ಬೊಗಳೆ ರಗಳೆ

header ads

ಬೆಲೆ ಏರಿಕೆ ಹಿಂದಿನ ಕಾರಣ ಪತ್ತೆ

(ಬೊಗಳೂರು ಬೊಗಳೆ ಬ್ಯುರೋದಿಂದ)
ಬೊಗಳೂರು, ಮೇ 8- ಕಡಿಮೆ ತಿಂದರೆ ಹೆಚ್ಚು ಕಾಲ ಬದುಕಬಹುದು ಎಂದು ಇಲ್ಲಿ ಪ್ರಕಟವಾದ ವರದಿಯನ್ನು ದೇಶದ ಮೂಲೆ ಮೂಲೆಯಲ್ಲಿ ಪ್ರಕಟಿಸಿ ಗೋಡೆ ಗೋಡೆಯಲ್ಲಿ ಅಂಟಿಸುವ ಆಂದೋಲನ ಭರದಿಂದ ಸಾಗಿದೆ ಎಂದು ವರದಿಯಾಗಿದೆ.

ಚುನಾವಣೆ ಸಂದರ್ಭ ಪಾಯಿಖಾನೆ ಗೋಡೆಯನ್ನೂ ಬಿಡದೆ ಎಲ್ಲೆಂದರಲ್ಲಿ ಗೋಡೆಗಳನ್ನು ಅಲಂಕರಿಸುತ್ತಿರುವ ಚುನಾವಣಾ ಪೋಸ್ಟರ್ ಹಚ್ಚುವ ಕಾರ್ಯ ಇದಾಗಿದೆಯೇ ಅಥವಾ ಎಡಪಂಥದಲ್ಲಿರುವವರು ತಮ್ಮ ಬೆಂಬಲವನ್ನು ಬಲಕ್ಕೆ ವಾಲಿಸಿಕೊಂಡರೇ ಎಂದು ತೀವ್ರ ಸಂಶಯಗೊಂಡ ಬೊಗಳೆ ರಗಳೆ ಬ್ಯುರೋ, ಈ ವರದಿಯ ಬೆನ್ನು ಹತ್ತಿದಾಗ ಹತ್ತಿದ ತಕ್ಷಣವೇ ಧಢಾರನೆ ಕೆಳಕ್ಕೇ ಬೀಳಬೇಕಾದ ಪ್ರಸಂಗವೊಂದು ಎದುರಾಯಿತು.

ಇದಕ್ಕೆ ಕಾರಣ, ಈ ಪೋಸ್ಟರ್ ಅಂಟಿಸುವಿಕೆ ಕಾರ್ಯದಲ್ಲಿ ಕೇಂದ್ರ ಸರಕಾರದ ಕೈವಾಡವಿರುವುದು ಸಾಬೀತಾಗಿರುವುದು!
ಕೇಂದ್ರದಲ್ಲಿ ಅಧಿಕಾರ"ಗ್ರಹಣ" ಮಾಡಿದಂದಿನಿಂದಲೂ ಜನಸಾಮಾನ್ಯರು ಬದುಕಲು ಬೇಕಾಗಿರುವ ಆಹಾರ ಧಾನ್ಯಗಳ ಬೆಲೆ ಗಗನಕ್ಕೇರುತ್ತಲೇ ಇರುವ ಕುರಿತು ಬೊಗಳೆ ರಗಳೆ ಬ್ಯುರೋವು ದಿನ1ರಿಂದಲೇ ವರದಿ ಪ್ರಕಟಿಸಲಾರಂಭಿಸಿತ್ತು.

ಇದರಿಂದ ತೀವ್ರ ಕಳವಳಕ್ಕೀಡಾಗಿರುವ ಸರಕಾರವು, ಇದೀಗ ಈ ಅಧ್ಯಯನ ವರದಿಯನ್ನು ಅಲ್ಲಲ್ಲಿ ಅಂಟಿಸಿ, ಜನಜಾಗೃತಿ ಉಂಟು ಮಾಡುತ್ತಾ, ಕಡಿಮೆ ತಿನ್ನಿ ಕಡಿಮೆ ತಿನ್ನಿ ಎಂದು ಜನರನ್ನು ಪ್ರೇರೇಪಿಸುತ್ತಿದೆ.

