ಬೊಗಳೆ ರಗಳೆ

header ads

ಮಾನವರ ಮೇಧಾ ಶಕ್ತಿ ನಾಪತ್ತೆಗೆ ಕಾರಣ ಇಲ್ಲಿದೆ

(ಬೊಗಳೂರು ವಿಕಟ ಸಂಶೋಧನೆ ಬ್ಯುರೋದಿಂದ)
ಬೊಗಳೂರು, ಡಿ.11- ಬೊಗಳೆ ರಗಳೆ ಏಕಸದಸ್ಯ ಬ್ಯುರೋದ ಪ್ರಧಾನ ವರದಿಗಾರರಲ್ಲೊಬ್ಬನಾಗಿರುವ ಅಸತ್ಯ ಅನ್ವೇಷಿಯ ಮರ್ಕಟ ಮನಸ್ಸಿನ ಹಿಂದಿರುವ ಕಾರಣವನ್ನು ಎಲ್ಲೆಲ್ಲೋ ಅಲೆದಾಡಿ ಪತ್ತೆ ಹಚ್ಚಿದಾಗ ಸಾಕಷ್ಟು ವಿವರಗಳು ಹಠಾತ್ ಆಗಿ ತಿಳಿದುಬಂದಿವೆ.

ಇತ್ತೀಚೆಗೆ ಅನ್ವೇಷಿಯ ವರದಿಗಳಲ್ಲಿ ಬೊಗಳೆ ಇಲ್ಲ ಎಂಬ ಆರೋಪಗಳು ಬಂದಿರುವ ಹಿನ್ನೆಲೆಯಲ್ಲಿ ಅನ್ವೇಷಿ ಮಿದುಳನ್ನು ತಪಾಸಣೆಗೊಳಪಡಿಸಲಾಯಿತು. ಆಗ ಮಿದುಳಿನ ಒಂದು ಭಾಗ ನಾಪತ್ತೆಯಾಗಿರುವುದು ತಿಳಿದುಬಂದಿದೆ.

ಈ ಒಂದು ಭಾಗ ಎಲ್ಲಿ ಹೋಗಿದೆ ಎಂದು ತಿಳಿದುಕೊಳ್ಳಲು ಹೋದಾಗ, ಅದು ಅನ್ವೇಷಿಯೊಬ್ಬನದೇ ಸಮಸ್ಯೆ ಮಾತ್ರವಲ್ಲ, ಮರ್ಕಟ ಮನಸ್ಸಿನ ಮಾನವ ಕುಲದವರೆಲ್ಲರ ಸಮಸ್ಯೆ ಎಂಬುದು ಬಟಾ ಬಯಲಾಯಿತು.

ಮನುಷ್ಯನ ಮಿದುಳಿನ ಕೋಶಗಳು ತಿಮಿಂಗಿಲಗಳಲ್ಲಿ ಪತ್ತೆಯಾಗಿದ್ದುದೇ ಇದಕ್ಕೆ ಕಾರಣವಾದ ಅಂಶವಾಗಿತ್ತು. ಅಲ್ಲದೆ ರಾಜಕಾರಣಿಗಳು, ಭೂ ಕಬಳಿಕೆದಾರರು, ದಂಧೆಕೋರರು ಮುಂತಾದವರೆಲ್ಲಾ ಸಿಕ್ಕಿದ್ದನ್ನು ಕಬಳಿಸುವ ಬುದ್ಧಿಯ ಹಿಂದಿನ ರಹಸ್ಯವೂ ಇದರಿಂದ ಬಯಲಾಗತೊಡಗಿದೆ.

ಇಷ್ಟು ಮಾತ್ರವಲ್ಲ ಒಂದೊಂದೇ ರಹಸ್ಯ ಬಯಲಾಗುವುದರ ಸಾಲಿಗೆ, ರಾಜಕಾರಣಿಗಳು ಆಗಾಗ್ಗೆ ಬೇರೆ ಪಕ್ಷಗಳ ಕೊಳಕ್ಕೆ ಹೋಗಿ ಗಾಳ ಹಾಕುವುದು ಯಾಕೆ, ಕೆಲವೊಂದು ತಿಮಿಂಗಿಲಗಳನ್ನೇ ಹಿಡಿಯುವುದು ಯಾಕೆ ಎಂಬುದಕ್ಕೆ ಕೂಡ ಕಾರಣ ಪತ್ತೆಯಾಗಿದೆ.

