Wednesday, February 28, 2007

ಮನುಜಬುದ್ಧಿ ತೋರಿಸಿದ ಶ್ವಾನದ ಉಚ್ಚಾಟನೆ

(ಬೊಗಳೂರು ಬೊಗಳೋ ಬ್ಯುರೋದಿಂದ)
ಬೊಗಳೂರು, ಫೆ.28- ತಪ್ಪು ಮಾಡಿದ ತಮ್ಮ "ಜಾತಿಭ್ರಷ್ಟ" ಕುಲಬಾಂಧವನೊಬ್ಬನಿಗೆ ಶ್ವಾನಗಳೆಲ್ಲಾ ಸೇರಿ ಬಹಿಷ್ಕಾರ ಹಾಕಿದ ಘಟನೆಯೊಂದು ವರದಿಯಾಗಿದೆ.

ಇದುವರೆಗೆ ಮಾನವರು ತಪ್ಪು ಮಾಡಿದಾಗಲೆಲ್ಲಾ ಅವರು "ನಾಯಿಬುದ್ಧಿ" ಎಂದು ಪರಸ್ಪರರನ್ನು ಹೊಗಳುತ್ತಾ ನಮ್ಮ ಕುಲದತ್ತ ತೋರುಬೆರಳು ತೋರಿಸಿ ಕಟಕಿಯಾಡುತ್ತಿದ್ದರು ಎಂದು ಹೇಳಿರುವ ವಿಶ್ವ ಶ್ವಾನ ಸಂಘದ ಅಧ್ಯಕ್ಷ ಮೋತಿ ಕುಮಾರ್ ಅವರು, ಇದೀಗ ನಾವು ಕೂಡ ಮನುಷ್ಯಬುದ್ಧಿ ತೋರಿಸುವ ನಾಯಿಗಳನ್ನು ಹೀಯಾಳಿಸೋಣ ಎಂದು ಪಣ ತೊಟ್ಟಿರುವುದಾಗಿ ಬೌವೌ ಗೋಷ್ಠಿಯೊಂದರಲ್ಲಿ ಪ್ರಕಟಿಸಿದ್ದಾರೆ.

ಇದಕ್ಕೆ ಕಾರಣವಾದ ಘಟನೆ ಇಲ್ಲಿದೆ. ಮನುಷ್ಯರು ಹಣ ಎಗರಿಸುವ ಚಾಕಕಚಕ್ಯತೆಯನ್ನು ನಾಯಿಯೊಂದು "ಬಾಲ-ತಲಾಮಲಕ" ಮಾಡಿಕೊಂಡಿದ್ದು, 60 ಸಾವಿರ ರೂ. ಹಣವನ್ನು ದೋಚಿ ಪರಾರಿಯಾಗಿತ್ತು. ಈ ಕಾರಣಕ್ಕಾಗಿ ಈ ಶ್ವಾನ ಸಂಘದ ಅಧ್ಯಕ್ಷ ಮೋತಿ ಕುಮಾರ್ ನೇತೃತ್ವದಲ್ಲಿ ನಿನ್ನೆ ಮಧ್ಯರಾತ್ರಿ ನಡೆದ ತುರ್ತು ಬೌವೌ ಗೋಷ್ಠಿಯಲ್ಲಿ, ಆ ನಾಯಿಯನ್ನು ಕುಲದಿಂದಲೇ ಉಚ್ಚಾಟಿಸುವ ನಿರ್ಧಾರ ಕೈಗೊಳ್ಳಲಾಯಿತು ಎಂದು ವರದಿ ಮಾಡಲಾಗಿದೆ.

ಈ ಪ್ರಕರಣದಿಂದ ಇದುವರೆಗೆ ಮನುಷ್ಯನ ಆತ್ಮೀಯ ಮಿತ್ರ ಎಂಬ ತೆಗಳಿಕೆಗೆ ಕಾರಣವಾಗಿದ್ದ ಶ್ವಾನ ಸಮುದಾಯ ತಲೆ ಎತ್ತಿ ನಡೆಯುವುದು ಅಸಾಧ್ಯವಾಗಿದೆ. ಇನ್ನು ಮುಂದೆ ಮನುಷ್ಯಬುದ್ಧಿ ತೋರಿಸುವ ನಾಯಿಗಳನ್ನೆಲ್ಲಾ ಸಾಮೂಹಿಕ ಉಚ್ಚಾಟನೆ ಕಾರ್ಯಕ್ರಮಕ್ಕೆ ಒಳಪಡಿಸಲಾಗುತ್ತದೆ ಎಂದು ಮೋತಿ ಕುಮಾರ್ ಅವರು ಮೂತಿಯನ್ನು ಮೇಲಕ್ಕೆ ಮಾಡಿ ಊಳಿಟ್ಟಿದ್ದಾರೆ.

