Tuesday, October 31, 2006

ಪ್ರಧಾನಿ ಪದೇ ಪದೇ ವಿದೇಶ ಪ್ರಯಾಣ ಗುಟ್ಟು ರಟ್ಟು

(ಬೊಗಳೂರು ನಿಧಾನಿ ಬ್ಯುರೋದಿಂದ)

ಬೊಗಳೂರು, ಅ.31- ಮೇರಾ ಮಹಾನ್ ಭಾರತದ ನಿಧಾನಿ ಪ್ರಧಾನಿ ಮನಮೋಹಕ ಸಿಂಗ್ ಅವರು ಪದೇ ಪದೇ ವಿದೇಶ ಪ್ರಯಾಣ ಮಾಡುತ್ತಿರುವುದೇಕೆ ಎಂಬುದನ್ನು ಶೋಧಿಸಲು ತೀವ್ರ ಒತ್ತಡ ಬಂದ ಹಿನ್ನೆಲೆಯಲ್ಲಿ ಬೊಗಳೆ ರಗಳೆ ಬ್ಯುರೋ ಕೂಡ ವಿದೇಶ ಪ್ರವಾಸದ ಮೇಲೆ ಕಣ್ಣಿಟ್ಟು ತನಿಖೆ ನಡೆಸಲಾರಂಭಿಸಿದೆ.

ಹವಾನಾದಲ್ಲಿ ಹೋಗಿ ಮುಷರಫ್ ಜತೆ ಶಾಂತಿಯ ಹವಾ ಅನುಭವಿಸಿ ಬರುವಾಗ ವಿರೋಧ ಪಕ್ಷಗಳು ಗಲಾಟೆ ಎಬ್ಬಿಸಿದವು. ಅಂತೆಯೇ ರಷ್ಯಾ, ದಕ್ಷಿಣ ಆಫ್ರಿಕಾ, ಫಿನ್ಲೆಂಡ್, ಬ್ರಿಟನ್ ಅಂತೆಲ್ಲಾ ತಿರುಗಾಟ ಮುಗಿಸಿ ಮರಳಿ ಬರುವಾಗ ಭಾರತದಲ್ಲಿ ಗಲಾಟೆ, ಭಯೋತ್ಪಾದನೆ ಅಶಾಂತಿ, ನಕ್ಸಲ್ ಹಿಂಸಾಚಾರ, ಯುಪಿಎಯೊಳಗೆ ಭಿನ್ನಮತ....

ಈ ಕುರಿತಾಗಿಯೇ ತನಿಖೆ ನಡೆಸಲಾಗಿದ್ದು, ಹಲವಾರು ವಿಷಯಗಳು ಬಯಲಾಗಿವೆ. ಅವುಗಳಲ್ಲಿ ಅತ್ಯಂತ ಪ್ರಮುಖವಾದದ್ದು ವಿದೇಶಾಂಗ ಸಚಿವರ ನೇಮಕಕ್ಕೆ ಹೆಚ್ಚುತ್ತಿರುವ ಒತ್ತಡ.ಯಾಕೆ ಎಂದು ನಿಧಾನಿಯ ಆಪ್ತರನ್ನು ಪ್ರಶ್ನಿಸಿದಾಗ ಅವರು ಹೇಳದಿದ್ದ ವಿಷಯವೆಂದರೆ, ವಿದೇಶಾಂಗ ಸಚಿವರ ನೇಮಕವಾದರೆ ತಮಗೆಲ್ಲಿ ವಿದೇಶ ಪ್ರವಾಸದ ಯೋಗ ತಪ್ಪಿ ಹೋಗುತ್ತದೆ ಎಂಬ ಆತಂಕ.

ಹಾಗಿದ್ದರೆ ಅವರು ವಿದೇಶ ಪ್ರಯಾಣಕ್ಕೆ ಹಾತೊರೆಯುತ್ತಿರುವುದೇಕೆ? ಎಂದು ಕೇಳಿದಾಗ... ಮೊದಲಿಗೆ ಉತ್ತರಿಸಲು ಹಿಂದು ಮುಂದು ನೋಡಿದರೂ, ಆ ಬಳಿಕ ಬಾಯಿ ಮುಚ್ಚಿ ವಿಷಯ ಹೇಳಿಯೇ ಬಿಟ್ಟರು.

ಸರಕಾರ ಅಧಿಕಾರಕ್ಕೆ ಬಂದು ಅದರ ಅರ್ಧ ಅವಧಿ ಮುಗಿಯುತ್ತಾ ಬಂದಿದೆ. ಈ ಅವಧಿಯಲ್ಲಿ ಜನಸಾಮಾನ್ಯರು ಬೆಲೆ ಏರಿಕೆಯ ಬಿಸಿಯಲ್ಲಿ ಅದು ಹೇಗೆ ಬದುಕುತ್ತಾರೋ ಗೊತ್ತಿಲ್ಲ. ಹಾಗಾಗಿ ಭಾರತದಲ್ಲಿ ಜೀವಿಸುವುದಕ್ಕಿಂತ ವಿದೇಶ ವಾಸವೇ ಅಗ್ಗದ ಸಂಗತಿ. ಅಲ್ಲೆಲ್ಲಾ ಪೆಟ್ರೋಲ್ ಬೆಲೆ ಏರಿತು, ತರಕಾರಿ ಬೆಲೆ ಏರಿತು ಅಂತ ಹೇಳಿಕೊಳ್ಳುವವರೂ ಇಲ್ಲ. ಯಾವ ಮಂಡೆ ಬಿಸಿಯೂ ಇಲ್ಲ ಎಂಬುದು ನಿಧಾನಿ ಕಚೇರಿಯಿಂದ ದೊರೆಯದ ಸಮಜಾಯಿಷಿ.

ಅದಲ್ಲದೆ, ಭಾರತದಲ್ಲಿದ್ದರೆ ಎಡಪಕ್ಷಗಳನ್ನು ಆಗಾಗ್ಗೆ ಎದುರಿಸಬೇಕು, ಮಾಜಿ ವಿದೇಶಾಂಗ ಸಚಿವ ನಟವರ ಸಿಂಗರಿಗೆ ಮುಖ ತೋರಿಸಲು ಸಾಧ್ಯವಾಗುತ್ತಿಲ್ಲ. ನೋಸಿಯಾ ಗಾಂಧಿ ಕೂಡ ಯಾಕೋ ಮುಗುಂ ಆಗಿದ್ದಾರೆ... ಈ ಎಲ್ಲ ತೊಂದರೆ ತಾಪತ್ರಯಗಳು ನಮಗೇಕೆ ಎಂಬುದು ಅವರ ಅಭಿಮತವೆಂದು ತಿಳಿದುಬಂದಿದೆ.

ಇಲ್ಲಿದ್ದರೆ ಒಂದಿಲ್ಲೊಂದು ಹಗರಣ ಬಯಲಾಗುತ್ತಾ ಇರುತ್ತದೆ, ಯುಪಿಎ ಸರಕಾರ ಮಾಡಿದ 'ಮಹಾನ್' ಕಾರ್ಯಗಳಿಗೆಲ್ಲಾ ನ್ಯಾಯಾಂಗವು ತಲೆ ತೂರಿಸಿ ಹಿಂದೆ ಜಗ್ಗುತ್ತಾ ಅಪಮಾನ ಮಾಡುತ್ತಿದೆ, ಈ ಕೋರ್ಟುಗಳು ಕೂಡ ನಮಗೆ ಮನಬಂದಂತೆ ಕಾರ್ಯ ನಿರ್ವಹಿಸಲು ಬಿಡುತ್ತಿಲ್ಲ ಎಂಬುದು ಅವರ ಅಸಮಾಧಾನಕ್ಕೆ ಕಾರಣವೆನ್ನಲಾಗುತ್ತಿದೆ.

-----------------------

ರಾಜ್ಯೋತ್ಸವ ಪ್ರಯುಕ್ತ ವಿಶೇಷ ಕೊಡುಗೆ.....

ನಿಮ್ಮ ಪ್ರತಿಗಳನ್ನು ಇಂದೇ ಕಾದಿರಿಸಿ....

ನಾಳಿನ ಸಂಚಿಕೆಯಲ್ಲಿ....

ಕನ್ನಡಿಗರಿಂದ ಕನ್ನಡಿಗರಿಗಾಗಿ ಕನ್ನಡವೇ ನಮ್ಮ ತಾಯಿ ತಂದೆ ಎಂದೆಲ್ಲಾ ಹೇಳುತ್ತಿರುವವರಿಗಾಗಿಯೇ ಸಿದ್ಧಪಡಿಸಲಾದ ವಿಶೇಷ ಕೊಡುಗೆ.

ಹೆಚ್ಚಿನ ವಿವರಗಳಿಗೆ ನಾಳಿನ ಬೊಗಳೆ ರಗಳೆ ನೋಡಿ...!!!

ನೋಡಲು ಮರೆಯದಿರಿ.... ಮರೆತು ನಿರಾಶರಾಗದಿರಿ!!!

Monday, October 30, 2006

ಸಮ್ಮಿಶ್ರಣ ಸರಕಾರದಲ್ಲಿ ನೈಜ ಕಿತ್ತಾಟವೇಕಿಲ್ಲ?

(ಬೊಗಳೂರು ಕಚ್ಚಾಟ ಬ್ಯುರೋದಿಂದ)
ಬೊಗಳೂರು, ಅ.30- ಜನತಾ ದಳದ ತೆನೆ ಹೊತ್ತ ರೈತ ಮಹಿಳೆಯ ಬದಲಾಗಿ ಹಿಂದಿನ ಚಕ್ರವೇ ಉರುಳಿಸಿದ ಪರಿಣಾಮವಾಗಿ ಮುಖ್ಯಮಂತ್ರಿ ಪಟ್ಟದಿಂದ ದಿಢೀರನೆ ಕೆಳಗೆ ಬಿದ್ದಿದ್ದ ಮಾಜಿ ಮುಖ್ಯಮಂತ್ರಿ ಭವಿಷ್ಯ ನುಡಿಯಲು ಹೊರಟಿದ್ದು ಕೇಳಿ ಆಸಕ್ತಿಯಿಂದ ಬೊಗಳೆ ರಗಳೆ ಬ್ಯುರೋ ಹೀಗೇ ತಿರುಗಾಡಿಕೊಂಡು ಅತ್ತ ಧಾವಿಸಿ ಬರಲು ಹೊರಟಿತು.

ಕಿತ್ತಾಟದಿಂದಲೇ ಸರಕಾರ ಪತನವಾಗುತ್ತದೆ ಎಂದು ಅವರು ಅನುಭವದ ನುಡಿಗಳಿಂದ ಭವಿಷ್ಯ ನುಡಿದಿದ್ದರೂ, ಈ ಬಾರಿ ಅದನ್ನು ಪ್ರಯೋಗ ಮಾಡಿಯೇ ತೀರಬೇಕು ಎಂದು ಬ್ಯುರೋ ತೀರ್ಮಾನಿಸಿ, ಕೆಲವೊಂದು ಹಣ್ಣು ಹಂಪಲುಗಳನ್ನು, ಮಾಲೆಪಟಾಕಿಯನ್ನು, ಕೊಳೆತ ಟೊಮೆಟೊವನ್ನು ಹಿಡಿದುಕೊಂಡು ಹೊರಟಿತು.

ಉಭಯ ಬಣಗಳಿಗೂ ಸರಿ ಸಮಾನಾಗಿ ಹಂಚುವ ಬದಲು, ಕಡಿಮೆ ಶಾಸಕರನ್ನು ಹೊಂದಿರುವ ತೆನೆ ಹೊತ್ತ ಮಹಿಳೆಗೆ ಹೆಚ್ಚು ಕೊಳೆತ ಟೊಮೆಟೋವನ್ನೂ, ಹೆಚ್ಚು ಶಾಸಕ ಬಲವಿರುವ ಕಮಲನಿಗೆ ಕಡಿಮೆ ಕೊಳೆತ ಮೊಟ್ಟೆಯನ್ನೂ ನೀಡಿ ಏನಾಗುತ್ತದೆ ಎಂದು ಕಾದು ಕೂರಲಾಯಿತು.

ಎಷ್ಟು ಕಾದರೂ ಏನೂ ಆಗಲೇ ಇಲ್ಲ. ಅವರದು ತಮಗೆ ಬೇಕು, ಇವರದು ಅವರಿಗೆ ಬೇಕು ಅಂತ ಅವರ್ಯಾರೂ ಎಳೆದಾಟ, ಕಿತ್ತಾಟ ಮಾಡಲೇ ಇಲ್ಲ!!!!

ಇದರ ಹಿಂದಿನ ರಹಸ್ಯ ಭೇದಿಸಲು ಹೊರಟಾಗ ಒಂದೇ ಒಂದು ವಿಷಯ ಗೊತ್ತಾಯಿತು.

ಅದೆಂದರೆ, ಇವರೆಷ್ಟು ಕಿತ್ತಾಟ ಮಾಡಿದರೂ ಏನೂ ದಕ್ಕುವುದಿಲ್ಲ. ಈಗಾಗಲೇ ತೆನೆ ಹೊತ್ತ ರೈತ ಮಹಿಳೆಯೂ ಕೈಯೂ ಪರಸ್ಪರ ಕಿತ್ತಾಡುತ್ತಲೇ ಎಲ್ಲವನ್ನೂ ಬರಿದು ಮಾಡಿದ್ದರಿಂದ, ಈಗ ಕಿತ್ತಾಟ ಮಾಡಿ ಪ್ರಯೋಜನವಿಲ್ಲ ಎಂದು ಉಭಯ ಬಣಗಳೂ ಸುಮ್ಮನಿದ್ದವು!

ಸಮ್ಮಿಶ್ರ ಸರಕಾರಗಳು ಈ ವಿಷಯದಲ್ಲಿ ಕಚ್ಚಾಟದೇ ಇರುವುದು, ಬರೇ ಮತದಾರರನ್ನು ಓಲೈಸಲು ಕೆಲವೊಂದಿಷ್ಟು ವಿಷಯಗಳನ್ನು ಎಳೆದು ತಂದು ರಾದ್ಧಾಂತ ಮಾಡುವುದು ಯಾಕೆಂಬುದರ ಹಿಂದಿನ ರಹಸ್ಯ ಬಯಲು ಮಾಡಿದ ಸಂತೋಷದಲ್ಲಿ ಬೊಗಳೆ ಬ್ಯುರೋ ಗಂಟು ಮೂಟೆ ಕಟ್ಟಿ ವಾಪಸಾಯಿತು.

Saturday, October 28, 2006

'ಅಧಿಕಾರ'ಕ್ಕೆ ಹಪಹಪಿಸುವ ಕೋಲಾಯುಕ್ತರು!...

(ಬೊಗಳೂರು ಭ್ರಷ್ಟಾಚಾರಿ ಬ್ಯುರೋದಿಂದ)
ಬೊಗಳೂರು, ಅ.28- ಲೋಕಾಯುಕ್ತರೂ ಅಧಿಕಾರಕ್ಕಾಗಿ ಹಪಹಪಿಸುತ್ತಿರುವುದನ್ನು ಓದಿ ಬೊಗಳೆ ರಗಳೆ ಬ್ಯುರೋ ಕುದಿಯತೊಡಗಿದ್ದು, ಈ ಬಿಸಿಯಿಂದಾಗಿ ಶೀಘ್ರವೇ ಬೇಳೆ ಬೇಯುವ ಸಾಧ್ಯತೆಗಳಿವೆ.

ದೇಶದ ಅರ್ಥ ವ್ಯವಸ್ಥೆಯ ಅಡಿಪಾಯವೇ ಆಗಿಬಿಟ್ಟಿರುವ ಭ್ರಷ್ಟಾಚಾರವನ್ನು ನಿವಾರಿಸಲು ಲೋಕಾಯುಕ್ತರು ಯತ್ನಿಸುತ್ತಿರುವುದನ್ನು ತೀವ್ರವಾಗಿ ಖಂಡಿಸಿರುವ ಸ್ವಅರ್ಥಾಭಿವೃದ್ಧಿ ಮಂಡಳಿಯು, ಈ ಭ್ರಷ್ಟಾಚಾರವನ್ನು ಇನ್ನಿಲ್ಲದಂತೆ ಮಾಡಿದರೆ, ದೇಶದ (ಅಂದರೆ ರಾಜಕಾರಣಿಗಳು, ಅಧಿಕಾರಶಾಹಿಯ) ಅರ್ಥಾಭಿವೃದ್ಧಿ ಆಗುವುದಾದರೂ ಹೇಗೆ ಎಂದು ಪ್ರಶ್ನಿಸಿದೆ.

