Wednesday, January 31, 2007

ಕಾಂguess ಸತ್ಯಾಗ್ರಹದ ವಿರುದ್ಧ ಬಿಜೆಪಿ ಸತ್ಯಾಗ್ರಹ !

(ಬೊಗಳೂರು ಸತ್ಯಾಗ್ರಹದಲ್ಲೂ ರಾಜಕೀಯ ಬ್ಯುರೋದಿಂದ)
ಬೊಗಳೂರು, ಜ.31- ಗಾಂಧೀಜಿ ಪ್ರಣೀತ ಸತ್ಯಾಗ್ರಹದ ಶತಮಾನೋತ್ಸವವನ್ನು ಪಕ್ಷಕ್ಕೆ ಸೀಮಿತಗೊಳಿಸಿ ಆಚರಿಸಿದೆ ಎಂದು ಸರ್ವತ್ರ ಶ್ಲಾಘನೆಗೆ ಕಾರಣವಾಗಿರುವ ಕಾಂguess, ತನ್ನ ನಿಲುವನ್ನು ಸಮರ್ಥಿಸಿಕೊಂಡಿದೆ.

ತಮ್ಮ ಪಕ್ಷವನ್ನು ಗಾಂಧೀಜಿ ಅವರೇ ಕಟ್ಟಿದ್ದು, ಈಗ ಕೂಡ "ಗಾಂಧೀಜಿ" ಅವರೇ ಪಕ್ಷಾಧ್ಯಕ್ಷೆಯಾಗಿ ಮುನ್ನಡೆಸುತ್ತಿದ್ದಾರೆ. ಹಾಗಾಗಿ ಸತ್ಯಾಗ್ರಹದ ಪೂರ್ಣ ಕ್ರೆಡಿಟ್ ತಮಗೇ ಸಲ್ಲಬೇಕು ಎಂದು ಕಾಂguess ವಕ್ತಾರರಾದ ಶಣಿ ಮಂಕರ್ ಅಯ್ಯೋರು ತಿಳಿಸಿದ್ದಾರೆ.

ಹಿಂದೆ ಬ್ರಿಟಿಷರೇ ನಮ್ಮ ದೇಶವನ್ನು ಕೊಳ್ಳೆ ಹೊಡೆಯುತ್ತಿದ್ದರು. ನಮ್ಮ ಪಕ್ಷದವರು ಸತ್ಯಾಗ್ರಹ ನಡೆಸಿದ ಪರಿಣಾಮವಾಗಿ ಏನನ್ನು ಬೇಕಾದರೂ ನಾವು ನಾವೇ ತಿನ್ನಬಹುದಾದ ಸ್ವಾತಂತ್ರ್ಯ ಇಡೀ ದೇಶಕ್ಕೆ ಸಿಕ್ಕಿದೆ. ನೀವು ಈ ಸ್ವಾತಂತ್ರ್ಯವನ್ನು ತೆಗೆದುಕೊಂಡು ಸುಮ್ಮನಿರಿ. ಸತ್ಯವನ್ನು ಆಗ್ರಹಿಸುವುದರಲ್ಲೇಕೆ ಪಾಲು ಕೇಳುತ್ತೀರಿ ಎಂದು ಅವರು ವಿರೋಧ ಪಕ್ಷಗಳಿಗೆ ಸವಾಲು ಹಾಕಿದ್ದಾರೆ.

ಮಹಾತ್ಮ ಗಾಂಧೀಜಿ ಅವರು ಇಹಲೋಕದಿಂದ ಪರಲೋಕಕ್ಕೆ ಹೋಗುವ ಮುನ್ನ ಕಾಂಗ್ರೆಸ್ ಪಕ್ಷವನ್ನು ವಿಸರ್ಜಿಸಬೇಕು ಎಂದು ಆದೇಶ ಮಾಡಿದ್ದರು. ಆದರೆ ಗಾಂಧೀಜಿ ನೆನಪು ಹಸಿರಾಗಿರುವಂತೆ ಮಾಡಲು ನಾವು ಅದನ್ನು ಉಳಿಸಿಕೊಂಡಿದ್ದೇವೆ. ಪಕ್ಷದ ಈ ಹಿಂದಿನ ಅಧ್ಯಕ್ಷರಿಗೆಲ್ಲಾ ಗಾಂಧಿ ಉಪ-ನಾಮ "ಹಾಕಿ"ದ್ದೇವೆ. ಗಾಂಧೀಜಿ ನೆನಪು ಅಚ್ಚಳಿಯದಂತೆ ಮಾಡುತ್ತಿದ್ದೇವೆ ಎಂದು ಶಣಿ ಮಂಕರ್ ಸ್ಪಷ್ಟಪಡಿಸಿದ್ದಾರೆ.

ಆದರೆ, ಗಾಂಧೀಜಿ ಈಗ ಇದ್ದಿದ್ದರೆ ಪಕ್ಷದ ವಿರುದ್ಧ ಸತ್ಯಾಗ್ರಹ ಮಾಡುತ್ತಿದ್ದರು ಎಂಬ ವಿಷಯವನ್ನು ಮಾತ್ರ ಅವರು ಹೇಳದಿದ್ದರೂ ನಮ್ಮ ವದರಿಗಾರರು ಬರೆದುಕೊಂಡಿದ್ದು, ಅದನ್ನು ಪ್ರಕಟಿಸದಿರಲು ನಮ್ಮ ಬ್ಯುರೋವನ್ನು ಕೋರಿದ್ದಾರೆ.

ಗಾಂಧಿ ಹೆಸರಲ್ಲೇ ನಾವು ಓಟು ಕೇಳುವ ಮೂಲಕ ಜನತೆಯಲ್ಲೂ ಅವರ ಹೆಸರು ಚಿರಸ್ಥಾಯಿಯಾಗಿರುವಂತೆ ನೋಡಿಕೊಂಡಿಲ್ಲವೇ? ವಿರೋಧ ಪಕ್ಷಗಳು ಎಂದಾದರೂ ಈ ರೀತಿ ಮಾಡಿವೆಯೇ ಎಂದು ಪ್ರಶ್ನಿಸಿರುವ ಅವರು, ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು ಬೇರೆ ಪಕ್ಷಗಳಿಗೆ ಸೇರಿದರೆ ಅದು ನಮ್ಮ ತಪ್ಪಲ್ಲ. ನಮ್ಮ ಪಕ್ಷಕ್ಕೇ ಬನ್ನಿ. ನೀವು ಕೂಡ ಸತ್ಯಾಗ್ರಹದ ಆಚರಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬಹುದು ಎಂದು ಹೇಳಿದ್ದಾರೆ.

ಈ ಮಧ್ಯೆ, ಸತ್ಯಾಗ್ರಹದ ಶತಮಾನೋತ್ಸವವನ್ನು ಪಕ್ಷಾಗ್ರಹದ ಶತಮಾನೋತ್ಸವವಾಗಿ ಆಚರಿಸಿದ ಕಾಂguessನಿಂದ ನ್ಯಾಯ ಬಯಸಿ ಬಿಜೆಪಿಯು ಸತ್ಯಾಗ್ರಹ ನಡೆಸಲಿದೆ ಎಂದು ತಿಳಿದುಬಂದಿದೆ. ಸತ್ಯಾಗ್ರಹವನ್ನು ವಿರೋಧಿಸಿದ್ದ Commuನಿಷ್ಠರನ್ನು ಕಾಂguess, ಆಹ್ವಾನಿಸಿದೆ, ಆದರೆ ಕಮ್ಯು-nullಗಳು ಎಂದು ನಮ್ಮನ್ನು ಹೊಗಳುತ್ತಿರುವವರು ಎರಡಕ್ಕೂ ಕನಿಷ್ಠ ಸಾಮಾನ್ಯ ಅಪವರ್ತನ ಆಗಿರುವ "commu" ಎಂಬ ಶಬ್ದಕ್ಕೆ ಬೆಲೆಯನ್ನೇ ನೀಡಿಲ್ಲ ಎಂದು ಬಿಜೆಪಿ ವಕ್ತಾರ ನಂಕಯ್ಯ ವೇಯ್ಡು ಆಕ್ಷೇಪಿಸಿದ್ದಾರೆ.

ಇದಲ್ಲದೆ, ಕಾಂguess ಈಗ ಕಾಂಗ್ರೆಸ್ ಆಗಿ ಉಳಿದಿಲ್ಲ, ಮೀಸಲಾತಿ, ವಿಶೇಷ ಸವಲತ್ತುಗಳನ್ನು ಒದಗಿಸುವ ಕುರಿತು ಮಾತನಾಡುತ್ತಾ ಈಗ ಅದು ವಿಭಜನಪೂರ್ವ ಭಾರತದ ಮುಸ್ಲಿಂ ಲೀಗ್‌ನಂತಾಗಿಬಿಟ್ಟಿದೆ, ವಿಭಜನಪೂರ್ವ ಭಾರತದ ಕಾಂಗ್ರೆಸ್ ಸಿದ್ಧಾಂತಗಳನ್ನು ಬಿಜೆಪಿ ತನ್ನ ಜೇಬಿನೊಳಗೆ ಹಾಕಿಕೊಂಡಿರುವುದರಿಂದ ನಾವು ಕೂಡ ಸತ್ಯಾಗ್ರಹ ಮಾಡಲು ಅರ್ಹರು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Tuesday, January 30, 2007

ಬೆತ್ತಲೆ ಪ್ರತಿಭಟನೆಯಲ್ಲ, Dog-Walk ಅಭ್ಯಾಸ !

(ಬೊಗಳೂರು ಫ್ಯಾಶನ್ ಬ್ಯುರೋದಿಂದ)
ಬೊಗಳೂರು, ಜ.30- ಶಾಲಾ ಮಕ್ಕಳನ್ನು ಬೆತ್ತಲೆಗೊಳಿಸಲಾಗಿದೆ ಎಂಬ ಸುದ್ದಿ ಕೇಳಿ ಬೊಗಳೆ ರಗಳೆ ಬ್ಯುರೋ ಭೋಪಾಲಕ್ಕೆ ತೆರಳಿ ವರದಿಯ ಅನೈಜತೆಯೇನು ಎಂಬುದನ್ನು ಪರೀಕ್ಷಿಸಿ ಓದುಗರಿಗೆ ಅಸತ್ಯಾಂಶ ತಿಳಿಯಪಡಿಸಲು ನಿರ್ಧರಿಸಿತು.

ಈ ಪ್ರಕಾರವಾಗಿ ಭೋಪಾಲದ ನರ್ಮದಾ ಶಾಲೆಗೆ ಹೋದ ನಮ್ಮ ಒದರಿಗಾರ ಪ್ರಮುಖರಾದ ಅಸತ್ಯಾನ್ವೇಷಿಯು, ಅಲ್ಲಿ ತಮ್ಮ ಪ್ರಾಧ್ಯಾಪಕರ ವಿರುದ್ದ ಕ್ರಮ ತೆಗೆದುಕೊಳ್ಳಬೇಕು ಎಂದು ಅರೆಬೆತ್ತಲೆಯಾಗಿಯೇ ಶಾಲೆಗೆ ಬಂದು ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳನ್ನು ಮಾತನಾಡಿಸಿರುವುದಾಗಿ ವರದಿ ಮಾಡಿದ್ದಾನೆ. ಇದರ ಸತ್ಯಾಸತ್ಯತೆಯನ್ನು ನಂತರ ಪರಿಶೀಲಿಸಲಾಗುತ್ತದೆ.

ಪ್ರತಿಭಟನಾಕಾರ ಹುಡುಗರಲ್ಲಿ ಕೇವಲ ಒಳಚಡ್ಡಿಯಲ್ಲಿ ನಿಂತಿದ್ದ ವಿದ್ಯಾರ್ಥಿಯೊಬ್ಬನನ್ನು ಪಕ್ಕಕ್ಕೆ ಕರೆದುಕೊಂಡು ಹೋಗಿ ಇಂಟರ್ವ್ಯೂವಿಸಲಾಯಿತು. ಆತ ಈ ಪ್ರಕರಣದ ಹಿಂದಿನ ವಿವರವನ್ನು ಸಮಗ್ರವಾಗಿ ವಿವರಿಸಿದ್ದಾನೆ.

ಅದೆಂದರೆ, ನಮ್ಮ ಪ್ರಾಧ್ಯಾಪಕರೇನೂ ಕೆಟ್ಟವರಲ್ಲ. ನಾವು ಅವರ ವಿರುದ್ಧ ಪ್ರತಿಭಟನೆ ನಡೆಸುತ್ತಿಲ್ಲ. ಹಾಲಿ ನಡೆದಿದ್ದೇನೆಂದರೆ, ಇಂದಿನ ಮಕ್ಕಳೇ ಮುಂದಿನ ಜನಾಂಗ ಆಗಿರುವಾಗ, ಈಗಾಗಲೇ ಬಿಚ್ಚೋಲೆ ಗೌರಮ್ಮರು ದೇಶೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡುತ್ತಿದ್ದಾರೆ. ಮುಂದೊಂದು ದಿನ ಎಲ್ಲರಿಗೂ ಕೂಡ ಅರೆಬರೆ ಬಟ್ಟೆ ಅಥವಾ ಇಲ್ಲದ ಬಟ್ಟೆಯೇ ಫ್ಯಾಶನ್ ಆಗಬಹುದು. ಹಾಗಾಗಿ ಈ ಪ್ರಾಧ್ಯಾಪಕರು ನಮ್ಮ ಮೈಮೇಲಿದ್ದ ಬಟ್ಟೆಯನ್ನೂ ಕಳಚಿ, ಈ ಕುರಿತು ನಮ್ಮಲ್ಲಿ ಜಾಗೃತಿ ಮೂಡಿಸುವಂತೆ ಮತ್ತು ಆಧುನಿಕ ಸಂಸ್ಕೃತಿಗೆ ಒಗ್ಗುವಂತೆ Instruct ಮಾಡುತ್ತಿದ್ದರು ಎಂದು ಆ ಹುಡುಗ ವಿವರಿಸಿದ್ದಾನೆ.

