Sunday, December 31, 2006

ಮುದ್ದಾಂ ಹುಸೇನ್‌ಗೆ ಗಲ್ಲು ಶಿಕ್ಷೆಯೇ ಏಕೆ?

(ಬೊಗಳೂರು ಅಂತಿಮ ಕ್ಷಣ ಬ್ಯುರೋದಿಂದ)
ಬೊಗಳೂರು, ಡಿ.31- ಇರಾಕ್ ಸರ್ವಾಧಿಕಾರಿ ಮುದ್ದಾಂ ಹುಸೇನ್‌ಗೆ ಮರಣ ದಂಡನೆ ವಿಧಿಸಿರುವುದು ವಿಶ್ವಾದ್ಯಂತ ಅಗ್ರ-ಉಗ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವಂತೆಯೇ, ಅವನನ್ನು ಗಲ್ಲಿಗೇರಿಸಿಯೇ ಕೊಂದಿದ್ದೇಕೆ ಎಂಬುದನ್ನು ಬೊಗಳೆ ರಗಳೆ ಬ್ಯುರೋ ಪತ್ತೆ ಹಚ್ಚಿದೆ.

ಮುದ್ದಾಂ ಮರಣ ದಂಡನೆಗೆ ಒಳಗಾದಾಗ ವಿಶ್ವದ ದೊಡ್ಡಣ್ಣನಾಗಲು ಶತಾಯಗತಾಯ ಯತ್ನಿಸುತ್ತಿರುವ ಲಾರ್ಜ್ ಬುಷ್ ಗಾಢ ನಿದ್ದೆಯಲ್ಲಿದ್ದು, ಅವರು ಬೊಗಳೆ ರಗಳೆ ಬ್ಯುರೋಗೆ ನಿದ್ದೆಯಲ್ಲೇ ವಿಶೇಷ ಸಂದರ್ಶನ ನೀಡಿ, ಇದರ ಹಿಂದಿನ ಉದ್ದೇಶವನ್ನು ಬಹಿರಂಗಪಡಿಸಿದ್ದಾರೆ.

ಇರಾಕಿನ ಮೇಲೆ ಹಿಡಿತ ಸಾಧಿಸಲು ದಶಕದಿಂದ ತಮ್ಮ ಪಡೆಗಳು ಯತ್ನಿಸುತ್ತಿದ್ದರೂ ಯಾವುದೇ ಯಶಸ್ಸು ಇದುವರೆಗೆ ಸಿಗಲಿಲ್ಲ. ಹಿಂಸಾಚಾರ ಯಥಾಪ್ರಕಾರ ಮುಂದುವರಿದಿದೆ. ಮಾತ್ರವಲ್ಲ ಮತ್ತಷ್ಟು ಹೆಚ್ಚಾಗಿಬಿಟ್ಟಿದೆ. ಹಾಗಾಗಿ ತಮ್ಮ ಇರಾಕ್ ನೀತಿ ವಿಫಲವಾಗಿದೆ ಎಂಬ ಟೀಕೆಗಳು ವಿಶ್ವಾದ್ಯಂತ ಕೇಳಿ ಬಂದ ಹಿನ್ನೆಲೆಯಲ್ಲಿ ಇಲ್ಲೊಂದು ಮೈಲಿಗಲ್ಲು ನೆಡಲು ತಾವು ಉದ್ದೇಶಿಸಿರುವುದಾಗಿ ಸ್ಪಷ್ಟಪಡಿಸಿರುವ ಲಾರ್ಜ್ ಬುಷ್, ಆದರೆ ಎಷ್ಟೇ ಪ್ರಯತ್ನ ಪಟ್ಟರೂ ಮೈಲಿಗಲ್ಲು ನೆಡಲಾಗಿರಲಿಲ್ಲ ಎಂದು ವಿವರಿಸಿದ್ದಾರೆ.

ಈ ಕಾರಣಕ್ಕಾಗಿ, ಮುದ್ದಾಂನನ್ನು ಗಲ್ಲು ಶಿಕ್ಷೆಗೆ ಗುರಿಪಡಿಸಿದರೆ ಮಾತ್ರವೇ ಮೈಲಿ-ಗಲ್ಲು ಸ್ಥಾಪಿಸಿದಂತಾಗುತ್ತದೆ ಎಂಬುದು ತಮ್ಮ ನಿರ್ಧಾರವಾಗಿತ್ತು ಎಂದವರು ಸ್ಪಷ್ಟಪಡಿಸಿದ್ದಾರೆ.

ಅದೂ ಅಲ್ಲದೆ, ಮುದ್ದಾಂಗಾಗಿ ಭಾರತದಲ್ಲಿ ಸಿಂಹಾಸನವೊಂದು ಸಿದ್ಧವಾಗುತ್ತಿದ್ದು, ಆತ ಅದನ್ನು ಏರಿಬಿಟ್ಟಾನು, ಮತ್ತೆ ಇರಾಕಿನಲ್ಲಿ ತನ್ನ ಆಧಿಪತ್ಯ ಸ್ಥಾಪಿಸಿ ಸ್ಕಡ್ ಕ್ಷಿಪಣಿಗಳಿಂದ ಅಮೆರಿಕಕ್ಕೆ ಪ್ರಬಲ ಪ್ರತಿರೋಧ ಒಡ್ಡಿಯಾನು ಎಂಬ ಭೀತಿಯೂ ಈ ಅವಸರದ ಗಲ್ಲು ಶಿಕ್ಷೆಗೆ ಕಾರಣವಾಗಿತ್ತು ಎಂಬುದು ಬ್ಯುರೋ ಕಂಡುಕೊಳ್ಳದ ಸತ್ಯ.

ಒಂದೇ ಗಲ್ಲು ಶಿಕ್ಷೆಯೇ?: ಈ ಮಧ್ಯೆ, ನೂರಾರು ಮಂದಿಯ ಸಾವಿಗೆ ಕಾರಣವಾದ ಆರೋಪ ಹೊತ್ತಿರುವ ಮುದ್ದಾಂಗೆ ಕೇವಲ ಒಂದೇ ಮರಣ ದಂಡನೆ ವಿಧಿಸಿರುವುದು ಎಲ್ಲರ ಹುಬ್ಬೇರಿಸಿದೆ. ಗಲ್ಲು ಶಿಕ್ಷೆ ತಪ್ಪು ಎಂದು ಮುದ್ದಾಂ ಅಭಿಮಾನಿಗಳು ವಿಶ್ವಾದ್ಯಂತ ಬೀದಿಗಿಳಿದಿದ್ದರೆ, ಮುದ್ದಾಂಗೆ ಮತ್ತಷ್ಟು ಉಗ್ರ ಶಿಕ್ಷೆ ವಿಧಿಸಬೇಕು, ಇನ್ನಷ್ಟು ಮರಣದಂಡನೆ ವಿಧಿಸಬೇಕು ಎಂದು ಮುದ್ದಾಂ ವಿರೋಧಿಗಳು ಆಗ್ರಹಿಸುತ್ತಾ ಪ್ರತಿಭಟನೆ ಆರಂಭಿಸಿದ್ದು, ಇರಾಕಿನಲ್ಲಿ ಹಿಂಸಾಚಾರ ಮೇರೆ ಮೀರಲು ವೇದಿಕೆ ಸಿದ್ಧವಾಗುತ್ತಿದೆ ಎಂದು ಬೊಗಳೆ ರಗಳೆ ಬ್ಯುರೋ ಕಂಡುಕೊಂಡಿದೆ.

(ಕೆಡುಕಿನ ಅಂತ್ಯವಾಗಲಿ, ಒಳಿತಿಗೆ ಯಶಸ್ಸಾಗಲಿ ಎಂಬ ಹಾರೈಕೆಯೊಡನೆ ಬೊಗಳೆ ರಗಳೆ ಬ್ಯುರೋ 2006ನೇ ವರ್ಷಕ್ಕೆ ವಿದಾಯ ಹಾಡುತ್ತಿದೆ. ಮುಂದಿನ ವರ್ಷ ಭೇಟಿಯಾಗೋಣ. -ಸಂ)

Thursday, December 28, 2006

ಸೇವಿಸಿದರೆ ಮದಿರೆ, (ಪರರ) ನಿದಿರೆಗೆ ತೊಂದರೆ!

(ಬೊಗಳೂರು ಮದಿರಾ ಬ್ಯುರೋದಿಂದ)
ಬೊಗಳೂರು, ಡಿ.28- ಮದ್ಯ ಸೇವನೆಯು ನಿದ್ರಾಹೀನತೆಗೆ ಕಾರಣವಾಗುತ್ತದೆ ಎಂಬುದನ್ನು ಇಲ್ಲಿ ಪತ್ತೆ ಹಚ್ಚಿರುವ ವಿಜ್ಞಾನಿಗಳು ಒಂದು ವಿಷಯವನ್ನು ಬಿಟ್ಟಿದ್ದರಿಂದಾಗಿ ಅಸತ್ಯಾನ್ವೇಷಿಯು ಇದರ ಸಂಶೋಧನೆಗೆ ಹೊರಟಾಗ ಗಾಳಿಯಲ್ಲೇ ತೇಲಿದ ಅನುಭವವಾಗಿತ್ತು ಎಂದು ವರದಿಯಾಗಿದೆ.

ಆಲ್ಕೋಹಾಲ್ ಸೇವನೆಯಿಂದ ರಾತ್ರಿಯ ಎರಡನೇ ಜಾವದಲ್ಲಿನ ನಿದ್ದೆಗೆ ಕೊರತೆಯಾಗುತ್ತದೆ ಎಂದು ವೈಜ್ಞಾನಿಕ ವರದಿ ಹೇಳಿದೆಯೇ ಹೊರತು, ಯಾರ ನಿದ್ದೆಗೆ ತೊಂದರೆಯಾಗುತ್ತದೆ ಎಂದು ಹೇಳದಿರುವುದು ಬೊಗಳೆ ರಗಳೆ ಬ್ಯುರೋದ ಹುಬ್ಬೇರಿಸಲು ಕಾರಣವಾಗಿತ್ತು. ಇದರ ಹಿಂದೆ ಏನೋ ಸಂಚು ಇರಬೇಕು ಎಂಬ ಸಂದೇಹದ ಹಿನ್ನೆಲೆಯಲ್ಲಿ ರಾತೋರಾತ್ರಿ ನಿದ್ದೆಗೆಟ್ಟು ಹೊಂಚು ಹಾಕಿ ತಪಾಸಣೆಗೆ ತೆರಳಿತ್ತು.

ಬ್ಯುರೋ ಸಿಬ್ಬಂದಿ ನೀಡಿದ ವರದಿ ಪ್ರಕಾರ, ಅತಿಯಾಗಿ ಮದ್ಯಪಾನ ಮಾಡಿದರೆ ನಿದ್ದೆಗೆ ತೊಂದರೆಯಾಗುವುದು ಕುಡಿದವರಿಗಲ್ಲ, ಪಕ್ಕದ ಮನೆಯವರಿಗೆ ಎಂಬ ಅಮೂಲ್ಯವಾದ ಸಂಶೋಧನೆಯೊಂದು ಹೊರಬಿದ್ದಿದೆ.

ಅತಿಯಾಗಿ ಮದ್ಯಸೇವನೆಯು ಸೇವಿಸಿದವರ ಆರೋಗ್ಯಕ್ಕೆ ಒಳ್ಳೆಯದು. ಅಂದರೆ ಮದ್ಯ ಪಾನ ಮಾಡಿದವರು ಯಾವತ್ತೂ ಸಂತೋಷದಲ್ಲಿ ತೇಲಾಡುತ್ತಾ ಇರುತ್ತಾರೆ. ಹಾಗಾಗಿ ಉಲ್ಲಸಿತರಾಗಿರುತ್ತಾರೆ, ಏನು ಬೇಕಾದರೂ ಮಾಡುತ್ತಾರೆ ಎಂಬೆಲ್ಲಾ ಸಿದ್ಧಾಂತಗಳು ಪತ್ತೆಯಾಗಿವೆ. ಹಾಗಾಗಿ ಅವರು ನಿದ್ದೆ ಬಾರದೇ ಇದ್ದರೂ ಸುಖವಾಗಿ ನಿದ್ದೆ ಮಾಡುತ್ತಾರೆ ಎಂದು ತಿಳಿದುಬಂದಿದೆ. ತೊಂದರೆಯಾಗುವುದು ಮಾತ್ರ ಪಕ್ಕದ ಮನೆಯವರಿಗೆ.

