Tuesday, July 31, 2007

ಮಾವನ ಸಂಪನ್ಮೂಲ ಅಭಿವೃದ್ಧಿಗೆ ಸೊಸೆಯರಿಂದ ತಡೆ

(ಬೊಗಳೂರು ಮೀಸಲಾತಿ ಬ್ಯುರೋದಿಂದ)
ಬೊಗಳೂರು, ಜು.31- ಮಾವನ ಸಂಪನ್ಮೂಲ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ತಾನು ಶ್ರಮಿಸುತ್ತಿದ್ದರೆ, ತಮ್ಮ ಮೇಲೆಯೇ ಸೊಸೆಯರು ಕೇಸು ಜಡಿಯತೊಡಗಿದ್ದಾರೆ ಎಂದು ಕೇಂದ್ರ ಮಾವನ ಸಂಪತ್-ಮೂಲ ಸಚಿವರಾದ ದುರ್ಜನ ಸಿಂಹರವರು ಅಲವತ್ತುಕೊಂಡಿದ್ದಾರೆ.

ತಮ್ಮ ಮಾವ ಕೇಂದ್ರದ ಯುಪಿಎ ಸರಕಾರದ ಮಾವನ ಸಂಪನ್ಮೂಲಗಳ ಅಭಿವೃದ್ಧಿ ಸಚಿವರಾಗಿರಬಹುದು. ಆದರೆ ಈ ಮಾವ ತಮ್ಮ ಸಂಪನ್ಮೂಲಗಳ ಅಭಿವೃದ್ಧಿಗಾಗಿ mercy ಇಲ್ಲದೆಯೇ ಮರ್ಸಿಡಿಸ್ ಬೆಂಜ್ ಕಾರು ಕೇಳಿದ್ದಾರೆ. ಇದು ಒಂದು ರೀತಿಯಲ್ಲಿ ಸರಿಯಾದುದೇ. ಯಾಕೆಂದರೆ ಅವರ ಉದ್ಯೋಗವೇ ಸಂಪನ್ಮೂಲ ಅಭಿವೃದ್ಧಿ ಮಾಡುವುದು ಎಂದು ಸೊಸೆಯಂದಿರು ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಬೊಗಳೆ ರಗಳೆ ಏಕಸದಸ್ಯ ಬ್ಯುರೋದ ನೂರಾರು ಸಿಬ್ಬಂದಿಗಳು ಕೇಂದ್ರ ಮಂತ್ರಿಯನ್ನು ಮಾತನಾಡಿಸಲು ಯತ್ನಿಸಿದರು. ಹರಸಾಹಸ ಪಟ್ಟರೂ ನೂರಾರು ಸಿಬ್ಬಂದಿಗಳಲ್ಲಿ ಶೇ.33 ಮಂದಿಗೆ ತಮ್ಮ ಭೇಟಿಗೆ ಅವಕಾಶದ ಮೀಸಲಾತಿ ಕಲ್ಪಿಸುವುದಾಗಿ ಮಂತ್ರಿಗಳ ಕಚೇರಿಯಿಂದ ಪ್ರಕಟಣೆ ಹೊರಬಿತ್ತು.

ಹೀಗಾಗಿ ಅಳಿದುಳಿದ ಸಿಬ್ಬಂದಿಗಳ ಕೈಗಳು, ಕಾಲುಗಳು, ತಲೆಗಳು, ದೇಹದ ಭಾಗಗಳನ್ನು ಶೇಕಡಾವಾರು ಮೀಸಲಾತಿಯಂತೆ ಜೋಡಿಸಿಕೊಂಡು ಕೇಂದ್ರ ಮಂತ್ರಿ ಕಚೇರಿಗೆ ತೆರಳಿದಾಗ ತಲೆಗಳ ಸಂಖ್ಯೆ ಕಡಿಮೆಯಾದರೂ ಸಾವರಿಸಿಕೊಂಡು ಅವರನ್ನು ಮಾತನಾಡಿಸಿದಾಗ, ತಾನು ಸೊಸೆಯರಿಗೂ ಮೀಸಲಾತಿ ಜಾರಿಗೆ ತರುವ ಇರಾದೆ ಹೊಂದಿದ್ದೆ. ಆದರೆ ಅವರೀಗ ತಮಗೆ ಜೈಲಿನಲ್ಲಿ ಮೀಸಲಾತಿ ದೊರಕಿಸಲು ಯತ್ನಿಸುತ್ತಿದ್ದಾರೆ. ಸೊಸೆಯರ ಸಂಖ್ಯೆ ಹೆಚ್ಚು, ಮಾವನಾದ ನಾನು ಒಬ್ಬನೇ ಇರುವುದರಿಂದ ಅವರು ಬಹುಸಂಖ್ಯಾತರು. ಅವರಿಗೆ ಸಕಲ ಸವಲತ್ತುಗಳೂ ಇವೆ. ಹಾಗಾಗಿ ಸೊಸೆಯರಿಗೆ ಮೀಸಲಾತಿ ಬೇಡ, ಅಲ್ಪಸಂಖ್ಯಾತರಾದ ನಮ್ಮಂತ ಮಾವಂದಿರಿಗೇ ಮೀಸಲಾತಿ ಕಲ್ಪಿಸಲು ಮುಂದಿನ ಅಧಿವೇಶನದಲ್ಲಿ ವಿಚಾರ ಮಂಡಿಸುವುದಾಗಿ ನುಡಿದರು.

Thursday, July 26, 2007

ನಿಘಂಟಿಗೆ ಹೆಚ್ಚು ಶಬ್ದಗಳ ಸೇರಿಸಲು ಕಾಂಗ್ರೆಸ್ ಆಗ್ರಹ

(ಬೊಗಳೂರು ಬಯ್ಯಾಲಜಿ ಬ್ಯುರೋದಿಂದ)
ಬೊಗಳೂರು, ಜು.26- "ಅಮ್ಮನಿಗೆ ಹುಟ್ಟಿದ್ದಕ್ಕೆ ಪಶ್ಚಾತ್ತಾಪ ಪಡಬೇಕು, ನಿನ್ನನ್ನು ಈ ನೆಲದಿಂದಲೇ ಗುಡಿಸಿ ಸಾರಿಸುತ್ತೇನೆ..." ಎಂಬಿತ್ಯಾದಿ ಶಬ್ದಗಳನ್ನು "ಪಾರ್ಲಿಮೆಂಟರಿ" ಶಬ್ದಕೋಶಕ್ಕೆ ಸೇರಿಸಬೇಕು ಎಂದು ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾದಿಯಾಗಿ ಆ ಪಕ್ಷದ ಎಲ್ಲಾ ಸದಸ್ಯರು ಸ್ಪೀಕರ್ ಅವರನ್ನು ಒತ್ತಾಯಿಸಿದ ಘಟನೆ ತಡವಾಗಿ ವರದಿಯಾಗಿದೆ.

ಕಲಾಪದ ಕಡತದಿಂದ ಮುಖ್ಯಮಂತ್ರಿಯವರ ಅಣಿಮುತ್ತುಗಳನ್ನು ಅಳಿಸಿಬಿಡುವುದೆಂದರೇನು ಹುಡುಗಾಟಿಕೆಯ ವಿಷಯವೇ ಎಂದು ಪ್ರಶ್ನಿಸಿರುವ com-guess ಪದಾಧಿಕಾರಿಗಳು, ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸಮರ್ಥಿಸಿಕೊಂಡಿದ್ದಾರೆ.

