Wednesday, June 27, 2007

7 ಅದ್ಭುತಗಳ ಪಟ್ಟಿಯಲ್ಲಿ ಬಿಪಾಶಾ, ಜನಸಾಮಾನ್ಯ

(ಬೊಗಳೂರು ಅತ್ಯದ್ಭುತ ಬ್ಯುರೋದಿಂದ)
ಬೊಗಳೂರು, ಜೂ.27- ಜಗತ್ತಿನ ಏಳು ಅದ್ಭುತಗಳ ಪಟ್ಟಿಯಲ್ಲಿ ಬಿಪಾಶಾ ಬಸುವನ್ನು ಸೇರಿಸಿರುವುದರಿಂದ ಅಚ್ಚರಿಗೊಂಡ ಬೊಗಳೆ ರಗಳೆ ಬ್ಯುರೋ, ಉಳಿದ ಆದ್ಭುತಗಳು ಯಾವುವು ಎಂಬುದರ ಬಗ್ಗೆ ಕೂಲಂಕಷ ವಿಚಾರಣೆ ಆರಂಭಿಸಿತು.

ಈ ಸ್ಥಾನಕ್ಕೆ ಅತ್ಯಂತ "ಸರಳ"ವಾದ ಉಡುಗೆ ಧರಿಸುವ ರಾಖೀ ಸಾವಂತ್ ಹೆಸರೂ ಚಾಲ್ತಿಯಲ್ಲಿದೆ ಎಂಬುದು ಕೂಡ ತಿಳಿದುಬಂದಾಗ, ಇನ್ನಷ್ಟು ಮಂದಿಯ ಹೆಸರನ್ನು ಇದಕ್ಕೆ ಸೇರಿಸಬಹುದು ಎಂದು ನಿರ್ಧರಿಸಿದ ನಮ್ಮ ಬ್ಯುರೋ, ಆ ವಿಷಯವನ್ನು ಅಲ್ಲಿಗೇ ಕೈಬಿಟ್ಟು ಬೇರೆ ಸಂಗತಿಗಳತ್ತ ದೃಷ್ಟಿ ಹೊರಳಿಸಿತು.

ಇನ್ನುಳಿದ ಐದು ಅದ್ಭುತಗಳನ್ನು ಪಟ್ಟಿ ಮಾಡುವ ಹೊಣೆಗಾರಿಕೆಯನ್ನು ಬೊಗಳೆ ರಗಳೆ ಬ್ಯುರೋಗೆ ವಹಿಸಲಾಗಿದ್ದು, ಇದಕ್ಕಾಗಿ ಓದುಗರಿಂದ ಅಭಿಪ್ರಾಯ ಸಂಗ್ರಹಿಸಲು ನಿರ್ಧರಿಸಲಾಗಿದೆ.

ನಮ್ಮ ಬ್ಯುರೋ ಸಿದ್ಧಪಡಿಸಿರುವ ಪಟ್ಟಿಯು ಈ ಕೆಳಗಿನಂತಿದೆ.

1. ರಾಜಕಾರಣಿ : ಎಷ್ಟೇ ಹಗರಣಗಳನ್ನು ತಲೆಯಿಂದ ಕಾಲಿನ ವರೆಗೆ ಲೇಪಿಸಿಕೊಂಡರೂ ಕಾನೂನಿನ ಕೈಯಿಂದ ಬಚಾವಾಗುತ್ತಾ, ಕಾನೂನನ್ನೇ ಬದಲಿಸುತ್ತಾ, ಆಗಾಗ್ಗೆ ಮಾಯವಾಗುತ್ತಾ, ಸಂಸತ್ತು/ವಿಧಾನ ಸಭೆಗಳಲ್ಲಿ ಗದ್ದಲ ಎಬ್ಬಿಸುತ್ತಿದ್ದರೂ, ಮತ್ತೆ ಮತ್ತೆ ಆರಿಸಿಬರುವ ಸಾಧನೆ.

2. ರಾಜಕೀಯ ಪಕ್ಷ 1 : ನಮ್ಮಲ್ಲಿ ಅಧಿಕಾರವಿದೆ, ಯಾರನ್ನು ಬೇಕಾದರೂ ರಾಷ್ಟ್ರಪತಿ/ರಾಜ್ಯಪಾಲ ಸ್ಥಾನದಲ್ಲಿ ತಂದು ಕೂರಿಸುತ್ತೇವೆ, ಸಂವಿಧಾನದ ಪರಮೋಚ್ಚ ಸ್ಥಾನಕ್ಕೆ ಅರ್ಹತೆ ಅನಗತ್ಯವಾಗಿದ್ದು, ಆ ಸ್ಥಾನದಲ್ಲಿರುವವರಿಗೂ ರಾಜಕೀಯ ಕಲಿಸುತ್ತೇವೆ ಎನ್ನುತ್ತಿರುವ ಕಲಸು ಮೇಲೋಗರ ಪಕ್ಷಗಳು.

3. ರಾಜಕೀಯ ಪಕ್ಷ 2 : ಅಧಿಕಾರ ಇರಲೇಬೇಕಿಲ್ಲ, ಸದಾ ಕಚ್ಚಾಡುತ್ತಲೇ ಕಾಲ ಕಳೆಯುತ್ತಾ, ಚುನಾವಣೆ ಬಂದಾಗ ದಿಢೀರನೆ ಎಚ್ಚೆತ್ತುಕೊಂಡು ಒಂದಾಗುವ, ಬಳಿಕ ಅಷ್ಟೇ ವೇಗದಲ್ಲಿ ಬೇರ್ಪಡುವ, ಭಿನ್ನಮತ ಏನೂ ಇಲ್ಲ ಎಂದು ಪ್ರತಿದಿನ ಹೇಳಿಕೆ ಕೊಡುವ, ಹೇಳಿಕೆ ನಿರಾಕರಿಸುವ ಇನ್ನೊಂದು ಮಾದರಿಯ ಪಕ್ಷ.

4. ರಾಜಕೀಯ ಪಕ್ಷ 3 :
ನಾವು ಎಡಚರು, ಕಾಂಗ್ರೆಸ್ ಬದ್ಧ ವಿರೋಧಿಗಳು, ಉಳಿದವರೆಲ್ಲಾ ಕೋಮುವಾದಿಗಳು ಎನ್ನುತ್ತಲೇ, ತಾವು ಕೂಡ ಒಂದು ಸಮುದಾಯದ ಓಲೈಕೆಗೆ ಹೊರಟಿದ್ದರೂ, ನಾವು ಜಾತ್ಯತೀತರು, ಶ್ರೀಮಂತಿಕೆಯಲ್ಲಿ ಎಲ್ಲರಿಗೂ ಸಮಾನತೆ ಬೇಕು, ನಮಗೆ ಮಾತ್ರ ಹೆಚ್ಚು ಬೇಕು ಎನ್ನುತ್ತಾ, ಸರಕಾರ ಕಾರ್ಯ ನಿರ್ವಹಣೆ ಒಂಚೂರು ಇಷ್ಟವಿಲ್ಲ, ಅದರ ಕಾಲನ್ನು ಈಗ ಎಳೆಯುತ್ತೇವೆ ಎನ್ನುತ್ತಾ ವರ್ಷಗಟ್ಟಲೆ ದಿನ ದೂಡುತ್ತಿರುವವರು.

