Thursday, August 31, 2006

ಮಿಗ್ ವಿಮಾನ ಪತನ ರಹಸ್ಯ ಬಯಲು

(ಬೊಗಳೂರು some-ಶೋಧನಾ ಬ್ಯುರೋದಿಂದ)
ಬೊಗಳೂರು, ಆ.31- ಭಾರತದಲ್ಲಿ ಆಗಾಗ್ಗೆ "ಮಿಗ್ ವಿಮಾನ ಪತನ. ಪೈಲಟ್ ಸಾವು"; "ಮಿಗ್ ಪತನ, ಪೈಲಟ್ ಪಾರು" ಎಂಬೋ ಸುದ್ದಿಗಳನ್ನು ನಾವು ಓದುತ್ತಿರುತ್ತೇವೆ. ಇದರ ಹಿಂದಿನ ರಹಸ್ಯ ಬಯಲಾಗಿದೆ.

ಈ ರಹಸ್ಯ ಬಯಲಾಗಲು ಕಾರಣ ಮತ್ತೊಂದು ರಹಸ್ಯವೇ ಆಗಿದೆ ಎನ್ನುವುದು ವಿಶೇಷ. ಈ ರಹಸ್ಯ ಶೋಧಕ್ಕೆ ಹರಸಾಹಸ ಮಾಡಿದಾಗ ಈ ವಿಷ್ಯಾ ಬೆಳಕಿಗೆ ಬಂತು.

ಇಲ್ಲೊಂದು ಸುದ್ದಿ ಪ್ರಕಟವಾಗಿತ್ತು. ಅದರ ಹಿಂದೆ ಅಸತ್ಯಾನ್ವೇಷಣೆಗೆ ಹೊರಟಾಗ ಸಿಕ್ಕಿದ್ದು ಬರೀ ಬೊಗಳೆ ಎಂದು ತಳ್ಳಿ ಹಾಕುವಂತಿಲ್ಲ.

ಈಜುಡುಗೆ ಧರಿಸಿದ್ದ ನಟಿಯೊಬ್ಬಳನ್ನು ನೋಡಿದ ಹೆಲಿಕಾಪ್ಟರ್ ದಿಢೀರನೆ ಕೆಳಗೆ ಉರುಳಿ ಬಿದ್ದದ್ದು ಈಗ ಸದ್ದು ಮಾಡಿರುವ ಸುದ್ದಿ. ಈಕೆಯ ಉಡುಗೆಯ ಪ್ರಮಾಣವನ್ನು ನೋಡುವಾಗ ಬಹುಶಃ ಹೆಲಿಕ್ಆಫ್‌ಟರ್ ಆಫ್! ತಲೆ ಟರಟರನೆ ತಿರುಗಿ ಬಿದ್ದೇ ಬಿಟ್ಟಿತು!

ಆಕೆಯ ತಕ್ಷಣದ ಪ್ರತಿಕ್ರಿಯೆ ಕೂಡ ಅದ್ಭುತವಾಗಿದೆ. ಹೆಲಿಕಾಪ್ಟರ್ ಬಿತ್ತು, ನೋಡಿದಾಗ ಬಟ್ಟೆ ಇರಲಿಲ್ಲ. ದಯವಿಟ್ಟು ಕ್ಷಮಿಸಿ, ಯಾರಾದ್ರೂ ನಂಗೆ ಬಟ್ಟೆ ತೊಡಿಸ್ತೀರಾ? ಅಂತ ಆಕೆ ಕೇಳಿದ್ದಾಳೆ.

ಇನ್ನು ಭಾರತದ ವಿಷ್ಯ. ಭಾರತದಲ್ಲಿ ದೇಶ ವಿದೇಶಗಳಿಂದ ನಟಿಯರು ಆಮದಾಗುತ್ತಿರುತ್ತಾರೆ, ಕನಿಷ್ಠ ಉಡುಗೆ ತೊಡುವುದರಲ್ಲಿ ನಂ.1 ಸ್ಥಾನಕ್ಕಾಗಿ ಪೈಪೋಟಿ ನಡೆಯುತ್ತಿರುತ್ತದೆ. ಈ ಹಂತದಲ್ಲಿ ಮಿಗ್ ವಿಮಾನಗಳು ಕೂಡ ಆಗಸದಲ್ಲಿ ಬ್ಲಾಗಿಂಗ್, ಸರ್ಚಿಂಗ್.... ಇತ್ಯಾದಿ ಕಾರ್ಯಾಚರಣೆಯಲ್ಲಿ ತೊಡಗಿರುತ್ತವೆ.

ಮಿಗ್ ವಿಮಾನಗಳಿಗೆ ಈ ಬಿಚ್ಚು ಮನಸ್ಸಿನ ಬಿಚ್ಚಮ್ಮರ ಕನಿಷ್ಠ ಉಡುಗೆ ಕಂಡಿರಬೇಕು, ಅವುಗಳಿಗೆ ಕಂಡಿರದಿದ್ದರೂ ಅದರೊಳಗೆ ದುರ್ಬೀನು ಇಟ್ಟುಕೊಂಡು ನೋಡುತ್ತಿರುವ ಪೈಲಟ್‌ಗಳಿಗಾದರೂ ಕಂಡಿರಬೇಕು. ನೋಡಬಾರದ್ದನ್ನು ಅವರು ನೋಡಿರಬೇಕು. ಹಾಗಾಗಿ... ತಗೊಳ್ಳಿ.... ಅಮಲೇರಿ ಬಿದ್ದೇಬಿಟ್ಟವು.

ಈ ಸಂಶೋಧನಾ ಸುದ್ದಿಯನ್ನು ಈಗಾಗಲೇ ಮಿಗ್ ಪತನದಿಂದ ಕಳವಳಗೊಂಡಿರುವ ಕೇಂದ್ರ ಶಿಕ್ಷ-ರಕ್ಷಣಾ ಸಚಿವರಿಗೆ ಕಳುಹಿಸಲಾಗಿದೆ. ನೊಬೆಲ್ ಪ್ರಶಸ್ತಿಗಾಗಿ ಕಾಯಲಾಗುತ್ತಿದೆ.

Wednesday, August 30, 2006

ಬ್ಲಾಗುವಿಕೆಗಿಂತನ್ಯ ತಪವು ಇಲ್ಲ...!!!

[ಇದು off the track... ಇದು ಬೊಗಳೆ ಅಲ್ಲ, ನಿಮಗೊಂದಿಷ್ಟು ದೀರ್ಘ ರಗಳೆ]
(ಬ್ಲಾಗಿಸುವಿಕೆಗಿಂತನ್ಯ ತಪವು ಇಲ್ಲ... ಬ್ಲಾಗಬಲ್ಲವರಿಂಗೆ ಪೇಳುವೆನು ಸೊಲ್ಲ... ಅಂತ ದಾಸರು ಈಗಿದ್ದಿದ್ದರೆ ಹಾಡುತ್ತಿದ್ದರೇನೋ ಎಂಬಷ್ಟರ ಮಟ್ಟಿಗೆ ಬೆಳೆದ ಬ್ಲಾಗ್ ಜಗತ್ತಿಗೆ ಕಾಲಿಟ್ಟ ಬಗ್ಗೆ ಒಂದಿಷ್ಟು ಅನಿಸಿಕೆ.
 
ಮೊದಲಾಗಿ ಬೊಗಳೆ ರಗಳೆ ಬ್ಯುರೋದ ಎಲ್ಲಾ ಓದುಗರಿಗೆ ನಮೋ ನಮಃ.
 
ಕಳೆದ ಏಪ್ರಿಲ್ ತಿಂಗಳಾರಂಭದಲ್ಲಿ ಅದ್ಯಾವ ಗಳಿಗೆಯಲ್ಲಿ ಈ ಬೊಗಳೆ ಬಿಡಲು ಆರಂಭಿಸಿದೆನೋ... ಇಂದು ವಿಶ್ವಾದ್ಯಂತ ಇರುವ ಕನ್ನಡಪ್ರೇಮಿಗಳ ಕುತೂಹಲಭರಿತ net ಕಣ್ನೋಟಗಳ ಕಾರಣದಿಂದಾಗಿ ಈ ಬ್ಲಾಗಿನ ಹಿಟ್ ಕೌಂಟರ್ 10 ಸಹಸ್ರ ದಾಟುತ್ತಿರುವುದು ಅತೀವ ಸಂತಸ ತರುತ್ತಿದೆ. ಇದೇ ಸಂದರ್ಭ Blog Postಗಳ ಸಂಖ್ಯೆ ಕೂಡ ಶತಕ ದಾಟಿದ ಸಂಭ್ರಮ. ಇದು ಕಾಕತಾಳೀಯ. ಅಂದರೆ ಇದು ಈ ಬ್ಲಾಗಿನಲ್ಲಿ ನನ್ನ 111ನೇ ಲೇಖನ. ಬಹುಶಃ ನೆಟ್‌ನಲ್ಲೇ ಜಾಲಾಡುತ್ತಾ ಇರೋ ಜನರಿಗೆ ಸಣ್ಣ ಸಂಗತಿಯಾಗಿ ಕಂಡೀತಾದರೂ ಇದು ನನ್ನ ಮಟ್ಟಿಗೆ ದೊಡ್ಡ ಸಂಗತಿಯೇ. ಇದಕ್ಕೆ ಕಾರಣ ಕೆಳಗೆ ಹೇಳಿದ್ದೇನೆ. ಅದಕ್ಕಾಗಿ ನಿಮಗೆ ಒಂದಿಷ್ಟು ಕಿರಿಕಿರಿ ಮಾಡುತ್ತಿದ್ದೇನೆ.
 
ಈ ನಾಲ್ಕೈದು ತಿಂಗಳ ಅವಧಿಯಲ್ಲಿ, ಅಪರಿಚಿತನಾಗಿದ್ದುಕೊಂಡೇ ನಾನು ಗಳಿಸಿಕೊಂಡ ಮಿತ್ರರ, ಆತ್ಮೀಯರ ಸಂಖ್ಯೆ ನೋಡಿದರೆ ಮನದುಂಬಿ ಬರುತ್ತದೆ. ಮತ್ತೆ ಕೆಲವರು ನನ್ನ ಪರಿಚಯ ಹೇಳದಿರಲು ಸಾಧ್ಯವೇ ಇಲ್ಲ ಎಂಬಷ್ಟು ಆತ್ಮೀಯರಾಗಿಬಿಟ್ಟಿದ್ದಾರೆ. ಮಾತು ಬೆಳ್ಳಿಯಾದರೆ, ಮೌನ ಬಂಗಾರ ಎಂಬ ಧ್ಯೇಯಕ್ಕೆ ಕಟ್ಟುಬಿದ್ದವ ನಾನು. ಬಹುಶಃ ಈ ಕಾರಣಕ್ಕೆ ಬಹಿರಂಗ ಪ್ರಪಂಚದಲ್ಲಿ ಮಿತ್ರರ ಕೊರತೆ ಎದುರಿಸುತ್ತಿದ್ದೆನೋ ಏನೋ, ಆದರೆ ಈ ಬ್ಲಾಗ್ ಮುಖಾಂತರ ಅನಾಮಿಕನಾಗಿದ್ದುಕೊಂಡು ಗಳಿಸಿಕೊಂಡ ಗೆಳೆಯರ ಬಳಗ ಹೃದಯತುಂಬಿ ಬರುವಷ್ಟು ದೊಡ್ಡದು. ಕೇವಲ ಒಂದೆರಡು ತಿಂಗಳಲ್ಲೇ ಅವರಲ್ಲಿ ಕೆಲವರಂತೂ ಬಹಳ ವರ್ಷಗಳಿಂದಲೇ ನಾವು ಪರಿಚಿತರು ಅನ್ನುವಷ್ಟು ಆತ್ಮೀಯರಾಗಿದ್ದಾರೆ. ಒಟ್ಟಿನಲ್ಲಿ.. ನನ್ನ ಜೀವನದಲ್ಲಿ ನಿಮ್ಮಂಥ ಸನ್ಮಿತ್ರರು ಸಿಗಲು ಈ ಬ್ಲಾಗು ವೇದಿಕೆಯಾಗಿದೆ. ಈ ಮಿತ್ರರನ್ನು ಪಡೆದ ಸಂತೋಷ ಇದೆಯಲ್ಲಾ.... ಅದುವೇ ನನ್ನ ಸ್ವಾರ್ಥ ಅಂತ ಮೊದಲೇ ಸ್ಪಷ್ಟವಾಗಿ ಹೇಳುತ್ತಿದ್ದೇನೆ.
 
ದುಃಖ ದುಮ್ಮಾನಗಳು ಮಾನವ ಸಹಜವಾದುದು. ಅಂಥ ಸಹಜ ಕಾರಣವೊಂದಕ್ಕೆ ಮುದುಡಿಹೋಗಿದ್ದ ಮನಸ್ಸು ದಾರಿ ತಪ್ಪಿ ಎಲ್ಲೆಲ್ಲೋ ಓಡಾಡುತ್ತಾ ನಿಯಂತ್ರಣ ಕಳೆದುಕೊಳ್ಳುವ ಹಂತಕ್ಕೆ ಬಂದು ಮುಟ್ಟಿದಾಗ ಹೊಸದಾಗಿ ಮತ್ತು ಆಕಸ್ಮಿಕವಾಗಿ ಪರಿಚಯವಾದದ್ದು ಈ ಬ್ಲಾಗಿಸುವಿಕೆ. ಇದರತ್ತ ಪೂರ್ಣ ಮನಸ್ಸು ಕೇಂದ್ರೀಕರಿಸಿದ ಬಳಿಕ ನಾನು ನಾನೇ ಆಗಿ ಉಳಿದುಬಿಟ್ಟೆ. ಬ್ಲಾಗ್ ವಿಹಾರ ಮಾಡುತ್ತಿದ್ದಾಗ ಕಣ್ಣಿಗೆ ರಾಚಿದ್ದು ಮಜಾವಾಣಿ ಎಂಬ ತಾಣ. ಅದುವೇ ನನ್ನ ಈ ಅಭಿಯಾನಕ್ಕೆ ಪ್ರೇರಣೆ ಎಂದರೂ ತಪ್ಪಲ್ಲ.
 
ಒಂದಿಷ್ಟು ದಿನ ರಜೆ ಹಾಕಿ ಊರಿಗೆ ಹೋದಾಗ Blog ಓದುಗರು comments ಮೂಲಕ ತೋರಿದ ಆದರ, ಕಳಕಳಿ, ಪ್ರೀತಿ ವಾತ್ಸಲ್ಯದ ಮಾತುಗಳನ್ನು ಮರೆಯಲು ಸಾಧ್ಯವೇ?
 
ವಾಸ್ತವವಾಗಿ ಬ್ಲಾಗ್ ಅನ್ನೋ ಒಂದು ಸಂಗತಿ ಇದೆ ಎಂಬುದು computer illiterate ಆಗಿರೋ ನನಗೆ ಗೊತ್ತಾದದ್ದೇ 2006 ಮಾರ್ಚ್ ಉತ್ತರಾರ್ಧದಲ್ಲಿ. ಅದುವರೆಗೆ ಇಂಟರ್ನೆಟ್ ಕೂಡ ನನಗೆ ಅಷ್ಟೇನೂ ಪರಿಚಯವಿರಲಿಲ್ಲ. ಕೆಲವೊಂದು ಇ-ಮೇಲ್, news sites ಮಾತ್ರ ಜಾಲಾಡುತ್ತಿದ್ದೆ. ಬಹುಶಃ ಇದೇ ಕಾರಣಕ್ಕೆ ನನಗಿದೊಂದು ದೊಡ್ಡ ವಿಷಯವಾಗಿರುವುದು.
 
ಹಾಗಿದ್ದರೆ ಬ್ಲಾಗು ಆರಂಭಿಸಿ ಅದರಲ್ಲೇನು ತುಂಬುವುದು? ಬಹುಶಃ ಇಂಟರ್ನೆಟ್ ವಿಹಾರಿಗಳೆಲ್ಲರೂ ಯಾಂತ್ರಿಕ ಅಥವಾ ತಾಂತ್ರಿಕ ಯುಗ ಎನ್ನಬಹುದೇನೋ... ಅಂತೂ ಅವಸರದ ಯುಗದಲ್ಲಿದ್ದಾರೆ. ಕಂಪ್ಯೂಟರ್ ಜಗತ್ತಿನ ಕೆಲಸ ಕಾರ್ಯಗಳೇ ಅಂಥದ್ದು, ದಿನವಿಡೀ ದಣಿದು ಬಂದ ಮನಸ್ಸುಗಳನ್ನು ಒಂದಿಷ್ಟು ಉಲ್ಲಸಿತಗೊಳಿಸುವ ಒಂದಿಷ್ಟು stuff ಹಾಕಬಾರದೇಕೆ ಎಂಬುದು ಹೊಳೆದದ್ದೇ ತಡ, "ಸ್ವಲ್ಪ ಕಾಯಿರಿ ಅಸತ್ಯಾನ್ವೇಷಣೆಗೆ ಹೊರಟಿದ್ದೇನೆ" ಎಂದು ಬರೆದುಬಿಟ್ಟು.... ಒಂದೆರಡು ದಿನ ಯೋಚಿಸಿದೆ.
 
ಬರೇ ಮನರಂಜನೆ ಕೊಟ್ಟರೆ ಸಾಲದು, ಮಾಹಿತಿ ಕೂಡ ಇರಲಿ, ಮಾತ್ರವಲ್ಲ ಇನ್ನೊಂದು ಅತ್ಯಂತ ಪ್ರಮುಖ ವಿಷಯ ಎಂದರೆ ಓದುಗರಿಗೆ ಓದುವ ತಾಳ್ಮೆ ಬೇಕಲ್ಲಾ... ಅದಕ್ಕಾಗಿ ಚಿಕ್ಕ-ಚೊಕ್ಕ ಲೇಖನ ಹಾಕೋಣ ಎಂದು ನಿಶ್ಚಯಿಸಿ ಕಾರ್ಯರೂಪಕ್ಕಿಳಿದೆ. 2-3-4 ದಿನಗಳಿಗೊಮ್ಮೆ ಏನಾದರೂ ಬರೆದು ಹಾಕುತ್ತಿದ್ದೆ. ಅಂತೂ ಈಗ ದಿನಕ್ಕೊಂದು stuff ಹಾಕಬೇಕಾದ ಅನಿವಾರ್ಯತೆಗೆ ಸಿಲುಕುವಂತೆ ನೀವೆಲ್ಲಾ ಮಾಡಿದ್ದೀರಿ! ಹಾಗಂತ ನಾನು ಬ್ಲಾಗಿಸುತ್ತಿರುವುದು ದೊಡ್ಡ ಸಾಧನೆ ಅಂತ ಹೇಳಿಕೊಳ್ಳಲು ಈ ಲೇಖನವಲ್ಲ. ಕೆಲವೊಂದು ಬ್ಲಾಗೋದುಗರ ಒತ್ತಾಸೆಗೆ ಸ್ಪಂದಿಸಬೇಕಾಗಿರುವ ಕಾರಣ ಈ ಬರಹ.
 
ಒಟ್ಟಿನಲ್ಲಿ ನಾಲ್ಕೈದು ತಿಂಗಳ ಈ ಅವಧಿಯಲ್ಲಿ ನನ್ನ ಬ್ಲಾಗು ಬೆಳೆಯಲು, ಬೆಳೆಸಲು ಸಲಹೆ ಸೂಚನೆ ನೀಡುತ್ತಾ, ಮಾತ್ರವಲ್ಲದೆ ಟೀಕೆ-ಟಿಪ್ಪಣಿ ಮೂಲಕವೂ ಆಗಾಗ್ಗೆ ನನ್ನ ಮೆದುಳಿಗೆ ಒಂದಿಷ್ಟು 'ಮೇವು' ನೀಡುತ್ತಾ ಪೋಷಿಸುತ್ತಿರುವವರಿಗೆಲ್ಲಾ ನಾನು ಚಿರಋಣಿ.
 
ಇದು Statcounter ಅಳವಡಿಸಿದ ಬಳಿಕದ ಲೆಕ್ಕಾಚಾರವಷ್ಟೆ. ಈ ಕೌಂಟರು ಜಾಲಾಡಿದಾಗ ನನ್ನ ಮನಸ್ಸು ಮತ್ತಷ್ಟು ಪ್ರಫುಲ್ಲಿತವಾಗಿದೆ. ಇದಕ್ಕೆ ಕಾರಣವೆಂದರೆ ನನ್ನ ಬ್ಲಾಗಿನ ಓದುಗರ ಸಂಖ್ಯೆ ಹೆಚ್ಚುತ್ತಿರುವುದು. ಕರ್ನಾಟಕ, ಭಾರತಕ್ಕಿಂತಲೂ ಹೊರ ದೇಶಗಳಲ್ಲೇ ಈ ಸಂಖ್ಯೆ ಹೆಚ್ಚಾಗುತ್ತಿದೆ ಎಂಬುದು ಮತ್ತೊಂದು ವಿಶೇಷ. ಆರಂಭದಲ್ಲಿ ಭಾರತ ಮತ್ತು ವಿದೇಶದ ಓದುಗರ ಪ್ರಮಾಣ 80:20 ಅನುಪಾತದಲ್ಲಿ ಇದ್ದರೆ, ಈಗ ಅದು ಉಲ್ಟಾ ಆಗಿಬಿಟ್ಟಿದೆ. ದೇಶ ಬಿಟ್ಟು ಹೊರಗಿರುವವರಿಗೆ ತಮ್ಮ ತವರೂರು, ಭಾಷೆ ಮೇಲೆ ಅಭಿಮಾನ, ಕಳಕಳಿ ಹೆಚ್ಚು ಎಂಬುದನ್ನು ಈ ಸಂದರ್ಭದಲ್ಲಿ ಕಂಡುಕೊಂಡಿದ್ದೇನೆ.
 
ಬ್ಲಾಗಿನಲ್ಲಿನ ಅಂಶಗಳಿಂದ ಅಥವಾ ಅವಸರ commentನಿಂದ ಯಾರ ಮನಸ್ಸಿಗಾದರೂ ನೋವಾಗಿದ್ದರೆ ಅದನ್ನು ಹೊಟ್ಟೆಗೆ ಹಾಕಿಕೊಳ್ಳಿ ಎಂದು ಹೇಳುವುದರೊಂದಿಗೆ, ಈ ತಾಣಕ್ಕೆ ಭೇಟಿ ನೀಡುವ ಸಕಲ ಓದುಗರಲ್ಲಿ ಒಂದು ವಿನಂತಿ: ದಯವಿಟ್ಟು, ಈ on-line ಬ್ಲಾಗು ಹೇಗನಿಸಿತು, ಹೇಗಿರಬೇಕಿತ್ತು, ಯಾವುದು ಇಷ್ಟವಾಗಲಿಲ್ಲ ಅಂತ ಇಲ್ಲೊಂದು one-line ಅನಿಸಿಕೆ ಕೊಟ್ಟುಬಿಡಿ. ಇದು ಕೂಡ ಕುತೂಹಲ ತಣಿಸಿಕೊಳ್ಳುವ ಸ್ವಾರ್ಥ !
(ಕನ್ನಡ ಫಾಂಟ್ ಇಲ್ಲದವರು ಇಂಗ್ಲಿಷ್ ಬಳಸಿದರೂ ಯಾವುದೇ ಮುಜುಗರ ಇಲ್ಲ ಅಂತ ಸ್ಪಷ್ಟಪಡಿಸುತ್ತಿದ್ದೇನೆ.)

Tuesday, August 29, 2006

ಮಾನ(ವ) ರಕ್ಷಣೆಗೆ ಪ್ರಾಣಿಗಳಿಂದ ಬಟ್ಟೆ ತೊಟ್ಟು ಪ್ರತಿಭಟನೆ

(ಬೊಗಳೂರು ಅಮಾನವೀಯ ಬ್ಯುರೋದಿಂದ)
ಬೊಗಳೂರು, ಆ.29- ಮಾಂಸಾಹಾರ ತ್ಯಜಿಸಬೇಕು ಎಂದು ತಮ್ಮ ಪರವಾಗಿ ಮಾನವ ಪ್ರಾಣಿಗಳು ಭಾರತದಲ್ಲೂ ಬಟ್ಟೆಬಿಚ್ಚಿ ಹೋರಾಟ ನಡೆಸುತ್ತಿರುವುದರಿಂದ ಉತ್ತೇಜನಗೊಂಡಿರುವ ಮಾನವೇತರ ಪ್ರಾಣಿಗಳು, ಇದೀಗ ಮಾನ(ವರ) ರಕ್ಷಣೆಗೆ ಮೈತುಂಬಾ ಬಟ್ಟೆ ಧರಿಸಿ ಪ್ರತಿಭಟನೆಗೆ ಸಜ್ಜಾಗುತ್ತಿರುವ ಅಂಶವೊಂದು ಬೆಳಕಿಗೆ ಬಂದಿದೆ.

ಈ ಪ್ರತಿಭಟನೆಯ ನೇತೃತ್ವವನ್ನು ಅಖಿಲ ಭಾರತ ಗಾರ್ದಭ ಸಂಘವು ವಹಿಸಿಕೊಂಡಿದೆ.

ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಜನಸಂಖ್ಯಾ ಸ್ಫೋಟ ಹೆಚ್ಚುತ್ತಿರುವುದರಿಂದ ಮಾನವರ ಉಡುಗೆ ತೊಡುಗೆಯ ಪ್ರಮಾಣದಲ್ಲಿ ದಯನೀಯ ಕುಸಿತ ಕಂಡುಬಂದಿದೆ. ಕೆಲವು ಮಾನವ ಪ್ರಾಣಿಗಳು ಉಡಲು ಬಟ್ಟೆ ಇಲ್ಲದೆ ತುಂಡು ತುಂಡಾದ, ಅಲ್ಲಲ್ಲಿ ಹರಿದ ಬಟ್ಟೆ ಧರಿಸುತ್ತಾ ಇದ್ದಾವೆ. ಆದರೆ ಅದಕ್ಕೆ ಹೊಸ ಫ್ಯಾಶನ್ ಎಂದು ಕರೆದುಕೊಂಡು ಅವರು ನೋವು ನುಂಗಿ ಸಂಭಾಳಿಸಿಕೊಂಡು ಹೋಗುತ್ತಾರೆ ಎನ್ನುವುದು ಅಭಾಗಾಸಂ ಅಧ್ಯಕ್ಷ ಗಾರ್ದಭ ರಜಕ್ ಅಭಿಮತ.

