Wednesday, February 28, 2007

ಮನುಜಬುದ್ಧಿ ತೋರಿಸಿದ ಶ್ವಾನದ ಉಚ್ಚಾಟನೆ

(ಬೊಗಳೂರು ಬೊಗಳೋ ಬ್ಯುರೋದಿಂದ)
ಬೊಗಳೂರು, ಫೆ.28- ತಪ್ಪು ಮಾಡಿದ ತಮ್ಮ "ಜಾತಿಭ್ರಷ್ಟ" ಕುಲಬಾಂಧವನೊಬ್ಬನಿಗೆ ಶ್ವಾನಗಳೆಲ್ಲಾ ಸೇರಿ ಬಹಿಷ್ಕಾರ ಹಾಕಿದ ಘಟನೆಯೊಂದು ವರದಿಯಾಗಿದೆ.

ಇದುವರೆಗೆ ಮಾನವರು ತಪ್ಪು ಮಾಡಿದಾಗಲೆಲ್ಲಾ ಅವರು "ನಾಯಿಬುದ್ಧಿ" ಎಂದು ಪರಸ್ಪರರನ್ನು ಹೊಗಳುತ್ತಾ ನಮ್ಮ ಕುಲದತ್ತ ತೋರುಬೆರಳು ತೋರಿಸಿ ಕಟಕಿಯಾಡುತ್ತಿದ್ದರು ಎಂದು ಹೇಳಿರುವ ವಿಶ್ವ ಶ್ವಾನ ಸಂಘದ ಅಧ್ಯಕ್ಷ ಮೋತಿ ಕುಮಾರ್ ಅವರು, ಇದೀಗ ನಾವು ಕೂಡ ಮನುಷ್ಯಬುದ್ಧಿ ತೋರಿಸುವ ನಾಯಿಗಳನ್ನು ಹೀಯಾಳಿಸೋಣ ಎಂದು ಪಣ ತೊಟ್ಟಿರುವುದಾಗಿ ಬೌವೌ ಗೋಷ್ಠಿಯೊಂದರಲ್ಲಿ ಪ್ರಕಟಿಸಿದ್ದಾರೆ.

ಇದಕ್ಕೆ ಕಾರಣವಾದ ಘಟನೆ ಇಲ್ಲಿದೆ. ಮನುಷ್ಯರು ಹಣ ಎಗರಿಸುವ ಚಾಕಕಚಕ್ಯತೆಯನ್ನು ನಾಯಿಯೊಂದು "ಬಾಲ-ತಲಾಮಲಕ" ಮಾಡಿಕೊಂಡಿದ್ದು, 60 ಸಾವಿರ ರೂ. ಹಣವನ್ನು ದೋಚಿ ಪರಾರಿಯಾಗಿತ್ತು. ಈ ಕಾರಣಕ್ಕಾಗಿ ಈ ಶ್ವಾನ ಸಂಘದ ಅಧ್ಯಕ್ಷ ಮೋತಿ ಕುಮಾರ್ ನೇತೃತ್ವದಲ್ಲಿ ನಿನ್ನೆ ಮಧ್ಯರಾತ್ರಿ ನಡೆದ ತುರ್ತು ಬೌವೌ ಗೋಷ್ಠಿಯಲ್ಲಿ, ಆ ನಾಯಿಯನ್ನು ಕುಲದಿಂದಲೇ ಉಚ್ಚಾಟಿಸುವ ನಿರ್ಧಾರ ಕೈಗೊಳ್ಳಲಾಯಿತು ಎಂದು ವರದಿ ಮಾಡಲಾಗಿದೆ.

ಈ ಪ್ರಕರಣದಿಂದ ಇದುವರೆಗೆ ಮನುಷ್ಯನ ಆತ್ಮೀಯ ಮಿತ್ರ ಎಂಬ ತೆಗಳಿಕೆಗೆ ಕಾರಣವಾಗಿದ್ದ ಶ್ವಾನ ಸಮುದಾಯ ತಲೆ ಎತ್ತಿ ನಡೆಯುವುದು ಅಸಾಧ್ಯವಾಗಿದೆ. ಇನ್ನು ಮುಂದೆ ಮನುಷ್ಯಬುದ್ಧಿ ತೋರಿಸುವ ನಾಯಿಗಳನ್ನೆಲ್ಲಾ ಸಾಮೂಹಿಕ ಉಚ್ಚಾಟನೆ ಕಾರ್ಯಕ್ರಮಕ್ಕೆ ಒಳಪಡಿಸಲಾಗುತ್ತದೆ ಎಂದು ಮೋತಿ ಕುಮಾರ್ ಅವರು ಮೂತಿಯನ್ನು ಮೇಲಕ್ಕೆ ಮಾಡಿ ಊಳಿಟ್ಟಿದ್ದಾರೆ.

ಈ ನಡುವೆ, ಉಚ್ಚಾಟಿತ ಶ್ವಾನ ಟೈಗರ್ ಕುಮಾರ್, ಕೇಂದ್ರ ಅಮಾನವ ಹಕ್ಕುಗಳ ಆಯೋಗಕ್ಕೆ ಮೊರೆ ಹೋಗಲು ಸಿದ್ಧತೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

Tuesday, February 27, 2007

ಬಜೆಟ್: ರೈಲಿನಲ್ಲಿ ಆಮ್ಲಜನಕ, ಸಂಸದರಿಗೆ ಉದ್ಯೋಗ

(ಬೊಗಳೂರು ರೈಲುಬಿಡುವ ಬ್ಯುರೋದಿಂದ)
ಬೊಗಳೂರು, ಫೆ.27- ಯಾವತ್ತೂ ನಿಧಾನವಾಗಿ ಬಜೆಟ್ ಮಂಡಿಸುವ ಕೇಂದ್ರದಿಂದ ರೈಲು ಬಿಡುವ ಮಂತ್ರಿ ಆಲೂ ಪ್ರಸಾದಿತ ಯಾದವೇಂದ್ರರು ಪ್ರತಿಪಕ್ಷಗಳ ಕೂಗಾಟದ ಮಧ್ಯೆಯೇ ಹಠಬಿಡದ ತ್ರಿವಿಕ್ರಮನಂತೆ ನಿನ್ನೆಯೇ ರೈಲು ಬಜೆಟ್ ಮಂಡಿಸಿದ ಹಿನ್ನೆಲೆ ಏನು ಎಂಬುದು ಪತ್ತೆಯಾಗಿದೆ.

ಬಿಹಾರದಲ್ಲಿರುವ ತಮ್ಮ in-law ಗಳು ಇತ್ತೀಚೆಗೆ out-law ಗಳಾಗುತ್ತಿರುವ ಹಿನ್ನೆಲೆಯಲ್ಲಿ ಅತ್ಯಂತ ಶೀಘ್ರವಾಗಿ ಹೇಗಾದರೂ ಇದಕ್ಕೊಂದು ಗತಿ ಕಾಣಿಸಬೇಕು ಎಂಬ ನಿರ್ಧಾರವೇ ಕಾರಣ ಎಂದು ಬೊಗಳೆ ಬೊಗಳೆ ಪತ್ತೆ ಹಚ್ಚಿದೆ.

ಈ ಬಜೆಟ್ ಮುಖ್ಯಾಂಶಗಳು ಹೀಗಿವೆ:

* In-law ಗಳಿಗೆ ಶೇ.101 ಪ್ರಯಾಣ ದರ ಕಡಿತ. ಇಲ್ಲದಿದ್ದರೆ ರೈಲ್ವೇ ಅಧಿಕಾರಿಗಳಿಗೂ ನಿಜವಾದ "ಕಡಿತ"ದ ಬಿಸಿ.

* ಕೊಳಚೆಯಂತಿರುವ ರೈಲು ನಿಲ್ದಾಣಗಳಲ್ಲಿ ಮೂಗು ಮುಚ್ಚಿಕೊಳ್ಳದೆ ಹೊರಬರುವ ಪ್ರಯಾಣಿಕರಿಗೆ ನೊಬೆಲ್ ಪ್ರಶಸ್ತಿಗೆ ಶಿಫಾರಸು

* ದುರ್ಗಂಧಭರಿತ ರೈಲುಗಳಲ್ಲಿ ರಿಯಾಯಿತಿ ದರದಲ್ಲಿ ಆಮ್ಲಜನಕ (oxygen) ಪೂರೈಕೆ ವ್ಯವಸ್ಥೆ

* 45 ವರ್ಷಕ್ಕಿಂತ ಹೆಚ್ಚು ವಯಸ್ಸಾದವರೇ ತಮ್ಮ ಮತ್ತು ಪಕ್ಷದ ಜನಗಳ In-law ಗಳಾಗುವುದರಿಂದ ಅವರಿಗೆ ಪ್ರಯಾಣ ದರದಲ್ಲಿ ರಿಯಾಯಿತಿ ನೀಡಲಾಗುತ್ತದೆ.

* ರೈಲಿನಲ್ಲಿ ಮಣ್ಣಿನ ಕುಡಿಕೆಯಲ್ಲಿ ಮಜ್ಜಿಗೆ ನೀಡುವ ಯೋಜನೆ ವಿಫಲವಾದ ಕಾರಣ, ಬಡಿಗೆಯಲ್ಲಿ ನೀರಾ (ಬೀರಾ?) ಪೂರೈಸಲಾಗುತ್ತದೆ. ಜತೆಗೆ ಛಂಯ್ಯ ಛಂಯ್ಯ ಹಾಡನ್ನೂ, ಮನರಂಜನೆಯನ್ನೂ ಒದಗಿಸಲಾಗುತ್ತದೆ.

* ಗರೀಬ್ ರಥ ಎಂದು ಹೊಸ ರೈಲು ಬಿಡಲಾಗಿದೆ. ಆದರೆ ಬರೇ ಗರೀಬರೇ ಇದರಲ್ಲಿ ಬರುವುದಿಲ್ಲ, ಅಮೀರರೇ ಇದರಲ್ಲಿ ಹೇಗಾದರೂ ಮಾಡಿ ಬರುತ್ತಾರೆ ಎಂಬುದು ತಮಗೆ ತಿಳಿದಿರುವುದರಿಂದ ಈ ಮೂಲಕ ರೈಲಿನ ಆದಾಯ ಹೆಚ್ಚಳವಾಗುತ್ತದೆ

* ಇಂಥ ಕೊಳೆಗೇರಿಯಂತಿರುವ ರೈಲುಗಳನ್ನು ಹಳಿ ಮೇಲೆ ಬಿಟ್ಟದ್ದರಿಂದಾಗಿಯೇ ಕಳೆದ ಹಣಕಾಸು ವರ್ಷದಲ್ಲಿ 300 ಕೋಟಿ ರೂ. ಆದಾಯವಾಗಿದ್ದರೆ, ಮುಂದಿನ ವರ್ಷಗಳಲ್ಲಿ ಮತ್ತಷ್ಟು ಕೊಳಚೆ ಸೇರಿಸುವ ಮೂಲಕ ಆದಾಯ ಹೆಚ್ಚಿಸಲು ಶತಪ್ರಯತ್ನ.

* ಸಂಸತ್ತಿನಲ್ಲಿ ಕೆಲಸವಿಲ್ಲದೆ ಕೂಗಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಮುಂಬರುವ ವರ್ಷಗಳಲ್ಲಿ ಒಬ್ಬೊಬ್ಬ ಸಂಸದನನ್ನೂ ರೈಲಿನ ಎಂಜಿನ್‌ಗೆ ಕಟ್ಟಿ ಬಿಟ್ಟರೆ ರೈಲಿನ ಕೂ....... ಎಂಬ ಸದ್ದಿಗೆ ಬೇರೆ ಉಪಕರಣದ ಅಗತ್ಯವೇ ಇರುವುದಿಲ್ಲ. ವಿದ್ಯುತ್ತೂ ಉಳಿತಾಯ, ರೈಲು ಚಾಲಕನ ಶ್ರಮವೂ ಉಳಿತಾಯ. ಕೆಲಸವಿಲ್ಲದ ಸಂಸದರಿಗೂ ಹೊಸ ಉದ್ಯೋಗ ದೊರೆತಂತಾಗುತ್ತದೆ.

* ಮಾತ್ರವಲ್ಲ, ಇದುವರೆಗೆ ಕಳೆದ 60 ವರ್ಷಗಳಿಂದಲೂ ಸಂಸತ್ತಿನಲ್ಲಿ ಹಳಿಯಿಲ್ಲದ ರೈಲೇ ಓಡಾಡುತ್ತಿತ್ತು. ಈ ಕಾರಣಕ್ಕೆ ಇದೇ ಹಳಿಯಿಲ್ಲದ ರೈಲುಗಳನ್ನು ಇನ್ನು ಮುಂದೆ ಪ್ರಯಾಣಿಕರ ಸಾಗಾಟಕ್ಕೂ ಉಪಯೋಗಿಸಲಾಗುತ್ತದೆ. ವಿಶೇಷವಾಗಿ ಬೆಂಗಳೂರು-ಮಂಗಳೂರು ರೈಲು ಮಾರ್ಗದಲ್ಲಿ ಈ ಹಳಿಯಿಲ್ಲದ ರೈಲು ಭರ್ಜರಿಯಾಗಿಯೇ ಓಡಾಡುತ್ತಿದೆ. ಇದರಿಂದಾಗಿ ಖಾಸಗಿ ಬಸ್ಸು ಮಾಲೀಕರಿಗೆ ಭರ್ಜರಿ ಆದಾಯ ಉಂಟಾಗುತ್ತದೆ. ಹಾಗಿರುವಾಗ ಬಸ್ಸು ಮಾಲಕರ ಜೇಬಿಗೆ ಕತ್ತರಿ ಹಾಕುವುದು ಸರಿಯಲ್ಲ.

ಈ ಮಧ್ಯೆ, ಶತಕೋಟಿಗಿಂತಲೂ ಹೆಚ್ಚು ಮಂದಿಯನ್ನು ಅತ್ಯಂತ ಅಪರೂಪವಾಗಿ ನಿಶ್ಶಬ್ದವಾಗಿರುವ ಲೋಕಸಭೆಯಲ್ಲಿ ಪ್ರತಿನಿಧಿಸುತ್ತಿರುವವರೆಲ್ಲಾ ಸೇರಿಕೊಂಡು Adults Only ಚಲನಚಿತ್ರದ ಶೂಟಿಂಗ್‌ಗೆ ಅವಕಾಶ ಮಾಡಿಕೊಟ್ಟಿದ್ದರು ಎಂಬುದನ್ನು ಇಲ್ಲಿ ಪತ್ತೆ ಹಚ್ಚಲಾಗಿದೆ.

Friday, February 23, 2007

ಆನೆಗಳಿಗೆ ಚಳ್ಳೆಹಣ್ಣು ತಿನ್ನಿಸುವ ಯತ್ನ ವಿಫಲ

(ಬೊಗಳೂರು ಚಳ್ಳೆಹಣ್ಣು ಬ್ಯುರೋದಿಂದ)
ಬೊಗಳೂರು, ಫೆ.23- ಆನೆಗಳು ಆಹಾರ ಹುಡುಕಿಕೊಂಡು ಸಮೃದ್ಧವಾದ ಬೆಳೆ ಇರುವಲ್ಲಿಗೇ ಹೋಗುತ್ತವೆ. ಇದಕ್ಕಾಗಿ ಅವುಗಳಿಗೆ ಚಳ್ಳೆಹಣ್ಣನ್ನೇ ಬೆಳೆಯಲು ಜಾರೋಖಂಡದ ಜನತೆ ನಿರ್ಧರಿಸಿರುವುದು ಚಳ್ಳೆಹಣ್ಣು ತಿನ್ನುವವರಿಗೆ ನುಂಗಲಾರದ ತುಪ್ಪವಾಗಿ ಪರಿಣಮಿಸಿದ್ದರೂ, ಅದು ನಿಧಾನವಾಗಿ ವಿಫಲವಾಗುತ್ತಿರುವುದು ಬೆಳಕಿಗೆ ಬರತೊಡಗಿದೆ.