5. ರಾಜಕೀಯ ಪಕ್ಷ 4 : ಮೂರನೇ ರಂಗ ಕಟ್ಟುತ್ತೇವೆ, ಅದಾಗದಿದ್ದರೆ ನಾಲ್ಕನೇ ರಂಗ ಕಟ್ಟುತ್ತೇವೆ ಎನ್ನುತ್ತಾ, ನಾವು ಎಲ್ಲರಿಂದ ಸಮಾನ ದೂರ ಎಂದುಕೊಳ್ಳುತ್ತಾ, ಆಗಾಗ್ಗೆ ವಿದಳನವಾಗುತ್ತಾ, ಮತ್ತೆ ಜೋಡಿಸಿಕೊಳ್ಳುತ್ತಾ ಇದ್ದರೂ, ಚುನಾವಣೆ ಸಂದರ್ಭ ಒಂದೊಂದು ಬಾರಿ ದಿಢೀರನೇ ಆರಿಸಿಬರುವವರು.

6. ಪೊಲೀಸರು :
ಯಾವುದೇ ರಾಜ್ಯದಲ್ಲಿ ಯಾವುದೇ ಪಕ್ಷವು ಅಧಿಕಾರ ಬಂದಾಗ, ಅದರ ತಾಳಕ್ಕೆ ತಕ್ಕಂತೆ ಕುಣಿಯಬೇಕಾದವರು ಎಂದು ಕರೆಸಿಕೊಳ್ಳುತ್ತಿರುವವರು.

ಹಾಗಿದ್ದರೆ ಕೊನೆಯ ಅದ್ಭುತ???
----
----
----

ಇದನ್ನು ಜಗತ್ತಿನ ಏಳನೇ ಅದ್ಭುತ ಅಥವಾ ಎಂಟನೇ ಅದ್ಭುತ ಎಂದೂ ಕರೆಯಬಹುದಾಗಿದೆ. ಆಯ್ಕೆ ಓದುಗರಿಗೆ ಬಿಟ್ಟದ್ದು.

7. ತೆರಿಗೆ ತಪ್ಪಿಸಿಕೊಳ್ಳುತ್ತಿರುವ ಜಾರಕಾರಣಗಳ ಐಷಾರಾಮಿ ಜೀವನಕ್ಕಾಗಿ, ತಾನು ಕಷ್ಟಪಟ್ಟು ದುಡಿದ ಹಣವನ್ನು ತೆರಿಗೆ ರೂಪದಲ್ಲಿ ಕಟ್ಟಿ ಕಟ್ಟಿ ಸುಸ್ತಾಗಿ, ಏರುತ್ತಿರುವ ಬೆಲೆಗಳನ್ನು ಆಕಾಶದಲ್ಲೇ ದೃಷ್ಟಿಸಿ ನೋಡುತ್ತಾ ಏನೂ ಮಾಡಲಾರದೆ ಕೈಚೆಲ್ಲಿ ಕೂತಿರುವ ಬಡ ಪ್ರಜೆ!!!

Monday, June 25, 2007

ಭಾ(ರೀ) ಜ(ಗ್ಗಾಡೋ) ಪ(ಕ್ಷ)ದಲ್ಲಿ ಭರ್ಜರಿ ಬದಲಾವಣೆ

(ಬೊಗಳೂರು ಅರಾಜಕೀಯ ಬ್ಯುರೋದಿಂದ)
ಬೊಗಳೂರು, ಜೂ.25- ರಾಜ್ಯದ ಭಾರೀ ಜಗ್ಗಾಟ ಪಕ್ಷ(ಭಾಜಪ)ದಲ್ಲಿ ಉತ್ತರ ಧ್ರುವವು ದಕ್ಷಿಣ ಧ್ರುವಕ್ಕೂ, ದಕ್ಷಿಣ ಧ್ರುವವು ಉತ್ತರ ದಿಕ್ಕಿಗೂ ಆಗಾಗ್ಗೆ ಚಲಿಸುತ್ತಾ ಸಂಚಲನ ಮೂಡಿಸುತ್ತಿರುವುದು ಹೊಸ ವಿದ್ಯಮಾನವಾಗಿದೆ.

ಆಗಾಗ್ಗೆ ಬೇರ್ಪಡುವ ಈ ಎರಡೂ ಧ್ರುವಗಳು ಮತ್ತೆ ಮತ್ತೆ ಒಂದುಗೂಡುವ ಪ್ರಕ್ರಿಯೆಯು ಹೊಸ ನೈಸರ್ಗಿಕ ಪ್ರಕೋಪವೇ ಎಂದು ಬೊಗಳೂರಿನ ಜನತೆ ತೀವ್ರ ಆತಂಕ ವ್ಯಕ್ತಪಡಿಸಿರುವುದಾಗಿ ವರದಿಯಾಗಿದ್ದು, ಇದು ಮತ್ತೊಂದು ಬಾರಿ ಬೇರ್ಪಡುವ ಹೊಸ ಯತ್ನ ಎಂದು ವಿಶ್ಲೇಷಿಸಲಾಗುತ್ತಿದೆ.

ಇದಲ್ಲದೆ, ಈ ಹಿಂದೆ ಚುನಾವಣೆ ಫಲಿತಾಂಶ ಹೊರಬರುವ ಮೊದಲೇ ಮಂತ್ರಿ-ಮುಖ್ಯಮಂತ್ರಿ ಅಭ್ಯರ್ಥಿಗಾಗಿ ತಾಕಲಾಟ ನಡೆಸಿದ್ದ ಅನುಭವೀ ಪಕ್ಷವೊಂದು ಅಧಿಕಾರ ಸಿಕ್ಕಾಗ ತಮ್ಮ ಕಚೇರಿಯೊಳಗೆ ಸಾಕಷ್ಟು ಉಸುಕು ತಂದು ಮುಸುಕಿನೊಳಗೆ ಅದನ್ನು ಹಾಕಿ ಗುದ್ದಾಟ ನಡೆಸುತ್ತಿರುವುದು ಸರ್ವವಿದಿತ. ಇದಕ್ಕಾಗಿಯೇ ವರಿಷ್ಠರು ಮರಳು ತಂದು ಹಾಕಿ ಮರುಳು ಮಾಡುತ್ತಿದ್ದಾರೆ ಎಂದು ಒಂದು ಪಂಗಡವು ಬೊಗಳೆ ರಗಳೆ ಬ್ಯುರೋದೆದುರು ಅಲವತ್ತುಕೊಂಡಿದೆ.

ಗಿಟ್ಟಿಸಿಕೊಂಡ ಅಧಿಕಾರವನ್ನು ಕಳೆದುಕೊಳ್ಳುವುದು ಹೇಗೆ ಎಂಬ ಕುರಿತಾಗಿ ಪಕ್ಷದೊಳಗೆ ತೀವ್ರ ಚಟುವಟಿಕೆಗಳು ನಡೆಯುತ್ತಿರುವುದರಿಂದ ಆಗಾಗ್ಗೆ ಭೂಕಂಪವಾದಂತಹ ಸದ್ದು ಕೇಳಿ, ಪೋಖರಣ್ ಸ್ಫೋಟವನ್ನು ನೆನಪಿಸುವ ವಿದ್ಯಮಾನಗಳು ನಡೆಯುತ್ತಿರುವುದು ಸಾಮಾನ್ಯವಾಗಿರುವುದರಿಂದ ಜನತೆ ಭಯಭೀತರಾಗದಂತೆ ಕೋರಿಕೊಳ್ಳಲಾಗಿದೆ.

