Thursday, May 31, 2007

ಹಲ್ಲಿ(ಇ)ಲ್ಲದ ತಿಂಡಿ ಪತ್ತೆ: ಅಜ್ಞಾನಿಗಳ ಸಾಧನೆ!

(ಬೊಗಳೂರು ಅಜೀವ ವಿಜ್ಞಾನಿ ಮತ್ತು ಸಜೀವ ಅಜ್ಞಾನಿ ತಂಡದ ಮಹತ್ಸಾಧನೆ)
ಬೊಗಳೂರು, ಮೇ 31- ಒರಿಸ್ಸಾದಲ್ಲಿ ಕಾಲಿಲ್ಲದ ಹಲ್ಲಿ ಪತ್ತೆಯಾಗಿದೆ ಎಂಬ ವರದಿಯಿಂದ ಪ್ರಭಾವಿತಗೊಂಡು ಹೋಟೆಲ್ ಹೋಟೆಲ್‌ಗಳಲ್ಲಿ ಶೋಧನೆ ನಡೆಸಿದ ಬೊಗಳೆ ರಗಳೆ ಬ್ಯುರೋಗೆ, ಆಹಾರದಲ್ಲಿ ಕಬ್ಬಿಣ ಸತ್ವ ಚೆನ್ನಾಗಿ ದೊರೆಯುವ ಈ ಕಾಲದಲ್ಲಿ, ಅಲ್ಲಲ್ಲಿ ಹಲ್ಲಿಲ್ಲದ ಮತ್ತು ಹಲ್ಲಿ ಇಲ್ಲದ ತಿಂಡಿಗಳು ಪತ್ತೆಯಾಗಿರುವುದು ವಿಸ್ಮಯಕ್ಕೆ ಕಾರಣವಾಗಿದೆ.

ಜೀವ ವಿಜ್ಞಾನಿಗಳು ದಟ್ಟಡವಿಯಲ್ಲಿ ಕಾಲಿಲ್ಲದ ಹಲ್ಲಿ ಪತ್ತೆ ಮಾಡಿದ್ದರೆ, ನಮ್ಮ ಬ್ಯುರೋ ನಟ್ಟನಗರದಲ್ಲೇ ಈ ರೀತಿಯ ಹಲ್ಲಿಲ್ಲದ ಮತ್ತು ಹಲ್ಲಿಯಿಲ್ಲದ ತಿಂಡಿಗಳನ್ನು ಪತ್ತೆ ಮಾಡಿದೆ ಎಂದು ತಿಳಿಸಲು ಹರ್ಷಿಸುತ್ತೇವೆ.

ಕೆಲವೆಡೆ ಹೋಟೆಲುಗಳಲ್ಲಿ ದುಡಿಯುವ ಕಾರ್ಮಿಕರು ಎದುರು ಮಾತನಾಡಿದ್ದಕ್ಕಾಗಿ ಆಗಾಗ ಮಾಲೀಕರು ಅಥವಾ ಸಹೋದ್ಯೋಗಿಗಳಿಂದ ಹಲ್ಲುದುರಿಸಿಕೊಳ್ಳುತ್ತಿದ್ದರು. ಆ ಹಲ್ಲು ನೇರವಾಗಿ ಯಾವುದೇ ತಿಂಡಿಗೋ... ತೀರ್ಥದೊಳಕ್ಕೋ... ಬೀಳುತ್ತಿತ್ತು. ಅಂಥ ವಿದ್ಯಮಾನ ಈಗೀಗ ಸ್ಥಗಿತವಾಗುತ್ತಿರುವುದರಿಂದಾಗಿಯೇ ಹಲ್ಲಿಲ್ಲದ ಆಹಾರ ಪತ್ತೆಯಾಗತೊಡಗಿದೆ ಎಂಬುದನ್ನು ಶೋಧಿಸಲಾಗಿದೆ.

ಅದೇ ರೀತಿ ಹಲ್ಲಿ ಇಲ್ಲದ ಆಹಾರವೂ ಅಲ್ಲಲ್ಲಿ ಕಂಡುಬಂದಿದ್ದು, ಇದನ್ನು ಪತ್ತೆ ಹಚ್ಚಿದವರು ಬೊಗಳೂರು ಬ್ಯುರೋದ ಅಜೀವ ವಿಜ್ಞಾನಿಗಳು ಹಾಗೂ ಸಜೀವ ಅಜ್ಞಾನಿಗಳ ತಂಡ.

ಬೊಗಳೂರಿನ ಹೋಟೆಲೊಂದರಲ್ಲಿ ಇದರ ಮೂಲ ಪತ್ತೆಯಾಗಿದೆ. ಅಲ್ಲಿರುವ ಎಲ್ಲಾ ನೌಕರರಲ್ಲೂ ಹಲ್ಲುಗಳಿರಲಿಲ್ಲ. ಇದರ ಹಿಂದಿನ ಕಾರಣ ಶೋಧಿಸಿದಾಗ ವಿಷಯ ತಿಳಿಯಿತು. ಅಲ್ಲಿದ್ದ ಕಾರ್ಮಿಕರೆಲ್ಲರೂ ಹೋಟೆಲ್ ಮಾಲಿಕರಿಗೆ ಎದುರು ಮಾತನಾಡಿ ತಮ್ಮ ಬಾಯಿಯನ್ನು ಕ್ಲೀನ್ ಮಾಡಿಸಿಕೊಂಡಿದ್ದಾರೆ! ಒಂದೇ ಬಾರಿ ಮಾಡಿಸಿಕೊಂಡಿದ್ದಲ್ಲ, ಕ್ರಮಾನುಗತವಾಗಿ ದಿನಕ್ಕೊಬ್ಬರಂತೆ ಪಾಳಿಗೆ ಅನುಸಾರವಾಗಿ ಒಂದೊಂದೇ ಹಲ್ಲುಗಳು ಉದುರುತ್ತಿದ್ದವು. ಆ ಸಮಯದಲ್ಲಿ ಹೋಟೆಲ್ ಗ್ರಾಹಕರೆಲ್ಲರಿಗೂ ತಿಂಡಿಯ ಜೊತೆಗೆ ಹಲ್ಲು ಉಚಿತವಾಗಿ ದೊರೆಯುತ್ತಿತ್ತು ಎಂದು ನಮ್ಮ ಪ್ರಾಚೀನ ಅಜ್ಞಾನಿಗಳ ತಂಡ ಪತ್ತೆ ಹಚ್ಚಿದ ಅಲಿಖಿತ ಶಾಸನವೊಂದು ಹೇಳುತ್ತದೆ.

ಇಷ್ಟು ಮಾತ್ರವಲ್ಲದೆ, ತಮಗೆ ಪರಿಪೂರ್ಣ ಹಲ್ಲು ದೊರೆಯಲೇ ಇಲ್ಲ, ಒಡೆದು ಚೂರಾದ ಹಲ್ಲು ದೊರೆತಿದೆ ಎಂದು ಕೆಲವರು ಮಾಲೀಕರೊಂದಿಗೆ ಜಗಳ ಮಾಡಿದ ಪ್ರಸಂಗಗಳ ಉಲ್ಲೇಖವೂ ಬೊಗಳೂರಿನಲ್ಲಿ ಪತ್ತೆಯಾದ ಇತಿಹಾಸ ಶಾಸನದಲ್ಲಿ ಇದೆ. ಹಿಂದಿನ ಕಾಲದಲ್ಲಿ ಈ ಊರಲ್ಲಿ ಶಾಸನ ಬರೆದಿಡಲು ಕಬ್ಬಿಣ, ತಾಮ್ರ, ತಾಳೆಗರಿ ಇತ್ಯಾದಿಗಳು ಲಭ್ಯವಿಲ್ಲದ ಕಾರಣದಿಂದಾಗಿ, ಅವುಗಳನ್ನು ಮಂಜುಗಡ್ಡೆಯಲ್ಲಿ ಕೆತ್ತಿ ಇತಿಹಾಸವನ್ನು ಐಸ್ ಶಾಸನದಲ್ಲಿ ಬರೆದಿಡಲಾಗುತ್ತಿತ್ತು ಎಂದು ತಿಳಿದುಬಂದಿದೆ.

