Tuesday, October 30, 2007

ಬೊಗಳೆ: ವಚನಭ್ರಷ್ಟ ಪದ ಕನ್ನಡದ್ದಲ್ಲ, ಸಂಸ್ಕೃತದ್ದು!

(ಬೊಗಳೂರು ಬೊಗಳೆ ಬೊಗಳೋ ಬ್ಯುರೋದಿಂದ)
ಬೊಗಳೂರು, ಅ.30- ಬೊಗಳೆ ಬ್ಯುರೋಗೆ ಸುದ್ದಿ ಮಾಡಲು ಯಾವುದೇ ವಿಷಯ ಸಿಗುತ್ತಿಲ್ಲ ಎಂದು ನಮ್ಮ ಏಕಸಿಬ್ಬಂದಿ ಬ್ಯುರೋದ ಎಲ್ಲರೂ ಸೇರಿಕೊಂಡು ಕರುನಾಟಕದಲ್ಲಿ ಅಲವತ್ತುಕೊಂಡ ಹಿನ್ನೆಲೆಯಲ್ಲಿ ಮಾಜಿ ಕಿಲಾಡಿ ಜೋಡಿಗಳಾದ ಗಮಾರಸ್ವಾಮಿ ಮತ್ತು ಬಿ.ಎಸ್.ಕುರ್ಚಿಯೂರಪ್ಪ ಅವರುಗಳು ಹೊಸ ಛೀಥೂ ನಾಟಕಕ್ಕೆ ಮುಂದಾಗಿರುವುದರಿಂದ, ರಾಜ್ಯದ ಪ್ರಜೆಗಳಿಗೆ ಪುಕ್ಕಟೆ ಮನರಂಜನೆಯೂ, ಬೊಗಳೆ ರಗಳೆಯ ಸಮಸ್ತ ಪ್ರಾಣಿಗಳಿಗೆ ಒಂದಿಷ್ಟು ಮೇವು ಕೂಡಾ ಲಭಿಸಿದೆ.

ಪ್ರಜೆಗಳ ದುರದೃಷ್ಟ ಮೇರೆ ಮೀರಿರುವ ರಾಜ್ಯದಲ್ಲಿ ಹೇಗಾದರೂ ಕುರ್ಚಿಯ ಮೇಲೆ ಕುಕ್ಕರಿಸಬೇಕೆಂಬ ಅವಕಾಶವಾದ ರಾಜಕಾರಣದ ಹೊಸ ವ್ಯಾಖ್ಯಾನ ಬರೆದಿರುವ ಉಭಯ ಹತಾಶ ನಾಯಕರನ್ನು ಬೊಗಳೆಗಾಗಿ ಸಂದರ್ಶಿಸಲಾಯಿತು.

ಅವರಿಬ್ಬರೂ ಬಹುತೇಕ ಒಂದೇ ರೀತಿಯ ಉತ್ತರ ನೀಡಿದ್ದು, ರಾಜಕೀಯವಾಗಿ ಬೇರೆ ಬೇರೆ ಪಕ್ಷದಲ್ಲಿದ್ದರೂ, ವ್ಯಕ್ತವಾದ ರಾಜಕಾರಣದ ದೃಷ್ಟಿಕೋನವನ್ನು ನೋಡಿದರೆ ಇಬ್ಬರೂ ಒಂದೇ ಪಕ್ಷದಲ್ಲಿರಬೇಕಿತ್ತು ಎಂಬುದನ್ನು ನಮ್ಮ ಬ್ಯುರೋ ಕಂಡುಕೊಂಡಿದೆ.

ಪ್ರಶ್ನೆ: ನಿಮಗೆ ನಾಚಿಕೆಯಾಗುವುದಿಲ್ಲವೇ?

ಉತ್ತರ: ಹ್ಹೆ ಹ್ಹೆ... ಏನ್ರೀ ನೀವು, ಬಹುಶಃ ಅಂಗನವಾಡಿ ಶಿಕ್ಷಣವನ್ನೂ ಪಡೆದಿಲ್ಲಾಂತ ಕಾಣುತ್ತೆ. ನಾಚಿಕೆ ಅಂದರೇನು ಎಂಬುದನ್ನು ನಮಗಂತೂ ಯಾವುದೇ ಮೇಷ್ಟ್ರು ಕೂಡ ಹೇಳಿಕೊಟ್ಟಿಲ್ಲ. ರಾಜಕೀಯಕ್ಕೆ ಸೇರಿದ್ರೆ ನಾಚ್ಕೆ, ಮಾನ, ಮರ್ಯಾದೆ ಎಲ್ಲಾ ಬಿಟ್ಟಿರಬೇಕಾಗುತ್ತೆ ಎಂಬುದು ಡೀಫಾಲ್ಟ್ ಆಗಿರೋ ಅಲಿಖಿತ ನಿಯಮ. ರಾಜಕಾರಣದಲ್ಲಿ ಏನಿದ್ದರೂ ನಾಚಿಕೆ ಬಿಟ್ಟೇ ಮಾಡಬೇಕು. ನಾಚಿಕೆ ಬಿಟ್ಟವನೇ ಊರಿಗೆ ದೊಡ್ಡವನು ಅಂತ ನಮ್ಮ ಕರುನಾಟಕದ ಪ್ರಜೆಗಳಿಗೆ ಸಾರಿ ಸಾರಿ ಹೇಳಬೇಕಾಗಿದೆ ಮತ್ತು ಅವರಿಗೆ ಅದನ್ನು ಮಾಡಿಯೂ ತೋರಿಸಬೇಕಾಗಿತ್ತು. ಇದಕ್ಕಾಗಿಯೇ ನಾವಿಬ್ಬರೂ ಮತ್ತೆ ಜತೆ ಸೇರಿದ್ದೇವೆ. ಇನ್ನು ಮುಂದೆ ನಮ್ಮ ಪ್ರಜೆಗಳಿಗೆ ನಾವು ನೀಡುವ ಬಹುದೊಡ್ಡ ಸಂದೇಶ ಇದೇ: ಏನೇ ಮಾಡಿ, ನಾಚ್ಕೆ ಬಿಡಿ!

ಪ್ರಶ್ನೆ: 20 ತಿಂಗಳ ಹಿಂದೆ ರಾಜಭವನದಲ್ಲಿ ಕಂಡುಬಂದ ವಾತಾವರಣವೇ ಮತ್ತೆ ಕಂಡುಬಂದಿದೆ. ವಿಶ್ವಾಸಘಾತಕರ ಅಲ್ಲಲ್ಲ... ಸಾರಿ, ಅದು ಬಾಯಿ ತಪ್ಪಿ ಬಂದ ಮಾತು... ಕ್ಷಮಿಸಿ... ವಿಶ್ವಾಸಭರಿತ ಶಾಸಕರ ಮುಖದಲ್ಲಿ ಅದೇನು ಕಳೆ, ಅದೇನು ನಗು... ಅದೇನು ಉತ್ಸಾಹ... ಇದಕ್ಕೇನು ಕಾರಣ?

ಉತ್ತರ: ಹೌದು, ಅಂದು ನಮ್ಮ ಗಮಾರನಿಗೆ ಮುಖ್ಯಮಂತ್ರಿಯಾಗಬೇಕಿತ್ತು. ಇಂದು ನಮಗೆ ಕುರ್ಚಿಯ ರುಚಿ ನೋಡಬೇಕಿದೆ. ಹಾಗಾಗಿ ಸ್ವಲ್ಪದಿನದ ವಿರಹ ವೇದನೆ ಎಲ್ಲಾ ಕಳೆದಿದೆ. ಕ್ಷಣಿಕ ಕೋಪ ಶಮನವಾಗಿದೆ. ಮತ್ತೆ ನಾವೆಲ್ಲಾ (ಕುರ್ಚಿಗಾಗಿ) ಒಂದುಗೂಡಿದ್ದೇವೆ. ಅದಕ್ಕೆ ಸಂತಸ ಪಡದೆ ದುಃಖ ವ್ಯಕ್ತಪಡಿಸಲಾಗುತ್ತದೆಯೇ? ಆವತ್ತು ನಮ್ಮ ಗಮಾರನ ಪ್ರೇಮ ವಿವಾಹಕ್ಕೆ ಅವರಪ್ಪ ಬಾಹ್ಯಾಡಂಬರದ ವಿರೋಧ ವ್ಯಕ್ತಪಡಿಸಿದ್ದರಿಂದಾಗಿ ಅವರು ಓಡಿ ಹೋಗಿ ಜೋಡಿಯಾಗಬೇಕಾಗಿತ್ತು. ಇಂದು ಪರಿಸ್ಥಿತಿ ಹಾಗಿಲ್ಲ, ನಾವು ಉಳಿಯಬೇಕಿದ್ದರೆ ಜೋಡಿಯಾಗಲೇಬೇಕು.

ಪ್ರಶ್ನೆ: ಜಡಿಯೋರಪ್ನೋರೇ, ವಚನಭ್ರಷ್ಟರೊಂದಿಗೆ ಮತ್ತೆ ಕೈಜೋಡಿಸುವ ಪ್ರಶ್ನೆಯೇ ಇಲ್ಲ ಅಂದಿದ್ದರಲ್ಲಾ?

ಉತ್ತರ: ನೋಡಿ... ಅಲ್ಲೇ ನೀವು ತಪ್ಪಿರುವುದು. ನಾವು ಹೇಳಿವುದು ಮತ್ತೆ ಕೈಜೋಡಿಸುವ ಪ್ರಶ್ನೆ ಇಲ್ಲ ಅಂತ ಮಾತ್ರ. ಆದರೆ ಉತ್ತರ ಇಲ್ಲ ಅಂತ ಎಲ್ಲಿಯೂ ಹೇಳಿಲ್ಲವಲ್ಲ. ಅದೆಲ್ಲಾ ಇರಲಿ... ವಚನಭ್ರಷ್ಟ, ವಿಶ್ವಾಸದ್ರೋಹ ಅಂದರೇನು? ನಂಗಂತೂ ಗೊತ್ತಿಲ್ಲ. ಆ ಶಬ್ದ ಕೇಳುವುದಕ್ಕೆ ಚೆನ್ನಾಗಿದೆ ಅಂತ ನಾವು ಹೇಳಿಬಿಟ್ಟೆವು. ಮತ್ತು ಅವೆರಡೂ ಕನ್ನಡ ಶಬ್ದಗಳಲ್ಲ. ಸಂಸ್ಕೃತದಿಂದ ಬಂದವು. ಕನ್ನಡದಲ್ಲಿ ಹೇಳಿದ್ದನ್ನು ಮಾತ್ರ ನೀವು ಪ್ರಶ್ನಿಸಬೇಕು. ಸಂಸ್ಕೃತದ ಉಸಾಬರಿ ನನಗೆ ಈಗ ಬೇಡ.

