Friday, August 31, 2007

ತುಟ್ಟಿ ಭತ್ಯೆ ಶೇ.100 ಹೆಚ್ಚಿಸಲು ಆಗ್ರಹ

(ಬೊಗಳೂರು ತುಟ್ಟಿ-ಪಿಟಕ್ ಬ್ಯುರೋದಿಂದ)
ಬೊಗಳೂರು, ಆ.31- ಕೇಂದ್ರದ ಬೆಲೆ ಏರಿಕೆ (Unprecedented Price Agenda) ಸರಕಾರವು ತನ್ನ ನೌಕರರಿಗೆ ತುಟ್ಟಿ ಭತ್ಯೆ ಹೆಚ್ಚಿಸಿದ್ದು, ಪ್ರಜೆಗಳ ಜೀವನಾವಶ್ಯಕ ವಸ್ತುಗಳನ್ನು ಮತ್ತಷ್ಟು ತುಟ್ಟಿ ಮಾಡುವ ಮೂಲಕ ದೇಶದ ಆರ್ಥಿಕ ಪ್ರಗತಿಗೆ ನಾಂದಿ ಹಾಡಿದೆ.

ಈ ಮಧ್ಯೆ, ಕೂಗೊಂದು ಕೇಳಿಬಂದಿದ್ದು, ನೌಕರರ ತುಟ್ಟಿ ಭತ್ಯೆಯನ್ನು ಶೇ.35ರಿಂದ 41ಕ್ಕೆ ಏರಿಸಲಾಗಿದೆ. ಆದರೆ ಪ್ರಜೆಗಳ ಜೀವನಾವಶ್ಯಕ ವಸ್ತುಗಳ ತುಟ್ಟಿ ದರವನ್ನು ಶೇ.100ಕ್ಕೂ ಹೆಚ್ಚು ಏರಿಸಲಾಗಿದೆ. ಇದು ಯಾವ ನ್ಯಾಯ ಎಂದು ಕೇಂದ್ರ ಸರಕಾರಿ ನೌಕರರು ಪ್ರತಿಭಟನೆ ನಡೆಸಲು ತಯಾರಾಗಿದ್ದಾರೆ.

ಆದರೆ ಈ ನೌಕರರು ಪ್ರತಿಭಟನೆ ನಡೆಸುತ್ತಿರುವುದು ಬಡವರ ತುಟ್ಟಿ ದರವನ್ನು ಏರಿಸಿದ್ದಕ್ಕೆ ಅಲ್ಲ, ಬದಲಾಗಿ ತಮ್ಮ ತುಟ್ಟಿ ಭತ್ಯೆ ದರವನ್ನೂ ಶೇ.100ಕ್ಕಿಂತ ಹೆಚ್ಚು ಮಾಡಲು ಎಂಬುದನ್ನು ಬ್ಯುರೋ ಪತ್ತೆ ಹಚ್ಚಿದೆ.

ತುಟ್ಟಿ ಭತ್ಯೆ ಹೆಚ್ಚಳದಿಂದ ಬೊಕ್ಕಸಕ್ಕೆ 2206ಕ್ಕೂ ಹೆಚ್ಚು ಕೋಟಿ ರೂಪಾಯಿಯಷ್ಟು ಹೊರೆಯಾಗುತ್ತದೆ ಎಂದು ಸರಕಾರವೇ ಹೇಳುತ್ತಿದೆ. ಆ ಕಾರಣಕ್ಕೆ ಈ ಹೊರೆ ನಿವಾರಿಸಲು ನೌಕರರನ್ನೇ ಕೆಲಸದಿಂದ ನಿವಾರಿಸಿಬಿಟ್ಟರೆ ಸಾಕಷ್ಟು ಉಳಿತಾಯವಾಗುತ್ತದೆ ಎಂಬುದು ಬೊಗಳೂರು ಪ್ರಜೆಗಳ ಅಭಿಪ್ರಾಯ.

ತನ್ನ ಕ್ರಮಕ್ಕೆ ಸಮರ್ಥನೆ ನೀಡಿರುವ ಸರಕಾರವು, ತುಟ್ಟಿ ಭತ್ಯೆ ಹೆಚ್ಚಳದಿಂದ ಸರಕಾರಕ್ಕೆ ಎಷ್ಟು ಹೊರೆಯಾಗುತ್ತದೋ, ಅದಕ್ಕಿಂತ ಮೂರು ಪಟ್ಟು ಕಾಸು ನಮ್ಮ ಸಂಸದರು, ಶಾಸಕರ ಸೌಲಭ್ಯಕ್ಕೆ ಖರ್ಚಾಗುತ್ತದೆ. ಹಾಗಿರುವಾಗ ಇದನ್ನೆಲ್ಲವನ್ನೂ ನಾವು ಬೆಲೆ ಏರಿಕೆಯ ಮೂಲಕವೇ ಸರಿದೂಗಿಸಿಕೊಳ್ಳುತ್ತೇವೆ ಎಂದು ಸಮಜಾಯಿಷಿ ನೀಡಿದೆ.

ಇದಲ್ಲದೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುವುದು ಜನತೆಯ ಮತ್ತು ಆ ಮೂಲಕ ದೇಶದ ಶ್ರೀಮಂತಿಕೆಯ ಸಂಕೇತ. ಬೇರೆ ಊರಿನಲ್ಲಿ 1 ರೂಪಾಯಿಗೆ ದೊರೆಯುವ ವಸ್ತುವೊಂದು ಇಲ್ಲಿ ಏಳೆಂಟು ರೂಪಾಯಿಗೆ ದೊರೆಯಿತೆಂದಾದರೆ, ನಮ್ಮ ಪ್ರಜೆಗಳ ಜೀವನ ಮೌಲ್ಯವೂ ಏಳೆಂಟು ಪಟ್ಟು ವೃದ್ಧಿಯಾದಂತಲ್ಲವೇ ಎಂದು ಸರಕಾರದ ವಕ್ತಾರರು ಪ್ರಶ್ನಿಸಿದ್ದಾರೆ.

