Wednesday, May 31, 2006

ಏಡ್ಸ್ "ವಿಕಾಸ" ವಾದ: ಮಂಗನಿಂದ ಮಾನವನಿಗೆ!

(ಬೊಗಳೂರು ಆರೋಗ್ಯ ಬ್ಯುರೋದಿಂದ)
ಬೊಗಳೂರು, ಮೇ 31- ವಿಶ್ವಾದ್ಯಂತ 40 ಮಿಲಿಯ ಮಂದಿಯನ್ನು ಪ್ರೀತಿಯಿಂದ ಸೋಕಿ, 25 ಮಿಲಿಯ ಮಂದಿಗೆ ಪರಲೋಕ ಯಾನ ಸೌಲಭ್ಯ ಕಲ್ಪಿಸಿರುವ ಏಡ್ಸ್ ರೋಗ ಕೂಡ ಡಾರ್ವಿನ್ನನ ವಿಕಾಸವಾದದಿಂದ ಪ್ರೇರಣೆಗೊಂಡು ಮಾನವನಿಗೆ ತಗುಲಿದೆ ಎಂಬ ಅಂಶ ಇಲ್ಲಿ ಬಯಲಾಗಿದೆ.

ಈ ವರ್ಷ ಎಚ್ಐವಿ ವೈರಸ್ ಪತ್ತೆಯಾದ ಬೆಳ್ಳಿ ಹಬ್ಬ (25ನೇ ವರ್ಷ) ಆಚರಿಸಲಾಗುತ್ತಿದೆ. ಇಂಥ ಶುಭ ಸಂದರ್ಭದಲ್ಲಿ ಚಿಂಪಾಂಜಿಯಲ್ಲೂ ಏಡ್ಸ್ ವೈರಸ್‌ಗಳು ಪತ್ತೆಯಾಗಿರುವುದು ಹೊಸ ಸಾಧ್ಯತೆಗೆ ನಾಂದಿ ಹಾಡಿದೆ.

ಮಂಗನಿಂದ ಮಾನವ ಎಂಬ ಡಾರ್ವಿನ್ನನ ವಿಕಾಸ ಸಿದ್ಧಾಂತವು ಕೇವಲ 25 ವರ್ಷಗಳ ಹಿಂದೆ ನಡೆದಿದ್ದೇ ಎಂಬ ಬಗ್ಗೆ ಇದೀಗ ವಿಜ್ಞಾನಿಗಳು ಸಂಶೋಧನೆ ಆರಂಭಿಸಿದ್ದಾರೆ.

ಹರಡಿದ್ದು ಹೇಗೆ?: ಅದಿರಲಿ, ಈ ಏಡ್ಸ್ ಎಂಬ ದಿವ್ಯೌಷಧಿಯು ಮಂಗನಿಂದ ಮಾನವನಿಗೆ ಹರಡಿದ್ದು ಹೇಗೆ ಎಂಬ ಅಂಶ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ವಿಜ್ಞಾನಿಗಳು, ವೈದ್ಯರ ಪ್ರಕಾರ ಈ ವೈರಸ್ ಕೇವಲ ತಟ್ಟಿದರೆ, ಮುಟ್ಟಿದರೆ ಬರುವುದಿಲ್ಲ. ಲೈಂಗಿಕ ಸಂಪರ್ಕ ಮತ್ತು ರಕ್ತದ ಸಂಪರ್ಕದಿಂದಲಷ್ಟೇ ಬರುತ್ತದೆ. ಇದೀಗ ಏಡ್ಸ್ ಹೇಗೆ ಮಂಗನಿಂದ ಮಾನವನಿಗೆ ಬಂತು ಎಂಬ ವಿಷಯವನ್ನು ಮರ್ಯಾದೆ ಕಾಪಾಡುವ ನಿಟ್ಟಿನಲ್ಲಿ ಗೌಪ್ಯವಾಗಿರಿಸಲಾಗಿದೆ ಎಂಬ ಮಾಹಿತಿ ಬೊಗಳೆ ರಗಳೆ ಬ್ಯುರೋಗೆ ಲಭಿಸಿದೆ. ಅದನ್ನು "ಸಂಬಂಧಿಕರ" ಗೌಪ್ಯತೆ ಕಾಪಿಡುವ ನಿಟ್ಟಿನಲ್ಲಿ ರಹಸ್ಯವಾಗಿರಿಸಲಾಗಿದೆ!

ಈ ಮಧ್ಯೆ, ಒಂದೆಡೆ ಚಿಂಪಾಂಜಿಗಳು ವೇಶ್ಯಾಗೃಹಕ್ಕೆ ಹೋಗುತ್ತಿದ್ದವೇ ಎಂಬ ಕುರಿತೂ ಶೋಧ ನಡೆಯುತ್ತಿದ್ದರೆ, ಇನ್ನೊಂದೆಡೆ, ಚಿಂಪಾಂಜಿಗಳಿಗೂ ಕಾಂಡೋಮ್ ವಿತರಿಸುವ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಏಡ್ಸ್ ಹರಡದಂತೆ ಮುಂಜಾಗ್ರತೆ ವಹಿಸಲು ಭಾರತ ಸರಕಾರದ ಮನವಿ ಮೇರೆಗೆ, ಕಾಡಿನಲ್ಲೂ ಕಾಂಡೋಮ್ ವೆಂಡಿಂಗ್ ಮೆಶಿನ್‌ಗಳನ್ನಿರಿಸಲು ಸಮಾಜಸೇವಾ ಸಂಸ್ಥೆಗಳು ಮುಂದೆ ಬಂದಿವೆ.

ಪರೀಕ್ಷೆ: ಇದೀಗ ಚಿಂಪಾಂಜಿಗಳಿಗೆ ಏಡ್ಸ್ ಬಂದಿದ್ದನ್ನು ದೃಢಪಡಿಸಿಕೊಳ್ಳಲು ವಿಜ್ಞಾನಿಗಳು ಸುಲಭ ಮಾರ್ಗವೊಂದನ್ನು ಪತ್ತೆ ಹಚ್ಚಿದ್ದಾರೆ. ರೋಗರಹಿತ ಮಾನವರನ್ನು ಕಾಡಿಗೆ ಕಳುಹಿಸುವುದು, ನಿರ್ದಿಷ್ಟ ಸಮಯದ ಬಳಿಕ ಅವರನ್ನು ಮರಳಿ ಕರೆಸಿ ರಕ್ತ ಪರೀಕ್ಷೆ ಮಾಡುವುದು ವಿಜ್ಞಾನಿಗಳು ಅನುಸರಿಸಿರುವ ವಿನೂತನ ವಿಧಾನ.
(ಸೂ: ಸುದ್ದಿಗೆ ಕತ್ತರಿ ಹಾಕಲಾಗಿದೆ.)

Tuesday, May 30, 2006

ರೈತರ ಬೀಜ ಕಸಿಯುವ ಹಕ್ಕು ಸರಕಾರಕ್ಕಿಲ್ಲ

(ಬೊಗಳೂರು ಕೃಷಿ ಬ್ಯುರೋ)
ಬೊಗಳೂರು, ಮೇ 30- ಕರ್ನಾಟಕದಲ್ಲಿ ಮುಂಗಾರು ಮಾರುತವು ಮಳೆಗಾಲಕ್ಕೆ ಮೊದಲೇ ಅವಸರವಸರವಾಗಿ ಬಂದುದರಿಂದ ಬಿತ್ತನೆ ಕಾರ್ಯಕ್ಕಿಳಿದಿರುವ ರೈತರಿಗೆ ಅವರ ಬೀಜದ್ದೇ ಸಮಸ್ಯೆಯಾಗಿದೆ ಎಂಬ ವಿಷಯ ತಿಳಿದುಬಂದಿದೆ.

ಸರಕಾರದ "ಮಿಶ್ರ ತಳಿ"ಯ ಬೀಜ ಒಣಗಿ ಹಾಳಾಗಿದೆ. ಖಾಸಗಿಯವರ ಬೀಜ ದಷ್ಟಪುಷ್ಟವಾಗಿದ್ದರೂ ಒಳ್ಳೆಯ ಫಲ ಕೊಟ್ಟು ಸಂತಾನೋತ್ಪತ್ತಿ... ಅಲ್ಲಲ್ಲ ಸಂಪತ್ ಉತ್ಪತ್ತಿಗೆ ಕಾರಣವಾಗುತ್ತಿಲ್ಲ ಎಂದು ರೈತರು ಆಪಾದಿಸಿದ್ದಾರೆ. ಅಧಿಕೃತ ಬೀಜ ವಿತರಣಾ ಕೇಂದ್ರಗಳಲ್ಲೂ ಸರಕಾರೀ ಬೀಜದ ಬದಲಿಗೆ ಖಾಸಗಿ ಬೀಜಗಳನ್ನೇ ಇರಿಸಿದ್ದಾರೆ. ಅದರ "ಫಲವತ್ತತೆ" ಕಡಿಮೆ. ಇನ್ನು ನಾವು ನಮ್ಮದೇ ಬೀಜವನ್ನು ಬೆಳೆಸಿ ಅದನ್ನೇ ಬಳಸುತ್ತೇವೆ ಎಂದು ಅವರು ಹೆಬ್ಬೆರಳಿನಿಂದ ಅಬ್ಬರಿಸಿದ್ದಾರೆ.

ಆದರೆ ತಮ್ಮ ಬೀಜದಿಂದ ಬೆಳೆಸಿದ ಫಸಲನ್ನು ಮಧ್ಯವರ್ತಿಗಳಿಗೇ ನೀಡಿ ಮಾರಾಟ ಮಾಡಬೇಕೆಂಬ ಸರಕಾರದ ಕಾನೂನಿನಿಂದ ರೊಚ್ಚಿಗೆದ್ದಿರುವ ರೈತರು, ನಮ್ಮ ಬೀಜ ಮುಟ್ಟಲು ಬಿಡಲಾರೆವು ಎಂದಿದ್ದಾರಲ್ಲದೆ, ರೈತರ ಬೀಜ ಕಸಿಯುವ ಹಕ್ಕು ಸರಕಾರಕ್ಕಿಲ್ಲ ಎಂದು ಕ್ಯಾಕರಿಸಿ ಆಗ್ರಹಿಸಿದ್ದಾರೆ.

ಒಬ್ಬನೇ ರೈತ ಹಲವಾರು ಬೀಜಗಳನ್ನು ಒಂದೇ ಬಾರಿಗೆ ಇರಿಸಿಕೊಳ್ಳುವುದು ಅಸಾಧ್ಯ. ಇದಕ್ಕಾಗಿ ಒಬ್ಬೊಬ್ಬರು ಒಂದೊಂದು ಬೀಜವನ್ನಷ್ಟೇ ಹೊಂದಿದ್ದೇವೆ ಎಂದು ರೈತರ ಕುಟುಂಬದ ಎಲ್ಲಾ ಸದಸ್ಯರು ಸ್ಪಷ್ಟನೆ ನೀಡಿದ್ದಾರೆ.

ಬೀಜದ ಸಮಸ್ಯೆಯಿಂದ ಬಳಲುತ್ತಿರುವ ರೈತರ ಪುನರ್ವಸತಿಗೆ ಬೊಗಳೂರು ಬ್ಯುರೋ ಹೋರಾಡುತ್ತದೆ.

ಸೂಚನೆ: ಕನ್ನಡ ಬ್ಲಾಗ್‌ಗಳ ಕುರಿತು ಬೆಂಗಳೂರಿನ ಸಂಕೇತ್ ಪಾಟೀಲ್ ಬರೆದಿರುವ ಲೇಖನ ಆನ್‌ಲೈನ್‌ನಲ್ಲಿ ಇಲ್ಲಿ ಪ್ರಕಟವಾಗಿದೆ. ಬೊಗಳೆ ರಗಳೆ ಬ್ಯುರೋದವರು ಬಾರ್‌ಗೆ ಹೋಗಿದ್ದನ್ನು ಉಲ್ಲೇಖಿಸಿ ಪತ್ರಿಕೆಗಿದ್ದ ಲವಲೇಶದ ಹೊಣೆಗಾರಿಕೆಯನ್ನು ಕೆಡವಿದ್ದಾರೆ ಮತ್ತು ನಮ್ಮ ಪತ್ರಿಕೆಗೆ 2000 ಒದೆತಗಳು ಬೀಳುತ್ತಿರುವ ಈ ಸಂದರ್ಭ ಏಕಸದಸ್ಯ ಬ್ಯುರೋದ ಸಮಸ್ತ ಸಿಬ್ಬಂದಿಗಳಿಗೆ ಎಮ್ಮೆ ತಂದುಕೊಟ್ಟಿದ್ದಾರೆ.

Monday, May 29, 2006

ಕ್ರಿಕೆಟ್: ಜಯಮಾಲೆ ವಿಂಡೀಸ್‌ಗೆ "ಮೀಸಲು"

(ಬೊಗಳೂರು ಕ್ರೀಡಾ ಬ್ಯುರೋ)
ಬೊಗಳೂರು, ಮೇ 29- ಮೀಸಲಾತಿ ಎಂಬೊಂದು ಅಮೂಲ್ಯ ಪರಿಮಳ ದ್ರವ್ಯವು ಕ್ರಿಕೆಟ್ ರಂಗಕ್ಕೂ ತಟ್ಟಿದ ಕಾರಣ ನಿನ್ನೆ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಭಾರತ ತಂಡವು ಕಳೆ ಭರಿತ ಪ್ರದರ್ಶನ ನೀಡಿ ಆತ್ಮೀಯವಾಗಿ ಸೋಲೊಪ್ಪಿಕೊಂಡಿತು ಮತ್ತು ತನ್ನ ದೇಶ ನಂಬಿರುವ "ಹಿಂದುಳಿದವರೂ ಮುಂದೆ ಬರಬೇಕು" ಎಂಬ ಸಿದ್ಧಾಂತವನ್ನು ಪುಷ್ಟೀಕರಿಸಿತು.

