Friday, June 30, 2006

ಹೆಸರು ಕೆಡಿಸಿದ ಕೋಲಾಯುಕ್ತರು: ಕೆರಳಿದ ಲಂಚಿಗರು

(ಬೊಗಳೂರು ಲಂಚ ಲೆಕ್ಕಿಗ ಬ್ಯುರೋದಿಂದ)
ಬೊಗಳೂರು, ಜೂ.30- ತಮ್ಮ ಖಾಸಗಿ ವೃತ್ತಿ ಬದುಕಿನ ಹೂರಣಗಳನ್ನೆಲ್ಲಾ ಬಯಲಿಗೆಳೆದು ಆಗಾಗ್ಗೆ ಅಪಮಾನ ಮಾಡುತ್ತಿರುವ ಮತ್ತು ಕೈಯಲ್ಲಿ ಕೋಲು ಹಿಡಿದುಕೊಂಡು ತಮ್ಮನ್ನೆಲ್ಲಾ ಆಟವಾಡಿಸುತ್ತಿರುವ ಕೋಲಾಯುಕ್ತರ ವಿರುದ್ಧ ಆಸ್ತಿ ಲೆಕ್ಕಿಗ, ಕೈ-ಆಭರಣ-ಗಾರಿಕಾ ಅಧಿಕಾರಿ, ಮತ್ತು ಗುಪ್ತವಾಗಿ ಚಲಿಸುತ್ತಿರುವ ಅಧಿಕಾರಿಗಳು ಬಂಡಾಯದ ಬಾವುಟ ಹಾರಿಸಿದ್ದಾರೆ.
 
ಪ್ರಥಮಂ ಲೆಕ್ಕಿಗಂ...ಚ
ಈತ ಕುಗ್ರಾಮದಲ್ಲೂ "ಆಸ್ತಿ" ಎಲ್ಲಿ ಸಿಗುತ್ತದೆ ಎಂದು ಗುರುತಿಸಬಲ್ಲ ಗ್ರಾಮ ಲೆಕ್ಕಿಗ.
 
ಕೋಲಾಯುಕ್ತರಿಂದ ಎಲ್ಲ ಬಹಿರಂಗ ಮಾಡಿಸಿಕೊಂಡ ಮತ್ತು 10 ಕೋಟಿ ರೂ. ಕಕ್ಕಿದ ಪ್ರಥಮ ಮಿಕದ ಪ್ರಾಥಮಿಕ ಆಲಾಪ. ಆತನದೇ ಮಾತುಗಳಲ್ಲಿ ಕೇಳಿದಾಗ:

"ನಾನು ನಿಜಕ್ಕೂ ಸರಕಾರಿ ಹುದ್ದೆಯಲ್ಲಿಲ್ಲ. ಗ್ರಾಮ ಲೆಕ್ಕಿಗ ಹುದ್ದೆ ಸಿಕ್ಕಿದೆ, ಕೆಲಸ ಮಾಡದಿದ್ದರೂ ಸಂಬಳ ಅದರ ಪಾಡಿಗೆ ಬರುತ್ತಿರುತ್ತದೆ. ನಾನೇನಿದ್ದರೂ ಆ ಗ್ರಾಮದಲ್ಲಿ ಎಷ್ಟು ಮಂದಿ ಹಣ ಕೊಡುವವರಿದ್ದಾರೆ ಅಂತ ಲೆಕ್ಕ ಹಾಕುವ ಒಬ್ಬ ಸಾಮಾನ್ಯ ಲೆಕ್ಕಿಗ. ಗ್ರಾಮ ಲೆಕ್ಕಿಗ ಅಂತ ನನ್ನನ್ನು ತಪ್ಪಾಗಿ ಕರೆಯಲಾಗುತ್ತದೆ. ನಾನು ಗ್ರಾಮದಲ್ಲಿ ಎಷ್ಟು ಲಂಚ ದೊರೆಯಬಹುದು ಎಂದು ಲೆಕ್ಕ ಹಾಕುವ ಬರೇ ಲೆಕ್ಕಿಗ.  ಆದುದರಿಂದ ಸರಕಾರಿ ಅಧಿಕಾರಿ ಅಂತ ನನ್ನ ಮೇಲೆ ದಾಳಿ ಮಾಡಿದ್ದು ಅಕ್ಷಮ್ಯ ಅಪರಾಧ."

ದ್ವಿತೀಯಕಂ....

ಈತ 8 ಕೋಟಿ ಕಕ್ಕಿದ ಗುಪ್ತಚರ ಇಲಾಖೆ ಅಧಿಕಾರಿ. ಆತನ ಮಾತುಗಳಲ್ಲಿ:

"ಮೊದಲ ವಾಕ್ಯ ನನ್ನದೂ ಲೆಕ್ಕಿಗ ಮಹಾಶಯರು ಹೇಳಿದ್ದೇ ಡಿಟ್ಟೋ. ಎರಡನೇ ವಾಕ್ಯದಲ್ಲಿ ಹುದ್ದೆಯ ಹೆಸರು ಮಾತ್ರ ಬದಲು. ಮುಂದಿನದು ಹೇಳುತ್ತಿದ್ದೇನೆ-ಕೇಳಿ. ಅಬಕಾರಿ ಇಲಾಖೆ ಅಂತ ಸರಕಾರ ಹುದ್ದೆ-ಸಂಬಳ ಕೊಡುತ್ತಿದ್ದರೂ, ನಾನು ಅಬಕಾರಿ ಬದಲು ನನ್ನದೇ ಆದ ಲಾಭಕಾರಿ ಹುದ್ದೆ ಆಯ್ದುಕೊಂಡಿದ್ದೇನೆ. ಎಲ್ಲೆಲ್ಲಾ ಲಂಚವೆಂಬ ಅಮೂಲ್ಯ ನಿಧಿ ದೊರೆಯುತ್ತದೆ ಅಂತ ಗುಪ್ತವಾಗಿ ತಿರುಗಾಡುತ್ತಾ ಮಾಹಿತಿ ಸಂಗ್ರಹಿಸುವುದು. ಇತರ ಅಧಿಕಾರಿಗಳಿಗೆ ವರದಿ ಸಲ್ಲಿಸುವುದು- ಅದೇ ಈ (ಎದೆ ತಟ್ಟಿಕೊಳ್ಳುತ್ತಾ) ಗುಪ್ತಚರನ ಕೆಲಸ"

ತೃತೀಯೋಧ್ಯಾಯಃ
 
ಈತ ಕೇವಲ 6 ಕೋಟಿ (ನುಂಗಿ) ವಾಂತಿ ಮಾಡಿದ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಅಧಿಕಾರಿ.
 
"ಮೊದಲ ಮೂರು ವಾಕ್ಯಗಳು ನನ್ನದೂ ಡಿಟ್ಟೋ... ಕೈಗಾರಿಕೆ ಅಂದ್ರೆ ಕೈಗೆ ಚಿನ್ನಾಭರಣ ಸೇರಿಸಿಕೊಳ್ಳುವ ಕೈ-ಸೊಗಸುಗಾರಿಕೆ ಅನ್ನೋದು ನನ್ನ ಖಚಿತ ವಾದ. ಅಂತೆಯೇ ನನ್ನ, ಹೆಂಡತಿ ಮಕ್ಕಳ ಕೈಗಳನ್ನು ಚಿನ್ನ, ಹಣ ಇತ್ಯಾದಿಗಳಿಂದ ಅಲಂಕರಿಸಿ ಅಭಿವೃದ್ಧಿ ಮಾಡುವುದೇ ನನ್ನ ವೃತ್ತಿಯ ಧ್ಯೇಯ. ಸರಕಾರ ಅಭಿವೃದ್ಧಿ ಮಾಡಲು ಹೇಳಿದೆ. ಯಾವುದನ್ನು ಅಂತ ಸ್ಪಷ್ಟವಾಗಿ ಹೇಳಿಲ್ಲ. ಇದಕ್ಕಾಗಿ ಕೈಗಳನ್ನು ಮಾತ್ರ ಅಲಂಕರಿಸಿ ಅಭಿವೃದ್ಧಿಪಡಿಸಿದ್ದೇವೆ. ಆದುದರಿಂದ ನಾನು ಆಡಿದ್ದೇ ಆಟ, ಹಾಡಿದ್ದೇ ರಾಗ, ಆದರೆ ಈಗ ಓಡಿದ್ದೇ ಓಟ ಆಗಲು ಕೋಲಾಯುಕ್ತರು ಬಿಡುತ್ತಿಲ್ಲ."
 
ಇತಿ ಅಸಂಪೂರ್ಣಂ....
 
"ನಮ್ಮ ವೃತ್ತಿಯನ್ನೆಲ್ಲಾ ಕೋಲಾಯುಕ್ತರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ, ಮಾತ್ರವಲ್ಲ ಕೇವಲ ಇಷ್ಟು ಮೊತ್ತದ ಆಸ್ತಿ ಬಹಿರಂಗ ಪಡಿಸಿ ನಾವು ಅಷ್ಟೇನೂ ಶ್ರೀಮಂತರಲ್ಲ ಎಂದು ಜಗತ್ತಿಗೆ ತೋರಿಸಿಕೊಟ್ಟು, ಜನರೆದುರು ನಮ್ಮನ್ನು ಸಣ್ಣವರನ್ನಾಗಿ ಮಾಡಿದ್ದಾರೆ. ಅವರಿಗೆ ಲಂಚದ ಅಆಇಈ ಕಲಿಸುತ್ತೇವೆ" ಎಂಬುದು ತ್ರಿಮೂರ್ತಿಗಳ ಒಕ್ಕೊರಳಿನ ಅರಚಾಟ.

Thursday, June 29, 2006

"ಅ"ಪ್ರಾಣಿ ಎಂದ ಪೋಲಿಗಳು: ಗಾರ್ದಭ ಸಂಘ ಕೆಂಡ

(ಬೊಗಳೂರು ಪ್ರಾಣಿ ಭಕ್ಷಣ ಬ್ಯುರೋದಿಂದ)
ಬೊಗಳೂರು, ಜೂ.29- ತಮ್ಮ ಸಂಘದ ಪಾಪದ ಸದಸ್ಯನೊಬ್ಬನನ್ನು ಬಂಧಿಸಿ ಕರೆದೊಯ್ದು ತಮ್ಮ ಕುಲಕ್ಕೇ ಅಪಮಾನ ಮಾಡಿದ ಪೊಲೀಸರ ವಿರುದ್ಧ ತೀವ್ರ ಕೆಂಡ ಕಾರಿರುವ ಅಖಿಲ ಭಾರತ ಗಾರ್ದಭ ಮಹಾಶಯರ (ಅಭಾಗಾಮ) ಸಂಘದ ಅಧ್ಯಕ್ಷ ಗಾರ್ದಭ ರಾಜ್ ಅವರು, ಇನ್ನುಮುಂದೆ ಮನುಷ್ಯ ಪ್ರಾಣಿಗಳು ತಮ್ಮ ಮೇಲೆ ಎಲ್ಲಾ ತಪ್ಪುಗಳನ್ನು "ಹೊರಿಸಿ" ಕೈತೊಳೆದುಕೊಳ್ಳುವಂತಿಲ್ಲ ಎಂದು ತೀವ್ರವಾಗಿ ಅರಚಿದ್ದಾರೆ.
 
ಇಷ್ಟು ಮಾತ್ರವಲ್ಲದೆ, ತಮ್ಮ ಅಭಾಗಾಮ ಸಂಘದ ಅಮೂಲ್ಯ ಸದಸ್ಯನನ್ನು ಪ್ರಾಣ ಇರುವ ಪ್ರಾಣಿ ಅಂತ ಪರಿಗಣಿಸದೆ, ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ನಮಗೇನು ಪ್ರಾಣ ಇಲ್ಲವೆ? ಕೇಳುವವರು ಯಾರೂ ಇಲ್ಲವೆ? ನಮ್ಮನ್ನು "ಘಟನೆ ನಡೆದ ಸ್ಥಳ"ದಿಂದ "ವಶ"ಪಡಿಸಿಕೊಳ್ಳಲಾಗಿದ್ದು, ಒಂದು ತುಂಡು (!) ಸಾಕ್ಷ್ಯ (piece of evidence) ಅಂತ ಪರಿಗಣಿಸಿದ್ದೇಕೆ ಎಂದು ತೀವ್ರವಾಗಿ ಪ್ರಶ್ನಿಸಿದ್ದಾರೆ.
 
ಈ ಬಗ್ಗೆ ಅಮಾನವೀಯ ಹಕ್ಕುಗಳ ಆಯೋಗಕ್ಕೆ ಜೋರಾಗಿ ಅರಚಿ ದೂರು ನೀಡಲಾಗುವುದು ಎಂದರು.
 
ಆದರೆ, ಈ ಘಟನೆಯಲ್ಲಿ ಮಾನ್ಯ ನ್ಯಾಯಮೂರ್ತಿಗಳು ನಮ್ಮನ್ನು ಪ್ರಾಣಿ ಎಂದು ಪರಿಗಣಿಸಿ ಬಂಧಿತನನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿರುವುದು ಮತ್ತು ಮರು ದಿನ ನ್ಯಾಯಾಲಯಕ್ಕೆ ಕರೆತರುವಂತೆ ಸೂಚಿಸಿರುವುದನ್ನು ಶ್ಲಾಘಿಸಿದ ಅವರು, ಭಾರತದಲ್ಲಿ ಇನ್ನೂ ನ್ಯಾಯಾಂಗ ವ್ಯವಸ್ಥೆ ಮನುಷ್ಯ ಪ್ರಾಣಿಗಳು ಬೊಬ್ಬಿರಿಯುವಷ್ಟು ಕುಲಗೆಟ್ಟು ಹೋಗಿಲ್ಲವೆಂಬುದಕ್ಕೆ ಇದು ಸಾಕ್ಷಿ ಎಂದು ಗಹಗಹಿಸಿ (ಮೇಲಿನ ಚಿತ್ರ ನೋಡಿ) ನಕ್ಕಿದ್ದಾರೆ.
 
ಪೊಲೀಸರಿಗೆ ಹೆದರಿಕೆ
ಈ ಮಧ್ಯೆ, ಮ್ಯಾಜಿಸ್ಟ್ರೇಟರ ತೀರ್ಪಿನಿಂದ ಬೆಚ್ಚಿ ಬಿದ್ದ ಪೊಲೀಸರು, ನಮಗೆ ಇದುವರೆಗೆ ಮನುಷ್ಯ ಪ್ರಾಣಿಗಳಿಗೆ ಮೂರನೇ ದರ್ಜೆಯ ಆತಿಥ್ಯ ನೀಡಿ ಗೊತ್ತಿದೆಯೇ ಹೊರತು ಜೋರಾಗಿ ಒದೆಯುವ ಪ್ರಾಣಿಗಳಿಗೆ ಗೊತ್ತಿಲ್ಲ ಎಂದು ತೀವ್ರ ಕಳವಳ ವ್ಯಕ್ತಪಡಿಸಿದರು.
 
ಮಾನವರು ಪಾಪದ ಪ್ರಾಣಿಗಳು. ಅವರಿಗೆ ಎಷ್ಟನೇ ದರ್ಜೆಯ ಚಿಕಿತ್ಸೆ, ಆತಿಥ್ಯ ಕೊಟ್ಟರೂ ಅಷ್ಟೊಂದು ಜೋರಾಗಿ ಬಾಯಿ ಬಿಡಲಾರರು ಮತ್ತು ಪ್ರತಿಕ್ರಿಯೆಯನ್ನೂ ತೋರಲಾರರು. ಆದರೆ ಇದು..... ಒದ್ದರೆ ನಾವುಂಟೇ?, ಅರಚಾಟಕ್ಕೆ ಪೊಲೀಸ್ ಠಾಣೆಯಲ್ಲಿ ಒಬ್ಬ ನರಪಿಳ್ಳೆಯೂ ಇರುವುದು ಸಾಧ್ಯವುಂಟೇ? ಇದೇ ಕಾರಣಕ್ಕೆ ನಾವು ಈ ಕತ್ತೆಯನ್ನು ಅದರ ಮಾಲಿಕನಿಗೆ ಒಪ್ಪಿಸಲು ನ್ಯಾಯಾಧೀಶರನ್ನು ಕೋರಿದೆವು" ಎಂದು ಪೋಲಿ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.
 
ಬೊಗಳೆ ಬ್ಯುರೋಕ್ಕೆ ಪ್ರಶಂಸೆ

ಈ ಮಧ್ಯೆ, ತಮ್ಮ ಸಂತತಿಯ ಸುಂದರ ಭಾವಚಿತ್ರವನ್ನು ಪ್ರಕಟಿಸಿ, ನೆಟ್ಟೋದುಗರ 'ಪ್ರಾತಃಸ್ಮರಣೀಯ' ಕುಲಕ್ಕೆ ತಮ್ಮನ್ನು ಸೇರಿಸಿ ಪ್ರಾಣಿ ದಯೆ ಮೆರೆದ ಬೊಗಳೂರಿನ ಬೊಗಳೆ ರಗಳೆ ಬ್ಯುರೋ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಗಾರ್ದಭ ರಾಜ್, ಇನ್ನಷ್ಟು ಒದೆತಗಳಿಗೆ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ. ಇದೂ ಅಲ್ಲದೆ ಮಂಗನನ್ನು ಇಳಿಸಿ ಕತ್ತೆಯನ್ನೇರಿಸಿದ ಬಗ್ಗೆಯೂ ಅವರು ಬೆಚ್ಚುಗೆ ಸೂಸಿದ್ದಾರೆ.
 
ಹಿಂದೆಯೂ ನಿಮ್ಮ ಬ್ಯುರೋ ನಮ್ಮ ಅರಚಾಟದ ಧ್ವನಿಯಾಗಿ ಕಾರ್ಯನಿರ್ವಹಿಸಿದೆ ಎಂದವರು ಗಳಗಳನೆ ನೆನಪಿಸಿಕೊಂಡರು.

Wednesday, June 28, 2006

320 ಕಾಂಡೋಂ ಗುಳುಂಕರಿಸಿದ ಹೀರೋಯಿನ್

(ಬೊಗಳೂರು ಮಾದಕ ಬ್ಯುರೋದಿಂದ)
ಬೊಗಳೂರು, ಜೂ.28- ಮಾದಕತೆಗೂ ಕಾಂಡೋಮ್‌ಗೂ ಏನು ಸಂಬಂಧ ಅನ್ನೋದೇ ತಿಳಿಯದ ಕಾರಣ ಸಿಡ್ನಿಗೆ ಪ್ರಯಾಣ ಬೆಳೆಸಿದಾಗ ಸಂಬಂಧ ಸ್ವಲ್ಪ ಬಲವಾಗಿಯೇ ಇದೆ ಅಂತ ತಿಳಿದು ಬಂದಿದ್ದು ಇಲ್ಲಿ ಪ್ರಕಟವಾದ 25ರ ಮಹಿಳೆಯೊಬ್ಬಳು 320 ಕಾಂಡೋಮ್‌ಗಳನ್ನು ಗುಳುಂಕರಿಸಿದ ಘಟನೆ ಬಳಿಕ.
 
ಇತ್ತೀಚೆಗೆ ನಮ್ಮ ಬ್ಯುರೋ ಪೆಪ್ಸಿ ಬಾಟಲಿಯೊಳಗೆ ಕಾಂಡೋಮ್ ನೀಡುವ ವರದಿ ಪ್ರಕಟಿಸಿದ ಬಳಿಕ ಕಾಂಡೋಮ್‌ಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ ಎಂದು ಸಿಬಿಐ ಅಧಿಕಾರಿಗಳು ನಮ್ಮ ವರದಿಗಾರರನ್ನು ತರಾಟೆಗೆ ತೆಗೆದುಕೊಂಡ ತಕ್ಷಣ ಇದರ ಹಿಂದಿನ ಅಸತ್ಯ ಅನ್ವೇಷಣೆಗೆ ಹೊರಟಾಗ ಕಾರಣವೂ ದೊರಕಿಬಿಟ್ಟಿತು.
 
ಬರೇ 25 ವರ್ಷ ಪ್ರಾಯದ ಈ ಮಹಿಳೆ ತನ್ನ ಹಲ್ಲುಗಳಿಗಿಂತ 10ಪಟ್ಟು ಸಂಖ್ಯೆಯ ಕಾಂಡೋಮ್‌ಗಳನ್ನು ನುಂಗಿದ್ದಾಳಂತೆ. ಆದರೆ ಕಾಂಡೋಮ್‌ನಲ್ಲಿ ಮಾದಕತೆ ಎಲ್ಲಿಂದ ಬಂತು ಎಂದು ಕೇಳಿದರೆ, ಹೀರೋಯಿನ್‌ಗಳು! ಅಲ್ಲಲ್ಲ ಇದು ಹೆರಾಯಿನ್ ಅಂತ ಖಚಿತವಾಗಿದೆ.
 
ಆದರೂ ಮಾದಕತೆ ಬಗ್ಗೆ ಮಾತನಾಡ ಹೋದರೆ ಇಂದಿನ Heroineಗಳಿಗೂ Heroinಗೂ ಹೆಚ್ಚು ವ್ಯತ್ಯಾಸವಿಲ್ಲ ಎಂಬುದು ನಮ್ಮ ಬ್ಯುರೋ ಶೋಧಿಸದ ಸತ್ಯ.
 
ಈಕೆ ಸಿಂಗಪುರ ವಿಮಾನ ನಿಲ್ದಾಣದಲ್ಲಿ ಮಂಗನಂತೆ ಛಂಗನೆ ನುಂಗಿದ ಹೆರಾಯಿನ್ ತುಂಬಿದ ಕಾಂಡೋಮ್‌ಗಳನ್ನು ಹೊರ ತೆಗೆದದ್ದು ಹೇಗೆ ಎಂಬುದು ಎಲ್ಲರನ್ನೂ ಯೋಚನೆಗೀಡು ಮಾಡಿರುವ ಸಂಗತಿ ಎಂಬುದು ಬೊಗಳೆ ರಗಳೆ ಬ್ಯುರೋ ಗಮನಕ್ಕೆ ಬಂದಿದೆ.

ಹೊರಗೆ ತೆಗೆದಾಗ ಕಾಂಡೋಮ್ ಏನಾದರೂ ಒಡೆದು ಹೆರಾಯಿನ್ ದೇಹ ಕೋಶದೊಳಗೆ ಸೇರಿಕೊಂಡುಬಿಟ್ಟಿದ್ದಿದ್ದರೆ..... ಅನಾಹುತವೇ ಆಗುತ್ತಿತ್ತು !!!  ಬೇಡ, ಅದನ್ನು ನೆನಪಿಸಿಕೊಳ್ಳೋದೂ ಬೇಡ ಅಂತ ಬ್ಯುರೋ ಸುಮ್ಮನಾಗಿದೆ.
 