ಈ ನಡುವೆ, ಬೊಗಳೂರಿನ ಕಿಡಿಗೇಡಿ ಸಮುದಾಯದವರೆಲ್ಲರೂ ಒಟ್ಟಾಗಿದ್ದು, ತುಟ್ಟಿ ಭತ್ಯೆಯ ಜತೆಗೆ ತುಟಿ ಭತ್ಯೆಯನ್ನೂ ಹೆಚ್ಚಿಸಬೇಕು ಎಂದು ಆಗ್ರಹಿಸಿದ್ದಾರೆ.

Wednesday, August 29, 2007

ಕೆಲಸವಿಲ್ಲದ ಯುವಕರಿಗೆ ತರಬೇತಿ

(ಬೊಗಳೂರು ಕೆಲಸವಿಲ್ಲದ ಬ್ಯುರೋದಿಂದ)
ಬೊಗಳೂರು, ಆ.29- ಮಾಡಲು ಕೆಲಸವಿಲ್ಲದ ಯುವಕರಿಗೆ ವಿಶೇಷ ತರಬೇತಿಯೊಂದನ್ನು ನೀಡಲು ಬೊಗಳೂರಿನ ಸರಕಾರ ನಿರ್ಧರಿಸಿದೆ.

ಈ ನಿರ್ಧಾರದ ಹಿಂದಿನ ಪ್ರಮುಖ ಉದ್ದೇಶವೆಂದರೆ, "ನಿನಗೆ ಮಾಡಲು ಬೇರೆ ಕೆಲಸ ಇಲ್ವಾ" ಅಂತ ಯಾರಾದರೂ ಕೇಳುವುದನ್ನು ತಪ್ಪಿಸುವುದು. ಈ ಕಾರಣಕ್ಕೆ ಕೆಲಸವಿಲ್ಲದ ಯುವ ಜನತೆಗೆ ಕೈತುಂಬಾ ಕೆಲಸ ನೀಡುವುದು ಮತ್ತು ಮಾಡಲು ಉದ್ಯೋಗವಿಲ್ಲದಿದ್ದರೂ ಹೇಗೆ ಬದುಕುವುದು ಎಂಬುದನ್ನು ಈ ತರಬೇತಿಯಲ್ಲಿ ಹೇಳಿಕೊಡಲಾಗುತ್ತದೆ.

ಈ ತರಬೇತಿ ಕಾರ್ಯಕ್ರಮದಲ್ಲಿ, ಕೆಲಸವಿಲ್ಲದ ಯುವಕರಿಗೆ ಓರ್ಕುಟ್ ವಿಹಾರ, ಅಶ್ಲೀಲ ಇ-ಮೇಲ್‌ಗಳ ಫಾರ್ವರ್ಡಿಂಗ್, spam ಸಂದೇಶಗಳ ರವಾನೆ, ಚಾಟಿಂಗ್ ತಾಣದಲ್ಲಿ ಹೋಗಿ ಚಾಟಿಂಗ್ ನಿರತವಾಗುವುದು ಎಂಬಿತ್ಯಾದಿಗಳನ್ನು ಮೂಲಭೂತವಾಗಿ ಹೇಳಿಕೊಡಲಾಗುತ್ತದೆ.

ಆ ಬಳಿಕ, ಕೆಲಸವಿಲ್ಲದವರಿಗಾಗಿ ಭರ್ಜರಿ ಉದ್ಯೋಗಾವಕಾಶಗಳಿರುವ ರಾಜಕೀಯ ಕ್ಷೇತ್ರದ ಎಲ್ಲ ಮೂಲ ಪಾಠಗಳನ್ನು ಹೇಳಿಕೊಡಲಾಗುತ್ತದೆ. ಅದರಲ್ಲಿ ಪಂಚಿಂಗ್, ಮೈಕ್ ಎಳೆದಾಡುವಿಕೆ, ಕೂಗಾಡುವಿಕೆ, ತಲೆಕೂದಲು ಎಳೆಯುವಿಕೆ, ಮಾತ್ರವಲ್ಲದೆ, ಆಡಳಿತಾರೂಢರ ಎಲ್ಲ ಕ್ರಮಗಳನ್ನು ವಿರೋಧಿಸುತ್ತಲೇ ಅಧಿಕಾರಕ್ಕೆ ಅಂಟಿಕೊಳ್ಳುವುದು, ವಿರೋಧಿಗಳೊಂದಿಗೆ ಕೈಜೋಡಿಸಿ, ಕುಡಿಕೆ ಹೊನ್ನು ಸಾಲದಂತೆ ಕುಳಿತು ತಿನ್ನುವುದು, ಅವರಿವರವನ್ನು ಟೀಕಿಸುವುದು, ತಲೆ ಇಲ್ಲದ ಚಿಕನ್ ತಿನ್ನುವುದು, ದೇಶದ ಜನರ ಮೇಲೆ ತೆರಿಗೆ ವಿಧಿಸಿ, ಆ ತೆರಿಗೆ ಹಣವನ್ನೆಲ್ಲಾ ಮೋಜು ಮಸ್ತಿಗೆ ವ್ಯಯಿಸುವುದು... ಮುಂತಾಗಿ ಪಾಠಗಳನ್ನು ಹೇಳಿಕೊಡಲಾಗುತ್ತದೆ.

