Friday, March 30, 2007

ಡಯಟಿಂಗ್ ಅತಿಯಾದರೆ ಅಸ್ಥಿಪಂಜರ ಉತ್ಪಾದನೆ!

(ಬೊಗಳೂರು ಅನಾರೋಗ್ಯ ಬ್ಯುರೋದಿಂದ)
ಬೊಗಳೂರು, ಮಾ.30- ಯಾರು ಕೂಡ ತೂಕ ಕಳೆದುಕೊಳ್ಳಲು ಡಯಟಿಂಗ್ ಮಾಡಬಾರದು ಎಂದು ಅಂತಾರಾಷ್ಟ್ರೀಯ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ತೂಕದ ವ್ಯಕ್ತಿಗಳು ಯಾವತ್ತೂ ತೂಕ ಹೆಚ್ಚೇ ಇರಬೇಕು. ಅದುವೇ ಅವರಿಗೆ ಪ್ರತಿಷ್ಠೆಯಾಗಿದ್ದು, ತೂಕ ಕಳೆದುಕೊಳ್ಳಲು ಅನ್ನಾಹಾರ ತ್ಯಾಗ, ನಿರಾಹಾರ ವ್ರತ, ಬೆವರಿಳಿಸುವ ವ್ಯಾಯಾಮ, ಈಜು ಮುಂತಾದವನ್ನು ಮಾಡಿದರೆ ದೇಹದೊಳಗಿರುವ ಅಮೂಲ್ಯ ಶಕ್ತಿ ನಷ್ಟವಾಗುತ್ತದೆ ಎಂದಿರುವ ಅವರು, ಈ ಬಗ್ಗೆ ತಿಮಿಂಗಿಲಗಳನ್ನು ಉದಾಹರಣೆ ಸಹಿತ ವಿವರಿಸಿದ್ದಾರೆ.

ಅಂದರೆ, ತೂಕ ಕಳೆದುಕೊಳ್ಳಲು ಸ್ವಿಮ್ಮಿಂಗ್ ಸೂಟ್ ತೊಟ್ಟು ಸ್ವಿಮ್ಮಿಂಗ್ ಪೂಲ್‌ಗೆ ಹೋಗುವವರಿಗೆ ಅತಿಯಾಗಿ ಎಚ್ಚರಿಕೆ ನೀಡಿರುವ ಅವರು, ಅಪ್ಪಿ ತಪ್ಪಿ ಎಲ್ಲಾದರೂ ನಿಮ್ಮ ತೂಕ ಕಡಿಮೆಯಾಗಿದ್ದರೆ ಅದಕ್ಕೆ ನೀವು ಈಜುವುದು ಕಾರಣವಲ್ಲ. ನಿಮ್ಮ ಉಡುಗೆಯೇ ಕಾರಣವಾಗಿರುತ್ತದೆ ಎಂದಿದ್ದಾರೆ.

ಅದು ಹೇಗೆ ಎಂದು ಪ್ರಶ್ನಿಸಿದಾಗ, ಕೆಲವರು ಈಜುಡುಗೆ ತೊಟ್ಟು ನಾಚಿ ಮುದ್ದೆಯಾಗುತ್ತಾರೆ, ಹಾಗಾಗಿ ತೆಳ್ಳಗಾಗಿರುತ್ತಾರೆ. ಇನ್ನು ಕೆಲವರು ನಾಚಿ ನೀರಾಗುತ್ತಾರೆ. ಅವರ ದೇಹದ ನೀರೆಲ್ಲಾ ಈಜುಕೊಳಕ್ಕೆ ಸೇರುವುದರಿಂದ ಇವರ ಗಾತ್ರ ಕಡಿಮೆಯಾಗುತ್ತದೆ, ಈಜುಕೊಳದಲ್ಲಿ ನೀರಿನ ಗಾತ್ರ ಹೆಚ್ಚಾಗುತ್ತದೆ. ಇದರ ಹೊರತಾಗಿಯೂ ಯಾರಾದರೂ ತೆಳ್ಳಗಾಗಿದ್ದಾರೆಂದರೆ ಅದಕ್ಕೆ ಈಜುಡುಗೆ ತೊಟ್ಟವರ ಮೇಲೆ ಬೇರೆಯವರ ದೃಷ್ಟಿ ತಗುಲಿದ್ದೇ ಕಾರಣವಾಗಿ, ಅವರು ದೃಷ್ಟಿ ತಗುಲಿ ಸೊರಗುತ್ತಾರೆ ಎಂದು ಸಿದ್ಧಾಂತ ಮಂಡಿಸಿದ್ದಾರೆ.

ಅವರು ನೀಡುವ ಉದಾಹರಣೆ : ಈಜಿನಿಂದ ತೂಕ ಕಳೆದುಕೊಳ್ಳುವುದು ನಿಜವಾಗಿದ್ದರೆ, ಯಾವತ್ತೂ ಈಜಾಡುತ್ತಲೇ ಇರುವ ತಿಮಿಂಗಿಲಗಳೇಕೆ ತೆಳ್ಳಗೆ ಬಳುಕುತ್ತಾ ಸ್ಮಾರ್ಟ್ ಆಗಿರುವುದಿಲ್ಲ?

ತೂಕ ಕಳೆದುಕೊಳ್ಳುವ ಕುರಿತು ಡಯಟಿಂಗ್ ಮತ್ತಷ್ಟು ಪ್ರಯತ್ನ ಹೆಚ್ಚಿಸಿದಲ್ಲಿ ಆಟೋಮ್ಯಾಟಿಕ್ ಆಗಿ ಅಸ್ಥಿಪಂಜರಗಳ ಉತ್ಪತ್ತಿಯಾಗುವ ಸಾಧ್ಯತೆಗಳೂ ಇವೆ ಎಂದೂ ಅವರು ಇದೇ ಸಂದರ್ಭ ಎಚ್ಚರಿಸಲು ಮರೆಯಲಿಲ್ಲ.

(ನಾಡಿದ್ದು ಭಾನುವಾರ ಏಪ್ರಿಲ್ 1. ಈ ಸಂಬಂಧ ವಿಶೇಷ ವರದಿಯೊಂದಕ್ಕಾಗಿ ದಯವಿಟ್ಟು ನಿರೀಕ್ಷಿಸಿ.)

Thursday, March 29, 2007

ವಿದ್ಯಾರ್ಥಿಗಳ ವರ್ಗಾವಣೆ ಪ್ರಕ್ರಿಯೆ ಭರಾಟೆ

(ಬೊಗಳೂರು ವಿದ್ಯಾರ್ಥಿ ಬ್ಯುರೋದಿಂದ)
ಬೊಗಳೂರು, ಮಾ.29- ರಾಜಕಾರಣಿಗಳ ತೀವ್ರ ಒತ್ತಡದಿಂದಾಗಿ ಹಲವಾರು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳನ್ನು ನೀರಿಲ್ಲದೂರಿಗೆ ವರ್ಗಾವಣೆ ಮಾಡುವ ಪ್ರಕ್ರಿಯೆಗೆ ಭರದ ಚಾಲನೆ ದೊರೆತಿದೆ. ಇದಕ್ಕೆ ಹಿನ್ನೆಲೆ ಎಂದರೆ, ಸೌಲಭ್ಯ ಇಲ್ಲದ ಕಾಲೇಜಿನಿಂದ ಬೇರೆಡೆಗೆ ವರ್ಗ ಬಯಸಿದ ವಿದ್ಯಾರ್ಥಿಗೆ ನ್ಯಾಯಾಲಯ ನ್ಯಾಯ ಒದಗಿಸಿರುವುದರ ಬಗ್ಗೆ ಇಲ್ಲೊಂದು ವರದಿ ಪ್ರಕಟವಾಗಿತ್ತು.

ಉತ್ತಮವಾಗಿ ಓದುತ್ತಿರುವ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳ ಜೇಬಿನಿಂದ ಒಂದು ತೊಟ್ಟು ಹನಿಯೂ ಬೀಳದಿರುವುದರಿಂದಾಗಿ ಅಧಿಕಾರಿಗಳು ಮತ್ತು ರಾಜಕಾರಣಿಗಳು ಈ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.

ಇದಲ್ಲದೆ, ಧನವಂತರ ಆಲಿಯಾಸ್ ರಾಜಕಾರಣಿಗಳ ಮಕ್ಕಳು ಎಂಬ ಹೆಗ್ಗಳಿಕೆ ಹೊತ್ತಿರುವವರು ಪ್ರತಿಭಾನ್ವಿತ ವಿದ್ಯಾರ್ಥಿಗಳ ಪ್ರತಿಭೆಯ ಪ್ರಕಾಶದಿಂದ ಕಣ್ಣು ಕುಕ್ಕಿದಂತಾಗಿ ಕನ್ನಡಕ ಧರಿಸುವಂತಾಗುತ್ತಿದೆ. ಈ ಕಾರಣಕ್ಕೆ ಕಾಲೇಜಿನಿಂದ ಇಂಥವರನ್ನು ಎತ್ತಂಗಡಿ ಮಾಡಿಸಿದರೆ ಅಳಿದವರಿಗೆ ಉಳಿದವನೇ ರಾಜ ಎಂಬಂತೆ ಪ್ರಥಮ, ದ್ವಿತೀಯ ಸಹಿತ ಕೊನೆಯ ಸ್ಥಾನವು ಕೂಡ ತಮ್ಮ ಪಾಲಾಗುತ್ತದೆ ಎಂದು ಯೋಚಿಸಿ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಈ ನಡುವೆ, ಕಾಲೇಜು ಮಟ್ಟದಲ್ಲೇ ರಾಜಕಾರಣಿಯಾಗತೊಡಗುತ್ತಿರುವ ಮರಿ ಪುಡಾರಿಗಳು ಕೂಡ ಪ್ರತಿಭಾನ್ವಿತರ ವರ್ಗಾವಣೆಗೆ ಪ್ರಭಾವ ಬೀರುತ್ತಿದ್ದಾರೆ ಎನ್ನಲಾಗುತ್ತಿದ್ದು, ಇವರ ಕಾಟದಿಂದ ಬೇಸತ್ತ ಕೆಲವು ವಿದ್ಯಾರ್ಥಿಗಳು ತಾವಾಗಿಯೇ ಸ್ವಯಂ ವರ್ಗಾವಣೆ ಬಯಸಿ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

ಇದರ ಮಧ್ಯೆ, ತಮಗರಿವಿಲ್ಲದಂತೆ ಹಠಾತ್ ಆಗಿ ವರ್ಗಾವಣೆಗೊಂಡ ಕೆಲವು ವಿದ್ಯಾರ್ಥಿಗಳು ವರ್ಗ ರದ್ದು ಮಾಡಲು ಹರ ಸಾಹಸ ಮಾಡುತ್ತಿದ್ದರೆ, ಇನ್ನು ಕೆಲವರು ತಮಗೆ ಬೇಕಾದೆಡೆಗೆ ತಮ್ಮನ್ನು ವರ್ಗಾಯಿಸಲು ರಾಜಕಾರಣಿಗಳ ಪಾದಬುಡಕ್ಕೆ ಪಾದಯಾತ್ರೆ ಕೈಗೊಳ್ಳತೊಡಗಿರುವುದು ಹೊಸ ಬೆಳವಣಿಗೆ.

Tuesday, March 27, 2007

ಕುಡಿಯದೆಯೂ ಸುಳ್ಳು ಹೇಳಬಲ್ಲೆವು: ಗುಲಾಮನಬೀಜಾದ್

(ಬೊಗಳೂರು ಅರಾಜಕ ಬ್ಯುರೋದಿಂದ)
ಬೊಗಳೂರು, ಮಾ. 27- ನಾವು ರಾಜಕಾರಣಿಗಳು ಕುಡಿಯದೆಯೂ ಸುಳ್ಳು ಹೇಳಬಲ್ಲೆವು ಎಂಬುದನ್ನು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಗುಲಾಮನ ಬೀಜಾದ್ ಅವರು ಸ್ಪಷ್ಟಪಡಿಸಿದ್ದಾರೆ.

ಎಲ್ಲರೂ ಕುಡಿದು ಸುಳ್ಳು ಹೇಳುತ್ತಾರೆಂಬುದನ್ನು ನಾನು ಒಪ್ಪುವುದಿಲ್ಲ. ಯಾಕೆಂದರೆ ಕುಡಿದವರು ಹೆಚ್ಚಾಗಿ ಸತ್ಯವನ್ನೇ ತಮಗರಿವಿಲ್ಲದಂತೆಯೇ ಹೇಳುತ್ತಾರೆ. ಹಾಗಾಗಿ ನಾವು ಕುಡಿದರೆ ನಮಗೇ ನಷ್ಟ ಎಂದು ಅವರು ತಿಳಿಸಿದ್ದಾರೆ.

ಸುಳ್ಳು ಹೇಳಬೇಕಿದ್ದರೆ ಕುಡಿಯಲೇಬೇಕೆಂದಿಲ್ಲ. ನಾವೆಲ್ಲರೂ ಕುಡಿಯದೆಯೇ ಸುಳ್ಳು ಹೇಳುವುದಿಲ್ಲವೇ ಎಂದು ಪ್ರಶ್ನಿಸಿರುವ ಅವರು, ನಾನೆಂದಿಗೂ ಜೀವನದಲ್ಲಿ ಇದುವರೆಗೆ ಸುಳ್ಳು ಹೇಳಲೇ ಇಲ್ಲ, ಸುಳ್ಳು ಹೇಳುವುದೂ ಇಲ್ಲ ಎಂದು ಕುಡಿಯದೆಯೇ ಹೇಳುತ್ತಿರುವುದಾಗಿ ಒತ್ತಿ ಒತ್ತಿ ನುಡಿದಿದ್ದಾರೆ.

ಅಂತೆಯೇ, ಜನರು ನನಗೆ ಓಟು ಹಾಕದಿದ್ದರೂ ಪರವಾಗಿಲ್ಲ, ರಾಜ್ಯದ ಅಭಿವೃದ್ಧಿ ಮಾಡುತ್ತಲೇ ಇರುತ್ತೇನೆ ಎಂದು ಕೂಡ ಅವರು ಕುಡಿಯದೆಯೇ ಹೇಳಿದ್ದಾರೆ.

(ಮನವಿ : ನಿಮ್ಮ ಬ್ಲಾಗು ಅಥವಾ ಮಿತ್ರರ ಬ್ಲಾಗು ಈ ಕೆಳಗಿರುವ ಕನ್ನಡ ಬ್ಲಾಗೋತ್ತಮರು ಪಟ್ಟಿಯಲ್ಲಿ ಇದೆಯೇ? ಇಲ್ಲವಾದಲ್ಲಿ, ಅದನ್ನು ಲಿಂಕಿಸುವ ಸಮ್ಮತಿಯೊಂದಿಗೆ ದಯವಿಟ್ಟು ಅದರ ಯುಆರ್ಎಲ್ ಮತ್ತು ಶೀರ್ಷಿಕೆ ಸಹಿತ asatya ಡಾಟ್ anveshi @ ಜಿಮೇಲ್ ಡಾಟ್ ಕಾಮ್ ಗೆ ತಿಳಿಸಿಬಿಡಿ.)

Monday, March 26, 2007

ನಮಗಿನ್ನು ಬರ್ಮುಡಾ ಬೇಡ : ಟೀಂ ಇಂಡಿಯಾ

(ಬೊಗಳೂರು ಜಾಹೀರಾತು ಬ್ಯುರೋದಿಂದ)
ಬೊಗಳೂರು, ಮಾ. 26- ಭಾರತೀಯ ಕ್ರಿಕೆಟಿಗರು ಇನ್ನು ಮುಂದೆ ಪ್ರಾಕ್ಟೀಸ್ ವೇಳೆ ಬರ್ಮುಡಾ ತೊಡದಿರಲು ಪಣ ತೊಟ್ಟಿದ್ದಾರೆ.

ತಾವು ಬರ್ಮುಡಾ ವಿರುದ್ಧ ವಿಶ್ವದಾಖಲೆಯ ಬ್ಯಾಟಿಂಗ್ ಪ್ರದರ್ಶಿಸಿ, ಈ ಕ್ರಿಕೆಟ್ ಶಿಶುಗಳಿಗೆ ಉತ್ತಮವಾಗಿ ಬೌಲಿಂಗ್ ಪ್ರಾಕ್ಟೀಸ್ ಮಾಡಿಸಿದ್ದರೂ, ಅವರು ಅಷ್ಟು ಸಣ್ಣ ಬಾಂಗ್ಲಾ ದೇಶದೆದುರು ಬರ್ಮುಡಾಕ್ಕಿಂತಲೂ ಕಿರಿದಾದ ಚಡ್ಡಿ ತೊಟ್ಟು ಹೊರ ನಡೆದಿದ್ದು, ಟೀಂ ಇಂಡಿಯಾವನ್ನು ಮೇಲಕ್ಕೇರಿಸಲು ವಿಫಲವಾಗಿರುವ ಆಕ್ರೋಶವೇ ಇದಕ್ಕೆ ಕಾರಣ.