ಅತಿಯಾಗಿ ಮದ್ಯಪಾನ ಮಾಡಿದವರು ಸುಖದ ಅಮಲಿನಲ್ಲಿ ತೇಲುತ್ತಾ ಮಾತಾಡುತ್ತಲೇ ಇರುತ್ತಾರೆ. ಅದನ್ನು ಮಾದಕ ಕನಸು ಎಂದು ಕರೆಯಬಹುದಾಗಿದ್ದು, ತಮ್ಮಷ್ಟಕ್ಕೆ ತಾವೇ ಮಾತನಾಡುತ್ತಾರೆ ಆದರೂ ಅವರಿಗೆ ಕೇಳಿಸುವುದಿಲ್ಲ. ಮತ್ತು ಯಾರೊಡನೆಯೋ ಜಗಳವಾಡುತ್ತಾರಾದರೂ ಅವರಿಗೆ ತಿಳಿದಿರುವುದಿಲ್ಲ.

ಇದೆಲ್ಲವೂ ಬಾಹ್ಯ ಪ್ರಪಂಚಕ್ಕೆ ಮಾತ್ರವೇ ಗೊತ್ತಾಗುವುದರಿಂದಾಗಿ ಪಕ್ಕದ ಮನೆಯವರು ಮದ್ಯ ಸೇವಿಸದಿದ್ದರೂ ಮರುದಿನ ಬೆಳಗ್ಗೆ ಏಳುವಾಗ ಮದಿರೆಯ ಅಂದರೆ ನಿದಿರೆಕೊರತೆಯ ಮನಸ್ಥಿತಿಯಲ್ಲೇ  ಇರುತ್ತಾರೆ. ಕಚೇರಿಯಲ್ಲಿ ಬಂದರೂ ಕಂಪ್ಯೂಟರ್ ಎದುರು ಅಮಲಿನಿಂದ ವಾಲುತ್ತಿರುತ್ತಾರೆ.

ಇನ್ನೊಂದು ವಾದದ ಪ್ರಕಾರ, ನೆರೆಮನೆಯವರು ಕೂಡ ಈ ರೀತಿ 'ಸುಖದ ಸುಪ್ಪತ್ತಿಗೆ'ಯಲ್ಲಿ ತೇಲಾಡುವುದು ನಿದಿರೆ ಕೊರತೆಯಿಂದಲೋ ಅಥವಾ ಕದ್ದುಮುಚ್ಚಿ ಸ್ವಯಂ ಮದಿರಾ ಸೇವನೆಯಿಂದಲೋ ಎಂಬುದು ತಡವಾಗಿ ಬೆಳಕಿಗೆ ಬರಬೇಕಿದೆ.

( ಸೂಚನೆ : ಗಡಗಡ ನಡುಗಿಸಿದ ಇಂದುವಿನ ಊರಿನಲ್ಲಿ ಎರಡು ತಿಂಗಳ ಅಜ್ಞಾತವಾಸ ಮುಗಿಸಿ ಮರಳಿ ಸ್ವಯಂ ಕಾರಸ್ಥಾನಕ್ಕೆ ಮರಳಿರುವ ಬೊಗಳೆ ರಗಳೆ ಬ್ಯುರೋ, ತನ್ನ ಕಛೇರಿಯಲ್ಲಿ ಧೊಪ್ಪನೆ ಬಂದು ಬಿದ್ದ ಪರಿಣಾಮವಾಗಿ ಕೆಲವು ದಿನಗಳಿಂದ ಬೊಗಳೆ ರಗಳೆ ಪ್ರಕಟವಾಗಿರಲಿಲ್ಲ. ಈ ದಿನಗಳಲ್ಲಿ ಓದುಗರಿಗಾದ ಅನುಕೂಲಕ್ಕೆ ವಿಷಾದಿಸುತ್ತೇವೆ. ಆದರೆ ಇದು ಮದಿರೆಯ ಪ್ರಭಾವ ಅಲ್ಲ ಎಂದು ಸ್ಪಷ್ಟಪಡಿಸುತ್ತಿದ್ದೇವೆ. ಎಂದಿನಂತೆ ಚಂದಾದಾರರ ಹಣ ಮರಳಿಸದೆ, ಅದನ್ನು ಗುಳುಂಕರಿಸಲಾಗುತ್ತಿದೆ.- ಸಂ )

Friday, December 22, 2006

Busy-ness: (Profit)Private ಮತ್ತು (Staff)Limited ಕಂಪನಿ !

(ಬೊಗಳೂರು ಅವಸರ-ಯುಗ ಬ್ಯುರೋದಿಂದ)
ಬೊಗಳೂರು, ಡಿ.22- ಅತ್ಯಾಧುನಿಕ ಯುಗದ ಅತ್ಯಾಧುನಿಕ ತಂತ್ರಜ್ಞಾನದ ಪರಿಣಾಮಗಳು ಮತ್ತು ಕೆಲಸದೊತ್ತಡಗಳು ಎಂಥೆಂತಹ ಕೆಲಸ ಮಾಡಿಸುತ್ತವೆ ಎಂಬುದಕ್ಕೆ ಹೊಸದೊಂದು ಉದಾಹರಣೆ ಇಲ್ಲಿ ಲಭ್ಯವಾಗಿದೆ.
 
ಬೆಳಗ್ಗೆ ಎದ್ದು ಕಚೇರಿಗೆ ಓಡಿ ಕಂಪ್ಯೂಟರ್ ಕೀಲಿಗಳೊಂದಿಗೆ ಕಟಕಟ ಸದ್ದಿನ ಆಟವಾಡಿ ತಡರಾತ್ರಿ ಮನೆಗೆ ಮರಳಿ ಬಿದ್ದ ತಕ್ಷಣ ನಿದ್ದೆ ಹೋಗುವ ಜಗತ್ತು ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಇಂಥದ್ದೊಂದು ಶೋಧನೆ ಕೈಗೊಳ್ಳಲಾಗಿದೆ.
 
ಯಾವುದೇ ಡಾಟ್ ಕಾಮ್ ಎಂಬ ಪ್ರೈವೇಟ್ ಲಿಮಿಟೆಡ್ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಇತ್ತೀಚೆಗೆ ಕಂಪನಿಯ ಹೆಸರಿನೊಂದಿಗೆ ಥಳುಕು ಹಾಕಿಕೊಂಡಿರುವ ಪ್ರೈವೇಟ್ ಮತ್ತು ಲಿಮಿಟೆಡ್ ಎಂಬ ಪದಗಳಿಗೆ ಅರ್ಥವನ್ನೂ ಕಂಡುಕೊಂಡಿದ್ದಾರೆ.
 
ಯಾವುದೇ ಲಾಭಗಳೆಲ್ಲಾ ಈ ಕಂಪನಿಯ ಪ್ರೈವೇಟ್ ಆಗಿದ್ದು, ಸಿಬ್ಬಂದಿಗಳ ಸಂಖ್ಯೆ ಮಾತ್ರ ಲಿಮಿಟೆಡ್ ಆಗಿರುತ್ತದೆ ಎಂಬ ವ್ಯಾಖ್ಯಾನ ದೊರೆತಿರುವ ಈ ಸಮಯದಲ್ಲಿ, ಕೆಲಸದಲ್ಲಿ ನಿರತರಾದವರಿಗೆ ಮದುವೆಯಾಗಲು, ಹನಿಮೂನ್‌ಗೆ ತೆರಳಲು ಪುರುಸೊತ್ತು ಎಂಬುದು ಪರರ ಸೊತ್ತಾಗಿಬಿಟ್ಟಿದೆ.
 
ಈ ಕಾರಣಕ್ಕಾಗಿಯೇ ಕಾಲ್ಪನಿಕ ಮದುವೆ, ಕಾಲ್ಪನಿಕ ಹನಿಮೂನ್ ಎಲ್ಲವನ್ನೂ ನಡೆಸಲಾಗುತ್ತಿದೆ ಎಂದು ವಿಶ್ಲೇಷಿಸಲಾಗಿದೆ.
ಈ ಮಧ್ಯೆ, ಹಿಂದಿನ ಕಾಲದಲ್ಲಿ ಸಾಂಸಾರಿಕ ಜಗತ್ತಿನ ಕಷ್ಟ ಕೋಟಲೆಗಳಿಂದ ನೊಂದವರು ತಪಸ್ಸು ಮಾಡಲು, ಮನಶ್ಶಾಂತಿ ಅರಸಿ ಕಾಡಿಗೆ ಹೋಗುತ್ತಾರೆ, ಆದರೆ ಈಗಿನದು ಅತ್ಯಾಧುನಿಕ ತಂತ್ರಜ್ಞಾನದ ಯುಗವಾದ್ದರಿಂದ ಅಂಥವರೆಲ್ಲಾ ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾರೆ, ಕಂಪ್ಯೂಟರ್ ಎದುರು ತಪಸ್ಸು ಮಾಡುತ್ತಿರುತ್ತಾರೆ ಎಂಬ ವಾದಕ್ಕೆ ಪುಷ್ಟಿ ದೊರೆಯುವ ಯತ್ನವಾಗಿ ಈ ಕಾಲ್ಪನಿಕ ವಿವಾಹ, ಕಾಲ್ಪನಿಕ ಹನಿಮೂನ್ ಇತ್ಯಾದಿ ಏರ್ಪಡಿಸಲಾಗಿದೆ ಎಂದು ಬೊಗಳೆ ರಗಳೆ ಬ್ಯುರೋ ಕ್ಯಾತೆ ತೆಗೆದಿದೆ.

Thursday, December 21, 2006

ಅರಣ್ಯ ನಾಶ ಮಾಡಿದ ಮಗು ಮೇಲೆ ಕೇಸು

(ಬೊಗಳೂರು ಪೂರ್ವಜನ್ಮ ಬ್ಯುರೋದಿಂದ)
ಬೊಗಳೂರು, ಡಿ.21- ಯಾರಾದರೂ "ಹೋದ ಜನ್ಮದ ಪಾಪದ ಫಲ" ಇದು ಅಂತೆಲ್ಲಾ ಬೊಗಳೆ ಬಿಡುವುದರ ಹಿಂದಿನ ಕಳಕಳಿಗೆ ಪುಷ್ಟಿ ದೊರೆತಿದ್ದು, ಆದರೆ ಇಷ್ಟು ಬೇಗನೆ ಶಿಕ್ಷೆಯಾಗುತ್ತದೆ ಎಂಬುದು ಯೋಚನೆಗೆ ನಿಲುಕದ ಸಂಗತಿಯಾಗಿತ್ತು.
 
ನೂರಾರು ವರ್ಷಗಳ ಹಿಂದೆ ಅರಣ್ಯ ನಾಶಪಡಿಸಿದ ಪ್ರಕರಣದ ಕುರಿತು ಅಂದೇ ತನಿಖೆ ಆರಂಭಿಸಿದ ಪೊಲೀಸರು ಶತಮಾನಗಳ ಶೋಧನೆಯ ಬಳಿಕ ಕೇಸು ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆ ಮಗು ಆಟವಾಡಲು ಕೋರ್ಟಿಗೆ ಬರಬೇಕಾಯಿತು.
 
ಅವರು ಕೊನೆಗೂ ಡಿಎನ್ಎ ಪರೀಕ್ಷೆ ಎಲ್ಲವನ್ನೂ ಕೈಗೊಂಡು ಒಂದು ಮಗುವನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಮುಖವುಳಿಸಿಕೊಳ್ಳುವ ನಿಟ್ಟಿನಲ್ಲಿ, ಈ ಹುಡುಗ 14 ತಿಂಗಳಿನವನಾಗಿದ್ದಾಗ ಅರಣ್ಯ ನಾಶ ಮಾಡಿದ್ದಾನೆ ಎಂದು ಎಫ್ಐಆರ್‌ನಲ್ಲಿ ಹೇಳುತ್ತಿದ್ದಾರೆ.
 
ಆದರೆ ನಿಜಕ್ಕೂ ಅವರಿಗೆ ಪುರಾತನ ಕೇಸೊಂದನ್ನು ಭೇದಿಸಿ ಕೈತೊಳೆದುಕೊಳ್ಳಬೇಕಾಗಿತ್ತು ಎಂಬುದನ್ನು ಬೊಗಳೆ ಬ್ಯುರೋ ಪತ್ತೆ ಹಚ್ಚಿದೆ.
 
