Thursday, November 29, 2007

ವಿಧಾನಸಭೆ ವಿಸರ್ಜನೆ: ಮತದಾರರ ಮನೆಬಾಗಿಲಲ್ಲಿ ತ್ಯಾಜ್ಯ

(ಬೊಗಳೂರು ವಿಸರ್ಜನೆ ಬ್ಯುರೋದಿಂದ)
ಬೊಗಳೂರು, ನ.29- ರಾಜ್ಯ ವಿಧಾನಸಭೆಯಿಂದ ವಿಸರ್ಜನೆ ಮಾಡಲಾದ ಎಲ್ಲಾ ಶ್ವೇತವಸನಧಾರಿ ಜೀವಿಗಳು ಇದೀಗ ಕರ್‌ನಾಟಕದ ಎಲ್ಲಾ 224 ಕ್ಷೇತ್ರಗಳ ಮನೆ ಮನೆಗಳಲ್ಲಿ ಕಾಣಿಸಿಕೊಳ್ಳಲಾರಂಭಿಸಿರುವುದು ಮತದಾರರ ಆತಂಕ ಹೆಚ್ಚಳಕ್ಕೆ ಕಾರಣವಾಗಿದೆ.

ರಾಜ್ಯ ನಿಧಾನಸಭೆಯಿಂದ ವಿಸರ್ಜನೆಯಾಗುತ್ತಿರುವ ತ್ಯಾಜ್ಯವನ್ನು ಸ್ಥೂಲವಾಗಿ ಮತ್ತು ಕೂಲಂಕಷವಾಗಿಯೂ ತಪಾಸಣೆಗೊಳಪಡಿಸಿದಾಗ ಅದರೊಳಗೆ ಹುಳುಗಳು, ಕ್ರಿಮಿಗಳು, ಕೊಳಚೆ, ಕೆಸರು, ಧೂಳು, ರಾಡಿ, ಕೊಚ್ಚೆ ಇತ್ಯಾದಿಗಳು ಪತ್ತೆಯಾಗಿರುವುದರಿಂದಾಗಿ ರಾಜ್ಯದ ಜನತೆ ಛೆ! ಇಂಥವರಿಂದಲೂ ಕೈಯೆತ್ತಿದ ನಮಸ್ಕಾರ ಪಡೆಯಬೇಕಲ್ಲಾ ಎಂದು ತಲೆ ತಲೆ ಚಚ್ಚಿಕೊಳ್ಳಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂದು ನಮ್ಮವರಲ್ಲದ ಬಾತ್ಮೀದಾರರು ಮುಖ ಮುಚ್ಚಿಕೊಂಡು ವರದಿ ಮಾಡಿದ್ದಾರೆ.

ವಿಸರ್ಜನೆಯ ಹಂತದಲ್ಲಿರುವಾಗಲೇ ರಾಜ್ಯ ನಿಧಾನಸಭೆಯಿಂದ ಹುಳು(ಕು)ಗಳು ಹೊರ ಬರಲಾರಂಭಿಸಿದ್ದವು. ಇದಕ್ಕೆ ಪ್ರಧಾನ ಕಾರಣವೆಂದರೆ ಕಮಲಕ್ಕೆ ಕೆಸರು ಮೆತ್ತಿ ಕೊಳೆತು ಹೋಗಿರುವುದು ಹಾಗೂ ತೆನೆಹೊತ್ತ ರೈತ ಮಹಿಳೆಯ ತಲೆಯ ಮೇಲಿದ್ದ ಮೂಟೆಯಲ್ಲೂ ಕೆಸರು ಎರಚಿ, ತೆನೆಯೆಲ್ಲವೂ ಉದುರುವ ಹಂತದಲ್ಲಿರುವುದು.

ಈಗಾಗಲೇ ವದಿಯೋಗೌಡ್ರ ಕಾರ್ಯವೈಖರಿಯಿಂದ ರೋಸಿ ಹೋಗಿರುವ ಪೀಂಎಂ ಪ್ರಕಾಶ್ ಅವರು ಕೆಲವು ಹುಳುಕುಗಳನ್ನು ತೆಗೆಯಲು ಪ್ರಯತ್ನಿಸುತ್ತಿದ್ದು, ದಳ ವಿದಳನೆ ಪ್ರಕ್ರಿಯೆಯು ಬಿರುಸಿನಿಂದ ನಡೆಯುತ್ತಿದೆ. ವದಿಯೋಗೌಡ್ರು ಇಬ್ಬರು ಮಕ್ಕಳೊಂದಿಗೆ ಎಲ್ಲಿಗೋ ಪಯಣ... ಯಾವುದೋ ದಾರಿ... ಎಂಬಂತೆ ಸನ್ಯಾಸದೀಕ್ಷೆಯತ್ತ ತಮ್ಮ ಚಿತ್ತ ನೆಟ್ಟರೆ, ಈ ತೆನೆ ಎಲ್ಲವೂ ಕ್ಲೀನ್ ಆಗಿಬಿಡುತ್ತದೆ ಎಂಬುದು ದಳವಾಯಿಗಳ ಅಂಬೋಣ.

ಇನ್ನೊಂದೆಡೆ ಕೆಸರು ಮೆತ್ತಿಕೊಂಡಿರುವ ಕಮಲವೂ ಕೂಡಾ ಪಕ್ಷ ಒಡೆಯೂರಪ್ಪ ಎಂಬ ಸ್ಥಿತಿ ತಲುಪಿದ್ದು, ಗಜದೀಶ್ ಮೆಟ್ಟರ್, ಡಿಯಚ್ ಕಿಂಕರಮೂರ್ತಿ ಮತ್ತು ಕೇಯಚ್ಚೀಶ್ವರಪ್ಪ ಅವರು ಈ ಕೊಳೆಯ ಕ್ಲೀನಿಂಗ್‌ಗಾಗಿ ದಿಲ್ಲಿ ದೊರೆಗಳ ಬಾಗಿಲು ಬಡಿದಿದ್ದಾರೆ.
ಇಂಥಹ ತ್ಯಾಜ್ಯ ವಿಸರ್ಜನೆಯ ಹಂತದಲ್ಲಿ ಕರ್ನಾಟಕದ ಮತದಾರರ ಮನೆ ಮನೆ ಬಾಗಿಲು ಆಗಾಗ ದಡಬಡನೆ ಸದ್ದಾಗುತ್ತಿದೆ.

ಮೂರು ವರ್ಷಗಳ ಹಿಂದೆ ಓಟು ಕೊಟ್ಟು ತಮ್ಮ ಪಾಡಿಗೆ ತಾವಿದ್ದ ಮತದಾರರು ಹೊರಗೋಡಿ ಬಂದಾಗ ಎಲ್ಲಾ ರಚ್ಚೆ, ಕೊಳಚೆಗಳು ಬಾಗಿಲಲ್ಲಿ ನಿಂತಿವೆ! ಇದು ವಿಧಾನಸಭೆಯ ವಿಸರ್ಜನೆಯ ಪರಿಣಾಮ ಎಂದು ಮನದಟ್ಟಾದ ಬಳಿಕ ಆಯ್ತಾಯ್ತು, ಓಟು ಕೊಡ್ತೇವೆ, ದಯವಿಟ್ಟು ನೀವು ಬೆಂಗಳೂರಲ್ಲೇ ಹೊಡೆದಾಡಿಕೊಂಡು, ಕೆಸರೆರಚಾಡುತ್ತಿರಿ, ಇಲ್ಯಾಕೆ ಬಂದು ತೊಂದರೆ ಕೊಡ್ತೀರಿ ಎಂದು ಕೇಳಲು ಸಿದ್ಧತೆ ಮಾಡಿರುವುದಾಗಿ ವರದಿಯಾಗಿದೆ.

Monday, November 26, 2007

ಧುತ್ತನೆ ಕಾಣಿಸ್ಕೊಂಡ ಪ್ರಾಣಿಯ ನಿಗೂಢತೆ ಬಯಲು

(ಬೊಗಳೂರು ಸ್ಟಿಂಗ್ ಬ್ಯುರೋದಿಂದ)
ಬೊಗಳೂರು, ನ.26- ರಾಜ್ಯದಲ್ಲಿ ಚುನಾವಣೆಗೆ ವೇದಿಕೆ ಸಜ್ಜಾಗುತ್ತಿರುವಂತೆಯೇ, ಚಿತ್ರ ವಿಚಿತ್ರ ಅಚ್ಚರಿಗಳು ಜನರನ್ನು ಬೆಚ್ಚಿ ಬೀಳಿಸತೊಡಗಿವೆ ಎಂದು ತಿಳಿದುಬಂದಿದೆ.

ಮೊದಲನೆಯದಾಗಿ, ಸದಾ ಕೆಸರೆರಚಾಟ, ಗದ್ದಲದ ಗೂಡಾಗಿರುವ ವಿಧಾನ ಸೌಧವು ಈಗ ಖಾಲಿ ಖಾಲಿಯಾಗಿ ಶಾಂತ ಸ್ಥಿತಿಯಲ್ಲಿರುವುದು. ಎರಡನೇ ಅಚ್ಚರಿಯೆಂದರೆ ರಾಜ್ಯದ ಮೂಲೆ ಮೂಲೆಗಳಲ್ಲಿ, ಹಳ್ಳಿ ಹಳ್ಳಿಗಳಲ್ಲಿ ಶ್ವೇತವಸ್ತ್ರ ತೊಟ್ಟ ಪ್ರಾಣಿಗಳೋ, ಅನ್ಯಗ್ರಹ ಜೀವಿಗಳೋ ಎಂಬ ಶಂಕೆ ಮೂಡಿಸುವ ಆಕಾರಗಳು ಧುತ್ತನೆ ಕಾಣಿಸಿಕೊಳ್ಳುತ್ತಿರುವುದು.

ಇವರು ಮುಖಕ್ಕೂ ವಸ್ತ್ರ ಮುಚ್ಚಿಕೊಂಡಿದ್ದರು. ಬೆನ್ನಿಗೆ ಗುರಾಣಿ ಥರಾ ಏನನ್ನೋ ಕಟ್ಟಿಕೊಂಡಿದ್ದರು. ಸರಿಯಾಗಿ ನೋಡಿದರೆ ಅನ್ಯಗ್ರಹ ಜೀವಿಗಳಂತೆಯೇ ಇದ್ದಾರೆ!!! ಈ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡ ಬೊಗಳೆ ಬ್ಯುರೋ, ಬೊಗಳೂರಿನಲ್ಲಿ ಕಂಡು ಬಂದ ಅಧಿಕವಾದ ಪ್ರಸಂಗವನ್ನು ಉದಾಹರಣೆ ರೂಪದಲ್ಲಿ ವಿವರಿಸಿದೆ. ಕರುನಾಟಕದ ಬಹುತೇಕ ಎಲ್ಲಾ ಕಡೆ ಇದೇ ಪರಿಸ್ಥಿತಿ ಕಂಡುಬಂದಿದೆ ಎಂದು ಓದುಗ ಪ್ರಭುಗಳು ತಿಳಿದುಕೊಳ್ಳತಕ್ಕದ್ದು.

ಬೊಗಳೂರಿನಲ್ಲಿ ನಡೆದ ಗುಂಡ್ಅಣ್ಣ ರಮ್ಅಣ್ಣ ನಡುವೆ ನಡೆದ ಸಂಭಾಷಣೆ ಹೀಗಿತ್ತು:

"ಅರರೆ... ಗುಂಡಣ್ಣಾ... ಅಲ್ಲಿ ಏನೋ ಬರಾಕತ್ತೈತಲ್ಲಾ... ಅದನ್ನ ಎಲ್ಲೋ ನೋಡ್ದಂಗಿದೆ... ಯಾರೂಂತ ಎಷ್ಟು ತಲೆ ಕೆರ್ಕೊಂಡ್ರೂ ನೆಂಪೇ ಆಗವೊಲ್ದು...!!"

"ಹೌದಲ್ಲಾ... ನಂಗೂ ಹಂಗೇ ಅನಿಸ್ತೈತಿ ಕಣಣ್ಣಾ.. ಹ್ಯಾಗೆ ಜಗಮಗ ಅಂತ ಬಿಳಿ ದಿರಿಸು ಇದೆ ನೋಡು. ಮಾಡೋದೆಲ್ಲಾ ಶುದ್ಧ ಕಪ್ಪು ವ್ಯವಹಾರವಾದ್ರೂ, ಇಸ್ತ್ರಿ ಮಾಡಿಸಿದ ಬೆಳ್ಳಂಬೆಳಗೋ ಷರ್ಟು ಧರಿಸಿ ಬರೋರು, ಮತ್ತು ಅವರ ಹಿಂದಿನ ಚೇಲಾಗಳೂ ಕೂಡ ಬಿಳಿ ಬಿಳಿಯಾಗೇ ಇರೋದು ನೋಡಿದ್ರೆ..."

