ಬೊಗಳೆ ರಗಳೆ

header ads

ಒದರಬಾರದೂಂತ ಸಂವಿಧಾನದಲ್ಲಿ ಹೇಳಿಲ್ಲ: ಕರುಣಾ

(ಬೊಗಳೂರು ಒದರೋ ಬ್ಯುರೋದಿಂದ)
ಬೊಗಳೂರು, ಸೆ.21- ತಾನು ಸುಳ್ಳು ಹೇಳಬಾರದು ಅಥವಾ ತನಗೆ ಓಟುಗಳನ್ನೇ ನೀಡದವರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ಮಾತುಗಳನ್ನು ಆಡಬಾರದು ಎಂದು ಭಾರತದ ಸಂವಿಧಾನದಲ್ಲಿ ತನ್ನನ್ನು ಉದ್ದೇಶಿಸಿ ಎಲ್ಲಿಯೂ ಬರೆದಿಲ್ಲ ಎಂದು ತಮಿಳುಕಾಡು ಅಮುಖ್ಯಮಂತ್ರಿಗಳು ಹೇಳಿದ್ದಾರೆ.

ರಾಮ ಮತ್ತು ರಾಮಾಯಣ ವಿಚಾರದಲ್ಲಿ ದೊಡ್ಡ ರಾಮಾಯಣವನ್ನೇ ಮಾಡುತ್ತಿರುವ ತಮಿಳುಕಾಡು "ದೊರೆ" ಕರುಣಾಕಿಡಿ ಅವರು ಬೊಗಳೂರಿನಲ್ಲಿ ಅವಸರದ ಪಾನಗೋಷ್ಠಿಯನ್ನು ಕರೆದು ಅಸತ್ಯಾನ್ವೇಷಿ ಎದುರು ಬಾಯಿಗೆ ಬಂದ ಮಾತುಗಳೆಲ್ಲವನ್ನೂ ಉದುರಿಸುತ್ತಿದ್ದರು. ಅಸತ್ಯಾನ್ವೇಷಿ ಕೈಯಲ್ಲಿ ಟವೆಲ್ ಇದ್ದ ಕಾರಣ ಬಚಾವ್ ಎಂದು ಸುರಕ್ಷಿತ ಅಂತರದಲ್ಲಿದ್ದುಕೊಂಡೇ ಇವೆಲ್ಲವನ್ನೂ ನೋಡುತ್ತಿದ್ದ ನಮ್ಮ ಬಾತ್ಮೀದಾರರು ವರದಿ ಮಾಡಿದ್ದಾರೆ.

ಬಾಯಿಗೆ ಬಂದದ್ದನ್ನು- ಅದು ಕೂಡ ಬುದ್ಧಿ ಇಲ್ಲದವರು- ಒದರಬಾರದು ಎಂದು ಭಾರತೀಯ ಸಂವಿಧಾನದ ಯಾವುದೇ ಪರಿಚ್ಛೇದದಲ್ಲಿ ತಿಳಿಸಿಲ್ಲ. ತನ್ನ ಮೂರ್ನಾಲ್ಕು ಹೆಂಡತಿಯರಲ್ಲೊಬ್ಬಳ ಮಗಳ ಮನೆಗೆ ಬೆಂಗಳೂರಿನಲ್ಲಿ ಹಾನಿ ಮಾಡಿದ್ದಾರೆ. ಅದೇನೂ ದೊಡ್ಡ ವಿಷಯವಲ್ಲ. ಇಂಥ ಹೇಳಿಕೆಗಳನ್ನು ನೀಡುತ್ತಲೇ ಇರುತ್ತೇನೆ ಮತ್ತು ತನ್ನ ಇಷ್ಟನೇ ಪತ್ನಿಯ ಇಂತಹ ಮಕ್ಕಳು ಇಂತಲ್ಲಿದ್ದಾರೆ ಎಂದು (ನನಗೇ ಗೊತ್ತಿಲ್ಲದಿದ್ದರೂ) ಪತ್ತೆ ಹಚ್ಚಿದವರು ಗಲಾಟೆ ಮಾಡುತ್ತಲೇ ಇರುವುದು ಸಾಮಾನ್ಯ ಎಂದು ಅವರು ಹೇಳಿದರು.

ಶ್ರೀರಾಮನು ಸೇತುವೆ ಕಟ್ಟಿಸಲು ಯಾವ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪಡೆದಿದ್ದಾನೆ ಅಂತ ನಾನು ಕೇಳಿದ್ದು ಹೌದು ಎಂದು ಒಪ್ಪಿಕೊಂಡ ಅವರು, ಈ ಹೇಳಿಕೆಗೆ ಆಕ್ಷೇಪ ಬಂದಿದೆ. ಹಾಗಾದರೆ ಶ್ರೀರಾಮ ಎಂಜಿನಿಯರಿಂಗ್ ಪದವಿ ಪೂರೈಸದೆಯೇ ಈ ಸೇತುವೆ ಕಟ್ಟಿಸಿದನೇ? ಅವನು ನನಗಿಂತಲೂ ಬುದ್ಧಿವಂತನಾಗಿದ್ದನೇ ಎಂದು ದಿವ್ಯ ಅಜ್ಞಾನದಿಂದ ಪ್ರಶ್ನಿಸಿ, ತಾವು ಸೇವಿಸಿದ "ತೀರ್ಥ"ವನ್ನು ಮೇಲೆ ನೋಡಿ ಉಗುಳುತ್ತಾ ತಮ್ಮ ಮೇಲೆಯೇ ಪವಿತ್ರ ಜಲ ಸಂಪ್ರೋಕ್ಷಣೆ ಮಾಡಿಸಿಕೊಂಡಿದ್ದಾರೆ.