ಮತ್ತೆ ಕೆಲವು ಮಂದಿಗೆ ಮೊಬೈಲ್ ಫೋನ್ ಕೈಗೆ ನೀಡಲಾಗುತ್ತದೆ. ಅವರು ಇದ್ದವರಿಗೆ, ಇಲ್ಲದವರಿಗೆ... ಹೀಗೆ ಎಲ್ಲರಿಗೂ ಎಸ್ಎಂಎಸ್ ಟೈಪ್ ಮಾಡಿ ಕಳುಹಿಸುತ್ತಾ ಇರಬಹುದು ಮತ್ತು ಈ ಮೂಲಕ ಅಮೂಲ್ಯವಾದ ಕಾಲವನ್ನು ಕಳೆಯಬಹುದು. ಆದರೆ ಮೊಬೈಲ್ ಫೋನ್ ಪಡೆದವರು ಅದರ ಕೀಪ್ಯಾಡ್‌ಗಳ ಅಕ್ಷರಗಳು ಸವೆದುಹೋಗದಂತೆ ಜಾಗ್ರತೆ ವಹಿಸಬೇಕು ಎಂಬ ಷರತ್ತು ವಿಧಿಸಿರುವುದು ಮಾತ್ರ, ಈ ಕೆಲಸವಿಲ್ಲದ ಯುವಜನತೆಯ ಆಕ್ರೋಶಕ್ಕೆ ಕಾರಣವಾಗಿದೆ ಎಂದು ತಿಳಿದುಬಂದಿದೆ.

Wednesday, August 22, 2007

ತಲೆ ಇಲ್ಲದ ಚಿಕನ್ ತಿನ್ನುವುದು ಅಪಾಯಕಾರಿ

(ಬೊಗಳೂರು ತಲೆ ಇಲ್ಲದ ಬ್ಯುರೋದಿಂದ)
ಬೊಗಳೂರು, ಆ.22- ತಲೆ ಇಲ್ಲದ ಚಿಕನ್‌ಗಳನ್ನು ತಿನ್ನುವವರಿಗೂ ತಲೆ ಇರುವುದಿಲ್ಲ ಎಂಬ ಆರೋಪ ಮಾಡಿರುವ ಅಮೆರಿಕದಲ್ಲಿರುವ ಭಾರತೀಯ ರಾಯಭಾರಿಯ ವಿರುದ್ಧ ಸಂಸದರೆಲ್ಲಾ ಹೆಗಲು ಮುಟ್ಟಿಕೊಂಡು ತೀವ್ರವಾಗಿ ಪ್ರತಿಭಟನೆ ನಡೆಸಿದ ಪ್ರಸಂಗವೊಂದು ದೇಶಾದ್ಯಂತ ಕುತೂಹಲಕ್ಕೆ ಕಾರಣವಾಗಿದೆ.

ತಲೆ ಇಲ್ಲದ ಚಿಕನ್‌ಗಳಂತೆ ಅತ್ತಿತ್ತ ಅಲೆದಾಡುವಿರೇಕೆ ಎಂದು ರಾಯಭಾರಿ ಹೇಳಿರುವುದು ನಮಗಲ್ಲ ನಮಗಲ್ಲ ಎಂದು ಸಂಸದರು ಒತ್ತಿ ಒತ್ತಿ ಸ್ಪಷ್ಟನೆ ನೀಡುತ್ತಿರುವ ದೃಶ್ಯವನ್ನು ದೇಶದಲ್ಲೇ ಬೊಗಳೆ ರಗಳೆ ಬ್ಯುರೋಗೆ ಸೆಡ್ಡು ಹೊಡೆಯುತ್ತಿರುವ ಐಬಿಎನ್ ನ್ಯೂಸ್ ಬ್ಯುರೋ ವರದಿ ಮಾಡಿರುವುದನ್ನು ಇಲ್ಲಿಂದ ಕದ್ದು ಬೊಗಳೆ ರಗಳೆ ಬ್ಯುರೋ ಓದುಗರಿಗಾಗಿ ಹಾಕಲಾಗಿದೆ.


ಈ ಮಧ್ಯೆ, ಆ ರಾಯಭಾರಿ ಆ ರೀತಿ ಹೇಳಿಕೆ ನೀಡಿರುವುದು ಬೊಗಳೆ ರಗಳೆ ಬ್ಯುರೋ ಬಗೆಗೂ ಅಲ್ಲ ಎಂದು ನಮ್ಮ ಸಂತಾಪಕರು ಕೂಡ ಒತ್ತಿ ಒತ್ತಿ, ಕುರ್ಚಿ ಎತ್ತಿ ಹೇಳತೊಡಗಿರುವುದು ನಮ್ಮ ಏಕಸದಸ್ಯ ಬ್ಯುರೋದಲ್ಲಿರುವ ಎಲ್ಲರಿಗೂ ಕುತೂಹಲ ಮೂಡಿಸಿದೆ ಎಂದು ತಿಳಿದುಬಂದಿದೆ.

