ಬೊಗಳೆ ರಗಳೆ

header ads

ಬಿಹಾರದಲ್ಲಿ ಬ್ರೇಕ್ಲಾ ತಂತ್ರ-ಜ್ಞಾನ ವಿವಿ ಆರಂಭ

(ಬೊಗಳೂರು ಶೈಕ್ಷಣಿಕ ಬ್ಯುರೋದಿಂದ)
ಬೊಗಳೂರು, ನ.9- ಐಟಿ ಶಿಕ್ಷಣಕ್ಕೆ ಸೀಟು ದೊರೆಯಲಿಲ್ಲ ಎಂದು ಹಲುಬುವ ವಿದ್ಯಾರ್ಥಿಗಳಿಗೆ ಇದೋ ಬೊಗಳೆ ರಗಳೆ ಬ್ಯುರೋ ಹೊತ್ತು ತಂದಿದೆ ಸಂತಸಕರ ಸುದ್ದಿ.

ಐಟಿ, ಬಿಟಿ ಮತ್ತು ಬಿಟ್ಟಿ ಟೆಕ್ನಾಲಜಿಗಳೆಲ್ಲಾ ಹಳತಾಗತೊಡಗಿದ್ದು, ಬಿಹಾರದಲ್ಲಿ ಹೊಸ ತಂತ್ರಜ್ಞಾನ ಕ್ರಾಂತಿಯೊಂದು ನಡೆಯುತ್ತಿರುವುದನ್ನು ನಮ್ಮ ಓದುಗರಿಗೋಸ್ಕರವೇ ಪತ್ತೆ ಹಚ್ಚಲಾಗಿದೆ.

ಬಿಹಾರದಾದ್ಯಂತ ಈ ತಂತ್ರ-ಜ್ಞಾನ ಬೋಧಿಸುವ ಶಾಲಾ ಕಾಲೇಜುಗಳೂ ಅಲ್ಲಿ ತಲೆ ಎತ್ತತೊಡಗಿದ್ದು, ಇವೆಲ್ಲವೂ All India Institute of Break-law Technology (AIIBT) ಮಾನ್ಯತೆಗೊಳಪಟ್ಟಿವೆ.
ಹಾಗಾಗಿ ಅದಕ್ಕೆ ಸ್ವಲ್ಪ ಮಟ್ಟಿನ ಪ್ರಚಾರ ನೀಡುವುದು ನಮ್ಮ ಕರ್ತವ್ಯವಾಗಿರುವುದರಿಂದ (ಜಾಹೀರಾತು ನೀಡಲು ಒಪ್ಪಿಕೊಂಡಿದೆ ಎಂದು ಯಾರಿಗೂ ಹೇಳಬಾರದಾಗಿ ವಿನಂತಿ!) ಈ ವರದಿ ಬಿತ್ತರಿಸಿ ತತ್ತರಿಸಲಾಗುತ್ತಿದೆ.

ಈ ವಿವಿಯಲ್ಲಿ ಏನೆಲ್ಲಾ ಕಲಿಸಲಾಗುತ್ತದೆ? ಒಬ್ಬ ಮಾನವ ಎಂದು ಕರೆಸಿಕೊಳ್ಳುವ ಪ್ರಾಣಿಯು ಅಮಾನವನಾಗುವುದು ಹೇಗೆ, ಅಮಾನವೀಯತೆ ಮೆರೆಯಲು ಎಷ್ಟೆಲ್ಲಾ ಮಾರ್ಗಗಳಿವೆ ಎಂಬುದನ್ನು ಈ ಕಾಲೇಜು ಮತ್ತು ವಿವಿಗಳಲ್ಲಿ ಆದ್ಯಂತವಾಗಿ ಹೇಳಿಕೊಡಲಾಗುತ್ತದೆ.

ಒಂದಲ್ಲ, ಎರಡಲ್ಲ, ಹತ್ತಾರು ಕೊಲೆ ಮಾಡಿ ಏನೂ ಆಗದಂತೆ ತಲೆ ಎತ್ತಿ ತಿರುಗಾಡುವುದು ಹೇಗೆ, ನ್ಯಾಯಾಲಯದ ಆದೇಶವನ್ನು ತಿರುಚುವುದು ಹೇಗೆ, ಅತ್ಯಾಚಾರ, ಅನಾಚಾರ ಮಾಡಿಯೂ ಏನೂ ಆಗದವರಂತೆ ಬದುಕುವುದು ಹೇಗೆ ಎಂಬಿತ್ಯಾದಿಗಳನ್ನು ಇಲ್ಲಿ ಕಲಿಸಲಾಗುತ್ತದೆ.

ಮುಂದಿನ ದಿನಗಳಲ್ಲಿ ಅತ್ಯಂತ ಅನಿವಾರ್ಯವಾಗಲಿರುವ ಇಂಥ ವ್ಯವಸ್ಥೆಯ ಬಗ್ಗೆ ಜನಜಾಗೃತಿ ಮೂಡಿಸಿ ಈಗಿಂದೀಗಲೇ ಜನಾಂಗ ರೂಪಿಸಲು ಮತ್ತು ಆ ಮೂಲಕ ಭಾರಿ ಪ್ರಮಾಣದಲ್ಲಿ ಬಾಚಿಕೊಳ್ಳಲು ರೂಪು ತಳೆದಿದೆ All India Institute of Break-law Technology (AIIBT).

