ಬೊಗಳೆ ರಗಳೆ

header ads

ಬೊಗಳೆ ಬೆನ್ನು ತಟ್ಟಿದ ಶಿಕ್ಷಣ ಆಯುಕ್ತರು

(ಬೊಗಳೂರು ಬೆನ್ನುತಟ್ಟಿಕೊಳ್ಳುವ ಬ್ಯುರೋದಿಂದ)
ಬೊಗಳೂರು, ಏ.26- ಇದೊಂದು ಅದ್ಭುತ ದುರಾಲೋಚನೆ.... ಅಲ್ಲಲ್ಲ.... ದೂರಾಲೋಚನೆ ಎಂದು ಶಿಕ್ಷಣ ಆಯುಕ್ತರು ಬೊಗಳೆ ರಗಳೆ ಬ್ಯುರೋದ ಬೆನ್ನು ತಟ್ಟಿದ್ದಾರೆ.

ನಾಡಿನಾದ್ಯಂತ ಪರೀಕ್ಷಾ ಫಲಿತಾಂಶದಲ್ಲಿ ದಾಖಲೆಯಾಗಿರುವುದಾಗಿ ಪ್ರಕಟವಾಗಿದ್ದು, ಇದು ಟೀಂ ಇಂಡಿಯಾ ಕೃಪೆಯಿಂದ. ಎಲ್ಲೆಡೆ ಅತ್ಯುತ್ತಮ ಫಲಿತಾಂಶ ಬರಲಿದೆ ಎಂದು ಬೊಗಳೆ ರಗಳೆ ಬ್ಯುರೋ ಕಳೆದ ತಿಂಗಳಲ್ಲೇ ಇಲ್ಲಿ ಭವಿಷ್ಯದ ವರದಿಯೊಂದನ್ನು ಪ್ರಕಟಿಸಿ ಕೈತೊಳೆದುಕೊಂಡಿತ್ತು. ಇದೀಗ ಆ ವರದಿ ನಿಜವಾಗಿರುವುದು ಶ್ಲಾಘನೀಯ ಎಂದು ಶಿಕ್ಷಣ ಆಯುಕ್ತರು ಹೇಳಿದ್ದಾರೆ.

ಈ ಉತ್ತಮ ಫಲಿತಾಂಶದ ಸಂಪೂರ್ಣ ಶ್ರೇಯಸ್ಸು ಭಾರತೀಯ ಕ್ರಿಕೆಟ್ ತಂಡಕ್ಕೆ ಸಲ್ಲಬೇಕು ಎಂದು ತಿಳಿಸಿರುವ ಅವರು, ಭವಿಷ್ಯದಲ್ಲೂ ಭಾರತ ತಂಡವು ಇದೇ ರೀತಿ ಪ್ರದರ್ಶನ ನೀಡಲಿ, ದೇಶದ ಭವಿಷ್ಯ ಉಜ್ವಲವಾಗಲಿ ಎಂದು ಆಶಿಸಿದ್ದಾರೆ.

ಆದರೆ ಫಲಿತಾಂಶದಲ್ಲಿ ಏರಿಕೆಯಾಗಲು ಹೊಸ ಪರೀಕ್ಷಾ ವಿಧಾನವೇ ಕಾರಣ ಎಂಬ ಹೇಳಿಕೆಯ ಹಿನ್ನೆಲೆ ಪ್ರಶ್ನಿಸಿದಾಗ, ಅದು ನಮ್ಮ ಪ್ರಯೋಗವನ್ನು ಸಮರ್ಥಿಸಿಕೊಳ್ಳಲು ಬೇಕಾಗಿರುವ ಒಂದು ವಾಕ್ಯವಷ್ಟೆ. ನಿಜವಾದ ಕಾರಣ ನೀವು ತಿಳಿಸಿರುವುದೇ ಆಗಿದೆ ಎಂದು ಸ್ಪಷ್ಟಪಡಿಸಿದರು.

