Friday, September 29, 2006

ರಬೀಸ್ ಲಸಿಕೆ ನಾಯಿಗಳಿಗೆ ಮಾತ್ರವೇಕೆ?

(ಬೊಗಳೂರು ಪ್ರಾಣಿಪ್ರಿಯ ಬ್ಯುರೋದಿಂದ)
ಬೊಗಳೂರು, ಸೆ.29- ರಬೀಸ್ ರೋಗ ನಿರೋಧಕ ಲಸಿಕೆಯನ್ನು ನಾಯಿಗಳಿಗೆ ಮಾತ್ರವೇ ಯಾಕೆ ಕೊಡಬೇಕು ಎಂಬ ಬಗ್ಗೆ ದೇಶಾದ್ಯಂತ ಜನಜಾಗೃತಿ ಜತೆಗೆ ಶ್ವಾನಜಾಗೃತಿಯನ್ನೂ ಮೂಡಿಸಲು ಬೊಗಳೆ ರಗಳೆ ಬ್ಯುರೋ ನಿರ್ಧರಿಸಿದೆ.
 
ನಾಯಿ ಕಚ್ಚುವ ಮಾನವರಿಗೆ ಮತ್ತು ಒಮ್ಮೊಮ್ಮೆ ನಾಯಿಗೇ ಕಚ್ಚುವ ಮಾನವರಿಗೇಕೆ ಚುಚ್ಚಲಾಗುವುದಿಲ್ಲ ಎಂಬುದು ಭೀಕರ ಸಂದೇಹಕ್ಕೆ ಕಾರಣವಾಗಿರುವ ಅಂಶವಾಗಿದ್ದು, ಈ ಅಭಿಯಾನದಲ್ಲಿ ಹಲವಾರು ಪ್ರಶ್ನೆಗಳನ್ನು ಎತ್ತಲಾಗುತ್ತದೆ. ಅದರ ಕೆಲವು ಪ್ರಶ್ನೆಗಳು ಹೀಗಿರುತ್ತವೆ:
 
ಏಡ್ಸ್ ಔಷಧವನ್ನು ಮಾನವರ ಮೇಲೆ ಮಾತ್ರ ಪ್ರಯೋಗಿಸುವುದೇಕೆ, ಹಾದಿ ಬೀದಿಯಲ್ಲಿ ಗಲಾಟೆ ಮಾಡುತ್ತಿರುವ ನಾಯಿಗಳ ಮೇಲೆ ಯಾಕೆ ಪ್ರಯೋಗಿಸುವುದಿಲ್ಲ?
 
ಏಡ್ಸ್‌ಗೆ ಲಸಿಕೆ ಕಂಡುಹಿಡಿಯಲು ಇಲಿಯ ಮೇಲೆಯೇ ಅಥವಾ ಹಂದಿಯ ಮೇಲೆಯೇ (guinee pig) ಪ್ರಯೋಗ ಮಾಡಬೇಕು ಯಾಕೆ. ಏಡ್ಸ್ ಕಾಡುವ ಮಾನವರ ಮೇಲೇಕೆ ಪ್ರಯೋಗವಿಲ್ಲ?
 
ಪೋಲಿಯೋ ಲಸಿಕೆಯನ್ನು ಹುಟ್ಟಿದ ಮಕ್ಕಳಿಗೇ ಯಾಕೆ ಕೊಡಬೇಕು? ಮಕ್ಕಳು ಹುಟ್ಟುವ ಮೊದಲೇ ಅವುಗಳ ಅಪ್ಪ-ಅಮ್ಮಂದಿರಿಗೆ ಮಾತ್ರ ಕೊಟ್ಟರಾಗದೆ?
 
ಇದರ ಜತೆಗೆ ಪುಟ್ಟ ಮಕ್ಕಳಿಗೆ ಅಷ್ಟುದ್ದದ ಸೂಜಿ ಚುಚ್ಚಿ ಹಿಂಸೆ ನೀಡುವುದೇಕೆ? ಎಲ್ಲವನ್ನೂ ಈ ಮಕ್ಕಳ ಪೂರ್ವಜರಿಗೇ ಕೊಟ್ಟು ಖಾಲಿ ಮಾಡರಾಗದೇ? ಇತ್ಯಾದಿ ಪ್ರಶ್ನೆಗಳನ್ನು ಹಿಡಿದುಕೊಂಡು ಜನರನ್ನು ಅಲುಗಾಡಿಸಿ ಎಚ್ಚರಿಸುವ ಆಂದೋಲನ ಮಾಡಲು ಉದ್ದೇಶಿಸಲಾಗಿದೆ.
 
ಬನ್ನಿ ಕೈಜೋಡಿಸಿ.... ಕಾಲೆಳೆಯಿರಿ....

Thursday, September 28, 2006

'ಬರ್ಬರ' ಕೃತ್ಯಕ್ಕೆ ಮುಂದಾದ ಮಹಿಳೆಯರು !

(ಬೊಗಳೂರು ಹೊಟ್ಟೆಕಿಚ್ಚು ಬ್ಯುರೋದಿಂದ)
ಬೊಗಳೂರು, ಸೆ.28- ಮಹಿಳೆಯರಿಗೆ ಪ್ರಾಧಾನ್ಯತೆ ಕಲ್ಪಿಸಿ, ಸಮಾನತೆ ಜಾರಿಗೊಳಿಸುವ ನಿಟ್ಟಿನಲ್ಲಿ ಐತಿಹಾಸಿಕ ಸಮತಾ ವಾದವನ್ನು ಅನುಷ್ಠಾನಕ್ಕೆ ತರಲಾಗಿದೆ.
 
ತಮ್ಮನ್ನು ಕಡೆಗಣಿಸಲಾಗುತ್ತಿದೆ, ಸಂಸತ್ತಿನಲ್ಲಿ ತಮಗೆ ಸೂಕ್ತ ಸ್ಥಾನ-ಮಾನ, ಪ್ರಾತಿನಿಧ್ಯ ಇತ್ಯಾದಿ ದೊರಕುತ್ತಿಲ್ಲ, ಲಿಂಗ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ ಎಂದು ಕಂಚಿನ ಕಂಠದಿಂದ ಉಲಿಯುತ್ತಿದ್ದ ಮಹಿಳಾ ಮಣಿಗಳ ಕನಸು ನಿಧಾನವಾಗಿ ನನಸಾಗಿಸುವ ನಿಟ್ಟಿನಲ್ಲಿ ಪ್ರಾಥಮಿಕ ಹೆಜ್ಜೆಯಾಗಿ ಬರ್ಬರ ಕೃತ್ಯವೊಂದನ್ನು ಜಾರಿಗೊಳಿಸಲಾಗಿದೆ.
 
ಅದುವೇ ಮಹಿಳೆಯರ ಬರ್ಬರ ಕೃತ್ಯ. ಇದುವರೆಗೆ ಗಂಡಸರೇ ಸಿಕ್ಕ ಸಿಕ್ಕವರ ತಲೆ ಬೋಳಿಸುತ್ತಿದ್ದು, ಇದೀಗ ಮಹಿಳಾ ಮಣಿಗಳೂ ತಲೆ ಬೋಳಿಸುವ ಹಕ್ಕನ್ನು ಪಡೆದುಕೊಂಡಿದ್ದಾರೆ .
 
ಈ ಬಗ್ಗೆ ನಾಮ ಹಾಕಿಸಿಕೊಳ್ಳಲೆಂದು ತಿರುಪತಿಗೆ ತೆರಳಿದ ಬೊಗಳೆ-ರಗಳೆ ಬ್ಯುರೋಗೆ ಕೆಲವು ಮಹತ್ವದ ವಿಷಯಗಳು ಕೂದಲಿನ ರಾಶಿಯ ಮಧ್ಯೆ ಮಧ್ಯೆ ಸಿಕ್ಕಿಬಿದ್ದವು.
 
ಗಲ್ಲಿ ಗಲ್ಲಿಯಲ್ಲಿ, ಕತ್ತರಿ ಪ್ರಯೋಗ ಮಾಡಲು ಸಜ್ಜಾಗಿರುವ ಮಹಿಳಾ ಮಣಿಗಳ ಕಣ್ತಪ್ಪಿಸಿ, ಇನ್-ಕ್ಯಾಮರಾ ತನಿಖೆ ನಡೆಸಿದಾಗ ಮಹಿಳಾ ಬಾರ್ಬರುಗಳ ಕೃತ್ಯದ ಹಿಂದಿನ ತಥ್ಯವೊಂದು ಬಯಲಿಗೆ ಬಂದಿದೆ. ಇವರೆಲ್ಲಾ ಪುರುಷಮಣಿಗಳ ತಲೆ ಬೋಳಿಸಿ ಅದನ್ನೆಲ್ಲಾ ಮರು ಜೋಡಿಸುತ್ತಿದ್ದರು. ಇದಕ್ಕೆ ಟಿ.ವಿ. ಚಾನೆಲ್‌ಗಳಲ್ಲಿ ಪ್ರಸಾರವಾಗುತ್ತಿರುವ ಕಸದಿಂದ ರಸ ತೆಗೆಯುವ ಕಾರ್ಯಕ್ರಮಗಳೇ ಸ್ಫೂರ್ತಿ ಎಂದು ತಿಳಿದುಬಂದಿದೆ.
 
ಹೀಗೆ ಮರುಜೋಡಿಸಲಾದ ಕೂದಲನ್ನು ಜಡೆಯ ರೂಪದಲ್ಲಿ ಹೆಣೆದು ಅದನ್ನು ಗಿಡ್ಡಕೂದಲಿನವರಿಗೆ ಮಾರಾಟ ಮಾಡುವ ಒಂದು ದಂಧೆಯೂ ಸಮೀಪದಲ್ಲೇ ನಡೆಯುತ್ತಿತ್ತು!!!
 
ಇದೀಗ ಎಲ್ಲೆಡೆ ಕತ್ತರಿ ಮಸೆಯುತ್ತಾ, ನಾವೇನು ಕಡಿಮೆ ಎಂದು ಬೀಗುತ್ತಿರುವ ವೀರರ-ಮಣಿಗಳು, ಇಂಥ ಸಾಧನೆಯು ಪುರುಷ ಮಣಿಗಳಲ್ಲಿ ರೋಮಾಂಚನವುಂಟು ಮಾಡುತ್ತವೆಯಾದುದರಿಂದ ತಕ್ಷಣವೇ ಕತ್ತರಿ ಹಿರಿದು ಅಲ್ಲಿ ಹಾಜರಾಗುತ್ತಿದ್ದರು. ರೋಮಾಂಚನವಾದ ತಕ್ಷಣ ನೆಟ್ಟಗೆ ನಿಂತ ತಲೆಕೂದಲನ್ನು ರ್ರ್ರ್ರ್ರ್ರ್ರರರ್ರ್ರರಪ್ಪನೆ ಕತ್ತರಿಸುವುದು ಸುಲಭ ಎಂಬುದು ಅವರ ಅಂಬೋಣ.
 
ಇಷ್ಟು ಬೆದರಿಕೆಯಿದ್ದರೂ, ಕಿಲಾಡಿ ಬ್ಯುರೋದ ಸಿಬ್ಬಂದಿ ಅಲ್ಲಿ ಹೋಗಿ.... ಬಾರ್ಬಾರ್ ದೇಖೋ... ಹಜಾರ್ ಬಾರ್ ದೇಖೋ ಅಂತ ಹಾಡುತ್ತಿರುವುದು ಗಮನಕ್ಕೆ ಬಂದಿದೆ.
 
ಈ ಬಗ್ಗೆ ಅವರನ್ನು ಪ್ರಶ್ನಿಸಿದಾಗ, ಇದು ಕಲ್ಯಾಣ ಕಟ್ಟೆಯಲ್ಲವೇ? ಇಲ್ಲಿ ಕಲ್ಯಾಣ ನಡೆಯುವುದಿಲ್ಲವೇ? ಎಂದೂ ಪ್ರತಿ-ಪ್ರಶ್ನೆ ಹಾಕಿ ಗೊಂದಲ ಮೂಡಿಸಿಬಿಟ್ಟಿದ್ದಾರೆ.

Wednesday, September 27, 2006

ನಿಮ್ಮ ಭವಿಷ್ಯ- ಕಣ್ಣು ಮುಚ್ಚಿ ಓದಿಕೊಳ್ಳಿ!

ಮೇಕೆ
ವಾರಾಂತ್ಯದಲ್ಲಿ ಪತ್ನಿ ಪೀಡನೆಯಿಂದಾಗಿ ಮನರಂಜನೆಗೋಸ್ಕರ ಹಣ ಹೆಚ್ಚು ಖರ್ಚಾಗುವ ಕಾರಣ ಮನರಂಜನೆಯೆಲ್ಲಾ ಕರಗಿ ಮನೋವೇದನೆಯಾಗುತ್ತದೆ.

ಟಗರು
ವೇತನ ಏರಿಸುತ್ತಾರೆಯೇ ಇಲ್ಲವೇ ಎಂಬುದು ಅನಿಶ್ಚಿತವಾಗಿರುವುದರಿಂದ ಯಾವಾಗಲೂ ಇರುವಂತೆ ಇಂದು ಕೂಡ ಆತಂಕ ಮುಂದುವರಿಯುತ್ತದೆ. ಇದೇ ಆತಂಕ ಹೆಚ್ಚು ಮುಂದುವರಿದರೆ ಅದು ಸಹಜವಾಗಿ ಅತಿರೇಕವಾಗಿ ಅತಿಶೋಕಕ್ಕೆ ಕಾರಣವಾಗುತ್ತದೆ.
 
ಜೋಡಿ
ಅಕ್ಕಿ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿ ಇರುವುದರಿಂದ ಬಂದ ನೆಂಟರನ್ನು ಧಢಾರನೆ ಬಾಗಿಲುಮುಚ್ಚಿ ಸ್ವಾಗತಿಸುವಿರಿ. ಒಳಗೆ ಬಂದ ತಕ್ಷಣ ಯಾವಾಗ ಹೊರಡುವುದು ಅಂತ ಕೇಳುತ್ತೀರಿ.

ಏಡಿ
ಯಾವಾಗಲೂ ಬೈಯುತ್ತಿರುವ ಪತಿರಾಯರಿಗೆ ಜ್ವರ ಬಂದು ಮಲಗುವ ಸಾಧ್ಯತೆ ಇದೆ. ಗೃಹಿಣಿಯರಿಗೆ ಈ ದಿನ ಬೈಗುಳವಿಲ್ಲದೆ ಮನಶ್ಶಾಂತಿ.
 
ಸಿಂಗ(ಳೀಕ)
ಅಶುಚಿಯಾಗಿರುವ ರುಚಿಕರ ಪಾನೀಯಗಳ ಅತಿ ಸೇವನೆಯಿಂದ ಅದು ಉದರದಲ್ಲಿ ನಿಲ್ಲದೆ ಹೊರಬರಲು ಪ್ರಯತ್ನಿಸುವುದರಿಂದ ನಿಮ್ಮ ಇಂದಿನ ಎಲ್ಲ ಕೆಲಸಗಳೂ ಹಾಳಾಗಲಿವೆ.
 
ಮದುವೆಯಾಗದವಳು
ವೈವಾಹಿಕ ಮಾತುಕತೆಗಳಲ್ಲಿ ಗಣನೀಯ ಪ್ರಗತಿಯಾಗಿ ಇಂದು ಒಂದೇ ದಿನದಲ್ಲಿ ನೀವು 14 ಮನೆಗಳಲ್ಲಿ ಉಪ್ಪಿಟ್ಟು-ಕೇಸರಿಬಾತ್ ತಿನ್ನುವಿರಿ. ಈ ಕಾರಣಕ್ಕೆ ಮರುದಿನ ಬೆಳಿಗ್ಗೆ ಹಾಸಿಗೆಯಿಂದ ಬೇಗನೇ ಏಳಬೇಕಾಗಬಹುದು.
 
ತೂಗು ತಕ್ಕಡಿ
ಆಧ್ಯಾತ್ಮಿಕ ವಿಷಯಗಳಲ್ಲಿ ಆಸಕ್ತಿ ಅಧಿಕವಾಗಿ ಉಕ್ಕೇರಿ ಹೊರಚೆಲ್ಲಿ ಅದೆಲ್ಲಾ ನಷ್ಟವಾಗುವುದರಿಂದ ಮಹಿಳಾ ಕಾಲೇಜುಗಳ ಸುತ್ತಮುತ್ತ ಗಿರಕಿ ಹೊಡೆಯುವ ಸಾಧ್ಯತೆ. ಕಪಾಳ ಮೋಕ್ಷದ ಸಾಧ್ಯತೆಗಳು ಅಧಿಕವಾಗಿವೆ.
 
(ಕುಟುಕೋ)ಚೇಳು
ಮದುವೆ ಔತಣಕೂಟಕ್ಕೆ ಹೋಗಿ ಅಲ್ಲಿ ಅಗತ್ಯಕ್ಕಿಂತ ಹೆಚ್ಚು ತಿನ್ನುವುದರಿಂದ ಮರುದಿನ ನೀವು ಕಾಯಿಲೆ ಬೀಳುವಿರಿ. ಆದುದರಿಂದಾಗಿ ನಿಮ್ಮ ಮನೆ ಪಕ್ಕದ ವೈದ್ಯರಿಗೆ ಈ ದಿನ ಶ್ರೇಯಸ್ಕರ.
 
(ರಾಮ)ಬಾಣ
ಚಾಕಲೇಟ್‌ಗೆ ನೀವು ಹಣ ಕೊಡದಿರುವುದರಿಂದ ಪುತ್ರ ಮನಸ್ತಾಪ. (ನಿನ್ನೆಯ ವರದಿ ನೋಡಿ ದಯವಿಟ್ಟು ಮಕ್ಕಳನ್ನು ಚಾಕಲೇಟ್‌ವಂಚಿತರನ್ನಾಗಿಸದಿರಿ. ಇದರಿಂದ ನಿಮಗೇ ನಷ್ಟ!) ನಿಮ್ಮೂರಿನಲ್ಲಿ ಜನಸಂಖ್ಯಾ ಹೆಚ್ಚಳಕ್ಕೆ ಕಾರಣರಾಗುವಿರಿ.
 
ಮೊಸಳೆ
ಪ್ರಯಾಣ ಸಂದರ್ಭ ಕಳ್ಳರ ಹಾವಳಿಯಿರುವುದರಿಂದ ಪ್ರಾಣಕ್ಕೆ ಅಪಾಯವಾಗದಂತಿರಬೇಕಿದ್ದರೆ ಹಣದ ಪರ್ಸನ್ನು ಷರ್ಟ್ ಜೇಬಿನಲ್ಲೇ ಇರಿಸಿಕೊಳ್ಳಿ.
 
ಕುಡಿಕೆ
ತೀವ್ರ ಬೆಲೆ ಏರಿಕೆ ಪರಿಣಾಮ ಇಂದು 100 ಮಿ.ಲೀ. ಹಾಲು ಖರೀದಿಗೆ ನೀವು ಚಿನ್ನ ಒತ್ತೆ ಇಡಬೇಕಾಗಬಹುದು.
 
ಮೀನು
ನಿಮ್ಮ ಗೆಳೆಯರ ಸಲಹೆ ಮೇರೆಗೆ ಸಂಜೆ ವೇಳೆಗೆ 'ತೀರ್ಥ' ಯಾತ್ರೆ ಕೈಗೊಳ್ಳುವ ಕಾರಣ, ತೀರ್ಥ ತಲೆಗೇರಿ ರಾತ್ರಿ ಯಾರದೋ ಮನೆ ಬಾಗಿಲು ಬಡಿಯುವಿರಿ.

