Thursday, December 27, 2007

ನಿದ್ದೆ ಕಳ್ಳರ ಪತ್ತೆಗೆ ಭಾರಿ ಅಂತರ-ಜಾಲ!

(ಬೊಗಳೂರು ನಿದ್ದೆಗೆಟ್ಟ ಬ್ಯುರೋದಿಂದ)
ಬೊಗಳೂರು, ಡಿ.27- ಲಗ್ಗೆರೆ ಎಂಬಲ್ಲಿ ನಿದ್ದೆ ಕದಿಯುವ ಕಳ್ಳರ ಪತ್ತೆಗಾಗಿ ಪೊಲೀಸರು ಭಾರೀ ಬಲೆ ಬೀಸಿದ್ದಾರಾದರೂ, ಅವರು ಬೀಸಿರುವ ಜಾಲವು ಅಂತರ್ಜಾಲ ತಾಣಗಳತ್ತಲೂ ವ್ಯಾಪಿಸತೊಡಗಿದೆ ಎಂಬುದನ್ನು ಬೊಗಳೆ ಬ್ಯುರೋ ಪತ್ತೆ ಹಚ್ಚಿದೆ.

ಈ ನಿದ್ದೆ ಕದಿಯುವವರ ಗುಂಪಿನಲ್ಲಿ ಹಲವಾರು ತಂಡಗಳಿರುವುದು ಬೊಗಳೆ ಬ್ಯುರೋ ತನಿಖೆ ವೇಳೆ ಶೋಧನೆಯಾಗಿದೆ. ಈ ತಂಡಗಳಲ್ಲಿ ಮುಖ್ಯವಾಗಿ ಮಾನಿನಿಯರ ತಂಡ ಮತ್ತು ಕಿಲಾಡಿಗಳ ತಂಡ ಪ್ರಮುಖವಾದದ್ದು. ಮಾನಿನಿಯರ ತಂಡದಲ್ಲಿ ಹಲವಾರು ಉಪ ತಂಡಗಳಿವೆ. ಅವುಗಳಲ್ಲಿ ಕಾಲೇಜು ಕನ್ಯೆಯರು, ಸಿನಿ-ಕನ್ಯೆಯರು, ಟೆನಿ-ಸ್‌ಕನ್ಯೆಯರು (ಇತ್ತೀಚೆಗಷ್ಟೇ ಸೇರ್ಪಡೆಯಾಗಿದ್ದು) ಮತ್ತು ಪಕ್ಕದ್ಮನೆಯವರು (ಅಥವಾ ಎದುರುಮನೆ) ಹಾಗೂ (ಅಂತರ)ಜಾಲದೊಳು ಕಣ್ಣು ಮಿಟುಕಿಸುವವರ ತಂಡಗಳಿವೆ.

ಕಿಲಾಡಿಗಳ ತಂಡದಲ್ಲಿಯೂ ಇದೇ ಮಾದರಿಯ ವಿಭಾಗಗಳಿದ್ದು, ಎರಡೂ ತಂಡಗಳ ಸದಸ್ಯರು ಪರಸ್ಪರರ ನಿದ್ದೆ ಕದಿಯುತ್ತಿರುವುದು ಇವರ ಕಳ್ಳತನ ಪ್ರಕ್ರಿಯೆಯಲ್ಲಿ ಕಂಡು ಬರುವ ಸಾಮ್ಯತೆ.

ಲಗ್ಗೆರೆಯಂತೆಯೇ ಎಲ್ಲೆಡೆಯೂ ಅವರು ಇವರ ಮತ್ತು ಇವರು ಅವರ ಹೃದಯಗಳಿಗೆ ಲಗ್ಗೆ ಹಾಕಿ ನಿದ್ದೆ ಕದ್ದ ಪರಿಣಾಮವಾಗಿ ಕಾಲೇಜುಗಳಲ್ಲಿ ತೂಕಡಿಸುವ ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಸಾಫ್ಟ್‌ವೇರ್ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ತರುಣ-ತರುಣಿಯರು, ಇ-ಮೇಲ್ - ಚಾಟಿಂಗಿನಲ್ಲಿ ಕಚೇರಿ ಕಾಲ ವ್ಯಯಿಸುತ್ತಿರುವವರು, ಓರ್ಕುಟಿನಲ್ಲಿ ಸರಿದಾಡುತ್ತಿರುವವರು, ಎಸ್ಎಂಎಸ್‌ನಲ್ಲಿ ಅಕ್ಷರಗಳ ಜತೆ ಆಟ ಆಡುತ್ತಿರುವವರು ಹಾಗೂ ಮೊಬೈಲನ್ನು ಕಿವಿಗೆ ಅಂಟಿಸಿಕೊಂಡೇ ಇರುವವರ ಸಂಖ್ಯೆ ಹೆಚ್ಚಾಗತೊಡಗಿರುವುದು ಪೋಲಿ ಇಲಾಖೆಗೆ ನಿದ್ದೆ ಗೆಡಿಸಿದ ಸಂಗತಿ.

ಈ ನಡುವೆ, ನಿದ್ದೆ ಕದಿಯುವ ಪ್ರಕ್ರಿಯೆಯಲ್ಲಿ ಮುಳುಗಿ ಹೋಗುವವರನ್ನು ಸುಲಭವಾಗಿ ಪತ್ತೆ ಹಚ್ಚಲು ಸೂಕ್ತವಾದ ಐಡಿಯಾವೊಂದನ್ನು ಬೊಗಳೆ ಬ್ಯುರೋ ಕಂಡು ಹಿಡಿದು ಪೊಲೀಸ್ ಇಲಾಖೆಗೆ ಒಪ್ಪಿಸಿದೆ. ಆ ಎರಡು ಪ್ರಮುಖ ವಿಧಾನಗಳೆಂದರೆ, ಎಲ್ಲರ ಮೊಬೈಲ್ ಫೋನ್ ಪರಿಶೀಲಿಸುವುದು ಮತ್ತು ಅವರ ಕೈಬೆರಳುಗಳನ್ನು ಪರೀಕ್ಷಿಸುವುದು. ಮೊಬೈಲ್ ಫೋನ್ ಕೀ ಪ್ಯಾಡ್ ಸವೆದು, ಯಾವುದೇ ಅಕ್ಷರ ಕಾಣಿಸದಿದ್ದರೆ ಮತ್ತು ಕೈಬೆರಳುಗಳ ತುದಿಗಳು ಸವೆದು ಹೋಗಿದ್ದರೆ... ನಿದ್ದೆ ಕದಿಯೋ ಕಳ್ಳ/ಳ್ಳಿ ಸಿಕ್ಕಿಬಿದ್ದ ಹಾಗೆಯೇ!

ಈ ಮಧ್ಯೆ, ಪೋಲಿ-ಸರಿಗೆ ದೂರು ನೀಡಿದವರನ್ನು ಬೊಗಳೆ ರಗಳೆ ಮಾಡದೆ ಮಾತನಾಡಿಸಿತು. ಬೆಚ್ಚಿ ಬಿದ್ದ ಅವರು ತಮ್ಮ ಗೋಳು ತೋಡಿಕೊಂಡಿದ್ದು ಹೀಗೆ:

"ಅವರೆಲ್ಲಾ ಮಧ್ಯರಾತ್ರಿ ನಮ್ಮ ಹೃದಯದ ಬೀಗ ಮುರಿದು ಕಳ್ಳತನ ಮಾಡುತ್ತಿದ್ದಾರೆ. ಕೆಲವು ಬಾರಿ ಅವರು ನೀಡುವ ಆಘಾತವನ್ನು ತಡೆದುಕೊಳ್ಳಲಾಗುವುದಿಲ್ಲ. ಅಪ್ಪ-ಅಮ್ಮಂದಿರು ಗಸ್ತು ತಿರುಗುತ್ತಿದ್ದರೂ ಕಳ್ಳತನ ವಿಪರೀತವಾಗಿದೆ. ಹೃದಯದಂಗಡಿಯಲ್ಲಿ ಬೆಲೆಬಾಳುವ ಭಾವನೆಗಳನ್ನು ಇರಿಸಿಕೊಳ್ಳಲು ಹೆದರಿಕೆಯಾಗುತ್ತಿದೆ. ಕೆಲವೊಮ್ಮೆ ರಾತ್ರಿಯಿಡೀ ಕಳ್ಳತನ ನಡೆಯುತ್ತದೆ. ಈ ಬಗ್ಗೆ ಎಷ್ಟೇ ದೂರು ನೀಡದಿದ್ದರೂ, ಯಾರು ಕೂಡ ಗಮನ ಹರಿಸುತ್ತಿಲ್ಲ" ಎಂಬುದು ಅವರ ಅಳಲು.

Wednesday, December 26, 2007

ವಿಚಿತ್ರ ಕಳ್ಳತನ, ವಿಚಿತ್ರ ಪರಿಹಾರ!

ಕಳ್ಳತನವೂ ವಿಚಿತ್ರ, ಅದರ ಪತ್ತೆ ಕಾರ್ಯವೂ ವಿಚಿತ್ರ... ಆದರೆ ಹೆಚ್ಚಿನವರಿಗೆ ಇವ್ಯಾವುವೂ
ವಿಚಿತ್ರವೇ ಅಲ್ಲ... ಅದೆಲ್ಲಾ ಮಾಮೂಲಿ...

ನಮ್ಮ ಬ್ಯುರೋದಿಂದ ಮತ್ತೊಂದು ಬೊಗಳೆಯನ್ನು ಕೇಳಲು ಕಿವಿ ನಿಮಿರಿಸಿ ಕೂತಿರಿ.

ಅದರ ಒದರಿಕೆ ಮಾತ್ರ ಬೊಗಳೆ ರಗಳೆಯಲ್ಲಿ...

