ಬೊಗಳೆ ರಗಳೆ

header ads

ನರಕ ದರ್ಶನ: ಅದೃಷ್ಟಶಾಲಿಗಳಿಗೆ ಸ್ಮಶಾನಯಾತ್ರೆ ಫ್ರೀ...!

(ಬೊಗಳೂರು ಅನಾರೋಗ್ಯ ಬ್ಯುರೋದಿಂದ)
ಬೊಗಳೂರು, ಸೆ.7- ಅಡ್ಡದಾರಿ ಹಿಡಿದಿರುವ ಕರ್ನಾಟಕದ ಸಚಿವರ ವಿರುದ್ಧ ಬೊಗಳೆ-ರಗಳೆ ಬ್ಯುರೋ ತೀವ್ರ ಪ್ರತಿಭಟನೆ ನಡೆಸುತ್ತಿದೆ.

ರಾಜಕಾರಣಿಗಳು ಕೂಡ "ಸತ್ಯ ವಾಕ್ಯವ ನೆಚ್ಚಿ ನಡೆದರೆ ಮೆಚ್ಚನಾ ಪರಮಾತ್ಮನು" ಎನ್ನೋ ಕವಿನುಡಿಗೆ ಬದ್ಧವಾಗಿರಬೇಕಾದದ್ದು ಇಂದಿನ ದಿನಗಳಲ್ಲಿ ಅನಿವಾರ್ಯವೇ ಆಗಿಬಿಟ್ಟಿದೆ ಮತ್ತು ಅದು ಅಲಿಖಿತ ಶಾಸನವೂ ಆಗಿದೆ. ಈ ಧ್ಯೇಯ ವಾಕ್ಯವನ್ನು ಎಷ್ಟು ಸಾಧ್ಯವೋ ಅಷ್ಟು ಜೋರಾಗಿ ತುಳಿದು ಸರಕಾರಿ ಆಸ್ಪತ್ರೆಯನ್ನು "ಇದು ಆಸ್ಪತ್ರೆಯಲ್ಲ, ನರಕ, ನರಕ" ಎಂಬ ಸತ್ಯವಾಕ್ಯಗಳನ್ನು ಅಬ್ಬರಿಸಿರುವುದಕ್ಕೆ ಬ್ಯುರೋ ತೀವ್ರವಾಗಿ ಖಂಡಿಸುತ್ತದೆ.

ಸರಕಾರೀ ಆಸ್ಪತ್ರೆಗೆ ಭೇಟಿ ನೀಡಿದ್ದ ಅನಾರೋಗ್ಯ ಸಚಿವರು, "ಇದೊಂದು ಡರ್ಟಿ ಆಸ್ಪತ್ರೆ, ನರಕ, ವಾತಾವರಣ ಹೊಲಸಾಗಿದೆ, ಸ್ಮಶಾನದಂತಿದೆ, ನಾಗರಿಕರಿಗಿದು ಜಾಗ ಅಲ್ಲ" ಅಂತೆಲ್ಲಾ ಒದರಿರುವುದಾಗಿ ಇಲ್ಲಿ ಪ್ರಕಟವಾಗಿರುವುದೇ ಈ ಆಕ್ರೋಶಕ್ಕೆ ಕಾರಣ.

ಯಾವುದೇ ಊರಲ್ಲಿ ಸರಕಾರೀ ಆಸ್ಪತ್ರೆಗಳನ್ನು ಸ್ವಚ್ಛವಾಗಿ, ಸುಖಾಸೀನವಾಗಿ, ಸುಸಜ್ಜಿತವಾಗಿ ಇರಿಸಿದಲ್ಲಿ ಬಹುತೇಕ ವೈದ್ಯರಿಗೆ ನಷ್ಟವಲ್ಲವೇ? ಸರಕಾರೀ ಆಸ್ಪತ್ರೆಯಲ್ಲೇ ರೋಗಿಗಳಿಗೆ ಸಕಲ ಸೌಲಭ್ಯಗಳು ದೊರೆತಲ್ಲಿ ಖಾಸಗಿ ಆಸ್ಪತ್ರೆಗಳ ಗತಿ ಏನಾಗಬೇಡ? ಮಾತ್ರವಲ್ಲದೆ ಖಾಸಗಿ ಪ್ರಾಕ್ಟೀಸ್ ಮಾಡುವ ಸರಕಾರೀ ವೈದ್ಯರ ಭವಿಷ್ಯ ಏನಾಗಬೇಡ ಎಂದು ಬೊಗಳೆ ರಗಳೆ ಬ್ಯುರೋ ಸ್ವಲ್ಪ ಜೋರಾಗಿಯೇ ಬೊಗಳುತ್ತದೆ.