541 ಸಸ್ಯರಾಶಿಯನ್ನು ಈ ಪುಟ್ಟಹುಡುಗ ನಾಶಪಡಿಸಿದ್ದಾನೆ ಎಂಬುದು ಪೊಲೀಸರ ಆರೋಪ. ಅರಣ್ಯ ರಕ್ಷಕರ ಕೈಗೂ ಸಿಗದಷ್ಟು ವೇಗವಾಗಿ ಈ ಮಗು ಓಡಿತ್ತು ಎಂದು ಪೊಲೀಸರು ಎಫ್ಐಆರ್‌ನಲ್ಲಿ ಹೇಳಿದ್ದರೂ, ನಿಜಕ್ಕೂ ಪೊಲೀಸರು ಅರಣ್ಯದಲ್ಲಿದ್ದ ಚಳ್ಳೆ ಹಣ್ಣನ್ನು ತಿಂದಿದ್ದರು ಎಂಬುದು ದೃಢಪಟ್ಟಿದೆ.
 
ಈ  ಕಳೆದ ಜನ್ಮದಲ್ಲಿ ಮಾಡಿದ ಪಾಪಕ್ಕೆ ಈ ಜನ್ಮದಲ್ಲಿ ಬಲು ಬೇಗನೆ ಶಿಕ್ಷೆ ದೊರಕಿಸುವ ನಿಟ್ಟಿನಲ್ಲಿ ಪೊಲೀಸರು ಈ ಕ್ರಮ ಕೈಗೊಂಡಿದ್ದರೂ, ಮನಸು ಕದ್ದ ಹಸುಳೆ ಮೇಲೂ ಅವರು ಕೇಸು ದಾಖಲಿಸಿದ್ದನ್ನು ಈ ಹಿಂದೆ ಬೊಗಳೆ ಬಿಡಲಾಗಿತ್ತು ಎಂಬುದನ್ನಿಲ್ಲಿ ಸಂಸ್ಮರಣೆ ಮಾಡಿಕೊಳ್ಳಬಹುದಾಗಿದೆ.
 
ಈ ಬಗ್ಗೆ ಪುಟ್ಟ ಮಗುವನ್ನು ಮಾತನಾಡಿಸಿದಾಗ, ನಾನೀಗಾಗಲಷ್ಟೇ ಕಳೆದ ಜನ್ಮದ ಪೊರೆ ಕಳಚಿಕೊಂಡು ಭೂಮಿಗೆ ಬಂದಿದ್ದೇನಷ್ಟೇ. ನನಗೇನೂ ಗೊತ್ತಿಲ್ಲ ಎನ್ನುತ್ತಾ ಚೆಂಡೆತ್ತಿಕೊಂಡು ಆಟವಾಡಲು ಹೊರಟಿತು.

Wednesday, December 20, 2006

ಜಾರಕಾರಣಿಗಳ ಆಘ್ರಾಣ ಸಾಮರ್ಥ್ಯದ ಗುಟ್ಟು

(ಬೊಗಳೂರು ಶ್ವಾನ ಬ್ಯುರೋದಿಂದ)
ಬೊಗಳೂರು, ಡಿ.20- "ಕುಸುಮ ಗಂಧದ ಒಳಗೊ ಗಂಧದೊಳು ಕುಸುಮವೋ, ಕುಸುಮ ಗಂಧಗಳೆರಡೂ ಆಘ್ರಾಣದೊಳಗೊ" ಎಂಬ ದಾಸರ ಶಂಕೆಗೆ ಪರಿಹಾರ ದೊರೆಯುವ ದಿನಗಳು ಸಮೀಪಿಸಿವೆ.
 
ನಾಯಿಗಳು ಮಾನವರಿಗಿಂತ ಹೆಚ್ಚು ಪ್ರಬಲವಾದ ಆಘ್ರಾಣ ಶಕ್ತಿ ಹೊಂದಿವೆ ಎಂಬುದು ಸರ್ವವಿದಿತ ಸತ್ಯ. ಆದರೆ ಹೊಸ ಅಧ್ಯಯನವೊಂದು ಈ ವಿಷಯವನ್ನು ಬಹುತೇಕ ಸುಳ್ಳಾಗಿಸಲು ಹೊರಟಿದೆ.
 
ಉನ್ನತ ಅಧಿಕಾರದಲ್ಲಿರುವ ಮಂತ್ರಿಗಳು, ಶಾಸಕರು, ಅಧಿಕಾರಿವರ್ಗವು ಹಗರಣ ಎಂಬ ಪ್ರಜಾಪ್ರಭುತ್ವದ ಅತ್ಯುನ್ನತ ಮೌಲ್ಯವನ್ನು ಎತ್ತಿಹಿಡಿಯಲು ಅಷ್ಟು ಸುಲಭವಾಗಿ ಹೇಗೆ ಯಶಸ್ವಿಯಾಗುತ್ತಿದ್ದಾರೆ ಎಂಬುದರ ಹಿಂದಿನ ರಹಸ್ಯವೂ ಬಯಲಾಗಿದ್ದು, ಅವರ ವಾಸನಾ ಸಾಮರ್ಥ್ಯವೇ ಇದಕ್ಕೆಲ್ಲಾ ಕಾರಣ ಎಂದು ಪತ್ತೆಯಾಗಿದೆ.
 
ಅಂದರೆ, ನಾಯಿಗಳಿಗಿರುವ ಆಘ್ರಾಣ ಸಾಮರ್ಥ್ಯವನ್ನು ಕೆಲವೊಂದಿಷ್ಟು ತರಬೇತಿ/ ಅಭ್ಯಾಸದ ಮೂಲಕ ಮನುಷ್ಯರೂ ಪಡೆಯಬಹುದು ಎಂಬುದನ್ನು ವಿಜ್ಞಾನಿಗಳು ಇಲ್ಲಿ ಪತ್ತೆ ಹಚ್ಚಿದ್ದರು. ಈ ಪ್ರಯೋಗದ ಫಲಿತಾಂಶವನ್ನು ರಾಜಕಾರಣಿಗಳು ಸಮರ್ಥವಾಗಿ ಬಳಸಿಕೊಂಡ ಪರಿಣಾಮವೇ ಈ ದೇಶದಲ್ಲಿ ಹಗರಣಗಳ ಸಾಲು ಸಾಲು ಆಂದೋಲನಗಳೇ ನಡೆದುಹೋದವು ಎಂದು ತಿಳಿದುಬಂದಿದೆ.

ಘಟಾನುಘಟಿ ರಾಜಕಾರಣಿಗಳ ಆಘ್ರಾಣ ಸಾಮರ್ಥ್ಯದ ಹಿಂದೆ ಬೊಗಳೆ ರಗಳೆ ಬ್ಯುರೋ ಬಿದ್ದಾಗ, ವಿಜ್ಞಾನಿಗಳು ಈ ಸಂಶೋಧನಾ ವರದಿ ನೀಡಿದ್ದೇ ಇದಕ್ಕೆಲ್ಲಾ ಕಾರಣ ಎಂದು ಪತ್ತೆ ಹಚ್ಚಲಾಯಿತು.
 
ಸರಕಾರದ ಯಾವ್ಯಾವ ಯೋಜನೆಗಳಲ್ಲಿ ಎಲ್ಲಿ ಎಷ್ಟರ ಮಟ್ಟಿಗೆ ಗಂಟು ಸಿಗುತ್ತದೆ, ಎಷ್ಟನ್ನು ಮೇಯಬಹುದು, ಉದಾರ ಕೊಡುಗೆಯಾಗಿ ಮತದಾರರ ಮೂಗಿಗೆ ತುಪ್ಪ ಸವರುವಂತಹ ಮೇಲ್ನೋಟದ ಯೋಜನೆಗಳನ್ನು ಅರ್ಪಿಸಲು ಎಷ್ಟನ್ನು ಉಳಿಸಬಹುದು ಎಂಬುದೆಲ್ಲಾ ಈ ರಾಜಕಾರಣಿಗಳ ಮೂಗಿಗೆ ತಕ್ಷಣವೇ ಗೊತ್ತಾಗಿಬಿಡುತ್ತಿತ್ತು.
 
ರಾಜಕಾರಣಿಗಳು ಮಾತ್ರವಲ್ಲದೆ ಅಧಿಕಾರಿವರ್ಗ ಕೂಡ ಎಲ್ಲಿಯೇ ಗಂಟಿದ್ದರೂ ಅದರ ನಂಟು ಬಿಡದಂತೆ ಆಘ್ರಾಣಿಸುತ್ತಿದ್ದಾರೆ. ಇವರೆಲ್ಲ ಏನಿದ್ದರೂ ತಮ್ಮ ಮೂಗಿನ ನೇರಕ್ಕೇ ಕೆಲಸ ಮಾಡುವುದರಿಂದ ಈ ಮೂಗಿಗೆ ಮತ್ತಷ್ಟು ಕೆಲಸ ಕೊಡುವುದು ಸುಲಭ. ಯಾರ ಜೇಬಿನಲ್ಲಿ, ಯಾರ ಮನೆಯಲ್ಲಿ, ಯಾರ್ಯಾರ ಬ್ಯಾಂಕುಗಳಲ್ಲಿ ಎಷ್ಟೆಷ್ಟು ಗಂಟು ಇದೆ ಎಂಬುದನ್ನೆಲ್ಲಾ ಕ್ಷಣಮಾತ್ರದಲ್ಲಿ ಮೂಸಿ ಪತ್ತೆ ಹಚ್ಚುವಂತಾಗಲು ಈ ಕುರಿತು ತರಬೇತಿ ಪಡೆದು ಅಭ್ಯಾಸನಿರತರಾಗಿದ್ದಾರೆ ಎಂದು ತಿಳಿಯಲಾಗಿದೆ.
 
ಹಾಗಾಗಿ ಇತ್ತೀಚಿನ ದಿನಗಳಲ್ಲಿ ಮನುಜ ಪ್ರಾಣಿಗಳ ನಾಯಿ ಬುದ್ಧಿ... ಕ್ಷಮಿಸಿ... ಶ್ವಾನಬುದ್ಧಿ ಹೆಚ್ಚಾಗುತ್ತಿರುವುದರಿಂದ ಇದಕ್ಕೊಂದು ಹೊಸ ಸೇರ್ಪಡೆಯನ್ನು ಈ ವಿಜ್ಞಾನಿಗಳು ಕೊಡುಗೆಯಾಗಿ ನೀಡಿದ್ದು, ಮನುಜಮತವನ್ನು ವಿಶ್ವಪಥದತ್ತ ಕೊಂಡೊಯ್ಯಲು ವೇದಿಕೆ ರೂಪಿಸಿದ್ದಾರೆ. ನಾಯಿಯು ಮಾನವನ ಆತ್ಮೀಯ ಮತ್ತು ನಂಬಿಕಸ್ಥ ಮಿತ್ರನೂ ಆಗಿರುವುದರಿಂದಾಗಿ ಅದನ್ನು ಸುಲಭವಾಗಿ ಮಂಗ ಮಾಡಬಹುದು ಮತ್ತು ಶ್ವಾನರ (ಶ್ವಾನ-ನರ) ಸಂ-ಬಂಧವನ್ನು ಮತ್ತಷ್ಟು ಬಲಪಡಿಸಬಹುದು ಎಂಬುದು ಅವರ ಅನಿಸಿಕೆಯಾಗಿದೆ.
 
ಮಾನವರೆಲ್ಲರೂ ಇದೀಗ ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಾಣಿಗಳಾಗಹೊರಟ ಸುದ್ದಿ ಬೊಗಳೆ ರಗಳೆಯಲ್ಲಿ ಪ್ರಕಟಗೊಂಡಿರುವುದರ ಬೆನ್ನಿಗೇ, ಬೊಗಳೆ ರಗಳೆ ಬ್ಯುರೋ ಯಾವತ್ತೂ ನಂಬಿರುವ ತತ್ವಾದರ್ಶಗಳು ಪೊಳ್ಳಾಗದಂತಾಗಲು ಈ ವರದಿ ಪ್ರಕಟಿಸಲಾಗಿದೆ.