ಎಂದಿನಂತೆ ನಿಮ್ಮ ಪ್ರತಿಗಳನ್ನು ನೀವೇ ಕಾಯ್ದುಕೊಳ್ಳಿ.

Tuesday, December 25, 2007

ಪಕ್ಷ ದೊಡ್ಡದೋ,ಮೋಡಿಯೋ?: ಅಳತೆ ಮಾಡಿದ ಬೊಗಳೆ

(ಬೊಗಳೂರು ಅಳತೆ ಮತ್ತು ತೂಕದ ಬ್ಯುರೋದಿಂದ)
ಬೊಗಳೂರು, ಡಿ.25- ಜಾತಿಗೆ ಅತೀತವಾದ ಬಸ್ ಮತ್ತು ಗುಜರಾತ್ ಅಭಿವೃದ್ಧಿಯ ರೈಲು ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಅದೆಷ್ಟೋ ಹುರಿಯಾಳುಗಳು ನೆಲಕಚ್ಚಿದ್ದು, ರೈಲಿನ ಚಾಲಕ ಮತ್ತೆ ರೈಲಿನ ಮೋಡಿ ಎಕ್ಸ್‌ಪ್ರೆಸ್ ಓಡಿಸಲಾರಂಭಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕರೇ ಹೇಳಿರುವುದು ಹಲವಾರು ಶಂಕೆಗಳಿಗೆ ಎಡೆಮಾಡಿಕೊಟ್ಟಿದೆ.

ಹಾಗಾಗಿ, ಈ ಶಂಕೆಗಳಲ್ಲಿ ಒಂದರ ನಿವಾರಣೆಗಾಗಿ ಬೊಗಳೆ ರಗಳೆ ಉದ್ಯುಕ್ತವಾಯಿತು. ಮಾಧ್ಯ-ಮಗಳು ಸೃಷ್ಟಿಸುತ್ತಿರುವ ಗೊಂದಲಗಳ ಬಗ್ಗೆ ತೀವ್ರ ಸಂತಸ ವ್ಯಕ್ತಪಡಿಸುತ್ತಿದ್ದ ಮೋಡಿ, ತಾನು ಪಕ್ಷಕ್ಕಿಂತ ದೊಡ್ಡವನಲ್ಲ ಎಂದು ಸ್ಪಷ್ಟನೆ ನೀಡಿರುವ ಹಿನ್ನೆಲೆಯಲ್ಲಿ ಬೊಗಳೆ ರಗಳೆಯ ಏಕಸದಸ್ಯ ಬ್ಯುರೋದ ಸಮಸ್ತ ಸಿಬ್ಬಂದಿಗಳು ಗೂಟದ ಕಾರಿನಲ್ಲಿ ಟೇಪು, ಫುಟ್‌ರೋಲ್ ಹಿಡಿದುಕೊಂಡು ಅಲ್ಲಿಗೆ ತೆರಳಿತು.

ಮೋಡಿ ಒಬ್ಬ ಕಟ್ಟಾ ಹುರಿಯಾಳು ಆಗಿರುವುದರಿಂದ ಅವರು ಪಕ್ಷಕ್ಕಿಂತ ದೊಡ್ಡವರೇ, ಅಥವಾ ಅವರಿಗಿಂತ ಪಕ್ಷ ದೊಡ್ಡದೇ ಎಂಬುದನ್ನು ಅಳೆಯಲು ದೊಡ್ಡ ಹುರಿ ಹಗ್ಗವನ್ನೂ ಒಯ್ಯಲಾಗಿತ್ತು. ಗೋಧ್ರಾ ರೈಲಿನಲ್ಲಿ ಜೀವಂತ ದಹನದ ಬಗ್ಗೆ ಚಕಾರವೆತ್ತದ ಜಾತ್ಯತೀತವಾದಿಗಳು, ಆನಂತರ ನಡೆದ ಹಿಂಸಾಚಾರವನ್ನು ಮೋಡಿಯೇ ಮಾಡಿದ್ದು ಎಂದೂ, ಆತ ಸಾವಿನ ವ್ಯಾಪಾರಿ ಎಂದೂ ದೇಶ-ವಿದೇಶಗಳಲ್ಲಿ ಪ್ರಚಾರ ಮಾಡುತ್ತಿದ್ದ ಪರಿಣಾಮವೋ ಎಂಬಂತೆ, ಈ ಮೋಡಿ ಸ್ವಯಂಚಾಲಿತವಾಗಿ ಏರಿದ ಎತ್ತರವನ್ನು ಅಳೆಯಲು ಒಂದು ಹುರಿ ಹಗ್ಗ ಸಾಕಾಗಲೇ ಇಲ್ಲ.

ಕೊನೆಗೂ ಅಡ್ಡಬಿದ್ದು, ಮೇಲೇರಿ, ಕೆಳಗೆ ಜಾರಿ, ಧೊಪ್ಪನೆ ಬಿದ್ದು ಅಳೆದು ತೂಗಿ ನೋಡಿದಾಗ, ಮೋಡಿ ಹೇಳಿರುವುದು ಸರಿ ಎಂಬುದು ಖಚಿತವಾಯಿತು. ಯಾಕೆಂದರೆ ಪಕ್ಷ ಮತ್ತು ಮೋಡಿಯ ಅಳತೆ ಎರಡೂ ಒಂದೇ ರೀತಿಯಾಗಿರುವುದು ಕಂಡುಬಂತು. ಹಾಗಾಗಿ ಮೋಡಿಯ ಪಕ್ಷಕ್ಕಿಂತ ತಾನು ದೊಡ್ಡವನಲ್ಲ ಎಂಬ ಮಾತನ್ನು ನಂಬಲೇಬೇಕಾಗಿ ಬಂದು ಇಲ್ಲಿ ವರದಿ ಮಾಡಬೇಕಾಯಿತು.

Friday, December 21, 2007

ನಷ್ಟವಾದ ಮಾನದ ಬೆಲೆ: ಬೊಗಳೆಗೆ ಸಂಶಯ

(ಬೊಗಳೂರು ಸಂಶಯ ಬ್ಯುರೋದಿಂದ)
ಬೊಗಳೂರು, ಡಿ.21- ಬೊಗಳೆ ರಗಳೆಗೆ ಇತ್ತೀಚೆಗೆ ಶಂಕೆಗಳು ಆರಂಭವಾಗಿದೆ. ಯಾಕೆ ಎಂದು ಯಾರ್ಯಾರ (ಇಲ್ಲದ ಮತ್ತು ಇರುವ) ತಲೆಗಳನ್ನು ಎಷ್ಟು ಕೆರೆದುಕೊಂಡರೂ ಗೊತ್ತೇ ಆಗುತ್ತಿಲ್ಲ ಎಂಬುದಕ್ಕೆ ಇತ್ತೀಚೆಗಿನ ಉದಾಹರಣೆ ಇಲ್ಲಿ ಓದಿದ ವರದಿ.

ಒದಿಯೋಗೌಡ್ರು ತಮ್ಮ ಮಾನದ ಬೆಲೆ 10 ಕೋಟಿ ಎಂದು ಕಟ್ಟಿಕೊಂಡಿದ್ದಾರೆ. ಇದು ತೀರಾ ಕಡಿಮೆ ಎನಿಸುತ್ತದೆಯೇ ಅಥವಾ ಅತಿಯಾಯಿತು ಎನಿಸುತ್ತದೆಯೇ ಎಂಬುದು ಎಷ್ಟು ತಲೆ ಕೆರೆದುಕೊಂಡರೂ ಹೊಳೆಯಲಾರದ ಸಂಗತಿ.

ದೇಶದ ಮಹೋನ್ನತ ಹುದ್ದೆ ಅಲಂಕರಿಸಿಯೂ ನಿಕೃಷ್ಟ ರಾಜಕಾರಣದ ಮೂಲಕವೇ ಸದ್ದು ಮಾಡುತ್ತಿರುವವರು ತಮ್ಮ ಮಾನದ ಬೆಲೆ ಇಷ್ಟು ಎಂದು ತೀರ್ಮಾನಿಸಿಬಿಟ್ಟಿದ್ದಾರೆ. ಹಾಗಿದ್ದರೆ ಇತ್ತೀಚೆಗಷ್ಟೇ ಸ್ವಯಂಕೃತ ತಂತ್ರಗಳಿಂದಾಗಿ ಅವರು ಆ ಮಾನವನ್ನು ಹರಾಜು ಹಾಕಿದ್ದಾಗ ಎಷ್ಟೊಂದು ಬೆಲೆ ಬಂದಿರಬಹುದು ಎಂಬ ಶಂಕೆಯೂ ಮೂಡಿದೆ. ಆದರೆ ಮಾನ ಹರಾಜು ಹಾಕಿದಾಗ ಬಂದ ಮೊತ್ತವನ್ನು ಗೌಪ್ಯವಾಗಿಡಲಾಗಿದೆ ಎಂದು ನಮ್ಮ ಗುಪ್ತ ಮೂಲಗಳು ಎಲ್ಲೆಲ್ಲಿಯೋ ಕೂತು ವರದಿ ಮಾಡಿವೆ.

ಮಾನವು ನಷ್ಟವಾಗಿರುವ ಬಗ್ಗೆ ಅಪಮೌಲ್ಯ ತೋರಿಸುತ್ತಿರುವುದರ ಕುರಿತು ತನಿಖೆ ನಡೆಸುವಂತೆ ಒತ್ತಾಯಿಸಲಿರುವ ಬೊಗಳೆ ರಗಳೆ ಬ್ಯುರೋ, ಇಷ್ಟು ಮೊತ್ತದ ಮಾನವನ್ನು ಆಗಾಗ್ಗೆ ಹರಾಜು ಹಾಕುತ್ತಾ, ಅದರಿಂದಾಗಿ ಸಂಪಾದನೆಯಾಗುವ ಭಾರೀ ಪ್ರಮಾಣದ ಸಂಪತ್ತು ಕೂಡಿ ಹಾಕಿರುವವರ ವಿರುದ್ಧ ಆದಾಯ ತೆರಿಗೆ ಇಲಾಖೆಗೆ ದೂರು ನೀಡಲು ನಿರ್ಧರಿಸಿದೆ.