ವಾಲ್ಮೀಕಿ ಬರೆದರೆ ಮಾತ್ರ ರಾಮಾಯಣ ಆಗುತ್ತದೆ. ನಾನೂ ಸಾಕಷ್ಟು ಕಥೆ ಬರೆದಿದ್ದೇನೆ. ಅದರಲ್ಲಿನ ಪಾತ್ರಗಳನ್ನು ಯಾರೂ ಪೂಜಿಸಿಲ್ಲ. ಓದಿದವರು ಮತ್ತೊಮ್ಮೆ ಓದುತ್ತಿಲ್ಲ ಎಂದು ವಿಷಾದಿಸಿದ ಅವರು, ರಾಮನಿಗೆ ಸೇತುವೆ ಕಟ್ಟಲು ಸಹಕರಿಸಿದವರ ಪಂಗಡದಲ್ಲಿ ತಾನೂ ಒಬ್ಬನಾಗಿದ್ದೆ, ಆ ಪಂಗಡದಿಂದ ತನ್ನನ್ನು ಹೊರಹಾಕಲಾಗಿತ್ತು ಎನ್ನುವುದನ್ನು ಮಾತ್ರ ಬಾಯಿಬಿಡಲಿಲ್ಲ.

ಇದೀಗ ತಮಿಳುಕಾಡು ಮುಖ್ಯಮಂತ್ರಿಯನ್ನು ಕೋರ್ಟಿಗೆ ದರದರನೆ ಎಳೆಯಲಾಗಿದೆ ಎಂದು ಇಲ್ಲಿ ವರದಿಯಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

4 ಕಾಮೆಂಟ್‌ಗಳು

  1. ಬೊಗಳಬಾರದು ಆಂತಾ ಸವಿ0ಧಾನದಲ್ಲಿ ಹೇಳಿಲ್ಲಾ
    ರಾಮನೀಲ್ಲ ,ಅದೋ0ದು ಪಾತ್ರವಷ್ಟೇ!!!!!!!
    ಅನ್ನೋ ಕರುಣಾ -ನಿಡನಿಗೆ 60 ನಲ್ಲಿ ಅರಳು ಮರಳು
    ಅನ್ನೋದನ್ನ ಅಪುರಾವೇ ಸಹಿತ ನಿರೂಪಿಸಿದ್ದಕ್ಕೆ, ರಾಮ ಪ್ರಶಸ್ತಿ

    ಪ್ರತ್ಯುತ್ತರಅಳಿಸಿ
  2. ವಾಲ್ಮೀಕಿ ಬರೆದ ದಿವ್ಯ ಚರಿತ್ರೆ ಆಯಿತು ರಾಮಾಯಣ;
    ಕರುಣಾಕಿಡಿ ಬರೆವ ಆತ್ಮಚರಿತ್ರೆ ಆಗುವದು ಹರಾಮಾಯಣ.

    ಪ್ರತ್ಯುತ್ತರಅಳಿಸಿ
  3. ಮಹಾಂತೇಶರೆ,
    ಅನ್ನವನ್ನೇ ತಿನ್ನಬೇಕು ಅಂತ ಕೂಡ ಸಂವಿಧಾನದಲ್ಲಿ ಹೇಳಿಲ್ಲಾಂತ ಕರುಣಾಕಿಡಿ ವಿರೋಧಿಗಳು ಒತ್ತಿ ಒತ್ತಿ ಹೇಳುತ್ತಿದ್ದಾರೆ.

    ಈ ಕಾರಣಕ್ಕೆ, ಬೊಗಳೂರು ಜನತೆ ಕೂಡ ಕರುಣಾಕಿಡಿಗೆ ಬೊಗಳುವ ಪ್ರಶಸ್ತಿ ನೀಡಲು ನಿರ್ಧರಿಸಿದೆ.

    ಪ್ರತ್ಯುತ್ತರಅಳಿಸಿ
  4. ಸುಧೀಂದ್ರರೆ,
    ಆತ್ಮ ಮತ್ತು ಜೀವ ಉಳ್ಳವರಿಗೆ ಮತ್ತು ಚಾರಿತ್ರ್ಯ ಇರುವವರಿಗೆ ಆತ್ಮಚರಿತ್ರೆ ಅಥವಾ ಜೀವನ ಚರಿತ್ರೆ ಇರುತ್ತದೆ. ಹಾಗಾಗಿ ಕರುಣಾಕಿಡಿಗೆ ಅದನ್ನು ಬರೆಯುವ ಪ್ರಮೇಯವೇ ಉದ್ಭವಿಸಲಾರದು.

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D