ಈ ಕಾರಣಕ್ಕೆ, ಅಗಸ ತಮ್ಮ ಮೇಲೆ ಹೇರುವ ಬಟ್ಟೆಯನ್ನೆಲ್ಲಾ ಅಡಗಿಸಿ ಎಲ್ಲಾ ಪ್ರಾಣಿಗಳಿಗೂ ಹಂಚಲಾಗುತ್ತದೆ. ಪ್ರಾಣಿವರ್ಗದವರೆಲ್ಲರೂ ತಮ್ಮ ಸಂಘ ಕೊಡಮಾಡುವ ಬಟ್ಟೆ ತೊಟ್ಟುಕೊಂಡು ಈ ಪ್ರತಿಭಟನೆಗೆ ಹಾಜರಾಗುವಂತೆ ಗಾರ್ದಭ್ ರಜಕ್ ಆಗ್ರಹಿಸಿದ್ದಾರೆ.

ಈ ಮಧ್ಯೆ, "ಅಯ್ಯೋ.... ಮಾನವರಿಗೆ ಇಂಥ ಸ್ಥಿತಿಯೇ? ತುಂಡು ಬಟ್ಟೆ ಸಾಕು ನನ್ನ ಮಾನ ಮುಚ್ಚೋಕೆ ಅಂತ ಹಾಡುವ ದುಸ್ಥಿತಿಗಿಳಿದರೇ? ಅಷ್ಟೊಂದು ಬಡತನ ಈ ಜನ್ಮದಲ್ಲಿ ಯಾವುದೇ ಪ್ರಾಣಿವರ್ಗಕ್ಕೆ ಬಾರದಿರಲಿ" ಎಂದು ಪ್ರಾಣಿಗಳು ಗಳಗಳನೆ ತಮ್ಮ ಶೋಕ ವ್ಯಕ್ತಪಡಿಸಿವೆ.

ಈ ಹಿಂದೆ ತಮ್ಮನ್ನು ಮಾನವಾತೀತವಾಗಿರುವ ಒಂದು ವರ್ಗವಾದ ಪೊಲೀಸ್ ಇಲಾಖೆಯು ಅಪ್ರಾಣಿ ಎಂದು ಪರಿಗಣಿಸಿದಾಗ ಬೊಗಳೆ ರಗಳೆ ಬ್ಯುರೋ ಮಾಡಿದ ಸಹಾಯದಿಂದ ಉತ್ತೇಜನಗೊಂಡು ಮತ್ತು ಈ ಬ್ಯುರೋದಲ್ಲೂ ಮಾನವರು ಇದ್ದಾರಲ್ಲಾ ಎಂದು ಆಶ್ಚರ್ಯಗೊಂಡು ಈ ಕ್ರಮಕ್ಕೆ ಮುಂದಾಗಿರುವುದಾಗಿ ಗಾರ್ಧಭ್ ರಜಕ್ ಘೋಷಿಸಿದ್ದಾರೆ.

Monday, August 28, 2006

ಗ್ರಹಕ್ಕೆ ಗ್ರಹಚಾರ: ಆಗಸದಿಂದ ಡಿಲೀಟ್

(ಬೊಗಳೂರು ನಕ್ಷತ್ರಿಕ ಬ್ಯುರೋದಿಂದ)
ಬೊಗಳೂರು, ಆ.28- ಮೊನ್ನೆ ಮೊನ್ನೆಯಷ್ಟೇ ಸೌರಮಂಡಲವಿಡೀ ಗ್ರಹಗಳಿಂದಲೇ ತುಂಬಿ ತುಳುಕಾಡುತ್ತದೆ, ಗ್ರಹಗಳ ಸಂಖ್ಯೆ 12 ದಾಟಲಿದೆ ಎಂದೆಲ್ಲಾ ಹೇಳಿ ಆಸೆ ಹುಟ್ಟಿಸಿದ್ದ ವಿಜ್ಞಾನಿಗಳು ಈಗ ದಿಢೀರ್ ಆಗಿ ಇದ್ದ ಗ್ರಹಗಳ ಸಂಖ್ಯೆಯನ್ನೂ ಮೈನಸ್ ಮಾಡಿದ ಬಡಪೆಟ್ಟಿಗೆ, ನವಗ್ರಹಗಳಲ್ಲೊಂದಾಗಿದ್ದ ಗ್ರಹವೂ ಉದುರಿಬಿದ್ದಿರುವುದು ಬೊಗಳೆ-ರಗಳೆ ಬ್ಯುರೋಗೆ ಲೋಕವೇ ಕತ್ತಲೆಯಾದಂತಾಗಿದೆ.
 
ಪ್ಲುಟೋ ಎಂಬ ಒಂದು ಗ್ರಹವಷ್ಟೇ ಉದುರಿದ್ದಾದರೂ ಇಡೀ ಆಕಾಶವೇ ಕಳಚಿ ತಲೆ ಮೇಲೆ ಬಿದ್ದಂತೆ ಚಿಂತಾಕ್ರಾಂತವಾದ ಏಕಸದಸ್ಯ ಬ್ಯುರೋದ ಸಮಸ್ತ ಸಿಬ್ಬಂದಿಗಳು, ಇದರ ಪರಿಣಾಮಗಳೇನು ಎಂಬ ಬಗ್ಗೆ ಲೆಕ್ಕಾಚಾರ ಹಾಕತೊಡಗಿದ್ದಾರೆ.
 
ಅಬ್ಬಾ... ಒಂದೊಮ್ಮೆ ಮಂಗಗಳ ಗ್ರಹವನ್ನೇ ಕಿತ್ತು ಹಾಕಿದ್ದರೆ, ಶುಕ್ರ ಗ್ರಹದವರು ತೀರಾ ಕಂಗಾಲಾಗುತ್ತಿದ್ದರು ಮತ್ತು vice versa ಆಗುತ್ತಿತ್ತು. ಸದ್ಯಕ್ಕೆ ಮಾನವ ಸಂತಾನಕ್ಕೆ ಧಕ್ಕೆಯಿಲ್ಲವಲ್ಲ ಎಂಬ ಸಮಾಧಾನ ಕೆಲವರದು.
 
ಹಾಗಿದ್ದರೆ ನವಗ್ರಹ ಎಂಬ ಖ್ಯಾತಿ ಮಣ್ಣುಪಾಲಾಗಿದೆ. ಅಂದರೆ ಒಂದು ಗ್ರಹ ಭೂಮಿಗೆ ಬಿದ್ದಿದೆ. ಇನ್ನೇನಿದ್ದರೂ ಅಷ್ಟಗ್ರಹಗಳ ಕಾರುಬಾರು. ಈ ಗ್ರಹಗಳ ಚಾರದಿಂದಲೇ ಮಾನವನಿಗೆ ಗ್ರಹಚಾರ ಬರುವುದರಿಂದಾಗಿ ಒಂದು ಗ್ರಹವು ಸೌರ ಮಂಡಲದಿಂದ ಡಿಲೀಟ್ ಆಗಿರುವುದು ಗ್ರಹಚಾರ ವಿರೋಧಿಗಳ ಸಂಘದ ಸಂತಸಕ್ಕೆ ಕಾರಣವಾಗಿದೆ.
 
ಆದರೆ ಬೊಗಳೆ ರಗಳೆ ಬ್ಯುರೋಗೆ ಕೂಡ ಸಂತಸವಾಗಿದೆ ಎಂದು ಒಪ್ಪಿಕೊಳ್ಳಲೇಬೇಕಾದ ಅಸತ್ಯ. ಯಾಕೆಂದರೆ ಈಗಾಗಲೇ ಹಲವಾರು ಗ್ರಹಗಳ ಕಾಟದಿಂದ ತತ್ತರಿಸುತ್ತಿರುವ ಬ್ಯುರೋಗೆ ಒಂದು ಗ್ರಹದ ಕಾಟ ಕಡಿಮೆಯಾಗಿದಂತಾಗಿದೆ.
 
ಇತ್ತ, ಶಾಲೆ ಮಕ್ಕಳು ಖುಷಿಯಾಗಿದ್ದಾರೆ. ಶಾಲೆಯಲ್ಲಿರೋದು ಗುರುವೋ ಶನಿಯೋ ಎಂಬ ಜಿಜ್ಞಾಸೆಯಲ್ಲಿ ಯಾವತ್ತೂ ಸಿಲುಕುವ ಈ ಮಕ್ಕಳು ಒಂದು ಗ್ರಹದ ಬಗ್ಗೆ ಅಧ್ಯಯನ ನಡೆಸಬೇಕಾದ ಬಾಲಗ್ರಹ ಪೀಡೆಯಿಂದ ತಪ್ಪಿಸಿಕೊಂಡೆವಲ್ಲಾ ಎಂಬ ಸಂತಸ ಅವರದು.
 
ಇದು ಕುತಂತ್ರ: ಪ್ಲುಟೋ ಅಭಿಮಾನಿಗಳ ಸಂಘ
 
ಇದು ದೊಡ್ಡ ದೊಡ್ಡ ಕುಳಗಳ ಕುತಂತ್ರ. ಪ್ಲುಟೋ ಗ್ರಹ ಎಲ್ಲಕ್ಕಿಂತ ಚಿಕ್ಕದು ಮತ್ತು ಕುಬ್ಜವಾಗಿದೆ ಎಂಬ ಕಾರಣಕ್ಕೆ ಅದನ್ನು ಸೌರಮಂಡಲದಿಂದ ಗುಡಿಸಿ ಸಾರಿಸಲಾಗಿದೆ. ಈ ಗ್ರಹಚಾರ ತಂತ್ರದ Supreme ಮೊರೆ ಹೋಗುವುದಾಗಿ ಅವರು ಪ್ರಕಟಿಸಿದ್ದಾರೆ.
 
ಮೀಸಲಾತಿ ವಿರೋಧಿಗಳ ತಂತ್ರ
 
ಇತ್ತೀಚೆಗೆ ಬಾನಂಗಳದಲ್ಲಿ ಕುಬ್ಜರ ಸಂತತಿ ಹೆಚ್ಚಾಗುತ್ತಿದೆ. ಆದರೂ ಅವರಿಗೆ ಅಲ್ಪಸಂಖ್ಯಾತರೆಂಬ ಮಾನ್ಯತೆ ನೀಡಿ ಸಾಕಷ್ಟು ಸೌಲಭ್ಯ ಒದಗಿಸುತ್ತಿರುವುದು ದೊಡ್ಡ ಗ್ರಹಗಳ ಕಣ್ಣು ಮತ್ತಷ್ಟು ಕೆಂಪಗಾಗಿ ಬೆಳಗಲು ಕಾರಣವಾಗಿವೆ ಎಂದು ಆರೋಪಿಸಿರುವ ಪ್ಲುಟೋ ವಾಸಿಗಳು, ಕುಬ್ಜರಿಗೂ ಮೀಸಲಾತಿ ನೀಡಬೇಕೆಂದು ಆಗಸದಲ್ಲಿ ಧರಣಿ, ಕೋಲಾಹಲ ಮಾಡತೊಡಗಿದ್ದಾರೆ.
 
ಸೌಲಭ್ಯ ವಾಪಸಾತಿಗೆ ತಂತ್ರ
 
ಈ ಮಧ್ಯೆ, ಏಳು ದಶಕಕ್ಕೂ ಹೆಚ್ಚು ಕಾಲದಿಂದ ಅಕ್ರಮವಾಗಿ ಗ್ರಹದ ಸ್ಥಾನ ಮಾನ ಅನುಭವಿಸುತ್ತಿದ್ದ ಪ್ಲುಟೋ ಗ್ರಹದಿಂದ, ಅಸಲು ಬಡ್ಡಿ ಸಮೇತ ಪಡೆದ ಸೌಲಭ್ಯದ ಮೊತ್ತ ಕಕ್ಕಿಸಲು ಕಕ್ಕುಲಾತಿಯಿಂದ ಸಿದ್ಧತೆ ನಡೆಯುತ್ತಿವೆ ಎಂಬ ವದಂತಿಗಳಿವೆ.

Saturday, August 26, 2006

ದೇಶದ ಜನತೆಗೆ ಪ್ರಾಣಾಯಾಮ ಮಾಡಿಸಿದ CD

(ಬೊಗಳೂರು ಬಾಂಬ್ ಬ್ಯುರೋದಿಂದ)
ಬೊಗಳೂರು, ಆ.26- ಶಕ್ತಿಶಾಲಿ ಆತ್ಮಹತ್ಯಾ ಬಾಂಬ್ ಮೂಲಕ ಕರ್-ನಾಟಕ ಸರಕಾರ ಉರುಳಿಸುವ ಸಿಡಿಮಿಡಿ "ರೆಡ್ಡಿ ಸಿಡಿ" ಬಿಡುಗಡೆ ಕಾರ್ಯಕ್ರಮದ ವರದಿಯಿದು.
 
ಇಡೀ ಬೊಗಳೂರಿಗೆ ಬೊಗಳೂರೇ ಕರಾಳ ಛಾಯೆಯಿಂದ ಆವೃತವಾಗಿತ್ತು. ನಗರದ ಪ್ರಮುಖ ರಸ್ತೆಗಳೆಲ್ಲಾ ಬಿಕೋ ಎನ್ನುತ್ತಿದ್ದವು. ಬಸ್ ನಿಲ್ದಾಣಗಳಲ್ಲಿ, ಹಾದಿ ಬೀದಿಗಳಲ್ಲಿ ಜನ ಸಂಚಾರ ವಿರಳವಾಗಿದ್ದರೆ, ಸರಕಾರಿ ಕಚೇರಿಗಳಲ್ಲಿ ಅಧಿಕಾರಿಗಳ ಸಂಖ್ಯೆಯೇ ವಿರಳವಾಗಿತ್ತು.
 
ಏನಾಯಿ ಥೂ? ಇವರೆಲ್ಲಾ ಎಲ್ಲಿ ಹೋದ್ರು? ಎಂದು ಕೊಂಡು ಪತ್ತೆಗೆ ಹೊರಟಾಗ, ಫೈಲುಗಳನ್ನು ನೋಡಬೇಕಿದ್ದ ಸರಕಾರಿ ನೌಕರರು ಟಿವಿ ನೋಡುತ್ತಿದ್ದರು. ಅವರಿಗೂ ಅದೇ.... ಸಿಡಿ ಬಿಡುಗಡೆ ಕಾರ್ಯಕ್ರಮದ ನೇರಪ್ರಸಾರ ವೀಕ್ಷಿಸುವ ತರಾತುರಿ.
 
ಅಮೋಘ ಸಿಡಿ ಬಿಡುಗಡೆ ಕಾರ್ಯಕ್ರಮಕ್ಕೆ ಪತ್ರಿಕೆ ಮತ್ತು ದೂರದರ್ಶನ ಮಾಧ್ಯಮಗಳ ಮೂಲಕ ಸರ್ವರಿಗೂ ಆದರದ ಆಮಂತ್ರಣ ನೀಡಲಾಗಿತ್ತು.
 
ಇಡೀ ರಾಷ್ಟ್ರಕ್ಕೆ ರಾಷ್ಟ್ರವೇ ಕರ್-ನಾಟಕ ಸರಕಾರವನ್ನು ಉರುಳಿಸಲಿರುವ ಆತ್ಮಹತ್ಯಾ ಬಾಂಬ್ ಸ್ಫೋಟಕ್ಕೆ ಕಾತರವಾಗಿರುವಷ್ಟರಲ್ಲಿ.... ರೆಡ್ಡಿ ಅವರ ಸಿಡಿ..... ಪುಡಿ ಪುಡಿಯಾಗಿ ಹೊರಬಿದ್ದಿತ್ತು.
 
ಉಸಿರು ಬಿಗಿ ಹಿಡಿದಿದ್ದವರೆಲ್ಲರೂ ಜೋರಾಗಿ ಉಸಿರು ಹೊರಬಿಟ್ಟ ಕಾರಣ ಅದರ ವೇಗಕ್ಕೆ ರೆಡ್ಡಿ ಈಗ ಬಲವಂತವಾಗಿ ಮೂಲೆಗೆ ತಳ್ಳಲ್ಪಟ್ಟಿದ್ದಾರೆ.
 
ಆದರೆ ಈ ಕುರಿತು ಜನರನ್ನ ತನ್ನತ್ತ ಸೆಳೆದ ಜನಾರ್ದನ ರೆಡ್ಡಿ ಏನು ಹೇಳುತ್ತಾರೆ?
 
ನೋಡಿ ಸ್ವಾಮಿ... ಇಡೀ ದೇಶವೇ ನನ್ನನ್ನೊಬ್ಬ ಹೀರೋನಂತೆ ಕಾಣಲಿಲ್ಲವೇ? ಸರಕಾರ ಉರುಳಿತೋ... ಬಿಟ್ಟಿತೋ... ಅಂತ ನನಗೆ ಚಿಂತೆಯಿಲ್ಲ... ಆದರೆ ನನ್ನನ್ನಂತೂ ಎಲ್ಲಾ ಟಿವಿ ಮಾಧ್ಯಮಗಳು, ಪತ್ರಿಕೆಗಳು ಇಂಟರ್ನೆಟ್ ತಾಣಗಳು ಮುಖಪುಟದಲ್ಲಿ ಛಾಪಿಸಿ ಹೂಹಾರ ಹಾಕುವ ಮಟ್ಟಿಗೆ ನಾನು ಖ್ಯಾತಿ ಪಡೆಯಲಿಲ್ಲವೇ? ಎಂದು ಸಂದರ್ಶಕರಿಗೇ ಪ್ರತಿ ಸವಾಲು.
 
ಮಾತ್ರವಲ್ಲ... ಅಷ್ಟು ಹೊತ್ತು ಎಲ್ಲರನ್ನೂ ಕಾಯಿಸಿದ್ದೇನೆ... ಪುರುಸೊತ್ತಿಲ್ಲದಿದ್ದರೂ ಪುರುಸೊತ್ತು ಮಾಡಿಕೊಂಡು ದೇಶದ ಜನರೆಲ್ಲಾ ಸ್ವಲ್ಪ ಹೊತ್ತು ತಮ್ಮ ಉಸಿರು ಕಟ್ಟಿಕೊಂಡು ಕೂತಿರಲಿಲ್ಲವೇ? ಇದರಿಂದ ಅವರಿಗೇ ತಿಳಿಯದಂತೆ ಪ್ರಾಣಾಯಾಮ ಮಾಡಿಕೊಂಡು ಅಷ್ಟು ಸಮಯದ ತಮ್ಮ ಆಯುಷ್ಯವನ್ನು, ಆರೋಗ್ಯವನ್ನು ಹೆಚ್ಚಿಸಿಕೊಂಡಿದ್ದಾರೆ ಎಂಬ ಮಾತನ್ನೂ ಉದುರಿಸಿದರು.
 
ಶೀಘ್ರದಲ್ಲೇ ಮತ್ತೊಂದು ಸಿಡಿ ಬಿಡುಗಡೆ ಮಾಡಲಾಗುತ್ತದೆ ಎಂದು ಅವರು ಘೋಷಿಸಿದಾಗ ಬೊಗಳೆ ರಗಳೆ ಬ್ಯುರೋ... "ದಯವಿಟ್ಟು ಬೇಡ" ಎಂದು ಮನಸ್ಸಿನಲ್ಲೇ ಘರ್ಜಿಸಿ ಅಲ್ಲಿಂದ ಹೊರ ನಡೆಯಿತು.

Friday, August 25, 2006

ಮುದುಕನ ಮದುವೆಯ Equation formula !

(ಬೊಗಳೂರು ಲೆಕ್ಕಾಚಾರ ಬ್ಯುರೋದಿಂದ)
ಬೊಗಳೂರು, ಆ.25- 100 ಆಗಲು 50+50 ಎಂದೇ ಆಗಬೇಕೇ? 5+95 ಅಂದರೂ ನೂರೇ ಆಗುತ್ತದಲ್ಲವೇ ಎಂಬುದನ್ನು ಸಾಬೀತುಪಡಿಸಲು ಹಿರಿ ಹಿರಿ ಹಿಗ್ಗುವ ಹಿರಿಯಜ್ಜ ಮತ್ತು ಮರಿ ಮರಿ ಮರಿಮೊಮ್ಮಗಳು ಸೇರಿ ತೀವ್ರ ಪ್ರಯತ್ನ ನಡೆಸಿದ ಘಟನೆಯೊಂದು ಇಲ್ಲಿ ವರದಿಯಾಗಿದೆ.
 
ಮಗುವನ್ನು ಆಟವಾಡಿಸುತ್ತಿದ್ದ ಅಜ್ಜನಿಗೆ ಆ ಮಗುವಿನ ಮೇಲೆ ಮಮತೆ ಹೆಚ್ಚಾಗಿ ಅದನ್ನು ಬಿಟ್ಟು ಬಾಳಲಾರೆ ಎಂಬುದನ್ನರಿತು ತೊಟ್ಟಿಲಲ್ಲೇ ಗಟ್ಟಿಯಾಗಿ ತಾಳಿ ಕಟ್ಟಿರುವ ಈ ಘಟನೆ ಹೊಸ ಹೊಸ ಸಾಧ್ಯತೆಗಳ ಮೇಲೆ ಬೆಳಕು ಚೆಲ್ಲಿದೆ. ಗಣಿತಜ್ಞರೆಲ್ಲಾ ಬೆಚ್ಚಿ ಬಿದ್ದಿದ್ದು, ಇಂಥದ್ದೊಂದು ಸಮೀಕರಣ ಸೂತ್ರ (Equation formula) ತಮಗೆ ಹೊಳೆಯಲೇ ಇಲ್ಲವಲ್ಲಾ ಎಂದು ಹಣೆ ಹಣೆ ಚಚ್ಚಿಕೊಳ್ಳುತ್ತಿದ್ದಾರೆ.
 
ಆದರೆ ಈ ಬಗ್ಗೆ ಮುತ್ತಜ್ಜನನ್ನು ಮಾತನಾಡಿಸಿದಾಗ, ನಮಗೆ ಸಮೀಕರಣ ಸೂತ್ರ ಎಂಬುದೆಲ್ಲಾ ಗೊತ್ತಿಲ್ಲ.... ಸಮಾನತೆಯ ಸೂತ್ರ ಮಾತ್ರ ಗೊತ್ತು ಎಂದು ಪ್ರತಿಕ್ರಿಯಿಸಿದ್ದಾಲ್ಲದೆ, 104ರ ಅಜ್ಜಿಯನ್ನು ಮದುವೆಯಾದ 33ರ ಯುವಕನನ್ನು ನೀವೇ ಸಂದರ್ಶನ ಮಾಡಿರಲಿಲ್ಲವೇ ಎಂದು ನಮಗೇ ತಿರುಗೇಟು ನೀಡಿದರು.
 
ಅದ್ಯಾವ ಸಮಾನತೆಯ ಸೂತ್ರ ಎಂದು ಪ್ರಶ್ನಿಸಲಾಗಿ, ಅಜ್ಜ ತಮ್ಮ ಬುತ್ತಿಯನ್ನು ಬಿಚ್ಚಿಟ್ಟರು.
 
ನೋಡಿ, ನಾನು ಹುಟ್ಟಿ ನೂರಾರು ವರ್ಷಗಳೇ ಆಯಿತು. ಹೆಣ್ಣು ಮಕ್ಕಳಿಗೆ ಯಾವುದೇ ಸ್ಥಾನ-ಮಾನ ಸಿಗುತ್ತಿಲ್ಲ. ಕೆಲವರಿಗೆ ಸ್ಥಾನ ಸಿಕ್ಕರೂ ಮಾನ ಬೇಡ ಅಂದ್ಕೊಂಡು ಬಿಚ್ಚೋಲೆಗಳಾಗುತ್ತಿರುವವರನ್ನು ನನ್ನ ಡಿಕ್ಷನರಿಯಿಂದ ಕಿತ್ತು ಹಾಕಿದ್ದೇನೆ. ಅದು ಬಿಡಿ.....
ಇಷ್ಟು ವರ್ಷಗಳಿಂದ ಮಹಿಳಾ ಮೀಸಲಾತಿ ಮಸೂದೆ ಎಂಬುದು ಪಾರ್ಲಿಮೆಂಟಿನಲ್ಲಿ ಮಂಡನೆಯಾಗುತ್ತಿದೆಯೇ? ರಾಜಕಾರಣಿಗಳು ಅದಕ್ಕೆ ಖಂಡಿತಾ ಬಿಡುವುದಿಲ್ಲ. ಮಹಿಳೆಯರಿಗೂ ಸಮಾನತೆಯ ಹಕ್ಕಿದೆ. ಇದಕ್ಕಾಗಿ ನಾನು ಮಹಿಳೆಯರನ್ನು ಹುಟ್ಟಿನಿಂದಲೇ ಮುಂದೆ ತರಲು ತಾಳಿ.... ಸ್ವಲ್ಪ ತಾಳಿ.. ತಾಳಿ ಕಟ್ಟಿರುವೆ. ಈ ಹೆಣ್ಣುಮಗು ಈಗಲೇ ಗೃಹಿಣಿ ಅಂತ ಅನಿಸಿಕೊಳ್ಳಲಿಲ್ಲವೇ? ಸಮಾಜದಲ್ಲಿ ಆಕೆಯ ಸ್ಥಾನ ಮಾನ ಹೆಚ್ಚಾಗುತ್ತದಲ್ಲವೇ... ನೀವೇ ಒಂದು ಬಾರಿ ಯೋಚಿಸಿ ನೋಡಿ.
 