ಯಾವಾಗಲೂ ನಾವೇ ಗೆದ್ದರೆ, ಕ್ರಿಕೆಟ್‌ನಲ್ಲಿ ಭಾರತದ ಹೆಸರು ರಾರಾಜಿಸಿದರೆ, ಲೋಕದ ಕೆಟ್ಟ "ದೃಷ್ಟಿ"ಗೆ ಆಹಾರವಾಗಬೇಕಾಗುತ್ತದೆ. ಮತ್ತು ಇಲ್ಲೂ ಪ್ರತಿಭಾವಂತರು ಬ್ಯಾಟಿಂಗ್, ಬೌಲಿಂಗ್‌ನಲ್ಲಿಮೆರೆದಾಡಿದರೆ ಖಂಡಿತವಾಗಿಯೂ ರಾಜಕಾರಣಿಗಳ ದೃಷ್ಟಿ ಬೀಳುತ್ತದೆ. ಹಾಗಾದಾಗ ಇಲ್ಲೂ ಮೀಸಲಾತಿ ಜಾರಿಗೊಳಿಸಿದಲ್ಲಿ ತಮ್ಮ ಸ್ಥಾನಕ್ಕೆ ಕುತ್ತು ಖಂಡಿತ ಎಂಬ ಸತ್ಯದ ಅರಿವಿದ್ದ ಆಟಗಾರರು ಹೊಸ ಯೋಜನೆ ಪ್ರಕಾರ ಆಟವಾಡಿದರು ಎಂದು ಮೂಲಗಳು ತಿಳಿಸಿವೆ.

ಹೆಚ್ಚು ಉತ್ತಮ ಪ್ರದರ್ಶನ ತೋರಿದರೆ, ಇಲ್ಲೂ ಹಿಂದುಳಿದವರನ್ನು ಮುಂದೆ ತರಬೇಕೆಂದು ಯೋಚಿಸುವ ರಾಜಕಾರಣಿಗಳ ಕಾಕದೃಷ್ಟಿ ಪ್ರತಿಭಾನ್ವಿತರ ಮೇಲೆಯೇ ಬೀಳುವುದು ಖಚಿತ. ಈ ಕಾರಣಕ್ಕೆ ವಿಶ್ವಖ್ಯಾತ ಬ್ಯಾಟ್ಸ್ ಮನ್‌ಗಳಾದ ಧೋನಿ, ದ್ರಾವಿಡ್, ರೈನಾ, ಉತ್ತಪ್ಪ ಮುಂತಾದವರು ಬ್ಯಾಟ್ ಬದಲು ಬರೇ ಕೈ ಬೀಸುತ್ತಾ ಪೆವಿಲಿಯನ್‌ಗೆ ಮಾರ್ಚ್ ಫಾಸ್ಟ್ ನಡೆಸಿದ್ದರು.ಆದರೆ ತನ್ನ ಸ್ಥಾನ ಉಳಿಸಿಕೊಳ್ಳಲು ಬ್ಯಾಟನ್ನೇ ಬೀಸುವುದು ಅನಿವಾರ್ಯವಾಗಿತ್ತು ಎಂದು ಸೆಹವಾಗ್‌ ಕೊನೆಗೆ ಕ್ರಿಕೆಟ್ ಮ್ಯಾನೇಜ್‌ಮೆಂಟ್ ಮತ್ತು ಸಹ ಆಟಗಾರರ ಬಳಿ ಕ್ಷಮೆ ಯಾಚಿಸಿದ್ದರು ಎಂದು ವರದಿಯಾಗಿದೆ.

ಒಟ್ಟಿನಲ್ಲಿ ಇಡೀ ತಂಡಕ್ಕೆ ಒಂದು ಸಮಾಧಾನವಿದೆ. ತಾವು ಕೆರಿಬಿಯನ್ ದ್ವೀಪಕ್ಕೆ ಬಂದರೂ ಒಂದು ವಿಶ್ವದಾಖಲೆ ಅಳಿಸಿಹಾಕಿದ್ದೇವೆ ಎಂಬುದೇ ಅದಕ್ಕಿರುವ ಹೆಮ್ಮೆ. ಯಾವುದೀ ದಾಖಲೆ ಎಂದು ಶೋಧಿಸಹೊರಟಾಗ ಬೊಗಳೆ ಪಂಡಿತರಿಗೆ ಸಿಕ್ಕ ವಿಷಯ ಇದು: "ಎದುರಾಳಿ ಒಡ್ಡಿದ ಸವಾಲಿನ ಮೊತ್ತವನ್ನು ಚೇಸ್ ಮಾಡಿ ಸತತವಾಗಿ 17 ವಿಜಯ ದಾಖಲಿಸಿದ ತಮ್ಮದೇ ತಂಡದ ವಿಶ್ವದಾಖಲೆಯ ಸರಪಣಿಯನ್ನು ಕಟ್ ಮಾಡಿಕೊಂಡಿದ್ದು!"

ಪರಿಣಾಮ: ಭಾರತ ತಂಡವು ಕ್ರಿಕೆಟ್‌ನ ವಿಜಯವನ್ನು ವೆಸ್ಟ್ ಇಂಡೀಸ್ ತಂಡಕ್ಕೆ ಮೀಸಲಾಗಿರಿಸಿತು!

Saturday, May 27, 2006

ಪ್ರತಿಭಾ ಪಲಾಯನಕ್ಕೆ ಸರಕಾರ ಬದ್ಧ: ಸಚಿವ

(ಬೊಗಳೂರು ಸಂದರ್ಶನ ಬ್ಯುರೋ)
ಬೊಗಳೂರು, ಮೇ 27- ಜಾತಿ ಆಧಾರಿತ ಸೀಟು ಮೀಸಲಾತಿ ಜಾರಿಗೆ ತರುವ ಮೂಲಕ ಭಾರತದಿಂದ "ಪ್ರತಿಭಾ ಪಲಾಯನ" ಕಾರ್ಯಾಚರಣೆಗೆ ಸರಕಾರ ಬದ್ಧವಾಗಿದೆ ಎಂದು ಕೇಂದ್ರದ Uncontrolled Price Agenda (UPA) ಸರಕಾರವಿಂದು ಖಚಿತವಾಗಿ ನುಡಿದಿದೆ.

ಪ್ರತಿವರ್ಷವೂ ಯಾವುದೇ ಶೈಕ್ಷಣಿಕ ಪರೀಕ್ಷಾ ಫಲಿತಾಂಶಗಳಲ್ಲಿ ಮುಂದುವರಿದವರೇ ಮುಂದೆ ಹೋಗುತ್ತಿದ್ದಾರೆ. ಈ ಕಾರಣಕ್ಕೆ ಹಿಂದುಳಿದವರು ಉನ್ನತ ಹುದ್ದೆಗಳಿಂದ ವಂಚಿತರಾಗುತ್ತಿದ್ದಾರೆ. ಅವರಿಗೆ ಈ ಲೋಕದಲ್ಲಿ ಬದುಕುವ ಹಕ್ಕೇ ಇಲ್ಲವೇ ಎಂದು ಪ್ರಧಾನಿ ಪದವಿ ಮೇಲೆ ಕಣ್ಣಿಡುತ್ತಾ ಬಂದಿರುವ ಶಿಕ್ಷಣ ಮತ್ತು ಮಾನವ "ಸಂಪದ್ಭರಿತ" ಸಚಿವ ದುರ್ಜನ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.

ಚಂದ್ರಲೋಕ ಯಾನಕ್ಕೆ ಭಾರತೀಯರನ್ನು ಕಳುಹಿಸುವ ಕುರಿತು ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಅಮೆರಿಕ ಅಧ್ಯಕ್ಷ ಬುಷ್ ಮಧ್ಯೆ ನಡೆದ ಮಾತುಕತೆ ವಿವರಗಳು ಇತ್ತೀಚೆಗೆ ಇಲ್ಲಿ ಬಹಿರಂಗಗೊಂಡ ಹಿನ್ನೆಲೆಯಲ್ಲಿ ಅವರು ಸ್ಪಷ್ಟನೆ ನೀಡಿದರು.

ಚಂದ್ರಲೋಕಕ್ಕೆ ಕಳುಹಿಸುವವರ ಪಟ್ಟಿಯಲ್ಲಿ ಮಾರ್ಪಾಟು ಮಾಡಲಾಗಿದೆ. ಅದರ ಪ್ರಕಾರ,
ಶೇ.20- SC,
ಶೇ.20- ST,
ಶೇ.15- OBC,
ಶೇ.15-ಅಲ್ಪಸಂಖ್ಯಾತರು,
ಶೇ.10-ಕಾಂಗ್ರೆಸಿಗರು/ಮಕ್ಕಳು,
ಶೇ.5 ಎಡಪಂಥೀಯರು,
ಶೇ.5 ಕಾಶ್ಮೀರೀ ವಲಸಿಗ ಉಗ್ರರು
ಸೇರಿರುತ್ತಾರೆ.
ರಾಜಕಾರಣಿಗಳಿಗೂ ಜಾಗ ಕಲ್ಪಿಸಲಾಗುವುದು. ಸ್ಥಳಾವಕಾಶ ಉಳಿದರೆ ಒಬ್ಬ ಖಗೋಳ ವಿಜ್ಞಾನಿ, ಸಾಧ್ಯವಾಗದಿದ್ದರೆ ಕನಿಷ್ಠ ನವಜಾತ ಶಿಶುವಿಗಾಗುವಷ್ಟು ಜಾಗ ದೊರೆತರೆ ವಿಜ್ಞಾನಿಯ ಮಗುವನ್ನಾದರೂ ಚಂದ್ರಲೋಕಕ್ಕೆ ಕಳುಹಿಸಲಾಗುವುದು ಎಂದವರು ಹೇಳಿದ್ದಾರೆ.

ಪ್ರತಿಭೆ ಇದ್ದವರು ಎಲ್ಲಿ ಬೇಕಾದರೂ ಬದುಕುತ್ತಾರೆ, ಅವರೆಲ್ಲಾ ವಿದೇಶಕ್ಕೆ ಹೋಗಲಿ, ಅಲ್ಲಿ ಮತ್ತಷ್ಟು ಶ್ರೀಮಂತರಾಗಲಿ. ಇದರಿಂದ ಭಾರತದ ಜನಸಂಖ್ಯೆ ಕಡಿಮೆಯಾಗುತ್ತದೆ ಎಂದು ರಾಜೀವ್ ಗೋಸ್ವಾಮಿಯನ್ನು ನೆನೆದುಕೊಂಡು ನುಡಿದ ಅವರು, ಪಾಪ... ಪ್ರತಿಭೆ ಇಲ್ಲದವರೂ ತಿನ್ನುವುದು ಬೇಡವೆ, ನಾವೂ ತಿಂದು ಅವರಿಗೂ ನೀರು ಕುಡಿಸುತ್ತೇವೆ ಎಂದು ತಮ್ಮ ಕೈಯಲ್ಲಿದ್ದ ಬಡಿಗೆಯನ್ನು ನೆಲಕ್ಕೆ ಕುಟ್ಟಿ ಕುಟ್ಟಿ ನುಡಿದರು.

Thursday, May 25, 2006

ಹೆಚ್ಚಾದ ಹುಚ್ !

(ಬೊಗಳೂರು ಕಾಲೇಜು ಬ್ಯುರೋದಿಂದ)
ಬೊಗಳೂರು, ಮೇ 25- ಅಸತ್ಯ ಅನ್ವೇಷಿಯ 'ಅಸತ್ಯ ಶೋಧನಾ ತಂಡ' ಈ ಬಾರಿ ನುಗ್ಗಿದ್ದು ಹುಟ್ಟೂರು ಸಮೀಪದ ಕಾಲೇಜಿನ ಕ್ಯಾಂಟೀನ್‌ಗೆ. ಇದಕ್ಕೆ ಕಾರಣ, ಇಲ್ಲಿ ಭಾರಿ 'ಹಾಲಾ'ಹಲವಾಗುತ್ತಿದೆ ಎಂಬ ಫೋನ್ ಕರೆ.

ಕಾಲೇಜು ಕ್ಯಾಂಟೀನ್‌ಗೆ ಹಸಿದ ಹೆಬ್ಬುಲಿಯಂತೆ ನುಗ್ಗಿದ 'ಅಸತ್ಯ ಶೋಧನಾ ತಂಡ'ದ ಕಿವಿಗೆ ಗಲಾಟೆ, ರಂಪಾಟ, ಬೊಬ್ಬೆ ಕೇಳಿಸುತ್ತಿದೆಯೇ ಹೊರತು, ಏನೂ ಗೋಚರಿಸದು. ಸಾಸಿವೆ ಕಾಳನ್ನು ಮೇಲಿನಿಂದ ಕೆಳಕ್ಕೆ ಹಾಕಿದರೆ ಅದು ನೆಲಕ್ಕೆ ಮುಟ್ಟಲಾಗದಷ್ಟು ಕಿಕ್ಕಿರಿದ ಜನಸಂದಣಿ ಮಧ್ಯೆ, ಉಸಿರನ್ನು ದೀರ್ಘವಾಗಿ ಹೊರಬಿಟ್ಟು ದೇಹವನ್ನು ಸಾಸಿವೆ ಕಾಳಿನಷ್ಟು ಕಿರಿದಾಗಿಸಿ ಒಳನುಗ್ಗಿದ ಅಸತ್ಯ ಅನ್ವೇಷಿಗೆ ವಿಷಯವನ್ನು ಹೊಟ್ಟೆಯಿಂದ ಹೊರಬಗೆಯಲು ಬಹಳ ತ್ರಾಸವಾಗಿತ್ತು.

