Friday, February 29, 2008

ಬಜೆಟ್ ಫ್ಲ್ಯಾಶ್: ಈ ಬಾರಿ ಭಾರತದ ಖಜಾನೆ ಭರ್ತಿ!

(ಬೊಗಳೂರು ಬಜೆಟ್ ಕಳ್ಳತನ ಬ್ಯುರೋದಿಂದ ವಿಶೇಷ ಬಜೆಟ್)
ಬೊಗಳೂರು, ಫೆ.29- ಬಹುನಿರೀಕ್ಷಿತ ಆಯವ್ಯಯ ಪತ್ರವನ್ನು ಮಂಡಿಸಲಾಗುತ್ತಿದೆ/ಮಂಡಿಸಲಾಗಿದೆ. ಆದರೆ ಇದರಲ್ಲಿ ಜಾರಕಾರಣಿಗಳಿಗೆ ಆಯ ಎಂದೂ ಬಡಪ್ರಜೆಗೆ ವ್ಯಯವೆಂದೂ ಪ್ರತ್ಯೇಕವಾಗಿ ವ್ಯಾಖ್ಯಾನಿಸಬೇಕಾಗಿಲ್ಲ ಎಂಬ ಸ್ಪಷ್ಟನೆಯೊಂದಿಗೆ ಬಜೆಟ್ ಮುಖ್ಯಾಂಶಗಳನ್ನು ಇಲ್ಲಿ ನೀಡಲಾಗುತ್ತಿದೆ.

ಭವ್ಯ ಭವಿಷ್ಯದ ಹಿತದೃಷ್ಟಿಯಿಂದ ಮುಂಗಡ ಪತ್ರದಲ್ಲಿ ಪ್ರಸ್ತಾಪಿಸಲಾಗಿರುವ ಹತ್ತು ಹಲವು ಯೋಜನೆಗಳಲ್ಲಿ ಕೆಲವು ಇಂತಿವೆ:
 • ಸಂಸತ್ತಿನಲ್ಲಿ ಸಂಸದರ ಕೂಗಾಟ, ಅರಚಾಟಗಳೆಲ್ಲಾ ಹೆಚ್ಚುತ್ತಿರುವುದರಿಂದ ಅಲ್ಲಿ ಉತ್ಪನ್ನವಾಗುವ ಶಬ್ದದಿಂದ ವಿದ್ಯುತ್ ಉತ್ಪಾದನೆ ಯೋಜನೆ
 • ಭಯೋತ್ಪಾದನೆ, ರಕ್ತಪಾತ, ಬಾಂಬ್ ಸ್ಫೋಟ... ಇತ್ಯಾದಿಗಳ ಮೇಲೆ ಶೇ.50 ಮೇಲ್ತೆರಿಗೆ
 • ಮಾಹಿತಿ ಹತ್ತಿಕ್ಕು ಕಾಯಿದೆ ಸಮರ್ಪಕ ಜಾರಿ
 • ವಿರೋಧ ಪಕ್ಷಗಳಿಗೆ ಓಟು ಹಾಕುವವರ ಮೇಲೆ ಶೇ.20 ಸೆಸ್
 • ಸರಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಪಡೆಯುವ ಲಂಚಕ್ಕೆ ಸೇವಾ ತೆರಿಗೆ
 • ಪೊಲೀಸರು ಪಡೆಯುವ ಹಫ್ತಾಕ್ಕೆ ಸೇವಾ ತೆರಿಗೆ
 • ವೇಶ್ಯಾವಾಟಿಕೆ ವೃತ್ತಿಗೂ ಸೇವಾ ತೆರಿಗೆ
 • ಎಲ್ಲ ಕ್ಷೇತ್ರಗಳಲ್ಲಿ ಮೀಸಲಾತಿ ಕಲ್ಪಿಸಿ, ಪ್ರತಿಭಾ ಪಲಾಯನ ಹೆಚ್ಚಳಕ್ಕೆ ಪ್ರೋತ್ಸಾಹ, ಅವರಿಗಾಗಿ ಪಲಾಯನ ಮಾಡಲು ವಿಶೇಷ ವಿಮಾನ ಮತ್ತು ರೈಲು ವ್ಯವಸ್ಥೆ
 • ಓಟು ಪಡೆದು ಊರು ಮಾರಿ ಐಷಾರಾಮಿ ಜೀವನ ನಡೆಸುತ್ತಿರುವವರಿಗೆ ತೆರಿಗೆ ಕಡಿತ
 • ಪ್ರಶಸ್ತಿಗೆ ಅತೀ ಹೆಚ್ಚು ಬಿಡ್ ಸಲ್ಲಿಸುವವರಿಗೆ ಭಾರ-ತಾ ರತ್ನದಂತಹ ಹತ್ತು ಹಲವು ಪ್ರಶಸ್ತಿಗಳು
 • ಬಡ ಭಾರತೀಯ ಪ್ರಜೆಗಳಿಗೆ ಮನೋರಂಜನೆ ಬದಲು ಮನೋವೇದನೆ ತೆರಿಗೆ
 • ಆವಶ್ಯಕ ವಸ್ತುಗಳ ಬೆಲೆ ಹೊತ್ತ ಉಪಗ್ರಹ ಉಡಾವಣೆ ಯೋಜನೆ
 • ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ಕಠಿಣ ಶಿಕ್ಷೆ
 • ಉಗ್ರಗಾಮಿಗಳಿಗೆ ಜೀವ ವಿಮೆ ಕಡ್ಡಾಯ ಪ್ರಸ್ತಾವನೆ
 • ಬಾಂಬ್ ಸ್ಫೋಟಿಸುವ ಉಗ್ರಗಾಮಿಗಳು ತಮ್ಮ ಯೋಜನೆಯನ್ನು ಮೊದಲೇ ಬಹಿರಂಗಪಡಿಸುವುದು ಕಡ್ಡಾಯ.
 • ಗಂಡಸರಿಗೆ ಹೆರಿಗೆ ರಜೆ ಒಂದು ವರ್ಷಕ್ಕೆ ವಿಸ್ತರಣೆ
 • ಪುರುಷ ದೌರ್ಜನ್ಯ ಯೋಜನೆ ಜಾರಿ ಪ್ರಸ್ತಾಪ
 • ಚಳ್ಳೆ ಹಣ್ಣು ತಿನ್ನಿಸುವವರ ಮೇಲೆ ಸೇವಾ ತೆರಿಗೆ
 • ಕರ್ನಾಟಕ ಸಹಿತ ವಿವಿಧ ರಾಜ್ಯಗಳಲ್ಲಿ ಉಗ್ರಗಾಮಿಗಳು ಹೆಚ್ಚುತ್ತಿರುವುದರಿಂದ ಅವರ ಮೇಲೂ ಸ್ಫೋಟ ತೆರಿಗೆ
 • ಕಾಲೇಜು ಪರಿಸರದಲ್ಲಿ ಹೃದಯರೋಗಿಗಳು ಹೆಚ್ಚಾಗುತ್ತಿರುವುದರಿಂದ ಪಕ್ಕದಲ್ಲೇ ಹೃದಯ ಆಸ್ಪತ್ರೆ ಸ್ಥಾಪನೆ ಪ್ರಸ್ತಾಪ
 • ತುಂಡುಡುಗೆ ಧರಿಸುವ ನಟಿಯರ ಉಡುಗೆ ಗಾತ್ರ ಕಿರಿದಾದಷ್ಟೂ ಹೆಚ್ಚಳವಾಗುವ ತೆರಿಗೆ
 • ಸಾಫ್ಟ್ ಡ್ರಿಂಕ್ಸ್ ಬಾಟಲಿಗಳಲ್ಲಿ ಹಾಟ್ ಡ್ರಿಂಕ್ಸ್ ಪೂರೈಕೆ
 • ಹೊಟ್ಟೆಗೆ ಹಿಟ್ಟಿಲ್ಲದೆ ಸಾಯೋದು ನಾನೋ ನೀನೋ ಅಂತ ಗೊಂದಲದಲ್ಲಿರುವವರಿಗೆ ನ್ಯಾನೋ ಕಾರು ಕೊಳ್ಳಲು ತೆರಿಗೆ ಕಡಿತ
 • ಪ್ರತಿವರ್ಷ ಕೋಟಿ ಕೋಟಿ ವ್ಯಯಿಸಿದರೂ ಹಿಂದುಳಿದವರು ಇನ್ನೂ ಮುಂದೆ ಬರುತ್ತಿಲ್ಲವಾದುದರಿಂದ ಅವರಿಗೆ ಸಿಕ್ಸ್‌ಟಿ ಸಿಕ್ಸ್‌ಟಿ ಮೀಸಲಾತಿ
 • ರೈತರ "ಉಪಯೋಗ"ಕ್ಕಾಗಿ ಇಲಿಪಾಷಾಣ, ಸಯನೈಡ್, ಟಿಕ್20 ಮುಂತಾದವುಗಳ ಬೆಲೆ ಇಳಿಕೆ. (ಬಡವರ ನಿರ್ಮೂಲನೆಯ ಗುರಿ)
 • ಕೊಟ್ಟ ಕೊನೆಯದಾಗಿ.. ಬಡತನ ರೇಖೆಯಿಂದ ಕೆಳಗಿರುವವರ ನಿರ್ಮೂಲನೆಗೆ ಎಲ್ಲಾ ಆವಶ್ಯಕ ವಸ್ತುಗಳ ಬೆಲೆ ಏರಿಕೆ ಯೋಜನೆ
ಈ ಯೋಜನೆಗಳಿಂದ ಭಾರತದ ಖಜಾನೆ ತುಂಬಿ ತುಳುಕಲಿದೆ. ಜಾರಕಾರಣಿಗಳ ಖಜಾನೆಯೂ ತುಳುಕುತ್ತದೆ. ಇದರೊಂದಿಗೆ, ಸಾಲದ ಸುಳಿಯಲ್ಲಿ ಸಿಲುಕಿದ ಅಮೆರಿಕ, ರಷ್ಯಾ, ಜಪಾನ್, ಸಿಂಗಾಪುರಗಳ ಸಾಲ ಮನ್ನಾ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ.

