Wednesday, December 31, 2008

2009 ರೆಸೊಲ್ಯುಷನ್: ಬೊಗಳೆ ಬ್ಯುರೋ ಬಂದ್

(ಬೊಗಳೂರು ಹೊಸವರ್ಷ ಬ್ಯುರೋದಿಂದ)
ಬೊಗಳೂರು, ಡಿ.31- ಹೊಸ ವರ್ಷ ಬರುತ್ತಿರುವಂತೆಯೇ, ಬೊಗಳೂರು ಮುಂದಿನ ವರ್ಷಕ್ಕೆ ಯಾವ ನಿರ್ಣಯ ಕೈಗೊಳ್ಳುತ್ತದೆ? ಅದರ ರೆಸೊಲ್ಯುಷನ್ ಹೇಗಿರಬಹುದು ಎಂಬ ಕುತೂಹಲ, ಹಪಹಪಿಕೆ, ಗ್ರಹಿಕೆ, ಪೂರ್ವಗ್ರಹಿಕೆ, ವಾಕರಿಕೆ ಎಲ್ಲ ಇರುವವರಿಗೆ ಇದೋ ಇಲ್ಲಿದೆ ಉತ್ತರ.

ಒಂದು ಸಂಗತಿ ಸ್ಪಷ್ಟಪಡಿಸುತ್ತಿದ್ದೇವೆ. ಇದು ಸ್ಮೋಕಿಂಗ್ ಬಿಟ್ಟು ಬರೇ ಕಿಂಗ್ ಆಗುತ್ತೇನೆ, ಕಿಂಗ್ ಫಿಶರ್ ಡ್ರಿಂಕಿಂಗ್ ಬಿಟ್ಟು ಓಲಾಡದ ಕಿಂಗ್ ಮಾತ್ರ ಆಗುತ್ತೇನೆ, ಅದು ಮಾಡುತ್ತೇನೆ, ಇದು ಮಾಡುತ್ತೇನೆ ಎಂದೆಲ್ಲಾ ಹೊಸ ವರ್ಷದ ಹಿಂದಿನ ದಿನವೇ ರಾತ್ರಿ ಪಾರ್ಟಿ ಆರಂಭವಾಗುವ ಮುನ್ನ ನಿರ್ಣಯ ಕೈಗೊಂಡು, ಪಾರ್ಟಿಯಲ್ಲಿ ತೇಲಾಡಿದ ಬಳಿಕ "ನಾನು ವಾಗ್ದಾನ ಮಾಡಿದ್ದು ಕಳೆದು ಹೋದ ವರ್ಷದಲ್ಲಿ ಅಲ್ವಾ? ನಾನು ಕಳೆದ ವರ್ಷದ ಬಗ್ಗೆಯೇ ಹೇಳಿದ್ದು. ಈ ವರ್ಷ ಏನಿದ್ರೂ ಹೊಸಾ ವರ್ಷ ಅಲ್ವಾ" ಅಂತ ಜಾರಿಕೊಳ್ಳುವವರು, "ಹೌದಾ? ನಾನು ಇಂತಹ ರೆಸೊಲ್ಯುಶನ್ ಕೈಗೊಂಡಿದ್ದೇನೆಯೇ?" ಎಂದು ನಮ್ಮನ್ನೇ ಯಾಮಾರಿಸಿ ಮರು ಪ್ರಶ್ನಿಸುವವರು, "ಈ ರೀತಿ ನಿರ್ಣಯ ಕೈಗೊಂಡಿದ್ದಿರಲೂಬಹುದು, ಆಗ ನಾನು ಅಮಲಿನಲ್ಲಿದ್ದಿರಬಹುದು" ಎಂದು ಸಮಜಾಯಿಷಿ ನೀಡುವವರು, "ನಾನು ಬೇರೆಯೇ ಹೇಳಿದ್ದೆ, ಇದನ್ನು ಮಾಧ್ಯಮಗಳು ತಪ್ಪಾಗಿ ವರದಿ ಮಾಡಿವೆ' ಅನ್ನೋ ಪಕ್ಕಾ ರಾಜಕಾರಣಿಗಳು--- ಮುಂತಾದವರಂತಲ್ಲ ಈ ಬೊಗಳೂರು ಬ್ಯುರೋ.

ಸದಾ ಸತ್ಯ ಹೇಳಿ ಹೇಳಿ ಬೋರಾದವರು, ಆಗೊಮ್ಮೆ ಈಗೊಮ್ಮೆ ಸುಳ್ಳು ಹೇಳುತ್ತಾರೆ. ಇದೇ ಮಾದರಿಯಲ್ಲಿ ಬೊಗಳೆ ರಗಳೆ ಬ್ಯುರೋ ಕೂಡ ಅಪರೂಪಕ್ಕೊಮ್ಮೆ ಸತ್ಯ ಹೇಳಲು ನಿರ್ಧರಿಸಿದೆ. ಹೀಗಾಗಿ ಈ ನಿರ್ಣಯ.

ಬೊಗಳೂರಿನ ನಿರ್ಣಯ:
ಈ ಸಂಚಿಕೆಯೊಂದಿಗೆ, ಬೊಗಳೂರು ಬ್ಯುರೋದಿಂದ ಪ್ರಕಟವಾಗುವ ಪತ್ರಿಕೆಯನ್ನು ಸದ್ಯಕ್ಕೆ ಈ ವರ್ಷ ನಿಲ್ಲಿಸಲಾಗುತ್ತದೆ.

ಆದರೆ, ಈ ರೆಸೊಲ್ಯುಶನ್‌ಗೆ ಮತ್ತೊಂದು ಲೈನು ಕೂಡ ಸೇರಿಸಲಾಗುತ್ತದೆ. ಅದೆಂದರೆ, ಮುಂದಿನ ವರ್ಷದಿಂದ ಯಥಾ ಪ್ರಕಾರ ಕೊರೆತ ಮುಂದುವರಿಸಲಾಗುತ್ತದೆ. ಓದುಗರು ಸಹಿಸಿ"ಕೊಲ್ಲಲು" ಕೋರಲಾಗಿದೆ.

ಓದುಗರಿಗೆ, ಓದದವರಿಗೆ, ಬರುವವರಿಗೆ, ಬಾರದವರಿಗೆ, ಬ್ಲಾಗೊಳು ಇಣುಕುವವರಿಗೆ, ಕಮೆಂಟಿಸುವವರಿಗೆ, ಬೈಯುವವರಿಗೆ, ತೆಗಳುವವರಿಗೆ... ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು.

Monday, December 29, 2008

ಬಳೆ ತೊಟ್ಟಿಲ್ಲ ಏಕೆ?: ಬೊಗಳೂರು ಸರಕಾರ ಸ್ಪಷ್ಟನೆ

(ಬೊಗಳೂರು ಬಿರುದು-ಬಾವಲಿ ಬ್ಯುರೋದಿಂದ)
ಬೊಗಳೂರು, ಡಿ.29- ನಮ್ಮನ್ನಾಳುವವರು ಬಳೆ ತೊಟ್ಟುಕೊಂಡಿದ್ದಾರೆ ಎಂಬ ಮುದಿ ಹುಲಿಯ ಘರ್ಜನೆಗೆ ಸ್ಪಷ್ಟನೆ ನೀಡಿರುವ ಆಡಳಿತಗಾರರು, ತಾವೇಕೆ ಬಳೆ ತೊಟ್ಟುಕೊಂಡಿಲ್ಲ ಎಂಬುದನ್ನು ವಿವರಿಸಿದ್ದಾರೆ

ಬಳೆಗಳಿಗೇಕೆ ಅವಮಾನ ಮಾಡುತ್ತೀರಿ? ಎಂದು ನೇರಾನೇರ ಠಾಳಾ ಭಾಕ್ರೆಯನ್ನು ಪ್ರಶ್ನಿಸಿರುವ ಬೊಗಳೂರು ಸರಕಾರೀ ವ್ಯಾಕ್‌ತಾರರು, ನಾವು ಬಳೆ ತೊಟ್ಟುಕೊಂಡಿದ್ದರೆ, ಇಂದಿರಾ ಗಾಂಧಿ ಕೈಗೊಂಡಂತಹ ಧೀರ ಕಾರ್ಯಕ್ಕೆ ಮುಂದಾಗುತ್ತಿದ್ದೆವು. ಮುಂಬಯಿ ದಾಳಿ ಬಗೆಗಿನ ವಿಶ್ವ ಸಮುದಾಯದ ಗಮನವನ್ನು ಬೇರೆಡೆಗೆ ಹೊರಳಿಸುವ ಪಾಕಿಸ್ತಾನದ ಬಲೆಗೆ ಬೀಳುತ್ತಿರಲಿಲ್ಲ. ಸೋ... ಹೀಗಾಗಿಯೇ ನಾವು ಬಳೆ ತೊಟ್ಟುಕೊಂಡಿಲ್ಲ ಎಂಬ ಸ್ಪಷ್ಟನೆ ನೀಡಿದ್ದಾರೆ.

ನಾವೇನಾದರೂ ಬಳೆ ತೊಟ್ಟುಕೊಂಡಿದ್ದಿದ್ದರೆ, ಬೊಗಳೂರಿಗೆ ಪಾತಕಿಸ್ತಾನದ ಮೇಲೆ ದಾಳಿ ನಡೆಸುವ ಧೈರ್ಯವೂ ಇಲ್ಲ ಎಂಬ ಹೇಳಿಕೆ ಬರಲು ಅವಕಾಶ ನೀಡುತ್ತಿದ್ದೆವೇ? ಎಂದು ಪ್ರಶ್ನಿಸಿರುವ ವ್ಯಾಕ್‌ತಾರರು, ದೇಶದ ಭವಿಷ್ಯವೂ ಬಳೆಗಳ ಕೈಯಲ್ಲೇ ಇದೆ. ಹೀಗಾಗಿ ನಾವು ಈಗಾಗಲೇ ಬಳೆ ತೊಟ್ಟುಕೊಳ್ಳಲು ಹೋಗುವುದಿಲ್ಲ. ಹೇಗಿದ್ದರೂ ಶೇ.33 ಸ್ಥಾನವನ್ನು ಬಳೆ ತೊಟ್ಟುಕೊಳ್ಳುವವರಿಗೆ ಮೀಸಲಿಡಲು ನಾವು ಬಿಡುವುದಿಲ್ಲವಲ್ಲ... (ಆದರೆ ಮುಂದೆ ಹೇಗೋ ಗೊತ್ತಿಲ್ಲ ಎಂಬ ಮಾತನ್ನು ಮೆಲ್ಲನೇ ಹೇಳಲು ಅವರು ಮರೆಯಲಿಲ್ಲ.) ನಮ್ಮನ್ನೆಲ್ಲಾ ಜನರು ಕ್ಯಾಕರಿಸಿ ದೂರ ತಳ್ಳುವವರೆಗೂ ಬಳೆಗಳಿಲ್ಲದೆಯೇ ನಾವು ಅಧಿಕಾರ ಮುಂದುವರಿಸುತ್ತೇವೆ ಎಂಬ ಸ್ಪಷ್ಟನೆ ನೀಡಿದರು.

ಇತ್ತೀಚೆಗೆ ಜಗತ್ತಿನ ಪ್ರಮುಖ ಕಂಪನಿಗಳ ಪ್ರಧಾನ ಹುದ್ದೆಯನ್ನು ಬಳೆ ತೊಟ್ಟವರೇ ಅಲಂಕರಿಸುತ್ತಾ ಅದನ್ನು ಯಶಸ್ವಿಯಾಗಿ ಮುನ್ನಡೆಸುತ್ತಾರೆ. ಆಡಳಿತದಲ್ಲಿಯೂ ಅವರೇ ಮೇಲುಗೈ ಸಾಧಿಸಿದರೆ ದೇಶವು ಉದ್ಧಾರವಾಗುತ್ತದೆ. ಅದು ನಮ್ಮ ರಾಜಕೀಯಕ್ಕೆ ವಿರೋಧ. ಈ ಕಾರಣಕ್ಕೆ ಶೇ.33 ಮೀಸಲಾತಿಯನ್ನು ಜನರಿಗೆ ಗೊತ್ತಾಗದ ಹಾಗೆ ಸಂಸತ್ತಿನಲ್ಲಿ ಅಂಗೀಕಾರವಾಗದಂತೆ ನೋಡಿಕೊಳ್ಳುತ್ತೇವೆ. ಆದರೆ ಬಾಯಲ್ಲಿ ಮಾತ್ರ ಮಹಿಳಾ ಮೀಸಲಾತಿಗೆ ಬದ್ಧ ಅಂತನೇ ಹೇಳಿಕೊಳ್ಳುತ್ತಿರುತ್ತೇವೆ. ಯಾಕೆಂದರೆ, ನಮ್ಮ ಓಟಿನ ಬ್ಯಾಂಕಿನಲ್ಲಿ ಠೇವಣಿ ಕಡಿಮೆಯಾಗಬಾರದಲ್ಲ... ಮತ್ತು ಅವರು ಅಧಿಕಾರಕ್ಕೇರುವವರೆಗೂ ನಾವು ಮೇಯುತ್ತಿರಬಹುದಲ್ಲ ಎಂಬ ಸ್ಪಷ್ಟನೆಯೂ ಅವರಿಂದಲೇ ಬಂದಿದೆ.

ಇಡೀ ವಿಶ್ವ ಸಮುದಾಯದಲ್ಲಿ ಮುಂಬಯಿಯ ಹೆಸರೇ ನಲಿದಾಡುತ್ತಿದೆ. ಜನರೆಲ್ಲಾ ನೋಡಿ ನೋಡಿ, ಮಾತನಾಡಿ ಮಾತನಾಡಿ ಈ ಮುಂಬಯಿಗೇನಾದರೂ ದೃಷ್ಟಿ ತಗುಲಿದರೆ ಎಂಬ ಭೀತಿ ನಮ್ಮದು. ಸೋ... ಜನರ ಗಮನ ಬೇರೆಡೆ ಸೆಳೆಯುವುದೊಂದೇ ಮುಂಬಯಿಗೆ ದೃಷ್ಟಿ ತಗುಲದಂತಾಗಿಸಲು ಇರುವ ಉಪಾಯ.

ಅದಕ್ಕಾಗಿ, ಭಾರತ-ಪಾತಕಿಸ್ತಾನ ನಡುವೆ ಯುದ್ಧೋನ್ಮಾದ ಸೃಷ್ಟಿಸಿದರೆ, ಜಗತ್ತಿನ ಗಮನವು ಮುಂಬಯಿ ಪ್ರಕರಣದಿಂದ ಬೇರೆಡೆ ಹೋಗುತ್ತದೆ. ಭಾರತದಲ್ಲಿ ಮುಂಬಯಿ ದಾಳಿ ಮೇಲಿನಿಂದ ಗಮನ ಬೇರೆ ಕಡೆ ಹರಿದರೆ, ಪಾತಕಿಸ್ತಾನದ ಕಡೆಯಲ್ಲಿ ಉಗ್ರರ ನಿವಾರಣೆ ಮೇಲಿನ ಗಮನವೂ ನಿವಾರಣೆಯಾಗುತ್ತದೆ. ಉಪಖಂಡದಲ್ಲಿ ಯುದ್ಧ ತಡೆಯುವುದರತ್ತಲೇ ಜಗತ್ತು ಗಮನ ಹರಿಸುವುದರಿಂದ ಎರಡೂ ದೇಶಗಳ ಇಚ್ಛೆ ಈಡೇರಿದಂತಾಗುತ್ತದೆ. ಭಾರತವು ಮುಂಬಯಿಯನ್ನು ಮರೆಸಲು ಮಾಡಿದ ಯತ್ನ ಫಲಿಸುತ್ತದೆ, ಪಾಕಿಸ್ತಾನವು ಉಗ್ರರ ಮೇಲೆ ಕ್ರಮ ಕೈಗೊಳ್ಳುವ ಒತ್ತಡ ನಿವಾರಿಸಿಕೊಳ್ಳುವಲ್ಲಿ ಯಶಸ್ವಿಯಾತ್ತದೆ ಎಂದು ಬೊಗಳೂರಿನ ಆಡಳಿತ ಪಕ್ಷದ ಅರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಈ ಎಲ್ಲಾ ಕಾರಣಗಳಿಗಾಗಿಯೇ ನಾವು ಬಳೆ ತೊಟ್ಟುಕೊಂಡಿಲ್ಲ. ಬಳೆ ತೊಟ್ಟಿದ್ದರೆ ಇದಕ್ಕೆ ವಿರುದ್ಧವಾಗಿಯೇ ಎಲ್ಲವನ್ನೂ ಮಾಡಿಬಿಡುತ್ತಿದ್ದೆವು ಎಂದು ಅವರು ಕೊನೆಗೊಂದು ಪ್ಯಾರಾವನ್ನು ತಮ್ಮ ಮಾತಿನ ಮಧ್ಯೆ ಸೇರಿಸಿದ್ದಾರೆ.

Friday, December 26, 2008

ಭಯೋತ್ಪಾದನಾಬಾದ್‌ನಲ್ಲಿ ಬೊಗಳೆ ಬ್ಯುರೋ!

(ಬೊಗಳೂರು ಪರದೇಶ ಪ್ರವಾಸ ಬ್ಯುರೋದಿಂದ)
ಬೊಗಳೂರು, ಡಿ.26- ಪಾತಕಿಸ್ತಾನವು ಉಗ್ರವಾದಿಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಎಲ್ಲ ಅವಕಾಶಗಳನ್ನು ಮುಕ್ತವಾಗಿರಿಸುವುದಾಗಿ ಭಾರತ ಸರಕಾರ ಘೋಷಿಸಿರುವುದರಿಂದ ಪಾತಕಿಸ್ತಾನವು ತುಂಬು ಸಂತೋಷಪಟ್ಟಿದೆ. ಪಾತಕಿಸ್ತಾನಿ ಪ್ರಧಾನಿ ಗಿಲಿಗಿಲಾನಿ ಮತ್ತು ಅದಕ್ಷ ಜಬರ್ದಾರಿ ಅವರು ಈ ಕುರಿತು ಬೊಗಳೂರಿಗೆ ವಿಶೇಷ ಸಂದೇಶ ರವಾನಿಸಿ, ತಮ್ಮ ಸಂತಸವನ್ನು ಹಂಚಿಕೊಳ್ಳಲು ಒಂದು ಪೊಟ್ಟಣ ಬಾಂಬ್ ಕಳುಹಿಸಿದೆ.

ಭಾರತವು ಎಲ್ಲ ಅವಕಾಶಗಳು ಮುಕ್ತ ಎಂದು ಕಳೆದ ಒಂದು ತಿಂಗಳಿಂದ ಹೇಳಿಕೊಳ್ಳುತ್ತಿದ್ದರೂ, ಏನೂ ಮಾಡದಿರುವುದರಿಂದ, ಪಾತಕಿಸ್ತಾನಕ್ಕೆ ಯುದ್ಧಕ್ಕೆ ಸನ್ನದ್ಧವಾಗಲು, ಉಗ್ರಗಾಮಿ ಶಿಬಿರಗಳನ್ನು ಅಡಗಿಸಿಡಲು, ಬಂಧಿತ ಉಗ್ರಗಾಮಿಯ ಕುಟುಂಬ ವರ್ಗವನ್ನು ಕತ್ತಲಕೋಣೆಯಲ್ಲಿರಿಸಲು, ತಾಲಿಬಾನ್ ಉಗ್ರರ ಜೊತೆ ಒಪ್ಪಂದ ಮಾಡಿಕೊಳ್ಳಲು... ಹೀಗೆ ಎಲ್ಲ ಅವಕಾಶಗಳನ್ನು ಮುಕ್ತವಾಗಿ ಒದಗಿಸಿದಂತಾಗಿದೆ ಎಂಬುದು ಪಾತಕಿಸ್ತಾನದ ಆಡಳಿತಗಾರರು ಬೊಗಳೂರಿಗೆ ಫೋನ್ ಮಾಡಿ ನೀಡಿದ ಸ್ಪಷ್ಟನೆ.

ಆದರೆ ಪಾತಕಿಸ್ತಾನವೇಕೆ ಉಗ್ರರನ್ನು ದಮನಿಸುತ್ತಿಲ್ಲ ಎಂಬುದು ಅರ್ಥವಾಗದೆ ಬೊಗಳೂರು ಬ್ಯುರೋ ಮಂದಿ ಇಲ್ಲದ ತಲೆಯನ್ನು ಕೆಡಿಸಿಕೊಳ್ಳತೊಡಗಿದ್ದರು. ಕೊನೆಗೆ ಎಲ್ಲ ಅವಕಾಶಗಳು ಮುಕ್ತ ಎಂಬ "ಕೋಳಿ ಕೇಳಿ ಮಸಾಲೆ ಅರೆಯುವ" ದಯನೀಯ ಹೇಳಿಕೆ ಬಗ್ಗೆ ತೀವ್ರ ದುಃಖದಿಂದ, ರೋಷದಿಂದ, ತಾಪದಿಂದ, ಕೋಪದಿಂದ, ದುಗುಡದಿಂದ, ದುಮ್ಮಾನದಿಂದ ಕಾಯುತ್ತಾ, ಕೊಟ್ಟ ಕೊನೆಗೆ ಸಂತಾಪದಿಂದಲೇ ಪಾತಕಿಸ್ತಾನದ ಆಡಳಿತಗಾರರನ್ನು ಸಂದರ್ಶಿಸಲೆಂದು ಬೊಗಳೂರು ಏಕಸದಸ್ಯ ಬ್ಯುರೋದ ಸಮಸ್ತ ಸಿಬ್ಬಂದಿಗಳು ಗಂಟು-ಮೂಟೆ ಕಟ್ಟಿಕೊಂಡು ಯುದ್ಧ ಸನ್ನದ್ಧರಾಗಿಯೇ ಭಯೋತ್ಪಾದನಾಬಾದ್‌ಗೆ ತೆರಳಿದರು.

ಅಲ್ಲಿ ಉಗ್ರದಟ್ಟಣೆಯಿಂದಾಗಿ (ಜನದಟ್ಟಣೆ ಮಾದರಿಯಲ್ಲಿ) ಕಾಲಿಡಲೂ ಜಾಗವಿಲ್ಲದಿದ್ದರೂ, ಕಾಲಿಟ್ಟ ಕೂಡಲೇ ನಮಗೆ ಎದುರಾದದ್ದು ಕೈಯಲ್ಲಿ ಎಳ್ಳುಂಡೆಯಂತೆ ಬಾಂಬುಗಳನ್ನು ಹಿಡಿದುಕೊಂಡು ಆಟವಾಡುತ್ತಿರುವ ಮಕ್ಕಳು. ಈ ಮಕ್ಕಳ ಅಪ್ಪ, ತನಗೆ ಹೀಗೆ ಸಿಕ್ಕಿದ ದುಡ್ಡಿನಲ್ಲಿ ಇವನ್ನೆಲ್ಲಾ ಮಕ್ಕಳಿಗೆ ತರಿಸಿಕೊಟ್ಟಿದ್ದಾನೆ ಎಂಬುದನ್ನು ಅವರೇ ಬಾಯಿ ದೊಡ್ಡದಾಗಿ ಬಿಟ್ಟು ಹೇಳಿದರು. ನೋಡಿದಾಗ ಬಾಯೊಳಗೂ ಒಂದು ಬಾಂಬ್ ಇತ್ತು!

ಅದಕ್ಷ ಜಬರ್ದಾರಿಯನ್ನು ಮತ್ತು ನಿಧನಾನಿ ಗಿಲಾನಿಯನ್ನು ಪ್ರಶ್ನಿಸಲೆಂದು ತೆರಳಿದವರಿಗೆ ಅಲ್ಲಿ ಅಚ್ಚರಿ ಕಾದಿತ್ತು. ಅವರೆಲ್ಲರೂ ತಾಲಿಬಾನ್ ಮುಖ್ಯಸ್ಥರು, ಐಎಸ್ಐ ಕುಖ್ಯಸ್ಥರು, ಲಷ್ಕರ್, ಜೈಷ್, ಅಲ್ ಖೈದಾ, ಜಮಾತ್ ಉದ್ ದಾವಾ ಮತ್ತಿತರ ಸಾವಿರಾರು ಉಗ್ರ ಸಂಘಟನೆಗಳ ನಾಯಿಕರು, ಮತ್ತು ಸೇನೆಯ ಅತಿಕುಖ್ಯಸ್ಥರೊಂದಿಗೆ ಭೋಜನ ಮಾಡುತ್ತಿದ್ದರು. ಬೊಗಳೂರು ಬ್ಯುರೋದ ಮಂದಿ ಬಂದ ಸುದ್ದಿ ಕೇಳಿಯೇ ಅದಕ್ಷ ಜಬರ್ದಾರಿ ನಮ್ಮನ್ನು ಪಕ್ಕಕ್ಕೆ ಕರೆದರು.

ತಕ್ಷಣವೇ ಬೊಗಳೂರು ಬ್ಯುರೋ ಸಿಬ್ಬಂದಿ ಒಂದು ಪ್ರಶ್ನೆ ಎಸೆದರು. "ನೀವೇಕೆ ಪ್ರಾಮಿಸ್ ಮಾಡಿದಂತೆ ಉಗ್ರವಾದಿಗಳನ್ನು ದಮನಿಸುತ್ತಿಲ್ಲ, ಉಗ್ರರ ಮೇಲೆ ಕ್ರಮ ಕೈಗೊಳ್ಳುತ್ತಿಲ್ಲ?". ಬೊಗಳೂರು ಬ್ಯುರೋ ಎಸೆದ ಈ ಏಕೈಕ ಪ್ರಶ್ನೆಯನ್ನು ತಕ್ಷಣವೇ ಎತ್ತಿಕೊಂಡ ಜಬರ್ದಾರಿ, ನಡುಗುತ್ತಲೇ... "ಮಹಾಸ್ವಾಮಿ, ನೀವೇ ನಮ್ಮ ಮಾನ ಕಾಪಾಡಬೇಕು. ನಾವು ಉಗ್ರರ ಮೇಲೆ ಕ್ರಮ ಕೈಗೊಳ್ಳಲು ಹೊರಟೆವು. ಇದಕ್ಕಾಗಿ ಕಾರ್ಯಾಚರಣೆ ಆರಂಭಿಸಿದಾಗ, ಇಡೀ ಪಾತಕಿಸ್ತಾನದ ಜನರನ್ನೆಲ್ಲಾ ಬಂಧಿಸಬೇಕಾಯಿತು. ಅವರನ್ನೆಲ್ಲಾ ಇರಿಸಲು ಜೈಲುಗಳಲ್ಲಿ ಸಮಯ ಬೇಕಲ್ಲ... ಇದು ತೀರಾ ತೊಂದರೆಯ ಸಂಗತಿ. ಸೋ... ನಾವೀಗ ಪಾತಕಿಸ್ತಾನವನ್ನೇ ಜೈಲು ಎಂದು ಘೋಷಿಸಿದ್ದೇವೆ. ಉಗ್ರಗಾಮಿಗಳೆಲ್ಲರೂ ಬಂಧನದಲ್ಲಿದ್ದಾರೆ ಎಂದು ನೀವು ತಿಳಿದುಕೊಳ್ಳಿ" ಎಂಬ ಸಮಜಾಯಿಷಿ ನೀಡಿ, ತಕ್ಷಣವೇ ಐಎಸ್ಐ ಕುಖ್ಯಸ್ಥ, ಲಷ್ಕರ್ ಕುಖ್ಯಸ್ಥ, ಅಲ್ ಖೈದಾ ಕುಖ್ಯಸ್ಥ ಮತ್ತಿತರ ಉಗ್ರಗಾಮಿ ಸಂಘಟನೆಗಳ ಕುಖ್ಯಸ್ಥರ ಕೆಂಗಣ್ಣು ನೋಡಿ, ನಿಧಾನವಾಗಿ ಅಲ್ಲಿಂದ ಜಾರಿ ತಮ್ಮ ಸೀಟಿನಲ್ಲಿ ಕುಕ್ಕರಿಸಿದರು.

ಆ ಬಳಿಕ ಬಂದದ್ದು ಪಾತಕಿಸ್ತಾನದ ನಿಧಾನಮಂತ್ರಿ ಗಿಲಿಗಿಲಾನಿ. ಬೊಗಳೂರಿನ ಸಿಬ್ಬಂದಿ ಪ್ರಶ್ನೆ ಕೇಳುವ ಮುನ್ನವೇ ಉತ್ತರಿಸತೊಡಗಿದ ಅವರು, "ಸ್ವಾಮೀ... ಭಾರತ ಹೇಳಿದಂತೆ ಉಗ್ರಗಾಮಿ ಸಂಘಟನೆಗಳಿಗೆ ನಾವು ಕಡಿವಾಣ ಹಾಕುವುದಾದರೂ ಹೇಗೆ? ನಮ್ಮ ಅಸಹಾಯಕತೆಯನ್ನೂ ಒಂಚೂರು ಅರ್ಥ ಮಾಡಿಕೊಳ್ಳಬಾರದೇಕೆ? ನೋಡಿ, ನಾವೀಗ ಉಗ್ರಗಾಮಿ ಸಂಘಟನೆಗಳಿಗೆ ನಿಷೇಧ ವಿಧಿಸಿದರೆ, ಪಾತಕಿಸ್ತಾನವನ್ನು ಆಳುವವರು ಯಾರು? ನೀವೇ ಹೇಳಿ" ಎಂದರು.

"ನೀವಿದ್ದೀರಲ್ಲಾ? ಪ್ರಜಾಸತ್ತಾತ್ಮಕವಾಗಿ ಚುನಾಯಿತರಾದವರು?" ಎಂದು ಬೊಗಳಿಗರು ಏನೂ ತಿಳಿಯದಂತೆ, ಪತ್ರಿಕಾವೃತ್ತಿಗೇ ನಾಲಾಯಕ್ಕಾದ ಪ್ರಶ್ನೆ ಕೇಳಿದಾಗ, ಗಿಲಿಗಿಲಿಯಾನಿಯಿಂದ ಬಂದ ಉತ್ತರ : ಏನ್ ಸ್ವಾಮಿ, ತಮಾಷೆ ಮಾಡ್ತಿದೀರಾ? ನನ್ನದು ಕೂಡ ಸ್ವಂತದ್ದಾದ ಭಯೋತ್ಪಾದನಾ ಸಂಘಟನೆ ಇದೆ. ಇಲ್ಲಿ ಪ್ರತಿಯೊಬ್ಬ ಜಾರಕಾರಣಿಗೂ ಇದೇ ರೀತಿಯ ಸ್ವಂತ ಸಂಘಟನೆಗಳಿವೆ. ಪಾತಕಿಸ್ತಾನವನ್ನು ನಾವೆಲ್ಲಾ ಸೇರಿಕೊಂಡೇ ಆಳುತ್ತಿದ್ದೇವೆ. ಹೀಗಾಗಿ ಭಯೋತ್ಪಾದನೆ ಸಂಘಟನೆಗಳನ್ನು ನಿಷೇಧಿಸಿದರೆ, ದೇಶವನ್ನು ಆಳಲು ಯಾರೂ ಇರುವುದಿಲ್ಲ! ಎಲ್ಲರೂ ಜೈಲಿನಲ್ಲಿದ್ದರೆ ಪಾತಕಿಸ್ತಾನದ ಪ್ರಜೆಗಳನ್ನು ನೋಡಿಕೊಳ್ಳುವವರಾದರೂ ಯಾರು? ಎಂದು ಅಲವತ್ತುಕೊಂಡೇ, ಅಲ್ಲಿಂದ ಜಾಗ ಖಾಲಿ ಮಾಡಿದರು.

ಅಲ್ಲಿಂದ ತಲೆಮರೆಸಿಕೊಂಡ ಬೊಗಳೂರು ಸಿಬ್ಬಂದಿ ಈಗಾಗಲೇ ಬೊಗಳೂರಿಗೆ ಬಂದು ಬಿದ್ದು ಚಾ-ತರಿಸಿಕೊಳ್ಳತೊಡಗಿದೆ.

Tuesday, December 23, 2008

ಚುನಾವಣೆ: ಬುಷ್‌ಗೆ ಭಾರತದಲ್ಲಿ ಭಾರೀ ಬೇಡಿಕೆ!

(ಬೊಗಳೂರು ಅರಾಜಕಾರಣ ಬ್ಯುರೋದಿಂದ)
ಬೊಗಳೂರು, ಡಿ.23- ಮುಂದಿನ ತಿಂಗಳಿಂದ ಅಮೆರಿಕದಲ್ಲಿ ನಿರುದ್ಯೋಗಿಯಾಗಲಿರುವ ದೊಡ್ಡಣ್ಣ ಜಾರ್ಜ್ ಬೂಟ್ಸ್ ಅವರನ್ನು ಭಾರತವಾಸಿ ಮಾಡಲು ನಮ್ಮ ಜಾರಕಾರಣಿಗಳು ಸಂಚು ಹೂಡುತ್ತಿದ್ದಾರೆಂಬ ಮಹತ್ವದ ಅಂಶವೊಂದು ಮತದಾರರಲ್ಲಿ ಸಂಚಲನ ಮೂಡಿಸಿದೆ.

ಇತ್ತೀಚೆಗೆ ಇರಾಕಿ ಪತ್ರಕರ್ತನೊಬ್ಬ (ತಲೆಮರೆಸಿಕೊಂಡಿದ್ದ ಬೊ.ರ. ಬ್ಯುರೋದ ಸದಸ್ಯ ಅಲ್ಲ ಎಂದು ಸ್ಪಷ್ಟಪಡಿಸುತ್ತಿದ್ದೇವೆ) ಜಾರ್ಜ್ ಬೂಟ್ಸ್ ಅವರಿಗೆ ಲಾರ್ಜ್ ಶೂ ಎಸೆದದ್ದು, ಅವರು ಅದರಿಂದ ತಪ್ಪಿಸಿಕೊಂಡಿದ್ದು... ಈ ಘಟನಾವಳಿಗಳೆಲ್ಲವೂ ಭಾರತೀಯ ಜಾರಕಾರಣಿಗಳ ಕಣ್ಣು ಕುಕ್ಕುವಂತೆ ಮಾಡಿದೆ. ಈ ಕಾರಣಕ್ಕೆ ಜಾರ್ಜ್ ಬೂಟ್ಸ್ ಅವರನ್ನೇ ಭಾರತಕ್ಕೆ ಕರೆತಂದು ತಮ್ಮ ಪಕ್ಷದ ಟಿಕೆಟ್ ಕೊಡಿಸಿ, ಮುಂದಿನ ಚುನಾವಣೆಗಳಿಗೆ ಪಕ್ಷವನ್ನು ಸಂಪೂರ್ಣವಾಗಿ ಸನ್ನದ್ಧ ಸ್ಥಿತಿಯಲ್ಲಿರಿಸಲು ಸಿದ್ಧತೆ ನಡೆಸುತ್ತಿದ್ದಾರೆ ಎಂಬ ಅಂಶವೊಂದು ಬೊಗಳೆ ರಗಳೆ ಬ್ಯುರೋದಲ್ಲಿ ಲೀಕ್ ಆಗಿದೆ.

ಚುನಾವಣೆಗಳು ಸಮೀಪಿಸುತ್ತಿವೆ. ತಮ್ಮ ತಮ್ಮ ಕ್ಷೇತ್ರಗಳಲ್ಲಿ ಜಾತಿ ರಾಜಕೀಯ, ಕೋಮು ರಾಜಕೀಯ ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಅರಾಜಕೀಯದಲ್ಲಿ ತೊಡಗಿದ್ದ ಸಂಭಾವ್ಯ ಅಭ್ಯರ್ಥಿಗಳೆಲ್ಲಾ ಚುನಾವಣೆಗೆ ನಿಲ್ಲಲು ಪತರಗುಟ್ಟುತ್ತಿದ್ದಾರೆ. ಇದಕ್ಕೆ ಕಾರಣವೆಂದರೆ ಮತದಾರ ಜಾಗೃತನಾಗಿರುವುದು. ಏರುವ ಬೆಲೆ ಇಳಿಸುವ ಬದಲು, ಕೋಮು ಜ್ವರ, ಧರ್ಮದ ನಡುವೆ ವೈಷಮ್ಯದ ಬೀಜ ಬಿತ್ತುವ ರಾಜಕಾರಣಿಗಳೆಲ್ಲರೂ, ತಮಗೆ ಈ ಬಾರಿ ಜಾರ್ಜ್ ಬೂಟ್ಸ್‌ಗೆ ದೊರೆತ ಉಡುಗೊರೆಗಳು ಖಚಿತ ಎಂಬುದು ಮನದಟ್ಟಾಗಿವೆ. ಈ ಕಾರಣಕ್ಕಾಗಿಯೇ, ಜಾರ್ಜ್ ಬೂಟ್ಸ್ ಅವರನ್ನು ಭಾರತಕ್ಕೆ ಕರೆಸಿಕೊಳ್ಳುವ ಹುನ್ನಾರ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿಲ್ಲ.

ಈ ಬಗ್ಗೆ "ಜಾರ್ಜ್ ಬೂಟ್ಸನ್ನೇಕೆ ಕರೆಸುತ್ತೀರಿ" ಎಂದು ಮೂಲವನ್ನು ಕೆದಕಿ ಕೆದಕಿ ಪ್ರಶ್ನಿಸಿದಾಗ, ಬಂದ ಉತ್ತರ "ತರಬೇತಿ" ಎಂಬ ನಾಲ್ಕಕ್ಷರದ ಶಬ್ದ. ಗೊತ್ತಾಗಲಿಲ್ಲ, ಅರ್ಥವಾಗಲಿಲ್ಲ ಎಂದು ತಲೆಯಲ್ಲಾಡಿಸಿದಾಗ ಈ ಕುರಿತು ವಿವರಣೆ ಬಂತು.

ಜನಾ ಖಂಡಿತವಾಗಿಯೂ ಹಾಳಾದ ಚಪ್ಪಲಿ, ಹರಿದು ಹೋದ ಶೂ, ಕೊಳೆತ ಮೊಟ್ಟೆ, ತರಕಾರಿ ಇತ್ಯಾದಿಗಳನ್ನು ಚುನಾವಣಾ ರ‌್ಯಾಲಿಗಳಲ್ಲಿ ಎಸೆಯುತ್ತಾರೆ ಎಂಬುದು ನಮಗೆ ಖಚಿತವಾಗಿಬಿಟ್ಟಿದೆ. ಆದುದರಿಂದ, ಕ್ಷಿಪಣಿಗಳಂತೆ ತೂರಿ ಬರುತ್ತಿರುವ ಈ ಅಮೂಲ್ಯ ವಸ್ತುಗಳಿಂದ ತಪ್ಪಿಸಿಕೊಂಡು, ಅದನ್ನು ಸಂಗ್ರಹ ಮಾಡಿಟ್ಟುಕೊಳ್ಳುವುದು ಹೇಗೆ ಎಂಬುದರ ತರಬೇತಿಗಾಗಿ ನಾವು ಜಾರ್ಜ್ ಬೂಟ್ಸ್ ಅವರನ್ನು ಕರೆಸುತ್ತಿದ್ದೇವೆ ಎಂಬ ಅಮೂಲ್ಯ ಉತ್ತರ ಬಂದೇಬಿಟ್ಟಿತು.

ಹಾಗಿದ್ದರೆ, ಹೀಗೆ ಸಂಗ್ರಹವಾದ ಶೂಗಳನ್ನು, ಕೊಳೆತ ತರಕಾರಿಗಳನ್ನು, ಮೊಟ್ಟೆಗಳನ್ನು ಏನು ಮಾಡುತ್ತೀರಿ? ಎಂಬ ಪ್ರಶ್ನೆಗೆ ಅದನ್ನು ನಮ್ಮ ವಿರೋಧ ಪಕ್ಷದವರ ರ‌್ಯಾಲಿಗಳಿಗೆ ಪ್ಯಾಕ್ ಮಾಡಿ ಕಳುಹಿಸುತ್ತೇವೆ. ಶೂ ಎಸೆದ ಜೈದಿ ಎಂಬ ಇರಾಕಿ ಬೊಗಳೆಗಾರನನ್ನೂ ಕರೆಸಲಿದ್ದೇವೆ. ಅಲ್ಲಿ ಜನರಿಗೆ ಶೂ ತೂರುವುದು ಹೇಗೆ ಎಂಬ ಬಗ್ಗೆ ತರಬೇತಿ ಕೊಡಿಸುವ ಇರಾದೆಯೂ ಇದೆ ಎಂಬ ಅಂಶವನ್ನು ಅವರು ಬಯಲು ಮಾಡಿದ್ದಾರೆ.

ಆದರೆ, ಹೆಚ್ಚಿನ ರಾಜಕಾರಣಿಗಳಿಗೆ ನಿರಾಸೆಯಾದ ದುರಾಸೆಯೆ ಸಂಗತಿಯೆಂದರೆ, ಆ ಪತ್ರಕರ್ತ ಶೂ ಜತೆಗೆ ಸಾಕ್ಸ್ ಕೂಡ ಎಸೆಯಲಿಲ್ಲವಲ್ಲ ಎಂಬುದು. ಸಾಕ್ಸನ್ನೂ ಎಸೆದಿದ್ದರೆ, ಎಸೆಯುವ ವಸ್ತುಗಳ ಸದ್ಬಳಕೆ ಮಾಡಿಕೊಳ್ಳಬಹುದಿತ್ತು ಎಂಬುದು ಅವರ ಚಿಂತೆಯ ಕಾರ್ಮೋಡಕ್ಕೆ ಕಾರಣವಾಗಿತ್ತು.

Monday, December 22, 2008

ಆಗುಂಬೆ ಘಾಟಿಯಲ್ಲಿ ನೇರ ರಸ್ತೆ: ಪಾಕ್ ಕೈವಾಡ!

(ಬೊಗಳೂರು ತಿರುವು-ಮುರುವು ಬ್ಯುರೋದಿಂದ)
ಬೊಗಳೂರು, ಡಿ.22- ಶಿರಾಡಿ ಘಾಟಿ, ಆಗುಂಬೆ ಘಾಟಿ, ಬಿಸಿಲೆ ಘಾಟಿ ಮುಂತಾದ U turn ಗಳು ಹೆಚ್ಚಾಗುತ್ತಿರುವ ರಸ್ತೆಗಳೆಲ್ಲೆಲ್ಲಾ ಇದೀಗ ವಾಹನಗಳು ನೇರವಾಗಿ ಧಾವಿಸಬಹುದು ಎಂಬುದನ್ನು ರದ್ದಿಮನೆಯೊಳಗೆ ಕುಳಿತ ನಮ್ಮ ವರದ್ದಿಗಾರರು ಘಂಟಾಘೋಷವಾಗಿ ಸಾರಿಬಿಟ್ಟಿದ್ದಾರೆ.

ಅವರು ಸುದ್ದಿ ತಿಳಿದ ತಕ್ಷಣವೇ ಬ್ಯುರೋದ ತನಿಖಾ ತಂಡವನ್ನು ಅತ್ತ ಕಡೆ ಅಟ್ಟಿದಾಗ ಸಾಕಷ್ಟು ಸಂಗತಿಗಳು ಹೊರಬಿದ್ದವು. ಇತ್ತೀಚೆಗೆ ಮುಂಬಯಿ ಮೇಲಿನ ದಾಳಿ ಹಿನ್ನೆಲೆಯಲ್ಲಿ ಮುಂಬಯಿಗಿಂತಲೂ ಹೆಚ್ಚಾಗಿ ಪಾಕಿಸ್ತಾನವು ವಿಶ್ವಪ್ರಸಿದ್ಧವಾಗುತ್ತಿದೆ. ಪಾಕಿಸ್ತಾನದಲ್ಲಿರುವ ಜೈಷೆ, ಲಷ್ಕರ್, ಜಮಾತ್, ಅಲ್ ಖೈದಾ ಇತ್ಯಾದಿತ್ಯಾದಿ ಅಲ್ಲಿನ ಜನಸಂಖ್ಯೆಗಿಂತಲೂ ಹೆಚ್ಚು ಇರುವ ಉಗ್ರಗಾಮಿ ಸಂಘಟನೆಗಳು ಕೂಡ ಮುಂಬಯಿಗಿಂತ ಹೆಚ್ಚಾಗಿ ಪ್ರಸಿದ್ಧಿ ಪಡೆಯುತ್ತಿವೆ. ಹೀಗಾಗಿ ನಮ್ಮೂರಿನ ಘಾಟ್ ರಸ್ತೆಗಳು ನೇರವಾಗುವುದಕ್ಕೂ ಪಾಕಿಸ್ತಾನಕ್ಕೂ ಯಾವುದಾದರೂ ನಂಟಿದೆಯೇ ಎಂಬುದು ನಮ್ಮ ಬ್ಯುರೋದವರ ಇಲ್ಲದ ತಲೆಗೆ ಠಣ್ಣಂತ ಹೊಳೆದದ್ದೇ ತಡ, ಮೂರು ಎಣಿಸುವಷ್ಟರಲ್ಲಿ ಅವರು ಪಾತಕಿಗಳ ನಾಡಿನಲ್ಲಿ ಬಿದ್ದಿದ್ದರು!

ಪಾತಕಿಸ್ತಾನಕ್ಕೆ ಹೊಕ್ಕಿದ್ದೇ ತಡ, ಅಲ್ಲಿ ಉಗ್ರರು ಯಾರು, ಮತ್ತು ಸರಕಾರ ನಡೆಸುತ್ತಿರುವ ಅಗ್ರರು ಯಾರು ಎಂಬುದೇ ತಿಳಿಯದೆ ಅತ್ತಿತ್ತ ಸುಳಿದಾಡುತ್ತಿದ್ದಾಗ, ಯು-ಟರ್ನ್‌ಗಳು ಹೆಚ್ಚಾಗಿರುವ ಸಂಗತಿ ದೃಢಪಟ್ಟಿತು. ಹಿಂದಿನ ದಿನ ಇದ್ದ ಬೋರ್ಡುಗಳು ಮರು ದಿನ ಬೇರೆಯೇ ರೀತಿಯಲ್ಲಿರುತ್ತಿದ್ದವು. ಹಿಂದಿನ ದಿನ ಜಮ್ಮುಕಾಶ್ಮೀರಕ್ಕೆ ರಸ್ತೆ ಮಾರ್ಗವನ್ನು ತೋರಿಸುವ ಬಾಣದ ಗುರುತು ಪೂರ್ವ ದಿಕ್ಕಿಗಿದ್ದರೆ, ಮರು ದಿನ ನೋಡಿದಾಗ ಅದು ಪಶ್ಚಿಮ ದಿಕ್ಕಿಗಿತ್ತು. ಎಲ್ಲಿ ಹೋದರಲ್ಲಿ ಯು-ಟರ್ನ್‌ಗಳೇ!

