Saturday, April 28, 2007

ವ್ಯಾಕ್....ಡೊನಾಲ್ಡ್‌ದಿಂದ ಜನಸಂಖ್ಯಾ ನಿಯಂತ್ರಣ

(ಬೊಗಳೂರು ಕಂಟ್ರೋಲ್ ಬ್ಯುರೋದಿಂದ)
ಬೊಗಳೂರು, ಏ.28- ಮನುಷ್ಯರು ತಿನ್ನುವ ಆಹಾರ ತಯಾರಿಸಿ ಮಾರಾಟ ಮಾಡಲು ಹೋಗಿ ಕೈಸುಟ್ಟುಕೊಂಡಿರುವ ವ್ಯಾಕ್ ವ್ಯಾಕ್‌ಡೊನಾಲ್ಡ್ ಕಂಪನಿಯು ಹೊಸ ಸಾಹಸಕ್ಕೆ ಕೈ ಹಚ್ಚಿದೆ.

ಲೈಂಗಿಕ ಶಿಕ್ಷಣವನ್ನು ಪಠ್ಯದಲ್ಲಿ ಅಳವಡಿಸಬೇಕೇ ಬೇಡವೇ ಎಂಬ ಕುರಿತು hot ಚರ್ಚೆ ನಡೆಯತೊಡಗಿರುವಂತೆಯೇ ದಿಢೀರನೇ ಎಚ್ಚೆತ್ತುಕೊಂಡಿರುವ ವ್ಯಾಕ್ ವ್ಯಾಕ್ಡೊನಾಲ್ಡ್, ಬಾಲಕಿಯರಿಗೆ ಆಹಾರದಲ್ಲಿ ಕಾಂಡೋಮ್ ವಿತರಿಸತೊಡಗಿರುವುದು ಹಲವರ ಹುಬ್ಬೇರಿಸತೊಡಗಿದೆ.

ತಮ್ಮ ಕಂಪನಿ ಆಹಾರ ಪದಾರ್ಥಗಳ ವಿರುದ್ಧ ತೀವ್ರ ಆಕ್ಷೇಪಗಳು ಕೇಳಿ ಬರುತ್ತಿವೆ. ನಾವು ಡಾಗ್ ಬಿಸ್ಕಿಟುಗಳನ್ನು ಮಾತ್ರವೇ ಮಾರಾಟ ಮಾಡುತ್ತೇವೆ ಎಂಬ ಕುರಿತು ಊಹಾಪೋಹಗಳು ಎದ್ದಿವೆ. ಮಾತ್ರವಲ್ಲದೆ ನಾವು ತಯಾರಿಸಿಕೊಡುವ ಹಾಟ್ ಡಾಗ್ ಕೂಡ ಬಿಸಿ ಬಿಸಿ ನಾಯಿ ಎಂಬರ್ಥದಲ್ಲಿ ಅಕ್ಷರಶಃ ತರ್ಜುಮೆಯಾಗಿ ಪ್ರಚಾರ ಪಡೆದುಕೊಳ್ಳುತ್ತಿದೆ. ಇದು ಅಕ್ಷಮ್ಯ ಅಪರಾಧ ಎಂದು ವ್ಯಾಕ್‌ಡೊನಾಲ್ಡ್ ತಿಳಿಸಿದೆ.

ದಯವಿಟ್ಟು ನಮ್ಮನ್ನು ನಂಬಿ. ಪ್ಲೀಸ್....ಪ್ಲೀಸ್... ನಾವು ಮನುಷ್ಯರು ತಿನ್ನುವಂತಹ ಪದಾರ್ಥಗಳನ್ನು ಮಾತ್ರವೇ ವಿತರಿಸುತ್ತೇವೆ. ಬೇಕಿದ್ದರೆ ಇದನ್ನು ನೀವು ಪರೀಕ್ಷಿಸಬಹುದು. ಒಂದು ತುಂಡು ಹಾಟ್ ಡಾಗನ್ನು ನಾಯಿಗೆ ಹಾಕಿ ನೋಡಿ, ಅದು ಸಾಯದಿದ್ದರೆ ಮತ್ತೆ ಕೇಳಿ ಎಂದಿರುವ ವ್ಯಾಕ್‌ಡೊನಾಲ್ಡ್, ಅದೇ ತುಂಡನ್ನು ಮನುಷ್ಯರು ತಿಂದರೆ ಏನೂ ಆಗುವುದಿಲ್ಲ. ಹಾಗಾಗಿ ನಮ್ಮದು ಮನುಷ್ಯರು ಮಾತ್ರವೇ ತಿನ್ನಬಹುದಾದ ಪದಾರ್ಥವಾಗಿರುತ್ತದೆ ಎಂದು ಸ್ಪಷ್ಟೀಕರಣ ನೀಡಿದೆ.

ನಾವು ನೀಡಿದ ಆಹಾರ ಸೇವಿಸಿ ದೇಶದಲ್ಲಿ ಜನಸಂಖ್ಯೆ ಹೆಚ್ಚಾಗುತ್ತದೆ ಎಂಬ ಭೀತಿ ಇದ್ದರೆ ಅದರ ನಿವಾರಣೆಗಾಗಿ ಇಂಥ ಕಾಂಡೋಮ್ ವಿತರಣಾ ಕಾರ್ಯಕ್ಕೆ ಕೈಹಚ್ಚಿದ್ದೇವೆ ಎಂದು ತಿಳಿಸಿರುವ ಅದು, ಇದನ್ನು ಸದ್ಯಕ್ಕೆ ಸಣ್ಣ ಮಕ್ಕಳಿಗೆ ಮಾತ್ರವೇ ವಿತರಿಸಲಾಗುತ್ತದೆ. ಆ ಮೇಲೆ ದೊಡ್ಡ ಮಕ್ಕಳಿಗೂ ವಿತರಿಸುವ ಯೋಜನೆ ಇದೆ ಎಂದು ತಿಳಿಸಿದೆ.

Thursday, April 26, 2007

ಬೊಗಳೆ ಬೆನ್ನು ತಟ್ಟಿದ ಶಿಕ್ಷಣ ಆಯುಕ್ತರು

(ಬೊಗಳೂರು ಬೆನ್ನುತಟ್ಟಿಕೊಳ್ಳುವ ಬ್ಯುರೋದಿಂದ)
ಬೊಗಳೂರು, ಏ.26- ಇದೊಂದು ಅದ್ಭುತ ದುರಾಲೋಚನೆ.... ಅಲ್ಲಲ್ಲ.... ದೂರಾಲೋಚನೆ ಎಂದು ಶಿಕ್ಷಣ ಆಯುಕ್ತರು ಬೊಗಳೆ ರಗಳೆ ಬ್ಯುರೋದ ಬೆನ್ನು ತಟ್ಟಿದ್ದಾರೆ.

ನಾಡಿನಾದ್ಯಂತ ಪರೀಕ್ಷಾ ಫಲಿತಾಂಶದಲ್ಲಿ ದಾಖಲೆಯಾಗಿರುವುದಾಗಿ ಪ್ರಕಟವಾಗಿದ್ದು, ಇದು ಟೀಂ ಇಂಡಿಯಾ ಕೃಪೆಯಿಂದ. ಎಲ್ಲೆಡೆ ಅತ್ಯುತ್ತಮ ಫಲಿತಾಂಶ ಬರಲಿದೆ ಎಂದು ಬೊಗಳೆ ರಗಳೆ ಬ್ಯುರೋ ಕಳೆದ ತಿಂಗಳಲ್ಲೇ ಇಲ್ಲಿ ಭವಿಷ್ಯದ ವರದಿಯೊಂದನ್ನು ಪ್ರಕಟಿಸಿ ಕೈತೊಳೆದುಕೊಂಡಿತ್ತು. ಇದೀಗ ಆ ವರದಿ ನಿಜವಾಗಿರುವುದು ಶ್ಲಾಘನೀಯ ಎಂದು ಶಿಕ್ಷಣ ಆಯುಕ್ತರು ಹೇಳಿದ್ದಾರೆ.

ಈ ಉತ್ತಮ ಫಲಿತಾಂಶದ ಸಂಪೂರ್ಣ ಶ್ರೇಯಸ್ಸು ಭಾರತೀಯ ಕ್ರಿಕೆಟ್ ತಂಡಕ್ಕೆ ಸಲ್ಲಬೇಕು ಎಂದು ತಿಳಿಸಿರುವ ಅವರು, ಭವಿಷ್ಯದಲ್ಲೂ ಭಾರತ ತಂಡವು ಇದೇ ರೀತಿ ಪ್ರದರ್ಶನ ನೀಡಲಿ, ದೇಶದ ಭವಿಷ್ಯ ಉಜ್ವಲವಾಗಲಿ ಎಂದು ಆಶಿಸಿದ್ದಾರೆ.

ಆದರೆ ಫಲಿತಾಂಶದಲ್ಲಿ ಏರಿಕೆಯಾಗಲು ಹೊಸ ಪರೀಕ್ಷಾ ವಿಧಾನವೇ ಕಾರಣ ಎಂಬ ಹೇಳಿಕೆಯ ಹಿನ್ನೆಲೆ ಪ್ರಶ್ನಿಸಿದಾಗ, ಅದು ನಮ್ಮ ಪ್ರಯೋಗವನ್ನು ಸಮರ್ಥಿಸಿಕೊಳ್ಳಲು ಬೇಕಾಗಿರುವ ಒಂದು ವಾಕ್ಯವಷ್ಟೆ. ನಿಜವಾದ ಕಾರಣ ನೀವು ತಿಳಿಸಿರುವುದೇ ಆಗಿದೆ ಎಂದು ಸ್ಪಷ್ಟಪಡಿಸಿದರು.

ಬೊಗಳೆ ರಗಳೆಯಲ್ಲಿ ರಗಳೆಗೀಡಾದ ಮತ್ತೊಂದು ಅಂಶವೆಂದರೆ ಪರೀಕ್ಷಾ ಫಲಿತಾಂಶದಲ್ಲಿ ಯಾವತ್ತೂ ಬಾಲಕರುಗಳು ಬಾಲಕಿಯರುಗಳ ಹಿಂದೆ ಬೀಳುವುದು.

ಈ ಮೊದಲು, ಸರಕಾರವು ವಿದ್ಯಾರ್ಥಿನಿಯರಿಗೆ ಉಚಿತ ಸೈಕಲ್‌ಗಳನ್ನು ವಿತರಿಸಿ ಅವರನ್ನು ಮತ್ತಷ್ಟು ವೇಗವಾಗಿ ಮುಂದುವರಿಯುವಂತೆ ಮಾಡಿರುವುದರಿಂದಾಗಿಯೇ ಅವರು ಎಸ್ಸೆಸ್ಸೆಲ್ಸಿ, ಪಿಯುಸಿ ಫಲಿತಾಂಶ ಪ್ರಕಟವಾದಾಗ ಮೇಲುಗೈ ಸಾಧಿಸುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದ ಹುಡುಗ ವಿದ್ಯಾರ್ಥಿ ಸಮುದಾಯವು ಸರಕಾರಕ್ಕೆ ಮೊರೆ ಹೋಗಿತ್ತು. ನಮಗೆ ಈ ಹುಡುಗಿಯರನ್ನು ಹಿಂಬಾಲಿಸಲು ಸಾಧ್ಯವಾಗುತ್ತಿಲ್ಲ ಎಂದು ವಿದ್ಯಾರ್ಥಿಗಳು ಒಕ್ಕೊರಲ ಬೇಡಿಕೆಯೊಡ್ಡಿದ್ದರು. ಆಗ ಸರಕಾರವು ಹುಡುಗಿಯರನ್ನು ಹಿಂಬಾಲಿಸುವಂತಾಗಲು ಹುಡುಗರಿಗೂ ಸೈಕಲ್ ವಿತರಿಸಲು ನಿರ್ಧರಿಸಿತ್ತಾದರೂ ಈ ಯೋಜನೆ ವಿಫಲವಾಗಿದೆ ಎಂಬುದನ್ನು ಈಗ ಬೊಗಳೆ ರಗಳೆ ಬ್ಯುರೋದ ತನಿಖಾ ವರದಿಗಾರರು ಪತ್ತೆ ಹಚ್ಚಿ ಬಿಟ್ಟಿದ್ದಾರೆ.