ಕಾನೂನು ಹೇಗೆ ಮುರಿಯಬಹುದು ಎಂದು ತಿಳಿದುಕೊಳ್ಳಲು, ಕಾನೂನಿನ ಎಲ್ಲಾ ಮಜಲು ಮಜಲುಗಳನ್ನು ಅಧ್ಯಯನ ಮಾಡಿ ಪದವಿ ಪಡೆದಿರುವ ಶಹಾಬುದ್ದೀನ್ ಅವರನ್ನು ಈ ವಿವಿಯ ಕುಲಾಧಿಪತಿಗಳನ್ನಾಗಿ ನೇಮಿಸಲಾಗಿದ್ದು, ಈ ರೀತಿಯಾಗಿ ಕಾನೂನು ಮುರಿಯಲೆಂದೇ ಕಾನೂನು ಪದವಿ ಪಡೆದಿರುವ ಇತರೆಲ್ಲರನ್ನೂ ಪ್ರತಿ ಕಾಲೇಜುಗಳ ಪ್ರಾಂಶುಪಾಲರಾಗಿ ನಿಯೋಜಿಸಲಾಗುತ್ತದೆ.

ಈ ಕುಲಾಧಿಪತಿಗಳ ವಿಶೇಷ ಸಂದರ್ಶನವನ್ನು ಈ ಹಿಂದೆಯೇ ಬೊಗಳೆ ರಗಳೆ ಬ್ಯುರೋ ಚಿಕ್ಕದಿರುವಾಗಲೇ ಮಾಡಿತ್ತು. ಈಗ ಕೆಲಸದ ಒತ್ತಡದಿಂದಾಗಿ ಮತ್ತೊಮ್ಮೆ ಸಂದರ್ಶನಕ್ಕೆ ಪುರುಸೊತ್ತು ಇಲ್ಲದಿರುವುದರಿಂದ ಅದನ್ನು ಇಲ್ಲಿ ಓದಿ ಬೆಚ್ಚಿ ಬೀಳಬಹುದು.

ಒಟ್ಟಿನಲ್ಲಿ ಈ ಕಾಲೇಜುಗಳ ಪ್ರಾಂಶುಪಾಲರಾಗಲು ಆಸಕ್ತರು ಅರ್ಜಿ ಸಲ್ಲಿಸಿದಲ್ಲಿ, ಕೂಡಲೇ ಮಚ್ಚು-ಲಾಂಗುಗಳೊಂದಿಗೆ ಆಸಕ್ತರಲ್ಲಿಗೇ ಜನ ಕಳುಹಿಸಲಾಗುವುದು ಎಂದು ಬೊಗಳೆ ರಗಳೆ ಪತ್ರಿಕೆಗೆ ಮಾತ್ರವೇ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ AIIBT ತಿಳಿಸಿದೆ.

+++++++++++++++++
ಇದು ಬಿಟ್ಟಿ ಜಾಹೀರಾತು
+++++++++++++++++
ಬರಲಿದೆ ಪ್ರಯಾಸ ಕಥನ!!!
ಬೊಗಳೆ ರಗಳೆ ಬ್ಯುರೋದಿಂದ ಆವಂತಿಕಾಪುರಿ(ಉಜ್ಜಯಿನಿ) ಪ್ರಯಾಸ ಕಥನ!
ಭಟ್ಟಿ ವಿಕ್ರಮಾದಿತ್ಯನ ನಾಡಿಗೆ ಅಸತ್ಯಾನ್ವೇಷಿ ಭೆಟ್ಟಿ!ಎಂದೂ ಕಂಡು
ಕೇಳರಿಯದ ಪ್ರಯಾಸ ಕಥನ ಶೀಘ್ರವೇ ಸಚಿತ್ರವಾಗಿ ಮೂಡಿಬರಲಿದೆ.
ನಿರೀಕ್ಷಿಸಬೇಡಿ...
ಯಾಕೆಂದರೆ ಆಸೆಯೇ ದುಃಖಕ್ಕೆ ಮೂಲ...
ನಿರೀಕ್ಷಿಸಿದರೆ ಅನಿರೀಕ್ಷಿತವಾಗಿರುವುದೇ ಘಟಿಸೀತು...!!!

ಕಾಮೆಂಟ್‌‌ ಪೋಸ್ಟ್‌ ಮಾಡಿ

2 ಕಾಮೆಂಟ್‌ಗಳು

  1. ಬಿಹಾರದ ವಿವಿಗೆ ಸೇರೋಕ್ಕೆ ವಯಸ್ಸಿನ ಮಿತಿ ಇದೆಯಾ? ಕೆಲಸಕ್ಕೆ ಅರ್ಜಿ ಗುಜರಾಯಿಸಿದರೆ ಸಿಗಬಹುದಾ? ನಾನು ಆಗಾಗ ಲಾಂಗು ಪಾಂಗು ಪ್ರಯೋಗಿಸಿರುವೆ.

    ನಾಳೆಗಾಗಿ ಕಾಯುತ್ತಿರುವೆ. ಆದರೆ ನಾಳೆ ಅನ್ನೋದು ಯಾವಾಗ ಬರತ್ತೆ?

    ಪ್ರತ್ಯುತ್ತರಅಳಿಸಿ
  2. ಮಾವಿನ ಸರಸ ಅವರೆ,

    ಅರ್ಜಿ ಜತೆಗೆ ಭಾರವಾದ ವಸ್ತು ಇರಿಸಿದರೆ ಕೆಲಸ ಗ್ಯಾರಂಟಿ.

    ಮತ್ತೆ ನಾಳೆ ಅನ್ನೋ ಬೋರ್ಡು ನಾಳೇನೂ ಹಾಕಿರುತ್ತೇವೆ!

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D