ಹೇಗೆ ಬೌಲಿಂಗ್ ಮಾಡಬೇಕು ಎಂದು ನಾವು ಬರ್ಮುಡಾಕ್ಕೆ ತರಬೇತಿ ಕೊಟ್ಟಿದ್ದೆವು. ಆದರೆ ನಮ್ಮನ್ನೂ ಸೋಲಿಸುವಷ್ಟು ದುರ್ಬಲವಾಗಿರುವ ಬಾಂಗ್ಲಾ ವಿರುದ್ಧ ಗೆಲ್ಲಲು ಬರ್ಮುಡಾಕ್ಕೇನುನು ಧಾಡಿ ಎಂದು ಪ್ರಶ್ನಿಸಿರುವ ಭಾರತೀಯ ಕ್ರಿಕೆಟಿಗರು, ಇಂಥ ಬರ್ಮುಡಾಗಳಿಗೆಲ್ಲಾ ಕ್ರಿಕೆಟ್ ಕಲಿಸುವುದೇ ವ್ಯರ್ಥ. ಬರ್ಮುಡಾದಲ್ಲಿ ಕ್ರಿಕೆಟ್ ನಿಷೇಧಿಸಬೇಕು ಎಂದು ಒತ್ತಾಯಿಸಿದ್ದಾರೆ.

ಬರ್ಮುಡಾದವರಿಗೆ ಕ್ರಿಕೆಟ್ ಆಡುವುದು ಹೇಗೆಂಬುದೇ ಗೊತ್ತಿಲ್ಲ. ಎಷ್ಟು ಕಲಿಸಿದರೂ ಕಲಿತುಕೊಳ್ಳುವುದಿಲ್ಲ. ಥತ್...!!! ಎಂಥ useless fellows!!! ಇವರು ಅಯೋಗ್ಯ ಕ್ರಿಕೆಟಿಗರು ಎಂದು ದೂರಿರುವ ಭಾರತೀಯ ಕ್ರಕೆಟಿಗರು, ನಿಮ್ಮ ದೇಶಕ್ಕೆ ಹೋಗಿ ನೀವು ಹೇಗೆ ಮುಖ ತೋರಿಸುತ್ತೀರಿ ಎಂಬುದನ್ನು (ಒಂದು ಕೈ) ನೋಡುತ್ತೇವೆ, ಯಾವ ರೀತಿಯ ಹಾರ ನಿಮಗೆ ಕಾದಿದೆ ಎಂಬುದು ನಿಮಗೆ ಗೊತ್ತಿದೆಯೇ ಎಂದು ಬರ್ಮುಡಾ ಆಟಗಾರರನ್ನು ಪ್ರಶ್ನಿಸಿದ್ದಾರೆ.

ಅಲ್ಲದೆ ನಿಮ್ಮ ರಾಷ್ಟ್ರದಲ್ಲಿ ಎಷ್ಟು ಜೀವಗಳ ಸಾವಿಗೆ ಕಾರಣರಾಗಿದ್ದೀರಿ ಎಂದು ಕೂಡ ಬರ್ಮುಡಿಗರನ್ನು ಪ್ರಶ್ನಿಸಿದ್ದಾರೆ.

ಇನ್ನು ನೀವು ಹೇಗೆ ಜೀವನ ಸಾಗಿಸುತ್ತೀರಿ ಎಂದು ಬರ್ಮುಡಾ ಕ್ರಿಕೆಟಿಗರನ್ನು ಪ್ರಶ್ನಿಸಿರುವ ಟೀಂ ಇಂಡಿಯಾ, ನಿಮಗೆ ಇನ್ನು ಯಾವುದೇ ಪ್ರಾಯೋಜಕರು ಸಿಗುವುದಿಲ್ಲ. ನಿಮ್ಮ ಮೇಲೆ ಹಣ ಹೂಡಿದ್ದ ಎಲ್ಲರೂ ಸಾಕಷ್ಟು ನಷ್ಟ ಮಾಡಿಕೊಂಡಿದ್ದಾರೆ.... ಇನ್ನು ಮುಂದೆ ನಿಮಗೆ ಜಾಹೀರಾತು ದೊರೆಯುವುದೇ ಇಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.

ಅಲ್ಲದೆ, ನಿಮ್ಮ ರಾಷ್ಟ್ರಕ್ಕೆ ವಾಪಸಾಗುವಾಗ ಒಂದೋ ಹೆಲ್ಮೆಟ್ ತೊಟ್ಟು ತೆರಳಿ, ಇಲ್ಲವೇ ಬರ್ಮುಡಾ ತೆಗೆದು ಬುರ್ಖಾ ಹಾಕಿಕೊಂಡು ತೆರಳಿ ಎಂಬ ಸಲಹೆಯನ್ನೂ ಟೀಂ ಇಂಡಿಯಾವು ಬರ್ಮುಡಾ ಕ್ರಿಕೆಟಿಗರಿಗೆ ನೀಡಿದೆ.

(ಮನವಿ : ನಿಮ್ಮ ಬ್ಲಾಗು ಅಥವಾ ಮಿತ್ರರ ಬ್ಲಾಗು ಈ ಕೆಳಗಿರುವ ಕನ್ನಡ ಬ್ಲಾಗೋತ್ತಮರು ಪಟ್ಟಿಯಲ್ಲಿ ಇದೆಯೇ? ಇಲ್ಲವಾದಲ್ಲಿ, ಅದನ್ನು ಲಿಂಕಿಸುವ ಸಮ್ಮತಿಯೊಂದಿಗೆ ದಯವಿಟ್ಟು ಅದರ ಯುಆರ್ಎಲ್ ಮತ್ತು ಶೀರ್ಷಿಕೆ ಸಹಿತ asatya ಡಾಟ್ anveshi @ ಜಿಮೇಲ್ ಡಾಟ್ ಕಾಮ್ ಗೆ ತಿಳಿಸಿಬಿಡಿ.)

Saturday, March 24, 2007

ಕೆಟ್ಟಾಟ ಕೃಪೆ : ಪರೀಕ್ಷಾ ಫಲಿತಾಂಶದಲ್ಲಿ ಏರಿಕೆ

(ಬೊಗಳೂರು ಕಿರಿಕಿರಿಕೆಟ್ಟಾಟ ಬ್ಯುರೋದಿಂದ)
(ಈ ವರದಿಯು ಮುಂಬರುವ ಏಪ್ರಿಲ್ ತಿಂಗಳಲ್ಲಿ ಪ್ರಕಟವಾಗಬೇಕಿದ್ದು, ತಪ್ಪಾಗಿ ಇಂದು ಪ್ರಕಟವಾಗುತ್ತಿದೆ. ಓದುಗರು ಸುಧಾರಿಸಿಕೊಳ್ಳಲು ವಿನಂತಿಸಲಾಗಿದೆ)
ಬೊಗಳೂರು, ಮಾ.24- ದೇಶಾದ್ಯಂತ ಎಸ್ಸೆಸ್ಸೆಲ್ಸಿ, ಪಿಯುಸಿ ಮತ್ತು ಪದವಿ ಪರೀಕ್ಷೆಗಳ ಫಲಿತಾಂಶ ಪ್ರಕಟವಾಗಿದ್ದು, ಎಲ್ಲಾ ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ.

ಎರಡನೇ ಪ್ರಮುಖ ವಿದ್ಯಮಾನವೆಂದರೆ, ಭಾರತದಾದ್ಯಂತ ಟಿವಿ ಕಂಪನಿಗಳು, ಡಿಟಿಎಚ್ ಸೇವೆ ಒದಗಿಸುವ ಕಂಪನಿಗಳು ಭಾರಿ ನಷ್ಟ ಅನುಭವಿಸಿದ್ದು, ಸ್ಟಾಕ್ ತೀರಿಸಲು ತಮ್ಮ ಉತ್ಪನ್ನಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವ ಯೋಚನೆಯಲ್ಲಿದ್ದಾರೆ.
ವಿದ್ಯಾರ್ಥಿಗಳೆಲ್ಲರೂ ಈ ಪರಿಯಾಗಿ ಅಂಕಗಳನ್ನು ಗಳಿಸಿರುವುದರ ಕುರಿತು ಹಿಂತಿರುಗಿ ನೋಡಿದಾಗ, ಇದಕ್ಕೆ ಭಾರತೀಯ ಕ್ರಿಕೆಟ್ ತಂಡವು ನೀಡಿದ ವರ ಹಾಗೂ ಅದು ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳೇ ಕಾರಣವೆಂದು ತಿಳಿದುಬಂದಿದೆ.

ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಭಾರತೀಯ ಕ್ರಿಕೆಟ್ ತಂಡವು ಮೊದಲನೆಯದಾಗಿ ಬಾಂಗ್ಲಾ ಹುಲಿಗಳ ಘರ್ಜನೆಗೆ ಹೆದರಿಬಿಟ್ಟಿತ್ತು. ವಾಸ್ತವವಾಗಿ ಅವರು ಹೆದರಿದ್ದೇಕೆಂದರೆ, ಎಲ್ಲಾದರೂ ತಾವು ಈ ಹುಲಿಗಳನ್ನು ಕಟ್ಟಿಹಾಕಬೇಕಾಗಿ ಬಂದರೆ ಎಂಬ ಭೀತಿ. ಕೊನೆಗೂ ಬಾಂಗ್ಲಾ ಹುಲಿಗಳು ಭಾರತದ ಕಾಗದದ ಹುಲಿಗಳನ್ನು ಸೋಲಿಸುವ ಮೂಲಕ ಭಾರತೀಯ ತಂಡ ನಿಟ್ಟುಸಿರು ಬಿಡುವಂತೆ ಮಾಡಿತ್ತು.

ಆದರೆ ಇದರ ಬಳಿಕ, ಭಾರತದಲ್ಲಿರುವ ತಮ್ಮ ಮನೆಗಳಿಗೆ ಕಲ್ಲು ಬಿದ್ದು, ತಮ್ಮ ಭಾವಚಿತ್ರಗಳಿಗೆ ಚಪ್ಪಲಿಹಾರ ಬಿದ್ದ ಹಿನ್ನೆಲೆಯಲ್ಲಿ ಅವರಿಗೊಂದು ಪಾಠ ಕಲಿಸೋಣ ಎಂದುಕೊಂಡ ತಂಡವು, ಕ್ರಿಕೆಟ್ ಶಿಶುಗಳಿಗೆ ಒಂದಷ್ಟು ಬೌಲಿಂಗ್ ಪ್ರಾಕ್ಟೀಸ್ ಆಗಲಿ, ಅವುಗಳು ಕೂಡ ಮುಂದೆ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಡುವಂತಾಗಲಿ ಎಂಬಂತೆ ಆಟವಾಡಿ, ದೊಡ್ಡ ಮೊತ್ತ ಪೇರಿಸಿ ಬರ್ಮುಡಾ ತಂಡಕ್ಕೆ ದೊಡ್ಡ ಬರ್ಮುಡಾ ತೊಡಿಸಿತ್ತು.

ಆ ಬಳಿಕ ಎದುರಾಗಿದ್ದು ಶ್ರೀಲಂಕಾದ ಹುಲಿಗಳು. ಅದರ ಎದುರು ಸೋಲಲು ಒಬ್ಬೊಬ್ಬ ಆಟಗಾರರು ತಮ್ಮದೇ ಕಾರಣ ನೀಡಿದ್ದು, ಕ್ರಿಕೆಟ್ ಕವರೇಜ್ ಮಾಡುವುದಕ್ಕೆ ಬೊಗಳೆ ರಗಳೆ ಬ್ಯುರೋದಿಂದ ಕಳುಹಿಸಲಾದ ಕ್ರಿಮಿನಲ್ ವರದಿಗಾರ ಅವರೆಲ್ಲರನ್ನೂ ಸಂ-ದರ್ಶಿಸಿ ವಿವರ ಸಂಗ್ರಹಿಸಿದ್ದಾರೆ. ಅವರ ಹೇಳಿಕೆ ಇಲ್ಲಿವೆ:

ನಾಯಕ ದ್ರಾಹುಲ್ ರಾವಿಡ್ : ನಮ್ಮ ಬದ್ಧ ಎದುರಾಳಿ ಹಾಗೂ ಏಷ್ಯಾ ಖಂಡದ ಅತ್ಯಂತ ಆಪ್ತ ತಂಡ ಪಾಕಿಸ್ತಾನವೇ ಕಣದಲ್ಲಿಲ್ಲದಿರುವಾಗ ನಾವಿದ್ದೇನು ಪ್ರಯೋಜನ? ಬೌಲರುಗಳು ಅಷ್ಟು ಬೇಗನೆ ವಿಕೆಟ್ ಕಿತ್ತಿದ್ದಾರೆ, ಸೇವೇಂದ್ರ ವಾಹ್‌ವಾಗ್ ಕೂಡ ಫಾರ್ಮಿಗೆ ಮರಳಿದ್ದಾರೆ. ನಮಗೆ ಇಷ್ಟು ಸಾಕು.

ಚಚ್ಚಿಂಗ್ ಚೆಂಡುಲ್ಕರ್ : ನಮಗೇನು ಗೊತ್ತು ಅವರು ಆ ರೀತಿ ಚೆಂಡು ಎಸೆಯುತ್ತಾರೆಂದು? ನಾವಿನ್ನೂ ಪಾಕ್ ಕೋಚ್ ಬಾಬ್ ವೂಲ್ಮರ್ ಕೊಲೆಯಾದ ದುಃಖದಲ್ಲಿದ್ದೇವೆ. ಅದರ ಬಗ್ಗೆಯೇ ಯೋಚಿಸುತ್ತಿದ್ದೆವು. ಚೆಂಡು ಈ ರೀತಿ ಎಸೆಯುತ್ತೇನೆ ಎಂದು ಹೇಳುವುದಕ್ಕೇನು ಧಾಡಿ ದಿಲ್ಹಾರಾ ಫೆರ್ನಾಂಡೊಗೆ?

ಸೇರೇಂದ್ರ ವಾಹ್‌ವಾಗ್ : ನಾನಂತೂ ಫಾರ್ಮಿಗೆ ಮರಳಿದ್ದೇನೆ. ಬರ್ಮುಡಾದೆದುರು ಶತಕ ಸಿಡಿಸಲಿಲ್ಲವೇ? ಲಂಕೆಯೆದುರು ಕೂಡ ಚೆನ್ನಾಗಿಯೇ ಚಚ್ಚಿದ್ದೇನೆ. ಯಾವಾಗಲೂ ನನ್ನ ಮೇಲೆ ಗೂಬೆ ಕೂರಿಸಲು ಯತ್ನಿಸಬೇಡಿ.

ಸಿಂಹೇಂದ್ರ ಮಂಗ್ ಧೋಣಿ : ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಕರೆದೊಯ್ಯುತ್ತೇವೆ, ಅಲ್ಲಿ ಸಾಕಷ್ಟು ದ್ವೀಪಗಳನ್ನು ದೋಣಿಯಲ್ಲಿ ಸುತ್ತಬಹುದು ಎಂದು ಹೇಳಿ ನಮ್ಮನ್ನು ಈ ರೀತಿ ದುಡಿಸುವುದಾ? ಈ ರೀತಿ ಆಟ ಆಡಬೇಕೆಂಬುದು ನಮಗೆ ಮೊದಲು ಗೊತ್ತಿರಲೇ ಇಲ್ಲ!!! ಏನೇ ಇರಲಿ, ಮುರಳೀಧರನ್ ಬೌಲಿಂಗೇ ಸರಿ ಇರಲಿಲ್ಲ.... ಆತ ಆ ರೀತಿ ಚೆಂಡೆಸೆಯಬಾರದಿತ್ತು.

ಸಿವರಾಜ್ ಯಂಗ್ : ಓಹ್.... ನಾವು ಬ್ಯಾಟು ಬೀಸಬೇಕಿತ್ತಾ?... ಮೊನ್ನೆ ಬರ್ಮುಡಾದೆದುರು ವಿಶ್ವದಾಖಲೆಯ ವಿಜಯ ಸಾಧಿಸಿದ್ದು ಸಾಕಾಗಲಿಲ್ಲವಾ? ಛೆ.... ಗೊತ್ತೇ ಇರಲಿಲ್ಲ.

ಗೌರವ್ ಸಂಗೂಲಿ : ನೋಡಿದ್ರಾ... ನಾನು ಇದ್ದಾಗ ತಂಡ ಕೇವಲ ಗೆಲ್ಲುವುದಲ್ಲ, ಸೋಲಲೂ ಸಾಧ್ಯ ಎಂಬುದು ಸಾಬೀತಾಗಲಿಲ್ಲವೇ?

ಬಳಿಕ ತಂಡದ ಎಲ್ಲರನ್ನೂ ಒಂದು ಕಡೆ ಕೂಡಿ ಹಾಕಿ ಮಾತನಾಡಿಸಿದಾಗ ಕೇಳಿಬಂದ ಕಾಳಜಿ : "ಸ್ವಾಮೀ... ನಾವು ಈ ರೀತಿ ಸೋತಿದ್ದೇವೆ ಅಂತ ದಯವಿಟ್ಟು ಯಾರಿಗೂ ಹೇಳಬೇಡಿ... ಜಾಹೀರಾತುಗಳಿಗೆ ನಮ್ಮ ಮುಖ ಬಾಡಿಗೆ ಕೊಡುವುದರಿಂದ ಬರುವ ಭಾರಿ ಮೊತ್ತದ ಆದಾಯ ಕೈತಪ್ಪಿ ಹೋದೀತು..."

