ಬೊಗಳೆ ರಗಳೆ

header ads

ಸುದ್ದಿಯೇ ಆಗದ ಬಿಳಿಯಾನೆಗಳ ಭೇಟಿ !

(ಬೊಗಳೂರು ಬಿಳಿಯಾನೆ ಬ್ಯುರೋದಿಂದ)
ಬೊಗಳೂರು, ಜ.3- ಆನೆಯೊಂದು ಹೋಟೆಲ್‌ಗೆ ಭೇಟಿ ನೀಡಿದ್ದನ್ನೇ ದೊಡ್ಡ ಸುದ್ದಿಯಾಗಿ ಇಲ್ಲಿ ಚಿತ್ರ ಸಮೇತ ಪ್ರಕಟಿಸಲಾಗಿದ್ದು, ಇದರ ಔಚಿತ್ಯವನ್ನು ಬೊಗಳೆ ರಗಳೆ ಪ್ರಶ್ನಿಸಿದೆ.

ಈ ರೀತಿ ಔಚಿತ್ಯ ಪ್ರಶ್ನಿಸುವುದಕ್ಕಾಗಿ ಹಲವಾರು ಕಾರಣಗಳಿವೆ. ಯಾಕೆಂದರೆ ಎಲ್ಲೆಡೆ ಬಿಳಿಯಾನೆಗಳು ಜನಸಾಮಾನ್ಯರ ಹೋಟೆಲ್, ಅಂಗಡಿಗಳಿಗೆ ಭೇಟಿ ನೀಡುತ್ತಾ, ಅವರನ್ನು ಹಿಂಡಿ ತಿನ್ನುವುದನ್ನು ನಾವು ಸಾಮಾನ್ಯವಾಗಿ ಕಾಣುತ್ತೇವೆ, ಕೇಳುತ್ತೇವೆ ಮತ್ತು ಓದುತ್ತೇವೆ. ಹಾಗಾಗಿ ಕಪ್ಪಾನೆಯೊಂದು ಹೋಟೆಲಿಗೆ ಭೇಟಿ ನೀಡುವುದು ದೊಡ್ಡ ಸುದ್ದಿಯೇ ಅಲ್ಲ ಎಂಬುದು ಬೊಗಳೆ ಬ್ಯುರೋ ವಾದವಾಗಿದೆ.

ಈ ಕಪ್ಪಾನೆಯು ನೂರು ಇಡ್ಲಿ ಮತ್ತು ಬಾಳೆ ಹಣ್ಣು ಇತ್ಯಾದಿಗಳನ್ನಷ್ಟೇ ನುಂಗಿದೆ. ಆದರೆ ಬಿಳಿಯಾನೆಗಳು, ರೈತರು, ಬಡವರ ಜೇಬಿಗೂ ಸೊಂಡಿಲು ತೂರಿಸಿ, ನಯಾ ಪೈಸೆ ಇದ್ದರೂ ಕಬಳಿಸುತ್ತವೆ. ಇದಲ್ಲದೆ, ಯಾವುದೇ ಕೆಲಸ ಮಾಡಬೇಕಿದ್ದರೂ ಹಣ ನುಂಗುತ್ತವೆ, (ವಿರೋಧಿಗಳ ಪರ) ಕೆಲಸ ಮಾಡುವುದು ಬೇಡವಾಗಿದ್ದರೂ ಹಣ ನುಂಗುತ್ತವೆ.

ಇದೂ ಅಲ್ಲದೆ, ಈ ಕಪ್ಪಾನೆಯನ್ನು ನಾಯಿ ಅಟ್ಟಾಡಿಸಿಕೊಂಡು ಓಡಿಸಿತು ಎಂದೂ ವರದಿ ಮಾಡಲಾಗಿದೆ, ಆದರೆ ಬಿಳಿಯಾನೆಗಳು ಕೂಡ ಅಲ್ಲಲ್ಲಿ ಮೂಗು ತೂರಿಸಿ, ಮನುಷ್ಯರಿಂದಲೇ ಓಡಿಸಿಕೊಂಡ ಪ್ರಸಂಗಗಳೆಷ್ಟಿಲ್ಲ? ಅವುಗಳನ್ನೆಲ್ಲಾ ಸುದ್ದಿ ಮಾಡುವುದಿಲ್ಲವೇಕೆ ಎಂಬುದು ಬೊಗಳೆಗೆ ಹೊಳೆಯದ ರಗಳೆ.