Monday, December 17, 2007

ಮನುಷ್ಯನಿಂದ ಕಚ್ಚಿಸಿಕೊಂಡ ನಾಯಿ ಆತ್ಮಹತ್ಯೆ!

(ಬೊಗಳೂರು ರೇಗೀಸ್ ಬ್ಯುರೋದಿಂದ)
ಬೊಗಳೂರು, ಡಿ.17- ಮಾನವೀಯತೆ ಮೆರೆಯುವ ಪ್ರಾಣಿಗಳ ಸುದ್ದಿಗಳನ್ನು ಆಗಾಗ್ಗೆ ಕೇಳುತ್ತಾ ಇದ್ದೇವೆ. ಈ ಹಿನ್ನೆಲೆಯಲ್ಲಿ vice versa ಆಗಬೇಕಾದದ್ದು ಮಾನವ ಧರ್ಮ. ಇಂಥ ಪ್ರಸಂಗಗಳು ಕೂಡ ಅಲ್ಲಲ್ಲಿ ವರದಿಯಾಗುತ್ತಿದ್ದು, ನಮ್ಮ ವಿರೋಧಿ ಪತ್ರಿಕೆಯೊಂದು ಇಲ್ಲಿ ಹುಚ್ಚು ನಾಯಿಗೇ ಕಚ್ಚಿದ ವೃದ್ಧನ ಬಗ್ಗೆ ವರದಿ ಪ್ರಕಟಿಸಿ ಬೊಗಳೆಯನ್ನು ಚಿಂತಾಜನಕ ಸ್ಥಿತಿಗೆ ತಳ್ಳಿದೆ.

ಹುಚ್ಚು ನಾಯಿ ಕಚ್ಚಿದಂತೆಯೇ ಓಡಾಡಿದ ಬೊಗಳೆ ಬ್ಯುರೋ ಸಿಬ್ಬಂದಿ, ಅಜ್ಜ ದಾಖಲಾಗಿದ್ದ ಆಸ್ಪತ್ರೆ ಸೇರಿ (ಚಿಕಿತ್ಸೆ ಪಡೆಯಲು ಅಲ್ಲ ಅಂತ ಸಂಪಾದಕರು ಸ್ಪಷ್ಟನೆ ನೀಡಿದ್ದಾರೆ.), ಅಜ್ಜ ಮಲಗಿದ್ದ ಹಾಸಿಗೆಯತ್ತ ಭೀತಿಯಿಂದಲೇ ಒಂದು ನೋಟ ಬೀರಿದಾಗ, ಆ ಅಜ್ಜನ ಮುಖದಲ್ಲಿ ನಗುವಿನ ಛಾಯೆಯಿತ್ತು. ಮಾತ್ರವಲ್ಲ ಹುಚ್ಚು ನಾಯಿಯನ್ನು ಕೊಂದ ಹೆಮ್ಮೆಯ ಗೆರೆಯೂ ಅಲ್ಲಿ ಕಾಣಿಸುತ್ತಿತ್ತು.

ಆದರೆ ಈ ಬಗ್ಗೆ ತೀವ್ರ ತನಿಖೆ ಕೈಗೊಂಡಾಗ, ಆ ನಾಯಿ ಸತ್ತದ್ದಕ್ಕೆ ಈ ಅಜ್ಜ ಕಚ್ಚಿದ್ದಾಗಲೀ, ಅಥವಾ ಅಲ್ಲಿದ್ದವರು ಹೊಡೆದದ್ದಾಗಲೀ ಕಾರಣವಲ್ಲ ಎಂದು ಪತ್ತೆಯಾಗಿದೆ. ತನಿಖೆ ತೀವ್ರಗೊಳಿಸಿದಾಗ ತಿಳಿದು ಬಂದ ಅಂಶವೆಂದರೆ ಈ ನಾಯಿ ತನ್ನದೇ ಆತ್ಮವನ್ನು ಹತ್ಯೆ ಮಾಡಿಕೊಂಡಿತ್ತು!

ಮನುಷ್ಯನಿಂದಲೂ ಕಚ್ಚಿಸಿಕೊಳ್ಳಬೇಕಾಯಿತಲ್ಲಾ ಎಂಬ ಅವಮಾನದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಅದು ಬರೆದಿಟ್ಟಿರುವ ಚೀಟಿಯೊಂದು ದೊರಕಿದ್ದು, ಮುಂದಿನ ಜನ್ಮದಲ್ಲಿ ತಾನೂ ಮಾನವನಾಗಿ ಹುಟ್ಟಿ ಬಂದು ಸೇಡು ತೀರಿಸಿಕೊಳ್ಳುವುದಾಗಿ ಶಪಥವನ್ನೂ ಹಾಕಲಾಗಿದೆ.

ಈ ನಾಯಿಯ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಶ್ವಾನವೈದ್ಯರು ನೀಡಿದ ವರದಿಯ ಪ್ರಕಾರ, ನಾಯಿಯ ದೇಹದಲ್ಲಿ ಆಧುನಿಕ ಯುಗದಲ್ಲಿ ಪ್ರಾಣಿಗಳಂತೆಯೇ ವರ್ತಿಸುತ್ತಿರುವ ಮಾನವನ ಅ-ಮಾನವೀಯತೆ ಎಂಬ ವಿಷವಿರುವುದು ಪತ್ತೆಯಾಗಿತ್ತು.

ಈ ಮಧ್ಯೆ, ಮಾನವ ಪ್ರಾಣಿ ಕಚ್ಚಿದ ಪರಿಣಾಮವಾಗಿ ನಾಯಿಗೆ ಇದ್ದ ರೇಗಿಸೋ "ರೇಬೀಸ್" ಕಾಯಿಲೆ ಗುಣವಾಗುವ ಹಂತಕ್ಕೆ ತಲುಪಿತ್ತೇ? ಗುಣವಾಗುವ ಲಕ್ಷಣಗಳು ಆರಂಭವಾಗಿದ್ದವೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

Friday, December 14, 2007

ಬೊಗಳೆಯಲ್ಲಿ ಹುಚ್ಚುನಾಯಿ ಕಡಿತದ ಫಾಲೋ ಅಪ್!

ಹುಚ್ಚುನಾಯಿಗೆ ಕಚ್ಚಿದ ಮಾನವನ ಕುರಿತು ವರದಿ ಈಗಾಗಲೇ ಓದಿರುತ್ತೀರಿ. ಅದರ ನಂತರ
ಏನಾಯಿತು? ಎಂಬ ಕುರಿತ ಫಾಲೋ ಅಪ್ ವರದಿ ಯಾರಾದರೂ ನೋಡಿದ್ದೀರಾ? ಯಾರೂ ಮಾಡದ
ಸಂಗತಿಯನ್ನು ಬೊಗಳೆ ಬ್ಯುರೋ ಮಾಡುತ್ತಿದೆ. ನಿಂತ ನೀರಾಗಿ ನಿರೀಕ್ಷಿಸಿ... ಆದರೆ
ನಾಚಿ ನೀರಾಗದಿರಿ.

Wednesday, December 12, 2007

ಬೊಗಳೆ: ಸಚಿವ ರೋಮ್ ದಾಸ್ ಮನೆಯೆದುರು ಹುಡುಗರ ದಂಡು!

(ಬೊಗಳೂರು ಪೋಲಿ-ಟ್ರಿಕ್ಸ್ ಬ್ಯುರೋದಿಂದ)
ಬೊಗಳೂರು, ಡಿ.12- ದೇಶದಲ್ಲಿರುವ ಎಲ್ಲಾ ಹುಡುಗರು, ರಾಮ ಇಲ್ಲ ಎಂದು ವಾದ ಮಾಡುತ್ತಿರುವ ಮತ್ತು (ವಸ್ತುಶಃ con-guess ಅಧ್ಯಕ್ಷರ ತಾಯ್ನಾಡು) "ರೋಮ್"ದಾಸ್ ಆಗಿ ಬದಲಾಗಿರುವ ಕೇಂದ್ರದ ಅನಾರೋಗ್ಯ ಸಚಿವರ ಮನೆಬಾಗಿಲಲ್ಲಿ ಕಾದು ಕುಳಿತಿದ್ದಾರೆ ಎಂದು ವರದಿಯಾಗಿದೆ.

ಈ ರಾದ್ಧಾಂತಕ್ಕೆ ಕಾರಣ, ನಮ್ಮ ವಿರೋಧಿ ಪತ್ರಿಕೆಯೊಂದು ಇಲ್ಲಿ ಪ್ರಕಟಿಸಿದ ವರದಿ. ಹಾಗಾಗಿ ತಾವೂ ರೋಮ್ ದಾಸಾನುದಾಸರಾಗುವ ನಿಟ್ಟಿನಲ್ಲಿ ಯಾವೆಲ್ಲಾ "ಕಲ್ಯಾಣ" ಕ್ರಮಗಳನ್ನು ಅನುಸರಿಸಬೇಕು ಎಂಬ ಬಗ್ಗೆ ಈ ಹುಡುಗರು "ಪೋಲಿ ಟ್ರಿಕ್ಸ್" ಪ್ರವೀಣ ಎಂಬ ಹೆಗ್ಗಳಿಕೆ ಪಡೆದಿರುವ ರೋಮ್ ದಾಸ್‌ರಲ್ಲಿ ಶಿಕ್ಷಣ ಪಡೆಯಲು ನಿರ್ಧರಿಸಿದ್ದಾರೆ ಎಂಬುದನ್ನು ಪತ್ತೆ ಹಚ್ಚಲಾಗಿದೆ.

