Sunday, December 31, 2006

ಮುದ್ದಾಂ ಹುಸೇನ್‌ಗೆ ಗಲ್ಲು ಶಿಕ್ಷೆಯೇ ಏಕೆ?

(ಬೊಗಳೂರು ಅಂತಿಮ ಕ್ಷಣ ಬ್ಯುರೋದಿಂದ)
ಬೊಗಳೂರು, ಡಿ.31- ಇರಾಕ್ ಸರ್ವಾಧಿಕಾರಿ ಮುದ್ದಾಂ ಹುಸೇನ್‌ಗೆ ಮರಣ ದಂಡನೆ ವಿಧಿಸಿರುವುದು ವಿಶ್ವಾದ್ಯಂತ ಅಗ್ರ-ಉಗ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವಂತೆಯೇ, ಅವನನ್ನು ಗಲ್ಲಿಗೇರಿಸಿಯೇ ಕೊಂದಿದ್ದೇಕೆ ಎಂಬುದನ್ನು ಬೊಗಳೆ ರಗಳೆ ಬ್ಯುರೋ ಪತ್ತೆ ಹಚ್ಚಿದೆ.

ಮುದ್ದಾಂ ಮರಣ ದಂಡನೆಗೆ ಒಳಗಾದಾಗ ವಿಶ್ವದ ದೊಡ್ಡಣ್ಣನಾಗಲು ಶತಾಯಗತಾಯ ಯತ್ನಿಸುತ್ತಿರುವ ಲಾರ್ಜ್ ಬುಷ್ ಗಾಢ ನಿದ್ದೆಯಲ್ಲಿದ್ದು, ಅವರು ಬೊಗಳೆ ರಗಳೆ ಬ್ಯುರೋಗೆ ನಿದ್ದೆಯಲ್ಲೇ ವಿಶೇಷ ಸಂದರ್ಶನ ನೀಡಿ, ಇದರ ಹಿಂದಿನ ಉದ್ದೇಶವನ್ನು ಬಹಿರಂಗಪಡಿಸಿದ್ದಾರೆ.

ಇರಾಕಿನ ಮೇಲೆ ಹಿಡಿತ ಸಾಧಿಸಲು ದಶಕದಿಂದ ತಮ್ಮ ಪಡೆಗಳು ಯತ್ನಿಸುತ್ತಿದ್ದರೂ ಯಾವುದೇ ಯಶಸ್ಸು ಇದುವರೆಗೆ ಸಿಗಲಿಲ್ಲ. ಹಿಂಸಾಚಾರ ಯಥಾಪ್ರಕಾರ ಮುಂದುವರಿದಿದೆ. ಮಾತ್ರವಲ್ಲ ಮತ್ತಷ್ಟು ಹೆಚ್ಚಾಗಿಬಿಟ್ಟಿದೆ. ಹಾಗಾಗಿ ತಮ್ಮ ಇರಾಕ್ ನೀತಿ ವಿಫಲವಾಗಿದೆ ಎಂಬ ಟೀಕೆಗಳು ವಿಶ್ವಾದ್ಯಂತ ಕೇಳಿ ಬಂದ ಹಿನ್ನೆಲೆಯಲ್ಲಿ ಇಲ್ಲೊಂದು ಮೈಲಿಗಲ್ಲು ನೆಡಲು ತಾವು ಉದ್ದೇಶಿಸಿರುವುದಾಗಿ ಸ್ಪಷ್ಟಪಡಿಸಿರುವ ಲಾರ್ಜ್ ಬುಷ್, ಆದರೆ ಎಷ್ಟೇ ಪ್ರಯತ್ನ ಪಟ್ಟರೂ ಮೈಲಿಗಲ್ಲು ನೆಡಲಾಗಿರಲಿಲ್ಲ ಎಂದು ವಿವರಿಸಿದ್ದಾರೆ.

ಈ ಕಾರಣಕ್ಕಾಗಿ, ಮುದ್ದಾಂನನ್ನು ಗಲ್ಲು ಶಿಕ್ಷೆಗೆ ಗುರಿಪಡಿಸಿದರೆ ಮಾತ್ರವೇ ಮೈಲಿ-ಗಲ್ಲು ಸ್ಥಾಪಿಸಿದಂತಾಗುತ್ತದೆ ಎಂಬುದು ತಮ್ಮ ನಿರ್ಧಾರವಾಗಿತ್ತು ಎಂದವರು ಸ್ಪಷ್ಟಪಡಿಸಿದ್ದಾರೆ.

ಅದೂ ಅಲ್ಲದೆ, ಮುದ್ದಾಂಗಾಗಿ ಭಾರತದಲ್ಲಿ ಸಿಂಹಾಸನವೊಂದು ಸಿದ್ಧವಾಗುತ್ತಿದ್ದು, ಆತ ಅದನ್ನು ಏರಿಬಿಟ್ಟಾನು, ಮತ್ತೆ ಇರಾಕಿನಲ್ಲಿ ತನ್ನ ಆಧಿಪತ್ಯ ಸ್ಥಾಪಿಸಿ ಸ್ಕಡ್ ಕ್ಷಿಪಣಿಗಳಿಂದ ಅಮೆರಿಕಕ್ಕೆ ಪ್ರಬಲ ಪ್ರತಿರೋಧ ಒಡ್ಡಿಯಾನು ಎಂಬ ಭೀತಿಯೂ ಈ ಅವಸರದ ಗಲ್ಲು ಶಿಕ್ಷೆಗೆ ಕಾರಣವಾಗಿತ್ತು ಎಂಬುದು ಬ್ಯುರೋ ಕಂಡುಕೊಳ್ಳದ ಸತ್ಯ.

ಒಂದೇ ಗಲ್ಲು ಶಿಕ್ಷೆಯೇ?: ಈ ಮಧ್ಯೆ, ನೂರಾರು ಮಂದಿಯ ಸಾವಿಗೆ ಕಾರಣವಾದ ಆರೋಪ ಹೊತ್ತಿರುವ ಮುದ್ದಾಂಗೆ ಕೇವಲ ಒಂದೇ ಮರಣ ದಂಡನೆ ವಿಧಿಸಿರುವುದು ಎಲ್ಲರ ಹುಬ್ಬೇರಿಸಿದೆ. ಗಲ್ಲು ಶಿಕ್ಷೆ ತಪ್ಪು ಎಂದು ಮುದ್ದಾಂ ಅಭಿಮಾನಿಗಳು ವಿಶ್ವಾದ್ಯಂತ ಬೀದಿಗಿಳಿದಿದ್ದರೆ, ಮುದ್ದಾಂಗೆ ಮತ್ತಷ್ಟು ಉಗ್ರ ಶಿಕ್ಷೆ ವಿಧಿಸಬೇಕು, ಇನ್ನಷ್ಟು ಮರಣದಂಡನೆ ವಿಧಿಸಬೇಕು ಎಂದು ಮುದ್ದಾಂ ವಿರೋಧಿಗಳು ಆಗ್ರಹಿಸುತ್ತಾ ಪ್ರತಿಭಟನೆ ಆರಂಭಿಸಿದ್ದು, ಇರಾಕಿನಲ್ಲಿ ಹಿಂಸಾಚಾರ ಮೇರೆ ಮೀರಲು ವೇದಿಕೆ ಸಿದ್ಧವಾಗುತ್ತಿದೆ ಎಂದು ಬೊಗಳೆ ರಗಳೆ ಬ್ಯುರೋ ಕಂಡುಕೊಂಡಿದೆ.

(ಕೆಡುಕಿನ ಅಂತ್ಯವಾಗಲಿ, ಒಳಿತಿಗೆ ಯಶಸ್ಸಾಗಲಿ ಎಂಬ ಹಾರೈಕೆಯೊಡನೆ ಬೊಗಳೆ ರಗಳೆ ಬ್ಯುರೋ 2006ನೇ ವರ್ಷಕ್ಕೆ ವಿದಾಯ ಹಾಡುತ್ತಿದೆ. ಮುಂದಿನ ವರ್ಷ ಭೇಟಿಯಾಗೋಣ. -ಸಂ)

Thursday, December 28, 2006

ಸೇವಿಸಿದರೆ ಮದಿರೆ, (ಪರರ) ನಿದಿರೆಗೆ ತೊಂದರೆ!

(ಬೊಗಳೂರು ಮದಿರಾ ಬ್ಯುರೋದಿಂದ)
ಬೊಗಳೂರು, ಡಿ.28- ಮದ್ಯ ಸೇವನೆಯು ನಿದ್ರಾಹೀನತೆಗೆ ಕಾರಣವಾಗುತ್ತದೆ ಎಂಬುದನ್ನು ಇಲ್ಲಿ ಪತ್ತೆ ಹಚ್ಚಿರುವ ವಿಜ್ಞಾನಿಗಳು ಒಂದು ವಿಷಯವನ್ನು ಬಿಟ್ಟಿದ್ದರಿಂದಾಗಿ ಅಸತ್ಯಾನ್ವೇಷಿಯು ಇದರ ಸಂಶೋಧನೆಗೆ ಹೊರಟಾಗ ಗಾಳಿಯಲ್ಲೇ ತೇಲಿದ ಅನುಭವವಾಗಿತ್ತು ಎಂದು ವರದಿಯಾಗಿದೆ.

ಆಲ್ಕೋಹಾಲ್ ಸೇವನೆಯಿಂದ ರಾತ್ರಿಯ ಎರಡನೇ ಜಾವದಲ್ಲಿನ ನಿದ್ದೆಗೆ ಕೊರತೆಯಾಗುತ್ತದೆ ಎಂದು ವೈಜ್ಞಾನಿಕ ವರದಿ ಹೇಳಿದೆಯೇ ಹೊರತು, ಯಾರ ನಿದ್ದೆಗೆ ತೊಂದರೆಯಾಗುತ್ತದೆ ಎಂದು ಹೇಳದಿರುವುದು ಬೊಗಳೆ ರಗಳೆ ಬ್ಯುರೋದ ಹುಬ್ಬೇರಿಸಲು ಕಾರಣವಾಗಿತ್ತು. ಇದರ ಹಿಂದೆ ಏನೋ ಸಂಚು ಇರಬೇಕು ಎಂಬ ಸಂದೇಹದ ಹಿನ್ನೆಲೆಯಲ್ಲಿ ರಾತೋರಾತ್ರಿ ನಿದ್ದೆಗೆಟ್ಟು ಹೊಂಚು ಹಾಕಿ ತಪಾಸಣೆಗೆ ತೆರಳಿತ್ತು.

ಬ್ಯುರೋ ಸಿಬ್ಬಂದಿ ನೀಡಿದ ವರದಿ ಪ್ರಕಾರ, ಅತಿಯಾಗಿ ಮದ್ಯಪಾನ ಮಾಡಿದರೆ ನಿದ್ದೆಗೆ ತೊಂದರೆಯಾಗುವುದು ಕುಡಿದವರಿಗಲ್ಲ, ಪಕ್ಕದ ಮನೆಯವರಿಗೆ ಎಂಬ ಅಮೂಲ್ಯವಾದ ಸಂಶೋಧನೆಯೊಂದು ಹೊರಬಿದ್ದಿದೆ.

ಅತಿಯಾಗಿ ಮದ್ಯಸೇವನೆಯು ಸೇವಿಸಿದವರ ಆರೋಗ್ಯಕ್ಕೆ ಒಳ್ಳೆಯದು. ಅಂದರೆ ಮದ್ಯ ಪಾನ ಮಾಡಿದವರು ಯಾವತ್ತೂ ಸಂತೋಷದಲ್ಲಿ ತೇಲಾಡುತ್ತಾ ಇರುತ್ತಾರೆ. ಹಾಗಾಗಿ ಉಲ್ಲಸಿತರಾಗಿರುತ್ತಾರೆ, ಏನು ಬೇಕಾದರೂ ಮಾಡುತ್ತಾರೆ ಎಂಬೆಲ್ಲಾ ಸಿದ್ಧಾಂತಗಳು ಪತ್ತೆಯಾಗಿವೆ. ಹಾಗಾಗಿ ಅವರು ನಿದ್ದೆ ಬಾರದೇ ಇದ್ದರೂ ಸುಖವಾಗಿ ನಿದ್ದೆ ಮಾಡುತ್ತಾರೆ ಎಂದು ತಿಳಿದುಬಂದಿದೆ. ತೊಂದರೆಯಾಗುವುದು ಮಾತ್ರ ಪಕ್ಕದ ಮನೆಯವರಿಗೆ.

ಅತಿಯಾಗಿ ಮದ್ಯಪಾನ ಮಾಡಿದವರು ಸುಖದ ಅಮಲಿನಲ್ಲಿ ತೇಲುತ್ತಾ ಮಾತಾಡುತ್ತಲೇ ಇರುತ್ತಾರೆ. ಅದನ್ನು ಮಾದಕ ಕನಸು ಎಂದು ಕರೆಯಬಹುದಾಗಿದ್ದು, ತಮ್ಮಷ್ಟಕ್ಕೆ ತಾವೇ ಮಾತನಾಡುತ್ತಾರೆ ಆದರೂ ಅವರಿಗೆ ಕೇಳಿಸುವುದಿಲ್ಲ. ಮತ್ತು ಯಾರೊಡನೆಯೋ ಜಗಳವಾಡುತ್ತಾರಾದರೂ ಅವರಿಗೆ ತಿಳಿದಿರುವುದಿಲ್ಲ.

ಇದೆಲ್ಲವೂ ಬಾಹ್ಯ ಪ್ರಪಂಚಕ್ಕೆ ಮಾತ್ರವೇ ಗೊತ್ತಾಗುವುದರಿಂದಾಗಿ ಪಕ್ಕದ ಮನೆಯವರು ಮದ್ಯ ಸೇವಿಸದಿದ್ದರೂ ಮರುದಿನ ಬೆಳಗ್ಗೆ ಏಳುವಾಗ ಮದಿರೆಯ ಅಂದರೆ ನಿದಿರೆಕೊರತೆಯ ಮನಸ್ಥಿತಿಯಲ್ಲೇ  ಇರುತ್ತಾರೆ. ಕಚೇರಿಯಲ್ಲಿ ಬಂದರೂ ಕಂಪ್ಯೂಟರ್ ಎದುರು ಅಮಲಿನಿಂದ ವಾಲುತ್ತಿರುತ್ತಾರೆ.

ಇನ್ನೊಂದು ವಾದದ ಪ್ರಕಾರ, ನೆರೆಮನೆಯವರು ಕೂಡ ಈ ರೀತಿ 'ಸುಖದ ಸುಪ್ಪತ್ತಿಗೆ'ಯಲ್ಲಿ ತೇಲಾಡುವುದು ನಿದಿರೆ ಕೊರತೆಯಿಂದಲೋ ಅಥವಾ ಕದ್ದುಮುಚ್ಚಿ ಸ್ವಯಂ ಮದಿರಾ ಸೇವನೆಯಿಂದಲೋ ಎಂಬುದು ತಡವಾಗಿ ಬೆಳಕಿಗೆ ಬರಬೇಕಿದೆ.

( ಸೂಚನೆ : ಗಡಗಡ ನಡುಗಿಸಿದ ಇಂದುವಿನ ಊರಿನಲ್ಲಿ ಎರಡು ತಿಂಗಳ ಅಜ್ಞಾತವಾಸ ಮುಗಿಸಿ ಮರಳಿ ಸ್ವಯಂ ಕಾರಸ್ಥಾನಕ್ಕೆ ಮರಳಿರುವ ಬೊಗಳೆ ರಗಳೆ ಬ್ಯುರೋ, ತನ್ನ ಕಛೇರಿಯಲ್ಲಿ ಧೊಪ್ಪನೆ ಬಂದು ಬಿದ್ದ ಪರಿಣಾಮವಾಗಿ ಕೆಲವು ದಿನಗಳಿಂದ ಬೊಗಳೆ ರಗಳೆ ಪ್ರಕಟವಾಗಿರಲಿಲ್ಲ. ಈ ದಿನಗಳಲ್ಲಿ ಓದುಗರಿಗಾದ ಅನುಕೂಲಕ್ಕೆ ವಿಷಾದಿಸುತ್ತೇವೆ. ಆದರೆ ಇದು ಮದಿರೆಯ ಪ್ರಭಾವ ಅಲ್ಲ ಎಂದು ಸ್ಪಷ್ಟಪಡಿಸುತ್ತಿದ್ದೇವೆ. ಎಂದಿನಂತೆ ಚಂದಾದಾರರ ಹಣ ಮರಳಿಸದೆ, ಅದನ್ನು ಗುಳುಂಕರಿಸಲಾಗುತ್ತಿದೆ.- ಸಂ )

Friday, December 22, 2006

Busy-ness: (Profit)Private ಮತ್ತು (Staff)Limited ಕಂಪನಿ !

(ಬೊಗಳೂರು ಅವಸರ-ಯುಗ ಬ್ಯುರೋದಿಂದ)
ಬೊಗಳೂರು, ಡಿ.22- ಅತ್ಯಾಧುನಿಕ ಯುಗದ ಅತ್ಯಾಧುನಿಕ ತಂತ್ರಜ್ಞಾನದ ಪರಿಣಾಮಗಳು ಮತ್ತು ಕೆಲಸದೊತ್ತಡಗಳು ಎಂಥೆಂತಹ ಕೆಲಸ ಮಾಡಿಸುತ್ತವೆ ಎಂಬುದಕ್ಕೆ ಹೊಸದೊಂದು ಉದಾಹರಣೆ ಇಲ್ಲಿ ಲಭ್ಯವಾಗಿದೆ.
 
ಬೆಳಗ್ಗೆ ಎದ್ದು ಕಚೇರಿಗೆ ಓಡಿ ಕಂಪ್ಯೂಟರ್ ಕೀಲಿಗಳೊಂದಿಗೆ ಕಟಕಟ ಸದ್ದಿನ ಆಟವಾಡಿ ತಡರಾತ್ರಿ ಮನೆಗೆ ಮರಳಿ ಬಿದ್ದ ತಕ್ಷಣ ನಿದ್ದೆ ಹೋಗುವ ಜಗತ್ತು ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಇಂಥದ್ದೊಂದು ಶೋಧನೆ ಕೈಗೊಳ್ಳಲಾಗಿದೆ.
 
ಯಾವುದೇ ಡಾಟ್ ಕಾಮ್ ಎಂಬ ಪ್ರೈವೇಟ್ ಲಿಮಿಟೆಡ್ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಇತ್ತೀಚೆಗೆ ಕಂಪನಿಯ ಹೆಸರಿನೊಂದಿಗೆ ಥಳುಕು ಹಾಕಿಕೊಂಡಿರುವ ಪ್ರೈವೇಟ್ ಮತ್ತು ಲಿಮಿಟೆಡ್ ಎಂಬ ಪದಗಳಿಗೆ ಅರ್ಥವನ್ನೂ ಕಂಡುಕೊಂಡಿದ್ದಾರೆ.
 
ಯಾವುದೇ ಲಾಭಗಳೆಲ್ಲಾ ಈ ಕಂಪನಿಯ ಪ್ರೈವೇಟ್ ಆಗಿದ್ದು, ಸಿಬ್ಬಂದಿಗಳ ಸಂಖ್ಯೆ ಮಾತ್ರ ಲಿಮಿಟೆಡ್ ಆಗಿರುತ್ತದೆ ಎಂಬ ವ್ಯಾಖ್ಯಾನ ದೊರೆತಿರುವ ಈ ಸಮಯದಲ್ಲಿ, ಕೆಲಸದಲ್ಲಿ ನಿರತರಾದವರಿಗೆ ಮದುವೆಯಾಗಲು, ಹನಿಮೂನ್‌ಗೆ ತೆರಳಲು ಪುರುಸೊತ್ತು ಎಂಬುದು ಪರರ ಸೊತ್ತಾಗಿಬಿಟ್ಟಿದೆ.
 
ಈ ಕಾರಣಕ್ಕಾಗಿಯೇ ಕಾಲ್ಪನಿಕ ಮದುವೆ, ಕಾಲ್ಪನಿಕ ಹನಿಮೂನ್ ಎಲ್ಲವನ್ನೂ ನಡೆಸಲಾಗುತ್ತಿದೆ ಎಂದು ವಿಶ್ಲೇಷಿಸಲಾಗಿದೆ.
ಈ ಮಧ್ಯೆ, ಹಿಂದಿನ ಕಾಲದಲ್ಲಿ ಸಾಂಸಾರಿಕ ಜಗತ್ತಿನ ಕಷ್ಟ ಕೋಟಲೆಗಳಿಂದ ನೊಂದವರು ತಪಸ್ಸು ಮಾಡಲು, ಮನಶ್ಶಾಂತಿ ಅರಸಿ ಕಾಡಿಗೆ ಹೋಗುತ್ತಾರೆ, ಆದರೆ ಈಗಿನದು ಅತ್ಯಾಧುನಿಕ ತಂತ್ರಜ್ಞಾನದ ಯುಗವಾದ್ದರಿಂದ ಅಂಥವರೆಲ್ಲಾ ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾರೆ, ಕಂಪ್ಯೂಟರ್ ಎದುರು ತಪಸ್ಸು ಮಾಡುತ್ತಿರುತ್ತಾರೆ ಎಂಬ ವಾದಕ್ಕೆ ಪುಷ್ಟಿ ದೊರೆಯುವ ಯತ್ನವಾಗಿ ಈ ಕಾಲ್ಪನಿಕ ವಿವಾಹ, ಕಾಲ್ಪನಿಕ ಹನಿಮೂನ್ ಇತ್ಯಾದಿ ಏರ್ಪಡಿಸಲಾಗಿದೆ ಎಂದು ಬೊಗಳೆ ರಗಳೆ ಬ್ಯುರೋ ಕ್ಯಾತೆ ತೆಗೆದಿದೆ.

Thursday, December 21, 2006

ಅರಣ್ಯ ನಾಶ ಮಾಡಿದ ಮಗು ಮೇಲೆ ಕೇಸು

(ಬೊಗಳೂರು ಪೂರ್ವಜನ್ಮ ಬ್ಯುರೋದಿಂದ)
ಬೊಗಳೂರು, ಡಿ.21- ಯಾರಾದರೂ "ಹೋದ ಜನ್ಮದ ಪಾಪದ ಫಲ" ಇದು ಅಂತೆಲ್ಲಾ ಬೊಗಳೆ ಬಿಡುವುದರ ಹಿಂದಿನ ಕಳಕಳಿಗೆ ಪುಷ್ಟಿ ದೊರೆತಿದ್ದು, ಆದರೆ ಇಷ್ಟು ಬೇಗನೆ ಶಿಕ್ಷೆಯಾಗುತ್ತದೆ ಎಂಬುದು ಯೋಚನೆಗೆ ನಿಲುಕದ ಸಂಗತಿಯಾಗಿತ್ತು.
 
ನೂರಾರು ವರ್ಷಗಳ ಹಿಂದೆ ಅರಣ್ಯ ನಾಶಪಡಿಸಿದ ಪ್ರಕರಣದ ಕುರಿತು ಅಂದೇ ತನಿಖೆ ಆರಂಭಿಸಿದ ಪೊಲೀಸರು ಶತಮಾನಗಳ ಶೋಧನೆಯ ಬಳಿಕ ಕೇಸು ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆ ಮಗು ಆಟವಾಡಲು ಕೋರ್ಟಿಗೆ ಬರಬೇಕಾಯಿತು.
 
ಅವರು ಕೊನೆಗೂ ಡಿಎನ್ಎ ಪರೀಕ್ಷೆ ಎಲ್ಲವನ್ನೂ ಕೈಗೊಂಡು ಒಂದು ಮಗುವನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಮುಖವುಳಿಸಿಕೊಳ್ಳುವ ನಿಟ್ಟಿನಲ್ಲಿ, ಈ ಹುಡುಗ 14 ತಿಂಗಳಿನವನಾಗಿದ್ದಾಗ ಅರಣ್ಯ ನಾಶ ಮಾಡಿದ್ದಾನೆ ಎಂದು ಎಫ್ಐಆರ್‌ನಲ್ಲಿ ಹೇಳುತ್ತಿದ್ದಾರೆ.
 
ಆದರೆ ನಿಜಕ್ಕೂ ಅವರಿಗೆ ಪುರಾತನ ಕೇಸೊಂದನ್ನು ಭೇದಿಸಿ ಕೈತೊಳೆದುಕೊಳ್ಳಬೇಕಾಗಿತ್ತು ಎಂಬುದನ್ನು ಬೊಗಳೆ ಬ್ಯುರೋ ಪತ್ತೆ ಹಚ್ಚಿದೆ.
 
541 ಸಸ್ಯರಾಶಿಯನ್ನು ಈ ಪುಟ್ಟಹುಡುಗ ನಾಶಪಡಿಸಿದ್ದಾನೆ ಎಂಬುದು ಪೊಲೀಸರ ಆರೋಪ. ಅರಣ್ಯ ರಕ್ಷಕರ ಕೈಗೂ ಸಿಗದಷ್ಟು ವೇಗವಾಗಿ ಈ ಮಗು ಓಡಿತ್ತು ಎಂದು ಪೊಲೀಸರು ಎಫ್ಐಆರ್‌ನಲ್ಲಿ ಹೇಳಿದ್ದರೂ, ನಿಜಕ್ಕೂ ಪೊಲೀಸರು ಅರಣ್ಯದಲ್ಲಿದ್ದ ಚಳ್ಳೆ ಹಣ್ಣನ್ನು ತಿಂದಿದ್ದರು ಎಂಬುದು ದೃಢಪಟ್ಟಿದೆ.
 
ಈ  ಕಳೆದ ಜನ್ಮದಲ್ಲಿ ಮಾಡಿದ ಪಾಪಕ್ಕೆ ಈ ಜನ್ಮದಲ್ಲಿ ಬಲು ಬೇಗನೆ ಶಿಕ್ಷೆ ದೊರಕಿಸುವ ನಿಟ್ಟಿನಲ್ಲಿ ಪೊಲೀಸರು ಈ ಕ್ರಮ ಕೈಗೊಂಡಿದ್ದರೂ, ಮನಸು ಕದ್ದ ಹಸುಳೆ ಮೇಲೂ ಅವರು ಕೇಸು ದಾಖಲಿಸಿದ್ದನ್ನು ಈ ಹಿಂದೆ ಬೊಗಳೆ ಬಿಡಲಾಗಿತ್ತು ಎಂಬುದನ್ನಿಲ್ಲಿ ಸಂಸ್ಮರಣೆ ಮಾಡಿಕೊಳ್ಳಬಹುದಾಗಿದೆ.
 
ಈ ಬಗ್ಗೆ ಪುಟ್ಟ ಮಗುವನ್ನು ಮಾತನಾಡಿಸಿದಾಗ, ನಾನೀಗಾಗಲಷ್ಟೇ ಕಳೆದ ಜನ್ಮದ ಪೊರೆ ಕಳಚಿಕೊಂಡು ಭೂಮಿಗೆ ಬಂದಿದ್ದೇನಷ್ಟೇ. ನನಗೇನೂ ಗೊತ್ತಿಲ್ಲ ಎನ್ನುತ್ತಾ ಚೆಂಡೆತ್ತಿಕೊಂಡು ಆಟವಾಡಲು ಹೊರಟಿತು.

Wednesday, December 20, 2006

ಜಾರಕಾರಣಿಗಳ ಆಘ್ರಾಣ ಸಾಮರ್ಥ್ಯದ ಗುಟ್ಟು

(ಬೊಗಳೂರು ಶ್ವಾನ ಬ್ಯುರೋದಿಂದ)
ಬೊಗಳೂರು, ಡಿ.20- "ಕುಸುಮ ಗಂಧದ ಒಳಗೊ ಗಂಧದೊಳು ಕುಸುಮವೋ, ಕುಸುಮ ಗಂಧಗಳೆರಡೂ ಆಘ್ರಾಣದೊಳಗೊ" ಎಂಬ ದಾಸರ ಶಂಕೆಗೆ ಪರಿಹಾರ ದೊರೆಯುವ ದಿನಗಳು ಸಮೀಪಿಸಿವೆ.
 
ನಾಯಿಗಳು ಮಾನವರಿಗಿಂತ ಹೆಚ್ಚು ಪ್ರಬಲವಾದ ಆಘ್ರಾಣ ಶಕ್ತಿ ಹೊಂದಿವೆ ಎಂಬುದು ಸರ್ವವಿದಿತ ಸತ್ಯ. ಆದರೆ ಹೊಸ ಅಧ್ಯಯನವೊಂದು ಈ ವಿಷಯವನ್ನು ಬಹುತೇಕ ಸುಳ್ಳಾಗಿಸಲು ಹೊರಟಿದೆ.
 
ಉನ್ನತ ಅಧಿಕಾರದಲ್ಲಿರುವ ಮಂತ್ರಿಗಳು, ಶಾಸಕರು, ಅಧಿಕಾರಿವರ್ಗವು ಹಗರಣ ಎಂಬ ಪ್ರಜಾಪ್ರಭುತ್ವದ ಅತ್ಯುನ್ನತ ಮೌಲ್ಯವನ್ನು ಎತ್ತಿಹಿಡಿಯಲು ಅಷ್ಟು ಸುಲಭವಾಗಿ ಹೇಗೆ ಯಶಸ್ವಿಯಾಗುತ್ತಿದ್ದಾರೆ ಎಂಬುದರ ಹಿಂದಿನ ರಹಸ್ಯವೂ ಬಯಲಾಗಿದ್ದು, ಅವರ ವಾಸನಾ ಸಾಮರ್ಥ್ಯವೇ ಇದಕ್ಕೆಲ್ಲಾ ಕಾರಣ ಎಂದು ಪತ್ತೆಯಾಗಿದೆ.
 
ಅಂದರೆ, ನಾಯಿಗಳಿಗಿರುವ ಆಘ್ರಾಣ ಸಾಮರ್ಥ್ಯವನ್ನು ಕೆಲವೊಂದಿಷ್ಟು ತರಬೇತಿ/ ಅಭ್ಯಾಸದ ಮೂಲಕ ಮನುಷ್ಯರೂ ಪಡೆಯಬಹುದು ಎಂಬುದನ್ನು ವಿಜ್ಞಾನಿಗಳು ಇಲ್ಲಿ ಪತ್ತೆ ಹಚ್ಚಿದ್ದರು. ಈ ಪ್ರಯೋಗದ ಫಲಿತಾಂಶವನ್ನು ರಾಜಕಾರಣಿಗಳು ಸಮರ್ಥವಾಗಿ ಬಳಸಿಕೊಂಡ ಪರಿಣಾಮವೇ ಈ ದೇಶದಲ್ಲಿ ಹಗರಣಗಳ ಸಾಲು ಸಾಲು ಆಂದೋಲನಗಳೇ ನಡೆದುಹೋದವು ಎಂದು ತಿಳಿದುಬಂದಿದೆ.

ಘಟಾನುಘಟಿ ರಾಜಕಾರಣಿಗಳ ಆಘ್ರಾಣ ಸಾಮರ್ಥ್ಯದ ಹಿಂದೆ ಬೊಗಳೆ ರಗಳೆ ಬ್ಯುರೋ ಬಿದ್ದಾಗ, ವಿಜ್ಞಾನಿಗಳು ಈ ಸಂಶೋಧನಾ ವರದಿ ನೀಡಿದ್ದೇ ಇದಕ್ಕೆಲ್ಲಾ ಕಾರಣ ಎಂದು ಪತ್ತೆ ಹಚ್ಚಲಾಯಿತು.
 
ಸರಕಾರದ ಯಾವ್ಯಾವ ಯೋಜನೆಗಳಲ್ಲಿ ಎಲ್ಲಿ ಎಷ್ಟರ ಮಟ್ಟಿಗೆ ಗಂಟು ಸಿಗುತ್ತದೆ, ಎಷ್ಟನ್ನು ಮೇಯಬಹುದು, ಉದಾರ ಕೊಡುಗೆಯಾಗಿ ಮತದಾರರ ಮೂಗಿಗೆ ತುಪ್ಪ ಸವರುವಂತಹ ಮೇಲ್ನೋಟದ ಯೋಜನೆಗಳನ್ನು ಅರ್ಪಿಸಲು ಎಷ್ಟನ್ನು ಉಳಿಸಬಹುದು ಎಂಬುದೆಲ್ಲಾ ಈ ರಾಜಕಾರಣಿಗಳ ಮೂಗಿಗೆ ತಕ್ಷಣವೇ ಗೊತ್ತಾಗಿಬಿಡುತ್ತಿತ್ತು.
 
ರಾಜಕಾರಣಿಗಳು ಮಾತ್ರವಲ್ಲದೆ ಅಧಿಕಾರಿವರ್ಗ ಕೂಡ ಎಲ್ಲಿಯೇ ಗಂಟಿದ್ದರೂ ಅದರ ನಂಟು ಬಿಡದಂತೆ ಆಘ್ರಾಣಿಸುತ್ತಿದ್ದಾರೆ. ಇವರೆಲ್ಲ ಏನಿದ್ದರೂ ತಮ್ಮ ಮೂಗಿನ ನೇರಕ್ಕೇ ಕೆಲಸ ಮಾಡುವುದರಿಂದ ಈ ಮೂಗಿಗೆ ಮತ್ತಷ್ಟು ಕೆಲಸ ಕೊಡುವುದು ಸುಲಭ. ಯಾರ ಜೇಬಿನಲ್ಲಿ, ಯಾರ ಮನೆಯಲ್ಲಿ, ಯಾರ್ಯಾರ ಬ್ಯಾಂಕುಗಳಲ್ಲಿ ಎಷ್ಟೆಷ್ಟು ಗಂಟು ಇದೆ ಎಂಬುದನ್ನೆಲ್ಲಾ ಕ್ಷಣಮಾತ್ರದಲ್ಲಿ ಮೂಸಿ ಪತ್ತೆ ಹಚ್ಚುವಂತಾಗಲು ಈ ಕುರಿತು ತರಬೇತಿ ಪಡೆದು ಅಭ್ಯಾಸನಿರತರಾಗಿದ್ದಾರೆ ಎಂದು ತಿಳಿಯಲಾಗಿದೆ.
 
ಹಾಗಾಗಿ ಇತ್ತೀಚಿನ ದಿನಗಳಲ್ಲಿ ಮನುಜ ಪ್ರಾಣಿಗಳ ನಾಯಿ ಬುದ್ಧಿ... ಕ್ಷಮಿಸಿ... ಶ್ವಾನಬುದ್ಧಿ ಹೆಚ್ಚಾಗುತ್ತಿರುವುದರಿಂದ ಇದಕ್ಕೊಂದು ಹೊಸ ಸೇರ್ಪಡೆಯನ್ನು ಈ ವಿಜ್ಞಾನಿಗಳು ಕೊಡುಗೆಯಾಗಿ ನೀಡಿದ್ದು, ಮನುಜಮತವನ್ನು ವಿಶ್ವಪಥದತ್ತ ಕೊಂಡೊಯ್ಯಲು ವೇದಿಕೆ ರೂಪಿಸಿದ್ದಾರೆ. ನಾಯಿಯು ಮಾನವನ ಆತ್ಮೀಯ ಮತ್ತು ನಂಬಿಕಸ್ಥ ಮಿತ್ರನೂ ಆಗಿರುವುದರಿಂದಾಗಿ ಅದನ್ನು ಸುಲಭವಾಗಿ ಮಂಗ ಮಾಡಬಹುದು ಮತ್ತು ಶ್ವಾನರ (ಶ್ವಾನ-ನರ) ಸಂ-ಬಂಧವನ್ನು ಮತ್ತಷ್ಟು ಬಲಪಡಿಸಬಹುದು ಎಂಬುದು ಅವರ ಅನಿಸಿಕೆಯಾಗಿದೆ.
 
ಮಾನವರೆಲ್ಲರೂ ಇದೀಗ ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಾಣಿಗಳಾಗಹೊರಟ ಸುದ್ದಿ ಬೊಗಳೆ ರಗಳೆಯಲ್ಲಿ ಪ್ರಕಟಗೊಂಡಿರುವುದರ ಬೆನ್ನಿಗೇ, ಬೊಗಳೆ ರಗಳೆ ಬ್ಯುರೋ ಯಾವತ್ತೂ ನಂಬಿರುವ ತತ್ವಾದರ್ಶಗಳು ಪೊಳ್ಳಾಗದಂತಾಗಲು ಈ ವರದಿ ಪ್ರಕಟಿಸಲಾಗಿದೆ.

Tuesday, December 19, 2006

ಶಿಕ್ಷೆ ಭೀತಿ : ಪ್ರಾಣಿಗಳಾಗತೊಡಗಿದ ಮಾನವರು

(ಬೊಗಳೂರು ಅಮಾನವೀಯ ಬ್ಯುರೋದಿಂದ)
ಬೊಗಳೂರು, ಡಿ.19- "ಮಾನವೀಯ" ಚೇಷ್ಟೆಗಳಿಂದ ಪ್ರೇರಿತವಾಗಿರುವ ಪಶು ಸಮುದಾಯದಲ್ಲಿ ಕೂಡ ಇತ್ತೀಚೆಗೆ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿರುವುದು ಕಂಡು ಬಂದಿದೆ. ಇದರ ಹಿಂದಿನ ತಥ್ಯ ಶೋಧನೆಗೆ ಹೊರಟಾಗ ಅಮೂಲ್ಯ ಮಾಹಿತಿಗಳು ಬೆಳಕಿಗೆ ಬಂದವು.
 
ಮಾನವೀಯ ಸಮುದಾಯದಲ್ಲಿ ಇತ್ತೀಚೆಗೆ ತಪ್ಪಿತಸ್ಥರಿಗೆ ಶಿಕ್ಷೆಯಾಗತೊಡಗಿದೆ. ಹಾಗಾಗಿ ಅಮಾನವೀಯರಾಗಿರುವುದೇ ಲೇಸು ಎಂಬ ನಿರ್ಧಾರಕ್ಕೆ ಈ ಕ್ರಿಮಿ-ನಲ್‌ಗಳು ಬಂದಿರುವುದೇ ಕಾರಣ!
 
ಬಡಪಾಯಿ ಹಸುವೊಂದರ ಮೇಲೆ ಆಸಿಡ್ ದಾಳಿ ನಡೆದ ಸುದ್ದಿ ಇಲ್ಲಿ ವರದಿಯಾಗಿದ್ದು, ಸುದ್ದಿಯ ಬೆಂಬತ್ತಿದ ಬ್ಯುರೋ, ಈ ಅಂಶವನ್ನು ಕಂಡುಕೊಂಡಿದೆ.
 
ಬೊಗಳೆ ರಗಳೆ ಬ್ಯುರೋ ನಡೆಸಿದ ತನಿಖೆಯ ಪ್ರಕಾರ, ಈ ಹಸುವಿನ ಮೇಲೆ ಆಸಿಡ್ ದಾಳಿ ನಡೆಸಿದ್ದು ಮಾನವರಲ್ಲ, ಅಮಾನವರು ಎಂದು ದೃಢಪಟ್ಟಿದೆ. ಈ ಪಶುವನ್ನು ಆಸಿಡ್‌ಗೆ ಬಲಿಪಶು ಮಾಡಿದ್ದು ಮತ್ತೊಂದು ಪಶುವೇ ಆಗಿದೆ ಎಂದು ಪತ್ತೆಯಾಗಿದ್ದು, ಈ ಪಶುವಿಗಾಗಿ ಶೋಧ ನಡೆಸಲಾಗುತ್ತಿದೆ.
 
ಮಾನವ ಸಮುದಾಯದಲ್ಲಿ ಇತ್ತೀಚೆಗೆ ನ್ಯಾಯವ್ಯವಸ್ಥೆ ಬಲಗೊಂಡಂತೆ ಕಾಣಿಸುತ್ತಿದೆ. ಹಾಗಾಗಿ ಜೆಸ್ಸಿಕಾ ಲಾಲ್, ಪ್ರಿಯದರ್ಶಿನಿ ಮಟ್ಟೂ ಮುಂತಾದವರನ್ನು ಕೊಲೆ ಮಾಡಿದ ಹಂತಕರಿಗೆ ಶಿಕ್ಷೆಯಾಗುತ್ತಿದೆ. ಭಯೋತ್ಪಾದಕರಿಗೆ ಕೇಂದ್ರ ಸಚಿವ ರಿಗೂ, ಕ್ರಿಕೆಟಿಗರಿಗೂ ಶಿಕ್ಷೆಯಾಗತೊಡಗಿದೆ.
 
ಹಾಗಾಗಿ ಪ್ರಾಣಿಗಳಾದರೇ ಸಲೀಸು ಎಂಬುದನ್ನರಿತ ಕೆಲವು ಮಾನವ ಕ್ರಿಮಿಗಳು, ಪ್ರಾಣಿಗಳಾಗಿ ಪರಿವರ್ತನೆಗೊಂಡು ಈ ಕೃತ್ಯ ಎಸಗಿವೆ ಎಂಬುದು ಸಂಶೋಧನೆಯ ಸಾರವಾಗಿದೆ.
 
ಹಾಗಾದರೆ ಈ ಪ್ರಾಣಿಗಳು ಆಸಿಡ್ ಬಳಸುವುದನ್ನು ಹೇಗೆ ಕಲಿತವು ಎಂಬ ಪ್ರಶ್ನೆ ಉದ್ಭವವಾಗುತ್ತದೆ ಎಂದು ಅರಿತುಕೊಂಡಿರುವ ನಮ್ಮ ಸಿಬ್ಬಂದಿ ಅದಕ್ಕೆ ಉತ್ತರವನ್ನೂ ತಯಾರಿಸಿದ್ದಾರೆ. ಅದುವೇ ಪೂರ್ವ ಜನ್ಮದ ಸುಕೃತ ಅನುಭವ.
 
ಇದೇ ಕಾರಣಕ್ಕಾಗಿಯೇ ಈ ಪ್ರಾಣಿಗಳು ಹಿಂದೆ ಮಾನವರಾಗಿದ್ದಾಗ ಎಲ್ಲಾ ಕ್ರಿಮಿನಲ್ ಕೃತ್ಯಗಳನ್ನು ಕರಗತ ಮಾಡಿಕೊಂಡಿದ್ದು, ಮುಂದಕ್ಕೆ ಪ್ರಯೋಜನಕ್ಕೆ ಬರುತ್ತದೆ ಎಂಬ ದೂ(ದು)ರಾಲೋಚನೆ ಹೊಂದಿದ್ದರು. ಹಾಗಾಗಿ ಇದು ಸಾಧ್ಯವಾಗಿದೆ.