ಆದರೆ ಈ 320 ಕಾಂಡೋಮ್‌ಗಳನ್ನು ಯಾವ ಗಣಿ-ತಜ್ಞ ಖಚಿತವಾಗಿ ಲೆಕ್ಕ ಹಾಕಿದ ಎಂಬ ಬಗ್ಗೆ ಅನ್ವೇಷಣೆ ನಡೆಯುತ್ತಿದೆ. ಮತ್ತು ಅದು ಹೊರಬರುವವರೆಗೂ ಕಾದು ಕುಳಿತ ಅಧಿಕಾರಿಗಳ ಮನಸ್ಥಿತಿಯ ಬಗ್ಗೆಯೂ ಶೋಧ ನಡೆಯಲಾರಂಭಿಸಿದೆ.
 
ಕೊಟ್ಟ ಕೊನೆಯದಾಗಿ ಹೆರಾಯಿನ್ ನುಂಗಿದ್ದನ್ನೇ ನೆಪವಾಗಿಟ್ಟುಕೊಂಡು ಆಕೆಯನ್ನೇ ಹೀರೋಯಿನ್ ಮಾಡಲು ಭರ್ಜರಿ ಸಿದ್ಧತೆ ನಡೆದಿದೆ.

Tuesday, June 27, 2006

ಒತ್ತಡವೇ? ಪ್ರಾಣಿಮಿಕ ಹೀಲಿಂಗ್ ಮಾಡಿಸಿಕೊಳ್ಳಿ!

(ಬೊಗಳೂರು ಅನಾರೋಗ್ಯ ಬ್ಯುರೋದಿಂದ)
ಬೊಗಳೂರು, ಜೂ.27- ಕಚೇರಿಯಲ್ಲಿ ಕಚೇರಿ ಕೆಲಸದ ಮಧ್ಯೆ ಸ್ವಂತ ಕೆಲಸಕ್ಕೆ ಸಮಯ ಸಿಗದೆ ಒತ್ತಡ ಅನುಭವಿಸುತ್ತಿದ್ದೀರೇ? ಅದರ ನಿವಾರಣೆಗೆ ಬೂಗಲ್ (Boogle !) ಸರ್ಚ್ ಮಾಡಿದಾಗ ಸಿಕ್ಕಿದ್ದು ಪ್ರಾಣಿಗಳ ಹೀಲಿಂಗ್ ಕೇಂದ್ರ. ಸರಿ... ನೆಟ್ಟೋದುಗರನ್ನೆಲ್ಲಾ ಒಂದು ಬಾರಿ ಸ್ಮರಿಸಿಕೊಂಡು ಈ ಪ್ರಾಣಿಮಿಕ ಹೀಲಿಂಗ್ ಕೇಂದ್ರದೊಳಗೆ ಕಾಲಿಟ್ಟಾಗಲೇ ಪ್ರಾಣಿಗಳ ಅರಚಾಟ ಮೂಗಿಗೆ ಬಡಿದು, ಅಸಹನೀಯ ವಾಸನೆ ಕಿವಿಗೆ ಕೇಳಿಸಿದ್ದು ವಿಶೇಷ. ಇದು ಒತ್ತಡದ ಪರಿಣಾಮವೋ ಎಂಬುದು ಪರೀಕ್ಷಿಸಬೇಕಾಗಿದೆ.

ಹೀಗೆ ಯೋಚಿಸುತ್ತಿದ್ದಾಗ, ಸಮೀಪದಲ್ಲೇ ಹಾಕಿರುವ ಒಂದು ಬೋರ್ಡು ರಪಕ್ಕನೆ ಕಿವಿಗೆ ಬಡಿದು ಕಣ್ಣಿಗೆ ರಾಚಿತು. "ಇಲ್ಲಿ ಪ್ರಾಣ ಇರುವವರಿಗೆ ಮಾತ್ರ ಪ್ರವೇಶ".

ಆದರೆ ಈ ಬೋರ್ಡಿನ ಹಿನ್ನೆಲೆ ಶೋಧಿಸಿದಾಗ ತಿಳಿದುಬಂದ ಅಂಶವೇನೆಂದರೆ ಅದು ಈ (ಹಣೆ)ಬರಹವನ್ನು ಬರೆದವರ ತಪ್ಪು. ತ್ರಾಣ ಇದ್ದವರಿಗೆ ಮಾತ್ರ ಎಂದಾಗಬೇಕಿತ್ತು. ಈಗಿನ ಶೈಲಿಯ ಜಾಹೀರಾತುಗಳಲ್ಲಿ ಹಾಕುವಂತೆ ಶೇ.50 ಡಿಸ್ಕೌಂಟ್ ಎಂದು ಬರೆದಿದ್ದರೆ, ನಿಮ್ಮ ಕಣ್ಣನ್ನು ಅದಕ್ಕೆ ಅಂಟುವಂತೆ ಮುಂದೆ ಚಾಚಿ ನೋಡಿದರೆ ಮಾತ್ರ ತಿಳಿಯುವ "Up To" ನಂತರ ಶೇ.50 ಅಂತ ಗೋಚರಿಸುವಂತೆ ಇಲ್ಲೂ ಕೂಡ between the lines ಏನಾದರೂ ಇರಬಹುದೇ ಎಂಬ ಸಂಶಯ ಕಾಡಿದಾಗ, ಆಶ್ಚರ್ಯ, ನಮ್ಮ ಸಂಶಯ ನಿಜವಾಯಿತು. ಅಲ್ಲಿ ತ್ರಾಣ ಎಂಬ ಪದಕ್ಕಿಂತ ಮೊದಲು "ಜೇಬಿನಲ್ಲಿ" ಎಂದು ಸೇರಿಸಲಾಗಿತ್ತು!

ಪ್ರೇಮಜ್ವರ ಪೀಡಿತರಿಗೆ ವಿಶೇಷ ಡಿಸ್ಕೋಉಂಟು!

ಇಲ್ಲಿ ಪ್ರೇಮ ಜ್ವರ ಪೀಡಿತ ಹಕ್ಕಿಗಳಿಗೆ ವಿಶೇಷ ಚಿಕಿತ್ಸೆ ನೀಡಲಾಗುತ್ತದೆಯಲ್ಲದೆ ಇದಕ್ಕೆ Discoಉಂಟು. ಕಾರಣವಿದೆ. ಯಾಕೆ?

ಕಾರಣ ಇಲ್ಲಿದೆ.

ಮನಸ್ಸು ಅರಳಿದಾಗ, ಪ್ರಫುಲ್ಲಿತವಾದಾಗ, ಉಲ್ಲಸಿತವಾದಾಗ, ಅನುರಾಗ ಅರಳಿದಾಗ ಸಂತೋಷ ಉಕ್ಕಿ ಹರಿಯುತ್ತದೆ. ಹಾಲು ಬಿಸಿಯಾಗಿದ್ದು ಹೆಚ್ಚಾದಾಗ ಪಾತ್ರೆಯಿಂದ ಮೇಲೆ ಉಕ್ಕಿ ಬಂದು ಸ್ಟವ್ ಮೇಲೆಲ್ಲಾ ಚೆಲ್ಲಿದಂತೆ, ಈ ರೀತಿ ಉಕ್ಕಿ ಹರಿದ ಸಂತೋಷವನ್ನು ಶೇಖರಿಸಲಾಗುತ್ತದೆ. ಅದನ್ನು ಸಂಗ್ರಹಿಸಿ ಬೇರೆ ಪ್ರಾಣಿಗಳ ಹೀಲಿಂಗಿಗೆ ಮಾರಲಾಗುತ್ತದೆ! ಇಲ್ಲಿ ನಿಮ್ಮ ಡಿಸ್ಕೋಗೆ ಕೊಟ್ಟ ಕಡಿತದ ಹಣ ಅಲ್ಲಿ ಬಂತು. (ಡಿಸ್ಕೋ ಅಂದರೆ ಕಡಿತದಿಂದ ಕೈಕಾಲು, ಮೈ ಪರಚಿಕೊಳ್ಳುವ ಹೊಸ ಡ್ಯಾನ್ಸ್ ಅಂತ ತಪ್ಪು ತಿಳಿಯಬಾರದಾಗಿ ಸೂಚನೆ.)

ಕೊನೆಯದಾಗಿ, ತಮ್ಮ ಪ್ರಾಣವನ್ನೇ ಬೇರೆಯವರ ಮೇಲೆ ಇಟ್ಟವರಿಗೂ ಚಿಕಿತ್ಸೆ ಇಲ್ಲ ಅಂತೇನೂ ತಿಳಿಯಬೇಡಿ. ಅಂಥವರಿಗೂ ಇದೆ. ಅದುವೇ Twin heart meditation ಎಂಬ ಅದ್‌ಭೂತ ವಿಧಾನ.

Monday, June 26, 2006

ಮಾರಿಗೆ ಕೊಟ್ಟಿದ್ದು ಲವ್ ಲೆಟರ್ ಅಲ್ಲ!

(ಬೊಗಳೂರು ಅನಾರೋಗ್ಯ ಬ್ಯುರೋದಿಂದ)
ಬೊಗಳೂರು, ಜೂ.26- ತೀವ್ರ ಕೆಲಸದ ಒತ್ತಡವಿರುವಾಗಲೂ ರಜೆಯನ್ನೇ ಹಾಕದೆ ಅಸತ್ಯಾನ್ವೇಷಿ ಕಾಲು ಸವೆಸಿದ್ದು ಭಾರತದಿಂದ ಹೊರಗೆ. ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಕೋಮು ಘರ್ಷಣೆಯೇ ನಡೆದಿಲ್ಲ ಏಕೆ ಎಂಬ ಅಚ್ಚರಿಯು ಕಾಡಿದ್ದೇ ಈ ಪಯಣಕ್ಕೆ ಕಾರಣ.

ಅಚ್ಚರಿಯ ಹಿನ್ನೆಲೆಯೂ ಅಚ್ಚರಿಯಾಗಿದೆ. ಸಿಂಧ್ ಪ್ರಾಂತ್ಯದ ಶಾಸಕನೊಬ್ಬ ಸದನದಲ್ಲೇ ಶಾಸಕಿಗೆ ಪ್ರೇಮ ಪತ್ರ ಕೊಟ್ಟು ಸಿಕ್ಕಿಹಾಕಿಕೊಂಡಿದ್ದ ವರದಿ ಇಲ್ಲಿ ಪ್ರಕಟವಾಗಿತ್ತು. ಹಿನ್ನೆಲೆ ಶೋಧಿಸಿದಾಗ ಆತ ಹಿಂದು, ಆಕೆ ಮುಸ್ಲಿಂ. ಆದರೂ ಭಾರತದ ಅರಾಜಕಾರಣಿಗಳಂತೆ ಅಲ್ಲಿ ಯಾರೂ ಈ ವಿಷಯವನ್ನು ಕೋಮು ಸಂಘರ್ಷಕ್ಕೆ ತಿರುಗಿಸಿಲ್ಲವೇಕೆ ಎಂಬುದೇ ಬೊಗಳೆ ರಗಳೆ ಬ್ಯುರೋ ಅರಿವಿಗೆ ಬಾರದ ಅಸತ್ಯ. ಇಲ್ಲಿನವರು ರಾಜಕಾರಣಿಗಳಾಗಲು ನಾಲಾಯಕ್ಕು, ಅವರಿಗೆ ಭಾರತದಲ್ಲಿ ತರಬೇತಿ ಕೇಂದ್ರ ಆರಂಭಿಸಬೇಕು ಎಂಬ ಹೊಸ ಯೋಚನೆಯೂ ಬಾರದಿರಲಿಲ್ಲ.

ಈಶ್ವರ ಅಂದರೆ ಕಾಮದಹನ ಮಾಡಿದವನಲ್ವೆ, ಆತ ಕೂಡ ಕೈಲಾಸದಲ್ಲೇ ಇರೋದಲ್ವೆ ಎಂಬ ಆತಂಕದಿಂದಲೇ ಅಲ್ಲಿಗೆ ಹೋದಾಗ ತಿಳಿದು ಬಂದಿದ್ದು, ಇದು ನೀಲವರ್ಣದ, ಪಾರ್ವತಿಪತಿ ಶಿವನಲ್ಲ. ಇದು ಲಾಲ್ ಬಣ್ಣದ ಈಶ್ವರನ ಕಿತಾಪತಿ ಅಂತ. ಈ ಈಶ್ವರ ಲಾಲ್ ಹೋಗಿ ಹೋಗಿ ಮಾರಿಗೆ ಲವ್ ಲೆಟರ್ ಕೊಡೋದೇ?

ನಾರಿ ಮುನಿದರೆ ಮಾರಿ ಅಂತ ಕೇಳಿದ್ದೀರಿ, ಆದರೆ ನೇರವಾಗಿ ಮಾರಿಗೇ ನೀವು ಈ ಥರ ಲವ್ ಲೆಟರ್ ಕೊಟ್ಟಿದ್ದೇಕೆ ಎಂಬ ಅಸತ್ಯಾನ್ವೇಷಿಯ ಪ್ರಶ್ನೆಗೆ ಉತ್ತರಿಸಿದ ಈಶ್ವರ, ಏನಿಲ್ಲ, ನಾನು ಸುಮ್ಮನೆ ಮಾರಿ ಬಿಸ್ಕಿಟ್ ತಿನ್ತಾ ಇದ್ದೆ. ಅದರ ಪೊಟ್ಟಣ ಖಾಲಿಯಾದಾಗ ಗುಮಾಸ್ತನ ಕೈಲಿ ಅದನ್ನು ಕೊಟ್ಟೆ, ಆದ್ರೆ ಅದರಲ್ಲಿ ಮಾರಿ ಅಂತ ಮುದ್ರಿತ ಅಕ್ಷರಗಳಿದ್ದುದರಿಂದ ಆ ಗುಮಾಸ್ತ ಅದನ್ನು ಓದಿ ಶಾಜಿ ಮಾರಿಗೆ ಕೊಟ್ಟೇಬಿಟ್ಟ ಎಂದು ಸಮರ್ಥಿಸಿಕೊಂಡ!

ಹಾಗಿದ್ರೆ ಕಳೆದೊಂದು ವರ್ಷದಿಂದ ನೀವು ಎಸ್ಎಂಎಸ್ ಕಳಿಸ್ತಾ ಇದ್ದೀರಿ ಅಂತ ಅವಳು ಆಪಾದಿಸಿದ್ದಾಳಲ್ಲ ಎಂದು ಕೇಳಿದಾಗ, ಹಾಗೇನೂ ಇಲ್ಲ, ಕೈಯಲ್ಲಿ ಮೊಬೈಲ್ ಇತ್ತು. ಕಾಲೇಜಿನಲ್ಲಿದ್ದಾಗಲೂ ಇದ್ದಬದ್ದವರಿಗೆ ಎಸ್ಎಂಎಸ್ ಫಾರ್ವರ್ಡ್ ಮಾಡ್ತಿದ್ದೆ, ಅದೇ ರೀತಿ ಈಗಲೂ ನನ್ನ ಮೊಬೈಲಿನಲ್ಲಿದ್ದ ಎಲ್ಲಾ ನಂಬರಿಗೂ ನಾನು ಎಸ್ಎಂಎಸ್ ಕಳಿಸ್ತಾ ಇದ್ದೆ. ಆಕೆಯದು ಯಾವ ಡಬ್ಬಾ ಮೊಬೈಲೋ ಏನೋ, ನಾನು ಕಳಿಸಿದ ಶಾರ್ಟ್ ಮೆಸೇಜನ್ನು ಇನ್ನಷ್ಟು ಶಾರ್ಟ್ ಮಾಡಿಸಿ ಆಕೆ ಅಪಾರ್ಥವಾಗುವಂತೆ ಮಾಡಿಬಿಟ್ಟಿದೆ ಅಂತ ನೋ-(ಕುಛ್ ಭೀ ನಹೀಂ)ಕಿಯಾ ಕಂಪನಿ ವಿರುದ್ಧ ಕೆಂಡ ಕಾರಿದರು.
ಃಃಃಃಃಃಃಃಃಃಃಃಃಃಃಃಃಃಃಃ
ನೆಟ್ಟೊದೆತಗಳು 4000 ದಾಟಿದ ಕಾರಣ ಒತ್ತಡ ತಾಳಲಾರದೆ ಚಿಕಿತ್ಸೆ ಅಗತ್ಯ ಅಂತ ವೈದ್ಯರು ಸೂಚಿಸಿದ್ದಾರೆ. ಇದಕ್ಕಾಗಿ ನಾಳೆ ಚಿಕಿತ್ಸೆಯ ಕುರಿತು ವಿವರಿಸಲಾಗುತ್ತದೆ.

Saturday, June 24, 2006

'ಎಲ್ಲೂ ಸಲ್ಲದವ ರಾಜಕೀಯಕ್ಕೆ ಸೇರಿದೆ, ಮಂತ್ರಿನೂ ಆದೆ'!

(ಬೊಗಳೂರು ನೆಟ್ವರ್ಕ್ ಬ್ಯುರೋದಿಂದ)
ಬೊಗಳೂರು, ಜೂ.24- ಇಂಗ್ಲಿಷ್ ಗೊತ್ತಿಲ್ಲದಿದ್ದರೂ ಇಂಗ್ಲಿಷಿನಲ್ಲೇ ಪ್ರಮಾಣ ವಚನ ಸ್ವೀಕರಿಸಿ ಕನ್ನಡಾಭಿಮಾನ ಮೆರೆದ ಕರ್ನಾಟಕದ ವಿಧಾನ ಪರಿಷತ್ತಿಗೆ ಆಯ್ಕೆಯಾದ ಹೊಸ ಸದಸ್ಯ ಅಮೀರ್ ಜಹ್ಮದ್ ಅವರು, ನನಗೆ ನಿನ್ನೆ ರಾತ್ರಿಯಿಡೀ ನಿದ್ದೆ ಇಲ್ಲ ಎಂದು ಹೇಳಿರುವ ಹಿನ್ನೆಲೆಯನ್ನು ಅರಸಿ ಹೋದಾಗ ತಥ್ಯ ಬಯಲಾಗಿದೆ.

ನನ್ನಿಂದ ಅಪರಾಧವಾಗಿದೆ, ಕೈಮುಗಿದು ಬೇಡಿಕೊಳ್ಳುವೆ ಎಂಬಿತ್ಯಾದಿಯಾಗಿ ಅವರು ವರದಿಗಾರರೆದುರು ಬೊಗಳೆ ಬಿಟ್ಟಿದ್ದು ಕನ್ನಡ ಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಬಹುದೆಂಬ ಭೀತಿಯ ಕಾರಣಕ್ಕಲ್ಲ. ಇಂಗ್ಲಿಷಿನಲ್ಲಿ ಪ್ರಮಾಣವಚನ ಸ್ವೀಕರಿಸುವಾಗ ಅವರು ಕೆಲವು ಅಕ್ಷರಗಳನ್ನು ತಪ್ಪು ತಪ್ಪಾಗಿ ಉಚ್ಚರಿಸಿದ್ದೇ ಅವರ ಈ ಕೀಳರಿಮೆಗೆ, ಕಳವಳಕ್ಕೆ ಕಾರಣ ಎಂದು ತಿಳಿದುಬಂದಿದೆ.

ಕ್ಷಮೆ ಕೋರಿದ್ದು ಕೂಡ ಉರ್ದು-ಇಂಗ್ಲಿಷ್ ಮಿಶ್ರಿತ ಭಾಷೆ ಆಗಿದ್ದುದರಿಂದ ಅದು ಕನ್ನಡವೋ ಅಥವಾ ಖಣ್ಣಢವೋ ಎಂಬುದು ಅರಿವಾಗದೆ ಎನ್ನಡ ಎಂದು ಬೆಚ್ಚಿ ಬೀಳುವ ಸರದಿ ಒದರಿಗಾರರದು.

ನಮ್ಮ ತಾಯಿ ಬಯಸಿದ್ದು ನಾನು ವೈದ್ಯ, ಎಂಜಿನಿಯರ್ ಆಗಬೇಕೆಂದು. ಉರ್ದು ಕೂಡ ಸರಿ ಇಲ್ಲ, ಇಂಗ್ಲಿಷ್ ಅರ್ಧಂಬರ್ಧ, ಕನ್ನಡವೂ ಅಪಥ್ಯ. ನನಗೆ ಏನೂ ತಲೆಗೆ ಹತ್ತಲಿಲ್ಲ. ಎಲ್ಲೂ ಸಲ್ಲದವನಂತಾಗಿಬಿಟ್ಟೆ. ಆದುದರಿಂದಾಗಿ ರಾಜಕೀಯವೇ ಸರಿ ಅನಿಸಿತು. ಆದರೆ ಆಕೆಗೇನು ಗೊತ್ತು ರಾಜಕೀಯಕ್ಕೆ ಬಂದರೆ ಉಳಿದೆಲ್ಲಕ್ಕಿಂತ ಹೆಚ್ಚು ಲಾಭ ಎನ್ನೋದು ಎಂಬುದು ಅಮೀರ್ ಅವರು ಅಸತ್ಯಾನ್ವೇಷಿಗೆ ನೀಡಿದ ಸಂದರ್ಶನಲ್ಲಿ ತಿಳಿಸಿದ ಸಂಗತಿ.

ಆದರೂ ಎರಡೂ ಕೈಕಟ್ಟಿದ ಬಳಿಕ ಅವರು ಪ್ರಮಾಣವಚನ ಸ್ವೀಕರಿಸುವಾಗ ಕೈಮುಗಿದದ್ದು ಹೇಗೆ ಎಂಬುದು ಅನ್ವೇಷಿಗೆ ತಿಳಿಯದ ಸಂಗತಿ.

Friday, June 23, 2006

ಜನಸಂಖ್ಯಾ ಹೆಚ್ಚಳ ರೋಗದ ಮೂಲ ಪತ್ತೆ

(ಬೊಗಳೂರು ಕಲಿಗಾಲ ಬ್ಯುರೋದಿಂದ)
ಬೊಗಳೂರು, ಜೂ.23- ಇದು ಕಲಿಗಾಲ. ಆದುದರಿಂದಾಗಿಯೇ ಗುಜರಾತಿನ ಭರೂಚ್ ಎಂಬಲ್ಲಿ ಇತ್ತೀಚಿನ ಕೆಲವು ದಿನಗಳಿಂದ ಜನಸಂಖ್ಯೆ ದಿಢೀರನೇ ಏರುತ್ತಿದೆ. ಈ ಹಿನ್ನೆಲೆಯಲ್ಲಿ ಬೊಗಳೂರಿನ ಮುಂಬಯಿ ರ'ಗೆಳೆಯ' ನಾಮ್ ಕೇ ವಾಸ್ತೇ ಬ್ಯುರೋ ಸಹಾಯ ಪಡೆದು ಗುಜರಾತಿಗೆ ಭೇಟಿ ನೀಡಿ ಅನ್ವೇಷಣೆ ನಡೆಸಿದಾಗ ಹೊಸ ಹೊಸ ವಿಷಯಗಳು ದಬದಬನೆ ಹೊರ ಬೀಳಲಾರಂಭಿಸಿದವು.