ತಾವೆಲ್ಲ ಕಷ್ಟಪಟ್ಟು ಬೆವರು ಸುರಿಸಿ ಸಂಪಾದಿಸಿದ ಹಣವನ್ನು ನುಂಗಲು ಬರುವ ಈ ಆನೆಗಳು, ಕೊಡಲು ಒಪ್ಪದವರ ಮೇಲೆ ಜಡಿದು ಒಳಗೆ ಹಾಕುತ್ತವೆ ಅಥವಾ ಬೂಟುಕಾಲಿನಿಂದ ತುಳಿಯುತ್ತವೆ. ಈ ಸಮಸ್ಯೆಗೆ ಸೂಕ್ತವಾದ ಪರಿಹಾರವನ್ನು ಅಧಿಕಾರದ ಕುರ್ಚಿ ಜಾರುತ್ತಲೇ ಇರುವ ಜಾರೋಖಂಡದ ಜನತೆ ಕಂಡುಹುಡುಕಿರುವುದರಿಂದ ಬಿಳಿಆನೆಗಳು ಕಂಗಾಲಾಗಿವೆ ಎಂದು ತಿಳಿದುಬಂದಿದೆ.

ಆದರೂ ಆನೆಗಳು ತಿನ್ನುವುದಿಲ್ಲ ಎಂದು ತಾವು ಸಾಸಿವೆ, ಮೂಲಂಗಿ ಇತ್ಯಾದಿ ಅಪಥ್ಯ ಬೆಳೆಗಳನ್ನು ಬೆಳೆದರೂ ಈ ಆನೆಗಳು ಖಂಡಿತಾ ಅವುಗಳಲ್ಲಿಯೂ ಪಾಲು ಕೇಳುತ್ತವೆ ಎಂಬುದು ಈ ರೈತರಿಗೆ ತಡವಾಗಿ ಜ್ಞಾನೋದಯವಾಗತೊಡಗಿದೆ.

ಚಳ್ಳೆಹಣ್ಣು ತಿಂದ ಆನೆಗಳು ತಮ್ಮತ್ತ ತಿರುಗಿಯೂ ನೋಡುವುದಿಲ್ಲ ಎಂಬ ಅವರ ವಿಶ್ವಾಸದ ಸೌಧವು ಕುಸಿದುಬಿದ್ದಿದೆ. ಆನೆಗಳು ಸ್ವಲ್ಪವಾದರೂ ಏನನ್ನಾದರೂ ಕೊಡುವಂತೆ ಕೈಚಾಚತೊಡಗಿವೆ ಎಂಬುದನ್ನು ಬೊಗಳೂರು ಬ್ಯುರೋ ಪತ್ತೆ ಹಚ್ಚಿದೆ.

ಇದೀಗ ಆನೆಗಳ ದಾಳಿಗೆ ಕಡಿವಾಣ ಹಾಕಲು ಸರಕಾರಗಳೂ ವಿಫಲವಾಗಿದೆ. ಬಿಸಿಯಾಗದೆ ಬೆಣ್ಣೆ ಕರಗದು ಎಂಬಂತೆ ಈ ಬಿಳಿಯಾನೆಗಳ ಕೈಗೆ ಬಿಸಿ ಮುಟ್ಟಿಸದಿದ್ದರೆ ಕೆಲಸವೇ ನಡೆಯದಿರುವುದರಿಂದ ಚಳ್ಳೆಹಣ್ಣುಗಳೊಂದಿಗೆ ಇತರ ಫಲಾ-ಫಲಗಳನ್ನೂ ನೀಡಲು ಜನತೆ ನಿರ್ಧರಿಸಿದ್ದಾರೆ.

Thursday, February 22, 2007

Sexpress ಹೆದ್ದಾರಿ ಲೋಕಾರ್ಪಣೆ

(ಬೊಗಳೂರು ಜಾಮ್ ಶೋಧನಾ ಬ್ಯುರೋದಿಂದ)
ಬೊಗಳೂರು, ಫೆ.22- ಇತ್ತೀಚೆಗೆ ವಿಶ್ವಾದ್ಯಂತ ರಸವತ್ತಾದ ಜಾಮ್ ತಯಾರಿಕೆಗಳು ಹೆಚ್ಚಾಗುತ್ತಿದ್ದು, ಹೊಸ ಸೇರ್ಪಡೆ ಇಲ್ಲಿದೆ. ಇದು ಹೊಸ ಮಾದರಿಯ ಟ್ರಾಫಿಕ್ ಎಂಬ ಬ್ರಾಂಡಿನ ಜಾಮ್ ಆಗಿದ್ದು, ಇದರ ಹಿಂದೆ ಏನು ಅಡಗಿದೆ ಎಂಬುದನ್ನು ಪತ್ತೆ ಹಚ್ಚಲು ಬೊಗಳೆ ರಗಳೆ ಬ್ಯುರೋ ಹರೋಹರ ಸಾಹಸ ಮಾಡಿತು.

ಇತ್ತೀಚೆಗಷ್ಟೇ ಬೊಗಳೆಯಲ್ಲಿ ಮಹಾನಗರಗಳಲ್ಲಿ ಟ್ರಾಫಿಕ್ ಜಾಮ್‌ಗೆ ಕಾರಣಗಳನ್ನು ಪತ್ತೆ ಹಚ್ಚಿ ಅರಿಭಯಂಕರ ತನಿಖಾ ವರದಿಯೊಂದನ್ನು ಪ್ರಕಟಿಸಲಾಗಿತ್ತು. ಇದಕ್ಕೂ ಹಿಂದೆ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಉದ್ಯಮ ಸ್ಥಾಪಿಸುವ ಕುರಿತಾದ ವಿಷಯಗಳನ್ನೂ ಬಯಲಿಗೆಳೆಯಲಾಗಿತ್ತು. ಬೊಗಳೆ ಬ್ಯುರೋ ಬರೇ ಬೊಗಳೆಯನ್ನೇ ಬಿಡುತ್ತಿದೆ ಎಂದು ಸಾಬೀತುಪಡಿಸಲು ತಾವು ಈ ಜಾಮ್ ಮಾಡಿರುವುದಾಗಿ ಕಾರಿನೊಳಗಿದ್ದ ಜೋಡಿ ಬಾಯಿಬಿಟ್ಟಿದೆ.

ಇನ್ನೊಂದು ಕಾರಣವನ್ನೂ ಈ ಜೋಡಿ ಬೊಗಳಿದೆ. ಅದು ಫಾಸ್ಟ್ ಲೇನ್ ಹೆದ್ದಾರಿಯಾಗಿದ್ದುದರಿಂದ ಇದರಲ್ಲಿ ಸಾಕಷ್ಟು ವಾಹನಗಳು ಭರ್ರನೇ ಧಾವಿಸುತ್ತವೆ. ಇದರಿಂದ ಅಪಘಾತಗಳಾಗುವ ಸಾಧ್ಯತೆ ಹೆಚ್ಚು ಈ ಟ್ರಾಫಿಕ್ ಜಾಮನ್ನು ಹೆದ್ದಾರಿ ಮಧ್ಯೆ ಹಚ್ಚಿದರೆ ಈ ಅಪಘಾತ ನಿಯಂತ್ರಣವಾಗುತ್ತದೆ ಎಂಬುದೂ ತಮ್ಮ ಉದ್ದೇಶಗಳಲ್ಲೊಂದಾಗಿತ್ತು ಎಂದವರು ಹೇಳಿದ್ದಾರೆ.

ಇದರಿಂದ ಆನಂದತುಂದಿಲರಾಗಿರುವ ಹೆದ್ದಾರಿ ಇಲಾಖೆಯವರು, ಈ ಹೆದ್ದಾರಿಗೆ Sexpress Lane ಎಂದು ನಾಮಕರಣ ಮಾಡಿ ಅದನ್ನು ಲೋಕಾರ್ಪಣೆ ಮಾಡಿದ್ದಾರೆ ಎಂದು ನಮ್ಮ someಶೋಧ'ಕರು'ಗಳು ತಿಳಿಸಿದ್ದಾರೆ.

Wednesday, February 21, 2007

ಸ್ಪಷ್ಟನೆಗಳ ಮಹಾಪೂರ

(ಬೊಗಳೂರು ಸ್ಪಷ್ಟನೆ ಬ್ಯುರೋದಿಂದ)
ಬೊಗಳೂರು, ಫೆ.21- ನಮ್ಮ ನಿನ್ನೆಯ ಸುದ್ದಿಗೆ ತೀವ್ರವಾಗಿ ಪ್ರತಿಕ್ರಿಯಿಸುವ ಧಾರಾವಾಹಿ ನಿರ್ದೇಶಕರು, ಕನಿಷ್ಠ ಒಬ್ಬ ವ್ಯಕ್ತಿಗೆ ಇಬ್ಬರು ಹೆಂಡಿರಿಲ್ಲದ ಕಣ್ಣೀರ-ಧಾರಾವಾಹಿಯನ್ನು ನಿರ್ಮಿಸುವುದು ಅಸಾಧ್ಯವಾಗಿದೆ ಎಂದು ತಪ್ಪೊಪ್ಪಿಕೊಂಡಿದ್ದಾರೆ.

ಮಾತ್ರವಲ್ಲದೆ, ರಬ್ಬರ್ ಕಂಪನಿಗಳು ತಮ್ಮನ್ನು ಹುಡುಕುತ್ತಿವೆ ಎಂಬ ಸುದ್ದಿ ಸುಳ್ಳು, ನಾವೇ ರಬ್ಬರ್ ಕಂಪನಿಗಳನ್ನು ಹುಡುಕುತ್ತಿದ್ದು, ಅತ್ಯುತ್ತಮ ರಬ್ಬರ್ ಯಾವುದು ಮತ್ತು ಅದನ್ನು ಯಾವ ರೀತಿ ಎಳೆಯಬಹುದು ಎಂಬುದನ್ನು ಸಂಶೋಧಿಸಬೇಕಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಚಾನೆಲ್ ಮಾಲಿಕರ ಸ್ಪಷ್ಟನೆ

ಇನ್ನೊಂದೆಡೆಯಿಂದ ಚಾನೆಲ್ ಮಾಲೀಕರು ಸ್ಪಷ್ಟನೆ ನೀಡಿ, ಜಾಹೀರಾತುಗಳ ನಡುನಡುವೆ ಧಾರಾವಾಹಿಗಳನ್ನು ಪ್ರದರ್ಶಿಸಲು ತಾವು ಎಷ್ಟು ಕಷ್ಟಪಡುತ್ತಿದ್ದೇವೆ ಎಂಬುದು ನಮಗೇ ಗೊತ್ತು. ವೀಕ್ಷಕರಿಗೆ ಅರ್ಧ ಗಂಟೆಯ ಅವಧಿಯಲ್ಲಿ ಕನಿಷ್ಠ 5-10 ನಿಮಿಷವಾದರೂ ಧಾರಾವಾಹಿ ತೋರಿಸಬೇಕೆಂಬುದು ನಮ್ಮ ಪ್ರಬಲ ಇಚ್ಛೆ ಎಂದು ಹೇಳಿದ್ದಾರೆ.

ಸಂಘೀಥ ಣಿರ್ಧೇಷಖರ ಸ್ಪಷ್ಟನೆ

ಧಾರಾವಾಹಿಗಳ ಮಧ್ಯೆ ಮಧ್ಯೆ ಝಾಂಯ್.... ಠೈಂಯಯಯ್... ಧಡ್... ಧಢಾರ್... ಲಬ್---ಡಬ್... ಎಂಬಿತ್ಯಾದಿ ಖರ್ಣ ಖಠೋರ ಸಂಗೀತವನ್ನು ಅಳವಡಿಸದಿದ್ದರೆ ಪ್ರೇಕ್ಷಕರೆಲ್ಲಿ ನಿದ್ದೆ ಹೋಗಿ ಅಮೂಲ್ಯವಾದ ಸಂಭಾಷಣೆಯೊಂದನ್ನು ಕಳೆದುಕೊಳ್ಳುತ್ತಾರೋ ಎಂಬುದು ನಮಗೆ ಭಯ. ಅದಕ್ಕಾಗಿ ಈ ರೀತಿ ಕಿವಿಗಡಚಿಕ್ಕುವ ಮೆಲುದನಿಯ ಸಂಗೀತವನ್ನು ಅಳವಡಿಸುತ್ತಿದ್ದೇವೆ ಎಂದು ಸಂಗೀತ ನಿರ್ದೇಶಕರು ಸ್ಪಷ್ಟಿಸಿದ್ದಾರೆ.

Tuesday, February 20, 2007

ಧಾರಾವಾಹಿಯ End ಗೆ ಹಪಹಪಿಸಿ ಕುಳಿತಲ್ಲೇ ಮರಗಟ್ಟಿದ!

(ಬೊಗಳೂರು ಚೂಯಿಂಗ್‌ಗಮ್ ಬ್ಯುರೋದಿಂದ)
ಬೊಗಳೂರು, ಫೆ.20- ಕನ್ನಡದಲ್ಲಿ ಬರುತ್ತಿರುವ ಧಾರಾವಾಹಿಗಳನ್ನು ನೋಡುತ್ತಲೇ ಜೀವನವನ್ನು ತ್ಯಾಗ ಮಾಡಿದ ಮಹಾನ್ ವ್ಯಕ್ತಿಯ ಮಮ್ಮಿಯನ್ನು ಇಲ್ಲಿ ಪತ್ತೆ ಹಚ್ಚಲಾಗಿದೆ.

ಇನ್ನೇನು, ಇದರ ಸಿಹಿ ಎಲ್ಲಾ ಮುಗಿಯಿತು, ಇನ್ನು ಉಗಿದುಬಿಡೋಣ ಎಂದು ವೀಕ್ಷಕರು ಅಂದುಕೊಳ್ಳುವಷ್ಟರಲ್ಲಿ ಚೂಯಿಂಗ್ ಗಮ್‌ಗೆ ಅದೆಲ್ಲಿಂದ ಸಿಹಿ ಬರುತ್ತದೋ.... ಮತ್ತೆ ಬೇರೆಯೇ ತಿರುವು ಪಡೆದುಕೊಂಡು ಉದ್ದ ಆಗುತ್ತಲೇ ಇದ್ದ ಧಾರಾವಾಹಿಯೊಂದನ್ನು ನೋಡಿ ನೋಡಿ ಈ ವ್ಯಕ್ತಿ ಈ ರೀತಿಯಾಗಿದ್ದಾನೆ ಎಂದು ಬೊಗಳೂರು ಬೊಗಳೆ ಬ್ಯುರೋ ಪತ್ತೆ ಹಚ್ಚಿದೆ.

ಈ ಧಾರಾವಾಹಿಗಳು ಅತ್ಯುತ್ತಮ ಸಂದೇಶವನ್ನು ಜನರಿಗೆ ನೀಡುತ್ತಿವೆ. ಇಬ್ಬರು ಹೆಂಡಿರಿದ್ದರೆ ತಪ್ಪಲ್ಲ, ವಿವಾಹಿತರಾಗಿ ವಿವಾಹೇತರ ಸಂಬಂಧ ತಪ್ಪಲ್ಲ, ಪತ್ನಿಯೂ ಪರಪುರುಷನ ಜತೆ ಓಡಿ ಹೋದರೆ ತಪ್ಪಲ್ಲ ಎಂಬಿತ್ಯಾದಿ ಅಮೂಲ್ಯ ಮಾನವೀಯ ಮೌಲ್ಯಗಳ ಸಂದೇಶವನ್ನು ಜನತೆಗೆ ನೀಡುತ್ತಿರುವ ಧಾರಾವಾಹಿಗಳು ಬಿಟ್ಟಿರಲಾರದ ವ್ಯಸನದಂತೆ ಮನುಷ್ಯನಿಗೆ ಅಂಟಿಕೊಂಡುಬಿಟ್ಟಿವೆ. ಹಾಗಾಗಿ ಸಾಯೋ ಕಾಲದಲ್ಲೂ ಟಿವಿ ಧಾರಾವಾಹಿಯೊಂದು ಮುಗಿಯುತ್ತದೆ ಎಂದು ಕಾದು ಕೂತ ವ್ಯಕ್ತಿ, ಧಾರಾವಾಹಿ ಮುಗಿಯುವವರೆಗೂ ಕಾದರೆ ಈ ಲೋಕವೇ ಗತಿ ಎಂದುಕೊಂಡು ಕುಳಿತಲ್ಲೇ ಪರಲೋಕಕ್ಕೆ ತೆರಳಿರುವುದಾಗಿ ಅಸತ್ಯಾನ್ವೇಷಿ ವರದಿ ಮಾಡಿದ್ದಾನೆ.