ಅದೇರೀತಿ ಮತ್ತೆ ಚುನಾವಣೆ ನಡೆದು ಆರಿಸಿ ಬಂದಲ್ಲಿ, ಖಜಾನೆಯಲ್ಲಿ ಸಾಕಷ್ಟು ಝಣ ಝಣ ಕೇಳಿಬರುತ್ತಿರುತ್ತದೆ. ಇದುವೇ ಚುನಾವಣೆಗೆ ಸ್ಪರ್ಧಿಸಲು ಪ್ರೇರಣೆಯನ್ನೂ, ಉತ್ಸಾಹವನ್ನೂ, ಆತ್ಮಬಲವನ್ನೂ ನೀಡುತ್ತದೆ ಎಂದು ಹೇಳುತ್ತಾ, ಬೊಗಳೆಯು ತನ್ನ ಬಜೆಟ್ ಭಾಷಣವನ್ನು ಕೊನೆಗೊಳಿಸುತ್ತಿದೆ.

Thursday, February 28, 2008

ಲಾಭದಲ್ಲಿ ಲಾಲು-ವೇಲು ರೈಲು: ರಹಸ್ಯ ಬಯಲು

(ಬೊಗಳೂರು ಲಾಭಾಲಾಭ ಲೆಕ್ಕಾಚಾರ ಬ್ಯುರೋದಿಂದ)
ಬೊಗಳೂರು, ಫೆ.28- ಕರ್ನಾಟಕದ ಮಟ್ಟಿಗೆ 'ಡರ್ಟಿ' ಬಜೆಟ್ ಮಂಡಿಸಿದ ಲಾಲು-ವೇಲು-ರೈಲು ಬಜೆಟ್ ಇದೀಗ ಐಲು ಪೈಲಾಗಿ ಕಂಡಿದ್ದು, ಲಾಲು ಅವರು ಯಾವತ್ತೂ ಲಾಭವನ್ನೇ ತೋರಿಸುತ್ತಿರುವುದು ಹೇಗೆ ಎಂಬುದನ್ನು ಪತ್ತೆ ಹಚ್ಚಲಾಗಿದೆ.

ಆದರೆ ಈ ಸಂಗತಿಯು ಕೇವಲ ಬೊಗಳೆಗೆ ಮಾತ್ರವೇ ತಿಳಿದಿರುವುದು ಸಮಾಧಾನಕರ ಅಂಶವೆಂದು ಜಾರಕಾರಣಿಗಳೆಲ್ಲಾ ಬಾಯಿಬಾಯಿ ಬಡಕೊಳ್ಳುತ್ತಿರುವುದು ಬೊಗಳೆಯ ಅಸ್ತಿತ್ವವನ್ನೇ ಪ್ರಶ್ನಿಸಿದಂತಾಗಿದೆ ಎಂದು ನಮ್ಮ ಖಾರಾ ಬಾತ್‌ಮೀದಾರರು ವ-ರದ್ದಿ ರವಾನಿಸಿದ್ದಾರೆ.

