ಬೊಗಳೆ ರಗಳೆ

header ads

'ಬರ್ಬರ' ಕೃತ್ಯಕ್ಕೆ ಮುಂದಾದ ಮಹಿಳೆಯರು !

(ಬೊಗಳೂರು ಹೊಟ್ಟೆಕಿಚ್ಚು ಬ್ಯುರೋದಿಂದ)
ಬೊಗಳೂರು, ಸೆ.28- ಮಹಿಳೆಯರಿಗೆ ಪ್ರಾಧಾನ್ಯತೆ ಕಲ್ಪಿಸಿ, ಸಮಾನತೆ ಜಾರಿಗೊಳಿಸುವ ನಿಟ್ಟಿನಲ್ಲಿ ಐತಿಹಾಸಿಕ ಸಮತಾ ವಾದವನ್ನು ಅನುಷ್ಠಾನಕ್ಕೆ ತರಲಾಗಿದೆ.
 
ತಮ್ಮನ್ನು ಕಡೆಗಣಿಸಲಾಗುತ್ತಿದೆ, ಸಂಸತ್ತಿನಲ್ಲಿ ತಮಗೆ ಸೂಕ್ತ ಸ್ಥಾನ-ಮಾನ, ಪ್ರಾತಿನಿಧ್ಯ ಇತ್ಯಾದಿ ದೊರಕುತ್ತಿಲ್ಲ, ಲಿಂಗ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ ಎಂದು ಕಂಚಿನ ಕಂಠದಿಂದ ಉಲಿಯುತ್ತಿದ್ದ ಮಹಿಳಾ ಮಣಿಗಳ ಕನಸು ನಿಧಾನವಾಗಿ ನನಸಾಗಿಸುವ ನಿಟ್ಟಿನಲ್ಲಿ ಪ್ರಾಥಮಿಕ ಹೆಜ್ಜೆಯಾಗಿ ಬರ್ಬರ ಕೃತ್ಯವೊಂದನ್ನು ಜಾರಿಗೊಳಿಸಲಾಗಿದೆ.
 
ಅದುವೇ ಮಹಿಳೆಯರ ಬರ್ಬರ ಕೃತ್ಯ. ಇದುವರೆಗೆ ಗಂಡಸರೇ ಸಿಕ್ಕ ಸಿಕ್ಕವರ ತಲೆ ಬೋಳಿಸುತ್ತಿದ್ದು, ಇದೀಗ ಮಹಿಳಾ ಮಣಿಗಳೂ ತಲೆ ಬೋಳಿಸುವ ಹಕ್ಕನ್ನು ಪಡೆದುಕೊಂಡಿದ್ದಾರೆ .
 
ಈ ಬಗ್ಗೆ ನಾಮ ಹಾಕಿಸಿಕೊಳ್ಳಲೆಂದು ತಿರುಪತಿಗೆ ತೆರಳಿದ ಬೊಗಳೆ-ರಗಳೆ ಬ್ಯುರೋಗೆ ಕೆಲವು ಮಹತ್ವದ ವಿಷಯಗಳು ಕೂದಲಿನ ರಾಶಿಯ ಮಧ್ಯೆ ಮಧ್ಯೆ ಸಿಕ್ಕಿಬಿದ್ದವು.
 
ಗಲ್ಲಿ ಗಲ್ಲಿಯಲ್ಲಿ, ಕತ್ತರಿ ಪ್ರಯೋಗ ಮಾಡಲು ಸಜ್ಜಾಗಿರುವ ಮಹಿಳಾ ಮಣಿಗಳ ಕಣ್ತಪ್ಪಿಸಿ, ಇನ್-ಕ್ಯಾಮರಾ ತನಿಖೆ ನಡೆಸಿದಾಗ ಮಹಿಳಾ ಬಾರ್ಬರುಗಳ ಕೃತ್ಯದ ಹಿಂದಿನ ತಥ್ಯವೊಂದು ಬಯಲಿಗೆ ಬಂದಿದೆ. ಇವರೆಲ್ಲಾ ಪುರುಷಮಣಿಗಳ ತಲೆ ಬೋಳಿಸಿ ಅದನ್ನೆಲ್ಲಾ ಮರು ಜೋಡಿಸುತ್ತಿದ್ದರು. ಇದಕ್ಕೆ ಟಿ.ವಿ. ಚಾನೆಲ್‌ಗಳಲ್ಲಿ ಪ್ರಸಾರವಾಗುತ್ತಿರುವ ಕಸದಿಂದ ರಸ ತೆಗೆಯುವ ಕಾರ್ಯಕ್ರಮಗಳೇ ಸ್ಫೂರ್ತಿ ಎಂದು ತಿಳಿದುಬಂದಿದೆ.
 