ಇನ್ನು ಕೆಲವರು ಅನಾರೋಗ್ಯ ಸಚಿವರ ಬಗ್ಗೆ ಗಂಭೀರ ಮತ್ತು ಚಿಂತಾಜನಕ ರೀತಿಯಲ್ಲಿ ಮತ್ಸರ ವ್ಯಕ್ತಪಡಿಸಿದ್ದು, ರೋಮ್ ದಾಸರನ್ನೇ AIIMSನ ಮಾನಸಿಕ ವಿಭಾಗದ ಅತ್ಯಂತ ಐಷಾರಾಮಿ ಕೊಠಡಿಯಲ್ಲಿ ದಾಖಲಿಸಿ ಕೈತೊಳೆದುಕೊಳ್ಳಲು ದೃಢ ನಿಶ್ಚಯಭರಿತ ಸಂಚು ರೂಪಿಸುತ್ತಿದ್ದಾರೆ.

ರೋಮ್ ದಾಸರಿಂದ ಶಿಕ್ಷಣ ಪಡೆಯಲು ಉದ್ದೇಶಿಸಿರುವ ಹುಡುಗರು, ತಮ್ಮ ಪ್ರತಿಷ್ಠೆಗಾಗಿ ಯಾವ ರೀತಿ ಒಬ್ಬ ಪ್ರಾಮಾಣಿಕ ವ್ಯಕ್ತಿಯನ್ನು ಮಟ್ಟ ಹಾಕಬಹುದು, ಸುಪ್ರೀಂ ಕೋರ್ಟು ತಡೆದರೂ ಕೂಡ, ಅವರನ್ನು ಕಿತ್ತು ಹಾಕಲು ಯಾವ ರೀತಿ ಶಾಸನಗಳನ್ನು ರೂಪಿಸಬೇಕು, ಅವರಿಗೆ ಬೆಂಬಲ ನೀಡುವವರನ್ನೆಲ್ಲಾ ನೀರಿಲ್ಲದ ಊರಿಗೆ ಹೇಗೆ ಅಟ್ಟುವುದು, ಸತ್ಯ ಬಹಿರಂಗಪಡಿಸುವವರ ಮೇಲೆಯೇ ಒಂದು ಗೂಬೆಯನ್ನು ತಂದು ಕೂರಿಸುವುದು ಹೇಗೆ ಎಂಬುದೇ ಮುಂತಾಗಿ ಪಾಠಗಳನ್ನು ಕಲಿತುಕೊಳ್ಳಲು ನಿರ್ಧರಿಸಿದ್ದಾರೆ.

"ಶಿಕ್ಷಣದಲ್ಲಿ ಯಾವತ್ತೂ ಹುಡುಗಿಯರು ಮುಂದೆ, ಹುಡುಗರೆಲ್ಲಿ ಅಂತ ಕೇಳಿದರೆ ಬರುವ ಉತ್ತರ- ಅವರು ಈ ಹುಡುಗಿಯರ ಹಿಂದೆ" ಎಂಬ ಚಾಲ್ತಿಯಲ್ಲಿರುವ ಪ್ರಶಂಸಾತ್ಮಕ ನುಡಿಯನ್ನು ಉಲ್ಟಾ ಮಾಡಲು ಇದೊಂದು ಸದವಕಾಶ ಎಂದು ಬಲವಾಗಿ ನಂಬಿರುವ ಈ ಹುಡುಗರು, ರೋಮ್ ದಾಸರಿಂದ ಪಾಠ ಕಲಿತರೆ, ತಮ್ಮ ಹಿಂದೆ ಹುಡುಗಿಯರು ಬೀಳುತ್ತಾರೆ, "ವಿಲ್ ಯೂ ಮ್ಯಾರೀ ಮೀ" ಅಂತ ಕೇಳುತ್ತಾರೆ. ಅಂದರೆ ಹುಡುಗಿಯರು ಹಿಂದೆ ಬಿದ್ದಂತಾಗುತ್ತದೆ, ಹುಡುಗರು ಮುಂದೆ. ಹೇಗಿದೆ ನಮ್ ಐಡಿಯಾ ಅಂತ AIIMS ನಲ್ಲಿ ಯಾವತ್ತೂ "ಹಿಂದೆ ಬೀಳೋ" ವಿದ್ಯಾರ್ಥಿಯೊಬ್ಬ ಪ್ರಶ್ನಿಸಿದ್ದಾನೆ.

ಆದರೆ, ಹುಡುಗಿಯರು ಹಿಂದೆ ಬಿದ್ದರೂ, ಮುಂದೆ ಇರುವ ಹುಡುಗರು ಕೂಡ ಬೀಳುತ್ತಾ ಇರುತ್ತಾರೆಯೇ ಅಥವಾ ಮುಂದೆ ಹೋಗುತ್ತಾ ಇರುತ್ತಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ ಎಂದು ನಮ್ಮ ಪೋಲಿ-ಟ್ರಿಕ್ಸ್ ವಿಶ್ಲೇಷಣಾಕಾರರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Monday, December 10, 2007

ಆತ್ಮಹತ್ಯೆ ಹೆಚ್ಚಳ: ಬೊಗಳೆ ಕೈವಾಡವಲ್ಲ!

(ಬೊಗಳೂರು ಆತ್ಮಹತ್ಯಾ ಬ್ಯುರೋದಿಂದ)
ಬೊಗಳೂರು, ಡಿ.10- ಆತ್ಮಹತ್ಯೆಯಲ್ಲಿ ಕರ್‌ನಾಟಕಕ್ಕೆ 5 ನೇ ಸ್ಥಾನ ದೊರೆತಿರುವ ಬಗ್ಗೆ ನಮ್ಮ ವಿರೋಧಿ ಪತ್ರಿಕೆ ವರದಿ ಮಾಡಿದ್ದು, ಇದರಲ್ಲಿ ಬೊಗಳೆ ರಗಳೆ ಬ್ಯುರೋ ಕೈವಾಡ ಸಾಧ್ಯತೆಯನ್ನು ದಟ್ಟವಾಗಿ, ಕರಾಳವಾಗಿ ಶಂಕಿಸಲಾಗುತ್ತಿದೆ.

ಕರುನಾಟಕದ ರಾಜಕಾರಣಿಗಳ ನಾಟಕದ ವಿಧಿ ವಿಧಾನಗಳ ಬಗ್ಗೆ ನಮ್ಮ ಬ್ಯುರೋವು ಎಡೆಬಿಡದೆ, ಜಾಹೀರಾತು ದೊರೆಯದ ಕಾರಣಕ್ಕಾಗಿ ಜಗಜ್ಜಾಹೀರಾತುಗೊಳಿಸುವ ವರದಿಗಳನ್ನು ಪ್ರಕಟಿಸಿತ್ತು. ಇದನ್ನು ಓದಿಯೇ ಕರುನಾಟಕದ ಮಂದಿ... ಅಬ್ಬಾ... ನಮ್ಮ ಜಾರಕಾರಣಿಗಳ ಜಾರೋಕೀಯ ಈ ಮಟ್ಟಕ್ಕೆ ಏರಿಬಿಟ್ಟಿತಲ್ಲಾ ಎಂದು ಹತಾಶೆಯಿಂದ, ಇರುವ ಮತ್ತು ಇಲ್ಲದ ಆತ್ಮಗಳೆಲ್ಲವನ್ನೂ ಹತ್ಯೆ ಮಾಡಿಕೊಂಡಿದ್ದಾರೆ ಎಂಬ ವಾದಕ್ಕೆ ಬಲವಾದ ಪುಷ್ಟಿ ದೊರೆಯುತ್ತಿದ್ದು, ಬೊಗಳೆ ಬ್ಯುರೋದಲ್ಲಿ ಆತಂಕ ಮೂಡಿಸಿಲ್ಲ.

ಇದರಲ್ಲಿ ಬೊಗಳೆ ಬ್ಯುರೋದ ಕೈವಾಡವಿಲ್ಲ. ಈಗಾಗಲೇ ಚುನಾವಣೆಗಳು ಎದುರಾಗುತ್ತಿರುವುದರಿಂದ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿರುವ ಶ್ವೇತವಸ್ತ್ರಧಾರಿ ಅನ್ಯಗ್ರಹ ಜೀವಿಗಳನ್ನು ನೋಡಿಯೇ ಕೆಲವರು ಹೃದಯಾಘಾತಕ್ಕೀಡಾಗುತ್ತಿದ್ದಾರೆ. ಇದನ್ನು ಆತ್ಮಹತ್ಯೆ ಅಂತ ಕೇಸು ಬರೆಸುವಂತೆ ಈ ಅನ್ಯಗ್ರಹಜೀವಿಗಳು ಪೊಲೀಸರಿಗೆ ತಾಕೀತು ಮಾಡುತ್ತಿದ್ದಾರೆ ಎಂಬುದನ್ನು ನಮ್ಮ ಬ್ಯುರೋದ ಇಲ್ಲದ ವದರಿಗಾರರು ಪತ್ತೆ ಹಚ್ಚಿ ಬಿಟ್ಟಿದ್ದಾರೆ.