ಕರುನಾಟಕದಲ್ಲಿ ಜಾರಕಾರಣಿಗಳ ಬಾಯನ್ನೆಲ್ಲಾ ಮುಚ್ಚಿಸಲಾಗಿದೆ. ಯಾರೇ ಕೂಗಾಡಲೀ, ಯಾರೇ ಹೋರಾಡಲಿ ಅಂತ ಲಾಲು ಅವರು ಕರ್ನಾಟಕದಿಂದ ಬರೋ ರೈಲ್ವೇ ಆದಾಯವನ್ನೆಲ್ಲಾ ಬಿಹಾರದ ಸ್ವಜಾತಿ ಬಾಂಧವರಾದ ಡರ್ಟಿ ಪೀಪಲ್‌ಗಳತ್ತ ರವಾನಿಸಿದ್ದಾರೆ. ಇನ್ನು ದೇಶದ ವಿವಿಧ ರಾಜ್ಯಗಳಿಂದ ಬರೋ ರೈಲ್ವೇ ಆದಾಯವನ್ನೆಲ್ಲಾ ಹಾಗೆಯೇ ಗಂಟು ಕಟ್ಟಿಡುತ್ತಾರೆ. ಮುಂದೆಂದಾದರೂ ಮೇಯಲು ಬೇಕಾಗಬಹುದು ಎಂಬ ದೂರಾಲೋಚನೆ ಇದ್ದರೂ ಇರಬಹುದು ಎಂಬ ಶಂಕೆ.

ಹೀಗೆ ಕಟ್ಟಿಟ್ಟ ಗಂಟಿನಲ್ಲಿ ಲವಲೇಶದಷ್ಟು ವಿನಿಯೋಗಿಸಿ, ಪ್ರಯಾಣಿಕರ ಮೂಗಿಗೆ ತುಪ್ಪ ಸವರಿಬಿಟ್ಟರೆ, ಸರಕಾರದ ಹೆಸರು ಚಿರಸ್ಮರಣೆಯಲ್ಲಿ ಉಳಿಯುತ್ತದೆ. ತಾನು ಬಿಹಾರವಾಳುತ್ತಿದ್ದಾಗ ಯಾವ ಪರಿಯಲ್ಲಿ ಬಿಹಾರದಲ್ಲಿ ಅಭಿವೃದ್ಧಿ ಮಾಡಲಿಲ್ಲವೋ, ಅದನ್ನೇ ಈಗ ದೇಶದೆಲ್ಲೆಡೆ ಮಾಡುತ್ತಿದ್ದಾರೆ ಎಂದು ನಮ್ಮ ರದ್ದಿಗಾರರು ಹೆಕ್ಕಿ ಹೆಕ್ಕಿ ವರದಿ ಮಾಡಿದ್ದಾರೆ.

ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರ. ರಾಜ್ಯದಲ್ಲೂ ತಮ್ಮ ಪರವಾಗಿರುವ ರಾಜ್ಯಪಾಲರು. ಉಳಿದ ಸಂಸದರು ಕೂಡ ಜನರ ಪರವಾಗಿ ಧ್ವನಿಯೆತ್ತಲಾರದಷ್ಟು ತಮ್ ತಮ್ಮೊಳಗಿನ ಕಚ್ಚಾಟದಲ್ಲಿ, ಕೆಸರೆರಚಾಟದಲ್ಲಿ ಮುಳುಗಿದ್ದಾರೆ. ಇವುಗಳನ್ನು ಮನದಟ್ಟು ಮಾಡಿಕೊಂಡಿರುವ ಲಾಲು-ವೇಲು ಜೋಡಿ, ಕರ್ನಾಟಕವನ್ನು ಹೊಗಳಿ ಅಟ್ಟಕ್ಕೇರಿಸಿ ಧುಢುಂ... ಅಂತ ಕೆಳ ತಳ್ಳಿ ಬಿಟ್ಟಿದ್ದಾರೆ.

ಒಟ್ಟಿನಲ್ಲಿ, ಒಟ್ಟು ಸೇರಿದ ಹಣವನ್ನು ಅಭಿವೃದ್ಧಿಗೆ ವಿನಿಯೋಗಿಸಿದರಲ್ಲವೇ ಇಲಾಖೆಗೆ ನಷ್ಟ ಅಂತನ್ನಿಸುವುದು? ಯಾವುದೇ ಅಭಿವೃದ್ಧಿ ಕಾರ್ಯ ಮಾಡದಿದ್ದರೆ ಲಾಭ ಲೆಕ್ಕಾಚಾರ ಹಾಕಬಹುದೆಂಬ ಚಾಣಾಕ್ಷ ಮತ್ತು ಚಾಣಕ್ಯ ತಂತ್ರವನ್ನು ಇಲ್ಲಿ ಪ್ರಯೋಗಿಸಲಾಗಿದೆ ಎಂಬ ರಹಸ್ಯ ನಮ್ಮ ನಿಮ್ಮಲ್ಲೇ ಇರಲಿ ಎಂದು ಬೊಗಳೆ ವರದಿಗಾರರು ಮನವಿ ಮಾಡಿಕೊಂಡಿದ್ದಾರೆ.
---------------
ಪುಗಸಟ್ಟೆ ಜಾಹೀರಾತು
ಫೆ.29ರಂದು ಪಿತ್ತ ಸಚಿವ ಪೀಚಿ ದಂಬರಂ ಅವರು ಜನಮರುಳು ಬಜೆಟ್ ಮಂಡಿಸಲಿದ್ದು, ಅವರು ಮಂಡಿಸುವ ಮುನ್ನವೇ ಅವರ ಕೈಯಿಂದ ಬಜೆಟ್ ಪ್ರತಿಗಳನ್ನು ಕಿತ್ತುಕೊಂಡು, ನಮ್ಮ ಬೊಗಳೆ ರಗಳೆ ಬ್ಯುರೋ ಆಯವ್ಯಯ ಪತ್ರ ಮಂಡಿಸಲಿದೆ.... ಇದಕ್ಕಾಗಿ ನಿಮ್ಮ ಪ್ರತಿಗಳನ್ನು ಇಂದೇ ಒಂದಕ್ಕೆ ಹತ್ತು ಪಟ್ಟು ಹಣ ನೀಡಿ ಕಾದಿರಿಸಿಕೊಳ್ಳಿ... ಇಲ್ಲವಾದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ.... ನಿರೀಕ್ಷಿಸಿ...

Wednesday, February 27, 2008

ಬೊಗಳೆಯಲ್ಲಿ ಬರಲಿದೆ ಬಜೆಟ್ ವಿಶೇಷ !

