Saturday, April 29, 2006

ಚಳ್ಳೆ ಹಣ್ಣು ರುಚಿಯಾಗಿತ್ತು, ತಿಂದೆವು:


ಕೈದಿ ಪರಾರಿಗೆ ಕನಿಷ್ಠಬಿಲ್ಲೆ ಪ್ರತಿಕ್ರಿಯೆ

(ಬೊಗಳೂರು ರಗಳೆ ಬ್ಯುರೋದಿಂದ)

ಬೊಗಳೂರು, ಏ.29- ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಕೈದಿ ಪರಾರಿ ಎಂಬ ವರದಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಪೊಲೀಸರು, ತಮಗೆ ಚಳ್ಳೆಹಣ್ಣು ತಿನ್ನಿಸಲಾಗಿಲ್ಲ, ತಾವಾಗಿಯೇ ತಿಂದೆವು ಎಂದು ಬೀಗಿಕೊಂಡಿದ್ದಾರೆ.

ವರದಿ ಬಗ್ಗೆ ಪ್ರತಿಕ್ರಿಯೆ ಕೇಳಿದ ನಮ್ಮ ಅಸತ್ಯಾನ್ವೇಷಿಗೆ ಅವರು ಉತ್ತರಿಸಿದ್ದು ಹೀಗೆ: "ವಾರೆವ್ಹಾ.... ಚಳ್ಳೆ ಹಣ್ಣು ಇಷ್ಟೊಂದು ರುಚಿಕರವಾಗಿರುತ್ತದೆಯೇ? ಮೊದಲೇ ಗೊತ್ತಿದ್ದರೆ ಇನ್ನಷ್ಟು ಚಳ್ಳೆಹಣ್ಣು ತಿನ್ನುತ್ತಿದ್ದೆವು, ಛೆ.... ತಡವಾಗಿಬಿಡ್ತು!" ಎಂದು ಈಗಾಗಲೇ ಸಾಕಷ್ಟು ಕೋಟ್ಯಂತರ ರೂ. ಸಂಪಾದಿಸಿ ಸುದ್ದಿ ಮಾಡಿದ್ದ ರಾಜ್ಯದ ಪೊಲೀಸ್ ಇಲಾಖೆಗೆ ಸೇರಿದ ಈ ಕನಿಷ್ಠಬಿಲ್ಲೆಗಳು ಚಳ್ಳೆಹಣ್ಣಿನ ವಾಸನೆ ಸೂಸುತ್ತಿದ್ದ ಕೈಗಳನ್ನು ಅವರು ಹಿಸುಕಿಕೊಂಡಿದ್ದಾರೆ.

ಈ ಮಧ್ಯೆ, ಅನ್ವೇಷಿಯ ಕಾರ್ಯಾಚರಣೆ ವೇಳೆ ಇನ್ನಷ್ಟು ಕುತೂಹಲಕರ ವಿಷಯಗಳು ಬೆಳಕಿಗೆ ಬಂದಿವೆ. ಕೈದಿಯ ಜತೆ ಪೊಲೀಸರು ಲೋಕಾಭಿರಾಮ ಮಾತನಾಡುತ್ತಾ ರಿಕ್ಷಾದಲ್ಲಿ ತೆರಳುತ್ತಿದ್ದರು. ಬಸ್ ನಿಲ್ದಾಣ ಬಳಿ ರಿಕ್ಷಾ ಅಡ್ಡಗಟ್ಟಿದ ಕೈದಿಯ ಸಹಚರರು (ಅವರೂ ಈ ಹಿಂದೆ ಪೊಲೀಸರಿಗೆ ಸಾಕಷ್ಟು ಚಳ್ಳೆಹಣ್ಣುಗಳನ್ನು ತಂದು ಕೊಟ್ಟವರು ಎಂಬುದು ತನಿಖೆ ವೇಳೆ ಪತ್ತೆಯಾಗಿದೆ), ಈ "ಕನಿಷ್ಠಬಿಲ್ಲೆ"ಗಳಿಗೆ ಪೆನ್ಸಿಲೊಂದನ್ನು ರಿವಾಲ್ವರ್ ತರಹ ತೋರಿಸಿದ್ದಾರೆ. ಆಗ ಪೊಲೀಸರು "ಅರೆ.... ಇಷ್ಟು ಚಿಕ್ಕ ಸಾಧನವನ್ನು ತಮಗೆ ತೋರಿಸಿ ಬೆದರಿಸಿದಂತೆ ತೋರುತ್ತಿದೆಯಲ್ಲ... ನಮ್ಮ ಬಳಿಯೂ ಉದ್ದನೆಯ ಹೆಣಭಾರದ ಓಬೀರಾಯನ ಬಂದೂಕು ಇದೆ. ಇದ್ಯಾವ ಕರ್ಮಕ್ಕೆ.... ಕೆಲಸಕ್ಕೆ ಬಾರದ್ದು..." ಅಂತ ಹಾಡಿ ಹೊಗಳುತ್ತಾ ತಮ್ಮಲ್ಲಿದ್ದ ವೀರಪ್ಪನ್ ಬಂದೂಕನ್ನು ಬಿಸಾಕಿದ್ದಾರೆ.

ಅಷ್ಟರಲ್ಲಿ ಕೈದಿ ತನ್ನನ್ನು ಕರೆದೊಯ್ಯಲು ಬಂದ ಸ್ನೇಹಿತರ ಜತೆ ಹೋಗಿದ್ದಾನೆ. ಹೋಗುವ ವೇಳೆಗೆ "ಆಟೋ ಚಾರ್ಜ್ ನಾವೇ ಕೊಡುತ್ತೇವೆ, ನೀವೇನೂ ಕೊಡಬೇಕಾಗಿಲ್ಲ" ಎಂದು ಪೊಲೀಸರಿಗೆ ಸ್ಪಷ್ಟನೆ ನೀಡಿದ್ದಾರೆ."ಅಯ್ಯೋ ಪಾಪ.... ಆತ ನಮ್ಮ ಆಟೋ ಚಾರ್ಜನ್ನೂ ಕೊಡುತ್ತಿದ್ದಾನೆ" ಎಂದುಕೊಂಡ ಪೊಲೀಸರು, ಕೈದಿ ಮತ್ತು ಸ್ನೇಹಿತರು ಹೋದದ್ದು ಯಾರೋ ಪಾಪದವನ ಆಟೋದಲ್ಲಿ, ಅದರ ನಂಬರ್ ಕಟ್ಟಿಕೊಂಡು ನಮಗೇನಾಗಬೇಕು, ಈ ಕೈದಿಗಳೆಲ್ಲಾ ನಮ್ಮನ್ನೇ ನಂಬಿಕೊಂಡಿದ್ದಾರಲ್ಲ, ಅವರ ನಂಬಿಕೆಗೆ ನಾವು ದ್ರೋಹ ಬಗೆಯುವುದಾದರೂ ಎಂತು ಎಂದು ತಮ್ಮಲ್ಲೇ ಪ್ರಶ್ನಿಸಿಕೊಂಡಿದ್ದಾರೆ.

ಇತ್ತ ಪೊಲೀಸರು, ಈ ಕೈದಿ ಮತ್ತವರ ಸ್ನೇಹಿತರು ತಮ್ಮ ಬಳಿಗೆ ಮರಳಿ ಬರಬಹುದು., ಈಗ ಬರಬಹುದು, ಮತ್ತೆ ಬರಬಹುದು ಎಂದು ಕೋರ್ಟಿನ ಮೆಟ್ಟಿಲಲ್ಲಿ ನಿರೀಕ್ಷೆಯಲ್ಲಿದ್ದರು. ಕೈದಿ ಬಾರದಿದ್ದಾಗ ಮನೆಗೆ ಹೋಗಿ ಗಡದ್ದಾಗಿ ನಿದ್ರಾದೇವಿಯನ್ನು ಅಪ್ಪಿಕೊಂಡಿದ್ದಾರೆ.ಇದೀಗ ಕೈದಿಯ ವಿಷಯ ಕೈಬಿಟ್ಟಿರುವ ಉನ್ನತ ಪೊಲೀಸರು, ಪರಾರಿಯಾಗಿರುವ ಈ ಕನಿಷ್ಠಬಿಲ್ಲೆಗಳಿಗಾಗಿ ವ್ಯಾಪಕ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.

______________________________

Re: Forwarded message attached:

ರಜಾ ಅರ್ಜಿ

ಇಂದ

ಅಸತ್ಯಾನ್ವೇಷಿ

ಬೊಗಳೂರು ಬ್ಯುರೋ ಮುಖ್ಯಸ್ಥ

ರಿಗೆ

ಬೊಗಳೆ ರಗಳೆ ಓದುಗ ಬ್ಯುರೋ

ಇಂಟರ್ನೆಟ್ ವಿಭಾಗ


ವಿಷಯ: ಎರಡು ದಿನದ ರಜೆಯ ಕುರಿತು

ಮಾನ್ಯರೆ,

ನನಗೆ ಭಾನುವಾರ ಮತ್ತು ಸೋಮವಾರ ಅನಾರೋಗ್ಯ ಕಾಡುವ ಸಾಧ್ಯತೆಗಳು ದಟ್ಟವಾಗಿರುವುದರಿಂದ ಎರಡು ದಿನಗಳ ರಜೆಯನ್ನು ದಯಪಾಲಿಸಬೇಕಾಗಿ ಕೋರುತ್ತೇನೆ.

ಇಂತಿ ತಮ್ಮ ವಿಶ್ವಾಸಿ

sd/ಅಸತ್ಯಾನ್ವೇಷಿ

Friday, April 28, 2006

'ಪೇಪರಿನೋರು ಅಭಿವೃದ್ಧಿ ಕಾರ್ಯ ಮಾಡ್ದಿದ್ರೆ

ವೋಟರ್ಸ್‌ಗೆ ನಾ ಹ್ಯಾಂಗ್ ಮುಖಾ ತೋರಿಸ್ಲಿ?'

ಪತ್ರಿಕೆಗೆ ಪಾಠ ಮಾಡಲು ಮಂತ್ರಿಗಿರಿಗೆ ರಾಜೀನಾಮೆ ಆಫರ್ !
(ಬೊಗಳೂರು ಬ್ಯುರೋ ವರದಿ)
ಬೊಗಳೂರು, ಏ.28- ಸಮಸ್ತ ಕನ್ನಡಿಗರ ಹೆಮ್ಮೆ ಎಂದು ವಿಶ್ವಾದ್ಯಂತ ಮನೆಮಾತಾಗಿರುವ ಪತ್ರಿಕೆಯನ್ನೇ ತನ್ನದೆಂದು ಹೇಳಿಕೊಂಡು ಅದಕ್ಕೆ ಪಾಠ ಹೇಳಿಕೊಡುವುದಕ್ಕಾಗಿ ಕರ್ನಾಟಕದ ಸಚಿವರೊಬ್ಬರು ಮಂತ್ರಿಗಿರಿಗೆ ರಾಜೀನಾಮೆ ನೀಡುವ ಯೋಚನೆಯಲ್ಲಿದ್ದಾರೆ.

ಕೊಪ್ಪಳ ಉಸ್ತುವಾರಿ ಸಚಿವರ ಕ್ಷೇತ್ರಕ್ಕೆ "ಮುಖ್ಯಮಂತ್ರಿ ಬಂದರೆ ಮುಕ್ಕಾಲು ಕೋಟಿ ರೂ. ಖರ್ಚು" ಎಂಬ ಶೀರ್ಷಿಕೆಯಡಿ ವಿಜಯಕರ್ನಾಟಕದಲ್ಲಿ ಪ್ರಕಟವಾದ ವರದಿಗೆ ಯದ್ವಾತದ್ವಾ ಉತ್ತರಿಸಿರುವ, ಜರ್ಮನಿಯ ಸಂದುಹೋದ ಸರ್ವಾಧಿಕಾರಿ ಹಿಟ್ಲರ್‌ನ ಸ್ಥಾನ ತುಂಬಲು ಅರ್ಜಿ ಗುಜರಾಯಿಸಿರುವ ಸಚಿವರು, ಈ ರೀತಿಯ ಸುಳ್ಳು ಸುದ್ದಿ ಪ್ರಕಟಿಸಿ ಪತ್ರಿಕೆ ತಮ್ಮ ಘನತೆಗೆ, ಶ್ರೀಮಂತಿಕೆಗೆ ಚ್ಯುತಿ ತಂದಿದೆ ಎಂದು ಘಂಟಾಘೋಷವಾಗಿ ಸಾರಿದ್ದಾರೆ.

ಮುಖ್ಯಮಂತ್ರಿ ಬಂದರೆ ಕೇವಲ ಮುಕ್ಕಾಲು ಕೋಟಿ ರೂ. ಖರ್ಚಾಗಿದೆ ಅಂತ ಪತ್ರಿಕೆಯವರು ಸುಳ್ಳು ಬರೆದಿದ್ದಾರೆ. ತಮ್ಮ ಇದ್ದಬದ್ದ ಮಾನ ಕಾಪಾಡಲಾದರೂ ಹತ್ತಿಪ್ಪತ್ತು ಕೋಟಿ ಖರ್ಚಾಗಿದೆ ಅಂತ ನಿಜ ವಿಷಯ ಬರೆಯಬಹುದಿತ್ತಲ್ಲ, ಕೇವಲ ಮುಕ್ಕಾಲು ಕೋಟಿ ಖರ್ಚು ಮಾಡಿದ್ದೆಂದು ಮುಖ್ಯಮಂತ್ರಿಗೆ ತಿಳಿದರೆ ತನ್ನ ಮಾನ ಏನಾಗಬೇಡ ಎಂದು ಅವರು ಪ್ರಶ್ನಿಸಿದ್ದಾರೆ.

ವರದಿಗಾರನಿಗೆ ಅ ಆ ಇ ಈಯನ್ನು ಸ್ಲೇಟಿನಲ್ಲಿ ಬರೆದು ಹೇಳಿಕೊಡುವುದಾಗಿ ಪ್ರತಿಜ್ಞೆ ಮಾಡಿರುವ ಸುಸ್ತುವಾರಿ ಮಂತ್ರಿ, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಈ ಪತ್ರಿಕೆಯನ್ನು ನಂ.1 ಮಾಡಲು ಎಷ್ಟು ಕಷ್ಟ ಪಟ್ಟಿದ್ದೇನೆ, ಈ ಪತ್ರಿಕೆ ನಡೆಸಲು ಕೋಟ್ಯಂತರ ರೂ. ಖರ್ಚಾಗುತ್ತದೆ. ಹಾಗಿರುವಾಗ ಇಂಥ ಪತ್ರಿಕೆಯನ್ನು ನಡೆಸುತ್ತಿರುವ "ನನಗೆ" ಈ ಕನಿಷ್ಠ ಖರ್ಚಿನ ವರದಿ ಅಪಮಾನವಲ್ಲವೆ ಎಂದವರು ಕೇಳಿದ್ದಾರೆ.

ಅಭಿವೃದ್ಧಿ: ತನ್ನ ಕ್ಷೇತ್ರದಲ್ಲಿ ಅಭಿವೃದ್ಧಿಯೇ ಆಗಿಲ್ಲ ಅಂತಲೂ ಪತ್ರಿಕೆ ಸುಖಾಸುಮ್ಮನೆ ಸುಳ್ಳಾಸುಳ್ಳು ಬರೆದಿದೆ. ಅಸತ್ಯಾನ್ವೇಷಿಗಳೆ, ನೀವೇ ಬಂದು ನೋಡಿ, ನಮ್ಮ ಕ್ಷೇತ್ರ ಶಂಕುಸ್ಥಾಪನೆಯಲ್ಲಿ ವಿಶ್ವದಾಖಲೆ ಮಾಡಲು ಹೊರಟಿದೆ. ಈ ಕ್ಷೇತ್ರದಲ್ಲಿ ಎಷ್ಟೊಂದು ಶಂಕುಗಳಿವೆಯೆಂದರೆ ವಸತಿರಹಿತರು ಕೂಡ ಈ ಶಂಕುಗಳನ್ನೇ ಆಧುನಿಕ ಶೌಚಾಲಯವಾಗಿಸಿಕೊಂಡು ದೇಹಬಾಧೆ ತೀರಿಸಿಕೊಳ್ಳುತ್ತಾರೆ. ಇಲ್ಲಿರುವ ಸಾವಿರಾರು ಅಡಿಗಲ್ಲುಗಳೇ ತಮ್ಮ ಸಾಧನೆ, ಅಭಿವೃದ್ಧಿ ಕಾರ್ಯಕ್ಕೆ ಸಾಕ್ಷಿ ಎಂದು ಸಚಿವರು ಒದರಿದ್ದಾರೆ.