ಈ ರೀತಿಯಾಗಿ ಕುಳಿತಲ್ಲೇ ಸೂಟುಕೇಸುಗಟ್ಟಲೆ ಕಬಳಿಸುವ ಬಿಳಿಯಾನೆಯ ಒಂದಾದರೂ ಚಿತ್ರವನ್ನು ಪೇಪರಿನಲ್ಲಿ ಪ್ರಕಟಿಸಿದ್ದಾರಾ? ಅಪ್ಪಿ ತಪ್ಪಿ, ಅತ್ಯಂತ ಅಪರೂಪದ ಪ್ರಕರಣಗಳಲ್ಲಿ ಈ ಬಿಳಿಯಾನೆಗಳನ್ನು ಬೋನಿನಲ್ಲಿ ಕೂಡಿ ಹಾಕಿದ್ದರೂ, ಅವುಗಳು ಅದು ಹೇಗೋ ತಕ್ಷಣ ಹೊರಬಂದು ಮತ್ತದೇ ಕಬಳಿಸುವಿಕೆಯಲ್ಲಿ ತೊಡಗುತ್ತಿರುತ್ತವೆ. ಇತ್ತೀಚೆಗೆ ಕರ್ನಾಟಕದಲ್ಲಂತೂ ಬಿಳಿಯಾನೆಗಳ ಹಾವಳಿ ಸಾಕಷ್ಟು ಹೆಚ್ಚಾಗಿದ್ದು, ಬಡ ತೆರಿಗೆದಾರ ತಲೆ ಮೇಲೆ ಕೈಹೊತ್ತು ಕುಳಿತಿರುವುದಾಗಿ ವರದಿಯಾಗಿದೆ.

ಈ ಬಿಳಿಯಾನೆಗಳಿಗೆ ಕೆಲಸ ಮಾಡಿದರೂ ಬೊಕ್ಕಸದಿಂದ ಪಗಾರ ಬರುತ್ತದೆ, ಕೆಲಸ ಮಾಡದೇ ಇದ್ದರೂ ಬರುತ್ತದೆ. ಆದರೆ ಅದು ಕೂಡ ಸಾಕಾಗುವುದಿಲ್ಲ ಎಂಬುದು ಅವುಗಳ ಸೊಂಡಿಲು ಬಡ ಬೋರೇಗೌಡನ ಹರಿದ ಜೇಬಿನೊಳಕ್ಕೆ ತೂರಿದಾಗಲೇ ಗೊತ್ತಾಗುತ್ತದೆ. ಹಾಗಾಗಿ ಈ ಬಿಳಿಯಾನೆಗಳಿಗೂ ಪ್ರಚಾರ ನೀಡಬೇಕು, ಅವುಗಳನ್ನೂ ಜನಪ್ರಿಯವಾಗಿಸಬೇಕು, ಅವುಗಳ ಚಿತ್ರವನ್ನೂ ಪ್ರಕಟಿಸಿ ಧನ್ಯರಾಗಬೇಕು ಎಂದು ತಮ್ಮ ವಿರೋಧಿ ಪತ್ರಿಕೆಗಳಿಗೆ ಬೊಗಳೆ ರಗಳೆ ಬ್ಯುರೋ ಕರೆ ನೀಡಿದೆ. ಆದರೆ ಇದನ್ನು ಕೆರ ನೀಡಿದೆ ಎಂದು ತಪ್ಪಾಗಿ ಓದಿಕೊಳ್ಳಬಾರದೆಂದು ನಮ್ಮ ಬ್ಯುರೋ ದಯನೀಯವಾಗಿ ಅಂಗಲಾಚಿಕೊಳ್ಳುತ್ತಿದೆ.