Monday, December 18, 2006

ಆರ್ಕಿಮಿಡೀಸ್ ತತ್ವಕ್ಕೆ ಹೊಸ ವ್ಯಾಖ್ಯಾನ

(ಬೊಗಳೂರು ಕುಡುಕರ ಬ್ಯುರೋದಿಂದ)
ಬೊಗಳೂರು, ಡಿ.18- ದೇಶವು ಜಾಗತೀಕರಣಗೊಳ್ಳುತ್ತಿರುವ ಪರಿಣಾಮ ಇದರ ಬಿಸಿ ಯುವ ಜನಾಂಗವನ್ನೂ ತಟ್ಟಿದ್ದು, ಕುಡಿತದ ಚಟ ಹತ್ತುವ ವಯಸ್ಸು 20ಕ್ಕೆ ಇಳಿದಿರುವುದು ಸ್ವಾಗತಾರ್ಹ ಎಂದು ಮದ್ಯ ಕುಡಿಸುವವರ ಸಂಘ ಶ್ಲಾಘಿಸಿದೆ.
 
ಜಾಗತೀಕರಣ ಎಂಬ ಬಲೂನಿನಲ್ಲಿ ಬಿಸಿ ಗಾಳಿ ತುಂಬಿದರೆ ಸುಲಭವಾಗಿ ಮೇಲಕ್ಕೆ ಹಾರುವ ಮಾದರಿಯಲ್ಲೇ, ಯುವ ಜನಾಂಗಕ್ಕೂ ಬಿಸಿ ಗಾಳಿಯ ಬಿಸಿ ಏರಿಸಬಲ್ಲ ಮದ್ಯ ಸುರಿಯಲು ಸಾಕಷ್ಟು ಪ್ರಮಾಣದಲ್ಲಿ ಯತ್ನಿಸಲಾಗುತ್ತದೆ. ಹಾಗಾಗಿ ಬೆಂಗಳೂರು ಈಗ ಪಬ್‌ಗಳೂರು ಆಗಿಬಿಟ್ಟಿದೆ ಎಂದು ಈ ಸಂಘವು ಚೀಯರ್ಸ್ ಎಂಬ ತಲೆಬರಹದಡಿಯಲ್ಲಿ ಹೇಳಿಕೆ ನೀಡಿದೆ.
 
ವರ್ಷ ಕಳೆದಂತೆ ಕರ್ನಾಟಕದಲ್ಲಿ ಕುಡುಕರ ಸಂಖ್ಯೆ ಹೆಚ್ಚಾಗುತ್ತಿದೆ, ಕುಡಿತದ ಚಟ ಹತ್ತುವ ವಯಸ್ಸು ಕಡಿಮೆಯಾಗುತ್ತದೆ ಎಂಬುದಾಗಿ ಆರ್ಕಿಮಿಡೀಸ್ ಸಿದ್ಧಾಂತಕ್ಕೆ ಹೊಸ ವ್ಯಾಖ್ಯಾನ ನೀಡಿದ ಕ್ರಮವನ್ನು ವೈಜ್ಞಾನಿಕ ಸಂಶೋಧಕರು ಸ್ವಾಗತಿಸಿದ್ದು, ಯುರೇಕಾ ಎನ್ನುತ್ತಲೇ ಬಾಟಲಿಗಳನ್ನು ತಮ್ಮ ಟೇಬಲಿನ ಮುಂದಿರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
 
ಈ ಮದ್ಯದ ಮಧ್ಯೆ, ಮದ್ಯ ಮಾರಾಟದಿಂದ ಬೊಕ್ಕಸಕ್ಕೆ ಬರುವ ಆದಾಯಕ್ಕಿಂತಲೂ, ಮದ್ಯಸೇವನೆಯ ದುಷ್ಪರಿಣಾಮದ ಪರಿಹಾರ ಕಾರ್ಯಕ್ರಮಗಳಿಗೆ ಸರಕಾರ ಖರ್ಚು ಮಾಡುತ್ತಿದೆ ಎಂಬಲ ವರದಿಗಳನ್ನು ಸಾರಾ ಸಗಟಾಗಿ ತಳ್ಳಿ ಹಾಕಿರುವ ಮದ್ಯ ಕುಡಿಯುವವರ ಸಂಘ, ಇದು ನಮ್ಮ ಮೇಲೆ ಹುಳಿ ಮದ್ಯ ಸುರಿಯುವ ತಂತ್ರ ಎಂದು ಟೀಕಿಸಿದ್ದಾರೆ.

Thursday, December 14, 2006

ಸಂಸತ್ ದಾಳಿ : ಸರಕಾರಕ್ಕೇ ಶೌರ್ಯ ಪ್ರಶಸ್ತಿ !

(ಬೊಗಳೂರು ಅರಾಜಕ ಬ್ಯುರೋದಿಂದ)

ಬೊಗಳೂರು, ಡಿ.14- ದೇಶದ ಮಹೋನ್ನತ ಅಧಿಕಾರ ಕೇಂದ್ರವಾಗಿರುವ ಸಂಸತ್ತಿನ ಮೇಲೆ ದಾಳಿ ನಡೆದ ಐದನೇ ವರ್ಷವನ್ನು ದೇಶಾದ್ಯಂತ, ವಿಶೇಷವಾಗಿ ಸಂಸತ್ತಿರುವ ರಾಜಧಾನಿಯಲ್ಲಿ ಅತ್ಯಂತ ವೇದನೆಯಿಂದ ಆಚರಿಸಲಾಯಿತು.

ಸಂಸತ್ತಿನ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಬಲಿದಾನ ಮಾಡಿದ ಭದ್ರತಾ ಸಿಬ್ಬಂದಿಯ ಕುಟುಂಬಿಕರು, ಪ್ರಕರಣದ ಪ್ರಧಾನ ಆರೋಪಿ ಗುರುವಿನ ಬಗ್ಗೆ ತಳೆದಿರುವ ನಿಲುವನ್ನು ಶ್ಲಾಘಿಸಿ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕೆ ಮೆಡಲ್ ಸಹಿತ ಶೌರ್ಯ ಪ್ರಶಸ್ತಿ ವಿತರಿಸಿದರು.

ಇದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಸರಕಾರವು ಕೂಡ, ಆರೋಪಿಗಳಿಗೆ ಶಿಕ್ಷೆಯಾಗುವುದಕ್ಕೆ ಸಾಕಷ್ಟು ವರ್ಷ ತಗುಲುತ್ತದೆ ಎಂದು ಭರವಸೆ ನೀಡಿತು ! ಈಗಾಗಲೇ ಗುರು ಹತ್ಯೆ ಮಹಾಪಾಪ ಎಂದು ಯಾರೋ ಹೇಳಿರುವುದನ್ನು ಇಲ್ಲಿ ಸ್ಮರಿಸಬಹುದು.

ಯಾವಾಗಲೂ ಪಟಾಕಿ ಸಿಡಿಸುತ್ತಾ ದೀಪಾವಳಿಯನ್ನೇ ನೆನಪಿಸುತ್ತಿರುವ ಜಮ್ಮು ಕಾಶ್ಮೀರ ಕೂಡ ಎರಡು ದಿನಗಳ ಶೋಕ ಆಚರಿಸಿರುವುದಾಗಿ ಬೊಗಳೆ ರಗಳೆ ಬ್ಯುರೋ ಕಂಡುಕೊಂಡಿದೆ.

ಈ ಮಧ್ಯೆ, ಭಯೋತ್ಪಾದಕರಿಗೆ ಸುಲಭದಲ್ಲಿ ಶಿಕ್ಷೆ ಆಗುವುದಿಲ್ಲ ಎಂದು ಉತ್ತೇಜನೆಗೊಂಡಿರುವ ಖ್ಯಾತ ಪಟಾಕಿ ಸಂಘಟನೆ ಅಲ್ ಖಾಯಿದಾ, ಗೋವಾದಲ್ಲೂ ಪಟಾಕಿ ಸಿಡಿಸುತ್ತೇವೆ ಎಂದು ಆತ್ಮೀಯ ಆಹ್ವಾನ ನೀಡಿರುವುದಾಗಿ ಇಲ್ಲಿ ವರದಿಯಾಗಿದೆ.

ಹಾಗಾಗಿ ಮುಂದಿನ ಚುನಾವಣೆಗಳಲ್ಲಿ ಮತ ಬ್ಯಾಂಕ್ ರಾಜಕಾರಣಕ್ಕೆ ಭರ್ಜರಿ ವಿಜಯವಾಗಲಿದೆ ಎಂದು ಬೊಗಳೆವಾಣಿ ಬ್ಯುರೋ ಭವಿಷ್ಯ ನುಡಿದಿದೆ.

Wednesday, December 13, 2006

ನಾಪತ್ತೆಯಾದವರ ಪತ್ತೆಗೆ ಅಪ್ಪಿಕೋ ಚಳವಳಿ !

(ಬೊಗಳೂರು ಹುಡುಕಾಟ ಬ್ಯುರೋದಿಂದ)
ಬೊಗಳೂರು, ಡಿ.13- ಡ್ರ್ಯಾಗನ್‌ಗಳಿರುವ ನಾಡಿನಲ್ಲಿ ಅಪ್ಪಿಕೋ ಚಳವಳಿ ನಡೆಯುತ್ತಿದೆ, ಅದು ಭಾರತಕ್ಕೂ ವ್ಯಾಪಿಸುವ ಎಲ್ಲ ಸಾಧ್ಯತೆಗಳಿಗೆ ಪೊಲೀಸರು ಸಂಚು ರೂಪಿಸಿದ್ದಾರೆ ಎಂಬ ಸುದ್ದಿ ಕೇಳಿ ಅಲ್ಲಿಗೆ ಧಾವಿಸಿದಾಗ ಪತ್ತೆಯಾದದ್ದು ಈ ಸುದ್ದಿ.
 
ಅಲ್ಲಿ ಸಿನಿಮಾ ಮಂದಿರಗಳಲ್ಲಿ ಡಿಸ್ಕೋಉಂಟು ನೋಡಲು ಹೋದವರಿಗೆ ಟಿಕೆಟ್‌ನಲ್ಲಿ ಡಿಸ್ಕೌಂಟ್ ಕೊಡಲಾಗುತ್ತದೆ. ಆದರೆ ಅದಕ್ಕೆ ಅಪ್ಪಿಕೋ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂಬುದು ಅಲ್ಲಿನವರ ಶರತ್ತು.
 
ಚಲನಚಿತ್ರವು ಪ್ರೇಮ ಕಥಾನಕ. ಅರುವತ್ತು ವರ್ಷಗಳ ಕಾಲ ಬೇರ್ಪಟ್ಟಿದ್ದ ಪ್ರೇಮಿಗಳು ಒಂದಾಗುವ ಚಿತ್ರ ವೀಕ್ಷಿಸಿದಾಗ ಅವರಿಗೆ ಎಷ್ಟು ವಯಸ್ಸಾಗಿದೆ ಎಂಬುದು ತಿಳಿದುಬರುವ ಕಾರಣ ಚಿತ್ರಕ್ಕೆ ವೀಕ್ಷಕರನ್ನು ಸೆಳೆಯುವ ಈ ತಂತ್ರ ಅನುಸರಿಸಲಾಗಿದೆ ಎಂದು ವಿಫಲಪ್ರೇಮಿಯೊಬ್ಬರು ತಿಳಿಸಿದ್ದಾರೆ.
 
60-70 ವರ್ಷದವರ ಪ್ರೇಮ ಕಥಾನಕ ಎಂದರೆ ಇಂದಿನ ಹೈಟೆಕ್ ಯುವ ಜನಾಂಗ ಮೂಗು ಮುರಿಯುತ್ತದೆ. ಈ ಕಾರಣಕ್ಕೆ ಯುವ ಪ್ರೇಮಿಗಳನ್ನು ಸೆಳೆಯುವ ನಿಟ್ಟಿನಲ್ಲಿ ಈ ಕ್ರಮಕೈಗೊಂಡಿರುವುದು ಸಾಬೀತಾಗಿತ್ತು.
 
ಈ ಮಧ್ಯೆ, ಕಾಲೇಜಿಗೆ ತೆರಳಿ ದಿಢೀರ್ ನಾಪತ್ತೆಯಾಗುತ್ತಿದ್ದ ತಮ್ಮ ಹದಿಹರೆಯದ ಮಕ್ಕಳೆಲ್ಲರೂ ಈ ಚಿತ್ರಮಂದಿರದ ಸುತ್ತಮುತ್ತಲೇ ಪತ್ತೆಯಾಗಿರುವ ಕಾರಣ ಹರ್ಷಚಿತ್ತರಾದ ಹೆತ್ತವರು ಚಿತ್ರಮಂದಿರದ ಮಾಲಿಕರಿಗೆ ಮತ್ತೆ ಮತ್ತೆ ಕೃತಜ್ಞತೆ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.
 
ಇದರಿಂದ ಸಂತುಷ್ಟವಾದ ಭಾರತೀಯ ಪೊಲೀಸರ ದಂಡು, ಹೆಚ್ಚಿನ ಅಧ್ಯಯನಕ್ಕಾಗಿ ಚೀನಾಕ್ಕೆ ಪ್ರವಾಸ ತೆರಳಿದೆ. ಇತ್ತೀಚೆಗಿನ ದಿನಗಳಲ್ಲಿ ಹದಿಹರೆಯದ ಹುಡುಗ-ಹುಡುಗಿಯರು ಕಾಲೇಜಿಗೆಂದು ತೆರಳಿ ನಾಪತ್ತೆಯಾಗುತ್ತಿರುವ ಪ್ರಸಂಗ ಹೆಚ್ಚಾಗುತ್ತಿದೆ. ಇಂಥ ಕೇಸುಗಳು ಪೋಲಿ ಠಾಣೆಗಳಲ್ಲಿ ರಾಶಿ ರಾಶಿ ಬೀಳುತ್ತಿದ್ದು, ಒಂದು ಪರಿಹಾರ ಕಾಣುವ ಸಂದರ್ಭ ಇನ್ನೂ ನಾಲ್ಕು ಕೇಸುಗಳು ಬಂದು ಬಿದ್ದಿರುತ್ತವೆ.
 
ಹಾಗಾಗಿ ತಲೆ ಕೆಡಿಸಿಕೊಂಡ ಪೊಲೀಸರು, ಇದೇ ತಂತ್ರಜ್ಞಾನವನ್ನು ಭಾರತದಲ್ಲೂ ಅಳವಡಿಸಲು ಚಿಂತನೆ ನಡೆಸುತ್ತಿದ್ದಾರೆ. ಹದಿಹರೆಯದವರು ಎಲ್ಲೇ ನಾಪತ್ತೆಯಾಗಿರಲಿ, ಊರಿಗೆ ಬಂದವರು ನೀರಿಗೆ ಬರದಿರುತ್ತಾರೆಯೇ ಎಂಬ ಮಾತಿಗೆ ತಕ್ಕಂತೆ, ಸಿನಿಮಾ ಮಂದಿರಕ್ಕೆ ಬಂದೇ ಬರುತ್ತಾರೆ ಎಂದು ಗ್ಯಾರಂಟಿ ಆಗಿರುವುದರಿಂದ ತಮ್ಮ ಪತ್ತೆ ಕಾರ್ಯ ಫಲಿಸುತ್ತದೆ ಎಂಬುದು ಪೋಲಿಗಳಿಗೆ ಬಲವಾದ ವಿಶ್ವಾಸ.

Tuesday, December 12, 2006

ಮಾತು ಮದಿರೆಯೇ ಮಾನಿನಿಯರಿಗೆ ?

(ಬೊಗಳೂರು ಮೌನ ಬ್ಯುರೋದಿಂದ)
ಬೊಗಳೂರು, ಡಿ.12- ಬೊಗಳೆ ರಗಳೆ ಬ್ಯುರೋದ ಕೆಲಸವನ್ನು ಬೇರೆಯವರಾರೋ ಮಾಡಿರುವುದರಿಂದಾಗಿ ಬೆಚ್ಚಿ ಬಿದ್ದ ಬ್ಯುರೋ ಸಿಬ್ಬಂದಿ ಚೇತರಿಸಿಕೊಳ್ಳುವ ಯತ್ನ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಸ್ತ್ರೀಯರು ಪುರುಷರಿಗಿಂತ ಬರೇ ಮೂರು ಪಟ್ಟು ಮಾತ್ರವೇ ಹೆಚ್ಚು ಮಾತನಾಡುತ್ತಾರೆ ಎಂದು ಸಂಶೋಧನಾ ವರದಿಯೊಂದು ತಿಳಿಸಿರುವುದು ಇಲ್ಲಿ ಪ್ರಕಟವಾಗಿದೆ. ಪುರುಷರು ದಿನಕ್ಕೆ 7 ಸಾವಿರ ಅಣಿ ಮುತ್ತುಗಳನ್ನು ಉದುರಿಸಿದರೆ, ಸ್ತ್ರೀಯರು ಕೇವಲ 20 ಸಾವಿರ ಮಾತ್ರವೇ ಶಬ್ದಗಳನ್ನು ಉದುರಿಸುತ್ತಾರೆ. ಹಾಗಾಗಿ ಪುರುಷರಿಗೆ ಈ ಅಣಿಮುತ್ತುಗಳನ್ನು ಹೆಕ್ಕಿಕೊಳ್ಳುವುದರಲ್ಲೇ ಸಮಯ ತಗುಲುತ್ತದೆ ಎಂಬ ಅಂಶವನ್ನು ಮಾತ್ರವೇ ಬೊಗಳೆ ರಗಳೆ ಬ್ಯುರೋ ತನಿಖೆ ನಡೆಸಿ ಹೆಕ್ಕಿಕೊಂಡಿದೆ.

ಆದರೆ ಮಾತುಗಾರಿಕೆ ಎಂಬುದು ಮಹಿಳೆಯರಿಗೆ ಮಾದಕ ದ್ರವ್ಯವಿದ್ದಂತೆ ಎಂದು ಹೇಳಿರುವುದರ ಹಿನ್ನೆಲೆಯನ್ನು ಪತ್ತೆ ಹಚ್ಚಲು ಬೊಗಳೆ ರಗಳೆ ಬ್ಯುರೋಗೆ ಸಾಧ್ಯವೇ ಆಗಲಿಲ್ಲ.

ಬಹುಶಃ ಸಂಶೋಧಕರು, ಆಗಾಗ್ಗೆ ಅಣಿಮುತ್ತು ಉದುರಿಸಿ, ಬೊಂಬಾಯಿಗರಾಗಿ ವಿವಾದಕ್ಕೆ ಸಿಲುಕುತ್ತಿರುವ ಜಯಶಬರಿಮಾಲರಂತಹ ಹೀರೋಯಿನ್‌ಗಳನ್ನು ಹೆರಾಯ್ನ್ ಎಂದು ತಪ್ಪು ತಿಳಿದುಕೊಂಡಿರಬಹುದೇ ಎಂಬ ಒಂದೇ ಒಂದು ಶಂಕೆ ಕಾಡಿದೆ.

ಈ ಮಧ್ಯೆ, ಸ್ತ್ರೀಯರ ಮಾತಿನ ಧಾವಂತಕ್ಕೆ ಅಷ್ಟಪಥದ ಎಕ್ಸ್‌ಪ್ರೆಸ್ ಹೆದ್ದಾರಿ ಇದ್ದರೆ, ಪುರುಷರ ಮಾತಿಗೆ ಹಳ್ಳಿಗಾಡಿನ ರಸ್ತೆಯೇ ಗತಿ ಇದೆ ಎಂದು ಹೋಲಿಕೆ ನೀಡಲಾಗಿರುವುದು ಪುರುಷರನ್ನು ಕೆರಳಿಸಿದೆ ಎಂದು ತಿಳಿದುಬಂದಿದೆ.

ಎಕ್ಸ್‌ಪ್ರೆಸ್ ಹೆದ್ದಾರಿಗಳಲ್ಲಿ ಗಾಡಿ ಸುಲಲಿತವಾಗಿ ಓಡಿಸಬಹುದು, ಆದರೆ ಹಳ್ಳಿಯ ಹೊಂಡಾಗುಂಡಿ ತುಂಬಿದ ರಸ್ತೆಗಳು ನಮಗೆ ಬೇಡ ಎಂಬುದು ಅವರ ಒಕ್ಕೊರಲ ಕೂಗಾಟವಾಗಿದೆ. ಹಾಗಾಗಿ ಈ ಸಂಶೋಧನೆ ನಡೆಸಿರುವುದು ಒಬ್ಬ ಸ್ತ್ರೀಯೇ ಆಗಿರುವುದರಿಂದ ಪುರುಷರು ಕೂಡ ಪ್ರತಿ-ಸಂಶೋಧನೆಗೆ ಸಜ್ಜಾಗಿದ್ದಾರೆ ಎಂದು ತಿಳಿದುಬಂದಿದೆ.

Monday, December 11, 2006

ಮಾನವರ ಮೇಧಾ ಶಕ್ತಿ ನಾಪತ್ತೆಗೆ ಕಾರಣ ಇಲ್ಲಿದೆ

(ಬೊಗಳೂರು ವಿಕಟ ಸಂಶೋಧನೆ ಬ್ಯುರೋದಿಂದ)
ಬೊಗಳೂರು, ಡಿ.11- ಬೊಗಳೆ ರಗಳೆ ಏಕಸದಸ್ಯ ಬ್ಯುರೋದ ಪ್ರಧಾನ ವರದಿಗಾರರಲ್ಲೊಬ್ಬನಾಗಿರುವ ಅಸತ್ಯ ಅನ್ವೇಷಿಯ ಮರ್ಕಟ ಮನಸ್ಸಿನ ಹಿಂದಿರುವ ಕಾರಣವನ್ನು ಎಲ್ಲೆಲ್ಲೋ ಅಲೆದಾಡಿ ಪತ್ತೆ ಹಚ್ಚಿದಾಗ ಸಾಕಷ್ಟು ವಿವರಗಳು ಹಠಾತ್ ಆಗಿ ತಿಳಿದುಬಂದಿವೆ.

ಇತ್ತೀಚೆಗೆ ಅನ್ವೇಷಿಯ ವರದಿಗಳಲ್ಲಿ ಬೊಗಳೆ ಇಲ್ಲ ಎಂಬ ಆರೋಪಗಳು ಬಂದಿರುವ ಹಿನ್ನೆಲೆಯಲ್ಲಿ ಅನ್ವೇಷಿ ಮಿದುಳನ್ನು ತಪಾಸಣೆಗೊಳಪಡಿಸಲಾಯಿತು. ಆಗ ಮಿದುಳಿನ ಒಂದು ಭಾಗ ನಾಪತ್ತೆಯಾಗಿರುವುದು ತಿಳಿದುಬಂದಿದೆ.

ಈ ಒಂದು ಭಾಗ ಎಲ್ಲಿ ಹೋಗಿದೆ ಎಂದು ತಿಳಿದುಕೊಳ್ಳಲು ಹೋದಾಗ, ಅದು ಅನ್ವೇಷಿಯೊಬ್ಬನದೇ ಸಮಸ್ಯೆ ಮಾತ್ರವಲ್ಲ, ಮರ್ಕಟ ಮನಸ್ಸಿನ ಮಾನವ ಕುಲದವರೆಲ್ಲರ ಸಮಸ್ಯೆ ಎಂಬುದು ಬಟಾ ಬಯಲಾಯಿತು.

ಮನುಷ್ಯನ ಮಿದುಳಿನ ಕೋಶಗಳು ತಿಮಿಂಗಿಲಗಳಲ್ಲಿ ಪತ್ತೆಯಾಗಿದ್ದುದೇ ಇದಕ್ಕೆ ಕಾರಣವಾದ ಅಂಶವಾಗಿತ್ತು. ಅಲ್ಲದೆ ರಾಜಕಾರಣಿಗಳು, ಭೂ ಕಬಳಿಕೆದಾರರು, ದಂಧೆಕೋರರು ಮುಂತಾದವರೆಲ್ಲಾ ಸಿಕ್ಕಿದ್ದನ್ನು ಕಬಳಿಸುವ ಬುದ್ಧಿಯ ಹಿಂದಿನ ರಹಸ್ಯವೂ ಇದರಿಂದ ಬಯಲಾಗತೊಡಗಿದೆ.

ಇಷ್ಟು ಮಾತ್ರವಲ್ಲ ಒಂದೊಂದೇ ರಹಸ್ಯ ಬಯಲಾಗುವುದರ ಸಾಲಿಗೆ, ರಾಜಕಾರಣಿಗಳು ಆಗಾಗ್ಗೆ ಬೇರೆ ಪಕ್ಷಗಳ ಕೊಳಕ್ಕೆ ಹೋಗಿ ಗಾಳ ಹಾಕುವುದು ಯಾಕೆ, ಕೆಲವೊಂದು ತಿಮಿಂಗಿಲಗಳನ್ನೇ ಹಿಡಿಯುವುದು ಯಾಕೆ ಎಂಬುದಕ್ಕೆ ಕೂಡ ಕಾರಣ ಪತ್ತೆಯಾಗಿದೆ.

ಆಗಾಗ್ಗೆ ಕೆಲವೆಡೆ ದಾಳಿ ನಡೆಸುವ ಸಿಬಿಐ ಅಧಿಕಾರಿಗಳು ದೊಡ್ಡ ದೊಡ್ಡ ತಿಮಿಂಗಿಲಗಳನ್ನಷ್ಟೇ ಹಿಡಿಯುತ್ತಿದ್ದಾರೆ. ತಿಮಿಂಗಿಲಗಳ ಹಿಂದಿರುವ ಮೇಧಾ ಶಕ್ತಿಯೇ ಇದಕ್ಕೆ ಕಾರಣ ಎಂಬ ಅದ್ಭುತ ಅಸತ್ಯವನ್ನು ಮಿದುಳಿಲ್ಲದಿದ್ದರೂ ಅನ್ವೇಷಿ ಪತ್ತೆ ಮಾಡಿದ್ದಾನೆ.

Friday, December 08, 2006

ಮಲೇಷ್ಯಾದಲ್ಲಿ ಬಾಲಿವುಡ್ ಚಿತ್ರೀಕರಣ ನಿಷೇಧ ಚಿಂತನೆ !

(ಬೊಗಳೂರು ಉಡುಗೆ ಬ್ಯುರೋದಿಂದ)
ಬೊಗಳೂರು, ಡಿ.8- ಮಲೇಷ್ಯಾದಲ್ಲಿ ಭಾರತೀಯ ಚಿತ್ರಗಳ ಚಿತ್ರೀಕರಣವನ್ನು ನಿಷೇಧಿಸಲಾಗುತ್ತಿದೆ ಎಂಬ ಮಹತ್ವದ ತನಿಖಾ ವರದಿಯನ್ನು ಹಿಂದೆಂದೂ ಕಂಡರಿಯದ ರೀತಿಯಲ್ಲಿ ಬೊಗಳೆ ರಗಳೆ ಬ್ಯುರೋ ಕೈಗೊಂಡಿದೆ.

ಇದಕ್ಕೆ ಕಾರಣವೆಂದರೆ ಎಲ್ಲವನ್ನೂ ಬಯಲಾಗಿಸುವ ಅಥವಾ ಹುಟ್ಟಿನ ಉಡುಗೆಗಳಲ್ಲಿ ಅಡ್ಡಾಡಬಾರದು ಎಂದು ಅಲ್ಲಿನ ಸ್ಥಳೀಯಾಡಳಿತೆಯು ಆದೇಶ ಮಾಡಿರುವುದು.

ಇದೀಗ ಚಿತ್ರೀಕರಣ ನೆಪದಲ್ಲಾದರೂ ಮಲೇಷ್ಯಾಕ್ಕೆ ಹೋಗುವ ಅವಕಾಶ ತಪ್ಪಿ ಹೋಗುವುದರಿಂದ ಆಕ್ರೋಶಗೊಂಡಿರುವ (ವಸ್ತ್ರ)ಖಾಲಿ ವುಡ್ ನಟೀಮಣಿಯರು, ಜನ್ಮಉಡುಗೆ ನಮ್ಮ ಆಜನ್ಮ ಸಿದ್ಧ ಹಕ್ಕು ಎಂದು ಹೋರಾಟಕ್ಕಿಳಿಯಲು ತೀರ್ಮಾನಿಸಿದ್ದಾರೆ.

ಈ ಹೋರಾಟದ ಮೊದಲನೆ ಹಂತದ ಅಂಗವಾಗಿ, ಬಟ್ಟೆ ಹಾಕಿಕೊಳ್ಳುವ ಬಾಲಿವುಡ್ ತಾರೆಯರನ್ನು ಅಲ್ಲಿಗೆ ಕಳುಹಿಸಲಾಗುತ್ತಿದೆ. ಅವರು ಈ ರಾಯಭಾರದಲ್ಲಿ ವಿಫಲರಾದಲ್ಲಿ, ಮತ್ತೆ ತೊಟ್ಟ ಉಡುಗೆಯ ಮತ್ತೆ ಉಡದಿರು (ತೊಟ್ಟ ಬಾಣವ ಮತ್ತೆ ತೊಡದಿರು ಎಂದು ಕುಂತಿಯು ಕರ್ಣನಲ್ಲಿ ಕೇಳಿಕೊಂಡ ಮಾದರಿಯಲ್ಲಿ) ಎಂಬ ಘೋಷಣಾ ವಾಕ್ಯದೊಂದಿಗೆ ಭರ್ಜರಿ ಪ್ರತಿಭಟನೆ ಮಾಡಲು ಬಿಚ್ಚಮ್ಮ ಸಂಘದ ಸಭೆಯಲ್ಲಿ ನಿರ್ಧರಿಸಲಾಯಿತು.

ಈಗ ಸಿನಿಕ ನಾಯಕಿರ ಜತೆಗೆ ಕೋಪ ಮರೆತು ಒಂದಾಗಿ ಸೇರಿಕೊಂಡಿರುವ ಬಿಚ್ಚೋಲೆ ಐಟಂಗಳೂ ಕೂಡ ಹೋರಾಟದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

Thursday, December 07, 2006

ಜ್ವರ ಇಳಿಸುವ ಫ್ರೀಜರ್ ಸಂಶೋಧನೆ

(ಬೊಗಳೂರು some-ಶೋಧನಾ ಬ್ಯುರೋದಿಂದ)
ಬೊಗಳೂರು, ಡಿ.7- ಜ್ವರ ಬಂದರೆ ಮೈ ಬಿಸಿಯಾಗುತ್ತೆ. ಅದನ್ನು ತಣಿಸಲು ಏನು ಮಾಡಬೇಕು ಎಂದು ಯೋಚಿಸುತ್ತಿದ್ದವರಿಗೆ ಹೊಸ ಉಪಕರಣವನ್ನು ಇಲ್ಲಿ ಸಂಶೋಧನೆ ಮಾಡಲಾಗಿದೆ.

ಸಿಕ್ಕಾ ಬಟ್ಟೆ ಜ್ವರ ಏರಿ ಮೈ ಬಿಸಿಯಾದರೆ ನಿಮ್ಮ ದೇಹವನ್ನು ಮಾತ್ರ Freezer ನಲ್ಲಿಟ್ಟರಾಯಿತು. ಆದರೆ ಅದನ್ನು ಶಾಶ್ವತವಾಗಿ ತಣಿಯದಂತೆ ನೋಡಿಕೊಳ್ಳಬೇಕು ಎಂಬುದು ತಜ್ಞರು ಸಲಹೆ ನೀಡಿದ್ದಾರೆ !

ಹಾಗಾಗಿ ಫ್ರೀಜರ್ ಅನ್ನುವುದು ಕೇವಲ ತಂಗಳನ್ನ ಪೆಟ್ಟಿಗೆಯಾಗಿ, ಅನಾರೋಗ್ಯಕ್ಕೆ ಪೂರಕವಾಗಿ ಮಾತ್ರವೇ ಅಲ್ಲ, ಆರೋಗ್ಯವನ್ನೂ ರಿಪೇರಿ ಮಾಡಬಹುದಾಗಿದೆ ಎಂಬುದನ್ನು ಈ ಸಂಶೋಧಕ ಮಹಾಶಯ ತೋರಿಸಿಕೊಟ್ಟಿದ್ದಾನೆ.

ಆದರೆ ಜ್ವರ ಬಂದ ಮಗುವಿನ ಮೈ ಬಿಸಿ ಇಳಿಸಲು ಆತ ಮಾಡಿದ ಪ್ರಯತ್ನಗಳು ಮಾತ್ರ ಸಂಶೋಧನೆಗೆ ತಕ್ಕುದಾದಂತಿತ್ತು. ಯಾವುದೇ ಸಂಶೋಧನೆಗಳು accident ನಿಂದಲೇ ಆಗುತ್ತವೆ ಎಂಬ ವೇದವಾಕ್ಯವನ್ನು ಇಲ್ಲಿ ಸ್ಮರಿಸಬಹುದು.

ಮೊದಲಿಗೆ ಆತ ಮಗುವಿಗೆ ಚಂಡಿ ಬಟ್ಟೆ ಕಟ್ಟಿದ, ಅದನ್ನು ಒಣಗಿಸಲು ಮಗುವನ್ನು ಗಾಳಿಯಲ್ಲಿರಿಸಿದ. ಮಗು ಒಣಗಿದ್ದು ಜಾಸ್ತಿಯಾದ ಕಾರಣ, ಸ್ವಲ್ಪ humidity ಬರಲಿ ಅಂತ ಮತ್ತೆ ಫ್ರಿಜ್‌ನಲ್ಲಿಟ್ಟ.

ಇದೀಗ ಈ ಸಂಶೋಧನೆ ಮಾಡಿದ ವ್ಯಕ್ತಿಯೇ ಫ್ರೀಜರ್‌ನಂತಹ ಕೊಠಡಿಯಲ್ಲಿ ಕಾಲ ಕಳೆಯುತ್ತಿದ್ದಾನೆ ಅಂತ ತಿಳಿದುಬಂದಿದೆ. ಆದರೆ ಇಲ್ಲಿ ಆತನಿಗೆ ಎಣಿಸುವುದಕ್ಕೆ ಎದುರಿಗೆ ಕಂಬಿಗಳನ್ನು ಇರಿಸಲಾಗಿದೆ ಎಂದೂ ತಿಳಿದುಬಂದಿದೆ.

Wednesday, December 06, 2006

ಪ್ರೇಮಿಗಳ ಆತ್ಮಹತ್ಯೆ ಹೆಚ್ಚಳಕ್ಕೆ ಕಾರಣ

(ಬೊಗಳೂರು ವಿಫಲ ಪ್ರೇಮ ಬ್ಯುರೋದಿಂದ)
ಬೊಗಳೂರು, ಡಿ.6- ಪ್ರೇಮ ರೋಗ ಮತ್ತು ಪ್ರೇಮ ವೈಫಲ್ಯದಿಂದ ಬಳಲುತ್ತಾ ಹೃದಯ ಹಾಳು ಮಾಡಿಕೊಂಡವರಿಗೊಂದು ಸಿಹಿ ಸುದ್ದಿ. ಇದೇ ವೇಳೆ, ಪ್ರೀತಿ ಪ್ರೇಮದ ಹೆಸರಿನಲ್ಲಿ ಆತ್ಮಹತ್ಯೆಗೆ ಶರಣಾಗುವ ಯುವ ಪ್ರೇಮಿಗಳ ಸಂಖ್ಯೆ ಹೆಚ್ಚಾಗುತ್ತಿರುವುದಕ್ಕೂ ಕಾರಣ ಪತ್ತೆ ಹಚ್ಚಲಾಗಿದೆ.

ಹಾಳಾದ ಹೃದಯವನ್ನು ಹುಟ್ಟುವ ಮೊದಲೇ ಸರಿಪಡಿಸಲಾಗುತ್ತದೆ ಎಂಬ ಸುದ್ದಿ ಇದಾದರೂ, ಈ ಜನ್ಮದಲ್ಲಿ ನಾವಿಬ್ಬರೂ ಒಂದಾಗಲಿಲ್ಲ, ಮುಂದಿನ ಜನ್ಮದಲ್ಲಾದರೂ ಒಂದಾಗೋಣ ಎನ್ನುತ್ತಾ ಹೃದಯ ಛಿದ್ರವಾಗಿ ಆತ್ಮಹತ್ಯೆಗೆ ಶರಣಾದವರು ಇದರಿಂದ ಭಾರೀ ಹರ್ಷಿತರಾಗಿದ್ದಾರೆ ಎಂದು ತಿಳಿದುಬಂದಿದೆ.

ಅವರು ಹರ್ಷಿತರಾಗಿ ಹೋದರೂ, ಈ ಲೋಕದಲ್ಲಿ ಪ್ರೇಮಿಗಳ ಆತ್ಮಹತ್ಯೆ ಪ್ರಮಾಣವೂ ಹೆಚ್ಚುತ್ತಿರುವುದಕ್ಕೆ ಇದೇ ಕಾರಣ ಎಂಬ ಕಳವಳಕಾರಿ ಅಂಶವನ್ನು ಬೊಗಳೆ ರಗಳೆ ಬ್ಯುರೋ ಪತ್ತೆ ಹಚ್ಚಿದೆ.

ಹುಟ್ಟುವ ಮೊದಲೇ ಹೃದಯ ಸರಿಪಡಿಸಿಕೊಳ್ಳಲು ಅವಕಾಶವಿರುವುದರಿಂದ, ಈ ಜನ್ಮದಲ್ಲಿ ಛಿದ್ರಗೊಂಡ ಹೃದಯವನ್ನು ಮರು ಜನ್ಮದಲ್ಲಿ ರಿಪೇರಿ ಮಾಡಿಸಿಕೊಳ್ಳುವ ಸಲುವಾಗಿ ಅವರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ತಿಳಿದುಬಂದಿದೆ.

ಈ ತಂತ್ರಜ್ಞಾನದ ಸಂಶೋಧಕನಿಗೆ ಅತ್ಯುನ್ನತ ಪ್ರೇಮಿ ಪ್ರಶಸ್ತಿ ನೀಡಲು ಪ್ರೇಮಿಗಳು ನಿರ್ಧರಿಸಿದ್ದರೆ, ಆತನನ್ನು ಹಿಡಿದು ಚಚ್ಚಲು ಪ್ರೇಮಿಗಳ ಹೆತ್ತವರು ಸಜ್ಜಾಗುತ್ತಿದ್ದಾರೆ ಎಂದು ತಿಳಿದುಬಂದಿದೆ.

ಒಟ್ಟಿನಲ್ಲಿ ಪ್ರೇಮಿಗಳ ಹೃದಯ ಲಬ್ ಡಬ್ ಲಬ್ ಡಬ್ ಎಂದು ಬಡಿದುಕೊಳ್ಳುತ್ತಿದ್ದರೆ, ಪ್ರೇಮಿಗಳ ಹೆತ್ತವರ ಹೃದಯ ಲಬೋ ಲಬೋ ಅಂತ ಮಾತ್ರವೇ ಬಡಿದುಕೊಳ್ಳುತ್ತಿರುವುದು ವಿಜ್ಞಾನ ರಂಗಕ್ಕೆ ಹೊಸ ಸವಾಲಾಗಿ ಪರಿಣಮಿಸಿದೆ.

Monday, December 04, 2006

ರಾಜಕಾರಣಿಗಳ ಬಾಯಲ್ಲಿ 'ಬೊಗಳೆ' ಮಂತ್ರ!

(ಬೊಗಳೂರು ಅರಾಜಕ ಬ್ಯುರೋದಿಂದ)
ಬೊಗಳೂರು, ಡಿ.4- ರಾಜಕಾರಣಿಗಳೂ ಸತ್ಯ ನುಡಿಯಲಾರಂಭಿಸಿರುವುದು ಬೊಗಳೆ ರಗಳೆ ಬ್ಯುರೋವನ್ನು ವಿಶೇಷವಾಗಿ ಕೆರಳಿಸಿದ ಪರಿಣಾಮವಾಗಿ, ತಾಳ್ಮೆಗೆಡದಿರುವಂತೆ ಎಲ್ಲಾ ಪ್ರಜೆಗಳಿಗೆ ಮನವಿ ಮಾಡಿಕೊಳ್ಳಲಾಗಿದೆ.
 
ಹೀಗೆ ಸತ್ಯ ಹೇಳಲಾರಂಭಿಸಿರುವುದರಿಂದ ಕಳವಳಗೊಂಡ ಬ್ಯುರೋ ತಂಡವು ನೇರವಾಗಿ ಮಾವನ (ಮತ್ತು ತಮ್ಮ) ಸಂಪನ್ಮೂಲಗಳ ಅಭಿವೃದ್ಧಿ ಮಂತ್ರಿ ದುರ್ಜನ ಸಿಂಹ ಅವರನ್ನು ಮಾತನಾಡಲಾರಂಭಿಸಿತು. ಇದಕ್ಕೆಲ್ಲಾ ಕಾರಣವೆಂದರೆ ದೇಶದ ಜನತೆಯ ಸಹಿಷ್ಣುತೆಯೇ ಪ್ರಜಾಸತ್ತೆ ಸತ್ತೇಹೋಗದಿರಲು ಕಾರಣ ಎಂದು ಅವರು ಹೇಳಿಕೆ ನೀಡಿರುವುದು!
 
ಕಳೆದ 60 ವರ್ಷಗಳಿಂದ ಮೇಯಲು ಸಾಮರ್ಥ್ಯವಿರುವವರು ಮೇಯ್ದುಕೊಂಡೇ ಇರುವಂತಾಗಲು ಈ ದೇಶದ ಪ್ರಜೆಗಳ ತಾಳ್ಮೆ ಮತ್ತು ಪರಿಸ್ಥಿತಿಯನ್ನು ಅಳೆದು ತೂಗಿ ನೋಡಿ "ಸುಮ್ಮನಿರುವುದೇ ಲೇಸು" ಎಂದು ತೀರ್ಮಾನಿಸುವ ಗುಣಗಳೇ ಕಾರಣ ಎಂದು ಅವರು ನಮ್ಮ ಬ್ಯುರೋಗೆ ಮಾತ್ರವೇ ಸ್ಪಷ್ಟಪಡಿಸಿದ್ದಾರೆ.
 