ಅಲ್ಲಿನ ಅಧ್ಯಕ್ಷ ಜಬರ್ದಾರಿಯೇ ಈ ಯು-ಟರ್ನ್‌ಗಳು, ತಿಪ್ಪರಲಾಗಗಳು, ಬಡಬಡಿಸುವಿಕೆಗಳ ರೂವಾರಿ ಎಂಬುದನ್ನು ಕಂಡುಕೊಳ್ಳಲಾಯಿತು. ಕ್ಷಣ ಕ್ಷಣಕ್ಕೂ ಅವರ ತಲೆ ಮತ್ತು ಕಾಲುಗಳು ಒಂದುಗೂಡುತ್ತಿದ್ದವು. ಇದನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಂಡುಕೊಳ್ಳಲಾಯಿತು. ಅಕ್ಷರಶಃ Putting foot in his mouth!

ಈ ನಡುವೆ, "ಉಗ್ರರು ನಮ್ಮಲ್ಲಿಂದ ಭಾರತಕ್ಕೆ, ವಿಶೇಷವಾಗಿ ಮುಂಬಯಿಗೆ ಪ್ರವಾಸ ಹೋದವರಾಗಿದ್ದು, ಅವರ ಬಗ್ಗೆ ನಮ್ಮ ನೆಲದ ಕಾನೂನು ಪಾಲಿಸುತ್ತೇವೆ" ಎಂದು ಜಬರ್ದಾರಿ ಹೇಳಿಕೆ ನೀಡಿರುವುದು ಹಲವರ ಹುಬ್ಬನ್ನು ತಲೆಕೂದಲಿನೊಂದಿಗೆ ಬೆಸೆಯುವಷ್ಟರ ಮಟ್ಟಿಗೆ ಮೇಲೇರಿದೆ. ಪಾತಕಿಸ್ತಾನದಲ್ಲಿ ಕಾನೂನು ಎಂಬುದು ಇದೆಯೇ ಎಂಬ ಪ್ರಶ್ನೆಗೆ ಬೊಗಳೆ ರಗಳೆ ಬ್ಯುರೋದ ಅಸತ್ಯಾನ್ವೇಷಣೆ ಪ್ರವೀಣರಿಗೂ ಉತ್ತರ ಕಂಡುಕೊಳ್ಳಲಾಗಿಲ್ಲ. ಇದರ ತನಿಖೆಗೆ ಬಹುಶಃ ಇನ್ನೈದಾರುನೂರು ವರ್ಷಗಳು ತಗುಲಬಹುದು ಎಂದು ಒಂದು ಅಂದಾಜಿನ ಪ್ರಕಾರ ಹೇಳಲಾಗುತ್ತಿದೆ.

Thursday, December 18, 2008

ನಾಯಿಗೆ ಲಿಫ್ಟ್ ಕೊಡುವುದು ಕಡ್ಡಾಯ!

(ಬೊಗಳೂರು ಪ್ರಾಣಿಗಳ ಬ್ಯುರೋದಿಂದ)
ಬೊಗಳೂರು, ಡಿ.18- ಶ್ವಾನ ಹಕ್ಕುಗಳ ಆಯೋಗದ ಅಧ್ಯಕ್ಷರನ್ನಾಗಿ 11ರ ಹರೆಯದ ಲ್ಯಾಬ್ರಡಾರ್ ಜಾತಿಗೆ ಸೇರಿದ ಶಿಮು ಅವರನ್ನು ಸರ್ವಾಸಮ್ಮತಿಯ (ಸರ್ವ+ಅಸಮ್ಮತಿ) ಮೂಲಕ ಆಯ್ಕೆ ಮಾಡಲಾಗಿದೆ.

ಈಗಾಗಲೇ ಲೈಕಾ ಎಂಬ ನಾಯಿಯೊಂದು ಬಾಹ್ಯಾಕಾಶಕ್ಕೇ ಹೋಗಿ ಸಾಧನೆ ಮಾಡಿ ಬಂದಿದೆ. ಹೀಗಿರುವಾಗ ಕೇವಲ ಐದನೇ ಮಹಡಿಯನ್ನೇರಲು ನಮಗೆ ಅಂತರಿಕ್ಷಕ್ಕೇರುವ ವಾಹನ "ಲಿಫ್ಟ್" ಏರಲು ಕೂಡ ಅವಕಾಶ ಮಾಡಿಕೊಡದಿರುವುದು ಮಾನವ ಅಲ್ಲಲ್ಲ ಶ್ವಾನವ ಹಕ್ಕುಗಳ ಉಲ್ಲಂಘನೆಯಾಗಿರುತ್ತದೆ ಎಂದು ಶಿಮು ಅವರು ನ್ಯಾಯಾಲಯದಲ್ಲಿ ವಾದಿಸಿ ವಿಜಯ ಗಳಿಸಿರುವ ವರದಿಯೊಂದು ಇಲ್ಲಿ ಪ್ರಕಟವಾಗಿರುವುದೇ ಅವರು ಈ ಹುದ್ದೆಗೆ ಅಪ್‌ಲಿಫ್ಟ್ ಆಗಲು ಪ್ರಧಾನ ಕಾರಣ.

ಇನ್ನೊಂದೆಡೆ ಬೆಕ್ಕುಗಳು, ಬೆಕ್ಕಿನ ಮರಿಗಳು ಕೂಡ, ನಮಗೂ ಲಿಫ್ಟ್ ಸೌಲಭ್ಯ ಬೇಕು ಎಂದು ಹೋರಾಟ ಮಾಡಲು ಸಿದ್ಧತೆ ನಡೆಸುತ್ತಿರುವುದಾಗಿ ನಮ್ಮ ಪ್ರಾಣಿಗಳ ಬ್ಯುರೋದ ವರದ್ದಿಗಾರರು ಸುದ್ದಿ ಕದ್ದು ತಂದು ಸುರಿದಿದ್ದಾರೆ.

ಈ ಕಾರಣದಿಂದಾಗಿ, ಎಲ್ಲ ಪ್ರಾಣಿಗಳು ತಮ್ಮ ತಮ್ಮ ಜನಾಂಗದ ಒಕ್ಕೂಟಗಳನ್ನು ರಚಿಸಿಕೊಂಡಿರುವುದರಿಂದ, ಜಾರಕಾರಣಿಗಳು ತೀವ್ರ ಕನಿಕರದಿಂದ ಕರಗಿ ನೀರಾಗುತ್ತಾ, ಇವರ ಸಂಖ್ಯೆ ತೀರಾ ಕಡಿಮೆ ಇದೆ, ಅತ್ತಕಡೆ ಅವರ ಬಾಲಕ್ಕೆ ಎಲ್ಲರೂ ತುಳಿಯುತ್ತಲೇ ಇರುತ್ತಾರೆ, ಮತ್ತೊಂದೆಡೆ ಇವರು ಬೀದಿನಾಯಿಗಳನ್ನು ನಾಯಿಗೆ ಬಂದಂತೆ ಅಲ್ಲಲ್ಲ ಬಾಯಿಗೆ ಬಂದಂತೆ ದುಡಿಸಿಕೊಳ್ಳುತ್ತಾರೆ, ದೌರ್ಜನ್ಯ ಎಸಗುತ್ತಾರೆ ಎಂದೆಲ್ಲಾ ಕಾರಣಗಳನ್ನು ಮುಂದಿಡುತ್ತಾ, ಅವುಗಳಿಗೂ ಪ್ರತ್ಯೇಕ ಮೀಸಲಾತಿ ಸೌಲಭ್ಯ ದೊರಕಿಸಿಕೊಡಬೇಕೆಂದು ಆಗ್ರಹಿಸಲು ಸರತಿ ಸಾಲಿನಲ್ಲಿ ನಿಂತಿದ್ದಾರೆ ಎಂದು ತಿಳಿದುಬಂದಿದೆ.

ನಾಯಿ-ಬೆಕ್ಕು-ಮಂಗ ಇತ್ಯಾದಿಗಳ ಪರವಾಗಿ ಈ ಹಿಂದೆಯೂ ಇಲ್ಲಿ , ಇಲ್ಲಿ ಮತ್ತು ಇಲ್ಲಿ ಮುಂತಾದೆಡೆ ಹೋರಾಡುತ್ತಲೇ ಬಂದಿರುವ ಬೊಗಳೆ ರಗಳೆ ಬ್ಯುರೋ, ಈ ಬಾರಿಯೂ ಹೋರಾಟಕ್ಕೆ ಹೊರಟಿರುವ ಹಿಂದೆ, ಮುಂದೆ ಚುನಾವಣೆಗೆ ನಿಲ್ಲುವ ಯೋಜನೆ ಇಲ್ಲ ಎಂಬುದನ್ನು ಬೊ.ರ. ಸಂತಾಪಕರು ಸ್ಪಷ್ಟಪಡಿಸಿದ್ದಾರೆ.

ಈ ಮಧ್ಯೆ, ಲಿಫ್ಟ್‌ನೊಳಗೆ ತೂರಿಕೊಳ್ಳುವ ಪ್ರಾಣಿಗಳ ಮೈಯ ಪರಿಮಳವು ಉಳಿದ ಲಿಫ್ಟ್ ಪ್ರಯಾಣಿಕರ ಮೂಗಿಗೆ ಯಾವುದೇ ತೊಂದರೆಯುಂಟು ಮಾಡದಂತಿರಲು ಉಚಿತ ಪರ್ಫ್ಯೂಮ್ ಒದಗಿಸುವುದಾಗಿ ಅಮಾನವೀಯ ಹಕ್ಕುಗಳ ಓರಾಟಗಾರ ಸಂಸ್ಥೆಯೊಂದು ಘೋಷಣೆ ಮಾಡಿದೆ ಎಂದೂ ತಿಳಿದುಬಂದಿದೆ.

ಇವೆಲ್ಲದರ ನಡುವೆ, ಬೈಕಿನಲ್ಲಿ ಧಾವಿಸುವ ಕಾಲೇಜು ಯುವಕ-ಯುವತಿಯರಲ್ಲಿ ಲಿಫ್ಟ್ ಕೇಳುವುದಕ್ಕೆ ಕೂಡ ಶ್ವಾನ ಸಂಘದ ಪದಾಧಿಕಾರಿಗಳು ಗಂಭೀರವಾಗಿ ಯೋಚನೆ ಮಾಡಿದ್ದು, ಇನ್ನು ಮುಂದೆ ಶ್ವಾನಗಳು ಕೂರಲಿಕ್ಕಾಗಿಯೇ ವಿಶೇಷವಾದ ಸೀಟೊಂದನ್ನು ಪಿಲಿಯನ್ ಭಾಗದಲ್ಲಿ ಇರಿಸಿಕೊಳ್ಳಬೇಕು ಎಂಬ ಆಗ್ರಹವೂ ಕೇಳಿಬರತೊಡಗಿದೆ. ಜಾರಕಾರಣಿಗಳು ಇದರ ಹಿಂದೆಯೂ ಬಿದ್ದಿದ್ದು, ಬೈಕು-ಕಾರುಗಳಲ್ಲಿ ಶ್ವಾನ-ಮಾರ್ಜಾಲ ಜನಾಂಗೀಯರಿಗೆ ಲಿಫ್ಟ್ ನೀಡುವುದು ಕಡ್ಡಾಯ ಎಂಬೊಂದು ಶಾಸನ ಜಾರಿಗೆ ತರಲು ಒಕ್ಕೊರಲಿನಿಂದ ಸಜ್ಜಾಗುತ್ತಿದ್ದಾರೆ.

Wednesday, December 17, 2008

ನಿವೃತ್ತ ಹುದ್ದೆಗಳಿಗೆ ಅರ್ಜಿಗಳ ಮಹಾಪೂರ!

(ಬೊಗಳೂರು, ನಿರುದ್ಯೋಗ ನಿವಾರಣೆ ಬ್ಯುರೋದಿಂದ)
ಬೊಗಳೂರು, ಡಿ.17- ನಿವೃತ್ತ ರಾಷ್ಟ್ರದ ಪತಿ ಮತ್ತು ನಿವೃತ್ತ ರಾಜ್ಯದ ಪಾಲ ಹುದ್ದೆಗೆ ಅರ್ಜಿ ಸಲ್ಲಿಸಲು ಬೊಗಳೂರಿನ ಸಮಸ್ತ ಜನತೆ ಧಾವಂತಕ್ಕೆ ಬಿದ್ದಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.

ಇದಕ್ಕೆ ಕಾರಣವೆಂದರೆ, ಕಷ್ಟಪಟ್ಟು ದುಡಿದರೂ ದೊರೆಯದಷ್ಟು ಸಂಬಳವು ನಿವೃತ್ತಿಯಾದ ನಂತರ ದೊರಕುವುದೇ ಆಗಿರುತ್ತದೆ ಎಂದು ಬೊಗಳೂರು ಮಹಾಜನತೆ ಸ್ಪಷ್ಟಪಡಿಸಿದ್ದಾರೆ. ಈ ನಿವೃತ್ತರ ಹುದ್ದೆಗಳಿಗೆ ಬೇಡಿಕೆ ತೀವ್ರವಾಗಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮೀಸಲಾತಿ ನೀಡಬೇಕೇ ಎಂಬ ಬಗ್ಗೆ ಜಾರಕಾರಣಿಗಳೆಲ್ಲರೂ ಸೇರಿ ಸಭೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಮಧ್ಯೆ, ನಮಗೂ ಸಂಬಳ ಹೆಚ್ಚಿಸಿ ಅಂತ ಸಂಸತ್ತಿನಲ್ಲಿ ನಿದ್ದೆ ಮಾಡುವ ಸಂಸದರೂ ಸೇರಿದಂತೆ ಹಲವರು ಪಟ್ಟು ಹಿಡಿದಿರುವುದು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಯಾಕೆಂದರೆ, ಇಂಥದ್ದೊಂದು ವಿಷಯದಲ್ಲಿ ಸಂಸತ್ತಿನಲ್ಲಿ ಯಾವತ್ತಿಗೂ ಪಕ್ಷಭೇದವಿಲ್ಲ, ಆಡಳಿತ ಪಕ್ಷ- ವಿರೋಧ ಪಕ್ಷ ಎಂಬ ತಾರ ತಮ್ಯ ಇರುವುದಿಲ್ಲ. ಪಕ್ಷಭೇದವಿಲ್ಲದೆ ಒಮ್ಮತದಿಂದ ಅಂಗೀಕಾರವಾಗುವ ಏಕೈಕ ಮಸೂದೆ ಎಂದರೆ ಸಂಸದರ ವೇತನ ಏರಿಕೆ ಶಿಫಾರಸು. ಹೀಗಾಗಿ ಈ ಹುದ್ದೆಗಳಿಗೂ ಬೊಗಳೂರು ಜನತೆ ಮುಗಿಬೀಳುತ್ತಿದ್ದಾರೆ.

ಸಂಸದರ ಹುದ್ದೆಗೆ ಇರಬೇಕಾದ ಅರ್ಹತೆಗಳೇನು, ಇಷ್ಟೊಂದು ವೇತನ, ಅನುದಾನ ಪಡೆಯಲು ನಿದ್ರಾ ಸಂಸದನಿಗೆ ಏನೆಲ್ಲ ಇರಬೇಕು ಮತ್ತು ಇರಬಾರದು ಎಂಬುದನ್ನು ಪಟ್ಟಿ ಮಾಡಿ ಬೊಗಳೂರಿನ ಬೀದಿ ಬೀದಿಗಳಲ್ಲಿ ಹಚ್ಚಲಾಗಿದೆ. ಅವುಗಳು ಈ ರೀತಿಯಾಗಿರುತ್ತವೆ:

* ಸಂಸತ್ತಿನಲ್ಲಿ ನಿದ್ದೆ ಮಾಡುತ್ತಿರಬೇಕು.

* ದೇಶದಲ್ಲಿ ಅಭಿವೃದ್ಧಿಗೆ ಸಂಬಂಧಿಸಿದಂತೆ ಯಾವುದೇ ಮಸೂದೆ ಮಂಡನೆಯಾದರೆ, ಅದರಲ್ಲಿ ಓಟು ಬ್ಯಾಂಕಿಗೆ ಏನಾದರೂ ಪೆಟ್ಟಾಗಬಹುದೇ ಎಂದು ಹುಳುಕು ಹುಡುಕುವಲ್ಲಿ ಎತ್ತಿದ ಕೈ ಆಗಿರಬೇಕು, ಇಲ್ಲವಾದರೆ ಕಾಲೆತ್ತಿದರೂ ಆದೀತು.

* ರಾಜಕಾರಣಕ್ಕೇ ಜೀವನವನ್ನು ಸವೆಸುವ ನಡುವೆ ದೇಶದ ಹಿತ ರಕ್ಷಣೆ ಕುರಿತ ಚರ್ಚೆಗೆ ಸಮಯಾವಕಾಶವಿಲ್ಲವೇ? ಸಂಸತ್ತಿನ ರಿಜಿಸ್ಟರಿಗೆ ಬೆಳ್ಳಾಂಬೆಳಗ್ಗೆ ಸಹಿ ಹಾಕಿ, ಸರಕಾರಿ ವೆಚ್ಚದಲ್ಲಿ ವಿಮಾನದ ಮೂಲಕ ರಾಜಕಾರಣ ಮಾಡಲು ತೆರಳಬೇಕು.

* ಕ್ಷೇತ್ರದಲ್ಲಿ ನೆರೆ ಹಾವಳಿ, ಬರ, ಕ್ಷಾಮ, ರಸ್ತೆ ಸರಿ ಇಲ್ಲ, ಮೂಗು ಮುಚ್ಚಿಕೊಂಡು ಓಡಾಡಬೇಕಾಗುತ್ತದೆ ಇತ್ಯಾದಿ ಸಮಸ್ಯೆಗಳಿವೆಯೇ? ಈ ದೇಶದಲ್ಲಿರುವ ಸಮಸ್ಯೆಗಳಿಗೆ ಪರದೇಶದಲ್ಲಿ ಪರಿಹಾರ ಕಂಡುಹುಡುಕುವ ನಿಟ್ಟಿನಲ್ಲಿ ಹೊರ ದೇಶಕ್ಕೆ ತೆರಳುವ 'ಅಧ್ಯಯನ ನಿಯೋಗ'ದಲ್ಲಿ ಪಾಲ್ಗೊಳ್ಳುವ ಅದಮ್ಯ ಉತ್ಕಟ ಆಕಾಂಕ್ಷೆ ಹೊಂದಿರಬೇಕು.

* ಹಿಂದಿನ ಸಂಸದನ ಅವಧಿಯಲ್ಲಿ ಆದ ಉತ್ತಮ ಕೆಲಸ ಕಾರ್ಯಗಳೇನಾದರೂ ಇವೆಯೇ ಎಂಬುದನ್ನು ಪತ್ತೆ ಹಚ್ಚುವಲ್ಲಿ ನಿಪುಣರಿರಬೇಕು. ಮಾತ್ರವಲ್ಲ, ಅದನ್ನು ರದ್ದುಪಡಿಸಿ, ಆ ಕಾರ್ಯಕ್ರಮಗಳ ಬಗ್ಗೆ ತನಿಖೆ ನಡೆಸಲು ಆದೇಶಿಸುವುದರಲ್ಲಿಯೂ ಪರಮ ನೈಪುಣ್ಯ ಸಾಧಿಸಿರಬೇಕು.

* ದೇಶದಲ್ಲಿ ಎಲ್ಲಾದರೂ ಸಣ್ಣಪುಟ್ಟ ಸಂಘರ್ಷವೊಂದು ನಡೆದರೆ, ಅದರಲ್ಲಿ ಕೋಮು ಬಣ್ಣವನ್ನು ಪತ್ತೆ ಹಚ್ಚಿ, ಹೊರಗೆಳೆದು ಆ ಕುರಿತು ಧ್ವನಿ ಎತ್ತಲು ಸಿದ್ಧವಿರಬೇಕು.

* ಸರಕಾರವೊಂದು ಒಳ್ಳೆಯ ಕೆಲಸ ಮಾಡಿದರೆ, ನೀವು ವಿರೋಧ ಪಕ್ಷದವರಾಗಿದ್ದರೆ, ಅದರಲ್ಲಿನ ಹುಳುಕನ್ನು ಎತ್ತಿತೋರಿಸಬೇಕು. ಸಣ್ಣ ಪುಟ್ಟ ನ್ಯೂನತೆಯಾದರೂ ಅದನ್ನು ದೊಡ್ಡ ಕುಂಬಳಕಾಯಿ ಮಾಡಿ, ಸಾಂಬಾರು ಮಾಡುವಂತಿರಬೇಕು.

* ಅದೇ ರೀತಿ, ನೀವು ಆಡಳಿತ ಪಕ್ಷದಲ್ಲಿದ್ದರೆ, ವಿರೋಧ ಪಕ್ಷದವರು ನೀಡುವ ಒಳ್ಳೆಯ ಸಲಹೆಯನ್ನು ಕ್ಯಾಕರಿಸಿ ತಿರಸ್ಕರಿಸಬೇಕು. ಎಲ್ಲಾದರೂ ಕ್ರೆಡಿಟ್ ಅವರಿಗೆ ಹೋದರೆ ಎಂಬ ಆತಂಕ ನಿಮ್ಮ ಮನದಂಗಳದಲ್ಲಿ ಫುಟ್ಬಾಲ್‌ನಂತೆ ಅತ್ತಿಂದಿತ್ತ ಸುಳಿಯುತ್ತಿರಬೇಕು.

* ಆ ಮೇಲೆ, ನೀವು ಸರಕಾರದ ಸಚಿವ ಸಂಪುಟದಲ್ಲಿ ಸಾಧ್ಯವಿದ್ದಷ್ಟು ಮಟ್ಟಿಗೆ ಒಳಗೆ ತೂರಿಕೊಳ್ಳಲು ಪ್ರಯತ್ನಿಸಬೇಕು. ಸಮಾಧಾನವಾಗಲಿಲ್ಲವೋ, ಅಥವಾ ಸಿಕ್ಕಲಿಲ್ಲವೋ... ಯಾವುದಾದರೂ ರಾಜ್ಯದ ರಾಜ್ಯಪಾಲ ಹುದ್ದೆಗೆ, ಅಥವಾ ಯಾವುದಾದರೊಂದನ್ನು ಸುಧಾರಿಸಲು ರಚಿಸಲಾಗುವ ಆಯೋಗವೊಂದನ್ನು ನೇಮಿಸಲು ಒತ್ತಡ ಹೇರಿ, ಅದರ ಮುಖ್ಯಸ್ಥರಾಗಿಯೋ ಕಾರ್ಯನಿರ್ವಹಿಸುವ ಚಾಣಕ್ಯ ತಂತ್ರ ಮತ್ತು ಚಾಣಾಕ್ಷತೆ ನಿಮ್ಮಲ್ಲಿರಬೇಕು.

* ನೀವು ಹಣ್ಣು ಹಣ್ಣು ಮುದುಕರಾದಷ್ಟೂ ಸಂಸದರಾಗುವ ಅವಕಾಶಗಳು ಹೆಚ್ಚು.

* ಇದರೊಂದಿಗೆ, ನಿಮ್ಮ ಮಗ, ಮೊಮ್ಮಗ, ಸೊಸೆ, ಮರಿ ಮಗ, ಗಂಡ, ಹೆಂಡತಿ ಎಲ್ಲರನ್ನೂ ರಾಜಕೀಯಕ್ಕೇ ತಂದು ಬೆಳೆಸುವ ಚಾಕಚಕ್ಯತೆ ಹೊಂದಿರಬೇಕು. ಕುಟುಂಬವೇ ರಾಜಕಾರಣಕ್ಕಾಗಿ ಜೀವ ಸವೆಸುತ್ತಿದೆ, ಮಹಾನ್ ತ್ಯಾಗ ಮಾಡುತ್ತಿದೆ ಎಂಬಂತೆ ಜನರಲ್ಲಿ ಅಭಿಪ್ರಾಯ ಮೂಡಿಸುವಲ್ಲಿ ಸಫಲರಾಗಿರಬೇಕು.

* ಕಪಡಾ, ರೋಟಿ, ಮಕಾನ್ ಎಂಬುದೇ ನಿಮ್ಮ ಮೂಲ ಮಂತ್ರವಾಗಿರಬೇಕು. ಅಲ್ಪಸಂಖ್ಯಾತರನ್ನು ಮೇಲೆ ತರಬೇಕು, ದಲಿತರನ್ನು ಉದ್ಧಾರ ಮಾಡಬೇಕು ಎನ್ನುತ್ತಾ ಬೊಗಳೆ ಬಿಡಬೇಕೇ ಹೊರತು, ಅವರ ಅಭಿವೃದ್ಧಿಗಾಗಿ ನಿಜವಾಗಿಯೂ ಏನು ಮಾಡಬೇಕು ಎಂಬುದನ್ನು ಚಿಂತಿಸುವ ಗೋಜಿಗೆ ಹೋದಿರೋ... ನಿಮ್ಮ ಸಂಸತ್ಸದಸ್ಯತನವೇ ರದ್ದಾಗುತ್ತದೆ, ಜೋಕೆ!

* ಈ ಪಟ್ಟಿ ಹೀಗೆಯೇ ಬೆಳೆಯುತ್ತಿದ್ದು, ಇದಕ್ಕೆ ಬೊಗಳೆ ರಗಳೆ ಓದುಗರೂ ಕೊಡುಗೆ ನೀಡಬಹುದು ಅಂತ ನೋಟೀಸು ಬೋರ್ಡುಗಳಲ್ಲಿ ಎಚ್ಚರಿಕೆ ಎಂಬ ಶೀರ್ಷಿಕೆಯಡಿ ಬರೆಯಲಾಗಿದೆ.

Monday, December 15, 2008

ಅಯೋಗ್ಯರು ಮನೆಗೆ: ಸರಕಾರಿ ಕಚೇರಿ ಖಾಲಿ ಖಾಲಿ!

(ಬೊಗಳೂರು ದುರಾಡಳಿತ ಸುಧಾರಣೆ ಬ್ಯುರೋದಿಂದ)
ಬೊಗಳೂರು, ಡಿ.15- ದೇಶವನ್ನು ಕಾಡುತ್ತಿರುವ ದುರಾಡಳಿತದ ಸುಧಾರಣೆಗೆ ನೇಮಿಸಲಾಗಿರುವ ಆಯೋಗ್ಯವೊಂದು ತನ್ನ ವರದಿಯಲ್ಲಿ ಇಲ್ಲಿ ಸಲ್ಲಿಸಿದ್ದು, ಇದರಿಂದಾಗಿ ದೇಶದ ಸರಕಾರಿ ಕಚೇರಿಗಳೆಲ್ಲವೂ ಬಹುತೇಕ ಸ್ಥಗಿತಗೊಳ್ಳುವ ಸಾಧ್ಯತೆಗಳು ದಟ್ಟವಾಗಿ ಗೋಚರಿಸಿವೆ.

ಅಯೋಗ್ಯ ಅಧಿಕಾರಿಗಳನ್ನು ಅವರವರ ಸ್ವಂತ ಮನೆಗೆ ಕಳುಹಿಸಲು ಶಿಫಾರಸು ಮಾಡಿರುವುದರಿಂದ ಈ ರೀತಿಯ ತುರ್ತು ಪರಿಸ್ಥಿತಿ ಉದ್ಭವವಾಗಿದ್ದು, ಸರಕಾರಿ ಕಚೇರಿಗಳಲ್ಲಿ ಇದುವರೆಗೆ ಇದ್ದ ಅರಾಜಕತೆಯು ಮತ್ತಷ್ಟು ಹೆಚ್ಚಾಗಿಬಿಟ್ಟಿದ್ದು, ಬೊಗಳೂರಿನ ಪ್ರಜೆಗಳು ಕಂಗಾಲಾಗಿದ್ದಾರೆ ಎಂದು ಎಲ್ಲಿಯೂ ವರದ್ದಿಯಾಗಿಲ್ಲ.

ಆದರೆ, 14 ಮತ್ತು 20ನೇ ವರ್ಷಗಳಲ್ಲಿ ಸರಕಾರಿ ನೌಕರರ ನಿಷ್ಕ್ರಿಯತೆಯ ಪರಾಮರ್ಶೆ ನಡೆಯಲಿದೆ ಎಂಬುದು ಸಂತಸಕರ ಸಂಗತಿಯಾಗಿದ್ದು, ಕನಿಷ್ಠ ಇಷ್ಟು ವರ್ಷಗಳ ಕಾಲ ತಾವು ಕಚೇರಿಗೆ ಬಂದು ನಿದ್ದೆ ಮಾಡುತ್ತಿದ್ದರೆ, ಮೂರು ಪೀಳಿಗೆಗೆ ಆಗುವಷ್ಟು ಕಬಳಿಸಲು ಸದವಕಾಶ ದೊರೆಯುತ್ತದಲ್ಲಾ ಎಂಬುದು ಬೊಗಳೂರಿನ ಕಾರ್ಯಮರೆತ ಸರಕಾರಿ ನೌಕರರ ಸಂಘದ ಪದಾಧಿಕಾರಿಗಳ ಅಭಿಪ್ರಾಯ.

ಇಪ್ಪತ್ತು ವರ್ಷಗಳ ಕಾರ್ಯವೈಖರಿ ಪರಾಮರ್ಶೆ ಸಂದರ್ಭವೂ ಅವರು ಅಯೋಗ್ಯರು ಎಂದು ಸಾಬೀತಾಗದಿದ್ದರೆ ದೇಶದ ಪ್ರಜೆಗಳನ್ನು ದೇವರೇ ಕಾಪಾಡಬೇಕು ಎಂದು ಬೊಗಳೆ-ರಗಳೆ ಬ್ಯುರೋ ಸಂತಾಪಕರು ಸಂತಾಪ ಸೂಚಿಸಿದ್ದಾರೆ.

ಆದರೆ, ಈ ದುರಾಡಳಿತ ಸುಧಾರಣಾ ಆಯೋಗವನ್ನೇ ಅಯೋಗ್ಯ ಎಂದು ತಪ್ಪಾಗಿ ಬರೆದ ಸರಕಾರಿ ಮುದ್ರಣಾಲಯದ ಅಧಿಕಾರಿಗಳಿಗೆ ಈಗಾಗಲೇ ನೋಟಿಸ್ ಜಾರಿ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಹತ್ತು ಹಲವು ವರ್ಷಗಳಿಂದ ದುರಾಡಳಿತ ಸುಧಾರಣೆಗೆ ವರದಿಯ ಮೇಲೆ ವರದಿ ಸಲ್ಲಿಸುತ್ತಲೇ ಬಂದಿರುವ ಕುರಿತು ಈಗಾಗಲೇ ಬೊಗಳೂರು ಬ್ಯುರೋ ಇಲ್ಲಿ ಒಂದೇ ಕಡೆ ನೂರಾರಿ ಬಾರಿ ಎಚ್ಚರಿಸಿದ್ದನ್ನು ಇಲ್ಲಿ ಪುಣ್ಯಸ್ಮರಣೆ ಮಾಡಿಕೊಳ್ಳಬಹುದಾಗಿದೆ.

Thursday, December 11, 2008

ಬ್ರೇಕ್ ನ್ಯೂಸ್: ಆಡ್ವಾಣಿ ಉಚ್ಚಾಟನೆಗೆ ಬಿಜೆಪಿ ಸಿದ್ಧತೆ!

(ಬೊಗಳೂರು ಸುದ್ದಿ ಸ್ಫೋಟ ಬ್ಯುರೋದಿಂದ)
ಬೊಗಳೂರು, ಡಿ.11- ಬೀಜೇಪೀಪೀ ನಾಯಕ ಆಡ್ವಾಣಿ ವಿರುದ್ಧ ವಿರುದ್ಧ ಕ್ರಮ ತೆಗೆದುಕೊಳ್ಳಲು ಬಿಜೆಪಿ ಚಿಂತಿಸುತ್ತಿದೆ. ಇದಕ್ಕೆ ಕಾರಣವೆಂದರೆ ಅವರು ನೀಡಿರುವ ಹೇಳಿಕೆ.

ಬೆಲೆ ಏರಿಕೆಯಲ್ಲಿಯೇ ಮುಳುಗಿ ಹೋಗಿರುವ ಕೇಂದ್ರದ ಯೂಪೀಪೀಏಯ್ ಸರಕಾರವು ದಾಖಲೆಗಳನ್ನು ಮಾಡಿ, ತಮ್ಮ ಪಕ್ಷದ ಸಾಧನೆಯನ್ನು ನಗಣ್ಯವಾಗಿಸಿದ್ದಾರೆ ಎಂಬುದಾಗಿ ಆಡ್ವಾಣಿ ಅವರು ಈ ರೀತಿ ಹೇಳಿಕೆ ನೀಡಬಾರದಾಗಿತ್ತು ಎಂದು ಪಕ್ಷದ ವರಿಷ್ಠ ಮಂಡಳಿಯು ಶೂಸಾಕ್ಸ್ ನೋಟೀಸ್ ಜಾರಿ ಮಾಡಿದೆ.

ಹಿಂದೂಸ್ತಾನವನ್ನೇ ತಮ್ಮ ತಾಯ್ನಾಡು ಎಂದು ತಿಳಿದುಕೊಂಡ ಹಿಂದೂಗಳನ್ನೇ ಭಯೋತ್ಪಾದಕರು ಎಂದು ಸಾಬೀತು ಮಾಡಲು ಪ್ರಯತ್ನಿಸುತ್ತಿರುವ ಮೂಲಕ ಭಯೋತ್ಪಾದನೆ ನಿಯಂತ್ರಣದಲ್ಲಿ ಯೂಪೀಪೀಏಯ್ ವಿಶಿಷ್ಟ ದಾಖಲೆಗಳನ್ನು ಮಾಡುತ್ತಿದೆ. ಆದರೆ ತಮ್ಮ ಎದುರಾಳಿ ಪಕ್ಷವನ್ನು ವೈಭವೀಕರಿಸುವುದೇಕೆ ಎಂಬುದು ತಮಗೆ ತಿಳಿಯದ ಸಂಗತಿ ಎಂಬುದಾಗಿ ಬೀಜಪೀಪೀ ವರಿಷ್ಠ ಮಂಡಳಿ ವ್ಯಾಖ್...ಯಾನಿಸಿದೆ.

ವಾಜಪೇಯಿಯವರಿಗೆ ಮಾಡಲಾಗದ್ದನ್ನೆಲ್ಲಾ ಯೂಪೀಪೀಏಯ್ ಸರಕಾರ ಮಾಡುತ್ತಿದೆ ಎಂದು ಹೇಳಿದ್ದ ಅಡ್ಡವಾಣಿಯಂತೆ ಹೇಳಿದ ಆಡ್ವಾಣಿ, ಹಿಂದೂ ಭಯೋತ್ಪಾದನೆ ಎಂಬ ಹೊಸದೊಂದು ಶಬ್ದವನ್ನು ಹುಟ್ಟುಹಾಕಿ, ಡಿಕ್ಷನರಿಗಳನ್ನು ಸಮೃದ್ಧವಾಗಿಸುತ್ತಿದ್ದಾರೆ ಎಂದು ಕೂಡ ಶಹಬ್ಬಾಸ್‌ಗಿರಿ ನೀಡಿರುವುದನ್ನು ಇಲ್ಲಿ ನೆನಪಿಸಿಕೊಳ್ಳದಿರಬಹುದು.

Monday, December 08, 2008

'ಕೇಶಿ'ರಾಜ ವೇದೇಗೌಡ ನುಡಿಸಿರಿಯಲ್ಲಿ ಪ್ರತ್ಯಕ್ಷ!

(ಬೊಗಳೂರು ಸಂಚೋದನಾ ಬ್ಯುರೋದಿಂದ)
ಬೊಗಳೂರು, ಡಿ.8- ಮೂಡುಬಿದ್ರಿಯಲ್ಲಿ ನುಡಿಸಿರಿ ಸಮ್ಮೇಳನಕ್ಕೆ ಬರಲೇ ಇಲ್ಲ ಎಂಬ ಅಪಹಾಸ್ಯ, ಅಪವಾದ ಮತ್ತು ಅಪ-ರೋಪದಿಂದ ಕಂಗೆಟ್ಟ ಬೊಗಳೆ, ಅಲ್ಲಿ ಕಂಡುಬಂದ ವಿಷಯವೊಂದನ್ನು ಸಂಚೋದಿಸಿ ಇಲ್ಲಿ ಪ್ರಕಟಿಸಿದೆ. ನುಡಿಸಿರಿಗೆ ಬಂದವರಿಗೆ ಅನ್ವೇಷಿ ಕಾಣಿಸದೇ ಇರುವುದಕ್ಕೆ ಅಲ್ಲಿಗೆ ವೇದೇಗೌಡರು ಬಂದಿದ್ದೇ ಕಾರಣ ಎಂಬುದನ್ನು ಇದೀಗ ಪತ್ತೆ ಹಚ್ಚಲಾಗಿದೆ.

ಮೊದಲ ದಿನ ಒಳಗಿದ್ದ ವೇದೇಗೌಡರು, ಬಳಿಕ ಆಳ್ವಾಸ್ ಕಾಲೇಜಿನ ಬಾಗಿಲಲ್ಲೇ ಬಂದು, ಮಿರಿ ಮಿರಿ ಮಿಂಚುವ ಬೆಳ್ಳಿಬಣ್ಣದ ತಲೆಗೂದಲು ಸವರಿಕೊಳ್ಳುತ್ತಿದ್ದರು! ಅರೆ! ವೇದೇಗೌಡರಿಗೆ ತಲೆಯೇ ಇಲ್ಲ, ಹೀಗಿರುವಾಗ ಕೂದಲೆಲ್ಲಿಂದ? ಬೊಗಳೆ ಬ್ಯುರೋದವರು ಬೊಗಳೆ ಬಿಡುತ್ತಿದ್ದಾರೆ ಎಂದು ಓದುಗರು ಪ್ರಶ್ನಿಸಬಹುದು. ಇದಕ್ಕೂ ಉತ್ತರ/ಕಾರಣ/ನೆಪ ಸಿದ್ಧಪಡಿಸಿಟ್ಟುಕೊಳ್ಳಲಾಗಿದೆ.

ಹೌದು... ವೇದೇಗೌಡರು ಅಲ್ಲಿದ್ದರು. ಜನರನ್ನು ಆಕರ್ಷಿಸುತ್ತಿದ್ದರು. ಅದೇ ಬೆಳ್ಳಿಕೂದಲ ಮೇಲೆ ಕೈಯಾಡಿಸಿಕೊಳ್ಳುತ್ತಾ... ವೇದೇಗೌಡರ ಈ ದುಸ್ಥಿತಿಗೆ ಕಾರಣ... ವಾರೆಕೋರೆಯಾಗಿ ತಾವು ಸಂಚೋದಿಸಿದ ಬಕ್ರೀ ಮೂತ್ರವನ್ನು ವೇದೇಗೌಡರ ತಲೆಗೆ ಹಚ್ಚಿ ಅಲ್ಲಿ ಮಾತ್ರ ಕೂದಲು ಬೆಳೆಯುವಂತೆ ಮಾಡಿದವರು ಪಂಚ್ ಶೆಟ್ಟರು. ಅದೇ ಬಾಯಿಯ ಸುತ್ತಮುತ್ತಲಿನ ಭಾಗದಲ್ಲಷ್ಟೇ ಕುರುಚಲು ಗಡ್ಡ ಇರಿಸಿಕೊಂಡು, ಕೈಯಲ್ಲೊಂದು ಶಾಯಿಪೆನ್ನನ್ನು ಖಡ್ಗದಂತೆ ಝಳಪಿಸುತ್ತಾ, ಕಾಲೇಜಿನ ದ್ವಾರದ ಬಲಭಾಗದಲ್ಲಿ ಅಲ್ಲಿಗೆ ಬಂದವರನ್ನೆಲ್ಲಾ ವಶೀಕರಣ ಮಾಡಿದಂತೆ ಸೆಳೆಯುತ್ತಿದ್ದರು!

ಅವರ ಸಂಚೋದನೆಯ ಫಲವೇ ವೇದೇಗೌಡರ ಬಕ್ಕ ತಲೆಯಲ್ಲಿ (ಹೊರಗೆ ಮಾತ್ರ, ಒಳಗೆ ಗೊತ್ತಿಲ್ಲ) ಕಾಡು ಬೆಳೆದದ್ದು. ಈ ಸುದ್ದಿಯನ್ನು ವಾರೆಕೋರೆ ವರದ್ದಿಗಾರ ಖಾಲಿ ತಲೆಮಾರ್ ಅವರು ತಂದುಕೊಟ್ಟಿದ್ದು, ಈ ಪರಮೌಷಧವನ್ನು ಸಂಚೋದಿಸಿದ್ದು ಬಕ್ರಪ್ಪ ಎಂಬ ಕುರಿಗಾಹಿ ಎಂಬುದನ್ನು ತಿಳಿಸಲು ಪ್ರಕಾಶ್ ಶೆಟ್ಟರು ಮರೆಯಲಿಲ್ಲ. 

ನುಡಿಸಿರಿ ಹೆಬ್ಬಾಗಿಲಲ್ಲೇ ಕತ್ತಿ ಝಳಪಿಸುತ್ತಾ ನಿಂತಿದ್ದ ಪ್ರಕಾಶ್ ಶೆಟ್ಟರು, ಕೇವಲ 100 ರೂಪಾಯಿಗೆ ನಿಮ್ಮ ತಲೆಯಲ್ಲಿ ಇಲ್ಲದ ಕೂದಲನ್ನು ಕೂಡಿಸುತ್ತಿದ್ದರು, ಇದ್ದ ಕೂದಲನ್ನು ಕಳೆಯುತ್ತಿದ್ದರು... ಮುಖಗಳನ್ನು ವಕ್ರವಾಗಿ ಎಳೆದು, ಕೈಕಾಲುಗಳನ್ನು ಅಡ್ಡಡ್ಡ ಜೋಡಿಸಿ... ಕೊನೆಗೆ ಏನೇನೋ ಹರಸಾಹಸ ಮಾಡಿ ನಿಮ್ಮ ವಿ-ರೂಪವನ್ನು ಸೃಷ್ಟಿಸಿ ನಿಮ್ಮ ಕೈಗಿಡುತ್ತಿದ್ದರು! ಆದರೂ ಅದು ನಿಮ್ಮ ರೂಪವಂತೂ ಖಂಡಿತ ಎಂದು ನೀವೇ ಬೆನ್ನು ತಟ್ಟಿಕೊಳ್ಳುತ್ತೀರಿ. ಅದರ ಜೊತೆಗೆ ವಾರೆಕೋರೆ ಎಂಬ ಸಂಚಿಕೆಯ ಕುರಿತ ಜನಾಭಿಪ್ರಾಯ ಸಂಗ್ರಹವೂ ನಡೆಯುತ್ತಿತ್ತು.

ಆದರೆ, ಈ ಬೊಕ್ಕತಲೆಯಲ್ಲಿ, ಅದಕ್ಕೂ ಹೆಚ್ಚಾಗಿ ಇಲ್ಲದ ತಲೆಯಲ್ಲಿ ಕೂದಲು ಮೂಡಿಸಬಲ್ಲ ಸಾಮರ್ಥ್ಯವಿರುವ ಬಕ್ರೌಷಧವನ್ನು ಹೇಗೆ/ಯಾವ ರೀತಿ (ಅಂದರೆ ಲೇಪಿಸಿಕೊಳ್ಳೋದೋ... ಸೇವಿಸೋದೋ) ಬಳಸುವುದು ಹೇಗೆಂಬ ಬಗ್ಗೆ ಅಲ್ಲಿದ್ದವರು ಯಾರೂ ಮುಖ ಸಿಂಡರಿಸುತ್ತಾ... ಬಾಯಿಬಿಡದೇ ಇರುವುದು ಹಲವು ಶಂಕೆಗಳಿಗೆ, ಮೂತ್ರಶಂಕೆಗಳಿಗೆ ಮತ್ತು ಆಮಶಂಕೆಗಳಿಗೆ ಕಾರಣವಾಗಿತ್ತು ಎಂಬುದಂತೂ ದಿಟ. 

Friday, December 05, 2008

ನಾಯಕರ ಬಾಯಿಯಲ್ಲಿ 'ನಾಯಿ'ಕರು: ಪ್ರತಿಭಟನೆ

(ಬೊಗಳೂರು ನಾಯಿ-ಕರ ಬ್ಯುರೋದಿಂದ)
ಬೊಗಳೂರು, ಡಿ.5- ಇಲ್ಲ, ಇಲ್ಲ, ಶ್ವಾನ ಸಂಘದ ಅಧ್ಯಕ್ಷರು ಇಷ್ಟೊಂದು ಕುಪಿತರಾಗಿರುವುದನ್ನು ಜೀವಮಾನದಲ್ಲೇ ಬೊಗಳೆ ಬ್ಯುರೋ ಕಂಡಿಲ್ಲ. ನಿಷ್ಠೆಗೆ, ಪ್ರಾಮಾಣಿಕತೆಗೆ ಹೆಸರಾಗಿರುವ ತಮ್ಮ ಹೆಸರನ್ನು ಈ ಹೊಣೆಗೇಡಿ ರಾಜಕಾರಣಿಗಳ ಬಾಯಲ್ಲಿ ಕೇಳಿ ಅವರು ದಿಗಿಲುಗೊಂಡಿದ್ದರು.

ಈ ಕಾರಣಕ್ಕೆ, ತ್ವರಿತವಾಗಿ ಬೊಗಳೆ ರಗಳೆಯನ್ನು ಮಾತ್ರವೇ ಪತ್ರಿಕಾ ಗೋಷ್ಠಿಗೆ ಕರೆದು ಹೀನಾಮಾನವಾಗಿ ಜಾರಕಾರಣಿಗಳ ಮೇಲೆ ಕೆಂಡ ಕಾರಿರುವ ಅವರು, ಕರ್ತವ್ಯನಿಷ್ಠೆ, ಸ್ವಾಮಿನಿಷ್ಠೆಗೆ ಹೆಸರಾದವರು ನಾವು. ನಿಷ್ಠೆ, ಪ್ರಾಮಾಣಿಕತೆ, ಜನ ಸೇವೆ ಮುಂತಾದವು ಈ ನಾಯಿಕರ ಬಾಯಲ್ಲಿ ಬಂದರೆ ಆ ಶಬ್ದಗಳಿಗೇ ಸಂಚಕಾರ ಎಂಬಷ್ಟರ ಮಟ್ಟಿಗೆ ಕುಲಗೆಟ್ಟು ಹೋಗಿದೆ ನಮ್ಮ ವ್ಯವಸ್ಥೆ. ಇಂಥದ್ದರಲ್ಲಿ ನಮ್ಮ ಹೆಸರು ಆ ಜಾರಕಾರಣಿಗಳ ಬಾಯಲ್ಲಿ ಬರುವಂತೆ ಮಾಡಿದ್ದು ಯಾರು ಎಂದು ಬಾಲ ಅಲ್ಲಾಡಿಸಲು ಜಾಗವಿಲ್ಲದಿದ್ದರೂ ಜೋರಾಗಿಯೇ ಬಾಲ ಅಲುಗಾಡಿಸುತ್ತಾ ಬೊಗಳಿದರು.