ಬೊಗಳೆ ರಗಳೆಯಲ್ಲಿ ರಗಳೆಗೀಡಾದ ಮತ್ತೊಂದು ಅಂಶವೆಂದರೆ ಪರೀಕ್ಷಾ ಫಲಿತಾಂಶದಲ್ಲಿ ಯಾವತ್ತೂ ಬಾಲಕರುಗಳು ಬಾಲಕಿಯರುಗಳ ಹಿಂದೆ ಬೀಳುವುದು.

ಈ ಮೊದಲು, ಸರಕಾರವು ವಿದ್ಯಾರ್ಥಿನಿಯರಿಗೆ ಉಚಿತ ಸೈಕಲ್‌ಗಳನ್ನು ವಿತರಿಸಿ ಅವರನ್ನು ಮತ್ತಷ್ಟು ವೇಗವಾಗಿ ಮುಂದುವರಿಯುವಂತೆ ಮಾಡಿರುವುದರಿಂದಾಗಿಯೇ ಅವರು ಎಸ್ಸೆಸ್ಸೆಲ್ಸಿ, ಪಿಯುಸಿ ಫಲಿತಾಂಶ ಪ್ರಕಟವಾದಾಗ ಮೇಲುಗೈ ಸಾಧಿಸುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದ ಹುಡುಗ ವಿದ್ಯಾರ್ಥಿ ಸಮುದಾಯವು ಸರಕಾರಕ್ಕೆ ಮೊರೆ ಹೋಗಿತ್ತು. ನಮಗೆ ಈ ಹುಡುಗಿಯರನ್ನು ಹಿಂಬಾಲಿಸಲು ಸಾಧ್ಯವಾಗುತ್ತಿಲ್ಲ ಎಂದು ವಿದ್ಯಾರ್ಥಿಗಳು ಒಕ್ಕೊರಲ ಬೇಡಿಕೆಯೊಡ್ಡಿದ್ದರು. ಆಗ ಸರಕಾರವು ಹುಡುಗಿಯರನ್ನು ಹಿಂಬಾಲಿಸುವಂತಾಗಲು ಹುಡುಗರಿಗೂ ಸೈಕಲ್ ವಿತರಿಸಲು ನಿರ್ಧರಿಸಿತ್ತಾದರೂ ಈ ಯೋಜನೆ ವಿಫಲವಾಗಿದೆ ಎಂಬುದನ್ನು ಈಗ ಬೊಗಳೆ ರಗಳೆ ಬ್ಯುರೋದ ತನಿಖಾ ವರದಿಗಾರರು ಪತ್ತೆ ಹಚ್ಚಿ ಬಿಟ್ಟಿದ್ದಾರೆ.

ಈ ಕುರಿತು ಇಲ್ಲಿ ಪ್ರಕಟವಾಗಿದ್ದ ತಮ್ಮ ವರದಿಯು ಕೂಡ ದುರಾಲೋಚನೆಯಿಂದ ಕೂಡಿತ್ತು ಎಂದು ಬೊಗಳೆ ರಗಳೆ ಬ್ಯುರೋದ ಸಂಪಾದ-ಕರುಗಳು ಬೆನ್ನು ತಟ್ಟಿಕೊಂಡು ನೆನಪಿಸಿದ್ದು, ಇದು ನಮ್ಮ ಬ್ಯುರೋದ ವಸ್ತು-ಅನಿಷ್ಠ ವರದಿಗೆ ದೊರೆತ ಜಯ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

8 ಕಾಮೆಂಟ್‌ಗಳು

  1. ಬೊಗಳೆ ರಗಳೆಯ ಬೆನ್ನನ್ನು ಯಾವುದದಿಂದ ತಟ್ಟಲಾಯಿತು ಎನ್ನುವುದನ್ನು ಹೇಳಿ ..ಹಾಗೆಯೇ ಇದೇ ರೀತಿ ಬೇರೆ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ಬಂದರೆ ಅದರಲ್ಲಿ ಬೊ.ರ ಕೈವಾಡವಿರುತ್ತೆ ಅನ್ನೋದು ಅಸತ್ಯದ ಮಾತು

