Monday, July 31, 2006

ಇದೋ ಬಂದಿದೆ ಹೊಸತು- ಬಿಟ್ಟಿ ಟೆಕ್ನಾಲಜಿ!

(ಬೊಗಳೂರು ಉದ್ಯೋಗ ಬದಲು ಬ್ಯುರೋದಿಂದ)

ಬೊಗಳೂರು, ಜು.31- ದೇಶದಲ್ಲಿ ಐಟಿ, ಎನ್‌ಟಿ (ಎಂಪ್ಟಿ ಅಲ್ಲ-ನ್ಯಾನೋ ಟೆಕ್ನಾಲಜಿ), ಬಿಟಿ (ಬಯೋ ಟೆಕ್ನಾಲಜಿ) ಮುಂತಾದವು ತೀವ್ರಗತಿಯಿಂದ ಬೆಳೆಯುತ್ತಾ ಬಂದಿರುವಂತೆಯೇ ಹೊಸದಾಗಿ 'ಬಿಟ್ಟಿ ಟೆಕ್ನಾಲಜಿ' ಉದ್ಯಮವೊಂದು ಬೇರೆಲ್ಲರನ್ನೂ ಹಿಂದಿಕ್ಕಿ ಧಾವಿಸತೊಡಗಿದೆ. ಆದರೆ ಬಿಟಿ ಟೆಕ್ನಾಲಜಿ ಅಂತ ಕೆಲವರು ತಪ್ಪು ತಿಳಿದು ಬೇಸ್ತು ಬಿದ್ದ ಪ್ರಸಂಗವೂ ಅಲ್ಲಲ್ಲಿ ನಡೆದಿದೆ.

ಈ ಹೊಸ ತಂತ್ರಜ್ಞಾನಕ್ಕೆ ವೈದ್ಯೋ ನಾರಾಯಣೋ ಹರಿಃ ಖ್ಯಾತಿಯ ನರಾರಿ (ನರಿ ಅಲ್ಲ, ನರ+ಅರಿ=ನರ ವೈರಿ)ಗಳೂ ಸಾಕಷ್ಟು ಸಂಖ್ಯೆಯಲ್ಲಿ ಅರ್ಜಿ ಗುಜರಾಯಿಸುತ್ತಿದ್ದಾರೆ.

ಓದುಗರು ಕೂಡ ಈ ಹೊಸ ಬಿಟ್ಟಿ ಉದ್ಯಮದಲ್ಲಿ ಹಣ ಹೂಡುವ ಮೂಲಕ ಭರ್ಜರಿ ಗಿಟ್ಟಿ-ಸಿಕೊಳ್ಳಬಹುದೆಂದು ಬೊಗಳೆ ರಗಳೆ ಬ್ಯುರೋ ಅಬ್ಬರದ ಅಪ-ಪ್ರಚಾರ ಮಾಡಲಾರಂಭಿಸಿದೆ.

ಹೆಚ್ಚಿನ ವಿವರಗಳು ನಮ್ಮ ಪ್ರತಿಸ್ಪರ್ಧಿ ಜಾಲವಾಗಿರುವ ಸಿಎನ್ಎನ್-ಐಬಿಎನ್ ಎಂಬ ತಾಣದ ಪುಟದಲ್ಲಿದೆ.ಆದರೆ ಈ ಪ್ರತಿಸ್ಪರ್ಧಿ ನೆಟ್-ಪತ್ರಿಕೆಯು ಎಲ್ಲವನ್ನೂ ಅರ್ಧಂಬರ್ಧ ಮಾಹಿತಿ ನೀಡಿ ಓದುಗರನ್ನು ಗೊಂದಲಕ್ಕೀಡುಮಾಡುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿ ದೊರೆಯದ ಅ-ಸತ್ಯಗಳು ಅವರಿಗೆ ದೊರಕುವಂತಾಗಲಿ ಎಂಬ ಉದ್ದೇಶದಿಂದ ಈ ಕಿರಿಕಿರು ಮಾಹಿತಿ.
ಅರ್ಹತೆ

ಈ ಬಿಟ್ಟಿ ಉದ್ಯಮಕ್ಕೆ ಬೇಕಾದ ಅರ್ಹತೆ ಎಂದರೆ ನಿಮ್ಮ ಅಂಗಾಂಗಗಳು ನೆಟ್ಟಗಿರಬಾರದು, ಸೊಟ್ಟಗಿರಬೇಕು. ಈ ಅರ್ಹತೆ ಯಾರಿಗಿಲ್ಲವೋ, ಅವರಿಗೆ ಅನುಕೂಲವಾಗಿಸಲು ಸಾಕಷ್ಟು ಕೇಂದ್ರಗಳು ದೇಶಾದ್ಯಂತ ಅಣಬೆಯಂತೆ ತಲೆಎತ್ತುತ್ತಿವೆ.
ಎಷ್ಟು ಖರ್ಚಾಗುತ್ತದೆ?

ಒಂದು ಬೆರಳು ಕತ್ತರಿಸಲು 500ರಿಂದ 1000 ರೂ. ವಿಧಿಸಲಾಗುತ್ತದೆ. ಒಂದು ಕಾಲು ಅಥವಾ ಕೈ ಕತ್ತರಿಸಬೇಕಿದ್ದರೆ 5 ಸಾವಿರದಿಂದ 10 ಸಾವಿರದವರೆಗಿನ ಅತ್ಯಾಧುನಿಕ ಕಟ್-ಕೇಂದ್ರಗಳೂ ಇವೆ. ಈ ಕಟ್ ಕೇಂದ್ರಗಳು ಕೈ-ಕಾಲುಗಳನ್ನು ಮಾತ್ರವೇ ಕಟ್ ಮಾಡದೆ, ಜೇಬು ಕೂಡ ಸರಿಯಾದ ರೀತಿಯಲ್ಲೇ ಕಟ್ ಮಾಡುತ್ತವೆ ಎಂಬುದನ್ನು ಬೊ.ರ. ಬ್ಯುರೋ ಕಂಡುಕೊಂಡಿದೆ.
ಉಚಿತ.... ಉಚಿತ....

ಆಮೇಲೆ.... ಇಲ್ಲಿ ನಾಲಿಗೆ ಕಟ್ ಉಚಿತ ಎಂಬ ಜಾಹೀರಾತು ಕೂಡ ಇದೆ. ಆದರೆ ಅದಕ್ಕೆ ಒಂದು ಸಣ್ಣ (ಕಟ್ ಮಾಡಿದ ಕಾಲ್ಬೆರಳಿನ ಮೂಲಕ !) ಹೆಜ್ಜೆಯನ್ನು ನೀವು ಮುಂದಿಡಬೇಕು. "ಈ ಬಗ್ಗೆ ನಾವು ಪೊಲೀಸರಿಗೆ ಹೇಳಿಬಿಡುತ್ತೇವೆ" ಅಂತ ಒಂದೇ ವಾಕ್ಯ ಹೇಳಿದರಾಯಿತು, ನಿಮ್ಮ ನಾಲಿಗೆ ಕಟ್ ಉಚಿತ!
0% Installment Scheme!

ಬಿಟ್ಟಿ ಜಾಹೀರಾತು ಪ್ರಕಾರ, ನೀವು ಉಚಿತವಾಗಿಯೇ ಕೈ-ಕಾಲು ಕಳೆದುಕೊಳ್ಳಬಹುದು. ಇದಕ್ಕೆ 0% installment ಸೌಲಭ್ಯವೂ ಇದೆ. ಆದರೆ ಈ installment ಮಾತ್ರ life-long ಆಗಿರುತ್ತದೆ. ನೀವು ಮಾಡಬೇಕಾದುದಿಷ್ಟೆ. "ನಿಮ್ಮ ದಂಧೆಯ ಬಗ್ಗೆ ಎಲ್ಲವನ್ನೂ ಬಟಾಬಯಲು ಮಾಡಿ, ಕ್ರಮ ಕೈಗೊಳ್ಳುತ್ತೇವೆ" ಎಂಬ ಅಣಿಮುತ್ತು ಉದುರಿಸಿದರಾಯಿತು.

ತಕ್ಷಣವೇ ನಿಮ್ಮ ಅದುರುತ್ತಿರುವ ಕೈ ಅಥವಾ ಕಾಲು ಉದುರಿರುತ್ತದೆ. ಕಣ್ಣು ಮುಚ್ಚಿ ತೆರೆಯುವುದರೊಳಗೆ ನೀವು ಬೀದಿಗೆ ಬಿದ್ದಿರುತ್ತೀರಿ. ಅಂದರೆ ಬೀದಿಯ ಬದಿಯಲ್ಲೇ ನಿಮಗೊಂದು ಆಸನ ನೀಡಿ ಅದರ ಮೇಲೆ ತಂದು ಕುಳ್ಳಿರಿಸಲಾಗುತ್ತದೆ. ಪ್ರತಿದಿನ ಅಥವಾ ಪ್ರತಿ ವಾರ, ತಿಂಗಳು ಅಂತ ನೀವು ಅವರಿಗೆ installment ನೀಡಿದರಾಯಿತು.
ಮನೆ... ಅಲ್ಲಲ್ಲ... ಬೀದಿ ಬಾಗಿಲಿಗೇ ಸೇವೆ!

ಮತ್ತೆ, installment ನೀವೇ ಹೋಗಿ ಕಟ್ಟಬೇಕೆಂದಿಲ್ಲ. ಅವರೇ ನಿಮ್ಮ ಬಳಿಗೆ ಬರುತ್ತಾರೆ. installment ನೀಡದಿದ್ದರೆ ಮತ್ತೊಂದು ಕಾಲೋ, ಕೈಯೋ ಕತ್ತರಿಸಲು ಬಿಟ್ಟಿ-ಮಾಫಿಯಾ ತಂಡದವರು ಬರುತ್ತಾರೆ. "ಕಳೆದುಕೊಳ್ಳುವ ಅಂಗಗಳ ಸಂಖ್ಯೆ ಹೆಚ್ಚಿದಂತೆ ಸಂಪಾದನೆಯೂ ಹೆಚ್ಚಾಗುತ್ತದೆ" ಎಂಬ ಬಿಟ್ಟಿ ಟೆಕ್ನಾಲಜಿ ಸೂತ್ರವನ್ನು ಅವರು ಪಾಲಿಸುತ್ತಾರೆ.
ನ್ಯೂಟನ್‌ಗೇ ಸವಾಲು

ನ್ಯೂಟನ್ನನ Thery of Gravity ಯಿಂದ ಪ್ರೇರಣೆ ಪಡೆದು ಇವರು Theory of earn-ity ರೂಪಿಸಿದ್ದಾರೆ. ಅದರ ಪ್ರಕಾರ, Every human body makes the earning which is inversely proportional to the number of organs and directly proportional to the organs which are in deficit.
ಮನವರಿಕೆ

ಬೊಗಳೆ ರಗಳೆ ಬ್ಯುರೋ ಮುಚ್ಚಿ ಮುಂಬಯಿಗೆ ಹೋಗಬೇಕು ಅಂತ ಮೊನ್ನೆ ಇಲ್ಲಿ ಯಾಕೆ ಹೇಳಿದ್ದೇವೆ ಎಂಬುದನ್ನು ಓದುಗರಿಗೆ ಮನದಟ್ಟು ಮಾಡಿಸಲೆಂದೇ ಪ್ರತಿಸ್ಪರ್ಧಿ ಪತ್ರಿಕೆ ಸಿಎನ್ಎನ್-ಐಬಿಎನ್ ಬ್ಯುರೋ ಮಾನವೀಯತೆ ತೋರಿ ನಮ್ಮ ಸಹಾಯಕ್ಕೆ ಬಂದಿದೆ.

Sunday, July 30, 2006

ಬಂದಿದೆ ಹೊಸ ತಂತ್ರಜ್ಞಾನ...!!!

ಬೊ.ರ. ಬ್ಯುರೋ ಕಷ್ಟಾ ಪಟ್ಟು ಶನಿವಾರ ಒಂದು ದಿನ ರಜೆ ತೆಗೆದುಕೊಂಡು ಮಜಾ ಮಾಡಿದ ಹಿನ್ನೆಲೆ ಏನು ಎಂದು ತಿಳಿಯುವ ಕುತೂಹಲವೇ?

ಹೊಸ ತಂತ್ರಜ್ಞಾನದ ಹಿಂದೆ ಬಿದ್ದಿದ್ದೇವೆ....!!!

ಯಾವುದು, ಏನು, ಎತ್ತ ಎಂಬ ಇತ್ಯಾದಿ ವಿವರಗಳಿಗೆ ಸೋಮವಾರದ ಬೋರಲು ಸಂಚಿಕೆ ನೋಡಿ...!!!!

ನಾಳೆ ಮುಖಾಮುಖಿಯಾಗಿ!!!!

ಸೂಚನೆ: ಮಾಡಲು ಬೇರೆ ಕೆಲಸವಿಲ್ಲದ್ದರಿಂದ ಈ ಜಾಹೀರಾತು ನೀಡಲಾಗುತ್ತಿದೆ.

Friday, July 28, 2006

ರಾಜಕಾರಣಿ-ಪತ್ರಕರ್ತ ಸಂಬಂಧ ಬಹಿರಂಗ

(ಬೊಗಳೂರು ಅರಾಜಕೀಯ ಬ್ಯುರೋ)
ಬೊಗಳೂರು, ಜು.28- ರಾಜಕಾರಣಿ ಮತ್ತು ಪತ್ರಕರ್ತರು ಇಬ್ಬರೂ ಒಂದೇ ಅಂತ ಹೇಳಿಕೆ ನೀಡಿ ಇಬ್ಬರ ಸಂಬಂಧವನ್ನು ಬಟಾಬಯಲಾಗಿಸಿದ, ಕರ್ನಾಟಕದಲ್ಲಿ ಕೆಲವೇ ಕ್ಷಣಗಳ ಕಾಲ ಸಚಿವರಾಗಿದ್ದ ಮಾಜಿ ಅರೆ-ಕ್ಷಣ ಸಚಿವ ಬಿ.ಕೆ.ಚಂದ್ರಶೇಖರ್ ವಿರುದ್ಧ ಪುತ್ರಕರ್ತರೆಲ್ಲಾ ಗಹಗಹಿಸಿ ಕೆಂಡಕಾರಿದ ಪ್ರಸಂಗ ವರದಿಯಾಗಿದೆ.

ರಾಜಕಾರಣಿಗಳಿಗೆ ಪತ್ರಕರ್ತರ ಮೇಲೆ ಗೌರವವೇ ಇಲ್ಲದಂತಾಗಿದೆ ಅಂತ ಬೀಕೇಸೀ ಅವರು ಬಹಿರಂಗವಾಗುತ್ತಿರುವ ಸತ್ಯವನ್ನು ಪೂರ್ತಿ ಹೊರಗೆಳೆದದ್ದಕ್ಕೆ ಖಂಡಿಸಿರುವ ಪುತ್ರಕರ್ತರು, ರಾಜಕಾರಣಿಗಳ ಮೇಲೆ ಪತ್ರಕರ್ತರಿಗೆ ಗೌರವ ಇನ್ನೂ ಇದೆ ಅಂತ ಇಲ್ಲಿ ತೋರಿಸಿಕೊಟ್ಟಿದ್ದೇವೆ. ವೇತನ ಮಂಡಳಿ ಜಾರಿ ಆಗ್ರಹಿಸಿ ಕಟ್ಟಾ ಭಾರತೀಯರಾದ ನಾವು ಇಟಲಿ ಮೂಲದ ಕೈ ಒಡತಿಯ ಮೊರೆ ಹೊಕ್ಕಿಲ್ಲವೇ? ಇದು ನಾವು ರಾಜಕಾರಣಿಗಳಿಗೆ ನೀಡುವ ಗೌರವವಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಈ ಮಧ್ಯೆ, ಪತ್ರಕರ್ತರಿಗೆ ಸೈಟು ಕೊಡಲಾಗುತ್ತದೆ, ಸೈಟಿನ ಗಡಿ ದಾಟಿ ಬೇರೆ ಸೌಲಭ್ಯಕ್ಕೂ ಕೈ ಚಾಚುತ್ತಾರೆ ಎಂದು ಬೀಕೇಶೀ ಆರೋಪಿಸಿದ್ದು, ಅದು ಯಾವ ಸೈಟು, ಬ್ಲಾಗ್ ಸೈಟೋ, ವೆಬ್ ಸೈಟೋ ಅಥವಾ ಸೈಟ್ ಸೀಯಿಂಗ್ ಮಾತ್ರವೇ ಎಂಬುದನ್ನು ಸ್ಪಷ್ಟಪಡಿಸಿಲ್ಲ.

ಇತ್ತೀಚಿನ ದಿನಗಳಲ್ಲಿ ಶಾಸನ ಸಭೆಯ ವಿಷಯದಲ್ಲಿ ಒಂದೇ ಒಂದು ಒಳ್ಳೆ ವರದಿಗಳು ಬರುತ್ತಿಲ್ಲ ಎಂದು ಮಾಜಿ ಸಚಿವರು ಹೇಳಿದರೂ, ಮುಖ ಬೇರೆಡೆ ತಿರುಗಿಸಿ, ರಾಜಕಾರಣಿಗಳು ಭ್ರಷ್ಟಾಚಾರ ನಿರತರಾಗಿದ್ದಾರೆ, ಒಳ್ಳೆ ಕೆಲಸ ಮಾಡಲು ಸಮಯವಾದರೂ ಎಲ್ಲಿದೆ ಎಂದು ನೆನಪಿಸಿಕೊಂಡರು. ಇದೂ ಅಲ್ಲದೆ ಶಾಸನ ಸಭೆಯಲ್ಲಿ ಕೋಲಾಹಲ, ಆರೋಪ ಪ್ರತ್ಯಾರೋಪಗಳ ಟೇಪುಗಳನ್ನೇ ಯಾವಾಗಲೂ ತಿರುಗಿ ತಿರುಗಿ ಹಾಕಲಾಗುತ್ತಿದೆ ಎಂಬುದನ್ನು ನೆನೆದು ಯಾರಿಗೂ ಗೊತ್ತಾಗದಂತೆ ಸುಮ್ಮನಾಗಿಬಿಟ್ಟರು.

ಜಾತಿ ಆಧಾರಿತವಾಗಿ ಪತ್ರಕರ್ತರು ಹುಟ್ಟಿಕೊಂಡಿರುವುದು ಕೆಟ್ಟ ಬೆಳವಣಿಗೆ ಅಂತ ಮಾಜಿಗಳು ಹೇಳಿದ್ದಾರೆ. ವಾಸ್ತವವಾಗಿ ಅವರು "ಜಾತಿ ಆಧಾರಿತ" ಎಂಬ ಶಬ್ದವನ್ನೇ ಪ್ರಯೋಗಿಸಿರಲಿಲ್ಲ ಎಂಬುದು ಬೊಗಳೂರು ಬ್ಯುರೋದ ತನಿಖೆಯಿಂದ ಗೊತ್ತಾಗಿದೆ.

ಪುತ್ರಕರ್ತರು ಹುಟ್ಟಿಕೊಂಡರೆ ರಾಜಕಾರಣಿಗಳಿಗೇ ನಷ್ಟವಲ್ಲವೇ? ಅನ್ನೋದು ಜಿಜ್ಞಾಸೆಯ ವಿಷಯ.

Thursday, July 27, 2006

ಸಾನಿಯಾ ಹಿಂದೆ ಯಾರೂ ಇಲ್ಲವೇ?

(ಬೊಗಳೂರು ಟೀನೇಜ್ ಬ್ಯುರೋದಿಂದ)
ಬೊಗಳೂರು, ಜು.27- ಭಾರತದ ಟೆನಿಸ್ ರಂಗಕ್ಕೆ ಸಿನಿಮಾದ ಆಕರ್ಷಣೆ ತಂದುಕೊಟ್ಟಿದ್ದಾರೆ ಎಂಬ ಗಂಭೀರ ಆರೋಪಕ್ಕೆ ಗುರಿಯಾಗಿರುವ ಟೀನೇಜ್ ಸೆನ್ಸೇಷನ್ ಸಾನಿಯಾ ಮಿರ್ಜಾಳ ಹಿಂದೆ ಯಾರೂ ಬಿದ್ದಿಲ್ಲ ಎಂದು ಮತ್ತೊಬ್ಬ ಟೆನಿಸ್ ಆಟಗಾರ ಮಹೇಶ ಭೂಪಪತಿ ಅಪ್ಪಟ ಸುಳ್ಳು ಹೇಳಿದ್ದಾರೆಂಬುದು ಬೊ.ರ.ಬ್ಯುರೋದಿಂದ ಬಯಲಾಗಿದೆ.

ಸಾನಿಯಾ ಹಿಂದೆ ಯಾರೂ ಇಲ್ಲ ಎಂಬುದು ಅಪ್ಪಟ ಸುಳ್ಳು ಎಂಬ ನಮ್ಮ ವಾದಕ್ಕೆ ಸಾನಿಯಾ ಹೆಸರಲ್ಲಿ ನಿರ್ಮಾಣಗೊಂಡಿರುವ ವೆಬ್ ಸೈಟುಗಳೇ ಸಾಕ್ಷಿ. ಮಾತ್ರವಲ್ಲದೆ ಯಾವುದೇ ಪತ್ರಿಕೆಗಳ ಮುಖಪುಟದಲ್ಲಾಗಲೀ, ಒಳಪುಟಗಳಲ್ಲಾಗಲಿ ಆಕೆ ಗೆಲ್ಲಲಿ, ಸೋಲಲಿ, (ವಿಶ್ವ ಟೆನಿಸ್ ಶ್ರೇಯಾಂಕಪಟ್ಟಿಯಲ್ಲಿ) ಏಳಲಿ, ಬೀಳಲಿ ಒಂದಾದರೂ ಭಾವ ಚಿತ್ರ ಇದ್ದೇ ಇರುತ್ತದೆ ಎಂಬ ಉಗ್ರ -ವಾದವೇ ಸಾಕ್ಷಿ.