ಈ ನಡುವೆ, ಉಚ್ಚಾಟಿತ ಶ್ವಾನ ಟೈಗರ್ ಕುಮಾರ್, ಕೇಂದ್ರ ಅಮಾನವ ಹಕ್ಕುಗಳ ಆಯೋಗಕ್ಕೆ ಮೊರೆ ಹೋಗಲು ಸಿದ್ಧತೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

9 comments:

 1. ನಾರಾಯಣ ನಾರಾಯಣ!
  ಅಷ್ಟು ಸುಲಭವಾಗಿ ಲೂಟಿ ಮಾಡುವುದಿದ್ದರೆ ಇಂತಹ ನಾಯಿಪಾಡು ಮನುಷ್ಯರಿಗೂ ಬರಲಿ!

  ReplyDelete
 2. ಓಹ್! ಇನ್ನೂ ಈ ಸುದ್ಧಿ ನಮ್ಮ ಅಖಿಲ ಚೋರ ಮಹಾಸಂಘಕ್ಕೆ ತಿಳಿದಂತಿಲ್ಲ. ತಿಳಿದಿದ್ದರೆ ಅವರು ಆ ಬಹಿಷ್ಕೃತ ಶ್ವಾನವನ್ನು ತಮ್ಮ 'ಪಾರ್ಟ್‍ನರ್' ಮಾಡಿಕೊಳ್ಳುತ್ತಿದ್ದುರಲ್ಲಿ ಅನುಮಾನವೇ ಇಲ್ಲ!

  ReplyDelete
 3. ಲೋಕದಲ್ಲಿ ಈಗ ಶ್ವಾನಗಳದ್ದೇ ಸಿಂಹಪಾಲಂತೆ. ಅದಕ್ಕೇ ಗ್ರಾಮಸಿಂಹ ಹೆಸರನ್ನು ರಾಷ್ಟ್ರಸಿಂಹ ಎಂದು ಮಾಡಬೇಕೆಂದು ಒತ್ತಾಯ ನಡೆಯುತ್ತಿದೆಯಂತೆ.
  ನಿಮ್ಮ ವರದಿಯ ಮೂಲ ಶ್ವಾನ ಮೂಲವೋ ಅಥವಾ ಮಾವನ ಮೂಲವೋ?

  ReplyDelete
 4. ಶ್ವಾನದ ಮಾನವ ಬುದ್ಧಿಯ ಬಗ್ಗೆ ಕೇಳಿ ತಿಳಿದು, ಓದಿ ಪರಿಶೀಲಿಸಿ, ಸಂಬಂಧ ಪಟ್ಟ ದಾಖಲೆಗಳನ್ನು ತರಿಸಿಕೊಂಡು ಕೂಲಂಕುಶವಾಗಿ ಪರಿಶೀಲಿಸಿ ಪ್ರಾಣಿ ದಯಾ ಸಂಘದ ಸರ್ವ-ಅಧಿಕಾರಿಣಿ ನಮೇಕಾ ಗಾಂಧಿಯವರು ಶಾನೇ ಖುಷಿಯಾಗಿ ತಮ್ಮ ಸಂಘದ ಸದಸ್ಯರಿಗೆಲ್ಲಾ ನಾಯಿ ಬಿಸ್ಕತ್ತುಗಳ ಇನಾಮು ನೀಡಿರುವುದಾಗಿ ತಿಳಿದು ಬಂದಿದೆ.
  ಶ್ವಾನದ ಈ ಕಲೆಯು ತಮ್ಮ ಪಕ್ಷಕ್ಕೆ ಅತ್ಯವಶ್ಯಕವಾಗಿ ಬೇಕಾಗಿದೆಯೆಂದು ತಿಳಿಯಪಡಿಸಿದ ಮಾನ್ಯ ಮಂತ್ರಿಗಳು ಅದನ್ನು ಕೂಡಲೆ ನಮ್ಮ ಪಕ್ಷಕ್ಕೆ ಆಹ್ವಾನಿಸಲಾಗುವುದು ಎಂಬ ಸಂತಸದ ವಿಚಾರವನ್ನು ಬಹಿರಂಗವಾಗಿ ವಿಸರ್ಜಿಸಿದ್ದಾರೆ.

  ReplyDelete
 5. ಓಹ್.. ಕಲಹಪ್ರಿಯ ದೇವರ್ಷಿಗಳಿಗೆ ಸ್ವಾಗತ!