    ಪ್ರತ್ಯುತ್ತರಅಳಿಸಿ
  2. ಹುಡುಗಿಯರ ಹಿಂದೆ ಹೋಗುವುದು ಹುಡುಗರ ಖಯಾಲಿ ಎನ್ನುವುದು ಬಹುಕಾಲದಿಂದ ಪ್ರಚಲಿತದಲ್ಲಿರುವ ಮಾತಾದ್ದರಿಂದ ಅದರ ಸತ್ಯಾಸತ್ಯತೆಯನ್ನು ಪರೀಕ್ಷಿಸದೆ ಒಪ್ಪಿಕೊಂಡಿದೆ ಸಮಾಜ. ಇದೀಗ ಹುಡುಗರಿಗೆ ಹುಡುಗಿಯರ ಹಿಂದೆ ಓಡುವ ಹವ್ಯಾಸ ಬೇಸರ ತರಿಸಿದೆ ಎಂದಾದರೆ ಹೆಣ್ಣು ಹೆತ್ತವರಿಗೆ ಕೊಂಚ ಸಮಾಧಾನವಾದೀತು (ಗಂಡು ಹೆತ್ತವರಿಗೂ).

    ಪ್ರತ್ಯುತ್ತರಅಳಿಸಿ
  3. ನಮ್ಮ ಬೀರುವಿಗೆ ಮತ್ತು ಅಸತ್ಯರಿಗೆ ಮಾತ್ರ ತಿಳಿದಿರುವ ಗುಟ್ಟಿನ ವಿಷಯವನ್ನು ಗಂಟೆ ಬಾರಿಸಿ ಘೋಷಿಸೋಕ್ಕೆ ನನಗಿಷ್ಟವಿಲ್ಲ. ಪರೀಕ್ಷೆಗಳ ಸಮಯದಲ್ಲಿ ನಮ್ಮವರು ಮತ್ತು ಅಸತ್ತಿಯವರ ತಂಡದವರು ಪ್ರಶ್ನೆ ಪತ್ರಿಕೆಗಳನ್ನು ಸೋರಿಸಿದ್ದು, ಉತ್ತರ ಪತ್ರಿಕೆಗಳನ್ನು ಹಾರಿಸಿ, ಉರಿಸಿ, ಏರಿಸಿದ್ದು ಯಾರಿಗೂ ಗೊತ್ತಿಲ್ಲ. ಗೊತ್ತಾಗೋದೂ ಇಲ್ಲ. ಈ ಕಾರ್ಯಾಚರಣೆ ಮಾಡಿ ನಾಡನ್ನು ಉದುರಿಸುತ್ತಿರುವುದಕ್ಕಾಗಿ ನಮಗೆ ಘನ ಸರ್ಕಾರದವರು ಹಣ, ಸಣ್ಣಮಾನ, ಬಿದುರು ಕೊಡುತ್ತಾರೆ ಎಂಬುದನ್ನೂ ನಾನಿಲ್ಲಿ ಹೇಳಬಯಸುವುದಿಲ್ಲ - ಇವೆಲ್ಲಾ ಗುಟ್ಟಿನ ವಿಷಯಗಳು :)

    ಪ್ರತ್ಯುತ್ತರಅಳಿಸಿ
  4. ಸುಚಿನ್ ಮಂಡೂಲಕರ, ಗೌರವ ಸಂಗೂಲಿ ಹಾಗೂ ಸೀರೇಂದ್ರ ವೆಹವಾಗ ಇವರ ಕಾಣಿಕೆಯನ್ನು ನಾವು ಕೃತಜ್ಞತೆಯಿಂದ ನೆನೆಯಬೇಕು. ಬಂಗ್ಲಾ ದೇಶಕ್ಕೆ ಹೋಗುವ ಟೀಮಿನಲ್ಲಿ ಇವರು ಇಲ್ಲದಿದ್ದರೆ ಸಪ್ಟಂಬರದಲ್ಲಿ ಜರುಗುವ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಫಲಿತಾಂಶಗಳು ಏರುಪೇರಾಗುವ ಸಾಧ್ಯತೆಯಿದೆ ಎನ್ನುವ ಎಚ್ಚರಿಕೆಯನ್ನು ನೀಡುತ್ತಿದ್ದೇನೆ.

