ಬೊಗಳೆ ರಗಳೆ

header ads


ಪರಿತ್ಯಕ್ತ ಪತ್ನಿ, ಮಕ್ಕಳ ಪುನರ್ವಸತಿಗೆ ಹೋರಾಟ

ಭೀತಿ:ಮೇಧಾ ಜತೆ ಕೈಜೋಡಿಸಿದ ಗರೀಬ್ ಖಾನ್

(ಬೊಗಳೂರು ಬ್ಯುರೋ ತನಿಖಾ ವರದಿ)
ಬೊಗಳೂರು, ಏ.24- ಬಾಲಿವುಡ್ಡನ್ನು ಹಾಲಿವುಡ್ ಅಂತ ತಿಳಿದುಕೊಂಡು ಚಿತ್ರಗಳನ್ನು ನಿರ್ಮಿಸುತ್ತಾ, ಎಡಗಣ್ಣು ಆಸ್ಕರ್ ಪ್ರಶಸ್ತಿಯ ಮೇಲೆ ಹಾಗೂ ಬಲಗಣ್ಣು ಫಾಲ್ಕೆ ಪ್ರಶಸ್ತಿಯ ಮೇಲಿಟ್ಟಿರುವ ಮಾಜಿ ಚಾಕಲೇಟ್ ಹೀರೋ ಗರೀಬ್ ಖಾನ್, ಈಗ ನರಮೇಧ ಬಚಾವೋ ಆಂದೋಲನಕ್ಕೆ ಧುಮುಕಿರುವುದು ಹಲವು ಚರ್ಚೆಗಳಿಗೆ ವೇದಿಕೆಯೊದಗಿಸಿದೆ.

ನರ್ಮದಾ ಡ್ಯಾಮ್ ಅನ್ನೇ ಡ್ಯಾಮೇಜ್ ಎಂದು ಪರಿವರ್ತಿಸುತ್ತಾ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಿಕೊಡಲು ಹೋರಾಡುತ್ತಿರುವ ಮೇಧಾ ಪಾಟ್ಕರ್‌ಗೆ ಗರೀಬ್ ಖಾನ್ ತಮ್ಮ ಒಳಮನಸ್ಸಿನ ಪ್ರಕೃತಿಯ ಕರೆಗೆ ಓಗೊಟ್ಟು ದಿಢೀರ್ ಆಗಿ ಬೆಂಬಲ ನೀಡಲು ಸೆಟೆದು ನಿಂತಿರುವುದರ ಹಿಂದೆ ಭಾರಿ ಷಡ್ಯಂತ್ರವಿದೆ ಎಂಬುದು ಅಸತ್ಯಾನ್ವೇಷಿಯ ಗಮನಕ್ಕೆ ಬಂದಿದೆ.

ಇತ್ತೀಚೆಗೆ ಕಿರಣ್ ರಾವ್‌ ಕೈಹಿಡಿಯಲು ಅನುಕೂಲವಾಗುವ ನಿಟ್ಟಿನಲ್ಲಿ ಗರೀಬ್ ಅವರು, ಷೋಡಶ ವರುಷ ತಮ್ಮೊಂದಿಗೆ ಸಂಸಾರ ಸಾಗಿಸಿ, ಜೀವಾವಧಿ ವಿವಾಹ ವಿಚ್ಛೇದನೆ ಶಿಕ್ಷೆ ಎದುರಿಸುತ್ತಿರುವ ರೀನಾ ದತ್ ಮತ್ತು ಇಬ್ಬರು ಮಕ್ಕಳಿಗೆ ಪುನರ್ವಸತಿ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಮೇಧಾ ಪಾಟ್ಕರ್ ಅವರು ದಿಲ್ಲಿಯ ಜಂತರ್ ಮಂತರ್ ಎದುರು ಉಪವಾಸ ಸತ್ಯಾಗ್ರಹ ಮಾಡುವರೆಂಬ ಭೀತಿಯೇ ಗರೀಬ್ ಖಾನ್‌ ಪ್ರಕೃತಿಯ ಕರೆಗೆ ಓಗೊಡಲು ಕಾರಣ ಎಂದು ತಿಳಿದುಬಂದಿದೆ.

