ಬೊಗಳೆ ರಗಳೆ

header ads

ಕಾಂguess ಸತ್ಯಾಗ್ರಹದ ವಿರುದ್ಧ ಬಿಜೆಪಿ ಸತ್ಯಾಗ್ರಹ !

(ಬೊಗಳೂರು ಸತ್ಯಾಗ್ರಹದಲ್ಲೂ ರಾಜಕೀಯ ಬ್ಯುರೋದಿಂದ)
ಬೊಗಳೂರು, ಜ.31- ಗಾಂಧೀಜಿ ಪ್ರಣೀತ ಸತ್ಯಾಗ್ರಹದ ಶತಮಾನೋತ್ಸವವನ್ನು ಪಕ್ಷಕ್ಕೆ ಸೀಮಿತಗೊಳಿಸಿ ಆಚರಿಸಿದೆ ಎಂದು ಸರ್ವತ್ರ ಶ್ಲಾಘನೆಗೆ ಕಾರಣವಾಗಿರುವ ಕಾಂguess, ತನ್ನ ನಿಲುವನ್ನು ಸಮರ್ಥಿಸಿಕೊಂಡಿದೆ.

ತಮ್ಮ ಪಕ್ಷವನ್ನು ಗಾಂಧೀಜಿ ಅವರೇ ಕಟ್ಟಿದ್ದು, ಈಗ ಕೂಡ "ಗಾಂಧೀಜಿ" ಅವರೇ ಪಕ್ಷಾಧ್ಯಕ್ಷೆಯಾಗಿ ಮುನ್ನಡೆಸುತ್ತಿದ್ದಾರೆ. ಹಾಗಾಗಿ ಸತ್ಯಾಗ್ರಹದ ಪೂರ್ಣ ಕ್ರೆಡಿಟ್ ತಮಗೇ ಸಲ್ಲಬೇಕು ಎಂದು ಕಾಂguess ವಕ್ತಾರರಾದ ಶಣಿ ಮಂಕರ್ ಅಯ್ಯೋರು ತಿಳಿಸಿದ್ದಾರೆ.

ಹಿಂದೆ ಬ್ರಿಟಿಷರೇ ನಮ್ಮ ದೇಶವನ್ನು ಕೊಳ್ಳೆ ಹೊಡೆಯುತ್ತಿದ್ದರು. ನಮ್ಮ ಪಕ್ಷದವರು ಸತ್ಯಾಗ್ರಹ ನಡೆಸಿದ ಪರಿಣಾಮವಾಗಿ ಏನನ್ನು ಬೇಕಾದರೂ ನಾವು ನಾವೇ ತಿನ್ನಬಹುದಾದ ಸ್ವಾತಂತ್ರ್ಯ ಇಡೀ ದೇಶಕ್ಕೆ ಸಿಕ್ಕಿದೆ. ನೀವು ಈ ಸ್ವಾತಂತ್ರ್ಯವನ್ನು ತೆಗೆದುಕೊಂಡು ಸುಮ್ಮನಿರಿ. ಸತ್ಯವನ್ನು ಆಗ್ರಹಿಸುವುದರಲ್ಲೇಕೆ ಪಾಲು ಕೇಳುತ್ತೀರಿ ಎಂದು ಅವರು ವಿರೋಧ ಪಕ್ಷಗಳಿಗೆ ಸವಾಲು ಹಾಕಿದ್ದಾರೆ.