"ಹೌದು.. ಕಣ್ಲಾ... ನಂಗೂ ಭಯವಾಗ್ತೈತಿ... ಇದೇನಾರ ದೆವ್ವ ಗಿವ್ವ ಇದ್ದೀತಾಂತ... ಅದೂ ಅಲ್ದೆ, ಸಿನಿಮಾದಲ್ಲಿ ಬೇರೆ ಗ್ರಹದ ಜೀವಿಗಳ್ನ ಇದೇ ಥರಾ ತೋರಿಸ್ತಾರೆ..."

"ದೆವ್ವಗಳ್ಗೆ ಕಾಲು ಕಾಣ್ಸಲ್ಲ... ಅದೇನೋ ಹಾವಿನ್ತರದ ಬಾಲವನ್ನೇ ಹೋಲೋ ಕಾಲು ಇರ್ತೈತೆ ಅಂತ ನಮ್ಮ ವ್ಯಂಗ್ರಚಿತ್ರಕಾರ್ರು ತೋರಿಸ್ತಾ ಇದ್ರಲ್ಲಾ... ಮುಖಕ್ಕೂ ಬಟ್ಟೆ ಮುಚ್ಕೊಂಡಿರೋದು ನೋಡಿದ್ರೆ... ಇದು ದೆವ್ವ ಆಗಿರ್ಲಾರ್ದು. ನಂಗೇನೋ ಈ ದೆವ್ವ ಗಿವ್ವಕ್ಕಿಂತಲೂ ಈ ವೇಷ ನೋಡಿದ್ರೆ... ರಾಜ್ಕಾರ್ಣಿ ನೆಂಪಾಗ್ತೈತಿ..."

"ಯಾಪ್ಪಾ... ಹಾಂಗನ್ನು ಮತ್ತೆ... ಈಗ ನೆಂಪಾತಾ... ನೀ ರಾಜ್ಕಾರ್ಣಿ ಅಂದತಕ್ಷಣ ಗ್ನಾಪ್ಕ ಬಂತು... ಅದು ರಾಜ್ಕಾರ್ಣೀನೇ... ಸರಿಯಾಗಿ ನೋಡ್ಲಾ... ಅವ್ರು ನಾವೇ ಓಟು ಕೊಟ್ಟು ಆರ್ಸಿದ ದೊರೆಯಲ್ವಾ... ಅದೇನೋ ವಿಧಾನಸೌಧದಲ್ಲಿ ಯಾವಾಗ್ಲೂ ಗಲಾಟೆ, ದ್ರೋಹ ಅಂತೆಲ್ಲಾ ಮಾಡ್ತಾ ಇರ್ತಾನಲ್ಲಾ... ಅವ್ನೇ ಕಣ್ಲಾ... "

"ಹೌದಲ್ಲಾ... ಛೆ... ಅಂವ ಇಲ್ಲಿ ಮುಖ ತೋರ್ಸದೆ ಮೂರು ವರ್ಷಕ್ಕೂ ಮೇಲಾಯ್ತು... ಅದ್ಕೇ ಕಾಣ್ಸುತ್ತೆ... ಎಲ್ಲೋssss ನೋಡ್ದಂಗೆ ಆಗಿದ್ದು... ಮುಖ ತೋರ್ಸೋಕೆ ನಾಚ್ಕೆಯಾದಂತೆ ಮುಚ್ಕೊಂಡಿರೋ ಅವ್ನ ಮುಖದಲ್ಲಿರೋ ಕಳೆ ನೋಡುದ್ರೆ... ನಮ್ಮೂರಿನ ಎಕ್ಕುಟ್ಟಿ ಹೋದ ರಸ್ತೆಗಳ ಥರಾ ಇದೆಯಲ್ಲಾ..."

"ಅರೆ... ಅಂವ ಏನಾದ್ರೂ ದಾರಿ ತಪ್ಪಿ ಇಲ್ಲಿಗೆ ಬಂದ್ನಾಂತ ಕಾಣ್ಸುತ್ತೆ... ಆವತ್ತೇ ಆರ್ಸಿ ಕಳ್ಸಿದೀವಿ... ಇನ್ನೈದು ವರ್ಸ ಅಂವ ಇತ್ಲಾಗೆ ತಲೆ ಹಾಕಾಕಿಲ್ಲ ಅಂತ ಆರಾಮಾಗಿದ್ವಲ್ಲಾ..."

"ಇರ್ಬೋದು ಕಣ್ಲಾ... ಪಕ್ಕದ ಕ್ಷೇತ್ರದಾಗೆ ನಡೆಯೋ ಫಂಕ್ಷನ್‌ನ್ಯಾಗೆ ಮೆರೀಬೇಕೂ ಅಂತ ಬಂದಿದ್ದಾಂತ ಕಾಣ್ಸುತ್ತೆ... ದಾರಿ ತಪ್ಪಿ ಅವ್ನ ಖಾಸಾ ಕ್ಷೇತ್ರಕ್ಕೆ ಬಂದ್ಬಿಟ್ಟಿದ್ದಾನೆ."

"ಅದಿರ್ಲಿ... ಮಕ ಯಾಕ್ ಮುಚ್ಕೊಂಡವ್ನೆ?.. "

"ಅದೇ ಕಣ್ಲಾ... ಕುರ್ಚಿಗೋಸ್ಕರ ಅಂವ ಆಡ್ರೋ ಆಟಾ ಎಲ್ಲಾ ಟಿವಿಯೋರು ಇಡೀ ದೇಸ್ದಾಗೆ ಟಾಂ ಟಾಂ ಮಾಡವ್ರಲ್ಲಾ... ಅವ್ನು ಮಾಡಿದ್ದೆಲ್ಲಾ ಊರೋರಿಗೆ ಗೊತ್ತಾಗ್ಬಿಟ್ಟಿದೆ... ಅದ್ಕೆ ಮಕ ತೋರ್ಸೋಕೆ ನಾಚ್ಕೆ ಇರ್ಬೋದು. "

"ಥೂ... ಹೋಗಾ ನೀ... ನಾಚ್ಕೆ ಗೀಚ್ಕೆ ಎಲ್ಲಾ ಎಂತದ್ದು... ರಾಜ್ಕಾರ್ಣಿಗಳ್ಗೆ ನಾಚ್ಕೆ ಇರುತ್ತಾ? ನಾಚ್ಕೆ ಇಲ್ದೋರು ಮಾತ್ರಾ ರಾಜ್ಕಾರ್ಣಿ ಆಗ್ತಾನೆ ಅಂತ ನಿಂಗೊತ್ತಿಲ್ವಾ..."

"ಹಂಗಾ..."

"ಬೇಕಿದ್ರೆ ಪರೀಕ್ಸೆ ಮಾಡು... ಅವ್ನ ಮಕದ ಮೇಲಿನ ಬಟ್ಟೆ ತಗ್ದು ಬಿಡಂತೆ... ಎರಡೂ ಕೈಗೋಳು ತಾನಾಗೇ ಮೇಲ್ ಹೋಗಿ ಪರಸ್ಪರ ಕೂಡಿಕೊಳ್ತಾವೆ..."

"ಹಂಗಂತೀಯಾ... ಮತ್ತೆ ಬೆನ್ನು ಮ್ಯಾಕೆ ಏನೋ ಕಟ್ಕೊಂಡಂತಿದೆಯಲ್ಲಾ..."

"ಹೂಂ... ಅಡಕೆ ಮರದ ಹಾಳೆ ಕಟ್ಕೊಂಡಿದ್ದಾರೆ. ಊರಿಗೆ ಮುಖ ತೋರ್ಸುದ್ರೆ... ಪಬ್ಲಿಕ್ನಾಗೆ ಯದ್ವಾ ತದ್ವಾ ಒದೆ ಬಿದ್ರೆ... ಅನ್ನೋ ಆತಂಕ ಅವ್ನಿಗೆ... ಪೂರ್ವ ಸಿದ್ಧತೆಯದು...."

"ಓಹೋ... ಈಗ ಗೊತ್ತಾತು ಕಣ್ಲಾ... ವೋಟು ಬಂದೈತಾಂತ ಕಾಣ್ಸುತ್ತೆ..."

"ಹೌದಪಾ... ಪಾಪ... ಅವ್ರಿಗೆ ಊರಾಗ್ ತಲೆ ಹಾಕೋಕೂ ಪುರ್ಸತ್ತೆಲ್ಲಿತ್ತು...? ಬರೇ ಕಾಲೆಳೆಯೋದು, ಕುರ್ಚಿ ಹಿಡಿಯೋದು,... ರೆಸಾರ್ಟ್‌ಗಳಿಗೆ ತಿರುಗೋದು... ಒಂದಲ್ಲಾ ಒಂದು ಪಕ್ಷದ ಬಾಲ ಹಿಡಿಯೋದು, ಕಾಲು ಹಿಡಿಯೋದು... ಪಕ್ಷದಿಂದ ಪಕ್ಷಕ್ಕೆ ಹಾರೋದು.. ಇದ್ರಲ್ಲೇ ಟೈಂ ಹೋತು.. ಇನ್ನು... ಕ್ಷೇತ್ರದಾಗೆ ಕೆಲ್ಸ ಮಾಡೋಕೆ ಟೈಮೆಲ್ಲಿತ್ತು.."

"ಅದೇ ಕಣಣ್ಣಾ... ಆದ್ರೆ ನಂಗೊಂದು ಡೌಟು.."

"ಏನ್ಲಾ ಅದು?"

"ಅಲ್ಲಾ... ಇಲ್ಲಿಗೆ ಬಂದಿರೋ ಆಯಪ್ಪಾ... ನಮ್ ಕ್ಷೇತ್ರದ ಶಾಸಕನಾ ಇಲ್ಲಾ... ಬೇರೆ ಕ್ಷೇತ್ರದೋನಾ?"

"ಯಾಕ್ಲಾ ಹಂಗ್ ಕೇಳ್ತೀ?"

"ಏನಿಲ್ಲಾ... ಅವ್ರು ಆರಿಸಿ ಹೋದ್ ನಂತ್ರ... ಕ್ಷೇತ್ರಾನೇ ಮರ್ತು ಬಿಟ್ಟವ್ರೆ... ಹಾಗಾಗಿ ಎಲ್ಲಿಂದ ಆರ್ಸಿ ಬಂದದ್ದು, ಯಾರು ಆರ್ಸಿರೋದು ಅಂತ ನೆನಪಿಲ್ದೆ ಎಲ್ಲೆಲ್ಲಿಗೆ ಹೋಗಿರ್ಲೂಬೌದು..."

"ಅಬ್ಬಾ... ನಿನ್ ಮಂಡೆ ಚಲೋ ಇದ್ದು ಕಣಣ್ಣಾ... ಸರಿಯಾಗೇ ಹೇಳ್ದೆ... ಈಗ್ ಗೊತ್ತಾತು ನೋಡು, ಓ ಅಲ್ಲಿ ಕೈ ಮೇಲೆ ಮಾಡಿ ಜೋಡ್ಸೋಕೆ ಶುರು ಮಾಡಿರೋದು... ಪಕ್ಕದ ಕ್ಷೇತ್ರದ ಸಾಸಕ ಕಣಯ್ಯಾ. ಅವ್ನಿಗೆ ಯಾವ ಕ್ಷೇತ್ರದಿಂದ ಆರ್ಸಿ ಹೋಗಿದ್ದೂಂತಾನೇ ಮರ್ತು ಹೋಗ್ಬಿಟ್ಟಿದೆ... ಅದ್ಕೇ ಇಲ್ಲಿ ಬಂದಿದ್ದು"

[ಇಲ್ಲಿಗೆ ನಮ್ಮ ನೇರ ಪ್ರಸಾರದ ಸಂಪರ್ಕ ಕಡಿದುಹೋಯಿತು. ಅಡಚಣೆಗಾಗಿ ವಿಷಾದಿಸುತ್ತಿದ್ದೇವೆ.- ಸಂ]

Saturday, November 24, 2007

ಪಿತೃವಾಕ್ಯ ಪರಿಪಾಲಕರಾಗೆವು: ಬೊಗಳೆ ಬ್ಯುರೋ

ಬೊಗಳೆ ರಗಳೆಯಲ್ಲಿ ದಿಢೀರ್ ಆಗಿ ಜಾಹೀರಾತು ಕಾಣಿಸಿಕೊಂಡ ತಕ್ಷಣವೇ ಈಗಾಗಲೇ ಬೆದರಿಕೆಗಳು ಬರತೊಡಗಿವೆ. ನಾವು ಪ್ರಾಣಿಯೊಂದರ ನಿಗೂಢತೆ ಬಯಲು ಮಾಡುತ್ತೇವೆ ಅಂತ ಮಾತು ಕೊಟ್ಟಾಗಿದೆ.

