ಬೊಗಳೆ ರಗಳೆ

header ads

ಗ್ರಹಕ್ಕೆ ಗ್ರಹಚಾರ: ಆಗಸದಿಂದ ಡಿಲೀಟ್

(ಬೊಗಳೂರು ನಕ್ಷತ್ರಿಕ ಬ್ಯುರೋದಿಂದ)
ಬೊಗಳೂರು, ಆ.28- ಮೊನ್ನೆ ಮೊನ್ನೆಯಷ್ಟೇ ಸೌರಮಂಡಲವಿಡೀ ಗ್ರಹಗಳಿಂದಲೇ ತುಂಬಿ ತುಳುಕಾಡುತ್ತದೆ, ಗ್ರಹಗಳ ಸಂಖ್ಯೆ 12 ದಾಟಲಿದೆ ಎಂದೆಲ್ಲಾ ಹೇಳಿ ಆಸೆ ಹುಟ್ಟಿಸಿದ್ದ ವಿಜ್ಞಾನಿಗಳು ಈಗ ದಿಢೀರ್ ಆಗಿ ಇದ್ದ ಗ್ರಹಗಳ ಸಂಖ್ಯೆಯನ್ನೂ ಮೈನಸ್ ಮಾಡಿದ ಬಡಪೆಟ್ಟಿಗೆ, ನವಗ್ರಹಗಳಲ್ಲೊಂದಾಗಿದ್ದ ಗ್ರಹವೂ ಉದುರಿಬಿದ್ದಿರುವುದು ಬೊಗಳೆ-ರಗಳೆ ಬ್ಯುರೋಗೆ ಲೋಕವೇ ಕತ್ತಲೆಯಾದಂತಾಗಿದೆ.
 
ಪ್ಲುಟೋ ಎಂಬ ಒಂದು ಗ್ರಹವಷ್ಟೇ ಉದುರಿದ್ದಾದರೂ ಇಡೀ ಆಕಾಶವೇ ಕಳಚಿ ತಲೆ ಮೇಲೆ ಬಿದ್ದಂತೆ ಚಿಂತಾಕ್ರಾಂತವಾದ ಏಕಸದಸ್ಯ ಬ್ಯುರೋದ ಸಮಸ್ತ ಸಿಬ್ಬಂದಿಗಳು, ಇದರ ಪರಿಣಾಮಗಳೇನು ಎಂಬ ಬಗ್ಗೆ ಲೆಕ್ಕಾಚಾರ ಹಾಕತೊಡಗಿದ್ದಾರೆ.
 
ಅಬ್ಬಾ... ಒಂದೊಮ್ಮೆ ಮಂಗಗಳ ಗ್ರಹವನ್ನೇ ಕಿತ್ತು ಹಾಕಿದ್ದರೆ, ಶುಕ್ರ ಗ್ರಹದವರು ತೀರಾ ಕಂಗಾಲಾಗುತ್ತಿದ್ದರು ಮತ್ತು vice versa ಆಗುತ್ತಿತ್ತು. ಸದ್ಯಕ್ಕೆ ಮಾನವ ಸಂತಾನಕ್ಕೆ ಧಕ್ಕೆಯಿಲ್ಲವಲ್ಲ ಎಂಬ ಸಮಾಧಾನ ಕೆಲವರದು.
 
ಹಾಗಿದ್ದರೆ ನವಗ್ರಹ ಎಂಬ ಖ್ಯಾತಿ ಮಣ್ಣುಪಾಲಾಗಿದೆ. ಅಂದರೆ ಒಂದು ಗ್ರಹ ಭೂಮಿಗೆ ಬಿದ್ದಿದೆ. ಇನ್ನೇನಿದ್ದರೂ ಅಷ್ಟಗ್ರಹಗಳ ಕಾರುಬಾರು. ಈ ಗ್ರಹಗಳ ಚಾರದಿಂದಲೇ ಮಾನವನಿಗೆ ಗ್ರಹಚಾರ ಬರುವುದರಿಂದಾಗಿ ಒಂದು ಗ್ರಹವು ಸೌರ ಮಂಡಲದಿಂದ ಡಿಲೀಟ್ ಆಗಿರುವುದು ಗ್ರಹಚಾರ ವಿರೋಧಿಗಳ ಸಂಘದ ಸಂತಸಕ್ಕೆ ಕಾರಣವಾಗಿದೆ.
 