Tuesday, December 19, 2006

ಶಿಕ್ಷೆ ಭೀತಿ : ಪ್ರಾಣಿಗಳಾಗತೊಡಗಿದ ಮಾನವರು

(ಬೊಗಳೂರು ಅಮಾನವೀಯ ಬ್ಯುರೋದಿಂದ)
ಬೊಗಳೂರು, ಡಿ.19- "ಮಾನವೀಯ" ಚೇಷ್ಟೆಗಳಿಂದ ಪ್ರೇರಿತವಾಗಿರುವ ಪಶು ಸಮುದಾಯದಲ್ಲಿ ಕೂಡ ಇತ್ತೀಚೆಗೆ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿರುವುದು ಕಂಡು ಬಂದಿದೆ. ಇದರ ಹಿಂದಿನ ತಥ್ಯ ಶೋಧನೆಗೆ ಹೊರಟಾಗ ಅಮೂಲ್ಯ ಮಾಹಿತಿಗಳು ಬೆಳಕಿಗೆ ಬಂದವು.
 
ಮಾನವೀಯ ಸಮುದಾಯದಲ್ಲಿ ಇತ್ತೀಚೆಗೆ ತಪ್ಪಿತಸ್ಥರಿಗೆ ಶಿಕ್ಷೆಯಾಗತೊಡಗಿದೆ. ಹಾಗಾಗಿ ಅಮಾನವೀಯರಾಗಿರುವುದೇ ಲೇಸು ಎಂಬ ನಿರ್ಧಾರಕ್ಕೆ ಈ ಕ್ರಿಮಿ-ನಲ್‌ಗಳು ಬಂದಿರುವುದೇ ಕಾರಣ!
 
ಬಡಪಾಯಿ ಹಸುವೊಂದರ ಮೇಲೆ ಆಸಿಡ್ ದಾಳಿ ನಡೆದ ಸುದ್ದಿ ಇಲ್ಲಿ ವರದಿಯಾಗಿದ್ದು, ಸುದ್ದಿಯ ಬೆಂಬತ್ತಿದ ಬ್ಯುರೋ, ಈ ಅಂಶವನ್ನು ಕಂಡುಕೊಂಡಿದೆ.
 
ಬೊಗಳೆ ರಗಳೆ ಬ್ಯುರೋ ನಡೆಸಿದ ತನಿಖೆಯ ಪ್ರಕಾರ, ಈ ಹಸುವಿನ ಮೇಲೆ ಆಸಿಡ್ ದಾಳಿ ನಡೆಸಿದ್ದು ಮಾನವರಲ್ಲ, ಅಮಾನವರು ಎಂದು ದೃಢಪಟ್ಟಿದೆ. ಈ ಪಶುವನ್ನು ಆಸಿಡ್‌ಗೆ ಬಲಿಪಶು ಮಾಡಿದ್ದು ಮತ್ತೊಂದು ಪಶುವೇ ಆಗಿದೆ ಎಂದು ಪತ್ತೆಯಾಗಿದ್ದು, ಈ ಪಶುವಿಗಾಗಿ ಶೋಧ ನಡೆಸಲಾಗುತ್ತಿದೆ.
 
ಮಾನವ ಸಮುದಾಯದಲ್ಲಿ ಇತ್ತೀಚೆಗೆ ನ್ಯಾಯವ್ಯವಸ್ಥೆ ಬಲಗೊಂಡಂತೆ ಕಾಣಿಸುತ್ತಿದೆ. ಹಾಗಾಗಿ ಜೆಸ್ಸಿಕಾ ಲಾಲ್, ಪ್ರಿಯದರ್ಶಿನಿ ಮಟ್ಟೂ ಮುಂತಾದವರನ್ನು ಕೊಲೆ ಮಾಡಿದ ಹಂತಕರಿಗೆ ಶಿಕ್ಷೆಯಾಗುತ್ತಿದೆ. ಭಯೋತ್ಪಾದಕರಿಗೆ ಕೇಂದ್ರ ಸಚಿವ ರಿಗೂ, ಕ್ರಿಕೆಟಿಗರಿಗೂ ಶಿಕ್ಷೆಯಾಗತೊಡಗಿದೆ.
 
ಹಾಗಾಗಿ ಪ್ರಾಣಿಗಳಾದರೇ ಸಲೀಸು ಎಂಬುದನ್ನರಿತ ಕೆಲವು ಮಾನವ ಕ್ರಿಮಿಗಳು, ಪ್ರಾಣಿಗಳಾಗಿ ಪರಿವರ್ತನೆಗೊಂಡು ಈ ಕೃತ್ಯ ಎಸಗಿವೆ ಎಂಬುದು ಸಂಶೋಧನೆಯ ಸಾರವಾಗಿದೆ.
 
ಹಾಗಾದರೆ ಈ ಪ್ರಾಣಿಗಳು ಆಸಿಡ್ ಬಳಸುವುದನ್ನು ಹೇಗೆ ಕಲಿತವು ಎಂಬ ಪ್ರಶ್ನೆ ಉದ್ಭವವಾಗುತ್ತದೆ ಎಂದು ಅರಿತುಕೊಂಡಿರುವ ನಮ್ಮ ಸಿಬ್ಬಂದಿ ಅದಕ್ಕೆ ಉತ್ತರವನ್ನೂ ತಯಾರಿಸಿದ್ದಾರೆ. ಅದುವೇ ಪೂರ್ವ ಜನ್ಮದ ಸುಕೃತ ಅನುಭವ.
 
ಇದೇ ಕಾರಣಕ್ಕಾಗಿಯೇ ಈ ಪ್ರಾಣಿಗಳು ಹಿಂದೆ ಮಾನವರಾಗಿದ್ದಾಗ ಎಲ್ಲಾ ಕ್ರಿಮಿನಲ್ ಕೃತ್ಯಗಳನ್ನು ಕರಗತ ಮಾಡಿಕೊಂಡಿದ್ದು, ಮುಂದಕ್ಕೆ ಪ್ರಯೋಜನಕ್ಕೆ ಬರುತ್ತದೆ ಎಂಬ ದೂ(ದು)ರಾಲೋಚನೆ ಹೊಂದಿದ್ದರು. ಹಾಗಾಗಿ ಇದು ಸಾಧ್ಯವಾಗಿದೆ.

Monday, December 18, 2006

ಆರ್ಕಿಮಿಡೀಸ್ ತತ್ವಕ್ಕೆ ಹೊಸ ವ್ಯಾಖ್ಯಾನ

(ಬೊಗಳೂರು ಕುಡುಕರ ಬ್ಯುರೋದಿಂದ)
ಬೊಗಳೂರು, ಡಿ.18- ದೇಶವು ಜಾಗತೀಕರಣಗೊಳ್ಳುತ್ತಿರುವ ಪರಿಣಾಮ ಇದರ ಬಿಸಿ ಯುವ ಜನಾಂಗವನ್ನೂ ತಟ್ಟಿದ್ದು, ಕುಡಿತದ ಚಟ ಹತ್ತುವ ವಯಸ್ಸು 20ಕ್ಕೆ ಇಳಿದಿರುವುದು ಸ್ವಾಗತಾರ್ಹ ಎಂದು ಮದ್ಯ ಕುಡಿಸುವವರ ಸಂಘ ಶ್ಲಾಘಿಸಿದೆ.
 
ಜಾಗತೀಕರಣ ಎಂಬ ಬಲೂನಿನಲ್ಲಿ ಬಿಸಿ ಗಾಳಿ ತುಂಬಿದರೆ ಸುಲಭವಾಗಿ ಮೇಲಕ್ಕೆ ಹಾರುವ ಮಾದರಿಯಲ್ಲೇ, ಯುವ ಜನಾಂಗಕ್ಕೂ ಬಿಸಿ ಗಾಳಿಯ ಬಿಸಿ ಏರಿಸಬಲ್ಲ ಮದ್ಯ ಸುರಿಯಲು ಸಾಕಷ್ಟು ಪ್ರಮಾಣದಲ್ಲಿ ಯತ್ನಿಸಲಾಗುತ್ತದೆ. ಹಾಗಾಗಿ ಬೆಂಗಳೂರು ಈಗ ಪಬ್‌ಗಳೂರು ಆಗಿಬಿಟ್ಟಿದೆ ಎಂದು ಈ ಸಂಘವು ಚೀಯರ್ಸ್ ಎಂಬ ತಲೆಬರಹದಡಿಯಲ್ಲಿ ಹೇಳಿಕೆ ನೀಡಿದೆ.
 
ವರ್ಷ ಕಳೆದಂತೆ ಕರ್ನಾಟಕದಲ್ಲಿ ಕುಡುಕರ ಸಂಖ್ಯೆ ಹೆಚ್ಚಾಗುತ್ತಿದೆ, ಕುಡಿತದ ಚಟ ಹತ್ತುವ ವಯಸ್ಸು ಕಡಿಮೆಯಾಗುತ್ತದೆ ಎಂಬುದಾಗಿ ಆರ್ಕಿಮಿಡೀಸ್ ಸಿದ್ಧಾಂತಕ್ಕೆ ಹೊಸ ವ್ಯಾಖ್ಯಾನ ನೀಡಿದ ಕ್ರಮವನ್ನು ವೈಜ್ಞಾನಿಕ ಸಂಶೋಧಕರು ಸ್ವಾಗತಿಸಿದ್ದು, ಯುರೇಕಾ ಎನ್ನುತ್ತಲೇ ಬಾಟಲಿಗಳನ್ನು ತಮ್ಮ ಟೇಬಲಿನ ಮುಂದಿರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
 
ಈ ಮದ್ಯದ ಮಧ್ಯೆ, ಮದ್ಯ ಮಾರಾಟದಿಂದ ಬೊಕ್ಕಸಕ್ಕೆ ಬರುವ ಆದಾಯಕ್ಕಿಂತಲೂ, ಮದ್ಯಸೇವನೆಯ ದುಷ್ಪರಿಣಾಮದ ಪರಿಹಾರ ಕಾರ್ಯಕ್ರಮಗಳಿಗೆ ಸರಕಾರ ಖರ್ಚು ಮಾಡುತ್ತಿದೆ ಎಂಬಲ ವರದಿಗಳನ್ನು ಸಾರಾ ಸಗಟಾಗಿ ತಳ್ಳಿ ಹಾಕಿರುವ ಮದ್ಯ ಕುಡಿಯುವವರ ಸಂಘ, ಇದು ನಮ್ಮ ಮೇಲೆ ಹುಳಿ ಮದ್ಯ ಸುರಿಯುವ ತಂತ್ರ ಎಂದು ಟೀಕಿಸಿದ್ದಾರೆ.

Thursday, December 14, 2006

ಸಂಸತ್ ದಾಳಿ : ಸರಕಾರಕ್ಕೇ ಶೌರ್ಯ ಪ್ರಶಸ್ತಿ !

(ಬೊಗಳೂರು ಅರಾಜಕ ಬ್ಯುರೋದಿಂದ)

ಬೊಗಳೂರು, ಡಿ.14- ದೇಶದ ಮಹೋನ್ನತ ಅಧಿಕಾರ ಕೇಂದ್ರವಾಗಿರುವ ಸಂಸತ್ತಿನ ಮೇಲೆ ದಾಳಿ ನಡೆದ ಐದನೇ ವರ್ಷವನ್ನು ದೇಶಾದ್ಯಂತ, ವಿಶೇಷವಾಗಿ ಸಂಸತ್ತಿರುವ ರಾಜಧಾನಿಯಲ್ಲಿ ಅತ್ಯಂತ ವೇದನೆಯಿಂದ ಆಚರಿಸಲಾಯಿತು.

ಸಂಸತ್ತಿನ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಬಲಿದಾನ ಮಾಡಿದ ಭದ್ರತಾ ಸಿಬ್ಬಂದಿಯ ಕುಟುಂಬಿಕರು, ಪ್ರಕರಣದ ಪ್ರಧಾನ ಆರೋಪಿ ಗುರುವಿನ ಬಗ್ಗೆ ತಳೆದಿರುವ ನಿಲುವನ್ನು ಶ್ಲಾಘಿಸಿ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕೆ ಮೆಡಲ್ ಸಹಿತ ಶೌರ್ಯ ಪ್ರಶಸ್ತಿ ವಿತರಿಸಿದರು.

ಇದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಸರಕಾರವು ಕೂಡ, ಆರೋಪಿಗಳಿಗೆ ಶಿಕ್ಷೆಯಾಗುವುದಕ್ಕೆ ಸಾಕಷ್ಟು ವರ್ಷ ತಗುಲುತ್ತದೆ ಎಂದು ಭರವಸೆ ನೀಡಿತು ! ಈಗಾಗಲೇ ಗುರು ಹತ್ಯೆ ಮಹಾಪಾಪ ಎಂದು ಯಾರೋ ಹೇಳಿರುವುದನ್ನು ಇಲ್ಲಿ ಸ್ಮರಿಸಬಹುದು.

ಯಾವಾಗಲೂ ಪಟಾಕಿ ಸಿಡಿಸುತ್ತಾ ದೀಪಾವಳಿಯನ್ನೇ ನೆನಪಿಸುತ್ತಿರುವ ಜಮ್ಮು ಕಾಶ್ಮೀರ ಕೂಡ ಎರಡು ದಿನಗಳ ಶೋಕ ಆಚರಿಸಿರುವುದಾಗಿ ಬೊಗಳೆ ರಗಳೆ ಬ್ಯುರೋ ಕಂಡುಕೊಂಡಿದೆ.

ಈ ಮಧ್ಯೆ, ಭಯೋತ್ಪಾದಕರಿಗೆ ಸುಲಭದಲ್ಲಿ ಶಿಕ್ಷೆ ಆಗುವುದಿಲ್ಲ ಎಂದು ಉತ್ತೇಜನೆಗೊಂಡಿರುವ ಖ್ಯಾತ ಪಟಾಕಿ ಸಂಘಟನೆ ಅಲ್ ಖಾಯಿದಾ, ಗೋವಾದಲ್ಲೂ ಪಟಾಕಿ ಸಿಡಿಸುತ್ತೇವೆ ಎಂದು ಆತ್ಮೀಯ ಆಹ್ವಾನ ನೀಡಿರುವುದಾಗಿ ಇಲ್ಲಿ ವರದಿಯಾಗಿದೆ.

ಹಾಗಾಗಿ ಮುಂದಿನ ಚುನಾವಣೆಗಳಲ್ಲಿ ಮತ ಬ್ಯಾಂಕ್ ರಾಜಕಾರಣಕ್ಕೆ ಭರ್ಜರಿ ವಿಜಯವಾಗಲಿದೆ ಎಂದು ಬೊಗಳೆವಾಣಿ ಬ್ಯುರೋ ಭವಿಷ್ಯ ನುಡಿದಿದೆ.

Wednesday, December 13, 2006

ನಾಪತ್ತೆಯಾದವರ ಪತ್ತೆಗೆ ಅಪ್ಪಿಕೋ ಚಳವಳಿ !

(ಬೊಗಳೂರು ಹುಡುಕಾಟ ಬ್ಯುರೋದಿಂದ)
ಬೊಗಳೂರು, ಡಿ.13- ಡ್ರ್ಯಾಗನ್‌ಗಳಿರುವ ನಾಡಿನಲ್ಲಿ ಅಪ್ಪಿಕೋ ಚಳವಳಿ ನಡೆಯುತ್ತಿದೆ, ಅದು ಭಾರತಕ್ಕೂ ವ್ಯಾಪಿಸುವ ಎಲ್ಲ ಸಾಧ್ಯತೆಗಳಿಗೆ ಪೊಲೀಸರು ಸಂಚು ರೂಪಿಸಿದ್ದಾರೆ ಎಂಬ ಸುದ್ದಿ ಕೇಳಿ ಅಲ್ಲಿಗೆ ಧಾವಿಸಿದಾಗ ಪತ್ತೆಯಾದದ್ದು ಈ ಸುದ್ದಿ.
 
ಅಲ್ಲಿ ಸಿನಿಮಾ ಮಂದಿರಗಳಲ್ಲಿ ಡಿಸ್ಕೋಉಂಟು ನೋಡಲು ಹೋದವರಿಗೆ ಟಿಕೆಟ್‌ನಲ್ಲಿ ಡಿಸ್ಕೌಂಟ್ ಕೊಡಲಾಗುತ್ತದೆ. ಆದರೆ ಅದಕ್ಕೆ ಅಪ್ಪಿಕೋ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂಬುದು ಅಲ್ಲಿನವರ ಶರತ್ತು.
 
ಚಲನಚಿತ್ರವು ಪ್ರೇಮ ಕಥಾನಕ. ಅರುವತ್ತು ವರ್ಷಗಳ ಕಾಲ ಬೇರ್ಪಟ್ಟಿದ್ದ ಪ್ರೇಮಿಗಳು ಒಂದಾಗುವ ಚಿತ್ರ ವೀಕ್ಷಿಸಿದಾಗ ಅವರಿಗೆ ಎಷ್ಟು ವಯಸ್ಸಾಗಿದೆ ಎಂಬುದು ತಿಳಿದುಬರುವ ಕಾರಣ ಚಿತ್ರಕ್ಕೆ ವೀಕ್ಷಕರನ್ನು ಸೆಳೆಯುವ ಈ ತಂತ್ರ ಅನುಸರಿಸಲಾಗಿದೆ ಎಂದು ವಿಫಲಪ್ರೇಮಿಯೊಬ್ಬರು ತಿಳಿಸಿದ್ದಾರೆ.
 
60-70 ವರ್ಷದವರ ಪ್ರೇಮ ಕಥಾನಕ ಎಂದರೆ ಇಂದಿನ ಹೈಟೆಕ್ ಯುವ ಜನಾಂಗ ಮೂಗು ಮುರಿಯುತ್ತದೆ. ಈ ಕಾರಣಕ್ಕೆ ಯುವ ಪ್ರೇಮಿಗಳನ್ನು ಸೆಳೆಯುವ ನಿಟ್ಟಿನಲ್ಲಿ ಈ ಕ್ರಮಕೈಗೊಂಡಿರುವುದು ಸಾಬೀತಾಗಿತ್ತು.
 
ಈ ಮಧ್ಯೆ, ಕಾಲೇಜಿಗೆ ತೆರಳಿ ದಿಢೀರ್ ನಾಪತ್ತೆಯಾಗುತ್ತಿದ್ದ ತಮ್ಮ ಹದಿಹರೆಯದ ಮಕ್ಕಳೆಲ್ಲರೂ ಈ ಚಿತ್ರಮಂದಿರದ ಸುತ್ತಮುತ್ತಲೇ ಪತ್ತೆಯಾಗಿರುವ ಕಾರಣ ಹರ್ಷಚಿತ್ತರಾದ ಹೆತ್ತವರು ಚಿತ್ರಮಂದಿರದ ಮಾಲಿಕರಿಗೆ ಮತ್ತೆ ಮತ್ತೆ ಕೃತಜ್ಞತೆ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.
 
ಇದರಿಂದ ಸಂತುಷ್ಟವಾದ ಭಾರತೀಯ ಪೊಲೀಸರ ದಂಡು, ಹೆಚ್ಚಿನ ಅಧ್ಯಯನಕ್ಕಾಗಿ ಚೀನಾಕ್ಕೆ ಪ್ರವಾಸ ತೆರಳಿದೆ. ಇತ್ತೀಚೆಗಿನ ದಿನಗಳಲ್ಲಿ ಹದಿಹರೆಯದ ಹುಡುಗ-ಹುಡುಗಿಯರು ಕಾಲೇಜಿಗೆಂದು ತೆರಳಿ ನಾಪತ್ತೆಯಾಗುತ್ತಿರುವ ಪ್ರಸಂಗ ಹೆಚ್ಚಾಗುತ್ತಿದೆ. ಇಂಥ ಕೇಸುಗಳು ಪೋಲಿ ಠಾಣೆಗಳಲ್ಲಿ ರಾಶಿ ರಾಶಿ ಬೀಳುತ್ತಿದ್ದು, ಒಂದು ಪರಿಹಾರ ಕಾಣುವ ಸಂದರ್ಭ ಇನ್ನೂ ನಾಲ್ಕು ಕೇಸುಗಳು ಬಂದು ಬಿದ್ದಿರುತ್ತವೆ.
 
ಹಾಗಾಗಿ ತಲೆ ಕೆಡಿಸಿಕೊಂಡ ಪೊಲೀಸರು, ಇದೇ ತಂತ್ರಜ್ಞಾನವನ್ನು ಭಾರತದಲ್ಲೂ ಅಳವಡಿಸಲು ಚಿಂತನೆ ನಡೆಸುತ್ತಿದ್ದಾರೆ. ಹದಿಹರೆಯದವರು ಎಲ್ಲೇ ನಾಪತ್ತೆಯಾಗಿರಲಿ, ಊರಿಗೆ ಬಂದವರು ನೀರಿಗೆ ಬರದಿರುತ್ತಾರೆಯೇ ಎಂಬ ಮಾತಿಗೆ ತಕ್ಕಂತೆ, ಸಿನಿಮಾ ಮಂದಿರಕ್ಕೆ ಬಂದೇ ಬರುತ್ತಾರೆ ಎಂದು ಗ್ಯಾರಂಟಿ ಆಗಿರುವುದರಿಂದ ತಮ್ಮ ಪತ್ತೆ ಕಾರ್ಯ ಫಲಿಸುತ್ತದೆ ಎಂಬುದು ಪೋಲಿಗಳಿಗೆ ಬಲವಾದ ವಿಶ್ವಾಸ.

Tuesday, December 12, 2006

ಮಾತು ಮದಿರೆಯೇ ಮಾನಿನಿಯರಿಗೆ ?

(ಬೊಗಳೂರು ಮೌನ ಬ್ಯುರೋದಿಂದ)
ಬೊಗಳೂರು, ಡಿ.12- ಬೊಗಳೆ ರಗಳೆ ಬ್ಯುರೋದ ಕೆಲಸವನ್ನು ಬೇರೆಯವರಾರೋ ಮಾಡಿರುವುದರಿಂದಾಗಿ ಬೆಚ್ಚಿ ಬಿದ್ದ ಬ್ಯುರೋ ಸಿಬ್ಬಂದಿ ಚೇತರಿಸಿಕೊಳ್ಳುವ ಯತ್ನ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಸ್ತ್ರೀಯರು ಪುರುಷರಿಗಿಂತ ಬರೇ ಮೂರು ಪಟ್ಟು ಮಾತ್ರವೇ ಹೆಚ್ಚು ಮಾತನಾಡುತ್ತಾರೆ ಎಂದು ಸಂಶೋಧನಾ ವರದಿಯೊಂದು ತಿಳಿಸಿರುವುದು ಇಲ್ಲಿ ಪ್ರಕಟವಾಗಿದೆ. ಪುರುಷರು ದಿನಕ್ಕೆ 7 ಸಾವಿರ ಅಣಿ ಮುತ್ತುಗಳನ್ನು ಉದುರಿಸಿದರೆ, ಸ್ತ್ರೀಯರು ಕೇವಲ 20 ಸಾವಿರ ಮಾತ್ರವೇ ಶಬ್ದಗಳನ್ನು ಉದುರಿಸುತ್ತಾರೆ. ಹಾಗಾಗಿ ಪುರುಷರಿಗೆ ಈ ಅಣಿಮುತ್ತುಗಳನ್ನು ಹೆಕ್ಕಿಕೊಳ್ಳುವುದರಲ್ಲೇ ಸಮಯ ತಗುಲುತ್ತದೆ ಎಂಬ ಅಂಶವನ್ನು ಮಾತ್ರವೇ ಬೊಗಳೆ ರಗಳೆ ಬ್ಯುರೋ ತನಿಖೆ ನಡೆಸಿ ಹೆಕ್ಕಿಕೊಂಡಿದೆ.

ಆದರೆ ಮಾತುಗಾರಿಕೆ ಎಂಬುದು ಮಹಿಳೆಯರಿಗೆ ಮಾದಕ ದ್ರವ್ಯವಿದ್ದಂತೆ ಎಂದು ಹೇಳಿರುವುದರ ಹಿನ್ನೆಲೆಯನ್ನು ಪತ್ತೆ ಹಚ್ಚಲು ಬೊಗಳೆ ರಗಳೆ ಬ್ಯುರೋಗೆ ಸಾಧ್ಯವೇ ಆಗಲಿಲ್ಲ.