ಹೀಗಾಗಿ ಗ್ರಾಹಕರ ತಗಾದೆ ಹೆಚ್ಚಾದ ಕಾರಣದಿಂದ ಹೋಟೆಲ್ ಮಾಲೀಕರು ಹಲ್ಲಿಲ್ಲದವರನ್ನಷ್ಟೇ ಕೆಲಸಕ್ಕೆ ತೆಗೆದುಕೊಳ್ಳಲಾರಂಭಿಸಿದರು. ಹಲ್ಲಿದ್ದವರು ಬಂದರೆ ಹಲ್ಲು ಒಪ್ಪಿಸಲು ಸಲಹೆ ನೀಡುತ್ತಿದ್ದರು. ಕ್ರಮೇಣ ಇದು ಮುಂದುವರಿದು, ಹೋಟೆಲಿನ ತಿಂಡಿಯಲ್ಲಿ ಹಲ್ಲೇ ದೊರೆಯದಂತಹ ಪರಿಸ್ಥಿತಿ ಬಂದಿತ್ತು. ಇದರಿಂದಾಗಿ ಆ ಹೋಟೆಲಿಗೆ "ಹಲ್ಲಿಲ್ಲದ ಲಂಚ ಹೋಮ" ಎಂದು ಹೆಸರಿರಿಸಲಾಗಿದೆ ಎಂಬ ನಾಮಕರಣ ಮೂಲವನ್ನೂ ಬೊಗಳೆ ರಗಳೆ ಪತ್ತೆ ಮಾಡಿದೆ.

Tuesday, May 29, 2007

ಮಾವಗಳಿಗೆ ವಿದೇಶದಲ್ಲಿ ಹೆಚ್ಚಿದ ಬೇಡಿಕೆ

(ಬೊಗಳೂರು ಮಾವಂದಿರ ಬ್ಯುರೋದಿಂದ)
ಬೊಗಳೂರು, ಮೇ 29- ಭಾರತದ ಮಾವಂದಿರಿಗೆ ವಿದೇಶದಲ್ಲಿ ಭರ್ಜರಿ ಬೇಡಿಕೆಯುಂಟಾಗಿದೆ ಎಂದು ಇಲ್ಲಿ ವರದಿಯಾಗಿರುವಂತೆಯೇ ಜಪಾನ್ ಕೂಡ ಭಾರತದಿಂದ ಮಾವಗಳನ್ನು ಆಮದು ಮಾಡಿಕೊಳ್ಳಲು ನಿರ್ಧರಿಸಿದೆ.

ಈಗಾಗಲೇ ಅಮೆರಿಕಕ್ಕೆ ಭಾರತೀಯ ಮಾವರನ್ನು ಆಹ್ವಾನಿಸಿ ಅಲ್ಲಿ ಮಾವನ ಹಬ್ಬ ಆಚರಿಸಲಾಗಿದೆ. ಇದೀಗ ಮುಂದಿನ ಸರದಿ ಜಪಾನ್ ಆಗಿದ್ದು, ಅಲ್ಲಿಯೂ ಮಾವಂದಿರ ಪ್ರದರ್ಶನ, ಹಬ್ಬ, ಮಾರಾಟ ಇತ್ಯಾದಿ ನಡೆಸಲು ಸಿದ್ಧತೆ ನಡೆಸಿದೆ ಎಂದು ತಿಳಿದುಬಂದಿದೆ.

ಭಾರತದಲ್ಲಿ ಮಕ್ಕಳಿಗೆ ಮದುವೆ ಮಾಡಿಸುವುದು ಇತ್ತೀಚಿನ ದಿನಗಳಲ್ಲಿ ದುಬಾರಿಯಾಗತೊಡಗಿದೆ. ಹೀಗಾಗಿ ಭಾರತದಲ್ಲಿರುವ ಎಲ್ಲ ಹೆ.ಹೆ. ತಳಿಯ ಮಾವ ಮತ್ತು ಗಂ.ಹೆ. ತಳಿಯ ಮಾವರು ವಿದೇಶಕ್ಕೆ ವಲಸೆ ಹೋಗಿ ಅಲ್ಲಿಯೇ ನೆಲೆಸಲು ನಿರ್ಧರಿಸಿದ್ದಾರೆ. ಸರಕಾರವು ಕೂಡ ಈ ತಳಿಯ ಮಾವರನ್ನು ವಿದೇಶಕ್ಕೆ ಸಾಗಹಾಕಲು ಒಪ್ಪಿಗೆ ಸೂಚಿಸಿರುವುದು ಸಂತಸದ ಬೆಳವಣಿಗೆ ಎಂದು ಅಖಿಲ ಭಾರತ ಮಾವ ಕಳೆಗಾರರ ಸಂಘವು ಹರ್ಷ ವ್ಯಕ್ತಪಡಿಸಿದೆ. (*ಹೆ.ಹೆ.=ಹೆಣ್ಣು ಹೆತ್ತ, *ಗಂ.ಹೆ.=ಗಂಡು ಹೆತ್ತ)

ಭಾರತದಿಂದ ಮಾವಗಳನ್ನು ರಫ್ತು ಮಾಡಲಾಗುತ್ತಿದ್ದರೂ, ವಿದೇಶೀ ಜೀವನ ಶೈಲಿಗೆ ಅಲ್ಲಿನ ಮಾವಗಳು ಒಗ್ಗುವವೇ ಎಂಬುದು ಕಾದುನೋಡಬೇಕಾದ ಅಂಶ. ಯಾಕೆಂದರೆ ವಿದೇಶೀಯರು ಮಾವನ ಮಗಳನ್ನು ಅಥವಾ ಮಗನನ್ನು ಮದುವೆಯಾಗಿ ಒಂದೆರಡು ವರ್ಷ ಮಾತ್ರವೇ ರುಚಿ ನೋಡಿ ಎಸೆಯುವ ಪರಿಪಾಠ ಹೆಚ್ಚಾಗುತ್ತಿದೆ. ಒಂದೆರಡು ವರ್ಷದಲ್ಲೇ ಮಾವ ಹಾಗೂ ಅದರ ಜತೆಗೆ ಮಾವನ ಮಿಡಿ ಕೂಡ ಹುಳಿ- ಎಂಬುದು ಅವರ ಅರಿವಿಗೆ ಬಾರದಿದ್ದರೂ ಬಂದಂತೆ ನಟಿಸುವುದೇ ಇದಕ್ಕೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ಈ ನಡುವೆ, ಭಾರತದ ಮಾವಗಳಿಗೆ ವಿದೇಶದಲ್ಲಿ ಬೇಡಿಕೆ ಹೆಚ್ಚಾದ ಕಾರಣ ಹೆಚ್ಚು ಹೆಚ್ಚು ಮಾವನ ಮ(ರ)ಗಳನ್ನು ಬೆಳೆಸಿ ಪೋಷಿಸಲು ಅಖಿಲ ಭಾರತ ಫಲಭರಿತ ಮಾವ ಬೆಳೆಗಾರರ ಸಂಘ ನಿರ್ಧರಿಸಿದೆ.

ಆದರೆ ಹೆಚ್ಚಿನ ಮಾವಗಳು ತಮ್ಮ ಮಿಡಿಗಳನ್ನು ವಿದೇಶಕ್ಕೆ ಮಾರಾಟ ಮಾಡಲು ಸಜ್ಜು ನಡೆಸುತ್ತಿರುವುದು ಎಲ್ಲರ ಹುಬ್ಬೇರಿಸಲು ಕಾರಣವಾಗಿರುವುದು ಕೂಡ ಒಂದೆಡೆ ಆತಂಕ ಸೃಷ್ಟಿಸತೊಡಗಿದೆ.

Thursday, May 24, 2007

ಬೆಂಗಾಳಿಗಳ ಊರು ಬೆಂಗಳೂರು !

(ಬೊಗಳೂರು ಗೊಂದಲದ ಗೂಡು ಬ್ಯುರೋದಿಂದ)
ಬೊಗಳೂರು, ಮೇ 24- ಆಕ್ಸ್‌ಫರ್ಡ್ ಡಿಕ್ಷ-ನರಿ ಸಂಸ್ಥೆಯವರು ಬೆಂಗಳೂರು ಮಂದಿಯ ಆಡುಭಾಷೆ ಬೆಂಗಾಳಿ ಎಂದು ಗಲೀಜು ಉಲ್ಲೇಖಿಸಿರುವುದರ ಹಿಂದೆ ಬೊಗಳೆ ರಗಳೆಯ ಕೈವಾಡವಿರುವ ಸಾಧ್ಯತೆಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.