ಆದರೆ ಬೊಗಳೆ ರಗಳೆ ಬ್ಯುರೋಗೆ ಕೂಡ ಸಂತಸವಾಗಿದೆ ಎಂದು ಒಪ್ಪಿಕೊಳ್ಳಲೇಬೇಕಾದ ಅಸತ್ಯ. ಯಾಕೆಂದರೆ ಈಗಾಗಲೇ ಹಲವಾರು ಗ್ರಹಗಳ ಕಾಟದಿಂದ ತತ್ತರಿಸುತ್ತಿರುವ ಬ್ಯುರೋಗೆ ಒಂದು ಗ್ರಹದ ಕಾಟ ಕಡಿಮೆಯಾಗಿದಂತಾಗಿದೆ.
 
ಇತ್ತ, ಶಾಲೆ ಮಕ್ಕಳು ಖುಷಿಯಾಗಿದ್ದಾರೆ. ಶಾಲೆಯಲ್ಲಿರೋದು ಗುರುವೋ ಶನಿಯೋ ಎಂಬ ಜಿಜ್ಞಾಸೆಯಲ್ಲಿ ಯಾವತ್ತೂ ಸಿಲುಕುವ ಈ ಮಕ್ಕಳು ಒಂದು ಗ್ರಹದ ಬಗ್ಗೆ ಅಧ್ಯಯನ ನಡೆಸಬೇಕಾದ ಬಾಲಗ್ರಹ ಪೀಡೆಯಿಂದ ತಪ್ಪಿಸಿಕೊಂಡೆವಲ್ಲಾ ಎಂಬ ಸಂತಸ ಅವರದು.
 
ಇದು ಕುತಂತ್ರ: ಪ್ಲುಟೋ ಅಭಿಮಾನಿಗಳ ಸಂಘ
 
ಇದು ದೊಡ್ಡ ದೊಡ್ಡ ಕುಳಗಳ ಕುತಂತ್ರ. ಪ್ಲುಟೋ ಗ್ರಹ ಎಲ್ಲಕ್ಕಿಂತ ಚಿಕ್ಕದು ಮತ್ತು ಕುಬ್ಜವಾಗಿದೆ ಎಂಬ ಕಾರಣಕ್ಕೆ ಅದನ್ನು ಸೌರಮಂಡಲದಿಂದ ಗುಡಿಸಿ ಸಾರಿಸಲಾಗಿದೆ. ಈ ಗ್ರಹಚಾರ ತಂತ್ರದ Supreme ಮೊರೆ ಹೋಗುವುದಾಗಿ ಅವರು ಪ್ರಕಟಿಸಿದ್ದಾರೆ.
 
ಮೀಸಲಾತಿ ವಿರೋಧಿಗಳ ತಂತ್ರ
 
ಇತ್ತೀಚೆಗೆ ಬಾನಂಗಳದಲ್ಲಿ ಕುಬ್ಜರ ಸಂತತಿ ಹೆಚ್ಚಾಗುತ್ತಿದೆ. ಆದರೂ ಅವರಿಗೆ ಅಲ್ಪಸಂಖ್ಯಾತರೆಂಬ ಮಾನ್ಯತೆ ನೀಡಿ ಸಾಕಷ್ಟು ಸೌಲಭ್ಯ ಒದಗಿಸುತ್ತಿರುವುದು ದೊಡ್ಡ ಗ್ರಹಗಳ ಕಣ್ಣು ಮತ್ತಷ್ಟು ಕೆಂಪಗಾಗಿ ಬೆಳಗಲು ಕಾರಣವಾಗಿವೆ ಎಂದು ಆರೋಪಿಸಿರುವ ಪ್ಲುಟೋ ವಾಸಿಗಳು, ಕುಬ್ಜರಿಗೂ ಮೀಸಲಾತಿ ನೀಡಬೇಕೆಂದು ಆಗಸದಲ್ಲಿ ಧರಣಿ, ಕೋಲಾಹಲ ಮಾಡತೊಡಗಿದ್ದಾರೆ.
 