ಈ ಕುರಿತು ಇಲ್ಲಿ ಪ್ರಕಟವಾಗಿದ್ದ ತಮ್ಮ ವರದಿಯು ಕೂಡ ದುರಾಲೋಚನೆಯಿಂದ ಕೂಡಿತ್ತು ಎಂದು ಬೊಗಳೆ ರಗಳೆ ಬ್ಯುರೋದ ಸಂಪಾದ-ಕರುಗಳು ಬೆನ್ನು ತಟ್ಟಿಕೊಂಡು ನೆನಪಿಸಿದ್ದು, ಇದು ನಮ್ಮ ಬ್ಯುರೋದ ವಸ್ತು-ಅನಿಷ್ಠ ವರದಿಗೆ ದೊರೆತ ಜಯ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

Tuesday, April 24, 2007

ಕ್ರಿಮಿನಲ್ ಸಂಖ್ಯೆ ಕುಸಿತ : 'ಕಂಸ'ದರ ಆತಂಕ

(ಬೊಗಳೂರು ವೇದನಾ ಬ್ಯುರೋದಿಂದ)
ಬೊಗಳೂರು, ಏ.24- ಗೌರವಾನ್ವಿತ ಸ್ಥಾನದಲ್ಲಿದ್ದುಕೊಂಡು ದೇಶವನ್ನು, ದೇಶದ ಬಡ ಜನತೆಯನ್ನು ಪ್ರತಿನಿಧಿಸುತ್ತಾ ಬಂದಿರುವ ತಮಗೆ ಕಡಿಮೆ Rank ದೊರಕಿಸಿಕೊಟ್ಟಿರುವುದರ ವಿರುದ್ಧ ತೀವ್ರವಾಗಿ ಕೆಂಡ ಕಾರಿರುವ "ಕಂಸ"ದರು, ಈ ಕುರಿತು ಸಮೀಕ್ಷೆ ನಡೆಸಿದ ಮಾಧ್ಯಮಗಳ ವಿರುದ್ಧ ಯದ್ವಾ ತದ್ವಾ ಕಿಡಿ ಕಾರಿದ್ದಾರೆ. ಮಾತ್ರವಲ್ಲದೆ ಕ್ರಿಮಿನಲ್‌ಗಳ ಸಂಖ್ಯೆಯನ್ನು ಅತ್ಯಂತ ಕಡಿಮೆ ಮಟ್ಟದಲ್ಲಿ ತೋರಿಸಿರುವುದರಿಂದ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

ಅರ್ಧ ಸಹಸ್ರಕ್ಕೂ ಹೆಚ್ಚು ಸದಸ್ಯರಿರುವ 14ನೇ ಲೋಕಸಭೆಯಲ್ಲಿ ಕೇವಲ 136 ಮಂದಿ ಮಾತ್ರ ಕ್ರಿಮಿನಲ್ ಹಿನ್ನೆಲೆಯುಳ್ಳವರು ಎಂದು ಬೊಗಳೆ ರಗಳೆಗೆ ತೀವ್ರ ಪೈಪೋಟಿಯೊಡ್ಡುತ್ತಿರುವ ಪತ್ರಿಕೆಯು ಇಲ್ಲಿ ವರದಿ ಮಾಡಿತ್ತು.

ಇದರಿಂದ ಕೋಪಾವಿಷ್ಟರಾಗಿರುವ ಸಂಸದರು, ತಮ್ಮ ಇದ್ದ ಮರ್ಯಾದೆ ತೆಗೆಯಲೆಂದೇ ಇಷ್ಟು ಕ್ಷುಲ್ಲಕ ಲೆಕ್ಕಾಚಾರದಲ್ಲಿ ನಮ್ಮನ್ನು ಅಳೆಯಲಾಗುತ್ತದೆ. ಸಂಸತ್ತಿನಲ್ಲಿ ಕೇವಲ 25 ಶೇಕಡಾ ಮಂದಿಗೆ ಮಾತ್ರ ಕ್ರಿಮಿನಲ್ ಎಂಬ ಕಿರೀಟ ಇದೆ ಎಂಬುದು ಶುದ್ಧ ಸುಳ್ಳು. ಕನಿಷ್ಠ ಪಕ್ಷ ಈ ಶೇಕಡಾವಾರು ಸಂಖ್ಯೆಯನ್ನು ದುಪ್ಪಟ್ಟು ಮಾಡಿ ಪ್ರಕಟಿಸಬಹುದಿತ್ತಲ್ಲಾ... ಈ ಕಿರೀಟ ಪಡೆದುಕೊಳ್ಳಲು ನಾವು ಮಾಡಿರುವ ಶ್ರಮ ಎಲ್ಲಾ ನಿರರ್ಥಕವಾಯಿತಲ್ಲಾ ಎಂದು ಗಳಗಳನೆ ಕೂಗಾಡಿದ್ದಾರೆ.

ಇಷ್ಟು ಸಣ್ಣ ಸಂಖ್ಯೆ ತೋರಿಸಿ ತಮ್ಮನ್ನು ಕೀಳಂದಾಜು ಮಾಡಿರುವ ಪತ್ರಕರ್ತರು ಮತ್ತು ಈ ವರದಿ ತಯಾರಿಸಿರುವ ಬ್ಯುರೋದ ಮಂದಿಗೆ ತಕ್ಕ ಶಾಸ್ತಿ ಮಾಡಿಯಾದರೂ, ತೋಳ್ಬಲದ ಮೂಲಕವೇ ಈ ಕ್ರಿಮಿನಲ್ ಸಂಸದರ ಸಂಖ್ಯಾಬಲವನ್ನು ಹೆಚ್ಚಿಸಲಾಗುತ್ತದೆ ಎಂದು ಹೆಸರು ಬಹಿರಂಗಪಡಿಸಲು ತೀವ್ರ ಇಚ್ಛೆ ವ್ಯಕ್ತಪಡಿಸಿರುವ ಸಂಸದರೊಬ್ಬರು ಹೇಳಿದ್ದಾರೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಆಡಳಿತಾಮೂಢ ಪಕ್ಷದ ಸದಸ್ಯರೊಬ್ಬರು, ಇದು ಬಹುಶಃ ವರದಿಗಾರರ ಕೈತಪ್ಪಿನಿಂದ ಪ್ರಕಟವಾಗಿರಬೇಕು. ವಾಸ್ತವವಾಗಿ ಅದು ಮಂತ್ರಿ ಮಂಡಲದಲ್ಲಿರುವ ಸಂಸದರ ಸಂಖ್ಯೆಯಾಗಿರಬಹುದೇನೋ ಎಂದು ಶಂಕೆಯಿಂದಲೇ ಕೇಳಿದ್ದಾರೆ.

ಒಂದು ನಿಮಿಷದೊಳಗೆ ಸ್ಪಷ್ಟನೆ ಪ್ರಕಟಿಸದಿದ್ದರೆ ಶೇ.25 ಎಂಬ ಸಂಖ್ಯೆಯನ್ನು ಶೇ.100 ಆಗಿಸುವಂತಾಗಲು ಎಲ್ಲ ರೀತಿಯ ಪ್ರಯತ್ನಗಳನ್ನೂ ಮಾಡಲಾಗುತ್ತದೆ ಎಂದೂ ವಿಶೇಷವಾಗಿ ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್‌ನ ಬಾಹು-ಬಲರು ಘೋಷಿಸಿದ್ದಾರೆ.

ನಾವು ಗಿನ್ನೆಸ್ ದಾಖಲೆ ಮಾಡಲು ಎಷ್ಟೆಲ್ಲಾ ಕಷ್ಟ ಪಡುತ್ತಿದ್ದೇವೆ. ಭಾರತಕ್ಕೆ ಭ್ರಷ್ಟಾಚಾರದಲ್ಲಿ ನಂ.1 ಎಂಬ ಹೆಗ್ಗಳಿಕೆ ದೊರಕಿಸಲು ಪ್ರಯತ್ನಿಸಿದ್ದೇವೆ. ಇದ್ದ ಬದ್ದ ಎಲ್ಲಾ ಮೂಲೆ ಮೂಲೆಯಲ್ಲೂ ಭ್ರಷ್ಟಾಚಾರ ಮಾಡಲು ಹವಣಿಸಿದ್ದೇವೆ. ಆದರೂ ಇಷ್ಟು ಕಡಿಮೆ ಸಂಖ್ಯೆಯ ಮೊತ್ತ ದೊರಕಿರುವುದು ಭಾರತವು ವಿಶ್ವ ಕಪ್ ಕ್ರಿಕೆಟ್ ಆಡಿದಂತಾಯಿತಲ್ಲಾ ಎಂದು ಅವರು ಹಲುಬಿದ್ದಾರೆ.

Saturday, April 21, 2007

ಜೀವನ ನಶ್ವರ : ಅವೇಕ್ ಒಬೀರಾಯ

(ಬೊಗಳೂರು ಆಧ್ಯಾತ್ಮಿಕ ಬ್ಯುರೋದಿಂದ)
ಬೊಗಳೂರು, ಏ.21- ಜೀವನವೇ ನಶ್ವರ ಎಂದು ಅವೇಕ್ ಓಬೀರಾಯ ತಿಳಿಸಿದ್ದಾರೆ.

ಈಗೀಗ ಆಜನ್ಮ ಬ್ರಹ್ಮಚಾರಿ ಆಂಜನೇಯ ಸ್ವಾಮಿಯ ಗುಡಿಯಲ್ಲಿ ಹೆಚ್ಚಾಗಿ ಕಂಡುಬರುತ್ತಿರುವ ಅವರನ್ನು ಮಾತನಾಡಿಸಿದಾಗ ಅವರು ತಮ್ಮ ಮನದಾಳವನ್ನು ಬಿಚ್ಚಿಟ್ಟರು.

ಇತ್ತೀಚೆಗೆ ಎಲ್ಲಾ ಪತ್ರಿಕೆಗಳು, ಸುದ್ದಿ ಚಾನೆಲ್‌ಗಳೂ ಸೇರಿ ಮುಂಬಯಿಯನ್ನೇ ತಮ್ಮ ಮುಖ್ಯಾಲಯವಾಗಿಸಿಕೊಂಡು, ಗಲ್ಲಿ ಗಲ್ಲಿಯಲ್ಲಿ, ಬೀದಿ ಬೀದಿಯಲ್ಲಿ, ಸಂದಿ ಗೊಂದಿಗಳಲ್ಲಿ ವರದಿಗಾರರನ್ನು ಇರಿಸಿ, ವಿಶ್ವದಲ್ಲೇ ಮೊಟ್ಟ ಮೊದಲಬಾರಿಗೆ ನಡೆಯುತ್ತಿರುವ ಐಸ್-ಛೋಟಾ ಬಚ್ಚಾ ವಿವಾಹಕ್ಕೆ ಸಂಬಂಧಿಸಿ ಕ್ಷಣ ಕ್ಷಣದ ರೋಚಕ ಕಥನಗಳನ್ನು ನೀಡುತ್ತಾ ಅದ್ಭುತ ಕವರೇಜ್ ನೀಡತೊಡಗಿರುವ ಹಿನ್ನೆಲೆಯಲ್ಲಿ ಐಸ್ ಮಾಜಿ ಗೆಳೆಯ ಅವೇಕ್... ಅವೇಕ್... ಓಬೀರಾಯರನ್ನು ಬೊಗಳೆ ರಗಳೆ ಬ್ಯುರೋ ಮಾತನಾಡಿಸಿತು.

ಪ್ರತಿಯೊಬ್ಬನೂ ಹುಟ್ಟಲೇ ಬೇಕು, ಹುಟ್ಟಿದವನು ಬೆಳೆಯಲೇ ಬೇಕು, ಬೆಳೆದು ದೊಡ್ಡವರಾದ ಬಳಿಕ ಮದುವೆಯಾಗಲೇಬೇಕು ಎಂದು ಯಾರಿಗೂ ಗೊತ್ತಿಲ್ಲದ ಸಂಗತಿಯನ್ನು ಹೇಳಿದ ಅವರು, ಹುಟ್ಟು ಬದುಕು ಮತ್ತು ಸಾವುಗಳ ನಡುವಣ ಜೀವನ ಯಾವತ್ತಿಗೂ ನಶ್ವರವಾಗಿರುತ್ತದೆ ಎಂದು ತಮ್ಮ ಅನುಭವಜನ್ಯ ಮಾತುಗಳಿಂದ ಗಮನ ಸೆಳೆದರು.