ಇದಕ್ಕೆ ಪ್ರಮುಖ ಕಾರಣವೆಂದರೆ ಆ ರಾಯಭಾರಿ ನೀಡಿರುವ ಸ್ಪಷ್ಟನೆ. ಇದನ್ನು ತಾನು ಹೇಳಿದ್ದು ಸಂಸದರಿಗಲ್ಲ, ನಮ್ಮ ಮಾಧ್ಯಮ ಮಿತ್ರರಿಗೆ ಎಂದು ಅವರು ಹೇಳಿರುವುದರಿಂದ ಅವರ ಮಾಧ್ಯಮ ಮಿತ್ರರ ಬಳಗದಲ್ಲಿ ಬೊಗಳೆ ಬ್ಯುರೋ ಕೂಡ ಸೇರಿಕೊಂಡಿರಬಹುದೇ ಎಂಬ ಸಂದೇಹಗಳು ಕಾಡುತ್ತಿವೆ ಎಂದು ವರದಿಯಾಗಿದೆ.

ಆದರೂ ಸಾವರಿಸಿಕೊಂಡಿರುವ ನಮ್ಮ ಬ್ಯುರೋ, ತಲೆ ಇಲ್ಲದ ಚಿಕನ್ ತಿಂದರೆ ತಲೆ ಇರುವುದಿಲ್ಲ ಎಂಬುದನ್ನು Someಶೋಧನೆ ಮೂಲಕ ಪತ್ತೆ ಹಚ್ಚಿದೆ. ಆದುದರಿಂದ ಯಾರು ಕೂಡ ತಲೆ ಇಲ್ಲದ ಚಿಕನ್ ತಿನ್ನುವ ಬದಲು, ತಲೆ ಇರುವ ಇಡೀ ಚಿಕನನ್ನು ಗುಳುಂಕರಿಸುವುದೇ ಸೂಕ್ತ ಎಂಬ ಪುಕ್ಕಟೆ ಸಲಹೆ ನೀಡಲಾಗುತ್ತಿದೆ.

Friday, August 17, 2007

ಬೊಗಳೆ ಬ್ಯುರೋ ದಿಲ್ಲಿಗೆ ಹೋಗಿಲ್ಲ : ಸ್ಪಷ್ಟನೆ

(ಬೊಗಳೂರು ಕಳವಳ ಬ್ಯುರೋದಿಂದ)
ಬೊಗಳೂರು, ಆ.17- 60ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಬೊಗಳೆ ರಗಳೆ ಬ್ಯುರೋವು ದೆಹಲಿಯ ಕೆಂಪುಕೋಟೆ ಸುತ್ತ ಮುತ್ತ ಠಳಾಯಿಸುತ್ತಿತ್ತು ಎಂಬ ವರದಿಗಳನ್ನು ಬೊಗಳೆ ಸಂತಾಪಕರು ತಳ್ಳಿ ಹಾಕಿದ್ದಾರೆ.

ಇಲ್ಲಿ ಪ್ರಕಟಿಸಿರುವ ಚಿತ್ರವು ಇ-ಮೇಲ್‌ನಲ್ಲಿ ಭಾರೀ ಪ್ರಮಾಣದಲ್ಲಿ ಫಾರ್ವರ್ಡ್ ಆಗುತ್ತಿರುವುದರಿಂದ ಬೆಚ್ಚಿ ಬಿದ್ದಿದ್ದೇವೆ ಎಂದು ನಾವಾಗಿಯೇ ತಿಳಿಸುತ್ತಿದ್ದು, ಯಾರು ಕೂಡ ಕಳವಳಗೊಳ್ಳಬಾರದು ಎಂದು ಈ ಮೂಲಕ ಎಚ್ಚರಿಸಲಾಗಿದೆ.

ತಾವೆಂದಿಗೂ ಕೆಂಪು ಕೋಟೆಗೆ ಹೋಗಿದ್ದಿಲ್ಲ, ಅಲ್ಲಿ ಧ್ವಜವನ್ನು ಹಾರಿಸಿದ್ದಿಲ್ಲ. ಮತ್ತು "ಯುವಕರೇ ಈ ದೇಶದ ಶಕ್ತಿ, ಅವರೆಲ್ಲಾ ಮುಂದೆ ಬರಬೇಕು, ಬಡವರ ಏಳಿಗೆಗೆ ಹಾಗೆ ಮಾಡಿದ್ದೇವೆ, ಹೀಗೆ ಮಾಡಿದ್ದೇವೆ" ಎಂಬಿತ್ಯಾದಿ ಬೊಗಳೆ ಬಿಟ್ಟಿಲ್ಲ ಎಂದು ಸಂತಾಪಕರು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.

ಬಡತನವನ್ನು ಇಷ್ಟು ಶೇಕಡಾ ನಿವಾರಿಸಿದ್ದೇವೆ, ಇನ್ನುಳಿದ ಬಡತನವನ್ನು ಇಂತಿಷ್ಟು ಸಮಯದಲ್ಲಿ ನಿವಾರಿಸುತ್ತೇವೆ ಎಂಬುದನ್ನು ಹೇಳಿಲ್ಲ. ಆದರೆ ಬಡತನ ನಿರ್ಮೂಲನೆ ಸಾಧ್ಯವಾಗದಿದ್ದರೆ ಬಡವರನ್ನೇ ನಿರ್ಮೂಲನೆ ಮಾಡಲಾಗುತ್ತದೆ ಎಂದು ಎಲ್ಲಾದರೂ ಹೇಳಿದ್ದಿರಬಹುದು ಎಂದು ಸಂತಾಪಕರು ತಮ್ಮ ಬಗ್ಗೆಯೇ ಸಂದೇಹ ವ್ಯಕ್ತಪಡಿಸಿದ್ದಾರೆ.

