ಬೊಗಳೆ ರಗಳೆ

header ads

ಡಯಟಿಂಗ್ ಅತಿಯಾದರೆ ಅಸ್ಥಿಪಂಜರ ಉತ್ಪಾದನೆ!

(ಬೊಗಳೂರು ಅನಾರೋಗ್ಯ ಬ್ಯುರೋದಿಂದ)
ಬೊಗಳೂರು, ಮಾ.30- ಯಾರು ಕೂಡ ತೂಕ ಕಳೆದುಕೊಳ್ಳಲು ಡಯಟಿಂಗ್ ಮಾಡಬಾರದು ಎಂದು ಅಂತಾರಾಷ್ಟ್ರೀಯ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ತೂಕದ ವ್ಯಕ್ತಿಗಳು ಯಾವತ್ತೂ ತೂಕ ಹೆಚ್ಚೇ ಇರಬೇಕು. ಅದುವೇ ಅವರಿಗೆ ಪ್ರತಿಷ್ಠೆಯಾಗಿದ್ದು, ತೂಕ ಕಳೆದುಕೊಳ್ಳಲು ಅನ್ನಾಹಾರ ತ್ಯಾಗ, ನಿರಾಹಾರ ವ್ರತ, ಬೆವರಿಳಿಸುವ ವ್ಯಾಯಾಮ, ಈಜು ಮುಂತಾದವನ್ನು ಮಾಡಿದರೆ ದೇಹದೊಳಗಿರುವ ಅಮೂಲ್ಯ ಶಕ್ತಿ ನಷ್ಟವಾಗುತ್ತದೆ ಎಂದಿರುವ ಅವರು, ಈ ಬಗ್ಗೆ ತಿಮಿಂಗಿಲಗಳನ್ನು ಉದಾಹರಣೆ ಸಹಿತ ವಿವರಿಸಿದ್ದಾರೆ.

ಅಂದರೆ, ತೂಕ ಕಳೆದುಕೊಳ್ಳಲು ಸ್ವಿಮ್ಮಿಂಗ್ ಸೂಟ್ ತೊಟ್ಟು ಸ್ವಿಮ್ಮಿಂಗ್ ಪೂಲ್‌ಗೆ ಹೋಗುವವರಿಗೆ ಅತಿಯಾಗಿ ಎಚ್ಚರಿಕೆ ನೀಡಿರುವ ಅವರು, ಅಪ್ಪಿ ತಪ್ಪಿ ಎಲ್ಲಾದರೂ ನಿಮ್ಮ ತೂಕ ಕಡಿಮೆಯಾಗಿದ್ದರೆ ಅದಕ್ಕೆ ನೀವು ಈಜುವುದು ಕಾರಣವಲ್ಲ. ನಿಮ್ಮ ಉಡುಗೆಯೇ ಕಾರಣವಾಗಿರುತ್ತದೆ ಎಂದಿದ್ದಾರೆ.

ಅದು ಹೇಗೆ ಎಂದು ಪ್ರಶ್ನಿಸಿದಾಗ, ಕೆಲವರು ಈಜುಡುಗೆ ತೊಟ್ಟು ನಾಚಿ ಮುದ್ದೆಯಾಗುತ್ತಾರೆ, ಹಾಗಾಗಿ ತೆಳ್ಳಗಾಗಿರುತ್ತಾರೆ. ಇನ್ನು ಕೆಲವರು ನಾಚಿ ನೀರಾಗುತ್ತಾರೆ. ಅವರ ದೇಹದ ನೀರೆಲ್ಲಾ ಈಜುಕೊಳಕ್ಕೆ ಸೇರುವುದರಿಂದ ಇವರ ಗಾತ್ರ ಕಡಿಮೆಯಾಗುತ್ತದೆ, ಈಜುಕೊಳದಲ್ಲಿ ನೀರಿನ ಗಾತ್ರ ಹೆಚ್ಚಾಗುತ್ತದೆ. ಇದರ ಹೊರತಾಗಿಯೂ ಯಾರಾದರೂ ತೆಳ್ಳಗಾಗಿದ್ದಾರೆಂದರೆ ಅದಕ್ಕೆ ಈಜುಡುಗೆ ತೊಟ್ಟವರ ಮೇಲೆ ಬೇರೆಯವರ ದೃಷ್ಟಿ ತಗುಲಿದ್ದೇ ಕಾರಣವಾಗಿ, ಅವರು ದೃಷ್ಟಿ ತಗುಲಿ ಸೊರಗುತ್ತಾರೆ ಎಂದು ಸಿದ್ಧಾಂತ ಮಂಡಿಸಿದ್ದಾರೆ.

