ಬೊಗಳೆ ರಗಳೆ

header ads

ಸಂಹಾರ: ಗುರುತಿನ ಚೀಟಿಗೆ ಶ್ವಾನ ಸಮುದಾಯ ಆಗ್ರಹ

(ಬೊಗಳೂರು ಬೊಗಳುವ ಬ್ಯುರೋದಿಂದ)
ಬೊಗಳೂರು, ಮಾ.8- ಮಗುವನ್ನು ಕಚ್ಚಿ ಕೊಂದಿದ್ದಕ್ಕಾಗಿ ರಾಜ್ಯದಿಂದ ಎಲ್ಲಾ ನಾಯಿಗಳನ್ನು ನಿರ್ಮೂಲನೆ ಮಾಡುವ ಕಾರ್ಯಾಚರಣೆ ಆರಂಭವಾಗಿರುವುದರಿಂದ ಸಿಡಿದೆದ್ದು ಬೊಗಳತೊಡಗಿರುವ ಅಖಿಲ ಭಾರತ ಬೌವೌ ಸಂಘಟನೆಯು, ತುರ್ತು ಸಭೆ ಸೇರಿ, ರಾಜ್ಯದ ನಾಯಿಗಳನ್ನು ಹಿಡಿಯಲು ಕೇಂದ್ರದ ನಾಯಿ ಹಿಡಿಯುವವರನ್ನು ಕರೆಸಿರುವುದನ್ನು ಖಂಡಿಸಿವೆ.

ಬೇಕಿದ್ದರೆ, ಕನ್ನಡನಾಡಿನ ಅನ್ನ ತಿಂದು, ನೀರು ಕುಡಿದು ಕನ್ನಡನಾಡಿಗೇ ದ್ರೋಹ ಬಗೆಯುತ್ತಾ ದಾಂಧಲೆ ಎಬ್ಬಿಸುತ್ತಿರುವ ಪರವೂರಿನ ಶ್ವಾನಗಳನ್ನು ಮಾತ್ರವೇ ಎತ್ತಿಕೊಂಡು ಹೋಗಲಿ ಎಂದು ಈ ಶ್ವಾನ ಸಂಘಟನೆಯ ಪದಾಧಿಕಾರಿಗಳೆಲ್ಲರೂ ಕೊರಳೆತ್ತಿ ಊಳಿಟ್ಟಿದ್ದಾರೆ.

ಇನ್ನು ಮುಂದೆ "ಇಲ್ಲಿ ಶ್ವಾನಗಳಿಗೆ ಪ್ರವೇಶವಿಲ್ಲ, ಇಲ್ಲಿ ಬೊಗಳಬಾರದು, ಇಲ್ಲಿ ಕಚ್ಚ ಬಾರದು" ಎಂದು ಅಲ್ಲಲ್ಲಿ ಬೋರ್ಡು ಹಾಕಬೇಕು ಎಂದೂ ಡೊಂಕುಬಾಲದ ನಾಕರು ಒತ್ತಾಯಿಸಿದ್ದಾರೆ.

ಮಲ ಬಾರದವರಿಂದ ತೊಂದರೆ

ಹೊರ ಊರಿನಿಂದ ಬಂದ ಶ್ವಾನಗಳು ಇಲ್ಲಿ ಬಲವಾಗಿ ಬೇರು ... ಅಲ್ಲಲ್ಲ ಬಾಲ ಬಿಟ್ಟಿರುವುದರಿಂದಾಗಿ ಇಲ್ಲಿ ನಮಗೂ ಬಾಲ ಅಲ್ಲಾಡಿಸಲು ಜಾಗವಿಲ್ಲ ಎಂಬುದನ್ನು ಈಗಾಗಲೇ ಹೇಳಿ ಆಗಿದೆ ಎಂದು ನೆನಪಿಸಿರುವ ಡೊಂಕು ಬಾಲದ ನಾಯಕರು, ತಮ್ಮನ್ನು ಹಿಡಿಸಲು ಮಲಬಾರದವರನ್ನು ಕರೆಸಿರುವುದಕ್ಕೆ ಕೆರಳಿ ಕೆಂಡವಾಗಿರುವುದಾಗಿ ಹೇಳಿಕೊಂಡಿದ್ದಾರೆ.