ನೀವೇ ನೋಡಿ, ಬದುಕಲು ಬೇಕಾದ ವಸ್ತುಗಳ ಬೆಲೆಯನ್ನು ಎಷ್ಟು ಎತ್ತರಕ್ಕೇರಿಸಿದರೂ ಒಂದೆರಡು ದಿನ ಕೂಗಾಡಿ ಗಲಾಟೆ ಮಾಡುತ್ತಾರೆಯೇ ಹೊರತು, ಬೆಲೆ ತಗ್ಗಿಸುವವರೆಗೂ ಅವರೇನೂ ಬಿಗುವಾಗಿರುವುದಿಲ್ಲ. ಶಾಂತರಾಗಿ ತಮ್ಮ ಪಾಡಿಗೆ ತಾವು ಮರಳುತ್ತಾರೆ. ಅವರಿಗೂ ಪರಿಸ್ಥಿತಿಯ ಅರಿವಾಗಿರುತ್ತದೆ. ಯಾವುದೇ ಪ್ರತಿಭಟನೆ ಮಾಡಿ ಪ್ರಯೋಜನ ಇಲ್ಲ, ಆಳುವವರು ಈ ಬಗ್ಗೆ ಒಂದು ಕುಡಿನೋಟವನ್ನೂ ಹಾಯಿಸುವುದಿಲ್ಲ ಎಂಬ ಸತ್ಯಾಂಶಕ್ಕೆ ಅವರು ಒಗ್ಗಿ ಹೋಗಿದ್ದಾರೆ ಎಂದವರು ತಿಳಿಸಿದರು.
 
ಮೀಸಲಾತಿ ವಿಷಯಗಳೂ ಅಷ್ಟೇ, ಒಂದು ನೂರಿನ್ನೂರು ಮಂದಿ ಪ್ರತಿಭಟನೆ ಮಾಡಿ ಆತ್ಮದಹನ ಮುಂತಾದ ಕಾರ್ಯಗಳಿಗೆ ಮುಂದಾಗಬಹುದು. ಆದರೆ ಇದರ ಬಗ್ಗೆ ಎಲ್ಲಾ ತಲೆ ಕೆಡಿಸಿಕೊಂಡರೆ, ನಮ್ಮ ಜೇಬು ತುಂಬಿಸಿಕೊಳ್ಳುವುದು, ಓಟಿನ ಬ್ಯಾಂಕ್ ಬ್ಯಾಲೆನ್ಸ್ ವೃದ್ಧಿಸಿಕೊಳ್ಳುವುದು ಹೇಗೆ. ಅವರು ಅವರ ಪಾಡಿಗೆ ಹೋರಾಟ ಮಾಡುತ್ತಾ ಇರುತ್ತಾರೆ ಎಂದು ಕ್ಯಾಕರಿಸಿ ನಕ್ಕರು.
 
ಈ ದೇಶದ ಪ್ರಜೆಗಳ ತಾಳ್ಮೆಯೇ ನಮ್ಮನ್ನು ಎಲ್ಲಾ ರಂಗಗಳಲ್ಲೂ, ಪ್ರತಿಯೊಂದು ಕ್ಷಣ ಕ್ಷಣವೂ ರಕ್ಷಿಸುತ್ತಿರುತ್ತದೆ. ಹಗರಣ ಬೆಳಕಿಗೆ ಬಂದಾಗ ಒಂದಷ್ಟು ಕೂಗಾಡುತ್ತಾರೆ, ತನಿಖಾ ಆಯೋಗ ರಚಿಸಿದ ತಕ್ಷಣ ಬಾಯಿ ಮುಚ್ಚುತ್ತಾರೆ. ತನಿಖಾ ಆಯೋಗದಲ್ಲಿ ನಮ್ಮವರನ್ನೇ ನೇಮಿಸಿದರಾಯಿತಲ್ಲಾ ಎಂದು ತಮ್ಮ ಚಾಣಕ್ಯ ನೀತಿಯ ಪ್ರಯೋಗಾನುಭವವನ್ನು ಮುಂದಿಟ್ಟರು.

Saturday, December 02, 2006

ಮುಕ್ತ ಮಾಲಿನ್ಯವಾಯು ಯಾನ!

(ಬೊಗಳೂರು ಮಾಲಿನ್ಯ ಬ್ಯುರೋದಿಂದ)
ಬೊಗಳೂರು, ಡಿ.2- ದೇಶದಲ್ಲಿ ಮುಕ್ತ ವಾಯುಯಾನ ನೀತಿಯನ್ನು ಜಾರಿಗೊಳಿಸಲಾಗಿರುವುದರಿಂದ ಸೇವನೆಗೆ ಯುಕ್ತವಾದ ವಾಯು ಇಲ್ಲದ ಕಾರಣ ಪ್ರಜೆಗಳು ತತ್ತರಿಸಿದ ಘಟನೆ ವರದಿಯಾಗಿದೆ.
 
ನಗರ ಪ್ರದೇಶಗಳಲ್ಲಿ ಪಬ್ ಸಂಸ್ಕೃತಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಹೆಚ್ಚಿನ ಮಂದಿ ಮುಕ್ತವಾಗಿ ವಾಯುವಿನಲ್ಲಿ ತೇಲಾಡುತ್ತಾ ಇರುತ್ತಾರಾದುದರಿಂದ ಅವರ ಮೇಲೆ ಈ ಹೊಸ ನೀತಿಯು ಯಾವುದೇ ಪ್ರಯೋಜನ ಬೀರಿಲ್ಲ ಎಂದು ಸಮೀಕ್ಷೆಗಳು ತಿಳಿಸಿವೆ.
 
ಈಗಾಗಲೇ ಕೊಚ್ಚೆ ಕೊಳಚೆಗಳು ಮಾತ್ರವಲ್ಲದೆ ವಾಹನಗಳೂ ಹೆಚ್ಚಾಗಿ ನಗರ ಪ್ರದೇಶಗಳಲ್ಲಿ ವಾಯು ಬಹುತೇಕ ಮಲಿನಗೊಂಡಿದೆ. ಇದೀಗ ಮುಕ್ತ ವಾಯು ತುಂಬಲು ಅವಕಾಶ ನೀಡಿರುವುದರಿಂದಾಗಿ ವಿದೇಶಗಳಿಂದ ಬರುವ ದುರ್ವಾಸನೆಯುಕ್ತ ತ್ಯಾಜ್ಯಗಳನ್ನೂ ತಂದು ದೇಶದ ಮಾರುಕಟ್ಟೆಗಳಲ್ಲಿ ಸುರಿಯಲಾಗುತ್ತಿದೆ.
 
ಇದರಿಂದ ಅವುಗಳು ಹೊರ ಸೂಸುವ (ದುರ್)ಗಂಧಭರಿತ ವಾಯು ನಗರವಿಡೀ ತುಂಬತೊಡಗಿದ್ದು, ಶುದ್ಧ ವಾಯುವಿಲ್ಲದೆ ಜನಜೀವನ ಅಸ್ತವ್ಯಸ್ತಗೊಂಡಿದೆ.
 
ಈಗಾಗಲೇ ಮುಕ್ತ ವಾಯುಯಾನದ ಸುಖವನ್ನು ವಿಮಾನಯಾನ ಕಂಪನಿಗಳು ಸೂಕ್ತವಾಗಿ ಅನುಭವಿಸುತ್ತಿದ್ದು, ಗಗನಕ್ಕೇರುತ್ತಿರುವ ವಿಮಾನಗಳ ಸಂಖ್ಯೆ ಹೆಚ್ಚಾಗುತ್ತಿರುವಂತೆಯೇ ವಿಮಾನ ಪ್ರಯಾಣ ದರಗಳು ಗಗನದಿಂದ ಇಳಿಯುತ್ತಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗಿದೆ.
 
ಆದರೆ ವಿಮಾನ ಪ್ರಯಾಣ ದರ ಇಳಿಕೆ ಎಂದು ವಾಯುಯಾನ ಕಂಪನಿಗಳು ಮುಕ್ತವಾಗಿಯೇ ಜಾಹೀರಾತು ನೀಡಿ, conditions apply ಅನ್ನೋದನ್ನು ಆಗಸದಲ್ಲಿ ಯಾರಿಗೂ ಕಾಣಿಸದಷ್ಟು ಎತ್ತರದಲ್ಲಿ ಬರೆದಿರುವುದರಿಂದಾಗಿ ಅವುಗಳು ಯಾರ ಕಣ್ಣಿಗೂ ಗೋಚರಿಸದೆ ವಾಯುಯಾನಿಗಳ ಸಂಖ್ಯೆ ಮೇಲಕ್ಕೇರಿದೆ ಎಂದು ತಿಳಿದುಬಂದಿದೆ.
 
ಈ ಮಧ್ಯೆ, ಮುಕ್ತ ವಾಯುಯಾನ ಎಂಬ ವಿಷಯವನ್ನು ಉಚಿತ ವಾಯುಯಾನ ಎಂದು ತಿಳಿದುಕೊಂಡವರು ಕೂಡ ವಿಮಾನವೇರಲು ಧಾವಿಸತೊಡಗಿದ್ದು, ವಿಮಾನ ನಿಲ್ದಾಣಗಳಲ್ಲಿ ಜನಜಂಗುಳಿ ಉಂಟಾಗುತ್ತಿದೆ.

Friday, December 01, 2006

ವಿಶ್ವ ಏಡ್ಸ್ ದಿನ : ಸಡಗರದ ಆಚರಣೆ !

(ಬೊಗಳೂರು ಆಚರಣೆ ಬ್ಯುರೋದಿಂದ)
ಬೊಗಳೂರು, ಡಿ.1- ಇಂದು ಅಂತಾರಾಷ್ಟ್ರೀಯ ಏಡ್ಸ್ ದಿನಾಚರಣೆ. ಈ ದಿನವನ್ನು ವಿಶ್ವಾದ್ಯಂತ ಸಂಭ್ರಮ ಸಡಗರಗಳಿಂದ ವಿಧ್ಯುಕ್ತವಾಗಿ ಆಚರಿಸಲಾಯಿತು ಎಂದು ತಿಳಿದುಬಂದಿದೆ.
 
ಸುಮಾರು 25 ವರ್ಷಗಳ ಹಿಂದೆ ಏಡ್ಸ್‌ಗೆ ಕಾರಣವಾಗುವ ಎಚ್ಐವಿ (ವೈರಸ್) ಪತ್ತೆಯಾದ ಬಳಿಕ ಏಡ್ಸ್‌ ಕುರಿತಾಗಿ ಭರ್ಜರಿ ಪ್ರಗತಿಯಾಗಿದೆ. ಈ ಬಗ್ಗೆ ಗ್ರಾಮ ಗ್ರಾಮಗಳಲ್ಲೂ ಸಾಕಷ್ಟು ಬೆಳವಣಿಗೆ ಕಂಡಿದ್ದು, ತನ್ನ ಆಳವಾದ ಬೇರುಗಳನ್ನು ಕುಗ್ರಾಮಗಳಿಗೂ ತೂರಿಸಿದೆ.
 
ಈ ಶುಭವಸರದಲ್ಲಿ, ಏಡ್ಸ್ ನಿಷೇಧಿಸಲು ಸರಕಾರ ಚಿಂತಿಸುತ್ತಿದೆ ಎಂದು ತಿಳಿದುಬಂದಿದೆ.
 
ಏರುತ್ತಿರುವ ಜನಸಂಖ್ಯೆ ಹತೋಟಿಗೆ ತರಲು ಪ್ರಮುಖ ಆಯುಧಗಳಲ್ಲೊಂದಾಗಿರುವ ಈ ರೋಗವನ್ನು ನಿಷೇಧಿಸಿದರೆ ಜನಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು ಎಂಬುದು ಪ್ರತಿಪಕ್ಷಗಳ ಕೂಗಾಟ.
 
ಆದರೆ ಪ್ರತಿಪಕ್ಷಗಳ ಒಕ್ಕೂಟ ಅಂಗ ಪಕ್ಷವೊಂದು, ಏಡ್ಸ್ ನಿಷೇಧಿಸಿದಲ್ಲಿ ನಾವು ಜನಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕುವುದಾದರೂ ಹೇಗೆ ಎಂಬ ಕಳವಳ ವ್ಯಕ್ತಪಡಿಸಿದೆ.

Thursday, November 30, 2006

'ಟ್ರಾಫಿಕ್' ಜಾಮ್‌ನಗರ ವಿರುದ್ಧ ಟ್ರಾಫಿಕ್ ಜಾಮ್ !

{ನವೆಂಬರ್ ಉತ್ಸವ ಇಂದಿಗೆ ಕೊನೆಗೊಳ್ಳುತ್ತಿರುವ ಸಂದರ್ಭದಲ್ಲಿ ವಿಶೇಷ ವರದಿ}
(ಬೆಂಗಳೂರು ಜಾಮ್ ಬ್ಯುರೋದಿಂದ)
ಬೊಗಳೂರು, ನ.30- ಬ್ಯಾಂಗಲೋರ್, ಮ್ಯಾಂಗಲೋರ್, ಮೈಸೋರ್ ಮುಂತಾದ Oreಗಳ ಹೆಸರನ್ನು ಊರು ಅಂತ ಬದಲಾಯಿಸಿ ಕನ್ನಡೀಕರಣ ಮಾಡುವಲ್ಲಿ ಸಾಕಷ್ಟು ಪ್ರಯತ್ನಗಳು ನಡೆಯುತ್ತಿರುವಂತೆಯೇ ಅದನ್ನು ಗುಜರಾತಿಗೆ ಹೋಲಿಸುವ ಮತ್ತೊಂದು ಹೊಸ ಪ್ರಯತ್ನ ನಡೆಸುತ್ತಿದೆ ಎಂಬುದು ಬೊಗಳೆ ರಗಳೆ ಬ್ಯುರೋದ ಗಮನಕ್ಕೆ ಬಂದಿದ್ದು ಇಲ್ಲಿ.

ಗುಜರಾತಿನ ಜಾಮ್‌ ನಗರವನ್ನು ಹೈಜಾಕ್ ಮಾಡಿ ಬೆಂಗಳೂರೆಂಬ ಬ್ರೆಡ್‌ಗೆ ಅಂಟಿಸಿಬಿಡೋ ಯತ್ನ ನಡೆಸಲಾಗುತ್ತಿದ್ದು, ಇದನ್ನು ಬೊಗಳೂರು ಬ್ಯುರೋ ತೀವ್ರವಾಗಿ ವಿರೋಧಿಸುತ್ತದೆ. ಇದರ ಹಿಂದಿರುವ ಪ್ರಮುಖ ಕಾರಣವೆಂದರೆ ಮುಂದೊಂದು ದಿನ ಬೊಗಳೂರಿನ ಹೆಸರನ್ನೂ ಬದಲಾಯಿಸಿಬಿಡಬಹುದೆಂಬ ಆತಂಕವೇ ಆಗಿದೆ ಎಂಬುದು ಯಾರಿಗೂ ತಿಳಿಯದ ಅಸತ್ಯ.

ಇದೀಗ ಟ್ರಾಫಿಕ್ ಜಾಮ್ ನಗರ ಎಂದು ಬದಲಾಯಿಸುವ ಯತ್ನದಿಂದ ತೀವ್ರವಾಗಿ ಆಕ್ರೋಶಿತರಾಗಿರುವ ಕಟ್ಟಾಳುಗಳು, ಮತ್ತೊಂದು ಪ್ರತಿಭಟನೆ ಏರ್ಪಡಿಸಿ ಟ್ರಾಫಿಕ್ ಜಾಮ್ ಮಾಡಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

ಮುಂಬಯಿಯನ್ನು ಬೊಂಬಾಯಿಯಾಗಿಸಲು ಯತ್ನಿಸುವ ವಿರುದ್ಧ ಈ ಹಿಂದೆಯೇ ಬೊಗಳೂರು ಬ್ಯುರೋ ಜನಜಾಗೃತಿ ಮೂಡಿಸಿದ್ದನ್ನು ಇಲ್ಲಿ ಸ್ಮರಿಸಿಕೊಂಡು ದೀಪ ಹಚ್ಚಬಹುದು.

ಬೆಂಗಳೂರು ಈಗಾಗಲೇ ಐಟಿ, ಬಿಟಿ ಕಂಪನಿಗಳಿಗೆ ಚಿನ್ನದ ore ನೀಡುವ ತಾಣವಾಗಿದೆ. ಮತ್ತು ಸಾಮಾನ್ಯ ಕನ್ನಡಿಗರಿಗೆ daily Bread ನೀಡುವ ತಾಣವೂ ಆಗಿದೆ. ಮಾತ್ರವಲ್ಲ ಇಲ್ಲಿ ನಾಯಿಗಳಿಗೂ ಬಾಲ ಅಲ್ಲಾಡಿಸಲು ಜಾಗದ ಕೊರತೆಯಿದೆ. ಈ ಕಾರಣಕ್ಕೆ ಟ್ರಾಫಿಕ್ ಜಾಮ್ ಸೇರಿಸಿಕೊಂಡು ಅದಕ್ಕೆ ಜಾಮ್ ಹಚ್ಚಲು ಹೊರಡುತ್ತಿರುವುದಕ್ಕೂ ಪ್ರತಿಭಟನೆ ಮಾಡದಿದ್ದರೆ ನಾವೇಕೆ ಇರುವುದು ಎಂಬ ಕೂಗಾಟ ಕೇಳಿಬರುತ್ತಿದೆ.

ಈಗಾಗಲೇ ಸುವರ್ಣ ರಾಜ್ಯೋತ್ಸವ ಆಚರಣೆ ಆರಂಭವಾಗಿ ಒಂದು ತಿಂಗಳಾಗಿದೆ. ಈ ಸಂದರ್ಭದಲ್ಲೇ ಇಂಥ ದುಸ್ಸಾಹಸಕ್ಕೆ ಇಳಿಯುವವರಿಗೆ ಎಚ್ಚರಿಕೆ ನೀಡಲು ಪ್ರತಿದಿನ ಒಂದು ಪುಟ್ಟ ಪ್ರತಿಭಟನೆ ಏರ್ಪಡಿಸಲು ನಿರ್ಧರಿಸಲಾಗಿದೆ.

ಒಂದು ಪುಟ್ಟ ಪ್ರತಿಭಟನೆಯಿಂದ ಇಡೀ ಬೆಂಗಳೂರು ನಗರದ ಸಂಚಾರ ವ್ಯವಸ್ಥೆ ಅಲ್ಲೋಲ ಕಲ್ಲೋಲವಾಗುತ್ತದೆ ಎಂಬ ಕಟು ಸತ್ಯವೇ ಅವರ ಈ ಪ್ರತಿಭಟನೆಗೆ ಪ್ರೇರಣೆ ಎಂದೂ ತಿಳಿದುಬಂದಿದೆ.

Wednesday, November 29, 2006

ಸಂಸತ್ತಿನಲ್ಲೂ ಉದ್ಯಮ ಸ್ಥಾಪನೆ

(ಬೊಗಳೂರು ದಂಧೆ ಬ್ಯುರೋದಿಂದ)
ಬೊಗಳೂರು, ನ.29- ಸುಮ್ಮನೆ ಬೈಕು, ಸ್ಕೂಟರ್ ಓಡಿಸುತ್ತಾ ಹಾಯಾಗಿ ಇರಬೇಕಾದ ಉದ್ಯಮಿಗಳೆಲ್ಲಾ ರಾಜಕೀಯ ಗೊತ್ತಿಲ್ಲದೆ "ದೇಶ ಆಳುವ ಉದ್ಯಮ"ಕ್ಕೆ ಕಾಲಿಟ್ಟರೆ ಹೀಗೇ ಆಗೋದು. ಇವರ ಉದ್ಯಮವನ್ನು ಮುಳುಗಿಸಿಯೇ ತೀರುತ್ತೇವೆ ಎಂದು ರಾಜಕೀಯ ಪಕ್ಷಗಳು ಪಣತೊಟ್ಟಿರುವ ಪ್ರಕರಣವೊಂದು ವರದಿಯಾಗಿದೆ.

ಸಂಸತ್ ಕಲಾಪ ಮುಂದೂಡಿಕೆಗೆ ಕಾರಣವಾಗುವ ರಾಜಕೀಯ ಪಕ್ಷಗಳಿಗೆ ಗಂಟೆಗೆ ಒಂದು ಕೋಟಿ ದಂಡ ವಿಧಿಸುವ ಮೂಲಕ ಇವರು ಬಹುಕೋಟಿ ರೂ.ಗಳ ಉದ್ಯಮ ಮಾಡಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ರಾಜಕೀಯ ಪಕ್ಷಗಳು, ಬಾಹುಲ್ ರಜಾಜ್ ಬೈಕುಗಳ ಟಯರಿನ ಗಾಳಿ ತೆಗೆಯಲು ಸಿದ್ಧತೆ ನಡೆಸುತ್ತಿವೆ.

ಇವರಿಗೆ ಎಲ್ಲಿ ಹೋದರೂ ಉದ್ಯಮ ಮಾಡುವ ಮನಸ್ಥಿತಿ. ದಿನಾಲೂ ಪ್ರತಿ ರಾಜಕೀಯ ಪಕ್ಷವೂ ಸಂಸತ್ತಿನಲ್ಲಿ ಕೋಲಾಹಲ ಮಾಡಿ ಗದ್ದಲ ಎಬ್ಬಿಸುತ್ತಿದೆ. ಹಾಗಿರುವಾಗ ಒಂದು ಅಧಿವೇಶನದ ಅವಧಿಯಲ್ಲಿ ಭರ್ಜರಿ ಬಹುಕೋಟಿ ರೂಪಾಯಿ ಸಂಗ್ರಹವಾಗುತ್ತದೆ ಎಂಬ ಶುದ್ಧ ಉದ್ಯಮದ ಮಂಡೆಯ ರಜಾಜ್, ರಾಜಕೀಯಕ್ಕಿನ್ನೂ ಹೊಸಬರೂಂತ ಕಾಣಿಸುತ್ತೆ ಅಂತಾನೂ ಬೊಗಳೆ ಮಾತುಗಳು ಕೇಳಿಬಂದಿವೆ.

ರಜಾಜ್ ಅವರು ಪಕ್ಷೇತರನಾಗಿರುವುದೇ ಇದರ ಹಿಂದಿನ ದೊಡ್ಡ ಗುಟ್ಟು. ಯಾಕೆಂದರೆ ಇವರಿಗೆ ಪಕ್ಷವೇ ಇಲ್ಲ. ಹಾಗಾಗಿ ಅವರು ಗದ್ದಲ ಮಾಡಿದರೆ ದಂಡ ಕಟ್ಟಬೇಕಾಗಿಲ್ಲ. ಇದೇ ಕಾರಣಕ್ಕೆ ಇತರ ರಾಜಕೀಯ ಪಕ್ಷಗಳನ್ನು ಅವರ "ಉದ್ಯಮದ ಪ್ರತಿಸ್ಪರ್ಧಿ" ಎಂದು ಭಾವಿಸಿ ಮುಳುಗಿಸಲು ಹೊರಟಿದ್ದಾರೆ ಎಂದಿರುವ ರಾಜಕೀಯ ಪಕ್ಷಗಳು, ಯಾವುದೇ ಕಾರಣಕ್ಕೂ ನಮ್ಮ ರಾಜಕೀಯೋದ್ಯಮ ಮುಳುಗಲು ಬಿಡುವುದಿಲ್ಲ ಎಂದು ಪಣ ತೊಟ್ಟಿವೆ.

ನಮಗೆ ನಮ್ಮದೇ ಆದ ಖಾಸಗಿ ತುರ್ತು ಕೆಲಸಗಳಿರುತ್ತವೆ. ಯಾವುದಾದರೂ ಪಾರ್ಟಿ, ಮದುವೆ, ಸುಲಿಗೆ ಇತ್ಯಾದಿ ಕಾರ್ಯಕ್ರಮಗಳಿಗೆ ಹೋಗಬೇಕಿರುತ್ತದೆ. ಅಥವಾ ರಾತ್ರಿಯಿಡೀ ಪಾರ್ಟಿ ಮಾಡಿ ಹಗಲು ನಿದ್ದೆಯ ಅವಶ್ಯಕತೆಯಿರುತ್ತದೆ. ಇದೆಲ್ಲಾ ನಾವು ಮಾಡುವುದು ದೇಹದ ... ಅಲ್ಲಲ್ಲ... ದೇಶದ ಒಳಿತಿಗಾಗಿ. ಹೀಗೆ ನಿದ್ದೆಗೆಟ್ಟಿರುವಾಗ ಕಲಾಪದಲ್ಲಿ ಪಾಲ್ಗೊಳ್ಳುವುದಾದರೂ ಹೇಗೆ? ಎಂದು ಪ್ರಶ್ನಿಸಿರುವ ಅವರು, ಸದನದಿಂದ ಹೊರ ಬೀಳುವುದಕ್ಕೋಸ್ಕರ ಕಲಾಪ ಸ್ಥಗಿತಗೊಳಿಸುವಷ್ಟು ಕೋಲಾಹಲ ಮಾಡಲೇಬೇಕಾಗುತ್ತದೆ ಎಂದು ಸಮರ್ಥಿಸಿಕೊಂಡಿದ್ದಾರೆ.

ನಾವು ಗಲಾಟೆ ಮಾಡಿದರೆ ಪಕ್ಷಕ್ಕೇಕೆ ದಂಡ ವಿಧಿಸಬೇಕು ಎಂದೂ ಕೇಳಿರುವ ಅವರುಗಳು, ಬಾಹುಲ್ ರಜಾಜ್ ಅವರಿಗೆ ರಾಜಕೀಯದ ಎಬಿಸಿಡಿ ಕಲಿಸುವುದು ಅತ್ಯಗತ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.

Tuesday, November 28, 2006

Theft Tech. ಕೋರ್ಸ್ ಅಭ್ಯಾಸ

(ಬೊಗಳೂರು ಕಳ್ಳತನ ಬ್ಯುರೋದಿಂದ)
ಬೊಗಳೂರು, ನ.28- ತಾನು ದರೋಡೆ ಮಾಡಿಲ್ಲ ಎಂದು ಪೊಲೀಸನೊಬ್ಬ ಬೊಗಳೆ ರಗಳೆ ಬ್ಯುರೋ ಎದುರು ಬೊಗಳೆ ಬಿಟ್ಟಿದ್ದಾನೆ.
 
ದರೋಡೆ ಆರೋಪದಲ್ಲಿ ಮುಖ್ಯ ಕನಿಷ್ಠ ಬಿಲ್ಲೆ ಬಂಧನಕ್ಕೊಳಗಾದ ಪ್ರಕರಣ ಇಲ್ಲಿ ವರದಿಯಾಗಿರುವ ಹಿನ್ನೆಲೆಯಲ್ಲಿ ಕನಿಷ್ಠರ ರಕ್ಷಣೆಯ ನಿಟ್ಟಿನಲ್ಲಿ ಧಾವಿಸಿದ ನಿಕೃಷ್ಟ ಬ್ಯುರೋ ಸಿಬ್ಬಂದಿಗೆ ವಿಶೇಷ ಸಂದರ್ಶನ ನೀಡಿದ ಮಹಾನ್ ಕನಿಷ್ಠ ಬಿಲ್ಲೆ, ತಾನು ಕಳ್ಳರನ್ನು ಹಿಂಬಾಲಿಸುತ್ತಿದ್ದೆನಷ್ಟೇ ಎಂದು ಸ್ಪಷ್ಟೀಕರಣ ನೀಡಿದ್ದಾರೆ.
 
ಈಗಿನ ದಿನಗಳಲ್ಲಿ ಪೊಲೀಸ್ ಹುದ್ದೆಗಿಂತ ಕಳ್ಳರ ಹುದ್ದೆಯು ಮೇಲ್ಮಟ್ಟದ್ದಾಗಿದ್ದು, ಅವರಿಗೆ ಹೆಚ್ಚು ಸಂಪಾದನೆ ಇದೆ. ನಮಗೆ ಬೀದಿ ಬೀದಿಗಳಲ್ಲಿ ಕೈಯೊಡ್ಡುವಾಗ ಬರೇ ಹತ್ತಿಪ್ಪತ್ತು ರೂಪಾಯಿ ಕಮಾಯಿ ಆಗುತ್ತಿದೆ. ಹಾಗಾಗಿ ಭವ್ಯ ಭವಿಷ್ಯ ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಈ ಕಳ್ಳತನದ ಕೋರ್ಸ್ ಮಾಡುತ್ತಿದ್ದೆ ಎಂದು ಸಂದರ್ಶನದಲ್ಲಿ ಅವರು ಉಗುಳಿದ್ದಾರೆ.
 
ತಾನು International Theft Technology ಕೋರ್ಸ್‌ಗೆ ಸೇರಿದ್ದೆ. ಇದರಲ್ಲಿ ಥಿಯರಿಗಿಂತಲೂ ಪ್ರಾಕ್ಟಿಕಲ್‌ಗೆ ಹೆಚ್ಚು ಆದ್ಯತೆ. ಹಾಗಾಗಿ ಪ್ರಯೋಗ ನಿರತನಾಗಿದ್ದಾಗ ತಾನು ಈ ಪ್ರಕರಣದಲ್ಲಿ ಅನ್ಯಾಯವಾಗಿ ಸಿಲುಕಿಹಾಕಿಕೊಂಡೆ ಎಂದವರು ಹೇಳಿದ್ದಾರೆ.
 
ಈ ಕಳ್ಳ ನನ್ಮಕ್ಳಿಗೆ ಸರಿಯಾಗಿ ಆಭರಣ ಹಿಡಿದುಕೊಳ್ಳುವುದು ಗೊತ್ತಿಲ್ಲ. ಆದುದರಿಂದ ಇಲ್ಲಿ ಸ್ವಲ್ಪ ಮಟ್ಟಿನಲ್ಲಿ ನನ್ನ ಪ್ರಯೋಗ ಯಶಸ್ವಿಯಾಗಿತ್ತು. ಆದರೆ ಅವರು ನಮ್ಮ ಠಾಣೆಗೇ ಮರಳಿ ಬಂದು ನಮ್ಮ ಮೇಲೆಯೇ ದೂರು ನೀಡುತ್ತಾರೆ ಎಂಬುದು ಯಾರಿಗೆ ತಿಳಿದಿತ್ತು ಎಂದು ಅವರು "ಎಡವಿದ್ದು ಎಲ್ಲಿ" ಎಂಬ ಮಾದರಿಯಲ್ಲಿ ಮುಖದಲ್ಲಿ ಪ್ರಶ್ನಾರ್ಥಕ ಚಿಹ್ನೆ ಮೂಡಿಸಿದರು.
 
ಛೆ, ಇಂಥ ಕೋರ್ಸಿಗೆ ಸೇರಿದ್ರೆ ಪ್ರಯೋಗ ಮಾಡೋಕೂ ಜನಾ ಬಿಡ್ತಾ ಇಲ್ಲ. ನಾವು ನಮ್ಮ ಹೊಟ್ಟೆ ಪಾಡಿಗೆ ಇದನ್ನು ಕಲಿಯುತ್ತಾ ಇದ್ದೇವೆ. ಅವರಿಗೆಲ್ಲಾ ನಾವು ಹೆಚ್ಚು ಸಂಪಾದನೆ ಮಾಡುತ್ತೇವೆ ಎಂಬ ಬಗ್ಗೆ ಈರ್ಷ್ಯೆ ಇರಬೇಕು. ಇದಕ್ಕಾಗಿ ಅವರು ನಿಜವಾದ ಪೊಲೀಸರಿಗೆ ದೂರು ಕೊಟ್ಟಿದ್ದಾರೆ ಎಂದು ಅವರು ಆರೋಪಿಸಿದರು.

Monday, November 27, 2006

ರಾಶಿ ರಾಶಿ ಭವಿಷ್ಯ

(ಬೊಗಳೆ ರಗಳೆ ಬ್ಯುರೋದಲ್ಲಿ ಭವಿಷ್ಯವಾಣಿಯಿಲ್ಲದೆ ನಮಗೆ ಭವಿಷ್ಯವೇ ಇಲ್ಲ ಎಂಬ ಓದುಗರ ದೂರಿನ ಹಿನ್ನೆಲೆಯಲ್ಲಿ ಇದೋ ಮತ್ತೊಮ್ಮೆ ಭವಿಷ್ಯ ನುಡಿಯಲಾಗುತ್ತಿದೆ. ನಿಮ್ಮ ಭವಿಷ್ಯ ನಮ್ಮ ಕೈಯಲ್ಲಿ, ನಮ್ಮ ಭವಿಷ್ಯ ನಿಮ್ಮ ಕೈಯಲ್ಲಿ!)
ಮೇಷ: ಅನಗತ್ಯ ಕಾರುಬಾರುಗಳಿಗೆ ಧನ ವ್ಯಯವಾಗುತ್ತದೆಯಾದರೂ, ಕಾರಿಗಿಂತಲೂ ಬಾರಿಗೇ ಹೆಚ್ಚು ಖರ್ಚು ಮಾಡುವ ಸಾಧ್ಯತೆಗಳಿವೆ.
 
ವೃಷಭ: ನಿಮ್ಮ ಒಡಹುಟ್ಟಿದವರೊಬ್ಬರು ನಾನೇ ನಿಮ್ಮ ಸೋದರ ಅಂತ ಹೇಳಿಕೊಳ್ಳುವುದು ನಿಮಗೆ ಕಿರಿಕಿರಿಯಾಗಬಹುದು. ನಿಜವಾಗಿರುವುದರಿಂದ ಸಹಿಸಿಕೊಳ್ಳುವುದು ಅನಿವಾರ್ಯ.
 
ಮಿಥುನ: ಹಿತಶತ್ರುಗಳ ಆಗಮನ, ಪುಷ್ಕಳ ಭೋಜನ, ಅವರು ಹಿಂದೆ ಹೋದ ಬಳಿಕ ನೋಡಿದಾಗ ನಿಮ್ಮ ಪರ್ಸು ಖಾಲಿ. ಮತ್ತೊಂದು ವಿದೇಶೀ ಗಡಿಯಾರವೂ ನಾಪತ್ತೆಯಾಗಿರಬಹುದು.
 
ಕಟಕ: ವಾತಾವರಣದಲ್ಲಿ ಉಷ್ಣತೆ ಹೆಚ್ಚುವುದರಿಂದ ನಿಮಗೂ ಸೆಕೆಯಾಗಬಹುದು. ಸೆಕೆಯಾಗದಿದ್ದರೆ ಜ್ವರವಿರುವ ಬಗ್ಗೆ ವೈದ್ಯರನ್ನು ಕಾಣುವುದೊಳಿತು.
 
ಸಿಂಹ: ನೆಂಟರ ಆಗಮನದಿಂದ ಉಲ್ಲಾಸವಿರುತ್ತದಾದರೂ, ಅವರು ಎಷ್ಟು ದಿನ ಠಿಕಾಣಿ ಹೂಡುವರು ಎಂಬುದೇ ನಿಮ್ಮ ಯೋಚನೆಗೆ ಕಾರಣವಾಗಬಹುದು.
 
ಕನ್ಯಾ: ಮಂಗಳ ಕಾರ್ಯದಲ್ಲಿ ಮಾಜಿ ಗೆಳತಿ ಮಂಗಳಾ ಭೇಟಿಯಾಗುವುದರಿಂದ ಪತ್ನಿಯ ಬಾಯಿಂದ ಅಮಂಗಳ ಮಾತು ಬರಬಹುದು.
 
ತುಲಾ: ನೀವು ಮಧ್ಯ ವಯಸ್ಕರಾಗಿದ್ದರೆ, ವಯಸ್ಕರಂತೆಯೇ ಮದ್ಯ ಸೇವನೆಯೂ ಅಷ್ಟೇ ಪ್ರಮಾಣದಲ್ಲಿರುವುದು. ಬರೇ ಪಬ್ಬಿಗೆ ಹೋಗುವ ವಯಸ್ಸು ನಿಮ್ಮದಲ್ಲದಿದ್ದರೆ ಬಾರ್ ನೋಡಬಹುದು.
 
ವೃಶ್ಚಿಕ: ನೀವು ಮುಂಗೋಪಿಗಳಾಗಿದ್ದರೆ ಆಗಾಗ್ಗೆ ಸಿಡುಕುವಿರಿ. ಅಲ್ಲದಿದ್ದರೂ ಕೋಪ ಬಂದಾಗ ಬಯ್ಯುವಿರಿ.
 
ಧನು: ನೀವು ವಾಚಾಳಿಗಳಾಗಿದ್ದರೆ, ತಿನ್ನುವುದರ ಬಗ್ಗೆ ವಿಶೇಷ ಆಸಕ್ತಿ. ಜೋರು ಹಸಿವಾದಾಗಲೆಲ್ಲಾ ಇತರರ ತಲೆ ತಿನ್ನುವಿರಿ.
 
ಮಕರ: ನಿಮಗೆ ಹಣವೇ ಎಲ್ಲವೂ ಆಗಿರುವುದರಿಂದ ನೀವು ರಾಜಕಾರಣಿಗಳಾಗಿ, ವರದಿಗಾರರಾಗಿ, ಪೊಲೀಸ್ ಅಧಿಕಾರಿಯಾಗಿ, ಸರಕಾರಿ ಅಧಿಕಾರಿಗಳು, ಟ್ರಾಫಿಕ್ ಪೊಲೀಸರು ಆಗಲು ಲಾಯಕ್ಕು.
 
ಕುಂಭ: ನಿಮಗೆ ಉತ್ತಮ ಗ್ರಹಣ ಶಕ್ತಿ ಇರುವುದರಿಂದ ಚಂದ್ರ ಗ್ರಹಣ, ಸೂರ್ಯ ಗ್ರಹಣ ಬಗ್ಗೆ ಎಚ್ಚರದಿಂದಿರಿ.
 
ಮೀನ: ನೀವು ಹುಟ್ಟಿದ ಬಳಿಕ ಕೌಮಾರ್ಯಕ್ಕೆ, ನಂತರ ಯೌವನಕ್ಕೆ, ಆ ಬಳಿಕ ಗೃಹಸ್ಥಾಶ್ರಮಕ್ಕೆ ಕಾಲಿಡುವಿರಿ. ಮಧ್ಯ ವಯಸ್ಸು ಕಳೆದ ಬಳಿಕ ವೃದ್ಧರಾಗಲಾರಂಭಿಸುವಿರಿ.

Saturday, November 25, 2006

ಉಜ್ಜಯಿನಿ ದಂಡಯಾತ್ರೆ ಪೂರ್ಣತೆಯ ಭಾಗ

ಜ್ಜಯಿನಿ ದಂಡಯಾತ್ರೆ ಪೂರ್ಣತೆಯ ಭಾಗಮುಂದೆ ಹೋಗಬೇಕಿತ್ತು. "ಉಜ್ಜಯಿನಿ ದರ್ಶನ"ಕ್ಕೆ ಮೃಚ್ಛಕಟಿಕದವರು ಏನಾದರೂ ತೀರ್ಥ ಕುಡಿಸಿಬಿಟ್ಟರೆ ಎಂಬ ಆತಂಕದಿಂದ ಸಹವಾಸ ಬೇಡ ಅಂದುಕೊಂಡು ಒಬ್ಬ ಮುಸಲ್ಮಾನ ವ್ಯಕ್ತಿಯ ಮೂರು ಚಕ್ರದ ರಿಕ್ಷಾ ಏರಲಾಯಿತು. ಆತನ ಹೆಸರು ಶಕೀಲ್ ಅಬ್ಬಾಸ್. 250 ರೂಪಾಯಿಗೆ ಉಜ್ಜಯಿನಿ ದರ್ಶನ ಮಾಡಿಸುವುದಾಗಿ ಒಪ್ಪಿಕೊಂಡಾಗ ಮೂರು ಲೋಕದ ದರ್ಶನವಾದ ಅನುಭವವಾಯಿತು.

ಮೊದಲು ತೆರಳಿದ್ದು ಗಢಕಾಳಿಕಾ ದೇವಿಯ ಮಂದಿರಕ್ಕೆ. ಕಾಳಿದಾಸನಿಗೊಲಿದ ಮಹಾಕಾಳಿಯು ನೆಲೆನಿಂತ ತಾಣವಿದು. ಬಸ್ಸಿನಲ್ಲಿ ಧೂಳಿದಾಸನಾಗುವುದರಿಂದ ಸ್ವಲ್ಪದರಲ್ಲೇ ತಪ್ಪಿಸಿಕೊಂಡು ಬಂದಾಗಿದೆ, ಅಲ್ಲೇ ರಿಕ್ಷಾದಿಂದಿಳಿದು , ಕಾಲಿದೋಸೆ ಸೇವಿಸಿ ಕಾಳಿದಾಸನ ಕೋಟಿಯ ಒಂದು ಭಾಗದಷ್ಟು ಜ್ಞಾನವನ್ನಾದರೂ ಕೊಡು ತಾಯಿ ಎಂದು ಪ್ರಾರ್ಥಿಸಿದಾಗ, ಇದುವೇ ಕೋಲ್ಕತಾದ ಕಾಳಿಯ ಮೂಲ ಸ್ಥಾನ ಎಂಬ ವಿವರಣೆ ದೊರೆಯಿತು.