ಇನ್ನೊಂದೆಡೆ, ನರ್ಮದಾ ನದಿಯ ಸುತ್ತಮುತ್ತ ತಮ್ಮ ಚಿತ್ರಗಳಿಗೆ ಆಗಾಗ್ಗೆ ಶೂಟಿಂಗ್ ನಡೆಸಬೇಕಿರುವುದರಿಂದ ಅಲ್ಲಿ ಸದಾ ಕಾಲ ನೀರು ತುಂಬುತ್ತಿರಬೇಕು, ನರ್ಮದೆ ತುಂಬಿ ಹರಿಯುತ್ತಿರಬೇಕು. ನದಿ ಜೋಡಿಸುವ ರೀತಿಯಲ್ಲೇ, ನರ್ಮದಾ ಮತ್ತು ಮೇಧಾ ಶಬ್ದಗಳ ಜೋಡಣೆಯಿಂದ ನರಮೇಧ ಎಂಬ ಪದಕ್ಕೆ ಅಲ್ಲಿ ಅರ್ಥ ಕಲ್ಪಿಸುವ ನಿಟ್ಟಿನಲ್ಲಿ ಮತ್ತು ಜಗತ್ತಿಗೆ ನರಮೇಧ ಎಂದರೇನೆಂಬುದನ್ನು ತೋರಿಸಿಕೊಡುವ ನಿಟ್ಟಿನಲ್ಲಿ ಅಲ್ಲಿನ ಸಂತ್ರಸ್ತರ ಗೋಳನ್ನು ಚಿತ್ರೀಕರಿಸಿಕೊಂಡು, ತಮ್ಮ ಮುಂದಿನ "ರಂಗ್ ದೇ ನರಮೇಧಾ" ಚಿತ್ರಕ್ಕೆ ಸಹಜತೆ ತುಂಬಬೇಕು. ಈ ಮೂಲಕ ಆಸ್ಕರ್, ಫಾಲ್ಕೆಗಳನ್ನು ಬುಟ್ಟಿಗೆ ಹಾಕಿಕೊಳ್ಳಬಹುದೆಂಬ ದೂರ-ದುರಾಲೋಚನೆಯೂ ಇದೆ ಎಂದು ಅವರು ಮೇಧಾ ನಿವಾಸದಲ್ಲಿ ಕಿಕ್ಕಿರಿದು ತುಂಬಿದ್ದ ಪತ್ರಿಕಾಗೋಷ್ಠಿಯಲ್ಲಿ ಅಸತ್ಯಾನ್ವೇಷಿಗೆ ಮಾತ್ರ ಸ್ಪಷ್ಟಪಡಿಸಿದ್ದಾರೆ.

ಅನ್ಯಾಯ, ಅಕ್ರಮ, ಭ್ರಷ್ಟಾಚಾರ

ಮಾನ್ಯ ಓದುಗರೆ,
ಮಾಂತ್ರಿಕ ಕಾರಣಗಳಿಂದಾಗಿ ನಮ್ಮ ನಿನ್ನೆಯ ಸಂಚಿಕೆ ಪ್ರಕಟವಾಗಿಲ್ಲ. ಓದುಗರಿಗಾದ ಸಂತೋಷಕ್ಕೆ ವಿಷಾದಿಸುತ್ತೇವೆ. ನಿನ್ನೆ ಸಂಚಿಕೆ ಎಷ್ಟು ಬಾರಿ ಅಪ್‌ಲೋಡ್ ಮಾಡಿದರೂ ಯಾವುದೋ ಮಾಂತ್ರಿಕ ಸಮಸ್ಯೆಯಿಂದಾಗಿ ಅದು ನೆಟ್‌ನೊಳಕ್ಕೆ ತೂರಿಕೊಳ್ಳುತ್ತಿರಲಿಲ್ಲ. ಅದಕ್ಕಾಗಿ ನಿನ್ನೆಯ ಹಳಸಲು ಸುದ್ದಿಯನ್ನು ಇಂದು ನೀಡುತ್ತಿದ್ದೇವೆ. ನಿಮಗಾದ ತೊಂದರೆಗೆ ಧನ್ಯವಾದವಿರಲಿ. -ಸಂ.