ಮತ್ತೊಂದು ಅಭಿಪ್ರಾಯ : ಕ್ರಿಕೆಟ್ ಶಿಶುಗಳು ಕೂಡ ಮುಂದೆ ಬರಬೇಕು, ಸ್ಕಾಟ್ಲೆಂಡ್, ಐರ್ಲೆಂಡ್, ಬಾಂಗ್ಲಾ, ನೆದರ್ಲೆಂಡ್ ಮುಂತಾದ ತಂಡಗಳು ಫೈನಲ್ ಪ್ರವೇಶಿಸುವಂತಾಗಬೇಕು. ಆ ರಾಷ್ಟ್ರಗಳಲ್ಲಿ ಕ್ರಿಕೆಟ್ ಬೆಳೆಯಬೇಕು, ಆ ಕ್ರಿಕೆಟಿಗರೂ ಜಾಹೀರಾತಿನಿಂದ ಹೆಚ್ಚು ಹೆಚ್ಚು ಆದಾಯ ಗಳಿಸುವಂತಾಗಬೇಕೆಂಬುದೇ ನಮ್ಮ ಗುರಿ.

ಮಗದೊಂದು ಮಾತು : ನಮ್ಮ ವಿದ್ಯಾರ್ಥಿಗಳು, ರಾತ್ರಿ ಶಿಫ್ಟ್‌ನಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಆರೋಗ್ಯ ಮತ್ತು ಮಾನಸಿಕ ಟೆನ್ಷನ್ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ನಾವು ವೆಸ್ಟ್ ಇಂಡೀಸ್‌ನಿಂದ ಬೇಗನೆ ಮರಳಲು ಇಚ್ಛಿಸಿದ್ದೆವು. ಹಾಗಾಗಿ ಎಲ್ಲರೂ ನಮ್ಮನ್ನು ಇನ್ನು ಮುಂದಾದರೂ ನಮ್ಮನ್ನು ದೇವರಂತೆ ಪೂಜಿಸಬೇಕು. ಹಾರ ಮಾತ್ರ ಹೂವಿನದ್ದೇ ಹಾಕಬೇಕು!!!

Friday, March 23, 2007

ಸ್ಪೈಡರ್ ಮ್ಯಾನ್ ಸೆರೆ : ವಿಶ್ವಾದ್ಯಂತ ಮಕ್ಕಳಿಗೆ ತಲೆನೋವು

(ಬೊಗಳೂರು ಮಕ್ಕಳಾಟಿಕೆ ಬ್ಯುರೋದಿಂದ)
ಬೊಗಳೂರು, ಮಾ.23- ವಿಶ್ವಾದ್ಯಂತ ಮಕ್ಕಳೆಲ್ಲರೂ ಎರಡೂ ಕೈಗಳನ್ನು ತಮ್ಮ ತಲೆಯ ಮೇಲೆ ಹೊತ್ತು ಕುಳಿತುಕೊಂಡಿದ್ದಾರೆ.
ಇದಕ್ಕೆ ಕಾರಣ ವಿಶ್ವ ಕಪ್ ಕ್ರಿಕೆಟ್ ಇರಬಹುದೇ? ಅಥವಾ ಅವರಿಗಾಗಿ ಇರುವ ಚಾಕಲೇಟುಗಳನ್ನೆಲ್ಲಾ ಹಿರಿಯರು ಕದ್ದೊಯ್ದರೇ ಎಂಬಿತ್ಯಾದಿ ಸಾಧ್ಯಾಸಾಧ್ಯತೆಗಳ ಬಗ್ಗೆ ಪರಿಶೀಲನೆ ನಡೆಸುತ್ತಿರುವಾಗ ದೊರೆತದ್ದು ಈ ಸುದ್ದಿ. ಮಕ್ಕಳ ಪ್ರೀತಿಯ ಆಟಗಾರ ಸ್ಪೈಡರ್ ಮ್ಯಾನ್‌ನನ್ನು ಮಲೇಷ್ಯಾ ಪೊಲೀಸರು ಬಂಧಿಸಿರುವುದು!!!

80 ಮಹಡಿಗಳ ಪೆಟ್ರೋನಾಸ್ ಕಟ್ಟಡಕ್ಕೆ ಮೇಲೇರಲು ಯತ್ನಿಸುತ್ತಿದ್ದ ಸ್ಪೈಡರ್ ಮ್ಯಾನ್‌ನನ್ನು ಪೊಲೀಸರು 60ನೇ ಮಹಡಿಯಿಂದ ಬಂಧಿಸಿದರು ಎಂದು ವರದಿ ತಿಳಿಸಿದೆ.

ಈ ಕಾರಣಕ್ಕೆ 60ನೇ ಮಹಡಿ ವರೆಗೆ ಏದುಸಿರು ಬಿಡುತ್ತಾ ಏರಿದ ಪೊಲೀಸರನ್ನು ಕೂಡ ಬಂಧಿಸಬೇಕು ಎಂದು ಪುಟಾಣಿಗಳು ಒತ್ತಾಯಿಸಿದ್ದು, ಸ್ಪೈಡರ್ ಮ್ಯಾನ್ ಬಿಡುಗಡೆಗೆ ತೀವ್ರ ಒತ್ತಡ ಹೇರತೊಡಗಿದ್ದಾರೆ.

ಈ ಬಗ್ಗೆ ಸ್ಪೈಡರ್ ಮ್ಯಾನ್‌ನನ್ನೇ ಮಾತನಾಡಿಸಲು ನಿರ್ಧರಿಸಿದ ಬೊಗಳೆ ರಗಳೆ ಬ್ಯುರೋ, ಕಟ್ಟಡದ ತುತ್ತ ತುದಿಯಲ್ಲಿ ನಿಂಬೆ ಹಣ್ಣಿನಂತೆ ತೋರುತ್ತಿದ್ದ ಸ್ಪೈಡರ್ ಮ್ಯಾನ್‌ನನ್ನು ಮರದ ಉದ್ದನೆಯ ಕೋಲಿನಿಂದ ಹೊಡೆದು ಕೆಳಗೆ ಎಳೆಯುವ ಪ್ರಯತ್ನ ಮಾಡಿತು. ಬೊಗಳೆ ಎಂದ ತಕ್ಷಣವೇ ಎರಡೂ ಕೈಗಳನ್ನು ಬಿಟ್ಟು ಧೊಪ್ಪನೆ ಕೆಳಗೆ ಬಿದ್ದ ಸ್ಪೈಡರ್ ಮ್ಯಾನ್, ಮಂಗನಂತೆ ಏರುವುದು ನಮ್ಮ ಉದ್ದೇಶವಾಗಿರಲಿಲ್ಲ. ಆದರೆ ಮಂಗ ಮಾಯವಾಗುವುದು ಹೇಗೆ ಎಂಬುದನ್ನು ಜನತೆಗೆ ತೋರಿಸಬೇಕಿತ್ತು ಎಂದು ಉತ್ತರಿಸಿದ್ದಾನೆ.

ಅದು ಹೇಗೆ, ಸ್ವಲ್ಪ ವಿವರಿಸಿ ಹೇಳುವೆಯಾ ಎಂದು ಕೇಳಿದಾಗ, "ಸುಮಾರು 40ನೇ ಮಹಡಿಗೆ ಏರಿದಾಗಲೇ ನಾನು ಕೆಳಗಿದ್ದವರಿಗೆ ಕಾಣಿಸುವುದಿಲ್ಲ. ಹಾಗಾಗಿ ಇನ್ನೂ ಮೇಲಕ್ಕೇರಿದರೆ ಬಹುತೇಕ ಅದೃಶ್ಯನಾಗಿಬಿಡುತ್ತೇನೆ. ಅಲ್ಲೆಲ್ಲಾದರೂ ಸ್ವರ್ಗ-ನರಕ ಕಾಣುತ್ತದೆಯೋ ಎಂಬುದನ್ನು ನೋಡಬೇಕಿತ್ತು" ಎಂದು ವಿವರಿಸಿದ್ದಾನೆ.

ಇದೀಗ ಮಕ್ಕಳನ್ನು ಸಮಾಧಾನಿಸಲು ವಿಶ್ವಾದ್ಯಂತ ಭರದ ಸಿದ್ಧತೆ ನಡೆಯುತ್ತಿದ್ದು, ಸ್ಪೈಡರ್ ಮ್ಯಾನ್ ಬಿಡುಗಡೆ ಬಹುತೇಕ ಖಚಿತವಾಗಿದೆ.

Wednesday, March 21, 2007

ಸರ್ವ-ಚಿತ್ someಮತ್ಸರ ಫಲ

(ಬೊಗಳೆ ಭವಿಷ್ಯರಹಿತ ಬ್ಯುರೋದಿಂದ)
ಸರ್ವರಿಗೂ ಸರ್ವಜಿತು ನಾಮ ಸಂವತ್ಸರದ ಶುಭಾಶಯಗಳೊಂದಿಗೆ ಬೊಗಳೆ ರಗಳೆ ಬ್ಯುರೋ ತನ್ನ ಓದುಗರಿಗಾಗಿ ಚಿಂತಾಜನಕ ಭವಿಷ್ಯ ವಾಣಿಯನ್ನು ಉಣಬಡಿಸಲಿದೆ.

ಬೊಗಳೆ ರಗಳೆ ಬ್ಯುರೋ ಭವಿಷ್ಯದ ವಿಶೇಷತೆಯೆಂದರೆ, ಈ ಕೆಳಗಿನ ರಾಶಿಗಳಿಂದ ಯಾರು ಬೇಕಾದರೂ ತಮಗೆ ಬೇಕಾದ ರಾಶಿಯನ್ನು ಆರಿಸಿಕೊಂಡು, ಅದನ್ನು ತಮ್ಮದೇ ರಾಶಿ ಎಂದುಕೊಂಡು ಮುನ್ನಡೆಯಬಹುದಾಗಿದೆ.

ಮೇಷ
ಅಷ್ಟಮ ಸ್ಥಾನದಲ್ಲಿ ಗುರು ನೆಲೆಸಿರುವುದರಿಂದ ಮನೆಯಲ್ಲಿ ಬಾಗಿಲು ಇಲ್ಲದಿದ್ದರೆ ಖಂಡಿತವಾಗಿಯೂ ಕಳ್ಳತನವಾಗುತ್ತದೆ. ಆದುದರಿಂದಾಗಿ ಚೋರ ಭಯ ಶತಃಸಿದ್ಧ. ಹಠಾತ್ ರಜೆ ಹಾಕಿದರೆ ಉನ್ನತ ಅಧಿಕಾರಿಗಳಿಂದ ಬೈಗುಳ. ಮನೆಯಲ್ಲಿ ಬೆಂಕಿ ಇದ್ದರೆ ಅದನ್ನು ಬೀಡಿ, ಸಿಗರೇಟು ಸುಡಲು, ಒಲೆ ಹಚ್ಚಲು ಬಳಸಬಹುದು. ಹೆಚ್ಚುಕಡಿಮೆ ಮಾಡಿಕೊಂಡು ಪ್ರಯೋಗಿಸಿದರೆ ಅನಾಹುತವಾಗಬಹುದು.

ವೃಷಭ
ಜ್ವರ ಬಂದರೆ ವೈದ್ಯರ ಬಳಿಗೆ ಹೋಗುವ ಇಚ್ಛೆ ನಿಮಗೆ ಬರಲಾರದು. ಬೇರೇನಾದರೂ ಕಾಯಿಲೆ ಬಂದರೆ ಮಾತ್ರ ಡಾಕ್ಟರ್ ಶಾಪ್ ಎಲ್ಲಿದೆ ಅಂತ ಹುಡುಕುವಿರಿ. ಬೇರೆಯವರ ಸ್ವಭಾವ ಗೊತ್ತಿದ್ದೂ ಅವರಿಗೆ ಜವಾಬ್ದಾರಿ ವಹಿಸಿದರೆ ಮೋಸ ಹೋಗುವ ಸರದಿ ನಿಮ್ಮದೇ. ಕಚೇರಿಯಲ್ಲಿ ಎಲ್ಲರೊಂದಿಗೂ ಕೂಗಾಡುತ್ತಿದ್ದರೆ ಅವರ ಆಕ್ರೋಶಕ್ಕೆ ಗುರಿಯಾಗುವಿರಿ. ಕ್ರೆಡಿಟ್ ಕಾರ್ಡ್ ಆಗಾಗ್ಗೆ ಬಳಸುವುದರಿಂದ ನೀವು ಸಾಲವಂತರಾಗುತ್ತೀರಿ.

ಮಿಥುನ
ನೀವು ಎಲ್ಲರೊಂದಿಗೂ ನಿಷ್ಠುರರಾಗಿ ಮಾತನಾಡುವುದರಿಂದ ಅವರೆಲ್ಲರಿಗೂ ನಿಷ್ಠುರ ವ್ಯಕ್ತಿ ಅನಿಸಿಕೊಳ್ಳುತ್ತೀರಿ. ನಿಮ್ಮ ತೋಟಕ್ಕೆ ಮಂಗಗಳ ಕಾಟ ಹೆಚ್ಚಾದಲ್ಲಿ ಮನೆಯಲ್ಲಿ ಮಂಗಗಳ ಕಾರ್ಯ ನೆರವೇರುವ ಸಾಧ್ಯತೆಗಳು ಬಹುತೇಕ ಖಚಿತ. ಹೊಸ ಬಟ್ಟೆ, ಹೊಸ ಆಭರಣ ತೊಟ್ಟರೆ ಎಲ್ಲರೂ ನಿಮ್ಮತ್ತ ನೋಡುವರು. ಬಟ್ಟೆ ಧರಿಸದಿದ್ದರೆ ನೋಡುವವರ ಸಂಖ್ಯೆ ಹೆಚ್ಚಾಗಲಿದೆ.

ಕರ್ಕಾಟಕ
ನೀವು ಎಲ್ಲರನ್ನೂ ನಂಬುವುದರಿಂದ ಎಲ್ಲರೂ ನಿಮಗೆ ಮೋಸ ಮಾಡುವುದು ಸುಲಭ. ಇದು ಬೊಗಳೆ ರಗಳೆ ಬ್ಯುರೋಗೆ ತಿಳಿಯದಂತೆ ಎಚ್ಚರ ವಹಿಸುವುದು ಸೂಕ್ತ. ವಿವಾದ ಇತ್ಯರ್ಥಕ್ಕೆ ನ್ಯಾಯಾಲಯದ ಮೊರೆ ಹೋಗಿದ್ದರೆ ಹತ್ತಾರು ವರ್ಷಗಳ ಬಳಿಕ ನಿಮಗೆ, ಅಲ್ಲದಿದ್ದರೆ ಎದುರಾಳಿ ಪಾರ್ಟಿಗಳಿಗೆ ನ್ಯಾಯ ದೊರೆಯುವುದು ಖಚಿತ. ಅಷ್ಟು ವರ್ಷಗಳ ಕಾಲ ಕರಿ"ಕೋಟಿ"ಗರು ನಿಮ್ಮಿಂದ ಕೋಟಿ ಕೋಟಿ ಪೀಕಿಸಬಹುದು.

ಸಿಂಹ
ಸಂಪಾದನೆಗಿಂತ ನೀವು ಹೆಚ್ಚು ಖರ್ಚು ಮಾಡಿದರೆ ಆ ತಿಂಗಳ ಮಟ್ಟಿಗೆ ದಿವಾಳಿಯಾಗುತ್ತೀರಿ. ಇಲ್ಲವಾದಲ್ಲಿ ಬ್ಯಾಂಕ್ ಬ್ಯಾಲೆನ್ಸ್ ಕರಗಿಸಬೇಕಾಗಿಬಂದೀತು. ಶಾಂತಿ ಎಂಬ ನಿಮ್ಮ ಕಾಲೇಜು ಗೆಳತಿ ಮನೆಗೆ ದಿಢೀರ್ ಬಂದರೆ ಗೃಹದಲ್ಲಿ ಅಶಾಂತಿ ಉಂಟಾದೀತು. ಯಾವುದೇ ಅಶುಭ ಫಲಗಳು ಸಂಭವಿಸದಿದ್ದರೆ ಆ ದಿನ ನಿಮಗೆ ಶುಭದಾಯಕವಾಗಲಿದೆ.

ಕನ್ಯಾ
ಕಲೆ, ಸಂಗೀತ, ಸಾಹಿತ್ಯ ಇತ್ಯಾದಿಗಳ ಅಕಾಡೆಮಿಗಳಿಗೆ ಅರ್ಜಿ ಸಲ್ಲಿಸಿಯೂ ನೀವು, ಕೆಲಸವಾಗಬೇಕಿದ್ದರೆ ಕತ್ತೆ ಕಾಲು ಹಿಡಿ ಎಂಬ ಉಕ್ತಿಯ ಅನುಸಾರ ರಾಜಕಾರಣಿಗಳ ಕಾಲು ಹಿಡಿಯದಿದ್ದರೆ, ಖಂಡಿತಾ ನಿಮಗೆ ಅರ್ಹತೆಯಿದ್ದರೂ ಪ್ರಶಸ್ತಿ, ಪುರಸ್ಕಾರ ಲಭಿಸುವುದಿಲ್ಲ. ರಾಜಕಾರಣಿಗಳೆಲ್ಲಾ ವಿಧಾನಸೌಧದಲ್ಲಿ ಹೊಡೆದಾಡುತ್ತಿರುವುದರಿಂದ ನಿಮ್ಮೂರಲ್ಲಿ ಅಭಿವೃದ್ಧಿ ಕಾರ್ಯಗಳಾಗಿ ಶಾಂತಿ ನೆಲಸಬಹುದು.