ಮುಂದೆ ಸಾಗಿದ್ದು, ಮದ್ಯ ಸೇವಿಸುವ ದೇವತೆಯಿರುವ ತಾಣ ಕಾಳಭೈರವ ಕ್ಷೇತ್ರಕ್ಕೆ. ಇಲ್ಲಿ ಬಾಟಲಿ ರಮ್ ವಿಸ್ಕಿಯೆಲ್ಲವನ್ನು ಕಾಳಭೈರವನ ಬಾಯಲ್ಲಿರಿಸಿದರೆ, ಅದು ಹರಿದುಹೋಗುತ್ತಿತ್ತು. ಮಹಾಕಾಳೇಶ್ವರನ ದರ್ಶನ ಮಾಡಿದವರು, ಶಿವ ಗಣವಾದ ಕಾಳಭೈರವನನ್ನೂ ಒಂದು ಕೈ ನೋಡಿಬರಬೇಕೆಂಬುದು ಪ್ರತೀತಿ ಅಂತ ಆ ಮುಸಲ್ಮಾನ ವಿವರಿಸಿದ. (ಎಡಚಿತ್ರ: ಗಢಕಾಳಿಕಾ ಮಂದಿರ)


ಖಂಡಿತವಾಗಿಯೂ ಇದೊಂದು ತೀರ್ಥಯಾತ್ರೆ ಎಂಬುದು ಖಚಿತವಾಯಿತು. ಸುತ್ತಮುತ್ತ ನೋಡಿದಾಗ ಕೆರ್ರ್.... ಎಂಬ ಕಿರುಚಾಟದೊಂದಿಗೆ ನನ್ನ ಕೈಯಲ್ಲಿದ್ದ ಪ್ರಸಾದದ ಗಂಟನ್ನು ಎಳೆದೊಯ್ದಿತು ನನ್ನ ಪ್ರೀತಿಯ ಮಂಗ! ಎಲ್ಲಿ ನೋಡಿದರಲ್ಲಿ ಈ ನಮ್ಮ ಸಂತಾನದವರು! ನಮ್ಮದೇ ಬುದ್ದಿ, ನಮ್ಮದೇ ತುಂಟಾಟ, ನಮ್ಮದೇ ನಗು... ಮರ್ಕಟ ಮನಸಿನ ನಮಗೂ ಅದಕ್ಕೂ ಎಷ್ಟೊಂದು ಹೋಲಿಕೆ! (ಬಲಚಿತ್ರ: ಕಾಲಭೈರವ ಮಂದಿರ ಎದುರು ಪ್ರವಾಸಿಗರನ್ನು "ಸುಲಿಯುವ" ಜಾತಿಬಾಂಧವರು!)


ಬಳಿಕ ಮಂಗಗಳ ಗ್ರಹದಲ್ಲಿರುವ ನಮ್ಮಂಥವರಿಗೆ ಮಂಗಳಕಾರಕನಾಗಿರುವ ಮಂಗಳನ ಉತ್ಪತ್ತಿ ಸ್ಥಾನ ಎಂದು ಕರೆಯಲಾಗುವ ಮಂಗಲನಾಥ ಮಂದಿರ. ಮಂಗಳ ಗ್ರಹ ಶಾಂತಿ ಇಲ್ಲಿ ವಿಶೇಷ. ಖಗೋಳಶಾಸ್ತ್ರೀಯವಾಗಿಯೂ ಈ ಸ್ಥಾನಕ್ಕೆ ಬಹಳ ಮಹತ್ವವಿದೆ. ಅಲ್ಲಿಂದ ರಾಮಘಾಟ್ ಎಂಬ ಸರೋವರ ತಟ. ಸುತ್ತ 1000 ಮಂದಿರಗಳಿವೆ ಎಂಬ ಮಾಹಿತಿ ದೊರೆಯಿತು ರಿಕ್ಷಾವಾಲ ಶಕೀಲ್‌ನಿಂದ.


ಮೂರು ಚಕ್ರದ ಗಾಡಿಯಲ್ಲಿ ಕುಳಿತಾಗ ಮೃಚ್ಛಕಟಿಕದ್ದೇ ನೆನಪು. ಮುಂದೆ ಸಾಗಿದೆವು. ಕ್ಷಿಪ್ರಾ ನದಿಯನ್ನು ಶಿಪ್ರಾ ನದಿಯೆಂದೂ ಇಲ್ಲಿ ಕರೆಯಲಾಗುತ್ತಿದ್ದು, ಇದು ದಕ್ಷಿಣದಿಂದ ಉತ್ತರಕ್ಕೆ ಹರಿಯುತ್ತಾ ಚಂಬಲ್ ನದಿಯನ್ನು ಸೇರಿ ಆ ಮೂಲಕ ಸಮುದ್ರ ಪಾಲಾಗುತ್ತದೆ. ಮಧ್ಯಭಾರತದ ಗಂಗೆ ಎಂಬ ಹೆಗ್ಗಳಿಕೆಯ, ವಿಷ್ಣುವಿನ ಬೆರಳಿನಿಂದ ಹುಟ್ಟಿದ ಕ್ಷಿಪ್ರೆಯ ತಟದಲ್ಲಿಯೇ ವಿಕ್ರಮಾದಿತ್ಯನನ್ನು ಕಾಡಿದ ಬೇತಾಳ ನೇತುಕೊಂಡಿರುವ ವಟವೃಕ್ಷವಿದೆ. ಇದುವೇ ಸಿದ್ಧವಟ ಕ್ಷೇತ್ರ. ಇಲ್ಲಿ ಪಿತೃಗಳ ಮೋಕ್ಷಕ್ಕೆ ವಿಶೇಷ ಸೌಕರ್ಯವಿದೆ.


ಉತ್ತಮ ಮಾತುಗಾರ ಅರ್ಚಕರೊಬ್ಬರು ಎಲ್ಲಾ ಮಾಹಿತಿ ನೀಡಿದರು. ಆದರೆ ಬಲವಂತವಾಗಿ ಕೀಳುವುದಿಲ್ಲ ಎನ್ನಬಹುದು. ನಿಮ್ಮ ಶಕ್ತ್ಯಾನುಸಾರ ಕೊಡಿ, ಪಿತೃಗಳಿಗೆ ಮುಕ್ತಿ ದೊರಕಿಸುತ್ತೇವೆ ಎಂದರು.


ಮುಂದೆ ಹೊಕ್ಕಿದ್ದು ಎರಡು ಗುಹೆಗಳನ್ನು. ಅದರಲ್ಲೊಂದು ವಿಕ್ರಮಾದಿತ್ಯನ ಅಣ್ಣ ಭರ್ತೃಹರಿ ಅಲಿಯಾಸ್ ಭಟ್ಟಿ ತಪಸ್ಸು ಮಾಡಿದ ತಾಣ. ಅಲ್ಲಿ ಭಟ್ಟಿಯ ತಪಸ್ಸು ಹಾಳುಗೆಡಹಲು ಇಂದ್ರನು ಶಿಲೆಕಲ್ಲನ್ನು ಎಸೆದಾಗ, ಅದನ್ನು ಭಟ್ಟಿಯು ಭದ್ರವಾಗಿ ಎತ್ತಿ ಹಿಡಿದ. ಆಗ ಮೂಡಿದ ಆತನ ಕೈಯ ಪಡಿಯಚ್ಚು, ಮತ್ತು ಆ ಆಘಾತಕ್ಕೆ ತುಂಡಾದ ಶಿಲೆಯನ್ನು ಅದರೊಳಗಿರುವ ಮಹಾತ್ಮರು ತೋರಿಸಿದರು, ವಿವರಿಸಿದರು. ಭಟ್ಟಿಯ ಮೂರ್ತಿಯೂ ಅಲ್ಲಿತ್ತು. (ಎಡಚಿತ್ರ: ಭಟ್ಟಿ ತಪಸ್ಸು ಮಾಡಿದ ತಾಣ, ಭಟ್ಟಿಯ ಮೂರ್ತಿಯೂ ಇದೆ.)


ಸಮಯವಿಲ್ಲದ ಕಾರಣ, ಓಡೋಡಿದಾಗ ಸಾಗಿದ್ದು, ಶ್ರೀಕೃಷ್ಣ-ಬಲರಾಮ ಎಂಬ ಯಾದವ ಬ್ರದರ್ಸ್, LKG ವಿದ್ಯಾಭ್ಯಾಸ ಮಾಡಿದ ಮತ್ತು Friend ಸುದಾಮನ ಜತೆಗೆ ಆಟವಾಡಿದ ಸಾಂದೀಪನಿ ಆಶ್ರಮಕ್ಕೆ. ಅಲ್ಲಿರುವ ಗೋವುಗಳ ಮೈದಡವಿ ಸುಂದರ ವಾಸ್ತುಶಿಲ್ಪ ಕಲೆಯ ಚಾರ್‌ಧಾಮ ಮಂದಿರ, ಬಡೇ ಗಣೇಶ್‌ಜಿ, ಪಂಚಮುಖಿ ಹನುಮಾನ್, ವಿಕ್ರಮಾದಿತ್ಯನ ಆರಾಧ್ಯ ದೇವಿಯಾದ ಹರಸಿದ್ಧಿದೇವಿ ಮಂದಿರ ಇವೆಲ್ಲಕ್ಕೂ ಕಣ್ನೋಟ ಹರಿಸಿದಂತೆ ಸಾಗಿದ್ದು. ಯಾಕೆಂದರೆ ಅದಾಗಲೇ ಕತ್ತಲಾಗಿತ್ತು.


ಮತ್ತೆ ಕೊನೆಯ ನನ್ನ ಪ್ರಯತ್ನವೆಂದರೆ ವಿಕ್ರಮಾದಿತ್ಯನ ಬಹುನಿರೀಕ್ಷಿತ ಸಿಂಹಾಸನ ಏರಲು ಯತ್ನಿಸಿದ್ದು! ಆದರೆ ಇದು ಪ್ರತಿಕೃತಿಯಷ್ಟೇ. ಅವನ ಸಿಂಹಾಸನವೇರುವ ಅರ್ಹತೆಯುಳ್ಳವರು ಯಾರೂ ಈ ಜಗತ್ತಿನಲ್ಲಿ ಇಲ್ಲದಿರುವುರಿಂದ ಅದು ಪಾತಾಳಕ್ಕೆ ಹೋಯಿತು ಎಂಬ ಕಥೆ ಕೇಳಿಬರುತ್ತದೆ. ಹಾಗಾಗಿ ಸಿಂಹಾಸನ ಏರುವ ಚಪಲ ವಿಫಲವಾಗಿ ಮರಳಿ ಇಂದೋರಿಗೆ ಕತ್ತಲಲ್ಲಿ ತಡಕಾಡುತ್ತಾ ತೆರಳಿದಾಗ ಏನನ್ನೋ ಕಳೆದುಕೊಂಡ ಭಾವ. (ಮೇಲಿನಚಿತ್ರ: ಸಾಂದೀಪನಿ ಆಶ್ರಮದಲ್ಲಿ ಶಿವಲಿಂಗದೆದುರು ಎದ್ದು ನಿಂತಿರುವ ನಂದಿ. ಇದು ವಿಶೇಷವಿರಬಹುದು. ಬಲಚಿತ್ರ: ವಿಕ್ರಮಾದಿತ್ಯ ಸಿಂಹಾಸಾರೂಢ ವಿಕ್ರಮಾದಿತ್ಯ.)


ಬೆಂಬಿಡದಂತೆ ಕಾಡುವ ಆ ಮೃಚ್ಛಕಟಿಕ, ಬಸ್ಸು ತುಂಬಿದರೂ ಖಾಲಿ ಖಾಲಿ ಎನ್ನುತ್ತಾ ಪ್ರಯಾಣಿಕರನ್ನು ರಾಶಿ ಹಾಕುವ ಕಂಡಕ್ಟರುಗಳು ನೆನಪಾಗುವುದರೊಂದಿಗೆ ಕಾಳಿದಾಸ, ವಿಕ್ರಮಾದಿತ್ಯರು ಮನದಲ್ಲಿ ಅಚ್ಚಳಿಯದೆ ಕುಳಿತಿದ್ದರು.

Friday, November 24, 2006

ಪ್ರಯಾಸ ಕಥನ ಭಾಗ- 3/4

ಜ್ಜಯಿನಿ ಮಹಾಕಾಲ ಮಂದಿರದ ಕೋಟಿತೀರ್ಥ ಸರೋವರದ ಮಧ್ಯಭಾಗದಲ್ಲಿ ಹೌದೋ ಅಲ್ಲವೋ ಎಂಬಷ್ಟು ಮೆಲ್ಲಗೆ ತೇಲುವ ಚೌಕಾಕಾರದ ತೇಲುತೊಟ್ಟಿಲಲ್ಲಿ ಗಿಡಮರಗಳಿದ್ದವು. ಅದು ತೇಲುತ್ತಾ ಇದೆ ಅಂತ ಹೇಳಿದರೆ ಇವನಿಗೇನೋ ತಲೆ ಕೆಟ್ಟಿರಬೇಕು ಎಂದು ಯಾರಾದರೂ ಅಂದುಕೊಂಡರೆ ಎಂದು ಯೋಚಿಸಿ ಸುಮ್ಮನಾದೆ.
 
ಜ್ಯೋತಿರ್ಲಿಂಗದತ್ತ ಸಾಗುವ ಪ್ರತಿಯೊಂದು ಹೆಜ್ಜೆ ಹೆಜ್ಜೆಗೂ ದೇವರ ಮೂರ್ತಿಗಳು, ಅಲ್ಲಲ್ಲಿ ಸುಲಿಯುವ ಅರ್ಚಕರ ಗಡಣ, ಅಭಿಷೇಕ ಮಾಡಿಸುತ್ತೇವೆ, ಪೂಜೆ ಮಾಡಿಸುತ್ತೇವೆ ಎಂಬಿತ್ಯಾದಿ ಹೇಳಿಕೆ ನೀಡಿ ಮುಂದೆ ಕಾಡುತ್ತಿರುತ್ತಾರೆ.
 
ಲಿಂಗವಿರುವ ಸ್ಥಳಕ್ಕೆ ಹೋದಾಗ, ಎಲ್ಲರೂ ಆ ಶಿವಲಿಂಗದ ಮೇಲೆ ಬಿದ್ದು ಹೊರಳಾಡುತ್ತಿರುವಂತೆ ಕಂಡಿತು. ಅಲ್ಲಲ್ಲ... ಲಿಂಗವನ್ನು ಮುಟ್ಟಿ, ಅದಕ್ಕೆ ಹೂವು, ಹಣ್ಣು ಹಾಕಿ, ತಾವೇ ಅಭಿಷೇಕ ಮಾಡಿ ಎಲ್ಲಾ ಭಕ್ತಾದಿಗಳು ತಮ್ಮತಮ್ಮನ್ನು ಪುನೀತರಾಗಿಸಿಕೊಳ್ಳುತ್ತಿದ್ದರು. ಮತ್ತೆ ಕೆಲವರು ಜೋರಾಗಿ ಅಭಿಷೇಕದ ಚೊಂಬನ್ನು ಬೀಸುತ್ತಾ ಅಕ್ಕಪಕ್ಕದಲ್ಲಿದ್ದವರನ್ನೂ ಪುನೀತರಾಗಿಸುತ್ತಿದ್ದರು.
 
ಆಗ ರಾವಣೇಶ್ವರನು ಗೋವಿನ ಕಿವಿ ಹೋಲುವಂತೆ ತಿರುಚಿದ ಈಶ್ವರನ ಆತ್ಮಲಿಂಗವಿದ್ದ ಪ್ರದೇಶ, ನಮ್ಮ ಕರುನಾಡಿನ ಗೋಕರ್ಣವನ್ನು ನೆನಪಿಸಿದರು ಇಲ್ಲಿನ ಅರ್ಚಕರು. ನಾನು ಹೋದ ತಕ್ಷಣ, ಆಯಿಯೇ, ಆಯಿಯೇ, ಆಪ್‌ಕಾ ಶುಭ ನಾಮ್, ನಕ್ಷತ್ರ್, ಗೋತ್ರ್ ಬತಾಯಿಯೇ ಎಂದು ಕೈ ಹಿಡಿದು ಎಳೆದು ನಿಲ್ಲಿಸಿಯೇಬಿಟ್ಟರು. ತಡಬಡಿಸಿದ ನನ್ನ ಬಾಯಿಂದ ಏನು ಉದುರಿತೋ ಗೊತ್ತಿಲ್ಲ, ಅದನ್ನೇ ಹೆಕ್ಕಿಕೊಂಡು ತನ್ನ ಮಂತ್ರದೊಂದಿಗೆ ಜೋಡಿಸಿದ ಆ ಆರ್ಚಕ ಮಹಾಶಯರು, ಆಪ್‌ಕಾ ಪಾಪ್ ಪರಿಹಾರ್ ಹೋಗಯಾ, ಯಥಾಶಕ್ತಿ ಕುಛ್ ದೇ ದೀಜಿಯೇ ಎಂದು ಕೇಳಿಯೇಬಿಟ್ಟರು!
 
ಖಂಡಿತವಾಗಿಯೂ ಅವರು ಪಾಪ ಕಟ್ಟಿಕೊಳ್ಳುತ್ತಿದ್ದಾರೆ ಎಂಬುದು ತಿಳಿದಿದ್ದು ಆಗಲೇ! ಅಂದರೆ ನಮ್ಮ ಪಾಪ ಪರಿಹಾರ ಮಾಡಿ, ಅದನ್ನು ಆತನ ತಲೆಗೇರಿಸಿಕೊಂಡು ದುಡ್ಡು ಕಿಸೆಗೆ ಇಳಿಸಿಕೊಳ್ಳುವುದು!
 
ಗೋಕರ್ಣದಲ್ಲಿ ತೀರ್ಥ ಬೇಕಿದ್ರೆ 2 ರೂ., ಗಂಧ ಬೇಕಿದ್ರೆ 5 ರೂ. ಕೊಡಬೇಕು ಅಂತ ಸುಮಾರು 10-15 ವರ್ಷಗಳ ಹಿಂದೆಯೇ ಹೋಗಿದ್ದಾಗ ಅರ್ಚಕರು ಕೇಳಿದ್ದ ವಿಷಯ ನೆನಪಾಯಿತು. ಈಗ ಕಾಲ ಬದಲಾಗಿದೆ, ಅಲ್ಲಿ ಆ ತೀರ್ಥ-ಪ್ರಸಾದದ ಮೌಲ್ಯವೂ ಹೆಚ್ಚಾಗಿದ್ದಿರಬಹುದು.
 
ಆಯಿತು, ಪೂಜೆ ಮಾಡಿದ ಮಹಾಶಯ ಅಲ್ಲಿ ರಾಶಿಹಾಕಲಾಗಿದ್ದ ಹಣದಲ್ಲಿ ಚಿಲ್ಲರೆ ಹಣವನ್ನೆಲ್ಲಾ ಎಲ್ಲೋ ಅಡಗಿಸಿಟ್ಟು, ಕೆಲವೇ ಕೆಲವು 10 ರೂ. ನೋಟು, ಉಳಿದಂತೆ 50, 100, 500ರ ನೋಟು ಇರುವಂತೆ ನೋಡಿಕೊಂಡಿದ್ದ. ಅದನ್ನು ತೋರಿಸಿ ಕುಛ್ ಡಾಲ್ ದೀಜಿಯೇ ಎನ್ನುತ್ತಿದ್ದ. ಇದು ಕೂಡ ದೊಡ್ಡ ನೋಟನ್ನು ನಮ್ಮ ಕೈಯಿಂದ ಇಳಿಸುವ ತಂತ್ರಗಳಲ್ಲೊಂದು.
 
ಹೋಗಲಿ ಅಂತ, ಕಿಸೆಯೆಲ್ಲಾ ತಡಕಾಡಿ ಒಂದೆರಡು ನಾಣ್ಯಗಳನ್ನು ಎತ್ತರದಿಂದ ಠಣ್ ಎಂಬ ಸದ್ದು ಕೇಳಿಸುವಂತೆ ಹಾಕಿಬಿಟ್ಟೆ.
ಆಗ ನಿಜಕ್ಕೂ ಈ ರುದ್ರನ ನಾಡಿನಲ್ಲಿ ರೌದ್ರಾವತಾರ ದರ್ಶನವಾಗಿದ್ದು! ಅತನ ಕಣ್ಣುಗಳು ರುದ್ರನ 3ನೇ ಚಕ್ಷು ತೆರೆದರೆ ಹೇಗಿರುತ್ತಿತ್ತು ಎಂಬುದನ್ನು ತೋರಿಸಿತು. ಧನ್ಯೋಸ್ಮಿ, ಮಹಾಕಾಲೇಶ್ವರ ಮಂದಿರದಲ್ಲಿ ಮಹಾ ಕಾಲನ ದರ್ಶನವಾಯಿತು ಎಂದುಕೊಂಡು ಆತನ ಮುಸುಡು ನೋಡದೆ ಹೊರಬಂದೆ.
 
ಅಂತೂ ಕ್ಯೂ ಎಲ್ಲೆಲ್ಲೋ ಸುತ್ತಿ ಬಳಸಿ ಸಾಗಿದ ಕಾರಣ, ನಾವು ನೋಡಿದ ಜ್ಯೋತಿರ್ಲಿಂಗ ಎಲ್ಲಿ ಇದ್ದದ್ದು ಎಂಬುದೇ ಮರೆತುಹೋಗಿತ್ತು! ಎಲ್ಲಿಂದ ಹೊರಗೆ ಹೋಗುವುದು ಎಂಬುದು ಗೊತ್ತಾಗದೆ ತಡಬಡಿಸಬೇಕಾಯಿತು. ಮುಂದೆ ಯಾವುದೇ ಸುಲಿಗೆ ಕೇಂದ್ರಗಳಿರುವುದು ಸಾಧ್ಯವಿಲ್ಲದ್ದರಿಂದ ಅಲ್ಲಿ ಯಾರೂ ಕೂಡ ನಮ್ಮನ್ನು ಹಚ್ಚಿಕೊಳ್ಳುವವರೇ ಇಲ್ಲ! ಅಂತೂ ಉಳಿದವರನ್ನು ಹಿಂಬಾಲಿಸಿ ಮಂದಿರದಿಂದ ಹೊರಬಿದ್ದೆ.
 
ನಾನು ಕಂಡುಕೊಂಡ ಅಂಶವೆಂದರೆ, ಹೊಸ ಉದ್ಯೋಗ ಯೋಜನೆಯೊಂದು ಸೃಷ್ಟಿಯಾಗುತ್ತಿದೆ. ಇಲ್ಲಿ ಉತ್ತಮ Communication Skill ಇರೋರಿಗೆ, ಬಾಯಲ್ಲಿ ಬೆಣ್ಣೆ ಇಟ್ಟುಕೊಳ್ಳೋರಿಗೆ ಉತ್ತಮ ಅವಕಾಶಗಳಿವೆ. ವಿದ್ಯೆ ಬೇಡ, ಒಂದಷ್ಟು "ಮಹಾದೇವ ಪ್ರೀತ್ಯರ್ಥೇ... ರುದ್ರಾಭಿಷೇಕ ಕಾರಯಿಷೇ" ಎಂದು ಹೇಳಲು ಗೊತ್ತಿದ್ದರೆ ಸಾಕು.
 
(ನಾಳೆ ಕೊನೆಯ ಕಂತಿನಲ್ಲಿ ಕೃಷ್ಣ ಬಲರಾಮರು ಎಲ್‌ಕೆಜಿ ಕಲಿತ ಶಾಲೆ, ವಿಸ್ಕಿ ಕುಡಿಯುವ ದೇವರು... ಇತ್ಯಾದಿ)

Thursday, November 23, 2006

ನಗಿಸುವುದು ಪರಧರ್ಮ ಎಂದ ಕ್ರಿಕೆಟ್ ತಂಡ

(ಬೊಗಳೂರು ಚೆಂಡಾಟ ಬ್ಯುರೋದಿಂದ)
ಬೊಗಳೂರು, ನ.23- ನಗುವು ಪರಮೌಷಧ ಎಂದು ತಿಳಿದವರು ಹೇಳಿರುವುದರಿಂದ ಭಾರತೀಯ ಕ್ರಿಕೆಟ್ ತಂಡವು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಇದನ್ನು ಶಿರಸಾವಹಿಸಲು ನಿರ್ಧರಿಸಿದ ಪರಿಣಾಮ ನಿನ್ನೆಯ ಪಂದ್ಯದಲ್ಲಿ ಅತ್ಯಂತ ಗೌರವಾನ್ವಿತ ಸೋಲನ್ನಪ್ಪಿದೆ.

ನಗುವು ಸಹಜದ ಧರ್ಮ ನಗಿಸುವುದು ಪರಧರ್ಮ ಅಂತ ಡಿವಿಜಿಯವರೂ ಹೇಳಿರುವುದರಿಂದ ಪ್ರೇರಣೆಗೊಂಡಿರುವ ಭಾರತೀಯ ಕ್ರಿಕೆಟ್ ತಂಡ, ನಿನ್ನೆಯ ಪಂದ್ಯದಲ್ಲಿ ನಗೆಪಾಟಲಿಗೀಡಾಗುವ ಮೂಲಕ ಭಾರತೀಯರು ಗಹಗಹಿಸಿ ನಗುವಂತೆ ಮಾಡಿದ್ದಾರಲ್ಲದೆ, ದಕ್ಷಿಣ ಆಫ್ರಿಕನ್ನರ ಮುಖದಲ್ಲೂ ಮಂದಹಾಸ ಮೂಡಿಸಲು ಕಾರಣರಾಗಿದ್ದಾರೆ.

ತಂಡವು ಕಡಿಮೆ ರನ್ನಿಗೆ ಆಲೌಟಾದರೆ ಎಲ್ಲರೂ ತಮ್ಮನ್ನು ನೋಡಿ ನಗುತ್ತಾರೆ ಎಂದು ಅರಿತುಕೊಂಡೇ ಕಣಕ್ಕಿಳಿದಿತ್ತು. ಇದೂ ಅಲ್ಲದೆ ಇತ್ತೀಚೆಗೆ ಪ್ರಧಾನಿ ಮನಮೋಹನ್ ಸಿಂಗ್ ಅವರು ಕೂಡ ದಕ್ಷಿಣ ಆಫ್ರಿಕಾ ಪ್ರವಾಸ ಮಾಡಿ ಉಭಯ ದೇಶಗಳ ಮಧ್ಯೆ ಸಂಬಂಧ ಬಲಪಡಿಸಲು ಯತ್ನಿಸಿದ್ದರು. ಈ ಕಾರಣಕ್ಕೆ ದ.ಆಫ್ರಿಕಾದ ಮುಖದಲ್ಲಿ ಗೆಲುವು ಮೂಡಿಸಬೇಕಿದ್ದರೆ ನಾವು ಸೋಲಲೇಬೇಕು ಎಂಬ ಸಿದ್ಧಾಂತದೊಂದಿಗೆ ಉಭಯ ರಾಷ್ಟ್ರಗಳ ನಡುವಿನ ಸಂಬಂಧ ವರ್ಧನೆಯಲ್ಲಿ ನಮ್ಮ ತಂಡವು ಪ್ರಧಾನ ಪಾತ್ರ ವಹಿಸುತ್ತಿದೆ ಎಂದು ವಿಶ್ಲೇಷಿಸಲಾಗಿದೆ.

ಈ ಬಗ್ಗೆ ಭಾರತೀಯ ಕ್ರಿಕೆಟ್ ತಂಡದ ಆಟಗಾರರನ್ನು ಬೊಗಳೆ ರಗಳೆ ಬ್ಯುರೋಗಾಗಿ ಮಾತನಾಡಿಸಲಾಯಿತು. ಅದಕ್ಕೆ ಹೆಚ್ಚಿನವರಿಂದ ಬಂದ ಉತ್ತರ ಬಹುತೇಕ ಒಂದೇ ರೀತಿಯಾಗಿತ್ತು.

"ನಾವಿನ್ನೂ ಆಟ ಆರಂಭವಾಗಿಲ್ಲ ಎಂದೇ ಯೋಚಿಸಿ ಬ್ಯಾಟು ಹಿಡಿದು ನಿಂತಿದ್ದೆವು. ಅವರಿಗೆ ನಮಗೆ ಹೇಳದೆಯೇ ಚೆಂಡೆಸೆದರು. ಮನೆಯ ದೂರವಾಣಿ ಸಂಖ್ಯೆಯನ್ನು ನೆನಪಿಸಿಕೊಳ್ಳುತ್ತಿದ್ದ ನಮಗೆ ಚೆಂಡು ಬಂದದ್ದು ಗೊತ್ತೇ ಆಗಿಲ್ಲ. ಅಷ್ಟರಲ್ಲಾಗಲೇ ಅಂಪೈರು ಕೈ ಎತ್ತಿಯಾಗಿತ್ತು. ಏನನ್ಯಾಯ? ನೋಡಿದರೆ ಹಸಿರಂಗಿಯವರು ಎಸೆದದ್ದು ನೇರವಾಗಿ ವಿಕೆಟಿಗೇ!" ಎಂದವರು ತತ್ತರಿಸಿದರು.

ಅವರು ಹೇಳಿದ "ದೂರವಾಣಿ" ಸಂಖ್ಯೆ ಎಂಬ ಪದದ ಹಿಂದೆ ಬಿದ್ದಾಗ ತಿಳಿದುಬಂದ ಅಂಶವೆಂದರೆ, ಅವರೆಲ್ಲರೂ ಪರದೇಶದಲ್ಲಿರುವುದರಿಂದ Home sick ಆಗಿದ್ದಾರೆ. ಅವರಿಗೆ ಮನೆಗೆ ಫೋನ್ ಮಾಡಲೆಂದು ಮನೆಯ ದೂರವಾಣಿ ಸಂಖ್ಯೆಯನ್ನು ಜ್ಞಾಪಿಸಿಕೊಳ್ಳುತ್ತಿದ್ದರು. ಎಷ್ಟೇ ಯೋಚನೆ ಮಾಡಿದರೂ ಒಂದು ಅಂಕಿ ಮಾತ್ರವೇ ನೆನಪಾಗುತ್ತಿತ್ತು. ಆ ಅಂಕಿಯ ಮೇಲೆಯೇ ಗಮನ ಕೇಂದ್ರೀಕರಿಸಿದ ಕಾರಣ ಎಲ್ಲರೂ ಅಷ್ಟೇ ಸಂಖ್ಯೆಯ ರನ್ ಗಳಿಸಿದರು.

ಎಲ್ಲಾ ಅಂಕಿಗಳನ್ನು ಒಟ್ಟುಗೂಡಿಸಿದಾಗ ಎಸ್‌ಟಿಡಿ ಕೋಡ್ ಸಹಿತದ ಒಂದು ದೂರವಾಣಿ ಸಂಖ್ಯೆ ಲಭಿಸಿತು. ಇದೊಂದು ಅದ್ಭುತ ಪ್ರಯೋಗವಾಗಿತ್ತು ಎಂದು ನಂಬಲರ್ಹ ಮೂಲಗಳು ತಿಳಿಸಿಲ್ಲ. ಈ ಮಧ್ಯೆ, ಸಚಿನ್, ದ್ರಾವಿಡ್ ಮತ್ತು ಧೋನಿ ಅವರೆಲ್ಲ ಒಂದಷ್ಟು ಅನುಭವ ಹೊಂದಿದ್ದರಿಂದ ಎರಡಂಕಿ ನೆನಪಿಸಿಕೊಳ್ಳಲು ಸಮರ್ಥರಾಗಿದ್ದರು.

ಇಷ್ಟರ ನಡುವೆಯೂ ಅವರೆಲ್ಲರೂ ದಾಖಲೆಗೆ ಯತ್ನಿಸಿದ್ದರು ಎಂಬ ಅಂಶವೂ ಬಯಲಾಗಿದೆ. 82ರನ್ ಇರುವಾಗ ಅದಕ್ಕೆ 3 ರನ್ ಸೇರಿಸಲು 5 ಮಂದಿ ದಾಂಡಿಗರು ತಮ್ಮ ವಿಕೆಟ್‌ಗಳನ್ನು ದಾನ ಮಾಡಿದ್ದರು!

ಮಿತ್ರ ರಾಷ್ಟ್ರಕ್ಕೂ ದಾಖಲೆಗೆ ಅವಕಾಶ ಮಾಡಿಕೊಟ್ಟ ದಾಂಡಿದರು ಶತಕವೀರ ಕಾಲಿಸ್‌ನ 4 ಓವರುಗಳಲ್ಲಿ 3 ರನ್ ಮಾತ್ರವೇ ತಮ್ಮಲ್ಲಿ ಉಳಿಸಿಕೊಂಡು, 3 ವಿಕೆಟ್‌ಗಳನ್ನು ವಿನಿಮಯ ಮಾಡಿಕೊಂಡಿರುವುದಾಗಿ ವರದಿಯಾಗಿದೆ.

(ಸೂ: ಪ್ರಯಾಸ ಕಥನದ ಮುಂದುವರಿದ ಭಾಗ ಬೇಯುತ್ತಿರುವ ಕಾರಣದಿಂದಾಗಿ ನಾಳೆ ಪ್ರಕಟವಾಗುವ ನಿರೀಕ್ಷೆ ಇದೆ.)

Wednesday, November 22, 2006

'ತೀರ್ಥ' ಯಾತ್ರೆ- ಭಾಗ 1/2

ಉಜ್ಜಯಿನಿ ಬಸ್ ನಿಲ್ದಾಣದಲ್ಲಿ ನನ್ನನ್ನು ಬಿಟ್ಟು ಎಲ್ಲೋ ನಾಪತ್ತೆಯಾದವರ ಬಗ್ಗೆ ತಲೆಕೆಡಿಸಿಕೊಳ್ಳದೆ ಮುಂದುವರಿದಾಗ ಈ ಮೃಚ್ಛಕಟಿಕದ ಸವಾರನೂ ಕೂಡ ಬಸ್ಸಿನಲ್ಲಿ ಹಾಕಿದ ಹಾಡಿನ ಮುಂದುವರಿದ ಭಾಗವನ್ನೇ ಹಾಕಿದ್ದ! " ಪರದೇಸೀ ಮೇರೇ ಯಾರಾ..., ವಾದಾ ನಿಭಾನಾ...ಮುಝೇ ಯಾದ್ ರಖ್‌ನಾ ಕಹೀಂ ಭೂಲ್ ನಾ ಜಾನಾ..." ಅಂತ ಹಾಡು ಮುಂದುವರಿದಾಗ ಯಾಕೋ ಮನಸ್ಸಿನಲ್ಲೆಲ್ಲೋ ತಳಮಳ ಮತ್ತು ಮೃಚ್ಛಕಟಿಕವನ್ನು ಮರೆಯಬಾರದೆಂಬ ಸಂಕಲ್ಪ.
 
ಮಹಾಕಾಲೇಶ್ವರ ಮಂದಿರದ ಬಳಿ ದಬಕ್ಕನೆ ಇಳಿಸಿದ ಚಾಲಕ, 'ಕ್ಯಾ ಸಾಬ್, ಆಪ್‌ಕೋ ದಾರೂ ವಗೈರಾ ಇಂತಜಾಮ್ ಕರೂಂ ಕ್ಯಾ' ಎಂದು ನಿರ್ಭಿಡೆಯಿಂದಲೇ ಕೇಳಿದ. ಇಳಿದು ಎತ್ತಕಡೆ ಹೋಗಬೇಕೆಂದು ತಿಳಿಯದೆ ಕಣ್ ಕಣ್ ಬಿಡುತ್ತಿದ್ದಾಗಲೇ, ಬಹುಶಃ ಆತನಿಗೆ ನಾನು ಪರದೇಸಿ ಅಂತ ಗೊತ್ತಾಗಿರ್ಬೇಕು, ಅದಕ್ಕಾಗಿ ಕೇಳಿರ್ಬೇಕು.
 
ಹೇಗಿದ್ದರೂ ಬಂದಿದ್ದು ತೀರ್ಥಯಾತ್ರೆಗೆ ಎಂದು ನೆನಪಾಗಿದ್ದು ಆಗಲೇ! ಮಹಾಕಾಲೇಶ್ವರನ ಮೊದಲು ಆತನಿಗೇ ಒಂದು ದೊಡ್ಡ ನಮಸ್ಕಾರ ಹಾಕಿ, ನಾನು ಬಂದಿದ್ದು ತೀರ್ಥ ಯಾತ್ರೆಗೆ ಹೌದಾದರೂ, ನಮ್ಮ ತೀರ್ಥ ಬೇರೆಯದು ಎಂದು ಸಮಜಾಯಿಷಿ ನೀಡಿದೆ.
ಇದು ಭಾರತದಲ್ಲಿರುವ 12 ಜ್ಯೋತಿರ್ಲಿಂಗಗಳಲ್ಲಿ ಒಂದು ಲಿಂಗ ಇರುವ ಕ್ಷೇತ್ರ. ಇಲ್ಲಿ ತೀರ್ಥ ಸೇವಿಸದಿದ್ದರೆ, ಸದ್ಗತಿ ಸಿಗಲಾರದು ಎಂದು ಯೋಚಿಸಿ ಜ್ಯೋತಿರ್ಲಿಂಗ ದರ್ಶನಾರ್ಥಿಯಾಗಿ ದೊಡ್ಡ ಸಾಲಿನಲ್ಲಿ ನಿಂತೆ.
 
ಆಗ ನೋಡಿ ಆರಂಭವಾಯಿತು.... ನಿರುದ್ಯೋಗ ಸಮಸ್ಯೆ ಎದುರಿಸುತ್ತಿರುವ ಭಾರತದಲ್ಲಿ ಹೇಗೂ ಬದುಕಬಹುದು, ಮನಸ್ಸಿದ್ದರೆ ಮಾರ್ಗ ಎಂಬ ವಿಷಯಕ್ಕೆ ಪುಷ್ಟಿ ದೊರೆಯುವ ಘಟನಾವಳಿಗಳು!
 
ಜ್ಯೋತಿರ್ಲಿಂಗ ದರ್ಶನವನ್ನು ಮಾಡಬೇಕಿದ್ದರೆ ಸುಮಾರು 2 ಗಂಟೆ ಉದ್ದರ ಕ್ಯೂನಲ್ಲಿ ನಿಲ್ಲಬೇಕಾಗಿತ್ತು. ಅಷ್ಟರಲ್ಲಿ ಅಲ್ಲಲ್ಲಿ ನುಸುಳುವ ಅಂಗಿ ಧರಿಸಿದ ಅರ್ಚಕರು (ಉತ್ತರ ಭಾರತದಲ್ಲಿ ಇದೇ ಸಂಪ್ರದಾಯ ಎಂಬಂತೆ ಕಾಣಿಸುತ್ತದೆ), "ಆಯಿಯೇ, ಆಪ್‌ಕೋ ಜಲ್ದೀ ದರ್ಶನ್ ಕರ್‌ವಾತೇ ಹೈಂ, ಕೇವಲ್ ಸೌ ರುಪಯಾ" ಎಂದು ಮೊದಲ ಎಚ್ಚರಿಕೆಯೇಟು ನೀಡಿದ.
 
ಹೇಗೆ ಅಷ್ಟು ಬೇಗ ನೂರು ರುಪಾಯಿ ಕೊಟ್ಟರೆ ದರ್ಶನ ಮಾಡಿಸುತ್ತೀಯಾ ಎಂದು ಕೇಳಿದರೆ, ಸರತಿ ಸಾಲಿನ ಒಂದು ಭಾಗದಲ್ಲಿರುವ ಗೇಟು ತೋರಿಸಿ, ಅಲ್ಲಿಂದ ನಿಮ್ಮನ್ನು ಕರೆದೊಯ್ಯುತ್ತೇನೆ ಎಂದುಬಿಟ್ಟ ಮಹಾಶಯ. ನೋಡೋಣ ಮುಂದೆ ಏನೆಲ್ಲಾ ಘಟಿಸುತ್ತದೆ ಎಂದು ಆತನಿಗೆ ಟಾಟಾ ಹೇಳಿ ಸಾಲಿನಲ್ಲಿ ನಿಂತರೂ, ಮತ್ತೊಬ್ಬ, ಮಗದೊಬ್ಬ, ಹೀಗೇ ಆಗಾಗ್ಗೆ ನಮ್ಮನ್ನು ಬಂದು ವಿಚಾರಿಸಿಕೊಳ್ಳುತ್ತಾ ಇರುವವರ ಸಂಖ್ಯೆ ಹೆಚ್ಚೇ ಆಗತೊಡಗಿತ್ತು.
 
ಮತ್ತೆ ಮುಂದುವರಿದಾಗ ಹೊಸದೊಂದು ವೇಷ ಪ್ರತ್ಯಕ್ಷವಾಯಿತು. ಕೈಯಲ್ಲಿ ತಾಮ್ರದ ಚೊಂಬು, ಕೊರಳೊಳು ರುದ್ರಾಕ್ಷಿ ಮಾಲೆಯೊಂದಿಗೆ, "ಅಭಿಷೇಕ್ ಕರ್ವಾನಾ ಹೈ?" ಎಂದು ಕೇಳಿದ. ಕೈಗೆ ಚೊಂಬು ಕೊಡಲು ಸಿದ್ಧನಾದ ಅವನನ್ನು ತಡೆದು ಮುಂದುವರಿದಾಗ, ಓಹ್.... ವೈಷ್ಣವ ಕ್ಷೇತ್ರ ತಿರುಪತಿಯಲ್ಲಿ ತಲೆ ಬೋಳಿಸುತ್ತಾರೆ, ಶೈವಕ್ಷೇತ್ರವಾದ ಇಲ್ಲಿ ಜೇಬು ಬೋಳಿಸುತ್ತಾರೆಯೇ ಎಂಬ ಕೆಟ್ಟ ಯೋಚನೆ ಮನದಲ್ಲಿ ಸುಳಿಯಿತು.
 
ತಲೆಯ ಮೇಲೆ ಕೈಯಾಡಿಸಿ, ತಲೆ ಬೋಳಾಗಿಲ್ಲ ಎಂಬುದನ್ನು ಖಚಿತಪಡಿಸಿಕೊಂಡು ಮುಂದುವರಿಯಲಾಯಿತು.
 