ಇನ್ನೂ ಒಂದು ವಿಷಯವಿದೆ. ಬೆಳೆಯುತ್ತಿರುವ ಹೆಣ್ಣು ಮಕ್ಕಳಿಗೆ ತಾಳಿ ಅನ್ನೋದು ಒಂದು ರೀತಿಯಲ್ಲಿ ಆಯುಧವಿದ್ದಂತೆ. ಸಣ್ಣ ಪ್ರಾಯದಲ್ಲೇ ತಾಳಿ ಕಟ್ಟಿ ಬಿಟ್ಟರೆ ಆಕೆ ಸುರಕ್ಷಿತಳಾಗಿರುತ್ತಾಳೆ. ಅಂತೂ ಸಾಯೋದಿಕ್ಕೆ ಮೊದಲಾದರೂ ಹೆಣ್ಣು ಮಕ್ಕಳು ಉದ್ಧಾರವಾಗುವುದನ್ನು ನೋಡಿದಂತಾಗಿದೆ..
-ಎಂದು ಏದುಸಿರುವ ಬಿಡುತ್ತಾ ಈ ಅಜ್ಜಯ್ಯ ವಿವರಿಸಿದ್ದಾರೆ.
 
ಆದರೂ ಒಂದು ಕೊರಗು ಈ ಅಜ್ಜಯ್ಯನನ್ನು ಬಾಧಿಸುತ್ತಲೇ ಇದೆ. ಈ ಸಣ್ಣ ಮಗುವನ್ನು ತನ್ನ ಮೊಮ್ಮಕ್ಕಳಿಂದ ರಕ್ಷಿಸಿಕೊಳ್ಳುವುದು ಹೇಗೆ ಎಂಬುದೇ ಆತನಿಗೆ ಚಿಂತೆಯಂತೆ.

Thursday, August 24, 2006

ಕಾಲೇಜು ಪರಿಸರದಲ್ಲಿ ಹೃದ್ರೋಗ ಹೆಚ್ಚಳ !

(ಬೊಗಳೂರು ಕಲ್ಲುಹೃದಯ ಬ್ಯುರೋದಿಂದ)
ಬೊಗಳೂರು, ಆ.24- ಭಾರತದಲ್ಲಿ ಹೃದ್ರೋಗಿಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ ಎಂಬ ವರದಿ ಪ್ರಕಟವಾದ ಮೇಲೆ ಎಚ್ಚೆತ್ತ ಬೊಗಳೆ-ರಗಳೆಯ ಛಿದ್ರಹೃದಯಾಲಯ ಬ್ಯುರೋ, ಈ ಬಗ್ಗೆ ಭಾರವಾದ ಹೃದಯದಿಂದಲೇ ಅನ್ವೇಷಣೆ ಆರಂಭಿಸಿದಾಗ ಬಹಿರಂಗಪಡಿಸಲಾರದ ವಿಷಯಗಳೆಲ್ಲಾ ಬಯಲಾದವು.
 
ಬೊ.ರ. ಬ್ಯುರೋ ತನಿಖೆಯ ಪ್ರಕಾರ, ವಿಶೇಷವಾಗಿ ಕಾಲೇಜುಗಳಿರುವ ಪ್ರದೇಶದಲ್ಲಿ ಮತ್ತು ಅದರ ಸುತ್ತಮುತ್ತಲಿನ ಹಾಸ್ಟೆಲ್, ಬಾಡಿಗೆ ಕೊಠಡಿ ಮುಂತಾದೆಡೆ ಈ ಹೃದ್ರೋಗ ಹೆಚ್ಚಾಗಿ ಕಂಡುಬರುತ್ತಿದೆ.
 
ಇದಕ್ಕೆ ಹಲವಾರು ಕಾರಣಗಳಿವೆಯಾದರೂ ಎಲ್ಲಕ್ಕಿಂತ ಪ್ರಮುಖವಾದ ಕಾರಣವೆಂದರೆ ಇತ್ತೀಚೆಗೆ ದೇಶಾದ್ಯಂತ ಆಚರಿಸಲಾದ ರಕ್ಷಾ ಬಂಧನ ಎಂಬುದು ಇತ್ತೀಚೆಗೆ ಪತ್ತೆಯಾಗಿದೆ. ತೀವ್ರ ಕಾಟ ಕೊಡುತ್ತಿದ್ದ ಅಪಾಪೋಲಿಗಳಿಗೆ ಬುದ್ಧಿ ಕಲಿಸಲು ತರುಣೀಮಣಿಯರು ಈ ರಕ್ಷಾ ಬಂಧನ ಕಾರ್ಯಾಚರಣೆಯನ್ನು ಸದುಪಯೋಗಪಡಿಸಿಕೊಂಡಿದ್ದರು.
 
ಇನ್ನು ಕೆಲವೆಡೆ, ತೀವ್ರ ಕಾಟ ಕೊಡುತ್ತಿದ್ದ ಕೆಲವು ರಸಿಕ ಶಿಖಾಮಣಿಗಳ ಪಾಲಿಗೆ ರಮಣಿಯರು 'ರುದ್ರ'ರಮಣಿಯರಾಗಿ ಕಾಡಿದ್ದು ಮತ್ತೊಂದು ಕಾರಣ.
 
ಆದುದರಿಂದ, ರಕ್ಷಾ ಬಂಧನಕ್ಕೂ ದೇಶದಲ್ಲಿ ಹೆಚ್ಚಿದ ಹೃದಯ ರೋಗಗಳಿಗೂ ಸಂಬಂಧವಿದೆ ಎಂಬ ಅಂಶವನ್ನು ಬಯಲಾಗಿಸಿದ್ದಕ್ಕಾಗಿ ಭಾರತ ರತ್ನ, ಜಾಗತಿಕ ರತ್ನ, ಮತ್ತಿತರ 'ರತ್ನ'ಳಿಗಾಗಿ ಅರ್ಜಿ ಸಲ್ಲಿಸಲಾಗಿದ್ದು, ಈಗಾಗಲೇ ಅರ್ಜಿಗೆ ಆಕೆಯಿಂದ ಯಾವುದೇ ಉತ್ತರ ಬಾರದಿರುವ ಹಿನ್ನೆಲೆಯಲ್ಲಿ ಹೃದ್ರೋಗಿಗಳ ಸಂಖ್ಯೆಗೆ ಇನ್ನೂ ಒಂದು ಸೇರ್ಪಡೆಯಾಗಿದೆ ಎಂದು ತಿಳಿದುಬಂದಿದೆ.
 
ಇದೂ ಅಲ್ಲದೆ, ಭಾರತೀಯರು ತಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳದಿದ್ದರೆ ಹೃದ್ರೋಗಿಗಳ ಸಂಖ್ಯೆ ಮತ್ತಷ್ಟು ಏರಿಕೆಯಾಗಲಿದೆ ಎಂದು ವರದಿಗಳು ಎಚ್ಚರಿಸಿರುವ ಹಿನ್ನೆಲೆಯಲ್ಲಿ ಜೀವನ ಶೈಲಿ ಬದಲಾವಣೆ ಹೇಗೆ ಮಾಡಿಕೊಳ್ಳಬಹುದು ಎಂಬುದರ ಕುರಿತು ತೀವ್ರ ಚರ್ಚೆ ನಡೆಯುತ್ತಿದೆ.
 
ಹದಿಹರೆಯದ ಹುಡುಗರು ಹುಡುಗಿಯರತ್ತ ಕಣ್ಣೆತ್ತಿ ನೋಡಬಾರದು (ಹಾಗೂ vice versa) ಮತ್ತು ತಮ್ಮ ತಮ್ಮ ಹೃದಯಗಳನ್ನು ಬಚ್ಚಿಟ್ಟುಕೊಳ್ಳದೆ ಯಾರಿಗೂ ಗೊತ್ತಾಗದ ಕಡೆಗಳಲ್ಲಿ ಹೋಗಿ ಬಾಂಬ್ ಬಿಚ್ಚಿಡಬೇಕು ಎಂಬ ಸಾಧ್ಯತೆಗಳ ಕುರಿತು ತೀವ್ರ ಚರ್ಚೆ ನಡೆಯುತ್ತಿದೆ.
 
ಮಾನವನೂ ಪ್ರಾಣಿಗಳಲ್ಲೊಂದಾಗಿರುವುದರಿಂದಾಗಿ ನಾಯಿಗಳ ಈರ್ಷ್ಯೆ ಕೂಡ ಹೃದ್ರೋಗ ಹೆಚ್ಚಳಕ್ಕೆ ಕಾರಣವೆಂಬ ಅಂಶವೂ ಸಂಶೋಧನೆಗೆ ವಸ್ತುವಾಗತೊಡಗಿದೆ.

Wednesday, August 23, 2006

ಕೂಪಮಂಡೂಕಗಳ ಸಾಮೂಹಿಕ ವಿವಾಹೋತ್ಸವ

(ಬೊಗಳೂರು ಕೂಪಕಪ್ಪೆ ಬ್ಯುರೋದಿಂದ)
ಬೊಗಳೂರು, ಆ.23- ಮಂಗಳೂರು ಸಹಿತ ಕರ್ನಾಟಕದ ವಿವಿಧೆಡೆ ಭಾರಿ ಮಳೆಯಾಗುತ್ತಿರುವ ಸುದ್ದಿ ಇದ್ದರೂ ರಾತ್ರಿ ಜೀರುಂಡೆಗಳ ಝೀsssssssನ್ಕಾರಕ್ಕೆ ಕಪ್ಪೆಗಳ ವಟವಟ ವಾದ್ಯದ ಹಿಮ್ಮೇಳ ವಾದನವೇಕಿಲ್ಲ ಎಂದು ಬೆಚ್ಚಿ ಬಿದ್ದ ಬೊಗಳೆ ರಗಳೆ ಬ್ಯುರೋ ಸಿಬ್ಬಂದಿ ಈ ಬಗ್ಗೆ ಅನ್ವೇಷಣೆಗೆ ಹೊರಟಾಗ ಸಿಕ್ಕಿದ್ದು ಈ ಸುದ್ದಿ.
 
ಬೊಗಳೆಊರು ಸೇರಿದಂತೆ ಈ ಪ್ರದೇಶದಲ್ಲಿ ಕಪ್ಪೆಗಳೇ ಕಾಣಸಿಗುತ್ತಿಲ್ಲ. ಇದಕ್ಕೆ ಕಾರಣ? ಎಲ್ಲಾ ಕಪ್ಪೆಗಳೂ ಸಾಮೂಹಿಕವಾಗಿ ಪಶ್ಚಿಮ ಬಂಗಾಳದ ಜಲಪಾಯ್ಗುರಿ ಜಿಲ್ಲೆಗೆ ವಲಸೆ ಹೋಗಿವೆ ಮತ್ತು ಉಳಿದವು ಕೂಡ ಹೋಗತೊಡಗಿವೆ ಎಂಬ ಆಘಾತಕಾರಿ ಅಂಶ.
ಅಲ್ಲೇನು ನಡೆಯುತ್ತಿದೆ ಎಂದರೆ, ಬೇರೇನಲ್ಲ... ಅಲ್ಲಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತಿದೆ. ಅದೇ... ಮಳೆಗಾಗಿ ಸಾಮೂಹಿಕ ಮಂಡೂಕ ವಿವಾಹ.
 
ಕೆಲವು ಕಪ್ಪೆಗಳು, ಈ ಬೊಗಳೂರಲ್ಲಿ ಹೇಗೂ ಮಳೆ ಬರುತ್ತಿದೆಯಲ್ಲ, ಬಂಗಾಳ ಕೊಲ್ಲಿಯ ಪಕ್ಕದಲ್ಲೇ ಇರುವ ಮಳೆ ಬಾರದ ಬಂಗಾಳದಲ್ಲಿ ನಮ್ಮ ಪವಾಡ ತೋರಿಸಿ ನಾವು ಕೂಡ ಕೂಪಮಂಡೂಕಗಳಾಗಿಯೇ ಇರುವ ಬದಲು ದೇವಮಾನವರಂತೆ ಭೂಪಮಂಡೂಕಗಳಾಗೋಣ ಎಂದುಕೊಂಡು ಅತ್ತ ಕಡೆಗೆ ಕುಪ್ಪಳಿಸುತ್ತಾ ಸಾಗಿದ್ದರೆ, ಮತ್ತೆ ಕೆಲವು ವಟವಟಗುಡುತ್ತಲೇ ಬಾಯಲ್ಲಿ ಅಂಟುದ್ರವ ಸುರಿಸುತ್ತಾ ಸಾಗುತ್ತಿದ್ದವು.
 
ಕಪ್ಪೆಗಳ ಕುಪ್ಪಳಿಕೆ ಹೆಜ್ಜೆಯ ಸಪ್ಪಳದ ಜಾಡು ಹಿಡಿದು ಮುನ್ನಡೆದಾಗ ಅನ್ವರ್ಥವಾಗಬೇಕಿದ್ದ ಹೆಸರು ಅಪಾರ್ಥವಾಗಿದ್ದ ಜಲಪಾಯ್ಗುರಿ ತಲುಪಿದೆವು. ಜಲ ಇರಬೇಕಾಗಿದ್ದ ಅಲ್ಲಿ ಮಳೆಯಿಲ್ಲದೆ ಜಲಕ್ಷಾಮವಿತ್ತು.
 
ಅಲ್ಲಲ್ಲಿ ಚಪ್ಪರ, ತಳಿರು ತೋರಣಗಳನ್ನು ಹಾಕಲಾಗಿತ್ತು. ವಿವಾಹಾಕಾಂಕ್ಷಿ ಕಪ್ಪೆಗಳ ಅಪ್ಪಂದಿರು ಚಪ್ಪರದಡಿ ಪರಸ್ಪರ ಮಾತುಕತೆಯಲ್ಲಿ ತೊಡಗಿದ್ದರು. ಅವರಲ್ಲೂ (ವಟ)ವಟದಕ್ಷಿಣೆಯ ಬಗ್ಗೆಯೇ ಮಾತುಕತೆ ನಡೆದಿತ್ತೆಂಬುದು ಆ ವಟವಟ ವಾಲಗ ಧ್ವನಿಯ ಮಧ್ಯೆ ಕೇಳಿ ಬಂದ ಸಂಗತಿ.
 
ಗಂಡು ಕಪ್ಪೆಗಳು ಇನ್ನು ಮುಂದೆ ಹೆಚ್ಚು ಹೆಚ್ಚು ಕುಪ್ಪಳಿಸದಂತೆ ಅಂಕುಶ ತೊಡಿಸಿ ಅವೆಲ್ಲಕ್ಕೂ ಮದುವೆ ನೆರವೇರಿಸಿ ಕೂಪಕ್ಕೆ ಹಾಕಿದ ಬಳಿಕ ವಧೂ-ವರರನ್ನು ನೀರಿಲ್ಲದ ಕೊಳವೊಂದಕ್ಕೆ ಬಿಡಲಾಯಿತು. ಅಷ್ಟರಲ್ಲಿ ವಟವಟ ಸದ್ದಿನಷ್ಟೇ ಜೋರಾಗಿ ಮಳೆ ಸುರಿಯಲಾರಂಭಿಸಿತು.
 
ಈ ಮಧ್ಯೆ, ಕಪ್ಪೆಗಳೆಲ್ಲಾ ಸಂಸಾರ ಸಾಗಿಸುತ್ತಾ ಸುಖವಾಗಿರಲು, ಒಂದು ದಿನ ಅವುಗಳ ಮಧ್ಯೆ ವಿರಸ ಏರ್ಪಟ್ಟಿತು. ತನ್ನ ಅನುಮತಿ ಪಡೆಯದೆಯೇ ಅಷ್ಟೊಂದು ಮೊಟ್ಟೆಗಳನ್ನು ನೀರಿಗೆ ಬಿಟ್ಟದ್ದೇಕೆ ಎಂದು ಗಂಡು-ಹೆಣ್ಣು ಕಪ್ಪೆಗಳ ಮಧ್ಯೆ ಜಗಳ ಆರಂಭವಾಯಿತು. ತಾನು ಇಟ್ಟ ಅಷ್ಟೂ ಮೊಟ್ಟೆಗಳನ್ನು ಬೇರೆಯವರಿಗೆ ತಿನ್ನಲು ಕೊಟ್ಟಿದ್ದೇಕೆ ಎಂಬುದು ವಧೂಕಪ್ಪೆಯ ಆಕ್ರೋಶ.
 
ಕೆಲವು ಮಂಡೂಕ ದಂಪತಿಗಳ ಕಲಹಕ್ಕೆ ಈ ವಿಷಯ ಕಾರಣವಾದರೆ, ಮತ್ತೆ ಕೆಲವು ಕಪ್ಪೆಗಳ ಅಪ್ಪಗಳು ವಟದಕ್ಷಿಣೆಗಾಗಿ ತಗಾದೆ ಎಬ್ಬಿಸಿದ ಪರಿಣಾವಾಗಿ ಒಂದೊಂದೇ ಕಪ್ಪೆಗಳು ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದವು. ವಿವಾಹ ವಿಚ್ಛೇದನವಾಗತೊಡಗಿದಂತೆಯೇ ಆ ಊರಿನಲ್ಲಿ ಮಳೆ ಕಡಿಮೆಯಾಯಿತು. ವಿಚ್ಛೇದನ ಪ್ರಕ್ರಿಯೆ ಪೂರ್ಣಗೊಂಡಾಗ ಮಳೆಯೂ ನಿಂತೇ ಬಿಟ್ಟಿತು.
 
ಒಟ್ಟಿನಲ್ಲಿ ಆ ಊರಿನವರಿಗೆ ಮಳೆಯಿಲ್ಲ, ಈ ಊರಿನಲ್ಲಿ ಕಪ್ಪೆಗಳಿಲ್ಲ ಎಂಬ ಪರಿಸ್ಥಿತಿ.
 
ಕಪ್ಪೆಗಳೆಲ್ಲಾ ಭ್ರಮನಿರಸನಗೊಂಡು ಒಂದೊಂದಾಗಿ ಮರಳತೊಡಗಿವೆ ಎಂಬುದು ಈ ಸುದ್ದಿ Post ಮಾಡುವ ವೇಳೆಗೆ ಬಂದ ಸುದ್ದಿ.
 
ಸೂಚನೆ: ಕಪ್ಪೆಗಳ ಮದುವೆಯ ವೀಡಿಯೋ ಶೂಟಿಂಗ್ ಚಿತ್ರ ಇಲ್ಲಿದೆ. ವಿವಾಹದ ಫೋಟೋ ಇಲ್ಲಿದೆ.

Tuesday, August 22, 2006

ಅಂದು ಹಾಲಾಹಲ, ಇಂದು ಹಾಲು.. ಮುಂದೆ? "ಕೋಲಾ"ಹಲ !

(ಬೊಗಳೂರು ಸ್ವರ್ಗೀಯ ಬ್ಯುರೋದಿಂದ)
ಬೊಗಳೂರು, ಆ.22- ದೇವರಿಗೇ ನೀರು ಕುಡಿಸಲು ಯತ್ನಿಸಿದ ಮಾನವರ ಪ್ರಯತ್ನಗಳನ್ನು ಧಿಕ್ಕರಿಸಿದ ದೇವ ಸಮುದಾಯ, ನೀರು ಕುಡಿದು ಕುಡಿದು ಸಾಕಾಗಿ, ಹಾಲು ಕುಡಿಯಲು ಹಾತೊರೆದ ಪ್ರಸಂಗಗಳು ವರದಿಯಾಗುತ್ತಿರುವಂತೆಯೇ ಸ್ವರ್ಗವಾಸಿಯಾಗಿಬಿಟ್ಟ ಬೊಗಳೆ-ರಗಳೆ ಬ್ಯುರೋ ಸಿಬ್ಬಂದಿ ನೇರವಾಗಿ ದೇವರುಗಳನ್ನೇ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆದಿದೆ.
 
ಏನು ದೇವ್ರೇ.... ಆವತ್ತು ಹಾಲಾಹಲ ಕುಡಿದು ವಿಷಕಂಠ ಅನ್ನೋ ಬಿರುದು ಹೊತ್ತುಕೊಂಡು ಪ್ರಚಾರ ಪಡೆದುಕೊಂಡೆ. ಇವತ್ತು ಹಾಲೂಂತ ಕುಡೀತೀಯಾ... ನಾಳೆ ಹತ್ತು ಗಂಟಲುಗಳನ್ನು ಹೊತ್ತು, ಕೋಲಾ ಬೇಕೂಂತ ಕುಡಿದು ದಶ ಕಂಠನಾಗುತ್ತೀಯಾ... ನೀನು ಎಲ್ಲಾ ಕಂಠಗಳ ಮಟ್ಟ ಕೋಲಾ ಕುಡಿದರೆ ಮತ್ತೆ ಎಳನೀರು ಕುಡಿಯುವುದಾದರೂ ಯಾರು ಎಂದು ತೀವ್ರವಾಗಿ ತರಾಟೆಗೆ ತೆಗೆದುಕೊಳ್ಳಲಾಯಿತು.
 
ಆದರೆ ಇದರ ಹಿಂದೆ ಮತ್ತಷ್ಟು ಅಸತ್ಯವನ್ನು ಕೆದಕಿದಾಗ ಕೆಲವೊಂದು ರೋಮಾಂಚಕಾರಿ ಸಂಗತಿಗಳು ಹೊರಬಿದ್ದವು.
 
ಮಾನವರಿಂದ ಬರೇ ನೀರು ಕುಡಿಸಿಕೊಂಡು ಸುಸ್ತಾಗಿದ್ದ ದೇವರು, ಅಲ್ಪಮತಿಗಳಿಗೆ ಸ್ವಲ್ಪವಾದರೂ ಬುದ್ಧಿ ಬರಲಿ ಎಂಬ ಕಾರಣಕ್ಕೆ ಒಂದು ದಿನದ ಮೊದಲೇ ಉಪಾಯ ಮಾಡಿದ್ದ. ಈಗ ಲಂಚವಿಲ್ಲದೆ ಏನೂ ನಡೆಯುವುದಿಲ್ಲ, ಲಂಚವನ್ನು ತಡೆಯುವುದು ತನ್ನಿಂದಲೂ ಸಾಧ್ಯವಿಲ್ಲ ಎಂಬುದನ್ನು ಅದಾಗಲೇ ದೃಢಪಡಿಸಿಕೊಂಡಿದ್ದ ದೇವ ವರ್ಗವು, ಇದಕ್ಕಾಗಿ ಭಾನುವಾರ, ಮಾವಿನ ರಸ ಹೆಚ್ಚಾಗಿ ದೊರೆಯುವ ಮುಂಬಯಿಯ ಕಡಲ ತೀರವನ್ನು ಮತ್ತು ಗುಜರಾತ್ ಸಮುದ್ರ ತೀರಗಳಲ್ಲಿ ಉಪ್ಪು ನೀರಿನ ಬದಲು ಸಿಹಿ ನೀರು ಕಳುಹಿಸಿಕೊಟ್ಟಿದ್ದ.
 
ಮಾನವ ಪ್ರಾಣಿಗಳಿಗೆ ಲಂಚ ಕೊಟ್ಟಂತೆಯೂ ಆಗಬೇಕು, ನೀರು ಕುಡಿಸಿದಂತೆಯೂ ಆಗಬೇಕು ಎಂಬುದು ಇದರ ಹಿಂದಿರುವ ಪರಮೋದ್ದೇಶ. ಆದರೆ ತಾವು ಸಿಹಿನೀರೆಂದು ಕುಡಿದದ್ದು ಸಮುದ್ರದ ಉಪ್ಪು ನೀರೇ ಎಂಬುದು ಮನುಜರ ಅರಿವಿಗೇ ಬರದಿರುವುದು ವಿಶೇಷ.
 
ಈ ಮಧ್ಯೆ, ಮುಂಬಯಿಯಲ್ಲಿ ಅನಾರೋಗ್ಯ ಇಲಾಖೆಯವರು ಬರುವ ಮೊದಲೇ ಸಮುದ್ರದ ಅರ್ಧದಷ್ಟು ನೀರು ಖಾಲಿಯಾಗಿತ್ತು ಎಂಬುದು ಬೊಗಳೆ ಬ್ಯುರೋಗೆ ಮಾತ್ರವೇ ಗೊತ್ತಾದ ದಿವ್ಯ ಸತ್ಯ.
 
1995ರಲ್ಲಿ ಗಣಪತಿ ಹಾಲು ಕುಡಿಯುತ್ತಿದ್ದಾಗ, ಮುಂಬಯಿಯ ದೇವಸ್ಥಾನವೊಂದರಲ್ಲಿ ಬೊಗಳೆ-ರಗಳೆ ಬ್ಯುರೋ ಕೂಡ ಇದೇ ರೀತಿ "ಇಂಥದ್ದೊಂದು ಬ್ಯುರೋ ಸೃಷ್ಟಿಯಾಗಲು ಸಹಾಯ ಮಾಡು" ಅಂತ ಕೋರಿ ಗಣಪತಿಗೇ ಹಾಲು ಕುಡಿಸಿತ್ತು. ಆದರೆ ಹಾಲಿಗೆ ನೀರು ಸೇರಿಸಿ ಕುಡಿಸಿದ್ದೋ ಅಥವಾ ಅಥವಾ ನೀರಿಗೇ ಹಾಲು ಸೇರಿಸಿ ಕುಡಿಸಿದ್ದೋ ಎಂಬುದು ಗುಟ್ಟಿನ ವಿಷಯ.
 
ಈ ಮಧ್ಯೆ, ದೇವರು ಹಾಲು ಕುಡಿಯುತ್ತಿದ್ದಾರೆ ಎಂಬ ಸುದ್ದಿ ಕೇಳಿದ ತಕ್ಷಣವೇ ಹಾಲು ಉದ್ಯಮಿಗಳು ಹಾಲು ಬಚ್ಚಿಟ್ಟ ಪ್ರಕರಣಗಳೂ ಅಲ್ಲಲ್ಲಿ ವರದಿಯಾಗಿವೆ.

Monday, August 21, 2006

ಎಳನೀರು ಹತ್ಯೆ ತಡೆಯಿರಿ, Pesti Cola ಕುಡಿಯಿರಿ!