ಇದನ್ನು ಇಡೀ ವಿಶ್ವದ ಅಷ್ಟೇಕೆ, ನಮ್ಮ ಬೊಗಳೂರಿನ ಶ್ವಾನಸಂಘಗಳು ಪ್ರತಿಭಟಿಸಲಿವೆ. ಈ ಜಾರಕಾರಣಿಗಳು ಹೋದಲ್ಲೆಲ್ಲಾ ಎರಡೂ ಕೈಮುಗಿಯುವ ಮಾದರಿಯಲ್ಲಿ, ನಾವು ಕೂಡ ಅವರನ್ನು ಕಂಡ ತಕ್ಷಣ ಒಂದು ಕಾಲನ್ನು ಮಾತ್ರವೇ ಎತ್ತಿ ಪ್ರತಿಭಟನೆ ನಡೆಸಲಿದ್ದೇವೆ. ಇದರಿಂದ ದೇಶದಲ್ಲಿ ಹೆಚ್ಚಾಗಿರುವ ಉಗ್ರಗಾಮಿಗಳ ಹಾವಳಿಯನ್ನು ಕೂಡ ಪರಿಣಾಮ ಬೀರದಂತೆ ಮಾಡಬಹುದು ಎಂದು ಶ್ವಾನಶ್ರೇಷ್ಠರು ಹೇಳಿದರು.

ಅದು ಹೇಗೆ ಎಂದು ತಬ್ಬಿಬ್ಬಾದ ಬೊಗಳೆಯೆದುರು ಜೋರಾಗಿಯೇ ಬೊಗಳಿದ ಅವರು, ಅಷ್ಟೂ ಗೊತ್ತಾಗಲ್ವೇನ್ರೀ..? ಉಗ್ರಗಾಮಿಗಳು ಅಲ್ಲಲ್ಲಿ ಬಾಂಬ್ ಬಿಸಾಕಿ ಹೋಗುತ್ತಾರೆ. ಅವುಗಳು ಸ್ಫೋಟಗೊಳ್ಳದಂತೆ ನಾವು ಕಾಲೆತ್ತಿ ಬಾಂಬ್ ಶಾಮಕ ಪದಾರ್ಥವನ್ನು ಸಿಂಪಡಿಸುತ್ತೇವೆ, ಇದರಿಂದ ಜಾರಕಾರಣಿಗಳಿಗೆ ಪ್ರತಿಭಟನೆ ಸೂಚಿದಂತೆಯೂ ಆಗುತ್ತದೆ, ನಮ್ಮ ಕರ್ತವ್ಯನಿಷ್ಠೆಯ ಮೂಲಕ ದೇಶದ ಜನರನ್ನು ರಕ್ಷಿಸಿದಂತೆಯೂ ಆಗುತ್ತದೆ ಎಂದು ಸ್ಪಷ್ಟನೆ ನೀಡಿದರು.

ಬೊಗಳೂರು ಬ್ಯುರೋದ ಮಂದಿ ಕಕ್ಕಾಬಿಕ್ಕಿಯಾಗಿ ಈ ಹೇಳಿಕೆಯನ್ನು ಇನ್ನೂ ಕೇಳಿಸಿಕೊಳ್ಳುತ್ತಾ, ಅರಗಿಸಿಕೊಳ್ಳಬೇಕೆಂಬಷ್ಟರಲ್ಲಿ ಮತ್ತೊಂದು ಬಾಂಬನ್ನೂ ಅವರು ಹಾಕಿದರು. ಇತ್ತೀಚೆಗೆ ಬಾಂಬ್ ನಿಷ್ಕ್ರಿಯ ದಳಕ್ಕೆ ನಿಷ್ಠಾವಂತ ನಾಯಿಗಳ ಬದಲು, ಕಂತ್ರಿನಾಯಿಗಳನ್ನು ಸೇರಿಸಿಕೊಳ್ಳಲಾಗುತ್ತಿದೆ. ಇದರಿಂದಾಗಿಯೇ, ಬಾಂಬ್ ಸ್ಫೋಟದ ಪೂರ್ವ ಸೂಚನೆ ದೊರೆತರೂ ನಮ್ಮ ನಾಯಿ-ಕರು ಯಾವುದೇ ರೀತಿಯಲ್ಲಿ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ ಎಂಬ ರಹಸ್ಯವನ್ನೂ ಅವರು ಬಿಚ್ಚಿಟ್ಟರು.

ಬಾಂಬ್ ಪತ್ತೆ ದಳ, ಬಾಂಬ್ ನಿಷ್ಕ್ರಿಯ ದಳಕ್ಕೆ "ನಾನು ಜನನಾ'ಯಿ'ಕ" ಎಂದು ಬೊಗಳೆ ಬಿಡುವ ಮಂದಿ ಶಿಫಾರಸು ಮಾಡುವವರನ್ನೇ ನೇಮಿಸಿಕೊಳ್ಳಲಾಗುತ್ತದೆ. ಹೀಗಾಗಿ ಅವರಿಗೆ ಕಮ್ಮಿ ನಿಷ್ಠೆ. ಅರ್ಹರನ್ನು ಮಾತ್ರವೇ ಶ್ವಾನದಳಕ್ಕೆ ಸೇರಿಸಿಕೊಳ್ಳಬೇಕು. ಇಲ್ಲವಾದಲ್ಲಿ ನಾಗರಿಕರ ಶ್ವಾಸ ಹೋಗಬಹುದು ಎಂದವರು ಎಚ್ಚರಿಸಿದ್ದಾರೆ.

Thursday, December 04, 2008

ಫಟೀಲ್ ರಾಜೀನಾಮೆ ಅನಗತ್ಯ: ಬೊಗಳೆ

(ಸೊಂಪಾದಕೀಯ)
ಮುಂಬಯಿ ಸ್ಫೋಟ ಪ್ರಕರಣಗಳಿಗೆ ಸಂಬಂಧಿ'ಸ'ದಂತೆ ಕೇಂದ್ರದ, ರಾಜ್ಯದ ಗೃಹ ಸಚಿವರು, ಮುಖ್ಯಮಂತ್ರಿಗಳು, ಅವರು, ಇವರು ಮತ್ತಿತರರು ರಾಜೀನಾಮೆ ನೀಡಿರುವುದನ್ನು ಬೊಗಳೂರು ಬ್ಯುರೋ ಗಹಗಹಿಸಿ ಖಂಡಿಸುತ್ತದೆ.

ಇದಕ್ಕೆ ಪ್ರಧಾನ ಕಾರಣವೆಂದರೆ ಕೇಂದ್ರದ ಸಚಿವರು ರಾಜೀನಾಮೆ ನೀಡುವ ಅಗತ್ಯವೇ ಇರಲಿಲ್ಲ. ಕಳೆದ ನಾಲ್ಕಾರು ವರ್ಷಗಳಿಂದ ಅವರಿರುವಾಗ ಅದೆಷ್ಟೋ ಭಯೋತ್ಪಾದಕ ಘಟನೆಗಳು ನಡೆಯುತ್ತಿರಲಿಲ್ಲವೇ? ಅವರಿರುವಾಗಲೂ ಸಾಕಷ್ಟು ನಡೆದಿದೆ. ಇನ್ನು ಅವರಿಲ್ಲದಿದ್ದರೆ ಕಡಿಮೆಯಾಗುವ ಸಾಧ್ಯತೆ ಇದೆಯೇ? ಎಂಬ ಮೂಲ ಭೂತ ಪ್ರಶ್ನೆ.

ಅವರು ಆ ಪದವಿಯಲ್ಲಿರುವಾಗಲೂ ಯಾವುದೇ ಭಯೋತ್ಪಾದನಾ ಕೃತ್ಯಗಳನ್ನು ಬಲವಾಗಿಯೇ, ಒತ್ತಿ ಒತ್ತಿಯೇ ಖಂಡಿಸುತ್ತಿದ್ದರು. ಮುಂದೆಯೂ ಖಂಡಿಸುತ್ತಾರೆ. ಇಷ್ಟಕ್ಕೂ ಮಿಗಿಲಾಗಿ, ಬೊಗಳೆ ಬ್ಯುರೋದ ಈ ಖಂಡನೆಗೆ ಪ್ರಧಾನ ಕಾರಣವೆಂದರೆ, ಅವರು ಗೃಹ ಸಚಿವರಾಗಿದ್ದರು ಎಂಬುದು ಯಾವುದೇ ಹಂತದಲ್ಲಿಯೂ ಯಾರಿಗೂ ತಿಳಿದಿರಲಿಲ್ಲ. ದೊಡ್ಡ ದೊಡ್ಡ ವಿಧ್ವಂಸಕಾರಿ ಕೃತ್ಯಗಳು ನಡೆದಾಗ ಖಂಡಿಸುವ ಸಂದರ್ಭದಲ್ಲಿ ಮಾತ್ರವೇ ನಮ್ಮ ಗೃಹ ಸಚಿವರು ಅವರಾಗಿದ್ದರು ಎಂದಷ್ಟೇ ಗೊತ್ತಾಗುತ್ತಿತ್ತು.

ಉಳಿದ ಸಂದರ್ಭಗಳಲ್ಲೆಲ್ಲಾ, ಅವರಿದ್ದರು ಎಂಬುದಕ್ಕೆ ಪುರಾವೆಯೇ ದೊರೆತಿರಲಿಲ್ಲ. ಇದೂ ಅಲ್ಲದೆ, ಇಷ್ಟು ಭೀಕರ ಕೃತ್ಯಕ್ಕೆ ಕೇಂದ್ರಕ್ಕೊಂದು ಬಲಿಪಶು ಬೇಕಾಗಿತ್ತು. ಅದನ್ನು ದೊಡ್ಡ -ಜವಾಬ್ದಾರಿಯುತ ಪದವಿಯ ಸಣ್ಣ ವ್ಯಕ್ತಿಯ ತಲೆಗೆ ಹೊರಿಸಿ, ಮುಂಬರುವ ಚುನಾವಣೆಗಳಲ್ಲಿ "ನಾವು ಮತ್ತೊಂದು ತ್ಯಾಗ, ಬಲಿದಾನ ಮಾಡಿದ್ದೇವೆ" ಎಂದು ಹೇಳಿಕೊಳ್ಳುವ ಅಸ್ತ್ರವನ್ನಾಗಿಯೇ ಬಳಸಲಾಗುತ್ತಿರುವುದರಿಂದ ಇದು ದೇಶದ ಪ್ರಜೆಗಳಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂಬುದು ಖಚಿತವಾಗಿದೆ.

ಈಗಾಗಲೇ ಜನರು ಎಚ್ಚೆತ್ತುಕೊಂಡಿದ್ದು, ಭಯೋತ್ಪಾದನೆಯಲ್ಲೂ ರಾಜಕೀಯ ಮಾಡುವವರು ಈಗಾಗಲೇ After-shock ಗಳ ಕೊಡುಗೆ ಪಡೆಯುತ್ತಿದ್ದಾರೆ. ಮೋದಿಗೆ ಹೇಮಂತ ಕರ್ಕರೆ ಪತ್ನಿ, ಕೇರಳ ಮುಖ್ಯಮಂತ್ರಿಗೆ ಉನ್ನಿಕೃಷ್ಣನ್, ಮತ್ತು ಇನ್ನೊಂದೆಡೆ ಸಂಜಯ್ ನಿರುಪಮ್‌ಗೆ ಜನರು ಚುರುಕು ಮುಟ್ಟಿಸಿದ್ದಾರೆ. ಇಷ್ಟಾಗಿಯೂ ರಾಜಕಾರಣಿಗಳು ರಾಜಕೀಯ ಮಾಡುವುದರಿಂದ ಎಚ್ಚೆತ್ತುಕೊಳ್ಳದಿದ್ದರೆ, ನಮ್ಮ ಬೊಗಳೆಗೆ ಸುದ್ದಿಗೆ ಬರವಿರಲಾರದು ಎಂದು ಭರವಸೆ ನೀಡುತ್ತಿದ್ದೇವೆ. ಹಾಗೂ ನಾವು ಕೂಡ ಮೊಸಳೆ ಕಣ್ಣೀರು ಸುರಿಸುತ್ತೇವೆ.

Wednesday, December 03, 2008

ನುಡಿಸಿರಿಯಲ್ಲಿ ಗುಡಿಸಲ್ಪಟ್ಟ ಬೊಗಳೆ

(ಬೊಗಳೂರು ಬೊಗಳೆ ಬ್ಯುರೋದಿಂದ)
ಬೊಗಳೂರು, ಡಿ.3- ನುಡಿಸಿರಿಗೆ ಹೋದ ಬೊಗಳೂರಿನ ಏಕಸದಸ್ಯ ಬ್ಯುರೋದ ಸಮಸ್ತ ಸಿಬ್ಬಂದಿ ಕಂಗಾಲಾಗಿ ಕುಲಗೆಟ್ಟು ಹೋಗಿದ್ದಾರೆ. ಇದಕ್ಕೆ ಕಾರಣವೆಂದರೆ ಬೊಗಳೂರಿನಿಂದ ಹೊರಗೆ ಕಾಲಿಟ್ಟ ತಕ್ಷಣವೇ ಒಂದಿಲ್ಲೊಂದು ಘಟನೆಗಳು ದೇಶದ ವಿವಿಧೆಡೆ ನಡೆಯುತ್ತಿರುವುದು.

ಈ ಹಿಂದೆ ಒಮ್ಮೆ ಬೊಗಳೂರಿನಿಂದ ಹೊರಬಿದ್ದು ಮಂಗಳೂರಲ್ಲಿ ನೆಗೆದಾಗ ಕರ್ನಾಟಕದಲ್ಲಿ ಚರ್ಚ್ ಮೇಲೆ ದಾಳಿ ನಡೆಯಿತು, ಗಲಾಟೆ, ಹಿಂಸಾಚಾರ ಎಲ್ಲ ನಡೆದು ನಾಲ್ಕು ದಿನ ಬಂದ್. ಹೀಗಾಗಿ ಬೊಗಳೆ ಅಲ್ಲಿಗೆ ಬಂದು ಬಿದ್ದದ್ದೇ... ನಾಲ್ಕು ದಿನ ಏಳಲಿಲ್ಲ, ಆ ಬಳಿಕ ಮತ್ತೊಮ್ಮೆ ಬೊಗಳೂರಿನಿಂದ ಹೊರಗೆ ತಲೆ ಹಾಕಿದ ತಕ್ಷಣವೇ ಬೆಂಗಳೂರು, ಅಹಮದಾಬಾದ್ ಸರಣಿ ಬಾಂಬ್ ಸ್ಫೋಟಗಳು ನಡೆದವು. ಬೊಗಳೆಯ ಬೇಳೆ ಯಾವುದೂ ಬೇಯಲಿಲ್ಲ. ಈ ಬಾರಿಯೂ ಅಷ್ಟೇ, ಬೊಗಳೂರಿನಲ್ಲಿ ಮರೆಸಿಕೊಂಡಿದ್ದ ತಲೆಯನ್ನು ಹೊರಹಾಕಿದ್ದೇ ತಡ, ಮುಂಬಯಿಯು ಉಗ್ರರ ಸ್ವರ್ಗ ಆಗಿಹೋಯಿತು. ಬೊಗಳೆ ಸ್ತಬ್ಧವಾಯಿತು.

ಹೀಗಾಗಿ ಏನೂ ತಿಳಿಯದೆ ಅತ್ತಿತ್ತ ಸುಳಿದಾಡುತ್ತಿದ್ದಾಗ, ಬೊಗಳೂರಿನಿಂದ ಬೊ.ರ. ಬ್ಯುರೋ ಹೊರಬೀಳುವುದಕ್ಕೂ, ಉಗ್ರರ ದಾಳಿಗೂ ಖಚಿತ ಸಂಬಂಧವಿದೆ ಎಂದು ಗರಿಗರಿಯಾದ ಸೂಟು ಧರಿಸಿದ ಹಿಂದಿನ ಮನೆ ಮಂತ್ರಿಗಳು ಹೇಳಿಕೆ ನೀಡಿದ್ದು, ಅವರು ನೀಡಿರುವ ಹೇಳಿಕೆಗಳು ಉಗ್ರವಾದಕ್ಕಿಂತಲೂ ಉಗ್ರವಾಗಿ ಪರಿಣಮಿಸಿದ ಪರಿಣಾಮವಾಗಿ ಬೊಗಳೂರು ಸಿಬ್ಬಂದಿ ಅಸ್ವಸ್ಥರಾಗಿಬಿಟ್ಟರು.

ನುಡಿಸಿರಿಗೆ ಹೋದ ಬೊಗಳೆ ಯಾವುದೇ ರಗಳೆ ಮಾಡದಿರುವುದಕ್ಕೆ ಬಲವಾದ ಕಾರಣ ಅಲ್ಲಿ ದೊರೆತ ರಾಜೋಪಚಾರವೇ ಎಂಬ ವಾದವೂ ಒಂದೆಡೆಯಿಂದ ಕೇಳಿಬರುತ್ತಿದೆ. ನಮ್ಮ ಓದುಗರೆಲ್ಲರ ಭವ್ಯ ಹಾರೈಕೆಯಂತೆ ಅಲ್ಲಿ ಮೂರು ದಿನಗಳ ಕಾಲ ಮೆಲ್ಲಲು (ಅಂದರೆ ಮೇಯಲು) ಏನ್ ಸಿಗುತ್ತೋ... ಅದನ್ನೆಲ್ಲಾ ಮೊದಲ ದಿನವೇ ಕಬಳಿಸಿದ ಪರಿಣಾಮ, ಬೊಗಳೆ ಅಲ್ಲಿಗೆ ಬಂದು ಬಿದ್ದದ್ದು ನೇರವಾಗಿ ಹಾಸಿಗೆಗೆ. ನುಡಿಸಿರಿಯಲ್ಲಿ ಆಳ್ವರು ಬಡಿಸಿರಿ ಬಡಿಸಿರಿ ಎಂದಷ್ಟೇ ಹೇಳಿದ್ದು ಗೊತ್ತು. ಹಾಸಿಗೆಯಿಂದ ಎಚ್ಚರವಾದಾಗ, ಅವರ ಬಾಯಿಂದ ಗುಡಿಸಿರಿ ಸಾರಿಸಿರಿ ಎಂದು ಸಮ್ಮೇಳನದ ಆವರಣವನ್ನು ಸ್ವಚ್ಛಗೊಳಿಸುವ ಕರೆ ಕೇಳಿಬರುತ್ತಿತ್ತು! ಈಗ ಬೊಗಳೂರು ಸಿಬ್ಬಂದಿ ಸ್ವಸ್ಥರಾಗಿ ತಮ್ಮ ಸ್ವ-ಕಾರಸ್ಥಾನಕ್ಕೆ ಮರಳಿದ್ದು, ಕಾರ್ಯಾಚರಣೆ ಆರಂಭಿಸಲಿದ್ದಾರೆ ಎಂದು ತಿಳಿದುಬಂದಿದೆ.

Thursday, November 27, 2008

ನುಡಿಸಿರಿಗೆ ಹೊರಟಿದೆ ಬೊಗಳೆ ದಂಡು!

ಮೂಡಬಿದ್ರಿಯಲ್ಲಿ ನಡೆಯುತ್ತಿರುವ ಸಾಹಿತ್ಯದ ಔತಣಕೂಟದಲ್ಲಿ ಸುಗ್ರಾಸ ಭೋಜನ ಮಾಡಲೆಂದು ಏಕಸದಸ್ಯ ಬ್ಯುರೋದ ಸಮಸ್ತ ಸಿಬ್ಬಂದಿಗಳು ದಂಡು ಕಟ್ಟಿಕೊಂಡು ಜಾತ್ರೆಗೆ ಹೊರಟಂತೆ ಹೊರಟಿದ್ದಾರೆ ಎಂದು ತಿಳಿಸಲು ವಿಷಾದಿಸುತ್ತೇವೆ.

ವಿಶೇಷವಾಗಿ ಅಲ್ಲಿನ ಭೋಜನಾಲಯ ಸಿಬ್ಬಂದಿಗೆ ಈ ಕುರಿತು ಎಚ್ಚರಿಕೆಯ ಮುನ್ಸೂಚನೆ ನೀಡಲಾಗಿದೆ. ಈಗಾಗಲೇ ಇದು ಸಾಹಿತ್ಯ ಸಮಾರಾಧನೆ, ಕನ್ನಡ ಸಾಹಿತ್ಯ ಜಾತ್ರೆ ಮತ್ತು ಸಾಹಿತ್ಯದ ರಸದೌತಣ ನಡೆಯಲಿದೆ ಎಂಬುದಾಗಿ ನಾಡೆಲ್ಲಾ ಪ್ರಚಾರವಾಗಿರುವ ಹಿನ್ನೆಲೆಯಲ್ಲಿ ಬೊಗಳೆ ರಗಳೆ ಬ್ಯುರೋಗೆ ಬ್ಯುರೋವೇ ಬಾಯಲ್ಲಿ ನೀರೂರಿಸಿದ ಕಾರಣ, ಬ್ಯುರೋ ಇರುವ ಚೆನ್ನೈಯಲ್ಲಿ ನೆರೆ ಹಾವಳಿ ಜೋರಾಗಿತ್ತು ಎಂಬುದನ್ನು ಪತ್ತೆ ಹಚ್ಚಲಾಗಿದೆ.

ನುಡಿಸಿರಿಯಲ್ಲಿ ಆಳ್ವರು ಏನನ್ನೆಲ್ಲಾ ಬಡಿಸಿರಿ ಅಂತ ಹೇಳುತ್ತಾರೆಯೋ, ಅದನ್ನು ಕೇಳಿಸಿಕೊಂಡು, ಯಾರೇ ಕುಡಿಸಿರಿ ಎಂದರೂ ಕುಡಿಯದೆ, ಬೊಗಳೆ ಬ್ಯುರೋಗೆ ಹೊಡೆಸಿರಿ ಎಂದು ಹೇಳದಂತೆ ಮಾಡಲು ಮುನ್ನೆಚ್ಚರಿಕೆ ವಹಿಸುತ್ತಾ ಮುನ್ನುಗ್ಗಲಾಗುತ್ತದೆ. ಶಾಸ್ತ್ರೀಯವಾಗಿ ಏನಾದರೂ ಚೆನ್ನುಡಿ, ಹೊನ್ನುಡಿ, ನಲ್ನುಡಿ, ಮೆಲ್ನುಡಿ, ಮೇಲ್ನುಡಿಗಳು ಸಿಕ್ಕಿದರೆ ಎತ್ತಿಕೊಂಡು ಬೊಗಳೆಯಲ್ಲೂ ಪ್ರಕಟಿಸಲಾಗುತ್ತದೆ.

ಅಲ್ಲೀವರೆಗೆ ಯಾರು ಕೂಡ ಖುಷಿಯಿಂದ ನಲಿದಾಡದಂತೆ ಸೊಂಪಾದಕರು ವರಾತವಾಚಕರ ಮೂಲಕ ಸುದ್ದಿ ಪ್ರಕಟಿಸಿದ್ದಾರೆ.

-ಸಂ

Tuesday, November 25, 2008

ಶಾಸ್ತ್ರೀಯ ಭಾಷೆ ಅಲ್ಲ: ಮತ್ತೊಂದು ಹೋರಾಟ ಸಿದ್ಧತೆ

(ಬೊಗಳೂರು ಆಶಾಸ್ತ್ರಿಯ ಬ್ಯುರೋದಿಂದ)
ಬೊಗಳೂರು, ನ.25- ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಎಂಬ ಸ್ಥಾನ-ಮಾನ ಸಿಕ್ಕಿದೆ, ಬೊಗಳೆಯು ಅಶಾಸ್ತ್ರೀಯ ಭಾಷೆ ಬಳಸುತ್ತಿದೆ ಎಂಬ ಕೂಗೆಲ್ಲಾ ಹಳೆಯದಾಗಿದ್ದು, ನವೆಂಬರ್ ಮುಗಿಯುವುದರೊಳಗೆ ಮತ್ತೊಂದು ಕನ್ನಡ ಹೋರಾಟಕ್ಕೆ ವೇದಿಕೆ ಸಜ್ಜಾಗುತ್ತಿದೆ.

ಚೆನ್ನುಡಿ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಲಭಿಸಲು ಬೊಗಳೆಯೂ ಸೇರಿದಂತೆ ಹಲವಾರು ಕನ್ನಡ ಓರಾಟಗಾರರು ಕೋಟ್ಯಂತರ ವರ್ಷಗಳಿಂದಲೇ ಹೋರಾಟ ಮಾಡುತ್ತಾ ಬಂದಿದ್ದುದು ಈಗ ಇತಿಹಾಸ... ಅಲ್ಲಲ್ಲ... ಪ್ರಾಚೀನ ಶಾಸನಗಳಲ್ಲಿ ಕಂಡುಬರಬಹುದಾದ ಪುರಾತನ ಇತಿಹಾಸ. ಅಥವಾ ಅದಕ್ಕಿಂತಲೂ ಹಳೆಯದಾಗಿರುವ ಪೌರಾಣಿಕ ಸಂಗತಿಯಾಗಿದ್ದಿರಬಹುದು. ಈ ಬಗ್ಗೆ ಪ್ರತ್ಯೇಕ ಸಂಚೋದನೆಗೆ ಅಜ್ಞರನ್ನು ಅಟ್ಟಲಾಗುತ್ತದೆ.

ಇದೀಗ ವಿಷಯಕ್ಕೆ ಬರೋಣ. ಕನ್ನಡ ಶಾಸ್ತ್ರೀಯ ಭಾಷೆ ಎಂದು ಕರೆದರೆ ಉಳಿದ ಭಾಷೆಗಳು ಅಶಾಸ್ತ್ರೀಯ ಎಂದಾಗಿ ಅವುಗಳ ಮಾನ ಹೋಗುವ ಸಾಧ್ಯತೆಗಳಿವೆ. ಒಂದಷ್ಟು ದೀರ್ಘ ತೆಗೆದು ಬಳಸಿದರೆ, ಅದು ಯಾವ ಶಾಸ್ತ್ರಿಯ ಭಾಷೆ, ರವಿ ಶಾಸ್ತ್ರಿಯದೋ ಅಥವಾ ವಿನಿವಿಂಕ್ ಶಾಸ್ತ್ರಿಯದೋ ಎಂಬ ಸಂದೇಹಗಳು ಏಳುವುದು ಸಹಜ. ಸೋ... ಅದನ್ನು ಅಭಿಜಾತ ಭಾಷೆ ಎಂದು ಕರೆದರೆ ಉತ್ತಮ ಎಂಬೋ ಸಲಹೆಯೂ ಕೇಳಿ ಬರುತ್ತಿದೆ. ಮತ್ತೊಂದು ವಾದ 'ಪಳಮೈ' ಭಾಷೆ ಎಂದು ಕರೆಯಬಹುದು ಅಂತ.

ಶಾಸ್ತ್ರಕ್ಕಷ್ಟೇ ಸೀಮಿತವಾಗಬಹುದಾದ ಶಾಸ್ತ್ರೀಯ ಭಾಷೆಯ ಹೆಸರು ಬದಲಾಯಿಸುವುದೆಂದರೆ, ಎರಡು ಪತ್ರಿಕೆಗಳಲ್ಲಿ ಪ್ರಕಟಣೆ ನೀಡಿ, ಅಧಿಕೃತವಾಗಿ ಹೆಸರು ಬದಲಾಯಿಸೋವಷ್ಟು ಇದು ಸುಲಭವಲ್ಲ ಎಂಬುದನ್ನು ಬೊಗಳೆ ರಗಳೆ ಬ್ಯುರೋ ಯಾರಿಗೂ ಗೊತ್ತಾಗದಂತೆ ಪತ್ತೆ ಹಚ್ಚಿಬಿಟ್ಟಿದೆ. ಅದೇಕೆ ಎಂದು ಶಾಸ್ತ್ರಿಯ ಓದುಗರು ಪ್ರಶ್ನಿಸಬಹುದು. ಅದಕ್ಕೆ ಉತ್ತರವನ್ನು ಕೂಡ ಕಂಡುಕೊಳ್ಳಲಾಗಿದೆ. ಅದೆಂದರೆ:

"ಇದುವರೆಗೆ ಬೊಗಳೆ ರಗಳೆ ಸಹಿತ ಹಲವಾರು ಮಂದಿ ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನ ದೊರೆಯಬೇಕು ಅಂತ ಕೋಟ್ಯಂತರ, ಲಕ್ಷಾಂತರ ವರ್ಷಗಳಿಂದ ಹೋರಾಟ ಮಾಡಿದ್ದರು. ಇದೀಗ ಅದನ್ನು ಅಭಿಜಾತವೋ, ಪಾರಂಪರಿಕವೋ, ಚೆನ್ನುಡಿಯೋ, ಪಳಮೈ ಭಾಷೆಯೋ.. ಇತ್ಯಾದಿತ್ಯಾದಿಯಾಗಿ ಹೆಸರು ಬದಲಾಯಿಸಬೇಕಿದ್ದರೆ, ಶುರುವಿನಿಂದಲೇ ಹೋರಾಟ ಶುರು ಹಚ್ಚಿಕೊಳ್ಳಬೇಕು. ಈ ಹೆಸರು ಕೊಡಬೇಕಿದ್ದರೆ ನೀವು ಹೋರಾಟ ಆರಂಭಿಸಿ, ಹಲವಾರು ವರ್ಷಗಳ ಬಳಿಕವೇ ನಾವು ಈ ಸ್ಥಾನ-ಮಾನ ನೀಡುತ್ತೇವೆ ಎಂದು ಕೇಂದ್ರವು ಸ್ಪಷ್ಟಪಡಿಸಿದೆ. ಹೀಗಾಗಿ ಇದುವರೆಗೆ ಕೋಟ್ಯಂತರ ವರ್ಷಗಳಿಂದ ನಾವು ಮಾಡಿದ ಹೋರಾಟ ವ್ಯರ್ಥವಾಯಿತು. ಇನ್ಯಾವಾಗ ನಮ್ಮದು ನಿಜಗನ್ನಡವಾಗುವುದು? ಎಂಬ ಚಿಂತೆ ಇಲ್ಲಿ ಆರಂಭವಾಗಿದೆ"!!!

ಈ ನಡುವೆ, ಬೊಗಳೆ ಭಾಷೆಗೆ 'ಅಶಾಸ್ತ್ರಿಯ' ಬದಲಾಗಿ, ಹಳಸಲು ಭಾಷೆ ಅಂತ ಅಚ್ಚಗನ್ನಡದಲ್ಲೇ ಪ್ರಯೋಗಿಸಬಹುದು ಎಂದು ನಮ್ಮ ಶತಕೋಟಿ ಭಾರತೀಯರಲ್ಲೊಬ್ಬ ಓದುಗರು ಸವಿನಯವಾಗಿ ಜಾಡಿಸಿದ್ದಾರೆ.

ಅದು ಒತ್ತಟ್ಟಿಗಿರಲಿ. ನಮ್ಮೆಲ್ಲರ ಓರಾಟಕ್ಕೆ ಶರಣಾಗಿ ಕೇಂದ್ರವು 'ಕ್ಲಾಸಿಕಲ್ ಲ್ಯಾಂಗ್ವೇಜ್' ಅಂತ ಹೇಳಿದ್ದರೂ, ಅದು ಕನ್ನಡಕ್ಕಾಗುವಾಗ ಯಾವ ರೀತಿ ಆಗಬೇಕು, ಸಂಸ್ಕೃತ, ಇಂಗ್ಲಿಷ್ ಹೊರತಾಗಿ ಅಚ್ಚಕನ್ನಡದಲ್ಲೇ ಅದಕ್ಕೊಂದು ಚೆಂದದ ನಾಮವಿಶೇಷಣ ಇಡಬಾರದೇಕೆ ಎಂದು ಬೊಗಳೆ ರಗಳೆ ಬ್ಯುರೋ ಅಪ್ಪಿ ತಪ್ಪಿ ಪ್ರಾಮಾಣಿಕವಾಗಿ ಪ್ರಶ್ನಿಸುತ್ತಿದೆ.

Saturday, November 22, 2008

ಚಂದಾದಾರರಿಗೆ ಉಚಿತ: ವಾರೆಕೋರೆ!

ಉದ್ದೇಶಪೂರ್ವಕವಾಗಿ ಏಪ್ರಿಲ್ 1ರಂದೇ (1960) ಹುಟ್ಟಿ ದಿ ಟೈಮ್ಸ್ ಆಫ್ ಡೆಕ್ಕನ್, ಮುಂಗಾರು ಮತ್ತು ಕೊನೆಗೆ ದಿ ವೀಕ್‌ನಲ್ಲಿ ವಾರೆಕೋರೆ ಚಿತ್ರಕಾರರಾಗಿ ಹೆಸರು ಮಾಡಿದ್ದ ಪ್ರಕಾಶ್ ಶೆಟ್ಟಿ ಅವರು, ಗಂಭೀರವಾಗಿ ಒಂದು ದುಸ್ಸಾಹಸಕ್ಕೆ ಇಳಿದಿದ್ದಾರೆ ಎಂದರೆ ನಂಬಲೇಬೇಕು. ಹೌದು. ಅವರು ವಾರೆಕೋರೆ ಎಂಬೊಂದು ಪತ್ರಿಕೆಯನ್ನೇ ಆರಂಭಿಸಿಬಿಟ್ಟಿದ್ದಾರೆ.

ಇದು ಚಂದಾದಾರರಿಗೆ ಉಚಿತವಂತೆ! ಇವುಗಳನ್ನು ಓದಿದ ಬಳಿಕ ನಿಮ್ಮ ಬಾಯೊಳಗಿರುವ 32 ಹಲ್ಲುಗಳಲ್ಲಿ ಒಂದೆರಡು ನಾಪತ್ತೆಯಾದರೆ ನಾವು ಜವಾಬ್ದಾರರಲ್ಲ.

ಮತ್ತು ಮನೆಯಲ್ಲಿರೋ ಪುಟಾಣಿಗಳು ಅತ್ತುಬಿಟ್ಟರೆ ಅವರ ಸಮಾಧಾನಕ್ಕೆ ನೀವು ಬುಗ್ಗೆ(ಪುಗ್ಗ)ಗಳನ್ನು ಇಲ್ಲಿಂದಲೇ ತರಿಸಿಕೊಳ್ಳಬಹುದು... ಅದೇ... ನಗೆ ಬುಗ್ಗೆಗಳನ್ನು!

ಹೆಚ್ಚಿನ ಮಾಹಿತಿ ಬೇಕಿದ್ದರೆ ಇಲ್ಲಿ ಪಿನ್ ಚುಚ್ಚಿ....
ನೀವೂ ಓದಿ, ನಿಮ್ಮವರಿಗೂ ಓದಿಸಿ... ತಿಳಿಸಿ...

Thursday, November 20, 2008

ವರ್ಲ್ಡ್ ವೈಡ್ ಪಬ್ ಸ್ಥಾಪನೆಗೆ ಚಿಂತನೆ

(ಬೊಗಳೂರು WWW ಬ್ಯುರೋದಿಂದ)
ಬೊಗಳೂರು, ನ.20- ಕುಡಿತದಿಂದಾಗುವ ಸತ್ಪರಿಣಾಮಗಳನ್ನು ದನಗಳಿಗೆ ಮತ್ತು ಜನಗಳಿಗೆ ತಿಳಿಯಪಡಿಸುವ ನಿಟ್ಟಿನಲ್ಲಿ ಬೊಗಳೂರಿನಲ್ಲಿ ಹೊಸ ಸಂಚೋದನೆಯೊಂದು ನಡೆಯುತ್ತಿದ್ದು, ಇದಕ್ಕೆ ವರ್ಲ್ಡ್ ವೈಡ್ ಪಬ್ ಎಂದು ನಾಮಕರಣ ಮಾಡಲಾಗಿದೆ.

ಕಾಸ್ಮೋಪಾಲಿಟನ್ ನಗರಗಳಲ್ಲಿ ಮಾತ್ರವಲ್ಲದೆ ಇತ್ತೀಚೆಗೆ ಕಾಸ್ಮೋಪಾಲಿಟನ್ ಹಳ್ಳಿಗಳಲ್ಲಿಯೂ ಪಬ್ ಸಂಸ್ಕೃತಿ ಮೇರೆ ಮೀರುತ್ತಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಬೊಗಳೂರಿನ ನಿಧಾನಮಂತ್ರಿಗಳು ಪುತ್ರೀ ಕಾ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಮುಂಬಯಿಯಲ್ಲಿ ನಂಗಾನಾಚ್ ಪಾರ್ಟಿಯಲ್ಲಿ ನೂರಾರು ಮಂದಿ ಸಿಕ್ಕಿಬಿದ್ದದ್ದು ಕಳಪೆ ಮಾದಕ ದ್ರವ್ಯ ಸೇವಿಸಿದ್ದರಿಂದಾಗಿ. ನೈಜವಾದ ಮಾದಕ ದ್ರವ್ಯ ಸೇವಿಸಿದ್ದಿದ್ದರೆ ಅವರು ಸಿಕ್ಕಿಬೀಳುವ ಬದಲು (ಚರಂಡಿಯಲ್ಲಿ) ಬಿದ್ದು ಸಿಕ್ಕುತ್ತಿದ್ದರು ಎಂಬುದನ್ನು ಬೊಗಳೂರಿನ ಸಂಚೋದನಾ ಮಂಡಳಿ ಕಂಡುಕೊಂಡಿದೆ.

ಏನೇ ಆದರೂ, ಇದೀಗ ಸಿಕ್ಕಿಬಿದ್ದಾಗಿದೆ. ಆದರೆ ಸಿಕ್ಕಿದ್ದು ಪೊಲೀಸರ ಕೈಗಾದರೂ, ಬಿದ್ದಿದ್ದು ಜೈಲಿನಲ್ಲಿ ಆಗಿರುವುದರಿಂದ ಇನ್ನು ಆರು ತಿಂಗಳ ಕಾಲ, ಕಾಲೇಜಿಗೆ ಹೋಗಬೇಕಿಲ್ಲ, ಜೈಲಿನೊಳಗೇ ಆರಾಮವಾಗಿ ಕಾಲ ಕಳೆಯಬಹುದು.

ಎಲ್ಲ ಬೇಸರ ಮರೆಸುವ, ಎಲ್ಲ ದುಃಖ ಒರೆಸುವ ಮತ್ತು ಯುಪಿಎ ಸರಕಾರದ ಬೆಲೆ ಏರಿಕೆ ನೀತಿಗಳನ್ನೆಲ್ಲಾ ಕ್ಷಮಿಸಿಬಿಡಬಹುದಾದ ತಾಕತ್ತು ನೀಡುವ ಈ ದ್ರವ್ಯಗಳನ್ನು ಅಂತಾರಾಷ್ಟ್ರೀಯ ಮತ್ತು ಅಂತರ್ಜಾಲೀಯ ಮಟ್ಟದಲ್ಲಿ ಆಂದೋಲನವೇ ನಡೆಯಬೇಕಿದೆ, ವಿಶ್ವದೆಲ್ಲೆಡೆ ವರ್ಲ್ಡ್ ವೈಡ್ ಆಗಿ ಪಬ್‌ಗಳನ್ನು ಸ್ಥಾಪಿಸಬೇಕಿದೆ ಎಂದು ಯುಪಿಎ ಸರಕಾರದ ವ್ಯಾಕ್‌ತಾರರು ಬೊಗಳೂರು ಬ್ಯುರೋಗೆ ತಿಳಿಸಿದ್ದಾರೆ.

Monday, November 17, 2008

ಆ ಚಿತ್ರ ಚಂದಿರನ ಊರಿದ್ದಲ್ಲ, ನಮ್ಮೂರ ರಸ್ತೆಗಳದು!

(ಬೊಗಳೂರು ಪರಲೋಕ ಯಾತ್ರೆ ಬ್ಯುರೋದಿಂದ)
ಬೊಗಳೂರು, ನ.17- "ತಿಂಗಳ"ನ ಅಂಗಳಕ್ಕೆ ಕಳುಹಿಸಿದ ಮಾನವರಹಿತ ನೌಕೆಯಲ್ಲಿ ಭಾರೀ ಒಳಸಂಚೊಂದು ನಡೆದಿದೆ ಎಂಬುದನ್ನು ಬೊಗಳೆ ರಗಳೆ ಬ್ಯುರೋ ಪತ್ತೆ ಹಚ್ಚಿದೆ.

ಮಾನವರಹಿತ ಅಥವಾ ಅಮಾನವೀಯ ಚಂದ್ರನೌಕೆಯನ್ನು ಮೊನ್ನೆ ಮೊನ್ನೆ ತಿಂಗಳನ ಅಂಗಳಕ್ಕೆ ಕಳುಹಿಸಿದೆ ಎಂಬುದು ನಿಜವಾದ ಅಸತ್ಯವಾದರೂ, ಇದಕ್ಕೆ ಮೊದಲೇ ಮಾನವಸಹಿತ ಚಂದ್ರನೌಕೆಗಳನ್ನು ಯಾರೋ ಹಾರಿಬಿಟ್ಟಿದ್ದರು ಎಂಬುದು ಕೂಡ ಇದೇ ಸಂದರ್ಭದಲ್ಲಿ ಬಯಲಾಗಿದೆ.

ಪರಲೋಕ ಯಾತ್ರೆಗಾಗಿ ಪ್ರತಿಯೊಂದು ಯೋಜನೆಗಳಲ್ಲಿಯೂ ದುಡ್ಡು ಒಟ್ಟುಗೂಡಿಸುವ ಜಾರಕಾರಣಿಗಳ ಪ್ರಯತ್ನದ ಫಲವಿದು ಎಂದು ಬೊ.ರ. ಬ್ಯುರೋ ವರದ್ದಿ ತಂದುಹಾಕಿದೆ.

ಇಷ್ಟೆಲ್ಲಾ ಭೂಮಿಯ ಬಯಲಿಗೆ ಬೀಳಲು ಕಾರಣ ಇಷ್ಟೆ. ಮೊನ್ನೆ ಮೊನ್ನೆ ಚಂದ್ರಯಾನ ನೌಕೆಯು ಚಂದಿರನ ಮೇಲ್ಮೈ ಅಂತ ಕೆಲವೊಂದು ಚಿತ್ರಗಳನ್ನು ಚಂದ್ರಲೋಕದಿಂದ ಭೂಲೋಕಕ್ಕೆ ರವಾನಿಸಿತ್ತು. ಅದು ಕೂಡ ಒಂದೇ ಎರಡೆ? ಸಾವಿರಗಟ್ಟಲೆ! ಈ ಚಿತ್ರಗಳನ್ನು ಬೊಗಳೆ ಬ್ಯುರೋದ ಮಂದಿ ತಮ್ಮದೇ ಆದ ಪ್ರಯೋಗ-ಲಯದಲ್ಲಿ ಕೂಲಂಕಷವಾಗಿ ತಪಾಸಣೆಗೆ ಒಳಪಡಿಸಿದರು.

ಆಗ ತಿಳಿದುಬಂದಿದ್ದೇನೆಂದರೆ, ಚಂದ್ರಲೋಕದಲ್ಲಿ ಕೂಡ ಈಗಾಗಲೇ ಭೂಲೋಕದಲ್ಲಿರುವಂತೆ "ಅಭಿವೃದ್ಧಿ" ಯೋಜನೆಗಳು ನಡೆಯುತ್ತಿವೆ. ಯೋಜನೆ ಎಂದ ತಕ್ಷಣ "ಗುಳುಂ" ಎಂಬ ಸದ್ದೇ ನೆನಪಾಗುವ ನಮ್ಮ ಜಾರಕಾರಣಿಗಳು ಹೇಗಾದರೂ ಮಾಡಿ ಅಲ್ಲಿಗೆ ತಲುಪಬೇಕು ಎಂದು ಶತಪಥ ಪ್ರಯತ್ನ ಕೈಗೊಂಡರು. ಅದರ ಫಲವಾಗಿ, ಅವರು ಅದಾಗಲೇ ಮಾವನಲೋಕದಿಂದ ಪರಲೋಕಕ್ಕೆ ದಿಢೀರ್ ಧಾವಿಸಿದರು. ಅದಕ್ಕಾಗಿಯೇ ಅವರು ಪರಲೋಕಯಾನ-೧ ಎಂಬ ನೌಕೆಯನ್ನು ಕಳುಹಿಸಿದ್ದು, ಇದಕ್ಕೆ ಈ ಹೆಸರಿಡಲು ಸಾಕಷ್ಟು ಮಂಡೆ ಖರ್ಚು ಮಾಡಿದ್ದಾರೆಂಬುದೂ ತಿಳಿದುಬಂದಿದೆ.

ಅಲ್ಲಿ ಅವರ ಕಣ್ಣಿಗೆ ಮೊದಲು ಕಂಡದ್ದು ಚಂದ್ರ ಲೋಕದ ರಸ್ತೆಗಳು. ಹೀಗಾಗಿ ಅಲ್ಲಿನ ರಸ್ತೆಗಳನ್ನು ಕೂಡ ಭೂಲೋಕದ ರಸ್ತೆಗಳಂತೆಯೇ ಅರೆಬರೆ, ಹೊಂಡಭರಿತವಾಗಿ ಮಾಡಿಸಿದರೆ, ಗುಳುಂಕರಿಸಿದಷ್ಟೂ ದುಡ್ಡು ಸರಕಾರದಿಂದ ಬಿಡುಗಡೆಯಾಗುತ್ತಲೇ ಇರುತ್ತದೆ ಎಂದು ತೀರ್ಮಾನ ಮಾಡಿದ್ದೇ ತಡ, ಗುಳುಂ ಕಾಮಗಾರಿ ಆರಂಭಿಸಿ ಬಿಟ್ಟಿದ್ದರು.

ಭೂಲೋಕದಲ್ಲಿರುವ ರಸ್ತೆಗಳು ನಿತ್ಯ ಪ್ರಯಾಣಿಕರನ್ನು ಪರಲೋಕ ಯಾತ್ರೆಗೆ ಕಳುಹಿಸುತ್ತಿರುವಂತಿರುತ್ತದೆ. ಇದೇ ಕಾರಣಕ್ಕೆ ತಾವು ಹೋದ ನೌಕೆಗೆ ಪರಲೋಕಯಾನ-೧ ಎಂಬ ಹೆಸರಿಟ್ಟಿದ್ದರು ಎಂಬುದು ಸಾಬೀತಾಗಿಬಿಟ್ಟಿದೆ.