ಹಾಗಿದ್ದರೆ ಈ ಪ್ರತಿಭಟನೆಯ ಮುಖವಾಡವೇಕೆ ಎಂದು ಪ್ರಶ್ನಿಸಿದಾಗ, ಅದೆಲ್ಲಾ ಸುಮ್ಮನೆ ಸ್ವಾಮೀ....ಫ್ಯಾಶನ್ ಪ್ರದರ್ಶನದಲ್ಲಿ ತರುಣಿಯರು ಅಷ್ಟೊಂದು ಜನರ ಮಧ್ಯೆ Cat walk ಮಾಡುತ್ತಾರೆ, ನಮಗೂ ಕೂಡ, ಅಷ್ಟೊಂದು ಜನರ ಮಧ್ಯೆ, ಬಹಿರಂಗವಾಗಿ ಆ ರೀತಿ ಮಾಡಲು ಮನೋಧೈರ್ಯ ಬರಬೇಕು. ಅದಕ್ಕಾಗಿ ಈಗಿಂದಲೇ ಪ್ರಾಕ್ಟೀಸ್ ಶುರು ಮಾಡಿದ್ದೇವೆ ಎಂದು ತಿಳಿಸಿದ ಆತ, ನಾವು ಹುಡುಗರು ಆದ ಕಾರಣ Dog walk ಪ್ರಯತ್ನಿಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾನೆ.

ಈ ನಡುವೆ, ಹುಡುಗರಿಗೆ ಬಟ್ಟೆ ಹಾಕಿಸುವ (ತೊಡಿಸುವ) ಯತ್ನಗಳು ಭರದಿಂದ ಸಾಗುತ್ತಿದೆ ಎಂದು ತಿಳಿದುಬಂದಿದೆ.

Monday, January 29, 2007

ಹೆಗ್ಗಳಿಕೆಗೆ ಕಳಂಕ ಯತ್ನ : ಲಂಚಾವತಾರಿಗಳ ಆಕ್ರೋಶ

(ಬೊಗಳೂರು ಲಂಚಾವತಾರ ಬ್ಯುರೋದಿಂದ)
ಬೊಗಳೂರು, ಜ.29- ದೇಶದ ಅತ್ಯಂತ ಭ್ರಷ್ಟ ರಾಜ್ಯಗಳಲ್ಲೊಂದು ಎಂಬ ಹೆಗ್ಗಳಿಕೆಯನ್ನು ನಿವಾರಿಸಲು ಹುಟ್ಟಿಕೊಂಡಿರುವ ಸಂಘಟನೆ ವಿರುದ್ಧ ರಾಜ್ಯಾದ್ಯಂತ ಅಧಿಕಾರಿ ವರ್ಗವು ಸಿಡಿದೆದ್ದಿರುವುದಾಗಿ ವರದಿಯಾಗಿದೆ.

ದೇಶಾದ್ಯಂತ ಭ್ರಷ್ಟಾಚಾರವನ್ನು ಬೆಳೆಸಲು ಮತ್ತು ಅದನ್ನು ಸಂರಕ್ಷಿಸಲು ಏನೇನೆಲ್ಲಾ ಕಸರತ್ತು ಮಾಡುತ್ತಿರುವಾಗ ಈ ಪುಟಗೋಸಿ ಸಂಘಟನೆಗಳೆಲ್ಲಾ ತಲೆ ಎತ್ತಿ ಭ್ರಷ್ಟಾಚಾರ ನಿರ್ಮೂಲನೆ ಮಾಡುವುದಾಗಿ ಮತ್ತು ನೊಂದು ಬೆಂದ ಬಡ ಪ್ರಾಣಿಗಳಿಗೆ ನೆರವಾಗುವುದು ಯಾವ ನ್ಯಾಯ ಎಂದು ಅಖಿಲ ಭಾರತ ಭ್ರಷ್ಟಾಚಾರ ನಿಷೇಧ ವಿರೋಧಿ ಸಂಘಟನೆ ಕೂಗಾಡಿದೆ.

ಒಂದು ಕಡೆಯಿಂದ ಲೋಕಾಯುಕ್ತರನ್ನು ಛೂಬಿಟ್ಟು ನಮಗೆ ನೆಲೆ ಇಲ್ಲದಂತೆ ಮಾಡುವ ಯತ್ನಗಳು ನಡೆಯುತ್ತಿವೆ. ಮತ್ತೊಂದು ಕಡೆಯಿಂದ ಭ್ರಷ್ಟಾಚಾರದ ಕುರಿತು ಜನರ ತಲೆಯಲ್ಲಿ ಇಲ್ಲ ಸಲ್ಲದ ವಿಷಯ ತುಂಬಲಾಗುತ್ತಿದೆ. ಇದಕ್ಕೆ 'ಜನಜಾಗೃತಿ' ಎಂಬ ಪೊಳ್ಳು ಹೆಸರು ನೀಡಲಾಗುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ನಾವು ಬದುಕುವುದಾದರೂ ಹೇಗೆ ಎಂದು ಈ ಅಧಿಕಾರಿವರ್ಗ ಪ್ರಶ್ನಿಸಿದೆ.

ಭ್ರಷ್ಟಾಚಾರಿ ಎಂಬ ಪೊಲೀಸರಿಂದ, ತನಿಖಾ ಮಂಡಳಿಗಳಿಂದ, ಲೋಕಾಯುಕ್ತರಿಂದ ತುಳಿತಕ್ಕೊಳಗಾದ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಲು ನಾವು ಶ್ರಮ ವಹಿಸುತ್ತಿರುವಾಗ ಇಂಥ ವೇದಿಕೆಗಳು ತಲೆ ಎತ್ತಿ ನಾವು ತಲೆ ಎತ್ತದಂತೆ ಮಾಡುತ್ತಿವೆ ಎಂದು ಮುಖ್ಯಮಂತ್ರಿಗೆ ದೂರು ಸಲ್ಲಿಸಲು ನಿರ್ಧರಿಸಿರುವ ಸಂಘಟನೆ ಪದಾಧಿಕಾರಿ ಭ್ರಷ್ಟ ಕುಮಾರ್, ದೇಶಾದ್ಯಂತ ಲಂಚ ಆಂದೋಲನ ಆರಂಭಿಸುವುದಾಗಿ ಎಚ್ಚರಿಸಿದ್ದಾರೆ.

Saturday, January 27, 2007

ಮಲ್ಲಿಕಾ ಮೇಲೆ ಬಾರ್‌ಬಾರಿಕ್ ಕೇಸ್

(ಬೊಗಳೂರು ಬಾರ್ ಬಾರ್ ಬ್ಯುರೋದಿಂದ)
ಬೊಗಳೂರು, ಜ.27- ಇತ್ತೀಚೆಗೆ ನ್ಯಾಯವಾದಿಗಳೇ ಕಾನೂನನ್ನು ಕೈಗೆತ್ತಿಕೊಳ್ಳುತ್ತಿರುವ ಪ್ರಕರಣಗಳು ಅಲ್ಲಲ್ಲಿ ವರದಿಯಾಗುತ್ತಿರುವಂತೆಯೇ, ಅವರು ಕಾನೂನು ರಕ್ಷಕರಾಗಿಯೂ ಕಾರ್ಯ ನಿರ್ವಹಿಸುತ್ತಿರುವ ಪ್ರಕರಣವೂ ವರದಿಯಾಗುತ್ತಿದೆ.

ಬಾರ್ ಡ್ಯಾನ್ಸರ್‌ಗಳಂತೆ ನರ್ತನ ಮಾಡುತ್ತಾ ತಮ್ಮದೇ ಆದ ಅಭಿಮಾನಿ ವಲಯವನ್ನು ಸೃಷ್ಟಿಸಿಕೊಂಡಿರುವ ಬಿಚ್ಚೋಲೆ ಮಲ್ಲಮ್ಮನ ವಿರುದ್ಧ ವೇಶ್ಯಾವಾಟಿಕೆಯ ಕೇಸು (ಬಿಯರ್ ಕೇಸ್ ಅಲ್ಲ ಎಂಬುದುಖಚಿತವಾಗಿದೆ) ಹಾಕಿರುವ ಬಾರ್ ಅಸೋಸಿಯೇಶನ್ ಅಧ್ಯಕ್ಷರೊಬ್ಬರು, ತಾವು ಕಾನೂನು ರಕ್ಷಣೆಯ ಸಾಮಾಜಿಕ ಕಳಕಳಿ ಹೊಂದಿರುವುದಾಗಿ ಸಾಬೀತುಪಡಿಸಿದ್ದಾರೆ.

ಆದರೆ ಅವರು ನ್ಯಾಯಾಲಯದಲ್ಲಿ ಹಾಜರುಪಡಿಸಿದ ಭಾವಚಿತ್ರಗಳು, ಆಕೆಯ ಮೇಲೆ ಮತ್ತೊಂದು ಕೇಸು ಹಾಕಲು ವೇದಿಕೆ ಹಾಕಿಕೊಟ್ಟಿದೆ. ಆಕೆಯ ವಿರುದ್ಧ ಪುರುಷರ ಮೇಲೆ ಅತ್ಯಾಚಾರ ಯತ್ನ ಕೇಸು ದಾಖಲಿಸುವುದಾಗಿ ಪಕ್ಕದಲ್ಲೇ ಇದ್ದ ಬಾರ್‌ನ ಮುಖ್ಯಸ್ಥರೊಬ್ಬರು ಸಾರಿದ್ದಾರೆ.

ಈ ಮಧ್ಯೆ ಮ್ಯಾಕ್ಸಿಮ್ ಪತ್ರಿಕೆಯ ಮುಖಪುಟದಲ್ಲಿ ಮ್ಯಾಕ್ಸಿಮಮ್ ಆಗಿ ತೋರಿಸಲು ಪ್ರಯತ್ನಿಸಿದಳಾದರೂ, ಸಂಪಾದಕರು ಕತ್ತರಿ ಪ್ರಯೋಗ ಮಾಡಿರುವ ಮೂಲಕ ಅದು ಕೇವಲ ಮಿನಿಮಮ್ ಆಗಿತ್ತು ಎಂದು ತಿಳಿದುಬಂದಿದೆ.

ಒಟ್ಟಿನಲ್ಲಿ ಸ್ಟಾರ್‌ಗಳ ವಿರುದ್ಧ ಕೇಸು ದಾಖಲಿಸಿದಲ್ಲಿ ತಾವೂ ಅಂತಾರಾಷ್ಟ್ರೀಯ ಸ್ಟಾರ್ ಆಗಬಹುದು ಎಂಬ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಬೊಗಳೆ ರಗಳೆ ಬ್ಯುರೋ ಕೂಡ ಯಾರ ಮೇಲೆ ಯಾವ ಕೇಸು ಹಾಕಬಹುದು ಎಂದು ಹೊಂಚು ಹಾಕುತ್ತಿರುವುದಾಗಿ ವರದಿಯಾಗಿದೆ.

Thursday, January 25, 2007

ಆಂಟಿ-ಉಪದ್ರವ ಆಯುಧ (ಆಉಆ) ಸಂಶೋಧನೆ

(ಬೊಗಳೂರು some-ಶೋಧನೆ ಬ್ಯುರೋದಿಂದ)
ಬೊಗಳೂರು, ಜ.25- ಉಪಗ್ರಹಗಳನ್ನು ಕೊಲ್ಲುವ ಆಯುಧವೊಂದನ್ನು ಪತ್ತೆ ಹಚ್ಚಿರುವುದಾಗಿ ಚೀನಾ ಕೊನೆಗೂ ಒಪ್ಪಿಕೊಂಡಿರುವುದು ಇಡೀ ವಿಶ್ವದಲ್ಲಿ ಹೊಸ ಸಂಚಲನ ಮೂಡಿಸಿದ್ದು, ಕೆಲವರು ಹರ್ಷಚಿತ್ತರಾಗಿದ್ದರೆ, ಮತ್ತೆ ಕೆಲವರು ರೋಷಾಕುಲರಾಗಿದ್ದಾರೆ.

ಚೀನಾದ ಈ ಆಯುಧವು ಹೊಸದಾದ ಆಯುಧ ಸಂಶೋಧನೆಗೆ ಹೇತುವಾಗಿದೆ. ಅದುವೇ ಆಂಟಿ-ಉಪದ್ರವ ಆಯುಧ.

ಹತಾಶ ಮತ್ತು ಪೀಡಿತ ಸಂಶೋಧಕರು ಕಂಡುಹುಡುಕಿರುವ ಆಂಟಿ-ಉಪದ್ರವ (ನಿವಾರಣೆ) ಆಯುಧ (ಆಉಆ)ಕ್ಕೆ ಈಗಾಗಲೇ ಭಾರತದಲ್ಲಿ ಭರ್ಜರಿ ಮಾರುಕಟ್ಟೆ ಸೃಷ್ಟಿಯಾಗಿದ್ದು, ಮೇಡ್ ಇನ್ ಚೀನಾ ಲೇಬಲ್ ಇರುವ ಈ ಉಪಕರಣ ಯಾವಾಗ ಭಾರತಕ್ಕೆ ಕಾಲಿಡುತ್ತದೆ ಎಂದು ಕುಕ್ಕುರುಗಾಲಿನಲ್ಲಿ ಕೂತು ಕಾಯುತ್ತಿದ್ದಾರೆ.