ಈಗಿನ ಪೀಳಿಗೆಗೆ ಭ್ರಷ್ಟಾಚಾರ ಮಾಡುವುದೇ ಕೆಲಸ. ಅದರ ನಿರ್ಮೂಲನೆ ವಿಷಯವನ್ನೆಲ್ಲಾ ಮುಂದಿನ ಪೀಳಿಗೆಗೆ ಬಿಡುವುದು ಬಿಟ್ಟು ಇವರಿಗೇಕೆ ಅದರ ಉಸಾಬರಿ ಎಂದು ಪ್ರಶ್ನಿಸಿರುವ ಮಂಡಳಿ ಅಧ್ಯಕ್ಷ ಭ್ರಷ್ಟ ಕುಮಾರ್ ಅವರು, ಬೇಕಿದ್ದರೆ ಒಂದನೇ ತರಗತಿಯಿಂದಲೇ ಇಂಗ್ಲಿಷ್ ಕಡ್ಡಾಯ ಮಾಡಿದಂತೆ, ಹುಟ್ಟಿದ ತಕ್ಷಣ ಮಗುವಿಗೆ ಭ್ರಷ್ಟಾಚಾರ ವಿರುದ್ಧದ ಹೋರಾಟ ಬೇಕಿದ್ದರೆ ಕಲಿಸುವ ವ್ಯವಸ್ಥೆ ಮಾಡೋಣ ಮತ್ತು ಭ್ರಷ್ಟಾಚಾರ ಆರೋಪಗಳಿಂದ ಮುಕ್ತರಾಗುವುದು ಹೇಗೆಂಬ ಬಗ್ಗೆಯೂ ಒಂದು ಬದಿಯಲ್ಲಿ ಕಲಿಸೋಣ ಎಂದು ಹೇಳಿದ್ದಾರೆ.

ಸದ್ಯದ ಅಧಿಕಾರದಿಂದ ಏನನ್ನೂ ಸಾಧಿಸುವುದು ಸಾಧ್ಯವಿಲ್ಲ ಎಂಬ ಲೋಕಾಯುಕ್ತರ ಮಾತನ್ನು ಗಂಭೀರವಾಗಿ ತರಾಟೆಗೆ ತೆಗೆದುಕೊಂಡಿರುವ ಅವರು, ಈಗಾಗಲೇ ಕೋಟಿ ಕೋಟಿ ಆಸ್ತಿಯನ್ನು ಬಯಲಿಗೆ ಎಳೆದುಹಾಕಿ ಪ್ರದರ್ಶಿಸಿದ್ದು ಯಾವ ಅಧಿಕಾರದಿಂದ ಎಂದು ಪ್ರಶ್ನಿಸಿದ್ದಾರೆ. ಯಾರಿಗೂ ತಿಳಿಯದ ಜಾಗದಲ್ಲಿ ಈ ಚಿನ್ನಾಭರಣಗಳು ಕೊಳೆಯದಂತೆ ಮತ್ತು ಅದು ಲೋಕಕ್ಕೆಲ್ಲಾ ತಿಳಿಯಲಿ, ಜನರೂ ಸಂತೋಷ ಪಡಲಿ ಎಂದು ಅವರೇ ಆಗಾಗ್ಗೆ ಇಂಥ ಚಿನ್ನಾಭರಣ ಪ್ರದರ್ಶನಗಳನ್ನು ಏರ್ಪಡಿಸುತ್ತಿದ್ದಾರೆ. ಮತ್ಯಾಕೆ ಅವರಿಗೆ ಇನ್ನಷ್ಟು ಅಧಿಕಾರ ಎಂದು ಪ್ರಶ್ನಿಸಿರುವ ಭ್ರಷ್ಟಕುಮಾರ್, ಅವರ ಕೈಗೆ ದಂಡ ಕೊಟ್ಟು ನಮ್ಮಂಥವರು ದಂಡ ತೆರಬೇಕೇ ಎಂದು ಕೇಳಿದ್ದಾರೆ,

ಲೋಕಾಯುಕ್ತರ ಕೈಗೆ ಕತ್ತರಿ ಕೊಟ್ಟು ನಮ್ಮ ಜೇಬು ಕತ್ತರಿಸಿಕೊಳ್ಳಲು ನಾವಂತೂ ಖಂಡಿತಾ ತಯಾರಿಲ್ಲ, ಅವರಿಗೆ ಹೆಚ್ಚಿನ ಅಧಿಕಾರ ಕೊಡುವುದಕ್ಕೆ ನಮ್ಮ ಗಂಭೀರ ವಿರೋಧವಿದೆ. ಈಗಾಗಲೇ ಚಿನ್ನಾಭರಣ ಪ್ರದರ್ಶನದೊಂದಿಗೆ, ಅದರ ಒಡೆಯರ ಚಿತ್ರ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದೆ. ಇಷ್ಟೇ ಸಾಕು, ಹೆಚ್ಚಿನ ಶಿಕ್ಷೆಯ ಅಗತ್ಯವೇ ಇಲ್ಲ ಎಂದು ಹೇಳಿರುವ ಅವರು, ಕೊನೆಗೊಂದು ನುಡಿ ಮುತ್ತು ಉದುರಿಸಿದ್ದಾರೆ.

ಎಲ್ಲರನ್ನೂ ಶಿಕ್ಷಿಸುವ ಅಧಿಕಾರ ಲೋಕಾಯುಕ್ತರಿಗೆ ಕೊಟ್ಟುಬಿಟ್ಟರೆ, ಈ ದೇಶದಲ್ಲಿ ಭ್ರಷ್ಟಾಚಾರಿಗಳ ಸಂಘದ ಗತಿಯೇನು ಎಂದು ಅವರು ಪ್ರಶ್ನಿಸಿರುವುದು ಉತ್ತರ ಸಿಗದ new type question ಎಂದು ಪರಿಗಣಿಸಲಾಗಿದೆ.

Friday, October 27, 2006

ಅತ್ಯಾಚಾರಕ್ಕೆ ಕಾರಣ ಸಂಶೋಧನೆ

(ಬೊಗಳೂರು .... ಬ್ಯುರೋದಿಂದ)
ಬೊಗಳೂರು, ಅ.27- ಹೆಚ್ಚುತ್ತಿರುವ ಅತ್ಯಾಚಾರಕ್ಕೆ ಕಾರಣವನ್ನು ಸಂಶೋಧನೆ ಮಾಡಿರುವ ವ್ಯಕ್ತಿಯೊಬ್ಬರಿಗೆ ಅತ್ಯಾಚಾರ ರತ್ನ ಬಿರುದು ನೀಡಲು ನಿರ್ಧರಿಸಲಾಗಿದೆ.

ಮಾಂಸವನ್ನು ಹೊರಗಿಟ್ಟರೆ ಬೆಕ್ಕುಗಳು ದಾಳಿ ಮಾಡಿ ತಿನ್ನದಿರುತ್ತವೆಯೇ ಎಂಬ ಸಿದ್ಧಾಂತವನ್ನು ಮೂಲವಾಗಿಟ್ಟುಕೊಂಡು ಅತ್ಯಂತ ಆಚಾರ ಹೆಚ್ಚುತ್ತಿರುವುದರ ಹಿನ್ನೆಲೆ ಕುರಿತು ಹಗಲು ರಾತ್ರಿ ಯೋಚಿಸಿ ಯೋಚಿಸಿ ಈ ಸಂಶೋಧನೆ ಮಾಡಿರುವುದಾಗಿ ಸಂಶೋಧಕರು ಇಲ್ಲಿ ಹೇಳಿಕೊಂಡಿದ್ದಾರೆ.

ಆದರೆ ಇತ್ತೀಚಿನ ಚಲನವಲನಚಿತ್ರಗಳನ್ನು ನೋಡಿದವರು ಈ ಕಾರಣವನ್ನು ಮೊದಲೇ ಪತ್ತೆ ಹಚ್ಚಿದ್ದರಾದರೂ ಯಾರೂ ಕೂಡ ಬಹಿರಂಗಪಡಿಸಿರಲಿಲ್ಲ. ಇನ್ನು ಕೆಲವರು ಈ ಸಂಶೋಧನೆ ಕುರಿತು ಪೇಟೆಂಟ್‌ಗೆ ಅರ್ಜಿ ಸಲ್ಲಿಸಿದ್ದು, ಪೇಟೆಂಟ್ ಲಭ್ಯವಾದ ಬಳಿಕವಷ್ಟೇ ಬಹಿರಂಗಪಡಿಸಲು ತೀರ್ಮಾನಿಸಿದ್ದರು.ಆದರೆ ಈ ಮಹಾತ್ಮರು ಅಷ್ಟು ಬೇಗ Spilled the beans!. ಇದಕ್ಕಾಗಿ ಅವರಿಗೆ ಬಿದಿರುಪ್ರದಾನ ಮಾಡಲು ಅಖಿಲ ವಿಶ್ವ ಸಕಲ ಮಹಿಳಾ ಸಂಘವು ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.

Thursday, October 26, 2006

ಸ್ತ್ರೀದೌರ್ಜನ್ಯ ಕಾಯಿದೆ: ಪುರುಷಮಣಿಗಳ ಸ್ವಾಗತ!

(ಬೊಗಳೂರು ಕಾಯಿದೆ ಉಲ್ಟಾ ಬ್ಯುರೋದಿಂದ)
ಬೊಗಳೂರು, ಅ.26- ಬೆಲೆ ಏರಿಕೆಯಿಂದಾಗಿ ಮನೆಯಲ್ಲಿ ಜೀವಿಸುವುದು ಕಷ್ಟಸಾಧ್ಯವಾಗಿರುವ ಪುರುಷ ಪ್ರಾಣಿಗಳಿಗೆ ಜೀವಿಸಲು ವಿನೂತನ ಅವಕಾಶ ಕಲ್ಪಿಸಿಕೊಟ್ಟಿರುವ ಕೇಂದ್ರ ಸರಕಾರದ ಹೊಸ ಕಾಯಿದೆಯು ಸರ್ವತ್ರ ಶ್ಲಾಘನೆಗೆ ಪಾತ್ರವಾಗಿದೆ.

ತಮ್ಮ ತಮ್ಮ ಸ್ವಂತ ಪತ್ನಿಯರನ್ನು ಹೊಡೆಯಬಲ್ಲ, ಬಡಿಯಬಲ್ಲ, ಇತರ ಸ್ತ್ರೀ ಜೀವಿಗಳನ್ನು ಹಿಂಸಿಸಬಲ್ಲವರಿಗೆ ಸ್ವಂತ ಗೃಹದಷ್ಟೇ ಸಕಲ ಸೌಲಭ್ಯಗಳುಳ್ಳ ಕಾರಾ-ಗೃಹ ವಾಸಕ್ಕೆ ಅವಕಾಶ ಮಾಡಿಕೊಟ್ಟಿರುವುದರಿಂದ ಪುರುಷ ಗಡಣ ಸಂತೃಪ್ತವಾಗಿದೆ ಎಂಬುದನ್ನು ಪತ್ತೆ ಹಚ್ಚಲಾಗಿದೆ.

ಜೈಲಿನಿಂದ ಹೊರಗಿದ್ದರೆ ಒಂದು ಕಿಲೋ ಟೊಮೆಟೋ ಪಡೆಯಬೇಕಿದ್ದರೆ ಒಂದು ಗ್ರಾಂ ಚಿನ್ನ ಅಡವಿಡಬೇಕಾದ ಪರಿಸ್ಥಿತಿ. ಆದರೆ ಜೈಲಿಗೆ ಹೋದರೆ ಉಚಿತ ಅಶನ, ವಸನ ಇತ್ಯಾದಿಗಳು ದೊರೆಯುತ್ತದೆ ಎಂಬ ಅಮೂಲ್ಯ ಸೂತ್ರವನ್ನು ಅಳವಡಿಸಲಾಗಿರುವುದು ಸರ್ವರ ಹರುಷಕ್ಕೆ ಕಾರಣವಾಗಿದೆ.

ಮಹಿಳಾ ಹಕ್ಕಿಗಳ ಸಂಘ ಹೋರಾಟದ ಕಣಕ್ಕೆ

ಸಾಮರ್ಥ್ಯ ಹೊಂದಿರುವ ಪುರುಷರಿಗೆ ಮಾತ್ರ ಈ ಅವಕಾಶ ಮಾಡಿಕೊಟ್ಟಿರುವ ಕ್ರಮಕ್ಕೆ ಮಹಿಳಾಮಣಿಗಳಿಂದ ಆಕ್ಷೇಪ ಬರುತ್ತಿದ್ದು, ತಮಗೂ ಈ ಅವಕಾಶ ದೊರಕಿಸಿಕೊಳ್ಳುವ ನಿಟ್ಟಿನಲ್ಲಿ ಅವುಗಳೆಲ್ಲಾ ಹೋರಾಟಕ್ಕೆ ಬೀದಿಗಿಳಿಯಲು ತೀರ್ಮಾನಿಸಿವೆ ಎಂದು ಇತ್ತೀಚಿನ ವರದಿಗಳು ತಿಳಿಸಿವೆ.

ತಾವು ಕೂಡ ಪುರುಷರಷ್ಟೇ ಸಮಾನರು, ತಮಗೂ ಅವರನ್ನು ಹಿಂಸಿಸುವ ತಾಕತ್ತು ಇದೆ. ನಮಗೂ ಇಂಥ ಕಾಯಿದೆ ಅನ್ವಯಿಸಬೇಕು ಎಂದು ಅಖಿಲ ಭಾರತ ಮಹಿಳಾ ಹಕ್ಕಿಗಳ ರಕ್ಷಣಾ ಸಮಿತಿ ಆಗ್ರಹಿಸಿದೆ.

ಉಲ್ಟಾ ಹೊಡೆದ ಕಾಯಿದೆ

ಪ್ರೀತಿ, ಆತ್ಮೀಯತೆ, ಸಾಂತ್ವನ ಎಂಬಿತ್ಯಾದಿ ಗುಣಗಳು ಈಗಿನ ಕಾಲದಲ್ಲಿ ಮಾನವರಿಗೆ ಸಂಬಂಧಿಸಿದ್ದಲ್ಲ.... ಅಂದರೆ ಅ-ಮಾನವೀಯ ಎಂದಾಗಿಬಿಟ್ಟಿರುವುದರಿಂದ ಈ ಅಮಾನವೀಯತೆಯನ್ನೇ ಬಂಡವಾಳವಾಗಿಟ್ಟುಕೊಳ್ಳಲು ಪುರುಷರು ನಿರ್ಧರಿಸಿದ ಪರಿಣಾಮ ದೇಶಾದ್ಯಂತ ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚಿದೆ ಎಂದು ತಿಳಿದುಬಂದಿದೆ.

ಗುರುವಾರದಿಂದ ಈ ಕಾಯಿದೆ ಜಾರಿಗೆ ಬಂದಿರುವುದರಿಂದ ಮಹಿಳೆಯರ ಮೇಲಿನ ಹಿಂಸಾಚಾರ ಪ್ರಕರಣಗಳು ದೇಶಾದ್ಯಂತ ಹೆಚ್ಚಳವಾಗತೊಡಗಿದೆ. ಹಾಗಾಗಿ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಈ ಕಾಯಿದೆ ರೂಪಿಸಿದ್ದು ಎಂದು ಸರಕಾರ ಹೇಳಿರುವುದು ಬರೀ ಬೊಗಳೆ ಎಂಬುದನ್ನು ನಮ್ಮ ಬ್ಯುರೋ ಯಾವುದೋ ಹೊತ್ತು ಗೊತ್ತಿಲ್ಲದ ನಾಡಿನಲ್ಲಿದ್ದುಕೊಂಡೇ ಅನ್ವೇಷಣೆ ಮಾಡಿದೆ.

Wednesday, October 25, 2006

ವಿದ್ಯಾರ್ಥಿನಿಯರು ಮದ್ಯಾರ್ಥಿನಿಯರಾದಾಗ!

(ಬೊಗಳೂರು ರಿಮೋಟ್ ಬ್ಯುರೋದಿಂದ)
ಬೊಗಳೂರು, ಅ.25- ಚೀನಾದಲ್ಲಿ ಇತ್ತೀಚೆಗೆ ಫಿಂಗ್ ಕಿಶರ್, ತ್ರಿಬಲ್ ಝಡ್ ಮುಂತಾದ ಮಾರ್ಕಿನ ಕಿಕ್ ಕೊಡಲಾರದ ದ್ರವಗಳು ಭಾರಿ ಬೇಡಿಕೆ ಪಡೆದುಕೊಂಡಿದ್ದು, ಯಾಕಿರಬಹುದು ಎಂಬ ಸಂಶಯ ಕಂಡುಬಂದ ಹಿನ್ನೆಲೆಯಲ್ಲಿ ಪರಲೋಕ ಯಾತ್ರೆ ಕೈಗೊಳ್ಳಲಾಯಿತು.

ಪರಲೋಕ ಯಾತ್ರೆಗೆ ಮೊದಲೇ 'ತೀರ್ಥ' ಯಾತ್ರೆಯನ್ನೂ ಕೈಗೊಂಡ ಕಾರಣದಿಂದಾಗಿ ಕೆಲವು ದಿನಗಳಿಂದ ಬೊಗಳೆ ರಗಳೆ ತಲೆಮರೆಸಿಕೊಳ್ಳಬೇಕಾಗಿತ್ತು.