ತುಲಾ
ಅಪರಿಚಿತರೊಂದಿಗೆ ಸಹ-ವಾಸ ದೋಷದಿಂದ ಎಚ್ಐವಿ ಎಂಬ ಮಾನವಕುಲಕ್ಕೆ ಇದೀಗ ಅಮೂಲ್ಯವಾಗಿಬಿಟ್ಟಿರುವ (ಅದರ ಚಿಕಿತ್ಸೆಗೆ ಸಾಕಷ್ಟು ವ್ಯಯ ಮಾಡಬೇಕಾಗಿರುವುದರಿಂದ ಅದು ಅ-ಮೂಲ್ಯ) ವೈರಸ್ ನಿಮ್ಮನ್ನು ಪ್ರೀತಿಸುವ ಸಾಧ್ಯತೆಯಿದ್ದು, ಡ್ಯುಯೆಟ್ ಸಾಂಗ್ ಹಾಡಬಹುದು. ಶನಿಕಾಟವಿದ್ದರೆ ಶನಿಶಾಂತಿಯನ್ನೂ, ಗುರುಕಾಟವಿದ್ದರೆ ಗುರುಶಾಂತಿಯನ್ನೂ, ಅದೇ ರೀತಿ ಇತರ ನವಗ್ರಹಗಳ ಕಾಟವಿದ್ದರೆ ಆಯಾ ಶಾಂತಿಯನ್ನು ಮಾಡಿಸಿಕೊಳ್ಳುವುದು ಉತ್ತಮ.

ವೃಶ್ಚಿಕ
ಕರೆಂಟ್ ಬಿಲ್ ಕಟ್ಟದಿದ್ದರೆ ಬಿಲ್ ಸರಿಯಾಗಿ ಕಟ್ಟಿದವರಿಗೆ ದೊರೆಯುವ ಪವರ್ ಕಟ್ ಸೌಲಭ್ಯ ನಿಮಗೂ ಅಚಾನಕ್ ಆಗಿ ದೊರೆಯಬಹುದು. ವಿದ್ಯುತ್ ಸೌಲಭ್ಯ ಇಲ್ಲದಿದ್ದರೂ ಶಾಕ್ ಹೊಡೆಯುವ ಅನುಭವವು ವಿದ್ಯುತ್ ಇಲಾಖೆಯ ಈ ಬಿಲ್-ವಿದ್ಯೆಯಿಂದಾಗಿ ನಿಮಗೆ ಆಗಲಿದೆ. ಮನೆ ಬಾಡಿಗೆ ಬಾಕಿ ಇರಿಸಿಕೊಂಡಿದ್ದರೆ, ನೀವು ಕಚೇರಿಯಿಂದ ಸಂಜೆ ಮರಳಿದಾಗ ಮನೆಯೊಳಗಿನ ವಸ್ತುಗಳೆಲ್ಲಾ ಹೊರಗಿರುವ ಸಾಧ್ಯತೆ ಇರುವುದರಿಂದ ಮತ್ತು ಮನೆಯೊಡೆಯ ಕಣ್ಣು ದೊಡ್ಡದು ಮಾಡುತ್ತಾ ದೊಣ್ಣೆ ಹಿಡಿದು ನಿಮ್ಮನ್ನು ಸ್ವಾಗತಿಸಲು ಕಾಯುತ್ತಿರುವುದರಿಂದ ಎಚ್ಚರಿಕೆ ವಹಿಸಿ.

ಧನು
ನೀವು ರಾಜಕೀಯಕ್ಕೆ ಸೇರಿದ್ದರೆ ಓಟು ಪಡೆಯುವುದಕ್ಕಾಗಿ ಅಸತ್ಯ ನುಡಿಯಬೇಕಾಗುತ್ತದೆ. ಪ್ರಜೆಗಳು ಏನೇ ಮನವಿ ಸಲ್ಲಿಸಿದರೂ, "ಶೀಘ್ರದಲ್ಲೇ ಅದನ್ನು ಪರಿಹರಿಸುತ್ತೇವೆ, ನಾಳೆಯೇ ಅದನ್ನು ರಿಪೇರಿ ಮಾಡಿಸುವೆ, ಇನ್ನೊಂದೆರಡು ವಾರ ಕೊಟ್ಟು ನೋಡಿ, ಹೇಗೆ ಊರನ್ನೇ ಬದಲಿಸುತ್ತೇನೆ" ಎಂಬಿತ್ಯಾದಿ ಸಾಮಾನ್ಯ ಧ್ಯೇಯವಾಕ್ಯಗಳನ್ನು ಬರೆದಿಟ್ಟುಕೊಳ್ಳಿ. ಆಗಾಗ್ಗೆ ಈ ವಾಕ್ಯಗಳನ್ನು ಬಾಯಿಯಿಂದ ಉದುರಿಸಬೇಕಾಗಬಹುದು. ಆದರೆ ಇದನ್ನು "ಬೊಗಳೆ" ಎಂದು ಕರೆದು ನಮ್ಮ ಬ್ಯುರೋಗೆ ಅಪಮಾನ ಮಾಡದಿರಲು ಕೋರಲಾಗಿದೆ.

ಮಕರ
ರಾಜ್ಯದಲ್ಲೇನಾದರೂ ಅಹಿತಕರ ಘಟನೆ ನಡೆದಲ್ಲಿ, ನೀವು ಆಡಳಿತ ಪಕ್ಷದವರಾಗಿದ್ದರೆ, "ತನಿಖೆ ನಡೆಸಲಾಗುತ್ತದೆ, ದುಷ್ಕರ್ಮಿಗಳನ್ನು ಮಟ್ಟ ಹಾಕುತ್ತೇವೆ" ಎಂದೂ, ವಿರೋಧ ಪಕ್ಷದಲ್ಲಿದ್ದರೆ "ಸಿಬಿಐ ತನಿಖೆಯಾಗಲಿ, ಇದರಲ್ಲಿನ ಮಂತ್ರಿ ಕೈವಾಡದ ಬಗ್ಗೆ ತನಿಖೆಯಾಗಲಿ" ಎಂದೂ ವಿಧಾನಸೌಧದಲ್ಲಿ ಕೂಗಾಡಿದರೆ ನಿಮಗೆ ಆ ದಿನದ ವೇತನ ಗ್ಯಾರಂಟಿ. ರಾತ್ರಿ ಆಡಳಿತ-ವಿರೋಧ ಪಕ್ಷದವರಿಬ್ಬರೂ ಕುಳಿತುಕೊಂಡು ಸಾಮರಸ್ಯಕ್ಕಾಗಿ ಪಬ್‌ಗಳೂರಲ್ಲಿ ಸೋಮ-ರಸ ಹೀರುತ್ತಾ ಕುಳಿತಿರಬಹುದು.

ಕುಂಭ
ನೀವು ಕೈಗೊಳ್ಳುವ ಎಲ್ಲಾ ಕಾರ್ಯಗಳಲ್ಲಿ ಜಯ ಲಭಿಸದಿದ್ದರೆ ಅಪಜಯ ಎದುರಾಗುವುದು ಖಚಿತ. ಗೃಹ ನಿರ್ಮಾಣ ಕಾರ್ಯಕ್ಕಾಗಿ ನೀವು ಪಂಚಾಂಗ ಹಾಕದಿದ್ದರೆ, ಮನೆಯು ಮೇಲೆದ್ದು ನಿಲ್ಲುವ ಸಾಧ್ಯತೆಗಳು ಕಡಿಮೆ ಎಂದೇ ಹೇಳಬಹುದು. ಅಧಿಕಾರಿಗಳ ಕೈಬಿಸಿಯಾಗದಿದ್ದರೆ ಪರವಾನಗಿ ಪತ್ರದ ಬೆಣ್ಣೆ ಕರಗುವುದಿಲ್ಲ.

ಮೀನ
ನೀವು ಸ್ನಾನ ಮಾಡದಿದ್ದರೆ ಸಮಾಜದಲ್ಲಿ ಉತ್ತಮ ಸ್ನಾನ-ಮಾನ ಲಭಿಸುವ ಸಾಧ್ಯತೆಗಳು ಕಡಿಮೆ. ನೀವು ಬೆಂಗಳೂರಿನಲ್ಲಿದ್ದರೆ ಶುನಕ ಕಾಟವೂ, ಶುನಕ ಕಾಟವಿಲ್ಲದಿದ್ದರೆ ಬೀದಿ ಶುನಕ ಕಾಟವೂ, ಯಾವುದೂ ಇಲ್ಲದಿದ್ದರೆ ಕೈಯೊಡ್ಡುವ ಪೊಲೀಸರ ಕಾಟವೂ ದೊರೆಯಲಿದೆ. ಮದುವೆಯಾಗದಿದ್ದರೆ ಮತ್ತು ಸರಿಯಾದ ವಧು-ವರರನ್ನು ನೋಡಿಟ್ಟಿದ್ದರೆ, ಕೊನೆಯದಾಗಿ ವಿವಾಹ ನಿಶ್ಚಿತಾರ್ಥವಾಗಿದ್ದರೆ ಮತ್ತು ವಿವಾಹವಾಗುವುದು ಖಚಿತವಾಗಿದ್ದರೆ ವಿವಾಹಯೋಗವಿದೆ.

(ಡಿಸ್ಕ್ ಕ್ಲೈಮರ್: ಭವಿಷ್ಯ ಓದಿ ಎದುರಾಗುವ ಕಾರ್ಯಗಳ ಫಲಾಫಲಗಳ ಬಗ್ಗೆ ಬೊಗಳೆ ಬ್ಯುರೋ ಜವಾಬ್ದಾರವಲ್ಲ.)
-------------
ಮನವಿ: ನಿಮ್ಮ ಬ್ಲಾಗು ಅಥವಾ ಮಿತ್ರರ ಬ್ಲಾಗು ಈ ಕೆಳಗಿರುವ ಕನ್ನಡ ಬ್ಲಾಗೋತ್ತಮರು ಪಟ್ಟಿಯಲ್ಲಿ ಇದೆಯೇ? ಇಲ್ಲವಾದಲ್ಲಿ, ಅದನ್ನು ಲಿಂಕಿಸುವ ಸಮ್ಮತಿಯೊಂದಿಗೆ ದಯವಿಟ್ಟು ಅದರ ಯುಆರ್ಎಲ್ ಮತ್ತು ಶೀರ್ಷಿಕೆ ಸಹಿತ asatya ಡಾಟ್ anveshi @ ಜಿಮೇಲ್ ಡಾಟ್ ಕಾಮ್ ಗೆ ತಿಳಿಸಿಬಿಡಿ.

Wednesday, March 14, 2007

ಬೊಗಳೆ ಬ್ಯುರೋಗೆ ರಜೆ : ಓದುಗರ ಹರ್ಷ

ನಿವಾರ್ಯವಾಗಿ ಮತ್ತು ಅನಗತ್ಯ ಕಾರ್ಯ ನಿಮಿತ್ತ, ಬೇರೆಯವರ ತಲೆ ಚಿಟ್ಟು ಹಿಡಿಸುತ್ತಿರುವ ಬೊಗಳೆ ರಗಳೆ ಬ್ಯುರೋದ ತಲೆಗೆ ಬಟ್ಟೆ ಮುಚ್ಚಿ ತಲೆ ಮರೆಸಿಕೊಳ್ಳುವಂತೆ ಮಾಡಲಾಗಿದ್ದು, ಮುಂದಿನ ಒಂದು ವಾರ ಕಾಲ ಏಕಸದಸ್ಯ ಬ್ಯುರೋದ ಸಮಸ್ತ ಸಿಬ್ಬಂದಿಗಳು ತಲೆ ಮರೆಸಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

ಈ ಅವಧಿಯಲ್ಲಿ ಓದುಗರು ಸುಧಾರಿಸಿಕೊಳ್ಳಲು ಸೂಕ್ತ ಅವಕಾಶ ದೊರೆತಿದ್ದು, ಇದರ ಸದುಪಯೋಗಪಡೆದುಕೊಳ್ಳುವಂತೆ ವಿಜ್ಞಾನಿಗಳು ಹರ್ಷಚಿತ್ತರಾಗಿ ಸೂಚಿಸಿದ್ದಾರೆ.

ಈ ಮಧ್ಯೆ, ಬೊಗಳೆ ರಗಳೆ ಬ್ಯುರೋಗೆ ರಜೆಯ ವಿಷಯ ತಿಳಿಯುತ್ತಿದ್ದಂತೆಯೇ, ವಿಶ್ವದಲ್ಲಿ ಬೆರಳಿನಲ್ಲಿ ಎಣಿಸಲು ಅಸಾಧ್ಯವಾದಷ್ಟು ಮಂದಿಯಿದ್ದರೂ ಬೊಗಳೆ ರಗಳೆ ಬ್ಯುರೋಗೆ ಅದಕ್ಕಿಂತಲೂ ಹೆಚ್ಚು (ಅಂದರೆ ಬೆರಳೆಣಿಕೆಗಿಂತ ಹತ್ತಿಪ್ಪತ್ತು ಕಡಿಮೆ!!) ಓದುಗರ ಬಳಗವಿರುವುದರಿಂದ ಅವರೆಲ್ಲರೂ ಅಪಾರ ಹರ್ಷ ವ್ಯಕ್ತಪಡಿಸಿದ್ದಾರೆ.
-----------------------
ಮನವಿ
ನಿಮ್ಮ ಬ್ಲಾಗು ಅಥವಾ ಮಿತ್ರರ ಬ್ಲಾಗು ಈ ಕೆಳಗಿರುವ ಕನ್ನಡ ಬ್ಲಾಗೋತ್ತಮರು ಪಟ್ಟಿಯಲ್ಲಿ ಇದೆಯೇ? ಇಲ್ಲವಾದಲ್ಲಿ, ಅದನ್ನು ಲಿಂಕಿಸುವ ಸಮ್ಮತಿಯೊಂದಿಗೆ ದಯವಿಟ್ಟು ಅದರ ಯುಆರ್ಎಲ್ ಮತ್ತು ಶೀರ್ಷಿಕೆ ಸಹಿತ asatya ಡಾಟ್ anveshi @ ಜಿಮೇಲ್ ಡಾಟ್ ಕಾಮ್ ಗೆ ತಿಳಿಸಿಬಿಡಲು ಕೋರಿಕೆ.

Tuesday, March 13, 2007

ಮಂಗಗಳ ಅಂಗಳದಲ್ಲಿ ವಿವಾಹ ಸಂಭ್ರಮ

(ಬೊಗಳೂರು ಮಂಗ ಬ್ಯುರೋದಿಂದ)
ಬೊಗಳೂರು, ಮಾ.13- ಬೆಂಗಳೂರಿನಲ್ಲಿ ನಾಯಿಗಳನ್ನು ಕೊಲ್ಲುತ್ತಾ ಮಾನವರು ದಾನವರಾಗುತ್ತಿರುವಂತೆಯೇ, ಪೂರ್ವಜರು ಕೂಡ ತಾವು ಬಹಳ ಪೂರ್ವಕಾಲದಲ್ಲೇ ಇದ್ದೇವೆ ಎಂಬುದನ್ನು ಅರಿತುಕೊಂಡು, ಮರಳಿ ಮಾನವಸಮುದಾಯಕ್ಕೆ ತಿರುಗಿಬರುವ ನಿಟ್ಟಿನಲ್ಲಿ ದೃಢವಾದ ಹೆಜ್ಜೆ ಇರಿಸುತ್ತಿದ್ದಾರೆ.

ಈ ರೀತಿ ಮಂಗಗಳ ಅಂಗಳದಲ್ಲಿ ಬಲವಾಗಿ ಹೆಜ್ಜೆ ಊರಿದ ಮೊದಲ ಪರಿಣಾಮವೇ ಮಂಗಗಳ ವಿವಾಹ. ಇತ್ತೀಚೆಗೆ ಕಪ್ಪೆಗಳ ಮದುವೆ, ನಾಯಿಗಳ ಮದುವೆ ಇತ್ಯಾದಿ ನಡೆದಿರುವುದು ಎಲ್ಲರಿಗೂ ತಿಳಿದ ಸಂಗತಿಯಾಗಿದ್ದು, ಈ ಸಾಲಿಗೆ ಹೊಸ ಸೇರ್ಪಡೆ ಮಂಗಗಳ ವಿವಾಹ.