ಜಾಹೀರಾತು
 • ಒಂದೇ ಏಟಿಗೆ ಹತ್ತು ಹಲವು ಹಕ್ಕಿಗಳು...!
 • ಕೇಂದ್ರ ಪಿತ್ತ ಖಾತೆ ಸಚಿವ ಪೀಚಿ ದಂಬರಂ ಬಜೆಟ್ ಮಂಡಿಸುವ ಮುನ್ನವೇ
 • ಲೀಕ್ ಆಗಿರುವ ಕೆಲವು ಯೋಜನೆಗಳು ನಿಮ್ಮ ಬೊಗಳೆ ರಗಳೆಯಲ್ಲಿ...
 • ಇದು ಆಯ ವ್ಯಯ ಪತ್ರ ಅಂತ ಪ್ರಸಿದ್ಧಿಯಾದರೂ, ಸರಕಾರಿ ನೌಕರರಿಗೆ ಆಯ
 • ಮತ್ತು ಬಡಜನತೆಗೆ ವ್ಯಯ ಪತ್ರವಾಗಲಿದೆ...
 • ಈ ಯೋಜನೆ ಕಾರ್ಯಗತವಾದಲ್ಲಿ ದೇಶದ ತುಂಬಾ ಝಣ ಝಣ...
 • ಆ ದಿನಗಳಿಗಾಗಿ ಕಾಯಿರಿ.... ಬಜೆಟ್ ದಿನಗಳಿಗಾಗಿ ನಿರೀಕ್ಷಿಸಿ...
 • ನಿಮ್ಮ ಪ್ರತಿಗಳನ್ನು ಈಗಲೇ ಕಾದಿರಿಸಿದರೆ ಕೊಳೆತು ಹೋಗುವುದು ಖಂಡಿತ...!!!! ಕಾಯಿರಿ... ಕಾಯಿರಿ...

(ಸೂಚನೆ: ಈ ನಿರೀಕ್ಷೆ ಪೂರ್ಣಗೊಳ್ಳಲು, ಕನ್ನಡದ ಧಾರಾವಾಹಿಗಳಂತೆ ವರ್ಷಗಟ್ಟಲೆ ಕಾಯಬೇಕಾಗಿಲ್ಲ....)

Tuesday, February 26, 2008

ಮಂಗ-ಳ ವಿವಾಹವಿದು... ಬಂಧನ ಅಲ್ಲ!

(ಬೊಗಳೂರು ವಿವಾದ ಕಾಯಿಲೆ ಬ್ಯುರೋದಿಂದ)
ಬೊಗಳೂರು, ಫೆ.26- ಏಕಸದಸ್ಯ ಬೊಗಳೆ ರಗಳೆ ಬ್ಯುರೋದಲ್ಲಿ ನಿನ್ನೆ ಎಲ್ಲವೂ ಖಾಲಿ ಖಾಲಿ. ಹಾಗಾಗಿ ಎಲ್ಲರೂ ಎಲ್ಲಿ ಹೋದರು ಅಂತ ತನಿಖೆ ನಡೆಸಿದಾಗ ತಿಳಿದುಬಂದ ಅಂಶವೆಂದರೆ, ಏಕಸದಸ್ಯ ಬ್ಯುರೋದಲ್ಲಿ ಒಬ್ಬರನ್ನು ಬಿಟ್ಟು ಉಳಿದವರೆಲ್ಲರೂ ತಮ್ಮ ಸ್ವಜಾತಿ ಬಾಂಧವರ ಮದುವೆಗೆ ಹೋಗಿದ್ದರು!

ಈ ಕುರಿತಾಗಿ ನಮ್ಮ ರದ್ದಿಗಾರರನ್ನು ಅದುಹೇಗೋ ಕಾಡುಮೇಡು ಅಲೆದು ಸಂಪರ್ಕಿಸಿ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಲಾಯಿತು. ಅದಕ್ಕೆ ಸುದೀರ್ಘ ಉತ್ತರವೊಂದನ್ನು ಅವರು ಮಂಗನ ಕೈಯಲ್ಲಿ ಕೊಟ್ಟು ಕಳುಹಿಸಿದ್ದಾರೆ ಎಂದು ತಿಳಿಸಲು ಹರ್ಷಿಸುತ್ತೇವೆ. ಅದರಲ್ಲಿ ಬರೆದ ಒಕ್ಕಣೆ ಏನಿತ್ತೆಂದರೆ:

"ಮಾನವೀಯ ಸಮಾಜದಲ್ಲಿ ಮದುವೆಯಾದವರು ಸ್ವಾತಂತ್ರ್ಯ ಕಳೆದುಕೊಳ್ಳುತ್ತಾರೆ, ಹೇಗೂ ಅವರಿಗೆ ಕಂಕಣ-ಬಂಧ ತೊಡಿಸಲಾಗುತ್ತದೆ, ಅವರು ವಿವಾಹ ಬಂಧನದಲ್ಲಿ ಸಿಲುಕಿ ವಿವಾದಕ್ಕೀಡಾಗುತ್ತಾರೆ, ಸಂಸಾರವೆಂಬ ನೊಗವನ್ನು ಅವರ ಕುತ್ತಿಗೆಗೆ ಕಟ್ಟಲಾಗುತ್ತದೆ ಎಂಬಿತ್ಯಾದಿ ಹೇಳಿಕೆಗಳಿದ್ದರೂ ಇಲ್ಲಿ ವಿವಾಹದ ಗಂಟು ಹಾಕಿಕೊಂಡು ಮಾನವೀಯ ಬಂಧನದಿಂದ ಪರಾರಿಯಾಗುವಲ್ಲಿ ಈ ಕೋತಿಗಳು ಯಶಸ್ವಿಯಾಗಿವೆ ಎಂಬುದರ ಕುರಿತು ತನಿಖೆ ನಡೆಸಲು ಬಂದಿದ್ದೇವೆ" ಅಂತ ನಮ್ಮ ಒದರಿಗಾರರು ನಮಗೇ ಕಾರಣ ನೀಡಿದ್ದಾರೆ.

ಅವರು ನಡೆಸಿದ ತನಿಖೆ ಪ್ರಕಾರ ಇನ್ನೂ ಕೆಲವು ವಿಷಯಗಳು ಹೊರಬಿದ್ದಿವೆ. ಮದುವೆಯಾದ ತಕ್ಷಣವೇ ಈ ಕೋತಿಗಳು ಮರದಿಂದ ಮರಕ್ಕೆ ಹಾರುತ್ತಾ ಹನಿಮೂನ್‌ಗೆ (ಅಂದರೆ ಕೆಲವು ಮರಗಳಲ್ಲಿ honey ಗೂಡುಗಳಿದ್ದವು, ಮರದ ಮೇಲೆ ನೋಡಿದರೆ moon ಕಾಣಿಸುತ್ತಿತ್ತು.) ಹೊರಟಿದ್ದವು.