ತನಿಖೆ ವೇಳೆ ಮತ್ತೊಂದು ವಿಷಯ ಬಯಲಾಗಿದ್ದು, ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ವಿಶೇಷವಾಗಿ ಹುಡುಗಿಯರು ಓದಿನಲ್ಲಿ, ಕಲಿಯುವಿಕೆಯಲ್ಲಿ ಹಿಂದೆ ಬಿದ್ದಿದ್ದಾದರಾದರೂ, ಇಂತಹಾ ಮದ್ಯೋದ್ಯೋಗ ಕಲಿಯುವಿಕೆಯಲ್ಲಿ ಮುನ್ನಡೆ ಸಾಧಿಸುತ್ತಾ, ಮದ್ಯಾರ್ಥಿಗಳಾಗುತ್ತಿದ್ದಾರೆ ಎಂದು ತಿಳಿದುಬಂದಿದೆ.

ಶಿಕ್ಷಕರು ಕೊಡುವ ಶಿಕ್ಷೆ ಹೆಚ್ಚಾದಂತೆ ಬಾಲ-ಕರುಗಳು ಕೂಡ ಓದಿನಲ್ಲಿ ಹೆಚ್ಚು ಹೆಚ್ಚು ಹಿಂದೆ ಬೀಳತೊಡಗಿದ್ದಾರೆ. ವಿದ್ಯಾರ್ಥಿನಿಯರು ಮದ್ಯಾರ್ಥಿನಿಯಾಗುತ್ತಿರುವುದರಿಂದ ಕಂಗೆಟ್ಟ ವಿದ್ಯಾರ್ಥಿಗಳೂ ಕಾರು- ಮತ್ತು ಬಾರು ಹೆಚ್ಚಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಒಟ್ಟಿನಲ್ಲಿ Studyಯಲ್ಲಿ concentrate ಮಾಡದವರೆಲ್ಲರೂ ಹೆಚ್ಚು ಹೆಚ್ಚು concentrated ಆಗಿರುವ ಮದ್ಯಕ್ಕೆ ಮೊರೆ ಹೋಗುತ್ತಿರುವುದು ಗಮನಕ್ಕೆ ಬಂದಿದೆ. ಈ ಕಾರಣಕ್ಕೆ ಅವರನ್ನು ಮಾತನಾಡಿಸಿದಾಗ, ಕಲಿಯುವುದಕ್ಕಿಂತ ಕಲಿಯದೆ ದೊರೆಯುವ ಕಿಕ್ಕೇ ಉತ್ತಮ ಎಂದು ತಾವು ತಿಳಿದುಕೊಂಡಿರುವುದಾಗಿ ಮದ್ಯಾರ್ಥಿನಿಯರು ಹೇಳಿದ್ದಾರೆ.

ಸೂಚನೆ

[ಕಲಿಯುವುದಕ್ಕಿಂತ ಕಲಿಯದಿರುವುದೇ ಉತ್ತಮ ಎಂದು ತಿಳಿದುಕೊಂಡ ಕಾರಣದಿಂದಾಗಿ ಮತ್ತು ಈಗ ಅಜ್ಞಾತ ವಾಸದಲ್ಲಿರುವುದರಿಂದಾಗಿ ಬೊಗಳೆ ರಗಳೆ ಬ್ಯುರೋವು ಲೋಕದ ಸಮಸ್ತ ಸಂಪರ್ಕ ಕಡ್ಡಾಯವಾಗಿ ಕಡಿದುಕೊಂಡಿದೆ. ಸದ್ಯಕ್ಕೆ ಜಿ-ಮೇಲ್, ಯಾಹೂ, ರೆಡಿಫ್, ಹಾಟ್ ಮೇಲ್ ಇತ್ಯಾದಿಗಳು ನೆಟ್ಟಿನಲ್ಲಿ ಎಷ್ಟು ಸರ್ಚ್ ಮಾಡಿದರೂ ಸಿಗುತ್ತಿಲ್ಲ. ಕೀಳಧಿಕಾರಿಗಳ ಕೈವಾಡ ಖಚಿತವಾಗಿದ್ದು, ರಾತೋರಾತ್ರಿ ಯಾರಿಗೂ ತಿಳಿಯದಂತೆ ಪತ್ರಿಕೆ ಪ್ರಕಟವಾಗುತ್ತಿದೆ. -ಸಂ]

Friday, October 20, 2006

ಬೊಗಳೆ ರಗಳೆಯಲ್ಲಿ ಪಟಾಕಿ ಇಲ್ಲ!

[ಸಮಸ್ತ ಓದುಗ ಮಿತ್ರರಿಗೆ ಮನೆ-ಮನ ಬೆಳಗುವ ದೀಪಾವಳಿ ಹಬ್ಬದ ಶುಭಾಶಯಗಳು]
ಸೂಚನೆ:
ಬೊಗಳೆ ರಗಳೆ ಬ್ಯುರೋ ದೀಪಾವಳಿಯನ್ನು ವಿಶಿಷ್ಟವಾಗಿ ಆಚರಿಸಲು ನಿರ್ಧರಿಸಿದ್ದು, ಸರಣಿ ಬಾಂಬ್ ಸ್ಫೋಟಿಸುವುದು ಇಷ್ಟವಿಲ್ಲ. ಈ ಕಾರಣಕ್ಕೆ ಇದುವರೆಗೆ ಹೆಚ್ಚೂಕಡಿಮೆ ಪ್ರತಿದಿನ ಠುಸ್ ಪುಸ್ ಅಂತ ಪಟಾಕಿ ಬಿಡುತ್ತಿದ್ದ ಬ್ಯುರೋ, ಇನ್ನು ಕೆಲವು ದಿನಗಳ ಕಾಲ ಪಟಾಕಿ ಬಿಡದಿರಲು ತೀರ್ಮಾನಿಸಿದೆ.
 
ಇದಕ್ಕೆ ಪ್ರಮುಖ ಕಾರಣವೆಂದರೆ, ಕಂಪನಿಗೇ ತರಬೇತಿ ನೀಡುವುದಕ್ಕಾಗಿ ಬೊಗಳೆ ರಗಳೆ ಸಿಬ್ಬಂದಿಯನ್ನು ದೂರದ ಯಾವುದೋ ಹೊತ್ತು ಗೊತ್ತಿಲ್ಲದ ಊರಿಗೆ ಕರೆದೊಯ್ಯಲಾಗಿದೆ. ಆದರೂ ನಾಪತ್ತೆ ಬ್ಯುರೋದಿಂದ ಸಾಧ್ಯವಾದಲ್ಲಿ ಆಗಾಗ್ಗೆ ವರದಿಗಳನ್ನು ಕಳುಹಿಸಲು ಯತ್ನಿಸಲಾಗುವುದು ಎಂದು ಭರವಸೆ ದೊರೆತಿದೆ.
 
ದೀಪಾವಳಿಯ ಶುಭವಸರದಲ್ಲಿ ಬೊಗಳೆ ರಗಳೆ ಬ್ಯುರೋಗೆ ಸಿಹಿ ತಿಂಡಿ ಕಳುಹಿಸುವವರು ಅದು ಇಲ್ಲಿಗೆ ತಲುಪುವುದು ತಡವಾಗುತ್ತದೆಯಾದುದರಿಂದ ಹಾಳಾಗದಂತೆ ಕೀಟನಾಶಕ ಮತ್ತಿತರ ಔಷಧಗಳನ್ನು ಸರಿಯಾದ ಪ್ರಮಾಣದಲ್ಲೇ ಸಿಂಪಡಿಸಿ ಕಳುಹಿಸತಕ್ಕದ್ದು- ಸಂ

Thursday, October 19, 2006

ನಮ್ಮ ಪಾ(ತ)ಕಿ ಮಿತ್ರ ಪರೀಕ್ಷೆಯಲ್ಲಿ ಪಾಸಾಗಲಿ

(ಬೊಗಳೂರು ಭಯೋತ್ಪಾದನಾ ಬ್ಯುರೋದಿಂದ)
ಬೊಗಳೂರು, ಅ.19- ಪಾತಕಿಸ್ತಾನಕ್ಕೆ ಪರೀಕ್ಷೆ ನಡೆಸುವುದಾಗಿ ನಿಧಾನಿ ಮನಮೋಹಕ ಸಂಗ್ ಮತ್ತೆ ಮತ್ತೆ ಘೋಷಿಸಿದ್ದಾರೆ.
 
ದೇಶಾದ್ಯಂತ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚುತ್ತಿವೆ. ಮುಂಬಯಿ ಬಾಂಬ್ ಸ್ಫೋಟದಲ್ಲಿ ಪಾಕಿಸ್ತಾನದ ಐಎಸ್ಐ ಕೈವಾಡವಿದೆ ಎಂದೆಲ್ಲಾ ನಮ್ಮ ಕೆಲಸವಿಲ್ಲದ ಪೊಲೀಸರು ಪತ್ತೆ ಹಚ್ಚಿದ್ದಾರೆ. ಹಾಗಾಗಿ ಪಾತಕಿಸ್ತಾನಕ್ಕೆ ಪರೀಕ್ಷೆ ನಡೆಸುವುದು ಅನಿವಾರ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
 
ನಮ್ಮ ಬೇಹುಗಾರಿಕಾ ಏಜೆನ್ಸಿಗಳು, ರಕ್ಷಣಾ ಪಡೆಗಳು ಮತ್ತಿತರ ದೇಶರಕ್ಷಣೆಯಲ್ಲಿ ಪ್ರಧಾನ ಪಾತ್ರ ವಹಿಸುತ್ತಿರುವ ಇಲಾಖೆಗಳು ಮಾಡಿರುವ ಪರೀಕ್ಷೆ ಸರಿ ಇಲ್ಲ. ಇವೆಲ್ಲದರಲ್ಲಿ ನಮ್ಮ ನೆರೆಯ ಮಿತ್ರ ರಾಷ್ಟ್ರವಾಗಿರುವ ಪಾತಕಿಸ್ತಾನ ಅನುತ್ತೀರ್ಣವಾಗಿದೆ. ಮಿತ್ರರಿಗೆ ಸಹಾಯ ಮಾಡುವುದು ನಮ್ಮ ಕರ್ತವ್ಯವಾದುದರಿಂದ ಅದಕ್ಕೆ ನಾವೇ ಪರೀಕ್ಷೆ ನಡೆಸುತ್ತೇವೆ, ಹೇಗಾದರೂ ಅವರು ಉತ್ತೀರ್ಣರಾಗಬೇಕು ಎಂದು ಅವರು ಹೇಳಿದರು.
 
ಭಯೋತ್ಪಾದಕ ಚಟುವಟಿಕೆಯಲ್ಲಿ ಎತ್ತಿದ ಕೈ ಆಗಿರುವ ಮತ್ತು ನರ್ಸರಿಯಿಂದಲೇ ಭಯೋತ್ಪಾದಕ ಶಿಕ್ಷಣದಲ್ಲಿ ಪಳಗಿರುವ ಅನುಭವಿ ರಾಷ್ಟ್ರವೊಂದರ ಸಹಾಯ ಪಡೆದು ಉಗ್ರವಾದದ ವಿರುದ್ಧ ಹೋರಾಡಲು ರೂಪಿಸಲಾಗಿರುವ ಭಾರತ-ಪಾತಕಿಸ್ತಾನ ಜಂಟಿ ಕಾರ್ಯತಂತ್ರ ವ್ಯವಸ್ಥೆಯ ಕುರಿತು ಪುತ್ರಿಕರ್ತರ ಪ್ರಶ್ನೆಗಳಿಗೆ ಅವರು ಉತ್ತರಿಸುತ್ತಿದ್ದರು.
 
ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎಂಬ ಸಿದ್ಧಾಂತ ನಮ್ಮದು ಎಂದ ಅವರು, ಈಗೆಲ್ಲಾ ಚುಚ್ಚುತ್ತಿರುವುದು ಸಣ್ಣ ಮುಳ್ಳುಗಳು. ಕಣ್ಣಿಗೇ ಕಾಣಿಸುವುದಿಲ್ಲ. ಇನ್ನೂ ದೊಡ್ಡ ಮುಳ್ಳು ಚುಚ್ಚಿದ ನಂತರ, ಅದು ಕಣ್ಣಿಗೆ ಕಂಡರೆ ಅದನ್ನು ತೆಗೆಯುವ ಪ್ರಯತ್ನ ಮಾಡಲಾಗುತ್ತದೆ ಎಂದು ಅವರು ಅಳಿದುಳಿದಿರುವ ಸ್ವದೇಶೀಯರಿಗೆ ಭರವಸೆ ನೀಡಿದರು.
 
ಮಿತ್ರರ ರಕ್ಷಣೆಯೇ ನಮ್ಮ ಕರ್ತವ್ಯ. ಮಿತ್ರರು ಏನು ಮಾಡಿದರೂ ಸಹಿಸಬೇಕು ಎನ್ನುವುದು ಮೈತ್ರಿ ಧರ್ಮ. ಅವರೆಲ್ಲಾ ವಿಭಿನ್ನ ರೀತಿಯ (ಮಾರಣ) ಹೋಮಗಳನ್ನು ನಡೆಸುತ್ತಾ ಸುಭಿಕ್ಷೆಗಾಗಿ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದ ಅವರು, ಭಯೋತ್ಪಾದನೆ ಸೃಷ್ಟಿಸುವುದು ಪಾತಕಿಸ್ತಾನಕ್ಕೆ ರಾಜಕೀಯ ಅನಿವಾರ್ಯವಾಗಿದ್ದರೆ, ಅದನ್ನು ಸಹಿಸಿಕೊಂಡು ಭಾರತವೊಂದು ಸಹಿಷ್ಣು ರಾಷ್ಟ್ರ ಎಂದು ಜಗತ್ತಿಗೇ ತೋರಿಸಿಕೊಡುವುದು ನಮ್ಮ ರಾಜಕೀಯ ಅನಿವಾರ್ಯ ಎಂದು ವಿವರಿಸಿದರು.
 
ಪಾತಕಿಸ್ತಾನದಲ್ಲಿ ಬಹುಸಂಖ್ಯಾತರ ರಕ್ಷಣೆಗೆ ಯಾವೆಲ್ಲಾ ಕ್ರಮ ಕೈಗೊಳ್ಳಲಾಗುತ್ತದೆಯೋ, ಭಾರತದಲ್ಲಿ ಅಲ್ಪಸಂಖ್ಯಾತರ ರಕ್ಷಣೆಗೂ ಅದೇ ರೀತಿಯ ಕ್ರಮ ಕೈಗೊಳ್ಳಲಾಗುತ್ತದೆ ಎಂದ ಅವರು, ಇಲ್ಲದಿದ್ದರೆ ನಾವು ಮತ್ತೊಮ್ಮೆ ಆರಿಸಿಬಂದು ದೇಶ ಸೇವೆ ಮಾಡುವುದಾದರೂ ಹೇಗೆ ಎಂದವರು ಪ್ರಶ್ನಿಸಿದರು.

Wednesday, October 18, 2006

ನರ್ಸರಿ... ಸಂದರ್ಶನವೇ ಸರಿ: ಪುಟಾಣಿ ಪರಿಷತ್ ಆಗ್ರಹ

(ಬೊಗಳೂರು ನರ್ಸರಿ-ನರ್ತಪ್ಪು ಬ್ಯುರೋದಿಂದ)
ಬೊಗಳೂರು, ಅ.18- ನರ್ಸರಿ ಶಿಕ್ಷಣಕ್ಕೆ ಸೇರಿಸಿಕೊಳ್ಳಲು ಸಂದರ್ಶನ ನಡೆಸಲಾಗದು ಎಂಬ ಕೋರ್ಟ್ ಆದೇಶದಿಂದ ತೀವ್ರವಾಗಿ ಆಕ್ರೋಶಗೊಂಡಿರುವ ಪುಟಾಣಿಗಳನ್ನೊಳಗೊಂಡ ನರ್ಸರಿ ವಿದ್ಯಾರ್ಥಿ ಪರಿಷತ್ ಸಂಘಟನೆಯು ಭಾರತ್ ಬಂದ್‌ಗೆ ಕರೆ ನೀಡಿದೆ.
 
ಇಂದಿನ ಈ ಹೈ ಕೆಟ್ ಯುಗದಲ್ಲಿ ಪ್ರತಿಯೊಂದಕ್ಕೂ ಇಂಟರ್ವ್ಯೂ ನೀಡಬೇಕಾಗುತ್ತದೆ. ಹಾಗಿರುವಾಗ ನಮಗೆ ಇಂಟರ್ವ್ಯೂ ನಡೆಸದೆ ಅಪಮಾನ ಮಾಡಲಾಗುತ್ತಿದೆ ಎಂದು ಹೇಳಿರುವ ಪುಟಾಣಿ ಪರಿಷತ್ ಅಧ್ಯಕ್ಷ ಪುಟ್ಟು ಕುಮಾರ್, ನಮ್ಮ ಅಪ್ಪ ಅಮ್ಮಂದಿರಿಗೂ ಇಂಟರ್ವ್ಯೂ ನಡೆಸಬಾರದೆಂಬ ಆದೇಶ ಶುದ್ಧ ತಪ್ಪು ಎಂದು ಸಾರಿದ್ದಾರೆ.
 