ಇದೂ ಅಲ್ಲದೆ, ವಿಧಾನಸಭೆ ವಿಸರ್ಜನೆಯಾದ ಬಳಿಕ, ಅಲ್ಲಿಂದ ಹೊರಬಿದ್ದ ಅರಾಜಕೀಯ ತ್ಯಾಜ್ಯದಿಂದ ಹೊರಟ ದುರ್ವಾಸನೆ ಮತ್ತು ವಿಷಾನಿಲ ಸೇವಿಸಿಯೇ ಕೆಲವರು ಸಾವಿಗೀಡಾಗಿದ್ದಾರೆ. ಇದು ಕೂಡ ವಿಷ ಸೇವಿಸಿ ಆತ್ಮಹತ್ಯೆ ಎಂಬ ಪ್ರಕರಣ ದಾಖಲಾಗಲು ಕಾರಣವಾಗುತ್ತಿದೆ ಮತ್ತು ಆ ರೀತಿ ದಾಖಲಿಸಲು ಒತ್ತಡವೂ ಬರುತ್ತಿದೆ ಎಂಬುದನ್ನು ನಮ್ಮ ವದರಿಗಾರರನ್ನು ಕೂಡಿ ಹಾಕಿದ್ದ ಜೈಲಿನ ಪೊಲೀಸರೊಬ್ಬರು ತಿಳಿಸಿದ್ದಾರೆ.

ಈ ಮಧ್ಯೆ, ರಾಷ್ಟ್ರೀಯ ಅಪರಾಧಗಳ ದಾಖಲೆ ಬ್ಯುರೋ ಕೂಡ ಎಲ್ಲಿಯೂ ತನ್ನ ವರದಿಯಲ್ಲಿ ಬೊಗಳೆಯ ರಗಳೆಯೂ ಕಾರಣ ಎಂದು ಎಲ್ಲಿಯೂ ಉಲ್ಲೇಖಿಸದಿರುವುದು ಹಲವರ ಹುಬ್ಬೇರಿಸಿದೆ. ಇದರಲ್ಲೇನೋ ಒಳ ಸಂಚಿರಬೇಕು, ಬೊಗಳೆ ಸೊಂಪಾದಕರು ಯಾರಿಗೋ ಲಂಚ ನೀಡಿ, ತಮ್ಮ ಪತ್ರಿಕೆಯ ಹೆಸರು ಈ ದಾಖಲೆಯಲ್ಲಿ ನುಸುಳದಂತೆ ಮಾಡಿರುವುದಾಗಿ ಶಂಕಿಸಲಾಗುತ್ತಿದೆ.

ಆದರೆ, ಬೊಗಳೆಯ ವರದಿಗಳನ್ನು ಓದಿಯೂ ಬದುಕುವುದರಲ್ಲಿ ನಂಬಿಕೆ ಉಳಿಸಿಕೊಂಡಿರುವವರ ಮನೋಸ್ಥೈರ್ಯವನ್ನು ನಮ್ಮ ಸೊಂಪಾದ-ಕರು ತುಂಬು ಕೊಡಗಳಿಂದ ಶ್ಲಾಘಿಸಿದ್ದಾರೆ.

ಅದೂ ಅಲ್ಲದೆ, ಬೊಗಳೆಯಲ್ಲಿ ಪ್ರಕಟವಾಗುತ್ತಿರುವ ಮತ್ತು ಪ್ರಕಟವಾಗದೇ ಬಾಕಿ ಉಳಿದ ಯಾವುದೇ ವರದಿಗಳು ಕೂಡ ಈ ಆತ್ಮಹತ್ಯೆಯನ್ನು ಪ್ರೇರೇಪಿಸಿಲ್ಲ ಎಂದು ನಮ್ಮ ಸಂಪಾದಕರು ಬಿದ್ದು, ಬಿದ್ದು ನಗುತ್ತಾ, ಎದ್ದು ಎದ್ದು ಓಡುತ್ತಾ, ಅಲವತ್ತುಕೊಳ್ಳುತ್ತಾ ಸ್ಪಷ್ಟನೆ ನೀಡಲು ಗಂಭೀರ ಚಿಂತನೆ ನಡೆಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಲಾಗಿದೆ.

Tuesday, December 04, 2007

ನುಡಿಸಿರಿಯಲ್ಲಿ ಬೊಗಳೆ: ಅಲ್ಲಲ್ಲಿ ಟೈರ್ ಪಂಕ್ಚರ್!

(ಬೊಗಳೂರು ಬಡಿಸಿರಿ ಬ್ಯುರೋದಿಂದ)
ಬೊಗಳೂರು, ಡಿ.4- ಇಷ್ಟು ದಿನ ನಾಪತ್ತೆಯಾಗಿದ್ದಕ್ಕೆ ಬೊಗಳೆ ರಗಳೆ ಬ್ಯುರೋದ ಸೊಂಪಾದಕರುಗಳನ್ನು ಯಾರೂ ಕೂಡ ಹಳಿಯದಂತಿರಲು ಈ ವರದಿ.

ಇಷ್ಟು ದಿನ ಓದುಗರಿಂದ ತಪ್ಪಿಸಿಕೊಂಡು ತಿರುಗಾಡಿದ್ದು ಕರುನಾಟಕದ ರಾಜಕೀಯ ಪ್ರಭಾವದಿಂದಲ್ಲ ಮತ್ತು ನಾವು ಓಟು ಕೇಳಲು ಮನೆಮನೆಗೆ ತೆರಳಿಲ್ಲ ಎಂದು ಈ ಮೂಲಕ ಸ್ಪಷ್ಟಪಡಿಸುತ್ತಿದ್ದು, ಇದಕ್ಕೆಲ್ಲಾ ಕಾರಣ ಗುಡಿಸಿರಿ, ಸಾರಿಸಿರಿ ಎಂದು ನಮ್ಮ ಬ್ಯುರೋ ಕೆಲಸ ಮಾಡಿದ್ದಾಗಿದೆ ಎಂದು ಖಂಡಿತವಾಗಿ ಹೇಳುತ್ತಿದ್ದೇವೆ.

ಮೂಡುಬಿದ್ರೆಯಲ್ಲಿ ಮೂರು ದಿನ ಆಳ್ವಾಸ್ ನುಡಿಸಿರಿ- ಕನ್ನಡ ರಸವನು ಬಡಿಸಿರಿ ಎಂಬ ಜಾತ್ರೆ ನಡೆದಿದ್ದು, ಅದರಲ್ಲಿ ಪಾಲ್ಗೊಳ್ಳಲೆಂದು ತೆರಳಿದ ನಮಗೆ ಅಲ್ಲಿ ದೊರೆತ ಸಂಗತಿಗಳು ಹಲವು. ಆದರೆ ಬೇರೆಯವರೆಲ್ಲರೂ ಎಲ್ಲವನ್ನೂ ವರದಿ ಮಾಡಿದ್ದಾರಾದುದರಿಂದ ಅಲ್ಲಿ ಹೋದ ನಮಗೆ ವರದಿ ಮಾಡಲು ಏನೂ ಸಿಗಲಿಲ್ಲ ಎಂದು ಬಲು ಸಂತೋಷದಿಂದ ಹೇಳಲು ಬಯಸುತ್ತಿದ್ದೇವೆ.

ಆಳ್ವಾ ಅವರು ಕನ್ನಡ ನುಡಿಯನು ನುಡಿಸಿರಿ, ಕನ್ನಡ ಅನ್ನ ಬಡಿಸಿರಿ, ಕನ್ನಡದ ನೀರು ಕುಡಿಸಿರಿ ಎಂದು ಕರೆ ಕೊಟ್ಟಿದ್ದ ಕಾರಣ ಎಲ್ಲರೂ ಅದನ್ನೇ ಮಾಡುತ್ತಿದ್ದುದು ಕಂಡು ಬಂದಿತ್ತು.

ಅಷ್ಟು ದೊಡ್ಡ ಮೂರು ದಿನಗಳ ಕಾರ್ಯಕ್ರಮದಲ್ಲಿ ವರದಿ ಮಾಡಲು ನಮಗೆ ಏನೂ ಸಿಗಲಿಲ್ಲವೆಂದರೆ! ಇದು ಅವಮಾನ, ಹೇಗಾದರೂ ಏನಾದರೂ ವರದಿ ಮಾಡಲೇಬೇಕು ಎಂದುಕೊಂಡು ಯೋಚಿಸುತ್ತಾ ಕುಳಿತ ನಮ್ಮ ಬ್ಯುರೋ ವರದಿಗಾರರಿಗೆ ಕೊನೆಗೂ ವರದಿ ಮಾಡಲು ಒಂದು ವಿಷಯ ಸಿಕ್ಕಿತು.

ಅದುವೇ ಟೈರು ಪಂಚರುಗಳಾಗುತ್ತಿರುವ ವರದಿಗಳು. ಆದರೆ ಇದು ನುಡಿಸಿರಿ ಸಮ್ಮೇಳನ ಸಂಪೂರ್ಣವಾಗಿ ಮುಗಿಸಿದಿರಿ ಎಂದು ಘೋಷಿಸಿದ ಬಳಿಕವಷ್ಟೇ ನಡೆದಿತ್ತು ಎಂಬುದನ್ನು ನಾವು ದಯನೀಯವಾಗಿ ಒಪ್ಪಿಕೊಳ್ಳುತ್ತಿದ್ದೇವೆ. ನಮ್ಮ ವರದಿಗಾರರಿಗೆ ಕೂಡ ಎಲ್ಲಾ ಮುಗಿದ ಬಳಿಕವೇ ವರದಿ ಮಾಡಲು ಅವಕಾಶ ಸಿಕ್ಕಿತ್ತು!