ಇತ್ತೀಚೆಗೆ ಮಂತ್ರಿ ಮಹೋದಯರ ಯುರೋಪ್ ಪ್ರವಾಸವನ್ನು ರದ್ದುಪಡಿಸಿದ ಕಾರಣದಿಂದಾಗಿ ದೇಶದೊಳಗಾದರೂ ವಿಮಾನದಲ್ಲಿ ಸುತ್ತೋಣ ಎಂದುಕೊಂಡಂತಿರುವ ಜಾರಕಾರಣಿಗಳು ಇದೀಗ ದೆಹಲಿ-ಬೆಂಗಳೂರು ವಿಮಾನ ಮಾರ್ಗದಲ್ಲಿ ಟ್ರಾಫಿಕ್ ಜಾಮ್ ಆಗುವಂತೆ ನೋಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಆಗಸದಲ್ಲಿ ಟ್ರಾಫಿಕ್ ಜಾಮ್ ಆದಲ್ಲಿ ಇನ್ನಷ್ಟು ಕಾಲ ಅರಸೊತ್ತಿಗೆಯ (ಅಧಿಕಾರದ) ಸುಖದ ಸುಪ್ಪತ್ತಿಗೆ ತೇಲಾಡುತ್ತಿರಬಹುದು, ಇಲ್ಲವಾದಲ್ಲಿ ಕೆಳಗಿಳಿಯಬೇಕಾದೀತು ಎಂಬುದರ ಅರಿವಿರುವ ಜಾರಕಾರಣಿಗಳು, ಈ ತಂತ್ರ ಹೂಡಿದ್ದಾರೆ ಎನ್ನಲಾಗುತ್ತಿದೆ.

ಬಿಜೆಪಿ ವರಿಷ್ಠರು ಕೇಂದ್ರದಿಂದ ಬಂದು, "ಗುಂಪುಗಾರಿಕೆ ಬೇಡ, ಜಗಳ ಬೇಡ, ಒಂದಾಗಿ ಇರಿ, ಅಸಮಾಧಾನವನ್ನು ಮಾಧ್ಯಮಗಳೆದುರು ಹೊರಗೆಡಹಬಾರದು, ಪಕ್ಷದ ವರ್ಚಸ್ಸು ಹಾಳು ಮಾಡಬೇಡಿ, ಕೆಸರಿಗೆ ಕಲ್ಲೆಸೆಯಬೇಡಿ" ಎಂಬಿತ್ಯಾದಿ ಈ ಹಿಂದೆ ರೆಕಾರ್ಡ್ ಮಾಡಿಟ್ಟುಕೊಂಡ ಸಲಹೆಗಳ ಪಟ್ಟಿಯನ್ನು ಮತ್ತೊಮ್ಮೆ ಪ್ಲೇ ಮಾಡಿ ಹೋಗುತ್ತಾರೆ. ಅವರು ಅತ್ತಕಡೆ ತೆರಳಿದ ತಕ್ಷಣ ಈ ಟೇಪ್ ರೆಕಾರ್ಡರ್ ಹಾಳಾಗುತ್ತದೆ ಮತ್ತು ಹಳೆಯ ಜಗಳ ಮರೆಯುವ ನಾಯಕರು, ಹೊಸ ಜಗಳ ಆರಂಭಿಸುತ್ತಾರೆ ಎಂದು ಶ್ರುತಪಟ್ಟಿದೆ.

ಆದರೆ, ಈ ಅಧಿಕಾರಕ್ಕಾಗಿನ ಕಿತ್ತಾಟದ ಮಧ್ಯೆ, ಎರಡು ಧ್ರುವಗಳ ಜಂಗೀಕುಸ್ತಿಯ ನಡುವೆ ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾಗುವುದಿಲ್ಲ, ಮೇಲಾಟ ಬದಲಾಗುವುದಿಲ್ಲ, ಎಳೆದಾಟ, ಕಿತ್ತಾಟ ಬದಲಾಗುವುದಿಲ್ಲ, ಕುರ್ಚಿಗಾಗಿ ಹಪಹಪಿಕೆ ಬದಲಾಗುವುದಿಲ್ಲ... ಹಾಗಿದ್ದರೆ ಏನು ಬದಲಾಗುತ್ತದೆ? ಎಂಬ ಪ್ರಶ್ನೆಗೆ ಬೊಗಳೆ ರಗಳೆಯ ಅಸತ್ಯಶೋಧನಾ ಸಮಿತಿಯು ಉತ್ತರ ಕಂಡುಕೊಂಡಿದೆ.
ಬದಲಾಗುವುದು: ಜಗಳ ನಿಲ್ಲಿಸಲು ಬರುವ ವರಿಷ್ಠ ನಾಯಕರು ಮಾತ್ರ!!!
ಈ ಹಿಂದೆ ವೆಂಕಯ್ಯ ನಾಯ್ಡು, ಅರುಣ್ ಜೇಟ್ಲಿ ಮತ್ತಿತರರು (ಸಾಕಷ್ಟು ಮಂದಿ ಬಂದು ಹೋಗುವುದರಿಂದ ಹೆಸರು ನೆನಪಿನಲ್ಲಿಟ್ಟುಕೊಳ್ಳುವುದು ಕಷ್ಟವಾಗುತ್ತಿದೆ) ಬಂದಿದ್ದಾರೆ, ಟೇಪ್ ರೆಕಾರ್ಡರ್ ಹಚ್ಚಿದ್ದಾರೆ, ಹೋಗಿದ್ದಾರೆ. ಇದೀಗ ಯಶವಂತ ಸಿನ್ಹಾ ಬಂದಿದ್ದಾರೆ ಹೋಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ವೈಮಾನಿಕ ಯಾತ್ರೆ ತೀರಾ ಅಗ್ಗವಾಗಿರುವುದರಿಂದಾಗಿ ಜಗಳ ದೆಹಲಿಗೆ ರವಾನೆಯಾಗಿದೆ.
______________________
[ಎರಡೇ ರೆಕ್ಕೆಯಲ್ಲಿ ಹಾರಾಡುತ್ತಿದ್ದ ಪಾತರಗಿತ್ತಿ ಇದೀಗ ನಾಲ್ಕು ರೆಕ್ಕೆಗಳನ್ನು ಒಟ್ಟಾಗಿಸಿಕೊಂಡು ಹೊಸ ಹೂದೋಟದಲ್ಲಿ ಹಾರಾಡುತ್ತಿದೆ. ಬೊಗಳೂರು ಬ್ಯುರೋದಿಂದ ಶುಭಾಶಯಗಳು.]

Saturday, June 23, 2007

ಆಕಾಶದಿಂದ ತಾರೆಗಳ ನಾಪತ್ತೆ

(ಬೊಗಳೂರು ಪತ್ತೆಹಚ್ಚೋ ಬ್ಯುರೋದಿಂದ)
ಬೊಗಳೂರು, ಜೂ.23- ಭೂಮಿಯಿಂದ ಈ ಹಿಂದೆ ದಿವ್ಯಾಭಾರತಿ, ಸೌಂದರ್ಯ ಮೊದಲಾದ ತಾರೆಗಳು ಕಣ್ಮರೆಯಾದ ಪ್ರಕರಣಗಳ ಬೆನ್ನಿಗೇ, ಈಗ ಆಕಾಶದಿಂದಲೂ ತಾರೆಗಳು ಕಣ್ಮರೆಯಾಗುತ್ತಿರುವುದು ತೀವ್ರ ಆತಂಕ ಮೂಡಿಸಿರುವ ವಿಚಾರವಾಗಿದೆ.