(ಬೊಗಳೂರಿನ ಜನಾಂದೋಲನ ಕಾರ್ಯಕ್ರಮ ವಿಶೇಷ)
ಬೊಗಳೂರು, ಆ.21- Pesti Colaಗಳನ್ನು ಕುಡಿಯಬಾರದು, ಅದಕ್ಕೆ ನಿಷೇಧ ಹೇರಬೇಕು ಎಂಬ ಬಗ್ಗೆ ಭಾರಿ ಕೋಲಾ-ಹಲವಾಗುತ್ತಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಫಲವತ್ತಾದ ಫಸಲು ಬೆಳೆಸಲು ಹಾಲಾಹಲದ ಮೂಲಕ ಸಹಕರಿಸುವ ಈ ಕಂಪನಿಗಳ ಕೋಲಾ-ಹಲಕ್ಕೆ ಯಾರು ಕೂಡ ಕಿವಿಗೊಡುತ್ತಿಲ್ಲವಲ್ಲಾ ಎಂದು ಹಪಹಪಿಸಿದ ಬೊಗಳೆ ರಗಳೆ ಬ್ಯುರೋ, ಬಹುರಾಷ್ಟ್ರೀಯ ಕಂಪನಿಗಳ ಜಾಹೀರಾತು ಹೇಗಾದರೂ ಗಳಿಸುವ ನಿಟ್ಟಿನಲ್ಲಿ ಅದರ ಪರವಾಗಿ ಬರೆಯಲು ನಿರ್ಧರಿಸಿರುವುದು ನಮ್ಮ ಪ್ರತಿಸ್ಪರ್ಧಿ ಪತ್ರಿಕೆಗಳಲ್ಲಿ ಭರ್ಜರಿ ತನಿಖಾ ವರದಿಯಾಗಿದೆ.
 
ದೇಶಾದ್ಯಂತ ಯುವ ಜನಾಂಗ ಹಾಟ್ ಹಾಟ್ ಆಗಿರೋ ಡ್ರಿಂಕ್‌ಗಳನ್ನು ಬಿಟ್ಟು ಈ ಕೂಲ್ ಖೂಳ ಡ್ರಿಂಕ್‌ಗೆ ಮೊರೆ ಹೋಗಿವೆ. ಹಾಗಿರುವಾಗ ಭವ್ಯ ಭಾರತದ ಭಾವೀ ಪ್ರಜೆಗಳ ಮನನೋಯಿಸುವುದು ಎಷ್ಟು ಸರಿ ಎಂಬುದು ಬ್ಯುರೋದಿಂದ ಬಿತ್ತರಗೊಳ್ಳುವ ಮೊದಲನೇ ಪ್ರಶ್ನೆ.
 
ಇನ್ನು.... ಈಗಾಗಲೇ Pesti Colaಗಳನ್ನು ಕುಡಿದು ಕುಡಿದು ಜನರ ಪಿತ್ತ ಕೋಶ, ಕರುಳು ಇತ್ಯಾದಿಗಳಲ್ಲಿ ರಂಧ್ರಗಳಾಗಿ ಹೆಚ್ಚುವರಿ ಜಾಗ ಸೃಷ್ಟಿಯಾಗಿದೆ. ಇದು ಹಸಿವನ್ನು ಹೆಚ್ಚಿಸುತ್ತದೆ. ಅಂದರೆ ಆ ರಂಧ್ರಗಳನ್ನು ತುಂಬಬೇಕಲ್ಲ? ಅಲ್ಲಿ ಆಹಾರ ತುಂಬಿ ಕ್ಷೀಣ ಶರೀರಿಗಳು ದಷ್ಟಪುಷ್ಟನೆ ಕಾಣಿಸಿಕೊಳ್ಳಬಹುದಾಗಿದೆ.
 
ಮತ್ತೊಂದು ದೊಡ್ಡ ಅನಾಹುತ ಎಂದರೆ.... ಈಗಾಗಲೇ Pesti Cola ಕುಡಿಯುತ್ತಿದ್ದವರಿಗೆ ಪ್ರಾಕೃತಿಕವಾಗಿ ಲಭ್ಯವಿರುವ ಎಳನೀರು ಅಥವಾ ನೀರುಮಜ್ಜಿಗೆ ಕೇವಲ ಒಂದು ಗುಟುಕು ಕುಡಿಸಿಬಿಡಿ ನೋಡೋಣ... ಪೆಸ್ಟಿ ಅಂಶಗಳಿಗೇ ಒಗ್ಗಿ ಹೋಗಿರುವ ಅವರ ಜೀರ್ಣಾಂಗವ್ಯೂಹವು ಖಂಡಿತವಾಗಿ ಎಳನೀರನ್ನು ಹೊಟ್ಟೆಯಲ್ಲಿ ಇರಿಸಿಕೊಳ್ಳುವುದಿಲ್ಲ. ಹಾಗಾಗಿ ಭವ್ಯ ಭವಿಷ್ಯದ ಭಾವೀ ಪ್ರಜೆಗಳು ವಾಂತಿ ಮಾಡಿ ಮಾಡಿ ನರಪೇತಲರಂತಾಗಬೇಕೇ? ಎಂದು ಬ್ಯುರೋ ಬಲವಾಗಿ ಪ್ರಶ್ನಿಸುತ್ತದೆ.
 
ಹಾಗಿರುವಾಗ ಯುವಜನಾಂಗದ ಜೀರ್ಣಾಂಗಕ್ಕೆ ಒಗ್ಗದ ಎಳನೀರು ಬಲವಂತವಾಗಿ ಕುಡಿಸುವುದು ಮಹಾಪರಾಧ. ಎಳನೀರು ಸೇವಿಸುವುದು ಭ್ರೂಣಹತ್ಯೆಯಷ್ಟೇ ಮಹಾಪಾಪ... ಎಂಬ ಪ್ರಚಾರಾಂದೋಲನವನ್ನು ಆರಂಭಿಸಲಾಗಿದೆ. ಎಳನೀರು ಮುಂದೆ ದೊಡ್ಡದಾಗಿ ಬೆಳೆದು ಜೀವನ ಸಾಗಿಸಬೇಕಾಗಿದೆ. ಅದು ತೆಂಗಿನಕಾಯಿಯಾಗಿ ಬೆಳೆಯಲು ದೇವರ ಪಾದದಲ್ಲಿ ಛಠಾಳ್ ಎಂದು ಒಡೆಸಿಕೊಳ್ಳಲು ನಾವೆಲ್ಲಾ ಕೈಜೋಡಿಸಬೇಕಾಗಿದೆ. ಆದುದರಿಂದ ಎಳನೀರು ಹತ್ಯೆಯ ತಡೆಗೆ ರಾಷ್ಟ್ರೀಯ ಆಂದೋಲನ ಆರಂಭಿಸಬೇಕು ಎಂದು ಬ್ಯುರೋ ಒತ್ತಾಯಿಸುತ್ತದೆ.
 
ನಮ್ಮ ಸವಾಲು: ಎಳನೀರು ಬಳಸಿ ನಿಮ್ಮ ಮನೆಯ ಬಾತ್ ರೂಮ್, ಟಾಯ್ಲೆಟ್‌ಗಳನ್ನು ಕ್ರಿಮಿಕೀಟಗಳಿಲ್ಲದಂತೆ ಸ್ವಚ್ಛಗೊಳಿಸಿ ನೋಡೋಣ...!!! ಬೇಕಿದ್ದರೆ  ಒಂದಲ್ಲ, 10 ಬಳಸಿ. ಅದು ನಿಮ್ಮಿಂದ ಸಾಧ್ಯವೇ? Pesti Colaದ ಒಂದೇ ಹನಿಯಿಂದ ಆಗುವುದನ್ನು ನಿಮ್ಮ ಪುಟಗೋಸಿ ಹಚ್ಚಹಸಿರಿನ ಎಳನೀರು ರಾಶಿಯಿಂದ ಮಾಡುವುದು ಸಾಧ್ಯವೇ? ಅದಕ್ಕೇ ಹೇಳೋದು, ಥಂಡಾ ಕಾ ಮತ್‌ಲಬ್ ಟಾಯ್ಲೆಟ್ ಕ್ಲೀನಿಂಗ್!!!!

Friday, August 18, 2006

ಸಂಸದರಿಗೆ ವೇತನ ಜುಜುಬಿ ಹೆಚ್ಚಳ: ಜನತೆ ಆಕ್ರೋಶ

(ಬೊಗಳೂರು ವೇತನ ಹೆಚ್ಚಳ ಬ್ಯುರೋದಿಂದ)
ಬೊಗಳೂರು, ಆ.18- ಕೇಂದ್ರದ ಯುಪಿಎ ಸರಕಾರವು ಸಂಸತ್ತಿನಲ್ಲಿ ಗದ್ದಲವೆಬ್ಬಿಸುತ್ತಾ, ಕೂಗಾಟ, ಕಲಾಪ ಬಹಿಷ್ಕಾರ, ಪರಸ್ಪರ ಕೆಸರು ಎರಚಿಕೊಳ್ಳುವುದು, ಕಪ್ಪು ಮಸಿ ಬಳಿಯುವುದು, ಕಾಲೆಳೆಯುವುದೇ ಮೊದಲಾದ ಅದ್ಭುತ ಕೌಶಲ್ಯಗಳನ್ನು ಪ್ರದರ್ಶಿಸುತ್ತಿರುವ ಸಂಸತ್ ಸದಸ್ಯರ ವೇತನವನ್ನು ಅತ್ಯಲ್ಪ ಪ್ರಮಾಣದಲ್ಲಿ ಏರಿಸುವುದು ಜನಸಾಮಾನ್ಯರ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
 
100 ಕೋಟಿ ಭಾರತೀಯರ ಧ್ವನಿಯನ್ನು 100 ಮೀಟರ್ ವ್ಯಾಪ್ತಿಯ ಸಂಸತ್ತಿನಲ್ಲಿ ತುಂಬಿಸುವುದೇನು ಕಾಲ್ಚೆಂಡಾಟ ಆಡಿದಷ್ಟು ಸುಲಭವೇ? ಯಾರು ಏನು ಹೇಳಿದರು ಎಂದು ಯಾರಿಗೂ ಗೊತ್ತಾಗದಷ್ಟು ಬಲವಾಗಿ ಅರಚಾಡುವುದು ಸುಲಭದ ಕೆಲಸವೇ? ಎಂದು ಪ್ರಶ್ನಿಸಿರುವ ಜನಸಾಮಾನ್ಯರು, ಇದಕ್ಕಾಗಿ ಅವರು ಮೈಕ್ ಇಲ್ಲದೆ ತಮ್ಮ ಧ್ವನಿಯನ್ನು ಪಣವಾಗಿಡುತ್ತಿದ್ದಾರೆ. ಅಷ್ಟೊಂದು ಗದ್ದಲವೆಬ್ಬಿಸಲು ಇಷ್ಟು ಕಡಿಮೆ ಮೊತ್ತದ ಸಂಬಳ ಕೊಡುವುದೇ? ಎಂಬುದು ಅವರ ಆಕ್ರೋಶದ ಮೂಲ ಕಾರಣ.
 
ಈಗ 40 ಸಾವಿರ ರೂ. ತಿಂಗಳ ವೇತನ-ಭತ್ಯೆ ಇತ್ಯಾದಿ ಪಡೆಯುತ್ತಿರುವ ಸಂಸದರ ಗಂಟಿನ ಮೊತ್ತವನ್ನು ಕೇವಲ 25 ಸಾವಿರದಷ್ಟು ಹೆಚ್ಚಿಸಲು ತೀರ್ಮಾನಿಸಲಾಗಿರುವುದು ಪ್ರಜಾ ಪ್ರಭುತ್ವಕ್ಕೆ ಬಗೆದ ದ್ರೋಹ ಎಂದು ಬಡಪ್ರಜೆಗಳು ತಮ್ಮ "ಪ್ರಭು"ಗಳ ಪರವಾಗಿ ಧ್ವನಿಯೆತ್ತತೊಡಗಿದ್ದಾರೆ.
 
ಇಷ್ಟು ಕಡಿಮೆ ಸಂಬಳ ಕೊಟ್ಟರೆ ಪ್ರಜೆಗಳೇ ಪ್ರಭುಗಳು ಎಂಬ ಮಾತಿಗೆ ಬೆಲೆ ಎಲ್ಲಿ ಬಂತು? ಪ್ರಜೆಗಳಾಗಿರುವ ಅವರು ಕೂಡ ಪ್ರಭುಗಳಾಗುವುದು ಯಾವಾಗ? ದೇಶಾದ್ಯಂತ ಈ ಪ್ರಮಾಣದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಸಿ ಸರಕಾರದ ಖಜಾನೆಯಲ್ಲಿ ತುಂಬುವ ಹಣ ಎಲ್ಲಿಗೆ ಹೋಗುತ್ತದೆ. ಇದೆಲ್ಲವೂ ಅವರಿಗಾಗಿಯೇ ಅಲ್ಲವೇ? ಎಂಬ ಪ್ರಶ್ನೆಗಳು ಕಾಡತೊಡಗಿವೆ. ಅಲ್ಪ ಪ್ರಮಾಣದ ವೇತನ ಏರಿಕೆ ಪ್ರಕಟಿಸಲಾಗಿದ್ದು, ಉಳಿದ ಹಣ ಎಲ್ಲಿಗೆ ಹೋಗುತ್ತದೆ, ಈ ಬಗ್ಗೆ ಸಿಬಿಐ ತನಿಖೆಯಾಗಲಿ ಎಂದು ಅವರು ಆಗ್ರಹಿಸಿದ್ದಾರೆ.
 
ಬೆದರಿಕೆ ಪತ್ರ ಬರೆಯುವುದಕ್ಕಾಗಿ ಇದುವರೆಗೆ ನೀಡಲಾಗುತ್ತಿದ್ದ 1000 ರೂ. ಮಾಸಿಕ ಭತ್ಯೆಯನ್ನು ಕೇವಲ 5 ಸಾವಿರಕ್ಕೆ ಏರಿಸಲಾಗಿದೆ. ಕನಿಷ್ಠ ಹತ್ತಿಪ್ಪತ್ತು ಸಾವಿರವಾದರೂ ಮಾಡಬೇಕಿತ್ತು. ಸಂಸದರ ಪ್ರವಾಸ ಭತ್ಯೆಯಲ್ಲಿ ಭಾರೀ ಅನ್ಯಾಯ ಮಾಡಲಾಗಿದೆ. ಕಿಲೋಮೀಟರಿಗೆ ಅತ್ಯಂತ ನಿಕೃಷ್ಟವೆನ್ನಬಹುದಾದಷ್ಟು ಅಂದರೆ 5 ರೂ. (8 ಇದ್ದದ್ದು 13 ರೂ.) ಮಾತ್ರ ಹೆಚ್ಚಿಸಲಾಗಿದೆ.
 
ಗೂಂಡಾ ಮಿತ್ರರೊಂದಿಗೆ ಮಾತನಾಡಲು, ಸುಪಾರಿ ದೊರಕಿಸಲು, ವಿರೋಧಿಗಳನ್ನು ಮಟ್ಟ ಹಾಕಲು, ಸುಳ್ಳು ಆರೋಪ ಹೊರಿಸಲು, ಲಂಚ ತೆಗೆದುಕೊಳ್ಳಲು, ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಬಿಡುಗಡೆಯಾಗುವ ನಿಧಿಯ ದುರ್ಬಳಕೆಗೆ ಈಗಿನ ಜಮಾನಾದಲ್ಲಿ ಎಷ್ಟೊಂದು ಕಷ್ಟ-ನಷ್ಟ, ಅಡೆ ತಡೆಗಳಿವೆ. ಇವುಗಳಿಂದ ಪಾರಾಗಲು ಎಷ್ಟು ಕಷ್ಟಪಡಬೇಕಾಗುತ್ತದೆ ಎಂಬುದ ಅರಿವು ಸರಕಾರಕ್ಕಿದೆಯೇ?
 
ನಮ್ಮನ್ನಾಳುವವರಿಗೆ ತಿರುಗಾಡಲು ಒಂದು ಒಳ್ಳೆಯ ಗೂಟದ ಕಾರಿಲ್ಲ. ಅತ್ಯಂತ ಕಡಿಮೆ ಬೆಲೆಯ ಭಾರತೀಯ ವಾಹನಗಳನ್ನು ಒದಗಿಸಲಾಗುತ್ತಿದೆ. ಸಮಾಜಸೇವೆ ಮಾಡುವುದಕ್ಕೆ ತಲಾ ನೂರಾರು ಕೋಟಿ ರೂ. ಬೆಲೆಯ ವಿದೇಶೀ ಕಾರುಗಳೇ ಸೂಕ್ತವಲ್ಲವೇ? ಎಂಬುದು ಸಾಮಾನ್ಯ ನಾಗರಿಕನನ್ನು ಕಾಡುವ ಪ್ರಶ್ನೆ.
 
ಸಂಸತ್ತಿನಲ್ಲಿ ಸಂಸದರ ವೇತನ ಹೆಚ್ಚಿಸುವ ನಿರ್ಣಯ ಮಂಡನೆ ವೇಳೆ ಎಲ್ಲಾ ಸಂಸದರೂ ಕೋಪಗೊಂಡಿದ್ದುದು ಸ್ಪಷ್ಟವಾಗಿತ್ತು. ಎಲ್ಲರೂ ಕೂಡ ಇವತ್ತೊಂದು ದಿನವಾದರೂ ಮೌನವಾಗಿಯೇ ತಮ್ಮ ಪ್ರತಿಭಟನೆ ಸಲ್ಲಿಸೋಣ ಎಂದುಕೊಂಡು ಪಕ್ಷಭೇದ ಮರೆತು ಸುಮ್ಮನೇ ಕುಳಿತು ಒಗ್ಗಟ್ಟು ಪ್ರದರ್ಶಿಸಿದ್ದರು. ಇದು ಸಂಸದೀಯ ಇತಿಹಾಸದಲ್ಲಿ ಅಪರೂಪಕ್ಕೊಮ್ಮೆ ಪ್ರಕಟವಾಗುವ ಒಗ್ಗಟ್ಟು.
 
ಅವರೆಲ್ಲಾ ಮೌನವಾಗಿಯೇ ಕುಳಿತಾಗ ಈ ನಿರ್ಣಯ ಯಾವುದೇ ಸದ್ದು ಗದ್ದಲವಿಲ್ಲದೆ ಅಂಗೀಕಾರವಾಗಿರುವುದು- ಅವರ ಮನಸ್ಸಿನಲ್ಲೂ ಎಷ್ಟು ಬೇಸರ ಮಡುಗಟ್ಟಿದೆ ಎಂಬುದರ ಸೂಚನೆಯಾಗಿತ್ತು ಎಂದು ಬೊಗಳೆ-ರಗಳೆ ಬ್ಯುರೋ Epi-top ಮೇಲೆ ಬರೆಯಲು ನಿರ್ಧರಿಸಿದೆ.

Thursday, August 17, 2006

ಸಾಯೋ ಕಲೆ ಕಲಿಕಾ ಕೇಂದ್ರ ಮುಚ್ಚಲು ನಿರ್ಧಾರ !

(ಬೊಗಳೂರು ಪರಲೋಕ ಯಾತ್ರೆ ಬ್ಯುರೋದಿಂದ)
ಬೊಗಳೂರು, ಆ.17- ಮಾನವರಿಗೆ ಬದುಕುವ ಕಲೆ ಎಷ್ಟು ಅಗತ್ಯವೋ ಸಾಯುವ ಕಲೆಯೂ ಅಷ್ಟೇ ಅಗತ್ಯ ಎಂದು ಜೈನ ಯತಿಗಳಾದ ಶ್ರೀ ತರುಣಸಾಗರ ಮುನಿಗಳು ಬೆಂಗಳೂರಿನಲ್ಲಿ ಇತ್ತೀಚೆಗೆ ಹೇಳಿಕೆ ನೀಡಿರುವುದು ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿರುವ ಹಿನ್ನೆಲೆಯಲ್ಲಿ ಬೊ.ರ. ಬ್ಯುರೋ ಅತ್ತ ಇಣುಕಿ ನೋಡಿದಾಗಲೇ ಕೋಲಾಹಲ ಉಂಟಾದ ಪ್ರಕರಣವೊಂದು ಎಲ್ಲೂ ವರದಿಯಾಗಿಲ್ಲ!!!
 
 ಈ ಮಹಾತ್ಮರ ಮಾತಿನಿಂದ ಪ್ರೇರಣೆ ಪಡೆದಿರುವ ಹಣಹಣವೆಂದರೆ ಹೆಣವೂ ಬಾಯ್ಬಿಡುವ ಉದ್ಯಮಿ ಸಂಘವು, ಸಾಯುವ ಕಲೆ ಕಲಿಸಿಕೊಡುವ ಶಿಕ್ಷಣ ಸಂಸ್ಥೆಗಳನ್ನು ಭಾರೀ ಸಂಖ್ಯೆಯಲ್ಲಿ ಹುಟ್ಟು ಹಾಕಲು ನಿರ್ಧರಿಸಿರುವುದು ದೇಶಾದ್ಯಂತ ಬೇರೊಂದು ಕಾರಣಗಳಿಗೆ ಆಕ್ರೋಶ ಹುಟ್ಟಲು ಕಾರಣವಾಗಿದೆ. ಆದರೆ ಸಾಯೋ ಕಲೆಯ ಕುರಿತು ಆಕ್ರೋಶ "ಹುಟ್ಟಿದ್ದು" ಹೇಗೆ ಎಂಬುದರ ಬಗ್ಗೆ ತನಿಖೆ ನಡೆಯುತ್ತಿರುವುದು ಬೇರೆ ಸಂಗತಿ.
 
ಬದುಕುವ ಕಲೆ ಕಲಿಸಿಕೊಡುವ ನಿಟ್ಟಿನಲ್ಲಿ ದೇಶಾದ್ಯಂತ ವಿವಿಧ ಶಿಕ್ಷಣ ಸಂಸ್ಥೆಗಳು ಭಾರಿ-ಭರ್ಜರಿ ಹಣ ಸಂಪಾದನೆಗಳಲ್ಲಿ ತೊಡಗಿವೆ. ಆದರೆ ಸಾಯುವ ಕಲೆ ಕಲಿಸಿಕೊಡಲು ಯಾವುದೇ ಶಿಕ್ಷಣ ಸಂಸ್ಥೆಗಳಿಲ್ಲ ಎಂಬುದನ್ನು ಮನಗಂಡ ಅಖಿಲ ಭಾರತ (ಬಡಪ್ರಜೆಗಳ) ಜೀವ ಹಿಂಡುವವರ ಸಂಘವೇ ಈ ಹೊಸ ಶಿಕ್ಷಣ ಸಂಸ್ಥೆಯನ್ನು ಹುಟ್ಟು ಹಾಕಿದ್ದು, ಅದಕ್ಕೆ "ಪರಮೋನ್ನತ" ಶಿಕ್ಷಣ ಎಂದು ಹೆಸರಿಸಲಾಗಿದೆ. ಪರಲೋಕ ಸೇರಿಕೊಂಡು ಉನ್ನತ ಮಟ್ಟಕ್ಕೇರಿಸುವುದೇ ಈ ಕಲೆಯ ಪರಮ ಗುರಿಯಾಗಿರುವುದರಿಂದ ಈ ಹೆಸರನ್ನಿರಿಸಲಾಗಿದೆ ಎಂಬುದು ಈ ಶಿಕ್ಷಣ ಕ್ಷೇತ್ರದ "ಉದ್ಯಮ" ಹುಟ್ಟುಹಾಕಿರುವ ಜಗತ್ತಿನ ಖ್ಯಾತ ವೈನೋದ್ಯಮಿ ಡಾ.ಡೆತ್ ಅವರ ಅಭಿಪ್ರಾಯ.
 
ಆದರೆ, ಸಾಯೋ ಕಲೆ ಶಿಕ್ಷಣ ಕೇಂದ್ರ ಹುಟ್ಟು ಹಾಕಿರುವ ಬಗ್ಗೆ ಆಕ್ರೋಶಗೊಂಡಿರುವ ಭಾರತೀಯ ಬಡ ಪ್ರಜೆಗಳ ವೇದಿಕೆಯು, ನಾವೀಗಾಗಲೇ ಸಾಯೋ ಕಲೆಯನ್ನು ಕರಗತ ಮಾಡಿಕೊಂಡಿದ್ದೇವೆ, ಏರಿದ ಬೆಲೆಗಳ ಮಧ್ಯೆ ಜೀವನ ಸಾಗಿಸುತ್ತಿರುವುದೇ ಒಂದು ಜೀವಂತವಾಗಿ ಸಾಯೋ ಕಲೆಯಲ್ಲವೇ ಎಂದು ಪ್ರಶ್ನಿಸಿದ್ದಾರೆ. ಇಂಥ ಕಲೆಯನ್ನು ನಮಗೆ ಸರಕಾರವೇ ಉಚಿತವಾಗಿ ಕಲಿಸಿಕೊಡುತ್ತಿರುವಾಗ ಹಣ ತೆತ್ತು ಸಾಯಬೇಕೇಕೆ ಎಂಬುದು ಅವರ ಪ್ರಶ್ನೆ.
 
ಅಖಿಲ ಭಾರತ ಕುಡುಕರ ಸಂಘವೂ ಈ ಪ್ರಶ್ನೆಗೆ ಧ್ವನಿಗೂಡಿಸಿದೆ. ಬಹುರಾಷ್ಟ್ರೀಯ ಕಂಪನಿಗಳು Pesti-cola ಕುಡಿಸುತ್ತಿವೆ. ಇದನ್ನು ಮೇಲ್ವರ್ಗದ ಮಂದಿಯೇ ಹೆಚ್ಚು ಸೇವಿಸುತ್ತಾರೆ. ಆದುದರಿಂದ ಅವರಿಗೂ ಸಾಯೋ ಕಲೆ ಶಿಕ್ಷಣ ಕೇಂದ್ರದ ಅಗತ್ಯವಿಲ್ಲ. ಮತ್ತೊಂದೆದೆ, ಗದ್ದೆ, ತೋಟಗಳಿಗೆ ತಗುಲುವ ಕೀಟ ಬಾಧೆ ನಿವಾರಣೆಗೂ ಈ Pesti-cola ಬಳಸಲಾಗುತ್ತಿದ್ದು, ಕೀಟ ಮತ್ತಿತರ ಪ್ರಾಣಿಗಳಿಗೂ ಸಾಯೋ ಕಲೆ ಕರಗತವಾಗಿಬಿಟ್ಟಿದೆ ಎಂದು ಸಂಘದ ಮಹಾನ್ ಕುಡಿರಾಯ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 
ಅಖಿಲ ಭಾರತ ಧನಪಿಶಾಚಿಗಳ ಸಂಘವೂ ಆಕ್ರೋಶ ಹುಟ್ಟೋ ಕಲೆಗೆ ಧ್ವನಿಗೂಡಿಸಿದೆ. ಸೀಮೆಎಣ್ಣೆ, ಪೆಟ್ರೋಲ್ ಮತ್ತಿತರ (ಏರೋ ಬೆಲೆಗಳಿಂದಾಗಿ) ಅಕ್ಷರಶಃ ಅ-ಮೂಲ್ಯ ವಸ್ತುಗಳ ಮೂಲಕ ನಾವೀ ಕಲೆಯನ್ನು ವರದಕ್ಷಿಣೆ ತಾರದ ವಧು ದಹನಕ್ಕಾಗಿ ಕರಗತ ಮಾಡಿಕೊಂಡಿದ್ದೇವೆ. ನಮಗಂತೂ ಅದರ ಅಗತ್ಯವಿಲ್ಲ, ಇದು ಜನರನ್ನು ಸುಲಿಯೋ ವಿಧಾನ ಎಂದಿದ್ದಾರೆ ಸಂಘದ ಅಧ್ಯಕ್ಷೆ ವರದಕ್ಷಿಣೇಶ್ವರಿ ಅವರು.
 