ಕೊನೆಗೆ ಗೊತ್ತಾದ್ದೆಂದರೆ, ಇದೆಲ್ಲಾ ಆ ಹುಚ್ಚೇ ಗೌಡನ ಕಿತಾಪತಿ ಎಂಬುದು.
ವಿಷಯ ಏನೂಂದ್ರೆ, ಹುಚ್ಚೇ ಗೌಡ ಎಂಬ ಹೆಸರನ್ನು ಆತನ ಕ್ಲಾಸ್‌ಮೇಟ್ಸ್ ಎಲ್ಲರೂ ಹುಚ್ಚು ಗೌಡ ಎಂದೇ ಕರೆದು ರೇಗಿಸುತ್ತಿದ್ದರು. ಇದರಿಂದ ಆತ ತೀರಾ ರೋಸಿ ಹೋಗಿದ್ದ. ಇದಕ್ಕಾಗಿ ಆತ ತನ್ನ ಹೆಸರನ್ನು ಇನಿಷಿಯಲ್ಸ್ ಉಪಯೋಗಿಸಿ 'ಹೆಚ್.' ಗೌಡ ಎಂದಷ್ಟೇ ಬರೆಯತೊಡಗಿದ.

ಕ್ಲಾಸ್‌ಮೇಟ್ಸ್ ಇದರಿಂದ ಮತ್ತಷ್ಟು ಸಂತೋಷ ಪಟ್ಟರು. ಅವರಿಗೆ ರೇಗಿಸಲು ಹೊಸ ಅಸ್ತ್ರ ಸಿಕ್ಕಂತಾಗಿತ್ತು. ಹೇಗೆ ಗೊತ್ತೇ? ಅವರೆಲ್ಲಾ '' ಈಗ ಹುಚ್ಚೇಗೌಡನ ಹುಚ್ಚು ಇದ್ದದ್ದು ಹೆಚ್ಚಾಗಿದೆ'' (ಹೆಚ್ ಆಗಿದೆ) ಅಂತ ರೇಗಿಸಲಾರಂಭಿಸಿದ್ದರು. ಇದಕ್ಕಾಗಿಯೇ ಆತ ಆಕಾಶ ಬಿರಿಯುವಂತೆ ಕ್ಯಾಂಟೀನ್‌ನಲ್ಲಿ ತನ್ನ ಕ್ಲಾಸ್‌ಮೇಟ್ಸ್ ಮೇಲೆ ಕೂಗಾಡುತ್ತಿದ್ದ.!

Friday, May 19, 2006

ಬಾರ್-ಕಿಂಗ್ ನ್ಯೂಸ್....!!!

(ಬೊಗಳೂರು ಪರದೇಸಿ ಬ್ಯುರೋದಿಂದ)
ಬೊಗಳೂರು, ಮೇ 19- ಮನಮೋಹಕ್ ಸಿಂಗ್ ಹಾಗೂ ಲಾರ್ಜ್ ಬುಶ್ ಅವರು ಬಾರ್ ಒಂದರಲ್ಲಿ ಹೀರ್‌ತ್ತಿದ್ದಾಗ ದೂರದಲ್ಲಿ ಅವರನ್ನು ಕಂಡ ಅಸತ್ಯಾನ್ವೇಷಿ, ಪಕ್ಕದ ಬಾರ್ ಅಸೋಸಿಯೇಶನ್ ಮತ್ತು ಬಾರ್ ಓನರ್ಸ್ ಅಸೋಸಿಯೇಶನ್ ಎರಡಕ್ಕೂ ಫೋನ್ ಮಾಡಿ ಖಚಿತಪಡಿಸಿಕೊಂಡ.

ಹೌದು, ಅವರು ಭಾರತದ ನಿಧಾನಿ ಮತ್ತು ಅಮೆರಿಕದ "ಉಗ್ರಾ'ಣಿ ಎಂಬುದು ದೃಢಪಟ್ಟಿತು.
ಹಲೋ.... ಇಲ್ಲೇನು ಮಾಡುತ್ತಿದ್ದೀರಿ....? ಎಂದು ಸಂದರ್ಶನ ಆರಂಭಿಸಿದ ಅಸತ್ಯಾನ್ವೇಷಿಗೆ ದೊರೆತ ಉತ್ತರದಿಂದ ಎದೆ ಧಸಕ್ಕೆಂದಿತು.

"ನಾವಿಲ್ಲಿ 3ನೇ ಮಹಾಯುದ್ಧದ ರೂಪುರೇಷೆಗಳ ಬಗ್ಗೆ ಚರ್ಚಿಸುತ್ತಿದ್ದೇವೆ" ಎಂದು ಬುಷ್ಷನೆ ನುಡಿದಾಗ, ಕೆಳಗೆ ಬಿದ್ದ ಅಸತ್ಯಾನ್ವೇಷಿಗೆ ಮೂರು ಗ್ಲಾಸ್ ನೀರು ನೀಡಿ ಎಚ್ಚರಿಸಲಾಯಿತು.

ಸಾವರಿಸಿಕೊಂಡ ಅನ್ವೇಷಿ, "ಹೌದೇ? ನಿಜವೇ? 3ನೇ ಮಹಾಯುದ್ಧದಲ್ಲಿ ಏನಾಗುತ್ತದೆ?" ಎಂದು ಪ್ರಶ್ನಿಸಲಾರಂಭಿಸಿದಾಗ ಮನಮೋಹಕ ನಗೆ ಬೀರಿದ ಸಿಂಗ್, ನಾವು 14 ದಶಲಕ್ಷದಷ್ಟಿರುವ ಇರಾನೀಯರು ಮತ್ತು ಒಬ್ಬ ಬೊಗಳೆ ಪಂಡಿತನನ್ನು ನಾಶಪಡಿಸಲಿದ್ದೇವೆ ಎಂದುತ್ತರಿಸಿದರು.

"ಆಂ... ಬೊಗಳೆ ಪಂಡಿತನನ್ನೇ?!" ಎಂದು ಬಾಯಿಬಿಟ್ಟ ಅಸತ್ಯಾನ್ವೇಷಿ, ಬಿಟ್ಟ ಬಾಯಿಯನ್ನು ಇದುವರೆಗೂ ತೆರೆದಿಲ್ಲ.
ಅಲ್ಲಿಗೆ ಬುಷ್ ಅವರು ಸಿಂಗ್‌ರತ್ತ ತಿರುಗಿ.... "ನಾನು ಹೇಳಿಲ್ವೇ? 14 ಮಿಲಿಯ ಇರಾನ್ ಜನತೆಯ ಬಗ್ಗೆ ಯಾರು ಕೂಡ ತಲೆಕೆಡಿಸಿಕೊಳ್ಳೋದಿಲ್ಲ. ಇನ್ನು ನಮಗೆ ಯಾರದೇ ಚಿಂತೆ ಇಲ್ಲ, ದಾಳಿ ಮುಂದುವರಿಸಬಹುದು."

ಅಲ್ಲಿಗೆ ಇರಾನ್ ಮೇಲಿನ ಯುದ್ಧ ಸುದ್ಧಿ ಸ್ಫೋಟಿಸುವ ವಿಷಯ ಮೊದಲಾಗಿ ಬೊಗಳೆ-ರಗಳೆಗೆ ದೊರೆಯಿತು.
 
NB: This Ex-jucive report has been poste somewhere near the indo-American border area with very "remote" control.! :)

Saturday, May 13, 2006

ರಜೆ ಚೀಟಿ

ಅ-ನಿವಾರ್ಯವಾಗಿ ನನ್ನ ಹೆತ್ತವರ ಮಗನ ಸ್ವಂತ ಊರಿಗೆ ಹೋಗಬೇಕಾಗಿರುವುದರಿಂದ ಇನ್ನು 7 ದಿನ ಏಕಸದಸ್ಯ ಬೊಗಳೆ-ರಗಳೆ ಬ್ಯುರೋದ ಎಲ್ಲಾ ಸಿಬ್ಬಂದಿಗಳಿಗೆ ರಜೆ ಸಾರಲಾಗಿದೆ. ಆದುದರಿಂದ ಈ ದಿನಗಳಲ್ಲಿ ಸಂಚಿಕೆಗಳನ್ನು ನಿಷೇಧಿಸಲಾಗುತ್ತದೆ. ಆದರೆ ಅಪ್ಪಿ ತಪ್ಪಿ ಪ್ರಕಟವಾದಲ್ಲಿ ನಾವು ಜವಾಬ್ದಾರರು. ವಿಶ್ವಾದ್ಯಂತ ಸಾವಿರಾರು ಪತ್ರಿಕೆಗಳ ಕೋಟ್ಯಂತರ ಓದುಗರು ಸಹಕರಿಸಲು ಕೋರಲಾಗಿದೆ.
-ಅಸತ್ಯಾನ್ವೇಷಿ

Aunty-Mosquito ಸಾಫ್ಟ್-ವೇರ್ !

(ಬೊಗಳೂರು ನೆಟ್ಗಳ್ಳರ ಬ್ಯುರೋದಿಂದ)
ಬೊಗಳೂರು, ಮೇ 13- ಪೆಪ್ಸಿ ಬಾಟಲಿಯಿಂದ ಸ್ಟ್ರಾ ಇಟ್ಟು ಕೋಲಾ ಹೀರುವಂತೆ ಮಾನವನ ರಕ್ತವನ್ನು ಹೀರುವ, ಕಿವಿ ತಮಟೆ ಒಡೆಯುವಂತೆ ಗುಂಯ್‌ಗುಡುವ ರಕ್ತ-ಪಿಪಾಸು ಸೊಳ್ಳೆಗಳಿಗೆ ಮುಕ್ತಿ ಕಾಣಿಸಲು ಹೊಸ ಸಾಫ್ಟ್ ವೇರ್ ಸಿದ್ಧವಾಗಿದೆ ಎಂಬ ವರದಿ ಪ್ರಕಟವಾಗಿರುವಂತೆಯೇ ಎಲ್ಲರ ಕಿವಿಗಳೂ ಒಮ್ಮೆಗೆ ನೆಟ್ಟಗಾಗಿವೆ.

Aunty ಸೊಳ್ಳೆಯಿಂದ ಕಚ್ಚಿಸಿಕೊಂಡು ತಡೆಯಲಾರದೆ ಈ Anti ಸೊಳ್ಳೆ ತಂತ್ರಜ್ಞಾನ ಕಂಡುಹುಡುಕಿದ ವಿಜ್ಞಾನಿಯ (ದೈಹಿಕ ಮತ್ತು ಮಾನಸಿಕ) ಸ್ಥಿತಿ ನೆನಪಿಸಿಕೊಂಡು ಗೊಳ್ಳನೆ ನಕ್ಕ ಅಸತ್ಯಾನ್ವೇಷಿ, ಈ ಬಗ್ಗೆ ತನಿಖೆ ನಡೆಸಿದಾಗ ಹೊಸ ಅಂಶವೊಂದು ಬಯಲಾಗಿದೆ.

ವಾಸ್ತವವಾಗಿ ವಿಜ್ಞಾನಿ ಇದನ್ನು ಕಂಡುಹುಡುಕಿದ್ದು ಸೊಳ್ಳೆಗಳಿಗಾಗಿ ಅಲ್ಲವಂತೆ. "Every new product comes out by an accident" ಎಂಬಂತೆ, ಸೊಳ್ಳೆಗಳಿಗೆ ಈ ಸಾಫ್ಟ್ ವೇರ್ ಮಾರಕವಾದದ್ದು ಕೂಡ ಒಂದು ಆಕ್ಸಿಡೆಂಟ್.

ಈ ಸುರಸುಂದರಾಂಗ ವಿಜ್ಞಾನಿಗೆ ಸುಂದರಿಯರ ವಿಪರೀತ ಕಾಟ. ಒಂಚೂರು ವಿಶ್ರಾಂತಿ ತೆಗೆದುಕೊಳ್ಳೋಣವೆಂದರೆ ಬಿಡಲೊಲ್ಲರು. ಅವರನ್ನು ದೂರ ಮಾಡುವುದು ಹೇಗೆ ಎಂಬ ಸಂಶೋಧನೆಯಲ್ಲಿದ್ದಾಗ ಹೆಣ್ಣು ಸೊಳ್ಳೆಗಳಿಗಷ್ಟೇ ಮಾರಕವಾಗಿರುವ ಈ ಸಾಫ್ಟ್ ವೇರ್ ಉತ್ಪತ್ತಿಯಾಗಿದೆ. ಮೊಬೈಲ್‌ ಫೋನ್‌ಗೂ ಇದು ಲಭ್ಯವೆಂಬುದು ಇತ್ತೀಚಿನ ಸುದ್ದಿ.