ಇದೂ ಅಲ್ಲದೆ ಹೆಂಗಸರು ಅಳುವುದು ಸಾಮಾನ್ಯ... ಅದರ ಬಗ್ಗೆ ತಲೆಕೆಡಿಸಿಕೊಳ್ಳಬೇಕಿಲ್ಲ... ಯಾವತ್ತಿದ್ದರೂ ಅವರು ಅಳುತ್ತಿರುತ್ತಾರೆ ಎಂಬ ಸಂದೇಶ ಕೂಡ ಈ ಧಾರಾವಾಹಿಯಲ್ಲಿದ್ದು, ಕಣ್ಣೀರು ಹರಿಯದ, ಸುಪ್ತ ಭಾವನೆಗಳನ್ನು ಕೆರಳಿಸದ ಧಾರಾವಾಹಿಗಳನ್ನು ಪ್ರಸಾರ ಮಾಡದಿರಲು ಚಾನೆಲ್‌ಗಳು ಕೂಡ ನಿರ್ಧರಿಸಿವೆ ಎಂದು ತಿಳಿದುಬಂದಿದೆ.

ಯಾವ ರೀತಿಯಲ್ಲಿ ಮನೆಯಲ್ಲಿ ಸುಳ್ಳು ಹೇಳಬೇಕು, ಯಾವ ರೀತಿ ಬೈಯಬೇಕು ಎಂಬಿತ್ಯಾದಿಗಳನ್ನೂ ಧಾರಾವಾಹಿ ಹೇಳಿಕೊಡುತ್ತಿದ್ದು ಕೊನೆ ಕ್ಷಣದಲ್ಲಿ ಈ ಧಾರಾವಾಹಿಯ ಅಂತ್ಯ ಹೇಗಿದೆ ಎಂಬುದನ್ನು ನೋಡಲು ಅಸಾಧ್ಯವಾಗಿ ಪರಲೋಕ ಸೇರಿದ ಈ ವ್ಯಕ್ತಿಯ ಅಂತಿಮ ಇಚ್ಛೆ ಈಡೇರದ ಕಾರಣ, ಆತ ಇನ್ನೂ ಮನೆ ಮನೆಗಳಲ್ಲಿ ಆಗಾಗ್ಗೆ ಧಾರಾವಾಹಿ ನೋಡಲು ದೆವ್ವರೂಪದಲ್ಲಿ ಬರುತ್ತಿರುತ್ತಾನೆ ಎಂದು ಪ್ರಸಿದ್ಧ ಮಂತ್ರ-ತಂತ್ರ ಧಾರಾವಾಹಿ ನಿರ್ಮಾಪಕರೊಬ್ಬರು ಕಥೆ ಹೆಣೆಯತೊಡಗಿದ್ದಾರೆ.

ಇದರ ಮಧ್ಯೆಯೇ, ಧಾರಾವಾಹಿ ನಿರ್ದೇಶಕರು ಮತ್ತು ನಿರ್ಮಾಪಕರಿಗಾಗಿ ತೀವ್ರ ಶೋಧ ನಡೆಸಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಹೊಂದಿರುವ ರಬ್ಬರ್ ಕಂಪನಿಗಳ ಮುಖ್ಯಸ್ಥರು ಬೆಂಗಳೂರಿಗೆ ಬಂದಿದ್ದಾರೆ ಎಂಬ Exclusive ವರದಿಯನ್ನು ಬೊಗಳೆ ರಗಳೆ ಬ್ಯುರೋ ಪತ್ತೆ ಹಚ್ಚಿದೆ.

Monday, February 19, 2007

ಕಾಂ-guessನ Midnight Masalaಕ್ಕೆ ತಡೆ

(ಬೊಗಳೂರು Poly-Tricks ಬ್ಯುರೋದಿಂದ)
ಬೊಗಳೂರು, ಫೆ.19- ತತ್ತರ ಪ್ರದೇಶದಲ್ಲಿ ಕಾನೂನು ಮತ್ತು ಅವ್ಯವಸ್ಥೆಗಳು ಸುಸ್ಥಿತಿಯಲ್ಲಿರುವುದರಿಂದ ಅಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲು ಉತ್ಸುಕತೆಯಲ್ಲಿರುವ calm-guessಗೆ ಎಡಪಕ್ಷಗಳು ಚೇಳಿನಿಂದ ಕುಟುಕತೊಡಗಿವೆ.

ಇದಕ್ಕೆ ಕಾರಣವೆಂದರೆ ಕೇಂದ್ರದ Unprecedented Price Agenda ಇರುವ ಸರಕಾರದ ನೀತಿಗಳಿಂದಾಗಿ ಈಗಾಗಲೇ ತತ್ತರಗೊಂಡಿರುವ ನಾಗರಿಕರು ಮುಂದಿನ ಚುನಾವಣೆಗಳಲ್ಲಿ ತಮ್ಮ ಮತ್ತು ಕಾಂಗ್ರೆಸ್‌ನ duet ಸಂಗೀತಕ್ಕೆ ತಡೆಯೊಡ್ಡುವರು ಎಂಬ ಭೀತಿ ಕಾರಣವಾಗಿದೆ ಎಂದು Common Price Maximum ಪೋಲೀಸ್ ಬ್ಯುರೋದ ಅಪ್ರಧಾನ ಕಾರ್ಯದರ್ಶಿಗಳು ಬೊಗಳೆ ರಗಳೆಗೆ ಗುಟ್ಟಾಗಿ ಫ್ಯಾಕ್ಸ್ ಮಾಡಿದ್ದಾರೆ.

ಇದಲ್ಲದೆ ತಮ್ಮ ಡ್ಯುಯೆಟ್ ಈವೆಂಟ್‌ಗೆ ಮಿಡ್‌ನೈಟ್ ಮಸಾಲಾ ಹಚ್ಚಬಾರದು ಎಂದೂ ಅವರು ಎಚ್ಚರಿಕೆ ನೀಡಿದ್ದಾರೆ. ಈ ಹಿಂದೆ ಬಿಹಾರದಲ್ಲಿ ಮಿಡ್‌ನೈಟ್ ಮಸಾಲಾ ಏರ್ಪಡಿಸಿದ ಕಾರಣದಿಂದಾಗಿ ಮತ್ತು ಜಾರ್ಖಂಡ್ ಹಾಗೂ ಗೋವಾಗಳಲ್ಲೂ ಪ್ರತಿಪಕ್ಷಗಳು ಇನ್ನೇನು ಅಧಿಕಾರದ ಸಿಂಹಾಸನವನ್ನೇರುತ್ತಿವೆ ಎಂದಾದಾಗ ಕಾಲಡಿಯ ರತ್ನಗಂಬಳಿಯನ್ನು ಎಳೆದು ಸಂವಿಧಾನದ 356ನೇ ವಿಧಿಯನ್ನು ಸಮರ್ಪಕವಾಗಿ ಪ್ರಯೋಗಿಸಿದ ಕಾರಣದಿಂದಾಗಿ ಇಡೀ ವಿಶ್ವವೇ Calm-guess ನ ಕ್ರಮವನ್ನು ಕ್ಯಾಕರಿಸಿ ಕೊಂಡಾಡಿದ್ದವು.

ಆದರೆ ಈ ಬಾರಿ ಈ ರೀತಿ ಮಾಡಿದರೆ ನಿಮ್ಮ ಪಕ್ಷಾಧ್ಯಕ್ಷರು ಹೋದೆಡೆಯಲ್ಲೆಲ್ಲಾ ಕೈಬೀಸುತ್ತಿರುವಂತೆ ಮುಂಬರುವ ಚುನಾವಣೆಗಳಲ್ಲಿ ನಮಗೂ ಮತದಾರರು ಕೈಬೀಸಿ ಕೃತಜ್ಞತೆ ವ್ಯಕ್ತಪಡಿಸಲಿದ್ದಾರೆ ಎಂದು Common Price Maximum ಪಕ್ಷವು ಆತ್ಮೀಯವಾಗಿ ಜ್ಞಾಪಿಸಿದೆ.

ಆದರೆ ತಮಗೆ ಬೇಡವಾಗಿರುವುದನ್ನು ನಿವಾರಿಸಲು ಸಂವಿಧಾನದ 356ನೇ ವಿಧಿಯೇ ಒಂದು ಮುಲಾಮು ಆಗಿದ್ದು, ಈಗ ತತ್ತರ ಪ್ರದೇಶದ ಮುಲಾಮಿಗೆ ಈ ಮುಲಾಮೇ ಮದ್ದು ಅಲ್ಲವೇ ಎಂದು ಕಾಂ-guess ಏನೂ ಅರಿಯದ ಮುಗ್ಧನಂತೆ ಇನ್ನೂ ಪ್ರಶ್ನಿಸುತ್ತಿದೆ. ಇದು ಏಕೆ ಎಂಬುದೇ ಅರ್ಥವಾಗುತ್ತಿಲ್ಲ ಎಂದು ಅಪ್ರಧಾನ ಕಾರ್ಯದರ್ಶಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.

Friday, February 16, 2007

ಕರೋಡ್‌ಪತಿ ಬದಲು ರೋಡ್ ಪತಿಯಾದ ಅಧಿಕಾರಿ

(ಬೊಗಳೂರು ರೋಡ್‌ಪತಿ ಬ್ಯುರೋದಿಂದ)
ಬೊಗಳೂರು, ಫೆ.16- ಸರಕಾರಿ ಕೆಲಸದಲ್ಲಿ ಸಾಕಷ್ಟು ಕಮಾಯಿ ಆಗದ ಕಾರಣದಿಂದಾಗಿಯೇ ತಾನು ಕೌನ್ ಬನೇಗಾ ಕರೋಡ್‌ಪತಿಯಲ್ಲಿ ಭಾಗವಹಿಸಲು ತೆರಳಿರುವುದಾಗಿ, ಕೆಲಸ ಕಳೆದುಕೊಂಡು ಬೀದಿಗೆ ಬಿದ್ದು ಈಗ ರೋಡ್‌ಪತಿಯಾಗಿಬಿಟ್ಟಿರುವ ಸರಕಾರಿ ಅಧಿಕಾರಿಯೊಬ್ಬರು ಬೊಗಳೆ ರಗಳೆ ಬ್ಯುರೋದೆದುರು ಸ್ಪಷ್ಟಪಡಿಸಿದ್ದಾರೆ.

ಇತ್ತೀಚೆಗೆ ಜನರಿಗೆ ಏನೋ ಆಗಿದೆ. ಸರಿಯಾಗಿ ಗಿಂಬಳವನ್ನು ಪಾವತಿಸಲು ಹಿಂದೆ ಮುಂದೆ ನೋಡುತ್ತಾರೆ. ಇಂಥವರಿಗೆಲ್ಲಾ ಯಾವಾಗ ಬುದ್ಧಿ ಬರುತ್ತೋ ಎಂಬುದು ತಿಳಿಯದಂ ಕಂಗಾಲಾಗಿ ತಾನು ಇಲ್ಲಿಗಿಂತ ಹೆಚ್ಚು ಕಮಾಯಿಸೋಣ ಎಂದು ಕೌನ್ ಬನೇಗಾದಲ್ಲಿ ಭಾಗವಹಿಸಲು ರಜೆಗಾಗಿ ಕೇಳಿದೆ. ಥೂ... ಅವರೂ ರಜೆ ಕೊಡಲು ನಿರಾಕರಿಸುವುದೇ? ನಮ್ಮ ಹಣೆ ಬರಹ ಹೇಗೂ ನೆಟ್ಟಗಿಲ್ಲ ಎಂಬುದು ಖಚಿತವಾದ ಕಾರಣವೇ ಕೆಬಿಸಿ-2ಗೆ ನೇರವಾಗಿ ತೆರಳಿದೆ ಎಂದು ಆತ ಹೇಳಿದ್ದಾನೆ.

ಕೆಬಿಸಿಯಲ್ಲಾದರೆ ಸಿಕ್ಕಾಪಟ್ಟೆ ಪ್ರಶ್ನೆ ಕೇಳುತ್ತಾರೆ. ಮಂಡೆ ಖರ್ಚು ಮಾಡಬೇಕಾಗುತ್ತದೆ. ತಲೆ ಕೆಡಿಸಿಕೊಳ್ಳಬೇಕಾಗುತ್ತದೆ. ಸುಮ್ಮನೆ ಕುಳಿತರೆ ಯಾವುದೇ ದುಡ್ಡು ಸಿಗುವುದಿಲ್ಲ. ಅದಕ್ಕಿಂತ ಸರಕಾರಿ ಕೆಲಸವೇ ಮೇಲು. ಸ್ವಲ್ಪಾನೂ ತಲೆ ಉಪಯೋಗಿಸಬೇಕಿಲ್ಲ. ಸುಮ್ಮನೆ ಕುಳಿತರೆ ದುಡ್ಡು ಬರುತ್ತದೆ ಎಂದು ಜ್ಞಾನೋದಯವಾಗಿರುವ ಆತ, ಕರೋಡ್‌ಪತಿಗಿಂತ ಸರಕಾರಿ ಕೆಲಸವೇ ಮೇಲು ಎಂದುಕೊಂಡು ಪುನಃ ಆ ಕೆಲಸಕ್ಕೆ ಅರ್ಜಿ ಹಾಕುತ್ತಿರುವುದಾಗಿ ತಿಳಿಸಿದ್ದಾನೆ.

ಇದೀಗ ಆತ ಕೆಲಸ ಸಿಗುವವರೆಗೂ ಮತ್ತೆ ಟಿವಿ ಎದುರು ಕೂತಿರಲು ದೃಢ ನಿಶ್ಚಯ ಮಾಡಿದ್ದಾನೆ.

Thursday, February 15, 2007

ಫೆಬ್ರ"ವರಿ" 14ರ ವಿಫಲ ಪ್ರೇಮ ದಿನಾಚರಣೆ

(ಬೊಗಳೂರು ಹಳಸಲು ಸುದ್ದಿ ಬ್ಯುರೋದಿಂದ)
ಬೊಗಳೂರು, ಫೆ.15- ವಿಶ್ವಾದ್ಯಂತ ವಿಫಲ ಪ್ರೇಮಿಗಳ ದಿನವನ್ನು ನಿನ್ನೆ ಸಂಭ್ರಮ ಸಡಗರದಿಂದ ಆಚರಿಸಲಾಯಿತು.

ವಿವಿಧೆಡೆಗಳಿಂದ ನಮ್ಮ ವದರಿಗಾರರು ಕಳುಹಿಸಿರುವ ವದರಿಯ ಪ್ರಕಾರ, ಇತ್ತೀಚೆಗಷ್ಟೇ ಭಾರತಕ್ಕೆ ಅಂಟಿಕೊಂಡಿರುವ ಫೆಬ್ರವರಿ ತಿಂಗಳಲ್ಲಿ ನಡೆಯುವ ಆ ಆಚರಣೆಯು ನಿಜಕ್ಕೂ ವರಿ ಮಾಡಿಕೊಂಡ"ವರಿ"ಗೆಲ್ಲಾ ತರಾ"ವರಿ" ವಿಧಾನಗಳಲ್ಲಿ ಆತ್ಮಕ್ಕೆ ಶಾಂತಿ ಮಾಡಿಸಿಕೊಳ್ಳುವ ಅವಕಾಶವೂ ಹೌದು ಎಂಬುದನ್ನು ತಿಳಿದುಕೊಳ್ಳಲಾಗಿದೆ.

ವಿಫಲ ಪ್ರೇಮಿಗಳೆಲ್ಲರೂ ಈ ದಿನವನ್ನು ತಮ್ಮ ಹಳೆ ನೆನಪುಗಳನ್ನು ಮೆಲುಕು ಹಾಕಿಕೊಳ್ಳುತ್ತಾ ಸಂತೋಷದಿಂದ ಆಚರಿಸಿಕೊಂಡರು. ಅವರಲ್ಲೊಬ್ಬ ವಿಫಲೇಶನನ್ನು ಮಾತನಾಡಿಸಿದಾಗ, ಆತ ತನ್ನ ಸವಿನೆನಪುಗಳನ್ನು spam ವರದಿಗಳಿಂದಲೇ ಬೇಳೆ ಬೇಯಿಸಿಕೊಳ್ಳುತ್ತಿರುವ ಬೊಗಳೆ ರಗಳೆ ಬ್ಯುರೋದೆದುರು ಬಿಚ್ಚಿಟ್ಟ.