ಪ್ರಶ್ನೆ: ಗಮಾರರೇ, ಬೀಜೇಪಿ ಕೋಮುವಾದಿ ಪಕ್ಷ, ನಮ್ಮ ಪಕ್ಷದ ನಿರ್ನಾಮಕ್ಕೆ ಸಜ್ಜಾಗಿತ್ತು. ಅದಕ್ಕೆ ಅಧಿಕಾರ ಕೊಟ್ಟರೇ ರಾಜ್ಯವೇ ಹೊತ್ತಿ ಉರಿಯುತ್ತದೆ ಅಂತೆಲ್ಲಾ ಹೇಳಿದ್ದೀರಲ್ಲಾ?

ಉತ್ತರ: ಅದೊಂದು ದೊಡ್ಡ ಜೋಕ್. ನನಗೂ ಜೋಕ್ ಮಾಡಲು ಬರುತ್ತದೆ ಅಂತ ನೀವೆಲ್ಲಾ ತಿಳಿದುಕೊಳ್ಳಬೇಕು. ಹೇಗಿದ್ದರೂ ನಮ್ಮ ಅಪ್ಪನೇ ತಾನೇ ಮೊದಲ ಗುರುವು? ನಾವೂ ಕೋಮುವಾದಿಗಳೇ ಅಲ್ವಾ? ನಾವು ಅಲ್ಪಸಂಖ್ಯಾತರನ್ನು ಓಲೈಸುತ್ತೇವೆ, ಅವರು ಬಹು ಸಂಖ್ಯಾತರನ್ನು ಓಲೈಸುತ್ತಾರೆ. ಹಾಗಾಗಿ ಎಲ್ಲರೂ ಕೋಮುವಾದಿಗಳೇ ಆಗಿರುವಾಗ, ಅದನ್ನು "ದೂಷಣೆ" ಅಂತ ಕರೆಯೋದಾದ್ರೂ ಹೇಗೆ? ಅದು ನಾವು ನೀಡೋ ಸರ್ಟಿಫಿಕೆಟ್ ಅಂತ ತಿಳ್ಕೊಳಿ.

ಪ್ರಶ್ನೆ: ಜಡಿಯೋರಪ್ನೋರೇ, ಈ ಟ್ವೆಂಟಿ20 ನಾಟಕೀಯ ಪಂದ್ಯದಲ್ಲಿ ನೀವು ಇನ್ನಿಂಗ್ಸ್ ಪೂರ್ಣಗೊಳಿಸುವ ಭರವಸೆಯಿದೆಯೇ? ಅದೂ ಇದೂ ಕಾರಣ ಹೇಳಿ ಜೇಡಿಎಸ್ ನಿಮಗೆ ಕೈಕೊಟ್ಟು, ಕುರ್ಚಿಗೆ ಜೇಡಿ ಮಣ್ಣು ಹಚ್ಚಲಿದೆ ಎಂಬುದನ್ನು ನೀವೇಕೆ ನಂಬುವುದಿಲ್ಲ?

ಉತ್ತರ: ನಂಬಿಕೆಯೇ? ಛೆ, ಎಂಥ ಮಾತೂಂತ ಆಡ್ತಾ ಇದ್ದೀರಿ? ರಾಜಕಾರಣದಲ್ಲಿ ಯಾರೂ ಯಾರನ್ನೂ ನಂಬುವುದಿಲ್ಲ. ನಾನಂತೂ ನಾಲ್ಕು ಘಳಿಗೆಯಾದರೂ ಮುಖ್ಯಮಂತ್ರಿ ಆಗುತ್ತೇನಲ್ಲಾ... ಅದಕ್ಕಿಂತ ದೊಡ್ಡ ಭಾಗ್ಯ ಏನಿದೆ. ಟ್ವೆಂಟಿ ಮಂತ್ಸ್ ಅಧಿಕಾರ ನಡೆಸೋದು ನಂಗೇನೂ ಭರವಸೆಯಿಲ್ಲ,ಅವರು ವಚನಭ್ರಷ್ಟಶ್ರೇಷ್ಠ ರತ್ನ ಎಂಬ ಪ್ರಶಸ್ತಿಪಡೆದರೂ, ಅವರು ನಮಗೆ ಕೈಕೊಡುವುದು ಸಾಧ್ಯವಿಲ್ಲ. ಯಾಕೆಂದರೆ ಅವರೇ ಈ ಹಿಂದೆ ಕೊಟ್ಟಿದ್ದ ಕೈ ಎಂಬುದು ಕಾಂಗ್ರೆಸ್ ಬಳಿಯೇ ಇದೆ.

ಪ್ರಶ್ನೆ: ಕೊನೆಯದಾಗಿ ಒಂದು ಪ್ರಶ್ನೆ. ಏನೇ ಆದ್ರೂ ಅಪ್ಪ-ಮಗನ ಪಕ್ಷದ ಜತೆ ಸೇರಲಾರೆ, ಅವರು ಮಿತ್ರದ್ರೋಹ ಮಾಡಿದ್ದಕ್ಕೆ ಜನತೆಯ ಕ್ಷಮೆ ಕೇಳಬೇಕು ಅಂತೆಲ್ಲಾ ಹೇಳಿ, ಈಗ ದಿಢೀರ್ ಆಗಿ ಮತ್ತು ನಿಗೂಢ ಕಾರಣಕ್ಕೆ ನಿಮ್ಮ ಬೆಂಬಲಕ್ಕೆ ಬಂದಿದ್ದಾರೆ. ಹೀಗಿರುವಾಗ ಬಡ ರಾಜ್ಯದ ಪ್ರಜೆಗಳ ಗತಿಯೇನು?

ಉತ್ತರ: ಶಟಪ್... ಯಾರ್ರೀ ಆ ಪ್ರಜೆಗಳು? ನಮಗೆ ಓಟು ಕೊಡೋದಷ್ಟೇ ಅವರ ಕೆಲಸ. ಆನಂತ್ರ ತೆಪ್ಪಗೆ ಟಿಕೆಟ್ ತಗೊಂಡು ನಮ್ಮ ನಾಟಕ ನೋಡಿ ಮುಚ್ಕೊಂಡು ಕೂತಿರ್ಬೇಕು. ನಾವು ಏನು ಬೇಕಾದ್ರೂ ಮಾಡ್ತೀವಿ. ಪ್ರಜೆಗಳ ಹೆಸರನ್ನೇಕೆ ಇಲ್ಲಿ ತಂದು ನಮ್ಮ ಮೂಡ್ ಹಾಳು ಮಾಡುತ್ತೀರಿ. ಅವರು ಏನು ಬೇಕಾದ್ರೂ ಆಗಲಿ, ನಮಗೆ ಕುರ್ಚಿ ಮುಖ್ಯ. ಅವಕಾಶವಾದಿತನ ಎಂಬ ಪದದ ಅರ್ಥ ಎಲ್ಲ ಜನರಿಗೂ ತೋರಿಸ್ಕೊಡೋದು ಮುಖ್ಯ. ಅವರಿಗಂತೂ ಮತ್ತಷ್ಟು ದಿನ ಮನರಂಜನೆ ಕೊಡಿಸೋ ನಮ್ಮ ಬಹುದಿನಗಳ ಕನಸು ನನಸಾಗ್ತಾ ಇದೆ. ಸಂತಸಪಡಿ.

Sunday, October 28, 2007

ಮತ್ತೆ ಒಂದಾದ ಪ್ರೇಮವಿರಹಿಗಳ ಸಂದರ್ಶನ ನಿರೀಕ್ಷಿಸಿ!!!!

(ಬೊಗಳೂರು ವಿಷಯವಿಲ್ಲದ ಬ್ಯುರೋದಿಂದ)
ಬೊಗಳೆ ರಗಳೆ ಓದುಗರಿಗೆ ಓದಲು ಯಾವುದೇ ವಿಷಯ ದೊರಕುತ್ತಿಲ್ಲ ಎಂದು ಪರದಾಡುತ್ತಿದ್ದ ಬೊಗಳೆ ರಗಳೆ ಬ್ಯುರೋಗೆ ಹೊಸ ಸಾಂತ್ವನ ನೀಡುವ ನಿಟ್ಟಿನಲ್ಲಿ ಕರು-ನಾಟಕದಲ್ಲಿ ನಾಟಕದ ಹೊಸ ಅಧ್ಯಾಯ ತೆರೆದುಕೊಂಡಿದೆ.

ಅವಕಾಶವಾದಿತನ, ವಚನಭ್ರಷ್ಟತೆ, ಪ್ರೇಮ, ವಿರಹ, ಮತ್ತೆ ಒಂದಾಗುವುದು ಇತ್ಯಾದಿ ರಸವತ್ತಾದ, ಒಂಬತ್ತು ರಸಗಳೂ ಬಿಂಬಿಸುವ ಅದ್ಭುತ ಕಲಾ ಕಾಣಿಕೆ ನೀಡುತ್ತಿರುವ ಕರು-ನಾಟಕದ ಅಧಿಕಾರದಾಹಿಗಳ ವಿಶೇಷ ಸಂದರ್ಶನ ನಿಮ್ಮ ಬೊಗಳೆ ರಗಳೆಯಲ್ಲಿ ಮೂಡಿಬರಲಿದೆ.

ನಿಮ್ಮ ಪ್ರತಿಗಳನ್ನು ಇಂದೇ ಕಾದಿರಿಸಿ. ಕರು-ನಾಟಕದ ರಾಜಕೀಯದ ಪ್ರಭಾವದಿಂದಾಗಿ ನಾವು ಕೂಡ ಮಾತಿಗೆ ತಪ್ಪಿದರೆ ನಾವು ಖಂಡಿತವಾಗಿಯೂ ಜವಾಬ್ದಾರರಲ್ಲ ಎಂದು ಸ್ಪಷ್ಟಪಡಿಸುತ್ತಿದ್ದೇವೆ.