Tuesday, September 26, 2006

...ಬಂಧೇನ ರೂಪೇಣ ಪಶು ಪತ್ನಿ ಸುತಾಲಯ

{ಜಾಹೀರಾತು: ನಾಳೆ ಮತ್ತೆ ವಾರ ಭವಿಷ್ಯ ಪ್ರಕಟವಾಗಲಿದೆ...! ಎಲ್ಲರೂ ನಿಮ್ಮ ಭವಿಷ್ಯವೇ ತಲೆಕೆಳಗಾಗುವ ಸಾಧ್ಯತೆಯಿರುವುದರಿಂದ ಎಚ್ಚರಿಕೆ ವಹಿಸಿ!}
 
(ಬೊಗಳೂರು ಪ್ರಾಣಿಗಳ ಬ್ಯುರೋದಿಂದ)
ಬೊಗಳೂರು, ಸೆ.26- ಬೊಗಳೆ ರಗಳೆ ಬ್ಯುರೋ ಕೂಡ ಭವಿಷ್ಯ ನುಡಿಯಲಾರಂಭಿಸಿರುವುದರಿಂದಾಗಿ ಜನರು ಇತ್ತೀಚೆಗೆ ಜಾತಕ ನೋಡಿ ಮದುವೆಯಾಗುವುದರ ಮೇಲೆ ವಿಶ್ವಾಸ ಕಳೆದುಕೊಂಡಿರುವ ಗಂಭೀರ ವಿಷಯದಿಂದ ಚಿಂತಾಕ್ರಾಂತವಾಗಿರುವ ಜಾನುವಾರುಗಳು, ನಾವಾದರೂ ಜಾತಕ ನೋಡಿಯೇ ಮದುವೆಯಾಗೋಣ ಎಂದು ತೀರ್ಮಾನಿಸಿವೆ.
 
ಇದಕ್ಕಾಗಿ ಜಾನುವಾರುಗಳಿಗೆ ಮೇವು ತಿನ್ನಿಸುವುದಕ್ಕಾಗಿ ಮತ್ತು ಮೇವು ತಿಂದದ್ದಕ್ಕಾಗಿ ವಿಶ್ವಾದ್ಯಂತ ಹೆಸರುವಾಸಿಯಾಗಿರುವ ಹಿಂದಿನ ಬಿಹಾರದ (ಇಂದು ಜಾರ್ಖಂಡ್ ರಾಜಧಾನಿ)  ರಾಂಚಿಗೆ ಧಾವಿಸಿರುವ ಮೇವುಪ್ರಿಯ ಜಾನುವಾರುಗಳು, ಅಲ್ಲಿನ ವಿಶ್ವವಿದ್ಯಾನಿಲಯದ ಮೊರೆ ಹೋಗಿವೆ ಎಂದು ಇಲ್ಲಿ ತಿಳಿದುಬಂದಿದೆ.
 
'ಋಣಾನುಬಂಧೇನ ರೂಪೇಣ, ಪಶು-ಪತ್ನಿ ಸುತಾಲಯ' ಎಂದು ತಮ್ಮ ಹಿರಿಯರು ಯಾವತ್ತೂ ಹೇಳುತ್ತಿದ್ದರು. ಆದರೆ ಪಶು ಮತ್ತು ಪತ್ನಿಯರ ಮಧ್ಯೆ ಯಾವಾಗಲೂ ಕೊಟ್ಟಿಗೆಯಲ್ಲಿ ಜಗಳವಾಗುತ್ತಿತ್ತು. ಇದಕ್ಕೆ ಪರಿಹಾರ ಕಂಡುಹುಡುಕುವ ನಿಟ್ಟಿನಲ್ಲಿ ತಮ್ಮ ಬಾಲ(ಇರುವ)ಕರುಗಳಿಗೆ ಜಾತಕ ಸಿದ್ಧಪಡಿಸುವಂತಾಗುವ ಯೋಜನೆಯನ್ನು ಪಶುಗಳು ಹಾಕಿಕೊಂಡಿವೆ.
 
ಹೀಗೆ ತಯಾರಿಸಲಾದ ಕುಂಡಲಿಯನ್ನು ತಮ್ಮ ಕಿವಿಗೆ ಸಿಲುಕಿಸಿಕೊಂಡು ಸುತ್ತಾಡಿದರಾಯಿತು. ಇಷ್ಟ ಇದ್ದವರು ಜಾತಕ ನೋಡಿ ಸಂಬಂಧ ಕಟ್ಟಲು ಮುಂದೆ ಬರುತ್ತಾರೆ. ಈ ರೀತಿಯಾದರೂ ಬೇರೆಯವರ ಜಾತಕ ಜಾಲಾಡಬಹುದಲ್ಲವೇ ಎಂಬುದು ಈ ಮೇಧಾವಿ ಪ್ರಾಣಿಗಳ ಅಭಿಮತ.

Monday, September 25, 2006

ಮಕ್ಕಳಿಗೂ ದೊರೆಯದಂತೆ ನಾಪತ್ತೆಯಾಗುವ ಚಾಕಲೇಟು!

(ಬೊಗಳೂರು ವಿಟಮಿನ್ ಬ್ಯುರೋದಿಂದ)
ಬೊಗಳೂರು, ಸೆ.25- ಆಂಧ್ರ ಪ್ರದೇಶದಲ್ಲಿ ಪೆಸ್ಟಿ ಕೋಲಾಗಳು ದಿಢೀರನೇ ಮಾರುಕಟ್ಟೆಯಿಂದ ನಾಪತ್ತೆಯಾಗುತ್ತಿರುವುದು ಮತ್ತು ಮೆಣಸಿನ ಸ್ಪ್ರೇ ಕೂಡ ದಿಢೀರನೆ ನಾಪತ್ತೆಯಾಗಿದ್ದ ಬಗ್ಗೆ ಭಯಾನಕ ವರದಿ ಮಾಡಿದ್ದ ಬೊಗಳೆ ರಗಳೆ ಬ್ಯುರೋ, ಇದೀಗ ಚಿಣ್ಣರ ಚಾಕಲೇಟ್ ನಾಪತ್ತೆಯಾಗುತ್ತಿರುವುದರ ಬೆನ್ನ ಹಿಂದೆ ಬಿದ್ದಿದೆ.
ಮಕ್ಕಳಿಗೆ ಚಾಕಲೇಟುಗಳು ಯಾಕೆ ಅಷ್ಟೊಂದು ಇಷ್ಟವಾಗುತ್ತವೆ ಎಂಬುದರ ಕುರಿತು ಸಂಶೋಧನೆ ಮಾಡಹೊರಟ ನೈಜೀರಿಯನ್ನರು ಹೊಸ ಸಂಶೋಧನೆ ಮಾಡಿದ್ದಾರೆ. ಅವರೀಗ ವಯಾಗ್ರಾ ಮಾತ್ರೆಗಳನ್ನೆಲ್ಲಾ ಚರಂಡಿಗೆ ಹಾಕುತ್ತಿದ್ದು, ಮಾರುಕಟ್ಟೆಯಲ್ಲಿರುವ ಚಾಕಲೇಟುಗಳನ್ನೆಲ್ಲಾ ಸಂಗ್ರಹಿಸಿ ದರ ಏರಿಸುವ ಯೋಚನೆಯಲ್ಲಿದ್ದಾರೆ ಎಂದು ತಿಳಿದುಬಂದಿದೆ.
ವಯಾಗ್ರಾದ ಬದಲು ಚಾಕಲೇಟುಗಳನ್ನು ಉಪಯೋಗಿಸುತ್ತಿರುವ ಕಾರಣಕ್ಕೆ, ಇದಕ್ಕೆ ಚಾಕ ಲೇಟು ಎಂದು ಹೆಸರಿಟ್ಟರೆ ಮಾರಾಟವಾಗದು ಎಂಬ ನಿರ್ಧಾರಕ್ಕೆ ಬಂದಿರುವ ನೈಜೀರಿಯನ್ನರು, ಲೇಟಾಗಿ ನಿರ್ಧಾರ ತೆಗೆದುಕೊಂಡು ಸೆಕ್‌ಸ್ಲೇಟ್ ಎಂಬ ನಾಮಕರಣ ಮಾಡಿದ್ದಾರೆ. ಆದರೆ ಈ ಪದಪುಂಜದಿಂದ ಅವರು ಲೇಟ್ ಪದವನ್ನು ಪ್ರತ್ಯೇಕಿಸಿಲ್ಲದಿರುವುದು ಹುಬ್ಬೇರಿಸಿದೆ.
ಇದೀಗ ಮಾದಕ ದ್ರವ್ಯಗಳಿಗೆ ಹೆಸರಾದ ನೈಜೀರಿಯನ್ನರು ಉನ್ಮಾದಕ ದ್ರವ್ಯಗಳನ್ನೂ ತಯಾರಿಸಹೊರಟಿರುವುದರಿಂದ ವ್ಯಗ್ರರಾಗಿರುವ ವಯಾಗ್ರಾ ತಯಾರಕರು, ಈ ಕ್ಷೇತ್ರದಲ್ಲಿ ತಮ್ಮ ಅಗ್ರಸ್ಥಾನ ಬಿದ್ದುಹೋದ ಕಾರಣದಿಂದ, ಉಗ್ರ ಪ್ರತಿಭಟನೆ ನಡೆಸಲು ನಿರ್ಧರಿಸುತ್ತಿದ್ದಾರೆ.
ಇದೂ ಅಲ್ಲದೆ, ಸ್ಲೇಟು ಹಿಡಿಯಬೇಕಾದ ಮಕ್ಕಳು ಚಾಕಲೇಟು ತಿನ್ನದಂತೆ ಮಾಡುವ ಹುನ್ನಾರವಿದು ಎಂದು ಅವರು ಹುಯಿಲೆಬ್ಬಿಸಿದ್ದಾರಲ್ಲದೆ, ಈ ಕಂಪನಿಗಳ ಕೈಯಲ್ಲೂ ಸ್ಲೇಟು ಹಿಡಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಸೆಕ್‌ಸ್ಲೇಟ್ ತಯಾರಿಕಾ ಕಂಪನಿಗಳು, ತಾವೇನೂ ಮಕ್ಕಳಿಗೆ ಚಾಕಲೇಟು ತಿನ್ನಲು ಬಲವಂತ ಮಾಡಿಲ್ಲ. ಅವರಿಗಿಷ್ಟವಾಗುತ್ತಿದೆ, ತಿನ್ನುತ್ತಾರೆ. ಅವರಿಗೆ ಬಲವಂತವಾಗಿ ತಿನ್ನಿಸುವ ದೊಡ್ಡ ಸಾಹಸ ಕಾರ್ಯವೊಂದು ಮಾಡಬೇಕಾಗಿಲ್ಲವಲ್ಲ ಎಂದು ನಾವು ನಿಟ್ಟುಸಿರು ಬಿಡುತ್ತಿದ್ದೇವೆ. ನಾವು ಅದರ ಪರಿಣಾಮಗಳನ್ನು ಮಾತ್ರವೇ ಸಂಶೋಧನೆ ಮಾಡುತ್ತಿದ್ದೇವೆ ಎಂದು ಉತ್ತರಿಸಿದ್ದಾರೆ.

Friday, September 22, 2006

ಐಸ್‌ಕ್ರೀಮ್ ಕರಗಿಸಲು ಹೊರಟು ತಾನೇ (ಐ)ಸ್ಕ್ರೀಮ್ ಆದ!

(ಬೊಗಳೂರು ಪ್ರಾಣಿಗಳ ಬ್ಯುರೋದಿಂದ)
ಬೊಗಳೂರು, ಸೆ.22- ನೋಡಲು ಮುದ್ದು ಮುದ್ದಾಗಿದೆ ಎಂದುಕೊಂಡು ಅಪ್ಪಿಕೋ ಚಳವಳಿ ಮಾಡಲು ಹೋದರೆ ಏನಾಗುತ್ತದೆ ಎಂಬುದನ್ನು ಜಗತ್ತಿಗೇ ತೋರಿಸಿಕೊಟ್ಟ ದೇಶಗಳಲ್ಲಿ ಚೀನಾಕ್ಕೆ ಮೊದಲ ಸ್ಥಾನ  ತಂದುಕೊಟ್ಟ ಪ್ರಕರಣವೊಂದು ಜಾಗತಿಕ ಮಟ್ಟದಲ್ಲಿ ಹೊಸ ಸಾಧ್ಯತೆಗಳಿಗೆ ನಾಂದಿ ಹಾಡಿದೆ.
 
ಬೀಜಿಂಗ್ ಪ್ರಾಣಿ ಸಂಗ್ರಹಾಲಯವೊಂದಕ್ಕೆ ತೆರಳಿದ್ದ ಈತ ಪ್ರಾಣಿ ಪ್ರಿಯ ಎಂಬುದು ಆ ಬಳಿಕ ಗೊತ್ತಾಯಿತು. ಪ್ರಾಣಿಗಳೆಂದರೆ ಈತನಿಗೆ ಭಾರಿ ಇಷ್ಟ. ಅದಕ್ಕಾಗಿಯೇ ಅವುಗಳನ್ನು ತಿನ್ನಲು ಹವಣಿಸುತ್ತಿದ್ದ. ಬೆಳ್ಳಗೆ ಐಸ್ ಕ್ರೀಮಿನಂತೆ ಕಂಡು ಬಂದ ಮುದ್ದಾದ ಪ್ರಾಣಿ ನೋಡಿದಾಗ ಆತನ ಬಾಯಲ್ಲಿ ನೀರೂರಿತ್ತು. ಅದು ಬೀಜಿಂಗ್ ಮೃಗಾಲಯದ ಇತರ ಪ್ರಾಣಿಗಳ ಬಾಯಾರಿಕೆ ತಣಿಸುವಷ್ಟು ಸಂಗ್ರಹವಾಗಿತ್ತು ಎಂದು ಪ್ರಾಣಿ ಸಂಗ್ರಹಾಲಯದ ಬೋನಿನೊಳಗೆ ಠಿಕಾಣಿ ಹೂಡಿರುವ ಬೊಗಳೆ ರಗಳೆ ಬ್ಯುರೋದ ವರದಿಗಾರರೊಬ್ಬರು ವರದಿ ಮಾಡಿದ್ದಾರೆ.
 
ಮೊದಲಿಗೆ ಆತ ಈ ಪ್ರಾಣಿಯ ಮೇಲೆ ಹಿಮ (ಮಂಜು) ಸುರಿದಿದ್ದು, ಅದು ಪಾಪ ಚಳಿಯಿಂದ ನಡುಗುತ್ತಿರಬಹುದು ಎಂದುಕೊಂಡು ಅದಕ್ಕೆ ಬಿಸಿ ಮುಟ್ಟಿಸುವ ಉದ್ದೇಶದಿಂದ ಅಪ್ಪಿಕೊಳ್ಳಲು ಹೋಗಿದ್ದ. ಬಿಸಿಯಾದರೆ ಬೆಣ್ಣೆ ಕರಗೀತು ಎಂಬುದರಲ್ಲಿ ಆತ ಬಲವಾದ ನಂಬಿಕೆ ಇರಿಸಿದ್ದ. ತಾನು ಕೂಡ ಸಾಕಷ್ಟು ಬಿಸಿ (ಹಾಟ್) ಆಗಿರೋ ಡ್ರಿಂಕ್ಸ್ ಸೇವಿಸಿದ್ದರಿಂದ ಅದು ಅಲ್ಲಿ ನೆರವಿಗೆ ಬಂದೀತೆಂಬುದು ಆತನ ಲೆಕ್ಕಾಚಾರವಾಗಿತ್ತು.
 
ಆದರೆ, ಆಗಿದ್ದೇನು? ಪಾಂಡಾ ಎಂಬ ಪಾಪದ ಪ್ರಾಣಿಯ ಮೈಮೇಲಿದ್ದ ಬೆಣ್ಣೆ ಕರಗಲೇ ಇಲ್ಲ. ಆ ಪ್ರಾಣಿಗೂ ಗೊತ್ತಿತ್ತು.... ಇಂಥವರಿಗೆ ಕೂಡ ಬಿಸಿಯಾಗದೆ ಬೆಣ್ಣೆ ಕರಗದು ಎಂಬುದು! ಅದಕ್ಕಾಗಿ ಅದು ತನ್ನ ಹಲ್ಲುಗಳನ್ನು ಆತನ ಚರ್ಮಕ್ಕೆ ತೂರಿಸಿಬಿಟ್ಟಿತು. ಇದರಿಂದ ಉತ್ತೇಜಿತನಾದ ಆತ ಕೂಡ ಪಾಂಡಾದ ದಪ್ಪ ಚರ್ಮಕ್ಕೆ ಹಿಂಭಾಗದಿಂದ ಕಚ್ಚಲು ನೋಡಿದನಾದರೂ, ತನ್ನ ಹಲ್ಲುಗಳು ಒಳಗೆ ಹೋಗಲೇ ಇಲ್ಲವಲ್ಲ ಎಂದು ಬಾಯಿ ಚಪ್ಪರಿಸಿಕೊಂಡನೆಂದು ಒದರಿಗಾರರು ಹೇಳಿದ್ದಾರೆ.
 
ತೀರಾ ಇತ್ತೀಚೆಗೆ ಬಂದಿರುವ ವರದಿಗಳ ಪ್ರಕಾರ, ಆತ ಈಗ ಆಸ್ಪತ್ರೆಯ ಹಾಸಿಗೆಯಲ್ಲಿ ಚೆನ್ನಾಗಿ ನಿದ್ದೆ ಮಾಡುತ್ತಿದ್ದಾನೆ. ಮೈಮೇಲೆಲ್ಲಾ ಅಲ್ಲಲ್ಲಿ ಬಿಳಿಯಾದ ಬಟ್ಟೆಯಿಂದ ಸುತ್ತಿ ಸುತ್ತಿ ಇರುವುದರಿಂದ ಮತ್ತು ಅಲ್ಲಲ್ಲಿ ಕಣ್ಣುಗಳಂತೆ ಕೆಂಪಾಗಿ ಗೋಚರಿಸುವ ರಕ್ತದ ಕಲೆಯಿಂದಾಗಿ ಆತನೂ ಪಿಳಿ ಪಿಳಿ ಕಣ್ಣು ಬಿಡುತ್ತಿರುವ ಪಾಂಡಾದಂತೆ ಗೋಚರಿಸುತ್ತಿದ್ದಾನೆ.

Thursday, September 21, 2006

ಸಾನಿಯಾ ತುಟಿಯಿಂದ ರಾಷ್ಟ್ರೀಯ ಬಿಕ್ಕಟ್ಟು!

(ಬೊಗಳೂರು ತಾರಾ ಬ್ಯುರೋದಿಂದ)
ಬೊಗಳೂರು, ಸೆ.21- ಕೈಯಲ್ಲಿ ರಾಕೆಟ್ ಬೀಸುತ್ತಲೇ ಹದಿಹರೆಯದ ಕುದಿ ಹೃದಯಗಳಲ್ಲಿ ruckus ಸೃಷ್ಟಿಸಿದ್ದ ಸಾನಿಯಾ ಮಿರ್ಜಾ ಮತ್ತೊಂದು ಬಾಂಬ್ ಸಿಡಿಸಿರುವುದರಿಂದ ಅದು ಎಲ್ಲಿ ಸ್ಫೋಟಗೊಂಡಿದೆ ಎಂದು ಹೆಕ್ಕಿಕೊಳ್ಳಲು ಹೋದ ಬೊಗಳೆ ಬ್ಯುರೋ ಸಿಬ್ಬಂದಿಗೆ ವಿಶೇಷ ಸುದ್ದಿಯೊಂದು ಸಿಕ್ಕಿದೆ.
 
ಭಾರತದಲ್ಲಿ ಭಯಂಕರವಾದ ರಾಷ್ಟ್ರೀಯ ಬಿಕ್ಕಟ್ಟೊಂದು ಸೃಷ್ಟಿಯಾಗಿರುವುದರ ಹಿನ್ನೆಲೆ ಏನು ಎಂದು ಅರಿಯಲು ಹೋದಾಗ ದೊರಕಿದ್ದು ಈ ಸುದ್ದಿ. ಸಾನಿಯಾ ಮಿರ್ಜಾ ಅವರ ತುಟಿಗಳೇ ಈ ಬಿಕ್ಕಟ್ಟಿನ ಹಿಂದಿರುವ ಚುಂಬಕ ಶಕ್ತಿ ಎಂಬುದು ತಿಳಿದುಬಂದಿದೆ.
 
ತನ್ನ ತುಟಿಗಳೇ ರಾಷ್ಟ್ರೀಯ ಬಿಕ್ಕಟ್ಟಿಗೆ ಕಾರಣ ಎಂದು ಆಕೆ ಕಟಕಟೆಯಲ್ಲಿ ತಪ್ಪೊಪ್ಪಿಕೊಂಡಿದ್ದು, ಈ ಬಗ್ಗೆ ಹೆಚ್ಚಿನ ಗಮನ ಹರಿಸುವುದಾಗಿ ಭರವಸೆ ನೀಡಿದ್ದಾರೆ. ಈ ಕಾರಣಕ್ಕೆ ರಾಷ್ಟ್ರೀಯ ಬಿಕ್ಕಟ್ಟು ಸೃಷ್ಟಿಸಿದ ಆಕೆಗೆ ಬೊಗಳೆ ರಗಳೆ ಬ್ಯುರೋ ಉದಾರವಾಗಿ ಕ್ಷಮಾದಾನ ಮಾಡಿದೆ.
 