ಇದೀಗ ಮಾನವರಹಿತವಾಗಿ ಹೋಗಿರುವ ಚಂದ್ರಯಾನ-೧ ನೌಕೆಯು, ಏನೂ ಅರಿಯದ ಮುಗ್ಧನಂತೆ ಅಲ್ಲಿನ ನೆಲದ ಫೋಟೋ ಅಂತ ಅಲ್ಲಿನ ರಸ್ತೆಗಳ ಫೋಟೋ ಕಳುಹಿಸಿದೆ. ಅದನ್ನು ಬೊ.ರ. ಬ್ಯುರೋದ ಅಜ್ಞಾನಿಗಳೆಲ್ಲರೂ "ಚಂದ್ರನ ಕುಳಿಗಳು ಚಂದ್ರನ ಕುಳಿಗಳು" ಎಂದೆಲ್ಲಾ ಅನರ್ಥೈಸಿ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಈ ಮಧ್ಯೆ, ಈ ಚಿತ್ರಗಳು ಚಂದ್ರನಿಂದ ಬಂದಿದ್ದಲ್ಲ, ನಮ್ಮೂರಿನ ರಸ್ತೆಗಳ ಚಿತ್ರವನ್ನು ಯಾರೋ ಕುಹಕಿಗಳು ವಿಜ್ಞಾನಿಗಳಿಗೆ ಕಳುಹಿಸಿದ್ದಾರೆ ಎಂದೆಲ್ಲಾ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಬೊ.ರ. ಬ್ಯುರೋಕ್ಕೇ ಇದರ ತನಿಖೆಯನ್ನೂ ಒಪ್ಪಿಸಲಾಗಿ, ಅದರ ತನಿಖೆ ಮುಂದುವರಿಸಲಾದಾಗ, ಅದು ಆರೋಪ ಎಂಬುದು ಸಾಬೀತಾಯಿತು.

Thursday, November 13, 2008

ಕಾಳ ಸಂತೆಯಲ್ಲಿ ಟಿಕೆಟ್: ಉತ್ಪಾದನೆ ಎಲ್ಲಿಂದ?

(ಬೊಗಳೂರು ಕಾಳಸಂತೆ ಬ್ಯುರೋದಿಂದ)
ಬೊಗಳೂರು, ನ.12- ಕಾಳ ಸಂತೆಯಲ್ಲಿ ಕಾಂಗ್ರೆಸ್ ಟಿಕೆಟ್ ಮಾರಾಟ ಮಾಡುತ್ತಿದ್ದ ಬಗ್ಗೆ ಸುದ್ದಿ ಪ್ರಕಟವಾದ ತಕ್ಷಣ ಅಸತ್ಯಾನ್ವೇಷಣೆಯಲ್ಲಿ ಪಳಗಿರುವ ಬೊ.ರ. ಬ್ಯುರೋಗೆ ಕಾಂguess ಹೈಫೈಕಮಾಂಡ್‌ನಿಂದ ಕರೆ ಬಂದಿದ್ದು, ಇದರ ತನಿಖೆ ನಡೆಸಲಾಯಿತು.

ಹೌದು. ಟಿಕೆಟುಗಳು ಮಾರಾಟವಾಗುತ್ತಿದ್ದುದಂತೂ ಸುಸ್ಪಷ್ಟವಾಗಿಯೇ ಗೋಚರಿಸಿತ್ತು. ರಸ್ತೆ ಬದಿ ಅಲ್ಲಲ್ಲಿ ಟಿಕೆಟುಗಳು ಬಿದ್ದಿದ್ದು, ಯಾರಾದರೂ ಬಿದ್ದವರಿದ್ದರೆ, ಮತ್ತು ಅವರು ಎದ್ದವರಾಗಿದ್ದರೆ ಅವರಿಗೆ ಅದು ಸಿಗುತ್ತಿತ್ತು. ಈ ಕಾರಣಕ್ಕಾಗಿ ಇದು ನನಗೆ 'ಬಿದ್ದು ಸಿಕ್ಕಿದ್ದು' ಎಂದು ಅವರು ಹೇಳಿಕೊಂಡು ಬರುತ್ತಿದ್ದರು.

ಆದರೆ ಎಲ್ಲಿ ಬೀಳಬೇಕು ಎಂದು ಯಾರು ಕೂಡ ಹೇಳದಿದ್ದರೂ, ಬೊ.ರ. ಮಾತ್ರವೇ ಅದನ್ನು ಪತ್ತೆ ಹಚ್ಚಿದೆ. ಬೀಳೋದು ಮೇಲಿನವರ ಕಾಲಿನಡಿ ಎಂಬ ಅಮೂಲ್ಯ ಅಸತ್ಯವೊಂದು ಈ ಸಂದರ್ಭದಲ್ಲಿ ಬಯಲಾಗಿದೆ.

ಈ ಮಧ್ಯೆ, ಮತ್ತಷ್ಟು ತೀವ್ರವಾಗಿ, ತೀಕ್ಷ್ಣವಾಗಿ ತಪಾಸಣೆ ಮಾಡಿ, ಇತ್ತೀಚೆಗೆ ಕರ್ನಾಟಕದಲ್ಲಿ ನಡೆದ ವಿದ್ಯಮಾನಗಳಿಗೆ ಹೋಲಿಕೆ ಮಾಡಿದಾಗ, ಆಪರೇಶನ್ ಕಮಲ ಎಂಬ ಶಬ್ದವೊಂದು ಎಲ್ಲಿಂದಲೋ ತನಿಖೆಯ ಹಾದಿಯಲ್ಲಿ ಬಂದು ಬಿತ್ತು. ಈ ಆಪರೇಶನ್ ಕಮಲದ ದಳದ ಅಡಿಯಲ್ಲಿ ಅಪ್ಪಚ್ಚಿಯಾದ ಕೈಗಳು, ತಮ್ಮ ಕೈಬೆರಳುಗಳ ನಡುವಿದ್ದ ಟಿಕೆಟನ್ನು ಅಲ್ಲಿಯೇ ಉದುರಿಸಿ ಹೋಗಿದ್ದವು. ಆ ಟಿಕೆಟುಗಳನ್ನೇ ಕಾಳಸಂತೆಕೋರರು ಎತ್ತಿಕೊಂಡು ತಮಗಿಷ್ಟದವರಿಗೆ ಕೊಟ್ಟಿದ್ದರು.

ಮ್ಯಾಗಿ ನೂಡಲ್ಸ್ ತಿನ್ನುತ್ತಾ ಮಾರ್ಗದಲ್ಲಿ ಎಷ್ಟೆಲ್ಲಾ ರೇಟಿಗೆ ಈ ಟಿಕೆಟು ಮಾರಾಟವಾಗುತ್ತಿತ್ತು ಎಂದು ಅಚ್ಚರಿಯಿಂದ ಕೇಳಬೇಕಾಗಿರಲಿಲ್ಲ. ಇದು ಪಕ್ಷದೊಳಗಿದ್ದವರಿಗೆ ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಹೀಗಾಗಿ ಇದೊಂದು ಹೊಸ ಶೋಧ ಅಥವಾ ಸಂಶೋಧನೆ ಅಥವಾ ಅನ್ವೇಷಣೆಯ ಕಾರ್ಯ ಅಲ್ಲ, ತಮ್ಮ ಬೆನ್ನು ತಟ್ಟಿಕೊಳ್ಳಬೇಕಿಲ್ಲ, ತಾವಾಗಿಯೇ ಪಕ್ಷದಿಂದ ಒದೆಸಿಕೊಳ್ಳಬೇಕಾಗಿರಲಿಲ್ಲ ಎಂದು ಬೊ.ರ. ಬ್ಯುರೋಗೆ ಸೆಡ್ಡುಹೊಡೆಯುತ್ತಾರೆಂಬ ಭೀತಿಯಿಂದಾಗಿಯೇ ಬೊ.ರ. ವರದ್ದಿಗಾರರು ಕಾಂguess ಹೈಕಳಮಾಂಡಿಗೆ ವರದ್ದಿ ಒಪ್ಪಿಸಿದ್ದಾರೆ.

ಆದರೆ ಟಿಕೆಟ್ ಹಂಚೋಣ ಪ್ರಕ್ರಿಯೆಯ ಸಂದರ್ಭದಲ್ಲಿ, ದೇಶದ ಪ್ರತಿಯೊಂದು ಅಂಶದಲ್ಲೂ ವೋಟೇ ಕಾಣಸಿಗುತ್ತಿರುವುದರಿಂದ ಇಲ್ಲಿ ಕಡಿಮೆ ಸಂಖ್ಯಾತರಿಗೆ ಒಂದಿಷ್ಟು ಮೀಸಲು, ತುಳಿತಕ್ಕೊಳಗಾದವರಿಗೆ ಒಂದಷ್ಟು ಮೀಸಲು ಎಂದೆಲ್ಲಾ ರಗಳೆಯನ್ನು ಯಾರೂ ತೆಗೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ ಎಂಬುದನ್ನು ದುರಾಚಾರ ಸಮಿತಿ ವರದಿಯೊಂದು ನಮ್ಮಿಂದ ಮೊದಲೇ ಕಂಡುಕೊಂಡಿದೆ.

Monday, November 10, 2008

ಕಾವೇರಿ ಬೇಡ, ಹೊಗೇನಕಲ್ಲೂ ಬೇಡ: ತಮಿಳರು!

(ಬೊಗಳೂರು ತಮಿಳುಕಾಡು ಬ್ಯುರೋದಿಂದ)
ಬೊಗಳೂರು, ನ.10- ನಮಗೆ ಹೊಗೇನಕಲ್ ಬೇಡ, ಕಾವೇರಿ ನೀರು ಕೂಡ ಬೇಡ ಎಂದು ತಮಿಳುಕಾಡು ಮಂದಿ ವರಾತ ತೆಗೆದಿದ್ದಾರೆ.

ಇದರ ಹಿಂದಿನ ಅಸತ್ಯ ಶೋಧನೆಯಲ್ಲಿ ಹೊರಟಾಗ ಬೊಗಳೆ ಬ್ಯುರೋದ ಮಂದಿಗೆ ಹಲವಾರು ಎಡರು ಮತ್ತು ತೊಡರುಗಳು ಎದುರಾದವು.

ಅವುಗಳಲ್ಲಿ ಪ್ರಮುಖವಾದ ವಾದವೆಂದರೆ ಬೊಗಳೂರು ಬ್ಯುರೋ ಇರುವುದೇ ತಮಿಳುಕಾಡಿನ ಮಧ್ಯೆ. ಹೀಗಾಗಿ ಇದರ ಹಿಂದೆ ಬೊಗಳೆ ಬ್ಯುರೋದ್ದೇ ಏನಾದರೂ ಸಂಚು ಇರಬಹುದು ಎಂಬ ಗಂಭೀರ ಶ್ಲಾಘನೆಭರಿತ ಆರೋಪ. ಇದನ್ನು ಥತ್ ಎಂದು ಕೊಡವಿಕೊಂಡು ಮುಂದುವರಿಯಲಾಯಿತು.

ಅಸತ್ಯಾನ್ವೇಷಣೆ ಸಂದರ್ಭ ದೊರೆತ ಬಲುದೊಡ್ಡ ವಿಚಾರವೆಂದರೆ, ತಮಿಳುಕಾಡಿನ ಮಂದಿಯೆಲ್ಲರೂ ಇದೀಗ ಬೊಗಳೂರು ತೊರೆದು ಕನ್ನಡದ ರಾಜಧಾನಿಯಾಗಿರುವ ಬೆಂಗಳೂರು ಎಂಬ ಮಹಾನಗರಿ ಸೇರಿಕೊಳ್ಳತೊಡಗಿದ್ದಾರೆ. ಅವರೆಲ್ಲರೂ ಕುಡಿಯುವುದು ಕಾವೇರಿ ನೀರನ್ನೇ! ಹೀಗಾಗಿ ಕಾವೇರಿ ನೀರನ್ನು ತಮಿಳುನಾಡಿಗೆ ಕಳುಹಿಸಿದರೆ ಇಲ್ಲಿದ್ದುಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳಲು ಕೂಡ ನೀರು ಇರಲಾರದು ಎಂಬ ಭಯಾತಂಕ. ಹೀಗಾಗಿ ಅವರು ಹೊಗೇನಕಲ್ಲಿನಲ್ಲಿ ಹೊಗೆ ಏಳದಂತೆ ಮಾಡಲು ಕಟ್ಟೆಚ್ಚರ ವಹಿಸುತ್ತಿದ್ದಾರೆ ಎಂಬುದನ್ನು ತನಿಖೆಯ ಮೂಲಕ ಕಂಡುಕೊಳ್ಳಲಾಗಿದೆ.

ಹಿಂದೊಂದು ಸಲ ತಮಿಳುಕಾಡಿನ ಜಗಮಗಿಸುವ ಸಿನಿಮಾ ರಂಗದ ಮಂದಿ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ, ತಮಿಳು ನಿರ್ಮಾಪಕನೊಬ್ಬ ವೀರಾವೇಶದ ಭೀಷಣ ಭಾಷಣ ಮಾಡಿ, "ನನಗೆ ಹೊಗೇನಕಲ್ ಎಂದ್ರೆ ತುಂಬಾ ಇಷ್ಟ, ಅದು ನಮಗೆ ಬೇಕು, ಹಾಗೆಯೇ ಬೆಂಗಳೂರು ಅಂದ್ರೂ ತುಂಬಾನೇ ಇಷ್ಟ. ಅದು ಕೂಡ ನಮಗೇ ಸೇರಬೇಕು' ಎಂದೆಲ್ಲಾ ಭೀಕರವಾಗಿ ಕಿರುಚಾಡಿದ್ದು ನೆನಪಿರಬಹುದು. ಇಲ್ಲದಿದ್ದರೂ ಅದನ್ನು ನೆನಪಿಸಿಕೊಳ್ಳಲು ಕೋರಿಕೊಳ್ಳಲಾಗುತ್ತಿದೆ.

ಈ ಕಾರಣಕ್ಕಾಗಿಯೇ ತಮಿಳರು ಸೂ.... ಸಾ... ಎಂದು ಉಸಿರು ಬಿಡದೆ ಇದ್ದಾರೆ ಎಂಬುದನ್ನು ಪತ್ತೆ ಹಚ್ಚಲಾಗಿದೆ. ಆದರೆ ಬೆಂಗಳೂರಿನಲ್ಲಿ ತಮಿಳರು ಜಾಸ್ತಿಯಾಗುತ್ತಿರುವುದಕ್ಕೂ, ಬೊಗಳೆ ಬ್ಯುರೋ ಎರಡು ವರ್ಷದ ಹಿಂದೆ ಇಲ್ಲಿ ಪ್ರಕಟಿಸಿದ ವರದಿಗೂ ಯಾವುದೇ ರೀತಿಯಲ್ಲೂ, ಲವಲೇಶವೂ, ಎಳ್ಳು ಕಾಳಿನಷ್ಟೂ ಸಂಬಂಧವಿಲ್ಲ ಎಂದು ಬಲವಾಗಿ, ಭರ್ಜರಿಯಾಗಿ, ಕೀಬೋರ್ಡ್ ಎತ್ತಿ ಎತ್ತಿ, ಕುಕ್ಕಿ ಕುಕ್ಕಿ ಸ್ಪಷ್ಟಪಡಿಸಲಾಗುತ್ತಿದೆ.

Monday, November 03, 2008

ಬೊಗಳೆಗೂ ಅಶಾಸ್ತ್ರೀಯ ಮಾನ!

(ಬೊಗಳೂರು ಶಾಸ್ತ್ರಿಯ ಬ್ಯುರೋದಿಂದ)
ಬೊಗಳೂರು, ನ.೩- ನಮ್ಮ ಚೆನ್ನುಡಿಗೆ ಕ್ಲಾಸಿಕಲ್ ಎಂಬ ಸ್ಟೇಟಸ್ ದೊರಕಿದ್ದೇ ತಡ, ಅದರ ವಿರುದ್ಧದ ಭಾಷೆಯಾಗಿರುವ ಬೊಗಳೆಗೂ ಅದೇ ಸ-ಮಾನ-ತೆಗೆ, ಅಶಾಸ್ತ್ರೀಯ ಮಾನ ನೀಡಬೇಕೆಂದು ಒಂದೇ ಕೊರಳಲ್ಲಿ ಆಗ್ರಹಿಸಲಾಗುತ್ತಿದೆ.

ಆದರೆ, ಬೊಗಳೆಗೆ ಯಾವ ಶಾಸ್ತ್ರಿಯ ಮಾನವನ್ನು ಕೊಡಬೇಕು ಎಂಬುದು ಕೇಂದ್ರದಲ್ಲಿರುವ ಭಾಷಾ ವಿಧ್ವಂಸಕರಿಗೆ ತಲೆನೋವಿನ ಸಂಗತಿಯಾಗಿಬಿಟ್ಟಿದೆ. ಈಗಾಗಲೇ ವಿನಿವಿಂಕ್ ಶಾಸ್ತ್ರಿ, ಬೇಡರ ಕಣ್ಣಪ್ಪದ ಶಾಸ್ತ್ರಿ ಎಲ್ಲರೂ ಇದ್ದಾರೆ. ಕೆಲವು ವರ್ಷಗಳ ಹಿಂದೆ ಬಸವನಹುಳು ಎಂದು ಖ್ಯಾತಿ ಪಡೆದಿದ್ದ ರವಿ ಶಾಸ್ತ್ರಿಯ ಹೆಸರೂ ಬಂದು ನುಸುಳಿಹೋಗಿದೆ. ಇವುಗಳೆಲ್ಲಾ ಗೊಂದಲ ಹೆಚ್ಚಿಸಲು ಕಾರಣವಾಗಿದೆ.

ಈ ಚರ್ಚೆ ನಡೆಯುತ್ತಿರುವಾಗಲೇ, ಅವುಗಳನ್ನೆಲ್ಲಾ ಪಕ್ಕಕ್ಕೆ ತಳ್ಳಿದ ಬೊ.ರ. ವ-ರದ್ದಿ ಬ್ಯುರೋ, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರಕಿಸುವಲ್ಲಿ ಕಾರಣವಾಗದೇ ಇರುವ ಅಂದರೆ ಅದಕ್ಕೆ ಅಡ್ಡಿಯಾಗಿರುವ ಬಹುಮುಖ್ಯ ಅಂಶಗಳ ಬಗ್ಗೆ ಸಂಚೋದನೆ ಮಾಡಿತು.

ದ್ರಾವಿಡಭಾಷಾ ಐವರು ಮಕ್ಕಳಲ್ಲಿ ಹಿರಿಯಣ್ಣ ಎಂಬ ಸ್ಥಾನ ಕಿತ್ತುಕೊಂಡಿರುವ ತಮಿಳರಿಗೆ ಶಾಸ್ತ್ರಿಯ ಮಾನ ಬಂದದ್ದು ಹೇಗೆ? ಎಂಬುದನ್ನು ವಿಶ್ಲೇಷಿಸಲಾಗಿ, "ಸೇತು ಸಮುದ್ರವೇ ಇಲ್ಲ, ಅದನ್ನು ಶ್ರೀರಾಮನು ಕಟ್ಟಿಸಿಯೇ ಇರಲಿಲ್ಲ, ಇದ್ದಿದ್ದರೆ, ಆ ಸೇತುವೆಯನ್ನು ಕಟ್ಟಿದ ರಾಮ ಯಾವ ಎಂಜಿನಿಯರಿಂಗ್ ಕಾಲೇಜಿನಲ್ಲಿ ಓದಿದ್ದು" ಎಂಬಲ್ಲಿಂದ, ಸೇತುವೆಯನ್ನು ರಾಮನೇ ನಾಶಪಡಿಸಿದ ಎಂಬಿತ್ಯಾದಿಯಾಗಿ ಬಾಯಿಗೆ ಬಂದಂತೆ ಹೇಳುತ್ತಾ, ಬೊ.ರ. ಬ್ಯುರೋಕ್ಕೇ ಸೆಡ್ಡು ಹೊಡೆದು ನಿಂತಿದ್ದವರಿರುವ ನಾಡಿನಲ್ಲಿ ಭಾಷೆಗಾಗಿ ಏನಾದರೂ "ಸಿಗುತ್ತದೆ" ಎಂಬ ಸುದ್ದಿ ಬಂದಾಗ ಬಾಲ ಮಡಚಿರುವುದು ಹೊರಬಿದ್ದಿದೆ.

ತಮಗೆ ಶಾಸ್ತ್ರಿಯನ್ನು ಕೊಡಬೇಕು ಎಂದು ಕೇಳುವಾಗ, ತಮಿಳರು ಮುಂದಿಟ್ಟಿರುವ ವಾದಗಳಲ್ಲಿ, 2004ರಲ್ಲಿ ಯುಪಿಎ ಅಧಿಕಾರಕ್ಕೆ ಬರುವಾಗ, ಯುಪಿಎಗೆ ಬೆಂಬಲ ಕೊಡಬೇಕಿದ್ದರೆ ಶಾಸ್ತ್ರಿಯನ್ನು ನಮಗೊಪ್ಪಿಸಬೇಕೆಂದು ಷರತ್ತು ವಿಧಿಸಿದ್ದರು. ಅದರ ಹೊರತಾಗಿ ಬೊಗಳೆ ರಗಳೆ ಬ್ಯುರೋದ ಗಮನ ಸೆಳೆದದ್ದು ಮತ್ತೊಂದು ವಾದ. ರಾಮಾಯಣ ಘಟಿಸಿದ ಕಾಲಕ್ಕಿಂತ ಹಿಂದೆಯೇ ಕಂಬನು "ಕಂಬ ರಾಮಾಯಣ" ಬರೆದಿದ್ದಿರಬಹುದು ಎಂಬುದಾಗಿಯೂ ತಮಿಳರು ಕೇಂದ್ರದೆದುರು ವಾದಮಂಡಿಸಿದ್ದಿರಬಹುದು ಎಂಬ ವಿ-ವಾದ! ಆದುದರಿಂದ ತಮಿಳು ಅತ್ಯಂತ ಪ್ರಾಚೀನ ಭಾಷೆ, ಆ ಕಾರಣಕ್ಕೆ ನಮಗೆ ಶಾಸ್ತ್ರಿಯ ಮಾನ ಬೇಕು ಎಂಬುದು ಅವರ ಅಪ-ವಾದವಾಗಿತ್ತು. ಅದಕ್ಕಾಗಿಯೇ ಅವರು, ಮೊನ್ನೆ ಮೊನ್ನೆಯಷ್ಟೇ ನಮಗೆ ತಿಳಿದುಬಂದ ಕನ್ನಡಕ್ಕೇಕೆ ಶಾಸ್ತ್ರಿ ಬೇಕು ಎಂದು ತಕರಾರೆತ್ತಿ ಅವರು ಮದ್ರಾಸು ಹೈಕೋರ್ಟಿನಲ್ಲಿ ತಕರಾರನ್ನೂ ಎತ್ತಿದ್ದಾರೆ.

ಅದಿರಲಿ... ಬೊಗಳೆಗೂ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕೀತು ಎಂದು ಬೊಗಳೂರಿನೆಲ್ಲೆಡೆ ಆತಂಕದ, ಭೀತಿಯ ಕರಾಳ ಛಾಯೆ ಆವರಿಸಿದ್ದು, ಈ ಛಾಯೆ ಎಷ್ಟು ಕಪ್ಪಗಿದೆಯೆಂದರೆ, ಬೊಗಳೂರು ಏಕಸದಸ್ಯ ಬ್ಯುರೋದಲ್ಲಿರುವ ಸಮಸ್ತ ಸಿಬ್ಬಂದಿಗೆ ಪರಸ್ಪರರ ಮುಖ ಕಾಣಿಸದಷ್ಟು! ಇದಕ್ಕೆ ಕಾರಣವೆಂದರೆ, ರಾಜ್ಯೋತ್ಸವ ಪ್ರಶಸ್ತಿಯ ಎರಡನೇ ಕಂತು ಈಗಾಗಲೇ ಬಿಡುಗಡೆಯಾಗಿದೆ, ಉಳಿದ ಏಳೆಂಟು ಕಂತುಗಳು ಕೂಡ ಒಂದೊಂದಾಗಿ ಬಯಲಿಗೆ ಬೀಳಲಿದ್ದು, ಇದರಲ್ಲಿ ಬೊಗಳೂರು ಕೂಡ ಸೇರಬಹುದೇ ಎಂಬ ಭಯಾತಂಕ.

ಹೀಗಾಗಿ, ಬೊಗಳೂರಿನ ಓದುಗರು ವದಂತಿಗೆ ಕಿವಿಗೊಡದಂತೆ, ನಿಮ್ಮ ಮನೆಯಂಗಳದಲ್ಲೇ ಸ್ಫೋಟ ಸಂಭವಿಸಿದರೂ, ಕೇಂದ್ರ ಸರಕಾರವು ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂಬ ಭರವಸೆಯಲ್ಲಿ ಶಾಂತಚಿತ್ತದಲ್ಲಿ ಇರಬೇಕೂಂತ ಕೋರಲಾಗುತ್ತಿದೆ.

Friday, October 31, 2008

ಸ್ಫೋಟ ನಡೆದಿದ್ದೆಲ್ಲಿ? ಖಂಡಿಸಲು ತಬ್ಬಿಬ್ಬಾದ ಮನೆ ಸಚಿವರು!

(ಬೊಗಳೂರು ಸ್ಫೋಟ ಖಂಡನಾ ಬ್ಯುರೋದಿಂದ)
ಬೊಗಳೂರು, ಅ.31- ದೇಶಾದ್ಯಂತ ವಿವಿಧೆಡೆ ಉಗ್ರಗಾಮಿಗಳು ನಿಜವಾದ ಬಾಂಬುಗಳನ್ನೇ ಸ್ಫೋಟಿಸುತ್ತಿರುವುದು ಮಧ್ಯದಲ್ಲಿರುವ ಮನೆ (Central Home) ಸಚಿವರ ಗಮನಕ್ಕೂ ಬಂದಿದ್ದು, ಅವರು ಕೂಡ ಶೀಘ್ರದಲ್ಲೇ ಇದನ್ನು ಖಂಡಿಸುವುದಾಗಿ ಪ್ರಕಟಿಸಿದ ತಕ್ಷಣವೇ ಬೊಗಳೆ ರಗಳೆ ಬ್ಯುರೋ ಅವರ ಬೆನ್ನು ಹತ್ತಿತು.

"ಖಂಡಿಸಿ ಖಂಡಿಸಿ... ನೀವು ಯಾವಾಗ ಖಂಡಿಸುತ್ತೀರಿ ಅಂತ ದೇಶದ ಜನರೆಲ್ಲರೂ ಶಾಂತಚಿತ್ತದಿಂದ, ಕುತೂಹಲದಿಂದ ಕಾಯುತ್ತಿದ್ದಾರೆ" ಎಂದು ಕೂಗಿಕೊಂಡ ತಕ್ಷಣವೇ, ತಮ್ಮ ಇಸ್ತ್ರಿಮಾಡಿದ ಸೂಟನ್ನು ಮತ್ತಷ್ಟು ಸರಿಪಡಿಸಿಕೊಂಡು, ತಮ್ಮೆಲ್ಲಾ ಸಾಮರ್ಥ್ಯವನ್ನು ಒಟ್ಟುಗೂಡಿಸಿಕೊಂಡು ಮನೆ ಸಚಿವರು ಖಂಡಿಸಲು ಆರಂಭಿಸಿದರು.

ಮೊದಲು ಮಾತು ಆರಂಭಿಸಿದ ಅವರು ತೊದಲುತ್ತಾ, ನಾನು ಅದನ್ನು ಖಂಡಿಸುತ್ತೇನೆ ಎನ್ನುತ್ತಾ ತಬ್ಬಿಬ್ಬಾದಂತೆ ಕಂಡು ಬಂದರು. "ಯಾವುದನ್ನು" ಎಂದು ಬೊ.ರ. ಮುಗಿಬಿದ್ದು ಕಣ್ಣು ಬಾಯಿ ಬಿಟ್ಟು ಕೇಳತೊಡಗಿದಾಗ, ಮತ್ತಷ್ಟು ತಬ್ಬಿಬ್ಬಾದ ಅವರು, "ನಿನ್ನೆ ಕೇಳಿಸಿದ್ದೇನಾದರೂ ದೀಪಾವಳಿಯ ಪಟಾಕಿಗಳ ಸದ್ದಿರಬಹುದೇ" ಎಂದು ಸಂಶಯದಿಂದಲೇ ಬೊ.ರ. ರದ್ದಿಗಾರರ ಕಿವಿಯಲ್ಲಿ ಕೇಳಿದರು.

ನಮ್ಮ ರದ್ದಿಗಾರರು ಅಪ್ಪಿ ತಪ್ಪಿ ತಲೆ ಅಲ್ಲಾಡಿಸಿದ ಬಳಿಕ, "ಇನ್ನು ಖಂಡಿಸದಿದ್ದರೆ ನನ್ನನ್ನು ಇವರು ಬಿಡುವುದಿಲ್ಲ" ಎಂಬುದನ್ನು ಅರ್ಥೈಸಿಕೊಂಡಂತೆ ಕಂಡುಬಂದರು. ನಾನು ಜೈಪುರ ಸ್ಫೋಟವನ್ನು ಖಂಡಿಸುತ್ತೇನೆ ಎಂದುಬಿಟ್ಟರು. ಪಕ್ಕದಲ್ಲೇ ಇದ್ದ ಅವರ ಪರ್ಸನಲ್ ಕಂಪ್ಯೂಟರ್... ಅಲ್ಲಲ್ಲ ಪರ್ಸನಲ್ ಸೆಕ್ರೆಟರಿ, ಸರಿಪಡಿಸುತ್ತಾ, "ಜೈಪುರ ಅಲ್ಲ ಸ್ವಾಮಿ... ಬೆಂಗಳೂರು ಬೆಂಗಳೂರು...ಸರಣಿ ಬಾಂಬ್ ಸ್ಫೋಟ" ಎಂದು ಕಿವಿಯಲ್ಲಿ ಉಸುರಿದರು.

ತಬ್ಬಿಬ್ಬಾದ ಮನೆ ಸಚಿವರು, ಒಂದಷ್ಟು ವಾಲಿದಾಗ, ಅವರ ಅಂಗ ರಕ್ಷಕ ಬಾಯಿ ಬಿಡುತ್ತಾ, "ಅಲ್ಲ ಅಲ್ಲ, ಅದು ಅಹಮದಾಬಾದ್ ಸ್ಫೋಟ" ಎಂದು ಬಿಟ್ಟ. ಬಳಿಯಲ್ಲೇ ಇದ್ದ ಮಗದೊಬ್ಬ ಅಂಗ'ಪ'ಕ್ಷಕ ಈಗ ಕೆಂಡಾಮಂಡಲವಾದ. "ಏನಾಗಿದೆ ಇವರಿಗೆ, ಸ್ಫೋಟ ನಡೆದದ್ದು ದೆಹಲಿಯಲ್ಲಿ ಅಲ್ಲವಾ" ಎಂದು ಕೇಳಿದ. ಆಗ ಬೆಳಕಿಗೆ ಬಂದ ಪರ್ಸನಲ್ ಸೆಕ್ರೆಟರಿ ನಂ.2, "ಅಲ್ಲ ಸ್ವಾಮಿ ಸ್ಫೋಟವಾಗಿದ್ದು ತ್ರಿಪುರದಲ್ಲಿ... ಅಥವಾ ನಾಸಿಕ್‌ನಲ್ಲಿಯೂ ಇರಬಹುದು ನೋಡಿ..." ಅಂತ ಮತ್ತೆ ಗೊಂದಲದ ಹಳ್ಳಕ್ಕೆ ತಳ್ಳಿದ.

ಇದನ್ನೆಲ್ಲಾ ನೋಡಿ ತಲೆ ತುರಿಸಿಕೊಂಡ ಬೊ.ರ. ವರದ್ದಿಗಾರ, "ನೀವೆಂಥಾ ಅಸಾಮಿ ಮಹಾಸ್ವಾಮಿ?"ಎಂದಾಗ, ತಕ್ಷಣವೇ ತಲೆ ಕೆರೆದುಕೊಂಡಂತೆ, ಜ್ಞಾನೋದಯವಾದವರಂತೆ, ಹುರ್ರೇ ಹುರ್ರೇ... ಯುರೇಕಾ ಎನ್ನುತ್ತಾ ತಮ್ಮ ಎರಡೂ ಕಣ್ಣುಗಳನ್ನು ಮತ್ತು ಕಿವಿಗಳನ್ನು ಸ್ವಲ್ಪವೇ ತೆರೆದ ಮನೆ ಸಚಿವರು, "ಅಸಾಮಿ ಅಲ್ಲಪ್ಪಾ, ಅಸ್ಸಾಂನಲ್ಲಿಯೇ ಸ್ಫೋಟ ಆಗಿದ್ದು, ಅದನ್ನೇ ನಾನು ಖಂಡಿಸ್ತಿರೋದು" ಎಂದು ಬಿಟ್ಟರು. ಅಲ್ಲಿಗೆ ವಿಶ್ವರೂಪದರ್ಶನ ಅಲ್ಲಲ್ಲ... ಸಂ-ದರ್ಶನ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.

Tuesday, October 28, 2008

ಚೀಲ ತುಂಬಾ ಹಣ, ಜೇಬು ತುಂಬೆಲ್ಲ ಪಟಾಕಿ!

(ಬೊಗಳೂರು ದಿವಾಳಿ ಬ್ಯುರೋದಿಂದ)
ಈ ಬಾರಿ ಜಾಗತಿಕ ಹಣಕಾಸು ಬಿಕ್ಕಟ್ಟು ಬಡ ಭಿಕ್ಷುಕರ ಕಿಸೆಗೂ ಕತ್ತರಿ ಹಾಕಿರುವುದರಿಂದ, ಅವರ ಮೊಬೈಲ್ ಬಿಲ್ ಕಟ್ಟಲು, ಅವರ ಟಿವಿ ಕೇಬಲ್ ಬಿಲ್ ಕೊಡಲು, ಮತ್ತು ಪಟಾಕಿ ಬಾಂಬ್ ಕೊಳ್ಳುವ ಶಕ್ತಿಯನ್ನು ತಗ್ಗಿಸಿವುದರ ಪರಿಣಾಮವಾಗಿ ಬೊಗಳೂರಿನ ಸಮಸ್ತ ಜನತೆ ಈ ಬಾರಿ ವಿಶಿಷ್ಟವಾಗಿ ದೀಪಾವಳಿ ಅಲ್ಲಲ್ಲ... ದಿವಾಳಿ ಆಚರಿಸಿದರು ಎಂದು ನಮ್ಮ ಬಾತ್ಮೀದಾರರು ಅಡಗಿ ಕುಳಿತು ವ-ರದ್ದಿ ತಂದುಕೊಟ್ಟಿದ್ದಾರೆ.

ಈ ಬಗ್ಗೆ ವಿಚಾರಿಸಲಾಗಿ, ಬೊಗಳೂರು ಬ್ಯುರೋ ಅನುಸರಿಸಿದ ಕ್ರಮದಂತೆಯೇ ಎಲ್ಲರೂ ದಿವಾಳಿ ಆ(ಚರಿಸಿ)ಗಿರುವುದಾಗಿ ತಿಳಿದುಬಂದಿದೆ.

ಹೇಗಂದ್ರೆ, ಚೀಲಾ ತುಂಬಾ ನೋಟಿನ ಕಂತೆ ತುಂಬಿಕೊಂಡು ಪಟಾಕಿ ಅಂಗಡಿಗೆ ಹೋಗಿ ಜೇಬು ತುಂಬಾ ಪಟಾಕಿ ತಂದು ಸುಟ್ಟು ಹಾಕುವ ಮೂಲಕ!

Saturday, October 25, 2008

ಬೊಗಳೆಯಲ್ಲಿ ದಿವಾಳಿಯಾಗಿದ್ದೇ ವಿಶೇಷ!

ಇದು ನಮ್ಮ ಬದ್ಧ ಪ್ರತಿಸ್ಪರ್ಧಿ ಮತ್ತು ಅಕ್ಷರಶಃ ವಿರೋಧಿ ಪತ್ರಿಕೆ "ವೆಬ್‌ದುನಿಯಾ"ದ ದೀಪಾವಳಿ ಸಂಚಿಕೆಗಾಗಿ ಸಂಪಾದಿಸಿಕೊಟ್ಟ ವಿಶೇಷ-ವ-ರದ್ದಿ. ಇಲ್ಲೂ ಪ್ರಕಟಿಸಿದ್ದಾರೆ. ಅವರಿಗೆ ಕೃತಜ್ಞತೆಗಳು.
-------
ದೀಪಾವಳಿಗೆ ಬೊಗಳೆ - ರಗಳೆ ವಿಶೇಷಾಂಕ ತರಬೇಕೆಂದು ತಲೆಯ ಕೂದಲುಗಳನ್ನು ರಪರಪನೆಯೂ, ಬಳಿಕ ಪರಪರನೆಯೂ ಕೆರೆದುಕೊಳ್ಳುತ್ತಾ, ಅತ್ತಿತ್ತ ಯೋಚಿಸುತ್ತಿರುವಾಗಲೇ ಕೇವಲ ಒಂದೇ ಒಂದು ವಿಶೇಷಾಂಕ ಸಿದ್ಧಪಡಿಸಬೇಕಿದ್ದರೆ ಹಲವಾರು ಲೇಖನಗಳು ಬೇಕೆಂಬುದು ಅರಿವಾಗಿಹೋಗಿಬಿಟ್ಟಿತ್ತು!

ಹೀಗಾಗಿ "ಆಲ್ ಇನ್ ಒನ್" ಲೇಖನ ಸಿದ್ಧಪಡಿಸಲು ಸಂತಾಪಕರು ಆದೇಶ ನೀಡಿದ ಮೇರೆಗೆ ಏಕಸದಸ್ಯ ಬ್ಯುರೋದಲ್ಲಿದ್ದ ಎಲ್ಲರೂ ಕಾರ್ಯಪ್ರವೃತ್ತರಾಗಿ ಒಂದೊಂದು ಗೆರೆಗಳನ್ನು ಗೀಚಿ ಬಿಟ್ಟರು. ಅವುಗಳನ್ನು ಸಂಗ್ರಹಿಸಿ ಇಲ್ಲಿ ಕೆಳಗೆ ಒಂದೊಂದಾಗಿ ಬಾಂಬ್ ಸುರಿಮಳೆಗರೆಯಲಾಗುತ್ತಿದೆ. ಅದನ್ನೇ ಹೆಕ್ಕಿಕೊಂಡು ಬೆಂಕಿ ಹಚ್ಚಿದಲ್ಲಿ ನಮ್ಮ ಓದುಗ ಸಮುದಾಯದ ದೀಪಾವಳಿ ಸಂಭ್ರಮವೋ ಸಂಭ್ರಮ!

* ಈ ಬಾರಿ ದೀಪಾವಳಿಯನ್ನು ಅಕ್ಷರಶಃ ಆಂಗ್ಲ ಭಾಷೆಯಲ್ಲೇ ಆಚರಿಸಲಾಗುತ್ತದೆ. ಬೆಲೆಗಳೆಲ್ಲವೂ ಆಕಾಶಕ್ಕೇರಿರುವುದರಿಂದ, ಮತ್ತು ಈಗಾಗಲೇ ಚಂದ್ರಯಾನ-1 ಗಗನ ನೌಕೆಯಲ್ಲಿ ಕೇಂದ್ರದ ಯುಪಿಎ ಎಂಬ ಪರಮಾಣುಭರಿತ ಸರಕಾರವು ದೇಶದ ಜೀವನಾವಶ್ಯಕ ಬೆಲೆಗಳನ್ನೇ ತುಂಬಿಸಿ ಕಳುಹಿಸಿದೆ ಎಂಬ ತೀವ್ರ ಶಂಕೆಯಿಂದಾಗಿ, ಎಲ್ಲರೂ ಹ್ಯಾಪೀ ದಿವಾಳಿಯೇ ಆಗುತ್ತಾರೆ.

* ಇಸ್ರೋದವರು ತಿಂಗಳನ ಅಂಗಳಕ್ಕೆ 386 ಕೋಟಿ ರೂ. ವೆಚ್ಚದಲ್ಲಿ ರಾಕೆಟ್ಟನ್ನು ಬಿಟ್ಟುಬಿಟ್ಟಿದ್ದಾರೆ. ಇಷ್ಟು ಕೋಟಿ ರೂ. ವೆಚ್ಚ ಆಗಿದೆ. ಹೀಗಿರುವಾಗ, ಪ್ರತಿಯೊಬ್ಬ ಭಾರತೀಯರೂ ಅದನ್ನೇ ದೀಪಾವಳಿ ರಾಕೆಟ್, ನಾವೇ ಅದಕ್ಕೆ ಖರ್ಚು ಮಾಡಿದ್ದೇವೆ ಅಂತೆಲ್ಲಾ ತಿಳಿದುಕೊಂಡು ತಮ್ಮ ತಮ್ಮ ಜೇಬನ್ನು ಭದ್ರವಾಗಿ ಮುಚ್ಚಿಕೊಳ್ಳಬಹುದು.

* ಯುಪಿಎ ಸರಕಾರದ ಅವಧಿಯಲ್ಲಿ ಯಾವತ್ತಿಗೂ ಕೂಡ ಬೆಲೆಗಳು ಆಕಾಶದಲ್ಲಿಯೇ ಇದ್ದವು ಮತ್ತು ಇರುತ್ತವೆ. ಈ ಬಗ್ಗೆ ಸಂಸತ್ತಿನಲ್ಲಿ ಕೂಡ ಒಂದೇ ಒಂದು ನರಪಿಳ್ಳೆ ಕೂಡ ಪಟಾಕಿ ಸಿಡಿಸುವುದಿಲ್ಲ. ಪ್ರತಿಪಕ್ಷದ ಪಟಾಕಿಗಳೆಲ್ಲವೂ ಠುಸ್ಸಾಗಿವೆ. ಸಂಸತ್ತಿನಲ್ಲಿ ಬೆಲೆ ಏರಿಕೆಯೊಂದನ್ನು ಬಿಟ್ಟು ಬೇರೆ ವಿಷಯಗಳಿಗೆ ನಮ್ಮ ನಿಧಾನಿಗಳನ್ನು (ನಿಧಾನವೇ ಪ್ರಧಾನ!) ರಾಕೆಟ್‌ನಂತೆ ಉಡಾಯಿಸುತ್ತಿವೆ ಪ್ರತಿಪಕ್ಷಗಳು ಅಂತ ನೀವು ಕೂಡ ನಿಧಾನಿಗಳಾಗಿ, ವ್ಯವಧಾನಿಗಳಾಗಿ, ಸಮಾಧಾನಿಗಳಾಗಿ, ಆದರೆ ಅಧ್ವಾನಿಗಳಾಗಬೇಡಿ!

* ಹೇಗಿದ್ದರೂ ಯುಪಿಎ ಸರಕಾರದ್ದು ಬಡವರ ನಿವಾರಣೆಯ ಸ್ಲೋಗನ್. ಇದಕ್ಕಾಗಿಯೇ ಅದು ಬೆಲೆ ಏರಿಕೆಯ ಸ್ಲೋ... ಗನ್ ಸಿಡಿಸುತ್ತಲೇ ಇದೆ. ಇದೂ ಒಂಥರಾ ದೀಪಾವಳಿಯ ಮದ್ದಿನ ಸದ್ದು ಅಂತಲೂ ಬಡಪ್ರಜೆಯು ತಿಳಿದುಕೊಂಡು, ನಾವೇ ಪಟಾಕಿ ಸಿಡಿಸಿದೆವು ಅಂತ ನೆಮ್ಮದಿಯಲ್ಲಿ ಉಸಿರಾಡಬಹುದು.

* ಬೆಲೆ ಏರಿಕೆಯ ಈ ದಿನಗಳಲ್ಲಿ ಪಟಾಕಿಗಳು ಕೂಡ ಮುಟ್ಟಿದರೆ ಎಲ್ಲಿ ಸಿಡಿದುಹೋಗುತ್ತವೋ ಎಂಬಷ್ಟರ ಮಟ್ಟಿಗೆ ದುಬಾರಿ. ಪಟಾಕಿ ಅಂಗಡಿಗೆ ತೆರಳುವಾಗ ದೂರದಲ್ಲೇ ಅದರ ವಾಸನೆಯನ್ನು ಆಘ್ರಾಣಿಸಿ, ಹಾ.... ಅಂತ ಒಂದು ನಿಟ್ಟುಸಿರು ಬಿಟ್ಟು, ಮನದಲ್ಲೇ ಪಟಾಕಿ ಸಿಡಿಸಿದ್ದನ್ನು ಕಲ್ಪಿಸಿಕೊಂಡು ಕೂಡ ನೆಮ್ಮದಿಯಿಂದ ಇರಬಹುದು.

* ಆದರೂ ಮಕ್ಕಳು ಜೋರಾಗಿ ಹಠ ಹಿಡಿಯುತ್ತಾರೆ, ರಚ್ಚೆ ಕಟ್ಟುತ್ತಾರೆಂಬ ಆತಂಕವೇ? ಒಂದ್ಕೆಲ್ಸ ಮಾಡಿ... ಒಂದೇ ಒಂದು ಸಣ್ಣ ಬೀಡಿ ಪಟಾಕಿ (ಮಾಲೆ ಪಟಾಕಿಯಲ್ಲಿರುತ್ತದಲ್ಲಾ... ಅದರ ಒಂದು ತುಣುಕು) ಖರೀದಿಸಿ ತನ್ನಿ. (ಅದರ ಬೆಲೆ ಹೆಚ್ಚೆಂದರೆ ಒಂದಷ್ಟು ಸಾವಿರ ರೂಪಾಯಿ ಇದ್ದೀತು!). ಅದಕ್ಕೆ ನಿಮ್ಮ ಮನೆಯಲ್ಲಿರುವ ಬೊಗಳೆ ರಗಳೆ ಪತ್ರಿಕೆಯ ಪ್ರತಿಗಳನ್ನೆಲ್ಲಾ ಸುತ್ತಿಬಿಡಿ. ಅದು ದೋ.......ಡ್ಡ ಬಾಂಬ್ ಆಗುವಂತೆ ಕಾಣಿಸಿಬಿಡಿ. ಎಲ್ಲಾ ಚಿಳ್ಳೆ ಪಿಳ್ಳೆ ಮಕ್ಕಳ ಕೈಗೂ ಒಂದೊಂದು ಊ......ದ್ದದ ಕಡ್ಡಿ ಕೊಡಿ. ಮಕ್ಕಳೆಲ್ಲರೂ ದೂ..........ರದಲ್ಲಿ ನಿಂತು ಏಕಕಾಲಕ್ಕೆ ಎಲ್ಲರೂ ಮೇಣದ ಬತ್ತಿಯ ಮೂಲಕ ಹೊತ್ತಿಸಿದ ತಮ್ಮ ತಮ್ಮ ಕಡ್ಡಿಗಳನ್ನು ಈ ಬೀಡಿ ಪಟಾಕಿಯಲ್ಲಿ ಇದೆಯೋ ಇಲ್ಲವೋ ಎಂಬಂತೆ ಕಾಣಿಸುತ್ತಿರುವ ಬತ್ತಿಗೆ ಮುಟ್ಟಿಸಲು ಹೇಳಿ.... ಎಲ್ಲರೂ ಪಟಾಕಿ ಹಚ್ಚಿದ ಅನುಭವವಾಗುತ್ತದೆ.