ಭಾರತದ ಯುವಜನತೆಯಲ್ಲಿ ಹೆಚ್ಚಿನವರು ಆಕೆಯ ಹಿಂದೆ ಬಿದ್ದಿದ್ದಾರೆ. ಇದಕ್ಕೆ ಆಕೆಯ ಅಭಿಮಾನಿಗಳು ಹುಟ್ಟುಹಾಕಿರುವ ಹಲವಾರು ವೆಬ್ ಸೈಟುಗಳೇ ಸಾಕ್ಷಿ. ಅದರಲ್ಲಿ ಒಂದು ಸಾನಿಯಾ ಫ್ಯಾನುಗಳದು, ಇನ್ನೊಂದು ಅನಧಿಕೃತ ಫ್ಯಾನುಗಳದು, ಮಗದೊಂದು ಭಾರತೀಯ ಟೆನಿಸ್ ದೇವತೆಯದು, ಇನ್ನೊಂದು ಸಾನಿಯಾ-ಮೇನಿಯಾದ್ದು.

ಸಾನಿಯಾಳ ಕೀರ್ತಿ ಪತಾಕೆ ಎತ್ತರೆತ್ತರಕ್ಕೆ ಏರುತ್ತಿರುವಂತೆಯೇ ಸಾನಿಯಾ ಸಮುದಾಯದ ಮುಖ್ಯಸ್ಥರ ಹುಬ್ಬುಗಳೂ ಎತ್ತರೆತ್ತರಕ್ಕೆ ಏರಿದವು. ಇದಕ್ಕೆ ಆಕೆ ಧರಿಸುವ ದಿರಿಸು ಕೂಡ ಎತ್ತರೆತ್ತರಕ್ಕೆ ಹಾರುವುದೇ ಕಾರಣವಾಗಿತ್ತು. ಕೊನೆಗೆ ಸಾನಿಯಾ ಡ್ರೆಸ್ ಧರಿಸುವುದರ ವಿರುದ್ಧವೇ..... ಅಲ್ಲಲ್ಲ... ಕ್ಷಮಿಸಿ.... ಸಾನಿಯಾ ಡ್ರೆಸ್ ಧರಿಸುವ ರೀತಿಯ ವಿರುದ್ಧ ಫತ್ವಾ ಹೊರಡಿಸಲಾಯಿತು.

ಮತ್ತೊಂದು ದಿನ, ವಿವಾಹಪೂರ್ವ ಲೈಂಗಿಕತೆ ತಪ್ಪಲ್ಲ ಎಂಬ, ತಮಿಳುನಾಡಿನಲ್ಲಿ ಅಕ್ಷರಶಃ ಆರಾಧ್ಯ ದೈವ ಆಗಿದ್ದ ಖುಷ್ಬೂಗೆ ಸಾನಿಯಾ ಬೆಂಬಲ ನೀಡಿದ್ದು ವರದಿಯಾಯಿತು. ದೇಶಾದ್ಯಂತ ಎಲ್ಲರ ಹುಬ್ಬುಗಳು ಮತ್ತೊಮ್ಮೆ ಮೇಲೇರಿದಾಗ ಇಲ್ಲ, ಹಾಗೆ ಹೇಳಿಲ್ಲ ಎಂಬ ಸ್ಪಷ್ಟನೆಯೂ ಬಂತು.

ಇಂಥ ಕ್ಯೂಟ್ ಸಾನಿಯಾ ಹಿಂದೆ ಯಾರೂ ಬಿದ್ದಿಲ್ಲ ಎಂಬುದು ಅಕ್ಷರಶಃ ಸುಳ್ಳು. ಸಾನಿಯಾ ಹಿಂದೆ ಯುವಕರು ಬಿದ್ದಿದ್ದಾರೆ, ಆಕೆ ಹೋದಲ್ಲೆಲ್ಲಾ ಇ-ಮೈಲ್, ಎಸ್ಎಂಎಸ್ ಸಂದೇಶಗಳು ಜತೆಗಿರುತ್ತವೆ, ಆಕೆಯ ಹಿಂದೆ ಅಭಿಮಾನಿಗಳ ಪಡೆ ಬಿದ್ದಿದೆ, ಧಾರ್ಮಿಕ ಮುಖಂಡರೂ ಬಿದ್ದಿದ್ದಾರೆ, ಸಾನಿಯಾ ಆಡುತ್ತಿರುವ ಆಟವಾದ ಟೆನಿಸ್ ಕೂಡ ಆಕೆಯ ಹಿಂದಿದೆ.

ಕೊಟ್ಟ ಕೊನೆಯದಾಗಿ, ಸಾನಿಯಾಳೇ ಆಡುತ್ತಿರುವ ಟೆನಿಸ್‌ನಿಂದ ತಾನು ಬಳಲುತ್ತಿದ್ದೇನೆ ಎಂದು ವಿಶ್ವಮಾನ್ಯ ಬ್ಯಾಟ್ಸ್ ಮನ್ ಸಚಿನ್ ತೆಂಡೂಲ್ಕರ್ ಕೂಡ ಬಾಯಿಬಿಟ್ಟಿದ್ದಾರೆ, ಅದಕ್ಕೆ ತಕ್ಕ ಶಾಸ್ತಿಯನ್ನೂ ಮಾಡಿಕೊಂಡಿದ್ದಾರೆ.

ಇನ್ನೂ ಒಂದು ವಿಷಯ ಬಾಕಿ ಉಳಿದಿದೆ. ಸಾನಿಯಾ ಹಿಂದೆ ಬೊ.ರ. ಬ್ಯುರೋ ಕೂಡ ಬಿದ್ದಿದೆ, ಬೊ.ರ. ಓದುಗರೂ ಬಿದ್ದಿಲ್ಲ ಅಂತ ಏನು ಗ್ಯಾರಂಟಿ? ಎಂದು ನಾವು ಶೀಘ್ರವೇ ಪ್ರಶ್ನೆ ಕೇಳಲಿದ್ದೇವೆ ಅನ್ನೋ ಮಾಹಿತಿ ನಮಗೇ ಸಿಕ್ಕಿದೆ!

ಸೂಚನೆ: ನೆಟ್ಟೊದೆತಗಳು 7000 ಅಂತ ನಮಗೇ ಗೊತ್ತಿಲ್ಲದೆ ತೋರಿಸಿದ್ದರಿಂದಾಗಿ ಹತಾಶೆಯಿಂದ ಈ ಟೀನೇಜ್ ಸುದ್ದಿ.

Wednesday, July 26, 2006

ಸರ್ವ ಅಶ್ಲೀಲ ಶಿಕ್ಷಾ ಅಭಿಯಾನ !

(ಬೊಗಳೂರು ರಸಿಕ ಬ್ಯುರೋದಿಂದ)

ಬೊಗಳೂರು, ಜು.26- ಭಾರತ ಸರಕಾರದ ಅತ್ಯಮೂಲ್ಯವಾದ ಸರ್ವ ಶಿಕ್ಷಾ ಅಭಿಯಾನವು ಯಶಸ್ವಿಯಾಗಿ ಜಾರಿಯಾಗುತ್ತಿರುವ ಹಿನ್ನೆಲೆಯಲ್ಲಿ, ಇದರ ಹಿಂದೆ ಏನೋ ಇರಬೇಕು ಎಂಬ ಶಂಕೆ ಬಂದ ಕಾರಣ ಬೊಗಳೆ ರಗಳೆ ಬ್ಯುರೋದ ರಸಿಕರ ತಂಡವು ಕೊಯಮತ್ತೂರಿಗೆ ತೆರಳಿತು.

ಹೆಸರು ಕೇಳಿದಾಗಲೇ ಅತ್ತಿತ್ತ ಆಲೋಚಿಸದೆ ಮತ್ತೇರಿಸುವ ಕೊಯಮತ್ತೂರಿನತ್ತ ಹೊರಟಿದ್ದರೂ ಅಲ್ಲಿ ತಲುಪಿದಾಗ ದೊರೆತ ಅಸತ್ಯದಿಂದಾಗಿ ಮತ್ತೂ ಮತ್ತೇರಿತ್ತು.

ಶಾಲೆಗಳಿಗೆ ಸರ್ವರ ಶಿಕ್ಷೆಗಾಗಿ ಇರುವ ಕಾರ್ಯಕ್ರಮದ ವಿತರಣೆಗೆ ನೀಡಲಾದ ಸರಂಜಾಮುಗಳು ಸರ್ವರ ಶಿಕ್ಷೆಗಾಗಿ ಅಲ್ಲ, ರಸಿಕರ ರಕ್ಷೆಗಾಗಿ ಎಂಬ ಅಂಶವು ಬಯಲಾಯಿತು.

ನಡೆದದ್ದಿಷ್ಟು. ಸರ್ವ ಶಿಕ್ಷಾ ಅಭಿಯಾನಕ್ಕೆ ಪೂರೈಸಿದ ಸಾಮಗ್ರಿಗಳಲ್ಲಿ ಅಶ್ಲೀಲ ಎಂದು ಯಾರೋ ಕೆಲವು ಕಿಡಿಗೇಡಿಗಳು ಕರೆಯುವ ಕೆಲವು ಸಿ.ಡಿ.ಗಳಿದ್ದವು. ಬಹುಶಃ ಇದು ವಯಸ್ಕರ ಶಿಕ್ಷಣದ ಸಾಮಗ್ರಿ ಇರಬಹುದು ಎಂಬುದು ಬೊ.ರ. ಬ್ಯುರೋದ ಪ್ರಥಮ ಮಾಹಿತಿ ವರದಿ (ಎಫ್ಐಆರ್).

ಆದರೆ, ಇವುಗಳನ್ನು ಉದ್ದೇಶಪೂರ್ವಕವಾಗಿ ವಿತರಿಸಲಾಗಿದೆ ಎಂದು ಗೊತ್ತಾಗಿ ಬಿಟ್ಟಿತು. ಸರ್ವ ಶಿಕ್ಷೆ ಅಭಿಯಾನದ ಹೆಸರು ಕೇಳಿಯೇ ಯಾರೂ ಬಾರದ ಕಾರಣ, ಒಟ್ಟಿನಲ್ಲಿ ಸರಕಾರದ ಹಣ ಬಿಡುಗಡೆಯಾಗಬೇಕು, ಅದರಲ್ಲಿ ಅಲ್ಪಮೊತ್ತದ ಹಣ ಆಯಾ ಉದ್ದೇಶಕ್ಕೆ ಖರ್ಚಾಗಬೇಕು, ಉಳಿದದ್ದು ನಮ್ಮ ಜೇಬಿಗೆ ಸೇರಬೇಕು ಎಂಬ ಪ್ರಾಮಾಣಿಕ ಮನಸ್ಸಿನಿಂದ ಸ್ಥಳೀಯ ಪುಡಾರಿಗಳು ಈ ವ್ಯವಸ್ಥೆ ಮಾಡಿದ್ದರು.

ಸರಿಯಾಗಿ ಹಾಜರಾತಿ ತೋರಿಸಿದರೆ ಸರಕಾರದಿಂದ ಬಿಡುಗಡೆಯಾಗುತ್ತದೆ. ಇದನ್ನು ಬಳಸಿ ಇನ್ನಷ್ಟು ಅಹ-ಶ್ಲೀಲವಾದ ಸಿಡಿಗಳನ್ನು ರಚಿಸಿ, ಶಿಕ್ಷೆ ಅಭಿಯಾನಕ್ಕೆ ಹೆಚ್ಚಿನ ಆಕರ್ಷಣೆ ತುಂಬಬಹುದು ಎಂಬುದು ಪರಮ ಉದ್ದೇಶ. ಯಾರು ಕೂಡ ದೂರು ನೀಡುವ ಗೋಜಿಗೆ ಹೋಗಿಲ್ಲ, ಮತ್ತು ಪೊಲೀಸರು ಕೂಡ ಯಾವುದೇ ಕೇಸು ದಾಖಲಿಸಿಲ್ಲ ಎಂಬುದು ಉಭಯ ಪಕ್ಷಗಳ ಸಾಮಾಜಿಕ ಕಾಳಜಿಯನ್ನು ಬಿಂಬಿಸುವ ಅಂಶಗಳು.

ಈ ಕಾರಣಕ್ಕೆ, ದಣಿದ ತನು-ಮನಗಳಿಗೆ ಮನರಂಜನೆ ಬೇಕೆಂಬ ಜನರ ಮತ್ತು ಪೊಲೀಸರ ಮನೋಭಾವಕ್ಕೆ ಸಾಮಾಜಿಕ ಕಳಕಳಿ ಪ್ರಶಸ್ತಿ ಪ್ರಕಟಿಸಲಾಗುತ್ತದೆ ಎಂದು ತಿಳಿದುಬಂದಿದೆ.

ಆದರೆ ಬಾಲಕಿಯರಿಗೆ ವಿತರಿಸಲಾದ ಸಾಮಗ್ರಿಗಳಲ್ಲಿ ಮಾತ್ರ ಇಂಥ ಸಿ.ಡಿ.ಗಳಿದ್ದವೇ ಎಂಬುದಿನ್ನೂ ಸ್ಪಷ್ಟವಾಗಿಲ್ಲ. ಮತ್ತೊಂದು ವಿಷಯ- ಸಿ.ಡಿ.ಮಾತ್ರ ಇದ್ದದ್ದೇ ಅಥವಾ ಇನ್ನೂ ಏನೇನೋ ಇದ್ದವೋ ಎಂಬುದಿನ್ನೂ ತನಿಖೆಗೊಳಪಡಬೇಕಿದೆ.

Tuesday, July 25, 2006

ಮುಂಬಯಿ: ಹೆಚ್ಚಿದ ನಾಣ್ಯದ ಶಬ್ದಮಾಲಿನ್ಯ !

(ಬೊಗಳೂರು ಹನಿಕೂಡಿಸುವ ಬ್ಯುರೋದಿಂದ)

ಬೊಗಳೂರು, ಜು.25- ಬೊಗಳೆ-ರಗಳೆ ಬ್ಯುರೋವನ್ನು ಮುಚ್ಚಿ ಬೇರೆಯೇ ಉದ್ಯಮ ಕೈಗೊಳ್ಳಲು ನಿರ್ಧರಿಸಲಾಗಿದೆ.

ಈ ನಿರ್ಧಾರಕ್ಕೆ ನಮ್ಮ ಏಕಸದಸ್ಯ ಬ್ಯುರೋದ ಎಲ್ಲಾ ಸಿಬ್ಬಂದಿಗಳೂ ಟಾಟಾ ಹೇಳಿ ಮುಂಬಯಿಗೆ ತೆರಳಿರುವುದೇ ಕಾರಣ.

ಅಳಿದು ಉಳಿದ ಬ್ಯುರೋ ಕೂಡ ಮುಂಬಯಿಗೆ ಯಾಕೆ ಭೇಟಿ ನೀಡಬಾರದು ಅಂತ ಯೋಚಿಸಿದಾಗ ಮೂರೂವರೆ ಪ್ರಶ್ನೆಗಳು ಧುತ್ತನೆ ಎದುರಾಗಿವೆ. ಇದರ ಅಸತ್ಯಾನ್ವೇಷಣೆಗೆ ಸಕಾಲ ಅಂತ ನಿರ್ಧರಿಸಲಾಯಿತು. ಆ ಪ್ರಶ್ನೆಗಳು ಇಂತಿವೆ:

1. ದೇಶಾದ್ಯಂತ ನಾಣ್ಯಗಳ ಕೊರತೆ ಕಂಡು ಬಂದಿದ್ದರೂ ಎಲ್ಲವೂ ಮುಂಬಯಿಯಲ್ಲಿ ಕ್ರೋಡೀಕರಣಗೊಂಡಿವೆ. ಇದಕ್ಕೆ ಕಾರಣಗಳೇನು?

2. ದೇಶಾದ್ಯಂತ ಜನಸಂಖ್ಯೆ ಹೆಚ್ಚಳವಾಗುತ್ತಿದ್ದರೂ ದಿಢೀರ್ ಹೆಚ್ಚಳ ಕಂಡುಬಂದಿದ್ದು ಮುಂಬಯಿಯಲ್ಲಿ. ಯಾಕೆ?

3. ಮುಂಬಯಿಯಲ್ಲಿ ಬಾಂಬ್ ಸ್ಫೋಟಿಸದಿರುವಾಗಲೂ ಶಬ್ದ ಮಾಲಿನ್ಯ ಹೆಚ್ಚಾಗಲು ಕಾರಣಗಳೇನು?

4. ಮುಂಬಯಿಯಲ್ಲಿರುವವರು ಎಲ್ಲರೂ ಚಿಲ್ಲರೆ ಜನಗಳೇ?

ಅಸತ್ಯಾನ್ವೇಷಿ ತನಿಖೆಗಾಗಿ ನೇರವಾಗಿ Bomb-bayಗೆ ಹೊರಟಿರುವ ಎತ್ತಿನ ಗಾಡಿ ಹತ್ತಿದಾಗ ತಲೆಯಲ್ಲಿ ನೂರಾರು ಯೋಚನೆಗಳು.

ಉಗ್ರಗಾಮಿಗಳೇನಾದರೂ ಎತ್ತಿನ ಗಾಡಿಯಲ್ಲಿ ಬಾಂಬ್ ಇರಿಸಿದ್ದಾರೆಯೇ ಎಂಬ ಆತಂಕದ ನಡುವೆ ಎತ್ತುಗಳ ಕಾಲು ಎತ್ತಿ ತೀವ್ರ ತಪಾಸಣೆಗೆ ಗುರಿಪಡಿಸಿ ಖಚಿತಪಡಿಸಿಕೊಳ್ಳಲಾಯಿತು. ಬಾಂಬಿನಂತಹ ವಸ್ತು ಕಂಡಿತಾದರೂ ಅದಲ್ಲವೆಂದು ತಿಳಿದು ಮುಂದುವರಿಯಲಾಯಿತು.

ಅಲ್ಲಿ ಹೋದಾಗ ಕಂಡದ್ದೇನು? ಎಲ್ಲರೂ ಅಲ್ಲಿ ತಟ್ಟೆ ಹಿಡಿದುಕೊಂಡಿದ್ದಾರೆ, ಎತ್ತಿನ ಗಾಡಿಯ ಕಿಟಕಿಯೊಳಗೂ ಕೈ ತೂರಿಸುತ್ತಿದ್ದಾರೆ. ತಟ್ಟೆಯಲ್ಲಿ ಠಣ್ ಅಂತ ಶಬ್ದ ಕೇಳಿದ ತಕ್ಷಣ ತಟ್ಟೆಗೆ ಅಂಟಿಕೊಂಡಿದ್ದ ಕೈಗಳ ಹಿಂದಿರುವವರ ಮುಖಭಾವವೇ ಬದಲಾಗುತ್ತದೆ. ಅದುವರೆಗೆ ಗಂಟಿಕ್ಕಿದ್ದ ಮುಖ ಆ ಸದ್ದು ಕೇಳಿದ ತಕ್ಷಣ ಅರಳಿಕೊಂಡಿತ್ತು. ವಾಸ್ತವದಲ್ಲಿ, ಇಂಥ ಸದ್ದು ಕೇಳಿದಾಗ ಮುಂಬಯಿಗರು ಹೆದರಬೇಕಿತ್ತು.

ಯಾಕೆ ಹೆದರಿಲ್ಲ.... ಅಂತ ಯೋಚಿಸಿದಾಗ, ಬಹುಶಃ ಮುಂಬಯಿಗರು ಬೊಂ-ಬಾಯಿ ಸದ್ದು ಮತ್ತು ಬಾಂಬ್ ಸದ್ದುಗಳು ಅಷ್ಟೊಂದು Addict ಆಗಿದ್ದಾರೋ ಎಂಬ ಸಣ್ಣ ಸಂಶಯದ ಸುಳಿಯೂ ಬಾರದಿರಲಿಲ್ಲ. ಆ ಶಬ್ದ ಕೇಳಿ ಬಾಂಬ್ ಎಂದು ಮೊದಲು ಹೆದರಿಕೆಯಾದರೂ, ಅಂಥ ಪಾವಲಿ ಬಾಂಬ್ ಇರಲಿಕ್ಕಿಲ್ಲ ಎಂದು ಸಮಾರಾಧನೆ ಮಾಡಿಕೊಂಡು ಮುಂದುವರಿಯಲಾಯಿತು.

ಅಷ್ಟೊಂದು ಗಿಜಿಗಿಜಿ ಗುಟ್ಟುವ ತಟ್ಟೆಗಳು ಮತ್ತು ಆ ತಟ್ಟೆಗಳ ನಡುನಡುವೆ ಕಾಣುತ್ತಿರುವ ತಲೆಗಳ ನಡುವೆ ಬಗ್ಗಿ ನೋಡಿದಾಗ ಕಂಡದ್ದೇನು? 5, 10, 25, 50 ಪೈಸೆಗಳ ನಾಣ್ಯಗಳು!ದೇಶದ ವಾಣಿಜ್ಯ ರಾಜಧಾನಿಯಲ್ಲಿ ಶಬ್ದಗಳಿಗೆ ಬರವಿಲ್ಲ. ಆದರೆ ಇತ್ತೀಚೆಗೆ ತಟ್ಟೆಗೆ ನಾಣ್ಯ ಬೀಳುವ ಶಬ್ದ ಹೆಚ್ಚಾಗಿ ಶಬ್ದಮಾಲಿನ್ಯ ಉಂಟಾಗುತ್ತಿದೆ.

ಮುಂದುವರಿದಾಗ ನಮ್ಮ ಬ್ಯುರೋದಲ್ಲಿ ಕೆಲಸ ಮಾಡುತ್ತಿದ್ದವರೂ ಅಲ್ಲಿದ್ದರು. ಅವರ ತಟ್ಟೆಗಳಿಗೆ ಮಾವಿನಯನಸರಿಂದಲೂ ಒಂದೊಂದು ಠಣ್ ಠಣ್ ಎಸೆತಗಳು ಬಂದು ಸೇರಿಕೊಳ್ಳುತ್ತಿದ್ದವು.ಇದರ ಎಳೆ ಹಿಡಿದಾಗ ದೊರಕಿದ್ದು ಈ ಸುದ್ದಿ. ಮುಂಬಯಿಯಲ್ಲಿ ಧರ್ಮಾನೇ ತಾಯಿ ತಂದೆ ಅಂದುಕೊಂಡೇ ಜೀವನ ಸಾಗಿಸುತ್ತಿರುವವರ ವಾರ್ಷಿಕ ಸಂಪಾದನೆ 180 ಕೋಟಿ ರೂ.!!!! ಇಷ್ಟೊಂದು ಕೋಟಿಯಲ್ಲಿ ಮಾವಿನಯನಸರ ಕೈವಾಡ ಅಥವಾ ಕೈ-ಕೊಡುಗೆ ಎಷ್ಟು ಎಂಬುದನ್ನು ಶೀಘ್ರವೇ ಅನ್ವೇಷಿಸಲಾಗುತ್ತದೆ.