(ಬೀಜ-ಪೀ ಮತ್ತು ಜೇಡಿ-ಸುಗಳು ಪರಸ್ಪರರನ್ನು ದೂಷಿಸುತ್ತಾ ನಮ್ಮ ಪ್ರತಿಸ್ಪರ್ಧಿ ಪತ್ರಿಕೆಗಳಿಗೆ ಪುಟಗಟ್ಟಲೇ ಜಾಹೀರಾತು ನೀಡಿ, ಹಣ ಪೋಲು ಮಾಡಿದ್ದಾರೆ, ಬೊಗಳೆ ರಗಳೆ ಪತ್ರಿಕೆಗೆ ಮಾತ್ರ ಒಂದು ಕವಡೆಕಾಸಿನ, ಒಂದು ಗೆರೆಯ ಜಾಹೀರಾತನ್ನೂ ನೀಡಿಲ್ಲ. ಇದರಿಂದ ತೀವ್ರ ಆಕ್ರೋಶಗೊಂಡಿರುವ ಬ್ಯುರೋದ ಸೊಂಪಾದ ಕರು, ಈ ಕಪೋಲ ಕಲ್ಪಿತ ಆದರೆ Exclusive ಸಂದರ್ಶನವನ್ನು ಪ್ರಕಟಿಸಲು ನಿರ್ಧರಿಸಿದ್ದಾರೆ. ಓದುಗರು ತಾಳ್ಮೆ ವಹಿಸಬೇಕೆಂದು ಕೋರಲಾಗಿದೆ.)

Wednesday, October 24, 2007

ಗಾರ್ದಭ ಸಮುದಾಯ ಅವಸಾನವಾಗುತ್ತಿರುವುದೇಕೆ?

(ಬೊಗಳೂರು ಗಾರ್ದಭ ಬ್ಯುರೋದಿಂದ)
ಬೊಗಳೂರು, ಅ.24- ಬೊಗಳೆ ರಗಳೆಯ ಏಕಸದಸ್ಯ ಬ್ಯುರೋದ ಸಮಸ್ತ ಸಿಬ್ಬಂದಿಗಳು ಇನ್ನು ಮುಂದೆ ನಮ್ಮ ಪತ್ರಿಕೆಗೆ ಲಭ್ಯವಾಗುವುದು ಬಹುತೇಕ ಶಂಕಾಸ್ಪದವಾಗಿದೆ ಎಂದು ವರದಿಗಳು ತಿಳಿಸಿವೆ.

ಇದಕ್ಕೆ ಪ್ರಧಾನ ಕಾರಣವೆಂದರೆ ತಮ್ಮ ಪ್ರತಿಸ್ಪರ್ಧಿ ಪತ್ರಿಕೆಯು ಇಲ್ಲಿ ಪ್ರಕಟಿಸಿರುವ ವರದಿ.

ಗಾರ್ದಭ ಸಮಾಜದವರು (ಬೊಗಳೂರು ಬ್ಯುರೋ ನಿರ್ವಹಿಸುತ್ತಿರುವವರು ಅಂತ ತಪ್ಪು ತಿಳಿದುಕೊಳ್ಳಬೇಕಾಗಿಲ್ಲ) ಇತ್ತಿತ್ತಲಾಗಿ ಬೆಲೆ ಕಳೆದುಕೊಳ್ಳುತ್ತಿದ್ದಾರೆ, ಹಾಗಾಗಿ ಈ ಜಾತ್ರೆಯೂ ಆಕರ್ಷಣೆ ಕಳೆದುಕೊಳ್ಳುತ್ತಿದೆ ಎಂದು ಪತ್ರಿಕೆ ವರದಿ ಮಾಡಿದ್ದು, ಅದರ ವರದಿಯನ್ನು ಸುಳ್ಳಾಗಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸೊಂಪಾದ ಕರು ಸ್ಪಷ್ಟಪಡಿಸಿದ್ದಾರೆ.

ಮತ್ತು ಇದರ ಜತೆಗೇ ನಮ್ಮ ಕಟ್ಟಾ ಮತ್ತು ಬದ್ಧ ಪ್ರತಿಸ್ಪರ್ಧಿ ಪತ್ರಿಕೆಯೊಂದು ಸುದ್ದಿ ಪ್ರಕಟಿಸಿದೆ. ಅದೆಂದರೆ ಕತ್ತೆಗಳು ಗೂಟದ ಕಾರುಗಳಿಂದಾಗಿ ಅಸ್ತಿತ್ವ ಕಳೆದುಕೊಳ್ಳುತ್ತಿವೆ ಎಂಬುದು. ಇದು ಕೂಡ ಹಲವಾರು ಶಂಕೆಗಳಿಗೆ ಕಾರಣವಾಗಿದ್ದು, ಗೂಟದ ಕಾರುಗಳು ಕೂಡ ಎಲ್ಲಿ ಇರುತ್ತವೆ ಎಂಬುದನ್ನು ಪತ್ತೆ ಹಚ್ಚುವ ಯತ್ನ ನಡೆಯುತ್ತಿದೆ.

ಒಟ್ಟಿನಲ್ಲಿ ಕತ್ತೆಗಳ ಜಾತ್ರೆಯು ನಿಜವಾದ ಕತ್ತೆಗಳಿಲ್ಲದೆ ಸೊರಗುತ್ತಿದೆ. ಇದನ್ನು ಅರಿತುಕೊಂಡ ಬ್ಯುರೋ ಸಿಬ್ಬಂದಿಗಳೆಲ್ಲರೂ ಒಂದು ಚಕ್ಕಡಿಗಾಡಿಯಲ್ಲಿ ರಾಜಸ್ಥಾನಕ್ಕೆ ತೆರಳಿದ್ದಾರೆ ಮತ್ತು ಇನ್ನೂ ತೆರಳುತ್ತಿದ್ದಾರೆ.

ಅಲ್ಲಿಗೆ ಹೋದ ಬೊಗಳೂರು ಸಿಬ್ಬಂದಿ ತಮ್ಮ ಎಂದಿನ ಚಾಕಚಕ್ಯತೆಯ ತನಿಖಾ ಗುಣವನ್ನು ಬಚ್ಚಿಟ್ಟುಕೊಳ್ಳಲಾಗದೆ, ತಮ್ಮ ಸಂಶೋಧನೆ ಆರಂಭಿಸಿದ್ದರು. ಆದರೆ ಇದರಿಂದ ತಿಳಿದುಬಂದ ಅಂಶ ಮಾತ್ರ, ಕಕ್ಕಾಬಿಕ್ಕಿಯಾಗುವಷ್ಟು ಘೋರವಾಗಿತ್ತು.

ಅದೆಂದರೆ, ಈ ಜಾತ್ರೆಗಳಲ್ಲಿ ಸಾಕಷ್ಟು ಜನ ರಂಜಿಸುತ್ತಿದ್ದ ಗಾರ್ದಭ ಮಹಾಶಯರು ಇತ್ತೀಚೆಗೆ ಕರು-ನಾಟಕ ಸಂಘಕ್ಕೆ ವಲಸೆ ಹೋಗಿದ್ದು, ಅಲ್ಲಿನ ಸಕ್ರಿಯ ರಾಜಕಾರಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಜನರು ಹೇರುವ ಭಾರ ಹೊರುವ ಬದಲು, ಅವರಿಂದ ಓಟು ಪಡೆದು ಒಂದಷ್ಟು ಆಟ ಆಡಬಹುದಲ್ಲಾ ಎಂಬ ಕಾರಣಕ್ಕೆ ಅವುಗಳು ಮನರಂಜನೆಗಾಗಿ ಈ ರೀತಿಯಾಗಿ ವಲಸೆ ಹೋಗಿವೆ ಎಂಬುದನ್ನು ಪತ್ತೆ ಮಾಡಲಾಗಿದ್ದು, ಈ ಸುದ್ದಿ ಪತ್ತೆ ಹಚ್ಚಿದ್ದಕ್ಕಾಗಿ ಗಿನ್ನಿಸ್ ದಾಖಲೆಗಳ ಪುಸ್ತಕಕ್ಕೆ ಅರ್ಜಿ ಗುಜರಾಯಿಸಿ, ಇನ್‌ಫ್ಲುಯೆನ್ಸ್‌ಗಾಗಿ ಪರದಾಡಲಾಗುತ್ತಿದೆ.

Monday, October 22, 2007

ಪಕ್ಕದ್ಮನೇಲಿ ನಡೆಯೋದನ್ನ ನೋಡೋ ಉಪಕರಣ!

(ಬೊಗಳೂರು ಬೇಲಿ ಹಾರೋ ಬ್ಯುರೋದಿಂದ)
ಬೊಗಳೂರು, ಅ.22- ಮೋಟುಗೋಡೆಯಾಚೆ ಇಣುಕಿ ಏನು ನಡೆಯುತ್ತಿದೆಯೆಂದು ವೀಕ್ಷಿಸಲು ನೆರವಾಗುವ ಉಪಕರಣ ಸಂಶೋಧಿಸಲಾಗಿದೆ ಎಂಬ ವರದಿ ಇಲ್ಲಿ ಪ್ರಕಟವಾದ ತಕ್ಷಣವೇ ಅದರ ತಯಾರಕರು ನಾಪತ್ತೆಯಾಗಿದ್ದಾರೆ.

ಇದಕ್ಕೆ ಪ್ರಧಾನ ಕಾರಣವೆಂದರೆ, ಈ ಸುದ್ದಿ ಪ್ರಕಟವಾಗುವ ಮುಂಚೆಯೇ ಅದಕ್ಕೆ ಬೊಗಳೂರಿನಿಂದ ಭಾರೀ ಬೇಡಿಕೆ ಬಂದಿರುವುದು. ಪಕ್ಕದ ಮನೆಯಲ್ಲಿ ಏನು ನಡೀತಾ ಇದೆ, ಪಕ್ಕದ ಕೋಣೆಯಲ್ಲಿ ಏನು ನಡೀತಾ ಇದೆ ಎಂಬುದನ್ನು ತಿಳಿದುಕೊಳ್ಳಬಹುದೆಂಬ ಈ ಬಹೂಪಯೋಗಿ ಯಂತ್ರವನ್ನು ನಮಗೆ ಕೊಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆಗಳು ಸಾಕಷ್ಟು ಬಂದಿವೆ ಎಂದು ತಿಳಿದುಬಂದಿದೆ.

ಪಕ್ಕದ ಮನೆಯಲ್ಲಿ ಬಂದ ಟಿವಿಯ ಅಗಲ ಎಷ್ಟು, ಸೀರೆಯ ಬಣ್ಣ ಯಾವುದು, ಏನು ತಿಂಡಿ ಮಾಡುತ್ತಿದ್ದಾರೆ, ಅವರು ತಂದಿರೋ ಒಡವೆ ನಿಜಕ್ಕೂ ಬಂಗಾರದ್ದೇ ಅಥವಾ ಗಿಲೀಟಿನದ್ದೇ? ಎಂಬಿತ್ಯಾದಿ ತಿಳಿದುಕೊಳ್ಳಲು ಅನುಕೂಲವಾಗುತ್ತದೆ ಎಂಬ ಕಾರಣಕ್ಕೆ ಬೊಗಳೂರಿನ ಗೃಹಿಣಿಯರು ಒಂದು ಕಡೆಯಿಂದ ಧಮಕಿ ನೀಡಲಾರಂಭಿಸಿದ್ದಾರೆಂದು ಪತ್ತೆಯಾಗಿದೆ.