* ಮೇಲಿನ ವಿಧಾನ ಅನುಸರಿಸಲು ಕಷ್ಟ, ಅದಕ್ಕೆ ರಷ್ ಆಗುತ್ತದೆ, ಸಿಕ್ಕಾಪಟ್ಟೆ ಮಕ್ಕಳ ಜನಜಂಗುಳಿಯಾಗುತ್ತದೆ ಅಂತ ಹೆದರಿಕೆಯೇ? ಅದಕ್ಕೂ ಒಂದು ಉಪಾಯವಿದೆ. ಹೋಮ ಇತ್ಯಾದಿ ಧಾರ್ಮಿಕ ಕಾರ್ಯಗಳ ಸಂದರ್ಭ ಪುರೋಹಿತರು, ಯಜ್ಞಕರ್ತರು ತಮ್ಮನ್ನು ಮುಟ್ಟಲು ದರ್ಭೆಯನ್ನು ಉಪಯೋಗಿಸುತ್ತಾರಲ್ಲ... ಅದೇ ರೀತಿಯಲ್ಲಿ ಯಾರ ಕೈಯಲ್ಲಿರುವ ಕಡ್ಡಿಗೆ ಈ ಬೀಡಿ ಪಟಾಕಿಯ ಮೂತಿ (ಬತ್ತಿ) ಎಟುಕುತ್ತದೋ... ಅವರನ್ನು ಮುಟ್ಟಿಕೊಂಡರಾಯಿತು. ಎಲ್ಲರೂ ಪಟಾಕಿ ಸಿಡಿಸಿದ ಅನುಭವ!

* ಇನ್ನೂ ನಿಮಗೆ ಸಮಾಧಾನವಿಲ್ಲವೇ? ಪಟಾಕಿಗಳ ಬೆಲೆ ಕೂಡ ಹೂಕುಂಡ (ಫ್ಲವರ್ ಪಾಟ್)ನಿಂದ ಸಿಡಿದು ರಾಕೆಟ್‌ನಂತೆ ಆಗಸಕ್ಕೇರಿದೆ ಎಂಬ ಚಿಂತೆಯೇ? ಚಿಂತೆ ಬಿಡಿ... ಈಗಿನ ಸರಕಾರದ ನೀತಿ ನಿಯಮಗಳ ಅಡಿಯಲ್ಲಿ ಪಟಾಕಿಗಿಂತಲೂ ಕಡಿಮೆ ಬೆಲೆಯಲ್ಲಿ ನಿಜವಾದ ಬಾಂಬುಗಳೇ ಅಲ್ಲಲ್ಲಿ (ವಿಶೇಷವಾಗಿ ಮಂಗಳೂರು ಸುತ್ತಮುತ್ತ, ಭಟ್ಕಳದಲ್ಲಿ ಮುಂತಾದೆಡೆ) ಸಿಗುತ್ತವೆಯಲ್ಲಾ ಅಂತ ಮರುಗುತ್ತಿದ್ದೀರೇ? ಉಗ್ರರ ಕೈಗೆ ಅಷ್ಟು ಸುಲಭವಾಗಿ ಸಿಗೋ ನಿಜ ಬಾಂಬಿಗಿಂತಲೂ, ನಮ್ಮ ಆಟಿಕೆಯ ಬಾಂಬೇ ದುಬಾರಿಯಾಯಿತಲ್ಲಾ ಅಂತ ಗೋಳಿಡುತ್ತಿದ್ದೀರಾ? ಮರುಗದಿರು ಎಲೆ ಮಾನವ! ಒಂದು ಕ್ಯಾಪ್ ಪಟಾಕಿಯನ್ನು ಎರಡು ಚಪ್ಪಟೆ ಕಲ್ಲುಗಳ ನಡುವೆ ಇರಿಸಿಕೊಂಡು ತಲೆಗೆ ಗುದ್ದಿಕೊಳ್ಳಬೇಕೂಂತ ನಮ್ಮ ಸರಕಾರದ ವಕ್ತಾರರು ಶೀಘ್ರವೇ ಹೇಳಿಕೆ ಹೊರಡಿಸಲಿದ್ದಾರಂತೆ!

* ತೀರಾ ಇತ್ತೀಚಿನ ವರದಿಗಳ ಪ್ರಕಾರ, ಕರ್ನಾಟಕಕ್ಕಾಗಿಯೇ ವಿಶೇಷವಾಗಿ ಕೆಲವೊಂದು ಬಾಂಬ್‌ಗಳನ್ನು ಸಿದ್ಧಪಡಿಸಲು ಸನ್ನದ್ಧತೆ ಮಾಡಿಕೊಳ್ಳಲಾಗಿತ್ತು. ಅವುಗಳೆಂದರೆ ಗಣಿ ಬಾಂಬ್, ರೆಡ್ಡಿ ಬಾಂಬ್, ಆಪರೇಶನ್ ಬಾಂಬ್, ಕಮಲ ಬಾಂಬ್, ಮುದ್ದೆ ಬಾಂಬ್, 'ಕೈ'ವಾಡ ಬಾಂಬ್, ಸಿದ್ದು ಬಾಂಬ್, ಗುದ್ದು ಬಾಂಬ್, ನೆಲ(ಗಳ್ಳ) ಬಾಂಬ್, ಭೂ(ಗಳ್ಳ) ಬಾಂಬ್, ವಿಶ್ವಾಸದ್ರೋಹ ಬಾಂಬ್, ಗೊಬ್ಬರ ಬಾಂಬ್, ಸೈಕಲ್ ಬಾಂಬ್, ಮತಾಂತರ ಬಾಂಬ್, ಕೋಮು ಬಾಂಬ್ ಇತ್ಯಾದಿ ಇತ್ಯಾದಿ ಹೆಸರಿಡಲು ತೀವ್ರ ಪ್ರಯತ್ನಗಳು ನಡೆದಿರುವುದಾಗಿ ಬೇರೆಲ್ಲೂ ವರದಿಯಾಗಿಲ್ಲದಿದ್ದರೂ ಇಲ್ಲಿ ವರದಿಯಾಗುತ್ತಿದೆ.

* ಇಷ್ಟೆಲ್ಲಾ ಆಗಿ, ನೆಲಗುಮ್ಮ (ಬೆಳ್ಳುಳ್ಳಿ ಪಟಾಕಿ) ಇಲ್ಲಾಂತ ನೀವೇ 'ಸಿಡಿ'ಮಿಡಿಗೊಳ್ಳುತ್ತಿದ್ದೀರಾ.... ಇದೋ ಇಲ್ಲಿದೆ.... ಸೆನ್ಸೆಕ್ಸ್! ನೆಲದೊಳಕ್ಕೆ ಇಳಿಯುತ್ತಲೇ ಇದೆ... ಪಾತಾಳಮುಖಿಯಾದ ಸೆನ್ಸೆಕ್ಸನ್ನೇ ನೆಲಗುಮ್ಮ ಅಂತ ತಿಳಿದುಕೊಳ್ಳಿ.

ಪಟಾಕಿ ಹೊಡೆದು ಹೊಡೆದು ಒಡೆದು ಸಿಡಿಸಿ, ಸುಟ್ಟು ಅದರೊಂದಿಗೆ ಒಂದಿಷ್ಟು ಕುಡಿದು ಬಡಿದು ಕಡಿದು 'ದಿವಾಳಿ'ಯಾಗದಿರಿ, ಎಲ್ಲರಿಗೂ ಶುಭ ದೀಪಾವಳಿ!

Wednesday, October 22, 2008

ಪರಲೋಕ ಯಾತ್ರೆ: ಮೀಸಲಾತಿಗೆ ತಾಕೀತು!

(ಬೊಗಳೂರು ಪರಲೋಕ ಯಾತ್ರೆ ಬ್ಯುರೋದಿಂದ)
ಬೊಗಳೂರು, ಅ.22- ಪರಲೋಕ ಯಾತ್ರೆಗೆ ಚಂದ್ರಯಾನ ಕೈಗೊಂಡ ವಿಜ್ಞಾನಿಗಳ ವಿರುದ್ಧ ಕೇಂದ್ರ ಸರಕಾರವು ಕೆಂಡ ಕಾರಿದೆ. ಇದಕ್ಕೆ ಅದು ಕಾರಣಗಳ ಪಟ್ಟಿ ಮಾಡಿದ್ದು, ಅದನ್ನು ಬೊಗಳೂರು ಬ್ಯುರೋಗೆ ಮಾತ್ರ ಅದು ಕಳುಹಿಸಿದೆ.

ಚಂದ್ರನಲ್ಲಿಗೆ ಮಾನವರಹಿತವಾಗಿಯೇ ನೌಕೆಯನ್ನು ಕಳುಹಿಸಿದ್ದೇಕೆ? ಈ ಪ್ರಯಾಣದ ಸಂದರ್ಭದಲ್ಲಿ ಕೆಲವೊಂದು ಸೀಟುಗಳನ್ನು ಮೀಸಲಾತಿ ಮೂಲಕ ಓಟು ನೀಡುವವರಿಗೆಲ್ಲಾ ವಿತರಿಸಬಹುದಿತ್ತಲ್ಲಾ?

ಅಲ್ಪಸಂಖ್ಯಾತರೆಂದರೆ ಎಲ್ಲರಿಂದಲೂ ನಿರ್ಲಕ್ಷಿಸಲ್ಪಡುತ್ತಿರುವವರು. ಅವರಿಗಾದರೂ ಈ ಗಗನ ಯಾತ್ರೆಯಲ್ಲಿ ಪ್ರಾಮುಖ್ಯತೆ ನೀಡಬಹುದಿತ್ತು.

ಅಲ್ಲಿಗೆ ಒಂದಷ್ಟು ಮಂದಿಯನ್ನು ಕಳುಹಿಸಿದ್ದರೆ, ಅಲ್ಲಿಯೇ ಅವರು ಮಕ್ಕಳು-ಮರಿಗಳನ್ನು ಮಾಡಿಕೊಂಡು, ಮುಂದಿನ ಮಹಾ ಚುನಾವಣೆ ವೇಳೆಗೆ ಓಟು ಹಾಕುವ ನಿಟ್ಟಿನಲ್ಲಿ ಭಾರತಕ್ಕೆ ಕರೆಸಿಕೊಳ್ಳಬಹುದಾಗಿತ್ತಲ್ಲ... ಈ ಅಮೂಲ್ಯ ಅವಕಾಶವನ್ನು ಹಾಳು ಮಾಡಿದ್ದೇಕೆ?

ಒಂದು ಸಣ್ಣ ಜನೋಪಯೋಗಿ ರಸ್ತೆಯ ಕಾಮಗಾರಿಯಲ್ಲೇ ಸಾಕಷ್ಟು ನುಂಗುವವರು ನಾವು. ಇದರ ಸಿಬಿಐ ತನಿಖೆಯಾಗುವಷ್ಟರ ಮಟ್ಟಿಗೆ ನಾವು ಒಂದು ಪುಟ್ಟ ಯೋಜನೆಯನ್ನು ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸುವಂತೆ ಮಾಡುತ್ತೇವೆ. ಹೀಗಿರುವಾಗ ಈ ನೂರಾರು ಕೋಟಿ ರೂಪಾಯಿ ವೆಚ್ಚದ, ಅಂತಾರಾಷ್ಟ್ರೀಯ ಯೋಜನೆಯಲ್ಲಿಯೂ ಅವ್ಯವಹಾರವಾಗಿದ್ದಿದ್ದರೆ, ನಮ್ಮ ಹೆಸರು ಓಟಿನ ಸಂದರ್ಭ ಪ್ರತಿಯೊಬ್ಬರ ಬಾಯಲ್ಲೂ ಕೇಳಿಬಂದು, ನಮಗೆ ಪ್ರಚಾರ ಸಿಗುವಂತಾಗುತ್ತಿತ್ತಲ್ಲ... ಅದನ್ನೇಕೆ ತಪ್ಪಿಸಿದಿರಿ? ಇದರಲ್ಲೇಕೆ ಹಣ ನುಂಗಲು ಬಿಡಲಿಲ್ಲ? ಕೂಡಲೇ ಸ್ಪಷ್ಟನೆ ನೀಡತಕ್ಕದ್ದು.

ಈಗಾಗಲೇ ಪರಲೋಕ ಯಾತ್ರೆಗೆ ನಮ್ಮ ಓಟಿನ ಬ್ಯಾಂಕೇ ಆಗಿಬಿಟ್ಟಿರುವ ಭಯ ಉತ್ಪಾದನಾ ಸಂಘಟನೆಗಳು ಸಾಕಷ್ಟು ಶ್ರಮ ವಹಿಸುತ್ತಿವೆ. ಅವುಗಳನ್ನು ಮೀರಿಸಿ ಪರಲೋಕ ಯಾತ್ರೆ ಕೈಗೊಂಡಿದ್ದು, ಅವರನ್ನು ಮೂಲೆಗುಂಪು ಮಾಡುವ ಮತ್ತು ತುಳಿಯುವ, ದಬ್ಬಾಳಿಕೆ ನಡೆಸುವ, ದೌರ್ಜನ್ಯ ಮಾಡುವ ಉದ್ದೇಶವನ್ನೇ ಹೊಂದಿರುವುದು ಸ್ಪಷ್ಟವಾಗಿದೆ. ಹೀಗಾಗಿ ಈ ಕುರಿತು ತನಿಖೆ ಎದುರಿಸಲು ಸಿದ್ಧರಾಗಿ.

Monday, October 20, 2008

ಮತ್ತೊಂದು ಫೂಕರ್ ಪ್ರಶಸ್ತಿಗೆ ಪ್ರಯತ್ನ

(ಬೊಗಳೂರು ಫೂಕರ್ ಪ್ರಶಸ್ತಿ ಬ್ಯುರೋದಿಂದ)
ಬೊಗಳೂರು, ಅ.20- ಈ ದೇಶದಲ್ಲಿದ್ದುಕೊಂಡು ದೇಶವನ್ನೇ ದೂರುತ್ತಿರುವವರಿಗೇ (ಅಲ್ಲಲ್ಲ... ದೇಶದ ಹುಳುಕನ್ನು ಎತ್ತಿ ತೋರಿಸಿ, ಅದನ್ನು ಸರಿಪಡಿಸಲು ಸಲಹೆ ನೀಡುವವರಿಗೆ !) ಫೂಕರ್ ಪ್ರಶಸ್ತಿ ದೊರೆಯುತ್ತದೆ ಎಂಬುದಕ್ಕೆ ನಿದರ್ಶನವಾಗಿರುವ ಅಂಧಮತಿ ಟಾಯ್ ಅವರು, ಬೊಗಳೆ ರಗಳೆ ಬ್ಯುರೋವನ್ನೇ ಪೋಲಿ-ಈಸರೊಂದಿಗೆ ಮಿಕ್ಸ್ ಮಾಡುತ್ತಿರುವುದು ಏಕ ಸದಸ್ಯ ಬ್ಯುರೋದ ಸಮಸ್ತ ಸಿಬ್ಬಂದಿಗಳನ್ನು ತೀವ್ರವಾಗಿ ಕೆರಳಿಸಿದೆ.

ಹೀಗಾಗಿ ಅವರನ್ನೇ ಹಿಡಿದು ತಂದು ಬೊಗಳೂರಿನ ಜನತೆಯ ಎದುರು ಸಾರಾ ಸಗಟಾಗಿ ಸಂದರ್ಶಿಸಲಾಯಿತು.

ನಿಮಗ್ಯಾರು ಕೊಟ್ಟರು ಫೂಕರ್ ಪ್ರಶಸ್ತಿ?
* ನಮಗ್ಯಾರಾದರೂ ಕೊಡಬೇಕೂಂತಾನೇ ಎಲ್ಲಿಯಾದರೂ ರೂಲ್ಸ್ ಇದೆಯಾ? ನಾವು ಬುದ್ಧಿ ಇರುವ ಜೀವಿಗಳು. ಇಂಥದ್ದೆಲ್ಲವೂ ನಮಗೇ ಸಲ್ಲಬೇಕು. ಯಾಕೆಂದರೆ ನಾವು ಕಾಶ್ಮೀರದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತೇವೆ, ದೇಶದ ವ್ಯವಸ್ಥೆ ವಿರುದ್ಧ ಸಿಡಿದೇಳುತ್ತೇವೆ. ನಾವು ಉಟ್ಟು ಓರಾಟಗಾರರು.

ನೀವೇಕೆ ಕಾಶ್ಮೀರಕ್ಕೆ ಸ್ವಾತಂತ್ರ್ಯ ದೊರೆಯಬೇಕೂಂತ ವಾದಿಸ್ತೀರಾ?
* (ವರದ್ದಿಗಾರರನ್ನು ಪಕ್ಕಕ್ಕೆ ಕರೆದು ಕಿವಿಯಲ್ಲಿ...) ರೀ... ಇದ್ರಲ್ಲಿ ಏನಾದರೂ "ನನ್ನ ಹೇಳಿಕೆ ತಿರುಚಲಾಗಿದೆ" ಅಂತ ಹೇಳೋ ಅಂಶವೇನಾದ್ರೂ ಇದೆಯೇ? ಸ್ವಲ್ಪ ನನ್ನ ಹಿಂದಿನ ಸ್ಟೇಟ್‌ಮೆಂಟ್‌ನ ಪುಟ ತಿರುಗಿಸಿ ನೋಡಿ....

ಇಲ್ಲ... ಇಲ್ಲ... ನೀವು ಸ್ಪಷ್ಟವಾಗಿಯೇ ಹೇಳಿದ್ದೀರಿ....ಕಾಶ್ಮೀರ ಸ್ವತಂತ್ರ ಆಗ್ಬೇಕೂಂತ... ಹೇಳಿ ಯಾಕೆ?
* ಉಫ್... (ಜೋರಾಗಿಯೇ) ಇಲ್ಲಪ್ಪ ಹಾಗೇನಿಲ್ಲ.... ಕಾಶ್ಮೀರಕ್ಕೆ ಸ್ವಾತಂತ್ರ್ಯ ದೊರೆತರೆ ನಮ್ಮ ದೇಶವನ್ನು ಕಾಡುತ್ತಿರುವ ಭಯೋತ್ಪಾದನೆ, ಉಗ್ರವಾದ ಚಟುವಟಿಕೆಗಳೆಲ್ಲಾ ನಿಲ್ಲಬಹುದು. ಭಾರತೀಯರು ನೆಮ್ಮದಿಯಿಂದ ಇರಬಹುದು.

ಓಹ್... ನೀವು ಭಾರತೀಯರು ಅಂತ ಹೇಳಿ ಕೋಮುವಾದವನ್ನು ಉಲ್ಲೇಖಿಸಿದಂತಾಗಿದೆಯಲ್ಲವೇ?
* ಓಹ್... ನಾವು ಹೇಳಬೇಕಾದ ವಿಷಯವನ್ನು ನೀವೇ ಹೇಳಿ ಸಂದರ್ಶನಕ್ಕೇ ಅಪಮಾನ ಮಾಡಿದ್ದೀರಿ. ಇರ್ಲಿ ಬಿಡಿ... ನೆನಪಿಸಿದ್ದಕ್ಕೆ ನಿಮಗೊಂದು ದೊಡ್ಡ ಮುಲಾಂ... ಅಲ್ಲಲ್ಲ ಸಲಾಂ. ನೋಡಿ. ನಮ್ಮಲ್ಲಿ ಭಾರತೀಯರು ಅಂದರೆ ಕೋಮುವಾದಿಗಳು ಅಂತ ಹೇಳಿದ ಹಾಗಾಗುತ್ತದೆ. ಅಥವಾ ಹಾಗಂತ ಹೆಚ್ಚಿನವರ ಕಿವಿಗೆ ಕೇಳಿಸುತ್ತದೆ. ಅಮೆರಿಕ, ವ್ಯಾಟಿಕನ್‌ಗಳೆಲ್ಲವೂ ಸದ್ದು ಮಾಡಲಾರಂಭಿಸುತ್ತವೆ. ಯಾಕೆಂದರೆ ಭಾರತದಲ್ಲಿರೋರು ಭಾರತೀಯರೇ ಆಗಿರ್ಬೇಕಲ್ವಾ... ಹೀಗಾಗಿ ಭಾರತೀಯರನ್ನು ಅಲ್ಪ ಸಂಖ್ಯಾತರು ಮತ್ತು ಬಹುಸಂಖ್ಯಾತರು ಅಂತ ಡಿವೈಡ್ ಮಾಡಿಯೇ ಹೇಳಬೇಕಾಗುತ್ತದೆ. ಇಲ್ಲವಾದಲ್ಲಿ ಒಂದು ಬಗೆಯ ಸಂಖ್ಯಾತರಿಗೆ ನಾವು ವಿಶೇಷ ಸವಲತ್ತು ಎಲ್ಲಾ ಕೊಡಿಸುವುದು ಹೇಗೆ? ನಮ್ಮ ರಾಜಕಾರಣಿಗಳು ಓಟಿಗಾಗಿ ಆಶ್ರಯಿಸುವುದಾದರೂ ಯಾರನ್ನು? ಇಲ್ಲಿ ಒಂದಿಡೀ ಸಮುದಾಯದ ಸಮಸ್ಯೆಯ ಪ್ರಶ್ನೆ ಇದೆ. ಒಂದು ದೇಶದ ಸರಕಾರದ ಪ್ರಶ್ನೆ ಇದೆ. ಹೀಗೆಲ್ಲಾ ಇರುವಾಗ ನಾವು ಒಂದು ಸಮುದಾಯವನ್ನು ಮಾತ್ರವೇ ಬೆಂಬಲಿಸಬೇಕಾಗಿರೋದು ನಮ್ಮ ಧರ್ಮ. ಆದರೆ, ಬೇರೆಯವರು ಮತ್ತೊಂದು ಸಮುದಾಯವನ್ನು ಬೆಂಬಲಿಸಿದರೆ ಖಂಡಿತವಾಗಿಯೂ ಅದು ಕೋಮುವಾದ ಅಂತ ಇಡೀ ಜಗತ್ತಿಗೇ ಗೊತ್ತು.

ಮತ್ತೀಗ ನೀವು ನಮ್ಮ ವಿರುದ್ಧವೇ... ಅಂದರೆ ಮಾಧ್ಯಮದವರು ಅಧಮರಾಗಿದ್ದಾರೆ, ಪೊಲೀಸರ ಜೊತೆ ಸೇರಿಕೊಂಡಿದ್ದಾರೆ ಅಂತೆಲ್ಲಾ ಬೊಗಳೆ ಬಿಡ್ತಾ ಇದ್ದೀರಲ್ಲ?
* ಯಾರ್ರೀ ಹೇಳಿದ್ದು ಅಲ್ಲಾಂತ...??? ನೋಡಿ... ಈಗ ನೀವೇ ನಮ್ಮನ್ನು ಸಂದರ್ಶನ ಮಾಡ್ತಾ ಇದ್ದೀರಿ. ನಮ್ಮಂಥವರನ್ನೆಲ್ಲಾ ನೀವಾಗಿಯೇ ಸಂದರ್ಶನ ಮಾಡ್ತಾ ಇದ್ದೀರಿ ಅಂದ್ಮೇಲೆ, ಬಹುಶಃ ನೀವು ಅಧಮರೇ ಇರಬೇಕು. ಯಾರೋ ಪೊಲೀಸರೇ ನಿಮ್ಮನ್ನು ಛೂ ಬಿಟ್ಟಿರಬೇಕು.

ಫೂಕರ್ ಪ್ರಶಸ್ತಿಯ ಬಳಿಕ ನಿಮ್ಮ ಸದ್ದೇ ಕೇಳುತ್ತಿರಲಿಲ್ಲ. ಇತ್ತೀಚೆಗೆ ಕಾಶ್ಮೀರ ಸ್ವಾತಂತ್ರ್ಯ ಘೋಷಿಸಿ ಸುದ್ದಿಯಾದಿರಿ. ಯಾಕೆ ಹೀಗೆ ಆಗಾಗ್ಗೆ ನಾಪತ್ತೆಯಾಗೋದು?
* ಇಲ್ಲಪ್ಪ... ಹಾಗೇನಿಲ್ಲ... ನಮಗೆ ಮಾಡಲು ಸಾಕಷ್ಟು ಹೋರಾಟಗಳು ಇರುತ್ತವೆ. ಅದು ದಿಢೀರ್ ಆಗಿ ನಮ್ಮ ತಲೆಗೆ ಹೊಳೆಯಬೇಕಷ್ಟೇ. ಇತ್ತೀಚೆಗೆ ಜಾಮಿಯಾ ನಗರ ಎನ್ಕೌಂಟರ್ ವಿಷಯ ಒಂದು ತಡವಾಗಿ ಹೊಳೆದಿದೆ. ಸೋ... ಎಲ್ಲದಕ್ಕೂ ಟೈಮ್ ಅಂತ ಇರುತ್ತೆ. ನಾವು ಟೈಮ್ ನೋಡಿ ಕೆಸರಿಗೆ ಕಲ್ಲು ಎಸೀತೀವಿ. ಉಳಿದ ಸಮಯದಲ್ಲೆಲ್ಲಾ... ಏನು ಸಿಗುತ್ತದೆ ಅಂತ ಯೋಚಿಸ್ತಾ ಇರ್ತೀವಿ. ಹೀಗೇ ದೇಶದ ಬಗ್ಗೆ ನೆಗೆಟಿವ್ ವಿಷಯಗಳನ್ನು ಬರೆದ್ರೆ ಖಂಡಿತವಾಗಿಯೂ ಮತ್ತೊಂದು ಫೂಕರ್ ಪ್ರಶಸ್ತಿಯೂ ದೊರೆಯಬಹುದೆಂಬ ಆಸೆ ನನಗಿಲ್ಲವಾದರೂ, ದುರಾಸೆ ಇದೆ. ಹೀಗಾಗಿ ನಿಮಗೊಂದು ನಮಸ್ಕಾರ... ಮತ್ತೇನು ಹೇಳಿಕೆ ನೀಡಬಹುದೂಂತ ಯೋಚಿಸಬೇಕು!

Thursday, October 16, 2008

ವಿದ್ಯುತ್ ಕಳವಿಗೆ ಲೋಡ್ ಶೆಡ್ಡಿಂಗ್ ತೆರವು ಶಿಕ್ಷೆ!

(ಬೊಗಳೂರು ಕಳ್ಳರ ಬ್ಯುರೋದಿಂದ)
ಬೊಗಳೂರು, ಅ.15- ವಿದ್ಯುತ್ ಕಳ್ಳತನ ತಡೆಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಘೋಷಿಸಿದ್ದು, ರೈತರಲ್ಲಿ, ಗ್ರಾಮೀಣ ಪ್ರದೇಶದಲ್ಲಿ ಹರ್ಷ ಮೂಡಿಸಿದೆ.

ಈ ಸುದ್ದಿ ಪ್ರಕಟವಾದ ತಕ್ಷಣವೇ ರೈತರೆಲ್ಲಾ ಹರ್ಷ ಆಚರಿಸುತ್ತಾ, ರಾತ್ರಿಯಿಡೀ ಸಂತಸದ ಹೊಳೆಯಲ್ಲಿ "ತೇಲುತ್ತಾ" ಇರುವುದು ಏಕೆ ಎಂಬುದರ ಬಗ್ಗೆ ನಮ್ಮ ಬ್ಯುರೋದ ಏಕಸದಸ್ಯ ಆಯೋಗದ ಒಂದಷ್ಟು ಮಂದಿ ಸೇರಿಕೊಂಡು ತನಿಖೆ ಆರಂಭಿಸಿತು.

ವಿದ್ಯುತ್ ಕಳ್ಳತನ ತಡೆಗೆ ಸೂಕ್ತ ಕ್ರಮ ಜರುಗಿಸುವುದು ಹೇಗೆ ಎಂದರೆ ವಿದ್ಯುತ್ ಕಳ್ಳರಿಗೇ ಶಾಕ್ ಹೊಡೆಸಿ, ಅವರು ಮುಂದೆ ಕದಿಯದಂತೆ ಮಾಡುವುದು. ಅಂದರೆ ವಿದ್ಯುತ್ ವಯರುಗಳಲ್ಲಿ ವಿದ್ಯುತ್ ಹರಿಸುವುದು. ಈ ಮೂಲಕ ಯಾವತ್ತೂ ಕರೆಂಟಿಲ್ಲದೆ ಒದ್ದಾಡುತ್ತಿದ್ದವರಿಗೆ ಈ ಲೆಕ್ಕದಲ್ಲಾದರೂ ಕರೆಂಟು ಬರುತ್ತದೆಯೆಂಬುದು ಅವರ ಲೆಕ್ಕಾಚಾರವೆಂಬುದನ್ನು ಪತ್ತೆ ಹಚ್ಚಲಾಗಿದೆ. ಈ ನೆಪದಲ್ಲಿ ನಮಗಿನ್ನು ಕರೆಂಟು ಖಂಡಿತ ಎಂದು ಅವರೆಲ್ಲಾ ಬಿದ್ದು ಬಿದ್ದು ನಗುತ್ತಿರುವುದನ್ನು ಕೂಡ ಚಿತ್ರ ಸಮೇತ ಬೊಗಳೂರು ಬ್ಯುರೋ ಕಂಡುಕೊಂಡಿದೆ.

Monday, October 13, 2008

ದೇಶದಲ್ಲಿ ಬಡತನ, ಭಯೋತ್ಪಾದನೆ ನಿಷೇಧ!

(ಬೊಗಳೂರು ನಿಷೇಧ ಬ್ಯುರೋದಿಂದ)
ಬೊಗಳೂರು, ಅ. ೧೩- ಇದೀಗ ದೇಶಾದ್ಯಂತ ನಿಷೇಧಗಳ ಯುಗ. ಶ್ರೀರಾಮನ ದಾಸರು ಧೂಮನನ್ನು ನಿಷೇಧಿಸಿ, ಇದೀಗ ಹೆಂಡ-ತಿಯರನ್ನು ನಿಷೇಧಿಸಲು ಹೊರಟಿದ್ದಾರೆ. ಮತ್ತೊಂದೆಡೆ ಮತಾಂತರ ನಿಷೇಧದ ಆಗ್ರಹವೂ, ಪಕ್ಷಾಂತರ ನಿಷೇಧದ ಒತ್ತಾಸೆಯೂ, 'ಗಂಡಾಂ'ತರವನ್ನು ತಡೆಯಬೇಕೆಂಬ ಒಕ್ಕೊರಲ ಕೂಗೂ ಕೇಳಿಬರುತ್ತಲೇ ಇದೆ.

ಇಷ್ಟೆಲ್ಲದರ ಮಧ್ಯೆಯೇ, ವಿಪ್ರ ಸಿಂಗರಂತೂ ಪರಿಷತ್ತು ಮತ್ತು ದಳಗಳನ್ನು ನಿಷೇಧಿಸಲು ಆಗ್ರಹಿಸಿದ್ದಾರೆ. ಇದರ ಹಿಂದೆ ವಿಧಾನ ಪರಿಷತ್ತು ಮತ್ತು ಜನತಾ ದಳ ಎಂಬ ಅಕ್ಷರಗಳೂ ಸೇರಿಕೊಂಡಿವೆಯೇ ಎಂಬ ಬಗ್ಗೆ ಬೊಗಳೂರು ಬ್ಯುರೋ ತನಿಖೆ ನಡೆಸುತ್ತಿದೆ.

ಆದರೆ, ಯಾರಿಗೂ ತಿಳಿಯದ ವಿಷಯವೊಂದು ಬೊಗಳೂರು ಮಂದಿಗೆ ಇರುವ ಮತ್ತು ಇರಬಹುದಾದ ಪ್ರತಿಯೊಂದು ಮನೆಮನೆಯಲ್ಲಿಯೂ ಕೇಳಿಬರುತ್ತಿದೆ. ಅದೇನೆಂದರೆ ಕೇಂದ್ರ ಸರಕಾರದ ಉನ್ನತ ಮಟ್ಟದ ಸಮಿತಿ ಕೈಗೊಂಡಿರುವ ಹತ್ತು ಹಲವು ನಿಷೇಧದ ನಿರಾಧಾರ ನಿರ್ಧಾರಗಳು.

ದೇಶದಲ್ಲಿ ಕ್ಷೋಭೆಗೆ ಕಾರಣವಾಗುತ್ತಿರುವುದು ಮತ್ತು ತಮ್ಮ ಓಟಿನ ಬ್ಯಾಂಕಿನ ಮೇಲೆ ತೀವ್ರ ಪರಿಣಾಮ ಬೀರುತ್ತಿರುವುದು ಭಯೋತ್ಪಾದನೆ. ಹೀಗಾಗಿ ಭಯೋತ್ಪಾದನೆಯನ್ನೇ ನಿಷೇಧಿಸಲು ಕೇಂದ್ರ ಚಿಂತಿಸಿದೆ. ಜತೆಗೇ ಬಾಂಬು ಸ್ಫೋಟಿಸುವುದನ್ನು ನಿಷೇಧಿಸುವ ಚಿಂತನೆ ಬಲವಾಗಿ ಕೇಳಿಬರುತ್ತಿದೆ. ಇದರೊಂದಿಗೆ, ದೇಶವನ್ನು ಕಾಡುತ್ತಿರುವ ಸಮಸ್ಯೆಗಳಾದ ಬೆಲೆ ಏರಿಕೆಯನ್ನೂ ನಿಷೇಧಿಸಿ ಆದೇಶ ಹೊರಡಿಸಲಿರುವ ಕೇಂದ್ರವು, ಹಣದುಬ್ಬರಕ್ಕೆ ನಿಷೇಧ ಹೇರಲು ಕೂಡ ನಿರ್ಧರಿಸಿದೆ.

ನಮ್ಮದು ಬಡ ರಾಷ್ಟ್ರ ಎಂಬೆಲ್ಲಾ ಆರೋಪಗಳು ಹೆಚ್ಚಾಗಿ ಕೇಳಿಬರುತ್ತಿರುವುದರಿಂದ ದೇಶದಲ್ಲಿ ಬಡತನವನ್ನೂ ನಿಷೇಧಿಸುವ ಕುರಿತು ಚಾಣಾಕ್ಷ ಸಚಿವರು ತೀರ್ಮಾನ ಕೈಗೊಂಡಿದ್ದು, ಮತ್ತೊಬ್ಬ ಅತಿ ಚಾಣಾಕ್ಷ ಮಂತ್ರಿ ಮಹೋದಯರಂತೂ ಬಡವರನ್ನೇ ನಿಷೇಧಿಸಲು ಯೋಜನೆ ರೂಪಿಸಿ ಸಲಹೆ ನೀಡಿದ್ದಾರೆ.

ಆದರೆ ಪ್ರತಿಪಕ್ಷದವರಂತೂ, ಬೆಲೆ ಸಿಕ್ಕಾಪಟ್ಟೆ ಏರಿಸಿದ, ಕುಸಿಯುತ್ತಿರುವ ಸೆನ್‌ಸೆಕ್ಸ್‌ಗೆ ಉತ್ತೇಜನ ನೀಡದ, ಜನಸಾಮಾನ್ಯರು ಆಹಾರ ಧಾನ್ಯಗಳ ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ಈ ದಿನಗಳಲ್ಲಿ ಪರಮಾಣು ತಿನ್ನುವಂತೆ ಮಾಡಿದ ಸರಕಾರವನ್ನೇ ನಿಷೇಧಿಸಬೇಕೆಂದು ಕೂಗೆಬ್ಬಿಸುತ್ತಿರುವುದು ಮಾತ್ರ ಅಧಿಕಾರ ಅನುಭೋಗಿಗಳ ನಿದ್ದೆ ಕೆಡಿಸಿದೆ. ಇನ್ನೂ ಯಾವ್ಯಾವುದನ್ನು ನಿಷೇಧಿಸಬಹುದು ಎಂಬುದರ ಕುರಿತು ಓದುಗರಿಂದ ಸಲಹೆ ಆಹ್ವಾನಿಸಲಾಗಿದ್ದು, ಇದನ್ನು ಕೇಂದ್ರದ Unprecedented Price Agenda ಸರಕಾರಕ್ಕೆ ತಲುಪಿಸಿ, ಈ ಸಲಹೆಯನ್ನು ನಿಷೇಧಿಸದಂತೆ ಕೋರಲಾಗುತ್ತದೆ!

Wednesday, October 08, 2008

ಒಡೆದ ಹೃದಯಕ್ಕೆ ತೇಪೆ: ಕಾಲೇಜು ಪರಿಸರದಲ್ಲಿ ಹರ್ಷ!

(ಬೊಗಳೂರು ಒಡೆದ ಹೃದಯಗಳಾ ಬ್ಯುರೋದಿಂದ)
ಬೊಗಳೂರು, ಅ.8- ಹೆಚ್ಚಾಗಿ ಕಾಲೇಜು ಪರಿಸರದಲ್ಲಿ ಕಂಡುಬರುತ್ತಿರುವ ಹೃದ್ರೋಗಿಗಳಲ್ಲಿ ಆಸೆಯ ಚಿಗುರೊಡೆದಿದೆ ಮತ್ತು ಭರವಸೆಯ ಮೊಳಕೆಯೊಡೆದಿದೆ ಹಾಗೂ ಬತ್ತಿ ಹೋದ ಜೀವನದ ಮೇಲಿನ ಆಸೆ ಮತ್ತೆ ಚಿಗಿತುಕೊಂಡಿದೆ. ಇದಕ್ಕೆ ಕಾರಣವೆಂದರೆ ಇಲ್ಲಿ ಪ್ರಕಟವಾಗಿರುವ ವರದಿ.

ಹೃದಯ ಒಡೆದುಕೊಂಡೋ, ಒಡೆಸಿಕೊಂಡೋ ಗೋಳೋ ಎಂದು ಪರಿತಪಿಸುತ್ತಿದ್ದ ಕಾಲ್-Age ವಿದ್ಯಾರ್ಥಿ ಬಳಗವು ಇದೀಗ ನೆಮ್ಮದಿಯ ನಿಟ್ಟುಸಿರುಬಿಟ್ಟಿತ್ತು, ಕೊನೆಗೂ ತಮ್ಮ ಮೊರೆ ಆ ದೇವರಿಗೆ ಕೇಳಿಸಿತಲ್ಲಾ ಎಂದು ಹರ್ಷಚಿತ್ತರಾಗಿ ಬೊಗಳೂರು ಬೊಗಳೆ ಬ್ಯುರೋಗೆ ಬಂದು ಸಿಹಿತಿಂಡಿ ಹಂಚಿ ಹೋಗಿದ್ದಾರೆ.

ತಮ್ಮ ಹೃದಯದ ಮೊರೆಯನ್ನು ಕೇಳುವವರು ಯಾರೂ ಇಲ್ಲ ಎಂದೆಲ್ಲಾ ಪರಿತಪಿಸಿಕೊಂಡು, ಆಗಾಗ್ಗೆ ಬ್ಲಾಗಿನಲ್ಲಿ ವಿರಹ ಗೀತೆಯನ್ನು ಗೀಚುತ್ತಲೋ, ಪತ್ರಿಕಾ ಕಚೇರಿಗಳಿಗೆ. ಬೊಗಳೆ ಬ್ಯುರೋಗೆಲ್ಲಾ ಕವನಗಳನ್ನು ಗೀಚಿ ಕಳುಹಿಸಿಯೋ, ಆಯಾ ಕಚೇರಿಗಳ ಬಕೆಟ್ ತುಂಬಿಸುತ್ತಿದ್ದವರೆಲ್ಲರೂ ಇದೀಗ ಆನಂದ ಬಾಷ್ಪ ಹರಿಸತೊಡಗಿದ್ದಾರೆ.

ಹೀಗಾಗಿ ಇನ್ನು ಮುಂದೆ ಬ್ಲಾಗುಗಳಲ್ಲೆಲ್ಲವೂ ಒತ್ತರಿಸಿ ಬರುವ ವಿ-ರಸ ಗೀತೆಗಳ ಬದಲು ಸ-ರಸ ಗೀತೆಗಳನ್ನು ಬಿತ್ತರಿಸಲಿವೆ ಎಂದು ಭವಿಷ್ಯ ನುಡಿಯಲಾಗುತ್ತಿದೆ.

ಇದೇ ಕಾರಣಕ್ಕೆ, ಪಡ್ಡೆ ಹುಡುಗರ ಕಾಟ ಜಾಸ್ತಿಯಾಗಿದೆಯೆಂದು ಹುಡುಗಿಯರೂ, ಪಡ್ಡೆ ಹುಡುಗಿಯರ ಕಾಟ ಹೆಚ್ಚಾಗಿದೆ ಅಂತ ಪಡ್ಡೆ ಹುಡುಗಿಯರೂ ಬೊಗಳೂರು ಬ್ಯುರೋದೆ ದೂರುವುದನ್ನು ಮರೆಯಲಿಲ್ಲ.

ಇದರ ಹಿಂದಿನ ಕಾರಣ ಪತ್ತೆ ಹಚ್ಚಲು ಹೊರಟಾಗ ಬಯಲಾದ ಅಂಶವೆಂದರೆ, ವೈದ್ಯರು ಒಡೆದು ಹೋದ ಹೃದಯದ ಚೂರುಗಳನ್ನು ಜೋಡಿಸಿ, ಹೃದಯಕ್ಕೆ ಪುನಶ್ಚೇತನ ನೀಡುತ್ತಾರೆಂಬ ಭರವಸೆಯಲ್ಲಿ, ಹಲವು ಬಾರಿ ಹೃದಯ ಒಡೆಸಿಕೊಳ್ಳಲು, "ಒಮ್ಮೆ ಒಡೆದರೆ ಹೋಗಲಿ, ಸರಿಪಡಿಸಲು ವೈದ್ಯರಿದ್ದಾರೆ" ಎಂಬ ಭಾವನೆ ಬೆಳೆಸಿಕೊಂಡಿರುವುದು!

Tuesday, October 07, 2008

ಕಂಡಲ್ಲಿ ಗುಂಡು: ಸರಕಾರದ ಕೊನೇ ಅಸ್ತ್ರ

(ಬೊಗಳೂರು ಗುಂಡು ಹಾಕುವ ಬ್ಯುರೋದಿಂದ)
ಬೊಗಳೂರು, ಅ.೭- ದೇಶಾದ್ಯಂತ ಕಳವಳಕಾರಿ ಪರಿಸ್ಥಿತಿ ಮತ್ತು ರಾಜ್ಯಾದ್ಯಂತ ಪಕ್ಷಾಂತರ-ಮತಾಂತರಗಳ ಗಂಡಾಂತರಗಳಿಂದ ಮುಳುಗಿರುವ ರಾಜ್ಯ ಸರಕಾರ, ಗುಂಡಾಂತರವೇ ಮೇಲು ಎಂದು ತಿಳಿದುಕೊಂಡಿದ್ದು, ಸಚಿವರು, ಶಾಸಕರು ಕಂಡಲ್ಲಿ ಗುಂಡು ಹಾಕಲು ನಿರ್ಧರಿಸಿದ್ದಾರೆ.

ಒಂದೆಡೆಯಿಂದ ಕೇಂದ್ರ ಸರಕಾರವೂ ಆರ್ಟಿಕಲ್ 355 ಎಂಬ ನಳಿಕೆಯ ಗುಂಡು ಹಾಕಿದೆ. ಮತ್ತೊಂಡೆಯಿಂದ ಧರ್ಮ ನೇತಾರರೂ ಕೂಡ ಮನೆ ಬಾಗಿಲಿಗೇ ಹೋದಾಗ ಛೀಮಾರಿಯೆಂಬ ಗುಂಡು ಹಾಕಿದ್ದಾರೆ. ಮಗದೊಂದೆಡೆಯಿಂದ ಉಗ್ರರು ಗುಂಡು ಹಾರಿಸಲು ಹೊಂಚು ಹಾಕುತ್ತಿದ್ದಾರೆ ಮತ್ತು ಸಿಕ್ಕಿ ಬೀಳುತ್ತಿದ್ದಾರೆ. ಇನ್ನೊಂದೆಡೆಯಿಂದ ರಾಜ್ಯ ಸರಕಾರದ ಗೃಹ ಸಚಿವರ ಮೇಲೂ ಮಾತಿನ ಗುಂಡಿನ ಸುರಿಮಳೆ ಸುರಿಯುತ್ತಿದೆ.

ಹೀಗಾಗಿ ಎಲ್ಲರೂ ತಮಗೆ ಗುಂಡು ಹಾಕುವಾಗ, ತಾವು ಕೂಡ ಗಡದ್ದಾಗಿ ಗುಂಡು ಹಾಕುವುದೇ ಸೂಕ್ತ ಎಂದು ತಿಳಿದಿರುವ ಸರಕಾರದ ಮಂದಿ, ಇದಕ್ಕಾಗಿ ಕಂಡಲ್ಲಿ ಗುಂಡು ಹಾಕಲು ನಿರ್ಧರಿಸಿದ್ದಾರೆ.

ಕಂಡಲ್ಲಿ ಗುಂಡು ಹಾಕುವುದರಿಂದ ತಲೆನೋವು ಕಡಿಮೆಯಾಗುತ್ತದೆ ಎಂದು ಬೊಗಳೂರಿನ ಹಿರಿಯರು ಅದ್ಯಾವತ್ತೋ ನುಡಿದಿರುವುದನ್ನು ಆದರ್ಶವಾಗಿರಿಸಿಕೊಂಡು ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ರದ್ದಿಯ ಮೂಲಗಳು ವರದ್ದಿ ಮಾಡಿವೆ.