Ox-ಫರ್ಡ್ ಕಂಪನಿಯವರ Faux-pas ಗೆ ಕಾರಣವಾಗಿರುವುದು ಬೊಗಳೆ ರಗಳೆ ಎಂದು ಅದರ ಸೊಂಪಾದಕರು ಯಾರಲ್ಲೋ ಹೇಳಿಕೊಂಡಿರುವುದನ್ನು ನಮ್ಮ ವರದಿಗಾರರು ಕೇಳಿಸಿಕೊಂಡಿದ್ದಾರೆ. ಬೊಗಳೆ ಬಿಡುವವರಿಂದಾಗಿ ಬೊಗಳೂರು ಎಂಬ ಊರು ಸೃಷ್ಟಿಯಾಗಿದೆ, ಇದೇ ಕಾರಣಕ್ಕೆ ಬೆಂಗಳೂರು ಎಂಬುದು ಬೆಂಗಾಳಿಗಳಿಂದಾಗಿ ಬಂದಿರಬಹುದು ಎಂದವರು ಸ್ವಯಂತೀರ್ಮಾನಕ್ಕೆ ಬಂದಿರುವುದಾಗಿ ವರದಿಯಾಗಿದೆ.

ಆದರೆ ಈ ಕುರಿತು ಸಮರ್ಥವಾಗಿ ತನಿಖೆ ನಡೆಸಿರುವ ಬೊಗಳೂರಿನ ಬೊಗಳೆ ಬ್ಯುರೋ, ಹಲವು ಮಹತ್ವದ ಅಂಶಗಳನ್ನು ಬಯಲಿಗೆಳೆದಿದೆ. ಅದೆಂದರೆ, ಆಕ್ಸ್‌ಫರ್ಡ್ ಸಂಪಾದಕರಿಗೆ ಈ ಸಂದೇಹ ಉದ್ಭವಿಸಲು ಪ್ರಧಾನ ಕಾರಣವಾಗಿದ್ದು ಬೆಂಗಳೂರಿಗೆ ಭೇಟಿ ನೀಡಿದಾಗಲೇ!!!

ಅಂದರೆ ಅಲ್ಲೀಗ ಕನ್ನಡ ಮಾತನಾಡುವವರ ಸಂಖ್ಯೆ ತೀರಾ ಕುಸಿತವಾಗಿದೆ. ಇರುವ ಬಹುತೇಕ ಕನ್ನಡಿಗರು ಕನ್ನಡಾಂಗ್ಲ ಮಿಶ್ರಣವಾದ ಕಂಗ್ಲಿಷ್ ಮಾತನಾಡುತ್ತಿದ್ದರೆ, ವಲಸೆ ಬಂದವರೆಲ್ಲರೂ ರಾಜ್ಯದ ಭಾಷೆಯ ಬದಲು ತಮ್ಮ ತಮ್ಮದೇ ಭಾಷೆಯಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ ಮತ್ತು ಕನ್ನಡಕ್ಕೆ ತಮ್ಮ ಭಾಷೆಯನ್ನು ತೂರಿಸಿಕೊ"ಲ್ಲು"ತ್ತಿದ್ದಾರೆ. ಈ ಕಾರಣದಿಂದ ಬೆಂಗಳೂರಿಗೆ ಭೇಟಿ ನೀಡಿದಾಗ, ಯಾವ ಭಾಷೆ ಮಾತನಾಡಬೇಕು ಎಂಬುದರ ಬಗ್ಗೆ ಕಳವಳಕಾರಿಯಾಗಿ ಗೊಂದಲಕ್ಕೀಡಾದ ಈ ಸೊಂಪಾದಕರು, ಸಕಲ ಭಾಷೆಗಳ ಸಮ್ಮಿಶ್ರಣದಲ್ಲಿ ತೇಲಿ ಹೋಗಿ ತಲೆ ಚಚ್ಚಿಕೊಳ್ಳುವ ಹಂತಕ್ಕೆ ಬಂದಿದ್ದರು.

ಬೆಂಗಳೂರಿನಲ್ಲಿ ಜನ ಮಾತಾಡ್ತಿರೋದು ಯಾವ ಭಾಷೆಯಪ್ಪಾ ಎಂದು ಸಂದೇಹ ಪಟ್ಟುಕೊಂಡೇ, ಬೊಗಳೆಯಿಂದ ಬೊಗಳೂರು ಆಗಿದ್ದರೆ ಬೆಂಗಾಳದಿಂದ ಬೆಂಗಳೂರು ಇರಬಹುದು ಎಂಬ ತಾರ್ಕಿಕ ತೀರ್ಮಾನಕ್ಕೆ ಬಂದರು ಎಂಬುದನ್ನು ಪತ್ತೆ ಹಚ್ಚಲಾಗಿದೆ.

Tuesday, May 22, 2007

ಮಾನವ ಶಕ್ತಿ ಕೊರತೆ : ಗಾರ್ದಭರಲ್ಲಿ ಮಿಂಚಿನ ಸಂಚಾರ

(ಬೊಗಳೂರು ಕಳವಳ ಬ್ಯುರೋದಿಂದ)
ಬೊಗಳೂರು, ಮೇ 22- ಇತ್ತೀಚಿನ ವರ್ಷಗಳಲ್ಲಿ ವೇತನ ಮಟ್ಟ ಮತ್ತು ಜನರ ಜೀವನ ಮಟ್ಟ ಹೆಚ್ಚುತ್ತಾ ಹೋದಂತೆ ಮಾನವೀಯತೆಯ ಮಟ್ಟವು ಕಳವಳಕಾರಿಯಾಗಿ ಕೆಳಗೆ ಬಂದಿರುವುದು ಬೊಗಳೆ ರಗಳೆಗೆ ಸಂತಸ ತಂದಿರುವ ವಿಚಾರವಾಗಿದೆ.

ಈಗೀಗ ಹಲವಾರು ಮಾರಣ ಹೋಮಗಳು ನಡೆಯುತ್ತಾ, ದೇಶದಲ್ಲಿ ರಕ್ತದ ಸುಭಿಕ್ಷೆಯಾಗುತ್ತಿದ್ದು, ಮಾನವ ಜೀವಗಳನ್ನೆಲ್ಲಾ ಹೊಡೆದು ಉರುಳಿಸಿ, ಈ ಭೂಮಂಡಲದಲ್ಲಿ ಪ್ರಾಣಿಗಳು ಮಾತ್ರವೇ ಉಳಿಯುವಂತೆ ಆಗುತ್ತಿರುವ ಪ್ರಯತ್ನಗಳು ಶ್ಲಾಘನೀಯ ಎಂದು ಎಲ್ಲೋ ಅವಿತುಕೊಂಡಿರುವ ಬೊಗಳೆ ರಗಳೆ ಬ್ಯುರೋದ ಪ್ರಾಣಿ-ಪ್ರಿಯ ವರದಿಗಾರರು ಅಭಿಪ್ರಾಯಪಟ್ಟಿದ್ದಾರೆ.

ಈ ಮಧ್ಯೆ, ಭಾರತಕ್ಕೆ ಮಾನವ ಶಕ್ತಿ ಕೊರತೆಯಾಗುತ್ತಿರುವ ಕುರಿತು ಇಲ್ಲಿ ಪ್ರಕಟವಾದ ವರದಿಯಿಂದ ತೀವ್ರ ಆನಂದತುಂದಿಲ ಆಗಿರುವ ಗಾರ್ದಭ ಸಮಾಜವು, ಇನ್ನು ಮೇಲಾದರೂ ಗಾರ್ದಭ ಶಕ್ತಿಗೆ ಉತ್ತಮ ಬೆಲೆ ದೊರೆತೀತು ಎಂದು ಆಶಾವಾದ ವ್ಯಕ್ತಪಡಿಸಿದೆ.

ಇಷ್ಟರವರೆಗೆ ಮಾನವರನ್ನು ಹೀಯಾಳಿಸಲು "ಕತ್ತೆ ದುಡಿದಂತೆ" ದುಡಿಯುತ್ತಾರೆ ಎಂಬ ಪದಸಮೂಹವನ್ನು ಪ್ರಯೋಗಿಸುತ್ತಿದ್ದರು. ಈಗ ಮನುಷ್ಯರಿಗೆ ಬುದ್ಧಿ ಬಂದಂತಿದೆ. ಕಚೇರಿಯಲ್ಲಿ 12 ಗಂಟೆಗೂ ಹೆಚ್ಚು ಕಾಲ ಕಂಪ್ಯೂಟರ್ ಮುಂದೆ ಕುಳಿತು ಬಾಹ್ಯ ಜಗತ್ತನ್ನೇ ಮರೆಯುವ ಮಾನವ ಸಮುದಾಯಕ್ಕೆ ದುಡಿಯುವುದು ಅಂದರೆ ಏನು ಎಂಬುದರ ಅರಿವಾಗಿದೆ. ಇದೇ ಕಾರಣಕ್ಕಾಗಿ ಈಗ ಮಾನವ ಶಕ್ತಿ ಕೊರತೆಯ ಹುಯಿಲೆಬ್ಬಿಸುತ್ತಿದೆ ಎಂದು ಹೇಳಿರುವ ಅಖಿಲ ಭಾರತ ಗಾರ್ಧಭ ಸಮಾಜದ ಅಧ್ಯಕ್ಷರು, ಈಗಾಗಲೇ ನಮ್ಮ ಸಮುದಾಯದಲ್ಲಿ ನಿರಂತರವಾಗಿ ಸುಮ್ಮನೇ ನಿಂತುಕೊಂಡು, ಎಲ್ಲೋ ನೋಡುತ್ತಾ ಏನೋ ಯೋಚಿಸುತ್ತಿರುವವರಿಗೆ "ಮಾನವರಂತೆ ಯೋಚಿಸುತ್ತಿದ್ದಾನೆ ನೋಡು" ಅಂತ ಹೀಯಾಳಿಸುವ ಪ್ರಕ್ರಿಯೆ ಆರಂಭಿಸಲಾಗಿದೆ ಎಂದಿದ್ದಾರೆ.