ಐಸ್ ಜತೆಗಿನ ತಮ್ಮ ಮದುವೆಯ ಯೋಜನೆಯನ್ನು ಮುರಿದು ಹಾಕಿದ ನ್ಯೂಸ್ ಚಾನೆಲ್‌ಗಳು, ಇದೀಗ ಅಭಿ ಜತೆಗೆ ಐಸ್ ವಿವಾಹವನ್ನು ಅದ್ದೂರಿಯಾಗಿ ಮಾಡಿಬಿಡುತ್ತಿವೆ. ಇದರೊಂದಿಗೆ ಜಗತ್ತಿಗೇ ಕ್ಷಣಕ್ಷಣದ ಕುತೂಹಲ ಕಥನವನ್ನು ಕಳೆದ ಕೆಲವು ದಿನಗಳಿಂದ ಧಾರಾವಾಹಿ ಮಾದರಿಯಲ್ಲಿ ಪ್ರಸಾರ ಮಾಡುತ್ತಿವೆ ಎಂದು ನುಡಿಯದ ಅವರು, ಆಧ್ಯಾತ್ಮವೊಂದೇ ಶಾಶ್ವತ. ಇಲ್ಲಿ ಸರಸ-ವಿರಸದ ಮಾತೇ ಇಲ್ಲ ಎಂದು ಖಚಿತ ಮಾತುಗಳಲ್ಲಿ ನುಡಿದರು.

"ಮದುವೆ ನಂಬರ್ 1" ಬಗ್ಗೆ ಏನಾದರೂ ಹೇಳಿ ಎಂದು ಬ್ಯುರೋ ಸಿಬ್ಬಂದಿಗಳಲ್ಲಿ ಕೆಲವರು ವಿರಹಿಗಳಂತೆ ಅತ್ತು ಗೋಗರೆದಾಗ ಅವೇಕ್, ಹುಟ್ಟಿದವನು ಮದುವೆಯಾಗಲೇಬೇಕು ಎಂದು ಮನೋಜ್ಞ ಉತ್ತರ ನೀಡಿದರು.

ನೀವು ಮಾಜಿ ಐಸ್ ಕ್ಯೂಬ್‌ಗಳ ಸಂಘಕ್ಕೆ ಅಧ್ಯಕ್ಷರಾಗುತ್ತೀರಾ ಎಂದು ಪ್ರಶ್ನಿಸಿದಾಗ, ಪ್ರತಿಸಲಮಾನ ಕಳೆದುಕೊಳ್ಳುತ್ತಿರುವವರು ಇದ್ದಾರೆ ಎಂದು ಸೂಚ್ಯವಾಗಿ ತಿಳಿಸಿದರು.

ಈ ಮಧ್ಯೆ, ಐಶ್-ಅಭಿ ಮದುವೆಗೆ ಸಲಮಾನಖಾನ ಮತ್ತು ಅವೇಕ್ ಅವರು ಯಾವ ರೀತಿಯ ಉಡುಗೊರೆಗಳನ್ನು ನೀಡಬೇಕು ಎಂಬ ಕುರಿತಾದ ಸಣ್ಣದೊಂದು ಮಾಹಿತಿಯನ್ನು ಕೇವಲ ಬೊಗಳೆ ರಗಳೆ ಬ್ಯುರೋ ತನ್ನದೇ ಓದುಗರಿಗೆ ಮಾತ್ರ ಒದಗಿಸುತ್ತಿದ್ದು, ಅದು ಇಲ್ಲಿದೆ.

(ಆಂಜನೇಯ ಗುಡಿಯಲ್ಲಿ ಅವೇಕ್ ಓಬೀರಾಯನ ಚಿತ್ರ ನಮ್ಮ ವಿಶೇಷ ಬ್ಯುರೋದಿಂದ ಅಂಚೆಯಲ್ಲಿ ಬರುವಾಗ ತಡವಾಗಿತ್ತು....)

Wednesday, April 18, 2007

ಗಂಡಸರಿಗೆ ಹೆರಿಗೆ ರಜೆ: ಹೆಂಗಸರಿಗೆ ಶಂಕೆ

(ಬೊಗಳೂರು ರಜೆ ಬ್ಯುರೋದಿಂದ)
ಬೊಗಳೂರು, ಏ.18- ದೇಶಾದ್ಯಂತ ಸರಕಾರಿ ಕಚೇರಿಗಳಲ್ಲಿ ಈಗಾಗಲೇ ಧೂಳು ತಿನ್ನುತ್ತಿರುವ ಫೈಲುಗಳ ಸಾಲಿಗೆ ಮತ್ತಷ್ಟು ಫೈಲುಗಳು ಸೇರ್ಪಡೆಯಾಗತೊಡಗಿದ್ದು, ಅವುಗಳನ್ನು ಇರಿಸುವುದೆಲ್ಲಿ ಎಂಬ ಬಗ್ಗೆ ಸರಕಾರಿ ಅಧಿಕಾರಿಗಳು ತೀವ್ರವಾಗಿ ತಲೆಕೆಡಿಸಿಕೊಳ್ಳಲಾರಂಭಿಸಿದ್ದಾರೆ. ಇದಕ್ಕೆ ಕಾರಣ ಗಂಡಸರಿಗೆ ಕೂಡ ಹೆರಿಗೆ ರಜೆ ದೊರೆತಿರುವುದೇ ಆಗಿದೆ.

ಈ ಅಸತ್ಯದ ಬೆನ್ನ ಹಿಂದೆ ಬಿದ್ದ ಬೊಗಳೆ ರಗಳೆ ಬ್ಯುರೋ, ಸರಕಾರವು ಇಬ್ಬರು ಮಕ್ಕಳಿದ್ದವರಿಗೆ ಮಾತ್ರವೇ ಈ ರಜೆ ನೀಡುವುದಾಗಿ ಪ್ರಕಟಿಸಿದ್ದರೂ ಕೂಡ ಸಾಕಷ್ಟು ಮಂದಿ ರಜೆಯಲ್ಲಿ ತೆರಳಲಾರಂಭಿಸಿದ್ದೇಕೆ ಎಂಬುದರ ಕುರಿತು some-ಶೋಧನೆ ನಡೆಸಿತು.

ಅದರ ಫಲವಾಗಿ ಈ ವರದಿ ಹೊರಬಿದ್ದಿದೆ. ಕೆಲಸದ ದಿನಗಳಲ್ಲೂ ರಜೆಯ ಮಜಾ ಅನುಭವಿಸುತ್ತಿದ್ದರೂ, ಪುಕ್ಕಟೆ ರಜೆ ಸಿಗುತ್ತದೆ ಎಂಬ ಕಾರಣಕ್ಕೆ, ಮಕ್ಕಳಿಲ್ಲದವರೆಲ್ಲರೂ ಮಕ್ಕಳು ಮಾಡಲು ಹೊರಟಿದ್ದಾರೆ ಮತ್ತು ಒಂದು ಮಗುವಿದ್ದವರು ಎರಡನೇ ಮಗುವಿಗೂ ತಯಾರಿ ನಡೆಸುತ್ತಿದ್ದಾರೆ ಎಂಬ (ಜನಸಂಖ್ಯಾ) ಸ್ಫೋಟಕ ವರದಿಯನ್ನು ಬೊಗಳೆ ರಗಳೆ ಬ್ಯುರೋ ಹೊರಗೆಡಹಿದೆ.

ಸರಕಾರವು ಇಬ್ಬರು ಮಕ್ಕಳಿಗೇ ತಮ್ಮನ್ನು ಸೀಮಿತಗೊಳಿಸಿದವರಿಗೆ ಮಾತ್ರ ರಜೆ ನೀಡಲು ನಿರ್ಧರಿಸಿದೆಯಾದರೂ, ಸರಕಾರಿ ನೌಕರರು ಮಾತ್ರ ಹಲವಾರು ಮಕ್ಕಳನ್ನು ಎರಡನೇ ಮಗುವಾಗಿ ಪರಿಗಣಿಸಿ ರಜೆ ತೆಗೆದುಕೊಳ್ಳಲು ಸಿದ್ಧತೆ ನಡೆಸುತ್ತಿರುವುದು ಹೊಸ ಬೆಳವಣಿಗೆ.

ಮತ್ತೊಂದು ಕಡೆಯಿಂದ, ಈ ತೀರ್ಮಾನದ ವಿರುದ್ಧ ಹೆಂಡಂದಿರು ಕೂಡ ದಂಗೆಯೇಳುವ ಲಕ್ಷಣಗಳು ಭರ್ಜರಿಯಾಗಿ ಗೋಚರಿಸತೊಡಗಿವೆ. ತಮ್ಮ ಗಂಡಂದಿರು ತಮಗೇ ತಿಳಿಯದಂತೆ ಹೆರಿಗೆ ರಜೆ ಪಡೆದು ಎಲ್ಲಿಗೋ ತೆರಳುತ್ತಿರುವುದನ್ನು ತಿಳಿದ ಅಖಿಲ ಭಾರತ ಹೆಂಡಂದಿರ ಸಂಘವು, ಸರಕಾರದ ನಿರ್ಧಾರದ ವಿರುದ್ಧ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಇದರ ಹಿಂದೆ ಏನೋ ನಡೆಯುತ್ತಿದ್ದು, ಗಂಡಂದಿರಿಗೆ ರಜೆ ನೀಡಲು ಅವರವರ ಹೆಂಡಂದಿರಿಂದ ಮಾನ್ಯತಾ ಪತ್ರ ಕಡ್ಡಾಯಗೊಳಿಸಬೇಕು ಎಂದು ಅವರು ಸರಕಾರವನ್ನು ಒತ್ತಾಯಿಸಿದ್ದಾರೆ.

ಒಂದು ಹೆರಿಗೆಗೆ 15 ದಿನ ರಜೆ ದೊರೆಯುವುದರಿಂದ ಕೆಲವು ಮಂದಿಯಂತೂ, ಪ್ರತಿ ಹದಿನೈದು ದಿನಕ್ಕೊಮ್ಮೆ ಅರ್ಜಿ ಗುಜರಾಯಿಸತೊಡಗಿದ್ದು, ಸರಕಾರಿ ಕಚೇರಿಯ ಕೆಲಸದ ಪರಿಸ್ಥಿತಿ ಅಲ್ಲೋಲ ಕಲ್ಲೋಲವಾಗಿವೆ ಎಂದು ತಿಳಿದುಬಂದಿದೆ. ಅವರ ಹೆಂಡಂದಿರಂತೂ ಗಂಡಂದಿರು ಎಲ್ಲಿಗೆ ಹೋಗುತ್ತಾರೆ ಎಂಬುದನ್ನು ತಿಳಿಯದೆ ಕಂಗಾಲಾಗತೊಡಗಿದ್ದಾರೆ.

ಇದೂ ಅಲ್ಲದೆ, ಸರಕಾರವು ತಮ್ಮ ಸ್ವಂತ ಮಕ್ಕಳ ಹೆರಿಗೆಗಾಗಿ ಮಾತ್ರ ರಜೆ ನೀಡಲಾಗುತ್ತದೆ ಎಂಬುದನ್ನೇನೂ ಕಡ್ಡಾಯಗೊಳಿಸಿಲ್ಲದಿರುವುದು ಕೂಡ ಹೆಂಡಂದಿರ ಆಕ್ರೋಶಕ್ಕೆ ಕಾರಣವಾಗಿದೆ. ಇದಕ್ಕಾಗಿ ತಮ್ಮದೇ ಗಂಡಂದಿರ ವಿರುದ್ಧ ಹದ್ದಿನ ಕಣ್ಣಿಡಲು ಅವರು ತೀರ್ಮಾನಿಸಿದ್ದಾರೆ ಮತ್ತು ರಜಾ ಅರ್ಜಿ ವಜಾ ಮಾಡಲು ಸರಕಾರದ ಮೇಲೆ ಒತ್ತಡ ಹೇರತೊಡಗಿದ್ದಾರೆ ಎಂದು ತಿಳಿದುಬಂದಿದ್ದು, ಈ ಕಾಯಿದೆಯನ್ನು ಸ್ತ್ರೀ ದೌರ್ಜನ್ಯ ಎಂದು ಪರಿಗಣಿಸಿ ಪ್ರತಿಭಟಿಸಲು ಮುಂದಾಗಿದ್ದಾರೆ.