ಪಕ್ಕದ ಮನೆಯಲ್ಲಿದ್ದುಕೊಂಡು ನಮ್ಮ ಮನೆ ವಿಷಯಗಳಿಗೆ ಮೂಗು ತೂರಿಸುತ್ತಾ ಧರ್ಮಕ್ಷೇತ್ರವಾಗಿರುವ ಮನೆಯನ್ನು ಯುದ್ಧಕ್ಷೇತ್ರವಾಗಿಸುವ ಮಾದರಿಯ ಉಪದ್ರವಗಳನ್ನು ನೀಡುತ್ತಿರುವವರನ್ನು ಹದ್ದುಬಸ್ತಿನಲ್ಲಿರಿಸಲು ಈ ಉಪಕರಣ ಸೂಕ್ತ ಪ್ರಯೋಜನಕ್ಕೆ ಬರಲಿದೆ ಎಂದು ಬೊಗಳೆ ರಗಳೆ ಬ್ಯುರೋ ಜಾಹೀರಾತು ಪ್ರಕಟಿಸಲು ನಿರ್ಧಸಿರಿಸಿರುವುದು ಚೀನಾಕ್ಕೆ ಹರ್ಷ ತಂದಿದೆ ಎಂದು ಚೀನಾದ ಅಧಿಕಾರಿ ಚಿನ್ ಮಿನ್ ಕುನ್ ಕೈಂಯ್ಯ (ಅಕ್ಷರಗಳನ್ನು ಬರೆಯುವುದು ಇಲ್ಲಿ ಸರಿಯಾಗುತ್ತಿಲ್ಲವಾದುದರಿಂದ ಮೈಕ್ರೋಸಾಫ್ಟ್‌ನ ಬಿಲ್ ಗೇಟ್ಸ್‌ಗೆ ಕೈಯಲ್ಲಿ ಪತ್ರ ಬರೆದು ರವಾನಿಸಲಾಗಿದೆ) ಎಂಬವರು ಹೇಳಿದ್ದಾರೆ.

ಇತ್ತೀಚೆಗೆ ನಗರ ಪ್ರದೇಶಗಳಲ್ಲಿ ಆಧುನೀಕರಣದ ಪ್ರಭಾವಕ್ಕೆ ಸಿಲುಕಿಕೊಂಡಿರುವ ಆಂಟಿ-ಉಪದ್ರವಗಳು ಜಾಸ್ತಿಯಾಗುತ್ತಿರುವುದರಿಂದ ಮನೆ ಮನೆಗಳಲ್ಲಿ "ಇಲ್ಲಿ ಆಂಟಿ-ಉಪದ್ರವ ಆಯುಧವಿದೆ, ಎಚ್ಚರಿಕೆ" ಎಂಬ ಬೋರ್ಡ್‌ಗಳನ್ನು ತೂಗುಹಾಕಲಾಗುತ್ತಿದೆ ಎಂಬುದನ್ನು ಪತ್ತೆ ಹಚ್ಚಿರುವ ಬ್ಯುರೋ ಒದರಿಗಾರರು, ಆ ಬೋರ್ಡನ್ನು ಕದಿಯುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ ಎಂಬುದನ್ನು ಪತ್ತೆ ಹಚ್ಚಿದ್ದಾರೆ.

ಇದರ ಹಿಂದೆ ಉಪದ್ರವ ನೀಡುವವರ ಕೈವಾಡವಿದೆಯೇ ಅಥವಾ ಉಪದ್ರವ ಸಹಿಸಲಾರದೆ ಹೇಗಾದರೂ ಮಾಡಿ ತಮ್ಮ ಮನೆಗೂ ಈ ಬೋರ್ಡ್ ತಗುಲಿಸಬೇಕು ಎಂದುಕೊಂಡಿರುವ ಅವಿವಾಹಿತರ ಕೈವಾಡವಿದೆಯೇ ಎಂಬುದರ ಕುರಿತು ತನಿಖೆ ನಡೆಯುತ್ತಿದೆ.

Wednesday, January 24, 2007

ಶತಶತಕೋಟಿ ರಾಮಮಂದಿರ ಜಪ ಯಜ್ಞ

(ಬೊಗಳೂರು ಚುನಾವಣಾ ಬ್ಯುರೋದಿಂದ)
ಬೊಗಳೂರು, ಜ.24- ಆಧ್ಯಾತ್ಮಿಕ ರಾಜಕಾರಣದಲ್ಲಿ ಹೊಸ ಪ್ರಯೋಗವೊಂದು ಹಲವಾರು ವರ್ಷಗಳ ಹಿಂದೆ ಆರಂಭವಾಗಿದ್ದು, ಈ ಪ್ರಯೋಗಕ್ಕೆ ಶತಶತಕೋಟಿ ರಾಮಮಂದಿರ ಜಪ ಯಜ್ಞ ಎಂದು ಹೆಸರಿಸಲಾಗಿದೆ ಎಂಬುದನ್ನು ಪತ್ತೆ ಹಚ್ಚಲಾಗಿದೆ.

ಎಲ್ಲ ರಾಜಕಾರಣಿಗಳು ಕೂಡ ಅಯೋಧ್ಯೆಯಲ್ಲಿ ಈ ವರ್ಷವೇ ಮಂದಿರ ನಿರ್ಮಿಸುತ್ತೇವೆ ಎಂಬ ಹೇಳಿಕೆ ನೀಡಲು ಪ್ರತಿಜ್ಞೆ ಕೈಗೊಂಡಿದ್ದಾರೆ. ಹೀಗಾಗಿ, ಹೋದ ಹೋದಲ್ಲೆಲ್ಲಾ ಅವರು "ಈ ವರ್ಷವೇ ಮಂದಿರ ನಿರ್ಮಿಸುತ್ತೇವೆ" ಎಂಬ ಪರಮಧ್ಯೇಯ ಮಂತ್ರವನ್ನು ಜಪಿಸುತ್ತಾ ಇರುತ್ತಾರೆ ಎಂಬುದು ಬೊಗಳೆ ರಗಳೆ ಬ್ಯುರೋದ ಗಮನಕ್ಕೆ ಬಂದಿದೆ.

ಆದರೆ, ಚುನಾವಣೆಗಳು ಬಂದಾಗ ಈ ಜಪ ಯಜ್ಞದ ಸಂಖ್ಯೆಯು ಹಗರಣಭರಿತ ಶೇರು ಮಾರುಕಟ್ಟೆಯ ಸೂಚ್ಯಂಕದ ಮಾದರಿಯಲ್ಲಿ ರೊಂಯ್ಯನೆ ಮೇಲಕ್ಕೇರುತ್ತದೆ.

ಅದರಲ್ಲೂ ಉತ್ತರ ಪ್ರದೇಶದ ಚುನಾವಣೆಗಳು ಇನ್ನು ಕೆಲವೇ ದಿನಗಳಲ್ಲಿ ನಡೆಯಲಿರುವ ಹಿನ್ನೆಲೆಯಲ್ಲಿ ಅಲ್ಲಿನ ರಾಜಕಾರಣಿಗಳಿಂದ ಈ ಶತಕೋಟಿ ರಾಮಜಪ ಯಜ್ಞಕ್ಕೆ ಉತ್ತಮ ಕಾಣಿಕೆಗಳು ಬರುತ್ತಿವೆ ಎಂದು ನಮ್ಮ ಭಾಷೆಯಿಲ್ಲದ ಬಾತ್ಮೀದಾರರು ಆತುರಾತುರವಾಗಿ ವರದಿ ಮಾಡಿದ್ದು, ಬಳಿಕ ಜಪ ಯಜ್ಞದ ವರದಿ ಮಾಡಲು ಪಕ್ಕದೂರಿಗೆ ದೌಡಾಯಿಸಿದ್ದಾರೆ.

ಆದರೆ ಅರ್ಧ ಕುಂಭ ಮೇಳದಲ್ಲಿ ಮಾಡಿರುವ ಘೋಷಣೆಗೂ ಉತ್ತರ ಪ್ರದೇಶ ಚುನಾವಣೆಗೂ ಸಂಬಂಧವಿದೆಯೇ ಎಂಬುದನ್ನು ಶೋಧಿಸಬೇಕಾಗಿದ್ದು, ಈ ಬಗ್ಗೆ ಕಾದುನೋಡುವ ತೀರ್ಮಾನ ಮಾಡಲಾಗಿದೆ.

ಈ ನಡುವೆ, ಔರಂಗಜೇಬನ ಅವಸಾನ ಕಾಲದಲ್ಲಿ ಆರಂಭವಾದ ಈ ಕಾರ್ಯಕ್ರಮವು ಯಾವಾಗ ಪೂರ್ಣಗೊಳ್ಳುತ್ತಿದೆ ಎಂಬುದು ಕಾದುನೋಡಬೇಕಾದ ಅಂಶ.

Tuesday, January 23, 2007

ವಿಶ್ವ ಕನ್ನಡ ಸಮ್ಮೇಳನ ಉದ್ಘಾಟನೆಗೆ ವಿಶ್ವ ಸುಂದರಿ

(ಬೊಗಳೂರು ಆಹಾಸಾಹಿತ್ಯ ಬ್ಯುರೋದಿಂದ)
ಬೊಗಳೂರು, ಜ.23- ಬೆಳಗಾವಿಯಲ್ಲಿ ನಡೆಯಲಿರುವ ವಿಶ್ವ ಕನ್ನಡ ಸಮಾವೇಶಕ್ಕೆ ಗ್ಲ್ಯಾಮರಸ್-ಸ್ಪರ್ಷ ನೀಡಲು ಉದ್ದೇಶಿಸಿರುವ ಆಯೋಜಕ ಬಳಗದವರೊಬ್ಬರ ಸಲಹೆಗೆ ಬೊಗಳೆ ಬಳಗದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

ಇದುವರೆಗೆ ಕನ್ನಡಕ್ಕಾಗಿ, ಕನ್ನಡದ ಏಳಿಗೆಗಾಗಿ ಹೇಳಿಕೊಳ್ಳುವಂಥದ್ದೇನನ್ನು ಮಾಡದಿರುವ ಆಕೆಗೆ ಕನ್ನಡಕ್ಕಾಗಿ ಏನಾದರೂ ಮಾಡಲು ಈ ಸದವಕಾಶವನ್ನು ಒದಗಿಸಲು ನಿರ್ಧರಿಸಿರುವುದಾಗಿ ಬೊಗಳೆ ರಗಳೆ ಬ್ಯುರೋ ನಡೆಸಿದ ತನಿಖೆಯಿಂದ ಸಾಬೀತಾಗಿದೆ. ಕನ್ನಡದಾ ಸಮ್ಮೇಳನಕ್ಕೆ ಹೆಚ್ಚು ಜನರನ್ನು ಬರುವಂತೆ ಮಾಡುವುದೇ ಆಕೆ ಮಾಡುವ ಕನ್ನಡ ಸೇವೆಯಾಗಲಿದೆ ಎಂದು ಪತ್ತೆ ಹಚ್ಚಲಾಗಿದೆ.

ಕುವೆಂಪು ಪ್ರಣೀತ "ಸತ್ತಂತಿಹರನು ಬಡಿದೆಚ್ಚರಿಸು" ಎಂಬ ಕರೆಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ಈಗಾಗಲೇ ಹದಿರೆಯದವರ ಕುದಿ ಹೃದಯ ತಟ್ಟಿರುವ ಮತ್ತು ವಯಸ್ಕರ ಹೃದಯವನ್ನೂ ರೊಯ್ಯನೆ ಕುದಿಸಿಬಿಟ್ಟಿರುವ ಸುಂದರಿಯನ್ನೇ ಈ ಸಮ್ಮೇಳನದ ಪ್ರಧಾನ ಆಕರ್ಷಣೆಯಾಗಿಸಿ ಏಳಲಾಗದವರನ್ನೂ ಎಬ್ಬಿಸಿ ಸಮ್ಮೇಳನದತ್ತ ಧಾವಿಸಿಬರುವಂತೆ ಮಾಡುವ ಪ್ರಯತ್ನವಿದು ಎಂದು ತಿಳಿದುಬಂದಿದೆ.

ಆಕೆಯ ಕೈಯಲ್ಲಿ ವಿಶ್ವಕನ್ನಡ ಸಮ್ಮೇಳನ ಉದ್ಘಾಟಿಸಿದರೆ ಖಂಡಿತವಾಗಿಯೂ ಅದು ಶಿವಮೊಗ್ಗ ಸಮ್ಮೇಳನಕ್ಕಿಂತಲೂ ಹೆಚ್ಚು ವಿವಾದಾಸ್ಪದವಾಗಿ ಭರ್ಜರಿ ಪ್ರಚಾರ ಪಡೆಯಲಿದೆ ಎಂಬುದು ಆಯೋಜಕರ ವಾದವಾಗಿದೆ.