ಮುಂದಿನ ದಿನಗಳಲ್ಲಿ ಈ ಪ್ರಕ್ರಿಯೆಯು ಒಂದು ಗಾರ್ದಭಾಂದೋಲನದ ರೂಪದಲ್ಲಿ ನಡೆಯಲಿದೆ ಎಂದು ತಿಳಿಸಿರುವ ಅವರು, ಈ ಮಹತ್ವದ ಕಾರ್ಯಕ್ಕೆ ಎಲ್ಲರೂ ಕೈ ಜೋಡಿಸ.... ಅಲ್ಲಲ್ಲ... ಕಾಲು.... ಅಲ್ಲಲ್ಲ ಹಿಂಗಾಲು ಜೋಡಿಸಬೇಕು ಎಂದು ತಮ್ಮ ಸಮುದಾಯದ ಅತ್ಯಂತ ಪ್ರಬಲ ಆಯುಧಕ್ಷೇತ್ರ ಎಂದೇ ಪರಿಗಣಿಸಲ್ಪಟ್ಟಿರುವ ದೇಹದ ಭಾಗವನ್ನು ನಿಖರವಾಗಿ ಉಲ್ಲೇಖಿಸುತ್ತಾ ಹೇಳಿದರು.

ಇಂದಿನ ದಿನಗಳಲ್ಲಿ ಕಂಪ್ಯೂಟರ್ ತಿಳಿಯದಿದ್ದವರು ಮೂಲೆಗುಂಪಾಗುತ್ತಿದ್ದಾರೆ. ಪದವಿ ಪೂರೈಸಿದವರು ಆಟೋರಿಕ್ಷಾ ಓಡಿಸುತ್ತಲೋ, ಚಹಾದಂಗಡಿ ಇರಿಸಿಯೋ ಕಾಲ ಕಳೆಯುತ್ತಿದ್ದರೆ, ಕಂಪ್ಯೂಟರ್ ಕಲಿತವರ ಬೆರಳುಗಳು ಜಡ್ಡುಗಟ್ಟಿ ಹೋಗುತ್ತಿವೆ ಎಂದಿರುವ ಅವರು, ಈ ಬೆರಳುಗಳ ಜಡ್ಡುಗಟ್ಟುವಿಕೆಗೆ ಕಾಲೇಜು ಹಂತದಲ್ಲೇ ಚಾಲನೆ ದೊರೆಯುತ್ತಿದೆ ಎಂದು ತಮ್ಮ ಸಂಶೋಧನಾ ವರದಿಯನ್ನು ಮುಂದಿಟ್ಟಿದ್ದಾರೆ.

ಅದು ಹೇಗೆ ಹಾಗನ್ನುತ್ತೀರಿ ಎಂದು ಏನೂ ಅರಿಯದವರಂತೆ ಕೇಳಿದ ವರದಿಗಾರರಿಗೆ ಉತ್ತರಿಸಿದ ಅವರು, ಮೊಬೈಲ್ ಫೋನಿನಲ್ಲಿ ಎಸ್ಸೆಮ್ಮೆಸ್ ಕಳಿಸುತ್ತಲೇ ತಮ್ಮ ಕೈಬೆರಳುಗಳನ್ನು ಹಿಂದಿನ ಸಿನಿಮಾಗಳಲ್ಲಿ ಕಾಣಿಸುತ್ತಿದ್ದ ಕುಷ್ಠರೋಗಿಗಳ ಕೈಗಳನ್ನು ನೆನಪಿಸುವಂತೆ ಜಡ್ಡುಗಟ್ಟಿಸಿಕೊಂಡಿರುವ ಯುವ ಸಮುದಾಯವು, ಕಾಲೇಜು ಬಿಟ್ಟ ತಕ್ಷಣ ಕಂಪ್ಯೂಟರ್ ಮುಂದೆ ಕೂರಲು ಸರ್ವ ಸನ್ನದ್ಧತೆ ನಡೆಸಿಕೊಳ್ಳುತ್ತಿದೆ ಎಂಬ ಅಮೂಲ್ಯ ಶೋಧವೊಂದನ್ನು ಬಯಲುಗೊಳಿಸಿದರು.

ಈ ಮಧ್ಯೆ Horse Power ಎಂಬ ಅಭಿದಾನದಿಂದ ವಿಶ್ವವಿಖ್ಯಾತವಾಗಿರುವ ಹಯ ಸಮುದಾಯವೂ ಧುತ್ತನೆ ಮೇಲೆದ್ದು ನಿಂತಿರುವುದು ಬೊಗಳೆ ರಗಳೆಯ ಪ್ರಾಣಿಪ್ರಿಯತೆಯ ಹೋರಾಟದ ಸಾಲಿಗೆ ಮತ್ತೊಂದು ಸೇರ್ಪಡೆಯಾಗುವ ಸಾಧ್ಯತೆಗಳು ದಟ್ಟವಾಗಿ ಗೋಚರಿಸತೊಡಗಿದೆ.

Thursday, May 17, 2007

Riggingಗೆ ರಾಗಿಂಗೇ ಅಡಿಪಾಯ

(ಬೊಗಳೂರು ವಿದ್ಯಾರ್ಥಿಕ್ಷೇಮ ಬ್ಯುರೋದಿಂದ)
ಬೊಗಳೂರು, ಮೇ 17- ರಾಗಿಂಗ್ (Ragging) ಅನ್ನು ಕ್ರಿಮಿನಲ್ ಪ್ರಕರಣದಂತೆ ಪರಿಗಣಿಸಿ ಇದರಲ್ಲಿ ತೊಡಗುವವರನ್ನು ಕಠಿಣವಾಗಿ ಶಿಕ್ಷಿಸಬೇಕು ಎಂಬ ನ್ಯಾಯಾಲಯದ ತೀರ್ಪು ವಿರೋಧಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ಘಟನೆ ಬೊಗಳೂರು ಬೀದಿಯಲ್ಲಿ ನಡೆದಿದೆ.

ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ವಿಧಿಸಿದ ಕಡಿವಾಣ ಎಂದು ಪ್ರತಿಕ್ರಿಯಿಸಿರುವ ಅಖಿಲ ಬೊಗಳೂರು ವಿದ್ಯಾರ್ಥಿ ಸಂಘದ ಅಧ್ಯಕ್ಷರು, ಹೀಗೆ ಮಾಡಿದರೆ ನಾವು ಕಾಲೇಜು ಮೆಟ್ಟಿಲೇರುವುದಾದರೂ ಹೇಗೆ ಎಂದು ಪ್ರತಿಕ್ರಿಯಿಯಿಸಿದ್ದಾರೆ.

ಹೈಸ್ಕೂಲ್ ಮುಗಿಸಿ ಕಾಲೇಜಿಗೆ ಬರುವುದೇ ಮಜಾ ಮಾಡಲು ಮತ್ತು ಮಜಾ ಪಡೆಯಲು. ಇನ್ನು ರಾಗಿಂಗ್‌ಗೆ ಕಡಿವಾಣ ಹೇರಿದಲ್ಲಿ ನಾವು ಕಾಲೇಜಿಗೆ ಬಂದು ಏನು ಪ್ರಯೋಜನ ಎಂದು ಪ್ರಶ್ನಿಸಿರುವ ಅವರು, ಶಿಕ್ಷಣ ಅಥವಾ ಸರ್ಟಿಫಿಕೇಟ್ ಎಲ್ಲಿ, ಯಾವಾಗ ಬೇಕಾದರೂ ಹಣ ಕೊಟ್ಟರೆ ದೊರೆಯುತ್ತದೆ, ಆದರೆ ರಾಗಿಂಗ್ ಎಲ್ಲಿ ಬೇಕೆಂದರಲ್ಲಿ ಮಾಡಲಾಗುವುದಿಲ್ಲವಲ್ಲ ಎಂದು ಕೊರಗಿದ್ದಾರೆ.