ತಾನು ಪ್ರೀತಿಸಿದ ಹುಡುಗಿಗೆ ಕಳೆದ ಫೆ.14ರಂದು ಪಕ್ಕದ ಮನೆಯ ತೋಟದಲ್ಲಿ ಬೆಳೆದಿದ್ದ ಸುಂದರ ಗುಲಾಬಿಯೊಂದನ್ನು ಬೆಳಗ್ಗೆ ಎದ್ದ ತಕ್ಷಣ ಕೊಟ್ಟಾಗ, ಗಬಕ್ಕನೆ ಅದನ್ನು ಸೆಳೆದುಕೊಂಡು ಥ್ಯಾಂಕ್ಸ್ ಸಹ ಹೇಳದೆ ಬಿರಬಿರನೆ ಧಾವಿಸಿದ ಆಕೆ, ಪಕ್ಕದ ಮನೆಯಾತ ನೀಡಿದ ಗುಲಾಬಿಯೊಂದಿಗೆ ಅದನ್ನು exchange ಮಾಡಿಕೊಂಡ ಸಂಭ್ರಮವನ್ನು ಆತ ವಿವರಿಸಿದ. ಹೀಗಾಗಿ ತಾನು ಪ್ರತಿವರ್ಷ ಈ ದಿನವನ್ನು ತನ್ನ ಪ್ರೇಮ ವೈಫಲ್ಯ ದಿನವಾಗಿ ಆಚರಿಸಿಕೊಳ್ಳುತ್ತಿರುವುದಾಗಿ ಆತ ಸಮಜಾಯಿಷಿ ನೀಡಿದ.

ಕಾಲೇಜು ಪರಿಸರದಲ್ಲೇ ಈ ರೀತಿಯ ದಿನವನ್ನು ಆಚರಿಸಿಕೊಳ್ಳುತ್ತಿರುವರ ಸಂಖ್ಯೆ ಹೆಚ್ಚಾಗಿದ್ದುದರಿಂದಾಗಿ ಬೊಗಳೆ ರಗಳೆ ಬ್ಯುರೋ ಭೇಟಿ ನೀಡಿದ ಶ್ರೀ ಪ್ರೇಮೇಶ್ವರ ಕಾಲೇಜು (ಎಸ್‌ಪಿಎಂ) ಕೆಂಗುಲಾಬಿಗಳಿಂದಲೇ ತುಂಬಿಕೊಂಡಿದ್ದು, ಕಾಲೇಜು ಪರಿಸರದ ಜತೆಗೆ ಕಾಲೇಜು ಹುಡುಗಿಯರ ಕೆನ್ನೆ ಕೆಂಪಾಗಿದ್ದರೆ, ಮೇಲೆ ಹೇಳಿದ ಮಾದರಿಯಲ್ಲಿ ಪ್ರೇಮ-exchangeನಿಂದ ನೊಂದವರ ಕಣ್ಣುಗಳ ತುಂಬಾ ಆನಂದ ಭಾಷ್ಪ ಧಾರೆ ಹರಿಯುತ್ತಿದ್ದುದರಿಂದ ಕಣ್ಣುಗಳು ಕೆಂಪಾಗಿದ್ದವು. ಮತ್ತೊಂದೆಡೆ, ಹುಡುಗಿಯರು ಯಾವ ಬ್ರಾಂಡ್‌ನ ಪಾದರಕ್ಷೆ ಧರಿಸಿದ್ದಾರೆ ಎಂಬುದನ್ನು ಅಚಾನಕ್ ಆಗಿ ತಿಳಿದುಕೊಳ್ಳಬೇಕಾಗಿ ಬಂದ ಇನ್ನು ಕೆಲವರ ಕೆನ್ನೆ ಊದಿಕೊಂಡು ಕೆಂಪಾಗಿತ್ತು. ಒಟ್ಟಿನಲ್ಲಿ ಇಡೀ ಕಾಲೇಜು ಕೆಂಪು ಕೆಂಪಾಗಿ ರಂಗೇರಿತ್ತು ಎಂದು ನಮ್ಮ ವದರಿಗಾರರು ಪ್ರತ್ಯಕ್ಷದರ್ಶಿ ವರದಿ ಕಳುಹಿಸಿದ್ದಾರೆ.

ಪ್ರೇಮ ವೈಫಲ್ಯ ದಿನಾಚರಣೆಯ ಹಿಂದಿನ ಕಾರಣಗಳನ್ನು ಪಟ್ಟಿ ಮಾಡುತ್ತಾ ಹೋದ ವರದಿಗಾರರ ಕೈಯಲ್ಲಿ ಸಾಕಷ್ಟು ಖಾಲಿ ಕಾಗದಗಳಿಲ್ಲದ ಕಾರಣ ಎಲ್ಲವನ್ನೂ ಪಟ್ಟಿ ಮಾಡುವುದು ಅಸಾಧ್ಯವಾಗಿ ಒಂದನ್ನು ಇಲ್ಲಿ ಬರೆದು ಕಳುಹಿಸಿದ್ದಾರೆ.

ಹಲವಾರು ವರ್ಷಗಳಿಂದ ನಾನಾಕೆಯನ್ನು ಪ್ರೀತಿಸುತ್ತಿದ್ದೆ, ಪ್ರೇಮ ಪರೀಕ್ಷೆಗೆ ಫೆ.14ರ ದಿನವೊಂದು ಸುಸಮಯವಾಗಿರುವುದರಿಂದ ತಾನು ಪ್ರೇಮ ನಿವೇದನೆ ಮಾಡಿಕೊಂಡಿದ್ದೆ. ಆದರೆ ಆಕೆ ತಿರಸ್ಕರಿಸಿದಳು. ಇದರಿಂದಾಗಿ ಪ್ರತಿ ವರ್ಷ ತಾನು ಈ ಸಂಭ್ರಮದ ಸವಿನೆನಪಿಗಾಗಿ ಪ್ರೇಮ ವೈಫಲ್ಯ ದಿನ ಆಚರಿಸುತ್ತಿರುವುದಾಗಿ ಒಬ್ಬಾತ ಹೇಳಿಕೊಂಡಿರುವುದು ಈ ರೀತಿ ದಿನ ಆಚರಿಸುತ್ತಿರುವವರಿಗೆಲ್ಲಾ ಸಾಮೂಹಿಕವಾಗಿ ಅನ್ವಯವಾಗುವ ಸೂತ್ರವಾಗಿತ್ತು.

ಮತ್ತೆ ಕೆಲವು ಹುಡುಗಿಯರನ್ನು ಈ ಬಾರಿ ವಿಶೇಷವಾಗಿ ಮಾತನಾಡಿಸಲಾಯಿತು. ನಮ್ಮ ಆರಾಧ್ಯದೈವವಾದ ಶಾರೂಖ್ ಖಾನ್ ಈ ರೀತಿ ಹೇಳಿಬಿಟ್ಟನಲ್ಲಾ ಎಂಬುದೇ ಅವರಿಗೆ ನೋವು ತಂದ ಕಾರಣಕ್ಕೆ ಫೆ.14ರಂದು ವೇದನಾ ದಿನಾಚರಣೆಯಾಗಿ ಆಚರಿಸಲು ಅವರು ತೀರ್ಮಾನಿಸಿದ್ದಾರಂತೆ.

ಥಾಯ್ಲೆಂಡಿಗೆ ಭೇಟಿ ನೀಡಿದ ನಮ್ಮ ವರದಿಗಾರರಿಗೆ ಪ್ರೇಮ ವೈಫಲ್ಯ ದಿನಾಚರಣೆಗೆ ಮತ್ತೊಂದು ಕಾರಣವೂ ಸಿಕ್ಕಿತು. ಅಲ್ಲಿ ಫೆ.14ರ ಬಗ್ಗೆ ಭರ್ಜರಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದ ಯುವಜನರ ಮೇಲೆ ಸರಕಾರವೇ ಸಿಡಿದೆದ್ದು ಕಡಿವಾಣ ಹಾಕಲು ನಿರ್ಧರಿಸಿತ್ತು.

ಪ್ರೇಮಿಗಳ ಸಂಖ್ಯೆಯು ಲಂಡನ್‌ನಲ್ಲಿ ಹೆಚ್ಚಾಗಿ ಕಂಡು ಬಂದ ಹಿನ್ನೆಲೆಯಲ್ಲಿ ಅದಕ್ಕೆ ಕಾರಣಗಳನ್ನು ಶೋಧಿಸಿದಾಗ ಈ ವಿಷಯ ತಿಳಿದುಬಂತು.

ಈ ನಡುವೆ, ಫೆ.14ರ ಪ್ರೇಮಿಗಳ ದಿನಾಚರಣೆ ಕಳೆದು ಸರಿಯಾಗಿ 9 ತಿಂಗಳ ಬಳಿಕ ನ.14ರಂದು ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತಿರುವ ಹಿನ್ನೆಲೆಯ ಕುರಿತು ಎಷ್ಟು ಕಷ್ಟಪಟ್ಟರೂ ತನಿಖೆ ನಡೆಸಲು ಬೊಗಳೆ ರಗಳೆ ಬ್ಯುರೋ ವಿಫಲವಾಗಿರುವುದು ತಲೆ ತಗ್ಗಿಸುವ ಸಂಗತಿಯಾಗಿದೆ ಎಂದು ತಿಳಿದುಬಂದಿದೆ.

Wednesday, February 14, 2007

ಕಂಪ್ಯೂಟರುಗಳಿಗೆ Love Virus ದಾಳಿ, ಅಪಾರ ಹಾನಿ

(ಬೊಗಳೂರು ವ್ಯಾಲೆಂಟೈನ್ ಬ್ಯುರೋದಿಂದ)
ಬೊಗಳೂರು, ಫೆ.14- ವಿಶ್ವಾದ್ಯಂತ ಕಂಪ್ಯೂಟರ್‌ಗಳಿಗೆ ಮತ್ತು ಮೊಬೈಲ್ ಫೋನ್‌ಗಳಿಗೆ ವೈರಸ್‌ಗಳು ನುಗ್ಗಿ ಹಾನಿ ಮಾಡುತ್ತಿರುವುದಾಗಿ ವರದಿಗಳು ಬರಲಾರಂಭಿಸಿವೆ. ಇತ್ತೀಚಿನ ವರೆಗೆ ವಿದೇಶಗಳಿಗಷ್ಟೇ ಸೀಮಿತವಾಗಿದ್ದ ಈ ವೈರಸ್, ಇತ್ತೀಚಿನ ವರ್ಷಗಳಲ್ಲಿ ಪ್ರತಿ ಫೆ.14ರಂದು ಭಾರತದಲ್ಲೂ ತನ್ನ ಪ್ರಭಾವವನ್ನು ತೀವ್ರವಾಗಿಯೇ ಪ್ರಕಟಪಡಿಸಲಾರಂಭಿಸಿದೆ.

"I am programmed to love you forever" ಎಂಬ ಸಂದೇಶವೊಂದು ವಿಶ್ವದ ಬಹುತೇಕ ಕಂಪ್ಯೂಟರುಗಳು ಮತ್ತು ಮೊಬೈಲ್ ಫೋನ್‌ಗಳಲ್ಲಿ ಒಂದರ ಮೇಲೊಂದರಂತೆ ಹರಿದಾಡಲಾರಂಭಿಸಿರುವುದು ಹೊಸ ಬೆಳವಣಿಗೆಯಾಗಿದೆ.

ಈ ಸಂದೇಶಗಳು ವಿಶೇಷವಾಗಿ ಯುವಜನರು ಬಳಸುತ್ತಿರುವ ಕಂಪ್ಯೂಟರುಗಳು ಮತ್ತು ಶಾಲಾ-ಕಾಲೇಜು ವಿದ್ಯಾರ್ಥಿಗಳ ಮೊಬೈಲ್ ಫೋನ್‌ಗಳಲ್ಲಿ ಮಾತ್ರವೇ ಕಾಣಿಸಿಕೊಳ್ಳುತ್ತಿರುವುದರ ಹಿಂದಿನ ರಹಸ್ಯ ಪತ್ತೆಗೆ ತೀವ್ರ ತನಿಖೆ ಆರಂಭವಾಗಿದೆ.

ವಿಶೇಷವಾಗಿ ಸೈಬರ್ ಸೆಂಟರ್‌ಗಳಲ್ಲಿ ಈ ವೈರಸ್‌ಗಳು ಹೆಚ್ಚಾಗಿ ಕಾಣಿಸಿಕೊಂಡಿದ್ದು, ಬಹುತೇಕ ಶಾಲಾ-ಕಾಲೇಜುಗಳು ಇಂದು ಅಘೋಷಿತ ರಜೆ ಆಚರಿಸತೊಡಗಿದ್ದು, ಕಂಪ್ಯೂಟರ್-savvy ವೈರಸ್‌ಗಳೆಲ್ಲವೂ ಈ ಸೈಬರ್ ಸೆಂಟರ್‌ಗಳಲ್ಲೇ ಜಮಾಯಿಸಿದ ಪರಿಣಾಮವಾಗಿ ಅಲ್ಲಿ ಜನಜಂಗುಳಿ ನಿಯಂತ್ರಿಸಲು ಲಾಠಿ ಚಾರ್ಜ್ ಮಾಡಬೇಕಾದ ಅನಿವಾರ್ಯತೆ ಎದುರಾಗಿರುವುದಾಗಿ ತಿಳಿದುಬಂದಿದೆ.

ಇ-ಮೇಲ್‌ನಲ್ಲಿ ಬರುವ ಸಂದೇಶದ subject line ನಲ್ಲಿ "My heart belongs to you" ಅಥವಾ "Together you and me" ಮುಂತಾದ ಸಾಲುಗಳಿರುತ್ತವೆ. ಇದನ್ನು ತೆರೆದು ಓದಿದ ತಕ್ಷಣ ಪ್ರೇಮಿಗಳೆಲ್ಲರೂ ತಕ್ಷಣವೇ ಎದ್ದು ಈ ಸಂದೇಶ ಕಳುಹಿಸಿದವರತ್ತ ಧಾವಿಸುತ್ತಿರುವುದು ಈ ವೈರಸ್‌ನ ಮತ್ತೊಂದು ಪ್ರಭಾವ ಎಂದು ತಿಳಿದುಬಂದಿದೆ.

ಈ ವೈರಸ್‌ನಿಂದಾಗಿ ಹೆಚ್ಚಿನವರ ಹೃದಯ ಬಡಿತ ಜಾಸ್ತಿಯಾಗುತ್ತಿರುವುದರಿಂದಾಗಿ ಎಲ್ಲೆಡೆ ಹೃದಯ ಬಡಿತದ ಸದ್ದಿನಿಂದಾಗಿ ಶಬ್ದ ಮಾಲಿನ್ಯವೂ ಹೆಚ್ಚಾಗುತ್ತಿದೆ. ವಿಶೇಷವಾಗಿ ಕಾಲೇಜು ಪರಿಸರದಲ್ಲಿ ಈ ಶಬ್ದ ಮಾಲಿನ್ಯ ಅತಿಯಾಗಿ ಕೇಳಿಬಂದಿದೆ.

ಈ ವೈರಸ್‌ನ ಮತ್ತೊಂದು ಪ್ರಭಾವವೆಂದರೆ, ಪಕ್ಕದ ಮನೆಯ ಗುಲಾಬಿ ಗಿಡಗಳಿಂದ ಎಲ್ಲಾ ಗುಲಾಬಿಗಳು ಇದ್ದಕ್ಕಿದ್ದಂತೆ ನಾಪತ್ತೆಯಾಗುತ್ತಿರುವುದಾಗಿದೆ. ಅಲ್ಲದೆ ಮಾರುಕಟ್ಟೆ ಪರಿಸರದಲ್ಲೂ ಇದೇ ಪ್ರಭಾವ ವ್ಯಕ್ತವಾಗಿದ್ದು, ಗುಲಾಬಿ ವ್ಯಾಪಾರಿಗಳೇ ಕಂಗಾಲಾಗುವಷ್ಟರ ಮಟ್ಟಿಗೆ ಈ ವೈರಸ್ ಬಾಧೆಯು ಗುಲಾಬಿಗಳನ್ನು ಸಂಪೂರ್ಣವಾಗಿ ಗುಡಿಸಿ ಸಾರಿಸಿದ್ದು, ಕಾಲೇಜು ಪರಿಸರದ ತುಂಬಾ ಗುಲಾಬಿ ಪಕಳೆಗಳ ರಾಶಿಯೋ ರಾಶಿ ಕಂಡುಬರುತ್ತಿದೆ.