ಮೂಡುಬಿದಿರೆಯ ಸುತ್ತಮುತ್ತ, ಅಂದರೆ ಮಂಗಳೂರು, ಕಾರ್ಕಳ, ಬೆಳ್ತಂಗಡಿ ಇತ್ಯಾದಿ ಪರಿಸರಗಳಲ್ಲಿ ಅಲ್ಲಲ್ಲಿ ಟೈರು ಪಂಚರಾಗಿ ನಿಂತುಬಿಟ್ಟಿದ್ದ ಲಾರಿಗಳು, ಬಸ್ಸುಗಳು, ಕಾರುಗಳು, ಬೈಕುಗಳು ಕಂಡು ಬರುತ್ತಿದ್ದವು. ಹಾಗಂತ ಇವುಗಳಿಗೆ ನುಡಿಸಿರಿಯಲ್ಲಿ ಹೊಟ್ಟೆ ತುಂಬಾ (ಪೆಟ್ರೋಲ್) ಕುಡಿಸಿರಿ ಅನ್ನುವವರು ಯಾರೂ ಇದ್ದಿರಲಿಲ್ಲ ಅಂತ ತಿಳಿದುಕೊಳ್ಳಬೇಕಾಗಿಲ್ಲ.

ಮೂರೂ ದಿನಗಳ ಜಾತ್ರೆಯನ್ನು ಕೆಲವರು (ಅಂದರೆ ನಮ್ಮ ಬದ್ಧ ವಿರೋಧಿ ಪತ್ರಿಕೆಗಳು) ನುಡಿ ಜಾತ್ರೆ ಎಂದರು, ಕೆಲವರು ಜನ ಜಾತ್ರೆ ಎಂದರು, ಮತ್ತೆ ಕೆಲವರು ಸಡಗರದ ಜಾತ್ರೆ, ಸಾಂಸ್ಕೃತಿಕ ಜಾತ್ರೆ ಎಂದರು, ಕೆಲವರು ನಗುವಿನ ಜಾತ್ರೆ ಎಂದೂ, ಸಾಹಿತ್ಯ ಜಾತ್ರೆ ಎಂದೂ, ಸಮಯ ಪಾಲನೆಯ ಜಾತ್ರೆ ಎಂದೂ, ಪುಸ್ತಕ ಜಾತ್ರೆಯೆಂತಲೂ, ಜಾಗೃತಿ ಜಾತ್ರೆ ಎಂತಲೂ, ಕನ್ನಡದ ಬಗ್ಗೆ ಚಿಂತನೆ ಮಾಡುವಂತೆ ಮಾಡುವ ಜಾತ್ರೆಯೆಂದೂ ತಮ್ಮ ತಮ್ಮ ಬಾಯಿಗೆ ಬಂದಂತೆ ಬರೆದರು.

ಪ್ರತಿದಿನವೂ ಸಾವಿರಾರು ಮಂದಿ ಇಲ್ಲಿ ಬಂದು ಹೋಗುತ್ತಿದ್ದರು. ಮತ್ತೆ ಮರಳಿ ಬರುತ್ತಿದ್ದರು. ಅಂತಿಮವಾಗಿ ಈ ಮೂರು ದಿನಗಳ ಜಾತ್ರೆಯು ಮುಗಿದಾಗಲಂತೂ, ಕನ್ನಡಕ್ಕೆ ಭವಿಷ್ಯವಿದೆ, ಅದರ ಬಗ್ಗೆ ಚಿಂತಿಸಬೇಕಾದ ಅಗತ್ಯವಿಲ್ಲ ಎಂಬ ಭಾವನೆಯಿಂದ ಮನಸ್ಸುಗಳು ಹಗುರವಾಗಿದ್ದವಾದರೂ, ಎಲ್ಲರ ಮನಸ್ಸುಗಳು ಭಾರವಾಗಿದ್ದವು, ಹೃದಯ ಭಾರವಾಗಿತ್ತು, ಒಡಲು ತುಂಬಿತ್ತು. ಕೆಲವರು ಅಲ್ಲಿ ದೊರೆತಿರುವ ಭರ್ಜರಿ ರಸದೌತಣವೇ ಇದಕ್ಕೆ ಕಾರಣವೆಂದು ಹೊಟ್ಟೆ ನೀವಿಕೊಂಡರೂ, ಸಾಹಿತ್ಯದ ರಸದೌತಣವನ್ನೂ ಅಲ್ಲಿ ಬಡಿಸಿರಿ ಬಡಿಸಿರಿ, ಅಂತ ಬಗೆಬಗೆದು ಕೊಡಲಾಗಿತ್ತು.

ಇಂಥದ್ದೊಂದು ಜಾತ್ರೆ ಮುಗಿಯಿತಲ್ಲಾ ಎಂಬ ಕೊರಗಿನೊಂದಿಗೆ ಭಾರವಾದ ಮನಸ್ಸು, ಹೊಟ್ಟೆ, ಹೃದಯ ಹೊತ್ತವರು ತಮ್ಮ ತಮ್ಮ ಊರಿಗೆ ಮರಳುವ ವಾಹನಗಳನ್ನೇರಿದ್ದರು. ಅವರ ತೂಕದೊಂದಿಗೆ ಈ ಭಾವನೆಗಳ ತೂಕವೂ ಹೆಚ್ಚಾಗಿ, ವಾಹನಗಳ ಟೈರುಗಳಿಗೆ ಈ ಒತ್ತಡ ಸಹಿಸುವ ಶಕ್ತಿ ಇಲ್ಲವಾಯಿತು. ಅಲ್ಲಲ್ಲಿ ಪಂಕ್ಚರ್ ಆಗಿಬಿಟ್ಟಿದ್ದವು ಎಂಬುದನ್ನು ಬೊಗಳೆ ರಗಳೆ ಬ್ಯುರೋ ಮಾತ್ರವೇ ಪತ್ತೆ ಹಚ್ಚಿದೆ.

ಹೀಗಾಗಿ ಮೂರು ದಿನಗಳ ಜಾತ್ರೆಗೆ ಹೋಗಿದ್ದ ನಾವು ಏನೂ ವರದಿ ನೀಡಿಲ್ಲ ಎಂಬ ಆರೋಪದಿಂದ ಮುಕ್ತರಾಗಲು, ಅಲ್ಲಿ ಕೇಳಿಬಂದ ಈ ಕೆಳಗಿನ ತುಣುಕುಗಳನ್ನು ಇಲ್ಲಿ ನೀಡುತ್ತಿದ್ದೇವೆ.

* ಅದು ಸಾಹಿತ್ಯ ಚರ್ಚೆಯೇ ಇರಲಿ, ಸಂವಾದ ಕಾರ್ಯಕ್ರಮವೇ ಆಗಿರಲಿ, ಯಕ್ಷಗಾನ ಪ್ರದರ್ಶನವೇ ಇರಲಿ, ಹಾಸ್ಯರಸವಿದ್ದ ಮಾತಿನ ಮಂಟಪವೇ ಇರಲಿ, ಕಾರ್ಟೂನುಗಳುಳ್ಳ ಪ್ರದರ್ಶನ ಕೊಠಡಿಯೇ ಇರಲಿ, ಎಲ್ಲೆಡೆ ರಾರಾಜಿಸುತ್ತಿದ್ದವರು ನಮ್ಮ ವದಿಯೋಗೌಡ್ರು ಮತ್ತವರ ವಂಶ ರಾಜಕಾರಣವೇ. ಒದೆಯೋರಪ್ಪನವರ ಜೋತುಬಿದ್ದ ಮುಖವೂ ಅಲ್ಲಿ ನೆನಪಾಯಿತು. * ಬೊಗಳೆ ರಗಳೆಯಲ್ಲಿ ಪ್ರಕಟವಾಗಿರುವ ವಿಧಾನಸಭೆ ವಿಸರ್ಜನೆಯಿಂದ ಎಲ್ಲೆಡೆ ಗಬ್ಬುನಾತ ಎಂಬ ಸುದ್ದಿಗೂ ಈ ಕಾರ್ಟೂನು ಗ್ಯಾಲರಿಗಳಲ್ಲಿ ಪ್ರಾಧಾನ್ಯ ನೀಡಲಾಗಿತ್ತು.

* ಸಮಯ ಪಾಲನೆಯನ್ನು ವ್ರತದಂತೆ ನಿಷ್ಠೆಯಿಂದ ಪಾಲಿಸುತ್ತಿದ್ದ ಸಮ್ಮೇಳನದ ರೂವಾರಿ ಮೋಹನ್ ಆಳ್ವಾರು ತಮಗೆ "ಬನ್ನಿರಿ ನೋಡಿರಿ ನುಡಿಸಿರಿ, ನಮ್ಮನ್ನೂ ಒಂದಿಷ್ಟು ನಗಿಸಿರಿ ಮತ್ತು 30 ನಿಮಿಷಕ್ಕೇ ಮುಗಿಸಿರಿ" ಅಂತ ಹೇಳಿದ್ದಾರೆ ಎಂದದ್ದು ಹನಿಕವಿ ಡುಂಡಿರಾಜ್.

* ಭುವನೇಶ್ವರಿ ಹೆಗಡೆ ಮತ್ತು ಡುಂಡಿರಾಜ್ ಅವರಿಗೆ 30-30 ನಿಮಿಷ ಅವಕಾಶ ನೀಡಿದಾಗ, ಅವರಿಬ್ಬರೂ, ನಾವು 30:30 ಬೇಷರತ್ ಆಗಿ ಮೈಕ್ ಹಸ್ತಾಂತರಿಸಿದ್ದೇವೆ ಅಂದಿದ್ದು ರಾಜಕೀಯ ಸೇರಲು ಇಚ್ಛಿಸಿರುವ ನಮಗೆ ಪ್ರಬಲವಾಗಿ ಮುಜುಗರ ಉಂಟುಮಾಡಿತು.