ಈ ವರದಿಯಿಂದ ಬೆಚ್ಚಿ ಬಿದ್ದ ಬೊಗಳೆ ಬ್ಯುರೋದ ಸಿಬ್ಬಂದಿ (ನಭೋಮಂಡಲಕ್ಕೆ) ನೆಗೆದುಬಿದ್ದ ಪರಿಣಾಮವಾಗಿ, ದಾರಿಯಲ್ಲೇ ತಾರೆಯೊಂದು ಧರೆಗಿಳಿಯುತ್ತಿರುವುದು ಕಂಡುಬಂತು. ಆದರೆ ಇದು ಭೂಮಿಯಿಂದಲೇ ಖುಷಿಯಿಂದಲೇ ನಾಪತ್ತೆಯಾಗಿ ಮತ್ತಷ್ಟು ಖುಷಿಯಿಂದ ಮರಳಿ ಬರುತ್ತಿರುವ ಸುನೀತಾ ವಿಲಿಯಮ್ಸ್ ಎಂಬ ತಾರೆ ಎಂಬುದು ಆಮೇಲೆ ಅರಿವಿಗೆ ಬಂದ ಬಳಿಕ ಬೊಗಳೆ ರಗಳೆ ಬ್ಯುರೋ ಇದ್ದ ಗಗನ ನೌಕೆಯು, ಅಟ್ಲಾಂಟಿಸ್ ನೌಕೆಗೆ ಡಿಕ್ಕಿ ಹೊಡೆಯದೇ, ಅದನ್ನು ತಡೆಯದೆ ಮುಂದೆ ಸಾಗಿ ತನಿಖೆ ಆರಂಭಿಸಿತು.

ಈ ಹಿಂದೆ ಕಲ್ಪನಾ ಚಾವ್ಲಾ ಎಂಬ, ಭೂಮಿಯಿಂದ ಆಗಸಕ್ಕೆ ತೆರಳಿದ ಧ್ರುವತಾರೆಯೊಂದು ಮರಳಿ ಬರುವಾಗಲೇ ಮರಳಿ ಬಾರದ ಲೋಕಕ್ಕೆ ತೆರಳಿ ಜಗತ್ತನ್ನು ದುಃಖದ ಮಡುವಿನಲ್ಲಿ ಮುಳುಗಿಸಿದ್ದ ಹಿನ್ನೆಲೆಯಲ್ಲಿ ಬೊಗಳೂರು ಬ್ಯುರೋ, ಅಟ್ಲಾಂಟಿಸ್ ನೌಕೆಗೆ ಶುಭ ಹಾರೈಸಿ ಮೇಲಕ್ಕೆ ಹಾರಿತು.

ಆದರೆ ನಿಜವಾದ ಕಾಳಜಿ, ಕಳಕಳಿ ವ್ಯಕ್ತವಾಗುವುದು ಆಗಸದಿಂದ ತಾರೆಯರು ಕಣ್ಮರೆಯಾಗುತ್ತಿರುವ ಸುದ್ದಿ ಇಲ್ಲಿ ಪ್ರಕಟವಾಗಿದ್ದರಿಂದ. ಇದಕ್ಕೆ ಬೇರೆಯೇ ಕಾರಣವಿದೆ ಎಂಬುದನ್ನು ಈ ಸಂದರ್ಭದಲ್ಲಿ ಪತ್ತೆ ಮಾಡಲಾಗಿದೆ. ಆಗಸದಲ್ಲಿ ಪ್ರೇಮಿಸುತ್ತಾ ಸುಖವಾಗಿದ್ದ ತಾರೆಯರು, ಇದೀಗ ಮಾನವರ ಕಾಟ ಇಲ್ಲಿಯೂ ಆರಂಭವಾಯಿತು ಎಂದು ತಿಳಿದುಕೊಂಡು, ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದರು ಎಂಬ ಅಮೂಲ್ಯವಾದ ಅಂಶವೊಂದನ್ನು ಓದುಗರ ಗಮನಕ್ಕೆ ತರಲಾಗುತ್ತಿದೆ.

ವರದಿಯಾಗಿರುವಂತೆ, ತಾರೆಯರು ಆಕಾಶದಲ್ಲೇ ಸ್ಫೋಟಗೊಂಡು ಆತ್ಮಹತ್ಯೆ ಮಾಡಿಕೊಳ್ಳಲು, ಪ್ರೇಮ ಪ್ರಕರಣಕ್ಕೆ ಪೋಷಕರ ವಿರೋಧವೇ ಕಾರಣ ಎಂದು ತಿಳಿದುಕೊಳ್ಳಲಾಗಿದೆ.

ಒಟ್ಟಿನಲ್ಲಿ ನಭೋಮಂಡಲದ ತಾರೆಗಳ ತೋಟಕ್ಕೂ, ಕಾಲೇಜು ಪರಿಸರದ ತಾರೆಗಳ ತೋಟಕ್ಕೂ ಯಾವುದೇ ವ್ಯತ್ಯಾಸಗಳಿಲ್ಲ. ಎರಡೂ ಕಡೆಯ ತಾರೆಗಳ ತೋಟದಲ್ಲಿ ತಾರೆಗಳು ಪರಾರಿಯಾಗಲು ಅಥವಾ ಕಣ್ಮರೆಯಾಗಲು ಕಾರಣ ಮಾತ್ರ ಏಕಪ್ರಕಾರವಾಗಿ ಇರುತ್ತದೆ ಎಂಬುದನ್ನು ಕಂಡುಕೊಳ್ಳಲಾಯಿತು.

Tuesday, June 19, 2007

'ಪತ್ನಿ ವೇತನಕ್ಕೂ ಪತಿಗೂ ಸಂಬಂಧ ಇರಲಿ'

(ಬೊಗಳೂರು ಅ(ನ)ರ್ಥ ಬ್ಯುರೋದಿಂದ)
ಬೊಗಳೂರು, ಜೂ.19- ಪತ್ನಿಯ ಆರ್ಥಿಕ ಸ್ಥಿತಿಗೂ ಪತಿಗೂ ಸಂಬಂಧ ಇಲ್ಲ ಎಂದು ಮಾನ್ಯ ನ್ಯಾಯಾಲಯವೇ ತೀರ್ಪು ನೀಡಿರುವುದನ್ನು ಬೊಗಳೂರಿನ ಸ್ತ್ರೀ ಸಮಾಜವು ವ್ಯಾಪಕವಾಗಿ ಸ್ವಾಗತಿಸಿದೆ.

ನ್ಯಾಯಾಲಯವಾದರೂ ಕನಿಷ್ಠಪಕ್ಷ ನಮ್ಮ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡಿದೆಯಲ್ಲಾ ಎಂದು ಹರ್ಷ ವ್ಯಕ್ತಪಡಿಸಿರುವ ಅಖಿಲ ಭಾರತ ಬೊಗಳೂರು ಸ್ತ್ರೀ ಸಮಾಜವು, ಬೊಗಳೆ ರಗಳೆ ಎದುರು ಧರಣಿ ನಡೆಸಿ ತನ್ನ ಹರ್ಷ ವ್ಯಕ್ತಪಡಿಸಿದೆ.

ನಮ್ಮ ಪತ್ರಿಕಾ ಕಚೇರಿ ಎದುರೇ ಈ ಸಮಾಜವು ಹರ್ಷಾಚರಣೆಯ ಧರಣಿ ನಡೆಸಿದ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ನಮ್ಮ ಬ್ಯುರೋ, ಕೆಲವೊಂದು ಮಹತ್ವದ ಅಂಶಗಳನ್ನು ಬಯಲಿಗೆಳೆಯುವಲ್ಲಿ ಯಶಸ್ವಿಯಾಯಿತು.

ಪ್ರಧಾನ ಅಂಶವೆಂದರೆ, ಪತ್ನಿ ದುಡಿಯಲು ಹೋಗಿ ತರುವ ಹಣವೆಲ್ಲಾ ಆಕೆಯ ಮೇಕಪ್‌ಗೆ ಸಾಕಾಗುತ್ತದೆ. ಹಾಗಾಗಿ ತಾವು ದುಡಿಯಲು ಹೊರಗೆ ಹೋಗುವುದೇ ಮೇಕಪ್‌ಗಾಗಿ. ತಾವು ಸಂಪಾದಿಸುವ ಹಣಕ್ಕೂ ಪತಿಗೂ ಸಂಬಂಧವೇ ಇರಬಾರದು ಎಂಬುದು ಅವರು ಹುಟ್ಟಿದಾರಭ್ಯ ಮಾಡುತ್ತಿದ್ದ ವಾದವಾಗಿತ್ತು.