ಇದಲ್ಲದೆ, ಸಾಯೋ ಕಲೆ ಕರಗತ ಮಾಡಿಕೊಂಡು ಮುಂದಿನ ಪೀಳಿಗೆಗೆ ದಾರಿ ದೀಪವಾಗುತ್ತಿರುವವರ ಸಾಲಿನಲ್ಲಿ ಪರೀಕ್ಷೆಯಲ್ಲಿ ಫೇಲಾಗುವ ವಿದ್ಯಾರ್ಥಿ ವಿದ್ಯಾರ್ಥಿನಿಯರು, ಪ್ರೇಮ ವೈಫಲ್ಯ ಅನುಭವಿಸುವ ಯುವಜನತೆ, ಪ್ರೇಮ ಸಾಫಲ್ಯವಾದರೂ ಮನೆಯವರ ಕೋಪಕ್ಕೆ ತುತ್ತಾಗುವವರು, ಕಿರುಕುಳ ಅನುಭವಿಸುವವರು, ಸಾಲದ ಬಾಧೆಯಿಂದ ನೊಂದವರು, ಖಿನ್ನತೆಯಿಂದ ಬಳಲುತ್ತಿರುವವರು.... ಮುಂತಾದವರ ದೊಡ್ಡ ಪಟ್ಟಿಯೇ ಇದೆ. ಅವರು ತಮ್ಮದೇ ಆದ ವಿಧಿ ವಿಧಾನಗಳ (ತುಂಡು ಹಗ್ಗ, ಒಂದು ಪುಟ್ಟ ಬಾಟಲಿ ವಿಷ, ಒಂದಿಷ್ಟು ನಿದ್ದೆ ಮಾತ್ರೆಗಳು, ಬಾವಿ-ಕೆರೆ ಮುಂತಾದ ನೈಸರ್ಗಿಕ ಸಂಪತ್ತುಗಳು) ಮುಖಾಂತರ ಸಾಯೋ ಕಲೆಯನ್ನು ಪ್ರದರ್ಶಿಸುವ ಚಾಕಚಕ್ಯತೆ ಹೊಂದಿದ್ದಾರೆ ಎಂದು ಹೇಳುತ್ತಾ ಈ ಸಮುದಾಯವೂ ಕೂಡ ಬಾವಿಗೆ ಹಾರಲು... ಅಲ್ಲಲ್ಲ ಬೀದಿಗಿಳಿಯಲು... ಸಿದ್ಧತೆ ಮಾಡಿಕೊಳ್ಳುತ್ತಿದೆ.
 
ಹಣವಿದ್ದ ಜನಾಂಗದವರು ಅತ್ಯಾಧುನಿಕ ಕಲೆಗಳನ್ನು ಕರಗತ ಮಾಡಿಕೊಂಡಿದ್ದು, ಅವರು ಏಡ್ಸ್ ಮುಂತಾದ ಹೊಸ ಮಾದರಿಯ ಮಾರ್ಗವನ್ನು ಅರಸುತ್ತಾ ನಿಧಾನವಾಗಿ ಸಾಯಲು ಹೋಗುತ್ತಿದ್ದಾರೆ ಎಂಬ ಅಂಶವೂ ಇದೇ ಸಂದರ್ಭ ಬಯಲಾಗಿದೆ.
 
ಕೊಟ್ಟ ಕೊನೆಯಲ್ಲಿ ಬಂಡಾಯವೆದ್ದವರು ಭಾರತ ಮಣ್ಣಿನ ಕೋಣೆ ಕೋಣೆಯಲ್ಲೂ ಸೇರಿಕೊಂಡುಬಿಟ್ಟು, ನಮ್ಮವರೇ ಆಗಿಬಿಟ್ಟಿರುವ ಪಾಕಿಸ್ತಾನೀ ಬೆಂಬಲಿತ ಉಗ್ರಗಾಮಿಗಳು. ನಾವು ಇಷ್ಟೆಲ್ಲಾ ಕಷ್ಟಪಟ್ಟು ಸಾಯಿಸೋ ಕಲೆಯನ್ನು ಕರಗತ ಮಾಡಿಕೊಂಡಿರುವಾಗ ನೀವು ಅವರಿಗೆ ಸಾಯೋ ಕಲೆ ಹೇಗೆ ಹೇಳಿಕೊಡುತ್ತೀರಿ ಅಂತ ಒಂದು ಕೈ ನೋಡಿಕೊಳ್ಳುತ್ತೇವೆ ಎಂದು ಅವರು ಆರ್‌ಡಿಎಕ್ಸ್‌ನಂತೆ ಸಿಡಿದೆದ್ದಿದ್ದಾರೆ.
 
ಬೊಗಳೆ-ರಗಳೆಯಲ್ಲಿ ಈ ವಿಶೇಷ ವರದಿ ಪ್ರಕಟವಾಗುತ್ತಿದ್ದಂತೆಯೇ ಕಳವಳಗೊಂಡಿರುವ ಡಾ.ಡೆತ್ ಅವರು, ಸಾಯೋ ಕಲೆ ಶಿಕ್ಷಣದಿಂದ ಹಣ ಮಾಡುವುದು ಈ ದೇಶದಲ್ಲಿ ಸರ್ವಥಾ ಸಾಧ್ಯವಿಲ್ಲ ಎಂದುಕೊಂಡು ಸಂಸ್ಥೆಯನ್ನು ಮುಚ್ಚಲು ನಿರ್ಧರಿಸಿದ್ದಾರೆ ಎಂದು ಇತ್ತೀಚೆಗೆ ಬಂದಿರುವ ವರದಿಗಳು ತಿಳಿಸಿವೆ.

Wednesday, August 16, 2006

"ಲಂಚ-ಭ್ರಷ್ಟಾಚಾರ ಗಟ್ಟಿಯಾಗಿ 'ನಿಲ್ಲಿ'ಸಿದ್ದೇವೆ"!

(ಬೊಗಳೂರು ಸ್ವ-ತಂತ್ರ ಬ್ಯುರೋದಿಂದ)

ಬೊಗಳೂರು, ಆ.16- ದೇಶಾದ್ಯಂತ ಆಗಸ್ಟ್ 15ರ ಪುಣ್ಯದಿನವಾದ ಮಂಗಳವಾರ ರಾಜಕಾರಣಿಗಳು ಸ್ವಾತಂತ್ರ್ಯ ದಿನೋತ್ಸವವನ್ನು ಸಂಭ್ರಮದಿಂದಲೇ ಆಚರಿಸಿದರು. ಬ್ರಿಟಿಷರು ಭಾರತೀಯರನ್ನು ಸುಲಿಯುತ್ತಾ ಕೊಳ್ಳೆಹೊಡೆಯುತ್ತಿರುವುದನ್ನು ಮನಗಂಡು ಅವರನ್ನು ಓಡಿಸಿ ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಹೋರಾಡಿದ ಮಹನೀಯರನ್ನು ಅವರು ಈ ಸಂದರ್ಭ ಸ್ಮರಿಸಿಕೊಂಡರು.

ಆದರೆ ಬಡ ಭಾರತೀಯ ಪ್ರಜೆ ಮಾತ್ರ ಆಗಲೂ, ಈಗಲೂ ಒಂದೇ ಪರಿಸ್ಥಿತಿ ಇದೆ, ಈಗಲೂ ನಮ್ಮನ್ನು ಎಲ್ಲರೂ ಕೊಳ್ಳೆ ಹೊಡೆಯುತ್ತಿದ್ದಾರೆ ಎಂಬ ಭಾವನೆಯಲ್ಲಿ ಈ ರಾಜಕಾರಣಿಗಳ ಮಾತುಗಾರಿಕೆ ಪ್ರದರ್ಶನಕ್ಕೆ ಬರೇ ಮೂಕ ಪ್ರೇಕ್ಷಕನಾಗಿ ಹಾಜರಾಗಿದ್ದ ಎಂಬುದು ಎಲ್ಲೆಡೆ ಸುತ್ತಾಡಿದ ಬೊಗಳೆ-ರಗಳೆ ಬ್ಯುರೋದ ಗಮನಕ್ಕೆ ಬಂದಿದೆ.

ಕಪ್ಪು ಕೋಟೆಯಲ್ಲಿ ತ್ರಿ-ನಾಮ (3 ಪಂಗನಾಮ) ಧ್ವಜ ಹಾರಿಸಿ ತಮ್ಮ ರಾಷ್ಟ್ರದಲ್ಲಿರುವ ನರಪಿಳ್ಳೆಗಳನ್ನು ಉದ್ದೇಶಿಸಿ ಮಾತನಾಡಿದ ಮಾನಿನೀಯ ಸ್ವಗೃಹ ಮಂತ್ರಿಗಳು, 59 ವರ್ಷಗಳ ಹಿಂದೆ ನಮಗೂ ಸ್ವಾತಂತ್ರ್ಯ ಸಿಕ್ಕಿದೆ, ನಾವೂ ಭ್ರಷ್ಟಾಚಾರಿಗಳಾಗಿದ್ದೇವೆ ಎಂದು ಘೋಷಿಸಿದರು.

ಇಂಗ್ಲೀಷರು ಹಾಕಿಕೊಟ್ಟ ಹಾದಿಯಲ್ಲೇ ನಾವಿನ್ನೂ ಮುಂದುವರಿಯುತ್ತಿದ್ದೇವೆ, ಅವರ ಭಾಷೆ, ಅವರ ಮಾತು, ಅವರ ವಾಕ್ಚಾತುರ್ಯ, ಅವರ ನಡತೆಗಳನ್ನು ನಾವು ಅಕ್ಷರಶಃ ಪಾಲಿಸುತ್ತಿದ್ದೇವೆ ಎಂದವರು ಇದೇ ಸಂದರ್ಭದಲ್ಲಿ ಉದಾಹರಣೆಗಳ ಸಹಿತ ಬಡಪ್ರಜೆಯನ್ನು ಕಾಲಿನಿಂದ ಒತ್ತಿ ಒತ್ತಿ ವಿವರಿಸಿದರು. ಅವರ ಭಾಷಣದ ಸಾರ-ಅಂಶಗಳು ಇಲ್ಲಿ ನೀಡಲಾಗಿದೆ.

* Matrimony ಎಂಬುದು ನಮಗೆ ಇಂಗ್ಲಿಷರು ನೀಡಿದ ಶಬ್ದ. ಅದರ ಹೆಸರಲ್ಲೇ money ಅಂಶವಿದೆ. ಇವೆಲ್ಲಾ Matter of money. ಆದುದರಿಂದ ವರದಕ್ಷಿಣೆ ಇಂದು ದೇಶಾದ್ಯಂತ ಪ್ರಬಲವಾಗಿ ಅನಿವಾರ್ಯವಿರುವ ಮತ್ತು ಚಾಲ್ತಿಯಲ್ಲಿರುವ ಸಂಗತಿ.

* ಯಾವುದೇ ಸರಕಾರೀ ಆಫೀಸನ್ನೇ ನೋಡಿ, ಅಲ್ಲಿ ಆ ಫೀಸು, ಈ ಫೀಸು ಇಲ್ಲದೆ ಕೆಲಸವೇ ಆಗದ ಹಾಗೆ ಇಂಗ್ಲಿಷರ ಶಬ್ದಪ್ರಯೋಗದ ಚಾತುರ್ಯಕ್ಕೆ ಮರುಳಾಗಿರುವ ನಾವು ಅದನ್ನ ಅಕ್ಷರಶಃ ಪಾಲಿಸುತ್ತಿದ್ದೇವೆ .

* ನಮ್ಮ ಸಂಚಾರ ವ್ಯವಸ್ಥೆಗೆ ಬ್ರಿಟಿಷ್ ಶಬ್ದ ಪ್ರಯೋಗವನ್ನೇ ಬಳಸಿ Push-Pull ರೈಲನ್ನು ಅಳವಡಿಸಿದ್ದೇವೆ. ಇದೇ Push-Pull ಅನ್ನು ನಾವು ( ಲಂಚ) Push ಮಾಡಿದರಷ್ಟೇ ನಿಮ್ಮ ನಿಮ್ಮ ಕೆಲಸ Pull ಮಾಡಿಕೊಳ್ಳಬಹುದು ಎಂದು ಜನತೆಗೆ ಸಾರಿ ಸಾರಿ ಹೇಳಿದ್ದೇವೆ.

* ಜನರ ಸೇವೆಗಾಗಿ Public sector undertaking ಮತ್ತು Government Undertaking ಮುಂತಾದ ಅದೆಷ್ಟೋ ಇಲಾಖೆಗಳನ್ನು, ಸಂಸ್ಥೆಗಳನ್ನು ರಚಿಸಿದ್ದೇವೆ. ಇಲ್ಲೆಲ್ಲಾ ಇರೋದು ಟೇಬಲ್‌ನ Underನಲ್ಲಿ (ಮನಿ)Take ಮಾಡುವವರೇ ಎಂಬುದು ಇಡೀ ಜಗತ್ತಿಗೇ ತಿಳಿದಿರುವ ವಿಷಯ. ಇದೇ ವಿಷಯದಲ್ಲಿ ನಾವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದೇವೆ.

* ದೇಶಕ್ಕೆ ಸ್ವಾತಂತ್ರ್ಯ ಬಂದು 60ರ ಅರಳುಮರಳಿನಲ್ಲಿದೆ. ಇಷ್ಟು ವರ್ಷಗಳಾದರೂ ಲಂಚ-ಭ್ರಷ್ಟಾಚಾರವನ್ನು ನಿಲ್ಲಿಸಿದ್ದೇವೆ. ಅದು ಎಷ್ಟರಮಟ್ಟಿಗೆ ನಿಂತಿದೆಯೆಂದರೆ ಯಾರು ಕೂಡ ಅಲುಗಾಡದಷ್ಟು ಭದ್ರವಾಗಿ ನಿಂತಿದೆ.

* ವಿವಿಧ ಜಾತಿಗಳಿಗೆ ಮೀಸಲಾತಿ ಮಾಡುತ್ತಿದ್ದೇವೆ. ವಿವಿಧ ಕುಶಲಕರ್ಮಿಗಳಿಗೆ ಪ್ರತ್ಯೇಕ ಒಳ ಮೀಸಲು ಇತ್ಯಾದಿ ನೀಡಲಾಗುತ್ತಿದೆ. ಅದೇ ರೀತಿ ಮಾನವನ ವರ್ಣ ವ್ಯವಸ್ಥೆಯಲ್ಲಿ ಭ್ರಷ್ಟಾಚಾರಿ, ಅತ್ಯಾಚಾರಿ ಮತ್ತು ಲಂಚಾವತಾರಿ ಎಂಬ ಮೂರು ಹೊಸ ಜಾತಿಗಳನ್ನು ಸೇರ್ಪಡೆಗೊಳಿಸಿ ಈ ಜಾತಿಗೆ ಸೇರಿದವರನ್ನು ಮುಂದೆ ತರುವುದು ನಮ್ಮ ನರಕ-ಕಾರದ ಉದ್ದೇಶ.

* ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ತೀವ್ರವಾಗಿ ಶ್ರಮಿಸಿದವರು ಗಾಂಧಿ ತಾತ. ಇದೇ ಕಾರಣಕ್ಕೆ ಎಲ್ಲಾ ಸರಕಾರಿ ಕಚೇರಿಗಳಲ್ಲಿ ಅವರನ್ನು ದಿನಂಪ್ರತಿ ನೆನಪಿಸಿಕೊಳ್ಳುವ ನಿಟ್ಟಿನಲ್ಲಿ ಸರಕಾರಿ ಕಚೇರಿ ನೌಕರರು, ಅಧಿಕಾರಿಗಳೆಲ್ಲಾ (ಲಂಚ) ತಾ ತಾ ಎನ್ನುತ್ತಲೇ ಇರುತ್ತಾರೆ.

* ಈ ದೇಶದಲ್ಲಿ ಶಾಸಕ, ಸಂಸದರಿಗೆ ಹೆಸರು ಕಡಿಮೆಯಾಗುತ್ತಿದೆ. ಈ ಕಾರಣಕ್ಕೆ Income Tax ನವರು Raid ಮಾಡಿದರಷ್ಟೇ ಅವರ ಪ್ರತಿಷ್ಠೆ ಹೆಚ್ಚಾಗುತ್ತದೆ, ದೇಶಾದ್ಯಂತ ದೊಡ್ಡ ಹೆಸರು ಕೂಡ ಅವರಿಗೆ ತನ್ನಿಂದತಾನೇ ಬರುತ್ತದೆ. ಭ್ರಷ್ಟಾಚಾರ ಮಾಡದವನು ರಾಜಕಾರಣಿಯೇ ಅಲ್ಲ ಎಂಬಂಥ ದುಸ್ಥಿತಿ ಬಂದಿರುವಾಗ ಪ್ರತಿಷ್ಠೆ ಉಳಿಸಿಕೊಳ್ಳುವ ಸಲುವಾಗಿ ನಾವು ಭ್ರಷ್ಟಾಚಾರಿಗಳಾಗುತ್ತಿದ್ದೇವೆ.

ಹೀಗೇ ಮಾತು ಮುಂದುವರಿಸುತ್ತಾ ಅವರು, ನೀವೆಲ್ಲಾ ಯೋಗಿ ಬಸವಣ್ಣನವರ ವಚನವನ್ನು ಸಮರ್ಥವಾಗಿಯೇ ಪಾಲಿಸುತ್ತೀರೆಂಬ ಆಶಯ ನಮಗಿದೆ. ಬಸವಣ್ಣನವರು ಹೀಗೆ ಹೇಳಿದ್ದಾರೆ:

"ಲೋಕದ ಡೊಂಕ ನೀವೇಕೆ ತಿದ್ದುವಿರಿ?
ಎನ್ನನು ಈ ಬಗ್ಗೆ ಕುರುಡನ ಮಾಡಯ್ಯ ತಂದೆ"


ಎಂಬ ಅಮೂಲ್ಯ ವಚನಗಳನ್ನು ಅವರು ಉಲ್ಲೇಖಿಸಿದರು.

ಅವರು ತಮ್ಮ ಭೀಷಣ-ಭಾಷಣವನ್ನು ಮುಗಿಸಿದ್ದು ಹೀಗೆ:

ಕಾಣಿಕೆಯಿಲ್ಲದ ಫೈಲು
ಕಾಣಿಸುವುದೇ ಇಲ್ಲ
ಲಂಚವಿಲ್ಲದ ಫೈಲು
ಕೊಂಚವೂ ಮುಂದೆ ಚಲಿಸುವುದೇ ಇಲ್ಲ!!!!


ಹೀಗಾಗಿ, ಬಡ ಪ್ರಜೆಗಳು ಈ ಬಗ್ಗೆ ಯಾವುದೇ ರೀತಿಯಲ್ಲಿ ತಲೆ ಕೆಡಿಸಿಕೊಳ್ಳಬಾರದು. ನಿಮ್ಮ ಮನೆಯಲ್ಲಿ ಜೇಡರ ಬಲೆ ಕಟ್ಟಿದರೆ ನೀವು ಬಲೆಯನ್ನು ಮಾತ್ರವೇ ತೆಗೆದು ನಿರುಮ್ಮಳವಾಗುತ್ತೀರಿ. ಆದರೆ ಜೇಡನನ್ನೇ ಕೊಂದರೆ ಬಲೆಯ ಸಮಸ್ಯೆ ನಿವಾರಣೆಯಾಗುತ್ತದೆ ಎಂಬುದನ್ನು ಖಂಡಿತಾ ಗಮನಕ್ಕೆ ತೆಗೆದುಕೊಳ್ಳಬೇಡಿ. ಅದೇ ರೀತಿ ದೇಶದ ಲಂಚಾವತಾರ ಮತ್ತು ಭ್ರಷ್ಟಾಚಾರದ ಕುರಿತಾಗಿಯೂ ನೀವು ಅದೇ ರೀತಿಯ ನಿಲುವು ತಳೆದು ಸಹಕರಿಸುವಿರೆಂದು ಹಾರೈಸುತ್ತೇನೆ ಎನ್ನುತ್ತಾ ತಮ್ಮ ಎರಡೇ ಎರಡು ಮಾತುಗಳನ್ನು ಅವರು ಮುಗಿಸಿಯೇ ಬಿಟ್ಟರು.

(ಸೂಚನೆ: ಇದರಲ್ಲಿ "ಹರಟೆ" ಕಾರ್ಯಕ್ರಮದಲ್ಲಿ ಬಿದ್ದ ಅಣಿಮುತ್ತುಗಳನ್ನು ಸೇರಿಸಿಕೊಳ್ಳಲಾಗಿದೆ.)

Tuesday, August 15, 2006

ದೇಶದೆಲ್ಲೆಡೆ ಧ್ವಜಾವರೋಹಣ!!!

ಇಂದು ದೇಶಾದ್ಯಂತ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ ನಡೆದಿದ್ದು, ರಾಜಕಾರಣಿಗಳು ಹಾರಿಸಿ ಹಾಗೆಯೇ ಬಿಟ್ಟು ಹೋದ ಧ್ವಜವನ್ನು ಇಳಿಸಿ ಜೋಪಾನವಾಗಿ ಕಾಯ್ದುಕೊಳ್ಳಬೇಕಾದ ನಿಮಿತ್ತ ನಮ್ಮ ಬ್ಯುರೋಗೆ ರಜೆ ಸಾರಲಾಗಿತ್ತು.
 
ಆದರೆ ಇಂದಿನ ಕಾರ್ಯಕ್ರಮದ ಸಮಗ್ರ ವರದಿಯೊಂದು ನಾಳಿನ ಸಂಚಿಕೆಯಲ್ಲಿ ಮೂಡಿ ಬರಲಿದೆ.
 
ನಿಮ್ಮ ಪ್ರತಿಗಳನ್ನು ಹೆಚ್ಚು ಹಣ (ಲಂಚ) ಕೊಟ್ಟು ಈಗಲೇ ಕಾದಿರಿಸಿ...
 
ಬೇರೆಲ್ಲೂ ಪ್ರಕಟವಾಗದ ವರದಿ ನಿಮ್ಮನ್ನು ತುದಿಗಾಲಲ್ಲಿ ಅಲ್ಲಲ್ಲ ಕುಕ್ಕುರುಗಾಲಲ್ಲಿ ನಿಲ್ಲಿಸಿ ಬೀಳುವಂತೆ ಮಾಡುತ್ತದೆ...
 
ನಿರೀಕ್ಷಿಸಿ!!!!

Monday, August 14, 2006

ಶಾಕ್ ಹೊಡೆಸುವವರಿಗೆ ಹೀಗೊಂದು ಬೆಂಬಲ !

(ಬೊಗಳೂರು ಶಾಕ್ ಬ್ಯುರೋದಿಂದ)
ಬೊಗಳೂರು, ಆ.14- ಲೋಹಗಳಲ್ಲಿ ಮಾತ್ರ ವಿದ್ಯುತ್ ಪ್ರವಹಿಸುತ್ತದೆ ಎಂಬ ಸಿದ್ಧಾಂತವನ್ನೇ ಬುಡಮೇಲು ಮಾಡಿ, ಬರೇ ಕಾಗದ ಪತ್ರಗಳಿಂದಲೂ ಮನುಷ್ಯರಿಗೆ ವಿದ್ಯುತ್ ಶಾಕ್ ಹೊಡೆಸಬಹುದು ಎಂಬುದನ್ನು ಶೋಧನೆ ಮಾಡಿ ವಿಶ್ವ ವಿಖ್ಯಾತವಾಗಿರುವ ವಿದ್ಯುತ್ ವಿತರಣಾ ಕಂಪನಿಗಳ ಮತ್ತೊಮ್ಮೆ ದರ ಏರಿಸುವ ಪ್ರಸ್ತಾಪವನ್ನು ವಿರೋಧಿಸುವ ಅರ್ಜಿಗಳ ಸಂಖ್ಯೆಯಲ್ಲಿ ಭಾರಿ ಕುಸಿತ ಕಂಡುಬರಲು ಕಾರಣವನ್ನು ಪತ್ತೆ ಹಚ್ಚಲಾಗಿದೆ.
 
ಇಲ್ಲಿ ಪ್ರಕಟವಾಗಿರುವ ವರದಿಯಿಂದ ರಸ್ತೆ ಬದಿಯಲ್ಲಿ ಬಿದ್ದ ವಿದ್ಯುತ್ ತಂತಿ ಮೆಟ್ಟಿದಂತೆ ಆಘಾತಕ್ಕೊಳಗಾದ ನಮ್ಮ ಬೊ.ರ. ಬ್ಯುರೋ ಸಿಬ್ಬಂದಿ ಬೊಗಳೂರಿನಿಂದ ಬೆಂಗಳೂರಿಗೆ ಧಾವಿಸುವ ದಾರಿ ಮಧ್ಯೆ ಅಲ್ಲಲ್ಲಿ ಬೋರಲಾಗಿ ಬಿದ್ದುಕೊಂಡ ಕರ್ನಾಟಕದ ಬಡ ಬೋರೇಗೌಡರ ಸ್ಥಿತಿ ಮರುಕ ಹುಟ್ಟಿಸುವಂತಿತ್ತು.
 