ಈ ರೀತಿ ಶಬ್ದವನ್ನೇ ಅಳಿಸುವ ಮೂಲಕ ನಮ್ಮ ಪಕ್ಷದ ಸಂಸ್ಕೃತಿಯನ್ನು ತಿರುಚಲು ಅವರಿಗೆ ಯಾವ ಹಕ್ಕಿದೆ ಎಂದು ಪ್ರಶ್ನಿಸಿರುವ ಅವರು, ಹೊಸ ಹೊಸ ಪದ ಪ್ರಯೋಗಗಳಿಂದ ಭಾಷೆ ಬೆಳವಣಿಗೆಯಾಗುತ್ತದೆ. ಬಡವಾಗಿದ್ದ ಸಾಹಿತ್ಯ ಕ್ಷೇತ್ರಕ್ಕೆ ಮತ್ತಷ್ಟು ಉತ್ತೇಜನ ನೀಡಿದಂತಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಈ ಪದಗಳು ಅನ್‌ಪಾರ್ಲಿಮೆಂಟರಿ ಎಂಬ ಆಪಾದನೆ ಸತ್ಯಕ್ಕೆ ದೂರ. ಇದು ನಮ್ಮ ಪಕ್ಷದ ಪ್ರಾಚೀನ ಸಂಸ್ಕೃತಿಯ ಪ್ರತೀಕವಾಗಿದ್ದು, ಇದು ಅನ್‌ಪಾರ್ಲಿಮೆಂಟರಿ ಶಬ್ದ ಎಂಬುದಕ್ಕೆ ಪುರಾವೆ ಸಲ್ಲಿಸಲಿ ಎಂದು ಪ್ರತಿಪಕ್ಷಗಳಿಗೆ ಸವಾಲು ಹಾಕಿರುವ ಅವರು, ಎಲ್ಲರೂ ಕೂಗಾಡುತ್ತಾರೆಂದು ಹೇಳಿ ಈ ಬಾರಿ ಕ್ಷಮೆ ಕೇಳುತ್ತೇವೆ, ಮುಂದಿನ ಬಾರಿ ನೋಡಿಕೊಳ್ಳುತ್ತೇವೆ ಎಂದು ಪ್ರೀತಿಯಿಂದ ನುಡಿದಿದ್ದಾರೆ.

ಮುಖ್ಯಮಂತ್ರಿ ಮಾಡಿದ್ದು ತಪ್ಪು ಎಂದು "ಅನ್‌ಪಾರ್ಲಿಮೆಂಟರಿ" ಯಾಗಿ ವರ್ತಿಸುತ್ತಾ, ಕೂಗಾಡುತ್ತಿದ್ದ ಶಾಸಕರನ್ನು ಸದನದಿಂದ ಹೊರಗೆ ಹಾಕಿದ ಅವರು, ಏನೇ ಆದರೂ ನಮ್ಮ ಸಂಸ್ಕೃತಿಯನ್ನು ನಾವು ಉಳಿಸಿ ಬೆಳೆಸಲು ಪ್ರಯತ್ನಿಸುತ್ತಲೇ ಇರುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

Monday, July 23, 2007

ಬಾಲದ ಸಂಪಾದಕಿಗೆ ಅಭಿನಂದನೆ

(ಬೊಗಳೂರು ಬಾಲಕತ್ತರಿಸುವ ಬ್ಯುರೋದಿಂದ)
ಬೊಗಳೂರು, ಜು.23- ಡೊಂಕು ಬಾಲದ ನಾಯಕರೇ ಎಂದು ಹಿರಿಯರು ಹಾಡಿದ್ದನ್ನೇ ಧ್ಯೇಯವಾಗಿಸಿಕೊಂಡು ನಮ್ಮ ಜಾರಕಾರಣಿಗಳು ಕೂಡ ಡೊಂಕು ಬಾಲದ ನಾಯಕನ ಪಟ್ಟಕ್ಕೆ ಸಂಸತ್ತಿನಲ್ಲಿ ಕೂತು ಗದ್ದಲ ಎಬ್ಬಿಸುತ್ತಿರುವಂತೆಯೇ, ಬಾಲದ ಸಂಪಾದಕಿಗೆ ರಾಷ್ಟ್ರಪತಿಯವರು ಅಭಿನಂದಿಸಿದ ಸುದ್ದಿ ಇಲ್ಲಿ ಪ್ರಕಟವಾಗಿದೆ.

ಬಾಲ ಮತ್ತು ಸಂಪಾದಕಿ ಎಂಬ ಎರಡು ಶಬ್ದಗಳಿಗೆ ಹಲವು ಅರ್ಥಗಳಿರುವುದರಿಂದ ಇದರ ಬಗ್ಗೆ ಸಂಶೋಧನೆಯನ್ನೇ ಕೈಗೊಳ್ಳಬೇಕಾದ ಅನಿವಾರ್ಯತೆ ಬೊಗಳೆ ರಗಳೆ ಬ್ಯುರೋಗೆ. ಇದು ಬಾಲವಿರುವ ಸಂಪಾದಕಿಯೇ ಎಂಬ ಸಂದೇಹ ನಮ್ಮ ಓದುಗ ಬಳಗದ್ದು. ಆದರೆ ನಿರ್ಗಮನ ರಾಷ್ಟ್ರಪತಿಯವರಿಗೆ ಮಕ್ಕಳು ಎಂದರೆ ತುಂಬಾ ಇಷ್ಟವೇ ಹೊರತು, ಬಾಲವಿರುವ ಪ್ರಾಣಿಗಳೆಂದರೆ ಇಷ್ಟ ಎಂಬುದನ್ನು ಬಿಂಬಿಸುವ ಸುದ್ದಿ ಇದುವರೆಗೆ ಎಲ್ಲೂ ಪ್ರಕಟವಾಗಿಲ್ಲ. ಹಾಗಾಗಿ ಅವರು ಅಂಥವರನ್ನು ಸನ್ಮಾನಿಸುವುದು ದೂರದ ಮಾತು. ಈ ಕಾರಣಕ್ಕೆ, ಈ ಬಾಲ ಎಂಬುದು ಬಾಲಕಿಯ ಅರ್ಧರೂಪ ಇರಬಹುದೇ ಎಂಬ ಶಂಕೆಯೂ ಒಂದು ವಿಭಾಗದ್ದು.

ಅದೇ ರೀತಿ ಸಂಪಾದಕಿ ಎಂಬ ಶಬ್ದವೂ ಕುತೂಹಲ ಮೂಡಿಸುತ್ತದೆ. ಆಕೆ ಇಷ್ಟು ಸಣ್ಣ ಪ್ರಾಯದಲ್ಲೇ ಸಂಪಾದನೆಗೆ ಹೊರಟಿದ್ದಾಳೆಯೇ? ಎಂಬ ಪ್ರಶ್ನೆ ಒಂದೆಡೆಯಾದರೆ, ಆಕೆ ಬಾಲಗಳನ್ನೇ ಸಂಪಾದಿಸುತ್ತಿದ್ದಾಳೆಯೇ ಎಂಬುದು ಮತ್ತೊಂದು ಶಂಕೆ. ಈ ಬಾಲಗಳನ್ನೆಲ್ಲಾ ಒಟ್ಟುಗೂಡಿಸಿದಲ್ಲಿ ಆಕೆಗೇನು ಲಾಭ? ಎಂಬುದು ಯಾರಿಗೂ ಅರ್ಥವಾಗದ ಪ್ರಶ್ನೆ.