ಭವಿಷ್ಯದಲ್ಲಿ ಉತ್ತಮ ಪ್ರಜಾ-ಪ್ರಭುತ್ವವಾದಿಯಾಗಲು ಇಂಥ ರಾಗಿಂಗ್ ಚಟುವಟಿಕೆಗಳು ಪ್ರೇರಕ. ಕೇಂದ್ರದಲ್ಲಿ ಅಧಿಕಾರ ಹಿಡಿಯಬೇಕಿದ್ದರೆ ವಿದ್ಯಾರ್ಥಿ ಜೀವನದಲ್ಲಿ ಇವೆಲ್ಲವನ್ನೂ ಮಾಡಿ ಕಲಿತು, ಬಲಿತು ಮುಂದೆ ದೊಡ್ಡ ದೊಡ್ಡ ಕ್ರಿಮಿನಲ್ ಕೇಸುಗಳಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಹಾಗಿರುವಾಗ ಇದು ಮೂಲಭೂತ ಹಕ್ಕು ಎಂದವರು ಬಣ್ಣಿಸಿದ್ದಾರೆ.

ರಾಗಿಂಗ್ ಬೇಕು ಎಂದು ನೀವು ಇಷ್ಟೊಂದು ಒತ್ತಾಯ ಮಾಡುತ್ತಿರುವುದೇಕೆ ಎಂದು ಪ್ರಶ್ನಿಸಿದಾಗ ಅವರು, ಛೆ! ನೀವೆಂಥ ಪತ್ರಕರ್ತರಯ್ಯ? ಕಾಲೇಜು ವಿದ್ಯಾರ್ಥಿಗಳು ಬೆಲೆದು ದೊಡ್ಡವರಾಗಿ ರಾಜಕೀಯ ಎಂಬ ಅದ್ಭುತ ಉದ್ಯಮಕ್ಕೆ ಧುಮುಕಬೇಡವೇ? ಅಲ್ಲಿ ಚುನಾವಣೆಗಳಲ್ಲಿ Rigging ಮಾಡಬೇಕಿದ್ದರೆ Raggingಏ ಅಡಿಪಾಯ ಇದ್ದಹಾಗೆ ಎಂದು ಉತ್ತರಿಸಿ, ಕಿರಿಯ ವಿದ್ಯಾರ್ಥಿಯನ್ನು ಚುಡಾಯಿಸಲು ಹೊರಟೇಹೋದರು.

Tuesday, May 15, 2007

...ಲೆಕ್ಕಕ್ಕುಂಟು ಅನ್ನಿಸಿಕೊಂಡ ಬೊಗಳೆ ರಗಳೆ

(ಬೊಗಳೂರು ಎಚ್ಚೆತ್ತ ಬ್ಯುರೋದಿಂದ)
ಬೊಗಳೂರು, ಮೇ 15- ವಿಶ್ವಾದ್ಯಂತ ಪತ್ರಿಕೆಗಳಿಗೆ ಬೇಡಿಕೆ ಹೆಚ್ಚಿರುವ ಹಿನ್ನೆಲೆಯಲ್ಲಿ ಇತ್ತೀಚೆಗೆ ತೀರಾ ಅನಿಯತಕಾಲಿಕವಾಗುತ್ತಿರುವ ಬೊಗಳೆ ರಗಳೆ ಪತ್ರಿಕೆಯೂ ತನ್ನ ಓದುಗರ ಸಂಖ್ಯೆಯನ್ನು ಒಂದಕ್ಕೆ ಏರಿಸಿಕೊಂಡಿದೆ ಎಂದು ತಿಳಿದುಬಂದಿದೆ.

ವರದಿಯ ಪ್ರಕಾರ, ಟಿವಿ, ಇಂಟರ್ನೆಟ್ಟುಗಳು ಹೆಚ್ಚು ಜನರನ್ನು ತಲುಪುತ್ತಿದ್ದರೂ, ವರ್ತಮಾನ ಪತ್ರಿಕೆಗಳ ಬೇಡಿಕೆ ಇಳಿದಿಲ್ಲ. ಆದರೆ ಇಂಟರ್ನೆಟ್ಟೂ ಅಲ್ಲದ, ಟೀವಿಯೂ ಅಲ್ಲದ ಮತ್ತು ಮುದ್ರಿತ ಪತ್ರಿಕೆಯ ಸಾಲಿಗೂ ಸೇರದ ತ್ರಿಶಂಕುವಿನಂತಿರುವ ಬೊಗಳೆ ರಗಳೆಯು, ವರ್ತಮಾನ ಪತ್ರಿಕೆಗಿಂತಲೂ ಭವಿಷ್ಯದ ಪತ್ರಿಕೆ ಎಂದು ಹಣೆಪಟ್ಟಿ ಹಚ್ಚಿಕೊಳ್ಳಲು ತೀವ್ರ ಹೆಣಗಾಟ ನಡೆಸಿರುವುದನ್ನು ಇಲ್ಲಿ ಓದುಗರು ಗಮನಿಸಿದ್ದಿರಬಹುದು.

ಜಾಗತಿಕ ಮಟ್ಟದಲ್ಲಿ ಪತ್ರಿಕೆಗಳ ಬೇಡಿಕೆಯು ಶೇ. 1.9ರಷ್ಟು ಏರಿದೆ ಎಂದು ವರದಿ ತಿಳಿಸಿದ್ದು, ಇದು ಸುಳ್ಳು, ಈ ಏರಿಕೆಯ ಪ್ರಮಾಣವು 0.00000000001ರಷ್ಟು ಹೆಚ್ಚಿದೆ. ಬೊಗಳೆ ರಗಳೆ ಬ್ಯುರೋವನ್ನು ಈ ಲೆಕ್ಕಕ್ಕೆ ತೆಗೆದುಕೊಳ್ಳಲಾಗಿಲ್ಲಗಿರುವುದರಿಂದಾಗಿ ಈ ಪ್ರಮಾದ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

ಆದರೆ ಜನಸಂಖ್ಯೆ ಹೆಚ್ಚಾಗುತ್ತಿರುವಂತೆಯೇ ಪತ್ರಿಕಾ ಓದುಗರ ಸಂಖ್ಯೆಯೂ ಹೆಚ್ಚಾಗುತ್ತಿದೆ ಎಂದು ವರದಿ ತಿಳಿಸಿರುವುದರಿಂದ ತೀವ್ರ ಕಳವಳಗೊಂಡಿರುವ ಬೊಗಳೆ ರಗಳೆ ಬ್ಯುರೋ ಸಂಪಾದಕರು, ಹಾಗಿದ್ದರೆ, ಪತ್ರಿಕೆಗಳನ್ನು ಮುಚ್ಚಿಬಿಟ್ಟರೆ ಜನಸಂಖ್ಯೆ ಇಳಿಮುಖವಾಗುತ್ತದೆಯೇ ಎಂದು ಪ್ರಶ್ನಿಸಿದ್ದಾರಲ್ಲದೆ, ಬೊಗಳೆ ರಗಳೆಯನ್ನೇ ಮುಚ್ಚಿಸಲು ಜನಸಂಖ್ಯಾ ವಿರೋಧಿಗಳು ಸಂಚು ಹೂಡಬಹುದೆಂಬ ಭೀತಿ ವ್ಯಕ್ತಪಡಿಸಿದ್ದಾರೆ.

ಹೇಗಿದ್ದರೂ, ಈ ವರದಿಯಲ್ಲಿ "ಎಲ್ಲ ಪತ್ರಿಕೆಗಳ ಪ್ರಸಾರ ಸಂಖ್ಯೆ ಹೆಚ್ಚುತ್ತಿದೆ" ಎಂದು ಸಾಮೂಹಿಕವಾಗಿ ಹೇಳಿರುವುದರಿಂದ ಅದರಲ್ಲಿ ಬೊಗಳೆ ರಗಳೆಯೂ ಸೇರಿಕೊಂಡಿರಬಹುದೆಂದು ಅಮಾನ್ಯ ಸೊಂಪಾದಕರು ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡಿದ್ದಾರೆ.