ಈ ವಿಷಯದ ಬಗ್ಗೆ ಅನ್ವೇಷಣೆ ನಡೆಸಿದಾಗ ಕಂಡುಬಂದ ಮಹತ್ವದ ಅಂಶವೆಂದರೆ, ಇವರೆಲ್ಲಾ ಹಿಂದಿನಿಂದಲೂ ವಿದ್ಯುತ್ ಇಲಾಖೆಯಿಂದ ಶಾಕ್ ಹೊಡೆಸಿಕೊಂಡವರಾಗಿದ್ದು, ಮೇಲೇಳಲಾರದಷ್ಟು ಹೊಡೆತ ತಿಂದಿದ್ದಾರೆ ಎಂಬುದು.
ಮತ್ತೆ ಕೆಲವು ಕಡೆ ವಿದ್ಯುತ್ ಇಲಾಖೆ ಕಳುಹಿಸಿದ ಬಿಲ್ ಅನ್ನು ಕೈಯಲ್ಲಿ ಹಿಡಿದ ತಕ್ಷಣವೇ ಶಾಕ್ ಹೊಡೆಸಿಕೊಂಡು ಹಾಸಿಗೆ ಪಾಲಾದವರೂ ಇದ್ದರು. ಇನ್ನೂ ಒಂದು ವರ್ಗದವರು ನಮ್ಮ ಬ್ಯುರೋದ ಕಣ್ತಪ್ಪಿ ಹೋಗುವುದರಲ್ಲಿದ್ದರು. ಅವರೆಂದರೆ ಕ್ಯಾಲೆಂಡರಿನಲ್ಲಿ ದಿನಾಂಕ ನೋಡಿದ ತಕ್ಷಣ "ವಿದ್ಯುತ್ ಬಿಲ್ ಬರೋ ಸಮಯವಾಯ್ತು" ಎಂದು ಯೋಚಿಸಿಯೇ ಹಾವು.... ಅಲ್ಲಲ್ಲ ವಿದ್ಯುತ್ ತಂತಿ ಮೆಟ್ಟಿದವರಂತೆ ಆಘಾತಕ್ಕೀಡಾದವರು.
 
ಪರೋಪಕಾರಿ ವಿದ್ಯುತ್ ಇಲಾಖೆ
 
ಮನೆಯಲ್ಲಿ ಮಂಗಳ ಕಾರ್ಯಕ್ಕೆ ರಾತೋರಾತ್ರಿ ತಯಾರಿ ನಡೆಸಬೇಕಾದ ಪರಿಸ್ಥಿತಿ ಇರುವಾಗ ವಿದ್ಯುತ್ ಇಲಾಖೆ ಅಂಥವರ ಮೇಲೆ ಕರುಣೆ ತೋರಿ, ಅವರು ಎಷ್ಟು ಶ್ರಮ ಪಡುತ್ತಿದ್ದಾರಲ್ಲಾ... ಸ್ವಲ್ಪವಾದರೂ ವಿಶ್ರಾಂತಿ ತೆಗೆದುಕೊಳ್ಳಲಿ ಎಂಬ ಕಾರಣಕ್ಕೆ ವಿದ್ಯುತ್ ಪೂರೈಕೆಯನ್ನೇ ನಿಲ್ಲಿಸಿಬಿಡುತ್ತಾ ಪರೋಪಕಾರ ಕಾರ್ಯವನ್ನೂ ಮಾಡುತ್ತಿತ್ತು. ಮತ್ತು ವಿಪರೀತ ಸೆಕೆ ಇರುವಾಗಲೂ, ನೀರಿನ ಕೊರತೆ ಇರುವಾಗಲೂ ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಲಾಗುತ್ತಿತ್ತು. ಇದಕ್ಕೆ ಕಾರಣವೂ ಇದೆ. ಇದು ಕೂಡ ವಿದ್ಯುತ್ ಇಲಾಖೆಯ ಪರೋಪಕಾರ ಕಾರ್ಯವೇ ಆಗಿದೆ ಎಂಬುದು ತನಿಖೆ ವೇಳೆ ಪತ್ತೆಯಾಗಿದೆ.
 
ಅಂದರೆ ವಿಪರೀತ ಸೆಕೆಯಿದ್ದಾಗ ಬೆವರು ಸುರಿಸುವುದು ಸಹಜ. ಈ ಬೆವರು ಹೆಚ್ಚು ಹೆಚ್ಚು ಸುರಿಯುತ್ತಿದ್ದಾಗ, ಅದನ್ನು ಬಕೆಟುಗಳಲ್ಲಿ ಸಂಗ್ರಹಿಸಿಟ್ಟುಕೊಂಡರೆ ನೀರಿನ ಸಮಸ್ಯೆ ಬಗೆಹರಿಯುತ್ತದೆ ಎಂಬುದು ವಿದ್ಯುತ್ ಇಲಾಖೆಯ ದೂ(ದು)ರಾಲೋಚನೆ.
ಮತ್ತೊಂದೆಡೆ ವಿದ್ಯಾರ್ಥಿಗಳು ಪರೀಕ್ಷೆ ಸಂದರ್ಭದಲ್ಲಿ ರಾತ್ರಿಯಿಡೀ ನಿದ್ದೆಗೆಟ್ಟು ಓದಬೇಕಾಗುತ್ತದೆ. ಮನೆಯವರೂ ಬಲವಂತ ಮಾಡುತ್ತಾರೆ. ಈ ಕಾರಣಕ್ಕೆ ವಿದ್ಯಾರ್ಥಿಗಳ ಹಿತರಕ್ಷಣೆಗೆ ಮುಂದಾಗುತ್ತಿರುವ ಇಲಾಖೆ, ರಾತ್ರಿ ವೇಳೆ ಮತ್ತು ಬೆಳ್ಳಂಬೆಳಗ್ಗೆ ವಿದ್ಯುತ್ ಪ್ರವಾಹವನ್ನೇ ಕಿತ್ತು ಹಾಕಿ ಅಂಥ ವಿದ್ಯಾರ್ಥಿಗಳ ವೇದನೆಯನ್ನು ನಿವಾರಣೆ ಮಾಡುತ್ತಿತ್ತು.
 
ವಿರೋಧ ಸಲ್ಲ
 
ಹೀಗೆ ಹತ್ತು ಹಲವು ಪುಣ್ಯ ಕಾರ್ಯಗಳಲ್ಲಿ ಭಾಗಿಯಾಗಿರುವ ವಿದ್ಯುತ್ ಇಲಾಖೆಯ ವಿರುದ್ಧ ಯಾರಾದರೂ ದೂರು ಕೊಡುತ್ತಾರೆಯೇ? ದರ ಏರಿಕೆಯ ಪ್ರಸ್ತಾಪವನ್ನು ವಿರೋಧಿಸುವುದು ವಿಹಿತವೇ? ಎಂಬ ಪಾಪಪ್ರಜ್ಞೆಯಿಂದಾಗಿಯೇ ಅರ್ಜಿಗಳ ಸಂಖ್ಯೆಯಲ್ಲಿ ಕೊರತೆ ಕಂಡುಬಂದಿತ್ತು ಎಂಬುದು ಸಮಗ್ರ ತನಿಖೆಯಿಂದ ಗೊತ್ತಾದ ಅಂಶ.
 
ಇನ್ನೂ ಒಂದು ಉಪ-ಕಾರಣವೂ ಲಭ್ಯವಾಗಿದೆ. ರಾಜ್ಯದ ಜನತೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯುತ್ ಇಲಾಖೆಯಿಂದ ಆಗಾಗ್ಗೆ ಶಾಕ್ ಹೊಡೆಸಿಕೊಂಡವರೇ ಆಗಿರುವುದರಿಂದ ಅರ್ಜಿ ಬರೆಯಲು ಅಥವಾ ದೂರು ನೀಡುವುದಕ್ಕಾಗಿ ವಿದ್ಯುತ್ ಕಚೇರಿವರೆಗೆ ಹೋಗಲು ಸಂಪೂರ್ಣವಾಗಿ ಅಶಕ್ತರಾಗಿದ್ದರು.
 
ಅರ್ಜಿಗಳ ಸಂಖ್ಯೆ ಕುಸಿತಕ್ಕೆ ಕೊನೆಯ ಪ್ರಧಾನ ಕಾರಣವೆಂದರೆ, ಅಭ್ಯಾಸಬಲದಿಂದ ಬಂದ ನಿರ್ಲಕ್ಷ್ಯ. ಇಲಾಖೆ ಆಗಾಗ್ಗೆ ವಿದ್ಯುತ್ ದರ ಏರಿಸುತ್ತಲೇ ಇರುವುದರಿಂದ "ಅವರದು ಇದ್ದದ್ದೇ, ಇದು ಮಾಮೂಲಿ" ಅಂದುಕೊಂಡು ಸುಮ್ಮನಾದವರು ಕೆಲವರಾದರೆ, ಏನೂ ಮಾಡಿದರೂ ಪ್ರಯೋಜನವಿಲ್ಲ ಎಂದುಕೊಂಡು ಸುಮ್ಮನಾಗುವವರು ಹಲವರು. ಮತ್ತೆ ಕೆಲವರಿಗೆ "ವಿದ್ಯುತ್ ದರ ಏರಿಸುತ್ತಿದ್ದಾರಾ... ಇದೆಲ್ಲೋ ಹಳೆಯ ಸುದ್ದಿಯಾಗಿರಬೇಕು" ಎಂಬ ಮಹಾನ್ ಆಶಾವಾದ!

Friday, August 11, 2006

ಪೊಲೀಸರಿಗೆ ಗುರುದಕ್ಷಿಣೆಯಾಗಿ ಕೈ ಕೊಟ್ಟೆ!

(ಬೊಗಳೂರು ಪೋಲಿ-ಶ್ ಬ್ಯುರೋದಿಂದ)
ಬೊಗಳೂರು, ಆ.11- ಪೊಲೀಸರು ಯಾವತ್ತೂ ಕಳ್ಳರನ್ನು, ಅಪರಾಧಿಗಳನ್ನು ಕೈಯಲ್ಲೇ ಹಿಡಿದು ಕರೆದುಕೊಂಡು ಹೋಗುತ್ತಾರೆ, ಬಹುಶಃ ಅವರಿಗೆ ಇಂತಹ ಕೈಗಳು ಇಷ್ಟ ಇದ್ದಿರಬೇಕುಎಂಬುದನ್ನು ತಿಳಿದ ವಿಚಾರಣಾಧೀನ ಕೈದಿಯೊಬ್ಬ ಅವರಿಗೆ ಕೈಗಳನ್ನು ಕೊಟ್ಟು ಓಡಿಹೋದ ಪ್ರಕರಣ ಇಲ್ಲಿ ವರದಿಯಾದ ಹಿನ್ನೆಲೆಯಲ್ಲಿ ಬೊ.ರ. ಬ್ಯುರೋ ಅಲ್ಲಿಗೆ ಧಾವಿಸಿತು.
 
ಈ ಹಿಂದೆ ಚಳ್ಳೆ ಹಣ್ಣು ಚೆನ್ನಾಗಿತ್ತು, ಅದಕ್ಕಾಗಿ ತಿಂದೆವು ಎಂದು ಹೇಳಿಕೆ ನೀಡಿದ್ದ ಪೊಲೀಸರೇ ಈ ಬಾರಿಯೂ ಮಾ ಥೂ... ಕತೆಗೆ ಸಿಕ್ಕರು. "ಆತ ಕೈ ಕೊಟ್ಟಾಗ ನಾವು ಬೇಡವೆನ್ನಲಾಗುತ್ತದೆಯೇ, ಎಷ್ಟಾದರೂ ಆತ ಮನುಷ್ಯನಲ್ಲವೇ, ಕೊಟ್ಟವ ಕೋಡಂಗಿ, ಇಟ್ಟುಕೊಂಡವ ಈರಭದ್ರ ಎಂಬೋ ಮಾತನ್ನು ನೀವು ಕೇಳಿಲ್ವೇ? ಆದುದರಿಂದ ನಾವೇ ಈರಭದ್ರರು, ಕೈ ಕೊಟ್ಟವನೇ ಕೋಡಂಗಿ" ಎಂದು ಈ ಪೊಲೀಸರು ತಮ್ಮ ಮಹಾನ್ ಸಾಧನೆಯನ್ನು ಸಮರ್ಥಿಸಿಕೊಂಡರಲ್ಲದೆ, ನಮ್ಮನ್ನೂ ಕೋಡಂಗಿ ಇರಬಹುದೇ ಎಂದು ಸಂಶಯದ ದೃಷ್ಟಿಯಿಂದಲೇ ಬಿರಬಿರನೆ ನೋಡಿದರು.
 
"ಈ ಹಿಂದೆ ಇದೇ ರೀತಿ, ಹೀಗೆ ಸಾಕಷ್ಟು ಚಳ್ಳೆ ಹಣ್ಣು ತಿಂದ ಪೊಲೀಸರನ್ನು ಮನೆಗೆ ಕಳುಹಿಸಲಾಗಿದೆ, ನಿಮಗೆ ಭವಿಷ್ಯದ ಬಗ್ಗೆ ಆತಂಕವಿಲ್ಲವೇ" ಎಂದು ಕೇಳಿದಾಗ, "ಆತಂಕ ಯಾರಿಗ್ರೀ...? ನಮಗೆ ಆಗಾಗ ಈ ರೀತಿಯಾಗಿ ಶ್ರೀಮಂತ ಕಳ್ಳರು, ದರೋಡೆಕೋರರು, ಮಾತ್ರವಲ್ಲದೆ ರಾಜಕಾರಣಿಗಳು ಕೂಡ ಕೈ ಕೊಡುತ್ತಾ ಇದ್ದರು. ಅವರು ಬರೇ ಕೈ ಕೊಟ್ಟಿರಲಿಲ್ಲ. ಕೈಯೊಳಗೆ ದೊಡ್ಡ ದೊಡ್ಡ ಇಡುಗಂಟನ್ನೂ ಕೊಡುತ್ತಿದ್ದರು. ಅದು ಕೊಳೆಯುವಷ್ಟಿದೆ. ಅಷ್ಟು ಮಾತ್ರವೇ ಅಲ್ಲ, ಪಾಪದವರನ್ನು ಬೆದರಿಸುವ ಮೂಲಕವೂ ನಾವು ಸಾಕಷ್ಟು ಸಂಪಾದಿಸಿದ್ದೇವೆ, ಜೀವಮಾನವಿಡೀ ದುಡಿಯಬೇಕು ಎಂಬುದೇ ನಿಮ್ಮ ಅಭಿಪ್ರಾಯವೇ?" ಎಂದು ಬ್ಯುರೋ ಸಿಬ್ಬಂದಿಯನ್ನೇ ಪ್ರಶ್ನಿಸಿದರು.!!!
 
ಆ ಬಳಿಕ, ಪೊಲೀಸರಿಗೆ ಕೈಕೊಟ್ಟು, ಕೈ ಕಳೆದುಕೊಂಡ ಆರೋಪಿ ನಾಗೇಂದ್ರ ಚಡ್ಡಿಯನ್ನು ಮಾತನಾಡಿಸಲಾಯಿತು. ಆತನಿಂದ ದೊರೆತ ಉತ್ತರ ಮಾತ್ರ ನೀಡಲಾಗುತ್ತದೆ, ಯಾಕೆಂದರೆ ಪ್ರಶ್ನೆ ಕೇಳುವುದಕ್ಕೆ ಆತ ನಮಗೆ ಅವಕಾಶವೇ ನೀಡಿರಲಿಲ್ಲ ಎಂದು ನಾವು ಔಪಚಾರಿಕತೆಗಾಗಿ ಹೇಳುತ್ತಿದ್ದೇವೆ. ವಾಸ್ತವವಾಗಿ ಆತನನ್ನು ಪ್ರಶ್ನಿಸುವ ಧೈರ್ಯ ನಮ್ಮ ತಂಡಕ್ಕಿಲ್ಲ ಎಂಬುದು ಗುಟ್ಟಿನ ವಿಷಯ!
 
ಆತನೇ ಮಾತನಾಡುತ್ತಾ ಹೋದಂತೆ, ನಮ್ಮ ಬ್ಯುರೋ ಸಿಬ್ಬಂದಿ ತಮ್ಮ ಬೆರಳುಗಳನ್ನು ಭದ್ರವಾಗಿ ಹಿಡಿದುಕೊಂಡು ಬರೆಯುತ್ತಾ ಹೋದರು.
 
"ನಾನು ನನ್ನ ಸ್ನೇಹಿತನ ತಲೆ, ಹೆಬ್ಬೆಟ್ಟು ಮುಂತಾದವನ್ನು ಕಡಿದು ಎಷ್ಟೊಂದು ಕಷ್ಟಪಟ್ಟು ಈ ಜೈಲಿಗೆ ಬಂದೆ! ಪುರಾಣದಲ್ಲಿ ಅಂದರೆ ಮಹಾಭಾರತದಲ್ಲಿ ನೀವು ಏಕಲವ್ಯನ ಕಥೆ ಕೇಳಲಿಲ್ವೇ? ಆತ ತನ್ನ ಬೆರಳಿನ ತುಂಡನ್ನಷ್ಟೇ ಗುರು ದ್ರೋಣಾಚಾರ್ಯರಿಗೆ ಕಡಿದು ಕೊಟ್ಟ. ನಾನು ಅವನಿಗಿಂತ ದೊಡ್ಡ ಸಾಧನೆ ಮಾಡಿದ್ದೇನೆ. ಪೊಲೀಸರಿಗೆ ಇಡೀ ಕೈಕೊಟ್ಟು ಬಂದಿದ್ದೇನೆ. ಪೊಲೀಸರು ಕೂಡ ತುಂಬಾ ದಯಾಮಯಿಗಳು. ನನ್ನ ಕೈಗೆ ಕೋಳ ತೊಡಿಸಿರಲಿಲ್ಲ. ಅಷ್ಟು ದೊಡ್ಡ ದಯಾಪರತೆ ತೋರಿದ ಪೊಲೀಸರಿಗೆ ಗುರುದಕ್ಷಿಣೆ ರೂಪದಲ್ಲಿ ಕೈಕೊಡದಿದ್ದರೆ ಹೇಗೆ" ಎಂದು ಪ್ರಶ್ನೆಯಲ್ಲೇ ಆತ ಮಾತು ಮುಗಿಸಿದ.

Thursday, August 10, 2006

ರಕ್ಷಾ ಬಂಧನವೂ... ಶಿಕ್ಷಾ ಬಿಡುಗಡೆಯೂ...!

(ಬೊಗಳೂರು ಶಿಷ್ಟ-ರಕ್ಷಕ ಬ್ಯುರೋದಿಂದ)
ಬೊಗಳೂರು, ಆ.10- ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ, ಮಡಕೆ ಒಡೆಯುವ ಸ್ಪರ್ಧೆಗಳೆಲ್ಲಾ ಅಲ್ಲಲ್ಲಿ ನಡೆಯುತ್ತದೆ ಅಂತ ಕೇಳಿದ್ದೇವೆ. ಆದರೆ ರಕ್ಷಾ ಬಂಧನ ದಿನದಂದೇ ಇದೇ ಮೊಸರು ಕುಡಿಕೆ ಒಡೆಯುವಂತಹ ಸ್ಪರ್ಧೆ ನಡೆದಿರುವುದು ಕುತೂಹಲ ಮೂಡಿಸಿರುವುದರಿಂದ ಬೊಗಳೆ ರಗಳೆ ಬ್ಯುರೋ ಇದರ ತನಿಖೆಗಾಗಿ ತನ್ನ ಅಭಿಯಾನ ಕೈಗೊಂಡಿತ್ತು.

ಕಾಲೇಜುಗಳಿಗೆ ರಕ್ಷಾ ಬಂಧನದಂದು ಭೇಟಿ ಕೊಟ್ಟ ದಿನ ಕಂಡುಬಂದ ಚಿತ್ರ ವಿಚಿತ್ರ ಸನ್ನಿವೇಶಗಳು ಬ್ಯುರೋ ಸಿಬ್ಬಂದಿಯ ಮನ ಕಲಕುವಂತೆ ಮಾಡಿದವು. ರಕ್ಷಾ ಬಂಧನ ಎಂಬುದನ್ನು ಶಿಕ್ಷೆ ಮತ್ತು ಬಂಧನ ಎಂದು ಭಾವಿಸಿದ ಕೆಲವರು ಕಾಲೇಜಿನಿಂದಲೇ ನಾಪತ್ತೆಯಾಗಿದ್ದರು.

ಕೆಲವು ಹುಡುಗರು ಕಣ್ಣೀರಿನ ಹೊಳೆಯಲ್ಲಿ ಈಜಾಡುತ್ತಾ ಇದ್ದರೆ, ಮತ್ತೆ ಕೆಲವರು ಕೈ ತೊಳೆಯುತ್ತಿದ್ದರು. ಇನ್ನು ಕೆಲವರು ಗಂಗೇಚ ಯಮುನೇಚ ಗೋದಾವರೀ, ಸರಸ್ವತಿಯರನ್ನು ಸೃಷ್ಟಿಸುತ್ತಿದ್ದರು.

ಅಷ್ಟರಲ್ಲಿ ಕಂಡದ್ದು, ಬಣ್ಣ ಬಣ್ಣದ ಚಿಟ್ಟೆಗಳ ದಂಡೊಂದು ಕಾಲೇಜಿನ ಮುಖ್ಯ ಅಪಾಪೋಲಿ ಹುಡುಗನೊಬ್ಬನನ್ನು ಅಟ್ಟಾಡಿಸಿಕೊಂಡು ಹೋಗುತ್ತಿತ್ತು. ವಾಸ್ತವವಾಗಿ ಈ ಹುಡುಗೀರ ದಂಡು ಆತನನ್ನು ಆಟ್ಟಾಡಿಸುತ್ತಿರಲಿಲ್ಲ, ಆತನೇ ಅವರ ಕೈಯಿಂದ ತಪ್ಪಿಸಿಕೊಳ್ಳಲು ಹೆಣಗಾಡುತ್ತಿದ್ದ ಎಂಬುದು ಆ ಬಳಿಕದ ತನಿಖೆಯಿಂದ ತಿಳಿದುಬಂದಿದೆ.

ಮತ್ತೊಂದೆಡೆ, ಶ್ರೀಕೃಷ್ಣ ಜನ್ಮಾಷ್ಟಮಿ ದಿನ ನಡೆಯುವ ಮೊಸರು ಕುಡಿಕೆ ಉತ್ಸವ ನಡೆಯುತ್ತಿದೆಯೋ ಅಂತ ನೋಡಲು ಹೋದಾಗ ನಾವು ಬೇಸ್ತು ಬಿದ್ದಿದ್ದು, ಅದು ರಾಖಿ ಕಟ್ಟುವುದರಿಂದ ತಪ್ಪಿಸಿಕೊಳ್ಳುವ ಯತ್ನ ಎಂಬುದು ಆ ಬಳಿಕ ತಿಳಿದುಬಂತು.

ಇದರ ನಡುವೆಯೂ ರಕ್ಷಾ ಬಂಧನ ಆಚರಣೆಯು ತಮಗೆ ಶಿಕ್ಷೆಯಿಂದ ಬಿಡುಗಡೆ ಎಂದು ಭಾವಿಸಿದ ಕಾಲೇಜು ತರುಣಿಯರು ಮಾತ್ರವೇ ಅಲ್ಲಲ್ಲಿ ಬಿದ್ದು... ಬಿದ್ದು.... ನಗುತ್ತಿದ್ದರು ಮತ್ತು ನಕ್ಕು ನಕ್ಕು ಬೀಳುತ್ತಿದ್ದರು. ಕೆಲವರಂತೂ ಜೋರಾಗಿ "ಸದ್ಯ ಪೀಡೆ ತೊಲಗಿಸಿಕೊಂಡೆನಲ್ಲಾ..." ಎಂಬ ಅತ್ಯುತ್ಸಾಹದಿಂದ ಬಿಟ್ಟ ನಿಟ್ಟುಸಿರಿನ ವೇಗಕ್ಕೆ ಎದುರಿಗಿದ್ದ ನವರಸ ನಾಯಕರು ಅಷ್ಟು ದೂರ ನೆಗೆದು ಬೀಳುತ್ತಿದ್ದರು. ನನಗೊಬ್ಬ ಉತ್ತಮ ಸಹೋದರ ದೊರೆತನಲ್ಲಾ ಎಂದು ಸಂತಸಪಟ್ಟವರೂ ಅಲ್ಲಲ್ಲಿ ಧನ್ಯತಾಭಾವ ಪ್ರಕಟಿಸುತ್ತಿದ್ದವರಿಗೂ ಅಲ್ಲಿ ಕೊರತೆಯಿರಲಿಲ್ಲ.

ಒಟ್ಟಿನಲ್ಲಿ ರಕ್ಷಾ ಬಂಧನವನ್ನು ಜನ್ಮಾಷ್ಟಮಿಯಂತೆ ಆಚರಿಸಿ, ಮಡಿಕೆ ಒಡೆಯುವ ಬದಲು ಹೃದಯ ಒಡೆಯುವ ಸ್ಪರ್ಧೆ ಏರ್ಪಡಿಸಿದ ಬಣ್ಣದ ಚಿಟ್ಟೆಗಳ ವಿರುದ್ಧ ಪ್ರತಿಭಟನೆಗೆ ನವರಸಿಕ ನಾಯಕರು ಸಿದ್ಧರಾಗುತ್ತಿದ್ದಾರೆ ಎಂಬ ಆತಂಕಕಾರಿ ಸಂಗತಿಯೂ ತನಿಖೆ ವೇಳೆ ಹೊರಬಿದ್ದಿದ್ದು, ಈ ಕುರಿತ ಗುಪ್ತಚರ ದಳದ ವರದಿಯನ್ನು ಕೇಂದ್ರ ಗೃಹ ಸಚಿವಾಲಯಕ್ಕೆ ಕಳುಹಿಸಿಕೊಡಲಾಗಿದೆ.