ಇದಕ್ಕೆ ಈ ಹಿಂದೆ ಈಕೆಯ ತುಟಿಗಳ ಬಗ್ಗೆ ದೇಶಾದ್ಯಂತ ಎದ್ದ ಆತಂಕದ ಅಲೆಗಳೇ ಕಾರಣ ಎಂಬುದು ಇಲ್ಲಿ ಗೊತ್ತಾಗಿದೆ.
 
ತುಟಿ ಬಿಚ್ಚಿದರೆ ರಾಷ್ಟ್ರೀಯ ಬಿಕ್ಕಟ್ಟು, ಟೆನಿಸ್ ಅಂಗಣದಲ್ಲಿ ತುಂಡು ಲಂಗ ಹಾಕಿದರೆ ಫತ್ವಾ ಜತೆಗೆ ಸಾಮುದಾಯಿಕ ಬಿಕ್ಕಟ್ಟು, ಬಾಯಿ ಬಿಟ್ಟರೆ ಮತ್ತೇನೋ ಬಿಕ್ಕಟ್ಟು ಎಲ್ಲಾ ಸೃಷ್ಟಿಯಾಗುತ್ತಿರುವ ಹಿನ್ನೆಲೆಯಲ್ಲಿ ಆಕೆ ಇತ್ತೀಚೆಗಿನ ದಿನಗಳಲ್ಲಿ ಟೆನಿಸ್ ಆಡುವಾಗ ರಾಕೆಟ್ ಬಲವಾಗಿ ಬೀಸಲು ಹೆದರುತ್ತಿದ್ದಾರೆ ಎಂಬುದನ್ನು ಬ್ಯುರೋ ಕಂಡುಕೊಂಡಿದೆ.
 
ಈ ಕಾರಣಕ್ಕೆ ಆಕೆ ಇತ್ತೀಚೆಗೆ ವಿಶ್ವ ಡಬ್ಲ್ಯುಟಿಎ ಶ್ರೇಯಾಂಕ ಪಟ್ಟಿಯಲ್ಲಿ ತಮ್ಮ ಸ್ಥಾನಗಳ ಸಂಖ್ಯೆಯನ್ನು 30ರಿಂದ 70ಕ್ಕೆ "ಏರಿಸಿ"ಕೊಂಡಿದ್ದಾರೆ ಎಂಬುದು ಖಚಿತವಾಗಿದೆ. ಇದೂ ಅಲ್ಲದೆ, ಆಕೆಯ ಮೇಲೆಯೇ ಬೊಗಳೆ ರಗಳೆ ಬ್ಯುರೋ ಸೇರಿದಂತೆ ಮಾಧ್ಯಮಗಳೆಲ್ಲಾ ಬೆಳಕು ಚೆಲ್ಲುತ್ತಿರುವುದರಿಂದಾಗಿ ಇತರ ತಾರೆಗಳಿಗೆ ಬೆಳಕಿನ ಕೊರತೆಯುಂಟಾಗಿದೆ. ಇದರಿಂದಾಗಿ ಪ್ಲುಟೋ ಗ್ರಹವನ್ನು ಉದುರಿಸಿದಂತೆ ಈ ತಾರೆಯೂ ಮೂಲೆಗೆ ಸೇರಬಹುದು ಎಂದು ಇತರ ನಕ್ಷತ್ರಗಳು ಎಚ್ಚರಿಕೆ ನೀಡಿವೆ.

Wednesday, September 20, 2006

ನಿಮ್ಮ ವಾರ ಭವಿಷ್ಯ ಇಲ್ಲಿದೆ!!!

ಮೇಷ

ನೀವಿದನ್ನು ಓದುತ್ತಾ ಕಾಲ ಕಳೆಯುತ್ತೀರಿ.

 

ವೃಷಭ

ಮನೆಗೆ ನಿಮ್ಮನ್ನು ಹುಡುಕಿಕೊಂಡು ಶಾಂತಿ ಬರುವುದರಿಂದ ಮನೆ ತುಂಬಾ ಅಶಾಂತಿ ಏಳಬಹುದು.

 

ಮಿಥುನ

ಮನೆಯಲ್ಲಿ ಹೆಂಡತಿ ಕೋಪಿಸಿಕೊಳ್ಳುವುದರಿಂದ ನಿಮ್ಮ ಖರ್ಚು ಹೆಚ್ಚಾಗಬಹುದು. ಹೋಟೆಲೂಟವೋ , ಸೀರೆಯೋ ಇತ್ಯಾದಿ ಖರ್ಚುಪಟ್ಟಿಯಲ್ಲಿ ಸೇರಬಹುದಾಗಿದೆ.

 

ಕಟಕ

ನಿಮ್ಮ ಆರೋಗ್ಯದಲ್ಲಿ ತೊಂದರೆ ಕಾಣಿಸಿಕೊಳ್ಳುವುದರಿಂದ ನಿಮ್ಮ ವೈದ್ಯರಿಗೆ ಧನಲಾಭ.

 

ಸಿಂಹ

ನೀವಿಂದು ಹಲ್ಲು ಕೀಳಿಸಿಕೊಳ್ಳಲು ದಂತವೈದ್ಯರಲ್ಲಿಗೆ ಹೋಗಬೇಕಾದ ಪ್ರಮೇಯವೇ ಬರುವುದಿಲ್ಲ. ಯಾಕಂದ್ರೆ ನೀವಾಡುವ ಮಾತಿಗೆ ಮನೆಯಲ್ಲೇ ಸುಲಭವಾಗಿ ಹಲ್ಲು ಉದುರುತ್ತದೆ.

 

ಕನ್ಯಾ

ನೀವು ಇತರರಿಗೆ ಟೋಪಿ ಹಾಕಲು ನಿರ್ಧರಿಸಿರುವುದರಿಂದ ಉತ್ತಮ ಹಣಕಾಸು ಆದಾಯವಿದೆ. ಆದರೆ ಪೊಲೀಸರು ನಿಮ್ಮಿಂದ ಕದಿಯಬಹುದು. ಎಚ್ಚರವಿರಲಿ.

 

ತುಲಾ

ನೀವು ಸಿಕ್ಕಾಪಟ್ಟೆ ತಿನ್ನುವುದರಿಂದ ಸಮ ಅನುಪಾತದಲ್ಲಿ ಅಷ್ಟೇ ಹೊರಗೆ ಹೋಗಬಹುದು. ತೂಕ ಮಾಡಿ ನೋಡಿ , ಹೋಗದಿದ್ದರೆ ಒಂದಿಷ್ಟು ನೀರು ಕುಡಿಯಿರಿ.

 

ಮಕರ

ನಿಮ್ಮ ಹಳೇ ಗೆಳತಿ ಮನೆಗೆ ದಿಢೀರ್ ಭೇಟಿ ನೀಡುವುದರಿಂದ ಮನೆಯೊಳಗೆ ಲಟ್ಟಣಿಗೆ , ಪಾತ್ರೆಪಗಡಿ ಇತ್ಯಾದಿಗಳು ಹಾರಾಡುತ್ತಿರುತ್ತವೆ. ಮಗುವೊಂದು ದೂರದಲ್ಲಿ ಕುಳಿತು ಅಳುತ್ತಿರುತ್ತದೆ.

 

ಕುಂಭ

ಶ್ರಮದಿಂದ ಧನಲಾಭ ಎಂಬ ಯೋಗವಿರುವುದರಿಂದ ಹಣವಿದ್ದ ಬೀರುವಿನ ಬಾಗಿಲು ತೆಗೆಯಲು ಭಾರಿ ಶ್ರಮ ಪಡಬೇಕಾಗುತ್ತದೆ.

 

ಮೀನ

ಅಧಿಕ ಧನಾಗಮನ ನಿರೀಕ್ಷೆ ಇರುವುದರಿಂದ ನಿಮ್ಮ ಪರ್ಸು ದೊಡ್ಡದು ಮಾಡಿಕೊಳ್ಳಿ. ಜೇಬುಗಳ್ಳರು ನಿಮ್ಮ ದೊಡ್ಡ ಕಿಸೆಯ ಸುತ್ತಲೇ ಸುತ್ತುತ್ತಿರುತ್ತಾರೆ.
 
ನಾವು ಮೊದಲೇ ಜಾಹೀರಾತು ನೀಡಲಿಲ್ಲವೇ? ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿಲ್ಲ.... ಬೊಗಳೆ ರಗಳೆ ಬ್ಯುರೋ ಕೈಯಲ್ಲಿದೆ ಅಂತ !!!

Tuesday, September 19, 2006

ಮದುವೆಯಾಗಲು ಲಂಚ!

(ಬೊಗಳೂರು Some-ಬಂಧನ ಬ್ಯುರೋದಿಂದ)
ಬೊಗಳೂರು, ಸೆ.19- ರಾಷ್ಟ್ರದ ವಿವಿಧೆಡೆ ಮಂಡೂಕಗಳ ಸಾಮೂಹಿಕ ವಿವಾಹೋತ್ಸವ ನಡೆದ ಬಳಿಕ ಈಗ ಮಂಡೂಕಗಳಿಗಿಂತ ಮೇಲ್ಜಾತಿಯವರು ಎಂದು ಕರೆಯಲಾಗುವ ಮಾನವರ ಸರದಿ.
 
'ಮೇಲ್ಜಾತಿ-ಕೀಳುಜಾತಿ' ಎಂಬ ಭೇದ ತೊಡೆದು ಹಾಕುವುದೇ ನಮ್ಮ ಉದ್ದೇಶ ಎಂದು ಹೇಳಿರುವ ಕೇಂದ್ರ ಸರಕಾರವು, ಮೇಲ್ಜಾತಿಯವರು ಕೀಳು ಎಂದು ಭಾವಿಸದೆ ಪರಿಶಿಷ್ಟ ಜಾತಿ-ವರ್ಗದವರನ್ನೇ ವಿವಾಹವಾಗಬೇಕು. ಹಾಗಾದರೆ ನೀಡಲಾಗುವ ಪ್ರೋತ್ಸಾಹ ಧನವನ್ನು 50 ಸಾವಿರ ರೂ.ಗಳಿಗೆ ಏರಿಸಲು ಸೂಚನೆ ನೀಡಿರುವುದು ಇದರ ಹಿಂದಿನ ಪ್ರಧಾನ ಕಾರಣ. ಈ ಕಾರಣಕ್ಕೆ ಅಲ್ಲಲ್ಲಿ ಸಾಮೂಹಿಕ ವಿವಾಹೋತ್ಸವ ನಡೆಸಲು ಭರ್ಜರಿ ಸಿದ್ಧತೆಗಳು ಆರಂಭವಾಗಿರುವುದು ನಮ್ಮ ಬ್ಯುರೋದ ಗಮನಕ್ಕೆ ಬಂದಿದೆ.
 
ಆದರೆ ಇದು ಅಂತಿಂಥ ಸಾಮೂಹಿಕ ವಿವಾಹೋತ್ಸವಗಳಲ್ಲ. ಮೇಲ್ಜಾತಿಯ ಒಬ್ಬನೇ ವ್ಯಕ್ತಿ ಸಾಮೂಹಿಕವಾಗಿ ಹತ್ತಿಪ್ಪತ್ತು ಮಂದಿಯ ಉದ್ಧಾರ ಮಾಡುವ ಪ್ರಯತ್ನವಾಗಿದ್ದು, ಕನಿಷ್ಠ 10 ಮಂದಿಯನ್ನು ವಿವಾಹವಾದರೆ (50 ಸಾವಿರx10) ಕನಿಷ್ಠ 5 ಲಕ್ಷ ರೂ. ಪಡೆಯುವ ಲೆಕ್ಕಾಚಾರ ಎಂಬುದು ತನಿಖೆಯಿಂದ ಗೊತ್ತಾಗಿದೆ. ಸರಕಾರ ಕರೆಕರೆದು ನೀಡುತ್ತಿರುವ ಹಣವನ್ನು ವ್ಯರ್ಥ ಮಾಡಬಾರದು, ಸದುಪಯೋಗಪಡಿಸಿಕೊಳ್ಳಬೇಕು ಎಂಬುದು ಇದರ ಹಿಂದಿನ ಸಾಮಾಜಿಕ ಕಳಕಳಿ.
 
ಮೇಲ್ಜಾತಿಯವರು ಪರಿಶಿಷ್ಟರನ್ನು ಮದುವೆಯಾದರೆ ಜಾತಿ ಭಾವನೆಗಳನ್ನು ತೊಳೆದು ಹಾಕಬಹುದು. ಈ ಭಾವನೆ ತೊಳೆಯಲು ಸೋಪು, ಶ್ಯಾಂಪೂ, ಮರಳು, ತೆಂಗಿನ ನಾರಿನ ಬ್ರಶ್... ಇತ್ಯಾದಿಗಳಿಗೆ 50 ಸಾವಿರ ರೂ. ಖರ್ಚು ಆಗುತ್ತದೆ. ಇದನ್ನು ಭರಿಸಲು ಯತ್ನಿಸುವಂತೆ ರಾಜ್ಯ ಸರಕಾರಗಳಿಗೆ ಕೇಂದ್ರ ಸೂಚಿಸಿದೆ.
 
ಈ ಮಧ್ಯೆ, ಮದುವೆಯೇ ಆಗೋದಿಲ್ಲ, ಇಹ ಸಂಸಾರೇ... ಬಲು ನಿಸ್ಸಾರೇ.... ಎಂದು ಹಾಡುತ್ತಾ ಸಂ-ನ್ಯಾಸಕ್ಕೆ ಸಿದ್ಧತೆ ನಡೆಸುತ್ತಿರುವವರು ಮತ್ತು ಸಂಸಾರ ಸಾಗರದಲ್ಲಿ ತೇಲುವುದಕ್ಕಿಂತ ಅಮಲಿನಲ್ಲೇ ತೇಲಾಡೋದು ಒಳಿತು ಎಂದು ಸುಮ್ಮನೆ ಬಾಟ್ಲಿ ಹಿಡಿದು ಕೂತವರನ್ನೂ ಮದುವೆ ಮಂಟಪಕ್ಕೆ ಎಳೆದು ತರುವ ಪ್ರಯತ್ನಗಳು ನಡೆಯುತ್ತಿವೆ. ಅವರನ್ನು ಮಂಟಪದಲ್ಲಿ ಕೂರಿಸಿ ಅವರ ತಲೆಗೆ ಅಕ್ಕಿ ಕಾಳು ಹಾಕಿ ಸರಕಾರದ ಹಣವನ್ನು ಹೆಕ್ಕಿಕೊಳ್ಳುವ ಉದ್ಯಮವನ್ನೇ ಕೆಲವರು ಆರಂಭಿಸಿದ್ದಾರೆ ಎಂದು ತನಿಖೆಯಿಂದ ಗೊತ್ತಾಗಿದೆ.
 
ಇಷ್ಟೆಲ್ಲಾ ಅನಾಹುತಗಳ ನಡುವೆ, ಈಗಾಗಲೇ ಮದುವೆಯಾದವರು ತಮ್ಮ ತಮ್ಮ ಹೆಂಡತಿಯರಿಗೆ ಕಿರುಕುಳ ನೀಡುತ್ತಾ, ಅವರಿಗೆ ತುಳಿತಕ್ಕೊಳಗಾದವರು, ದಲಿತರು ಎಂದೆಲ್ಲಾ ಸರ್ಟಿಫಿಕೇಟ್ ಕೊಡಿಸಿ, ತಾವು ಕೂಡ ಜಾತಿಯ ಕಲೆಯನ್ನು ತೊಳೆದಿದ್ದೇವಾದುದರಿಂದ ತಮಗೂ ಅದಕ್ಕಾದ ಖರ್ಚನ್ನು ಲಂಚದ ರೂಪದಲ್ಲಿ ನೀಡಬೇಕು ಎಂದು ಒತ್ತಾಯಿಸುವ ಯತ್ನಗಳು ಕೂಡ ಆರಂಭವಾಗಿದೆ.
 
ಇತ್ತೀಚೆಗೆ ಬಂದಿರುವ ಸ್ಫೋಟಕ ವರದಿಗಳ ಪ್ರಕಾರ, ಈ ವಿವಾಹ ವಿವಾದಕ್ಕೆ ತಮ್ಮನ್ನು ತಳ್ಳಲು ಯತ್ನಿಸುತ್ತಿರುವ ದಂಧೆಕೋರರ ವಿರುದ್ಧ ಸರ್ವಸಂಗ ಪರಿತ್ಯಾಗಿಗಳು ಪ್ರತಿಭಟನೆಗೆ ಸಿದ್ಧತೆ ನಡೆಸುತ್ತಿದ್ದಾರೆ.
 
ಇದು ನಮ್ಮ ವರ್ಗದವರ ಸಂಖ್ಯಾ ಹೆಚ್ಚಳವನ್ನು ನಿಗ್ರಹಿಸಲು ಸರಕಾರ ಹೂಡಿರುವ ಸಂಚು ಎಂದು ಶ್ರೀ ಶ್ರೀ ಶ್ರೀ (ಮೂರುವರೆ ಸಾವಿರ) ಸಂಸಾರಾನಂದೇಶ್ವರೇಶ್ವರ ಸ್ವಾಮೀಜಿ ಅವರು ಇ-ಮೇಲ್‌ನಲ್ಲಿ ಘೋಷಿಸಿದ್ದು, ಪ್ರತಿಭಟಿಸಲು ಸಜ್ಜಾಗಿರುವುದಾಗಿ ಹೇಳಿದ್ದಾರೆ.
 
-------------------
ಜಾಹೀರಾತು
ಜಾಗ್ರತೆ.... ನಿಮ್ಮ ಭವಿಷ್ಯ ನಮ್ಮ ಕೈಯಲ್ಲಿದೆ...!!!!
ನಿಮ್ಮ ಭವಿಷ್ಯದ ವಾಣಿಯನ್ನು ಬೊಗಳೆ-ರಗಳೆ ಬ್ಯುರೋ ಸಿದ್ಧಪಡಿಸುತ್ತಿದೆ...!!!
ನಿಮ್ಮ ಪ್ರತಿಗಳನ್ನು ದ್ವಿಪ್ರತಿಯಲ್ಲಿ ಕಾದಿರಿಸಿ...!!!
ನಾಳಿನ ಸಂಚಿಕೆಯನ್ನು ಇಂದೇ ಕೊಂಡುಕೊಳ್ಳಿರಿ...

Monday, September 18, 2006

ಟಿಕೆಟ್ ಒಂದು, ವಿಮಾನ ಯಾನ ಇನ್ನೂ ಒಂದು !

(ಬೊಗಳೂರು ಸಂಚಾರಿ ಬ್ಯುರೋದಿಂದ)
ಬೊಗಳೂರು, ಸೆ.18- ಒಂದೇ ಟಿಕೆಟಿಗೆ ಎರಡು ಬಾರಿ ವಿಮಾನದಲ್ಲಿ up and down ಸಂಚಾರ ನಡೆಸಿದ ಯುವತಿ ಇದೀಗ ಸಂಶೋಧನೆಗೊಂದು ವಸ್ತುವಾಗಿದ್ದಾಳೆ. ಆಕಾಶದಲ್ಲಿ ಲೋಹದ ಹಕ್ಕಿಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಲ್ಲೂ ಟ್ರಾಫಿಕ್ ಜಾಮ್ ಆಗುತ್ತಿದ್ದರೂ ಆಕೆ ದೂರಾಲೋಚನೆ ನಡೆಸಿಯೇ ವಿಮಾನದಲ್ಲಿ ನಿದ್ದೆ ಮಾಡುವ ಕ್ರಮಕ್ಕೆ ಮುಂದಾಗಿದ್ದಾಳೆ ಎಂದು ಬೊಗಳೆ ರಗಳೆ ಬ್ಯುರೋ ವರದಿ ಮಾಡಿದೆ.
 