ಸಂಪಾದಿಸು ಅನ್ನುವುದಕ್ಕೆ ಮತ್ತೊಂದು ಅರ್ಥವೂ ಇದೆ ಎಂಬುದು ಭಾರಿ ಸಂಶೋಧನೆ ಬಳಿಕ ತಿಳಿದುಬಂತು. ಅದೆಂದರೆ ಉದ್ದವಾದ ಸುದ್ದಿಯೊಂದನ್ನು ಸೊಂಪಾಗಿ ಕತ್ತರಿಸಿ ಬ್ರೇಕಿಂಗ್ ನ್ಯೂಸ್ ನೀಡುವುದು... (ಅಂದರೆ... ಬಾಲವನ್ನು ಬ್ರೇಕ್ ಮಾಡುವ ನ್ಯೂಸ್ ಅಲ್ಲ) ಸುದ್ದಿಯನ್ನು ತಿದ್ದಿ ತಿದ್ದಿ ಪ್ರಕಟಿಸುವುದು ಎಂಬುದು ಮತ್ತೊಂದು ವ್ಯಾಖ್ಯಾನ. ಅದು ಕೂಡ ಇಲ್ಲಿ ಅನ್ವಯಿಸಬಹುದು. ಹೇಗೆಂದರೆ ಆಕೆ ಬಾಲಗಳನ್ನೆಲ್ಲಾ ಕತ್ತರಿಸಿ ಅದನ್ನು ಸಂಗ್ರಹಿಸಿಟ್ಟುಕೊಳ್ಳುತ್ತಿದ್ದಳೆ? ಅಂದರೆ ಸುದ್ದಿ ಕತ್ತರಿಸಿ(ತಿದ್ದಿ)ದಂತೆ, ಬಾಲವನ್ನು ತಿದ್ದಿ ತೀಡುತ್ತಿದ್ದಳೇ? ಅದಕ್ಕಾಗಿಯೇ ಆಕೆ ಬಾಲ ಸಂಪಾದಕಿ ಎನಿಸಿಕೊಂಡಿದ್ದಾಳೆಯೇ...

ಈ ಉತ್ತರ ತಿಳಿಯದ ಪ್ರಶ್ನೆಗಳ ಗೊಂದಲದಲ್ಲಿ ಮುಳುಗಿದ್ದಾಗ ಹೊಳೆದ ಮತ್ತೊಂದು ವಿಷಯವೆಂದರೆ ಇದು ದೇಶದ ಅತ್ಯಂತ ಹಳೆಯ ರಾಜಕೀಯ ಪಕ್ಷವೊಂದಕ್ಕೆ ಸಂಬಂಧಿಸಿದ ಸುದ್ದಿಯಾಗಿರಬಹುದೇ? ಎಂಬುದು.

ಶತಕೋಟಿ ಜನಸಂಖ್ಯೆ ಇರುವ ದೇಶದ ಜಾರಕಾರಣಿಗಳೆಲ್ಲಾ ತಮ್ಮ ಅಧಿನಾಯಕಿಯ ಮನೆಬಾಗಿಲಲ್ಲಿ ಬಾಲ ಮುದುಡುತ್ತಾ, ಬಾಲ ಅಲ್ಲಾಡಿಸುತ್ತಿರುವುದೇಕೆ? ಆಕೆ ಹೇಳಿದವರೇ ಅಗ್ರಪಟ್ಟ ಅಲಂಕರಿಸುತ್ತಿದ್ದಾರೆ... ಆಕೆಯ ಕೃಪಾ ಕಟಾಕ್ಷವಿದ್ದರೆ ಅರ್ಹತೆ ಎಲ್ಲಾ ಅನಗತ್ಯ. ಪಕ್ಷವನ್ನು ಮುನ್ನಡೆಸುವ ಘಟಾನುಘಟಿ ನಾಯಕರಿದ್ದರೂ ಅವರೆಲ್ಲಾ ಆಕೆಯೆದುರು ಬಾಲ ಮುದುಡಿರುತ್ತಾರೆ, ಆಜ್ಞೆಯನ್ನು ಶಿರಸಾವಹಿಸಿ ಪಾಲಿಸುತ್ತಾರೆ. ಹಾಗಾಗಿ ಆಕೆಯೇ ಇವರನ್ನೆಲ್ಲಾ ತಿದ್ದುವ, ತೀಡುವ, ಆಡಿಸುವ, ಸಂಪಾದನೆಗೆ ದಾರಿ ತೋರುವ ಸಂಪಾದಕಿಯೇ ಆಗಿರಬಹುದೇ? ಅಂದರೆ ಆಕೆಯೇ ಬಾಲ ಸಂಪಾದಕಿಯಾಗಿರಬಹುದೇ?

ಪ್ರಶ್ನೆಗೆ ಉತ್ತರಕ್ಕಾಗಿ ಮತ್ತಷ್ಟು ಸಂಶೋಧನೆ ನಡೆಯಬೇಕಿದೆ ಎಂಬುದು ಅರಿವಾಗಿದ್ದೇ ತಡ, ಈ ಕುರಿತ ಶೋಧನೆಯನ್ನು ಇಲ್ಲಿಗೇ ಕೈಬಿಡಲಾಗಿದೆ ಎಂದು ತಿಳಿದುಬಂದಿದೆ.

Thursday, July 19, 2007

ಟಿವಿ ತೆರಿಗೆ : ಜಾರಕಾರಣಿಗಳ ಮೇಧಾ ಶಕ್ತಿಗೆ ವಿಶ್ವಮಾನ್ಯತೆ

(ಬೊಗಳೂರು ಮನೋವೇದನಾ ಬ್ಯುರೋದಿಂದ)
ಬೊಗಳೂರು, ಜು.19- ದೇಶದ ಜನತೆ ಹಸಿವಿನಿಂದ, ಏರಿದ ಬೆಲೆಗಳಿಂದ ಹಾಗೂ ಇತರ ಜೀವನಾವಶ್ಯಕ ಸೌಲಭ್ಯ ಕೊರತೆಗಳಿಂದಾಗಿ ಕಂಗೆಟ್ಟಿದ್ದರೆ, ಈ ಎಲ್ಲಾ ಸಮಸ್ಯೆಗಳಿಗೆ ಅಂತ್ಯ ಹಾಡುವ ನಿಟ್ಟಿನಲ್ಲಿ ಕೇಂದ್ರ ಸರಕಾರವು ಹೊಸದೊಂದು ಕ್ರಮಕ್ಕೆ ಮುಂದಾಗಿದೆ.

ಅದೆಂದರೆ, ಹಸಿವು ತಡೆದುಕೊಂಡಾದರೂ ಟಿವಿ ಮನೋರಂಜನೆಯನ್ನು ನೋಡಿ ಮನೋವೇದನೆ ತೊಲಗಿಸಿಕೊಳ್ಳೋಣ ಎಂದುಕೊಂಡ ಜನತೆಗಾಗಿಯೇ ಇದು ವಿಶೇಷ ಪ್ಯಾಕೇಜ್. ಟೀವಿ ನೋಡುವವರ ಮೇಲೆ ವಾರ್ಷಿಕ 500 ರೂ. ಕರ"ಭಾರ" ಘೋಷಿಸಲಾಗಿದೆ ಎಂದು ಕೇಂದ್ರದ ಮಾಹಿತಿ ಮತ್ತು ಅಪಪ್ರಚಾರ ಖಾತೆ ಸಚಿವರು ತಿಳಿಸಿರುವುದಾಗಿ ಇಲ್ಲಿ ವರದಿಯಾಗಿದೆ.

ದೇಶವನ್ನು ಕಾಡುತ್ತಿರುವ ದೈನಂದಿನ ಸಮಸ್ಯೆಗಳನ್ನು ಸರಿಪಡಿಸುವ ಬದಲಾಗಿ ಮೀಸಲಾತಿ, ತರಕಾರಿ ಬೆಲೆ ಏರಿಕೆ, ಪೆಟ್ರೋಲ್ ಬೆಲೆ ಏರಿಕೆ, ಶಂಕಿತ ಭಯೋತ್ಪಾದಕರ ರಕ್ಷಣೆಗೆ ಒತ್ತಾಯ, ರಾಷ್ಟ್ರಪತಿ ಸ್ಥಾನಕ್ಕೆ ಯಾರಿಗೂ ತಿಳಿಯದ "ಪ್ರತಿಭಾ"ವಂತರ ನೇಮಕ ಮುಂತಾದ ನಿದ್ದೆಕೆಡುವ ಅಪೂರ್ವ, ಅಪ್ರತಿಭ ತೀರ್ಮಾನಗಳನ್ನು ಕೈಗೊಳ್ಳುತ್ತಿರುವ ಸರಕಾರದ ಮುಕುಟದ ಗರಿಗೆ ಮತ್ತೊಂದು ಸೇರ್ಪಡೆ ಈ ಟಿವಿ ಕರ.