ಐಶ್ವರ್ಯಾ ರೈ ವಿಶ್ವ ಸುಂದರಿಯಾದ ಸಂದರ್ಭದಲ್ಲಿ ರೈ ಎಂಬುದನ್ನು ರಾಯ್ ಎಂದು ಕೆಲವು ಪತ್ರಿಕೆಗಳಲ್ಲಿ ಪ್ರಕಟವಾದಾಗ (ಬೊಗಳೆ ರಗಳೆ ಆಗ ಇರಲಿಲ್ಲ ಎಂದು ಬೆನ್ನು ತಟ್ಟಿಕೊಳ್ಳುತ್ತಿದ್ದೇವೆ) ಆಕೆ ಬಂಗಾಳಿಯೋ, ಕನ್ನಡಿಗಳೋ ಎಂಬುದು ಚರ್ಚೆಗೆ ಹೇತುವಾಗಿ ಕೊನೆಗೂ ಆಕೆಯ ಮೂಲವನ್ನು ಮಾಧ್ಯಮಗಳು ಕಷ್ಟಪಟ್ಟು ದಕ್ಷಿಣ ಕನ್ನಡ ಜಿಲ್ಲೆ ಎಂದು ಪತ್ತೆ ಹಚ್ಚಿಬಿಟ್ಟಿದ್ದವು. ಹಾಗಾಗಿ ಆಕೆ ಕನ್ನಡಿಗಳು ಎಂದು ತಿಳಿದ ತಕ್ಷಣವೇ ಕರ್ನಾಟಕ ಜನತೆ ಮತ್ತು ಈ ಸಮ್ಮೇಳನ ಆಯೋಜಕರು ಆಕೆಯನ್ನು ದೊಡ್ಡ ಕಾರ್ಯಕ್ರಮಕ್ಕೆ ಆಹ್ವಾನಿಸುವ ನಿಟ್ಟಿನಲ್ಲಿ ಒಂದು ಕಣ್ಣು ಅತ್ತಲೇ ಇರಿಸಿದ್ದರು ಎಂದು ತಿಳಿದುಬಂದಿದೆ. ಐಶ್ ಶೀಘ್ರವೇ ಬಚ್ಚನ್ ಕುಟುಂಬದ ಸುಂದರಿಯಾಗಹೊರಟಿರುವುದರಿಂದ, ವಿವಾಹವಾದ ಮೇಲೆ ಆಕೆಯ ಗ್ಲ್ಯಾಮರ್ ಕಡಿಮೆಯಾಗುತ್ತದೆ, ಅಭಿಮಾನಿಗಳ ಸಂಖ್ಯೆ ಕುಸಿಯುತ್ತದೆ, ಆಕೆ ತೆರೆಮರೆಗೆ ಸರಿಯುತ್ತಾರೆ ಎಂಬುದನ್ನು ಮನಗಂಡಿರುವ ಆಯೋಜಕ ಬಳಗದ ಸದಸ್ಯರು, ಇನ್ನು ಮುಂದೆ ಇಂಥ ಅವಕಾಶ ಸಿಗಲಾರದು ಎಂದು ತಿಳಿದು ಈ ಕ್ರಮ ಕೈಗೊಂಡಿದ್ದಾರೆ.

ವಾಸ್ತವವಾಗಿ ಆಕೆ ಹೇಗೂ "ವಿಶ್ವ"ಸುಂದರಿ. ಹಾಗಾಗಿ "ವಿಶ್ವ"ಕನ್ನಡ ಸಮ್ಮೇಳನದ ಅಧ್ಯಕ್ಷತೆ ವಹಿಸುವುದು ಆಕೆಗೇನೂ ಕಷ್ಟವಾಗಲಾರದು ಎಂದು ಕೆಲವು ಮಂಡೆಗಳು ಯೋಚಿಸಿದ್ದವು. ಆದರೆ ಸಾಹಿತಿಗಳು ಭರ್ಜರಿಯಾಗಿ ತೆಗಳುವರು ಎಂಬ ಕಾರಣಕ್ಕೆ ಈ ಪ್ರಸ್ತಾಪ ಕೈಬಿಡಲಾಗಿತ್ತು ಎಂದು ತನಿಖಾ ವರದಿಯನ್ನು ಒಪ್ಪಿಸಲಾಗಿದೆ.

ಇತ್ತೀಚೆಗೆ ಶಿವಮೊಗ್ಗದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಅಭಾಕವಿವಾದ ಸಮ್ಮೇಳನ ಸಮಾರಂಭವು ಚಂಪಾ ಸಮಾರಂಪ ಆಗಿ ಪರಿವರ್ತನೆಗೊಂಡಿತ್ತು. ಅದಕ್ಕಂತೂ ಬೊಗಳೆ ರಗಳೆ ಬ್ಯುರೋಗೆ ಆಹ್ವಾನವಿರಲಿಲ್ಲ ಎಂಬುದರ ಬಗ್ಗೆ ಓದುಗ ಬಳಗವು ಅತ್ಯಂತ ಹರ್ಷ ವ್ಯಕ್ತಪಡಿಸಿತ್ತು. ಇದೀಗ ವಿಶ್ವ ಕನ್ನಡ ಸಮ್ಮೇಳನಕ್ಕೆ ಬ್ಯುರೋಗೆ ಆಹ್ವಾನ ನೀಡದೆಯೇ ಅದರ ಅಧ್ಯಕ್ಷತೆಗೆ ಮತ್ತು ಉದ್ಘಾಟನೆಗೆ ಹೆಸರುಗಳನ್ನು ಪತ್ತೆ ಹಚ್ಚುವಂತೆ ಕೋರಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಅಧ್ಯಕ್ಷತೆಯ ಆಹ್ವಾನವನ್ನು ಬೊಗಳೆ ರಗಳೆ ಬ್ಯುರೋ ನಯವಾಗಿ ತಳ್ಳಿ ಹಾಕಿ, ಪ್ರಧಾನಿ ಪದವಿ ನಿರಾಕರಿಸಿದ ಸೋನಿಯಾ ಗಾಂಧಿಯಂತೆ ತ್ಯಾಗ, ಬಲಿದಾನ ಮುಂತಾದ ಗುಣಗಳನ್ನು ಮೆರೆದಿದೆ.

Monday, January 22, 2007

ಇದು ದಾಂಧಲೆ ಅಲ್ಲ, ಪ್ರಯೋಗಗಳ ಸರಮಾಲೆ!

(ಬೊಗಳೂರು ಕೋಮುವಾದಿ ಬ್ಯುರೋದಿಂದ)
ಬೊಗಳೂರು, ಜ.22- ರಾಜಧಾನಿ ಬೆಂಗಳೂರಿನ (ಬೊಗಳೂರಿನ ಅಲ್ಲ) ಏಳಿಗೆಗೆ ಶ್ರಮಿಸುತ್ತಿರುವ ದುಷ್ಕರ್ಮಿಗಳು ಶಿವಾಜಿನಗರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸುದ್ದಿಯೊಂದನ್ನು ಸ್ಫೋಟಿಸಲು ಯತ್ನ ನಡೆಸಿರುವುದು ಇಲ್ಲಿ ವರದಿಯಾಗಿದೆ.

ಬೆಂಗಳೂರು ಇತ್ತೀಚಿನ ದಿನಗಳಲ್ಲಿ ಯಾವುದೇ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡುತ್ತಿಲ್ಲ ಎಂಬುದನ್ನು ಮನಗಂಡ ಈ ದುಷ್ಕರ್ಮಿಗಳು, ಮನೆಗಳಿಗೆ, ಬಸ್ಸುಗಳಿಗೆ ಎಲ್ಲೆಂದರಲ್ಲಿ ಬೆಂಕಿ ಹಚ್ಚಿ ಬೆಂಗಳೂರು ಪ್ರ-ಜ್ವಲಿಸುವಂತೆ ಮಾಡಿರುವುದನ್ನು ಬೊಗಳೆ ರಗಳೆ ಬ್ಯುರೋ ಪತ್ತೆ ಹಚ್ಚಿದೆ.

ಇದಲ್ಲದೆ ಇಲ್ಲಿ ತಯಾರಿಕೆ ಮಾಡಲಾದ ಕತ್ತಿ, ಮಚ್ಚು, ರಾಡ್‌ಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಳ್ಳೆಯ ವಹಿವಾಟು ಕುದುರಿಸುವ ನಿಟ್ಟಿನಲ್ಲಿ, ಹಲವರಿಗೆ ಇರಿದು, ಈ "ಉತ್ಪನ್ನ"ಗಳ ಕಾರ್ಯ ಸಾಮರ್ಥ್ಯ ಪರೀಕ್ಷಿಸಲಾಗಿತ್ತು ಎಂದು ವ್ಯಾವಹಾರಿಕ ದುಷ್ಕರ್ಮಿಯೊಬ್ಬ ಬೊಗಳೆ ರಗಳೆ ಬ್ಯುರೋಗೆ ತಿಳಿಸಿದ್ದಾನೆ.

ಈ ಮಾರಕಾಯುಧಗಳ ಪ್ರಯೋಗ ಯಶಸ್ವಿಯಾಗಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮೇಡ್ ಇನ್ ಬೆಂಗಳೂರು ಮಚ್ಚು-ಲಾಂಗು-ಕಠಾರಿಗಳಿಗೆ ಉತ್ತಮ ಮಾರುಕಟ್ಟೆ ದೊರೆಯುವ ಭರವಸೆಯನ್ನು ಆತ ವ್ಯಕ್ತಪಡಿಸಿದ್ದಾನೆ.

ಮತ್ತೊಬ್ಬ ದುಷ್ಕರ್ಮಿಯನ್ನು ಸಂದರ್ಶಿಸಿದಾಗ, ತಾನು ದುಷ್ಕರ್ಮಿ ಅಲ್ಲ, ದುಷ್ಟ-ಕ್ರಿಮಿ ಎಂದು ಸ್ಪಷ್ಟಪಡಿಸಿದ ಆತ, ಇತ್ತೀಚಿನ ದಿನಗಳಲ್ಲಿ ಪೊಲೀಸರು ಎಷ್ಟು ಜಾಗೃತರಾಗಿದ್ದಾರೆ ಎಂಬುದನ್ನು ಪರೀಕ್ಷೆ ಮಾಡುವುದು ನಮ್ಮ ಉದ್ದೇಶ ಎಂದು ಸ್ಪಷ್ಟಪಡಿಸಿದ್ದಾನೆ.

ವಿರಾಟ್ ಹಿಂದೂ ಸಮಾವೇಶ ನಡೆಯುತ್ತಿರುವಾಗಲೇ ಇಂಥವನ್ನೆಲ್ಲಾ ಮಾಡಿದರೆ ಈ ಸಮಾವೇಶ ಆಯೋಜಕರ ಮೇಲೆ ಸುಲಭವಾಗಿ ಎಲ್ಲ ದೂಷಣೆಗಳನ್ನು ಜಾರಿಸಿಬಿಡಬಹುದು. ಮೆರವಣಿಗೆ ಸಂದರ್ಭದಲ್ಲಿ ಮನೆಯೊಳಗಿದ್ದವರು ಎಚ್ಚರವಾಗಿದ್ದಾರೆಯೇ ಎಂಬುದನ್ನು ಪರಿಶೀಲನೆ ಮಾಡಬೇಕಿತ್ತು ಮತ್ತು ಬೆಂಗಳೂರಿನ ರಸ್ತೆಗಳಲ್ಲಿ ಹೊಂಡವೆದ್ದು ಹೋಗಿ ದೊರೆತ ಕಲ್ಲುಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆಯೇ ಎಂಬುದನ್ನು ಪರೀಕ್ಷೆಗೊಳಪಡಿಸುವುದು ತಮ್ಮ ಉದ್ದೇಶ ಎಂದಾತ ಹೇಳಿದ್ದಾನೆ.

ಇನ್ನೊಂದೆಡೆ ಮನೆಯೊಳಗೆ ಅಡಗಿಕೊಂಡ ದುಷ್ಕರ್ಮಿಗಳನ್ನು ಹಿಡಿಯಲು ಪೊಲೀಸರು ಬಂದಾಗ ಮಹಿಳಾಮಣಿಗಳು ಅವರ ಮೇಲೆ ಮೆಣಸಿನಪುಡಿ ಸ್ಪ್ರೇ ಮಾಡಿ ಅದನ್ನೂ ಪರೀಕ್ಷೆಗೊಳಪಡಿಸಿದ್ದಾರೆ ಎಂದು ವರದಿಯಾಗಿದೆ.

ಒಟ್ಟಿನಲ್ಲಿ ಬೆಂಗಳೂರಲ್ಲಿ ನಡೆದದ್ದು ದಾಂಧಲೆಯಲ್ಲ, ಅದು ಹಲವು ಉತ್ಪನ್ನಗಳ ಪರೀಕ್ಷೆಗಳ ಸರಮಾಲೆ ಎಂಬುದನ್ನು ಬ್ಯುರೋ ಪತ್ತೆ ಹಚ್ಚಿದೆ.

Friday, January 19, 2007

ಸದ್ದಾಂಗಳ ಪತ್ತೆ : ಅಮೆರಿಕಕ್ಕೀಗ ತನ್ನ ಮೇಲೇ ಸಂದೇಹ!

(ಬೊಗಳೂರು ಅಪರಾವತಾರ ಬ್ಯುರೋದಿಂದ)
ಬೊಗಳೂರು, ಜ.19- ಸದ್ದಾಂ ಹುಸೇನ್‌ನನ್ನು ಮುದ್ದಾಂ ಆಗಿ ಗಲ್ಲಿಗೇರಿಸಿದ ಬಳಿಕ ವಿಶ್ವದ ದೊಡ್ಡಣ್ಣನಾಗಲು ಹೊರಟ ದೇಶದ ಮುಂದಿನ ಗುರಿ ಭಾರತ ಎಂದು ಗೊತ್ತಾಗಿದೆ.