ಮಾನವನ ರಕ್ತ ಹೀರುವ ಹೆಣ್ಣು ಸೊಳ್ಳೆಗಳು ಈ ಸಾಫ್ಟ್ ವೇರ್ ಹೊರಡಿಸುವ ಶಬ್ದ ಬಂದತ್ತ ಧಾವಿಸುತ್ತವೆ. ಅದು ಕಂಪ್ಯೂಟರ್‌ನಿಂದ ಬರುವುದರಿಂದ ಅಲ್ಲಿ ಬ್ರೌಸ್ ಮಾಡುತ್ತಾ ಬೊಗಳೆ-ರಗಳೆ ಓದತೊಡಗುತ್ತವೆ. ಅಲ್ಲಿಗೆ ಬೇರೆಯವರ ರಕ್ತ ಹೀರುವ ಮನುಷ್ಯ ಪ್ರಾಣಿಗೆ ಸುಖ ನಿದ್ದೆ.

ಈ ಕುರಿತ ಹೆಚ್ಚಿನ ಮಾಹಿತಿ ನಿಮಗೆ ಇಲ್ಲಿ ಸಿಗಲಾರದು.

ಈ ಸಾಫ್ಟ್ ವೇರ್ ಇಲ್ಲಿ ಡೌನ್ ಲೋಡ್ ಮಾಡಬೇಕಿದ್ದರೆ ಬೊಗಳೆ-ರಗಳೆ ಓದುಗರಿಗೆ ಸಂಪೂರ್ಣ ಉಚಿತ. (ಶರತ್ತುಗಳು ಅನ್ವಯ. ಬೇಕಿದ್ದರೆ ನೀವು ಸೇವಾ ತೆರಿಗೆ, ಹ್ಯಾಂಡ್ಲಿಂಗ್ ಚಾರ್ಜ್, ಸಾಗಾಟ ವೆಚ್ಚ, ಕೂಲಿ ವೆಚ್ಚ, ತಯಾರಿಕಾ ವೆಚ್ಚ, ಊಟದ ಖರ್ಚು, ಮಾಹಿತಿ ಶುಲ್ಕ... ಇನ್ನೂ ಇತ್ಯಾದಿ ಏನೇನೋ ಶುಲ್ಕಗಳನ್ನೆಲ್ಲಾ ಸೇರಿಸಿ ಬೊಗಳೆ-ರಗಳೆ ಬ್ಯುರೋದ ಅಸತ್ಯಾನ್ವೇಷಿಗೆ ಕಳುಹಿಸಬಹುದು.)

Friday, May 12, 2006

ಸೆಕೆಂಡ್ ಹ್ಯಾಂಡ್ ಮಾರುಕಟ್ಟೆ ಏರುಪೇರು

ತಮಿಳುನಾಡಿನಲ್ಲಿ ಕಲರ್ ಟಿವಿ ಕೊಡುವ ಡಿಎಂಕೆ ಅಧಿಕಾರಕ್ಕೆ
(ಬೊಗಳೂರು ಸ್ವಂತ ವರದಿ)
ಬೊಗಳೂರು, ಮೇ 12- ಇತ್ತ ತಮಿಳುನಾಡಿನಲ್ಲಿ ತಾತ ನರುಣಾಕಿಧಿ ನೇತೃತ್ವದ ಡಿಎಂಕೆ ಸರಕಾರ ಗದ್ದುಗೆ ಏರಿರುವಂತೆಯೇ ರಾಜ್ಯದ ಸೆಕೆಂಡ್ ಹ್ಯಾಂಡ್ ಟಿವಿ ಮಾರುಕಟ್ಟೆಯಲ್ಲಿ ಭಾರಿ ಚಟುವಟಿಕೆ ಕಂಡುಬಂದಿದ್ದು, ಹೊಸ ಟಿವಿ ಬರುತ್ತದೆ ಎಂಬ ಕಾರಣಕ್ಕೆ ತಮಿಳು ತಲೆಗಳು ತಮ್ಮ ತಮ್ಮ ಮನೆಯಲ್ಲಿದ್ದ ಟಿವಿ ಸೆಟ್‌ಗಳನ್ನು ಸೆಕೆಂಡ್ ಹ್ಯಾಂಡ್ ಟಿವಿ ಮಾರುಕಟ್ಟೆಗೆ ಇಳಿಸಿದ್ದರಿಂದ ಮಾರುಕಟ್ಟೆಯೇ ಏರುಪೇರಾಗಿದೆ.

ಅಧಿಕಾರಕ್ಕೆ ಬಂದರೆ ಕಲರ್ ಟಿವಿ ಕೊಡುತ್ತೇವೆ ಎಂದು ಡಿಎಂಕೆ ತನ್ನ ಚುನಾವಣಾ ಪ್ರಣಾಳಶಿಶುವಿನಲ್ಲಿ ಹೇಳಿದ್ದ ಕಾರಣ ಈ ದಿಢೀರ್ ಬೆಳವಣಿಗೆ ಕಂಡುಬಂದಿದ್ದು, ಮಾರುಕಟ್ಟೆಯ ಈ ಮಹಾನ್ ತಲ್ಲಣವನ್ನು ಶಮನಗೊಳಿಸಲು ಮುಂದಾಗಿರುವ ಹೊಸ ಸರಕಾರವು, ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯಿಂದ ಇದೇ ಟಿವಿ ಸೆಟ್‌ಗಳನ್ನು ಖರೀದಿಸಲು ನಿರ್ಧರಿಸಿದೆ. ಬಳಿಕ ಅದಕ್ಕೆ ಹೊಸ ಕವಚ ತೊಡಿಸಿ ತಮ್ಮ ಚುನಾವಣಾ ಆಶ್ವಾಸನೆಯನ್ನು ಈಡೇರಿಸುವುದು ಅದರ ದೂ(ದು)ರಾಲೋಚನೆ ಎನ್ನಲಾಗುತ್ತಿದೆ.

ನಮ್ಮ ಟಿವಿ, ನಮ್ಮದೇ ಕೇಬಲ್: ಟಿವಿ ಖರೀದಿಸಿದವರೆಲ್ಲರೂ ತಮ್ಮ ಕುಟುಂಬದ್ದೇ ಆದ ಸನ್, ಉದಯ, ಜೆಮಿನಿ, ತೇಜ, ಸೂರ್ಯ, ಉಷೆ ಮುಂತಾದ ಚಾನೆಲ್‌ಗಳನ್ನೇ ನೋಡುವಂತಾಗಬೇಕು. ಇದರಿಂದ ಕೇಬಲ್ ಆಪರೇಟರ್ಸ್ ನೇತೃತ್ವ ವಹಿಸಿರುವ ತಮ್ಮ ಕುಟುಂಬಿಕನೇ ಆಗಿರುವ ಮಾರನ್‌ಗೂ ಕೇಬಲ್ ಶುಲ್ಕ ರೂಪದಲ್ಲಿ ಸಾಕಷ್ಟು ಮಾಸಿಕ ವರಮಾನ ಬರುತ್ತದೆ.ಇದರೊಂದಿಗೆ (ಇದುವರೆಗೆ ಮಾಡಿದಂತೆ), ಈಗ ಮಾಜಿಯಾಗಿಬಿಟ್ಟಿರುವ ಮುಖ್ಯಮಂತ್ರಿ ಜಯಲಲಿತಾ ಸಾಧನೆಗಳು ದೇಶ-ವಿದೇಶಗಳಲ್ಲಿ ಪ್ರಸಾರವಾಗದಂತೆ ತಡೆದಂತೆಯೂ ಆಗುತ್ತದೆ ಎಂಬ ಗುಟ್ಟು ಬಯಲಾಗಿದೆ. ಇದುವರೆಗೆ ತಮ್ಮ ಬದ್ಧವಿರೋಧಿ ಜಯಲಿತಾ ಬಗ್ಗೆ ದೇಶಾದ್ಯಂತ ವೀಕ್ಷಕರು ಕೆಟ್ಟ ಭಾವನೆ ಹೊಂದುವಂತಾಗುವಲ್ಲಿ ಇವರ ಟಿವಿ ನೆಟ್‌ವರ್ಕ್‌ನ ಕೊಡುಗೆ ಅಪಾರ ಎಂಬುದನ್ನು ಇಲ್ಲಿ ಸ್ಮರಿಸಬಹುದು.

ಹೊರಗೆ ಕಲರ್, ಒಳಗೆ?: ಎಲ್ಲರಿಗೂ ಟಿವಿ ನೀಡುವ ಈ ಘೋಷಣೆಯ ಹಿಂದಿರುವ ಮಿಥ್ಯವನ್ನು ಅಸತ್ಯಾನ್ವೇಷಿ ಸಂಶೋಧಿಸಿದಾಗ ಕಂಡುಬಂದ ಈ ವಿಷಯಕ್ಕೆ ಈಗೀಗ ಹೆಚ್ಚಿನ ಮಹತ್ವ ಬರತೊಡಗಿದೆ.
ಆದರೆ ಡಿಎಂಕೆ ಕಲರ್ ಟಿವಿ ಅಂತ ಹೇಳಿಕೊಂಡಿದ್ದರೂ, ಕಲರ್‌ಫುಲ್ ಮಾತು ಉಳಿಸಿಕೊಳ್ಳುವ ಸಲುವಾಗಿ ಕಪ್ಪು ಬಿಳುಪು ಟಿವಿಯನ್ನೇ ಹಲವು ಚಿತ್ರ ವಿಚಿತ್ರ ವರ್ಣಗಳ ಅಲಂಕಾರದೊಂದಿಗೆ ನೀಡುತ್ತಾರೆಯೇ ಎಂಬುದು ಕಾದುನೋಡಬೇಕಾದ ಸಂಗತಿ.

Thursday, May 11, 2006

ವೈದ್ಯೋ ನಾರಾಯಣೋ 'ಹರಿಃ' !

(ಬೊಗಳೂರು ಸಂಚಾರಿ ಬ್ಯುರೋದಿಂದ)
ಬೊಗಳೂರು, ಮೇ 11- ಇದು ಯಾಂತ್ರಿಕ ಯುಗ. ಇಲ್ಲಿ ಮಾನವನ ದೇಹದ ಒಂದೊಂದು ಯಂತ್ರಗಳೂ ಒಂದೊಂದು ದಿಕ್ಕಿಗೆ ಕೆಲಸ ಮಾಡುತ್ತವೆ. ಮೆದುಳು ಇರಬೇಕಾದಲ್ಲಿ ಕಿಡ್ನಿ ಬಂದು ಕೂತಿದೆ. ಈ ಕಾರಣಕ್ಕೆ ಹಿಂಸೆ, ಅನಾಚಾರಗಳು ಮೇಳೈಸುತ್ತಿವೆ. ಇಂದಿನ ಯಾಂತ್ರಿಕರಿಗಿಂತ ಹಿಂದಿನ "ತಾಂತ್ರಿಕ"ರಿರುವ ಯುಗದಲ್ಲೇ ಚೆನ್ನಾಗಿತ್ತು. ಅಂದಿನ ಮನುಷ್ಯರು ಕೂಡ ನಿಜವಾದ ಮನುಷ್ಯರೇ ಆಗಿದ್ದರು. ಅಂದಿನ ಮನುಷ್ಯರಿಗೆ ಪ್ರಾಣಿಗಳ ಗುಣಗಳಿರಲಿಲ್ಲ....

ಈ ಒಂದು ಪರಿಚಯದೊಂದಿಗೆ ಇಲ್ಲಿ ಪ್ರಕಟವಾಗಿರುವ ಸುದ್ದಿಗೆ ಆಸ್ಪತ್ರೆಯ ವೈದ್ಯರು ಮತ್ತು ಇಂಥ ಆಸ್ಪತ್ರೆ ಕಟ್ಟಿಸಿ ಅದನ್ನು ಬೆಳೆಸದೆಯೇ ತಮ್ಮ ಜೇಬು ಬೆಳೆಸುತ್ತಿರುವ ರಾಜಕಾರಣಿಗಳು ಸ್ಪಷ್ಟನೆ ನೀಡಿದ್ದಾರೆ.

ಒಂದೆಡೆ ವೈದ್ಯರು ಮುಷ್ಕರ ಹೂಡುತ್ತಿದ್ದರೆ, ಇತ್ತ ವೈದ್ಯರು ನೀಡಿದ ಸ್ಪಷ್ಟನೆಯನ್ನು ಅವರದೇ ಮಾತುಗಳಲ್ಲಿ ಕೇಳಿ:

ಹಿಂದೆ ಹೆರಿಗೆ ಮಾಡಿಸುವಾಗ ವಿದ್ಯುತ್ ಇತ್ತೇ? ಕತ್ತಲೆ ಕೋಣೆಯಲ್ಲೇ ಹೆಚ್ಚೆಂದರೆ ಸೀಮೆಣ್ಣೆ ಬುಡ್ಡಿ ದೀಪವನ್ನೋ ಟಾರ್ಚ್ ಬೆಳಕಿನಲ್ಲೋ ಹೆರಿಗೆ ಮಾಡಲಾಗುತ್ತಿತ್ತಲ್ಲವೇ? ಆಗ ಹುಟ್ಟಿದ ಮನುಷ್ಯರ ಬುದ್ಧಿ ಎಷ್ಟು ನೆಟ್ಟಗಿತ್ತು! ಇಂದು ನಾವೆಲ್ಲಾ ಇಂಥ ಒಳ್ಳೆ ಸ್ಥಿತಿಗೆ ಬರಲು ಈ ರೀತಿ ಹುಟ್ಟಿದವರೇ ಕಾರಣವಲ್ಲವೆ? ಇದೇ ಕಾರಣಕ್ಕೆ ಮುಂದೆಯೂ ಇಂತಹ ನಿಜವಾದ ಮನುಷ್ಯರೇ ಹುಟ್ಟುವಂತಾಗಲು ಈಗಿನ ಸರಕಾರಿ ಆಸ್ಪತ್ರೆಗಳಿಗೆ ದಶಕಗಳಿಂದ ವಿದ್ಯುತ್ ಒದಗಿಸಲಾಗುತ್ತಿಲ್ಲ.