ಜ್ಯೋತಿರ್ಲಿಂಗ ಸಮೀಪಿಸುತ್ತಿರುವಂತೆಯೇ ಹರಹರ ಮಹಾದೇವ ಎಂಬ ಘೋಷಣೆಗಳು, ಭಕ್ತಾದಿಗಳ ಬಾಯಿಯಿಂದ ಹೊರಬರುತ್ತಿತ್ತು. ಯಾರೋ ಬೆಂಬತ್ತಿದವರಂತೆ, ಕಳವಳದ ಕೂಗಿನಂತಿತ್ತು ಈ ಘೋಷಣೆ. ದೇವರಿಗೆ ಮೆಲ್ಲ ಹೇಳಿದರೆ ಕೇಳಿಸಲಾರದು, ಹೇಗಿದ್ದರೂ ಎತ್ತರದ ಕೈಲಾಸ ಶಿಖರದಲ್ಲಿರೋದಲ್ಲಾ! ಅದಕ್ಕೇ ಇರಬೇಕು, ಆದರೆ ನಮ್ಮ ಕಿವಿ ತಮಟೆಯೇಕೆ ರಪ್ಪನೆ ಹರಿಯಬೇಕು? ಎಂಬ ಪ್ರಶ್ನೆಗೆ ಉತ್ತರ ನೀಡುವ ಸ್ಥಿತಿಯಲ್ಲಿ ಯಾರೂ ಇರಲಿಲ್ಲ.
 
ಮುಂದೆ ಘಟಿಸಿದ್ದು ಕರ್ನಾಟಕದ ಗೋಕರ್ಣವನ್ನು ನೆನಪಿಸುವ ಪ್ರಸಂಗ, ಸಾಕ್ಷಾತ್ ರೌದ್ರಾವತಾರ ದರ್ಶನ ಯೋಗ.! ನಿರುದ್ಯೋಗ ನಿವಾರಣಾ ಯೋಗ. (ಅಲ್ಲಿಗೆ ಮತ್ತೆ ಹೋಗಬೇಕಾಗಿರುವುದರಿಂದ ಅದನ್ನು ನಾಳೆ ಪ್ರಕಟಿಸಲಾಗುತ್ತದೆ)

Tuesday, November 21, 2006

ಪ್ರಯಾಸ ಕಥನ - (ಕಾಲು ಭಾಗ)

(ಬೊಗಳೂರು ಅಲೆಮಾರಿ ಬ್ಯುರೋದಿಂದ)

ಲ್ಲರೂ ಪ್ರಯಾಣ ಮಾಡುತ್ತಾರೆ, ಎಲ್ಲರೂ ಪ್ರಯಾಸ ಕಥನ ಬರೆಯುತ್ತಾರೆ, ನಿಮ್ಮ ಬೊಗಳೆಯಲ್ಲೇಕಿಲ್ಲ ಎಂಬ ಅಪವಾದದಿಂದ ಅವಮಾನಿತನಾಗಿ ಉಜ್ಜೈನಿ ಯಾತ್ರೆಗೆ ತೆರಳಿದ ಅಸತ್ಯಾನ್ವೇಷಿಯಿಂದ ಬೊಗಳೆ-ರಗಳೆಗಾಗಿಯೇ ವಿಶೇಷವಾಗಿ ಸಿದ್ಧಪಡಿಸಲಾದ ದಯನೀಯ ಪ್ರಯಾಸ ಕಥನವಿದು.

ಇದನ್ನು ಅಸತ್ಯಾನ್ವೇಷಿಯ ಬಾಯಿಯಿಂದಲೇ ಕೇಳಿ:

ಪ್ರಯಾಸ ಕಥನ ಜವಾಬ್ದಾರಿಯನ್ನು ಬೊಗಳೆ-ರಗಳೆಯ ಏಕಸದಸ್ಯ ಬ್ಯುರೋ ನನಗೊಪ್ಪಿಸಿದ ಪರಿಣಾಮ ಬೇತಾಳನನ್ನೇ ಕಾಡಿದ ವಿಕ್ರಮಾದಿತ್ಯ ಆಳಿದ ಮತ್ತು ಕಳ್ಳಭಟ್ಟಿ ನೆನಪಿಸುವ ಭಟ್ಟಿ ಇರುವ ನಾಡಿಗೆ ತೆರಳಲು ನಿರ್ಧರಿಸಿದೆ. ಭಾರತದ ದೇಶದ ನಾಭಿ ಪ್ರದೇಶ ಎಂದೇ ಕರೆಯಲಾಗುವ ಉಜ್ಜಯಿನಿಗೆ ಬಹಳ ದೂರವಿದೆ. ರೈಲು ಏರಿದರೆ ಅದು ತುಂಬಾ ಉದ್ದವಿದೆ, ತಲುಪುವುದು ತಡವಾಗುತ್ತದೆ, ವಿಮಾನ ಏರಿದರೆ ಇಳಿಯುವುದಾದರೂ ಎಲ್ಲಿ? ಆಕಾಶದಲ್ಲೇ ಟ್ರಾಫಿಕ್ ಜಾಮ್ ಆದರೆ ಎಂಬ ಆತಂಕ, ಕಾರಿನಲ್ಲಿ ಹೋದರೆ ಏಕಸದಸ್ಯ ಬ್ಯುರೋದ ಸಮಸ್ತ ಸಿಬ್ಬಂದಿಗೆ ಜಾಗ ಸಾಕಾಗದು. (ಎಡಚಿತ್ರ: ಉಜ್ಜಯಿನಿಯಲ್ಲಿ ಆಪ್ತವಾಗಿಬಿಟ್ಟ 'ಮೃಚ್ಛಕಟಿಕ!')

ಈ ರೀತಿ ಯೋಚನೆ ಮಾಡಿಮಾಡಿ ಕೊನೆಗೆ ಧೂಮ್ರಶಕಟವನ್ನೇರಿದಾಗ ಹೊತ್ತು ಮೀರಿತ್ತು. ಇಂದೋರಿನಿಂದ ಹೊರಟ ಈ ಧೂಮ್ರಶಕಟವು ಕಟಕಟ ಎಂದು ಸದ್ದು ಮಾಡುತ್ತಾ, ಅಕಟಕಟಾ, ನಾವೇಕೆ ಈ ಬಸ್ಸೇರಿದೆವು ಎಂದು ಚೆನ್ನಾಗಿ ಯೋಚಿಸುವಂತೆ ಮಾಡಿತು. ಧೂಳು ತುಂಬಿದ, ಹೊಂಡಾ-ಗುಂಡಿ ತುಂಬಿದ ಮಾರ್ಗದಲ್ಲಿ ಹೋಗುವಾಗ ಮನಸ್ಸು ಮಾತ್ರ "ಕಾಶೀಲಿ ಸ್ನಾನ ಮಾಡು, ಕಾಶ್ಮೀರ ಸುತ್ತಿ ನೋಡು, ಜೋಗಾದ ಗುಂಡಿ ಒಡೆಯ ನಾನೆಂದು ತುಂಬಿ ಹಾಡು" ಅನ್ನೋ ರಾಜಕುಮಾರರ ಹಾಡು ಈ ಗುಂಡಿಗಳನ್ನೇ ನೋಡಿ ಮೂಡಿಬಂದಿರಬೇಕು ಅನ್ನೋದನ್ನೇ ಯೋಚಿಸುತ್ತಿತ್ತು. (ಬಲಚಿತ್ರ: ಉಜ್ಜಯಿನಿ ಮಹಾಕಾಲೇಶ್ವರ ಮಂದಿರ)

ಒಬ್ಬನೇ ಉಜ್ಜಯಿನಿಗೆ ತೆರಳುವುದೆಂದು ತೀರ್ಮಾನಿಸಿದರೂ, ನಿಲ್ದಾಣದಲ್ಲಿ ನಿಂತಿದ್ದವರೆಲ್ಲಾ ಅದೇ ಬಸ್ಸನ್ನೇರುವವರೇ! ಕೊನೆಗೆ 62 ಮಂದಿ ನನ್ನ ಜತೆಗೆ, ನಾನೆಲ್ಲಿ ಹೋಗುತ್ತಿದ್ದೇನೆ ಎಂದು ತಿಳಿದುಕೊಳ್ಳುವ ಕುತೂಹಲದಿಂದಲೋ ಏನೋ ಬಂದೇ ಬಿಟ್ಟರು.

ಹೆಸರಿಗೆ ಮಾತ್ರ ಎಂಪಿಎಸ್ಆರ್ಟಿಸಿ, ನಿರ್ವಹಣೆಯೆಲ್ಲವೂ ಖಾಸಗಿಯೇ ಆದುದರಿಂದ ಈ ಧೂಮ್ರಶಕಟದೊಳಗೆ ಜನ ಗಿಜಿಗಿಜಿಗುಟ್ಟುತ್ತಿದ್ದರೂ "ಖಾಲೀ ಹೈ, ಖಾಲಿ ಹೈ, ಕೋಯೀ ನಹೀ ಹೈಂ" ಎನ್ನುತ್ತಾ ನಿರ್ವಾಹಕ ಮಹಾಶಯ ಮತ್ತಷ್ಟು ಜನರನ್ನು ಕೂಗಿ ಕೂಗಿ ಕರೆಯುತ್ತಾ ಬಸ್ಸೇರಿಸುವ ಹವಣಿಕೆಯಲ್ಲಿರುವುದು ಆತನ ಆತ್ಮವಿಶ್ವಾಸದ ಬಗ್ಗೆ ಹುಬ್ಬೇರಿಸುವಂತೆ ಮಾಡಿತು. ಎಲ್ಲಿ ತುಂಬಿಸುತ್ತಾನೆ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿತ್ತು.

ಅಂತೂ ಒತ್ತಿ ಒತ್ತಿ ಕುಳಿತಾಗ ಮೊದಲು ನೋವಾದರೂ, ಸ್ವಲ್ಪ ಸಮಯದ ಬಳಿಕ ಒಂಥರಾ ಸಮಾಧಾನಕರ ಮನೋಭಾವನೆ! ಯಾಕೇಂತ ತಪ್ಪು ತಿಳಿದುಕೊಳ್ಳಬಾರದು. ಇಷ್ಟರಲ್ಲೇ ಕಾರಣ ಹೇಳುತ್ತೇನೆ.

ಅಂತೂ ಬಸ್ಸಿನಲ್ಲಿ ಕೂತಾಗ "ಪರ್‌ದೇಸೀ ಪರ್‌ದೇಸೀ ಜಾನಾ ನಹೀಂ" ಎಂಬ ಹಾಡು ಕಿವಿ ತಮಟೆ ಹರಿಯುವಷ್ಟು ಇಂಪಾಗಿ ಮೂಡಿಬರುತ್ತಿತ್ತು. ನಾನು ಪರ-ದೇಸಿಯೇ ಆಗಿದ್ದುದರಿಂದ ನನ್ನನ್ನೇ ಉಲ್ಲೇಖಿಸಿ ಹೇಳುತ್ತಿದ್ದಾರೆ ಎಂದುಕೊಂಡು ಸಮಾಧಾನಗೊಂಡೆ.

ದಾರಿಯುದ್ದಕ್ಕೂ ಬಯಲು ಪ್ರದೇಶ. ದಖ್ಖಣದ ಪ್ರಸ್ಥಭೂಮಿ ಎಂದು ನಮಗೆ ಭೂಗೋಳ ಮೇಷ್ಟ್ರು ಹೇಳಿದ್ದು ನೆನಪಾಯಿತು. ಕಪ್ಪು ಮಣ್ಣು ಅಂತಲೂ ಹೇಳಿದ್ದರು. ಪೂರ್ತಿ ಕರ್ರಗೆ ಕಪ್ಪು ಅಲ್ಲ, ಕಡು ಬಣ್ಣದ ಮಣ್ಣು, ಸಮೃದ್ಧ ಕೃಷಿಯೋಗ್ಯ ಭೂಮಿ. ಕಣ್ಣು ಹಾಯಿಸಿದಾಗ ಯಾವುದೇ ಗಿಡ, ಮರಗಳಿಲ್ಲದಿರುವುದರಿಂದ, ದೂರಕ್ಕೆ ಕಣ್ಣು ಹಾಯಿಸಿದರೆ ಅಮೆರಿಕ, ಕೆನಡಾ, ಫ್ರಾನ್ಸ್, ನ್ಯೂಜಿಲೆಂಡ್, ಇಂಗ್ಲೆಂಡ್, ಇರಾನ್, ಫ್ರಾನ್ಸ್ ಮಾತ್ರವಲ್ಲ ಭಾರತದಲ್ಲಿರುವ ಬೊಗಳೆ ರಗಳೆಯ ಓದುಗ ಮಿತ್ರರನ್ನು ನೋಡಬಹುದಾಗಿತ್ತು!

ಅಂತೂ ಸುಮಾರು 60 ಕಿ.ಮೀ. ದೂರಕ್ಕೆ ಒಂದೂ ಮುಕ್ಕಾಲು ಗಂಟೆ ಬೇಕಾಯಿತು. ಧೂಳು ತುಂಬಿದ ಮಾರ್ಗ ಉಜ್ಜಯಿನಿಯಲ್ಲಿ ಇಳಿಯುವಾಗಲೇ ಗೊತ್ತಾದದ್ದು, ನನ್ನ ಅಕ್ಕ ಪಕ್ಕ ಕೂತವರೆಲ್ಲರೂ ಬಣ್ಣ ಬದಲಿಸಿದ್ದರು, ನಾನು ಮಾತ್ರ ಧೂಳಿನ ಕಣವೂ ತಗುಲದೆ ಸ್ವಚ್ಛವಾಗಿದ್ದೆ! ಇದಕ್ಕಾಗಿಯೇ ಒತ್ತಿ ಒತ್ತಿ ಕೂತಾಗ ಮನಸ್ಸು ಸಮಾಧಾನಗೊಂಡದ್ದು! ಬೇರೆ ಯಾವ ಕಾರಣವೂ ಇಲ್ಲ. ಇಷ್ಟು ಮಾತ್ರವಲ್ಲ, ನನ್ನ ಎಲುಬುಗಳು ಕೂಡ ಸರಿಯಾಗಿದ್ದವು. ಬೇರೆಯವರೆಲ್ಲಾ ತಮ್ಮ ತಮ್ಮ ತಪ್ಪಿದ ಕೀಲುಗಳನ್ನು ಸರಿಪಡಿಸಿಕೊಳ್ಳುತ್ತಿದ್ದರು!

ಮೂಲತಃ ಉಜ್ಜಯಿನಿ ಎಂಬ ಊರನ್ನು ನಾಲಿಗೆ ತಿರುಗದ ಹಿಂದಿ ಭಾಷಿಗರು ಉಜೇನ್ ಎಂದೇ ಕರೆಯುತ್ತಾರೆ. ಆವಂತಿಕಾಪುರಿ, ಪದ್ಮಾವತಿ, ಕನಕಶೃಂಗ, ಕುಶಸ್ಥಲೀ, ಕುಮುದಾವತಿ, ಅಮರಾವತಿ, ವಿಶಾಲಾ ಎಂಬ ಹೆಸರುಗಳೂ ಈ ಊರಿಗಿದೆ ಎಂದು ತಿಳಿದು ಇಂಥ ಪುಣ್ಯ ನಗರಿಗೆ ಕಾಲಿಟ್ಟಾಗ ಮನಸ್ಸು ತುಂಬಿ ಬಂತು.

ಪ್ರಯಾಣಕ್ಕಾಗಿ ಮೊದಲೇ ಶೂದ್ರಕನಿಗೆ ಫೋನ್ ಮಾಡಿ ಹೇಳಲಾಗಿತ್ತು. ಅವನು ತನ್ನ "ಮೃಚ್ಛಕಟಿಕ"ವನ್ನು ಸಿದ್ಧಪಡಿಸಿಟ್ಟು ಕಳುಹಿಸಿದ್ದ. ಅದರ ಚಿತ್ರ ಪಕ್ಕದಲ್ಲೇ ಇದೆ. (ಮೃಚ್ಛಕಟಿಕ ಎಂದರೆ ಮಣ್ಣಿನ ಗಾಡಿ ಎಂದರ್ಥವೇ? ಬಲ್ಲವರು ಹೇಳಿ.)

ಗಡಗಡ ಸದ್ದು ಮಾಡುತ್ತಾ, ಪ್ರಿಯಕರನಲ್ಲಿ ಕೋಪಗೊಂಡ ಪ್ರಿಯತಮೆ ಮೂತಿ ಬಾಪಿಸಿಕೊಂಡಂತೆ ಕಂಡುಬಂದ ಮತ್ತು ನನ್ನ ಪ್ರೀತಿಯ ಗಾಡಿಯಾಗಿ ಪರಿವರ್ತನೆಗೊಂಡ ಬಜಾಜ್ ಕಂಪನಿಯ ಈ ಮೃಚ್ಛಕಟಿಕವು 2 ರೂಪಾಯಿಯಲ್ಲಿ ನನ್ನನ್ನು ಮಹಾಕಾಲೇಶ್ವರನ ಮಂದಿರಕ್ಕೆ ತಲುಪಿಸಿತು. ಬಸ್ಸಿನೊಳಗಿದ್ದ 60ಕ್ಕೂ ಹೆಚ್ಚು ಮಂದಿ ಎಲ್ಲಿ ಹೋದರೆಂಬುದೇ ತಿಳಿಯಲಿಲ್ಲ. ಯಾಕೆಂದರೆ ಈ ಮೃಚ್ಛಕಟಿಕದಲ್ಲಿ ಅವಕಾಶವಿದ್ದದ್ದು 10-12 ಮಂದಿಗೆ ಮಾತ್ರ.

(ಮುಂದುವರಿಯುತ್ತದೆ ಎಂದು ಎಚ್ಚರಿಕೆ ನೀಡಲಾಗುತ್ತಿದೆ.)

Monday, November 20, 2006

ಶ್ರೀಮಂತಿಕೆ: ಅಂಬಾನಿಗಳಿಗಿಂತಲೂ ಶ್ರೀಮಂತರು!

(ಬೊಗಳೂರು ಕಾಳದಂಧೆ ಬ್ಯುರೋದಿಂದ)
ಬೊಗಳೂರು, ನ.20- ದೇಶದ ಧೀರ-ಭಾಯಿ ಭಾಯಿ ಖ್ಯಾತಿಯ ಅಂಬಾನಿದ್ವಯರು ವಿಪ್ರೋ ಅಧ್ಯಕ್ಷ ಅಜೀಂ ಪ್ರೇಮ್‌ಜಿಯವರನ್ನು ಶ್ರೀಮಂತಿಕೆಯಲ್ಲಿ ಹಿಂದಿಕ್ಕಿದರೂ, ತಮ್ಮನ್ನು ಹಿಂದಿಕ್ಕಲು ಅವರಿಗೆ ಸಾಧ್ಯವೇ ಇಲ್ಲ, ನಾವೇ ನಂಬರ್ 1 ಎಂದು ಬಡ ಬೋರೇಗೌಡ ಹೇಳಿಕೊಂಡಿದ್ದಾನೆ.
 
ಅಂಬಾನಿ ಸಹೋದರರನ್ನು ಶ್ರೀಮಂತರ ಪಟ್ಟಿಯಲ್ಲಿ ಗುರುತಿಸಿರುವ ಬಗ್ಗೆ ಜನಸಾಮಾನ್ಯರ ಪ್ರತಿನಿಧಿಯಾದ ಬಡಬೋರೇಗೌಡನನ್ನು ಬೊಗಳೆ ರಗಳೆ ಬ್ಯುರೋ ಮಾತನಾಡಿಸಿದಾಗ ಕಂಡು ಕೇಳರಿಯದ ತನಿಖಾ ವರದಿಗೆ ಅರ್ಹವಾದ ಹತ್ತು ಹಲವು ಅಂಶಗಳು ದೊರೆತವು.
 
ಅಂಬಾನಿ ಸಹೋದರರಿಗೆ ಅಷ್ಟೊಂದು ಶ್ರೀಮಂತಿಕೆಯಿದೆ. ಆದರೆ ಅವರು ನಮ್ಮಂತೆ ಅರೆ ಹೊಟ್ಟೆಯಲ್ಲಿ ಇರುವುದು ಸಾಧ್ಯವೇ? ಅಥವಾ ಅರೆಬಟ್ಟೆಯಲ್ಲಿ ಕಾಲ ಕಳೆಯುವುದು ಸಾಧ್ಯವೇ ಎಂದು ಪ್ರಶ್ನಿಸಿರುವ ಬಡ ಬೋರೇಗೌಡ, ಆದರೂ ನಾವೆಷ್ಟು ಸಂತೋಷವಾಗಿದ್ದೇವೆ, ನೆಮ್ಮದಿಯಿಂದಿದ್ದೇವೆ, ಅವರು ನೆಮ್ಮದಿಯಿಂದಿದ್ದಾರಾ ಎಂದು ಪ್ರಶ್ನಿಸಿದ್ದಾನೆ. ಮಾತ್ರವಲ್ಲ ಹೃದಯಶ್ರೀಮಂತಿಕೆಯಲ್ಲೂ ನಾವೇ ಮುಂದಿದ್ದೇವೆ ಎಂಬುದನ್ನೂ ಖಚಿತಪಡಿಸಿದ್ದಾನೆ.
 
ಈ ವಿಷಯದ ಕುರಿತು ಅಸತ್ಯಾನ್ವೇಷಿಯ ಬದ್ಧವೈರಿಯಾದ ಸತ್ಯಾನ್ವೇಷಿಯನ್ನು ಪ್ರಶ್ನಿಸಲಾಯಿತು.
 
ಫೋರ್ಬ್ಸ್ ಪತ್ರಿಕೆಗೆ ಅವರೆಲ್ಲ ಹಣ ಕೊಟ್ಟು ಈ ರೀತಿ ಅಚ್ಚು ಹಾಕಿಸಿದ್ದಾರೆ ಎಂಬಲ್ಲಿಂದ ಮಾತಿಗಾರಂಭಿಸಿದ ಸತ್ಯಾನ್ವೇಷಿ, ಅವರಿಗಿಂತ ಹೆಚ್ಚು ಶ್ರೀಮಂತರ ಹೆಸರು ನಾನು ಹೇಳಬಲ್ಲೆ ಎಂದು ಎದೆತಟ್ಟಿಕೊಂಡು ಉಗುಳಿಬಿಟ್ಟ.
 
ಅದು ಹೇಗೆ ಅಷ್ಟು ಕರಾರುವಾಕ್ಕಾಗಿ ಹೇಳುತ್ತೀ ಎಂದು ಪ್ರಶ್ನಿಸಿದಾಗ, "ಈಗ ಕೇಂದ್ರದಲ್ಲಿ ಸರಕಾರದ ಕೈಗೊಂಬೆಯಾಗಿ ಕಾರ್ಯಾಚರಿಸುತ್ತಿದೆ ಎಂಬ ಆರೋಪ ಹೊತ್ತಿರುವ ಸಿಬಿಐಯಲ್ಲಿರುವ ರಾಜಕೀಯ ರಹಿತ ಅಧಿಕಾರಿಗಳನ್ನು ತನಿಖೆಗೆ ಬಿಡಿ, ಅವರು ಎಲ್ಲ ರಾಜಕಾರಣಿಗಳ ಆಸ್ತಿ ಸಂಶೋಧಿಸಲಿ, ಆಗ ಗೊತ್ತಾಗುತ್ತೆ, ಯಾರು ಹೆಚ್ಚು ಶ್ರೀಮಂತರು ಎಂದು" ಎಂಬ ಉತ್ತರ ಬಂದಿತು.
 
ಈ ಕಾರಣಕ್ಕೆ ಕಪ್ಪು ಹಣ ಮತ್ತು ಬಿಳಿ ಹಣ ಎಂಬ ಎರಡು ವಿಭಾಗಗಳನ್ನು ಮಾಡಿ ಎರಡೂ ವಿಭಾಗಗಳ ಶ್ರೀಮಂತರನ್ನು ಗುರುತಿಸುವ ಪ್ರಯತ್ನವಾಗಬೇಕು ಎಂದು ಆತ ಫೋರ್ಬ್ಸ್ ಪತ್ರಿಕೆಗೆ ಸಲಹೆ ನೀಡಿದ್ದಾನೆ.
 
ಉದ್ಯಮಪತಿಗಳೆಲ್ಲ ತಂತ್ರಜ್ಞಾನ ಅಭಿವೃದ್ಧಿಗೆ ಕಾರಣರಾಗಿ ಆಸ್ತಿಪಾಸ್ತಿ ಮಾಡುತ್ತಿದ್ದರೆ, ರಾಜಕಾರಣಿಗಳು ಸಂಪನ್ಮೂಲಗಳ ಗಣಿ ಅಗೆದು, ಮೇವು ತಿಂದು, ಪ್ರಜೆಗಳನ್ನು ಹಿಂಡಿ ಹಣ ಮಾಡುತ್ತಿದ್ದಾರೆ, ಹಾಗಾಗಿ ಇದು ಹೆಚ್ಚು ಸಾಧನೆಯಿಂದ ಸಂಪಾದಿಸಿದ ಹಣ ಎಂಬುದು ಸತ್ಯಾನ್ವೇಷಿಯ ಅಭಿಮತ.
 
ಹೀಗಾಗಿ ಉದ್ಯಮಿಗಳ ಶ್ರೀಮಂತಿಕೆಯನ್ನು ನಗಣ್ಯ ಎಂದು ಪರಿಗಣಿಸಬಹುದಾಗಿದೆ ಎಂದಾತ ಹೇಳಿದ್ದಾನೆ.
 
-----------
ಸೂಚನೆ: ಉಜ್ಜಯಿನಿಗೆ ತೆರಳುವ ವಾಹನ ಕೈಕೊಟ್ಟಿದೆ. ಪ್ರಯಾಸ ಕಥನ ಶೀಘ್ರವೇ ಪ್ರಕಟವಾಗಲಿದೆ.

Saturday, November 18, 2006

ಬರಲಿದೆ ಪ್ರಯಾಸ ಕಥನ!!!

ಬೊಗಳೆ ರಗಳೆ ಬ್ಯುರೋದಿಂದ ಆವಂತಿಕಾಪುರಿ(ಉಜ್ಜಯಿನಿ) ಪ್ರಯಾಸ ಕಥನ!
 
ಭಟ್ಟಿ ವಿಕ್ರಮಾದಿತ್ಯನ ನಾಡಿಗೆ ಅಸತ್ಯಾನ್ವೇಷಿ ಭೆಟ್ಟಿ!
 
ಎಂದೂ ಕಂಡು ಕೇಳರಿಯದ ಪ್ರಯಾಸ ಕಥನ ಶೀಘ್ರವೇ ಸಚಿತ್ರವಾಗಿ ಮೂಡಿಬರಲಿದೆ.
 
ಕಾಳಿದಾಸನಿಗೊಲಿದ ಕಾಳಿ ನೆಲೆನಿಂತ ನಾಡಿನಲ್ಲಿ ಕಾಲಿ ದೋಸೆ ತಿಂದು ಅಲೆದಾಡಿ ಧೂಳಿದಾಸನಾದ ಕಥೆ
 
ಶ್ರೀಕೃಷ್ಣ-ಬಲರಾಮ-ಸುದಾಮರು LKG ಕಲಿತ ಸಾಂದೀಪನಿ ಆಶ್ರಮದಲ್ಲಿ ಅ, ಆ, ಇ, ಈ ಓದಿದ ಅಸತ್ಯಾನ್ವೇಷಿ.
 
ಜ್ಯೋತಿರ್ಲಿಂಗಗಳಲ್ಲೊಂದಾಗಿರುವ ಮಹಾಕಾಲೇಶ್ವರ ಮಂದಿರದಲ್ಲಿ ಅರ್ಚಕರನ್ನು ರುದ್ರಭಯಂಕರರಾಗಿಸಿದ ಕಥೆ...
 
ನಿರೀಕ್ಷಿಸಬೇಡಿ...
 
ಯಾಕೆಂದರೆ ಆಸೆಯೇ ದುಃಖಕ್ಕೆ ಮೂಲ...
 
ನಿರೀಕ್ಷಿಸಿದರೆ ಅನಿರೀಕ್ಷಿತವಾಗಿರುವುದೇ ಘಟಿಸೀತು...!!!

Thursday, November 16, 2006

'ಶಿಕ್ಷಕರೇ, ಮರಳಿ ಬನ್ನಿ' ಯೋಜನೆ ಜಾರಿಗೆ

(ಬೊಗಳೂರು ಸರ್ವ ಶಿಕ್ಷಾ ಬ್ಯುರೋದಿಂದ)
ಬೊಗಳೂರು, ನ.16- ಮಕ್ಕಳ ಹಾಜರಾತಿ ಕೊರತೆಯಿಂದಾಗಿ ರಾಜ್ಯ ಸರಕಾರವು ಸರ್ವ ಶಿಕ್ಷಾ ಅಭಿಯಾನದಡಿ 'ಮರಳಿ ಬನ್ನಿ ಶಾಲೆಗೆ' ಎಂಬ ಯೋಜನೆ ಹಮ್ಮಿಕೊಂಡು ಮಕ್ಕಳಿಗೆ ಹಾಲು, ಮೊಟ್ಟೆ, ಅಕ್ಕಿ... ಇತ್ಯಾದಿ ಹಾಳು ಮೂಳು ಕೊಡಲು ಆರಂಭಿಸಿದ್ದು ಹಳೆಯ ಕಥೆಯಾಗಿದ್ದು, ಈಗ ಶಿಕ್ಷಕರಿಗಾಗಿ 'ಮರಳಿ ಬನ್ನಿ ಶಾಲೆಗೆ' ಎಂಬ ಹೊಸ ಯೋಜನೆ ಜಾರಿಗೊಳಿಸಲು ಸಿದ್ಧತೆ ನಡೆಯುತ್ತಿದೆ.
 
ಇತ್ತೀಚೆಗೆ ಶಾಲೆಗೆ ಹಾಜರಾಗುತ್ತಿರುವ ಶಿಕ್ಷಕರ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದ್ದು, ಅವರಿಗೆ ಕಲಿಸಲು ಬೇರೆ ಕಡೆಯೂ ಕೆಲಸವಿದೆ ಎಂಬುದು ಇದರ ಹಿಂದಿರುವ ಕಾರಣವೆಂದು ಪತ್ತೆ ಹಚ್ಚಲಾಗಿದೆ. ಶಿಕ್ಷಕರ ಮತ್ತು ಶಿಕ್ಷಕಿಯರ ಹಾಜರಾತಿ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ.
 
ಈ ಮಧ್ಯೆ, ಶಾಲೆಗೆ ಚಕ್ಕರ್ ಹೊಡೆಯುತ್ತಿರುವ ಮತ್ತು ಬಾಲ-ಕರುಗಳಿಗೆ ಶಿಕ್ಷೆ ನೀಡುತ್ತಲೇ "ಶಿಕ್ಷ-ಕರು" ಎಂದು ಹೆಸರು ಗಳಿಸಿರುವವರ ವಿರುದ್ಧ ವಿದ್ಯಾರ್ಥಿಗಳು ತಾವು ಕೂಡ ತರಗತಿಗೆ ಚಕ್ಕರ್ ಹೊಡೆಯಲು ಇದೇ ಸುಸಮಯ ಎಂದುಕೊಂಡು ಬೀದಿಗಿಳಿಯಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
 
ಮಕ್ಕಳನ್ನು ಮರಳಿ ಶಾಲೆಗೆ ಕರೆಸಲು ಹಾಲು ಹಣ್ಣು ಅಕ್ಕಿ ಇತ್ಯಾದಿ ಆಮಿಷವೊಡ್ಡಲಾಗಿತ್ತು. ಆದರೆ ಶಿಕ್ಷಕರನ್ನು ಶಾಲೆಯತ್ತ ಸೆಳೆಯಲು ಯಾವ ಕ್ರಮ ಕೈಗೊಳ್ಳಬಹುದು, ಯಾವ ಆಮಿಷ ಒಡ್ಡಬಹುದು ಎಂಬುದನ್ನು ಆಲೋಚಿಸಲಾಗುತ್ತಿದೆ.

Wednesday, November 15, 2006

ಬಾಲ ಅಲ್ಲಾಡಿಸಲು ಜಾಗದ ಕೊರತೆ

(ಬೊಗಳೂರು ಶ್ವಾನಾನ್ವೇಷಿ ಬ್ಯುರೋದಿಂದ)
ಬೊಗಳೂರು, ನ.15- ಬೆಂಗಳೂರಿನಲ್ಲಿ ನಾಯಿಗಳ ತೀವ್ರ ಕೊರತೆ ಇದೆ.
 
ಹಿಂದೊಂದು ಕಾಲವಿತ್ತು, ಬಸ್ಸಿಂದ ಕೆಳಗೆ ಕಾಲಿಟ್ಟ ತಕ್ಷಣ ನಾಯಿಗಳು ಇರುವೆಗಳಂತೆ ಮುತ್ತಿಕೊಳ್ಳುತ್ತಿದ್ದವು. ಆದರೆ ಈಗ ಕಾಲ ಬದಲಾಗಿದೆ. ನಾಯಿಗಳು ನಗರ ಜೀವನದಿಂದ ರೋಸಿ ಹೋಗಿವೆ. ಅವುಗಳು ಬೇರೆ ಪುಟ್ಟ ಪಟ್ಟಣಗಳಿಗೆ ಮತ್ತು ಗ್ರಾಮಾಂತರ ಪ್ರದೇಶಗಳಿಗೆ ವಲಸೆ ಹೋಗುತ್ತಿವೆ.
 
ಇದಕ್ಕೆ ಕಾರಣವೆಂದರೆ ನಾಯಿಗಳಿಗೆ ಬಾಲ ಅಲ್ಲಾಡಿಸಲು ಜಾಗವೇ ಇಲ್ಲ. ಇರೋದು ಒಂದು ಬಾಲ. ಅದನ್ನೂ ಅಲ್ಲಾಡಿಸಲು ಜಾಗವಿಲ್ಲದ ಮೇಲೆ ನಮಗೇಕ್ರೀ ಬೇಕು ಈ ಸಿಲ್ಲಿ-ಕಾನ್ ಸಿಟಿಯ ಸಹವಾಸ ಅಂತ ಹೇಳಿ ಶ್ವಾನಮಹೋದಯರು ಅಲ್ಲಿಂದ ಕಾಲ್ಕಿತ್ತಿರುವುದಾಗಿ ವರದಿಯಾಗಿದೆ.
 
ಇನ್ನೊಂದು ನಾಯಿಯನ್ನು ಸಮೀಪ ಕರೆದು ಅದರ ಮೂತಿಯ ಬಳಿ ಬಾಯಿ ಇರಿಸಿ ಕೇಳಲಾಯಿತು. "ನಿಜಕ್ಕೂ ನೀವುಗಳು ಈ ನಗರಿ ಬಿಡಲು ಕಾರಣವೇನು?"
ಅದಕ್ಕೆ ಬಂದ ಉತ್ತರ ಮಾತ್ರ ಸಖತ್ತಾಗಿತ್ತು.
 
ಅಲ್ಲ ಬೊಗಳೆ ಮಹೋದಯರೇ, ನೀವು ಕೂಡ ನಮ್ಮಂತೆಯೇ ಬೊಗಳ್ತಾ ಇರ್ತೀರಿ. ಇಲ್ಲಿ ಕನ್ನಡ ಮಾತಾಡ್ಕೋತಾ, ಖುಷಿಯಾಗಿ ಬಾಲ ಅಲ್ಲಾಡಿಸುತ್ತಾ ನಮ್ ಪಾಡಿಗೆ ನಾವಿದ್ವಾ? ಇಲ್ಲಿಗೆ ತೆಲುಗಿನಲ್ಲಿ, ತಮಿಳಿನಲ್ಲಿ ಬೊಗಳೆ ಬಿಡೋ (ಬೊಗಳೋ ಅಂತ ಖಂಡಿತವಾಗಿಯೂ ಹೇಳಿಲ್ಲ) ಮಂದಿ ಬರಾಕ್ ಹತ್ತಿದರು. ಅವುಗಳು ಕೂಡ ಬಾಲ ಬಿಚ್ಚಲಾರಂಭಿಸಿದವು. ಮಾತ್ರವಲ್ಲ ಜೋರಾಗಿಯೇ ಅಲ್ಲಾಡಿಸತೊಡಗಿದವು. ಸಿಕ್ಕಿದ್ದನ್ನು ಮೇಯ್ದು ಗಟ್ಟಿಮುಟ್ಟಾದ ಕಪ್ಪು ಕಪ್ಪನೆಯ ದಪ್ಪ ಶರೀರವಲ್ವೇ...? ಹಾಗಾಗಿ ಅವುಗಳ ಬಾಲ ಅಲ್ಲಾಡಿಸುವಿಕೆಯ ಮಧ್ಯೆ ನಮ್ಮ ಬಾಲ ತೂರಿಸಲು ಅವಕಾಶವೇ ಸಿಗುತ್ತಿಲ್ಲ. ಅಷ್ಟು ಗಟ್ಟಿಯಾಗಿ ಬಾಲ ಅಲ್ಲಾಡಿಸುತ್ತಿವೆ ಎಂಬ ಉತ್ತರ ಬಂದಿತು.
 
ಈ ಕಾರಣಕ್ಕೆ ಅಲ್ಲಿದ್ದವುಗಳು ಬಾಲ ಮಡಚಿಕೊಂಡು ಊರು ಬಿಡತೊಡಗಿವೆ. ಪರಊರಿನ ನಾಯಿಗಳೇ ಅಲ್ಲಿ ಠಿಕಾಣಿ ಹೂಡುತ್ತಿವೆ ಎಂಬ ಆತಂಕಕಾರಿ ವಿದ್ಯಮಾನ ನಡೆದಿರುವ ಹಿನ್ನೆಲೆಯಲ್ಲಿ ಬೊಗಳೂರನ್ನು ಬೆಂಗಳೂರಿನಂತಾಗಲು ಬಿಡುವುದಿಲ್ಲ ಎಂದು ಬೊಗಳೂರು ಬ್ಯುರೋ ಪ್ರತಿಜ್ಞೆ ತೊಟ್ಟಿದೆ.

Tuesday, November 14, 2006

(ಹಿಂ)ಬಾಲಕರಿಗೂ ಸೈಕಲ್: ಸರ್ಕಾರಿ ಯೋಜನೆ ವಿಫಲ

[ಇದು ಚಿಕ್ಕ ಮತ್ತು ದೊಡ್ಡ ಮಕ್ಕಳ ದಿನಾಚರಣೆ ವಿಶೇಷ]
(ಬೊಗಳೂರು ಕಾಲೇಜು ಬ್ಯುರೋದಿಂದ)
ಬೊಗಳೂರು, ನ.14-  ಎಸ್ಸೆಸ್ಸೆಲ್ಸಿ, ಪಿಯುಸಿ ಫಲಿತಾಂಶ ಪ್ರಕಟವಾದಾಗ ಹುಡುಗಿಯರೇ ಮೇಲುಗೈ ಸಾಧಿಸುತ್ತಿದ್ದಾರೆ ಎಂಬುದು ಎಲ್ಲರಿಗೂ ವೇದ್ಯವಾದ ಸಂಗತಿ. ಇತ್ತೀಚೆಗೆ ಕರ್ನಾಟಕ ಸರಕಾರವು ವಿದ್ಯಾರ್ಥಿನಿಯರಿಗೆ ಉಚಿತ ಸೈಕಲ್‌ಗಳನ್ನು ವಿತರಿಸಿ ಅವರನ್ನು ಮತ್ತಷ್ಟು ವೇಗವಾಗಿ ಮುಂದುವರಿಯುವಂತೆ ಮಾಡಿರುವುದರಿಂದ ಆತಂಕಗೊಂಡಿರುವ ಹುಡುಗ ವಿದ್ಯಾರ್ಥಿ ಸಮುದಾಯವು ಸರಕಾರಕ್ಕೆ ಮೊರೆ ಹೋಗಿದೆ.
 
ನಮಗೆ ಈ ಹುಡುಗಿಯರನ್ನು ಹಿಂಬಾಲಿಸಲು ಸಾಧ್ಯವಾಗುತ್ತಿಲ್ಲ ಎಂದು ವಿದ್ಯಾರ್ಥಿಗಳ ಒಕ್ಕೊರಲ ಬೇಡಿಕೆಗೆ ಮಣಿದ ಸರಕಾರವು, ಹುಡುಗಿಯರನ್ನು ಹಿಂಬಾಲಿಸಲು ಅನುವಾಗುವಂತೆ ಹುಡುಗರಿಗೂ ಸೈಕಲ್‌ಗಳನ್ನು ವಿತರಿಸಲು ನಿರ್ಧರಿಸಿತ್ತು ಎಂದು ತಿಳಿದುಬಂದಿದೆ.
 
ಈ ಹಿನ್ನೆಲೆಯಲ್ಲಿ ಸೈಕಲೇರಿ ಹುಡುಗಿಯರನ್ನು ಹಿಂಬಾಲಿಸಲು ಹೊರಟ ಹುಡುಗರ ದಂಡು ಅಲ್ಲಲ್ಲಿ ಮುಗ್ಗರಿಸುತ್ತಾ ಮುಂದೆ ಸಾಗುತ್ತಿರುವುದು ಗಮನಕ್ಕೆ ಬಂದಿದೆ. ಎಷ್ಟು ಮುಂದುವರಿದಿದ್ದಾರೆ ಎನ್ನುವುದನ್ನು ಪರೀಕ್ಷಾ ಫಲಿತಾಂಶದಿಂದಲೇ ಅರಿಯಬಹುದಾಗಿರುವುದರಿಂದ ಈ ಕುರಿತು ಅವಸರ ಮಾಡಿದ ಬೊಗಳೆ ರಗಳೆಯು ಭವಿಷ್ಯ ವಾಣಿ ಬ್ಯುರೋದ ಮೊರೆ ಹೋಗಲಾಯಿತು.
 
ಈ ಭವಿಷ್ಯ ನುಡಿಯ ಪ್ರಕಾರ, ಹುಡುಗಿಯರ ಹಿಂದೆ ಬಿದ್ದ ಹುಡುಗ ವಿದ್ಯಾರ್ಥಿಗಳು ಸೈಕಲೇರಿ ಮುಂದೆ ನಡೆಯುವ ಬದಲು ಮತ್ತಷ್ಟು ಹಿಂದೆ ಬೀಳಲಿದ್ದಾರೆ. ಇದಕ್ಕೆ ಕಾರಣವನ್ನೂ ಪತ್ತೆ ಹಚ್ಚಲಾಗಿದ್ದು, ಅವರ "ಹುಡುಗಿಯರ ಹಿಂದೆ ಬೀಳುವಿಕೆ" ಪ್ರಕ್ರಿಯೆಯಿಂದಾಗಿ ಅವರು ಓದಿನಲ್ಲೂ ಹಿಂದೆ ಬಿದ್ದಿದ್ದರು!
 