ಇದರೊಂದಿಗೆ ಮಂಗ-ಮಾನವ ಸಂಬಂಧಕ್ಕೆ ಹೊಸ ಅರ್ಥವೊಂದನ್ನು ಕಲ್ಪಿಸಲಾಗುತ್ತಿದ್ದು, ಮಂಗನಿಂದ ಮಾನವ ಎಂದಿದ್ದದ್ದನ್ನು ಮಾನವನಿಂದ ಮಂಗ ಎಂದು ತಿರುಗಿಸಲು ಮಂಗ ಸಮುದಾಯವು ಪಣ ತೊಟ್ಟಿರುವುದು ಶಾಂತಿಯ ಭಂಗಕ್ಕೆ ಕಾರಣವಾಗಬಹುದೇ ಎಂದು ಆತಂಕ ವ್ಯಕ್ತಪಡಿಸಲಾಗಿದೆ.

ಇದಕ್ಕೆ ಪ್ರಮುಖ ಕಾರಣವೆಂದರೆ, ಇತ್ತೀಚೆಗೆ ಮಾನವ ಬುದ್ಧಿ ತೋರಿಸಿದ ಶ್ವಾನವನ್ನು ಸಮುದಾಯದಿಂದಲೇ ಬಹಿಷ್ಕರಿಸುವ ನಿರ್ಧಾರ ಕೈಗೊಂಡಿರುವುದು. ಇದೀಗ ವಿವಾಹಿತ ಮಂಗ ದಂಪತಿಯನ್ನು ಮಂಗ ಸಮುದಾಯವು ಬಹಿಷ್ಕರಿಸಲಿದೆಯೇ ಎಂದು ಕಾದು ನೋಡಲಾಗುತ್ತಿದೆ.

ಆದರೆ ವಿವಾಹವಾದ ಬಳಿಕ ವಿವಾದ ಇದ್ದದ್ದೇ ಎಂಬ ಅಲಿಖಿತ ನಿಯಮವು ಮಂಗಗಳ ಮಟ್ಟಿಗೆ ಇದುವರೆಗೆ ಅನ್ವಯವಾಗಿಲ್ಲ. ಕಾಲಾನಂತರದಲ್ಲಿ ಸಂಸಾರ ಸಾಗರದಲ್ಲಿ ಈಜುತ್ತಿರುವ ಹಂತದಲ್ಲಿ ಇದು ಗೋಚರಕ್ಕೆ ಬರಬಹುದು, ಅಂತೆಯೇ ಮಂಗಗಳ ಕಿರ್ರ್...ಕಿರ್ರ್... ಧ್ವನಿಯು ಊರವರ ನಿದ್ದೆ ಕೆಡಿಸಲಿದೆಯೇ ಎಂಬ ಬಗ್ಗೆ ಈಗಾಗಲೇ ಭರದಿಂದ ಯೋಚನೆ-ಯೋಜನೆಗಳನ್ನು ಲೆಕ್ಕಾಚಾರ ಹಾಕಲಾಗುತ್ತಿದೆ.

ಡಿಸ್ಕ್ ಕ್ಲೈಮರ್ : ಈ ವರದಿಯಲ್ಲಿ ಅಗತ್ಯಕ್ಕಿಂತ ಹೆಚ್ಚು ಬಾರಿ ಮಂಗ ಮಂಗ ಮಂಗ ಮಂಗ ಎಂಬ ಪದವನ್ನು ಬಳಸಿದ್ದರೆ ಅದಕ್ಕೆ ಯಾರು ಕೂಡ ಜವಾಬ್ದಾರರಲ್ಲ- ಅಸತ್ಯಾನ್ವೇಷಿ
------------------------------------
ಮನವಿ

ನಿಮ್ಮ ಬ್ಲಾಗು ಅಥವಾ ಮಿತ್ರರ ಬ್ಲಾಗು ಈ ಕೆಳಗಿರುವ ಕನ್ನಡ ಬ್ಲಾಗೋತ್ತಮರು ಪಟ್ಟಿಯಲ್ಲಿ ಇದೆಯೇ? ಇಲ್ಲವಾದಲ್ಲಿ, ಅದನ್ನು ಲಿಂಕಿಸುವ ಸಮ್ಮತಿಯೊಂದಿಗೆ ದಯವಿಟ್ಟು ಅದರ ಯುಆರ್ಎಲ್ ಮತ್ತು ಶೀರ್ಷಿಕೆ ಸಹಿತ asatya ಡಾಟ್ anveshi @ ಜಿಮೇಲ್ ಡಾಟ್ ಕಾಮ್ ಗೆ ತಿಳಿಸಿಬಿಡಲು ಕೋರಿಕೆ.

Monday, March 12, 2007

ಭವಿಷ್ಯಕ್ಕೆ ತಯಾರಿ ನಡೆಸಿರುವ ಪುಟಾಣಿ

(ಬೊಗಳೂರು ಕಷ್ಟನಷ್ಟ ಬ್ಯುರೋದಿಂದ)
ಬೊಗಳೂರು, ಮಾ.12- ಜೀವನದಲ್ಲಿ ಕಷ್ಟ ನಷ್ಟಗಳು ಎದುರಾಗುವುದು ಸಹಜ. ಅಂತೆಯೇ ಯಾರೇ ಅಧಿಕಾರಕ್ಕೆ ಬಂದರೂ ಬೆಲೆ ಏರಿಕೆ ಬಿಸಿಯಿಂದ ಕಣ್ಣೀರು ಸುರಿಯುವುದು ಸಹಜ. ಹೀಗಾಗಿ ಈಗಿನ ಮಕ್ಕಳು ಭವಿಷ್ಯದಲ್ಲಿ ಹೇಗೆ ಕಷ್ಟಪಡಬೇಕು ಎಂಬುದನ್ನು ಕಲಿತುಕೊಂಡೇ ಹುಟ್ಟತೊಡಗುತ್ತವೆ.

ಈ ಫಿಲಾಸಫಿಯೊಂದಿಗೆ ಅಸ್ಸಾಂ ಪುಟಾಣಿಯೊಬ್ಬ ಮೆಣಸು ತಿಂದು ಜೀವನ ನಡೆಸುವುದು ಹೇಗೆ ಎಂಬುದರಲ್ಲಿ ಪರಿಣತಿ ಸಾಧಿಸಿದ್ದಾನೆ.

ಅಪ್ಪ ಕೇಳಿದರೆ ಐಸ್ ಕ್ಯಾಂಡಿ ಕೊಡಿಸುವುದಿಲ್ಲ. ಹೀಗಾಗಿ ಸ್ವಾಭಿಮಾನದಿಂದಾಗಿ ಐಸ್ ಕ್ಯಾಂಡಿಯಂತೆಯೇ ಕಾಣಿಸುವ ಕೆಂಪು ಮೆಣಸು ತಿನ್ನಲು ಆರಂಭಿಸಿದ ಆತ, ಸ್ವಾವಲಂಬನೆಯಲ್ಲಿ ದೃಢ ಹೆಜ್ಜೆ ಇರಿಸಿದ್ದಾನೆ ಎಂದು ವಿಶ್ಲೇಷಿಸಲಾಗಿದೆ.

ಅಂದರೆ ಐಸ್ ಕ್ಯಾಂಡಿ ಕೊಡಿಸಲು ಯಾರಿಗೂ ಕಾಡಬೇಕಿಲ್ಲ. ತಾನೇ ಹೋಗಿ ಗದ್ದೆಯಲ್ಲಿನ ಈ ಮೆಣಸು ತಿಂದರಾಯಿತು ಎಂಬುದು ಈತನ ಸಿದ್ಧಾಂತ. ಮುಂದೆ ಬೆಲೆ ಏರಿಕೆಯಿಂದಾಗಿ ಏನೂ ತಿನ್ನವುದು ಸಾಧ್ಯವಾಗದಿದ್ದರೆ ಈಗಿಂದಲೇ ಕಷ್ಟಪಡಲು ಆತ ಪ್ರಾಕ್ಟೀಸ್ ಆರಂಭಿಸಿದ್ದಾನೆ ಎಂದು ತಿಳಿದುಬಂದಿದೆ.

ಆದರೆ, ಆತ ಮೆಣಸು ತಿನ್ನುವಾಗ ಕಣ್ಣೀರು ಬರುತ್ತಿದ್ದು, ಆತ ಅಳುತ್ತಿದ್ದ ಎಂಬುದು ಯಾರಿಗೂ ತಿಳಿದಿಲ್ಲ. ಮೆಣಸಿನ ಖಾರದಿಂದಾಗಿಯೇ ಕಣ್ಣಲ್ಲಿ ನೀರು ಬರುತ್ತಿದೆ ಎಂದು ಸುತ್ತ ನೆರೆದಿದ್ದವರು ತಿಳಿದುಕೊಂಡಿದ್ದರೇ ಎಂಬುದರ ಕುರಿತು ಬೊಗಳೆ ರಗಳೆ ತನಿಖೆ ನಡೆಸುತ್ತಿದೆ.

ನಿಮ್ಮ ಬ್ಲಾಗು ನಮಗೆ ಕೊಡಿ !
ಆತ್ಮೀಯ ಬ್ಲಾಗೋದುಗರೆ ಮತ್ತು ಬ್ಲಾಗಿಗರೇ,
ಕನ್ನಡ ಬ್ಲಾಗ್ ಜಗತ್ತು ಬೆಳೀತಾ ಇದೆ. ಹಾಗಾಗಿ ಈ "ಬೊಗಳೆ ರಗಳೆ"ಯಲ್ಲಿ ಎಲ್ಲಾ ಕನ್ನಡ ಬ್ಲಾಗುಗಳನ್ನು ಲಿಂಕಿಸುವ ನಿಟ್ಟಿನಲ್ಲಿ ನಿಮ್ಮಿಂದ ಸಹಾಯ ಕೋರಿಕೆ.

ಕನ್ನಡ ಬ್ಲಾಗೋತ್ತಮರ ಪಟ್ಟಿಯಲ್ಲಿ ಕನ್ನಡದಲ್ಲಿ ಸಕ್ರಿಯವಾಗಿರುವ ಬ್ಲಾಗುಗಳು ಯಾವುದಾದರೂ ಬಿಟ್ಟು ಹೋಗಿದ್ದರೆ ಲಿಂಕಿಸುವ ಅನುಮತಿಯೊಂದಿಗೆ ಅದರ URL ಮತ್ತು ಶೀರ್ಷಿಕೆಯನ್ನು ದಯವಿಟ್ಟು asatya ಡಾಟ್ anveshi @ ಜಿಮೇಲ್ ಡಾಟ್ ಕಾಮ್ ಗೆ ತಿಳಿಸಿದರೆ ನಾವು ಆಭಾರಿ.

ಬ್ಲಾಗು ಲಿಂಕಿಸಲು ಆಕ್ಷೇಪ ಇಲ್ಲ ಎಂಬುದು ನಮಗೆ ಖಚಿತವಾದರೆ ಸಾಕು.
- ಧನ್ಯವಾದ.

Saturday, March 10, 2007

ನಿಮ್ಮ ಬ್ಲಾಗು ನಮಗೆ ಕೊಡಿ !

ಆತ್ಮೀಯ ಬ್ಲಾಗೋದುಗರೆ ಮತ್ತು ಬ್ಲಾಗಿಗರೇ,

ಕನ್ನಡ ಬ್ಲಾಗ್ ಜಗತ್ತು ಬೆಳೀತಾ ಇದೆ. ಹಾಗಾಗಿ ಈ "ಬೊಗಳೆ ರಗಳೆ"ಯಲ್ಲಿ ಎಲ್ಲಾ ಕನ್ನಡ ಬ್ಲಾಗುಗಳನ್ನು ಲಿಂಕಿಸುವ ನಿಟ್ಟಿನಲ್ಲಿ ನಿಮ್ಮಿಂದ ಸಹಾಯ ಕೋರಿಕೆ.

ಕನ್ನಡ ಬ್ಲಾಗಾ"ಸುರ"ರ ಪಟ್ಟಿಯಲ್ಲಿ ಕನ್ನಡದಲ್ಲಿ ಸಕ್ರಿಯವಾಗಿರುವ ಬ್ಲಾಗುಗಳು ಯಾವುದಾದರೂ ಬಿಟ್ಟು ಹೋಗಿದ್ದರೆ, ಲಿಂಕಿಸುವ ಅನುಮತಿಯೊಂದಿಗೆ ಅದರ URL ಮತ್ತು ಶೀರ್ಷಿಕೆಯನ್ನು ದಯವಿಟ್ಟು asatya ಡಾಟ್ anveshi @ ಜಿಮೇಲ್ ಡಾಟ್ ಕಾಮ್ ಗೆ ತಿಳಿಸಿದರೆ ನಾವು ಆಭಾರಿ.

ಬ್ಲಾಗು ಲಿಂಕಿಸಲು ಆಕ್ಷೇಪ ಇಲ್ಲ ಎಂಬುದು ನಮಗೆ ಖಚಿತವಾದರೆ ಸಾಕು.
ಧನ್ಯವಾದ.

Friday, March 09, 2007

ಸೆರೆಸಿಕ್ಕಿದ್ದಕ್ಕಿಂತಲೂ ಬಿಡುಗಡೆಯಾದ ಶ್ವಾನಗಳೇ ಹೆಚ್ಚು !

(ಬೊಗಳೂರು ಬೌವೌ ಬ್ಯುರೋದಿಂದ)
ಬೊಗಳೂರು, ಮಾ.9- ಮಗುವನ್ನು ಕಚ್ಚಿಕೊಂದ ಶ್ವಾನ ಸಮುದಾಯದ ದುಷ್ಕರ್ಮಿಯೊಬ್ಬನ ಕೃತ್ಯದಿಂದಾಗಿ ಇಡೀ ಶ್ವಾನಕುಲವೇ ನಿರ್ನಾಮವಾಗುವ ಹಂತ ತಲುಪಿದ್ದು, ಶ್ವಾನ ಸಂಘಟನೆಯು ಮತ್ತೊಂದು ತುರ್ತು ಸಭೆ ಕರೆದು ಚರ್ಚಿಸಿದೆ.

ಈ ಬಾರಿ ನಿನ್ನೆಯಂತಲ್ಲ. ಅವುಗಳು ತುರ್ತು ಸಭೆಯಲ್ಲಿ ಕೆಲವೊಂದು ನಿರ್ಣಯಗಳನ್ನೂ ಕೈಗೊಂಡಿವೆ. ಅದರ ಪ್ರಕಾರ, ಶ್ವಾನಗಳಿಗೆ ಮಂತ್ರಿಮಹೋದಯರು ಓಡಾಡುವ ವಿಧಾನಸೌಧದ ಆವರಣದಲ್ಲೇ ಪುನರ್ವಸತಿ ಕಲ್ಪಿಸಬೇಕು ಎಂಬುದೂ ಸೇರಿದೆ.
ತಮ್ಮಂತೆಯೇ ಸದನದೊಳಗೆ ಕಚ್ಚಾಡುವವರನ್ನು ನೋಡಿ ನಾವು ಕಲಿತುಕೊಳ್ಳಬೇಕಾದದ್ದು ಬಹಳಷ್ಟಿದೆ. ಇದಕ್ಕಾಗಿ ತಮಗೆ ಈ ಸ್ಥಾನವನ್ನೇ ಒದಗಿಸಬೇಕು ಎಂದು ನಿರ್ಣಯದಲ್ಲಿ ಒತ್ತಾಯಿಸಲಾಗಿದೆ.

ತಮ್ಮನ್ನು ಹಿಡಿಯುವುದರ ಹಿಂದೆ ಕಳ್ಳಕಾಕರ ಕೈವಾಡವಿದೆ. ತಾವು ಮನೆಯಲ್ಲಿದ್ದರೆ ಬೊಗಳುತ್ತಾ ಕಳ್ಳರ ಕಾರ್ಯಾಚರಣೆಗೆ ತಡೆಯೊಡ್ಡುತ್ತೇವೆ ಎಂಬ ಕಾರಣಕ್ಕೆ ಈ ತಂತ್ರ ಅನುಸರಿಸಲಾಗುತ್ತಿದೆ ಎಂದು ನಿರ್ಣಯದಲ್ಲಿ ಆರೋಪಿಸಲಾಗಿದೆ.

ಅಂತೆಯೇ, ಈ ಆಡಳಿತಕ್ಕೆ ಬುದ್ಧಿ ಬರಬೇಕಿದ್ದರೆ ಮಕ್ಕಳನ್ನು ಮನೆಯಲ್ಲಿ ಕಟ್ಟಿಹಾಕಬೇಕು, ನಾಯಿಗಳನ್ನು ಬೀದಿಯಲ್ಲಿ ಆಟವಾಡಲು ಅನುಮತಿಸಬೇಕು ಎಂಬ ಜನತೆಯ ಆಕ್ರೋಶಭರಿತ ಒತ್ತಾಯವನ್ನು ಅವು ಪೂರ್ಣಪ್ರಮಾಣದಲ್ಲಿ ಬೆಂಬಲಿಸಿವೆ.

