ಬೊಗಳೆ ರಗಳೆ

header ads

ಮಾತಿಗೆ ತಪ್ಪಿದ್ದು ಒಡೆಯೋರಪ್ಪನೇ: ವದಿಯೋಗೌಡ್ರ ಉವಾಚ!

[ಮಣ್ಣಿನ ಮಗನ ಡಬಲ್ ಡಿಗ್ರಿ: ಮಣ್ಣಿನ ಅಪ್ಪ ಹರ್ಷ]
(ಬೊಗಳೂರು ಡಿಗ್ರಿ ಕಾಳಸಂತೆ ಬ್ಯುರೋದಿಂದ)
ಬೊಗಳೂರು, ನ.20- ರಾಜಕೀಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ತನ್ನ (ಮಣ್ಣಿನ) ಮಗನ ಬಗ್ಗೆ ವದಿಯೋಗೌಡರು ಭಾರೀ ತೃಪ್ತಿ ವ್ಯಕ್ತಪಡಿಸಿದ್ದಾರೆ.

ಸ್ನಾತಕ ಪದವಿಗೆ ಸಮಾನವಾದ ವಚನ ಭ್ರಷ್ಟ ಎಂಬ ಡಿಗ್ರಿಯನ್ನು ಕೆಲವೇ ದಿನಗಳ ಹಿಂದಷ್ಟೇ ಪಡೆದಿರುವ ಅವರು, ಇದೀಗ "ವಿಶ್ವಾಸ ದ್ರೋಹಿ" ಎಂಬ ಸ್ನಾತಕೋತ್ತರ ಪದವಿಯನ್ನೂ ಇಷ್ಟು ಶೀಘ್ರವಾಗಿ ಪಡೆದುಕೊಂಡಿರುವುದು ಬಹುಶಃ ಈ ನಾಟಕ ಇತಿಹಾಸದಲ್ಲೇ ಒಂದು ದಾಖಲೆ ಎಂದು ತಮ್ಮ ಮಗನ ಪ್ರತಿಭೆಯನ್ನು ಅವರು ಕೊಂಡಾಡಿದ್ದಾರೆ.

ಈ ವಿಶ್ವಾಸ ದ್ರೋಹಿ ಪಟ್ಟ ಕಟ್ಟಿಸಿಕೊಳ್ಳಲು ತಾವು ಪಟ್ಟ ಶ್ರಮವನ್ನು ಸಾದ್ಯಂತವಾಗಿ ವಿವರಿಸಿದ ಅವರು, ಮಾತಿಗೆ ತಪ್ಪಿದ್ದು ತಾವಲ್ಲ ಎಂದು ಉದಾಹರಣೆಯೊಂದಿಗೆ ವಿವರಿಸಿದ್ದಾರೆ.

ಮಾತಿಗೆ ತಪ್ಪಿದ್ದು ಒಡೆಯೋರಪ್ಪನೇ. ಮೊನ್ನೆ ಮೊನ್ನೆ ಡೆಲ್ಲಿಗೆ ಹೋಗಿ ಎಲ್ಲಾ ಶಾಸಕರನ್ನೂ ಕರೆದೊಯ್ದು, ಆಯಮ್ಮನೆದುರು ನಮಗೆ ಸಂಖ್ಯಾಬಲವಿದೆ, ಸರಕಾರ ರಚನೆಗೆ ಅವಕಾಶ ಕೊಡಿ ಅಂತೆಲ್ಲಾ ಒಡೆಯೋರಪ್ಪರು ಹೇಳಿದ್ದು ಸುಳ್ಳಲ್ಲವೇ? ಸದನದಲ್ಲಿ ಬಹುಮತ ದೊರೆತೇ ದೊರೆಯುತ್ತದೆ ಅಂತೆಲ್ಲಾ ಆತ್ಮವಿಶ್ವಾಸದಿಂದ ಮಾಧ್ಯಮಗಳೆದುರು ಹೇಳಿದ್ದು ಬೊಗಳೆಯಲ್ಲವೇ? ಎಂದು ಕೇಳಿದ ವದಿಯೋಗೌಡರು, ಅದೆಲ್ಲಾ ಇರಲಿ. ಹೋಗಿ ಹೋಗಿ ಮಿತ್ರಪಕ್ಷವಾದ ನಮ್ಮ ಮೇಲೆ "ಸಂಪೂರ್ಣ ವಿಶ್ವಾಸವಿದೆ, ನಾವು ಬೆಂಬಲ ಕೊಡ್ತೇವೆ, ಕೊಡಲ್ಲ ಅಂತನ್ನೋದೆಲ್ಲಾ ನಿಮ್ಮಂತ ಮಾಧ್ಯಮಗಳ ಸೃಷ್ಟಿ" ಅಂತೆಲ್ಲಾ ಎಷ್ಟೊಂದು ಆತ್ಮವಿಶ್ವಾಸ ಪ್ರದರ್ಶಿಸುತ್ತಾ ಹೇಳಿದ್ದರಲ್ಲಾ... ಇದನ್ನೂ ಸುಳ್ಳಾಗಿಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.