ಇನ್ನೊಂದು ಕಡೆಯಿಂದ ಪೋಲಿ ಹುಡುಗರಿಂದಲೂ ಸಾಕಷ್ಟು "ಧಮಕಿ ಭರಿತ ಬೇಡಿಕೆ"ಗಳು ಬಂದಿದ್ದು, ಪಕ್ಕದ ಮನೆಯಲ್ಲಿರೋರು ಏನು ಮಾಡ್ತಾರೆ, ಬೇಲಿಯಾಚೆ ಹಾರೋದು ಹೇಗೆ, ಕಂಪೌಂಡಿನಾಚೆ ಯಾರು ಎಷ್ಟು ಹೊತ್ತಿಗೆ ಬರುತ್ತಾರೆ ಎಂಬುದನ್ನು ತಿಳಿದುಕೊಳ್ಳುವುದಕ್ಕಾಗಿ ಈ ಬೇಡಿಕೆಗಳನ್ನು ಸಲ್ಲಿಸಿದ್ದಾರೆ.

ಮತ್ತೊಂದೆಡೆಯಿಂದ ಕನ್ಯಾಪಿತರು ಕೂಡ ಇದಕ್ಕಾಗಿ ಅರ್ಜಿ ಗುಜರಾಯಿಸಿದ್ದಾರೆ. ಪಕ್ಕದ್ಮನೆ ಹುಡುಗ ನಮ್ಮನೆ ಹುಡ್ಗಿ ಜತೆ ಗೋಡೆಯಾಚೆ ನಿಂತು ಏನು ಮಾತಾಡುತ್ತಾನೆ, ಏನು ಮಾಡುತ್ತಾನೆ ಎಂದೆಲ್ಲಾ ನೋಡುವುದಕ್ಕಾಗಿ ಹೇಳಿ ಮಾಡಿಸಿದಂತಿರುವ ಈ ಯಂತ್ರವನ್ನು ಹಣ ಎಷ್ಟೇ ಆಗಲಿ, ಕೊಡದಿದ್ದರೆ ಸಾಯಿಸಿ ಬಿಡುವುದಾಗಿ ಅವರೇ ಈ ಸಂಶೋಧಕರಿಗೆ ಬೆದರಿಕೆಯೊಡ್ಡಿದವರು ಎಂದು ತಿಳಿದುಬಂದಿದೆ.

Thursday, October 18, 2007

ವಿಧಿವಿಧಾನಸೌಧ ಖಾಲಿ ಖಾಲಿಯಾಗಲಿದೆ!

(ಬೊಗಳೂರು ಟಾಯ್ಲೆಟ್ ಕ್ಲೀನಿಂಗ್ ಬ್ಯುರೋದಿಂದ)
ಬೊಗಳೂರು, ಅ.18- ಈ ತಿಂಗಳಾಂತ್ಯದಲ್ಲಿ ಬೊಗಳೂರಿನ ವಿಧಾನಸೌಧದಿಂದ ಹಲವಾರು ಮಂದಿ ನಾಪತ್ತೆಯಾಗಲಿದ್ದಾರೆ ಎಂದು ಬೊಗಳೂರು ಬ್ಯುರೋ ಭವಿಷ್ಯ ನುಡಿಯುತ್ತಿದೆ.

ಇದಕ್ಕೆ ಕಾರಣ, ರಾಜ್ಯದಲ್ಲಿ ಕೊಳೆತು ನಾರುತ್ತಿರುವ ರಾಜಕೀಯವೇ ಆಗಿದೆ. ಇದರಲ್ಲಿ ಪಾಲ್ಗೊಂಡು ಅನುಭವವಿರುವವರೆಲ್ಲರೂ ವಿಶ್ವಮಟ್ಟದಲ್ಲಿ ತಮ್ಮ ಕಲಾಪ್ರದರ್ಶನ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಗಬ್ಬುನಾತ ರಾಜಕೀಯದಲ್ಲಿ ಪಳಗಿದವರೆಲ್ಲರೂ ದಿಲ್ಲಿಯಾತ್ರೆ ಕೈಗೊಳ್ಳುತ್ತಿರುವ ಕಾರಣವನ್ನು ಈ ವರದಿಯ ಕೊನೆಯಲ್ಲಿ ನೀಡಲಾಗುತ್ತದೆ. ಈ ದಿಲ್ಲಿ ಯಾತ್ರೆ ಕೈಗೊಂಡಲ್ಲಿ ತಾವು ಮಾಡಿದ, ಮಾಡುತ್ತಿರುವ, ಮಾಡಲಿರುವ ಪಾಪಗಳೆಲ್ಲವೂ ಕೂಪಗಳಲ್ಲಿ ತೊಳೆದು ಹೋಗುತ್ತದೆ, ಇದರಿಂದ ಮತ್ತಷ್ಟು ಪಾಪ ಮಾಡಲು ಶಕ್ತಿ ಬರಲಿದೆ ಎಂಬುದು ಈ ಜಾರಕಾರಣಿಗಳ ಒಕ್ಕೊರಲ ಅಭಿಪ್ರಾಯ.

ಕೊಳಚೆ ಮೇಲೆ ಬಿದ್ದು ಹೊರಳಾಡುವುದು ಹೇಗೆ, ಕೆಸರು ಎರಚುವುದು ಹೇಗೆ, ಇನ್ನೇನು ಮತ್ತೊಬ್ಬರು ಟಾಯ್ಲೆಟ್ ಮೇಲೆ ಕೂರುತ್ತಾರೆ ಎಂದಾದಾಗ ಅವರ ಕಾಲು ಹಿಡಿದೆಳೆಯುವುದು ಹೇಗೆ ಎಂಬಿತ್ಯಾದಿ ವಿಧಿ ವಿಧಾನಗಳ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ನಡೆಯಲಿದ್ದು, ಪ್ರಾತ್ಯಕ್ಷಿಕೆಗಾಗಿಯೇ ಈ ಮಂದಿಯನ್ನು ಅಲ್ಲಿಗೆ ಕರೆಸಲಾಗಿದೆ ಎಂದು ಏನೂ ಹೇಳಲೊಲ್ಲದ ಮೂಲಗಳು ತಿಳಿಸಿವೆ.

ಇಲ್ಲಿ ಪ್ರಾತ್ಯಕ್ಷಿಕೆಯಲ್ಲಿ ಅವರು ಕ್ಲೀನ್ ಮಾಡುವುದು ಹೇಗೆ ಎಂಬುದನ್ನು ತೋರಿಸುತ್ತಾರೋ ಅಥವಾ ಅವರನ್ನೇ ಕ್ಲೀನ್ ಮಾಡಬೇಕಾದ ಅನಿವಾರ್ಯತೆ ಎದುರಾಗುತ್ತದೆಯೋ ಎಂಬ ಬಗ್ಗೆ ಖಚಿತ ಮಾಹಿತಿಗಳು ಲಭ್ಯವಾಗಿಲ್ಲ. ಆದರೂ ನಮ್ಮ ಬ್ಯುರೋ ವರದಿಗಾರರು ಇದನ್ನು ಪತ್ತೆ ಹಚ್ಚಲು ಪರದಾಡುತ್ತಿದ್ದಾರೆ.

ಈ ನಾಲ್ಕು ದಿನಗಳ "ಟಾಯ್ಲೆಟ್ ಕ್ಲೀನ್ ಮಾಡುವುದು ಹೇಗೆ" ಎಂಬ ಕುರಿತ ಅಂತಾರಾಷ್ಟ್ರೀಯ ವಿಚಾರ ಸಂಕಿರಣವು ಗಬ್ಬು ರಾಜಕೀಯದ ಪ್ರಧಾನ ಕೇಂದ್ರವಾಗಿರುವ ದಿಲ್ಲಿಯಲ್ಲೇ ಅಕ್ಟೋಬರ್ 31ರಿಂದ ನಡೆಯಲಿದೆ ಎಂಬುದೇ ಈ ಮಂದಿಯ ದಿಲ್ಲಿ ಯಾತ್ರೆಗೆ ಕಾರಣ ಎಂದು ಹೇಳಿ ನಮ್ಮ ಎರಡು ಮಾತುಗಳನ್ನು ಕೊನೆಗೊಳಿಸುತ್ತೇವೆ.

ಧನ್ಯವಾದ.

Monday, October 15, 2007

ಸಂಸದರ ಸಂಖ್ಯಾ 'ಸ್ಫೋಟ'ಕ್ಕೆ ತಡೆ

(ಬೊಗಳೂರು 'ಪಾಪ'ದ ಬ್ಯುರೋದಿಂದ)
ಬೊಗಳೂರು, ಅ.15- ಪಾಕಿಸ್ತಾನ ಸಂಸತ್ತಿನಲ್ಲಿ ವಿಶಿಷ್ಟ ಬಾಂಬ್ ಸ್ಫೋಟಗೊಂಡು ನೂರಾರು ಮಂದಿ ಸಂಸದರು ಚಿಂತಾಜನಕವಾಗಿ ನೊಂದು ಅರೆಬೆಂದಿದ್ದಾರೆ.

ಜನಸಂಖ್ಯಾ ಸ್ಫೋಟವನ್ನು ತಡೆಗಟ್ಟುವ ನಿಟ್ಟಿನಲ್ಲಿ, ಪಾಕಿಸ್ತಾನದ ಸಂಸದರಿದ್ದ ತಾಣದಲ್ಲಿಯೇ ಈ ಕಾಂಡೋ ಬಾಂಬ್ ಸ್ಫೋಟಗೊಂಡಿರುವುದು ಹಲವಾರು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ.

