Saturday, September 29, 2007

ಬೊಗಳೆ ಪತ್ತೆದಾರಿ: ಚೆಂಡು ಅಂಗಣದಲ್ಲೇ ಪತ್ತೆ

(ಬೊಗಳೂರು ಸಡನ್ ಹೊಳೆಯುವ ಬ್ಯುರೋದಿಂದ)
ಬೊಗಳೂರು, ಸೆ.29- ವಿದೇಶೀ ಮಾಧ್ಯಮದಿಂದ ತೀವ್ರ ನಿರ್ಲಕ್ಷ್ಯಕ್ಕೊಳಗಾಗಿರುವ ಟ್ವೆಂಟಿ20 ಕ್ರಿಕೆಟ್ ಆರ್ಭಟದಲ್ಲಿ ಬ್ಯಾಟುಗಾರರು ಯದ್ವಾತದ್ವ ಬೀಸಿದಾಗ ಕಳೆದುಹೋಗಿದ್ದ ಚೆಂಡು ಪತ್ತೆಯಾಗಿದೆ. ಅದನ್ನು ಪತ್ತೆ ಮಾಡಿದವರು ಜಾತ್ಯತೀತ ತಂಡದ ಕೋಚ್ ವದಿಯೋಗೌಡರು.

ನಾವೇನೂ ಬಾಲ್ ಕದ್ದಿಲ್ಲ, ಅದು "ಭಾರತೀಯ" ತಂಡದ ಅಂಗಣದಲ್ಲೇ ಇದೆ ಎಂದು ವದಿಯೋಗೌಡರು ಒತ್ತಿ ಒತ್ತಿ ಹೇಳಿದ್ದಾರೆ.

ಇದರೊಂದಿಗೆ ಯುವರಾಜ್ ಸಿಂಗ್ ಸಿಕ್ಸರ್‌ಗೆ ಸಿಲುಕಿ ನಾಪತ್ತೆಯಾಗಿದ್ದ ಚೆಂಡು ಎಲ್ಲಿ ಹೋಯಿತು ಎಂಬ ಕುತೂಹಲಕ್ಕೆ ತೆರೆಬಿದ್ದಿದೆ.

ಇದೇ ವೇಳೆ, ಬೆಂಗಳೂರಿಗೆ ಬಂದಿರುವ ಆಸೀಸ್ ತಂಡದ ನಾಯಕ ಪಂಟರ್ ಕಿಂಗ್ ಅವರ ಜತೆ ನಿಗೂಢ ಮಾತುಕತೆ ನಡೆಸಿರುವ ವದಿಯೋಗೌಡರು, ಬಾಯಿಗೆ ಬಂದಂತೆ ಒದರುತ್ತಲೇ ಎದುರಾಳಿಗಳ ಧೃತಿಗೆಡಿಸುವುದು ಹೇಗೆ ಎಂಬ ಬಗ್ಗೆ ಸಮಾಲೋಚನೆ ನಡೆಸಿರುವುದಾಗಿ ವರದಿಯಾಗಿದೆ.

Friday, September 28, 2007

ಬೊಗಳೆ ವರದಿ ಪರಿಣಾಮ: ಪಂದ್ಯವೇ ಡಿಕ್ಲೇರ್?

(ಬೊಗಳೂರು Fifty-fifty ಬ್ಯುರೋದಿಂದ)
ಬೊಗಳೂರು, ಸೆ.28- ಬೊಗಳೂರಿನ ವಿಶೇಷ ಟ್ವೆಂಟಿ-20 ಕುರಿತ ಬೊಗಳೆ ವರದಿಯಿಂದ ಬೇಸತ್ತ ಕರ್ನಾಟಕದ ಪಂದ್ಯಾವಳಿಯು ತಲ್ಲಣಗೊಂಡಿದೆ.

ಇನ್ನಿಂಗ್ಸ್‌ನ ಕೊನೆಯ ಓವರುಗಳನ್ನು ಆಡುತ್ತಿರುವ ಜಾಜದ ತಂಡವು, ಇನ್ನಿಂಗ್ಸ್ ಒತ್ತಟ್ಟಿಗಿರಲಿ, ಇಡೀ ಪಂದ್ಯವನ್ನೇ ಡಿಕ್ಲೇರ್ ಮಾಡುವುದರತ್ತ ಮುಖ ಮಾಡಿದೆ. ಇದಕ್ಕೆ ಭಾಜಪ ತಂಡದ ಬೌನ್ಸರ್‌ನಿಂದಾಗಿ ಜಾಜದ ತಂಡದ ಕೋಚ್ ಆಗಿರುವ ವದಿಯೋಗೌಡರ ಮುಖ ಊದಿಕೊಂಡದ್ದೇ ಕಾರಣ ಎಂದು ಬೊಗಳೂರು ಬ್ಯುರೋ ವರದಿ ಮಾಡಿದೆ.

ಅಕ್ಟೋಬರ್ 3ರಂದು ಬ್ಯಾಟಿಂಗ್‌ಗೆ ಡಿಕ್ಲೇರ್ ಘೋಷಿಸುತ್ತೇನೆ, ಭಾಜಪ ತಂಡಕ್ಕೆ ಬ್ಯಾಟಿಂಗ್ ಅವಕಾಶ ನೀಡುತ್ತೇನೆ ಎಂದು ಹೇಳಿದ್ದ ಜಾಜದ ತಂಡದ ಕ್ಯಾಪ್ಟನ್ ಆಗಿರುವ ವದಿಯೋಗೌಡರ ಮಗ, ಇದೀಗ ತಿಪ್ಪರಲಾಗಕ್ಕೂ ಸಿದ್ಧರಾಗಿದ್ದು, ಅಕ್ಟೋಬರ್ 3ರಂದೇ ನಿರ್ಧಾರ ತೆಗೆದುಕೊಳ್ಳುವುದಾಗಿ ಘೋಷಿಸಿರುವುದರಿಂದ ಪಂದ್ಯವೇ ಡಿಕ್ಲೇರ್ ಆಗುವ ಸಾಧ್ಯತೆಗಳು ಗೋಚರಿಸುತ್ತಿವೆ.

ಇನ್ನೊಂದೆಡೆ, ಟಿಕೆಟ್ ಖರೀದಿಸಿ (ಅಂದರೆ ತೆರಿಗೆ ಕಟ್ಟಿ) ಈ ಪಂದ್ಯಾಟ ವೀಕ್ಷಿಸಲು ಆಗಮಿಸಿರುವ ಬಡಪಾಯಿ ಪ್ರೇಕ್ಷಕ ಸಮುದಾಯಕ್ಕೆ ಆಟದ ಮನರಂಜನೆ ದೊರಕಿಸುವ ನಿಟ್ಟಿನಲ್ಲಿ, ಆಗಾಗ್ಗೆ "ಕೈ" ಬೀಸುತ್ತಾ, ಜಾಜದ ತಂಡದ ಸದಸ್ಯರತ್ತ ಹಾಯ್ ಹಾಯ್ ಎಂದು ಹೇಳುತ್ತಿರುವ ತಂಡವು ಪಂದ್ಯ ಮುಂದುವರಿಸುವ ಸಾಧ್ಯತೆಗಳನ್ನೂ ಕ್ರಿಕೆಟ್ ಪಂಡಿತರು ಅಲ್ಲಗಳೆಯುತ್ತಿಲ್ಲ.

ಪ್ಯಾಡ್ ಕಟ್ಟಿ, ಭಾರದ ಬ್ಯಾಟು ಹೊತ್ತು ಕಾಯುತ್ತಿರುವ ಗಡಿಊರಪ್ಪ ತಂಡವು, ಎಲ್ಲವನ್ನೂ ಕಟ್ಟಿಕೊಂಡ ಪರಿಣಾಮವಾಗಿ ಸೆಖೆಯ ಅನುಭವ ಪಡೆಯುತ್ತಿದ್ದು, ಒಳಗಿಂದೊಳಗೇ ಬೆವೆತುಕೊಳ್ಳಲಾರಂಭಿಸಿದೆ. ಭಾಜಪ ತಂಡದ ಈ ಸ್ಥಿತಿಗೆ ಕಾರಣವೂ ಇದೆ. ತಂಡದ ಕೆಲವು ಸದಸ್ಯರು, ವಿಶೇಷವಾಗಿ ಬಳ್ಳಾರಿ ಭಾಗದವರು ಯದ್ವಾ ತದ್ವಾ ಬ್ಯಾಟು ಬೀಸಿ ಹಿಟ್ ವಿಕೆಟ್ ಆಗುವ ಕಲೆಯನ್ನು ರೂಢಿಸಿಕೊಂಡಿದ್ದಾರೆ. ಹಿಂದೆ ಕೂಡ ಬ್ಯಾಟಿಂಗ್ ಸಿಗುವ ಮುನ್ನವೇ, ಕಪ್ತಾನ ಯಾರು, ಉಪಕಪ್ತಾನ ಯಾರು, ವಿಕೆಟ್ ಕೀಪರ್ ಯಾರು ಎಂಬಿತ್ಯಾದಿ ಪಟ್ಟಿ ಸಿದ್ಧಪಡಿಸಿಟ್ಟುಕೊಂಡು, ಚುನಾವಣಾ ಫಲಿತಾಂಶ ಹೊರಬಂದ ಬಳಿಕ ಏನೂ ಇಲ್ಲದಂತಾಗಿದ್ದು ಇತಿಹಾಸ. ಹೀಗಾಗಿ ಅವರಿಗೇನಾದರೂ ಬ್ಯಾಟಿಂಗ್ ಕೊಟ್ಟರೆ ಇಡೀ ಪಂದ್ಯ ಮತ್ತು ಪ್ರೇಕ್ಷಕರ ಪರಿಸ್ಥಿತಿ ಚಿಂತಾಜನಕವಾಗಬಹುದು ಎಂಬುದು ಬೊಗಳೂರು ಬ್ಯುರೋದ ಲೆಕ್ಕಾಚಾರ.

ಅಂದರೆ ಭಾಜದ ಬ್ಯಾಟಿಂಗ್ ಆರಂಭಿಸುವ ಮುನ್ನವೇ, ಎದುರಾಳಿ ತಂಡ- ಜಾಜದದ ನಾಯಕ ನನ್ನನ್ನು ಔಟ್ ಮಾಡಲು ಸಂಚು ರೂಪಿಸಿದ್ದಾರೆ ಎಂಬ ಆಂತರಿಕ ಭೀತಿ ವ್ಯಕ್ತಪಡಿಸಿ ಥರ್ಡ್ ಅಂಪೈರಿಗೆ ದೂರು ನೀಡಿರುವುದು ಎಲ್ಲರ ಅಸಮಾಧಾನಕ್ಕೆ ಕಾರಣವಾಗಿದೆ. ಅದೂ ಅಲ್ಲದೆ, ಭಾಜಪ ತಂಡದಲ್ಲಿ ಕಪ್ತಾನ ಯಾರಾಗಬೇಕೆಂಬ ಬಗ್ಗೆ ಬೂದಿಯೊಳಗೆ ಕೆಂಡದ ತುಂಡುಗಳು ಅಲ್ಲಾಡುತ್ತಿವೆ. ಆಟ ಶುರುವಾದ ಮೇಲೆಯೂ ಇದೇ ಸಮಸ್ಯೆ ಉಲ್ಬಣಗೊಂಡು ಆಂತರಿಕ ಭಾರದಿಂದಾಗಿಯೇ ಇನ್ನಿಂಗ್ಸ್ ಡಿಕ್ಲೇರ್ ಮಾಡಬೇಕಾದ ಅನಿವಾರ್ಯತೆ ಎದುರಾದಾಗ ಪ್ರೇಕ್ಷಕರು ಮೂಕರಾಗಿಯೇ ಇರಬೇಕಾಗುತ್ತದೆ ಎಂಬ ಆತಂಕ ಎಲ್ಲೆಡೆ ಕಾಡುತ್ತಿದೆ.

Wednesday, September 26, 2007

ಇಲ್ಲೊಂದು ಟ್ವೆಂಟಿ20: ವಿದೇಶೀ ಮಾಧ್ಯಮ ನಿರ್ಲಕ್ಷ್ಯ!