ಇಲ್ಲಿ ಹುಟ್ಟಿದಾರಭ್ಯ ಪಾಳುಬಿದ್ದಿರುವ ಇಷ್ಟೊಂದು ಅಡಿಗಲ್ಲುಗಳಿವೆಯಲ್ಲ ಎಂದು ತೋರಿಸಿದ ಸಚಿವರು, ಅಭಿವೃದ್ಧಿ ಮಾಡುವ ಕಾರ್ಯವೇನಿದ್ದರೂ ಪತ್ರಿಕೆಗಳಿಗೆ ಬಿಟ್ಟ ವಿಷಯ. ತನ್ನ ಕೆಲಸ ಅಡಿಗಲ್ಲು ಹಾಕಿ ಭಾಷಣ ಮಾಡುವುದು ಮಾತ್ರ. ಇದಕ್ಕೇ ಸಾಕಷ್ಟು ಸಮಯ ತಗುಲುತ್ತದೆ. ಹೀಗಿರುವಾಗ ಪತ್ರಿಕೆಯವರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳದಿದ್ದರೆ ಮುಂದಿನ ಬಾರಿ ಮತಭಿಕ್ಷೆಗಾಗಿ ಮತದಾರರಿಗೆ ಮುಖತೋರಿಸುವುದಾದರೂ ಹೇಗೆ ಎಂದವರು ಪ್ರಶ್ನಿಸಿದ್ದಾರೆ.

Thursday, April 27, 2006

ಬಾಟ್ಲಿಯೊಳಗೆ ಕಾಂಡೋಮ್: ಪೆಪ್ಸಿ ಸಮರ್ಥನೆ

ಬ್ರೇಕಿಂಗ್ ನ್ಯೂಸ್
ಬೊಗಳೂರು, ಏ.27- ಅತ್ಯಂತ ಭಯಂಕರ ವಿದ್ಯಮಾನವೊಂದರಲ್ಲಿ, ಪೆಪ್ಸಿ ಬಾಟಲಿಯಲ್ಲಿ ಕಾಂಡೋಮ್ ದೊರೆತಿದ್ದಕ್ಕೆ ನ್ಯಾಯಾಲಯ ಲಕ್ಷಾಂತರ ರೂ. ದಂಡ ವಿಧಿಸಿದ ಸುದ್ದಿಯನ್ನು ವಿಶ್ವಪುಟ ಸ್ಫೋಟಿಸಿದ ತಕ್ಷಣ ಅಸತ್ಯಾನ್ವೇಷಿಗೆ ಸ್ಪಷ್ಟನೆ ನೀಡಿದ ಪೇಯ ಕಂಪನಿಯ ಮಹಾ-ಮಹಾನ್ ವ್ಯವಸ್ಥಾಪಕ'ರಬ್ಬರು', ಬಾಟಲಿಯೊಳಗೆ ಕಾಂಡೋಮ್ ಹಾಕುವುದು ಮತ್ತು ಕಾಂಡೋಮ್‌ನೊಳಗೆ ಪೇಯ ತುಂಬುವ ತಮ್ಮ ಉದ್ದೇಶವನ್ನು ಸಮರ್ಥಿಸಿಕೊಂಡಿದ್ದಾರೆ.

ವಿಶೇಷತಃ ಮಕ್ಕಳು ಮತ್ತು ಯುವಜನಾಂಗದವರು ಏಡ್ಸ್ ಮುಂತಾದ ಸೆಕ್ಸೀ ರೋಗಗಳಿಗೆ ಈಡಾಗುತ್ತಿರುವುದರ ವಿರುದ್ಧ ನಮ್ಮ ಕಂಪನಿಯು ಹೋರಾಟಕ್ಕೆ ಕೈಜೋಡಿಸಿದೆ. ಕಾಂಡೋಮ್ ಕೊಳ್ಳುವವರಿಗೆ ಪೇಯ ಉಚಿತ ಮತ್ತು ಪೇಯ ಕೊಳ್ಳುವವರಿಗೆ ಕಾಂಡೋಮ್ ಉಚಿತ ಎಂಬ ವಿನೂತನ ಧ್ಯೇಯ ನಮ್ಮದಾಗಿತ್ತು. ಇದರ ಪರಿಣಾಮ ನಾವು ಪೆಪ್ಸಿ ಪಾಟಲಿಯಲ್ಲಿ ಕಾಂಡೋಮ್ ಮತ್ತು ಕಾಂಡೋಮ್‌ನೊಳಗೆ ಪೆಪ್ಸಿ ತುಂಬಿಸಿ ವಿತರಿಸುತ್ತೇವೆ. ಇದು ಗ್ರಾಹಕಸ್ನೇಹಿ ನಿರ್ಧಾರ. ಗ್ರಾಹಕರು ಎರಡನ್ನೂ ಪ್ರತ್ಯೇಕವಾಗಿ ಒಯ್ಯುವ ಅಥವಾ ಪ್ರತ್ಯೇಕವಾಗಿ ಖರೀದಿಸುವ ಸಂಕಷ್ಟ ಎದುರಿಸಬೇಕಿಲ್ಲ. ಕಾಂಡೋಮ್ ಬಳಸದವರು ಅದನ್ನು ತಮ್ಮ ಮಕ್ಕಳಿಗೆ ಬಲೂನಿನ ರೀತಿ ಆಟವಾಡಲು ಕೊಡುಗೆ ನೀಡಬಹುದು ಎಂದು ಸ್ಪಷ್ಟಪಡಿಸಲಾಗಿದೆ.

ಬಹೂಪಯೋಗಿ ಪೇಯ: ವಾಸ್ತವವಾಗಿ ಜನಸಂಖ್ಯಾ ಸ್ಫೋಟ ತಡೆಯುವುದಕ್ಕಾಗಿಯೇ ನಮ್ಮ ಕಂಪನಿಯು ಭಾರತದಲ್ಲಿ ಪೆಪ್ಸಿ ವಿತರಿಸುತ್ತಿದೆ. ಈಗಾಗಲೇ ನಮ್ಮ ಪೆಪ್ಸಿಯಲ್ಲಿ ಕೀಟನಾಶಕವಿದೆ ಎಂಬ ವರದಿಗಳು ಬಂದಿವೆ. ಅವುಗಳನ್ನು ಆಂಧ್ರ ಪ್ರದೇಶದ ರೈತರು ತಮ್ಮ ಬೆಳೆಗಳಿಗೂ ಸಿಂಪಡಿಸಿ ಕೀಟಗಳಿಂದ ಬೆಳೆ ರಕ್ಷಿಸಿಕೊಂಡಿದ್ದಾರೆ. ಅಂತೆಯೇ ಪೆಪ್ಸಿಯಲ್ಲಿ ಸಂತಾನೋತ್ಪತ್ತಿ ಕ್ರಿಯೆ ತಡೆಯುವ ರಾಸಾಯನಿಕವೂ ಸೇರಿದೆ. ಮತ್ತು ಈ ಕೀಟನಾಶಕ ಕುಡಿದರೆ ಸಂತಾನ ನಿಯಂತ್ರಣವಾಗುತ್ತದೆ, ಹೊಟ್ಟೆಯೊಳಗಿರುವ ಕ್ರಿಮಿ ಕೀಟಗಳು ನಾಶವಾಗುತ್ತವೆ. ಇಷ್ಟೆಲ್ಲಾ ಬಹೂಪಯೋಗಿ ಪೇಯದ ವಿರುದ್ಧ ಯಾರೋ ಸಂಚು ಮಾಡುತ್ತಿದ್ದಾರೆ ಎಂದು ಕಂಪನಿ ದೂರಿದೆ.

ಪೆಪ್ಸಿ ಇದ್ದರೆ ಕಾಂಡೋಮ್ ಯಾಕೆ?: ಈ ಮಧ್ಯೆ, ಇದೇನು ದೊಡ್ಡ ವಿಷಯವೇ ಅಲ್ಲ ಎಂದು ತಳ್ಳಿಹಾಕಿರುವ ಬಹುರಾಷ್ಟ್ರೀಯ ಕಂಪನಿಗಳ ವಿರುದ್ಧದ ಹೋರಾಟಗಾರರೊಬ್ಬರು, ಜನಸಂಖ್ಯಾ ತಡೆಗೆ ಮತ್ತು ಮಾರಕ ರೋಗ ತಡೆಗೆ ಕಾಂಡೋಮನ್ನೇ ಏಕೆ ವಿತರಿಸಬೇಕು, ಪೆಪ್ಸಿ ಮಾತ್ರ ಕುಡಿಸಿದರೆ ಸಾಲದೇ? ಎಂದು "ಮಾರ್ಮಿಕ"ವಾಗಿ ಪ್ರಶ್ನಿಸಿದ್ದಾರೆ.

Wednesday, April 26, 2006


ಇಲ್ಲಿ ಹೊಸ ಗಂಡ ಮಾರಾಟಕ್ಕೆ ಲಭ್ಯ !

(ಬೊಗಳೂರು ನೆಟ್ಗಳ್ಳರ ಬ್ಯುರೋ)
ಬೊಗಳೂರು, ಏ.26- ಅಸತ್ಯಾನ್ವೇಷಿಯು ನೆಟ್‌ನಲ್ಲಿ ವಿನೋದ ವಿಹಾರದಲ್ಲಿದ್ದಾಗ ನ್ಯೂಯಾರ್ಕ್ ನಿಂದ ಈ ಸುದ್ದಿ ಸಿಕ್ಕಿದೆ.

ನಿಮಗೆ ಹೊಚ್ಚ ಹೊಸ ಗಂಡ ಬೇಕೇ? ನ್ಯೂಯಾರ್ಕ್ ಪಟ್ಟಣಕ್ಕೆ ಭೇಟಿ ನೀಡಿ. ಅಲ್ಲಿನ ದೊಡ್ಡ ಮಳಿಗೆಯೊಂದಿದೆ. ಇದರಲ್ಲಿ ಪತಿಯ ಹುಡುಕಾಟದಲ್ಲಿರುವ ಮಹಿಳೆ ಹೊಚ್ಚ ಹೊಸ ಗಂಡನನ್ನು ಪಡೆದುಕೊಳ್ಳಬಹುದು.

ಈ ಮಳಿಗೆ ಯಾವ ರೀತಿ ಕಾರ್ಯನಿರ್ವಹಿಸುತ್ತಿದೆ ಎಂಬ ಬಗ್ಗೆ ಬಾಗಿಲಲ್ಲೇ ಬೋರ್ಡ್‌ನಲ್ಲಿ ಸಮಗ್ರ ಮಾಹಿತಿ ತೂಗು ಹಾಕಿದ್ದಾರೆ. ಅದರಲ್ಲಿ ಸೂಚನೆಗಳಿವೆ.

ಒಂದು ನಿಯಮ. ನೀವಿಲ್ಲಿಗೆ ಒಂದು ಬಾರಿ ಮಾತ್ರ ಭೇಟಿ ನೀಡಬಹುದು. ಬಹುಶಃ ಪತಿವ್ರತೆಯಾಗಿರಲಿ ಎಂಬ ಉದ್ದೇಶದಿಂದ. ಆರು ಮಹಡಿಗಳಿವೆ. ಖರೀದಿದಾರ್ತಿಯು ಮಹಡಿ ಏರಿದಂತೆಲ್ಲಾ ಉತ್ಪನ್ನಗಳ ಬೆಲೆಯೂ ಮೇಲೇರುತ್ತಾ ಹೋಗುತ್ತದೆ. ಯಾವುದೇ ಮಹಡಿಯಲ್ಲಿರೋ ಮಳಿಗೆಯಿಂದ ಆಕೆ ಗಂಡನನ್ನು ಆಯ್ದುಕೊಳ್ಳಬಹುದು ಇಲ್ಲವೇ ಇನ್ನಷ್ಟು ಉತ್ತಮ ಕ್ವಾಲಿಟಿ ಬೇಕಿದ್ದರೆ ಮುಂದಿನ ಮಹಡಿಗೆ ಮುಂದುವರಿಯಬಹುದು. ಆದರೊಂದು ಕಂಡಿಷನ್ನು. ಆಕೆ ಮಳಿಗೆಯಿಂದ ಹೊರಗೆ ಹೋಗುವುದಕ್ಕೆ ಬಿಟ್ಟು, ಬೇರಾವುದೇ ಕಾರಣಕ್ಕೆ ವಾಪಸ್ ಕೆಳಗೆ ಬರುವಂತಿಲ್ಲ.

ಇಂತಿರಲಾಗಿ...

ಭಾರತದಿಂದ ಅಮೆರಿಕಕ್ಕೆ ತೆರಳಿದ ಮಹಿಳೆಯೊಬ್ಬಳು ಈ ಮಳಿಗೆಗೆ ಗಂಡನ್ನು ಖರೀದಿಸಲೆಂದು ಭೇಟಿ ಕೊಟ್ಟಳು. ಮೊದಲ ಮಹಡಿಯೇರಿದಳು. ಅಲ್ಲಿನ ಬಾಗಿಲಲ್ಲಿ ಈ ರೀತಿ ಬರೆದಿತ್ತು. "1ನೇ ಮಹಡಿ: ಈ ಪುರುಷರಿಗೆ ಉದ್ಯೋಗವಿದೆ".ಮುಂದಿನ ಮಹಡಿಯಲ್ಲೇನಿರಬಹುದೆಂಬ ಕುತೂಹಲ. ಸರಿ 2ನೇ ಮಹಡಿಗೆ ಹೋದಾಗ ಅಲ್ಲಿ ಬಾಗಿಲಲ್ಲಿ ಬರೆದಿತ್ತು.

”ಮಹಡಿ 2: ಈ ಪುರುಷರಿಗೆ ಉದ್ಯೋಗವಿದೆ, ಮಕ್ಕಳನ್ನು ಪ್ರೀತಿಸುತ್ತಾರೆ.
”3ನೇ ಮಹಡಿ ಬಾಗಿಲಲ್ಲಿ ಈ ರೀತಿ ಬರೆದಿತ್ತು. ” ಮಹಡಿ 3: ಈ ಪುರುಷರಿಗೆ ಉದ್ಯೋಗವಿದೆ, ಮಕ್ಕಳನ್ನು ಪ್ರೀತಿಸುತ್ತಾರೆ, ಮತ್ತು ತುಂಬಾ ಸುಂದರ ಮೈಕಟ್ಟು ಹೊಂದಿದ್ದಾರೆ.”

”ವ್ಹಾವ್...” ಎನ್ನುತ್ತಾ ಮುಂದೆ ಹೋದಳಾಕೆ. ”ಮಹಡಿ 4: ಈ ಪುರುಷರಿಗೆ ಉದ್ಯೋಗವಿದೆ, ಮಕ್ಕಳನ್ನು ಪ್ರೀತಿಸುತ್ತಾರೆ, ಮತ್ತು ತುಂಬಾ ಸುಂದರ ಮೈಕಟ್ಟು ಹೊಂದಿದ್ದು, ಮನೆಕೆಲಸದಲ್ಲಿ ಸಹಾಯ ಮಾಡುತ್ತಾರೆ.” ಅಲ್ಲಿ ಬರೆದಿತ್ತು.

”ವಾಹ್...ನಾನೆಷ್ಟು ಲಕ್ಕಿ, ನಂಬಲಸಾಧ್ಯ” ಎಂದು ಉದ್ಗರಿಸಿದ ಆಕೆ ಇನ್ನೂ ಮುಂದುವರಿದಳು. ಅಲ್ಲಿ ಬರೆದಿತ್ತು- ” ಮಹಡಿ 5: ಈ ಪುರುಷರಿಗೆ ಉದ್ಯೋಗವಿದೆ, ಮಕ್ಕಳನ್ನು ಪ್ರೀತಿಸುತ್ತಾರೆ, ಮತ್ತು ತುಂಬಾ ಸುಂದರ ಮೈಕಟ್ಟು ಹೊಂದಿದ್ದು, ಮನೆಕೆಲಸದಲ್ಲಿ ಸಹಾಯ ಮಾಡುತ್ತಾರೆ. ತುಂಬಾ ರೋಮ್ಯಾಂಟಿಕ್ ಆಗಿರುತ್ತಾರೆ”.