ಪಾಪ ಮಾಡಿದರೆ ದೇಶಾದ್ಯಂತ ಸಾಕಷ್ಟು ಸಂಖ್ಯೆಯಲ್ಲಿ ಪಾಪು ಆಗುತ್ತವೆ ಎಂಬುದರ ಅರಿವಿದ್ದರೂ, ಈ ಪುರುಷ ಪುಂಗವರು ತಮಗೆ ನೀಡಲಾದ ಕಾಂಡೋಂಗಳನ್ನು ಹಿಡಿದುಕೊಂಡು ಸ್ಪೀಕರ್ ಕಚೇರಿಗೆ ಹೊಕ್ಕಿದ್ದಾರೆ. ಹಾಗಂತ ಸ್ಪೀಕರ್ ಅವರೂ ಪುರುಷಪುಂಗವರೇ. ಆದರೆ ಈ ಸಂಸದರೆಲ್ಲಾ ಹೋಗಿದ್ದು ದೂರು ನೀಡುವುದಕ್ಕಾಗಿಯೇ ಹೊರತು ಬೇರೆ ಯಾವುದೇ ದುರುದ್ದೇಶ ಹೊಂದಿಲ್ಲ ಅಥವಾ ಅನ್ಯಥಾ ಭಾವಿಸಬೇಕಾಗಿಲ್ಲ.

ಈ ಮಧ್ಯೆ, ಮಹಿಳಾ ಸಂಸದರಿಗೆ ಇದನ್ನು ಕೊಟ್ಟಿಲ್ಲದಿರುವುದರಿಂದ ಪುರುಷಪುಂಗವ ಸಂಸದರು ರೊಚ್ಚಿಗೆದ್ದಿದ್ದಾರೆ ಎಂದು ತಿಳಿದುಬಂದಿದ್ದರೂ, ಸರಕಾರವು "ಉನ್ನತ ಮಟ್ಟ"ದಲ್ಲೇ ಜನಸಂಖ್ಯಾ ಸ್ಫೋಟ ತಡೆಯುವ ನಿಟ್ಟಿನಲ್ಲಿ ಈ ಹೆಜ್ಜೆ ಇರಿಸಿದೆ ಎಂಬ ಸ್ಪಷ್ಟನೆ ನೀಡಿರುವುದು ಈ ಸಂಸದರ ನೈತಿಕತೆಯ ಮೇಲೆ ಪ್ರಶ್ನಾರ್ಥಕ ಚಿಹ್ನೆ ಇರಿಸಿದಂತಾಗಿದೆ.

ಆದರೆ ಕೆಲವು ಸಂಸದರು ಮಾತ್ರ, ಈ ಕಾಂಡೋಂ ಇದ್ದರೆ ತಮಗಿನ್ನು ಕೆಟ್ಟ ಹೆಸರು ಬರಲಾರದು ಎಂದುಕೊಂಡು, ಅದನ್ನು ತೆಗೆದುಕೊಂಡು ಮನೆಗಳಿಗೆ ಹೊರಟಿದ್ದಾರೆ. ಯಾವ ಮನೆಗಳಿಗೆ, ಯಾರ ಮನೆಗಳಿಗೆ ಎಂಬ ಪ್ರಶ್ನೆ ಅಗತ್ಯವಿಲ್ಲ. ಆದರೆ ಕೆಲವರು ತಮ್ಮ ತಮ್ಮ ಮನೆಗಳಿಗೆ ಮಾತ್ರವೇ ಅವುಗಳನ್ನು ಕೊಂಡೊಯ್ದಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿದ್ದು, ಉಳಿದವರು ಎಲ್ಲಿಗೆ ಕೊಂಡೊಯ್ದರು ಎಂಬುದರ ಬಗ್ಗೆ ಏನನ್ನೂ ತಿಳಿಸಿಲ್ಲ.

ಮತ್ತೆ ಕೆಲವು ಸಂಸದರು ಎಲ್ಲಿ ಹೋದರೆಂಬುದೇ ಇನ್ನೂ ಪತ್ತೆಯಾಗಿಲ್ಲ ಎಂದು ಒಲ್ಲದ ಮೂಲಗಳು ಹೇಳಿವೆ.

Friday, October 12, 2007

ರಾಜ್ಯ ನಾಟಕದ ಆನಿಮೇಶನ್ ಸೀರೀಸ್!

(ಬೊಗಳೂರು ನಾಟಕ ಮಂಡಳಿ ಬ್ಯುರೋದಿಂದ)
ಬೊಗಳೂರು, ಅ.12- ರಾಜ್ಯ ನಾಟಕರಂಗದಲ್ಲಿ ಇದೀಗ ನಡೆಯುತ್ತಿರುವ ನಾಟಕೀಯ ದೃಶ್ಯಾವಳಿಗಳನ್ನು ಆನಿಮೇಶನ್ ಸೀರೀಸ್‌ನಲ್ಲಿ ಪ್ರಕಟಿಸಲು ಕೇಂದ್ರೀಯ ನಾಟಕ ಕಂಪನಿ ನಿರ್ಧರಿಸಿದೆ.

ರಾಜ್ಯದಲ್ಲಿ ಕುದುರೆಗಳು ಸಾಕಷ್ಟಿವೆ. ಅವುಗಳ ಭರ್ಜರಿ ಮಾರಾಟವಾಗಬೇಕಿದೆ. ಕೆಲವು ಕತ್ತೆಗಳು ಕೂಡ ಕುದುರೆ ರೂಪದಲ್ಲಿ ಕಾರ್ಯಾಚರಿಸುತ್ತಿರುತ್ತವೆ. ಆದರೂ ಈ ಎಲ್ಲಾ ಕುದುರೆಗಳ ವ್ಯಾಪಾರಕ್ಕೆ ಅನುಕೂಲವಾಗುವಂತೆ ಈ ಆನಿಮೇಶನ್ ಸೀರೀಸ್ ಪ್ರಕಟಿಸಲಾಗುತ್ತದೆ ಎಂದು ಕಾಂಗ್ರೆಸ್ ಕೃಪಾಪೋಷಿತ ಕೇಂದ್ರೀಯ ನಾಟಕ ಕಂಪನಿ ಯುಪಿಎ ತಿಳಿಸಿದೆ.

ಈ ಕುದುರೆ ವ್ಯವಹಾರವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕರುನಾಟಕದ ನಾಟಕ ಕಂಪನಿಗಳ ನಾಟಕಗಳನ್ನು Suspended Animation ಸರಣಿಯಲ್ಲಿ ಪ್ರಕಟಿಸಲಾಗುವುದು ಎಂದು ಏನೂ ಬಲ್ಲದ ಮೂಲಗಳು ಬೊಗಳೆ ರಗಳೆಗೆ ತಿಳಿಸಿವೆ.

Wednesday, October 10, 2007

ಬೊಗಳೆಗೆ ಸೆಡ್ಡುಹೊಡೆಯುವ ಜಾರಕಾರಣಿಗಳು!

(ಬೊಗಳೂರು ವಚನಭ್ರಷ್ಟ ಬ್ಯುರೋದಿಂದ)
ಬೊಗಳೂರು, ಅ.10- ರಾಜಕಾರಣಿಗಳ ಯಾವುದೇ ಹೇಳಿಕೆಗಳು ಬೊಗಳೆ ರಗಳೆಗೆ ಮಾತ್ರವೇ ಮೀಸಲಾಗಿದ್ದ ಒಂದು ಕಾಲವಿತ್ತು. ಆದರೆ ಈಗ ಅವರ ಪ್ರತಿಯೊಂದು ಹೇಳಿಕೆಗಳು ಕೂಡಾ ನಮ್ಮ ವಿರೋಧೀ ಪತ್ರಿಕೆಗಳಲ್ಲಿಯೂ ಪ್ರಕಟವಾಗುತ್ತಿರುವುದು ಎರಡ್ಮೂರು ಇದ್ದ ಬೊಗಳೆ ರಗಳೆಯ ಪ್ರಸಾರ ಸಂಖ್ಯೆಯನ್ನು ಒಂದಕ್ಕೆ ಇಳಿಸುವ ತಂತ್ರ ಎಂದು ಕೂಡ ವಿಶ್ಲೇಷಿಸಲಾಗುತ್ತಿದೆ.

ಇದೀಗ ರಾಜಕಾರಣಿಗಳು ನೀಡುವ ಪ್ರತಿಯೊಂದು ಹೇಳಿಕೆಯನ್ನೂ ವಿರೋಧಿ ಪತ್ರಿಕೆಗಳು ಪ್ರಕಟಿಸುತ್ತಿವೆ (ಪ್ರಕಟಿಸದೆ ಅವುಗಳಿಗೆ ವಿಧಿಯಿಲ್ಲ). ಅವುಗಳ ಓದುಗರೂ ಮನರಂಜನೆ ಅನುಭವಿಸುತ್ತಿರುವುದರಿಂದ ಬೊಗಳೆ ರಗಳೆ ಅಪಪ್ರಚಾರ ಸಂಖ್ಯೆಯು ದಯನೀಯವಾಗಿ ಕುಸಿಯತೊಡಗಿದೆ ಎಂದು ಈ ಸಂದರ್ಭ ತಿಳಿದುಬಂದಿದೆ.

ಹಾಗಾಗಿ ರಾಜಕಾರಣಿಗಳ ಹೇಳಿಕೆ ಬೊಗಳೆ ರಗಳೆಗೆ ಮಾತ್ರ ಸೀಮಿತ ಎಂದು ಒತ್ತಿ ಒತ್ತಿ ಹೇಳುತ್ತಿದ್ದೇವೆ. ಇನ್ನು ಮುಂದಾದರೂ ವಿರೋಧಿ ಪತ್ರಿಕೆಗಳು ಈ ಬಗ್ಗೆ ಗಮನ ಹರಿಸದಿದ್ದಲ್ಲಿ, ಅವುಗಳನ್ನು ಓದುವವರಲ್ಲಿ ನಮ್ಮ ಬ್ಯುರೋ ಮಾತೇ ಆಡುವುದಿಲ್ಲ ಎಂದು ಸ್ಪಷ್ಟಪಡಿಸಲಾಗುತ್ತಿದೆ.

ಅದಿರಲಿ... ವಿಷಕ್ಕೆ ಬರೋಣ, ಮಹಾಭಾರತದ ಕೃಷ್ಣನನ್ನು ಉಲ್ಲೇಖಿಸಿ ರಾಜ್ಯದಲ್ಲಿ ಅಧಿಕಾರ ತ್ಯಾಗ ಮಾಡಿ ಪಕ್ಷವನ್ನು ಬಲಿದಾನ ಮಾಡಿದ ನಿರ್ಗಮನ ಮುಖ್ಯಮಂತ್ರಿಯವರು, ಮಹಾಭಾರತದ ಕೃಷ್ಣನೂ ಸುಳ್ಳು ಹೇಳಲಿಲ್ಲವೇ? ನಾನೂ ಸುಳ್ಳು ಹೇಳಿದರೆ ತಪ್ಪೇನು ಎಂಬ ಒಂದು ಸತ್ಯಾಂಶವುಳ್ಳ ಪ್ರಶ್ನೆಯನ್ನು ಮುಂದಿಟ್ಟಿದ್ದರು. ರಾಜಕಾರಣಿಗಳ ಬಾಯಲ್ಲೂ ಇಂಥ ಸತ್ಯವಾಕ್ಯಗಳು ಬರುತ್ತಿದೆ ಎಂದರೆ ಅದು ಕಲಿಯುಗದ ಮಹಾತ್ಮೆಯೇ ಇರಬೇಕು ಎಂದು ವಿಶ್ಲೇಷಿಸಲಾಗಿದೆ.