ಈಗಾಗಲೇ ಅಗ್ಗದ ಟಿಕೆಟ್ ಎನ್ನುತ್ತಾ ವಿಮಾನ ಕಂಪನಿಗಳು ವಿವಿಧ ಆಮಿಷ ತೋರಿಸಿ ಸುಲಿಗೆ ಮಾಡುತ್ತಿವೆ. ಮತ್ತು ವಿಮಾನ ಸೇವೆ ಒದಗಿಸಲು ಪೈಪೋಟಿ ನಡೆಸುತ್ತಾ, ವಿಮಾನಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿವೆ. ಹಾಗಾಗಿ ವಾಯು ಮಾರ್ಗದಲ್ಲಿ ಟ್ರಾಫಿಕ್ ಜಾಮ್ ಆದರೆ ಆ ಸಮಯವನ್ನು ಸದುಪಯೋಗಪಡಿಸಿಕೊಳ್ಳುವುದು ಹೇಗೆ ಎಂಬುದನ್ನು ಲೋಕಮುಖಕ್ಕೆ ತೋರಿಸಿಕೊಡುವ ನಿಟ್ಟಿನಲ್ಲೇ ಈ ತರುಣಿ ನಿದ್ರಾ ಪ್ರಯೋಗ ಕೈಗೊಂಡಳು ಎಂಬುದು ಖಚಿತವಾಗಿದೆ.
 
ಈ ಪ್ರಯೋಗದ ಹಿಂದೆ ಇನ್ನೂ ಒಂದು ದುರ್ಉದ್ದೇಶವಿದೆ. ವಿಶ್ವಾದ್ಯಂತ ಅಶಾಂತಿ, ಅಸಮಾಧಾನ, ಹಿಂಸಾಚಾರ, ಉಗ್ರವಾದ ಇತ್ಯಾದಿ ಹೆಚ್ಚುತ್ತಿದೆ. ಭೂಮಿಯಲ್ಲಿ ಗಟ್ಟಿಯಾಗಿ ಗೊರಕೆ ಹೊಡೆಯಲು ಸಾಧ್ಯವಿಲ್ಲದ ಸ್ಥಿತಿ ಇದೆ. ಹಾಗಾಗಿ ಸದಾ ಕಾಲ ಆಕಾಶದಲ್ಲಿ ಸುಖಾ ಸುಮ್ಮನೆ ನಿದ್ರೆ ಮಾಡುತ್ತಲೇ ಕಾಲ ಕಳೆಯೋದು ಹೇಗೆಂಬುದನ್ನೂ ಪ್ರಯೋಗ ಮಾಡಿ ನೋಡೋಣ ಎಂದಾಕೆ ನಿರ್ಧರಿಸಿದ್ದಳು.
 
ಈ ಬಗ್ಗೆ ವಿಮಾನದ ಅಧಿಕಾರಿಗಳನ್ನು ಪ್ರಶ್ನಿಸುವ ಬದಲು, ಉದ್ದೇಶಪೂರ್ವಕವಾಗಿ ಗಗನ ಸಖಿಯರನ್ನು ಪ್ರಶ್ನಿಸಿದಾಗ, ವಿಮಾನ ಎರಡು ಬಾರಿ ಅತ್ತಿಂದಿತ್ತ ಹೋಗಿ ಬಂದರೂ ವಿಮಾನದ ಸದ್ದಿನ ನಡುವೆ ಈಕೆಯ ಗೊರಕೆ ಸದ್ದು ಅಡಗಿ ಹೋಗಿದ್ದುದೇ ತಮಗೆ ಇದರ ಬಗ್ಗೆ ಅರಿವಿಗೆ ಬಾರದಿರುವುದಕ್ಕೆ ಕಾರಣ ಎಂದು ಉತ್ತರಿಸಿದ್ದಾರೆ.
 
ಎಲ್ಲ ಅಯೋಮಯವಾದ ಹಿನ್ನೆಲೆಯಲ್ಲಿ, ಆ ತರುಣಿಯನ್ನೇ ನೇರವಾಗಿ ತರಾಟೆಗೆ ತೆಗೆದುಕೊಳ್ಳಲಾಯಿತು. ಆಕೆ ಕೂಡ ಬ್ಯುರೋ ಸಿಬ್ಬಂದಿಗಳನ್ನು ಪ್ರತಿಯಾಗಿ ತರಾಟೆಗೆ ತೆಗೆದುಕೊಂಡರೂ ಅದನ್ನು ಮುಖ ಮುಚ್ಚಿಕೊಳ್ಳುವ ನಿಟ್ಟಿನಲ್ಲಿ ಇಲ್ಲಿ ಪ್ರಕಟಿಸಲಾಗುವುದಿಲ್ಲ ಎಂದು ತಿಳಿಸಲು ವಿಷಾದಿಸುವುದಿಲ್ಲ.
 
ಆಕೆ ಹೇಳಿದ್ದೇನು ಗೊತ್ತೆ? ಬಸ್ಸು, ರೈಲು, ವಿಮಾನಗಳಲ್ಲಿ No Smoking ಅಂತ ದೊಡ್ಡದಾಗಿ ಬೋರ್ಡ್ ಹಾಕುತ್ತಾರೆ, ಆದರೆ No Sleeping ಅಂತ ಹಾಕೋದಿಕ್ಕೇನು ಧಾಡಿ ಎಂದು ನಮ್ಮನ್ನೇ ಸಂದರ್ಶನ ಮಾಡುವ ಧಾಟಿಯಲ್ಲಿ ಪ್ರಶ್ನಿಸಿ ಬಿಟ್ಟಳು.
 
--------------------
ಜಾಹೀರಾತು

ನಿಮ್ಮ ಭವಿಷ್ಯ ನಮ್ಮ ಕೈಯಲ್ಲಿ!!!!

ಶೀಘ್ರವೇ ಬೊಗಳೆ ರಗಳೆ ಬ್ಯುರೋದಿಂದ ನಿಮ್ಮ ಭವಿಷ್ಯ ಪ್ರಕಟವಾಗಲಿದೆ. ನಿಮ್ಮ ಪ್ರತಿಗಳನ್ನು ಇಂದೇ ಕಾದಿರಿಸಿ!!!

ಹೆಚ್ಚು ಕೊಟ್ಟವರ ಭವಿಷ್ಯ ಹೆಚ್ಚು ಹೆಚ್ಚು ಉಜ್ವಲವಾಗಿರುತ್ತದೆ!!!

Saturday, September 16, 2006

ಕರೀಂ ತಲೆತೆಗಿ ಬಾಯ್ಬಿಟ್ಟಾಗ ಮಂಪರಿನಲ್ಲಿರಲಿಲ್ಲ !

(ಬೊಗಳೂರು ಮಂಪರು ಶೋಧ ಬ್ಯುರೋದಿಂದ)
ಬೊಗಳೂರು, ಸೆ.16- ಕಳೆದ ವಾರ ಛಾಪಿತ ಲೋಕದಿಂದ ಅಬ್ದುಲ್ ಕರೀಂ ತಲೆತೆಗಿ ಬಾಯಿ ಬಿಟ್ಟಾಗ ಅರಾಜಕೀಯ ಲೋಕವು ಗಡಗಡನೇ ನಡುಗಿದ್ದು ಹಳೆಯ ಸುದ್ದಿಯಾದರೂ ಅದು ನಮಗೆ ರದ್ದಿಯಾಗದೇ ಇರುವುದರಿಂದ ಕಸದ ಬುಟ್ಟಿಯನ್ನು ಮತ್ತೆ ಕೆದಕಲು ನಮ್ಮ ಬ್ಯುರೋ ನಿರ್ಧರಿಸಿದೆ.
 
ತತ್ಪರಿಣಾಮವಾಗಿ ಈ ಕಸದ ಬುಟ್ಟಿಯಿಂದ ದೊರೆತ ಮಾಹಿತಿಯ ಅನ್ವಯ, ತಲೆತೆಗಿಯು ಭರ್ಜರಿಯಾಗಿ ಅಸತ್ಯ ಹೇಳುವಂತೆ ಮಾಡಲು ಆತನ ಮಂಪರು ಪರೀಕ್ಷೆ ನಡೆಸಿದ್ದೇ ಅಸತ್ಯ ಎಂಬ ದಿವ್ಯ ಮಾಹಿತಿ ದೊರಕಿದೆ.
 
ಹಲವಾರು ವರ್ಷಗಳಿಂದ ಛಾಪಕೂಪದಲ್ಲಿ ಸಿಕ್ಕಿ ಒದ್ದಾಡುತ್ತಿರುವ ಅಬ್ದುಲ್ ಕರೀಂ ತಲೆತೆಗಿಯು ಯಾವಾಗ ಯಾರ ತಲೆ ತೆಗೆಯುತ್ತಾನೋ ಎಂಬ ಪಾಪಪ್ರಜ್ಞೆಯು ರಾಜಕಾರಣಿಗಳಿಗೆ ಮತ್ತು ಪೊಲೀಸರಿಗೆ ಇದ್ದ ಕಾರಣದಿಂದಾಗಿ ತಲೆತೆಗಿಯ ಪ್ರಜ್ಞೆ ತಪ್ಪಿಸುವ ನಿಟ್ಟಿನಲ್ಲಿ ಆತನಿಗೆ ಮಂಪರು ಬರಿಸುವ ದ್ರಾವಣ ಕುಡಿಸಲಾಗಿತ್ತು.
 
ಆದರೆ, ಈಗ ಎಲ್ಲರ ಜುಟ್ಟು ತನ್ನ ಕೈಯಲ್ಲಿರುವುದರಿಂದ ಅವರಿಂದ ಜೀವಬೆದರಿಕೆ ಇರಬಹುದೆಂದು ಆಲೋಚಿಸುತ್ತಿದ್ದ ತಲೆತೆಗಿಯು, ನಿದ್ರಾಹೀನತೆ ರೋಗದಿಂದ ಬಳಲುತ್ತಿದ್ದ. ಈ ಕಾರಣಕ್ಕೆ ಆತನ ಮೇಲೆ ಈ ಮಂಪರು ಔಷಧಿಯು ಯಾವುದೇ ಕೆಲಸ ಮಾಡಿರಲಿಲ್ಲ. ಅಂದರೆ ಆತ ಬಾಯಿ ಬಿಡುವಾಗ ಮಂಪರಿನಲ್ಲಿರಲಿಲ್ಲ. ಟಿವಿ ಚಾನೆಲ್‌ಗಳಲ್ಲಿ ಆತನ ಮಂಪರು ಪರೀಕ್ಷೆಯ ನೇರವಲ್ಲದ ಪ್ರಸಾರ ಮಾಡಿದ ಸಂದರ್ಭದಲ್ಲಿ ಆತ ತೊದಲುತ್ತಿದ್ದುದು ವಿದೇಶೀ ಮದ್ಯದ ಪ್ರಭಾವ ಎಂಬುದು ದೃಢಪಟ್ಟಿದೆ.
 
ಈ ವಿದೇಶೀ ಮದ್ಯ ಪೂರೈಸಿದ್ದು ಮಹಾರಾಷ್ಟ್ರ ರಾಜಕಾರಣಿ ಪರದ್ ಶವಾರ್, ಭುಜನ್ ಛಗಬಲ್ ಮತ್ತು ಕರ್ನಾಟಕದ ಭೇಷನ್ ರೋಗ್ ಎಂಬ ಸುಳಿವು ಸಿಕ್ಕಿದ್ದು, ಇದರ ಹಿಂದಿನ ಕಾರಣಗಳನ್ನು ವಿಶ್ಲೇಷಿಸಲಾಗುತ್ತಿದೆ.
 
ಈ ವಿಶ್ಲೇಷಣೆ ಪ್ರಕಾರ, ಈಗಾಗಲೇರಾಜಕೀಯ ಕ್ಷೇತ್ರದಲ್ಲಿ ತಮ್ಮ ಹೆಸರಿನ ಮಿಂಚುವಿಕೆ ಕಡಿಮೆಯಾಗುತ್ತಿದೆ. ಹಾಗಾಗಿ ಹೆಸರು ಮಾಡಬೇಕಿದ್ದರೆ, ವೀರಪ್ಪನ್‌ಗಳು, ತೆಲಗಿಗಳು ಮತ್ತಿತರ ಕುಖ್ಯಾತರ ಬಾಯಲ್ಲಿ ತಮ್ಮ ಹೆಸರು ಬರಬೇಕು. ಈ ದುರಾಲೋಚನೆ ಪರಿಣಾಮವೇ ತಲೆತೆಗಿಯ ಬಾಯಲ್ಲಿ ಈ ಅರಾಜಕರ ಹೆಸರು ಸ್ಫೋಟವಾಗಿದ್ದು. ಇದಕ್ಕಾಗಿ ತಲೆತೆಗಿ ಬಾಯಿಬಿಟ್ಟ ತಕ್ಷಣ ಆ ಬಾಯಿಗೆ ವಿದೇಶೀ ಮದ್ಯ ಸುರಿಯಲಾಗಿತ್ತು ಎಂಬ ಅಂಶ ಬಯಲಾಗಿದೆ.
 
ಈ ಪ್ರಕರಣದ ಮುಂದುವರಿದ ಭಾಗವಾಗಿ, ತಲೆತೆಗಿಯಿಂದ ಪರದ್ ಶವಾರ್, ಛಗಬಲ್ ಮುಂತಾದವರಿಗೆ ನೀಡಿದ ಗುಣನಡತೆಯ ಸರ್ಟಿಫಿಕೆಟ್. ಅವರು ಅದನ್ನು ತಮ್ಮ ತಮ್ಮ ಮನೆ ಗೋಡೆಗಳಲ್ಲಿ ಫ್ರೇಮ್ ಹಾಕಿ ಒಪ್ಪವಾಗಿ ಇರಿಸಿಕೊಂಡಿದ್ದಾರೆ.
 
ಈ ಅರಾಜಕರು ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ ಮೈನಸ್ ಇಂಟು ಮೈನಸ್ ಈಸ್ ಈಕ್ವಲ್‌ಟು ಪ್ಲಸ್ ಅನ್ನೋ ನಿಯಮವನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಅಂದರೆ ಆರೋಪಿಯೊಬ್ಬ ಮತ್ತೊಬ್ಬ ಆರೋಪಿ ಮೇಲೆ ಆರೋಪ ಮಾಡಿದರೆ ಅದು ಅನ್-ಆರೋಪ. ಸತ್ಯ ಮತ್ತು ಸತ್ಯ ಸೇರಿದರೆ ಸುಳ್ಳು ಎಂಬುದೂ ಅವರ ವಾದಕ್ಕೆ ಪುಷ್ಟಿಕೊಡುವ ಒಂದು ಸಮೀಕರಣ ಸೂತ್ರವಾಗಿದೆ ಎಂದು ತಿಳಿದುಬಂದಿದೆ.

Friday, September 15, 2006

ಚಳ್ಳೆಹಣ್ಣು ಚತುರನ ಬೆನ್ನು ಬಿದ್ದ ಪೊಲೀಸರು

(ಬೊಗಳೂರು ಚಳ್ಳೆಹಣ್ಣು ಬ್ಯುರೋದಿಂದ)
ಬೊಗಳೂರು, ಸೆ.15- ಮಂತ್ರಕ್ಕೆ ಮಾವಿನ ಕಾಯಿ ಉದುರುತ್ತದೆಯೇ ಎಂದು ಅನಾದಿಕಾಲದಿಂದಲೂ ನಾಸ್ತಿಕರು ಕೇಳುತ್ತಾ ಬಂದಿದ್ದಾರೆ. ಈ ನಾಸ್ತಿಕರನ್ನೆಲ್ಲಾ ಆಸ್ತಿಕರನ್ನಾಗಿಸ ಹೊರಟ ಎಸ್ಕೇಪ್ ನಾಗ ಎಂಬಾತ, ಮಂತ್ರ ಹೇಳುತ್ತಲೇ ಮಂಗಮಾಯವಾಗುತ್ತಾ ಪೊಲೀಸರಿಗೆ ಅತ್ಯಂತ ಪ್ರಿಯವಾಗಿರುವ ಚಳ್ಳೆಹಣ್ಣುಗಳನ್ನು ವಿತರಿಸುತ್ತಿರುವ ಪ್ರಕರಣ ಭಾರಿ ಕುತೂಹಲ ಮೂಡಿಸಿದೆ.

ಮಂತ್ರ ಹೇಳಿದರೆ ಗುಡಿಯಲ್ಲಿದ್ದ ದೇವರ ಮೈಮೇಲಿನ ಆಭರಣಗಳು ಆತನ ಜೋಳಿಗೆಯಲ್ಲಿ ಬಂದು ಬೀಳುತ್ತಿದ್ದವು ಎಂಬುದು ಬೊಗಳೆ ರಗಳೆ ಬ್ಯುರೋದ ಗಮನಕ್ಕೆ ಬಂದಿದೆ.

ಈಗಾಗಲೇ ಕಂಡಕಂಡವರಿಗೆ ರುಚಿ ರುಚಿಯಾಗಿರುವ ಚಳ್ಳೆಹಣ್ಣುಗಳನ್ನು 37 ಬಾರಿ ಉದಾರವಾಗಿ ದಾನ ಮಾಡಿರುವ ಆತ, ಪ್ರೀತಿಯ ಪೊಲೀಸರಿಗೆ ಚಳ್ಳೆ ಹಣ್ಣುಗಳನ್ನು ಉಡುಗೊರೆಯಾಗಿ ತಿನ್ನಿಸುವುದರಲ್ಲಿ ಶತಕ ಸಾಧಿಸಲು ಹೊರಟಿದ್ದಾನೆ ಎಂದು ತಿಳಿದುಬಂದಿದೆ.

ಮಂತ್ರ ಹೇಳಿ ಮಂಗಮಾಯ ಎಂಬ ಸುದ್ದಿ ಕೇಳಿ ಬೆಂಗಳೂರಿನ ಹುಲಸೂರು ಗೇಟಿಗೆ ಧಾವಿಸಿದಾಗ ಅಲ್ಲಿ ಗೇಟಿಗೆ ಬೀಗ ಹಾಕಿತ್ತು. ತಕ್ಷಣವೇ ನಾಗನನ್ನು ಮೊಬೈಲ್‌ನಲ್ಲಿ ಸಂಪರ್ಕಿಸಲಾಗಿ, ಮಂತ್ರವೊಂದನ್ನು ಉದುರಿಸುವಂತೆ ಕೋರಿಕೊಳ್ಳಲಾಯಿತು. ಆತ ಹೇಳಿದ ಮಂತ್ರ ಒದರಿದ ತಕ್ಷಣ ಗೇಟ್ ತೆರೆದುಕೊಂಡಿತು.

ನಿಜಕ್ಕೂ ಮಂಗ ಮಾಯ ಅಂದರೆ ಮಂಗನೇ ಮಾಯವಾಗುತ್ತಿದ್ದ ಎಂಬ ಅನ್ಅರ್ಥವೂ ಬರುವುದರಿಂದ ಈತನೂ ಮಂಗನೇ ಎಂಬುದು ಬಹುತೇಕ ಖಚಿತವಾದಾಗ ಆತನೆದುರು ಬಾಲ ಬಿಚ್ಚೋದು ಕಷ್ಟದ ಕೆಲಸ ಎಂದು ಅರಿವಾಯಿತು.

ಆದರೂ ಪ್ರಶ್ನೆ ಎಸೆದರೆ ಎಲ್ಲಿ ಮಂಗಮಾಯವಾಗುತ್ತಾನೋ ಎಂಬ ಭೀತಿಯಿಂದಲೇ, ದೇವರ ಆಭರಣಗಳೇ ನಿನಗೇಕೆ ಬೇಕು ಅಂತ ಕೇಳಿದಾಗ ಆತನ ಬಾಯಿಯಿಂದ ನಿರರ್ಗಳವಾಗಿ ಮಂತ್ರ ಉದುರಿತು.

ಮನುಷ್ಯರ ಮೈಮೇಲೆ ಆಭರಣಕ್ಕಾಗಿ ಕೈ ಹಾಕಿದರೆ, ಅವರೇ ನನ್ನ ಕೈ ಕಿತ್ತು ಕೈಯೇ ಇಲ್ಲದಂತಾಗದೇ? ಹಾಗೇನಾದರೂ ಆದರೆ ನಾನು ಪೊಲೀಸರಿಗೆ ಕೈ ಕೊಡುವುದಾದರೂ ಹೇಗೆ ಎಂದು ಪ್ರಶ್ನಿಸಿದ ಆತ, ದೇವರಿಗೆ ಆಭರಣ ಹಾಕಿದರೆ ಅವರೇನೂ ಅದನ್ನು ತೊಟ್ಟುಕೊಂಡು ಬಂದ-ಹೋದಲ್ಲೆಲ್ಲಾ ಪ್ರದರ್ಶಿಸುವುದಿಲ್ಲ. ಹಾಗಾಗಿ ಅದು ಸ್ಥಿರ ಆಗಿರಬಾರದು, ಚರ ಆಗಿರಲಿ ಎಂಬುದೇ ನನ್ನ ಉದ್ದೇಶ ಎಂದು ಸ್ಪಷ್ಟಪಡಿಸಿದ್ದಾನೆ.