ಇದೇ ರೀತಿಯಲ್ಲಿ ದೇಶ ವಿದೇಶದಲ್ಲಿ ಭಾರಿ ಪ್ರಮಾಣದಲ್ಲಿ ಪ್ರತಿಭಟನೆ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಪುಟ್ಟು ಕುಮಾರ್ ತಿಳಿಸಿದ್ದಾರೆ. ಈ ಬಗ್ಗೆ ಬೊಗಳೆ ರಗಳೆ ಬ್ಯುರೋ ನೇರವಾಗಿ ಪುಟ್ಟು ಮತ್ತು ಪುಟ್ಟಿಯರ ಕಿವಿ ಹಿಡಿದು ಸಂದರ್ಶನ ನಡೆಸಿತು.
 
ತಮ್ಮ ಚಿತ್ರ ಸಹಿತ ತೊದಲು ನುಡಿಗಳು ಬೊಗಳೆ ರಗಳೆ ಪತ್ರಿಕೆಯಲ್ಲಿ ಪ್ರಕಟವಾಗುತ್ತದೆ ಎಂದು ತೀವ್ರವಾಗಿ ಉತ್ಸಾಹದಿಂದ ಕುದಿದು ಹೋದ ಈ ಪುಟ್ಟು-ಪುಟ್ಟಿಗೆ ಒಂದು ಪ್ರಶ್ನೆ ಹಾಕಲಾಯಿತು.
 
ನ್ಯಾಯಾಲಯವೇ ಇಂಟರ್ವ್ಯೂ ಮಾಡಬಾರದು ಎಂದು ಹೇಳಿದಾಗ ನೀವೇಕೆ ಬೇಕು ಅನ್ನುತ್ತಿದ್ದೀರಿ? ಎಂದು ಕೇಳಿದಾಗ ಉತ್ತರ ಬಂತು: "ನೋಡಿ, ಮೊದಲನೆಯದಾಗಿ ನೀವೇ ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಿ ನಮ್ಮ ಸಂದರ್ಶನ ಮಾಡುತ್ತಿದ್ದೀರಿ" ಎಂದು ರಪ್ಪನೆ ಪೀಪಿ ಊದಿತು ಪುಟ್ಟಿ.
 
ಆದರೂ ಸುಧಾರಿಸಿಕೊಂಡ ಬ್ಯುರೋ ಸಿಬ್ಬಂದಿ, ಪುಟಾಣಿ ಪುಟ್ಟುವಿನತ್ತ ಮುಖ ಮಾಡಿದಾಗ, ಅದರ ಬಾಯಿಯಿಂದ ಉದುರಿದ ಅಣಿಮುತ್ತುಗಳು: "ನೋಡಣ್ಣಾ... ನಮ್ಮದು ಇದು ಕಲಿಯುವ ವಯಸ್ಸಾ? ಏನಿದ್ದರೂ ಆಟವಾಡುತ್ತಾ ಇರಬೇಕಾದವರು ನಾವು. ನಮ್ಮನ್ನು ಸಂದರ್ಶನ ಮಾಡಿದ್ರೆ ನಾವು ತಪ್ಪು ತಪ್ಪಾಗಿ ಉತ್ತರಿಸಿ ಬಚಾವ್ ಆಗುತ್ತೇವೆ. ಹಾಗೆಯೇ ಅಪ್ಪ ಅಮ್ಮಂದಿರನ್ನೂ ಸಂದರ್ಶನ ಮಾಡುತ್ತಾರೆ. ಅವರಿಗೂ ಸರಿಯಾಗಿ ಠುಸ್ ಪುಸ್ ಇಂಗ್ಲಿಷ್ ಬರೋದಿಲ್ಲ. ಅವರೂ ಎಡವುತ್ತಾರೆ. ಮತ್ತೆ ಶಾಲೆಗಳ ಆಡಳಿತ ಮಂಡಳಿಗಳಿಗೆ ಮಕ್ಕಳ ಅಪ್ಪಂದಿರ ಜೇಬಿನ ಮೇಲೆಯೇ ಕಣ್ಣು ಇರೋದ್ರಿಂದ ನಮ್ಮಪ್ಪನ ಜೇಬು ಕೂಡ ಅಷ್ಟೇನೂ ದಪ್ಪವಿಲ್ಲ. ಹಾಗಾಗಿ ಸಂದರ್ಶನದ ವೇಳೆ ಅವರು ಫೇಲ್ ಆಗೋದು ಗ್ಯಾರಂಟಿ. ಹೀಗಾದರೆ ನಮಗೆ ಶಾಲೆಗೆ ಹೋಗುವ ಕೆಲಸವೇ ಉಳಿಯುತ್ತಲ್ಲಾ...?"
 
ಈ ಕಾರಣ ಕೇಳಿದ್ದೇ ತಡ, ನಮ್ಮ ಸಿಬ್ಬಂದಿ ಯಾರದ್ದು ಅಂತಾನೂ ನೋಡದೆ ಅಲ್ಲಿದ್ದ ಗಂಟುಮೂಟೆ ಕಟ್ಟಿಕೊಂಡು, ನ್ಯಾಯಾಂಗ ನಿಂದನೆ ಮೊಕದ್ದಮೆ ಹೂಡಿದರೆ ಎಂಬ ಭಯದಿಂದ ಅಲ್ಲಿಂದ ಕಾಲ್ಕಿತ್ತರು ಎಂದು ನಮ್ಮ ಪ್ರತಿಸ್ಪರ್ಧಿ ಪತ್ರಿಕಾ ವರದಿಗಾರರು ವರದಿ ಮಾಡಿದ್ದಾರೆ.

Tuesday, October 17, 2006

Love at First Flight !

(ಬೊಗಳೂರು high-ಕೆಟ್ ಬ್ಯುರೋದಿಂದ)
ಬೊಗಳೂರು, ಅ.17- ಇದು ಅವಸರದ ಯುಗ. ಇದನ್ನು ತೀರಾ ಇತ್ತೀಚಿನ ಭಾಷೆಯಲ್ಲಿ ಹೈ-ಕೆಟ್ ಯುಗ ಅಂತಾನೂ ಕರೀಬೌದು. ಅಥವಾ high ನೆಟ್ ಯುಗ ಎಂದೇ ಹೇಳಬಹುದು. ಯಾಕೆಂದರೆ ಎಲ್ಲವೂ ಇಂಟರ್ನೆಟ್ಟಿನಲ್ಲೇ ಆಗಿಬಿಡುತ್ತವೆ.
 
ಬರೇ ಇಂಟರ್ನೆಟ್‌ನಲ್ಲಿ ಮಾತ್ರ ಎಂದು ತಿಳಿದುಕೊಂಡುಬಿಟ್ಟರೆ ಅದು ಕೂಡ ಅನ್ಅರ್ಥವೇ ಆಗಬಹುದಾಗಿದೆ ಎಂದು ಬೊಗಳೆ ರಗಳೆ ಬ್ಯುರೋ ವಾದಿಸಿದ್ದಕ್ಕೆ ಪುಷ್ಟಿ ನೀಡಲು ಮಾಹಿತಿ ಸಂಗ್ರಹಣೆಗೆ ಮೇಲಕ್ಕೆ ನೆಗೆದುಬಿದ್ದಾಗ ಈ ಸುದ್ದಿ ಸಿಕ್ಕಿದೆ.
 
ಇದು Love at first flight ಆಗಿರುವುದರಿಂದ ಮತ್ತು ಮದುವೆ ನಡೆದ ಪ್ರದೇಶವು ಭೂಮಿಯಿಂದ 30 ಸಾವಿರ ಅಡಿಗಳಷ್ಟು ಎತ್ತರದಲ್ಲಿದ್ದರೂ ಇದು ಸ್ವರ್ಗಕ್ಕೆ ಮೂರೇ ಗೇಣು ದೂರದಲ್ಲಿರುವುದರಿಂದ ಭಾರಿ ಸಂಖ್ಯೆಯಲ್ಲಿ ಈ ಮದುವೆಯೂಟಕ್ಕೆ ಹಾಜರಾಗಲು ಹೊರಟಿದ್ದರು.
 
ಇದೇ ಕಾರಣಕ್ಕೆ ಸ್ವರ್ಗದಲ್ಲಿ ನಡೆಯುವ ಮದುವೆ ನೋಡಲು ಅಲ್ಲಿಗೆ ವಿಶೇಷ ವಿಮಾನಗಳ ಸೌಲಭ್ಯಗಳನ್ನು ಏರ್ಪಾಡು ಮಾಡಲಾಗಿತ್ತು. ಇದರಿಂದ ಆಕಾಶದಲ್ಲಿ ಟ್ರಾಫಿಕ್ ಜಾಮ್ ಆಗಿದ್ದರಿಂದ ಕೆಲವರು ಆ ಜಾಮನ್ನೇ ಬ್ರೆಡ್‌ಗೆ ಸವರಿಕೊಂಡು ಬಾಯಿ ಚಪ್ಪರಿಸಿ ಮರಳಿದರೆ, ಮತ್ತೆ ಕೆಲವರು ಊಟಕ್ಕೆ ಹೋಗಲಾರದೆ, ಸ್ವರ್ಗವನ್ನೂ ನೋಡಲಾರದ ಚಿಂತೆಯಲ್ಲಿ ವಾಪಸಾಗಿದ್ದರು.
 
ಮತ್ತೆ ಕೆಲವರು ವಿಮಾನದಲ್ಲೇ ಬಫೆ ಸಿಸ್ಟಮ್ ಇದ್ದುದರಿಂದ ಊಟ ಮಾಡಿ ಕೈತೊಳೆದಾಗ ಭೂಮಿಯಲ್ಲಿದ್ದವರ ಮೇಲೆ ಮಳೆ ಬಂದ ಪ್ರಕರಣಗಳೂ ಅಲ್ಲಲ್ಲಿ ವರದಿಯಾಗಿವೆ.
 
ಬೊಗಳೆ ರಗಳೆ ಬ್ಯುರೋ ತನಿಖೆ
 
ಆದರೆ, ಈ ಮದುವೆ ನಡೆಯುವುದಕ್ಕೆ ಮುನ್ನವೇ ಆಕಾಶದಲ್ಲಿ ಮತ್ತೊಂದು ಜೀವಿಯ ಉದಯವಾಗಿತ್ತು. ಮಕ್ಕಳಿಗೆ ವಿಮಾನ ಎಂದರೆ ಪಂಚ ಪ್ರಾಣ. ಅದರಲ್ಲೇ ಆಟ ಆಡುತ್ತಾ ಅವು ತಮ್ಮ ಇರುವಿಕೆಯನ್ನೇ ಮರೆಯುತ್ತವೆ.
 
ಆದರೆ ಆಧುನಿಕ ಅಂದರೆ ಹೈ-ಕೆಟ್ ಕಾಲದ ಮಕ್ಕಳು ಯಾವತ್ತೂ ಎಲ್ಲದರಲ್ಲೂ ಮುಂದಿರುತ್ತಾರೆ. ಅದೇ ರೀತಿ ಹುಟ್ಟುವುದರಲ್ಲೂ. ಮಗುವೊಂದು ಆಕಾಶದಲ್ಲೇ ಜನಿಸಿ ಆಕಾಶ್ ಎಂದು ಹೆಸರಿರಿಸಿಕೊಳ್ಳಲು ಪೂರ್ವನಿರ್ಧಾರ ಮಾಡಿಯೇ ಧರೆಗಿಳಿದಿದೆ.
 
ಆದರೆ ವಿಮಾನದಲ್ಲೇ ಹುಟ್ಟುವುದಕ್ಕೆ ಪ್ರಮುಖ ಕಾರಣವೆಂದರೆ ಆ ಮಗುವಿಗೆ ವಿಮಾನದ ಜೊತೆ ಆಟವಾಡಲು ತಡೆಯಲಾರದಷ್ಟು ಇಚ್ಛೆ ಆಗಿತ್ತೇ ಎಂಬುದರ ಬಗ್ಗೆ ಬ್ಯುರೋದಿಂದ ತನಿಖೆ ನಡೆಯುತ್ತಿದೆ.
 
ಕಿಡ್ಡು ಬಿಡ್ಡು
 
ಈ ಮಧ್ಯೆ, ಹೈ-ಕೆಟ್ ಯುಗಕ್ಕೆ ಮತ್ತೊಂದು ಸೇರ್ಪಡೆಯಾಗಿದೆ. ತಾನು ದೊಡ್ಡವನಾದ ಬಳಿಕ ಆಡಲಿಕ್ಕಾಗಿ 3 ವರ್ಷದ ಪ್ರಾಯದಲ್ಲೇ e-Bayಗೆ ಬ್ಯಾ ಬ್ಯಾ ಎನ್ನುತ್ತಾ ಮೌಸ್ ಮೂತಿ ಕ್ಲಿಕ್ ಮಾಡಿ ಒಂದು ಕಾರು ಖರೀದಿಸಿಬಿಟ್ಟಿದೆ. ಆ ಮಗುವಿಗೆ ಅಷ್ಟೊಂದು ಬ್ಯುಸಿ ದೈನಂದಿನ ಚಟುವಟಿಕೆಗಳ ಮಧ್ಯೆಯೂ ಇದಕ್ಕೆ ಸಮಯ ಸಿಕ್ಕಿಬಿಟ್ಟಿದ್ದು ವಿಶೇಷ!
 
ಮಗುವಿಗೆ ಎಂಥಾ ಅವಸರ! ಈ kid ಹಾಕಿದ bid ನಿಂದಾಗಿ ಮಾರಾಟಗಾರರು ಎದ್‌ಬಿದ್ ಬೆಚ್ಚಿದ್ದು, ಚೇತರಿಸಿಕೊಳ್ಳುತ್ತಿರುವುದಾಗಿ ನಮ್ಮ ಬ್ಯುರೋದಿಂದ ವರದಿಯಾಗಿದೆ.

Monday, October 16, 2006

(ಅಫ್ಜಲ್) ಗುರು ಹತ್ಯೆ ಮಹಾಪಾಪ!

(ಬೊಗಳೂರು ಓಟ್ ಬ್ಯಾಂಕ್ ಬ್ಯುರೋದಿಂದ)
ಬೊಗಳೂರು, ಅ.16- ಗುರು ಹತ್ಯೆ ಮಹಾಪಾಪ ಎಂದು ಅರಿತುಕೊಂಡಿರುವ ಕೇಂದ್ರ ಸರಕಾರವು ಅದೇ ಹೆಸರುಳ್ಳ ವ್ಯಕ್ತಿಗಳನ್ನು ಕೊಲ್ಲದಿರಲು ಕ್ರಮ ಕೈಗೊಳ್ಳಲು ನಿರ್ಧರಿಸಿದೆ.
 
ಭಾರತದ ಪರಮೋನ್ನತ ಅಧಿಕಾರ ಕೇಂದ್ರವಾದ ಸಂಸತ್ತಿನ ಮೇಲೆ ದಾಳಿ ನಡೆಸಿದ ಪ್ರಕರಣದಲ್ಲಿ ಜೈಶ್ ಎ ಮಹಮ್ಮದ್ ಉಗ್ರಗಾಮಿ ಮತ್ತು ಭಯೋತ್ಪಾದಕರ ಗುರುವೇ ಆಗಿಬಿಟ್ಟಿರುವ ಮಹಮದ್ ಅಫ್ಜಲ್ ಗುರುವಿಗೆ ಗಲ್ಲು ಶಿಕ್ಷೆ ವಿಧಿಸುವ ನಿಟ್ಟಿನಲ್ಲಿ ದೇಶದ ಸರ್ವೋನ್ನತ ನ್ಯಾಯಾಲಯವು ಆದೇಶ ನೀಡಿದ್ದರೂ, ಈ ಬಗ್ಗೆ ದಯಾಭಿಕ್ಷೆ ದೊರಕಿಸಲು ಯತ್ನಿಸುತ್ತಿರುವುದೇಕೆ ಎಂಬುದಾಗಿ ಮಾಡಲು ಬೇರೇನೂ ಕೆಲಸವಿಲ್ಲದ ಕಾರಣದಿಂದಾಗಿ ಬೊಗಳೆ ರಗಳೆ ಬ್ಯುರೋ ನಮ್ಮನ್ನಾಳುವ ಕೇಂದ್ರದ ವಕ್ತಾರನನ್ನು ಹಿಡಿದು ಪ್ರಶ್ನಿಸಿತು.
 
ಈ ಪ್ರಶ್ನೆಗೆ ಬಂದ ಉತ್ತರಗಳು ಯಾವುದೇ ಭಯೋತ್ಪಾದನೆಗೆ ಕಡಿಮೆಯಾಗಿರಲಿಲ್ಲವಾದ ಕಾರಣ, ರಾಜಕೀಯದಲ್ಲಿ ಇದೆಲ್ಲಾ ಮಾಮೂಲಿ ಎಂದುಕೊಂಡು ಸುಮ್ಮನಾಗಬೇಕಾಯಿತು.
 