ಇದಲ್ಲದೆ ಭಾರತ ಸರಕಾರದ ಹಿಂದೂ ವಿವಾದ ಕಾಯಿದೆ-1947ರ ಅಡಿಯಲ್ಲೇ ಈ ವಿವಾಹ ಸಮಾರಂಭ ನಡೆದಿದ್ದು, ಎಲ್ಲರಿಗೂ ಊಟ ನೀಡಲಾಗಿತ್ತು.

ಇದರೊಂದಿಗೆ ಮಂಗ-ಮಾನವ ಸಂಬಂಧಕ್ಕೆ ಹೊಸ ಅರ್ಥವೊಂದನ್ನು ಕಲ್ಪಿಸಲಾಗುತ್ತಿದ್ದು, ಮಂಗನಿಂದ ಮಾನವ ಎಂದಿದ್ದದ್ದನ್ನು ಮಾನವನಿಂದ ಮಂಗ ಎಂದು ತಿರುಗಿಸಲು ಮಂಗ ಸಮುದಾಯವು ಪಣ ತೊಟ್ಟಿರುವುದು ಶಾಂತಿಯ ಭಂಗಕ್ಕೆ ಕಾರಣವಾಗಬಹುದೇ ಎಂದು ಆತಂಕ ವ್ಯಕ್ತಪಡಿಸಲಾಗಿದೆ.

ಈ ಮೊದಲು, ಶ್ವಾನಕ್ಕೆ ತಾಳಿ ಕಟ್ಟಿದ ಬಗೆಗೂ ಬಿಡದೆ ಬೊಗಳೆ ಬ್ಯುರೋ ವರದಿ ಮಾಡಿತ್ತು. ಅಂತೆಯೇ ಮಾನವ ಬುದ್ಧಿ ತೋರಿಸಿದ ಶ್ವಾನವನ್ನು ಸಮುದಾಯದಿಂದಲೇ ಬಹಿಷ್ಕರಿಸುವ ನಿರ್ಧಾರ ಕೈಗೊಂಡಿರುವುದರ ಬಗ್ಗೆಯೂ ಒದರಿತ್ತು. ಇದೀಗ ವಿವಾಹಿತ ಮಂಗ ದಂಪತಿಯನ್ನು ಮಂಗ ಸಮುದಾಯವು ಬಹಿಷ್ಕರಿಸಲಿದೆಯೇ ಎಂದು ಕಾದು ನೋಡಲಾಗುತ್ತಿದೆ.

ಜಾರಕಾರಣಿಗಳಿಗೆ ಕೋಟಿ ಕೋಟಿ ನೀಡಿದರೆ ಮಾನವರ ವಿವಾಹವನ್ನೂ ಅದ್ದೂರಿಯಾಗಿಸಬಹುದು, ಉಗ್ರರೂ, ಅಗ್ರರಾಗಬಹುದು ಎಂಬುದು ಇಲ್ಲಿ ಶ್ರುತಪಟ್ಟಿದ್ದು, ಕೂಪ ಮಂಡೂಕಗಳ ವಿವಾಹ ಮಹೋತ್ಸವದ ಬೊಗಳೂರು ಬ್ಯುರೋದ ವರದಿ ಎಲ್ಲರ ಕಣ್ಣು ಮುಚದ್ದುದನ್ನು ಇಲ್ಲಿ ಚಿರ-ಸ್ಮರಿಸಿಕೊಳ್ಳಬಹುದು.

ಆದರೆ ವಿವಾಹವಾದ ಬಳಿಕ ವಿವಾದ ಇದ್ದದ್ದೇ ಎಂಬ ಅಲಿಖಿತ ನಿಯಮವು ಮಂಗಗಳ ಮಟ್ಟಿಗೆ ಇದುವರೆಗೆ ಅನ್ವಯವಾಗಿಲ್ಲ. ಕಾಲಾನಂತರದಲ್ಲಿ ಸಂಸಾರ ಸಾಗರದಲ್ಲಿ ಈಜುತ್ತಿರುವ ಹಂತದಲ್ಲಿ ಇದು ಗೋಚರಕ್ಕೆ ಬರಬಹುದು, ಅಂತೆಯೇ ಮಂಗಗಳ ಕಿರ್ರ್...ಕಿರ್ರ್... ಧ್ವನಿಯು ಊರವರ ನಿದ್ದೆ ಕೆಡಿಸಲಿದೆಯೇ ಎಂಬ ಬಗ್ಗೆ ಈಗಾಗಲೇ ಭರದಿಂದ ಯೋಚನೆ-ಯೋಜನೆಗಳನ್ನು ಲೆಕ್ಕಾಚಾರ ಹಾಕಲಾಗುತ್ತಿದೆ.
------
ಜಾಹೀರಾತು
ಬರಲಿದೆ ಬಜೆಟ್ ವಿಶೇಷ!
ಕೇಂದ್ರ ಪಿತ್ತ ಖಾತೆ ಸಚಿವ ಪೀಚಿ ದಂಬರಂ ಬಜೆಟ್ ಮಂಡಿಸುವ ಮುನ್ನವೇ ಲೀಕ್ ಆಗಿರುವ ಕೆಲವು ಯೋಜನೆಗಳು ನಿಮ್ಮ ಬೊಗಳೆ ರಗಳೆಯಲ್ಲಿ...
ಇದು ಆಯ ವ್ಯಯ ಪತ್ರ ಅಂತ ಪ್ರಸಿದ್ಧಿಯಾದರೂ, ಸರಕಾರಿ ನೌಕರರಿಗೆ ಆಯ ಮತ್ತು ಬಡಜನತೆಗೆ ವ್ಯಯ ಪತ್ರವಾಗಲಿದೆ...
ಈ ಯೋಜನೆ ಕಾರ್ಯಗತವಾದಲ್ಲಿ ದೇಶದ ತುಂಬಾ ಝಣ ಝಣ...

ಆ ದಿನಗಳಿಗಾಗಿ ಕಾಯಿರಿ.... ಬಜೆಟ್ ದಿನಗಳಿಗಾಗಿ ನಿರೀಕ್ಷಿಸಿ... ನಿಮ್ಮ ಪ್ರತಿಗಳನ್ನು ಈಗಲೇ ಕಾದಿರಿಸಿದರೆ ಕೊಳೆತು ಹೋಗುವುದು ಖಂಡಿತ...!!!! ಕಾಯಿರಿ... ಕಾಯಿರಿ...