ಆದರೆ ಗಮಾರಸ್ವಾಮಿಯಂತೆ ಆಗದಿರಲು ಶ(ತ)ಪಥ ಮಾಡಿರುವ ನಾವು, ಎಷ್ಟೇ ಬೆದರಿಕೆ ಬಂದರೂ, ಎಷ್ಟೇ ಕುರ್ಚಿಯ ಆಮಿಷವೊಡ್ಡಿದರೂ, ಮಗಾ... ಕುರ್ಚಿ ಬಿಡಬೇಡ ಅಂತ ಅಪ್ಪನೇ ಹೇಳುತ್ತಲೇ ಇದ್ದರೂ ಜಗ್ಗದಿರಲು ನಿರ್ಧರಿಸಿದ್ದೇವೆ ಮತ್ತು (ಇಂಥ) ಪಿತೃವಾಕ್ಯ ಪರಿಪಾಲಕರೆಂಬ ಕೆಟ್ಟ ಹೆಸರು ಬಾರದಂತಿರಲು ಎಚ್ಚರಿಕೆ ವಹಿಸುತ್ತಿದ್ದೇವೆ.

ಹೇಗಾದರೂ ಮಾಡಿ, ವಚನ ಭ್ರಷ್ಟ ಮತ್ತು ವಿಶ್ವಾಸದ್ರೋಹ ಎಂಬ ಎರಡು ಪದವಿಗಳು ನಮಗೆ ಪ್ರದಾನವಾಗುವುದನ್ನು ತಪ್ಪಿಸಿಕೊಳ್ಳಲು ತೀರ್ಮಾನಿಸಿರುವ ನಾವು, ಇದೇ ಕಾರಣಕ್ಕೆ ಎರಡು ದಿನ ಭೂ(ತ)ಗತರಾಗಿದ್ದೆವು ಎಂದು ಸ್ಪಷ್ಟಪಡಿಸಲಾಗುತ್ತದೆ.

ಆದುದರಿಂದ ಖಂಡಿತವಾಗಿಯೂ ಈ ನಿಗೂಢ ಪ್ರಾಣಿಗಳ ಕುರಿತ ವಿವರವನ್ನು ಚೂಯಿಂಗ್ ಗಮ್ಮಿನಂತೆ ಬಯಲಿಗೆ ಎಳೆಯುತ್ತೇವೆ. ನೀವು ನಿಮ್ಮ ಮುಂದಿನ ಪ್ರತಿಗಳಿಗೆ ಕೋರಿಕೆ ಸಲ್ಲಿಸುವುದಕ್ಕೆ ಯಾವುದೇ ಅಡ್ಡಿ ಇಲ್ಲ. ನಿರೀಕ್ಷಿಸಲು ಮರೆಯಿರಿ, ಮರೆತು ನಿರಾಶರಾಗಿ!!!!

Thursday, November 22, 2007

ನಿಗೂಢವಾಗಿ ಪತ್ತೆಯಾದ ಹೊಸ ಪ್ರಾಣಿಗಳು!!! ನಿರೀಕ್ಷಿಸಿ!!!

ಜನತೆಯನ್ನು ಕಂಗೆಡಿಸಿದ ನಿಗೂಢ ಪ್ರಾಣಿಗಳು ಪತ್ತೆಯಾಗಿವೆ ಎಂಬುದು ನಿಮಗೆ ಗೊತ್ತೇ?...

ನಿಮ್ಮಲ್ಲಿ ಕೆಲವರಾದ್ರೂ ಈಗಾಗ್ಲೇ ಅದನ್ನು ನೋಡಿರ್ಬೋದು...

ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿರುವ ಇವೇನು, ಅನ್ಯಗ್ರಹ ಜೀವಿಗಳೇ?

ಗುಂಡ್ಅಣ್ಣ ಮತ್ತು ರಂಅಣ್ಣ ನಡುವಣ ಸಂಭಾಷಣೆಯಿಂದ ತಿಳಿದುಬಂದ ಅಂಶವನ್ನು ಬೊಗಳೆ ರಗಳೆ ಸ್ಟಿಂಗ್ ಬ್ಯುರೋ ಪತ್ತೆ ಹಚ್ಚಿ ನಿಮ್ಮ ಮುಂದಿಡುತ್ತಿದೆ.!!!

ಏನು? ಎತ್ತ... ಎಂಬಿತ್ಯಾದಿ ಕುತೂಹಲವಿದ್ದರೆ ಅದಕ್ಕೆ ಈಗಲೇ ತಣ್ಣೀರು ಹಾಕಿ ಶಮನ ಮಾಡಿಕೊಳ್ಳಿ...

ಅದು ಶೀಘ್ರವೇ ಬೊಗಳೆ ರಗಳೆಯಲ್ಲಿ ಮೂಡಿಬರಲಿದೆಯಾದುದರಿಂದ ಈಗಲೇ ನೀವು ತಣ್ಣೀರು ಹಾಕಿಕೊಳ್ಳದಿದ್ದರೆ ಇಲ್ಲಿ ಪ್ರಕಟವಾದಾಗ ನಿಮ್ಮಲ್ಲಿ ಕುತೂಹಲದ ಬಿಸಿ ಇರಲಾರದು.

ನಿಮ್ಮ ಪ್ರತಿಗಳನ್ನು ಮೊದಲೇ ಕಾದಿರಿಸಿ. ಯಾಕೆಂದರೆ ಈಗಾಗಲೇ ನಾವು ಒಂದೂವರೆ ಪ್ರತಿಯನ್ನು ಮುದ್ರಿಸುತ್ತಿದ್ದೇವೆ. ಈ ಪ್ರಸಾರ ಸಂಖ್ಯೆಯನ್ನು ಎರಡೂವರೆಗೆ ಏರಿಸಬೇಕಿದ್ದರೆ ಇನ್ನೊಂದಾದರೂ ಪ್ರತಿ ಹೆಚ್ಚು ಮುದ್ರಿಸಬೇಕಾಗಬಹುದು. ಇದು ತುಂಬಾ ಕಷ್ಟ...

Wednesday, November 21, 2007

ಬೊಗಳೆ ಪದಕ್ಕೆ ಅವಮಾನ ಮಾಡಿದರು!!!

(ಬೊಗಳೂರು ವಿಶ್ವಾಸ ದ್ರೋಹಿ ಬ್ಯುರೋದಿಂದ)
ಬೊಗಳೂರು, ನ.21- ಸರಕಾರ ರಚನೆಯಾಗುವ ಮುನ್ನ "20 ತಿಂಗಳ ನಂತರ ಅಧಿಕಾರ ಹಸ್ತಾಂತರಿಸುತ್ತೇವೆ", ಆ ನಂತರ, ಸರಕಾರ ಉರುಳೇ ಹೋಯ್ತು ಎಂದಾದಾಗ, "ಕಾಂಗ್ರೆಸಿಗರು ತಮ್ಮ ಪಕ್ಷವನ್ನು ಒಡೆಯುತ್ತಿದ್ದಾರೆ" ಎಂಬ ನೆಪ ಹೇಳಿ, "ನೀವು ಸರಕಾರ ಮಾಡಿ, ನಾವು ಬೇಷರತ್ ಬೆಂಬಲ ನೀಡುತ್ತೇವೆ" ಮುಂತಾಗಿ ಇಲ್ಲ ಸಲ್ಲದ್ದೆಲ್ಲಾ ಬೊಗಳೆ ಬಿಟ್ಟು, ಈಗ ಕೈಕೊಟ್ಟು ಬೊಗಳೆ ಎಂಬ ಪದಕ್ಕೇ ಅವಮಾನ ಮಾಡಿರುವ ಸಂಚನ್ನು ಬೊಗಳೆ ಬ್ಯುರೋ ಬಯಲಿಗೆಳೆದಿದೆ.

ತಾವೇ ಬೊಗಳೆ ಬಿಟ್ಟು, ನಮ್ಮ ಬ್ಯುರೋಗೆ ಬೊಗಳೆ ಬಿಡಲು ಅವಕಾಶವೇ ದೊರೆಯದಂತೆ ಜೇಡೀಸ್ ಸಂಚು ರೂಪಿಸಿದ ಪ್ರಹಸನವು ಇಡೀ ಬೊಗಳೂರು ಸರಕಾರವನ್ನೇ ಅಲ್ಲಾಡಿಸಿರುವುದರಿಂದ ಕರುನಾಟಕ ಪ್ರಹಸನ ನಿರ್ದೇಶಕ ವೇದೇಗೌಡರನ್ನು ವಿಶೇಷವಾಗಿ ಸಂದರ್ಶಿಸಲಾಯಿತು. ಸಂದರ್ಶನದ ನಿದ್ರಾರೂಪ ಇಲ್ಲಿದೆ:

ನೀವು ಈ ರೀತಿಯೆಲ್ಲಾ ಬೊಗಳೆ ಬಿಟ್ಟು ನಮ್ಮನ್ನೇ ಏಕೆ ಮಟ್ಟ ಹಾಕಲು, ನಮಗೆ ಪರ್ಮನೆಂಟಾಗಿ ರಜೆ ಕೊಡಲು ಯೋಚಿಸುತ್ತಿದ್ದೀರಿ?

(ಆsssssಕಳಿಸುತ್ತಾ...) ನಿಮ್ಮ ಪತ್ರಿಕೆ ಬಿಡುತ್ತಿರುವ ಬೊಗಳೆಯಿಂದ ಜಾರಕಾರಣಿಗಳು ಯಾರು ಕೂಡ ತಲೆ ಎತ್ತದಂತಾಗದಂತಹ ಪರಿಸ್ಥಿತಿ ಸೃಷ್ಟಿಯಾಗುತ್ತಿದೆ. ಹಾಗಾಗಿ ನಾವು ನಿಮಗಿಂತ ಜೋರಾಗಿ ಬೊಗಳೆ ಬಿಟ್ಟು, ಬೀಜಪೀಗೆ ಅಧಿಕಾರದ ಆಸೆ ತೋರಿಸಿದೆವು. ಅದರ ಕೈಗೆ ತುಪ್ಪ ಹಚ್ಚಿದ ಪರಿಣಾಮ, ಅಧಿಕಾರದ ವಾಸನೆ ಗ್ರಹಿಸಿದ ಅದು ಅತ್ತಿತ್ತ ಶತಪಥ ಹಾಕಿತು.

ಹೋಗಲಿ, ನೀವೇಕೆ ಅಧಿಕಾರದ ಆಸೆ ತೋರಿಸಿ ಅವರಿಗೆ ಕೈ ಕೊಟ್ಟಿರಿ?

ನಾವು ಹಸ್ತ ಲಾಘವದ ರೀತಿ ಕೈ ಕೊಟ್ಟದ್ದು, ಅವರು ಕೈ ಹಿಡಿದೆಳೆದರು, ನಮಗೂ ಕಬಡ್ಡಿ ಆಟದ ನೆನಪು ಬಂದು ಕಾಲು ಹಿಡಿದೆಳೆದೆವು. ಒಟ್ಟಿನಲ್ಲಿ ಅವರು ಔಟ್ ಆದರಲ್ಲಾ...

ಅವರ ಮೇಲೆ ನಿಮಗೇಕೆ ಅಷ್ಟೊಂದು ಪ್ರೀತಿ?