ರಕ್ಷಾ ಬಂಧನ ದಿನವನ್ನೇ ಅಕ್ಕ-ತಂಗಿಯಂದಿರು ದುಷ್ಟ ಶಿಕ್ಷಣ, ಶಿಷ್ಟ ರಕ್ಷಣೆಗೆ ಬಳಸಿಕೊಳ್ಳತೊಡಗಿರುವುದು ವಿಶೇಷ. ರಾಖಿ ಎಂಬ ಹೊಸ ಆಯುಧದ ಬಗ್ಗೆ ಎಲ್ಲಾ ಸೋದರಿಯರು ಸಂತಸಚಿತ್ತರಾಗಿದ್ದಾರೆ ಎಂಬ ಅಮೂಲ್ಯ ಮಾಹಿತಿಯೂ ಇದೇ ವೇಳೆ ದೊರಕದೇ ಬಿಡಲಿಲ್ಲ.

Wednesday, August 09, 2006

"ಜಾಹೀರಾತು ಪ್ರೇಮ" ಪತ್ರ !

(ಬೊಗಳೂರು ಜಾಹೀರಾತು-ನಿಷೇಧ ವಿಭಾಗದಿಂದ)
 
ಬೊಗಳೂರು, ಆ.9- ಬೊ.ರ. ಪತ್ರಿಕೆಗೆ ಯಾವುದೇ ಜಾಹೀರಾತು ದೊರಕದಿರುವ ಹಿನ್ನೆಲೆಯಲ್ಲಿ ತೀವ್ರ ರೋಷಾವೇಶಗೊಂಡಿರುವ ಬ್ಯುರೋ ಎಲ್ಲಾ ಜಾಹೀರಾತುದಾರರ ಜಾತಕ ಜಾಲಾಡಲು ನಿರ್ಧರಿಸಿದೆ.
 
ಅವರು ಜಾಹೀರಾತು ನೀಡಲು ನಿರಾಕರಿಸಿರುವುದರಿಂದ ತೀವ್ರ ನೊಂದು ಕೊಂಡಿರುವುದರಿಂದ, ಅವುಗಳಿಗೆ ತಕ್ಕ ಶಾಸ್ತಿ ಮಾಡಲು ನಮ್ಮ ಏಕೈಕ ಸದಸ್ಯರ ಬ್ಯುರೋ ಬಹುಮತದ ನಿರ್ಣಯ ಕೈಗೊಂಡಿದೆ.
 
ಈಗ ಪ್ರೇಮಜ್ವರ ಪೀಡಿತರೇ ಈ ಖೋಟಾ ಪತ್ರ ತಯಾರಿಸಿರುವುದರಿಂದ ಇದಕ್ಕೊಂದು love ಲೇಪನವಿದೆ. ಜಾಹೀರಾತುದಾರರ ಮನಕೆರಳಿಸುವ ನಿಟ್ಟಿನಲ್ಲಿ ಈ ಪತ್ರವನ್ನು ನಾವು ಇಲ್ಲಿ ಪ್ರಕಟಿಸುತ್ತಿದ್ದೇವೆ.
 
ನ್ನ ಪ್ರೀತಿಯ FAIR and LOVELY (ಏಕ್ ಚಾಂದ್ ಕಾ ಟುಕ್‌ಡಾ),
 
ನೀನೇ ನನ್ನ TVS SCOOTY (first love) ಮತ್ತು ನನ್ನ AIWA (pure passion). ನಾನು ಯಾವತ್ತೂ BPL (believe in the best) ಮತ್ತು ನೀನೇನಿದ್ದರೂ SANSUI (better than the best).
 
ನೀನು ನನಗೆ DOMINO'S PIZZA (delivering a million smiles**) ಇದ್ದ ಹಾಗೆ. ಇದು ನನ್ನಲ್ಲಿ COLGATE ENERGY GEL (seriously fresh) ಭಾವನೆ ಉಂಟುಮಾಡುತ್ತಿದೆ.
 
ನೀನು ನನ್ನ ಜೀವನ ಸಂಗಾತಿಯಾಗಬೇಕೆಂದು ನಾನು ಬಯಸುತ್ತೇನೆ, ಆದರೆ ನೀನು KAWASAKI BAJAJ CALIBER (The unshakable ) ಆಗಿರುವ ನಿನ್ನಪ್ಪನ ಬಗ್ಗೆ ಚಿಂತಿತಳಾಗಿದ್ದೀ ಅಂತ ನನಗೆ ಗೊತ್ತು. ನನ್ನಪ್ಪನೂ CEAT (born tough ). ಆದರೆ ಚಿಂತಿಸದಿರು, ನಾನು ಕೂಡ FORD ICON (the josh machine) ಮತ್ತು ನನ್ನ ಮನೆಯ ಇತರ ಮಂದಿ KELVINATORS (the coolest ones).
 
ಅವರೆಲ್ಲಾದರೂ ಬೇಡ ಅಂತ ಹೇಳಿದರೆ, ನಾವು ಓಡಿ ಹೋಗಿ ಮದುವೆಯಾಗೋಣ ಮತ್ತು PHILIPS (let's make things better) ಮಾಡೋಣ. ಆಗವರು MIRINDA (zor ka jhatka dhire se lage) ಅಂತ ಭಾವಿಸುತ್ತಾರೆ. ಆದರೆ ನಾನು ಯಾವತ್ತೂ COCA COLA (Jo chahe ho jaye)ದಲ್ಲಿ ನಂಬಿಕೆ ಇಟ್ಟಿರುವವ.
 
ನಮ್ಮ ಮದುವೆಗೆ SAMSUNG DIGITALL (everyone's invited) ಮತ್ತು ಮದುವೆಯ ಬಳಿಕ ನಾವಿಬ್ಬರೂ WHIRLPOOL (U and me — the world's best homemakers). ಯಾವತ್ತಿಗೂ NOKIA (connecting people) ದಂತಿರುವ, ಎಲ್ಲರನ್ನೂ ಪ್ರೀತಿಸುವ ದೇವರ ಮೇಲೆ ನಂಬಿಕೆ ಇಡು. ಈಗ ಪ್ರೀತಿಯ ಗೀತೆಯನ್ನು HYUNDAI (we are listening)., ಪ್ರೀತಿ ಎನ್ನುವುದು DAIRY MILK (real taste of life ) ಅಂತ ನೀನು ಯಾವತ್ತೂ ತಿಳಿದಿರಬೇಕು. ಅಲ್ವೇ?
 
ಆದ್ದರಿಂದ ಯಾವತ್ತೂ ನನ್ನನ್ನು ಮರೆಯಬೇಡ. Ok bye!
 
ನಾನೀ ಪತ್ರದಲ್ಲಿ ಬರೆದದ್ದು ಸ್ವಲ್ಪ ಮಾತ್ರ, ಆದ್ರೆ... PEPSI (Yeh dil mange more)!!!
 
LG (digitally yours)
xyz

Tuesday, August 08, 2006

ಬಾಲ ಕಾಮುಕರಿಗೆ ನಿಷೇಧ: ಕೇಂದ್ರ ಆದೇಶ

(ಬೊಗಳೂರು ಕಾರ್-ಮಿಕ ಬ್ಯುರೋದಿಂದ)
ಬೊಗಳೂರು, ಆ.8- ದೇಶದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯಿಂದಾಗಿ ಪ್ರಜೆಗಳಿಗೆ ಬದುಕಲು ಸೂಕ್ತ ಸೌಲಭ್ಯಗಳನ್ನು ಒದಗಿಸಲು ಅನುವಾಗುವಂತೆ ಕೇಂದ್ರ ಸರಕಾರವು ಬಾಲ ಕಾಮುಕರನ್ನು ನಿಷೇಧಿಸಿ ಆದೇಶ ಹೊರಡಿಸಿದೆ.

ಇತ್ತೀಚೆಗೆ ಚಲನಚಿತ್ರಗಳಲ್ಲಿ ಮತ್ತು ಇತರ ಮಾಧ್ಯಮಗಳಲ್ಲಿ ಅರೆಬರೆ ಉಡುಗೆಗಳ ಸೀನು-ಸೀನರಿಗಳು ಹೆಚ್ಚಾಗುತ್ತಿರುವುದರಿಂದ ಅಂಥ ಚಲನಚಿತ್ರಗಳನ್ನು ವೀಕ್ಷಿಸಲು ಬಾಲ-ಕರುಗಳು ಹಣ ಸಂಪಾದನೆಗಾಗಿ ದಂಧೆಗಿಳಿದಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಕಾರಣಕ್ಕೆ ಇನ್ನು ಮುಂದೆ ಪ್ರಾಯಕ್ಕೆ ಬಂದವರು ಮಾತ್ರವೇ ಈ ರೀತಿ ಮೈಬಗ್ಗಿಸಿ ದುಡಿಯಬಹುದು ಎಂದು ಕೇಂದ್ರದ Unprecedented Price Agenda ಸರಕಾರವು ಆದೇಶಿಸಿದೆ.

ಇತ್ತೀಚೆಗೆ ಬೀದಿ ಬೀದಿಗಳಲ್ಲಿ ಮಕ್ಕಳು ಮರಿಗಳ ಸುತ್ತಾಟ ಹೆಚ್ಚಾಗಿರುವುದು ಕಳವಳಕ್ಕೆ ಕಾರಣವಾಗಿದೆ. ಈ ಮಕ್ಕಳ ಸಂಖ್ಯೆ ಎಲ್ಲಿಂದ ಹುಟ್ಟುತ್ತದೆ ಎಂಬುದೇ ಸರಕಾರಕ್ಕೆ ಅರ್ಥವಾಗದ ವಿಷಯವಾಗಿತ್ತು. ಈ ಬಗ್ಗೆ ಬೊಗಳೆ ರಗಳೆ ಬ್ಯುರೋಕ್ಕೆ ಮನವಿ ಮಾಡಿಕೊಂಡಿದ್ದ UPA ಸರಕಾರವು, ಬಾಲ ಕಾಮುಕತನ ನಿವಾರಣೆಗೆ ಏನಾದರೂ ಮಾಡುವಂತೆ ಮನವಿ ಮಾಡಿಕೊಂಡಿತ್ತು.

ಬೀದಿ ಬದಿಗಳಲ್ಲಿ ಮಕ್ಕಳು-ಮರಿಗಳು ಭಿಕ್ಷಾಟನೆ ನೆವದಲ್ಲಿ ಬಸ್ ಪ್ರಯಾಣಿಕರಿಗೆ ಕಿರುಕುಳ ಕೊಡುವುದು, ಹೋಟೆಲ್-ಲಾಡ್ಜ್ ಇತ್ಯಾದಿಗಳಲ್ಲಿ ಮೈಬಗ್ಗಿಸಿ ದುಡಿಯುವುದು, ಹೋಟೆಲ್‌ಗಳಲ್ಲಿ ತೊಳೆಯುವುದು, ಲಾಡ್ಜ್‌ಗಳಲ್ಲಿ ಹಾಸಿಗೆ ಹಾಸುವುದು, ಬೀದಿ ಬದಿಯಲ್ಲಿ ತಿರುಗಾಡುತ್ತಾ ಬಸ್‌ನಲ್ಲಿ ಕುಳಿತವರ ಮೇಲೆ ಕೈ ಹಾಕುವುದು (ofcourse.... ಅಮ್ಮಾ, ಏನಾದ್ರೂ ಕೊಡಿ... ಅಂತ ಕೇಳುತ್ತಾರೆ), ಬಾರ್‌ಗಳಲ್ಲಿ ಮದಿರೆ ಸುರಿಯುವುದು.... ಇವೇ ಮುಂತಾದ ಬಾಲಕಾಮುಕತೆಗಳನ್ನು ಪ್ರದರ್ಶಿಸಿ ಸಂಭಾವಿತರಿಗೆ ಕಿರುಕುಳ ನೀಡುತ್ತಿದ್ದರು.

ಮಕ್ಕಳು ಈ ರೀತಿಯಾಗಿ ದುಡಿಯುವುದು ದೇಶಕ್ಕೆ ಕೆಟ್ಟ ಹೆಸರು ಮತ್ತು ಬಾಲ-ಕರುಗಳ ಆರೋಗ್ಯಕ್ಕೂ ಒಳ್ಳೆಯದಲ್ಲ ಎಂದು ಮನಗಂಡ ಸರಕಾರ ಈ ಕ್ರಮ ಕೈಗೊಂಡಿದೆ.ಈ ಮಧ್ಯೆ, ಬೊಗಳೆ-ರಗಳೆ ಬಾಲ ಬಿಚ್ಚಲು ಹೋಗದಂತೆಯೂ ಕೇಂದ್ರವು ಮನವಿ ಮಾಡಿಕೊಂಡಿದೆ.

(ಸೂಚನೆ: ಕಂಪ್ಯೂಟರ್ ಸಮಸ್ಯೆಯಿಂದಾಗಿ ಒಂದು ನಿರ್ದಿಷ್ಟ ಪದ ತಪ್ಪಾಗಿ ಮುದ್ರಣವಾಗುತ್ತಿದೆ... :))

Monday, August 07, 2006

ತಾನು ತೊಡದ ಬಟ್ಟೆ ಮಕ್ಕಳಿಗೆ ತೊಡಿಸುವ ಬ್ರಿಟ್ನಿ

ಬೊಗಳೂರು ವಸ್ತ್ರ(ನಾಪತ್ತೆ)ಶೋಧ ಬ್ಯುರೋದಿಂದ

ಬೊಗಳೂರು, ಆ.7- ತಾನು ಬಟ್ಟೆ ಧರಿಸುವುದಕ್ಕಿಂತಲೂ ಮಕ್ಕಳಲ್ಲಿ ವಸ್ತ್ರ ಧರಿಸುವ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿಸಬೇಕು ಎಂಬುದರ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿರುವ ಖ್ಯಾತ ವಸ್ತ್ರ ದ್ವೇಷಿ ಅಭಿನೇತ್ರಿಯರಲ್ಲೊಬ್ಬಳಾದ 'ಎಲ್ಲವನ್ನೂ ಬಿಟ್ನಿ' ಸ್ಪಿಯರ್ಸ್, ಈಗ ಬಟ್ಟೆ ಬಿಚ್ಚುವುದೆಂದರೆ ಏನೆಂದೇ ತಿಳಿಯದ ಮುಗ್ಧ ಮಕ್ಕಳಿಗೆ ಬಟ್ಟೆ ತೊಡಿಸಲು ಹೊರಟಿರುವ ಅಂಶ ಇಲ್ಲಿ ಬಯಲಾಗಿದೆ.

ಹುಟ್ಟುಡುಗೆ ಎಂಬ ಪದಕ್ಕೆ ಹೊಸ ಅರ್ಥವೋ... ಅಪಾರ್ಥವೋ... ಕಲ್ಪಿಸಿ ಮೆರೆದಾಡುವ ನಟೀಮಣಿಯರಲ್ಲಿ 'ಬಟ್ಟೆ ಬಿಟ್ಟಿ' ಸ್ಪಿಯರ್ಸ್ ಕೂಡ ಒಬ್ಬಳು. ಈ ಕಾರಣಕ್ಕೆ ಆಕೆ ಹುಟ್ಟಿದ ಮಕ್ಕಳಿಗೆ ಮಾತ್ರವಲ್ಲದೆ ಇನ್ನೂ ಹುಟ್ಟದಿರುವ ಮಕ್ಕಳಿಗೂ ಬಟ್ಟೆ ತೊಡಿಸಲು ಮುಂದಾಗಿರುವುದಕ್ಕೆ ಆಕೆಯ ಮನದಲ್ಲಿ ಮನೆಮಾಡಿರುವ ಪಾಪ ಪ್ರಜ್ಞೆಯೇ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ತಾನಂತೂ ಸಾಕಷ್ಟು ಬಟ್ಟೆ ತೊಟ್ಟುಕೊಳ್ಳಲಾಗಲಿಲ್ಲ, ಮುಂದಿನ ಪೀಳಿಗೆಯ ಭವ್ಯ ಭವಿಷ್ಯದ ರೂವಾರಿಗಳಾದ ಮಕ್ಕಳೂ ತನ್ನಂತಾಗುವುದು ಬೇಡ ಎಂಬ ಉದ್ದೇಶದಿಂದ ಯಾರಿಗೂ ಬೇಡವಾಗಿದ್ದ ಈ ಕೆಲಸಕ್ಕೆ ಕೈ ಹಚ್ಚಿರುವುದಾಗಿ ಬಹಿರಂಗವಾಗಿ ಆಕೆ ಹೇಳಿಕೆ ನೀಡಿದ್ದರೂ ಅವಳ ಒಳಮನಸ್ಸಿನ ಉದ್ದೇಶ ಬೇರೆಯೇ ಎಂಬುದು ಬೊಗಳೆ ರಗಳೆ ಬ್ಯುರೋದ ಗಮನಕ್ಕೆ ಬಂದಿದೆ. ಆದರೆ ಬ್ರಿಟ್ನಿಯ ದು(ದೂ)ರಾಲೋಚನೆಯೇ ಅವಳು ಕೈಗೆ ಹಚ್ಚಿಕೊಂಡ ಹೊಸ ಸಾಹಸಕ್ಕೆ ಕಾರಣ ಎಂಬುದು ಅಸತ್ಯಾನ್ವೇಷಿ ತನಿಖೆಯಿಂದ ಗೊತ್ತಾಗಿದೆ.

ತನಿಖೆ ಪ್ರಕಾರ, Rampನಲ್ಲಿ ಮಾರ್ಜಾಲ ನಡಿಗೆ (cat walk) ಯಾವೆಲ್ಲಾ ಬಟ್ಟೆಗಳನ್ನು ಯಾವ ರೀತಿ ತೊಟ್ಟುಕೊಂಡರೆ ಏನೆಲ್ಲಾ ಕಾಣಿಸಬಹುದು, ಮತ್ತು ಏನನ್ನೆಲ್ಲಾ ಯಾವ ರೀತಿ ಕಾಣಿಸದೇ ಇರಬಹುದು ಎಂಬುದನ್ನು ಮಾತ್ರವಲ್ಲದೆ, ಕೆಲವನ್ನು ಕಾಣಿಸಿಯೂ ಕಾಣಿಸದಂತೆ ಮಾಡುವುದು ಹೇಗೆ ಎಂಬುದೇ ಮುಂತಾಗಿ ಪ್ರಯೋಗ ಮಾಡಿ ನೋಡುವುದಕ್ಕಾಗಿ ಆಕೆ ಮಕ್ಕಳನ್ನು ಆರಿಸಿಕೊಂಡಿದ್ದಾಳೆ ಎನ್ನಲಾಗಿದೆ.

ಪುಟ್ಟ ಮಕ್ಕಳಿಗೆ ಯಾವ ರೀತಿ ಬಟ್ಟೆ ಹಾಕಿದರೂ ಯಾರು ಕೂಡ ನಗುವುದೂ ಇಲ್ಲ ಎಂಬುದು ಒಂದು ಕಾರಣವಾದರೆ, ನೋಡುವವರ ಕಣ್ಣಿನೊಳಗೆ ಯಾವ ಕೆಟ್ಟ ಭಾವನೆಯೂ ಮೂಡಲಾರದು ಎಂಬುದು ಮತ್ತೊಂದು ಕಾರಣ. ಮಿನಿ ಹಾಕಿದರೆ, ಮಿಡಿ ಹಾಕಿದರೆ, ಮಿನಿ-ಮಿಡಿ ಯಾವುದೂ ಹಾಕದಿದ್ದರೆ, ಈಜುಡುಗೆ ಧರಿಸಿದರೆ, ಈಜುಡುಗೆ ಧರಿಸದೇ ಇದ್ದರೆ, ಬಿಕಿನಿ ತೊಟ್ಟರೆ, ಬಿಕಿನಿ ಸುಟ್ಟರೆ... ಎಂಬಿತ್ಯಾದಿ ಯೋಚನೆಗಳನ್ನು.... ಕೊನೆಯಲ್ಲಿ ನ್ಯಾಪ್‌ಕಿನ್ ಧರಿಸಿ Rampಗೆ ಬಂದರೆ ಹೇಗಿರುತ್ತದೆ ಎಂದು ನೋಡಲು ಈ 'ಎಲ್ಲಾ ಬಿಟ್ನಿ' ಸ್ಪಿಯರ್ಸ್ ಮಕ್ಕಳಿಗೆ ತೊಡಿಸಿ ನೋಡುತ್ತಿದ್ದಾಳೆ ಎಂಬುದು ಗುಪ್ತ ತನಿಖೆಯಿಂದ ತಿಳಿದುಬಂದ ಸಂಗತಿ.

ಮಗುವಿಗೆ ಬಟ್ಟೆ ತೊಡಿಸಿದ ಬ್ರಿಟ್ನಿ- ಚಿತ್ರ ಇಲ್ಲಿದೆ.

ಈ ಮಧ್ಯೆ, ಬ್ರಿಟ್ನಿಯ ಉಡುಗೆ ನೋಡಿ ಪುಟ್ಟ ಮಕ್ಕಳೇ ಆಕೆಗೆ ಬಟ್ಟೆ ತೊಡಿಸಲು ಮುಂದಾಗಿರುವುದು ಇತ್ತೀಚೆಗೆ ಬಂದ ಸುದ್ದಿ!!!

ಧಮಕಿ

ಹಿಟ್ (ಒದೆತ) ಕೌಂಟರ್ (ಪೆಟ್ಟಿಗೆ) 8000ದ ಮಿತಿ ಮೀರಿದ್ದರಿಂದಾಗಿ ತೀವ್ರ ಆಘಾತಗೊಂಡಿರುವ ಬೊಗಳೆ ರಗಳೆ ಬ್ಯುರೋ ಒಂದು ದಿನ ಕಚೇರಿ ಮುಚ್ಚಿ ಮೌನ ವ್ರತ ಆಚರಿಸಿದ ಪರಿಣಾಮವಾಗಿ ಶನಿವಾರದ ಸಂಚಿಕೆ ಪ್ರಕಟವಾಗಿರಲಿಲ್ಲ ಎಂದು ತಿಳಿಸಲು ಖಂಡಿತಾ ವಿಷಾದಿಸುವುದಿಲ್ಲ.

ಗ್ರಹದಿಂದ ಉಚ್ಚಾಟನೆ: ಇದರೊಂದಿಗೆ, ಕೇಂದ್ರ ಸರಕಾರ ಬೊಗಳೆ Blogspotಅನ್ನು Block-spot ಮಾಡಿದ ಬಳಿಕ, "ಬ್ಲಾಗಿಗರಿಗೆ ಉಳಿಗಾಲವಿಲ್ಲ" ಎಂಬ ನಮ್ಮ ಬ್ಯುರೋದ ರಗಳೆಯನ್ನು ಕನ್ನಡ ಬ್ಲಾಗಿಗರ ಗ್ರಹವೂ ಬೆಂಬಲಿಸಿದ ಪರಿಣಾಮವಾಗಿ ಅಲ್ಲಿ ನಮ್ಮ ಬೊಗಳೆ ರಗಳೆ ಪ್ರಕಟವಾಗುತ್ತಿಲ್ಲ. ಬೊಗಳೆ-ರಗಳೆ Black-spot ಆಗದಿದ್ದರೂ blocked-spot ಆಗಿದೆ ಅಂತ ಗೊತ್ತಾಗಿದೆ.

ಈ ಬ್ಯುರೋದ ಅನಾಮಿಕರು ಈ ಗ್ರಹಕ್ಕೆ ಸೇರಿದವರಲ್ಲ ಎಂದು ಸಾರಿದ ಈ ಗ್ರಹ ಇದುವರೆಗೆ ನೀಡಿದ ಸಹಕಾರಕ್ಕೆ ನಮ್ಮ ಅಭೂತಪೂರ್ವ ಧನ್ಯವಾದಗಳನ್ನು ಬೋರಲಾಗಿ ಬಿದ್ದ ಬ್ಯುರೋ ಸಲ್ಲಿಸುತ್ತಿದೆ.

Friday, August 04, 2006

ಮಗಳನ್ನು ಪೋಷಿಸುವುದು ಮಾವನ ಕರ್ತವ್ಯ!

(ಬೊಗಳೂರು ಮ-ರಗಳೆ ಬ್ಯುರೋದಿಂದ)
ಬೊಗಳೂರು, ಆ.3- ಫಲ ಕೊಡುವ ಮಗಳನ್ನು ಬೆಳೆಸಿ ಪೋಷಿಸುವುದು ಮಾವನಾದವನ ಕರ್ತವ್ಯ.

ಈ ವಾಕ್ಯ ನೋಡಿ ಆಶ್ಚರ್ಯವಾದ ಹಿನ್ನೆಲೆಯಲ್ಲಿ ಮಾವನೇಕೆ ಮಗಳನ್ನು ಬೆಳೆಸಬೇಕು ಎಂದು ಕೇಳಿದಾಗ, ಉಸಿರು ಬಿಡಬೇಕಿದ್ದರೆ, ಜೀವನ ಹಸಿರಾಗಬೇಕಿದ್ದರೆ ಮಗಳು ಬೇಕು ಎಂಬ ಗೊಂದಲದ ಉತ್ತರವೇ ಸಿಕ್ಕಿತ್ತು. ಅಂತೂ ಬ್ಯುರೋದ ಮ-ರಗಳೆ ಗೊಂದಲದ ಗೂಡಾಗಿ ಪರಿವರ್ತಿತವಾಯಿತು.

ಗಿಡ ನೆಡಬಹುದು, ಮರಗಳನ್ನೇ ನೆಡುವುದು ಹೇಗಪ್ಪಾ.... ಎಂದು ರಪರಪನೆ ತಲೆ ಕೆರೆದುಕೊಂಡಾಗ ಈ ಸಂದೇಹಕ್ಕೆ ಪರಿಹಾರ ಸಿಕ್ಕಿದ್ದು ಇಲ್ಲಿ ಪ್ರಕಟವಾಗಿರುವ ಸುದ್ದಿಯಿಂದ.

ಒಂದಿಡೀ ಮರವನ್ನೇ ಕಡಿದು.... ಅಲ್ಲಲ್ಲ... ಬೇರು ಸಮೇತ ಕಿತ್ತು ಬೇರೆಡೆ ನೆಟ್ಟು ಸುಲಲಿತವಾಗಿ ಸ್ಥಳಾಂತರ ಮಾಡಲಾಗಿದೆ!

ಈ ವಿಷಯಕ್ಕೆ ಅರ್ಧದಲ್ಲೇ, ಸೆಮಿ ಕೋಲನ್ ಹಾಕೋಣ.....