ನೀವೇಕೆ ಗುರುವಿಗೆ ತಿರುಮಂತ್ರ ಹಾಕುವ ಬದಲು, ನೇಣಿನಿಂದ ರಕ್ಷಿಸಲು ಯತ್ನಿಸುತ್ತಿದ್ದೀರಿ ಎಂದು ಪ್ರಶ್ನಿಸಿದಾಗ, ಅಂಥ ಮರಳುಗಾಡಿನ ಮುಸ್ಲಿಂ ರಾಷ್ಟ್ರಗಳಲ್ಲೇ ಕೊಂದವನಿಗೆ ಕೊಲೆಯೇ ಶಿಕ್ಷೆ ಎಂಬುದಿದೆ. ಮತ್ತು ತಪ್ಪು ಮಾಡಿದರೆ ಮಾತ್ರವೇ ಶಿಕ್ಷೆ ವಿಧಿಸಲಾಗುತ್ತದೆ. ಆದರೆ ಈತ ಇಲ್ಲಿ ಯಾರನ್ನೂ ಕೊಂದಿಲ್ಲ. ಸಂಸತ್ ಭವನವನ್ನೇ ಸ್ಫೋಟಿಸಲು ಯತ್ನಿಸಿದ್ದು ಮಾತ್ರ. ಸ್ಫೋಟವಾಗಿದೆಯೇ? ನಾವೆಲ್ಲಾ ಇನ್ನೂ ಬದುಕುಳಿದಿಲ್ಲವೇ? ಹಾಗಾಗಿ ಈತ ತಪ್ಪು ಮಾಡಿದ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂಬ ಉತ್ತರ ಬಂತು.
 
ಮತ್ತೆ, ಅನಾದಿ ಕಾಲದಿಂದ ನಮ್ಮ ವೇದ ಶಾಸ್ತ್ರ ಪುರಾಣಗಳಲ್ಲೇ ಗುರು ಹತ್ಯೆ ಮಹಾಪಾಪ ಎಂದು ಹೇಳಲಾಗಿದೆ. ಈ ಅಫ್ಜಲ್ ಗುರು ಕೂಡ ಸಾಕಷ್ಟು ಮಂದಿಗೆ ಬಂದೂಕು ಹಿಡಿಯುವುದು ಹೇಗೆ, ಬಾಂಬ್ ಸ್ಫೋಟಿಸುವುದು, ಭಯವನ್ನು ಉತ್ಪಾದಿಸುವುದು ಹೇಗೆ ಎಂಬಿತ್ಯಾದಿ ವಿಷಯಗಳ ಕುರಿತು ಶಿಕ್ಷಣ ನೀಡಿದ್ದಾನೆ. ಇಂಥ ಮಹಾನ್ ಗುರುವಿಗೆ ಶಿಕ್ಷಕರ ದಿನಾಚರಣೆಯಂದು ರಾಷ್ಟ್ರಪತಿ ಪುರಸ್ಕಾರ ನೀಡುವುದು ಬಿಟ್ಟು ಗಲ್ಲು ಶಿಕ್ಷೆ ನೀಡಲು ಹೊರಟಿದ್ದಾರಲ್ಲಾ... ಇವರಿಗೆ ಯಾರಾದರೂ ಹೇಳೋರು ಕೇಳೋರು ಇಲ್ಲವೇ ಎಂದು ನಮ್ಮನ್ನೇ ಪುನರಪಿ ಪ್ರಶ್ನಿಸಲಾಯಿತು.
 
ಇನ್ನು, ಆತ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ್ದಾನೆ. ಈ ಸಮುದಾಯವೇ ನಮ್ಮನ್ನು ಇಂದು ಈ ಸ್ಥಾನದಲ್ಲಿ ಕುಳ್ಳಿರಿಸಿರುವುದು. ಅವರ ಕಲ್ಯಾಣಕ್ಕಾಗಿ ಹಲವಾರು ಕ್ರಮಗಳನ್ನು ನಾವು ಮತ್ತು ನಮ್ಮ ಪಕ್ಷ ಕೈಗೊಂಡಿದ್ದಕ್ಕಾಗಿಯೇ ಇಂದು ಅಧಿಕಾರಕ್ಕೇರಿದ್ದೇವೆ. ಅವರಿಗೆ ಕಲ್ಯಾಣ ಮಾಡಿಸುವುದು ಬಿಟ್ಟು ಅವರನ್ನೇ ಕೊಂದು ಹಾಕಿಬಿಟ್ಟರೆ, ನಮಗೆ ಓಟು ಹಾಕುವವರಾದರೂ ಯಾರು? ನಾವು ಮತ್ತೊಮ್ಮೆ ಅಧಿಕಾರದ ಕುರ್ಚಿಗೆ "ಗ್ರಹಣ" ಮಾಡುವುದಾದರೂ ಹೇಗೆ ಎಂದು ಈ ವಕ್ತಾರರು ವರಾತ ತೆಗೆದಿದ್ದಾರೆ.
 
ಜಮ್ಮು ಮತ್ತು ಕಾಶ್ಮೀರದಲ್ಲಿ ನಮ್ಮ ನೆರೆರಾಷ್ಟ್ರ ಪಾಕಿಸ್ತಾನವನ್ನು ಬೆಂಬಲಿಸುವವರೇ ಹೆಚ್ಚಾಗಿದ್ದಾರೆ. ನರೆಕರೆಯವರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಲು ಸಕಲ ಕ್ರಮಗಳನ್ನು ಕೈಗೊಳ್ಳುವವರೇ ಇರುವುದರಿಂದ ಆ ಸಮುದಾಯದ ಮಂದಿಗೆ ನಾವು ಪ್ರೋತ್ಸಾಹ ನೀಡಬೇಕು. ಅವರ ಓಟಿನ ಬ್ಯಾಂಕ್ ಠೇವಣಿಯನ್ನು ಭದ್ರಪಡಿಸಿಕೊಳ್ಳುವ ನಿಟ್ಟಿನಲ್ಲಿ ಅಲ್ಲಿನ ಮುಖ್ಯಮಂತ್ರಿ ಗುಲಾಮನ ಬೀಜಾದ್ ಅವರೇ ಗುರುವಿಗೆ ಕ್ಷಮೆ ನೀಡುವಂತೆ ಹೇಳಿರುವುದರಿಂದ ಮುಖ್ಯಮಂತ್ರಿ ಮಾತಿಗಾದರೂ ಬೆಲೆ ಕೊಡಬೇಡವೇ ಎಂದು ಈ ವಕ್ತಾರ ಘೊಳ್ಳನೆ ನಕ್ಕಿದ್ದಾನೆ.
 
ಅಲ್ಲಿಗೆ ಬೊಗಳೆ-ರಗಳೆ ಬ್ಯುರೋದ ಬಾಯಿ ಬಂದ್! ಬಾಯಿಯಿಂದ ಒಂದು ಶಬ್ದ ಉದುರಿದ್ದರೆ ಮತ್ತೆ ಕೇಳಿ!!!!!

Friday, October 13, 2006

ಹೀಗೊಂದು ಬರ್ಬರ ಆಕ್ಸಿಡೆಂಟ್!

ಬೊಗಳೆ ರಗಳೆ ಬ್ಯುರೋದಲ್ಲಿ busyನೆಸ್ ಹೆಚ್ಚಾಗಿದ್ದರಿಂದಾಗಿ ಇಂದಿನ ಸಂಚಿಕೆಗೆ ನಮ್ಮ ಬದ್ಧವೈರಿ ಪ್ರತಿಸ್ಪರ್ಧಿಯೊಂದಿಗೆ ಹಿಂಬಾಗಿಲಿನ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರ ಫಲವಾಗಿ ಆ ಪತ್ರಿಕೆಯು ಈ ಲಿಂಕ್ ಅನ್ನು ದಯಪಾಲಿಸಿದೆ.
 
ಈ ಅಪಘಾತ ನಡೆದ ನಿಜವಾದ ಕಾರಣ, ಅದರ ಹಿನ್ನೆಲೆ-ಮುನ್ನೆಲೆ ಇತ್ಯಾದಿಗಳನ್ನು ತನಿಖೆಗೊಳಪಡಿಸಲು ಬ್ಯುರೋ ಆಗ್ರಹಿಸುತ್ತಿದೆ.
-ಅನ್ವೇಷಿ

Thursday, October 12, 2006

ಕಾಣೆಯಾಗಿದ್ದ ತೂಕದ ಮಹಿಳೆಯರು ಪತ್ತೆ!

(ಬೊಗಳೂರು ಸ್ತ್ರೀ ನಾಪತ್ತೆ ಶೋಧ ಬ್ಯುರೋದಿಂದ)
ಬೊಗಳೂರು, ಅ.12- ದೇಶ ವಿದೇಶಗಳಲ್ಲಿ ಮಹಿಳೆಯರು ಅದರಲ್ಲೂ ಹೆಚ್ಚು ತೂಕದ ಮಹಿಳೆಯರೇ ನಾಪತ್ತೆಯಾಗುತ್ತಿರುವ ಪ್ರಕರಣ ಬೆಚ್ಚಿ ಬೀಳಿಸುತ್ತಿದ್ದು, ಇದರ ಕುರಿತು ತನಿಖೆ ನಡೆಸುವಂತೆ ಮಾನ್ಯ ರಾಷ್ಟ್ರಪತ್ನಿಗಳ ಆದೇಶ ಪಡೆದ ಬೊಗಳೆ ರಗಳೆ ಬ್ಯುರೋ ಬಂದು ಬಿದ್ದದ್ದು ನ್ಯೂರೀ ಎಂಬ ಪುಟ್ಟ ಪಟ್ಟಣಕ್ಕೆ.
 
ಅದು ಹೇಗೋ ರೀ... ರೀ... ಎಂಬ ಧ್ವನಿ ನ್ಯೂರೀ ಎಂದು ಕೇಳಿಸಿಕೊಂಡ ಪರಿಣಾಮವಾಗಿ ತಕ್ಷಣ ಗೂಗಲ್ ಸರ್ಚ್ ಎಂಜಿನ್‌ನಲ್ಲಿ ಹುಡುಕಿದಾಗ ಈ ಪಟ್ಟಣ ಪತ್ತೆಯಾಗಿತ್ತು. ಅಲ್ಲಿಗೆ ಹೋದಾಗ ಮನೆ ಮನೆಗಳಲ್ಲಿ ಹೆಂಗಸರ ಕಿಲ ಕಿಲವೋ... ಗೊರ ಗೊರ ಸದ್ದೋ ಎಲ್ಲವೂ ಕೇಳಿಬರುತ್ತಿತ್ತು.
 
ಮಹಿಳೆಯರ ನಾಪತ್ತೆ ಪ್ರಕರಣದ ಬೆನ್ನ ಹಿಂದೆ ಬಿದ್ದ ಬ್ಯುರೋದ ಸಿಬ್ಬಂದಿ ಗಡಣಕ್ಕೆ ಅಲ್ಲಿ ಕೆಲವರು ತಮ್ಮ ತಲೆ ಮೇಲೆ ತೂಕದ ಮಹಿಳೆಯರನ್ನು ಹೊತ್ತು ಕೊಂಡು Practice ಮಾಡುತ್ತಿರುವ ಅಂಶ ಕಣ್ಣಿಗೆ ಬಿದ್ದದ್ದೇ, ಕಣ್ಣಿಗೆ ಬಿದ್ದ ಆ ಕಸವನ್ನೇ ಹೆಕ್ಕಿಕೊಂಡು ಅದರ ಎಳೆ ಹಿಡಿದು ಹೊರಟಾಗ ಸತ್ಯ ಬಯಲಾಗಿತ್ತು.
 
ಇಲ್ಲಿ ನಡೆಯುತ್ತಿದ್ದದ್ದು 7ನೇ ವರ್ಷದ ಪತ್ನಿ ಹೊತ್ತೊಯ್ಯುವ ಚಾಂಪಿಯನ್‌ಶಿಪ್ ಕೂಟ. ಇಲ್ಲಿ ಹೆಚ್ಚು ತೂಕದ ಪತ್ನಿಯರನ್ನು ಹೊತ್ತೊಯ್ದರೆ ಹೆಚ್ಚು ಹೆಚ್ಚು ಬಹುಮಾನ ದೊರೆಯುತ್ತಿತ್ತು. ಅಂದರೆ ನೀವು 100 ಕಿಲೋ ತೂಕದ ಪತ್ನಿಯನ್ನು ಹೊತ್ತೊಯ್ದರೆ ಅಷ್ಟೇ ತೂಕದ ಬಿಯರ್ ಹಾಗೂ ಅದರ ಐದು ಪಟ್ಟು ಮೊತ್ತದ ನಗದು ಹಣ ದೊರೆಯುತ್ತಿತ್ತು. ಇದಲ್ಲದೆ ಮುಂದಿನ ವರ್ಷ ಫಿನ್ಲೆಂಡಿನಲ್ಲಿ ನಡೆಯುವ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದರೆ ನಿಮಗೆ 1000 ಡಾಲರ್ ವಾಪಸ್ ಸಿಗುತ್ತದೆ.
 
ಈ ಕಾರಣಕ್ಕೆ ಮನೆ ಮನೆಗಳಿಂದ ಮಹಿಳೆಯರು ಮಲಗಿದ್ದಾಗಲೇ ಹೊತ್ತೊಯ್ಯಲಾಗುತ್ತಿದ್ದು, ಇದರಿಂದಾಗಿ ಅವರು ಬೆಳಗ್ಗೆ ಎದ್ದಾಗ ನಾಪತ್ತೆಯಾಗುತ್ತಿದ್ದರು ಎಂಬುದು ಮನದಟ್ಟಾಗಿದೆ. ಮತ್ತೂ ಒಂದು ವಿಶೇಷವೆಂದರೆ, ಈ ಪಂದ್ಯಾವಳಿಯ ನಿಯಮಾವಳಿಯಲ್ಲಿ ಸ್ವಂತ ಪತ್ನಿಯರನ್ನೇ ಹೊತ್ತೊಯ್ಯಬೇಕು ಎಂದು ಎಲ್ಲಿಯೂ ಉಲ್ಲೇಖಿಸದಿರುವುದು. ಕೆಲವರು ತೂಕದ ಮಹಿಳೆಯರನ್ನು ಎತ್ತಿ ಎತ್ತಿ ಹೊತ್ತು ಒಯ್ಯುತ್ತಾ Practice ಮಾಡುತ್ತಿದ್ದರೆ, ಮತ್ತೆ ಕೆಲವರು ತೂಕದ ಸ್ತ್ರೀಯರೇ ಇದ್ದರೆ ಹೆಚ್ಚು ಬಹುಮಾನ ಸಿಗುತ್ತದೆ ಎಂಬ ಕಾರಣಕ್ಕೆ ಬೇರೆ ಬೇರೆ ಮನೆಗಳಿಂದ ದೊಡ್ಡ ದೊಡ್ಡ ಮಹಿಳೆಯರನ್ನು ಎತ್ತಿಕೊಂಡು ವಿಮಾನವೇರಿದ್ದರು.
 
ಹಾಗಾಗಿ ಮುಂದಿನ ವರ್ಷ ಪತ್ನಿಯರು ಅಥವಾ ಮಹಿಳೆಯರು, ವಿಶೇಷವಾಗಿ ಹೆಚ್ಚು ತೂಕವುಳ್ಳವರು ನಾಪತ್ತೆಯಾದರೆ ಪೊಲೀಸರಿಗೆ ದೂರು ನೀಡಬೇಕಿಲ್ಲ. ನೇರವಾಗಿ ಪತ್ನಿಯರ ಹೊತ್ತೊಯ್ಯುವ ವಿಶ್ವ ಚಾಂಪಿಯನ್‌ಶಿಪ್ ನಡೆಯುವ ಫಿನ್ಲೆಂಡ್‌ಗೆ ಧಾವಿಸಿದರಾಯಿತು ಎಂದು ಬೊಗಳೆ ರಗಳೆ ಬ್ಯುರೋ 'ಭವಿಷ್ಯ ವಾಣಿ' ನುಡಿಯುತ್ತದೆ.

Wednesday, October 11, 2006

ಕಂಡಲ್ಲಿ ಗುಂಡು ಹಾಕಿದ್ದೇ ಗಲಭೆಗೆ ಕಾರಣ!

(ಬೊಗಳೂರು ಗುಂಡು ಬ್ಯುರೋದಿಂದ)
ಬೊಗಳೂರು, ಅ.11- ಇತ್ತೀಚೆಗೆ ಕರ್ನಾಟಕದ ಕರಾವಳಿ ತೀರದಲ್ಲಿ ಕೋಮು ಸಂಘರ್ಷಗಳು ಸೃಷ್ಟಿಯಾಗಲು ಮೂಲ ಪ್ರೇರಣೆಯೇ ಪೊಲೀಸರು ಎಂಬುದನ್ನು ಬೊಗಳೆ ರಗಳೆ ಬ್ಯುರೋದ ಮಹಾನ್ ಅನ್ವೇಷಣಾ ವರದಿಯೊಂದು ಕಂಡುಕೊಂಡಿದೆ.
 