(ಬೊಗಳೂರು ತಪ್ಪು ಲೆಕ್ಕಾಚಾರ ಬ್ಯುರೋದಿಂದ)
ಬೊಗಳೂರು, ಸೆ.26- ಈಗಾಗಲೇ ಭಾರತವು ಅವಸರದ ಕ್ರಿಕೆಟ್ ಪಂದ್ಯ ಗೆದ್ದುಕೊಂಡು ವಿಶ್ವಚಾಂಪಿಯನ್ ಆಗಿದ್ದಲ್ಲದೆ, ಆಟಗಾರರೆಲ್ಲರೂ ಕೈಗೆ ನಿಲುಕದಷ್ಟು ಎತ್ತರಕ್ಕೆ ಏರಿದ್ದಾರೆ. (ಶ್ರೀಮಂತಿಕೆಯಲ್ಲಿ ಮತ್ತು ಹೆಸರಿನಲ್ಲಿ!). ಆದರೆ ನಮ್ಮದೇ ನೆಲದಲ್ಲಿ ನಿಧಾನವಾಗಿಯೇ ನಡೆಯುತ್ತಿರುವ ಟ್ವೆಂಟಿ20 ಪಂದ್ಯದ ಬಗ್ಗೆ ಎಲ್ಲಾ ಅಂತಾರಾಷ್ಟ್ರೀಯ ಮಾಧ್ಯಮಗಳು ಅಸಡ್ಡೆ ತೋರಿಸುತ್ತಿರುವುದೇಕೆ ಎಂಬುದು ಬೊಗಳೂರು ಬ್ಯುರೋಗೆ ಅರ್ಥವಾಗದ ಅನರ್ಥಕಾರಿ ವಿಷಯ.

ಈ ಟ್ವೆಂಟಿ20 ಪಂದ್ಯವು ಅನುಕ್ರಮವಾಗಿ ಕಮಲ ಮತ್ತು ತೆನೆ ಹೊತ್ತ ರೈತಮಹಿಳೆಯ ಲಾಂಛನ ಹೊಂದಿರುವ ಭಾಜಪ ಮತ್ತು ಜಾಜದ ತಂಡಗಳ ನಡುವೆ ನಡೆಯುತ್ತಿದ್ದು, ಜಾಜದ ತಂಡವು ಅಕ್ಟೋಬರ್ 3ರಂದು ತನ್ನ ಇನ್ನಿಂಗ್ಸ್ ಬ್ಯಾಟಿಂಗ್ ಪೂರ್ಣಗೊಳಿಸಲಿದೆ. ಕಿರಿಕೆಟ್ಟಾಟದ ಟ್ವೆಂಟಿ20 ಎಂದರೆ ಓವರುಗಳ ಲೆಕ್ಕಾಚಾರವಾದರೆ, ಇಲ್ಲಿ ತಲಾ 20 ತಿಂಗಳುಗಳ ಲೆಕ್ಕಾಚಾರವಾಗಿದೆ.

ಅಕ್ಟೋಬರ್ 3ರಂದು ಜಾಜದವು ಬ್ಯಾಟಿಂಗ್ ಕೊನೆಗೊಳಿಸಿದ ತಕ್ಷಣ ಇದುವರೆಗೆ ಬೌಲಿಂಗ್ ಮಾಡುತ್ತಿದ್ದ (ಅತ್ಯಧಿಕ ಸೀಟುಗಳನ್ನು ಹೊಂದಿರುವ) ಭಾಜಪವು ಬ್ಯಾಟಿಂಗ್ ಆರಂಭಿಸುವುದೆಂದು ನಿರ್ಧಾರವಾಗಿದೆ. ಆ ತಂಡವು ಬ್ಯಾಟನ್ನು ಇದುವರೆಗೆ ಗಾಳಿಯಲ್ಲೇ ಬೀಸುತ್ತಾ ಅಭ್ಯಾಸ ನಡೆಸುತ್ತಿದ್ದು, ಚೆಂಡಿನಲ್ಲೇ ಆಡಲು ಕಾದು ಕೂತಿದೆ. ಆದರೆ ಬ್ಯಾಟಿಂಗ್ ಪೂರ್ಣಗೊಳಿಸಿರುವ ಜಾಜದ ತಂಡದವರು ಬೌಲಿಂಗ್ ನಡೆಸಲು ಕೇಳುತ್ತಾರೋ ಇಲ್ಲವೋ ಎಂಬ ಶಂಕೆ ಮೂಡಲಾರಂಭಿಸಿದೆ. ಇದಕ್ಕೆ ಕಾರಣವೆಂದರೆ, ಜಾಜದ ತಂಡದ ಕೋಚ್ ವೇದೇಗೌಡರು ತಮ್ಮ ತಂಡದ ನಾಯಕ ಕುಮಾರನೇ ಬ್ಯಾಟು ಬೀಸುವುದನ್ನು ಮುಂದುವರಿಸಬೇಕು ಎಂಬಂತೆ ಆಗಾಗ ಹೇಳಿಕೆಗಳನ್ನು ಹೊರಬಿಡುತ್ತಿರುವುದು ಮತ್ತು ತಕ್ಷಣವೇ ಒಳಗೆಳೆದುಕೊಳ್ಳುತ್ತಿರುವುದು!

ಜಾಜದ ತಂಡದವರು ಬ್ಯಾಟಿಂಗ್ ನಡೆಸುತ್ತಿದ್ದಾಗ, ಕೆಲವೊಮ್ಮೆ ಭಾಜಪ ತಂಡದ ಬೌಲರುಗಳು ಯದ್ವಾತದ್ವಾ ಬೌಲಿಂಗ್ ಮಾಡಿದ ಉದಾಹರಣೆಗಳೂ ಅನೇಕ ಇವೆ. ಆದರೆ, ಇವರು ಬೌಲಿಂಗ್ ಮಾಡಿದ್ದಕ್ಕಿಂತಲೂ ಅವರು ಸಿಕ್ಸರ್ ಎತ್ತಿದ ಸಂಖ್ಯೆಯೇ ಹೆಚ್ಚಿರುವುದರಿಂದಾಗಿ, ನಂತರ ಬ್ಯಾಟು ಬೀಸುವ ತಂಡವು ನಿಗದಿತ ಗುರಿ ತಲುಪುವ ಲಕ್ಷಣಗಳು ಕಡಿಮೆ ಇವೆ ಎಂದು ಬೊಗಳೂರು ಟ್ವೆಂಟಿ20 ಲೆಕ್ಕಾಚಾರ ಬ್ಯುರೋದವರು ಲೆಕ್ಕಾಚಾರ ಹಾಕಿದ್ದಾರೆ.

ಟಾಸ್ ಗೆದ್ದ ಜಾಜದ ತಂಡವು ಬ್ಯಾಟಿಂಗ್ ಆರಿಸಿಕೊಂಡು, ಇನ್ನಿಂಗ್ಸ್‌ನ ಸ್ಲಾಗ್ (ಕೊನೆಯ) ಓವರುಗಳಲ್ಲಿ ಯದ್ವಾತದ್ವಾ ಬ್ಯಾಟು ಬೀಸಲಾರಂಭಿಸಿದೆ. ಕೆಲವೊಮ್ಮೆ ಪೆವಿಲಿಯನ್‌ನಲ್ಲಿ ಕೂತ ಕೋಚ್ ವೇದೇಗೌಡ, ದೈಹಿಕ ತರಬೇತುದಾರರಾಗಿ ಇತ್ತೀಚೆಗಷ್ಟೇ ಆಯ್ಕೆಗೊಂಡ ಜೆರಾಮುದ್ದೀನ್ ಪಟೇಲ್ ಅವರು ಕೂಡ ಕುಳಿತಲ್ಲಿಂದಲೇ ಬ್ಯಾಟು ಬೀಸತೊಡಗಿದ್ದಾರೆ. ರಿಟೈರ್ಡ್ ಹರ್ಟ್ ಆಗಿ BCCIನಿಂದ ಸಿಡಿದು ICL ಥರಹ ಬೇರೆಯೇ ತಂಡ ಸೇರಿಕೊಂಡ ಸಿಕ್ಸರ್ ಸಿದ್ದು, ಪೇಜರ್ ಸಿಂಧ್ಯಾ ಕೂಡ ಅದೆಲ್ಲಿಂದಲೋ ಆಗಾಗ ಬೌಲಿಂಗ್ ಮಾಡತೊಡಗುತ್ತಾರೆ. ಚೆಂಡು ಸಿಕ್ಕಿದ್ದೇ ಪುಣ್ಯ ಎಂದುಕೊಂಡ ಬ್ಯಾಟಿಂಗ್ ಪಡೆಯು, ಅದನ್ನೇ ಯದ್ವಾತದ್ವಾ ಬೌಂಡರಿಗಟ್ಟುತ್ತಿತ್ತು. ಇದರಿಂದಾಗಿ ಸ್ಕೋರು ಏರುತ್ತಲೇ ಹೋಗಿದ್ದು, ಮುಂದೆ ಬ್ಯಾಟಿಂಗ್ ಮಾಡುವ ತಂಡವು ಅದನ್ನು ಬೆಂಬತ್ತುವ ಸಾಧ್ಯತೆಗಳು ಹೆಚ್ಚು ಹೆಚ್ಚು ಕ್ಷೀಣವಾಗತೊಡಗಿದೆ.
ನಂತರ ಬ್ಯಾಟ್ ಮಾಡುವ ತಂಡಕ್ಕೆ ಖಂಡಿತವಾಗಿಯೂ ಪಿಚ್ ಸರಿಯಾಗಿ ಇರುವುದಿಲ್ಲ. ಎಲ್ಲಾ ಬೌನ್ಸರುಗಳೇ ಬರುತ್ತವೆ ಎಂದು ಖಚಿತವಾಗಿ ಭವಿಷ್ಯ ನುಡಿದಿರುವ ಬೊಗಳೆ ಬ್ಯುರೋ, ಬೌನ್ಸರುಗಳು ಬೌಲಿಂಗ್ ಮಾಡುವ ತಂಡದಿಂದ ಮಾತ್ರವೇ ಅಲ್ಲ, ಪ್ರೇಕ್ಷಕರ ಗ್ಯಾಲರಿಯಿಂದಲೂ ಆಗಾಗ್ಗೆ ಬರುತ್ತಿರುತ್ತವೆ ಎಂದು ಭವಿಷ್ಯದಲ್ಲಿ ಹೇಳಲಾಗಿದೆ. ಈ ಕಾರಣಕ್ಕೆ ವಿಕೆಟ್ ರಕ್ಷಿಸಿಕೊಳ್ಳಲಾರದ ಭಾಜಪ ತಂಡವು ಬಲುಬೇಗನೇ ಆಲೌಟ್ ಆಗಿ, ಹೊಸ ಪಂದ್ಯಾಟಕ್ಕೆ ಅವಕಾಶ ಮಾಡಿಕೊಡಲಿದೆ ಎಂದು ನಮ್ಮ ಬ್ಯುರೋ ಕೂಡ ಇತರ ಟಿವಿ ಚಾನೆಲ್‌ಗಳಂತೆ ತಪ್ಪು ತಪ್ಪು ವಿಶ್ಲೇಷಣೆ ಮತ್ತು ತಪ್ಪು ತಪ್ಪು ಲೆಕ್ಕಾಚಾರ ಹಾಕಿದೆ.

Tuesday, September 25, 2007

ಬೊಗಳೆ: ಟ್ವೆಂಟಿ20 ಕೂಟ ಮುಗಿದಿಲ್ಲ

ಭಾರತ ತಂಡವು ಕಪ್ ಗೆದ್ದ ತಕ್ಷಣ ಟ್ವೆಂಟಿ20 ಕ್ರಿಕೆಟ್ ಕೂಟವೇ ಮುಗಿಯಿತು, ನಮ್ಮ ಕ್ರಿಕೆಟಿಗರೆಲ್ಲರೂ ಕೋಟಿ ಕೋಟಿ ಬಾಚಿಕೊಂಡು ಶ್ರೀಮಂತರಾಗಿಬಿಟ್ಟರು ಅಂತ ತಿಳಿದುಕೊಳ್ಳುವವರಿಗೆ ಒಂದು ಎಚ್ಚರಿಕೆ.