Monday, August 13, 2007

ಸ್ವತಂತ್ರ ರಾಶಿ ಭವಿಷ್ಯ: ನಿಮ್ಮ ರಾಶಿ ನೀವೇ ಆರಿಸಿ!

ನಮ್ಮ ಜಾತಕವು ಬೇರೊಬ್ಬರ ಕೈಯಲ್ಲಿದೆ ಎಂಬುದು ಖಚಿತವಾಗಿರುವ ಕಾರಣದಿಂದಾಗಿ ಬೊಗಳೆ ರಗಳೆಯ ಭವಿಷ್ಯವಾಣಿ ಬ್ಯುರೋದ ಬಾಗಿಲನ್ನು ಮತ್ತೆ ತೆರೆಯಲಾಗಿದ್ದು, ಕೆಲವು ರಾಶಿಗಳ ದಿನ/ವಾರ/ಮಾಸ/ವರ್ಷ ಭವಿಷ್ಯವನ್ನು ಒಟ್ಟುಸೇರಿಸಿ ಇಲ್ಲಿ ನೀಡಲಾಗಿದೆ.

ಯಾರು ಬೇಕಾದರೂ ಯಾವುದೇ ರಾಶಿಯನ್ನು ಆಯ್ದುಕೊಳ್ಳಬಹುದು ಎಂಬುದು 60ನೇ ಸ್ವಾತಂತ್ರ್ಯ ದಿನದ ನಮ್ಮ ಕೊಡುಗೆಯಾಗಿರುತ್ತದೆ.

ಹಾಗಾಗಿ ರಾಶಿ ಹೆಸರುಗಳ ಬದಲಾಗಿ ಒಂದೊಂದು ಚುಕ್ಕಿಗಳನ್ನು ಇಟ್ಟಿದ್ದೇವೆ...

ರಾಶಿ ಭವಿಷ್ಯ ಇಂತಿದೆ:

  • ಶನಿಯ ವಕ್ರ ದೃಷ್ಟಿಯಿಂದಾಗಿ, ಚಾಕಲೇಟು ಕೊಡಿಸದ ನಿಮ್ಮನ್ನು ನಿಮ್ಮ ಪುಟ್ಟ ಮಕ್ಕಳೇ ವಕ್ರ ದೃಷ್ಟಿಯಿಂದ ನೋಡಬಹುದು.
  • ಬಂಧುಗಳು, ಮಿತ್ರರ ಮಧ್ಯಸ್ಥಿಕೆಯಿಂದ ಸಂತಾನ ಯೋಗ. ರಾಜ್ಯಭಾರದಿಂದಾಗಿ ನಿಮಗೆ ಜೀವನವೇ ಭಾರವಾದೀತು. ಚೀಲ ತುಂಬಾ ಹಣ ತೆಗೆದುಕೊಂಡರೆ ಜೇಬು ತುಂಬಾ ಅಕ್ಕಿ ದೊರೆಯುವ ಸಾಧ್ಯತೆಗಳು ಹೆಚ್ಚು.
  • ಕುಜನು ನೀಚ ರಾಶಿಯಲ್ಲಿರುವುದರಿಂದ ಪಕ್ಕದ ಮನೆಯಲ್ಲಿ ಸಂತಾನ ಸಂಭ್ರಮ. ಮನೆಯಲ್ಲಿ ಮಾತ್ರ ಕುರುಕ್ಷೇತ್ರ.
  • ಪಕ್ಕದ ಮನೆಯವರ ಜೊತೆ ಸರಸ, ಮನೆಯಲ್ಲಿ ವಿರಸ. ಚಂದ್ರನು ಮಂಗಳನ ಮನೆಗೆ ಹೋಗುವುದರಿಂದ ಮಂಗಳ ಊರಿನಲ್ಲಿ ಕಲಹವೇರ್ಪಡಬಹುದು. ಚಂದ್ರನು ಹಳೆಯ ಬಾಕಿ ಕೇಳಲೆಂದೇ ಮಂಗಳನ ಮನೆಗೆ ಹೋಗಿದ್ದುದೇ ಇದಕ್ಕೆ ಕಾರಣವಿರಬಹುದು.
  • ಸೊನ್ನೆಯಿಂದ 9 ವರೆಗಿನ ಅಂಕಿಗಳನ್ನು ನಿಮಗೆ ಸರಿಯಾಗಿ ಬರೆಯಲು ಬರುತ್ತದೆಯೆಂದಾದರೆ ಪ್ರಾಥಮಿಕ ಶಾಲೆಯಲ್ಲಿ ನಿಮಗೆ ಸರಿಯಾಗಿ ಟೀಚರ್ ಪಾಠ ಮಾಡಿದ್ದಾರೆಂದರ್ಥ. ಅದರಲ್ಲೂ ಆ ಅಂಕಿಗಳನ್ನು ಕೂಡಿಸಲು, ಕಳೆಯಲು ನಿಮಗೆ ತಿಳಿದಿದ್ದರೆ, ಖಂಡಿತವಾಗಿಯೂ ನೀವು ರಾಜಕಾರಣಿಯಾಗಲು ಯೋಗ್ಯ, ಹಣದ ಲೆಕ್ಕ ಪಕ್ಕಾ ಇರುತ್ತದೆ.
  • ಶುಕ್ರನು ವಕ್ರವಾಗಿದ್ದರೆ ನೀವು ಆ ಕಡೆಯಿಂದ ಸಂಪಾದಿಸಿದ ಹಣವನ್ನು ಈ ಕಡೆ ಸುರಿಯುವುದರಿಂದಾಗಿ ಧನ ವ್ಯಯವಾಗಬಹುದು. ತೊಟ್ಟೆ, ಬಾಟಲಿ ಇತ್ಯಾದಿಗಳ ಬದಲು ಪೀಪಾಯಿಯನ್ನೇ ಸುರಿದರೆ ಮತ್ತಷ್ಟು ಧನ ಹಾನಿಯಾಗುತ್ತದೆ.
  • ಮಂಗಳಳ ಮನೆಗೆ ಧೂಮದಂತೆ ಕೇತು ಪ್ರವೇಶಿಸುವುದರಿಂದ ಅಮಂಗಳ ಕಾರ್ಯ ಹೆಚ್ಚಾಗಬಹುದು. ಅಲ್ಲದೆ ತೋಟಕ್ಕೆ ಮಂಗಗಳ ಕಾಟವೂ ಹೆಚ್ಚಿ, ಅಡಿಕೆ, ತೆಂಗು, ಮಾವು, ಬೇವು, ಬೆಳೆ, ಕಳೆಗಳೆಲ್ಲಾ ಕುಲಗೆಟ್ಟು ಹೋದಾವು...
  • ನಿಮ್ಮನ್ನು ಬಾರಿಗೆ ಕರೆದೊಯ್ಯುವ ಗುರುವು ವಕ್ರವಾಗಿದ್ದರೆ, ನೀವು ಕೂಡ ಮರಳಿ ಮನೆಗೆ ಬರುವಾಗ ವಕ್ರ ವಕ್ರವಾಗಿಯೇ ಚಲಿಸುತ್ತಿರಬಹುದು.
  • ಮನೆಯಲ್ಲಿ ಪಕ್ಕದ ಮನೆಯ ಶಾಂತಿಯಿಂದ ಸಂತಾನ ಪ್ರಾಪ್ತಿಯಾಗುವುದರಿಂದ ಸ್ವಂತ ಮನೆಯಲ್ಲಿ ಅಶಾಂತಿ. ಮಂಗಗಳ ಕಾಟದಿಂದ ಅಮಂಗಳ ಕಾರ್ಯ.
  • ಪಕ್ಕದ ಮನೆಯ ನಾಯಿಗಳು ಕೂಡ ತಮಗೆ ದೊರೆತ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ಸದುಪಯೋಗಪಡಿಸಿಕೊಂಡಿದ್ದರಿಂದಾಗಿ ಎರಡೂ ಮನೆಯ ಮಾಲೀಕರ ನಡುವೆ ತೀವ್ರ ವಾಗ್ಯುದ್ಧ. ಅದೇ ರೀತಿ ದನಗಳು ಕೂಡ ಸ್ವಾತಂತ್ರ್ಯ ಆಚರಿಸಿದ್ದರಿಂದಾಗಿ ಮನೆಯ ಆವರಣದ ಸುತ್ತಮುತ್ತ ಕಾಗೆ-ಬೆಕ್ಕು-ನಾಯಿಗಳ ಅರಚಾಟದ ಮಾದರಿಯ ಕೂಗಾಟ ಕೇಳಿಬರಬಹುದು.