ನೋಡಿ, ಅವರು ಬಹು ಸಂಖ್ಯಾತರಾದುದರಿಂದ ಅಲ್ಪ ಸಂಖ್ಯಾತರ ವಿರೋಧಿಗಳು. ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಮಾಡುತ್ತಾರೆ ಅಂತ ಎಲ್ಲರೂ ಹೇಳುತ್ತಾರೆ. ಅವರಿಗೆ ಸದನದಲ್ಲಿ 79 ಸ್ಥಾನವಿದೆ. ಅವರು ಬಹು ಸಂಖ್ಯಾತರು. ನಮಗೆ ಕೇವಲ 58 ಸ್ಥಾನಗಳು, ನಾವು ಅಲ್ಪ ಸಂಖ್ಯಾತರು. ಹಾಗಾಗಿ ನಮ್ಮ ಮೇಲೆ ದೌರ್ಜನ್ಯ ನಡೆಸಬಹುದಾಗಿದೆ. ಇದಕ್ಕಾಗಿಯೇ ಕಾಲಡಿಯ ಹಾಸಿಗೆಯನ್ನು ನಾವು ಹಿಡಿದೆಳೆದೆವು.

ಮತ್ತೆ ಅವರು, ಅಲ್ಪಸಂಖ್ಯಾತರಾದ ನಮ್ಮನ್ನು ಮಾಧ್ಯಮಗಳೆದುರು ಅಲ್ಪರು ಮತ್ತು ಸಂಖ್ಯಾತರು ಎಂದು ಪ್ರತ್ಯೇಕವಾಗಿ ವಿಭಜಿಸಲೂ ನೋಡಿದರು. ಈ ಹಿಂದೆ ನಾವು ಮಾತು ಮುರಿದದ್ದಕ್ಕೆ ನಮ್ಮನ್ನು ಅಲ್ಪರು ಎಂದು ಹೊಗಳಿದರು. ನೀವೇ ಹೇಳಿ, ಹೀಗೆ ಮಾಡಿದರೆ ನೀವಾದರೂ ಸುಮ್ಮನಿರುತ್ತಿದ್ದಿರಾ?

ಈ ಮಧ್ಯೆ, ವಚನಭ್ರಷ್ಟ ಶ್ರೇಷ್ಠ ಪ್ರಶಸ್ತಿಯ ಬಳಿಕ ವಿಶ್ವಾಸದ್ರೋಹಿ ಪ್ರಶಸ್ತಿಯನ್ನೂ ಜಂಟಿಯಾಗಿ ಪಡೆದುಕೊಂಡಿರುವ ಜೇಡೀಸಿನ ಅಪ್ಪ-ಮಕ್ಕಳಿಗೆ ವಿಶ್ವಾದ್ಯಂತದಿಂದ ಕ್ಯಾಕರಿಸಿ ಅಭಿನಂದನೆಯ ಮಹಾಪೂರವೇ ಹರಿದುಬರುತ್ತಿದೆ ಎಂದು ತಿಳಿದುಬಂದಿದೆ.

ಇದಲ್ಲದೆ, ವಿಧಾನಸೌಧದಲ್ಲಿ ಅತೀ ಕಡಿಮೆ ಶಾಸಕರನ್ನು ಹೊಂದಿದ ಪಕ್ಷವಾಗಿ ಒಂದು ರಾಷ್ಟ್ರೀಯ ಪಕ್ಷವನ್ನೇ ಗಡಗಡ ನಡುಗಿಸಿದ, ಅವರ ಬಾಯಿಗೆ ಮಣ್ಣು ಹಾಕಿದ ವಿಶೇಷ ಸಾಧನೆ ಮಾಡಿದ್ದಕ್ಕಾಗಿ ಮಣ್ಣಿನ ಮಗನನ್ನು ಅಲ್ಲಲ್ಲಿ ಅಭಿನಂದಿಸಲಾಗಿದೆ ಮತ್ತು ಅಭಿನಂದಿಸಲಾಗುತ್ತಿದೆ ಎಂದು ತಿಳಿದುಬಂದಿದೆ.

Tuesday, November 20, 2007

ಮಾತಿಗೆ ತಪ್ಪಿದ್ದು ಒಡೆಯೋರಪ್ಪನೇ: ವದಿಯೋಗೌಡ್ರ ಉವಾಚ!

[ಮಣ್ಣಿನ ಮಗನ ಡಬಲ್ ಡಿಗ್ರಿ: ಮಣ್ಣಿನ ಅಪ್ಪ ಹರ್ಷ]
(ಬೊಗಳೂರು ಡಿಗ್ರಿ ಕಾಳಸಂತೆ ಬ್ಯುರೋದಿಂದ)
ಬೊಗಳೂರು, ನ.20- ರಾಜಕೀಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ತನ್ನ (ಮಣ್ಣಿನ) ಮಗನ ಬಗ್ಗೆ ವದಿಯೋಗೌಡರು ಭಾರೀ ತೃಪ್ತಿ ವ್ಯಕ್ತಪಡಿಸಿದ್ದಾರೆ.

ಸ್ನಾತಕ ಪದವಿಗೆ ಸಮಾನವಾದ ವಚನ ಭ್ರಷ್ಟ ಎಂಬ ಡಿಗ್ರಿಯನ್ನು ಕೆಲವೇ ದಿನಗಳ ಹಿಂದಷ್ಟೇ ಪಡೆದಿರುವ ಅವರು, ಇದೀಗ "ವಿಶ್ವಾಸ ದ್ರೋಹಿ" ಎಂಬ ಸ್ನಾತಕೋತ್ತರ ಪದವಿಯನ್ನೂ ಇಷ್ಟು ಶೀಘ್ರವಾಗಿ ಪಡೆದುಕೊಂಡಿರುವುದು ಬಹುಶಃ ಈ ನಾಟಕ ಇತಿಹಾಸದಲ್ಲೇ ಒಂದು ದಾಖಲೆ ಎಂದು ತಮ್ಮ ಮಗನ ಪ್ರತಿಭೆಯನ್ನು ಅವರು ಕೊಂಡಾಡಿದ್ದಾರೆ.

ಈ ವಿಶ್ವಾಸ ದ್ರೋಹಿ ಪಟ್ಟ ಕಟ್ಟಿಸಿಕೊಳ್ಳಲು ತಾವು ಪಟ್ಟ ಶ್ರಮವನ್ನು ಸಾದ್ಯಂತವಾಗಿ ವಿವರಿಸಿದ ಅವರು, ಮಾತಿಗೆ ತಪ್ಪಿದ್ದು ತಾವಲ್ಲ ಎಂದು ಉದಾಹರಣೆಯೊಂದಿಗೆ ವಿವರಿಸಿದ್ದಾರೆ.

ಮಾತಿಗೆ ತಪ್ಪಿದ್ದು ಒಡೆಯೋರಪ್ಪನೇ. ಮೊನ್ನೆ ಮೊನ್ನೆ ಡೆಲ್ಲಿಗೆ ಹೋಗಿ ಎಲ್ಲಾ ಶಾಸಕರನ್ನೂ ಕರೆದೊಯ್ದು, ಆಯಮ್ಮನೆದುರು ನಮಗೆ ಸಂಖ್ಯಾಬಲವಿದೆ, ಸರಕಾರ ರಚನೆಗೆ ಅವಕಾಶ ಕೊಡಿ ಅಂತೆಲ್ಲಾ ಒಡೆಯೋರಪ್ಪರು ಹೇಳಿದ್ದು ಸುಳ್ಳಲ್ಲವೇ? ಸದನದಲ್ಲಿ ಬಹುಮತ ದೊರೆತೇ ದೊರೆಯುತ್ತದೆ ಅಂತೆಲ್ಲಾ ಆತ್ಮವಿಶ್ವಾಸದಿಂದ ಮಾಧ್ಯಮಗಳೆದುರು ಹೇಳಿದ್ದು ಬೊಗಳೆಯಲ್ಲವೇ? ಎಂದು ಕೇಳಿದ ವದಿಯೋಗೌಡರು, ಅದೆಲ್ಲಾ ಇರಲಿ. ಹೋಗಿ ಹೋಗಿ ಮಿತ್ರಪಕ್ಷವಾದ ನಮ್ಮ ಮೇಲೆ "ಸಂಪೂರ್ಣ ವಿಶ್ವಾಸವಿದೆ, ನಾವು ಬೆಂಬಲ ಕೊಡ್ತೇವೆ, ಕೊಡಲ್ಲ ಅಂತನ್ನೋದೆಲ್ಲಾ ನಿಮ್ಮಂತ ಮಾಧ್ಯಮಗಳ ಸೃಷ್ಟಿ" ಅಂತೆಲ್ಲಾ ಎಷ್ಟೊಂದು ಆತ್ಮವಿಶ್ವಾಸ ಪ್ರದರ್ಶಿಸುತ್ತಾ ಹೇಳಿದ್ದರಲ್ಲಾ... ಇದನ್ನೂ ಸುಳ್ಳಾಗಿಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.

ತಮ್ಮ ಅಧಿಕಾರದಾಸೆಗಾಗಿ ಆ ಪಾಪದ ರಾಜ್ಯಪಾಲರನ್ನು ಎಷ್ಟು ಬಾರಿ ದೆಹಲಿಗೆ ಓಡಾಡಿಸಿದ್ದಾರೆ...!!! ಇಷ್ಟು ಸಂಖ್ಯಾ ಬಲವಿದ್ದರೂ ಸರಕಾರ ರಚನೆಗೆ ಅವಕಾಶ ನೀಡದೆ ರಾಜಕೀಯ ಮಾಡುತ್ತಿದ್ದಾರೆ ಎಂದೆಲ್ಲಾ ಹೇಳಿ, ಅತ್ತೂ ಕರೆದು, ರಾಜ್ಯಪಾಲರ ಮೇಲೆ, ಪ್ರಧಾನಿ ಮೇಲೆ ಒತ್ತಡ ಹೇರಿ, ಮುಖ್ಯಮಂತ್ರಿ ಕುರ್ಚಿ ಮೇಲೆ ಕುಕ್ಕರಿಸಿದರು. ಆದರೆ ಈಗ ಅವರು ಮುಖ್ಯಮಂತ್ರಿ ಎಂಬುದು ಕೂಡ ಸುಳ್ಳೇ ಅಲ್ಲವೇ ಎಂದು ಕೂಡ ಪ್ರಶ್ನಿಸಿದರು.

ಒಂದು ಬಾರಿ ಕೈಕೊಟ್ಟ ನಾವು, ಮತ್ತೆ ಸರಕಾರ ರಚನೆಗೆ ಬೇಷರತ್ತು ಬೆಂಬಲ ಕೊಡ್ತೀವಿ ಅಂತ ಹೇಳಿದಾಗ, ಅವರೇಕೆ ಸರಕಾರ ರಚನೆಗೆ ಒಪ್ಪಿಕೊಳ್ಳಬೇಕಿತ್ತು ಎಂದು ಬೊಗಳೆ ರಗಳೆ ಬ್ಯುರೋವನ್ನೇ ತದೇಕಚಿತ್ತದಿಂದ ನೋಡುತ್ತಾ ಪ್ರಶ್ನಿಸಿದ ಅವರು, ಬೇಷರತ್ತು ಅಂತ ನಾವೆಂದೂ ಎಲ್ಲಿಯೂ ಹೇಳಿಲ್ಲ ಎಂದು ತಿಳಿಸಿದ್ದಾರೆ.

ನಾವು ಹೇಳಿದ "ಬೇರೆಷರತ್ತು" ಎಂಬುದನ್ನು ಮಾಧ್ಯಮಗಳು ಅಕ್ಷರ ಲೋಪ ಮಾಡಿ, 'ರೆ' ತೆಗೆದು ಪ್ರಕಟಿಸಿದ್ದವು. ಹಾಗಾಗಿ ಇದು ಬೇಷರತ್ತು ಎಂದೇ ಪ್ರಕಟವಾದವು. ಈ ಮಾಧ್ಯಮಗಳಿಗೆ ಅಕ್ಷರ ತಪ್ಪು ಮಾಡುವಾಗ ಸ್ವಲ್ಪವೂ ಬುದ್ಧಿ ಇರುವುದಿಲ್ಲವೇ ಎಂದು ಅವರು ಮತ್ತೊಂದು ಪ್ರಶ್ನೆಯ ಬಾಣ ಎಸೆದರು.

Saturday, November 17, 2007

ನಾಯಿಪಾಡಿಗಾಗಿ ನಾಯಿಗೇ ತಾಳಿ ಕಟ್ಟಿದ!