ಯಾವುದೇ ವಿದೇಶೀ ಮಾಧ್ಯಮಗಳ ಕಣ್ಣಿಗೆ ಬೀಳದೆ ಸೊರಗಿದ ಆಟವೊಂದು ನಾಳಿನ ಸಂಚಿಕೆಯಲ್ಲಿ ವಿಶೇಷ ವರದಿ ರೂಪದಲ್ಲಿ ಪ್ರಕಟವಾಗಲಿದೆ.

ನಿಮ್ಮ ಪ್ರತಿಗಳನ್ನು ಇಂದೇ ಕಾದಿರಿಸಬೇಡಿ. ಕಾದಿರಿಸಿದರೆ ಅವುಗಳೆಲ್ಲಾ ಹಾಳಾದಾವು. ಅದಕ್ಕಾಗಿ ಫ್ರೆಷ್ ಪ್ರತಿಗಳನ್ನು ಕೊಳ್ಳದೆಯೇ ಓದುವ ವಿದ್ಯೆಯನ್ನು ಕರಗತ ಮಾಡಿಕೊಳ್ಳಿ.

ನಾಳಿನ ಬೊಗಳೆ ಸಂಚಿಕೆ ನೋಡಿ.

Monday, September 24, 2007

Oneದೇ ದಿನಕ್ಕೆ ಧೋಣಿ ಕಪ್ತಾನ?

(ಬೊಗಳೂರು ಟಿಕ್20 ಬ್ಯುರೋದಿಂದ)
ಬೊಗಳೂರು, ಸೆ.24- ಹೊಡೆಬಡಿಯ ದಾಂಡಿಗ ಎಂದೇ ಖ್ಯಾತನಾಗಿ, ಲಯ ಕಳೆದುಕೊಂಡು ಇದೀಗ ಟಿಕ್20 ಕಿರಿಕೆಟ್ಟಾಟದಲ್ಲಿ ಹೊಡೆದಾಟ ಆರಂಭಿಸಿರುವ ಸಿಂಹೇಂದ್ರ ಮಂಗ್ ಧೋಣಿಯನ್ನು ಒಂದೇ ದಿನಕ್ಕೆ (One Day) ನಾಯಕನನ್ನಾಗಿ ಆರಿಸಿರುವುದು ಹಲವರ ಹುಬ್ಬುಗಳು ಮೇಲೇರಿ ತಲೆಕೂದಲಿನೊಂದಿಗೆ ಸೇರಿಕೊಳ್ಳುವಲ್ಲಿ ಪ್ರಧಾನ ಪಾತ್ರ ವಹಿಸಿವೆ.
ಭಾರತೀಯ ಕ್ರಿಕೆಟ್ಟು ಮುಂದೆ ಸಾಗಬೇಕಿದ್ದರೆ ದೋಣಿಯೇ ಏಕೆ ಬೇಕು, ಹಳಿಗೆ ಮರಳಿದ ಚಚ್ಚಿಂಗ್ ಚೆಂಡುಲ್ಕರ್, ಎಚ್ಚೆತ್ತುಕೊಂಡ ಗೌರವ್ ಸಂಗೂಲಿ ಇದ್ದರಲ್ಲ ಎಂಬ ಆಮಶಂಕೆಯ ನಡುವೆಯೇ ದೋಣಿಯನ್ನು ಒಂದೇ ದಿನ ನೀರಿನಲ್ಲಿ ಬಿಡಲು ನಿರ್ಧರಿಸಿರುವುದೇ ಈ ಎಲ್ಲಾ ಗೊಂದಲಗಳಿಗೆ ಕಾರಣವಾಗಿದೆ.
ನೀರಲ್ಲಿ ದೋಣಿಯನ್ನು ಬಿಡುವ ಬದಲು ಈಗಾಗಲೇ ಎಳ್ಳುಂಡೋಳಿಗೆ ಮೆದ್ದಿರುವ ಗಣಪನನ್ನು ಬಿಡಲು ಎಲ್ಲಾ ಕಡೆ ಸಿದ್ಧತೆಗಳು ನಡೆದಿವೆ ಮತ್ತು ಕೆಲವೆಡೆ ಈಗಾಗಲೇ ಈ ಕೆಲಸ ಪೂರೈಸಿ ಕೈತೊಳೆದುಕೊಳ್ಳಲಾಗಿದೆ.
ಈಗಾಗಲೇ ಚಪ್ಪೆಲ್ ಹರಿದು ಹೋಗಿದ್ದು, ಗೋಡೆಯೂ ದ್ರಾವಿಡ ಪ್ರಾಣಾಯಾಮ ಮಾಡಿ ಈ ರಾಜಕೀಯವಾಗಿ ಬಿಸಿ ಇರುವ ಸ್ಥಾನತ್ಯಾಗ ಮಾಡಿದ ಬಳಿಕ ಬಿಸಿ ತಣ್ಣಗಾಗಿಸುವುದಕ್ಕಾಗಿಯೇ ದೋಣಿಯನ್ನು ನಡು ನೀರಿನಲ್ಲಿ ಇರಿಸಲಾಗಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾಗಿರುವ ಮತ್ತು ಬಿಸಿಬಿಸಿ ರಾಜಕೀಯ ನಡೆಯುತ್ತಿರುವ ಬಿಸಿಬಿಸಿಬಿಸಿಐಯೊಳಗಿನ ಮೇಲಾಟಗಳನ್ನು ನೋಡಿದರೆ ದೋಣಿಯನ್ನು ಒಂದೇ ದಿನಕ್ಕೆ ನಾಯಕನನ್ನಾಗಿಸಿದ್ದರಲ್ಲಿ ತಪ್ಪಿಲ್ಲ, ಎಷ್ಟಿದ್ದರೂ ಮರುದಿನ ಮತ್ತೊಬ್ಬ ನಾಯಕ ಬಂದೇ ಬರುತ್ತಾನೆ ಎಂಬ ಸಮರ್ಥನೆಯೂ ದೊರೆಯುತ್ತದೆ.
ಇನ್ನೊಂದೆಡೆ, ನಾಯಕತ್ವ ಸ್ಥಾನ ಸಿಗದ ಅತೃಪ್ತಿಯಿಂದಾಗಿ ಯುವರಾಜ್ ಸಿಂಗ್ ಚೆಂಡನ್ನು ಮನಬಂದಂತೆ ಚಚ್ಚುತ್ತಾ, ಕ್ಯಾಪ್ಟನ್ಸಿ ತನಗೂ ಬೇಕು ಎಂಬ ಬೇಡಿಕೆಯನ್ನು ಅಪ್ಪನ ಮೂಲಕ ಮುಂದಿರಿಸಿದ್ದಾರೆ. ಹೀಗಾಗಿ ಧೋಣಿ ಏಕ್ ದಿನ್ ಕಾ ಬಾದಶಾ ಆಗಿದ್ದಾರೆ ಎಂದು ನಂಬಲನರ್ಹ ಮೂಲಗಳು ತಿಳಿಸಿವೆ.

Friday, September 21, 2007

ಒದರಬಾರದೂಂತ ಸಂವಿಧಾನದಲ್ಲಿ ಹೇಳಿಲ್ಲ: ಕರುಣಾ

(ಬೊಗಳೂರು ಒದರೋ ಬ್ಯುರೋದಿಂದ)
ಬೊಗಳೂರು, ಸೆ.21- ತಾನು ಸುಳ್ಳು ಹೇಳಬಾರದು ಅಥವಾ ತನಗೆ ಓಟುಗಳನ್ನೇ ನೀಡದವರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ಮಾತುಗಳನ್ನು ಆಡಬಾರದು ಎಂದು ಭಾರತದ ಸಂವಿಧಾನದಲ್ಲಿ ತನ್ನನ್ನು ಉದ್ದೇಶಿಸಿ ಎಲ್ಲಿಯೂ ಬರೆದಿಲ್ಲ ಎಂದು ತಮಿಳುಕಾಡು ಅಮುಖ್ಯಮಂತ್ರಿಗಳು ಹೇಳಿದ್ದಾರೆ.

ರಾಮ ಮತ್ತು ರಾಮಾಯಣ ವಿಚಾರದಲ್ಲಿ ದೊಡ್ಡ ರಾಮಾಯಣವನ್ನೇ ಮಾಡುತ್ತಿರುವ ತಮಿಳುಕಾಡು "ದೊರೆ" ಕರುಣಾಕಿಡಿ ಅವರು ಬೊಗಳೂರಿನಲ್ಲಿ ಅವಸರದ ಪಾನಗೋಷ್ಠಿಯನ್ನು ಕರೆದು ಅಸತ್ಯಾನ್ವೇಷಿ ಎದುರು ಬಾಯಿಗೆ ಬಂದ ಮಾತುಗಳೆಲ್ಲವನ್ನೂ ಉದುರಿಸುತ್ತಿದ್ದರು. ಅಸತ್ಯಾನ್ವೇಷಿ ಕೈಯಲ್ಲಿ ಟವೆಲ್ ಇದ್ದ ಕಾರಣ ಬಚಾವ್ ಎಂದು ಸುರಕ್ಷಿತ ಅಂತರದಲ್ಲಿದ್ದುಕೊಂಡೇ ಇವೆಲ್ಲವನ್ನೂ ನೋಡುತ್ತಿದ್ದ ನಮ್ಮ ಬಾತ್ಮೀದಾರರು ವರದಿ ಮಾಡಿದ್ದಾರೆ.

ಬಾಯಿಗೆ ಬಂದದ್ದನ್ನು- ಅದು ಕೂಡ ಬುದ್ಧಿ ಇಲ್ಲದವರು- ಒದರಬಾರದು ಎಂದು ಭಾರತೀಯ ಸಂವಿಧಾನದ ಯಾವುದೇ ಪರಿಚ್ಛೇದದಲ್ಲಿ ತಿಳಿಸಿಲ್ಲ. ತನ್ನ ಮೂರ್ನಾಲ್ಕು ಹೆಂಡತಿಯರಲ್ಲೊಬ್ಬಳ ಮಗಳ ಮನೆಗೆ ಬೆಂಗಳೂರಿನಲ್ಲಿ ಹಾನಿ ಮಾಡಿದ್ದಾರೆ. ಅದೇನೂ ದೊಡ್ಡ ವಿಷಯವಲ್ಲ. ಇಂಥ ಹೇಳಿಕೆಗಳನ್ನು ನೀಡುತ್ತಲೇ ಇರುತ್ತೇನೆ ಮತ್ತು ತನ್ನ ಇಷ್ಟನೇ ಪತ್ನಿಯ ಇಂತಹ ಮಕ್ಕಳು ಇಂತಲ್ಲಿದ್ದಾರೆ ಎಂದು (ನನಗೇ ಗೊತ್ತಿಲ್ಲದಿದ್ದರೂ) ಪತ್ತೆ ಹಚ್ಚಿದವರು ಗಲಾಟೆ ಮಾಡುತ್ತಲೇ ಇರುವುದು ಸಾಮಾನ್ಯ ಎಂದು ಅವರು ಹೇಳಿದರು.

ಶ್ರೀರಾಮನು ಸೇತುವೆ ಕಟ್ಟಿಸಲು ಯಾವ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪಡೆದಿದ್ದಾನೆ ಅಂತ ನಾನು ಕೇಳಿದ್ದು ಹೌದು ಎಂದು ಒಪ್ಪಿಕೊಂಡ ಅವರು, ಈ ಹೇಳಿಕೆಗೆ ಆಕ್ಷೇಪ ಬಂದಿದೆ. ಹಾಗಾದರೆ ಶ್ರೀರಾಮ ಎಂಜಿನಿಯರಿಂಗ್ ಪದವಿ ಪೂರೈಸದೆಯೇ ಈ ಸೇತುವೆ ಕಟ್ಟಿಸಿದನೇ? ಅವನು ನನಗಿಂತಲೂ ಬುದ್ಧಿವಂತನಾಗಿದ್ದನೇ ಎಂದು ದಿವ್ಯ ಅಜ್ಞಾನದಿಂದ ಪ್ರಶ್ನಿಸಿ, ತಾವು ಸೇವಿಸಿದ "ತೀರ್ಥ"ವನ್ನು ಮೇಲೆ ನೋಡಿ ಉಗುಳುತ್ತಾ ತಮ್ಮ ಮೇಲೆಯೇ ಪವಿತ್ರ ಜಲ ಸಂಪ್ರೋಕ್ಷಣೆ ಮಾಡಿಸಿಕೊಂಡಿದ್ದಾರೆ.