ಅವರು ಯಾಕಾಗಿ ಬೀದಿಗಿಳಿದರು ಎಂಬುದನ್ನು ಕೂಡ ಅಧ್ಯಯನ ನಡೆಸಲಾಗಿದೆ. ಹೆಂಡಸರಾಯಿ ಕುಡಿಯಲೆಂದೇ ಹೆಂ(ಡ)ಗಸರನ್ನು ಪೀಡಿಸುತ್ತಾ ಮತ್ತು ಅವರ ದುಡಿತದ ಹಣವನ್ನು ಕಿತ್ತುಕೊಳ್ಳಲು ಗಂಗ(ಡ)ಸರು ಯತ್ನಿಸುತ್ತಿರುವ ಪ್ರಕರಣಗಳು ಇತ್ತಿತ್ತಲಾಗಿ ಹೆಚ್ಚಾಗತೊಡಗಿವೆ. ಇದು ಸ್ತ್ರೀ ಸಮಾಜವನ್ನು ಕೆರಳಿಸಿತ್ತು.

ಈ ಸಮಾಜದಲ್ಲಿ ಇನ್ನೊಂದು ವರ್ಗದ ಮಹಿಳಾ ಸಮಾಜವೂ ಸೇರಿಕೊಂಡಿತ್ತು. ಆದರೆ ಅಲ್ಲಿ ಕೇಳಿಬಂದಿದ್ದು ಮಾತ್ರ ತದ್ವಿರುದ್ಧ ಧ್ವನಿ. ಪತ್ನಿಯ ಕೈಯಲ್ಲಿ ನಯಾಪೈಸೆ ಇಲ್ಲದಿದ್ದರೆ ಪತಿಯೇ ಎಲ್ಲವನ್ನು ನೀಡಬೇಕಾಗುತ್ತದೆ. ಆದುದರಿಂದ ಪತ್ನಿಯ ಆರ್ಥಿಕ ಸ್ಥಿತಿಗೂ, ಪತಿಗೂ ಸಂಬಂಧವಿಲ್ಲ ಎಂಬುದನ್ನು ನಾವು ವಿರೋಧಿಸುತ್ತೇವೆ ಎಂದು ಅವರು ಕೂಗೆಬ್ಬಿಸಿದ್ದಾರೆ.

ಒಂದು ವೇಳೆ ನಮ್ಮಲ್ಲಿ ನಯಾಪೈಸೆ ಇದ್ದರೆ ಅದು ಮೇಕಪ್ ಕಿಟ್ ಕೊಳ್ಳಲು ಅಲ್ಲಿಂದಲ್ಲಿಗೆ ಸಾಕಾಗಬಹುದಾದ ಸಾಧ್ಯತೆಗಳನ್ನು ಊಹಿಸಬಹುದು, ಆದರೆ ಚಿನ್ನ ಕೊಳ್ಳಲು, ಸೀರೆ ಕೊಳ್ಳಲು ಎಲ್ಲದಕ್ಕೂ ಪತಿಯೇ ಆರ್ಥಿಕ ಸಹಾಯ ಮಾಡಬೇಕು. ಹಾಗಿರುವಾಗ ಸಂಬಂಧವೇ ಇಲ್ಲ ಎನ್ನುವುದು ಎಷ್ಟರ ಮಟ್ಟಿಗೆ ಸರಿ ಎಂದವರು ಪ್ರಶ್ನಿಸಿದ್ದಾರೆ.

Friday, June 15, 2007

ತಲೆತೆಗಿ ಚಿತ್ರದಲ್ಲಿ ಮಂಪರು ಪರೀಕ್ಷೆ ಸುಲಭ!

(ಬೊಗಳೂರು ತಲೆತೆಗೆಯೋ ಸಲಹೆ ಬ್ಯುರೋದಿಂದ)

ಬೊಗಳೂರು, ಜೂ.15- ಖಾನಾಪುರದಲ್ಲಿ ಸಿಕ್ಕಾಪಟ್ಟೆ ಖಾನಾ ತಿಂದು ಕೈಯನ್ನು ಬೇರೆ ಬೇರೆ ರಣಹದ್ದುಗಳಂತಿರುವ ಬೆಕ್ಕುಗಳ ಮುಸುಡಿಗೆ ಒರೆಸಿರುವ ಕರೀಂ ತಲೆತೆಗಿ ಬಗ್ಗೆ ಸಿನಿಮಾ ನಿರ್ಮಾಣವಾಗುತ್ತಿರುವ ಸುದ್ದಿ ಕೇಳಿ ಬೊಗಳೂರು ಬ್ಯುರೋ ಬೆಚ್ಚಿ ಬಿದ್ದಿದೆ.

ಇದಕ್ಕೆ ಪ್ರಧಾನ ಕಾರಣವೆಂದರೆ ಛಾಪಾ ಕಾಗದದ ಪಾಪ ಕೂಪದಲ್ಲಿ ಬೊಗಳೆ ರಗಳೆ ಬ್ಯುರೋದ ಹೆಸರು ಕೂಡ ಚಲನಚಿತ್ರದಲ್ಲಿ ಪ್ರಕಟವಾಗುತ್ತದೆಯೇ ಎಂಬ ಒಂದು ಸಣ್ಣ ಮತ್ತು ಲೆಕ್ಕಕ್ಕಿಲ್ಲದ ಅಂಶ.

ಅದಲ್ಲದೆ ಈ ಛಾಪಾ ಕಾಗದದ ಕಾರುಬಾರಿನಿಂದ ಬಂದ ಹಣವನ್ನು ಕಾರು ಕೊಳ್ಳಲು ಮತ್ತು ಡ್ಯಾನ್ಸ್ ಬಾರುಗಳಲ್ಲಿ ಸುರಿಯಲು (ಬೇರೆಯವರ) ತಲೆತೆಗಿ ಸಂಚು ರೂಪಿಸಿದ್ದ ಎಂಬುದು ಕೂಡ ವರದಿಯಾಗಿದೆ. ಹೀಗಿರುವಾಗ ಹೇಗಾದರೂ ಮಾಡಿ ಈ ಹಗರಣದ ಮಸಿಯನ್ನು ತನ್ನ ಮೈಯಿಂದ ತೊಳೆದುಕೊಳ್ಳಲು ನಿರ್ಧರಿಸಿರುವ ಬೊಗಳೂರು ಬ್ಯುರೋ, ಇದೀಗ ಸಿನಿಮಾ ನಿರ್ಮಾಪಕರಿಗೆ ಖರ್ಚು ಕಡಿಮೆ ಮಾಡಿಸಲು ಒಂದು ಸಲಹೆ ಕೊಟ್ಟಿದೆ.

ಆ ಸಲಹೆಯ ಪರಿಣಾಮವೇ ಅದರಲ್ಲಿ ಸಾಕೀ ವಸ್ತ್ರಾಂತ ಹೇಳುತ್ತಿರುತ್ತಿರುವ ರಾಖಿ ಸಾವಂತ್ ಮತ್ತು ಸಂ-ಭಾವನೆ ಕೆರಳಿಸುತ್ತಿರುವ ಸಂಭಾವನಾ ಸೇಠ್ ಸೇರ್ಪಡೆ.