    ಪ್ರತ್ಯುತ್ತರಅಳಿಸಿ
  5. ಶಿವ್ ಅವರೆ,
    ಬೆನ್ನು ತಟ್ಟಿದ್ದು ಹೌದು, ಆದರೆ ಯಾವುದರಿಂದ ಎಂದು ತನಿಖೆ ನಡೆಸಿದಾಗ ಗೊತ್ತಾಗಿದ್ದೇನೆಂದರೆ, ಹಿಂದಿನ ದಿನವೇ ಪಕ್ಕದ ಮನೆಯಿಂದ ಹಲವಾರು ಚಪ್ಪಲಿಗಳು ಕಳ್ಳತನವಾಗಿದ್ದವು ಎಂಬ ಭಯಂಕರ ಸತ್ಯ!

    ಪ್ರತ್ಯುತ್ತರಅಳಿಸಿ
  6. ಸುಪ್ತ ದೀಪ್ತಿಯವರೆ,
    ಪರೀಕ್ಷಿಸದೆಯೇ ಒಪ್ಪಿಕೊಂಡಿದೆ ಎಂಬ ನಿಮ್ಮ ಮಾತಿನ ಅರ್ಥ, ಹುಡುಗಿಯರೇ ಹುಡುಗರ ಹಿಂದೆ ಬೀಳುತ್ತಿದ್ದಾರೆಂಬುದೇ? ಇರಲೂಬಹುದು.... ಆಗಾಗ್ಗೆ ನಾವು ಕೇಳ್ತಾ ಇರ್ತೀವಲ್ಲ.... "ಅವಳು ಅವನೊಂದಿಗೆ ಓಡಿಹೋದಳು" ಎಂಬ ಮಾತುಗಳನ್ನು! ಒಟ್ಟಿನಲ್ಲಿ ನಿಮ್ಮ ಮಾತುಗಳಿಂದ ಓಡುವುದು ಮತ್ತು ಬೀಳುವುದು ಎಂಬ ಎರಡು ಶಬ್ದಗಳ ಬಗ್ಗೆ ಚರ್ಚೆ ನಡೆಯಬೇಕಾಗಿದೆ ಎಂಬುದು ಖಚಿತವಾಯಿತು.

    ಪ್ರತ್ಯುತ್ತರಅಳಿಸಿ
  7. ಶ್ರೀನಿವಾಸರೆ,
    ನಿಮ್ಮಿಂದಲೂ ಎರಡು ಹೊಸ ಶಬ್ದಗಳು ಚರ್ಚೆಗೀಡಾಗಲಿದೆ. ಸತ್ತವರು ಮತ್ತು ಅಸತ್ತವರು!

    ಪ್ರತ್ಯುತ್ತರಅಳಿಸಿ
  8. ಸುನಾಥರೆ,
    ನಿಮ್ಮ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಟೀಂ ಇಂಡಿಯಾ, ನಾವೇನೂ ಬಾಂಗ್ಲಾಕ್ಕೆ ಗೆಲ್ಲಲೆಂದು ಹೋಗುತ್ತಿಲ್ಲ, ಕ್ರಿಕೆಟ್ ಅಭ್ಯಾಸಕ್ಕೆ ಹೋಗುತ್ತಿದ್ದೇವೆ ಎಂದು ಸ್ಪಷ್ಟನೆ ನೀಡಲು ನಿರ್ಧರಿಸಿದೆ.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D