ಅವರು ನೀಡುವ ಉದಾಹರಣೆ : ಈಜಿನಿಂದ ತೂಕ ಕಳೆದುಕೊಳ್ಳುವುದು ನಿಜವಾಗಿದ್ದರೆ, ಯಾವತ್ತೂ ಈಜಾಡುತ್ತಲೇ ಇರುವ ತಿಮಿಂಗಿಲಗಳೇಕೆ ತೆಳ್ಳಗೆ ಬಳುಕುತ್ತಾ ಸ್ಮಾರ್ಟ್ ಆಗಿರುವುದಿಲ್ಲ?

ತೂಕ ಕಳೆದುಕೊಳ್ಳುವ ಕುರಿತು ಡಯಟಿಂಗ್ ಮತ್ತಷ್ಟು ಪ್ರಯತ್ನ ಹೆಚ್ಚಿಸಿದಲ್ಲಿ ಆಟೋಮ್ಯಾಟಿಕ್ ಆಗಿ ಅಸ್ಥಿಪಂಜರಗಳ ಉತ್ಪತ್ತಿಯಾಗುವ ಸಾಧ್ಯತೆಗಳೂ ಇವೆ ಎಂದೂ ಅವರು ಇದೇ ಸಂದರ್ಭ ಎಚ್ಚರಿಸಲು ಮರೆಯಲಿಲ್ಲ.

(ನಾಡಿದ್ದು ಭಾನುವಾರ ಏಪ್ರಿಲ್ 1. ಈ ಸಂಬಂಧ ವಿಶೇಷ ವರದಿಯೊಂದಕ್ಕಾಗಿ ದಯವಿಟ್ಟು ನಿರೀಕ್ಷಿಸಿ.)

ಕಾಮೆಂಟ್‌‌ ಪೋಸ್ಟ್‌ ಮಾಡಿ

6 ಕಾಮೆಂಟ್‌ಗಳು

  1. ಇಲ್ಲೊಬ್ಬರು ತೂಕದ ವ್ಯಕ್ತಿ ಅಲ್ವಂತೆ. ಅವರನ್ನು ಎಲ್ಲರೂ ಹಲ್ಕಾ ಎಂದು ಕರೆಯುತ್ತಾರಂತೆ. ಅವರು ಡಯಟಿಂಗ್ ಮಾಡಬಹುದಾ? ಹಾಗೆ ಡಯಟಿಂಗ್ ಮಾಡಿದರೆ ಅವರೂ ಮುದ್ದೆ ಆಗುತ್ತಾರಾ? ಆ ಮುದ್ದೆಯನ್ನು ತಿನ್ನಬಹುದಾ? ಹಾಗೆ ಡಯಟಿಂಗ್ ಮಾಡಿದಾಗ ಅವರ ಮೈ ಮೇಲೆ ಬಟ್ಟೆ ಉಳಿಯಲು ಸಾಧ್ಯವೇ? ಬಿದ್ದು ಹೋಗುವುದಲ್ಲವೇ?

    ನಾನೇನ್ಮಾಡ್ಲಿ - ಅವರನ್ನು ನಿಮ್ಮ ಪತ್ರಿಕೆ ಓದಿ ನಾಚಿ ನೀರಾಗಿ - ನೆಲದ ಮೇಲೆ ತೆವಳುತ್ತಿದ್ದಾರೆ. ನಾನೇ ಅವರ ಪರವಾಗಿ ಪ್ರಶ್ನೆ ಕೇಳ್ಬೇಕು ಅಂತ ಕೇಳಿಕೊಂಡಿದ್ದಾರೆ.

    ಏಪ್ರಿಲ್ ಒಂದರಂದು ನಿಮಗೆ ರಜೆ ಇಲ್ವಾ? ನಾನೇನೋ ಅಂದು ಮರೆಯಾಗಿ ಪರದೆ ಹಿಂದೆ ಅವಿತುಕೊಂಡಿರುತ್ತೇನೆ.