ಇನ್ನೊಂದೆಡೆ, ಅಡ್ಡಾಡಿ, ಬೀಡಾಡಿ ನಾಯಿಗಳ ಜತೆಗೆ ಜೈಲು ಸೇರಿರುವ ಸಾಕುನಾಯಿಗಳು ಕೂಡ ಜೈಲಿನೊಳಗೆ ಸಭೆ ನಡೆಸಿ, ತಮಗೂ ಗುರುತಿನ ಚೀಟಿ ಬೇಕು, ಇಲ್ಲವಾದಲ್ಲಿ ಕನಿಷ್ಠಪಕ್ಷ ಬಿಳಿ ಕಾಲರ್ ಆದರೂ ಅಳವಡಿಸಬೇಕು ಎಂದು ಒತ್ತಾಯಿಸಿರುವುದಾಗಿ ಜೈಲು ಸೇರಿರುವ (ಸಂದರ್ಶನಕ್ಕಾಗಿ!!!) ನಮ್ಮ ಬ್ಯುರೋ ಸಿಬ್ಬಂದಿ ಒದರಿದ್ದಾರೆ.

ಬೊಗಳೆ ರಗಳೆ ತನಿಖೆ
ನಾಯಿ ಹಿಡಿಯಲು ತಲಾ ಶ್ವಾನವೊಂದಕ್ಕೆ 50 ರೂ. ಎಂದು ಅಧಿಕಾರಿಗಳು ಘೋಷಿಸಿದ್ದರೂ, ಹಿಡಿದ ನಾಯಿಗಳ ಸಂಖ್ಯೆಗಿಂತ ಬಿಟ್ಟ ನಾಯಿಗಳ ಸಂಖ್ಯೆಯೇ ಹೆಚ್ಚಾಗಿರುವುದು ಏಕೆ ಎಂಬ ಕುರಿತು ಬೊಗಳೆ ಬ್ಯುರೋ ತನಿಖೆ ನಡೆಸಿದಾಗ ಭಯಂಕರವಾದ ಅಸತ್ಯವೊಂದು ಬಯಲಾಗಿದೆ.

ಇದಕ್ಕೆ ಕಾರಣವೆಂದರೆ, ಹಿಡಿದ ನಾಯಿಗಳನ್ನು ಬಿಡಲು ಕೆಲವರು 25 ರೂ. ತೆಗೆದುಕೊಳ್ಳುತ್ತಿದ್ದರು. ಹಾಗಾಗಿ ಅದೇ ನಾಯಿಯನ್ನು ಹಲವಾರು ಬಾರಿ ಬಿಡುವುದು ಮತ್ತು ಅದನ್ನೇ ಮತ್ತೆ ಒಳಗೆ ಹಾಕುವುದು ನಡೆಯುತ್ತಾ ಇತ್ತು. ಅಂದರೆ ಒಂದು ನಾಯಿಯೇ ಮೂರ್ನಾಲ್ಕು ಬಾರಿ ಒಳಗೆ ಹೊರಗೆ ಹೋಗುವುದರಿಂದ ಆಗುವ ವ್ಯವಹಾರ ಭರ್ಜರಿಯೇ ಸಾಗಿದ್ದು, ಒಟ್ಟಿನಲ್ಲಿ ಈ ಕೋಟ್ಯಂತರ ರೂಪಾಯಿಯ ಕೊಡು-ಕೊಳ್ಳುವಿಕೆ ವ್ಯವಹಾರವು ಸೆನ್ಸೆಕ್ಸ್ ಏರಲು ಕಾರಣವಾಗಿದೆ ಎಂಬ ಕುರಿತು ತನಿಖೆ ಮಾಡಲಾಗುತ್ತಿದೆ.

ಪೊಲೀಸ್ ನಾಯಿಗಳ ಪ್ರತಿಭಟನೆ
ಈ ಮಧ್ಯೆ, ಶ್ವಾನ ನಿರ್ಮೂಲನೆ ಹೆಸರಿನಲ್ಲಿ ಉನ್ನತ ಹುದ್ದೆಯಲ್ಲಿರುವ ತಮ್ಮನ್ನೂ ನಾಯಿಗೆ ಒದ್ದಂತೆ ಒದ್ದು ಒಳಗೆ ಹಾಕುವುದರ ವಿರುದ್ಧ ಪೊಲೀಸ್ ನಾಯಿಗಳು ತಿರುಗಿಬಿದ್ದಿವೆ. ತಮ್ಮನ್ನು ಕಂಡರಾಗದವರು ನೀಡಿದ ದೂರಿನನ್ವಯ ಪೋಲಿ ನಾಯಿಗಳ ಮೇಲೆ ಕ್ರಮ ಕೈಗೊಳ್ಳುವ ಬದಲು ಶ್ವಾನದಳದ ಪೊಲೀಸ್ ನಾಯಿಗಳ ಮೇಲೇ ಅಧಿಕಾರಿಗಳು ಕೆಂಗಣ್ಣು ಹರಿಸುತ್ತಿದ್ದಾರೆ ಎಂದು ಅವು ಆರೋಪಿಸಿವೆ.
ಹಾಟ್ ಡಾಗ್
ಬಂಧಿಸಿ ಜೈಲಿಗೆ ತಳ್ಳಲ್ಪಟ್ಟ ನಾಯಿಗಳನ್ನು ಏನು ಮಾಡಲಾಗುತ್ತದೆ ಎಂಬ ಪ್ರಶ್ನೆಗೆ ಉತ್ತರ ಸಿಗದಿದ್ದರೂ, ಪ್ರಾಣಿ ಪ್ರಿಯರಾದ ಮೇನಕಾ ಗಾಂಧಿ ಮತ್ತು Peta ಸಂಘಟನೆಗಳು ಆಕ್ಷೇಪಿಸದಿದ್ದರೆ ಅವುಗಳು 'ಹಾಟ್ ಡಾಗ್'ಗಳಾಗಿ ಪರಿವರ್ತನೆಗೊಳ್ಳಲಿವೆಯೇ ಎಂಬುದನ್ನು ಇದುವರೆಗೆ ಯಾರೂ ಪತ್ತೆ ಹಚ್ಚಿಲ್ಲ.

(ಕನ್ನಡ ಬ್ಲಾಗೋದುಗರಲ್ಲಿ ಮನವಿ: ಕೆಳಗಿನ ಬ್ಲಾಗಾ'ಸುರ'ರ ಪಟ್ಟಿಯಲ್ಲಿ ಇಲ್ಲದಿರುವ ಯಾವುದಾದರೂ ಕನ್ನಡ ಬ್ಲಾಗುಗಳಿದ್ದರೆ ದಯವಿಟ್ಟು asatya ಡಾಟ್ anveshi @ ಜಿಮೇಲ್ ಡಾಟ್ ಕಾಮ್ ಗೆ ತಿಳಿಸಿದರೆ ನಾವು ಆಭಾರಿ. ಬ್ಲಾಗಿನ ಹೆಸರು ಹಾಗೂ url ಕೊಡಲು ಮನವಿ.)

Thursday, March 08, 2007

ಸಂಹಾರ: ಗುರುತಿನ ಚೀಟಿಗೆ ಶ್ವಾನ ಸಮುದಾಯ ಆಗ್ರಹ

(ಬೊಗಳೂರು ಬೊಗಳುವ ಬ್ಯುರೋದಿಂದ)
ಬೊಗಳೂರು, ಮಾ.8- ಮಗುವನ್ನು ಕಚ್ಚಿ ಕೊಂದಿದ್ದಕ್ಕಾಗಿ ರಾಜ್ಯದಿಂದ ಎಲ್ಲಾ ನಾಯಿಗಳನ್ನು ನಿರ್ಮೂಲನೆ ಮಾಡುವ ಕಾರ್ಯಾಚರಣೆ ಆರಂಭವಾಗಿರುವುದರಿಂದ ಸಿಡಿದೆದ್ದು ಬೊಗಳತೊಡಗಿರುವ ಅಖಿಲ ಭಾರತ ಬೌವೌ ಸಂಘಟನೆಯು, ತುರ್ತು ಸಭೆ ಸೇರಿ, ರಾಜ್ಯದ ನಾಯಿಗಳನ್ನು ಹಿಡಿಯಲು ಕೇಂದ್ರದ ನಾಯಿ ಹಿಡಿಯುವವರನ್ನು ಕರೆಸಿರುವುದನ್ನು ಖಂಡಿಸಿವೆ.

ಬೇಕಿದ್ದರೆ, ಕನ್ನಡನಾಡಿನ ಅನ್ನ ತಿಂದು, ನೀರು ಕುಡಿದು ಕನ್ನಡನಾಡಿಗೇ ದ್ರೋಹ ಬಗೆಯುತ್ತಾ ದಾಂಧಲೆ ಎಬ್ಬಿಸುತ್ತಿರುವ ಪರವೂರಿನ ಶ್ವಾನಗಳನ್ನು ಮಾತ್ರವೇ ಎತ್ತಿಕೊಂಡು ಹೋಗಲಿ ಎಂದು ಈ ಶ್ವಾನ ಸಂಘಟನೆಯ ಪದಾಧಿಕಾರಿಗಳೆಲ್ಲರೂ ಕೊರಳೆತ್ತಿ ಊಳಿಟ್ಟಿದ್ದಾರೆ.

ಇನ್ನು ಮುಂದೆ "ಇಲ್ಲಿ ಶ್ವಾನಗಳಿಗೆ ಪ್ರವೇಶವಿಲ್ಲ, ಇಲ್ಲಿ ಬೊಗಳಬಾರದು, ಇಲ್ಲಿ ಕಚ್ಚ ಬಾರದು" ಎಂದು ಅಲ್ಲಲ್ಲಿ ಬೋರ್ಡು ಹಾಕಬೇಕು ಎಂದೂ ಡೊಂಕುಬಾಲದ ನಾಕರು ಒತ್ತಾಯಿಸಿದ್ದಾರೆ.

ಮಲ ಬಾರದವರಿಂದ ತೊಂದರೆ

ಹೊರ ಊರಿನಿಂದ ಬಂದ ಶ್ವಾನಗಳು ಇಲ್ಲಿ ಬಲವಾಗಿ ಬೇರು ... ಅಲ್ಲಲ್ಲ ಬಾಲ ಬಿಟ್ಟಿರುವುದರಿಂದಾಗಿ ಇಲ್ಲಿ ನಮಗೂ ಬಾಲ ಅಲ್ಲಾಡಿಸಲು ಜಾಗವಿಲ್ಲ ಎಂಬುದನ್ನು ಈಗಾಗಲೇ ಹೇಳಿ ಆಗಿದೆ ಎಂದು ನೆನಪಿಸಿರುವ ಡೊಂಕು ಬಾಲದ ನಾಯಕರು, ತಮ್ಮನ್ನು ಹಿಡಿಸಲು ಮಲಬಾರದವರನ್ನು ಕರೆಸಿರುವುದಕ್ಕೆ ಕೆರಳಿ ಕೆಂಡವಾಗಿರುವುದಾಗಿ ಹೇಳಿಕೊಂಡಿದ್ದಾರೆ.

ಮಲಬಾರದವರು ಈ ಊರಿಗೆ ಬಂದರೆ ತಮ್ಮ ಆಹಾರದ ಗತಿಯೇನು ಎಂದು ಪ್ರಶ್ನಿಸಿರುವ ಮೋತಿ ಕುಮಾರ್, ತಮ್ಮ ಸಮುದಾಯದ ಯಾರೋ ದುಷ್ಕರ್ಮಿಗಳು ಮಾಡಿದ ಈ ತಪ್ಪಿಗೆ, ಇಡೀ ಸಮುದಾಯವನ್ನೇ ನಿರ್ನಾಮ ಮಾಡಲು ನಿರ್ಧರಿಸಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

ಈ ರಾಜಕಾರಣಿಗಳು ತಮ್ಮ ಹೆಸರು ಹೇಳಿ ಆಟ ಆಡುತ್ತಿದ್ದಾರೆ. ತಮಗೆ ಮತದಾನ ಹಕ್ಕು ಇಲ್ಲ ಎಂಬುದೇ ಇದಕ್ಕೆಲ್ಲಾ ಕಾರಣ. ಹಾಗಾಗಿ ಶ್ವಾನಗಳಿಗೂ ಮತದಾನದ ಹಕ್ಕು ನೀಡಿದರೆ ಖಂಡಿತವಾಗಿಯೂ ಶ್ವಾನಗಳು ಬದುಕಲು ಸಾಧ್ಯ ಎಂದಿರುವ ಬೌವೌ ಸಂಘಟನೆಯ ಅಧ್ಯಕ್ಷ ಮೋತಿ ಕುಮಾರ್, ತಮ್ಮ ಸಮುದಾಯಕ್ಕೂ ವೋಟರ್ ಕಾರ್ಡ್ ನೀಡಬೇಕು, ಸಾಕು ನಾಯಿಗಳನ್ನು ಹಿಡಿಯದಂತಾಗಲು ಅವುಗಳಿಗೆ ಗುರುತಿನ ಚೀಟಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ನಾಳೆಯೂ ಬೌವೌ ಇದೆ

ಈ ಕುರಿತು ಅಂತಾರಾಷ್ಟ್ರೀಯ ಅಮಾನವೀಯ ಹಕ್ಕುಗಳ ಆಯೋಗಕ್ಕೆ ಮೊರೆ ಹೋಗುವುದಾಗಿ ಸ್ಪಷ್ಟಪಡಿಸಿರುವ ಅವರು, ತಮ್ಮನ್ನು ಸದಾ ಬೆಂಬಲಿಸುತ್ತಾ ಬೊಗಳುತ್ತಿರುವ ಬೊಗಳೆ ರಗಳೆ ಬ್ಯುರೋಗೆ ಬೌವೌ-ಗಿರಿ (ಶ್ವಾನ ಸಮುದಾಯದಿಂದ ದೊರೆಯುವ ಅತ್ಯುನ್ನತ ಶಹಭಾಸ್‌ಗಿರಿ) ವ್ಯಕ್ತಪಡಿಸಿದ್ದಾರೆ.

ಇದರಿಂದ ಉತ್ತೇಜನಗೊಂಡಿರುವ ಬೊಗಳೆ ರಗಳೆ ಬ್ಯುರೋ, ಮತ್ತೊಂದು ಕಂತ್ರಿ ನಾಯಿಗಳ ಕುರಿತು ಮತ್ತೊಂದು ಕಂತಿನ ವರದಿಯನ್ನು ನಾಳೆ ಪ್ರಕಟಿಸಲು ನಿರ್ಧರಿಸಿದೆ ಎಂದು ಮೂಲಗಳು ವರದಿ ಮಾಡಿದ್ದು, ನಾಳಿನ ಸಂಚಿಕೆಯಲ್ಲಿ ಅಮೂಲ್ಯ ತನಿಖಾ ವರದಿಯೊಂದನ್ನು ಮಂಡಿಸಲಾಗುತ್ತದೆ ಎಂದೂ, ಕಾದು ನೋಡಬೇಕು ಎಂದೂ ಕೋರಲಾಗಿದೆ.

(ಕನ್ನಡ ಬ್ಲಾಗೋದುಗರಲ್ಲಿ ಮನವಿ: ಕೆಳಗಿನ ಬ್ಲಾಗಾ'ಸುರ'ರ ಪಟ್ಟಿಯಲ್ಲಿ ಇಲ್ಲದಿರುವ ಯಾವುದಾದರೂ ಕನ್ನಡ ಬ್ಲಾಗುಗಳಿದ್ದರೆ ದಯವಿಟ್ಟು asatya ಡಾಟ್ anveshi @ ಜಿಮೇಲ್ ಡಾಟ್ ಕಾಮ್ ಗೆ ತಿಳಿಸಿದರೆ ನಾವು ಆಭಾರಿ. ಬ್ಲಾಗಿನ ಹೆಸರು ಹಾಗೂ url ಕೊಡಲು ಮನವಿ.)

Wednesday, March 07, 2007

ಜವುಳಿ ಉದ್ಯಮಿ ಜತೆ ಈಜುಡುಗೆ ಮಾಡೆಲ್ ವಿವಾಹ !

(ಬೊಗಳೂರು ವಿವಾಹ-ಬಂಧನ ಬ್ಯುರೋದಿಂದ)
ಬೊಗಳೂರು, ಮಾ.7- 2004ರಿಂದಲೂ ರೂಮರ್ ಮಿಲ್ ನಡೆಸುತ್ತಿದ್ದ ಜವುಳಿ ಮಿಲ್ ದೊರೆ ನರುಣ್ ಆಯರ್ ಈ ರೂಮರ್ ಮಿಲ್ ಅನ್ನು ನಿಲ್ಲಿಸಿದ್ದು, ಜವುಳಿ ಮಿಲ್ ಅನ್ನೇ ನಿಲ್ಲಿಸುವ ಎಲ್ಲ ಲಕ್ಷಣಗಳು ಗೋಚರಿಸತೊಡಗಿದೆ.

ಇದಕ್ಕೆ ಕಾರಣ ಅವರು, ಕನಿಷ್ಠ ಈಜುಡುಗೆಗಳಿಂದಾಗಿಯೇ ವಿಶ್ವವಿಖ್ಯಾತಿ ಪಡೆದಿರುವ "ಜವುಳಿರಹಿತ" ಮಾಡೆಲ್ ಒಬ್ಬಾಕೆಯನ್ನು ವಿವಾಹವಾಗಿರುವುದು! ಪತ್ನಿ ಏನನ್ನೂ ತೊಡದೇ ಇದ್ದರೆ ಜವುಳಿ ಉದ್ಯಮವನ್ನೇ ನಿಲ್ಲಿಸಬೇಕಾಗುತ್ತದೆ ಎಂಬುದು ಇದರ ಹಿಂದಿರುವ ತರ್ಕವಾಗಿದೆ.