ಇದುವರೆಗೆ ಬೊಗಳೆ ರಗಳೆಯಲ್ಲಿ ಪ್ರಕಟವಾಗುತ್ತಿದ್ದ ವದರಿಗಳೆಲ್ಲವನ್ನೂ ಕನಿಷ್ಠ ಪಕ್ಷ ಒಬ್ಬರಾದರೂ ನಂಬುತ್ತಿರಲಿಲ್ಲ. ಆದರೆ ಈಗ ಎಲ್ಲರೂ ನಂಬಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಅದಕ್ಕೆ ಪ್ರತಿಯಾಗಿ, ನಮ್ಮ ವಿರೋಧಿ ಪತ್ರಿಕೆಗಳಲ್ಲಿಯೂ ರಾಜಕಾರಣಿಗಳು ಹೇಳುವ ಅಸತ್ಯಗಳ ಅಣಿಮುತ್ತುಗಳು ಹೆಚ್ಚು ಹೆಚ್ಚು ಪ್ರಕಟವಾಗತೊಡಗಿವೆ. ಇದರಿಂದ ಬೊಗಳೆ ರಗಳೆ ಪತ್ರಿಕೆಯ ಪ್ರಸಾರ ವಿಭಾಗವು ಭಯಭೀತವಾಗಿದೆ.

ಶ್ರೀ ಕೃಷ್ಣನು ಜಗದೋದ್ಧಾರದ ಉದ್ದೇಶದಿಂದ ಸುಳ್ಳು ಹೇಳುವಂತಹ ಪ್ರಸಂಗಗಳನ್ನು ಸೃಷ್ಟಿಸಿದ್ದರೆ, ಇದು ಆಧುನಿಕ ಯುಗ ಮತ್ತು ರಾಜಕೀಯ ಆಗಿರುವುದರಿಂದಾಗಿ ಈ ಆಧುನಿಕ ಕೃಷ್ಣ ಏನು ಹೇಳಿದರೂ ಅದು ಸುಳ್ಳೇ ಆಗುತ್ತಿರುವುದು ವಿಶೇಷ. ನಾನು ನಾಡಿನ ಉದ್ಧಾರ ಮಾಡುತ್ತೇನೆ, ಮಣ್ಣಿನ ಮಗನನ್ನು ಮಣ್ಣಿನಿಂದ ಮೇಲೆತ್ತುತ್ತೇನೆ, ಅ.3ರಂದು ಅಧಿಕಾರವನ್ನು ಪಾಂಡವರಿಗೆ ಬಿಟ್ಟುಕೊಡುತ್ತೇನೆ, ಎಂದೆಲ್ಲಾ ಹೇಳಿದ ಬಳಿಕ, ಈ ಎಲ್ಲಾ ಸತ್ಯಗಳ ತಲೆ ಮೇಲೆ ಹೊಡೆಯುವಂತೆ "ಕೊಟ್ಟ ಮಾತಿಗೆ ತಪ್ಪುವವನಲ್ಲ" ಎಂದೂ ಸೇರಿಸಿಬಿಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.

ರಾಜಕಾರಣಿಗಳು ಹೇಳುವ ಮಾತುಗಳೆಲ್ಲವೂ ಬೊಗಳೆ ರಗಳೆಗೆ ಮಾತ್ರವೇ ಸೀಮಿತವಾಗುತ್ತದೆ ಎಂಬುದು ಈ ದೊಡ್ಡ ದೊಡ್ಡ ಪತ್ರಿಕೆಗಳಿಗೆ ಯಾಕೆ ಅರ್ಥವಾಗುವುದಿಲ್ಲ? ಎಂಬ ಕಗ್ಗಂಟನ್ನು ಬಿಡಿಸಲು ಬೊಗಳೆ ರಗಳೆಯ ಏಕ ಸದಸ್ಯ ಬ್ಯುರೋದಲ್ಲಿರುವ ಸಮಸ್ತ ಸಿಬ್ಬಂದಿಗಳು ಕೆಲವು ದಿನಗಳಿಂದ ಹೆಣ-ಗಾಡುತ್ತಿದ್ದಾರೆ.

ಹಾಗಾಗಿ, ಅಡಿಗೆ ಬಿದ್ದರೂ ಮೂಗು ಮೇಲೆ ಮಾಡಿಕೊಂಡಿರುವ ಬೊಗಳೆ ರಗಳೆ ಬ್ಯುರೋ, ಇದೀಗ "ವಚನಭ್ರಷ್ಟ-ಶ್ರೇಷ್ಠ" ಎಂಬ ವಿನೂತನ ಪ್ರಶಸ್ತಿಯನ್ನು ನೀಡಲು ತೀರ್ಮಾನಿಸಿದ್ದು, ಅದಕ್ಕೆ ಓದುಗರು ಅರ್ಹರ ಹೆಸರನ್ನು ಸೂಚಿಸಬಹುದು. ಆದರೆ ಈ ಪ್ರಶಸ್ತಿಗೆ ಬೊಗಳೆ ರಗಳೆಯನ್ನಾಗಲಿ, ಅಸತ್ಯಾನ್ವೇಷಿಯನ್ನಾಗಲಿ ಪರಿಗಣಿಸಿ ಹೆಸರು ಸೂಚಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.

Sunday, October 07, 2007

ಬೊಗಳೆಗೆ ಅತ್ಯುತ್ತಮ ವರದಿ ಪ್ರಶಸ್ತಿ!

ಬೊಗಳೆ ರಗಳೆ ತಂಡಕ್ಕೆ ಅತ್ಯುತ್ತಮ ಒದರಿಗಾರಿಕೆ ಎಂಬ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.

ಇದಕ್ಕೆ ಕಾರಣ, ಅದು ಪ್ರಕಟಿಸಿರುವ "ಪಂದ್ಯವೇ ಡಿಕ್ಲೇರ್" ಎಂಬ ಅತ್ಯುತ್ತಮ ತನಿಖಾ ವರದಿ. ಈಗಾಗಲೇ ಬೊಗಳೆ ಬಿಟ್ಟದ್ದೆಲ್ಲಾ ನಿಜವಾಗತೊಡಗಿರುವುದರಿಂದ ತೀವ್ರವಾಗಿ ಕಳವಳಗೊಂಡಿರುವ ಬೊಗಳೆ ಬ್ಯುರೋ, ಎಲ್ಲಾ ಬಿಟ್ಟವ ದೇಶಕ್ಕೆ ದೊಡ್ಡವ ಎಂಬ ಮಾತಿಗೆ ಬದ್ಧವಾಗಿ, ಎಲ್ಲಾ ಬಿಟ್ಟು ಬಿಡಲು ತೀರ್ಮಾನಿಸುವ ಯೋಚನೆ ಮಾಡುತ್ತಿದೆ ಎಂದು ನಂಬಲನರ್ಹ ಮೂಲಗಳು ತಿಳಿಸಿವೆ.

ಇದು ಬೊಗಳೆಯ ಭವಿಷ್ಯವಾಣಿ ಬ್ಯುರೋಗೆ ಸಂದ ಅಗೌರವ ಎಂದು ಸೊಂಪಾದ ಕರು ತಿಳಿಸಿದೆ.

Thursday, October 04, 2007

ವದಿಯೋಗೌಡ್ರ ಚಿತ್ತ ಅಂಪೈರ್ ಆಗುವತ್ತ!

[ಅರಾಜಕೀಯದ ತುರ್ತು ವಿಶ್ಲೇಷಣೆ]
ರ್ನಾಟಕವು ಚಪ್ಪಲಿ ರಾಜಕೀಯದಿಂದ ಹಿಡಿದು ಮಸಿ ರಾಜಕೀಯ, ಕೆಸರು ರಾಜಕೀಯ, ಕೊಳಚೆ ರಾಜಕೀಯ ಮುಂತಾದ ರಾಜಕಾರಣದ ಶ್ರೇಷ್ಠಾತಿಶ್ರೇಷ್ಠ ರೂಪಗಳನ್ನು ಹೊಂದಿರುವ ಛೀ-ಥೂ ರಾಜಕೀಯಗಳನ್ನು ಕಂಡಿದೆ. ಈ ಛೀ-ಥೂ ಧಾರಾವಾಹಿಯ ಮುಂದುವರಿದ ಮತ್ತು ಮುಗಿಯಲಾರದ ಭಾಗವೇ "ಒಪ್ಪದ ಒಪ್ಪಂದ".

ಮೇಲೇರಲು ಕಾರಣರಾದವರು ಮೇಲೇರಿದವರಿಂದಲೇ ತುಳಿಯಲ್ಪಟ್ಟು, ಪಕ್ಷದಿಂದಲೇ ಉಚ್ಚಾಟಿಸಲ್ಪಡುವ ಮೌಲ್ಯಾಧಾರಿತ ರಾಜಕಾರಣಕ್ಕೆ ಕರ್ನಾಟಕದಲ್ಲಿ ಮೊದಲು ಬಲಿಯಾಗಿದ್ದು ರಾಮಕೃಷ್ಣ ಹೆಗಡೆ. ಅಂದಿನಿಂದ ಇಂದಿನವರೆಗೆ ಮಣ್ಣಿನ ಮಗನ ಈ ಜೈತ್ರ ಯಾತ್ರೆಯಲ್ಲಿ ಹಲವಾರು ಮಂದಿ - ರಾಜಕೀಯಕ್ಕೆ ನಾಲಾಯಕ್ ಆಗಿರುವ ನೀತಿ ನಿಯಮಾವಳಿಗಳನ್ನು, ಕಾರ್ಯನಿಷ್ಠೆಯನ್ನು ಪ್ರದರ್ಶಿಸಿದವರು- ಇನ್ನಿಲ್ಲದಂತೆ ನಾಶವಾಗಿದ್ದಾರೆ. ಈ ರಾಜಕೀಯಕ್ಕೆ ಬಲಿಯಾದವರಲ್ಲಿ ಹೆಗಡೆ, ಸಿಂಧ್ಯಾ, ಸಿದ್ದರಾಮಯ್ಯ, ಧರ್ಮ ಸಿಂಗ್ ಮುಂತಾದ ಬಲಿಪಶುಗಳು ಕಣ್ಣಿಗೆ ರಾಚುವಂತೆ ನಮ್ಮ ಮುಂದಿವೆ.