ವಾಲ್ಮೀಕಿ ಬರೆದರೆ ಮಾತ್ರ ರಾಮಾಯಣ ಆಗುತ್ತದೆ. ನಾನೂ ಸಾಕಷ್ಟು ಕಥೆ ಬರೆದಿದ್ದೇನೆ. ಅದರಲ್ಲಿನ ಪಾತ್ರಗಳನ್ನು ಯಾರೂ ಪೂಜಿಸಿಲ್ಲ. ಓದಿದವರು ಮತ್ತೊಮ್ಮೆ ಓದುತ್ತಿಲ್ಲ ಎಂದು ವಿಷಾದಿಸಿದ ಅವರು, ರಾಮನಿಗೆ ಸೇತುವೆ ಕಟ್ಟಲು ಸಹಕರಿಸಿದವರ ಪಂಗಡದಲ್ಲಿ ತಾನೂ ಒಬ್ಬನಾಗಿದ್ದೆ, ಆ ಪಂಗಡದಿಂದ ತನ್ನನ್ನು ಹೊರಹಾಕಲಾಗಿತ್ತು ಎನ್ನುವುದನ್ನು ಮಾತ್ರ ಬಾಯಿಬಿಡಲಿಲ್ಲ.

ಇದೀಗ ತಮಿಳುಕಾಡು ಮುಖ್ಯಮಂತ್ರಿಯನ್ನು ಕೋರ್ಟಿಗೆ ದರದರನೆ ಎಳೆಯಲಾಗಿದೆ ಎಂದು ಇಲ್ಲಿ ವರದಿಯಾಗಿದೆ.

Thursday, September 20, 2007

6 ಎಸೆತದಲ್ಲಿ ಆರೇ ಸಿಕ್ಸ್ ಹೊಡೆಯಲು 12 ಕಾರಣಗಳು

(ಬೊಗಳೂರು ಕಿರಿಕಿರಿಆಟ ಬ್ಯುರೋದಿಂದ)
ಬೊಗಳೂರು, ಸೆ.20- ಒಂದು ಓವರಿನಲ್ಲಿ ಐದು ಸಿಕ್ಸ್ ಹೊಡೆಸಿಕೊಂಡು ಚಚ್ಚಿಸಿಕೊಳ್ಳಲೂ ಗೊತ್ತಿದೆ, ಚಚ್ಚಲೂ ಗೊತ್ತಿದೆ ಅಂತ ಸಾಬೀತುಪಡಿಸಿದ ಯುವರಾಜ್ ಸಿಂಗ್ ಅವರು ಒಂದು ಓವರಿನಲ್ಲಿ ಕೇವಲ ಆರು ಸಿಕ್ಸ್ ಹೊಡೆಯಲು ಕಾರಣಗಳೇನು ಎಂಬುದನ್ನು ಬೊಗಳೂರು ಬ್ಯುರೋ ತನ್ನ ದಿವ್ಯ ಅಜ್ಞಾನದಿಂದ ಕಂಡುಕೊಂಡಿದ್ದು, ಆ 12 ಕಾರಣಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

1. ಒಂದು ಓವರಿನಲ್ಲಿ ಇಂಗ್ಲೆಂಡ್ ಬೌಲರ್ ಕೇವಲ ಆರು ಬಾರಿ ಮಾತ್ರ ಚೆಂಡೆಸೆದದ್ದು.

2. ಯುವರಾಜ್ ಸಿಂಗ್ ಕಾಲಿನ ಬದಲು ಬ್ಯಾಟ್ ಬೀಸಿದ್ದು... ಅಲ್ಲಲ್ಲ ಎತ್ತಿ ಎತ್ತಿ ಒಗೆದದ್ದು.

3. ಭಾರತ ಮತ್ತು ಇಂಗ್ಲೆಂಡ್ ಮಧ್ಯೆ ಟಿಕ್-20 ಪಂದ್ಯ ನಡೆದದ್ದು.

4. ಬೌಲರ್ ಯಾವುದೇ ನೋಬಾಲ್ ಮತ್ತು ವೈಡ್ ಎಸೆಯದೇ ಇದ್ದದ್ದು.

5. ಯುವರಾಜ್ ಸಿಂಗ್ ಕೈಯಲ್ಲಿ ಕ್ರಿಕೆಟಿಗರು ಆಡುವ ಬ್ಯಾಟ್ ಇದ್ದದ್ದು.

6. ಬ್ರಾಡ್ ಮತ್ತು ಸಿಂಗ್ ಇಬ್ಬರು ಕೂಡ ಒಂದೇ ಗ್ರೌಂಡಿನಲ್ಲಿ ಕ್ರಿಕೆಟ್ ಆಡುತ್ತಿದ್ದದ್ದು.

7. ಬೌಲರ್ ಓ.......ಡಿ ಬಂದು ಚೆಂಡು ಎಸೆದದ್ದು.

8. ಬ್ಯಾಟಿಗೆ ತಾಗುವಂತೆ ಬೌಲರು ಚೆಂಡನ್ನು ಬಿಸಾಕಿದ್ದು.

9. ಆ ಸ್ಟುವರ್ಟ್ ಬ್ರಾಡ್ 19ನೇ ಓವರನ್ನು ಎಸೆದಿದ್ದು ಕೂಡ ಮತ್ತೊಂದು ಕಾರಣ.

10. ಬ್ರಾಡ್ ಮತ್ತು ಸಿಂಗ್ ವಿರುದ್ಧ ತಂಡಗಳ ಪರವಾಗಿ ಆಡುತ್ತಿದ್ದದ್ದು.

11. ಹಳೆಯ ಕಾರಣಗಳಲ್ಲೊಂದು: ಯುವರಾಜ್ ಸಿಂಗ್ ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದು.

12. ಕೊನೆಯ ಮತ್ತು ಪ್ರಧಾನ ಕಾರಣ: ಇಂಗ್ಲೆಂಡ್ ಬೌಲರ್ ಬೇರೆ ಯಾವುದೋ ಗುಂಡಗಿನ ವಸ್ತುವಿನ ಬದಲು ಚೆಂಡನ್ನೇ ಎಸೆದದ್ದು!

ಇದೀಗ ಇಂಗ್ಲೆಂಡ್ ಕ್ರಿಕೆಟಿಗರು ತಮ್ಮ ತಂಡದ ಮೇಲೆ ಸೇಡು ತೀರಿಸಿಕೊಂಡ ಯುವರಾಜ್ ಸಿಂಗ್ ವಿರುದ್ಧ ಹೀಗೆ ಟೀಕೆ ಮಾಡುತ್ತಿದ್ದಾರೆ ಎಂದು ನಿನ್ನೆ ರಾತ್ರಿಯಿಡೀ ನಿದ್ದೆಗೆಟ್ಟು ಡರ್ಬನ್ ಸುತ್ತಾಡಿದ್ದ ನಮ್ಮ ಒದರಿಗಾರರು ತಿಳಿಸಿದ್ದಾರೆ.
"ಯುವರಾಜ್ ಸಿಂಗ್ ಆರು ಸಿಕ್ಸ್ ಹೊಡೆಯಲು ಆರು ಎಸೆತಗಳನ್ನು ತೆಗೆದುಕೊಂಡರು. ಆದರೆ ನಮ್ಮ ಸಾಧನೆ ಇನ್ನೂ ದೊಡ್ಡದು. ನಾವು ಎರಡು ವಾರದ ಹಿಂದೆ ಯುವರಾಜ್ ಅವರ ಕೇವಲ ಒಂದೇ ಒಂದು ಓವರಿನಲ್ಲಿ ಐದು ಸಿಕ್ಸ್ ಬಾರಿಸಿರಲಿಲ್ಲವೇ?"

ಈ ಕುರಿತು ಯುವರಾಜ್ ಸಿಂಗ್‌ರನ್ನು ಮಾತನಾಡಿಸಿದಾಗ, ನನ್ನ ಬಾಲಿಗೆ 5 ಸಿಕ್ಸ್ ಹೊಡೆಸಿಕೊಂಡ ಬಳಿಕ ಯಾರು ಕೂಡ ನನಗೆ ಫೋನ್ ಮಾಡುತ್ತಿರಲಿಲ್ಲ. ನನಗೆ ಯಾವುದೇ ಫೋನ್ ಬಾರದೆ ತಲೆಬಿಸಿಯಾಗಿತ್ತು. ಅದಕ್ಕಾಗಿಯೇ ಈ ರೀತಿ ಮಾಡಿದೆ ಎಂದರು.

ಅದೂ ಅಲ್ಲದೆ, ಆಂಡ್ರ್ಯೂ ಫ್ಲಿಂಟಾಫ್ ಅವರು ತಮ್ಮ ಬ್ಯಾಟರಿಗೆ ರೀಚಾರ್ಜ್ ಮಾಡಿಸಿದರು ಎಂದೂ ಯುವರಾಜ್ ಸ್ಪಷ್ಟಪಡಿಸಿದರು. ಈ ಕಾರಣದಿಂದ, ಯುವರಾಜ್ ಬ್ಯಾಟಿಂಗ್‌ಗೆ ಹೋಗುವಾಗ ಅವರನ್ನು ಫುಲ್ಲೀ ಚಾರ್ಜ್ ಮಾಡಿಯೇ ಕಳುಹಿಸುತ್ತೇವೆ ಎಂದು ತಂಡದ ನಾಯಕ ದೋಣಿ ಬಿಟ್ಟಿದ್ದಾರೆ.

Tuesday, September 18, 2007

ಬೊಗಳೆ: ಶಾಲಾಪ್ರವೇಶಪತ್ರದಲ್ಲಿ ಮತ್ತಷ್ಟು ಹೊಸ ಕಾಲಂ

(ಬೊಗಳೂರು ಆಟಪಾಠ ಬ್ಯುರೋದಿಂದ)
ಬೊಗಳೂರು, ಸೆ.18- ಶಾಲಾ ಪ್ರವೇಶ ದಾಖಲಾತಿ ವೇಳೆ ಜಾತಿ ನಮೂದಿಸುವ ಕಾಲಂ ಅನ್ನು ಕಿತ್ತು ಹಾಕಬೇಕು ಎಂಬ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದರೂ, ಕೆಲವು ಕಾಲಂಗಳಲ್ಲಿ ಬದಲಾವಣೆಯನ್ನಾದರೂ ಮಾಡಬೇಕೆಂದು ಅಖಿಲ ಭಾರತ ವಿದ್ಯಾರ್ಥಿಪಿತರ ಸಂಘವು ನಿರ್ಧರಿಸಿದೆ.

ಶಾಲೆಗಳಲ್ಲಿ ಪ್ರವೇಶಕ್ಕಾಗಿ ಸಲ್ಲಿಸುವ ಅರ್ಜಿಯಲ್ಲಿ ಮದರ್ ಟಂಗ್ ಎಂಬುದನ್ನು ಅಕ್ಷರಶಃ ಭಾಷಾಂತರಿಸಿ ಕನ್ನಡದಲ್ಲೇ ನೀಡಿದರೆ, ನಮಗೆ ಅದರ ಮುಂದೆ "ತುಂಬಾ ಉದ್ದ" ಎಂದು ಬರೆಯಲು ಸಾಧ್ಯವಾಗುತ್ತದೆ ಎಂಬ ಬೇಡಿಕೆಯೂ ಈ ಪ್ರಸ್ತಾಪಿತ ಮನವಿಯಲ್ಲಿ ಸೇರಿಕೊಂಡಿದೆ.