ಹಾಗಿದ್ದರೆ ಸಮೀಪದಲ್ಲೇ ಶವಸಂಸ್ಕಾರಕ್ಕೆ ಅವಕಾಶ ನೀಡಿದೆಯಲ್ಲ, ಅದೇಕೆ ಎಂದು ಅಸತ್ಯಾನ್ವೇಷಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾವಣ, ಜರಾಸಂಧ, ಕೀಚಕ, ಯಮ ಮಹಾಶಯರು, "ಸ್ವಲ್ಪ ಆಧುನಿಕತೆ ಟಚ್ ಇರಲಿ ಅಂತ ಈ ವ್ಯವಸ್ಥೆ. ಹೆರಿಗೆಗೆ ಬಂದವರು ಸರಿಯಾಗಿ ಹಣ ದಾನ ಮಾಡದಿದ್ದರೆ, ಆಸ್ಪತ್ರೆ ಸಿಬ್ಬಂದಿಗೆ ಕೋಪ ಬರುವುದು ಸಹಜ. ವೈದ್ಯರಿಗೆ ಬಾರದಿದ್ದರೂ ಆಸ್ಪತ್ರೆ ನಡೆಸುವ ಸರಕಾರಿ ಅಧಿಕಾರಿಗಳಿಗೆ ಖಂಡಿತಾ ಕೋಪ ಬರುತ್ತದೆ. ಆಗ "ಮೇಲಿನಿಂದ" ಆದೇಶ ಪಡೆದು "ಮುಂದುವರಿಯುವಂತಾಗಲು" ಮತ್ತು ಮುಂದಿನ ಕರ್ಮಗಳನ್ನು ಸೂಕ್ತವಾಗಿ ನೆರವೇರಿಸಲು ಈ ವ್ಯವಸ್ಥೆ ಎಂದು ಒಕ್ಕೊರಲಿನಿಂದ ತತ್ತರಿಸಿದ್ದಾರೆ.

ಆದರೆ ವೈದ್ಯೋ ನಾರಾಯಣೋ ಹರಿಃ ಎಂಬ ಜನಪ್ರಿಯ ಉಕ್ತಿಯೇ ಇದೆಯಲ್ಲ ಎಂದು ಕೇಳಿದಾಗ ಅವರು ಕೂಲ್ ಆಗಿ ತತ್ತರಿಸಿದ್ದು ಹೀಗೆ: "ಈ ವಾಕ್ಯವನ್ನು ತಪ್ಪಾಗಿ ಅರ್ಥೈಸಲಾಗಿದೆ. ಇಲ್ಲಿ ಹರಿಃ ಅನ್ನೋ ಪದಕ್ಕೆ ಬೇರೊಂದು ಅರ್ಥವಿದೆ. ಉದಾಹರಣೆಗೆ ಮುರಹರ (ಮುರಾಸುರನನ್ನು ಸಂಹರಿಸಿದವ), ದುಃಖಹರ (ದುಃಖವನ್ನು ವಿನಾಶಗೊಳಿಸುವವ). ಈ ಉಕ್ತಿ ಸರಿಯಾಗಿಯೇ ಇದೆ. ಆದರೆ ಅದನ್ನು ತಪ್ಪಾಗಿ ಅರ್ಥೈಸಿಕೊಳ್ಳುತ್ತಿರುವುದು ವಿಷಾದನೀಯ. ನಮ್ಮ ಪ್ರಕಾರ ಇದರರ್ಥ, ಸರಕಾರಿ ಆಸ್ಪತ್ರೆಗಳಲ್ಲಿ ಸಾಕಷ್ಟು ದುಡ್ಡು ಬಿಚ್ಚದಿದ್ದರೆ ವೈದ್ಯರು ನಾರಾಯಣ ಬಂದರೂ ಅವರನ್ನು 'ಹರೋಹರ' ಮಾಡಿಬಿಡುತ್ತಾರೆ. ದಯವಿಟ್ಟು ಅರ್ಥಮಾಡಿಕೊಳ್ಳಿ"!

Wednesday, May 10, 2006

ಉಸಿರೇ.... ಉಸಿರೇ.... ನೀ ಹೃದಯ ಕೊಲ್ಲಬೇಡ...

(ಬೊಗಳೂರು ನೆಟ್ಗಳ್ಳರ ಬ್ಯುರೋದಿಂದ)
ಬೊಗಳೂರು, ಮೇ 10- ಉಸಿರುಕಟ್ಟಿ ದಾಖಲೆ ಮಾಡುವ ತನ್ನ ಆರೋಗ್ಯಕರ ಪ್ರಯತ್ನವೊಂದಕ್ಕೆ ತಣ್ಣೀರೆರಚಿದ್ದರಿಂದ ಅಮೆರಿಕದ ಮಾಯಾಜಾಲ ಪ್ರವೀಣ ಡೇವಿಡ್ ಬ್ಲೈನ್ ಕೆಂಡಾಮಂಡಲನಾಗಿದ್ದಾನೆ.

ನಗರ ಪ್ರದೇಶದ ವಾಯುಮಾಲಿನ್ಯದಿಂದ ಸ್ವಲ್ಪಮಟ್ಟಿನ ಬಿಡುವು ಪಡೆದು ಗೋಲದೊಳಗೆ ನೀರು ತುಂಬಿ ಅದರಲ್ಲಾದರೂ ವಾಯುಸೇವನೆ ಇಲ್ಲದೆ ಸ್ವಲ್ಪ ಆರಾಮವಾಗಿರೋಣ ಎಂದುಕೊಂಡರೆ ಇವರು ಬಿಡುತ್ತಿಲ್ಲವಲ್ಲ ಎಂಬ ಕೊರಗು ಆತನದು.

ಮನೆಯಲ್ಲಿ ಪತ್ನಿಯ ಕಾಟ, ಹೇಗೂ ದಿನಂಪ್ರತಿ ಉಸಿರುಕಟ್ಟಿಸುವ ವಾತಾವರಣ. ಅದನ್ನೇ ದಾಖಲೆಯಾಗಿ ಪರಿವರ್ತಿಸಬಾರದೇಕೆ. ವಾತಾವರಣದಲ್ಲಿರುವ ಕಲುಷಿತ ವಾಯುಸೇವನೆಗಿಂತ ಈ ವಿಧಾನ ಆರೋಗ್ಯಕ್ಕೂ ಪೂರಕವಲ್ಲವೆ ಎಂದು ಡೇವಿಡ್ ತನ್ನನ್ನು ಸಂದರ್ಶಿಸಿದ ಅಸತ್ಯಾನ್ವೇಷಿಯನ್ನು ಪ್ರಶ್ನಿಸಿದ್ದಾನೆ.

ಮನೆಯಲ್ಲಿ ಹೇಗೂ ಉಸಿರುಕಟ್ಟೀ... ಕಟ್ಟೀ... ಅಭ್ಯಾಸವಾಗಿಬಿಟ್ಟಿದೆ. ಅದೇ ಭರವಸೆಯಲ್ಲಿ ಈ ದಾಖಲೆಗೆ ಮುಂದಾದೆ ಎಂದು ತಿಳಿಸಿರುವ ಡೇವಿಡ್, ಅಸತ್ಯಾನ್ವೇಷಿಯ ಕುತೂಹಲಭರಿತ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ, "ಇಷ್ಟಕ್ಕೂ ನಾನು ಕಟ್ಟಿಕೊಂಡದ್ದು ನನ್ನ ಕೊನೆಯುಸಿರನ್ನು ಅಲ್ಲವಲ್ಲ?" ಎಂದು ಪ್ರತಿ-ಪ್ರಶ್ನಿಸಿದ್ದಾನಲ್ಲದೆ, ನೀವೇಕೆ ಉಸಿರುಕಟ್ಟಿದಂತೆ ಚಡಪಡಿಸಬೇಕು ಎಂದು ಕೇಳಿದ್ದಾನೆ.

Monday, May 08, 2006


ಬಟ್ಟೆ ಧರಿಸಿದ ಮಲ್ಲಿಕಾ ಶರ್‌ಮಾ-ಮತ್ ದಾಖಲೆ
(ಬೊಗಳೂರು ರ-ಗೆಳೆಯ ಬ್ಯುರೋದಿಂದ)
ಬೊಗಳೂರು, ಮೇ 8- ನಂಬಿದ್ರೆ ನಂಬಿ, ಬಿಟ್ರೆ ಬಿಡ್ಬೇಡಿ. ಮಲ್ಲಿಕಾ ಶರ್‌ಮಾ ಮತ್ ಎಂಬ ಬಿಚ್ಚೋಲೆ ಗೌರಮ್ಮ ಮೈತುಂಬಾ ಉಡುಗೆ ಧರಿಸಿ ಹೊಸ ದಾಖಲೆ ಸೃಷ್ಟಿಸಿದ್ದಾಳೆ. ಅದೂ ಕೂಡ ಪಬ್ಲಿಕ್ ಆಗಿ! ಅಷ್ಟು ಮಾತ್ರವಲ್ಲ, ಅಭಿಮಾನಿ ಪೊಲೀಸರು ಎಷ್ಟೇ ಕೂಗಾಡಿದರೂ ಆಕೆ ಬಟ್ಟೆ ಬಿಚ್ಚಲು ಕೇಳಲೇ ಇಲ್ಲ!

ಯಾವತ್ತೂ ಹುಟ್ಟುಡುಗೆಯನ್ನೇ ಇಷ್ಟಪಡುತ್ತಿರುವಂತೆ ಕಾಣಿಸುವ ಈ ನಾಚುವ, ನಾಚ್ತಾ ಹುವಾ, ಬಟ್ಟೆ ಬಿಚ್ತಾ ಹುವಾ ಬಿಕಿನಿ ಸುಂದರಿ, ಅಪರೂಪಕ್ಕೊಮ್ಮೆ ಮೈತುಂಬಾ ಬಟ್ಟೆ ಧರಿಸಿದ ಕಾರಣಕ್ಕೋ ಏನೋ, ನಾಚಿ ನೀರಾದ ಕಾರಣ ಮುಂಬಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಒಂದು ಕ್ಷಣ ಪ್ರವಾಹ ಬಂದಿತ್ತು.

ಯಾವತ್ತೂ ಬಟ್ಟೆ ಬಿಚ್ಚೀ ಬಿಚ್ಚೀ ಬೇಜಾರಾದಾಗಲೊಮ್ಮೆ ಆಕೆ ಮೈಮುಚ್ಚಿಕೊಳ್ಳುವ ಬುರ್ಖಾ ಧರಿಸಿದ್ದಿರಬಹುದು ಎಂಬುದು ಈ ವರದಿಗೆ ಪ್ರತಿಕ್ರಿಯಿಸಿದ ಮಾವಿನ ಅರಸರ ಶಂಕೆ.

ಸಲ್ಮಾನ್ ಬೆದರಿಕೆ: ಈ ಮಧ್ಯೆ, ತನಗಿಂತಲೂ ಕನಿಷ್ಠ ಉಡುಗೆ ಧರಿಸಿ ತನ್ನನ್ನು ಹಿಂದಿಕ್ಕಿದ್ದ ನಟೀಮಣಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಸಲ್'ಮಾನ' ಖಾನಾ, ಈಕೆ ಬಟ್ಟೆ ಬಿಚ್ಚುವ ಸಂಘದವರ ಮಾನ ತೆಗೆಯುವ ಸಲುವಾಗಿ ಮುಂಬಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಷ್ಟೊಂದು ಬಟ್ಟೆ ತೊಟ್ಟಿದ್ದೇಕೆ ಎಂದು ಕೆಂಡಕಾರಿದ್ದಾನೆ.