ಕಳೆದ ವರ್ಷ ಈ ಪುಟ್ಟ ಹಳ್ಳಿಯಲ್ಲಿ ಸೆನ್ಸ್ ಇಲ್ಲದ ರೀತಿಯಲ್ಲಿ ಸೆನ್ಸಸ್ (ಜನಗಣತಿ) ನಡೆಸಿದಾಗ ಅಲ್ಲಿನ ಮಕ್ಕಳ ಸಂಖ್ಯೆ ಕೇವಲ 3. ಈಗ ಅಲ್ಲಿ ಮಕ್ಕಳು-ಮರಿಗಳ ಸಂಖ್ಯೆ ಸೆಂಚುರಿ ದಾಟಿ ನಾಟೌಟ್ ರೀತಿಯಲ್ಲಿ ಡಬಲ್ ಸೆಂಚುರಿಯತ್ತ ಧಾವಿಸುತ್ತಿದೆ.

ಇದಕ್ಕೆಲ್ಲ ಕಾರಣ ಸಂಪ್ರದಾಯಬದ್ಧ ಎಂದು ಕರೆಸಿಕೊಂಡು ವಿದೇಶೀ ಸಂಪ್ರದಾಯಗಳನ್ನೆಲ್ಲಾ ತನ್ನತ್ತ ಸೆಳೆದುಕೊಳ್ಳುತ್ತಿರುವ ಮತ್ತು ಆ ಸಂಪ್ರದಾಯಕ್ಕೆ ಬದ್ಧವಾಗುತ್ತಿರುವ ಭಾರತಕ್ಕೆ ಬಂದ ಹೊಸ ರೋಗ. ಅದುವೇ ---- ಇಲ್ಲಿ ಪತ್ನಿಯರು ಬಾಡಿಗೆಗೆ ಲಭ್ಯ!

ಇಷ್ಟು ಮಾತ್ರವೇ ಆಗಿದ್ದರೆ ಕಥೆ ಮುಂದುವರಿಯುತ್ತಿರಲಿಲ್ಲ. ಬೇರೆಯವರ ಪತ್ನಿಯನ್ನು ಕರೆಸಿಕೊಂಡು ಬಾಡಿಗೆಗೆ ಇರಿಸಿಕೊಳ್ಳುವ ಈ ವಿನೂತನ ಸಂಪ್ರದಾಯಕ್ಕೆ ಈ ಸುಮಂಗಲಿಯರ "ಏಕಪತ್ನೀ ವ್ರತಸ್ಥ" ಗಂಡಂದಿರೂ ಕೂಡ ಬೆಂಬಲ ನೀಡುತ್ತಿರುವುದು. ತನ್ನ ಪತ್ನಿ ತನ್ನಿಂದ ದೂರವಾಗಿದ್ದ ಬಗ್ಗೆ ಆಕ್ರೋಶಗೊಂಡು ಆಕೆಯನ್ನು ಕರೆಸಲು ಪೊಲೀಸ್ ಸಹಾಯ ಪಡೆದು ಕೊನೆಗೆ ಕೈಬಿಟ್ಟಿದ್ದ ದಂಡ ಗಂಡ, ಕೊನೆಗೆ ಪತ್ನಿ ಅಲ್ಲಿಂದಲೇ ಪ್ರತಿತಿಂಗಳು 8 ಸಾವಿರ ರೂ. "ದುಡಿದು" ಸಂಪಾದಿಸುತ್ತಾಳೆ ಎಂದು ತಿಳಿದಾಗ ಮತ್ತು ತನ್ನ ಜೇಬು ಕೂಡ ತುಂಬತೊಡಗಿದಾಗ ಆತ CD ಪ್ಲೇಟ್ ಬದಲಿಸಿದ. "ರಜೆಯಲ್ಲಿ" ಬಂದ ಪತ್ನಿಯನ್ನು ತಕ್ಷಣವೇ ಹೋಗುವಂತೆ ಒತ್ತಾಯಿಸತೊಡಗಿಸುವಷ್ಟರ ಮಟ್ಟಿಗೆ ಈ ರೋಗ ಆತನಿಗೂ ತಟ್ಟಿತ್ತು.

ಗುಜರಾತಿನ ಭರೂಚ್ ಜಿಲ್ಲೆಯಲ್ಲಿ ಕಾಣಿಸಿಕೊಂಡ ಈ ರೋಗವು ಸುತ್ತಮುತ್ತಲಿನ ಹಳ್ಳಿಗಳಿಗೂ ವ್ಯಾಪಿಸಿದ್ದು, ದೇಶಾದ್ಯಂತ ಹರಡಿ ಭಾರತವನ್ನು ನಂ.1 ಆಗಿಸುವ ಗುರಿಯತ್ತ ದಾಪುಗಾಲಿಡುತ್ತಿದೆ. ಯಾವುದರಲ್ಲಿ ಗೊತ್ತೇ? ಚೀನಾವನ್ನು ಹಿಂದಿಕ್ಕಿ ಜನಸಂಖ್ಯೆಯಲ್ಲಿ!

Thursday, June 22, 2006

ಮುಂಬಯಿಯನ್ನು ಬೊಂ'ಬಾಯಿ'ಯಾಗಿಸಲು ಸಂಚು !

(ಬೊಗಳೂರು ಸಂಚಾರಿ ಬ್ಯುರೋದಿಂದ)
ಬೊಗಳೂರು, ಜೂ.22- ಇದೀಗ ಸದ್ದಾದ ಸುದ್ದಿ. ದೇಶದ ವಾಣಿಜ್ಯ ರಾಜಧಾನಿ ಹೆಗ್ಗಳಿಕೆಯ ಮುಂಬಯಿಯ ಹೆಸರನ್ನು ಬೊಂಬಾಯಿ ಎಂದು ಬದಲಿಸಲು ಭಾರಿ ಒಳ ಸಂಚು ನಡೆಸುತ್ತಿರುವ ವಿಷಯವೊಂದು ಇಲ್ಲಿ ಬೆಳಕಿಗೆ ಬಂದಿದೆ.

ಈ ಭಾರೀ ಕಾರ್ಯತಂತ್ರದ ಹಿಂದೆ ಬೊಗಳಿಯರ ಮತ್ತು ವಾಚಾಳಿಯರ ಜಿಹ್ವಾಡ... ಅಲ್ಲಲ್ಲ, ಕೈವಾಡ ಇರುವುದು ಕಂಡುಬಂದಿದೆ.

ಎಲ್ಲೆಡೆ ಮಾತಿನ ಮಲ್ಲಿಯರನ್ನು ಮಾತ್ರವೇ ಅಲ್ಲ ಅಲ್ಪ ಸ್ವಲ್ಪ ಮಟ್ಟಿಗೆ ಮಲ್ಲರನ್ನು ಕೂಡ "ಬೊಂಬಾಯಿ" ಅಂತ ಪ್ರೀತಿಯಿಂದ ಉದ್ದಹೆಸರಿಟ್ಟು ಹಿಂದೆಲ್ಲಾ ಕರೆಯುತ್ತಿದ್ದರು. ಅಷ್ಟೊಳ್ಳೆ ಹೆಸರು ಗಳಿಸಲು ನಾವು ಪುಣ್ಯ ಮಾಡಬೇಕಿತ್ತು. ಆದರೆ ಈಗ ಮುಂಬಯಿ ಅಂತ ಕರೆದರೆ ಏನೋ ಇರಿಸುಮುರಿಸಾಗುತ್ತೆ ಅನ್ನೋದು ಬೊಂಬಾಯಿ ವಾಚಾಳಿಯರ ಸಂಘದ ಅಧ್ಯಕ್ಷೆ ವಾಚಾಳೀಶ್ವರಿ ಬಾಯಿ ಅವರ ಅಳಲು.

ಈ ಒಳ ಸಂಚಿನ ಬಗ್ಗೆ ಬೊಂಬಾಯಿಯನ್ನು ಕಿರಿದಾಗಿಸಿ ಮುಂಬಯಿಯಾಗಿಸಿದ ಠಾಳ್ ಬಾಕ್ರೆ ಅವರು ಈ ಸುದ್ದಿ ತಿಳಿಸಿದ ಬೊಗಳೆ ಬ್ಯುರೋದ ರಗಳೆ ಮೇಲೇ ಬಾರ್ಕಿಂಗ್ ಮಾಡಿದ್ದಾರೆ.

ಮಾತ್ರವಲ್ಲ, ಮುಂಬಯಿಗಿಂತ ಬೊಂಬಾಯಿಯೇ 100 ಪಟ್ಟು ಹೆಚ್ಚು ಉತ್ತಮವಾಗಿತ್ತು ಅಂತ ತಿಳಿಸಿದ ಖ್ಯಾತ ನಾಮ-ಶಾಸ್ತ್ರಜ್ಞ ಬೇಜಾನ್ ದಾರೂ ಪೀನೇವಾಲ ವಿರುದ್ಧ ಕೂಡ ಬಾಕ್ರೆ ಘರ್ಜಿಸಿದ್ದಾರೆ. ಬೊಂಬಾಯಿಯನ್ನು ಇಂಗ್ಲಿಷ್‌ನಲ್ಲಿ Bomb-bay ಎಂದು ಕರೆದ ಕಾರಣಕ್ಕಾಗಿಯೇ ಅಷ್ಟೊಂದು ಬಾಂಬ್ ಸ್ಫೋಟಗಳಾದವು. ಆ ಪ್ರಮಾಣದ ಬಾಂಬ್ ಸ್ಫೋಟಗಳು ಮುಂಬಯಿ ಆದ ಮೇಲೆ ನಡೆಯಲಿಲ್ಲವಲ್ಲ ಎಂಬುದು ಅವರ ಸಮರ್ಥನೆ.

1996ರಲ್ಲಿ ಅಸತ್ಯಾನ್ವೇಷಿ ಮುಂಬಯಿಯಲ್ಲಿದ್ದ ಸಂದರ್ಭದಲ್ಲಿ, "ನಮ್ಮ ಮನೆಯಲ್ಲೂ ಗಣಪತಿ ವಿಗ್ರಹ ಹಾಲು ಕುಡಿದಿದೆ" ಅಂತ ಕಣ್ಣಾರೆ ಹೇಳಿದ್ದ ಅಂದಿನ ಮುಖ್ಯಮಂತ್ರಿ- ರಮಣಿಯರ ಮನೋಹರಿಸಿದ್ದ ಜೋಷಿ ಅವರು ಕೂಡ ಪ್ರತಿಕ್ರಿಯೆ ನೀಡಿ, ಮುಂಬಯಿಯಲ್ಲಿ ಇತ್ತೀಚೆಗೆ ನಡೆಯುತ್ತಿರುವ ಪ್ರವಾಹ, ಕಟ್ಟಡಕುಸಿತ ಇತ್ಯಾದಿ ದುರಂತಗಳ ಸರಮಾಲೆಗೆ ಏಳೂವರೆ ಶನಿ ದೋಷವಿದೆ, ಮುಂಬಯಿ ಮತ್ತೆ ಬೊಂಬಾಯಿಯಾಗಬೇಕು ಎಂದೆಲ್ಲಾ ಹೇಳುವುದು ಮೂಢ ನಂಬಿಕೆ ಎಂಬುದಾಗಿ ತಿಳಿಸಿದ್ದಾರೆ.

ಅಲ್ಲದೆ ಮುಂಬಯಿಯನ್ನು ಬೊಚ್ಚುಬಾಯಿ ಬೇಕಾದರೂ ಮಾಡುತ್ತೇವೆ, ಮತ್ತೆ ಬೊಂಬಾಯಿ ಮಾಡಲು ಖಂಡಿತಾ ಬಿಡುವುದಿಲ್ಲ ಎಂದವರು ಸ್ಪಷ್ಟಪಡಿಸಿದ್ದಾರೆ.

Wednesday, June 21, 2006

ಭ್ರಷ್ಟಾಚಾರದ ಬೀಜಗಳು ಇಲ್ಲಿ ನೂರ್ಕಾಲ ಬಾಳುತ್ತವೆ !

(ಬೊಗಳೂರು someಶೋಧನೆ ಬ್ಯುರೋದಿಂದ)‌
ಬೊಗಳೂರು, ಜೂ.21- ಸಾವಿರಾರು ವರ್ಷಗಳ ಕಾಲ ಬೀಜವನ್ನು ಸಂರಕ್ಷಿಸುವ ತಂತ್ರಜ್ಞಾನವೊಂದು ಜಗತ್ತಿಗೆ ಪರಿಚಿಸಲ್ಪಟ್ಟಿರುವುದರಿಂದ ಚಿಂತಾಜನಕವಾಗಿ ಕಳವಳಗೊಂಡಿರುವ ಬೊಗಳೂರು ಬ್ಯುರೋ, ಈ ಅಜ್ಞಾನದ some-ಶೋಧಕರನ್ನು ತದ್ವಾತದ್ವಾ ತರಾಟೆಗೆ ತೆಗೆದುಕೊಂಡ ಪ್ರಸಂಗ ವರದಿಯಾಗಿದೆ.

ಬೊಗಳೂರು ಬ್ಯುರೋದ ಈ ಕಳವಳಕ್ಕೆ ಕಾರಣವೆಂದರೆ ಇದರಲ್ಲಿ ಭಾರತೀಯ ಭ್ರಷ್ಟರಾಜಕಾರಣಿಗಳ ಕೈವಾಡವೇನಾದರೂ ಇದೆಯೇ ಎಂಬುದು. ಅಲ್ಲದೆ, ಅವರೂ ತಮ್ಮ ತಮ್ಮ ವಿವಿಧ ನಮೂನೆಯ ಬೀಜಗಳನ್ನು ಈ ಕೇಂದ್ರದಲ್ಲಿ ಠೇವಣಿ ಇರಿಸಬಹುದೆಂಬ ಆತಂಕ. ಇಂಥ ರಾಜಕಾರಣಿಗಳ ಆಯ್ಕೆಯ ಬೀಜಗಳಲ್ಲಿ ಭ್ರಷ್ಟಾಚಾರದ ಬೀಜ, ಜಾತಿ ಬೀಜ, ಕೋಮು ಸಂಘರ್ಷದ ವಿಷಬೀಜ, ಲಂಚೋಪಾಯಗಳ ಬಗೆಗಿನ ಬೀಜಗಳೂ ಸೇರಿವೆ ಎಂಬುದು ಅನ್ವೇಷಣೆ ಸಂದರ್ಭ ಬಯಲಾಗಿದೆ.

ಈ ರಾಜಕಾರಣಿಗಳು ತಮ್ಮಲ್ಲಿ ಕೂಡಿಟ್ಟು ಮಿಕ್ಕುಳಿದ ಹಣವನ್ನು ಸ್ವಿಸ್ ಬ್ಯಾಂಕ್ ಖಾತೆಗಳಲ್ಲಿ ಅದುಮಿಟ್ಟಂತೆಯೇ ಮತ್ತು ಅದು ಅಲ್ಲಿ ಸುರಕ್ಷಿತವಾಗಿರುತ್ತಾ, ಯಾವಾಗ ಬೇಕಾದರಾವಾಗ ತೆಗೆಯಬಹುದಾದಂತಹ ಸೌಲಭ್ಯ ಇದೆ ಮತ್ತು ಈ ದೇಶದ ಯಾವ ಕಾನೂನು ಕೂಡ ಅದನ್ನು ಮುಟ್ಟದಂತೆ ಮಾಡಲು ಅವರೇ ಹೊಸ ಹೊಸ ಕಾನೂನುಗಳನ್ನು ಮಾಡುತ್ತಿರುವುದರಿಂದ ಅದರಿಂದ ಪ್ರೇರಣೆ ಪಡೆದು ತಮ್ಮ ಬೀಜಗಳನ್ನೂ ಅಲ್ಲಿ ಸುರಕ್ಷಿತವಾಗಿ ಕಾಪಿಡಲು ಸಿದ್ಧರಾಗಿದ್ದಾರೆ.

ಯಾವುದೇ ಪ್ರಳಯಕ್ಕೂ ಜಗ್ಗದಂತೆ ಪರ್ವತದಲ್ಲಿ 70 ಮೀಟರ್ ಕೊರೆದು ಈ ಬೀಜ ಬ್ಯಾಂಕನ್ನು ಭೂಗತವಾಗಿ ಸ್ಥಾಪಿಸಲಾಗಿದೆ. ಇದರ ರಿಮೋಟ್ ಕಂಟ್ರೋಲ್ ಇರುವುದು ಸ್ವೀಡನ್‌ನಲ್ಲಿ. ಕೇಂದ್ರ ಸರಕಾರವು ದೇಶದಲ್ಲಿ Price control ಮಾಡಲಾಗದಿದ್ದರೂ, ಇಟಲಿ ಮೂಲದ ಕೇಂದ್ರವೊಂದರ ಮೂಲಕ Remote controlled ಆಡಳಿತ ನಡೆಸುತ್ತಿರುವ ಅನುಭವದ ಹಿನ್ನೆಲೆಯಲ್ಲಿ ಈ ಬೀಜ ಬ್ಯಾಂಕಿನ ರಿಮೋಟ್ ಕಂಟ್ರೋಲ್ ಪಡೆಯಲು ಹಕ್ಕು ಮಂಡಿಸಿತ್ತಾದರೂ ಅದರಲ್ಲಿ ವಿಫಲವಾಯಿತು ಎಂದು ತಿಳಿದುಬಂದಿದೆ.

Tuesday, June 20, 2006

'ಸಾಕೀ' ವಸ್ತ್ರಾಂತಳ ಬಲೆಗೆ ಬಿದ್ದ 'ಮಿಕ' !

(ಬೊಗಳೂರು ವಯಸ್ಕರ ಬ್ಯುರೋದಿಂದ)
ಬೊಗಳೂರು, ಜೂ.20- ಕೆಲವೇ ದಿನಗಳ ಹಿಂದೆ, ನನ್ನ ದೇಹ, ನಾನು ಎಷ್ಟು ಬೇಕಾದ್ರೂ ತೋರಿಸ್ತೀನಿ, ನನ್ನ ಬಟ್ಟೆ, ಎಷ್ಟು ಬೇಕಾದ್ರೂ ಬಿಚ್ತೀನಿ ಅಂತ ಅರಚಾಡುತ್ತಿದ್ದ ಮತ್ತು ದೇಹದ ಮೇಲಿದ್ದ ಒಂದೊಂದೇ ವಸ್ತ್ರದ ಐಟಂಗಳನ್ನು ಕಳಚುತ್ತಾ ಐಟಂ ಗರ್ಲ್ ಅನ್ನೋ ಹೆಸರು ಗಳಿಸಿದ ಸಾಕೀ ವಸ್ತ್ರಾಂತ್, ಎರಡನೇ ಬಾರಿ ಕಿಸ್ ಕೊಡಿಸಿಕೊಂಡು ಸುದ್ದಿಯಾಗಿರುವುದರ ಹಿಂದೆ ಭಾರಿ ಒಳಸಂಚು ಕಂಡುಬರುತ್ತಿದೆ.

ಗಾಯಕ ಮಿಕಾನನ್ನು ಪಬ್ಲಿಸಿಟಿಗೋಸ್ಕರ ಆಕೆ ಮಿಕ ಮಾಡಿಕೊಂಡು ಇದೀಗ ಇಡೀ ರಾಷ್ಟ್ರವೇ ಆಕೆಯನ್ನು ಮಿಕಮಿಕಾಂತ ನೋಡಿ ಭರ್ಜರಿ ಪಬ್-ಲಿಸಿಟಿ ಪಡೆದ ಅಂಶ ಕನಿಷ್ಠ ಉಡುಗೆಯ ಮಧ್ಯೆ ಹೊರಬಿದ್ದಿದೆ.

ಮಿಕ ನನಗೆ ಮಿಕಮಿಕಾಂತ ಕಿಸ್ ಕೊಟ್ಟಿರುವುದು ಇದೇ ಮೊದಲೇನಲ್ಲ, ಈ ಹಿಂದೆಯೂ ಕೊಟ್ಟಿದ್ದ. ಆದ್ರೆ ಆಗ ಕ್ಷಮಿಸಿದ್ದೆ, ಆಗ ನನ್ನ ಫ್ರೆಂಡ್ ಆಗಿದ್ದನಾತ ಎಂದೆಲ್ಲಾ ತೊದಲಿದ ಸಾಕೀ ವಸ್ತ್ರಾಂತ್, ಈ ಬಾರಿ ಮಾತ್ರ ಯಾಕೆ ಪೊಲೀಸ್ ಕೇಸ್ ಹಾಕಿದ್ದು ಎಂಬ ಪ್ರಶ್ನೆಗೆ ಉತ್ತರಿಸುತ್ತಾ, ಇತ್ತೀಚೆಗೆ ನಾನು ಎಷ್ಟೇ ಕಡಿಮೆ ಬಟ್ಟೆ ತೊಟ್ಟರೂ ಪ್ರಚಾರವೂ ಕಡಿಮೆಯಾಗುತ್ತಿದೆ ಎಂದು ವಾರೆನೋಟ ಬೀರಿದ್ದಾಳೆ.

ಆದ್ರೆ ಆತ ನನಗೆ ಗೊತ್ತಿಲ್ಲದೆಯೇ ಕಿಸ್ ಕೊಟ್ಟಿದ್ದು, ನನಗೆ ಆಘಾತ ನೀಡಿತ್ತು. ಕೇಳಿದ್ದರೆ ಅವಕಾಶ ನೀಡುತ್ತಿರಲಿಲ್ಲವೇ ಅಂತಲೂ ಆಕೆ ತುಟಿ ಸವರಿಕೊಂಡು ನುಡಿದಿದ್ದಾಳೆ.

ಪೊಲೀಸರಿಗೆ ದೂರು ನೀಡಲು ತಡವೇಕಾಯಿತು ಎಂದು ಕೇಳಿದಾಗ, ಘಟನೆ ನಡೆದ ಬಳಿಕ ನನಗೆ ಸ್ವಲ್ಪ ಅಳಲು ಸಮಯ ಬೇಕಿತ್ತು. (ಕಣ್ಣು ಕೆಂಪಗಾಗಬೇಡವೆ?) ಅದಕ್ಕಿಂತಲೂ ಹೆಚ್ಚಾಗಿ, ಬೆನ್ನೆಲುಬಿಲ್ಲದವರು ತೊಡುವ ಬೆನ್ನಿಲ್ಲದ ಉಡುಗೆ ಮಾತ್ರ ಇದ್ದ ಕಾರಣ ಬಟ್ಟೆ ತೊಟ್ಟುಕೊಳ್ಳಬೇಕಿತ್ತು. ಅದಕ್ಕೆ ಸ್ವಲ್ಪ ತಡವಾಯಿತು ಎಂದಾಕೆ ತಡಬಡಿಸಿದ್ದಾಳೆ.