ಮಹಾತ್ಮ ಗಾಂಧೀಜಿ ಅವರು ಇಹಲೋಕದಿಂದ ಪರಲೋಕಕ್ಕೆ ಹೋಗುವ ಮುನ್ನ ಕಾಂಗ್ರೆಸ್ ಪಕ್ಷವನ್ನು ವಿಸರ್ಜಿಸಬೇಕು ಎಂದು ಆದೇಶ ಮಾಡಿದ್ದರು. ಆದರೆ ಗಾಂಧೀಜಿ ನೆನಪು ಹಸಿರಾಗಿರುವಂತೆ ಮಾಡಲು ನಾವು ಅದನ್ನು ಉಳಿಸಿಕೊಂಡಿದ್ದೇವೆ. ಪಕ್ಷದ ಈ ಹಿಂದಿನ ಅಧ್ಯಕ್ಷರಿಗೆಲ್ಲಾ ಗಾಂಧಿ ಉಪ-ನಾಮ "ಹಾಕಿ"ದ್ದೇವೆ. ಗಾಂಧೀಜಿ ನೆನಪು ಅಚ್ಚಳಿಯದಂತೆ ಮಾಡುತ್ತಿದ್ದೇವೆ ಎಂದು ಶಣಿ ಮಂಕರ್ ಸ್ಪಷ್ಟಪಡಿಸಿದ್ದಾರೆ.

ಆದರೆ, ಗಾಂಧೀಜಿ ಈಗ ಇದ್ದಿದ್ದರೆ ಪಕ್ಷದ ವಿರುದ್ಧ ಸತ್ಯಾಗ್ರಹ ಮಾಡುತ್ತಿದ್ದರು ಎಂಬ ವಿಷಯವನ್ನು ಮಾತ್ರ ಅವರು ಹೇಳದಿದ್ದರೂ ನಮ್ಮ ವದರಿಗಾರರು ಬರೆದುಕೊಂಡಿದ್ದು, ಅದನ್ನು ಪ್ರಕಟಿಸದಿರಲು ನಮ್ಮ ಬ್ಯುರೋವನ್ನು ಕೋರಿದ್ದಾರೆ.

ಗಾಂಧಿ ಹೆಸರಲ್ಲೇ ನಾವು ಓಟು ಕೇಳುವ ಮೂಲಕ ಜನತೆಯಲ್ಲೂ ಅವರ ಹೆಸರು ಚಿರಸ್ಥಾಯಿಯಾಗಿರುವಂತೆ ನೋಡಿಕೊಂಡಿಲ್ಲವೇ? ವಿರೋಧ ಪಕ್ಷಗಳು ಎಂದಾದರೂ ಈ ರೀತಿ ಮಾಡಿವೆಯೇ ಎಂದು ಪ್ರಶ್ನಿಸಿರುವ ಅವರು, ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು ಬೇರೆ ಪಕ್ಷಗಳಿಗೆ ಸೇರಿದರೆ ಅದು ನಮ್ಮ ತಪ್ಪಲ್ಲ. ನಮ್ಮ ಪಕ್ಷಕ್ಕೇ ಬನ್ನಿ. ನೀವು ಕೂಡ ಸತ್ಯಾಗ್ರಹದ ಆಚರಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬಹುದು ಎಂದು ಹೇಳಿದ್ದಾರೆ.

ಈ ಮಧ್ಯೆ, ಸತ್ಯಾಗ್ರಹದ ಶತಮಾನೋತ್ಸವವನ್ನು ಪಕ್ಷಾಗ್ರಹದ ಶತಮಾನೋತ್ಸವವಾಗಿ ಆಚರಿಸಿದ ಕಾಂguessನಿಂದ ನ್ಯಾಯ ಬಯಸಿ ಬಿಜೆಪಿಯು ಸತ್ಯಾಗ್ರಹ ನಡೆಸಲಿದೆ ಎಂದು ತಿಳಿದುಬಂದಿದೆ. ಸತ್ಯಾಗ್ರಹವನ್ನು ವಿರೋಧಿಸಿದ್ದ Commuನಿಷ್ಠರನ್ನು ಕಾಂguess, ಆಹ್ವಾನಿಸಿದೆ, ಆದರೆ ಕಮ್ಯು-nullಗಳು ಎಂದು ನಮ್ಮನ್ನು ಹೊಗಳುತ್ತಿರುವವರು ಎರಡಕ್ಕೂ ಕನಿಷ್ಠ ಸಾಮಾನ್ಯ ಅಪವರ್ತನ ಆಗಿರುವ "commu" ಎಂಬ ಶಬ್ದಕ್ಕೆ ಬೆಲೆಯನ್ನೇ ನೀಡಿಲ್ಲ ಎಂದು ಬಿಜೆಪಿ ವಕ್ತಾರ ನಂಕಯ್ಯ ವೇಯ್ಡು ಆಕ್ಷೇಪಿಸಿದ್ದಾರೆ.