ಇದಾಗಬಹುದು ಎಂದು ಅವಳಲ್ಲೇ ನಿಲ್ಲುತ್ತಾಳೆ. ಆದರೂ ಹುಚ್ಚು ಮನಸ್ಸು. ತಡೀಲೊಲ್ಲದು. ಇನ್ನೂ ಮೇಲೆ ಹೋದರೆ ಮತ್ತೂ ಒಳ್ಳೆಯ ಗಂಡ ಸಿಗಬಹುದೆಂಬ ಬಲವಾದ ವಿಶ್ವಾಸ. ಆರನೇ ಮತ್ತು ಕೊನೆಯ ಮಹಡಿಯೇರಿದಳು.

ಅಲ್ಲಿ ಬರೆದಿತ್ತು- ” ಮಹಡಿ 6: ನೀವು ಇಲ್ಲಿಗೆ ಭೇಟಿ ನೀಡಿದ ಮಹಿಳೆಯರಲ್ಲಿ 31,4,56,012ನೆಯವರು, ಈ ಮಹಡಿಯಲ್ಲಿ ಪುರುಷರೇ ಇಲ್ಲ. ಮಹಿಳೆಯರ ಮನಸ್ಸನ್ನು ಮೆಚ್ಚಿಸುವುದು ಅಸಾಧ್ಯ ಎಂಬ ಉಕ್ತಿಗೆ ಸಾಕ್ಷಿಯಾಗಿ ಈ ಮಹಡಿ ನಿಂತಿದೆ. ಗಂಡನ ಖರೀದಿಗಾಗಿ ಅಂಗಡಿಗೆ ಭೇಟಿ ನೀಡಿದ್ದಕ್ಕೆ ಧನ್ಯವಾದ”.

Monday, April 24, 2006


ಪರಿತ್ಯಕ್ತ ಪತ್ನಿ, ಮಕ್ಕಳ ಪುನರ್ವಸತಿಗೆ ಹೋರಾಟ

ಭೀತಿ:ಮೇಧಾ ಜತೆ ಕೈಜೋಡಿಸಿದ ಗರೀಬ್ ಖಾನ್

(ಬೊಗಳೂರು ಬ್ಯುರೋ ತನಿಖಾ ವರದಿ)
ಬೊಗಳೂರು, ಏ.24- ಬಾಲಿವುಡ್ಡನ್ನು ಹಾಲಿವುಡ್ ಅಂತ ತಿಳಿದುಕೊಂಡು ಚಿತ್ರಗಳನ್ನು ನಿರ್ಮಿಸುತ್ತಾ, ಎಡಗಣ್ಣು ಆಸ್ಕರ್ ಪ್ರಶಸ್ತಿಯ ಮೇಲೆ ಹಾಗೂ ಬಲಗಣ್ಣು ಫಾಲ್ಕೆ ಪ್ರಶಸ್ತಿಯ ಮೇಲಿಟ್ಟಿರುವ ಮಾಜಿ ಚಾಕಲೇಟ್ ಹೀರೋ ಗರೀಬ್ ಖಾನ್, ಈಗ ನರಮೇಧ ಬಚಾವೋ ಆಂದೋಲನಕ್ಕೆ ಧುಮುಕಿರುವುದು ಹಲವು ಚರ್ಚೆಗಳಿಗೆ ವೇದಿಕೆಯೊದಗಿಸಿದೆ.

ನರ್ಮದಾ ಡ್ಯಾಮ್ ಅನ್ನೇ ಡ್ಯಾಮೇಜ್ ಎಂದು ಪರಿವರ್ತಿಸುತ್ತಾ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಿಕೊಡಲು ಹೋರಾಡುತ್ತಿರುವ ಮೇಧಾ ಪಾಟ್ಕರ್‌ಗೆ ಗರೀಬ್ ಖಾನ್ ತಮ್ಮ ಒಳಮನಸ್ಸಿನ ಪ್ರಕೃತಿಯ ಕರೆಗೆ ಓಗೊಟ್ಟು ದಿಢೀರ್ ಆಗಿ ಬೆಂಬಲ ನೀಡಲು ಸೆಟೆದು ನಿಂತಿರುವುದರ ಹಿಂದೆ ಭಾರಿ ಷಡ್ಯಂತ್ರವಿದೆ ಎಂಬುದು ಅಸತ್ಯಾನ್ವೇಷಿಯ ಗಮನಕ್ಕೆ ಬಂದಿದೆ.

ಇತ್ತೀಚೆಗೆ ಕಿರಣ್ ರಾವ್‌ ಕೈಹಿಡಿಯಲು ಅನುಕೂಲವಾಗುವ ನಿಟ್ಟಿನಲ್ಲಿ ಗರೀಬ್ ಅವರು, ಷೋಡಶ ವರುಷ ತಮ್ಮೊಂದಿಗೆ ಸಂಸಾರ ಸಾಗಿಸಿ, ಜೀವಾವಧಿ ವಿವಾಹ ವಿಚ್ಛೇದನೆ ಶಿಕ್ಷೆ ಎದುರಿಸುತ್ತಿರುವ ರೀನಾ ದತ್ ಮತ್ತು ಇಬ್ಬರು ಮಕ್ಕಳಿಗೆ ಪುನರ್ವಸತಿ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಮೇಧಾ ಪಾಟ್ಕರ್ ಅವರು ದಿಲ್ಲಿಯ ಜಂತರ್ ಮಂತರ್ ಎದುರು ಉಪವಾಸ ಸತ್ಯಾಗ್ರಹ ಮಾಡುವರೆಂಬ ಭೀತಿಯೇ ಗರೀಬ್ ಖಾನ್‌ ಪ್ರಕೃತಿಯ ಕರೆಗೆ ಓಗೊಡಲು ಕಾರಣ ಎಂದು ತಿಳಿದುಬಂದಿದೆ.

ಇನ್ನೊಂದೆಡೆ, ನರ್ಮದಾ ನದಿಯ ಸುತ್ತಮುತ್ತ ತಮ್ಮ ಚಿತ್ರಗಳಿಗೆ ಆಗಾಗ್ಗೆ ಶೂಟಿಂಗ್ ನಡೆಸಬೇಕಿರುವುದರಿಂದ ಅಲ್ಲಿ ಸದಾ ಕಾಲ ನೀರು ತುಂಬುತ್ತಿರಬೇಕು, ನರ್ಮದೆ ತುಂಬಿ ಹರಿಯುತ್ತಿರಬೇಕು. ನದಿ ಜೋಡಿಸುವ ರೀತಿಯಲ್ಲೇ, ನರ್ಮದಾ ಮತ್ತು ಮೇಧಾ ಶಬ್ದಗಳ ಜೋಡಣೆಯಿಂದ ನರಮೇಧ ಎಂಬ ಪದಕ್ಕೆ ಅಲ್ಲಿ ಅರ್ಥ ಕಲ್ಪಿಸುವ ನಿಟ್ಟಿನಲ್ಲಿ ಮತ್ತು ಜಗತ್ತಿಗೆ ನರಮೇಧ ಎಂದರೇನೆಂಬುದನ್ನು ತೋರಿಸಿಕೊಡುವ ನಿಟ್ಟಿನಲ್ಲಿ ಅಲ್ಲಿನ ಸಂತ್ರಸ್ತರ ಗೋಳನ್ನು ಚಿತ್ರೀಕರಿಸಿಕೊಂಡು, ತಮ್ಮ ಮುಂದಿನ "ರಂಗ್ ದೇ ನರಮೇಧಾ" ಚಿತ್ರಕ್ಕೆ ಸಹಜತೆ ತುಂಬಬೇಕು. ಈ ಮೂಲಕ ಆಸ್ಕರ್, ಫಾಲ್ಕೆಗಳನ್ನು ಬುಟ್ಟಿಗೆ ಹಾಕಿಕೊಳ್ಳಬಹುದೆಂಬ ದೂರ-ದುರಾಲೋಚನೆಯೂ ಇದೆ ಎಂದು ಅವರು ಮೇಧಾ ನಿವಾಸದಲ್ಲಿ ಕಿಕ್ಕಿರಿದು ತುಂಬಿದ್ದ ಪತ್ರಿಕಾಗೋಷ್ಠಿಯಲ್ಲಿ ಅಸತ್ಯಾನ್ವೇಷಿಗೆ ಮಾತ್ರ ಸ್ಪಷ್ಟಪಡಿಸಿದ್ದಾರೆ.

ಅನ್ಯಾಯ, ಅಕ್ರಮ, ಭ್ರಷ್ಟಾಚಾರ

ಮಾನ್ಯ ಓದುಗರೆ,
ಮಾಂತ್ರಿಕ ಕಾರಣಗಳಿಂದಾಗಿ ನಮ್ಮ ನಿನ್ನೆಯ ಸಂಚಿಕೆ ಪ್ರಕಟವಾಗಿಲ್ಲ. ಓದುಗರಿಗಾದ ಸಂತೋಷಕ್ಕೆ ವಿಷಾದಿಸುತ್ತೇವೆ. ನಿನ್ನೆ ಸಂಚಿಕೆ ಎಷ್ಟು ಬಾರಿ ಅಪ್‌ಲೋಡ್ ಮಾಡಿದರೂ ಯಾವುದೋ ಮಾಂತ್ರಿಕ ಸಮಸ್ಯೆಯಿಂದಾಗಿ ಅದು ನೆಟ್‌ನೊಳಕ್ಕೆ ತೂರಿಕೊಳ್ಳುತ್ತಿರಲಿಲ್ಲ. ಅದಕ್ಕಾಗಿ ನಿನ್ನೆಯ ಹಳಸಲು ಸುದ್ದಿಯನ್ನು ಇಂದು ನೀಡುತ್ತಿದ್ದೇವೆ. ನಿಮಗಾದ ತೊಂದರೆಗೆ ಧನ್ಯವಾದವಿರಲಿ. -ಸಂ.

Saturday, April 22, 2006


ಪ್ರಮೋದ್ ಜಹಾಪನಾಗೆ ಗುಂಡು ಹಾಕುವ

ಮೊದಲು ತಾನೇ ಗುಂಡು ಹಾಕಿಕೊಂಡಿದ್ದ !


(ಬೊಗಳೂರು ಬ್ಯುರೋ ತ್ವರಿತ ಸುದ್ದಿ ವಿಭಾಗ)
ಬೊಗಳೂರು, ಏ.22- ಮುಂಬಯಿಯಲ್ಲಿ ಲಕ್ ಮಣ ಖ್ಯಾತಿಯ (ಬಿಜೆಪಿಯ ಶ್ರೀಮಾನ್ ರಾಂ ಸೋದರ) ಪ್ರಮೋದ್ ಜಹಾಪನಾ ಅವರ ಮೇಲೆ ಗುಂಡಿನ ದಾಳಿ ನಡೆಸಿದ ಸುದ್ದಿ ಬೊಗಳೆಯ ನವಗೆಳೆಯ ತವಿಶ್ರೀ ಅವರಿಂದ ತಿಳಿಯುತ್ತಲೇ, ಅಲ್ಲಿಗೆ ಧಾವಿಸಿದಾಗ, ಅಲ್ಲಿನ ಅಧೋಲೋಕದ ಆಟಾಟೋಪದಿಂದಾಗಿ ರೈಲು ನಿಲ್ದಾಣದಲ್ಲೇ 3 ಸುತ್ತು ತಿರುಗಿ ಕೈಭಾಷೆಯಲ್ಲೇ ನೀರು ಕೇಳುವಷ್ಟರ ಮಟ್ಟಿಗೆ ನಮ್ಮ ಅಸತ್ಯಾನ್ವೇಷಿ ಬೆಚ್ಚಿ ಬಿದ್ದ ಪ್ರಸಂಗ ನಮ್ಮ ಪ್ರತಿಸ್ಪರ್ಧಿ ಪತ್ರಿಕೆಗಳ ಮುಖ(ಪುಟ)ದಲ್ಲಿ ಮಂದಹಾಸದ ವಕ್ರ ಗೆರೆಯೊಂದು ಮೂಡಲು ಕಾರಣವಾಗಿದೆ.

ಪ್ರಮೋದ್ ಜಹಾಪನಾ ಮೇಲೆ ಗುಂಡು ಹಾರಿಸುವುದಕ್ಕೆ ಮೊದಲೇ ಅವರ ಸಹೋದರ, ಆರೋಪಿ ಅಧೋಲೋಕ ಪ್ರವೀಣನು ತಾನೂ ಕೂಡ ಹೊಟ್ಟೆಗೆ ಗುಂಡು ಹಾಕಿಕೊಂಡಿದ್ದ ಎಂಬುದು ಅಸತ್ಯಾನ್ವೇಷಿ ತನಿಖೆಯಿಂದ ಬಯಲಾಗಿದೆ.

ಅಂಡರ್ ದಿ ವರ್ಲ್ಡ್: ಅಧೋಲೋಕ ಪ್ರವೀಣನಿಗೆ ಅಂಡರ್ ದಿ ವರ್ಲ್ಡ್ ಕೊಲೆಕ್ಷನ್ ಸೆಂಟರ್ ಇದೆ ಎಂಬುದು ಕೂಡ ಗೊತ್ತಾಗಿದೆ. ಈತನಿಗೆ ರಾಜಾ ಛೋಟನ್ ಮತ್ತು ಗರುಣ್ ಆವ್ಳಿಯ ಮಚ್ಚು-ಲಾಂಗುಗಳು ಮತ್ತು ಗುಂಡು-ಪೆಗ್ಗುಗಳ ಪರಿಚಯ ಚೆನ್ನಾಗಿದೆ ಎಂಬ ವಿಷಯ ಅಸತ್ಯಾನ್ವೇಷಿಯ ಅಂಡರ್ ವರ್ಲ್ಡ್ ಕನೆಕ್ಷನ್‌ನಿಂದ ಗೊತ್ತಾಗಿದೆ ಎಂದು ಪತ್ರಿಕೆಯು ಯಾರಿಗೂ ಗೊತ್ತಾಗದಂತೆ ಹೇಳಲು ಬಯಸುತ್ತದೆ.

ಇದೊಂದು ಎಕ್ಸ್ ಜ್ಯೂಸಿವ್ ವರದಿ ಎಂದು ಬೊಗಳೆ ಬಿಡಲು ನಿರ್ಧರಿಸಲಾಗಿದ್ದರೂ, ಅಸತ್ಯಾನ್ವೇಷಿಯೂ ಜಗತ್ತಿನ ತಳ ಭಾಗದಲ್ಲಿ (ಅಂಡರ್ ವರ್ಲ್ಡ್ ನಲ್ಲಿ ಯಾರಿಗೂ ಗೊತ್ತಾಗದಂತೆ) ಗುಂಡು ಹಾಕಲು ಹೋಗಿದ್ದರಿಂದಾಗಿ ನಮ್ಮ ಮಾನ ಹರಾಜಾಗುತ್ತದೆಂಬ ಕಾರಣಕ್ಕೆ ಅದನ್ನು ಇಲ್ಲಿ ಬಹಿರಂಗಪಡಿಸಲಾಗುತ್ತಿಲ್ಲ.

ಈ ನಡುವೆ, ಸಾಲಾ ಬಾಹೇಬ್ ಥ್ಯಾಕರೆ ಎಂಬ ಹಳೆ ಹುಲಿ ಈಗ ವೃದ್ಧಾಪ್ಯದಿಂದಾಗಿ ಕಾಡಿನ ಮೂಲೆಯಲ್ಲಿ ಕೂತಿರುವುದರಿಂದಾಗಿ, ರಾಜಾ ಛೋಟನ್ ತನ್ನ ಬೇಳೆ ಬೇಯಿಸಿಕೊಳ್ಳಲು ಇತರ ರಾವಣರಾಸಂಧಕೀಚಕಮ ಪುಡಾರಿಗಳನ್ನು ಆರಿಸಿಕೊಳ್ಳುತ್ತಿದ್ದಾನೆ ಎಂಬ ಅತ್ಯಂತ ರಹಸ್ಯ ವಿಷಯವನ್ನು ಬಟಾಬಯಲು ಮಾಡದಂತೆ ಪತ್ರಿಕೆ ನಮ್ಮ ಓದುಗರನ್ನು ಬೋಂಡಾ ಪಡೆಯ ಮೂಲಕ ಬೆದರಿಸಲು ನಿರ್ಧರಿಸಿದೆ. ಓದುಗರು ಸಹಕರಿಸಲು ವಿನಂತಿಸಲಾಗಿದೆ.
ಇದಕ್ಕೆ ಇತ್ತೀಚಿನ ಮಚ್ಚು-ಲಾಂಗು ಸಹಿತದ ಕನ್ನಡ (ವಿ)ಚಿತ್ರಗಳನ್ನು ಬಳಸಲು ಪತ್ರಿಕೆ ನಿರ್ಧರಿಸಿದೆ.