---------------------------------------------------
ಪತ್ತೆ: ಭಾರತೀಯ ಮಾರುಕಟ್ಟೆಯಲ್ಲಿ ಶನಿವಾರ (6 ಮೇ 2006) ಚಿನ್ನದ ಬೆಲೆ 10 ಗ್ರಾಂ.ಗೆ 10030 ರೂ.
ಅದೇ ರೀತಿ ಬೊಗಳೆ ರಗಳೆಯ ಒದೆತದ (ಹಿಟ್) ಕೌಂಟರ್ ಬೆಲೆಯು ಬೆಳಗ್ಗೆ 10.30ರವೇಳೆಗೆ 1030 ತಲುಪಿತ್ತು ಎಂದು ಮಂಗಳೂರಿಗರೊಬ್ಬರು ಪತ್ತೆ ಮಾಡಿದ್ದಾರೆ. ಈ ಸಂಭ್ರಮದ ಹಿನ್ನೆಲೆಯಲ್ಲಿ ಬೊಗಳೆ-ರಗಳೆಗೆ ಹೊಸ ತಲೆ ಮಾಡಿಕೊಟ್ಟ ಮಂಗಳೂರಿನ ರೋಹಿದಾಸ್ ಅಭಿನಂದನಾರ್ಹರು.- ಅಸತ್ಯಾನ್ವೇಷಿ

Saturday, May 06, 2006


ಮಾರುಕಟ್ಟೆಯಲ್ಲಿ ಮೆಣಸಿನ ಸ್ಪ್ರೇ ದಿಢೀರ್ ಮಾಯ!
(ಬೊಗಳೂರು ಬ್ಯುರೋ ವಿಶೇಷ)
ಬೊಗಳೂರು, ಮೇ 6- ಸ್ವಯಂ ರಕ್ಷಣೆಗೆ "ಒಲಿಯೋ ಜಾಪ್" ಎಂಬ ಮೆಣಸಿನಪುಡಿ ಸ್ಪ್ರೇ ಮಾರುಕಟ್ಟೆಗಿಳಿದಿರುವಂತೆಯೇ ಈ ಸ್ಪ್ರೇ ಪೊಟ್ಟಣಗಳು ಹಳಸಿದ ತಂಪುತಂಪು ಐಸ್‌ಕ್ರೀಮ್‌ನಂತೆ ಮಾರುಕಟ್ಟೆಯಲ್ಲಿ ಖರ್ಚಾಗಿಬಿಟ್ಟಿದ್ದು, ಇದರ ಹಿಂದೆ ದೊಡ್ಡ ಹಗರಣವೇ ನಡೆದಿರುವ ಸಾಧ್ಯತೆಗಳು ದಟ್ಟವಾಗಿ ಕೇಳಿಬಂದಿವೆ.

ಈ ಹಿನ್ನೆಲೆಯಲ್ಲಿ ಜೈಲಿನಿಂದ ಹೊರಬಂದ ತಕ್ಷಣವೇ ಕಣಕ್ಕಿಳಿದ ಅಸತ್ಯಾನ್ವೇಷಿ ಕಂಡುಕೊಂಡ ಅನೃತದ ಪ್ರಕಾರ, ಈ ಸ್ಪ್ರೇ ಪೊಟ್ಟಣಗಳು ಮಾರುಕಟ್ಟೆಯಲ್ಲಿ ದಿಢೀರ್ ಗೋಚರಿಸದಂತಾಗಲು ಎರಡು ಕಾರಣಗಳು ಪತ್ತೆಯಾಗಿವೆ.
ಕಾರಣ ಒಂದು: ಎಲ್ಲಾ ಮಹಿಳೆಯರು ಇದನ್ನು ಖರೀದಿಸಿ ತಮಗೆ ಕಾಟ ಕೊಡುವ (ತಮ್ಮ ಮತ್ತು ಇತರರ) ಗಂಡಂದಿರನ್ನು ಅಂಕೆಯಲ್ಲಿಟ್ಟುಕೊಳ್ಳುವ ನಿರ್ಧಾರ ಮಾಡಿದ್ದಾರೆ ಮತ್ತು ಅವರ ಕಾಟಕ್ಕೆ ಅಂತ್ಯ ಹಾಡಲು ಈ ಮೆಣಸಿನ ಪುಡಿಯನ್ನೇ ಸಾರು-ಪಲ್ಯ ಇತ್ಯಾದಿಗಳಿಗೆ ಮನಬಂದಂತೆ ಸುರಿದು ಗಂಡಂದಿರಿಗೆ ಉಣಬಡಿಸಲು ತೀರ್ಮಾನಿಸಿದ್ದಾರೆ.
ಕಾರಣ ಎರಡು: ಅಪಾಪೋಲಿ ಯುವಕರು, ಮುದುಕರು ಇತ್ಯಾದಿ ಈ ಸ್ಪ್ರೇಯನ್ನು ಸಗಟು ಖರೀದಿ ಮಾಡಿ, ಅದು ತರುಣಿಯರ ಮತ್ತು ಮಹಿಳಾಮಣಿಗಳ ಕೈಗೆ ಸಿಗದಂತೆ ಮಾಡಿದ್ದಾರೆ.

ಪೂರ್ವಜರ ನೆನಪು: ಈ ಮಧ್ಯೆ, ಸ್ಪ್ರೇ ಉಪಯೋಗಿಸುವುದಷ್ಟೇ ಅಲ್ಲ, ಮಹಿಳೆಯರು ತಮ್ಮನ್ನು ಕಾಡುವ ಪುಂಡುಪೋಕರಿಗಳ ಪಾಲಿಗೆ ಶೂರ್ಪ'ನಖಿ'ಗಳಾಗಿ ಮುಖಕ್ಕೆ ಎರಡೂ ಕೈಗಳಿಂದ ಪರಚಬೇಕು, ಅದೂ ಸಾಲದಿದ್ರೆ ಕಿರುಚಬೇಕು, ಅರಚಬೇಕು, ಕೊನೆಗೆ ಕಚ್ಚಬೇಕು ಎಂದು ಸಾಂಗ್ಲಿಯಾನ ಹೇಳಿರುವುದಾಗಿ ವರದಿಯಾಗಿದೆ. ಇದು ಜನರಿಗೆ ತಮ್ಮ ತೋಟ ಕಾಯುವ ಪೂರ್ವಜರು, ಮನೆ ಬಾಗಿಲು ರಕ್ಷಿಸುವ ಶ್ವಾನ, ಮನೆಯ ಹಾಲು ರಕ್ಷಿಸುವ ಮಾರ್ಜಾಲ ಮುಂತಾದವನ್ನು ನೆನಪಿಸಿಕೊಟ್ಟಿರುವುದು ಗೊಂದಲ ಮೂಡಿಸಿದೆ.

ಸ್ವಾಗತ: ಇದೂ ಅಲ್ಲದೆ, ಕೊನೆಯ ಅಸ್ತ್ರವಾದ ಕಚ್ಚುವಿಕೆಗೆ ಪುಂಡುಪೋಕರಿಗಳು ತೀವ್ರ ಬೆಂಬಲ ವ್ಯಕ್ತಪಡಿಸಿರುವುದಾಗಿ ಅಸತ್ಯಾನ್ವೇಷಿಯ ಸಂಶೋಧನೆಯಿಂದ ಗೊತ್ತಾಗಿದೆ. ಆದರೆ ಈ ಶಸ್ತ್ರವನ್ನು ಬಲವಾಗಿ ಪ್ರಯೋಗಿಸಬಾರದು ಎಂಬುದು ಅವರ ಒಕ್ಕೊರಳಿನ ಆಗ್ರಹಪೂರ್ವಕ ಅಭಿಪ್ರಾಯ.
---------------------------------
'ಅಧಿ'ಸೂಚನೆ: ಹಿಟ್ ಕೌಂಟರ್ 1000ದ ಗಡಿ ದಾಟಿರುವ ಹಿನ್ನೆಲೆಯಲ್ಲಿ ನಾಳಿನ ಸಂಚಿಕೆಗೆ ರಜೆ ಘೋಷಿಸಲಾಗಿದ್ದು, ಅದೇ ಹಿಟ್ಟಿನಿಂದ ದೋಸೆ ಮಾಡಿ ತಿನ್ನಲಾಗುತ್ತದೆ. ಸರ್ವರ್ ಕೂಡ ಸಹಕರಿಸಬೇಕೆಂದು ಕೋರಿ-ಕೊಲ್ಲುತ್ತೇವೆ.
ನೆಟ್ಟೋದುಗರಿಗೆ ಏಕ ಸದಸ್ಯ ಬೊಗಳೂರು ಬ್ಯುರೋದ
ಮುಖ್ಯಸ್ಥರಲ್ಲೊಬ್ಬರಿಂದ ತಲಾ ಒಂದೊಂದು ಥ್ಯಾಂಕ್ಸ್.

Friday, May 05, 2006


ದಾಂಧ(ಖ)ಲೆ ಮಾಡಿದ್ದು ಕಮಿಷನರ್ !

(ಅಸತ್ಯಾನ್ವೇಷಿ ರಹಿತ ಬ್ಯುರೋದಿಂದ)
ಬೊಗಳೂರು, ಮೇ 5- ರಾಜ್ ಅಂತ್ಯಕ್ರಿಯೆ ಸಂದರ್ಭ ಬೆಂಗಳೂರಿನಲ್ಲಿ ದಾಖಲೆ ಮಾಡಲು ಹೊರಟವರನ್ನು ಗುರುತಿಸಿ ಪುರಸ್ಕರಿಸುವುದಕ್ಕಾಗಿ ಪೊಲೀಸರು ಪ್ರಯತ್ನಗಳನ್ನು ಆರಂಭಿಸಿದ್ದಾರೆ.

ಈ ಹಿನ್ನೆಲೆಯಲ್ಲಿ, ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯ ಬಾಲ ಹಿಡಿದು ಹೊರಟ ಅಸತ್ಯಾನ್ವೇಷಿ ತಲುಪಿದ್ದು ಬೆಂಗಳೂರಿನ ಪೊಲೀಸ್ ಆಯುಕ್ತ ಡಾ.ಅಜಯ್ ಕುಮಾರ್ ಸಿಂಗ್ ಅವರ ಮನೆ ಮುಂಭಾಗಕ್ಕೆ. ಇಲ್ಲೇನು ಸಿಕ್ಕಾಪಟ್ಟೆ ಭದ್ರತೆ ಇದೆಯಲ್ಲ ಅಂತ ಒಂದು ಕ್ಷಣ ತಡವರಿಸಿದರೂ, ಸಾವರಿಸಿಕೊಂಡು ಮುಂದೆ ನುಗ್ಗಿದಾಗ ಎದುರಾದ ನಗರ ಪೊಲೀಸ್ ಕಮಿಷನರ್ ಅವರನ್ನು ತಕ್ಷಣವೇ ಹಿಡಿದು ಎಳೆದಾಡಿದ ಅಸತ್ಯಾನ್ವೇಷಿ, ನೀವು ಕೂಡ ದಾಂಧಲೆಯಲ್ಲಿ ಭಾಗವಹಿಸಿದ್ದೀರಿ ಅನ್ನೋದಕ್ಕೆ ನನ್ನ ಬಳಿ ದಾಖಲೆ ಇದೆ ಎಂದು ಪತ್ರಿಕಾ ವರದಿಯನ್ನು ತೋರಿಸಿದ.

"ಇಲ್ಲಿ ನೋಡಿ, ನಿಮ್ಮ ಫೋಟೋ ಪತ್ರಿಕೆಯಲ್ಲಿ ಬಂದಿದೆ" ಎಂದು ಪೇಪರ್ ಕಟ್ಟಿಂಗ್ ತೋರಿಸಿದ ಅಸತ್ಯಾನ್ವೇಷಿ, "ಇವರನ್ನೆಲ್ಲಾದರೂ ಕಂಡರೆ ಮಾಹಿತಿ ನೀಡಿ, ಶಾಂತಿಗೆ ಸಹಕರಿಸಿ" ಅಂತ ಪೊಲೀಸರೇ ಕೋರಿಕೊಂಡಿದ್ದಾರೆ, ಅದರ ಕೆಳಗೆ ನಿಮ್ಮದೇ ಫೋಟೋ ಎದ್ದು ಕಾಣುತ್ತಿದೆ. ನೀವು ತಕ್ಷಣವೇ ಪೊಲೀಸ್ ಠಾಣೆಗೆ ಬಂದು ಹಾಜರಿ ಹಾಕತಕ್ಕದ್ದು ಎಂದು ಆದೇಶಿಸಿದ್ದಾನೆ. ಪರಿಣಾಮ ಈಗ ಅಸತ್ಯಾನ್ವೇಷಿ ಜೈಲಿನೊಳಗೆ ಎಷ್ಟು ಕಂಬಿಗಳಿವೆ ಅಂತ ಎಣಿಸುತ್ತಾ ಕೂತಿದ್ದು, ಇಂದು ಸಂಜೆವರೆಗೆ ಈತನ ಲೆಕ್ಕಾಚಾರ ಪ್ರಕ್ರಿಯೆ ಮುಗಿಯುವ ಸೂಚನೆಗಳಿಲ್ಲ ಎಂಬ ಖಚಿತ ಮಾಹಿತಿ ದೊರಕಿದೆ.

Thursday, May 04, 2006


ಭಾರತಕ್ಕೆ ದೃಷ್ಟಿ ತಗುಲದಂತಾಗಲು

ಮೀಸಲಾತಿ ಅವಶ್ಯ: ಮಾಜಿ ನಿಧಾನಿ
(ಬೊಗಳೂರು ಬ್ಯುರೋದಿಂದ)
ಬೊಗಳೂರು, ಮೇ 4- ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ವಿಜ್ಞಾನಿಗಳು, ಸಾಫ್ಟ್ ವೇರ್ ಎಂಜಿನಿಯರ್‌ಗಳು ಖ್ಯಾತನಾಮರಾಗಿ ಭಾರತದ ಹೆಸರು ಕೂಡ ಉನ್ನತಿಗೇರುತ್ತಿರುವುದರಿಂದ ತೀವ್ರವಾಗಿ ಕಳವಳಗೊಂಡಿರುವ ಮಾಜಿ ನಿಧಾನಿ, ಮಂಡಲೋದ್ಧಾರಕ ಖ್ಯಾತಿಯ ಮೀಸಲಾತಿ ಪ್ರಲಾಪ್ ಸಿಂಗ್ ಅವರು, ಹೀಗೇ ಮುಂದುವರಿದರೆ ಭಾರತಕ್ಕೆ ಜಗತ್ತಿನಾದ್ಯಂತ ಜನರ ದೃಷ್ಟಿ ತಗುಲಬಹುದು ಎಂದು ಆತಂಕಿಸಿದ್ದಾರೆ.