ಈ ಪ್ರೇರೇಪಣೆ ಆಂದೋಲನದಿಂದ ಪ್ರೇರಣೆಗೊಳ್ಳದಿರುವವರಿಗಾಗಿಯೇ ತಾವು ಬೆಲೆ ಏರಿಕೆ ನೀತಿ ಅನುಸರಿಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿರುವ ಕೇಂದ್ರವು, ಜನರೆಲ್ಲಾ ನೂರ್ಕಾಲ ಬಾಳಬೇಕು ಎಂಬುದು ನಮ್ಮ ಮಹದಾಶೆ ಎಂದು ಸ್ಪಷ್ಟಪಡಿಸಿದೆ. ಆದರೆ ಇದು ಅಸ್ಥಿಪಂಜರಗಳು ಸೃಷ್ಟಿಯಾಗುವ ಸಾಧ್ಯತೆ ಇರುವುದರಿಂದ, ಆ ಪ್ರಮಾಣದಲ್ಲಿ ಆಹಾರ ಸೇವಿಸದೆ ಇರಬಾರದು ಎಂದೂ ಸರಕಾರ ಜನತೆಗೆ ಕಳಕಳಿಯ ಮನವಿ ಮಾಡಿಕೊಂಡಿರುವುದಾಗಿ ಒದರಿ ಹೇಳಿದ್ದು, ಬಡತನ ನಿರ್ಮೂಲನೆಗೂ ತಾವು ಯತ್ನಿಸುತ್ತಿಲ್ಲ ಎಂದು ಹೇಳಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

6 ಕಾಮೆಂಟ್‌ಗಳು

  1. ಗಾಳಿ ಮತ್ತು ನೀರನ್ನು ಮಾತ್ರ ಸೇವಿಸುವದರಿಂದ, ಪೂರ್ವಕಾಲದ ಋಷಿಗಳು ಚಿರಂಜೀವಿಗಳಾಗಿ ಉಳಿಯುವದರ ಗುಟ್ಟು ಈಗ ಗೊತ್ತಾಯಿತು! ಈ ಫಾರ್ಮುಲಾ ಬಳಸುವದರಿಂದ ರೈತರ ಆತ್ಮಹತ್ಯೆಯನ್ನು ಸಹ ತಡೆಯಬಹುದಲ್ಲವೆ?

    ಪ್ರತ್ಯುತ್ತರಅಳಿಸಿ
  2. ಸುನಾಥರೇ, ರೈತರ ಆತ್ಮಹತ್ಯೆ ತಡೆದರೆ ನಮ್ಮ ಜಾರಕಾರಣಿಗಳ ಪಾಲಿನಲ್ಲಿ ಖೋತಾ ಆಗಿ ಅವರ ಹೊಟ್ಟೆಬಟ್ಟೆಗೆ ಕಡಿಮೆಯಾಗುತ್ತಲ್ಲ. ಅದಕ್ಕೇನು ಮಾಡೋಣ?

    ಪ್ರತ್ಯುತ್ತರಅಳಿಸಿ
  3. ಸುನಾಥರೆ,
    ಗಾಳಿ ಸೇವನೆಗೆ ಇನ್ನು ತೆರಿಗೆ ವಿಧಿಸಿ ಬಂದ ಹಣದಿಂದ ವಿದೇಶಗಳ ಸಾಲ ಮನ್ನಾಕ್ಕೆ ಕೇಂದ್ರವು ಯೋಚಿಸುತ್ತಿರುವುದರಿಂದ ದೇಶದ ಜನಸಂಖ್ಯೆ ಕಡಿತಗೊಳ್ಳುವ ಸಾಧ್ಯತೆಗಳು ನಿಚ್ಚಳವಾಗಿ ತೋರುತ್ತಿದೆ.

    ಪ್ರತ್ಯುತ್ತರಅಳಿಸಿ
  4. ಸುಪ್ತ ದೀಪ್ತಿ ಅವರೆ,
    ಜಾರಕಾರಣಿಗಳ ಹೊಟ್ಟೆಗೆ ಕಡಿಮೆಯಾಗುತ್ತದೆ ಹೌದು. ಆದರೆ ಬಟ್ಟೆಗೆ ಕಡಿಮೆಯಾಗೋದು ಅಂತ ನಾವು ಕೇಳಿದ್ದು ಚಿತ್ರ ನಟೀಮಣಿಯರಿಗೆ ಮಾತ್ರ.

    ಪ್ರತ್ಯುತ್ತರಅಳಿಸಿ
  5. ಕಳೆದ ವಾರ ನಾನು ವಿಶ್ವ ಪರ್ಯಟನೆ ಮಾಡುತ್ತಿದ್ದುದರಿಂದ ಹಳಸಲು ಸುದ್ದಿಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ :D

    ಪ್ರತ್ಯುತ್ತರಅಳಿಸಿ
  6. ಶ್ರೀನಿವಾಸರೆ
    ನಾವು ವಿಶ್ವ ಪರ್ಯಟನೆಗೆ ಹೋಗಿದ್ದರಿಂದಾಗಿ ಸುದ್ದಿ ಹಳಸಲು ಆಯಿತೇ ಎಂಬುದೇ ನಮಗೆ ಶಂಕೆ. ತಕ್ಷಣವೇ ವಾಪಸ್ ಬರತಕ್ಕದ್ದು.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D