ಐಸಿಯು ಒಳಗೆ ಪತ್ರಿಕಾಗೋಷ್ಠಿ: ಇಷ್ಟೆಲ್ಲದರ ನಡುವೆಯೇ, ಜಹಾಪನಾ ಅವರು ಆಸ್ಪತ್ರೆಯ ಐಸಿಯು ಕೊಠಡಿಯೊಳಗೇ ಸುದ್ದಿಗೋಷ್ಠಿ ಕರೆದು, ಈ ಘಟನೆಯನ್ನು ಖಂಡಿಸಿರುವುದಾಗಿ ಅಸತ್ಯಾನ್ವೇಷಿ ವರದಿ ಮಾಡಿದ್ದಾರಾದಾರೂ, ಜಹಾಪನಾ ಅವರು ತಮ್ಮ ಸ್ಥಿತಿ ಈಗ ಹೇಗಿದೆ ಎಂಬುದನ್ನು ಬಹಿರಂಗಪಡಿಸಲು ನಿರಾಕರಿಸಿದರು.

ಮಾನ್ಸೂನ್ ಉಚಿತ: ಲಯಜಲಿತಾ

ಅಣೆಕಟ್ಟೆ ಉಚಿತ: ನರುಣಾಕಿಧಿ

(ಬೊಗಳೂರು ಬ್ಯುರೋದಿಂದ)

ಬೊಗಳೂರು, ಏ.21- ತಮಿಳುನಾಡಿನಲ್ಲಿ ಚುನಾವಣೆಗಳು ಕಾವೇರಿ ವಿವಾದದ ತೆರನಾಗಿ ಕಾವೇರುತ್ತಿರುವಂತೆಯೇ, ಕಡಿಮೆ ದರದಲ್ಲೋ ಉಚಿತವಾಗಿಯೋ ಅಕ್ಕಿ ಕೊಟ್ಟು ಮತದಾರರಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಹೊರಟಿರುವ ರಾಜಕೀಯ ಪಕ್ಷಗಳು ಮತ್ತೊಂದು ಹೆಜ್ಜೆ ಮುಂದೆ ಹೋಗಿವೆ.

ರಾಜ್ಯವನ್ನು ಕಾಡುತ್ತಲೇ ಬಂದಿರುವ ನೀರಿನ ಸಮಸ್ಯೆ ಬಗೆಹರಿಸಲು, ಬಡ ರೈತರಿಗೆ ಪ್ರತಿ ವರ್ಷ ಮುಂಗಾರು ಮಳೆಯನ್ನು ಉಚಿತವಾಗಿ ನೀಡುವುದಾಗಿ ಮುಖ್ಯಮಂತ್ರಿ ಲಯಜಲಿತಾ ಘೋಷಿಸಿದ್ದಾರೆ.

ಇದರ ಬೆನ್ನಿಗೇ, ಬೊಗಳೆ ಬಿಡುವುದರಲ್ಲಿ ತಾನೇನು ಕಮ್ಮಿ ಎಂದು ತೊಡೆ ತಟ್ಟಿ ರಂಗಕ್ಕಿಳಿದಿರುವ ತಾತ ನರುಣಾಕಿಧಿ ಅವರು, ರಾಜ್ಯದಲ್ಲಿ ಲಯಜಲಿತಾ ಘೋಷಣೆಯಂತೆ ಮುಂಗಾರು ಮಳೆ ಬಂದರೆ, ಪ್ರವಾಹಗಳನ್ನೆಲ್ಲಾ ತಡೆಗಟ್ಟಲು ಅಣೆಕಟ್ಟು ಕಟ್ಟಿ ಬಡರೈತರನ್ನು ಶೋಷಿಸುವುದಾಗಿ... ಅಲ್ಲಲ್ಲ ಪೋಷಿಸುವುದಾಗಿ ಘೋಷಿಸಿದ್ದಾರೆ. ಈ ಅಣೆಕಟ್ಟೆ ಕಾಮಗಾರಿಯನ್ನು ತಮ್ಮ ಪಕ್ಷದ ಭಾವೀ ಅಧ್ಯಕ್ಷ ಮಯಾನಿಧಿ ದಾರನ್ ಅವರಿಗೆ ಗುತ್ತಿಗೆ ನೀಡುವುದಾಗಿ ಘೋಷಿಸಿದ್ದಾರೆ.

ಪ್ರತಿಪಕ್ಷ ಮುಖಂಡ ನರುಣಾಕಿಧಿ ಮತ್ತು ಮಯಾನಿಧಿ ದಾರನ್ ಅವರು ಈಗಾಗಲೇ ಕರುಣೆ ಮತ್ತು ದಯೆಯ ಹೆಸರಿನಲ್ಲಿ ಮತಗಳ ಭಿಕ್ಷೆ ಕೇಳುತ್ತಾ ಚುನಾವಣೆಗೆ ನಿಧಿ ಸಂಗ್ರಹಿಸುತ್ತಿದುದ, ಜನತೆಗೆ ತನ್ನಿಂದಲೂ ಹೆಚ್ಚು ದಪ್ಪದ ನಾಮ ಎಳೆಯುತ್ತಾರೆ ಎಂಬ ಬಗ್ಗೆ ಕಸಿವಿಸಿಗೊಂಡಿರುವ ಮುಖ್ಯಮಂತ್ರಿ ಲಯಜಲಿತಾ, ಈ ಘೋಷಣೆಗೆ ಪ್ರತ್ಯುತ್ತರ ನೀಡಲು ಸ್ವಲ್ಪ ಕಾಲ ಯೋಚಿಸುವುದಾಗಿ ಘೋಷಿಸಿದ್ದಾರೆ.

Friday, April 21, 2006

ನಾನೊಬ್ಬ ಜೋಕರ್ ಅಂತೆ...!
ಇದು ಅಸತ್ಯಾನ್ವೇಷಿಗೆ ಬ್ಲಾಗ್ ಥಿಂಗ್ಸ್ ಡಾಟ್ ಕಾಮ್ ಸೈಟ್ ನೀಡಿದ ಸರ್ಟಿಫಿಕೆಟ್. ಅಬ್ಬಾ ಅವರ ಅಹಂಕಾರವೇ... ಇದು ನಾವು ನಂಬಿದ ತತ್ವ-ಆದರ್ಶಗಳಿಗೆ ತದ್ವಿರುದ್ಧವಾದುದು. ಯಾವ ರೀತಿ ಬರ್ದಿದಾರೆ ನೋಡಿ: You're totally hilarious, and you can find the humor in any situation.Whether you're spouting off zingers, comebacks, or jokes about life...You usually can keep a crowd laughing, and you have plenty of material.You have the makings of a great comedian - or comedic writer. ನೀವೂ ಬೇಕಿದ್ದರೆ ಪ್ರಯತ್ನಿಸಿ...!

Thursday, April 20, 2006


90ರ ಹಣ್ಣು ಹಣ್ಣು ಮುದುಕಿ ಮೇಲೆ

ಅತ್ಯಾಚಾರ: (ನಮ್ಮ ಸ್ವಂತ ವರದಿಗಾರರಿಂದ)

ಬೊಗಳೂರು, ಏ.20- ಶತಕ ಬಾರಿಸಲು ಹೊರಟಿದ್ದ 90 ವರ್ಷದ ವೃದ್ಧೆಯೊಬ್ಬಳ ಮೇಲೆ ನಮ್ಮ ವರದಿಗಾರರು ಅತ್ಯಾಚಾರ ಮಾಡಿದ್ದನ್ನು ವೀಡಿಯೊ ವಿವರಣೆ ಸಹಿತ ಇಲ್ಲಿ ವರದಿ ಮಾಡಿದ್ದಾರೆ.

ನಿಲ್ಲಿ ಸ್ವಾಮೀ..... ಇದು ನಮ್ಮ ಪತ್ರಿಕೆಯ ಸುದ್ದಿಮನೆಯಲ್ಲಾದ ಅವಾಂತರ ಅಲ್ಲ. ಅಲ್ಲಲ್ಲ.... ಅಂದ್ರೆ ಅತ್ಯಾಚಾರ ನಮ್ಮ ಸುದ್ದಿ ಮನೆಯಲ್ಲಾಗಿದೆ ಅಂತ ಅಲ್ಲವೇ ಅಲ್ಲ. ಪುಟ ವಿನ್ಯಾಸಕಾರ ಮಾಡಿದ ಮಿಸ್ಟೇಕ್.

ಅಂದ್ರೆ ಪುಟ ವಿನ್ಯಾಸಕಾರ ಅತ್ಯಾಚಾರ ಮಾಡಿದ್ದಾರೆ ಅಂತನೂ ಅರ್ಥ ಅಲ್ಲ ಮಾರಾಯ್ರೇ...! ಇದು ಉಪಸಂಪಾದಕರ ನಿರ್ಲಕ್ಷ್ಯದಿಂದಾದ ಅವಾಂತರ. ಅಂದ್ರೆ.... ಅವ್ರೂ ಅತ್ಯಾಚಾರ ಮಾಡಿದ್ದು ಅಂತಲ್ಲ. ಇದು ಸಂಪಾದಕರು ನೋಡದೆ ಮಾಡಿದ ತಪ್ಪು. ಅಂದ್ರೆ... ಅಂದ್ರೆ... ನೀವಂದುಕೊಂಡಂತೆ ಸಂಪಾದಕರು ತಿಳಿಯದೆ ಮಾಡಿದ ಅತ್ಯಾಚಾರ ಅನ್ನುವುದೂ ತಪ್ಪು.
ಈ ವಿಷಯ ಓದುಗರ ತಲೆ ಕೆಡಿಸುವುದಕ್ಕಿಂತ ಮೊದಲು ಈ ಅವಾಂತರ ಸರಣಿಯ ಪೂರ್ವಾಪರಗಳನ್ನು ಇಲ್ಲಿ ಪಟ್ಟಿ ಮಾಡುತ್ತಿದ್ದೇವೆ.

ನಡೆದದ್ದಿಷ್ಟು: ಬಾಲ್ಟಿಮೋರ್‌ನ ಕಾಕಿಸ್‌ವಿಲ್ಲೆ ಎಂಬಲ್ಲಿ 90ರ ಮುದುಕಿ ಮೇಲೆ ಅತ್ಯಾಚಾರವಾಗಿ, ಆಕೆ ಆಸ್ಪತ್ರೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿರುವುದು ಮತ್ತು ಅತ್ಯಾಚಾರಿಗಾಗಿ ಶೋಧ ನಡೆಯುತ್ತಿರುವುದು ನಮ್ಮ ನೆಟ್ಗಳ್ಳರ ಬ್ಯುರೋಗೆ ಪತ್ರಿಕೆ ಅಚ್ಚಿಗೆ ಹೋಗುವ ಕೆಲವೇ ಕ್ಷಣಗಳ ಮೊದಲು ತಿಳಿಯಿತು. ಈ ಲೇಟೆಸ್ಟ್ ಸುದ್ದಿಯನ್ನು ಪತ್ರಿಕೆಯಲ್ಲಿ ಹಾಕದಿದ್ದರೆ ನಾಳೆ ಮಜಾವಾಣಿ, ನೂರೆಂಟು ಸುಳ್ಳು, ವಿಶ್ವಪುಟ, ಕನ್ನಡಸಾರಥಿ ಮುಂತಾದ ಬೊಗಳೆ (ಕ್ಷಮಿಸಿ... ಇದು ಬ್ಲಾಗ್ ಎಂಬುದರ "ದ್ಭ" ರೂಪ !) ಪತ್ರಿಕೆಗಳಲ್ಲಿ ಪ್ರಕಟವಾಗಿ, ನಮ್ಮ ಪತ್ರಿಕೆಯಲ್ಲಿ ಇಲ್ಲದಿದ್ದರೆ ವಿಶ್ವದೆಲ್ಲೆಡೆ ಒಟ್ಟಾರೆ ಇರುವ ಕೋಟಿಗಟ್ಟಲೆ ಓದುಗರಲ್ಲಿ ನಮ್ಮ ಪತ್ರಿಕೆಯ (ಲೆಕ್ಕ ಮಾಡಲು ಹೋದರೆ ಕೈಬೆರಳುಗಳನ್ನು ಮೈನಸ್ (ಕಟ್) ಮಾಡಬೇಕಾಗುತ್ತದೆ) ಓದುಗರಿಂದ ಧಮಕಿ ಬರಬಹುದೆಂಬ ಭೀತಿಯಲ್ಲಿ ಪತ್ರಿಕೆಗೆ ಈ ಸುದ್ದಿ ಅಳವಡಿಸಲು ಕೊನೆಯ ಕ್ಷಣದಲ್ಲಿ ನಿರ್ಧಾರವಾಗಿತ್ತು.

ಸರಿ... ವರದಿಗಾರರು ಅವಸರವಸರವಾಗಿ ಟೈಪಿಸಿ, ಉಪಸಂಪಾದಕರಿಗೆ ಕೊಟ್ಟರು. ಉಪಸಂಪಾದಕರು ಅವಸರವಸರವಾಗಿ ಅದನ್ನು ನೋಡಿ ಪುಟ ವಿನ್ಯಾಸಕಾರನಿಗೆ ಪಾಸ್ ಮಾಡಿದರು. ಪುಟ ವಿನ್ಯಾಸಕಾರ ಅವಸರವಸರವಾಗಿ ಮೊದಲ ಎರಡೂ ವಾಕ್ಯಗಳನ್ನು ಹೆಡ್ಡಿಂಗ್ ಎಂದು ದೊಡ್ಡಕ್ಷರದಲ್ಲಿ ಬರುವಂತೆ ನೋಡಿಕೊಂಡ. ಅವನಿಗೂ ಅವಸರ ನೋಡಿ..... ಕಂಪ್ಯೂಟರ್ ಕೀಬೋರ್ಡ್‌ನಲ್ಲಿ ಬೆರಳಾಡಿಸುವಾಗ ಮೊದಲ ಪ್ಯಾರಾದಲ್ಲಿ " ನಮ್ಮ ವರದಿಗಾರರು" ಅನ್ನೋ ಪದವು ಐದು ಪದಗಳನ್ನು ದಾಟಿ ಹಿಂದೆ ಬಂದು ಕೂತಿತು. ಸಂಪಾದಕರು ಅವಸರವಸರವಾಗಿ ಕಣ್ಣಾಡಿಸಿ ಗ್ರೀನ್ ಸಿಗ್ನಲ್ ನೀಡಿದರು. ಸರಿ... ಪುಟ ಅಚ್ಚಿಗೆ ಹೋಯಿತು. ಆಗ ಮೂಡಿದ್ದೇ ಈ ವಿಶೇಷ ಅವಾಂತರದ ಪುಟ.

ದಯವಿಟ್ಟು ನಂಬಿ. ನಮ್ಮ ವರದಿಗಾರರು ಅತ್ಯಾಚಾರದಂತಹ ಕೀಳು ಕೃತ್ಯ.... ಅದೂ 90ರ ವೃದ್ಧೆ ಮೇಲೆ..... ಛೀ.... ಥೂ...... ಅಂಥದ್ದು ಮಾಡಲು ಖಂಡಿತಾ ಹೋಗಲಾರರು.

Tuesday, April 18, 2006


ಬೆಂಗಳೂರಲ್ಲಿ ಲೋಹದ ಹಕ್ಕಿ ಜ್ವರ:

ವಿಮಾನಗಳ ಟ್ರಾಫಿಕ್ ಜಾಮ್...!

(ಬೊಗಳೂರು ಬ್ಯುರೋ ವಿಶೇಷ)
ಬೊಗಳೂರು, ಏ.18- ದಿನದಿಂದ ದಿನಕ್ಕೆ ಅಸಹನೀಯವಾಗುತ್ತಿರುವ ಬೆಂಗಳೂರಿನಲ್ಲಿ ವಿಮಾನಗಳ ಸಂಚಾರ ದಟ್ಟಣೆಯಿಂದಾಗಿ ಹಲವು ತಾಸುಗಳ ಕಾಲ ಟ್ರಾಫಿಕ್ ಜಾಮ್ ಆಗಿದ್ದುಇಂಥ ಪ್ರಕರಣಗಳಿಂದಾಗಿ ವಿಮಾನ ಅವಘಡಗಳೂ ಹೆಚ್ಚುತ್ತಿವೆ ಎನ್ನಲಾಗಿದೆ.