ಮಿಕಾ ವಿರುದ್ಧ ಕೇಸ್ ಹಾಕಲು ಏನು ಪ್ರೇರಣೆ ಎಂದು ಕೇಳಿದಾಗ, ನಿಮ್ಮ ಬೊಗಳೆ ರಗಳೆ ಬ್ಯುರೋದ ಈ ವರದಿ ಕಾರಣ ಅಂತಲೂ ಆಕೆ ಹೇಳಿದಳು.

ಮಿಕಾ ಬಹಿರಂಗವಾಗಿ ಕ್ಷಮೆ ಕೇಳಿದ್ರೆ ನನ್ನ ತುಂಡುಡುಗೆ ಬಿಚ್ಚಿ ಹಾಕಿದಷ್ಟೇ ಸಲೀಸಾಗಿ ಕೇಸ್ ವಾಪಸ್ ತಗೋತೀನಿ ಅಂತ ಆಕೆ ನುಡಿದಿದ್ದಾಳೆ.

ಇತ್ತ, ಪೊಲೀಸರ ಹದ್ದಿನ ಕಣ್ಣಿಗೆ ಗುರಿಯಾದ ಮಿಕ ಮಿಕಾನನ್ನು ಪ್ರಶ್ನಿಸಿದಾಗ, ನಾನೇನೂ ಕಚಕ್ಕನೆ ಆಕೆಯ ತುಟಿ ಕಚ್ಚಲಿಲ್ಲ. ಆಕೆ ಬರ್ತ್‌ಡೇ ಶುಭಾಶಯದೊಂದಿಗೆ ಕಿಸ್ ಕೊಟ್ಟಾಗ ನಾನು ಸ್ವಲ್ಪ ಲೊಚಗುಟ್ಟಿದೆನಷ್ಟೆ ಎಂದು ಸ್ಪಷ್ಟಪಡಿಸಿದ್ದಾನೆ.ಅದಲ್ಲದೆ ಈ ಘಟನೆ ನಡೆದ ಹೋಟೆಲ್ ಹೆಸರು "Someone Else" ಆಗಿರುವುದರಿಂದ ಇಲ್ಲಿ ಯಾರು ಮುತ್ತು ಕೊಟ್ಟರೂ ಅದು "someone else" ಅಂತ ಹೇಳಿ ಸುಮ್ಮನಾಗಬಹುದಲ್ವಾ ಎಂದೂ ಆತ ಪ್ರಶ್ನಿಸಿದ್ದಾನೆ.

Monday, June 19, 2006

OBC ಸರ್ಟಿಫಿಕೆಟ್ ಬಿಕರಿ

(ಬೊಗಳೂರು ಮೀಸಲಾತಿ ಬ್ಯುರೋದಿಂದ)
ಬೊಗಳೂರು, ಜೂ.19- ಮೀಸಲಾತಿ ಪರವಾಗಿ ಬೊಗಳೆ ಬ್ಯುರೋದ ಜತೆಗೆ ನಮ್ಮ ಪ್ರೇರಕ ಪತ್ರಿಕೆ ಮಜಾವಾಣಿ ಬ್ಯುರೋ ಕೂಡ ಕೈಜೋಡಿಸಿರುವುದರಿಂದ ಇರುವೆ ಬಲ ಬಂದಂತಾಗಿರುವ ಹಿನ್ನೆಲೆಯಲ್ಲಿ ಇನ್ನಷ್ಟು ತೀವ್ರಗತಿಯ ತನಿಖೆ ನಡೆಸಿದ ಬೊಗಳೆ ಬ್ಯುರೋಗೆ ಮತ್ತಷ್ಟು ಅಸತ್ಯದ ತಲೆ ಮೇಲೆ ಹೊಡೆಯುವ ಸಂಚುಗಳ ಬಗ್ಗೆ ತಿಳಿಯಿತು.

ಕೇಂದ್ರ ಸಂಪತ್ತಿನ ಮೂಲದ ಸಚಿವ ದುರ್ಜನ್ ಸಿಂಗ್ ಅವರು OBC ಪರವಾಗಿ ಮೀಸಲಾತಿಗೆ ಬಲವಾಗಿ ಹೋರಾಟ ಮಾಡುತ್ತಿರುವುದರ ಹಿಂದೆ ಅವರಿಗೇ ಮೀಸಲಾತಿ ಪಡೆಯುವ ಪರಮಗುರಿಯೇ ಕಾರಣ ಎಂಬ ಅಂಶ ಇಲ್ಲಿ ಬಯಲಾಗಿದೆ.

ಒಂದೆಡೆ ಹೆಚ್ಚಿಸಿದ "ಖೋಟಾ" ಸೀಟುಗಳಿಗೆ ಸಾಕಷ್ಟು ಬಾಚಿಕೊಂಡು ಸೂಕ್ತ ಜಾಗ ಮಾಡುವುದು ಹೇಗೆ ಎಂದು ಬೀರ್‌ಅಪ್ಪ ಮೂಗಿಲಿ ಅವರು ತಲೆಯನ್ನು ರಪರಪನೆ ಕೆರೆದುಕೊಳ್ಳುತ್ತಿದ್ದರೆ, ಹೇಗಾದರೂ ಮಾಡಿ ಈ ದೇಶದಲ್ಲಿ ನಾವೂ ಬದುಕಬೇಕು, ಅದಕ್ಕಾಗಿ OBC ಸರ್ಟಿಫಿಕೆಟ್ ಪಡೆದುಕೊಳ್ಳಬೇಕೆಂದು ಘೋರವಾಗಿ ಚಿಂತಿಸುತ್ತಿರುವವರಿಗೆ ಸರಕಾರ ಈ ರೀತಿ ಸಹಾಯ ಮಾಡಲು ಹೊರಟಿರುವುದು ಸರಕಾರದ ಜನಪರ ಆಡಳಿತಕ್ಕೆ ಹಿಡಿದ ಕೈಗನ್ನಡಿ ಎಂದು ವಿಶ್ಲೇಷಿಸಲಾಗುತ್ತಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಜಾತ್ಯಾಧಾರಿತ ರಾಷ್ಟ್ರ ಎಂಬ ಬಿರುದು ದೊರಕಿಸಿಕೊಡುವುದೇ ನಮ್ಮ ಮೂಲ ಗುರಿ ಎಂದು ಈಗಾಗಲೇ ಸರಕಾರ ಸ್ಪಷ್ಟಪಡಿಸಿದೆ.

ಅಟಲ್ ಬಿಹಾರಿ ವಾಜಪೇಯಿ, ಪ್ರಕಾಶ್ ಕಾರಟ್, ರಾಜನಾಥ್ ಸಿಂಗ್ ಹಾಗೂ ಅರ್ಜುನ್ ಸಿಂಗ್‌ರಂಥವರಿಗೇ ಒಂದೇ ಕ್ಷಣದಲ್ಲಿ OBC ಸರ್ಟಿಫಿಕೆಟ್ ದೊರಕಿಸಿಕೊಳ್ಳಬಹುದು ಎಂಬ ಅಂಶವನ್ನು ಇಂಡಿಯನ್ ಎಕ್ಸ್ ಪ್ರೆಸ್ ರೈಲು ಜೂ.17ರ ಮುಖಪುಟದಲ್ಲಿ ತನಿಖಾ ವರದಿ ಪ್ರಕಟಿಸಿ ಭಾರತೀಯರಿಗೆ ಬದುಕಲು ದಾರಿಯೊಂದನ್ನು ತೋರಿಸಿತ್ತು.

ಮಜಾವಾಣಿ ಹೋರಾಟ

ಈ ಮಧ್ಯೆ, ಬೊಗಳೆ-ರಗಳೆಯ ನೆಟ್ಟೊದೆತಗಳ ಸಂಖ್ಯೆ ಒಂದೇ ಸಮನೆ ಹೆಚ್ಚಾದ ಕಾರಣ ಬ್ಯುರೋದಲ್ಲಿ ಭೂಕಂಪನದ ಅನುಭವವಾದ ಕಾರಣ ಅದರ ಹಿನ್ನೆಲೆ ಶೋಧಿಸಹೊರಟಾಗ ಮತ್ತೊಂದು ವಿಷಯ ಬೆಳಕಿಗೆ ಬಂದಿದೆ.

ಯಾರಿಂದಲೂ ಹಣ ಪಡೆಯದೆ ಅಸತ್ಯಾನ್ವೇಷಿ ನಡೆಸಿದ ತನಿಖೆ ವೇಳೆ, ಬ್ಲಾಗಿಸುವವರಿಗೂ ಶೇ.27 ಮೀಸಲಾತಿ ಬೇಕು ಅಂತ ಹೋರಾಟ ಮಾಡುತ್ತಿರುವ ಮಜಾವಾಣಿ ಬ್ಯುರೋದ ವಿಷಾದಾಂಕದ ಮೂಲಕವೇ ಈ ಹಿಟ್ಟುಗಳು (ನೆಟ್ಟೊದೆತಗಳು) ಬಂದಿದ್ದವು ಅಂತ ತಿಳಿಯಿತು.

ಇಡೀ ನೆಟ್ಟೋದುಗರನ್ನು ನಗೆಯ ನೆಟ್ಟಿನಲ್ಲಿ ಸಿಲುಕಿಸಿ, ಅವರ ಮನದ ದುಗುಡವನ್ನು ಒಂದೇ ವಾಕ್ಯದ ಡೋಸ್ ನೀಡಿ, ಅರೆಕ್ಷಣದಲ್ಲಿ ನಿವಾರಿಸುತ್ತಾ, ನೆಟ್ಟಿಗರಿಗೆ ಗಟ್ಟಿಗತನದ ನಗೆಯ ಅಮಲೇರಿಸಿದ್ದ ಮತ್ತು ಅಮಲೇರಿಸುತ್ತಲೇ ಇರುವ ಮಜಾವಾಣಿ ಬ್ಯುರೋ, ಬೊಗಳೆ-ರಗಳೆ ಉತ್ತಮ ಗುಣಮಟ್ಟದ್ದು, ಜನಪ್ರಿಯ ಎಂಬಿತ್ಯಾದಿ ಇಲ್ಲ ಸಲ್ಲದ ಅಪಾದನೆಗಳನ್ನು ಮಾಡಿಯಾದರೂ ಮೀಸಲಾತಿ ಪಡೆಯಬೇಕು ಎಂಬ ಕಾರಣಕ್ಕೆ ಮೀಸಲಾತಿ ಪರ ಹೋರಾಟ ಕಣಕ್ಕಿಳಿದಿದೆ ಎಂದು ತಿಳಿದುಬಂದಿದೆ.

ಈ ಕಾರಣಕ್ಕೆ ಮಜಾವಾಣಿ ಬ್ಯುರೋ ಸಂಪಾದಕರೂ, ಪ್ರಕಾಶಕರೂ, ಓದುಗರೂ, ವರದಿಗಾರರೂ ಮತ್ತು ಎಲ್ಲವೂ ಆಗಿರುವ ವಾರ್ತಾವಿದೂಷಕರಿಗೆ ನೆಟ್ಟೊದೆತಗಳಿಗೆ ಪ್ರತಿಯಾಗಿ ಸಾವಿರ ನಮನಗಳನ್ನು ಕೊಡಲು ಏಕಸದಸ್ಯ ಬೊಗಳೆ ರಗಳೆ ಬ್ಯುರೋದ ಸಮಸ್ತ ಸಿಬ್ಬಂದಿಗಳ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

Saturday, June 17, 2006

Hell- mate ಕಡ್ಡಾಯ !

(ಬೊಗಳೂರು ರಗಳೆ ಬ್ಯುರೋದಿಂದ)
ಬೊಗಳೂರು, ಜೂ.17- ಬೊಗಳಿಗರ ಸಹಾಯಕ್ಕೆ ಧುತ್ತನೆ ಧಾವಿಸಿ ಬಂದಿರುವ ಕರ್-ನಾಟಕ ಸರಕಾರ ಕೂಡ ಬೊಗಳಿಗರ ತಲೆ-ಮಂಡೆ ರಕ್ಷಣೆಗಾಗಿ "hell- mate" ಕಡ್ಡಾಯಗೊಳಿಸುವ ಚಿಂತನೆಗೆ ಕೈಹಚ್ಚಿರುವುದು ಇಡೀ ಬೊಗಳೆ ಸಮುದಾಯದಲ್ಲಿ ಸಂಚಲನ ಮೂಡಿಸಿದೆ.

ದ್ವಿಚಕ್ರ ಸವಾರರಿಗೆ hell- mate ಕಡ್ಡಾಯಗೊಳಿಸುವ ಸರಕಾರದ ನಿರ್ಧಾರದ ಹಿಂದೆ ನ್ಯಾಯಾಲಯದ ಆದೇಶದ ನೆರಳಿದೆ. ಆದರೆ ನ್ಯಾಯಾಲಯದ ಆದೇಶಕ್ಕೆ ನಾವು ತಲೆ ಕೆಡಿಸಿಕೊಳ್ಳದಿದ್ದರೂ ಬೊಗಳಿಗರ- ಅದಕ್ಕಿಂತಲೂ ಮಿಗಿಲಾಗಿ hell- mate ತಯಾರಿಕಾ ಕಂಪನಿಗಳ ತಲೆ ಕಾಯ್ದುಕೊಳ್ಳುವುದು ಸರಕು-ಕಾರದ ಆದ್ಯ ಕರ್ತವ್ಯವಲ್ಲವೆ ಎಂದು ರಾಜ್ಯದ ಅಮುಖ್ಯ ಮಂತ್ರಿ ಮರಿಗೌಡರು ಕೇಳಿದ್ದಾರೆ.

ದ್ವಿಚಕ್ರ ಸವಾರರೆಲ್ಲರೂ ತಾವು ನರಕದಲ್ಲಿ ಹಿಂದಿನ ಜನ್ಮದಲ್ಲಿ ಮಾಡಿದ ಪಾಪ ಕಳೆಯುತ್ತಿದ್ದಾಗ ಜೊತೆಗಾರರಾಗಿದ್ದ ನರಕ-ಮೇಟ್ (class-mate, school-mate ಥರಾ)ಗಳನ್ನು ಜೊತೆಗೇ ಕರೆದೊಯ್ಯಬೇಕು. ಹೇಗಿದ್ದರೂ ಬೆಂಗಳೂರು ಉದ್ಯಾನ-ನಗರ ಎಂದಿದ್ದದ್ದು ಕಾಂಕ್ರೀಟ್-ನರಕ ಎಂದಾಗುತ್ತಿದೆ. ಇಂಥ ಸಣ್ಣಪುಟ್ಟ ಕಾರ್ಯಗಳಿಂದಲೇ ಬೆಂಗಳೂರಿನ ಸಮಗ್ರ ಬದಲಾವಣೆ ಸಾಧ್ಯ. ಹನಿ ಕೂಡಿದರೆ ಹಳ್ಳ ಎಂಬ ಇದುವರೆಗೆ ಯಾರಿಗೂ ಗೊತ್ತಿರದ ನಾಣ್ನುಡಿಯೊಂದನ್ನು ಅವರು ತಮ್ಮ ಬಾಯಿಂದ ಉದುರಿಸಿದರು.

++++++++++

ಧಮಕಿ: ಕಾರಸ್ಥಾನದಲ್ಲಿ ವಿಪರೀತ ಒತ್ತಡ ಬಿದ್ದ ಪರಿಣಾಮದಿಂದಾಗಿ ಮುದ್ರಣ ಯಂತ್ರ ಅಪ್ಪಚ್ಚಿಯಾದುದರಿಂದ ನಿನ್ನೆಯ ಸಂಚಿಕೆ ಪ್ರಕಟವಾಗಿರಲಿಲ್ಲ. ಎಂದಿನಂತೆ, ಚಂದಾದಾರರ ಹಣ ಮರಳಿಸಲಾಗುವುದಿಲ್ಲ. -ಸಂ

Thursday, June 15, 2006

ಬೊಗಳಿಗರೇ, ನಿಮಗೊಂದು ಟೂಲ್!

(ಹಾಯ್ ಬೊಗಳೂರು ನೆಟ್ಗಳ್ಳರ ಬ್ಯುರೋ)
ಬೊಗಳೂರು, ಜೂ.15- ತಲೆ ಇದ್ದವರಿಗೆ ಬುರುಡೆಯೂ ಇರುತ್ತದೆ. ಅವರು ತಲೆ ಹರಟೇನೂ ಮಾಡ್ತಿರ್ತಾರೆ. ಅಂಥ ಜಾತಿಗೆ ಸೇರಿದ, ಕಡ್ಡಾಯವಾಗಿ ತಲೆ ಇರುವ ಬೊಗಳೆ (blog) ನಿರತರಿಗೆ ಆರಂಭದಿಂದಲೂ ಒಂದು ಸಮಸ್ಯೆ ಕಾಡುತ್ತಿರುವುದು ಬೊಗಳೂರು ಬ್ಯುರೋದ ಗಮನಕ್ಕೆ ಬಂದಿದೆ.

ಈ ಪ್ರಯುಕ್ತ, ತಲೆ ಇರುವ ಮತ್ತು ಬುರುಡೆಯೂ ಇರುವ ಬೊಗಳೆದಾರರಿಗಾಗಿಯೇ ವಿಶೇಷವಾಗಿ ಸಂಶೋಧನಾ ವರದಿಯೊಂದನ್ನು ಪ್ರಕಟಿಸಲು ನಮ್ಮ ಬ್ಯುರೋ ನಿರ್ಧರಿಸಿದ ಪರಿಣಾಮ ಈ ಸುದ್ದಿ.

ಬೊಗಳೆದಾರರು ಮೊದಲಿನಿಂದಲೂ ಒಂದು ಸಮಸ್ಯೆ ಹೇಳುತ್ತಾ ಬಂದಿದ್ದಾರೆ. ಏನು ಬರೆಯಲಿ, ಹೇಗೆ ಬರೆಯಲಿ ಎನ್ನೋದನ್ನು ಆರಿಸೋದೇ ದೊಡ್ಡ ತಲೆನೋವು. ಅವರ ಈ ಸಮಸ್ಯೆಗೆ ಅವರೇ ನೀಡುವ ಪ್ರಮುಖ ಕಾರಣ ತಲೆಯೊಳಗೆ ಬೇಕಾದಷ್ಟು ಸಂಗತಿಗಳು, ಘಟನಾವಳಿಗಳು, ಐಡಿಯಾಗಳು ಛಕ್ಕನೆ ಹೊಳೆ ಹೊಳೆದು ತಲೆಯಿಂದ ಹೊರಗೆ ನೆಗೆದು ಮಾಯವಾಗಿಬಿಡುತ್ತವೆ ಎನ್ನುವುದು.

ತಲೆ ಇರುವಾಗ ಇದೆಲ್ಲಾ ಸಹಜವಾದದ್ದಾರೂ, ಆಗಾಗ್ಗೆ ಛಕ್ಕನೆ ಸುಳಿಸುಳಿದು "ನಾನಿದ್ದೀನಿ, ತಾನಿದ್ದೀನಿ" ಅಂತ ಹೇಳುತ್ತಾ "ನನ್ನನ್ನು ಮೊದಲು ಬೊಗಳು, ನನ್ನನ್ನೇ ಮೊದಲು ಉಗುಳು" ಅಂತ ಮಂಡೆಗೆ ಆಜ್ಞಾಪಿಸುತ್ತಾ ಗಲಾಟೆ ಎಬ್ಬಿಸುತ್ತಿರುತ್ತವೆ ಈ ಐಡಿಯಾಗಳು. ಬೊಗಳದಿದ್ದರೆ ಅಥವಾ ಉಗುಳದಿದ್ದರೆ ಅವು ಕೋಪಿಸಿಕೊಂಡು ತಲೆಯೊಳಗಿಂದ ಹೊರಗೆ ಹಾರಿ ಮಾಯವಾಗಿಬಿಡುತ್ತವೆ.

ಬೊಗಳಿಗರ ಈ ಮನಸ್ಥಿತಿಯನ್ನು ಮನಗಂಡು ಹೊಸದಾಗಿ ಭಾರತಕ್ಕೆ ಪರಿಚಯಿಸಲಾಗಿದೆ ಕ್ರೇನಿಯೋಪ್ಲಾಸ್ಟಿ ಅನ್ನೋ ಅತ್ಯಾಧುನಿಕ ತಂತ್ರಜ್ಞಾನ. ಅಮೆರಿಕ, ಜಪಾನ್, ಆಸ್ಟ್ರೇಲಿಯಾಗಳಲ್ಲಿ ಮಾತ್ರ ದೊರೆಯುತ್ತಿದ್ದ ಅದನ್ನು ಭಾರತಕ್ಕೆ ಪರಿಚಯಿಸಿದ್ದು ಬೊಗಳೂರು ಅಂತ ಇಲ್ಲಿನ ಸಿಬ್ಬಂದಿ, ಇಲ್ಲದ ತಲೆಯ ಮೇಲ್ಮುಂಭಾಗದಲ್ಲಿರುವ ಹಣೆಗೆ ಚಚ್ಚಿಕೊಂಡರೂ ಇದು ಕೊಯಮತ್ತೂರಿನಲ್ಲಿ ಪತ್ತೆಯಾದ ಕಾರಣ ಸಿಬ್ಬಂದಿ ಮೊಂಡುವಾದಕ್ಕೆ ಪೇಟೆಂಟ್ ದೊರೆಯಲಿಲ್ಲ ಎಂದು ಈ ಮೂಲಕ ಸ್ಪಷ್ಟಪಡಿಸಲಾಗಿದೆ.

ಈ ತಂತ್ರಜ್ಞಾನದ ಪ್ರಕಾರ, ತಲೆಬುರುಡೆಯಲ್ಲಿರುವ ರಂಧ್ರಗಳನ್ನು, ಬಿರುಕುಗಳನ್ನು ಮುಚ್ಚಲಾಗುತ್ತದೆ ಎಂದು ಇಲ್ಲಿ ವರದಿಯಾಗಿದೆ.

ನಮ್ಮ ತಲೆಬುರುಡೆಯಲ್ಲಿರುವ ರಂಧ್ರಗಳಿಂದಾಗಿಯೇ ಐಡಿಯಾಗಳು ತಲೆಯಿಂದ ಹೊರಗೆ ಹೋಗುವುದರಿಂದ ಈ ರಂಧ್ರಗಳನ್ನು ಮುಚ್ಚಿಬಿಟ್ಟರೆ ಐಡಿಯಾಗಳು ಹೇಗೆ ಹೊರಗೆ ನೆಗೆಯುತ್ತವೆ ಅಂತ ಒಂದು ಕೈ ನೋಡಿಯೇಬಿಡೋಣವೆ?