(ಬೊಗಳೂರು ಮ್ಯಾರೇಜ್ ಬ್ಯುರೋದಿಂದ)
ಬೊಗಳೂರು, ನ.17- ನಾಯಿಯನ್ನು ಅದು ಕೂಡ ಹೆಣ್ಣು ನಾಯಿಯನ್ನು ಮದುವೆಯಾದ ಯುವಕನೊಬ್ಬ ತನ್ನ ಕ್ರಮವನ್ನು ಬೊಗಳೆ ರಗಳೆ ಎದುರು ಸಮರ್ಥಿಸಿಕೊಂಡಿದ್ದಾನೆ.

ತಾನು ಹಿರಿಯರು, ಅನುಭವಿಗಳ ಮಾತನ್ನು ಸದಾ ಪಾಲಿಸುತ್ತೇನೆ. ನಮ್ಮದು ಗಮಾರಸ್ವಾಮಿಯಂತಹ ಪಿತೃವಾಕ್ಯ ಪರಿಪಾಲಕರ ತಲೆಮಾರು. ಅಂತೆಯೇ ನಮ್ಮ ಹಿರಿಯರು ಹೇಳುತ್ತಿದ್ದುದು ಒಂದೇ... ಮದುವೆಯಾದವರದು ನಾಯಿಪಾಡು ಅಂತ. ಹಾಗಾಗಿ ನಾಯಿಯನ್ನೇ ಮದುವೆಯಾದರೆ ನಮ್ಮದು ಮನುಷ್ಯಪಾಡು ಆದೀತು ಎಂದು ಪ್ರಯೋಗ ಮಾಡಲು ಈ ರೀತಿ ಮಾಡಿರುವುದಾಗಿ ಆತ ತಿಳಿಸಿದ್ದಾನೆ.

ಅಲ್ಲದೆ ಎರಡು ನಾಯಿಗಳು ಮದುವೆಯಾಗುವುದಕ್ಕಿಂತ, ಒಂದು ನಾಯಿ ಒಂದು ಮನುಷ್ಯ ಮದುವೆಯಾದರೆ ಕನಿಷ್ಠ ಒಬ್ಬರ ಪಾಡು ಬದಲಾದೀತು ಎಂಬ ಪ್ರಯೋಗವೂ ತನ್ನ ಯೋಜನೆಯಲ್ಲಿ ಸೇರಿದೆ ಎಂದು ಆತ ತಿಳಿಸಿದ್ದಾನೆ.

ಇದಕ್ಕೆ ಹಲವಾರು ಉದಾಹರಣೆಗಳ ಮೂಲಕ ನಮ್ಮ ಒದರಿಗಾರರನ್ನು ಕಂಗೆಡಿಸಿದ ಅವರು, ಓದುಗರೂ ಕೂಡ ಮದುವೆಯಾಗುವ ಬಗ್ಗೆ ಹಿಂದೆ ಮುಂದೆ ಯೋಚಿಸುವಂತಹ ಬೆಚ್ಚಿ ಬೀಳಿಸುವ ಸಂಗತಿಗಳನ್ನು ಕೂಡ ಉಸುರಿದ್ದಾನೆ.

ನಮ್ಮಜ್ಜ ಮತ್ತು ಅಜ್ಜಿ (ಪ್ರತ್ಯೇಕವಾಗಿ ಕರೆದು) ಹೇಳುತ್ತಿದ್ದುದನ್ನು ಕೇಳಿಯೇ ಜೀವನದಲ್ಲಿ ಒಂದೇ ಮದುವೆ ಸಾಕಪ್ಪಾ... ತಾನು ಮತ್ತೊಮ್ಮೆ ಎಂದಿಗೂ ಮದುವೆಯಾಗುವುದಿಲ್ಲ ಎಂದು ನಿರ್ಧರಿಸಿರುವುದಾಗಿ ಆತ ಹೇಳಿದ್ದಾನೆ.

ನನಗೆ ದೆವ್ವ ಭೂತಗಳ ಬಗ್ಗೆ ಹೆದರಿಸ್ತೀಯಲ್ಲಾ... ಅವುಗಳು ಕಿಟಾರನೆ ಕಿರುಚುತ್ತವೆ ಎಂದೆಲ್ಲಾ ಹೇಳಿದ್ದೆಯಲ್ಲಾ... ಅದನ್ನು ನೋಡಬೇಕಿದ್ರೆ ಏನು ಮಾಡಬೇಕು ಅಂತ ನಾನು ಮತ್ತು ತಂಗಿ ಇಬ್ಬರೂ ಕೇಳಿದ್ದೆವು. ಆಗ ಅಜ್ಜ, "ಮದುವೆಯಾದ ನಂತರ ಎಲ್ಲವೂ ತಿಳಿಯುತ್ತದೆ" ಅಂತ ತಿಳಿಯುತ್ತದೆ ಎಂದು ಹೇಳಿದ್ದರು ಎಂಬ ಒಂದು ಉದಾಹರಣೆ ನೀಡಿದ.

ಮತ್ತೊಂದು ಬಾರಿ, ನಾವಿಬ್ಬರೂ ಬೆಳೆದು ದೊಡ್ಡವರಾದ ಬಳಿಕ ಶಾಲೆ ಕಾಲೇಜುಗಳಿಗೆ ಹೋಗುತ್ತಾ, ಬೊಗಳೆ ರಗಳೆ ಓದುತ್ತಾ ಇದ್ದೆವು. ಆಗ ಆರಂಭವಾದ ನಗು ಯಾವತ್ತೂ ನಿಂತಿರಲಿಲ್ಲ. ಈ ನಗು ರೋಗವೇ ಇರಬಹುದೇ ಅಂತ ಅಜ್ಜನಲ್ಲಿ ಕೇಳಿದ್ದೆವು. ಅದಕ್ಕೆ ಅವರು, ನಿಮ್ಮ ನಗು ನಿಲ್ಲಬೇಕಿದ್ದರೆ ನೀವು ಮದುವೆಯಾಗಬೇಕು ಎಂದೂ ಅಪೂರ್ವ ಸಲಹೆ ನೀಡಿದ್ದರು ಎಂಬ ಮತ್ತೊಂದು ಬಾಂಬ್ ಕೂಡ ಸಿಡಿಸಿದ.

ಈ ಎಲ್ಲಾ ಕಾರಣಗಳಿಂದಾಗಿ ತಾನು ಬೊಗ್ಗಿ (ಹೆಣ್ಣು ಶ್ವಾನ)ಗೆ ತಾಳಿ ಕಟ್ಟಿರುವುದಾಗಿ ಆತ ಹೇಳಿದ್ದಾನೆ. ತಾಳಿ ಕಟ್ಟುವ ಸಮಯದಲ್ಲಿ ಬೊಗ್ಗಿಯು ನಾಚಿ ನೀರಾಗಿತ್ತು. ಡಾಗ್ ಬಿಸ್ಕಿಟನ್ನು ಮತ್ತೊಬ್ಬರು ಅದರ ಎದುರಿನಲ್ಲಿ ಹಿಡಿದರು. ಹಾಗಾಗಿ ಅದನ್ನು ಆ ನಾಯಿ ತಿನ್ನುವ ಹವಣಿಕೆಯಲ್ಲಿದ್ದಾಗ, ತಾಳಿ ಕಟ್ಟಿ ಬಿಟ್ಟೆ ಎಂದು ತನ್ನ ಸಾಧನೆಯನ್ನಾತ ವಿವರಿಸಿದ್ದಾನೆ.

ಆದರೆ ಕುಟುಂಬ ಕಲ್ಯಾಣ ಯೋಜನೆ ಬಗ್ಗೆ ಬೊಗಳೆ ರಗಳೆ ಬಿಸಾಕಿದ ಪ್ರಶ್ನೆ ಹೆಕ್ಕಿಕೊಳ್ಳಲು ಆತ ನಿರಾಕರಿಸಿದ್ದಾನೆ. ಉತ್ತರಿಸದೆ ಪರಾರಿಯಾಗಿದ್ದಾನೆ ಎಂದು ತಿಳಿಸಲು ವಿಷಾದಿಸುತ್ತೇವೆ.

Thursday, November 15, 2007

ಎಲ್ಲರೂ ಜೈಲಲ್ಲಿದ್ದರೆ ಚುನಾವಣೆ ಸುಲಭ

(ಬೊಗಳೂರು ವಿದೇಶೀ ಸಂಚಾರ ಬ್ಯುರೋದಿಂದ)
ಬೊಗಳೂರು, ನ.15- ಪಾತಕಿಸ್ತಾನದಲ್ಲಿ ಎಲ್ಲರನ್ನೂ ಒಂದೇ ಕಡೆ ಒಟ್ಟುಗೂಡಿಸಿದಲ್ಲಿ ಮಹಾ ಚುನಾವಣೆಗಳನ್ನು ನಡೆಸಲು ಸುಲಭವಾಗುತ್ತದೆ ಎಂಬ ಕಾರಣಕ್ಕೆ ಸಾಮಾನ್ಯ (ಜನರಲ್) ಸರ್ವಾಧಿಕಾರಿ ಮುರ್ವೇಜ್ ಪುಷರಫ್ ಸಮರ್ಥಿಸಿಕೊಂಡಿದ್ದಾರೆ.

ಬೊಗಳೆ ರಗಳೆಗೆ ವಿಶೇಷ ಸಂದರ್ಶನ ನೀಡುತ್ತಿದ್ದ ಅವರು, "ಅದು ಹೇಗೆ" ಎಂದು ಕಕ್ಕಾಬಿಕ್ಕಿಯಾಗಿ ಕೇಳಿದ ಸಂದರ್ಶಕರ ಪ್ರಶ್ನೆಗೆ ಮತ್ತಷ್ಟು ಕಕ್ಕಾಬಿಕ್ಕಿಯಾಗಿಯೇ ಉತ್ತರಿಸತೊಡಗಿದರು.

ನೋಡಿ ನಮ್ಮಲ್ಲಿ ಉಗ್ರಗಾಮಿಗಳೇ ಎಲ್ಲೆಡೆ ರಾರಾಜಿಸುತ್ತಿದ್ದುದರಿಂದ ವಿಶ್ವಮಟ್ಟದಲ್ಲಿ ನಮ್ಮ ದೇಶವು ಪಾತಕಿಸ್ತಾನ ಎಂಬ ಪ್ರಸಿದ್ಧಿ ಗಳಿಸಿದೆ. ನಾನು ಸಮವಸ್ತ್ರ ತೊಟ್ಟುಕೊಂಡು ದೇಶದ ಆಡಳಿತ, ಸೈನ್ಯದ ಆಡಳಿತ, ಐಎಸ್ಐ ಕುತಂತ್ರಗಳು, ಭಾರತದ ವಿರುದ್ಧ ಉಗ್ರರ ಛೂಬಿಡುವಿಕೆ, ಅಮೆರಕದೊಂದಿಗೆ ಕಪಟ ಮೈತ್ರಿ... ಇವೆಲ್ಲವನ್ನೂ ನಾನೊಬ್ಬನೇ ನಿಭಾಯಿಸಬೇಕಾಗುತ್ತದೆ. ಇಷ್ಟೆಲ್ಲದರ ಮಧ್ಯೆ, ಈ ದೇಶದ ಹಾಳು ಪ್ರಜೆಗಳಿಗೂ ನಾನು ಆಗಾಗ ಉತ್ತರ ನೀಡಬೇಕಾಗುತ್ತದೆ ಎನ್ನುತ್ತಾ ಅವರು ಒಂದು ನಿಮಿಷ ಮಾತು ನಿಲ್ಲಿಸಿ, ನೀರು ಕುಡಿದರು.