Wednesday, August 08, 2007

ಬೊಗಳೆ ಪತ್ರಿಕೆ ಬೆಲೆ ನೂರು ಕೋಟಿ: ಸಂಶೋಧನೆ!

(ಬೊಗಳೂರು ರದ್ದಿ ಬ್ಯುರೋದಿಂದ)
ಬೊಗಳೂರು, ಆ.8- ಬೊಗಳೆ ರಗಳೆ ಎಂಬ ಇಂಟರ್ನೆಟ್ ಪತ್ರಿಕೆಯ ಬೆಲೆ ಎಷ್ಟು ಎಂಬುದನ್ನು ಮೋಡಿ ಸರಕಾರ ಸಂಶೋಧನೆ ಮಾಡಿ ಪತ್ತೆ ಹಚ್ಚಿದೆ ಎಂದು ಇಲ್ಲಿ ವರದಿಯಾಗಿದೆ.

ತಮ್ಮ ಪತ್ರಿಕೆಯನ್ನು ಸುದ್ದಿ ಪತ್ರಿಕೆಗಳಡಿ ಸೇರಿಸದೆ, ರದ್ದಿ ಪತ್ರಿಕೆ ಎಂದು ಪರಿಗಣಿಸಿದ ಮೋಡಿ ಮಾಡೋ ಸರಕಾರಕ್ಕೆ ಕೃತಜ್ಞತೆ ಸಲ್ಲಿಸಿರುವ ಏಕ ಸದಸ್ಯ ಬ್ಯುರೋದ ಸಮಸ್ತ ಸಿಬ್ಬಂದಿಗಳು ಮತ್ತು ಓದುಗರೂ ಆಗಿರುವ ಸಂಪಾದಕರು, ರದ್ದಿ ಪತ್ರಿಕೆಗಳ ಸಾಲಿನಲ್ಲೇ ತಮ್ಮದು ನಂಬರ್ 1 ಪತ್ರಿಕೆಯಾಗಲು ಪ್ರಯತ್ನಿಸುವುದಾಗಿ ಭರವಸೆ ನೀಡಿದ್ದಾರೆ.