ಮತ್ತೊಂದೆಡೆಯಿಂದ ಗಂಡಸರೂ ಕೂಡ ಪ್ರತಿಭಟನೆಗೆ ಇಳಿಯತೊಡಗಿದ್ದಾರೆ. ಇದಕ್ಕೆ ಕಾರಣ ಸ್ತ್ರೀ ಸಮಾನತೆಯ ಬಗ್ಗೆ ಇಷ್ಟೆಲ್ಲಾ ಚರ್ಚೆಯಾಗುತ್ತಿದ್ದರೂ, ಗಂಡಸರಿಗೆ 15 ದಿನ ಮಾತ್ರ ಘೋಷಿಸಲಾಗಿದೆ. ಆದರೆ ಹೆಂಗಸರಿಗೆ 90 ಇದ್ದ ರಜೆಯನ್ನು 135ಕ್ಕೆ ಏರಿಸಿ ಅನ್ಯಾಯ ಮಾಡಲಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲ್ಲೂ ಸಮಾನತೆ ಬೇಕು, ನಮಗೂ ಹೆಚ್ಚು ರಜೆ ಬೇಕು ಎಂದವರು ಒತ್ತಾಯಿಸಲು ಆರಂಭಿಸಿದ್ದಾರೆ.

Tuesday, April 17, 2007

ಅಮೆರಿಕದ ಸಾಲ ಮನ್ನಾ: ಭಾರತ ಯೋಜನೆ

(ಬೊಗಳೂರು ಲಾಸ್ ಮನ್ನಾ ಬ್ಯುರೋದಿಂದ)
ಬೊಗಳೂರು, ಏ.17- ಮೀಸಲಾತಿ ಎಂಬ ಧನಂ-ಜಯ ಜಪ ಆರಂಭಿಸಿರುವ ಭಾರತದ ಮಾವನ ಸಂಪನ್ಮೂಲ ಅಭಿವೃದ್ಧಿ ಸಚಿವ ದುರ್ಜನ್ ಸಿಂಗ್ ಅವರಿಂದಾಗಿ ಭಾರತದಲ್ಲಿ ಸಿಕ್ಕಾಪಟ್ಟೆ ಸಂಪನ್ಮೂಲ ಅಭಿವೃದ್ಧಿಯಾಗುತ್ತಿರುವುದರಿಂದ ಕ್ಯೂಬಾಕ್ಕೆ ನೀಡಿರುವ 62 ದಶಲಕ್ಷ ಡಾಲರ್ ಸಾಲವನ್ನು ಬಡ್ಡಿ ಸಹಿತ ಮನ್ನಾ ಮಾಡಿರುವುದಾಗಿ ಘೋಷಿಸಲಾಗಿದೆ.

ಕೇಂದ್ರ ಸರಕಾರದ ಈ ನಿರ್ಧಾರದಿಂದ ತೀವ್ರ ಸಂತಸಗೊಂಡಿರುವ ದೇಶದ ರೈತರು, ಒಂದಲ್ಲ ಒಂದು ದಿನ ತಮ್ಮ ಸಾಲವನ್ನೂ ಕೇಂದ್ರ ಸರಕಾರ ಮನ್ನಾ ಮಾಡುತ್ತದೆ ಎಂಬ ಆಶಾಭಾವನೆಯಿಂದ ಈ ಕ್ರಮವನ್ನು ಮನೆತುಂಬಿದ ಸಾಲದಿಂದ ಸ್ವಾಗತಿಸಿದ್ದಾರೆ.

ದೇಶದಲ್ಲಿನ ಪ್ರಜೆಗಳು ಹೇಗೂ ಹಣ ನೀಡುತ್ತಿದ್ದಾರೆ. ಈಗಾಗಲೇ ತಿನ್ನಬಹುದಾದಂತಹ ವಸ್ತುಗಳ ಬೆಲೆಯು ಕೈಗೆ ಸಿಗದಷ್ಟು ಮೇಲಕ್ಕೇರಿದೆ. ಯಾರ ಕೈಗೂ ಸಿಗದಂತೆ ಬೆಲೆಯನ್ನು ಉಡಾವಣೆ ಮಾಡಿರುವುದರಿಂದ ದೇಶದ ಆರ್ಥಿಕತೆ ಪ್ರಬಲವಾಗುತ್ತಿದೆ. ಸರಕಾರದ ಬೊಕ್ಕಸಕ್ಕೆ ಹೆಚ್ಚು ಹೆಚ್ಚು ಆದಾಯ ಬರುತ್ತಿದೆ. ಹೀಗಾಗಿ ಪುಟ್ಟ ರಾಷ್ಟ್ರ ಕ್ಯೂಬಾಕ್ಕೆ ಸಹಾಯ ಮಾಡುವುದು ನಮ್ಮ ಆದ್ಯ ಕರ್ತವ್ಯ ಎಂದಿರುವ ಕೇಂದ್ರ ಸರಕಾರ, ದೇಶಾದ್ಯಂತ ಅಗತ್ಯ ವಸ್ತುಗಳ ಬೆಲೆ ಏರಿದಲ್ಲಿ ನಾವು ಭವಿಷ್ಯದಲ್ಲಿ ಅಮೆರಿಕದ ಸಾಲವನ್ನೂ ಮನ್ನಾ ಮಾಡಲು ಶಕ್ತರಾಗಲಿದ್ದೇವೆ ಎಂದು ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

ಈ ಸಾಲು ಸಾಲು ಸಾಲ ಮನ್ನಾದಿಂದ ನಮಗೇನೂ ಲಾಸು ಆಗದು ಎಂದು ತಿಳಿಸಿರುವ ಅವರು, ನಾವು ಕ್ಯೂಬಾಕ್ಕೆ ಸಾಲ ಮನ್ನಾ ಮಾಡುವುದು ಕೇವಲ 62 ಲಕ್ಷ ಡಾಲರ್ ಮಾತ್ರ, ಆದರೆ ದೇಶದ ರೈತರ ಸಾಲ ಮನ್ನಾ ಮಾಡಬೇಕಿದ್ದರೆ ನೂರಾರು ಕೋಟಿ ರೂಪಾಯಿ ಬಿಚ್ಚಬೇಕಾಗುತ್ತದೆ. ಹಾಗಾಗಿ ಅತ್ಯಂತ ಕಡಿಮೆಯಲ್ಲಿ ಯಾವುದು ಮನ್ನಾ ಆಗುತ್ತದೋ ಅದರಿಂದಲೇ ನಾವು ಆರಂಭಿಸುತ್ತಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.

Saturday, April 14, 2007

ವರ್ಷದ ಮಗುವಿಗೆ ರಜತಸಹಸ್ರ ಒದೆತ!

(ಬೊಗಳೆ ರಗಳೆಯ ಮಗು ಬ್ಯುರೋದಿಂದ)
ಬೊಗಳೂರು, ಏ.14- ಒಂದು ವರ್ಷದ ಮಗುವಿನ 250ಕ್ಕೂ ಹೆಚ್ಚು ಬೊಗಳೆಗಳಿಗೆ 25 ಸಾವಿರಕ್ಕೂ ಹೆಚ್ಚು ಮಂದಿ ಮನಬಂದಂತೆ ಒದೆಯುತ್ತಿರುವ ಹಾಸ್ಯಕ್ಕೆ ಆಸ್ಪದವಾದ ಕಥಾನಕವು ವರದಿಯಾಗಿದೆ.

ಒಂದು ವರ್ಷದ ಹಿಂದೆ ಏಪ್ರಿಲ್ 4ರಂದು ಅಚಾನಕ್ ಆಗಿ ಜನ್ಮತಾಳಿದ ಈ ಮಗು ಮಾನವೀಯ ಜಗತ್ತಿನಲ್ಲಿ ಅಮಾನವೀಯತೆಯನ್ನು ಪ್ರೋತ್ಸಾಹಿಸುತ್ತಾ, ಪ್ರಾಣಿಗಳ ಜಗತ್ತಿನಲ್ಲಿ ಮಾನವೀಯತೆಯನ್ನು ವಿರೋಧಿಸುತ್ತಾ ಬೆಳೆದು ಬರುತ್ತಿತ್ತು.
ಕಂಪ್ಯೂಟರ್ ಎಂದರೇನೆಂದು ಗೊತ್ತಿಲ್ಲದೆಯೇ ಬೊಗಳೆ ಬಿಡಲಾರಂಭಿಸಿದ ಈ ಮಗುವಿನ ಜನ್ಮ ದಿನ ಏಪ್ರಿಲ್ 1 ಎಂದು ಬಹುತೇಕ ಮಾನವ ಸಮುದಾಯ ವಾದಿಸಿದ್ದರೂ, ಬೊಗಳೆ ರಗಳೆ ಬ್ಯುರೋದ ಮೊದಲ ವರದಿಯಲ್ಲೇ ಈ ದಿನಾಂಕ ದಾಖಲಾಗಿರುವುದರಿಂದ, ಏಪ್ರಿಲ್ 4 ಈ ಮಗುವಿನ ಜನ್ಮ ದಿನ ಎಂಬುದನ್ನು ಅಧಿಕೃತವಾಗಿ ಸಾಬೀತುಪಡಿಸಲಾಗುತ್ತಿದೆ ಎಂದು ಬ್ಯುರೋ ವರದಿ ಮಾಡಿದೆ.

ನಾಲ್ಕು ತಿಂಗಳ ಮಗುವಾಗಿದ್ದಾಗಲೇ 10 ಸಾವಿರ ಒದೆತ ತಿಂದಿದ್ದ ಈ ಮಗು ಬ್ಲಾಗುವಿಕೆಗಿಂತನ್ಯ ತಪವು ಇಲ್ಲ ಎನ್ನುತ್ತಾ ತಪಸ್ಸು ಮಾಡಲು ಕಾಡಿಗೆ ಹೊರಟಾಗ ಓದುಗರೆಲ್ಲಾ ರಚ್ಚೆ ಹಿಡಿದವರಂತೆ ಒದೆ ಕೊಡಲಾರಂಭಿಸಿದ್ದರು. ಹೀಗಾಗಿ ಇದೀಗ 250ಕ್ಕೂ ಹೆಚ್ಚು ಸ್ಫೋಟಕ ವರದಿಗಳನ್ನು ಪ್ರಕಟಿಸಿ, ವಿಶ್ವಾದ್ಯಂತದ ಕುತೂಹಲಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿ 26 ಸಾವಿರಕ್ಕೂ ಹೆಚ್ಚು ಒದೆತ ತಿಂದ ಕಾರಣದಿಂದಾಗಿಯೇ ಜೀವಂತವಾಗಿರುವುದು ತುಂಬಲಾರದ ನಷ್ಟದಷ್ಟೇ ನಂಬಲಾರದ ಕಷ್ಟ ಎಂಬುದನ್ನು ಪತ್ತೆ ಹಚ್ಚಲಾಗಿದೆ.

ಪ್ರತಿ ವರದಿಗೂ ಕಾಮೆಂಟ್ ಮೂಲಕ ಬರುತ್ತಿದ್ದ ಬೆದರಿಕೆಗಳು, ಮಾನ ಹರಾಜು ಪ್ರಕ್ರಿಯೆಗಳು, ಅವಮಾನ ನಷ್ಟ ಮೊಕದ್ದಮೆಗಳು, ಛೀ ಥೂ ಮಾತ್ರೆಗಳು... ಇವುಗಳೆಲ್ಲದರ ಹೊರತಾಗಿಯೂ ಈ ಮಗು ಎದ್ದು ಹೋಗಲು ಪ್ರಯತ್ನಿಸಿದರೂ, ಅದನ್ನು ಎದ್ದು ಹೋಗದಂತೆ ತಡೆಯುವ ಪ್ರಯತ್ನಗಳೂ ಸಾಕಷ್ಟು ನಡೆದಿದ್ದವು. ಏಳುವ ಯತ್ನದಲ್ಲಿ ಬಿದ್ದಾಗ ಕೆಲವರು ಎರಡೇಟು ಬಿಗಿದು ಮತ್ತೆ ಜುಟ್ಟಿನಲ್ಲಿ ಹಿಡಿದೆತ್ತಿ ಸರಿಯಾಗಿ ನಿಲ್ಲಿಸಿರುವುದರಿಂದ ಈ ಮಗುವಿನ ಪರಿಸ್ಥಿತಿ ನೋಡಿ ವಿಶ್ವಾದ್ಯಂತದ ಸಹೃದಯಿಗಳು ಗಹಗಹಿಸಿ ನಗಲಾರಂಭಿಸಿದ್ದಾರೆಂಬ ಆತಂಕಕಾರಿ ಅಂಶವೊಂದನ್ನು ಕೂಡ ಇದೇ ಸಂದರ್ಭ ಪತ್ತೆ ಹಚ್ಚಲಾಗಿದೆ.