* ಡುಂಡಿಯವರು ಮಾತು ಪೋಣಿಸುತ್ತಾ, ಡಿಸೆಂಬರ್ 1ಕ್ಕೆ ಏಡ್ಸ್ ಡೇ ಮುಂತಾಗಿ ಪ್ರತಿಯೊಂದಕ್ಕೂ ಒಂದು ಡೇ ಇರುತ್ತದೆ. ಹಾಗಾಗಿ ಅದೇ ಮಾದರಿಯಲ್ಲಿ ರಾಜಕಾರಣಿಗಳಿಗೆ ಬುರು-ಡೇ, ಮಹಿಳೆಯರಿಗಾಗಿ ಜ-ಡೇ, ಸತ್ತವರಿಗಾಗಿ ವ-ಡೇ, ಯಕ್ಷಗಾನದವರಿಗಾಗಿ ಚೆಂ-ಡೇ, ರೌಡಿಗಳಿಗಾಗಿ ಹೊ-ಡೇ, ಬೇಕರಿಯವರಿಗಾಗಿ ಬಂ-ಡೇ, ಕುಡುಕರಿಗಾಗಿ ಖೋ-ಡೇ ಅಂತೆಲ್ಲಾ ಹೇಳಿ ಅಲ್ಲಿ ಸುಮ್ಮನೆ ಕೂತಿದ್ದವರನ್ನು ಜೋರಾಗಿ ಸದ್ದು ಮಾಡುವಂತೆ ಮಾಡಿ ಅಕ್ಷಮ್ಯ ಅಪರಾಧವೆಸಗಿದರು.

* ಯಡಿಯೂರಪ್ಪ ಬಗ್ಗೆ ಡುಂಡಿ ನುಡಿ ಢೀ ಢೀ: ಜ್ಯೋತಿಷಿಗಳು ಹೇಳಿದ್ದೆಲ್ಲಾ ಮಾಡಿ, ತಮ್ಮ ಹೆಸರಿಗೆ ಇನ್ನೊಂದು ಡಿ, ಸೇರಿಸಿಕೊಂಡರು ಯಡ್ಡಿ, ನಿವಾರಣೆ ಆಗಿಲ್ಲ ಆತಂಕ ಅಡ್ಡಿ, ಕಾಡಿದರು ಎಚ್‌ಡಿಡಿ, ಹಾಕಿದರು ಕಡ್ಡಿ, ಹೊಸ ಹೊಸ ಷರತ್ತುಗಳ ಒಡ್ಡಿ, ಕೊನೆಗೂ ಜಾರಿಸಿದರು ಚಡ್ಡಿ.

* ಡುಂಡಿಯವರ ಮತ್ತೊಂದು ನುಡಿ ಹಬ್ಬದ "ಡಿ"ಸ್ಕೌಂಟು ಬಗ್ಗೆ: ಹಬ್ಬದ ಸಲುವಾಗಿ ಒಳ ಉಡುಪುಗಳ ಮೇಲೆ ಭಾರೀ ದರ ಕಡಿತ, ಧರಿಸಿದ ಮೇಲೇ ಗೊತ್ತಾಗುತ್ತೆ ಒಳಗೂ ಭಾರೀ ಕಡಿತ!

* ಪ್ರತಿಯೊಬ್ಬ ಯಶಸ್ವೀ ಪುರುಷನ ಹಿಂದೊಬ್ಬ ಮಹಿಳೆಯಿರುತ್ತಾಳೆ ಅಲ್ಲವೇ? ಇದನ್ನು ಜೆಎಚ್ ಪಟೇಲರಿಗೆ ಕೇಳಲಾಗಿತ್ತು. ಡುಂಡಿಯವರು ಹೇಳಿದ್ದು ಹೀಗೆ: ಪಟೇಲರೇ ನೀವೊಬ್ಬ ಯಶಸ್ವೀ ನಾಯಕರು, ನಿಮ್ಮ ಹಿಂದಿರುವ ಹೆಂಗಸಾರು? ಆಗ ಪಟೇಲರು ಹೇಳಿದರು, ಆರಲ್ಲ, ಸಾವಿರಾರು!

* ಡುಂಡಿಯವರು ಬಹಿರಂಗ ಪಡಿಸಿದ ನಿಗೂಢ ರಹಸ್ಯ!: ನಮ್ಮ ಮನೆಯಲ್ಲಿ ಮಿಕ್ಸರು ಇಲ್ಲ, ಗ್ರೈಂಡರು ಇಲ್ಲ, ವಾಶಿಂಗ್ ಮೆಷಿನ್ ಇಲ್ಲ, ಎಂದೆಲ್ಲಾ ನನ್ನಾಕೆ ಗೊಣಗುವುದೇ ಇಲ್ಲ, ಯಾಕಂದ್ರೆ ನಾನಿದ್ದೇನಲ್ಲ!

* ಲವ್ ಶುರುವಾಗೋದು ಎಲ್ಲಿಂದ ಅನ್ನೋದಿಕ್ಕೆ ಡುಂಡಿ ವ್ಯಾಖ್ಯಾನ: ಇದಕ್ಕೆ ಹುಡ್ಗೀರು ಉತ್ತರಿಸೋದು, ಲವ್ ಅಟ್ ಫಸ್ಟ್ ಸೈಟ್ ಅಂತ, ಹುಡುಗ್ರು ಉತ್ತರಿಸೋದು ವೆಬ್ ಸೈಟ್‌ನಿಂದ ಅಂತ, ಕಣ್ಣಿಂದ ಅಲ್ಲ, ಪೆನ್ನಿಂದ ಅಂತ ಯುವ ಕವಿ. ಹೇಗೆ? ಮಿತ್ರನೊಬ್ಬ ಬರೆದ ಸುಂದರ ಪ್ರೇಮ ಪತ್ರ, ಓದಿದ ಅಪ್ಪ ಕಾದಿರಿಸಿದ ಛತ್ರ! ಮತ್ತೆ ಈಗಿನ ಯುವ ಜನಾಂಗದಲ್ಲಿ ಲವ್ ಶುರುವಾಗೋದು ಕಾಲಿಂದ... ಅಂದ್ರೆ ಮಿಸ್ಡ್ ಕಾಲಿಂದ ಅಂತ! ಡುಂಡಿಯವರು ಹೇಳುವುದೇನು? ಲವ್ ಶುರುವಾಗೋದು ಎಲ್ಲಿಂದ ಎಂಬ ಪ್ರಶ್ನೆಯಲ್ಲೇ ಉತ್ತರವಿದೆ. ಅಂದರೆ "ಎಲ್"ಇಂದ!

* ಫಲಿತಾಂಶದಲ್ಲೇಕೆ ಯಾವಾಗ್ಲೂ ಹುಡ್ಗೀರು ಮುಂದೆ? ಯಾಕಂದ್ರೆ ಹುಡುಗ್ರು ಯಾವತ್ತೂ ಹುಡ್ಗೀರ ಹಿಂದೆ ಎಂದದ್ದು ಡುಂಡಿರಾಜ್.

* ಪ್ರೀತಿ ಪ್ರೇಮದ ಬಗ್ಗೆ ಸಾಕಷ್ಟು ಕತೆ ಕಾದಂಬರಿಗಳು ಬಂದಿವೆ. ಆದರೆ ಚುಟುಕು ಕವಿಯ ಮದುವೆ ಹೇಗೆ? ಡುಂಡಿ ಹೇಳಿದ್ದು ಹೀಗೆ: ಅವಳು ನನ್ನನ್ನು ನೋಡಿ ನಕ್ಕಳು, ನಮಗೆ ಈಗ ಎರಡು ಮಕ್ಕಳು!

* ಮದುವೆಯಾದವರ ಪರಿಸ್ಥಿತಿ ಬಗ್ಗೆ ಅವರ ಮತ್ತೊಂದು ಕೋಟ್: ನಿಮ್ಮ ಹೃದಯದಲಿ ಸಿಕ್ಕರೆ ಜಾಗ, ಅಷ್ಟೇ ಸಾಕೆಂದಿದ್ದಳು ಆಗ, ಈಗ ದಿನಾಲೂ ಒಂದೇ ರಾಗ, ಸೈಟು ಕೊಳ್ಳುವುದು ಯಾವಾಗ!

* ಅದಕ್ಕೆ ಮುಂಚೆ, ಅರ್ಥಶಾಸ್ತ್ರ ಉಪನ್ಯಾಸಕಿಯಾಗಿರುವ ಹಾಸ್ಯಸಾಹಿತಿ ಭುವನೇಶ್ವರಿ ಹೆಗಡೆ ಹೇಳಿದ್ದು: ಅರ್ಥ ಶಾಸ್ತ್ರ ಎಂದರೇನು, ಎಷ್ಟು ವಿಧ ಎಂಬ ಪ್ರಶ್ನೆಗೆ ಉತ್ತರ- ಪ್ರತಿಯೊಂದು ಶಬ್ದಕ್ಕೂ ಒಂದೊಂದು ಅರ್ಥ ಹುಡುಕಿ ವಿವರಿಸುವುದೇ ಅರ್ಥಶಾಸ್ತ್ರ. ಅದರಲ್ಲಿ ಎರಡು ವಿಧ- ತಪ್ಪು ತಿಳಿದುಕೊಳ್ಳುವುದು ಅಪಾರ್ಥ ಶಾಸ್ತ್ರ ಮತ್ತು ಈ ಅಪಾರ್ಥದಿಂದ ಜಗಳವಾಗಿ ಮಾರಾಮಾರಿಗೆ ಹೋದರೆ ಅದು ಅನರ್ಥ ಶಾಸ್ತ್ರ!

* ತಮ್ಮ ಕೈನೆಟಿಕ್‌ಗೆ ಡಿಕ್ಕಿ ಹೊಡೆದ ಬಸ್ಸಿನ ಗಾಜನ್ನು ಆಕ್ರೋಶಿತ ವಿದ್ಯಾರ್ಥಿಗಳು ಪುಡಿ ಮಾಡಿದ ಸಂದರ್ಭ ಪತ್ರಿಕೆಯೊಂದರಲ್ಲಿ ಬಂದ ಸುದ್ದಿಯ ಟೈಟಲ್ಲು: ಕೈನೆಟಿಕ್‌ಗೆ ಡಿಕ್ಕಿಯಾಗಿ ಪುಡಿಪುಡಿಯಾಗ ಬಸ್!