ಇದಲ್ಲದೆ, ಕಾಂguess ಈಗ ಕಾಂಗ್ರೆಸ್ ಆಗಿ ಉಳಿದಿಲ್ಲ, ಮೀಸಲಾತಿ, ವಿಶೇಷ ಸವಲತ್ತುಗಳನ್ನು ಒದಗಿಸುವ ಕುರಿತು ಮಾತನಾಡುತ್ತಾ ಈಗ ಅದು ವಿಭಜನಪೂರ್ವ ಭಾರತದ ಮುಸ್ಲಿಂ ಲೀಗ್‌ನಂತಾಗಿಬಿಟ್ಟಿದೆ, ವಿಭಜನಪೂರ್ವ ಭಾರತದ ಕಾಂಗ್ರೆಸ್ ಸಿದ್ಧಾಂತಗಳನ್ನು ಬಿಜೆಪಿ ತನ್ನ ಜೇಬಿನೊಳಗೆ ಹಾಕಿಕೊಂಡಿರುವುದರಿಂದ ನಾವು ಕೂಡ ಸತ್ಯಾಗ್ರಹ ಮಾಡಲು ಅರ್ಹರು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

3 ಕಾಮೆಂಟ್‌ಗಳು

  1. ಅ-ಸತ್ಯ-ಗ್ರಹಿಗಳೇ,

    ಸತ್ಯಗ್ರಹದ ಸವಿನೆನಪಿನಲಿ ಸೋ-ಗಾಂಧಿಮ್ಮ ದಂಡಿವರೆಗೆ ನಡೆದುಕೊಂಡು ಹೋಗಿಬರ್ತಾರ?

    ಪ್ರತ್ಯುತ್ತರಅಳಿಸಿ
  2. ಶಿವ್ ಅವರೆ,
    ನಡೆದು ಹೋಗುವುದು ಹಿಂದಿನ ಕಾಲವಾಯ್ತಲ್ಲಾ. ಈಗೇನಿದ್ದರೂ ಹೆಲಿಕಾಪ್ಟರಿನಲ್ಲೇ ಹೋಗೋದು. ಸುತ್ತ ಮುತ್ತ ಇತರ ಸತ್ಯಾಗ್ರಹಿಗಳ ಬದಲು, ಚೇಲಾಗಳು, ಬ್ಲ್ಯಾಕ್ ಕ್ಯಾಟ್‌ಗಳು ಇತ್ಯಾದಿಗಳಿರುತ್ತಾರೆ....

    ಪ್ರತ್ಯುತ್ತರಅಳಿಸಿ
  3. ಶ್ರೀನಿವಾಸರೆ,
    ನಿಮ್ಮ ಒತ್ತಾಸೆ ಪ್ರಕಾರ ತನಿಖೆ ನಡೆಸಲಾಗಿದ್ದು, ಜೇಬಿಪಿಯವರಿಗೆಲ್ಲರಿಗೂ ಲೋ ಬಿಪಿ ಇದೆ ಎಂಬುದು ತಿಳಿದುಬಂದಿದೆ. ಹಾಗಾಗಿ ಉಪ್ಪಿನ ಸತ್ಯಾಗ್ರಹಕ್ಕೆ ಎಲ್ಲರೂ ಹೊರಟಿದ್ದಾರೆ ಅಂತ ಕೇಳಿತಿಳಿದಿದ್ದೇವೆ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D