ಹೀಗೆ ಮರುಜೋಡಿಸಲಾದ ಕೂದಲನ್ನು ಜಡೆಯ ರೂಪದಲ್ಲಿ ಹೆಣೆದು ಅದನ್ನು ಗಿಡ್ಡಕೂದಲಿನವರಿಗೆ ಮಾರಾಟ ಮಾಡುವ ಒಂದು ದಂಧೆಯೂ ಸಮೀಪದಲ್ಲೇ ನಡೆಯುತ್ತಿತ್ತು!!!
 
ಇದೀಗ ಎಲ್ಲೆಡೆ ಕತ್ತರಿ ಮಸೆಯುತ್ತಾ, ನಾವೇನು ಕಡಿಮೆ ಎಂದು ಬೀಗುತ್ತಿರುವ ವೀರರ-ಮಣಿಗಳು, ಇಂಥ ಸಾಧನೆಯು ಪುರುಷ ಮಣಿಗಳಲ್ಲಿ ರೋಮಾಂಚನವುಂಟು ಮಾಡುತ್ತವೆಯಾದುದರಿಂದ ತಕ್ಷಣವೇ ಕತ್ತರಿ ಹಿರಿದು ಅಲ್ಲಿ ಹಾಜರಾಗುತ್ತಿದ್ದರು. ರೋಮಾಂಚನವಾದ ತಕ್ಷಣ ನೆಟ್ಟಗೆ ನಿಂತ ತಲೆಕೂದಲನ್ನು ರ್ರ್ರ್ರ್ರ್ರ್ರರರ್ರ್ರರಪ್ಪನೆ ಕತ್ತರಿಸುವುದು ಸುಲಭ ಎಂಬುದು ಅವರ ಅಂಬೋಣ.
 
ಇಷ್ಟು ಬೆದರಿಕೆಯಿದ್ದರೂ, ಕಿಲಾಡಿ ಬ್ಯುರೋದ ಸಿಬ್ಬಂದಿ ಅಲ್ಲಿ ಹೋಗಿ.... ಬಾರ್ಬಾರ್ ದೇಖೋ... ಹಜಾರ್ ಬಾರ್ ದೇಖೋ ಅಂತ ಹಾಡುತ್ತಿರುವುದು ಗಮನಕ್ಕೆ ಬಂದಿದೆ.
 
ಈ ಬಗ್ಗೆ ಅವರನ್ನು ಪ್ರಶ್ನಿಸಿದಾಗ, ಇದು ಕಲ್ಯಾಣ ಕಟ್ಟೆಯಲ್ಲವೇ? ಇಲ್ಲಿ ಕಲ್ಯಾಣ ನಡೆಯುವುದಿಲ್ಲವೇ? ಎಂದೂ ಪ್ರತಿ-ಪ್ರಶ್ನೆ ಹಾಕಿ ಗೊಂದಲ ಮೂಡಿಸಿಬಿಟ್ಟಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

8 ಕಾಮೆಂಟ್‌ಗಳು

  1. ಓಹ್! ಬರ್ಬರ ಅಂದ್ರೆ ಬೊಬ್ಬಿಟ್ಟ ಬಾಬಿಟ್ಟ ನೆನಪಾಗಿದ್ದ. ಇಲ್ಲಿ ನೋಡಿದ್ರೆ ಬಾರ್ಬರಮ್ಮಗಳ ಬಗ್ಗೆ ಬರೆದಿದ್ದೀರಿ. ನನಗೆ ಅವರುಗಳ ಹತ್ತಿರ ಹೋಗೋ ಅವಕಾಶವೇ ಇಲ್ಲ. ಕತ್ತರಿಸಲು ಅಸಲು ತಲೆಯಲ್ಲಿ ಕೂದಲಿಲ್ಲ, ಅಂಗಿಗೆ ಜೇಬು ಇಲ್ಲ.