ಕನಿಷ್ಠ ಪಕ್ಷ ರದ್ದಿ ಆಯುವವರಾದರೂ ಈ ಪತ್ರಿಕೆಯ ಮೌಲ್ಯ ಅರಿತು ಅದಕ್ಕೆ ಕೋಟಿಗಟ್ಟಲೆ ಬೆಲೆ ಕಟ್ಟಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿರುವ ಸಂತಾಪಕರು, "ನಿರ್ಮಲ ಇಂಟರ್ನೆಟ್" ಯೋಜನೆಯಡಿ ಕೈಗೊಂಡಿರುವ ಈ ಯೋಜನೆ ಫಲಪ್ರದವಾಗಲಿ ಎಂದು ಹಾರೈಸಿದ್ದಾರೆ.

ಈ ಬಗ್ಗೆ ಕೂಲಂಕಷ ತನಿಖೆ ನಡೆಸಿದ ನಮ್ಮ ಬ್ಯುರೋವು, ಆ ಪ್ರದೇಶದಲ್ಲಿ ದೊರೆತ ವೇಸ್ಟ್-ಪೇಪರ್ (ರದ್ದಿ ಪತ್ರಿಕೆ) ಮತ್ತು ಜಂಕ್‌ಗಳಲ್ಲಿ ಶೇ. 99.99 ಭಾಗವೂ ಬೊಗಳೆ ರಗಳೆಗೆ ಸಂಬಂಧಿಸಿದ್ದೇ ಆಗಿತ್ತು ಎಂದು ಪತ್ತೆ ಹಚ್ಚಿ, ಬೆನ್ನು ತಟ್ಟಿಕೊಳ್ಳಲು ಆರಂಭಿಸಿದೆ.

Tuesday, August 07, 2007

ಬಿ.ಪಿ.ಒ., ಕೆ.ಪಿ.ಒ. ಬಳಿಕ... ವಿ.ಪಿ.ಒ!!!

(ಬೊಗಳೂರು ಸಂ-ಶೋಧನೆ ಬ್ಯುರೋದಿಂದ)
ಬೊಗಳೂರು, ಆ.7- ಬಿ.ಪಿ.ಒ., ಕೆ.ಪಿ.ಒ. ಬಳಿಕ ಮುಂದೆ ಯಾವ ಪಿ.ಒ. ಎಂದು ನೆಟ್‌ನೋಟಿಗರು ತಮ್ಮ ಬೊಗಳೆಯಲ್ಲಿ ಪ್ರಶ್ನಿಸಿದ್ದರಿಂದ ತೀವ್ರ ಪ್ರೇರಣೆ ಪಡೆದುಕೊಂಡಿರುವ ಬೊಗಳೆ ಬ್ಯುರೋ, ಈ ಕುರಿತು ಸಂಶೋಧನೆ ಮಾಡಬೇಕೆಂದು ಯೋಚಿಸಿತು.

ಆದರೆ, ಎಲ್ಲಾ ತಿಳಿದಾಗ, ಛೆ! ಇದಕ್ಕಾಗಿ ಇಷ್ಟೊಂದು ಯೋಚನೆ ಮಾಡಬೇಕಿತ್ತೇ? ಸಂಶೋಧನೆಯ ಅಗತ್ಯವಿತ್ತೇ ಎಂದು ಕೈಕೈ ಹಿಸುಕಿಕೊಳ್ಳುವಂತಾಗಿದ್ದು, ನಮ್ಮ ಬ್ಯುರೋಗೆ ಹೆಮ್ಮೆಯ ಸಂಗತಿ ಎಂಬುದನ್ನು ಸಂತಾಪಕರು ತಿಳಿಸಿದ್ದಾರೆ.

ಇತ್ತೀಚೆಗೆ ಕನ್ನಡ ಟಿವಿ ಧಾರಾವಾಹಿಗಳಲ್ಲಿ ಮುಗಿಯದಷ್ಟು "ಮೆಗಾ" ಆಗಿ ಪ್ರವಹಿಸುತ್ತಿರುವ ಕಥಾನಕಗಳೇ ಹೆಚ್ಚುತ್ತಿದ್ದು, ಅನೇಕತಾ ಕಪೂರರು ಅನೇಕಾನೇಕ ಕಥಾನಕಗಳನ್ನು ಓದುಗರಿಗೆ ನೀಡಲು ಇಚ್ಛಿಸುತ್ತಿದ್ದರೂ, ಅನೇಕತೆಯಲ್ಲಿ ಏಕತೆ ಎಂಬಂತೆ ಕಥಾ ಹಂದರವೆಲ್ಲವೂ ಸಾಮಾನ್ಯವಾಗಿ ಒಂದೇ ಹೂವಿನ ಸುತ್ತ ದುಂಬಿಯಂತೆ ಸುತ್ತುತ್ತಿರುತ್ತದೆ.

ಅವುಗಳಲ್ಲಿ, ಇಬ್ಬರು ಹೆಂಡಿರ ನಡುವೆ ಜೀವನ ಸಾಗಿಸುವುದು ಹೇಗೆ, ಮದುವೆಯಾದ ಮೇಲೂ ಲವ್ ಮಾಡುವುದು ಹೇಗೆ, ಮತ್ತೊಬ್ಬರ ಸಂಸಾರ ಒಡೆಯುವುದು ಹೇಗೆ, ಜಗಳ ಮಾಡುವುದು ಹೇಗೆ, ಅಳುವುದು ಹೇಗೆ, ಮತ್ತೊಬ್ಬರಿಗೆ "ತಕ್ಕ" ಪಾಠ ಕಲಿಸುವುದು ಹೇಗೆ, ಜೀವನನ್ನು ನರಕದಂತೆ ಅನುಭವಿಸುವುದು ಹೇಗೆ, ಮನಸ್ಸು ಕೆಡಿಸಿಕೊಂಡು ಕೂರುವುದು ಹೇಗೆ, ಇನ್ನೊಬ್ಬರ ಭಾವನೆಗಳೊಂದಿಗೆ ಆಟವಾಡುವುದು ಹೇಗೆ ಎಂಬಿತ್ಯಾದಿ ಅಮೂಲ್ಯ ಮಾಹಿತಿಪೂರ್ಣ ಸಂಗತಿಗಳು ತುಂಬಿಕೊಂಡಿರುವುದರಿಂದ ಇತ್ತೀಚೆಗೆ ಪ್ರೇಕ್ಷಕ ಮಹಾಪ್ರಭುಗಳು ದೂರ ಸರಿಯುತ್ತಿದ್ದಾರೆ.