Friday, May 11, 2007

Palm mistery ಯ ಹಿಸ್ಟೀರಿಯಾ

(ಬೊಗಳೂರು ಭವಿಷ್ಯವಿಲ್ಲದ ಬ್ಯುರೋದಿಂದ)
ಬೊಗಳೂರು, ಮೇ 11- ಕೈಯ ಕೊಟ್ಟು ಓಡಿ ಹೋದನೂ..... ನಮ್ಮ ಶಿವಾ.... ಅಂತ ಹಾಡುತ್ತಿದ್ದವರೆಲ್ಲಾ ಈಗ Palm mistery ಕೇಂದ್ರವನ್ನು ತೆರೆದಿರುವುದು ಲೋಕದ ಸಮಸ್ತ ಜನಗಳ ಕಾಕದೃಷ್ಟಿಗೆ ಬಿದ್ದಿರುವ ಹಿನ್ನೆಲೆಯಲ್ಲಿ ಶಂಕೆ ನಿವಾರಣೆಗಾಗಿ ಇಲ್ಲೊಂದು ಪುಟ್ಟ ಪ್ರಯತ್ನವನ್ನು ನಮ್ಮ ಬ್ಯುರೋ ಕೈಗೊಂಡಿದೆ.

Palm mistreryಗೂ Palm tree (ತಾಳೆ ಮರ)ದಿಂದ ಇಳಿಸುವ ಕಳ್ಳುವಿಗೂ ಸಂಬಂಧವಿಲ್ಲ ಎಂದು ಮೊತ್ತ ಮೊದಲಾಗಿ ಈ ಮೂಲಕ ನಮ್ಮ ಬ್ಯುರೋ ಸ್ಪಷ್ಟಪಡಿಸುತ್ತಿದೆ.

ಗ್ರಹ ಮಂಡಲದಿಂದ ಪ್ಲುಟೋ ಉದುರಿಬಿದ್ದ ಪರಿಣಾಮವಾಗಿ Palm misteryಯ ಹಿಸ್ಟರಿ ಕೂಡ ಬದಲಾಗಿದೆ. ಈ ಬದಲಾದ ವಿದ್ಯಮಾನದಲ್ಲಿ ನಿಮ್ಮ ನಿಮ್ಮ ಹಸ್ತ ರೇಖೆಗಳನ್ನು ಸ್ವಲ್ಪಮಟ್ಟಿಗೆ ಹಸ್ತ ಬದಲಿಸಿ ನೋಡಲಾಗುತ್ತದೆ. ಬಹುತೇಕವಾಗಿ ಯಾವ ಕೈ ಜೇಬಿನಿಂದ ಹೊರಬರುತ್ತದೆಯೋ ಅದನ್ನೇ ನಿಮ್ಮ ಭವಿಷ್ಯ ನಿರ್ಧಾರಕ್ಕಾಗಿ ಆಯ್ದುಕೊಳ್ಳಲಾಗುತ್ತದೆ. ನಡು ನಡುವೆ ನಿಮ್ಮ ಹಣೆಯಲ್ಲಿ ಮೂಡಿಬರುವ ಗೆರೆಗಳನ್ನೂ ರೇಖೆಗಳೆಂದೇ ಪರಿಗಣಿಸಿ ನೋಡಲಾಗುತ್ತದೆ.

ಅದಕ್ಕೆ ಕೆಲವೊಂದು ಸ್ಪಷ್ಟ ಕಾರಣಗಳನ್ನು ಹೇಳಬೇಕೆಂದರೆ 1) ಈ Palm mistery ಹೇಳುವಾತ ನಮ್ಮ lifeನ file ನಿಂದ ಒಂದು t ತೆಗೆದು misery ಮಾಡದಿದ್ದರೆ ಸಾಕು. 2) ಈ Palm mistery ಹೇಳುವವ ನಮ್ಮ Historyಗಳನ್ನೆಲ್ಲಾ ಹೇಳಿಬಿಟ್ಟು calm ಆಗಿದ್ದ ಲೈಫಿಗೆ ಆ-ಶಾಂತಿಯನ್ನು ತಂದು ಹಾಕದಿದ್ದರೆ ಸಾಕು. 3) ಏನೇನೆಲ್ಲಾ ಹೇಳಿ ಎಷ್ಟು ಹಣ ಕೀಳುತ್ತಾನೋ.... ಈ ಮೂರು default ಕಾರಣಗಳು ನಮ್ಮ ನಮ್ಮ ಹಣೆಯ ಬರಹದ ಮೇಲೆ ಗೆರೆಗಳಂತೆ ಮೂಡಿಬರಲು ಕಾರಣಗಳಾಗುತ್ತವೆ.

ಹಾಂ... ಒಂದ್ನಿಮಿಷ ನಿಲ್ಲಿ. ರೇಖೆ ಎಂಬ ಪದದ ಸ್ತ್ರೀಲಿಂಗವೇ ರೇಕಿ ಅಂತ ಯಾರು ಕೂಡ ತಪ್ಪು ತಿಳಿದುಕೊಳ್ಳಬೇಕಾಗಿಲ್ಲ. ಈ ಮಿಸ್ಟರಿ ಶಾಸ್ತ್ರವು ಮಿಸ್ಟರುಗಳಿಗೆ ಮಾತ್ರವಲ್ಲದೆ, mistressಗಳ Stress ನಿವಾರಣೆಗೂ ಸಹಾಯ ಮಾಡುತ್ತದೆ. ಈ ಮಿಸ್ಟರಿ ಶಾಸ್ತ್ರವು ಕೈ ಕೊಡುವವರಿಗೆ ಮತ್ತು ಕೈ ತೆಗೆದುಕೊಳ್ಳುವವರಿಗಾಗಿದ್ದು, ಕೈ ಕೊಟ್ಟವರು ಬೇರೆಯವರ ಕೈಹಿಡಿಯಲೇಬೇಕಾದ ಅನಿವಾರ್ಯತೆಗಳ ಕುರಿತು ಬೆಳಕು ಚೆಲ್ಲಲಾಗುತ್ತದೆ.

ಆದರೆ ಕೆಲವು ರಾಜಕಾರಣಿಗಳ ಮೃತ ಹಸ್ತದಿಂದಲೇ ಎಲ್ಲಾ ಕೆಲಸಗಳು ಆರಂಭವಾಗಿರಬೇಕಾಗುವಾಗ ಅವರ ಭವಿಷ್ಯ ನಿರ್ಣಯಕ್ಕೆ ಅವರ ಹಸ್ತವೇ ಬೇಕಾಗಿಲ್ಲ. ಅವರ ಹಿಂಬಾಲಕರ ಕೈಗಳು ಮಾತ್ರವೇ ಸಾಗುತ್ತದೆ.

ಇನ್ನು ಕೆಲವರು ಎಲ್ಲಾ ಕೆಲಸ ಕಾರ್ಯಕ್ಕೂ ಹಸ್ತಕ್ಷೇಪ ಮಾಡುವುದರಿಂದ ಇಂಥವರ ಹಸ್ತಗಳು ಕ್ಷೇಪ ಮಾಡುವುದಕ್ಕಾಗಿಯೇ ಮೀಸಲಾಗಿರಲಿ, ಅವರ ಮೂಗು ನೋಡಿ ಭವಿಷ್ಯ ಹೇಳಲಾಗುತ್ತದೆ. ಅಂದರೆ ಅವರೆಷ್ಟು ಪ್ರಮಾಣದಲ್ಲಿ ಮೂಗು ತೂರಿಸುತ್ತಾರೆ ಎಂಬುದನ್ನು ಅಳೆದು ಸುರಿದು ನೋಡಲಾಗುತ್ತದೆ.

Tuesday, May 08, 2007

ಬೆಲೆ ಏರಿಕೆ ಹಿಂದಿನ ಕಾರಣ ಪತ್ತೆ

(ಬೊಗಳೂರು ಬೊಗಳೆ ಬ್ಯುರೋದಿಂದ)
ಬೊಗಳೂರು, ಮೇ 8- ಕಡಿಮೆ ತಿಂದರೆ ಹೆಚ್ಚು ಕಾಲ ಬದುಕಬಹುದು ಎಂದು ಇಲ್ಲಿ ಪ್ರಕಟವಾದ ವರದಿಯನ್ನು ದೇಶದ ಮೂಲೆ ಮೂಲೆಯಲ್ಲಿ ಪ್ರಕಟಿಸಿ ಗೋಡೆ ಗೋಡೆಯಲ್ಲಿ ಅಂಟಿಸುವ ಆಂದೋಲನ ಭರದಿಂದ ಸಾಗಿದೆ ಎಂದು ವರದಿಯಾಗಿದೆ.