    ಹುಂ! ಇಂಥ ಕಾಲ ಬರತ್ತೆ ಅಂತ ನಾನು ಆಗಾಗ್ಯೆ ಹೇಳ್ತಿದ್ರೂ ಈಗಿನ ಮಕ್ಕಳು ನಂಬ್ರಾನೇ ಇರ್ಲಿಲ್ಲ.

    ಕಲಿಗಾಲವಯ್ಯ ಕಲಿಗಾಲ
    ಕಡುಬಿಸಿಲಿನಲ್ಲೂ ಛಳಿಗಾಲ
    ಕಡುಛಳಿಯಲ್ಲೂ ಬೆವರುವ ಕಾಲ
    ಬೆವರಿನಲ್ಲೇ ಮಳೆ ಕಾಣುವ ಕಾಲ
    ಕಲಿಗಾಲವಯ್ಯ ಕಲಿಗಾಲ
    ಅರಿಯದವರಿಗಿದು ಕೊನೆಗಾಲ

    ಪ್ರತ್ಯುತ್ತರಅಳಿಸಿ
  2. ಮಾವಿನರಸರೆ,

    ಜೋರಾಗಿ ಬೊಬ್ಬಿಟ್ಟವರಿಗೆ ಆ ಗತಿ ಬರುತ್ತದೇಂತ ನಾನೂ ಕೇಳಿದ್ದೇನೆ. ಇದೊಂದು hair rising ಪ್ರಕರಣವೇ.

    ನೀವು ತಲೇಲಿ ಕೂದಲಿಲ್ಲ ಅಂತ ಬೀಗಬೇಕಾಗಿಲ್ಲ... ಇದ್ದಬದ್ದ ತಲೆಕೂದಲನ್ನೂ ಬೇರೆ ಗ್ರಹದವರು ಬಂದು ಕತ್ತರಿಸಿಕೊಂಡು ಹೋಗ್ತಿದಾರಲ್ಲಾ... :)

    ಪ್ರತ್ಯುತ್ತರಅಳಿಸಿ
  3. ನಿಮ್ಮ ಕೂದಲು ಇದೆಯಾ? ಇಲ್ಲ ಮಾಯನಾ? ಅನ್ವೇಷಣೆ ಮಾಡಿ :)

    ಪ್ರತ್ಯುತ್ತರಅಳಿಸಿ
  4. ಮನಸ್ವಿನಿ ಅವರೆ,

    ನಮಗೆ ಆ ತಾಪತ್ರಯವೇ ಇಲ್ಲ. ಮನೆಯಲ್ಲಿ ಗಣಪನ ವಾಹನಗಳು ಸಾಕಷ್ಟು ಓಡಾಡುತ್ತಿವೆ. ರಾತ್ರಿ ಮಲಗಿ ಬೆಳಗ್ಗೆ ಎದ್ದಾಗ ತಲೆ ಕ್ಲೀನ್ ಆಗಿರುತ್ತದೆ.

    ಮತ್ತೂ ಕೂದಲು ಸಂರಕ್ಷಣೆಯ ಮತ್ತೊಂದು ವಿಧಾನವೂ ಇದೆ. ರಾತ್ರಿ ಮಲಗುವಾಗ ಕೂದಲಿನ ಮೂಟೆಯನ್ನು ತಲೆಯಿಂದ ಕಿತ್ತು ಬೀರುವಿನಲ್ಲಿರಿಸೋದು, ಬೆಳಗ್ಗೆ ಎದ್ದಾಗ ಮತ್ತೆ ತಲೆಗೇರಿಸಿಕೊಳ್ಳೋದು.
    ;-)

    ಪ್ರತ್ಯುತ್ತರಅಳಿಸಿ
  5. ಎಲೈ ಇಲಿಕತ್ತರಿಸಿದಕೂದಲುಳ್ಳ un way ಶಿಯೇ,

    'ಹಜಾಮತ್ ಸೆ ಹಜಾಮತ್ ತಕ್..." ಎಂಬ ವಿಚಿತ್ರಾನ್ನ ಸಂಚಿಕೆಯಲ್ಲಿ ಬಾರ್ಬರಿಗಳ ಬಗ್ಗೆ ಉಲ್ಲೇಖಿಸಲಾಗಿತ್ತು.

