ಬೊಗಳೆ ರಗಳೆ

header ads

ಕಾನೂನು ಉಲ್ಲಂಘಿಸಲು ಕಾನೂನು ಪದವಿ

(ಬೊಗಳೂರು ಸಂದರ್ಶನ ಬ್ಯುರೋದಿಂದ)
ಬೊಗಳೂರು, ಜೂ.3- ಕಾನೂನನ್ನು ಉಲ್ಲಂಘಿಸಿಯೇ ಜನ್ಮ ತಾಳಿದ್ದ ಮತ್ತು ಕಾನೂನು ಉಲ್ಲಂಘನೆಗಾಗಿಯೇ ಈ ಲೋಕದಲ್ಲಿ ಅವತಾರವೆತ್ತಿದ ಬಿಹಾರದ ಸಂಸದ ಶಹಾಬುದ್ದೀನ್ ಕಾನೂನು ಪದವಿ "ಗಿಟ್ಟಿಸಿ"ಕೊಂಡ ಹಿನ್ನೆಲೆಯಲ್ಲಿ ಆತನನ್ನು ಬೊಗಳೆ ರಗಳೆಗಾಗಿ ಮಾತನಾಡಿಸಲಾಯಿತು.

ಬನ್ನಿ ಬನ್ನಿ, ಬೊಗಳೆ ಪಂಡಿತರೆ, ನನ್ನಿಂದೇನಾದರೂ ಕಾನೂನು ಉಲ್ಲಂಘನೆಯಾಗಬೇಕೆ ಎಂದು ಆತ್ಮೀಯತೆಯಿಂದಲೇ ಕೆಕ್ಕರಿಸಿ ನೋಡಿದರು ಶಹಾಬುದ್ದೀನ್.

ಕತ್ತಿ, ಮಚ್ಚು, ಪಿಸ್ತೂಲು ಸಂಸ್ಕೃತಿಯಲ್ಲಿ ಇಷ್ಟೊಂದು ಬ್ಯುಸಿಯಾಗಿರುವಾಗಲೂ ನೀವು ಹುಟ್ಟಿನಿಂದ ವಿರೋಧಿಸುತ್ತಿರುವ ಕಾನೂನಿನಲ್ಲೇ ಡಿಗ್ರಿ ತೆಗೆದುಕೊಂಡಿರಲ್ಲಾ, ನಾಚಿಕೆ ಎನಿಸುವುದಿಲ್ಲವೇ? ಎಂಬ ಮೊದಲ ಪ್ರಶ್ನೆಗೆ ತತ್ತರಿಸುತ್ತಾ ಶಹಾಬುದ್ದೀನ್, "ನಮ್ಮದೇನಿಲ್ಲಾ... ಎಲ್ಲಾ ನನ್ನ ಪರವಾಗಿ ಪರೀಕ್ಷೆ ಎದುರಿಸಿದ ಮಹಮ್ಮದ್ ಫಿರೋಜ್‌ನ ದಯೆ-ಕೃಪೆ" ಎಂದರು.

ನಾನ್ಯಾಕೆ ಪರೀಕ್ಷೆ ಬರೆಯುವ ತ್ರಾಸ ತೆಗೆದುಕೊಳ್ಳಲಿ, ಪರೀಕ್ಷೆಯೇ ನನ್ನನ್ನು ಬರೆಯುತ್ತದೆ ಎಂದು ಸ್ಪಷ್ಟಪಡಿಸಿದ ಶಹಾಬುದ್ದೀನ್ ಮಹಾಶಯ, ಕಾನೂನು ಪರೀಕ್ಷೆಯನ್ನೇ ಆಯ್ದುಕೊಂಡಿದ್ದೇಕೆ ಎಂಬ ಪ್ರಶ್ನೆಗೆ ಭಯಾನಕವಾಗಿ ಮೂಗಿನ ಹೊಳ್ಳೆಗಳನ್ನು ಅರಳಿಸುತ್ತಾ, "ಮತ್ತೆ... ಕಾನೂನು ಉಲ್ಲಂಘಿಸುವುದು ಹೇಗೆಂಬುದು ನಮ್ಮಂತಹ ಯುವ ನಾಯಕರಿಗೆ ಗೊತ್ತಾಗುವುದು ಬೇಡ್ವೆ? ಸರಕಾರ ಅಥವಾ ಪೊಲೀಸರು ಚಾಪೆ ಕೆಳಗೆ ತೂರಿದರೆ ನಾವು ರಂಗೋಲಿ ಕೆಳಗೆ ತೂರುವುದು ಬೇಡವೆ? ಕಾನೂನಿನ ಹುಳುಕುಗಳನ್ನು ಅರಿಯುವುದಕ್ಕಾಗಿಯೇ ನಾನದನ್ನು ಆರಿಸಿಕೊಂಡೆ" ಎಂದು ತತ್ತರಿಸಿದರು.