ಈ ಹಿಂದೆ ಅಲ್ಲೆಲ್ಲಾ ಗಲಾಟೆ ನಡೆದಿದ್ದಾಗ ಮತ್ತು ಕೋಮು ಸಂಘರ್ಷಗಳು ನಡೆದಿದ್ದಾಗ ಪೊಲೀಸರು ಬಿಸಿಬಿಸಿಯಾಗಿರುತ್ತಿದ್ದ ಜನತೆಯನ್ನು ತಣ್ಣಗಾಗಿಸಲು ಕರ್ಫ್ಯೂ ಹೇರಿ, ಅಶ್ರುವಾಯುಗಳನ್ನು ಸಿಡಿಸುತ್ತಿದ್ದರು. ಅಷ್ಟಕ್ಕೂ ತೃಪ್ತರಾಗದ ಜನತೆಯನ್ನು ಮತ್ತಷ್ಟು ಸಂ-ತೃಪ್ತರಾಗಿಸಲು ಕಂಡಲ್ಲಿ ಗುಂಡು ಹಾಕಲು ಆದೇಶ ನೀಡುತ್ತಿದ್ದರು.
 
ಕಂಡಲ್ಲಿ ಗುಂಡು ಹಾಕಲು ನೀಡುವ ಆದೇಶವೇ ಮಂಗಳೂರು ಜನತೆಗೆ ಕೋಮು ಗಲಭೆಗೆ ಮೂಲ ಪ್ರೇರಣೆ ಎಂದು ತಿಳಿದುಬಂದಿದೆ.
 
ಈ ಆದೇಶ ಕೇಳಿದ ತಕ್ಷಣ ಮಂಗಳೂರಿಗರಲ್ಲಿ ಗಲಾಟೆ ನಿರತರನೇಕರು ಬಾರುಗಳೇ ಹೆಚ್ಚಾಗಿರುವ ಪ್ರದೇಶಕ್ಕೆ ತೆರಳಿ ಕಂಡ ಕಂಡಲ್ಲಿ ಗುಂಡು ಹಾಕಿಕೊಳ್ಳಲು ಕುಳಿತುಬಿಡುತ್ತಿದ್ದರು. ಹೇಗಿದ್ದರೂ ತ್ವೇಷಮಯ ವಾತಾವರಣವಿರುತ್ತದೆ, ಎಲ್ಲಾ ಬಾರ್ ಮಾಲೀಕರು ಹೆದರಿ ತಮಗೆ ಗುಂಡು ಹಾಕಲು ಸಹಕರಿಸುತ್ತಾರೆ ಎಂದು ಅರಿತುಕೊಂಡ ಅವರು ಸಾಕಷ್ಟು ಗುಂಡೇರಿಸಿಕೊಳ್ಳುತ್ತಿದ್ದರು.
 
ಹಣ ಕೇಳಿದವರಿಗೆ ಹೇಗಿದ್ದರೂ 'ಪೊಲೀಸರ ಆದೇಶವಿದೆ' ಎಂಬ ಸಿದ್ಧ ಉತ್ತರವಿದೆ ಎಂಬ ಹಮ್ಮು ಅವರದು ಎಂದು ಭೀಕರ ತನಿಖೆಯೊಂದರಿಂದ ತಿಳಿದುಬಂದಿದೆ.
 
ಹೀಗಾಗಿ ಅವರ್ಯಾರೂ ಕಂಡಲ್ಲಿ ಗುಂಡು ಹಾಕಲು ಹೆದರುವುದಿಲ್ಲ ಮತ್ತು ಗುಂಡು ಹಾಕುತ್ತಲೇ ಗಾಳಿಯಲ್ಲಿ ಗುಂಡು ಹಾರಿಸಿದಂತೆ ತೇಲಾಡುತ್ತಿರುತ್ತಾರೆ ಎಂದು ತಿಳಿದುಬಂದಿದೆ.

Tuesday, October 10, 2006

ಹಾಕೋ ಬಟ್ಟೆಗೂ ಕತ್ರೀನಾ?

(ಬೊಗಳೂರು ಬಟ್ಟೆಗೆ ಕತ್ತರಿ ಬ್ಯುರೋದಿಂದ )
ಬೊಗಳೂರು, ಅ.10- ಬಟ್ಟೆಗಳಿಗೆಲ್ಲಾ ಕತ್ತರಿ ಹಾಕುತ್ತಲೇ ಬಾಲಿವುಡ್ ರಂಗದಲ್ಲಿ ಕತ್ರಿನಾ ಎಂದೇ ಹೆಸರುವಾಸಿಯಾಗಿರುವ ಈ ಐಟಂ ಗರ್ಲ್ ಹೋದಲ್ಲೆಲ್ಲಾ ಆಕೆಯ ಬಟ್ಟೆ ಮೇಲಕ್ಕೆ ಹೋದಂತೆ ನೆರೆದಿದ್ದವರ ಹುಬ್ಬುಗಳೂ ಮೇಲಕ್ಕೇರುವುದು ಸಹಜ ಎಂಬುದು ಜ್ಞಾನೋದಯವಾದಾಗ ಎಚ್ಚೆತ್ತ ಬೊಗಳೆ ರಗಳೆ ಬ್ಯುರೋ ಅಜ್ಮೇರಿಗೆ ಹೊರಟಾಗ ಸಿಕ್ಕಿದ ಸುದ್ದಿಯಿದು.
 
ಇದೀಗ ಆಕೆ ತೊಟ್ಟ ಬಟ್ಟೆಗಾಗಿ ಕಿತ್ತಾಟ ನಡೆಯುತ್ತಿರುವುದರಿಂದ ಛತ್ರೀನಾ ನೇರವಾಗಿ ಮಾತನಾಡಿಸಲಾಯಿತು. ಯಾಕೇ ಹೀಗಾಯ್ತೋ.... ಎಂದು ಕೇಳಿದಾಗ ಆಕೆ ನೀಡಿದ ಉತ್ತರ 'ಸಂಪ್ರದಾಯದ ಪ್ರಕಾರ, ಅಲ್ಲಿಗೆ ಭೇಟಿ ನೀಡುವ ಮಹಿಳೆಯರ ತಲೆ, ಕೈ ಮತ್ತು ಕಾಲುಗಳು ಸಂಪೂರ್ಣವಾಗಿ ಮುಚ್ಚಿಕೊಂಡಿರಬೇಕು. ನಾನು ಕೂಡ ಈ ಸಂಪ್ರದಾಯ ಪಾಲಿಸಿದ್ದೇನೆ. ಯಾಕೆಂದರೆ... ಎಲ್ಲರ ದೃಷ್ಟಿ ನನ್ನ ತಲೆ, ಕೈ, ಕಾಲುಗಳ ಮೇಲೆಯೇ ಇದ್ದುದರಿಂದಾಗಿ ನನ್ನ ದೇಹದ ಈ ಭಾಗಗಳು ಸಂಪೂರ್ಣವಾಗಿ cover ಆಗಿದ್ದವು. ಅಲ್ಲಿ ಅದನ್ನೇ ತದೇಕಚಿತ್ತದಿಂದ ನೋಡುತ್ತಿರುವವರಿಗೆ ಬಿಟ್ಟು, ಬೇರೆಯವರಿಗೆ ಕಾಣಿಸುತ್ತಿರಲಿಲ್ಲ' ಎಂಬುದು ಆಕೆಯ ಸಮರ್ಥನೆ.
 
ಕೊನೆಯ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಆಕೆ... "ಛೆ,,, ಅಲ್ಲಿಗೂ ಬಟ್ಟೆ ತೊಟ್ಟುಕೊಂಡೇ ಹೋಗಬೇಕೆಂಬುದು ನನಗೆ ಗೊತ್ತೇ ಇರಲಿಲ್ಲ" ಎಂಬ ರಾಗದೊಂದಿಗೆ ಸಂದರ್ಶನಕ್ಕೆ ಅಂತ್ಯ ಹಾಡಿದಳು.
 
ತನಿಖೆ ವೇಳೆ ತಿಳಿದುಬಂದ ಅಂಶವೆಂದರೆ, ಆಕೆ ಬಟ್ಟೆ ತೊಟ್ಟು ಅಲ್ಲಿಗೆ ಪ್ರವೇಶಿಸಿದ್ದೇಕೆ ಎಂಬುದೇ ಚರ್ಚೆಗೆ ಪ್ರಮುಖ ವಿಷಯವಾಗಿತ್ತು. (ಯಾವ ಬಟ್ಟೆ- ಪಾಶ್ಚಾತ್ಯವೋ ಪೌರ್ವಾತ್ಯವೋ ಎಂಬುದು ಆಮೇಲಿನ ಸಂಗತಿ!).
 
ಕೈಕಾಲುಗಳನ್ನು ಮಾತ್ರವೇ ಮುಚ್ಚಿಕೊಳ್ಳಬೇಕೇಕೆ? ಮಾನ ಮುಚ್ಚಿಕೊಳ್ಳುವಂತೆ ಅಲ್ಲಿ ಬೋರ್ಡ್ ತಗುಲಿಸಿರಲಿಲ್ಲವೇಕೆ ಎಂಬ ಆಕೆಯ ಪ್ರಶ್ನೆಯಿನ್ನೂ ಬೊಗಳೆ ರಗಳೆ ಬ್ಯುರೋವನ್ನು ಕೊರೆಯುತ್ತಿದೆ.
 
"I could not see the dress worn by Katrina," said Chisti. "I was at a distance and it looked to me as if she was wearing a full dress," he added ಎಂಬುದಾಗಿ ಪ್ರಾರ್ಥನಾಸ್ಥಳದ ಮುಖ್ಯಸ್ಥರು ಹೇಳಿದ್ದಾರೆಂದು ವರದಿಯಾಗಿರುವುದು ಮಾತ್ರ ಕತ್ರಿನಾ ಎಂಬ "ಮಾಯಾಂಗನೆ"ಯ ಮೋಡಿಯ ತೀವ್ರತೆಗೆ ಸಾಕ್ಷಿಯಾಗಿತ್ತು ಎಂದು ಬೊಗಳೆ ರಗಳೆ ಬ್ಯುರೋ ವಿಶ್ಲೇಷಿಸಿದೆ. ಅಂದರೆ ಬಟ್ಟೆಯೇ ಇರಲಿಲ್ಲವೇ? ಎಂಬ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿದೆ.

Monday, October 09, 2006

ಭಾರತ ಈಗ ನಂ.1 !!!

(ಬೊಗಳೂರು ಮೇರಾ ಭಾರತ್ ಮಹಾನ್ ಬ್ಯುರೋದಿಂದ )
ಬೊಗಳೂರು, ಅ.9- ಇದೋ ಬಂದಿದೆ... ಭಾರತೀಯರು ಎದೆಬಿರಿದುಕೊಂಡು ಸಂತಸಪಡಬೇಕಾದ ಶುಭ ಸುದ್ದಿ. ಎಲ್ಲರೂ ಕ್ಯಾಕರಿಸಿ ಸ್ವಾಗತಿಸಬೇಕಾದ ಸ್ಫೋಟಕ ಸಮಾಚಾರ. ಸರ್ವರೂ ಕಾತರದಿಂದ, ಕುತೂಹಲದಿಂದ ಕಾಯುತ್ತಿದ್ದ ಮತ್ತು ಎಲ್ಲರನ್ನೂ ಗಹಗಹಿಸಿ ನಗಬಲ್ಲಂತೆ ಮಾಡಬಲ್ಲ ಆ ರಸ ನಿಮಿಷಗಳು ಮರಳಿ ಬಂದಿವೆ... ಭಾರತವು ಜಾಗತಿಕವಾಗಿ ನಂ.1 ಸ್ಥಾನ ಪಡೆದಿರುವುದೇ ಈ ಉಲ್ಲಾಸದ ಕ್ಷಣಗಳಿಗೆ ಕಾರಣ.
 
ಐಟಿ, ಬಿಟಿ, ಶಿಕ್ಷಣ, ಪ್ರಗತಿ, ಅಭಿವೃದ್ಧಿ ಇತ್ಯಾದಿಗಳಲ್ಲಿ ನಂ.1 ಸ್ಥಾನ ಪಡೆಯಲು ಪ್ರಯತ್ನ ನಡೆಸುತ್ತಿರುವ ಭಾರತವು ಇದೀಗ ಭ್ರಷ್ಟಾಚಾರದಲ್ಲಿ ನಂ.1 ಸ್ಥಾನ ಪಡೆದಿರುವುದರಿಂದ ಬೊಗಳೆ ರಗಳೆ ಬ್ಯುರೋ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಈ ಬಗ್ಗೆ ಯಾವುದೇ ಹೆಚ್ಚಿನ ತನಿಖೆ ಅಗತ್ಯವಿಲ್ಲ ಎಂಬುದನ್ನು ಕಂಡುಕೊಂಡಿದೆ.
 
ಇದಲ್ಲದೆ, ಈಗಾಗಲೇ ಐಟಿ ವಿಭಾಗದಲ್ಲಿ ಚೀನಾವನ್ನು ಹಿಂದಿಕ್ಕಲು ಹೊರಟಿರುವ ಭಾರತ, ಜನಸಂಖ್ಯೆಯಲ್ಲೂ ಅದನ್ನು ಹಿಂದಿಕ್ಕಲು ಸ್ವಾತಂತ್ರ್ಯ ದೊರೆತಂದಿನಿಂದಲೂ ತೀವ್ರವಾಗಿ ಹಗಲು ರಾತ್ರಿ ಶ್ರಮಿಸುತ್ತಿತ್ತು. ಈ ಪರಿಶ್ರಮಕ್ಕೆ ಸೂಕ್ತ ಪ್ರತಿಫಲ ಸದ್ಯದಲ್ಲೇ ದೊರೆಯಲಿದೆ ಎಂಬುದನ್ನು ಬೊಗಳೆ ರಗಳೆ ಬ್ಯುರೋ ಹುಟ್ಟುವ ಮೊದಲೇ ಯಾರೋ ಅನ್ವೇಷಿಸಿಯಾಗಿದೆ ಎಂಬುದನ್ನು ತಿಳಿಸಲು ವಿಷಾದಿಸುವುದಿಲ್ಲ.
 
ಈಗಾಗಲೇ ಭಾರತದಲ್ಲಿ ಗಿಂಬಳ ದರ ಜಾಸ್ತಿಯಾದ ಬಗ್ಗೆ ಎಚ್ಚರಿಕೆ ವರದಿ ಪ್ರಕಟಿಸಿದ್ದ ಬ್ಯುರೋಗೆ, ಭಾರಿ ಪ್ರಮಾಣದಲ್ಲಿ ಲಂಚ ರುಷುವತ್ತುಗಳು ಹರಿದು ಬಂದ ಪರಿಣಾಮವಾಗಿ ಭಾರತವು ಈ ಸಾಧನೆ ಮಾಡಲು ಅಮೋಘ ಕೊಡುಗೆ ದೊರಕಿದಂತಾಗಿದೆ ಎಂದು ಹೇಳಲಾಗುತ್ತಿದೆ.
 
ಬೊಗಳೆ ರಗಳೆಯಿಂದ ಕುಸ್ತಿ
ಇದೀಗ ನಂಬರ್ ಒನ್ ಸ್ಥಾನಕ್ಕೆ ಲಗ್ಗೆ ಹಾಕಿರುವ ಭಾರತದ ಪ್ರಯತ್ನದ ಹಿಂದೆ ಬೊಗಳೆ ರಗಳೆ ಬ್ಯುರೋದ ಕೊಡುಗೆ ಅತ್ಯಂತ ಮಹತ್ತರವಾದದ್ದು ಎಂದು ಎದೆತಟ್ಟಿಕೊಂಡು ಹೇಳಲಾಗುತ್ತಿದೆ. ಭಾರತದಲ್ಲಿ ಭ್ರಷ್ಟಾಚಾರವನ್ನು ಶಿಷ್ಟಾಚಾರವಾಗಿಸುವ ಯತ್ನಗಳು ನಡೆದಿರುವ ಬಗ್ಗೆ ಎಲ್ಲರಿಗೂ ಜ್ಞಾನೋದಯ ಮಾಡಿಸಲಾಗಿತ್ತು.
 