ಈ ಹಿಂದೆ ಇಟಾಲಿಯನ್ ಮಾಡೆಲ್ ಒಬ್ಬಳನ್ನು ವಿವಾಹವಾಗಿ ಆಕೆಗೆ ಬಟ್ಟೆ ತೊಡಿಸಲು ವಿಫಲವಾದ ಬಳಿಕ ನರುಣ್ ಆಯರ್, ಈ ಈಜುಡುಗೆ ಸುಂದರಿಗೆ ಬಟ್ಟೆ ತೊಡಿಸಲು ಹೊರಟಿದ್ದಾರೆ ಎಂದು ನಂಬಲನರ್ಹ ಮೂಲಗಳು ತಿಳಿಸಿವೆ.

ಅಂತೆಯೇ 13 ವರ್ಷಗಳ ಕಾಲ ಬ್ರಿಟಿಷ್ ನಟನೊಂದಿಗೆ ನಟನೆ ಜೀವನ ಸಾಗಿಸಿದ ಈ ಉಡುಗೆದ್ವೇಷಿ ಮಾಡೆಲ್, ಇದೀಗ ಉಡುಗೆ ಉದ್ಯಮಿಯ ಕೈಹಿಡಿಯಲು ಹೊರಟಿರುವುದಾಗಿ ನಮ್ಮ ಬ್ಯುರೋ ವರದಿ ಮಾಡುವುದಿಲ್ಲ.

ಈಗಾಗಲೇ ಅಂತರ್-ಖಂಡೀಯ ವಿವಾಹವಾಗಿರುವ ಜವುಳಿ ತಯಾರಿಸುವ ವರ ಮತ್ತು ಜವುಳಿ ಬೇಡವೆನ್ನುವ ವಧು ಇಬ್ಬರೂ ಮುಂಬಯಿಗೆ ಬಂದು ಭಾರತೀಯ ಸಂಪ್ರದಾಯದಲ್ಲಿ ವಿವಾಹವಾಗಿ ನೋಡಲಿದ್ದಾರೆ ಎಂದು ವರದಿಯಾಗಿದೆ.

Tuesday, March 06, 2007

ಬಿಜೆಪಿಯ ಕೈಯಲ್ಲ, ಕಾಂಗ್ರೆಸಿನ ಕೈ ಕತ್ತರಿಸಿದೆವು: ಎನ್‌ಸಿಪಿ

(ಬೊಗಳೂರು ರಾಜಕೀಯ ಬ್ಯುರೋದಿಂದ)
ಬೊಗಳೂರು, ಮಾ.6- ಬಿಜೆಪಿ ಅಭ್ಯರ್ಥಿಯೊಬ್ಬನ ಕೈ ಕತ್ತರಿಸಿರುವುದಾಗಿ ಇಲ್ಲಿ ವರದಿಯಾಗಿರುವುದನ್ನು ಎನ್‌ಸಿಪಿ ಕಾರ್ಯಕರ್ತರು ನಿರಾಕರಿಸಿದ್ದಾರೆ ಮಾತ್ರವಲ್ಲದೆ ಆಕ್ಷೇಪವನ್ನೂ ವ್ಯಕ್ತಪಡಿಸಿದ್ದಾರೆ.

ನಮಗೆ ಕೋಪ ಇರುವುದು ಕಾಂಗ್ರೆಸ್‌ನ ಕೈ ಚಿಹ್ನೆಯ ಮೇಲೆ. ಅದಕ್ಕಾಗಿ ಬಿಜೆಪಿ ಮಂದಿ ಕಮಲ ಚಿಹ್ನೆಯನ್ನು ಹಿಡಿದುಕೊಳ್ಳುವುದು ಬಿಟ್ಟು ರಾಜಕೀಯ ಸಭೆಗಳಲ್ಲಿ, ಚುನಾವಣಾ ಪ್ರಚಾರ ಸಭೆಗಳಲ್ಲಿ ಕೈಯನ್ನೆತ್ತಿ ತೋರಿಸುತ್ತಾ ಕಾಂಗ್ರೆಸ್ಸನ್ನು ಬೆಂಬಲಿಸುವಂತೆ ಪರೋಕ್ಷವಾಗಿ ಪ್ರಚಾರ ಮಾಡುತ್ತಿರುವುದು ನಮ್ಮನ್ನು ಸೋಲಿಸುವ ಯತ್ನವಾಗಿತ್ತು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಮ್ಮ ಪಕ್ಷದಿಂದ ಓಟು ಸೆಳೆದು ಕಾಂಗ್ರೆಸಿನ "ಕೈ"ಗೆ ಒಪ್ಪಿಸುವ ಕಾರ್ಯವನ್ನು ಬಿಜೆಪಿ ಕಾರ್ಯಕರ್ತರು ಮಾಡುತ್ತಿದ್ದುದರಿಂದಾಗಿ ನಾವು ಕೈ ಚಿಹ್ನೆಯನ್ನು ಮಾತ್ರ ಕತ್ತರಿಸಿದೆವು ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

Monday, March 05, 2007

ಕ್ರಿಕೆಟ್ ವಿಶ್ವಕಪ್ ಆಸೆಗೆ ಸ್ಪೀಕರ್ ತಣ್ಣೀರು!

(ಬೊಗಳೂರು ಕಿರಿಕೆಟ್ಟ ಬ್ಯುರೋದಿಂದ)
ಬೊಗಳೂರು, ಮಾ.5- ವಿಶ್ವಕಪ್ ಎತ್ತಿಕೊಳ್ಳಲೆಂದು ವೆಸ್ಟಿಂಡೀಸಿಗೆ ಪ್ರಯಾಣ ಬೆಳೆಸಿರುವ ಭಾರತೀಯ ಕ್ರಿಕೆಟ್ ತಂಡದ ಕಪ್ಪು ಗೆಲ್ಲುವ ಸಾಧ್ಯತೆಗಳು ಕುಸಿದ ಸೆನ್ಸೆಕ್ಸ್‌ನಂತೆ ಇಳಿಮುಖವಾಗಿದೆ.

ಇದಕ್ಕೆ ಕಾರಣವೆಂದರೆ ಲೋಕಸಭೆ ಸ್ಪೀಕರ್ ಸೋಮನಾಥ್ ಚಟರ್ಜಿ "ಓ ಕ್ರಿಕೆಟಿಗರೇ, ಕಪ್ ಗೆಲ್ಲಲೇಬೇಕಿದ್ದರೆ ದಯವಿಟ್ಟು ಸಂಸತ್ಸದಸ್ಯರ ದುಂಡಾವರ್ತನೆಯನ್ನು ಅನುಕರಿಸಬೇಡಿ" ಎಂಬ ಹೇಳಿಕೆ ನೀಡಿರುವುದಾಗಿದೆ. ಇದಕ್ಕೂ ಕ್ರಿಕೆಟಿಗರ ಸಾಮರ್ಥ್ಯ ಪ್ರದರ್ಶನಕ್ಕೂ ಯಾವ ಬಾದರಾಯಣ ಸಂಬಂಧ ಎಂದು ತಲೆಕೆಡಿಸಿಕೊಳ್ಳಬೇಕಿಲ್ಲ ಎಂದು ಬೊಗಳೆ ರಗಳೆ ಬ್ಯುರೋ ಸ್ಪಷ್ಟಪಡಿಸುತ್ತಿದೆ.

ಲೋಕಸಭೆಯಲ್ಲಿ ಸಂಸದರು ಮೈಕುಗಳನ್ನು, ಕಾಗದ ಪತ್ರಗಳನ್ನು ಎಸೆಯುತ್ತಾ ಯಾವ ರೀತಿ ಬೌಲಿಂಗ್ ಪ್ರಾಕ್ಟೀಸ್ ಮಾಡುತ್ತಾರೆ, ಕುರ್ಚಿಗಳನ್ನು ಮೇಲಕ್ಕೆತ್ತಿ ತೂರಿ ಬಂದ ಮೈಕುಗಳನ್ನು ಸಿಕ್ಸರ್ ಗೆರೆ ದಾಟಿಸಲು ಯಾವ ರೀತಿ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಾರೆ ಮತ್ತು ಕೋಲಾಹಲದ ನಡುವೆಯೂ ಏಕಾಗ್ರತೆ ಸಾಧಿಸಿ ತೂರಿ ಬರುತ್ತಿರುವ ಮೈಕುಗಳನ್ನು ಕ್ಯಾಚ್ ಹಿಡಿದು, ಪ್ರತಿಪಕ್ಷಗಳ ವಿಕೆಟ್ ಇರುವತ್ತ ಹೇಗೆ ಎಸೆಯಬೇಕು ಎಂಬಿತ್ಯಾದಿಗಳು ನಡೆದ ಉದಾಹರಣೆಗಳು ಸಾಕಷ್ಟಿವೆ. ನಮ್ಮ ಕ್ರಿಕೆಟಿಗರು ಕೂಡ ಅದನ್ನು ನೋಡುತ್ತಲೇ ಬೆಳೆದಿದ್ದಾರೆ. ಅವರು ಕೂಡ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್‌ಗೆ ಸಂಸದರು ಅನುಸರಿಸುತ್ತಿದ್ದ ಮಾರ್ಗವನ್ನೇ ಅನುಕರಿಸುತ್ತಿದ್ದರು. ಈಗ ನೋಡಿದರೆ ಸಂಸತ್ ಮುಖ್ಯಸ್ಥರು ಈ ರೀತಿ ಹೇಳುತ್ತಿದ್ದಾರೆ ಎಂದು ಕ್ರಿಕೆಟಿಗರು ಚಿಂತಾಕ್ರಾಂತರಾಗಿರುವುದಾಗಿ ತಿಳಿದುಬಂದಿದೆ.

ಇದೂ ಅಲ್ಲದೆ, ಪೂರ್ಣ ಬಹುಮತವಿಲ್ಲದೆಯೂ ಬೇರೆ ಬೇರೆ ಪಕ್ಷಗಳನ್ನು ಸೇರಿಸಿಕೊಂಡು ಎಡಪಕ್ಷಗಳ ಉರಿದಾಳಿಯ ನಡುವೆಯೂ ಸರಕಾರದ ವಿಕೆಟ್ ಕೀಪಿಂಗ್ ಮಾಡುವ ಸಂಸದರ ಕ್ರಮವೇ ತನಗೆ ಪ್ರೇರಣೆ ಎಂದು ದೋಣಿಯಲ್ಲಿ ಸಾಗುತ್ತಿರುವ ಕೀಪರ್ ಧೋನಿ ಬೊಗಳೆ ರಗಳೆ ಬ್ಯುರೋದೆದುರು ಆರ್ದ್ರ ಕಂಗಳಿಂದ ಹೇಳಿಕೊಂಡಿದ್ದಾರೆ.

ಅಂತೆಯೇ ಸರಿಯಾಗಿ ಬ್ಯಾಟಿಂಗ್ ಮಾಡುತ್ತಿದ್ದ ಸರಕಾರಗಳನ್ನು ಸಂವಿಧಾನದ 356ನೇ ಗೂಗ್ಲಿ ಚೆಂಡು ಎಸೆದು ಔಟ್ ಮಾಡಿಸುವ ವಿಧಾನ ತನಗೆ ಇದುವರೆಗೆ ಭಾರಿ ಪ್ರೇರಣೆ ನೀಡಿತ್ತು ಎಂದು ಖ್ಯಾತ ಸ್ಪಿನ್ನಿಗ ಅನಿಲ್ ಕುಂಬ್ಳೆ ಮತ್ತು ಹರಭಜನ್ ಸಿಂಗ್ ತಡವರಿಸುತ್ತಾ ಹೇಳಿದ್ದು, ಇನ್ನು ನಾವು ಹೇಗೆ ಗೂಗ್ಲಿ ಎಸೆತ ಪ್ರಯೋಗಿಸುವುದು ಎಂದು ತತ್ತರಿಸಿದ್ದಾರೆ.

ಆದರೆ, ಅವರ ಮಾತಿಗೆ ಬೆಲೆ ಕೊಡುವ ಸಲುವಾಗಿ, ಎದುರಾಳಿಗಳು ಸರಿಯಾಗಿ ಚೆಂಡು ಎಸೆಯಲಿಲ್ಲ, ಅಥವಾ ಆಡಳಿತ ಪಕ್ಷಗಳು ಸರಿಯಾಗಿ ಬ್ಯಾಟಿಂಗ್ ಮಾಡಿಲ್ಲ ಎಂದು ಕೂಗಾಡುತ್ತಾ ಸದನದಿಂದ ಹೊರನಡೆಯುವಂತಹ ಸಂಸದರ ಕ್ರಮವನ್ನು ತಾವೆಂದಿಗೂ ಅನುಕರಿಸುವುದಿಲ್ಲ ಎಂದು ಕ್ರಿಕೆಟಿಗರು ಪಣ ತೊಟ್ಟಿದ್ದಾರೆ ಎಂದು ತಿಳಿದುಬಂದಿದೆ.

Saturday, March 03, 2007

ಇಂಗ್ಲಿಷ್ ವರ್ಣಮಾಲೆಯಿಂದ Q ಗೆ ಗೇಟ್‌ಪಾಸ್

(ಬೊಗಳೂರು ಎಬಿಸಿಡಿ ಗೊತ್ತಿಲ್ಲದ ಬ್ಯುರೋದಿಂದ)
ಬೊಗಳೂರು, ಮಾ.2- ಭಾರತದಲ್ಲಿ ಇಂಗ್ಲಿಷ್ ವರ್ಣಮಾಲೆಗೆ ಕೇವಲ ಇಪ್ಪತ್ತೈದೇ ಅಕ್ಷರಗಳಿರುವುದು ಇತ್ತೀಚೆಗೆ ತೀರಾ ಕೋಲಾಹಲಕ್ಕೆ ಕಾರಣವಾಗಿದೆ. ಇದಕ್ಕೆ ಕಾರಣ ಇಲ್ಲಿದೆ. ಭಾರತದಲ್ಲಿ ಇಂಗ್ಲಿಷ್ ವರ್ಣಮಾಲೆಯ ಒಂದು ಅಕ್ಷರಕ್ಕೆ ಮಾತ್ರ ಒತ್ತು ನೀಡುತ್ತಿರುವುದರಿಂದ ತೀವ್ರವಾಗಿ ಕೆಂಡಾಮಂಡಲವಾಗಿರುವ ಇಂಗ್-ಲ್ಯಾಂಡ್ ತನ್ನ ಆಕ್ಷೇಪ ವ್ಯಕ್ತಪಡಿಸಿದೆ.

ಈ ಕಾರಣದಿಂದಾಗಿ Q ಕೇಂದ್ರದ ಸರಕಾರವು Q ಅಕ್ಷರವನ್ನೇ ಅಳಿಸಿಹಾಕಲು ಸುಗ್ರೀವಾಜ್ಞೆ ಹೊರಡಿಸಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ಇತ್ತೀಚೆಗಿನ ದಿನಗಳಲ್ಲಿ Q ಎಂಬುದು ಕೇಂದ್ರ ಸರಕಾರ ಮತ್ತು ಅದರ ಅಧ್ಯಕ್ಷರಿಗೆ, ಪಕ್ಷದ ಅಧ್ಯಕ್ಷರಿಗೆ ತೀರಾ ನಿದ್ದೆಗೆಡಿಸುವ ಸಂಗತಿಯಾಗಿದೆ. ಕೋಲಸಭೆಯಲ್ಲೂ ಕೋಲಾಹಲವೇ ಆಗುತ್ತದೆ ಹೊರತು ನಾಯಿಗಳ ಆಹಾರ ದರ ಇಳಿಸಿದ ಬಜೆಟಿಗೆ ಅಂಗೀಕಾರ ದೊರೆಯುತ್ತಿಲ್ಲ ಎಂಬುದು ವಿತ್ತ ಸಚಿವರ ಕೊರಗು.

ಇಲ್ಲದೆ, ಹೆಚ್ಚಾಗಿ ಚುನಾವಣೆಗಳು ಸಮೀಪಿಸುತ್ತಿರುವಂತೆಯೇ ಈ Q ಎನ್ನುವುದು ಧುತ್ತನೆ ಕಾಣಿಸಿಕೊಳ್ಳುತ್ತದೆ. ಹಗಲು-ರಾತ್ರಿ ಕಾಡುತ್ತದೆ. ಈ ಬಾರಿ ಉತ್ತರ ಪ್ರದೇಶದ ಬಿಸಿ ಇದೆ, ಇನ್ನೆರಡು ವರ್ಷದೊಳಗೆ ಲೋಕಸಭೆಗೆ ಮಹಾಸಮರ ನಡೆಯಲಿದೆ. ಹಾಗಾಗಿ ಈ Q ಎನ್ನುವುದು ಕ್ಯೂನಲ್ಲಿ ನಿಂತು ಮತ್ತಷ್ಟು ಇರಿಯುವುದು ಗ್ಯಾರಂಟಿ. ಇದಕ್ಕಾಗಿ Q ವನ್ನು ಗುಳುಂ ಮಾಡಿದರೆ ಆಂಗ್ಲ ವರ್ಣಮಾಲೆಯಲ್ಲಿ ಒಟ್ಟು ಇರುವ ಅಕ್ಷರಗಳ ಸಂಖ್ಯೆಯನ್ನು ನೆನಪಿನಲ್ಲಿಟ್ಟುಕೊಳ್ಳುವುದೂ ಸುಲಭವಾಗುತ್ತದೆ, ನಮ್ಮ ಎಲ್ಲಾ ಪಕ್ಷಗಳಿಗೂ ರಾತ್ರಿ ಸರಿಯಾಗಿ ನಿದ್ದೆ ಮಾಡಬಹುದು ಎಂಬುದು ಸರಕಾರಿಗರ ಲೆಕ್ಕಾಚಾರ.