ಸೂ: ಲಾಲೂ ಇಂದು ರೈಲು ಬಿಡುತ್ತಿರುವುದರಿಂದ ಕಳೆದ ಬಾರಿಯ ರೈಲ್ವೇ ಬಜೆಟ್ ಬೊಗಳೆ ಮಾಹಿತಿ ಇಲ್ಲಿದೆ.

Monday, February 25, 2008

ವಿಚ್ಛೇದನಕ್ಕೆ ನೆಪ ಸಂಶೋಧನೆಗೆ ಪ.ಪೀ.ಸಂಘ ಯತ್ನ!

(ಬೊಗಳೂರು ಪ.ಪೀ. ಸಂಘದಿಂದ)
ಬೊಗಳೂರು, ಫೆ.25- ಅಡುಗೆ ಮಾಡದಿರುವುದೇ ವಿಚ್ಛೇದನಕ್ಕೆ ಸಕಾರಣವಾಗಲಾರದು ಎಂಬ ನ್ಯಾಯಾಲಯದ ತೀರ್ಪಿನಿಂದ ಆಘಾತಗೊಂಡಿರುವ ಪ.ಪೀ.ಸಂಘವು, ಇನ್ನು ಮುಂದೆ ವಿಚ್ಛೇದನೆಗೆ ಯಾವೆಲ್ಲಾ ಕ್ರಮಗಳನ್ನು ಅನುಸರಿಸಬಹುದು ಎಂಬುದರ ಕುರಿತು ಲೆಕ್ಕಾಚಾರ ಹಾಕತೊಡಗಿದೆ.

ತಮ್ಮನ್ನು ಮದುವೆಯಾದವರು ಅಡುಗೆ ಮಾಡಲೇಬೇಕು. ಮಾಡದೇ ಇದ್ದವರು ಅಥವಾ ಅಡುಗೆ ಮಾಡಲು ಗೊತ್ತಿಲ್ಲದವರು ಮದುವೆಯಾಗಲು ಅನರ್ಹರು. ತಾವು ಹೇಳಿದಂತೆ ಕೇಳದಿದ್ದರೆ ವಿಚ್ಛೇದನೆ ಪಡೆಯಬಹುದು ಎಂಬುದು ಇದುವರೆಗೆ ಈ ಪ.ಪೀ.ಸಂಘದ ಸದಸ್ಯರಲ್ಲಿ ಇದ್ದ ಸಾಮಾನ್ಯ ಜನಾಭಿಪ್ರಾಯವಾಗಿತ್ತು.

ಮದುವೆಯಾದ ಮೇಲೆ ಬಟ್ಟೆ ಒಗೆಯಲು ಬಾರದಿರುವುದು, ಪಾತ್ರೆ ತೊಳೆಯಲು ಬಾರದಿರುವುದು, ನೀರು ಸೇದಿ ಹಾಕಲು ಆಗದಿರುವುದು, ಮಗುವನ್ನು ಸ್ನಾನ ಮಾಡಿಸಲು ಆಗದಿರುವುದು... ಇವೆಲ್ಲವನ್ನೂ ನೆಪ ಎಂದು ಇನ್ನು ಮುಂದೆ ನ್ಯಾಯಾಲಯಕ್ಕೆ ತಿಳಿಹೇಳುವುದು ಸಾಧ್ಯವಾಗದ ಮಾತು ಎಂಬುದನ್ನು ಗಂಭೀರವಾಗಿ ಪರಿಗಣಿಸಿರುವ ಪಪೀ ಸಂಘ, ಇನ್ನೇನು ಮಾಡಲಿ ಎಂದು ತಲೆ ಮೇಲೆ ಕೈಹೊತ್ತು ಕುಳಿತಿರುವುದಾಗಿ ವರದಿಯಾಗಿದೆ.

ಇದಲ್ಲದೆ, ಮದುವೆಯಾದ ಮೇಲೂ ಉದ್ಯೋಗಕ್ಕೆ ತೆರಳಬೇಕು ಎಂಬ ಕಂಡಿಶನ್ನನ್ನೂ ಹಾಕುವ ಸಾಧ್ಯತೆಗಳಿಗೆ ಕೂಡ ಕಲ್ಲು ಬಿದ್ದಂತೆ ಭಾಸವಾಗಿದೆ ಎಂದು ಪ.ಪೀ.ಸಂಘ ಆರೋಪಿಸಿದೆ.

ಸೂಚನೆ: ಓದುಗರು ಪ.ಪೀ.ಸಂಘವನ್ನು ಪಪ್ಪೀ ಸಂಘವೆಂದು ತಪ್ಪಾಗಿ ಓದಿಕೊಳ್ಳುವಂತಿಲ್ಲ. 'ಪೀ' ಎಂದರೆ ಪೀಡಿತ ಎಂಬುದು ಸರಿಯಾದ ಊಹೆ. ಆದರೆ 'ಪ' ಎಂಬುದು ಪತಿ ಮತ್ತು ಪತ್ನಿ ಎರಡಕ್ಕೂ ಅನ್ವಯವಾಗುವುದರಿಂದ ಇದನ್ನು ತಮಗೆ ಬೇಕಾದಂತೆ ತಿರುಚಿಕೊಂಡು ಓದಬಹುದು ಎಂದು ಸೂಚಿಸಲಾಗಿದೆ. ಇಲ್ಲವಾದಲ್ಲಿ, ಅದನ್ನು ಒಂದು ಬಾರಿ ಓದುವಾಗ ಪತ್ನಿ ಪೀಡಿತರ ಸಂಘವೆಂತಲೂ, ಮತ್ತೊಮ್ಮೆ ಓದುವಾಗ ಪತಿ ಪೀಡಿತರ ಸಂಘವೆಂತಲೂ ಓದಬೇಕೆಂದು ಆಜ್ಞಾಪಿಸಲಾಗಿದೆ.

Thursday, February 21, 2008

ಐ-ಪಿಲ್ ಕ್ರಿಕೆಟ್ ಮಾನ ಕೋತಿ ಕೋತಿಗೆ ಹರಾಜು!