ಈಗಾಗಲೇ ಗಲ್ಲಿಗೇರಿಸಲ್ಪಟ್ಟು ಸತ್ತು ಬದುಕಿದಂತಿರುವ ಸದ್ದಾಂನ ಹಲವಾರು ಅವತಾರಗಳು ಭಾರತದಲ್ಲಿ ಪತ್ತೆಯಾಗಿರುವುದೇ ಇದಕ್ಕೆ ಕಾರಣವಾಗಿದ್ದು, ತಾವು ಗಲ್ಲಿಗೇರಿಸಿರುವುದು ನಿಜವಾದ ಸದ್ದಾಂನನ್ನೇ ಎಂಬುದು ಸ್ವತಃ ಅಮೆರಿಕದ ಶಂಕೆಗೆ ಈಗ ಕಾರಣವಾಗಿದೆ!

ಉತ್ತರ ಭಾರತಕ್ಕೆ ಪ್ರವಾಸ ಮಾಡಿದ ಸಂದರ್ಭ ಅಲ್ಲಿ ನೂರಾರು ಸದ್ದಾಂ ಹುಸೇನ್‌ಗಳಿರುವುದನ್ನು ಇಲ್ಲಿ ಪತ್ತೆ ಹಚ್ಚಲಾಗಿದೆ. ಈ ಹಿನ್ನೆಲೆಯಲ್ಲಿ ವಿಶ್ವದ ದೊಡ್ಡಣ್ಣನ ಸಂತಾನಿಗರ ಕಣ್ಣು ಉತ್ತರ ಭಾರತದ ಮೇಲೆ ಬಿದ್ದಿದೆ.

1991ರಲ್ಲಿ ಇರಾಕ್ ಮೇಲೆ ಅಮೆರಿಕ ನಡೆಸಿದ ದಾಳಿ ಸಂದರ್ಭದಲ್ಲೂ ಸದ್ದಾಂ ಹುಸೇನ್‌ನ ಅದೆಷ್ಟೋ ತದ್ರೂಪಿಗಳು ಮುದ್ದಾಂ ಆಗಿ ಅಂದಿನ ಬುಷ್ ಎದುರು ಭುಸುಗುಟ್ಟಿದ್ದನ್ನು ಇಲ್ಲಿ ನೆನಪಿಸಬಹುದಾಗಿದೆ.

ಅಂತೆಯೇ ಕಳೆದ ವರ್ಷ ಮುದ್ದಾಂ ಬಂಧನವಾದ ಸಂದರ್ಭದಲ್ಲಿ ಕೂಡ ಈತ ನಿಜವಾದ ಸದ್ದಾಂ ಹೌದೇ ಅಲ್ಲವೇ ಎಂಬುದರ ಬಗ್ಗೆ ತೀವ್ರವಾಗಿ ತಲೆ ಕೆಡಿಸಿಕೊಂಡಿದ್ದ ಅಮೆರಿಕ, ಡಿಎನ್ಎ ಪರೀಕ್ಷೆಗೂ ಮುಂದಾಗಿದ್ದುದನ್ನು ನಮ್ಮ ಬ್ಯುರೋ ಬಹಿರಂಗಪಡಿಸಲು ಇಚ್ಛಿಸುತ್ತಿಲ್ಲ.

ಇದೀಗ, ಈಗಾಗಲೇ ಕನಿಷ್ಠ 2 ಕ್ರಿಕೆಟ್ ತಂಡ ಕಟ್ಟಬಲ್ಲಷ್ಟು ಸದ್ದಾಂಗಳನ್ನು ಹೊಂದಿರುವ ಬಿಹಾರದ ಗಯಾ ಜಿಲ್ಲೆಯ ಲಖನೌ ಹಳ್ಳಿಯಲ್ಲಿ ಶೀಘ್ರವೇ ಮತ್ತಷ್ಟು ಸದ್ದಾಂಗಳನ್ನು ಸೃಷ್ಟಿಸಿ ಪೂರ್ತಿ ಹಳ್ಳಿಯನ್ನು ಸದ್ದಾಂಮಯವಾಗಿಸುವ ಯತ್ನಗಳು ಭರದಿಂದ ಸಾಗಿದೆ.

Thursday, January 18, 2007

ತತ್ತರ ಪ್ರದೇಶ : ಮುಲಾಮು ಟ್ಯೂಬ್‌ಗೆ ಪಿನ್ ಚುಚ್ಚಿದ ಕಾಂ-guess!

(ಬೊಗಳೂರು ಅರಾಜಕ ಬ್ಯುರೋದಿಂದ)
ಬೊಗಳೂರು, ಜ.18- ಮಕ್ಕಳ ಮೂಳೆ ಮಾಂಸಗಳು ದೊರೆತು ತತ್ತರ ಪ್ರದೇಶವಾಗಿರುವ ಉತ್ತರ ಪ್ರದೇಶದಲ್ಲಿ, ಐದು ವರ್ಷಗಳ ಆಡಳಿತದ ಸವಿಯನ್ನು ಸಂಪೂರ್ಣವಾಗಿ ಸವಿದು, ತಿಂದು ತೇಗಿದ ಬಳಿಕ, ಶೀಘ್ರವೇ ಚುನಾವಣೆಗಳು ನಡೆಯಲಿರುವ ಹಿನ್ನೆಲೆಯಲ್ಲಿ ತಾವು ಮುಲಾಮು ಸಿಂಗ ಸರಕಾರಕ್ಕೆ ಬೆಂಬಲ ಹಿಂತೆಗೆದುಕೊಂಡಿರುವುದಾಗಿ ಸತ್ತವರ ಪ್ರದೇಶ ಕಾಂ-guess ಸಮಿತಿ ಸ್ಪಷ್ಟಪಡಿಸಿದೆ.

ಸದ್ಯಕ್ಕೆ ಮುಲಾಮು ಜತೆ ಗುರುತಿಸಿಕೊಂಡರೆ ಮತದಾರರು ತಮ್ಮ ಮೇಲೆ ಆಕ್ರೋಶಗೊಳ್ಳುತ್ತಾರೆ, ಈಗಾಗಲೇ ಮಕ್ಕಳ ತಲೆಬುರುಡೆಗಳು ಹಾಗೂ ಅಸ್ಥಿಪಂಜರಗಳು ಸಿಕ್ಕಿ ಮುಲಾಮು ಸರಕಾರಕ್ಕೆ ಮಸಣದ ದರ್ಶನವಾಗಿದೆ. ಇದು ಅಪಶಕುನವಾಗಿದ್ದು, ಇದರ ಕಳಂಕ ತಮಗೆ ತಟ್ಟಿದರೂ, ಅದನ್ನು ಇನ್ನೆರಡು ತಿಂಗಳೊಳಗೆ ಮತದಾರರ ಮನಸ್ಸಿನಿಂದ ಈ ಕಳಂಕವನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಈ ನಿರ್ಣಯ ಕೈಗೊಂಡಿರುವುದಾಗಿ ಸಮಿತಿ ಅಧ್ಯಕ್ಷ ಖಲ್ಮಾನ್ ಸುರ್ಷಿದ್ ಹೇಳಿದ್ದಾರೆ.

ಅಧಿಕಾರಾವಧಿ ಹೇಗೂ ಮುಗಿದಿದೆ. ಇನ್ನು ಸರಕಾರದಲ್ಲಿರುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದಿರುವ ಅವರು, ನಾವೇನೂ ಮುಲಾಮು ಜತೆಗಿನ ಸಂಬಂಧವನ್ನು ಪೂರ್ಣವಾಗಿ ಕಡಿದುಕೊಂಡಿಲ್ಲ. ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ಅದಕ್ಕೆ ಅನುಸಾರವಾಗಿ ನಮ್ಮ ನಿರ್ಧಾರ ಬದಲಿಸಲಾಗುತ್ತದೆ ಎಂದು ಕೂಡ ಅವರು ಸ್ಪಷ್ಟಪಡಿಸಿದ್ದಾರೆ.

ಮುಲಾಮು ಸರಕಾರ ಇಷ್ಟು ವರ್ಷ ಭ್ರಷ್ಟಾಚಾರ, ದುರಾಡಳಿತಗಳಲ್ಲಿ ನಿರತವಾಗಿತ್ತು. ಈ ವಿಷಯಗಳೆಲ್ಲಾ ಇದುವರೆಗೆ ಅಧಿಕಾರದಲ್ಲಿದ್ದ ನಮಗೆ ಹೇಗೆ ಗಮನಕ್ಕೆ ಬಂದಿಲ್ಲ ಎಂಬುದೇ ತಿಳಿಯುತ್ತಿಲ್ಲ. ಈಗ ಚುನಾವಣೆಗಳು ಹತ್ತಿರ ಬಂದ ಕಾರಣದಿಂದಾಗಿ ನಮ್ಮ ಗಮನಕ್ಕೆ ಬಂದಿರುವುದು ನಮ್ಮ ಪೂರ್ವಜರು ಮಾಡಿದ ಪುಣ್ಯ. ಹಾಗಾಗಿ ಸದ್ಯಕ್ಕೆ ದೂರವಾಗಲು ನಿರ್ಧರಿಸಿದ್ದೇವೆ ಎಂದು ತಿಳಿಸಿರುವ ಅವರು, ಇದೇನೂ ಶಾಶ್ವತ ಕಳಚಿಕೊಳ್ಳುವಿಕೆ ಅಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಫಲಿತಾಂಶ ಬಂದ ಮೇಲೆ ಮತ್ತೊಂದು ಪತ್ರಿಕಾಗೋಷ್ಠಿ ಕರೆದು ನಮ್ಮ ನಿಲುವನ್ನು ಸ್ಪಷ್ಟಪಡಿಸಲಾಗುತ್ತದೆ. ಅಲ್ಲಿವರೆಗೆ ನಮ್ಮ ನಿಲುವನ್ನು guess ಮಾಡಿ ಎಂದವರು ಹೇಳಿದರು.

Wednesday, January 17, 2007

ಸಿಪಾಯಿ ದಂಗೆ-II

(ಬೊಗಳೂರು ರಕ್ಷಣಾ ಬ್ಯುರೋದಿಂದ)
ಬೊಗಳೂರು, ಜ.17- ಪೊಲೀಸ್ ಠಾಣೆ ಧ್ವಂಸ ಮಾಡಿದ ಸುದ್ದಿಯನ್ನು ತಡವಾಗಿಯಾದರೂ ಸಮರ್ಥಿಸಿಕೊಂಡಿರುವ ಸಂಬಂಧಪಟ್ಟ ಸೈನಿಕರು, ತಮ್ಮ ಪೂರ್ವಜರು ಕೂಡ ಬ್ರಿಟಿಷ್ ಆಳ್ವಿಕೆಯ ವಿರುದ್ಧ ಸಿಡಿದೆದ್ದು ಪ್ರತಿಭಟನೆ ನಡೆಸಿದ ಘಟನೆಯನ್ನು ಉಲ್ಲೇಖಿಸಿದ್ದಾರೆ.

ತಮ್ಮದು ಸಿಪಾಯಿ ದಂಗೆ-II ಎಂದು ಕರೆದುಕೊಂಡಿದ್ದಾರವರು. ಹಿಂದಿನ ಕಾಲದಲ್ಲಿ ದುರಾಡಳಿತ, ದೌರ್ಜನ್ಯ, ತುಳಿತ ಇತ್ಯಾದಿಗಳ ವಿರುದ್ಧ ನಮ್ಮವರು ಬ್ರಿಟಿಷ್ ಆಡಳಿತದ ವಿರುದ್ಧ ತಿರುಗಿಬಿದ್ದು, 1857ರಲ್ಲಿ ದಂಗೆ ಎದ್ದಿದ್ದರು. ಈಗಿನ ಕಾಲದಲ್ಲಿ ಆಡಳಿತದಲ್ಲಿ ಮಾತ್ರ ಬ್ರಿಟಿಷರ ಬದಲು, ಸ್ವದೇಶೀಯರೇ ಇದ್ದಾರೆ ಹೊರತಾಗಿ ಪರಿಸ್ಥಿತಿ ಮಾತ್ರ ಅದೇ ರೀತಿಯಾಗಿದೆ ಎಂದು ಈ ಸೈನಿಕರು ಬೊಗಳೆ ಬಿಟ್ಟಿದ್ದಾರೆ.

ಥಾಯ್ಲೆಂಡ್, ಪಾಕಿಸ್ತಾನ, ಫಿಜಿ ಮುಂತಾದ ರಾಷ್ಟ್ರಗಳಲ್ಲಿ ಸೇನಾ ದಂಗೆ ಎದ್ದು, ಆ ದೇಶದ ಆಡಳಿತವನ್ನೇ ಸೈನಿಕರು ಕಿತ್ತುಕೊಂಡಿದ್ದಾರೆ. ಆದರೆ ಇಲ್ಲಿ ನಾವು ಕೂಡ ಇದಕ್ಕಾಗಿ ಶತಪ್ರಯತ್ನ ಮಾಡಿದರೂ ಸಾಧ್ಯವಾಗಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿರುವ ಅವರು, ನಾವು ಶಿಸ್ತಿನ ಸಿಪಾಯಿಗಳಾಗಿರುವುದರಿಂದ ಏನು ಮಾಡಿದರೂ ಅದು ಶಿಸ್ತೇ ಆಗಿರುತ್ತದೆ ಎಂದು ಹೇಳಿಕೊಂಡಿದ್ದಾರೆ.