ಮತ್ತೆ ಕೆಲವು ತಿರಸ್ಕೃತ ಗುಲಾಬಿಗಳ ಪಕ್ಕದಲ್ಲೇ ಜಲ ಮಾಲಿನ್ಯವೂ ಹೆಚ್ಚಾಗತೊಡಗಿದೆ. ಇದರ ಹಿಂದಿನ ಕಾರಣ ಶೋಧಿಸಹೊರಟಾಗ, ಪ್ರೇಮಿಗಳ ಕಣ್ಣಿನಿಂದ ಉದುರಿದ ಜಲಧಾರೆಯಿಂದಾಗಿ ಜಲ ಮಾಲಿನ್ಯ ಉಂಟಾಗಿರುವುದು ಪತ್ತೆಯಾಯಿತು.

ಈ ನಡುವೆ ಟಿವಿ ಚಾನೆಲ್‌ಗಳಲ್ಲೂ ಈ ವೈರಸ್ ಬಹುತೇಕ ಕಾಣಿಸಿಕೊಂಡಿದ್ದು, ಸುದ್ದಿ ಚಾನೆಲ್‌ಗಳಲ್ಲೂ ಇದೇ ವೈರಸ್ ಪ್ರಭಾವ ತೀವ್ರವಾಗಿಬಿಟ್ಟಿರುವುದು ಎಲ್ಲೆಡೆ ಕೋಲಾಹಲಕ್ಕೆ ಕಾರಣವಾಗಿದೆ. ಭಾರತದಲ್ಲಿ ಈ ವೈರಸ್ ಹರಡಲು ಪ್ರಮುಖವಾಗಿ ಸುದ್ದಿ ಮಾಧ್ಯಮಗಳೇ ಕಾರಣ, ಟಿವಿ ಚಾನೆಲ್‌ಗಳಲ್ಲದೆ ಪತ್ರಿಕಾ ಮಾಧ್ಯಮಗಳಲ್ಲೂ ಈ ವೈರಸ್ ಪ್ರಭಾವ ಪ್ರಕಾಶನಗೊಂಡಿರುವುದು ಕಾರಣ ಎಂದು ಪತ್ತೆ ಹಚ್ಚಲಾಗಿದೆ.

Saturday, February 10, 2007

ಕಾವೇರಿ ವಿವಾದಕ್ಕೆ ಪರಿಹಾರ ಸಾಧ್ಯತೆ ಶೋಧ!

(ಬೊಗಳೂರು ಪರಿಹಾರ ಬ್ಯುರೋದಿಂದ)
ಬೊಗಳೂರು, ಫೆ.10- ಯಾವುದೇ ರೀತಿಯ ವಿವಾದಗಳಿಗೆ ಪರಿಹಾರ ಕಲ್ಪಿಸುವ ಹೊಸ ಮಾರ್ಗವೊಂದನ್ನು ಇಲ್ಲಿ ಶೋಧಿಸಲಾಗಿದ್ದು, ಕರ್ನಾಟಕ-ತಮಿಳುನಾಡು ನಡುವಣ ಕಾವೇರಿ ವಿವಾದದ ಪರಿಹಾರ ಕುರಿತಂತೆ ಹೊಸ ಸಾಧ್ಯತೆಗಳಿಗೆ ಚಾಲನೆ ದೊರೆತಿದೆ.

ಮಹಿಳೆಯೊಂದಿಗೆ ಓಡಿಹೋದ ಫಾರೂಕ್ ಎಂಬಾತನಿಗೆ ಸ್ಥಳೀಯ ಪಂಚಾಯತು ಒಂದುವರೆ ಲಕ್ಷ ರೂ. ದಂಡ ವಿಧಿಸಿದ್ದು, ಐದು ವರ್ಷ ಊರಿಗೆ ತಲೆ ಹಾಕದಂತೆ ಎಚ್ಚರಿಕೆ ನೀಡಿತ್ತು. ಆದರೂ ಈ ಜೋಡಿ ವಿವಾಹವಾದ ಕಾರಣ ಮತ್ತೆ ಸಭೆ ಸೇರಿದ "ನ್ಯಾಯ ಮಂಡಳಿ", 4ರ ಪುಟ್ಟ ಹುಡುಗಿಯೊಂದನ್ನು 44ರ ಮತ್ತೂ ಪುಟ್ಟದಾದ ಹುಡುಗನಿಗೆ ಕಟ್ಟಿತು. ಇದು ಒಟ್ಟಾರೆ ಕಥೆ.

ಈ ಪಂಚಾಯತಿಯನ್ನು ನ್ಯಾಯಮಂಡಳಿ ಎಂದು ಪರಿಗಣಿಸಿ, ಕಾವೇರಿಯ ವಿವಾದವನ್ನೂ ಈ ಸೂತ್ರದ ಪ್ರಕಾರ ಪರಿಹರಿಸುವ ಸಾಧ್ಯತೆಗಳ ಬಗ್ಗೆ ದಪ್ಪ ಮಂಡೆಯವರು ಚಿಂತಾಕ್ರಾಂತರಾಗಿ ಆಲೋಚನೆಗಳನ್ನು ನಡೆಸುತ್ತಿದ್ದಾರೆ ಎಂಬುದನ್ನು ಬೋ....ರ್ ಬ್ಯುರೋ ಪತ್ತೆ ಹಚ್ಚಿದೆ.

ಇದಕ್ಕೆ ಪ್ರಮುಖ ಕಾರಣವೆಂದರೆ ನಿಯಾಯ ಮಂಡಳಿಗೆ ಲೆಕ್ಕ ತಪ್ಪಿದ್ದು. ಅಂದರೆ ಕರ್ನಾಟಕ ಕೋರಿದ್ದು 465 ಟಿಎಂಸಿ, ಆದರೆ ದಕ್ಕಿದ್ದು 270 ಮಾತ್ರ. ಆದರೆ ತಮಿಳುನಾಡು ಕೋರಿದ್ದು ಭರ್ಜರಿ 562, ಅದಕ್ಕೆ ದಕ್ಕಿದ್ದು ಕೂಡ ಭರ್ಜರಿ 419 ಟಿಎಂಸಿ. ಇದು ಲೆಕ್ಕ ತಪ್ಪಿದುದರ ಪರಿಣಾಮ ಎಂದೇ ಭಾವಿಸಲಾಗಿರುವುದರಿಂದ ಹೊಸ ವ್ಯಾಜ್ಯ ಮಂಡಳಿ ರಚನೆಗೆ ನಾಂದಿ ಹಾಡಲಾಗಿದೆ.

ಇದರಲ್ಲಿ ಯಾರು ಫಾರೂಕ್, ಯಾರು ಆ ಮಹಿಳೆ, ಯಾರು ಪಂಚಾಯತ್ ಎಂಬುದನ್ನು ಓದುಗರೇ ನಿರ್ಧರಿಸಬೇಕಿದ್ದು, 4ರ ಹರೆಯದ ಬಾಲೆಯ ಕುರಿತು ಒಂದು ಕ್ಲೂ ನೀಡಲಾಗುತ್ತದೆ. ಅದು ಕರ್ನಾಟಕದಲ್ಲಿರುವ ಒಂದು ಪುಟ್ಟ ತೊರೆ.

Friday, February 09, 2007

ಟ್ರಾಫಿಕ್ ಜಾಮ್‌ಗೆ ಟ್ರಾಫಿಕಿಂಗೇ ಕಾರಣ!

(ಬೊಗಳೂರು ಟ್ರಾಫಿಕ್ ಬ್ಯುರೋದಿಂದ)
ಬೊಗಳೂರು, ಫೆ.9- ಭಾರತ ದೇಶದಲ್ಲಿ ಪ್ರಮುಖ ನಗರಗಳಲ್ಲಿ ಟ್ರಾಫಿಕ್ ಜಾಮ್ ಆಗುತ್ತಿರುವುದಕ್ಕೆ ಪ್ರಮುಖವಾದ ಕಾರಣವೊಂದನ್ನು ಪತ್ತೆ ಹಚ್ಚಲಾಗಿದೆ.

ಹೆಚ್ಚಾಗಿ ಮುಂಬಯಿಯಂತಹ ಮಹಾನಗರಗಳಲ್ಲಿ ಈ ಟ್ರಾಫಿಕ್ ಜಾಮ್ ಹೆಚ್ಚಾಗುತ್ತಿದ್ದರೂ, ಇತ್ತೀಚೆಗಿನ ದಿನಗಳಲ್ಲಿ ವಾಹನಗಳೆಲ್ಲವೂ ಹಳ್ಳಿ ಹಳ್ಳಿಗಳ ಮೂಲೆ ಮೂಲೆಯಿಂದಲೂ ನಗರ ಪ್ರದೇಶಕ್ಕೆ ವಲಸೆ ಹೋಗುತ್ತಿರುವುದು ಕೂಡ ಕಾರಣವಾಗಿದೆ.

ಇದರಿಂದ ಹಳ್ಳಿಗಳು ಕೂಡ ಶ್ರೀಮಂತಿಕೆಯಿಂದ ತುಂಬಿ ತುಳುಕಾಡಲು ಶುರುಹಚ್ಚಿಕೊಂಡಿವೆ ಎಂಬುದನ್ನು ಪತ್ತೆ ಹಚ್ಚಲಾಗಿದೆ.

ಇತ್ತೀಚೆಗೆ ಆಂಧ್ರಪ್ರದೇಶದಿಂದ ಬರುವ ವಾಹನಗಳಿಂದಾಗಿ ಬೆಂಗಳೂರಿನಲ್ಲೂ ಕೂಡ ಟ್ರಾಫಿಕ್ ಜಾಮ್ ಆಗಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

Thursday, February 08, 2007

ಹೊಟ್ಟೆ loose ಆಗಿಸುವ ಐಷಾರಾಮಿ ಲೂ!

(ಬೊಗಳೂರು ಆರಾಮ ಬ್ಯುರೋದಿಂದ)
ಬೊಗಳೂರು, ಫೆ.8- ಇದು ತಾಂತ್ರಿಕ ಯುಗ. ಮನುಷ್ಯರಿಗೆ ಯಾವುದಕ್ಕೂ ಪುರುಸೊತ್ತು ಇಲ್ಲ. ಹಾಗಾಗಿ ಅವರಿಗೆ ಏಕಕಾಲಕ್ಕೆ ಹಲವಾರು ಕೆಲಸಗಳನ್ನು ಪೂರೈಸಿಕೊಳ್ಳುವಂತೆ ಬೊಗಳೂರು ಬ್ಯುರೋದ ಕೋರಿಕೆ ಮೇರೆಗೆ ಹೊಸದೊಂದು "ಲೂ" ಸಂಶೋಧಿಸಲಾಗಿದ್ದು, ಇದರ ಪ್ರಚಾರಾರ್ಥ "Loo becomes loose" ಎಂಬ ಸ್ಲೋಗನ್ ಸಿದ್ಧಪಡಿಸಲಾಗಿದೆ.

ಈ "ಸಿಂಹಾಸನ"ವನ್ನು ಏರಲು 49 ಬೊಂಬೆಗಳ ಪ್ರಶ್ನೆಗಳಿಗೆ ಉತ್ತರಿಸಬೇಕಾಗಿಲ್ಲ. ಮತ್ತು ಕೇಂದ್ರದಲ್ಲಿ ಅಥವಾ ರಾಜ್ಯಗಳ ಅಧಿಕಾರ ಕೇಂದ್ರಗಳಲ್ಲಿ ಅಧಿಕಾರದ ಗದ್ದುಗೆ ಏರಲು ವಿಫಲರಾದವರೆಲ್ಲರೂ ತಮ್ಮ ಮಹತ್ವಾಕಾಂಕ್ಷೆಯನ್ನು ಈ ಸಿಂಹಾಸನವೇರಿ ಪೂರೈಸಿಕೊಳ್ಳಬಹುದಾಗಿದೆ ಎಂಬುದನ್ನು ಬೊಗಳೆ ರಗಳೆ ಬ್ಯುರೋ ಪತ್ತೆ ಹಚ್ಚಿದೆ.

ಇಲ್ಲಿ ಏನೆಲ್ಲಾ ಇದೆ?

ಇಂದಿನ ಕಾಲದಲ್ಲಿ ಜಂಕ್ ಫುಡ್‌ಗಳೇ ಅವಸರದ ಮನುಷ್ಯನಿಗೆ ಸತ್ವ ನೀಡುವುದು ಸತ್ಯವಾಗಿರುವುದರಿಂದ ಅದು ಬೇಗನೆ ಶರೀರದಿಂದ ಹೊರಬರಲು ಕೇಳುವುದಿಲ್ಲ. ಇದಕ್ಕೆ ಸಾಕಷ್ಟು ಸಮಯ ತಗುಲುತ್ತದೆ. ಹಾಗಾಗಿ ಚಲನಚಿತ್ರ ವೀಕ್ಷಿಸುತ್ತಲೇ ಇಲ್ಲಿ ಗಂಟೆಗಟ್ಟಲೆ ಕಳೆಯಲು ಟಿವಿ ವ್ಯವಸ್ಥೆಯೂ ಇದೆ.

ಎಷ್ಟು ಕಷ್ಟಪಟ್ಟರೂ ತ್ಯಾಜ್ಯ ಹೊರಬರುವುದಿಲ್ಲ ಎಂದಾದರೆ ಕುಳಿತಲ್ಲೇ, ವ್ಯಾಯಾಮ ಮಾಡಿ ಅದನ್ನು ಹೊರಬರಿಸುವ ಯತ್ನಗಳನ್ನು ಮಾಡಲು ಸೈಕ್ಲಿಂಗ್ ವ್ಯಾಯಾಮ ಯಂತ್ರವಿದೆ. ಹೊಟ್ಟೆಯಲ್ಲಿ ಸಾಕಷ್ಟು ಕಶ್ಮಲ ಇಲ್ಲವೆಂದಾದರೆ, ಮತ್ತಷ್ಟು ಕಸ ಕಡ್ಡಿಯನ್ನು ಅದರೊಳಗೆ ತೂರಿಸಲು ಡ್ರಿಂಕ್ಸ್ (ಹಾಟ್/ಕೋಲ್ಡ್), ಜಂಕ್ ಫುಡ್ ಇತ್ಯಾದಿಗಳ ವ್ಯವಸ್ಥೆಯೂ ಇದೆ.

ಇಷ್ಟೆಲ್ಲಾ ಕಸರತ್ತು ಮಾಡಿಯೂ ಹೊರಬರಲಿಲ್ಲವೇ? ಹೊಚ್ಚ ಹೊಸ ವ್ಯವಸ್ಥೆಯೊಂದನ್ನು ವಿದೇಶೀ ಕಂಪನಿ ಶೋಧಿಸಿದೆ. ಚೂಯಿಂಗ್ ಗಮ್‌ನಂತೆ ಎಳೆದೆಳೆದು ಉದ್ದವಾಗುತ್ತಿರುವ ಧಾರಾವಾಹಿಗಳ ಕೆಲವು ದೃಶ್ಯಗಳನ್ನು ನೋಡಿಬಿಟ್ಟರಾಯಿತು, ವಾಂತಿಯ ಮೂಲಕ ಶರೀರದ ಕಶ್ಮಲವೆಲ್ಲವೂ ಹೊರಬರಬಹುದಾಗಿದೆ ಎಂಬುದು ಕಂಪನಿಯ ಉಚಿತ ಸಲಹೆ!

ನುಂಗಿದ್ದನ್ನು ಹೊರ ಹಾಕಲು ಇಷ್ಟು ಶ್ರಮ ಪಟ್ಟ ಮೇಲೆ ಆಯಾಸವಾಗದಿರುತ್ತದೆಯೇ? ಅದಕ್ಕಾಗಿ ಪಕ್ಕದಲ್ಲೇ ಸುಖಾಸೀನ ಹಾಸಿಗೆಯೊಂದನ್ನು ಅಳವಡಿಸಲು ಕಂಪನಿಗೆ ಬೊಗಳೆ ರಗಳೆ ಬ್ಯುರೋ ಸಲಹೆ ನೀಡಿದೆ.