ಈ ವರದಿಯನ್ನು ತೀವ್ರವಾಗಿ ಪ್ರತಿಭಟಿಸಿರುವ ಹುಡುಗ ವಿದ್ಯಾರ್ಥಿಗಳು, ತಾವು ಹಿಂದೆ ಬೀಳಲು ಕಾರಣವನ್ನೂ ನೀಡಿದ್ದಾರೆ.
 
"ಈ ಹುಡುಗಿಯರು ನಮ್ಮ ಸೈಕಲನ್ನು (ಮನಸ್ಸನ್ನು ಎಂದು ಓದಿಕೊಳ್ಳುವುದು) ಹಾಳು ಮಾಡುತ್ತಾರೆ, ಅವರು ನಮ್ಮ ಸೈಕಲ್ ಚಕ್ರದ (ಕನಸಿನ ಬಲೂನಿನ ಅಂತ ಓದಿಕೊಳ್ಳುವುದು) ಗಾಳಿ ಠುಸ್ಸೆಂದು ತೆಗೆದುಬಿಡುತ್ತಾರೆ. ಹಾಗಾಗಿ ಎದ್ದು ಬಿದ್ದು ಸರಿಪಡಿಸಿಕೊಂಡು ಮುಂದೆ ಬರುವಾಗ ವಿಳಂಬವಾಗಿದೆ!!!" ಎಂಬುದು ಅವರಿಂದ ದೊರೆತ ಉತ್ತರ.
 
ಒಟ್ಟಿನಲ್ಲಿ ಸರಕಾರದ ಯೋಜನೆಯೊಂದು ಅಸಫಲವಾಗುವ ಮೂಲಕ ಬಾಲಕರು ಹಿಂ-ಬಾಲಕರೇ ಆಗಿಯೂ, ಬಾಲಕಿಯರು ಮುಂ-ಬಾಲಕಿಯರೇ ಆಗಿಯೂ ಉಳಿಯುವಂತಾಗಿದೆ.
 
------------------
ಬರಲಿದೆ ಪ್ರಯಾಸ ಕಥನ!!!
ಬೊಗಳೆ ರಗಳೆ ಬ್ಯುರೋದಿಂದ ಆವಂತಿಕಾಪುರಿ(ಉಜ್ಜಯಿನಿ) ಪ್ರಯಾಸ ಕಥನ!
ಭಟ್ಟಿ ವಿಕ್ರಮಾದಿತ್ಯನ ನಾಡಿಗೆ ಅಸತ್ಯಾನ್ವೇಷಿ ಭೆಟ್ಟಿ!
ಎಂದೂ ಕಂಡು ಕೇಳರಿಯದ ಪ್ರಯಾಸ ಕಥನ ಶೀಘ್ರವೇ
ಸಚಿತ್ರವಾಗಿ ಮೂಡಿಬರಲಿದೆ.
ನಿರೀಕ್ಷಿಸಬೇಡಿ...

Monday, November 13, 2006

ವಿನೂತನ ಉದ್ಯೋಗ ಯೋಜನೆ: ನಿಧಾನಿ ಪ್ರಶಂಸೆ

(ಬೊಗಳೂರು ಕೆಲಸವಿಲ್ಲದ ಬ್ಯುರೋದಿಂದ)
ಬೊಗಳೂರು, ನ.13- ದೇಶವನ್ನು ಕಾಡುತ್ತಿರುವ ನಿರುದ್ಯೋಗ ಎಂಬ ಪಿಡುಗು ನಿವಾರಣೆಗೆ ಪೂರ್ಣ ಪ್ರಮಾಣದಲ್ಲಿ ಸಹಕರಿಸುತ್ತಿರುವ ಉಗ್ರಗಾಮಿಗಳಿಗೆ ಭಾರತದ ನಿಧಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ.

ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಭಾಗದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಒಂದು ಪೂಜಾ ಕ್ಷೇತ್ರ ಅಥವಾ ಪ್ರಾರ್ಥನಾ ಮಂದಿರಕ್ಕೆ ಗ್ರೆನೇಡ್ ಎಸೆದರೆ 1000 ರೂ. ನೀಡುವ ಈ ಯೋಜನೆಯು ಪಾಕ್ ಪರವಾಗಿರುವ ನಿರುದ್ಯೋಗಿಗಳಲ್ಲಿ ಆಶಾವಾದ ಮೂಡಿಸಿದೆ ಎಂದು ಹೇಳಿದರು.

ಇದುವರೆಗೆ ಈ ದೇಶವಾಳಿದ ಯಾರು ಕೂಡ ಕಂಡುಹಿಡಿಯಲಾಗದ ಈ ಹೊಸ ಉದ್ಯೋಗ ಸೃಷ್ಟಿ ಯೋಜನೆ ರೂಪಿಸಿರುವುದಕ್ಕೆ ಯೋಜನೆಯ ಪ್ರವರ್ತಕರಾದ ಉಗ್ರರಿಗೆ ವ್ಯಗ್ರತಾಭಾವದಿಂದ ಧನ್ಯವಾದ ಎಸೆದ ಅವರು, ಇದರಿಂದ ಅಲ್ಪಸಂಖ್ಯಾತರ ಕಲ್ಯಾಣ ಆಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಆದರೆ, ಇದೇ ಉದ್ಯೋಗ ನೀತಿಯನ್ನು ಪೂಜಾ ಅಥವಾ ಪ್ರಾರ್ಥನಾ ಮಂದಿರಗಳ ಬದಲು ಶಾಸನಸಭೆಗಳಾದ ಸಂಸತ್ತು/ವಿಧಾನಸಭೆ ಮೇಲೆ ಪ್ರಯೋಗಿಸದಂತೆ ಅವರು ಈ ಸಂದರ್ಭ ಕಳಕಳಿಯ ಸಲಹೆ ನೀಡಿದರು.

ಈಗಾಗಲೇ ಕಟ್ಟಾ ಧಾರ್ಮಿಕತೆಯನ್ನು ಅನುಸರಿಸುತ್ತಾ, ಮಾರಣ ಹೋಮ ಮುಂತಾದ ಯಜ್ಞ-ಯಾಗಾದಿಗಳನ್ನು ನೆರವೇರಿಸುತ್ತಾ, ಪವಿತ್ರ ಯುದ್ಧ (ಜಿಹಾದ್) ನಡೆಸುತ್ತಿರುವ ಪ್ರತ್ಯೇಕತಾವಾದಿ ಮತ್ತು ಹಿಂಸಾವಾದಿ ಸಮಾಜ ನಿರ್ಮಾಣಕ್ಕೆ ಮುಂದಾಗಿರುವವರನ್ನು ಗದ್ಗದಿತರಾಗಿ ತೆಗಳಿದ ಅವರು, ಒಂದಷ್ಟು ಕ್ಯಾಕರಿಸಿ ಪ್ರಶಂಸಿಸಿದರು.
ಮಕ್ಕಳ ದಿನಾಚರಣೆ ಪ್ರಯುಕ್ತ ವಿಶೇಷ!!!
ಚಿಕ್ಕ ಮಕ್ಕಳು ಮತ್ತು ದೊಡ್ಡ ಮಕ್ಕಳಿಗಾಗಿ ವಿಶೇಷ ವರದಿ ನಾಳೆ ಪ್ರಕಟವಾಗಲಿದೆ.
ನಿಮ್ಮ ಪ್ರತಿ ಕಾದಿರಿಸಬೇಡಿ.
ಸೂಚನೆ: ಈ ವರದಿ ಮೊದಲೇ ಬೇಕಾದವರಿಗೆ ಕ್ರೆಡಿಟ್ ಕಾರ್ಡ್ ಮೂಲಕ ವಿಶೇಷ ವ್ಯವಸ್ಥೆ ಏರ್ಪಡಿಸಲಾಗಿದ್ದು, ಯಾರು ಬೇಕಾದರೂ, ಎಷ್ಟು ಬೇಕಾದರೂ ತೆರಬಹುದು.ಆದರೆ ವರದಿ ಪ್ರಕಟವಾಗಲು ಕನಿಷ್ಠ ಒಂದು ದಿನ ತಗುಲುತ್ತದೆ.

Saturday, November 11, 2006

ಶಾಕ್ ನೀಡಿ ಸಾಯಿಸಿದ ಬಿಲ್ವಿದ್ಯುತ್ ಇಲಾಖೆ

Shockಇಂಗ್ ನ್ಯೂಸ್ !
 
ಒಂದು ಮನೆಗೆ 12 ಲಕ್ಷ ಬಿಲ್ ಕೊಟ್ಟ ವಿದ್ಯುತ್ ಇಲಾಖೆಯು ಆ ಮನೆಯೊಡೆಯ ಪ್ರಾಣ ಕಳೆದುಕೊಳ್ಳುವ ಹೊರತಾಗಿ ಬೇರೇನೂ ಮಾರ್ಗ ತೋಚದಂತೆ ಕತ್ತಲೆ ಮಾಡಿಬಿಟ್ಟ ಪ್ರಕರಣವೊಂದು ಇಲ್ಲಿ ವರದಿಯಾಗಿದೆ.
 
ಇದು ಅವಸರದ ಸುದ್ದಿಯಾಗಿರುವುದರಿಂದ ಬೇಗನೆ ಅಳವಡಿಸಿ ಮನೆಗೋಡಲಾಗಿದೆ.

Friday, November 10, 2006

(ಮನ) ಬಿಚ್ಚಿ ನುಡಿದಳಾ ನಟೀಮಣಿ

(ಬೊಗಳೂರು ವಸ್ತ್ರ ಶೋಧ ಬ್ಯುರೋದಿಂದ)
ಬೊಗಳೂರು, ನ.10- ಇತ್ತೀಚೆಗೆ ನಟೀ ಮಣಿಯರು ಮಹಾಭಾರತದಿಂದ ಪ್ರೇರಣೆ ಪಡೆದವರಂತೆ ಕಾಣಿಸುತ್ತಿದೆ ಎಂಬ ಕುರಿತು ಆರೋಪವೊಂದು ಕೇಳಿಬಂದಿದ್ದೇ ತಡ, ಅಲ್ಲಿಗೆ ಮುಖಮರೆಸಿಕೊಂಡು ತೆರಳಿದ ಬೊಗಳೆ ರಗಳೆ ಬ್ಯುರೋದ ಮುಖಕ್ಕೆ ತುಂಡು ವಸ್ತ್ರವೊಂದು ರಪ್ಪನೆ ರಾಚಿತು. ಆಗ ನೆನಪಿಗೆ ಬಂದದ್ದು ಮಿಗ್ ವಿಮಾನ ಪತನ.

ಚೇತರಿಸಿಕೊಂಡು ಏನೆಂದು ನೋಡಿದಾಗ ನಿಜ ವಿಷಯ ತಿಳಿದು ಬಂತು. ಅಲ್ಲಿ ಅತ್ಯಾಧುನಿಕ ಬಟ್ಟೆಗಳನ್ನು ಎಷ್ಟೇ ಗುಡ್ಡೆ ಹಾಕಿದರೂ ಅದು ಒಂದು ಮೀಟರಿಗಿಂತ ಹೆಚ್ಚು ಎತ್ತರಕ್ಕೆ ಏರುವುದೇ ಇಲ್ಲ! ಈ ಕುತೂಹಲ ಭರಿತ, ದಾಖಲೆಗೆ ಅರ್ಹವಾದ ಮತ್ತು ಪವಾಡಸದೃಶ ಸಂಗತಿಗೆ ಕಾರಣವೇನು ಎಂದು ಶೋಧಿಸಿದಾಗ.....

ಏನೂಂತ ಹೇಳಲಿ....? ಅಲ್ಲೇನೂ ಇರಲೇ ಇಲ್ಲ! ಅಂದರೆ ಅಲ್ಲಿ ಇದ್ದುದು ಒಂದಿಂಚಿಗಿಂತ ಕಡಿಮೆ ಅಳತೆಯ ಬಟ್ಟೆಗಳೇ....! ಎಷ್ಟೇ ಗುಡ್ಡೆ ಹಾಕಿದರೂ ಒಂದು ಬಕೆಟ್ ತುಂಬಲು ಹಲವಾರು ವರ್ಷಗಳೇ ಬೇಕಾಗುವ ಈ ಪ್ರಕರಣ, ದಾಖಲೆಯೇನೂ ಅಲ್ಲ ಎಂದು ತಿಳಿದುಬಂತು.

ಆದರೂ ಈ ರಾಶಿ ಯಾಕೆ ಹಾಕಿದ್ದಾರೆ, ಇಲ್ಲೇನಾದರೂ ಮಹಾಭಾರತದ ದ್ರೌಪದಿ ವಸ್ತ್ರಾಪಹರಣದ ಶೂಟಿಂಗ್ ನಡೆಯುತ್ತಿದೆಯೇ ಎಂಬ ಅನುಮಾನ ಬಂತು.ಮತ್ತೂ ಮುಂದುವರಿದು ಈ ತುಂಡು ಬಟ್ಟೆಗಳು ಎಲ್ಲಿಂದ ಬರುತ್ತಿವೆ ಎಂದು ನೋಡಿದಾಗ... ನಟೀ ಮಣಿ ಜಾನೆಟ್ ಜಾಕ್ಸನ್‌ ಸಾಕೀ ವಸ್ತ್ರದ ಸಹವಾಸ ಅಂದುಕೊಂಡು ಈ ಬಟ್ಟೆ ಎಸೆಯುತ್ತಿದ್ದು, ಆಕೆ ಎಸೆಯುತ್ತಿದ್ದ ಥೂಂಡು ಬಟ್ಟೆಯೇ ಕಣ್ಣಿಗೆ ಬಡಿದು ಪ್ರಜ್ಞೆ ತಪ್ಪಿ ಬೀಳುವುದರಲ್ಲಿತ್ತು ಬ್ಯುರೋ!

ಇದರ ಹಿಂದಿರುವ ಕಾರಣಗಳೇನು ಎಂದು ಶೋಧಿಸಿದಾಗ ಇಲ್ಲಿ ಪ್ರಕಟವಾಗಿದ್ದ ವರದಿಯೊಂದು ಕುತೂಹಲ ಕೆರಳಿಸಿತು. ಏನೆಂದರೆ 80 ವರ್ಷ ಆಗುವವರೆಗೂ ಬಿಚ್ಚುವುದನ್ನು ನಿಲ್ಲಿಸುವುದಿಲ್ಲ ಎಂದು ಈ ಬಿಚ್ ಶಿರೋಮಣಿ ಖ್ಯಾತಿಯ ಜಾಕೆಟ್ ಜಾನ್ಸನ್ ಘೋಷಿಸಿದ್ದಳು.

ಹಾಗಾಗಿ ಸಂದರ್ಶನ ಮಾಡಬೇಕಾದ ಅನಿವಾರ್ಯತೆ ಎದುರಾಗಲಿಲ್ಲ. ಯಾಕೆಂದರೆ ಆಕೆಯ ಅಭಿಮಾನಿಗಳಿಗೆ ಅಷ್ಟೇ ಸಾಕು. ಅವಳ ಕುರಿತು ಏನೇ ಸುದ್ದಿ ಪ್ರಕಟವಾದರೂ ಅದನ್ನು ಜತನದಿಂದ ಕಾಪಾಡಲೆಂದೇ ಒಂದು ವೆಬ್ ತಾಣವನ್ನೂ ತೆರೆಯಲಾಗಿದೆ.

ಒಟ್ಟಿನಲ್ಲಿ ಇನ್ನು ಎಂಬತ್ತು ವರ್ಷಗಳೇ ಕಳೆದರು ಕೂಡ ಈ ಬಿಚ್ಚೋಲೆ ನಟಿ ಬಿಚ್ಚಿ ಹಾಕುವ ವಸ್ತ್ರದ ಒಟ್ಟು ರಾಶಿಯು ಎರಡು ಬಕೆಟ್ ದಾಟಲಾರದು ಎಂದು ಅಂದಾಜಿಸಲಾಗಿದೆ.

+++++++++++++++++
ಇದು ಬಿಟ್ಟಿ ಜಾಹೀರಾತು
+++++++++++++++++
ಬರಲಿದೆ ಪ್ರಯಾಸ ಕಥನ!!!
ಬೊಗಳೆ ರಗಳೆ ಬ್ಯುರೋದಿಂದ ಆವಂತಿಕಾಪುರಿ(ಉಜ್ಜಯಿನಿ) ಪ್ರಯಾಸ ಕಥನ!
ಭಟ್ಟಿ ವಿಕ್ರಮಾದಿತ್ಯನ ನಾಡಿಗೆ ಅಸತ್ಯಾನ್ವೇಷಿ ಭೆಟ್ಟಿ!ಎಂದೂ ಕಂಡು
ಕೇಳರಿಯದ ಪ್ರಯಾಸ ಕಥನ ಶೀಘ್ರವೇ ಸಚಿತ್ರವಾಗಿ ಮೂಡಿಬರಲಿದೆ.
ನಿರೀಕ್ಷಿಸಬೇಡಿ...
ಯಾಕೆಂದರೆ ಆಸೆಯೇ ದುಃಖಕ್ಕೆ ಮೂಲ...
ನಿರೀಕ್ಷಿಸಿದರೆ ಅನಿರೀಕ್ಷಿತವಾಗಿರುವುದೇ ಘಟಿಸೀತು...!!!

Thursday, November 09, 2006

ಬಿಹಾರದಲ್ಲಿ ಬ್ರೇಕ್ಲಾ ತಂತ್ರ-ಜ್ಞಾನ ವಿವಿ ಆರಂಭ

(ಬೊಗಳೂರು ಶೈಕ್ಷಣಿಕ ಬ್ಯುರೋದಿಂದ)
ಬೊಗಳೂರು, ನ.9- ಐಟಿ ಶಿಕ್ಷಣಕ್ಕೆ ಸೀಟು ದೊರೆಯಲಿಲ್ಲ ಎಂದು ಹಲುಬುವ ವಿದ್ಯಾರ್ಥಿಗಳಿಗೆ ಇದೋ ಬೊಗಳೆ ರಗಳೆ ಬ್ಯುರೋ ಹೊತ್ತು ತಂದಿದೆ ಸಂತಸಕರ ಸುದ್ದಿ.

ಐಟಿ, ಬಿಟಿ ಮತ್ತು ಬಿಟ್ಟಿ ಟೆಕ್ನಾಲಜಿಗಳೆಲ್ಲಾ ಹಳತಾಗತೊಡಗಿದ್ದು, ಬಿಹಾರದಲ್ಲಿ ಹೊಸ ತಂತ್ರಜ್ಞಾನ ಕ್ರಾಂತಿಯೊಂದು ನಡೆಯುತ್ತಿರುವುದನ್ನು ನಮ್ಮ ಓದುಗರಿಗೋಸ್ಕರವೇ ಪತ್ತೆ ಹಚ್ಚಲಾಗಿದೆ.

ಬಿಹಾರದಾದ್ಯಂತ ಈ ತಂತ್ರ-ಜ್ಞಾನ ಬೋಧಿಸುವ ಶಾಲಾ ಕಾಲೇಜುಗಳೂ ಅಲ್ಲಿ ತಲೆ ಎತ್ತತೊಡಗಿದ್ದು, ಇವೆಲ್ಲವೂ All India Institute of Break-law Technology (AIIBT) ಮಾನ್ಯತೆಗೊಳಪಟ್ಟಿವೆ.
ಹಾಗಾಗಿ ಅದಕ್ಕೆ ಸ್ವಲ್ಪ ಮಟ್ಟಿನ ಪ್ರಚಾರ ನೀಡುವುದು ನಮ್ಮ ಕರ್ತವ್ಯವಾಗಿರುವುದರಿಂದ (ಜಾಹೀರಾತು ನೀಡಲು ಒಪ್ಪಿಕೊಂಡಿದೆ ಎಂದು ಯಾರಿಗೂ ಹೇಳಬಾರದಾಗಿ ವಿನಂತಿ!) ಈ ವರದಿ ಬಿತ್ತರಿಸಿ ತತ್ತರಿಸಲಾಗುತ್ತಿದೆ.

ಈ ವಿವಿಯಲ್ಲಿ ಏನೆಲ್ಲಾ ಕಲಿಸಲಾಗುತ್ತದೆ? ಒಬ್ಬ ಮಾನವ ಎಂದು ಕರೆಸಿಕೊಳ್ಳುವ ಪ್ರಾಣಿಯು ಅಮಾನವನಾಗುವುದು ಹೇಗೆ, ಅಮಾನವೀಯತೆ ಮೆರೆಯಲು ಎಷ್ಟೆಲ್ಲಾ ಮಾರ್ಗಗಳಿವೆ ಎಂಬುದನ್ನು ಈ ಕಾಲೇಜು ಮತ್ತು ವಿವಿಗಳಲ್ಲಿ ಆದ್ಯಂತವಾಗಿ ಹೇಳಿಕೊಡಲಾಗುತ್ತದೆ.

ಒಂದಲ್ಲ, ಎರಡಲ್ಲ, ಹತ್ತಾರು ಕೊಲೆ ಮಾಡಿ ಏನೂ ಆಗದಂತೆ ತಲೆ ಎತ್ತಿ ತಿರುಗಾಡುವುದು ಹೇಗೆ, ನ್ಯಾಯಾಲಯದ ಆದೇಶವನ್ನು ತಿರುಚುವುದು ಹೇಗೆ, ಅತ್ಯಾಚಾರ, ಅನಾಚಾರ ಮಾಡಿಯೂ ಏನೂ ಆಗದವರಂತೆ ಬದುಕುವುದು ಹೇಗೆ ಎಂಬಿತ್ಯಾದಿಗಳನ್ನು ಇಲ್ಲಿ ಕಲಿಸಲಾಗುತ್ತದೆ.

ಮುಂದಿನ ದಿನಗಳಲ್ಲಿ ಅತ್ಯಂತ ಅನಿವಾರ್ಯವಾಗಲಿರುವ ಇಂಥ ವ್ಯವಸ್ಥೆಯ ಬಗ್ಗೆ ಜನಜಾಗೃತಿ ಮೂಡಿಸಿ ಈಗಿಂದೀಗಲೇ ಜನಾಂಗ ರೂಪಿಸಲು ಮತ್ತು ಆ ಮೂಲಕ ಭಾರಿ ಪ್ರಮಾಣದಲ್ಲಿ ಬಾಚಿಕೊಳ್ಳಲು ರೂಪು ತಳೆದಿದೆ All India Institute of Break-law Technology (AIIBT).

ಕಾನೂನು ಹೇಗೆ ಮುರಿಯಬಹುದು ಎಂದು ತಿಳಿದುಕೊಳ್ಳಲು, ಕಾನೂನಿನ ಎಲ್ಲಾ ಮಜಲು ಮಜಲುಗಳನ್ನು ಅಧ್ಯಯನ ಮಾಡಿ ಪದವಿ ಪಡೆದಿರುವ ಶಹಾಬುದ್ದೀನ್ ಅವರನ್ನು ಈ ವಿವಿಯ ಕುಲಾಧಿಪತಿಗಳನ್ನಾಗಿ ನೇಮಿಸಲಾಗಿದ್ದು, ಈ ರೀತಿಯಾಗಿ ಕಾನೂನು ಮುರಿಯಲೆಂದೇ ಕಾನೂನು ಪದವಿ ಪಡೆದಿರುವ ಇತರೆಲ್ಲರನ್ನೂ ಪ್ರತಿ ಕಾಲೇಜುಗಳ ಪ್ರಾಂಶುಪಾಲರಾಗಿ ನಿಯೋಜಿಸಲಾಗುತ್ತದೆ.

ಈ ಕುಲಾಧಿಪತಿಗಳ ವಿಶೇಷ ಸಂದರ್ಶನವನ್ನು ಈ ಹಿಂದೆಯೇ ಬೊಗಳೆ ರಗಳೆ ಬ್ಯುರೋ ಚಿಕ್ಕದಿರುವಾಗಲೇ ಮಾಡಿತ್ತು. ಈಗ ಕೆಲಸದ ಒತ್ತಡದಿಂದಾಗಿ ಮತ್ತೊಮ್ಮೆ ಸಂದರ್ಶನಕ್ಕೆ ಪುರುಸೊತ್ತು ಇಲ್ಲದಿರುವುದರಿಂದ ಅದನ್ನು ಇಲ್ಲಿ ಓದಿ ಬೆಚ್ಚಿ ಬೀಳಬಹುದು.

ಒಟ್ಟಿನಲ್ಲಿ ಈ ಕಾಲೇಜುಗಳ ಪ್ರಾಂಶುಪಾಲರಾಗಲು ಆಸಕ್ತರು ಅರ್ಜಿ ಸಲ್ಲಿಸಿದಲ್ಲಿ, ಕೂಡಲೇ ಮಚ್ಚು-ಲಾಂಗುಗಳೊಂದಿಗೆ ಆಸಕ್ತರಲ್ಲಿಗೇ ಜನ ಕಳುಹಿಸಲಾಗುವುದು ಎಂದು ಬೊಗಳೆ ರಗಳೆ ಪತ್ರಿಕೆಗೆ ಮಾತ್ರವೇ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ AIIBT ತಿಳಿಸಿದೆ.

+++++++++++++++++
ಇದು ಬಿಟ್ಟಿ ಜಾಹೀರಾತು
+++++++++++++++++
ಬರಲಿದೆ ಪ್ರಯಾಸ ಕಥನ!!!
ಬೊಗಳೆ ರಗಳೆ ಬ್ಯುರೋದಿಂದ ಆವಂತಿಕಾಪುರಿ(ಉಜ್ಜಯಿನಿ) ಪ್ರಯಾಸ ಕಥನ!
ಭಟ್ಟಿ ವಿಕ್ರಮಾದಿತ್ಯನ ನಾಡಿಗೆ ಅಸತ್ಯಾನ್ವೇಷಿ ಭೆಟ್ಟಿ!ಎಂದೂ ಕಂಡು
ಕೇಳರಿಯದ ಪ್ರಯಾಸ ಕಥನ ಶೀಘ್ರವೇ ಸಚಿತ್ರವಾಗಿ ಮೂಡಿಬರಲಿದೆ.
ನಿರೀಕ್ಷಿಸಬೇಡಿ...
ಯಾಕೆಂದರೆ ಆಸೆಯೇ ದುಃಖಕ್ಕೆ ಮೂಲ...
ನಿರೀಕ್ಷಿಸಿದರೆ ಅನಿರೀಕ್ಷಿತವಾಗಿರುವುದೇ ಘಟಿಸೀತು...!!!

Wednesday, November 08, 2006

ಹೋರಾಟಕ್ಕೆ ಕಿಡಿ ಹಚ್ಚಿಸಿದ ವಿಪರೀತ ಸಿಂಗ್!

(ಬೊಗಳೂರು ಮೀಸಲಾತಿ ಬ್ಯುರೋದಿಂದ)
ಬೊಗಳೂರು, ನ.8- MTVಯಲ್ಲಿ ಕೌಸಲ್ಯಾ ಸುಪ್ರಜಾ ರಾಮ.... ಅಂತ ಸುಪ್ರಭಾತ ಕೇಳಿ ಬಂದರೆ ಹೇಗಿರುತ್ತೆ? ನಿರೀಕ್ಷಿಸುವುದು ಸಾಧ್ಯವೇ ಇಲ್ಲ ಎಂದು ಇಡೀ ಜಗತ್ತು ಅಂದುಕೊಳ್ಳುವ ಮಾತು ಉಲ್ಟಾ ಹೊಡೆದಿದೆ.

ಒಂದು ಕಾಲದಲ್ಲಿ ದೇಶಾದ್ಯಂತ ಮನೆ ಮನೆಯಲ್ಲಿ ಅಡುಗೆ ಮಾಡಲು ಕಿಚ್ಚು ಹತ್ತಿಸಿದ್ದ ಮತ್ತು ಹಲವು ಮನೆಗಳ ದೀಪ ನಂದಿಸಲು ಕಾರಣರಾಗಿದ್ದ ಮಾಜಿ ನಿಧಾನಿ ವಿಪರೀತ ಸಿಂಗ್ ಅವರ ಹೇಳಿಕೆಯೇ ಎಲ್ಲ ಗೊಂದಲಕ್ಕೂ ಕಾರಣ.

ಅತ್ಯಂತ ಅಪರೂಪದ ಪ್ರಕರಣವೊಂದರಲ್ಲಿ, ಉನ್ನತ ಹುದ್ದೆಗೆ ನೇಮಿಸುವಾಗ ಪ್ರತಿಭೆಯೇ ಅರ್ಹತೆಯಾಗಲಿ ಎಂದು ಹೋರಾಟದ ಕಿಚ್ಚು ಹಚ್ಚಿಸುವಲ್ಲಿ ನಿಷ್ಣಾತರಾಗಿರುವ ಅವರು ಸ್ವರ್ಗಕ್ಕೇ ಕಿಚ್ಚು ಹಚ್ಚಲು ಹೊರಟಿದ್ದು, ಮತ್ತೊಂದು ಕಿಡಿ ಹತ್ತಿಸುವ ಸಿದ್ಧತೆ ಮಾಡಿದ್ದಾರೆ. ಇಷ್ಟಕ್ಕೂ ಅವರು ಹೇಳಿದ್ದೇನು? ಮೆರಿಟ್ ಆಧಾರದಲ್ಲೇ ನ್ಯಾಯಾಧೀಶರನ್ನು ನೇಮಿಸಬೇಕೆಂಬುದು.... ಅಷ್ಟೆ.

ಮೊನ್ನೆ ಮೊನ್ನೆವರೆಗೂ ಮಂಡಲ ಜಪ ಮಾಡುತ್ತಾ, ಮೀಸಲಾತಿ ನೀಡಿದರೆ ಮಾತ್ರವೇ ದೇಶ ಉದ್ಧಾರವಾಗುತ್ತದೆ ಎಂದೆಲ್ಲಾ ಹೇಳುತ್ತಾ ಇದ್ದ ತಮ್ಮ ನೇತಾರನ ಬಾಯಲ್ಲಿ ಇಂಥ ಮಾತುಗಳನ್ನು ಕೇಳಿ ಸ್ವತಃ ಅವರ ಬೆಂಬಲಿಗರು ರೋಷದಿಂದ ಕುದಿಯಲಾರಂಭಿಸಿದ್ದಾರೆ ಎಂದು ತಿಳಿದುಬಂದಿದೆ.

ಪ್ರತಿಭೆಗೆ ಮಣೆ ಹಾಕಿದರೆ ಈ ದೇಶ ಉದ್ಧಾರವಾಗುವುದಾದರೂ ಹೇಗೆ, ರಾಜಕಾರಣಿಗಳು ಬದುಕುವುದಾದರೂ ಹೇಗೆ, ಓಟಿನ ಬ್ಯಾಂಕು ನಿರ್ನಾಮವಾಗಿಬಿಡುತ್ತದೆ ಎಂಬುದು ಅವರ ರೋಷಕ್ಕೆ ಕಾರಣ.
ಈ ಬಗ್ಗೆ ಸಿಂಗರನ್ನು ಮಾತನಾಡಿಸಿದಾಗ, ತಾನು ಆ ರೀತಿ ಹೇಳಲೇ ಇಲ್ಲ, ಹೇಳುವ ಮೊದಲೇ ಯಾರೋ ಬರೆದುಬಿಟ್ಟಿದ್ದಾರೆ ಎಂದು ಕಟ್ಟಾ ರಾಜಕಾರಣಿಯಂತೆ ಸ್ಪಷ್ಟಪಡಿಸಿದರು.

Tuesday, November 07, 2006

ಸರಿ ಇಲ್ಲ!

ಬೊಗಳೆ ರಗಳೆಗೆ

ಸರಿ ಇಲ್ಲದ ಕಾರಣದಿಂದಾಗಿ

ಓದುಗ ಮಂಡಳಿಗೆ

ಅಡಚಣೆಯಾಗದಿದ್ದುದಕ್ಕೆ

ವಿಷಾದಿಸುವುದಿಲ್ಲ

ಎಂದು ತಿಳಿಸಲು ವಿಷಾದಿಸುತ್ತೇವೆ.

ಮುಂದಿನ ಸಂಚಿಕೆ ಇನ್ನು 10 ಗಂಟೆಗಳೊಳಗೆ ಪ್ರಕಟವಾಗಲಿದೆ.

Saturday, November 04, 2006

ದಾಖಲೆ: ಅಮಿತಾಭ್‌ಗೆ ಸೆಡ್ಡು ಹೊಡೆದ ಜಾರಕಾರಣಿಗಳು!

(ಬೊಗಳೂರು ಅರಾಜಕ ಬ್ಯುರೋದಿಂದ)
ಬೊಗಳೂರು, ನ.4- ವಯೋವೃದ್ಧರೂ ನಟನಾ ವೃದ್ಧರೂ ಆದ ಬಾಲಿವುಡ್‌ನ ಪ್ರಥಮ ಪ್ರಜೆ 64ರ ಹರೆಯದ ಅಮಿತಾಭ್ ಬಚ್ಚನ್ ಅವರು ಐದು ಗಂಟೆಗಳಲ್ಲಿ 23 ದೃಶ್ಯದಲ್ಲಿ ಪಾಲ್ಗೊಂಡಿದ್ದು ದಾಖಲೆ ಎಂದು ಇಲ್ಲಿ ಸುದ್ದಿಯಾಗುತ್ತಿರುವಂತೆಯೇ ಕೆರಳಿ ಕೆಂಡವಾಗಿರುವ ರಾಜಕಾರಣಿಗಳು, ಈ ದಾಖಲೆ ತಮ್ಮ ಪಾಲಿಗೆ ಸೇರಬೇಕು ಎಂದು ಮುಗಿಬಿದ್ದ ಘಟನೆಯೊಂದು ಯಾರ ಗಮನಕ್ಕೂ ಬಂದಿಲ್ಲ.

ಅಮಿತಾಭ್ ಅವರು ಐದು ಗಂಟೆಗಳಲ್ಲಿ ಕೇವಲ 23 ಬಾರಿ ಬಣ್ಣ ಬದಲಿಸಿದ್ದಾರೆ. ಆದರೆ ನಾವು ಒಂದು ನಿಮಿಷದಲ್ಲಿ ಎಷ್ಟು ಬಾರಿ ಬಣ್ಣ ಬದಲಿಸುತ್ತೇವೆ ಎಂಬುದು ಇವರ ಗಮನಕ್ಕೆ ಬಂದಿಲ್ಲವೇ ಎಂದು ಪ್ರಶ್ನಿಸಿರುವ ಜಾರಕಾರಣಿಗಳು, ಗಿನ್ನಿಸ್ ದಾಖಲೆ ಪುಸ್ತಕದ ಆಡಳಿತ ಮಂಡಳಿಗೆ ಅರ್ಜಿ ಸಲ್ಲಿಸಲು ಸಕಲ ಸಿದ್ಧತೆಗಳನ್ನೂ ನಡೆಸುತ್ತಿದ್ದಾರೆ.

ಅಮಿತಾಭ್ ಅವರಿಗೆ ವೇಷ ಬದಲಿಸುವುದು, ನಟಿಸುವುದು ಮಾತ್ರ ಗೊತ್ತಿದೆ. ಆದರೆ ನಮ್ಮದು ಯಾವುದೂ ನಟನೆ ಅಲ್ಲ. ನೈಜತೆ. ಏನಿದ್ದರೂ ಮಾಡಿ ತೋರಿಸುತ್ತೇವೆ ಎಂದಿರುವ ಜಾರಕಾರಣಿಗಳು, ಅಮಿತಾಭ್ ಅವರು ಡಯಲಾಗ್‌ಗಳನ್ನು ಕಂಠಪಾಠ ಮಾಡಿಯೋ, ಅಥವಾ ಹಿಂದೆ ಮುಂದು ನೋಡಿಕೊಂಡೋ ಹೇಳುತ್ತಾರೆ. ಆದರೆ ನಮಗೆ ಆ ತರಬೇತಿ ಎಲ್ಲಾ ಬೇಕಾಗಿಲ್ಲ. Instantaneous ಆಗಿ ನಮ್ಮ ಬಾಯಿಯಿಂದ ಸಂದರ್ಭಕ್ಕೆ ತಕ್ಕಂತೆ ಅಣಿಮುತ್ತುಗಳು ಉದುರುತ್ತವೆ. ಅದನ್ನು ಯಾರು ಬೇಕಾದರೂ ಹೆಕ್ಕಿಕೊಂಡು, ತಮಗೆ ಬೇಕಾದಂತೆ ಭಾವಿಸಿಕೊಳ್ಳಬಹುದು ಎಂದವರು ಹೇಳಿದ್ದಾರೆ.

ಮತ್ತೇನಾದರೂ ಹೆಚ್ಚು ಕಡಿಮೆಯಾದರೆ ಮರುದಿನ ಹೇಗೂ ನಿರಾಕರಣೆ ಅವಕಾಶ ಇದ್ದೇ ಇರುತ್ತದೆ ಎಂದೂ ಅವರು ಸೇರಿಸಿದ್ದು, ಗಿನ್ನೆಸ್ ದಾಖಲೆ ಪುಸ್ತಕದ ಕಚೇರಿಯತ್ತ ದಾಪುಗಾಲು ಹಾಕಿದ್ದಾರೆ.

Friday, November 03, 2006

ಮನಸು ಕದ್ದ ಹಸುಳೆ ಮೇಲೆ ದರೋಡೆ ಕೇಸು!

(ಬೊಗಳೂರು ಪುಟಾಣಿ ಬ್ಯುರೋದಿಂದ)

ಬೊಗಳೂರು, ನ.3- ಇದು ಹೈ-ಕೆಟ್ ಯುಗವಾಗಿರುವುದರಿಂದ ಪುಟ್ಟು ಪುಟಾಣಿಗಳು ಹುಟ್ಟುವ ಮೊದಲೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವ ಸಾಧ್ಯತೆಗಳನ್ನು ಬೊಗಳೂರು ಬೊಗಳೆ ಬ್ಯುರೋ ಈ ರಾಬರಿ ದೇವಿ ಆಳಿದ್ದ ಬಿಹಾರದಲ್ಲಿ ಮೂರು ತಿಂಗಳ ಮಗು ಬರೋಬರಿ ರಾಬರಿ ಮಾಡಿದ್ದು ಹೌದು ಎಂಬುದು ಸಾಬೀತಾಗಿದೆ.

ಈ ಪುಟ್ಟ ಮಗು ಪುಟ್ಟ ಪುಟ್ಟ ಹೆಜ್ಜೆಯಿಡುತ್ತಲೇ ಆ ಬಸ್ಸಿನಲ್ಲಿದ್ದವರ ಎಲ್ಲ ಪ್ರಯಾಣಿಕರನ್ನು ಸಂಪೂರ್ಣವಾಗಿ ಮೈಮರೆಯುವಂತೆ ಮಾಡಿತ್ತು ಎಂಬುದು ತಿಳಿದುಬಂದಿದೆ. ಇದಲ್ಲದೆ ಅದರ ಬಳಿ ಹರಿತವಾದ ಆಯುಧವೊಂದಿತ್ತು. ಅದು ಕುಡಿನೋಟದಿಂದ ಕಣ್ಣು ಪಿಳಿ ಪಿಳಿ ಮಾಡಿತೆಂದರೆ, ಅಲ್ಲಿದ್ದವರೆಲ್ಲರ ಹೃದಯ ಚುಚ್ಚಿದಂತಾಗಿ ಬೋಲ್ಡಾಗಿ ಬಿಡುತ್ತಿದ್ದರು. ಅವರೆಲ್ಲಾ ಭಾವಪರವಶರಾದಾಗ ಈ ಮಗು ಅವರ ಹೃದಯದಲ್ಲಿದ್ದ ಚಿನ್ನಾ, ರನ್ನಾ, ಮುದ್ದು... ಬಂಗಾರಾ... ಎಲ್ಲವನ್ನೂ ಕದಿಯುತ್ತಿತ್ತು ಎಂದು ಬ್ಯುರೋ ಕಂಡುಕೊಂಡಿದೆ.

ತನ್ನ ಮುದ್ದು ಮುಖಗಳನ್ನು ತೋರಿಸುತ್ತಲೇ ಹಲವಾರು ಮನಸ್ಸುಗಳನ್ನು ದರೋಡೆ ಮಾಡುವ ಈ ಮಗುವಿನ ಮೇಲೆ ಕೇಸು ಜಡಿಯಲಾಗಿದ್ದು, ಆ ಮಗು ಕದ್ದು ತನ್ನ ಮುಗ್ಧ ಮನಸ್ಸಿನಲ್ಲಿ ಶೇಖರಿಸಿಟ್ಟುಕೊಂಡ ಪ್ರೀತಿ, ವಾತ್ಸಲ್ಯವೆಲ್ಲವನ್ನೂ ಹಿಂತಿರುಗಿಸುವಂತೆ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.

ಹಾಗಾಗಿ... ಬಾಲ ಲೀಲೆಗಳಿಂದ ದಿನ ಕಳೆಯಲು ನೆರವಾಗುತ್ತಿದ್ದ ನಗುಮುಖದ ಪುಟಾಣಿ ಮಗು ಕಳೆದು ಹೋಗಿದೆಯೇ? ಮೊದಲು ಪೊಲೀಸ್ ಠಾಣೆಯಲ್ಲಿ ಹುಡುಕಿದರೆ ಸಿಗಬಹುದು ಎಂದು ಅಮೂಲ್ಯ ಸಲಹೆ ನೀಡಲಾಗುತ್ತದೆ.

ಅಲ್ಲಾ..., ಪುಟ್ಟ ಮಕ್ಕಳೂಂತ ಅವರಿಗಾಗಿ ನಮ್ಮ ಬ್ಯುರೋ ಏನೇನೆಲ್ಲಾ ಮಾಡಿ ಸ್ಪರ್ಧೆ ಇತ್ಯಾದಿ ಏರ್ಪಡಿಸಿದರೆ.... ಹೀಗಾ ಮಾಡೋದು!!!