    ೧. ಕ್ಷೌರಿಕರಿಗೆ ವಾಚಾಳಿತನ ಹೆಚ್ಚು
    ೨. ಮಹಿಳೆಯರಿಗೂ ವಾಚಾಳಿತನ ಹೆಚ್ಚು (ಯಾಕೆ ಎಂಬುದು beyond the scope of this ಕಮೆಂಟ್)

    ಆದ್ದರಿಂದ ಮಹಿಳೆಯರೇ ಕ್ಷೌರಿಕರಾದರೆ ಅಲ್ಲಿ ಮಾತಿನ ಭರಾಟೆ ಎಷ್ಟಿರಬಹುದು ಎಂಬ ಆತಂಕವನ್ನೂ ವ್ಯಕ್ತಪಡಿಸಲಾಗಿತ್ತು.

    'ಬಾರ್ಬರಾ'ಖ್ಯಾನದ ಬಗ್ಗೆ ಓದುಗರೂ ಸಾಕಷ್ಟು ಬರ್ಬರೆದಿದ್ದರು.

    ಅಂದಹಾಗೆ ರಾತ್ರಿ ಮಲಗುವಾಗ ನೀವು ಕೂದಲರಾಶಿಯನ್ನು ಬೀರುವಿನಲ್ಲೂ ತಲೆ ಮತ್ತು ದೇಹದ ಮತ್ತಿತರ ಭಾಗಗಳನ್ನು 'ಬೀಯರ್'ನಲ್ಲೂ ಅದ್ದಿಡುತ್ತೀರಿ ಎಂದು ನಿಮ್ಮ ಸ್ನೇಹಿತ ಪಬ್ಬಿಗರು ಹೇಳುತ್ತಿದ್ದರೆಂದು ಗುಮಾನಿ. ನಿಜವೇ?

    ಪ್ರತ್ಯುತ್ತರಅಳಿಸಿ
  6. (ಪುಲಿ)ಕೇಶಿ ಜೋಶ್ಇ ಅವರೆ,

    ಓಹ್.... ಪಬ್ಬಿನಲ್ಲಿ ಪಬ್ಬಿಗರೇ ನಿಮಗೆ ಜತೆಯಾಗಿದ್ದಾರೆಂದಾಗಿದ್ದರೆ ನೀವು ಕೂಡ ನಂಬುವ ಸ್ಥಿತಿಯಲ್ಲೇ ಇದ್ದೀರಿ ಅಂತಾಯ್ತು. :)

    ಅಂತೂ ತೇಲಾಡಿದ ಅನುಭವವಾಗಿದ್ದು ನಿಜ. ಆದರೆ ಯಾವುದರಲ್ಲಿ ಎಂಬುದು ತಿಳಿಯುವ ಸ್ಥಿತಿಗೆ ಇನ್ನೂ ಮರಳಿಲ್ಲ!

    ಪ್ರತ್ಯುತ್ತರಅಳಿಸಿ
  7. ಶಬ್ದರಾಜನ ಕೇಶಮಣಿದರ್ಪಣ ಓದಿದ್ದೀರಾ ಜೋಶ್‌eಯವರೇ?

    -ಪಬ್

    ಪ್ರತ್ಯುತ್ತರಅಳಿಸಿ
  8. ಕೇಶಿ ಮಣಿ ದರ್ಪಣ ನೋಡ್ಲಿಕ್ಕೆ ಕೇಶವೇ ಅಡ್ಡಿಯಾಗಿದ್ದು, ಕತ್ತರಿಸಲು ಮೂಷಿಕವನ್ನು ಕರೆಸಲಾಗುತ್ತಿದೆಯಂತೆ ಪಬ್ಬಿಗರೇ!!!!

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D