Wednesday, June 14, 2006

ಹಮಾಲಿ ಹುದ್ದೆ: ಮೇಲ್ವರ್ಗದವರ ಪೈಪೋಟಿ

(ಹಾಯ್ ಬೊಗಳೂರು-ರಗಳೆ ಬ್ಯುರೋದಿಂದ)
ಬೊಗಳೂರು, ಜೂ.14- ಮೀಸಲಾತಿಯಿಂದಾಗಿ ಬೀದಿಗೆ ಬಿದ್ದ ಮೇಲ್ವರ್ಗದವರು ಕಸ ಗುಡಿಸುವ ಹುದ್ದೆಗೆ ಪೈಪೋಟಿ ನಡೆಸಿರುವ ಸಂಗತಿ ಇಲ್ಲಿ ಪ್ರಕಟವಾಗಿರುವ ಬಗ್ಗೆ ತಡವಾಗಿ ನೆಗೆದುಬಿದ್ದ ಬೊಗಳೆ ಬ್ಯುರೋ ಸಿಬ್ಬಂದಿ, ಲಕ್ನೋಗೆ ಪ್ರವಾಸಕ್ಕಾಗಿ ಹೊರಟಿದ್ದು, ಮೀಸಲಾತಿಯಿಂದಾಗಿ ರೈಲಿನ ಟಿಕೆಟ್ ಸಿಗದೆ ಪರದಾಡಿದ ಪ್ರಸಂಗ ವರದಿಯಾಗಿದೆ.

ಇಲ್ಲಿ ಹಿಂದುಳಿದವರಿಗೆ ಮಾತ್ರವೇ ರೈಲು ಟಿಕೆಟ್ ಎಂದು ಕಡ್ಡಾಯ ಮಾಡಿದ ಹಿನ್ನೆಲೆಯಲ್ಲಿ ಅಸತ್ಯಾನ್ವೇಷಿ ಮರಳಬೇಕಾಯಿತು.

ಇನ್ನು ವಿಮಾನವೇರೋಣ ಎಂದು ಹೋದಾಗ ಯಾವ ಕ್ಲಾಸ್‌ನ ಟಿಕೆಟ್ ಬೇಕೆಂಬ ಪ್ರಶ್ನೆ ತೂರಿಬಂತು. ಮೂರನೇ ದರ್ಜೆ ಅಂತ ಹೇಳಿದಾಗ ಟಿಕೆಟ್ ಕೊಡುವವರ ಹುಬ್ಬು 90 ಡಿಗ್ರಿಯಷ್ಟು ಮೇಲಕ್ಕೆ ನೆಗೆಯಿತು. ಈಗ ಸಾವರಿಸಿಕೊಂಡ ಅಸತ್ಯಾನ್ವೇಷಿ, ಏನೋ ಉಪಾಯ ಹೊಳೆದಂತಾಗಿ ಶೆಡ್ಯೂಲ್ಡ್ ಕ್ಲಾಸ್ ಅಂತ ಒದರಿದಾಗ ಟಿಕೆಟ್ ನೀಡುವ ಯುವತಿಯ ಮೂಗಿನ ಕೆಳಗೆ U ಆಕಾರದ ನಗೆಯೊಂದು ಮಿಂಚಿ ಮಾಯವಾಯಿತು. ಹೇಗಿದ್ದರೂ ಇದು ಮಾಯಾವತಿ ಆಳಿದ ನಾಡಲ್ಲವೆ...!

ಸಾರಿ, ಶೆಡ್ಯೂಲ್ಡ್ ಕ್ಲಾಸ್‌ಗೆ ಟಿಕೆಟ್ ಇಲ್ಲ. ಶೆಡ್ಯೂಲ್ಡ್ ಟ್ರೈಬ್ ಮತ್ತು ಕಾಸ್ಟ್ ಗಳಿಗೆ ಮಾತ್ರ ಎಂಬ ಉತ್ತರ ಬಂತು. ಉತ್ತರ ಕೇಳಿ ತತ್ತರಿಸಿದ ಅನ್ವೇಷಿ ಸ್ವಲ್ಪ ಯೋಚಿಸತೊಡಗಿದ.

ಲಕ್ನೋದಲ್ಲಿ ವಿಮಾನ ಇಳಿಯಲು ಜಾಗವಿಲ್ಲ, ಅಲ್ಲಿನ ಎಲ್ಲಾ ಸ್ಥಳಗಳು ಮೀಸಲಾಗಿಬಿಟ್ಟಿವೆ. (Sold Out ಮಾದರಿಯಲ್ಲಿ). ಇನ್ನು ರೈಲು ತುಂಬಾ ಉದ್ದವಿರುವುದರಿಂದ ಅಷ್ಟುದ್ದದ ರೈಲು ಲಕ್ನೋ ತಲುಪುವುದು ನಿಧಾನವಾಗುತ್ತದೆ. ಬಸ್ಸಿನಲ್ಲಿ ಹೋಗುವುದು ರಗಳೆಯ ವಿಷಯ. ಇದಕ್ಕಿಂತ ಸ್ವಂತ ಕಾಲಿನಲ್ಲೇ ಹೋಗುವುದು ವಾಸಿ ಅಂದುಕೊಂಡಾಗ ಹೊತ್ತು ಮೀರಿತ್ತು.

ಆದರೆ ನಂತರ ವಿಷಯ ತಿಳಿದ ಪ್ರಕಾರ, ಲಕ್ನೋದಲ್ಲಿ ಕಸ ಗುಡಿಸುವ ಹುದ್ದೆಗೆ ಅರ್ಜಿ ಸಲ್ಲಿಸಿದ ಬ್ರಾಹ್ಮಣರ ಸಂಖ್ಯೆ ಮೇರೆ ಮೀರಿದ್ದರಿಂದ ಅಲ್ಲಿ ಹಿಂದುಳಿದವರು ಮತ್ತು ಮುಂದೆ (ತಟಸ್ಥವಾಗಿ) ಉಳಿದವರ ಮಧ್ಯೆ ಘರ್ಷಣೆ ನಡೆದಿದೆ

ಹಮಾಲಿ ಹುದ್ದೆ, ಟಾಯ್ಲೆಟ್ ಕ್ಲೀನಿಂಗ್, ಮನೆಕೆಲಸ, ಸೆಗಣಿ ಸಾರಿಸುವಿಕೆ, ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುವುದು, ರಸ್ತೆ ಸ್ವಚ್ಛಗೊಳಿಸುವುದು ಇತ್ಯಾದಿ ಸಂಭಾವಿತ ಹುದ್ದೆಗಳಿಗೂ ಹೋರಾಟ ನಡೆಯಲಾರಂಭಿಸಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಮೇಲ್ವರ್ಗಿಗಳು, ಎಲ್ಲ ಹುದ್ದೆಗಳನ್ನು ಮೀಸಲಿರಿಸಿದರೆ ನಾವು ಬದುಕುವುದು ಬೇಡವೇ? ದೇಶದಲ್ಲಿ ಮುಂದುವರಿದವರನ್ನೇ ಇಲ್ಲದಂತಾಗಿಸಿ, ಬರೇ ಹಿಂದುಳಿದವರ ರಾಷ್ಟ್ರವಾಗಿಸುವ ಉದ್ದೇಶವೇ ಎಂದು ಪ್ರಶ್ನಿಸಿದ್ದಾರೆ.

ಹೋರಾಟ ಜೋರಾಗುತ್ತಿದೆ ಅಂತ ತಿಳಿದಾಗ ಬ್ಯುರೋ ಸಿಬ್ಬಂದಿ ರೈಲು, ಬಸ್ಸು ಮತ್ತು ವಿಮಾನ- ಈ ರೀತಿ ಮೂರೂ ನಿಲ್ದಾಣಗಳಿಂದ ಒಂದೇ ಓಟ. ಉಸಿರು ಬಿಟ್ಟದ್ದು ಬೊಗಳೆ-ರಗಳೆ ಕಚೇರಿಯಲ್ಲೇ.

ಇನ್ನೂ ಏದುಸಿರು ಬಿಡುತ್ತಿರುವ ಸಿಬ್ಬಂದಿಯ ಸಂದರ್ಶನಕ್ಕೆ ಎನ್‌ಡಿಟಿವಿ, ಸಿಎನ್‌ಎನ್-ಐಬಿಎನ್, ಬಿಬಿಸಿ, ಟೈಮ್ಸ್ ನೌ ಮುಂತಾದ ಚಾನೆಲ್‌ಗಳ ವರದಿಗಾರರು ಕಾದು ಕುಳಿತಿದ್ದಾರೆ ಎಂಬಲ್ಲಿಗೆ ಮೀಸಲಾತಿ ಪುರಾಣದ ಮುಗಿಯಲಾರದ ಕಂತುಗಳಲ್ಲೊಂದು ಮುಗಿದೇಬಿಟ್ಟಿತು.

Tuesday, June 13, 2006

ಗಂಗೂಲಿ "ಬಾಯಲ್ಲಿ ಕಾಲು" ಚೆಂಡಾಟ

(ಹಾಯ್-ಬೊಗಳೂರು ಬ್ಯುರೋ)
ಬೊಗಳೂರು, ಜೂ.13- ಭಾರತ ಕ್ರಿಕೆಟ್ ತಂಡದ ಎಡಗೈ ಕ್ಯಾಪ್ಟನ್ ಆಗಿದ್ದ ಗೌರವ್ ಸಂಗೂಲಿ ಈಗೇನು ಮಾಡುತ್ತಿದ್ದಾರೆ ಎಂಬ ಕುತೂಹಲ ಬೊಗಳೆ-ರಗಳೆ ಬ್ಯುರೋ ಸಿಬ್ಬಂದಿಗೆ.

ಸರಿ, ಇದು ನೆನಪಾದದ್ದೇ ತಡ, ಬ್ಯುರೋದ ಏಕೈಕ ಸಿಬ್ಬಂದಿಯ ಭರ್ಜರಿ ತಂಡವು ಮೂರ್ನಾಲ್ಕು ಕಾರುಗಳಲ್ಲಿ, ರೈಲುಗಳಲ್ಲಿ, ವಿಮಾನ-ಬಸ್ಸುಗಳಲ್ಲಿ ಕಾಲು-ಕುತ್ತಕ್ಕೆ ಧಾವಿಸಿತು. ಅಲ್ಲಿ ಬ್ಯುಸಿಯಾಗಿದ್ದ ಗೌರವ್ ಸಂಗೂಲಿಯ ಎರಡೂ ಕಾಲುಗಳಿಗೆ ಚಿನ್ನದ ಬೂಟ್ ಇದ್ದವು. ಅದರ ಹಿಂದಿನ ರಹಸ್ಯ ಭೇದಿಸಿದಾಗ ಹಲವು ಅಂಶಗಳು ತಿಳಿದುಬಂದವು.

ಭಾರತ ತಂಡವನ್ನು ಎಡಗೈ ಬ್ಯಾಟ್ಸ್ ಮನ್ ಆಗಿ ಮುನ್ನಡೆಸುತ್ತಿದ್ದ ಸಂದರ್ಭದಲ್ಲಿ ಇತರ ಬ್ಯಾಟ್ಸ್ ಮನ್ ಮತ್ತು ಬೌಲರ್‌ಗಳ ಕಾಲುಗಳನ್ನು ಎಳೆಯುತ್ತಾ ಸುದ್ದಿ ಮಾಡುತ್ತಿದ್ದ ಸಂಗೂಲಿ, ಕೊನೆಗೊಂದು ಬಾರಿ ಹೊಚ್ಚ ಹೊಸ ಕೋಚ ಚಾಪೆಲ್‌ನ ಕಾಲಡಿಯ ಚಾಪೆ ಎಳೆಯಲು ಹೋದಾಗ ಕಾಲೇ ಕೈಕೊಟ್ಟ ಕಾರಣ ಕಾಲು-ಕುತ್ತಕ್ಕೆ ಒಂದೇ ಉಸಿರಿನಲ್ಲಿ ನೆಗೆದಿದ್ದರು.
ಕ್ಯಾಪ್ಟನ್ ಆಗಿದ್ದಾಗಿನಿಂದಲೂ ತಮ್ಮ ಕಾಲುಗಳಿಗೆ ಸಾಕಷ್ಟು ಕೆಲಸ ಕೊಡುತ್ತಾ, ಬಾಯಲ್ಲೇ ಕಾಲು ಇಟ್ಟುಕೊಂಡು ಸುದ್ದಿ ಮಾಡುತ್ತಿದ್ದ ಸಂಗೂಲಿಯ ಈ ಕ್ರಮದ ಹಿನ್ನೆಲೆ ಏನು ಎಂದು ಅರಿವಾದದ್ದು ಸಂಗೂಲಿ ಫುಟ್ಬಾಲ್ ದಿರಿಸಿನಲ್ಲಿ ಕಾಣಿಸಿಕೊಂಡಾಗ ಮತ್ತು ಅವರ ತಂಡವು ಫುಟ್ಬಾಲ್ ಪಂದ್ಯದಲ್ಲಿ ವಿಜಯಿಯಾಗಿದೆ ಎಂದು ತಿಳಿದಾಗ.
"ಓ, ಬನ್ನಿ ಬೊಗಳೆ ಪಂಡಿತರ ಕಡೆಯವರಲ್ವಾ" ಎಂದು ಕಾಲು ಬೀಸಿ ಕರೆದ ಸಂಗೂಲಿಯನ್ನು ಬ್ಯುರೋ ಸಿಬ್ಬಂದಿ ವಿಚಾರಿಸತೊಡಗಿದರು.

ಫುಟ್ಬಾಲ್‌ಗೆ ಯಾವತ್ತಿಗೂ ನನ್ನ ಪ್ರಥಮ ಆದ್ಯತೆ ಎಂದೇ ಮಾತು ಶುರುಹಚ್ಚಿಕೊಂಡ ಸಂಗೂಲಿ, ನನಗೆ ಕಾಲ್ಚೆಂಡಾಟ ಆಡಿ ತುಂಬಾ ಅಭ್ಯಾಸ, ಅನುಭವ ಇದೆ. ಉಳಿದವರಿಗೆಲ್ಲಾ ಕೈಕೊಟ್ಟು ಅನುಭವವಿದ್ದರೆ ನನಗೆ ಕಾಲು ಕೊಟ್ಟೇ ಅಭ್ಯಾಸ. ಕ್ರಿಕೆಟ್ ಆಡುತ್ತಿದ್ದಾಗಲೂ ಚಾಪೆಲ್ ಮುಂತಾದವರ ಕಾಲೆಳೆಯುತ್ತಾ ನನ್ನ ಭವಿಷ್ಯವನ್ನು ಫುಟ್ಬಾಲ್ ಕ್ರೀಡೆಗಾಗಿ ಅಣಿ ಮಾಡಿಕೊಳ್ಳುತ್ತಿದ್ದೆ ಎಂದು ಸ್ಪಷ್ಟಪಡಿಸಿದರು.

ನನಗೆ ಎಡಕೈಯಂತೆಯೇ ಎಡಕಾಲು ಕೂಡ ಬಲವಾಗಿದೆ. ಆ ಕಾರಣಕ್ಕೆ ನನಗೆ ಎರಡೆರಡು ಎಡಕಾಲುಗಳು, ನೀವೇ ನೋಡಿ ಎಂದು ಕಾಲೆತ್ತಿ ರಪ್ಪನೆ ಬಾರಿಸಿದರು.

ಎಲ್ಲಿ ಬಾರಿಸಿದ್ದು ಅಂತ ಬೊಗಳೆ ಬ್ಯುರೋ ಸಿಬ್ಬಂದಿಗೆ ತಿಳಿದಾಗ ತಡವಾಗಿತ್ತು....! ಸ್ವಲ್ಪ ನಿಲ್ಲಿ, ತಪ್ ತಿಳ್ಕೊಂಡಿದೀರಾ... !

ಸಂಗೂಲಿ ಒದ್ದಿದ್ದು, ಅಲ್ಲೇ ಹತಾಶವಾಗಿ ಬಿದ್ದಿದ್ದ ಫುಟ್ಬಾಲ್‌ಗೆ. ಅದು ದೂರದಲ್ಲೆಲ್ಲೋ ಧೊಪ್ಪನೆ ಬಿದ್ದಾಗ, ಬೊಗಳೆ ಬ್ಯುರೋ "ಸದ್ಯ ತಲೆ ಉಳಿಯಿತಲ್ಲಾ" ಎಂದು ಕೊಳ್ಳುತ್ತಾ, ದೂರದಿಂದಲೇ ಸಲಾಂ ಹೊಡೆದರೂ ಸಂಗೂಲಿ ಮಾತ್ರ ಎರಡೂ ಕಾಲೆತ್ತಿ ಟಾಟಾ ಹೇಳಿ ಬೆದರಿಸಿ ಬೀಳ್ಕೊಡುವುದನ್ನು ಬಿಡಲಿಲ್ಲ.

Monday, June 12, 2006

ಲೋಕಾಯುಕ್ತ ವಿರುದ್ಧ Inhuman Rights Commissionಗೆ ದೂರು

(ಹಾಯ್ ಬೊಗಳೂರು ಬ್ಯುರೋದಿಂದ)
ಬೊಗಳೂರು, ಜೂ.12- "ಇದು ಅನ್ಯಾಯ, ಇದು ಅಕ್ರಮ, ಇದು ಭ್ರಷ್ಟಾಚಾರ-ಅಮಾನವೀಯ ಹಕ್ಕುಗಳ ಉಲ್ಲಂಘನೆ" ಎಂದು ಬೊಬ್ಬಿಟ್ಟವರು ಭಾರಿ ಪ್ರಮಾಣದ ಆಸ್ತಿ ಕೂಡಿಸಿಟ್ಟ ಹೊರತಾಗಿಯೂ ಅಲ್ಪ ಪ್ರಮಾಣದ ಸೊತ್ತು ಮಾತ್ರ ಬಯಲಾಗಿಸಿ ಸಿಕ್ಕಿಬಿದ್ದ ಕರ್ನಾಟಕದ ಸರಕಾರೀ ಅಧಿಕಾರಿಗಳು.

ಈ ಬಗ್ಗೆ ಇಲ್ಲಿ ವರದಿ ಪ್ರಕಟವಾದ ತಕ್ಷಣ ಹಾಯ್ ಬೊಗಳೂರು ಬ್ಯುರೋದ ನೆಟ್ಗಳ್ಳರ ತಂಡವು ನೇರವಾಗಿ ರಾಜ್ಯ ರಾಜಧಾನಿಗೆ ಧಾವಿಸಿ ಲೋಕಾಯುಕ್ತ ಪೊಲೀಸರು ಸೆರೆ ಹಿಡಿದ, ಅಯ್ಯೋ ಪಾಪ ಮುಖಭಾವ ಹೊತ್ತ ಮತ್ತು ಅಧಿಕವಾಗಿಯೇ ಕಾರಿದ ಅಧಿಕಾರಿಗಳನ್ನು ಸಂದರ್ಶಿಸಿತು.

ನಾವೆಲ್ಲರೂ ಥರ್ಡ್ ಕ್ಲಾಸ್ ಸರಕಾರಿ ಗುಮಾಸ್ತರು ಎಂದು ಅಳಲು ತೋಡಿಕೊಂಡ ಈ ಅಧಿಕಾರಿಗಳು, ಅಂದ್ರೆ ನಾವು ಓದಿದ್ದು ಮೂರನೆ ತರಗತಿಯಾಗಿದ್ದರೂ, ಅದರರ್ಥ ಅದಲ್ಲ. ಥರ್ಡ್ ಕ್ಲಾಸ್ ಅಂದ್ರೆ ನಾವು ಮೂರನೇ ದರ್ಜೆ ಗುಮಾಸ್ತರು ಎಂದು ಅದರ ಕನ್ನಡೀಕರಣವನ್ನೂ ಬ್ಯುರೋದ ತಂಡದ ಎದುರೇ ಮಾಡಿ ತೋರಿಸಿದರು.

ನಾವು ವೃತ್ತಿ ಜೀವನ ಆರಂಭಿಸಿದ್ದೇ ಥರ್ಡ್ ಕ್ಲಾಸ್ ಆಗಿ ಎಂದು ಸ್ಪಷ್ಟಪಡಿಸಿದ ಅವರು, ನಮ್ಮಲ್ಲಿ ಪ್ರತಿಭೆ ಇಲ್ಲದಿದ್ದರೂ ಸರಕಾರಿ ಕೆಲಸ ಪಡೆಯಲು ಎಷ್ಟೊಂದು ದುಡ್ಡು ಸುರಿದಿದ್ದೇವೆ, ಅವನ್ನೆಲ್ಲಾ ಮರಳಿ ಪಡೆಯೋದು ಬೇಡ್ವಾ ಎಂದು ಪ್ರಶ್ನಿಸಿದರು.

ಲೋಕಾಯುಕ್ತರಿಂದ ಅವಮಾನ: ಬರೇ ಜನಸೇವೆ ಅಂತ ಕೂತರೆ ಆಯಿತಾ? ನಮ್ಮ ಬಹುಪತ್ನಿಯರು, ಪುತ್ರರತ್ನರು ಎಲ್ಲ ತಿಂದುಂಡು, ಮಕ್ಕಳು, ಮರಿಮಕ್ಕಳಿಗೂ ಅನ್ನಾಹಾರ ಬೇಡವೆ? ಅದಕ್ಕಾಗಿ ಈಗಲೇ ನಾವು ಕೂಡಿಡುತ್ತಿದ್ದೇವೆ ಎಂದು ಸಮರ್ಥಿಸಿಕೊಂಡ ಈ ಅಧಿಕ-ಕಾರಿಗಳು, ನಾವೆಷ್ಟು ಶ್ರೀಮಂತರೆಂದು ಜಗತ್ತಿಗೆ ತೋರಿಸೋದು ಬೇಡ್ವೆ ಎಂದು ಪ್ರಶ್ನಿಸಿದರು.

ಲೋಕಾಯುಕ್ತರು ಕೇವಲ ನಮ್ಮ ಅಲ್ಪ ಸಂಪತ್ತನ್ನು ಮಾತ್ರ ಬಹಿರಂಗಪಡಿಸಿ ಅವಮಾನ ಮಾಡಿದ್ದಾರೆ. ನಮ್ಮ ಮನೆಯ ನೆಲಮಾಳಿಗೆಯಲ್ಲಿ, ವಿದೇಶೀ ಬ್ಯಾಂಕ್‌ಗಳಲ್ಲಿ, ದೊಡ್ಡ ದೊಡ್ಡ ಕಂಪನಿಗಳಲ್ಲಿ ಇರಿಸಿದ ಶೇರುಗಳಲ್ಲಿ ನಾವು ಹೂಡಿರುವ ದುಡ್ಡನ್ನು ಲೋಕಾಯುಕ್ತರು ಗಣನೆಗೇ ತೆಗೆದುಕೊಂಡಿಲ್ಲ ಎಂದವರು ಲೋಕಾಯುಕ್ತರ ವಿರುದ್ಧ ಕಿಡಿ ಕಾರಿದರು.