ಈ ಕಾರಣಕ್ಕಾಗಿ, ಎಲ್ಲಾ ಕ್ಷೇತ್ರಗಳಲ್ಲಿ ನೂರಕ್ಕೆ ನೂರು ಮೀಸಲಾತಿ ಜಾರಿಗೆ ಬರಬೇಕು. ಇದರಿಂದಾಗಿ ದೇಶದಲ್ಲಿ ಜಾತಿ ರಾಜಕಾರಣ ಉತ್ತಮ ಬೆಳವಣಿಗೆ ಕಾಣುತ್ತದೆ. ಇದುವರೆಗೆ ತಮ್ಮನ್ನೆಲ್ಲಾ ಶೋಷಿಸುತ್ತಾ ಬಂದಿರುವ ಪ್ರತಿಭಾವಂತರ ಸಂತತಿ ಅಳಿದು, ಭಾರತ ಮತ್ತೆ ತನ್ನ "ಗತ" ವೈಭವವನ್ನು ಮರಳಿಪಡೆಯುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮೀಸಲಾತಿ ಜಾರಿಗೆ ತಂದರೆ ಅಂತಾರಾಷ್ಟ್ರೀಯ ಸ್ತರದಲ್ಲಿ ಭಾರತದ ಬಗೆಗಿನ ಪ್ರಚಾರ ಕಡಿಮೆಯಾಗುತ್ತದೆ. ಪ್ರತಿಭಾವಂತರೆಲ್ಲಾ ವಿದೇಶಗಳಿಗೆ ಓಡಿ ಹೋಗಿ ಅಲ್ಲಿನ ಕೀರ್ತಿ ಹೆಚ್ಚಿಸಿ, ಆ ದೇಶಕ್ಕೆ ಇಡೀ ಜಗತ್ತಿನ ದೃಷ್ಟಿ ತಾಗುವಂತೆ ಮಾಡುತ್ತಾರೆ. ಇದರಿಂದ ಆ ದೇಶವು ದೃಷ್ಟಿ ತಗುಲಿದ್ದಕ್ಕೆ ಶಾಂತಿ ಮಾಡಿಸಿಕೊಳ್ಳಬೇಕಾಗುತ್ತದೆ, ಇತ್ತ ಭಾರತವು ಕೆಟ್ಟ ದೃಷ್ಟಿಯಿಂದ ಪಾರಾಗುತ್ತದೆ ಎಂದು ಅವರು ಉವಾಚಿಸಿದ್ದಾರೆ.

ಕ್ರಿಕೆಟ್‌ನಲ್ಲಿ ಮೀಸಲು ಬೇಕು: ಈ ಮಧ್ಯೆ ಖಾಸಗಿ ಶಾಲೆ-ಕಾಲೇಜುಗಳಲ್ಲಿ ಮೀಸಲಾತಿ ಜಾರಿಗೊಳಿಸಿ ದೇಶವನ್ನು ಮತ್ತೊಮ್ಮೆ ಮಂಡಲ್ ಸಿಂಗ್ ಆಡಳಿತಾವಧಿಯ ಅಲ್ಲೋಲ ಕಲ್ಲೋಲಕ್ಕೆ ಒಳಪಡಿಸುವ ಕೇಂದ್ರ ಹಿಂದುಳಿದ ಸಂಪನ್ಮೂಲ ಮಂತ್ರಿ ದುರ್ಜನ್ ಸಿಂಗ್ ಪ್ರಸ್ತಾಪವನ್ನು ಉತ್ತರ ಪ್ರದೇಶದ ಓಟಿನ ಬ್ಯಾಂಕ್‌ನ ಮಹಾ ವ್ಯವಸ್ಥಾಪನಾ ನಿರ್ದೇಶಕರಾದ ಮಾಯಾಂಗನೆ, ಮುಲಾಮು ಸಿಂಗ್ ಹಾಗೂ ಕರ್‌ನಾಟಕದ ಮಾಜಿ ಉಪನಿಧಾನಿ ಸಿದ್ದರಾದ್ಧಾಂತಯ್ಯ ಸ್ವಾಗತಿಸಿದ್ದಾರೆ.

ಇತ್ತೀಚೆಗೆ ಭಾರತವು ಕ್ರಿಕೆಟ್, ಟೆನಿಸ್, ಚೆಸ್ ಮತ್ತಿತರ ರಂಗಗಳಲ್ಲಿ ಭಾರಿ ಸುದ್ದಿ ಮಾಡುತ್ತಿದೆ. ಇದರಿಂದಾಗಿ ದೃಷ್ಟಿ ತಗುಲದಂತಾಗಲು ಈ ರಂಗಗಳಲ್ಲೂ ಶೇ.99 ಮೀಸಲಾತಿ ಜಾರಿಗೊಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಹಾಗಿದ್ದರೆ, ಮಹಿಳಾ ಟೆನಿಸ್ ರಂಗವನ್ನು ಹಿಂದುಳಿದವರಿಗೆ ಮೀಸಲಿಡಬೇಕೆ ಎಂಬ ಅಸತ್ಯಾನ್ವೇಷಿ ಪ್ರಶ್ನೆಗೆ ಸ್ವಲ್ಪ ಯೋಚಿಸಿದ ಮುಲಾಮು ಸಿಂಗ್, ಹೌದಲ್ಲ, ನನಗದು ಹೊಳೆಯಲೇ ಇಲ್ಲ. ಸದ್ಯಕ್ಕೇನೂ ಅದರ ಅವಶ್ಯಕತೆ ಕಾಣಿಸುತ್ತಿಲ್ಲ. ಅಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರೇ ಮೆರೆಯುತ್ತಿದ್ದಾರಲ್ಲ ಎಂದು ನಗುತ್ತಾ ಉತ್ತರಿಸಿದರು.

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ವಾಪಸ್ ಬಂದ ಮಾಜಿ ನಿಧಾನಿಗಳು, ಪ್ರಧಾನಿ ಹುದ್ದೆಗೂ ಮೀಸಲಾತಿ ಅನ್ವಯಿಸಬೇಕು. ಅಲ್ಲದೆ, ಶಿಕ್ಷಕ ಹುದ್ದೆಗಳಿಗೂ ಮೀಸಲಾತಿ ಅನ್ವಯಿಸಿದರೆ ಪ್ರತಿಭಾವಂತರೆಲ್ಲಾ ಪಲಾಯನ ಮಾಡುತ್ತಾರೆ, ಇದರಿಂದ ಭವಿಷ್ಯದ ಭವ್ಯ ಪ್ರಜೆಗಳನ್ನು ರೂಪಿಸುವ ಶಾಲೆಯ ಮಟ್ಟದಿಂದಲೇ ಭಾರತದ ಹೆಸರಿಗೆ ದೃಷ್ಟಿ ತಗುಲದೆ "ಸುರಕ್ಷಿತ"ವಾಗಿರುವಂತೆ ನೋಡಿಕೊಳ್ಳಲು ಸಹಾಯವಾಗುತ್ತದೆ. ಮೊದಲು ದುರ್ಜನ್ ಸಿಂಗ್ ಮಂತ್ರಾಲಯದಿಂದಲೇ ಇಂಥದ್ದು ಆರಂಭವಾಗಲಿ ಎಂದು ಅಭಿಪ್ರಾಯಪಟ್ಟರು.

ವಿಶ್ವಸುಂದರಿಗೂ ಮೀಸಲು: ಈ ಮಧ್ಯೆ, ಉ.ಪ್ರ.ದ (ತಪ್ಪಾಗಿ ಉಪದ್ರ ಎಂದು ಓದದಿರಿ) ಮಾಯಾಂಗನೆ ಅವರು ಅಸತ್ಯಾನ್ವೇಷಿಯನ್ನು ಫೋನ್ ನಲ್ಲಿ ಸಂಪರ್ಕಿಸಿ, "ನನ್ನದೂ ಒಂದು ಆಗ್ರಹ ಇದೆ, ವಿಶ್ವ ಸುಂದರಿ ಪಟ್ಟಕ್ಕೂ ಮೀಸಲಾತಿ ಬೇಕು, ಸಾಧ್ಯವಾಗದಿದ್ದರೆ ಭಾರತ ಸುಂದರಿ ಪಟ್ಟಕ್ಕಾದರೂ ಮೀಸಲಾತಿ ನೀಡಬೇಕು, ಇದನ್ನು ನಿಮ್ಮ 'ಬೊಗಳೆ ರಗಳೆ'ಯಲ್ಲಿ ಪ್ರಕಟಿಸಿ" ಎಂದು ತಾಕೀತು ಮಾಡಿದ್ದಾರೆ.
-----------------------
ಇಂ'ದಿನ' ವಿಶೇಷ
ಇಂದು 04-05-06ರ ಮಧ್ಯಾಹ್ನ 1 ಗಂಟೆ, 2 ನಿಮಿಷ, 3 ಸೆಕೆಂಡುಗಳಾಗುವ ಹೊತ್ತಿಗೆ ಕಂಪ್ಯೂಟರ್/ಡಿಜಿಟಲ್ ಕ್ಯಾಲೆಂಡರ್‌ಗಳು 1:2:3:4/5/6 ಅಂತ ತೋರಿಸುತ್ತದೆ. ಇದು ಈ ಜನ್ಮದಲ್ಲಿ ಒಮ್ಮೆ ಮಾತ್ರ ಕಾಣಸಿಗುವ ವಿದ್ಯಮಾನ!

Wednesday, May 03, 2006


33+104 = ಸುದೀರ್ಘ ದಾಂಪತ್ಯ ಜೀವನ
(ಬೊಗಳೂರು ಬ್ಯುರೋದಿಂದ)
ಬೊಗಳೂರು, ಮೇ 3- ಜೀವನದಲ್ಲೇ ಮೊದಲ ಬಾರಿ 33ರ ಯುವಕನೊಬ್ಬ 104 ವರ್ಷದ ಅ.........ಜ್ಜಿಯನ್ನು ಮದುವೆಯಾಗಿರುವ ಸುದ್ದಿ ಇಲ್ಲಿ ನೀಡಿರುವುದನ್ನು ಓದಿದ ಅಸತ್ಯಾನ್ವೇಷಿ ಮಲೇಷಿಯಾಕ್ಕೆ ಧಾವಿಸಿ, ಈ ಹಣ್ಣು ಹಣ್ಣು ಯುವಕ ಮತ್ತು ಯುವ ಮುದುಕಿಯರ ಸಂದರ್ಶನ ನಡೆಸಿದ್ದಾನೆ.

ಸಂದರ್ಶನದ ಸಾರ ಇಲ್ಲಿದೆ. ವರ ಮಹಾಶಯ ಮಹಮ್ಮದ್ ನೂರಾ ಛೇ ಮೂಸಾ (Muhamad Noor Che Musa) ಮತ್ತು ನಾಚಿ ನಾಚಿ ಮುಖವೆಲ್ಲಾ ಸುಕ್ಕುಗಟ್ಟಿದ್ದ ನವವಧು ವ್ಯಾಕ್ ಕೊಂದರ್ (Wook Kundor) ಅಸತ್ಯಾನ್ವೇಷಿ ಎದುರು ಬೊಚ್ಚು ಬಾಯಿ ಬಿಟ್ಟದ್ದು ಹೀಗೆ:

ಅನ್ವೇಷಿ: ನೀವು ಮದುವೆಯಾಗಿದ್ದೇಕೆ?
ನೂರಾ ಛೆ: ಎಲ್ಲರೂ ಆಗುತ್ತಾರೆ, ಅದಕ್ಕೆ.ವ್ಯಾಕ್ ಕೊಂದರ್ : ಮದುವೆ ಆಗಿ ಆಗಿ ಅಭ್ಯಾಸವಾಗ್ಬಿಟ್ಟಿದೆ ನೋಡಿ, ಬಿಡಕ್ಕಾಗಲ್ಲ.

ಅನ್ವೇಷಿ: ಇದು ನಿಮಗೆ ಎಷ್ಟನೇ ಮದುವೆ?
ನೂರಾ ಛೇ: ಇದೇ ಮೊದಲು ಪ್ರಯತ್ನಿಸಿದ್ದೇನೆ.
ವ್ಯಾಕ್ ಕೊಂದರ್ : ನಾವೀಗ 21ನೇ ಶತಮಾನದಲ್ಲಿದ್ದೀವಿ, ಹಿಂದಿನ ಶತಮಾನದ್ದೂ ಸೇರಿ ನನ್ನದು 21ನೇ ಮದುವೆಯಿದು!

ಅನ್ವೇಷಿ: ನಿಮ್ಮ ಹೆಸರಿಗೂ 104ರ ಅಜ್ಜಿಯನ್ನು ಮದುವೆಯಾಗುವುದಕ್ಕೂ ಸಂಬಂಧವಿದೆಯೆ?
ನೂರಾ ಛೇ: ಅಷ್ಟೂ ಗೊತ್ತಾಗಲ್ವ. ನಾನು ನೂರಾ, ಆಕೆಗೆ ನೂರಾ ನಾಕು. ಈ ಸಾಮ್ಯತೆ ನಮ್ಮನ್ನು ಬಲವಾಗಿ ಹಿಡಿದಿಟ್ಟಿರುತ್ತದೆ.