ಸೌಲಭ್ಯ ವಾಪಸಾತಿಗೆ ತಂತ್ರ
 
ಈ ಮಧ್ಯೆ, ಏಳು ದಶಕಕ್ಕೂ ಹೆಚ್ಚು ಕಾಲದಿಂದ ಅಕ್ರಮವಾಗಿ ಗ್ರಹದ ಸ್ಥಾನ ಮಾನ ಅನುಭವಿಸುತ್ತಿದ್ದ ಪ್ಲುಟೋ ಗ್ರಹದಿಂದ, ಅಸಲು ಬಡ್ಡಿ ಸಮೇತ ಪಡೆದ ಸೌಲಭ್ಯದ ಮೊತ್ತ ಕಕ್ಕಿಸಲು ಕಕ್ಕುಲಾತಿಯಿಂದ ಸಿದ್ಧತೆ ನಡೆಯುತ್ತಿವೆ ಎಂಬ ವದಂತಿಗಳಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

13 ಕಾಮೆಂಟ್‌ಗಳು

  1. ಬೇಗ ಬೇಗ ಎಲ್ಲ ಗ್ರಹಗಳನ್ನೂ ಸೌರಮಂಡಲದಿಂದ ತೆಗೆದು ಹಾಕಿಬಿಟ್ಟರೆ, ಶನಿಕಾಟ ತಪ್ಪುತ್ತೆ. ಗುರುದೆಶೆಯೂ ಇರೋಲ್ಲ. ಆಗ ಸೂರ್ಯನ ಶಾಖ ಭೂಮಿಯ ಮೇಲೆ ಮಾತ್ರ ಬಿದ್ದು, ಎಲ್ಲವೂ ಸೊಂಪಾಗಿರಬಹುದು.

    ಬೇಗ ಬೇಗನೆ ಕೆಲಸ ಮಾಡೋಕ್ಕೆ ತಿಳಿಸಿಬಿಡಿ.

    ಪ್ರತ್ಯುತ್ತರಅಳಿಸಿ
  2. ಸ್ವಾಮೀ, ಈ ಗ್ರಹಾನು ತೆಗ್ದು ಹಾಕಿದ್ದು ಯಾಕೆ ಅಂದ್ರೆ, ಅದರ ಬದಲಿಗೆ ಇನ್ನೊಂದಿಷ್ಟು ಸೇರ್‌ಸೋಕೆ!

    ನಿಮ್ಮ ಗ್ರಹಚಾರ ಜಾಸ್ತಿ ಆಗುತ್ತೋ ಹೊರ್ತು ಕಮ್ಮೀ ಆಗಂಗಿಲ್ಲ ಬಿಡ್ರಿ!

    ಪ್ರತ್ಯುತ್ತರಅಳಿಸಿ
  3. ಮಾವಿನರಸರೆ,
    ಅವಸರ ಮಾಡ್ಬೇಡಿ.... ನಿನ್ನೆಯಷ್ಟೇ ಗಣಪತಿಯನ್ನು ನೀರಿಗೆ ಹಾಕಿ ಬಂದಿದ್ದೀರಿ... ಅಥವಾ ನೀರಿಗೆ ಹಾಕಿ ಕೈ ಮುಗಿಯೋ (ತೊಳೆಯೋ) ತರಾತುರಿಯಲ್ಲಿದ್ದೀರಿ....

    ಹಾಗಂತ ಗ್ರಹಗಳನ್ನೂ ನೀರಿಗೆ ಹಾಕಿ ಕೈತೊಳೆದುಕೊಳ್ಳೋ ಯೋಚನೆಯೇ?