Inhuman Rights Commissionಗೆ ದೂರು: ಕೇವಲ ನಾವು ವಾಸಿಸುವ ಮತ್ತು ನಮ್ಮ ಹೆಂಡಿರು ಮಕ್ಕಳು ಮೈತುಂಬಾ ಧರಿಸಿರುವ ಆಭರಣಗಳ ಮೇಲೆ ಕಣ್ಣು ಹಾಕಿ ಲೋಕಾಯುಕ್ತರು ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳನ್ನು ಕಿತ್ತುಕೊಂಡಿದ್ದಾರೆ. ಈ ಬಗ್ಗೆ ಅಮಾನವೀಯ ಹಕ್ಕುಗಳ ಆಯೋಗಕ್ಕೆ (Inhuman Rights Commission) ದೂರು ನೀಡಲಾಗುತ್ತದೆ ಎಂದು ಲೋಕಾಯುಕ್ತರಿಗೆ ಅವರು ಧಮಕಿ ಹಾಕಿದರು.
 
------------------
ಸೂಚನೆ: "coffee wrong" ಸಮಸ್ಯೆಯಿಂದಾಗಿ ನಮ್ಮ ಬರೇ ಬೊಗಳೂರು ಬ್ಯುರೋಗೆ ಹಾಯ್ ಬೊಗಳೂರು ಬ್ಯುರೋ ಅಂತ ಮರು ನಾಮ ಹಾಕಲಾಗಿದೆ.

Saturday, June 10, 2006

ವಿರೋಧ ಪಕ್ಷಗಳಿಗೆ ಎಣ್ಣೆ ಕುಡಿಸುವ ಚಾಣಾಕ್ಷ ಸರ್ಕಾರ

(ಬೊಗಳೂರು ಅರಾಜಕೀಯ ಬ್ಯುರೋದಿಂದ)
ಬೊಗಳೂರು, ಜೂ.10- ವಾಹನಕ್ಕೆ ಹಾಕುವ "ಎಣ್ಣೆ"ಯ ದರ ಏರಿಕೆ ವಿರುದ್ಧ ದೇಶಾದ್ಯಂತ ಎದ್ದಿರುವ ಪ್ರತಿಭಟನೆಯ ಅಲೆಯಿಂದ ಸ್ವಲ್ಪವೂ ವಿಚಲಿತವಾಗದ ಕೇಂದ್ರದ Unprecedented Price Agenda ಸರಕಾರ, गरीबों को देश से हटावो ಎಂಬ ನಿಲುವಿಗೆ ಬದ್ಧವಾಗಿರುವುದಾಗಿ ಮತ್ತೊಮ್ಮೆ ಸ್ಪಷ್ಟಪಡಿಸಿದೆ.

ಈ ಖಚಿತ ಭರವಸೆಯ ಹಿನ್ನೆಲೆಯನ್ನು ಕೆದಕಲು ಹೋದಾಗ ಹೊಸ ಹೊಸ ಅಸತ್ಯಗಳು ಗೋಚರಿಸತೊಡಗಿವೆ.

ಮೊದಲನೆ ಕಾರಣ, ಯುಪಿಎ ಸರಕಾರ "ಆಡಿದ್ದೇ ಆಟ, ಮಾಡಿದ್ದೇ ಮಾಟ" ಎಂಬ ಪರಮಾನಂದ ಸ್ಥಿತಿಯನ್ನು ಅನುಭವಿಸುತ್ತಿದೆ. ಅಂದರೆ ಸರಕಾರ ಸಮರ್ಪಕವಾಗಿ, ಜನಪರವಾಗಿ ಮುನ್ನಡೆಯಲು ಪ್ರತಿಪಕ್ಷದ ಅಗತ್ಯವಿದೆ. ಆದರೆ ಪ್ರತಿಪಕ್ಷಗಳೇ ಇಲ್ಲದಂತಹ ಪರಿಸ್ಥಿತಿ ಇದೆ ಎನ್ನುವುದೇ ಯುಪಿಎ ಭರವಸೆಯ ಮೇಲೆ ಭರವಸೆ ನೀಡಲು ಪ್ರಧಾನ ಕಾರಣ.

ಇದ್ದ ಪ್ರತಿಪಕ್ಷಕ್ಕೆ ಏನಾಗಿದೆ ಎಂಬ ವಿಷಯ ಕೆದಕಿದಾಗ, ಪ್ರತಿಪಕ್ಷಕ್ಕೂ ಜನಪರ ಹೋರಾಟ ಮಾಡಲು ಮನಸ್ಸಿದೆ. ಅದಕ್ಕಾಗಿ ರಥಯಾತ್ರೆ, ತೀರ್ಥಯಾತ್ರೆ ಇತ್ಯಾದಿಗಳನ್ನು ಕೈಗೊಳ್ಳುವ ಹಂತದಲ್ಲಿರುವಾಗ ರಥದ ಟಯರ್ ಆಗಾಗ್ಗೆ ಪಂಕ್ಚರ್ ಆಗುತ್ತದೆ. ಸರಕಾರದ ವಿರುದ್ಧ ಬ್ರಹ್ಮಾಸ್ತ್ರ ಇನ್ನೇನು ತೊಡಬೇಕು ಎಂಬ ಹಂತದಲ್ಲಿರುವಾಗ ಪಕ್ಷದ ಮನೆಯೊಡೆಯುತ್ತದೆ. ತೊಟ್ಟ ಬಾಣವ ಮತ್ತೆ ತೊಡದಿರು ಅಂತ ಪ್ರತಿಪಕ್ಷಗಳು ಯಾರಿಗೋ ಮಾತುಕೊಟ್ಟಿರುವುದರಿಂದ ಅಲ್ಲಿಗೇ ಪ್ರತಿಭಟನೆಯ ಬಾಂಬ್ ಠುಸ್sssssssssss ಆಗುತ್ತಿದೆ. ಆದ ಕಾರಣದಿಂದ ವಿರೋಧ ಪಕ್ಷಗಳ ವಿರೋಧವೇ ಇಲ್ಲ !

ಇನ್ನು ಸರಕಾರದೊಳಗೇ "ಉಭಯವಾಸಿ"ಯಂತಿರುವ ವಿರೋಧಪಕ್ಷಗಳ ವಿಷಯ. ಹುಟ್ಟಿದಾರಭ್ಯ ಕಾಂಗ್ರೆಸ್ ನೀತಿಗಳನ್ನು ಟೀಕಿಸುತ್ತಲೇ ಬಂದಿರುವ ಎಡಚ ಪಕ್ಷಗಳು, ಬಲ ಕೈಗಳಿಂದ ಸರಕಾರವನ್ನು ಎತ್ತಿ ಹಿಡಿಯುತ್ತಾ ಎಡ ಕೈಗಳಿಂದ ಸರಕಾರವನ್ನು ಆಟವಾಡಿಸುತ್ತಾ ಸ್ವಲ್ಪಮಟ್ಟಿಗೆ ಪ್ರತಿಪಕ್ಷಗಳ ಸ್ಥಾನ ತುಂಬಲು ಪ್ರಯತ್ನಿಸುತ್ತಿವೆ.

ಆದರೆ ಈ ಎಡಚಪಕ್ಷಗಳದು ವಿರೋಧ ಅತಿರೇಕಕ್ಕೇರಿದರೆ ಎರಡು ಉಪಾಯಗಳನ್ನು ಕೇಂದ್ರ ಕಂಡುಕೊಂಡಿದೆ.

ಒಂದು: ಕಮ್ಯೂನಿಸ್ಟರು ಎಲ್ಲೆಲ್ಲಾ ಇದ್ದಾರೋ (ರಷ್ಯಾ, ಚೀನಾ, ನೇಪಾಳ) ಮತ್ತಿತರ ಕಡೆಗಳಲ್ಲಿ ಅವರ ಪರವಾಗಿ ಒಂದೆರಡು ಅಣಿಮುತ್ತುಗಳನ್ನು ಉದುರಿಸಿದರೆ ಅವುಗಳನ್ನು ಹೆಕ್ಕಿಕೊಂಡು ಎಡಚರು ಆಟವಾಡುತ್ತಾ ಸುಮ್ಮನಿರುತ್ತಾರೆ. ಕೆಲವರಿಗೆ ಈ ಅಣಿಮುತ್ತುಗಳು ಸಾಲದು ಅಂತ ಗೊತ್ತಾದರೆ, ಮತ್ತು ವಿರೋಧ ಹೆಚ್ಚಾಗುತ್ತದೆ ಎಂದು ಗೊತ್ತಾದ ಎರಡನೆ ಉಪಾಯ: ತಕ್ಷಣ ಪೆಟ್ರೋಲ್ ಬೆಲೆಯನ್ನು 10-20 ಪೈಸೆ ಇಳಿಸಿ ಕೈತೊಳೆದುಕೊಳ್ಳುವುದು. 20 ಪೈಸೆ ಇಳಿಸಿದರೂ ಪೆಟ್ರೋಲ್ ಮಾರಾಟ ಕಂಪನಿಗಳು ಟ್ಯಾಕ್ಸ್-ಸುಡುಗಾಡು ಅಂತ ಅದರಲ್ಲೂ ಮುರಿದುಕೊಂಡು 10 ಪೈಸೆ ಮಾತ್ರ ಇಳಿಸುತ್ತವೆ.

ಅಲ್ಲಿಗೆ ಸರಕಾರಕ್ಕೆ ಪೆಟ್ರೋಲ್ ದರ ಏರಿಸಿದ ಖುಷಿ, ವಿರೋಧ ಪಕ್ಷಗಳಿಗೆ ತಮ್ಮ ಪ್ರತಿಭಟನೆ ಫಲ ನೀಡಿದ ಖುಷಿ!

Friday, June 09, 2006

ಯಕ್ಷಿಣಿಗಾರ ಲಾರ್ಜ್ ಬುಷ್ !

(ಬೊಗಳೂರು ಠಳಾಯಿಸುವ ಬ್ಯುರೋದಿಂದ)
ಬೊಗಳೂರು, ಜೂ.9- ಪತ್ರಿಕೆಯನ್ನು ಸುಟ್ಟು ಹಾಕಿದ ಕಾರಣ ದೇಶ ಒಂದು ದಿನದ ಮಟ್ಟಿಗೆ ಪರದೇಸಿಯಾಗಲು ಹೊರಟ ಅಸತ್ಯಾನ್ವೇಷಿಗೆ ಲಾರ್ಜ್ ಬುಷ್ ಕಾರ್ಯಕ್ರಮಕ್ಕೆ ತುರ್ತು ಆಹ್ವಾನ ದೊರೆಯಿತು.

ಅದು ಅಮೆರಿಕದ ಅಧ್ಯಕ್ಷರ ಶಾಲಾ ಸಂದರ್ಶನ ಕಾರ್ಯಕ್ರಮವಾಗಿದ್ದ ಹಿನ್ನೆಲೆಯಲ್ಲಿ ಕಾರ್ಯಮರೆತ ಪತ್ರಕರ್ತ ಅಸತ್ಯಾನ್ವೇಷಿಯ ಭೇಟಿಗೆ ಮಹತ್ವ ದೊರೆತಿತ್ತು. ಇದಲ್ಲದೆ, ಅಲ್ ಖೈದಾದ ಪ್ರಮುಖ ಉಗ್ರಗಾಮಿ ಅಲ್ ಜರ್ಖಾವಿ ಕೂಡ ಇರಾಕಿನಲ್ಲಿ ಅಮೆರಿಕದ ದಾಳಿಗೆ ಸಿಲುಕಿ ಹತನಾದ ಸುದ್ದಿಯೂ ಬಂದಿತ್ತು.

ಇರಾನ್ ಮೇಲೆ, ಇರಾಕ್ ಮೇಲೆ ದಾಳಿ, ಅಫಘಾನಿಸ್ತಾನದ ಮೇಲೆ ಯುದ್ಧದ ಕುರಿತಾಗಿ, ಅದರ ಸಂಚಿನ ಕುರಿತಾಗಿ ಅದು-ಇದು ಮಾತನಾಡಿದ ಲಾರ್ಜ್ ಬುಷ್, ಪ್ರಶ್ನೆ ಕೇಳುವಂತೆ ಮಕ್ಕಳಿಗೆ ಸೂಚಿಸಿದರು.

ಅಸತ್ಯಾನ್ವೇಷಿ ಕೈಯೆತ್ತಿದಾಗ, ಲಾರ್ಜ್ ಬುಷ್ ಗೊತ್ತಿದ್ದರೂ ಗೊತ್ತಿಲ್ಲದವರಂತೆ "ನಿಮ್ಮ ಹೆಸರೇನು?" ಕೇಳಿದರು.
"ಅಸತ್ಯಾನ್ವೇಷಿ"
"ಹೂಂ. ಏನಾಗಬೇಕಿತ್ತು?"
"ನನಗೆ ಕೇಳಲು ಮೂರು ಪ್ರಶ್ನೆಗಳಿವೆ"
"ಕೇಳಿ"

ಮೊದಲನೆಯದು: ವಿಶ್ವಸಂಸ್ಥೆಯ ಬೆಂಬಲವಿಲ್ಲದಿದ್ದಾಗ್ಯೂ ಅಮೆರಿಕವು ಇರಾಕ್ ಮೇಲೆ ಆಕ್ರಮಣ ಮಾಡಿದ್ದೇಕೆ?
ಎರಡನೆಯದು ಅಲ್ ಗೋರೆಗೆ ಅಧಿಕ ಮತಗಳು ಸಿಕ್ಕಿದ್ದರೂ ನೀವೇಕೆ ಅಧ್ಯಕ್ಷರಾದಿರಿ?
ಕೊನೆಯದು ಒಸಾಮಾ ಬಿನ್ ಲಾಡೆನ್ನಿಗೇನಾಯಿತು?

ಅಷ್ಟು ಹೊತ್ತಿಗೆ ಶಾಲೆಯ ವಿರಾಮದ ಗಂಟೆ ಬಾರಿಸಿತು. recess ಅವಧಿ ಮುಗಿದ ಬಳಿಕ ಮುಂದುವರಿಸೋಣ ಅಂತ ಲಾರ್ಜ್ ಬುಷ್ ಟಾಟಾ ಹೇಳಿದರು.

ವಿರಾಮದ ಅವಧಿಯ ಬಳಿಕ ನಡೆದ ಪ್ರಸಂಗವನ್ನು ನಮ್ಮ ಬೊಗಳೆ ಬ್ಯುರೋದ ವಿಶಿಷ್ಟ ಕ್ಯಾಮರಾ ಮಾತ್ರ ದಾಖಲಿಸಿಕೊಂಡಿತು. ಅದಕ್ಕೆ ಕಾರಣ ಈ ವರದಿಯ ಕೊನೆಯಲ್ಲಿ ತಿಳಿಯುತ್ತದೆ.

Recess ಬಳಿಕ ಮತ್ತೆ ಪ್ರಶ್ನೋತ್ತರ ಕಾರ್ಯಕ್ರಮ ಮುಂದುವರಿಯಿತು. ಲಾರ್ಜ್ ಹೇಳಿದರು, "ಓಕೆ, ನಾವೆಲ್ಲಿದ್ದೆವು?.... ಓ... ಸರಿ ಸರಿ, ಪ್ರಶ್ನೋತ್ತರ ಸಮಯವಲ್ವಾ? ಯಾರು ಪ್ರಶ್ನೆ ಕೇಳುವವರಿದ್ದೀರಿ?"

ಈ ಬಾರಿ ಶಾಲಾ ಬಾಲಕಿಯೊಬ್ಬಳು ಕೈಯೆತ್ತಿದಾಗ ಲಾರ್ಜ್ ಆಕೆಯ ಹೆಸರೇನೂಂತ ಕೇಳಿದರು.
"ಮೋನಿಕಾ ಲೆವಿನ್‌ಸ್ಕಿ"
ಒಂದು ಕ್ಷಣ ಬುಷ್ ಮುಖ ತನ್ನ ಹಿಂದಿನ ಅಧ್ಯಕ್ಷ ಕ್ಲಿಂಟನ್ ನೆನಪಾಗಿ ಕಳೆಗುಂದಿತು. ಸಾವರಿಸಿಕೊಂಡು,
"ನಿನ್ನ ಪ್ರಶ್ನೆ ಕೇಳು ಮೋನಿಕಾ?"
"ನಂಗೆ ಕೇಳಲು 5 ಪ್ರಶ್ನೆಗಳಿವೆ."
"ಕೇಳು"

ಮೊದಲನೆಯದಾಗಿ, ವಿಶ್ವಸಂಸ್ಥೆಯ ಬೆಂಬಲವಿಲ್ಲದಿದ್ದಾಗ್ಯೂ ಅಮೆರಿಕವು ಇರಾಕ್ ಮೇಲೆ ಆಕ್ರಮಣ ಮಾಡಿದ್ದೇಕೆ?
ಸೆಕೆಂಡ್- ಅಲ್ ಗೋರೆಗೆ ಅಧಿಕ ಮತಗಳು ಸಿಕ್ಕಿದ್ದರೂ ನೀವೇಕೆ ಅಧ್ಯಕ್ಷರಾದಿರಿ?
ಥರ್ಡ್- ಒಸಾಮಾ ಬಿನ್ ಲಾಡೆನ್ನಿಗೇನಾಯಿತು?
ನಾಲ್ಕನೆಯದು- ಶಾಲೆಯ ವಿರಾಮ ಗಂಟೆ 20 ನಿಮಿಷ ಮೊದಲೇ ಬಾರಿಸಿದ್ದೇಕೆ?
ಕೊನೆಯದು- ಅಸತ್ಯಾನ್ವೇಷಿ ಎಲ್ಲಿ?!!!

+++++++++++++++++
(ಯುಪಿಎ ಸರಕಾರವು ದೇಶ್ ಸೇ ಗರೀಬೋಂ ಕೋ ಹಠಾವೋ ಆಂದೋಲನ ನಡೆಸುತ್ತಿರುವ ಬಗ್ಗೆ ಮೊನ್ನೆ ಪ್ರಕಟವಾದ ವರದಿಯಿಂದ ಕಿಡಿಕಿಡಿಯಾದ ಯುಪಿಎ ಅಂಗಹೀನ ಪಕ್ಷಗಳ ಕಾರ್ಯಕರ್ತರು ಪತ್ರಿಕೆಯ ಪ್ರತಿಗಳನ್ನು ಸುಟ್ಟು ಹಾಕಿದ ಕಾರಣ ನಿನ್ನೆಯ ಸಂಚಿಕೆ ತಡವಾಗಿ ದಮ್ ಮಾರೋ ಕಟ್ಟೆಗೆ ಬಂತು. ಅದಕ್ಕಾಗಿ ವಿಷಾದಿಸುತ್ತೇವೆ. ಆದರೆ ಒಬ್ಬ ಓದುಗರ ಚಂದಾ ಹಣ ಯಾವುದೇ ಕಾರಣಕ್ಕೆ ಹಿಂತಿರುಗಿಸಲಾಗುವುದಿಲ್ಲ. ಅದು ನೀವೇ ಆಗಿರಲೂ ಬಹುದು!!!-ಸಂ)

Thursday, June 08, 2006

ಅಸತ್ಯಾನ್ವೇಷಿ ನಾಪತ್ತೆ!

ಬೊಗಳೂರು ಲೇಟ್ ಫ್ಲ್ಯಾಶ್ ನ್ಯೂಸ್
ಬೊಗಳೂರು, ಜೂ.8- ಸತ್ಯ ವಾಕ್ಯವೆ ನೆಚ್ಚಿ ನಡೆದರೆ ಮೆಚ್ಚನಾ ಪರಮಾತ್ಮನು ಎಂಬ ಪರಮಧ್ಯೇಯದೊಂದಿಗೆ ಅಸತ್ಯಾನ್ವೇಷಿ ಅಮೆರಿಕದಲ್ಲಿ ಬುಷ್ ಜತೆ ಮಾತನಾಡುತ್ತಿದ್ದಾಗ ಇದ್ದಕ್ಕಿದ್ದಂತೆ ನಾಪತ್ತೆಯಾಗಿಬಿಟ್ಟಿರುವುದರಿಂದ ಇಂದಿನ ಸಂಚಿಕೆ ಪ್ರಕಟವಾಗಿಲ್ಲ.

ಅಸತ್ಯಾನ್ವೇಷಿ ನಿಗೂಢ ನಾಪತ್ತೆ ಕುರಿತಾದ ಹಸಿ ಹಸಿ ಬಿಸಿ ಬಿಸಿ ಸುದ್ದಿಗಾಗಿ ಕಾಯಲಾಗುತ್ತಿದೆ. ನಾಳಿನ ನಿಮ್ಮ ಪ್ರತಿಗಳನ್ನು ಇಂದೇ ಕಾದಿರಿಸಿ.

ಇಂದಿನ ಸುದ್ದಿ- ನಾಳೆ ಆಗದು ರದ್ದಿ ಎಂಬ ಭರವಸೆಯೊಂದಿಗೆ
-ಬೊಗಳೂರು ಏಕವ್ಯಕ್ತಿ ಬ್ಯುರೋ

Wednesday, June 07, 2006

ಬಡವರ ನಿರ್ಮೂಲನೆಯೇ UPA ಗುರಿ: ನಿಧಾನಿ

(ಬೊಗಳೂರು ಜನಪರ ಬ್ಯುರೋದಿಂದ)
ಬೊಗಳೂರು, ಜೂ.7- ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ ಬಗ್ಗೆ ಕೇಂದ್ರದಲ್ಲಿರುವ Unprecedented Price Agenda ಸರಕಾರ ಸ್ಪಷ್ಟನೆ ನೀಡಿದ್ದು, ಕೃಷಿ ಆಧಾರಿತ ರಾಷ್ಟ್ರವಾದ ಭಾರತದಲ್ಲಿ ಕೃಷಿ ಸಂಪನ್ಮೂಲ ರಕ್ಷಣೆಗೆ ಇದು ಪೂರಕ ಎಂದು ಸ್ಪಷ್ಟಪಡಿಸಿದೆಯಲ್ಲದೆ ಬಡವರ ನಿರ್ಮೂಲನೆಯೇ ಸರಕಾರದ ಗುರಿ ಎಂದು (ಜನಸಾಮಾನ್ಯರನ್ನು ಕಾಲಿನಿಂದ) ಒತ್ತಿ ಒತ್ತಿ ಹೇಳಿದೆ.