Thursday, October 02, 2008

ಗಾಂಧಿ ಜಯಂತಿ: ಬೊಗಳೆಯಿಂದ ಹಿಂಸಾತ್ಮಕ ಆಚರಣೆ

(ಬೊಗಳೂರು ಹಿಂಸಾತ್ಮಕ ಬ್ಯುರೋದಿಂದ ವಿಶೇಷ)
ಇಂದು ಗಾಂಧಿ ಜಯಂತಿ. ಈ ಸಂದರ್ಭ ಬೊಗಳೂರು ಜನತೆಗೆ ಗಾಂಧಿ ನೆನಪಾಗುವುದು ಯಾವಾಗ ಎಂಬುದರ ಬಗ್ಗೆ ನಮ್ಮ ಬ್ಯುರೋ ವಿಶೇಷ ವರದಿಯೊಂದನ್ನು ಸಂಗ್ರಹಿಸಿ ತೆರಳಿದೆ. ಆದರೆ ಅದು ಸಕಾಲದಲ್ಲಿ ತಲುಪಿಲ್ಲದ್ದರಿಂದ ಮಧ್ಯೆ ಮಧ್ಯೆ ಬಂದು ತಲುಪಿದ ಅರ್ಧಂಬರ್ಧ ವರದಿಯನ್ನೇ ಇಲ್ಲಿ ಅವಸರವಸರವಾಗಿ ಪಟ್ಟಿ ಮಾಡಲಾಗಿದೆ.

ದೇಶಾದ್ಯಂತ ಹಿಂಸೆ ತಾಂಡವವಾಡುತ್ತಿದೆ- ಶಾಂತಿ-ಅಹಿಂಸೆ ಬೋಧಿಸಿದ ಗಾಂಧೀಜಿ ನೆನಪಾಗುತ್ತಾರೆ.

ದೇಶಾದ್ಯಂತ ಭ್ರಷ್ಟಾಚಾರ ತಾಂಡವವಾಡುತ್ತಿದೆ - ಸತ್ಯ-ಶಾಂತಿ ಮೂರ್ತಿ ಗಾಂಧೀಜಿ ನೆನಪಾಗುತ್ತಾರೆ.

ಕಾಂಗ್ರೆಸ್ ಪಕ್ಷವು ಏನು ಬೇಕೋ ಅದೆಲ್ಲವನ್ನೂ ಮಾಡಿಕೊಳ್ಳುತ್ತಿದೆ - ಕಾಂಗ್ರೆಸ್ಸನ್ನು ವಿಸರ್ಜಿಸಬೇಕು ಎಂದು ಸಲಹೆ ನೀಡಿದ ಗಾಂಧೀಜಿ ನೆನಪಾಗುತ್ತಾರೆ.

ಕಾಶ್ಮೀರದಲ್ಲಿ ಹಿಂಸಾಚಾರ ಮೇಳೈಸುತ್ತಿದೆ - ದೇಶ ವಿಭಜನೆಯ ಸಂದರ್ಭದ ಗಾಂಧೀಜಿ ನೆನಪಾಗುತ್ತಾರೆ.

ಇಂದಿನ ದಿನ ನಾವು ಗಾಂಧೀಜಿ ಪುತ್ರ ಹರಿಲಾಲನಿಂದಾಗಿ ಗಾಂಧೀಜಿಯನ್ನು ನೆನಪಿಸಿಕೊಳ್ಳುತ್ತೇವೆ.

ಬೇಕು ಬೇಕಾದ್ದಕ್ಕೆ, ಬೇಡದಿದ್ದಕ್ಕೆಲ್ಲಾ ಸತ್ಯಾಗ್ರಹ ಮಾಡುತ್ತೇವೆ - ಗಾಂಧೀಜಿ ನೆನಪಾಗುತ್ತಾರೆ.

ಮುಸ್ಲಿಂ ಭಯೋತ್ಪಾದನೆ ಈ ಮಟ್ಟಕ್ಕೇರಿದ್ದರೂ, ವಿಸರ್ಜನೆಯಾಗಲೇಬೇಕೆಂದು ಗಾಂಧೀಜಿಯಿಂದ ಪರಿಗಣಿಸಲ್ಪಟ್ಟಿದ್ದ ಕಾಂಗ್ರೆಸ್ ನೇತೃತ್ವದ ಸರಕಾರ ಓಲೈಕೆ ರಾಜಕೀಯ ಮಾಡುತ್ತಲೇ ಇರುವಾಗ ಗಾಂಧೀಜಿ ನೆನಪಾಗುತ್ತಾರೆ.

ಸಂಸತ್ ಮೇಲೆ ದಾಳಿ ನಡೆಸಿ, ಕಾನೂನು ಪ್ರಕಾರ ಗಲ್ಲು ಶಿಕ್ಷೆ ವಿಧಿಸಲ್ಪಟ್ಟಿದ್ದರೂ, ಜೈಲಿನಲ್ಲೇ ಕೊಳೆಯುತ್ತಿರುವವರಿರುವಾಗ ಶಾಂತಿ, ಸಹನೆ, ತಾಳ್ಮೆ, ಅಹಿಂಸೆ ಬೋಧಿಸಿದ ಗಾಂಧೀಜಿ ನೆನಪಾಗುತ್ತಾರೆ.

ಶಾಂತಿ ಶಾಂತಿ ಶಾಂತಿ ಎಂದು ಬೋಧಿಸಿದ ಗಾಂಧೀಜಿ ನೆನಪಾಗುವಾಗ ಅದ್ಯಾಕೋ ಮತಾಂತರವೂ ನೆನಪಾಗುತ್ತದೆ. ಅಥವಾ ಮತಾಂತರ - ಹಿಂಸಾಚಾರ ನೋಡಿದಾಗ ಗಾಂಧೀಜಿಯೇ ನೆನಪಾಗುತ್ತಾರೆ.

ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟಿದ್ದು, ದೇಶದ ರಕ್ಷಕ, ದೇಶದ ಸಾರ್ವಭೌಮತೆಯ ಉದ್ಧಾರಕ ಎಂದೆಲ್ಲಾ ಕರೆಸಿಕೊಳ್ಳುತ್ತಿರುವ "ಗಾಂಧಿ ಕುಟುಂಬ" ಎಂದು ಹೇಳುವಾಗ ಮಾತ್ರ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಮಾತ್ರವಲ್ಲ ಸೋನಿಯಾ ಗಾಂಧಿಯೂ ನೆನಪಾಗುತ್ತಾರೆ!

ಆದರೋ.. ಭಾರತದ ಮುಂದಿನ ಭವ್ಯ ಭವಿಷ್ಯದ ನೇತಾರ ಎಂದು ಸ್ಮರಿಸಿಕೊಳ್ಳುವಾಗ ರಾಹುಲ್ ಗಾಂಧಿ ನೆನಪಾಗುತ್ತಾರೆ.

ಇವೆಲ್ಲದರ ಮಧ್ಯೆ, ಗಾಂಧಿ ಜಯಂತಿ ಆಚರಣೆಯ ವಿಷಯ ಬಂದಾಗ ಮಾತ್ರ, ಯಾವ ಗಾಂಧೀಜಿ? ಸೋನಿಯಾ? ರಾಹುಲ್? ಪ್ರಿಯಾಂಕ ಗಾಂಧಿಯೇ? ಎಂದೆಲ್ಲಾ ತಡಬಡಾಯಿಸಿದವರು ಬೊಗಳೂರು ಪ್ರಜೆಗಳು!

Monday, September 29, 2008

ಉಗ್ರರಿಗೂ ಮತದಾನದ ಹಕ್ಕು: ಕೇಂದ್ರ ಚಿಂತನೆ

(ಬೊಗಳೂರು ಓಟಿನ ಬ್ಯಾಂಕು ಬ್ಯುರೋದಿಂದ)
ಬೊಗಳೂರು, ಸೆ.29- ಭಯೋತ್ಪಾದಕರಿಗೂ ಮತದಾನ ಹಕ್ಕು ನೀಡಲು ಕೇಂದ್ರ ಗೃಹದೊಳಗಿರುವ ಸಚಿವಾಲಯಕ್ಕೆ ಶಾಸನ ರೂಪಿಸಲು ತೀವ್ರ ಒತ್ತಡ, ಸಲಹೆ, ಮನವಿ ಇತ್ಯಾದಿಗಳು ಕೇಳಿಬರುತ್ತಿರುವುದು ಬೊಗಳೆ ರಗಳೆ ಬ್ಯುರೋದ ವ-ರದ್ದಿಗಾರರ ಕಿವಿಗೆ ಬಿದ್ದಿದೆ.

ಇದಕ್ಕೆ ಮೂಲ ಪ್ರೇರಣೆ ದುರ್ಜನ ಸಿಂಗರು ಕೈಗೊಳ್ಳುತ್ತಿರುವ ನಿರ್ಧಾರಗಳು. ತಮ್ಮ ಓಟಿನ ಬ್ಯಾಂಕುಗಳು ಇತ್ತೀಚೆಗೆ ಜೈಲು ಸೇರುತ್ತಿರುವುದರಿಂದ ತೀವ್ರ ಕಳವಳಗೊಂಡಿರುವ ಸರಕಾರವು, ಇನ್ನು ಮುಂದೆ ಚುನಾವಣೆಯಲ್ಲಿ ಜಯಿಸುವುದಾದರೂ ಹೇಗೆ ಎಂದು ಚಿಂತಾಕ್ರಾಂತವಾಗಿ ಕುಳಿತಿದ್ದಾಗ, ಅರ್ಜುನನಿಗೆ ಅಭಿಮನ್ಯುವಿನಿಂದ ದೊರೆತ ಮಾದರಿಯ ಸಲಹೆಯೊಂದು ಛಕ್ಕಂತ ಸರಕಾರದ ಅಂಗಳದಲ್ಲಿ ಬಂದು ಬಿದ್ದಿದೆ.

ಸ್ವತಃ ದುರ್ಜನ ಸಿಂಗರೇ ಇದರಿಂದ ಕಕ್ಕಾಬಿಕ್ಕಿಯಾಗಿ, ಈ ಸಲಹೆ ಬಿದ್ದದ್ದೆಲ್ಲಿಂದ ಎಂದು ಸಾವರಿಸಿಕೊಳ್ಳುವಷ್ಟರಲ್ಲಿ, ಶಾಸನ ರೂಪಿಸಲು ಎಲ್ಲ ರೀತಿಯ ಸಿದ್ಧತೆಗಳನ್ನೂ ಮಾಡಲಾಗಿದೆ ಎಂದು ಮೂಲಗಳು ವರದ್ದಿ ಮಾಡಿವೆ.

ಇದರ ನಡುವೆಯೇ, ತಮ್ಮ ಗೃಹದ ಹೊರಗೆ ಮತ್ತೆ ಮತ್ತೆ ಪಟಾಕಿಗಳು ಸಿಡಿಯುತ್ತಿರುವುದು ಗೃಹದ ಸಚಿವರ ಗಮನಕ್ಕೆ ಬರುವ ವೇಳೆಗೆ ಆ ಸುದ್ದಿಯ Expiry date ಮುಗಿದಿರುತ್ತದೆ. ಹೀಗಾಗಿ, ಅವರು ಗೃಹದ ಒಳಗಿಂದ ಹೊರಗೆ ಬಂದು, "ಹೌದಾ, ಸಿಡಿದದ್ದು ಪಟಾಕಿಯೇ? ಬಹುಶಃ ದೀಪಾವಳಿ ಸಮೀಪಿಸುತ್ತಿದೆಯಲ್ಲ, ಅದೇ ಇರಬೇಕು" ಎಂದು ತಮ್ಮನ್ನು ಭೇಟಿಯಾದ ಸುದ್ದಿಗಾರರಿಂದಲೇ ಸ್ಪಷ್ಟನೆ ಕೇಳಿದ್ದಾರೆ.

ನಾಲ್ಕು ಹೆಜ್ಜೆ ಮುಂದುವರಿದು ಮಾತನಾಡಿದ ಅವರು, ತಮ್ಮ ಕಾರಿನತ್ತ ತಲುಪಿ, "ನಾವು ಅಲ್ಪ ಸಂಖ್ಯಾತರನ್ನು ರಕ್ಷಿಸಬೇಕು. ಪಾಪ, ಅವರು ಈ ದೇಶದಲ್ಲಿ ಅದೆಷ್ಟು ಭೀತಿಯ ವಾತಾವರಣದಲ್ಲಿ ಬದುಕುತ್ತಿದ್ದಾರೆ. ನೆರೆಯ ಪಾಕಿಸ್ತಾನದಲ್ಲೂ ನಮ್ಮಲ್ಲಿದ್ದಂಥದ್ದೇ ಸಮಸ್ಯೆಯಿದೆ. ನಾವಂತೂ ಭಾರತದಲ್ಲಿ ಅವರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕಟಿಬದ್ಧರಾಗಿದ್ದೇವೆ. ಅವರಿಗೆ ನಾವು ರಕ್ಷಣೆ ಕೊಡದಿದ್ದರೆ, ಬೇರೆ ಯಾರು ಕೊಡುತ್ತಾರೆ? ಉಳಿದ ಎಲ್ಲ ಪಕ್ಷದವರೂ ಭಾರತದಲ್ಲಿರುವವರ ಪರವಾಗಿಯೇ ಮಾತನಾಡುತ್ತಿವೆ. ನಾವಾದರೂ ಇವರ ಬಗ್ಗೆ ಕಾಳಜಿ ತೆಗೆದುಕೊಳ್ಳಬೇಡ್ವೇ" ಎಂದು ಪ್ರಶ್ನಿಸಿದ್ದಾರೆ.

ಉಗ್ರಗಾಮಿಗಳೆಲ್ಲರನ್ನೂ ಭಯೋತ್ಪಾದಕರೆಂದು ದೂರವಿಡಲಾಗುತ್ತದೆ. ಅವರಿಗೆ ಮತದಾನದ ಹಕ್ಕನ್ನೂ ನಿರಾಕರಿಸುತ್ತಿರುವುದು ನಮ್ಮ ದೇಶದ ಸಾರ್ವಭೌಮತೆಗೆ ಧಕ್ಕೆ ತರುವ ಸಂಗತಿ. ಪಟಾಕಿ ಸ್ಫೋಟಿಸಿದ ಕೆಲವರನ್ನಂತೂ ಜೈಲಿಗೆ ತಳ್ಳಲಾಗುತ್ತಿದೆ. ಅವರೂ ಮಾನವರೇ ಅಲ್ಲವೇ? ಅವರಿಗೂ ಮಾನವೀಯತೆ ತೋರಿಸಬೇಡವೇ? ಓಟಿನ ಸಮಯದಲ್ಲಾದರೂ ಅವರಿಗೆ ಒಂದಷ್ಟು ಕ್ಷಣಗಳ ಕಾಲ ಹೊರಗೆ ಬಂದು ಮತ ಚಲಾಯಿಸುವಂತಾಗಲು, ಅದಕ್ಕೆ ಪೂರಕವಾದ ಕಾನೂನು ನಮ್ಮ ಮುಂದಿದೆ ಎಂದು ಕೇಂದ್ರದ ವಕ್ತಾರರು ಬೇರೆಲ್ಲಾ ಪತ್ರಿಕೆಗಳನ್ನು ಬಿಟ್ಟು, ಬೊಗಳೆ ರಗಳೆ ಬ್ಯುರೋದ ರದ್ದಿಗಾರರಿಗೂ ತಿಳಿಸದೆ ಪತ್ರಿಕಾ ಗೋಷ್ಠಿಯಲ್ಲಿ ವಾದಿಸಿದ್ದಾರೆ.

Friday, September 26, 2008

ಶ್ವಾನ ದಳವನ್ನೇ ಬಾಂಬ್ ನಿಷ್ಕ್ರಿಯ ದಳವಾಗಿಸಿದರು!

(ಬೊಗಳೂರು ನಿಷ್ಕ್ರಿಯ ದಳದಿಂದ)
ಬೊಗಳೂರು, ಸೆ.26- ಕೇವಲ ಬಾಂಬ್ ಪತ್ತೆ ದಳದಿಂದಲೇ ಬಾಂಬ್ ನಿಷ್ಕ್ರಿಯ ದಳದ ಕೆಲಸ ಮಾಡಿಸಿದ ಬೊಗಳೂರು ಪೊಲೀಸರ ಸಂಶೋಧನೆಯನ್ನೇ ಬೊಗಳೆ ರಗಳೆ ಬ್ಯುರೋದ ಸಂಶೋಧಕರು ಪತ್ತೆ ಹಚ್ಚಿ ತಮ್ಮ ಚಾಕಚಕ್ಯತೆ ಮೆರೆದಿದ್ದಾರೆ.

ವಾಸ್ತವವಾಗಿ ಧಾರವಾಡದಲ್ಲಿ ಬಾಂಬ್ ಇದೆ ಎಂದು ಗೊತ್ತಾದಾಗ, ಬಾಂಬ್ ನಿಷ್ಕ್ರಿಯ ದಳವು ಬೆಂಗಳೂರಿನಿಂದ ಬರಲು ಏಳೆಂಟು ಗಂಟೆ ಹಿಡಿಯುತ್ತದೆ ಎಂಬುದು ಪೊಲೀಸರ ಚಿಂತೆಗೆ ಕಾರಣ. ಹೀಗಾಗಿ ಧಾರವಾಡದಲ್ಲೇ ಲಭ್ಯವಿದ್ದ ನಾಯಿಯೊಂದನ್ನು ಕರೆದೊಯ್ದ ಅವರು, ಬಾಂಬ್ ಪತ್ತೆ ದಳವನ್ನಾಗಿ ಮಾಡಿಕೊಂಡರು.

ಈ ನಾಯಿಗೆ ಸ್ಥಳದಲ್ಲೇ ಚೆನ್ನಾಗಿ ನೀರೋ/ಬೀರೋ ಕುಡಿಸಿದ ಅವರು, ಬಾಂಬ್ ಹುಡುಕಲಾರಂಭಿಸಿದರು. ಅರ್ಧ ಗಂಟೆ ಕಳೆಯುವಷ್ಟರಲ್ಲಿ ನಾಯಿಗೆ ಹೊಟ್ಟೆಯಲ್ಲಿ ಜಳಜಳವಾದ ಸದ್ದು. ತಡೆಯಲಾಗದೆ ಕಾಲೆತ್ತಿಯೇ ಬಿಟ್ಟಿತು. ಆದರೆ ಅದೃಷ್ಟವಶಾತ್ ಅದೇ ಸ್ಥಳದಲ್ಲಿ ಬಾಂಬ್ ಇದ್ದಿತ್ತು. ಅದು ನೀರು ಬಿದ್ದ ದೀಪಾವಳಿ ಪಟಾಕಿಯಂತೆ ಠುಸ್ ಎಂದಿತು. ಅಲ್ಲಿಗೆ ಬಾಂಬ್ 'ನಿಷ್ಕ್ರಿಯ'ವಾಯಿತು. ಇದನ್ನು ಪತ್ತೆ ಹಚ್ಚಿದ್ದು ಬೊಗಳೂರಿನ ಏಕಸದಸ್ಯ ಬ್ಯುರೋದ ಸಮಸ್ತ ಸಿಬ್ಬಂದಿಗಳು ಚಹಾ ಸೇವಿಸುತ್ತಿದ್ದಾಗ!

ಇದರಿಂದ ತಾವೇ ಬಾಂಬ್ ನಿಷ್ಕ್ರಿಯ ದಳವೊಂದನ್ನು ಸಂಶೋಧಿಸಿದ್ದೇವೆ ಮತ್ತು ಅದನ್ನು ಪ್ರಯೋಗ ಮಾಡಿ ಯಶಸ್ಸೂ ಸಾಧಿಸಿದ್ದೇವೆ ಎಂದು ಪೊಲೀಸರು ತಮ್ಮ ಬೆನ್ನು ತಟ್ಟಿಕೊಂಡು, ನಾಯಿಯ ಬೆನ್ನು ಸವರಿದ್ದಾರೆ.

ಈ ಮಧ್ಯೆ, ಪೊಲೀಸರು ಬೀಡಾಡಿ ನಾಯಿಗಳನ್ನೆಲ್ಲಾ ಬಾಂಬ್ ನಿಷ್ಕ್ರಿಯ ಮತ್ತು ಪತ್ತೆ ದಳಕ್ಕೆ ಸೇರಿಸುತ್ತಿದ್ದಾರೆ ಎಂಬುದರ ಸುಳಿವು ಪಡೆದ ಉಗ್ರಗಾಮಿಗಳು, ನಾಯಿಗಳ ದಾರಿ ತಪ್ಪಿಸಲು ಹೊಸ ಉಪಾಯ ಕಂಡುಕೊಂಡಿದ್ದಾರೆ. ಅದೆಂದರೆ ಗಂಡು ನಾಯಿಗಳಿಗೆ ತುಂಡು ನೀಡುವುದು ಮತ್ತು ಬೊಗ್ಗಿ ನಾಯಿಗಳನ್ನು ಹೆಚ್ಚು ಹೆಚ್ಚು ಈ ಶ್ವಾನ ದಳದತ್ತ ಛೂಬಿಡುವುದು.

ಅವರ ಕಾರ್ಯತಂತ್ರದ ಪ್ರಕಾರ, ಶ್ವಾನ ದಳದವರಿರುವೆಡೆಯಲ್ಲೆಲ್ಲಾ ಜೇಬಿನಲ್ಲಿ ಚಿಕನ್ ತುಂಡು ಇಟ್ಟುಕೊಂಡು ತಿರುಗಾಡುತ್ತಿರುವುದು. ಚಿಕನ್‌ನ ವಾಸನೆ ಗ್ರಹಿಸುವ ಈ ನಾಯಿಗಳು, ಹಣವಿರುವೆಡೆ ರಾಜಕಾರಣಿಗಳು ಸಕ್ರಿಯರಾಗುವಂತೆ, ಅವರನ್ನೇ ಹಿಂಬಾಲಿಸುವಂತೆ ಮಾಡುವುದು. ಶ್ವಾನ ದಳದ ಮತ್ತೊಂದು ಬಣವು ಬೊಗ್ಗಿ ನಾಯಿಗಳ ಹಿಂದೆ ಹೋಗುತ್ತಾ, ಬಾಂಬ್ ಮರೆತುಬಿಡುತ್ತವೆ. ಈ ರಣತಂತ್ರಕ್ಕೆ ಪ್ರತಿತಂತ್ರವೊಂದು ಶೀಘ್ರದಲ್ಲೇ ಸಿದ್ಧವಾಗಲಿದೆ ಎಂದು ವರದಿಯಾಗಿದೆ.

Thursday, September 25, 2008

ದಕ್ಕದ ಭ್ರಷ್ಟಾಚಾರ ಪ್ರಶಸ್ತಿಗೆ ಅವಮಾನ!

(ಬೊಗಳೂರು ಡಬ್ಬಾ ಪ್ರತಿಭಟನೆ ಬ್ಯುರೋದಿಂದ)
ಬೊಗಳೂರು, ಸೆ.25- ಕೇವಲ ಬೊಗಳೂರೆಂಬ ಪುಟ್ಟದಾದ ಆದರೆ ಬ್ರಹ್ಮಾಂಡದಂತಹ ಊರಿಗೆ ಸೇರಬೇಕಾಗಿದ್ದ ಬಿರುದು ಮತ್ತು ಬಾವಲಿಯು ಇಡೀ ದೇಶಕ್ಕೇ ದೊರೆತರೆ ಏನಾಗುತ್ತದೆ? ಬೊಗಳೂರಿನ ಮಂದಿಯಾದ ನಾವು ಖಂಡಿತವಾಗಿ ಪ್ರತಿಭಟಿಸಲೇಬೇಕಾಗುತ್ತದೆ.

ಆದರೆ ಇದೀಗ ನಮ್ಮದು ಡಬ್ಬ(ಲ್) ಪ್ರತಿಭಟನೆಗೆ ಯೋಜನೆ ರೂಪುಗೊಳ್ಳುತ್ತಿದೆ. ಯಾಕೆ ಗೊತ್ತೆ? ಬೊಗಳೂರಿಗೆ ದೊರೆಯಬೇಕಾದ ಪದವಿಯನ್ನು ಭಾರತಕ್ಕೆ ನೀಡಿದ್ದಾರೆ. ಅದೆಂದರೆ ಭ್ರಷ್ಟಾಚಾರದಲ್ಲಿ 85ನೇ ರಾಷ್ಟ್ರ ಭಾರತ ಎಂಬ ಸ್ಥಾನ-ಮಾನ. ವಿಶ್ವದಲ್ಲೇ ಹಣದುಬ್ಬರ ಏರುತ್ತದೆ, ಸೆನ್ಸೆಕ್ಸ್ ಧರಾಶಾಯಿಯಾಗುತ್ತದೆ, ವಹಿವಾಟುಗಳೆಲ್ಲಾ ತೋಪು ಹೊಡೆಯುತ್ತವೆ. ಆದರೆ ಭ್ರಷ್ಟಾಚಾರಕ್ಕೆ ಸಂಬಂಧಪಟ್ಟ ಕ್ಷೇತ್ರವೊಂದರಲ್ಲಿ ವ್ಯವಹಾರವಂತೂ ಎಗ್ಗಿಲ್ಲದೇ ಮುಂದುವರಿಯುತ್ತದೆ. ಅದಕ್ಕೆ ಯಾರ ಹಂಗೂ ಇಲ್ಲ.

ಇದೇ ಕಾರಣಕ್ಕಾಗಿ ಮತ್ತು ವಿಶ್ವಾದ್ಯಂತ ಅತ್ಯಂತ ಅಗೌರವಕ್ಕೆ ಪಾತ್ರರಾಗಿರುವುದಕ್ಕಾಗಿಯೇ ಬೊಗಳೂರು ಮಂದಿ ಭ್ರಷ್ಟಾಚಾರವನ್ನೇ ತಮ್ಮ ಜೀವನಾಂಶವಾಗಿ ಮಾಡಿಕೊಂಡಿದ್ದರು. ಆದರೆ ಇಷ್ಟೆಲ್ಲಾ ಶ್ರಮಪಟ್ಟರೂ, ಕಳೆದ ಬಾರಿಗಿಂತ ಭ್ರಷ್ಟಾಚಾರದ ರ‌್ಯಾಂಕಿನಲ್ಲಿ ಈ ಬಾರಿ ಭಾರೀ ಕುಸಿತವೇ ಕಂಡುಬಂದಿದೆ. ಕಳೆದ ವರ್ಷ 72ನೇ ಮಟ್ಟದಲ್ಲಿದ್ದ ನಮ್ಮ ದೇಶ, ಈ ಬಾರಿ 85ನೇ ಸ್ಥಾನಕ್ಕೆ ಇಳಿದಿದೆ (ಏರಿದೆ!).

ಬೊಗಳೂರಿನ ಮಂದಿಗೆ ಮತ್ತು ನಮ್ಮ ಬ್ಯುರೋದವರಿಗೆ ತೀವ್ರ (ಡಬ್ಬಲ್) ಆಕ್ರೋಶಕ್ಕೆ ಕಾರಣವಾಗಿರುವ ಅಂಶವೆಂದರೆ, ನಮಗೆ ದೊರೆಯಬೇಕಾದ ಈ ಪ್ರಶಸ್ತಿಯನ್ನು ಭಾರತ ಕಿತ್ತುಕೊಂಡಿದ್ದಲ್ಲ. ಬದಲಾಗಿ, ಕಿತ್ತುಕೊಂಡರೂ ಅದು ಉತ್ತಮ ನಿರ್ವಹಣೆ ತೋರಲಿಲ್ಲ. ಕಳೆದ ಸಲಕ್ಕಿಂತ ತೀರಾ ಕಳಪೆ ಪ್ರದರ್ಶನ ನೀಡಿ ರ‌್ಯಾಂಕಿನಲ್ಲಿ ಕುಸಿತ ದಾಖಲಿಸಿದೆ ಎಂಬುದಾಗಿದೆ.

ಈ ಕುರಿತು ಅಪ್ರಜ್ಞಾವಂತ ಅನಾಗರಿಕರು ತೀವ್ರ ಪ್ರತಿಭಟನೆ ಮಾಡಲು ನಿರ್ಧರಿಸಿ ನಿದ್ದೆಹೋಗಿದ್ದಾರೆ.

Tuesday, September 23, 2008

ಸಿಎಮ್ಮು ರಾಜಕೀಯ ದೊಂಬರಾಟದ 'ಗೊಂಬೆ' ಅಲ್ಲ!

(ಬೊಗಳೂರು ನಿದ್ರೆಯಿಂದ ಎಚ್ಚೆತ್ತ ಬ್ಯುರೋದಿಂದ)
ಬೊಗಳೂರು, ಸೆ.23- ಬೊಗಳೂರಿನಿಂದ ಪರಾರಿಯಾಗಿದ್ದೇ ತಡ, ಮಂಗಳೂರು-ಬೆಂಗಳೂರುಗಳಲ್ಲಿ ದಾಳಿ-ಗಲಭೆಗಳ ನಡುವೆ ರಾಜಕೀಯ ದೊಂಬರಾಟ ಮೇರೆ ಮೀರುತ್ತಿರುವ ಹಂತ ತಲುಪಿದ ಸಂದರ್ಭದಲ್ಲಿ, ಈ ರಾಜಕೀಯ ದೊಂಬರಾಟಕ್ಕೆ ಮೂಲ ಪ್ರೇರಣೆಯೊಂದು "ಅದಲ್ಲ" ಅನ್ನಿಸಿಕೊಂಡಿದೆ.

ಅದೆಂದರೆ, ದೊಂಬರಾಟಗಳಿಗೆ ಬಳಸುವ ಗೊಂಬೆಯು 'ಅದು ಅಲ್ಲ' ಎಂದು ಗಣಿ ಧಣಿಗಳು ಇಲ್ಲಿ ಸ್ಪಷ್ಟಪಡಿಸಿದ್ದಾರೆ.

ನಾವು ಇದುವರೆಗೆ ನಮ್ಮ ಕೈಯಲ್ಲಿರೋದು ಸಿಎಂ ಗೊಂಬೆ ಅಂತ ತಿಳಿದುಕೊಂಡಿದ್ದೆವು. ಆದರೆ ಅದು ಆಟವಾಡುತ್ತಿರುವ ರೀತಿ ನೋಡಿದರೆ, ಅದು ಕೈಗೊಂಬೆಯಲ್ಲ. ಚನ್ನಪಟ್ಟಣದ ಗೊಂಬೆಗಿಂತಲೂ ಶಾರ್ಪ್ ಆಗಿದೆ ಎಂದು ಗಣಿ ರೆಡ್ಡಿಗಳು ವಿಶೇಷವಾಗಿ ಬೆಂಗಳೂರಿಗೆ ಓಡಿಬಂದಿದ್ದ ಬೊಗಳೆ ರಗಳೆ ಬ್ಯುರೋದ ಏಕಸದಸ್ಯ ಬ್ಯುರೋದ ತಂಡದ ಸಮಸ್ತ ಸಿಬ್ಬಂದಿಗೆ ಏಕಾಂತದಲ್ಲಿ ನೀಡಿದ ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಅವರೀಗ ಕೈಗೊಂಬೆಯಲ್ಲ. ಅವರ ಕೈಗಳನ್ನು ಕಟ್ಟಿ ಹಾಕಲಾಗಿರುವುದರಿಂದ ಅವರು ಕೈಕಟ್‌ಗೊಂಬೆ ಹಾಗೂ ಕಣ್ಣುಗಳಿಗೂ ಬಟ್ಟೆಕಟ್ಟಿರುವುದರಿಂದ ಕಣ್‌ಕಟ್ ಗೊಂಬೆ ಎಂಬುದು ನಮಗೀಗ ಅರಿವಾಗಿದೆ ಎಂದವರು ಸ್ಪಷ್ಟಪಡಿಸಿದ್ದಾರೆ.

ರಾಜ್ಯದ ಹಿತವನ್ನು ಬಲಿ ಕೊಡುವುದು ಸಾಧ್ಯವಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಅದನ್ನು ಬಲಿ ಕೊಟ್ಟರೆ, ಅದು ಮುಂದಿನ ಪೀಳಿಗೆಗೆ ಉಳಿಯುವುದಾದರೂ ಹೇಗೆ ಎಂದು ಮರು ಸವಾಲು ಹಾಕಿದ ಅವರು, ಆದರೆ ಈ ಹಿತ-ಅಹಿತ ಬಗ್ಗೆ ಗಂಭೀರವಾಗಿ, ಮಾರಾಮಾರಿಯಾಗಿ, ಭೀಕರವಾಗಿ, ಭೀಭತ್ಸಕರವಾಗಿ, ಅಸಹ್ಯವಾಗಿ ಚರ್ಚೆಯಾಗಬೇಕಿದೆ ಎಂದು ಮಾತ್ರ ಸೇರಿಸುವುದನ್ನು ಮರೆಯಲಿಲ್ಲ.

ನಾವಿರೋವಾಗ ಯಾವುದೇ ರೀತಿಯ ಅಕ್ರಮಗಳನ್ನು ಬೇರೆಯವರು ಮಾಡುವುದನ್ನು ಸಹಿಸುವುದಿಲ್ಲ ಮತ್ತು ಅದಕ್ಕೆ ಅವಕಾಶವನ್ನೂ ನೀಡುವುದಿಲ್ಲ ಎಂದು ಇದೇ ಸಂದರ್ಭದಲ್ಲವರು ಗುಸುಗುಸು ಎಂದು ಬೊಬ್ಬಿಟ್ಟಿದ್ದಾರೆ.

Friday, September 12, 2008

ರಹಸ್ಯ ಭೇದಿಸುವ ಸಂಚು: ಬೊಗಳೂರು ಬಂದ್

ಬ್ರಹ್ಮಾಂಡ ಸೃಷ್ಟಿಯ ರಹಸ್ಯವರಿಯುವ ನೆಪದಲ್ಲಿ ಬೊಗಳೆ ರಗಳೆ ಬ್ಯುರೋದ ವಿರುದ್ಧ ಸುರಂಗ ಕಾರ್ಯಾಚರಣೆ ನಡೆಸಿ, ರಹಸ್ಯ ಪತ್ತೆ ಹಚ್ಚುವ ಅಸಹ್ಯ ಕಾರ್ಯ ಆರಂಭವಾಗಿರುವುದರಿಂದ ಕೆರಳಿರುವ ಬೊಗಳೂರು ಮಂದಿ, ಪ್ರತಿಭಟನಾರ್ಥವಾಗಿ ಬ್ಯುರೋ ಬಾಗಿಲು ಮುಚ್ಚಿ ಒಂದು ವಾರ ಕಾಲ ಪರಾರಿಯಾಗಲು ಮತ್ತು ಇಲ್ಲದ ತಲೆ ಮರೆಸಿಕೊಳ್ಳಲು ನಿರ್ಧರಿಸಿದ್ದಾರೆ.

ಇನ್ನೊಂದು ವಾರ, ಬೊಗಳೆ ಬ್ಯುರೋದ ಕುಟುಕು ಕಾರ್ಯಾಚರಣೆಯಿಲ್ಲದೆ, ನೆಟ್ಲೋಕದ ಮಂದಿ ನಿಶ್ಚಿಂತೆಯಿಂದ ನಿದ್ದೆ ಮಾಡಬಹುದೆಂಬ ಸಲಹೆ ನೀಡುತ್ತಾ....
-ಅನ್ವೇಷಿ

Monday, September 08, 2008

ತಾಳಿ ಕಟ್ಟುವಾಗ ವಧು-ವರರ ಪವರ್ ಕಟ್!

(ಬೊಗಳೂರು ತಾಳಿ ಕಟ್ ಬ್ಯುರೋದಿಂದ)
ಬೊಗಳೂರು, ಸೆ.8- ತಾಳಿ ಕಟ್ಟುವಾಗ ಸ್ವಲ್ಪ ತಾಳಿ ಎಂಬ ಹಿರಿಯರ ವಾಕ್ಯಕ್ಕೆ ಸೊಪ್ಪು ಹಾಕದ ಮಂದಿ, ಕರೆಂಟು ಹೋದ ಪರಿಣಾಮ, ಪಕ್ಕದಲ್ಲೇ ಗೋಣೊಡ್ಡಿದ ಮುತ್ತಜ್ಜಿಯರಿಗೆ ತಾಳಿ ಕಟ್ಟಿದ ಪ್ರಸಂಗವೊಂದು ಇಲ್ಲಿ ವ-ರದ್ದಿಯಾಗಿದೆ.

ಇದಕ್ಕೆ ಕಾರಣವೆಂದರೆ, ಜಿಗಿಜಿಗಿ ಜನರಿಂದ ತುಂಬಿರುವ ವಿವಾಹ ಸಭಾಂಗಣದಲ್ಲಿ ತನ್ನ ಮರಿಮೊಮ್ಮಗಳಿಗೆ ಮದುವೆಯಾಗುವುದನ್ನು ಕಣ್ಣಾರೆ ಕಾಣಬೇಕು ಎಂದು ಮಂಟಪದಲ್ಲಿ ಹಾತೊರೆಯುತ್ತಿದ್ದ ಮುತ್ತಜ್ಜಿ. ಕರೆಂಟ್ ಹೋದಾಗ ಆಘಾತಗೊಂಡು, ತನ್ನ ಮರಿಮೊಮ್ಮಗಳನ್ನು ಇರುವೆ ಕಚ್ಚಿಕೊಂಡು ಹೋದರೆ... ಎಂಬ ಭೀತಿಗೊಳಗಾದಳು. ಸಾಲಂಕೃತಳಾದ ವಧುವಿಗೆ ಏನೂ ಆಗಬಾರದು ಅಂತ ತಮ್ಮ ಗೋಣನ್ನು ವಧುವಿನ ಮುಖದ ಬಳಿಯೇ ಇರಿಸಿದ್ದರು. ವರ ಮಹಾಶಯನಿಗೆ "ತಾಳಿ ತಾಳಿ" ಎಂದು ಹೇಳಿದ್ದಷ್ಟೇ ಕೇಳಿಸಿತ್ತು. ಅದು 'ತಾಳಿರಿ ತಾಳಿರಿ' ಎಂದಿದ್ದೋ, ಅಥವಾ 'ಮುಹೂರ್ತ ಬಂದಿದೆ ಬೇಗನೇ ತಾಳಿ ಕಟ್ಟಿ' ಅಂದಿದ್ದೋ ಎಂದು ಬೊಗಳೆ ರಗಳೆ ಬ್ಯುರೋದಂತೆ ವಿಶ್ಲೇಷಣೆ ಮಾಡಲು ಹೋಗದ ಆತ, ಪವರ್ ಕಟ್ಟಿನ ಮಧ್ಯೆಯೇ ತಾಳಿ ಕಟ್ಟಿದಾಗ ಕೆಲಸ ಕೆಟ್ಟಿತ್ತು. ಅಜ್ಜಿ ಗೋಳೋ ಎಂದು ಅಳಲಾರಂಭಿಸಿದಾಗಲೇ ವಿಷಯ ಅರಿವಿಗೆ ಬಂದಿತ್ತು ಎಂದು ಪ್ರತ್ಯಕ್ಷದರ್ಶಿಗಳು ವ-ರದ್ದಿ ತಂದೊಪ್ಪಿಸಿದ್ದಾರೆ.

ಈ ಕುರಿತು ಉನ್ನತ ವಿಶ್ಲೇಷಣೆ ಮಾಡಲಾರಂಭಿಸಿದ ಬೊಗಳೂರು ಬ್ಯುರೋ, ಮದುವೆಯಾಗುವುದು ಜನುಮ ಜನುಮದ ಅನುಬಂಧವಾದರೂ, ಪವರ್ ಕಟ್ ಇದ್ದಾಗಲೇ ತಾಳಿ ಕಟ್ಉವುದು, ಮುಂದಿನ ಭವಿಷ್ಯದಲ್ಲಿ ವಧು-ವರರಿಬ್ಬರ ಪವರ್‌ಗಳು ಕಟ್ ಆಗುವ ವಾಸ್ತವಾಂಶಕ್ಕೆ ಮುನ್ನುಡಿ ಮತ್ತು ಅವರವರ ಭವಿಷ್ಯದ ಕನ್ನಡಿ ಎಂದು ಹೇಳಲಾಗುತ್ತಿದೆ.

ಇನ್ನೊಂದು ವಾದದ ಪ್ರಕಾರ, ಇಷ್ಟವಿಲ್ಲದವರನ್ನು ಗಂಟು ಹಾಕುವ ಹೆತ್ತವರ ಪ್ರಯತ್ನದಿಂದ ಪಾರಾಗಲು ಇದು ವಧು ಮತ್ತು ವರರು ಸೇರಿಕೊಂಡು ಮಾಡಿದ ಪೂರ್ವಯೋಜಿತ ಸಂಚು. ಆದರೆ ಅವರ ಸಂಚಿನ ಅರಿವಿದ್ದ ಹೆತ್ತವರು, ಕಲ್ಯಾಣ ಮಂಟಪದಲ್ಲಿ 80ಕ್ಕಿಂತ ಹೆಚ್ಚು ವಯಸ್ಸಾದವರಿಗೆ ಮಾತ್ರವೇ ಪ್ರವೇಶ ನೀಡಿ, ಯತ್ನ ವಿಫಲಗೊಳಿಸಲು ಪ್ರಯತ್ನಿಸಿದ್ದರು. ಇದನ್ನು ಮೊದಲೇ ಊಹಿಸಿದ್ದ ವರ, ಚೆಂದಾಗಿ ಕಾಣುತ್ತಿದ್ದವಳಿಗೆ ಅಜ್ಜಿಯ ಮಾರುವೇಷದಲ್ಲಿ ಬರುವಂತೆ ಹೇಳಿದ್ದ. ಅಲ್ಲಿಗೆ ಆ ಅಧ್ಯಾಯ ಮುಗಿದಿತ್ತು.

ವರರ ಗೊಂದಲ: ತಾವು ಕಟ್ಟಿದ ತಾಳಿಯನ್ನು ಕಿತ್ತು, ಮರಳಿ ಮರಳಿ 'ಬಲಿಪಶು'ವಿಗೇ ಕಟ್ಟುವಂತೆ ಮಾಡಿದ ಹಿರಿಯರು ವಿರುದ್ಧ ಕೇಸು ದಾಖಲಿಸಲು ವರ-ಮಹಾಶಯರು ತೀರ್ಮಾನಿಸಿದ್ದಾರೆ. ಇದಕ್ಕೆ ಕಾರಣವೆಂದರೆ, ತಮ್ಮ ಮೇಲೆ ದ್ವಿಪತ್ನಿತ್ವ ಎಂಬ ಕೇಸು ಜಡಿಯುವ ಸಾಧ್ಯತೆಗಳು. ಯಾಕೆಂದರೆ ಒಂದೇ ಮಂಟಪದಲ್ಲಿ ಇಬ್ಬರಿಗೆ ತಾಳಿ ಕಟ್ಟಿದ ಭೂಪ ಎಂದು ಬೊಗಳೆ ರಗಳೆ ಸಹಿತ ಹಲವಾರು ಪತ್ರಿಕೆಗಳು ವ-ರದ್ದಿ ಮಾಡಿದ್ದವು.

ಸಾಮೂಹಿಕ: ಆದರೆ, ಮತ್ತೆ ಕೆಲವರು ಇದು 'ಸಾಮೂಹಿಕ ವಿವಾಹ' ಆಗಿದ್ದುದರಿಂದ, ಯಾರು ಯಾರಿಗೆ ಬೇಕಾದರೂ, ಎಷ್ಟು ಬಾರಿಯೂ ತಾಳಿ ಕಟ್ಟಬಹುದು ಎಂದು ತಿಳಿದುಕೊಂಡಿದ್ದು, ಈ ರೀತಿಯ ವಿಶ್ಲೇಷಣೆಗಳಿಂದ ತಮ್ಮ ತಮ್ಮ ವಾದವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂಬುದನ್ನು ಬೊಗಳೂರು ಬ್ಯುರೋ ಪತ್ತೆ ಹಚ್ಚಿದೆ.

ಕಾಳದಂಧೆ: ಈ ಮಧ್ಯೆ, ಈ ಘಟನೆಗಳಿಂದ ಪ್ರೇರಿತರಾಗಿ ಡಿಪ್ಲೊಮಾ ಇನ್ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಎಂಬ ಬೋರ್ಡು ತಗುಲಿಸಿಕೊಂಡವರ ಸಂಖ್ಯೆ ಹೆಚ್ಚಾಗುತ್ತಿದೆ. ಕಲ್ಯಾಣ ಮಂಟಪಗಳಲ್ಲಿ ತಮಗೆ (ಕರೆಂಟು ತೆಗೆಯಲು) ಬೇಡಿಕೆ ಹೆಚ್ಚಾಗುತ್ತಿದ್ದು, ಇಂತಹ engineered ಮದುವೆ ಏರ್ಪಡಿಸಲೆಂದೇ ಅವರು ಡಿಪ್ಲೊಮಾಗಳನ್ನು ಕದ್ದು ತಗುಲಿಸಿಕೊಂಡಿದ್ದಾರೆ ಎಂಬುದನ್ನು ಬೊಗಳೂರು ಬ್ಯುರೋ ಪತ್ತೆ ಹಚ್ಚಿದೆ.

ಆದರೆ, ಇದು ಬೊಗಳೆ ಬ್ಯುರೋ ಸಂಶೋಧಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ಡೈವೊರ್ಜೀನ್ ಎಂಬ ವಿವಾಹೋತ್ತರ ಕಾರ್ಯಕ್ರಮದ ಬೇಡಿಕೆ ತಗ್ಗಿಸಿ, ಬ್ಯುರೋಗೆ ಭಾರೀ ಪ್ರಮಾಣದ ನಷ್ಟ ಉಂಟುಮಾಡುವ ಸಂಚು ಎಂಬುದೂ ಪತ್ತೆಯಾಗುತ್ತಿದೆ.

Friday, September 05, 2008

ಡೈವೊರ್ಸ್‌ಗೆ ಹೊಸ ತಂತ್ರಜ್ಞಾನ 'ಡೈವೊರ್ಜೀನ್' ಪತ್ತೆ!

(ಬೊಗಳೂರು ತಂತ್ರಅಜ್ಞಾನ ಬ್ಯುರೋದಿಂದ)
ಬೊಗಳೂರು, ಸೆ. ೫- ದೇಶದೆಲ್ಲೆಡೆ ಪವಿತ್ರ ಬಾಂಧವ್ಯವಾಗಿ ಏರ್ಪಡಬೇಕಿದ್ದ ವಿವಾಹವು ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದ ಬಂಧನವಾಗಿ ಪರಿವರ್ತನೆಗೊಂಡು " ವಿವಾಹ....ಬಂ"ಧನ" ರೂಪೇಣ ಪಶು, ಪತ್ನಿ ಸುತಾಲಯಃ" ಎಂಬುದು ಜೋರಾಗಿಯೇ ಕೇಳಿಬರುತ್ತಿದೆ. ಇದಕ್ಕೆಲ್ಲಾ ಕಾರಣ ಬೊಗಳೆ ರಗಳೆ ಬ್ಯುರೋದ ಅಜ್ಞಾನಿಗಳು ಸಂಶೋಧಿಸಿದ ಡೈವೋರ್ಜೀನ್ ಎಂಬ ಹೊಸ ತಂತ್ರಾಂಶ ಎಂಬುದನ್ನು ನಮ್ಮ ಬದ್ಧ ಪ್ರತಿಸ್ಪರ್ಧಿ ಪತ್ರಿಕೆ ಇಲ್ಲಿ ಪ್ರಕಟಿಸಿದೆ.