ಮೇಲಿನ ನಾಲ್ಕೂ ಪ್ರಶ್ನೆಗಳಿಗೆ ಓದುಗರು ಈ ಸುದ್ದಿಯಲ್ಲೇ ಉತ್ತರ ಕಂಡುಹುಡುಕಿಕೊಳ್ಳಬೇಕು ಎಂದು ಆದೇಶಿಸಲಾಗಿದೆ.ಬೇಕಾ ಈ ಬೇಕಾರ್ ಉದ್ಯೋಗ? ಅಂದುಕೊಂಡಿದ್ದೇ..... ತಕ್ಷಣಕ್ಕೆ ಹೊಳೆದ ವಿಷಯವೆಂದರೆ ಬ್ಯುರೋಗೆ ಬೀಗ ಹಾಕಿ ಮುಂಬಯಿಗೆ ತೆರಳುವುದು.

Monday, July 24, 2006

ಬ್ರೇಕ್ ಕಿಂಗ್‌(ಫಿಶರ್) ನ್ಯೂಸ್ !

(ಬೊಗಳೂರು ಅಮಲು ಬ್ಯುರೋದಿಂದ)
ಬೊಗಳೂರು, ಜು.24- ಇಲ್ಲದಿದ್ದರೂ ಬದುಕಲಾಗದು, ಇದ್ದರೂ ಬದುಕುವುದು ಸಾಧ್ಯವಿಲ್ಲ- ಏನದು?

ಎಂಬ ಒಗಟಿನಿಂದ ನಮ್ಮ ಇಂದಿನ ಸಂಚಿಕೆಯನ್ನು ಆರಂಭಿಸುತ್ತಿದ್ದೇವೆ.

ನಾವು ಮೊದಲು ಉತ್ತರ ಹೇಳಿಬಿಡುತ್ತೇವೆ. ಆಮೇಲೆ ನಮ್ಮ ಓದುಗರು ಹೇಳಬೇಕಾಗಿ ವಿನಂತಿ. ಯಾಕೆಂದರೆ ಅದರ ಕ್ರೆಡಿಟ್ ನಮಗೇ ಸಿಗಬೇಕೆಂಬ ನಿಸ್ವಾರ್ಥ ಬಯಕೆ!

ಉತ್ತರ ಕುಡಿತ. ಕೆಲವರಿಗೆ ಅದನ್ನು ಎಷ್ಟು ಮಾತ್ರಕ್ಕೂ ಕಡಿತ ಮಾಡದಂತಹ ತುಡಿತ. ಕಡಿತ ಮಾಡಿದರೋ.... ಇಡೀ ದಿನ ಅಲ್ಲಲ್ಲಿ ಕಡಿತ!

ಇನ್ನು ಮುಂದೆ ಬೆಳಗ್ಗೆ ಎದ್ದ ತಕ್ಷಣ ಯಾಕೆ ಕುಡೀತೀರಿ ಅಂತ ಹೆಂಡ್ತಿ ಇನ್ನು ಬಯ್ಯೋಹಾಗಿಲ್ಲ. ಮಾತ್ರವಲ್ಲ, ಇನ್ನು ಯಾರು ಕೂಡ ಕುಡುಕ ಅಂತ ಸರ್ಟಿಫಿಕೆಟ್ ಕೂಡ ಕೊಡೋಹಾಗಿಲ್ಲ.

ಇದರ ಶೋಧನೆಗೂ ಕಾರಣವಿದೆ. ಕಚೇರಿ ಕೆಲಸದ ಮಧ್ಯೆ ಆಗಾಗ್ಗೆ ಕುಡಿಯಲೇಬೇಕು ಅಂತ ಅನ್ನಿಸಿದರೆ ಎದ್ದು ಹೋಗುವಂತಿಲ್ಲ ಎಂಬ ಕಾರಣಕ್ಕೆ ವಿಜ್ಞಾನಿಗಳು ಕಂಡುಹುಡುಕಿದ್ದಾರೆ ಆಲ್ಕೋಹಾಲ್ ಪಿಲ್.

ಮತ್ತು ಮತ್ತೆನ್ನೊಡನೆ
ನಿತ್ತುಕೊಂಡೀ ರಣದಿ? !
ಉತ್ತರವ ಕೊಡುವೆ
ಬಲು ಧೂರ್ತ ಸುಗ್ರೀವಾ....!!

ಎಂಬ ವಾಲಿ-ಸುಗ್ರೀವ ಕಾಳಗ ಯಕ್ಷಗಾನದ ಹಾಡಿನಿಂದ ಪ್ರೇರಣೆ ಪಡೆದುಕೊಂಡ ವಿಜ್ಞಾನಿಗಳು ಮತ್ತು ಮತ್ತೆ ಮತ್ತೇರಿಸುವ ಮಾತ್ರೆ ಕಂಡುಹುಡುಕಿದ್ದಾರಂತ ಇಲ್ಲಿ ಗೊತ್ತಾಗಿದೆ.

ಇನ್ನು ಮುಂದೆ ಮದ್ಯದ ಹೊಳೆ ಹರಿಯುವಂತಿಲ್ಲ. ಆ ಮದ್ಯದ ಹೊಳೆಯಲ್ಲಿ ಈಜಾಡುವ ಕಷ್ಟವಿಲ್ಲ. ಕುಳಿತಲ್ಲೇ ತೇಲಾಡಬಹುದು.

ನಮ್ಮಂಥ ಪತ್ರಿಕಾ ಶಿಖಾಮಣಿಗಳಿಗೆ "ಇಂತಿಂಥಾ ಶಾಸಕರ ಕ್ಷೇತ್ರದಲ್ಲಿ ಮದ್ಯದ ಹೊಳೆ ಹರಿಯುತ್ತಾ ಇದೆ, ಕುಡುಕರೇ ತುಂಬಿರುವ ಊರು, ಕುಡಿದು ಕುಡಿದು ಸತ್ತ" ಎಂಬಿತ್ಯಾದಿ ಹೆಡ್ಡಿಂಗ್ ಕೊಡದಂತೆ ಮಾಡಿರುವ ವಿಜ್ಞಾನಿಗಳ ವಿರುದ್ಧ ಶೀಘ್ರವೇ ಅಮಲುನಷ್ಟ ದಾವೆ ಹೂಡಲಾಗುತ್ತದೆ ಎಂದು ತಿಳಿದುಬಂದಿದೆ.

ಈ ಸುದ್ದಿ ಕೇಳಿದ ತಕ್ಷಣ ಕುಡಿಯುವವರ (ಯೆಂಡ್ಕುಡುಕ ರತ್ನನ ಮುಂದಾಳುತ್ವ) (ಸೂ: ಅಂದ್ರೆ "ಸುದ್ದಿ ಕೇಳಿದ ತಕ್ಷಣವೇ ಕುಡಿದುಬಿಡುವವರ" ಎಂದು ಅರ್ಥವತ್ತಾಗಿ ಓದಿಕೊಳ್ಳದಿರಿ) ಮತ್ತು ಕುಡಿಸುವವರ ಸಂಘಗಳು (ಬಾರ್ ಮಾಲೀಕರ ನೇತೃತ್ವ) ಬೀದಿಗೆ ಇಳಿದಿವೆ. ಮದ್ಯ ತಯಾರಕರು ಆಕ್ರೋಶಗೊಂಡಿದ್ದಾರೆ, ಗುತ್ತಿಗೆದಾರರು ಕಂಗಾಲಾಗಿದ್ದಾರೆ.

ಇಷ್ಟೆಲ್ಲಾ ಆಲ್-ಕೋಲಾಹಲದ ನಡುವೆ ಎಲ್ಲಾ ನೆಟ್ಕುಡುಕರ ಸಂಘಕ್ಕೆ ಮದಿರೆ ಪಾರ್ಟಿ ಏರ್ಪಡಿಸಲಾಗಿದೆ. ಇದು par-Tea ಆಗಿರುವುದರಿಂದ ಚಹಾ ವಿತರಿಸಲಾಗುವುದಿಲ್ಲ ಎಂದು ಕಚೇರಿ ಕೆಲಸದ ಮಧ್ಯೆ ಮಧ್ಯೆ ಮದ್ಯ ಕುಡಿಯುವವರ ಸಂಘದ ಅತಿ-ಕಾರಿಗಳು ತಿಳಿಸಿದ್ದಾರೆ.

Saturday, July 22, 2006

ಬೊಗಳೆ-ರಗಳೆ ಬ್ಲಾಕ್ ಸ್ಪಾಟ್!

(ಬೊಗಳೂರು ಬೊಗಳೆ ಬ್ಯುರೋದಿಂದ)

ಬೊಗಳೂರು, ಜು.22- ಸರಕಾರವು ಬ್ಲಾಗಿಗಳನ್ನು ಮಟ್ಟ ಹಾಕಲು, ಬ್ಲಾಗ್‌ಗಳು ಆಗಾಗ್ಗೆ ಸ್ಫೋಟಗೊಳ್ಳುತ್ತಿರುವ ಬ್ಲಾಗ್‌ಸ್ಪಾಟ್ ತಾಣವನ್ನೇ ಬ್ಲಾಕ್ (block or black) ಸ್ಪಾಟ್ ಆಗಿಸಿರುವುದರ ಹಿಂದಿನ ರಹಸ್ಯ ಬಯಲಾಗಿದೆ.

ಯಾರೇ ಅರಚಾಡಲಿ, ಊರೇ ಬೊಗಳೆಬಿಡಲಿ.... ನಮ್ಮ ನೆಮ್ಮದಿಗೆ ಭಂಗವಿಲ್ಲ ಎಂಬಂತಿರುವ ಬೊಗಳೆ ರಗಳೆ ಬ್ಯುರೋದ ವರದಿಗಳಿಂದಾಗಿ "ಆನೆಗೆ ಸೊಳ್ಳೆ ಕಚ್ಚಿದಂತೆ" ಬೆಚ್ಚಿದ ಸರಕಾರದ ಕೆಲವರು, ಸೊಳ್ಳೆಯೊಂದನ್ನು ಇನ್ನಿಲ್ಲದಂತೆ ಮಾಡಲು ಇಡೀ ಮನೆಗೇ ಬೆಂಕಿ ಹಚ್ಚಿದಂತೆ, ಬೊಗಳೆ-ರಗಳೆ ಪತ್ರಿಕೆಯನ್ನು ಮಟ್ಟ ಹಾಕಲು ಇಡೀ ಬ್ಲಾಗ್‌ಸ್ಪಾಟಿಗೇ ತಡೆಯೊಡ್ಡಿತ್ತು ಎಂಬುದನ್ನು ವಿಶ್ವಾದ್ಯಂತ ಹರಡಿಕೊಂಡಿರುವ ನಮ್ಮ ಜಾಲದ ನೆಟ್ಟುಗ್ರರು ಅಂಚೆ ಮೂಲಕ ಸಂಶೋಧನಾ ಸಂದೇಶ ಕಳುಹಿಸಿದ್ದಾರೆ.

ಬೊಗಳೆ-ರಗಳೆ ಬ್ಯುರೋವನ್ನೇ ಮಟ್ಟ ಹಾಕಲು ಸರಕಾರ ಉದ್ದೇಶಿಸಿದ್ದಕ್ಕೆ ಆಗಸದಲ್ಲಿ ಆಲ್-ಕೋಲಾಹಲ , "ಧೈರ್ಯವಂತ" ಮುಂಬೈಗರೇ ಉಗ್ರರ ಹಿಡೀತಾರೆ: ಮಂತ್ರಿ , ಭ್ರಷ್ಟಾಚಾರವನ್ನು ಶಿಷ್ಟಾಚಾರವಾಗಿಸಲು ಯತ್ನ , ಬಡವರ ನಿರ್ಮೂಲನೆಯೇ UPA ಗುರಿ: ನಿಧಾನಿ , ಪ್ರತಿಭಾ ಪಲಾಯನಕ್ಕೆ ಸರಕಾರ ಬದ್ಧ: ಸಚಿವ , ಬಾರ್-ಕಿಂಗ್ ನ್ಯೂಸ್....!!! ಮುಂತಾದ ವರದಿಗಳೇ ಕಾರಣವೆಂದು ಶಂಕಿಸಲಾಗಿದೆ.

ಅದಕ್ಕೂ ಹೆಚ್ಚಾಗಿ ನಮ್ಮ ಪ್ರೇತ ಪ್ರತಿನಿಧಿ ವರದಿ ಮಾಡಿದ "ಚಿಗುರು-ಬಾಲ" ಪ್ರತಿಭಾ ಸ್ಪರ್ಧೆ ವರದಿಯೇ ಅವರ ಮುಖದಲ್ಲಿ ಕೆಂಗಣ್ಣು ಮೂಡಲು ಕಾರಣವಾಗಿತ್ತು ಎಂಬುದನ್ನು ನಮ್ಮ ಸಂ-ಶೋಧನಾ ಬ್ಯುರೋ ಕಂಡುಕೊಂಡಿದೆ.

Friday, July 21, 2006

ನದಿಗೆ ಬ್ಲಾಗಿನ ಅರ್ಪಣೆ !

( http://www.pkblogs.com/bogaleragale ದಿಂದ ನೋಡಬಹುದು)
(ಬೊಗಳೂರು ರಗಳೆ ಬ್ಯುರೋದಿಂದ)
ಬೊಗಳೂರು, ಜು.21- ಬೊಗಳಿಗರಿಗೆ ಯಾವುದೆಲ್ಲಾ ಕಡೆಯಿಂದ ಒತ್ತಡಗಳು ಬರುತ್ತಿವೆಯಪ್ಪಾ ಎಂದು ತಲೆ ಮೇಲೆ ಕೈಹೊತ್ತು ಕುಳಿತಾಗ, ಕರ್ನಾಟಕದ ನೆಟ್ಟಿಗರಿಗೆ ಬ್ಲಾಗಿಸಲು ಯಾಕೆ ಸಾಧ್ಯವಾಗುತ್ತಿಲ್ಲ ಎಂಬುದರ ಹಿಂದಿನ ರಹಸ್ಯ ಬಯಲಾಗಿದೆ.

ಸರಕಾರಗಳು ಬೊಗಳಿಗರನ್ನು ಮಟ್ಟ ಹಾಕಲು ಸಾಕಷ್ಟು ಶ್ರಮ ಪಡುತ್ತಿರುವಂತೆಯೇ ಕರ್ನಾಟಕ ಸರಕಾರದ ಮುಖ್ಯಮಂತ್ರಿಗಳು ಒಂದು ಹೆಜ್ಜೆ ಮುಂದೆ ಹೋಗಿ ಬ್ಲಾಗಿನ ವಿಷಯಗಳನ್ನು ಬೆಣ್ಣೆತೊರಾದಲ್ಲಿ ತುಂಬಿರುವ ನೀರಿಗೆ ಧುಢುಂ ಅಂತ ಜೋರಾಗಿಯೇ ಸದ್ದು ಬರುವಂತೆ ಬ್ಲಾಗಿನಗಳನ್ನು ತಳ್ಳಿಬಿಟ್ಟಿದ್ದಾರೆ. (ಪಕ್ಕದ ಚಿತ್ರ ನೋಡಿ).ಇದರಿಂದ ರಾಜ್ಯಾದ್ಯಂತ ಬ್ಲಾಗಿಗರು ಚಂಡಿಯಾಗಿ ಕೂತಿದ್ದಾರೆ.

ಆದರೆ ಅದಕ್ಕೆ ಪತ್ರಿಕೆಯವರು ಮಾತ್ರ ಬಾಗಿನ ಎಂದು ತಪ್ಪು ತಪ್ಪಾಗಿ ಬರೆದಿದ್ದಲ್ಲದೆ, ಬ್ಲಾಗಿನಗಳನ್ನು ಮುಖ್ಯಮಂತ್ರಿ ಅವರು ಸುರುವಿದ್ದರೂ ಬಾಗಿನ "ಅರ್ಪಿಸಿದರು" ಎಂದು ಬೊಗಳೆ ಬಿಟ್ಟಿವೆ.

ನೀರಾವರಿ ಯೋಜನೆಯೊಂದನ್ನು ನಾಡಿಗೆ ಸಮರ್ಪಿಸುವ ಸಂದರ್ಭ ಮುಖ್ಯಮಂತ್ರಿಯವರು ಯಾರಿಗೂ ಗೊತ್ತಾಗದಂತೆ ಬ್ಲಾಗಿನಗಳನ್ನು ಗುಳುಂ ಎಂದು ಮುಳುಗಿಸಿರುವ ವಿಷಯ ಸದನದಲ್ಲೂ ಲಂಚಾವತಾರವೆತ್ತಿ ಕೋಲಾಹಲ ಮೂಡಿಸುತ್ತಿದೆ ಎಂದು ಗೊತ್ತಾಗಿದೆ. ಮುಖ್ಯಮಂತ್ರಿಯವರ ರಾಜೀನಾಮೆಗೆ ಕಾಂಗ್ರೆಸ್ ಒತ್ತಾಯಿಸುತ್ತಿದೆ ಅಂತಲೂ ಬ್ಲಾಗಿಗರಿಗೆ ತಿಳಿದುಬಿಟ್ಟಿದೆ.
---------------------------------------------
ಇಷ್ಟೊಂದು ಹತಾಶೆಗೊಳ್ಳುವುದೇಕೆ?

ಇದು ಹೇಳಲೇಬೇಕಾದ ವಿಷಯ, ಹೇಳಿಯೇ ಬಿಡುತ್ತೇನೆ.

ದೇಶಾದ್ಯಂತ ಉಗ್ರವಾದ, ಹಿಂಸಾಚಾರ ಮೇಳೈಸುತ್ತಿದ್ದರೆ, ಅದನ್ನು ಮಟ್ಟ ಹಾಕುವ ಬದಲು ನಮ್ಮ ಆಡಳಿತವು ಬ್ಲಾಗಿಗರ ಮೇಲೆ ಕೆಂಗಣ್ಣು ಬೀರಿರುವುದು ನೋಡಿ ಅಯ್ಯೋ ಪಾಪ... ಎಂಬ ಅನುಕಂಪ ವ್ಯಕ್ತಪಡಿಸದೆ ಬೇರೆ ವಿಧಿಯೇ ಇಲ್ಲ.

"ಕೋಟೆ ಸೂರೆ ಹೋದ ಮೇಲೆ, ದಿಡ್ಡಿ ಬಾಗಿಲು ಹಾಕಿದಂತೆ" ಮತ್ತು "ಒಂದು ಸಣ್ಣ ಸೊಳ್ಳೆ ಹಿಡಿಯಲಾಗದಿದ್ದರೆ ಇಡೀ ಮನೆಗೇ ಬೆಂಕಿ ಹಾಕಿದಂತೆ" ಎಂಬೆರಡು ವಾಕ್ಯಗಳಿಗೆ ಸರಿಯಾದ ಅರ್ಥವನ್ನು ನಮಗೆಲ್ಲಾ ಜ್ಞಾನೋದಯ ಮಾಡಿಸಿದ್ದಾರೆ ನಮ್ಮ ಅಧಿಕಾರಿಗಳು. ಯಾರೋ ಒಬ್ಬ ದೊಡ್ಡ ಮಂಡೆಯ ಅಧಿಕಾರಿಗೆ ಹೊಳೆದ ಈ ಅರ್ಥಹೀನ ಉಪಾಯವನ್ನು ಆತ ಘನ ಸರಕಾರಕ್ಕೆ ತಿಳಿಸಿಬಿಟ್ಟ ಪರಿಣಾಮವೇ ಬ್ಲಾಗ್ ಬ್ಲಾಕ್.

ಆದರೆ ಈ Block ಆದ Blogಗಳ lock ತೆಗೆಯುವುದು ಹೇಗೆ ಎಂಬುದನ್ನು ಭಾರತೀಯರಿಗೆ ತಿಳಿಸಿಕೊಟ್ಟವರು ಪಾಕಿಸ್ತಾನೀಯರೇ ಎಂಬುದು ಇಲ್ಲಿ ಉಲ್ಲೇಖಾರ್ಹ. ಅದಕ್ಕೇ ಪಿಕೆಬ್ಲಾಗ್ಸ್ ಡಾಟ್ ಕಾಮ್ ( pkblogs.com) ಎಂಬ ಹೆಸರಿದೆ. ಇದೂ ಅಲ್ಲದೆ ಭಾರತೀಯ ಮಿತ್ರರಿಗೆ ಮತ್ತು ಭಾರತೀಯರೊಂದಿಗೆ ಬಾಂಧವ್ಯ ಬೆಸೆಯುವ ಉದ್ದೇಶದಿಂದ ಅವರು ಭಾರತೀಯರಿಗಾಗಿಯೇ ರೂಪಿಸಿದ ಮತ್ತೊಂದು Blog unblocking ಟೂಲ್ ಹೆಸರೇ inblogs.net.

ಪಾಕಿಸ್ತಾನೀಯರು ಭಾರತೀಯರಿಗೆ ಮಿತ್ರತ್ವದ ಸಂದೇಶ ಕಳುಹಿಸಿದ ವೆಬ್ ಸೈಟ್ ಇಲ್ಲಿದೆ: http://www.help-pakistan.com . ಇದು ರೂಪುಗೊಂಡಿದ್ದು ಕೂಡ ಅಲ್ಲಿನ ಸರಕಾರದ ಇಂಥದ್ದೇ ದೊಡ್ಡ ಮಂಡೆಯ ಧೋರಣೆಯಿಂದ ಎಂದು ಹೇಳಬೇಕಾಗಿಲ್ಲ. ಒಂದು ಸಣ್ಣ ಭೂಮಿಗಾಗಿ ಭಯೋತ್ಪಾದನೆಯನ್ನೇ ಜೀವಾಳವಾಗಿರಿಸಿಕೊಂಡಿರುವ ಕೆಲವು ದುಷ್ಟಷಕ್ತಿಗಳ ನಡುವೆ ಪಾಕ್ ಮಿತ್ರರು ಕಳುಹಿಸಿದ ಸ್ನೇಹದ ಉಡುಗೊರೆಯನ್ನು ಅವರೇ ಈ ರೀತಿಯಾಗಿ ಉಲ್ಲೇಖಿಸಿದ್ದಾರೆ.
"Please consider this as a gift from Pakistan to all
Indians in hope of building friends across the border".