ಸೂಚನೆ:

ದೇಶದ ಅತ್ಯಂತ ಪ್ರತಿಷ್ಠಿತ ಹಿಂದೂ ಪತ್ರಿಕೆಯಲ್ಲೂ ಬೊಗಳೆ ರಗಳೆಯನ್ನು Fake ಪತ್ರಿಕೆ ಎಂದು ಜರಿದು ಅವಮಾನ ಮಾಡಿರುವುದು ನಮ್ಮ ನಿರರ್ಥಕ ಪ್ರಯತ್ನಕ್ಕೆ ಸಂದ ಮನ್ನಣೆ ಎಂದು ಭಾವಿಸಲಾಗುತ್ತಿದೆ. ಕನ್ನಡ ಬೊಗಳಿಗರ ಕುರಿತು ಪ್ರಕಟವಾದ ಲೇಖನ ಇಲ್ಲಿದೆ.

Thursday, November 02, 2006

ಬಡತನ ಹೆಸರು ಚಿರಸ್ಥಾಯಿಯಾಗಿಸಲು ಪಣ

(ಬೊಗಳೂರು ಅಸತ್ಯಾನ್ವೇಷಣೆ ಬ್ಯುರೋದಿಂದ)
ಬೊಗಳೂರು, ನ.2- ದೇಶದಲ್ಲಿ ಬಡತನ ನಿವಾರಿಸಲು ಬಡವರ ನಿರ್ನಾಮವೇ ಗುರಿ ಎಂದು ಹಿಂದಿನ ಕಾಲದಿಂದಲೂ ನಮ್ಮನ್ನು ಆಳುತ್ತಿರುವವರು ಹೇಳುತ್ತಾ ಬಂದಿರುವುದರ ಹಿಂದಿನ ರಹಸ್ಯ ಬಯಲಾಗಿಸಲು ಸಕಲ ಸಿಬ್ಬಂದಿ ಸಮೇತ ತಲೆಮರೆಸಿಕೊಂಡಿರುವ ಬ್ಯುರೋ ಎಚ್ಚೆತ್ತು ಹೊರಟ ಪರಿಣಾಮ ರುದ್ರಭೀಕರ ಮಾಹಿತಿಯೊಂದು ಬಯಲಾಗಿದೆ.

ಮಹಾತ್ಮಾ ಗಾಂಧೀಜಿ ತುಳಿದ ಹಾದಿ ಅನುಸರಿಸುತ್ತಿರುವವರು ನಮ್ಮ ರಾಜಕಾರಣಿಗಳು. ಅದನ್ನೀಗ ಗಾಂಧಿ ಹೆಸರಿನಲ್ಲಿ ವಂಶಪಾರಂಪರ್ಯವಾಗಿ ಚಾಚೂ ತಪ್ಪದೆ ಚಾಚಾ ನೆಹರೂ ಅವರ ಕಾಲದಿಂದಲೇ ಅನುಸರಿಸಿಕೊಂಡು ಬರಲಾಗುತ್ತಿದೆ ಎಂಬುದು ಎಲ್ಲರಿಗೂ ತಿಳಿಯದ ವಿಚಾರ. ಅಥವಾ ತಿಳಿದಿದ್ದರೂ ನಮಗೇನೂ ಗೊತ್ತಿಲ್ಲ ಎಂದು ಸುಮ್ಮನಿರಬೇಕಾದ ಸಂಗತಿ.

ಬಡತನ ನಿವಾರಣೆಗೆ ಗಾಂಧೀಜಿ ಕರೆ ನೀಡಿದ್ದರು. ಅದನ್ನು ಅನುಸರಿಸಿದ ನೆಹರೂ ಕೂಡ ಬಡತನ ನಿವಾರಿಸುತ್ತೇವೆ ಎಂದು ಘೋಷಿಸಿದರು. ಇಂದಿರಾ ಗಾಂಧಿ ಅದನ್ನು ಬದಲಾಯಿಸಿ ಗರೀಬೀ ಹಠಾವೋ ಎಂದು ಭಾರತೀಕರಣಗೊಳಿಸಿದರು. ಆಮೇಲೆ ಅಧಿಕಾರಕ್ಕೇರಿದವರೆಲ್ಲಾ ಗರೀಬೋಂ ಕೋ ಹಠಾವೋ ಎನ್ನುತ್ತಾ ಬೆಲೆ ಏರಿಸತೊಡಗಿದರು. ಇತ್ತೀಚೆಗಷ್ಟೇ ಗರೀಬೀ ಹಠಾವೋ-ಭಾಗ-2 ಬಿಡುಗಡೆಯಾಗಿರುವುದನ್ನು ಇಲ್ಲಿ ಸ್ಮರಿಸಬಹುದು.

ಇಷ್ಟು ಪೀಠಿಕೆಯೊಂದಿಗೆ ತನಿಖೆಯ ವಿಷಯಕ್ಕೆ ಬಂದಾಗ, ಆಂಧ್ರಪ್ರದೇಶದಲ್ಲಿ ಇತ್ತೀಚೆಗೆ ಪ್ರಧಾನಿಗಳು ಮನಮೋಹಕವಾಗಿ ಇನ್ನು 20 ವರ್ಷಗಳಲ್ಲಿ ಬಡತನ ನಿವಾರಿಸುತ್ತೇವೆ ಎಂದು ಘೋಷಿಸಿದಾಗ ಅವರ ಬೆನ್ನ ಹಿಂದೆಯೇ ಅನ್ವೇಷಿ ಬ್ಯುರೋ ತಿರುಗಾಟ ಮಾಡಿತು.

ಅಲ್ಲಿ, ಸ್ವಾತಂತ್ರ್ಯ ದೊರೆತ ಸಂದರ್ಭದಲ್ಲಿ ನೆಹರೂ ಅವರ ಭಾಷಣಕ್ಕಾಗಿ ಸಿದ್ಧಪಡಿಸಿದ ಭಾಷಣದ ಪ್ರತಿಯೊಂದು ಪತ್ತೆಯಾಯಿತು. ಇದೇ ಭಾಷಣವನ್ನು ಸಮಯ ಸಿಕ್ಕಾಗ, ವೇದಿಕೆ ಸಿಕ್ಕಾಗಲೆಲ್ಲಾ ನೆಹರೂ, ಇಂದಿರಾ, ರಾಜೀವ್, ನರಸಿಂಹರಾವ್ ಮುಂತಾದ ಘಟಾನುಘಟಿಗಳೆಲ್ಲಾ ಓದಿದ್ದೇ ಓದಿದ್ದು. ಅದನ್ನೇ ಮತ್ತೆ ಮನಮೋಹಕ ಸಿಂಗರೂ ಓದಿದ್ದಾರೆ ಎಂಬುದು ಗೊತ್ತಾಗಿದೆ. ಈ ಮಧ್ಯೆ, ಆ ಭಾಷಣದ ಕ್ಯಾಸೆಟ್ ಕೂಡ ಪತ್ತೆಯಾಗಿದೆ. ಅದನ್ನು ಕಂಠಪಾಠಕ್ಕಾಗಿ ಬಳಸಲಾಗುತ್ತಿತ್ತೆಂದು ತಿಳಿದುಬಂದಿದೆ.

ಅದೇಕೆ ಹೀಗೆ ಮಾಡುತ್ತಿದ್ದೀರಿ ಎಂದು ಪ್ರಧಾನಿ ಕಾರ್ಯಾಲಯದ ಆಪ್ತ ಸಿಬ್ಬಂದಿಯನ್ನು ಪ್ರಶ್ನಿಸಿದಾಗ, ಬಂದ ಉತ್ತರ ಹೀಗಿತ್ತು:

"ನೋಡಿ ಸ್ವಾಮಿ.... ಬಡತನ ಅನ್ನೋದು ಎಷ್ಟೊಂದು ಒಳ್ಳೆಯ ಪದ! ದೇಶವಿದೇಶಗಳಲ್ಲಿ ಇದು ಪ್ರಸಿದ್ಧಿ ಪಡೆದಿದೆಯಲ್ಲದೆ ಭಾರತೀಯರೆಲ್ಲರೂ ಈ ಶಬ್ದವನ್ನು ಅತ್ಯಂತ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಇದನ್ನು ಉಚ್ಚರಿಸುವುದು ಕೂಡ ಸುಲಭ. ಇದು ಎಲ್ಲರಿಗೂ ಪರಿಚಿತವಾಗಿರುವುದರಿಂದ, ಜನರಿಗೆ ಮತ್ತಷ್ಟು ಹತ್ತಿರವಾಗಲು ನಾವು ಪ್ರತಿ ಭಾಷಣದಲ್ಲೂ ಈ ಅಮೂಲ್ಯ ಶಬ್ದವನ್ನು ಸೇರಿಸಲು ಯತ್ನಿಸುತ್ತಿದ್ದೇವೆ. ಇದು ಕೇಳಲು ಕಿವಿಗೂ ಇಂಪು, ಬಿಸಿಯಾದ ಮನಗಳಿಗೂ ಒಂದಿಷ್ಟು ತಂಪು!!!."

ಅದೇ ಕ್ಯಾಸೆಟ್ಟನ್ನು ಮತ್ತೆ ಮತ್ತೆ ರಿವೈಂಡ್ ಮಾಡೋದು, ಮತ್ತೆ ಪ್ಲೇ ಮಾಡೋದು... ಹಾಗೂ ಓದಿ, ಓದಿ ಹಳತಾದ ಭಾಷಣವನ್ನೇ ಮತ್ತೆ ಓದಿ ಬಡತನ ಶಬ್ದವನ್ನು ಚಿರಸ್ಥಾಯಿಯಾಗಿಸುವ ಯತ್ನವನ್ನು ಬಯಲಿಗೆಳೆದ ಬೊಗಳೂರಿನ ಬೊಗಳೆ ಬ್ಯುರೋಗೆ "ನಿರರ್ಥಕ ರತ್ನ" ಪ್ರಶಸ್ತಿ ನೀಡಲು ತೀರ್ಮಾನಿಸಿರುವುದು ಆತಂಕ ಹೆಚ್ಚಿಸಿದೆ.

Wednesday, November 01, 2006

ಕನ್ನಡಕ್ಕಳಿವಿಲ್ಲ, ಬೆಂಗಳೂರಲ್ಲಿ ಜತನದಿಂದಿದೆ!!!

[ಸರಿಯಾಗಿ ಓದಿ... ನಿಮಗೆ ಭರವಸೆ ನೀಡಲಾದ ಕೊಡುಗೆ ಎಲ್ಲೋ ಸಿಲುಕಿಕೊಂಡಿರಬಹುದು!!!]
(ಬೊಗಳೂರು ಕನ್ನಡಹೋರಾಟ ಬ್ಯುರೋದಿಂದ)
ಬೊಗಳೂರು, ನ.1- ಇಂದು ಕನ್ನಡ ರಾಜ್ಯೋತ್ಸವ. ಅದರಲ್ಲೂ ಸುವರ್ಣ ವರ್ಷದ ಸಂಭ್ರಮದ ಉತ್ಸವ. ಹಾಗಂತ "ಕನ್ನಡ ಅಳಿಯುತ್ತಿದೆ, ಅದನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯ" ಎಂಬ ರಾಜಕಾರಣಿಗಳ ಬಾಯಲ್ಲಿ ಸವೆದುಹೋದ ಸಲಹೆಯನ್ನು ನಮ್ಮ ಬ್ಯುರೋ ಸರ್ವಥಾ ನೀಡುತ್ತಿಲ್ಲ.

ಯಾಕೆಂದರೆ, ಯಾರು ಕೂಡ ಕನ್ನಡ ರಕ್ಷಣೆಗೆ, ಉಳಿಸುವಿಕೆಗೆ ಗಮನ ಕೊಡುತ್ತಿಲ್ಲ ಎಂಬ ನಮ್ಮ ಸಾಹಿತಿಗಳು, ಹೋರಾಟಗಾರರು, ಮತ್ತಿತರ ಕನ್ನಡದ ಕಟ್ಟಾಳುಗಳ ವಾದ ಸರಿಯಲ್ಲ ಎಂಬುದನ್ನು ಬೊಗಳೆ ರಗಳೆ ಬ್ಯುರೋ ಅಸತ್ಯದ ಮೇಲೆ ಪ್ರಮಾಣ ಮಾಡಿ ಕಂಡುಕೊಂಡಿದೆ.

ಇದಕ್ಕೆ ಕಾರಣವಿದೆ. ಅಳಿಯುತ್ತಿರುವ ಕನ್ನಡವನ್ನು ಉಳಿಸಿ ಎಂದು ಯಾರು ಕೂಡ ಹೋರಾಟ ನಡೆಸಬೇಕಾಗಿಲ್ಲ. ಅದು ಉಳಿಯುತ್ತಿದೆ. ಸುಭದ್ರವಾಗಿ ಉಳಿಯುತ್ತಿದೆ. ನಮ್ಮ ನಿಮ್ಮೆಲ್ಲರ ಮನೆ-ಮನಗಳಲ್ಲಿ ಸುರಕ್ಷಿತವಾಗಿದೆ. ವಿಶೇಷವಾಗಿ ಬೆಂಗಳೂರಿನ ಮೂಲೆ ಮೂಲೆಯಲ್ಲಿ ಅದು ಭದ್ರವಾಗಿದೆ. ಅದನ್ನು ಕಾಪಾಡಲಾಗುತ್ತಿದೆ.

ಇದಕ್ಕೊಂದು ಪುಟ್ಟ ಉದಾಹರಣೆ ಇಲ್ಲಿದೆ:

ಬೊಗಳೆ ರಗಳೆ ಬ್ಯುರೋಗೆ ತ್ವರಿತವಾಗಿ ಕರ್ನಾಟಕದಿಂದ ಒಂದು ಮಾಹಿತಿ ಬೇಕಾಗಿತ್ತು. ಹಾಗಾಗಿ ನಮ್ಮೂರು, ಕನ್ನಡದ ಊರು ಎಂಬ ಕಾರಣಕ್ಕಾಗಿ ಬೆಂಗಳೂರಿನ ಕಂಪನಿಯೊಂದಕ್ಕೆ ದೂರವಾಣಿ ಹಚ್ಚಲಾಯಿತು. ಅಭಿಮಾನದಿಂದ ಕನ್ನಡದಲ್ಲೇ ಮಾತಿಗಾರಂಭಿಸಿ ನಮಸ್ಕಾರ ಎಂದಾಗ, ಗುಡ್ ಮಾರ್ನಿಂಗು ಎಂಬ ಪ್ರತಿ-ದಾಳಿ ನಡೆಯಿತು. "ಈ.... ವಿಷಯದ ಬಗ್ಗೆ ಒಂದಿಷ್ಟು ಮಾಹಿತಿ ಬೇಕಿತ್ತಲ್ಲಾ..." ಎಂದು ಪ್ರಶ್ನಿಸಿದಾಗ.... ತಳಮಳಗೊಂಡಂತೆ ಕಂಡು ಬಂದ ಆ ಹೆಣ್ಣು ಧ್ವನಿ, ಎನ್ನ ಎನ್ನ? ಎಂದು ತಡಬಡಾಯಿಸಿತು. ಬಹುಶಃ ಕನ್ನಡ ತಿಳಿದಿರಲಾರದು ಎಂದು ಗೊತ್ತಿದ್ದಷ್ಟು ಇಂಗ್ಲಿಷಿನಲ್ಲಿ ಕೇಳಲಾಯಿತು... ಊ ಹೂಂ... ಜಗ್ಗುವುದೇ ಇಲ್ಲ...ತಡಬಡಾಯಿಸುವಿಕೆಯೇ ಉತ್ತರವಾಯಿತು.

ಕೊನೆಗೆ, ಅನಿವಾರ್ಯವಾಗಿ ಕಲಿತಿರುವ ಅರೆಬರೆ ತಮಿಳಿನಲ್ಲಿ ಕೇಳಿದಾಗ... ಬದುಕಿದೆಯಾ ಬಡ ಜೀವವೇ ಎಂದು ಕೊಂಡ ಆ ಹೆಣ್ಣು ಧ್ವನಿ ಪಟಪಟನೆ ತಮಿಳಿನಲ್ಲಿ ಸಂಪೂರ್ಣ ಮಾಹಿತಿ ಕೊಟ್ಟಿತು. ಬ್ಯುರೋ ಸಿಬ್ಬಂದಿಗೆಷ್ಟು ಅರ್ಥವಾಯಿತೋ, ಏನನ್ನು ನಮ್ಮವರು ಬರೆದುಕೊಂಡರೋ... ಅದರಲ್ಲಿ ಎಷ್ಟು ಸರಿಯೋ ತಿಳಿಯಲೊಲ್ಲದು.

ಹಾಗಾಗಿ ಕರ್ನಾಟಕದಲ್ಲಿ, ವಿಶೇಷವಾಗಿ ರಾಜಧಾನಿ ಬೆಂಗಳೂರಿನಲ್ಲಿ ಅನ್ಯ ಭಾಷಿಗರು ತುಂಬಿ ಹೋಗುತ್ತಾ ಕನ್ನಡದ ಬಳಕೆ ಕಡಿಮೆಯಾಗುತ್ತಿದೆ. ಕನ್ನಡ ಹೆಚ್ಚು ಬಳಸಿದರೆ ಸವೆಯುತ್ತದೆ, ಹಾಗಾಗಿ ಅಲ್ಪಸ್ವಲ್ಪವೇ ಬಳಸಲಾಗುತ್ತದೆ. ಮತ್ತೆ ಅಳಿದುಳಿದ ಕನ್ನಡವನ್ನು ಹೆಚ್ಚು ಉಪಯೋಗಿಸದಂತೆ ಯಾವುದೋ ಸೇಫ್ ಲಾಕರಿನಲ್ಲಿ ಭದ್ರವಾಗಿ ಇರಿಸಲಾಗಿದೆ. ಕನ್ನಡವನ್ನು ಯಾರೂ ಬಳಸದಿದ್ದರೆ ಅದು ಸವೆಯುವುದಾದರೂ ಹೇಗೆ, ಅದು ಅಳಿಯುವುದು ಸಾಧ್ಯವೇ? ಮಿತ ಬಳಕೆಯೇ ಕನ್ನಡದ ರಕ್ಷಣೆಗಿರುವ ಏಕೈಕ ಮಾರ್ಗ ಎಂದು ಕಂಡುಕೊಂಡವರಿಗೊಂದು ದೊಡ್ಡ ನಮಸ್ಕಾರ.

ಇನ್ನೂ ಒಂದು ವಿಷಯವೆಂದರೆ, ಕನ್ನಡಿಗರು ಕೂಡ ಅಲ್ಪಸಂಖ್ಯಾತರಾದಲ್ಲಿ ಅಲ್ಪಸಂಖ್ಯಾತ ಕೋಟಾದಲ್ಲಿ ಹೆಚ್ಚು ಹೆಚ್ಚು ಸೌಲಭ್ಯ ಪಡೆಯಬಹುದು ಎಂಬ ದೂರಾಲೋಚನೆಯೂ ಕೆಲವರಲ್ಲಿ ಸೇರಿಕೊಂಡುಬಿಟ್ಟಿದೆ.

ಆದುದರಿಂದ "ಎನ್ನಡ ಕನ್ನಡ" ಎಂದರೆ "ಎನ್ನಯ ಕನ್ನಡ" ಎಂದೇ ತಿಳಿದುಕೊಳ್ಳುವವರಿಗೆ ಏನು ಹೇಳಬೇಕೋ ಗೊತ್ತಿಲ್ಲ.

ಬೊಗಳೆ ರಗಳೆ ಬ್ಯುರೋದಿಂದ ಸುವರ್ಣ ಕರ್ನಾಟಕದ ಕೊಡುಗೆ ಇಲ್ಲಿದೆ:

ತಾವು ಸ್ವತಃ 'ಕನ್ನಡ ಕನ್ನಡ' ಎಂದು ಬಹಿರಂಗವಾಗಿ ಬೊಬ್ಬಿಡುತ್ತಿದ್ದರೂ, ನಿರರ್ಗಳವಾಗಿ ಇಂಗ್ಲಿಷ್ ಮಾತನಾಡುವವರಿಗೆ ಮಾತ್ರವೇ ಕರ್ನಾಟಕದಲ್ಲಿ ಉದ್ಯೋಗ ನೀಡುವವರಿಗಾಗಿ ವಿಶೇಷವಾಗಿ ಈ ಕೊಡುಗೆಯನ್ನು ರೂಪಿಸಲಾಗಿದೆ.

ಆದುದರಿಂದ... ಉಳಿದವರು ಮತ್ತು ನಿಜವಾದ ಕನ್ನಡಾಭಿಮಾನಿಗಳಿಗೆ ಈ ಕೊಡುಗೆ ಅಲ್ಲ ಎಂದು ತಿಳಿಸಲು ವಿಷಾದಿಸುತ್ತೇವೆ. ಇದು ಕನ್ನಡ ಗೊತ್ತಿಲ್ಲದ ಕನ್ನಡದ ಉಟ್ಚು ಓರಾಟಗಾರರಿಗಾಗಿ. ಮತ್ತು ವಿಶೇಷವಾಗಿ ಕನ್ನಡದ ರಾಜಧಾನಿಯಲ್ಲಿ ಕನ್ನಡವನ್ನು ಜತನದಿಂದ ಕಾಯ್ದುಕೊಳ್ಳುತ್ತಾ, ಇಂಗ್ಲಿಷನ್ನು ಬಳಸಿ ಬಳಸಿ ಆಂಗ್ಲ ಭಾಷೆಯನ್ನು ಸವೆಸುತ್ತಾ ನಾಶಪಡಿಸುತ್ತಾ ಇರುವವರಿಗಾಗಿಯೇ ಇದನ್ನು ರೂಪಿಸಲಾಗಿದೆ.

ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ ಅಂ ಅಃ
ಕ ಖ ಗ ಘ ಙ
ಚ ಛ ಜ ಝ ಞ
ಟ ಠ ಡ ಢ ಣ
ತ ಥ ದ ಧ ನ
ಪ ಫ ಬ ಭ ಮ
ಯ ರ ಲ ವ ಶ ಷ ಸ ಹ ಳ ಕ್ಷ ತ್ರ ಜ್ಞ
ಸಿರಿಗನ್ನಡಂ ಗೆಲ್ಗೆ I ಕನ್ನಡದಿಂದಲೇ ನಮ್ಮಯ ಏಳ್ಗೆ II

(ಸೂಚನೆ: ಬೇರಾವುದೇ ಕನ್ನಡ ಪತ್ರಿಕೆಗಳು ಮಾಧ್ಯಮ ಇತಿಹಾಸದಲ್ಲೇ ಇದುವರೆಗೆ ನೀಡಿರದ, ನೀಡಲಾರದ ಕೊಡುಗೆಯನ್ನು ನಾವು ಕೊಟ್ಟಿರುವುದರಿಂದ ನಮ್ಮ ಬೆನ್ನು ತಟ್ಟಬೇಕಾಗಿ ವಿನಂತಿ!)

ಮತ್ತಷ್ಟು ಕೊಡುಗೆಗಳು ಇಲ್ಲಿವೆ:

1. ಕನ್ನಡ ನಾಡಿಗೆ ಬಂದ ಪರರಾಜ್ಯದ ಪರಭಾಷಿಕರಿಗೆ ನಮ್ಮ ಭಾಷೆ ಕಲಿಸುವ ಬದಲು ಅವರ ಭಾಷೆಯನ್ನೇ ಕಲಿತು, ಅವರೊಂದಿಗೆ ಅವರಂತಾಗಿಬಿಡುವವರಿಗೆ ಒಂದು ಬಕೆಟ್ ಉಪ್ಪುನೀರು.

2. ಹೊರ ನಾಡಿಗೆ ಹೋಗಿ ಕನ್ನಡ ಮರೆತು, ಮನೆಯಲ್ಲೂ ಆ ಊರಿನ ಭಾಷೆಯಲ್ಲೇ ಬಡಬಡಾಯಿಸುವವರಿಗೆ ಒಂದು ತಂಬಿಗೆ ಮೆಣಸಿನ ಶರಬತ್ತು.

3. ಬೆಂಗಳೂರಿನಲ್ಲಿ ತಮಿಳರು ತಮಿಳಿನಲ್ಲಿ, ಆಂಧ್ರದ ಮಂದಿ ತೆಲುಗಿನಲ್ಲಿ, ಮರಾಠಿಗಳು ಮರಾಠಿಯಲ್ಲಿ, ಹಿಂದಿ ಭಾಷಿಗರು ಹಿಂದಿಯಲ್ಲಿ ಮಾತನಾಡುತ್ತಾರೆ, ಆದರೆ ಹೆಚ್ಚಿನ ಕನ್ನಡಿಗರು ಮಾತ್ರ ಇಂಗ್ಲಿಷ್‌ನಲ್ಲೇ ಮಾತನಾಡುತ್ತಾರೆ ಎಂಬ ಸಂಗತಿಯನ್ನು ಪತ್ತೆ ಹಚ್ಚಿದ ಸಂಶೋಧಕನಿಗೆ ಕರ್ನಾಟಕ ರತ್ನ.

4. ರಾಜ್ಯೋತ್ಸವ ಬಂದಾಗ ಮಾತ್ರ ಕನ್ನಡ ಕನ್ನಡ ಎಂದು ಬೊಬ್ಬಿಡುತ್ತಾ, ರಾಜ್ಯೋತ್ಸವದ ಆಚರಣೆ ಮುಗಿದ ತಕ್ಷಣ ಪತಾಕೆ, ಬ್ಯಾನರು ಕಟ್ಟಿಟ್ಟು, ಮುಂದಿನ ವರ್ಷಕ್ಕಾಗಿ ಜತನವಾಗಿ ತೆಗೆದಿಟ್ಟು, ಗಡದ್ದಾಗಿ ನಿದ್ದೆ ಹೋಗುವ ಆಳುವ ಮಂದಿಗೆ ಒಂದು ಪೀಪಾಯಿ ಬೇವಿನ ರಸ.

5. ಪ್ರತಿವರ್ಷ ನವೆಂಬರ್ 1 ಹತ್ತಿರ ಬರುತ್ತಿದ್ದಾಗಲೇ ಕೆಲವರು "ಅಯ್ಯಯ್ಯೋ... ಕನ್ನಡವನ್ನು ಕಾಪಾಡಿ" ಎಂದುಕೊಳ್ಳುತ್ತಾ ದಿಗಿಲಿಗೆ ಬಿದ್ದವರಂತೆ ವರ್ತಿಸುತ್ತಿರುವುದೇಕೆ? ಇದು ಕೂಡ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಹೆಚ್ಚಾಗಿ ಜಾರಿಯಲ್ಲಿರುತ್ತದೆ. ಮತ್ತೆ ಈ ಕೂಗಾಟ ಕೇಳಿಬರುವುದು ಮುಂದಿನ ವರ್ಷವೇ. ಹಾಗಿದ್ದರೆ ಮುಂದಿನ ವರ್ಷವೂ ಈ ಕೂಗು ಕೇಳಿಬರುವಂತೆ ಮಾಡುವುದಕ್ಕೆ ಕಾರಣರು ಯಾರು? ಅಂಥವರ ಮುಖಕ್ಕೆ ಬೆಳಗ್ಗೆ ಏಳುವ ಮೊದಲೇ ಬಿಸಿ ಬಿಸಿ ನೀರು ಎರಚಾಟ.

Tuesday, October 31, 2006

ಪ್ರಧಾನಿ ಪದೇ ಪದೇ ವಿದೇಶ ಪ್ರಯಾಣ ಗುಟ್ಟು ರಟ್ಟು

(ಬೊಗಳೂರು ನಿಧಾನಿ ಬ್ಯುರೋದಿಂದ)

ಬೊಗಳೂರು, ಅ.31- ಮೇರಾ ಮಹಾನ್ ಭಾರತದ ನಿಧಾನಿ ಪ್ರಧಾನಿ ಮನಮೋಹಕ ಸಿಂಗ್ ಅವರು ಪದೇ ಪದೇ ವಿದೇಶ ಪ್ರಯಾಣ ಮಾಡುತ್ತಿರುವುದೇಕೆ ಎಂಬುದನ್ನು ಶೋಧಿಸಲು ತೀವ್ರ ಒತ್ತಡ ಬಂದ ಹಿನ್ನೆಲೆಯಲ್ಲಿ ಬೊಗಳೆ ರಗಳೆ ಬ್ಯುರೋ ಕೂಡ ವಿದೇಶ ಪ್ರವಾಸದ ಮೇಲೆ ಕಣ್ಣಿಟ್ಟು ತನಿಖೆ ನಡೆಸಲಾರಂಭಿಸಿದೆ.

ಹವಾನಾದಲ್ಲಿ ಹೋಗಿ ಮುಷರಫ್ ಜತೆ ಶಾಂತಿಯ ಹವಾ ಅನುಭವಿಸಿ ಬರುವಾಗ ವಿರೋಧ ಪಕ್ಷಗಳು ಗಲಾಟೆ ಎಬ್ಬಿಸಿದವು. ಅಂತೆಯೇ ರಷ್ಯಾ, ದಕ್ಷಿಣ ಆಫ್ರಿಕಾ, ಫಿನ್ಲೆಂಡ್, ಬ್ರಿಟನ್ ಅಂತೆಲ್ಲಾ ತಿರುಗಾಟ ಮುಗಿಸಿ ಮರಳಿ ಬರುವಾಗ ಭಾರತದಲ್ಲಿ ಗಲಾಟೆ, ಭಯೋತ್ಪಾದನೆ ಅಶಾಂತಿ, ನಕ್ಸಲ್ ಹಿಂಸಾಚಾರ, ಯುಪಿಎಯೊಳಗೆ ಭಿನ್ನಮತ....

ಈ ಕುರಿತಾಗಿಯೇ ತನಿಖೆ ನಡೆಸಲಾಗಿದ್ದು, ಹಲವಾರು ವಿಷಯಗಳು ಬಯಲಾಗಿವೆ. ಅವುಗಳಲ್ಲಿ ಅತ್ಯಂತ ಪ್ರಮುಖವಾದದ್ದು ವಿದೇಶಾಂಗ ಸಚಿವರ ನೇಮಕಕ್ಕೆ ಹೆಚ್ಚುತ್ತಿರುವ ಒತ್ತಡ.ಯಾಕೆ ಎಂದು ನಿಧಾನಿಯ ಆಪ್ತರನ್ನು ಪ್ರಶ್ನಿಸಿದಾಗ ಅವರು ಹೇಳದಿದ್ದ ವಿಷಯವೆಂದರೆ, ವಿದೇಶಾಂಗ ಸಚಿವರ ನೇಮಕವಾದರೆ ತಮಗೆಲ್ಲಿ ವಿದೇಶ ಪ್ರವಾಸದ ಯೋಗ ತಪ್ಪಿ ಹೋಗುತ್ತದೆ ಎಂಬ ಆತಂಕ.

ಹಾಗಿದ್ದರೆ ಅವರು ವಿದೇಶ ಪ್ರಯಾಣಕ್ಕೆ ಹಾತೊರೆಯುತ್ತಿರುವುದೇಕೆ? ಎಂದು ಕೇಳಿದಾಗ... ಮೊದಲಿಗೆ ಉತ್ತರಿಸಲು ಹಿಂದು ಮುಂದು ನೋಡಿದರೂ, ಆ ಬಳಿಕ ಬಾಯಿ ಮುಚ್ಚಿ ವಿಷಯ ಹೇಳಿಯೇ ಬಿಟ್ಟರು.

ಸರಕಾರ ಅಧಿಕಾರಕ್ಕೆ ಬಂದು ಅದರ ಅರ್ಧ ಅವಧಿ ಮುಗಿಯುತ್ತಾ ಬಂದಿದೆ. ಈ ಅವಧಿಯಲ್ಲಿ ಜನಸಾಮಾನ್ಯರು ಬೆಲೆ ಏರಿಕೆಯ ಬಿಸಿಯಲ್ಲಿ ಅದು ಹೇಗೆ ಬದುಕುತ್ತಾರೋ ಗೊತ್ತಿಲ್ಲ. ಹಾಗಾಗಿ ಭಾರತದಲ್ಲಿ ಜೀವಿಸುವುದಕ್ಕಿಂತ ವಿದೇಶ ವಾಸವೇ ಅಗ್ಗದ ಸಂಗತಿ. ಅಲ್ಲೆಲ್ಲಾ ಪೆಟ್ರೋಲ್ ಬೆಲೆ ಏರಿತು, ತರಕಾರಿ ಬೆಲೆ ಏರಿತು ಅಂತ ಹೇಳಿಕೊಳ್ಳುವವರೂ ಇಲ್ಲ. ಯಾವ ಮಂಡೆ ಬಿಸಿಯೂ ಇಲ್ಲ ಎಂಬುದು ನಿಧಾನಿ ಕಚೇರಿಯಿಂದ ದೊರೆಯದ ಸಮಜಾಯಿಷಿ.

ಅದಲ್ಲದೆ, ಭಾರತದಲ್ಲಿದ್ದರೆ ಎಡಪಕ್ಷಗಳನ್ನು ಆಗಾಗ್ಗೆ ಎದುರಿಸಬೇಕು, ಮಾಜಿ ವಿದೇಶಾಂಗ ಸಚಿವ ನಟವರ ಸಿಂಗರಿಗೆ ಮುಖ ತೋರಿಸಲು ಸಾಧ್ಯವಾಗುತ್ತಿಲ್ಲ. ನೋಸಿಯಾ ಗಾಂಧಿ ಕೂಡ ಯಾಕೋ ಮುಗುಂ ಆಗಿದ್ದಾರೆ... ಈ ಎಲ್ಲ ತೊಂದರೆ ತಾಪತ್ರಯಗಳು ನಮಗೇಕೆ ಎಂಬುದು ಅವರ ಅಭಿಮತವೆಂದು ತಿಳಿದುಬಂದಿದೆ.

ಇಲ್ಲಿದ್ದರೆ ಒಂದಿಲ್ಲೊಂದು ಹಗರಣ ಬಯಲಾಗುತ್ತಾ ಇರುತ್ತದೆ, ಯುಪಿಎ ಸರಕಾರ ಮಾಡಿದ 'ಮಹಾನ್' ಕಾರ್ಯಗಳಿಗೆಲ್ಲಾ ನ್ಯಾಯಾಂಗವು ತಲೆ ತೂರಿಸಿ ಹಿಂದೆ ಜಗ್ಗುತ್ತಾ ಅಪಮಾನ ಮಾಡುತ್ತಿದೆ, ಈ ಕೋರ್ಟುಗಳು ಕೂಡ ನಮಗೆ ಮನಬಂದಂತೆ ಕಾರ್ಯ ನಿರ್ವಹಿಸಲು ಬಿಡುತ್ತಿಲ್ಲ ಎಂಬುದು ಅವರ ಅಸಮಾಧಾನಕ್ಕೆ ಕಾರಣವೆನ್ನಲಾಗುತ್ತಿದೆ.

-----------------------

ರಾಜ್ಯೋತ್ಸವ ಪ್ರಯುಕ್ತ ವಿಶೇಷ ಕೊಡುಗೆ.....

ನಿಮ್ಮ ಪ್ರತಿಗಳನ್ನು ಇಂದೇ ಕಾದಿರಿಸಿ....

ನಾಳಿನ ಸಂಚಿಕೆಯಲ್ಲಿ....

ಕನ್ನಡಿಗರಿಂದ ಕನ್ನಡಿಗರಿಗಾಗಿ ಕನ್ನಡವೇ ನಮ್ಮ ತಾಯಿ ತಂದೆ ಎಂದೆಲ್ಲಾ ಹೇಳುತ್ತಿರುವವರಿಗಾಗಿಯೇ ಸಿದ್ಧಪಡಿಸಲಾದ ವಿಶೇಷ ಕೊಡುಗೆ.

ಹೆಚ್ಚಿನ ವಿವರಗಳಿಗೆ ನಾಳಿನ ಬೊಗಳೆ ರಗಳೆ ನೋಡಿ...!!!

ನೋಡಲು ಮರೆಯದಿರಿ.... ಮರೆತು ನಿರಾಶರಾಗದಿರಿ!!!

Monday, October 30, 2006

ಸಮ್ಮಿಶ್ರಣ ಸರಕಾರದಲ್ಲಿ ನೈಜ ಕಿತ್ತಾಟವೇಕಿಲ್ಲ?

(ಬೊಗಳೂರು ಕಚ್ಚಾಟ ಬ್ಯುರೋದಿಂದ)
ಬೊಗಳೂರು, ಅ.30- ಜನತಾ ದಳದ ತೆನೆ ಹೊತ್ತ ರೈತ ಮಹಿಳೆಯ ಬದಲಾಗಿ ಹಿಂದಿನ ಚಕ್ರವೇ ಉರುಳಿಸಿದ ಪರಿಣಾಮವಾಗಿ ಮುಖ್ಯಮಂತ್ರಿ ಪಟ್ಟದಿಂದ ದಿಢೀರನೆ ಕೆಳಗೆ ಬಿದ್ದಿದ್ದ ಮಾಜಿ ಮುಖ್ಯಮಂತ್ರಿ ಭವಿಷ್ಯ ನುಡಿಯಲು ಹೊರಟಿದ್ದು ಕೇಳಿ ಆಸಕ್ತಿಯಿಂದ ಬೊಗಳೆ ರಗಳೆ ಬ್ಯುರೋ ಹೀಗೇ ತಿರುಗಾಡಿಕೊಂಡು ಅತ್ತ ಧಾವಿಸಿ ಬರಲು ಹೊರಟಿತು.

ಕಿತ್ತಾಟದಿಂದಲೇ ಸರಕಾರ ಪತನವಾಗುತ್ತದೆ ಎಂದು ಅವರು ಅನುಭವದ ನುಡಿಗಳಿಂದ ಭವಿಷ್ಯ ನುಡಿದಿದ್ದರೂ, ಈ ಬಾರಿ ಅದನ್ನು ಪ್ರಯೋಗ ಮಾಡಿಯೇ ತೀರಬೇಕು ಎಂದು ಬ್ಯುರೋ ತೀರ್ಮಾನಿಸಿ, ಕೆಲವೊಂದು ಹಣ್ಣು ಹಂಪಲುಗಳನ್ನು, ಮಾಲೆಪಟಾಕಿಯನ್ನು, ಕೊಳೆತ ಟೊಮೆಟೊವನ್ನು ಹಿಡಿದುಕೊಂಡು ಹೊರಟಿತು.

ಉಭಯ ಬಣಗಳಿಗೂ ಸರಿ ಸಮಾನಾಗಿ ಹಂಚುವ ಬದಲು, ಕಡಿಮೆ ಶಾಸಕರನ್ನು ಹೊಂದಿರುವ ತೆನೆ ಹೊತ್ತ ಮಹಿಳೆಗೆ ಹೆಚ್ಚು ಕೊಳೆತ ಟೊಮೆಟೋವನ್ನೂ, ಹೆಚ್ಚು ಶಾಸಕ ಬಲವಿರುವ ಕಮಲನಿಗೆ ಕಡಿಮೆ ಕೊಳೆತ ಮೊಟ್ಟೆಯನ್ನೂ ನೀಡಿ ಏನಾಗುತ್ತದೆ ಎಂದು ಕಾದು ಕೂರಲಾಯಿತು.

ಎಷ್ಟು ಕಾದರೂ ಏನೂ ಆಗಲೇ ಇಲ್ಲ. ಅವರದು ತಮಗೆ ಬೇಕು, ಇವರದು ಅವರಿಗೆ ಬೇಕು ಅಂತ ಅವರ್ಯಾರೂ ಎಳೆದಾಟ, ಕಿತ್ತಾಟ ಮಾಡಲೇ ಇಲ್ಲ!!!!

ಇದರ ಹಿಂದಿನ ರಹಸ್ಯ ಭೇದಿಸಲು ಹೊರಟಾಗ ಒಂದೇ ಒಂದು ವಿಷಯ ಗೊತ್ತಾಯಿತು.

ಅದೆಂದರೆ, ಇವರೆಷ್ಟು ಕಿತ್ತಾಟ ಮಾಡಿದರೂ ಏನೂ ದಕ್ಕುವುದಿಲ್ಲ. ಈಗಾಗಲೇ ತೆನೆ ಹೊತ್ತ ರೈತ ಮಹಿಳೆಯೂ ಕೈಯೂ ಪರಸ್ಪರ ಕಿತ್ತಾಡುತ್ತಲೇ ಎಲ್ಲವನ್ನೂ ಬರಿದು ಮಾಡಿದ್ದರಿಂದ, ಈಗ ಕಿತ್ತಾಟ ಮಾಡಿ ಪ್ರಯೋಜನವಿಲ್ಲ ಎಂದು ಉಭಯ ಬಣಗಳೂ ಸುಮ್ಮನಿದ್ದವು!

ಸಮ್ಮಿಶ್ರ ಸರಕಾರಗಳು ಈ ವಿಷಯದಲ್ಲಿ ಕಚ್ಚಾಟದೇ ಇರುವುದು, ಬರೇ ಮತದಾರರನ್ನು ಓಲೈಸಲು ಕೆಲವೊಂದಿಷ್ಟು ವಿಷಯಗಳನ್ನು ಎಳೆದು ತಂದು ರಾದ್ಧಾಂತ ಮಾಡುವುದು ಯಾಕೆಂಬುದರ ಹಿಂದಿನ ರಹಸ್ಯ ಬಯಲು ಮಾಡಿದ ಸಂತೋಷದಲ್ಲಿ ಬೊಗಳೆ ಬ್ಯುರೋ ಗಂಟು ಮೂಟೆ ಕಟ್ಟಿ ವಾಪಸಾಯಿತು.

Saturday, October 28, 2006

'ಅಧಿಕಾರ'ಕ್ಕೆ ಹಪಹಪಿಸುವ ಕೋಲಾಯುಕ್ತರು!...