ತಲೆತೆಗಿಯು ಬೇರೆಯವರ ತಲೆ ತೆಗೆಯುವ ನಿಟ್ಟಿನಲ್ಲಿ ಹೆಸರು ಬಹಿರಂಗಪಡಿಸಲು ಆತನಿಗೆ ಮಂಪರು ಪರೀಕ್ಷೆ ನಡೆಸಲಾಗುತ್ತದಷ್ಟೇ? ಆದರೆ ಕುಡಿದು ಕುಡಿದೂ ಅಮಲಿಗೆ immune ಆಗಿಬಿಟ್ಟಿದ್ದ ತಲೆತೆಗಿಗೆ ಎಷ್ಟೇ ಔಷಧ ನೀಡಿದರೂ ಮಂಪರುನಿದ್ರೆಗೆ ಜಾರುತ್ತಿರಲಿಲ್ಲ. ಆ ಕಾರಣಕ್ಕೆ ಆತ ಮಾದಕತೆಯಲ್ಲಿ ತೇಲಾಡುವಂತಾಗುವ ನಿಟ್ಟಿನಲ್ಲಿ ಈ ಮಾದಕ ನಟಿಯರನ್ನು ಸೇರಿಸಿಕೊಳ್ಳಲು ನಮ್ಮ ಬ್ಯುರೋ ಸಲಹೆ ಮಾಡಿದೆ ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಮೂಲಗಳು ವರದಿ ಮಾಡಿವೆ.

Thursday, June 14, 2007

ರಾಷ್ಟ್ರಪತಿ ಚುನಾವಣೆ: ತಲೆಮರೆಸಿಕೊಂಡ ಬೊಗಳೆ

(ಬೊಗಳೂರು ಭಯಭೀತ ಬ್ಯುರೋದಿಂದ)
ಬೊಗಳೂರು, ಜೂ.14- ನಮ್ಮಲ್ಲೀಗ ಅಧಿಕಾರವಿದೆ, ನಮ್ಮದು ರಾಷ್ಟ್ರ ಪಿತನ ಪಕ್ಷ, ನಾವು ಯಾರನ್ನು ಬೇಕಾದರೂ ನಾವು ರಾಷ್ಟ್ರಕ್ಕೆ ಪತಿಯಾಗಿಸುತ್ತೇವೆ ಎಂದು ಹೊರಟಿರುವ ಕಾಂguess ತಂತ್ರದಿಂದ ತೀರಾ ಕಳವಳಕ್ಕೀಡಾಗಿರುವ ಬೊಗಳೂರು ಏಕಸದಸ್ಯ ಬ್ಯುರೋದ ಸಮಸ್ತ ಸಿಬ್ಬಂದಿಗಳು, ಕಣ್ಣಿಗೆ ತೋಚಿದ ಜಾಗದಲ್ಲಿ ತಲೆ ಮರೆಸಿಕೊಳ್ಳಲು ಶುರುಹಚ್ಚಿಕೊಂಡಿದ್ದಾರೆ.

ಸಂವಿಧಾನದ ಪರಮೋಚ್ಚ ಹುದ್ದೆಗೆ ಕಳಂಕ ತರುವ ಇಂಥಹ ಪ್ರಯತ್ನಗಳಿಗೆ ಎಲ್ಲೆಡೆಯಿಂದ ಪ್ರಶಂಸೆಗಳು ವ್ಯಕ್ತವಾಗುತ್ತಿರುವಂತೆಯೇ, ಇದನ್ನು ಬಲವಾಗಿ ವಿರೋಧಿಸಿರುವ ಬೊಗಳೆ ರಗಳೆ ಬ್ಯುರೋ ಸಂಪಾದಕರು, ಎಲ್ಲಿಯಾದರೂ ತಮ್ಮನ್ನೂ ಆ ಹುದ್ದೆಗೇರಿಸಿದರೆ ಎಂಬ ಭೀತಿಯಲ್ಲಿ ಪರಾರಿಯಾಗಿದ್ದಾರೆ.

ಅದೂ ಅಲ್ಲದೆ, ತಮ್ಮನ್ನು ಆ ಹುದ್ದೆಗೇರಿಸಿ, "ಕಳಂಕಗಳಲ್ಲೇ ನಂ.1" ಎಂಬ ಅತ್ಯಂತ ಅಮೂಲ್ಯವಾದ ಪಟ್ಟವನ್ನು ತಾನೇ ಅಲಂಕರಿಸಿ ದೇಶ ವಿದೇಶದಲ್ಲಿ ಕೀರ್ತಿ ಪತಾಕೆ ಹಾರಿಸುವ ಕಾಂguess ತಂತ್ರದ ಸಂಚಿಗೆ ಬಲಿಯಾಗದಿರಲು ಬೊಗಳೆ ಬ್ಯುರೋ ನಿರ್ಧರಿಸಿದೆ.

ಪ್ರಮುಖ ಪ್ರಾದೇಶಿಕ ಪಕ್ಷಗಳ ನಾಯಕರ "ದೆಹಲಿ ಭೇಟಿ" ಎಂಬ ಕಾರ್ಯಕ್ರಮವು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯ ಬಗ್ಗೆ ತನಿಖೆ ನಡೆಸಿದಾಗ ಅತ್ಯಮೂಲ್ಯ ಸಂಗತಿಯೊಂದು ಬಯಲಾಗಿದೆ. "ಆ ಹುದ್ದೆಗಾಗಿ ನಾವು ಇನ್ನೂ ಹುಡುಕಾಟ ಮುಂದುವರಿಸಿದ್ದೇವೆ. ಯಾರು ಸಿಗುತ್ತಾರೋ ಕಾದು ನೋಡಬೇಕು, ಯಾರು ಬೇಕಾದರೂ ಆಗಬಹುದು" ಎಂದು ಬಹಿರಂಗವಾಗಿ ಘೋಷಿಸುತ್ತಾ, "ಒಟ್ಟಿನಲ್ಲಿ ಅವರಿಗೆ ರಾಜಕೀಯ ತಿಳಿದಿರಬೇಕು" ಎಂದು ಯಾರಿಗೂ ಕೇಳಿಸದಂತೆ ಪಕ್ಷವು ಈಗಾಗಲೇ ಸ್ಪಷ್ಟಪಡಿಸಿರುವುದೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ.

ನಾವೀಗಾಗಲೇ ಗೋವಾ, ಜಾರ್ಖಂಡ್ ಮತ್ತು ಬಿಹಾರಗಳಲ್ಲಿ ಆಯಾ ರಾಜ್ಯಗಳ ಸಾಂವಿಧಾನಿಕ ಪ್ರಧಾನ ಹುದ್ದೆಯಾದ ರಾಜ್ಯಪಾಲರಿಗೆ ರಾಜಕೀಯ ಕಲಿಸಿ ಎಲ್ಲೆಲ್ಲೂ ಕೀರ್ತಿಯ ಪತಾಕೆ ಹಾರಿಸಿದ್ದೇವೆ. ಈ ಕಾರಣಕ್ಕೆ ಈಗ ರಾಜಕೀಯ ಮಾಡಲು ಬೇರಾವುದೇ ಸಮರ್ಥ ಅಭ್ಯರ್ಥಿಗಳು ಕಾಣಿಸುತ್ತಿಲ್ಲ. ಹಾಗಾಗಿ ನಮ್ಮವರನ್ನೇ ಆ ಸ್ಥಾನದಲ್ಲಿ ಕೂರಿಸಿದರೆ, ಯಾವುದೇ ಅನ್ಯ ಪಕ್ಷಗಳ ಆಡಳಿತವಿರುವ ಸರಕಾರಗಳನ್ನು ಸುಲಭವಾಗಿ ವಜಾ ಮಾಡಬಹುದು, ಅಥವಾ ಚುನಾವಣೆಯಲ್ಲಿ ಜಯ ಗಳಿಸಿದರೂ ಸರಕಾರ ರಚನೆಗೆ ಅವಕಾಶವನ್ನು ಸುಲಭವಾಗಿ ನಿರಾಕರಿಸಬಹುದು ಎಂದು ಪಕ್ಷದ ವಕ್ತಾರರು ನಮ್ಮ ರದ್ದಿಗಾರರಿಗೆ ತಿಳಿಸಿದ್ದಾರೆ.