ಇದೀಗ ಟ್ವೆಂಟಿ20 ಕ್ರಿಕೆಟ್ ಎಂಬ ಅಮೂಲ್ಯವಾದ ಮನರಂಜನಾ ನಾಟಕದಲ್ಲೂ ಕರುನಾಟಕದ ಬಡತೆರಿಗೆದಾರರು ಪುಕ್ಕಟೆ ಮನರಂಜನೆ ಪಡೆಯುತ್ತಿರುವುದು ಚೌಚೌ ರಾಜಕೀಯದ ಹೊಸ ಕೊಡುಗೆ. ಇದಕ್ಕೆ ವದಿಯೋಗೌಡರು ಕೊಡುವ ಕಾರಣ ಕೂಡ ಒಪ್ಪತಕ್ಕದ್ದೇ. ರಾಜ್ಯದ ಜನತೆ ಇಷ್ಟೊಂದು ಓಟು ಕೊಟ್ಟು ನಮ್ಮನ್ನು ಆರಿಸಿದ್ದಾರೆ, ಅವರು ಬೇಕಾಬಿಟ್ಟಿಯಾಗಿ ತೆರಿಗೆಯನ್ನೂ ಪಾವತಿಸಿ, ನಮ್ಮ ಐಷಾರಾಮಿ ಜೀವನಕ್ಕೆ ಕಾರಣಕರ್ತರಾಗಿದ್ದಾರೆ. ಬೆವರು ಸುರಿಸಿ ಹಣ ಸಂಪಾದಿಸಿ, ಮತ್ತು ಕರ್-ನಾಟಕದ ದೃಶ್ಯಾವಳಿಗಳನ್ನು ನೋಡಿ ಜೀವನದಲ್ಲಿ ಬೆಂದು ನೊಂದು ಬೇಸತ್ತಿರುವ ಅವರ ಮೈ-ಮನಗಳಿಗೆ ಸ್ವಲ್ಪವಾದರೂ ಮನರಂಜನೆ ದೊರೆಯದಿದ್ದರೆ ಹೇಗೆ? ಈ ಕಾರಣಕ್ಕೆ ನಾವು ಈ ನಾಟಕ ಪ್ರದರ್ಶನ ಏರ್ಪಡಿಸಿದ್ದೇವೆ ಎಂದು ವದಿಯೋಗೌಡರು ಬೊಗಳೆ ರಗಳೆ ಬ್ಯುರೋಗೆ ಮಾತ್ರವೇ ತಿಳಿಸಿದ್ದಾರೆ.

"ಆ ನನ್ಮಗ ಕುಮಾರ, ಕಾಂಗ್ರೆಸಿಗೆ ಅದರದ್ದೇ ಚಿಹ್ನೆಯಾಗಿರುವ "ಕೈ" ಕೊಟ್ಟು, ತನ್ನೆರಡೂ ಕರಗಳಲ್ಲಿ "ಕಮಲ"ಳನ್ನು ಅಪ್ಪಿಕೊಳ್ಳುವಾಗ ನನ್ನನ್ನೊಂದ್ಮಾತು ಕೇಳಿಲ್ಲ. ಅವ್ನು ನನ್ಮಗನೇ ಅಲ್ಲ, ನಿದ್ದೆ ಮಾಡಿದ್ರಿಂದಾಗಿಯೇ ಪ್ರಧಾನಿ ಪಟ್ಟ ಕೈತಪ್ಪಿ ಹೋದಾಗಲೂ ಇಷ್ಟು ಬೇಜಾರಾಗಿರಲಿಲ್ಲ. ಇದು ಅತ್ಯಂತ ಕರಾಳ ದಿನ" ಅಂತ ಅತ್ತೂ ಕರೆದು, ಮೌನ ವ್ರತ ಧಾರಣೆ ಮಾಡಿದಂತಿದ್ದ ಒದಿಯೋಗೌಡ್ರು, ಇದೀಗ ಪ್ರಧಾನಿ ಪಟ್ಟ ಹೋದಾಗ ನೀಡಿದ್ದ ಮಾತನ್ನೊಂದು ಅಚಾನಕ್ಕಾಗಿ ನೆನಪಿಸಿಕೊಂಡಿದ್ದಾರೆ.

ಅದೆಂದರೆ, "ಧೂಳಿನಿಂದ ಮೇಲೆದ್ದು ಬರುವೆ" ಎಂಬ ಭೀಷ್ಮ ಪ್ರತಿಜ್ಞೆ. ಆದರೆ ಧೂಳಿನಿಂದ ಮೇಲೆದ್ದು ಬರಲು, ಮತ್ತು ಧೂಳನ್ನು ಕೊಡವಿಕೊಳ್ಳಲು ಸಾಕಷ್ಟು ಧೂಳು ಇರಬೇಕು. ಅದಕ್ಕಾಗಿ ಕೊಳಚೆ ರಾಜಕೀಯದಲ್ಲಿ ಮುಳುಗಬೇಕು, ಅದು ಒಣಗಬೇಕು.- ಈ ಪ್ರಕ್ರಿಯೆ ಪೂರೈಸಿದರೆ, ಖಂಡಿತವಾಗಿಯೂ ಧೂಳಿನ ರಾಶಿಯು ಏರ್ಪಟ್ಟು, ಅದರೊಳಗಿಂದ ಎದ್ದು ಬಂದಲ್ಲಿ, ತನ್ನ ಪ್ರತಿಜ್ಞೆ ಈಡೇರಿದಂತೆ ಎಂದು ನಿರ್ಧರಿಸಿದ ಪರಿಣಾಮವೇ ಈ ಟ್ವೆಂಟಿ20 ಪಂದ್ಯ.

ಆದರೆ ಈ ಪಂದ್ಯದಲ್ಲಿ ಕೋಚ್ ಆಗಿದ್ದ ವದಿಯೋಗೌಡರು, ದಿಢೀರನೇ ಅಂಪೈರ್ ಪಾತ್ರ ವಹಿಸಿ, ಕುಮಾರಕಂಠೀರವನ ಇನ್ನಿಂಗ್ಸ್ ಮುಗಿದು ಔಟ್ ಆಗಬೇಕಿದ್ದರೂ, ನಾಟೌಟ್ ಎಂದು ಗೋಣಲ್ಲಾಡಿಸಿದ್ದು, ಬ್ಯಾಟಿಂಗ್ ಮುಂದುವರಿಸುವಂತೆ ಹೆಣಗಾಡುತ್ತಿರುವುದು ಮಾತ್ರ ಕರ್ನಾಟಕದ ಮುಕ್ಕೋಟಿ (ಈಗ ನಾಲ್ಕೈದು ಕೋಟಿ) ಕನ್ನಡಿಗರಿಗೆ ಹೊಸ ಮನರಂಜನೆಯ ವಿಷಯ ದೊರೆತಂತಾಗಿದೆ. ವದಿಯೋಗೌಡ್ರು ದಿಢೀರನೆ ಅಂಗಣಕ್ಕಿಳಿದ ಕಾರಣದಿಂದಾಗಿ ಪ್ರೇಕ್ಷಕರು "ಈ ಟ್ವೆಂಟಿ20 ಕ್ರಿಕೆಟಿನಲ್ಲಿ ಧುತ್ತನೆ ಕಾಣಿಸಿಕೊಂಡ ವದಿಯೋಗೌಡ ಯಾರು? ಅವರಿಗೇನು ಇಲ್ಲಿ ಕೆಲಸ? ಅವರಿಗೇನಿದೆ ಅಧಿಕಾರ?" ಎಂಬಿತ್ಯಾದಿ ಪ್ರಶ್ನೆಗಳು ಸಿಕ್ಸರ್‌ನಂತೆ ಮೇಲಕ್ಕೆ ಚಿಮ್ಮಿದ್ದರಿಂದ ಕಕ್ಕಾಬಿಕ್ಕಿಯಾಗಿದ್ದಾರೆ.

ಒಟ್ಟಿನಲ್ಲಿ ರಾಜ್ಯ-ಕಾರಣವು ಛೀ-ಥೂ, ಗಬ್ಬು, ಕೊಳಚೆ, ವ್ಯಾಕ್, ಆ...ಕ್ಷೀssss ಎಂಬ ಮಜಲುಗಳನ್ನು ದಾಟಿ, ಇದೀಗ "ದುರಂತ" ಎಂಬ ಹಂತಕ್ಕೆ ತಲುಪಿರುವುದು ಮತ್ತು ಈ ನಾಟಕದ ದೃಶ್ಯಗಳನ್ನು ದೆಹಲಿಯಲ್ಲೇ ಪ್ರದರ್ಶಿಸಬೇಕು ಎಂಬುದಾಗಿ ಎಲ್ಲ ಪಕ್ಷಗಳು ಈಗ ನಿರ್ಧರಿಸಿರುವುದು ಬಡ ಪ್ರಜೆಗಳಿಗೆ ಅತೀವ ಮನರಂಜನಾತ್ಮಕ ಸಂಗತಿಯಾಗಿದೆ. ಈ ಮಧ್ಯೆ, ಬೊಗಳೆ ಬ್ಯುರೋ ದೂರದ ತಮಿಳುಕಾಡಿನಲ್ಲಿದ್ದರೂ, ಗಬ್ಬುನಾತ ಎಲ್ಲಿಂದ ಬರುತ್ತಿದೆ ಎಂಬುದನ್ನು ಸಂಶೋಧನೆ ಮಾಡಲಾರಂಭಿಸಿದಾಗ ಈ ವಿಷಯಗಳು ಬೆಳಕಿಗೆ ಬಂದಿದೆ ಎಂಬುದು ಹೇಳಲೇಬೇಕಾದ ಸಂಗತಿ.

Tuesday, October 02, 2007

ಗಾಂಧಿಜಯಂತಿ ಸ್ಪೆಶಲ್: ಕರುಣಾಕಿಡಿ ಗಾಂಧಿ ಸ್ಟೈಲ್

[ಇಂದು ಗಾಂಧಿ ಜಯಂತಿ. ಈ ಪ್ರಯುಕ್ತ ಬೊಗಳೆ ರಗಳೆ ಬ್ಯುರೋದಿಂದ ವಿಶೇಷ ಲೇಖನ. ಗಾಂಧಿ ತತ್ವಗಳನ್ನು ಇಂದು ದೇಶ ಯಾವ ರೀತಿ ಪಾಲಿಸುತ್ತಿದೆ ಎಂಬ ಬಗೆಗೊಂದು ವಾರೆ ನೋಟ...]