ಪೊಲೀಸರ ಬಳಿ ಹಳೆಯ ಬ್ರಿಟಿಷರ ಕಾಲದ, ಎತ್ತಲಾಗದಷ್ಟು ಭಾರ ಇರುವ ತುಪಾಕಿಗಳು ಇನ್ನೂ ಇವೆ. ಆದರೆ ನಾವು ದೇಶ ರಕ್ಷಿಸುವವರು. ನಮ್ಮ ಬಳಿ ಅತ್ಯಾಧುನಿಕ ಆಯುಧಗಳಿವೆ. ಅಲ್ಲದೆ ಶತ್ರುಗಳ ಬಂಕರ್‌ಗಳನ್ನು ಧ್ವಂಸ ಮಾಡುವುದು ಹೇಗೆ ಎಂಬುದರ ಕುರಿತು ನಮಗೆ ಉತ್ತಮ ತರಬೇತಿ ಲಭಿಸಿರುವುದರಿಂದ ಪೊಲೀಸ್ ಠಾಣೆ ಧ್ವಂಸವೂ ಸುಲಭವಾಯಿತು ಎಂದವರು ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಮತ್ತೊಬ್ಬ ಸೈನಿಕನನ್ನು ಮಾತನಾಡಿಸಿದಾಗ, ನಮ್ಮ ಪೊಲೀಸರು ಎಷ್ಟರ ಮಟ್ಟಿಗೆ ಅಲರ್ಟ್ ಆಗಿರುತ್ತಾರೆ, ಅವರು ಪ್ರತಿದಾಳಿಗೆ ಎಷ್ಟರ ಮಟ್ಟಿಗೆ ಸಜ್ಜಾಗಿದ್ದಾರೆ ಎಂಬುದನ್ನು ಪರೀಕ್ಷಿಸಲು ಈ ರೀತಿ ಮಾಡಿರುವುದಾಗಿ ತಪ್ಪೊಪ್ಪಿಕೊಂಡರು.

ಮಗದೊಬ್ಬ ಸೈನಿಕನ ಪ್ರಕಾರ, ಕಳೆದ ಕೆಲವು ಸಮಯದಿಂದ ಶತ್ರುಗಳ ಕಾಟವಿಲ್ಲದೆ, ಯುದ್ಧ ಮಾಡದೆ ನಮ್ಮ ಕೈಗಳೆಲ್ಲಾ ಜಡ್ಡುಗಟ್ಟಿದ್ದವು. ಸಮರ ಕಲೆ ಮರೆತು ಹೋಗಬಾರದು, ಅದಕ್ಕೂ ಅಭ್ಯಾಸ ದೊರೆಯಬೇಕು ಎಂಬ ಕಾರಣಕ್ಕೆ ನಾವು ಪೊಲೀಸ್ ಠಾಣೆಯನ್ನು ಕೇಂದ್ರೀಕರಿಸಿ ತಾಲೀಮು ಮಾಡಿದೆವು! ಎಂದಿದ್ದಾನವನು.

Monday, January 15, 2007

20K ಒದೆತಗಳ ಸಂ-ಕ್ರಾಂತಿ

ಸಂಕ್ರಾಂತಿ ಶುಭ ತರಲಿಕನ್ನಡ ಕುಲ ಕೋಟಿಗೆ ಉತ್ತರಾಯಣ ಪುಣ್ಯಕಾಲವಾದ ಮಕರ ಸಂಕ್ರಾಂತಿಯ ಶುಭಾಶಯಗಳು.

(ಬೊಗಳೆ ರಗಳೆ ಬ್ಯುರೋದ ಕ್ಯಾಮರಾದಲ್ಲಿ ಸೆರೆಹಿಡಿದ ಚಿತ್ರವಿದು. ಮಂಗನ ಕೈಯಲ್ಲಿದ್ದ ಮಾಣಿಕ್ಯವಲ್ಲ ಎಂದು ಸ್ಪಷ್ಟಪಡಿಸಲಾಗುತ್ತಿದೆ.)

ಓದುಗರ ಪ್ರೀತಿಯ ಒದೆತಗಳಿಂದಾಗಿ 2006 ಏಪ್ರಿಲ್ ತಿಂಗಳಲ್ಲಿ ಆರಂಭವಾದ ಈ ಬೊಗಳೆಯು ಆಗಸ್ಟ್ ಅಂತ್ಯದ ವೇಳೆಗೆ 10 ಸಾವಿರ ಒದೆತಗಳನ್ನು ತಾಳಿಕೊಂಡಿದ್ದು, ಇದೀಗ ಬೊಗಳೆ ರಗಳೆ ಬ್ಯುರೋದ ಅರಿವಿಗೆ ಬಾರದೆ ನಮ್ಮ (ಚಪಾತಿ) ಹಿಟ್ಟಿನ ಕೌಂಟರ್ 20K ದಾಟಿಬಿಟ್ಟಿದೆ. ಇದೇ ವೇಳೆ ಲೇಖನಗಳ ಸಂಖ್ಯೆಯೂ ದ್ವಿಶತಕ ದಾಟಿದೆ.

ಇದಕ್ಕೆ ನಿಜವಾಗಿಯೂ ಕನ್ನಡ ನೆಟ್ಟೋದುಗರ ಮತ್ತು ಅನಿವಾರ್ಯ ಕಾರಣಗಳಿಗಾಗಿ "ಕನ್ನಡನಾಡು ಬಿಟ್ಟೋಡುಗರು" ಆಗಿರುವವರ ಸವಿಮನಸಿನ ನೆಟ್ಟೊದೆತಗಳೇ ಕಾರಣ.

ಆದರೆ ಕ್ರಿಸ್ಮಸ್ ರಜೆಯಿಂದಾರಭ್ಯ ಹೊಸ ವರ್ಷ ಬಂದು ಸಂಕ್ರಾಂತಿ ಬಂದೇಬಿಟ್ಟಿದ್ದರೂ, ಇತ್ತೀಚೆಗೆ ಸರಿಯಾಗಿ ಕಚೇರಿಗೆ ಹಾಜರಾಗದೆ, ಮೈಗಳ್ಳನಂತಾಗಿಬಿಟ್ಟಿರುವ ನಮ್ಮ ಏಕಸದಸ್ಯ ಬ್ಯುರೋದ ಪ್ರಧಾನ ವರದಿಗಾರರ ಸಮೂಹದಲ್ಲೊಬ್ಬನಾಗಿ ತೂರಿಕೊಂಡಿರುವ ಅಸತ್ಯಾನ್ವೇಷಿಯು ಬೊಗಳೆ ಬಿಟ್ಟು ರಗಳೆ ಮಾಡುತ್ತಿದ್ದಾನೆ ಎಂದು ಓದುಗರು ದೂರಿರುವ ಹಿನ್ನೆಲೆಯಲ್ಲಿ ಅಸತ್ಯಾನ್ವೇಷಿಯನ್ನು ತರಾಟೆಗೆ ತೆಗೆದುಕೊಂಡ ಪರಿಣಾಮವಾಗಿ ಆತ ಬ್ಯುರೋಗೆ ಬೆದರಿಕೆ ಹಾಕಿದ್ದಾನೆ.

ಯಾರು ಉಗುಳಲಿ ಎಂದು
ನಾನು ಬೊಗಳುವುದಿಲ್ಲ
(ಸಂ-ಪಾದ-ಕರು ಸಂ-ಬಳ ಮಾತ್ರ ಕೊಡುವುದರಿಂದ)
ಬೊಗಳುವುದು ಅನಿವಾರ್ಯ ಕರ್ಮ ನನಗೆ !!

ಎಂದು ಆತ ಕವಿವರ್ಯರ ಕ್ಷಮೆ ಕೋರಿ ಸೂಚ್ಯವಾಗಿ ಬೆದರಿಕೆಯೊಡ್ಡಿರುವುದರಿಂದ ಅವನ ವೇತನವನ್ನು ಒಂದು ಪೈಸೆಗೆ ಏರಿಸಲಾಗಿದೆ ಎಂದು ತಿಳಿಸಲು ಬ್ಯುರೋ ವಿಷಾದಿಸುತ್ತದೆ.

ಇಲ್ಲಿ ಯಾರು ಬೇಕಾದರೂ ಹೇಗೆ ಬೇಕಾದರೂ (ಸಭ್ಯತೆಯ ಮಿತಿಯಲ್ಲಿ) ಉಗುಳಬಹುದು ಎಂಬ ಅಲಿಖಿತ ನಿಯಮ ಅಳವಡಿಸಲಾಗಿದ್ದರೂ, ಇದುವರೆಗಿನ ಉಗುಳುವಿಕೆ ಅಥವಾ ಬೊಗಳುವಿಕೆಯಲ್ಲಿ ಯಾವುದು ಇಷ್ಟವಾಗಲಿಲ್ಲ ಎಂಬುದನ್ನು ನೆಟ್ಟೋದುಗರು ನಮ್ಮ ಬ್ಯುರೋದಲ್ಲಿ ಅಳವಡಿಸಲಾಗಿರುವ ಪ್ರಥಮಚಿಕಿತ್ಸೆ ಪೆಟ್ಟಿಗೆ (comment box)ಯಲ್ಲಿ ಚೀಟಿ ಬರೆದು ಹಾಕಲು ಕೋರಲಾಗಿದೆ. -ಸಂ

Monday, January 08, 2007

ಸಾಮಾನ್ಯ ಪ್ರಜೆ, ಊರಿಗೇ ಅರಸನಾದಾಗ!

(ಬೊಗಳೂರು ಜನಸಂಖ್ಯಾ ಸ್ಫೋಟಕ ಬ್ಯುರೋದಿಂದ)
ಬೊಗಳೂರು, ಜ.7- ವಸುಧೈವ ಕುಟುಂಬಕಂ ಎಂಬ ತತ್ವ ಪಾಲನೆ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇರಿಸಿರುವ ಮಿಜೋರಾಂನ ಮಹಾಶಯನೊಬ್ಬ ಸದ್ಯಕ್ಕೆ ಹಳ್ಳಿಯೇ ತನ್ನ ಕುಟುಂಬ ಎಂದು ಸಾಧಿಸಿತೋರಿಸುವಲ್ಲಿ ಸಫಲನಾಗಿರುವ ಅಂಶ ಇಲ್ಲಿ ಬಯಲಾಗಿದೆ.
 
ಆದರೆ ಇದರ ಹಿಂದಿನ ನೈಜತೆ ಅರಿಯಲು ತೆರಳಿದಾಗ ಸಿಕ್ಕಿದ ಅಸತ್ಯ ಬೇರೆಯೇ ಆಗಿತ್ತು. ಜಿಯೋನಾ ಎಂಬ ಈ ಮಹಾಶಯನಿಗೆ ರಾಜ ಅಥವಾ ಒಬ್ಬ ಆಡಳಿತಗಾರ ಅನ್ನಿಸಿಕೊಳ್ಳುವ ಹುಚ್ಚು. ಬೇರೆಯವರು ಯಾರು ಕೂಡ ಆತನ ನಾಯಕತ್ವ ಸ್ವೀಕರಿಸುತ್ತಿರಲಿಲ್ಲ. ಇದಕ್ಕಾಗಿ ತನ್ನ ಹಿಂಬಾಲಕರನ್ನು ತಾನೇ ಸೃಷ್ಟಿಸಿಕೊಂಡರೆ ಆಟೋಮ್ಯಾಟಿಕ್ ಆಗಿ ನಾಯಕನಾಗಬಹುದು ಎಂದು ಚಿಂತಿಸಿದವನೇ... ವಿವಾಹಾಂದೋಲನಕ್ಕೆ ಕಾಲಿಟ್ಟ. ಸಾಲು ಸಾಲು ಮದುವೆಯಾದ. ಪತ್ನಿಯರ ಸಂಖ್ಯೆಯೇ ಲೆಕ್ಕಕ್ಕೆ ಸಿಗದಷ್ಟಿತ್ತು.
 
ಆದರೆ ಇತ್ತೀಚೆಗೆ ಬಹಳ ಕಷ್ಟಪಟ್ಟು ಮಕ್ಕಳ ಸಂಖ್ಯೆಯನ್ನು ಎಣಿಸಲಾಗಿದೆ. 109 ಮಕ್ಕಳು ಇದುವರೆಗೆ ಪತ್ತೆಯಾಗಿದ್ದಾರಾದರೂ ಇದು ಕೂಡ ಖಚಿತ ಸಂಖ್ಯೆ ಆಗಿರುವ ಸಾಧ್ಯತೆಗಳಿಲ್ಲ. ಯಾಕೆಂದರೆ ಮಕ್ಕಳನ್ನು ಲೆಕ್ಕ ಹಾಕುವಾಗ ಕೆಲವು ಬಚ್ಚಲಕೋಣೆಯಲ್ಲೋ, ಕೆಲವು ಮಕ್ಕಳು ಟಾಯ್ಲೆಟ್‌ನಲ್ಲೋ ತಮ್ಮ ತಮ್ಮ ಕೆಲಸದಲ್ಲಿ ನಿರತವಾಗಿದ್ದವು. ಆ ಕೊಠಡಿಯಿಂದ ಹೊರ ಬಂದಾಗ ಮತ್ತೊಂದು ಮಗು ಅದರೊಳಗೆ ಹೋಗುತ್ತಿತ್ತು. ಹೀಗಾಗಿ ಈ ಸಂಖ್ಯೆಯ ಖಚಿತತೆ ತಿಳಿದುಕೊಳ್ಳುವುದು ಸಾಧ್ಯವಾಗಲಿಲ್ಲ.
 
ಈ ಬಗ್ಗೆ ಪ್ರತಿಕ್ರಿಯಿಸಿರುವ ಈ ಹಳ್ಳಿಯ ಮಾಜಿ ನಿವಾಸಿಗಳು, ಈ ಭೂಪ ತನ್ನ ಕುಟುಂಬದ ಜನಸಂಖ್ಯೆ ಹೆಚ್ಚಿಸಿ ತಮ್ಮನ್ನು ಈ ಹಳ್ಳಿಯಿಂದ ಹೊರದಬ್ಬಿ ಹಳ್ಳಿಯ ಮೇಲೆ ಪ್ರಭುತ್ವ ಸಾಧಿಸಲು ಸಂಚು ಹೂಡಿದ್ದಾನೆ ಎಂದು ಆರೋಪಿಸಿದ್ದಾರೆ.
 