ಓದುಗರಲ್ಲಿ ವಿನಂತಿ: ಯಾರೇ ಕೇಳಿದರೂ ಬೊಗಳೆ ಬ್ಯುರೋ ಮುಖ್ಯಸ್ಥರು ಎಲ್ಲಿದ್ದಾರೆ ಎಂಬುದನ್ನು ಆ ಪಕ್ಷಕ್ಕೆ ತಿಳಿಸಬಾರದಾಗಿ ನಿವೇದನೆ. ಕುತ್ಗೆ ಕುಯ್ಸಿ... ನಾಲ್ಗೆ ಸೀಳ್ಸಿ... ಬೊಗಳೋರ್ ಎಲ್ಲಿ ಅಂತ ಕೇಳಿದ್ರೂನೂ... ನೀವು ಮಾತ್ರ ಮೂಗ್ನಲ್ಲೂ ಆ ವಿಷಯ ಬಾಯಿ ಬಿಡಬಾರದಾಗಿ ಕಳಕಳಿಯ ವಿನಂತಿ.

Friday, June 08, 2007

ಉಡುಗೆ ನಿಷೇಧ: ಸ-ಮಾನ-ತೆಗೆ ಸಿನಿ ನಟಿಯರ ಆಗ್ರಹ

(ಬೊಗಳೂರು ವೇಸ್ಟ್ಇ-ಬ್ಯುರೋದಿಂದ)
ಬೊಗಳೂರು, ಜೂ.8- ವೇಸ್ಟಿಯನ್ನು ವೇಸ್ಟ್ ಎಂದು ಪರಿಗಣಿಸಿದ ಚೆನ್ನೈನ ಕ್ಲಬ್‌ನ ಹೆಸರು ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಾಳಿಗೆ ಹಾರುವ ಪಂಚೆಯಂತೆಯೇ ಹಾರಾಡತೊಡಗಿದೆ.

ಕ್ರಿಕೆಟ್ ಕ್ಲಬ್ ಪ್ರವೇಶಿಸಬೇಕಾದರೆ ಪಂಚೆ/ಧೋತಿ/ವೇಸ್ಟಿಯನ್ನು ಕಳಚಿಯೇ ಒಳಪ್ರವೇಶಿಸಬೇಕೆಂಬ ನಿಯಮವು ಇದೀಗ ರಾಷ್ಟ್ರೀಯ ಸುದ್ದಿಯಾಗಿದ್ದು, ಎಲ್ಲಾ ಬಿಚ್ಚಿ ಹಾಕಿ ಪ್ರವೇಶಿಸಲು ಇದೇನು ಈಜುಕೊಳವಾಗಿರಬಹುದೇ? ಎಂದು ನೋಡಲು ಬೊಗಳೂರು ಬ್ಯುರೋ ಅತ್ತ ಕಡೆ ತೆರಳಿತು.

ಅತ್ತ ಧಾವಿಸಿದಾಗ ತಿಳಿದು ಬಂದ ಅಂಶವೆಂದರೆ, ಈ ಕ್ಲಬ್ ಕ್ರಿಕೆಟ್‌ಗೆ ಮೀಸಲಾಗಿದೆ. ಕ್ರಿಕೆಟ್ ಆಡುವಾಗ ಪಂಚೆ ಗಾಳಿಗೆ ಹಾರುತ್ತದೆ ಎನ್ನುವ ಕಾರಣಕ್ಕೆ ಈ ನಿಷೇಧ ಹೇರಲಾಗಿದೆ ಎಂಬುದು ಪ್ರಾಥಮಿಕ ತನಿಖೆ ವೇಳೆ ಮೇಲ್ನೋಟಕ್ಕೆ ತಿಳಿದುಬಂದ ಅಂಶ.

ಕ್ಲಬ್ ಡ್ಯಾನ್ಸರ್‌ಗಳನ್ನು.... ಅಲ್ಲಲ್ಲ.... ಕ್ಲಬ್ ಅಧಿಕಾರಿಗಳನ್ನು ಈ ಕುರಿತು ಪ್ರಶ್ನಿಸಲಾಯಿತು. ಅವರು ಕೂಡ ಬೊಗಳೆ ಸಂದೇಹವನ್ನು ಖಚಿತಪಡಿಸಿದರು. ಕ್ರಿಕೆಟ್ ಸಂದರ್ಭದಲ್ಲಿ ಪ್ರೇಕ್ಷಕರು ಆಯಾ ದೇಶದ ಧ್ವಜಗಳನ್ನು ಬೀಸಿ ಹರ್ಷ ವ್ಯಕ್ತಪಡಿಸುತ್ತಿರುವಂತೆಯೇ, ಇಲ್ಲಿ ಕ್ರಿಕೆಟ್ ನಡೆಯುತ್ತಿರುವಾಗ ಪಂಚೆ ಎತ್ತಿ ಹರ್ಷ ವ್ಯಕ್ತಪಡಿಸಿದರೆ ಎಂಬ ಭೀತಿಯೂ ಇದಕ್ಕೆ ಕಾರಣ ಎಂದು ಅವರು ಸೇರಿಸಿದರು.

ಇನ್ನೇನು, ಕ್ಲಬ್‌ನಿಂದ ಬೊಗಳೂರು ಬ್ಯುರೋ ಪಲಾಯನ ಮಾಡಬೇಕೆನ್ನುವಷ್ಟರಲ್ಲಿ ಅಲ್ಲಿಗೆ ಸಿನಿಮಾ ತಾರೆಯರು ಮತ್ತು ಬಿಚ್ಚೋಲೆ ಗೌರಮ್ಮಗಳ ದಂಡೊಂದು ಆಗಮಿಸಿತು.

ಕೈಯಲ್ಲಿ ಫಲಕಗಳು, ಬ್ಯಾನರ್‌ಗಳನ್ನು ಹಿಡಿದು, ಘೋಷಣೆ ಕೂಗುತ್ತಾ ಅವರು ತಮ್ಮಲ್ಲಿದ್ದ ಉಡುಗೆ-ತೊಡುಗೆಯನ್ನೆಲ್ಲಾ ಗಾಳಿಯಲ್ಲಿ ಬೀಸುತ್ತಾ ಧಾವಿಸಿ ಬರುತ್ತಿತ್ತು. ಬಹುಶಃ ಚೆನ್ನೈಯಲ್ಲಿ ಸಿಕ್ಕಾಪಟ್ಟೆ ತಾಪಮಾನ ಹೆಚ್ಚಿರಬೇಕು ಎಂದು ಭಾವಿಸಲಾಗಿತ್ತು. ಆದರೆ ವಿಷಯ ಬೇರೆಯೇ!

ಅವರ ಘೋಷಣೆ ಒಂದೇ ಆಗಿತ್ತು : ನಮಗೂ ಸಮಾನತೆ ನೀಡಿ!!! ಮಹಿಳಾ ತಾರತಮ್ಯ ನೀತಿ ಅನುಸರಿಸದಿರಿ!!! ನಮಗೂ ಉಡುಗೆ ನಿಷೇಧಿಸಿ!!! ನಾವೂ ಉಡುಗೆ ಕಳಚಿ ಕ್ಲಬ್ ಪ್ರವೇಶಿಸುತ್ತೇವೆ!!!