ಗಗನಕ್ಕೇರುತ್ತಿರುವ ವಿಮಾನಗಳ ಸಂಖ್ಯೆ ಹೆಚ್ಚಾಗುತ್ತಿರುವಂತೆಯೇ ವಿಮಾನ ಪ್ರಯಾಣ ದರಗಳು ಗಗನದಿಂದ ಇಳಿಯುತ್ತಿರುವ ಹಿನ್ನೆಲೆಯಲ್ಲಿ ಖಾಸಗಿ ಲೋಹದ ಹಕ್ಕಿಗಳ ಸಂಖ್ಯೆ ಕೂಡ 300 ದಾಟಿದೆ ಎಂದು ಪ್ರಜಾವಾಣಿ ಏ.7ರಂದು ಇಲ್ಲಿ ವರದಿ ಮಾಡಿತ್ತು.

ಬೆಂಗಳೂರಿಗೆ ಅಮರಿಕೊಂಡ ಈ "ಲೋಹದ ಹಕ್ಕಿ ಜ್ವರ"ದಿಂದ ಕಂಗಾಲಾಗಿರುವ ಆಡಳಿತವು, ಇದಕ್ಕೆ ಸೂಕ್ತ ಲಸಿಕೆ ಕಂಡು ಹುಡುಕುವ ನಿಟ್ಟಿನಲ್ಲಿ ಭಾರಿ ಸಂಖ್ಯೆಯಲ್ಲಿ ವೈಮಾನಿಕ ಟ್ರಾಫಿಕ್ ಪೊಲೀಸರನ್ನು ನಿಯೋಜಿಸಿದೆ ಎಂದು ತಿಳಿದುಬಂದಿದೆ. ಹೆಚ್ಚಿನ ಸಂದರ್ಭದಲ್ಲಿ ಈ ಟ್ರಾಫಿಕ್ ಪೊಲೀಸರಿಂದಾಗಿಯೇ ವಿಮಾನಗಳಿಗೆ ಇಳಿಯಲು ಜಾಗ ದೊರೆಯುತ್ತಿಲ್ಲ ಎಂಬ ಅಂಶ ಅಸತ್ಯಾನ್ವೇಷಣೆ ವೇಳೆ ಪತ್ತೆಯಾಗಿದೆ.

ಡಕೋಟ ಏರ್‌ವೇಸ್ ಕೆಂಡಾಮಂಡಲ: ಬೆಂಗಳೂರಿನ ಗಗನದಲ್ಲಿ ಲೋಹ ಹಕ್ಕಿಗಳ ಸಂಚಾರ ಹೆಚ್ಚಾಗಿದ್ದರಿಂದಲೇ ಡೆಕ್ಕನ್ ಏರ್‌ವೇಸ್‌ನ ಡಕೋಟ ಎಕ್ಸ್ ‌ಪ್ರೆಸ್ ವಿಮಾನಗಳು ಆಗಾಗ್ಗೆ ಅಪಘಾತಕ್ಕೀಡಾಗುತ್ತಿವೆ ಎನ್ನಲಾಗಿದೆ.

ವಿಮಾನ ನಿಲ್ದಾಣದಲ್ಲಿ ಸ್ಥಳಾವಕಾಶವಿಲ್ಲದ ಕಾರಣ, ಇಳಿಯಬೇಕಾಗಿದ್ದ ವಿಮಾನವು, ನಿಲ್ದಾಣದಿಂದ ಒಂದು ವಿಮಾನ ಮೇಲೇರುವವರೆಗೆ ಕಾಯಬೇಕಾಗುತ್ತದೆ. ಇದಕ್ಕಾಗಿ ಅದು ಆಕಾಶದಲ್ಲೇ ಗಿರಕಿ ಹೊಡೆಯುತ್ತಿರಬೇಕಾಗುತ್ತದೆ. ಈ ರೀತಿ ಬೆಂಗಳೂರಿನ ಸುತ್ತ ಗಿರಕಿ ಹೊಡೆಯುತ್ತಾ ಗಂಟೆಗಟ್ಟಲೆ ಕಾಯುತ್ತಿರುವಾಗ, ಅದರಲ್ಲಿದ್ದ ಇಂಧನ ಖಾಲಿಯಾಗಿ ಪೈಲಟ್ ಇಳಿಸುವ ಮೊದಲೇ ಸ್ವಯಂಚಾಲಿತವಾಗಿ ಡೆಕ್ಕನ್ ವಿಮಾನಗಳು ಕೆಳಗೆ ಬೀಳುತ್ತಿದ್ದವು.

ಇಂಥ ಮಾಮೂಲಿ ಘಟನೆಗಳಿಗೆ ಪತ್ರಿಕೆಗಳೆಲ್ಲಾ ಬಣ್ಣ ಕಟ್ಟಿ "ರನ್‌ವೇಯಲ್ಲಿ ಜಾರಿದ ವಿಮಾನ, ಪ್ರಯಾಣಿಕರು ಪವಾಡಸದೃಶ ಪಾರು" ಎಂಬಿತ್ಯಾದಿ ತಲೆ(ಸರಿಇಲ್ಲದ) ಬರಹಗಳನ್ನು ಕೊಟ್ಟು ಗುಲ್ಲೆಬ್ಬಿಸುತ್ತಿವೆ ಎಂಬುದು ಡಕೋಟ ಏರ್‌ವೇಸ್ ಮುಖ್ಯಸ್ಥರ ಸ್ಪಷ್ಟನೆ.

ಪೈಲಟ್‌ಗಳಿಗೆ ಅರ್ಧ ಸಂಬಳ: ಈ ಕಾರಣಕ್ಕೆ, ಬೇರೆ ಊರುಗಳಿಂದ ಬೆಂಗಳೂರಿಗೆ ಬರುವ ವಿಮಾನಗಳ ಪೈಲಟ್‌ಗಳಿಗೆ ಅರ್ಧ ಸಂಬಳ ಕೊಡುವುದಾಗಿ ಡಕೋಟ ಏರ್‌ವೇಸ್ ಆಡಳಿತ ತಿಳಿಸಿದೆ. ಇದರ ಹಿನ್ನೆಲೆ ಅರಿಯಲು ಹೋದ ಅಸತ್ಯಾನ್ವೇಷಿಗೆ ತಿಳಿದದ್ದಿಷ್ಟು:

ಇಂಧನ ಖಾಲಿಯಾಗಿ ಆಗಸದಲ್ಲೇ ತಲೆಸುತ್ತು ಬಂದು ವಿಮಾನಗಳು ಕೆಳಗೆ ಬೀಳುವುದರಿಂದ ಪೈಲಟ್‌ಗಳಿಗೆ ವಿಮಾನವನ್ನು ತಾವೇ ಕಷ್ಟಪಟ್ಟು ನಿಲ್ಲಿಸಬೇಕಾದ "ಹೊರೆ" ಇರುವುದಿಲ್ಲ. ವಿಮಾನ ಬೆಂಗಳೂರಿಗೆ ಬರುತ್ತಿರುವಂತೆಯೇ ಅವರಿಗೆ ರಜೆ ಕೊಟ್ಟು ಕಳುಹಿಸುವುದು. ಇದರಿಂದ ಮ್ಯಾನ್‌ಪವರ್ (ಮಾನವ ಶ್ರಮ ಮತ್ತು ಸಂಪನ್ಮೂಲ) ಉಳಿತಾಯವಾದಂತಾಗುತ್ತದೆ ಎಂಬುದು ಕಂಪನಿ ಅಂಬೋಣ.

Monday, April 17, 2006

ಹಾರ್ಟ್ ಆಫ್ ಕಿಲ್ಲಿಂಗ್‌ನಿಂದ ಆರ್ಟ್ ಆಫ್ ಲಿವಿಂಗ್‌ನತ್ತ...
(ಬೊಗಳೂರು ಬ್ಯುರೋ ವರದಿ)
ಬೊಗಳೂರು, ಏ.17- ಕಾನೂನು ವ್ಯವಸ್ಥೆಗೇ ಮಂಕು ಬೂದಿ ಎರಚಿ ಹೊಸ ಹೊಸ ಕಾನೂನುಗಳ ರಚನೆಗೆ ಕಾರಣವಾಗುತ್ತಾ, ಜೈಲಿನೊಳಗೆ ಹೋದಷ್ಟೇ ವೇಗವಾಗಿ ಹೊರಬರುತ್ತಾ, ಬಿಹಾರದೆಲ್ಲೆಡೆ ಪ್ರಖ್ಯಾತ "ಬಾಹು"ಬಲಿಯಾಗಿ ಮೆರೆಯುತ್ತಿದ್ದ ಆರ್‌ಜೆಡಿ ಸಂಸದ ಮೊಹಮ್ಮದ್ ಶಹಾಬುದ್ದೀನ್‌ಗೆ ಮಾನವನ ಜೀವನ ಏನು ಎಂಬುದನ್ನು ತಿಳಿದುಕೊಳ್ಳುವ ಆಸೆಯಾಗಿದೆ ಎಂಬುದನ್ನು ಬೊಗಳೂರು ಬ್ಯುರೋ ಪತ್ತೆ ಹಚ್ಚಿದೆ.

ಇದುವರೆಗೆ ಆರ್ಟ್ ಆಫ್ ಕಿಲ್ಲಿಂಗ್‌ಗೆ ಪ್ರಸಿದ್ಧನಾಗಿದ್ದ ಬಿಹಾರದ ಸಿವಾನ್ ಕ್ಷೇತ್ರದ ಈ ಭಯಾನಕ ಸಂಸದ, ಇದೀಗ ಜೈಲಿನಿಂದ ಹೊರಬರಲಾರದೆ ಆರಾಮವಾಗಿರುವ ಜೀವನ ಕಲೆ (ಆರ್ಟ್ ಆಫ್ ಲಿವಿಂಗ್) ಎಂದರೆ ಏನು ಎಂದು ತಿಳಿದುಕೊಳ್ಳಲು ಮುಂದಾಗಿದ್ದಾನೆ.ಇದಲ್ಲದೆ ಮಾನಸಿಕ ಒತ್ತಡ ನಿವಾರಣೆಗೆ ಯೋಗಕ್ಕೂ ಮೊರೆ ಹೋಗಿದ್ದಾನೆಂಬುದನ್ನು ತಿಳಿದುಕೊಂಡ ಬೊಗಳೂರು ಅಸತ್ಯಾನ್ವೇಷಣಾ ತಂಡವು, ಶಹಾಬುದ್ದೀನ್‌ಗೆ ಕೂಡ ಮನುಷ್ಯರಂತೆಯೇ ಮನಸ್ಸು ಎಂಬುದಿದೆ ಮತ್ತು ಅದು ಕೂಡ ಒತ್ತಡಕ್ಕೆ ಒಳಗಾಗುತ್ತದೆ ಎಂಬುದನ್ನು ಪತ್ತೆ ಹಚ್ಚಿ ವಿ'ಭ್ರಮಿಸಿ'ದೆ.

ಇದೇ ರೀತಿಯಲ್ಲಿ, ಕಳೆದ ಬಿಹಾರ ಚುನಾವಣೆಗಳಲ್ಲಿ ಅಡಿಗೆ ಬಿದ್ದು ಅಪ್ಪಚ್ಚಿಯಾದರೂ ಮೂಗು ಮೇಲೆ ಎಂದು ಹೇಳಿಕೊಳ್ಳುತ್ತಲೇ 'ಗಂಭೀರವಾದ ಮಾನಸಿಕ ಒತ್ತಡ' ಪೀಡಿತರಾಗಿದ್ದ ಮೇವು ತಿಂದ ದೊರೆ ಲಾಲು ಪ್ರಸಾದ್ ಯಾದವ್ ಮತ್ತು ಸಗಣಿ ಸಾರಿಸಿಯೇ ಕೋಟ್ಯಂತರ ರೂ. ಆಸ್ತಿ ಸಂಗ್ರಹಿಸಿದ ಪತ್ನಿ ರಾಬ್ಡಿ ದೇವಿ ಅವರು ಕೂಡ ಟಿವಿ ಯೋಗ ಗುರು ಬಾಬಾ ರಾಮದೇವ್ ಅವರ ಮೊರೆ ಹೋಗಿ ತಮಗೂ ಮನುಷ್ಯತ್ವ ಇದೆ ಎಂಬುದನ್ನು ತೋರಿಸಿಕೊಟ್ಟಿರುವುದು ವರದಿಯಾಗಿದೆ.

ಈ ಮಧ್ಯೆ, ಕೊಲೆ, ಸುಲಿಗೆ, ಅಪಹರಣ, ಅತ್ಯಾಚಾರ ಮುಂತಾದ 'ಲೋಕ ಕಲ್ಯಾಣ'ಕಾರಿ ಕಾರ್ಯಗಳಿಗಾಗಿ ಕೇವಲ 40ರಷ್ಟು ಕ್ರಿಮಿನಲ್ ಕೇಸುಗಳನ್ನು ಎದುರಿಸುತ್ತಿರುವ ಶಹಾಬುದ್ದೀನ್‌ಗೆ ಮಾನಸಿಕ ಒತ್ತಡ ಎಂಬುದು ಬಂದದ್ದೇಕೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

ಬಹುಶಃ ಜೈಲಿನೊಳಗೆ ತಮ್ಮ ಲೋಕ ಕಲ್ಯಾಣ ಕಾರ್ಯಗಳನ್ನು ಮುಂದುವರಿಸಲು ಅವಕಾಶ ದೊರೆಯದಿರುವುದೇ ಆತನ ಒತ್ತಡದ ಲಿವಿಂಗ್‌ಗೆ ಕಾರಣ ಎಂದು ತರ್ಕಿಸಲಾಗುತ್ತಿದೆ. ಇದಲ್ಲದೆ ಆರ್ಟ್ ಆಫ್ ಕಿಲ್ಲಿಂಗ್ ಬಗ್ಗೆ ತಮ್ಮ ಗುರು ಲಾಲು ಜತೆ ಚರ್ಚಿಸುತ್ತಿದ್ದ ಶಹಾಬುದ್ದೀನ್, ಈಗ ಗುರುವಿಗೆ ನಮಸ್ಕಾರ ಹಾಕಿ ಬೇರೆ ಗುರು ಅವರ ಮೊರೆ ಹೋಗಿರುವ ಹಿಂದೆ ಕೇಸರಿ ಬಣ್ಣದ ವಿರೋಧ ಪಕ್ಷಗಳ ಕೈವಾಡವಿದೆ ಎಂದು ಶಂಕಿಸಲಾಗುತ್ತಿದೆ.
(ಚಿತ್ರ: ಆರ್ಟ್ ಆಫ್ ಕಿಲ್ಲಿಂಗ್ ಬಗ್ಗೆ ತಮ್ಮ ಗುರು ಲಾಲು ಜತೆ ಶಹಾಬುದ್ದೀನ್ ಚರ್ಚಿಸುತ್ತಿದ್ದಾಗಿನ ಚಿತ್ರ)
ಶಿಖಾಮಣಿ ವಾಗ್ಝರಿ: ಸಂದರ್ಶಕ ಪರಾರಿ !

(ಬೊಗಳೂರು ನೆಟ್ಗಳ್ಳರ ಬ್ಯುರೋದಿಂದ)
ಒಂದು ಬಾರಿ 'ಶಿಖಾಮಣಿ' ಬಹುಭಾಷಾ ಕಂಪನಿಯೊಂದರ ನೌಕರಿ ಪ್ರಯುಕ್ತ ಸಂದರ್ಶನ ಎದುರಿಸಬೇಕಾದಾಗ ಸಂದರ್ಶಕರು ಆತನ ವಾಗ್ಝರಿಗೆ ತಲೆ ಅಲ್ಲಾಡಿಸಿ ಏನು ಮಾಡಬೇಕೆಂದು ತೋಚದೆ ಪರಾರಿಯಾದ ಪ್ರಸಂಗವೊಂದು ಇಲ್ಲಿದೆ. ಇದು ಬೊಗಳೂರು ನೆಟ್ಗಳ್ಳರ ಬ್ಯುರೋದ ಇನ್‌ಬಾಕ್ಸಿನಲ್ಲಿದ್ದದ್ದು. ಸಂದರ್ಶನದ ಆಯ್ದ ಭಾಗ ಇಲ್ಲಿದೆ:
ಸಂದರ್ಶಕ : ನಾನು ಹೇಳಿದ್ದಕ್ಕೆ ವಿರೋಧ ಪದಗಳನ್ನು ಹೇಳು.
ಶಿಖಾಮಣಿ : ಆಯ್ತು ಸಾರ್....
ಸಂದರ್ಶಕ : Made in India
ಶಿಖಾಮಣಿ : Destroyed in Pakistan
ಸಂದರ್ಶಕ : Keep it Up
ಶಿಖಾಮಣಿ : Put it Down
ಸಂದರ್ಶಕ : Maxi Mum
ಶಿಖಾಮಣಿ : Mini Dad
ಸಂದರ್ಶಕ : ಸಾಕು! Take your Seat
ಶಿಖಾಮಣಿ : ಇನ್ನು ಬೇಕು! Don’t take my seat
ಸಂದರ್ಶಕ : ಮೂರ್ಖ! Take your Seat
ಶಿಖಾಮಣಿ : ಜಾಣ ! Don’t take my Seat
ಸಂದರ್ಶಕ : I say you get out!
ಶಿಖಾಮಣಿ : You didn’t say I come in
ಸಂದರ್ಶಕ : I reject you!
ಶಿಖಾಮಣಿ : You Appoint me!!!
ಸಂದರ್ಶಕ : ………!!!!!!!