ಅಲ್ಲದೆ, ಆತ ಅಲ್ಪಸಂಖ್ಯಾತನೇ ಅಲ್ಲವೇ, ಹಿಂದುಳಿದವನೇ ಅಥವಾ ಅಲ್ಲವೇ ಎಂಬುದನ್ನು ಸ್ಪಷ್ಟವಾಗಿ ನಮೂದಿಸಿದರೆ, ಮೀಸಲಾತಿ ಮತ್ತು ಇತರ ಸೌಕರ್ಯ ನೀಡದಿದ್ದರೆ ನೇರವಾಗಿ ಮಾವನ ಸಂಪನ್ಮೂಲ ಸಚಿವ ದುರ್ಜನ ಸಿಂಗರಿಗೆ ದೂರು ಕೊಡಲು ಸಹಕಾರಿಯಾಗುತ್ತದೆ ಎಂಬುದು ವಿದ್ಯಾರ್ಥಿಪಿತರ ಒತ್ತಾಸೆ.

ಇನ್ನೊಂದೆಡೆ, ಶಾಲಾ ಆಡಳಿತ ಮಂಡಳಿಗಳು ಕೂಡ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲು ಮುಂದಾಗಿದ್ದು, ಶಾಲಾ ಪ್ರವೇಶ ಅರ್ಜಿಗಳಲ್ಲಿ ಮತ್ತಷ್ಟು ಕಾಲಂಗಳನ್ನು ಸೇರಿಸಬೇಕು ಎಂದು ಒತ್ತಾಯಿಸಿವೆ.

ಅವುಗಳು ಸಲ್ಲಿಸಲು ನಿರ್ಧರಿಸಿರುವ ಪಿಲ್ (PIL)ನಲ್ಲಿ, ವಿದ್ಯಾರ್ಥಿಯ ಅಪ್ಪನ ಜೇಬು ಎಷ್ಟು ದೊಡ್ಡದು (ಅದರ ಅಗಲ, ಉದ್ದ, ಮತ್ತು ದಪ್ಪ), ವಿದ್ಯಾರ್ಥಿಯ ಅಪ್ಪನ ರಾಜಕೀಯ ಪ್ರಭಾವ ಎಷ್ಟು, ವಿದ್ಯಾರ್ಥಿಯ ಅಪ್ಪ ಮೀಸಲಾತಿಗೆ ಅರ್ಹನೇ? ವಿದ್ಯಾರ್ಥಿಯ ಅಪ್ಪನಿಗೆ ಹಿಂದೆ ಮೀಸಲಾತಿ ವಿರುದ್ಧ ಹೋರಾಟ ಮಾಡಿದ ಅನುಭವವಿದೆಯೇ ಎಂಬಿತ್ಯಾದಿ ಕಾಲಂಗಳೂ ಸೇರಿವೆ.

ಅಲ್ಲದೆ, ವಿದ್ಯಾರ್ಥಿಯ ಅಪ್ಪನ ಬ್ಯಾಂಕ್ ಬ್ಯಾಲೆನ್ಸ್ ಶೀಟ್‌ನ ನಕಲು ಪ್ರತಿಯೊಂದನ್ನು ಕೂಡ ಅರ್ಜಿ ಜತೆ ಲಗತ್ತಿಸಲು ಅವಕಾಶ ಮಾಡಿಕೊಡಬೇಕು. ಮನೆಯಲ್ಲಿ ಫ್ರಿಜ್, ಟಿವಿ, ಬೈಕು, ಕಾರು ಇತ್ಯಾದಿ ಇವೆಯೇ ಎಂಬುದನ್ನು ನಮೂದಿಸುವ ಕಾಲಂ ಬೇಕು ಎಂಬ ಆಗ್ರಹ ಅವರದು.

ಡೊನೇಶನ್ ಹೇಗೂ ಯಾರೂ ನೀಡಬೇಕಾಗಿಲ್ಲ, ಶಾಲೆಯ ಅಭಿವೃದ್ಧಿ ಕಾರ್ಯದ ನೆಪದಲ್ಲಿ ಮಕ್ಕಳನ್ನು ಸಾಕಷ್ಟು ಮಟ್ಟಿಗೆ ದೋಚಬಹುದು. ಮತ್ತಷ್ಟು ದೋಚುವಂತಾಗಲು, ಶಾಲೆಯಿಂದಲೇ ಪುಸ್ತಕ ಒದಗಿಸುತ್ತೇವೆ, ಶಾಲೆಯಿಂದಲೇ ಸಮವಸ್ತ್ರ ಒದಗಿಸುತ್ತೇವೆ ಎಂಬಿತ್ಯಾದಿ ತಂತ್ರಗಳನ್ನು ಚಾಣಕ್ಯನ ಅರ್ಥಶಾಸ್ತ್ರದಿಂದ ಕದ್ದು ಅಳವಡಿಸಲು ಆಡಳಿತ ಮಂಡಳಿ ನಿರ್ಧರಿಸಿದೆ.

ಇದರಿಂದಾಗಿ ಹಿಂದೆ ಡೊನೇಶನ್ ಇದ್ದ ಸಮಯದಲ್ಲಿ ನೀಡುತ್ತಿದ್ದಕ್ಕಿಂತಲೂ ಹೆಚ್ಚು ಹಣವನ್ನು ವಿದ್ಯಾರ್ಥಿ ಪಿತರು ಕಕ್ಕುವಂತಾಗುತ್ತದೆ. ಅದು ತೆರಿಗೆ ತಪ್ಪಿಸಿಕೊಳ್ಳಲು ಹೆಣಗಾಡುತ್ತಿರುವ ವಿದ್ಯಾರ್ಥಿಪಿತರಿಗೆ ಅನುಕೂಲವೇ ಆಗಲಿದೆ ಎಂಬುದು ಶಾಲಾ ಆಡಳಿತಮಂಡಳಿಯ ಸಮಜಾಯಿಷಿ.

Thursday, September 13, 2007

ಮೊಬೈಲ್ ಬಿಸಿ: ಬಾಲವಾಡಿ ಬಾಲ-ಕರು ಸಂಘ ವಿಸರ್ಜನೆ

(ಬೊಗಳೂರು ಲಬೋಲಬೋ ಬ್ಯುರೋದಿಂದ)
ಬೊಗಳೂರು, ಸೆ.13- ಮೊಬೈಲ್ ನಿಷೇಧ ಕುರಿತು ಸರಕಾರ ಕೈಗೊಂಡಿರುವ ನಿರ್ಧಾರವು ಕೇವಲ ಬೊಗಳೂರು ಬ್ಯುರೋಗೆ ವ್ಯಾಪ್ತಿಗೆ ಸಂಬಂಧಿಸಿದ್ದಲ್ಲ, ಇದು ಎಲ್ಲಾ ಊರುಗಳಿಗೂ, ವಿಶೇಷವಾಗಿ ಶಾಲಾ-ಕಾಲೇಜು ಪರಿಸರಕ್ಕೆ ಅನ್ವಯವಾಗುತ್ತದೆ ಎಂದು ಅಂಗನವಾಡಿ ವಿದ್ಯಾರ್ಥಿ ಸಂಘದ ಪದಚ್ಯುತ ಅಧ್ಯಕ್ಷ ಪುಟಾಣಿ ರಾಜ್ ಸ್ಪಷ್ಟಪಡಿಸಿದ್ದಾರೆ.

ನಿನ್ನೆ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮೊಬೈಲ್ ನಿಷೇಧ ಹಿಂತೆಗೆತಕ್ಕೆ ಆಗ್ರಹಿಸಿದ ಬೆನ್ನಿಗೇ, ಸರಕಾರವು ಅವರನ್ನು ಅಂಗನವಾಡಿ ವಿದ್ಯಾರ್ಥಿ ಸಂಘದ ಅಧ್ಯಕ್ಷಪಟ್ಟದಿಂದ ಉಚ್ಚಾಟಿಸಿದ್ದು, ವಿದ್ಯಾರ್ಥಿ ಸಂಘವನ್ನೇ ವಿಸರ್ಜಿಸಿತು. ಆ ಬಳಿಕವೂ ಅವರು ಮಾತನಾಡುವುದನ್ನು ನಿಲ್ಲಿಸದೆ, ಮತ್ತೊಂದು ಪತ್ರಿಕಾಗೋಷ್ಠಿ ಕರೆದಿದ್ದರು. ಆದರೆ ಪಾನಗೋಷ್ಠಿ ಇಲ್ಲದ ಕಾರಣ ಬಹುತೇಕ ಪತ್ರಕರ್ತರು ಹಾಜರಾಗದ ಪರಿಣಾಮವಾಗಿ, ಬೊಗಳೆ ರಗಳೆಯ ಪ್ರತಿನಿಧಿ ಮಾತ್ರವೇ ಅಲ್ಲಿ ಹಾಜರಿದ್ದು, ಈ ವರದಿ ನೀಡಿದ್ದಾರೆ. ಬೊಗಳೂರಿನಲ್ಲಿ ಮಾತ್ರವೇ ಪುಟಾಣಿ ವಿದ್ಯಾರ್ಥಿಗಳು ಈ ಬಗ್ಗೆ ಪ್ರತಿಭಟನೆಯ ಧ್ವನಿಯೆತ್ತಿದ ಕಾರಣ ಅವರು ಈ ಸ್ಪಷ್ಟನೆ ನೀಡಲು ಬಯಸಿದ್ದರು.

ಮೊಬೈಲ್ ನಿಷೇಧದ ಕಾರಣದಿಂದಾಗಿ ತಮ್ಮ ಪದಚ್ಯುತಿಯ ಸಂದರ್ಭ, ತಮ್ಮ ಮಾನ ಉಳಿಸಿಕೊಳ್ಳಲು ಯಾರನ್ನೂ ಸಂಪರ್ಕಿಸಲು ಸಾಧ್ಯವೇ ಆಗಲಿಲ್ಲ. ಇದೊಂದೇ ಸಾಕಲ್ಲವೇ ಮೊಬೈಲ್ ನಿಷೇಧದ ದುಷ್ಪರಿಣಾಮದ ತೀವ್ರತೆಯನ್ನು ಅರಿಯಲು? ಎಂದು ಪ್ರಶ್ನಿಸಿರುವ ಅವರು, ಹೀಗಾದರೆ ನಾವು ಬೆಳೆದು ದೊಡ್ಡವರಾದ ಬಳಿಕ, ರಾಜಕೀಯಕ್ಕೆ ಅನಿವಾರ್ಯವಾದ ಅರ್ಹತೆಯಾದ ಬ್ಲ್ಯಾಕ್‌ಮೇಲ್ ಮತ್ತು ಗೂಂಡಾಗಿರಿ, ಇನ್‌ಫ್ಲುಯೆನ್ಸ್ ಎಲ್ಲವನ್ನೂ ಪ್ರಯೋಗಿಸಲು ಕಲಿಯುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ.

ಪರೀಕ್ಷೆಯಲ್ಲಿ ಕೂಡ ಮೊಬೈಲ್ ಮೂಲಕವೇ ಕೇಳಿ ಕೇಳಿ ಬರೆಯಬಹುದು. ಇದರಿಂದ ಇದ್ದ ಮಕ್ಕಳೆಲ್ಲರೂ ಪ್ರತಿಭಾವಂತರಾಗುತ್ತಾರೆ, ಯಾರು ಕೂಡ ಫೇಲ್ ಆಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಹೇಳಿರುವ ಅವರು, ಮೊಬೈಲ್ ಫೋನ್ ಬಳಕೆಯು ಮಕ್ಕಳ ಮೂಲಭೂತ ಹಕ್ಕು, ಈ ಹಕ್ಕನ್ನು ಕಿತ್ತುಕೊಳ್ಳುವ ಪಾಲಕರ ಮೊಬೈಲುಗಳನ್ನೇ ಕಿತ್ತು ಮಕ್ಕಳ ಕೈಯಲ್ಲಿ ಕೊಡಬೇಕೆಂಬ ಸುಧೀಂದ್ರರ ಸಲಹೆಯನ್ನು ಬಿದ್ದು ಬಿದ್ದು ನಗುತ್ತಾ ಸ್ವಾಗತಿಸಿದ್ದಾರೆ.