ನಿಮಗೂ ಯಾವುದಾದರೂ ಡಿಗ್ರೀ ಬೇಕೆ, ನಮ್ಮ ಬಿಹಾರದಲ್ಲಿ ಏನು ಬೇಕಾದರೂ ಸಿಗುತ್ತೆ ಎಂದು ಸೇರಿಸಲು ಶಹಾಬುದ್ದೀನ್ ಮರೆಯಲಿಲ್ಲ.

ಬಿಹಾರದಲ್ಲಿ ಸಾಕಷ್ಟು ನಮ್ಮವರೇ ಆದ ಬಾಹು-ಬಲಿಗಳಿದ್ದಾರೆ, ಏನು ಬೇಕಾದರೂ ಮಾಡಿಸಿಕೊಡುವಂತೆ ಲಾಲು ಅವರ ಆರ್‌ಜೆಡಿಯ 15 ವರ್ಷಗಳ ಆಡಳಿತ ನಮಗೆಲ್ಲಾ ಉತ್ತಮ ಅವಕಾಶ ಒದಗಿಸಿಕೊಟ್ಟಿದೆ. ಈಗ ನೋಡಿ ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿ ಬಂದಿದ್ದಾರೆ. ನಮ್ಮಂಥವರು ಬದುಕುವುದಾದರೂ ಹೇಗೆ ಅಂತ ಬೊಗಳೆ ಬ್ಯುರೋದ ಸಿಬ್ಬಂದಿಯನ್ನೇ ಇಂಟರ್‌ವ್ಯೂ ಮಾಡಲಾರಂಭಿಸಿದರು.

ಹೊಸ ಬ್ಯುಸಿನೆಸ್: ಬಿಹಾರದಲ್ಲಿ 500 ರೂ. ಕೊಟ್ಟರೆ ಒಂದು ಡಿಗ್ರಿ ಸಿಗುತ್ತದೆ ಎಂದು ತಿಳಿದುಕೊಂಡ ಬೊಗಳೆ ಬ್ಯುರೋ ಸಿಬ್ಬಂದಿ, ಅಲ್ಲಿಂದ ಸಾಕಷ್ಟು ಡಿಗ್ರಿಗಳನ್ನು ತಂದು ನಮ್ಮೂರಲ್ಲಿ ಒಂದಿಷ್ಟು ಹೆಚ್ಚು ಕ್ರಯಕ್ಕೆ ಮಾರಾಟ ಮಾಡುವ ದಂಧೆ ಆರಂಭಿಸುವ ಯೋಚನೆಯಲ್ಲಿದ್ದಾರೆ. ಅಂತೆಯೇ ಡಿಗ್ರಿ ಮಾರಾಟ ದಂಧೆಯಿಂದಲೇ ಕೋಟ್ಯಧಿಪತಿಗಳಾದ ಬಿಹಾರಿ ಚಾಣಕ್ಯರನ್ನು ಸಂದರ್ಶಿಸಲಾಗಿದ್ದು, ಅವರ ಜೀವನ ಚರಿತ್ರೆಯನ್ನೂ ಬರೆದು ಇದು ಪರಮ ಪಾವನ ಜೀವನ ಸೂತ್ರವೆಂಬಂತೆ ಊರಿನ ನಿರುದ್ಯೋಗಿಗಳಿಗೆ ಮಾರುವ ಯೋಜನೆಯೂ ಇದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

12 ಕಾಮೆಂಟ್‌ಗಳು

  1. Soniಯಾಜಿ ಅವರೆ, ಕನ್ನಡ ಬ್ಲಾಗ್ ಜಗತ್ತಿಗೆ ಸ್ವಾಗತ.
    ಇದು ಬ್ಲಾಗ್ ಅಲ್ಲ.... ಬೊಗಳೆ!

    ಬ್ಲಾಗಿಗೆ ಕನ್ನಡದಲ್ಲಿ ನಾವು ಕರೆಯೋದೇ ಹಾಗೆ!