Saturday, April 15, 2006

ಓದುಗರಿಗೊಂದು ಸವಿನಯ ಧಮಕಿ
"ತಾಂತ್ರಿಕ ಕಾರಣ"ಗಳಿಂದಾಗಿ ನಮ್ಮ ಇ-ಕಸದ ಬುಟ್ಟಿಯ ಏ.11ರ ಸಂಚಿಕೆಯಲ್ಲಿ ಪ್ರಕಟವಾದ "ಮಾನವರಿಗೆ ಹೋಲಿಸಿ ಗಾರ್ದಭ ಕುಲಕ್ಕೆ ಅವಮಾನ: ಕತ್ತೆಗಳ ತೀವ್ರ ಪ್ರತಿಭಟನೆ" ವರದಿ ಪುಟಕ್ಕೆ ಅಂಟಿಕೊಳ್ಳಲು ಕೇಳುತ್ತಲೇ ಇಲ್ಲ. ಈ ಕತ್ತೆ ಸುದ್ದಿಯನ್ನು ಎಷ್ಟು ಬಾರಿ ತಂದು ಎಳೆದು ಪುಟದ ಗೂಟಕ್ಕೆ ಕಟ್ಟಿ ಹಾಕಿದರೂ ಆಗೊಮ್ಮೆ-ಈಗೊಮ್ಮೆ ಇಣುಕಿ, ಮತ್ತೆ ಸ್ವಯಂಚಾಲಿತವಾಗಿ ನಾಪತ್ತೆಯಾಗುತ್ತಿದ್ದ ಕಾರಣ, ಹತಾಶ ಅಭಿಮಾನಿಗಳು ಕಸದ ಬುಟ್ಟಿ ತುಂಬಾ ಕಸ ಎಸೆದು ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.

ಈ ಕಾರಣಕ್ಕೆ ಗಾರ್ದಭ ರಾಜ್ ಅವರು ಕೂಡ "ನಮ್ಮ ವರದಿ ನಿಮ್ಮಲ್ಲಿ ಪ್ರಕಟವಾಗಲೇ ಇಲ್ಲ, ನಮ್ಮನ್ನೇನು ನಿಮ್ಮಷ್ಟು ಮೂರ್ಖರೆಂದು ತಿಳಿದಿದ್ದೀರೆ" ಎಂದು ಆಕ್ಷೇಪಿಸಿದ್ದಾರೆ. ಈ ಸುದ್ದಿ ಪ್ರಕಟವಾಗದ ಕಾರಣಕ್ಕೆ ಓದುಗರಿಗೆ ಆದ ಅನುಕೂಲಕ್ಕೆ ನಾವು ಸಂತಾಪ ಸೂಚಿಸುತ್ತೇವೆ.ಕತ್ತೆ ಪುರಾಣ ಯಾಕೆ ಆಗುತ್ತೆ ನಾಪತ್ತೆ ಅಂತ ಶೋಧಿಸಲು ನಮ್ಮ ಅಸತ್ಯಾನ್ವೇಷಣ ತಂಡ ಹೊರಟಿದೆ. ಎರಡೆರಡು ಬಾರಿ ಬ್ಲಾಗ್ ನಲ್ಲಿ ತುರುಕಿದರೂ ಈ ಕತ್ತೆ ಚಿತ್ರ ಸಮೇತ ನಾಪತ್ತೆಯಾಗುವುದು ನಮಗೆ ನಮ್ಮ ಪ್ರತಿಸ್ಪರ್ಧಿಗಳ ಕೈವಾಡವಿದೆಯೋ ಎಂಬ ಶಂಕೆಗೆ ಕಾರಣವಾಗಿದೆ. ಆ ಕತ್ತೆಯನ್ನು ಮತ್ತೆ ಹಿಡಿದು ತರುತ್ತೇನೆ ಎಂದು ಆಶ್ವಾಸನೆ ನೀಡುತ್ತಿದ್ದೇನೆ. ಅಲ್ಲಿವರೆಗೆ ನೀವು ಮೇಲಿನ ವರದಿಯ ಲಿಂಕ್ ಕ್ಲಿಕ್ಕಿಸಿದರೆ ಕತ್ತೆ ಪತ್ತೆ ಆಗುತ್ತೆ. ಗುಡ್ ಲಕ್.
-ಸಂಪಾದಕ
ನಿಧನಕ್ಕೆ ದಾಂಧಲೆ: ಸಮಾಜವಿದ್ರೋಹಿ

ಸಂಘದಿಂದ ಗಿನ್ನೆಸ್ ದಾಖಲೆಗೆ ಅರ್ಜಿ
(ಬೊಗಳೂರು ಬ್ಯುರೋ ವರದಿ)
ಬೊಗಳೂರು, ಏ.15- ಕನ್ನಡದ ಮೇರುನಟ ಡಾ.ರಾಜ್ ಕುಮಾರ್ ಅವರು ನಿಧನರಾದ ಸುದ್ದಿ ತಿಳಿಯುತ್ತಿದ್ದಂತೆಯೇ ಅಕ್ರೋಶಿತರಾದ ಡಾ.ಭೋಜ್ ದುರಭಿಮಾನಿಗಳ ಯಾನೆ ಸಮಾಜಘಾತುಕ ಸಂಘದ ಸದಸ್ಯರು, ಸುತ್ತ ಮುತ್ತ ಯಾರ ತಂಟೆಗೂ ಹೋಗದೆ ಮೌನವಾಗಿ ರೋದಿಸುತ್ತಿದ್ದ ಬಸ್ಸು, ಕಾರು, ಮನೆಗಳಿಗೆ ಬೆಂಕಿ ಹಚ್ಚಿದ ಘಟನೆ ಬೊಗಳೂರಿನಿಂದ ವರದಿಯಾಗಿದೆ.

ಇದಲ್ಲದೆ, ಡಾ.ರಾಜ್ ಸಾವಿನ ಸುದ್ದಿ ಕೇಳಿ ಆಘಾತದಿಂದ ಅಳುತ್ತಿದ್ದ ಜನರನ್ನು ಹಿಗ್ಗಾಮುಗ್ಗ ಎಳೆದಾಡಿದ ದುರಭಿಮಾನಿಗಳ ಸಂಘದ ಸದಸ್ಯರು, ಅವರಿಗೆ ಕಲ್ಲಿನಿಂದ ಹೊಡೆದು, ಅವರ ವಾಹನಗಳಿಗೂ ಕಲ್ಲೇಟು ನೀಡಿ ಏನೂ ಆಗದವರಂತೆ ತೆರಳಿದ್ದಾರೆ.ಇನ್ನೂ ಮುಂದುವರಿದ ಸಮಾಜಘಾತುಕ ಸಂಘದ ಸದಸ್ಯರು, ಡಾ.ರಾಜ್ ಶವವನ್ನು ವಿಧಾನ ಸೌಧದೊಳಗೆ ತಂದು ಸಾರ್ವಜನಿಕ ದರ್ಶನಕ್ಕೆ ಇರಿಸಬೇಕು ಎಂದು ಕೂಗಾಡತೊಡಗಿದರು.

ಮಚ್ಚು, ದೊಣ್ಣೆ ಹಿಡಿದುಕೊಂಡು, ಕಂಠ ಮಟ್ಟ ಏರಿಸಿಕೊಂಡಿದ್ದ ಇತರ ಸದಸ್ಯರು ತಮ್ಮ ಕಂಠ ಬಿರಿಯುವಂತೆ ಈ ದುರಾಲೋಚನೆಗೆ ಗಾರ್ದಭ ಸಂಘದ ಸದಸ್ಯರು ಕೂಡ ತಲೆತಗ್ಗಿಸುವಷ್ಟು ಜೋರಾಗಿ ಅರಚಾಡಿ ತಮ್ಮ ಬೊಬ್ಬಲ ಸೂಚಿಸಿದರು.ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಈ ರೀತಿ ಮಾಡುವುದು ಅಸಾಧ್ಯ ಎಂದ ಪೊಲೀಸರ
ಮೇಲೇ ದಾಳಿ ನಡೆಸಿದ ದುರಭಿಮಾನಿಗಳು, ಪೊಲೀಸರಲ್ಲೊಬ್ಬರನ್ನು ಅಟ್ಟಾಡಿಸಿಕೊಂಡು ಹೋಗಿ ಕಲ್ಲಿನಿಂದ ಚಚ್ಚಿ ಚಚ್ಚಿ ಸಾಯಿಸಿ ಕೇಕೆ ಹಾಕಿದರು.

ಇದರಿಂದಾಗಿ ನಾಡು ಕಂಡ ಮಹಾನ್ ನಟ, ಕನ್ನಡ ಪ್ರೇಮಿ ಡಾ.ರಾಜ್ ಕುಮಾರ್ ಅವರು ಸಾವಿನಲ್ಲೂ ನಡುಬೀದಿಯಲ್ಲೇ ಉಳಿಯುವಂತಾಯಿತು. ಬೊಗಳೂರಿನ ಹೆಸರಿಗೆ, ಡಾ.ರಾಜ್ ಹೆಸರಿಗೆ ಮಸಿ ಬಳಿಯುವ 'ಸಾಧನೆ'ಯ ಹಿನ್ನೆಲೆಯಲ್ಲಿ ಸಮಾಜವಿದ್ರೋಹಿಗಳ ಸಂಘವು ಗಿನ್ನೆಸ್ ಪುಸ್ತಕದಲ್ಲಿ ಹೆಸರು ದಾಖಲಿಸಲು ಹೊರಟಿದೆ ಎಂದು ತಿಳಿದುಬಂದಿದೆ.

ಅಸತ್ಯಾನ್ವೇಷಿ ತಂಡ ತನಿಖೆ: (ದುರ್)ಅಭಿಮಾನದ ಹೆಸರಲ್ಲಿ ಅ'ರಾಜ'ಕತೆ ಸೃಷ್ಟಿಯಾದ ಹಿನ್ನೆಲೆಯನ್ನು ಕೆದಕಲು ಹೊರಟ ಅಸತ್ಯಾನ್ವೇಷಣಾ ತಂಡಕ್ಕೆ ಕೆಲವು ಮಹತ್ವದ ಸುಳಿವುಗಳು ಸಿಕ್ಕಿಯೇ ಬಿಟ್ಟವು. ಅದರ ಜಾಡು ಹಿಡಿದು ಹೋದಾಗ ದಾಂಧಲೆ ನಡೆಸುತ್ತಿದ್ದವನೊಬ್ಬ ವಿಷಯ ಬಾಯಿಬಿಟ್ಟ.ಈ ಹಿಂದಿನ ಸರಕಾರಕ್ಕೆ ಆಗಾಗ್ಗೆ ಮುಳ್ಳಿನಂತೆ ಚುಚ್ಚುತ್ತಲೇ, ಮುಖ್ಯಮಂತ್ರಿ ವಿರುದ್ಧ ರಣತಂತ್ರ ರೂಪಿಸುತ್ತಿದ್ದ ಕೇಡಿ ವಕುಮಾರ್ ಎಂಬ ದುಷ್ಟ ರಾಜಕಾರಣಿಯೇ ಇದರ ಹಿಂದಿದ್ದಾನೆ ಎಂದು ಆತ 'ಬೊಗಳೆ-ರಗಳೆ' ತಂಡದೆದುರು ಬೊಗಳಿದ್ದಾನೆ.

ಹಿಂದಿನ ಸರಕಾರದಲ್ಲಿ ತಮ್ಮ ಉದ್ದನೆಯ ಮೂಗು ತೂರಿಸುವ ಯತ್ನದಲ್ಲಿದ್ದಾಗಲೇ, ಆ ಸರಕಾರವನ್ನು ಹೈಜಾಕ್ ಮಾಡಿ 'ಕಮಲ'ನ ಜತೆಗೆ ಕೈಜೋಡಿಸಿ ತಮ್ಮ ಸರಕಾರ ಪ್ರತಿಷ್ಠಾಪಿಸಿದ ತೆನೆ ಹೊತ್ತ ರೈತ ಮಹಿಳೆಯನ್ನು ಕೆಳಕ್ಕಿಳಿಸುವುದೇ ಕೇಡಿ ವಕುಮಾರ್ ಉದ್ದೇಶ ಎಂಬ ಅಂಶ ಬಯಲಾಗಿದೆ.
ಚಿತ್ರ: ಸಮಾಜ ಘಾತುಕ ಸಂಘ ಸದಸ್ಯರು ವಾಹನ ಪುಡಿಗಟ್ಟಿ, ಗಿನ್ನೆಸ್ ದಾಖಲೆಗೆ ಅರ್ಜಿ ಸಲ್ಲಿಸುವ ಕೆಲವೇ ಕ್ಷಣಗಳ ಮೊದಲು
(ಚಿತ್ರ ಕೃಪೆ: ಇಂಡಿಯನ್ ಎಕ್ಸ್ ಪ್ರೆಸ್)

Thursday, April 13, 2006

ನೈಟಿಯಿಲ್ಲದೆ ಅನುಗೆ ಮಂಪರುಪರೀಕ್ಷೆ: ವಿಶ್ವದಾಖಲೆ !

(ಬೊಗಳೂರು ಬ್ಯುರೋ ವರದಿ)
ಬೊಗಳೂರು, ಏ.13- ನಾಮ ಹಾಕಿಸಿಕೊಳ್ಳಲು ಯಾವತ್ತೂ ತುದಿಗಾಲಲ್ಲಿ ನಿಂತಿರುವವರಿಗೆ ನೈಟಿ ಹಾಕಿಕೊಂಡೇ ಕೋಟ್ಯಂತರ ರೂಪಾಯಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ 'ನೈಟಿ ಅನು'ಗೆ ಮಂಪರು ಪರೀಕ್ಷೆ ಮಾಡಲಾಗುತ್ತದೆ ಎಂಬ ವರದಿ ವಿಜಯ ಕರ್ನಾಟಕ ಏ.12, 2006ರ ಸಂಚಿಕೆಯ 3ನೇ ಪುಟದಲ್ಲಿ ಪ್ರಕಟವಾಗಿರುವುದನ್ನು ಗಮನಿಸಿದ ಅಸತ್ಯಾನ್ವೇಷಿ, ನೇರವಾಗಿ ಬೆಂಗಳೂರಿಗೆ ಧಾವಿಸಿದಾಗ ವಿಶ್ವದಾಖಲೆಯೊಂದು ಬಯಲಿಗೆ ಬಂದ ಪ್ರಸಂಗ (ಬೇರೆಲ್ಲೋ) ವರದಿಯಾಗಿದೆ!

ಇದಕ್ಕೆ ಕಾರಣ, ನೈಟಿ ಅನು ಎಂಬ ಹೆಸರೇ ಆಗಿದೆ. ನೈಟಿ ಅನುವನ್ನು ಮಂಪರು ಪರೀಕ್ಷೆಗೆ ಒಳಪಡಿಸುವ ಸಂದರ್ಭದಲ್ಲಿ ಆಕೆ ನೈಟಿ ಹಾಕದಿದ್ದುದೇ ಹೊಸ ದಾಖಲೆ. ನೈಟಿಯನ್ನು ನೈಟ್‌ನಲ್ಲಿ ಅಲ್ಲದಿದ್ದರೂ, ಯಾವತ್ತೂ ತೊಟ್ಟುಕೊಂಡು ನೈಂಟಿ ಹಾಕಿಕೊಂಡು ಟೈಟ್ ಆಗಿಯೇ ವಂಚನಾ ಕೌಶಲ್ಯ ಪ್ರದರ್ಶಿಸುತ್ತಿದ್ದ ನೈಟಿ ಅನು, ಮಂಪರು ಪರೀಕ್ಷೆಗಾಗಿ ಮಂಪರಿನಲ್ಲಿದ್ದಾಗಲೇ ಅಲ್ಲಿನ ಪರೀಕ್ಷಕರಿಗೇ ಟೋಪಿ ಹಾಕಿ ತನ್ನ ಕೌಶಲ್ಯ ಮೆರೆದಿದ್ದಳು.