ಮಲಬಾರದವರು ಈ ಊರಿಗೆ ಬಂದರೆ ತಮ್ಮ ಆಹಾರದ ಗತಿಯೇನು ಎಂದು ಪ್ರಶ್ನಿಸಿರುವ ಮೋತಿ ಕುಮಾರ್, ತಮ್ಮ ಸಮುದಾಯದ ಯಾರೋ ದುಷ್ಕರ್ಮಿಗಳು ಮಾಡಿದ ಈ ತಪ್ಪಿಗೆ, ಇಡೀ ಸಮುದಾಯವನ್ನೇ ನಿರ್ನಾಮ ಮಾಡಲು ನಿರ್ಧರಿಸಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

ಈ ರಾಜಕಾರಣಿಗಳು ತಮ್ಮ ಹೆಸರು ಹೇಳಿ ಆಟ ಆಡುತ್ತಿದ್ದಾರೆ. ತಮಗೆ ಮತದಾನ ಹಕ್ಕು ಇಲ್ಲ ಎಂಬುದೇ ಇದಕ್ಕೆಲ್ಲಾ ಕಾರಣ. ಹಾಗಾಗಿ ಶ್ವಾನಗಳಿಗೂ ಮತದಾನದ ಹಕ್ಕು ನೀಡಿದರೆ ಖಂಡಿತವಾಗಿಯೂ ಶ್ವಾನಗಳು ಬದುಕಲು ಸಾಧ್ಯ ಎಂದಿರುವ ಬೌವೌ ಸಂಘಟನೆಯ ಅಧ್ಯಕ್ಷ ಮೋತಿ ಕುಮಾರ್, ತಮ್ಮ ಸಮುದಾಯಕ್ಕೂ ವೋಟರ್ ಕಾರ್ಡ್ ನೀಡಬೇಕು, ಸಾಕು ನಾಯಿಗಳನ್ನು ಹಿಡಿಯದಂತಾಗಲು ಅವುಗಳಿಗೆ ಗುರುತಿನ ಚೀಟಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ನಾಳೆಯೂ ಬೌವೌ ಇದೆ

ಈ ಕುರಿತು ಅಂತಾರಾಷ್ಟ್ರೀಯ ಅಮಾನವೀಯ ಹಕ್ಕುಗಳ ಆಯೋಗಕ್ಕೆ ಮೊರೆ ಹೋಗುವುದಾಗಿ ಸ್ಪಷ್ಟಪಡಿಸಿರುವ ಅವರು, ತಮ್ಮನ್ನು ಸದಾ ಬೆಂಬಲಿಸುತ್ತಾ ಬೊಗಳುತ್ತಿರುವ ಬೊಗಳೆ ರಗಳೆ ಬ್ಯುರೋಗೆ ಬೌವೌ-ಗಿರಿ (ಶ್ವಾನ ಸಮುದಾಯದಿಂದ ದೊರೆಯುವ ಅತ್ಯುನ್ನತ ಶಹಭಾಸ್‌ಗಿರಿ) ವ್ಯಕ್ತಪಡಿಸಿದ್ದಾರೆ.

ಇದರಿಂದ ಉತ್ತೇಜನಗೊಂಡಿರುವ ಬೊಗಳೆ ರಗಳೆ ಬ್ಯುರೋ, ಮತ್ತೊಂದು ಕಂತ್ರಿ ನಾಯಿಗಳ ಕುರಿತು ಮತ್ತೊಂದು ಕಂತಿನ ವರದಿಯನ್ನು ನಾಳೆ ಪ್ರಕಟಿಸಲು ನಿರ್ಧರಿಸಿದೆ ಎಂದು ಮೂಲಗಳು ವರದಿ ಮಾಡಿದ್ದು, ನಾಳಿನ ಸಂಚಿಕೆಯಲ್ಲಿ ಅಮೂಲ್ಯ ತನಿಖಾ ವರದಿಯೊಂದನ್ನು ಮಂಡಿಸಲಾಗುತ್ತದೆ ಎಂದೂ, ಕಾದು ನೋಡಬೇಕು ಎಂದೂ ಕೋರಲಾಗಿದೆ.