ಬಹುಶಃ ಸಂಶೋಧಕರು, ಆಗಾಗ್ಗೆ ಅಣಿಮುತ್ತು ಉದುರಿಸಿ, ಬೊಂಬಾಯಿಗರಾಗಿ ವಿವಾದಕ್ಕೆ ಸಿಲುಕುತ್ತಿರುವ ಜಯಶಬರಿಮಾಲರಂತಹ ಹೀರೋಯಿನ್‌ಗಳನ್ನು ಹೆರಾಯ್ನ್ ಎಂದು ತಪ್ಪು ತಿಳಿದುಕೊಂಡಿರಬಹುದೇ ಎಂಬ ಒಂದೇ ಒಂದು ಶಂಕೆ ಕಾಡಿದೆ.

ಈ ಮಧ್ಯೆ, ಸ್ತ್ರೀಯರ ಮಾತಿನ ಧಾವಂತಕ್ಕೆ ಅಷ್ಟಪಥದ ಎಕ್ಸ್‌ಪ್ರೆಸ್ ಹೆದ್ದಾರಿ ಇದ್ದರೆ, ಪುರುಷರ ಮಾತಿಗೆ ಹಳ್ಳಿಗಾಡಿನ ರಸ್ತೆಯೇ ಗತಿ ಇದೆ ಎಂದು ಹೋಲಿಕೆ ನೀಡಲಾಗಿರುವುದು ಪುರುಷರನ್ನು ಕೆರಳಿಸಿದೆ ಎಂದು ತಿಳಿದುಬಂದಿದೆ.

ಎಕ್ಸ್‌ಪ್ರೆಸ್ ಹೆದ್ದಾರಿಗಳಲ್ಲಿ ಗಾಡಿ ಸುಲಲಿತವಾಗಿ ಓಡಿಸಬಹುದು, ಆದರೆ ಹಳ್ಳಿಯ ಹೊಂಡಾಗುಂಡಿ ತುಂಬಿದ ರಸ್ತೆಗಳು ನಮಗೆ ಬೇಡ ಎಂಬುದು ಅವರ ಒಕ್ಕೊರಲ ಕೂಗಾಟವಾಗಿದೆ. ಹಾಗಾಗಿ ಈ ಸಂಶೋಧನೆ ನಡೆಸಿರುವುದು ಒಬ್ಬ ಸ್ತ್ರೀಯೇ ಆಗಿರುವುದರಿಂದ ಪುರುಷರು ಕೂಡ ಪ್ರತಿ-ಸಂಶೋಧನೆಗೆ ಸಜ್ಜಾಗಿದ್ದಾರೆ ಎಂದು ತಿಳಿದುಬಂದಿದೆ.

Monday, December 11, 2006

ಮಾನವರ ಮೇಧಾ ಶಕ್ತಿ ನಾಪತ್ತೆಗೆ ಕಾರಣ ಇಲ್ಲಿದೆ

(ಬೊಗಳೂರು ವಿಕಟ ಸಂಶೋಧನೆ ಬ್ಯುರೋದಿಂದ)
ಬೊಗಳೂರು, ಡಿ.11- ಬೊಗಳೆ ರಗಳೆ ಏಕಸದಸ್ಯ ಬ್ಯುರೋದ ಪ್ರಧಾನ ವರದಿಗಾರರಲ್ಲೊಬ್ಬನಾಗಿರುವ ಅಸತ್ಯ ಅನ್ವೇಷಿಯ ಮರ್ಕಟ ಮನಸ್ಸಿನ ಹಿಂದಿರುವ ಕಾರಣವನ್ನು ಎಲ್ಲೆಲ್ಲೋ ಅಲೆದಾಡಿ ಪತ್ತೆ ಹಚ್ಚಿದಾಗ ಸಾಕಷ್ಟು ವಿವರಗಳು ಹಠಾತ್ ಆಗಿ ತಿಳಿದುಬಂದಿವೆ.

ಇತ್ತೀಚೆಗೆ ಅನ್ವೇಷಿಯ ವರದಿಗಳಲ್ಲಿ ಬೊಗಳೆ ಇಲ್ಲ ಎಂಬ ಆರೋಪಗಳು ಬಂದಿರುವ ಹಿನ್ನೆಲೆಯಲ್ಲಿ ಅನ್ವೇಷಿ ಮಿದುಳನ್ನು ತಪಾಸಣೆಗೊಳಪಡಿಸಲಾಯಿತು. ಆಗ ಮಿದುಳಿನ ಒಂದು ಭಾಗ ನಾಪತ್ತೆಯಾಗಿರುವುದು ತಿಳಿದುಬಂದಿದೆ.

ಈ ಒಂದು ಭಾಗ ಎಲ್ಲಿ ಹೋಗಿದೆ ಎಂದು ತಿಳಿದುಕೊಳ್ಳಲು ಹೋದಾಗ, ಅದು ಅನ್ವೇಷಿಯೊಬ್ಬನದೇ ಸಮಸ್ಯೆ ಮಾತ್ರವಲ್ಲ, ಮರ್ಕಟ ಮನಸ್ಸಿನ ಮಾನವ ಕುಲದವರೆಲ್ಲರ ಸಮಸ್ಯೆ ಎಂಬುದು ಬಟಾ ಬಯಲಾಯಿತು.

ಮನುಷ್ಯನ ಮಿದುಳಿನ ಕೋಶಗಳು ತಿಮಿಂಗಿಲಗಳಲ್ಲಿ ಪತ್ತೆಯಾಗಿದ್ದುದೇ ಇದಕ್ಕೆ ಕಾರಣವಾದ ಅಂಶವಾಗಿತ್ತು. ಅಲ್ಲದೆ ರಾಜಕಾರಣಿಗಳು, ಭೂ ಕಬಳಿಕೆದಾರರು, ದಂಧೆಕೋರರು ಮುಂತಾದವರೆಲ್ಲಾ ಸಿಕ್ಕಿದ್ದನ್ನು ಕಬಳಿಸುವ ಬುದ್ಧಿಯ ಹಿಂದಿನ ರಹಸ್ಯವೂ ಇದರಿಂದ ಬಯಲಾಗತೊಡಗಿದೆ.

ಇಷ್ಟು ಮಾತ್ರವಲ್ಲ ಒಂದೊಂದೇ ರಹಸ್ಯ ಬಯಲಾಗುವುದರ ಸಾಲಿಗೆ, ರಾಜಕಾರಣಿಗಳು ಆಗಾಗ್ಗೆ ಬೇರೆ ಪಕ್ಷಗಳ ಕೊಳಕ್ಕೆ ಹೋಗಿ ಗಾಳ ಹಾಕುವುದು ಯಾಕೆ, ಕೆಲವೊಂದು ತಿಮಿಂಗಿಲಗಳನ್ನೇ ಹಿಡಿಯುವುದು ಯಾಕೆ ಎಂಬುದಕ್ಕೆ ಕೂಡ ಕಾರಣ ಪತ್ತೆಯಾಗಿದೆ.

ಆಗಾಗ್ಗೆ ಕೆಲವೆಡೆ ದಾಳಿ ನಡೆಸುವ ಸಿಬಿಐ ಅಧಿಕಾರಿಗಳು ದೊಡ್ಡ ದೊಡ್ಡ ತಿಮಿಂಗಿಲಗಳನ್ನಷ್ಟೇ ಹಿಡಿಯುತ್ತಿದ್ದಾರೆ. ತಿಮಿಂಗಿಲಗಳ ಹಿಂದಿರುವ ಮೇಧಾ ಶಕ್ತಿಯೇ ಇದಕ್ಕೆ ಕಾರಣ ಎಂಬ ಅದ್ಭುತ ಅಸತ್ಯವನ್ನು ಮಿದುಳಿಲ್ಲದಿದ್ದರೂ ಅನ್ವೇಷಿ ಪತ್ತೆ ಮಾಡಿದ್ದಾನೆ.

Friday, December 08, 2006

ಮಲೇಷ್ಯಾದಲ್ಲಿ ಬಾಲಿವುಡ್ ಚಿತ್ರೀಕರಣ ನಿಷೇಧ ಚಿಂತನೆ !

(ಬೊಗಳೂರು ಉಡುಗೆ ಬ್ಯುರೋದಿಂದ)
ಬೊಗಳೂರು, ಡಿ.8- ಮಲೇಷ್ಯಾದಲ್ಲಿ ಭಾರತೀಯ ಚಿತ್ರಗಳ ಚಿತ್ರೀಕರಣವನ್ನು ನಿಷೇಧಿಸಲಾಗುತ್ತಿದೆ ಎಂಬ ಮಹತ್ವದ ತನಿಖಾ ವರದಿಯನ್ನು ಹಿಂದೆಂದೂ ಕಂಡರಿಯದ ರೀತಿಯಲ್ಲಿ ಬೊಗಳೆ ರಗಳೆ ಬ್ಯುರೋ ಕೈಗೊಂಡಿದೆ.

ಇದಕ್ಕೆ ಕಾರಣವೆಂದರೆ ಎಲ್ಲವನ್ನೂ ಬಯಲಾಗಿಸುವ ಅಥವಾ ಹುಟ್ಟಿನ ಉಡುಗೆಗಳಲ್ಲಿ ಅಡ್ಡಾಡಬಾರದು ಎಂದು ಅಲ್ಲಿನ ಸ್ಥಳೀಯಾಡಳಿತೆಯು ಆದೇಶ ಮಾಡಿರುವುದು.

ಇದೀಗ ಚಿತ್ರೀಕರಣ ನೆಪದಲ್ಲಾದರೂ ಮಲೇಷ್ಯಾಕ್ಕೆ ಹೋಗುವ ಅವಕಾಶ ತಪ್ಪಿ ಹೋಗುವುದರಿಂದ ಆಕ್ರೋಶಗೊಂಡಿರುವ (ವಸ್ತ್ರ)ಖಾಲಿ ವುಡ್ ನಟೀಮಣಿಯರು, ಜನ್ಮಉಡುಗೆ ನಮ್ಮ ಆಜನ್ಮ ಸಿದ್ಧ ಹಕ್ಕು ಎಂದು ಹೋರಾಟಕ್ಕಿಳಿಯಲು ತೀರ್ಮಾನಿಸಿದ್ದಾರೆ.

ಈ ಹೋರಾಟದ ಮೊದಲನೆ ಹಂತದ ಅಂಗವಾಗಿ, ಬಟ್ಟೆ ಹಾಕಿಕೊಳ್ಳುವ ಬಾಲಿವುಡ್ ತಾರೆಯರನ್ನು ಅಲ್ಲಿಗೆ ಕಳುಹಿಸಲಾಗುತ್ತಿದೆ. ಅವರು ಈ ರಾಯಭಾರದಲ್ಲಿ ವಿಫಲರಾದಲ್ಲಿ, ಮತ್ತೆ ತೊಟ್ಟ ಉಡುಗೆಯ ಮತ್ತೆ ಉಡದಿರು (ತೊಟ್ಟ ಬಾಣವ ಮತ್ತೆ ತೊಡದಿರು ಎಂದು ಕುಂತಿಯು ಕರ್ಣನಲ್ಲಿ ಕೇಳಿಕೊಂಡ ಮಾದರಿಯಲ್ಲಿ) ಎಂಬ ಘೋಷಣಾ ವಾಕ್ಯದೊಂದಿಗೆ ಭರ್ಜರಿ ಪ್ರತಿಭಟನೆ ಮಾಡಲು ಬಿಚ್ಚಮ್ಮ ಸಂಘದ ಸಭೆಯಲ್ಲಿ ನಿರ್ಧರಿಸಲಾಯಿತು.

ಈಗ ಸಿನಿಕ ನಾಯಕಿರ ಜತೆಗೆ ಕೋಪ ಮರೆತು ಒಂದಾಗಿ ಸೇರಿಕೊಂಡಿರುವ ಬಿಚ್ಚೋಲೆ ಐಟಂಗಳೂ ಕೂಡ ಹೋರಾಟದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

Thursday, December 07, 2006

ಜ್ವರ ಇಳಿಸುವ ಫ್ರೀಜರ್ ಸಂಶೋಧನೆ

(ಬೊಗಳೂರು some-ಶೋಧನಾ ಬ್ಯುರೋದಿಂದ)
ಬೊಗಳೂರು, ಡಿ.7- ಜ್ವರ ಬಂದರೆ ಮೈ ಬಿಸಿಯಾಗುತ್ತೆ. ಅದನ್ನು ತಣಿಸಲು ಏನು ಮಾಡಬೇಕು ಎಂದು ಯೋಚಿಸುತ್ತಿದ್ದವರಿಗೆ ಹೊಸ ಉಪಕರಣವನ್ನು ಇಲ್ಲಿ ಸಂಶೋಧನೆ ಮಾಡಲಾಗಿದೆ.