ಈ ಮಧ್ಯೆ, ಪೊಲೀಸರು ಆತನ ಬೆನ್ನು ಬಿದ್ದಿದ್ದಾರೆ ಎಂಬ ಮಾಹಿತಿ ಬೊಗಳೆ ರಗಳೆ ಬ್ಯುರೋಗೆ ತಲುಪಿದೆ. ಆದರೆ ಆತನನ್ನು ಹಿಡಿಯಲು ಅಲ್ಲ, ಆತ ನೀಡುವ ಚಳ್ಳೆ ಹಣ್ಣುಗಳು ಅತ್ಯಂತ ರುಚಿಕರವಾಗಿರುವುದೇ ಇದರ ಹಿಂದಿರುವ ನಿಗೂಢ ಕಾರಣ ಎಂಬುದು ಗೊತ್ತಾಗಿದೆ.

Thursday, September 14, 2006

ಭಿಕ್ಷುಕ, ಭಕ್ಷಕರಿಂದಾಗಿ ದೇಶ ಸುಭಿಕ್ಷ

(ಬೊಗಳೂರು ಭವತಿ ಭಿಕ್ಷಾಂ ದೇಹಿ ಬ್ಯುರೋದಿಂದ)
ಬೊಗಳೂರು, ಸೆ.14- ಫೈನ್ ಆಗಿ ಭಿಕ್ಷೆ ಬೇಡುವ ವೃತ್ತಿಯಲ್ಲಿ ಮುಂದುವರಿಯದ ಮಹಿಳೆಗೆ ಫೈನ್ ವಿಧಿಸಲಾಗಿದೆ ಎಂಬ ಸುದ್ದಿ ಪ್ರಕಟವಾದ ಹಿನ್ನೆಲೆಯಲ್ಲಿ ಇದರ ಹಿಂದಿನ ಅಸತ್ಯ ಅನ್ವೇಷಣೆಗಾಗಿ ಹೊರಟಾಗ ಈ (ಪರಾ)ಕ್ರಮದ ಸರಕಾರದ ಕೈವಾಡವಿರುವುದು ಖಚಿತವಾಗಿದೆ.
 
ಈ ಮಹಿಳೆ ಕಳೆದ ವರ್ಷದವರೆಗೂ ವಂಶಪಾರಂಪರ್ಯವಾಗಿ ವೃತ್ತಿ ಮುಂದುವರಿಸುತ್ತಾ ಭಿಕ್ಷೆ ಬೇಡುತ್ತಿದ್ದು, ಆದಾಯ ತೆರಿಗೆ ಕಟ್ಟದಿರುವ ಕಾರಣಕ್ಕಾಗಿಯೇ ಈ ರೀತಿ ದಂಡ ಹೇರಲಾಗಿದೆ ಎಂದು ತಿಳಿದುಬಂದಿದೆ.
 
ಅನಾದಿ ಕಾಲದಿಂದಲೂ ಭಿಕ್ಷುಕರ ಬೆನ್ನೆಲುಬು ಬಾಗಿದ್ದರೂ ಅವರೇ ನಮ್ಮ ದೇಶದ ಬೆನ್ನೆಲುಬಾಗಿದ್ದರು. ಇಷ್ಟು ಮಾತ್ರವಲ್ಲ ದೇಶದ ವಾಣಿಜ್ಯ ರಾಜಧಾನಿ ಎನಿಸಿಕೊಂಡ, ಶ್ರೀನಿವಾಸರ ಗೂಡು ಇರುವ ಮುಂಬಯಿಯಲ್ಲೂ ಶಬ್ದ ಮಾಲಿನ್ಯ ಹೆಚ್ಚಳಕ್ಕೆ ಭಿಕ್ಷುಕರ ಸಂಪಾದನೆಯ ಠಣ್ ಠಣ್ ಶಬ್ದಗಳೇ ಕಾರಣ ಎಂದು ಬೊಗಳೆ ರಗಳೆ ಪತ್ರಿಕೆ ತಡವಾಗಿ ಎಚ್ಚೆತ್ತುಕೊಂಡು Ex-In-Clusive ವರದಿಯಾಗಿ ಪ್ರಕಟಿಸಿರುವುದನ್ನು ಇಲ್ಲಿ ಜ್ಞಾಪಿಸಿಕೊಳ್ಳಬಹುದು.
 
ಅಭಿವೃದ್ಧಿ ಪರೀಕ್ಷಾ ಟೂಲ್ !
 
ದೇಶದಲ್ಲಿ ಮಾಹಿತಿ ತಂತ್ರಜ್ಞಾನ ಹೆಚ್ಚಿದಂತೆ ಭಿಕ್ಷಾಟನಾ ತಂತ್ರಜ್ಞಾನವೂ ಹೆಚ್ಚಿದ್ದು, ಇದರಿಂದ ದೇಶ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ ಎಂಬುದನ್ನು ಕಣ್ಣಾರೆ ಕಾಣಬೇಕೇ? ಹೀಗೊಂದು ಕೆಲಸ ಮಾಡಿ ಪರೀಕ್ಷಿಸಿಕೊಳ್ಳಬಹುದಾಗಿದೆ ಎಂಬುದನ್ನು ನಮ್ಮ ಬ್ಯುರೋ ತತ್ತರಿಸುತ್ತಾ ಬಿತ್ತರಿಸುತ್ತಿದೆ.
 
ದಾರಿಯಲ್ಲಿ ಹೋಗುತ್ತಿದ್ದಾಗ ಅಮ್ಮಾ... ಅಯ್ಯಾ... ಅನ್ನುವ ಭಿಕ್ಷುಕರ ತಟ್ಟೆಗೆ ಠಣ್ ಅಂತ ಒಂದು ರೂಪಾಯಿ ನಾಣ್ಯ ಎಸೆದುಬಿಡಿ ನೋಡೋಣ! ಆಗಲೇ ಅವರ ಬಾಯಿಂದ ಸಹಸ್ರನಾಮಾರ್ಚನೆ ಬರುತ್ತದೆ... ನಾಣ್ಯಗಳನ್ನೆಲ್ಲಾ ನಮ್ಮ ಡಿಕ್ಷನರಿಯಿಂದಲೇ ತೊಡೆದು ಹಾಕಿದ್ದೇವೆ, ನೋಟು ಇಲ್ಲವೇ ಎಂದು ಅವರೇ ಬಾಯಿಬಿಟ್ಟು ಪ್ರಶ್ನಿಸಿದರೆ, ದೇಶ ಮತ್ತು ಆ ಪ್ರದೇಶ ಅಭಿವೃದ್ಧಿ ಹೊಂದಿದೆ ಎಂದರ್ಥ. ಸಿಕ್ಕಿದ್ದು ದಕ್ಕಿತು ಅಂತ ಸುಮ್ಮನಾದರೆ ಆ ಪ್ರದೇಶವಿನ್ನೂ ಹಿಂದುಳಿದಿದೆ ಎಂದರ್ಥ.
 
ಆಧುನಿಕ ಭಿಕ್ಷುಕರು ಮತ್ತು ಭಕ್ಷಕರು
 
ದಾರಿಹೋಕರನ್ನು ಕಾಡಿಬೇಡುವುದು ಈಗಿನ ಫ್ಯಾಶನ್ ಅಲ್ಲ. ಈಗೇನಿದ್ದರೂ ಕೈಯಲ್ಲೊಂದು ಮೊಬೈಲ್ ಫೋನ್ ಹಿಡಿದುಕೊಂಡು, ನನಗೆ ನೀಡಲಾಗುವ ಭಿಕ್ಷೆಯನ್ನು ನನ್ನ ಬ್ಯಾಂಕ್‌ನ ಕ್ರೆಡಿಟ್ ಕಾರ್ಡ್ ಅಕೌಂಟಿಗೆ ಜಮಾ ಮಾಡಿ ಎಂದು ಅವರೇ ಸವಿನಯವಾಗಿ ಪ್ರಾರ್ಥಿಸುತ್ತಾರೆ. ಅವರು ಕ್ರೆಡಿಟ್ (ಸಾಲ) ಮಾಡಿಯೇ ಈ ಕ್ರೆಡಿಟ್ ಪಡೆದುಕೊಂಡಿದ್ದಾರೆ.
 
ಇದರೊಂದಿಗೆ, ಬರೇ ಭಿಕ್ಷುಕರು ಎಂದು ನಮ್ಮ ಬಗ್ಗೆ ಅಗೌರವ ತೋರಿಸುವುದೇಕೆ ಎಂದು ಪ್ರಶ್ನಿಸುವ ಭಿಕ್ಷುಕ ಸಮುದಾಯವು, ವಿಶ್ವ ಬ್ಯಾಂಕಿನಿಂದ ಭಿಕ್ಷೆ ಬೇಡಿ ತಂದ ಹಣವನ್ನು ನಮಗೆ ಪ್ರಾತಃಸ್ಮರಣೀಯರೂ, ಮಾದರಿ ಪುರುಷರೂ ಆಗಿರುವ ನಮ್ಮನ್ನಾಳುವವರು ಭಕ್ಷಣೆ ಮಾಡುವುದಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
 
ಅವರೆಲ್ಲಾ ಯಾರಿಗೂ ತಿಳಿಯದಂತೆ ಮತ್ತು ತಿಳಿದರೂ ಏನೂ ಆಗದವರಂತೆ ಭಕ್ಷಣೆ ಮಾಡುತ್ತಾರೆ, ಆದರೆ ನಾವು ಭಕ್ಷಣೆ ಮಾಡುವುದು ಎಲ್ಲರಿಗೂ ಗೊತ್ತಾಗುವಂತಿರುತ್ತದೆಯಾದುದರಿಂದ ನಮಗೆ ತೆರಿಗೆ ರಿಯಾಯಿತಿ ನೀಡಬೇಕು ಎಂದು ಅವರ ಒಕ್ಕೊರಲ ಆಗ್ರಹ.

Wednesday, September 13, 2006

ಮಣ್ಣಿನ ಮೊಮ್ಮಗನ ಸ್ವಚ್ಛತಾ ಕ್ರಾಂತಿ !

(ಬೊಗಳೂರು ಅಶುಚಿ ಬ್ಯುರೋದಿಂದ)
ಬೊಗಳೂರು, ಸೆ.13- ಕರ್ನಾಟಕ ರಾಜ್ಯಾದ್ಯಂತ ಸ್ವಚ್ಛತಾ ಕ್ರಾಂತಿಯಾಗಿದೆ. ಈ ಅಭೂತಪೂರ್ವ ಬೆಳವಣಿಗೆಗೆ ಈಗಿನ ಸರಕಾರವೇ ಕಾರಣ ಎಂಬ ಆರೋಪಗಳು ತೀವ್ರವಾಗಿ ಕೇಳಿಬಂದ ಹಿನ್ನೆಲೆಯಲ್ಲಿ ಅನ್ವೇಷಿಯ ಅನ್ವೇಷಣಾ ಯಾತ್ರೆ ಹೊರಟಿತು.
 
ದಾರಿಯಲ್ಲಿ ಹಲವಾರು ಕೊಳೆಗೇರಿಗಳಲ್ಲಿ ಮರಳಿನ ರಾಶಿ ಹಾಕಲಾಗಿತ್ತು... ನಮ್ಮ ತಂಡದ ಕಣ್ಣಿಗೆ ಒಂದಿಷ್ಟು ಮರಳು ಮರಳಿ ಮರಳಿ ಬೀಳುತ್ತಿದ್ದರೂ ಇದ್ಯಾಕೆ ಎಂದು ಪ್ರಶ್ನಿಸಿದಾಗ ಅಲ್ಲಿದ್ದ ಹೆಂಡಸರು-ಗಂಗಸರು ಎಲ್ಲರೂ ನಮ್ಮನ್ನೇ ಯಾವುದೇ ಪ್ರಾಣಿಯನ್ನು ನೋಡಿದಂತೆ ಕತ್ತು ಕೊಂಕಿಸಿ ಮುನ್ನಡೆದರು.
 
ನಮ್ಮೂರ್ನಾಗೆ ಮಹಾರಾಜ್ರು ಬರ್ತಾವ್ರೆ... ಅವ್ರಿಗೆ ಮಲ್ಗೋಕೆ ಸ್ವಲ್ಪನಾದ್ರೂ ಸ್ವಚ್ಛ ತಾಣ ಬೇಡ್ವೇನ್ರಿ ಎಂದು ಪಾಪದ ಹುಡುಗನೊಬ್ಬ ಹೇಳತೊಡಗಿದ. ಮನೆ ಮನೆ ತೊಳೆಯಲು ಮರಳಿನ ರಾಶಿ ಹಾಕಲಾಗಿದೆ. ಮತ್ತೆ ಕೆಲವರು ಮೈಯ ಕೊಳೆ ಕಳೆಯಲು ಸ್ನಾನಕ್ಕೂ ಅದನ್ನೇ ಬಳಸುತ್ತಾರೆ ಎಂದು ಆತನೇ ವಿವರಿಸಿದ.
 
ಹಾಗಿದ್ದರೆ ಮನಸ್ಸಿನ ಕೊಳೆಯನ್ನೂ ಇಲ್ಲೇ ಕಳೆಯಲಾಗುತ್ತದೆಯೇ ಎಂದು ಯೋಚಿಸುತ್ತಾ ಮುನ್ನಡೆದಾಗ, ಮೋರಿಗೆ ಹಾಕಲಾಗುವ ದೊಡ್ಡ ದೊಡ್ಡ ಕಾಂಕ್ರೀಟ್ ಪೈಪುಗಳೊಳಗೆ ವಾಸಿಸುತ್ತಿದ್ದವರು ಕೂಡ ತಮ್ಮ ತಮ್ಮ 'ವಾಸ ಸ್ಥಾನ'ವನ್ನು ತಿಕ್ಕುತ್ತಿದ್ದರು.
 
ಎಲ್ಲಾದ್ರೂ ನಮ್ಮ ಮಣ್ಣಿನ ಮೊಮ್ಮಗ ಇಲ್ಲೇ ಬಂದು ಠಿಕಾಣಿ ಹೂಡಿದ್ರೂ ಹೂಡಬಹುದು ಎಂಬ ದೂರದ ಆಶಾಭಾವನೆ ಅವರದಾಗಿತ್ತು. ಇದೇ ಆಶಾವಾದವೇ ರಾಜ್ಯವಿಡೀ ನಳನಳಿಸುವಂತೆ ಮಾಡತೊಡಗಿದೆ ಎಂಬುದು ಬ್ಯುರೋ ಕಂಡುಕೊಂಡ ಪರಮಾಸತ್ಯ.
 
ಹೀಗಿರಲಾಗಿ, ಕೊನೆಗೆ ಮುಖ್ಯಮಂತ್ರಿಯವರನ್ನೇ ಒಂದು ಮೂಲೆಗೆ ಕರೆದುಕೊಂಡು ಹೋಗಿ ಅವರ ಕಿವಿಯಲ್ಲಿ ಅವರಿಗೆ ಮಾತ್ರ ಕೇಳಿಸುವಂತೆ ಪ್ರಶ್ನೆ ಕೇಳಲಾಯಿತು-"ಸಾರ್, ನೀವ್ಯಾಕೆ ಊರು ಬಿಟ್ಟು ಇಂಥ ಹಳ್ಳಿಗಳಲ್ಲಿ ವಾಸ್ತವ್ಯ ಹೂಡೋದು?"
ಅದಕ್ಕೆ ಮಣ್ಣಿನ ಮೊಮ್ಮಗರು, ಯಾರಲ್ಲೂ ಹೇಳಬೇಡಿ ಎನ್ನುತ್ತಾ ಅನ್ವೇಷಿ ಕಿವಿಯಲ್ಲಿ ಉತ್ತರಿಸಿದ್ದು ಹೀಗೆ:
 
"ಊರಲ್ಲಿದ್ದರೆ ಗಣಿ ಗಲಾಟೆ, ಲಂಚ ಆರೋಪ, ಸಿ.ಡಿ. ಎಲ್ಲಾ ತೋರಿಸ್ತಾರೆ... ಪತ್ರಿಕೆಗಳಲ್ಲಿ ದಿನ ಬೆಳಗಾಗೆದ್ದರೆ ಇದೇ ಗಲಾಟೆ. ಇಲ್ಲಾದ್ರೆ, ಪೇಪರ್ ಬರೋದಿಲ್ಲ, ಟೆಲಿಫೋನ್ ಸಂಪರ್ಕ ಇಲ್ಲ, ವಿದ್ಯುತ್ ಸೌಲಭ್ಯ ಇಲ್ಲ, ಟೀವಿ ಇಲ್ಲ... ಸಿ.ಡಿ. ಅಂದ್ರೇನು ಅಂತ ಹಳ್ಳಿಗರಿಗೆ ಗೊತ್ತೇ ಇಲ್ಲ... ಹಾಗಾಗಿ ಯಾವುದೇ ಚಿಂತೆ ಇಲ್ದೆ ಗಡದ್ದಾಗಿ ನಿದ್ದೆ ಹೊಡೀಬಹುದು!".

Tuesday, September 12, 2006

ಪಟಾಕಿ ಸಿಡಿಸಿದ ಪಾತಕಿಗಳಿಗೆ ಟಿಕೆಟ್: ಸಮರ್ಥನೆ

(ಬೊಗಳೂರು ಅರಾಜಕ ಬ್ಯುರೋದಿಂದ)
ಬೊಗಳೂರು, ಸೆ.12- ಮುಂಬಯಿಯಲ್ಲಿ ಸಣ್ಣಪುಟ್ಟ ಪಟಾಕಿ ಸ್ಫೋಟಿಸಿದ್ದಕ್ಕಾಗಿ ಪಾತಕಿ ಪಟ್ಟ ಕಟ್ಟಿಸಿಕೊಂಡ ದೆವ್ವೂದ್ ಇಬ್ರಾಹಿಂ ಮತ್ತು ಟಬು ಸಲೇಂ ಅವರಿಗೆ ಟಿಕೆಟ್ ಕೊಡಲು ನಿರ್ಧರಿಸಿರುವ ನಿರ್ಧಾರಕ್ಕೆ ಎಲ್ಲೆಡೆ ಬೆಂಬಲ ವ್ಯಕ್ತವಾಗಿದೆ.

ಆದರೆ ಈ ಪಟಾಕಿ ಪಾತಕಿಗಳಿಗೆ ಟಿಕೆಟ್ ಕೊಡುವುದು ಎಲ್ಲಿಗೆ ಎಂಬುದೇ ದೊಡ್ಡ ಸಮಸ್ಯೆಯ ಸಂಗತಿಯಾಗಿದೆ. ಮೇಲಕ್ಕೆ ಟಿಕೆಟ್ ಇಷ್ಟು ಬೇಗ ಕೊಟ್ಟರೆ ಅವರು ಇಷ್ಟರವರೆಗೆ ಮಾಡಿದ ಘನ ಕಾರ್ಯಗಳು ಅವರೊಂದಿಗೇ ಮೇಲಕ್ಕೆ ಹೋಗುತ್ತವೆಯಾದುದರಿಂದ ಅದು ಆಗದ ಮಾತು ಎಂದು ನಿರ್ಧರಿಸಿದ ಅಪ್ಪನ ದಳವು, ಉತ್ತರ ಪ್ರದೇಶದಲ್ಲಿ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಕೊಡೋಣ ಎಂದು ತೀರ್ಮಾನಿಸಿತ್ತು.