(ಬೊಗಳೂರು ಅವಮಾನ ಬ್ಯುರೋದಿಂದ)
ಬೊಗಳೂರು, ಫೆ.21- ಚೆಂಡು ಮತ್ತು ದಾಂಡು ಹೊಡೆಯುತ್ತಾ, ಎಸೆಯುತ್ತಾ ಆಟವಾಡುತ್ತಿದ್ದವರ ಮಾನ ಹರಾಜು ಪ್ರಕ್ರಿಯೆ ಭರದಿಂದ ಸಾಗಿದ್ದು, ಕೋತಿಗಟ್ಟಲೆ ಕಾಸಿಗೆ ಚೆಂಡಿಗರು ಮತ್ತು ದಾಂಡಿಗರು ಮಾರಾಟವಾಗುತ್ತಿದ್ದಾರೆ ಎಂಬ ವರದಿಯಿಂದ ಆಘಾತಗೊಂಡಿರುವ ಬ್ಯುರೋ, ಅತ್ತ ಧಾವಿಸಿದಾಗ ಅದಕ್ಕೆ ಸಿಕ್ಕಿದ್ದು ಅಲ್ಲಲ್ಲಿ ಬಿದ್ದಿದ್ದ ಮೂರು ಕಾಸಿನ ಮಾನಗಳು.

ಇದರಲ್ಲಿ ಸಿಂಹೇಂದ್ರ ಮಂಗ್ ಧೋಣಿ ಹಾಗೂ ಸೈಮೊಂಡ್‌ಸ್ ಅವರು ಅತೀ ಹೆಚ್ಚು ಕೋತಿಗೆ ಹರಾಜಾಗಿದ್ದು, ಹರಾಜಾದ ಬಳಿಕ ಅಲ್ಲಿ ಉಳಿದಿದ್ದ ಮಾನವನ್ನು ಹೆಕ್ಕಿಕೊಳ್ಳಲಾಯಿತು. ಆದರೆ ಈ ಮಾನವನ್ನು ಹಿಡಿದುಕೊಳ್ಳಲು ಕೇವಲ ಒಂದು ಪುಟ್ಟ, ಬೆಂಕಿಪೆಟ್ಟಿಗೆಯ ಕಾಲು ಭಾಗದಷ್ಟು ಗಾತ್ರದ ಪೊಟ್ಟಣವಷ್ಟೇ ಸಾಕಾಗಿತ್ತು.

ಇದೀಗ ಮಾನ ಹರಾಜು ಹಾಕಿಸಿಕೊಂಡ ಕ್ರಿಕೆಟಿಗರು, ಇನ್ನು ಮುಂದೆ ಯಾವುದೇ ದೇಶದ ಬಗ್ಗೆ ಹೆಮ್ಮೆಯಿಂದ ಆಡಬೇಕಾಗಿಲ್ಲ. ಯಾಕೆಂದರೆ ಇದೀಗ ಕ್ರಿಕೆಟ್ ಜಾಗತೀಕರಣಗೊಂಡಿದೆ. ಎಲ್ಲಾ ದೇಶಗಳ ಸದಸ್ಯರು ಎಲ್ಲಾ ತಂಡಗಳಲ್ಲಿದ್ದಾರೆ. ಇನ್ನೇನಿದ್ದರೂ ಹಣವೇ ಪ್ರಧಾನವಾಗಿಬಿಡುತ್ತದೆ ಎಂಬುದನ್ನು ಪತ್ತೆ ಹಚ್ಚಲಾಗಿದೆ.

ಕ್ರಿಕೆಟಿಗರು ಇಷ್ಟೊಂದು ಭರ್ಜರಿ ಮೊತ್ತಕ್ಕೆ ಮಾನ ಹರಾಜು ಹಾಕಿಸಿಕೊಂಡ ಪ್ರಕರಣದಿಂದ ಅತೀ ಹೆಚ್ಚು ಕಳವಳಗೊಂಡವರೆಂದರೆ ಬುಕ್ಕೀಗಳು. ಈ ಹಿಂದೆ ಅಲ್ಪ ಮೊತ್ತಕ್ಕೆ ಕೈಚಾಚುತ್ತಾ, ಪಂದ್ಯವನ್ನು ಅದೇ ಕೈಯಿಂದ ಕೆಳಗೆ ಚೆಲ್ಲುತ್ತಿದ್ದ ಕ್ರಿಕೆಟಿಗರಿಗೆ, ಅಷ್ಟು ಹಣವೆಲ್ಲಾ ಯಾವುದಕ್ಕೂ ಸಾಕಾಗಾದು. ಇನ್ನೇನಿದ್ದರೂ ಕೋತಿ ಕೋತಿ ಮೊತ್ತದಲ್ಲೇ ಇರುತ್ತದೆ ಎಂದು ಅವರು ಕೈಕೈ ಹಿಸುಕಿಕೊಂಡಿದ್ದಾರೆ.

ಕ್ರಿಕೆಟಿಗರ ರೇಟು ಈ ಪ್ರಮಾಣ ಏರಿಬಿಟ್ಟಿರುವುದರಿಂದ ಮ್ಯಾಚ್ ಫಿಕ್ಸಿಂಗ್ ಮಾಡಲು ಇನ್ನು ಮುಂದೆ ಕಷ್ಟವಾದರೂ, ನಾವು ಹೇಗಾದರೂ ಮ್ಯಾನೇಜ್ ಮಾಡುತ್ತೇವೆ ಎಂದು ಹೇಳಿದ್ದಾರಾದರೂ, ಕ್ರಿಕೆಟ್ ಮ್ಯಾಚ್ ನೋಡಲು ಬೆವರು ಸುರಿಸಿ, ರಕ್ತ ಸುರಿಸಿ ದುಡಿದು ದುಡ್ಡು ತರುವ ಭಾರತದ ಬಡಜನತೆ ಮಾತ್ರ, ಪ್ರತಿಯೊಬ್ಬ ಚೆಂಡಿಗ ಎಸೆಯುವ ಚೆಂಡಿನಲ್ಲಿ ಮತ್ತು ಪ್ರತಿಯೊಬ್ಬ ದಾಂಡಿಗ ಕುಟ್ಟುವ ಬ್ಯಾಟಿನಲ್ಲೂ ಹಣದ ಚಿತ್ರವನ್ನೇ ಕಾಣುತ್ತಿದ್ದಾನೆ ಎಂದು ನಮ್ಮ ಭವಿಷ್ಯ ಬ್ಯುರೋದ ಮಂದಿ ಒದರಿದ್ದಾರೆ.

ಈ ಹರಾಜುಕೋರರ ದಂಧೆಯಿಂದಾಗಿ ಐ-ಪಿಲ್ ಸಾಕಷ್ಟು ಶ್ರೀಮಂತವಾಗಿದೆ ಎಂಬುದು ಸಾಬೀತಾಗಿದ್ದು, ಕ್ರಿಕೆಟಿಗರ ಬಳಿ ಬೇಕಾಬಿಟ್ಟಿ ಖರ್ಚು ಮಾಡಲು ಸಿಕ್ಕಾಪಟ್ಟೆ ಹಣವಿರುವುದರಿಂದ ಐಪಿಲ್ ಬೇಡಿಕೆಯೂ ಹೆಚ್ಚಾಗಲಿದೆ ಎಂದು ನಿರೀಕ್ಷಿಸಲಾಗಿದೆ.