ಈ ರೀತಿಯ ತೀರ್ಮಾನಗಳು ಈಗಾಗಲೇ ವಿಶ್ವದ ಗಮನ ಸೆಳೆದಿದ್ದು, ದೇಶ-ವಿದೇಶದ ಆಡಳಿತಗಾರರು ಭಾರತೀಯ ರಾಜಕಾರಣಿಗಳಿಂದ ಪಾಠ ಕಲಿಯಲು ಮತ್ತು ಇಂಥಹ ತೀರ್ಮಾನಗಳನ್ನು ಕೈಗೊಳ್ಳುವುದಕ್ಕಾಗಿಯೇ ವಿಶೇಷ ಕೋರ್ಸ್ ಒಂದನ್ನು ತೆಗೆದುಕೊಳ್ಳಲು ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ.

ಆದರೆ ಪಾಕಿಸ್ತಾನದಂತಹ ಕೆಲವು ರಾಷ್ಟ್ರಗಳಂತೂ, ದೇಶದ ಹಿತ ಕಾಯುವುದಕ್ಕೂ ಹೆಚ್ಚಾಗಿ ಜನತೆಗೆ ಹೊರೆಯಾಗುವ ಇಂಥಹ ನಿರ್ಧಾರಗಳನ್ನು ಕೈಗೊಳ್ಳುತ್ತಿರುವ ಭಾರತದ ಅದ್ಭುತ ಮೇಧಾ ಶಕ್ತಿ, ಭಾರೀ ದು(ದೂ)ರಾಲೋಚನೆಯುಳ್ಳ ರಾಜಕಾರಣಿಗಳನ್ನೇ ಅಪಹರಿಸಿ, ತಮ್ಮ ದೇಶದ ಘನ ಹುದ್ದೆಯಲ್ಲಿ ಕುಳ್ಳಿರಿಸುವ ಯತ್ನ ನಡೆಸುತ್ತಿದೆ ಎಂದು ನಮ್ಮ ಗುಪ್ತ ವರದಿಗಾರರು ಒದರಿದ್ದಾರೆ.

ತಮ್ಮ ಅತ್ಯುತ್ತಮ ಮಂಡೆಯ ತೀರ್ಮಾನದಿಂದಾಗಿ ವಿಶ್ವಾದ್ಯಂತ ಬೇಡಿಕೆ ಕುದುರಿಸಿಕೊಂಡಿರುವ ಜಾರಕಾರಣಿಗಳು ತಮ್ಮ ಬೇಡಿಕೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ತಲೆಮರೆಸಿಕೊಳ್ಳಲಾರಂಭಿಸಿದ್ದು, ಬೇಡಿಕೆ ಕುದುರಿದ ತಕ್ಷಣ ಅವರು (ಇಲ್ಲದ) ತಲೆ ತೋರಿಸತೊಡಗುತ್ತಾರೆ ಎಂಬುದನ್ನು ಪತ್ತೆ ಹಚ್ಚಲಾಗಿದೆ.

Monday, July 16, 2007

ಎಮ್ಮೆಚ್‌ಫುಸೇನ್ ಮಾನ ಹರಾಜಿಗೆ ಯತ್ನ

(ಬೊಗಳೂರು ಮಾನ ಹರಾಜು ಬ್ಯುರೋದಿಂದ)
ಬೊಗಳೂರು, ಜು.16- ತನ್ನದೇ ತಾಯಿಯನ್ನು ಅಶ್ಲೀಲವಾಗಿ ಬಿಂಬಿಸಿ ಚಿತ್ರ ರಚಿಸಿದ ತನ್ನ ದೇಶಪ್ರೇಮಕ್ಕಾಗಿಯೇ "ಖ್ಯಾತಿ" ಗಳಿಸಿರುವ ಚಿತ್ರ ಕಲಾವಿದ ಎಮ್ಮೆಚ್ ಫುಸೇನ್‌ನ ಮಾನವನ್ನು ಹರಾಜು ಹಾಕಲು ಸಕಲ ಸಿದ್ಧತೆಗಳು ನಡೆಯುತ್ತಿರುವುದಾಗಿ ಬೊಗಳೆ ರಗಳೆ ಬ್ಯುರೋಗೆ ಮಾಹಿತಿ ದೊರಕಿದೆ.

ಚೆನ್ನೈನ ಹರಾಜು ಸಂಸ್ಥೆಯೊಂದು ಮಾತೆಯ ಚಿತ್ರವನ್ನು "ಆರ್ಟ್ ಫಾರ್ ಮಿಶನ್ ಕಾಶ್ಮೀರ್" ಎಂಬ ಹೆಸರಿನಲ್ಲಿ ಹರಾಜು ಹಾಕಲು ನಿರ್ಧರಿಸಿದೆ ಎಂದು ಇಲ್ಲಿ ವರದಿಯಾಗಿದ್ದು, ಹರಾಜಿನಿಂದ ಬಂದ ಹಣವನ್ನು ಕಾಶ್ಮೀರದಲ್ಲಿ ಇತ್ತೀಚೆಗೆ ಭರ್ಜರಿ ಉತ್ಪಾದನೆಯಲ್ಲಿ ತೊಡಗಿರುವ ಕಂಪನಿಯೊಂದಕ್ಕೆ ನೀಡಲು ನಿರ್ಧರಿಸಿದೆ ಎಂದು ಪತ್ತೆ ಹಚ್ಚಲಾಗಿದೆ.

ಆದರೆ ನೈಜ ಭಾರತೀಯರ ಪ್ರತಿರೋಧ ತೀವ್ರವಾಗತೊಡಗಿದೆ ಎಂಬುದು ತಿಳಿದ ತಕ್ಷಣವೇ ಈ ಸಂಸ್ಥೆಯು ಈ ಚಿತ್ರ ರಚಿಸಿದ ಕಲಾವಿದನ ಮಾನವನ್ನು ಹರಾಜು ಹಾಕಿ ದುಡ್ಡು ಮಾಡಲು ನಿರ್ಧರಿಸಿತು ಎಂದು ನಂಬಲರ್ಹ ಮೂಲಗಳು ತಿಳಿಸಿವೆ.

ತಮ್ಮ ತಾಯಿಯ ಮಾನ ಹರಾಜಿಗೆ ಹೊರಟವರ ಮಾನ ಹರಾಜು ಹಾಕಿ ಬಂದ ಹಣವನ್ನು ಕಾಶ್ಮೀರದಲ್ಲಿ ಭರ್ಜರಿ ಭಯದ ಉತ್ಪಾದನೆಯಲ್ಲಿ ತೊಡಗಿರುವ ಸಂಘಟನೆಗಳಿಗೆ ನೀಡಲು ಯೋಚಿಸಲಾಗಿತ್ತು. ಆದರೆ ಇಂತಹ ಚಿತ್ರ ರಚಿಸಿದ ಕಲಾವಿದನ ಮಾನಕ್ಕೆ ಮೂರು ಕಾಸು ಕೂಡ ಸಿಗದ ಕಾರಣದಿಂದಾದಿ ಅವರ ಭಯದ ಉತ್ಪಾದನಾ ಕಾರ್ಯವೇ ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ ಎಂದು ಕಾಶ್ಮೀರ ಕೊಳ್ಳದಿಂದ ನಮ್ಮ ಬಾತ್ಮೀದಾರರು ಒದರಿ ಮಾಡಿದ್ದಾರೆ.