ಮತ್ತಷ್ಟು ವಿವರವಾದ ತನಿಖೆ ನಡೆಸಿದಾಗ, ಈ ಬಹುಪತ್ನೀವಲ್ಲಭನದು ಗಿನ್ನೆಸ್ ದಾಖಲೆಗೂ ನಿಲುಕದ ದಾಖಲೆ ಎಂಬುದು ತಿಳಿದುಬಂತು. ಗಿನ್ನೆಸ್ ತಂಡದವರು ಅಲ್ಲಿ ತೆರಳಿದರೂ ಅವರಿಗೆ ತಮ್ಮ ಪುಸ್ತಕದಲ್ಲಿ ಈ ದಾಖಲೆ ದಾಖಲಿಸಲು ಸಾಧ್ಯವಾಗಿರಲಿಲ್ಲ.
 
ಇದೀಗ ಈ ಬಪವ (ಬಹುಪತ್ನಿವಲ್ಲಭ) ತನ್ನದೇ ಮನೆಯಾಗಿಬಿಟ್ಟಿರುವ ಊರಿನಲ್ಲಿ ತನ್ನ ಮಕ್ಕಳನ್ನು ಸಾಕಲು ಒಂದು ಪಾಕಶಾಲೆ ಮತ್ತು ಮಕ್ಕಳಿಗೆ ಬುದ್ಧಿ ಕಲಿಸಲು ಒಂದು ಪಾಠ ಶಾಲೆ ತೆರೆಯುವ ಯೋಜನೆ ಹಾಕಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

Wednesday, January 03, 2007

ಪ್ರಾಣಿಗಳ 'ಮಾನವನಿಷ್ಠೆ' ಅಗ್ಗಳಿಕೆಗೆ ಪೈಪೋಟಿ !

(ಬೊಗಳೂರು ಗುಟ್ರಟ್ಟು ಬ್ಯುರೋದಿಂದ)
ಬೊಗಳೂರು, ಜ.3- ಮನುಷ್ಯ ಪ್ರಾಣಿಯ ನಿಷ್ಠಾವಂತ ಮಿತ್ರ ಎಂಬ ಸ್ಥಾನಕ್ಕೆ ನೈಜ ಪ್ರಾಣಿ ವಲಯದಲ್ಲಿ ಪೈಪೋಟಿ ಶುರುವಾಗಿದ್ದು, ನಾಯಿ ಬೆಕ್ಕುಗಳ ಕಾದಾಟಕ್ಕೆ ಚಾಲನೆ ದೊರೆತ ಲಕ್ಷಣಗಳು ಗೋಚರಿಸತೊಡಗಿವೆ.

ಮನೆಗೆ ಬೆಂಕಿ ಬಿದ್ದಿದ್ದನ್ನು ಯಜಮಾನನಿಗೆ ಬೆಕ್ಕೊಂದು ತಿಳಿಸಿ ಯಜಮಾನ ನಿಷ್ಠೆ ಮೆರೆದಿದೆ ಎಂದು ಇಲ್ಲಿ ವರದಿಯಾಗಿದ್ದು, ಇದರಿಂದ ಬೆದರಿರುವ ಶ್ವಾನ ಸಮೂಹವು ಬೊಗಳೆ ರಗಳೆ ಬ್ಯುರೋಗೆ ಮೊರೆ ಹೊಕ್ಕಿದೆ.

ತತ್ಪರಿಣಾಮವಾಗಿ ಕತ್ತೆ-ಮಂಗಗಳೊಂದಿಗೆ ಈ ಪ್ರಕರಣದ ಕುರಿತು ಪತ್ತೆದಾರಿಕೆಗೆ ಇಳಿದ ಬ್ಯುರೋ, ಈ ಆಘ್ರಾಣ ಸಾಮರ್ಥ್ಯದ ಹಿಂದಿನ ರಹಸ್ಯ ಭೇದಿಸಲು ಹೋಗಿ ಮಹತ್ವದ ಸಂಗತಿಯನ್ನು ಪತ್ತೆ ಹಚ್ಚಿದೆ.

ಇದರ ಪ್ರಕಾರ, ಬೆಕ್ಕು ತನ್ನ ಯಜಮಾನನನ್ನು ಎಚ್ಚರಿಸಿದ್ದರ ಹಿಂದಿನ ಕಾರಣ ಗೊತ್ತಾಗಿದೆ. ಅದೆಂದರೆ ಈ ಬೆಕ್ಕಿನ ಮೂಗಿಗೆ ತುಪ್ಪ ಸವರಲಾಗಿತ್ತಾದರೂ, ಅದರ ಮೂಗಿಗೆ ವಾಸನೆ ಬಡಿದಿದ್ದು ಸುಟ್ಟ ಹಾಲಿನದ್ದು! ಅದರ ಎಲ್ಲ ಗಮನ ಹಾಲಿನ ಮೇಲೇ ಇದ್ದುದರಿಂದ, ಸದಾಶಿವನಿಗೆ ಅದೇ ಧ್ಯಾನ ಎಂಬಂತೆ ಈ ಮಾರ್ಜಾಲ ಸನ್ಯಾಸಿಗೂ ಹಾಲಿನದ್ದೇ ಧ್ಯಾನ ಇತ್ತು.

ಪ್ರತಿಭಟನೆಗೆ ಬೆದರಿ ಬೊಗಳೆ ರಗಳೆ ಬ್ಯುರೋಗೆ ರಜೆ

ಹಾಲನ್ನು ಉಳಿಸುವ ನಿಟ್ಟಿನಲ್ಲಿ ಅದು ಯಜಮಾನನ ಮೈಗೆ ಪರಚಿ ಎಬ್ಬಿಸಿತ್ತು ಎಂಬುದನ್ನು ಪತ್ತೆ ಹಚ್ಚಿ ವರದಿ ಮಾಡಿರುವ ಬೊಗಳೆ ರಗಳೆ ಬ್ಯುರೋ ವಿರುದ್ಧ ಮಾರ್ಜಾಲ ಸಂದೋಹವು ಪ್ರತಿಭಟನೆ ನಡೆಸಲು ನಿರ್ಧರಿಸಿದೆ ಎಂದು ನಮಗೆ ಈಗಾಗಲೇ ಮಾಹಿತಿ ದೊರೆತಿದ್ದು, ಇದಕ್ಕಾಗಿ ಕೆಲವು ದಿನಗಳ ಕಾಲ ಬ್ಯುರೋಗೆ ರಜೆ ಸಾರಲು ನಿರ್ಧರಿಸಲಾಗಿದೆ.

ಈ ರಜೆಯ ಅವಧಿಯಲ್ಲಿ ಅಪ್ಪಿ ತಪ್ಪಿ ಪತ್ರಿಕೆ ಪ್ರಕಟವಾಗುವ ಸಾಧ್ಯತೆಗಳಿವುದರಿಂದ ಎಚ್ಚರ ವಹಿಸಲು ಸೂಚಿಸಲಾಗಿದೆ.

Tuesday, January 02, 2007

'ಕೌನ್ ಬನೇಗಾ ಕಾಮಿಡಿಪತಿ' ಕ್ವಿಜ್ !

(ಬೊಗಳೂರು ಎಲ್ಲಾ ಬಯಲು ಬ್ಯುರೋದಿಂದ)
ಬೊಗಳೂರು, ಜ.2- KBC (ಕೌನ್ ಬನೇಗಾ ಕಾಮಿಡಿಪತಿ) ಸ್ಪರ್ಧೆಯಲ್ಲಿ ಲಾಕ್ ಮಾಡುವವರು ಬದಲಾದ ಹಿನ್ನೆಲೆಯಲ್ಲಿ ದೇಶದಲ್ಲಿ ವಿಚಿತ್ರ ವಿದ್ಯಮಾನಗಳೂ ನಡೆಯುತ್ತಿದ್ದು, ಕೆಬಿಸಿಯಲ್ಲಿ ಕೇಳಬಹುದಾದ ಪ್ರಶ್ನೆ ಪತ್ರಿಕೆ ಬಯಲಾಗಿದೆ. ಈ ಪ್ರಶ್ನೆ ಪತ್ರಿಕೆ ಬೊಗಳೆ ರಗಳೆ ಕೈಗೆ ಸಿಕ್ಕಿದ್ದು, ಅದನ್ನು ಓದುಗರಿಗಾಗಿ ಇಲ್ಲಿ ಬಯಲು ಮಾಡಲಾಗುತ್ತಿದೆ.
ಕ..ಕ..ಕ..ಕ...ಕೌನ್ ಬನೇಗಾ ಕ...ಕ...ಕ...ಕ...ಕಾಮಿಡಿಪತಿ ಪ್ರಶ್ನೆ ಪತ್ರಿಕೆಯ ಪ್ರಮುಖ ಪ್ರಶ್ನೆಗಳು ಈ ರೀತಿಯಾಗಿರುತ್ತವೆ.
 
1. ಕ್ಲೂ: ಇದು ಎಡಪಕ್ಷಗಳಿಗೆ ಕೇಳಲಾಗುವ ಪ್ರಶ್ನೆ.
ಮುಷ್ಕರ ಅಂದರೇನು?
ಎ) ವೇತನಸಹಿತ ರಜಾದಿನ
ಬಿ) ಉಸಿರಿನಷ್ಟೇ ನೈಸರ್ಗಿಕವಾದ ಒಂದು ಕ್ರಿಯೆ
ಸಿ) ಇದನ್ನು ಮಮತಾ ಬ್ಯಾನರ್ಜಿಯಂಥವರು ನಕಲಿ ಹೊಡೆದರೆ ಅದನ್ನೇ ನಾಚಿಕೆಗೇಡಿನ ಸಂಗತಿ ಎಂದು ಹೇಳಲಾಗುತ್ತದೆ.
ಡಿ) ನೀವು ಯಾವತ್ತೂ ಮಾಡುತ್ತಿರುವುದನ್ನು ಜನತೆ ಮಾಡುವಂತೆ ಪ್ರೇರೇಪಿಸುವುದು. (ಅಂದರೆ ಏನೂ ಇಲ್ಲ!)
ಯಾವ ಮಿತ್ರನಿಗೆ ಫೋನ್ ಕರೆ ಮಾಡಲು ಬಯಸುತ್ತೀರಿ?
ಮನಮೋಹನ್ ಸಿಂಗ್‌ಗೆ ಖಂಡಿತಾ ಬೇಡ ಎಂಬ ಉತ್ತರ.

2. ಜನತಾ ದಳ ಎಂಬ ವಿದಳನಾ ಪಕ್ಷಕ್ಕೆ ಕೇಳುವ ಪ್ರಶ್ನೆ.
ಪಕ್ಷ ಎಂದರೇನು?
ಎ) ಅವಕಾಶಕ್ಕಾಗಿ ಹಾತೊರೆಯುತ್ತಾ ಅದು ಸಿಕ್ಕಿದ ತಕ್ಷಣ ಒಡೆದು ಚೂರಾಗುವುದು.
ಬಿ) ಅಧಿಕಾರಕ್ಕಾಗಿ ಚೌಕಾಶಿಯ ಪ್ರಧಾನ ಅಸ್ತ್ರ
ಸಿ) ಪರಮಾಣುವಿಗಿಂತಲೂ ಕಿರಿದಾದ ಗಾತ್ರದಷ್ಟಕ್ಕೆ ಒಡೆಯಬಲ್ಲ ಒಂದು ವೈಜ್ಞಾನಿಕ ಅದ್ಭುತ
ಡಿ) ಚುನಾವಣೆಗಳು ಬಂದಾಗ ರಾಜಕಾರಣಿಗಳು ಅತ್ಯಂತ ಇಷ್ಟಪಡುವ ವಸ್ತು
ಯಾವ ಮಿತ್ರನಿಗೆ ಕರೆ ಮಾಡಲು ಬಯಸುತ್ತೀರಿ?
ರಾಜಕೀಯದಲ್ಲಿ ಯಾರು ಕೂಡ ಯಾವಾಗ ಬೇಕಾದರೂ ಮಿತ್ರರಾಗಬಹುದು, ಶತ್ರುಗಳೂ ಆಗಬಹುದು. ಹಾಗಿರುವುದರಿಂದ ಯಾರಿಗೆ ಬೇಕಾದರೂ ಕರೆ ಮಾಡುತ್ತೇವೆ!

3. ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿಗೆ ಪ್ರಶ್ನೆ.
ತಮಿಳು ಅಂದರೇನು?
ಎ) ಚಿತ್ರೋದ್ಯಮಕ್ಕೆ ತೆರಿಗೆ ಉಳಿಸುವ ಒಂದು ಅಸ್ತ್ರ
ಬಿ) ಅಕ್ಷರಗಳು, ಉಚ್ಚಾರಣೆಗಳು ಕಡಿಮೆ ಇದ್ದರೂ ಶಾಸ್ತ್ರೀಯ ಭಾಷೆ ಸ್ಥಾನಕ್ಕೆ ಅರ್ಹವಾದ ಸಂಗತಿ
ಸಿ) ಆಂಗ್ಲ ಹೆಸರುಳ್ಳ ತಮ್ಮ ಕೌಟುಂಬಿಕ ಒಡೆತನದ ಚಾನೆಲ್‌ನಲ್ಲಿ ಕಡಿಮೆ ಬಳಸಲಾಗುವ ಭಾಷೆ
ಡಿ) ತಮಿಳುನಾಡಿನಾದ್ಯಂತ ಇದೇ ಚಾನೆಲನ್ನೇ ಬಲವಂತವಾಗಿ ನೋಡಬೇಕಾಗಿರುವುದರಿಂದ ತಮಿಳು ಬಗ್ಗೆ ಯೋಚಿಸಲು ಯಾರಿಗಾದರೂ ಸಮಯವೆಲ್ಲಿದೆ?
ಯಾರಿಗೆ ಫೋನ್ ಮಾಡಲು ಬಯಸುತ್ತೀರಿ?
ತಮಿಳು ಕುರಿತಾಗಿ ವಿಶೇಷಣ ಸೇರಿಸಿ ಮಾತನಾಡುವ ಯಾರಿಗಾದರೂ ಸೈ!