ಸ್ವತಃ ವೈದ್ಯರೇ ಆಗಿರುವ ಸಚಿವರಿಗೆ ಅಷ್ಟೂ ತಿಳಿವಳಿಕೆ ಬೇಡವೆ? ಸರಕಾರೀ ಆಸ್ಪತ್ರೆಯಲ್ಲಿ ಬಡಬಗ್ಗರಿಗಾಗಿ ಉಚಿತ ಚಿಕಿತ್ಸೆ, ಔಷಧ ದೊರೆಯುತ್ತದೆ ಎನ್ನೋ ಬೋರ್ಡು ಹಾಕಲು ಹೇಳುತ್ತಾರೆ... ಆದರೆ ಈ ರೀತಿ ಬೋರ್ಡ್ ಬರೆಸಿದಲ್ಲಿ ಇಲ್ಲಿಗೆ ಬರುವವರ ಸಂಖ್ಯೆ ಹೆಚ್ಚಾಗಿ ವೈದ್ಯರು ಬಿಡುವೇ ಇರಲಾರದಷ್ಟು ಕೆಲಸ ಮಾಡಬೇಕಾಗುತ್ತದೆ. ಹೆಚ್ಚುವರಿ ವೈದ್ಯರನ್ನು ನೇಮಿಸಬೇಕಾಗುತ್ತದೆ. ಮಾತ್ರವಲ್ಲ ಔಷಧಗಳನ್ನು ಕೂಡ ಭಾರಿ ಪ್ರಮಾಣದಲ್ಲಿ ತರಿಸಬೇಕಾಗುತ್ತದೆ... ಇಷ್ಟೆಲ್ಲಾ ಕೆಲಸ ಕಾರ್ಯಗಳಿಕೆ ಸಾಕಷ್ಟು ಖರ್ಚಾಗುತ್ತದೆ. ಇದು ಸರಕಾರದ ಖಜಾನೆ ಖಾಲಿ ಮಾಡುವ ಯೋಚನೆಯಲ್ಲವೇ ಎಂಬುದು ಅಂಥ ಸರಕಾರಿ ಆಸ್ಪತ್ರೆಯ ಹೊಣೆ ಹೊತ್ತಿರುವವರ ಪ್ರಶ್ನೆ.

ಅದೂ ಅಲ್ಲದೆ, ಖಾಸಗಿ ಆಸ್ಪತ್ರೆಗಳು ತಮ್ಮ ಹಣ ಕೊಡೋ ರೋಗಿಗಳಿಗೆ ಉಚಿತ ನರಕಯಾತ್ರೆ ಮಾಡಿಸಿದ ಉದಾಹರಣೆಗಳು ಇಲ್ಲವೇ ಇಲ್ಲ ಎನಿಸುವಷ್ಟು ಕಡಿಮೆ. ನಾವಿಲ್ಲಿ ನರಕ ಯಾತ್ರೆ ಮತ್ತು ಉಚಿತ ನರಕ ದರ್ಶನ ಏರ್ಪಡಿಸುತ್ತೇವೆ. ಹೆಚ್ಚುವರಿ ಸೌಲಭ್ಯದ ಕೊಡುಗೆಯಾಗಿ ಅದೃಷ್ಟಶಾಲಿಗಳಿಗೆ ಸ್ಮಶಾನ ಯಾತ್ರೆಯ ಏರ್ಪಾಟೂ ಮಾಡಲಾಗುತ್ತದೆ. ಇದಕ್ಕೆಲ್ಲಾ ಯಾವುದೇ ದುಡ್ಡು ಕಟ್ಟಬೇಕಾಗಿಲ್ಲ. ಒಮ್ಮೊಮ್ಮೆ ಸಾಕ್ಷಾತಿ ಯಮನನ್ನು ಒಲಿಸಿಕೊಳ್ಳುವ ಅವಕಾಶವೂ ದೊರೆಯುತ್ತದೆ ಎಂದಿದ್ದಾರೆ ವೈದ್ಯೋ ಹರೋಹರರು.

ಕೊನೆಯಲ್ಲಿ, ಸಚಿವರು "ಇಲ್ಲಿ ಮನುಷ್ಯರಿಗೆ ಬದುಕಲಿಕ್ಕಾಗುತ್ತಾ" ಎಂದು ಪ್ರಶ್ನಿಸಿರುವುದು ಮಾನವನ ಜೀವನದ ಆಸ್ತಿತ್ವವನ್ನೇ ಪ್ರಶ್ನಿಸಿರುವ ಕೆಲಸವಾಗಿರುವುದರಿಂದ ಮಾನವ ಕುಲಕ್ಕೇ ಮಾಡಿದ ಅವಮಾನ ಎಂದು ಬಣ್ಣಿಸಲಾಗುತ್ತಿದ್ದು, ಇದರ ಬಗ್ಗೆ ಗಂಭೀರ ಬಿಸಿಬಿಸಿ ಚರ್ಚೆ ನಡೆಯುತ್ತಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

2 ಕಾಮೆಂಟ್‌ಗಳು

  1. ಬೊ-ರಣ್ಣನವರ ಫ್ರೀ ಯಾತ್ರೆಯಲ್ಲಿ ನಾನೂ ಭಾಗವಹಿಸುವೆ. ನೀವೇನೂ ಹೆದರಬೇಡಿ, ನಿಮ್ಮ ಹಿಂದೆಯೇ ನಾನೂ ಬರ್ತೀನಿ. ಈ ಲೋಕಕ್ಕಿಂತ ನರಕ ಇನ್ನೂ ಚೆನ್ನಾಗಿರತ್ತಂತೆ. ಇಲ್ಲಿಯ ಕಾಮನಬಿಲ್ಲಿಗೆ ಏಳು ಬಣ್ಣಗಳಿದ್ದರೆ ಅಲ್ಲಿ ಹದಿನಾಲ್ಕು ಬಣ್ಣಗಳಿವೆಯಂತೆ.

    ಪ್ರತ್ಯುತ್ತರಅಳಿಸಿ
  2. ಮಾವಿನರಸರೆ,
    ಯಾತ್ರೆಗೆ ಇಷ್ಟು ಬೇಗ ರೆಡಿಯಾಗ್ಬೇಡಿ...
    ಅಲ್ಲಿ ನೀವು ಕಾಮನ ಬಿಲ್ಲು ಮುರಿಯಲು ಹೊರಟಿದ್ದೀರಾ? :)

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D