ಎಷ್ಟು ಆಪ್ಯಾಯಮಾನ ವಾಕ್ಯ!

ಬ್ಲಾಗುಗಳ ಮೇಲೆ ನಿಯಂತ್ರಣ ಹೇರುವ ಬದಲು, ಯಾವ ಬ್ಲಾಗು ಅಥವಾ ವೆಬ್ ಸೈಟ್ ದೇಶವಿರೋಧಿ ಭಾವನೆಗಳನ್ನು ಪ್ರಚೋದಿಸುತ್ತದೆ ಎಂಬುದನ್ನು ಪತ್ತೆ ಹಚ್ಚಿ ಅದರ ಮೇಲೆ ನಿಯಂತ್ರಣ ಸಾಧಿಸುವ ಬುದ್ಧಿ ಸರಕಾರಕ್ಕೆ ಬರಲಿ. ಉಗ್ರವಾದ ಮಟ್ಟ ಹಾಕುವಲ್ಲಿ ಯಶಸ್ಸು ಗಳಿಸಲಿ.

Thursday, July 20, 2006

ವಿಚ್ಛೇದನ ಯಂತ್ರ Spoon-taneous Divertin !

(ಬೊಗಳೂರು ಸಂಶೋಧನಾ ಬ್ಯುರೋದಿಂದ)

ಬೊಗಳೂರು, ಜು.20- ಸಂಸಾರದಲ್ಲಿ ಸರಿಗಮ ಇಲ್ಲದಿದ್ದರೆ ಮತ್ತು ಗಂಡ ಹೆಂಡತಿಗೆ, ಹೆಂಡತಿ ಗಂಡನಿಗೆ ಸಸಾರ ಆಗಿಬಿಟ್ಟ ಕಾರಣಕ್ಕೆ spontaneous ಆಗಿ ವಿಚ್ಛೇದನ ಬಯಸುವವರಿಗಾಗಿ ಹೊಸದೊಂದು ಯಂತ್ರವನ್ನು ಆವಿಷ್ಕರಿಸಲಾಗಿದೆ. ಅದಕ್ಕೆ ನಮ್ಮ ಬ್ಯುರೋ Spoon-taneous Divertin ಅಂತ ಹೆಸರಿಟ್ಟಿದೆ. (ಟ್ರೇಡ್ ಮಾರ್ಕ್! ಎಚ್ಚರಿಕೆ)

ಇದು ತಿಳಿದದ್ದು ಇಲ್ಲಿ ಪ್ರಕಟವಾಗಿರುವ ಈ ಸುದ್ದಿಯಿಂದ. ಇದರ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಜಬಲ್ಪುರಕ್ಕೆ ಜಬರ್ದಸ್ತಾಗಿ ತೆರಳಿದಾಗ ಮತ್ತಷ್ಟು ಅಹಾ-ಸತ್ಯ ವಿಷಯಗಳು ಬಯಲಿಗೆ ಬಂದಿವೆ.

ವಾಸ್ತವವಾಗಿ ಇಷ್ಟೊಂದು ವರದಕ್ಷಿಣೆ ಪಡೆದುಕೊಂಡಿದ್ದ ಪತಿ ಜತೆ ಜೀವಿಸುವುದು ಆ ಪತ್ನಿಗೆ ಬೇಕಿರಲಿಲ್ಲ. ಹೇಗಾದರೂ ಮಾಡಿ ಅಲ್ಲಿಂದ ಹೊರಬೀಳಬೇಕು ಎಂದು ಯೋಚಿಸಿದಾಗ ತೋಚಿದ್ದು, ಬೇರೆ ಮನೆ ಮಾಡುವ ವಿಚಾರ. ಆದರೆ ಆ ಮಹರಾಯ ಅದಕ್ಕೂ ಹೂಂಗುಟ್ಟಬೇಕೆ? ಅಷ್ಟು ಮಾತ್ರವೇ ಆಗಿದ್ದರೆ ಪರವಾಗಿರಲಿಲ್ಲ.

ಆದರೆ ಆ ಅತ್ತೆ ಕೂಡ ವರದಕ್ಷಿಣೆ ಎಂದು ಪಡೆದ ಎಲ್ಲ ವಸ್ತುಗಳನ್ನು ಹಿಂತಿರುಗಿ ಕೊಟ್ಟೇ ಬಿಡಬೇಕೇ?

ಏನು ಮಾಡೋದು ಅಂತ ಯೋಚಿಸಿದಾಗ ಆಕೆಗೆ ಅಲ್ಲಿನ ಶಾಸಕರು, ಮಂತ್ರಿ ಮಾಗಧರ ಹಿಂದೆ-ಮುಂದೆ ಸುತ್ತಾಡುತ್ತಾ ಚಮಚಾಗಿರಿ ಮಾಡುವ ಚಮಚಾಗಳು ಜ್ಞಾಪಕಕ್ಕೆ ಬಂದ್ರು.

ಈ ಹಿನ್ನೆಲೆಯಲ್ಲಿ ತಕ್ಷಣವೇ ಚಾ-ತರಿಸಿಕೊಂಡ ಆಕೆಗೆ ಹೊಳೆದದ್ದು ಚಮ-ಚಾ (Tea-spoon). ಚಾ ಕುಡಿದ ತಕ್ಷಣ ಚಮ-ಚಾವನ್ನು ಬಿಸಾಡಿದ ಆಕೆ, ವರದಕ್ಷಿಣೆಯಾಗಿ ಕೊಟ್ಟಿದ್ದ ಒಂದು ಚಮಚಾ ಬರಲೇ ಇಲ್ಲ ಎಂದು ಕೂಗಾಟ ಮಾಡಿದಳು. ತವರುಮನೆಗೆ ಹೋದಳು, ಅತ್ತೆ ಮೇಲೆ ಕಂಪ್ಲೇಂಟ್ ಕೊಟ್ಟಳು.

ಅವರಿಬ್ಬರ ವಿರಹ-ವಿರಸಕ್ಕೆ ಚಮಚವೇ ಕಾರಣ ಎಂದು ಪತ್ತೆ ಹಚ್ಚಿರುವ ಕೌನ್ಸೆಲಿಂಗ್ ಕೇಂದ್ರದ ಅಧಿಕಾರಿಗಳಿಗೆ ಶ್ರೇಷ್ಠ ಅಸತ್ಯಾನ್ವೇಷಣಾ ಪ್ರಶಸ್ತಿ ನೀಡಲು ಬೊಗಳೆ ರಗಳೆ ಬ್ಯುರೋ ನಿರ್ಧರಿಸಿದೆ.

ಅಲ್ಲದೆ Spoon-taneous ಎಂಬ ಹೊಸದೊಂದು ಆಯುಧವನ್ನು ಈ ದೇಶಕ್ಕೇ ಮಾತ್ರವಲ್ಲದೆ ಇಡೀ ವಿಶ್ವಕ್ಕೇ ಕೊಡುಗೆಯಾಗಿ ನೀಡಿದ ಸಂಶೋಧಕಿಗೆ (ಮಹಿಳಾಮಣಿಗಳೇ ಚಪ್ಪಾಳೆ ತಟ್ಟಿ) ನೋ-ಬೆಲ್ ಪ್ರಶಸ್ತಿ ನೀಡಲು ಶಿಫಾರಸು ಮಾಡಲಾಗಿದೆ.

Wednesday, July 19, 2006

ಬ್ಲಾಗಿಸಲು ಅಸಾಧ್ಯವಾಗುತ್ತಿದೆಯೇ?

ಬೊಗಳಿಗರಿಗೊಂದು ಕಹಿ ಸುದ್ದಿ ನಡುವೆ ಸಂತಸದ ಸುದ್ದಿ.

ಚೀನಾದಲ್ಲಿ ಇಂಟರ್ನೆಟ್ ನಿಷೇಧ ಹೇರಿದಂತೆ ಭಾರತ ಸರಕಾರವೂ ಈ ರೀತಿ ಮಾಡುವಲ್ಲಿ ಹೆಜ್ಜೆ ಮುಂದಿಟ್ಟಿರುವುದು ಕಹಿ ಸುದ್ದಿ.
ಆದರೆ ಸಿಹಿ ಸುದ್ದಿ ಏನಪ್ಪಾ ಅಂದ್ರೆ ಬ್ಲಾಗ್‌ಸ್ಪಾಟ್ ಬ್ಲಾಗುಗಳನ್ನು ಬೇರೆ ಕಡೆ ನೋಡಬಹುದಾಗಿದೆ ಎನ್ನುವುದು.
ನಿಮ್ಮ ಬ್ಲಾಗುಗಳನ್ನು ಇಂಟರ್ನೆಟ್ ಸರ್ವಿಸ್ ಪ್ರೊವೈಡರ್ (ISP)ಗಳು ಬ್ಲಾಕ್ ಮಾಡಿದ್ದಾರೆಯೇ?
ನೇರವಾಗಿ pkblogs.comಗೆ ಭೇಟಿ ನೀಡಿ. ಅಲ್ಲಿ ನಿಮಗೆ ಬೇಕಾದ ಬ್ಲಾಗಿನ ಯುಆರ್ಎಲ್ (blogspot ಮಾತ್ರ) ದಾಖಲಿಸಿ.
ಈ ಮೂಲಕ ನಿಮಗಿಷ್ಟದ ಬ್ಲಾಗುಗಳನ್ನು, ಅಥವಾ ನಿಮ್ಮದೇ ಬ್ಲಾಗುಗಳನ್ನು ನೋಡಬಹುದು.

ಬೇರೆಯವರ ಬ್ಲಾಗುಗಳನ್ನು ನೋಡಬೇಕಿದ್ದರೆ, ಉದಾಹರಣೆಗೆ ಬೊಗಳೆ ರಗಳೆ ಬ್ಲಾಗನ್ನು ನೋಡಬೇಕಿದ್ದರೆ
http://pkblogs.com/bogaleragale ಈ ರೀತಿ ಟೈಪಿಸಿದರಾಯಿತು. ಬೇರೆ ಬ್ಲಾಗಿಗಾದರೆ ಬೊಗಳೆ ರಗಳೆ ಎಂಬ ರಗಳೆ ಕಿತ್ತು ಹಾಕಿ ಅವರವರ ಯುಆರ್‌ಎಲ್‌ನಲ್ಲಿರುವ ತುಣುಕನ್ನು ಸೇರಿಸಿದರಾಯಿತು. ಅಂದರೆ http://www.pkblogs.com/blogname ಈ ಥರ ಮಾಡಿದರಾಯಿತು.
ಎಲ್ಲರಿಗೂ ಒಳಿತಾಗಲಿ, ಬ್ಲಾಗಿಸುತ್ತಿರಿ, ಬ್ಲಾಗಿ-ಸುತ್ತಿರಿ.....!

ನನ್ನ ಪ್ರಯೋಗ ಯಶಸ್ವಿಯಾಗಿದೆ. ನೀವೂ ಪ್ರಯತ್ನಿಸಿ.
-ಅಸತ್ಯಾನ್ವೇಷಿ

Tuesday, July 18, 2006

Canne: ಬಿಚ್ಚೋ ಮನಸ್ಸಿಂದ ನೆಗೆದುಬಿದ್ದ ಖಾನ್!

(ಬೊಗಳೂರು ಸಿನಿಕ ಬ್ಯುರೋದಿಂದ)
ಬೊಗಳೂರು, ಜು.18- ಒಮ್ಮೊಮ್ಮೆ ಬಾಟಮ್ ಲೆಸ್ ಆಗಿ, ಮತ್ತೊಮ್ಮೊಮ್ಮೆ ಟಾಪ್ ಲೆಸ್ ಆಗಿ ಹಾಗೂ ಹೆಚ್ಚಾಗಿ ಎಲ್ಲವೂ ಲೆಸ್ ಆಗಿ ಸುದ್ದಿ ಮಾಡುತ್ತಿದ್ದ, ಭಾರತದಿಂದ ಸ್ವಂತ ಊರಿಗೆ ರವಾನೆಗೊಂಡ ನೆಗರ್ ಖಾನ್ ಎಂಬ ಅರೆಬರೆ ಉಡುಗೆಯ ಬೆಡಗಿ, ಕ್ಯಾನೆ ಚಿತ್ರೋತ್ಸವದಲ್ಲಿ Canneಯಲ್ಲೂ I can ಎಂದು ಭರ್ಜರಿ ಸುದ್ದಿ ಮಾಡಿದ ಸಂಗತಿ ಇಲ್ಲಿ ವರದಿಯಾಗಿರುವುದು ಬೊಗಳೆ ಬ್ಯುರೋದ ಗಮನಕ್ಕೆ ತಡವಾಗಿ ಬಂದಿದೆ.

ಮೈಮೇಲಿನ ಐಟಂಗಳನ್ನು ಕಳಚುತ್ತಲೇ ಇತ್ತೀಚೆಗೆ ಐಟಂ ಗರ್ಲ್‌ಗಳು ಸುದ್ದಿ ಮಾಡುತ್ತಿರುವುದರಿಂದ ಈ ರದ್ದಿ ಸುದ್ದಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ.

ಈ ಬಗ್ಗೆ, ಗಂಡ ಸಾಹಿಲ್‌ನಿಂದ ಬೇರೆಯಾಗಿ ಪ್ಯಾರಿಸ್ ಹಿಲ್ಟನ್‌ಳನ್ನು ತನ್ನ ರೋಲ್ ಮಾಡೆಲ್ ಆಗಿ ಜಪಿಸುತ್ತಿರುವ ನೆಗರ್‌ಳನ್ನು ಮಾತನಾಡಿಸಲು ನೇರವಾಗಿ ನಾರ್ವೇಗೆ ತೆರಳಿದ ಅಸತ್ಯಾನ್ವೇಷಿಗೆ ಸ್ವಾಗತ ನೀಡದೆ ನೆಗರುವಂತೆ ಮಾಡಿದ ನೆಗರ್ ಖಾನ್ ಮೇಲೆ ಪ್ರಶ್ನೆಗಳ ಸುರಿಮಳೆ ಸುರಿಸಲಾಯಿತು. ಅದಕ್ಕೆ ಆಕೆ ನೀಡಿದ ಉತ್ತರ ಹೀಗಿದೆ:

Cannes ಚಿತ್ರೋತ್ಸವದಲ್ಲಿ ಐಶ್ವರ್ಯಾ ರೈಯಂಥವರಿಗೆ ಮತ್ತು ಬಾಲಿವುಡ್ ಮತ್ತಿತರ ವಿದೇಶೀ ನಟಿಯರಿಗೆ ಮಾತ್ರ ಪ್ರಾಶಸ್ತ್ಯ ನೀಡಲಾಗುತ್ತಿದೆ. ಬಾಲಿವುಡ್ ಚಿತ್ರಗಳ ಭರ್ಜರಿ ಪ್ರದರ್ಶನಕ್ಕೆ ನಮ್ಮ " ಭರ್ಜರಿ ಪ್ರದರ್ಶನ"ವೇ ಕಾರಣ ಎಂಬುದನ್ನು ಯಾರೂ ಮರೆಯಲಾರರು. ಹೀಗಿರುವಾಗ Canne ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ನಮ್ಮನ್ನು ಕಡೆಗಣಿಸುವುದೇಕೆ? ಇದೇ ಕಾರಣಕ್ಕೆ ಅಭಿಮಾನಿಗಳಿಗೆ ಗಾಳಿಯಲ್ಲಿ ಕಿಸ್ ಕೊಡುವಾಗ ಮೇಲುಡುಗೆ ಸ್ವಲ್ಪ ಸರಿಸಿದ್ದೆ, ಜನರೆಲ್ಲಾ ಅದನ್ನೇ ದೊಡ್ಡ ಸುದ್ದಿ ಮಾಡಿದ್ದಾರೆ. ಇದರಿಂದಾಗಿ ನಮ್ಮ ಪ್ರಾಶಸ್ತ್ಯವೇನು ಎಂಬುದು ಜಗತ್ತಿಗೆ ತಿಳಿಯಲಿಲ್ಲವೇ? ಎಂದಾಕೆ ಹೆಮ್ಮೆಯಿಂದಲೇ ಪ್ರಶ್ನಿಸಿದ್ದಾಳೆ.

'ಎಷ್ಟಿದ್ದರೂ ನನ್ನದು ಬಿಚ್ಚು ಮನಸ್ಸು. ಅದು ಬಿಚ್ಚೋ ಮನಸ್ಸು ಕೂಡ' ಎಂದಿರುವ ಆಕೆಯ ಕುರಿತು, ಬಾಲಿವುಡ್ ರಸಿಕರಿಗೊಂದು ರಸವತ್ತಾದ ಸುದ್ದಿ. ನೆಗರ್ ಖಾನ್ ಮತ್ತೆ ಭಾರತಕ್ಕೆ ಶೀಘ್ರವೇ ನೆಗೆದುಬೀಳಲಿದ್ದಾಳೆ.

Saturday, July 15, 2006

ಆಗಸದಲ್ಲಿ ಆಲ್-ಕೋಲಾಹಲ!

(ಬೊಗಳೂರು ಅಮಲು ಬ್ಯುರೋದಿಂದ)
ಬೊಗಳೂರು, ಜು.15- ದೇಶದಲ್ಲಿ ಅಲ್-ಖಾಯಿದಾ ಉಗ್ರರಿಂದಾಗಿ ದೇಶಾದ್ಯಂತ ಆಲ್-ಕೋಲಾಹಲ ಎದ್ದಿದ್ದರೆ, ಇನ್ನೊಂದೆಡೆ Unprecedented Price Agenda ಹೊತ್ತಿರುವ ಕೇಂದ್ರ ಸರಕಾರದ ನೀತಿಗಳಿಂದಾಗಿ ಕೋಲಾಹಲ ಏರ್ಪಟ್ಟಿದೆ. ಈ ಹಿನ್ನೆಲೆಯಲ್ಲಿ ಆಲ್-ಕೋಲಾಹಲಕ್ಕೂ ಕೋಲಾಹಲಕ್ಕೂ ಮತ್ತು ಆಲ್ಕೋಹಾಲಿಗೂ ಸಂಬಂಧವಿದೆಯೇ ಎಂದು ಅನ್ವೇಷಿಸಲು ಹೊರಟಾಗ ಹೇಳಬಾರದ ಅಸತ್ಯಗಳು ಆಗಸದಿಂದ ಕೆಳಗುರುಳಿದವು.
 
ಈ ಸರಕಾರವನ್ನು ನಡೆಸುತ್ತಿರುವ ನಿಧಾನಿ ಆಲ್-ಕೋಲಾಹಲಕ್ಕೀಡಾಗಲು ಹೊರಟಿದ್ದೇ ಇವೆಲ್ಲವುಗಳಿಗೆ ಮೂಲ ಕಾರಣ ಎಂಬುದು ಇಲ್ಲಿ ಪತ್ತೆಯಾಗಿದೆ.
 
ಸರಕಾರವು ಜೀವನಾವಶ್ಯಕ ವಸ್ತುಗಳ ಬೆಲೆಗಳನ್ನು ಯಾರ ಕೈಗೂ ಎಟುಕದಷ್ಟು ಮೇಲೇರಿಸಿರುವುದರಿಂದ ಈ ಬೆಲೆಗಳು ಆಗಸದಲ್ಲಿ ಎಲ್ಲಾದರೂ ಗೋಚರಿಸುತ್ತದೋ ಎಂದು ತಿಳಿದುಕೊಳ್ಳುವ ಸಲುವಾಗಿಯೇ ನಿಧಾನಿ ಅವರು ಇತ್ತೀಚೆಗೆ ಜರ್ಮನಿ ಭೇಟಿಯ ವೇಳೆ ಉದ್ದೇಶಪೂರ್ವಕವಾಗಿಯೇ ವಾಯು ಮಾರ್ಗದಲ್ಲಿ ಪ್ರಯಾಣಿಸಿದ್ದರು.
 
ಸಾಧ್ಯವಾದಲ್ಲಿ ಗಗನಕ್ಕೇರಿರುವ ಬೆಲೆಗಳನ್ನು ಹಿಡಿದು ಕೆಳಗೆ ತರೋಣ ಎಂದುಕೊಂಡಿರಬಹುದು ಅವರು. ಆದರೆ ಗಗನ ಯಾತ್ರೆಗೆ ಹೋದಾಗ ಅವರಿಗೆ ತಲೆ ತಿರುಗಿದರೆ ಎಂಬ ಆತಂಕ ಅವರ ಹಿಂಬಾಲಕರಿಗೆ. ಈ ಕಾರಣಕ್ಕೆ ತಿರುಗಿದ ತಲೆಯನ್ನು ಸರಿಪಡಿಸಲೋಸುಗ ಅವರಿದ್ದ ಏರ್ ಇಂಡಿಯಾ ವಿಮಾನದಲ್ಲಿ ಸಾಕಷ್ಟು ಮದ್ಯದ ಬಾಟಲಿಗಳಿದ್ದವು.
 
ಈ ಮದ್ಯದ ಬಾಟಲಿಗಳು ಎಲ್ಲರ ಕೈಗೆಟುಕುವಂತೆ ಮಧ್ಯದಲ್ಲೇ ಇದ್ದರೂ ಅದು ಹೇಗೋ ಆಲ್-ಕೋಲಾಹಲಿಗರು ಇದನ್ನು ಪತ್ತೆ ಮಾಡಿದ್ದರು. ಅಷ್ಟರಲ್ಲಿ ಬಹುಶಃ ಅಲ್ಲಿ ಅವರಿಗೆ ಭಾರತದಿಂದ ಗಗನಕ್ಕೇರಿದ ಬೆಲೆಗಳು ಕಾಣಿಸಿರಬೇಕು. ಆಗ ಕಣ್ಣು ಕತ್ತಲೆ ಕವಿದು ತಲೆ ತಿರುಗಿದಂತಾಗಿರಬೇಕು. ತಿರುಗಿದ ತಲೆಯನ್ನು ಮತ್ತೆ 360 ಡಿಗ್ರಿ ತಿರುಗಿಸಿ ಪೂರ್ವಸ್ಥಿತಿಗೆ ಮರಳಿಸುವ ಯೋಚನೆಯಲ್ಲಿ ಅವರು ಮಧ್ಯದಲ್ಲಿದ್ದ ಮದ್ಯವನ್ನು ಸುರುವಿಕೊಳ್ಳಲೆಂದು ಬಾಟಲಿಯ ಮುಚ್ಚಳವನ್ನು ತಿರುವಿರಬೇಕು.
 