    ಪ್ರತ್ಯುತ್ತರಅಳಿಸಿ
  2. ತೂಕದ ವ್ಯಕ್ತಿಗಳ ಬಗ್ಗೆ ಹಗುರವಾಗಿ ಮಾತನಾಡಿದರೆ ಭಾರವಾದ ಕ್ರಮ ಕೈಗೊಳ್ಳಲಾಗುವುದು ಎಂದು ತೂಕದ ವ್ಯಕ್ತಿಗಳ ಸಂಘದ ಕಾರ್ಯದರ್ಶಿ ಡ್ರಮ್ ಸಿಂಗ್‍ರವರು ಪತ್ರಿಕಾ ಹೇಳಿಕೆ ನೀಡಿದ್ದು, ಬೊ-ರ ಪತ್ರಿಕೆಯ ವದರಿ ಫ್ಯಾಕ್ಚುಯರ್ ಎರರ್‍ಗಳಿಂದ ತುಂಬಿರುವುದಾಗಿಯೂ, ಒಂದು ದಿನ ಅಂದರೆ ಇಪ್ಪತ್ತು ನಾಲ್ಕು ಘಂಟೆಗಳ ಕಾಲ ಉಪವಾಸ ಸತ್ಯಾಗ್ರಹ ಮಾಡಿದರೂ ಒಂದು ಔನ್ಸೂ ಕಡಿಮೆಯಾಗಿಲ್ಲ ಎಂದು ಪಕ್ಕದ ರಾಜ್ಯದ ಗಜಲಿಲತರ ಸಾಕ್ಷಿ ಇಟ್ಟುಕೊಂಡು ನಿಮ್ಮ ಪತ್ರಿಕೆಯನ್ನು ನೂರೆಂಟು ಸುಳ್ಳು ಬ್ಯೂರೋಗೆ ಇನ್‍`ವೇಸ್ಟಿ`ಗೇಶನ್‍ಗೆ ಕಳುಹಿಸಲಾಗುವುದೆಂದು ಬೆದರಿಕೆ ಹಾರಿಸಿದ್ದಾರೆ.


    ಅಂದಹಾಗೆ ವರ್ಷವಿಡೀ ನಾವೇನಾಗಿರುತ್ತೇವೆಯೋ ಅದನ್ನು ತಿಳಿಸುವ ದಿನ ಹತ್ತಿರಾಗುತ್ತಿದೆ. ಶುಭಾಶಯಗಳು!!

    ಪ್ರತ್ಯುತ್ತರಅಳಿಸಿ
  3. ನೀವು ಯಾವ ತಿಮಿಂಗಿಲುಗಳ ಬಗ್ಗೆ ಮಾತಾಡ್ತಿದೀರಾ?
    ಸರ್ಕಾರಿ ಕಚೇರಿಗಳಲ್ಲಿ,ಇಲಾಖೆಗಳಲ್ಲಿ , ವಿಧಾನಸಭೆಯಲ್ಲಿ ಈಜಾಡುವ ತಿಮಿಂಗಿಲುಗಳ ಬಗ್ಗೆಯೇ?

    ಅಂದಾಗೆ W.H.O ನವರು ಈ ತರ ಅಸ್ಥಿಪಂಜರದಂತವರಿಗೆ ಉಚಿತವಾಗಿ ಆಹಾರ ಕೊಡಬೇಕೆಂದು ಆಯಾ ಸರಕಾರಗಳಿಗೆ ಸೂಚಿಸಿದೆಯಂತೆ ?!

    ಪ್ರತ್ಯುತ್ತರಅಳಿಸಿ
  4. ಶ್ರೀನಿವಾಸರೆ,
    ಡಯಟಿಂಗ್ ಮಾಡಿದ್ರೆ ಮುದ್ದೆಯಾಗಿ ಮೈಮೇಲಿನ ಬಟ್ಟೆ ಕಳಚಿಹೋಗುತ್ತದೆ ಎಂಬ ಸೂತ್ರವನ್ನು ನೀವು ಮುಂಬಯಿಯಲ್ಲೇ ಇರುವುದರಿಂದ ಬಾಲಿವುಡ್ ನಟೀಮಣಿಯರಿಗೆ ಮಾರಾಟ ಮಾಡಬಹುದು!!!

    ಪ್ರತ್ಯುತ್ತರಅಳಿಸಿ
  5. ಸುಪ್ರೀತರೇ
    ವೇಸ್ಟ್-ಗೇಶನ್ ವರದಿಗಳ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಧನ್ಯವಾದ. ಆದರೆ ಒಂದು ದಿನಕ್ಕೆ ಇಪ್ಪತ್ತನಾಲ್ಕು ಗಂಟೆ ಮಾತ್ರ ಇರೋದು ಎಂದು ಗಜಲಲಿತ ನಂಬಿದ್ದೇ ಎಲ್ಲ ಅವಾಂತರಕ್ಕೆ ಕಾರಣ ಅಂತ ಸ್ಪಷ್ಟಪಡಿಸುತ್ತಿದ್ದೇವೆ.

    ಪ್ರತ್ಯುತ್ತರಅಳಿಸಿ
  6. ಶಿವ್ ಅವರೆ,
    ನಿಮ್ಮ ಪ್ರಶ್ನೆಯಲ್ಲೇ ಉತ್ತರವಿದೆ. ತಿಮಿಂಗಿಲಗಳಿಗೆ ನೀಡಲೆಂದೇ WHO ಹೇಳಿರುವುದಾಗಿ ಸರಕಾರ ಬಲವಾಗಿ ನಂಬಿದೆ!!!!

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D