ಈಗ ಈ ಸ್ಲೋಗನ್ ಹಿಂದೆ ಅನ್ವೇಷಣೆಗೆ ಹೊರಟಾಗ ಇದು ಸ್ವರಲೋಪ.... ಅಲ್ಲಲ್ಲ ವ್ಯಂಜನ ಲೋಪ ಸಂಧಿ ಎಂಬುದು ಗೊತ್ತಾಯಿತು.

ಮಗಳನ್ನು ಎನ್ನುವ ಕಡೆ ಮಧ್ಯದಲ್ಲಿ ಒಂದು 'ರ' ಹಾಗೂ ಮಾವನಾದವನ ಎಂಬುದರ ಮಧ್ಯದಲ್ಲಿ 'ನ' ಎಂಬುದು ವೈಯಾಕರಣಿಗಳ ಯಾವುದೋ ಒಂದು ಲೋಪ ಸಂಧಿಗೆ ಸೇರಿಕೊಂಡಿರುವ ಕಾರಣದಿಂದಾಗಿ ಇದು ಒಂದು ಕಾಲದಲ್ಲಿ ಪರಿಸರ ಸಂರಕ್ಷಕರ ಸ್ಲೋಗನ್ ಆಗಿದ್ದಿರಬಹುದು ಎಂಬುದು ಬ್ಯುರೋಗೆ ಆಮೇಲೆ ತಿಳಿದುಬಂದ ವಿಷಯ.

ಈಗ ಸೆಮಿ ಕೋಲನ್‌ನಿಂದ ಮುಂದುವರಿಸಲಾಗಿ....

ಮೇಲಿನ ಸ್ಲೋಗನ್‌ಗೂ ಈ ಪ್ರಕರಣಕ್ಕೂ ಸಾಕಷ್ಟು ಸಂಬಂಧವಿದೆ ಎಂಬುದು ಬೊಗಳೆರಗಳೆ ಬ್ಯುರೋ ತನಿಖೆಯಿಂದ ಗೊತ್ತಾಗಿದೆ.ಈ ಮರ ನೆಟ್ಟ ನಾರಾಯಣಸ್ವಾಮಿ ಎಂಬವರು ಈ ಸ್ಲೋಗನ್ನನ್ನು ಅಕ್ಷರಶಃ ಪಾಲಿಸಿದ್ದಾರೆ. ಮಗಳನ್ನು ಬೇರೆಯವರಿಗೆ ಕೊಟ್ಟು ಮದುವೆ ಮಾಡಿದ ಸ್ಮರಣಾರ್ಥ ಅವರು ಈ ಸಸಿ ನೆಟ್ಟಿದ್ದರು. ಅದೀಗ ಫಲಕೊಡುವ ಮರವಾಗಿದೆ. ಮಾವ ಮಗಳನ್ನೂ ಕೊಟ್ಟಾಗಿದೆ, ಮರಗಳನ್ನೂ ಬೆಳೆಸಿಯಾಗಿದೆ ! ಮಗಳನ್ನು ಮನೆಯಿಂದ ಹೊರ ಹಾಕಿ ಆಗಿದೆ, ಮರವನ್ನೂ ಮನೆಯಿಂದ ದೂರ ಇಟ್ಟೂ ಆಗಿದೆ!!

Thursday, August 03, 2006

Soft ಡ್ರಿಂಕ್ಸ್ hot hot ಮಾರಾಟ!!

(ಬೊಗಳೂರು ಜಾಗತೀಕರಣ ಪ್ರೋತ್ಸಾಹ ಬ್ಯುರೋದಿಂದ)

ಬೊಗಳೂರು, ಆ.3- ದೇಶಾದ್ಯಂತ ಪೆಪ್ಸಿ, ಕೋಕಾ ಕೋಲಾ ಮುಂತಾದ soft ಹೆಸರು ಅಂಟಿಸಿಕೊಂಡಿರೋ hot ಡ್ರಿಂಕ್ಸ್‌ಗಳ ಮಾರಾಟ ದಿಢೀರನೆ ರಾತ್ರಿ ಬೆಳಗಾಗುವುದರೊಳಗೆ ಹೆಚ್ಚಳವಾಗಿರುವ ಅಂಶ ನಿಜಕ್ಕೂ 'ಕೋಲಾ'ಹಲಕ್ಕೆ ಕಾರಣವಾಗಿದೆ.

ಇದು ಆಲ್-ಕೋಲಾಹಲಕ್ಕಿಂತ ಭಿನ್ನವಾದ ಕೋಲಾ ಆಗಿದ್ದು, ಇದರ ಹಿಂದೆ ಪರಿಸರ ಮತ್ತು ವಿಜ್ಞಾನ ಸಂಶೋಧನಾ ಕೇಂದ್ರದ ಕೈವಾಡವಿದೆ ಎಂಬುದು ಇಲ್ಲಿ ಸಾಬೀತಾಗಿದೆ.

ಇದಕ್ಕೆ "ಪೆಪ್ಸಿ, ಕೋಲಾ ಮುಂತಾದ un-alcolaಹಲಗಳಲ್ಲಿ ಕೀಟನಾಶಕ ವಸ್ತುಗಳಿವೆ" ಎಂದು ಈ ಸಂಸ್ಥೆ ವರದಿಯೊಂದನ್ನು ಎಲ್ಲಾ ಮಾಧ್ಯಮಗಳು ಮುಖಪುಟದಲ್ಲಿ ಪ್ರಕಟವಾಗುವಂತೆ ನೋಡಿಕೊಂಡದ್ದೇ ಕಾರಣ ಎಂಬುದು ಅ-ಸತ್ಯಾನ್ವೇಷಣೆ ವೇಳೆ ಪತ್ತೆಯಾಗಿದೆ.

ಈ ವರದಿಯಿಂದ ಪ್ರೇರಣೆ ಪಡೆದ ರೈತಾಪಿ ವರ್ಗ, ತಮ್ಮೆಲ್ಲಾ ಗದ್ದೆಗಳಿಗೆ ಪೀಪಾಯಿಗಟ್ಟಲೆ ಈ ಪಾನೀಯಗಳನ್ನು ಖರೀದಿಸಿರುವುದೇ ಈ ಅಬ್ಬರದ ಮಾರಾಟದ ಹಿಂದಿನ ರಹಸ್ಯ.

ಇದರಲ್ಲಿ ಕೋಲಾ-ಹಲ ಕಂಪನಿಗಳ ಕೈವಾಡವಿದೆ ಎಂದು ಕೀಟನಾಶಕ ಕಂಪನಿಗಳು ಆರೋಪಿಸಿದ್ದು, ಕಠಿಣ ಕ್ರಮಕ್ಕೆ ಒತ್ತಾಯಿಸಿವೆ. ಸರಕಾರೀ ಕೀಟನಾಶಕಗಳು ಎಲ್ಲಾ ಕಡೆ ವಿಫಲವಾಗಿರುವ ಹಿನ್ನೆಲೆಯಲ್ಲಿ ರೈತರು ಈ ಕೋಲಾ-ಹಲಗಳನ್ನೇ ಬಳಸುತ್ತಿರುವುದರಿಂದ ಸರಕಾರದ ಕೀಟನಾಶಕ ಗೋಡೌನ್‌ಗಳಲ್ಲಿ ವ್ಯಾಪಾರ gone-down ಆಗಿದೆ ಎಂದು ತಿಳಿದುಬಂದಿದೆ.

ಇದಲ್ಲದೆ ಕೆಲವು ಮಾರಣಾಂತಿಕ ಕೀಟನಾಶಕಗಳಿಗೆ (eg: Heptachlor) ಭಾರತದಲ್ಲಿ ನಿಷೇಧವಿದೆ. ಅವು ಭಾರತದಲ್ಲಿ ದೊರೆಯುತ್ತಲೇ ಇಲ್ಲ. ಆದರೆ ಈ ಪಾನೀಯ ಎಂಬ ಹೆಸರಿನಲ್ಲಿರುವ ದ್ರಾವಣಗಳಲ್ಲಿ ಅವು ಯಥೇಚ್ಛ ದೊರೆಯುತ್ತಿವೆ. ಇದರ ಪೂರ್ಣ ಪ್ರಯೋಜನವನ್ನು ರೈತರು ಪಡೆಯಲಾರಂಭಿಸಿದ್ದಾರೆ.

ಈ ಹಿಂದೆ ಲಘುಪೇಯದಲ್ಲಿ ಕಾಂಡೋಮ್ ಹಾಕುವ ಮೂಲಕ ಸಂತಾನ ನಿಯಂತ್ರಣಕ್ಕೆ ಮುಂದಾಗಿದ್ದ ಕಂಪನಿಗಳು, ಕೀಟನಾಶಕ ಬಳಸುವ ಮೂಲಕ ಮಾನವ ಸಂತಾನನಿಯಂತ್ರಣ ಕ್ಷೇತ್ರದತ್ತಲೂ ಹೆಚ್ಚಿನ ಗಮನ ಹರಿ'ಸತ್ತಿವೆ'. ಇದಕ್ಕಾಗಿಯೇ ಅವುಗಳು "ಸಂತಾನ ನಿಯಂತ್ರಣಕ್ಕೆ ಕಾಂಡೋಮ್ ಏಕೆ, ನಮ್ಮ ಲಘುಪೇಯವೇ ಓಕೆ" ಎಂಬ ಘೋಷಾವಾಕ್ಯ ಹೊರಡಿಸಲು ನಿರ್ಧರಿಸಿವೆ.

ವಾಸ್ತವವಾಗಿ, ಏಡ್ಸ್ ಮುಂತಾದ "ಸೆಕ್ಸೀ ರೋಗ"ಗಳ ನಿಯಂತ್ರಣಕ್ಕೆ ತಾವು ಬಾಟ್ಲಿಯೊಳಗೆ ಕಾಂಡೋಮ್ ಇರಿಸಿರುವುದಾಗಿ ಕಂಪನಿ ಹೇಳಿಕೆ ನೀಡಿತ್ತು.

ಇದೀಗ ಭಾರತದ ಬೆನ್ನೆಲುಬು ಆಗಿರುವ ರೈತರ ಬೆನ್‌ಗಾವಲಿಗೆ ವಿದೇಶೀ ಮೂಲದ ಕಂಪನಿಗಳು ಮುಂದಾಗಿರುವುದು ಜಾಗತೀಕ-ರಣದ ಹೊಸ ಬೆಳವಣಿಗೆ.

Wednesday, August 02, 2006

ಪೊದೆಮೀಸೆಯ ಮಧ್ಯೆ ಕಂಡಿತು ಗುಹೆ!

(ಬೊಗಳೂರು ಸೊಂಪಾದ ಕೃಷಿ ಬ್ಯುರೋದಿಂದ)

ಬೊಗಳೂರು, ಆ.2- ವೀರಪ್ಪನ್‌ನ ಭೂತ-ಪ್ರೇತ-ಪಿಶಾಚಾದಿಗಳು ಸಿಕ್ಕಾಪಟ್ಟೆ ಉಪಟಳ ನೀಡುತ್ತಿವೆ ಎಂಬ ದೂರುಗಳು ಜೋರಾಗಿ ಕೇಳಿ ಬಂದ ಹಿನ್ನೆಲೆಯಲ್ಲಿ ಬೊಗಳೆ ರಗಳೆ ಬ್ಯುರೋ ಈ ಬಾರಿ ಧಾವಿಸಿದ್ದು ಉತ್ತರ ಪ್ರದೇಶದ ರಾಜಧಾನಿ ಲಕ್ನೋಗೆ.

ಅಲ್ಲಿಗೆ ಕಾಲಿಟ್ಟಾಗಲೇ ಮುಖವಿಡೀ ಕಪ್ಪಿಟ್ಟುಕೊಂಡಿದ್ದ ಮಂದಿ, ಕಾಡುಗಳಂತೆ ಬೆಳೆಯಲಾಗಿದ್ದ ತಮ್ಮದೇ ಸ್ವಂತ ಮೀಸೆ ತಿರುವಿಕೊಳ್ಳುತ್ತಾ ನಮ್ಮನ್ನು ಒಂಥರಾ ನೋಡುತ್ತಾ ಬೊಗಳುವವರಿಗೇ ಭಯ ಹುಟ್ಟಿಸುವ ಮಾದರಿಯಲ್ಲಿ ವಾರೆಗಣ್ಣ ನೋಟ ಬೀರುತ್ತಿದ್ದರೆ, ಏಕೈಕ ಸಿಬ್ಬಂದಿಯುಳ್ಳ ಬ್ಯುರೋದ ಎಲ್ಲರಿಗೂ ಎದೆಯೊಳಗೆ ಕಲ್ಲು ಕುಟ್ಟುವ ಅನುಭವ.

ಸರಿಯಾಗಿ ಗಮನವಿಟ್ಟು ನೋಡಿದಾಗ ಅವರೆಲ್ಲರಿಗೆ ಕಣ್ಣುಬಾಯಿ-ಮೂಗುಗಳಿಲ್ಲ, ಮುಖವಿಡೀ ಕಪ್ಪಿಟ್ಟು ಹೋಗಿದೆ, ಬಹುಶಃ ಅವರಿಗೆ ಉಪ್ಪಿಟ್ಟು ತಿನ್ನಲಾಗದು ಎಂಬುದು ನಮ್ಮ ಗಮನಕ್ಕೆ ಬಂತು. ಅಂದರೆ ಇಲ್ಲಿ ಇಎನ್‌ಟಿ(ಕಣ್ಣು ಕಿವಿ ನಾಲಿಗೆ) ಸ್ಪೆಶಲಿಸ್ಟ್‌ಗಳ ಭಾರೀ ಕೊರತೆಯಿರಬೇಕು ಎಂದು ಮನಸ್ಸಿನಲ್ಲೇ ಮಂಡಿಗೆ ಮೆಲ್ಲುತ್ತಾ ಇನ್ನಷ್ಟು ಹತ್ತಿರ ಹೋದಾಗ ಉದ್ದಾನುದ್ದನೆಯ ದಟ್ಟ ಮೀಸೆಯ ರೋಮಗಳು ಮೆಲ್ಲಮೆಲ್ಲನೆ ಅಲ್ಲಾಡುವುದು ಕಂಡಿತು.

ಹೌದು ಸ್ವಾಮೀ.... ಅದು ಅಲುಗಾಡುತ್ತಿದ್ದುದು ಜೋರಾದ ಗಾಳಿಯಿಂದ. ಅಂದರೆ ಅಲ್ಲೇ ಎಲ್ಲೋ ಮೂಗಿನ ಹೊಳ್ಳೆಗಳಿರಬಹುದು, ದಟ್ಟವಾದ ಮೀಸೆಯ ಪೊದೆಯಲ್ಲಿ ಅವಿತು ಅದರೊಳಗಿಂದ ಹೊರಬರಲು ವಾಯುದೇವನೇ ಏದುಸಿರು ಬಿಡುತ್ತಿರಬಹುದು ಎಂದು ಖಚಿತವಾಯಿತು.

ಹಾಗಿದ್ದರೆ ಅದಕ್ಕೆ ಸ್ವಲ್ಪವೇ ಕೆಳಗಿನ ಅಂತರದಲ್ಲಿ ಬಾಯಿ ಇರಬೇಕಲ್ಲ ಎಂಬ ಸಂಶಯದ ಸುಳಿಯೊಂದು ಛಕ್ಕನೆ ಸುಳಿದು ಮಾಯವಾಯಿತು. 'ಯಾರು ನೀವು' ಎಂದು ಕೇಳಿಬಂದ ಧ್ವನಿಯ ಎಳೆಯನ್ನು ಹಿಡಿದು ಮೂಗಿನ ಕೆಳಗೆ ಆ ಎಳೆಯನ್ನು ಎಳೆದು ನಿಲ್ಲಿಸಿದಾಗ ಅಲ್ಲಿ ಬಿಲದಂತಹ ಬಾಯಿಯೂ ಕಂಡುಬಂದಿತ್ತು.

ಹುರ್‌ರೇ.... ಇದು ಮನುಷ್ಯನೇ ಎಂದು ತಿಳಿದಾಗ ಬ್ಯುರೋಗೆ ಸಂತಸವಾದರೂ ಒಳಗೆ ಅಕ್ಕಿ ಕುಟ್ಟುತ್ತಲೇ ಇತ್ತು. ಸರಿಯಾಗಿ ವಿಚಾರಿಸಿದಾಗ ಇವರು ವೀರಪ್ಪನ್ ಪ್ರೇತಗಳಲ್ಲ, ವೀರಪ್ಪನ್ ಮಟ್ಟ ಹಾಕಲು ಕಾಯುತ್ತಿದ್ದ ಪೊಲೀಸರು ಎಂಬುದು ತಿಳಿಯಿತು. ಆಗ ಧೈರ್ಯ ಬಂದು ಮಾತು ಮುಂದುವರಿಸಲಾಯಿತು.

ಹೀಗೇ ಮಾತಿಗೆ ಮಾತು ಬೆಳೆದು ನಿಮ್ಮ ಸಂಬಳ ಎಷ್ಟು ಎಂದು ಕೇಳುವ ಹಂತಕ್ಕೆ ಬಂದು ಮುಟ್ಟಿತು. ಸಂಬಳ 1000 ರೂ. ಎಂದು ಕೇಳಿದಾಗ ಅಷ್ಟೇಯಾ ಎಂದುಕೊಳ್ಳುವಷ್ಟರಲ್ಲಿ, ಅವರ ಪೊದೆ ಮಧ್ಯೆ ಇದ್ದ ಗುಹೆಯೊಳಗಿಂದ ಇನ್ನೂ ಮುಗಿದಿಲ್ಲ ಎಂಬ ಧ್ವನಿಯೂ ಹೊರಟಿತು.

ಇನ್ನೇನು, ಗಿಂಬಳವೇ ಇರಬಹುದು ಎಂದು ಸುಮ್ಮನಾಗುವ ಮುನ್ನವೇ ಪೊದೆಯನ್ನು ಅಗಲಿಸಿದ ಆ ಪೊಲೀಸರು, ಮೀಸೆ ಸಾಕುವುದಕ್ಕೆ 10 ಸಾವಿರ ರೂ. ಭತ್ಯೆಯೂ ಇದೆ ಎಂದಾಗ ಖಂಡಿತಾ ಇವರು ಪೊಲೀಸ್ ಇಲಾಖೆಯಲ್ಲಿರಲು ಸಂಪೂರ್ಣ ಲಾಯಕ್ಕು ಅಂತ ತಿಳಿದು ಬೊಗಳೆ ರಗಳೆ ಬ್ಯುರೋ ಕೂಡ ಮೀಸೆ ಬೆಳೆಸುವ ನಿರ್ಧಾರ ಮಾಡಿಕೊಂಡು ಅಲ್ಲಿಂದ ಮೀಸೆ... ಅಲ್ಲಲ್ಲ ಕಾಲು... ಕಿತ್ತಿತು.

Tuesday, August 01, 2006

ಬ್ಲಾಗಿಸುವವರಿಗಿದು ಕಾಲವಲ್ಲಾ....

(ಬೊಗಳೂರು ಬೊಗಳೆ ಬ್ಯುರೋದಿಂದ)

ಬೊಗಳೂರು, ಆ.1- ಬ್ಲಾಗು ಬ್ಲಾಗೆನುತಾ ಹೆಜ್ಜೆ ಹೆಜ್ಜೆಗೂ ಅದರ ಅಮಲೇರಿಸಿಕೊಂಡ ಬ್ಲಾಗಿಗಳ ಕಾಲ ಬುಡಕ್ಕೇ ನೀರು ಬಂದಿದೆ.ಒಂದೆಡೆ ಬ್ಲಾಗಿಸುತ್ತಾ, ಬೊಗಳುತ್ತಾ, ಬೊಗಳಿಸುತ್ತಾ ಸಂತೋಷದಲ್ಲಿ ನೆಟ್ ವಿಹಾರ ಮಾಡುತ್ತಿದ್ದ ಭಾರತೀಯ ಬ್ಲಾಗಿಗರ ಬಾಲ ಕತ್ತರಿಸಲು ಭಾರತದಲ್ಲಿ ತೀವ್ರ ಪ್ರಯತ್ನಗಳು ನಡೆಯುತ್ತಿರುವಂತೆಯೇ ಕೆಲವೊಂದು ಆಘಾತಕಾರಿ ಸುದ್ದಿಗಳು ಉಗುಳಲಾರದ ತುತ್ತಾಗಿ ಪರಿಣಮಿಸಿವೆ.

ಬ್ಲಾಗಿಂಗ್ ಮಾಡಿದ್ದನ್ನೇ ಮಹಾಪರಾಧ ಎಂಬಂತೆ ಪರಿಗಣಿಸಿದ ಹಲವು ಕಂಪನಿಗಳು ತಮ್ಮ ತಮ್ಮ ಬ್ಲಾಗ್-ಪೀಡಿತ ಉದ್ಯೋಗಿಗಳನ್ನು 'ನೀವು ಶಾಶ್ವತವಾಗಿ ಬ್ಲಾಗಿನಲ್ಲೇ ವಿಹರಿಸುತ್ತಿರಿ' ಎಂದು ಗೇಟ್ ಪಾಸ್ ನೀಡಿ ಕಳುಹಿಸಿದ ವರದಿಗಳು ಬಿಸಿಬಿಸಿಯಾಗಿ ನಮ್ಮ ಮತ್ತೊಬ್ಬ ಪ್ರತಿಸ್ಪರ್ಧಿ ನೆಟ್ ತಾಣ ಬಿಬಿಸಿ (ಇದು ಬೊಗಳೂರು ಬೊಗಳೆ ಕಾರ್ಪೊರೇಶನ್ ಅಲ್ಲ ಎಂದು ಸ್ಪಷ್ಟಪಡಿಸುತ್ತಿದ್ದೇವೆ) ಪ್ರಕಟಿಸಿರುವುದರಿಂದ ಬೆಚ್ಚಿ ಬಿದ್ದಿರುವ ಬೊಗಳೂರು ಬ್ಯುರೋ, ಕೈ ಕೈ ಹಿಸುಕಿಕೊಳ್ಳುತ್ತಿದೆ.


ಅಮೂಲ್ಯವಾದ ಬೊಗಳೆ ಬಿಟ್ಟದ್ದಕ್ಕೆ ಅಷ್ಟು ದೊಡ್ಡ ಬೆಲೆ ತೆರಬೇಕಾಗಿ ಬಂತೆಂದರೆ ಬೊಗಳುವುದಕ್ಕೆ ಇಷ್ಟೊಂದು ಬೆಲೆ ಇದೆ ಎಂದಾಯಿತು.

ಅದೂ ಅಲ್ಲದೆ, ಸದಾ ಮದ್ಯದ ಅಮಲಿನಲ್ಲಿ ತೇಲಾಡುತ್ತಾ ಸುತ್ತಮುತ್ತಲಿನ ಮನೆಯವರಿಗೆ ರಾತ್ರಿ ನಿದ್ದೆಯಿಲ್ಲದಂತೆ ಮಾಡಿ, ಅಕ್ಕಪಕ್ಕದ ಸಹೋದ್ಯೋಗಿಗಳಿಗೆ ಹಗಲು ಕಿರುಕುಳ ನೀಡುತ್ತಿದ್ದವರು ಬ್ಲಾಗ್ ವ್ಯಸನಕ್ಕೆ ತುತ್ತಾಗಿ 'ಇದ್ದಾರೋ, ಇಲ್ಲವೋ' ಎಂದು ಪಕ್ಕದ ಮನೆಯವರು ಮತ್ತು ಪಕ್ಕದಲ್ಲೇ ಕುಳಿತುಕೊಂಡ ಸಹೋದ್ಯೋಗಿಗಳು ನೋಡುವಷ್ಟರ ಮಟ್ಟಿಗೆ ಬದಲಾಗಿಬಿಟ್ಟಿದ್ದರು. ಇದು ಬ್ಲಾಗಿನ ಕೊಡುಗೆ ಅಲ್ಲವೆ?

ಇದೀಗ ಈ ಬ್ಲಾಗ್ ಎಂಬ ಮಾದಕ ದ್ರವ್ಯಕ್ಕೆ ನಿಷೇಧ ಹೇರಿದ್ದಲ್ಲದೆ, ಅದನ್ನು ನೀವು ತ್ಯಜಿಸದಿದ್ದರೆ ನಾವು ನಿಮ್ಮನ್ನು ತ್ಯಜಿಸುತ್ತೇವೆ ಎಂದು ಕಂಪನಿಗಳು ಹೇಳಿರುವುದು ಆಘಾತಕ್ಕೆ ಕಾರಣವಾಗಿದೆ.

ಕೊನೆಯ ಪ್ಯಾರಾ: ಬ್ಲಾಗಿಸಿದ್ದಕ್ಕಾಗಿ ಕೆಲಸದಿಂದ ಉಚ್ಚಾಟನೆಗೊಂಡ ಬ್ರಿಟಿಷ್ ಸೆಕ್ರೆಟರಿ ಕ್ಯಾಥರೀನ್ ಎಂಬಾಕೆ ಅಜ್ಞಾತ ಹೆಸರಲ್ಲಿ ಬೊಗಳೆ-ರಗಳೆ ಮಾಡುತ್ತಿದ್ದಳು ಎಂಬುದು ಅಸತ್ಯಾನ್ವೇಷಿ ಬ್ಯುರೋಕ್ಕೆ ಮತ್ತಷ್ಟು ಕಳವಳ ಹೆಚ್ಚಿಸಿದ ಸಂಗತಿಯಾಗಿದೆ. ಯಾಕೆ ಅಂತಾನೇ ಗೊತ್ತಾಗ್ತಿಲ್ಲಾ##$%

ಎಂಜಿನ್ ಇಲ್ಲದ ರೈಲು: ಬ್ರೇಕಿಂಗ್ ನ್ಯೂಸ್ ಅಲ್ಲವೆಂದ ಬೊ.ರ.

[ಬೊಗಳೂರು ಪಟ್ಟೆ-ರಹಿತ ರೈಲು ಬ್ಯುರೋ] ಬೊಗಳೂರು: ಆಫ್‌ಲೈನ್ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯೊಂದು ಆನ್‌ಲೈನ್ ಸಂಪಾದಕರ ಕಣ್ಣು ಕುಕ್ಕಿದ್ದು, ಎಂಜಿನ್ ಇಲ್ಲದೆ...