ಕುಡಿದು ಅಮಲೇರಿದಾಗ ಮದ್ಯದ ಬಾಟಲಿಗಳಿಗಾಗಿ ಕಿತ್ತಾಟ ಆಗಿರಬೇಕು, ಮದ್ಯ ಸಿಗದವನೊಬ್ಬ ಇಷ್ಟು ಸಮಯದವರೆಗೂ ಕೊರಗುತ್ತಾ ಕೊರಗುತ್ತಾ ಸೋತು ಸುಣ್ಣವಾದಾಗ ಕೊನೆಗೊಂದು ನಿರ್ಧಾರಕ್ಕೆ ಬಂದು "ಮದ್ಯ ಎಲ್ಲಿ" ಎಂಬ ಬಾಂಬ್ ಸಿಡಿಸಿದ್ದಾನೆ. ಅಲ್ಲಿಗೆ ತನಿಖೆ ಆರಂಭವಾಗಿದೆ.
 
ಪ್ರಧಾನಿಯಿರುವ ವಿಮಾನದಲ್ಲಿ ಮದ್ಯವೇಕೆ, ಪ್ರಧಾನಿ ಮಾತ್ರವೇ ವಿಮಾನದೊಳಕ್ಕೆ ಮದ್ಯ ಹೊತ್ತೊಯ್ಯಬಹುದೇ, ಪ್ರಧಾನಿಗೊಂದು ನೀತಿ, "ಮದ್ಯ"ಮ ವರ್ಗದವರಿಗೊಂದು ನೀತಿ ಸರಿಯೇ? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರಾನ್ವೇಷಣೆ ನಡೆಯುತ್ತಿದೆ.

Friday, July 14, 2006

"ಧೈರ್ಯವಂತ" ಮುಂಬೈಗರೇ ಉಗ್ರರ ಹಿಡೀತಾರೆ: ಮಂತ್ರಿ

(ಬೊಗಳೂರು ಗುಪ್ತ ಬ್ಯುರೋದಿಂದ)
ಬೊಗಳೂರು, ಜು.14- ವಿಶ್ವ ಜನಸಂಖ್ಯಾ (ಸ್ಫೋಟ) ದಿನಾಚರಣೆಯಾದ ಜು.11ರಂದೇ 'ಜನನಿರ್ನಾಮ' ಸ್ಫೋಟ ನಡೆದಿದ್ದರೂ, ಇಂಥ ಭಯಾನಕ, ಆತಂಕ ಭರಿತ ಸನ್ನಿವೇಶಗಳಲ್ಲಿ ಮುಂಬಯಿಗರು (mumbaikars) ಗಟ್ಟಿಗತನ ಪ್ರದರ್ಶಿಸಿದ್ದಾರೆ, ಅವರಿಗೆ ಹ್ಯಾಟ್ಸಾಫ್ ಅಂತ ಮುಂಬಯಿಯಲ್ಲಿ ರೈಲು ಬಾಂಬ್ ಸ್ಫೋಟಿಸಿ ಉಗ್ರರು ಮಾರಣ ಹೋಮ ಮಾಡಿರುವುದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ Home ಸಚಿವ ಶಿವರಾಜ್ ಪಾಟೀಲ್ ಎಲ್ಲಾ ಮುಂಬಯಿಗರ ಹೊಗಳಿಕೆಗೆ ಪಾತ್ರವಾಗಿದ್ದಾರೆ.
 
ದೇಶದಲ್ಲಿ ಎಲ್ಲಿ ಎಷ್ಟೇ ಅನಾಹುತಗಳಾದರೂ ಎಲ್ಲರೂ ಮುಂಬಯಿಗರ ಧೈರ್ಯ ಸ್ಥೈರ್ಯವನ್ನು ಪ್ರದರ್ಶಿಸಬೇಕು ಎಂದೂ ಕರೆ ನೀಡಿರುವುದರ ಹಿಂದೆ ಹಲವಾರು ಮರ್ಮಗಳು ಅಡಗಿವೆ ಎಂಬುದು ಖಚಿತವಾಗಿದೆ.
 
ಆದರೆ ಸಚಿವರ ಬಾಯಿಂದ ಉದುರದೇ ಹೋದ ಒಂದೆರಡು ಅಂಶಗಳು ಜನರಿಗೆ ತಿಳಿಯಲಿ ಎಂಬ ಉದ್ದೇಶದಿಂದ ಬೊಗಳೆ ರಗಳೆ ಬ್ಯುರೋ ಈ ಅಪ-ವಾದವನ್ನು ಮಂಡಿಸುತ್ತಿದೆ.
 
ಸಚಿವರು ಹೇಳದೇ ಇದ್ದ ವಿಷಯಗಳು ಇಷ್ಟು:
 
"ಮುಂಬಯಿಗರು ಧೈರ್ಯ ಸಾಮರ್ಥ್ಯಗಳಲ್ಲಿ ನಮ್ಮ ಗೃಹ ಇಲಾಖೆಯನ್ನೇ ಮಾತ್ರವಲ್ಲದೆ ಸರಕಾರವನ್ನೂ ನಾಚುವಂತೆ ಮಾಡಿದ್ದಾರೆ. ಈ ಕಾರಣದಿಂದ ಸ್ಫೋಟಕ್ಕೆ ಕಾರಣರಾದ ಉಗ್ರಗಾಮಿಗಳನ್ನು ಕೂಡ ಮುಂಬಯಿಕರ್‌ಗಳೇ ಹಿಡಿದು ನಮ್ಮ ಕೈಗೊಪ್ಪಿಸುತ್ತಾರೆಂಬ ಸಂಪೂರ್ಣ ಭರವಸೆ ನಮಗಿದೆ.
 
ನಮ್ಮ ಗುಪ್ತಚರ ಇಲಾಖೆಗಳೆಲ್ಲವೂ ನಮ್ಮ ವಿರೋಧಿ ಪಕ್ಷಗಳ ಮುಖಂಡರ ಗುಪ್ತ ಕಾರ್ಯಗಳ ಶೋಧನೆಯಲ್ಲಿ ಮಗ್ನವಾಗಿರುವುದರಿಂದ ಅವರಿಗೂ ಪುರುಸೊತ್ತು ಇರುವುದಿಲ್ಲ. ಇಂಥ ಜಾಗೃತ ನಾಗರಿಕರೇ ಇನ್ನು ಮುಂದೆ ಖಾಸಗಿ ಗುಪ್ತಚರ (ಇಂಟೆಲಿಜೆನ್ಸ್) ಪಡೆಯನ್ನು ಇರಿಸಿಕೊಳ್ಳುವರು ಎಂಬುದು ಮುಂಬಯಿಗರ ಧೈರ್ಯ ಸಾಮರ್ಥ್ಯ ನೋಡಿ ನಮಗೆ ಮನದಟ್ಟಾಗಿದೆ.
 
ಈ ಹಿಂದೆ ಮುಂಬಯಿಯಲ್ಲಿ ಭಾರಿ ಪ್ರವಾಹ ಉಂಟಾದಾಗಲೂ ಸ್ವತಃ ಪ್ರಧಾನಿಯವರು ಕೂಡ ಮುಂಬಯಿಗರನ್ನು ಈ ರೀತಿ ಹೊಗಳಿದ್ದಾರೆ. ಈ ಬಾರಿ ನಮ್ಮ ಜತೆಗೆ ಲಾಲು ಪ್ರಸಾದ್ ಕೂಡ ಮುಂಬಯಿಗರ ಧೈರ್ಯವನ್ನು ಹೊಗಳಿದ್ದಾರೆ. ಇನ್ನು ಮುಂದೆಯೂ ಈ ರೀತಿಯಾದಾಗೆಲ್ಲಾ ಮುಂಬಯಿಗರನ್ನು ಹೊಗಳುತ್ತಲೇ ಇರುತ್ತೇವೆ.
 
ಮತ್ತೆ ಈ ದೇಶದಲ್ಲಿ ಅಲ್ಪಸಂಖ್ಯಾತರ ರಕ್ಷಣೆಯೂ ನಮ್ಮ ಹೊಣೆಯಾಗಿದೆ. ಸ್ಫೋಟ ನಡೆದ ದಿನವೇ ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡುವಂತೆ ಆಗ್ರಹಿಸಲು ನಮ್ಮ ಮೀಸಲಾತಿ ಮಂತ್ರಿಯನ್ನು ಮೀಸಲಿರಿಸಿದ್ದೇವೆ.
 
ಅದಕ್ಕೂ ಹೆಚ್ಚಾಗಿ, ನಾವು ನಮ್ಮ ಸಚಿವ ಸಂಪುಟವು ನಿನ್ನೆ ಸಭೆ ಸೇರಿ ಸ್ಫೋಟದ ತೀವ್ರತೆಗಿಂತಲೂ ಹೆಚ್ಚು ಬಲವಾಗಿ ಈ ಪ್ರಕರಣವನ್ನು ಖಂಡಿಸಿದ್ದೇವೆ. ಅಷ್ಟು ಬಲವಾಗಿ ಯಾರಿಗಾದರೂ ಖಂಡಿಸಲು ಇದುವರೆಗಾದರೂ ಸಾಧ್ಯವಾಗಿದೆಯೇ? ದೇಶ-ವಿದೇಶಗಳಿಂದ ಖಂಡನೆಗಳ ಮಹಾಪೂರವೇ ಹರಿದು ಬಂದಿವೆ. ಅವನ್ನೆಲ್ಲಾ ಸಂಗ್ರಹಿಸಿ ನಾವು ಬಾಂಬ್ ಸ್ಫೋಟದಲ್ಲಿ ಮಡಿದವರ ಕುಟುಂಬಗಳಿಗೆ ರವಾನಿಸುತ್ತೇವೆ"!

Thursday, July 13, 2006

ಇಲ್ಲಿ ರೈಲು ಸ್ಫೋಟ, ಅಲ್ಲಿ ಜನಸಂಖ್ಯಾ ಸ್ಫೋಟ !

(ಬೊಗಳೂರು ಆ-ಸ್ಫೋಟ ಬ್ಯುರೋದಿಂದ)
ಬೊಗಳೂರು, ಜು.13- ವಿಶ್ವದಲ್ಲಿ ಜನಸಂಖ್ಯಾ ಸ್ಫೋಟ ಹೆಚ್ಚಾಗುತ್ತಿದ್ದಂತೆಯೇ ಪಾಕಿಸ್ತಾನಿ ಉಗ್ರಗಾಮಿಗಳು ಬಾಂಬ್ ಸ್ಫೋಟ ನಡೆಸಿ ಜನಸಂಖ್ಯಾ ಸ್ಫೋಟಕ್ಕೆ ಪ್ರತಿಸ್ಫೋಟ ಮಾಡುವ ತಂತ್ರಗಳನ್ನುಹೆಣೆಯುತ್ತಿದ್ದರೂ ಜನಸಂಖ್ಯೆ ಏಕೆ ಈ ಪರಿಯಾಗಿ ಏರುತ್ತಿದೆ ಎಂಬ ಗುಟ್ಟು ಕೂಡ ರಟ್ಟಾಗಿದೆ.
 
ಈ ತಾಂತ್ರಿಕ ಯುಗದಲ್ಲಿ ಮಹಿಳೆಯರು ಇತ್ತೀಚೆಗೆ ಫಲವತ್ತತೆ ಹೆಚ್ಚಿಸಿಕೊಂಡಿರುವ ಅಂಶ ಮತ್ತು ಪುರುಷರು ಕೇವಲ ಹಣ ಸಂಪಾದನೆಯಲ್ಲಿ ನಿರತರಾಗಿ ಫಲವತ್ತತೆ (ಅಂದರೆ ಪುರುಸೊತ್ತು?) ಕಡಿಮೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಅಂಶ ತೀವ್ರ ಚರ್ಚೆಗೆ ಗ್ರಾಸವಾಗಿದೆ.
 
ಈ ಹಿನ್ನೆಲೆಯಲ್ಲಿ ಜನಸಂಖ್ಯಾ ಸ್ಫೋಟ ಎಲ್ಲಿ ಆಗುತ್ತಿದೆ ಎಂದು ಮೂಲ ಕೆದಕಲು ಧಾವಿಸಿದ ಧಾವಿಸಿದ ಬೊಗಳೆ ರಗಳೆ ಬ್ಯುರೋ ಸಿಬ್ಬಂದಿ ಹೃದಯಾಘಾತದಿಂದ ಇನ್ನೂ ಚೇತರಿಸಿಕೊಂಡಿಲ್ಲ.
 
ಆದರೆ ಸಿಬ್ಬಂದಿಯ ತೊಡೆ ಮೇಲಿದ್ದ ಟ್ಯಾಪ್ ಲಾಪ್ ಮೂಲಕ ಇ-ಮೇಲ್ ಆಟೋಮ್ಯಾಟಿಕ್ ಆಗಿ ಹೊರಬಂದು ನಮ್ಮ ಬ್ಯುರೋ ತಲುಪಿದೆ.
 
ಅದರಲ್ಲಿರುವ ಮಾಹಿತಿ ಪ್ರಕಾರ, ಕೇವಲ 63 ವರ್ಷದ ತಾರುಣ್ಯ ಉಕ್ಕಿ ಹರಿದ (ಅಂಥವರಿಗೆ ವೃದ್ಧೆ ಎಂದು ಕರೆಯಲಾಗುತ್ತದೆ) ಅಜ್ಜಿ, ಮುತ್ತಜ್ಜಿಯಾಗುವ ಬದಲು ತಾಯಿಯಾಗಿಬಿಟ್ಟಿದ್ದಾಳೆ. ಮತ್ತಷ್ಟು ಕೂಲಂಕಷವಾಗಿ ಶೋಧಿಸಿದಾಗ, ಈ ಅಜ್ಜಿಗೆ ಮಕ್ಕಳು, ಮೊಮ್ಮಕ್ಕಳು, ಮರಿ ಮಕ್ಕಳು, ಮರಿಮರಿ ಮಕ್ಕಳು ಮರೆಮರೆತು ಹೋಗುವಷ್ಟು ಸಂಖ್ಯೆಯಲ್ಲಿ ಇದ್ದಾರಂತೆ.
 
ಆದುದರಿಂದ ಇವರ ವಂಶ ವೃಕ್ಷಕ್ಕೆ ಸಾಕಷ್ಟು ಗೊಬ್ಬರ ಬಿದ್ದಿದೆ, ಹುಲುಸಾಗಿ ಬೆಳೆಯುತ್ತಿದೆ. ಈ ಗೊಬ್ಬರ ಯಾವುದು ಎಂಬ ಬಗ್ಗೆ ಸಂಶೋಧನೆಗಳು ಆರಂಭವಾಗಿದೆ.

Wednesday, July 12, 2006

ಪುತ್ರಕರ್ತರೂ, ಪುತ್ರಿಕೋದ್ಯಮವೂ...

(ಬೊಗಳೂರು ಕಳಪೆ ಬ್ಯುರೋದಿಂದ)
ಬೊಗಳೂರು, ಜು.12- ಶ್ರೀಮಂತರ ಓಲೈಕೆ, ಕಳಪೆ ಸುದ್ದಿಗಳತ್ತ ಪತ್ರಿಕೋದ್ಯಮ ಸಾಗುತ್ತಿದೆ ಎಂದು ಪ್ರಜಾವಾಣಿ ಮಾಜಿ ಸಂಪಾದಕ ಕೆ.ಎನ್.ಹರಿಕುಮಾರ್ ಆತಂಕ ವ್ಯಕ್ತಪಡಿಸಿರುವುದು ಪ್ರಕಟವಾಗಿರುವುದರಿಂದ ತೀವ್ರವಾಗಿ ಆತಂಕಕ್ಕೊಳಗಾದ ಬೊಗಳೆ ರಗಳೆ ಬ್ಯುರೋ, ಹೆಗಲು ಮುಟ್ಟಿಕೊಂಡು ನೋಡಿದ ಪ್ರಕರಣ ವರದಿಯಾಗಿದೆ.
 
ವಿಶ್ವದಲ್ಲೇ ಅತ್ಯಂತ Fakest ಸುದ್ದಿಗಳನ್ನು ನೀಡುತ್ತಿರುವ ಬೊ.ರ. ಪತ್ರಿಕೆಯನ್ನೇ ಅವರು ಗುರಿಯಾಗಿರಿಸಿ ಈ ರೀತಿಯಾಗಿ ಕ್ಯಾಕರಿಸಿ ಹೊಗಳಿದ್ದಾರೆ ಎಂದು ಅಂದಾಜಿಸಲಾಗಿದೆ.
 
ಅವರು ಈ ಮಾತನ್ನು ಹೇಳಿರುವುದು ಅಭಿವೃದ್ಧಿ ಪತ್ರಿಕೋದ್ಯಮ ಪ್ರೋತ್ಸಾಹ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಎಂಬುದನ್ನು ಇಲ್ಲಿ ಗಮನಿಸಬೇಕು. ಇಲ್ಲಿ ಅಭಿವೃದ್ಧಿ ಎಂದರೆ ಯಾರ ಜೇಬಿನ ಅಭಿವೃದ್ಧಿ ಎಂಬುದನ್ನು ಅವರು ಸ್ಪಷ್ಟವಾಗಿ ಉಲ್ಲೇಖಿಸದಿರುವುದು ಹಲವು ಸಂದೇಹಗಳಿಗೆ ಕಾರಣವಾಗಿದೆ.
 
ಕೊನೆಯಲ್ಲಿ ಏನೇನೂ ಅರ್ಥವಾಗದೆ ಗೊಂದಲದ ಕೂಪದಲ್ಲಿ ಬಿದ್ದಿರುವ ಬೊ.ರ. ಬ್ಯುರೋ, ಅಭಿವೃದ್ಧಿ ಪತ್ರಿಕೋದ್ಯಮವೆಂದರೆ ಸಂತಾನಾಭಿವೃದ್ಧಿ ಪುತ್ರಿಕೋದ್ಯಮವೇ ಎಂದು ಬಲವಾಗಿ ಪ್ರಶ್ನಿಸುತ್ತದೆ. ಹಾಗಿದ್ದರೆ ಪತ್ರಕರ್ತರೆಲ್ಲಾ ಪುತ್ರಕರ್ತರೇ ಎಂಬುದಕ್ಕೂ ಅವರು ಉತ್ತರಿಸಬೇಕಾಗಿದೆ. ಈ ಸಮಾರಂಭದಲ್ಲಿ ಗೌರವಾನ್ವಿತ ರಾಜ್ಯಪಾಲರು ಕೂಡ ಭಾಗವಹಿಸಿರುವುದು ಹಲವರ ಹುಬ್ಬೇರಿಸಿದೆ.
 
ಈ ಮಧ್ಯೆ, ವಿಜಯ ಕರ್ನಾಟಕ, ಪ್ರಜಾವಾಣಿ ಬಳಿಕ ಝೀ ನ್ಯೂಸ್ ಕೂಡ ಬೊಗಳೆ ರಗಳೆ ವಿರುದ್ಧ ತಲೆ ತಿರುಗಿ ಬಿದ್ದಿದ್ದು, ಸುಪ್ರೀಂ ಕೋರ್ಟ್ ಮೂಲಕ ಅದು ಆದೇಶವನ್ನು ಹೊರಡಿಸಿ ಜಗಜ್ಜಾಹೀರು ಮಾಡಿದೆ ಎಂಬುದು ನಮ್ಮ ಗಮನಕ್ಕೆ ಬಂದಿದೆ.
 
ಆದರೂ "ಸತ್ಯ ವಾಕ್ಯವ ನೆಚ್ಚಿ ನಡೆದರೆ ಮೆಚ್ಚನಾ ಪರಮಾತ್ಮನು" ಎಂಬ ನಮ್ಮ ಧ್ಯೇಯ ವಾಕ್ಯಕ್ಕೆ ಬದ್ಧವಾಗಿರುವುದಾಗಿ ಬೊ.ರ. ಬ್ಯುರೋ ಬೋರಲಾಗಿ ಸಾರುತ್ತದೆ.

Tuesday, July 11, 2006

ಫುಟ್ಬಾಲ್ ಬಗ್ಗೆ ಬೊಗಳೆ-ರಗಳೆ ನಿರ್ಲಕ್ಷ್ಯ: ಸ್ಪಷ್ಟನೆ

(ಬೊಗಳೂರು ಕಾಲೆಳೆಯೋ ಬ್ಯುರೋದಿಂದ)
ಬೊಗಳೂರು, ಜು.11- ಇಡೀ ವಿಶ್ವಕ್ಕೆ ಫುಟ್ಬಾಲ್ ಜ್ವರ ಬಂದು ಹೋಗಿದ್ದರೂ ಬೊಗಳೆ ರಗಳೆ ಬ್ಯುರೋ ಮಾತ್ರ ಗಡದ್ದಾಗಿ ನಿದ್ದೆ ಮಾಡುತ್ತಿದ್ದುದೇಕೆ ಎಂದು ವಿಶ್ವಾದ್ಯಂತ ನಮ್ಮ ಪತ್ರಿಕೆಯ ಒಂದೆರಡು ಓದುಗರ ಬಲುದೊಡ್ಡಸಮುದಾಯವು ಬೈಗುಳದ ಸುರಿಮಳೆ ಸುರಿಸಿದ್ದರಿಂದ ಕಣ್ಣಿಗೆ ನೀರು ತಗುಲಿದಂತಾಗಿ ಎಚ್ಚೆತ್ತುಕೊಂಡ ಬ್ಯುರೋ, ಏನಾದರೂ ಮಾಡಬೇಕಲ್ಲ ಎಂದು ಯೋಚಿಸಿತೊಡಗಿದಾಗ ಸ್ಪಷ್ಟನೆ ನೀಡುವುದೇ ಸರಿಯಾದ ಹೆಜ್ಜೆ ಎಂಬುದು ತಿಳಿಯಿತು.
 
ಆಗ ಹೊಳೆದದ್ದು 'ಕೋಟೆ ಸೂರೆ ಹೋದ ಮೇಲೆ ದಿಡ್ಡಿ ಬಾಗಿಲು ಹಾಕಿದರಂತೆ' ಎಂಬ ಪದದ ಅರ್ಥವನ್ನು ಓದುಗರಿಗೆ ವಿವರಿಸುವುದು. ಅದರ ಪರಿಣಾಮವೇ ಈ ಕಾಲೆಳೆಯೋ.... ಕಾಲ್ಚೆಂಡಿನ ವರದಿ.
 