ಆಗಾಗ್ಗೆ ಕೆಲವೆಡೆ ದಾಳಿ ನಡೆಸುವ ಸಿಬಿಐ ಅಧಿಕಾರಿಗಳು ದೊಡ್ಡ ದೊಡ್ಡ ತಿಮಿಂಗಿಲಗಳನ್ನಷ್ಟೇ ಹಿಡಿಯುತ್ತಿದ್ದಾರೆ. ತಿಮಿಂಗಿಲಗಳ ಹಿಂದಿರುವ ಮೇಧಾ ಶಕ್ತಿಯೇ ಇದಕ್ಕೆ ಕಾರಣ ಎಂಬ ಅದ್ಭುತ ಅಸತ್ಯವನ್ನು ಮಿದುಳಿಲ್ಲದಿದ್ದರೂ ಅನ್ವೇಷಿ ಪತ್ತೆ ಮಾಡಿದ್ದಾನೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

6 ಕಾಮೆಂಟ್‌ಗಳು

  1. ಪೇದಾ ಮಾಟ್ಕರ್ ಈಗೀಗ ಪತ್ತೆ ಇಲ್ಲ ಎಂಬ ಸುದ್ದಿ. ಅದಕ್ಕೂ ನಿಮ್ಮ ಬರಹಕ್ಕೂ ಮತ್ತು ನಿಮ್ಮ ಇಂದಿನ ಊರಿನ ದಾಳಿಗೂ ಏನಾದರೂ ಸಂಬಂಧವಿದೆಯೇ?

    ಪ್ರತ್ಯುತ್ತರಅಳಿಸಿ
  2. ಅನ್ವೇಷಿಗಳ ಮೆದುಳಿನ ಭಾಗ 'ಮಿಸ್' ಆದುದನ್ನು ಕೇಳಿ ಒಮ್ಮೆಲೇ ಆತಂಕಗೊಂಡು ಪೋಲೀಸ್ ಕಂಪ್ಲೇಂಟ್ ಆದ್ರೂ ಕೊಡ್ಲಿಕ್ಕೆ ಸಲಹೆ ಕೊಡೋಣ ಅಂತಿದ್ದೆ. ಆದರೆ ಇದು ಎಲ್ಲರಲ್ಲೂ ಮಿಸ್ಸಿಂಗು ಅಂತ ಮುಂದೆ ಓದಿದಾಗ ತಿಳಿದು ಮತ್ತಷ್ಟು ಆತಂಕವಾಗಿ ಈಗ ನನ್ನ ಮೆದುಳೇ ಕೆಲಸ ಮಾಡದ ಹಂತ ತಲುಪಿದೆ..!

    ಪ್ರತ್ಯುತ್ತರಅಳಿಸಿ
  3. ಹಾಗಾದರೆ ತಿಮಿಂಗಲಗಳು ಈಗ ಸಿಕ್ಕಿದ್ದನ್ನು ಕಬಳಿಸುವ ಬುದ್ಧಿಯ ರಾಜಕಾರಣಿಗಳು, ಭೂ ಕಬಳಿಕೆದಾರರು, ದಂಧೆಕೋರರು ಮುಂತಾದವರೆಲ್ಲರ ಕ್ಷಮೆ ಕೇಳಬೇಕಾ?

    ಪ್ರತ್ಯುತ್ತರಅಳಿಸಿ
  4. ಶ್ರೀನಿವಾಸರೆ,

    ಇಂದಿನ ಊರಿನಲ್ಲಿಯೇ ಅನ್ವೇಷಿ ಮಿದುಳು ನಾಪತ್ತೆಯಾಗಿದೆ.
    ಪೇಡಾ ಮಾಸ್ಟರ್‌ಗೆ ನಾವೇನೂ ಮಾಡಿಲ್ಲ. ದಯವಿಟ್ಟು ನಮ್ಮನ್ನು ಬಿಟ್ಟುಬಿಡಿ.

    ಪ್ರತ್ಯುತ್ತರಅಳಿಸಿ
  5. ಸುಶ್ರುತ ಅವರೆ,

    ನೀವು ಕೊಡಲು ಹೋದ ಪೊಲೀಸರ ಮೆದುಳು ಮೊದಲೇ ನಿಷ್ಕ್ರಿಯ ಮಾಡಿಬಿಟ್ಟಿದ್ದೇವೆ.

    ಮತ್ತೆ.... ನಿಮ್ಮ ಮೆದುಳಿನ ಬಗ್ಗೆ ಹೇಳುವುದಾದರೆ, ನೀವು ಮೌನವಾಗಿ ಗಾಳ ಹಾಕುತ್ತಲೇ ಅಲ್ಲಲ್ಲಿ ಸಿಗಬಹುದಾದ ಮೀನುಗಳಿಂದ ಪತ್ತೆ ಮಾಡಿಕೊಳ್ಳಬಹುದಾಗಿದೆ. ;)

    ಪ್ರತ್ಯುತ್ತರಅಳಿಸಿ
  6. ಶ್ರೀತ್ರೀ ಅವರೆ,

    ತಿಮಿಂಗಿಲಗಳಿಗೆ ನಮ್ಮದೇ ಮೆದುಳು ಹೋಗಿರುವುದರಿಂದ ಅವುಗಳು ಕ್ಷಮೆ ಕೇಳುವುದಿಲ್ಲ, ಏನಿದ್ದರೂ ನಿರಾಕರಿಸಿಬಿಡುತ್ತವೆ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D