ಈ ಬಗ್ಗೆ ಅಪ್ಪನ ದಳವನ್ನು ಮಾತನಾಡಿಸಿ ಒಂದೇ ಒಂದು ಪ್ರಶ್ನೆ ಕೇಳಲಾಯಿತು. ಪಟಾಕಿ ಸಿಡಿಸುವವರಿಗೇಕೆ ನೀವು ಯಾವುದೇ ಕ್ಯೂನಲ್ಲಿ ನಿಲ್ಲದೆ, ಹೈಕಮಾಂಡಿಗೆ ಯಾವುದೇ ಸೂಟ್ ಕೇಸ್ ರವಾನಿಸದೆಯೇ ನೇರವಾಗಿ ಟಿಕೆಟ್ ಕೊಡುತ್ತೀರಿ ಎಂಬುದು ಆ ಪ್ರಶ್ನೆ.

ಆದರೆ ಅದಕ್ಕೆ ಬಂದ ಉತ್ತರ ಮಾತ್ರ ಕನ್ನಡ ಧಾರಾವಾಹಿಗಳಂತೆ ಉದ್ದುದ್ದ ಪ್ರವಹಿಸುತ್ತಲೇ ಇತ್ತು. ಹಾಗೆ ಹರಿದಾಡುತ್ತಿದ್ದ ಅವುಗಳಲ್ಲಿ ಬೇಕಾದ್ದನ್ನು ಆರಿಸಿ ತೆಗೆದಾಗ ಸಿಕ್ಕ ಉತ್ತರದ ಸಾರಾಂಶ ಇಲ್ಲಿ ನೀಡಲಾಗುತ್ತಿದೆ.

"ಅಲ್ಲಾ ಸ್ವಾಮಿ... ನೋಡಿ... ನಮ್ಮದು ಅರ್ಹರಿಗೆ ಮಾತ್ರವೇ ಟಿಕೆಟ್ ಕೊಡುವ ಪಕ್ಷ. ಅವರಿಬ್ಬರೂ ಯಾವುದೇ ಪಕ್ಷದಲ್ಲಿ ಇಲ್ಲದೆಯೇ ಇಷ್ಟೊಂದು ಪ್ರಮಾಣದಲ್ಲಿ ರಾಜಕೀಯ ಆಟ ಆಡುತ್ತಾರೆ ಮತ್ತು ಆಡಿಸುತ್ತಿದ್ದಾರೆ. ಭಾರತ ಮತ್ತು ಪಾಕಿಸ್ತಾನಗಳನ್ನು ಗಡಗಡನೇ ಅಲ್ಲಾಡಿಸುತ್ತಾ ಇದ್ದಾರೆ."

"ರಾಜಕೀಯದ ಅಪರಾಧೀಕರಣ ಪ್ರಕ್ರಿಯೆ ತೀರಾ ನಿಧಾನವಾಗಿ ನಡೆಯುತ್ತಿದೆ. ಈ ಮಹಾನ್ ಕಾರ್ಯಕ್ಕೆ ವೇಗ ನೀಡುವ ನಿಟ್ಟಿನಲ್ಲಿ ನಾವು ಈ ನಿರ್ಧಾರ ಕೈಗೊಂಡಿದ್ದೇವೆ."ಇನ್ನೂ ಒಂದು ಪ್ರಮುಖ ಕಾರಣವೆಂದರೆ, ಅವರಿಗೆ ರಾಜಕೀಯದ ಒಳ-ಹೊರಗು ಚೆನ್ನಾಗಿಯೇ ತಿಳಿದಿದೆ. ವಿರೋಧಿಗಳನ್ನು ಮಟ್ಟ ಹಾಕುವುದು ಹೇಗೆ, ಮುಗ್ಧರನ್ನು ಬಲಿಪಶುಗಳನ್ನಾಗಿಸುವುದು ಹೇಗೆ, ಕೋಟಿ ಕೋಟಿ ಗುಳುಂ ಮಾಡುವುದು ಹೇಗೆ, ಬಡ ಭಾರತೀಯರನ್ನು ಸುಲಿಯುವುದು ಹೇಗೆ, ಅವರ ಬೇಸರ ಕಳೆಯುವ ನಿಟ್ಟಿನಲ್ಲಿ ಅವರ ಜೀವನದಲ್ಲಿ ಚೆಲ್ಆಟ ಆಡುವುದು ಹೇಗೆ, ಜನರಲ್ಲಿ ಕೋಮು ಸಂಘರ್ಷ ಸೃಷ್ಟಿಸಿ ಮೋಜಿನಾಟ ನೋಡುವುದು ಹೇಗೆ, ಪೊಲೀಸರಿಗೂ ಮಾಡಲು ಕೆಲಸ ಒಂದು ಬೇಕಲ್ಲ... ಅದಕ್ಕೆ ವ್ಯವಸ್ಥೆ ಮಾಡುವುದು ಹೇಗೆ ಎಂಬಿತ್ಯಾದಿ ರಾಜಕೀಯದ ಕಲೆಗಳು ಅಮೋಘವಾಗಿ ಜನ್ಮಜಾತವಾಗಿ ಸಿದ್ಧಿಸಿವೆಯಾದುದರಿಂದ ಅದಕ್ಕೆಲ್ಲಾ ತರಬೇತಿ ಅಗತ್ಯವಿಲ್ಲ, ಮತ್ತು ನೋಡಿ ತಿಳಿ, ಮಾಡಿ ಕಲಿ ನೀತಿಯೂ ಬೇಕಾಗಿಲ್ಲ ಎಂದು ಅಪ್ಪನ ದಳವು ವಿವರಿಸಿದೆ.

ಅಪ್ಪನ ದಳವು ಹೇಳದಿದ್ದರೂ ನಮ್ಮ ಬ್ಯುರೋ ಕೇಳಿಸಿಕೊಂಡ ಕೊನೆಯ ಒಂದು ಮಾತಿನ ಪ್ರಕಾರ, ಪಟಾಕಿ ಸಿಡಿಸುತ್ತಿದ್ದ ಅವರಿಬ್ಬರೂ "ನಮಗೆ ಟಿಕೆಟ್ ಕೊಡದಿದ್ದರೆ ನಿಮಗೇ ಟಿಕೆಟ್ ಕೊಡುತ್ತೇವೆ" ಎಂದು ಪ್ರೀತಿಯಿಂದ, ಅಕ್ಕರೆಯಿಂದ, ಕಳಕಳಿಯಿಂದ ಎಚ್ಚರಿಕೆ ನೀಡಿದ್ದರು!

Monday, September 11, 2006

ಭಯೋತ್ಪಾದನೆ ವಿರುದ್ಧ ಗೃಹಿಣಿಯರ ಸಮರ

(ಬೊಗಳೂರು ಭಯೋತ್ಪಾದನಾ ಆಗ್ರಹ ಬ್ಯುರೋದಿಂದ)
ಬೊಗಳೂರು, ಸೆ.11- ದೇಶಾದ್ಯಂತ ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಎಲ್ಲಾ ಗೃಹ ಮಂತ್ರಿಗಳೂ ಕೈಜೋಡಿಸತೊಡಗಿದ್ದಾರೆ ಎಂಬ ಸುದ್ದಿ ತಿಳಿಯುತ್ತಲೇ ಯಾರ್ಯಾರದೋ ಮನೆಗೆ ನುಗ್ಗಿದ ಬ್ಯುರೋ ಸಿಬ್ಬಂದಿ ಭಯೋತ್ಪಾದಕರ ಪತ್ತೆಗೆ ತೀವ್ರ ಸಹಕಾರ ನೀಡಿತು.
 
ಈ ದೇಶದಲ್ಲಿ ಅಂಟಿನಂತಹ... ರಬ್ಬರಿನಂತಹ... ಎಳೆದಷ್ಟೂ ಉದ್ದವಾಗುತ್ತಿರುವ ಕನ್ನಡ ಟಿವಿ ಧಾರಾವಾಹಿಗಳೇ ಸರ್ವಸ್ವ, ಅದು ಬಿಟ್ಟು ಬೇರೆ ಪ್ರಪಂಚವೇ ಇಲ್ಲ ಎಂದುಕೊಂಡಿದ್ದ ಮುಕ್ತಾಯಮ್ಮ, ರಂಗೋಲಿಯಮ್ಮ ಮತ್ತು ಕುಂಕುಮಭಾಗ್ಯವತಿಯರನ್ನು ಮಾತನಾಡಿಸಲೆಂದು ಹೋದಾಗ ಅವರೆಲ್ಲರೂ ಸೇರಿಕೊಂಡು ಒಬ್ಬಾತನನ್ನು ಕಟ್ಟಿ ಹಾಕಿದ್ದರು. ಇದರ ಹಿಂದಿನ ರಹಸ್ಯ ಭೇದಿಸಲು ಹೋದಾಗ ಆತ ಕೇಬಲ್ ಟಿವಿಯಾತ ಎಂಬುದು ತಿಳಿಯಿತು.
 
ಅಲ್ಲಮ್ಮಾ, ನೀವೇಕೆ ಆತನನ್ನು ತದುಕಬೇಕು ಎಂದು ಪ್ರಶ್ನಿಸಿದಾಗ.... ಧಾರಾವಾಹಿಯಂತೆಯೇ ಸರಾಗವಾಗಿ ಎಳೆದಷ್ಟೂ ಉದ್ದವಾಗುವ ಧಾಟಿಯಲ್ಲಿ ಮಾತನಾಡಿದ ಮೂವರೂ "ಅಲ್ಲಾ ಸ್ವಾಮಿ, ನೋಡಿ ಈತ ನಾವು ಕೇಬಲ್ ಬಿಲ್ ಕಟ್ಟದಿದ್ದರೆ ಮತ್ತು ಹೆಚ್ಚು ಹಣ ಪಾವತಿಸದಿದ್ದರೆ ನಾಳೆಯಿಂದ ಕನ್ನಡ ಚಾನೆಲ್ ಹಾಕೋದನ್ನು ನಿಲ್ಲಿಸ್ತಾನಂತೆ... ಇದು ನಮ್ಮಲ್ಲಿ ಭೀತಿ, ಆತಂಕ ಉತ್ಪಾದಿಸುವ ಸಂಚಲ್ಲವೇ? ಈತನೂ ಒಬ್ಬ ಭಯೋತ್ಪಾದಕನಲ್ಲವೇ?" ಎಂದು ಪ್ರಶ್ನಿಸಿದರು.
 
ಆದರೆ ಈ ಮಾತಿನ ಧಾರಾವಾಹಿಯ ಮಧ್ಯೆ ಜಾಹೀರಾತಿನ "ಒಂದು ಪುಟ್ಟ ಬ್ರೇಕ್"ಗೆ ಅವಕಾಶವೇ ಇರಲಿಲ್ಲ. ಯಾಕೆಂದರೆ ಅವರ್ಯಾರು ಕೂಡ ಕೇಬಲ್ ಟೀವಿಯಾತನಿಗೆ ಬಾಯಿ ತೆರೆಯಲು ಅವಕಾಶವನ್ನೇ ಕೊಡುತ್ತಿರಲಿಲ್ಲ!
 
ಪಕ್ಕದ ಮನೆಗೆ ಹೋದಾಗ ಕರೆಂಟ್ ಶಾಕ್ ಹೊಡೆದಂತಾಯಿತು. ಎಲ್ಲರೂ ಶಾಕ್ ಹೊಡೆಸಿಕೊಂಡವರಂತೆ ನಡುಗುತ್ತಿದ್ದರು. ಅವರೆಲ್ಲಾ ಪೊರಕೆ ಹಿಡಿದು ಭಯೋತ್ಪಾದಕನ ಆಗಮನಕ್ಕೆ ಕಾಯುತ್ತಿದ್ದರು. ತಿಂಗಳು ಆರಂಭವಾಗುವ ಮೊದಲೇ ಬಿಲ್ ಹೊತ್ತುಕೊಂಡು ಬರುವ ವಿದ್ಯುತ್ ಇಲಾಖೆಯ ಸಿಬ್ಬಂದಿಯೇ ಅವರ ಮನದಲ್ಲಿ ಭೀತಿ ಉತ್ಪಾದಿಸುವಾತ. ಈ ಭಯೋತ್ಪಾದಕನಿಗೆ ತಕ್ಕ ಶಾಸ್ತಿ ಮಾಡಲು ಅವರು ಕಾಯುತ್ತಿದ್ದರು.
 
ಹಾಗೆಯೇ ಮುಂದೆ ಮುಂದೆ ಹೋದಂತೆ ಹದಿಹರೆಯದ ಮಕ್ಕಳಿರುವ ಮನೆಗಳಲ್ಲಿ ಟೆಲಿಫೋನ್ ಬಿಲ್ಲಿಂಗ್ ಇಲಾಖೆಯಾತನ ಭಯೋತ್ಪಾದನಾ ಕೃತ್ಯ, ಪತ್ರಿಕಾಭ್ಯಾಸಿಗಳ ಮನೆಯಲ್ಲಿ ಪತ್ರಿಕಾ ವಿತರಕನ ಭೀತಿವಾದ, ದ್ರವ ಬಾಂಬ್ ಸಿಡಿಸುವ ಶಂಕೆಯಲ್ಲಿ ಹಾಲು ಮಾರುವವನ ಶಂಕಾಸ್ಪದ ಉಗ್ರವಾದ ಕೃತ್ಯಗಳ ವಿರುದ್ಧ ಗೃಹಿಣಿಯರು ಸಿಂಹಿಣಿಯರಾಗಿದ್ದರು. ಇದಲ್ಲದೆ ಮತ್ತೊಬ್ಬ ಪ್ರಮುಖ ವ್ಯಕ್ತಿ ಮನೆಯೊಡೆಯ. ಈತ ಯಾವತ್ತೂ ಬಾಡಿಗೆ ಬಂಟರ ಮೂಲಕವೇ ಬಾಡಿಗೆ ವಸೂಲಿಗೆ ಯತ್ನಿಸುತ್ತಾ ಗೃಹಶಾಂತಿ ಭಂಗ ಮಾಡುವ ಕಾರಣ ಭಯೋತ್ಪಾದಕರ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾನೆ ಎಂಬುದು ತಿಳಿದುಬಂದಿದೆ.
 
ಇಷ್ಟೆಲ್ಲಾ ಕಿತಾಪತಿಗಳ ನಡುವೆ, ಬೊಗಳೆ ರಗಳೆ ಪತ್ರಿಕೆಯು ತನ್ನ ಚಂದಾದಾರರಿಗೆ ಬಿಲ್ ಕಳುಹಿಸದೆಯೇ ಹೇಗೆ ವಸೂಲಿ ಮಾಡುವುದು ಎಂಬ ಬಗ್ಗೆ ಚಿಂತಾಜನಕ ಸ್ಥಿತಿಯಲ್ಲಿ ಯಾಚನಾಮಗ್ನವಾಗಿದೆ ಎಂದು ತಿಳಿದುಬಂದಿದೆ.

Friday, September 08, 2006

ದೇವೇಕೃಪೆ: ಮೀನುಗಾರಿಕೆಗೆ ಹೊರಟ ಪುಡಾರಿಗಳು

(ಬೊಗಳೂರು ಮೀನುಗಾರಿಕಾ ಬ್ಯುರೋದಿಂದ)
ಬೊಗಳೂರು, ಸೆ.8- ಇದೀಗ ಕರ್ನಾಟಕದಲ್ಲಿ ಮಳೆಗಾಲ ಮುಗಿಯುತ್ತಾ ಬರುತ್ತಿರುವಂತೆಯೇ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಬೃಹತ್ ಪ್ರಮಾಣದ ಬೀಸು ಬಲೆಗಳನ್ನು ಹಿಡಿದುಕೊಂಡು ಮೀನು ಹಿಡಿಯಲು ಹೊರಟಿದ್ದಾರೆ ಎಂಬ ಅಂಶ ಬೊಗಳೆ ರಗಳೆ ಬ್ಯುರೋಗೆ ತಿಳಿದುಬಂದ ತಕ್ಷಣ ಕಿವಿಗೆ ಗಾಳಿ ಹೊಕ್ಕಂತಾಯಿತು.
 
ತಕ್ಷಣವೇ ಬ್ಯುರೋ ಕೂಡ ಗಾಳ ಹಿಡಿದುಕೊಂಡು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ ಸಾಗರದತ್ತ ತೆರಳಿದಾಗ ಕಂಡ ದೃಶ್ಯ ಎಲ್ಲರ ಮನ ಕಲಕುವಂತಿತ್ತು. ಹಲವಾರು ಪುಡಾರಿಗಳು ಆ ಸಾಗರದಲ್ಲಿ ಬಲೆ ಹರಡಲು ಹೆಣಗಾಡುತ್ತಿದ್ದರು. ಯಾಕೆಂದರೆ ಈ ಸಾಗರದಲ್ಲಿ ತಿಮಿಂಗಿಲಗಳಿವೆ ಎಂದು ದೇವೇಗೌಡರೇ ಹೇಳಿದ್ದರಿಂದ ಅವರು ದೊಡ್ಡ ದೊಡ್ಡ ಕಬ್ಬಿಣದ ಬಲೆಗಳನ್ನೇ ಹಿಡಿದುಕೊಂಡು ಬಂದಿದ್ದರು.
 
ಮತ್ತೆ ಕೆಲವರು ತಮ್ಮ ಕೈಯಲ್ಲಿದ್ದ ಪುಟ್ಟ ಪುಟ್ಟ ಗಾಳದಿಂದ ಪುಟ್ಟ ಪುಟ್ಟ ತಿಮಿಂಗಿಲಗಳನ್ನು ಹಿಡಿಯಲು ಯತ್ನಿಸುತ್ತಿದ್ದುದು ಕಂಡುಬಂತು.
 
ನಮ್ಮ ಕೊಳದಲ್ಲಿ ಹೆಚ್ಚೆಂದರೆ ಕಪ್ಪೆ, ಆಮೆ ಇರಬಹುದು. ಆದರೆ ಕಾಂಗ್ರೆಸ್ ಸಾಗರದಲ್ಲಿ ತಿಮಿಂಗಿಲಗಳೇ ಇವೆ ಎಂಬ ಅವರ ಹೇಳಿಕೆಯಿಂದ ಪ್ರೇರಣೆಗೊಂಡ ಜನತಾ ವಿದಳನೆಯ ಸದಸ್ಯರು ಕೂಡ ಅಲ್ಲಿ ದೊಡ್ಡ ಹಡಗನ್ನೇ ತಂದು ನಿಲ್ಲಿಸಿದ್ದು ಕಂಡು ಬಂತು.
ಅವರನ್ನು ಈ ಬಗ್ಗೆ ವಿಚಾರಿಸಲಾಗಿ, ಇದು ಇಟಲಿಯಿಂದ ಬಂದ ದೊಡ್ಡ ತಿಮಿಂಗಿಲವನ್ನು ಸೆರೆಹಿಡಿಯುವುದಕ್ಕಾಗಿ ತಯಾರಿ ಎಂಬ ಉತ್ತರ ಬಂತು.
 
ಆದರೆ ದೊಡ್ಡ ತಿಮಿಂಗಿಲದ ಮರಿಯೊಂದು ರಾಜ್ಯವಾಳುತ್ತಿದೆಯಲ್ಲ ಎಂದು ಕೇಳಿದಾಗ ಬಳಬಳನೆ ಇರಿಸುಮುರಿಸುಗೊಳಗಾದಂತೆ ಕಂಡುಬಂದ ವಿದಳ ಸದಸ್ಯರು, ಗೋಣಲ್ಲಾಡಿಸುತ್ತಾ ಮೆಲ್ಲಗೆ ಜಾರಿಕೊಂಡರು.
 
ಅಲ್ಲಿ ಉಳಿದವರ ಬಳಿ ಮತ್ತೊಂದು ಪ್ರಶ್ನೆ ಕೇಳಲಾಯಿತು. ರಾಜ್ಯವಾಳುವ ಕುಮಾರರು ಅಲ್ಲಲ್ಲಿ ಹೋಗಿ ಜನಸಾಮಾನ್ಯರ ಮನೆಯಲ್ಲಿ ಗಡದ್ದಾಗಿ ನಿದ್ದೆ ಹೊಡೆಯುವುದೇಕೆ?
 