ನಮಗೂ ನೀರು ಕುಡಿಸಿ ಮುಂದುವರಿಸಿದ ಅವರು, ಎಲ್ಲವನ್ನೂ ಏಕಕಾಲಕ್ಕೆ ಮಾಡುವುದರೊಂದಿಗೆ ಚುನಾವಣೆಯೆಂಬ ಕಾಟಾಚಾರವನ್ನೂ ಮುಗಿಸಬೇಕಾಗುತ್ತದೆ. ಹಾಗಾಗಿ ಉಗ್ರಗಾಮಿಗಳು, ರಾಜಕಾರಣಿಗಳು, ಪತ್ರಕರ್ತರು, ಹೋರಾಟಗಾರರು, ಪ್ರಜಾಪ್ರಭುತ್ವ ಪ್ರಜಾಪ್ರಭುತ್ವ ಎಂದು ಬೊಬ್ಬಿಡುವ ಕಾರ್ಯಕರ್ತರು... ಇವರೆಲ್ಲರನ್ನೂ ಒಂದೇ ಕಡೆ ಕೂಡಿ ಹಾಕಿದರೆ ಚುನಾವಣೆ ಸುಲಭವಾಗುತ್ತದೆ. ಅವರನ್ನೆಲ್ಲಾ ಒಂದೇ ಬಾರಿ ಬೆದರಿಸಿ ಓಟು ಹಾಕಿಸಿದರೆ ಸಮಯ ಉಳಿತಾಯವಾಗುತ್ತದೆ. ಇದೇ ಕಾರಣಕ್ಕೆ ನಾವು ನಮ್ಮ ದೇಶದ ಜೈಲು ಜೈಲುಗಳನ್ನು ತುಂಬಿಸತೊಡಗಿದ್ದೇವೆ. ಇದರಿಂದ ಎಲ್ಲರೂ ಒಂದೇ ಕಡೆ ಸಿಗುವಂತಾಗುತ್ತಾರೆ ಎಂಬ ಸಮರ್ಥನೆ ನೀಡಿದರು.

ಉತ್ತರ ಕೇಳಿ ತತ್ತರಿಸಿ ಅಲ್ಲಿಂದ ಎದ್ದು ಹೊರಡುವುದು ಹೇಗೆ ಎಂದು ಚಡಪಡಿಸುತ್ತಿದ್ದ ನಮ್ಮ ಒದರಿಗಾರರನ್ನು ಎತ್ತಿ ಕುಕ್ಕಿ ಒತ್ತಿ ಕುಳ್ಳಿರಿಸಿದ ಅವರು, ಇನ್ನಷ್ಟು ಹೇಳಲಿಕ್ಕಿದೆ ಎಂದು ಬಾಯಿ ತೆರೆಯುತ್ತಿದ್ದರು. ಅವರು ದೊಡ್ಡದಾಗಿ ಬಾಯಿ ತೆರೆದಾಗ, ಪೊದೆ ಮೀಸೆಯು ಅವರ ಕಣ್ಣಿಗೆ ಅಡ್ಡ ಬಂದ ತಕ್ಷಣವೇ ಒದರಿಗಾರರು ಅಲ್ಲಿಂದ ಕಾಲು ಕಿತ್ತು ಹಿಂದೆ ತಿರುಗಿಯೂ ನೋಡದೆ ಒಂದೇ ಉಸಿರಿನಿಂದ ಓಡಿ ವಾಘಾ ಗಡಿ ದಾಟಿ ಭಾರತದೊಳಕ್ಕೆ ಕಾಲಿರಿಸಿದ ಬಳಿಕವೇ ಉಸಿರೆಳೆದುಕೊಂಡರು ಎಂದು ಗೊತ್ತಾಗಿದೆ.

ಈ ಒದರಿಗಾರರನ್ನೂ ಸಂದರ್ಶಿಸಲಾಯಿತು. ಒಂದೇ ಪ್ರಶ್ನೆ: "ಹೀಗೇಕೆ ಓಡಿ ಬಂದಿರಿ?". ಅದಕ್ಕೆ ಅವರು ನೀಡಿದ ಉತ್ತರ: "ನಮ್ಮನ್ನೂ ಒಂದೇ ಕಡೆ ಕೂಡಿ ಹಾಕುವ ಪ್ರಾಣಿಗಳ ಪಟ್ಟಿಗೆ ಸೇರಿಸಿದರೆ ಎಂಬ ಆತಂಕ"!!!

Tuesday, November 13, 2007

ಕರು-ನಾಟಕದ ಹೊಸ ಬಿಂಕದ ಅಂಕ ಆರಂಭ

(ಬೊಗಳೂರು ಭವಿಷ್ಯ ವಿಶ್ಲೇಷಣೆ ಬ್ಯುರೋದಿಂದ)
ಬೊಗಳೂರು, ನ.13- ಕೊನೆಗೂ ಬೊಗಳೂರಿನ ರಾಜಧಾನಿಯಾಗಿರುವ ಕರು-ನಾಟಕದಲ್ಲಿ ಹೊಸ ಸರಕಾರವು ಅಸ್ತಿತ್ವಕ್ಕೆ ಬಂದು, ನಾಟಕದ ಹಳೆಯ ಅಂಕಕ್ಕೆ ಪರದೆ ಬಿದ್ದು, ಅಸ್ಥಿರತೆ, ಕಾಲೆಳೆಯುವ ರೋಚಕ ದೃಶ್ಯಗಳಿರುವ ಹೊಸ ಅಂಕವೊಂದಕ್ಕೆ ನಾಂದಿ ಹಾಡಲಾಗಿದೆ.

ಕಾಲೆಳೆಯುವ ಅಂಕ ಎಂದು ಇದನ್ನು ಹೆಸರಿಸಲಾಗಿದೆ. "ವಚನ ಭ್ರಷ್ಟ" ಎಂಬ ಪದವನ್ನು ಅನಾಮತ್ತಾಗಿ ತಮ್ಮ ತಲೆಯಿಂದ ಅತ್ಯಂತ ಸುಲಭವಾಗಿ ತೊಲಗಿಸಿಕೊಂಡ ಮಾಜಿ ಮುಮ ಕುಮಾರ ಸ್ವಾಮೀಜೀ ಅವರು, ಪಿತೃವಾಕ್ಯ ಪರಿಪಾಲನೆ ನಿಮಿತ್ತ "ಕೋಮುವಾದಿ"ಗಳ ಸಂಗ ಕಳಚಿಕೊಳ್ಳುವುದು ಹೇಗೆ ಎಂಬ ಬಗ್ಗೆ ಗಂಭೀರ ತಪಸ್ಸಿಗೆ ಆರಂಭಿಸಿದ್ದಾರೆ ಎಂಬುದನ್ನು ನಮ್ಮ ಬುಡರಹಿತ ಮೂಲಗಳು ವರದಿ ಮಾಡಿವೆ.

ಆರಂಭದ ದಿನವೇ ತಮ್ಮವರು ಹೊಸ ವೇದಿಕೆಯಲ್ಲಿ ಕಾಲೆಳೆದಾಟ ಶುರು ಮಾಡದಂತೆ ತಡೆ ಹಿಡಿಯುವ ನಿಟ್ಟಿನಲ್ಲಿ ಜೆಡಿಎಸ್ ಗೂಡಿನ ಬೀಗ ಹಾಕಲಾಗಿತ್ತು. ಈ ಕಾರಣದಿಂದಾಗಿ ಜೇಡಿಸ್‌ನಿಂದ ಯಾರೊಬ್ಬರೂ ಪ್ರಮಾಣ ವಚನ ಸ್ವೀಕಾರಕ್ಕೆ ಆಗಮಿಸಿರಲಿಲ್ಲ.

ಇದರ ಹಿಂದಿನ ಅನೃತವಾದ ಕಾರಣ ಏನು ಎಂದು ಸಂಶೋಧನೆ ನಡೆಸಿದಾಗ ಎರಡು ಕಾರಣಗಳು ದೊರೆತಿವೆ. ಒಂದನೆಯದು ಪ್ರಮಾಣ ವಚನ ಎಂಬ ಶಬ್ದದ ಉತ್ತರಾರ್ಧದಲ್ಲಿರುವ "ವಚನ" ಎಂಬ ಪದ. ಅದರ ಉತ್ತರ ಪ್ರತ್ಯಯವಾಗಿರುವ "ಭ್ರಷ್ಟ" ಎಂಬ ಪದವನ್ನಷ್ಟೇ ನೋಡಿದಾಕ್ಷಣ ಎಲ್ಲಾ ರಾಜಕಾರಣಿಗಳು ನೆನಪಾಗುತ್ತಾರಾದರೂ, ಎರಡೂ ಸೇರಿಕೊಂಡ ತಕ್ಷಣ ನೆನಪಾಗುವುದು ಜೇಡೀಎಸ್ಸೇ!

ಎರಡನೇ ಕಾರಣ ಎಂದರೆ, ಈಗಲೇ ಕಾಲು ಕೆರೆದು ಜಗಳಕ್ಕೆ ತಮ್ಮ ಗೂಡಿನೊಳಗಿದ್ದವರನ್ನು ಬಿಟ್ಟೇ ಬಿಟ್ಟರೆ, ಜಗಳ ಅನ್ನೋದು ಅಷ್ಟು ಪರಿಣಾಮಕಾರಿಯಾಗಿರುವುದಿಲ್ಲ. ಅವರನ್ನು ಮತ್ತಷ್ಟು ಕಾಲ ಕಟ್ಟಿ ಹಾಕಿದರೆ, ಮನಸ್ಸಿನೊಳಗಿನ ರೋಷ, ಆವೇಶ, ತುಡಿತ ಎಲ್ಲವೂ ಶೇಖರಣೆಯಾಗಿ, ಅದು ಜ್ವಾಲಾಮುಖಿ ಹಂತಕ್ಕೆ ತಲುಪುತ್ತದೆ. ಅವರನ್ನು ಸರಿಯಾದ ಸಮಯಕ್ಕೆ ಗೂಡಿನಿಂದ ಹೊರ ಬಿಟ್ಟರೆ ಭಾರೀ ವೇಗದಿಂದ, ಧಾವಂತದಿಂದ, ಬಲವಾಗಿ ಕಾಲು ಕೆರೆಯಬಹುದು ಎಂಬ ಚಾಣಾಕ್ಷ ನೀತಿ. ಕುರ್ಚಿಯೂರಪ್ಪ ಅವರು ಕುಳಿತಿರುವ ಕುರ್ಚಿಯಡಿ ಇರುವ ರತ್ನಗಂಬಳಿಯನ್ನು ಸುಲಭವಾಗಿ ಸೆಳೆಯಬಹುದು ಎಂಬುದು ಅತ್ಯಂತ ಪ್ರಮುಖ ತಂತ್ರಗಾರಿಕೆ.

ಒಟ್ಟಿನಲ್ಲಿ ಇನ್ನು ಹತ್ತೊಂಬತ್ತು ತಿಂಗಳ ಅವಧಿಯಲ್ಲಿ ಮತ್ತಷ್ಟು ರಂಜನಾತ್ಮಕ ಕ್ಷಣಗಳು ರಾಜ್ಯದ ಜನತೆಗೆ ಕಾದಿವೆ. ಅತ್ಯಂತ ಹೊಸ ಹೊಸ ಪದ ಪ್ರಯೋಗಗಳೂ ಈ ವೇಳೆ ಡಿಕ್ಷ-ನರಿಗೆ ಸೇರ್ಪಡೆಯಾಗಲಿವೆ ಎಂದು ನಮ್ಮ ಬೊಗಳೂರು ಬ್ಯುರೋ ಕುಳಿತಲ್ಲಿಂದಲೇ ವದರಿ ಮಾಡುತ್ತಿದೆ.

Saturday, November 10, 2007

ದೇಶಾದ್ಯಂತ ಎಲ್ಲರೂ ದಿವಾಳಿ

(ಬೊಗಳೂರು ಬೌದ್ಧಿಕ ದಿವಾಳಿ ಬ್ಯುರೋದಿಂದ)
ಬೊಗಳೂರು, ನ.10- ದೇಶದೆಲ್ಲೆಡೆ ಎಲ್ಲರೂ ಭಕ್ತಿ, ಸಡಗರ, ಅಬ್ಬರದಿಂದ ದಿವಾಳಿಯಾಗುವ ಸಂಭ್ರಮದಲ್ಲಿರುವುದು ಬೊಗಳೂರಿನಲ್ಲಿಯೂ ಚುರುಕು ಮುಟ್ಟಿಸಿದೆ.

ಮಕ್ಕಳು ಪಟಾಕಿಗಳನ್ನು ಸುಟ್ಟಮೇಲೆ ಕೈಸುಟ್ಟುಕೊಂಡರೆ ಅವರ ಅಪ್ಪಂದಿರು ಕಿಸೆ ಸುಟ್ಟುಕೊಂಡು ಬಾಲ ಸುಟ್ಟಬೆಕ್ಕುಗಳಂತೆ ಅತ್ತಿಂದಿತ್ತ ಶಥಪಥ ಹಾಕುವ ದೃಶ್ಯ ಸರ್ವೇ ಸಾಮಾನ್ಯವಾಗಿತ್ತು.