(ಬೊಗಳೂರು ಭ್ರಷ್ಟಾಚಾರಿ ಬ್ಯುರೋದಿಂದ)
ಬೊಗಳೂರು, ಅ.28- ಲೋಕಾಯುಕ್ತರೂ ಅಧಿಕಾರಕ್ಕಾಗಿ ಹಪಹಪಿಸುತ್ತಿರುವುದನ್ನು ಓದಿ ಬೊಗಳೆ ರಗಳೆ ಬ್ಯುರೋ ಕುದಿಯತೊಡಗಿದ್ದು, ಈ ಬಿಸಿಯಿಂದಾಗಿ ಶೀಘ್ರವೇ ಬೇಳೆ ಬೇಯುವ ಸಾಧ್ಯತೆಗಳಿವೆ.

ದೇಶದ ಅರ್ಥ ವ್ಯವಸ್ಥೆಯ ಅಡಿಪಾಯವೇ ಆಗಿಬಿಟ್ಟಿರುವ ಭ್ರಷ್ಟಾಚಾರವನ್ನು ನಿವಾರಿಸಲು ಲೋಕಾಯುಕ್ತರು ಯತ್ನಿಸುತ್ತಿರುವುದನ್ನು ತೀವ್ರವಾಗಿ ಖಂಡಿಸಿರುವ ಸ್ವಅರ್ಥಾಭಿವೃದ್ಧಿ ಮಂಡಳಿಯು, ಈ ಭ್ರಷ್ಟಾಚಾರವನ್ನು ಇನ್ನಿಲ್ಲದಂತೆ ಮಾಡಿದರೆ, ದೇಶದ (ಅಂದರೆ ರಾಜಕಾರಣಿಗಳು, ಅಧಿಕಾರಶಾಹಿಯ) ಅರ್ಥಾಭಿವೃದ್ಧಿ ಆಗುವುದಾದರೂ ಹೇಗೆ ಎಂದು ಪ್ರಶ್ನಿಸಿದೆ.

ಈಗಿನ ಪೀಳಿಗೆಗೆ ಭ್ರಷ್ಟಾಚಾರ ಮಾಡುವುದೇ ಕೆಲಸ. ಅದರ ನಿರ್ಮೂಲನೆ ವಿಷಯವನ್ನೆಲ್ಲಾ ಮುಂದಿನ ಪೀಳಿಗೆಗೆ ಬಿಡುವುದು ಬಿಟ್ಟು ಇವರಿಗೇಕೆ ಅದರ ಉಸಾಬರಿ ಎಂದು ಪ್ರಶ್ನಿಸಿರುವ ಮಂಡಳಿ ಅಧ್ಯಕ್ಷ ಭ್ರಷ್ಟ ಕುಮಾರ್ ಅವರು, ಬೇಕಿದ್ದರೆ ಒಂದನೇ ತರಗತಿಯಿಂದಲೇ ಇಂಗ್ಲಿಷ್ ಕಡ್ಡಾಯ ಮಾಡಿದಂತೆ, ಹುಟ್ಟಿದ ತಕ್ಷಣ ಮಗುವಿಗೆ ಭ್ರಷ್ಟಾಚಾರ ವಿರುದ್ಧದ ಹೋರಾಟ ಬೇಕಿದ್ದರೆ ಕಲಿಸುವ ವ್ಯವಸ್ಥೆ ಮಾಡೋಣ ಮತ್ತು ಭ್ರಷ್ಟಾಚಾರ ಆರೋಪಗಳಿಂದ ಮುಕ್ತರಾಗುವುದು ಹೇಗೆಂಬ ಬಗ್ಗೆಯೂ ಒಂದು ಬದಿಯಲ್ಲಿ ಕಲಿಸೋಣ ಎಂದು ಹೇಳಿದ್ದಾರೆ.

ಸದ್ಯದ ಅಧಿಕಾರದಿಂದ ಏನನ್ನೂ ಸಾಧಿಸುವುದು ಸಾಧ್ಯವಿಲ್ಲ ಎಂಬ ಲೋಕಾಯುಕ್ತರ ಮಾತನ್ನು ಗಂಭೀರವಾಗಿ ತರಾಟೆಗೆ ತೆಗೆದುಕೊಂಡಿರುವ ಅವರು, ಈಗಾಗಲೇ ಕೋಟಿ ಕೋಟಿ ಆಸ್ತಿಯನ್ನು ಬಯಲಿಗೆ ಎಳೆದುಹಾಕಿ ಪ್ರದರ್ಶಿಸಿದ್ದು ಯಾವ ಅಧಿಕಾರದಿಂದ ಎಂದು ಪ್ರಶ್ನಿಸಿದ್ದಾರೆ. ಯಾರಿಗೂ ತಿಳಿಯದ ಜಾಗದಲ್ಲಿ ಈ ಚಿನ್ನಾಭರಣಗಳು ಕೊಳೆಯದಂತೆ ಮತ್ತು ಅದು ಲೋಕಕ್ಕೆಲ್ಲಾ ತಿಳಿಯಲಿ, ಜನರೂ ಸಂತೋಷ ಪಡಲಿ ಎಂದು ಅವರೇ ಆಗಾಗ್ಗೆ ಇಂಥ ಚಿನ್ನಾಭರಣ ಪ್ರದರ್ಶನಗಳನ್ನು ಏರ್ಪಡಿಸುತ್ತಿದ್ದಾರೆ. ಮತ್ಯಾಕೆ ಅವರಿಗೆ ಇನ್ನಷ್ಟು ಅಧಿಕಾರ ಎಂದು ಪ್ರಶ್ನಿಸಿರುವ ಭ್ರಷ್ಟಕುಮಾರ್, ಅವರ ಕೈಗೆ ದಂಡ ಕೊಟ್ಟು ನಮ್ಮಂಥವರು ದಂಡ ತೆರಬೇಕೇ ಎಂದು ಕೇಳಿದ್ದಾರೆ,

ಲೋಕಾಯುಕ್ತರ ಕೈಗೆ ಕತ್ತರಿ ಕೊಟ್ಟು ನಮ್ಮ ಜೇಬು ಕತ್ತರಿಸಿಕೊಳ್ಳಲು ನಾವಂತೂ ಖಂಡಿತಾ ತಯಾರಿಲ್ಲ, ಅವರಿಗೆ ಹೆಚ್ಚಿನ ಅಧಿಕಾರ ಕೊಡುವುದಕ್ಕೆ ನಮ್ಮ ಗಂಭೀರ ವಿರೋಧವಿದೆ. ಈಗಾಗಲೇ ಚಿನ್ನಾಭರಣ ಪ್ರದರ್ಶನದೊಂದಿಗೆ, ಅದರ ಒಡೆಯರ ಚಿತ್ರ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದೆ. ಇಷ್ಟೇ ಸಾಕು, ಹೆಚ್ಚಿನ ಶಿಕ್ಷೆಯ ಅಗತ್ಯವೇ ಇಲ್ಲ ಎಂದು ಹೇಳಿರುವ ಅವರು, ಕೊನೆಗೊಂದು ನುಡಿ ಮುತ್ತು ಉದುರಿಸಿದ್ದಾರೆ.

ಎಲ್ಲರನ್ನೂ ಶಿಕ್ಷಿಸುವ ಅಧಿಕಾರ ಲೋಕಾಯುಕ್ತರಿಗೆ ಕೊಟ್ಟುಬಿಟ್ಟರೆ, ಈ ದೇಶದಲ್ಲಿ ಭ್ರಷ್ಟಾಚಾರಿಗಳ ಸಂಘದ ಗತಿಯೇನು ಎಂದು ಅವರು ಪ್ರಶ್ನಿಸಿರುವುದು ಉತ್ತರ ಸಿಗದ new type question ಎಂದು ಪರಿಗಣಿಸಲಾಗಿದೆ.

Friday, October 27, 2006

ಅತ್ಯಾಚಾರಕ್ಕೆ ಕಾರಣ ಸಂಶೋಧನೆ

(ಬೊಗಳೂರು .... ಬ್ಯುರೋದಿಂದ)
ಬೊಗಳೂರು, ಅ.27- ಹೆಚ್ಚುತ್ತಿರುವ ಅತ್ಯಾಚಾರಕ್ಕೆ ಕಾರಣವನ್ನು ಸಂಶೋಧನೆ ಮಾಡಿರುವ ವ್ಯಕ್ತಿಯೊಬ್ಬರಿಗೆ ಅತ್ಯಾಚಾರ ರತ್ನ ಬಿರುದು ನೀಡಲು ನಿರ್ಧರಿಸಲಾಗಿದೆ.

ಮಾಂಸವನ್ನು ಹೊರಗಿಟ್ಟರೆ ಬೆಕ್ಕುಗಳು ದಾಳಿ ಮಾಡಿ ತಿನ್ನದಿರುತ್ತವೆಯೇ ಎಂಬ ಸಿದ್ಧಾಂತವನ್ನು ಮೂಲವಾಗಿಟ್ಟುಕೊಂಡು ಅತ್ಯಂತ ಆಚಾರ ಹೆಚ್ಚುತ್ತಿರುವುದರ ಹಿನ್ನೆಲೆ ಕುರಿತು ಹಗಲು ರಾತ್ರಿ ಯೋಚಿಸಿ ಯೋಚಿಸಿ ಈ ಸಂಶೋಧನೆ ಮಾಡಿರುವುದಾಗಿ ಸಂಶೋಧಕರು ಇಲ್ಲಿ ಹೇಳಿಕೊಂಡಿದ್ದಾರೆ.

ಆದರೆ ಇತ್ತೀಚಿನ ಚಲನವಲನಚಿತ್ರಗಳನ್ನು ನೋಡಿದವರು ಈ ಕಾರಣವನ್ನು ಮೊದಲೇ ಪತ್ತೆ ಹಚ್ಚಿದ್ದರಾದರೂ ಯಾರೂ ಕೂಡ ಬಹಿರಂಗಪಡಿಸಿರಲಿಲ್ಲ. ಇನ್ನು ಕೆಲವರು ಈ ಸಂಶೋಧನೆ ಕುರಿತು ಪೇಟೆಂಟ್‌ಗೆ ಅರ್ಜಿ ಸಲ್ಲಿಸಿದ್ದು, ಪೇಟೆಂಟ್ ಲಭ್ಯವಾದ ಬಳಿಕವಷ್ಟೇ ಬಹಿರಂಗಪಡಿಸಲು ತೀರ್ಮಾನಿಸಿದ್ದರು.ಆದರೆ ಈ ಮಹಾತ್ಮರು ಅಷ್ಟು ಬೇಗ Spilled the beans!. ಇದಕ್ಕಾಗಿ ಅವರಿಗೆ ಬಿದಿರುಪ್ರದಾನ ಮಾಡಲು ಅಖಿಲ ವಿಶ್ವ ಸಕಲ ಮಹಿಳಾ ಸಂಘವು ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.

Thursday, October 26, 2006

ಸ್ತ್ರೀದೌರ್ಜನ್ಯ ಕಾಯಿದೆ: ಪುರುಷಮಣಿಗಳ ಸ್ವಾಗತ!

(ಬೊಗಳೂರು ಕಾಯಿದೆ ಉಲ್ಟಾ ಬ್ಯುರೋದಿಂದ)
ಬೊಗಳೂರು, ಅ.26- ಬೆಲೆ ಏರಿಕೆಯಿಂದಾಗಿ ಮನೆಯಲ್ಲಿ ಜೀವಿಸುವುದು ಕಷ್ಟಸಾಧ್ಯವಾಗಿರುವ ಪುರುಷ ಪ್ರಾಣಿಗಳಿಗೆ ಜೀವಿಸಲು ವಿನೂತನ ಅವಕಾಶ ಕಲ್ಪಿಸಿಕೊಟ್ಟಿರುವ ಕೇಂದ್ರ ಸರಕಾರದ ಹೊಸ ಕಾಯಿದೆಯು ಸರ್ವತ್ರ ಶ್ಲಾಘನೆಗೆ ಪಾತ್ರವಾಗಿದೆ.

ತಮ್ಮ ತಮ್ಮ ಸ್ವಂತ ಪತ್ನಿಯರನ್ನು ಹೊಡೆಯಬಲ್ಲ, ಬಡಿಯಬಲ್ಲ, ಇತರ ಸ್ತ್ರೀ ಜೀವಿಗಳನ್ನು ಹಿಂಸಿಸಬಲ್ಲವರಿಗೆ ಸ್ವಂತ ಗೃಹದಷ್ಟೇ ಸಕಲ ಸೌಲಭ್ಯಗಳುಳ್ಳ ಕಾರಾ-ಗೃಹ ವಾಸಕ್ಕೆ ಅವಕಾಶ ಮಾಡಿಕೊಟ್ಟಿರುವುದರಿಂದ ಪುರುಷ ಗಡಣ ಸಂತೃಪ್ತವಾಗಿದೆ ಎಂಬುದನ್ನು ಪತ್ತೆ ಹಚ್ಚಲಾಗಿದೆ.

ಜೈಲಿನಿಂದ ಹೊರಗಿದ್ದರೆ ಒಂದು ಕಿಲೋ ಟೊಮೆಟೋ ಪಡೆಯಬೇಕಿದ್ದರೆ ಒಂದು ಗ್ರಾಂ ಚಿನ್ನ ಅಡವಿಡಬೇಕಾದ ಪರಿಸ್ಥಿತಿ. ಆದರೆ ಜೈಲಿಗೆ ಹೋದರೆ ಉಚಿತ ಅಶನ, ವಸನ ಇತ್ಯಾದಿಗಳು ದೊರೆಯುತ್ತದೆ ಎಂಬ ಅಮೂಲ್ಯ ಸೂತ್ರವನ್ನು ಅಳವಡಿಸಲಾಗಿರುವುದು ಸರ್ವರ ಹರುಷಕ್ಕೆ ಕಾರಣವಾಗಿದೆ.

ಮಹಿಳಾ ಹಕ್ಕಿಗಳ ಸಂಘ ಹೋರಾಟದ ಕಣಕ್ಕೆ

ಸಾಮರ್ಥ್ಯ ಹೊಂದಿರುವ ಪುರುಷರಿಗೆ ಮಾತ್ರ ಈ ಅವಕಾಶ ಮಾಡಿಕೊಟ್ಟಿರುವ ಕ್ರಮಕ್ಕೆ ಮಹಿಳಾಮಣಿಗಳಿಂದ ಆಕ್ಷೇಪ ಬರುತ್ತಿದ್ದು, ತಮಗೂ ಈ ಅವಕಾಶ ದೊರಕಿಸಿಕೊಳ್ಳುವ ನಿಟ್ಟಿನಲ್ಲಿ ಅವುಗಳೆಲ್ಲಾ ಹೋರಾಟಕ್ಕೆ ಬೀದಿಗಿಳಿಯಲು ತೀರ್ಮಾನಿಸಿವೆ ಎಂದು ಇತ್ತೀಚಿನ ವರದಿಗಳು ತಿಳಿಸಿವೆ.

ತಾವು ಕೂಡ ಪುರುಷರಷ್ಟೇ ಸಮಾನರು, ತಮಗೂ ಅವರನ್ನು ಹಿಂಸಿಸುವ ತಾಕತ್ತು ಇದೆ. ನಮಗೂ ಇಂಥ ಕಾಯಿದೆ ಅನ್ವಯಿಸಬೇಕು ಎಂದು ಅಖಿಲ ಭಾರತ ಮಹಿಳಾ ಹಕ್ಕಿಗಳ ರಕ್ಷಣಾ ಸಮಿತಿ ಆಗ್ರಹಿಸಿದೆ.

ಉಲ್ಟಾ ಹೊಡೆದ ಕಾಯಿದೆ

ಪ್ರೀತಿ, ಆತ್ಮೀಯತೆ, ಸಾಂತ್ವನ ಎಂಬಿತ್ಯಾದಿ ಗುಣಗಳು ಈಗಿನ ಕಾಲದಲ್ಲಿ ಮಾನವರಿಗೆ ಸಂಬಂಧಿಸಿದ್ದಲ್ಲ.... ಅಂದರೆ ಅ-ಮಾನವೀಯ ಎಂದಾಗಿಬಿಟ್ಟಿರುವುದರಿಂದ ಈ ಅಮಾನವೀಯತೆಯನ್ನೇ ಬಂಡವಾಳವಾಗಿಟ್ಟುಕೊಳ್ಳಲು ಪುರುಷರು ನಿರ್ಧರಿಸಿದ ಪರಿಣಾಮ ದೇಶಾದ್ಯಂತ ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚಿದೆ ಎಂದು ತಿಳಿದುಬಂದಿದೆ.

ಗುರುವಾರದಿಂದ ಈ ಕಾಯಿದೆ ಜಾರಿಗೆ ಬಂದಿರುವುದರಿಂದ ಮಹಿಳೆಯರ ಮೇಲಿನ ಹಿಂಸಾಚಾರ ಪ್ರಕರಣಗಳು ದೇಶಾದ್ಯಂತ ಹೆಚ್ಚಳವಾಗತೊಡಗಿದೆ. ಹಾಗಾಗಿ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಈ ಕಾಯಿದೆ ರೂಪಿಸಿದ್ದು ಎಂದು ಸರಕಾರ ಹೇಳಿರುವುದು ಬರೀ ಬೊಗಳೆ ಎಂಬುದನ್ನು ನಮ್ಮ ಬ್ಯುರೋ ಯಾವುದೋ ಹೊತ್ತು ಗೊತ್ತಿಲ್ಲದ ನಾಡಿನಲ್ಲಿದ್ದುಕೊಂಡೇ ಅನ್ವೇಷಣೆ ಮಾಡಿದೆ.

Wednesday, October 25, 2006

ವಿದ್ಯಾರ್ಥಿನಿಯರು ಮದ್ಯಾರ್ಥಿನಿಯರಾದಾಗ!

(ಬೊಗಳೂರು ರಿಮೋಟ್ ಬ್ಯುರೋದಿಂದ)
ಬೊಗಳೂರು, ಅ.25- ಚೀನಾದಲ್ಲಿ ಇತ್ತೀಚೆಗೆ ಫಿಂಗ್ ಕಿಶರ್, ತ್ರಿಬಲ್ ಝಡ್ ಮುಂತಾದ ಮಾರ್ಕಿನ ಕಿಕ್ ಕೊಡಲಾರದ ದ್ರವಗಳು ಭಾರಿ ಬೇಡಿಕೆ ಪಡೆದುಕೊಂಡಿದ್ದು, ಯಾಕಿರಬಹುದು ಎಂಬ ಸಂಶಯ ಕಂಡುಬಂದ ಹಿನ್ನೆಲೆಯಲ್ಲಿ ಪರಲೋಕ ಯಾತ್ರೆ ಕೈಗೊಳ್ಳಲಾಯಿತು.

ಪರಲೋಕ ಯಾತ್ರೆಗೆ ಮೊದಲೇ 'ತೀರ್ಥ' ಯಾತ್ರೆಯನ್ನೂ ಕೈಗೊಂಡ ಕಾರಣದಿಂದಾಗಿ ಕೆಲವು ದಿನಗಳಿಂದ ಬೊಗಳೆ ರಗಳೆ ತಲೆಮರೆಸಿಕೊಳ್ಳಬೇಕಾಗಿತ್ತು.

ತನಿಖೆ ವೇಳೆ ಮತ್ತೊಂದು ವಿಷಯ ಬಯಲಾಗಿದ್ದು, ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ವಿಶೇಷವಾಗಿ ಹುಡುಗಿಯರು ಓದಿನಲ್ಲಿ, ಕಲಿಯುವಿಕೆಯಲ್ಲಿ ಹಿಂದೆ ಬಿದ್ದಿದ್ದಾದರಾದರೂ, ಇಂತಹಾ ಮದ್ಯೋದ್ಯೋಗ ಕಲಿಯುವಿಕೆಯಲ್ಲಿ ಮುನ್ನಡೆ ಸಾಧಿಸುತ್ತಾ, ಮದ್ಯಾರ್ಥಿಗಳಾಗುತ್ತಿದ್ದಾರೆ ಎಂದು ತಿಳಿದುಬಂದಿದೆ.

ಶಿಕ್ಷಕರು ಕೊಡುವ ಶಿಕ್ಷೆ ಹೆಚ್ಚಾದಂತೆ ಬಾಲ-ಕರುಗಳು ಕೂಡ ಓದಿನಲ್ಲಿ ಹೆಚ್ಚು ಹೆಚ್ಚು ಹಿಂದೆ ಬೀಳತೊಡಗಿದ್ದಾರೆ. ವಿದ್ಯಾರ್ಥಿನಿಯರು ಮದ್ಯಾರ್ಥಿನಿಯಾಗುತ್ತಿರುವುದರಿಂದ ಕಂಗೆಟ್ಟ ವಿದ್ಯಾರ್ಥಿಗಳೂ ಕಾರು- ಮತ್ತು ಬಾರು ಹೆಚ್ಚಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಒಟ್ಟಿನಲ್ಲಿ Studyಯಲ್ಲಿ concentrate ಮಾಡದವರೆಲ್ಲರೂ ಹೆಚ್ಚು ಹೆಚ್ಚು concentrated ಆಗಿರುವ ಮದ್ಯಕ್ಕೆ ಮೊರೆ ಹೋಗುತ್ತಿರುವುದು ಗಮನಕ್ಕೆ ಬಂದಿದೆ. ಈ ಕಾರಣಕ್ಕೆ ಅವರನ್ನು ಮಾತನಾಡಿಸಿದಾಗ, ಕಲಿಯುವುದಕ್ಕಿಂತ ಕಲಿಯದೆ ದೊರೆಯುವ ಕಿಕ್ಕೇ ಉತ್ತಮ ಎಂದು ತಾವು ತಿಳಿದುಕೊಂಡಿರುವುದಾಗಿ ಮದ್ಯಾರ್ಥಿನಿಯರು ಹೇಳಿದ್ದಾರೆ.

ಸೂಚನೆ

[ಕಲಿಯುವುದಕ್ಕಿಂತ ಕಲಿಯದಿರುವುದೇ ಉತ್ತಮ ಎಂದು ತಿಳಿದುಕೊಂಡ ಕಾರಣದಿಂದಾಗಿ ಮತ್ತು ಈಗ ಅಜ್ಞಾತ ವಾಸದಲ್ಲಿರುವುದರಿಂದಾಗಿ ಬೊಗಳೆ ರಗಳೆ ಬ್ಯುರೋವು ಲೋಕದ ಸಮಸ್ತ ಸಂಪರ್ಕ ಕಡ್ಡಾಯವಾಗಿ ಕಡಿದುಕೊಂಡಿದೆ. ಸದ್ಯಕ್ಕೆ ಜಿ-ಮೇಲ್, ಯಾಹೂ, ರೆಡಿಫ್, ಹಾಟ್ ಮೇಲ್ ಇತ್ಯಾದಿಗಳು ನೆಟ್ಟಿನಲ್ಲಿ ಎಷ್ಟು ಸರ್ಚ್ ಮಾಡಿದರೂ ಸಿಗುತ್ತಿಲ್ಲ. ಕೀಳಧಿಕಾರಿಗಳ ಕೈವಾಡ ಖಚಿತವಾಗಿದ್ದು, ರಾತೋರಾತ್ರಿ ಯಾರಿಗೂ ತಿಳಿಯದಂತೆ ಪತ್ರಿಕೆ ಪ್ರಕಟವಾಗುತ್ತಿದೆ. -ಸಂ]

Friday, October 20, 2006

ಬೊಗಳೆ ರಗಳೆಯಲ್ಲಿ ಪಟಾಕಿ ಇಲ್ಲ!

[ಸಮಸ್ತ ಓದುಗ ಮಿತ್ರರಿಗೆ ಮನೆ-ಮನ ಬೆಳಗುವ ದೀಪಾವಳಿ ಹಬ್ಬದ ಶುಭಾಶಯಗಳು]
ಸೂಚನೆ:
ಬೊಗಳೆ ರಗಳೆ ಬ್ಯುರೋ ದೀಪಾವಳಿಯನ್ನು ವಿಶಿಷ್ಟವಾಗಿ ಆಚರಿಸಲು ನಿರ್ಧರಿಸಿದ್ದು, ಸರಣಿ ಬಾಂಬ್ ಸ್ಫೋಟಿಸುವುದು ಇಷ್ಟವಿಲ್ಲ. ಈ ಕಾರಣಕ್ಕೆ ಇದುವರೆಗೆ ಹೆಚ್ಚೂಕಡಿಮೆ ಪ್ರತಿದಿನ ಠುಸ್ ಪುಸ್ ಅಂತ ಪಟಾಕಿ ಬಿಡುತ್ತಿದ್ದ ಬ್ಯುರೋ, ಇನ್ನು ಕೆಲವು ದಿನಗಳ ಕಾಲ ಪಟಾಕಿ ಬಿಡದಿರಲು ತೀರ್ಮಾನಿಸಿದೆ.
 
ಇದಕ್ಕೆ ಪ್ರಮುಖ ಕಾರಣವೆಂದರೆ, ಕಂಪನಿಗೇ ತರಬೇತಿ ನೀಡುವುದಕ್ಕಾಗಿ ಬೊಗಳೆ ರಗಳೆ ಸಿಬ್ಬಂದಿಯನ್ನು ದೂರದ ಯಾವುದೋ ಹೊತ್ತು ಗೊತ್ತಿಲ್ಲದ ಊರಿಗೆ ಕರೆದೊಯ್ಯಲಾಗಿದೆ. ಆದರೂ ನಾಪತ್ತೆ ಬ್ಯುರೋದಿಂದ ಸಾಧ್ಯವಾದಲ್ಲಿ ಆಗಾಗ್ಗೆ ವರದಿಗಳನ್ನು ಕಳುಹಿಸಲು ಯತ್ನಿಸಲಾಗುವುದು ಎಂದು ಭರವಸೆ ದೊರೆತಿದೆ.
 
ದೀಪಾವಳಿಯ ಶುಭವಸರದಲ್ಲಿ ಬೊಗಳೆ ರಗಳೆ ಬ್ಯುರೋಗೆ ಸಿಹಿ ತಿಂಡಿ ಕಳುಹಿಸುವವರು ಅದು ಇಲ್ಲಿಗೆ ತಲುಪುವುದು ತಡವಾಗುತ್ತದೆಯಾದುದರಿಂದ ಹಾಳಾಗದಂತೆ ಕೀಟನಾಶಕ ಮತ್ತಿತರ ಔಷಧಗಳನ್ನು ಸರಿಯಾದ ಪ್ರಮಾಣದಲ್ಲೇ ಸಿಂಪಡಿಸಿ ಕಳುಹಿಸತಕ್ಕದ್ದು- ಸಂ

Thursday, October 19, 2006

ನಮ್ಮ ಪಾ(ತ)ಕಿ ಮಿತ್ರ ಪರೀಕ್ಷೆಯಲ್ಲಿ ಪಾಸಾಗಲಿ

(ಬೊಗಳೂರು ಭಯೋತ್ಪಾದನಾ ಬ್ಯುರೋದಿಂದ)
ಬೊಗಳೂರು, ಅ.19- ಪಾತಕಿಸ್ತಾನಕ್ಕೆ ಪರೀಕ್ಷೆ ನಡೆಸುವುದಾಗಿ ನಿಧಾನಿ ಮನಮೋಹಕ ಸಂಗ್ ಮತ್ತೆ ಮತ್ತೆ ಘೋಷಿಸಿದ್ದಾರೆ.
 
ದೇಶಾದ್ಯಂತ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚುತ್ತಿವೆ. ಮುಂಬಯಿ ಬಾಂಬ್ ಸ್ಫೋಟದಲ್ಲಿ ಪಾಕಿಸ್ತಾನದ ಐಎಸ್ಐ ಕೈವಾಡವಿದೆ ಎಂದೆಲ್ಲಾ ನಮ್ಮ ಕೆಲಸವಿಲ್ಲದ ಪೊಲೀಸರು ಪತ್ತೆ ಹಚ್ಚಿದ್ದಾರೆ. ಹಾಗಾಗಿ ಪಾತಕಿಸ್ತಾನಕ್ಕೆ ಪರೀಕ್ಷೆ ನಡೆಸುವುದು ಅನಿವಾರ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
 
ನಮ್ಮ ಬೇಹುಗಾರಿಕಾ ಏಜೆನ್ಸಿಗಳು, ರಕ್ಷಣಾ ಪಡೆಗಳು ಮತ್ತಿತರ ದೇಶರಕ್ಷಣೆಯಲ್ಲಿ ಪ್ರಧಾನ ಪಾತ್ರ ವಹಿಸುತ್ತಿರುವ ಇಲಾಖೆಗಳು ಮಾಡಿರುವ ಪರೀಕ್ಷೆ ಸರಿ ಇಲ್ಲ. ಇವೆಲ್ಲದರಲ್ಲಿ ನಮ್ಮ ನೆರೆಯ ಮಿತ್ರ ರಾಷ್ಟ್ರವಾಗಿರುವ ಪಾತಕಿಸ್ತಾನ ಅನುತ್ತೀರ್ಣವಾಗಿದೆ. ಮಿತ್ರರಿಗೆ ಸಹಾಯ ಮಾಡುವುದು ನಮ್ಮ ಕರ್ತವ್ಯವಾದುದರಿಂದ ಅದಕ್ಕೆ ನಾವೇ ಪರೀಕ್ಷೆ ನಡೆಸುತ್ತೇವೆ, ಹೇಗಾದರೂ ಅವರು ಉತ್ತೀರ್ಣರಾಗಬೇಕು ಎಂದು ಅವರು ಹೇಳಿದರು.
 
ಭಯೋತ್ಪಾದಕ ಚಟುವಟಿಕೆಯಲ್ಲಿ ಎತ್ತಿದ ಕೈ ಆಗಿರುವ ಮತ್ತು ನರ್ಸರಿಯಿಂದಲೇ ಭಯೋತ್ಪಾದಕ ಶಿಕ್ಷಣದಲ್ಲಿ ಪಳಗಿರುವ ಅನುಭವಿ ರಾಷ್ಟ್ರವೊಂದರ ಸಹಾಯ ಪಡೆದು ಉಗ್ರವಾದದ ವಿರುದ್ಧ ಹೋರಾಡಲು ರೂಪಿಸಲಾಗಿರುವ ಭಾರತ-ಪಾತಕಿಸ್ತಾನ ಜಂಟಿ ಕಾರ್ಯತಂತ್ರ ವ್ಯವಸ್ಥೆಯ ಕುರಿತು ಪುತ್ರಿಕರ್ತರ ಪ್ರಶ್ನೆಗಳಿಗೆ ಅವರು ಉತ್ತರಿಸುತ್ತಿದ್ದರು.
 
ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎಂಬ ಸಿದ್ಧಾಂತ ನಮ್ಮದು ಎಂದ ಅವರು, ಈಗೆಲ್ಲಾ ಚುಚ್ಚುತ್ತಿರುವುದು ಸಣ್ಣ ಮುಳ್ಳುಗಳು. ಕಣ್ಣಿಗೇ ಕಾಣಿಸುವುದಿಲ್ಲ. ಇನ್ನೂ ದೊಡ್ಡ ಮುಳ್ಳು ಚುಚ್ಚಿದ ನಂತರ, ಅದು ಕಣ್ಣಿಗೆ ಕಂಡರೆ ಅದನ್ನು ತೆಗೆಯುವ ಪ್ರಯತ್ನ ಮಾಡಲಾಗುತ್ತದೆ ಎಂದು ಅವರು ಅಳಿದುಳಿದಿರುವ ಸ್ವದೇಶೀಯರಿಗೆ ಭರವಸೆ ನೀಡಿದರು.
 
ಮಿತ್ರರ ರಕ್ಷಣೆಯೇ ನಮ್ಮ ಕರ್ತವ್ಯ. ಮಿತ್ರರು ಏನು ಮಾಡಿದರೂ ಸಹಿಸಬೇಕು ಎನ್ನುವುದು ಮೈತ್ರಿ ಧರ್ಮ. ಅವರೆಲ್ಲಾ ವಿಭಿನ್ನ ರೀತಿಯ (ಮಾರಣ) ಹೋಮಗಳನ್ನು ನಡೆಸುತ್ತಾ ಸುಭಿಕ್ಷೆಗಾಗಿ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದ ಅವರು, ಭಯೋತ್ಪಾದನೆ ಸೃಷ್ಟಿಸುವುದು ಪಾತಕಿಸ್ತಾನಕ್ಕೆ ರಾಜಕೀಯ ಅನಿವಾರ್ಯವಾಗಿದ್ದರೆ, ಅದನ್ನು ಸಹಿಸಿಕೊಂಡು ಭಾರತವೊಂದು ಸಹಿಷ್ಣು ರಾಷ್ಟ್ರ ಎಂದು ಜಗತ್ತಿಗೇ ತೋರಿಸಿಕೊಡುವುದು ನಮ್ಮ ರಾಜಕೀಯ ಅನಿವಾರ್ಯ ಎಂದು ವಿವರಿಸಿದರು.
 
ಪಾತಕಿಸ್ತಾನದಲ್ಲಿ ಬಹುಸಂಖ್ಯಾತರ ರಕ್ಷಣೆಗೆ ಯಾವೆಲ್ಲಾ ಕ್ರಮ ಕೈಗೊಳ್ಳಲಾಗುತ್ತದೆಯೋ, ಭಾರತದಲ್ಲಿ ಅಲ್ಪಸಂಖ್ಯಾತರ ರಕ್ಷಣೆಗೂ ಅದೇ ರೀತಿಯ ಕ್ರಮ ಕೈಗೊಳ್ಳಲಾಗುತ್ತದೆ ಎಂದ ಅವರು, ಇಲ್ಲದಿದ್ದರೆ ನಾವು ಮತ್ತೊಮ್ಮೆ ಆರಿಸಿಬಂದು ದೇಶ ಸೇವೆ ಮಾಡುವುದಾದರೂ ಹೇಗೆ ಎಂದವರು ಪ್ರಶ್ನಿಸಿದರು.

Wednesday, October 18, 2006

ನರ್ಸರಿ... ಸಂದರ್ಶನವೇ ಸರಿ: ಪುಟಾಣಿ ಪರಿಷತ್ ಆಗ್ರಹ

(ಬೊಗಳೂರು ನರ್ಸರಿ-ನರ್ತಪ್ಪು ಬ್ಯುರೋದಿಂದ)
ಬೊಗಳೂರು, ಅ.18- ನರ್ಸರಿ ಶಿಕ್ಷಣಕ್ಕೆ ಸೇರಿಸಿಕೊಳ್ಳಲು ಸಂದರ್ಶನ ನಡೆಸಲಾಗದು ಎಂಬ ಕೋರ್ಟ್ ಆದೇಶದಿಂದ ತೀವ್ರವಾಗಿ ಆಕ್ರೋಶಗೊಂಡಿರುವ ಪುಟಾಣಿಗಳನ್ನೊಳಗೊಂಡ ನರ್ಸರಿ ವಿದ್ಯಾರ್ಥಿ ಪರಿಷತ್ ಸಂಘಟನೆಯು ಭಾರತ್ ಬಂದ್‌ಗೆ ಕರೆ ನೀಡಿದೆ.
 
ಇಂದಿನ ಈ ಹೈ ಕೆಟ್ ಯುಗದಲ್ಲಿ ಪ್ರತಿಯೊಂದಕ್ಕೂ ಇಂಟರ್ವ್ಯೂ ನೀಡಬೇಕಾಗುತ್ತದೆ. ಹಾಗಿರುವಾಗ ನಮಗೆ ಇಂಟರ್ವ್ಯೂ ನಡೆಸದೆ ಅಪಮಾನ ಮಾಡಲಾಗುತ್ತಿದೆ ಎಂದು ಹೇಳಿರುವ ಪುಟಾಣಿ ಪರಿಷತ್ ಅಧ್ಯಕ್ಷ ಪುಟ್ಟು ಕುಮಾರ್, ನಮ್ಮ ಅಪ್ಪ ಅಮ್ಮಂದಿರಿಗೂ ಇಂಟರ್ವ್ಯೂ ನಡೆಸಬಾರದೆಂಬ ಆದೇಶ ಶುದ್ಧ ತಪ್ಪು ಎಂದು ಸಾರಿದ್ದಾರೆ.
 
ಇದೇ ರೀತಿಯಲ್ಲಿ ದೇಶ ವಿದೇಶದಲ್ಲಿ ಭಾರಿ ಪ್ರಮಾಣದಲ್ಲಿ ಪ್ರತಿಭಟನೆ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಪುಟ್ಟು ಕುಮಾರ್ ತಿಳಿಸಿದ್ದಾರೆ. ಈ ಬಗ್ಗೆ ಬೊಗಳೆ ರಗಳೆ ಬ್ಯುರೋ ನೇರವಾಗಿ ಪುಟ್ಟು ಮತ್ತು ಪುಟ್ಟಿಯರ ಕಿವಿ ಹಿಡಿದು ಸಂದರ್ಶನ ನಡೆಸಿತು.
 
ತಮ್ಮ ಚಿತ್ರ ಸಹಿತ ತೊದಲು ನುಡಿಗಳು ಬೊಗಳೆ ರಗಳೆ ಪತ್ರಿಕೆಯಲ್ಲಿ ಪ್ರಕಟವಾಗುತ್ತದೆ ಎಂದು ತೀವ್ರವಾಗಿ ಉತ್ಸಾಹದಿಂದ ಕುದಿದು ಹೋದ ಈ ಪುಟ್ಟು-ಪುಟ್ಟಿಗೆ ಒಂದು ಪ್ರಶ್ನೆ ಹಾಕಲಾಯಿತು.
 
ನ್ಯಾಯಾಲಯವೇ ಇಂಟರ್ವ್ಯೂ ಮಾಡಬಾರದು ಎಂದು ಹೇಳಿದಾಗ ನೀವೇಕೆ ಬೇಕು ಅನ್ನುತ್ತಿದ್ದೀರಿ? ಎಂದು ಕೇಳಿದಾಗ ಉತ್ತರ ಬಂತು: "ನೋಡಿ, ಮೊದಲನೆಯದಾಗಿ ನೀವೇ ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಿ ನಮ್ಮ ಸಂದರ್ಶನ ಮಾಡುತ್ತಿದ್ದೀರಿ" ಎಂದು ರಪ್ಪನೆ ಪೀಪಿ ಊದಿತು ಪುಟ್ಟಿ.
 
ಆದರೂ ಸುಧಾರಿಸಿಕೊಂಡ ಬ್ಯುರೋ ಸಿಬ್ಬಂದಿ, ಪುಟಾಣಿ ಪುಟ್ಟುವಿನತ್ತ ಮುಖ ಮಾಡಿದಾಗ, ಅದರ ಬಾಯಿಯಿಂದ ಉದುರಿದ ಅಣಿಮುತ್ತುಗಳು: "ನೋಡಣ್ಣಾ... ನಮ್ಮದು ಇದು ಕಲಿಯುವ ವಯಸ್ಸಾ? ಏನಿದ್ದರೂ ಆಟವಾಡುತ್ತಾ ಇರಬೇಕಾದವರು ನಾವು. ನಮ್ಮನ್ನು ಸಂದರ್ಶನ ಮಾಡಿದ್ರೆ ನಾವು ತಪ್ಪು ತಪ್ಪಾಗಿ ಉತ್ತರಿಸಿ ಬಚಾವ್ ಆಗುತ್ತೇವೆ. ಹಾಗೆಯೇ ಅಪ್ಪ ಅಮ್ಮಂದಿರನ್ನೂ ಸಂದರ್ಶನ ಮಾಡುತ್ತಾರೆ. ಅವರಿಗೂ ಸರಿಯಾಗಿ ಠುಸ್ ಪುಸ್ ಇಂಗ್ಲಿಷ್ ಬರೋದಿಲ್ಲ. ಅವರೂ ಎಡವುತ್ತಾರೆ. ಮತ್ತೆ ಶಾಲೆಗಳ ಆಡಳಿತ ಮಂಡಳಿಗಳಿಗೆ ಮಕ್ಕಳ ಅಪ್ಪಂದಿರ ಜೇಬಿನ ಮೇಲೆಯೇ ಕಣ್ಣು ಇರೋದ್ರಿಂದ ನಮ್ಮಪ್ಪನ ಜೇಬು ಕೂಡ ಅಷ್ಟೇನೂ ದಪ್ಪವಿಲ್ಲ. ಹಾಗಾಗಿ ಸಂದರ್ಶನದ ವೇಳೆ ಅವರು ಫೇಲ್ ಆಗೋದು ಗ್ಯಾರಂಟಿ. ಹೀಗಾದರೆ ನಮಗೆ ಶಾಲೆಗೆ ಹೋಗುವ ಕೆಲಸವೇ ಉಳಿಯುತ್ತಲ್ಲಾ...?"
 
ಈ ಕಾರಣ ಕೇಳಿದ್ದೇ ತಡ, ನಮ್ಮ ಸಿಬ್ಬಂದಿ ಯಾರದ್ದು ಅಂತಾನೂ ನೋಡದೆ ಅಲ್ಲಿದ್ದ ಗಂಟುಮೂಟೆ ಕಟ್ಟಿಕೊಂಡು, ನ್ಯಾಯಾಂಗ ನಿಂದನೆ ಮೊಕದ್ದಮೆ ಹೂಡಿದರೆ ಎಂಬ ಭಯದಿಂದ ಅಲ್ಲಿಂದ ಕಾಲ್ಕಿತ್ತರು ಎಂದು ನಮ್ಮ ಪ್ರತಿಸ್ಪರ್ಧಿ ಪತ್ರಿಕಾ ವರದಿಗಾರರು ವರದಿ ಮಾಡಿದ್ದಾರೆ.

ಎಂಜಿನ್ ಇಲ್ಲದ ರೈಲು: ಬ್ರೇಕಿಂಗ್ ನ್ಯೂಸ್ ಅಲ್ಲವೆಂದ ಬೊ.ರ.

[ಬೊಗಳೂರು ಪಟ್ಟೆ-ರಹಿತ ರೈಲು ಬ್ಯುರೋ] ಬೊಗಳೂರು: ಆಫ್‌ಲೈನ್ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯೊಂದು ಆನ್‌ಲೈನ್ ಸಂಪಾದಕರ ಕಣ್ಣು ಕುಕ್ಕಿದ್ದು, ಎಂಜಿನ್ ಇಲ್ಲದೆ...