ಚುನಾವಣೆ ಸಂದರ್ಭ ಪಾಯಿಖಾನೆ ಗೋಡೆಯನ್ನೂ ಬಿಡದೆ ಎಲ್ಲೆಂದರಲ್ಲಿ ಗೋಡೆಗಳನ್ನು ಅಲಂಕರಿಸುತ್ತಿರುವ ಚುನಾವಣಾ ಪೋಸ್ಟರ್ ಹಚ್ಚುವ ಕಾರ್ಯ ಇದಾಗಿದೆಯೇ ಅಥವಾ ಎಡಪಂಥದಲ್ಲಿರುವವರು ತಮ್ಮ ಬೆಂಬಲವನ್ನು ಬಲಕ್ಕೆ ವಾಲಿಸಿಕೊಂಡರೇ ಎಂದು ತೀವ್ರ ಸಂಶಯಗೊಂಡ ಬೊಗಳೆ ರಗಳೆ ಬ್ಯುರೋ, ಈ ವರದಿಯ ಬೆನ್ನು ಹತ್ತಿದಾಗ ಹತ್ತಿದ ತಕ್ಷಣವೇ ಧಢಾರನೆ ಕೆಳಕ್ಕೇ ಬೀಳಬೇಕಾದ ಪ್ರಸಂಗವೊಂದು ಎದುರಾಯಿತು.

ಇದಕ್ಕೆ ಕಾರಣ, ಈ ಪೋಸ್ಟರ್ ಅಂಟಿಸುವಿಕೆ ಕಾರ್ಯದಲ್ಲಿ ಕೇಂದ್ರ ಸರಕಾರದ ಕೈವಾಡವಿರುವುದು ಸಾಬೀತಾಗಿರುವುದು!
ಕೇಂದ್ರದಲ್ಲಿ ಅಧಿಕಾರ"ಗ್ರಹಣ" ಮಾಡಿದಂದಿನಿಂದಲೂ ಜನಸಾಮಾನ್ಯರು ಬದುಕಲು ಬೇಕಾಗಿರುವ ಆಹಾರ ಧಾನ್ಯಗಳ ಬೆಲೆ ಗಗನಕ್ಕೇರುತ್ತಲೇ ಇರುವ ಕುರಿತು ಬೊಗಳೆ ರಗಳೆ ಬ್ಯುರೋವು ದಿನ1ರಿಂದಲೇ ವರದಿ ಪ್ರಕಟಿಸಲಾರಂಭಿಸಿತ್ತು.

ಇದರಿಂದ ತೀವ್ರ ಕಳವಳಕ್ಕೀಡಾಗಿರುವ ಸರಕಾರವು, ಇದೀಗ ಈ ಅಧ್ಯಯನ ವರದಿಯನ್ನು ಅಲ್ಲಲ್ಲಿ ಅಂಟಿಸಿ, ಜನಜಾಗೃತಿ ಉಂಟು ಮಾಡುತ್ತಾ, ಕಡಿಮೆ ತಿನ್ನಿ ಕಡಿಮೆ ತಿನ್ನಿ ಎಂದು ಜನರನ್ನು ಪ್ರೇರೇಪಿಸುತ್ತಿದೆ.

ಈ ಪ್ರೇರೇಪಣೆ ಆಂದೋಲನದಿಂದ ಪ್ರೇರಣೆಗೊಳ್ಳದಿರುವವರಿಗಾಗಿಯೇ ತಾವು ಬೆಲೆ ಏರಿಕೆ ನೀತಿ ಅನುಸರಿಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿರುವ ಕೇಂದ್ರವು, ಜನರೆಲ್ಲಾ ನೂರ್ಕಾಲ ಬಾಳಬೇಕು ಎಂಬುದು ನಮ್ಮ ಮಹದಾಶೆ ಎಂದು ಸ್ಪಷ್ಟಪಡಿಸಿದೆ. ಆದರೆ ಇದು ಅಸ್ಥಿಪಂಜರಗಳು ಸೃಷ್ಟಿಯಾಗುವ ಸಾಧ್ಯತೆ ಇರುವುದರಿಂದ, ಆ ಪ್ರಮಾಣದಲ್ಲಿ ಆಹಾರ ಸೇವಿಸದೆ ಇರಬಾರದು ಎಂದೂ ಸರಕಾರ ಜನತೆಗೆ ಕಳಕಳಿಯ ಮನವಿ ಮಾಡಿಕೊಂಡಿರುವುದಾಗಿ ಒದರಿ ಹೇಳಿದ್ದು, ಬಡತನ ನಿರ್ಮೂಲನೆಗೂ ತಾವು ಯತ್ನಿಸುತ್ತಿಲ್ಲ ಎಂದು ಹೇಳಿದೆ.

Saturday, May 05, 2007

ಕೋರ್ಟಿನಲ್ಲಿ ಮೂಕ ಪ್ರೇಕ್ಷಕನಾದ ಗಾರ್ದಭ!

(ಬೊಗಳೂರು ಅ-ಮಾನವ ಬ್ಯುರೋದಿಂದ)
ಬೊಗಳೂರು, ಮೇ 5- ತಮ್ಮ ಅಪಸ್ವರದ ಬಗೆಗೇ ಅಪಸ್ವರ ಎತ್ತಿ ತಮ್ಮ ಮೇಲೆಯೇ ಕೇಸು ಜಡಿದ ಮಾನವ ಸಮುದಾಯದ ಮೇಲೆ ಗಾರ್ದಭ ಸಮಾಜವು ರೊಚ್ಚಿಗೆದ್ದು ಪ್ರತಿಭಟನೆಗೆ ಮುಂದಾಗಿದೆ.

ನಮ್ಮ ಮೇಲೆಯೇ ಕೇಸು ಜಡಿಯುತ್ತಿರುವ ಮಾನವ ಪ್ರಾಣಿಗಳಂತೆ ನಾವೇನೂ ನ್ಯಾಯಾಲಯದಲ್ಲಿ "ನಾನು ತಪ್ಪಿತಸ್ಥನಲ್ಲ" ಎಂದು ಕಿರುಚಾಡಲಿಲ್ಲ, ಸತ್ಯವನ್ನೇ ಹೇಳುತ್ತೇನೆ ಎಂಬ ಸುಳ್ಳು ಪ್ರಮಾಣವನ್ನೂ ಮಾಡಲಿಲ್ಲ ಎಂದು ಗಾರ್ದಭ ಸಮಾಜದ ಅಧ್ಯಕ್ಷ ಗಾರ್ದಭ ರಾಜ್ ಅವರು ಕಿಕ್ಕಿರಿದು ತುಂಬಿದ್ದ, ಬೊಗಳೆ ರಗಳೆ ಬ್ಯುರೋದ ಏಕಮಾತ್ರ ವರದಿಗಾರನ ಉಪಸ್ಥಿತಿಯ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟೀಕರಣ ನೀಡಿದರು.

ನ್ಯಾಯಾಲಯದಲ್ಲಿ ನಮ್ಮ ವರ್ತನೆಯಿಂದಾಗಿ ಆಶ್ಚರ್ಯಗೊಂಡ ನ್ಯಾಯಾಧೀಶರೇ ನಮ್ಮನ್ನು ಹೊಗಳೆ ಅಟ್ಟಕ್ಕೆ.... ಅಲ್ಲಲ್ಲ... ಲಾಯಕ್ಕೆ ಏರಿಸಿದರು. ಸ್ವತಃ ನ್ಯಾಯಾಧೀಶರಿಗೆ ಅಚ್ಚರಿಯಾಗಿ, ಮೂಗಿನ ಮೇಲೆ ಬೆರಳಿಟ್ಟುಕೊಂಡ ಪರಿಣಾಮವಾಗಿ ಅವರ ಬಾಯಿಯಿಂದ ತೀರ್ಪು ಉದುರುವುದು ಸಾಧ್ಯವಾಗಲೇ ಇಲ್ಲ ಎಂದು ವಿವರಿಸಿದ ಗಾರ್ದಭ ರಾಜ್, ಇನ್ನು ಮುಂದಾದರೂ ನಮ್ಮ ಮೇಲೆ ಕೇಸು ಜಡಿಯುವುದನ್ನು ನಿಲ್ಲಿಸಬೇಕು ಎಂದು ಮನವಿ ಮಾಡಿಕೊಂಡರು.