ಇದರಿಂದ ತೀವ್ರವಾಗಿ ರೋಸಿ ಹೋದ ಎಮ್ಮೆಚ್ ಫುಸೇನ್, ತನ್ನ ಹೆತ್ತ ತಾಯಿ, ಪತ್ನಿ, ಮಕ್ಕಳ ಚಿತ್ರ ರಚಿಸಲು ಸಿದ್ಧತೆ ನಡೆಸುತ್ತಿದ್ದಾರೆ ಮತ್ತು ಅದನ್ನು ಹರಾಜು ಹಾಕಿ ಹಣ ಮಾಡಲು ಯೋಚನೆ ಮಾಡುತ್ತಿದ್ದಾರೆ ಎನ್ನಲಾಗಿದೆ.

ಇದೀಗ ತಮ್ಮ ಚಿತ್ರವನ್ನೂ ಚಿತ್ರಿಸಿ ಹರಾಜು ಹಾಕುವ ಭೀತಿಯಿಂದಾಗಿ ಬೊಗಳೆ ರಗಳೆ ಬ್ಯುರೋದ ಸಿಬ್ಬಂದಿ ಕೂಡ ಎಮ್ಮೆಚ್ ಫುಸೇನ್‌ರ ಕಣ್ಣಿಗೆ ಬೀಳದಂತಿರಲು ಇಲ್ಲದ ತಲೆಯೊಂದನ್ನು ಹೊರತು ಪಡಿಸಿ ದೇಹದ ಇತರೆಲ್ಲಾ ಭಾಗಗಳನ್ನು ಮರೆಸಿಕೊಳ್ಳಲು ಸಿದ್ಧತೆ ನಡೆಸಿದೆ.

Thursday, July 12, 2007

ನಿಧಾನಿಗೆ ನಿದ್ದೆ ಮಾತ್ರೆ: ಸಂಶೋಧನೆಗೆ ಯತ್ನ

(ಬೊಗಳೂರು ಸಮುದಾಯರಕ್ಷಣಾ ಬ್ಯುರೋದಿಂದ)
ಬೊಗಳೂರು, ಜು.12- ದೇಶದ ಘನತೆವೆತ್ತ ವಿತ್ತಮಂತ್ರಿಯಾಗಿ ಕಾರ್ಯನಿರ್ವಹಿಸಿ, ಈಗ ಹಲವಾರು ಸಾಧನೆಗಳಿಂದಾಗಿ ಘನತೆ ಕಳೆದುಕೊಂಡ ನಿಧಾನಿಯವರು ತಮಗೆ ನಿದ್ದೆ ಬರುತ್ತಿಲ್ಲ ಎಂದು ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಅವರಿಗೆ ನಿದ್ದೆ ಮಾತ್ರೆ ಕೊಡಿಸಲು ತೀವ್ರ ಪ್ರಯತ್ನಗಳು ನಡೆಯುತ್ತಿರುವುದಾಗಿ ವರದಿಯಾಗಿದೆ.

ಎಲ್ಲರಿಗೂ ಭಯೋತ್ಪಾದಕ ಪಟ್ಟ ಕಟ್ಟಿ ಅವರನ್ನು ತನಿಖೆಗಾಗಿ ಗಡೀಪಾರು ಮಾಡಿಬಿಟ್ಟರೆ ನಾವು ಮುಂದೆ ಚುನಾವಣೆಯಲ್ಲಿ ಆರಿಸಿಬರುವುದಾದರೂ ಹೇಗೆ, ನಮ್ಮ ಪಕ್ಷದ ಅಧ್ಯಕ್ಷೆಯ ಸೇವೆ ಮಾಡುವುದಾದರೂ ಹೇಗೆ ಎಂಬ ಮಂಡೆಬಿಸಿ ಮಾಡಿಕೊಂಡಿರುವ ಅವರು, ಇತ್ತೀಚೆಗೆ ನಿದ್ರೆ ಮಾಡುವುದನ್ನು ಮರೆತುಹೋಗುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದರ ಹಿಂದೆ ಭಾರೀ ಸಂಚಿದೆ. ನಮ್ಮ ಓಟಿನ ಬ್ಯಾಂಕಿನ ಮೇಲೆ ಪ್ರತಿಪಕ್ಷದವರು ಸಂಚು ಹೂಡಿ, ಅವರನ್ನೆಲ್ಲಾ ಭಯೋತ್ಪಾದಕರು ಎಂದು ವಿದೇಶಗಳಲ್ಲಿಯೂ ಪ್ರಚಾರ ಮಾಡುತ್ತಿದ್ದಾರೆ. ಇದಕ್ಕೆಲ್ಲಾ ಸೊಪ್ಪು ಹಾಕಬೇಡಿ ಎಂದು ಬ್ರಿಟನ್ ಪ್ರಧಾನಿಗೂ ಸೂಚಿಸಿರುವ ನಿಧಾನಿಗಳು, ಬಾಂಬ್ ತಯಾರಿ ಬಗ್ಗೆ ಮಾಹಿತಿ ದೊರಕಿರುವುದೆಲ್ಲಾ ನಮ್ಮನ್ನು ಕಂಡರಾಗದವರ ಸಂಚು ಎಂದು ಸ್ಪಷ್ಟಪಡಿಸಿದ್ದಾರೆ.

ಇದಕ್ಕಾಗಿಯೇ ಕಫೀಲ್ ಮತ್ತು ಆತನ ಸಹೋದರನ ಬಗ್ಗೆ ಮಾಧ್ಯಮಗಳು ಕೂಡ ತಪ್ಪು ತಪ್ಪಾಗಿ ವರದಿ ಮಾಡುತ್ತಿವೆ. ಅವರಿಗೆ ವರದಿ ಮಾಡಲು ಗೊತ್ತೇ ಇಲ್ಲ... ಅವರೇಕೆ ಒಂದು ಸಮುದಾಯದವರ ವಿರುದ್ಧ ಮಾತ್ರವೇ ಬರೆಯುತ್ತಿದ್ದಾರೆ? ಇದು ಪ್ರತಿಪಕ್ಷದ ಸಂಚು ಎಂಬುದಕ್ಕೆ ಇದಕ್ಕಿಂತ ದೊಡ್ಡ ಪುರಾವೆ ಬೇಕೇ? ಎಂದೂ ಕೇಳಿರುವ ಅವರು, ಬೆಂಗಳೂರು ಈಗ ಸಾಫ್ಟ್‌ವೇರ್ ತಂತ್ರಜ್ಞಾನದಲ್ಲಿ ಹೆಸರು ಪಡೆಯುತ್ತಿದೆ. ಸಿರಿಂಜ್ ಬಾಂಬ್ ತಯಾರಿಕೆ ಕೂಡ ಉನ್ನತ ತಂತ್ರಜ್ಞಾನದ ಪ್ರತೀಕವಲ್ಲವೇ? ಇದು ನಮ್ಮ ದೇಶ ಪ್ರಗತಿ ಸಾಧಿಸಿದೆ ಎಂಬುದಕ್ಕೆ ಸಾಕ್ಷಿ ಎಂದು ಸ್ಪಷ್ಟೀಕರಿಸಿದ್ದಾರೆ.