ಸರಾಸರಿ ಮನುಷ್ಯನೊಬ್ಬ ತನ್ನ ಜೀವಿತಾವಧಿಯಲ್ಲಿ 11,862 ಗಂಟೆಗಳನ್ನು (1 ವರ್ಷ, 4 ತಿಂಗಳು, 5 ದಿನ) ಟಾಯ್ಲೆಟ್‌ನಲ್ಲೇ ಕಳೆಯುತ್ತಿದ್ದಾನೆ. ಆದರೆ ಇತ್ತೀಚಿನ ಜಂಕ್‌ಫುಡ್ ಯುಗದಲ್ಲಿ ಈ ಅವಧಿ ಮತ್ತಷ್ಟು ಹೆಚ್ಚುವ ಸಾಧ್ಯತೆಗಳು ದಟ್ಟವಾಗಿವೆ. ಈ ಕಾರಣಕ್ಕೆ ಅದಕ್ಕೆ ಪ್ರಾಶಸ್ತ್ಯ ನೀಡಬೇಕಾಗುತ್ತದೆ ಎಂಬುದು ಲೂಸ್ ತಯಾರಿಕಾ ಕಂಪನಿಯ ವಾದ.

ಆದರೆ ಒಮ್ಮೆ ಟಾಯ್ಲೆಟ್ ಹೊಕ್ಕವರು ಅದರಿಂದ ಹೊರಬರಲು ಕೇಳದೇ ಇದ್ದರೆ ನಾವು ಜವಾಬ್ದಾರರಲ್ಲ ಎಂದು ಕೂಡ ಕಂಪನಿಯು ಯಾರ ಕಣ್ಣಿಗೂ ಕಾಣಿಸದಷ್ಟು ಪುಟ್ಟ ಅಕ್ಷರಗಳಲ್ಲಿ ಪ್ರಕಟಿಸಿದೆ.

Wednesday, February 07, 2007

ಬಡತನ ರೇಖೆ ಎಂದಿಗೂ ದಾಟೆವು!

(ಬೊಗಳೂರು ಬಡಪಾಯಿ ಬ್ಯುರೋದಿಂದ)
ಬೊಗಳೂರು, ಫೆ.7- ಕರನಾಟಕದಲ್ಲಿ ಜನತೆ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಸರಕಾರಿ ಯೋಜನೆಗಳಲ್ಲಿ ಭಾಗಿಯಾಗುತ್ತಿರುವ ಸ್ವಾಗತಾರ್ಹ ಬೆಳವಣಿಗೆಯೊಂದು ಪತ್ತೆಯಾಗಿದೆ.

ಕರ್ನಾಟಕದಲ್ಲಿರುವ ಒಟ್ಟು ಜನಸಂಖ್ಯೆಗಿಂತಲೂ ಬಡತನ ರೇಖೆಗಿಂತ ಕೆಳಗಿರುವ (BPL) ಪ್ರಜೆಗಳ ಸಂಖ್ಯೆಯೇ ಹೆಚ್ಚಾಗಿರುವುದು ಇದಕ್ಕೆ ಕಾರಣ. ಕರನಾಟಕದಲ್ಲಿ ವಾಸ್ತವವಾಗಿ ಒಟ್ಟು 1.10 ಕೋಟಿ ಕುಟುಂಬಗಳಿದ್ದು, ಇದರಲ್ಲಿ "ಕೇವಲ" 1.28 ಕೋಟಿ ಕುಟುಂಬಗಳು "ಮಾತ್ರ" ಬಡತನ ರೇಖೆಗಿಂತ ಕೆಳಗಿದ್ದಾರೆ. ಇದು ಅವರ ಸರಕಾರಿ ಯೋಜನೆಗಳ ಸದುಪಯೋಗ ಪಡೆದುಕೊಳ್ಳುವ ಮನಸ್ಥಿತಿಯನ್ನು ಎತ್ತಿ ತೋರಿಸಿದ್ದು, ಸರಕಾರಕ್ಕೆ ಹರ್ಷ ತಂದ ಸಂಗತಿಯಾಗಿದೆ ಎಂದು ಬೊಗಳೆ ರಗಳೆ ಬ್ಯುರೋ ವರದಿ ಮಾಡಿದೆ.

ಸರಕಾರಿ ಯೋಜನೆಗಳ ಲಾಭವನ್ನು ಸಂಪೂರ್ಣಕ್ಕಿಂತಲೂ ಹೆಚ್ಚು ಹೆಚ್ಚು ತಮ್ಮದಾಗಿಸಿಕೊಳ್ಳುತ್ತಿರುವ ಜನತೆಯ ಕ್ರಮದಿಂದ ಸಂತೋಷದ ಕೊಡವು ತುಂಬಿ ತುಳುಕಾಡುತ್ತಿದೆ ಎಂದು ರಕ್ತ ರಹಿತ ಕ್ರಾಂತಿಯ ಮೂಲಕ ಅಧಿಕಾರಕ್ಕೇರಿ ಒಂದು ವರ್ಷ ಪೂರೈಸಿದ ಮುಖ್ಯಮಂತ್ರಿಯವರ ಪರವಾಗಿ ಅವರ ಮನೆ ಕೆಲಸದಾಳು (ಬಡತನ ರೇಖೆಗಿಂತ ಕೇವಲ ಒಂದು ಸೆಂಟಿಮೀಟರ್ ಕೆಳಗೆ) ಪತ್ರಿಕಾ ಹೇಳಿಕೆಯಲ್ಲಿ ವಿವರಿಸಿದ್ದಾರೆ.

ಅಲ್ಲದೆ ಈ ಹಿಂದೆ ಹಿಂ-ಬಾಲಕರಿಗೂ ಸೈಕಲ್ ಕೊಡಿಸುವ ಸರಕಾರೀ ಯೋಜನೆ ವಿಫಲವಾಗಿರುವ ಹಿನ್ನೆಲೆಯಲ್ಲ ಬಿಪಿಎಲ್ ಯೋಜನೆ ಸಫಲತೆ ಗಡಿ ಮೀರಿ ತುಳುಕಾಡಿದ್ದು ಸ್ವತಃ ಮುಖ್ಯಮಂತ್ರಿಗಳಿಗೆ ಆಶ್ಚರ್ಯಕ್ಕೂ, ಆಹ್ಲಾದಕ್ಕೂ ಕಾರಣವಾಗಿದೆ ಎಂದವರು ಯಾಹೂ ಮೆಸೆಂಜರ್ ಮೂಲಕ ಮುಖ್ಯಮಂತ್ರಿಯವರ ಜತೆ ಚಾಟಿಂಗ್ ನಡೆಸಿ ಸ್ಪಷ್ಟಪಡಿಸಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲಿ ಬಾಲ ಅಲ್ಲಾಡಿಸಲು ಕೂಡ ಜಾಗದ ಕೊರತೆ ಇದೆ ಎಂಬ ಕುರಿತು ನಮ್ಮ ಬ್ಯುರೋ ಈ ಹಿಂದೆಯೇ ವರದಿ ಮಾಡಿ ಜನಜಾಗೃತಿ ಮೂಡಿಸಲು ಯತ್ನಿಸಿತ್ತು. ಇದೀಗ Below Poverty Line ನಿಂದ ಕೆಳಗಿರುವವರಲ್ಲಿ ಹೆಚ್ಚಿನವರು ರಾಜಧಾನಿ ಬೆಂಗಳೂರಿನಲ್ಲೇ ಬೀಡುಬಿಟ್ಟಿದ್ದಾರೆ. ಅದರಲ್ಲೂ ಹೆಚ್ಚಿನವರು ವಿಧಾನ ಸೌಧದ ಸುತ್ತಮುತ್ತಲೇ ತಿರುಗಾಡುತ್ತಿರುತ್ತಾರೆ ಎಂಬುದನ್ನು ನಮ್ಮ ಬ್ಯುರೋ ಪತ್ತೆ ಹಚ್ಚಿ ಹಿಡಿದೆಳೆದು ವರದಿ ಮಾಡಿದೆ. ತಮ್ಮನ್ನು ಈ ರೇಖೆಯಿಂದ ಮಾರುದ್ದ ಕೆಳಗೆ ಇರುವಂತೆ ತಳ್ಳಿದ ರಾಜಕಾರಣಿಗಳಿಗೆ ಡೊಗ್ಗು ಸಲಾಂ ಹೊಡೆಯಬೇಕಾದ ಅನಿವಾರ್ಯತೆಯೇ ಕಾರಣ ಎಂಬುದು ಕೂಡ ತಿಳಿದುಬಂದಿದೆ.

ಬಡತನ ರೇಖೆ ಎಂಬುದು ರಾಮಾಯಣದ ಕಾಲದಲ್ಲೇ ಲಕ್ಷ್ಮಣ ಎಳೆದ ರೇಖೆಯಾಗಿದ್ದು, ಇದನ್ನು ನಾವೆಂದಿಗೂ ದಾಟಲಾರೆವು. ಶ್ರೀಮಂತಿಕೆಯೇನೂ ನಮಗೆ ಮುಖ್ಯವಲ್ಲ. ಈ ಲಕ್ಷ್ಮಣ ರೇಖೆ ದಾಟಿದರೆ ಪಾಪ ಬರುತ್ತದೆ, ಜನಸಂಖ್ಯೆಯ ಗಡಿ ದಾಟಲು ಪಾಪು ಬಂದರೂ ಪರವಾಗಿಲ್ಲ, ಬಡತನದ ರೇಖೆ ದಾಟಿ ಪಾಪ ಕಟ್ಟಿಕೊಳ್ಳಲಾರೆವು ಎಂದು ಕರನಾಟಕದ ಪ್ರಜೆಗಳು ಪಣ ತೊಟ್ಟಿರುವುದು ವಿಶ್ವಾದ್ಯಂತ ಶ್ಲಾಘನೆಗೆ ಕಾರಣವಾಗಿದ್ದು, ಕರನಾಟಕದ ಹೆಸರು ಚಿರಸ್ಥಾಯಿಯಾಗತೊಡಗಿದೆ.

ಬಿಪಿಎಲ್ ಪಟ್ಟಿಯಲ್ಲಿರುವವರ ಮನೆಗೆ ಬೊಗಳೆ ಬ್ಯುರೋ ವಿಶೇಷ ಪ್ರವಾಸ ಕೈಗೊಂಡಿತ್ತು. ಶೇ.100 ಮನೆಗಳಲ್ಲಿ 29 ಇಂಚಿನ ಕೇವಲ ಒಂದೊಂದೇ ಬಿಪಿಎಲ್ ಟಿವಿಗಳಿದ್ದವು. ಆದರೆ ಶೇ.90 ಮಂದಿಯ ಮನೆಗಳಲ್ಲಿ ಮಾತ್ರವೇ ಕಂಪ್ಯೂಟರ್ ಇದ್ದಿದ್ದು ತೀರಾ ಕಳವಳಕಾರಿ ಸಂಗತಿ ಎಂದು ನಮ್ಮ ಒದರಿಗಾರರು ಒದರಿದ್ದಾರೆ.

ಈ ಮಧ್ಯೆ, ತಮ್ಮ ಮನೆಯಲ್ಲಿ ಕೆಲಸದಾಳುಗಳಾಗಿ ದುಡಿಯುತ್ತಿರುವ ಅಡುಗೆಯವರು, ಬಟ್ಟೆ ಒಗೆಯುವವರು, ನೀರು ತರುವವರು, ಹಾಲು ಕರೆಯುವವರು ಮುಂತಾದವರನ್ನೂ ಈ ಪಟ್ಟಿಯಲ್ಲಿ ಸೇರಿಸಲು ತಮಗೆ ಸಾಧ್ಯವಾಗಲಿಲ್ಲವಲ್ಲಾ ಎಂದು ಬಹುತೇಕ ಬಿಪಿಎಲ್ ಮಂದಿ ಕೊರಗು ವ್ಯಕ್ತಪಡಿಸಿದ್ದಾರೆ.

Tuesday, February 06, 2007

ಕಾವೇರಿ ಅಪಹರಣಕ್ಕೆ ಸಂಚು!

(ಬೊಗಳೂರು ಕಾವೇರಿಸುವ ಬ್ಯುರೋದಿಂದ)

ಬೊಗಳೂರು, ಫೆ.6- ಕನ್ನಡ ನಾಡಿಗೆ ಬೆಂಕಿ ಬಿದ್ದ ಪರಿಣಾಮವಾಗಿ ಅದನ್ನು ಆರಿಸಲು ಬೇಕಾದಷ್ಟು ಕಾವೇರಿಸುವ ನೀರು ರಾಜ್ಯದಲ್ಲಿಲ್ಲ. ಹಾಗಾಗಿ ಬೆಂಕಿಗೆ ನೀರು ಸಿಗದಿದ್ದರೆ ತುಪ್ಪ ಸುರಿಯಲು ಸಿದ್ಧತೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ತಮಿಳುನಾಡನ್ನು ತನ್ನ ಕಾರಸ್ಥಾನ ಮಾಡಿಕೊಂಡಿರುವ ಬೊಗಳೆ ರಗಳೆ ಬ್ಯುರೋ ಆತಂಕದ ಪರಿಸ್ಥಿತಿ ಎದುರಿಸುತ್ತಿದೆ.

ಕಾವೇರಿ ವಿವಾದ ಮಂಡಳಿಯು ಲೆಕ್ಕ ತಪ್ಪಿದ ಪರಿಣಾಮವಾಗಿ ಈ ದುರಂತ ಸಂಭವಿಸಿದೆ ಎಂದು ಬೊಗಳೂರಿನಿಂದ ಕದ್ದುಮುಚ್ಚಿ ವರದಿ ಮಾಡುತ್ತಿರುವ ನಮ್ಮ ವದರಿಗಾರರು ಸುದ್ದಿ ರವಾನಿಸಿದ್ದಾರೆ.

ತೀರ್ಪಿನಿಂದಾಗಿ ಕರ್ನಾಟಕದಾದ್ಯಂತ ತಾಪಮಾನ ಹೆಚ್ಚಾಗಿದ್ದು, ಯಾವತ್ತೂ ಬಿಸಿಯಾಗಿರುವ ತಮಿಳುನಾಡಿನಲ್ಲಿ ತಂಪುತಂಪಿನ ಅನುಭವ ಇರುವ ಹಿನ್ನೆಲೆಯಲ್ಲಿ, ಸಂತಸಗೊಂಡಿರುವ ತಮಿಳುನಾಡು, ಕಾವೇರಿಯನ್ನೇ ಅಪಹರಿಸುವ ಸಂಚು ರೂಪಿಸುತ್ತಿರುವುದು ಕೂಡ ಈ ವದರಿಗಾರಿಕೆ ವೇಳೆ ಬೆಳಕಿಗೆ ಬಂದಿದೆ.

ಚೀನಾವು ಅರುಣಾಚಲ ಪ್ರದೇಶವನ್ನು ತನ್ನದು ಎನ್ನುತ್ತಿದೆ. ಅದೇ ರೀತಿ ಕಾವೇರಿ ನಮ್ಮದು. ಕಾವೇರಿಯನ್ನು ಅಪಹರಿಸಿ ತಮಿಳುನಾಡಿನ ಶೋಕವನದಲ್ಲಿ ಇರಿಸಿದರೆ ವಿವಾದವೇ ಪರಿಹಾರವಾಗಬಹುದು. ಆ ಮೇಲೆ ಅಲ್ಲಿ ಇಲ್ಲಿ ಬಸ್ಸುಗಳ ದಹನ ಸಂಭವಿಸಬಹುದು. ಲಂಕೆಯೇ ಉರಿದು ಹೋದ ಬಳಿಕ ರಾವಣ ಲಂಕೆಯನ್ನು ಪುನರ್ನಿರ್ಮಿಸಿಲ್ಲವೇ ಎಂಬುದು ತಮಿಳು ತಲೆಗಳ ವಾದ.

ಈ ಮಧ್ಯೆ, ವಿವಾದಗಳಿಗೆ ಎಂದಿಗೂ ಅಂತ್ಯ ಇಲ್ಲ ಎಂಬ ಪರಿಸ್ಥಿತಿ ಇರುವುದರಿಂದಾಗಿ ಇದುವೇ ಅಂತಿಮ ತೀರ್ಪು ಎಂದು ಸಂತಸಪಟ್ಟುಕೊಳ್ಳಬೇಕಿಲ್ಲ ಎಂಬುದಾಗಿ 1968ರಿಂದ ಕಾವೇರಿಗಾಗಿ ಕರ್ನಾಟಕದ 11 ಮುಖ್ಯಮಂತ್ರಿಗಳ ಜತೆಗೆ ಮಾತನಾಡಿದ್ದೇನೆ ಎಂದು ಹೇಳಿಕೊಂಡಿರುವ, ಜ್ಞಾನಕ್ಕಿಂತಲೂ ವಯೋ-ವೃದ್ಧರಾಗಿರುವ ತಮಿಳುನಾಡು ಅಮುಖ್ಯಮಂತ್ರಿ ನರುಣಾಕಿಢಿ ಒಳಗೊಳಗೆ ಆತಂಕಭರಿತರಾಗಿ ಬೊಗಳೆ ರಗಳೆ ಬ್ಯುರೋದೆದುರು ಅಲವತ್ತುಕೊಂಡಿದ್ದಾರೆ.