ಕೊನೆಯದಾಗಿ, ಇತ್ತೀಚೆಗೆ ಬಿಳಿ ಬಿಳಿಯಾಗಿರುವ ನಿಧಾನಸೌಧದಿಂದ ಬಿಳಿಯಾನೆಗಳೆಲ್ಲಾ ನಾಪತ್ತೆಯಾಗಿವೆ. ಅಲ್ಲಿ ಅವುಗಳ ಘೀಳಿಡುವಿಕೆ ಕೇಳಿಸುತ್ತಿಲ್ಲ. ಏನಿದ್ದರೂ ಈಗ ನಾಡಿನಲ್ಲಿ ತಿರುಗಾಡುತ್ತಿರುವ ಅವುಗಳು, ಘೀಳಿಡುವ ಬದಲು ಕುಂಯ್‌ಗುಡುತ್ತಿವೆ ಎಂಬುದನ್ನು ಅಲ್ಲಲ್ಲಿ ನೇಮಿಸಿರುವ ನಮ್ಮ ಗುಪ್ತ ಮೂಲಗಳು ಒದರಿ ಮಾಡಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

6 ಕಾಮೆಂಟ್‌ಗಳು

  1. chunavanevarage beLiyaane kaata illa ansutte...
    hosa varshadalli biLi aanegaLu nimage mattu baDa boregoudarige kadime kaata kodali eMdu haariasuve..

    ಪ್ರತ್ಯುತ್ತರಅಳಿಸಿ
  2. ಬಿಳಿಯಾನೆಗಳ ಭಕ್ಷಣನೀತಿಯನ್ನು ಅರಿಯುವ ಉದ್ದೇಶದಿಂದ ನಿಮ್ಮ ಈ ಒದರಿಗಾರನು ಕೆಲವು ತಿಂಗಳುಗಳ ಹಿಂದೆ ಪುಣೆಯಲ್ಲಿರುವ ಪ್ರಸಿದ್ಧ “ಐರಾವತ ರೆಸಾರ್ಟ್”ನಲ್ಲಿ ಅವುಗಳನ್ನು ಸಂದರ್ಶಿಸಿದ್ದನು. ಆ ಸಮಯದ ಮಾತುಕತೆಯ ಕೆಲವು ತುಣುಕುಗಳು ಈ ರೀತಿಯಾಗಿವೆ:
    ಆನೆ (೧): ನಾನು ಬೊಗಳೂರಿನ ಸುತ್ತಮುತ್ತಲಿನ ಜಮೀನನ್ನೆಲ್ಲ ತಿಂದು ಹಸಿವೆಯನ್ನು ಹಿಂಗಿಸಿಕೊಳ್ಳುತ್ತಿದ್ದೆ. ಅಷ್ಟರಲ್ಲಿ ಚಡ್ಯೂರಪ್ಪ ಎನ್ನುವ ಮತ್ತೊಂದು ಆನೆ ನನ್ನ ಬಾಲ ಎಳೆದು ನನ್ನನ್ನು ವಚನಭ್ರಷ್ಟನನ್ನಾಗಿ ಮಾಡಿತು.
    ಆನೆ(೨): ನನ್ನ ಹೆಸರು ಮಣ್ಣಿನ ಮೊಮ್ಮಗ. ನಾನು ಗಣಿಗಳಲ್ಲಿರುವ ಮಣ್ಣನ್ನು ಮಾತ್ರ ತಿಂದು ದಿನ ಕಳೆಯುತ್ತಿದ್ದೆ. ಈಗ ಅದಕ್ಕೂ ಕಲ್ಲು ಹಾಕಿದ್ದಾರೆ. ಈಗ ನಂದಿನಿ ಹಾಲೇ ನನಗೆ ಗತಿ.
    ಅಷ್ಟರಲ್ಲಿ ತೂಕಡಿಸುತ್ತಿದ್ದ ಮುದಿ ಆನೆಯೊಂದು ನಿಮ್ಮ ಒದರಿಗಾರನ ಕಣ್ಣಿಗೆ ಬಿತ್ತು. ಆ ಆನೆಯ ಕಿವಿಗಳಲ್ಲಿ ಶಂಖನಾದ ಮಾಡಿ ಎಬ್ಬಿಸಿದ ಮೇಲೆ ಆ ಆನೆ ಘೀಳಿಟ್ಟಿತು: “ನಾನು ದಿಲ್ಲಿಯಲ್ಲಿದ್ದಾಗ ರೈತ ಮಹಿಳೆ ಹೊತ್ತ ಹುಲ್ಲು ಮಾತ್ರ ತಿನ್ನುತ್ತಿದ್ದೆ. ಆಗ ಕೇಸರಿಯೊಂದು ನನ್ನನ್ನು ಅಲ್ಲಿಂದ ಓಡಿಸಿತು. ಈಗ ಬೊಗಳೂರಿನಲ್ಲಿ ಪಾರ್ಟನರಶಿಪ್ ಮೇಲೆ ರಾಗಿ ಮುದ್ದೆ ತಿನ್ನಲು ಕರೆದರೂ ಸಹ ಚಡ್ಡಿ ಆನೆಗಳು ಮತ್ತು ಟೋಪಿ ಆನೆಗಳು ನನಗೇ ಸರ್ಕಸ್ ಮಾಡಿಸುತ್ತಿವೆ!”