Monday, January 01, 2007

ಹೊಸ ವರ್ಷ, ಹೊಸ resolution ಮತ್ತು ಉಡುಗೊರೆ!

ಹೊಸ ವರ್ಷದ ಸಂಭ್ರಮದಲ್ಲಿ ತೇ(ಓ)ಲಾಡುತ್ತಿರುವವರಿಗೆಲ್ಲರಿಗೆ ತನ್ನ "ಗುಡ್ ಬೈ" ತಿಳಿಸಲು 2006ನೇ ಇಸವಿಯು ಬೊಗಳೆ ರಗಳೆ ಬ್ಯುರೋವನ್ನು ಕೋರಿದೆ.

2007ನ್ನು ಅಪ್ಪಿಕೊಳ್ಳಲಾರಂಭಿಸಿರುವ ಈ ಸಂದರ್ಭದಲ್ಲಿ ಹೊಸ ವರ್ಷವನ್ನು ಸ್ವಾಗತಿಸುವುದಕ್ಕಿಂತಲೂ ಹಳೆ ವರ್ಷವನ್ನು, ಅದರ ಕರಾಳ ನೆನಪುಗಳನ್ನು ದೂರೀಕರಿಸುವುದಕ್ಕೇ ಹೆಚ್ಚಿನ ಆದ್ಯತೆ ನೀಡಲು ನಿರ್ಧರಿಸಲಾಗಿದೆ.

ಕಾಲನ ನಡಿಗೆಯಲ್ಲಿ 2007 ಎಂಬ ಹೊಸ ಹೆಜ್ಜೆಯ ಗುರುತು ಮೂಡಿದ್ದು, 24x7x365 ಎಂಬ ಸಂಖ್ಯಾಪ್ರಕಾರದಲ್ಲಿ busyನೆಸ್ ಮಾಡುತ್ತಿರುವ ಮನುಜ ಪ್ರಾಣಿಗಳಿಗೆ ಮತ್ತೊಂದು ಸಂಖ್ಯಾ ಲೆಕ್ಕಾಚಾರಕ್ಕೆ ವೇದಿಕೆ ದೊರೆತಿದೆ.

ಡಿಸೆಂಬರ್ ಕೊನೆಯ ರಾತ್ರಿ ಕಳೆದು ಜನವರಿಯ ಮೊದಲ ದಿನ ಬಾಲ ಬಿಚ್ಚಲಾರಂಭಿಸಿದಾಗ, ಹಿಂದೆ ತಿರುಗಿ ನೋಡಿಯೇ ಮುಂದಡಿಯಿಡುವುದು ಸೂಕ್ತ ಮತ್ತು ಏರಿದ ಏಣಿಯಲ್ಲಿ ಎಷ್ಟು ಮೆಟ್ಟಿಲುಗಳಿದ್ದವು ಎಂಬುದನ್ನು ಲೆಕ್ಕ ಹಾಕುವುದು ಸೂಕ್ತ ಎಂಬ ಸಲಹೆ ಬೊಗಳೆ ರಗಳೆ ಬ್ಯುರೋದಿಂದ ಉದುರಿದೆ.

ಈಗಿನ ಕಾಲದಲ್ಲಿ ಹೊಸ ವರುಷದ ಉದಯವಾಯಿತು ಎಂದು ಹೇಳುವ ಹಾಗಿಲ್ಲ. ಯಾಕೆಂದರೆ ಕೆಲವರಿಗೆ ದಿನದ ಚಟುವಟಿಕೆ ಆರಂಭವಾಗುವುದು ರಾತ್ರಿ ಕಾಲದಲ್ಲಿ. ಹಗಲು-ರಾತ್ರಿ ದುಡಿತದಲ್ಲಿ ತೊಡಗುವವರಿಗೆ ಮಾತ್ರವಲ್ಲದೆ ಕುಡಿತದಲ್ಲಿ ತೊಡಗುವವರಿಗೂ ಇದು ಅನ್ವಯ.

ನಿನ್ನೆಯಷ್ಟೇ ಉಗಿಬಂಡಿಯಂತೆ ಹೊಗೆಯುಗುಳುತ್ತಿದ್ದವರು ಇಂದು "ನಾನು smoking ಬಿಟ್ಟು, ಬರೇ king ಆಗುತ್ತೇನೆ" ಅಂತ ನಿರ್ಣಯ ಕೈಗೊಳ್ಳುತ್ತಾರೆ. ನಿನ್ನೆಯಷ್ಟೇ ಪೀಪಾಯಿಗಟ್ಟಲೆ ಮದ್ಯ ಸುರಿದುಕೊಳ್ಳುತ್ತಾ, ಸ್ನಾನದ ನೀರಿಗೂ ತತ್ವಾರ ಉಂಟು ಮಾಡಿದವರು, ನಾನು Drinking ಬಿಟ್ಟು king ಆಗುತ್ತೇನೆ ಎನ್ನುತ್ತಾರೆ.

ಆದರೆ ಇವರಲ್ಲಿ ಹೆಚ್ಚಿನವರು ಸತ್ಯವನ್ನೇ ಹೇಳುತ್ತಾರೆ ಎಂಬುದು ಒಪ್ಪತಕ್ಕ ಅಂಶ ಎಂಬುದನ್ನು ನಮ್ಮ ಬ್ಯುರೋ ಪತ್ತೆ ಹಚ್ಚಿದೆ. smoking ಬಿಟ್ಟವ ನಿಜಕ್ಕೂ ಹೇಳಿದ್ದೇನು? small size ಬಿಟ್ಟು, king size cigarette ಮಾತ್ರ ಸೇವಿಸುತ್ತೇನೆ ಅಂತ. ಅದೇ ರೀತಿ Drinking ಬಿಟ್ಟು king ಆಗುತ್ತೇನೆ ಎಂದವ, ಬರೇ Kingಫಿಶರ್ ಮಾತ್ರವೇ ಸೇವಿಸುತ್ತೇನೆ ಎಂದು ತನಗೇ ಸಮಾಧಾನ ಮಾಡಿಕೊಳ್ಳುತ್ತಾನೆ!

ಇನ್ನೊಂದು ನಿರ್ಣಯ ಇರುತ್ತದೆ. ಆಯಾ ದಿನದ ದಿನಚರಿ ಬರೆದಿಡುತ್ತೇನೆ ಎಂಬುದು. ಇದನ್ನು ಮುರಿಯುವ ಸುಲಭೋಪಾಯವೇನು? ಅದು ಪರ್ಸನಲ್ ಡೈರಿ ಆಗಿರುವುದರಿಂದ ಅದನ್ನು ಇತರರು ಓದುವಂತಿಲ್ಲ ಎಂಬುದು ಸರ್ವವಿದಿತ. ಆದರೆ ಬರಹಗಾರನೇ ತನ್ನ ಬರವಣಿಗೆಯ ಏಕೈಕ ಓದುಗ ಎಂದಾದಲ್ಲಿ ಅದನ್ನು ಬರೆದು ಪ್ರಯೋಜನವಾದರೂ ಏನು ಎಂಬುದು ಈ ನಿರ್ಧಾರ ಮುರಿಯಲೊಂದು ಸೂಕ್ತವಾದ ಕಾರಣ!!!

ಇನ್ನು ಹೊಸ ವರ್ಷದ ಉಡುಗೊರೆ ವಿಷಯ. ಒಂದು ಡೈರಿ ಉಡುಗೊರೆ ನೀಡುವುದು ಸಾಮಾನ್ಯ. (ಯಾರು ಕೂಡ ಅದರಲ್ಲಿ ಬರೆಯುವ ಗೋಜಿಗೆ ಹೋಗದಿದ್ದರೂ!). ಆದರೆ ನಾವೇ ಮಿತ್ರನೊಬ್ಬನಿಗೆ ಕೊಟ್ಟ ಡೈರಿ, ಹಲವು ಕೈಗಳನ್ನು ಸುತ್ತಿಕೊಂಡು ಬಂದು, ಕೊನೆಗೆ ನಮಗೇ "ಆತ್ಮೀಯ" New Year Gift ರೂಪದಲ್ಲಿ ಮರಳಿದಾಗ ಹೇಗಾಗಿರಬೇಡ! ಕೆಲವರು ದುಂಬಾಲು ಬಿದ್ದು ಡೈರಿ ಕೇಳುವುದು ಏತಕ್ಕೆ ಎಂಬುದು ನಮ್ಮ ಬ್ಯುರೋಗೆ ಗೊತ್ತಾಗಿದ್ದು ಆಗಲೇ! ಆದರೂ ಒಂದು ಡೈರಿಯು ಎಷ್ಟು ಜನರ ಮೊಗದಲ್ಲಿ ಸರಣಿ ನಗು ಅರಳಿಸಿತಲ್ಲ ಎಂಬುದೊಂದು ಸಮಾಧಾನ ಅಲ್ಲಿ ಉಳಿದುಬಿಡುತ್ತದೆ. ಇದೂ ಒಂದು chain reaction!

ಹೊಸ ವರ್ಷದ ಪಾರ್ಟಿಗಳ ಬಗ್ಗೆ ಹೇಳುವುದಾದರೆ, ಹೊಸ ವರ್ಷದ ಬೆಳಗನ್ನು ನಗುವಿನಿಂದ, ಉತ್ಸಾಹದಿಂದ, ಉಲ್ಲಾಸದಿಂದ ಸ್ವಾಗತಿಸಲು ನಿರ್ಣಯಿಸುವವರು ಡಿ.31ರ ರಾತ್ರಿಯಿಡೀ ಕುಡಿದು ಕುಣಿದು ಕುಪ್ಪಳಿಸಿ, ಜ.1ರ ಸೂರ್ಯೋದಯದ ವೇಳೆಗೆ ಧೊಪ್ಪನೆ ಹಾಸಿಗೆಯಲ್ಲಿ ಬಿದ್ದಿರುತ್ತಾರೆ. ಅವರು ಎದ್ದಾಗ, ಅಥವಾ ಎದ್ದರೂ ಅಮಲಿನಲ್ಲೇ ಇರುವುದರಿಂದ, ಪೂರ್ಣವಾಗಿ ಉಲ್ಲಾಸಮಯವಾಗಿರುವ ಹೊತ್ತಿಗೆ ಜ.1ರ ಸೂರ್ಯ ಅಸ್ತಮಿಸುವ ಮಾರ್ಗದಲ್ಲಿ ಬಲು ದೂರ ಸಾಗಿರುತ್ತಾನೆ. ಅಲ್ಲಿಗೆ ಹೊಸ ವರ್ಷಾಚರಣೆ ಮುಗಿದೇಹೋಗುತ್ತದೆ. ಕೆಲವರ (ಸೇವಿಸಿದ!) Spirit ಪ್ರಮಾಣ ಎಷ್ಟಿರುತ್ತದೆ ಎಂದರೆ, ಅವರ Hangover ಮುಂದಿನ ಹೊಸ ವರ್ಷಾಚರಣೆ ದಿನದವರೆಗೂ ಇರುತ್ತದೆ!

ಈ ಎಲ್ಲ ಕಾರಣಕ್ಕೆ ಹಳೆಯದನ್ನೆಲ್ಲಾ ಮರೆತು ಬೊಗಳೆ ರಗಳೆ ಬ್ಯುರೋ, ಹಳೆ ಕ್ಯಾಲೆಂಡರಿನ ಜಾಗದಲ್ಲಿ ಹೊಸ ಕ್ಯಾಲೆಂಡರ್ ಅಳವಡಿಸಿ 2007ನ್ನು ಹೊಸದೊಂದು ಜೋಕ್ ಎಂದು ಸ್ವಾಗತಿಸುತ್ತದೆ. ನೀವು?

ಸಮಸ್ತ ನೆಟ್-ಮಿತ್ರ ಸಮುದಾಯಕ್ಕೆ 2007 ಶುಭ ತರಲಿ, ಬಾಳು ಬೆಳಗಲಿ,
ಬದುಕು ಬಂಗಾರವಾಗಲಿ, ಜೀವನಯಾನದ ಹಾದಿ ಹೂವಿನ ಹಾಸಿಗೆಯಾಗಲಿ

ಎಂಜಿನ್ ಇಲ್ಲದ ರೈಲು: ಬ್ರೇಕಿಂಗ್ ನ್ಯೂಸ್ ಅಲ್ಲವೆಂದ ಬೊ.ರ.

[ಬೊಗಳೂರು ಪಟ್ಟೆ-ರಹಿತ ರೈಲು ಬ್ಯುರೋ] ಬೊಗಳೂರು: ಆಫ್‌ಲೈನ್ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯೊಂದು ಆನ್‌ಲೈನ್ ಸಂಪಾದಕರ ಕಣ್ಣು ಕುಕ್ಕಿದ್ದು, ಎಂಜಿನ್ ಇಲ್ಲದೆ...