20 ಕಿಲೋ ಒದೆತಗಳ ಸಂಕ್ರಾಂತಿ ಆಚರಿಸಿದ್ದ ಈ ಮಗು, ಈ ಮಗು ಆಗಾಗ್ಗೆ ಬಾಯಿಗೆ ಬಂದದ್ದನ್ನು ಉಗುಳುತ್ತಿದ್ದರೂ ಇದರಿಂದಾಗಿ ಪೆಚ್ಚಾಗಿದ್ದರೆ ಹೊಟ್ಟೆಗೆ ಹಾಕಿಕೊಂಡು ಅರಗಿಸಿಕೊಳ್ಳುವಂತೆಯೂ, ಪೆಚ್ಚಾದ ಪ್ರಸಂಗಗಳ ಬಗ್ಗೆ ವಿವರಿಸುವಂತೆ ಕೋರಲಾಗಿದೆ.

ವಿಷು ಕಣಿ ನೋಡುವ ಬದಲು ಕಣಿ ಕೇಳಿದ ಬಳಿಕವೇ ಏ.4ರ ಬೊಗಳೆ ಜನ್ಮದಿನದ ಬದಲಾಗಿ 10 ದಿನದ ಬಳಿಕ ಇದನ್ನು ಪ್ರಕಟಿಸಲಾಗಿದ್ದು, ಏಕಸದಸ್ಯ ಬ್ಯುರೋದ ಸಮಸ್ಯ ಸಿಬ್ಬಂದಿಗಳ ಪರವಾಗಿ ಓದುಗರಿಗೆ ಸೌರಮಾನ ಯುಗಾದಿ ಶುಭಾಶಯಗಳನ್ನು ಕೋರಲಾಗುತ್ತಿದೆ.

Thursday, April 12, 2007

Hug bugನಿಂದ ಪಾಪ!

(ಬೊಗಳೂರು ಪಾಪಿ ಬ್ಯುರೋದಿಂದ)
ಬೊಗಳೂರು, ಏ.12- ಅತಿ ದೊಡ್ಡ "ಪಾಪ"ವನ್ನು ರೂಪಿಸಿದ್ದಕ್ಕಾಗಿ ಪಾಪಿಸ್ತಾನ ಎಂದೇ ಹೆಸರುಪಡೆದಿರುವ ರಾಷ್ಟ್ರದ ಮಹಿಳಾ ಮಂತ್ರಿಯ ವಿರುದ್ಧ ಫತ್ವಾ ಹೊರಡಿಸಿದ ಸಂಗತಿಯ ಬೆನ್ನು ಬಿದ್ದಿರುವ ಅನ್ವೇಷಿ, ಇದರ ಹಿಂದೆ hug-bug ಇದೆ ಎಂಬುದನ್ನು ಪತ್ತೆ ಹಚ್ಚಿದೆ.

ಈ hug bug ತಗುಲಿದಲ್ಲಿ ಪಾಪ ಆಗುತ್ತದೆ ಎಂಬ ನಂಬಿಕೆಯೇ ಈ ರಾದ್ಧಾಂತಕ್ಕೆ ಕಾರಣ ಎಂಬುದನ್ನು ಪತ್ತೆ ಹಚ್ಚಲಾಗಿದ್ದು, ಈ ಕುರಿತು ಅಧ್ಯಕ್ಷ ಮೂಸಾ ರಫ್ ಅವರನ್ನು ಮಾತನಾಡಿಸಲಾಯಿತು.

ಬೊಗಳೆ ರಗಳೆ ಬ್ಯುರೋ ಎಂದ ತಕ್ಷಣವೇ ಬೆಚ್ಚಿ ಬಿದ್ದ ಅವರು ಸುಧಾರಿಸಿಕೊಂಡು, ದಯವಿಟ್ಟು ನನಗೇನೂ ಮಾಡಬೇಡಿ, ಖಂಡಿತವಾಗಿಯೂ ನಿಮಗೆ ಸಂದರ್ಶನ ಕೊಡುತ್ತೇನೆ ಎಂದು ಒಪ್ಪಿಕೊಂಡುಬಿಟ್ಟರು.

ಆದರೆ ಅವರು ಬೆಚ್ಚಿ ಬಿದ್ದುದರ ಹಿಂದಿನ ಸಂಗತಿ ಆ ಮೇಲೆ ಪತ್ತೆಯಾಗಿದೆ. ಬೊಗಳೆ ರಗಳೆ ಬ್ಯುರೋ ನಮ್ಮ ಬೆನ್ನ ಹಿಂದೆ ಬಿದ್ದಿದೆ ಎಂದಾದರೆ ಮಿಲಿಟರಿಯಲ್ಲಿ ಏನೋ ಪಾಪದ Coupಅ ನಡೆಯುತ್ತಿರಬಹುದು ಎಂಬ ಶಂಕೆಯೇ ಇದಕ್ಕೆ ಕಾರಣ ಎಂದು ತಿಳಿದುಕೊಳ್ಳಲಾಗಿದೆ.

ಒಟ್ಟಿನಲ್ಲಿ ಸಂದರ್ಶನ ನೀಡಲು ಒಪ್ಪಿದ ರಫ್ ಅವರು, ಅಟಲ್ ಬಿಹಾರಿ ವಾಜಪೇಯಿ ಮತ್ತು ಶರೀಫ್ ಅವರು ಪರಸ್ಪರ ಅಪ್ಪಿಕೊಂಡ ಪರಿಣಾಮವಾಗಿ ಕಾರ್ಗಿಲ್ ಯುದ್ಧವೇ ನಡೆಯಿತು. ಇನ್ನು ನಮ್ಮ ಮಂತ್ರಿಗಳೂ ಅಪ್ಪಿಕೊಳ್ಳಲು ಶುರು ಹಚ್ಚಿಕೊಂಡರೆ ಎಲ್ಲಿ ಯಾವಾಗ ಏನು ಆಗುತ್ತದೆ ಎಂಬುದು ನನಗೇ ತಿಳಿಯುವುದು ಕಷ್ಟಕರವಾಗುತ್ತದೆ ಎಂದು ಅಧಿಕಾರಭ್ರಷ್ಟರಾಗುವ ಕುರಿತು ತೀವ್ರ ಕಳಕಳಿ ವ್ಯಕ್ತಪಡಿಸಿದರು.

ಆದರೆ ಅಧಿಕಾರಭ್ರಷ್ಟನಾದರೂ ಪರವಾಗಿಲ್ಲ ಭ್ರಷ್ಟ ಅಧಿಕಾರಿಯಾಗಿ ಮುಂದುವರಿಯಲು ಯಾರೂ ಬಿಡದಿದ್ದರೆ ನಮ್ಮ ಪಾಪಿಸ್ತಾನದ ಗತಿ ಏನು? ಅದರ ಪ್ರ"ಗತಿ"ಯಾಗುವುದಾದರೂ ಹೇಗೆ ಎಂದೂ ಅವರು ದುಃಖಾತಿರೇಕದಿಂದ ಪ್ರಶ್ನಿಸಿದರು.

ಈ ಕಾರಣಕ್ಕೆ ಇನ್ನು ಯಾರೂ ಇಲ್ಲಿ ಅಪ್ಪಿಕೋ ಚಳವಳಿ ಮಾಡಬಾರದು. ಇದು ದೊಡ್ಡ ಪಾಪಕ್ಕೆ ಕಾರಣವಾಗುತ್ತದೆ ಎಂದು ಸುಗ್ರೀವಾಜ್ಞೆ ಹೊರಡಿಸಲು ನಿರ್ಧರಿಸಿವುದಾಗಿ ಅವರು ಬೊಗಳೆ ರಗಳೆಗೆ ಮಾತ್ರವೇ ಹೇಳಿದ್ದಾರೆ.

Tuesday, April 10, 2007

ಮುಖ್ಯಮಂತ್ರಿ ವಿರುದ್ಧ ಬಾಲಕಾರ್ಮಿಕ ನಿಷೇಧ ಕಾಯ್ದೆ !

(ಬೊಗಳೂರು ಮಕ್ಕಳಾಟ ಬ್ಯುರೋದಿಂದ)
ಬೊಗಳೂರು, ಏ.10- ಮುಖ್ಯಮಂತ್ರಿ "ಕುಮಾರ"ಸ್ವಾಮಿ ಅವರನ್ನು ಮಕ್ಕಳ ಸಾಲಿಗೆ ಸೇರಿಸಿರುವ ತಮಿಳುನಾಡಿನ ಹಿರಿಯ ಕರುಣಾಜನಕನಿಧಿ ಅವರ ಕ್ರಮ ಸಮರ್ಥನೀಯ ಎಂದು ಹೇಳಿರುವ ವಿರೋಧ ಪಕ್ಷಗಳು, ಮಕ್ಕಳಾಟ ಆಡಬೇಕಿದ್ದವರು ಬಾಲಕಾರ್ಮಿಕರಂತೆ ದುಡಿಯುತ್ತಿದ್ದಾರೆ ಎಂದು ಆರೋಪಿಸಿವೆ.

ಈ ಕಾರಣಕ್ಕೆ, ಮಣ್ಣಿನ ಮಗನ "ಕುಮಾರ"ನ ಮೇಲೆ ಬಾಲಕಾರ್ಮಿಕತನ ನಿಷೇಧ ಕಾಯ್ದೆಯ ಅನುಸಾರ ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದ್ದಾರೆ.

ಇಷ್ಟು ಸಣ್ಣ ವಯಸ್ಸಿಗೇ ಅವರು ಚಾಣಕ್ಯ ತಂತ್ರ ರೂಪಿಸಿ ವಿರೋಧ ಪಕ್ಷ ಬಿಜೆಪಿಯೊಂದಿಗೆ ಜತೆ ಸೇರಿ ಅಧಿಕಾರಕ್ಕೇರಿದ್ದಾರೆ. ಸಣ್ಣ ಪ್ರಾಯದಲ್ಲೇ ಇಂಥಹ ಮಕ್ಕಳಾಟಿಕೆ ಪ್ರದರ್ಶಿಸಿದರೆ, ಇನ್ನು ತಮ್ಮ ಪ್ರಾಯಕ್ಕೆ ಬಂದಾಗ ಅವರು ಏನೆಲ್ಲಾ ಮಾಡಬಹುದು ಎಂದು ಮೂಗಿನ ಮೇಲೆ ಎರಡೂ ಬೆರಳಿಟ್ಟಿರುವ ವಿರೋಧಿಗಳು, ಬೆಳೆಯ ಸಿರಿಯನ್ನು ಮೊಳಕೆಯಲ್ಲೇ ಚಿವುಟದಿದ್ದರೆ, ವೃದ್ಧರಿಗೆ ರಾಜಕಾರಣ ಮಾಡುವ ಅವಶ್ಯಕತೆಯೇ ಎದುರಾಗದಿರುವ ಭೀತಿ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆದರೆ, ತಾವರೆಯನ್ನು ಮಹಿಳೆಯ ತಲೆ ಮೇಲಿರುವ ಬೈಹುಲ್ಲಿನ ಮೇಲಿಟ್ಟು ಬೆಳೆಸುತ್ತಿರುವ "ಕುಮಾರ", ತಮ್ಮ ಅಧಿಕಾರಾವಧಿ ಕೊನೆಗೊಳ್ಳುತ್ತಿರುವ ಹಂತ ತಲುಪಿರುವ ಅವಧಿಯಲ್ಲೇ ಇಂಥ "ತ್ಯಾಗ"ಕ್ಕೆ ಸಿದ್ಧರಾಗಿರುವುದರಿಂದ ಕುಮಾರಲೀಲೆಯ ಮತ್ತೊಂದು ಅಧ್ಯಾಯ ತೆರೆದುಕೊಳ್ಳಲಿದೆ ಎಂದು ಬೊಗಳೆ ರಗಳೆ ಬ್ಯುರೋದಲ್ಲಿ ವಿಶ್ಲೇಷಿಸಲಾಗುತ್ತಿದೆ.

ಕಿಡಿ ಸ್ಪಷ್ಟನೆ: 1968ರಿಂದ ಇದುವರೆಗೆ ಕಾವೇರಿಯನ್ನು ಒಪ್ಪಿಸಬೇಕೆಂದು 10 ಮಂದಿ ಕರ್ನಾಟಕ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿದ್ದರೂ, ಇದುವರೆಗೆ ಯಾರು ಕೂಡ ಈ ರೀತಿ ಮಕ್ಕಳಂತೆ ಆಟವಾಡುತ್ತಿರಲಿಲ್ಲ. ತಾನು ಇನ್ನೂ ಹತ್ತು ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸುತ್ತೇನೆ ಎಂದು ಆಶಾವಾದ ವ್ಯಕ್ತಪಡಿಸಿರುವ 90ರ ಹರೆಯದ ಕಿಡಿ, ತನ್ನ ವಯಸ್ಸಿಗಾದರೂ ಆತ ಬೆಲೆ ಕೊಡಬೇಡವೇ? ಇದಕ್ಕಾಗಿಯೇ ತಾನು ಆತನನ್ನು ಮಕ್ಕಳಾಟಿಕೆ ಮಾಡುತ್ತಿದ್ದಾರೆ ಎಂದಿದ್ದೆ ಎಂದು ಸ್ಪಷ್ಟಪಡಿಸಿದ್ದಾರೆ.