ಅನ್ವೇಷಿ: ನಿಮ್ಮ ಜೀವನದಲ್ಲಿ ಮದುವೆ ಸಂಖ್ಯೆ ಹೆಚ್ಚಿಸುವ ಯೋಚನೆಯಿದೆಯೆ?
ನೂರಾ ಛೇ :ಯಾಕಿಲ್ಲ, ನನ್ನಜ್ಜಿ.... ಅಲ್ಲಲ್ಲ.... ಹೊಸ ಪತ್ನಿ ಈಗಾಗಲೇ 21 ಮದುವೆಯಾಗಿ'ಬಿಟ್ಟಿ'ರುವಾಗ ನಾನು ಅದನ್ನು ಮೀರಿಸೋದು ಬೇಡವೆ?
ವ್ಯಾಕ್ ಕೊಂದರ್: ಈ ಶತಮಾನದ ಅಂತ್ಯದೊಳಗೆ ಮದುವೆಯ ಸಂಖ್ಯೆಯನ್ನು ಡಬ್ಬಲ್ ಆಗಿಸುವ ಯೋಚನೆಯಿದೆ. ನೋಡೋಣ, ಆ ದೇವರು ಕಣ್ಣು ಬಿಟ್ಟರೆ ವಿಶ್ವದಾಖಲೆ ಮಾಡಬಹುದು.

ಅನ್ವೇಷಿ: ನಿಮ್ಮ ಹಿಂದಿನ ಗಂಡಂದಿರ ಗಡಣ ಎಲ್ಲಿದೆ, ಏನು ಮಾಡುತ್ತಿದೆ?
ವ್ಯಾಕ್ ಕೊಂದರ್: ಮದುವೆಯಾಗುವುದು ನನ್ನ ಕೆಲಸ. ಅವರೆಲ್ಲಿದ್ದಾರೆ, ಏನಾಗಿದ್ದಾರೆ, ಏನು ಮಾಡುತ್ತಿದ್ದಾರೆ ಎಂದೆಲ್ಲಾ ಯೋಚಿಸುವುದು ಅವರಿಗೇ ಬಿಟ್ಟ ವಿಚಾರ.

ಅನ್ವೇಷಿ: ನೂರಾ 4 ಅವರೆ, ನಿಮ್ಮ ಹೆಸರಲ್ಲೇಕೆ ಛೆ ಎಂಬ ಶಬ್ದವಿದೆ?
ನೂರಾ: ಗೊತ್ತಿಲ್ಲ. ಈಕೆಯನ್ನು ಮದುವೆಯಾದ ನಂತರ ಅದು ತಾನೇ ತಾನಾಗಿ ಹೆಸರಿಗೆ ಅಂಟಿಕೊಂಡಿತು.

ಅನ್ವೇಷಿ: ಮಿಲಿಟರಿ ಏಕೆ ಬಿಟ್ಟಿರಿ?
ನೂರಾ: ಮದುವೆಯಾಗಲು.

ಅನ್ವೇಷಿ: ನಿಮ್ಮ ಭವಿಷ್ಯದ ಯೋಚನೆ ಏನು?
ವ್ಯಾಕ್ ಕೊಂದರ್: ಇದುವರೆಗೆ ಒಂಟಿ ಜೀವನ ಸಾಕಾಗಿದೆ. ಇನ್ನು ಮನೆತುಂಬಾ ಮಕ್ಕಳನ್ನು ಅವುಗಳೊಂದಿಗೆ ಆಡುತ್ತಾ ಕಾಲ ಕಳೆಯೋದು.
ನೂರಾ:ನಮ್ಮದು ಸುದೀರ್ಘ ದಾಂಪತ್ಯ ಜೀವನ ಎಂಬ ವಿಶ್ವಾಸವಿದೆ. ಯಾಕೆಂದರೆ ಆಕೆಗೆ ಈಗಾಗಲೇ 104 ವರ್ಷ, ನನಗೆ 33 ಸೇರಿದರೆ 137 ವರ್ಷ. ಇದು ವಿಶ್ವದಾಖಲೆಗೆ ಸೇರುತ್ತದೆಯೋ... ದಯವಿಟ್ಟು ಒಮ್ಮೆ ಚೆಕ್ ಮಾಡಿ ನೋಡಿಬಿಡಿ.

ಅನ್ವೇಷಿ : ಧನ್ಯವಾದ.
ನೂರಾ ಮತ್ತು ವ್ಯಾಕ್ ಕೊಂದರ್: ನಿಮಗೂ ಧನ್ಯವಾದ. ಮುಂದಿನ ಮದುವೆಗೆ ಇನ್ವಿಟೇಶನ್ ಕಳುಹಿಸುತ್ತೇವೆ, ಖಂಡಿತಾ ಬರಬೇಕು.

Tuesday, May 02, 2006


ಪೂರ್ವ'ಗ್ರಹ' ಕಾಟ: ವಿಶ್ವ ಸುಂದರ್ಯಾ ರೈಗೇ

ಕೈ ಕೊಡುವತ್ತ ಛೋಟಾ ಬಚ್ಚಾನ್‌ ಕುಟುಂಬ

ಮುಂಬಯಿ (ರ)ಗೆಳೆಯ ಬ್ಯುರೋದಿಂದ
ಬೊಗಳೂರು, ಮೇ 2- ಬಾಲಿವುಡ್‌ನ ಭಾರಿ ವುಡ್-ಬಿ ಜೋಡಿ ಎಂಬ ಖ್ಯಾತಿವೆತ್ತಿದ್ದ ಛೋಟಾ "ಬಚ್ಚಾ"ನ್ ಮತ್ತು ವಿಶ್ವ ಸುಂದರ್ಯಾ ರೈ ನಡುವಣ ಸಂಬಂಧ ಐಶ್ಚರ್ಯಕರವಾಗಿ ಶೇಕ್ ಆಗತೊಡಗಿದೆ ಎಂಬ ಮಾಹಿತಿ ಮಾವಿನ ರಸಾಯನ ಉಣಬಡಿಸುವವರೊಬ್ಬರಿಂದ ದೊರೆತಿದೆ.

ಸೂಪರ್‌ಸ್ಟಿಶನ್ ಎಂಬ ಇದೀಗ ಜಾಗತೀಕರಣಗೊಳ್ಳುತ್ತಿರುವ ಭಾರತದ ಮಹಾನ್ ಸಂಪ್ರದಾಯವೊಂದಕ್ಕೆ ತೀವ್ರವಾಗಿ ಕಟ್ಟುಬಿದ್ದಿರುವ ಬಚ್ಚಾನ್ ಕುಟುಂಬ, ಆಶ್ಚರ್ಯಳ ಜಾತಕದಲ್ಲಿ ಮಂಗಳ ಯೋಗ ಇರುವುದರಿಂದಾಗಿ ಸಂಬಂಧ ಜೋಡಿಸಲು ಹಿಂದೆ ಮುಂದೆ ನೋಡುತ್ತಿದೆ. ಇದಕ್ಕೆ ಹಿಂದಿನ ಜನ್ಮದ ಅಂದರೆ ಪೂರ್ವಗ್ರಹಗಳ ಪೀಡೆಯೇ ಕಾರಣ ಎಂದು ಶಂಕಿಸಲಾಗಿದೆ.

ಈ ಮಧ್ಯೆ, ಪೂರ್ವಗ್ರಹ ಎನ್ನುವುದು 10ನೇ ಗ್ರಹವೇ ಆಗಿರಬಹುದೇ ಎಂಬ ಬಗ್ಗೆ ಅಸತ್ಯಾನ್ವೇಷಿಯಿಂದ ಶೋಧ ಕಾರ್ಯಾಚರಣೆ ತೀವ್ರವಾಗಿ ನಡೆದಿದೆ.

ಇದರಿಂದಾಗಿ ಈ ಹಿಂದೆ ತನಗೆ "ಸಲ್ಲುವ ಮಾನ" ಹರಾಜಿಗೆ ಕಾರಣವಾದ ಸಲ್‌ಮಾನ್‌ಗೆ ಕೈಕೊಟ್ಟಿದ್ದಲ್ಲದೆ, ತನ್ನ ಮೋಹಿನಿ ಕಾಟಕ್ಕೆ ಸಿಲುಕಿ "ನಾವಿಬ್ಬರೂ ಮದುವೆಯಾಗುತ್ತೇವೆ" ಎಂದು ಅ-ವಿವೇಕದಿಂದ ಬೊಗಳೆ ಬಿಟ್ಟಿದ್ದ ಕ್ಯಾಬೇ...?ರಾಯ್‌ಗೂ ತಣ್ಣೀರು ಕುಡಿಸಿ ಸುಮ್ಮನಾಗಿಸಿದ್ದ ವಿಶ್ವಸುಂದರ್ಯಾ ರೈಗೇ ಈಗ ಬಡಾ-ಛೋಟಾ ಬಚ್ಚಾ ಕುಟುಂಬ ಕೈಕೊಡಲು ಸಿದ್ಧತೆ ನಡೆಸಿರುವುದು ಸಿನಿಮಮಸಾಲ ಪತ್ರಿಕೆಗಳಿಗೆ ಒಳ್ಳೆಯ ಚಿಕನ್ ಮಸಾಲೆ ನೀಡಿದೆ.

101 ವರ್ಷ ಹೀರೋಯಿನ್: ಈ ಸುದ್ದಿ ತಿಳಿದ ವಿಶ್ವಸುಂದರ್ಯಾ, ತನಗೆ ಸದ್ಯಕ್ಕೆ 101 ವರ್ಷದ ಅವಧಿಗೆ ಮದುವೆಯೇ ಬೇಡ. ಅಲ್ಲಿಯವರೆಗೆ ಬಾಲಿವುಡ್, ಅವಕಾಶ ಸಿಕ್ಕರೆ ಹಾಲಿವುಡ್ ಚಿತ್ರಗಳಲ್ಲಿ ಹೀರೋಯಿನ್ ಆಗಿ ಮುಂದುವರಿಯುವುದಾಗಿ ಭೀಷ್ಮ ಪ್ರತಿಜ್ಞೆ ಮಾಡಿದ್ದಾರೆ.

ಭೀಕರ ಅಪಘಾತ: ಅತ್ತ ಹೀಗಿರಲು, ಇತ್ತ ಬಾಗಿಲ ಕೋಟೆಯಲ್ಲಿ ಈ ಬೆಕ್ಕಿನ ಕಣ್ಣಿನ ಹಕ್ಕಿ ಜತೆಗೆ ಗಾಂಧರ್ವ (ತೆರೆ) ವಿವಾಹವನ್ನೂ ನೆರವೇರಿಸಿಕೊಂಡಿರುವ ಛೋಟಾ ಬಚ್ಚಾನ್, ಆಕಾಶವೇ ಕಳಚಿಬಿದ್ದಂತೆ ತಲೆ ಮೇಲೆ ಕೈಹೊತ್ತು ಕುಳಿತಿರಲು, ಇತಿಹಾಸ ಕಂಡು ಕೇಳರಿಯದ ಭೀಕರ ಸೈಕಲ್ ಅಪಘಾತಕ್ಕೆ ತುತ್ತಾಗಿರುವ ಆಶ್ಚರ್ಯಳ ಕೈಗೆ ತರಚು ಗಾಯವಾಗಿರುವ ಬಗ್ಗೆ ವಿಶ್ವಾದ್ಯಂತ ಭಾರೀ ಕೋಲಾಹಲಕಾರಿಯಾದ ಸುದ್ದಿಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿದೆ.

ಸುದ್ದಿಯಾಗದ ನಾಯಿ: ಆದರೆ ಈ ಸಂದರ್ಭ ಆಕೆಯೊಡನಿದ್ದ ನಾಯಿಮರಿಗೂ ಭೀಕರವಾದ, ರುದ್ರಭಯಾನಕವಾದ ತರಚುಗಾಯಗಳಾದ ಬಗ್ಗೆ ಯಾವುದೇ ಪತ್ರಿಕೆಗಳು ಚಕಾರವೆತ್ತದಿರುವುದು ಪ್ರಾಣಿಗಳ ಪರ ಕತ್ತಿ ಕಾಳಗ ನಡೆಸುತ್ತಿರುವ ನೆಹರೂ ಕುಟುಂಬದ ಉಚ್ಚಾಟಿತ ಕುಡಿ ಸೋನಿಕಾ ಗಾಂಧಿ ಅವರ ಕಣ್ಣು ಕುಕ್ಕಿಸಿದೆ.

ಎಂಜಿನ್ ಇಲ್ಲದ ರೈಲು: ಬ್ರೇಕಿಂಗ್ ನ್ಯೂಸ್ ಅಲ್ಲವೆಂದ ಬೊ.ರ.

[ಬೊಗಳೂರು ಪಟ್ಟೆ-ರಹಿತ ರೈಲು ಬ್ಯುರೋ] ಬೊಗಳೂರು: ಆಫ್‌ಲೈನ್ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯೊಂದು ಆನ್‌ಲೈನ್ ಸಂಪಾದಕರ ಕಣ್ಣು ಕುಕ್ಕಿದ್ದು, ಎಂಜಿನ್ ಇಲ್ಲದೆ...