ಮಂಪರು ಪರೀಕ್ಷೆ ಆದ ತಕ್ಷಣವೇ ನಿಮ್ಮ ಹಣವನ್ನು ದುಪ್ಪಟ್ಟು ಆಗುವಂತೆ ಮಾಡುತ್ತೇನೆ ಎಂಬ ಆಮಿಷವನ್ನು ಮಂಪರಿನಲ್ಲೇ ಒಡ್ಡಿದ ಆಕೆ ಡಾ.ನರಪೇತಲ ನಾರಾಯಣ ಅವರಿಗೆ ಬಲೆ ಬೀಸಿದ್ದಳು. ಡಾ.ನರಪೇತಲ್ ಅವರು ಮರು ಮಾತನಾಡದೆ ನೈಟಿಯ ಚೂಟಿತನಕ್ಕೆ ಬಲಿಯಾಗಿದ್ದರು. ತಾವು ಹಣವನ್ನು ಹೇಗೆ ಮೇಜಿನ ಅಡಿಯಿಂದ ಕೈಚಾಚಿ ತೆಗೆದುಕೊಂಡು ಸಂಗ್ರಹಿಸಿಟ್ಟಿದ್ದರೋ, ಅದೇ ರೀತಿ ಮೇಜಿನಡಿಯಿಂದ ನಿಂತಲ್ಲೇ ಕೈಚಾಚಿ 10 ಲಕ್ಷ ರೂ.ಗಳನ್ನು ಆಕೆಗೆ ನೀಡಿದ್ದರು.

ಮಂಪರು ಪರೀಕ್ಷೆಯಾದ ತಕ್ಷಣ ನೈಟಿ ಅನುವನ್ನು ಪೊಲೀಸರು ತರಾತುರಿಯಲ್ಲಿ ಕರೆದುಕೊಂಡು ಹೋಗಿದ್ದರು. ಈ ಬಗ್ಗೆ ಪೊಲೀಸರಿಗೆ ಹೇಳಿದರೆ ಅಥವಾ ಅಲ್ಲೇ ರಾದ್ಧಾಂತ ಎಬ್ಬಿಸಿದರೆ ತಮ್ಮ ಹುದ್ದೆಗೇ ಸಂಕಷ್ಟ ಎಂದು ತಿಳಿದು ಡಾ.ನರಪೇತಲ ಸುಮ್ಮನಾಗಬೇಕಾಯಿತು.

ಆಕೆ ಸುಖಾಸುಮ್ಮನೆ ಏನೇನೂ ಕಷ್ಟವಿಲ್ಲದೆ ದೊರೆತ 10 ಲಕ್ಷ ರೂ.ಗಳನ್ನು ನೈಟಿಯೊಳಗೆ ತುರುಕಿಸಿಕೊಂಡು ಅದನ್ನು ಪೊಲೀಸರಿಗೆ ನೀಡಲು ಸಿದ್ಧತೆ ನಡೆಸುತ್ತಿದ್ದಾಳೆ ಎಂಬ ಅಂಶ ಅಸತ್ಯಾನ್ವೇಷಿಯ ಕಿವಿಗೆ ಬಿದ್ದಿದೆ.

Tuesday, April 11, 2006

ಕಿಸ್‌ಗೆ ಜೈಲು ಪ್ರಸ್ತಾಪ: ದೇಶದ ಉಷ್ಣತೆ ಹೆಚ್ಚಳ

(ಬೊಗಳೂರು ಬ್ಯುರೋ ವರದಿ)
ಬೊಗಳೂರು, ಏ.11- ಕಿಸ್ ಕೊಟ್ಟವರಿಗೆ ಜೈಲು ಶಿಕ್ಷೆ ಎಂಬ ವರದಿಯು ಭಾರತದಾದ್ಯಂತ 100 ಡಿಗ್ರಿ ಸೆಂಟಿಗ್ರೇಡ್ ತಾಪಮಾನ ಹೆಚ್ಚಳಕ್ಕೆ ಕಾರಣವಾಗಿದೆ.

ಈ ತಾಪಮಾನ ಏರಿದ್ದು ಯುವಜನತೆಯ ನೆತ್ತಿಯಲ್ಲೋ ಅಥವಾ ಅವರ ಹೃದಯದೊಳಗೋ ಎಂಬ ಬಗ್ಗೆ ಇನ್ನೂ ಸಂಶೋಧನೆ ನಡೆಯುತ್ತಿದೆ. ಇದರಿಂದ ಆತಂಕ ಮತ್ತು ಭಯ ಜತೆಗೆ ಸಿಟ್ಟು ಕೂಡ ಈ ಉಷ್ಣತೆ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

ಇಂಡೋನೇಷ್ಯಾದಲ್ಲಿ ಪ್ರಸ್ತಾಪಿಸಿರುವ ಈ ಹೊಸ ಕಾನೂನಿನ ಪ್ರಕಾರ, ಬಹಿರಂಗವಾಗಿ ಕಿಸ್ ಕೊಡುವುದು ಇಸ್ಲಾಂ ವಿರೋಧಿಯಾಗಿದ್ದು, ಅದಿನ್ನು ಕಾನೂನು ಬಾಹಿರವಾಗಲಿದೆ. ಅದಕ್ಕೂ ಸಮಯದ ಮಿತಿ ವಿಧಿಸಲಾಗಿದ್ದು, ಐದು ನಿಮಿಷಕ್ಕಿಂತ ಹೆಚ್ಚು ದಂಪತಿಗಳು ತುಟಿಗಳನ್ನು ಬಿಸಿಬಿಸಿಯಾಗಿ ಬೆಸೆದುಕೊಂಡಿರುವುದು ಅಪರಾಧವಂತೆ.

ಈ ಕಾನೂನಿನ ಪ್ರಸ್ತಾಪದ ಹಿನ್ನೆಲೆಯಲ್ಲಿ ದಂಪತಿಗಳು ಮಾತ್ರವಲ್ಲದೆ ಅಧಿಕೃತವಾಗಿ ದಂ ಇಲ್ಲದ ಪತಿಗಳು ಕೂಡ ಕಳವಳಗೊಂಡಿದ್ದಾರೆ. ತಮ್ಮದೇ ಹೆಂಡತಿಯರನ್ನು ಮುದ್ದಿಸಿದರೆ ಶಿಕ್ಷೆ ವಿಧಿಸಬಾರದು ಎಂದು ಗಂಡಭೇರುಂಡ ಸಂಘವು ಕೋರ್ಟಿಗೆ ಮೊರೆ ಹೋಗಲು ಸಿದ್ಧತೆ ನಡೆಸುತ್ತಿದೆ. ಇನ್ನೊಂದೆಡೆ ಪತ್ನಿ ಪೀಡಿತ ಸಂಘದವರು ತಮ್ಮದೇ ವಾದವನ್ನು ಮುಂದಿರಿಸಿಕೊಂಡು, ಈ ದಂಡ ಸಂಹಿತೆಯು ಗಂಡ-ಹೆಂಡತಿಯರ ಚುಂಬನಕ್ಕೆ ಮಾತ್ರವೇ ಸೀಮಿತವಾಗಿರಬೇಕು, ಗಂಡನೂ ಅಲ್ಲದ, ಹೆಂಡತಿಯೂ ಆಗಿರದವರು ಪರಸ್ಪರ ಮುದ್ದಿಸಿಕೊಂಡರೆ ಅದನ್ನು ಅಪರಾಧ ಎಂದು ಪರಿಗಣಿಸಬಾರದಾಗಿ ಮನವಿ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ.

ಈ ಹೊಸ ಕಾನೂನು ಪ್ರಸ್ತಾಪದಿಂದಾಗಿ ಭಾರತೀಯ ಚಿತ್ರರಂಗವಂತೂ ಆಕಾಶವೇ ಕಳಚಿ ಬಿದ್ದಂತೆ ತಲೆ ಮೇಲೆ ಕೈಹೊತ್ತು ಕುಳಿತುಬಿಟ್ಟಿದೆ. ಕಿಸ್ ನಿಷೇಧವು ಭಾರತಕ್ಕೂ ಬಂದು, ಇಲ್ಲಿನ ಮನರಂಜನಾ ಕ್ಷೇತ್ರಕ್ಕೂ ಲಗಾವು ಆದಲ್ಲಿ, ತಮ್ಮ ಚಿತ್ರಗಳೆಲ್ಲಾ ನೆಲಕಚ್ಚಿಯೇಬಿಡುತ್ತವೆ ಎಂಬುದು ಅವರ ಅಂಬೋಣ.

ಆದರೆ ಈ ಸುದ್ದಿಯಿಂದ ಕರೀನಾ ಕಪೂರ್, ಶಹೀದ್ ಕಪೂರ್ ತೀರಾ ಕಳವಳಗೊಂಡು ತಲೆ ಮರೆಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.

Monday, April 10, 2006

ಸಿನಿ(ಕ) ನಾಯಕಿಯರ ವಿರುದ್ಧ ಕ್ಯಾಬರೆ ಡ್ಯಾನ್ಸರ್‌ಗಳ 'ಬಿಚ್ರೋಶ'
(ಬೊಗಳೂರು ರಗಳೆ ಬ್ಯುರೋದಿಂದ)
ಬೊಗಳೂರು, ಏ.10- ಪೂರ್ತಿ ಬಿಚ್ಚೋಲೆ ಹೀರೋಯಿನ್‌ಗಳ ವಿರುದ್ಧ ಸಿಡಿದೆದ್ದಿರುವ 'ಅರ್ಧಂಬರ್ಧ ಬಿಚ್ಚೋಲೆ ಗೌರಮ್ಮ ಕ್ಯಾಬರೆ ಡ್ಯಾನ್ಸರ್‌ಗಳ ಸಂಘ'ವು, ಈಗಿನ ಸಿನಿಮಾ ಹೀರೋಯಿನ್‌ಗಳು ತಮ್ಮ ವೃತ್ತಿ ಬದುಕಿಗೇ ಕೊಳ್ಳಿ ಇಕ್ಕಿದ್ದಾರೆ ಎಂದು ತೀವ್ರ ಅಕ್ರೋಶ ವ್ಯಕ್ತಪಡಿಸಿದೆ.

ಈ ಮೊದಲು ಸಿನಿಮಾ ನಿರ್ಮಾಪಕರಿಗೆ ತಮ್ಮ ಚಿತ್ರದ ಹೀರೋಯಿನ್‌ಗಳ ಉಡುಗೆ ತೊಡುಗೆಗಳಿಗಾಗಿ ಭಾರಿ ವೆಚ್ಚ ಮಾಡಬೇಕಾಗಿತ್ತು. ನಿರ್ಮಾಪಕರ ಈ ಸಂಕಷ್ಟಭರಿತ ಅಳಲಿನ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಗರತಿ ಗೌರಮ್ಮರಂತಿದ್ದ ಹೀರೋಯಿನ್‌ಗಳು, ತಾವು ಬಿಚ್ಚೋಲೆ ಹೀರೋಯಿನ್‌ಗಳಾಗುತ್ತೇವೆ ಎಂದು ಪಣ ತೊಟ್ಟಿದ್ದರಲ್ಲದೆ, ಇನ್ನು ಮುಂದೆ ಯಾವುದೇ ಚಲನ ಚಿತ್ರದಲ್ಲಿ ನಮ್ಮ ಉಡುಗೆಗೆ ನೀವು ಹಣ ಖರ್ಚು ಮಾಡಬೇಕಾದ ಪ್ರಮೇಯವೇ ಬರದಂತೆ ನೋಡಿಕೊಳ್ಳುತ್ತೇವೆ ಎಂದು ನಿರ್ಮಾಪಕರ ಸಂಘಕ್ಕೆ ಭರವಸೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಇದರಿಂದಾಗಿ ನಿರ್ಮಾಪಕರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಸಿನಿಮಾ ಮಧ್ಯೆ ಜನಾಕರ್ಷಣೆಗಾಗಿಯೇ ಮಾಡಲಾಗುತ್ತಿದ್ದ ಕ್ಯಾಬರೆ ಡ್ಯಾನ್ಸ್ ಗಳ ತುರುಕಿಸುವಿಕೆಯನ್ನೇ ಕೈಬಿಟ್ಟಿದ್ದಾರೆ. ಅಲ್ಲದೆ ಈಗಿನ ಸಿನಿಮಾ ನಟಿಯರ ತುಂಡು-ತುಣುಕು ಉಡುಗೆಯ ಧಾವಂತವನ್ನು ನೋಡಿದ ಬಳಿಕ ಹರ್ಷಚಿತ್ತರಾಗಿರುವ ನಿರ್ಮಾಪಕರು, "ಕ್ಯಾಬರೆ ಡ್ಯಾನ್ಸರ್‌ಗಳಿಗೆ ಇನ್ನು ಕ್ಯಾರೇ ಮಾಡಬೇಕಾಗಿಲ್ಲ" ಎಂದು ಒದರಿದ್ದಾರೆ ಎಂಬುದಾಗಿ ವರದಿಯಾಗಿದೆ.

ಈ ಕಾರಣಕ್ಕೆ ಈ ಬಿಚ್ಚೋಲೆ ಗೌರಮ್ಮ ಕ್ಯಾಬರೆ ನರ್ತಕಿಯರು ತಮ್ಮ ಜೀವಮಾನದಲ್ಲೇ ಮೊದಲ ಬಾರಿಗೆ ಎಂಬಂತೆ ಮೈತುಂಬಾ ಬಟ್ಟೆ ಧರಿಸಿಕೊಂಡು ವಿಧಾನಸೌಧದೆದುರು ಪ್ರತಿಭಟನೆ ನಡೆಸಲಿದ್ದಾರೆ.

ಈ ವರದಿಗೆ ಪ್ರತಿಕ್ರಿಯಿಸಿರುವ ಹೆರಾಯಿನ್‌ನಷ್ಟು ಮಾದಕವಾಗಿರುವ ಹೀರೋಯಿನ್‌ಗಳ ಸಂಘವು, ತಾವು ಕೂಡ, "ಹುಟ್ಟಿದಾಗ ಯಾವ ರೀತಿ ಉಡುಗೆ" ಎಂಬುದಿತ್ತೋ, ಅದೇ ಮಾದರಿಯಲ್ಲಿ, ವಿಧಾನ ಸೌಧದೆದುರು ಪ್ರತಿಭಟನೆ ನಡೆಸುವುದಾಗಿ ಪ್ರಕಟಿಸಿದೆ.
ಈ ಮಧ್ಯೆ, ನಮ್ಮ ದೇಹವೇ ಒಂದು ಜಾರುಬಂಡಿ ಆಗಿರುವಾಗ ಮೈಮೇಲೆ ಸುತ್ತಿದ ಬಟ್ಟೆ ಕೆಳ ಜಾರಿದರೆ ನಾವೇನೂ ಮಾಡೋಕಾಗುತ್ತೆ ಎನ್ನುವುದು ಬಿಚ್ಚಮ್ಮ ನರ್ತಕಿಯರ ಸಂಘದ ಸಮರ್ಥನೆ.
ಹುಟ್ಟುಡುಗೆ ಪ್ರತಿಭಟನಾ ಸಭೆ ಬಗ್ಗೆ ನಟೀ ಮಣಿಯರ ಸಂಘದ ಅಧ್ಯಕ್ಷೆ ಬಿಚ್ಚಶ್ರೀಯವರನ್ನು ಪ್ರಶ್ನಿಸಿದಾಗ, ತಾವು ಈ ರೀತಿ ಪ್ರತಿಭಟನೆ ಮಾಡಿದರೆ, ಸಾಕಷ್ಟು ಸಂಖ್ಯೆಯಲ್ಲಿ ನಮ್ಮ ಅಭಿಮಾನಿಗಳು ಅಲ್ಲಿ ಸೇರುತ್ತಾರೆ (ತಮ್ಮನ್ನು ನೋಡಲೆಂದು!), ಇದರಿಂದ ನಮ್ಮ ಜನಬಲ ಎಷ್ಟೆಂಬುದನ್ನು "ಬಟಾಬಯಲು" ಮಾಡಿದಂತಾಗುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ.

Saturday, April 08, 2006

ನನ್ಮೇಲೆ ಅತ್ಯಾಚಾರ !

