Saturday, March 03, 2007

ಇಂಗ್ಲಿಷ್ ವರ್ಣಮಾಲೆಯಿಂದ Q ಗೆ ಗೇಟ್‌ಪಾಸ್

(ಬೊಗಳೂರು ಎಬಿಸಿಡಿ ಗೊತ್ತಿಲ್ಲದ ಬ್ಯುರೋದಿಂದ)
ಬೊಗಳೂರು, ಮಾ.2- ಭಾರತದಲ್ಲಿ ಇಂಗ್ಲಿಷ್ ವರ್ಣಮಾಲೆಗೆ ಕೇವಲ ಇಪ್ಪತ್ತೈದೇ ಅಕ್ಷರಗಳಿರುವುದು ಇತ್ತೀಚೆಗೆ ತೀರಾ ಕೋಲಾಹಲಕ್ಕೆ ಕಾರಣವಾಗಿದೆ. ಇದಕ್ಕೆ ಕಾರಣ ಇಲ್ಲಿದೆ. ಭಾರತದಲ್ಲಿ ಇಂಗ್ಲಿಷ್ ವರ್ಣಮಾಲೆಯ ಒಂದು ಅಕ್ಷರಕ್ಕೆ ಮಾತ್ರ ಒತ್ತು ನೀಡುತ್ತಿರುವುದರಿಂದ ತೀವ್ರವಾಗಿ ಕೆಂಡಾಮಂಡಲವಾಗಿರುವ ಇಂಗ್-ಲ್ಯಾಂಡ್ ತನ್ನ ಆಕ್ಷೇಪ ವ್ಯಕ್ತಪಡಿಸಿದೆ.

ಈ ಕಾರಣದಿಂದಾಗಿ Q ಕೇಂದ್ರದ ಸರಕಾರವು Q ಅಕ್ಷರವನ್ನೇ ಅಳಿಸಿಹಾಕಲು ಸುಗ್ರೀವಾಜ್ಞೆ ಹೊರಡಿಸಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ಇತ್ತೀಚೆಗಿನ ದಿನಗಳಲ್ಲಿ Q ಎಂಬುದು ಕೇಂದ್ರ ಸರಕಾರ ಮತ್ತು ಅದರ ಅಧ್ಯಕ್ಷರಿಗೆ, ಪಕ್ಷದ ಅಧ್ಯಕ್ಷರಿಗೆ ತೀರಾ ನಿದ್ದೆಗೆಡಿಸುವ ಸಂಗತಿಯಾಗಿದೆ. ಕೋಲಸಭೆಯಲ್ಲೂ ಕೋಲಾಹಲವೇ ಆಗುತ್ತದೆ ಹೊರತು ನಾಯಿಗಳ ಆಹಾರ ದರ ಇಳಿಸಿದ ಬಜೆಟಿಗೆ ಅಂಗೀಕಾರ ದೊರೆಯುತ್ತಿಲ್ಲ ಎಂಬುದು ವಿತ್ತ ಸಚಿವರ ಕೊರಗು.

ಇಲ್ಲದೆ, ಹೆಚ್ಚಾಗಿ ಚುನಾವಣೆಗಳು ಸಮೀಪಿಸುತ್ತಿರುವಂತೆಯೇ ಈ Q ಎನ್ನುವುದು ಧುತ್ತನೆ ಕಾಣಿಸಿಕೊಳ್ಳುತ್ತದೆ. ಹಗಲು-ರಾತ್ರಿ ಕಾಡುತ್ತದೆ. ಈ ಬಾರಿ ಉತ್ತರ ಪ್ರದೇಶದ ಬಿಸಿ ಇದೆ, ಇನ್ನೆರಡು ವರ್ಷದೊಳಗೆ ಲೋಕಸಭೆಗೆ ಮಹಾಸಮರ ನಡೆಯಲಿದೆ. ಹಾಗಾಗಿ ಈ Q ಎನ್ನುವುದು ಕ್ಯೂನಲ್ಲಿ ನಿಂತು ಮತ್ತಷ್ಟು ಇರಿಯುವುದು ಗ್ಯಾರಂಟಿ. ಇದಕ್ಕಾಗಿ Q ವನ್ನು ಗುಳುಂ ಮಾಡಿದರೆ ಆಂಗ್ಲ ವರ್ಣಮಾಲೆಯಲ್ಲಿ ಒಟ್ಟು ಇರುವ ಅಕ್ಷರಗಳ ಸಂಖ್ಯೆಯನ್ನು ನೆನಪಿನಲ್ಲಿಟ್ಟುಕೊಳ್ಳುವುದೂ ಸುಲಭವಾಗುತ್ತದೆ, ನಮ್ಮ ಎಲ್ಲಾ ಪಕ್ಷಗಳಿಗೂ ರಾತ್ರಿ ಸರಿಯಾಗಿ ನಿದ್ದೆ ಮಾಡಬಹುದು ಎಂಬುದು ಸರಕಾರಿಗರ ಲೆಕ್ಕಾಚಾರ.

ಮತ್ತು ಸಣ್ಣ ಮಕ್ಕಳಿಗೆ ಇಂಗ್ಲಿಷ್ ಕಲಿಯುವುದಕ್ಕೂ ಸುಲಭವಾಗುತ್ತದೆ ಎಂಬುದು ಈಕ್ಷಣ ಮಂತ್ರಿಗಳ ಲೆಕ್ಕಾಚಾರ.