ನಮ್ಮ ಬ್ಯುರೋಗೆ ವಿಶೇಷ ಸಂದರ್ಶನ ನೀಡಿದ ಅವರು, ಕರ್ನಾಟಕದಲ್ಲಿ "ರಕ್ತ ಕೊಟ್ಟೇವು ನೀರು ಕೊಡೆವು" ಮತ್ತು "ಕಾವುಏರಿಸುವೆವು, ಕಾವೇರಿ ಬಿಡೆವು" ಎಂಬ ಆಂದೋಲನಕ್ಕೆ ಪ್ರತಿಯಾಗಿ ತಮಿಳುನಾಡಿನಲ್ಲೂ "ಬೀರು ಹೀರುವೆವು, ನೀರು ಬಿಡೆವು" ಎಂಬ ಆಂದೋಲನ ಆರಂಭಿಸುವುದಾಗಿ ಹೇಳಿದ್ದಾರೆ.

ಸಂದರ್ಶನ ಸಂದರ್ಭ ಅವರ ಬಾಯಿಯಿಂದ ಉದುರದಿರುವ ಮಾತು ಹೀಗಿತ್ತು : "ಕಾವೇರಿಯಲ್ಲಿ ಕರ್ನಾಟಕ ರೈತರಿಗೆ ಬೇಕಾಗುವಷ್ಟು ನೀರಿಲ್ಲ ಎಂಬುದು ನಮಗೂ ಗೊತ್ತಿದೆ. ನಾವು ನಿಜವಾಗಿ ಕೇಳಿದ್ದು 560 ಟಿಎಂಸಿ ನೀರು, ಅನ್ಯಾಯ ಮಂಡಳಿಗೆ ಲೆಕ್ಕ ತಪ್ಪುತ್ತದೆ ಮತ್ತು ನಮಗೆ ಅದಕ್ಕಿಂತ ಕಡಿಮೆ ಸಿಗುತ್ತದೆ ಎಂಬುದು ಖಚಿತವಾಗಿ ತಿಳಿದಿತ್ತು. ಈಗ ಕರ್ನಾಟಕದ ರೈತರ ಕಣ್ಣೀರು ಕೂಡ automatic ಆಗಿ ಕಾವೇರಿಗೆ ಸೇರಿಕೊಂಡು ನಾವು ಬೇಡಿಕೆ ಮುಂದಿಟ್ಟಷ್ಟು ನೀರನ್ನು ಪಡೆಯುತ್ತೇವೆ ಎಂಬ ಹುನ್ನಾರ ನಮ್ಮದು".

ಇಷ್ಟೆಲ್ಲಾ ಹೋರಾಟಕ್ಕೆ ಎಲ್ಲ ಕಡೆ ಸಿದ್ಧತೆ ನಡೆಯುತ್ತಿರುವ ಹಿನ್ನೆಲೆಯಲ್ಲಿ, ತನ್ನಿಂದಾಗಿ-ತನಗಾಗಿ ಈ ಜನ ಗಲಾಟೆ, ಹೋರಾಟ ಹೆಸರಿನಲ್ಲಿ ಎಲ್ಲ ಆಸ್ತಿ ಪಾಸ್ತಿ, ಪ್ರಾಣ ಹಾನಿ ಮಾಡೋದು ಬೇಡ ಎಂದುಕೊಂಡಿರುವ ಕಾವೇರಿ, ತಾನಾಗಿಯೇ ಪರಾರಿಯಾಗಲು ಸಂಚು ರೂಪಿಸಿದ್ದಾಳೆ ಎಂಬುದು ತೀರಾ ಇತ್ತೀಚಿನ ವಿದ್ಯಮಾನ.

Monday, February 05, 2007

ವಿಮಾನ ಏರುವ ಮುನ್ನವೇ ತೇಲಿದ ಪೈಲಟ್‌ಗಳು

(ಬೊಗಳೂರು ತೇಲಾಟ ಬ್ಯುರೋದಿಂದ)
ಬೊಗಳೂರು, ಫೆ.5- ವಿಮಾನ ಮೇಲೇರಿ ಗಾಳಿಯಲ್ಲಿ ಹಾರಾಡುವ ಮೊದಲು, ಭೂಮಿಯಲ್ಲಿದ್ದಾಗಲೇ ಗಾಳಿಯಲ್ಲಿ ತೇಲಾಡುತ್ತಿದ್ದ ಪೈಲಟ್‌ಗಳನ್ನು ಅಮಾನತುಗೊಳಿಸಿರುವುದು ಇಲ್ಲಿ ವರದಿಯಾಗಿದೆ.

ಈ ಕುರಿತು ಬಂಧಿತ ಪೈಲಟ್‌ಗಳ ಪರವಾಗಿ ವಾದ ಮಂಡಿಸಲೆಂದು ಬೊಗಳೆ ರಗಳೆ ಬ್ಯುರೋ ನವದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಗದಾಗ ಅಲ್ಲಿ ಭರ್ಜರಿ ಸ್ವಾಗತವೇ ದೊರೆಯಿತು.

ಆಕಾಶದಲ್ಲಿ ತೇಲಾಡುವ ಪೈಲಟ್‌ಗಳೆಲ್ಲರೂ ತೂರಾಡುತ್ತಾ ಹಾರ ಹಿಡಿದು ನಿಂತಿದ್ದರು.

ಅಮಲಿನಿಂದಾಗಿ ಅಮಾನತುಗೊಂಡ ಪೈಲಟಾನಂದನನ್ನು ಮಾತನಾಡಿಸಿದಾಗ, ಆತ ತಾನು ಸೇವಿಸಿದ್ದು ಮದ್ಯ ಅಲ್ಲ ಎಂದು ಸಮರ್ಥಿಸಿಕೊಂಡಿದ್ದಾನೆ. ಆಕಾಶದಲ್ಲಿ ಹಾರಾಡುತ್ತಿದ್ದಾಗ ಮಧ್ಯ ಮಧ್ಯದಲ್ಲಿ ತಮ್ಮ ವಿಮಾನ ಕೆಳಗೆ ಇಳಿಯುತ್ತಿರುವ ಅನುಭವವಾಗಿತ್ತು. ಹಾಗಾಗಿ ಆ ವಿಮಾನವನ್ನು ಮತ್ತೆ ಮೇಲೆಯೇ ಹಾರಾಡುವಂತೆ ಮಾಡಲು ಫುಟ್ಬಾಲ್‌ನ ಒಂದು ಭರ್ಜರಿ ಕಿಕ್ ಬೇಕಾಗಿತ್ತು. ಅದಕ್ಕಾಗಿ ಒಂದು ಬಾಟಲಿಯನ್ನು ಮಧ್ಯ ಮಧ್ಯ ಸುರಿದುಕೊಳ್ಳುತ್ತಿದ್ದೆವು ಎಂದು ಆತ ಸ್ಪಷ್ಟಪಡಿಸಿದ್ದಾನೆ.

ಮತ್ತೊಬ್ಬ ತೇಲಟ್‌ನನ್ನು ಕೂಡ ಕಷ್ಟಪಟ್ಟು ಮಾತನಾಡಿಸಲಾಯಿತು. ಆತನ ಹೇಳಿಕೆ ಪ್ರಕಾರ, ನಾವು ಇಡೀ ವಿಮಾನ-ಪ್ರಯಾಣಿಕ ಸಮೂಹವನ್ನೇ ಆಕಾಶದಲ್ಲಿ ತೇಲಿಸುವವರು. ನಮಗೂ ತೇಲುವಿಕೆಯ ಸುಖಾನುಭವನ ಆಗುವುದು ಬೇಡವೇ ಎಂದು ಪ್ರಶ್ನಿಸಿದ್ದಾನೆ. ಆಗಸದಲ್ಲಿ ತೇಲುವುದಕ್ಕೆ ಭೂಮಿಯಲ್ಲಿರುವಾಗ ತರಬೇತಿ ಕೊಡಿಸುವ ಯೋಚನೆಯನ್ನು ನಮ್ಮ ಕಂಪನಿ ಮಾಡಿರಲಿಲ್ಲ. ಹಾಗಾಗಿ ನಾವು ನಾವೇ ವ್ಯವಸ್ಥೆ ಮಾಡಿಕೊಳ್ಳಲಾಯಿತು ಎಂದು ಹೇಳುತ್ತಾ ಮತ್ತೆ ತೇಲಲೆಂದು ಆತ ವಿಮಾನ ನಿಲ್ದಾಣದ ಲಾಂಜ್‌ನ ಮೂಲೆಗೆ ತೆರಳಿದ.

ಶೀಘ್ರವೇ ಅಮಾನತುಗೊಳ್ಳಲಿರುವ ಮತ್ತೊಬ್ಬ ತೇಲಟ್‌ನನ್ನು ಹಿಡಿದು ನಿಲ್ಲಿಸಿ ಪ್ರಶ್ನಿಸಲಾಯಿತು. ಆತ ತೇಲುತ್ತಾ ಹೇಳಿದ್ದು : "ನಮ್ಮ ರಕ್ತದಲ್ಲೇ ಅಮಲು ಇದೆ. ಹಾಗಾಗಿ ಅದನ್ನು ಬೇರ್ಪಡಿಸುವುದು ಸಾಧ್ಯವಿಲ್ಲ!"

Saturday, February 03, 2007

ಮಕ್ಕಳಿಗೆ ಕಬ್ಬಿಣಸತ್ವದ ಜಂಕ್‌ಫುಡ್: ವ್ಯಾಕ್‌ವ್ಯಾಕ್‌ಡೊನಾಲ್ಡ್ಸ್

(ಬೊಗಳೂರು ನಿರಾಹಾರ ಬ್ಯುರೋದಿಂದ)
ಬೊಗಳೂರು, ಫೆ.3- ಕರ್ನಾಟಕದಲ್ಲಿ ಮೊಟ್ಟೆ-ಹಾಲು ಲಾಬಿಗಳ ಕಾದಾಟ ಹೆಚ್ಚಾಗುತ್ತಿರುವಂತೆಯೇ ಈ ಹೊಸ "ಉದ್ಯಮಾವಕಾಶ"ಕ್ಕೆ ಜಾಗತೀಕರಣದ touch ನೀಡಲು ಪ್ರಮುಖ ಜಂಕ್‌ಫುಡ್ ವಿತರಣಾ ಸಂಸ್ಥೆಯಾದ ವ್ಯಾಕ್‌ಡೊನಾಲ್ಡ್ಸ್ ಕಣಕ್ಕಿಳಿದಿದೆ.

ಈಗಾಗಲೇ ತಿನ್ನಲುಯೋಗ್ಯವಾದುದನ್ನು ಬಿಟ್ಟು ಎಲ್ಲವನ್ನೂ ಮಾರುಕಟ್ಟೆಗೆ ಸುಂದರವಾದ ಕೆಂಪು ಕೆಂಪಗಿನ ಪ್ಯಾಕೆಟ್‌ಗಳಲ್ಲಿ ಮಾರುಕಟ್ಟೆಗೆ ಹರಿಯಬಿಡುತ್ತಿರುವ ವ್ಯಾಕ್ ವ್ಯಾಕ್ ಸಂಸ್ಥೆಯು ಮಕ್ಕಳ ಜಗತ್ತಿನಲ್ಲಿ ಜನಪ್ರಿಯ un-ಆಹಾರವಾಗಿ ಮೇಳೈಸುತ್ತಿದೆ. ಹಾಗಾಗಿ ಮಕ್ಕಳು ಕೂಡ ತಮಗೇ ಓಟು ನೀಡುತ್ತಾರೆ ಎಂದು ಈ ಸಂಸ್ಥೆ ಬಲವಾದ ವಿಶ್ವಾಸ ಹೊಂದಿದೆ.

silly-ಕಾನ್ ಸಿಟಿ ಬೆಂಗಳೂರು ಕೇಂದ್ರವಾಗಿರುವ ಕರ್ನಾಟಕದಲ್ಲಿ ಹೇಗೂ ಜಾಗತೀಕರಣ ಪ್ರಭಾವ ಹೆಚ್ಚಾಗುತ್ತಿದ್ದು, ಮಕ್ಕಳು ತಮ್ಮ ಜಂಕ್ ಫುಡ್ ಅನ್ನೇ ಇಷ್ಟಪಡುವುದರಿಂದ, ಅವುಗಳಿಗೆ ಜಂಕ್ ಆಹಾರವನ್ನೇ ತಿನ್ನಿಸಬೇಕು ಎಂಬುದಾಗಿ ಪ್ರಖ್ಯಾತ ಜಂಕ್ ಆಹಾರ ತಯಾರಿಕಾ ಸಂಸ್ಥೆ ವಾದಿಸಲು ಆರಂಭಿಸಿದೆ.

ಮಕ್ಕಳು ಮುಂದೆ ಬೆಳೆದು ದೊಡ್ಡವರಾಗಿ ಇತ್ತೀಚಿನ ಕನ್ನಡ ಸಿನಿಮಾಗಳು ನೀಡುತ್ತಿರುವ ಸಂದೇಶದಂತೆ ಮಚ್ಚು-ಲಾಂಗುಗಳ ಬಳಕೆಗೆ ಅನುವಾಗಬೇಕು. ಹಾಗಾಗಿ ಅವರು ಬ್ಲೇಡ್‌ನಿಂದ ಈ ತರಬೇತಿಯನ್ನು ಆರಂಭಿಸಲಿ. ಈ ಜಂಕ್ ಫುಡ್‌ನಲ್ಲಿ ಬ್ಲೇಡ್ ಇತ್ಯಾದಿಗಳನ್ನು ಸೇರಿಸಿ ನೀಡುವುದರಿಂದ ಮಕ್ಕಳ ದೇಹ ಗಟ್ಟಿಯಾಗುತ್ತದೆ, ಅವರಿಗೆ ಉಪಯುಕ್ತವಾದ ಕಬ್ಬಿಣದ ಪೋಷಕಾಂಶವು ಸುಲಭವಾಗಿ ಲಭಿಸಿ ಬುದ್ಧಿಶಕ್ತಿ ಹೆಚ್ಚುತ್ತದೆ ಎಂದು ಅದು ವಾದಿಸುತ್ತಿದೆ ಎಂದು ಹೇಳಲಾಗಿದೆ.

Friday, February 02, 2007

ಮಕ್ಕಳಿಗೆ ಯಾವುದರ ಮೊಟ್ಟೆ, ಯಾವುದರ ಹಾಲು?

(ಬೊಗಳೂರು ಗೊಂದಲಮಯ ಬ್ಯುರೋದಿಂದ)
ಬೊಗಳೂರು, ಫೆ.2- ಕರ್ನಾಟಕದಲ್ಲಿ ಮಕ್ಕಳು ಮುಂದೆ ಬೆಳೆದು ದೊಡ್ಡವರಾದ ಬಳಿಕ ಬೊಗಳೆ ರಗಳೆ ಬ್ಯುರೋದಲ್ಲಿರುವ ಸಿಬ್ಬಂದಿಗಳಂತಾಗುವುದು ಬೇಡ ಎಂಬ ಕಾರಣಕ್ಕೆ ಸರಕಾರವು ಅವುಗಳಿಗೆ ಮೊಟ್ಟೆ, ಹಾಲು, ಬೆಣ್ಣೆ, ಬಾಳೆ ಹಣ್ಣು ಇತ್ಯಾದಿ ಕೊಡಬೇಕು ಎಂದು ನಿರ್ಧರಿಸಿದ ಹಿನ್ನೆಲೆಯಲ್ಲಿ ಮಿತ್ರರೊಳಗೆ ಪರಸ್ಪರ ಕಾದಾಟ ಉಂಟಾಗಿತ್ತು. ಈ ಕಾದಾಟಕ್ಕೆ ಕಾಲು ಕೆರೆದು ಬರುವ ಕೆಲವು ಕೋಳಿಗಳು ಕಾವು ನೀಡಿದ ಕಾರಣ ಮೊಟ್ಟೆ ಒಡೆದು, ಹಾಲು ನೀಡುವ ತೀರ್ಮಾನಕ್ಕೆ ಬರಲಾಗಿದೆ ಎಂಬುದು ಇತ್ತೀಚಿನ ವರದಿ.