Wednesday, September 12, 2007

ಮೊಬೈಲ್ ನಿಷೇಧ ಹಿಂತೆಗೆತಕ್ಕೆ ಪುಟಾಣಿಗಳ ಆಗ್ರಹ

(ಬೊಗಳೂರು ಕಿಡ್ಸ್ ರಕ್ಷಣಾ ಬ್ಯುರೋದಿಂದ)
ಬೊಗಳೂರು, ಸೆ.12- ಮಕ್ಕಳಿಗೆ ಮೊಬೈಲ್ ಬಳಕೆ ನಿಷೇಧದಿಂದಾಗಿ ಗಂಡಾಂತರಕಾರಿ ಪರಿಸ್ಥಿತಿ ಎದುರಾಗಿದೆ ಎಂದು ಅಖಿಲ ಭಾರತ ಅಂಗನವಾಡಿ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಮಹೋದಯರು ಬೊಗಳೂರಿನಲ್ಲಿ ನಡೆಸಿದ ತುರ್ತು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಇದು ಬೆಳೆಯುತ್ತಿರುವ ಯುಗ ಎಂದು ನಮ್ಮ ಅಪ್ಪ ಹೇಳುತ್ತಿರುತ್ತಾರೆ, ತನಗೂ ಒಂದು ಮೊಬೈಲ್ ಬೇಕು, ಕೆಲಸವಿಲ್ಲದಾಗ ಬೇರೆಯವರೊಂದಿಗೆ ಎಸ್ಎಂಎಸ್ ಹರಟೆ ಹೊಡೆಯಲು ಬೇಕೇಬೇಕು ಅಂತ ಅಮ್ಮ ಕೂಡ ಅಪ್ಪನಲ್ಲಿ ಜಗಳಾಡಿ ಮೊಬೈಲ್ ತೆಗೆಸಿಕೊಂಡಿದ್ದಾರೆ. ಅಪ್ಪನಿಗೆ ಎರಡು ಮೊಬೈಲ್, ಅಮ್ಮನಿಗೆ ಒಂದು ಮೊಬೈಲ್, ನನಗೆ ಮಾತ್ರ ಸೊನ್ನೆ ಮೊಬೈಲ್ ಯಾಕೋ ಗೊತ್ತಿಲ್ಲ... ಅಂತ ಅಂಗನವಾಡಿ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪುಟಾಣಿರಾಜ್ ಅವರು ನಮ್ಮ ರದ್ದಿಗಾರರಿಗೆ ತಿಳಿಸಿದ್ದಾರೆ.

ನಮ್ ಮಿಸ್ಸು ಕೂಡ ಆಗಾಗ್ಗೆ ಮಿಸ್ ಕಾಲ್ ಪಡೆಯುತ್ತಿರುತ್ತಾರೆ. ಅದರ ರಿಂಗಿಂಗ್ ಟೋನ್ ಕೇಳುವುದೇ ಅಂಗನವಾಡಿಯಲ್ಲಿ ನಮಗೆ ದೊರೆಯುವ ಉತ್ತಮ ಮನರಂಜನೆಗಳಲ್ಲೊಂದಾಗಿದೆ. ಆಗಾಗ್ಗೆ ಮಿಸ್ ಕಾಲ್ ಬರೋದು, ಒಮ್ಮೊಮ್ಮೆ ಕಾಲ್ ಮಿಸ್ ಆಗದಿದ್ದರೆ, ನಮ್ಮ ಮಿಸ್ಸೇ ಕ್ಲಾಸಿನಿಂದ ಮಿಸ್ ಆಗ್ತಿರೋದು ನಡೆಯುತ್ತೆ. ಹಾಗಾಗಿ ನಮಗೆ ಕ್ಲಾಸಿನಲ್ಲಿ ಬೇಕಾದಷ್ಟು ಜೋರಾಗಿ ಕೂಗಾಡಬಹುದು, ಹೊಡೆದಾಡಬಹುದು. ಇದು ಮೊಬೈಲ್ ಪ್ರಯೋಜನಗಳಲ್ಲೊಂದು ಎಂದು ತಿಳಿಸಿರುವ ಅವರು, ಆದರೆ ಮಕ್ಕಳ ಕೈಗೂ ಮೊಬೈಲ್ ಕೊಡದಿದ್ದರೆ, ಬೆಳೆಯುತ್ತಿರುವ ತಂತ್ರಜ್ಞಾನದೊಂದಿಗೆ ಪುಟಾಣಿಗಳು ಅಪ್‌ಡೇಟ್ ಆಗೋದು ಹೇಗೆ, ಅದರಲ್ಲಿರೋ ಗೇಮ್ಸ್‌ಗಳನ್ನು ನಾವು ಕರಗತ ಮಾಡಿಕೊಳ್ಳೋದು ಹೇಗೆ ಮತ್ತು ಎಸ್ಎಂಎಸ್‌ನಲ್ಲಿ ಬಳಸುವ ಭಾಷೆಯ ಅರಿವು ನಮಗಾಗುವುದು ಹೇಗೆ ಎಂಬ ಮೂಲಭೂತ ಪ್ರಶ್ನೆಗಳನ್ನು ಅವರು ಮುಂದಿಟ್ಟಿದ್ದಾರೆ.

ನಮಗೂ ಒಂದು ಮೊಬೈಲ್ ಕೊಟ್ಟರೆ, ಆಗಾಗ ನಮಗೆ ಬೇಕಾದವರಿಗೆ ಮತ್ತು ಬೇಡವಾದ ಮಿಸ್‌ಗೆ ಕೂಡ ಮಿಸ್ ಕಾಲ್ ಕೊಡುತ್ತಾ, ಅವರು ದೂರ ಹೋಗುವಂತೆ, ಅವರ ಗಮನ ದೂರ ತಂಗಾಳಿಯಲ್ಲಿ ತೇಲಿ ಹೋಗುವಂತೆ ಮಾಡಬಹುದು ಎಂಬುದು ಪುಟಾಣಿರಾಜ್ ನೀಡಿರುವ ಸ್ಪಷ್ಟನೆ.

ಮಕ್ಕಳು ಮೊಬೈಲ್ ಬಳಸುವುದರಿಂದ ಕಿವಿ, ಮೆದುಳು, ಹೃದಯ ಮತ್ತಿತರ ಅಂಗಗಳಿಗೆ ಹಾನಿಯಾಗುತ್ತದೆ ಅಂತ ತಜ್ಞರು ಹೇಳಿದ್ದಾರೆ. ಹೌದು, ಸರಿ, ಆಯ್ತು... ಏನೀಗ ಎಂದು ಪ್ರಶ್ನಿಸಿರುವ ಅವರು, ಈಗ ಬೆಳೆದು ದೊಡ್ಡವರಾದವರಿಗೂ ಕಿವಿ ಎಂಬುದು ಕೇಳಿಸುತ್ತದೆಯೇ? ಮಕ್ಕಳಾದ ನಾವೆಷ್ಟು ಬಾರಿ ಜೋರಾಗಿ ಅರಚಾಡಿ ಪೀಪಿ ತೆಗೆಸಿಕೊಡು, ಚಾಕ್ಲೇಟು ತೆಗೆಸಿಕೊಡು ಅಂತ ಕೇಳಿದರೂ ತಕ್ಷಣವೇ ತೆಗೆಸಿಕೊಡುವ ಅಪ್ಪಂದಿರು ಎಷ್ಟಿದ್ದಾರೆ? ನಾವೆಷ್ಟೇ ಕೂಗಾಡಿದರೂ ಕೇಳಿಸಿಕೊಳ್ಳುವ ಮಿಸ್ಸಂದಿರು ಎಷ್ಟಿದ್ದಾರೆ ಎಂದು ಪ್ರಶ್ನಿಸಿದರು.

ಅದಲ್ಲದೆ, ಈಗ ಬೆಳೆದು ದೊಡ್ಡವರಾದವರಿಗೆ ಮೆದುಳು ಎಂಬುದು ಇದೆಯೇ? ಇಲ್ಲ ಎಂಬುದು ನಮ್ಮ ಸರಕಾರದ ನೀತಿ ನಿಯಮಾವಳಿಗಳಿಂದಾಗಿಯೇ ತಿಳಿಯುತ್ತದೆ. ಉದಾಹರಣೆಗೆ ಮಕ್ಕಳಿಗೆ ಮೊಬೈಲ್ ಬಳಕೆ ನಿಷೇಧವನ್ನೇ ತೆಗೆದುಕೊಳ್ಳಿ. ಇದು ಮೆದುಳು ಇಲ್ಲದ ಕಾರಣದಿಂದಾಗಿಯೇ ತೆಗೆದುಕೊಂಡ ನಿರ್ಧಾರವಲ್ಲವೇ ಎಂದು ಅ ಆ ಇ ಈ ಕಲಿಯುವ "ಬ್ಯುಸಿ" ಶೆಡ್ಯೂಲ್ ನಡುವಿನಲ್ಲೂ ಒಂಟಿ ಪತ್ರಿಕಾಗೋಷ್ಠಿಯಲ್ಲಿ ಕೇಳಿದ ಪುಟಾಣಿರಾಜ್, 16 ವರ್ಷ ದಾಟಿದ ತಕ್ಷಣವೇ ಹೃದಯ ಬೆಳೆಯುತ್ತದೆ. ಇದನ್ನು ನಾವು ಕಾಲೇಜು ಸಮೀಪದ ಪಾರ್ಕುಗಳಲ್ಲಿ, ನಗರದ ಸಿನಿಮಾ ಥಿಯೇಟರುಗಳಲ್ಲಿ ಕಣ್ಣಾರೆ ಕಾಣಬಹುದು. ಅವರೆಲ್ಲಾ ಮೊಬೈಲನ್ನೇ ಅಲ್ಲವೇ ಬಳಸುತ್ತಿರುವುದು? ಅವರ ಹೃದಯಕ್ಕೆ ಹಾನಿಯಾಗುವುದು ಮೊಬೈಲ್‌ನಲ್ಲಿ ಹರಿದಾಡುವ ಸಂದೇಶಗಳು ಮತ್ತು ಅದರಲ್ಲಿ ಮೂಡಿಬರುವ ಮಾತುಗಳಿಂದಾಗಿಯೇ ಹೊರತು, ಮೊಬೈಲ್ ಬಳಕೆಯಿಂದ ಅಲ್ಲ ಎಂದು ತಮ್ಮ ಪೂರ್ವಜನ್ಮದ ಅನುಭವದ ನುಡಿಗಳನ್ನು ರದ್ದಿಗಾರರ ಮುಂದೆ ಬಿಚ್ಚಿಟ್ಟರು.

ಸರಕಾರವು ನಮಗೆ ಮೊಬೈಲ್ ನಿಷೇಧ ಮಾಡಿದ ನಿರ್ಧಾರ ಹಿಂತೆಗೆದುಕೊಳ್ಳದಿದ್ದಲ್ಲಿ ಎಲ್ಲಾ ಅಂಗನವಾಡಿ ಮಕ್ಕಳೂ ಶಾಲೆಗೆ ಬಂದು ಆಟವಾಡುವ ಬದಲು, ಮನೆಯಲ್ಲೇ ಆಟವಾಡುವುದಾಗಿ ಬೆದರಿಕೆಯೊಡ್ಡಿದ ಅವರು, ಹೋರಾಟದ ಮುಂದಿನ ಭಾಗವಾಗಿ, ಅಂಗನವಾಡಿಯಿಂದ ಮನೆಗೆ ಹೋಗುವ ದಾರಿಯಲ್ಲಿರುವ ಎಲ್ಲಾ ಅಂಗಡಿಗಳಿಗೆ ನುಗ್ಗಿ, ಅಲ್ಲಿಂದ ಪೆಪ್ಪರ್‌ಮಿಂಟ್ ತೆಗೆಸಿಕೊಡಲು ಅಪ್ಪ-ಅಮ್ಮಂದಿರನ್ನು ಎಡೆಬಿಡದೆ ಕಾಡುವುದಾಗಿ ಎಚ್ಚರಿಸಿದ್ದಾರೆ.