(ಬೊಗಳೂರು ರಗಳೆ ಬ್ಯುರೋದಿಂದ)
ಬೊಗಳೂರು, ಏ.8- ನನ್ಮೇಲೆ ಅತ್ಯಾಚಾರವಾಗಿದೆ, ನನ್ ಮೇಲೆ ಅತ್ಯಾಚಾರವಾಗಿದೆ ಅಂತ ಬಾಯಿ ಬಾಯಿ ಬಡಿದುಕೊಳ್ಳುತ್ತಿದ್ದ ಶಿಖಾಮಣಿಯ ಬಾಯಿಯಿಂದ ಸತ್ಯ ಹೊರ ಹಾಕಿಸಲು ಅಸತ್ಯ ಅನ್ವೇಷಿ ಹೊರಟಾಗಲೇ ಬೊಗಳೂರು ಬ್ಯುರೋದಲ್ಲಿ ಸಂಚಲನ ಮೂಡಿತ್ತು.
'ಅಲ್ಲಾ, ಈ ಶಿಖಾಮಣಿ ಹೇಳಿ ಕೇಳಿ 'ಗಂಡು'. ಅಲ್ಲವೇ? ಗಂಡಸರ ಮೇಲೂ ಅತ್ಯಾಚಾರ ನಡೆಯುವ ಕಾಲ ಬಂತಲ್ಲ. ಏನೇ ಆಗಲಿ, ಇದು ನಮ್ಮ ರದ್ದಿ ಪತ್ರಿಕೆಗೊಂದು ಒಳ್ಳೆಯ ಸುದ್ದಿ' ಎಂಬ ವಿತಂಡ ವಾದದೊಂದಿಗೆ ತಂಡವು ಅಸತ್ಯ ಶೋಧನೆಗೆ ತೊಡಗಿತು.ಶಿಖಾಮಣಿಯ ಮನೆಗೆ ನಕ್ಸಲರಂತೆ ನುಗ್ಗಿ ಅವನನ್ನೇ ನೇರವಾಗಿ ತೀವ್ರ ತರಾಟೆಗೆ ತೆಗೆದುಕೊಂಡ ತಂಡ, ಎಷ್ಟೇ ಕೈಕಾಲು ಬಡಿದರೂ, ಕಾಲು ಮೇಲೆ-ತಲೆ ಕೆಳಗೆ ಮಾಡಿದರೂ ಶಿಖಾಮಣಿ ಬಾಯಿಂದ ಅಸತ್ಯ ಕಕ್ಕಿಸಲಾಗಲೇ ಇಲ್ಲ.
ಇಂತಿರಲು... ಚಿಂತಾಕ್ರಾಂತವಾಗಿ ಕುಳಿತ ತಂಡ ತಲೆ ಮೇಲೆ ಕೂದಲೇ ಇಲ್ಲದ ಕಡೆ ಪರಪರನೆ..... ಕೊನೆ ಕೊನೆಗೆ ರಪ ರಪನೆ ಕೆರೆದುಕೊಂಡಿದ್ದಾಯಿತು. ಊಹೂಂ... ಏನು ಮಾಡುವುದೆಂದು ತಮ್ಮ ಮೇಲೇ ಅತ್ಯಾಚಾರವಾದವರಂತೆ ತಲೆ ಮೇಲೆ ಕೈಹೊತ್ತು ಕುಳಿತ ತಂಡದ ಸ್ಥಿತಿ ನೋಡಲಾಗದೆ ಗಹ ಗಹಿಸಿ ನಗಲಾರಂಭಿಸಿದ ಶಿಖಾಮಣಿಯನ್ನು ನೋಡಿ ತಂಡಕ್ಕೆ ದೂರದಲ್ಲೆಲ್ಲೋ ಸುಂಯ್ಯನೆ ಸುಳಿವೊಂದು ಗೋಚರಿಸಿದಂತಾಯಿತು.
''ಏನು.... ಇನ್ನೊಮ್ಮೆ ಹೇಳು... ನಿಧಾನವಾಗಿ... ಬಿಡಿಸಿ ಬಿಡಿಸಿ ಹೇಳು'' ಎಂದು ತನಿಖಾ ತಂಡವು ಶಿಖಾಮಣಿಯನ್ನು ಎಳೆದಾಡತೊಡಗಿತು.
ಆಗ ಶಿಖಾಮಣಿ ನಿಧಾನವಾಗಿ ಬಾಯಿಬಿಟ್ಟ. ಇಲ್ಲಿ ಅಲ್ಲ ಸ್ವಾಮೀ, ಮಧ್ಯ ಪ್ರದೇಶದಲ್ಲಿ ಕ್ರಿಶ್ಚಿಯನ್ ಪಂಗಡದ 'ನನ್' ಮೇಲೆ ಅತ್ಯಾಚಾರವಾಗಿದೆ ಅಂತ ಶಿಖಾಮಣಿ ಸತ್ಯದ ತಲೆ ಮೇಲೆ ಹೊಡೆದಂತೆ ಒದರಿದಾಗ, ಅಸತ್ಯ ಶೋಧನಾ ತಂಡ ಬಲೂನಿಗೆ ಸೂಜಿ ಚುಚ್ಚಿದಂತೆ ಸುಂಯ್ಯನೆ ಉತ್ಸಾಹದ ಗಾಳಿಯನ್ನೆಲ್ಲಾ ಕಳೆದುಕೊಂಡು ಠುಸ್ ಆಗಿ ಮರಳಿತು.

ಅಪ್ಪಿ ತಪ್ಪಿ ಮಾಡಿದ ಸತ್ಯಾನ್ವೇಷಣೆ
(ಬೊಗಳೂರು ನೆಟ್ಗಳ್ಳರ ಬ್ಯುರೋ)

ವರಾತ್ರಿ ಅಂದರೆ ಫಸ್ಟ್ ನೈಟಾ? ಸೆಕ್ಸ್ ವರ್ಕರ್ಸ್ ಅಂತ ನಾವೆಲ್ಲಾ ಹೀಗಳೆಯುವ ಮಿಟುಕಲಾಡಿ ನಿತ್ಯ ಸುಮಂಗಲಿಯರಿಗೆ ಫಸ್ಟ್ ನೈಟ್ ಎನ್ನುವುದು "ಮೊದಲ ರಾತ್ರಿ"ಯಾಗುವುದು ಎಂದಿಗೂ ಸಾಧ್ಯವಿಲ್ಲ.
ಫಸ್ಟ್ ಅಂದರೆ ಮೊದಲ ಅನ್ನೋದಕ್ಕೆ ಹೊಸದಾದ ಆರಂಭ ಎಂದೂ ಹೇಳಬಹುದಲ್ಲವೆ? ಈ ಕಾರಣಕ್ಕೆ ಇದೇ ಹೊಸತನ್ನು ಇನ್ನೂ ಸ್ವಲ್ಪ ಮುಂದಕ್ಕೆ ಕೊಂಡೊಯ್ದರೆ 'ನವ' ಎಂದೂ ಕರೆಯಬಹುದಲ್ಲ. ಇದೇ ಕಾರಣಕ್ಕೆ ನವರಾತ್ರಿಯನ್ನು ಕೂಡ ಫಸ್ಟ್ ನೈಟ್ ಎಂದೇ ಭಾವಿಸಿರುವವರಿವರು.
ಇದಕ್ಕಾಗಿಯೇ ನವರಾತ್ರಿಗೂ ಫಸ್ಟ್ ನೈಟ್‌ಗೂ ಸಂಬಂಧ ಕಲ್ಪಿಸಬೇಕಾಯಿತು. ಯಾಕೆಂದರೆ ಈ ನಿತ್ಯ ಸುಮಂಗಲಿಯರಿಗೆ ಯಾವತ್ತೂ ಫಸ್ಟ್ ನೈಟ್ ಗಳೇ ಅಲ್ಲವೆ?
ಹಾಗಂತ, ಈ ನಿತ್ಯ ಸುಮಂಗಲಿಯರಿಗೆ ಯಾವತ್ತೂ ದೇವಳದ ಪ್ರವೇಶ ನಿಷಿದ್ಧ. ಆದರೆ ವಾರಾಣಸಿಯಲ್ಲಿ ನಡೆಯುವ ಸಂಪ್ರದಾಯವೊಂದರ ಪ್ರಕಾರ, ನವರಾತ್ರಿ ಸಂದರ್ಭ ನಿತ್ಯ ಸುಮಂಗಲಿಯರಿಗೆ ಭಾರಿ ಬೇಡಿಕೆ. ಛೆ.. ತಪ್ಪಾಗಿ ತಿಳಿದುಕೊಳ್ಳಬೇಡಿ ಸ್ವಾಮೀ, ನಾನು 'ಹಾಗಲ್ಲ' ಹೇಳಿದ್ದು. ಹೆಚ್ಚಿನ ವಿವರ ಬೇಕಿದ್ದರೆ ಇಲ್ಲಿ ಓದಿ.

Friday, April 07, 2006

ನಿಧನಕ್ಕೆ ತೀವ್ರ ಸಂತಸ !

(ಬೊಗಳೂರು ಬ್ಯೂರೊ ವರದಿ)
ಬೊಗಳೂರು, ಏ.7- ಆಪರೇಶನ್ ಅಸತ್ಯ ಕಾರ್ಯಾಚರಣೆ ಪ್ರಯುಕ್ತ ಬೊಗಳೆ ಪಂಡಿತ ಸಮೀಪದ ಪುತ್ತೂರಿನ ಮನೆಯೊಂದಕ್ಕೆ ಭೇಟಿ ನೀಡಿದಾಗ, ಕೆಲವರೆಲ್ಲಾ ಸೇರಿಕೊಂಡು ಒಬ್ಬಾತನಿಗೆ ಚೆನ್ನಾಗಿ ತದುಕುತ್ತಿದ್ದರು. ಅಲ್ಲಿದ್ದವರನ್ನೆಲ್ಲಾ ಸರಿಸಿ ಮುನ್ನುಗ್ಗಿದಾಗ ಹ್ಯಾಪ್ ಮೋರೆಯ 'ಭೂಪ'ತಿ ಎದುರಾದ. ಆತನನ್ನೇ ಆಪರೇಶನ್‌ಗೊಳಪಡಿಸಿದಾಗ ನಿಜವಾದ ಅಸತ್ಯ ಹೊರಬಂತು.
ವಿಷಯ ಏನಪ್ಪಾ ಅಂದ್ರೆ, ಈ 'ಭೂಪ'ತಿಯ ಪ್ರತಿಸ್ಪರ್ಧಿ ಎಂದೇ ಢಾಣಾಢಂಗುರವಾಗಿಬಿಟ್ಟಿದ್ದ ಶ್ರೀಮಾನ್ ಅಲ್ಲೋಲ ಕಲ್ಲೋಲ ಅವರು ಇತ್ತೀಚೆಗೆ ನಿಧನರಾಗಿದ್ದೇ ಈ ರಾದ್ಧಾಂತಕ್ಕೆ ಕಾರಣ. ಬಹುತೇಕ ಎಲ್ಲ ದಕ್ಷಿಣ ಕನ್ನಡಿಗರಂತೆ ಈತ ಕೂಡ ಒಂದಿಷ್ಟು ಪ್ರಚಾರ ಪ್ರಿಯ. ಪ್ರತಿಯೊಂದು ಸಣ್ಣ ವಿಷಯಕ್ಕೂ ಪತ್ರಿಕಾ ಹೇಳಿಕೆ ನೀಡುವುದು ಈತನ ಅಭ್ಯಾಸ.
ಹಾಗೆಯೇ ಅಲ್ಲೋಲ ಕಲ್ಲೋಲ ನಿಧನದಲ್ಲಿ ದೊರೆಯುವ ಪತ್ರಿಕಾ ಪ್ರಚಾರದಲ್ಲಿ ತನ್ನದೂ ಒಂದು ಪಾಲಿರಲಿ ಎಂದು ಯೋಚಿಸಿದ ಈ 'ಭೂಪ'ತಿ ಆ ರೀತಿ ಯೋಚನೆ ಮಾಡಿದ್ದೇ ಕುತ್ತಿಗೆಗೆ ಬಂದು ಬಿಟ್ಟಿದೆ.ಮರು ದಿನ ಪತ್ರಿಕೆ ಬೆಳ್ಳಂಬೆಳಗ್ಗೆ ಎಲ್ಲೆಡೆ ವಿತರಣೆಯಾಗುತ್ತಿರುವಂತೆಯೇ ಮೊದಲ ಫೋನ್ ಪತ್ರಿಕಾಲಯಕ್ಕಲ್ಲ, 'ಭೂಪ'ತಿಯ ಮನೆಗೆ!
ಆ ದುರಂತದ ದಿನ ಈ 'ಭೂಪ'ತಿ ಪತ್ರಿಕೆ ಓದಲು ಕುಳಿತಿದ್ದನಷ್ಟೆ. ಅಲ್ಲೋಲ ಕಲ್ಲೋಲ ಮಹಾಶಯನ ನಿಧನ ವಾರ್ತೆಯ ಕೆಳ ತುದಿಯಲ್ಲಿ, ಸಂತಾಪ ನೀಡಿದವರ ಪಟ್ಟಿ. ಅದೂ ಸಾಕಷ್ಟು ದೊಡ್ಡದೇ ಇತ್ತು. 'ಭೂಪ'ತಿ ಕೂಡ ತನ್ನ ಸಂತಾಪದ ಹೆಸರು ಎಲ್ಲಿ ಪ್ರಕಟವಾಗಿದೆ ಎಂದು ಬಾರಿ ನೋಡಿ ಕಣ್ಣು, ಮನಸ್ಸು ತಂಪು ಮಾಡಿಕೊಳ್ಳೋಣ ಎಂದು ನಿಧನ ವಾರ್ತೆಗೆ ಕಣ್ಣು ಹಾಯಿಸುತ್ತಿದ್ದಾಗಲೇ ಆತನಿಗೆ ಹಾರ್ಟ್ ಅಟ್ಯಾಕ್ ಆಗುವುದೊಂದು ಬಾಕಿ!
ಅಲ್ಲಿ ಪ್ರಕಟವಾಗಿದ್ದು : ಅಲ್ಲೋಲ ಕಲ್ಲೋಲ ನಿಧನಕ್ಕೆ ಶ್ರೀಮಾನ್ 'ಭೂಪ'ತಿಯವರು ತೀವ್ರ ಸಂತಸ ಸೂಚಿಸಿದ್ದಾರೆ ಎಂದು !

ಅಪ್ಪಿ ತಪ್ಪಿ ಮಾಡಿದ ಸತ್ಯಾನ್ವೇಷಣೆ:

(ಬೊಗಳೂರು ನೆಟ್ ಕಳ್ಳರ ವಿಭಾಗ ವಿಶೇಷ ವರದಿ)
ತಾಂತ್ರಿಕ ಯುಗದಲ್ಲಿ ಕಂಪ್ಯೂಟರ್ ಕ್ರೇಜಿ ಜನಸಾಮಾನ್ಯರ ಮೂಗಿನ ಕೆಳಗೆ ಒಂದು 'U' ಆಕಾರದ ವಕ್ರರೇಖೆ ಮೂಡಿಸುವ ಸುದ್ದಿಯೊಂದು ಇಲ್ಲಿ ಪ್ರಕಟವಾಗಿದೆ. 100 ಡಾಲರ್‌ ಕೊಟ್ಟರೆ ತೊಡೆ ಮೇಲೊಂದು (ಲ್ಯಾಪ್-ಟಾಪ್)ಕಂಪ್ಯೂಟರ್ ಇಟ್ಟುಕೊಳ್ಳಬಹುದು ಎಂಬುದು ಸಿಹಿ ಸುದ್ದಿ. ಆ ಕನಸು ಶೀಘ್ರ ನನಸಾಗಲಿ ಎಂಬುದು ಬೊಗಳೆ ಪಂಡಿತನ ಹಾರೈಕೆ.

Tuesday, April 04, 2006

ಸ್ವಲ್ಪ ಕಾಯಿರಿ....

ಅಸತ್ಯದ ಅನ್ವೇಷಣೆಗೆ ಹೋಗಿದ್ದೇನೆ, ಶೀಘ್ರವೇ ಮರಳಿ ಬರುವೆ.....

ಎಂಜಿನ್ ಇಲ್ಲದ ರೈಲು: ಬ್ರೇಕಿಂಗ್ ನ್ಯೂಸ್ ಅಲ್ಲವೆಂದ ಬೊ.ರ.

[ಬೊಗಳೂರು ಪಟ್ಟೆ-ರಹಿತ ರೈಲು ಬ್ಯುರೋ] ಬೊಗಳೂರು: ಆಫ್‌ಲೈನ್ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯೊಂದು ಆನ್‌ಲೈನ್ ಸಂಪಾದಕರ ಕಣ್ಣು ಕುಕ್ಕಿದ್ದು, ಎಂಜಿನ್ ಇಲ್ಲದೆ...