ಓದುಗರ ಆಗ್ರಹದ ಮೇರೆಗೆ ಮೊದಲಾಗಿ ನಮ್ಮ ಬ್ಯುರೋದಿಂದ ಸ್ಪಷ್ಟನೆ:
 
"ಕಾಲ್ಚೆಂಡಾಟದಲ್ಲಿ ಚೆಂಡುಗಳು ಅತ್ತಿಂದಿತ್ತ ಅಲ್ಲಾಡುವುದು ಯಾವತ್ತೂ ರಾತ್ರಿ ವೇಳೆಯಲ್ಲೇ. ಅದೂ ಅಲ್ಲದೆ ಕೇವಲ ಆ ಒಂದು ಚೆಂಡಿಗಾಗಿ 11+11 ಮಂದಿ ಹೋರಾಡುವುದು, ಒಂದು ಗೋಲು ಬಾರಿಸಬೇಕಿದ್ದರೆ ಮೈದಾನದೊಳಗೆಯೇ ಕನಿಷ್ಠ 10 ಕಿ.ಮೀ. ಓಡುವುದು.... ಇವೆಲ್ಲಾ ಅರ್ಥ ಹೀನ ವಿಷಯ. ಎಲ್ಲರಿಗೂ ಒಂದೊಂದು ಚೆಂಡು ಕೊಟ್ಟುಬಿಟ್ಟಿದ್ದರೆ ಇರೋ ಒಂದು ಚೆಂಡಿಗಾಗಿ ಇಷ್ಟೊಂದು ಮಾರಾಮಾರಿ ನಡೆಯುವುದು ತಪ್ಪುತ್ತಿತ್ತು.
 
ಅಲ್ಲದೆ, ಹಗಲಲ್ಲೂ ಕಾಲೆಳೆಯೋ ಆಟ ಆಡಿ ಸುಸ್ತಾಗಿರುವ ನಮ್ಮ ಬ್ಯುರೋ ಸಿಬ್ಬಂದಿಗೆ ರಾತ್ರಿಯೂ ಕಾಲಿನಿಂದ ಒದೆಯೋ ಆಟದ ಬಗ್ಗೆ ಗಮನ ಹರಿಸುವುದು ಅಸಾಧ್ಯ.
 
ಹಗಲೂ-ರಾತ್ರಿ ಕಾಲು ಉಪಯೋಗಿಸಿದರೆ ಅದರ ಬಳಕೆ ಹೆಚ್ಚಾಗಿ ಕಾಲು ಕೈಕೊಟ್ಟರೆ, ಅಂದರೆ ನೇತಾಡಿದರೆ(hang ಆದ್ರೆ)?
ಮತ್ತು ಜಾಸ್ತಿ ಉಪಯೋಗದಿಂದಾಗಿ ಅದು ಹ್ಯಾಂಗ್ ಆಗಿ ಹ್ಯಾಂಗ್ ಹ್ಯಾಂಗೋ ಆಡಿದರೆ ಕಾಲನ್ನು ಕಟ್ ಡೌನ್ ಮಾಡಿ, ಕಾಲಾಡಿಸುವ ದೇಹವನ್ನು ಶಟ್ ಡೌನ್ ಮಾಡಿ ರೀಸ್ಟಾರ್ಟ್ ಮಾಡಬೇಕಾಗಬಹುದು ಎಂಬ ಆತಂಕ."
 
ಇಟಲಿ ವಿಜಯಕ್ಕೂ ಕಾಂಗ್ರೆಸ್ ಅಧ್ಯಕ್ಷರ
 
ನಿವಾಸದಲ್ಲಿ ಹರ್ಷಾಚರಣೆ ನಡೆಯಿತೆ?
 
ಕೊನೆಯದಾಗಿ, ಇಡೀ ವಿಶ್ವಕ್ಕೆ ತಗುಲಿಕೊಂಡ ಫುಟ್ಬಾಲ್ ವಿಶ್ವಕಪ್ ಜ್ವರ ಕೊನೆಗಾಣಿಸುವ ನಿಟ್ಟಿನಲ್ಲಿ ಇಟಲಿಯು ಕಪ್ಪುಕಪ್ಪಾದ ಕಪ್ಪನ್ನು ಗೆದ್ದುಕೊಂಡಾಗ ನವದೆಹಲಿಯಲ್ಲಿರುವ 10, ಜನಪಥದಲ್ಲಿರುವ ಕಾಂಗ್ರೆಸ್ ಅಧ್ಯಕ್ಷರ ನಿವಾಸದಲ್ಲಿ ಹೊಸವರ್ಷಾಚರಣೆಯ ಮಾದರಿಯಲ್ಲಿ ಹೊಸ ಹರ್ಷಾಚರಣೆ ನಡೆಯಿತೇ ಎಂಬ ಬಗ್ಗೆ ಅಸತ್ಯಾನ್ವೇಷಿ ತಲೆಕೆಡಿಸಿಕೊಂಡ ಕಾರಣ, ತಲೆಯೂ ಫುಟ್ಬಾಲ್ ಮಾದರಿಯಲ್ಲಿ ಅತ್ತಿಂದಿತ್ತ ಓಲಾಡತೊಡಗಿದೆ.

Monday, July 10, 2006

ಗುಟ್ಟು ಕಳ್ಳರಿದ್ದಾರೆ ಎಚ್ಚರಿಕೆ !

(ಬೊಗಳೂರು ಗುಟ್ರಟ್ಟು ಬ್ಯುರೋದಿಂದ)
ಬೊಗಳೂರು, ಜು.10- ದೇಶಾದ್ಯಂತ ಕಳ್ಳತನದ ಹೊಸ ವರಸೆಯೊಂದು ಆರಂಭವಾಗಿದ್ದು, ವಿಶೇಷವಾಗಿ ಹೆಂಗಸರು ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ.

ಆಗಾಗ್ಗೆ ಗುಟ್ಟು ರಟ್ಟಾಗುತ್ತಿರುವುದರಿಂದ ಈ ಹೊಸ ಹಗರಣವು ಬೆಳಕಿಗೆ ಬಂದಿದ್ದು, ಕೋಕಾ ಕೋಲಾ ಕಂಪನಿಯ ಗುಟ್ಟುಗಳನ್ನು ಮೂಟೆ ಕಟ್ಟಿ ಪೆಪ್ಸಿ ಕಂಪನಿಗೆ ಮಾರಾಟ ಮಾಡಿರುವ ವಿಷಯ ಈ ಹಗರಣಕ್ಕೆ ಹೊಸದೊಂದು ಸೇರ್ಪಡೆ.

ಈ ಹಿನ್ನೆಲೆಯಲ್ಲಿ ಗುಟ್ಟು ಮಾಡುವವರು, ಗುಟ್ಟು ಹೇಳುವವರು ಮತ್ತು ಗುಟ್ಟಾಗಿಯೇ ಏನೇನೋ ಮಾಡಿ ಮುಗಿಸುವವರು ಗಟ್ಟಿಯಾಗಿ ಕಟ್ಟು ಕಟ್ಟಿ ಇರಿಸಲು ಮತ್ತು ಅದನ್ನು ಬಿಟ್ಟುಕೊಡದಿರುವುದು ಸೂಕ್ತ ಎಂದು ಭಾವಿಸಲಾಗಿದೆ.
ಹೆಂಡಸರ ಬಗ್ಗೆ ವಿಶೇಷ ಗಮನ

ಗುಟ್ಟು ರಟ್ಟಾಗಿಸುವಲ್ಲಿ ಪರಿಣತವಾಗಿರುವ ಹೆಂಡಸರ ಮೇಲೆ ದೇಶ ವಿದೇಶಗಳ ಬಹುರಾಷ್ಟ್ರೀಯ ಕಂಪನಿಗಳ ಕೆಂಡಗಣ್ಣು ಬಿದ್ದಿದೆ ಎಂದು ವರದಿಯಾಗಿದೆ.

ಗುಟ್ಟೊಂದು ಹೇಳುವೆ, ಹತ್ತಿರ ಹತ್ತಿರ ಬಾ ಎಂದು ಮುಂದುವರಿಯುವ ಮತ್ತು ಈ ಹಾಡನ್ನೂ ಮುಂದುವರಿಸುವ ಗಂಗಸರ (ತುಳುವಿನಲ್ಲಿ ಗಂಗಸರ= ಹೆಂಡಸಾರಾಯಿ) ಮೇಲೂ ಅವರ ಗುಮಾನಿ ಹೆಚ್ಚಾಗತೊಡಗಿದೆ.

ಹೆಂಡಸಾರಾಯಿಗಳೆಲ್ಲಾ ತಮ್ಮ ಬೊಂಬಾಯಿಯಿಂದ "ನಿಮಗೆ ಮಾತ್ರ ಹೇಳುವೆ, ಬೇರಾರಿಗೂ ಹೇಳಬೇಡಿ" ಅಂತ ಊರಿಗೆಲ್ಲಾ ಕೇಳಿಸುವಂತೆಯೂ, ಕಂಡಕಂಡವರೆದುರು ಹೇಳುವುದರಿಂದಾಗಿಯೂ ಈ ಗುಟ್ಟು ಬರೇ ರಟ್ಟಾಗುತ್ತದೆ ಹೊರತು ಕಳವಾಗುವ ಸಾಧ್ಯತೆಗಳಿಲ್ಲ.

ಆದರೆ ಗಂಗಸಾರಾಯಿಗಳು ಗುಟ್ಟುಗಳನ್ನೆಲ್ಲಾ ಬಾಟ್ಲಿಯಲ್ಲಿ ಸಂಗ್ರಹಿಸಿ, ರಟ್ಟಿನ ಪೆಟ್ಟಿಗೆಗಳಲ್ಲಿ ಒಟ್ಟುಗೂಡಿಸಿ ಬೇರೆಯವರಿಗೆ ಮಾರಾಟ ಮಾಡುವ ಸಾಧ್ಯತೆಗಳು ಈ ಪ್ರಕರಣದಿಂದ ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ಸರ್ವರೂ ತಮ್ಮ ತಮ್ಮ ಗುಟ್ಟುಗಳನ್ನು ಗಟ್ಟಿಯಾಗಿ ತಮ್ಮ ತಮ್ಮಲ್ಲೇ ಇರಿಸಿಕೊಂಡು ಬೇರೆಯವರು ಎಷ್ಟೇ ಎಳೆದಾಡಿದರೂ ಬಿಟ್ಟುಕೊಡದಂತೆ ಸೂಚಿಸಲಾಗಿದೆ.
ಅಸತ್ಯಾನ್ವೇಷಿ ಗುಟ್ಟು ರಟ್ಟಿಸುವ ಸಂಚು!
ಈ ಮಧ್ಯೆ, ಗುಟ್ಟು ರಟ್ಟಾಗುವ ಪ್ರಕ್ರಿಯೆಗಳಿಂದ ಅಸತ್ಯಾನ್ವೇಷಿಗೂ ಬಿಸಿ ತಟ್ಟಿದ್ದು, ನಂ.1 ಪ್ರತಿಸ್ಪರ್ಧಿ ವಿಜಯ ಕರ್ನಾಟಕ ಪತ್ರಿಕೆಯೂ ಬೊಗಳೆ ರಗಳೆ ಬ್ಯುರೋ ವಿರುದ್ಧ (ತಲೆ)ತಿರುಗಿ ಬಿದ್ದಿದೆ. ಅದರ ಜು.3ರ ಸಂಚಿಕೆಯ ಸಿಂಪ್ಲಿ ಸಿಟಿ ಪುಟದಲ್ಲಿ ಸ್ವಾಮೀಜಿಯವರೊಬ್ಬರ ಮೂಲಕ ಅಸತ್ಯಾನ್ವೇಷಿಯ ಗುಟ್ಟು ರಟ್ಟಾಗಿಸುವ ಬಹಿರಂಗ ಸಂಚು ನಡೆದಿದೆ.

"ಅಸತ್ಯಾನ್ವೇಷಿಯಾದವನು ಈ ಸಮಾಜದ ರೀತಿ ನೀತಿಗಳನ್ನು ಒಪ್ಪುವುದಿಲ್ಲ, ಸುಳ್ಳು, ಸುಲಿಗೆ, ಮೋಸ, ಅನೀತಿ, ಬೂಟಾಟಿಕೆ ಇವುಗಳಿಗೆ ಅವನು ಹತ್ತಿರವಾಗುತ್ತಾನೆ" ಎಂಬ ಸ್ವಾಮೀಜಿ ಹೇಳಿಕೆಯನ್ನು ಬೇಕೆಂದೇ 180 ಡಿಗ್ರಿ ತಿರುಚಿ, ನಮ್ಮ ಮರ್ಯಾದೆ ತೆಗೆಯಲೆಂದೇ ಪ್ರಕಟಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಮಾಹಿತಿ ಹತ್ತಿಕ್ಕುವ ಕಾಯಿದೆ ಜಾರಿಗೊಳಿಸಬೇಕೆಂದು ನಮ್ಮ ಬ್ಯುರೋ ಜೋರಾಗಿ ಅರಚಾಡುತ್ತದೆ.

Saturday, July 08, 2006

ಮಾಹಿತಿ ಹತ್ತಿಕ್ಕು ಕಾಯಿದೆ ಶೀಘ್ರ ಜಾರಿ

(ಬೊಗಳೆ ರಗಳೆ ಅಪಪ್ರಚಾರ ಬ್ಯುರೋದಿಂದ)
ಬೊಗಳೂರು, ಜು.8- ಮಾಹಿತಿಗಳೆಲ್ಲಾ ಸೋರಿ ಹೋಗುತ್ತಿರುವುದರಿಂದ ಗಂಭೀರ ಕಳವಳ ವ್ಯಕ್ತಪಡಿಸಿರುವ ಕರುನಾಟಕ ಸರಕಾರವು, ಮಾಹಿತಿ ಹತ್ತಿಕ್ಕು ಕಾಯಿದೆಯನ್ನು ಜಾರಿಗೊಳಿಸಲು ನಿರ್ಧರಿಸಿದೆ.
 
ಲೋಕಾಯುಕ್ತರ ಅಧಿಕಾರಕ್ಕೆ ಸಂಬಂಧಿಸಿ ಅವರಿಗೆ ಹೆಚ್ಚಿನ ಹಲ್ಲು ಸೆಟ್‌ಗಳನ್ನು ಉಚಿತವಾಗಿ ನೀಡಲಾಗುತ್ತದೆ ಎಂದು ಹೇಳಿದ ಬೆನ್ನಿಗೆ ಲೋಕಾಯುಕ್ತರ ಮುಂದುವರಿಕೆಯೂ ಇಲ್ಲ, ಅಧಿಕಾರ ವ್ಯಾಪ್ತಿ ಹೆಚ್ಚಿಸುವುದೂ ಇಲ್ಲ ಎಂಬ ತದ್ವಿರುದ್ಧ ಹೇಳಿಕೆಗಳು ದಿನ ಬಿಟ್ಟು ದಿನ ಪ್ರಕಟವಾದ ಹಿನ್ನೆಲೆಯಲ್ಲಿ ಮತ್ತು ಪ್ರಾಮಾಣಿಕ ಅಧಿಕಾರಿ ಎಂದು ಜನರಿಂದ ಕೆಟ್ಟದಾಗಿ ಹೊಗಳಿಸಿಕೊಂಡಿರುವ ಪೊಲೀಸ್ ಅಧಿಕಾರಿ ಪಂಕಜ್ ಕುಮಾರ್ ಠಾಕೂರ್ ಅವರ ಎತ್ತಂಗಡಿ ವಿಷಯವೂ ಬಯಲಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಮಗೇಗೌಡರು ಈ ಕ್ರಮ ಕೈಗೊಂಡಿದ್ದಾರೆ.
 
ಠಾಕೂರ್ ವರ್ಗಾವಣೆಯಲ್ಲಿ ತನ್ನ ಮತ್ತು ತಮ್ಮ ಪಕ್ಷದವರ ಕೈವಾಡವಿರುವ ಕುರಿತ ಮಾಹಿತಿ ಹೀಗೆ ಸೋರಿ ಹೋಗಿದ್ದು ಹೇಗೆಂಬುದು ತಿಳಿಯದೆ ಕಂಗಾಲಾಗಿರುವ ಮುಖ್ಯಮಂತ್ರಿ, ಇದೀಗ ತಮ್ಮ ಹುಲ್ಲು ಹೊತ್ತ ಮಹಿಳೆಯ ಬೆನ್ನುಬಿದ್ದು (ಸ್ವಲ್ಪ ಜೋರಾಗಿಯೇ ಬಿದ್ದು) ಬೆನ್ನಿಗೆ ಚುಚ್ಚುತ್ತಿರುವ ಕಮಲದ ದಳಗಳಿಂದ ಬಚಾವಾಗಲು ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಗೊತ್ತಾಗಿದೆ.
 
ಅಲ್ಲದೆ ಈ ಕ್ರಮದ ಹಿಂದೆ ಸಾರ್ವಜನಿಕ ಹಿತಾಸಕ್ತಿಯೂ ಅಡಗಿದೆ. ಸಾರ್ವಜನಿಕರು ಮಾಡುವ ಯಾವುದೇ ಅನ್ಯಾಯ ಅಕ್ರಮಗಳ ಕುರಿತಾದ ಮಾಹಿತಿಗಳನ್ನು ಅವರೇ ಸ್ವತಃ ಸುಲಭವಾಗಿ, ಸರಳವಾಗಿ ಹತ್ತಿಕ್ಕಿಕೊಳ್ಳಬಹುದು.
 
ಇದರಿಂದ ಯಾರಿಗೂ ಏನೂ ತಿಳಿಯದು. ಎಲ್ಲರಿಗೂ ಸ್ವಾತಂತ್ರ್ಯ ನೀಡಿದಂತಾಗುತ್ತದೆ. ಬ್ರಿಟಿಷರು ನಮಗಿನ್ನೂ ಪೂರ್ಣ ಸ್ವಾತಂತ್ರ್ಯ ಕೊಟ್ಟಿರಲಿಲ್ಲ. ಈಗ ನಾವು ಕೊಡುತ್ತಿದ್ದೇವೆ. ಭಯಮುಕ್ತ ಸಮಾಜ ನಮ್ಮ ಗುರಿ ಎಂದವರು ಸ್ಪಷ್ಟಪಡಿಸಿದರು.

Thursday, July 06, 2006

"ಚಿಗುರು-ಬಾಲ" ಪ್ರತಿಭಾ ಸ್ಪರ್ಧೆ

(ಸೂಚನೆ: ನೆಟ್ಟೊದೆತಗಳ ಸಂಖ್ಯೆ 5000 ದಾಟಿದ ಪ್ರಯುಕ್ತ ಬಾಲ-ಕರುಗಳಿಗಾಗಿ ಆಯೋಜಿಸಲಾದ ಈ ಸ್ಪರ್ಧೆಗೆ ಪ್ರವೇಶ ಉಚಿತ. ಆದರೆ ಆ ತೆರಿಗೆ, ಈ ತೆರಿಗೆ, ಆ ಶುಲ್ಕ, ಈ ಶುಲ್ಕ ಅಂತ ಒಂದಿಷ್ಟು ಸಾವಿರ ನಗದನ್ನು ಮಾತ್ರ ನೀಡಿದರಾಯಿತು.)
 
(ನಮ್ಮ ಪ್ರೇತ ಪ್ರತಿನಿಧಿಯಿಂದ)
ಬೊಗಳೂರು, ಜು.6- ಬೊಗಳೆ ರಗಳೆ ಪತ್ರಿಕೆಯು ಮಕ್ಕಳ ಬಗ್ಗೆ ತೀವ್ರ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಪಾಲಕರು ಸುಪ್ರೀಂ ಕೋರ್ಟಿಗೆ ಮೊರೆ ಹೋಗುವುದಾಗಿ ಹೆದರಿಸಿದ ಹಿನ್ನೆಲೆಯಲ್ಲಿ ಇದೀಗ ಮಕ್ಕಳನ್ನು ಪ್ರೋತ್ಸಾಹಿಸಲು ಮತ್ತು ಅವರ ಪಾಲಕರನ್ನು ಖುಷಿ ಪಡಿಸಲು ಬ್ಯುರೋ ಒಂದು ವಿಶೇಷ ಸ್ಪರ್ಧೆಯನ್ನು ಆಯೋಜಿಸಿದೆ.
 
ಭವ್ಯ ನೆಟ್ ಲೋಕದ ಭಾವೀ ನೆಟ್ಟಿಗರೇ, ನಿಮ್ಮನ್ನು ಗಟ್ಟಿಗರಾಗಿಸಲು ಇದೊಂದು ರಗಳೆ ಬಾಕಿ ಇತ್ತು!. ಬಾಲದ ಕರುಗಳ "ಚಿಗುರುವ ಬಾಲ"ಪ್ರತಿಭಾ ಸ್ಪರ್ಧೆ ನಿಮಗಾಗಿ ಮತ್ತು ನಮ್ಮ ಜೇಬಿಗಾಗಿ ಆಯೋಜಿಸಲಾಗುತ್ತಿದೆ. ಇದಕ್ಕಿರುವ ನಿಬಂಧನೆಗಳಿಷ್ಟೇ: (ಓದಲು ಬರುತ್ತದೆಯಾದರೆ ಓದಿ, ಇಲ್ಲವೇ ಓದಿಸಿಕೊಳ್ಳಿ).
 
* ಪ್ರತಿಭಾ ಪ್ರದರ್ಶನದಲ್ಲಿ ಭಾಗವಹಿಸಬೇಕಿದ್ದರೆ ಬಹುಮಾನ ಪಡೆಯುವುದೇ ಮುಖ್ಯ ಗುರಿಯಾಗಿರಬೇಕೇ ಹೊರತು ಬೊಗಳೆ-ರಗಳೆ ಬ್ಯುರೋಕ್ಕೆ ಮಾತ್ರ ಬಹು-ನಾಮ ಹಾಕಬಾರದು.
 