ನಮ್ಮ ಓಟಿನ ಬ್ಯಾಂಕಿನ ಮೇಲೆ ಮಾತ್ರವೇ ಕಣ್ಣು ಇಟ್ಟಿರುವುದೇಕೆ ಎಂದು ಪ್ರಶ್ನಿಸಿರುವ ಅವರು, ಹೀಗೇ ಮುಂದುವರಿದರೆ ವಿದೇಶದಲ್ಲಿ ಶಸ್ತ್ರಾಭ್ಯಾಸ... ಅಲ್ಲಲ್ಲ ಶಸ್ತ್ರಕ್ರಿಯೆ ಮತ್ತು ತಂತ್ರಜ್ಞಾನ (ಬಾಂಬ್ ತಯಾರಿಕೆ ಇತ್ಯಾದಿ) ಬಗ್ಗೆ ಉನ್ನತ ವ್ಯಾಸಂಗಕ್ಕೆ ತೆರಳುವ ನಮ್ಮ ಪ್ರತಿಭೆಗಳ ಗತಿಯೇನು? ಎಂದೂ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಈ ನಡುವೆ, ಉನ್ನತ ವ್ಯಾಸಂಗಕ್ಕೆಂದು ವಿದೇಶಕ್ಕೆ ತೆರಳುತ್ತಿರುವವರು, ಜೆಹಾದಿಗಳ 'ಸಂಗ' ಮಾಡಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆ ಎಂದು ನಮ್ಮ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಗಳು ಘೋಷಿಸಿದ್ದು, ಇದರಿಂದ ಈ ಭಯೋತ್ಪಾದಕರೇ ಮೇಳೈಸುವ ರಾಜ್ಯದಲ್ಲಿ ಚಟುವಟಿಕೆ ಸ್ವಲ್ಪ ಮಟ್ಟಿಗೆ ಶಾಂತವಾದೀತು ಎಂಬ ಆಶಾವಾದ ವ್ಯಕ್ತಪಡಿಸಿದ್ದಾರೆ.

ತೀರಾ ಇತ್ತೀಚಿನ ವರದಿಗಳ ಪ್ರಕಾರ, ನಿಧಾನಿಗೆ ನಿದ್ದೆ ಮಾತ್ರೆಯೊಂದನ್ನು ಸಂಶೋಧಿಸಲಾಗಿದ್ದು, ಅವರ ಓಟಿನ ಬ್ಯಾಂಕನ್ನು ಭದ್ರಪಡಿಸಿದ ತಕ್ಷಣವೇ ಅವರಿಗೆ ನಿದ್ದೆ ಬರುತ್ತಿರುವ ಲಕ್ಷಣಗಳು ಗೋಚರವಾಗಿವೆ ಎಂದು ತಿಳಿದುಬಂದಿದೆ.

ಸೂಚನೆ: ಚಾಟ್ ವಿಂಡೋದಲ್ಲಿ ನಕಲಿ ಅನ್ವೇಷಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಅದನ್ನು ತೆಗೆದುಹಾಕಲಾಗಿದೆ.

Friday, July 06, 2007

ಆತ್ಮಹತ್ಯೆಗೆ ಕಠಿಣ ಶಿಕ್ಷೆ ವಿಧಿಸಲು ನಿರ್ಧಾರ

(ಬೊಗಳೂರು ಆತ್ಮದ ಹತ್ಯೆ ಬ್ಯುರೋದಿಂದ)
ಬೊಗಳೂರು, ಜು.6- ಆತ್ಮಹತ್ಯೆಗೆ ಮುನ್ನ ತಮ್ಮ ಆತ್ಮವನ್ನು ಶೋಧಿಸಿಕೊಳ್ಳಬೇಕು ಎಂಬ ನಿರ್ಣಯದ ಬೆನ್ನಿಗೇ, ರೈತರು ಆತ್ಮಹತ್ಯೆ ಮಾಡಿಕೊಳ್ಳಲಿ ಬಿಡಿ ಎಂಬ ಮಾಜಿ ನಿಧಾನಿಗಳ ಸಲಹೆಯಿಂದ ಎಚ್ಚೆತ್ತುಕೊಂಡಿರುವ ಕೇಂದ್ರ ಸರಕಾರವು, ಇದೀಗ ಆತ್ಮಹತ್ಯೆ ನಿಷೇಧ ಕಾಯಿದೆ ಜಾರಿಗೆ ತರಲು ನಿರ್ಧರಿಸಿದೆ ಎಂದು ಒಲ್ಲದ ಮೂಲಗಳಿಂದ ತಿಳಿದುಬಂದಿದೆ.

ಮಣ್ಣಿನ ಮಗನೇ ಮಣ್ಣಿನ ಮಕ್ಕಳಿಗೆ ಸಲಹೆ ನೀಡಿರುವುದರಿಂದ ದೇಶದಲ್ಲಿ ಆತ್ಮಹತ್ಯೆ ಹೆಚ್ಚಾಗಬಹುದೆಂಬ ಶಂಕೆಯಿಂದ ಕೇಂದ್ರವು ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ.

ಜಾರಿಗೆ ತರಲುದ್ದೇಶಿಸಿರುವ ಹೊಸ ಕಾನೂನಿನ ಪ್ರಕಾರ, ಆತ್ಮಹತ್ಯೆ ಮಾಡಿಕೊಂಡವರಿಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ. ಆತ್ಮಹತ್ಯೆ ಮಾಡಿಕೊಳ್ಳುವ ರೈತರು, ಮಣ್ಣಿನ ಮಕ್ಕಳು, ಚಿನ್ನದ ಮಕ್ಕಳು ಎಂಬೆಲ್ಲಾ ಭೇದಭಾವವಿಲ್ಲ. ಇಲ್ಲಿ ಸಮಾನ ನಾಗರಿಕ ಸಂಹಿತೆ ಅನ್ವಯಿಸಲಾಗುತ್ತದೆ. ಯಾರೇ ಆತ್ಮಹತ್ಯೆ ಮಾಡಿಕೊಂಡರೂ ಅವರಿಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ.

ಕಠಿಣ ಶಿಕ್ಷೆಯ ಪ್ರಮಾಣವೂ ವಿಶಿಷ್ಟವಾಗಿರುತ್ತದೆ. ದಿನನಿತ್ಯದ ಆವಶ್ಯಕ ಸಾಮಗ್ರಿಗಳ, ಬೇಳೆ ಕಾಳುಗಳ, ತರಕಾರಿ-ಹಣ್ಣುಗಳೇ ಮುಂತಾದ, ತಿನ್ನಲು ಯೋಗ್ಯವಾದ ವಸ್ತುಗಳ ಬೆಲೆ ಏರಿಸುತ್ತಾ, ಇಲ್ಲೇ ಜೀವನ ನಡೆಸಬೇಕು ಎಂಬ ಆದೇಶವೇ ಶಿಕ್ಷೆಯಾಗುತ್ತದೆ ಎಂದು ಪರಿಭಾವಿಸಲಾಗಿದೆ.

ಬೆಲೆ ಏರಿಕೆ ಸಹಿಸಿಕೊಂಡೂ ಮತ್ತೆ ಮತ್ತೆ ಆತ್ಮಹತ್ಯೆಗೆ ಮುಂದಾಗಿ, ಆತ್ಮಹತ್ಯೆ ಮಾಡಿಕೊಂಡವರಿಗೆ ಗಲ್ಲು ಶಿಕ್ಷೆ ವಿಧಿಸಲು ಕೂಡ ಕೆಲವು ಜಾರಕಾರಣಿಗಳಿಂದ ಅಮೂಲ್ಯ ಸಲಹೆಗಳು ಬಂದವು ಎಂದು ನಮ್ಮ ಸಂಪುಟ ಸಭೆಯ ಬಾತ್ಮೀದಾರರು ಒದರಿ ಮಾಡಿದ್ದಾರೆ.
ಇಷ್ಟೆಲ್ಲಾ ಪರಿಹಾರ-ಪ್ಯಾಕೇಜ್‌ಗಳನ್ನು ವಿತರಿಸಿಯೂ ರೈತರು ಆತ್ಮಹತ್ಯೆಗೆ ಮುಂದಾಗುತ್ತಿದ್ದು, ಅಂಥವರಿಗೆ ಏನು ಮಾಡಲು ಸಾಧ್ಯ ಎಂಬ ಮಾಜಿ ನಿಧಾನಿಗಳ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿದ ಸಂಪುಟ ಸಭೆಯು, ರೈತರಿಗೆ ಪರಿಹಾರ ವಿತರಿಸದಿದ್ದರೆ, ಸರಕಾರಿ ಅಧಿಕಾರಿಗಳು, ಜಾರಕಾರಣಿಗಳ ಹೊಟ್ಟೆ ತುಂಬುವುದಾದರೂ ಹೇಗೆ ಎಂದು ಅಚ್ಚರಿ ವ್ಯಕ್ತಪಡಿಸಿತು.