ಮತ್ತು ಸಣ್ಣ ಮಕ್ಕಳಿಗೆ ಇಂಗ್ಲಿಷ್ ಕಲಿಯುವುದಕ್ಕೂ ಸುಲಭವಾಗುತ್ತದೆ ಎಂಬುದು ಈಕ್ಷಣ ಮಂತ್ರಿಗಳ ಲೆಕ್ಕಾಚಾರ.

Thursday, March 01, 2007

ಬಜೆಟ್ : ಇನ್ನು ನಾಯಿಪಾಡು ಅನುಭವಿಸುವುದು ಸುಲಭ!

(ಬೊಗಳೂರು ಸ್ವಯಂಬಜೆಟ್ ಬ್ಯುರೋದಿಂದ)
ಬೊಗಳೂರು, ಮಾ.1- ತಮಿಳುನಾಡಿಗೆ ಸೇರಿದವರಾದ ಕೇಂದ್ರದ ವಿತ್ತ ಸಚಿವರಾದ ಪೀಚಿ ದಂಬರಂ ಅವರು ಜನಸಾಮಾನ್ಯರ ಪಾಡನ್ನು ಎತ್ತ ಕೊಂಡೊಯ್ಯುತ್ತಾರೆ ಎಂಬ ಬಗೆಗಿದ್ದ ಕುತೂಹಲವನ್ನು ನಿನ್ನೆ ಕೋಲಸಭೆಯಲ್ಲಿ ಮಂಡಿಸಿದ ಆಯವ್ಯಯ ಪತ್ರದ ಮೂಲಕ ಶ್ರುತಪಡಿಸಿದ್ದು, ಮನುಷ್ಯ ಹೊರತಾಗಿ ಸಕಲ ಚರಾಚರ ಸಮುದಾಯವು ಬಜೆಟನ್ನು ಭರ್ಜರಿಯಾಗಿ ಸ್ವಾಗತಿಸಿವೆ.

ಈಗಾಗಲೇ ಮನುಷ್ಯರು ತಿನ್ನುವ ತರಕಾರಿ, ಬೇಳೆ ಮತ್ತಿತರ ದಿನಬಳಕೆ ಸಾಮಗ್ರಿಗಳು ಕೈಗೆಟುಕದಷ್ಟು ಮೇಲಕ್ಕೆ ನೆಗೆದಿದ್ದರೂ, ನಾಯಿ ಬೆಕ್ಕುಗಳ ಆಹಾರಕ್ಕೆ 33% ರಷ್ಟು ತೆರಿಗೆ ಕಡಿತ ಮಾಡುವ ಮೂಲಕ ಜನಸಾಮಾನ್ಯರು ಕೂಡ ಆ ಆಹಾರಗಳನ್ನೇ ತಿಂದು ನಾಯಿಬೆಕ್ಕುಗಳಂತೆ ಸಮೃದ್ಧವಾಗಿ, ದಷ್ಟಪುಷ್ಟವಾಗಿ, ಬುದ್ಧಿವಂತರಾಗಿ ಬೆಳೆಯಲು ಅನುವು ಮಾಡಿಕೊಟ್ಟಿರುವುದು ಸರ್ವತ್ರ ಶ್ಲಾಘನೆಗೆ ಕಾರಣವಾಗಿದೆ.

ಮೀಸಲಾತಿ ಎಂದ ತಕ್ಷಣ ದೌರ್ಜನ್ಯಕ್ಕೊಳಗಾದ, ತುಳಿತಕ್ಕೊಳಗಾದ ಎಂಬಿತ್ಯಾದಿ ಪದಗಳನ್ನು ನೆನಪಿಸಬಲ್ಲ ಮತ್ತು ಪ್ರತಿಭಟನೆ ಎದುರಿಸುತ್ತಿರುವ ಸಮುದಾಯವನ್ನು ಮೇಲೆತ್ತಲು ಎಂಬ ಉದ್ದೇಶದಿಂದ ಪರಿಶಿಷ್ಟ ಜಾತಿ-ವರ್ಗ ಮತ್ತು ಒಬಿಸಿಗಳಿಗೆ ಬಜೆಟ್ ಅನುದಾನವನ್ನು ಮೂರು ಪಟ್ಟು (ಅಂದರೆ ಕಳೆಬಾರಿ 6,600 ಕೋಟಿ ರೂ. ಇದ್ದದ್ದು ಈ ಬಾರಿ 17,691 ಕೋಟಿ ರೂ.ಗೆ) ಹೆಚ್ಚಿಸಿರುವುದು ವೈಟ್ ಕಾಲರ್ ನುಂಗಣ್ಣಗಳಿಂದ ಬಾಯ್ತುಂಬಾ ಹೊಗಳಿಕೆಗೆ ಕಾರಣವಾಗಿದೆ.

ಇಷ್ಟು ವರ್ಷಗಳಿಂದ ಪರಿಶಿಷ್ಟರ ಕಲ್ಯಾಣಕ್ಕೆ ಕೋಟಿ ಕೋಟಿ ರೂ. ಅನುದಾನ ಮೀಸಲಾಗಿಡುತ್ತಿದ್ದರೂ, ಇನ್ನೂ ಅವರು "ಹಿಂದುಳಿದಿದ್ದಾರೆ" ಎಂದೆಲ್ಲಾ ಈಗಲೂ ಕೂಗಾಡುತ್ತಿರುವುದರ ಹಿಂದಿನ ರಹಸ್ಯವನ್ನು ಇದೇ ಸಂದರ್ಭ ಪತ್ತೆ ಹಚ್ಚಲಾಗಿದ್ದು, ಅವರ ಕಲ್ಯಾಣಕ್ಕೆ ಮೀಸಲಾಗಿಡುತ್ತಿದ್ದ ಧನಕನಕಗಳೆಲ್ಲಾ ನುಂಗಣ್ಣರ ಅಭಿವೃದ್ಧಿಗೆ ವ್ಯಯವಾಗುತ್ತಿರುವುದು ಪತ್ತೆಯಾಗಿದೆ.

ಇದರಿಂದ ಇದುವರೆಗೆ ಬರೇ ಐಷಾರಾಮಿ ಕಾರುಗಳಲ್ಲಿ ಓಡಾಡುತ್ತಿದ್ದ ಕಲ್ಯಾಣ ಮತ್ತು ಅಭಿವೃದ್ಧಿ ಇಲಾಖೆ ಜನಗಳು ಇದೀಗ ಪರಿಶಿಷ್ಟರಿಗೆ ಅತಿ ಶೀಘ್ರದಲ್ಲಿ ಸೇವೆ ಸಲ್ಲಿಸುವುದಕ್ಕಾಗಿ ಹೆಲಿಕಾಪ್ಟರ್, ವಿಮಾನ ಖರೀದಿಗೆ ಮುಂದಾಗಿದ್ದಾರೆ. ತುಳಿತಕ್ಕೊಳಗಾಗಿ ಪಾತಾಳಕ್ಕೆ ತಳ್ಳಲ್ಪಟ್ಟಿರುವ ಸಮುದಾಯದ ಮಂದಿಯನ್ನೆಲ್ಲಾ ಪತ್ತೆ ಹಚ್ಚುವುದು ಇದರಿಂದ ಸುಲಭವಾದೀತು ಎಂದು ಈ ಬಿಳಿಕಾಲರ್ ನುಂಗಣ್ಣಗಳು ಸ್ಪಷ್ಟನೆ ನೀಡಿದ್ದಾರೆ.

ಆದರೆ ಪತ್ತೆ ಹಚ್ಚಿದ ಮೇಲೆ ಅವರಿಗೆ ಒಂದೆರಡು ರೂಪಾಯಿ ಕೊಟ್ಟುಬಿಟ್ಟರಾಯಿತು, ಇದರಿಂದ ಅವರ ಅಭಿವೃದ್ಧಿ ಖಂಡಿತಾ ಸಾಧ್ಯವಾಗುತ್ತದೆ ಎಂದು ಅವರು ಬಾಯಿಬಿಟ್ಟು ಹೇಳಿರುವುದಾಗಿ ಬೊಗಳೆ ರಗಳೆ ಬ್ಯುರೋದಲ್ಲೂ ವರದಿಯಾಗಿಲ್ಲ.

ಹಿಂದುಳಿದವರ ಕಲ್ಯಾಣಕ್ಕಾಗಿ ಇದೂ ಸಾಲದೆಂಬಂತೆ ಜನಸಾಮಾನ್ಯರನ್ನೂ ಮತ್ತಷ್ಟು ಹಿಂಡುವ ಪ್ರಯತ್ನವಾಗಿ ಶೈಕ್ಷಣಿಕ ಸೆಸ್ ಅನ್ನು 2% ನಿಂದ 3% ಕ್ಕೆ ಏರಿಸಿರುವುದು ಬಿಳಿಕಾಲರ್ ಸಮುದಾಯದ ಮತ್ತಷ್ಟು ಸಂತೋಷಕ್ಕೆ ಕಾರಣವಾಗಿದೆ.

ಒಟ್ಟಿನಲ್ಲಿ ಈ ಎರಡೂ ಕ್ರಮಗಳು ಎರಡು ತಿಂಗಳಲ್ಲೇ ನಡೆಯಲಿರುವ ಉತ್ತರ ಪ್ರದೇಶ ಚುನಾವಣೆಗಳು ಹಾಗೂ ಇನ್ನೆರಡು ವರ್ಷದೊಳಗೆ ನಡೆಯಲಿರುವ ಮತ್ತೊಂದು ಲೋಕಸಭಾ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಅನುಷ್ಠಾನಗೊಂಡಿವೆ ಎಂದು ಶೋಧಿಸಲಾಗಿದೆ.

ರೈತರ ಬಗ್ಗೆ

ಇನ್ನು ದೇಶದ ಬೆನ್ನೆಲು-ಬಾಗಿರುವ ರೈತರ ಬಗ್ಗೆ ಪೀಚಿ ದಂಬರಂ ಅವರು ಮತ್ತಷ್ಟು ದಯಾಪರತೆ ತೋರಿಸಿದ್ದಾರೆ. ಈಗಾಗಲೇ ಮಾಡಿದ ಸಾಲ ತೀರಿಸಲಾಗದೆ, ಬಡ್ಡಿ ಕಟ್ಟಲಾಗದೆ ದೇಶಾದ್ಯಂತ ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವಂತೆಯೇ, ಅವರಿಗೆ ಹಣಕಾಸು ಸಹಾಯ ಅಥವಾ ಅವರು ಬೆಳೆದ ಬೆಳೆಗಳಿಗೆ ಬೆಲೆ ನೀಡುವ ಬದಲು, ಅವರಿಗೆ ನೀಡುವ ಸಾಲದ ಪ್ರಮಾಣವನ್ನು ಹೆಚ್ಚಿಸಿರುವುದು ಹಲವಾರು ಶಂಕೆಗಳಿಗೆ ಕಾರಣವಾಗಿದೆ. ಸಾಲದ ಪ್ರಮಾಣ ಹೆಚ್ಚಾದಷ್ಟೂ ಆತ್ಮಹತ್ಯೆಯ ಪ್ರಮಾಣವೂ ಹೆಚ್ಚಾಗಲಿದೆಯೇ ಎಂಬುದು ಈ ಶಂಕೆಗೆ ಮೂಲ ಹೇತುವಾಗಿದೆ.

ಜನ"ಸಾಮಾನ್ಯ"ರ "ಕಲ್ಯಾಣ"ಕ್ಕೆ ಪೀಚಿ ದಂಬರಂ ಅವರ ಇನ್ನು ಕೆಲವು ಸೂತ್ರಗಳು

* ಮನುಷ್ಯ ಬದುಕಲು ಬೇಕಾದ ಆಹಾರ ವಸ್ತುಗಳ ಬೆಲೆ ಏರುತ್ತಿದ್ದು, ಸರಿಯಾಗಿ ತಿನ್ನದೆ ನಿಶ್ಶಕ್ತರಾಗಿರುತ್ತಾರೆ. ಅವರಿಗೆ ಅತ್ತಿತ್ತ ಓಡಾಡುವುದು ಸುಗಮವಾಗಲಿ ಎಂಬ ಕಾರಣ್ಕೆ ಕಾರು ಖರೀದಿಯ ಸಾಲಕ್ಕೆ ತೆರಿಗೆ ಮನ್ನಾ.

* ಹೆಚ್ಚು ತಿಂದರೆ ಹೊಟ್ಟೆ ಹಾಳು ಎಂಬ ಕಾರಣದಿಂದ ಬೇಳೆ ಕಾಳುಗಳು, ಚಹಾ, ತರಕಾರಿ ಮತ್ತಿತರ ಆಹಾರ ಪದಾರ್ಥಗಳ ಬೆಲೆ ಏರಿಕೆ.

* ಡಾಗ್ ಬಿಸ್ಕಿಟ್ ಮತ್ತಿತರ ಆಹಾರಗಳ ಬೆಲೆ ಇಳಿಕೆ. ಬೇಯಿಸಿದ ಆಹಾರ ಹೊಟ್ಟೆಗೆ ಒಳ್ಳೆಯದಲ್ಲ ಎಂಬ ಕಾರಣಕ್ಕೆ ಎಲ್‌ಪಿಜಿ, ಸೀಮೆಣ್ಣೆ ದರ ಏರಿಕೆ. (ಈ ಎರಡು ವಾಕ್ಯಗಳ ಸಂದೇಶ ಏನು?)

* ಇದು ಯಾಂತ್ರಿಕ ಯುಗವಾದುದರಿಂದ ಮನುಷ್ಯನಿಗಿಂತಲೂ ಯಂತ್ರಗಳಿಗೇ ಹೆಚ್ಚು ಪ್ರಾಧಾನ್ಯತೆ. ಈ ಕಾರಣಕ್ಕೆ ಟಿವಿ, ವಾಷಿಂಗ್ ಮೆಶಿನ್, ಫ್ರಿಜ್, ಏರ್ ಕಂಡಿಶನರ್ ಮುಂತಾದ ಐಷಾರಾಮಿ ವಸ್ತುಗಳ ಬೆಲೆ ಇಳಿಕೆ, ಜನ ಸಾಮಾನ್ಯರು ಹೊಟ್ಟೆಗೇನು ತಿನ್ನದಿದ್ದರೂ ಐಷಾರಾಮ ಜೀವನ ನಡೆಸಲಿ ಎಂಬುದು ಇದರ ಹಿಂದಿನ ಉದ್ದೇಶ.

* ಆಹಾರಕೊರತೆಯಿಂದ ಹೆಚ್ಚು ಅನಾರೋಗ್ಯ ಹೊಂದಿದರೆ ಚಿಕಿತ್ಸೆ ಸುಲಭವಾಗಲು ವೈದ್ಯಕೀಯ ಉಪಕರಣಗಳಿಗೆ ತೆರಿಗೆ ಕಡಿತ.

* ಇಷ್ಟಾಗಿಯೂ ತೀರಾ ಹೆಚ್ಚು ಹಸಿವಾದರೆ... ಹೊಟ್ಟೆಗೆ ತಣ್ಣೀರು ಬಟ್ಟೆ ಹಾಕಿಕೊಳ್ಳುವ ಬದಲು, ಕೆಳ ದರ್ಜೆಯ ಸಿಮೆಂಟ್ ಬೆಲೆಯನ್ನು ಮತ್ತಷ್ಟು ಇಳಿಸಲಾಗಿದೆ. ಸಿಮೆಂಟ್ ಹಾಕಿಬಿಟ್ಟರೆ ಹಸಿವಾಗಲಾರದು ಎಂಬುದು ಇದರ ಮರ್ಮ.

ಎಂಜಿನ್ ಇಲ್ಲದ ರೈಲು: ಬ್ರೇಕಿಂಗ್ ನ್ಯೂಸ್ ಅಲ್ಲವೆಂದ ಬೊ.ರ.

[ಬೊಗಳೂರು ಪಟ್ಟೆ-ರಹಿತ ರೈಲು ಬ್ಯುರೋ] ಬೊಗಳೂರು: ಆಫ್‌ಲೈನ್ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯೊಂದು ಆನ್‌ಲೈನ್ ಸಂಪಾದಕರ ಕಣ್ಣು ಕುಕ್ಕಿದ್ದು, ಎಂಜಿನ್ ಇಲ್ಲದೆ...