6 comments:

 1. ನಿಮ್ಮ ದೇಶದಲ್ಲಿನ್ನೂ Q ಅಕ್ಷರಕ್ಕೆ ಮಾನ್ಯತೆ ಇದೆಯೇ? :o

  ನಮ್ಮ ದೇಶದಲ್ಲಿ ಅದಕ್ಕೆ ಸ್ಥಾನವೇ ಇಲ್ಲ. ರಾಲೂ, ಬಾಬ್ರಿ, ಕೊಂಗೈ, ಬೀಜಿಪ, ರಾವಣ ಸೇನೆ ಇತ್ಯಾದಿ ಪಕ್ಷಗಳೆಲ್ಲಾ ಒಮ್ಮತದಿಂದ ಆಳ್ವಿಕೆ ಆರಂಭಿಸಿದಂದಿನಿಂದ ತನು ಮನ ಗಟ್ಟಿ ಇದ್ದವರಿಗೆ ಮಾತ್ರವೇ ಇಲ್ಲಿ ಉಳಿಗಾಲ. ಇಲ್ಲದವರಿಗೆ ರಾಹು ಕಾಲ. ನೀವಿನ್ನೂ ಬಹಳ ಹಿಂದಿನ ಕಾಲದಲ್ಲಿ ಇದ್ದೀರಂತ ಅನ್ಸತ್ತೆ.

  ReplyDelete
 2. ತುಂಬ ಒಳ್ಳೆಯ ಸಮಾಚಾರ. ಇನ್ನು ಮುಂದೆ ನೀರಿಗಾಗಿ, ಸೀಮೆ ಎಣ್ಣೆಗಾಗಿ, ಸಿನೆಮ ಟಿಕೆಟ್ಗಳಿಗೆ Q ನಿಲ್ಲುವುದು ತಪ್ಪುತ್ತದೆ ಅಂತ ಆಯ್ತು:-))

  ReplyDelete
 3. Q ಒಂದೇ ಅಲ್ಲಾ..
  B,H,G ಇವೆಲ್ಲವನ್ನೂ ಇಂಗ್ಲೀಷ್ ವರ್ಣಮಾಲೆಯಿಂದ 'ಕೈ' ಬಿಡುವ ಸಂಭವವಿದೆಯಂತೆ

  (B-Bofors,H-Hawala,G-Godra)

  ReplyDelete
 4. ಹೌದು ಶ್ರೀನಿವಾಸರೆ,
  ರಾಜೀವ ಗಾಂಧಿ ಕಾಲದಿಂದ Q ಅಳಿಸುವ ಪ್ರಯತ್ನ ಇತ್ತು. ಆದರೆ ಯಾರಿಗೂ ಸಾಧ್ಯವಾಗಲಿಲ್ಲ. ಯಾಕೆಂದರೆ ಜಾರಕಾರಣಿಗಳಿಗೆ ಆಗ ಸ್ವಲ್ಪವಾದರೂ ಹೊಣೆಗಾರಿಕೆ ಇತ್ತು. ಈಗ ಕಾಲ ಬದಲಾಗಿದೆ.!!!!

  ReplyDelete
 5. ಜಗಲಿ ಭಾಗವತರೆ,
  ಬನ್ನಿ ಬನ್ನಿ, ನಿಮ್ಮ ಸಲಹೆಗೆ ನಮ್ಮ ಬೆಂಬಲವಿದೆ.
  Q ನಿಲ್ಲುವ ಸಮಯದಲ್ಲಿ ಏನು ಮಾಡಬೇಕು ಅಂದ್ರೆ, ನಿಮ್ಮ ಜಗಲಿಯಲ್ಲಿ ಕುಳಿತು ನಿಮ್ಮ ಭಾಗವತಿಕೆ ಕೇಳುತ್ತಾ, ಕುಂದಗನ್ನಡ ಕಲೀತಾ ಪಟ್ಟಾಂಗ ಹೊಡೆಯೋದು!!!!

  ReplyDelete
 6. ಶಿವ್ ಅವರೆ,
  ಇಂಗ್ಲಿಷಿನಲ್ಲಿ ಇರುವ 26 ಅಕ್ಷರಗಳಿಗಿಂತಲೂ ಹೆಚ್ಚು ಹೆಸರಿನ ಹಗರಣಗಳಿವೆ. ಆದುದರಿಂದ ಅಂದು ಇಂಗ್ಲಿಷರನ್ನು ಹೊಡೆದೋಡಿಸಲು ಹೋರಾಡಿದರು. ಈಗ ಇಂಗ್ಲಿಷನ್ನೇ ನಿರ್ನಾಮ ಮಾಡುವುದು ನಮ್ಮನ್ನಾಳುವವರಿಗೆ ತೀರಾ ಸುಲಭವಾಗಿಬಿಡುತ್ತದೆ. ಒಟ್ಟಿನಲ್ಲಿ ಇಂಗ್ಲಿಷಿಗೆ ಯಾವುದೇ ಅಕ್ಷರಗಳು ಉಳಿಯದಂತೆ ಮಾಡುವಲ್ಲಿ ನಮ್ಮವರು ಯಶಸ್ವಿಯಾಗುವುದು ಖಂಡಿತ.

  ReplyDelete

ನಿಮ್ಮ ಸಲಹೆ/ಅಭಿಪ್ರಾಯ ತಿಳಿಸಿ..

ಎಂಜಿನ್ ಇಲ್ಲದ ರೈಲು: ಬ್ರೇಕಿಂಗ್ ನ್ಯೂಸ್ ಅಲ್ಲವೆಂದ ಬೊ.ರ.

[ಬೊಗಳೂರು ಪಟ್ಟೆ-ರಹಿತ ರೈಲು ಬ್ಯುರೋ] ಬೊಗಳೂರು: ಆಫ್‌ಲೈನ್ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯೊಂದು ಆನ್‌ಲೈನ್ ಸಂಪಾದಕರ ಕಣ್ಣು ಕುಕ್ಕಿದ್ದು, ಎಂಜಿನ್ ಇಲ್ಲದೆ...