ನಾವು ಅಧಿಕಾರಕ್ಕೆ ಬಂದ ಎರಡು ವರ್ಷದೊಳಗೆ ಪೆಟ್ರೋಲಿಯಂ ಉತ್ಪನ್ನದ ಬೆಲೆಯನ್ನು ದಾಖಲೆ 7ನೇ ಬಾರಿ ಏರಿಸಿದ್ದೇವೆ ಎಂದು ಕೊಚ್ಚಿಕೊಂಡ ನಿಧಾನಿ ಮನಮೋಹಕ್ ಅವರು, ಇದರಿಂದ ಸರಕು ಸಾಗಾಟ ಬೆಲೆ ಏರಿಕೆಯೊಂದಿಗೆ ತರಕಾರಿ ಬೆಲೆಯೂ ಏರುತ್ತದೆ. ಮತ್ತೆ ರಿಕ್ಷಾ, ಟ್ಯಾಕ್ಸಿ, ಬಸ್ ಪ್ರಯಾಣದರ ಹೆಚ್ಚಳ ಅನಿವಾರ್ಯ. ಒಟ್ಟಿನಲ್ಲಿ ಜನಸಾಮಾನ್ಯರು ಬದುಕಲು ಬೇಕಾದ ಜೀವನಾವಶ್ಯಕ ವಸ್ತುಗಳನ್ನು ಆಕಾಶದೆತ್ತರಕ್ಕೆ ಯಾರಿಗೂ ಸಿಗದಷ್ಟು ಹಾರಿಸುವ ಸಾಧನೆ ಮಾಡಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ.
ಇದರಿಂದ ಈ ದೇಶದಲ್ಲಿ ಬಡವರೇ ಇನ್ನಿಲ್ಲದಂತೆ ಮಾಡುವ ನಮ್ಮ (ತುಳಿಯುವ) ಕಾರ್ಯಾಚರಣೆಗೆ ಆನೆ ಬಲ ಬಂದಂತಾಗುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.

ಕೃಷಿ ಸಂಪನ್ಮೂಲ ಸುರಕ್ಷಿತ: ಪೆಟ್ರೋಲ್ ಬೆಲೆಯನ್ನು ಆಗಾಗ ಏರಿಸುತ್ತಲೇ ಇರುತ್ತೇವೆ, ತತ್ಪರಿಣಾಮವಾಗಿ ತರಕಾರಿ, ಹಣ್ಣು ಹಂಪಲುಗಳ ಬೆಲೆ ಗಗನಕ್ಕೇರುತ್ತದೆ. ಏರಿದ ಬೆಲೆಯಿಂದಾಗಿ ಅದನ್ನು ಯಾರೂ ಖರೀದಿಸಲು ಅಸಾಧ್ಯ. ಹೀಗಿರುವಾಗ ದೇಶದ ಬೆಳೆಗಳು ಸಮೃದ್ಧವಾಗಿ ಕೃಷಿಕರ ಬಳಿಯಲ್ಲೇ ಸುರಕ್ಷಿತವಾಗಿ ಉಳಿಯುತ್ತವೆ. ಈ ರೀತಿ ಬೆಲೆ ಕೈಗೆಟುಕದಷ್ಟು ಎತ್ತರಕ್ಕೇರಿದರೆ ಯಾವ ನನ್ಮಗ ತಾನೇ ತರಕಾರಿ ತಿನ್ನುವ ದುಸ್ಸಾಹಸಕ್ಕಿಳಿಯುತ್ತಾನೆ? ಇದರಿಂದ ಕೃಷಿಯ ರಕ್ಷಣೆಯಾದಂತಾಗುವುದಿಲ್ಲವೇ? ಎಂದು ಪೆಟ್ರೋಲಿಯಂ ಸಚಿವ ಮುರಳಿ (ಅಯ್ಯೋ) ದೇವ್ರೇ ಪ್ರಶ್ನಿಸಿದ್ದಾರೆ.

ನರಕ ಶಿಕ್ಷೆಗೆ "ಅನುಭವ" ಅಗತ್ಯ: ಬೆಲೆ ಹೆಚ್ಚಳದಿಂದಾಗಿ ಜನ ಜೀವನ ನರಕ ಸದೃಶವಾಗುತ್ತದೆ. ಜನರು ಎಷ್ಟು ಚೆನ್ನಾಗಿ ನರಕಸದೃಶ ಜೀವನ ಅನುಸರಿಸುತ್ತಾರೆ ಎಂಬುದನ್ನು ನೋಡಲು ನಮಗೆ ತುಂಬಾ ಆಸೆಯಾಗಿದೆ. ಜನರಿಗೂ ಭೂಮಿಯಲ್ಲಿದ್ದುಕೊಂಡೇ ನರಕದಲ್ಲಿ ಯಾವ ರೀತಿಯೆಲ್ಲಾ ಶಿಕ್ಷೆ ಎದುರಿಸಬಹುದು ಎಂಬುದರ ಅನುಭವ ದೊರೆಯುತ್ತದೆ. ಮುಂದೆ ನರಕಕ್ಕೆ ಹೋದಾಗ ಈ Experience ಅವರಿಗೆ ತುಂಬಾ ಪ್ರಯೋಜನಕ್ಕೆ ಬರುತ್ತದೆ. ಅಲ್ಲಿ ಕೂಡ ಅನುಭವವಿದ್ದವರಿಗೆ ಪ್ರಾಶಸ್ತ್ಯವಿರುವುದರಿಂದ ಭಾರತದಿಂದ ಬಂದವರಿಗೆ ಮನ್ನಣೆ ದೊರೆಯುತ್ತದೆ ಎಂದು ನಿಧಾನಿ ಕಾರ್ಯಾಲಯವು ಸ್ಪಷ್ಟನೆಯಲ್ಲಿ ತಿಳಿಸಿದೆ.

ಇದಲ್ಲದೆ, ಈ ಜನ್ಮದಲ್ಲಿ ಮಾಡಿದ ಪಾಪಕರ್ಮಗಳಿಗೆ ಇಲ್ಲೇ ಶಿಕ್ಷೆ ಅನುಭವಿಸಿದರೆ, ನರಕಕ್ಕೆ ಹೋದ ಮೇಲೆ ಕುದಿಯುವ ಎಣ್ಣೆಯಲ್ಲಿ ತೇಲಾಡುವ ಶಿಕ್ಷೆಯಿಂದ ಕಡಿತ ದೊರೆಯಬಹುದು ಎನ್ನುವುದು ನಿಧಾನಿ ಕಾರ್ಯಾಲಯದ ವಿಶ್ವಾಸ.

ಬೆಲೆಗಳ ರಾಕೆಟ್: ಅಮೆರಿಕ, ರಷ್ಯಾ ಮುಂತಾದ ರಾಷ್ಟ್ರಗಳು ಮಂಗಳ ಗ್ರಹ, ಚಂದ್ರ ಮುಂತಾದ ಗ್ರಹಗಳಿಗೆ ರಾಕೆಟ್ ಹಾರಿಬಿಡುತ್ತಾರೆ. ಈ ನಿಟ್ಟಿನಲ್ಲಿ ನಮ್ಮದು ಬೆಲೆಯನ್ನಾದರೂ ಬಾಹ್ಯಾಕಾಶಕ್ಕೆ ಹಾರಿಬಿಡುವ ಸಣ್ಣ ಪ್ರಯತ್ನವಷ್ಟೆ ಎಂದು ಪ್ರಧಾನಿ ಕಾರ್ಯಾಲಯದ ಪರವಾಗಿ ಪತ್ರಿಕಾ ಹೇಳಿಕೆ ಪ್ರಕಟಿಸಿರುವ ಸಾನಿಯಾ ಗಾಂಧಿ ಕಾರ್ಯ ಲಯ ತಿಳಿಸಿದೆ.

+++++++++++++

(ಕನ್ನಡದಲ್ಲಿ ಬ್ಲಾಗಿಸುವವರ ಬಗೆಗಿನ ಒಂದು ಲೇಖನ ಕನ್ನಡ ಸಾಹಿತ್ಯ ಡಾಟ್ ಕಾಂನಲ್ಲಿ ಇಲ್ಲಿ ಪ್ರಕಟವಾಗಿದೆ.)

Tuesday, June 06, 2006

ಪಟಾಕಿ ಸಿಡಿಸಿದ್ದಕ್ಕೆ ಪಾತಕಿ ಪಟ್ಟವೇ?!

(ಬೊಗಳೂರು ಪರದೇಸಿ ಬ್ಯುರೋದಿಂದ)

ಬೊಗಳೂರು, ಜೂ.6- ಭಾರತದಲ್ಲಿ ಸಣ್ಣ ಪುಟ್ಟ ಅಪರಾಧಗಳನ್ನು ಮಾಡುತ್ತಾ, ಒಂದೆರಡು ಇರುವೆ, ನಾಯಿಮರಿ, ಬೆಕ್ಕಿನ ಮರಿಗಳನ್ನಷ್ಟೇ ಕೊಂದಿದ್ದ ದಾವೂದ್ ಇಬ್ರಾಹಿಂನನ್ನು ಅಮೆರಿಕವು ಪಾತಕಿ ಎಂದು ಘೋಷಿಸಿರುವುದು ವಿಶೇಷವಾಗಿ ಪಾತಕಿಸ್ತಾನದ ಹುಬ್ಬೇರಿಸಿದೆ.

ಭಾರತದಲ್ಲಿ ಒಂದೆರಡು ನೊಣಗಳನ್ನು ಕೊಂದು, ಮುಖಕ್ಕೆ ಹಾಕುವ ಬಿಳಿ ಪುಡಿ (ಅದಕ್ಕೆ ಹೆರಾಯ್ನ್, ಚರಸ್ ಇತ್ಯಾದಿ ಹಣೆಪಟ್ಟಿ), ಒಂದೆರಡು ಆಟಿಕೆ ಎ.ಕೆ.-47 ಬಂದೂಕುಗಳು ಇತ್ಯಾದಿಗಳನ್ನು ಸಾಗಿಸುತ್ತಿದ್ದರೂ ಕಸ್ಟಮ್ಸ್ ಅಧಿಕಾರಿಗಳು ಅದನ್ನು ಕಂಡೂ ಕಾಣದಂತೆ ಮುಖ ತಿರುಗಿಸಿ, ಎಲ್ಲವೂ ರವಾನೆಯಾದ ಬಳಿಕ ಆತನನ್ನು "ಕಳ್ಳ ಸಾಗಾಟಗಾರ" ಅಂತ ಘೋಷಿಸಿ ದಾವೂದ್‌ಗೆ ಅನ್ಯಾಯ ಎಸಗಿದ್ದಾರೆ ಎನ್ನುವುದು ಪಾತಕಿಸ್ತಾನದ ವಾದ.

ಮುಂಬಯಿಯಲ್ಲಿ ಆತ ಸಣ್ಣಪುಟ್ಟ ನೆಲಗುಮ್ಮದಂತಹ ಬೆಳ್ಳುಳ್ಳಿ ಪಟಾಕಿ ಸಿಡಿಸಿ ದೀಪಾವಳಿ ಅಚರಿಸಿದ ಎಂದ ತಕ್ಷಣ ಭಾರತೀಯರು ಸರಣಿ ಬಾಂಬ್ ಸ್ಫೋಟ ಎಂದು ಕೂಗಾಡಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಆಗಾಗ್ಗೆ ಪಟಾಕಿ ಸಿಡಿಸುತ್ತಾ ವಿಶಿಷ್ಟವಾದ ಹೋಮ ಆಚರಿಸುತ್ತಿದ್ದ ಅಲ್ ಖೈದಾ ಸೌಮ್ಯಗಾಮಿಗಳ ಪಡೆಗೂ ಆತನ ಪರಮ ಬೆಂಬಲವಿದೆ ಎಂದೆಲ್ಲಾ ಅಪಪ್ರಚಾರ ಮಾಡಲಾಗುತ್ತಿದೆ. ಈ ಹೋಮವನ್ನೇ ಭಾರತವು ಮಾರಣ ಹೋಮ ಅಂತ ಹೆಸರಿಟ್ಟು ಬೊಬ್ಬಿಡುತ್ತಿದೆ ಎಂದು ದೂರಿರುವ ಪಾಕಿಸ್ತಾನದ ಪರಮಪಾತಕಿ ಸಾಮಾನ್ಯ (ಜನರಲ್) ವ್ಯಕ್ತಿಯು ಈಗ ಅಮೆರಿಕದ ವಿರುದ್ಧ ಜೋರಾಗಿ ಮನಬಂದಂತೆ ಬೊಬ್ಬಿರಿಯುವುದಾಗಿ ಘರ್ಜಿಸಿದ್ದಾನೆ. ಇಲ್ಲದಿದ್ದಲ್ಲಿ ಡಸ್ಟ್ ಬಿನ್ ಲಾಡೆನ್ ತನ್ನನ್ನು ಸುಮ್ಮನೆ ಬಿಡಲಾರನೆಂಬುದು ಆತನ ಆತಂಕ.

ದಾವೂದ್ ಪಾತಕಿಸ್ತಾನದಲ್ಲಿ ಸಣ್ಣ ಸಣ್ಣ ಕೆಲವು ಗುಡಿಸಲುಗಳಲ್ಲಿ ವಾಸಿಸುತ್ತಿದ್ದರೂ, ಆತ ಪಾಕಿಸ್ತಾನದಲ್ಲಿ ತಲೆಮರೆಸಿಕೊಂಡಿದ್ದಾನೆ, ಪಾಕಿಸ್ತಾನವು ಅವನಿಗೆ ರಾಜಾಶ್ರಯ ನೀಡಿದೆ ಎಂದು ಭಾರತ-ಅಮೆರಿಕಗಳು ಗುಲ್ಲೆಬ್ಬಿಸುತ್ತಿವೆ ಎಂದು ದೂರಿರುವ "ಪರವಾಗಿಲ್ಲ ರಫ್ ಮೀಸೆ" ಅವರು, ಇಷ್ಟು ಬೇಗನೆ ದಾವೂದ್‌ನನ್ನು ಪರಮ ಪಾತಕಿ ಎಂದು ಹೆಸರಿರಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ.

ಪಾತಕಿ ಹಣೆಪಟ್ಟಿ ಅಂಟಿಸುವ ಮೊದಲು ನಮ್ಮಲ್ಲಿ ಒಂದು ಮಾತು ಕೇಳಬಹುದಿತ್ತು. ಇದರಿಂದ ಅಮೆರಿಕ ಮತ್ತು ಭಾರತದ ವಿರುದ್ಧ ದಾವೂದ್‌ ತನ್ನೆಲ್ಲಾ ಘನಕಾರ್ಯಗಳನ್ನು ಪೂರ್ಣವಾಗಿ ಸಿದ್ಧ ಮಾಡಿಟ್ಟುಕೊಳ್ಳಲು ಸಹಾಯವಾಗುತ್ತಿತ್ತಲ್ಲ ಎಂಬುದು "ಪರವಾಗಿಲ್ಲ ರಫ್ ಮೀಸೆ"ಯ ಆಕ್ಷೇಪ. ಅಲ್ಲದೆ, ದಾವೂದ್ ಕೂಡ ಒಂದಿಷ್ಟು ಪೂರ್ವ ಸಿದ್ಧತೆ ಮಾಡಿಕೊಳ್ಳಬಹುದಿತ್ತಲ್ಲ ಅನ್ನೋದು ಆಕ್ಷೇಪ.

ಈ ಬಗ್ಗೆ ತೀವ್ರ ಖಂಡನೆಯ ಅಂಗವಾಗಿ ಎ.ಕೆ.-47 ಬಂದೂಕುಗಳುಳ್ಳ "ಬೊಕೆ"ಯನ್ನು ಪ್ರೀತಿಯಿಂದ ಅಮೆರಿಕ ಅಧ್ಯಕ್ಷೀಯ ಕಚೇರಿಗೆ ರವಾನಿಸಲಾಗುತ್ತದೆ ಎಂದು ಅಸತ್ಯಾನ್ವೇಷಿಗೆ ನೀಡಿದ ಶೇಷ ಸಂದರ್ಶನದಲ್ಲಿ "ರಫ್ ಮೀಸೆ" ತಿಳಿಸಿದೆ.

ಸಂದೇಹ: ಈ ಮಧ್ಯೆ, ದಾವೂದ್‌ನನ್ನು ಅಮೆರಿಕವು ಪಾತಕಿ ಅಂತ ಕರೆದಿದ್ದೋ ಅಥವಾ ಒಂದಕ್ಷರ ಅಳಿಸಿ ಪಾಕಿ ಅಂತ ಕರೆದಿದ್ದೋ ಎಂದು ತಿಳಿಯಲು ಸತ್ಯ ಶೋಧನಾ ತಂಡವೊಂದನ್ನು ಅಮೆರಿಕದ ವರ್ಲ್ಡ್ ಟ್ರೇಡ್ ಸೆಂಟರ್‌ಗೆ ಕಳುಹಿಸುವುದಾಗಿ ಪಾತಕಿಸ್ತಾನ ಹೇಳಿದೆ.

--------------------

ಸೂ: ಇಂದಿನ ದಿನಾಂಕ 6-6-6 ಎಂದು ಆಗಿರುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಅಸತ್ಯಾನ್ವೇಷಿ, ಇದು ನಮ್ಮನ್ನು ಗೊಂದಲಕ್ಕೆ ಸಿಲುಕಿಸುವ ಯತ್ನ ಎಂದು ಯಾರದೋ ವಿರುದ್ಧ ಕಿಡಿ ಕಾರಿದ್ದಾರೆ.

Monday, June 05, 2006

ಹೋಂ ವರ್ಕ್ ಮಾಡದಿದ್ರೆ ಬ್ಲೂ ಫಿಲ್ಮ್

ಭಾರತದಲ್ಲೂ ಜಾರಿಗೆ ಜಾತ್ಯಾಧಾರಿತ ರಾಜಕಾರಣಿಗಳ ನಿರ್ಧಾರ
(ಬೊಗಳೂರು ನೆಟ್ಗಳ್ಳರ ಬ್ಯುರೋದಿಂದ)
ಬೊಗಳೂರು, ಜೂ.5- ಹೋಮ್‌ವರ್ಕ್ ಮಾಡದಿದ್ದರೆ ಬ್ಲೂ ಫಿಲಂ ತೋರಿಸುವ ಹೊಸ  ಸಂಗತಿ ಬಗ್ಗೆ ತೀವ್ರ ಸಂತಸ ವ್ಯಕ್ತ ಪಡಿಸಿರುವ ಯುವ ವಿದ್ಯಾರ್ಥಿ ಸಮುದಾಯ, ಈ ಜನ್ಮದಲ್ಲಿ ಇನ್ನೆಂದಿಗೂ ಅಪ್ಪಿತಪ್ಪಿಯೂ ಹೋಮ್ ವರ್ಕ್ ಮಾಡುವುದಿಲ್ಲ ಎಂದು ಶಪಥ ಮಾಡಿದೆ.

ಇದುವರೆಗೆ ಹೋಮ್ ವರ್ಕ್ ಮಾಡದಿದ್ದರೆ ಶಿಕ್ಷಕರ ಬೆತ್ತದ ರುಚಿ ಸವಿಯುತ್ತಿದ್ದ ಈ ವಿದ್ಯಾರ್ಥಿ ಬಳಗವು, ಈಗ ತಿಂದದ್ದನ್ನೇ ತಿಂದು ಬೇಜಾರಾಗಿರುವ ಕಾರಣ, ಹೊಸ 'ರುಚಿ'ಯ ಪ್ರಯೋಗದಿಂದ ಆನಂದತುಂದಿಲವಾಗಿದೆ.

ಈ ಮಧ್ಯೆ, ಸದಾ ಕಾಲ ಹೋಮ್ ವರ್ಕ್ ತಪ್ಪದೆ ಮಾಡಿ ತಂದು ಮಾಸ್ತರರಿಂದ ಪ್ರಶಂಸೆ ಗಿಟ್ಟಿಸುತ್ತಿದ್ದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೂ ಇತ್ತಿತ್ತಲಾಗಿ ಹೋಮ್ ವರ್ಕ್ ಮಾಡುವುದು ಬೇಜಾರು ಕೆಲಸ ಎಂದನ್ನಿಸುತ್ತಿರುವುದಾಗಿ ಅಸತ್ಯಾನ್ವೇಷಿ ವರದಿ ಮಾಡಿದ್ದಾರೆ. ಪ್ರತಿಭಾವಂತರು ಕೂಡ ಹೊಸ ರುಚಿಯತ್ತ ಆಕರ್ಷಿತರಾಗುತ್ತಿದ್ದಾರೆ ಎನ್ನಲಾಗುತ್ತಿದೆ.

ತನ್ಮಧ್ಯೆ, ಈ ಹೊಸ ಶಿಕ್ಷಣ ನೀತಿಯನ್ನು ಭಾರತದಲ್ಲೂ ಜಾರಿಗೆ ತರಲು ಹಿಂದುಳಿದ ಸಂಪನ್ಮೂಲ ಸಚಿವ ದುರ್ಜನ್ ಸಿಂಗ್ ನೇತೃತ್ವದಲ್ಲಿ ಜಾತಿ ರಾಜಕಾರಣದ ಪ್ರತಿಪಾದಕರು ಮತ್ತು ಜಾತ್ಯಾಧಾರಿತ ದೇಶ ವಿಭಾಜಕ ರಾಜಕಾರಣಿಗಳು ತೀವ್ರವಾಗಿ ಆಲೋಚಿಸುತ್ತಿದ್ದಾರೆ. ಪ್ರತಿಭಾವಂತರು ಕೂಡ ಹೋಮ್ ವರ್ಕ್ ಮಾಡುವುದನ್ನು ನಿಲ್ಲಿಸುವುದರಿಂದ ದೇಶದಲ್ಲಿ ಪ್ರತಿಭಾವಂತರ ಕೊರತೆ ಕಾಣತೊಡಗುತ್ತದೆ. ಆ ಮೇಲೆ ಮೀಸಲಾತಿ ಜಾರಿಗೊಳಿಸುವುದು ಸುಲಭವಾದೀತು ಎಂಬುದು ಅವರ ಲೆಕ್ಕಾಚಾರವಾಗಿದೆ ಎಂದು ತಿಳಿದುಬಂದಿದೆ.

Saturday, June 03, 2006

ಕಾನೂನು ಉಲ್ಲಂಘಿಸಲು ಕಾನೂನು ಪದವಿ

(ಬೊಗಳೂರು ಸಂದರ್ಶನ ಬ್ಯುರೋದಿಂದ)
ಬೊಗಳೂರು, ಜೂ.3- ಕಾನೂನನ್ನು ಉಲ್ಲಂಘಿಸಿಯೇ ಜನ್ಮ ತಾಳಿದ್ದ ಮತ್ತು ಕಾನೂನು ಉಲ್ಲಂಘನೆಗಾಗಿಯೇ ಈ ಲೋಕದಲ್ಲಿ ಅವತಾರವೆತ್ತಿದ ಬಿಹಾರದ ಸಂಸದ ಶಹಾಬುದ್ದೀನ್ ಕಾನೂನು ಪದವಿ "ಗಿಟ್ಟಿಸಿ"ಕೊಂಡ ಹಿನ್ನೆಲೆಯಲ್ಲಿ ಆತನನ್ನು ಬೊಗಳೆ ರಗಳೆಗಾಗಿ ಮಾತನಾಡಿಸಲಾಯಿತು.