ಆದರೆ ಈ ಕಾದಾಟದ ನಡುವೆ ಒಳಗಿಂದೊಳಗೆ ಯಾವುದರ ಮೊಟ್ಟೆ ಕೊಡಬೇಕು, ಯಾವುದರ ಹಾಲು ನೀಡಬೇಕು ಎಂಬ ಕುರಿತಾಗಿ ಹಲವಾರು ಸಂಗತಿಗಳು ಘಟಿಸಿದವು ಎಂಬುದನ್ನು ಬೊಗಳೆ ರಗಳೆ ಬ್ಯುರೋ ಪತ್ತೆ ಹಚ್ಚಿದೆ.

ಮಾನವರ ಮೊಟ್ಟೆಯನ್ನೇ ಮಕ್ಕಳಿಗೆ ಕೊಡಬೇಕು ಎಂಬುದನ್ನು ಕೆಲವರು ಬಲವಾಗಿಯೇ ಪ್ರತಿಪಾದಿಸಿ, ಅದನ್ನು ಇಲ್ಲಿ ಕಾರ್ಯರೂಪಕ್ಕೂ ಇಳಿಸಿದ ಕಾರಣ ಬೇಡಿಕೆಯೂ ಹೆಚ್ಚಾಯಿತು. ಇದಕ್ಕಾಗಿ ಆಂಧ್ರದಿಂದ ಮಾನವ ಮೊಟ್ಟೆ ತರಿಸುವ ವ್ಯವಸ್ಥೆ ಮಾಡಲಾಯಿತು ಎಂದೂ ಸಂಶೋಧನೆ ವೇಳೆ ತಿಳಿದುಬಂದಿದೆ.

ಕತ್ತೆ ಹಾಲು?

ಇನ್ನೊಂದೆಡೆ ಹಾಲು ಎಂಬ ಶಬ್ದ ಕೇಳಿದ ತಕ್ಷಣ ಎಚ್ಚೆತ್ತ ಬೊಗಳೆ ರಗಳೆ ಬ್ಯುರೋದ ಹಣೆ ಬರಹದಲ್ಲಿ (ಮೇಲೆ ನೋಡಿ) ಅರಚಾಡುತ್ತಿರುವ ಕತ್ತೆಗಳೂ ಕಣಕ್ಕಿಳಿದಿದ್ದು, ಮಕ್ಕಳಿದೆ ಕತ್ತೆ ಹಾಲೇ ಸೂಕ್ತ ಎಂಬ ಲಾಬಿ ಆರಂಭಿಸಿವೆ.

ರಾಜಕಾರಣಿಗಳು ತಮ್ಮ ತಮ್ಮೊಳಗೇ ಇಷ್ಟೆಲ್ಲಾ ರಾದ್ಧಾಂತ, ವಾದ ಮಾಡುತ್ತಲೇ ಇರುವಾಗ, ಬಾಳೆ ಹಣ್ಣು ಬೆಳೆಗಾರರು ತಮ್ಮ ಬಾಳೆ ಹಣ್ಣನ್ನೇ ಮಕ್ಕಳಿಗೆ ನೀಡಿ ಎಂದೂ, ದ್ರಾಕ್ಷಿ ಬೆಳೆಗಾರರು ತಮ್ಮ ದ್ರಾಕ್ಷಿಯನ್ನೇ ಪುಟಾಣಿಗಳಿಗೆ ತಿನಿಸಬೇಕೆಂದೂ, ಟೊಮೆಟೋ, ಈರುಳ್ಳಿ, ಆಲೂಗೆಡ್ಡೆ ಬೆಳೆಗಾರರು ತಮ್ಮ ಬೆಳೆಗಳನ್ನು ರಸ್ತೆಗೆ ಚೆಲ್ಲುವ ಬದಲು ಮಕ್ಕಳಿಗೆ ಉಣಿಸಬೇಕೆಂದೂ ವಾದ ಮಂಡಿಸಿದಂತೆಯೇ, ಮೆಣಸಿನ ಬೆಲೆ ಕುಸಿತದಿಂದ ಕಂಗಾಲಾದ ಮೆಣಸು ಬೆಳೆಗಾರರು, ಮಕ್ಕಳಿಗೆ ಸರಕಾರದ ಕಡೆಯಿಂದ ಪೋಷಕಾಂಶ ಕೊಡಿಸುವುದಾದರೆ, ಮೆಣಸನ್ನೇ ತಿನ್ನಿಸಬೇಕು ಎಂದು ವಾದಿಸತೊಡಗಿದ್ದು ಮತ್ತೊಂದು ಬೆಳವಣಿಗೆ.

ಮಕ್ಕಳಿಗೆ ಸಾರಾಯಿ ಲೇಸು ?

ಆ ರೀತ್ಯಾ ವಾದ ವಿವಾದಗಳು ಮೊಟ್ಟೆಯ ಕಾವೇರಿಸಿ ಮರಿಯಾಗತೊಡಗಿರುವಂತೆಯೇ, ಹಾಲು ಕುಡಿಸಬೇಕೆಂದು ವಾದಿಸುವವರಿಗೆ ನೀರು ಕುಡಿಸಲು ಮತ್ತೊಂದು ಲಾಬಿಯು ತೂರಾಡುತ್ತಾ ಬಿದ್ದರೂ ಎದ್ದುನಿಂತಿದೆ. ಮಕ್ಕಳಿಗೆ ಏನು ಬೇಕಿದ್ದರೂ ಮಾಡುವಂತೆ ದೈಹಿಕ ಬಲ ಮತ್ತು ಮನೋಬಲ ನೀಡಬಲ್ಲ ಅತ್ಯುತ್ತಮ ಪೋಷಕಾಂಶವಾದ ನೀರಾ ಕುಡಿಸಬೇಕು ಇಲ್ಲವೇ ಸಾರಾಯಿ ಕುಡಿಸಬೇಕು ಎಂದು ಅಖಿಲ ಕರ್ನಾಟಕ ಮದ್ಯ ಕುಡಿಸುವವರ ಸಂಘವು ವಾದ ಮಂಡಿಸುವಲ್ಲಿಗೆ ಪ್ರಕರಣವು ಒಂದು ಹಂತಕ್ಕೆ ಬಂದು ನಿಂತಿದೆ ಎಂದು ಪತ್ತೆ ಹಚ್ಚಲಾಗಿದೆ.

ಈ ಪ್ರಸ್ತಾಪಕ್ಕೆ ಕೆಲವು ಮಕ್ಕಳಿಂದ ಈಗಾಗಲೇ ಬೆಂಬಲವೂ ವ್ಯಕ್ತವಾಗಿದ್ದು, ಬೇಡಿಕೆಯ ಪ್ರಮಾಣ ಹೆಚ್ಚಾಗತೊಡಗಿದೆ ಎಂದು ಅಂದಾಜಿಸಲಾಗಿದೆ. ಅಲ್ಲದೆ ಇದನ್ನು ನಮ್ಮ ಬ್ಯುರೋ ಕೂಡ ಬೆಂಬಲಿಸುತ್ತಿರುವುದೇಕೆ ಎಂಬುದನ್ನು ಇಲ್ಲಿ ಕಂಡುಕೊಳ್ಳಲಾಗಿತ್ತು. ಇದಕ್ಕೆ ಕುಡಿಸುವವರ ಸಂಘ ನೀಡುತ್ತಿರುವ ಸಮರ್ಥನೆಯನ್ನು ಬೊಗಳೆ ರಗಳೆ ಬ್ಯುರೋ ಮೊದಲೇ ಇಲ್ಲಿ ಸಂಶೋಧಿಸಿತ್ತು.

ಸೂ: ಮಕ್ಕಳಿಗೆ ನಮ್ಮ ಆಹಾರವೇ ಸೂಕ್ತ ಎಂದು ಮತ್ತೊಬ್ಬರು ಕಣಕ್ಕಿಳಿದಿದ್ದಾರೆ. ಈ ಬಗ್ಗೆ ಒಂದು ಪುಟ್ಟ ವರದಿ ನಾಳೆ ಕೊಡುವುದಾಗಿ ನಮ್ಮ ವದರಿಗಾರರು ತಿಳಿಸಿದ್ದಾರೆ.-ಸಂ

Thursday, February 01, 2007

ಮಕ್ಕಳಿಗೆ ಮೊಟ್ಟೆ ತಿನ್ನಿಸಲು ಮಿತ್ರರ ಕಾದಾಟ

(ಬೊಗಳೂರು ಮೊಟ್ಟೆ ಕೆಟ್ಟೆ ಬ್ಯುರೋದಿಂದ)
ಬೊಗಳೂರು, ಫೆ.1- ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳಿಗೆ ಮೊಟ್ಟೆ ನೀಡುವ ಕುರಿತು ಭಾರಿ ಚರ್ಚೆಗಳಾಗುತ್ತಿದ್ದರೂ, ಅದು ಯಾವುದರ ಮೊಟ್ಟೆ ಎಂಬುದನ್ನು ಇನ್ನೂ ತೀರ್ಮಾನಿಸಿಲ್ಲ ಎಂಬ ಮಹತ್ವದ ಸಂಗತಿಯನ್ನು ಬೊಗಳೆ ರಗಳೆ ಬ್ಯುರೋ ಪತ್ತೆ ಹಚ್ಚಿದೆ.

ಈಗಾಗಲೇ ಸರಕಾರ ಒದಗಿಸಿದ ಬಿಸಿಯೂಟಕ್ಕೆ ಹಲವೆಡೆ ಮಕ್ಕಳು ಬಲಿಯಾಗಿರುವ ವರದಿಗಳು ಈಗಾಗಲೇ ಪ್ರಕಟವಾಗಿವೆ. ಇದಕ್ಕೆ ಕಾರಣ ಬಿಸಿಯೂಟಕ್ಕೆ ಒದಗಿಸುವ ಅಕ್ಕಿ-ಬೇಳೆಗಳು ಗೋಣಿಗಟ್ಟಲೆಯಾಗಿ "ನಿಜಕ್ಕೂ ಸಂಬಂಧಪಟ್ಟ ಅಧಿಕಾರಿಗಳ" ಪಾಲಾಗುತ್ತಿತ್ತು, ಮತ್ತು ಮಕ್ಕಳಿಗೆ ಕಳಪೆ ಮತ್ತು ಕಲಬೆರಕೆ ಅಕ್ಕಿ-ಬೇಳೆ ಬಳಸಿ ಊಟ ನೀಡಲಾಗುತ್ತಿತ್ತು. ಇದೀಗ ಪುಟ್ಟ ಮಕ್ಕಳ ಹೊಟ್ಟೆ ಕೆಡದಂತಾಗಲು ಮೊಟ್ಟೆ ಒದಗಿಸುವ ನಾನ್ ವೆಜ್ ರಾಜಕಾರಣಿಗಳ ನಿರ್ಧಾರದ ಹಿಂದೆ ಬೊಗಳೆ ರಗಳೆ ಕೈವಾಡವಿದೆ. ಈ ಕುರಿತು ಸಲಹೆ ನೀಡಿದ್ದು ಬೊಗಳೆ ರಗಳೆ ಬ್ಯುರೋ ಎಂದು ಬೆನ್ನು ತಟ್ಟಿಕೊಳ್ಳಲಾಗುತ್ತಿದೆ.

ಗೋಣಿಚೀಲದೊಳಗಿನ ಅಕ್ಕಿ ಕದ್ದು ಸಾಗಿಸಬಹುದು, ಆದರೆ ಮೊಟ್ಟೆಯೊಳಗಿರುವುದನ್ನು ಕದಿಯಲಾಗುವುದಿಲ್ಲ. ಹಾಗೆಯೇ ಅಕ್ಕಿಗೆ ಕಲ್ಲು ಬೆರಸಬಹುದು, ಆದರೆ ಮೊಟ್ಟೆಯೊಳಗೆ ಏನನ್ನೂ ತೂರಿಸುವುದು ಅಸಾಧ್ಯವಾಗಿರುವುದರಿಂದ ಮೊಟ್ಟೆಯೊಳಗಿನ ವಸ್ತುವನ್ನು ಕಲಬೆರಕೆ ಮಾಡಲಾಗದು ಎಂದು ಬೊಗಳೆ ರಗಳೆ ಬ್ಯುರೋ ಸೂಚಿಸಿದ ತಕ್ಷಣ ಎಚ್ಚೆತ್ತ ಮೊಟ್ಟೆ ಲಾಬಿಗಳು, ಈ ಕುರಿತು ಕುಮಾರಣ್ಣನ ಬೆನ್ನು ಹತ್ತಲು ಶುರು ಮಾಡಿದರು ಎಂದು ತಿಳಿದುಬಂದಿದೆ. ಮೊಟ್ಟೆಯನ್ನು ಸುಲಭವಾಗಿ ಕಿಸೆಯಲ್ಲಿ ಹಾಕಿಕೊಂಡು ಒಯ್ಯಬಹುದು.... ಅಲ್ಲಲ್ಲ.... ಮನೆಗೆ ಸಾಗಿಸಬಹುದು ಎಂಬುದು ಕೆಲವು ಲಾಬಿಗಳ ದೂರದ ದುರಾಲೋಚನೆ.

ಈ ಕುರಿತು ಮಿತ್ರರಾಗಿರುವ ನಾನ್ ವೆಜ್ ಪಕ್ಷ ಜೆಡಿಎಸ್ ಮತ್ತು ವೆಜ್ ಪಕ್ಷ ಬಿಜೆಪಿ ನಡುವೆ ತಗಾದೆ ಎದ್ದಿದ್ದು, ಮಕ್ಕಳು ಇಷ್ಟರವರೆಗೆ ಪೋಷಕಾಂಶ ಇಲ್ಲದೆಯೇ ಬೆಳೆದಿದ್ದಾರೆ. ಹಾಗಾಗಿ ಅವರು ಬೆಳೆದು ದೊಡ್ಡವರಾದಾಗ ಬೊಗಳೆ ರಗಳೆ ಮುಂತಾದ ಬ್ಯುರೋಗಳು ಈ ರೀತಿಯಾಗಿ ಕಾರ್ಯ ನಿರ್ವಹಿಸುವಂತಾಗಿವೆ. ಹಾಗಾಗಿ ಪೋಷಕಾಂಶ ಬೇಕೇ ಬೇಕು ಎಂದು ತೀರ್ಮಾನಿಸಿದ ಕೆಲವರು ಮೊಟ್ಟೆ ಕೊಡೋಣ ಎಂದು ವಾದಿಸಿದರೆ, ಮತ್ತೆ ಕೆಲವರು ಹಾಲು ಹಾಲು ಎನ್ನತೊಡಗಿದರು.

ಮೊಟ್ಟೆ ತಿಂದರೆ ಮಕ್ಕಳ ಹೊಟ್ಟೆ ಕೆಟ್ಟು ಹೋಗುತ್ತವೆ, ಹಾಲು ಕೆಲವರ ಆರೋಗ್ಯಕ್ಕೆ ಹಾಳು ಎಂಬ ವಾದಗಳೂ ಹುಟ್ಟಿಕೊಂಡಿತೇ ಹೊರತು ಯಾವುದರ ಮೊಟ್ಟೆ ಮತ್ತು ಯಾವುದರ ಹಾಲು ಎಂಬುದು ತೀರ್ಮಾನವಾಗಲೇ ಇಲ್ಲ.

(ಯಾವುದು ಒಳ್ಳೆಯದು ಎಂಬ ಬಗ್ಗೆ ನಡೆದ ರಂಪಾಟದ ಬಗ್ಗೆ ನಾಳಿನ ಸಂಚಿಕೆಯಲ್ಲಿ ನಿರೀಕ್ಷಿಸಿ).

ಎಂಜಿನ್ ಇಲ್ಲದ ರೈಲು: ಬ್ರೇಕಿಂಗ್ ನ್ಯೂಸ್ ಅಲ್ಲವೆಂದ ಬೊ.ರ.

[ಬೊಗಳೂರು ಪಟ್ಟೆ-ರಹಿತ ರೈಲು ಬ್ಯುರೋ] ಬೊಗಳೂರು: ಆಫ್‌ಲೈನ್ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯೊಂದು ಆನ್‌ಲೈನ್ ಸಂಪಾದಕರ ಕಣ್ಣು ಕುಕ್ಕಿದ್ದು, ಎಂಜಿನ್ ಇಲ್ಲದೆ...