(ಕನ್ನಡ ಬ್ಲಾಗೋದುಗರಲ್ಲಿ ಮನವಿ: ಕೆಳಗಿನ ಬ್ಲಾಗಾ'ಸುರ'ರ ಪಟ್ಟಿಯಲ್ಲಿ ಇಲ್ಲದಿರುವ ಯಾವುದಾದರೂ ಕನ್ನಡ ಬ್ಲಾಗುಗಳಿದ್ದರೆ ದಯವಿಟ್ಟು asatya ಡಾಟ್ anveshi @ ಜಿಮೇಲ್ ಡಾಟ್ ಕಾಮ್ ಗೆ ತಿಳಿಸಿದರೆ ನಾವು ಆಭಾರಿ. ಬ್ಲಾಗಿನ ಹೆಸರು ಹಾಗೂ url ಕೊಡಲು ಮನವಿ.)

ಕಾಮೆಂಟ್‌‌ ಪೋಸ್ಟ್‌ ಮಾಡಿ

8 ಕಾಮೆಂಟ್‌ಗಳು

  1. ಪ್ರಿಯ ಅನ್ವೇಷಿಗಳೆ,

    ಕನ್ನಡದಲ್ಲಿ ಸದಭಿರುಚಿಯ ಹಾಸ್ಯದ ಬ್ಲಾಗ್ ಬರೆಯುತ್ತಿರುವ ತಮಗೆ ವಂದನೆಗಳು. ನಿಮ್ಮ ಬರಹಗಳಿಗೆ ತುಂಬ 'ಅಭಿಮಾನಿ'ಗಳನ್ನೂ, 'ಅಭಿಮಾನಿನಿ'ಯರನ್ನೂ ಗಳಿಸಿಕೊಂಡಿದ್ದೀರಿ.ಅಭಿನಂದನೆಗಳು.

    ಆದರೆ, ಶ್ವಾನಗಳ ಕುರಿತಾದ ಲಘುಧಾಟಿಯ ತಮ್ಮ ಇತ್ತೀಚಿನ ಲೇಖನಗಳನ್ನೋದಿ ಬಹಳ ಖೇದವೆನ್ನಿಸಿತು. ಶ್ವಾನಗಳು ಮಾನವನ ಅತ್ಯಂತ ನಂಬುಗೆಯ ಸ್ನೇಹಿತ, ಆಪದ್ಭಾಂಧವ. ಮಹಾಭಾರತದ ಕಾಲದಿಂದಲೂ (ಯುಧಿಷ್ಠಿರನ ಕಥೆ ತಮಗೆ ತಿಳಿದಿರಬಹುದೆಂದು ನಿರೀಕ್ಷಿಸುತ್ತೇವೆ) ಶ್ವಾನಗಳನ್ನು ಪೂಜ್ಯಭಾವದಿಂದ ನೋಡಲಾಗುತ್ತಿದೆ. ಸಾಕಷ್ಟು ಕವಿಗಳು ಶ್ವಾನಗಳ ಸ್ವಾಮಿನಿಷ್ಠೆಯ ಕುರಿತು ಹಾಡಿಹೊಗಳಿದ್ದಾರೆ. ಇಂಥ ಶ್ವಾನಗಳ ಕುರಿತಾದ ತಮ್ಮ ಬರಹ ಅವಹೇಳನಕಾರಿಯಾಗಿದ್ದು, ಶ್ವಾನಗಳ ಆತ್ಮಗೌರವಕ್ಕೆ ಧಕ್ಕೆ ತಂದಿದೆ ಎನ್ನುವುದನ್ನು ತಮ್ಮ ಗಮನಕ್ಕೆ ತರಲಿಚ್ಛಿಸುತ್ತೇನೆ.