ಬನ್ನಿ ಬನ್ನಿ, ಬೊಗಳೆ ಪಂಡಿತರೆ, ನನ್ನಿಂದೇನಾದರೂ ಕಾನೂನು ಉಲ್ಲಂಘನೆಯಾಗಬೇಕೆ ಎಂದು ಆತ್ಮೀಯತೆಯಿಂದಲೇ ಕೆಕ್ಕರಿಸಿ ನೋಡಿದರು ಶಹಾಬುದ್ದೀನ್.

ಕತ್ತಿ, ಮಚ್ಚು, ಪಿಸ್ತೂಲು ಸಂಸ್ಕೃತಿಯಲ್ಲಿ ಇಷ್ಟೊಂದು ಬ್ಯುಸಿಯಾಗಿರುವಾಗಲೂ ನೀವು ಹುಟ್ಟಿನಿಂದ ವಿರೋಧಿಸುತ್ತಿರುವ ಕಾನೂನಿನಲ್ಲೇ ಡಿಗ್ರಿ ತೆಗೆದುಕೊಂಡಿರಲ್ಲಾ, ನಾಚಿಕೆ ಎನಿಸುವುದಿಲ್ಲವೇ? ಎಂಬ ಮೊದಲ ಪ್ರಶ್ನೆಗೆ ತತ್ತರಿಸುತ್ತಾ ಶಹಾಬುದ್ದೀನ್, "ನಮ್ಮದೇನಿಲ್ಲಾ... ಎಲ್ಲಾ ನನ್ನ ಪರವಾಗಿ ಪರೀಕ್ಷೆ ಎದುರಿಸಿದ ಮಹಮ್ಮದ್ ಫಿರೋಜ್‌ನ ದಯೆ-ಕೃಪೆ" ಎಂದರು.

ನಾನ್ಯಾಕೆ ಪರೀಕ್ಷೆ ಬರೆಯುವ ತ್ರಾಸ ತೆಗೆದುಕೊಳ್ಳಲಿ, ಪರೀಕ್ಷೆಯೇ ನನ್ನನ್ನು ಬರೆಯುತ್ತದೆ ಎಂದು ಸ್ಪಷ್ಟಪಡಿಸಿದ ಶಹಾಬುದ್ದೀನ್ ಮಹಾಶಯ, ಕಾನೂನು ಪರೀಕ್ಷೆಯನ್ನೇ ಆಯ್ದುಕೊಂಡಿದ್ದೇಕೆ ಎಂಬ ಪ್ರಶ್ನೆಗೆ ಭಯಾನಕವಾಗಿ ಮೂಗಿನ ಹೊಳ್ಳೆಗಳನ್ನು ಅರಳಿಸುತ್ತಾ, "ಮತ್ತೆ... ಕಾನೂನು ಉಲ್ಲಂಘಿಸುವುದು ಹೇಗೆಂಬುದು ನಮ್ಮಂತಹ ಯುವ ನಾಯಕರಿಗೆ ಗೊತ್ತಾಗುವುದು ಬೇಡ್ವೆ? ಸರಕಾರ ಅಥವಾ ಪೊಲೀಸರು ಚಾಪೆ ಕೆಳಗೆ ತೂರಿದರೆ ನಾವು ರಂಗೋಲಿ ಕೆಳಗೆ ತೂರುವುದು ಬೇಡವೆ? ಕಾನೂನಿನ ಹುಳುಕುಗಳನ್ನು ಅರಿಯುವುದಕ್ಕಾಗಿಯೇ ನಾನದನ್ನು ಆರಿಸಿಕೊಂಡೆ" ಎಂದು ತತ್ತರಿಸಿದರು.

ನಿಮಗೂ ಯಾವುದಾದರೂ ಡಿಗ್ರೀ ಬೇಕೆ, ನಮ್ಮ ಬಿಹಾರದಲ್ಲಿ ಏನು ಬೇಕಾದರೂ ಸಿಗುತ್ತೆ ಎಂದು ಸೇರಿಸಲು ಶಹಾಬುದ್ದೀನ್ ಮರೆಯಲಿಲ್ಲ.

ಬಿಹಾರದಲ್ಲಿ ಸಾಕಷ್ಟು ನಮ್ಮವರೇ ಆದ ಬಾಹು-ಬಲಿಗಳಿದ್ದಾರೆ, ಏನು ಬೇಕಾದರೂ ಮಾಡಿಸಿಕೊಡುವಂತೆ ಲಾಲು ಅವರ ಆರ್‌ಜೆಡಿಯ 15 ವರ್ಷಗಳ ಆಡಳಿತ ನಮಗೆಲ್ಲಾ ಉತ್ತಮ ಅವಕಾಶ ಒದಗಿಸಿಕೊಟ್ಟಿದೆ. ಈಗ ನೋಡಿ ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿ ಬಂದಿದ್ದಾರೆ. ನಮ್ಮಂಥವರು ಬದುಕುವುದಾದರೂ ಹೇಗೆ ಅಂತ ಬೊಗಳೆ ಬ್ಯುರೋದ ಸಿಬ್ಬಂದಿಯನ್ನೇ ಇಂಟರ್‌ವ್ಯೂ ಮಾಡಲಾರಂಭಿಸಿದರು.

ಹೊಸ ಬ್ಯುಸಿನೆಸ್: ಬಿಹಾರದಲ್ಲಿ 500 ರೂ. ಕೊಟ್ಟರೆ ಒಂದು ಡಿಗ್ರಿ ಸಿಗುತ್ತದೆ ಎಂದು ತಿಳಿದುಕೊಂಡ ಬೊಗಳೆ ಬ್ಯುರೋ ಸಿಬ್ಬಂದಿ, ಅಲ್ಲಿಂದ ಸಾಕಷ್ಟು ಡಿಗ್ರಿಗಳನ್ನು ತಂದು ನಮ್ಮೂರಲ್ಲಿ ಒಂದಿಷ್ಟು ಹೆಚ್ಚು ಕ್ರಯಕ್ಕೆ ಮಾರಾಟ ಮಾಡುವ ದಂಧೆ ಆರಂಭಿಸುವ ಯೋಚನೆಯಲ್ಲಿದ್ದಾರೆ. ಅಂತೆಯೇ ಡಿಗ್ರಿ ಮಾರಾಟ ದಂಧೆಯಿಂದಲೇ ಕೋಟ್ಯಧಿಪತಿಗಳಾದ ಬಿಹಾರಿ ಚಾಣಕ್ಯರನ್ನು ಸಂದರ್ಶಿಸಲಾಗಿದ್ದು, ಅವರ ಜೀವನ ಚರಿತ್ರೆಯನ್ನೂ ಬರೆದು ಇದು ಪರಮ ಪಾವನ ಜೀವನ ಸೂತ್ರವೆಂಬಂತೆ ಊರಿನ ನಿರುದ್ಯೋಗಿಗಳಿಗೆ ಮಾರುವ ಯೋಜನೆಯೂ ಇದೆ.

Friday, June 02, 2006

ಬಿಟ್ಟ ಕಾಯಿಯೂ, ಬಿಟ್ಟ ಬೆಳ್ಳುಳ್ಳಿಯೂ!

(ಬೊಗಳೂರು ಅಡುಗೆ ಬ್ಯುರೋದಿಂದ)
ಬೊಗಳೂರು, ಜೂ.2- ಹೆಂಡ್ತಿ ತವರು ಮನೆಗೆ ಹೋಗಿರುವ ಪುರುಷರ ಸಂಘದ ಒತ್ತಾಸೆ ಮೇರೆಗೆ ಅಡುಗೆ ಅಂಕಣವೊಂದನ್ನು ಆರಂಭಿಸಲು ಹೊರಟಾಗ ಎದುರಾದ ತೊಂದರೆ ತಾಪತ್ರಯಗಳು ಮೂರಾರು.

ದಟ್ಸ್ ಕನ್ನಡದಲ್ಲಿ ಪ್ರಕಟವಾಗಿರುವ ಸಬ್ಬಸಿಗೆ ಸೊಪ್ಪಿನ ವಿಚಿತ್ರಾನ್ನದ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಅದನ್ನು ಮಾಡಲು ಹೋದ ಬೊಗಳೆ ಪಂಡಿತರಿಗೆ ನೂರಾರು ಸಂಕಟಗಳು ಎದುರಾದ ಬಗೆಯಿದು.

ಮೊತ್ತ ಮೊದಲು, ಈ ಅಡುಗೆ ಮಾಡಬೇಕಿದ್ದರೆ ಹೆಂಡ್ತಿ ತವರು ಮನೆಗೆ ಹೋಗಿರಲಿ ಮತ್ತು ಬ್ರಹ್ಮಚಾರಿಯಾಗಿದ್ದರೆ, ಒಬ್ಬಂಟಿ ಜೀವನ ನಡೆಸುತ್ತಿದ್ದರೆ ಇನ್ನೂ ಒಳಿತು ಎಂಬ ಸಲಹೆಯಿಂದಲೇ ಅಡುಗೆ ಪಾಕ ಶುರು.

ಅದೇ ಪ್ರಕಾರ ಹೆಂಡತಿಯನ್ನು ತವರು ಮನೆಗೆ ತಳ್ಳಿದ ಬೊಗಳೆ ಪಂಡಿತರು, ದಿನಾ ಮಾಡಿ ಮಾಡಿ ತಿಂದು ಸುಸ್ತಾದ ಚಿತ್ರಾನ್ನವನ್ನೇ ವಿಚಿತ್ರಾನ್ನವಾಗಿಸಿ ಹೊಸರುಚಿ ಉಣಬಡಿಸುವವರನ್ನು ನೆನಪಿಸಿಕೊಂಡು ಮುಂದುವರಿದಾಗ ಮೊದಲು ಎದುರಾದದ್ದು ಬೆಳ್ಳುಳ್ಳಿ ಎಂಬ ಕಂಟೆಂಟ್ ಸಂಗ್ರಹಿಸುವ ಸಮಸ್ಯೆ.

ಬೇಕಾಗುವ ಸಾಮಾನುಗಳು ಎಂಬ ಪಟ್ಟಿಯಲ್ಲಿ ದಾಖಲಿಸಿದಂತೆ "1 ಬೆಳ್ಳುಳ್ಳಿ (ನಿಮಗೆ ಬಿಟ್ಟದ್ದು)" ಎಂಬುದು ಗೊಂದಲಕ್ಕೆ ಕಾರಣ. ಇದುವರೆಗೆ ಕೇಳಿರುವ ಪ್ರಕಾರ ಹಲಸಿನ ಮರದಲ್ಲಿ ಕಾಯಿ ಬಿಡುತ್ತದೆ, ಸೌತೆ ಬಳ್ಳಿಯಲ್ಲಿ ಸೌತೆಕಾಯಿ ಬಿಡುತ್ತದೆ, ತೆಂಗಿನ ಮರದಲ್ಲಿ ಕಾಯಿ ಬಿಡುತ್ತದೆ. ಆದರೆ ನಮ್ಮಲ್ಲಿ ಬಿಟ್ಟ ಬೆಳ್ಳುಳ್ಳಿಯೇ ಆಗಬೇಕೆಂಬ ಪ್ರಸ್ತಾಪ ಮಾತ್ರ ತಲೆ ಕೆರೆದುಕೊಳ್ಳುವಂತೆ ಮಾಡಿತು.

ಸರಿ ನಿಮಗೆ ಬಿಟ್ಟ ಬೆಳ್ಳುಳ್ಳಿಯನ್ನೇ ಬಿಟ್ಬಿಡೋಣ ಎಂದುಕೊಂಡು ಮುಂದುವರಿದರೆ, ಅನ್ನವನ್ನು ಉದುರಿಸಬೇಕು ಎಂದು ಸೂಚಿಸಲಾಗಿದೆ! ಆದರೆ ಅಕ್ಕಿಯನ್ನು ನೀರಿಗೆ ಹಾಕಿ ಬೇಯಿಸಬೇಕು ಎಂಬ ಸೂಚನೆಯೂ ಇರಲಿಲ್ಲ. ಅಕ್ಕಿ ನೀರಿಗೆ ಹಾಕಿದ ತಕ್ಷಣ ಅದು ಉದುರುವುದಾದರೂ ಹೇಗೆ?
 
ಸ್ವರ್ಗಕ್ಕೆ ಕಿಚ್ಚು: ಅದೆಲ್ಲಾ ಇರಲಿ, ಮಾನವರು ಬೆಳಗ್ಗೆ ತಲೆಗೂ ರಾತ್ರಿಯಾಗುತ್ತಿರುವಂತೆಯೇ ಹೊಟ್ಟೆಗೂ ಎಣ್ಣೆ ಹಾಕುವುದನ್ನು ಕೇಳಿರುವ ಬೊಗಳೆ ಪಂಡಿತರಿಗೆ ಬಾಣಲೆಗೆ ಎಣ್ಣೆ ಹಾಕಬೇಕು ಎಂಬ ನಿರ್ದೇಶನ ಮಾತ್ರ ಹೊಚ್ಚ ಹೊಸತು. ಇದು ಹೊಸ ರುಚಿಯೇ ಇರಬೇಕು ಎಂದು ಎಲ್ಲವನ್ನೂ ಬೆರೆಸಿ ತಿನ್ನಲೆಂದು ಕುಳಿತಾಗ ರುಚಿ ನೋಡಿದ ತಕ್ಷಣ ಎದ್ದೋಡುವಷ್ಟು ರೋಷ ಬಂದಿತ್ತು. ಹಸಿ ಹಸಿ ವಾಸನೆ, ಬೇಯದ ಅಕ್ಕಿ, ಸೊಪ್ಪು. ಇದರ ಹಿಂದಿನ ಅಸತ್ಯವೇನು ಅಂತ ಶೋಧಿಸಿದಾಗ ಗೊತ್ತಾದದ್ದು, ಎಲ್ಲೂ ಕೂಡ ಅಡುಗೆ ಮಾಡುವಾಗ ಒಲೆ ಹಚ್ಚಿ ಅಥವಾ ಉರಿಯುತ್ತಿರುವ ಒಲೆಯ ಮೇಲಿಡಿ ಅಂತ ಸೂಚನೆಯನ್ನೇ ನೀಡಲಾಗಿಲ್ಲ!

ಈ ನಳ ಪಾಕದ ಸೂಚನೆಯ ಕೊನೆಯಲ್ಲಿ ಸ್ವರ್ಗಕ್ಕೆ ಕಿಚ್ಚು ಹಚ್ಚಲು ಸೂಚಿಸಲಾಗಿದೆ, ಆದರೆ ಒಲೆಗೆ ಕಿಚ್ಚು ಹಚ್ಚಲು ಹೇಳಿಕೊಟ್ಟಿರಲೇ ಇಲ್ಲ! ಈ ಬಗ್ಗೆ ಮಾಹಿತಿ ನಿರ್ದೇಶನಾಲಯಕ್ಕೆ ದೂರು ನೀಡಲಾಗಿದೆ.

Thursday, June 01, 2006

ಕನಿಷ್ಠ ಉಡುಗೆ: ಟಿವಿ ಬಳಿಕ ರೇಡಿಯೋ ಸರದಿ!

ಬೊಗಳೂರು, ಜೂ.1- Too sexyಯಾಗಿ ಉಡುಗೆ ತೊಟ್ಟಿದ್ದಕ್ಕಾಗಿ ಕೆಲಸದಿಂದ ವಜಾಗೊಂಡ ರೇಡಿಯೋ ಉದ್ಘೋಷಕಿ(ಜಾಕಿ)ಯೊಬ್ಬಳು ಮಾಲೀಕರ ವಿರುದ್ಧ ಕೋರ್ಟ್‌ ಮೆಟ್ಟಿಲೇರಿರುವುದು ಹಲವು ಹುಬ್ಬುಗಳನ್ನು ಮೇಲಕ್ಕೆ ಏರಿಸಿ, ಕೆಲವರ ಕಣ್ಣ ಮೇಲೆ ಕಪ್ಪು ಗೆರೆಯೇ ಇಲ್ಲದಂತಾಗಿದೆ.

ವರದಿ ಪ್ರಕಟವಾದ ತಕ್ಷಣ ಲಂಡನ್‌ಗೆ ಧಾವಿಸಿದ ಬೊಗಳೆ ಬ್ಯುರೋ ವರದಿಗಾರರು, ಈ ಸುದ್ದಿಯನ್ನು ಬಟಾಬಯಲಾಗಿಸಿದ್ದು ಖಂಡಿತವಾಗಿಯೂ ತಾವಲ್ಲ ಎಂದು ಉದ್ಘೋಷಕಿಗೆ ತಿಳಿ ಹೇಳುವಲ್ಲಿ ಹೆಣಗಾಡಿ, ಕೊನೆಗೂ ಆಕೆಯ ಬಿಚ್ರೋಶದಿಂದ ಪಾರಾಗುವಲ್ಲಿ ಯಶಸ್ವಿಯಾಗಿದ್ದಾರೆ.

ನಾನು ಬಟ್ಟೆ ತೊಟ್ಟರೂ ತೊಡದಿದ್ದರೂ ರೇಡಿಯೋದಲ್ಲಿ ಅದು ಶ್ರೋತೃಗಳಿಗೇನೂ ಕಾಣಿಸುವುದಿಲ್ಲವಲ್ಲ ಎಂದು ಸ್ಪಷ್ಟನೆ ನೀಡಿದ ಆಕೆ, ಕೆಲವು ಟೀವಿ ಚಾನೆಲ್‌ಗಳಲ್ಲಿ ಬಟ್ಟೆಯೇ ಇರೋದಿಲ್ಲ, ಕೇವಲ ದೇಹ ಮಾತ್ರ ಕಾಣಿಸುತ್ತದೆ, ಇದರ ಮೇಲೆ ಕ್ರಮ ಕೈಗೊಳ್ಳುವುದಿಲ್ಲವೇಕೆ ಎಂದು ಪ್ರಶ್ನಿಸಿದ್ದಾಳೆ.

ಕನಿಷ್ಠ ಉಡುಗೆ ತೊಟ್ಟರೆ ಧ್ವನಿ ಮತ್ತಷ್ಟು ಮಾದಕವಾಗುತ್ತದೆ, ರೇಡಿಯೋ ವೀಕ್ಷಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಬಹುದಿತ್ತಲ್ಲ ಎಂದು ಆಕೆ ಮಾಲೀಕರಿಗೆ ಸಲಹೆಯನ್ನೂ ನೀಡಿದ್ದಾಳೆ.

ಈ ಮಧ್ಯೆ ಆಕೆಗೆ ಮತ್ತೂ ಸಂದೇಹ. ತನ್ನನ್ನು ಕೆಲಸದಿಂದ ತೆಗೆದು ಹಾಕಿದ್ದು ತೊಟ್ಟ ಬಟ್ಟೆ ಕಡಿಮೆಯಾಗಿದ್ದಕ್ಕೋ ಅಥವಾ ಕಡಿಮೆ ತೊಟ್ಟದ್ದು ಸಾಲದ್ದಕ್ಕೋ ಎಂಬುದರ ಬಗ್ಗೆ ಆಕೆಯಿನ್ನೂ ಸಂಶೋಧನೆ ನಡೆಸುತ್ತಿದ್ದಾಳೆ.

ಈ ಮಧ್ಯೆ, ಕ್ರಮವನ್ನು ಸಮರ್ಥಿಸಿಕೊಂಡಿರುವ ರೇಡಿಯೋ ಚಾನೆಲ್ ಮಾಲೀಕರು, ಆಕೆಯ ಮಾತಿನ ಮಾದಕತೆ ಹೆಚ್ಚಾಗಿ ವೀಕ್ಷಕರ ಅಲ್ಲಲ್ಲ ಶ್ರೋತೃಗಳ ಸಂಖ್ಯೆ ವಿಪರೀತ ಆಗಿಬಿಟ್ಟರೆ ಜನಜಂಗುಳಿ ಹೆಚ್ಚಾಗಿ ಏರ್‌ಟೈಮ್ ಟ್ರಾಫಿಕ್ ಜಾಮ್ ಆಗಬಹುದಿತ್ತು ಎಂದವರು ಭೀತಿ ವ್ಯಕ್ತಪಡಿಸಿದ್ದಾರೆ. ಆದ್ರೂ ತಾವು ಹೇಳುವ ಮೊದಲೇ ಆಕೆ ಬಟ್ಟೆಯ ಗಾತ್ರ ಕುಗ್ಗಿಸಿಕೊಂಡಳಲ್ಲ ಎಂಬುದು ಅವರಿಗೆ ಇನ್ನೂ ಇರುವ ಅಸಮಾಧಾನ.

ಅವರು ಹೇಳಿದ್ದು:"ಅಲ್ ಸ್ವಾಮೀ, ಮೈಕ್ರೋಸ್ಕೋಪ್ ಹಿಡಿದು ನೋಡಿದ್ರೂ ಆಕೆಯ ಮೈಮೇಲೆ ಚೂರೂ ಬಟ್ಟೆ ಇರಲಿಲ್ಲಾಂತೀನಿ.... ನಮ್ಮ ರೇಡಿಯೋ ಪ್ರಸಾರ ಯಂತ್ರಗಳೆಲ್ಲಾ ಸ್ಥಗಿತವಾಗಿರುವ ಹಿನ್ನೆಲೆ ಏನು ಅಂತ ಹುಡುಕಾಟ ಮಾಡಿದಾಗಲೇ ನಮಗೆ ಆಕೆ ಕನಿಷ್ಠಯುಡುಗೆ ತೊಟ್ಟಿರುವ ವಿಷಯ ಗೊತ್ತಾಗಿದ್ದು!"

ಎಂಜಿನ್ ಇಲ್ಲದ ರೈಲು: ಬ್ರೇಕಿಂಗ್ ನ್ಯೂಸ್ ಅಲ್ಲವೆಂದ ಬೊ.ರ.

[ಬೊಗಳೂರು ಪಟ್ಟೆ-ರಹಿತ ರೈಲು ಬ್ಯುರೋ] ಬೊಗಳೂರು: ಆಫ್‌ಲೈನ್ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯೊಂದು ಆನ್‌ಲೈನ್ ಸಂಪಾದಕರ ಕಣ್ಣು ಕುಕ್ಕಿದ್ದು, ಎಂಜಿನ್ ಇಲ್ಲದೆ...