    ಪ್ರತ್ಯುತ್ತರಅಳಿಸಿ
  2. Soni ಅವರೆ,

    ನೀವು ಈ ಲಿಂಕ್ ತೆಗೆದು ನೋಡಿದ್ರೆ ನಿಮಗೆಲ್ಲಾ ಡಿಟೈಲ್ಸ್ ಸಿಗಬಹುದು.

    ಹೆಚ್ಚಿನ ಕನ್ನಡ ಫಾಂಟ್ ಹೆಲ್ಪಿಗೆ ಇಲ್ಲಿ ಕ್ಲಿಕ್ ಮಾಡಿ: http://sampada.net/fonthelp

    ನೀವು ಕನ್ನಡ ಕಲಿತ(!) ಬಳಿಕ ನನಗೆ ತಿಳಿಸಿ!

    ಪ್ರತ್ಯುತ್ತರಅಳಿಸಿ
  3. ಮಾನ್ಯ ಸಂಪಾದಕರೇ,
    ಡಿಗ್ರಿ ಗಳು ಎಲ್ಲಿ ಸಿಗುತ್ತವೆ, ಅದಕ್ಕೆ "ಎಷ್ಟಾಗುತ್ತದೆ" ಎಂಬ ಮುಖ್ಯ ವಿವರವನ್ನೇ ನಿಮ್ಮ ಸಂದರ್ಶನದಲ್ಲಿ ಪ್ರಸ್ತಾಪಿಸಿಲ್ಲ. ದಯವಿಟ್ಟು ವಿವರವನ್ನು ಗೌಪ್ಯವಾಗಿ ನಿಮ್ಮ ಪತ್ರಿಕೆಯಲ್ಲೇ ಪ್ರಕಟಿಸಿಬಿಡಿ. ಇದರಿಂದ ನಮ್ಮಂಥ ಡಿಗ್ರಿ ಹೀನರಿಗೆ ಉಪಯೋಗವಾದೀತು!
    -ವಿಶ್ವನಾಥ

    ಪ್ರತ್ಯುತ್ತರಅಳಿಸಿ
  4. ೫೦೦ ರೂಪಾಯಿಗಳಿಗೆ ಒಂದು ಡಿಗ್ರಿಯೇ? ಸ್ವಲ್ಪ ಜಾಸ್ತಿಯಾಯಿತು. ಕಡಿಮೆ ಮಾಡಿಕೊಳ್ಳಲು ಆಗೋಲ್ವಾ? ಪಿಎಚ್‍ಡಿ ಡಿಗ್ರಿಗೂ ಇಷ್ಟೇ ದರಾನಾ? ಮೆಡಿಕಲ್, ಇಂಜಿನಿಯರಿಂಗ್, ಇನ್ನಿತರ ಎಲ್ಲ ಡಿಗ್ರಿಗಳನ್ನೂ ನಮ್ಮೂರಿನಲ್ಲಿ ಮಾರಲು ನಾನು ಹಂಚಿಕೆದಾರನಾಗಬೇಕೆಂದಿರುವೆ. ನಿಮ್ಮನ್ನೇ ಸಂಪರ್ಕಿಸಬೇಕೋ ಅಥವಾ ಇಲ್ಲಿ ತರಕಾರಿ ಮಾರುವ ಬಿಹಾರೀ ಪಂಡಿತನನ್ನು ಸಂಪರ್ಕಿಸಬೇಕೋ?

    ಈಗ ವ್ಯವಹಾರದ ವಿಷಯ. ನಮ್ಮೂರಲ್ಲಿ ಉಷ್ಣತೆ ಮಿತಿಮೀರುತ್ತಿದೆ. ೨೮ ಡಿಗ್ರಿ ಇದ್ದರೆ ಸುಖದ ಜೀವನವಂತೆ. ಇಲ್ಲಿ ೩೫-೩೬ ಡಿಗ್ರಿಗಳಿರುತ್ತದೆ. ನಾನು ನಿಮಗೆ ಒಂದು ಡಿಗ್ರಿ ಕೊಟ್ಟರೆ ನೀವು ನನಗೆ ಎಷ್ಟು ಕೊಡ್ತೀರ. ನಂತರ ನೀವು ಎಷ್ಟಕ್ಕೆ ಬೇಕಾದರೂ ಮಾರಿಕೊಳ್ಳಿ ಪರವಾಗಿಲ್ಲ.