ಗಂಡ ಹೆಂಡಿರ ಮಧ್ಯೆ ನಂಬಿಕೆ-ಅಪನಂಬಿಕೆ, ಕಟ್ಟಿಕೊಂಡ ಹೆಂಡತಿಗಿಂತಲೂ ದಾರಿಹೋಕರೇ ಚಂದ ಕಾಣುವುದು ಮತ್ತು ತಾಳಿ ಕಟ್ಟಿದ ಗಂಡನಿಗಿಂತಲೂ ಪಕ್ಕದ ಮನೆಯ ಮಹಿಳೆಯ ಗಂಡನೇ ಗ್ರೇಟ್ ಅನ್ನಿಸಿಕೊಳ್ಳುವುದು, ವಿವಾಹ ಬಂಧನ ಸಂದರ್ಭದಲ್ಲಿ ನೀಡಿದ ಧನ ಕಡಿಮೆಯಾಗಿದೆ ಅಂತ (ವಿಶೇಷವಾಗಿ ವಧುವಿನ ಅತ್ತೆಯಂದಿರಿಗೆ) ಪದೇ ಪದೇ ತೋರುವುದು ಮುಂತಾದ ರೋಗಲಕ್ಷಣಗಳಿಗೆ ಬೊಗಳೂರಿನ ತಂತ್ರಜ್ಞಾನ ಬ್ಯುರೋದಿಂದ ಸಂಶೋಧನೆ ಮಾಡಲ್ಪಟ್ಟ ಡೈವೋರ್ಜೀನ್ ಎಂಬ ವೈರಸ್ ಕಾರಣ ಎಂಬುದನ್ನು ಪತ್ತೆ ಹಚ್ಚಲಾಗಿದೆ.

ಈ ಡೈವೋರ್ಜೀನ್‌ನ ಪ್ರಭಾವ ಎಷ್ಟರ ಮಟ್ಟಿಗಿದೆಯೆಂದರೆ, ಇತ್ತಿತ್ತಲಾಗಿ, ಮದುವೆಯಾಗುವುದಕ್ಕೆ ಮುನ್ನವೇ ಡೈವೊರ್ಸ್ ನೀಡುವ ಪ್ರಕರಣಗಳೂ ಅಲ್ಲಲ್ಲಿ ಹೆಚ್ಚಾಗತೊಡಗಿವೆ. ಬಹುತೇಕವಾಗಿ ಇದು ಕಾಲೇಜು ಪರಿಸರಗಳಲ್ಲಿ ಹೆಚ್ಚೆಚ್ಚಾಗಿ ಮತ್ತು ಹುಚ್ಚುಚ್ಚಾಗಿ ಕಂಡುಬರುತ್ತಿರುವುದನ್ನು ಬೊಗಳೆ ರಗಳೆಯ ಅಪಾಪೋಲೀ ಬ್ಯುರೋದ ಸದಸ್ಯರು ಸ್ಟಿಂಗ್ ಕಾರ್ಯಾಚರಣೆಯ ಮೂಲಕ ಪತ್ತೆ ಹಚ್ಚಿದ್ದಾರೆ.

ಈ ವೈರಸ್ಸನ್ನು ನಗರಗಳಲ್ಲಾದರೆ ಬಹುತೇಕವಾಗಿ ಪಾರ್ಕು ಪ್ರದೇಶಗಳಲ್ಲಿ, ಗ್ರಾಮೀಣ ಭಾಗದಲ್ಲಾದರೆ ಬಸ್ ನಿಲ್ದಾಣ, ಬಾವಿಕಟ್ಟೆಗಳ ಬಳಿ ಬಿಡಲಾಗುತ್ತಿದೆ. ಹೀಗಾಗಿ ಪ್ರೇಮ ಅರಳುವ ಮುನ್ನವೇ ಬ್ರೇಕಪ್ ಆಗುವ ಸಾಧ್ಯತೆಗಳು ಅಂದರೆ ವಸ್ತುಶಃ ಪ್ರೇಮ ವಿಚ್ಛೇದನೆಗೊಳ್ಳುವ ಪ್ರಕರಣಗಳು ಅತಿಯಾಗುತ್ತಿವೆ.

ಈ ಹಿಂದೆ, ಬೊಗಳೆ ರಗಳೆ ಬ್ಯುರೋ ಸಂಶೋಧಿಸಿದ "Spoon-ಟೇನಿಯಸ್ ಡೈವರ್ಟೀನ್" ಎಂಬ ಡೈವರ್ಸ್ ಔಷಧ ಹಾಗೂ ಅರಿವಿಲ್ಲದೆ ಡೈವೊರ್ಸ್ ನೀಡಬಲ್ಲ ವಿಧಾನವು ಸರಿಯಾಗಿ ಕೆಲಸ ಮಾಡದ ಕಾರಣ ಈ ಹೊಸ ಸಂಶೋಧನೆಗೆ ಕೈಹಚ್ಚಲಾಗಿದೆ ಎಂದು ಏಕಸದಸ್ಯ ಬ್ಯುರೋದ ಸಮಸ್ಯ ಸಿಬ್ಬಂದಿಗಳು ವಿವರಿಸಿದ್ದಾರೆ.

ಆದರೆ, ಈ ಡೈವೊರ್ಜೀನ್‌ನ ಮೂಲ ಅಂಶವಾಗಿರುವ ಜೀನ್ ಅನ್ನೇ ನಾಶಪಡಿಸುವುದು ಮತ್ತು ಆ ಮೂಲಕ ಜನಸಂಖ್ಯಾ ಸ್ಫೋಟ ತಡೆಯುವ ನಿಟ್ಟಿನಲ್ಲಿ ಕೈಗೊಳ್ಳಲಾಗುತ್ತಿರುವ ಡೈವರ್ಸ್ ಆಂದೋಲನಕ್ಕೆ ಕಡಿವಾಣ ಹಾಕುವ ಪ್ರಯತ್ನವೂ ಭಾರಿ ಪ್ರಮಾಣದಲ್ಲಿ ನಡೆಯುತ್ತಿದೆ ಎಂಬುದು ಡೈವೊರ್ಜೀನ್ ಸಂಶೋಧಕರಿಗೆ ನುಂಗಲಾರದ ತುತ್ತು.

Wednesday, September 03, 2008

ಮಾನವನಿಂದ ಮಂಗ: ಹಾಟ್ ಕಲ್ಚರ್ ವಿಕಾಸವಾದ

(ಬೊಗಳೂರು ಅಸತ್ಯ Someಚೋದನಾ ಬ್ಯುರೋದಿಂದ)
ಬೊಗಳೂರು, ಸೆ.2- ಮಾನವರಿಂದಲೇ ಮಂಗ ಎಂಬ ವಿಕಾಸವಾದಕ್ಕೆ ಹೊಸ ಪುಷ್ಟಿ ದೊರೆತದ್ದು ಬೊಗಳೂರು ಬ್ಯುರೋದ ಸೊಂಪಾದಕರಿಂದ ಎಂದು ಬೊಟ್ಟು ಮಾಡಿ ತೋರಿಸುತ್ತಿದ್ದವರಿಗೆ ಹೊಸ ಸುದ್ದಿ. ಇದು ತಪ್ಪು ಎಂದು ಇಲ್ಲಿ ಸಾಬೀತಾಗಿದೆ.

ಇದೀಗ ಜಗತ್ತಿನಲ್ಲಿ ಹಾಟ್ ಕಲ್ಚರ್ ಹೆಚ್ಚಾಗುತ್ತಿದೆ. ಯಾವುದೇ ಚಲನಚಿತ್ರ ನೋಡಿದರೂ ಹಾಟ್ ಹಾಟ್ ಆಗಿರೋ ತಾರೆಯರು ಮೈ ಕುಲುಕಿಸುತ್ತಿರುತ್ತಾರೆ. ಹೀಗಾಗಿ ದೇಹದ ತಾಪಮಾನ ಹೆಚ್ಚಾಗುತ್ತಿರುವಂತೆಯೇ ಬಿಚ್ಚೋಲೆ ಗೌರಮ್ಮರ ಮಾನ ಹರಾಜಾಗುತ್ತಾ ದೇಶದ ತಾಪಮಾನವೂ ಏರುತ್ತಲೇ ಇರುತ್ತದೆ. ಈ ರೀತಿಯಾಗಿ ಉಷ್ಣತೆ ಏರುತ್ತಿರುವುದರಿಂದ ಮಾನವನಾಗಿದ್ದ ಪ್ರಾಣಿಯು ನಿಧಾನವಾಗಿ ಮಂಗನ ರೂಪವಾಗಿ ಪರಿವರ್ತನೆಗೊಳ್ಳುತ್ತಿದೆ ಎಂದು ಬೊಗಳೂರಿನ ಏಕ ಸದಸ್ಯ ಬ್ಯುರೋದ ಅವ್ಯವಸ್ಥಾಪಕ ಮುಖ್ಯ ಕಿರಿ(ಕಿರಿ) ಸೊಂಪಾದಕರು ಭಾರೀ ಪ್ರಯತ್ನ ಪಟ್ಟು ಪತ್ತೆ ಹಚ್ಚಿ, ತಮ್ಮ ಮೇಲೆ ಯಾರಾದರೂ ಕಿರುಬೆರಳೆತ್ತಿ ತೋರಿಸುತ್ತಿರುವುದನ್ನು ತಪ್ಪಿಸಲು ಶತ ಪ್ರಯತ್ನ ಮಾಡಿದ್ದಾರೆ.

ಇತ್ತೀಚೆಗೆ ನಟೀಮಣಿಯರು ಪುಟ್ಟ ಬೆಂಕಿ ಪೆಟ್ಟಿಗೆಯೊಳಗೆ ಮಡಚಿ ಇರಿಸಬಹುದಾದಷ್ಟು ಭಾರೀ ಗಾತ್ರದ ಉಡುಗೆ ತೊಡುವ, ಅಥವಾ ಆ ಉಡುಗೆಯನ್ನು ದೇಹಕ್ಕೆ 'ಸ್ಯಾಂಪಲ್' ಆಗಿ ತೋರಿಸುವ ಪ್ರವೃತ್ತಿ ಹೆಚ್ಚಿಸುತ್ತಾ ಪ್ರಸಿದ್ಧಿ ಪಡೆಯಲು ಹರಸಾಹಸ ಮಾಡುತ್ತಿರುವುದರಿಂದ ಸುತ್ತಮುತ್ತಲಿನವರು ಕೂಡ ಹಾಟ್ ಆಗಿ ತಾಪಮಾನ ಹೆಚ್ಚಾಗಿಬಿಡುತ್ತಿದೆ. ಇದರಿಂದಾಗಿ ಅಲ್ಲಲ್ಲಿ ಅನ್ಯಾಯ, ಅನಾಚಾರ, ಅತ್ಯಾಚಾರ ಇತ್ಯಾಚಾರಗಳು ನಡೆಯುತ್ತಿವೆ. ಈ ರೀತಿ, ಮಾನವರು ದೈಹಿಕವಾಗಿ ಮಾತ್ರವಲ್ಲದೆ, ಮಾನಸಿಕವಾಗಿಯೂ ಪ್ರಾಣಿಗಳಾಗಿ ವಿಕಾಸಗೊಳ್ಳುತ್ತಿದ್ದಾರೆ ಎಂಬುದು ಬೊಗಳೆ ರಗಳೆಯ ಅಸತ್ಯ ಬ್ಯುರೋ ಕಂಡುಕೊಂಡಿರುವ ನಿಗೂಢ ರಹಸ್ಯವಾಗಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲೂ ಸ್ಪೈಸಿ ಗರ್ಲ್ಸ್ ಮುಂತಾದ ಹಿರಿಮೆ-ಗರಿಮೆಗಳನ್ನು ಪಡೆದುಕೊಂಡು ಮನಸ್ಸನ್ನು ಸ್ಪೈಸೀಕರಣಗೊಳಿಸಿರುವುದರಿಂದ ಜಾಗತಿಕ ತಾಪಮಾನವೂ ಹೆಚ್ಚಾಗುತ್ತಿದೆ ಎಂದು ನಮ್ಮ ವಿಶ್ಲೇಷಣಾಕಾರರು ತರ್ಕಿಸಿದ್ದಾರೆ.

Tuesday, September 02, 2008

ಬೊಗಳೆಯಲ್ಲಿ ತಾಪಮಾನದ ರಗಳೆ!

ಜಾಗತಿಕ ತಾಪಮಾನ ಹೆಚ್ಚುತ್ತಿರುವುದೇಕೆ ಮತ್ತು ಇದರ ನೇರ ಪರಿಣಾಮ ಬೊಗಳೆ ರಗಳೆ ಬ್ಯುರೋದ ಮೇಲೆ ಬಿದ್ದದ್ದು ಹೇಗೆ ಅಂತ ತಿಳಿದುಕೊಳ್ಳಬೇಕೇ? ನಾಳಿನ ಸಂಚಿಕೆ ತರಿಸಿಕೊಳ್ಳಿ.

ನೀವು ಕ್ಲಿಕ್ ಮಾಡಿದರೆ ನಿಮ್ಮ ಮನೆ ಬಾಗಿಲಿನಲ್ಲಿ ಈ ಅಂತರ್ಜಾಲದ ರದ್ದಿ ಪತ್ರಿಕೆ ಬಿದ್ದಿರುತ್ತದೆ!!!!
ಸರ್ವರಿಗೂ ಬೊಗಳೆ ರಗಳೆಯ ಅಚ್ಚುಮೆಚ್ಚಿನ ಗಣಪತಿಯ ಹುಟ್ಟುಹಬ್ಬದ ಶುಭಾಶಯಗಳು.

Monday, September 01, 2008

ಈಡಿಯಟ್ ಪದವಿಗೆ ವ್ಯಾಖ್ಯಾನ: ಬೊಗಳೆ ಹರ್ಷ!

(ಬೊಗಳೂರು ಈಡಿಯಟ್ ಬ್ಯುರೋದಿಂದ)
ಬೊಗಳೂರು, ಸೆ.1- ಬೊಗಳೂರು ಬ್ಯುರೋದ ಅವ್ಯವಸ್ಥಾಪಕ ಮುಖ್ಯ ಕಿರಿ ಕಿರಿ ಸಂಪಾದಕರ ಹುದ್ದೆಯ ಘನತೆಯ ಬಗ್ಗೆ ಪರಮೋಚ್ಚನ್ಯಾಯಾಲಯದಲ್ಲಿ ತೀವ್ರ ಚರ್ಚೆ ನಡೆದಿರುವುದು ಬೊಗಳೆ ರಗಳೆಗೆ ಸಂದ ಗೌರವ ಎಂದು ನಮ್ಮ ಬ್ಯುರೋ ಹರ್ಷ ವ್ಯಕ್ತಪಡಿಸಿದೆ.

'ನಿಜವಾಗಿಯೂ ಈಡಿಯಟ್' ಎಂಬ ಪದವು ಮತ್ತು ಈಡಿಯಟ್ ಎಂಬ ಪದವು ನಿಜವಾಗಿಯೂ, ಅತ್ಯಂತ ಹೆಚ್ಚು ದುರ್ಬಳಕೆಗೀಡಾದ ಗೌರವಾರ್ಹ ಶಬ್ದವಾಗಿದೆ. ಬೊಗಳೆ ರಗಳೆ ಬ್ಯುರೋ ಸೊಂಪಾದಕರು ಹುಟ್ಟಿದ ಇಷ್ಟು ವರ್ಷಗಳ ಬಳಿಕ ಇದಕ್ಕೆ ಹೊಚ್ಚ ಹೊಸ ವ್ಯಾಖ್ಯಾನವನ್ನು ಕಲ್ಪಿಸಲು ಹೊರಟಿರುವುದು ತಮ್ಮ ಸಾಧನೆಗೆ ಸಂದ ಅಗೌರವ ಎಂದು ಸೊಂಪಾದ ಕರುಗಳು ಬೆನ್ನು ತಟ್ಟಿಕೊಂಡಿದ್ದಾರೆ.

ಆದರೆ, 20ರವರೆಗೆ 'ಒಂದುಎರಡು' ಹೇಳಲು ಬರಬೇಕು ಎಂಬ ಶರತ್ತಿನ ಬಗ್ಗೆ ಮಾತ್ರ ಒಂದಷ್ಟು ಅಸಮಾಧಾನವಿದೆ. ಹಲವಾರು ಎದುರಾಳಿ ಪತ್ರಿಕೆಗಳು ಬೊಗಳೆ ರಗಳೆ ಸೊಂಪಾದಕರ ವಿರುದ್ಧ ಕೇಸುಗಳನ್ನು ಜಡಿದಿರುವುದರಿಂದ, ಬಹುಶಃ ಮುಂದೊಂದು ದಿನ ಇದು ಕಂಬಿ ಎಣಿಸಲು 'ಪೂರ್ವಾಭ್ಯಾಸ' ಮಾಡಿದಂತಾಗುತ್ತದೆ ಎಂಬುದು ನಿಜವಾದರೂ, 20ರವರೆಗೆ ಎಣಿಸುತ್ತಾ ಕೂತರೆ, ಬೊಗಳೆ ರಗಳೆ ಪತ್ರಿಕೆ ಹೊರತರುವುದಾದರೂ ಹೇಗೆ? ಅಷ್ಟೊಂದು ಸಂಖ್ಯೆಗಳನ್ನು ಯೋಚನೆ ಮಾಡುವಷ್ಟರಲ್ಲಿ ನಾಲ್ಕೈದು ದಿನಗಳು ಕಳೆದುಹೋಗಬಹುದು ಎಂಬುದು ಸೊಂಪಾದಕರ ಆತಂಕ.

ಇದೂ ಅಲ್ಲದೆ, ಇಲ್ಲಿ ಗಮನ ಸೆಳೆದಿರುವ ಮತ್ತೊಂದು ಅಂಶವೂ ಇದೆ. ದಿನ ಎಣಿಕೆ ಮಾಡುತ್ತಿರಬೇಕು ಎಂಬುದು ಕೂಡ ದಯನೀಯ ಸಲಹೆ. ಇದು ಅಂತಿಮ ದಿನ ಎಣಿಕೆಯೋ, ಅಥವಾ ಕ್ಷಣಗಣನೆಯೋ ಎಂಬುದನ್ನು ಸ್ಪಷ್ಟೀಕರಿಸಬೇಕು ಎನ್ನುವುದು ನಮ್ಮ ಬ್ಯುರೋದ ಏಕೈಕ ಸಂತಾಪಕರ ಅಭಿಮತ.

ಸೂಚನೆ: ಬಲಬದಿಯಲ್ಲಿ ಬೊಗಳೆ ರಗಳೆ ಬ್ಯುರೋ ನಡೆಸಿದ ಸಮೀಕ್ಷೆಯಲ್ಲಿ, ಬ್ಲಾಗ್ ಎಂಬ ಪದಕ್ಕೆ ಬೊಗಳೆ ಎಂಬ ಪದವೇ ಸೂಕ್ತ ಎಂದೆಲ್ಲಾ ಬೊಗಳೆ ಬಿಟ್ಟು ಗುಂಡಿ ಒತ್ತಿದ ನಮ್ಮ ಮೂರಾಬಟ್ಟೆ ಓದುಗರಿಗೆಲ್ಲರಿಗೂ ಅಭಿನಂದನೆಗಳು ಮತ್ತು ಧನ್ಯವಾದಗಳು.

Wednesday, August 27, 2008

ಚಿನ್ನ ನುಂಗಿದ ಬೃಹತ್ ಮೀನು ತವರಿಗೆ ಮರುಸಾಗಾಟ

(ಬೊಗಳೂರು ಕುಂಯ್ ಚುಂಗ್ ಚೈಂ ಬ್ಯುರೋದಿಂದ)
ಬೊಗಳೂರು, ಆ.27- ಬೀಜಿಂಗ್ ಎಂಬ ಒಲಿಂಪಿಕ್ಸ್ ಈಜುಕೊಳದಲ್ಲಿ 8 ಚಿನ್ನದ ಪದಕಗಳನ್ನು ನುಂಗಿದ ವಿಶ್ವದ ಅತ್ಯಂತ ದೊಡ್ಡ ಮೀನನ್ನು ಇದೀಗ ಅದರ ತಾಣವಾಗಿರುವ ಅಮೆರಿಕಕ್ಕೆ ಮರಳಿಸಲಾಗಿದೆ.

200 ಪೌಂಡ್ ತೂಕದ, 193 ಇಂಚು ಎತ್ತರವಿರುವ ಈ ಫೆಲ್ಪ್ಸ್ ಎಂಬ ಮೀನನ್ನು ಬೃಹತ್ ಕೃತಕ ಕೊಳವೊಂದರಲ್ಲಿ ಹಾಕಿ, ನಾಲ್ಕಾರು ಚಕ್ರಗಳುಳ್ಳ ದೊಡ್ಡ ಟ್ರಕ್‌ನಲ್ಲಿರಿಸಿ ಅಮೆರಿಕಕ್ಕೆ ಮರಳಿಸಲಾಯಿತು.

ನೂರಾರು ಮಂದಿ ಕೆಲಸಗಾರರು ಈ ಮೀನನ್ನು ಕೃತಕ ಕೊಳದೊಳಗೆ ಸೇರಿಸಲು ಹರಸಾಹಸ ಪಟ್ಟಿದ್ದು, ಹಲವಾರು ಚಿನ್ನದ ಪದಕಗಳನ್ನು ನುಂಗಿದ್ದ ಕಾರಣದಿಂದಾಗಿ ಅದರ ತೂಕ ಹೆಚ್ಚಾಗಿತ್ತು.

ಇದೀಗ ಎಂಟು ಚಿನ್ನ ನುಂಗಿ ಸುದ್ದಿ ಮಾಡಿದ್ದ ಈ ಬೃಹತ್ ಮೀನು, ತನ್ನೂರಿನಲ್ಲಿರುವ ಆರಡಿ ಮೂರಡಿಗಿಂತಲೂ ದುಪ್ಪಟ್ಟು ವಿಸ್ತೀರ್ಣವಿರುವ, ಆವಾಸ ಸ್ಥಾನದಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದೆ ಎಂದು ಅಲ್ಲಿಗೆ ತೆರಳದ ಮೂಲಗಳು ವರದ್ದಿ ಕಳುಹಿಸಿವೆ.

ಈ ದೈತ್ಯ ದೇಹಿಯನ್ನು ಬೃಹತ್ ಗಾಜಿನ ಪೆಟ್ಟಿಗೆಯಲ್ಲಿ ನೀರು ತುಂಬಿಸಿ ಇರಿಸಲಾಗಿದ್ದು, ಅದನ್ನು ನೋಡಲು ಜನಜಾತ್ರೆಯೇ ಹರಿದುಬರುತ್ತಿದೆ.

ನೀರಿನ ತೊಟ್ಟಿಯಲ್ಲಿ ಆರಾಮವಾಗಿರುವಂತೆ ಕಂಡುಬಂದಿರುವ ಫೆಲ್ಪ್ಸ್ ಮೀನು, ರಾತ್ರಿ 2 ಗಂಟೆ ಸುಮಾರಿಗೆ ನಿದ್ರೆಗೆ ಶರಣಾಯಿತು ಎಂದು ಈ ಮೀನನ್ನು ಇರಿಸಲಾಗಿರುವ ಮತ್ಸ್ಯಾಲಯದ ಉಸ್ತುವಾರಿ ಅಧಿಕಾರಿಗಳು ಔಟ್‌ಗೋಯಿಂಗ್ ಸೌಲಭ್ಯವಿಲ್ಲದ ಫೋನ್ ಇನ್ ಫೆಸಿಲಿಟಿ ಮೂಲಕ ಬೊಗಳೆ ರಗಳೆಗೆ ಮಾಹಿತಿ ನೀಡಿದ್ದಾರೆ.

ಈ ನಡುವೆ, ಬೀಜಿಂಗಿನಲ್ಲಿ ಅದು ಎಷ್ಟು ಮೆಡಲ್‌ಗಳನ್ನು ನುಂಗಿದೆ ಎಂಬುದು ಇನ್ನೂ ದೃಢಪಟ್ಟಿಲ್ಲ. ಹೀಗಾಗಿ ಈ ಮೀನು ಎಲ್ಲೆಲ್ಲಾ ಈಜುಗಾರಿಕೆ ನಡೆಸಿದೆಯೋ, ಆ ಕೊಳದೊಳಗೆಲ್ಲಾ ಮುಳುಗೆದ್ದು, ಅದರಲ್ಲೇನಾದರೂ ಮೆಡಲುಗಳು ಬಾಕಿ ಉಳಿದಿವೆಯೇ? ಉಳಿದಿದ್ದರೆ ಎಷ್ಟಿವೆ ಎಂಬಿತ್ಯಾದಿಗಳ ನಿಖರ ಅಂಕಿ ಅಂಶ ಪಡೆಯಲು ಶತ ಪ್ರಯತ್ನ ನಡೆಯುತ್ತಿದೆ. ಆದರೆ ಈಜು ಕೊಳದಿಂದ ಚಿಮ್ಮಿದ ಮೀನೊಂದು, ಬಣ್ಣವನ್ನು ಒಂದಷ್ಟು ಬದಲಿಸಿ, ಅತಿ ವೇಗದಿಂದ ಓಡಿ, ಜಮೈಕಾವರೆಗೂ ತೆರಳಿ ಬಾಗಿಲಿನ ಬೋಲ್ಟ್ ಹಾಕಿಕೊಂಡು ಕುಳಿತಿದೆ ಎಂಬುದನ್ನು ಕೂಡ ಪತ್ತೆ ಹಚ್ಚಲಾಗಿದೆ. ಇದರ ನಡುವೆಯೇ, ಟ್ರ್ಯಾಕ್‌ನಿಂದ ಅಥವಾ ಈಜುಕೊಳದಿಂದ ಮೆಡಲ್‌ಗಳು ಮೇಲಕ್ಕೆ ಜಿಗಿದಿವೆಯೇ ಎಂಬುದರ ಕುರಿತಾಗಿಯೂ ಚೀನೀ ತನಿಖೆ ನಡೆಯುತ್ತಿದೆ.

ಈ ತನಿಖೆ ನೇತೃತ್ವವನ್ನು ಚೀನಾದ ಮಹಾನ್ ಪತ್ತೆದಾರ ಚು ಚಿಂವ್ ಚುಂಯ್ ಕುಂಯ್‌ಗೆ ವಹಿಸಲಾಗಿದೆ.

Monday, August 25, 2008

ಹಣದುಬ್ಬರ: ವರದಕ್ಷಿಣೆಯ ದರವೂ ಉಬ್ಬರ!

(ಬೊಗಳೂರು ವರದಕ್ಷಿಣೆ ಉಬ್ಬರ ಬ್ಯುರೋದಿಂದ)
ಬೊಗಳೂರು, ಆ.25- ದೇಶವು ಹಣದುಬ್ಬರಕ್ಕೆ ತತ್ತರಿಸುತ್ತಿರುವುದರಿಂದ ವರದಕ್ಷಿಣೆಯ ಮೇಲೂ ಇದು ಪರಿಣಾಮ ಬೀರಿರುವುದರಿಂದ ವರದಕ್ಷಿಣೆ ದರವೂ ಏರಿಕೆ ಕಂಡಿದ್ದು, ಅದರ ಬೇಡಿಕೆಯ ಸೊತ್ತುಗಳು ಕೂಡ ಭರ್ಜರಿಯಾಗಿ ಆಧುನೀಕರಣಗೊಂಡಿವೆ.

ಹಿಂದಿನ ಕಾಲದಲ್ಲಿ ಕಾರು, ಬಂಗಾರ ಇತ್ಯಾದಿಗಳಿದ್ದ ವರದಕ್ಷಿಣೆ ಪಟ್ಟಿಯಲ್ಲಿಯೂ ಯುಪಿಎ ಸರಕಾರದ ಆಳ್ವಿಕೆಯಿಂದಾಗಿ ಭಾರೀ ಬದಲಾವಣೆ ಕಂಡಿದ್ದು, ಬೊಗಳೂರಿನ ವರದಕ್ಷಿಣಿಗರ ಪಟ್ಟಿಯಲ್ಲಿ ಒಂದು ಲೀಟರ್ ಪೆಟ್ರೋಲ್, ಒಂದು ಕಿಲೋ ತರಕಾರಿ, ಒಂದು ನೂರು ಗ್ರಾಂ ಬೇಳೆ, ಅರ್ಧ ತೆಂಗಿನ ಕಾಯಿ... ಇತ್ಯಾದಿಗಳೆಲ್ಲವೂ ಸೇರಿಕೊಂಡು ಬಿಟ್ಟಿವೆ.

ಇದಲ್ಲದೆ, ದುಡ್ಡು ಕೊಡಲು ಬಂದರೆ, ದುಡ್ಡು ಯಾರಿಗೆ ಬೇಕ್ರೀ... ನೀವೇ ಇಟ್ಕೊಳಿ ಎಂದು ಧಮಕಿ ಹಾಕುವ ವರ ಮಹಾಶಯರು, ತಮಗೆ ಒಂದು ಕಿಲೋ ತರಕಾರಿ ಸಪ್ಲೈ ಮಾಡಿ ನೋಡೋಣ ಎಂದು ವಾರೆಗಣ್ಣಿನಿಂದ ಭಾವೀ ಮಾವಂದಿರಿಗೆ ಸವಾಲು ಹಾಕುತ್ತಿರುವ ದೃಶ್ಯವೂ ಅಲ್ಲಲ್ಲಿ ಕಂಡುಬಂದಿದೆ.

ಹೇಗೂ, ದೇಶದ ಪರಮೋಚ್ಚ ನ್ಯಾಯಾಲಯವೂ ಬೆಲೆ ಏರಿಕೆಯಿಂದಾಗಿ ಈ ದೇಶದ ಪರಿಸ್ಥಿತಿಯನ್ನು ನೆನೆದು ತೀರಾ ಹತಾಶೆ ವ್ಯಕ್ತಪಡಿಸಿದೆ. ಹೀಗಾಗಿ, ಆಡಳಿತಾರೂಢರು ತಮ್ಮ ತಮ್ಮ ಜೇಬು ತುಂಬಿಸಿಕೊಳ್ಳುವುದರಲ್ಲೇ ಮಗ್ನರಾಗಿದ್ದಾರೆ. ಹಣದುಬ್ಬರ ಹೆಚ್ಚಾಗಿರುವುದರಿಂದ, ಹಣದ ಬೆಲೆ ಕಡಿಮೆಯಾಗಿರುವುದರಿಂದ ಎಷ್ಟು ತುಂಬಿಸಿಕೊಂಡರೂ ತಮ್ಮ ಜೇಬು ತುಂಬುತ್ತಿಲ್ಲ ಎಂಬುದು ಈ ಜಾರಕಾರಣಿಗಳ ಅರಿವಿಗೂ ಬಂದಿದ್ದು, ಅವರು ಇನ್ನೂ ತುಂಬದ ಜೇಬು ಭರ್ತಿಯಾಗಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿದ್ದಾರೆ ಎಂದು ಅವರ ಕಚೇರಿ ಮೂಲಗಳು ತಿಳಿಸಿವೆ.

ಈ ಕಾರಣದಿಂದ, ಜಾರಕಾರಣಿಗಳು ಕೂಡ ವರದಕ್ಷಿಣೆಯತ್ತ ತಮ್ಮ ದೃಷ್ಟಿ ಹರಿಸಿದ್ದಾರೆ. ಮದುವೆಯಾಗುವಾಗ ಮಾತ್ರವೇ ಅಲ್ಲ, ಜಾರಕಾರಣಿ ಆಗುವವನಿಗೂ ವರದಕ್ಷಿಣೆ ಕೊಡುವುದು ಕಡ್ಡಾಯ ಮಾಡುವ ಕಾಯಿದೆಯೊಂದಕ್ಕೆ ಅವರೆಲ್ಲರೂ ಚಿಂತಿಸುತ್ತಿದ್ದಾರೆ ಎಂದು ನಮ್ಮ ಬೊ.ರ. ಬ್ಯುರೋದ ಸ್ಟಿಂಗ್ ಕಾರ್ಯಾಚರಣಾ ಪಡೆಯ ವ-ರದ್ದಿಗಾರರು ಫ್ಯಾಕ್ಸ್ ಮಾಡಿದ್ದಾರೆ.

Thursday, August 21, 2008

ಸಮಯಕ್ಕೆ ಮುಂಚೆ ಪರಾರಿಯಾದ ರೈಲು!

(ಬೊಗಳೂರು ರೈಲು ಬಿಡೋ ಬ್ಯುರೋದಿಂದ)
ಬೊಗಳೂರು, ಆ.21- ಭಾರತೀಯ ರೈಲ್ವೇ ಇಲಾಖೆಯನ್ನು ವಿಶ್ವ ದಾಖಲೆ ಅಥವಾ ವಿಶ್ವದ ಮತ್ತೊಂದು ಅದ್ಭುತ ಎಂದು ಕರೆಸುವ ಮೂಲಕ ಗಿನ್ನೆಸ್ ದಾಖಲೆ ಪುಸ್ತಕದೊಳಗಿರಿಸಿ ಗಟ್ಟಿಯಾಗಿ ಬೈಂಡ್ ಹಾಕಲು ಹೊಸದೊಂದು ಸಂಚು ನಡೆಯುತ್ತಿರುವುದು ತೀರಾ ನಿಧಾನವಾಗಿ ಆದರೂ ತಡವಾಗಿ ಬೊಗಳೆ ರಗಳೆ ಬ್ಯುರೋದ ಗಮನಕ್ಕೆ ಬಂದಿದೆ.

ಈ ಸಂಶೋಧನೆ ಪತ್ತೆಯಾಗಿದ್ದು ಇಲ್ಲಿ ಪ್ರಕಟವಾಗಿರುವ ವರದಿಯಿಂದ. (ಆದರೆ ಇಲ್ಲಿ ಪ್ರಯಾಣಿಕರನ್ನು ಸ್ಟಂಪ್ ಔಟ್ (Passengers stumped) ಮಾಡಿದ್ದೇಕೆಂಬ ಬಗ್ಗೆ ತನಿಖೆ ನಡೆಯುತ್ತಿದೆ.) ಯಾವತ್ತೂ ನಿದ್ರಿಸುತ್ತಿರುವ ಬೊಗಳೆ ರಗಳೆ ಬ್ಯುರೋ ವರದಿಗಾರರು, ಎಂದಿನಂತೆ ತಮ್ಮ ದೈನಂದಿನ ದಿಢೀರ್ ಬೀಟ್‌ಗೆ 2 ಗಂಟೆ ತಡವಾಗಿಯೇ ಹೊರಟಿದ್ದರು. ಇದಕ್ಕೆ ಕಾರಣವೆಂದರೆ, ರೈಲ್ವೇ ಇಲಾಖೆಯ ಸಮಯ ನಿಷ್ಠೆ. ಹೇಗೂ ಎರಡ್ಮೂರ್ನಾಲ್ಕೈದಾರು ಗಂಟೆ ತಡವಾಗಿಯೇ ರೈಲು ಬರುತ್ತದಲ್ಲ ಎಂಬ ಕಾರಣಕ್ಕೆ ಈ ವ್ಯವಸ್ಥೆ.

ಆದರೆ, ಬೊ.ರ. ಬ್ಯುರೋದವರ ಹೊರತಾಗಿ, ಸಮಯ ಪಾಲನೆ ಎಂಬ ದುರ್ವ್ಯಸನಕ್ಕೆ ತುತ್ತಾಗಿ ಯಾವತ್ತೂ ಕಾಯುತ್ತಲೇ ಇರಬೇಕಾದ ಪ್ರಯಾಣಿಕರು ಈ ಬಾರಿ ಮೋಸ ಹೋಗಿದ್ದರು. ಆದರೂ ಅವರಿಗೆ ಕಾಯುವುದು ತಪ್ಪಲಿಲ್ಲ. ಅದೆಂದರೆ, ಈ ಬಾರಿ ರೈಲು ನಿಗದಿತ ಗಂಟೆಗೆ ಮೊದಲೇ ಹೊರಟಾಗಿತ್ತು. ಹೀಗಾಗಿ 2.30ಕ್ಕೆ ಎಂದು ನಿಗದಿಪಡಿಸಲಾಗಿದ್ದ ರೈಲು ಪ್ರಯಾಣವನ್ನು "ಅದು ಮರುದಿನದ 2.30" ಎಂದು ಬರೆಯಲು ಬಹುಶಃ ರೈಲ್ವೇ ಇಲಾಖೆ ಅಧಿಕಾರಿಗಳು ಮರೆತಿದ್ದರು.

ಆದರೆ, ಇದು ರೈಲ್ವೇ ಇಲಾಖೆಯನ್ನು ಗಿನ್ನಿಸ್ ಪುಸ್ತಕದೊಳಗೆ ಹಾಕುವ ಸಂಚು (ಅಂದರೆ ಇತಿಹಾಸದೊಳಗೆ ತಳ್ಳುವ ಸಂಚು) ಎಂದು ರೈಲ್ವೇ ಅಧಿಕಾರಿಗಳು ದೂಷಿಸಿದ್ದಾರೆ. ಅಲ್ಲೇ ಅಡ್ಡಾಡುತ್ತಿದ್ದ ಬೊ.ರ. ಬ್ಯುರೋದವರನ್ನು ದಬಾಯಿಸಿ ಕರೆದು ಮಾತನಾಡಿದ ಅಧಿಕಾರಿ, "ಇಲ್ಲ, ಇಲ್ಲ, ಇಂಥದ್ದು ಸಾಧ್ಯವೇ ಇಲ್ಲ. ರೈಲ್ವೇ ಇಲಾಖೆಯ ಇತಿಹಾಸದಲ್ಲಿಯೇ ರೈಲು ನಿಗದಿತ ಅವಧಿಗೆ ಹೋದ ಮತ್ತು ಅದಕ್ಕಿಂತಲೂ ಮೊದಲು ಹೊರಟ ದಾಖಲೆಯೇ ಇಲ್ಲ" ಎಂದು ಕೈಕಾಲು ಹಿಡಿಯುತ್ತಾ ಅಲವತ್ತುಕೊಂಡರು.

ಯಾವತ್ತಿಗೂ ತಡವಾಗಿಯೇ ಸಂಚರಿಸುವ ದಾಖಲೆ ಸ್ಥಾಪಿಸುವ ರೈಲ್ವೇ ಇಲಾಖೆಗೆ ಇದೊಂದು ಒಲಿಂಪಿಕ್ಸ್ ಕೂಟ ದಾಖಲೆ, ಅಥವಾ ಬಹುಶಃ ಒಲಿಂಪಿಕ್ಸ್‌ನಲ್ಲಿ ಪದಕಗಳು ಸಾಕಷ್ಟು ಸಂಖ್ಯೆಯಲ್ಲಿ ಬರುತ್ತಿರುವುದರಿಂದ ಅದರಿಂದ ಉತ್ತೇಜಿತವಾಗಿ ಈ ರೈಲು ವೇಗವಾಗಿ ಓಡಿರಬಹುದು, ಅಥವಾ ಈ ರೈಲಿನ (ಉಸೈನ್) ಬೋಲ್ಟ್ ಲೂಸ್ ಆಗಿರಬಹುದು ಎಂದು ಶಂಕಿಸಲಾಗಿದೆ.

ತಮಗೆ ತಿಳಿಯದೆಯೇ ರೈಲು ಪರಾರಿಯಾಗಿದ್ದು ಹೇಗೆ ಎಂಬ ಬಗ್ಗೆ ತಲೆ ಕೆರೆದು ಕೆರೆದು ಕೆರೆಕೆರೆದುಕೊಂಡಿರುವ ಅಧಿಕಾರಿಗಳು, ಈ ಕುರಿತು ಪತ್ರಿಕಾ ಹೇಳಿಕೆಯನ್ನು ಇನ್ನಿಲ್ಲದ ವೇಗದಿಂದ ಅರ್ಧ ಗಂಟೆ ತಡವಾಗಿ ಕಳುಹಿಸಿದೆ.

ಆದರೆ ಈ ಕುರಿತು ರೈಲು ಸಚಿವ ಆಲೂ ಪ್ರಸಾದರನ್ನು ಸಂಪರ್ಕಿಸದೆಯೇ ಮಾತನಾಡಿಸಿದಾಗ, ಅವರು ಉತ್ತರ ನೀಡಿದ್ದು ಹೀಗೆ: "ನಮ್ಮದು ಯಾವತ್ತಿದ್ದರೂ ರೈಲು ಬಿಡುವ ಸಚಿವಾಲಯ, ಹೀಗಾಗಿ ಪ್ರಯಾಣಿಕರಿಗೆ ಕೂಡ ಸೂಕ್ತ ಮಾಹಿತಿಯನ್ನು ಹಳಿಯಿಲ್ಲದ ರೈಲು ಬಿಟ್ಟೇ ತಲುಪಿಸಿದ್ದೇವೆ."!

Monday, August 18, 2008

ದೇವರ ಮೇಲೆ ದೂರು: ಸುಪ್ರೀಂಕೋರ್ಟಲ್ಲಿ ಪ್ರಶ್ನಿಸಲು ನಿರ್ಧಾರ

(ಬೊಗಳೂರು ದೇವರ ಬ್ಯುರೋದಿಂದ)
ಬೊಗಳೂರು, ಆ.18- ಈ ದೇಶವನ್ನು ದೇವರೂ ರಕ್ಷಿಸಲಾರ ದೇಶದ ಪರಮೋಚ್ಚ ನ್ಯಾಯಾಲಯವೂ ಜಾರಕಾರಣಿಗಳ ಮುಖಕ್ಕೆ ಉಗುಳಿ ಹೇಳಿರುವುದರಿಂದ ಜಾರಕಾರಣಿಗಳಿಗೆ ಬಲ ಬಂದಂತಾಗಿದ್ದು, ದೇಶದಲ್ಲಿ ನಡೆಯುತ್ತಿರುವ ಭಯೋತ್ಪಾದನಾ ಚಟುವಟಿಕೆಗಳು, ಹಿಂಸಾಚಾರ, ಭ್ರಷ್ಟಾಚಾರ, ಅರಾಜಕತೆ, ಹಾಹಾಕಾರ, ಬೆಲೆ ಏರಿಕೆ... ಇವುಗಳಿಗೆಲ್ಲಾ ದೇವರೇ ಕಾರಣ ಎಂದು ದೇವರ ಮೇಲೆ ದೂರು ಹಾಕುವ ಕೇಂದ್ರದ ನಿರ್ಧಾರವನ್ನು ಪ್ರಶ್ನಿಸಿ ಅಪ್ಪ-ಲೇಟ್ ಟ್ರಿಬ್ಯೂನಲ್‌ಗೆ ಮನವಿ ಹಾಕಲು ನಿರ್ಧರಿಸಲಾಗಿದೆ.

ಇಷ್ಟರವರೆಗೆ ದೇಶದ ಅರಾಜಕತೆಗೆ ನಾವೇ ಕಾರಣರು ಅಂದುಕೊಂಡಿದ್ದೆವು. ಆದರೇ ಈಗ ನಮಗೆ ಅಜ್ಞಾನೋದಯವಾಗಿದೆ. ಜ್ಞಾನದ ಪರದೆ ಸರಿದು ಕತ್ತಲು ಆವರಿಸಿ ಎಲ್ಲವನ್ನೂ ಮುಚ್ಚಿ ಹಾಕುವುದು ಸುಲಭವಾಗಿದೆ. ಎಲ್ಲವೂ ಆ ದೇವರೇ ಮೇಲಿನಿಂದ ನಿಯಂತ್ರಿಸುತ್ತಿರುವುದರಿಂದ ನಾವಿನ್ನು ಆರಾಮವಾಗಿರಬಹುದು. ಜನಸಾಮಾನ್ಯರು ಮತ್ತು ಮತದಾರರ ಉಗುಳುವಿಕೆಯನ್ನು ಕೈಯಲ್ಲಿ ಹಿಡಿದುಕೊಂಡು ತಲೆಗೆ ಹಚ್ಚಿಕೊಳ್ಳಬೇಕಾಗಿಲ್ಲ ಎಂದು ಅಭೂತಪೂರ್ವ ಬೆಲೆ ಏರಿಕೆ ಪಕ್ಷದ ನೇತೃತ್ವದ ಸರಕಾರದ ಮುಖ್ಯಸ್ಥರು ಬೊಗಳೆ ರಗಳೆಗೆ ಮಾತ್ರವೇ ಪತ್ರಿಕಾ ಗೋಷ್ಠಿ ಕರೆದು ತಿಳಿಸಿದ್ದಾರೆ.

ನಮ್ಮ ಅವಸ್ಥೆ ನೋಡಿ ಆ ದೇವರಿಗೂ ಏನು ಮಾಡಲಾಗುವುದಿಲ್ಲ ಎಂಬುದೇ ನ್ಯಾಯಾಲಯದ ಹೇಳಿಕೆಯ ಪರೋಕ್ಷ ಅರ್ಥ. ಹೀಗಾಗಿ ನಾವೇಕೆ ಈ ಬಗ್ಗೆ ಇಲ್ಲದ ತಲೆಯನ್ನು ಕೆಡಿಸಿಕೊಳ್ಳಬೇಕು ಎಂದು ಅವರು ಪ್ರಶ್ನೆಗಳ ದಾಳಿಗೆ ತತ್ತರಿಸುತ್ತಾ ಉತ್ತರಿಸಿದರು.

Saturday, August 16, 2008

ದೇಶವಾಳಲು ಹೊರಟ ಬೊಗಳೂರು ಮಂದಿ!

ಆಗಸ್ಟ್ 15ರಂದು ವಿಶ್ವಾದ್ಯಂತ ಸ್ವಾತಂತ್ರ್ಯ ದಿನ. ಆದರೆ ಭಾರತೀಯರು ಮಾತ್ರ ಆಚರಿಸಿದ್ದು ವಿಶೇಷವಾಗಿತ್ತು. ಅದಿರಲಿ, ಹಿಂದೊಂದು ದಿನ ಬೊಗಳೆ ರಗಳೆ ಬ್ಯುರೋದ ಮಂದಿ ಕೂಡ ಸ್ವಾತಂತ್ರ್ಯ ಸಿಕ್ಕಿದ ಕಾರಣ ದೇಶವನ್ನೇ ಆಳಲು ಹೊರಟಿದ್ದರು. ಈ ವಿಷಯವನ್ನು ಸಂಚೋದನೆ ಮಾಡಿ ವೆಬ್‌ದುನಿಯಾ ಇಲ್ಲಿ ಪ್ರಕಟಿಸಿದೆ. ಬೊಗಳೂರಿಗೆ ಸ್ವಾತಂತ್ರ್ಯ ಲಭಿಸುವವರೆಗೆ ಓದುಗರು ಇಲ್ಲಿ ಏನಿಲ್ಲದಿದ್ದರೂ ಓದುತ್ತಿರುವಂತೆ ನಟಿಸುತ್ತಿರಬಹುದಾಗಿದೆ.