Monday, September 10, 2007

ನೀರು ಇಲ್ಲವೇ? ಚಿಂತೆ ಬೇಡ, ಪರಿಹಾರ ಇಲ್ಲಿದೆ!

(ಬೊಗಳೂರು ಗಂಭೀರ ಸಂಶೋಧನಾ ಬ್ಯುರೋದಿಂದ)
ಬೊಗಳೂರು, ಸೆ. 10- ಕರ್ನಾಟಕ - ತಮಿಳುನಾಡು, ತಮಿಳುನಾಡು-ಕೇರಳ, ಆಂಧ್ರ-ಕರ್ನಾಟಕ, ಮಹಾರಾಷ್ಟ್ರ-ಕರ್ನಾಟಕ ರಾಜ್ಯಗಳು ಒಂದು ಹನಿ ನೀರಿಗಾಗಿ ಪರಸ್ಪರ ಕಚ್ಚಾಡುತ್ತಿರುವುದು ಏಕೆ ಎಂಬ ಬಗ್ಗೆ ಗಂಭೀರವಾಗಿ ಯೋಚಿಸತೊಡಗಿದಾಗ ಬೊಗಳೆ ರಗಳೆ ಬ್ಯುರೋಗೆ ಜ್ಞಾನೋದಯವಾಗಿದೆ.

"ಜಗವೆಲ್ಲ ಮಲಗಿರಲು ಅವನೊಬ್ಬನೆದ್ದ" ಎಂದು ಬೊಗಳೆ ಬ್ಯುರೋಗೇ ಹೇಳಿದ್ದಾಗಿ ನೆನಪಿಸಿಕೊಂಡು, ರಾತ್ರಿಯಿಡೀ ಎದ್ದು ಯೋಚಿಸತೊಡಗಿದಾಗ ಈ ವಿಷಯವು ತಲೆ ಇಲ್ಲದ ತಲೆಯೊಳಗೆ ಬಂದಿದೆ ಎಂದು ಪ್ರತ್ಯಕ್ಷದರ್ಶಿಗಳು ವರದಿ ಮಾಡಿದ್ದಾರೆ.

ನೀರಿಗಾಗಿ ಕಚ್ಚುವ ಆಟ, ಕಾಲೆಳೆಯುವ ಆಟ, ಕೆಸರೆರಚುವ ಆಟ ಆಡುವುದಕ್ಕೆ ನೀರು ಇಲ್ಲದಿರುವುದೇ ಪ್ರಧಾನ ಕಾರಣ ಎಂದು ಸಮಸ್ಯೆಯ ಮೂಲವನ್ನು ಪತ್ತೆ ಹಚ್ಚಲಾಗಿದೆ. ನದಿಮೂಲ, ಋಷಿ ಮೂಲ ಮತ್ತು ಸ್ತ್ರೀಮೂಲ ಕೆದಕಬಾರದು ಎಂದು ಹೇಳಿದ್ದರೂ ಆ ನಿಯಮವನ್ನು ಮುರಿದು ಈ ವಿಷಯವನ್ನು ಶೋಧಿಸಲಾಗಿದೆ.

ನೀರಿಂದಲೇ ಜನ ಮಾತ್ರವಲ್ಲ ಸಕಲ ಜೀವರಾಶಿಗಳು ಕೂಡ ಬದುಕೋದು, ಹಾಗಿದ್ದರೂ ನೀರೇಕೆ ಇಲ್ಲ ಎಂಬ ಪ್ರಶ್ನೆಯ ಎಳೆಯನ್ನು ಹಿಡಿದು ಹೊರಟು, ಬಹು ದೂರ ಸಾಗಿದಾಗ ನಮಗೆ ಗೋಚರವಾಗಿದ್ದೆಂದರೆ, ಆ ನೀರೆಲ್ಲವೂ ಭೂಮಿಯ ಮೇಲಿದೆ. ಅಂದರೆ ಭೂಮಿಯಲ್ಲಿ ಶೇ.70 ಭಾಗದಲ್ಲಿ ನೀರು ಇದೆ. ಆದ ಕಾರಣ ಎಲ್ಲಾ ನೀರು ಭೂಮಿಯಲ್ಲೇ ಇರುವುದರಿಂದ, ನಮಗೆಲ್ಲಾ ನೀರಿನ ಸಮಸ್ಯೆ ಎದುರಾಗಿದೆ.

ಈ ಶೇ.70 ಭಾಗದಲ್ಲಿ ಶೇ.97 ಭಾಗವೂ ಉಪ್ಪು ನೀರು. ಇದರಲ್ಲಿ ನಾವು ಜಗಳವಾಡುತ್ತಿರುವ ನದಿ ನೀರಿನ ಅಂದರೆ ಸಿಹಿನೀರಿನ ಪಾಲು ಶೇ.3 ಮಾತ್ರ. ಈ ಅತ್ಯಲ್ಪ ಭಾಗದಲ್ಲಿ, ಬಟ್ಟೆ ಒಗೆಯಲು, ಕೈತೊಳೆಯಲು, ಸ್ನಾನ, ಶೌಚಕ್ಕೆ ಹೆಚ್ಚಿನ ಪಾಲು ಮೀಸಲಾಗುತ್ತದೆ. ಬಳಿಕ ಎರಡು ಬಗೆಯ "ತೀರ್ಥ"ಗಳಿಗೆ ನೀರು ಬೇಕೇಬೇಕು. (ಪಟ್ಟಣ ಪ್ರದೇಶಗಳಲ್ಲಿ ನೀರಿಗಿಂತ ಬೀರಿನ ಪ್ರಮಾಣವೇ ಹೆಚ್ಚಿರುವುದು ಇಲ್ಲಿ ಉಲ್ಲೇಖಾರ್ಹ.)

ಇದೀಗ ಈ ಸಮಸ್ಯೆಯ ನಿವಾರಣೆ ಏನು? ಹೇಗೆ ಎಂದು ಕೂಡ ನಿದ್ದೆಗಣ್ಣಲ್ಲೇ (ತೀರ್ಥ ಸೇವಿಸಿದ ಕಣ್ಣಿನಲ್ಲಿ ಅಂತ ನಮಗಾಗದವರು ದೂರು ಹೊಗಳುತ್ತಿದ್ದಾರೆ, ಇರಲಿ ಬಿಡಿ.) ನಮ್ಮ ಬ್ಯುರೋ ಗಂಭೀರ ಚಿಂತನೆ ಮಾಡಿದೆ.

ಮಗದೊಂದು ಅಧ್ಯಯನದ ಪ್ರಕಾರ, ರಾಜ್ಯ ರಾಜ್ಯಗಳ ನಡುವೆ ಜಗಳ ನಡೆಯುತ್ತಿರುವುದು ಅಕ್ಷರ ದೋಷದಿಂದಾಗಿರಬಹುದೇ? ಎಂಬ ಶಂಕೆಯೊಂದು ಬೊಗಳೂರು ಬ್ಯುರೋವನ್ನು ಕಾಡಿದ್ದು, "ಬೀರು" ಬದಲು "ನೀರು" ಎಂದು ಪತ್ರಿಕೆಗಳಲ್ಲಿ ಪ್ರಕಟವಾಗಿರುವುದು ಕಾರಣವೇ ಎಂಬ ಬಗ್ಗೆ ಸಂಶೋಧನೆ ನಡೆಸಲಾಗುತ್ತಿದೆ.

ಭೂಮಿಯಿಂದ ನೀರನ್ನು ತಂದು ಜಗಳವಾಡುತ್ತಿರುವ ರಾಜ್ಯಗಳಿಗೆ ಹಂಚುವುದರಿಂದ ಎಲ್ಲಾ ಸಮಸ್ಯೆಗಳು ಮುಕ್ತಾಯವಾಗುತ್ತದೆ. ಹಾಗಾಗಿ ಕಾವು ಏರುವ ಮತ್ತು ಏರಿಸುವ ಅನ್ಯಾಯ ಮಂಡಳಿಗಳಿಗಾಗಿ ಮಾಡುವ ಖರ್ಚು ಕೂಡ ಉಳಿಯುತ್ತದೆ ಎಂದು ಹೇಳಿ ನಾವು ನಮ್ಮ ಅಧ್ಯಯನ ಭರಿತ ಒಂದೆರಡು ಮಾತುಗಳನ್ನು ಕೊನೆಗೊಳಿಸುತ್ತೇವೆ. ಜೈಹಿಂದ್...

Friday, September 07, 2007

ಹನಿಗಾಗಿ ಕಿತ್ತಾಟವೇ? ಪರಿಹಾರ ಲಭ್ಯ...

[ಬೊಗಳೆ ರಗಳೆ ಬ್ಯುರೋ Honey ಬಗ್ಗೆ ಮಾತನಾಡುತ್ತಿಲ್ಲ. ನೀರಿನ ಹನಿ ಬಗ್ಗೆ ಮಾತಾಡುತ್ತದೆ- ಸಂ]

ಭೂಮಿಯ ಶೇ.70 ಭಾಗ ಜಲದಿಂದಲೇ ಆವೃತವಾಗಿದ್ದರೂ, ನೀರು ನೀರು ಎಂದು ರಾಜ್ಯ ರಾಜ್ಯಗಳ ನಡುವೆ ಕಿತ್ತಾಟ ಏಕೆ? ಈ ಬಗ್ಗೆ ಗಂಭೀರ ಸಂಶೋಧನಾತ್ಮಕ ವರದಿಯೊಂದು ನಿಮ್ಮ ಬೊಗಳೆಯಲ್ಲಿ ಸೋಮವಾರ ಮೂಡಿಬರಲಿದೆ. ನಿಮ್ಮ ಪ್ರತಿಗಳನ್ನು ಇಂದೇ ಕಾದಿರಿಸಿ. ನಿಮಗೆ ಬೇಡವಾಗಿದ್ದರೂ ಪ್ರತಿಗಳನ್ನು ಕಾದಿರಿಸಿದವರನ್ನು ಇಲ್ಲಿ ಕುಳಿತುಕೊಂಡೇ ಯಾರ ಮತ್ತು ಯಾವ ಉಸಾಬರಿಯೂ ಇಲ್ಲದೆ ಪ್ರೋತ್ಸಾಹಿಸಲಾಗುವುದು.

ಸೂಚನೆ: ನೀವು ಕಾದಿರಿಸಿದ ಪ್ರತಿಗಳನ್ನು ಬೇರೆಯವರಿಗೆ ಮಾರುವುದನ್ನು ನಿಷೇಧಿಸಲಾಗಿದೆ. ಯಾರಾದರೂ ಮಾರುತ್ತಾರೆ ಎಂದು ಗೊತ್ತಾದಲ್ಲಿ, ನಮ್ಮಲ್ಲಿ ಮಾರಾಟವಾಗದೆ ಕೊಳೆಯುತ್ತಿರುವ ಪ್ರತಿಗಳೆಲ್ಲವನ್ನೂ ಅವರ ಕೈಗೇ ಕೊಟ್ಟು ಅವರ ಮೂಲಕವೇ ಮಾರಿಸಲಾಗುತ್ತದೆ. ಈ ಮೂಲಕ ಬೆರಳೆಣಿಕೆಯ ಅರ್ಧದಷ್ಟಿರುವ ಓದುಗರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಹುನ್ನಾರ ನಡೆಯುತ್ತಿದೆ. -ಸಂ

Wednesday, September 05, 2007

ಪ್ರಜೆಗಳಿಗೆ ಮನೋವೇದನೆ ತೆರಿಗೆ ಪ್ರಸ್ತಾಪ

(ಬೊಗಳೂರು ಬೊಕ್ಕಸದೋಚೋ ಬ್ಯುರೋದಿಂದ)
ಬೊಗಳೂರು, ಆ.5- ಮೈತ್ರಿ ರಾಜಕಾರಣದ ನಾಟಕಗಳಿಗೆ ಮನೋವೇದನಾ ತೆರಿಗೆ ವಿಧಿಸಬೇಕು ಎಂದು ಮೈತ್ರಿ ಸರಕಾರದ ಪಾಲುದಾರ ಪಕ್ಷಗಳು ಒತ್ತಾಯಿಸಿವೆ.