ಈ ಪ್ರಶ್ನೆಗೆ ಧಢಾರನೆ ಬಾಗಿಲು ಹಾಕಿದಂತೆ ಉತ್ತರ ಬಂತು: "ಅಲ್ಲಾ ಸ್ವಾಮಿ... ಮಣ್ಣಿನ ಮಗ ಎಲ್ಲಾ ಸಭೆ ಸಮಾರಂಭಗಳಲ್ಲಿ ನಿದ್ದೆ ಮಾಡುತ್ತಿದ್ದುದನ್ನು ಪ್ರಶ್ನಿಸಿದವರು ನೀವೆ... ಈಗ ಮಣ್ಣಿನ ಮೊಮ್ಮಗ ಯಾವುದೇ ಉಸಾಬರಿ ಬೇಡ ಎಂದು ಮನೆಯೊಳಗೆ ನಿದ್ದೆ ಮಾಡಿದ್ರೂ ನೀವು ಪ್ರಶ್ನಿಸ್ತೀರಿ... ಎಂಥಾ ಪತ್ರಿಕೆಯಯ್ಯಾ ನಿಮ್ದು?"
 
ಅಲ್ಲಿಗೆ... ನಿದ್ದೆ ಬಂದಂತಾದ ನಮ್ಮ ಬ್ಯುರೋ ಸಿಬ್ಬಂದಿ ಒಂದೇ ಏಟಿಗೆ ಆzzzzzzzzzಕಳಿಸಿ ಬ್ಯುರೋಗೆ ವಾಪಸಾಯಿತು.

Thursday, September 07, 2006

ನರಕ ದರ್ಶನ: ಅದೃಷ್ಟಶಾಲಿಗಳಿಗೆ ಸ್ಮಶಾನಯಾತ್ರೆ ಫ್ರೀ...!

(ಬೊಗಳೂರು ಅನಾರೋಗ್ಯ ಬ್ಯುರೋದಿಂದ)
ಬೊಗಳೂರು, ಸೆ.7- ಅಡ್ಡದಾರಿ ಹಿಡಿದಿರುವ ಕರ್ನಾಟಕದ ಸಚಿವರ ವಿರುದ್ಧ ಬೊಗಳೆ-ರಗಳೆ ಬ್ಯುರೋ ತೀವ್ರ ಪ್ರತಿಭಟನೆ ನಡೆಸುತ್ತಿದೆ.

ರಾಜಕಾರಣಿಗಳು ಕೂಡ "ಸತ್ಯ ವಾಕ್ಯವ ನೆಚ್ಚಿ ನಡೆದರೆ ಮೆಚ್ಚನಾ ಪರಮಾತ್ಮನು" ಎನ್ನೋ ಕವಿನುಡಿಗೆ ಬದ್ಧವಾಗಿರಬೇಕಾದದ್ದು ಇಂದಿನ ದಿನಗಳಲ್ಲಿ ಅನಿವಾರ್ಯವೇ ಆಗಿಬಿಟ್ಟಿದೆ ಮತ್ತು ಅದು ಅಲಿಖಿತ ಶಾಸನವೂ ಆಗಿದೆ. ಈ ಧ್ಯೇಯ ವಾಕ್ಯವನ್ನು ಎಷ್ಟು ಸಾಧ್ಯವೋ ಅಷ್ಟು ಜೋರಾಗಿ ತುಳಿದು ಸರಕಾರಿ ಆಸ್ಪತ್ರೆಯನ್ನು "ಇದು ಆಸ್ಪತ್ರೆಯಲ್ಲ, ನರಕ, ನರಕ" ಎಂಬ ಸತ್ಯವಾಕ್ಯಗಳನ್ನು ಅಬ್ಬರಿಸಿರುವುದಕ್ಕೆ ಬ್ಯುರೋ ತೀವ್ರವಾಗಿ ಖಂಡಿಸುತ್ತದೆ.

ಸರಕಾರೀ ಆಸ್ಪತ್ರೆಗೆ ಭೇಟಿ ನೀಡಿದ್ದ ಅನಾರೋಗ್ಯ ಸಚಿವರು, "ಇದೊಂದು ಡರ್ಟಿ ಆಸ್ಪತ್ರೆ, ನರಕ, ವಾತಾವರಣ ಹೊಲಸಾಗಿದೆ, ಸ್ಮಶಾನದಂತಿದೆ, ನಾಗರಿಕರಿಗಿದು ಜಾಗ ಅಲ್ಲ" ಅಂತೆಲ್ಲಾ ಒದರಿರುವುದಾಗಿ ಇಲ್ಲಿ ಪ್ರಕಟವಾಗಿರುವುದೇ ಈ ಆಕ್ರೋಶಕ್ಕೆ ಕಾರಣ.

ಯಾವುದೇ ಊರಲ್ಲಿ ಸರಕಾರೀ ಆಸ್ಪತ್ರೆಗಳನ್ನು ಸ್ವಚ್ಛವಾಗಿ, ಸುಖಾಸೀನವಾಗಿ, ಸುಸಜ್ಜಿತವಾಗಿ ಇರಿಸಿದಲ್ಲಿ ಬಹುತೇಕ ವೈದ್ಯರಿಗೆ ನಷ್ಟವಲ್ಲವೇ? ಸರಕಾರೀ ಆಸ್ಪತ್ರೆಯಲ್ಲೇ ರೋಗಿಗಳಿಗೆ ಸಕಲ ಸೌಲಭ್ಯಗಳು ದೊರೆತಲ್ಲಿ ಖಾಸಗಿ ಆಸ್ಪತ್ರೆಗಳ ಗತಿ ಏನಾಗಬೇಡ? ಮಾತ್ರವಲ್ಲದೆ ಖಾಸಗಿ ಪ್ರಾಕ್ಟೀಸ್ ಮಾಡುವ ಸರಕಾರೀ ವೈದ್ಯರ ಭವಿಷ್ಯ ಏನಾಗಬೇಡ ಎಂದು ಬೊಗಳೆ ರಗಳೆ ಬ್ಯುರೋ ಸ್ವಲ್ಪ ಜೋರಾಗಿಯೇ ಬೊಗಳುತ್ತದೆ.

ಸ್ವತಃ ವೈದ್ಯರೇ ಆಗಿರುವ ಸಚಿವರಿಗೆ ಅಷ್ಟೂ ತಿಳಿವಳಿಕೆ ಬೇಡವೆ? ಸರಕಾರೀ ಆಸ್ಪತ್ರೆಯಲ್ಲಿ ಬಡಬಗ್ಗರಿಗಾಗಿ ಉಚಿತ ಚಿಕಿತ್ಸೆ, ಔಷಧ ದೊರೆಯುತ್ತದೆ ಎನ್ನೋ ಬೋರ್ಡು ಹಾಕಲು ಹೇಳುತ್ತಾರೆ... ಆದರೆ ಈ ರೀತಿ ಬೋರ್ಡ್ ಬರೆಸಿದಲ್ಲಿ ಇಲ್ಲಿಗೆ ಬರುವವರ ಸಂಖ್ಯೆ ಹೆಚ್ಚಾಗಿ ವೈದ್ಯರು ಬಿಡುವೇ ಇರಲಾರದಷ್ಟು ಕೆಲಸ ಮಾಡಬೇಕಾಗುತ್ತದೆ. ಹೆಚ್ಚುವರಿ ವೈದ್ಯರನ್ನು ನೇಮಿಸಬೇಕಾಗುತ್ತದೆ. ಮಾತ್ರವಲ್ಲ ಔಷಧಗಳನ್ನು ಕೂಡ ಭಾರಿ ಪ್ರಮಾಣದಲ್ಲಿ ತರಿಸಬೇಕಾಗುತ್ತದೆ... ಇಷ್ಟೆಲ್ಲಾ ಕೆಲಸ ಕಾರ್ಯಗಳಿಕೆ ಸಾಕಷ್ಟು ಖರ್ಚಾಗುತ್ತದೆ. ಇದು ಸರಕಾರದ ಖಜಾನೆ ಖಾಲಿ ಮಾಡುವ ಯೋಚನೆಯಲ್ಲವೇ ಎಂಬುದು ಅಂಥ ಸರಕಾರಿ ಆಸ್ಪತ್ರೆಯ ಹೊಣೆ ಹೊತ್ತಿರುವವರ ಪ್ರಶ್ನೆ.

ಅದೂ ಅಲ್ಲದೆ, ಖಾಸಗಿ ಆಸ್ಪತ್ರೆಗಳು ತಮ್ಮ ಹಣ ಕೊಡೋ ರೋಗಿಗಳಿಗೆ ಉಚಿತ ನರಕಯಾತ್ರೆ ಮಾಡಿಸಿದ ಉದಾಹರಣೆಗಳು ಇಲ್ಲವೇ ಇಲ್ಲ ಎನಿಸುವಷ್ಟು ಕಡಿಮೆ. ನಾವಿಲ್ಲಿ ನರಕ ಯಾತ್ರೆ ಮತ್ತು ಉಚಿತ ನರಕ ದರ್ಶನ ಏರ್ಪಡಿಸುತ್ತೇವೆ. ಹೆಚ್ಚುವರಿ ಸೌಲಭ್ಯದ ಕೊಡುಗೆಯಾಗಿ ಅದೃಷ್ಟಶಾಲಿಗಳಿಗೆ ಸ್ಮಶಾನ ಯಾತ್ರೆಯ ಏರ್ಪಾಟೂ ಮಾಡಲಾಗುತ್ತದೆ. ಇದಕ್ಕೆಲ್ಲಾ ಯಾವುದೇ ದುಡ್ಡು ಕಟ್ಟಬೇಕಾಗಿಲ್ಲ. ಒಮ್ಮೊಮ್ಮೆ ಸಾಕ್ಷಾತಿ ಯಮನನ್ನು ಒಲಿಸಿಕೊಳ್ಳುವ ಅವಕಾಶವೂ ದೊರೆಯುತ್ತದೆ ಎಂದಿದ್ದಾರೆ ವೈದ್ಯೋ ಹರೋಹರರು.

ಕೊನೆಯಲ್ಲಿ, ಸಚಿವರು "ಇಲ್ಲಿ ಮನುಷ್ಯರಿಗೆ ಬದುಕಲಿಕ್ಕಾಗುತ್ತಾ" ಎಂದು ಪ್ರಶ್ನಿಸಿರುವುದು ಮಾನವನ ಜೀವನದ ಆಸ್ತಿತ್ವವನ್ನೇ ಪ್ರಶ್ನಿಸಿರುವ ಕೆಲಸವಾಗಿರುವುದರಿಂದ ಮಾನವ ಕುಲಕ್ಕೇ ಮಾಡಿದ ಅವಮಾನ ಎಂದು ಬಣ್ಣಿಸಲಾಗುತ್ತಿದ್ದು, ಇದರ ಬಗ್ಗೆ ಗಂಭೀರ ಬಿಸಿಬಿಸಿ ಚರ್ಚೆ ನಡೆಯುತ್ತಿದೆ.

Tuesday, September 05, 2006

ವಯಸ್ಕರ ಶಿಕ್ಷಣದಿಂದ ರಾಕ್ಷಸರಾಗಲು ಹೊರಟರು!

(ಬೊಗಳೂರು ರಾಕ್ಷಸತಾ ಬ್ಯುರೋದಿಂದ)
 
[ಶಿಕ್ಷಕರ ದಿನಾಚರಣೆ ಪ್ರಯುಕ್ತ ಶಿಕ್ಷೆ ನೀಡುವವರ ಕುರಿತ ವಿಶೇಷ ವರದಿ]
ಬೊಗಳೂರು, ಸೆ.5- ನಾವೂ ಅಕ್ಷರ ಕಲಿತು 'ವಯಸ್ಕರ' ಶಿಕ್ಷಣ ಪಡೆದು ಈ ಸಮಾಜದಲ್ಲಿ ರಾಕ್ಷಸರಾಗೋಣ... ಅಲ್ಲಲ್ಲ.... ಸಾಕ್ಷರರಾಗೋಣ, ಗೌರವ ಗಳಿಸಿಕೊಳ್ಳೋಣ ಎಂದು ಹೊರಟರೆ ಇವರೆಲ್ಲಾ ನಮ್ಮನ್ನು ದೂರ ತಳ್ಳುವ ಸಂಚು ರೂಪಿಸುತ್ತಿದ್ದಾರೆ ಎಂಬುದು ಬಿಹಾರದಲ್ಲಿ ಪೊಲೀಸರ ಅಳಲು.
 
ಚಿಕ್ಕವರಿರುವಾಗ ಅಪ್ಪ ಅಮ್ಮ ಕಷ್ಟಪಟ್ಟು ನಾಲ್ಕಕ್ಷರ ಕಲಿಯಲಿ ಎಂಬ ಕಾರಣ ನೀಡಿ ನಮ್ಮನ್ನು ಶಾಲೆಗೆ ಕಳುಹಿಸುತ್ತಿದ್ದರು. ಆದರೆ ಚಿಕ್ಕವರಿರುವುದೇ ಆಟವಾಡುವುದಕ್ಕೆ, ದೊಡ್ಡವರಾದ ಮೇಲೆ ಆಡಲಾಗುತ್ತದೆಯೇ ಎಂಬುದು ನಮಗೆ ಅಂದಿನ ಕಾಲದಲ್ಲೇ ಹೊಳೆಹೊಳೆದಿರುವುದರಿಂದ ನಾವು ಚಿನ್ನಿದಾಂಡು (ಕುಟ್ಟಿ-ದೊಣ್ಣೆ), ಬುಗರಿ, ಗೋಲಿ, ಕಾಲೆಳೆಯುವಿಕೆ ಮುಂತಾದ ಆಟದಲ್ಲಿ ಪರಿಣತಿ ಪಡೆದಿದ್ದೆವು.
 
- ಇದು ಅಸತ್ಯಾನ್ವೇಷಿಯ ಏಕೈಕ ಸದಸ್ಯರ ತನಿಖಾ 'ತಂಡ'ವು ಇಲ್ಲಿ ಪ್ರಕಟವಾಗಿರುವ ಸುದ್ದಿಯಿಂದ 'ಥಂಡಾ' ಹೊಡೆದು ಬೆಚ್ಚಿಬಿದ್ದು ಅಡ್ಡಾದಿಡ್ಡಿ ಚಲಿಸದೆ ನೇರವಾಗಿ ಬಿಹಾರಕ್ಕೆ ಧಾವಿಸಿ ಪೊಲೀಸರನ್ನೇ ವಿಚಾರಣೆಗೆ ಗುರಿಪಡಿಸಿದಾಗ ಕಂಡುಕೊಂಡ ಅಸತ್ಯ.
 
ಅಲ್ಲಾ ಸ್ವಾಮಿ, ಕಾಲ ಕಳೆದಂತೆ ಈ ಮಹಾನ್ ಕ್ರೀಡೆಗಳನ್ನು ದೇಶದ ಕ್ರೀಡೆಗಳ ಪಟ್ಟಿಯಿಂದಲೇ ಕಾಲಕಸ ಮಾಡಿ ತಳ್ಳಿ ಹಾಕುತ್ತಾರೆ ಅಂತ ನಮಗೇನು ಕನಸು ಬಿದ್ದಿತ್ತೇ? ಗೊತ್ತಿದ್ದರೆ ಸುಮ್ಮನೇ ನಾವು ಶಾಲೆಗೆ ಹೋಗಿ ಮಾಸ್ಟರರ ಕೈಲಿ ಪೆಟ್ಟು ತಿಂದರೂ ಅಕ್ಷರ ಕಲಿಯುತ್ತಿರಲಿಲ್ಲವೇ ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ ಬಿಚ್ಚಿಟ್ಟವರು ಬಿಹಾರದ ಪೊಲೀಸರ ಒಂದು ಗುಂಪು.
 
ಆದರೂ ಓಟ, ಕಾಲೆಳೆದಾಟ, ಲಂಚ ನೀಡುವಿಕೆಯ ಕಸರತ್ತು, ರಾಜಕಾರಣಿಗಳ ಪ್ರಭಾವ ಮುಂತಾದ ಸಣ್ಣ ಪುಟ್ಟ ಆಟಗಳನ್ನು ಚಿಕ್ಕಂದಿನಿಂದಲೇ ಕರಗತ ಮಾಡಿಕೊಂಡ ಆಟಗಳಿಂದಾಗಿ ನಮಗೆ, ನಮ್ಮ ಕುಟುಂಬಿಕರಿಗೆ ಮೇಯಲು ಒಂದು ಕೆಲಸ ಅಂತ ಸಿಕ್ಕಿದೆ. ಈ ಕೆಲಸದಿಂದಾಗಿಯೇ ನಾವು ಬಾಚಿ ಬಾಚಿಕೊಳ್ಳುತ್ತಿದ್ದೇವೆ. ಆದರೆ ನಮಗೀಗ ಅದೆಲ್ಲಿತ್ತೋ... ಆ-ಜ್ಞಾನ... ಅದೀಗ ಉದಯವಾಗುತ್ತಿದೆ. ಈಗಾಗಲೇ ರಾಕ್ಷಸರಾಗಿರುವ ನಾವು, ವಯಸ್ಕರ ಶಿಕ್ಷಣ ಪಡೆದು ಸಾಕ್ಷರರಾಗೋಣ ಅಂತ ಮನಸ್ಸು ಮಾಡಿದ್ದೇವೆ. ಅದಕ್ಕಾಗಿ ಶಾಲೆಯಿಂದ ಮಕ್ಕಳನ್ನು ಹೊರಗೆ ಹಾಕಿ ನಾವು ಓದು ಬರಹ ಕಲಿಯಲು ನಿರ್ಧರಿಸಿದ್ದೇವೆ ಎಂದು ಅವರು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡರು.
 
ಆ ಮಕ್ಕಳಿಗೇನು, ಇನ್ನೂ ಸಾಕಷ್ಟು ಅಂದರೆ 50-60 ವರ್ಷ ಇದೆ, ಆ ಅವಧಿಯಲ್ಲಿ ಕಲಿತುಕೊಳ್ಳುತ್ತಾರೆ ಎಂದು ಹೇಳಿರುವ ಪೊಲೀಸರು, ನಾವೇನೂ ಅವರನ್ನು ಹೊರಹೊಕಲಿಲ್ಲ, ನಮ್ಮ ನಮ್ಮ ಬಂದೂಕು ನಮ್ಮಷ್ಟಕ್ಕೇ ತೋರಿಸ್ತಾ ಇದ್ದೆವು, ಜೋರಾಗಿ ನಮ್ಮ ನಮ್ಮೊಳಗೇ ಕೂಗಾಡುತ್ತಿದ್ದೆವು, ನಿದ್ದೆ ಬಂದಾಗ ಗಟ್ಟಿಯಾಗಿ ಬಾಗಿಲು ಹಾಕಿ ನಿದ್ದೆ ಮಾಡುತ್ತಿದ್ದೆವು... ಹಾಗಾಗಿ ಈ ಮಕ್ಕಳೇ ಒಳಗೆ ಬರಲಿಲ್ಲ... ಎಂದು ಒತ್ತಿ ಒತ್ತಿ ಸಮರ್ಥನೆ ಮಾಡಿಕೊಂಡರು. ಮಾತ್ರವಲ್ಲ, ನಾವಿಲ್ಲಿ ಎಷ್ಟೊಂದು ಶಾಂತಿಯಿಂದ ನಿದ್ದೆ ಮಾಡುತ್ತೇವೆ ಎಂದೂ ಕೇಕೆ ಹಾಕಿದರು!
 
ಮತ್ತೊಬ್ಬ ಪೊಲೀಸ್ ಪೇದೆ ಸ್ವಲ್ಪ ಸ್ವಲ್ಪವೇ ತೂರಾಡುತ್ತಿದ್ದ. ಸತ್ಯವಾಗಿಯೂ ಆತ ಪೂರ್ತಿ ತೂರಾಡುತ್ತಿರಲಿಲ್ಲ ಎಂದು ಬ್ಯುರೋ ಸ್ಪಷ್ಟಪಡಿಸುತ್ತದೆ. ಆತನನ್ನು ವಿಚಾರಿಸಿದಾಗ ಆತನ ನಿರೀಕ್ಷೆಯೇ ಮುಗಿಲು ಮುಟ್ಟುವಂತಿತ್ತು..... ಆತ ಅರೆಬರೆ ಪ್ರಜ್ಞೆಯಲ್ಲಿ ಹೇಳಿದ್ದೇನು? "ಸ್ವಾಮೀ, ಇಲ್ಲಿ ಪ್ರವೇಶ ಇರುವುದು ವಯಸ್ಕರಿಗೆ ಮಾತ್ರ.... ಅದಕ್ಕೇ ಭಾರೀ ನಿರೀಕ್ಷೆಯಲ್ಲಿದ್ದೇನೆ"!!!