ಸಿಕ್ಕಾ ಬಟ್ಟೆ ಜ್ವರ ಏರಿ ಮೈ ಬಿಸಿಯಾದರೆ ನಿಮ್ಮ ದೇಹವನ್ನು ಮಾತ್ರ Freezer ನಲ್ಲಿಟ್ಟರಾಯಿತು. ಆದರೆ ಅದನ್ನು ಶಾಶ್ವತವಾಗಿ ತಣಿಯದಂತೆ ನೋಡಿಕೊಳ್ಳಬೇಕು ಎಂಬುದು ತಜ್ಞರು ಸಲಹೆ ನೀಡಿದ್ದಾರೆ !

ಹಾಗಾಗಿ ಫ್ರೀಜರ್ ಅನ್ನುವುದು ಕೇವಲ ತಂಗಳನ್ನ ಪೆಟ್ಟಿಗೆಯಾಗಿ, ಅನಾರೋಗ್ಯಕ್ಕೆ ಪೂರಕವಾಗಿ ಮಾತ್ರವೇ ಅಲ್ಲ, ಆರೋಗ್ಯವನ್ನೂ ರಿಪೇರಿ ಮಾಡಬಹುದಾಗಿದೆ ಎಂಬುದನ್ನು ಈ ಸಂಶೋಧಕ ಮಹಾಶಯ ತೋರಿಸಿಕೊಟ್ಟಿದ್ದಾನೆ.

ಆದರೆ ಜ್ವರ ಬಂದ ಮಗುವಿನ ಮೈ ಬಿಸಿ ಇಳಿಸಲು ಆತ ಮಾಡಿದ ಪ್ರಯತ್ನಗಳು ಮಾತ್ರ ಸಂಶೋಧನೆಗೆ ತಕ್ಕುದಾದಂತಿತ್ತು. ಯಾವುದೇ ಸಂಶೋಧನೆಗಳು accident ನಿಂದಲೇ ಆಗುತ್ತವೆ ಎಂಬ ವೇದವಾಕ್ಯವನ್ನು ಇಲ್ಲಿ ಸ್ಮರಿಸಬಹುದು.

ಮೊದಲಿಗೆ ಆತ ಮಗುವಿಗೆ ಚಂಡಿ ಬಟ್ಟೆ ಕಟ್ಟಿದ, ಅದನ್ನು ಒಣಗಿಸಲು ಮಗುವನ್ನು ಗಾಳಿಯಲ್ಲಿರಿಸಿದ. ಮಗು ಒಣಗಿದ್ದು ಜಾಸ್ತಿಯಾದ ಕಾರಣ, ಸ್ವಲ್ಪ humidity ಬರಲಿ ಅಂತ ಮತ್ತೆ ಫ್ರಿಜ್‌ನಲ್ಲಿಟ್ಟ.

ಇದೀಗ ಈ ಸಂಶೋಧನೆ ಮಾಡಿದ ವ್ಯಕ್ತಿಯೇ ಫ್ರೀಜರ್‌ನಂತಹ ಕೊಠಡಿಯಲ್ಲಿ ಕಾಲ ಕಳೆಯುತ್ತಿದ್ದಾನೆ ಅಂತ ತಿಳಿದುಬಂದಿದೆ. ಆದರೆ ಇಲ್ಲಿ ಆತನಿಗೆ ಎಣಿಸುವುದಕ್ಕೆ ಎದುರಿಗೆ ಕಂಬಿಗಳನ್ನು ಇರಿಸಲಾಗಿದೆ ಎಂದೂ ತಿಳಿದುಬಂದಿದೆ.

Wednesday, December 06, 2006

ಪ್ರೇಮಿಗಳ ಆತ್ಮಹತ್ಯೆ ಹೆಚ್ಚಳಕ್ಕೆ ಕಾರಣ

(ಬೊಗಳೂರು ವಿಫಲ ಪ್ರೇಮ ಬ್ಯುರೋದಿಂದ)
ಬೊಗಳೂರು, ಡಿ.6- ಪ್ರೇಮ ರೋಗ ಮತ್ತು ಪ್ರೇಮ ವೈಫಲ್ಯದಿಂದ ಬಳಲುತ್ತಾ ಹೃದಯ ಹಾಳು ಮಾಡಿಕೊಂಡವರಿಗೊಂದು ಸಿಹಿ ಸುದ್ದಿ. ಇದೇ ವೇಳೆ, ಪ್ರೀತಿ ಪ್ರೇಮದ ಹೆಸರಿನಲ್ಲಿ ಆತ್ಮಹತ್ಯೆಗೆ ಶರಣಾಗುವ ಯುವ ಪ್ರೇಮಿಗಳ ಸಂಖ್ಯೆ ಹೆಚ್ಚಾಗುತ್ತಿರುವುದಕ್ಕೂ ಕಾರಣ ಪತ್ತೆ ಹಚ್ಚಲಾಗಿದೆ.

ಹಾಳಾದ ಹೃದಯವನ್ನು ಹುಟ್ಟುವ ಮೊದಲೇ ಸರಿಪಡಿಸಲಾಗುತ್ತದೆ ಎಂಬ ಸುದ್ದಿ ಇದಾದರೂ, ಈ ಜನ್ಮದಲ್ಲಿ ನಾವಿಬ್ಬರೂ ಒಂದಾಗಲಿಲ್ಲ, ಮುಂದಿನ ಜನ್ಮದಲ್ಲಾದರೂ ಒಂದಾಗೋಣ ಎನ್ನುತ್ತಾ ಹೃದಯ ಛಿದ್ರವಾಗಿ ಆತ್ಮಹತ್ಯೆಗೆ ಶರಣಾದವರು ಇದರಿಂದ ಭಾರೀ ಹರ್ಷಿತರಾಗಿದ್ದಾರೆ ಎಂದು ತಿಳಿದುಬಂದಿದೆ.

ಅವರು ಹರ್ಷಿತರಾಗಿ ಹೋದರೂ, ಈ ಲೋಕದಲ್ಲಿ ಪ್ರೇಮಿಗಳ ಆತ್ಮಹತ್ಯೆ ಪ್ರಮಾಣವೂ ಹೆಚ್ಚುತ್ತಿರುವುದಕ್ಕೆ ಇದೇ ಕಾರಣ ಎಂಬ ಕಳವಳಕಾರಿ ಅಂಶವನ್ನು ಬೊಗಳೆ ರಗಳೆ ಬ್ಯುರೋ ಪತ್ತೆ ಹಚ್ಚಿದೆ.

ಹುಟ್ಟುವ ಮೊದಲೇ ಹೃದಯ ಸರಿಪಡಿಸಿಕೊಳ್ಳಲು ಅವಕಾಶವಿರುವುದರಿಂದ, ಈ ಜನ್ಮದಲ್ಲಿ ಛಿದ್ರಗೊಂಡ ಹೃದಯವನ್ನು ಮರು ಜನ್ಮದಲ್ಲಿ ರಿಪೇರಿ ಮಾಡಿಸಿಕೊಳ್ಳುವ ಸಲುವಾಗಿ ಅವರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ತಿಳಿದುಬಂದಿದೆ.

ಈ ತಂತ್ರಜ್ಞಾನದ ಸಂಶೋಧಕನಿಗೆ ಅತ್ಯುನ್ನತ ಪ್ರೇಮಿ ಪ್ರಶಸ್ತಿ ನೀಡಲು ಪ್ರೇಮಿಗಳು ನಿರ್ಧರಿಸಿದ್ದರೆ, ಆತನನ್ನು ಹಿಡಿದು ಚಚ್ಚಲು ಪ್ರೇಮಿಗಳ ಹೆತ್ತವರು ಸಜ್ಜಾಗುತ್ತಿದ್ದಾರೆ ಎಂದು ತಿಳಿದುಬಂದಿದೆ.

ಒಟ್ಟಿನಲ್ಲಿ ಪ್ರೇಮಿಗಳ ಹೃದಯ ಲಬ್ ಡಬ್ ಲಬ್ ಡಬ್ ಎಂದು ಬಡಿದುಕೊಳ್ಳುತ್ತಿದ್ದರೆ, ಪ್ರೇಮಿಗಳ ಹೆತ್ತವರ ಹೃದಯ ಲಬೋ ಲಬೋ ಅಂತ ಮಾತ್ರವೇ ಬಡಿದುಕೊಳ್ಳುತ್ತಿರುವುದು ವಿಜ್ಞಾನ ರಂಗಕ್ಕೆ ಹೊಸ ಸವಾಲಾಗಿ ಪರಿಣಮಿಸಿದೆ.

Monday, December 04, 2006

ರಾಜಕಾರಣಿಗಳ ಬಾಯಲ್ಲಿ 'ಬೊಗಳೆ' ಮಂತ್ರ!

(ಬೊಗಳೂರು ಅರಾಜಕ ಬ್ಯುರೋದಿಂದ)
ಬೊಗಳೂರು, ಡಿ.4- ರಾಜಕಾರಣಿಗಳೂ ಸತ್ಯ ನುಡಿಯಲಾರಂಭಿಸಿರುವುದು ಬೊಗಳೆ ರಗಳೆ ಬ್ಯುರೋವನ್ನು ವಿಶೇಷವಾಗಿ ಕೆರಳಿಸಿದ ಪರಿಣಾಮವಾಗಿ, ತಾಳ್ಮೆಗೆಡದಿರುವಂತೆ ಎಲ್ಲಾ ಪ್ರಜೆಗಳಿಗೆ ಮನವಿ ಮಾಡಿಕೊಳ್ಳಲಾಗಿದೆ.
 
ಹೀಗೆ ಸತ್ಯ ಹೇಳಲಾರಂಭಿಸಿರುವುದರಿಂದ ಕಳವಳಗೊಂಡ ಬ್ಯುರೋ ತಂಡವು ನೇರವಾಗಿ ಮಾವನ (ಮತ್ತು ತಮ್ಮ) ಸಂಪನ್ಮೂಲಗಳ ಅಭಿವೃದ್ಧಿ ಮಂತ್ರಿ ದುರ್ಜನ ಸಿಂಹ ಅವರನ್ನು ಮಾತನಾಡಲಾರಂಭಿಸಿತು. ಇದಕ್ಕೆಲ್ಲಾ ಕಾರಣವೆಂದರೆ ದೇಶದ ಜನತೆಯ ಸಹಿಷ್ಣುತೆಯೇ ಪ್ರಜಾಸತ್ತೆ ಸತ್ತೇಹೋಗದಿರಲು ಕಾರಣ ಎಂದು ಅವರು ಹೇಳಿಕೆ ನೀಡಿರುವುದು!
 
ಕಳೆದ 60 ವರ್ಷಗಳಿಂದ ಮೇಯಲು ಸಾಮರ್ಥ್ಯವಿರುವವರು ಮೇಯ್ದುಕೊಂಡೇ ಇರುವಂತಾಗಲು ಈ ದೇಶದ ಪ್ರಜೆಗಳ ತಾಳ್ಮೆ ಮತ್ತು ಪರಿಸ್ಥಿತಿಯನ್ನು ಅಳೆದು ತೂಗಿ ನೋಡಿ "ಸುಮ್ಮನಿರುವುದೇ ಲೇಸು" ಎಂದು ತೀರ್ಮಾನಿಸುವ ಗುಣಗಳೇ ಕಾರಣ ಎಂದು ಅವರು ನಮ್ಮ ಬ್ಯುರೋಗೆ ಮಾತ್ರವೇ ಸ್ಪಷ್ಟಪಡಿಸಿದ್ದಾರೆ.
 