* ಕುರುಕ್ಷೇತ್ರಕ್ಕೊಂದು ಆಯೋಗ ಎಂಬ ವಿಶಿಷ್ಟ ಯಕ್ಷ ರಂಗ ಪ್ರಯೋಗದಲ್ಲಿ ನ್ಯಾಯದ ಕಟಕಟೆಯಲ್ಲಿ ನಿಂತ ಕೌರವ ಹೇಳಿದ್ದು: ನಾನೇನೂ ತಪ್ಪು ಮಾಡಿಲ್ಲ. ಏನಿದ್ದರೂ ಕುರು ವಂಶಕ್ಕಾಗಿ ಮಾಡಿದೆ, ನಮ್ಮ ವಂಶೋನ್ನತಿಗಾಗಿ, ಕುಲೋನ್ನತಿಗಾಗಿ ಮಾಡಿದೆ ಎನ್ನುತ್ತಾ ವದಿಯೋಗೌಡ್ರನ್ನು ನೆನಪಿಸಿದ!

* ಆಯೋಗದ ತೀರ್ಪುಗಾರಿಕೆ ನಿರ್ವಹಿಸಿದ ಪ್ರಭಾಕರ ಜೋಷಿ ಹೇಳಿದ್ದು: ತಪ್ಪು ಮಾಡಿಯೂ ಏನೂ ಮಾಡಿಲ್ಲ ಎನ್ನುವ ಸುಯೋಧನ, ಧೃತರಾಷ್ಟ್ರರು ನಮ್ಮ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ. ಅಂಥವರೆಲ್ಲರೂ ಕಲಿಯುಗದಲ್ಲಿ ರಾಜಕಾರಣಿಗಳಾಗಿದ್ದಾರೆ.

* ಮಾತಿನ ಮಂಟಪದಲ್ಲಿ ಪ್ರೊ.ಕೃಷ್ಣೇಗೌಡರು ಹೇಳಿದ್ದು: ಹಂಸಕ್ಷೀರ ನ್ಯಾಯದ ಪ್ರಕಾರ, ಹಂಸವು ನೀರನ್ನು ಬಿಟ್ಟು ಹಾಲನ್ನು ಮಾತ್ರ ಸೇವಿಸುತ್ತದೆ ಹೇಗೆ ಎಂದು ಪದೇ ಪದೇ ಕೇಳಿದಾಗ ಜಿ.ಪಿ.ರಾಜರತ್ನಂ ಉತ್ತರಿಸಿದ್ದು ಹೀಗೆ- ಹಂಸವು ಹಾಲು ಸ್ವೀಕರಿಸಿ ನೀರು ಬಿಡುತ್ತದೆ, ಆದರೆ ಎಲ್ಲಿ, ಯಾವಾಗ ಬಿಡುತ್ತದೆ ಅಂತ ಗೊತ್ತಿಲ್ಲ!

* ಇಂಗ್ಲಿಷ್ ಮಾತನಾಡುವ ಚಟ ಬೆಳೆಸಿಕೊಳ್ಳುವ ಹೆಂಡತಿಯೊಬ್ಬಳು, ಗಂಡನ ಜತೆ ಮದುವೆಗೆ ಹೋಗಲು ಸಿದ್ಧತೆ ನಡೆಸುತ್ತಿರುತ್ತಾಳೆ. ಕತ್ತು ತುಂಬಾ ಆ ಸರ, ಈ ಸರ, ಬದನೆಕಾಯಿ ಸರ ಹಾಕಿಕೊಂಡ ಹೆಂಡತಿಯನ್ನು ನೋಡಿ ಗಂಡ ಅವಾಕ್ಕಾಗಿ ಪ್ರಶ್ನಿಸುತ್ತಾನೆ, ಏನೇ ಇದು, ಮದ್ವೆಗೆ ಬಂದೋರೆಲ್ಲರೂ ನಿನ್ನನ್ನೇ ಮದುಮಗಳು ಅಂತ ತಿಳ್ಕೊಂಡಾರು ಎಂದು ಎಚ್ಚರಿಸುತ್ತಾನೆ. ಆಗ ಅವಳು ಉತ್ತರಿಸುತ್ತಾಳೆ - "ರೀ, ಈ ವೆಡ್ಡಿಂಗಿಗೆ ತುಂಬಾ ಪೀಪಲ್ಸ್ ಬರ್ತಾರಲ್ಲ, ಅವ್ರು ಬಂದಾಗ ನಾನು ಬಾಗ್ಲಲ್ಲೇ ನಿಂತಿರ್ತೀನಿ. ಅವ್ರೆಲ್ಲಾ ನನ್ನ ನೆಕ್‌ನೋಡಿ ಹೋಗ್ಲೀಂತ ಈ ರೀತಿ ಹಾಕ್ಕೊಂಡೆ" ಅಂತಾಳೆ. ಅದ್ಯಾಕೆ ನಿನ್ನನ್ನ ನೆಕ್ ನೋಡಿ ಹೋಗ್ಬೇಕು ಎಂದು ಗಂಡ ತತ್ತರಿಸುತ್ತಾನೆ.

* ಇಂಗ್ಲಿಷನ್ನು ಹೇಗೆ ಬೇಕಾದರೂ ಬಳಸಬಹುದು ಎಂಬುದಕ್ಕೊಂದು ಉದಾಹರಣೆ: GHOTI ಎಂದು ಬರೆದರೆ ಇಂಗ್ಲಿಷಿನಲ್ಲಿ ಫಿಶ್ ಅಂತಾನೂ ಓದಬಹುದು. ಯಾಕೆ? ರಫ್ ಪದದ ಸ್ಪೆಲ್ಲಿಂಗಿನಲ್ಲಿ GH ಸೇರಿದರೆ ಫ್ ಆಗುತ್ತದೆ, O ಎಂಬುದು ವಿಮೆನ್ ಪದದಲ್ಲಿ ಇ ಆಗುತ್ತದೆ, ಅಂತೆಯೇ TI ಎಂಬುದು ನೇಶನ್ ಪದದಲ್ಲಿ ಶ್ ಆಗುತ್ತದೆ. ಇವೆಲ್ಲವೂ ಒಟ್ಟು ಸೇರಿದರೆ ಫಿಶ್ ಆಗುತ್ತದೆ ಎಂಬ ಬರ್ನಾರ್ಡ್ ಷಾ ನುಡಿ ನೆನಪಿಸಿದರು ಕೃಷ್ಣೇಗೌಡರು.

Sunday, December 02, 2007

ನುಡಿಸಿರಿಯಲ್ಲಿ ಬೊಗಳೆ

(ಬೊಗಳೆ ಜಾಹೀರಾತು ಬ್ಯುರೋದಿಂದ)
ಮೂಡುಬಿದಿರೆಯಲ್ಲಿ ನಡೆದ ಆಳ್ವಾಸ್ ನುಡಿಸಿರಿಯಲ್ಲಿ ಬೊಗಳೆ ಧುತ್ತನೆ ಕಾಣಿಸಿಕೊಂಡು ಬಡಿಸಿರಿ, ಗುಡಿಸಿರಿ ಅಂತೆಲ್ಲಾ ತಿಳಿದುಕೊಂಡು, ದಡಬಡಾಯಿಸಿ, ವರದಿಗಾಗಿ ಪರದಾಡಿದ ಕಥೆ. ಬೊಗಳೆಯಲ್ಲಿ ಮೂಡಿಬರಲಿದೆ.

ನುಡಿಸಿರಿಯನ್ನೇ ಕುಡಿಯಿರಿ ಮತ್ತು ಕುಡಿಸಿರಿ ಅಂತ ತಿಳಿದುಕೊಂಡು ನಮ್ಮ ಬ್ಯುರೋ ಒದ್ದಾಡಿ, ಯಾರು ಯಾರೋ ನುಡಿದದ್ದನ್ನೆಲ್ಲಾ ಹೆಕ್ಕಿಕೊಂಡು ಗುಡಿಸಿ ಒಟ್ಟು ಸೇರಿಸಿ ಹೇಗಾದರೂ ವರದಿ ಒಪ್ಪಿಸಿದ ಘಟನೆಯು ನಾಳಿನ ಸಂಚಿಕೆಯಲ್ಲಿ.

ಯಾರೂ ನೀಡದ ವರದಿಯೊಂದನ್ನು ಬಿಟ್ಟು, ಮಿಕ್ಕಿದ್ದೆಲ್ಲವನ್ನೂ ಪ್ರಕಟಿಸುವ ಸಾಧ್ಯತೆಗಳು ದಟ್ಟವಾಗಿವೆ. ನಿಮ್ಮ ಪ್ರತಿಗಳನ್ನು ಕಾದಿರಿಸಿಕೊಳ್ಳಬೇಡಿ, ಆದರೆ ನಮ್ಮ ಪ್ರತಿಗಳನ್ನ ಮಾತ್ರವೇ ಕಾದಿರಿಸಿ. ಕಾದು ನಿಂತು ನಿರಾಶರಾಗಿ.

ಎಂಜಿನ್ ಇಲ್ಲದ ರೈಲು: ಬ್ರೇಕಿಂಗ್ ನ್ಯೂಸ್ ಅಲ್ಲವೆಂದ ಬೊ.ರ.

[ಬೊಗಳೂರು ಪಟ್ಟೆ-ರಹಿತ ರೈಲು ಬ್ಯುರೋ] ಬೊಗಳೂರು: ಆಫ್‌ಲೈನ್ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯೊಂದು ಆನ್‌ಲೈನ್ ಸಂಪಾದಕರ ಕಣ್ಣು ಕುಕ್ಕಿದ್ದು, ಎಂಜಿನ್ ಇಲ್ಲದೆ...