ಭಾರತವು ಹತ್ತು ಹಲವಾರು ಕ್ರಮಗಳನ್ನು ಕೈಗೊಂಡು, ಮಾಹಿತಿ ಹತ್ತಿಕ್ಕುವ ಕಾಯಿದೆ ಜಾರಿಗೂ ಪ್ರಯತ್ನಿಸಿತ್ತು. ಇದರ ಜತೆಗೆ ಭ್ರಷ್ಟಾಚಾರದ ಬೀಜಗಳನ್ನು ನೂರ್ಕಾಲ ಸಂರಕ್ಷಿಸುವ ತಂತ್ರಜ್ಞಾನಕ್ಕೂ ಪೇಟೆಂಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು.
ಹೀಗೆ ಸಮಗ್ರವಾಗಿ, ಭಾರತವು ನಂ.1 ಆಗಿರುವುದರ ಹಿಂದೆ ಬೊ.ರ. ಬ್ಯುರೋದ ಕೈವಾಡವಿದೆ ಎಂದು ನಮಗೆ ಗೊತ್ತಿಲ್ಲದೆಯೇ ತಿಳಿದುಬಂದಿತ್ತು. ಅಷ್ಟಲ್ಲದೆ, ದೇಶವನ್ನು ಈ ಪರಿಯಾಗಿ ನಂ.1 ಸ್ಥಾನಕ್ಕೇರಿಸುವಲ್ಲಿ ಪ್ರಮುಖ ಪಾತ್ರವಹಿಸಿರುವ ಸಂಸದರ ವೇತನ ಹೆಚ್ಚಳ ಜುಜುಬಿ ಎಂದೆಲ್ಲಾ ಅರಚಾಡಿ ಬ್ಯುರೋವು ಜನರನ್ನು ಸಮರ್ಥವಾಗಿಯೇ ಎತ್ತಿಕಟ್ಟಿತ್ತು.
 
ಈ ಎಲ್ಲಾ ಕಾರಣಗಳಿಗೆ ಈ ವಿಷಯವನ್ನು ಸಿಕ್ಕ ಸಿಕ್ಕಲ್ಲೆಲ್ಲಾ ಪ್ರಚಾರ ಮಾಡಿಸಿ ಭಾರತದ ಅತ್ಯುನ್ನತ ಪ್ರಶಸ್ತಿಯಾದ ಭ್ರಷ್ಟ ರತ್ನ ಅಗೌರವ ಪಡೆಯಲು ತಲೆ ಕೆಳಗೆ-ಕಾಲು ಮೇಲೆ ಮಾಡಿ ಎಲ್ಲಾ ಕಡೆಯಿಂದಲೂ ಪ್ರಭಾವ ಬೀರಿಸಲಾಗುತ್ತಿದೆ. ಹೇಗಿದ್ದರೂ ನಂ.1 ದೇಶವಾಗಿರುವುದರಿಂದ ಇದು ಕಷ್ಟದ ಕೆಲಸವೇನಲ್ಲ ಎಂದು ತಿಳಿದುಕೊಂಡು ಸುಮ್ಮನಿರಲಾಗಿದೆ.
 
ಕೊನೆಗೊಂದು ನಿವೇದನೆ:
ಭ್ರಷ್ಟಾಚಾರದಲ್ಲಿ ಭಾರತ ನಂ. 1 ಎಂಬ ಸುದ್ದಿ ವಿಷಯ ಇದುವರೆಗೆ ಎಲ್ಲೂ ಪ್ರಕಟವಾಗಿಲ್ಲ ಅಷ್ಟೆ. ಆದರೆ ಜನಸಾಮಾನ್ಯರಿಗೆ ಈ ವಿಷಯವು ರಾಜಕಾರಣಿಗಳು ನಮ್ಮನ್ನು ಆಳಲು ಆರಂಭಿಸಿದಾಗಿನಿಂದಲೇ ಗೊತ್ತಿತ್ತು. ಆದರೂ ನಮ್ಮ ವಿರೋಧಿ ಪತ್ರಿಕೆಯು ಈ ಸುದ್ದಿ ಪ್ರಕಟಿಸಿ ಪ್ರಸಾರದ ಗಿಮಿಕ್ ಮಾಡಿರುವುದು ಗಮನಕ್ಕೆ ಬಂದಿದೆ. ಪ್ರತಿಸ್ಪರ್ಧಿ ಪತ್ರಿಕೆಗೆ ಸುದ್ದಿಯ ಕೊರತೆಯಿಂದಾಗಿ ಈ ಸುದ್ದಿಯನ್ನು ಪ್ರಕಟಿಸಿದೆ ಎಂದು ಶಂಕಿಸಲಾಗಿದ್ದು, ತನಿಖೆ ನಡೆಯುತ್ತಿದೆ.

Friday, October 06, 2006

ಚಿಕುನ್ ಗುನ್ಯಾ ಹೆಚ್ಚಳ: ಸೊಳ್ಳೆಗಳಿಗೆ No entry!

(ಬೊಗಳೂರು ಅನಾರೋಗ್ಯ ಬ್ಯುರೋದಿಂದ)
ಬೊಗಳೂರು, ಅ.6- ಎಲ್ಲೆಡೆ ಚಿಕನ್ ಗುನ್ಯಾ, ಮಲೇರಿಯಾ, ಡೆಂಗ್ ಮತ್ತು ಇತರ ಟುಂಯ್‌ಗುಟ್ಟುವ ಮಹಾನ್ ಕೀಟಗಳಿಂದ ಹರಡುವ ರೋಗಗಳ ಬಗ್ಗೆ ಎಲ್ಲಾ ಮುಗಿದ ಬಳಿಕ ಸೊಳ್ಳೆ ಕಚ್ಚಿದಂತೆ ಧಡಕ್ಕನೆ ಎದ್ದು ಕುಳಿತಿರುವ ಸರಕಾರವು, ಈ ಸೊಳ್ಳೆಗಳಿಗೆ 'No Entry' ಬೋರ್ಡ್ ತಗುಲಿಸುವಂತೆ ಪ್ರಜೆಗಳಿಗೆ ಕರೆ ನೀಡಿದೆ.
 
ಆದರೆ, ಚಿಕುನ್ ಗುನ್ಯಾದಿಂದಾಗಿ ಯಾರೂ ಸಾಯುವುದಿಲ್ಲ, ಹೆದರಬೇಕಾದ್ದಿಲ್ಲ ಅಂದ ನಮ್ಮ ಘನ ಸರಕಾರದ ಅನಾರೋಗ್ಯ ಮಂತ್ರಿಗಳ ಹೇಳಿಕೆಯ ಹಿಂದಿರುವ ತಥ್ಯವೇನು ಎಂಬುದು ಪತ್ತೆಯಾಗಿದೆ. ಜನತೆ ಸಾಯುವುದು ಚಿಕುನ್ ಗುನ್ಯಾ ಅಥವಾ ಡೆಂಗ್ ಜ್ವರದಿಂದಾಗಿ ಅಲ್ಲ, ಸರಕಾರದ ನೀತಿಗಳು, ಆಸ್ಪತ್ರೆಯಲ್ಲಿ ದೊರೆಯದ ಸೌಲಭ್ಯ, ಮತ್ತು ಸರಕಾರವು ಇಂಥ ರೋಗಗಳ ತಡೆಗೆ ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ಎಂದು ಬಾಯಿಬಿಟ್ಟು ಹೇಳಲಾರದೆ ಅವರು ಈ ಹೇಳಿಕೆ ನೀಡಿದ್ದಾರೆ ಎಂದು ನಮಗೆ ಗೊತ್ತಾಗಿದೆ.
 
ಆದರೂ, ಚಿಕನ್ ಗುನ್ಯಾ, ಮಲೇರಿಯಾ, ಜಾಂಡೀಸ್, ಏಡ್ಸ್ ಮುಂತಾದ ರೋಗಗಳಿಂದ ಪ್ರಜೆಗಳು ಈ ಭೌತಿಕಲೋಕದಿಂದ ನಾಪತ್ತೆಯಾಗಿ ಅಲೌಕಿಕರಾಗಿಬಿಡುತ್ತಿರುವ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸಲಾಗಿದೆ.
 
ಈ ಮೊದಲು ಬೊಗಳೆ ರಗಳೆ ವರದಿ ಮಾಡಿದ್ದಂತೆ, ಸೊಳ್ಳೆಗಳು ಆಂಟಿಗಳಿಗೆ ಮಾತ್ರವೇ ಅಂಟುತ್ತವೆ ಎಂದುಕೊಂಡು ಸರಕಾರವು ಸುಮ್ಮನಿತ್ತು. ಇದಲ್ಲದೆ ಇದೇ ಬ್ಯುರೋ ಅದಕ್ಕಾಗಿ Anty-mosquito ಸಾಫ್ಟ್‌ವೇರ್ ಮಾರುಕಟ್ಟೆಯಲ್ಲಿ ಲಭ್ಯವಿದೆ ಎಂದೂ ವರದಿ ಮಾಡಿದ ಹಿನ್ನೆಲೆಯಲ್ಲಿ ಹೇಗೂ ಪರಿಹಾರವಿದೆಯಲ್ಲ ಎಂದು ಸರಕಾರ ಸುಮ್ಮನಿತ್ತು.
 
ಇದೀಗ ಮಸ್ಕಿಟಾಸುರರ ಹಾವಳಿ ಹೆಚ್ಚಾಗಿ, ಸರಕಾರದ ಕಿವಿಯ ಬಳಿಯಲ್ಲೇ ಕಿವಿಗಡಚಿಕ್ಕುವ ಠುಂಯ್‌ಕಾರ ಕೇಳಿಸತೊಡಗಿದ್ದು, ಪ್ರಜೆಗಳಲ್ಲಿ ಹಾಹಾಕಾರವೂ ಹೆಚ್ಚಾಗಿದೆ. ಈ ಪರಿಸ್ಥಿತಿಯ ಲಾಭ ಪಡೆದುಕೊಳ್ಳಬೇಕಲ್ಲ ಎಂದುಕೊಂಡಿರುವ ಸರಕಾರವು ಚೀನಾ, ಜಪಾನ್, ಅಮೆರಿಕ ಇತ್ಯಾದಿ ದೇಶಗಳಿಗೆ ಪ್ರವಾಸ ಏರ್ಪಡಿಸಿ, ಅಲ್ಲಿ ಇಂಥ ರೋಗಗಳಿಗೆ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಅಧ್ಯಯನ ಮಾಡಿಬರಲು ತನ್ನ ಸಚಿವರು, ಶಾಸಕರನ್ನೆಲ್ಲಾ ಕಳುಹಿಸಲು ಸಿದ್ಧತೆ ನಡೆಸಿದೆ.

Thursday, October 05, 2006

ರಾಶಿ ರಾಶಿ ಭವಿಷ್ಯ

[ಸೂಚನೆ: ತಮ್ಮ ರಾಶಿ ಎಲ್ಲೂ ಕಾಣಿಸುತ್ತಿಲ್ಲ ಎಂದು ಕೆಲವರು ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಈ ಬಾರಿ ರಾಶಿಯ ಹೆಸರು ಹಾಕಿಲ್ಲ. ಯಾರು ಬೇಕಾದರೂ ತಮ್ಮ ತಮ್ಮ ರಾಶಿಯನ್ನು ಆಯ್ದುಕೊಂಡು ಭವಿಷ್ಯ ನಿರ್ಧರಿಸಿಕೊಳ್ಳಬಹುದು.]

1ನೇ ರಾಶಿ
ಮಂಗಗಳ ಕಾರ್ಯಗಳಿಗೆ ಹಣ ಖರ್ಚು. ಅವುಗಳನ್ನು ತೋಟದಿಂದ ಓಡಿಸಲು ಬಂದೂಕು ಖರೀದಿಸಬೇಕಾಗಬಹುದು.

2ನೇ ರಾಶಿ
ನೀವು ಹಳ್ಳಿಯಲ್ಲಿರುವವರಾದರೆ ದಿಢೀರನೆ ಕರೆಂಟ್ ಬಂದು ಆಶ್ಚರ್ಯ ಉಂಟುಮಾಡಬಹುದು. ನಗರವಾಸಿಗಳಾಗಿದ್ದರೆ, ದಿಢೀರನೆ ಕರೆಂಟ್ ಹೋಗಿ ತೊಂದರೆ ಕೊಡಬಹುದು.

3ನೇ ರಾಶಿ
ನೀವು ಮಾಡಿದ ಅಮಂಗಳ ಕಾರ್ಯಗಳೆಲ್ಲಾ ಬಯಲಾಗಿ, ಈ ಆರೋಪಗಳೆಲ್ಲಾ ಹುರುಳಿಲ್ಲದ್ದು, ಅಪವಾದ, ಬೊಗಳೆ ಎಂದೆಲ್ಲಾ ನೀವು ವಾದಿಸಬಹುದು.

4ನೇ ರಾಶಿ
ಅಪಘಾತದ ಭಯವಿರುವುದರಿಂದ 100ಕ್ಕಿಂತ ಹೆಚ್ಚು ಕಿ.ಮೀ. ದೂರ ಪ್ರಯಾಣ ಮಾಡಬೇಕಿದ್ದರೆ ನಡೆದೇ ಹೋಗಿ. ಚಲಿಸುವ ವಾಹನದಿಂದ ನೆಗೆಯದಿದ್ದರೆ ಯಾವುದೇ ಗಾಯವಾಗದು.

5ನೇ ರಾಶಿ
ದೇವಸ್ಥಾನಗಳಿಗೆ ಭೇಟಿ ನೀಡುವುದರಿಂದ ಖರ್ಚು ಹೆಚ್ಚಾಗಬಹುದು. ಕಾಣಿಕೆ ಹುಂಡಿ, ತಟ್ಟೆ ಮಾತ್ರವಲ್ಲದೆ ಭಿಕ್ಷುಕರ ತಟ್ಟೆಗೂ ಹಣ ಹಾಕಬೇಕಾಗಿರುವುದರಿಂದ ಇದರ ಜತೆಗೆ ಹೊರಗಿಟ್ಟ ನಿಮ್ಮ ಚಪ್ಪಲಿಯೂ ಕಾಣೆಯಾಗುವುದರಿಂದ ಖರ್ಚು ಹೆಚ್ಚಳ ಸಂಭವ.

6ನೇ ರಾಶಿ
ದೇವಸ್ಥಾನಕ್ಕೆ ಹೋಗುವುದರಿಂದ ದೇವರ ದರ್ಶನ ಮಾಡಬೇಕಾಗಬಹುದು. ಆದರೆ ಅರ್ಚನ, ಆರತಿ, ಪುಷ್ಪ, ಕುಸುಮ ಇತ್ಯಾದಿಗಳಿಂದಾಗಿ ಕಣ್ಣು ಕುಕ್ಕುವ ಸಾಧ್ಯತೆಗಳಿವೆ.

7ನೇ ರಾಶಿ
ಕಪ್ಪು ದಂಧೆಯಿಂದ ಸಂಪಾದಿಸಿದ ಹಣವನ್ನು ಇಂದು ಸ್ವಿಸ್ ಬ್ಯಾಂಕಿನಲ್ಲಿಡಲು ಸುದಿನ. ಇದರಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ದಿಢೀರ್ ಏರಬಹುದು.

8ನೇ ರಾಶಿ
ನೀವು 'ಏನು ಅಪರೂಪ?' ಎಂದು ಕೇಳಿದ್ದು 'ಏನು ವಿರೂಪ?' ಎಂದು ಕೇಳಿಸಿದ ಕಾರಣ ನಿಮಗೆ ಧರ್ಮದೇಟು ದೊರೆಯಬಹುದು.

9ನೇ ರಾಶಿ
ವಾಹನ ಚಲಾಯಿಸುವಾಗ ಫಸ್ಟ್ ಗೇರ್ ಬದಲು ರಿವರ್ಸ್ ಗೇರ್ ಹಾಕಿದರೆ ಎಡವಟ್ಟಾದೀತು. ಹಿಂದಿನ ವಾಹನದವರು ನಿಮ್ಮನ್ನು ಬೈದು ಪೊಲೀಸ್ ಠಾಣೆಗೆ ದರದರನೆ ಎಳೆದುಕೊಂಡುಹೋಗಬಹುದು.

10ನೇ ರಾಶಿ
ಈ ವಾರ ಯಾವುದೇ ಕೆಲಸಕ್ಕೆ ಕೈಹಾಕದಿರುವುದು ಒಳಿತು. ಕಾಲಿನಲ್ಲೇ ಎಲ್ಲವನ್ನೂ ಮುಗಿಸಿಬಿಡಿ.

11ನೇ ರಾಶಿ
ಈ ವಾರ ತಲೆಯ ಬದಲು ಹೊಟ್ಟೆಗೆ ಹೆಚ್ಚು ಎಣ್ಣೆ ಹಾಕಿಕೊಳ್ಳುವಿರಿ. ಆದರೂ ರಾತ್ರಿ ನಿಮ್ಮದೇ ಮನೆಯ ಬಾಗಿಲು ಬಡಿಯುವುದರಿಂದ ಪ್ರಾಣಕ್ಕೇನೂ ಅಪಾಯವಿರದು. ಯಾವುದಕ್ಕೂ ನಡೆದಾಡುವಾಗಲೂ, ಬಾಗಿಲು ಬಡಿಯುವಾಗಲೂ ಹೆಲ್ಮೆಟ್ ಹಾಕಿಕೊಂಡಿರುವುದು ಒಳಿತು.