ಇದೇ ವೇಳೆ, ಈಗಾಗಲೇ ಕೇಂದ್ರ ಸರಕಾರವು ಆವಶ್ಯಕ ವಸ್ತುಗಳ ಬೆಲೆಯನ್ನು ಆಕಾಶ ಬುಟ್ಟಿಯಂತೆ ಮಾಡಿ ರಾಕೆಟ್ ಮೂಲಕ ಆಗಸಕ್ಕೆ ಉಡಾಯಿಸಿದ್ದರೆ, ದೇಶಾದ್ಯಂತ ಪ್ರಜೆಗಳು ಅದನ್ನು ನೋಡುತ್ತಾ ಭಕ್ತಿ ಸಡಗರದಿಂದ ಅಲ್ಲಿಂದಲೇ ಕೈ ಮುಗಿದು ತಮ್ಮ ಹತಾಶೆಯನ್ನು ಸಲ್ಲಿಸಿದರು.

ಪಟಾಕಿಗಳ ಬೆಲೆ, ತರಕಾರಿಗಳ ಬೆಲೆ, ಬೇಳೆ ಕಾಳುಗಳು, ಆಹಾರ ಇತ್ಯಾದಿ ಬದುಕುವುದಕ್ಕೆ ಬೇಕಾಗಿರುವ ಬೆಲೆಗಳೆಲ್ಲವೂ ಆಕಾಶದಲ್ಲೇ ನಕ್ಷತ್ರಗಳಂತೆ ಬೆಳಗುತ್ತಿರುವುದರಿಂದಾಗಿ ಎಲ್ಲಾ ಪ್ರಜೆಗಳು ಕೂಡ ಆಗಸದತ್ತ ದೃಷ್ಟಿ ನೆಡುವ ಮೂಲಕ ದೀಪಾವಳಿಯ ಆಚರಣೆಯ ಧನ್ಯತೆ ಪಡೆದರು ಎಂದು ಗೊತ್ತಾಗಿದೆ.

ಅಂತೆಯೇ, ಒಂದು ಚೀಲ ತುಂಬಾ ಹಣದ ನೋಟುಗಳನ್ನು ತುಂಬಿಕೊಂಡು, ಅದಕ್ಕೆ ಶರಟಿನ ಜೇಬು ತುಂಬಾ ದೊರೆತ ಪಟಾಕಿಗಳನ್ನು ತರುವಷ್ಟರಲ್ಲಿ ಸಾಕು ಸಾಕಾಗಿ ಹೆಚ್ಚಿನವರು ಅಕ್ಷರಶಃ ದಿವಾಳಿ ಆಚರಿಸಿದರು ಎಂದು ಗೊತ್ತಾಗಿದೆ.

ಕೆಲವು ಪಟಾಕಿಗಳಂತೂ ಠುಸ್ ಠುಸ್ ಎನ್ನುತ್ತಲೇ ಇದ್ದುದರ ಹಿಂದೆ ಇರಬಹುದಾದ ಕಾರಣ ಏನು ಎಂದು ಸಂಶೋಧಿಸಿದಾಗ, ಈ ಬಾರಿ ಕೆಲವು ಪಟಾಕಿ ಕಂಪನಿಗಳು ಬಾಲ ಕಾರ್ಮಿಕರನ್ನು ಬಳಸಿಲ್ಲದಿರುವುದೇ ಕಾರಣ ಅಂತ ತಿಳಿದುಬಂತು. ಬಾಲ ಕಾರ್ಮಿಕರಾದರೆ ಶ್ರದ್ಧೆಯಿಂದ ದುಡಿಯುತ್ತಿದ್ದರು, ಆದರೆ ಈ ಬಾರಿ ಪಟಾಕಿಗೆ ಮದ್ದು ತುಂಬಿದ್ದು "ವ್ಯವಹಾರ"ದಲ್ಲಿ ಬಲಿತು ಪಳಗಿದ ದೊಡ್ಡ ಮಕ್ಕಳೇ ಆದುದರಿಂದ ಪಟಾಕಿಗಳು ಠುಸ್ ಆಗಿದ್ದವು.

(ಬೊಗಳೆ ರಗಳೆಗೆ ಇಣುಕಿ ಹೆಣಕಿ, ಕೆಣಕಿ ಬಂದು ಹೋಗುವ ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು.)

Tuesday, November 06, 2007

ಫ್ಯಾಶನ್ ಶೋ: ದಿಲ್ಲಿಯಲ್ಲಿ ಶಾಸಕರ ಪೆರೇಡ್!

(ಬೊಗಳೂರು ಫ್ಯಾಶನ್ ಶೋ ಬ್ಯುರೋದಿಂದ)
ಬೊಗಳೂರು, ನ.6- ಕರುನಾಡಿನಲ್ಲಿ ನಡೆಯುತ್ತಿರುವ ನಾಟಕಕ್ಕೆ ವಿಶ್ವಾದ್ಯಂತ ಪ್ರಶಂಸೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ಇದರ ಮುಂದಿನ ಭಾಗವಾಗಿ ದೇಶದ ರಾಜಧಾನಿಯಲ್ಲಿ ಶಾಸಕರ ಫ್ಯಾಶನ್ ಪೆರೇಡ್ ಅದ್ದೂರಿಯಾಗಿ ಜರುಗಿತು.

ನಾವು ಪೆರೇಡ್ ಮಾಡುತ್ತೇವೆ, ನೀವೂ ಬನ್ನಿ ಎಂದು ಶಾಸಕರೆಲ್ಲಾ ಬೊಗಳೆ ರಗಳೆ ಬ್ಯುರೋಗೆ ದುಂಬಾಲು ಬಿದ್ದ ಕಾರಣ, ಅವರ ಹಿಂದೆಯೇ ಹಿಂ-ಬಾಲಿಸಲಾಯಿತಾದರೂ, ಅವರ ಜತೆ ಡಾಗ್-ವಾಕ್ ಮಾಡಲು ಬ್ಯುರೋ ಸಂಪಾದಕರು ನಿರಾಕರಿಸಿರುವುದು ಹಲವರ ಹುಬ್ಬುಗಳು ಮೇಲಕ್ಕೇರಲು ಕಾರಣವಾಗಿವೆ.

ಕೆಲವರಿಗೆ ಮಹಿಳೆಯ ಎದುರು ಕ್ಯಾಟ್ ವಾಕ್ ಮಾಡುವುದು ಮುಜುಗರ ಹುಟ್ಟಿಸಿದ್ದರೆ, ಇನ್ನು ಕೆಲವರಿಗೆ ಇಲ್ಲದ ಆತ್ಮದ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು.

ಪ್ರತಿಭಾನ್ವಿತ ಪಾಟೀಲರು ಈ ಶಾಸಕರ ಪೆರೇಡ್‌ನ ಪರದಾಟ ನೋಡಿ ಅಪ್ರತಿಭರಾದರು. ರಾಂಪ್ ಮೇಲೆ ಕೆಲವು ಶಾಸಕರು ಜಯವಾಗಲಿ ಅಂತ ಕೂಗುತ್ತಾ, ಮತ್ತೆ ಕೆಲವರು ಧಿಕ್ಕಾರ ಎಂದು ಕೂಗುತ್ತಾ ಕ್ಯಾಟ್ ಮತ್ತು ಡಾಗ್ ವಾಕ್‌ಗಳನ್ನು ಮಾಡುವುದನ್ನು ನೋಡುವುದೇ ಒಂದು ನಾಟಕೀಯ ವಿದ್ಯ-ಮಾನವಾಗಿತ್ತು ಅಂತ ನಮ್ಮ ಮೂಗುದಾರ ಹಾಕಿದ ಬಾತ್ಮೀದಾರರು ದೆಹಲಿಯ ಕೆಂಪುಕೋಟೆಯ ಕೆಳಗೆ ನಿಂತು ವರದಿ ಮಾಡಿದ್ದಾರೆ.

ಈ ಶಾಸಕರನ್ನು ಅಲ್ಲಿಗೆ ಕರೆದೊಯ್ಯಲು ಐಷಾರಾಮಿ ಬಸ್ಸುಗಳು, ನಾಲ್ಕೈದು ವಿಮಾನಗಳ ಏರ್ಪಾಟು ಮಾಡಲಾಗಿದ್ದು, ಇವುಗಳ ಖರ್ಚುಗಳೆಲ್ಲವನ್ನೂ ಕರು-ನಾಡಿನ ಮರುಮರುಗುತ್ತಿರುವ ಪ್ರಜೆಗಳ ತೆರಿಗೆಯಿಂದ ಭಾವೀ ಸರಕಾರವು ಭರಿಸಲಿದೆ ಎಂದು ತಿಳಿದುಬಂದಿದೆ.

ಅವರಿಗೆ ಪಂಚ ಅಥವಾ ದಶ ತಾರಾ ಹೋಟೆಲುಗಳ ವ್ಯವಸ್ಥೆ ಮಾಡಲಾಗಿದ್ದು, ಕೆಲವರಿಗೆ ಒಂದೇ ತಾರೆಯಿರುವ ಹೋಟೇಲನ್ನೂ ನೀಡಲಾಗಿದೆ. ಕಳೆದ ಇಪ್ಪತ್ತು ತಿಂಗಳುಗಳಿಂದ ಶಾಸಕರಿಗೆಲ್ಲಾ ಈ ರೆಸಾರ್ಟ್, ಪ್ರವಾಸ, ಪಾನ ಗೋಷ್ಠಿ.... ಅಲ್ಲಲ್ಲ ಪತ್ರಿಕಾ ಗೋಷ್ಠಿ... ಇತ್ಯಾದಿಗಳೆಲ್ಲಾ ದೈನಂದಿನ ಚಟುವಟಿಕೆಯಾಗಿತ್ತು. ಹೀಗಾಗಿ ಒಂದು ಕೊಠಡಿಯಲ್ಲಿ ಎಷ್ಟೇ ತಾರೆಗಳಿದ್ದರೂ ಈ ಶಾಸಕರಿಗೆ ಸಾಲುತ್ತಿಲ್ಲ ಎಂದು ನಮ್ಮ ನಿಗೂಢ ಬಾತ್ಮೀದಾರರು ಒದರಿ ಮಾಡಿದ್ದಾರೆ.

ದಣಿವರಿಯದ ಸಾಧನೆಗೆ ಪ್ರೇರಣೆ ಏನು?

ಆದರೂ ದಿನಕ್ಕೊಂದು ಬಾರಿ ದಿನಕ್ಕೊಬ್ಬ, ದನಕ್ಕೊಬ್ಬ ರಾಜಕಾರಣಿ ಆಗಾಗ್ಗೆ ದೆಹಲಿಗೆ ಹೋಗಿ ಬರುತ್ತಿರುವುದು ಮತ್ತು ಬೆಳಗಿನ ಉಪಾಹಾರ ಅಲ್ಲಿ, ಮಧ್ಯಾಹ್ನ ಇಲ್ಲಿ, ರಾತ್ರಿ ಪುನಃ ಅಲ್ಲಿ ಎಂಬಂತಹ ಪರಿಸ್ಥಿತಿಗಳಿಂದಾಗಿ, ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಓಡಾಡುತ್ತಿರುವ ಶಾಸಕರ ಈ ಸಾಮರ್ಥ್ಯದ ಹಿಂದಿನ ಪ್ರಧಾನ ಕಾರಣವೆಂದರೆ ದೂರದಲ್ಲೆಲ್ಲೋ ಗೋಚರಿಸುತ್ತಿರುವ "ಕುರ್ಚಿ"ಯೇ ಆಗಿದೆ ಎಂಬುದನ್ನು ಪತ್ತೆ ಹಚ್ಚಲಾಗಿದೆ.

ಪ್ರೇಮ ಪತ್ರ ಬರವಣಿಗೆ ಸ್ಪರ್ಧೆ

ಈ ನಡುವೆ, ಈ ಹಿಂದೆ ಧರಂ ಸಿಂಗರು ಗರಂ ಗರಂ ಆಗುತ್ತಲೇ ಇರುವಲ್ಲಿ ಪ್ರಧಾನ ಪಾತ್ರ ವಹಿಸಿದ್ದ ವೇದೇಗೌಡರ ಆಗಾಗ್ಗೆ ಪತ್ರ ಬರೆಯುತ್ತಿರುವ ಹವ್ಯಾಸದ ಬಗ್ಗೆ ವಿಶೇಷ ಸಂಶೋಧನೆಯೊಂದನ್ನು ಕೈಗೊಳ್ಳಲಾಗಿದ್ದು, ಮಿತ್ರ ಪಕ್ಷಗಳೆಲ್ಲಾ ಸೇರಿ ತಮ್ಮ ತಮ್ಮ ಶಾಸಕರಿಗೆ ಈ ಪತ್ರ ಬರವಣಿಗೆ ಕಲೆಯನ್ನು ಕರಗತ ಮಾಡಿಸುವ ನಿಟ್ಟಿನಲ್ಲಿ ಶಿಕ್ಷಣ ನೀಡಲು ನಿರ್ಧರಿಸಿವೆ.