  ನಾಯಿಪಾಡು ಬರಿಸುವುದಕ್ಕೋಸ್ಕರವೇ ಬಜೆಟಿನಲ್ಲಿ ನಾಯಿಬಿಸ್ಕಿಟ್ ಬೆಲೆ ಇಳಿಸಿದ್ದಾರೆ.

  ReplyDelete
 6. ಸುಶ್ರುತರೇ,
  ಶ್ವಾನದ ಪತ್ತೆಗೆ ತೀವ್ರ ಶೋಧ ನಡೆಯುತ್ತಿದೆಯಂತೆ. ಹಾಗಾಗಿ ಎಲ್ಲಿ ಶ್ವಾನವೋ, ಅಲ್ಲಿ ಚೋರರು ಪತ್ತೆಯಾಗುವುದು ಗ್ಯಾರಂಟಿ.

  ReplyDelete
 7. ಶ್ರೀನಿವಾಸರೆ,
  ನಾರದರು ಬಂದಿದ್ದಾರೆ. ಶ್ರೀಮನ್ನಾರಾಯಣ ಸ್ಮರಣೆ ಒಪ್ಪಿಸಿಕೊಳ್ಳಿ.
  ಶ್ವಾನಕ್ಕೂ ಮಾವನಿಗೂ ನೀವು ಸಂಬಂಧ ಕಲ್ಪಿಸಿದ್ದು ನೋಡಿದರೆ ನಮಗೇ ಹೆದರಿಕೆಯಾಗತೊಡಗಿದೆ. ಯಾರನ್ನೂ ಛೂಬಿಟ್ಟಿಲ್ಲ ತಾನೇ?

  ReplyDelete
 8. ಸುಪ್ರೀತರೆ
  ಮನೆ-ಕಾಯುವವರಿಗಾಗಿಯೇ ಪೀಚಿ ದಂಬರಂ ಅವರು ಏನು ಮಾಡಿದ್ದಾರೆ ಗೊತ್ತಲ್ಲ???
  ಅಂತೂ ಮಂತ್ರಿಗಳು ವಿಸರ್ಜಿಸಿದ ಪರಿಣಾಮವಾಗಿ ಶ್ವಾನಕ್ಕೂ ಬಂತು ರಾಜಕಾರಣಿಯಾಗಿ ಉಣ್ಣುವ ಯೋಗ.!!!

  ReplyDelete
 9. ನನ್ನನ್ನು ಕಲಹಪ್ರಿಯ ಅಂತೀರೇನ್ರಿ? ನಾರಾಯಣ ನಾರಾಯಣ! ನಾನೆಲ್ಲಿ ಜಗಳ ಮಾಡ್ತೀನಿ?
  ನೀವು ಬಜೆಟ್ ಬಗ್ಗೆ ಅವಹೇಳನ ಮಾಡ್ತೀರಿ, ಬಜೆಟ್ಟಿನಲ್ಲಿ ಅಲ್ಪಸಂಖ್ಯಾತರಾದ ನಾಯಿಗಳ ತುಷ್ಟೀಕರಣ ಅಂತ ಅರೋಪ ಮಾಡಿದ್ದೀರ ಅಂತ ಕಾಂಗೆಸ್ಸಿನವರಿಗೆ ಹೇಳ್ತೀನಿ.
  ಬಜೆಟ್ ಚೆನ್ನಾಗಿದೆ, ಹಿಂದುಗಳಲ್ಲದ ನಾಯಿಗಳ ಹಿತವೇ ದೇಶದ ಹಿತ ಅಂತ ಬರೆದಿದ್ದೀರ ಅಂತ ಬಜಪ್ಪದವರಿಗೆ ಹೇಳಿ ಇಬ್ಬರೂ ನಿಮ್ಮನ್ನ ಚಚ್ಚಿ ಹಾಕೋ ಥರ ಮಾಡ್ತೀನಿ ನೋಡಿ...

  ReplyDelete

ನಿಮ್ಮ ಸಲಹೆ/ಅಭಿಪ್ರಾಯ ತಿಳಿಸಿ..

ಎಂಜಿನ್ ಇಲ್ಲದ ರೈಲು: ಬ್ರೇಕಿಂಗ್ ನ್ಯೂಸ್ ಅಲ್ಲವೆಂದ ಬೊ.ರ.

[ಬೊಗಳೂರು ಪಟ್ಟೆ-ರಹಿತ ರೈಲು ಬ್ಯುರೋ] ಬೊಗಳೂರು: ಆಫ್‌ಲೈನ್ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯೊಂದು ಆನ್‌ಲೈನ್ ಸಂಪಾದಕರ ಕಣ್ಣು ಕುಕ್ಕಿದ್ದು, ಎಂಜಿನ್ ಇಲ್ಲದೆ...