* ಮಕ್ಕಳನ್ನು ಕರೆತರುವ ತಾಯಂದಿರು ಉಡುವ ಪಟ್ಟೆ ಸೀರೆ, ತೊಡುವ ಅಪ್ಪಟ ಚಿನ್ನದ ಆಭರಣ, ಅವರ ತುಟಿಗೆ ಲಿಪ್ ಸ್ಟಿಕ್, ಸೆಂಟ್, ಪೌಡರ್ --- ಇತ್ಯಾದಿ ಅಲಂಕಾರ ಸಾಮಗ್ರಿಗಳೆಲ್ಲಾ ಅತ್ಯಂತ ದುಬಾರಿಯಾದಷ್ಟೂ ಅವರ ಮಕ್ಕಳಿಗೆ ಬಹುಮಾನ ದೊರೆಯುವ ಸಾಧ್ಯತೆ ಹೆಚ್ಚು. ಅವರ ಸೀರೆ, ಆಭರಣ ಪ್ರದರ್ಶನಕ್ಕೆ ವಿಶೇಷ ಆದ್ಯತೆ.
 
* ಮಕ್ಕಳಿಗಾಗಿ ಆಯೋಜಿಸುವ ಸ್ಪರ್ಧಾ ಸಾಮಗ್ರಿ (ಉಡುಗೆ, ತೊಡುಗೆ, ಬಣ್ಣ, ಪೇಪರ್, ಇತ್ಯಾದಿ) ತಂದುಕೊಡುವುದಕ್ಕಾಗಿ ತಮ್ಮ ಸ್ವಂತ (ಬೇರೆಯವರದಲ್ಲ) ಕಾರು, ಬೈಕುಗಳನ್ನು ಮಾರಾಟ ಮಾಡುವ ಅಪ್ಪಂದಿರಿಗೆ ಪ್ರೋತ್ಸಾಹಕ ಬಹುಮಾನ ಉಂಟು. ಇನ್ನು ಮನೆ ಮಾರಿ ಬರುವ ಅಪ್ಪಂದಿರು ತಮ್ಮ ಮಕ್ಕಳಿಗೆ ಮೂರು ಕಾಸಿನ ಪ್ರಥಮ ಬಹುಮಾನ ನಿರೀಕ್ಷಿಸಬಹುದು.
 
* ಪಕ್ಕದ ಮನೆ "ಬಾಲ" ಅಷ್ಟು ಚೆನ್ನಾಗಿ ಕುಣಿಯುತ್ತದೆ, ಹಾಡುತ್ತದೆ, ನಿನಗೇಕೆ ಸಾಧ್ಯವಾಗುತ್ತಿಲ್ಲ ಎಂದು ತಮ್ಮ ಬಾಲ-ಕರುಗಳಿಗೆ ದಬದಬನೆ ಬಡಿಯುವ ಅಮ್ಮಂದಿರಿಗೆ ವಿಶೇಷ ಬಹುಮಾನ ಉಂಟು. ಈ ಪರಿಸ್ಥಿತಿಯಲ್ಲಿ ಮಕ್ಕಳ ಮುಖ ಭಾವ ನೋಡಿ ಅಮ್ಮಂದಿರ ಕೋಪ ಎಷ್ಟರ ಮಟ್ಟಿಗಿತ್ತು ಎಂದು ಅಂದಾಜಿಸಲಾಗುತ್ತದೆ.
 
* ಹುಡುಗ ಚೆನ್ನಾಗಿ ತನ್ನ ಪ್ರತಿಭೆ ಪ್ರದರ್ಶಿಸಿದರೂ, ಆ ಬಾಲ-ಕರುವಿನ ತಾಯಿ ಜರಿ ಸೀರೆ ಇಲ್ಲದೆ, ಆಭರಣ ತೊಡದೆ, ಅಲಂಕಾರವಿಲ್ಲದೆ ಬಂದಿದ್ದರೆ ಅಂಕಗಳನ್ನು ನೀಡಲಾಗುವುದಿಲ್ಲ.
 
* ಪಕ್ಕದ ಮನೆ ಹುಡುಗ ಭಾರಿ ಪೋಕರಿ, ಅವನಿಗೊಂದು ಪಾಠ ಕಲಿಸುತ್ತೇನೆ ಎಂದು ಎಲ್ಲಾ ಪಾಠ ಕಲಿಸಲು ತಮಗೆ ಗೊತ್ತಿದೆ ಅಂದುಕೊಳ್ಳುವ ತಾಯಂದಿರು ತಮ್ಮ ಮಕ್ಕಳಿಗೆ ಪಾಠ ಕಲಿಸಲು ವಿಫಲರಾಗಿರುತ್ತಾರೆ. ಹಾಗಾಗಿ ಪರಸ್ಪರರ ಮಕ್ಕಳನ್ನು ಅಕ್ಕ ಪಕ್ಕದ ಮನೆಗಳಿಗೆ ಕಳುಹಿಸಿ ಪಾಠ ಕಲಿಸಿಕೊಡಲು ಯತ್ನಿಸಬಹುದು. ಆದರೆ ಏನೋ ಮಾಡಲು ಹೋಗಿ ಏನೋ ಆಗಿ, ಮುಖ ಊದಿಸಿಕೊಂಡು ಬರುವ ತಾಯಂದಿರಿಗೆ ವಿಶೇಷ ಗ್ರೇಸ್ ಮಾರ್ಕ್ಸ್ ಉಂಟು.
 
ತಕ್ಷಣ ಅರ್ಜಿ ಸಲ್ಲಿಸಿ:
ಅರ್ಜಿ ಸಲ್ಲಿಸಬೇಕಾದ ವಿಳಾಸ
ಬೊಗಳೆ-ರಗಳೆ ಬ್ಯೂರೋ
ನೆಟ್ಟಗೆ ಬೊಗಳಿ ವಿಭಾಗ
ಬೊಗಳೂರು-000
ಮೇಲೇನೂ ನೋಂದಾಯಿಸಬಹುದು.

Wednesday, July 05, 2006

ಭ್ರಷ್ಟಾಚಾರವನ್ನು ಶಿಷ್ಟಾಚಾರವಾಗಿಸಲು ಯತ್ನ

(ಬೊಗಳೂರು ಭ್ರಷ್ಟಾಚಾರ ಬ್ಯುರೋದಿಂದ)
ಬೊಗಳೂರು, ಜು.5- ಭ್ರಷ್ಟಾಚಾರ ಪರವಾಗಿ ಸಮರ ಸಾರಿರುವ ಬೊಗಳೆ ರಗಳೆ ಬ್ಯುರೋ, ಇಂದು ಮತ್ತೊಂದು ಬಾರಿ ಮುಮ ಅವರನ್ನು ಭೇಟಿ ಮಾಡುವ ಅನಿವಾರ್ಯತೆ ಸೃಷ್ಟಿಸಿದ್ದು ಪ್ರಜಾವಾಣಿ ಪತ್ರಿಕೆ ವರದಿ ಮಾಡಿದ ಒಂದಕ್ಕೊಂದು ತಾಳೆಯಾಗದ ತದ್ವಿರುದ್ಧ ಸುದ್ದಿಗಳು. ಇದು ಮುಖ್ಯಮಂತ್ರಿಯವರ ತಪ್ಪಲ್ಲ ಎಂಬುದು ಪ್ರಾಥ'ಮಿಕ' ತನಿಖೆಯಿಂದ ಗೊತ್ತಾಗಿದೆ.
 
ಪತ್ರಿಕೆಯೇ ತದ್ವಿರುದ್ಧ ಹೇಳಿಕೆಯನ್ನು ಜು.2ರಂದು ಮತ್ತು ಜು.3ರಂದು ಮುಖಪುಟದಲ್ಲಿ ಆಯ್ದು ಪ್ರಕಟಿಸಿದೆ ಎಂಬುದು ಅಧಮ ಮಂಡಳಿಯ ಸ್ಪಷ್ಟನೆ.
 
ಕೋಲಾಯುಕ್ತರಿಗೆ ಕೋಲು, ಹಲ್ಲು ಕೊಡುತ್ತೇವೆ ಎಂದು ಹೇಳಿಕೆ ನೀಡಿದ ಬೆನ್ನಿಗೇ ಪ್ರಜಾವಾಣಿ, ಅವರ ಅಧಿಕಾರಾವಧಿ ವಿಸ್ತರಣೆ ಇಲ್ಲ ಎಂದು ಪ್ರಕಟಿಸಿದೆಯಲ್ಲಾ ಎಂದು ಮುಮ ಅವರನ್ನೇ ನೇರವಾಗಿ ತರಾಟೆ ಸಂದರ್ಶನಕ್ಕೆ ಒಳಪಡಿಸಲಾಯಿತು.
 
ಅವರು ತಮ್ಮ ಸಮರ್ಥನೆಯನ್ನು ಸಮರ್ಥವಾಗಿಯೇ ಸಮರ್ಥಿಸಿಕೊಂಡಿದ್ದಾರೆ. ಇನ್ನು ಮುಂದಿನದು ನಮ್ಮ ಬ್ಯುರೋ ಮಾತನಾಡುವುದಿಲ್ಲ. ಮುಮ ಅವರೇ ಮಾತನಾಡಿದ್ದಾರೆ. ಅವರ ಬಾಯಲ್ಲೇ point-wise ಆಗಿ ಕೇಳಿ.
 
1."ಭ್ರಷ್ಟಾಚಾರದ ವ್ಯಾಪ್ತಿ ಲೋಕಾಯುಕ್ತರ ವ್ಯಾಪ್ತಿಗಿಂತಲೂ ದೊಡ್ಡದು. ಆದುದರಿಂದ ಶ್ರೀಮಂತರ ಎದುರು ಸಣ್ಣವರನ್ನು ಕದನಕ್ಕೆ ಇಳಿಸುವುದು ಅನ್ಯಾಯವಲ್ಲವೇ?".
 
2. ಈ ಭೂಮಿ ಹುಟ್ಟಿದಂದಿನಿಂದಾರಭ್ಯ ಡೊಂಕಾಗಿರುವ ನಾಯಿಬಾಲವನ್ನು ಸರಿಪಡಿಸಿದವರಿದ್ದರೆ ತೋರಿಸಿ ನೋಡೋಣ. ಇದು ಲೋಕಾಯುಕ್ತರಿಗಂತೂ ಅಸಾಧ್ಯದ ಮಾತು.
 
3. ಲಂಚಾಧಿಕಾರಿಗಳು ರಕ್ತಬೀಜಾಸುರ ಸಂತತಿಯವರು. ಆದರೆ ಲೋಕಾಯುಕ್ತರಲ್ಲ, ರಕ್ತಬೀಜಾಸುರ ಸಂಹಾರ ರಕ್ತೇಶ್ವರಿಯಿಂದ ಮಾತ್ರವೇ ಸಾಧ್ಯ ಹೊರತು, ಸಂತತಿ ಸಣ್ಣದಾಗಿರುವ ಲೋಕಾಯುಕ್ತರಿಂದ ಅಸಾಧ್ಯ.
 
4. ಯಃಕಶ್ಚಿತ ಸರಕಾರಿ ಗುಮಾಸ್ತನೊಬ್ಬ ದಿನಬೆಳಗಾಗುವುದರೊಳಗೆ ಕೋಟ್ಯಧಿಪತಿಯಾಗುವುದು ನಮ್ಮ ರಾಜ್ಯದ ಪ್ರಗತಿಯ ಸಂಕೇತ, ಅಭಿವೃದ್ಧಿಯ ಸಂಕೇತ. ರಾಜ್ಯಕ್ಕೆ ಸಮೃದ್ಧಿಯ ಹೆಸರು ಬರುವುದರಿಂದ ಬಂಡವಾಳ ಹರಿದು ಬರುತ್ತದೆ. ಆಗ ಮೇಯಲು ಸಾಕಷ್ಟು ಹುಲ್ಲುಗಾವಲು ಕೂಡ ದೊರಕಿದಂತಾಗುತ್ತದೆ.
 
5. ರಾಜ್ಯದಲ್ಲಿ ಭ್ರಷ್ಟಾಚಾರವನ್ನೇ ಶಿಷ್ಟಾಚಾರವಾಗಿಸುವ ಇರಾದೆ ಇರುವುದರಿಂದ ಮತ್ತು ಅನಿವಾರ್ಯವೂ ಆಗಿಬಿಟ್ಟಿರುವುದರಿಂದ ಲೋಕಾಯುಕ್ತ ಹುದ್ದೆಯೇ Waste, waste, waste.!
 
6. ಅವರು ಇದುವರೆಗೆ ಮಾಡಿದ್ದು ಅಲ್ಲಲ್ಲಿ ದಾಳಿ ನಡೆಸಿದ್ದು ಮತ್ತು ವರದಿ ಸಲ್ಲಿಸಿದ್ದು ಮಾತ್ರ. ಏನಾದರೂ ಪರಿಣಾಮಕಾರಿಯಾದ ಕ್ರಮ ಕೈಗೊಂಡಿದ್ದಾರೆಯೇ? ಅಥವಾ ಭ್ರಷ್ಟಾಚಾರಿಗಳ ಸಂಖ್ಯೆಗೆ ಏನಾದರೂ ಕಡಿವಾಣ ಹಾಕುವುದು ಅವರಿಗೆ ಸಾಧ್ಯವಾಗಿದೆಯೇ? ಎಷ್ಟು ಜನರಿಗೆ ಶಿಕ್ಷೆ ಆಗಿದೆ? ಅವರೆಲ್ಲಾ ಹೊರಬರಲಿಲ್ಲವೇ? ಲೆಕ್ಕ ಕೊಡಿ ನೋಡೋಣ.
 
7. ಕಾಗದದ ಹುಲಿ ಯಾವತ್ತಿದ್ದರೂ ನೋಡುವುದಕ್ಕೆ ಮಾತ್ರವೇ ಚೆಂದ. ಆದುದರಿಂದ ನಿಜವಾದ ಹುಲಿ ತರುವ ಉದ್ದೇಶವೇ ಇಲ್ಲ.
 
8. ನಮ್ ಮಂತ್ರಿಮಂಡಲದಲ್ಲಿ ಯುವಕರಿಗೆ ಆದ್ಯತೆ ನೀಡಿ, ಹಳಬರಿಗೆ ನಿವೃತ್ತಿಯ ಮಾರ್ಗ ತೋರಿದ್ದೇವೆ. ಅಂತೆಯೇ ಲೋಕಾಯುಕ್ತರು ಕೂಡ ದಣಿದಿದ್ದಾರೆ, ಅವರಿಗೆ ವಿಶ್ರಾಂತಿ ಅಗತ್ಯ.
 
9. ಇಂದಲ್ಲ ನಾಳೆ ಅವರು ನಮ್ಮ ಮೇಲೂ ದಾಳಿ ಮಾಡುವ ಸಾಧ್ಯತೆಗಳಿವೆ. ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕಾದದ್ದು ನಮ್ಮ ಧರ್ಮ-ಕರ್ಮ.
 
10. ಅವರಿಗೇನಾದರೂ ಹೆಚ್ಚು ಅಧಿಕಾರ ಕೊಟ್ಟರೆ ಮತ್ತು ಮುಂದುವರಿಸಿದರೆ, ಜನಸಾಮಾನ್ಯರು ಅಭಿನಂದನೆಗಳ ಸುರಿಮಳೆ ಸುರಿಸುತ್ತಾರೆ. ಈ ಮಳೆಯಿಂದ ಪ್ರವಾಹ ಬರಬಹುದು, ಕನ್ನಂಬಾಡಿ ಕಟ್ಟೆ ಒಡೆಯಬಹುದು, ತಮಿಳುನಾಡಿನವರು ನೀರು ಬಿಡೀ ಅಂತ ಗೋಗರೆಯಬಹುದು... ಇನ್ನೂ ಏನೇನೋ ಸರಣಿ ಅನಾಹುತಗಳಾಗಬಹುದು.
 
ಕೊಟ್ಟ ಕೊನೆಯದಾಗಿ ವಿಧಾನ ಸೌಧದ ಸುತ್ತ ಠಳಾಯಿಸಿ ಒಳ ಹೊಕ್ಕು ಅಲ್ಲಿ ಸದನ ಕಲಾಪ ವೇಳೆ ಗಡದ್ದಾಗಿ ಯೋಚನಾಮಗ್ನರಾದ ಶಾಸಕರನ್ನು ಬಡಿದೆಬ್ಬಿಸಿ ಲೋಕಾಯುಕ್ತರ ಬಗ್ಗೆ ಕೇಳಲಾಯಿತು.
 
"ಲೋಕಾಯುಕ್ತ.....?"
 
ಇಷ್ಟೇ ಕೇಳಿದ್ದು. ಧಡಕ್ಕನೆ ಸೀಟಿನೆಂದೆದ್ದು, ಆಕಾಶವೇ ಕಳಚಿಬಿದ್ದಂತೆ, ಕಳವಳ, ಆತಂಕ ಮುಖಭಾವದಿಂದ (ಬಹುಶಃ ಲೋಕಾಯುಕ್ತರು ತಮ್ಮ ಮನೆಗೇ ದಾಳಿ ಮಾಡಿದ್ದಾರೆ ಎಂದು ಯೋಚಿಸಿರಬೇಕು) ಅವರಿಂದ ದೊರೆತ ಉತ್ತರ-
"ಇಲ್ಲ, ಇಲ್ಲ.. ಖಂಡಿತವಾಗಿಯೂ ನಾನು ಅಕ್ರಮವಾಗಿ ಸಂಪಾದಿಸಿಲ್ಲ, ಜನರೇ ಕೆಲಸ ಮಾಡಿಸಲೆಂದು ನನಗೆ ಕೊಟ್ಟದ್ದು. ಇದು ಯಾರೋ ವಿರೋಧ ಪಕ್ಷದವರ ಕುತಂತ್ರ. ಇದನ್ನು ಬಯಲಿಗೆಳೆಯುತ್ತೇವೆ. ನಾನು ಸ್ವಚ್ಛ ಅಂತ ಸಾಬೀತುಪಡಿಸುವೆ"!

Tuesday, July 04, 2006

ಕೋಲಾಯುಕ್ತರಿಗೆ ಹಲ್ಲು ಕೊಟ್ಟರೆ, ಮೇಯಲು ಹುಲ್ಲು ಎಲ್ಲಿ?

(ಬೊಗಳೂರು ಲೋಕಾ-ಹಲ ಬ್ಯುರೋದಿಂದ)
ಬೊಗಳೂರು, ಜು.4- ಕೋಲಾಯುಕ್ತರಿಗೆ ಹಲ್ಲು ಕೊಡುವುದಿಲ್ಲ ಎಂದು ಹೇಳುವ ಮೂಲಕ ಕರ್ನಾಟಕ ಮುಖ್ಯಮಂತ್ರಿ ಕುಮಾರ ಮಹಾಶಯರು, ಆಗಾಗ್ಗೆ ದಾಳಿಗೆ ತುತ್ತಾಗುತ್ತ ಕಂಗೆಟ್ಟಿರುವ ಬಡಪಾಯಿ ಸರಕಾರಿ ನೌಕರ ವರ್ಗಕ್ಕೆ "ಬೆದರದಿರಿ ಮಕ್ಕಳೇ" ಎಂಬ ಅಭಯವನ್ನು ನೀಡಿದ್ದಾರೆ.

ಕೋಲಾಯುಕ್ತರು ಕರ್ನಾಟಕದ ಸರಕಾರಿ ಅಧಿಕಾರಿಗಳಲ್ಲಿ ಕೋಲಾಹಲ ಮೂಡಿಸುತ್ತಿದ್ದಾರೆ. ಅವರು ಭಯೋತ್ಪಾದನೆ ಮಾಡುತ್ತಿದ್ದಾರೆ ಎಂದು ಕೆಲವು ಅಧಿಕಾರಿಗಳು ದೂರು ನೀಡಿರುವುದು ತಮ್ಮ ಗಮನಕ್ಕೂ ಬಂದಿದೆ ಎಂದು ಅವರು ಅಸತ್ಯಾನ್ವೇಷಿಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಸರಕಾರಿ ಅಧಿಕಾರಿಗಳಿಗೆ ನೆಮ್ಮದಿಯಿಂದ ನಿದ್ದೆ ಮಾಡಲೂ ಬಿಡುವುದಿಲ್ಲ ಎಂಬುದು ಕೋಲಾಯುಕ್ತರ ಮೇಲಿರುವ ಪ್ರಮುಖ ಆರೋಪಗಳಲ್ಲೊಂದು. ಈ ಬಗ್ಗೆ ತನಿಖೆ ನಡೆಸಲಾಗುತ್ತದೆ. ಈ ತನಿಖಾ ಸಮಿತಿಗೆ ನಿಮ್ಮನ್ನು ಬೇಕಾದರೂ ನಾಮನಿರ್ದೇಶನ ಮಾಡಲಾಗುತ್ತದೆ ಎಂದು ಅವರು ಆಮಿಷ ನೀಡಿದರು.

ಏನೋ ಪಾಪ, ಥರ್ಡ್ ಕ್ಲಾಸ್‌ ಕೆಲಸ ಮಾಡುತ್ತಾ ಥರ್ಡ್ ಕ್ಲಾಸ್ ಪಾಸ್ ಆಗುತ್ತಾ ಇದ್ದ ಸರಕಾರಿ ಮಿಕಗಳು, ಅದೇನೋ ಮಾಡ್ಕೊಂಡು ಮೂರು ಕಾಸಿನವರಾಗಿ ಸಂಪಾದನೆ ಮಾಡುತ್ತಿರುತ್ತಾರೆ. ಮೂರು ಕಾಸಿಲ್ಲದಿದ್ದರೂ ಎರಡು ಕಾಸಾದರೂ ಸಿಗುತ್ತಿರುತ್ತದೆ. ಈಗ ಕೋಲಾಯುಕ್ತರ ಕೋಲಾಹಲದಿಂದಾಗಿ ಈ ಸರಕಾರಿ ಪಾಪಿಗಳ (ಹ್ಹೆ, ಹ್ಹೆ, ಇದು ಪಾಪದವರು ಎಂಬುದರ "ಅಲ್ಪ" ರೂಪ ಎಂದೂ ಮುಮ ಸಮರ್ಥಿಸಿಕೊಂಡರು.) ಹೊಟ್ಟೆಗೆ ಕಲ್ಲು ಬಿದ್ದಿದೆ. ಅವರಿಗೆ ಮೇಯಲು ಏನೂ ದೊರೆಯದ ಕಾರಣ ಅವರ ಹೆಂಡತಿ ಮಕ್ಕಳು ಬರೇ ಈಗ ರಾಶಿ ಹಾಕಿರುವ ಇಡುಗಂಟನ್ನೇ ಕರಗಿಸುತ್ತಾ ಹೊಟ್ಟೆ ತುಂಬಾ ಉಂಡು ತೇಗಿ ಉಪವಾಸ ಬೀಳುತ್ತಿದ್ದಾರೆ ಎಂದು ಅವರು ಕನಿಕರ ತೋರಿದರು.