    ಪ್ರತ್ಯುತ್ತರಅಳಿಸಿ
  3. ಅನ್ವೇಷಿಗಳೆ,
    ನೀವು ಈ ರೀತಿ ಕಪ್ಪಾನೆಯನ್ನು ಬೆಂಬಲಿಸುವುದು ನೋಡಿದರೆ, ಈ ನುಗ್ಗಾಟದ ಹಿಂದೆ ನಿಮ್ಮ ಕೈವಾಡ ಇರಲೂ ಸಾಕು ಎಂದು ಇಲ್ಲಿನ ಬಿಳಿಯಾನೆಯೊಂದು ಸಂಶಯ ವ್ಯಕ್ತಪಡಿಸಿದೆ :)

    ಪ್ರತ್ಯುತ್ತರಅಳಿಸಿ
  4. ಮಹಾಂತೇಶರೇ,

    ಹಲವು ದಿನಗಳ ಬಳಿಕ ಕಾಟ ಕೊಡಲಾರಂಭಿಸಿದ್ದೀರಿ. ನಿಮ್ಮ ಆರೈಕೆಯ ಹಾರೈಕೆಗೆ ಏನು ಪೂರೈಕೆ ಮಾಡಬೇಕೆಂಬುದೇ ಗೊತ್ತಾಗುತ್ತಿಲ್ಲ. ಚುನಾವಣೆಯಲ್ಲಿ ಪೂರೈಕೆ ಮಾಡೋದನ್ನಂತೂ ಇಲ್ಲಿ ಕೊಡಲಾಗುತ್ತಿಲ್ಲ.

    ಪ್ರತ್ಯುತ್ತರಅಳಿಸಿ
  5. ಸುಧೀಂದ್ರರೆ,
    ಈ ಐಲು ವಾತ ರೆಸಾರ್ಟಿನಲ್ಲಿ ನಮ್ಮ ಒದರಿಗಾರರನ್ನೇ ಕುಟುಕು (sting) ಆಪರೇಶನ್‌ಗೆ ಒಳಪಡಿಸಿದ ನಿಮ್ಮ ಅದೃಶ್ಯ ಒದರಿಗಾರರ ಚಾಣಾಕ್ಷತನಕ್ಕೆ ಬೆಚ್ಚಿದ್ದೇವೆ. ನಿಮ್ಮನ್ನು ಕೂಡ ನಮ್ಮದೇ ಒದರಿಗಾರರನ್ನಾಗಿಸಲು ತೀವ್ರ ಯತ್ನ ನಡೆಯುತ್ತಿದೆ.

    ಪ್ರತ್ಯುತ್ತರಅಳಿಸಿ
  6. ಪುದುವೆಟ್ಟು ಅವರೆ,

    ನಿಮಗೆ ಬೊಗಳೂರಿನ ಬೊಗಳೆಗೆ ಸ್ವಾಗತ.

    ನಾವು ಯಾವತ್ತೋ ಅಮಾನವೀಯತೆಗೆ ಮಾರು ಹೋಗಿರುವವರಾಗಿರುವುದರಿಂದ ಆನೆ, ಕತ್ತೆ, ನಾಯಿ, ಜಿರಳೆಗಳಿಗೇ ನಮ್ಮ ಬೆಂಬಲ. ನಿಮ್ಮಲ್ಲಿರೋ ಬಿಳಿಯಾನೆಯನ್ನು ಕೂಡ ಇತ್ತ ಕಳಿಸಿ. ನಾವು ಕಪ್ಪು ಮಾಡದಿದ್ದರೆ ಮತ್ತೆ ಕೇಳಿ!

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D