Saturday, April 07, 2007

ಸದನದಲ್ಲಿ ಗದ್ದಲ, ಹೊರಗಿನಿಂದಲೇ ಸಭಾತ್ಯಾಗ!

(ಬೊಗಳೂರು Honey honey ಬ್ಯುರೋದಿಂದ)
ಬೊಗಳೂರು, ಏ.7- ಯಾವತ್ತೂ ಕೂಗಾಡುತ್ತಾ ಚೀರಾಡುತ್ತಾ ಸಿಕ್ಕಿದ್ದನ್ನು ಎಸೆಯುತ್ತಾ ಸದನದೊಳಗೆ ಗದ್ದಲ ಮಾಡಿ, ಅದರಿಂದಲೂ ತಮ್ಮನ್ನು ಸಭಾಧ್ಯಕ್ಷರು ಹೊರ ಹಾಕದಿದ್ದಾಗ ಸಭಾತ್ಯಾಗ ಮಾಡುವವರು ಸದನದ ಹೊರಗೆ ಬಂದೂ ಸಭಾತ್ಯಾಗ ಮಾಡಿದ ಘಟನೆ ಇಲ್ಲಿ ವರದಿಯಾಗಿದೆ.

ಸಚಿವರು, ಶಾಸಕರು ಸದನದೊಳಗೆ ಯಾವತ್ತೂ ನಡೆಯುವ ಗದ್ದಲಕ್ಕೆ ಒಗ್ಗಿ ಹೋಗಿದ್ದರಿಂದಾಗಿ ಗುಂಯ್ ಎಂಬ ಸದ್ದಿಗೆ ಅವರ ಕಿವಿಯು immune ಆಗಿತ್ತು. ಹೀಗಾದ್ದರಿಂದ ನಮ್ಮ ಬರುವಿಕೆಯು ಅವರ ಕಿವಿಗೆ ಬಿದ್ದಿರಲಿಲ್ಲ ಎಂದು dearest honey ನೊಣಗಳು ಅಸತ್ಯಾನ್ವೇಷಿ ಕಿವಿಯಲ್ಲಿ ಊದಿವೆ.

ಆದರೆ ಸದನದಿಂದ ಸಭಾತ್ಯಾಗ ಮಾಡಿದವರೆಲ್ಲರೂ ಹೊರಬಂದು, ಜೇನ್ನೊಣ ಕಾಟದಿಂದ ತಪ್ಪಿಸಿಕೊಳ್ಳಲು ಹೊರಗೆ ನಡೆಯುತ್ತಿದ್ದ ಸಭೆಯನ್ನು "ತ್ಯಾಗ" ಮಾಡಿ ಹೋಗಿದ್ದು ಸದನದೊಳಗೆಯೇ ಎಂದು ಪತ್ತೆ ಹಚ್ಚಲಾಗಿದೆ.

ಈ ನಡುವೆ, ತಮ್ಮನ್ನು ಭಯೋತ್ಪಾದಕರು ಎಂದು ಬಿಂಬಿಸುವ ಪತ್ರಿಕೆಗಳ ವಿರುದ್ಧವೂ ಅವುಗಳು ಗುಂಯ್‌ಗುಡುತ್ತಿರುವುದರಿಂದ ಶೀಘ್ರವೇ ಅವೆಲ್ಲವೂ ಇತ್ತಕಡೆ ಲಗ್ಗೆ ಹಾಕಲಿವೆ ಎಂಬುದನ್ನು ಮನಗಂಡಿರುವ ಪುತ್ರಕರ್ತರು, ರಾಣಿಯನ್ನು ಮಾತ್ರ ಗೂಡಿನೊಳಗಿರಿಸಲು ಸಂಚು ಹೂಡುತ್ತಿರುವುದನ್ನು ನಮ್ಮ ಬ್ಯುರೋ ಬಯಲಿಗೆಳೆದಿದೆ.

ವಿಧಾನಸಭೆಯ ಹೊರಗೆ ನಡೆದ ಈ ಘಟನೆಯಲ್ಲಿ ಮಹಿಳೆಯರು ಜೇನುನೊಣಗಳಿಂದ ರಕ್ಷಿಸಿಕೊಳ್ಳಲು ಸೆರಗು ಮುಚ್ಚಿಕೊಂಡರು, ಆದರೆ ಪುರುಷರು ಕಾಲಿಗೆ ಬುದ್ಧಿ ಹೇಳಿದರು ಎಂದು ವರದಿಯಾಗಿದೆ. ಈ ವರದಿಯ ಬಗ್ಗೆ ಶಂಕೆ ವ್ಯಕ್ತಪಡಿಸಿರುವ ಬೊಗಳೆ ಬ್ಯುರೋ, ಪುರುಷರು ಕಾಲಿಗೆ ಬುದ್ಧಿ ಹೇಳುವುದರ ಬದಲು, ಕೈ ಮತ್ತು ಬಾಯಿಗೆ ಬುದ್ಧಿ ಹೇಳಿದ್ದರೆ "ಹೆಜ್ಜೇನು ಸವಿದಂತೆ ಸರ್ವಜ್ಞ" ಎಂಬುದನ್ನು ಅನುಭವಿಸಬಹುದಿತ್ತಲ್ಲವೇ ಎಂದು ಪ್ರಶ್ನಿಸಿದೆ.

Friday, April 06, 2007

ಪೂರ್ಣಚಂದ್ರಾಸ್ತ :(

ಎಂದೂ ಯಾವುದೇ ಪ್ರಶಸ್ತಿ ಪ್ರದಾನ ಸಮಾರಂಭಗಳಿಗೂ ಹಾಜರಾಗದೆ "ಆನೆ ನಡೆದಿದ್ದೇ ದಾರಿ" ಎಂಬಂತೆ ಕನ್ನಡ ಸಾಹಿತ್ಯ ಲೋಕವನ್ನು ತಮ್ಮದೇ ಆದ ವಿಶಿಷ್ಟ ಛಾಪಿನಿಂದ ಬೆಳಗಿಸಿದ್ದ, ಜ್ಞಾನ ಪೀಠಕ್ಕೆ ನಿಜವಾಗಿಯೂ ಅರ್ಹತೆಯುಳ್ಳ, ನಿಸರ್ಗ ಪ್ರಿಯ, ಅಭಿಮಾನಿಗಳ ಪ್ರೀತಿಯ ಪೂಚಂತೇ- ಪೂರ್ಣಚಂದ್ರ ತೇಜಸ್ವಿ ಅವರಿಗೆ ಭಾವಪೂರ್ಣ ನಮನ.

Thursday, April 05, 2007

ಶಾಸಕರಿಗೆ ಬಟ್ಟೆ ತೊಡಿಸಲು ಚಿತ್ರ ತಾರೆಯರು

(ಬೊಗಳೂರು ನಿರ್ವಸ್ತ್ರೋದ್ಯಮ ಬ್ಯುರೋದಿಂದ)
ಬೊಗಳೂರು, ಏ.5- ಚಿತ್ರ ತಾರೆಯರು ಅಸ್ಸಾಂಗೆ ದಂಡೆತ್ತಿ ಹೋಗಿರುವುದರ ಹಿಂದಿನ ರಹಸ್ಯ ಬಯಲಾಗಿದ್ದು, ಕಾನೂನು ನಿರ್ಮಾತೃಗಳಿಗೆ ಬಟ್ಟೆ ತೊಡಿಸಲು ಅವರು ತೆರಳಿದ್ದರೆಂಬ ರಹಸ್ಯ ಅಂಶವನ್ನು ಬೊಗಳೆ ರಗಳೆ ಬ್ಯುರೋ ಪತ್ತೆ ಹಚ್ಚಿದೆ.

ಸದನದಲ್ಲಿ ಯಾವ ರೀತಿ ಬಟ್ಟೆ ತೊಡಬೇಕು ಅಥವಾ ಬಿಚ್ಚಬೇಕು ಎಂಬುದರ ಬಗ್ಗೆ ಈ ಕಾನೂನು ರೂಪಕರು ಇಷ್ಟೊಂದು ತಲೆ ಕೆಡಿಸಿಕೊಳ್ಳುತ್ತಾರೇಕೆ? ಎಂದು ಮೂಗಿನ ಮೇಲೆ ಎರಡೂ ಬೆರಳಿಟ್ಟು ಒತ್ತಿಕೊಂಡಿರುವ ಸಿನಿ ತಾರೆಯರು, ಇವರು ಬಹುಶಃ ನಮ್ಮ ನಟನೆಯ ಚಿತ್ರಗಳನ್ನೇ ನೋಡಿರಲಿಕ್ಕಿಲ್ಲ ಎಂದು ತಲೆ ಚಚ್ಚಿಕೊಂಡಿದ್ದಾರೆ.

ಬಟ್ಟೆ ತೊಟ್ಟರೂ ಹೇಗೆ ತೊಡದಂತಿರಬೇಕು ಮತ್ತು ತೊಡದೆಯೂ ಬಟ್ಟೆ ತೊಟ್ಟಂತೆ ಕಾಣಿಸುವುದು ಹೇಗೆ ಎಂಬುದರ ಕುರಿತು ಈ ಕಾನೂನು ರೂಪಕರಿಗೆ ಹೇಳಿಕೊಡುವುದಾಗಿ ತಿಳಿಸಿರುವ ವಸ್ತ್ರಶೂನ್ಯ ತಾರೆಯರು, ಇದಕ್ಕಾಗಿ ಅಸ್ಸಾಂನಲ್ಲಿ "ಬಟ್ಟೆ ಕ್ರ್ಯಾಶ್" ಕೋರ್ಸ್ ನಡೆಸಲು ಸನ್ನದ್ಧರಾಗಿದ್ದಾರೆ ಎಂಬುದನ್ನು ಪತ್ತೆ ಹಚ್ಚಲಾಗಿದೆ.

ಆದರೆ ಸದನಕ್ಕೆ ಬರುವಾಗ ಮೈಕು, ಕುರ್ಚಿಗಳೆಲ್ಲಾ ಗಾಳಿಯಲ್ಲಿ ಹಾರಾಡುವುದರಿಂದ ದೇಹದ ಅಮೂಲ್ಯ ಭಾಗಗಳ ರಕ್ಷಣೆ ಬಗ್ಗೆ ಈ ವಸ್ತ್ರಶೂನ್ಯ ತಾರೆಯರಿಗೆ ಯಾವುದೇ ಅರಿವು ಇಲ್ಲ, ಅವರು ಕುಣಿಯುವಾಗ ತೊಟ್ಟ ಬಟ್ಟೆಯೆಲ್ಲವೂ ಗಾಳಿಯಲ್ಲಿ ಹಾರಾಡುತ್ತದೆಯೇ ಹೊರತು, ಮೈಕು-ಕುರ್ಚಿಗಳು ಹಾರಾಡಿದ ಅನುಭವ ಅವರಿಗಿಲ್ಲ ಎಂದು ಅಸ್ಸಾಂ ಸದನದ ಬಾಹು-ಬಲರು ತೋಳೆತ್ತಿ ಘರ್ಜಿಸಿದ್ದಾರೆ.

ಈ ತಾರೆಯರು ಬಂದರೆ ಬರಲಿ, ಆದರೆ ನಮಗೆ ಬಟ್ಟೆ ತೊಡುವ ಬಗ್ಗೆ ಪಾಠ ಕಲಿಸಬೇಕಾಗಿಲ್ಲ ಎಂದಿರುವ ಅವರು, ಅವರು ಕಲಿಸಿದ ಪಾಠ ಕಲಿತು ಸದನದಿಂದ ಹೊರಗೆ ಬಂದು ತಲೆಯೆತ್ತಿ ನಡೆಯಲಾದೀತೇ? ನಾವು ಮುಜುಗರವಿಲ್ಲದೆ ನಡೆದರೂ ನೋಡುಗರು ಗರ ಬಡಿದವರಂತೆ ಇರಲಾರರೇ ಎಂದು ಪ್ರಶ್ನಿಸಿದ್ದಾರೆ.