    ಪ್ರತ್ಯುತ್ತರಅಳಿಸಿ
  5. ಸಂಪಾದಕರು ಅಂದ್ರೆ ಏನ್ರೀ ಅರ್ಥ? ಡಿಗ್ರಿಯನ್ನು ಬಿಕರಿಗಿಟ್ಟು ಸಂಪಾದನೆ ಮಾಡುತ್ತಿರುವೆನೆಂದೇ?

    ಇರಲಿ, ಡಿಗ್ರಿ ಬೇಕೆ? ಶಹಾಬುದ್ದೀನ್ ಮತ್ತು ಲಾಲುಗೆ ಬೆಣ್ಣೆ ಸವರಿದ ತಕ್ಷಣ ಅಲ್ಲಿಂದ ಬೊಗಳೆ ಬ್ಯುರೋಗೆ ಕಳುಹಿಸುತ್ತಾರೆ, ಅದಕ್ಕೆ ನಾವು ಮತ್ತಷ್ಟು ಸರ್ವಿಸ್ ಟ್ಯಾಕ್ಸ್, ಸೇವಾ ತೆರಿಗೆ, ಆಕ್ಟ್ರಾಯ್ ಚಾರ್ಜ್, ಸೇವಾ ಶುಲ್ಕ, ಆ ಫೀಸು, ಈ ಫೀಸು... ಪೀಸ್ ಪೀಸ್.... ಎಲ್ಲಾ ಸೇರಿಸಿ ದರ ನಿಗದಿ ಮಾಡುತ್ತೇವೆ. ಆದರೊಂದು ವಿಷಯ. ಇಲ್ಲಿ ಮೀಸಲಾತಿ ಇರುವುದಿಲ್ಲ. ಲಕ್ಷ ಲಕ್ಷ ನೀಡುವವರತ್ತ ಮಾತ್ರವೇ ಲಕ್ಷ್ಯ!

    ಪ್ರತ್ಯುತ್ತರಅಳಿಸಿ
  6. ಅಯ್ಯಯ್ಯಪ್ಪಾ ಮಾವಿನಯನಸ ಅವರೆ,

    ವಿಶ್ವನಾಥ್ ನಮ್ಮನ್ನು ಸೊಂಪಾದ ಕರು ಎಂದು ಕರೆದರೆ ನೀವು ಭಯಂಕರ ಡಿಗ್ರಿ ಬಗ್ಗೆ ಮಾತಾಡುತ್ತಿರುವಿರಲ್ಲ?
    ಮತ್ತೆ.... ನೀವು ಕೊಟ್ಟ ಡಿಗ್ರಿಯನ್ನು ಎಸಿ ಫ್ರಿಜ್ ನಲ್ಲಿ ಕಾಪಿಡಲಾಗುವುದು.

    ಇಲ್ಲಿ ಡಿಗ್ರಿ ವಿನಿಮಯ ಇಲ್ಲ, ಬಿಕರಿ ಮಾತ್ರ. ಪಿಎಚ್ ಡಿಗಾದ್ರೆ ಕಡಿಮೆ, ಮೆಡಿಕಲ್ ಗೆ ಇನ್ನೂ ಕಡಿಮೆ, ಎಂಜಿನಿಯರಿಂಗ್ ಗೆ ಮತ್ತಷ್ಟು ಕಮ್ಮಿ. ಈ ಕಮ್ಮಿ ಕಮ್ಮಿ ಆಗೋದು ಏನಂದ್ರೆ ನಾಣ್ಯಗಳು, ಅದರ ಅನುಸಾರ ನೋಟುಗಳು ಸಮಾನುಪಾತದಲ್ಲಿ ಏರುತ್ತಾ ಹೋಗುತ್ತದೆ ಎಂಬುದು ನೆನಪಿರಲಿ.