Monday, September 04, 2006

ಕಿಸ್ ನೇ ಕಿಸ್ ಕೋ ಕಿಸ್ ದಿಯಾ!

(ಬೊಗಳೂರು ತುಂಟರ ಬ್ಯುರೋದಿಂದ)
ಬೊಗಳೂರು, ಸೆ.4- ನಿಮ್ಮ ವಾಹನ ಕೆಟ್ಟು ಹೋಗಿ ಅಥವಾ ಅಥವಾ ಗ್ಯಾಸ್ ಸ್ಟವ್ ಕೈಕೊಟ್ಟು... ಏನಾದರೂ ಕಿಸ್sssss ಎಂದು ಸದ್ದು ಮಾಡಿತೋ.... ಅಂಥ ಸದ್ದು ಕೇಳಿದ ತಕ್ಷಣ ಕಿಸಕ್ಕನೇ ನಕ್ಕು ಧಾವಿಸಿ ಬರುವ ಮತ್ತು ಪರದೆ ಮೇಲೆ ಕಿಸ್ ನೀಡುವಲ್ಲಿ ದಾಖಲೆ ಮಾಡಲು ಹೊರಟಿರುವ ಮಲ್ಲಿಕಾ ಶರ್‌ಮಾಮತ್ ಎಂಬ ಬೆಡಗಿ ಪ್ರಜ್ಞೆ ತಪ್ಪಿ ಬೀಳಲು ಆಕೆ ಚಳಿಯಲ್ಲಿ ನಡುಗಿದ್ದು ಕಾರಣ ಅಲ್ಲ ಎಂಬುದು ನಮ್ಮ ಬ್ಯುರೋದ ತನಿಖೆಯಿಂದ ನೆಗೆದುಬಿದ್ದಿದೆ.
 
ಶರ್‌ಮಾಮತ್‌ಗೆ ಕಿಸ್ ಕೊಡುವುದರಲ್ಲಿ ಹಾಗೂ ಬಟ್ಟೆ ತೊಡುವುದರಲ್ಲಿ ಶರಮ್ ಇರುವುದಿಲ್ಲ ಎಂದು ಜ್ಯೋತಿಷಿಗಳಿಂದ ತಿಳಿದುಕೊಂಡಿದ್ದ ಆಕೆಯ ಮನೆಯವರು ಈ ಥರಾ ನಾಮಕರಣ ಮಾಡಿದ್ದಾರೆ ಎಂದು basic ತನಿಖೆ ಶ್ರುತಪಡಿಸಿತ್ತು.
 
ಅದು ಕೂಡ ಸೈಡ್ ಎಫೆಕ್ಟ್ ಎಂಬ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ಹೀಗಾಯಿತು ಎಂಬ ಸುದ್ದಿ ಇರುವುದರಿಂದ, ಕಿಸ್ ಕಿಸ್ ನೇ ಕಿಸ್ ಕೋ ಕಿಸ್ ದಿಯಾ ಎಂಬುದೇ ತಿಳಿಯದೆ ಆದ ಸೈಡ್ ಎಫೆಕ್ಟ್ ಎಂದು ಭಾವಿಸಲಾಗಿದೆ.
 
ದಾಖಲೆ ಕಿಸ್‌ ಮಾಡುವ ಧಾವಂತದಲ್ಲಿ ಆಕೆ ಸುಸ್ತಾಗಿ ಪ್ರಜ್ಞೆ ತಪ್ಪಿ ಬಿದ್ದಳು ಎಂಬುದನ್ನು ಕಂಡು ಕೊಂಡ ಅನ್ವೇಷಕರ ತಂಡವು, ಇದರಲ್ಲಿ ಆಕೆಯ ಜತೆ ಪಾಲ್ಗೊಂಡಿದ್ದ ನಟ ರಾಹುಲ್ ಬೋಸ್‌ನ ಯಾವುದೇ ಕಿತಾಪತಿ ಇರಲಿಲ್ಲವೇ ಎಂಬುದನ್ನು ಪತ್ತೆ ಹಚ್ಚುವ ಸಾಹಸಕ್ಕೆ ಹೋಗಿಲ್ಲ.
 
ಮತ್ತೊಂದು ಸಂದೇಹದ ಪ್ರಕಾರ, ಕಿಸ್ ಕೊಡು-ಕೊಳ್ಳುವಿಕೆಯಲ್ಲಿ ಮುಂದೆ ಯಾರೂ ತನ್ನ ದಾಖಲೆ ಮುರಿಯಬಾರದು ಎಂಬ ಕಾರಣಕ್ಕೆ ಆಕೆ, ಕಿಸ್ ಕೊಟ್ಟರೆ ಪ್ರಜ್ಞೆ ತಪ್ಪುತ್ತದೆ ಎಂದು ಇತರ ಬಿಚ್ಚೋಲೆ ನಟೀಮಣಿಯರಿಗೆ ಸಂದೇಶ ಮುಟ್ಟಿಸಲು ಯತ್ನಿಸಿದ್ದಾರೆ ಎಂದೂ ಹೇಳಲಾಗುತ್ತಿದೆ.
 
ಮತ್ತೂ ಒಂದು ಶಂಕೆಯಿದೆ. ಇದು ಪ್ಯಾರ್ ಕೇ ಸೈಡ್ ಎಫೆಕ್ಟ್ ಹೆಸರಿನ ಚಿತ್ರವಾಗಿರುವುದರಿಂದ ಆ ಚಿತ್ರದಲ್ಲಿ ನಟನೆಯಲ್ಲಿ ತನ್ನನ್ನು ಪೂರ್ತಿಯಾಗಿ ಮಗ್ನವಾಗಿಸಿಕೊಳ್ಳುವ ನಿಟ್ಟಿನಲ್ಲಿ ಆಕೆ ಮುಂದುವರಿದಾಗ ಪ್ರಜ್ಞೆ ಇರುವ ನರ(nerve) ಕಟ್ ಆಯಿತು ಎನ್ನಲಾಗುತ್ತಿದೆ.
 
ಆದರೆ, ಬಲ್ಲವರ ಪ್ರಕಾರ, ಚೊಚ್ಚಲ ಚಿತ್ರ "ಖ್ವಾಯಿಷ್‌"ನಲ್ಲಿ 17 ಕಿಸ್ ಮೂಲಕ ದಾಖಲೆ ಮಾಡಿದ್ದ ಆಕೆಯ ಪ್ರಜ್ಞೆ ಇರುವ ನರ ಯಾವತ್ತೋ ಕಟ್ ಆಗಿರುವುದರಿಂದ ಮೈಮೇಲೆ ಅರಿವೆ (ವಸ್ತ್ರ) ಇರುವ ಅರಿವೇ ಇರುವುದಿಲ್ಲ. ಅದಕ್ಕಾಗಿ ಆಕೆಗೆ "ಎಲ್ಲಿ ಜಾರಿತೋ...ಅರಿವೇ... ಎಲ್ಲೆ ಮೀರಿತೋ" ಎಂಬ ಹಾಡು ತುಂಬಾ ಇಷ್ಟ ಅಂತಾನೂ ತಿಳಿದುಬಂದಿದೆ.
 
ಈ ಮಧ್ಯೆ, ಇ-ಕಿಸ್‌ಗಳು ಇಲ್ಲಿ ಉಚಿತವಾಗಿ ಸಿಗುವುದರಿಂದ ಆಕೆಗೆ ಇಲ್ಲಿಂದಲೂ ಸಾಕಷ್ಟು ಕಿಸ್‌ಗಳ ರವಾನೆಯಾಗುತ್ತಿವೆ ಎಂದು ತಿಳಿದುಬಂದಿದೆ.

Saturday, September 02, 2006

ಪ್ಲುಟೋ ಉದುರಲು ಶನಿ ಕಾರಣ !

(ಬೊಗಳೂರು ನಿ-ಗ್ರಹ ಬ್ಯುರೋದಿಂದ)
 
ಬೊಗಳೂರು, ಸೆ.2- ಆಗಸದ ಸೌರಮಂಡಲದಿಂದ ಧೂಮಕೇತುವಿನ ರೀತಿಯಲ್ಲಿ ಪ್ಲುಟೋ ಗ್ರಹ ಉದುರಿ ಬೀಳಲು ಕಾರಣಗಳು ನಿಧಾನವಾಗಿ ಸ್ಪಷ್ಟವಾಗತೊಡಗಿವೆ.
 
ಇದರಲ್ಲಿ ನಿಜಕ್ಕೂ ಮಾನವರ ಕೈವಾಡವಿದೆ ಎಂಬುದು ಕೂಡ ಸಾಬೀತಾಗಿದೆ.
 
ವಾಸ್ತವವಾಗಿ ಮಾನವ ಲೋಕದ ಹುಲುಮಾನವರು ತಮ್ಮನ್ನು ಯಾವತ್ತೂ ಕಾಡುತ್ತಿರುವ ಶನಿ ಗ್ರಹವನ್ನೇ ಆಗಸದಿಂದ ಉರುಳಿಸಲು ನೋಡಿದ್ದರು. ಆದರೆ ಅವರು ಬಿಟ್ಟ ಕ್ಷಿಪಣಿ ಗುರಿ ತಪ್ಪಿ ಪ್ಲುಟೋಕ್ಕೆ ತಗುಲಿತ್ತು ಎಂಬುದು ಅಸಂಶೋಧನೆಯಿಂದ ತಿಳಿದುಬಂದ ಅಂಶ.
 
ಇನ್ನೂ ಒಂದು ಸಿದ್ಧಾಂತದ ಪ್ರಕಾರ, ಇಲ್ಲಿಯೂ ಶನಿ ತನ್ನ ಪ್ರಭಾವವನ್ನು ಮೆರೆದಿದ್ದಾನೆ. ಪ್ಲುಟೋವನ್ನು ಕಾಡಿದ ಶನಿ, ಮಾನವರ ಅಣ್ವಸ್ತ್ರ ಭರಿತ ಕ್ಷಿಪಣಿಯು ಇರಾನಿನಿಂದ ಆಗಸಕ್ಕೆ ನೆಗೆದಿರುವಂತೆಯೇ ತನ್ನ ಸಹೋದ್ಯೋಗಿಯಾಗಿದ್ದ ಪ್ಲುಟೋವನ್ನು ಮುಂದಕ್ಕೆ ತಳ್ಳಿದ್ದಾನೆ.
 
ಶನಿಯ ಮುಂದಿನ ಸರದಿ ತನ್ನನ್ನು ಗುರಿಯಾಗಿರಿಸಿಕೊಂಡ ಹುಲುಮನುಜರನ್ನು ಕಾಡುವುದು ಎಂದು ಗೊತ್ತಾಗಿರುವುದರಿಂದ ಬೊಗಳೆ ರಗಳೆ ಬ್ಯುರೋ ನಾಳೆ ಒಂದು ದಿನ ರಜಾ ಹಾಕಿ ಮುಸುಕಿ ಹಾಕಿ ಮಲಗಲು ನಿರ್ಧರಿಸಿದೆ.

Friday, September 01, 2006

ರೈತರ విరుద్ధ తిరుగి బిద్ద Pesti ಕಂಪನಿ!

(ಬೊಗಳೂರು Some-ಶೋಧನಾ ಬ್ಯುರೋದಿಂದ)
ಬೊಗಳೂರು, ಸೆ.1- ತೆಲುಗು ರೈತರನ್ನು ಕೊಚ್ಚಿ ಕೊಚ್ಚಿ ಕೊಲ್ಲಲು ಬಹುರಾಷ್ಟ್ರೀಯ ಪೆಸ್ಟ್ ಕೋಲಾಟ ಕಂಪನಿಗಳು ಶಪಥ ತೊಟ್ಟಿವೆ.
ಮೊನ್ನೆ ಮೊನ್ನೆವರೆಗೂ ತಮ್ಮ ಕಂಪನಿಯ ಉತ್ಪನ್ನಗಳನ್ನು ಗದ್ದೆಗೆ, ಬೆಳೆಗಳಿಗೆ ಉಣಿಸುತ್ತಾ, ಕೀಟಗಳಿಂದ ರಕ್ಷಿಸಿಕೊಳ್ಳುವ ಹೊಸ ಅದ್ಭುತ ಸಂಶೋಧನೆ ಮಾಡಿ ಬಹುರಾಷ್ಟ್ರೀಯ ಕಂಪನಿಗಳು ಉತ್ಪಾದಿಸುವ ಈ ಪೇಯಗಳ ಭರ್ಜರಿ ಮಾರಾಟಕ್ಕೆ ಕಾರಣವಾಗಿದ್ದ ಇದೇ ರೈತರನ್ನು ಈ ಪೆಸ್ಟಿ ಕೋಲಾಟ ಕಂಪನಿಗಳು ಕ್ಯಾಕರಿಸಿ ಹೊಗಳುತ್ತಿದ್ದವು.
 
ಅಷ್ಟು ಹೊಗಳಿ ಹೊಗಳಿ ಹೊನ್ನ ಶೂಲಕ್ಕೇರಿಸುತ್ತಿದ್ದ ಇದೇ ಕಂಪನಿಗಳು, ಈಗ ಕಡಿದು ಕಡಿದು ಕಡಿದು ಕೊಲೆ ಮಾಡುವುದಾಗಿ ಘೋಷಣೆ ಮಾಡಲು ಕಾರಣ ಇಲ್ಲಿ ಪ್ರಕಟವಾಗಿರುವ ವರದಿ.
 
ಇದೀಗ ತಮ್ಮ ಪೇಯ ಉತ್ಪನ್ನಗಳ ಬದಲು ದೇಶೀ ನಿರ್ಮಿತ ಕ್ವಾರ್ಟರ್ ಬಾಟಲಿಗಳನ್ನೇ ರೈತರು ತಮ್ಮ ಹೊಲದ ರಕ್ಷಣೆಗೆ, ಕೀಟನಾಶಕದ ರೂಪದಲ್ಲಿ ಬಳಸತೊಡಗಿರುವುದು ಈ ಬಹು-ನಾಮ ಹಾಕುವ ಕಂಪನಿಗಳ ಕಣ್ಣು ಕೆಂಪುಕೆಂಪಾಗಿಸಿದೆ.
 
"ನಮ್ಮದು ಸ್ವದೇಶೀ ಚಳವಳಿಯ ಭಾಗ"
 
ಈ ಬಗ್ಗೆ ರೈತರನ್ನು ಸಂಪರ್ಕಿಸಿದಾಗ ಅವರು ಹೇಳಿದ್ದು: ಬಹುರಾಷ್ಟ್ರೀಯರು ಬಹುಮಾನ ಕೊಡುತ್ತೇವೆ ಎನ್ನುತ್ತಾ ನಮ್ ಜನಗಳಿಗೆ ಬಹು ನಾಮ ಹಾಕಿಬಿಡುತ್ತಿದ್ದಾರೆ. ನಮ್ಮ ನೀರನ್ನೇ ಬಳಸಿಕೊಂಡು ನಮಗೇ ಮಾರಾಟ ಮಾಡುತ್ತಾ ಹಣ ಮಾಡುತ್ತಾರೆ. ಈ ಕಾರಣಕ್ಕೆ ನಾವು ದೇಶೀ ಉತ್ಪಾದನೆಗೆ ಹೆಚ್ಚಿನ ಉತ್ತೇಜನ ನೀಡುವ ನಿಟ್ಟಿನಲ್ಲಿ ಕಳ್ಳು-ಹೆಂಡಗಳ ಬಳಕೆಗೆ ಮುಂದಾಗಿದ್ದೇವೆ ಎಂದು ಉತ್ತರಿಸಿದ್ದಾರೆ.
 
ನೋಡಿ, ರಾಸಾಯನಿಕ ಕೀಟನಾಶಕ ಬಳಕೆಗೆ ನಮಗೆ ಒಂದು ಎಕರೆಗೆ 3000 ರೂ. ಖರ್ಚಾಗುತ್ತದೆ, ಅದೇ ಪೆಸ್ಟಿ-ಕೋಲಾಟಗಳನ್ನು ಬಳಸಿದಲ್ಲಿ ಸ್ವಲ್ಪ ಕಡಿಮೆ ಸಾಕಾಗುತ್ತದೆ. ಆದರೆ ಈ ಕ್ವಾರ್ಟರ್ ಹೆಂಡ ತುಂಬಾ ಅಗ್ಗ. ಒಂದೆಕರೆಗೆ 4 ಕ್ವಾರ್ಟರ್ ಇದ್ದರಾಯಿತು ಎಂದು ಹೇಳಿದವರು ರೈತಾಪಿ ವರ್ಗದವರು.
 
ಹಾರಾಡಲಾರದೆ ತೂರಾಡುವ ಕೀಟಗಳು
 
ಇದೇ ಸಂದರ್ಭ, ರೈತರ ಹೊಲಗಳಿಗೆ ಭೇಟಿ ನೀಡಿದಾಗ ಅಲ್ಲಿ ದೀಪಾವಳಿ ಸಂದರ್ಭ ದುಂಬಿಗಳು ಹಾರಾಡುತ್ತಿರುವಂತಹ ದೃಶ್ಯಾವಳಿ ಕಂಡುಬಂತು. ಈ ಕೀಟಗಳ ಸಮೂಹದಲ್ಲಿ ಎರಡು ವಿಧದ ಚಲನಶೀಲತೆಯಿತ್ತು. ಒಂದು ಗುಂಪು ಗುಂಯ್ ಎಂದು ಸದ್ದು ಮಾಡುತ್ತಾ ಎಲ್ಲಿ ಮದ್ಯದ ಬಾಟಲಿ ಇಟ್ಟಿದ್ದಾರೆ ಎಂಬ ಶೋಧದಲ್ಲಿದ್ದರೆ, ಇನ್ನು ಕೆಲವು ಹಾರಾಡಲಾಗದೆ ತೂರಾಡುತ್ತಾ, ಅಲ್ಲಲ್ಲಿ ಮುಗ್ಗರಿಸಿ ಬೀಳುತ್ತಾ ಹೇಗೆ ಹೇಗೋ ಹಾರಾಡುತ್ತಿದ್ದವು.
 
ಹೆಚ್ಚಿನ ಕೀಟಗಳು ರೈತರ ಪೈರಿನ ಮೇಲೆ ಕುಳಿತುಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ತಲೆ ತಿರುಗಿ ಬೀಳುತ್ತಿದ್ದವು.
 
ಮಾನವರ ಮೇಲೂ ಪ್ರಯೋಗ ಸಾಧ್ಯತೆ
 
ಇದೀಗ Pesti cola ಪರಿಣಾಮವನ್ನೇ ಮದ್ಯವೂ ನೀಡುತ್ತಿರುವುರಿಂದ ಅದೇ ರೀತಿಯ "ಉತ್ತೇಜನ" ಪಡೆಯುವ ನಿಟ್ಟಿನಲ್ಲಿ ಮದ್ಯವನ್ನೇ ಮಾನವರ ಮೇಲೂ ಪ್ರಯೋಗಿಸಬಾರದೇಕೆ, ಆತ್ಮಹತ್ಯೆ ಮಾಡಿಕೊಳ್ಳಲು ಇಚ್ಛಿಸುವವರಿಗೆ, ನಿಧಾನ ವಿಷ ಸೇವಿಸಿ ವಿಳಂಬಸಾವು ಬಯಸುವವರಿಗೆ ಇದು ಸೂಕ್ತವಲ್ಲವೇ ಎಂದು ಬೊಗಳೆ ರಗಳೆ ಬ್ಯುರೋದ ಸಂಶೋಧನಾ ವಿಭಾಗವು ಅನ್ವೇಷಣೆ ಮಾಡಿ ಪೇಟೆಂಟ್‌ಗೆ ಅರ್ಜಿ ಸಲ್ಲಿಸಲು ನಿರ್ಧರಿಸಿದೆ.

ಎಂಜಿನ್ ಇಲ್ಲದ ರೈಲು: ಬ್ರೇಕಿಂಗ್ ನ್ಯೂಸ್ ಅಲ್ಲವೆಂದ ಬೊ.ರ.

[ಬೊಗಳೂರು ಪಟ್ಟೆ-ರಹಿತ ರೈಲು ಬ್ಯುರೋ] ಬೊಗಳೂರು: ಆಫ್‌ಲೈನ್ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯೊಂದು ಆನ್‌ಲೈನ್ ಸಂಪಾದಕರ ಕಣ್ಣು ಕುಕ್ಕಿದ್ದು, ಎಂಜಿನ್ ಇಲ್ಲದೆ...