ಹೀಗಾಗಿ ಇಂಥ ಟೀವಿ ಧಾರಾವಾಹಿಗಳಿಗೆ ವೀಕ್ಷಕರ ಕೊರತೆ ಕಂಡುಬರುತ್ತಿದ್ದು, ವ್ಯೂವರ್ಸ್ ಪ್ರೋಸೆಸ್ ಔಟ್‌ಸೋರ್ಸಿಂಗ್ (ವಿ.ಪಿ.ಒ.) ಗಾಗಿ ಈಗ ಮುಸಲ-ಧಾರಾವಾಹಿ ಕಂಪನಿಗಳು ಯೋಚಿಸುತ್ತಿವೆ ಎಂಬುದು ಹೊಳೆದದ್ದೇ ತಡ, ಬೊಗಳೆ ರಗಳೆ ಬ್ಯುರೋ ತನ್ನ ಸಂಶೋಧನೆಯನ್ನು ನಿಲ್ಲಿಸಿ, ತಕ್ಷಣವೇ ಲೈಫ್-ಬಾಯ್ ಸೋಪ್ ಹಾಕಿ ಕೈ ತೊಳೆದುಕೊಂಡಿತು.

Sunday, August 05, 2007

ಸ್ನೇಹಸೇತು ದಿನದ ಶುಭಾಶಯ

ಎಲ್ಲೆಲ್ಲಿಂದಲೋ ಬಂದು
ಒಂದೆರಡು ಅಣಿಮುತ್ತುದುರಿಸಿ
ಅಪರಿಚಿತಾಗಿದ್ದುಕೊಂಡೇ
ಸನ್ಮಿತ್ರರಾಗಿಬಿಟ್ಟಿರುವ,
ಗೆಳೆತನದ ಸುಳಿಗಾಳಿಯಿಂದ
ಜೀವನದ ಬಿಸಿ ತಂಪಾಗಿಸುವ
ಒಲುಮ-ನಲುಮೆಗೆ ಹೇತುವಾದ
ಆತ್ಮೀಯರಿಗೆಲ್ಲರಿಗೂ
ಸ್ನೇಹ ದಿನದ ಶುಭಾಶಯಗಳು
++++++++

ಸೂಚನೆ:
ಬೊಗಳೆ ರಗಳೆ ಬ್ಯುರೋದ ಸಂಪಾದಕರು ಹಲವು ದಿನಗಳಿಂದ ಹಗಲು ರಾತ್ರಿ ಕಾರ್ಯಾಚರಿಸುತ್ತಾ, ಸಂಪೂರ್ಣ ಸಂಪಾದನೆಯಲ್ಲೇ ತೊಡಗಿದ ಕಾರಣದಿಂದಾಗಿ ಅನಿಯತಕಾಲಿಕ ಪತ್ರಿಯ ಪ್ರಕಟಣೆಯಲ್ಲಿ ವಿಳಂಬ, ಅಡಚಣೆ, ಅಡೆತಡೆಗಳು ಸಂಭವಿಸಿವೆ. ಹಾಗಾಗಿ ಬೇರೆ ಪತ್ರಿಕೆಗಳಲ್ಲಿ ಯಾರು ಕೂಡ "ಬೊಗಳೂರಿನಿಂದ ಸಂತಾಪಕರು ಪರಾರಿ ಅಥವಾ ನಾಪತ್ತೆ" ಎಂಬ ಸುದ್ದಿ ಪ್ರಕಟಿಸಬಾರದಾಗಿ ಕೋರಲಾಗಿದೆ. ತಲೆ ಮರೆಸಿಕೊಳ್ಳುತ್ತಿರುವುದಕ್ಕೆ ರಾಷ್ಟ್ರಪತಿ ಚುನಾವಣೆಯಾಗಲೀ, ಮುಂದೆ ಬರುವ ಉಪರಾಷ್ಟ್ರಪತಿ ಚುನಾವಣೆಯಾಗಲಿ ಕಾರಣ ಅಲ್ಲ ಎಂದು ಈ ಮೂಲಕ ಸ್ಪಷ್ಟಪಡಿಸುತ್ತಿದ್ದೇವೆ.... - ಸಂತಾಪಕ.

ಎಂಜಿನ್ ಇಲ್ಲದ ರೈಲು: ಬ್ರೇಕಿಂಗ್ ನ್ಯೂಸ್ ಅಲ್ಲವೆಂದ ಬೊ.ರ.

[ಬೊಗಳೂರು ಪಟ್ಟೆ-ರಹಿತ ರೈಲು ಬ್ಯುರೋ] ಬೊಗಳೂರು: ಆಫ್‌ಲೈನ್ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯೊಂದು ಆನ್‌ಲೈನ್ ಸಂಪಾದಕರ ಕಣ್ಣು ಕುಕ್ಕಿದ್ದು, ಎಂಜಿನ್ ಇಲ್ಲದೆ...