ತಮ್ಮ ಅಧಿಕಾರದಾಸೆಗಾಗಿ ಆ ಪಾಪದ ರಾಜ್ಯಪಾಲರನ್ನು ಎಷ್ಟು ಬಾರಿ ದೆಹಲಿಗೆ ಓಡಾಡಿಸಿದ್ದಾರೆ...!!! ಇಷ್ಟು ಸಂಖ್ಯಾ ಬಲವಿದ್ದರೂ ಸರಕಾರ ರಚನೆಗೆ ಅವಕಾಶ ನೀಡದೆ ರಾಜಕೀಯ ಮಾಡುತ್ತಿದ್ದಾರೆ ಎಂದೆಲ್ಲಾ ಹೇಳಿ, ಅತ್ತೂ ಕರೆದು, ರಾಜ್ಯಪಾಲರ ಮೇಲೆ, ಪ್ರಧಾನಿ ಮೇಲೆ ಒತ್ತಡ ಹೇರಿ, ಮುಖ್ಯಮಂತ್ರಿ ಕುರ್ಚಿ ಮೇಲೆ ಕುಕ್ಕರಿಸಿದರು. ಆದರೆ ಈಗ ಅವರು ಮುಖ್ಯಮಂತ್ರಿ ಎಂಬುದು ಕೂಡ ಸುಳ್ಳೇ ಅಲ್ಲವೇ ಎಂದು ಕೂಡ ಪ್ರಶ್ನಿಸಿದರು.

ಒಂದು ಬಾರಿ ಕೈಕೊಟ್ಟ ನಾವು, ಮತ್ತೆ ಸರಕಾರ ರಚನೆಗೆ ಬೇಷರತ್ತು ಬೆಂಬಲ ಕೊಡ್ತೀವಿ ಅಂತ ಹೇಳಿದಾಗ, ಅವರೇಕೆ ಸರಕಾರ ರಚನೆಗೆ ಒಪ್ಪಿಕೊಳ್ಳಬೇಕಿತ್ತು ಎಂದು ಬೊಗಳೆ ರಗಳೆ ಬ್ಯುರೋವನ್ನೇ ತದೇಕಚಿತ್ತದಿಂದ ನೋಡುತ್ತಾ ಪ್ರಶ್ನಿಸಿದ ಅವರು, ಬೇಷರತ್ತು ಅಂತ ನಾವೆಂದೂ ಎಲ್ಲಿಯೂ ಹೇಳಿಲ್ಲ ಎಂದು ತಿಳಿಸಿದ್ದಾರೆ.

ನಾವು ಹೇಳಿದ "ಬೇರೆಷರತ್ತು" ಎಂಬುದನ್ನು ಮಾಧ್ಯಮಗಳು ಅಕ್ಷರ ಲೋಪ ಮಾಡಿ, 'ರೆ' ತೆಗೆದು ಪ್ರಕಟಿಸಿದ್ದವು. ಹಾಗಾಗಿ ಇದು ಬೇಷರತ್ತು ಎಂದೇ ಪ್ರಕಟವಾದವು. ಈ ಮಾಧ್ಯಮಗಳಿಗೆ ಅಕ್ಷರ ತಪ್ಪು ಮಾಡುವಾಗ ಸ್ವಲ್ಪವೂ ಬುದ್ಧಿ ಇರುವುದಿಲ್ಲವೇ ಎಂದು ಅವರು ಮತ್ತೊಂದು ಪ್ರಶ್ನೆಯ ಬಾಣ ಎಸೆದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

2 ಕಾಮೆಂಟ್‌ಗಳು

  1. "ತಮ್ಮ ಅಧಿಕಾರದಾಸೆಗಾಗಿ ಆ ಪಾಪದ ರಾಜ್ಯಪಾಲರನ್ನು ಎಷ್ಟು ಬಾರಿ ದೆಹಲಿಗೆ ಓಡಾಡಿಸಿದ್ದಾರೆ...!!!"

    ಪಾಪ ರಾಜ್ಯಪಾಲ್ರು. ಈ ಕರ್ ನಾಟಕಕ್ಕೆ ಯಾಕಾದರೂ ಬಂದೆನೋ ಅಂತ ಗೋಳಾಡ್ತಿರಬೇಕು. :)

    ಪ್ರತ್ಯುತ್ತರಅಳಿಸಿ
  2. ಶ್ರೀ ತ್ರೀ ಅವರೆ,

    ನೀವೂ ನಮ್ಮ ಹಾಗೆ ರಾಜ್ಯಪಾಲರನ್ನು ಪಾಪ ಅಂತಿದ್ದೇವೆ. ಆದರೆ ಪಾಪ ಮಾಡೋ ಪಾಪಿಗಳೇ ಇರೋ ರಾಜಕಾರಣದ ಮಧ್ಯೆ ಅವರು ಪಾಪ ಆಗಬೇಕಾದದ್ದು ಸಹಜ ತಾನೇ.!

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D