Thursday, August 14, 2008

ಎಚ್ಐವಿ ಪಾಸಿಟಿವ್‌ಗಳ ಸಂಖ್ಯೆ ಹೆಚ್ಚಳಕ್ಕೆ ಕಾರಣ ಪತ್ತೆ!

(ಬೊಗಳೂರು ಪಾಸಿಟಿವ್ ರಿಪೋರ್ಟ್ ಬ್ಯುರೋದಿಂದ)
ಬೊಗಳೂರು, ಆ.14- ದೇಶಾದ್ಯಂತ A+ve, B+ve, AB+ve O+ve ಮುಂತಾದ ಪಾಸಿಟಿವ್ ರಕ್ತ ಸಾಕಷ್ಟು ಪ್ರಮಾಣದಲ್ಲಿ ದೊರೆಯುತ್ತಿರುವಂತೆಯೇ, ಇದಕ್ಕೆ ಮತ್ತೊಂದು ರಕ್ತದ ತಳಿಯು ಪ್ರಬಲ ಪೈಪೋಟಿ ನೀಡಲು ಸಿದ್ಧತೆ ನಡೆಸುತ್ತಿದೆ ಎಂಬುದನ್ನು ಬೊಗಳೆ ರಗಳೆ ಬ್ಯುರೋ ಪತ್ತೆ ಹಚ್ಚಿದೆ.

ಯಾವತ್ತಿದ್ದರೂ ನೆಗೆಟಿವ್ ಗುಂಪಿನ ರಕ್ತವುಳ್ಳವರಿಗೆ ತೊಂದರೆ ತಪ್ಪಿದ್ದಲ್ಲ ಎಂಬುದು ವೈದ್ಯಲೋಕದ ಅಭಿಮತ. ಈ ಕಾರಣಕ್ಕೆ, ಇತ್ತೀಚೆಗಿನ ಟ್ರೆಂಡ್ ಪ್ರಕಾರ, ಎಚ್ಐವಿ ಪಾಸಿಟಿವ್ ರಕ್ತವುಳ್ಳವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಆಧುನಿಕತೆಯ ಸುಳಿಗೆ ಸಿಲುಕಿದ ಮಂದಿ ಇತ್ತೀಚೆಗಿನ ದಿನಗಳಲ್ಲಿ ಪ್ರತಿಯೊಂದಕ್ಕೂ ಎಚ್ಐವಿ ಪರೀಕ್ಷೆ ಮಾಡಿಸಿಕೊಳ್ಳಬೇಕಾಗುತ್ತಿದೆ. ಈ ಸಂದರ್ಭದಲ್ಲಿ ಎಚ್ಐವಿ ನೆಗೆಟಿವ್ ರಕ್ತವಿದೆ ಎಂದು ಪರೀಕ್ಷಾ ವರದಿಗಳು ಬಂದಾಗ ಅವರೆಲ್ಲಾ ಹೌಹಾರಿದ್ದರು.

ಯಾವುದೇ ರೀತಿಯಲ್ಲಾದರೂ ಎಚ್ಐವಿ ನೆಗೆಟಿವ್ ರಿಪೋರ್ಟ್ ಬರಬಾರದು, ಪಾಸಿಟಿವ್ ಆಗಿಯೇ ಇರಬೇಕು ಎಂದು ಹೆಣಗಾಟ ನಡೆಸಿರುವ ಜನರಿಂದಾಗಿ, ಎಚ್ಐವಿ ಪಾಸಿಟಿವ್ ರಕ್ತವಿರುವವರ ಸಂಖ್ಯೆಯೂ ಏರುತ್ತಲೇ ಇರುತ್ತಿದೆ ಎಂಬುದನ್ನು ನಮ್ಮ ಸಂ-ಚೋದನಾ ಬ್ಯುರೋ ಸದಸ್ಯರು ಕಂಡುಕೊಂಡಿದ್ದಾರೆ.

ಹಾಗಿದ್ದರೆ ಎಚ್ಐವಿ ಪಾಸಿಟಿವ್ ಪಟುಗಳ ಈ ದಿಢೀರ್ ಏರಿಕೆಗೆ ಕಾರಣಗಳೇನು ಎಂಬುದರ ಹಿಂದೆ ಬಿಂದ ಬೊಗಳೆ ರಗಳೆ ಬ್ಯುರೋದ ಏಕಸದಸ್ಯ ತನಿಖಾ ಮಂಡಳಿಯ ಸರ್ವ ಸದಸ್ಯರು, ಅತ್ಯಂತ ಪ್ರೋತ್ಸಾಹದಾಯಕ ಸಂಗತಿಯೊಂದನ್ನು ಕಂಡುಕೊಂಡರು. ಅದೆಂದರೆ ಎಚ್ಐವಿ ಪಾಸಿಟಿವ್ ರಕ್ತ ಹೊಂದಿರುವವರಿಗೆ ಮೀಸಲಾತಿ. ಮಾತ್ರವಲ್ಲದೆ, ಎಚ್ಐವಿ ಪಾಸಿಟಿವ್ ಇದ್ದರೆ ವಿಮಾ ರಕ್ಷಣೆಯೂ ದೊರೆಯುತ್ತದೆ!

ಪರಿಸ್ಥಿತಿ ಹೀಗೇ ಮುಂದುವರಿದರೆ ಮುಂದೊಂದು ದಿನ ಎಚ್ಐವಿ ಪಾಸಿಟಿವ್ ರಕ್ತವುಳ್ಳವರ ಸಂಖ್ಯೆ ಹೆಚ್ಚೆಚ್ಚಾಗುತ್ತದೆ. ಅವರು ಕೂಡ ತಾವು ಅಲ್ಪಸಂಖ್ಯಾತರು, ತಮಗೂ ಮೀಸಲಾತಿ ಬೇಕು ಅಂತ ಹೋರಾಟ ಮಾಡಬಹುದು ಮತ್ತು ಅವರು ಕೂಡ ಅಮೂಲ್ಯವಾದ ಓಟು ಬ್ಯಾಂಕ್ ಆಗಬಲ್ಲರು ಎಂಬುದನ್ನು ಮನಗಂಡಿರುವ ಜಾರಕಾರಣಿಗಳು, ಅವರಿಗೆ ಮಾನವೀಯ ನೆರವು, ಮಾನಸಿಕ ಬೆಂಬಲ ಇತ್ಯಾದಿಯೆಲ್ಲಾ ನೀಡುವ ಬದಲಾಗಿ, ಮೀಸಲಾತಿ ಕಲ್ಪಿಸಲು ಈಗಿಂದೀಗಲೇ ಸಿದ್ಧತೆ ನಡೆಸತೊಡಗಿದ್ದಾರೆ.

Monday, August 11, 2008

ಭಾರತಕ್ಕೆ ಒಲಿಂಪಿಕ್ಸ್ ಚಿನ್ನ: ತನಿಖೆಗೆ ಆದೇಶ!

(ಬೊಗಳೂರು ಒಲಿಂ-ಫಿಕ್ಸ್ ಬ್ಯುರೋದಿಂದ)
ಬೊಗಳೂರು, ಆ.11- ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತಕ್ಕೆ 28 ವರ್ಷಗಳ ಬಳಿಕ ಚಿನ್ನದ ಪದಕ ಸಿಕ್ಕಿರುವ ಆಘಾತದಿಂದ ಇನ್ನೂ ಚೇತರಿಸಿಕೊಳ್ಳದ ಭಾರತೀಯ ರಾಜಕೀಯ ಒಲಿಂಪಿಕ್ಸ್ ಮಂಡಳಿಯು (ಭಾರಾಓಮ), ಈ ಒಲಿಂಪಿಕ್ಸ್‌ನಲ್ಲಿ ಏನು ಫಿಕ್ಸ್ ಆಗಿದೆ ಎಂಬುದರ ಕುರಿತು ತನಿಖೆಗೆ ಆದೇಶಿಸಿದೆ.

ಇದಕ್ಕೆ ಪ್ರಮುಖ ಕಾರಣವೆಂದರೆ, ತಾವು ಎಷ್ಟೆಲ್ಲಾ ಹರ ಸಾಹಸ ಮಾಡಿದರೂ, ಕ್ರೀಡಾಗಳುಗಳ ಜಂಘಾಬಲ ಉಡುಗಿಸಲು ಬೇಕಾದ ಎಲ್ಲ ರೀತಿಯ ರಾಜಕೀಯ ಮಾಡಿದರೂ, ಅದು ಹೇಗೆ ಈ ವ್ಯಕ್ತಿ, ರಾಜಕೀಯದಿಂದ ನುಸುಳಿ, ಬೀಜಿಂಗಿಗೆ ತೆರಳಿ ಚಿನ್ನ ಗೆದ್ದ ಎಂಬುದು ಭಾರಾಓಮಗೆ ಇನ್ನೂ ನಂಬಲಾಗದ ಸಂಗತಿಯಾಗುಳಿದಿದೆ.

ಭಾರತದಲ್ಲಿ ದುಡ್ಡು ಕೊಡುವ ಕ್ರಿ-ಕೆಟ್ಟಿದೆ. ಬೇರಾವುದೇ ಆಟಗಳು ನಮಗೆ ಬೇಕಾಗಿಲ್ಲ. ಹೀಗಾಗಿ ಇತರ ಕ್ರೀಡೆಗಳನ್ನೆಲ್ಲಾ ನಾಮಾವಶೇಷ ಮಾತ್ರವೇ ಉಳಿಸುವ ನಿಟ್ಟಿನಲ್ಲಿ ಹಾಕಿ ಕ್ರೀಡೆಗೆ ಈಗಾಗಲೇ ಒಲಿಂಪಿಕ್ಸ್‌ನಿಂದ ಖೋ ನೀಡಿಸಲಾಗಿದೆ. ಇನ್ನು ವೇಟ್ ಲಿಫ್ಟಿಂಗಿನಲ್ಲಿ ತಮ್ಮ ರಾಜಕೀಯವನ್ನೂ ಮೀರಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಮೋನಿಕಾ ದೇವಿ ವಿರುದ್ಧ ಎಷ್ಟೋ ಶ್ರಮ ಪಟ್ಟು, ಅವರು ಅಲ್ಲಿ ಹೋಗಿ ಭಾರತದ ಮಾನ ಕಾಪಾಡದಂತೆ ನೋಡಿಕೊಳ್ಳಲಾಗಿದೆ ಎಂದು ಭಾರಾಓಮದ ಅದಕ್ಷರು ಬೊಗಳೆ ರಗಳೆಗೆ ತಿಳಿಸಿದ್ದಾರೆ.

ಈ ಮಧ್ಯೆ, ಮತ್ತೊಂದು ತನಿಖೆಗೆ ಹೊರಟಿರುವ ಭಾರತೀಯ ಕೆಸರೆರಚಾಟ ಕ್ರೀಡೆ ವಿಭಾಗದ ಅದಕ್ಷರು, ನೂರಾಹತ್ತು ಕೋಟಿ ಭಾರತೀಯರಲ್ಲಿ, ಒಬ್ಬರಿಗೆ ಮಾತ್ರವೇ ಚಿನ್ನ ಕೊಟ್ಟಿದ್ದೇಕೆ ಎಂಬುದರ ಕುರಿತು ಶೋಧ ನಡೆಸಲು ಆಜ್ಞಾಪಿಸಿದ್ದಾರೆ. ಇಷ್ಟು ಕೋಟಿ ಭಾರತೀಯರಿಗೆ ಇದು ಏನೇನೂ ಸಾಲದು. ಇಲ್ಲಿ ದೊರೆತ ಚಿನ್ನದಲ್ಲಿ ಅಲ್ಪಸಂಖ್ಯಾತರಿಗೆ ಶೇ.50, ಹಿಂದುಳಿದವರಿಗೆ ಶೇ.40 ಮತ್ತು ಮುಂದುವರಿದವರಿಗೆ ಶೇ.1 ಇತ್ಯಾದಿಯೆಲ್ಲಾ ಮೀಸಲಾತಿ ನೀಡಬೇಕು. ಇಷ್ಟು ಪುಟ್ಟ ಚಿನ್ನದ ಪದಕದಲ್ಲಿ ಇದನ್ನೆಲ್ಲಾ ಲೆಕ್ಕಾಚಾರ ಹಾಕಿ ಸರಿಪಡಿಸುವುದು ಹೇಗೆ ಎಂಬುದು ತಿಳೀತಿಲ್ಲ ಎಂದು ಅವರು ತಲೆಯನ್ನು ಸಂಪೂರ್ಣವಾಗಿ ಕೆಡಿಸಿಕೊಂಡುಬಿಟ್ಟಿದ್ದಾರೆ.

ಕನಿಷ್ಠ ಪಕ್ಷ ಮುಂದಿನ ಒಲಿಂಪಿಕ್ಸ್‌ನಲ್ಲಾದರೂ ಹಣದ ಥೈಲಿ ತರುವ ಆಟ, ರಾಜಕೀಯ ಪ್ರಾವೀಣ್ಯ ಪ್ರದರ್ಶಿಸುವ ಆಟಗಳನ್ನು ಕೂಡ ಅಳವಡಿಸಲಿ, ಇದರಿಂದಾಗಿ ತಮ್ಮ ಜೇಬು ಸಾಕಷ್ಟು ತುಂಬಿಕೊಳ್ಳಬಹುದು, "One World, One Dream" ಎಂಬ ಕನಸು ನನಸಾಗುವುದು ಎಂಬುದಾಗಿ ಶತಕೋಟಿ ಭಾರತೀಯರಲ್ಲಿ ಹಲವು, ಕೆಲವು ಜಾರಕಾರಣಿಗಳು ತೀವ್ರವಾಗಿ ಒತ್ತಾಯಿಸಿದ್ದಾರೆ.

Thursday, August 07, 2008

ಮ್ಯಾರಥಾನ್ ಬೆಲೆ ಓಟ; ಮ್ಯಾರಥಾನ್ ನರಳಿಕೆಯ ದಾಖಲೆ

(ಬೊಗಳೂರು ದಾಖಲೆಗಳ ಬ್ಯುರೋದಿಂದ)
ಬೊಗಳೂರು, ಆzzzzzzzz., 7- ದೇಶದಲ್ಲಿ ದಾಖಲೆ ಮಾಡುವವರಿಗೇನೂ ಬರವಿಲ್ಲ. ಹೀಗಾಗಿ ಗಿನ್ನೆಸ್ ಮತ್ತು ಲಿಮ್ಕಾ ದಾಖಲೆಗಳ ಪುಸ್ತಕ ಮಾಲೀಕರು ಭಾರತದತ್ತ ತಲೆ ಹಾಕಿಯೂ ಮಲಗದಿರಲು ಭೀಷ್ಮ ಪ್ರತಿಜ್ಞೆ ಮಾಡಿದ್ದಾರೆ ಎಂದು ಬೊಗಳೆ ರಗಳೆ ಬ್ಯುರೋದ ಮಂದಿಗೆ ಮಾತ್ರ ಗೊತ್ತಾಗಿದೆ.

ಇದಕ್ಕೆ ಪ್ರಮುಖ ನೆಪವೆಂದರೆ ಇತ್ತೀಚೆಗಷ್ಟೇ ಮಾಡಲಾದ ನಿರಂತರ - ಮ್ಯಾರಥಾನ್ ಮೃದಂಗವಾದನ ದಾಖಲೆ. ಇದೇನೂ ದಾಖಲೆಯೇ ಅಲ್ಲ ಎಂದು ಬೆನ್ನು... ಅಲ್ಲಲ್ಲ... ಹೊಟ್ಟೆ ತಟ್ಟಿಕೊಳ್ಳುತ್ತಿರುವ ಭಾರತದ ಜನ ಸಾಮಾನ್ಯರು ಇದಕ್ಕೆ ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನಗಳನ್ನು ಮಾಡುತ್ತಿದ್ದಾರೆ.

ಒಬ್ಬರ ವಾದದ ಪ್ರಕಾರ, ಈ ದಾಖಲೆಯು ಕೇಂದ್ರದ ಯುಪಿಎ ಸರಕಾರದ ಹೆಸರಿನಲ್ಲಿ ಬರೆಸಬೇಕು. ಅಧಿಕಾರಕ್ಕೆ ಬಂದಂದಿನಿಂದ ನಿರಂತರವಾಗಿ ಮ್ಯಾರಥಾನ್ ಬೆಲೆ ಏರಿಕೆಯಲ್ಲಿ ತೊಡಗಿದ ಕಾರಣದಿಂದಾಗಿಯೇ ಅದಕ್ಕೆ Unprecedented Price Agenda ಸರಕಾರ ಎಂಬ ಹೆಸರು ಬಂದಿದೆ.

ಮತ್ತೊಬ್ಬರ ವಾದದ ಪ್ರಕಾರ, ದೇಶಾದ್ಯಂತ ನಿರಂತರ ಬಾಂಬ್ ಸ್ಫೋಟ, ಆತ್ಮಾಹುತಿ ದಾಳಿಯೇ ಮೊದಲಾದ ಭಯೋತ್ಪಾದನಾ ಚಟುವಟಿಕೆಗಳ ಮ್ಯಾರಥಾನ್ ನಿರಂತರವಾಗಿ ನಡೆಯುತ್ತಿವೆ. ಯಾವುದೇ ಅಡೆತಡೆಯಿಲ್ಲದೆಯೇ ನಡೆಯುತ್ತಿರುವುದರಿಂದ ಕೇಂದ್ರ ಸರಕಾರದ ಗೃಹ ಇಲಾಖೆಗೆ ಈ ದಾಖಲೆಯ ಕೀರ್ತಿ ಸಲ್ಲಬೇಕು.

ಇನ್ನೂ ಒಂದು ದಾಖಲೆಯಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂಸಾಚಾರ. ಅದು ಕೂಡ ಮೇಲಿನ ಕೆಟಗರಿಗೇ ಸೇರ್ಪಡೆಯಾಗುವುದರಿಂದ ಇದನ್ನು ಆ ದಾಖಲೆಗಳ ಪಟ್ಟಿಯಡಿಗೇ ಸೇರಿಸಲಾಗುತ್ತದೆ.

ಮತ್ತೊಂದು ದಾಖಲೆಯೆಂದರೆ, ನಿರಂತರವಾಗಿ ಏರುತ್ತಲೇ ಇರುವ ಹಣದುಬ್ಬರದ ಮ್ಯಾರಥಾನ್ ಓಟ.

ಮಗದೊಂದು: ದೇಶದ ಜನ ಮ್ಯಾರಥಾನ್ ಬೆಲೆ ಏರಿಕೆಯಿಂದ ತತ್ತರಿಸುತ್ತಿದ್ದರೂ ಸರಕಾರ ನಿರಂತರವಾಗಿ ಕಣ್ಮುಚ್ಚಿ ಕುಳಿತಿರುವುದು.

ಬಗೆಬಗೆದು ತೆಗೆದ ಮಗದೊಂದು ದಾಖಲೆ (ಇದನ್ನೇ ಲಿಮ್ಕಾ / ಗಿನ್ನೆಸ್ ಪುಸ್ತಕದಲ್ಲಿ ಇಷ್ಟವಿಲ್ಲದಿದ್ದರೂ ಸೇರ್ಪಡಿಸಲಾಗಿದೆ): ಇಷ್ಟೆಲ್ಲ ಬೆಲೆ ಏರಿಕೆಯಿದ್ದರೂ ಈ ದೇಶದ ಜನರು ಮ್ಯಾರಥಾನ್ ಆಗಿ ಬದುಕುಳಿದು, ಅರೆಬರೆ ಹೊಟ್ಟೆ-ಬಟ್ಟೆಯಲ್ಲೇ ಜೀವನ ಸಾಗಿಸುತ್ತಿರುವುದು ಮತ್ತು ಕೇಳುವವರಿಲ್ಲದಂತಾಗಿ ಅಸಹಾಯಕತೆಯಿಂದ ಮ್ಯಾರಥಾನ್ ಆಗಿ ಆಕಾಶ ನೋಡುತ್ತಿರುವುದು!

Monday, August 04, 2008

ಕಾನೂನು ಮಿಗಿಲೋ, ನಾನು ಮಿಗಿಲೋ?: ಕರುಣಾಕಿಡಿ

(ಬೊಗಳೂರು ಅಜ್ಞಾನಿಗಳ ಬ್ಯುರೋದಿಂದ)
ಬೊಗಳೂರು, ಆ.4- "ನೀವು ಕಾನೂನಿಗಿಂತ ಮಿಗಿಲೇ?" ಅಂತ ನ್ಯಾಯಾಲಯವು ಕೇಳಿರುವುದಕ್ಕೆ ಹ್ಹ ಹ್ಹ ಹ್ಹ ಎಂದು ಪ್ರತಿಕ್ರಿಯಿಸಿರುವ ತಮಿಳುಕಾಡು ಅಮುಖ್ಯಮಂತ್ರಿ ಕರುಣಾಕಿಡಿ, ನ್ಯಾಯಾಲಯಕ್ಕೆ ಇಷ್ಟೂ ಗೊತ್ತಿಲ್ಲದಿದ್ದರೆ ಹೇಗೆ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ತಮ್ಮ ಸರಕಾರವು ಇಷ್ಟೊಂದು ಅಕ್ರಮ, ಅನ್ಯಾಯಗಳನ್ನು ಮಾಡುತ್ತಿದ್ದರೂ, ಯಾssssರಿಗೂ ಏssssನೂ ಮಾಡಲಾಗಿಲ್ಲ. ಹೀಗಿರುವಾಗ ನಾವು ಮಿಗಿಲೋ ಕಾನೂನು ಮಿಗಿಲೋ ಎಂಬುದು ಗೊತ್ತಾಗುವುದಿಲ್ಲವೇ ಎಂದು ಪ್ರಶ್ನೆ ಹಾಕಿರುವ ಆಗಾಗ್ಗೇ ಸೇತು ಸಮುದ್ರಕ್ಕೆ ಬೆಂಕಿಯ ಕಿಡಿ ಹಚ್ಚುತ್ತಿರುವ ಕರುಣಾಕಿಡಿ, ತಮಗೆ ಧರ್ಮ, ದೇವರು-ದಿಂಡರಲ್ಲಿ ನಂಬಿಕೆ ಬಲವಾಗಿಯೇ ಇದೆ ಎಂದು ತಮ್ಮ ದ್ರಾವಿಡ ಸಿದ್ಧಾಂತವನ್ನು ಮೆಟ್ಟಿ ಮಾತನಾಡಿದ್ದಾರೆ.

ಅದು ಹೇಗೆ ಎಂದು ಅಚ್ಚರಿಯಿಂದ ಕೇಳಿದಾಗ, 'ಗಣಪತಿಯ ಮದುವೆ ಯಾವಾಗ ಎಂಬ ಪ್ರಶ್ನೆಗೆ 'ನಾಳೆ' ಎಂಬ ಸಿದ್ಧ ಉತ್ತರವಿಲ್ಲವೇ? ಇದು ಪುರಾಣದ ಕಥನವೇ ಅಲ್ಲವೇ? ನಾನಿದನ್ನು ಬಲವಾಗಿಯೇ ನಂಬುತ್ತಿದ್ದೇನೆ. ಹೀಗಾಗಿ, ಶೋಕಾಸ್ ನೋಟೀಸಿಗೆ ಶೋಕಭರಿತ ಉತ್ತರ ಯಾವಾಗ ನೀಡುತ್ತೀರಿ ಎಂದು ನ್ಯಾಯಾಲಯವು ಆಗಾಗ್ಗೆ ಕೇಳುತ್ತಿದೆ. ನಾವು ಕೂಡ ನಾಳೆ ನಾಳೆ ಅಂತಲೇ ಹೇಳುತ್ತಿದ್ದೇವೆ' ಎಂದು ಸಮರ್ಥಿಸಿಕೊಂಡರು.

ಮಾತ್ರವಲ್ಲ, ನಮಗೂ ಈಗ ರಾಮನ ಮೇಲೆ ನಂಬಿಕೆ ಬಂದಿದೆ. ಹೀಗಾಗಿ, ರಾಮಸೇತುವನ್ನು ಶ್ರೀರಾಮನೇ ಧ್ವಂಸ ಮಾಡಿದೆ ಅಂತ ನಾವು ಕೇಂದ್ರ ಸರಕಾರದ ಕೈಯಲ್ಲೇ ನ್ಯಾಯಾಲಯಕ್ಕೆ ಹೇಳಿಸಲಿಲ್ಲವೇ ಎಂದು ಪ್ರಶ್ನೆ ಹಾಕಿರುವ ಕರುಣಾಕಿಡಿ, ಈ ಕಾಲದಲ್ಲಿ ದೇವರಲ್ಲಿ ನಂಬಿಕೆ ಇಡದಿದ್ದರೆ ಉಳಿಗಾಲವಿಲ್ಲ. ಕನಿಷ್ಠ ಪಕ್ಷ ದೇವರ ಹೆಸರಿನಲ್ಲಿ ಬಾಂಬು ಸಿಡಿಸಿ ರಕ್ತಪಾತ ಮಾಡುತ್ತಿರುತ್ತಾರಲ್ಲ, ಅವರ ಮೇಲಾದರೂ ನಂಬಿಕೆ ಇಡಬೇಕಾಗುತ್ತದೆ. ಯಾಕೆಂದರೆ ಚುನಾವಣೆಗಳು ಸಮೀಪಿಸುತ್ತಲೇ ಇರುತ್ತವಲ್ಲ ಎಂದು ಕೊಂಕು ನುಡಿದಿದ್ದಾರೆ.

ಈಗೀಗಲಂತೂ ನಾವು ದೇವರ ಮೇಲೆ ಹೆಚ್ಚು ಹೆಚ್ಚು ಭಾರ ಹಾಕಲಾರಂಭಿಸಿದ್ದೇವೆ. ಯಾಕೆಂದರೆ ಏರುತ್ತಿರುವ ಬೆಲೆಗಳನ್ನು ಇಳಿಸುವುದು ನಮ್ಮ ಕೈಯಲ್ಲಿಲ್ಲ. 'ರಾಜ್ಯದ ಜನರನ್ನು ಆ ದೇವರೇ ಕಾಪಾಡಬೇಕು' ಎನ್ನುತ್ತಾ ಅವರು ಇಂಟರ್‌ವಲ್ ಅಲ್ಲಲ್ಲ... ಇಂಟರ್‌ವ್ಯೂ ಮುಗಿಸಿ ಎದ್ದುಹೋದರು. ಸ್ಥಂಭೀ'ಭೂತ'ವಾಗಿಬಿಟ್ಟ ಬೊಗಳೆ ರಗಳೆ ಬ್ಯುರೋ ಸದಸ್ಯರು, ಅಲ್ಲೇ ಇದ್ದ ಬೆಕ್ಕು ನಾಯಿಗಳನ್ನು ಹಿಡಿದು ಇಂಟರ್ವ್ಯೂ ಮಾಡಲಾರಂಭಿಸಿದರು.

Wednesday, July 30, 2008

ಪೊಲೀಸ್ ನಿಷ್ಕ್ರಿಯ ದಳ, ಸಾಕುನಾಯಿ ದಳ ಸ್ಥಾಪನೆ

(ಬೊಗಳೂರು ನಿಷ್ಕ್ರಿಯ ಬ್ಯುರೋದಿಂದ)
ಬೊಗಳೂರು, ಜು.೩೦- ಭಯೋತ್ಪಾದಕರನ್ನು ಮತ್ತು ಉಗ್ರವಾದವನ್ನು ಮಟ್ಟ ಹಾಕುವ ಪೊಲೀಸರ ಕ್ರಮವನ್ನು ಖಡಾಖಂಡಿತವಾಗಿ ಖಂಡಿಸಿರುವ ಅಖಿಲ ಭಾರತ ಓಟು ಓಲೈಕೆ ಪಕ್ಷವು, ಅಲ್ಲಲ್ಲಿ ಬಾಂಬ್ ಸ್ಫೋಟಿಸುತ್ತಾ, ರಕ್ತ ಪಾತ ಮಾಡುತ್ತಾ, ಕಾಶ್ಮೀರದಲ್ಲಿ ಸದಾ ಹಿಂಸಾಚಾರದಲ್ಲಿ ತೊಡಗುತ್ತಾ, ಬಾಂಬುಗಳ ಸಹಿತವಾಗಿ ಪತ್ತೆಯಾಗುತ್ತಿರುವ 'ಮತದಾರರನ್ನು' ಪತ್ತೆ ಹಚ್ಚುವುದಕ್ಕಾಗಿ ಪೊಲೀಸ್ ನಿಷ್ಕ್ರಿಯ ದಳಗಳನ್ನು ರಚಿಸುವ ಪ್ರಸ್ತಾಪ ಮುಂದಿಟ್ಟಿದೆ.

ಭಯೋತ್ಪಾದಕರನ್ನು ಪತ್ತೆ ಹಚ್ಚಿದರೆ ಮತ್ತು ಅವರನ್ನು ಬಂಧಿಸಿದರೆ, ಶೀಘ್ರವೇ ನಡೆಯಲಿರುವ ಚುನಾವಣೆಗಳಲ್ಲಿ ನಮಗೆ ಮತ ಹಾಕುವವರಾರು ಎಂಬ ಸಂದಿಗ್ಧತೆಗೆ ಸಿಲುಕಿರುವ ಅಭಾಓಓ ಪಕ್ಷ, ಪೊಲೀಸ್ ನಿಷ್ಕ್ರಿಯ ದಳದ ರೂಪು ರೇಷೆ ತಯಾರಿಸಿದೆ.

ಅದರ ಪ್ರಕಾರ, ಪೊಲೀಸ್ ನಿಷ್ಕ್ರಿಯ ದಳಕ್ಕೆ ನ್ಯೂಟನ್ ನಿಯಮ, ಐನ್‌ಸ್ಟೀನ್ ಸೂತ್ರ ಹಾಗೂ ದೇಶದ ಹೆಸರಾಂತ ಜಾರಕಾರಣ ವಿಜ್ಞಾನದ ವಿಶಿಷ್ಟ ಸೂತ್ರವನ್ನು ಕೂಡ ರೂಪಿಸಲಾಗಿದೆ.

ನ್ಯೂಟನ್ ನಿಯಮದ ಪ್ರಕಾರ, ಭಯೋತ್ಪಾದಕರು ದಾಳಿ ಮಾಡಲು ಅವಕಾಶ ಮಾಡಿಕೊಡಬೇಕು. ಆಗ ಭಯೋತ್ಪಾದಕರು ತಾವಾಗಿಯೇ ಬಲೆಗೆ ಬೀಳುವಂತಾಗುತ್ತದೆ. ಸಿಕ್ಕಿದರೆ 'ಯುರೇಕಾ' ಎನ್ನುತ್ತಾ, ಭಯೋತ್ಪಾದಕರನ್ನು ಹಿಂದಿಕ್ಕುವ ಭರದಲ್ಲಿ ಅವರನ್ನು ಅಲ್ಲೇ ಬಿಟ್ಟು ಓಡಬಹುದು.

ಐನ್‌ಸ್ಟೀನ್ ನಿಯಮದ ಪ್ರಕಾರ, ಬಾಂಬು ಇಡಲು ಬರುವ ಉಗ್ರಗಾಮಿಗಳನ್ನು ಬೆನ್ನಟ್ಟಬೇಕು. ಉಗ್ರರಿಗೆ ಓಡಿ ಓಡಿ ಸಾಕು ಸಾಕಾಗುವವರೆಗೂ ಓಡಿಸಬೇಕು. ಕೊನೆಗೆ ಆಯಾಸದಿಂದ ಅವರು ಬೀಳುತ್ತಾರೆ. ಆಗ ಶಕ್ತಿಗುಂದಿದ ಅವರನ್ನು (ನಮಗೆ ಶಕ್ತಿಯಿದ್ದರೆ) ಹಿಡಿಯುವುದು ಸುಲಭ.

ವಿಶಿಷ್ಟ ಮತ್ತು ವಿಶೇಷವಾದ ಜಾರಕಾರಣ ನಿಯಮದ ಪ್ರಕಾರ, ದಾಳಿ ನಡೆದಾಗ ಯಾರಾದರೊಬ್ಬರನ್ನು ಬಂಧಿಸಲೇಬೇಕಲ್ಲ... ಇದಕ್ಕಾಗಿ ಒಬ್ಬ ಮುಗ್ಧನನ್ನು ಬಂಧಿಸಿಡಬೇಕು. "ಅಯ್ಯೋ... ಬಿಟ್ಬಿಡಿ.... ನನ್ನೇನೂ ಮಾಡ್ಬೇಡಿ... ನಾನು ಉಗ್ರಗಾಮಿ ಅಂತ ಒಪ್ಪಿಕೊಳ್ತೀನಿ" ಅಂತ ಗೋಗರೆಯುವವರೆಗೂ ಚೆನ್ನಾಗಿ 'ಪೊಲೀಸ್ ಟ್ರೀಟ್‌ಮೆಂಟ್' ಕೊಟ್ಟಾಗ ನಮಗೊಬ್ಬ ಭಯೋತ್ಪಾದಕ ಸಿಕ್ಕಿದಂತಾಗುತ್ತದೆ!

ಇದರೊಂದಿಗೆ, ಬಾಂಬ್ ಪತ್ತೆಗೆ ಮತ್ತು ಅವುಗಳನ್ನಿರಿಸಿದವರ ಶೋಧಕ್ಕೆ ಶ್ವಾನ ದಳಗಳನ್ನು ಸುಖಾಸುಮ್ಮನೆ ದುಡಿಸಿಕೊಳ್ಳಲಾಗುತ್ತಿದೆ. ಅವುಗಳು ನಿಷ್ಠೆಗೆ ಹೆಸರಾಗಿರುವ ಪ್ರಾಣಿಗಳಾಗಿರುವುದರಿಂದ ಮತ್ತು ಅವುಗಳಿಗೆ ಯಾವುದೇ ಆಮಿಷ ನೀಡುವುದು ಸಾಧ್ಯವಿಲ್ಲ. ಅವುಗಳು ನಿಷ್ಪಕ್ಷಪಾತವಾಗಿ ಶೋಧನೆ ಮಾಡುತ್ತವೆಯಾದುದರಿಂದ, ನಮ್ಮ ಬಂಡವಾಳಗಳು ಹೊರಗೆ ಬರದಂತಾಗಲು, ಈ ಶ್ವಾನ ದಳಗಳಲ್ಲಿ ನಾಯಿಗಳ ಬದಲು ನಮ್ಮ ಪಕ್ಷದ ಮುಖಂಡರಿಗೇ ಅವಕಾಶ ನೀಡಬೇಕು ಎಂದೂ ಆಗ್ರಹಿಸಲಾಗಿದೆ. ಅದು ಶ್ವಾನದಳವೇ ಆಗಬೇಕೂಂತ ಇದ್ದರೆ, ಈ ಮುಖಂಡರು ತಮ್ಮ ಜೊತೆ ಮನೆಯಲ್ಲಿರುವ ಸಾಕುನಾಯಿಗಳನ್ನೂ ಒಯ್ಯುತ್ತಾರೆ ಎಂಬ ವಾಕ್ಯವನ್ನೂ ಈ ಪಕ್ಷವು ಸೇರಿಸಿದೆ.

Monday, July 28, 2008

ಕಂಡಕಂಡಲ್ಲಿ ಖಂಡನೆ: ತೀವ್ರತೆ ಅಳೆಯಲು ಭೂಕಂಪ ಮಾಪನ

(ಬೊಗಳೂರು ಕಂಡಲ್ಲಿ ಖಂಡನಾ ಬ್ಯುರೋದಿಂದ)
ಬೊಗಳೂರು, ಜು.28- ದೇಶದ ಭದ್ರತಾ ವ್ಯವಸ್ಥೆಯನ್ನು, ಪೋಟಾ ಕಾಯಿದೆ ರದ್ದುಪಡಿಸಿದ ಸರಕಾರದ ಭಯೋತ್ಪಾದನಾ ವಿರೋಧೀ ಕಾಯಿದೆಯ ಸಾಮರ್ಥ್ಯವನ್ನು ಅಳೆಯುವ ನಿಟ್ಟಿನಲ್ಲಿ ರಣಹೇಡಿ ಉಗ್ರರು ಟಿಫಿನ್, ಸೈಕಲು, ಬಸ್ಸು, ಆಸ್ಪತ್ರೆಗಳಲ್ಲಿ ಬಾಂಬ್ ಸ್ಫೋಟಿಸಿರುವುದಕ್ಕೆ ಜಾರಕಾರಣಿಗಳ ಸಮುದಾಯದಿಂದ ಖಂಡನೆಗಳ ಮಹಾಪೂರವೇ ಹರಿದುಬರುತ್ತಿದೆ.

ಈ ಖಂಡನೆಗಳೇ ಅಲ್ಲಲ್ಲಿ ಪಶ್ಚಾತ್ ಕಂಪನಗಳಂತೆ ಸ್ಫೋಟಿಸುತ್ತಿರುವುದರಿಂದ ಆತಂಕಗೊಂಡಿರುವ ಬೊಗಳೆ ರಗಳೆ ಬ್ಯುರೋ, ತಮ್ಮ ಪತ್ರಿಕೆಯಲ್ಲಿ ಈ ಖಂಡನೆಗಳನ್ನು ಪ್ರಕಟಿಸಲು ಸಾಧ್ಯವಾಗಲಾರದೆ ಚಡಪಡಿಸುತ್ತಿದೆ. ಆದರೆ ಈ ಬಗ್ಗೆ ಕ್ರಮ ಕೈಗೊಂಡಿರುವ ಸೊಂಪಾದ-ಕರು, ತೀವ್ರವಾಗಿ ಖಂಡಿಸಿದವರ ಹೇಳಿಕೆಯನ್ನು ಮಾತ್ರ ಪ್ರಕಟಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಈ ಕಾರಣಕ್ಕೆ ಖಂಡನೆಯ ತೀವ್ರತೆ ಎಷ್ಟೆಂಬುದನ್ನು ಅಳೆಯಲು ಭೂಗರ್ಭವತಿ ಶಾಸ್ತ್ರಜ್ಞರ ಮೊರೆ ಹೋಗಲಾಗಿದ್ದು, ಅವರು ನೀಡಿದ ಭೂಕಂಪ ಮಾಪನವನ್ನೇ ಈ ಖಂಡನೆಯ ತೀವ್ರತೆ ಅಳೆಯಲೂ ಉಪಯೋಗಿಸಲಾಗುತ್ತದೆ.

ಯಾರೂ ಏನೂ ಹೇಳದೆಯೇ ಮತ್ತು ಕೇಳದೆಯೇ ದೇಶದ ಮನೆ (=ಗೃಹದಲ್ಲಿರುವ) ಮಂತ್ರಿಗಳು, ಬೊಗಳೆಗೆ ಮಾತ್ರ ಪ್ರತಿಕ್ರಿಯೆ ನೀಡಿ, "ದೇಶ ಬಿಕ್ಕಟ್ಟಿನಲ್ಲಿದೆ. ದೇಶದ ಪ್ರಜೆಗಳ ರಕ್ಷಣೆಯು ಕೇಂದ್ರ ಸರಕಾರದ ಮತ್ತು ಗೃಹ ಇಲಾಖೆಯ ಜವಾಬ್ದಾರಿ ಅಂತ ಆ ರಾಜ್ಯಗಳು ನಮ್ಮ ಮೇಲೆ ಗೂಬೆ ಕೂರಿಸುವಂತಿಲ್ಲ. ಆಯಾ ರಾಜ್ಯಗಳೇ ಸೂಕ್ತ ಕ್ರಮ ಕೈಗೊಳ್ಳಲಿವೆ ಎಂಬ ಭರವಸೆ ನಮಗಿದೆ" ಅಂತ ಪ್ರತಿಕ್ರಿಯಿಸಿ, ಎದುರಿಗೇ ಇದ್ದ ಕೊಚ್ಚೆಗೆ ಕಲ್ಲೆಸೆದುಕೊಂಡಿದ್ದಾರೆ.

ಈ ಮಧ್ಯೆ, ಖಂಡನೆಯನ್ನು ತೀವ್ರವಾಗಿಸುವ, ಉಗ್ರವಾಗಿಸುವ, ಅತ್ಯುಗ್ರವಾಗಿಸುವ, ಅತ್ಯಂತ ಕಟುವಾಗಿಸುವ ಭರದಲ್ಲಿ ಜಾರಕಾರಣಿಗಳ ಬಾಯಿಂದ ಉದುರಿದ ಅಣಿಮುತ್ತುಗಳು ಇಂತಿವೆ:

* ದಯವಿಟ್ಟು ನಮಗೆ ರಕ್ಷಣೆ ನೀಡಿ: ಪೊಲೀಸ್ ಪಡೆ

* ನಮಗೆ ಓಟಿಯೂ ಕೊಡಬೇಕು, ಒಟಿನ ಹಕ್ಕೂ ನೀಡಬೇಕು: ಶ್ವಾನದಳ

* ರಕ್ಷಣೆ ನೀಡುವುದು ರಾಜ್ಯ ಸರಕಾರಗಳ ಜವಾಬ್ದಾರಿ, ಅವರು ಕೇಳಿದ್ದನ್ನು ನಾವು ಕೊಡಲು ರೆಡಿ: ಕೇಂದ್ರದ ಘನ ಗೃಹ ಮಂತ್ರಿ

* ಉಗ್ರರನ್ನು ಬಂಧಿಸಿದರೆ ಒಂದು ಸಮುದಾಯಕ್ಕೆ ನೋವಾಗುತ್ತದೆ, ಹೀಗಾಗಿ ಕೂಲಂಕಷವಾಗಿ ಪರಿಶೀಲಿಸಬೇಕಾಗುತ್ತದೆ: ಯುಪಿಎ

* ಭಯೋತ್ಪಾದಕರ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದನ್ನು ನಾವು ಸ್ವಾತಂತ್ರ್ಯ ಬಂದಂದಿನಿಂದಲೂ ಹೇಳುತ್ತಾ ಬಂದಿಲ್ಲವೇ? : ಕೇಂದ್ರ ಮಂತ್ರಿ ಪ್ರಶ್ನೆ

* ನಾವು ದಿನಾಲೂ ಉಗ್ರರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದೇವೆ (ಪ್ರತಿದಿನ ಖಂಡನಾ ನಿರ್ಣಯ ಹೊರಡಿಸಿ ಖಂಡಿಸುವ ಮೂಲಕ): ಕೇಂದ್ರ ಮಂತ್ರಿ

* ನಮಗೆ ಜನರ ಜೀವ ಮುಖ್ಯವೇ ಹೊರತು, ಉಗ್ರರಲ್ಲ. ಹೀಗಾಗಿ ಉಗ್ರರನ್ನು ನಾವೇನೂ ಹಿಡಿಯಲು ಹೋಗುವುದಿಲ್ಲ: ಕೇಂದ್ರ ಕಂತ್ರಿ

* ನಾವೂ ಉಗ್ರರನ್ನು ಹಿಡಿಯೋದಿಲ್ಲ, ಅವ್ರು ತಾನಾಗಿಯೇ ಸಿಕ್ಕಿ ಬೀಳ್ತಾರೆ: ನಿದ್ದೆಯಿಂದೆದ್ದ ಕಾನೂನು ಪಾಲಕ

* ನಾವಂತೂ ಭಯೋತ್ಪಾದಕರನ್ನು ಹಿಡಿಯೋದೇ ಇಲ್ಲ, ಯಾಕಂದ್ರೆ ಅವರನ್ನು ಬಿಡಿಸಲು ರಾಜಕಾರಣಿಗಳು ಹೆಣಗಾಡಿ ನಮ್ಮ ಮೇಲೇ ಕೋಮುವಾದ ಎಂಬ ಗೂಬೆ ಕೂರುಸ್ತಾರೆ: ಪೊಲೀಸ್ ಮುಖ್ಯಸ್ಥ

ಆದರೆ, ಪಕ್ಕದಲ್ಲೇ ನಿಂತಿದ್ದ ದೇಶದ ಮಹಾನ್ ಜಾರಕಾರಣಿಯೊಬ್ಬರು ಏನೂ ಮಾತನಾಡದೆ ಸುಮ್ಮನಿದ್ದರು. ಈ ಕುರಿತು ಅವರನ್ನು "ನೀವೇಕೆ ಖಂಡಿಸಿಲ್ಲ?" ಅಂತ ಪ್ರಶ್ನಿಸಲಾಯಿತು.

"ಒಂದು ಸಮುದಾಯದ ಮನಸ್ಸಿಗೆ ತೀವ್ರ ನೋವಾಗಬಹುದು, ಇದರಿಂದ ಅವರ ಓಟುಗಳು ತಮಗೆ ದೊರೆಯಲಾರವು" ಎಂಬ ಉತ್ತರ ದೊರೆಯುವ ಮೂಲಕ ನಮ್ಮ ಪ್ರಶ್ನೆ ಸಾರ್ಥಕವಾಯಿತು ಎಂಬ ಭಾವನೆ ಮೂಡಿಸಿದರು!
----------------
(ಆಸ್ಪತ್ರೆಯ ಮೇಲೂ ದಾಳಿ ನಡೆಸಿ, ಅಮಾಯಕರ ರಕ್ತ ಹೀರಿದ ಈ ದೈವದ್ರೋಹಿಗಳೂ, ಮಾನವದ್ರೋಹಿಗಳೂ, ಧರ್ಮ ದ್ರೋಹಿಗಳೂ, ದೇಶದ್ರೋಹಿಗಳೂ ಆಗಿರುವ ಉಗ್ರರಿಗೆ ಧಿಕ್ಕಾರವಿರಲಿ)

ಎಂಜಿನ್ ಇಲ್ಲದ ರೈಲು: ಬ್ರೇಕಿಂಗ್ ನ್ಯೂಸ್ ಅಲ್ಲವೆಂದ ಬೊ.ರ.

[ಬೊಗಳೂರು ಪಟ್ಟೆ-ರಹಿತ ರೈಲು ಬ್ಯುರೋ] ಬೊಗಳೂರು: ಆಫ್‌ಲೈನ್ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯೊಂದು ಆನ್‌ಲೈನ್ ಸಂಪಾದಕರ ಕಣ್ಣು ಕುಕ್ಕಿದ್ದು, ಎಂಜಿನ್ ಇಲ್ಲದೆ...