    ಪ್ರತ್ಯುತ್ತರಅಳಿಸಿ
  7. ನೋಟುಗಳನ್ನು ಎಷ್ಟು ಬೇಕಾದ್ರೂ ಕಳುಹಿಸಬಹುದು. ಅದನ್ನು ಮುದ್ರಿಸಲು ನಮ್ಮ ಬುಡನ್ ಸಾಬಿ ಹತ್ತಿರವೇ ಇದ್ದಾನೆ. ನನ್ನ ಹತ್ತಿರವೇ ಮೊದಲು ಕೆಲಸಕ್ಕಿದ್ದ. ಒಳ್ಳೆಯ ಕಸುಬುದಾರೆ. ವಿದೇಶೀ ಸರ್ಟಿಫಿಕೇಟ್ ಬೇಕಿದ್ರೆ ನನಗೆ ತಿಳಿಸಿ. ಅವನಲ್ಲಿ ಹೊಸದಾದ ಒಂದು ಯಂತ್ರ ಬಂದಿದೆ.

    ನೀವು ನಾಣ್ಯವನ್ನು ನಗಣ್ಯ ಮಾಡ್ತಿರೋದು ಒಳ್ಳೆಯ ಸುದ್ದಿ. ಯಾಕೆಂದರೆ ನಾಣ್ಯಗಳನ್ನು ಮುದ್ರಿಸಲು ಸ್ವಲ್ಪ ಕಷ್ಟ. ಅದರ ಬಗ್ಗೆಯೂ ಈಗ ಸಂಶೋಧನೆ ನಡೆಸುತ್ತಿರುವೆ.

    ಪ್ರತ್ಯುತ್ತರಅಳಿಸಿ
  8. ನೀವು ನೋಟು ಮುದ್ರಿಸುವ ಯಂತ್ರ ಕಳುಹಿಸಿಕೊಟ್ರೆ ನಿಮಗೆ ಒಂದು ಪುಟುಗೋಸಿ ಡಿಗ್ರಿ ಫ್ರೀ....!

    ನೋಟು ಮುದ್ರಣ ಯಂತ್ರ ಕೊಡದಿದ್ರೆ ನಾಣ್ಯಗಳ ಗಂಟು ಗಂಟೇ ಬೇಕು. ಇದು ಕಡ್ಡಾಯ.

    ಪ್ರತ್ಯುತ್ತರಅಳಿಸಿ
  9. ಅಸತ್ಯಾನ್ವೇಷಿಗಳೆ,
    ನಿಮ್ಮ ಬೊಗಳೆಗೆ ಮೊದಲ ಭೇಟಿ ಇದು..ನೀವು 'License to ಬೊಗಳೆ' ತರ ರೀ.
    ನಿಮ್ಮ ಬೊಗಳೆ ರಗಳೆ ಸ್ವಾರಸ್ಯಕರವಾಗಿವೆ.

    ಅಂದಾಗೆ ಮಾವಿನಯನಸರು ತರ ನಾನು ಡಿಗ್ರಿ ಮಾರುವ ಡೀಲರ್ ತಗೋಬೇಕೂಂತ ಇದ್ದೀನಿ.ನನ್ನದು overseas ಮಾರುಕಟ್ಟೆ.ಎಷ್ಟು ಖರ್ಚಾಗುತ್ತೆ ಅಂತಾ ತಿಳಿಸಿ.

    ಪ್ರತ್ಯುತ್ತರಅಳಿಸಿ
  10. ಶಿವ್ ಅವರೆ,
    ಬೊಗಳೆ ತಾಣಕ್ಕೆ ಭೇಟಿ ನೀಡಿದ್ದಕ್ಕೆ ವಂದನೆಗಳು, ಸ್ವಾಗತ.

    ಆದ್ರೆ ನಮ್ ರಗಳೆ ಸ್ವಾರಸ್ಯಕರವಾಗಿದೆ ಅಂತ ಹೇಳಿದ್ದೀರಿ. ಕ್ಷಮಿಸಿ... ಮುಂದೆ ಹಾಗಾಗದಂತೆ ಎಚ್ಚರ ವಹಿಸುತ್ತೇವೆ !

    ಓವರ್ ಸೀಸ್ ಅಂದರೆ earಗೆ ಸೀಸವೇ?
    ಸಪ್ತಸಾಗರ ದಾಟಿದ್ರೆ ಒಂದು ರೂ. ಜಾಸ್ತಿಯಾಗುತ್ತೆ. ಕೇವಲ ಒಂದೇ ಸಾಗರ ದಾಟಿದ್ರೆ 10 ರೂ. ಮಾತ್ರ ಹೆಚ್ಚು!

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D