ರೈತರಿಗೆ ಕೋಟಿ ಕೋಟಿ ಪ್ರಕಟಿಸಿದರೂ, ಅದರಲ್ಲಿ ಅಧಿಕಾರಿಗಳು, ಜಾರಕಾರಣಿಗಳೂ ಪಾಲು ಪಡೆಯುತ್ತಿದ್ದು, ಅವರೂ ಜೀವನ ಮಾಡಬೇಡವೇ ಎಂದು ಸಭೆಯಲ್ಲಿ ಹಾಜರಿದ್ದವರು ಆಶ್ಚರ್ಯ ವ್ಯಕ್ತಪಡಿಸಿದ್ದರು.

Wednesday, July 04, 2007

"ಪೂರ್ಣ"ಧೂಮದ ಪಾನ ನಿಷೇಧ

(ಬೊಗಳೂರು ಧೂಮಪಾನಮತ್ತ ಬ್ಯುರೋದಿಂದ)
ಬೊಗಳೂರು, ಜು.2- ಸಂಪೂರ್ಣ ಧೂಮವನ್ನು ಪಾನ ಮಾಡುವುದನ್ನು ನಿಷೇಧಿಸಲು ವಿಶ್ವ ಆರೋಗ್ಯ ಸಂಸ್ಥೆ ಕರೆ ನೀಡಿರುವ ಬೆನ್ನಿಗೆ ಎಚ್ಚೆತ್ತುಕೊಂಡ ಕೇಂದ್ರ ಸರಕಾರವು, ಯಾರು ಕೂಡ "ಸಂಪೂರ್ಣ"ವಾಗಿ ಧೂಮವನ್ನೇ ಪಾನ ಮಾಡಬಾರದು ಎಂದು ಆದೇಶ ಹೊರಡಿಸಿದೆ.

ಪೂರ್ತಿಯಾಗಿ ಎಲ್ಲಾ ಧೂಮವನ್ನು ಒಳಗೆಳೆದುಕೊಂಡುಬಿಟ್ಟರೆ ಅದು ಆರೋಗ್ಯವಂತರ ಆರೋಗ್ಯಕ್ಕೆ ಮತ್ತು ಶ್ವಾಸಕೋಶ ಇದ್ದವರ ಶ್ವಾಸಕೋಶಕ್ಕೂ ಹಾನಿಯುಂಟು ಮಾಡುತ್ತದೆ. ಹೊಗೆಯನ್ನು ಸಂಪೂರ್ಣವಾಗಿ ಒಳಗೆಳೆದುಕೊಂಡರೆ ಹೊಗೆಗೆ ಒಳಗೆ ಜಾಗ ಸಾಲದೆ ಪಪ್ಪುಸ ಒಡೆಯುವ ಅಥವಾ ಅನಿಲ ಸೋರಿಕೆಯಾಗುವ ಸಾಧ್ಯತೆಗಳಿವೆ ಎಂಬ ಕಾರಣ ನೀಡಿ ಸರಕಾರದ ಅನಾರೋಗ್ಯ ಸಚಿವಾಲಯವು ಈ ಕ್ರಮ ಕೈಗೊಂಡಿದೆ ಎಂದು ನಮ್ಮ ವರದಿಗಾರರು ಮೂಗು ಮುಚ್ಚಿಕೊಂಡು ವರದಿ ಮಾಡಿದ್ದಾರೆ.

ಕೆಟ್ಟದ್ದನ್ನು ಸುಟ್ಟುಬಿಡಬೇಕು ಎಂಬ ದಾರ್ಶನಿಕರ ಸಂದೇಶವನ್ನು ಯಥಾವತ್ ಪಾಲಿಸುತ್ತಿರುವ ಇಂದಿನ ಜನಾಂಗೀಯರು, ಧೂಮಲೀಲೆಯಲ್ಲೇ ಮಗ್ನರಾಗಿ, ಇತ್ತೀಚಿನ ದಿನಗಳಲ್ಲಿ, ಅಲ್ಲಲ್ಲಿ ಹಳೆಯ ರೈಲು ಎಂಜಿನಿನಿಂದ ಹೊಗೆ ಬಿಡುತ್ತಿರುವ ದೃಶ್ಯಗಳು ಸರ್ವೇ ಸಾಮಾನ್ಯವಾಗಿ ಕಂಡುಬರುತ್ತಿದ್ದವು. ಹೊಗೆಬತ್ತಿ ಸೇವನೆಯು ಆರೋಗ್ಯಕ್ಕೆ ಹಾನಿಕರ ಎಂಬ ಕಟ್ಟೆಚ್ಚರಿಕೆಯುಳ್ಳ "ಶಾಸನ ವಿಧಿಸಿದ ಎಚ್ಚರಿಕೆ"ಯು ಯಾರ ಕಣ್ಣಿಗೂ ಬೀಳದಷ್ಟು ಚಿಕ್ಕ ಅಕ್ಷರಗಳಲ್ಲಿ ಮತ್ತು ದಟ್ಟ ಹೊಗೆಯ ನಡುವೆ ಕಣ್ಣಿಗೆ ಬೀಳದಂತಿದ್ದುದರಿಂದಾಗಿ ಯುವಕರು ಈ ತಂಬಾಕು ಯಜ್ಞವನ್ನು ಅಲ್ಲಲ್ಲಿ ಕೈಗೊಳ್ಳುತ್ತಿದ್ದಾರೆ ಎಂಬುದನ್ನು ಪತ್ತೆ ಹಚ್ಚಲಾಗಿದೆ.

ಅದು ಶಾಸನ ವಿಧಿಸಿದ ಎಚ್ಚರಿಕೆಯಾದರೂ ಧೂಮಪಾನವು ಸೇದಿದವರ ಆರೋಗ್ಯಕ್ಕೆ ಹಾನಿಕರ ಅಲ್ಲ, ಬದಲಾಗಿ ಪಕ್ಕದಲ್ಲಿ ಪರೋಕ್ಷವಾಗಿ ಧೂಮಪಾನ ಮಾಡುವವರ ಮತ್ತು ಹೊಗೆಬತ್ತಿ ಸೇದದವರ ಆರೋಗ್ಯಕ್ಕೆ ಹಾನಿಕರ ಎಂಬುದು ಶಾಸನ ವಿಧಿಸದ ಎಚ್ಚರಿಕೆ ಎಂದು ಧೂಮಪಾನಿಗಳು ತಿಳಿದುಕೊಂಡಿದ್ದರು ಎಂಬುದನ್ನು ಕೂಡ ಇದೇ ಸಂದರ್ಭದಲ್ಲಿ ಅನ್ವೇಷಣೆ ಮಾಡಲಾಗಿದೆ.

ಮಾತ್ರವಲ್ಲದೆ, ನೇರ ಧೂಮಪಾನಿಗಳಿಗಿಂತಲೂ ಪರೋಕ್ಷ ಧೂಮಪಾನಿಗಳ ಸಾವಿನ ಸಂಖ್ಯೆ, ಕಾಯಿಲೆಯ ಸಂಖ್ಯೆ ಹೆಚ್ಚಿರುವುದರಿಂದಾಗಿ ಇದನ್ನೇ ಆಯುಧವನ್ನಾಗಿಸಿಕೊಂಡ ಧೂಮಪಾನಿಗಳು, ನೋಡಿ, ಧೂಮಪಾನಿಗಳು ಆರೋಗ್ಯದಿಂದಿರುತ್ತಾರೆ, ಸೇದದವರೇ ಅನಾರೋಗ್ಯಕ್ಕೆ ತುತ್ತಾಗುತ್ತಾರೆ, ಆದುದರಿಂದ ಎಲ್ಲರೂ ಸೇದಿರಿ ಸೇದಿರಿ ಎಂದು ಬೊಗಳೆ ಘೋಷಣೆ ಹೊರಡಿಸಲಾರಂಭಿಸಿದ್ದಾರೆ.