ಕೋಲಾಯುಕ್ತರಿಗೆ ಹೆಚ್ಚುವರಿ ಅಧಿಕಾರ ನೀಡಿ ಹಲ್ಲು ಕೊಟ್ಟರೆ ಅವರ ಕಚ್ಚುವಿಕೆಯ ಪ್ರಮಾಣ ತೀವ್ರವಾಗುತ್ತದೆ. ಹೀಗೆ ಸರಕಾರದ ಎಲ್ಲ ಇಲಾಖೆಗಳಿಗೂ ಅವರು ಭೇಟಿ ನೀಡಿದರೆ ಸರಕಾರ ಎಂಬುದೇ ಶೂನ್ಯವಾಗುತ್ತದೆ. ಯಾಕೆಂದರೆ ಎಲ್ಲಾ ಅಧಿಕಾರಿಗಳು ಸಸ್ಪೆಂಡ್ ಆದರೆ ಸರಕಾರ ನಡೆಸುವವರಾದರೂ ಯಾರು? ಅರಾಜಕತೆ ಉದ್ಭವಿಸುವುದಿಲ್ಲವೇ ಎಂದೂ ಅವರು ಪ್ರಶ್ನಿಸಿದರು.

ಈಗ ನಿವೃತ್ತರಾಗಿರುವ ಕೋಲಾಯುಕ್ತರು ಸ್ವಲ್ಪ ದಿನ ವಿಶ್ರಾಂತಿ ತೆಗೆದುಕೊಳ್ಳಲಿ. ಅವರ ಅವಧಿ ಖಂಡಿತಾ ವಿಸ್ತರಿಸುವುದಿಲ್ಲ. ನಂತರದ ದಿನಗಳಲ್ಲಿ ಅವರ ವಿರುದ್ಧವೂ ಕೆಲವೊಂದು ಕೇಸುಗಳನ್ನು ರಾಶಿ ಹಾಕಲಾಗುತ್ತದೆ ಎಂದು ಅವರು ಸುದ್ದಿಗಾರರ ದಯನೀಯ ಮುಖ ನೋಡುತ್ತಾ, ಮುಖಮುಚ್ಚಿಕೊಂಡು ಹೇಳಿದರು.

ಇದೇಕೆ ಎಂದು ಬೆಪ್ಪುತಕ್ಕಡಿಯಂತೆ ಕೇಳಿದ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಮುಮ, ಅಷ್ಟೂ ತಿಳಿಯೋದಿಲ್ವೆ? ಅವರು ನಮ್ಮದೇ ಜನರ (ಅಧಿಕಾರಿವರ್ಗ) ಮೇಲೆ ಕೇಸುಗಳ ರಾಶಿ ಹಾಕಿದ್ದು, ಅದರ ಅಡಿಯಲ್ಲಿ ಅಧಿಕಾರಿಗಳೇ ಕಾಣಿಸುತ್ತಿಲ್ಲ. ಹೀಗಿರುವಾಗ ಇಷ್ಟೊಂದು ಕೇಸು ಹಾಕುವುದು ಸಮಂಜಸವಲ್ಲ, ರಾಶಿ ಹಾಕಿದರೆ ಏನಾಗುತ್ತದೆ ಎಂಬುದು ಅವರ ಅರಿವಿಗಾದರೂ ಬರೋದು ಬೇಡ್ವೆ ಎಂದು ಮತ್ತೊಮ್ಮೆ ಕರವಸ್ತ್ರದಿಂದ ಬೆವರೊರಸಿಕೊಳ್ಳುವ ನೆಪದಲ್ಲಿ ಮುಖ ಮುಚ್ಚಿಕೊಂಡು ಅವರು ನುಡಿದರು.

ಈಗ ನೆನಪಾಗಿದ್ದು, "ಮಾನವ ಜನ್ಮ ದೊಡ್ಡದು.... ಅದ... ಹಾಳು ಮಾಡಲು ಬೇಡಿ ಹುಚ್ಚಪ್ಪಗಳಿರಾ" ಎಂಬ ದಾಸವಾಣಿ ನೆನಪಾಯಿತು.

ಕೊನೆಗೆ ವರದಿಗಾರರಿಗೇ ಮು.ಮ. ಕೇಳಿದ ಪ್ರಶ್ನೆ:

"ಕೋಲಾಯುಕ್ತರಿಗೆ ಹಲ್ಲು ಕೊಟ್ಟರೆ ಹುಲ್ಲೆಗಳಿಗೆ ಮೇಯಲು ಹುಲ್ಲು ಸಿಗುವುದಾದರೂ ಎಲ್ಲಿ?"

ಅಲ್ಲಿಗೆ... "ಹುಟ್ಟಿಸಿದ (ಕುಮಾರ !) ಸ್ವಾಮಿ ತಾ ಹೊಣೆಗಾರನಾದ ಮೇಲೆ ಘಟ್ಟಿಯಾಗಿ ರಕ್ಷಿಪನು ಇದಕೆ ಸಂಶಯವಿಲ್ಲ" ಎಂಬ ದಾಸವಾಣಿ ನೆನಪಿಸಿಕೊಂಡು ಅಸತ್ಯಾನ್ವೇಷಿಯ ಇಂಟರ್ವ್ಯೂ ಬಂದ್!

Monday, July 03, 2006

ಭೂಮಿ 1.2 ಡಿಗ್ರಿ ಚಿತ್ರದುರ್ಗದತ್ತ ವಾಲಿದ್ದೇಕೆ?

(ಬೊಗಳೂರು ಕಲ್ಕೋಟೆ ಬ್ಯುರೋದಿಂದ)
ಬೊಗಳೂರು, ಜು.3- ಕರ್ನಾಟಕದ ವೀರರ ಮಣಿಯೂ ವೀರ ರಮಣಿಯೂ ಆಗಿರುವ ಒನಕೆ ಓಬವ್ವ ಇದ್ದ ನಾಡಿನಲ್ಲಿ ಇತ್ತೀಚೆಗೆ ಪೊಲೀಸರ ಸಂಖ್ಯೆಯಲ್ಲಿ ದಿಢೀರ್ ಏರಿಕೆ ಕಂಡು ಬಂದಿದೆ ಮಾತ್ರವಲ್ಲ, ಇಡೀ ಭೂಮಿಯೇ ಜನಸಂಖ್ಯಾ ಭಾರದಿಂದಾಗಿ ಚಿತ್ರದುರ್ಗದತ್ತ ಒಂದಿಂಚು ವಾಲಿರುವ ಅಂಶವು ಭೂ'ಗರ್ಭ'ಶಾಸ್ತ್ರಜ್ಞರನ್ನೆಲ್ಲಾ ಕುಲಗೆಡಿಸಿಬಿಟ್ಟಿದೆ.

ಇದರ ಹಿನ್ನೆಲೆ ಅರಸಿ ಹೋದಾಗ ಕಂಡು ಬಂದ ಅಸತ್ಯ ಮತ್ತಷ್ಟು ಕುಚೋದ್ಯಕರವಾಗಿದೆ. ನಾಡಿನ ಎಲ್ಲ ಪೊಲೀಸರು ಕೂಡ ಚಿತ್ರದುರ್ಗಕ್ಕೆ ವರ್ಗಾವಣೆ ಕೊಡಿ ಎಂದು ರಾಜ್ಯದ ಪೊಲೀಸ್ ಮಹಾ ವರಿಷ್ಠರ ಕಚೇರಿ ಎದುರು ಸಾಲುಗಟ್ಟಿ ನಿಂತಿರುವುದು ಬೊಗಳೆ ರಗಳೆ ಬ್ಯುರೋದ ಗಮನಕ್ಕೆ ಬಂದಿದೆ. ತಕ್ಷಣವೇ ಹೆಡೆಮುರಿ ಕಟ್ಟಿಕೊಂಡು ಸರ್ವ ಸನ್ನದ್ಧವಾಗಿ ಇದರ ಹಿನ್ನೆಲೆ ಅನ್ವೇಷಣೆಗೆ ಏಕ ಸದಸ್ಯ ಬ್ಯುರೋದ ಮತ್ತೊಂದು ತಂಡ ಪಯಣ ಆರಂಭಿಸಿತು.

ಹೀಗೆ ಏಕಾಂಗಿ ಬ್ಯುರೋದ ಉಭಯ ತಂಡಗಳು ಕಂಡುಕೊಂಡ ರದ್ದಿಗಳನ್ನು ಕಲೆ ಹಾಕಿದಾಗ ಇದೆಲ್ಲಾ ಒನಕೆ ಓಬವ್ವನಿಗಾಗಿ ಅಲ್ಲ, ಬದಲು ಲಟ್ಟಣಿಗೆ ಓಬವ್ವರಿಗಾಗಿ ಎಂಬ ಅಮೂಲ್ಯ ಅಂಶ ಬಯಲಾಯಿತು. ಇದಕ್ಕೆಲ್ಲಾ ಕಾರಣ ವಿಜಯ ಕರ್ನಾಟಕ ಪತ್ರಿಕೆಯ ಮೇಲಿನ ವರದಿ ಎಂದು ಊಹಿಸಲಾಗಿದೆ.

ಇಲ್ಲಿ ಪೊಲೀಸರಿಗೆ ಮದುವೆ ಉಚಿತ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಘೋಷಿಸಿರುವುದರಿಂದ, ಈಗಾಗಲೇ ವರದಕ್ಷಿಣೆ ಕೊಡಲಾಗದೆ ಪರಿತಪಿಸುತ್ತಿದ್ದ ಕನ್ಯಾಪಿತೃಗಳು ಕೂಡ ಅಲ್ಲಿನ ಪೊಲೀಸರ ಮನೆಯೆದುರು ಸಾಲುಗಟ್ಟಿ ನಿಂತಿದ್ದರು. (ಸೂಚನೆ: ಈ ಕನ್ಯಾ ಪಿತೃಗಳನ್ನು ಕ.ಪಿ.ಗಳು ಅಂತ ಕರೆಯುವುದನ್ನು ನಮ್ಮ ಬ್ಯುರೋ ಕಡ್ಡಾಯವಾಗಿ ಖಂಡಿಸುತ್ತದೆ.)

ಮುಂದಿನ ಕ್ಯೂ ನಿಲ್ಲುವ ಸರದಿ ಹೆರಿಗೆ ಆಸ್ಪತ್ರೆಗಳಲ್ಲಿ. ಇಲ್ಲಿ ನಿಂತವರು ವರ್ಷದ ಹಿಂದಷ್ಟೇ ಮದುವೆಯಾದ ಹೆಣ್ಣುಮಕ್ಕಳು. ಹೆಚ್ಚಿನವರು ಹೆಣ್ಣು ಹೆರುವ ನಿರೀಕ್ಷೆಯಲ್ಲಿರುವವರು. ಹೆಣ್ಣು ಹೆತ್ತರೆ ಆ ಕುಟುಂಬಕ್ಕೆ ತಲಾ 2 ಸಾವಿರ ರೂ. ದೊರೆಯುತ್ತದೆ ಎಂಬ ಘೋಷಣೆ ಇದಕ್ಕೆ ಕಾರಣ. ಈ ಕಾರಣಕ್ಕೆ ಬಹುಪತ್ನಿ ವಲ್ಲಭರಾಗಿರುವ ಕೆಲವು ಮಂದಿ ಪೊಲೀಸರು, ತಮ್ಮ ಗಂಟು ಪಡೆಯಲು ಮತ್ತು ಅದನ್ನು ಇಡುಗಂಟಾಗಿಸಲು, ಇನ್ನಷ್ಟು ಬೆಳೆಸಲು "ಬೇಕಾಗುವ" ಎಲ್ಲಾ ಪ್ರಯತ್ನಗಳನ್ನೂ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ಮುಂದಿನ ದಿನಗಳಲ್ಲಿ ಚಿತ್ರದುರ್ಗದ ಕಲ್ಲಿನ ಕೋಟೆಯ ಸುತ್ತಮುತ್ತೆಲ್ಲಾ ಮಕ್ಕಳ ಕಿಲ ಕಿಲ ನಗು, ಕಿರುಚಾಟದಿಂದ ತುಂಬಿಹೋಗಲಿದೆ ಎಂದು ನಿರೀಕ್ಷಿಸಲಾಗಿದ್ದು, ಜನಸಂಖ್ಯಾ ಹೆಚ್ಚಳದ ಪರಿಣಾಮವಾಗಿ ಈಗಾಗಲೇ ವಾಲಿರುವ ಭೂಮಿಯ ವಾಲಿಕೆಯು ಇನ್ನೂ 2.05 ಡಿಗ್ರಿಗೆ ಏರುವ ಸಾಧ್ಯತೆ ಇದೆ ಎಂದು ಭೂಗರ್ಭವತಿ ಶಾಸ್ತ್ರಜ್ಞರು ತಿಳಿಸಿದ್ದಾರೆ.

Saturday, July 01, 2006

ಭಾರತದಲ್ಲಿ ಗಿಂಬಳದ ದರ ಭಾರಿ ಏರಿಕೆ

(ಬೊಗಳೂರು ಗಿಂಬಳ ಬ್ಯುರೋದಿಂದ)
ಬೊಗಳೂರು, ಜು.1- ಭಾರತದಲ್ಲಿ ಸಂಬಳದ ಏರಿಕೆಯು ಅತ್ಯಧಿಕ ಎಂಬ ಅಂಶವು ಇಲ್ಲಿ ಬಯಲಾಗಿರುವುದು ಬೊಗಳೂರು ಬ್ಯುರೋದ ಗಮನಕ್ಕೆ ಬಂದ ಬಳಿಕ ತೀವ್ರ ಆಕ್ರೋಶಗೊಂಡಿರುವ ಬ್ಯುರೋ ಸಿಬ್ಬಂದಿ, ಕೇವಲ ಸಂಬಳ ಹೆಚ್ಚಾಗಿದೆ ಎಂದು ಹೇಳಿರುವ ಕೆಲ್ಲಿ ಸಂಸ್ಥೆಯು, ಗಿಂಬಳದ ಬಗ್ಗೆ ಏನೂ ಪ್ರಸ್ತಾಪಿಸದೆ ಇರುವುದಕ್ಕೆ ಕೆಂಡವನ್ನು ವಾಂತಿ ಮಾಡಿದ್ದಾರೆ.

ಈ ಕಾರಣಕ್ಕೆ, ಗಿಂಬಳ ಏರಿಕೆಯ ಅಂಕಿ ಅಂಶ ಹುಡುಕಾಟಕ್ಕಾಗಿ ಹುಡುಗಾಟದಿಂದ ಹೊರಟಾಗ ಹಲವಾರು ವಿಷಯಗಳು ಬ್ಯುರೋ ಗಮನಕ್ಕೆ ಬಂತು.

ಈ ಬಗ್ಗೆ ಬೊಗಳೂರಿನ ತೀರಾ ಹಿಂದುಳಿದ ಮೂಲೆಯೊಂದರಲ್ಲಿ ಎರಡೂ ಕೈಗಳ ಬೆರಳುಗಳನ್ನು ಎಣಿಸುತ್ತಾ ಕೂತಿದ್ದ ಬಡ ಬೋರೇಗೌಡರನ್ನು ಪತ್ರಿಕೆಗಾಗಿ ಸಂದರ್ಶಿಸಲಾಯಿತು.

ಸಂದರ್ಶನ ವೇಳೆ ಕೆಲವು ಅಚ್ಚರಿಯ ವಿಷಯಗಳು ಹೊರಬಂದವು.

"ನೋಡಪ್ಪಾ, ಹಿಂದೆ ನಮ್ ಕಾಲದಲ್ಲೆಲ್ಲಾ, ಜಮೀನಿನ ಹಕ್ಕು ಪತ್ರ ಪಡೆಯೋದಿಕ್ಕೆ ಮೂರು ಕಾಸು ಕೊಟ್ಟಿದ್ದರೆ ಸಾಕಾಗ್ತಿತ್ತು. ಆದರೆ ಈಗ ಆ ಮೂರು ಕಾಸಿನವರಿಗೆ ಹಾಗೆಂದರೆ ಏನೆಂಬುದೇ ಗೊತ್ತಿಲ್ಲ. ಈಗೇನಿದ್ದರೂ ನಮ್ಮನ್ನು ಕನಿಷ್ಠ ಮೂರು ತಾಸು ಕಾಯಿಸಿ ತಲಾ ಮೂರು ಸಾವಿರ ಕೀಳುತ್ತಾರೆ" ಎಂಬುದು ಬೋರೇಗೌಡ ನೀಡಿರುವ ಅತಿ ಸಣ್ಣ ಉದಾಹರಣೆ.

ಇನ್ನೊಂದು ಉದಾಹರಣೆ ಆತನ ಬಾಯಿಂದ ಆತನಿಗೆ ಅರಿವಿಲ್ಲದಂತೆಯೇ ಉದುರಿತು. ಅದನ್ನು ಹೆಕ್ಕಿಕೊಂಡು ಓದಿ ನೋಡಿದಾಗ ಅದು ನಮ್ಮ ಪೋಲಿಗಳ ಬಗ್ಗೆ ಬರೆದಿದ್ದು!

ಪೊಲೀಸರು ಕೂಡ ಹಿಂದೆಲ್ಲಾ ನಾಕಾಣೆ ಕೊಟ್ರೆ ಕಳ್ಳರನ್ನು ಹಿಡಿದುಕೊಡ್ತಿದ್ರು, ಈಗ ನಾಕಾಣೆ ಕೊಟ್ರೆ ಕಳ್ಳರನ್ನು ನಾ ಕಾಣೆ ಎನ್ನುತ್ತಾ ಟಾಟಾ ಹೇಳುತ್ತಾರೆ. ಯಾಕಂದ್ರೆ ಕಳ್ಳರೇ ಅವರ ಕಿಸೆಯೊಳಗಿರುತ್ತಾರೆ ಮತ್ತು ಕಳವಿನಲ್ಲಿ ಅವರಿಗೆ ನಾಕಾಣೆಗಿಂತಲೂ ಮಿಗಿಲಾದ ದೇವರಾಣೆಯ ಪಾಲುಗಳು ಸಿಗುತ್ತಿರುತ್ತವೆ.

ಹಿಂದೆ ಸರಕಾರಿ ನೌಕರರು 'ಸರಕಾರದ ಕೆಲಸ ದೇವರ ಕೆಲಸ' ಎಂದು ಅಕ್ಷರಶಃ ಭಾವಿಸಿ, ಹಣ ಅನ್ನೋದು ಅತ್ಯಂತ ಶುದ್ಧ ಮತ್ತು ಮೈಲಿಗೆಗೆ ಸಂಬಂಧಿಸಿದ ವಿಷಯವಾದುದರಿಂದ ಕಚೇರಿಯಲ್ಲಿ ಮೇಜಿನ ಕೆಳಗೆ ಮತ್ರವೇ ಕೈಚಾಚುತ್ತಿದ್ದರು.

ಆದ್ರೆ ಈಗಿನವರು ಹಾಗಲ್ಲ, ರಸ್ತೆ ಬದಿ ಸಿಕ್ಕರೂ ಪಕ್ಕಕ್ಕೆ ಕರೆದು "ಒಂದಷ್ಟು ತಳ್ಳಿ" ಅಂತನ್ನುತ್ತಾ 'ಏನೂ ನಡೆದಿಲ್ಲ, ಇದೆಲ್ಲಾ ಮಾಮೂಲಿ' ಎಂಬಂತೆ ನಡೆದುಕೊಳ್ಳುತ್ತಾರೆ.

ಅದೂ ಅಲ್ಲದೆ "ಸರಕಾರಿ ಕೆಲಸ ದೇವರ ಕೆಲಸ" ಎನ್ನುತ್ತಾ, ಆ ಕೆಲಸವನ್ನು ಮುಟ್ಟಿದರೆ ಎಲ್ಲಿ ಮೈಲಿಗೆಯಾಗುತ್ತದೋ, ಅಶುದ್ಧವಾಗುತ್ತದೋ ಎಂದು ಕೆಲಸ ಮಾಡದೇ ಕೂರುವ ಮತ್ತು ಲಂಚಪ್ರಸಾದಕ್ಕಾಗಿ ಸದಾ ಹಾತೊರೆಯುತ್ತಿರುವ ಲಂಚಿಗರ ರಕ್ಷಣೆಗಾಗಿ ಮಾನ್ಯ ವಿಚಿತ್ರಾನ್ನಿಗಳು ಲಂಚಾಷ್ಟಕವನ್ನು ರಚಿಸಿ ಲಂಚಿತ ಪಾಮರರನ್ನು ಪುನೀತರನ್ನಾಗಿಸಲು ಹೊರಟಿದ್ದಾರೆ.

ಅವರ ಈ ಲಂಚಾಷ್ಟಕದ ಮುದ್ರಣಕ್ಕೆ ಭಾರಿ ಬೇಡಿಕೆ ಬಂದಿರುವುದರಿಂದ ಡಾ ವಿನ್ಸಿ ಕೋಡ್ ಮೂಲೆಗುಂಪಾಗಿದೆ. ಇದರಿಂದ ತೀವ್ರ ಆಕ್ರೋಶಗೊಂಡಿರುವ ಅಂತಾರಾಷ್ಟ್ರೀಯ ಸಮುದಾಯವು, ವಿಚಿತ್ರಾನ್ನ ದ ಪೇಟೆಂಟ್ ಗಳಿಸಲು ಸಂಚು ಹೂಡಿ ಸೇಡು ತೀರಿಸಿಕೊಳ್ಳುತ್ತಿದೆ ಎಂದು ತಿಳಿದುಬಂದಿದೆ.

ಎಂಜಿನ್ ಇಲ್ಲದ ರೈಲು: ಬ್ರೇಕಿಂಗ್ ನ್ಯೂಸ್ ಅಲ್ಲವೆಂದ ಬೊ.ರ.

[ಬೊಗಳೂರು ಪಟ್ಟೆ-ರಹಿತ ರೈಲು ಬ್ಯುರೋ] ಬೊಗಳೂರು: ಆಫ್‌ಲೈನ್ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯೊಂದು ಆನ್‌ಲೈನ್ ಸಂಪಾದಕರ ಕಣ್ಣು ಕುಕ್ಕಿದ್ದು, ಎಂಜಿನ್ ಇಲ್ಲದೆ...