Monday, June 04, 2007

ತಲೆಇಲ್ಲದವರಿಗೂ hell-mate ಕಡ್ಡಾಯಕ್ಕೆ ಆಕ್ರೋಶ

(ಬೊಗಳೂರು ತಲೆ ಇಲ್ಲದ ಬ್ಯುರೋದಿಂದ)
ಬೊಗಳೂರು, ಜೂ.4- ತಲೆ ಇದ್ದವರಿಗೆ ಮಾತ್ರವೇ ಅಲ್ಲದೆ ತಲೆ ಇಲ್ಲದವರಿಗೂ hell-mate ಕಡ್ಡಾಯಗೊಳಿಸಿರುವ ತಮಿಳುನಾಡು ಸರಕಾರದ ಕ್ರಮವನ್ನು ಬೊಗಳೆ ರಗಳೆ ಬ್ಯುರೋ ಖಂಡಿಸುತ್ತದೆ.

ಹೆಲ್-ಮೇಟ್ ಕಡ್ಡಾಯ ಎಂಬುದು ತಲೆ ಇದ್ದವರು ತಲೆ ಇಲ್ಲದವರಿಗಾಗಿ ಮತ್ತು ತಲೆ ಇಲ್ಲದವರು ತಲೆ ಇದ್ದವರಿಗಾಗಿ ಸರಿಯಾಗಿ ಕೂರುವ ಟೋಪಿ ಹಾಕಲು ರೂಪಿಸಿರುವ ತಂತ್ರ ಎಂದು ಬೊಗಳೂರು ಬ್ಯುರೋ ಆಕ್ರೋಶ ವ್ಯಕ್ತಪಡಿಸಿದೆ.

ತಲೆ ಇಲ್ಲದವರ ಜೇಬು ಸೇರಿದಂತೆ ತಲೆ ಬೋಳಿಸಲು ತಲೆ ಇದ್ದವರು (ಮಂಡೆ ಖರ್ಚು ಮಾಡಿ) ಹೂಡಿರುವ ತಂತ್ರವಿದು ಎಂದು ವಿಶ್ಲೇಷಿಸಲಾಗುತ್ತಿದೆ. ಮತ್ತೊಂದು ವ್ಯಾಖ್ಯಾನದ ಪ್ರಕಾರ, ಇದು ತಲೆ ಇಲ್ಲದವರು ಬೇರಾವುದೇ ಅಭಿವೃದ್ಧಿ ಕಾರ್ಯಗಳ ಗಮನ ಹರಿಸುವ ಬದಲು ತಲೆ ಇದ್ದವರ ತಲೆ ರಕ್ಷಿಸುತ್ತೇವೆ, ಮಹತ್ಕಾರ್ಯ ಮಾಡಿದ್ದೇವೆ ಎಂಬಂತೆ ಬಿಂಬಿಸಿಕೊಳ್ಳಲು ಈ ರಣನೀತಿ ರೂಪಿಸಿದ್ದಾರೆ ಎಂಬ ಶ್ಲಾಘನೆಗಳು ಕೇಳಿಬರುತ್ತಿದೆ.

ದ್ವಿಚಕ್ರ ಸವಾರರಿಗೆ hell- mate ಕಡ್ಡಾಯಗೊಳಿಸುವ ಸರಕಾರದ ನಿರ್ಧಾರದ ಹಿಂದೆ ನ್ಯಾಯಾಲಯದ ಆದೇಶದ ನೆರಳಿದೆ. ಆದರೆ ನ್ಯಾಯಾಲಯದ ಆದೇಶಕ್ಕೆ ನಾವು ತಲೆ ಕೆಡಿಸಿಕೊಳ್ಳದಿದ್ದರೂ ಬೊಗಳಿಗರ- ಅದಕ್ಕಿಂತಲೂ ಮಿಗಿಲಾಗಿ hell- mate ತಯಾರಿಕಾ ಕಂಪನಿಗಳ ತಲೆ ಕಾಯ್ದುಕೊಳ್ಳುವುದು ಸರಕು-ಕಾರದ ಆದ್ಯ ಕರ್ತವ್ಯವಲ್ಲವೆ ಎಂದು ರಾಜ್ಯದ ಅಮುಖ್ಯ ಮಂತ್ರಿಗಳು ಸ್ಪಷ್ಟಪಡಿಸಿದ್ದಾರೆ.

ದ್ವಿಚಕ್ರ ಸವಾರರೆಲ್ಲರೂ ತಾವು ನರಕದಲ್ಲಿ ಹಿಂದಿನ ಜನ್ಮದಲ್ಲಿ ಮಾಡಿದ ಪಾಪ ಕಳೆಯುತ್ತಿದ್ದಾಗ ಜೊತೆಗಾರರಾಗಿದ್ದ ನರಕ(hell)-ಮೇಟ್ (class-mate, school-mate ಥರಾ)ಗಳನ್ನು ಜೊತೆಗೇ ಕರೆದೊಯ್ಯಬೇಕು. ಇದು ಅವರ ಪೂರ್ವಜನ್ಮದ ಸುಕೃತ ಫಲ ಎಂಬ ಸಮರ್ಥನೆಯೂ ಕೇಳಿಬರುತ್ತಿದೆ.

ಬ್ಲಾಗಿಗರ ಸ್ವಾಗತ

ಆದರೆ ಬ್ಲಾಗು ಜಗತ್ತು ಮಾತ್ರ ಈ ಹೆಲ್-ಮೇಟ್ ಕಡ್ಡಾಯ ನೀತಿಯನ್ನು ಮನದುಂಬಿ ಸ್ವಾಗತಿಸಿದೆ. ಬ್ಲಾಗಿಗರ ತಲೆಯಲ್ಲಿ ನುಸುಳುವ ಬ್ಲಾಗ್ ಐಡಿಯಾಗಳು ತಲೆಯಿಂದ ಹೊರಗೆ ಹಾರಿ ಹೋಗದಂತೆ ಈ ಹೆಲ್-ಮೇಟ್ ತಡೆಯುತ್ತದೆ ಎಂಬ ಹರ್ಷ ಅವರದು.

ಬ್ಲಾಗಿಸುವ ಕುರಿತ ಏನೇ ಹೊಸ ಐಡಿಯಾಗಳಿದ್ದರೂ ತಲೆಯೊಳಗೆಯೇ ಸುಳಿದಾಡುತ್ತಾ ಇರುತ್ತದೆ, ಮನೆಯಿಂದ ಕಚೇರಿ ಮತ್ತು ಕಚೇರಿಯಿಂದ ಮನೆಗೆ ಬಂದು-ಹೋಗುವ ಹಾದಿಯಲ್ಲಿ ಫಳಕ್ಕನೆ ಹೊಳೆಯುವ ಈ ಐಡಿಯಾಗಳು ಹೆಲ್-ಮೇಟ್‌ನೊಳಗೆ ಸುರಕ್ಷಿತವಾಗಿರುತ್ತವೆ, ಗಮ್ಯ ಸ್ಥಾನ ತಲುಪಿದ ಕೂಡಲೇ ಆ ಐಡಿಯಾವನ್ನು ಬ್ಲಾಗಿಗಿಳಿಸಬಹುದು ಎಂದವರು ಸಂತಸ ವ್ಯಕ್ತಪಡಿಸಿದ್ದಾರೆ.

ಎಂಜಿನ್ ಇಲ್ಲದ ರೈಲು: ಬ್ರೇಕಿಂಗ್ ನ್ಯೂಸ್ ಅಲ್ಲವೆಂದ ಬೊ.ರ.

[ಬೊಗಳೂರು ಪಟ್ಟೆ-ರಹಿತ ರೈಲು ಬ್ಯುರೋ] ಬೊಗಳೂರು: ಆಫ್‌ಲೈನ್ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯೊಂದು ಆನ್‌ಲೈನ್ ಸಂಪಾದಕರ ಕಣ್ಣು ಕುಕ್ಕಿದ್ದು, ಎಂಜಿನ್ ಇಲ್ಲದೆ...