Wednesday, April 04, 2007

ನಳ್ಳಿ ತಿರುಗಿಸಿದರೆ ಗಾಳಿ: ತ.ನಾ. ಹೊಸ ಪ್ರಯೋಗ

(ಬೊಗಳೂರು ನೀರು ಕುಡಿಸುವ ಬ್ಯುರೋದಿಂದ)
ಬೊಗಳೂರು, ಏ.4- ಗೋಡೆಗೆ ತಗುಲಿಕೊಂಡಿರುವ ನಳ್ಳಿ ತಿರುಗಿಸಿದರೆ ಭುರ್ರನೇ ಗಾಳಿ ಬರುವುದು ಕರ್ನಾಟಕದ ವಿವಿಧ ಹಳ್ಳಿಗಳು ಮಾತ್ರವಲ್ಲದೆ ನಗರ ಪ್ರದೇಶಗಳಲ್ಲೂ ಸರ್ವೇ ಸಾಮಾನ್ಯ. ಅಂಥದ್ದು ಈಗ ತಮಿಳುನಾಡಿನಲ್ಲೂ ಬರಲಿದೆ ಎಂಬುದನ್ನೇ ದೊಡ್ಡ ಸುದ್ದಿ ಮಾಡಿ ಇಲ್ಲಿ ಪ್ರಕಟಿಸಿರುವುದು ಹಲವಾರು ಶಂಕೆಗಳಿಗೆ ಎಡೆ ಮಾಡಿಕೊಟ್ಟಿದೆ.

ಕರ್ನಾಟಕದಿಂದ ಕಾವೇರಿ ನೀರು ಕಸಿದುಕೊಂಡರೂ ತಮಿಳುನಾಡಿನಲ್ಲಿ ನಳ್ಳಿ ನೀರು ಪೂರೈಕೆ ವ್ಯವಸ್ಥೆ ಅತ್ಯಂತ ಕಡಿಮೆ. ವಿಶೇಷವಾಗಿ ಚೆನ್ನೈನಲ್ಲಿ ಪ್ರತಿಮನೆಗೂ ಬೋರ್‌ವೆಲ್ ಮಾದರಿಯ ಕೈಪಂಪ್‌ನಿಂದಲೇ ಮೆಟ್ರೋ ನೀರು ಮೇಲೆತ್ತಲಾಗುತ್ತಿದೆ. ಹಾಗಿರುವಾಗ, ಜೀವಮಾನದಲ್ಲೇ ಮೊದಲ ಬಾರಿಗೆ ನಳ್ಳಿ ಮೂಲಕ ಪೂರೈಕೆ ವ್ಯವಸ್ಥೆ ಇಲ್ಲಿ ಕೇಳಿಬರುತ್ತಿರುವುದರಿಂದ ನಳ್ಳಿಯಲ್ಲಿ ಗಾಳಿ ಬರುವುದೇ ಅವರಿಗೆ ದೊಡ್ಡ ಸುದ್ದಿಯಾಗಿಬಿಡುತ್ತಿದೆ ಎಂಬುದನ್ನು ಬೊಗಳೆ ರಗಳೆ ಬ್ಯುರೋ ಕಂಡುಕೊಂಡಿದೆ.

ಕರ್ನಾಟಕದಿಂದ ಕಾವೇರಿ ನೀರನ್ನು ಕಸಿದುಕೊಂಡರೂ ಪೈಪಿನಲ್ಲಿ ಗಾಳಿಯನ್ನೇ ಒದಗಿಸುತ್ತಿರುವ ತಮಿಳುನಾಡು ಸರಕಾರದ ಕ್ರಮದ ಬಗ್ಗೆ ತೀವ್ರ ಆಕ್ಷೇಪಗಳು ಕೇಳಿಬರುತ್ತಿದೆ. ಇದು ನಳ್ಳಿಯಲ್ಲಿ ಗಾಳಿ ಬಿಟ್ಟು ಮತ ಸೆಳೆಯುವ ತಂತ್ರ ಎಂದು ಮಾಜಿ ಅಮುಖ್ಯರಾದ ಗಜಲಲಿತಾ ಆರೋಪಿಸಿದ್ದಾರೆ.

ಈ ಸರಕಾರ ಹೀಗೆಯೇ ಮುಂದುವರಿಯಲು ಬಿಟ್ಟರೆ ಇಲ್ಲಿ ಹಳಿಯಿಲ್ಲದ ರೈಲುಗಳನ್ನೂ ಕಾಣುವ ದಿನಗಳು ದೂರವಿಲ್ಲ ಎಂದು ಅವರು ಹೇಳಿದ್ದಾರೆ.

ದೇಶದಲ್ಲೇ ಪ್ರಥಮ ಬಾರಿ ನಳ್ಳಿಯಲ್ಲಿ ಗಾಳಿ ಪೂರೈಸುತ್ತೇವೆ ಎಂದು ಬೊಗಳೆ ಬಿಡುತ್ತಿರುವುದರ ವಿರುದ್ಧ ಸಿಡಿದೆದ್ದಿರುವ ಕರ್ನಾಟಕ ಸರಕಾರವು, ತಮ್ಮಲ್ಲಿ ಕಳೆದ 50ಕ್ಕೂ ಹೆಚ್ಚು ವರ್ಷಗಳಿಂದ ಇದು ಚಾಲ್ತಿಯಲ್ಲಿದೆ. ಹಾಗಾಗಿ ಮೊತ್ತ ಮೊದಲ ಬಾರಿಗೆ ಎಂಬ ನಾಮವಿಶೇಷಣವು ಕರ್ನಾಟಕ ಸರಕಾರಕ್ಕೇ ಸೇರಬೇಕು ಎಂದು ಅಧಿಕಾರಾರೂಢರು ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ದೂರು ಸಲ್ಲಿಸಲು ಹೊರಟಿಲ್ಲ ಎಂಬುದನ್ನು ಪತ್ತೆ ಹಚ್ಚಲಾಗಿದೆ.

Monday, April 02, 2007

ಟೀಂ ಇಂಡಿಯಾ ಕೆಬಿಸಿ ಕ್ವಿಜ್ !

11ನೇ ವಿಶ್ವಕಪ್ ಕ್ರಿಕೆಟ್ ಕೂಟವು ವೆಸ್ಟ್ ಇಂಡೀಸಿನಲ್ಲಿ ಇನ್ನೂ ಮುಂದುವರಿಯುತ್ತಿದ್ದರೂ, ಟೀಂ ಇಂಡಿಯಾವು ಇದನ್ನು ವೇಸ್ಟ್ ಇಂಡೀಸ್‌ ಎಂದು ತಿಳಿದುಕೊಂಡು ಆಡಿದ ಪರಿಣಾಮವಾಗಿ, ಇಡೀ ಭಾರತದಲ್ಲಿ ವಿಶ್ವ ಕಪ್ ಕ್ರಿಕೆಟ್ ಮುಕ್ತಾಯವಾಗಿದೆ. Aftershocks ಆಗಾಗ್ಗೆ ಢಮಾರ್, ಢಬ್ ಎಂದು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಕಿರಿಕೆಟ್ಟಾಭಿಮಾನಿಗಳ ಮೆದುಳಿಗೊಂದು ಕಸರತ್ತು ಪ್ರಕಟಿಸುವಂತೆ ತೀವ್ರ ಒತ್ತಡ ಬಂದ ಹಿನ್ನೆಲೆಯಲ್ಲಿ ಕೆಬಿಸಿಯ ಶಾರ್ಕ್ ಖಾನ್ ಜತೆಗೆ ಒಪ್ಪಂದ ಮಾಡಿಕೊಂಡು ಈ ಪ್ರಶ್ನಾವಳಿ.

ಪ್ರಶ್ನೆ 1:
ಕ್ರಿಕೆಟ್ ನೋಡುತ್ತಿದ್ದ ಪ್ರೇಕ್ಷಕ ಟಾಯ್ಲೆಟ್‌ಗೆಂದು ಎದ್ದು ಹೋದಾಗ ಆತ ಏನನ್ನು ಮಿಸ್ ಮಾಡಿಕೊಳ್ಳುತ್ತಾನೆ?
a) ಸೆಹವಾಗ್ ಬ್ಯಾಟಿಂಗ್ ಮಾತ್ರ b) ಟೀಂ ಇಂಡಿಯಾದ ಪೂರ್ಣ (ಬ್ಯಾಟಿಂಗ್) ಇನ್ನಿಂಗ್ಸ್ c) ಎದುರಾಳಿಗಳ ವಿಜಯೋತ್ಸವ ಆಚರಣೆ d) ಟೀಂ ಇಂಡಿಯಾ ಜಾಹೀರಾತು ಮಾತ್ರ (ಸಾಧ್ಯವೇ ಇಲ್ಲ!)

ಪ್ರಶ್ನೆ 2: ಕ್ರಿಕೆಟ್ ನೋಡುತ್ತಿದ್ದ ಪ್ರೇಕ್ಷಕ ಟಾಯ್ಲೆಟ್‌ಗೆಂದು ಎದ್ದು ಹೋದಾಗ ಆತ ಏನನ್ನು ಮಿಸ್ ಮಾಡಿಕೊಳ್ಳುವುದಿಲ್ಲ?
a) ಅಗರ್ಕರ್ ಬೌಲಿಂಗ್ b) ಟೀಂ ಇಂಡಿಯಾ ಬೌಲರುಗಳ ವೈಡ್-ನೋಬಾಲ್‌ಗಳಿಂದ ತುಂಬಿದ ಒಂದು ಓವರ್ c) ಎದುರಾಳಿಗಳ ವಿಜಯೋತ್ಸವ ಆಚರಣೆ

ಪ್ರಶ್ನೆ 3:
ಭಾರತೀಯ ದಾಂಡಿಗರು ಅತ್ಯುತ್ತಮ ಪ್ರದರ್ಶನ ತೋರುವುದು ಯಾವಾಗ?
a) ಶಾಲಾ ತಂಡಗಳೆದುರು b) ಬರ್ಮುಡಾ ಅಥವಾ ನೆದರ್ಲೆಂಡ್ c) ಯಾವುದೂ ಅಲ್ಲ d) ಜಾಹೀರಾತಿನಲ್ಲಿ

ಪ್ರಶ್ನೆ 4:
ಅಗರ್ಕರ್ ಹೆಸರಿನ ಮುಂದೆ 100 ರನ್ ಯಾವಾಗ ಗೋಚರಿಸುತ್ತದೆ?
a) ಬ್ಯಾಟಿಂಗ್ ಮಾಡುತ್ತಿದ್ದಾಗ ತಂಡದ ಮೊತ್ತ b) ಟೀಂ ಇಂಡಿಯಾದ extra ರನ್‍ಗಳ ಸಂಖ್ಯೆ c) ಬೌಲಿಂಗ್ ಮಾಡುತ್ತಿದ್ದಾಗ ಆತನ ಬೌಲಿಂಗ್ figures d) ಭಾರತ ತಂಡ ಇನ್ನಿಂಗ್ಸ್ ಮುಗಿಸಿದಾಗ

ಪ್ರಶ್ನೆ 5:
ಭಾರತೀಯ ದಾಂಡಿಗರು ಅತ್ಯುತ್ತಮ Footwork ಯಾವಾಗ ಪ್ರದರ್ಶಿಸುತ್ತಾರೆ?
a) ಪೆವಿಲಿಯನ್‌ಗೆ ಮರಳುವ ಸಂದರ್ಭ b) ಬೌನ್ಸರ್‌ಗಳಿಂದ ತಪ್ಪಿಸಿಕೊಳ್ಳುವ ಸಂದರ್ಭ c) ಅಂಗಣಕ್ಕೆ ಇಳಿಯುವ ಸಂದರ್ಭ d) ಯಾವುದೂ ಅಲ್ಲ

ಪ್ರಶ್ನೆ 6:
ಭಾರತೀಯ ದಾಂಡಿಗರು 50 ಓವರು ಪೂರ್ಣ ಆಡುವಂತೆ ಮಾಡುವುದು ಹೇಗೆ?
a) ಬೌಲರುಗಳನ್ನು ಸೆಂಚುರಿ ಸಮೀಪ ರನ್ ಮಾಡಿಸುವಂತೆ ಒತ್ತಾಯಿಸುವುದು b) ಕನಿಷ್ಠ 10 ರನ್ ಮಾಡದಿದ್ದರೆ ಜಾಹೀರಾತಿಗೆ ಅವಕಾಶವಿಲ್ಲ ಎಂದು ಬೆದರಿಸುವುದು c) ಮೊದಲು 2 ಇನ್ನಿಂಗ್ಸ್ ಆಡುವಂತೆ ಸೂಚಿಸುವುದು, ಆ ಬಳಿಕ ನಿಧಾನವಾಗಿ ಇನ್ನಿಂಗ್ಸ್ ಸಂಖ್ಯೆ ಹೆಚ್ಚಿಸುವುದು d) 'ಬರ್ಮುಡಾ' ಎಂದು ನೆನಪಿಸುವುದು