ಅರಚುತ್ತೇವೆ ಎಂಬ ಕಾರಣಕ್ಕೆ ನಮ್ಮ ಮೇಲೆ ಕೇಸು ಜಡಿದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯದಲ್ಲಿ ನಾವು ಮೌನವಾಗಿಯೇ ಎಲ್ಲವನ್ನೂ ಕೇಳಿಸಿಕೊಂಡಿದ್ದೇವೆ.... ಎಲ್ಲಾದರೂ ಅರಚಾಡಿದ್ದೇವೆಯೇ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

ನಮ್ಮ ಪತ್ರಿಕಾಗೋಷ್ಠಿಗೆ ಏಕಮಾತ್ರ ಸದಸ್ಯರಿರುವ ಬೊಗಳೆ ರಗಳೆ ಬ್ಯುರೋದ ಸಮಸ್ತ ಸಿಬ್ಬಂದಿಗಳೂ ಕಿಕ್ಕಿರಿದು ಹಾಜರಾಗಿರುವುದು ಸಂತಸ ತಂದಿದೆ. ಉಳಿದ ಪತ್ರಿಕೆಗಳು ನಮ್ಮ ಬೆಂಬಲಕ್ಕೆ ಬರುತ್ತಿಲ್ಲ, ಬೊಗಳೆಯೊಂದೇ ನಮ್ಮ ರಕ್ಷಕನಾಗಿದ್ದು, ನಮ್ಮ ಅಭಿಪ್ರಾಯ ಸ್ವಾತಂತ್ರ್ಯಕ್ಕೆ ಉತ್ತಮ ಮರದಲ್ಲಿ ಮಾಡಿರುವ ಮಣೆ ಹಾಕುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದ ಅವರು, ಈ ಹಿಂದೆಯೂ ಇಂಥದ್ದೇ ವರದಿ ಪ್ರಕಟಿಸಿ ನಮ್ಮ ಇಲ್ಲದ ಮಾನವನ್ನು ಹಿಡಿದೆತ್ತಿ ತೋರಿಸಿದ್ದಕ್ಕಾಗಿ ಅಭಿನಂದನೆಗಳನ್ನು ಸಲ್ಲಿಸಿದರು.

Thursday, May 03, 2007

ಜೀವವಿಮಾ ದಂಧೆಗೆ ಉಗ್ರರ ಒಲವು

(ಬೊಗಳೂರು ಉಗ್ರರ ಬ್ಯುರೋದಿಂದ)
ಬೊಗಳೂರು, ಮೇ 3- ಕೇಂದ್ರದಲ್ಲಿ ಯುಪಿಎ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ತಮಗೆ ಉದ್ಯೋಗಾವಕಾಶಗಳು ಹೆಚ್ಚಾಗತೊಡಗಿರುವ ಬಗ್ಗೆ ಉಗ್ರಗಾಮಿಗಳು, ಭಯೋತ್ಪಾದಕರು ಎಂಬಿತ್ಯಾದಿ ನಾಮವಿಶೇಷಣಗಳಿಂದ ಕರೆಯಲ್ಪಡುತ್ತಿರುವ ಅಖಂಡ ಭಾರತ ಭಯೋತ್ಪಾದಕರ ಸಂಘವು ಹರ್ಷ ವ್ಯಕ್ತಪಡಿಸಿದೆ.

ಈಗಾಗಲೇ ಪುರೋಹಿತಶಾಹಿ ವೃತ್ತಿಯೆಂದೇ ಹೇಳಲಾಗುತ್ತಿರುವ (ಮಾರಣ)ಹೋಮ, (ರುಧಿರ)ಅಭಿಷೇಕ ಇತ್ಯಾದಿಗಳಲ್ಲಿ ತೊಡಗಿಸಿಕೊಂಡು ದೇಶಾದ್ಯಂತ ಜನಸಂಖ್ಯಾ ನಿಯಂತ್ರಣಕ್ಕೆ ಒತ್ತು ನೀಡುತ್ತಿದ್ದ ಈ ಸಮುದಾಯವು ಹೊಸ ಹೊಸ ಉದ್ಯೋಗ ಸಾಧ್ಯತೆಗಳಿಂದಾಗಿ ಕೇಂದ್ರ ಸರಕಾರವನ್ನು ಅಭಿನಂದಿಸುತ್ತಿದೆ.

ಗುರು ಹತ್ಯೆ ಮಹಾಪಾಪ ಎಂದುಕೊಂಡಿರುವ ಕೇಂದ್ರದ ನೀತಿಯಿಂದಾಗಿ ನಮ್ಮ ಸಮುದಾಯಕ್ಕೆ ಉತ್ತಮ ಪ್ರೋತ್ಸಾಹ ದೊರಕಿದಂತಾಗಿದೆ ಎಂದು ಪತ್ರಿಕಾ ಹೇಳಿಕೆ ನೀಡದಿರುವ ಈ ಸಮುದಾಯವು, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಷೇರು ಮಾರುಕಟ್ಟೆಗಳಲ್ಲಿ ಕೂಡ ತನ್ನ ಸಾಮರ್ಥ್ಯವನ್ನು ಒರೆಗೆ ಹಚ್ಚಿ ಸುದ್ದಿ ಮಾಡಿರುವುದು ಹಳೆಯ ಸುದ್ದಿ ಆಗಿರುವುದರಿಂದ ಅದನ್ನು ಬೊಗಳೆ ರಗಳೆ ಬ್ಯುರೋ ಇಲ್ಲಿ ಮತ್ತೆ ಗಮನಕ್ಕೆ ತರಲು ಇಚ್ಛಿಸುವುದಿಲ್ಲ.

ತೈಲೋದ್ಯಮದಲ್ಲಿ ಭಾಗಿಯಾಗಿರುವ ಮೂಲಕ ವಿಶ್ವಮಾರುಕಟ್ಟೆಗೂ ಕಾಲಿಟ್ಟಿರುವ ಈ ಸಂಘವು, Unರಿಯಲ್ ಎಸ್ಟೇಟ್ ಉದ್ಯಮದಲ್ಲೂ ಕಾಶ್ಮೀರ ಗಡಿಯಲ್ಲಿ ಭಾರತದೊಳಕ್ಕೆ ನುಸುಳುವಂತೆ ಒಳನುಸುಳಿ ಭರ್ಜರಿ ಮುನ್ನಡೆ ಸಾಧಿಸತೊಡಗಿದೆ.
ಈ ಬಗ್ಗೆ ಅಭಾಭಸಂ ಅಧ್ಯಕ್ಷರನ್ನು ಮಾತನಾಡಿಸಲಾಯಿತು. ಬೊಗಳೆ ಎಂದ ಕೂಡಲೇ ಉಗ್ರಗಾಮಿಯೆಂದುಕೊಂಡೇ ಬೆಚ್ಚಿಬಿದ್ದ ಅವರನ್ನು ನಿಮ್ಮ ಮುಂದಿನ ಗುರಿ ಏನು ಎಂದು ಪ್ರಶ್ನಿಸಲಾಯಿತು.

ಅದಕ್ಕೆ ಅವರು ಒಂದೇ ಮಾತಿನಲ್ಲಿ ನೀಡಿದ ಉತ್ತರ : "ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿ ಜನರು ಮಾರಣಹೋಮ ಇತ್ಯಾದಿಗಳಿಂದಾಗಿ ಹೆಚ್ಚು ಹೆಚ್ಚು ಪ್ರಮಾಣದಲ್ಲಿ ಜೀವ ಕಳೆದುಕೊಳ್ಳುತ್ತಿರುವುದರಿಂದ, ಇನ್ನು ಮುಂದೆ ನಾವು ಜೀವ ವಿಮಾ ಕ್ಷೇತ್ರಕ್ಕೂ ಕಾಲಿಡಲಿದ್ದೇವೆ"!

ಅಭಾಭಸಂದ ಈ ಘೋಷಣೆ ಕೇಳಿದ ತಕ್ಷಣವೇ ವಿಶ್ವಾದ್ಯಂತ ನಿರುದ್ಯೋಗಿಗಳು ಹೊಸ ಉದ್ಯೋಗಾವಕಾಶ ಸೃಷ್ಟಿಯಾದ ಬಗ್ಗೆ ಅತೀವ ಸಂತಸ ವ್ಯಕ್ತಪಡಿಸಿರುವುದಾಗಿ ವರದಿಯಾಗಿದ್ದು, ಇದಕ್ಕೆ ಅವಕಾಶ ಮಾಡಿಕೊಟ್ಟಿರುವ ಕೇಂದ್ರದಲ್ಲಿಲ್ಲದ ಸರಕಾರದ ಸಾಧನೆಯನ್ನು ಪ್ರಶಂಸಿಸಿದ್ದಾರೆ.

ಎಂಜಿನ್ ಇಲ್ಲದ ರೈಲು: ಬ್ರೇಕಿಂಗ್ ನ್ಯೂಸ್ ಅಲ್ಲವೆಂದ ಬೊ.ರ.

[ಬೊಗಳೂರು ಪಟ್ಟೆ-ರಹಿತ ರೈಲು ಬ್ಯುರೋ] ಬೊಗಳೂರು: ಆಫ್‌ಲೈನ್ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯೊಂದು ಆನ್‌ಲೈನ್ ಸಂಪಾದಕರ ಕಣ್ಣು ಕುಕ್ಕಿದ್ದು, ಎಂಜಿನ್ ಇಲ್ಲದೆ...