ರಾಜ್ಯದಲ್ಲಿ ಅಧಿಕಾರ ಹಸ್ತಾಂತರವೆಂಬ ನಾಟಕವು ಭರ್ಜರಿ ಪ್ರದರ್ಶನ ಕಾಣುವ ನಿರೀಕ್ಷೆಗಳನ್ನು ಈಗಾಗಲೇ ಹುಟ್ಟಿಸಿದ್ದು, ಹಸ್ತಾಂತರಕ್ಕೆ ದೊರೆತಷ್ಟು ಪ್ರಚಾರವು ಮೈತ್ರಿ ಪಕ್ಷಗಳ ಯಾವುದೇ ಕಾರ್ಯಗಳಿಗೆ ದೊರಕಿಲ್ಲ. ಹಾಗಾಗಿ ಈ ಅಧಿಕಾರ ಹಸ್ತಾಂತರವೆಂಬ ನಾಟಕವು ಬಿಡುಗಡೆಯಾದ ತಕ್ಷಣವೇ ಭರ್ಜರಿ ಜನಾಕರ್ಷಣೆಗೆ ಕಾರಣವಾಗಲಿದೆ ಎಂದು ಬಾಕ್ಸಾಫೀಸ್‌ನಲ್ಲಿ ಲೆಕ್ಕಾಚಾರ ಹಾಕಲಾಗುತ್ತಿದೆ.

ಈ ಮೈತ್ರಿ ಯಾಕೆ, ಅವರು ಸರಿ ಇಲ್ಲ, ತೆರಿಗೆ ಇಲ್ಲದ ಮನರಂಜನೆಯಿದು, ಸರಕಾರದ ಸಾಧನೆ ನಮ್ಮದು ಮಾತ್ರ, ಮೈತ್ರಿ ಪಕ್ಷದ್ದಲ್ಲ ಎಂಬಿತ್ಯಾದಿ ಡೈಲಾಗ್‌ಗಳು ಈ ನಾಟಕದ ಪ್ರಧಾನ ಆಕರ್ಷಣೆ. ಈ ಕಾರಣಕ್ಕೆ ಸ್ಕ್ರಿಪ್ಟ್ ರೈಟರ್‌ಗೆ ರಾಷ್ಟ್ರಪ್ರಶಸ್ತಿ ನೀಡಲು ಮೈತ್ರಿ ಪಕ್ಷಗಳ ಮುಖಂಡರ ನಡುವೆ ಗುದ್ದಾಟ ಆರಂಭವಾಗಿರುವುದಾಗಿ ವರದಿಯಾಗಿದೆ.

ಇದೇ ರೀತಿ, ಕೇಂದ್ರೀಯ ಮಟ್ಟದಲ್ಲೂ ಭರ್ಜರಿ ನಾಟಕವೊಂದು ಈಗಾಗಲೇ ಪ್ರದರ್ಶನಗೊಳ್ಳುತ್ತಿದ್ದು, ಎಡ ಪಕ್ಷಗಳು ಅಧಿಕಾರಾರೂಢ ಪಕ್ಷವನ್ನು ಎಡಕ್ಕೆ ಬಲಕ್ಕೆ ಎಳೆದಾಡುತ್ತಾ ಕುತೂಹಲ ಮೂಡಿಸುತ್ತಿದೆ. ಬೆಂಬಲ ಹಿಂತೆಗೆಯುತ್ತೇವೆ ಎಂಬ ಘರ್ಜನೆ ಕೇಳಿ ಬಂದ ತಕ್ಷಣವೇ ಮೆತ್ತಗಾಗುವ ಸರಕಾರವು, ಘರ್ಜನೆ ಕೇಳಿಬಂದಲ್ಲಿಗೆ ಒಂದಷ್ಟು ಸೊಪ್ಪು ಹಾಕಿ ಅವನ್ನು ಶಾಂತಗೊಳಿಸುವ ಕಲೆಯನ್ನೂ ಕರಗತ ಮಾಡಿಕೊಳ್ಳಲು ಈ ಬೆಂಬಲ ಹಿಂತೆಗೆತ ಎಂಬ ನಾಟಕ ಪೂರಕವಾಗಿದೆ.

ಕಚ್ಚುವ ನಾಯಿ ಬೊಗಳುವುದಿಲ್ಲ ಎಂಬ ಧ್ಯೇಯವಾಕ್ಯವನ್ನು ಶಿರಸಾವಹಿಸಿ ಅನುಸರಿಸುತ್ತಿರುವ ಕೇಂದ್ರವು ಈ ನಾಟಕದ ಯಶಸ್ಸಿಗಾಗಿ ಈಗಾಗಲೇ ಪ್ರಜೆಗಳಿಗೆ ಮನೋವೇದನಾ ತೆರಿಗೆಯನ್ನು ಹೇರಿ ಭರ್ಜರಿ ಸಂಪಾದನೆಯನ್ನೂ ಆರಂಭಿಸಿದೆ. ಇನ್ನೆರಡು ವರ್ಷದಲ್ಲಿ ಬಾಕ್ಸಾಫೀಸ್‌ನಂತಿರುವ ಸರಕಾರಿ ಬೊಕ್ಕಸವು ಭರ್ಜರಿಯಾಗಿ ತುಂಬಿ ತುಂಬಿ, ಅಧಿಕಾರಸ್ಥರ ಜೇಬುಗಳಿಗೂ ತುಳುಕಾಡಲಿದೆ ಎಂದು ನಾಟಕ ವಿಮರ್ಶಕರು ಈಗಾಗಲೇ ಲೆಕ್ಕಾಚಾರ ಹಾಕಲಾರಂಭಿಸಿದ್ದಾರೆ.

Monday, September 03, 2007

ಬೆಲೆ ಹೊತ್ತ ಉಪದ್ರವ ಯಶಸ್ವಿ ಉಡ್ಡಯನ!

(ಬೊಗಳೂರು ಏರುತಿಹುದು... ಬ್ಯುರೋದಿಂದ)
ಬೊಗಳೂರು, ಸೆ.3- ಜಿಎಸ್ಎಲ್‌ವಿ ಉಪದ್ರವವನ್ನು ಉಡಾವಣೆ ಮಾಡಿದ್ದು ನಾನು, ತಾನು ಎಂದು ಹೇಳಿಕೊಳ್ಳುತ್ತಾ, ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳು ಹೊಡೆದಾಡಿಕೊಳ್ಳುವ ಹಂತಕ್ಕೆ ತಲುಪಿವೆ ಎಂದು ಬೊಗಳೂರು ಬ್ಯುರೋ ವರದಿ ಮಾಡಿದೆ.

ಭಾರತದ ಪ್ರಜೆಗಳ ಜೀವನಾವಶ್ಯಕ ವಸ್ತುಗಳ ಬೆಲೆಗಳನ್ನು ಹೊತ್ತ ಉಪದ್ರವವೊಂದನ್ನು ನಿನ್ನೆ ಶ್ರೀಹರಿ ಖೋತಾದಿಂದ ಬಾಹ್ಯಾಕಾಶಕ್ಕೆ ಹಾರಿಬಿಡಲಾಗಿತ್ತು. ಇದು ನಮ್ಮ ಸಾಧನೆ ಎಂದು ಅಜ್ಞಾನಿಗಳು ಹೇಳಿಕೊಳ್ಳತೊಡಗಿದ ಬೆನ್ನಿಗೇ ಕೇಂದ್ರ ಮತ್ತು ರಾಜ್ಯ ಸರಕಾರಗಳು ಏರುತಿಹುದು, ಹಾರುತಿಹುದು ನೋಡು ನಮ್ಮ ಬೆಲೆಗಳು... ಎನ್ನುತ್ತಾ "ನಮ್ಮದು" ಎಂಬುದನ್ನು ಒತ್ತಿ ಹೇಳುತ್ತಾ ಬೀದಿಗಿಳಿದಿವೆ.

ಉಪದ್ರವದ ಬಾಲಕ್ಕೆ ಬೆಲೆಗಳನ್ನು ಕಟ್ಟಿದ್ದು ನಾವೇ ಎಂದು ಕೇಂದ್ರವು ಹೇಳಿಕೊಳ್ಳತೊಡಗಿದ್ದರೆ, ನಾವು ಆ ಉಪದ್ರವದ ಮೂತಿಗೇ ಬೆಲೆಗಳನ್ನು ಕಟ್ಟಿದ್ದೇವೆ. ಅದೀಗ ಜನಸಾಮಾನ್ಯರ ಕೈಗೆ ಎಟುಕದಂತೆ ಮಾತ್ರವಲ್ಲದೆ ಕಣ್ಣಿಗೂ ಗೋಚರಿದಷ್ಟು ಮೇಲಕ್ಕೇರಿದ್ದು, ಬಾಹ್ಯಾಕಾಶದಲ್ಲಿ ರಾರಾಜಿಸುತ್ತಿದೆ ಎಂದು ಉಭಯ ಸರಕಾರಗಳೂ ಪೇಚಿಗೆ ಬಿದ್ದಂತೆ ಸಾರತೊಡಗಿವೆ.

ಈ ಮಧ್ಯೆ, ಬೆಲೆಗಳನ್ನು ಹೊತ್ತ ಉಪದ್ರವವು ಯಶಸ್ವಿಯಾಗಿ ತನ್ನ ಕಕ್ಷೆ ಸೇರಿರುವುದರಿಂದ ದೇಶದ ಬಡಪ್ರಧಾನಿ ಮತ್ತು ರಾಷ್ಟ್ರಪತಿಗಳು, ಬೆಲೆ ಏರಿಕೆಗೆ ಸಹಕರಿಸಿದ ಎಲ್ಲಾ ಅಜ್ಞಾನಿಗಳ ಸಾಧನೆಯನ್ನು ಪ್ರಶಂಸಿಸಿದ್ದಾರೆ.

ಬೆಲೆಗಳನ್ನು ಏರಿಸಿರುವುದರಿಂದ ದೇಶದ ಕೀರ್ತಿ ಪತಾಕೆಯು ಕೂಡ ಎತ್ತರೆತ್ತರದಲ್ಲಿ ಹಾರಾಡಲಿದೆ. ಜನಸಾಮಾನ್ಯರು ಇನ್ನು ಏರುತ್ತಿರುವ ಬೆಲೆಗಳ ಬಗ್ಗೆ ಚಿಂತೆಯೇ ಮಾಡಬೇಕಾಗಿಲ್ಲ. ಯಾಕೆಂದರೆ ಅದು ಇನ್ನು ಬರಿಗಣ್ಣಿಗೆ ಗೋಚರಿಸದಷ್ಟು ದೂರ ಹೋಗಿ ಆಗಿದೆ. ಇದು ನಮ್ಮ ಸರಕಾರದ ಸಾಧನೆ ಎಂದು ನಿಧಾನಮಂತ್ರಿಯವರು ತಮ್ಮ ಪಕ್ಷದ ಮುಖ್ಯಸ್ಥರಿಂದ ಅನುಮತಿ ಪಡೆದು ಹೇಳಿಕೆ ನೀಡಿದ್ದಾರೆ.

ಎಂಜಿನ್ ಇಲ್ಲದ ರೈಲು: ಬ್ರೇಕಿಂಗ್ ನ್ಯೂಸ್ ಅಲ್ಲವೆಂದ ಬೊ.ರ.

[ಬೊಗಳೂರು ಪಟ್ಟೆ-ರಹಿತ ರೈಲು ಬ್ಯುರೋ] ಬೊಗಳೂರು: ಆಫ್‌ಲೈನ್ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯೊಂದು ಆನ್‌ಲೈನ್ ಸಂಪಾದಕರ ಕಣ್ಣು ಕುಕ್ಕಿದ್ದು, ಎಂಜಿನ್ ಇಲ್ಲದೆ...