ಕಾಮೆಂಟ್‌‌ ಪೋಸ್ಟ್‌ ಮಾಡಿ

7 ಕಾಮೆಂಟ್‌ಗಳು

  1. ತಿಳಿಯದ ಬಹಳಷ್ಟು ವಿಷಯಗಳನ್ನು ಬೊಗಳೆ ಬಿಟ್ಟಿದ್ದೀರ. ನಿನ್ನೆಯ ಸಂಚಿಕೆ ಬಿಡುಗಡೆ ಆಗದಿದುದ್ದಕ್ಕೆ ನನಗೆ ನಿಜಕ್ಕೂ ಬೇಜಾರಾಗಿದೆ. ನಿನ್ನೆಯ ಸಂಚಿಕೆ ನಿನ್ನೆಯೇ ಬಂದಿದ್ದರೆ ಇಂದು ಹೊಸತೊಂದು ಹುಳ ನಿಮ್ಮ ತಲೆಯಿಂದ ಆಚೆ ಬರುವುದನ್ನು ನೋಡಿ ಸಂತೋಷಿಸಬಹುದಿತ್ತು.

    ಪ್ರತ್ಯುತ್ತರಅಳಿಸಿ
  2. ಅಲ್ಲಾ ಶ್ರೀನಿವಾಸ್ ಅವರೆ,
    ನಮ್ಮ ತಲೆ ಹೊಕ್ಕಿದ್ದು ಮತ್ತು ಹೊರಬರಲು ಸಿದ್ಧವಾಗುತ್ತಿರುವುದು ಹುಳ ಅಲ್ಲ, ಇತ್ತೀಚೆಗೆ ಪೇಟೆ-ಪಟ್ಟಣಗಳಲ್ಲಿ ಮೇಡ್ ಇನ್ ಚೀನಾ ಐಟಂಗಳು ಜಾಸ್ತಿಯಾಗ್ತಿವೆಯಲ್ಲಾ, ಅಂತೆಯೆ ತಲೆಯಲ್ಲಿರುವುದು ಚೈನೀಸ್ ನೂಡಲ್ಸ್ ಎನ್ನುವುದು ಗೊತ್ತಾಗಿಲ್ಲವೆ?

    ಪ್ರತ್ಯುತ್ತರಅಳಿಸಿ
  3. ಬೊಗಳೆ ಬೇಡ, ಸಲಹೆ ಬೇಕು.

    ಬರಹದಿಂದ ಲೇಖನಗಳನ್ನು ಯೂನಿಕೋಡಿಗೆ ಪರಿವರ್ತಿಸಿ, ಸೈಟ್‍ಗೆ ಹಾಕುವಾಗ, ಪ್ಯಾರಾಗಳ ನಡುವಿನ ಅಂತರ (space) ಕಾಪಾಡುವುದು ಹೇಗೆ? ಎಲ್ಲವೂ ಕಲಸಿಹೋಗುವ, ಅಥವಾ ಪದಗಳ ನಡುವೆ ಅನವಸ್ಯಕ ಜಾಗ ಏರ್ಪಡುವ ಸಮಸ್ಯೆ ಎದುರಿಸುತ್ತಿದ್ದೇನೆ.

    ಪ್ರತ್ಯುತ್ತರಅಳಿಸಿ
  4. ಶ್ರೀ ಶ್ರೀ ಶ್ರೀ (=ಶ್ರೀ ಥ್ರೀ) ಅವರೆ,

    ಬರಹದ ಬಗ್ಗೆ ನನಗೆ ಅಷ್ಟೇನೂ ತಿಳಿದಿಲ್ಲ. ಆದರೆ ಯೂನಿಕೋಡ್‌ನಲ್ಲಿ ಪ್ಯಾರಾಗಳ ನಡುವೆ ಸ್ಪೇಸ್ ಕೊಡಬೇಕಿದ್ದರೆ, ನಾವು ಬ್ಲಾಗ್ ಪೋಸ್ಟ್ ಮಾಡುವಾಗಲೇ ಒಂದು ಎಂಟರ್ ಹೆಚ್ಚು ಕೊಟ್ಟರಾಯಿತು. ನಿಮ್ಮ ಸೈಟಿಗೆ ಹೋಗಿ ನೋಡಿದರೆ ಈ ಸ್ಪೇಸ್ already ಇದೆ? ಅದೇ ರೀತಿ ಮಾಡುತ್ತಿದ್ದೀರೆಂದು ಭಾವಿಸಿರುವೆ.