ಇದೇ ತಂತ್ರಕ್ಕೆ ಮೊರೆ ಹೋದ ಸರಕಾರ ಸಂಪೂರ್ಣ ಧೂಮಪಾನ ನಿಷೇಧಿಸಿ, ಭಾಗಶಃ ಧೂಮಪಾನವನ್ನು ಉತ್ತೇಜಿಸಲು ನಿರ್ಧರಿಸಿದೆ ಎಂದು ಬೊಗಳೂರು ಬ್ಯುರೋ ವರದಿ ಮಾಡಿಲ್ಲ.

Monday, July 02, 2007

ಆತ್ಮ- ಹತ್ಯೆಗೆ ಮುನ್ನ ಆತ್ಮ-ಶೋಧನೆಗೆ ಕರೆ

(ಬೊಗಳೂರು ರೈತಕಾಳಜಿ ಬ್ಯುರೋದಿಂದ)
ಬೊಗಳೂರು, ಜು.1- ಮಾಜಿ ಸಚಿವರೊಬ್ಬರ ಮಾತಿನಿಂದ ಪ್ರೇರಣೆಗೊಂಡ ಮಾಜಿ ನಿಧಾನಿಗಳು, ತಮ್ಮ ಆತ್ಮವನ್ನು ಶೋಧಿಸಿಕೊಳ್ಳಲು ತೀವ್ರ ಪ್ರಯತ್ನ ನಡೆಸುತ್ತಿರುವುದು ಬೊಗಳೆ ರಗಳೆ ಬ್ಯುರೋವನ್ನು ಬೆಚ್ಚಿ ಬೀಳಿಸಿದೆ.

ಇದಕ್ಕೆ ಕಾರಣವೆಂದರೆ ಅಸತ್ಯ ಶೋಧನೆಯಲ್ಲಿ ನಿರತವಾಗಿರುವ ಬೊಗಳೆ ರಗಳೆ ಬ್ಯುರೋಗೇ ಅವರು ಸೆಡ್ಡು ಹೊಡೆಯುತ್ತಿರುವುದು. ಈ ಹಿನ್ನೆಲೆಯಲ್ಲಿ, ಆತ್ಮ ಹತ್ಯೆ ಮಾಡಿಕೊಂಡ ರೈತರ ಆತ್ಮವನ್ನು ಮಾಜಿ ನಿಧಾನಿಗಳು ಶೋಧಿಸಹೊರಟಿದ್ದು, ಕುತೂಹಲ ಮೂಡಿಸಿದೆ.

ಆತ್ಮಹತ್ಯೆ ಮಾಡಿಕೊಂಡ ರೈತರು ಈಗ ಏನು ಮಾಡುತ್ತಿದ್ದಾರೆ, ಅವರ ಸಾಲ ಮನ್ನಾ ಮಾಡಬೇಕೇ, ಸಾಲ ಮನ್ನಾ ಮಾಡಿದರೆ ಅವರು ಮರಳಿ ಬರುತ್ತಾರೆಯೇ ಎಂಬಿತ್ಯಾದಿ ವಿಷಯಗಳನ್ನು ಸಂ-ಶೋಧನೆಯಲ್ಲಿ ಅಳವಡಿಸಲು ನಿರ್ಧರಿಸಲಾಗಿದೆ.
ಇದಲ್ಲದೆ, ಆತ್ಮಹತ್ಯೆಗೆ ಶರಣಾಗುವ ಮುನ್ನ ಈ ರೈತರು ಮುದ್ದೆ ತಿಂದು ನಿದ್ದೆಗೆ ಶರಣಾಗಿದ್ದರೇ ಎಂಬುದನ್ನೂ ಈ ಆತ್ಮಶೋಧನಾ ಪ್ರಕ್ರಿಯೆ ವೇಳೆ ಪತ್ತೆ ಹಚ್ಚಲು ತೀರ್ಮಾನಿಸಲಾಗಿದೆ.

ಈ ಕುರಿತು ರದ್ದಿಗಾರರೊಂದಿಗೆ ಮಾತನಾಡಿದ ಮಾಜಿ ನಿಧಾನಿಗಳು, ಆತ್ಮ ಹತ್ಯೆ ಮಾಡಿಕೊಳ್ಳುವವರು ಅದಕ್ಕೆ ಮುನ್ನ ತಮ್ಮ ಹಾಗೂ ನೆರೆಮನೆಯ ರೈತರ ಆತ್ಮದ ಶೋಧನೆ ಮಾಡಿಕೊಂಡರೆ ಒಳಿತು ಎಂದು ಕರೆ ನೀಡಿದರು. ಈ ರೀತಿ ಮಾಡಿದರೆ, ತಾನು ಆತ್ಮಶೋಧನೆ ಮಾಡಿಕೊಳ್ಳುವಂತೆ ಬೇರೆಯವರು ನನಗೆ ಸಲಹೆ ನೀಡುವುದು ಉಳಿಯುತ್ತದೆ. ಮಾತ್ರವಲ್ಲದೆ, ರೈತರಿಂದಲೇ ಪ್ರಧಾನಿ ಗಾದಿಗೇರಿದ ತನಗೆ ರೈತರ ಆತ್ಮಗಳು ಮುಂದೆಂದಾದರೂ ಕಿರುಕುಳ ನೀಡಬಹುದಾದ ಸಾಧ್ಯತೆಗಳನ್ನೂ ನಿವಾರಿಸಬಹುದಾಗಿದೆ ಎಂದು ಅವರು ತರ್ಕ ಮಂಡಿಸಿದರು.

ಮಹಾರಾಷ್ಟ್ರದ ವಿದರ್ಭದಲ್ಲಿ ಪ್ರಧಾನಿಯವರು ಪರಿಹಾರ ಪ್ಯಾಕೇಜ್ ಘೋಷಿಸಿದ ತಕ್ಷಣವೇ, ಆತ್ಮವನ್ನು ಶೋಧಿಸಿಕೊಂಡ ರೈತರು, ಸರಕಾರದಿಂದ ಬರುವ ಪರಿಹಾರ ಧನದ ರೀತಿ ನೀತಿಗಳು, ವಿಳಂಬಗಳು, ನುಂಗಣ್ಣ ಅಧಿಕಾರಿಗಳ ಕಾಟ... ಇತ್ಯಾದಿ ಎಲ್ಲವನ್ನೂ ಕಂಡುಕೊಂಡಬಳಿಕ, ಪೈಪೋಟಿಗೆ ಬಿದ್ದವರಂತೆ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂಬುದನ್ನು ಇಲ್ಲಿ (ಚಿರ)ಸ್ಮರಣೆ ಮಾಡಿಕೊಳ್ಳಬಹುದು.

ತಿಮಿಂಗಿಲಗಳಿಗೆ ಸಹಕಾರ: ಪ್ರಶ್ನೆ ಪತ್ರಿಕೆ, ಬೆಲೆ ಇಳಿಕೆಗಳಿಗೂ ನಿಷೇಧ

[ಬೊಗಳೂರು ಭಾಗ್ಯಗಳ ಬ್ಯುರೋದಿಂದ] ಬೊಗಳೂರು: ಜನರು ಸೀಲಿಂಗ್ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದರಿಂದ ಸೀಲಿಂಗ್ ಫ್ಯಾನನ್ನೇ ನಿಷೇಧಿಸಬೇಕು...