    ಪ್ರತ್ಯುತ್ತರಅಳಿಸಿ
  4. ಕಾಳೂ ಅವರೆ,
    ಜೊಳ್ಳು ತೆಗೆದು ಕಾಳು ಸೇರ್ಸೋ ಕಾರಣಕ್ಕೆ ಈ ರೀತಿ ಮಾಡಿದ್ದಾರೆ ಎಂಬೋ ನಿಮ್ಮ ಮಾತು ಸತ್ಯ.
    ಅಂತೂ ಕಾಳೂ ಅವರಿಗೂ ಗ್ರಹಗಳ ಸ್ಥಾನಮಾನ ಸಿಗುತ್ತೆ ಅಂತಾಯ್ತು... ನಿಮ್ಮ ಗ್ರಹಚಾರ... :)

    ಪ್ರತ್ಯುತ್ತರಅಳಿಸಿ
  5. ಎಲ್ಲ ಗ್ರಹಗಳು ಸರಿಯಾಗಿಯೇ ಸುತ್ತುತ್ತಿದ್ದರೆ ಪ್ಲೂಟೊ ಮಾತ್ರ ಹೆಂಡಕುಡಿದವರಂತೆ ಸ್ವಲ್ಪ ಅಡ್ಡಾದಿಡ್ಡಿ ಸುತ್ತುತ್ತಿತ್ತು ಅಂದರೆ ನೆಪ್ಚ್ಯೂನ್‌ನ ಕಕ್ಷೆಯ ಒಳಗೆ ಆಗಾಗ ನುಗ್ಗುತ್ತಿತ್ತು. ಹಾಗಿದ್ದ ಮೇಲೆ ಸಂಭಾವಿತ ಗ್ರಹಗಳ ಕೂಟದಿಂದ ಅದನ್ನು ಹೊರದಬ್ಬಿದ್ದು ಸರಿಯಾಗಿಯೇ ಇದೆ. ಏನಂತೀರಾ?

    ಪಬ್

    ಪ್ರತ್ಯುತ್ತರಅಳಿಸಿ
  6. ಪಾಪ ಪಾಂಡು ಥರಾ ಪಾಪ ಪ್ಲೂಟೋ!!

    hangadre iga jataka nododu ella chaneg aguthe allwa??

    ಪ್ರತ್ಯುತ್ತರಅಳಿಸಿ
  7. Enigma ಅವರೆ,

    ಜಾತಕ ನೋಡೋದು ಭಾರತೀಯರು ಮಾತ್ರವೇ ಆಗಿರುವುದರಿಂದ ಮತ್ತು ಭಾರತೀಯ ಜ್ಯೋತಿಷ್ಯದಲ್ಲಿ ಪ್ಲುಟೋ ಒಂದು ಗ್ರಹವೇ ಅಲ್ಲ ಎಂದು ಭಾವಿಸಿರುವುದರಿಂದ ಜಾತಕ ಬಯಲು ಮಾಡಲು ಏನೂ ಅಡ್ಡಿಯಿಲ್ಲ...

    ಬೊಗಳೆ ರಗಳೆ ಬ್ಯುರೋ ಬಿಟ್ಟ ವಿಷಯ ತುಂಬಿಸಿಕೊಟ್ಟಿದ್ದೀರಿ...

    ಪ್ರತ್ಯುತ್ತರಅಳಿಸಿ
  8. ಪಬ್ಬಿಗರೆ,,,
    ನಿಮ್ಮ ಮಾತಿಗೆ ಸ್ವಲ್ಪ ತಿದ್ದುಪಡಿ.... ಸಂಭಾವಿತರನ್ನೇ ಆ ಪಬ್ಬಿನ ಗಿರಗಿರನೆ ತಿರುಗುವವರ ಕೂಟದಿಂದ ತಳ್ಳಲಾಗಿದೆ.

    ಆದ್ರೆ
    ನಮಗೊಂದು ಶಂಕೆ ಬಂದಿದೆಯಲ್ಲಾ,.....!!!
    ಅಂದ್ರೆ.
    ಅಂದ್ರೆ,
    ನೀವು ಪಬ್ಬಿನಲ್ಲಿ ಕೂತಿದ್ದಾಗಲೂ ನಿಮಗೆ ಆಕಾಶದಲ್ಲಿ ನಕ್ಷತ್ರಗಳು ಕಾಣಿಸುತ್ತವೆಯೇ?