ನೀವೇ ನೋಡಿ, ಬದುಕಲು ಬೇಕಾದ ವಸ್ತುಗಳ ಬೆಲೆಯನ್ನು ಎಷ್ಟು ಎತ್ತರಕ್ಕೇರಿಸಿದರೂ ಒಂದೆರಡು ದಿನ ಕೂಗಾಡಿ ಗಲಾಟೆ ಮಾಡುತ್ತಾರೆಯೇ ಹೊರತು, ಬೆಲೆ ತಗ್ಗಿಸುವವರೆಗೂ ಅವರೇನೂ ಬಿಗುವಾಗಿರುವುದಿಲ್ಲ. ಶಾಂತರಾಗಿ ತಮ್ಮ ಪಾಡಿಗೆ ತಾವು ಮರಳುತ್ತಾರೆ. ಅವರಿಗೂ ಪರಿಸ್ಥಿತಿಯ ಅರಿವಾಗಿರುತ್ತದೆ. ಯಾವುದೇ ಪ್ರತಿಭಟನೆ ಮಾಡಿ ಪ್ರಯೋಜನ ಇಲ್ಲ, ಆಳುವವರು ಈ ಬಗ್ಗೆ ಒಂದು ಕುಡಿನೋಟವನ್ನೂ ಹಾಯಿಸುವುದಿಲ್ಲ ಎಂಬ ಸತ್ಯಾಂಶಕ್ಕೆ ಅವರು ಒಗ್ಗಿ ಹೋಗಿದ್ದಾರೆ ಎಂದವರು ತಿಳಿಸಿದರು.
 
ಮೀಸಲಾತಿ ವಿಷಯಗಳೂ ಅಷ್ಟೇ, ಒಂದು ನೂರಿನ್ನೂರು ಮಂದಿ ಪ್ರತಿಭಟನೆ ಮಾಡಿ ಆತ್ಮದಹನ ಮುಂತಾದ ಕಾರ್ಯಗಳಿಗೆ ಮುಂದಾಗಬಹುದು. ಆದರೆ ಇದರ ಬಗ್ಗೆ ಎಲ್ಲಾ ತಲೆ ಕೆಡಿಸಿಕೊಂಡರೆ, ನಮ್ಮ ಜೇಬು ತುಂಬಿಸಿಕೊಳ್ಳುವುದು, ಓಟಿನ ಬ್ಯಾಂಕ್ ಬ್ಯಾಲೆನ್ಸ್ ವೃದ್ಧಿಸಿಕೊಳ್ಳುವುದು ಹೇಗೆ. ಅವರು ಅವರ ಪಾಡಿಗೆ ಹೋರಾಟ ಮಾಡುತ್ತಾ ಇರುತ್ತಾರೆ ಎಂದು ಕ್ಯಾಕರಿಸಿ ನಕ್ಕರು.
 
ಈ ದೇಶದ ಪ್ರಜೆಗಳ ತಾಳ್ಮೆಯೇ ನಮ್ಮನ್ನು ಎಲ್ಲಾ ರಂಗಗಳಲ್ಲೂ, ಪ್ರತಿಯೊಂದು ಕ್ಷಣ ಕ್ಷಣವೂ ರಕ್ಷಿಸುತ್ತಿರುತ್ತದೆ. ಹಗರಣ ಬೆಳಕಿಗೆ ಬಂದಾಗ ಒಂದಷ್ಟು ಕೂಗಾಡುತ್ತಾರೆ, ತನಿಖಾ ಆಯೋಗ ರಚಿಸಿದ ತಕ್ಷಣ ಬಾಯಿ ಮುಚ್ಚುತ್ತಾರೆ. ತನಿಖಾ ಆಯೋಗದಲ್ಲಿ ನಮ್ಮವರನ್ನೇ ನೇಮಿಸಿದರಾಯಿತಲ್ಲಾ ಎಂದು ತಮ್ಮ ಚಾಣಕ್ಯ ನೀತಿಯ ಪ್ರಯೋಗಾನುಭವವನ್ನು ಮುಂದಿಟ್ಟರು.

Saturday, December 02, 2006

ಮುಕ್ತ ಮಾಲಿನ್ಯವಾಯು ಯಾನ!

(ಬೊಗಳೂರು ಮಾಲಿನ್ಯ ಬ್ಯುರೋದಿಂದ)
ಬೊಗಳೂರು, ಡಿ.2- ದೇಶದಲ್ಲಿ ಮುಕ್ತ ವಾಯುಯಾನ ನೀತಿಯನ್ನು ಜಾರಿಗೊಳಿಸಲಾಗಿರುವುದರಿಂದ ಸೇವನೆಗೆ ಯುಕ್ತವಾದ ವಾಯು ಇಲ್ಲದ ಕಾರಣ ಪ್ರಜೆಗಳು ತತ್ತರಿಸಿದ ಘಟನೆ ವರದಿಯಾಗಿದೆ.
 
ನಗರ ಪ್ರದೇಶಗಳಲ್ಲಿ ಪಬ್ ಸಂಸ್ಕೃತಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಹೆಚ್ಚಿನ ಮಂದಿ ಮುಕ್ತವಾಗಿ ವಾಯುವಿನಲ್ಲಿ ತೇಲಾಡುತ್ತಾ ಇರುತ್ತಾರಾದುದರಿಂದ ಅವರ ಮೇಲೆ ಈ ಹೊಸ ನೀತಿಯು ಯಾವುದೇ ಪ್ರಯೋಜನ ಬೀರಿಲ್ಲ ಎಂದು ಸಮೀಕ್ಷೆಗಳು ತಿಳಿಸಿವೆ.
 
ಈಗಾಗಲೇ ಕೊಚ್ಚೆ ಕೊಳಚೆಗಳು ಮಾತ್ರವಲ್ಲದೆ ವಾಹನಗಳೂ ಹೆಚ್ಚಾಗಿ ನಗರ ಪ್ರದೇಶಗಳಲ್ಲಿ ವಾಯು ಬಹುತೇಕ ಮಲಿನಗೊಂಡಿದೆ. ಇದೀಗ ಮುಕ್ತ ವಾಯು ತುಂಬಲು ಅವಕಾಶ ನೀಡಿರುವುದರಿಂದಾಗಿ ವಿದೇಶಗಳಿಂದ ಬರುವ ದುರ್ವಾಸನೆಯುಕ್ತ ತ್ಯಾಜ್ಯಗಳನ್ನೂ ತಂದು ದೇಶದ ಮಾರುಕಟ್ಟೆಗಳಲ್ಲಿ ಸುರಿಯಲಾಗುತ್ತಿದೆ.
 
ಇದರಿಂದ ಅವುಗಳು ಹೊರ ಸೂಸುವ (ದುರ್)ಗಂಧಭರಿತ ವಾಯು ನಗರವಿಡೀ ತುಂಬತೊಡಗಿದ್ದು, ಶುದ್ಧ ವಾಯುವಿಲ್ಲದೆ ಜನಜೀವನ ಅಸ್ತವ್ಯಸ್ತಗೊಂಡಿದೆ.
 
ಈಗಾಗಲೇ ಮುಕ್ತ ವಾಯುಯಾನದ ಸುಖವನ್ನು ವಿಮಾನಯಾನ ಕಂಪನಿಗಳು ಸೂಕ್ತವಾಗಿ ಅನುಭವಿಸುತ್ತಿದ್ದು, ಗಗನಕ್ಕೇರುತ್ತಿರುವ ವಿಮಾನಗಳ ಸಂಖ್ಯೆ ಹೆಚ್ಚಾಗುತ್ತಿರುವಂತೆಯೇ ವಿಮಾನ ಪ್ರಯಾಣ ದರಗಳು ಗಗನದಿಂದ ಇಳಿಯುತ್ತಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗಿದೆ.
 
ಆದರೆ ವಿಮಾನ ಪ್ರಯಾಣ ದರ ಇಳಿಕೆ ಎಂದು ವಾಯುಯಾನ ಕಂಪನಿಗಳು ಮುಕ್ತವಾಗಿಯೇ ಜಾಹೀರಾತು ನೀಡಿ, conditions apply ಅನ್ನೋದನ್ನು ಆಗಸದಲ್ಲಿ ಯಾರಿಗೂ ಕಾಣಿಸದಷ್ಟು ಎತ್ತರದಲ್ಲಿ ಬರೆದಿರುವುದರಿಂದಾಗಿ ಅವುಗಳು ಯಾರ ಕಣ್ಣಿಗೂ ಗೋಚರಿಸದೆ ವಾಯುಯಾನಿಗಳ ಸಂಖ್ಯೆ ಮೇಲಕ್ಕೇರಿದೆ ಎಂದು ತಿಳಿದುಬಂದಿದೆ.
 
ಈ ಮಧ್ಯೆ, ಮುಕ್ತ ವಾಯುಯಾನ ಎಂಬ ವಿಷಯವನ್ನು ಉಚಿತ ವಾಯುಯಾನ ಎಂದು ತಿಳಿದುಕೊಂಡವರು ಕೂಡ ವಿಮಾನವೇರಲು ಧಾವಿಸತೊಡಗಿದ್ದು, ವಿಮಾನ ನಿಲ್ದಾಣಗಳಲ್ಲಿ ಜನಜಂಗುಳಿ ಉಂಟಾಗುತ್ತಿದೆ.

Friday, December 01, 2006

ವಿಶ್ವ ಏಡ್ಸ್ ದಿನ : ಸಡಗರದ ಆಚರಣೆ !

(ಬೊಗಳೂರು ಆಚರಣೆ ಬ್ಯುರೋದಿಂದ)
ಬೊಗಳೂರು, ಡಿ.1- ಇಂದು ಅಂತಾರಾಷ್ಟ್ರೀಯ ಏಡ್ಸ್ ದಿನಾಚರಣೆ. ಈ ದಿನವನ್ನು ವಿಶ್ವಾದ್ಯಂತ ಸಂಭ್ರಮ ಸಡಗರಗಳಿಂದ ವಿಧ್ಯುಕ್ತವಾಗಿ ಆಚರಿಸಲಾಯಿತು ಎಂದು ತಿಳಿದುಬಂದಿದೆ.
 
ಸುಮಾರು 25 ವರ್ಷಗಳ ಹಿಂದೆ ಏಡ್ಸ್‌ಗೆ ಕಾರಣವಾಗುವ ಎಚ್ಐವಿ (ವೈರಸ್) ಪತ್ತೆಯಾದ ಬಳಿಕ ಏಡ್ಸ್‌ ಕುರಿತಾಗಿ ಭರ್ಜರಿ ಪ್ರಗತಿಯಾಗಿದೆ. ಈ ಬಗ್ಗೆ ಗ್ರಾಮ ಗ್ರಾಮಗಳಲ್ಲೂ ಸಾಕಷ್ಟು ಬೆಳವಣಿಗೆ ಕಂಡಿದ್ದು, ತನ್ನ ಆಳವಾದ ಬೇರುಗಳನ್ನು ಕುಗ್ರಾಮಗಳಿಗೂ ತೂರಿಸಿದೆ.
 
ಈ ಶುಭವಸರದಲ್ಲಿ, ಏಡ್ಸ್ ನಿಷೇಧಿಸಲು ಸರಕಾರ ಚಿಂತಿಸುತ್ತಿದೆ ಎಂದು ತಿಳಿದುಬಂದಿದೆ.
 
ಏರುತ್ತಿರುವ ಜನಸಂಖ್ಯೆ ಹತೋಟಿಗೆ ತರಲು ಪ್ರಮುಖ ಆಯುಧಗಳಲ್ಲೊಂದಾಗಿರುವ ಈ ರೋಗವನ್ನು ನಿಷೇಧಿಸಿದರೆ ಜನಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು ಎಂಬುದು ಪ್ರತಿಪಕ್ಷಗಳ ಕೂಗಾಟ.
 
ಆದರೆ ಪ್ರತಿಪಕ್ಷಗಳ ಒಕ್ಕೂಟ ಅಂಗ ಪಕ್ಷವೊಂದು, ಏಡ್ಸ್ ನಿಷೇಧಿಸಿದಲ್ಲಿ ನಾವು ಜನಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕುವುದಾದರೂ ಹೇಗೆ ಎಂಬ ಕಳವಳ ವ್ಯಕ್ತಪಡಿಸಿದೆ.

ಎಂಜಿನ್ ಇಲ್ಲದ ರೈಲು: ಬ್ರೇಕಿಂಗ್ ನ್ಯೂಸ್ ಅಲ್ಲವೆಂದ ಬೊ.ರ.

[ಬೊಗಳೂರು ಪಟ್ಟೆ-ರಹಿತ ರೈಲು ಬ್ಯುರೋ] ಬೊಗಳೂರು: ಆಫ್‌ಲೈನ್ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯೊಂದು ಆನ್‌ಲೈನ್ ಸಂಪಾದಕರ ಕಣ್ಣು ಕುಕ್ಕಿದ್ದು, ಎಂಜಿನ್ ಇಲ್ಲದೆ...