    ಆ ಮೇಲೆ ಇನ್ನೊಂದು ವಿಷಯ ನಿಮ್ಮ ಸೈಟ್‌ನಲ್ಲಿ ಗಮನಿಸಿದೆ. ರಾಜ್ ಮತ್ತು ಕುಮಾರ್ ಒಟ್ಟು ಸೇರಿಸಿದರೆ ರಾಜ್ಕುಮಾರ್ ಎಂದಾಗಿದೆ. ಅದು ರಾಜ್‌ಕುಮಾರ್ ಎಂದು "ಪ್ರತ್ಯೇಕ ಜೋಡಿ" ಮಾಡಬೇಕಿದ್ದರೆ, "ರಾಜ್" ಬರೆದ ತಕ್ಷಣ ''ಇಲಿ''ಯ ಬಲಗಣ್ಣು (right click) ಒತ್ತಿದರೆ ಅಲ್ಲಿ ತಳಭಾಗದಲ್ಲಿ ''Insert Unicode control character'' ಎಂದಿರುತ್ತದೆ,

    ಅದರಲ್ಲಿ ಮುಂದುವರಿದರೆ ''ZWNJ- Zero width non joiner'' ಅನ್ನೋದನ್ನು (ಮೇಲಿನಿಂದ 4ನೇ option) ಕ್ಲಿಕ್ ಮಾಡಿದ ನಂತರ "ಕುಮಾರ್" ಕಂಪೋಸ್ ಮಾಡಿದರೆ "ರಾಜ್‌ಕುಮಾರ್" ಆಗುತ್ತದೆ. ಆದರೆ ಈ ರೀತಿ ನಾವು ನೇರವಾಗಿ ಟೆಂಪ್ಲೇಟ್‌ನಲ್ಲೇ ಮಾಡುವಂತಿಲ್ಲ. ನೋಟ್ ಪ್ಯಾಡ್‌ ಅಥವಾ ಇನ್ಯಾವುದೇ ಗೀಚೋ ಪ್ಯಾಡ್‌ನಲ್ಲಿ ಈ ರೀತಿ ಮಾಡಿದ ನಂತರವಷ್ಟೇ ಅದನ್ನು ವೆಬ್ ಟೆಂಪ್ಲೇಟ್‌ಗೆ ಹಾಕಬಹುದು.

    ಪ್ರತ್ಯುತ್ತರಅಳಿಸಿ
  5. ಶ್ರೀ-ಥ್ರೀ ಅವರೆ.
    ಒಂದು ವಿಷಯ ಮರೆತುಬಿಟ್ಟೆ. ನೀವು ಬರಹದಲ್ಲಿ ಟೈಪಿಸಿದ ಬಳಿಕ (ಟೈಪಿಂಗ್‌ಗೆ ಯಾವ ಪ್ರೋಗ್ರಾಂ ಎಂದು ತಿಳಿಯದು. ಯುನಿಕೋಡ್ ಸಪೋರ್ಟ್ ಮಾಡುವ ನೋಟ್ ಪ್ಯಾಡ್ ನಲ್ಲಿ ಆದರೆ ಈ ಉದಾಹರಣೆ) ಮೇಲಿರುವ Format ಮೆನುವಿನಲ್ಲಿ wordwrap ಕ್ಲಿಕ್ ಆಗಿದ್ದರೆ, ಅದನ್ನು unclick ಮಾಡಿನೋಡಿ. ಹೀಗಾದರೆ ಎಲ್ಲವೂ ಕಲಸುಮೇಲೋಗರವಾಗುವ ಅಥವಾ ಅನವಶ್ಯಕ ಸ್ಪೇಸ್ ಉಂಟಾಗುವ ಸಮಸ್ಯೆ ನಿವಾರಣೆಯಾಗಬಹುದೆಂದು ತೋರುತ್ತದೆ. ಟ್ರೈ ಮಾಡಿ ನೋಡಿ.

    ಪ್ರತ್ಯುತ್ತರಅಳಿಸಿ
  6. ಶ್ರೀಥ್ರೀ ಅವರೇ, ನಿಮಗೆ ಯಾವುದೇ ಕನ್ನಡ ಫಾಂಟ್ ಗಳ ತೊಂದರೆ ಎದುರಾಗುತ್ತಿದ್ದಲ್ಲಿ http://sampada.net/ ನ ನಾಡಿಗ್ ಅವರನ್ನು ಸಂಪರ್ಕಿಸಿ.

    ಪ್ರತ್ಯುತ್ತರಅಳಿಸಿ
  7. ಧನ್ಯವಾದಗಳು. ನಿಮ್ಮ ಸಲಹೆಗಳನ್ನು ಒಂದೊಂದಾಗಿ ಪ್ರಯತ್ನಿಸುತ್ತೇನೆ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D