    ತಮ್ಮ ಮೇಲೆ ಮಾನನಷ್ಟ ಮೊಕದ್ದಮೆಯನ್ನು ಏಕೆ ಹೂಡಬಾರದು ಎಂದು ೩ ದಿನಗಳ ಒಳಗಾಗಿ ತಿಳಿಸತಕ್ಕದ್ದು. ಜೊತೆಯಲ್ಲಿ ಬೇಷರತ್ ಕ್ಷಮೆಯನ್ನೂ ಕೇಳಬೇಕೆನ್ನುವುದು ಶ್ವಾನಸಮಾಜದ ಆಗ್ರಹವಾಗಿದೆ.

    ಇದಕ್ಕೆ ತಪ್ಪಿದಲ್ಲಿ ತಮ್ಮ ವಿರುದ್ಧ ಶ್ವಾನ ಜಾಗೃತಿಯನ್ನುಂಟುಮಾಡಿ ಶ್ವಾನಾಂದೋಲನವನ್ನು ಸಂಘಟಿಸಲಾಗುವುದು. ತಮ್ಮ ಪ್ರತಿಕೃತಿಯು 'ಶುನಕ ಹಕ್ಕುಗಳ ರಕ್ಷಣಾ ಸಮಿತಿ'ಯ ಬಳಿ ಲಭ್ಯವಿದೆ ಎನ್ನುವುದು ನೆನಪಿರಲಿ.

    ಶುಭ ಹಾರೈಕೆಗಳೊಂದಿಗೆ,
    ಶುನಕ ಹಕ್ಕುಗಳ ರಕ್ಷಣಾ ಸಮಿತಿ.

    ಪ್ರತ್ಯುತ್ತರಅಳಿಸಿ
  2. ಓಹ್...ಇನ್ಮೇಲೆ...." ಡೊಂಕು ಬಾಲದ ನಾಯಕರೇ...ಹಾಡು ಹೇಳಂಗಿಲ್ವಾ??!

    ಪ್ರತ್ಯುತ್ತರಅಳಿಸಿ
  3. papernallo nAyi kATa...
    theatrnallu naayineralu..
    bogaLayalli naayiya bagge bou bou.
    ella nAyiya mahime.....

    ಪ್ರತ್ಯುತ್ತರಅಳಿಸಿ
  4. ಬೊ-ರ ಎಲ್ಲಿ ಬಾಲ ಊರಿದ್ದಾರೆ ಅಂತ ತನಿಖೆ ನಡೆಯಲಾಗುತ್ತಿದೆ. ಅಂದ ಹಾಗೆ ಜಾಸ್ತಿ ಕಮಿಷನ್ ಸಿಗುವಂತಿದ್ದರೆ ಬೌ-ವೌ ಎಂಬ ಹೆಸರನ್ನು ಬ್ಲಾಗಿಗೆ ಇಡುವಿರಾ?
    ಕಡೆಯದಾಗಿ ಮತ್ತೊಂದು - ಬ್ಲಾಗಾಸುರರಲ್ಲಿ ಹೆಸರನ್ನು ನೊಂದಾಯಿಸಿಕೊಂಡವರಿಗೆ ಏನು ಕೊಡುವಿರಿ? ಬ್ಲಾಗ್ ಇಲ್ಲದವರೂ ಅಲ್ಲ ಸಲ್ಲದ ಹೆಸರನ್ನು ಸೂಚಿಸಬಹುದೇ?

    ಪ್ರತ್ಯುತ್ತರಅಳಿಸಿ
  5. ಶುನಕ ಹಕ್ಕುಗಳ ರಕ್ಷಣಾ ಸಮಿತಿಯವರೆ,
    ನಾವೆಂದಿಗೂ ಶ್ವಾನಗಳ ವಿರುದ್ಧವಲ್ಲ. ಅವುಗಳನ್ನು ಬಾಲದಲ್ಲೇ ನಾವು ಮೇಲೆತ್ತುತ್ತಾ ಇದ್ದೇವೆ.