12ನೇ ರಾಶಿ
ಕಚೇರಿಯಲ್ಲಿ ನೀವು ಖಾಸಗಿ ಕೆಲಸ ಮಾಡುತ್ತಿರುವಾಗ ಸಹೋದ್ಯೋಗಿಗಳ ಆಕ್ಷೇಪ ಮಾಡುವುದು ನಿಮಗೆ ಇದೊಂದು ದೊಡ್ಡ ತೊಂದರೆ ಎನಿಸಬಹುದು.

13ನೇ ರಾಶಿ
ಓಹ್.... ಹನ್ನೆರಡೇ ರಾಶಿ ಇರೋದಲ್ವಾ.... ಗೊತ್ತೇ ಇರ್ಲಿಲ್ಲ....

(ಸೂಚನೆ: ಬ್ಲಾಗರ್ ಬೀಟಾ ವರ್ಷನ್‌ಗೆ ಈ ಬ್ಲಾಗನ್ನು ಹಸ್ತಾಂತರಿಸಲಾಗಿರುವುದರಿಂದ ಕಾಮೆಂಟಿಂಗ್‌ಗೆ ಜಿ-ಮೇಲ್ ಐಡಿ ಕೇಳಿದರೆ ಹೆದರಬೇಕಾದ್ದಿಲ್ಲ.... others option ಬಳಸಿಕೊಳ್ಳಬಹುದಾಗಿದೆ.)

Wednesday, October 04, 2006

Accident ಪರಿಹಾರ ನಿಧಿ ಕೋರಿ ತರುಣಿಯರ ಸಾಲು

(ಬೊಗಳೂರು ಸೆನ್‌ಸೆಕ್ಸ್ ಬ್ಯುರೋದಿಂದ)
ಬೊಗಳೂರು, ಅ.4- ಗುಜರಾತಿನಲ್ಲಿ ಅಧಿಕಾರಾರೂಢ ಮೋಡಿ ಸರಕಾರವು ವಿಚಿತ್ರ ಪರಿಸ್ಥಿತಿ ಎದುರಿಸುತ್ತಿದೆ. ದಸರಾ ಆಚರಣೆ ಸಂದರ್ಭ ಗರ್ಭಾ ನೃತ್ಯ ಪಾರ್ಟಿಗಳನ್ನು ಇಷ್ಟೊಂದು ಅದ್ದೂರಿಯಾಗಿ, ಲಂಗು ಲಗಾಮಿಲ್ಲದೆ, ಐಷಾರಾಮದಿಂದ ಆಚರಿಸುವುದು ಹೇಗೆ ಎಂಬ ಬಗ್ಗೆ ಬೊಗಳೆ ರಗಳೆ ಬ್ಯುರೋ ನಡೆಸಿದ ಅಸತ್ಯಾನ್ವೇಷಣೆಯ ವರದಿ ಸ್ಫೋಟಗೊಂಡಿದ್ದೇ ಇದಕ್ಕೆ ಕಾರಣ ಎಂಬುದು ತಿಳಿದುಬಂದಿದೆ.
 
ದಸರಾ ಆರಂಭಕ್ಕೆ ಮುನ್ನ ಅಲ್ಲಿನ ಮೆಡಿಕಲ್ ಶಾಪ್‌ಗಳಲ್ಲಿ ಶಾಪಕ್ಕೆ ತುತ್ತಾದವರಂತೆ ಹದಿ ಹರೆಯದ ಮಂದಿ ಸಾಲುಗಟ್ಟಿ ನಿಲ್ಲುತ್ತಿದ್ದರು. ಇದರಿಂದಾಗಿ ಔಷಧ ವಸ್ತುಗಳ ಸಂವೇದನೆ ಸೂಚ್ಯಂಕವು (ಸೆನ್‌ಸೆಕ್ಸ್ ಇಂಡೆಕ್ಸ್) ದಿಢೀರನೇ ಮೇಲಕ್ಕೆ ನೆಗೆದಿತ್ತು. ಔಷಧ ಅಂಗಡಿಗಳು ಪಿಲ್‌ಗಳ ಸಿಕ್ಕಾಪಟ್ಟೆ ವ್ಯಾಪಾರದಿಂದಾಗಿ ಸಾಕಷ್ಟು ಮಾಲು ಪೂರೈಸಲಾಗದೆ ಕೆಲವಂತೂ ಮುಚ್ಚಿರುವ ಅಂಶವು ನಮ್ಮ ಬದ್ಧವೈರಿ ನೆಟ್ಪತ್ರಿಕೆ CNN-IBN ಪ್ರಕಟ ಮಾಡಿದ್ದು, ಬೊಗಳೆ ಬ್ಯುರೋ ನೋಡಿದ ತಕ್ಷಣ ವರದಿಯನ್ನು ಹಿಂತೆಗೆದುಕೊಂಡಿತ್ತು.
 
ಈ ಸೆನ್‌ಸೆಕ್ಸ್ ಸಂವೇದನೆ ಸೂಚ್ಯಂಕವು ಬಿರುಸುಬಾಣದಂತೆ ಮೇಲೇರಿದ್ದರ ಹಿಂದೆ ಪಿಲ್ ತಯಾರಿಕಾ ಕಂಪನಿಗಳ ಕೈವಾಡವಿದೆ ಎಂಬ ಆರೋಪದ ಬಗ್ಗೆ ತನಿಖೆಗೆ ಪ್ರತಿಪಕ್ಷಗಳು ಒತ್ತಾಯಿಸುತ್ತಿವೆ. ಈ ಕಾರಣಕ್ಕೆ ಮೋಡಿ ಸರಕಾರ ಇಕ್ಕಟ್ಟಿನಲ್ಲಿ ಸಿಲುಕಿದೆ. ಹೊಸದಾಗಿ ಉತ್ಪಾದಿಸಿರುವ ಗರ್ಭ ನಿರೋಧಕ ಗುಳಿಗೆಯ ಪರಿಣಾಮ ಪರೀಕ್ಷಿಸುವ ನಿಟ್ಟಿನಲ್ಲಿ ಅವರು ಗುಜರಾತಿಗೇ ಲಗ್ಗೆ ಇಟ್ಟಿದ್ದಾರೆ ಎಂಬುದು ತನಿಖೆ ವೇಳೆ ಪತ್ತೆಯಾಗದ ಅಂಶ.
 
ಮತ್ತೊಂದು ಚಿಂತಾಜನಕ ಘಟನೆಯಲ್ಲಿ, ಗರ್ಭಾ ನೃತ್ಯದ ಸಂದರ್ಭದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪಿಲ್ ಸಿಗದ ಕಾರಣ ತೀವ್ರ ತೊಂದರೆಗೀಡಾದ ಅವಿವಾಹಿತ ಗರ್ಭವತಿಯರು, accicent ವಿಮಾ ಪರಿಹಾರ ನೀಡಬೇಕೆಂದು ಮೋಡಿ ಸರಕಾರದ ಕಾಲೆಳೆಯಲಾರಂಭಿಸಿದ್ದಾರೆ. ನವರಾತ್ರಿ ಎಂಬ ಹಬ್ಬದ ಹೆಸರನ್ನು ಅಪಾರ್ಥ ಮಾಡಿಕೊಂಡು ಆಚರಣೆ ಮಾಡಿ accidentಗೆ ತುತ್ತಾದವರು ಅಲ್ಲಲ್ಲಿ ಧರಣಿ, ಪ್ರದರ್ಶನ ಇತ್ಯಾದಿ ನಿರತರಾಗಿದ್ದು, ರಾಜ್ಯದಲ್ಲಿ ನೈತಿಕ ಪೊಲೀಸ್ ವಿಭಾಗದ ಹೆಚ್ಚುವರಿ ತುಕಡಿಗಳನ್ನು ಕರೆಸಿಕೊಳ್ಳಲಾಗಿದೆ.
 
ಪಿಲ್‌ಗಳ ಅದ್ದೂರಿ ಮಾರಾಟದಿಂದಾಗಿಯೇ ಅದ್ದೂರಿಯಿಂದಲೇ ಗರ್ಭಾ ನೃತ್ಯ ಆಯೋಜಿಸಲು ಸಾಧ್ಯವಾಗಿತ್ತು ಎಂಬ ಅಂಶವನ್ನು ಮೋಡಿ ಸರಕಾರದ ಮನವಿ ಮೇರೆಗೆ ಬೊಗಳೆ ಬ್ಯುರೋ ನಡೆಸಿ ಸಲ್ಲಿಸಿದ ತನಿಖಾ ವರದಿಯಲ್ಲಿ bold  ಅಕ್ಷರಗಳಲ್ಲಿ ಉಲ್ಲೇಖಿಸಲಾಗಿದೆ.
 
ಇದೇ ಸಂದರ್ಭದಲ್ಲಿ, ತೀವ್ರ ತನಿಖೆ ನಡೆಸುತ್ತಾ ನಡೆಸುತ್ತಾ ಮುಂದುವರಿದಂತೆ, ಈ ಆಚರಣೆಗೆ ಗರ್ಭಾ ನೃತ್ಯ ಎಂದೇ ಹೆಸರಿರಿಸಿದ್ದೇಕೆ ಎಂಬ ಅಂಶವನ್ನೂ... ನಾವಲ್ಲ.... ನಾವಲ್ಲ... ನಮ್ಮ ಓದುಗರು ಪತ್ತೆ ಹಚ್ಚಿಬಿಟ್ಟಿದ್ದಾರೆ.
 
ಅಲ್ಲದೆ ಗರ್ಭಾ ನೃತ್ಯ ಕೂಟ ಇರುವಲ್ಲಿ ಏಡ್ಸ್ ಜಾಗೃತಿಯನ್ನೂ ಮೂಡಿಸುತ್ತಿರುವುದೇಕೆ ಎಂಬುದು ಯಾರಿಗೂ ಗೊತ್ತಾಗದ ಸಂಗತಿ.

Tuesday, October 03, 2006

ನರ್ಸರಿಯಿಂದಲೇ ಉಗ್ರವಾದ ಶಿಕ್ಷಣ

(ಬೊಗಳೂರು ಉಗ್ರವಾದ ತರಬೇತಿ ಬ್ಯುರೋದಿಂದ)
ಬೊಗಳೂರು, ಅ.3- ಮದರಸಾಗಳಲ್ಲಿ ಭಯೋತ್ಪಾದನಾ ತರಬೇತಿ ನೀಡಲಾಗುತ್ತದೆ ಎಂಬ ಬಗ್ಗೆ ಭಾರತದಲ್ಲಿ ಕೂಗೆದ್ದಿದ್ದು ಮಾತ್ರವಲ್ಲದೆ, ಅಫ್ಘಾನಿಸ್ತಾನ ಅಧ್ಯಕ್ಷ ಹಮೀದ್ ಕರ್ಜಾಯಿ ಅವರೂ ಘೋಷಿಸಿರುವುದರಿಂದ ಕೆಂಡದಂತೆ ಬಿಸಿಯಾಗಿರುವ ಜನರೇಟರ್ ಮರ್ವೇಜ್ ಪುಷರಫ್ ಅವರು, ಭಾರತದ ರಕ್ಷಣಾ ಸಚಿವರ ಹೇಳಿಕೆಯಿಂದ ಸ್ವಲ್ಪಮಟ್ಟಿಗೆ ತಂಪಿನ ಅನುಭವ ಪಡೆದಿದ್ದಾರೆ.
 
ನಮ್ಮ ದೇಶದಲ್ಲಿ ಧಾರ್ಮಿಕ ಶಿಕ್ಷಣ ಕೇಂದ್ರಗಳಲ್ಲಿ ಮಾತ್ರವೇ ಹಿಂಸಾಚಾರದ ಶಿಕ್ಷಣ ನೀಡಲಾಗುತ್ತದೆ ಎಂಬುದು ನಮ್ಮ ಮತಕ್ಕೆ ಬಗೆದ ಅವಮಾನ. ಜಾತ್ಯತೀತರೇ ಈಗ ಆಳ್ವಿಕೆ ನಡೆಸುತ್ತಿರುವ ಭಾರತದಲ್ಲಿ ನಮ್ಮ ಬಗ್ಗೆ ಹೆಚ್ಚು ಉತ್ತಮ ಅಭಿಪ್ರಾಯವಿದೆ ಎಂದು ತಿಳಿಸಿರುವ ಪುಷರಫ್, ಕೊನೆಗೂ ಭಾರತೀಯರಾದರೂ ನಮ್ಮಲ್ಲಿ ನರ್ಸರಿ ಮಟ್ಟದಿಂದಲೇ ಬಂದೂಕಿನ ತರಬೇತಿ ನೀಡಲಾಗುತ್ತದೆ ಎಂದು ತಿಳಿದುಕೊಂಡಿದ್ದಾರಲ್ಲಾ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
 
ಭಾರತದಲ್ಲಿ ಮಾತ್ರವಲ್ಲ ಎಲ್ಲೆಡೆಯೂ ಈಗ ಇಂಗ್ಲಿಷ್ ಶಿಕ್ಷಣ ಕಡ್ಡಾಯವಾಗತೊಡಗಿದೆ. ಆದರೆ ಕೆಲವರು ಮಾತ್ರ ಇಂಗ್ಲಿಷ್ ಕಲಿಸುವುದಕ್ಕೆ ಅಪಸ್ವರ ಎತ್ತುತ್ತಾರೆ. ಇದೇ ಕಾರಣಕ್ಕಾಗಿ ಆ ದೇಶ ಶಿಕ್ಷಣದಲ್ಲಿ ಹಿಂದುಳಿದಿರುವುದು ಎಂದು ವಿಶ್ಲೇಷಿಸಿರುವ ಅವರು, ನಾವೇ ಅವರಿಗೆ ಮಾರ್ಗದರ್ಶಕರಾಗುತ್ತೇವೆ, ನರ್ಸರಿ ಮಟ್ಟದಿಂದಲೇ ಬಾಂಬ್, ಬಂದೂಕು ಎಲ್ಲಾ ತರಬೇತಿ ನೀಡಲಾಗುತ್ತದೆ ಎಂದರು.
 
ಸಣ್ಣ ಸಣ್ಣ ಮಕ್ಕಳು ಕೂಡ ಬೆಳೆಯುತ್ತಿರುವ ಹಂತದಲ್ಲಿ ನಮ್ಮ ನೆರೆಯ ರಾಷ್ಟ್ರದ ಬಗೆಗೆ ದ್ವೇಷ ಭಾವನೆ ಬೆಳೆಸಿಕೊಳ್ಳಬೇಕಾದರೆ ಸಣ್ಣ ಪ್ರಾಯದಲ್ಲೇ ದ್ವೇಷದ ಬೀಜವನ್ನು ಬಿತ್ತಬೇಕು. ಇದಕ್ಕಾಗಿ ನಮಗೆ ಅಲ್ ಖೈದಾ ಮತ್ತು ಜೈಶ್ ಎ ಮೊಹಮ್ಮದ್ ಮುಂತಾದ ಸಂಘಟನೆಗಳು ಭಾರಿ ಪ್ರಮಾಣದಲ್ಲಿ ದ್ವೇಷದ ಬೀಜಗಳನ್ನು ಪೂರೈಸುತ್ತಿವೆ ಎಂದು ಪುಷರಫ್ ಹೇಳಿದ್ದಾರೆ.
 
ಅವುಗಳು ಪೂರೈಸುವ ದ್ವೇಷದ ಬೀಜಗಳು ಸಾಲದಿದ್ದರೆ ನಾವು ಇರಾಕ್, ಸೂಡಾನ್ ಮುಂತಾದೆಡೆಗಳಿಂದ ಅವುಗಳನ್ನು ಆಮದು ಮಾಡಿಕೊಳ್ಳುವುದಾಗಿ ತಮ್ಮ ದೇಶದ ಪ್ರಜೆಗಳಿಗೆ ಅವರು ಭರವಸೆ ನೀಡಿದ್ದಾರೆ.
 
ಈಗಾಗಲೇ ನಮ್ಮ ಹಿರಿಯರು ಬೀಜದ ಬ್ಯಾಂಕಿನಲ್ಲಿ ಸಾಕಷ್ಟು ಬೀಜಗಳನ್ನು ಕಾಪಾಡಿಟ್ಟುಕೊಂಡಿದ್ದಾರೆ. ನಮಗೆ ಭಾರತವೇ ಇದಕ್ಕೆ ದಾರಿ ತೋರಿದೆ ಎಂದು ಅವರು ಹೇಳಿದರು.

ಎಂಜಿನ್ ಇಲ್ಲದ ರೈಲು: ಬ್ರೇಕಿಂಗ್ ನ್ಯೂಸ್ ಅಲ್ಲವೆಂದ ಬೊ.ರ.

[ಬೊಗಳೂರು ಪಟ್ಟೆ-ರಹಿತ ರೈಲು ಬ್ಯುರೋ] ಬೊಗಳೂರು: ಆಫ್‌ಲೈನ್ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯೊಂದು ಆನ್‌ಲೈನ್ ಸಂಪಾದಕರ ಕಣ್ಣು ಕುಕ್ಕಿದ್ದು, ಎಂಜಿನ್ ಇಲ್ಲದೆ...