    ಪ್ರತ್ಯುತ್ತರಅಳಿಸಿ
  9. ಪ್ಲೋಟೋ ಖಾಲಿ ಮಾಡಿದ ಜಾಗಕ್ಕೆ ಹೊಸ ಗ್ರಹ ತುಂಬಲು ಯೋಚನೆ ನಡೆದಿದೆಯಂತೆ..ಅದಕ್ಕೆ ತೀವ್ರ ಸ್ಪರ್ಧೆ ಇದೆಯಂತೆ..ದಿಲ್ಲಿ-ಆಳಿದ-ದೊಡ್ಡಗೌಡ್ರು ಬಹುಷಃ ಆ ಗ್ರಹಕೂಟದಲ್ಲಿ ಸೇರಿಸುವ ಲಕ್ಷಣವಿದೆಯಂತೆ..

    ಪ್ರತ್ಯುತ್ತರಅಳಿಸಿ
  10. ಶಿವ್ ಅವರೆ,
    ನಾವಂತೂ ಕನ್ನಡ ಗ್ರಹದಿಂದ ಹೊರಬಿದ್ದಿದ್ದೇವೆ...
    ಹಾಗಾಗಿ ಇನ್ನು ಸೂರ್ಯಮಂಡಲಕ್ಕೆ ಟ್ರೈ ಮಾಡ್ಬಹುದೇನೋ...
    :)

    ಪ್ರತ್ಯುತ್ತರಅಳಿಸಿ
  11. > ನೀವು ಪಬ್ಬಿನಲ್ಲಿ ಕೂತಿದ್ದಾಗಲೂ ನಿಮಗೆ ಆಕಾಶದಲ್ಲಿ ನಕ್ಷತ್ರಗಳು ಕಾಣಿಸುತ್ತವೆಯೇ?

    ನೀವು ನಿಜವಾಗಿಯೂ ಅಸತ್ಯಾನ್ವೇಷಿಗಳೇ. ಪ್ಲೂಟೋ ಒಂದು ಗ್ರಹ (ಆಗಿತ್ತು) ಆದರೆ ನಕ್ಷತ್ರವಲ್ಲ.

    -ಪಬ್

    ಪ್ರತ್ಯುತ್ತರಅಳಿಸಿ
  12. ಪ್ಲೂಟೋ ಓಕೆ, ಬೋಸ್ ಇಲ್ಲ ಯಾಕೆ? ಏನಾದರು ಅರ್ಥವಾಯಿತೇ? ಇಲ್ಲವಾದಲ್ಲಿ ಈ ಲೇಖನ ಓದಿ -http://vishvakannada.com/node/285

    -ಪವನಜ

    ಪ್ರತ್ಯುತ್ತರಅಳಿಸಿ
  13. ಪಬ್ಬಿಗರೇ,
    ಬಹುಶಃ ಎಲ್ಲೋ ಲೆಕ್ಕ ತಪ್ಪಿ ಉಲ್ಟಾ ಆಗಿದೆ... ನಮಗೇ ಗ್ರಹಗಳು ನಕ್ಷತ್ರಗಳ ಥರಾ ಕಂಡುಬಿಟ್ಟಿವೆಯಲ್ಲಾ....


    ಪವನಜರೆ,
    ನಿಮ್ಮ ಪ್ರಕಾರ ನಮ್ಮ ದೇಶವನ್ನಾಳುವವರ ಗ್ರಹ-ಚಾರ ಸರಿ ಇಲ್ಲ... ನಮ್ಮದೆಲ್ಲವನ್ನೂ ಹೊರದೇಶಕ್ಕೆ ಬಿಟ್ಟುಕೊಡುವ ಉದಾರತೆ ಹೊಂದಿದವರು ನಾವಲ್ಲವೇ?

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D