ಒಮ್ಮೆ ಅಧಿಕಾರಕ್ಕೇರಿದ ತಕ್ಷಣವೇ, ಈ ಪ್ರೇಮ ಪತ್ರ ಬರೆಯುವುದು ಹೇಗೆ ಎಂಬ ಆಂದೋಲನಕ್ಕೆ ಚಾಲನೆ ನೀಡಲಾಗುವುದು ಎಂದು ಬೀಜ-ಪೀ ಮತ್ತು ಜೇಡಿಸ್ ಶಾಸಕರು ಒಕ್ಕೊರಲಿನಿಂದ ಘೋಷಿಸಿದ್ದಾರೆ.

Thursday, November 01, 2007

ಬೊಗಳೂರು: ಕರ್ನಾಟಕ ಫಾರ್ಮೇಶನ್ ಡೇ!

[ಬೊಗಳೆ ರಗಳೆಯ ಓದುಗರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು]
(ಬೊಗಳೂರು ಸೊಂಪಾದ-ಕರುವಿನ ಬ್ಯುರೋದಿಂದ)
ಬೊಗಳೂರು, ನ.1- ನಮ್ಮೆಲ್ಲರ ಹೆಮ್ಮೆಯ, ಹೊನ್ನಿನ ನುಡಿ "ಕನ್ನಡ" ಎಂಬುದು ಬೊಗಳೆ ರಗಳೆ ಬ್ಯುರೋಗೆ ಇಂದಷ್ಟೇ ಜ್ಞಾಪಕಕ್ಕೆ ಬಂದಿದೆ. ಇದಕ್ಕೆ ಕಾರಣವೆಂದರೆ, ಯಾರೋ ಬೆಳ್ಳಾಂಬೆಳಗ್ಗೆ ಎದ್ದು "Happy KARNATAKA formation day" ಅಂತ ಎಸ್ಸೆಮ್ಮೆಸ್ ಮಾಡಿ, ಸುದೀರ್ಘ ಕಾಲದಿಂದ ಸೊಂಪಾದ ನಿದ್ರಾವಸ್ಥೆಯಲ್ಲಿದ್ದ ನಮ್ಮ ಬೊಗಳೂರಿನ ಬ್ಯುರೋ ಸೊಂಪಾದ-ಕರುವನ್ನು ಬಡಿದೆಬ್ಬಿಸಿದ್ದು.

ಎದ್ದ ತಕ್ಷಣ ಕನ್ನಡ ಕನ್ನಡ ಎಂದು ಕೂಗಾಡಲಾರಂಭಿಸಿದ ಸೊಂಪಾದಕರು, ಬೊಗಳೂರಿನ ನವೆಂಬರ್ ಕನ್ನಡ ಸಂಘ (ಇದು ಬೊಗಳೂರು ರಾಜಕೀಯ ಪಕ್ಷದ ಕನ್ನಡ ಪ್ರೇಮ ಘಟಕ) ಏರ್ಪಡಿಸಿದ್ದ ಸಮಾರಂಭಕ್ಕೆ ತನ್ನನ್ನು ಬೊಗಳೆ ಬಿಡಲು ಆಹ್ವಾನಿಸಿದ್ದಾರೆ ಎಂದು ನೆನಪಾಗಿದ್ದೇ ತಡ, ಗಡಗಡನೇ ನಡುಗಿದರಲ್ಲದೆ, ತಕ್ಷಣವೇ ಗಡಿಬಿಡಿಯಿಂದ ಬಡಬಡಿಸಿ ಎದ್ದು ಹಳದಿ ಅಂಗಿ, ಕೇಸರಿ ಪ್ಯಾಂಟು ಧರಿಸಿ ಓಟಕ್ಕಿತ್ತರು.

ಸಮಾರಂಭ ನಡೆಯುವ ಸ್ಥಳದಲ್ಲಿ ಅದಾಗಲೇ ಜನರು ನೆರೆದಿದ್ದರು. ಇದು ರಾಜಕೀಯ ಕಾರ್ಯಕ್ರಮವಾಗಿದ್ದುದರಿಂದ ವೇದಿಕೆ ಯಾವುದು- ಪ್ರೇಕ್ಷಕರ ಗ್ಯಾಲರಿ ಯಾವುದು ಎಂಬ ವ್ಯತ್ಯಾಸವೇ ಗೊತ್ತಾಗುತ್ತಿರಲಿಲ್ಲ. ಅತೀ ಹೆಚ್ಚು ಜನರು ಕುರ್ಚಿ ಹಾಕಿಕೊಂಡು ಸುಖಾಸೀನರಾಗಿರುವುದೇ ವೇದಿಕೆ ಇರಬಹುದು ಎಂದು ಸರಿಯಾಗಿಯೇ ಗ್ರಹಿಸಿದ್ದ ಸೊಂಪಾದಕರು, ತಕ್ಷಣವೇ ಅಲ್ಲಿದ್ದ ಒಂದು ಮೈಕನ್ನು ತಮ್ಮ ಬಾಯಿಯೊಳಗೆ ಇರಿಸಿಕೊಂಡರು.

"ಕನ್ನಡ ಪ್ರೇಮಿಗಳೇ, ನಾವೆಲ್ಲಾ ಕನ್ನಡವನ್ನು ಪ್ರೀತಿಸಬೇಕು, ಕನ್ನಡ ಭಾಷೆಗೆ ಆತಂಕ ಎದುರಾಗಿದೆ, ಅದಕ್ಕೆ ಕುತ್ತು ಬಂದಿದೆ. ಅದನ್ನು ರಕ್ಷಿಸಬೇಕು, ಅದನ್ನು ಜೋಪಾನವಾಗಿ ಕಾಯ್ದಿಡಬೇಕು" ಎಂದು ರಾಜಕಾರಣಿಗಳ ಬಾಯಲ್ಲಿ ಪ್ರತಿ ನವೆಂಬರ್ ತಿಂಗಳಲ್ಲಿ ಕೇಳಿಬರುವ ಮಾತನ್ನೇ ಹೇಳುತ್ತಾ, ಒಂದು ಹೆಜ್ಜೆ ಮುಂದೆ ಹೋಗಿ... "ಹೆಚ್ಚು ಹೆಚ್ಚು ಬಳಸಿದರೆ ಈ ಕನ್ನಡ ಎಂಬುದು ಸವೆಯಬಹುದು. ಅದಕ್ಕಾಗಿ ಅದನ್ನು ಗಟ್ಟಿಯಾಗಿ, ಭದ್ರವಾಗಿ ಕಟ್ಟಿಡಬೇಕು, ಅದಕ್ಕೆ ಭದ್ರತೆ ನೀಡಬೇಕು" ಎಂದೆಲ್ಲಾ ಕಿರುಚಾಡಿದ ತಕ್ಷಣವೇ, ಪ್ರೇಕ್ಷಕರ ಗ್ಯಾಲರಿಯಿಂದ ಕರತಾಡನ, ಕೂಗಾಟದ ಸುರಿಮಳೆಯೇ ಸುರಿಯಿತು. ಆಹಾ, ಬಣ್ಣ ಬಣ್ಣದ ಹೂವುಗಳು ವೇದಿಕೆಯತ್ತ ಧಾವಿಸಿ ಬರುತ್ತಿವೆ, ಜನ ಸಂತುಷ್ಟರಾಗಿ ಪುಷ್ಪಾರ್ಚನೆ ಮಾಡಿದ್ದಾರೆ ಎಂಬುದರಿಂದ ಸಂತಸಗೊಂಡ ಸೊಂಪಾದಕರು ಇನ್ನೇನು, ಮಾತು ಮುಂದುವರಿಸಲಿದ್ದರು.

ಠಣ್ಣ್‌ಣ್... ಅಂತ ಸದ್ದು ಕೇಳಿಸಿತು. ಎಲ್ಲೋ, ತಮ್ಮ ಕೈಯಲ್ಲಿದ್ದ ಮೈಕ್ ಕೆಳ ಬಿದ್ದಿರಬೇಕು ಅಂತ ಗ್ರಹಿಸಿದರು. ಅರೆ, ಅದೇನೋ ತಲೆಯೂ ಒದ್ದೆಯಾದಂತಿದೆಯಲ್ಲಾ... ಪ್ರೇಕ್ಷಕರು ಅಭಿಷೇಕವನ್ನೂ ಮಾಡಿರಬೇಕು ಅಂತ ಮತ್ತಷ್ಟು ಉಬ್ಬಿಹೋದರು. ತಮ್ಮ ಬೋಳು ತಲೆಯ ಮೇಲೆ ಕೈಯಾಡಿಸಿ ನೋಡಿದಾಗ ಅವರಿಗೆ ವಿಷಯದ ಅರಿವಾಯಿತು. ಪ್ರೇಕ್ಷಕರ ಗ್ಯಾಲರಿಯಿಂದ ಪುಷ್ಪವೃಷ್ಟಿಯಾದದ್ದಲ್ಲ, ನಿನ್ನೆ ದಿನ ಮಾರುಕಟ್ಟೆಯಲ್ಲಿ ಒಂದು ವಾರದಿಂದ ಮಾರಾಟವಾಗದೆ ಉಳಿದಿದ್ದ ಕೊಳೆತ ಟೊಮೆಟೋ ಮತ್ತು ಕೊಳೆತ ಮೊಟ್ಟೆಗಳನ್ನು ಯಾರೋ ತಮ್ಮ ಭಾಷಣಕ್ಕಾಗಿಯೇ "ಮೀಸಲಿಟ್ಟು", ಇಲ್ಲಿಗೆ ತಂದಿದ್ದರಂತೆ.

ಅದರ ಜತೆ ಕೆಲವು ಕಲ್ಲುಗಳನ್ನೂ ಸೇರಿಸಿದ್ದರಿಂದ, ಟೊಮೆಟೋ, ಮೊಟ್ಟೆ ರಸದ ಜತೆಗೆ ತಮ್ಮ ಬೊಕ್ಕ ತಲೆಯಿಂದ ಚಿಮ್ಮಿದ ನೆತ್ತರು ಕೂಡ ಮಿಶ್ರಣವಾಗಿ ಅತ್ಯದ್ಭುತ ಪಾಕವಾಗಿ ಹೋಗಿತ್ತು. ಮೇಲಿಂದ ಒಸರುತ್ತಿದ್ದ ಈ ರಸಪಾಕವನ್ನು ನಾಲಿಗೆಯನ್ನು ಒಂದಿಷ್ಟು ಹೊರ ಹಾಕಿ, ಅಲ್ಲಿಂದಲೇ ಸವರಿಕೊಂಡ ಸೊಂಪಾದಕರು, ಮರಳಿ ಮನೆಗೆ ಬಂದು, ತಮ್ಮ ಭೀಷಣ ಭಾಷಣ ಪ್ರಕ್ರಿಯೆಯ ಮೊದಲರ್ಧ ಭಾಗವನ್ನೇ ಮೆಲುಕು ಹಾಕುತ್ತಾ, ಮುಸುಕೆಳೆದುಕೊಂಡರು. ತಪ್ಪಿಯೂ ಮುಂದಿನ ಭಾಗವನ್ನು ನೆನಪಿಸಿಕೊಳ್ಳಲಿಲ್ಲ ಎಂದು ತಿಳಿದುಬಂದಿದೆ.

ಎಂಜಿನ್ ಇಲ್ಲದ ರೈಲು: ಬ್ರೇಕಿಂಗ್ ನ್ಯೂಸ್ ಅಲ್ಲವೆಂದ ಬೊ.ರ.

[ಬೊಗಳೂರು ಪಟ್ಟೆ-ರಹಿತ ರೈಲು ಬ್ಯುರೋ] ಬೊಗಳೂರು: ಆಫ್‌ಲೈನ್ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯೊಂದು ಆನ್‌ಲೈನ್ ಸಂಪಾದಕರ ಕಣ್ಣು ಕುಕ್ಕಿದ್ದು, ಎಂಜಿನ್ ಇಲ್ಲದೆ...