ಬೊಗಳೂರು, ಅ.2- ಅಹಿಂಸಾ ಪರಮೋ ಧರ್ಮ, ನ್ಯಾಯದ ಪಥದಲ್ಲಿ ನಡೆಯೋಣ ಎಂದು ಜಗತ್ತಿಗೆ ಸಾರುತ್ತಾ, ರಘುಪತಿ ರಾಘವ ರಾಜಾರಾಮ ಎಂಬ ಮಂತ್ರೋಚ್ಚರಿಸುತ್ತಾ, ಕೊನೆಗಾಲದಲ್ಲಿ ಹೇ ರಾಮ್ ಎನ್ನುತ್ತಲೇ ಹುತಾತ್ಮರಾದ ಮಹಾತ್ಮಾ ಗಾಂಧಿ ಆದರ್ಶಗಳನ್ನೇ ತಮಿಳುಕಾಡು ಮುಖ್ಯಮಂತ್ರಿ ಕರುಣಾಕಿಡಿ ಅನುಸರಿಸುವತ್ತ "ಸಾಗು"ತ್ತಿದ್ದಾರೆ ಎಂದು ಕೇಂದ್ರ ಸರಕಾರವು ಪ್ರಮಾಣಪತ್ರ ನೀಡಿದೆ.

ಇದಕ್ಕೆ ಕೇಂದ್ರ ಸರಕಾರವು ಪಟ್ಟಿ ಮಾಡಿರುವ ಕಾರಣಗಳನ್ನು ಬೊಗಳೆ ಓದುಗರಿಗಾಗಿ ವಿಶೇಷವಾಗಿ ನೀಡಲಾಗಿದೆ. ಈ ಕಾರಣಗಳು ಇಂತಿವೆ:

* ಶ್ರೀರಾಮನ ಏಕಪತ್ನೀ ವ್ರತದ ಆದರ್ಶ ಪಾಲಿಸುತ್ತಿರುವ ಕರುಣಾಕಿಡಿ ಅವರು ಈಗಾಗಲೇ ಕೇವಲ ಒಬ್ಬ ಪತ್ನಿಯನ್ನು ಮಾತ್ರವೇ ಅಧಿಕೃತವಾಗಿ ಹೊಂದಿದ್ದಾರೆ.

* ಗಾಂಧೀಜಿ ಅವರು ಹುತಾತ್ಮರಾದಾಗ ಹೇ ರಾಮ್ ಎಂದಿದ್ದರು. ಆದರೆ ಕರುಣಾಕಿಡಿಯವರಿಗೆ ವಯಸ್ಸಾಗಿದೆ ಎಂಬುದು ಒತ್ತಟ್ಟಿಗಿರಲಿ, ಕರುಣಾಕಿಡಿ ಮಾತ್ರ, ತಮಿಳಿನಲ್ಲಿ "ಹ" ಅಕ್ಷರದ ಕೊರತೆಯಿರುವುದರಿಂದಾಗಿ "ನೋ ರಾಮ್" ಎಂದಷ್ಟೇ ಹೇಳುತ್ತಿದ್ದಾರೆ ಮತ್ತು ಮುಂದೆಯೂ ಹೇಳುತ್ತಾರೆ.

* ಕರುಣಾಕಿಡಿ ತುಂಬಾ ಹಿರಿಯ ನಾಯಕ (ವಯಸ್ಸಾಗಿರುವುದರಿಂದ). ಅವರು ಯುಪಿಎ ಸರಕಾರದ ಅಳಿವು ಉಳಿವಿಗೆ ಏಕೈಕ ಆಧಾರಸ್ತಂಭ. ಅವರನ್ನು ನಾವು ಕೈಬಿಡುವುದುಂಟೇ? ಅವರು ಮಾಡಿದ್ದೇ ಸರಿ. ಯಾಕೆಂದರೆ ಎಲ್ಲಾದರೂ ಚುನಾವಣೆ ನಡೆದಲ್ಲಿ ನಮ್ಮ ಗತಿ ಯಾರಿಗೂ ಬೇಡದಂತಿರುತ್ತದೆ.

* ಕರುಣಾಕಿಡಿ ಗಾಂಧಿವಾದ ಅನುಸರಿಸುತ್ತಿದ್ದಾರೆ. ಅವರು ತುಳಿದ ಹಾದಿಯನ್ನೇ ನಾವೂ ಅನುಸರಿಸುತ್ತಿದ್ದೇವೆ. ನ್ಯಾಯಾಂಗಕ್ಕೆ ತಲೆಬಾಗಲೇಬೇಕು ಎಂದು ಗಾಂಧೀಜಿ ಹೇಳಿಲ್ಲ. ನ್ಯಾಯಮಾರ್ಗದಲ್ಲಿ ನಡೆಯಬೇಕು ಎಂದಷ್ಟೇ ಹೇಳಿದ್ದಾರೆ. ಹಾಗಿರುವಾಗ ನಾವು ನಡೆದ ಹಾದಿಯೇ ನ್ಯಾಯಯುತ ಮಾರ್ಗ.

* ನ್ಯಾಯಾಂಗವು ರಜಾ ದಿನವೂ ಕೆಲಸ ಮಾಡಿದೆ. ಅವರು ಕೆಲಸ ಮಾಡುತ್ತಾರೆಂದು ನಾವೇಕೆ ಕೆಲಸ ಮಾಡಬೇಕು? ನ್ಯಾಯಾಂಗ ಆಗಾಗ ಎಚ್ಚರಿಕೆ ನೀಡುತ್ತಲೇ ಇರುತ್ತದೆ. ಈಗಾಗಲೇ ರಜೆ ಘೋಷಿಸಿದ್ದೇವೆ. ತಮಿಳುಕಾಡಿನ ಕರುಣಾಕಿಡಿ ಬೆಂಬಲಿಗರೂ ಮಜಾ ಮಾಡೋದು ಬೇಡವೆ? ಅಷ್ಟಕ್ಕೂ ನಾವೇನೂ ಬಂದ್ ಮಾಡಿಲ್ಲ. ತಾನಾಗಿಯೇ ಬಂದ್ ಆಗಿದೆ ಅಂತ ಕರುಣಾಕಿಡಿ ಹೇಳಿದ್ದಾರೆ. ನಾವದನ್ನು ನಂಬಲೇಬೇಕು.

* ಒಂದು ಕಾಲದಲ್ಲಿ ಹಿಂದಿಯನ್ನೇ ಹಿಂದುಸ್ತಾನದಿಂದ ಓಡಿಸಿಬಿಡಬೇಕು ಎಂಬಷ್ಟರಮಟ್ಟಿಗೆ ಗದ್ದಲವೆಬ್ಬಿಸಿದ್ದ ತಮಿಳುಕಾಡು ಮುಖ್ಯಮಂತ್ರಿಗಳು ಈಗ, ನಮ್ಮತ್ತಲೂ ಕೃಪಾದೃಷ್ಟಿ ಬೀರಿದ್ದಾರೆ. ಅವರ ಬಾಯಿಯಿಂದಲೇ ಭಾಯಿಭಾಯಿ ಎಂಬ ಹಿಂದಿ ಅಣಿಮುತ್ತುಗಳು ಉದುರಿವೆ. ಅವನ್ನು ಹೆಕ್ಕಿಕೊಂಡು ನಾವು ಕೃತಾರ್ಥರಾಗಿದ್ದೇವೆ.

* ಕರುಣಾಕಿಡಿಯವರೇನೂ ವಯಸ್ಸಾಗಿ ಹಸಿವು ತಾಳಲಾರದೆ ಉಪವಾಸ ಬಿಟ್ಟಿಲ್ಲ, ಅವರು ಉಪವಾಸ ಬಿಟ್ಟದ್ದು ನ್ಯಾಯಾಲಯಕ್ಕೆ "ಕಿಂಚಿತ್ ಗೌರವ ಕೊಡುವುದಕ್ಕಾಗಿ"! ಮಾತ್ರವಲ್ಲ, ಅಂದು ಬಂದ್ ಇದ್ದದ್ದರಿಂದ ಅಂಬ್ಯುಲೆನ್ಸ್‌ಗಳು ಕೂಡ ಕೈಗೆ ಸಿಗುತ್ತಿರಲಿಲ್ಲ, ಆಸ್ಪತ್ರೆಗಳು ಕೂಡ ಬಂದ್ ಆಗಿದ್ದರೆ ಎಂಬ ಚಿಂತೆ ನಮಗೆ ಆವರಿಸಿತ್ತು.

* ನ್ಯಾಯಾಲಯದ ಕಟ್ಟಡದ ವಿಸ್ತೀರ್ಣವು ನಮ್ಮ ಶಾಸಕಾಂಗ (ಸಂಸತ್) ಕಟ್ಟಡಕ್ಕಿಂತ ತೀರಾ ಕಿರಿದು. ಹಾಗಾಗಿ ನಮ್ಮದೇ ದೊಡ್ಡದು. ನ್ಯಾಯಾಂಗ ನಮಗೆ ಗೌಣ. ನ್ಯಾಯಾಂಗಕ್ಕೆ ಬೆಲೆ ಕೊಟ್ಟರೆ ನಮ್ಮ ಡೊಳ್ಳು ಹೊಟ್ಟೆ ತುಂಬುವುದು ಹೇಗೆ? ಸಾಧ್ಯವಾದರೆ ಸಂವಿಧಾನ ಬದಲಿಸಲು ಯತ್ನಿಸುತ್ತೇವೆ ಎಂದು ಹೇಳಿದ ಕೇಂದ್ರದ ವಕ್ತಾರರು ಮಾತು ಮುಗಿಸಿದರು.

ಎಂಜಿನ್ ಇಲ್ಲದ ರೈಲು: ಬ್ರೇಕಿಂಗ್ ನ್ಯೂಸ್ ಅಲ್ಲವೆಂದ ಬೊ.ರ.

[ಬೊಗಳೂರು ಪಟ್ಟೆ-ರಹಿತ ರೈಲು ಬ್ಯುರೋ] ಬೊಗಳೂರು: ಆಫ್‌ಲೈನ್ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯೊಂದು ಆನ್‌ಲೈನ್ ಸಂಪಾದಕರ ಕಣ್ಣು ಕುಕ್ಕಿದ್ದು, ಎಂಜಿನ್ ಇಲ್ಲದೆ...