    ಆದರೂ, ನಾಯಿ ಎನ್ನುವುದು ಒಂದು "ಅಮೂಲ್ಯ" ಮಾನವೇತರ ಜೀವಿ, ನಾರಾಯಣ ಮತ್ತು ಈಶ್ವರ ಎಂಬೆರಡು ಶಬ್ದಗಳ abbreviated form ಎಂಬುದನ್ನು ನಮಗೆ ಮನದಟ್ಟು ಮಾಡಿಸಿದ್ದಕ್ಕೆ ಧನ್ಯವಾದ.

    ನಮ್ಮ ವರದಿಯಿಂದ ಶ್ವಾನಗಳ ಆತ್ಮಗೌರವಕ್ಕೆ ಧಕ್ಕೆಯಾಗಿದ್ರೆ, ಆ ಆತ್ಮಗಳಿಗೆ ಶಾಂತಿ ದೊರೆಯಲಿ ಎಂದು ಹಾರೈಸುತ್ತೇವೆ.

    ಮತ್ತೆ, ಮಾನ ನಷ್ಟ ಮೊಕದ್ದಮೆ ಬಗ್ಗೆ ಒಂದು ಮಾತು. ನಮ್ಮಲ್ಲಿ ನಷ್ಟವಾಗುವಂಥದ್ದೇನೂ ಉಳಿದಿಲ್ಲ. ಶುನಕಗಳ ಪರವಾಗಿ ಬರೆದು ಎಲ್ಲ ನಷ್ಟವಾಗಿರುವುದರಿಂದ ನೀವೇ ನಮಗೆ ಪರಿಹಾರ ಕೊಡಬೇಕೆಂದು ಕೋರುತ್ತೇವೆ.
    -ಇತಿ
    ತಮ್ಮ ಪಂಗಡದ ಹಿತೈಷಿ

    ಪ್ರತ್ಯುತ್ತರಅಳಿಸಿ
  6. ಅನಾನಿಮಸ್ಗಿರಿಯವರೆ,
    ಹಾಗೇನಾದರೂ ಹಾಡೀರಿ ಜೋಕೆ,
    ತಮಗೆ ನಾಯಕ ಪಟ್ಟ ಕಟ್ಟಿದ್ದಕ್ಕಾಗಿ ಶ್ವಾನಗಳ ಸಂತತಿಯೇ ನಿಮ್ಮ ಹಿಂದೆ ಬರಬಹುದು.

    ಪ್ರತ್ಯುತ್ತರಅಳಿಸಿ
  7. ಮಹಾಂತೇಶರೆ,
    ಮೊದಲೊಂದು ನಿಯಮವಿತ್ತು. ನಾಯಿ ಮನುಷ್ಯನಿಗೆ ಕಚ್ಚಿದರೆ ಸುದ್ದಿಯಲ್ಲ, ಮನುಷ್ಯನೇ ನಾಯಿಗೆ ಕಚ್ಚಿದರೆ ಸುದ್ದಿ ಅಂತ.
    ಆದರೆ ಈಗ ನಾಯಿ ಮನುಷ್ಯನಿಗೂ ಕಚ್ಚಿಯೂ ಸುದ್ದಿ ಮಾಡುತ್ತಿದೆ.

    ಪ್ರತ್ಯುತ್ತರಅಳಿಸಿ
  8. ಶ್ರೀನಿವಾಸರೆ,
    ನಮ್ಮ ಬಾಲ ಎಳೆಯಲು ಬಂದರೆ ಶುನಕ ರಕ್ಷಣಾ ಸಮಿತಿಯನ್ನು ಛೂಬಿಡಲಾಗುತ್ತದೆ ಎಂದು ಎಚ್ಚರಿಕೆ ನೀಡುತ್ತಿದ್ದೇವೆ.

    ಎಲ್ಲಾ ಬ್ಲಾಗಿಗರನ್ನು ತಿಳಿದುಕೊಂಡು, ಯಾರಿಗೂ ತಿಳಿಯದಂತೆ ನಾವು ಕೂಡ ಸ್ಪರ್ಧೆ ಏರ್ಪಡಿಸುತ್ತೇವೆ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D