ಪ್ರಶ್ನೆ 7: ಹ್ಯಾಟ್ರಿಕ್ ಎಂಬುದರ ಭಾರತೀಯ ರೂಪ (Indian version) ಏನು?
a) ಮೂರು ವರ್ಷದಲ್ಲಿ 3 ಕೋಚ್‌ಗಳು b) ಮೂರು ಎಸೆತದಲ್ಲಿ 3 ವಿಕೆಟ್ ಒಪ್ಪಿಸುವುದು c) ಮೂರು ವಿಕೆಟ್ ಕಳೆದುಕೊಂಡು 3 ರನ್ d) ಮೊದಲ 3 ಓವರಿನಲ್ಲಿ 3 ವಿಕೆಟ್

ಪ್ರಶ್ನೆ 8: ಆಶಾವಾದ (optimism)ನ ಪರಮಾವಧಿ ಯಾವುದು?
a) ಆರಂಭಿಕ ಆಟಗಾರರು ಮುಖಕ್ಕೆ ಸನ್‌ಸ್ಕ್ರೀನ್ ಹಚ್ಚಿ ಬ್ಯಾಟಿಂಗ್‌ಗೆ ಬರುವುದು b) ಬರ್ಮುಡಾ ವಿರುದ್ಧ ಬಾಂಗ್ಲಾ ಸೋಲಲಿ ಎಂದು ಪ್ರಾರ್ಥಿಸುವುದು c) ಬಾಂಗ್ಲಾದವರು ಮಾದಕದ್ರವ್ಯ ಸೇವನೆಯಲ್ಲಿ ಸಿಕ್ಕಿಬಿದ್ದು ಭಾರತಕ್ಕೆ ಸೂಪರ್ 8ಕ್ಕೆ ಅವಕಾಶ ದೊರೆಯಲಿ ಎಂದುಕೊಳ್ಳುವುದು d) ಟೀಂ ಇಂಡಿಯಾ ಸದಸ್ಯರು ಜಾಹೀರಾತಿಗೆ ಸಹಿ ಹಾಕುವುದಿಲ್ಲ ಎಂದುಕೊಳ್ಳುವುದು.

Sunday, April 01, 2007

ಜನ್ಮದಿನವಲ್ಲ : ಬೊಗಳೆ ಬ್ಯುರೋ ಸ್ಪಷ್ಟನೆ

ಅಬ್ಬ!
ಇಂದು ಏಪ್ರಿಲ್ 1. ಅಂತಾರಾಷ್ಟ್ರೀಯ ಪರ್ವ. ಎಲ್ಲರೂ ಸಂಭ್ರಮ, ಸಡಗರೋತ್ಸಾಹಗಳಿಂದಲೇ ಆಚರಿಸಲೇಬೇಕಾದ ಒಂದು ಶುಭ ದಿನ.

ಆದರೆ "ಬೊಗಳೆ ರಗಳೆ ಬ್ಯುರೋ"ಕ್ಕೂ ಈ ದಿನಾಚರಣೆಗೂ ಯಾವುದೇ ಸಂಬಂಧವಿಲ್ಲ ಎಂದು ಲಬೋ ಲಬೋ ಅಂತ ಎಷ್ಟೇ ಬೊಬ್ಬೆ ಹೊಡೆದರೂ ಕೇಳದ ನಮ್ಮ ಪತ್ರಿಕೆಯ ಓದುಗರು, ರಾಶಿ ರಾಶಿ ಶುಭಾಶಯ ಕಳುಹಿಸುತ್ತಿದ್ದು, ಈಗಾಗಲೇ ಪತ್ರಿಕಾ-ಲಾಯದ ಕಸದಬುಟ್ಟಿ ತುಂಬಿ ತುಳುಕಾಡುತ್ತಿದೆ ಎಂದು ತಿಳಿಸಲು ವಿಷಾದಿಸುತ್ತೇವೆ.

ನಾವು ವಿಶೇಷ ವರದಿ ಪ್ರಕಟಿಸುವುದಾಗಿ ಹೇಳಿದ್ದು ನಿಜವಾಗಿದ್ದರೂ "ಬೊಗಳೆ ರಗಳೆ ಜನ್ಮದಿನ ಇಂದೇ" ಎಂದು ಘೋಷಿಸುತ್ತೇವೆಯೇ ಎಂಬುದನ್ನು ಓದುಗರು ಕಾಯುತ್ತಾ ಕೂತಿರುವುದು ಮಾತ್ರ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ನಮ್ಮಜ್ಜ ಹೇಳುತ್ತಿದ್ದುದನ್ನು ನಿಮಗೀಗ ನೆನಪಿಸುತ್ತಿದ್ದೇವೆ.

ಅನ್ವೇಷಿಯ ಹುಟ್ಟಿದ ಹಬ್ಬದ ಬಗ್ಗೆ ಶೇ.99.9 ಮಂದಿಯೂ ಏಪ್ರಿಲ್ 1ಕ್ಕೇ ಮತ ಹಾಕಿದ್ದಾರೆ ಎಂಬುದು ಇಂದಿನ ಮತದಾನದ ಸಂದರ್ಭ ನಮ್ಮ ಅರಿವಿಗೆ ಬಂದಿದೆ. ಆದರೆ ಉಳಿದಿರುವ 0.01 ಶೇಕಡಾದಷ್ಟು ಮಂದಿ ಬೇರೆಯೇ ದಿನವೊಂದನ್ನು ಹೇಳುತ್ತಿರುವುದರಿಂದ (ಬಹುಶಃ ನಮ್ಮ ವರದಿಗಾರ ಅನ್ವೇಷಿಯ ಮತವೇ ಇರಬಹುದು!) ಈ ಬಗ್ಗೆ ಸಮಗ್ರ ತನಿಖೆಯೊಂದು ನಡೆಯುತ್ತಿದೆ. ಹಾಗಾಗಿ ಓದುಗರು ಗಹಗಹಿಸಿ ನಗಬೇಕಾಗಿಲ್ಲ ಎಂದು ಸ್ಪಷ್ಟಪಡಿಸುತ್ತಿದ್ದೇವೆ.

ವಿಶ್ವ ಕಪ್ ಕ್ರಿಕೆಟಿನಲ್ಲಿ ಬಾಂಗ್ಲಾ ಮತ್ತು ಬರ್ಮುಡಾ ನಡುವಿನ ಮ್ಯಾಚ್ ಫಿಕ್ಸ್ ಆಗಿತ್ತು, ಹಾಗಾಗಿ ಶಾಲಾ ತಂಡಗಳ ವಿರುದ್ಧ ಹೆಣಗ್ಆಡಿ ಜಯಿಸಿರುವ ಭಾರತಕ್ಕೆ ಸೂಪರ್ 8ಕ್ಕೆ ಏರುವ ಅವಕಾಶ ದೊರೆತಿದ್ದು, ತಂಡವು ವಿಶ್ವ ಕಪ್‌ನ ಸೋಲಿನ ಅಭಿಯಾನ ಮುಂದುವರಿಸಲಿದೆ ಎಂಬ ಸಂದೇಶ ಕಳುಹಿಸುವ ಮೂಲಕ ನಮ್ಮ ಬ್ಯುರೋವನ್ನು ಮೂರ್ಖರನ್ನಾಗಿಸಲು ತೀವ್ರ ಯತ್ನಗಳು ನಡೆದಿವೆಯಾದರೂ, ಅದು ಪರಮಾಮವಧಿ ತಲುಪಿರುವುದರಿಂದ ಬ್ಯುರೋವನ್ನು "ಮತ್ತಷ್ಟು" ಮೂರ್ಖರಾಗಿರುವ ಯತ್ನ ಸಫಲವಾಗುವುದಿಲ್ಲ ಹಾಗೂ ಸಾಬೀತುಪಡಿಸಬೇಕಾದ ಅಗತ್ಯವೇ ಎದುರಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗುತ್ತದೆ.

ಬಹುತೇಕ ಪತ್ರಿಕೆಗಳು ರಾಜಕಾರಣಿಗಳ ಭರವಸೆಗಳನ್ನು (ಶೀಘ್ರವೇ ಬೆಲೆ ಇಳಿಸುತ್ತೇವೆ, ಬಡತನ ನಿವಾರಿಸುತ್ತೇವೆ, ಉದ್ಯೋಗಾವಕಾಶ ಹೆಚ್ಚಿಸುತ್ತೇವೆ, ನ್ಯಾಯ ದೊರಕಿಸಿಕೊಡುತ್ತೇವೆ ಎಂಬಿತ್ಯಾದಿ) ಪ್ರಕಟಿಸುವ ಮೂಲಕ ಓದುಗರನ್ನು ದಿನಂಪ್ರತಿ ಫೂಲ್ ಮಾಡುತ್ತವೆಯಾದರೂ, ಏಪ್ರಿಲ್ 1ರಂದು ವಿಶೇಷವಾಗಿ ಫೂಲ್ ಮಾಡುವ ಪತ್ರಿಕೆಗಳು ಕೂಡ ಇರುತ್ತವೆ ಮತ್ತು ಅಂದು ಮಾತ್ರ ವಿಶೇಷವಾಗಿ ಫೂಲ್ ಆಗುವವರೂ ಇರುತ್ತಾರೆ. ಆದರೆ ಅವುಗಳ ಸಾಲಿಗೆ ನಮ್ಮ ಪತ್ರಿಕೆ ಸೇರಬಾರದು, ನಮ್ಮ ಓದುಗರೂ ಸೇರಬಾರದು ಎಂದು ತೀವ್ರ ಸಾಮಾಜಿಕ ಕಳಕಳಿ ವ್ಯಕ್ತಪಡಿಸಿರುವ ನಮ್ಮ ಬ್ಯುರೋ, ನಮ್ಮ ಪತ್ರಿಕೆಯು ಯಾರನ್ನೂ ತಾನಾಗಿಯೇ ಫೂಲ್ ಮಾಡಲು ಹೋಗುವುದಿಲ್ಲ ಎಂದು ಒತ್ತಿ ಒತ್ತಿ ಹೇಳುತ್ತಿದೆ.

ಮತ್ತು ಏಪ್ರಿಲ್ 1ರಂದು ವಿಶೇಷ ವರದಿ ಪ್ರಕಟವಾಗಲಿದೆ ಎಂದು ನಾವು ಘೋಷಿಸಿಲ್ಲ, ಬೇರಾರೋ ಘೋಷಿಸಿಬಿಟ್ಟಿದ್ದಾರೆ. ನಾವು ನೀಡಿದ ಈ ಭರವಸೆ ನಮ್ಮ ಏಕಸದಸ್ಯ ಬ್ಯುರೋದ ಸಮಸ್ತ ಸಿಬ್ಬಂದಿಯನ್ನು ಮೂರ್ಖರನ್ನಾಗಿಸುವ ಉದ್ದೇಶ ಹೊಂದಿತ್ತೇ ಹೊರತು, ಓದುತ್ತಿರುವ ನಿಮ್ಮನ್ನು ಅಲ್ಲ. ಹಾಗಾಗಿ ಯಾರು ಕೂಡ ಹೆಗಲು ಮುಟ್ಟಿಕೊಳ್ಳಬಾರದೆಂದು ಈ ಮೂಲಕ ಸೂಚಿಸಲಾಗುತ್ತದೆ!

ಎಂಜಿನ್ ಇಲ್ಲದ ರೈಲು: ಬ್ರೇಕಿಂಗ್ ನ್ಯೂಸ್ ಅಲ್ಲವೆಂದ ಬೊ.ರ.

[ಬೊಗಳೂರು ಪಟ್ಟೆ-ರಹಿತ ರೈಲು ಬ್ಯುರೋ] ಬೊಗಳೂರು: ಆಫ್‌ಲೈನ್ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯೊಂದು ಆನ್‌ಲೈನ್ ಸಂಪಾದಕರ ಕಣ್ಣು ಕುಕ್ಕಿದ್ದು, ಎಂಜಿನ್ ಇಲ್ಲದೆ...