Wednesday, February 20, 2008

ಮದುವೆಗೂ ಮೀಸಲಾತಿ: ಏಬೀವೀಫೋ ಹಕ್ಕೊತ್ತಾಯ

(ಬೊಗಳೂರು ಮೀಸಲು ಬ್ಯುರೋದಿಂದ)
ಬೊಗಳೂರು, ಫೆ.20- ಶಾಲಾ ಕಾಲೇಜು ಪ್ರವೇಶದಲ್ಲಿ, ಉದ್ಯೋಗದಲ್ಲಿ, ಬಡ್ತಿಯಲ್ಲಿ ಮೀಸಲಾತಿ ಆಯ್ತು. ಇನ್ನು ಮುಂದೆ ಅತ್ಯಂತ ಪ್ರಧಾನವಾಗಿ ಬಾಕಿ ಉಳಿದಿರುವ ವಿವಾಹದಲ್ಲೂ ಮೀಸಲಾತಿ ಘೋಷಿಸಬೇಕು ಎಂದು ತೀರಾ ಹಿಂದೆ ಉಳಿದಿರುವ ಮತ್ತು ಓಟುಗಳ ಸಂಖ್ಯೆಯಲ್ಲಿ ಹೆಚ್ಚಿದ್ದರೂ ಅಲ್ಪ ಸಂಖ್ಯೆಯಲ್ಲಿರುವವರನ್ನು ಒಳಗೊಂಡ ಅಖಿಲ ಬೊಗಳೂರು ವಿವಾಹ ಫೋರಂ (ಏಬೀವೀಫೋ) ಆಗ್ರಹಿಸಿದೆ.

"ಮದುವೆಗಳು ಸ್ವರ್ಗದಲ್ಲಿ ನಡೆಯುತ್ತವೆ, ಆದರೆ ಮದುವೆಯ ಮೀಸಲಾತಿ ಭಾರತದಲ್ಲಿ ಮಾತ್ರವೇ ನಡೆಯುತ್ತದೆ" (Marriages are made in heaven, but Marriage reservations are made in India!) ಎಂಬ ಘೋಷಾವಾಕ್ಯದೊಂದಿಗೆ ಏಬೀವೀಫೋ ಸಂಘಟನೆ ಇತ್ತೀಚೆಗೆ ಆರಂಭವಾಗಿದ್ದು ಎಲ್ಲರ ಗಮನ ತನ್ನತ್ತ ಸೆಳೆಯಲು ಆರಂಭಿಸಿದೆ.

ಒಳ್ಳೆಯ ರೀತಿಯಲ್ಲಿ ಮದುವೆ ಆಗಲು ಅಶಕ್ತರಾಗಿರುವ ಈ ಸಂಘದ ಸದಸ್ಯರಲ್ಲಿ ಹೆಚ್ಚಿನವರ ಮೇಲೆ ಅಪಹರಣ, ಅತ್ಯಾಚಾರ ಮುಂತಾದ ಆರೋಪಗಳಿವೆ. ಈ ಪ್ರಕರಣಗಳಿಗೆ ಸಂಬಂಧಿಸಿ ಅವರು, ಸರಿಯಾಗಿ ಮದುವೆಯಾಗಲು ನಮ್ಮಲ್ಲಿ ಹಣವಿಲ್ಲ ಎಂಬ ಸಮರ್ಥನೆ ನೀಡಿದ್ದರು ಎಂಬುದನ್ನು ನಮ್ಮ ಬ್ಯುರೋ ಪತ್ತೆ ಹಚ್ಚಿದೆ.

ಈ ವರದಿಯಿಂದ ಮುಖ ಅರಳಿಸಿರುವ ಕೆಲವೊಂದು ಅಭಿಮಾನಿನಿಯರು, ಗಣೇಶನ ಮದುವೆಯಲ್ಲೂ ಮೀಸಲಾತಿ ಇದ್ದಿದ್ದರೆ... ಎಂಬ ಗಂಭೀರ ಯೋಚನೆಯಲ್ಲಿ ತೊಡಗಿದ್ದಾರೆ ಎಂಬುದನ್ನು ಬೊಗಳೂರು ಬ್ಯುರೋ ಪತ್ತೆ ಹಚ್ಚಿದೆ.

ಮೀಸಲಾತಿ ಬಂದರೆ, ತಮಗೆ ಬೇಕಾದ ವರಗಳನ್ನು ಮತ್ತು ವಧುಗಳನ್ನು ದಕ್ಕಿಸಿಕೊಳ್ಳಬಹುದು. ರೂಪ ಮತ್ತು ಗುಣಕ್ಕಿಂತಲೂ ಇಲ್ಲಿ ಜಾತಿಗೇ ಹೆಚ್ಚು ಪ್ರಾಧಾನ್ಯತೆ ಇರುವುದರಿಂದ ಸುಲಭವಾಗಿ ಮದುವೆಯಾಗಿಬಿಡಬಹುದು ಎಂಬುದು ಈ ಸಂಘದ ಹಕ್ಕೊತ್ತಾಯ.

ಈ ನಡುವೆ, ಕೇವಲ ಒಂದು ವರ್ಗದ ಉದ್ಧಾರಕ್ಕೆ ಮಾತ್ರವೇ ಕಟಿಬದ್ಧವಾಗಿರುವ ಪಕ್ಷವು, ಅವರು ಕೇಳದಿದ್ದರೂ ಬಾಚಿ ಬಾಚಿ ಬಾಚುತ್ತಾ ವಿದೇಶದಲ್ಲಿರುವ ಧಾರ್ಮಿಕ ಸ್ಥಳಗಳ ಸಂದರ್ಶನಕ್ಕೆ ಕೋಟಿ ಕೋಟಿ ಕೊಡುತ್ತಿರುವ ಪ್ರಕರಣದಿಂದ ಉಲ್ಲಸಿತರಾಗಿರುವ ಏಬೀವೀಫೋ ಸದಸ್ಯರು, ನಮ್ಮ ಓಟುಗಳಲ್ಲಿ ಇರುವುದಕ್ಕಿಂತಲೂ ಹೆಚ್ಚು ಓಟುಗಳನ್ನು ನಿಮಗೆ ನೀಡುತ್ತೇವೆ, ನಮಗೂ ಇದೇ ರೀತಿ ಕೋಟಿ ಕೋಟಿ ಕೊಡಿ ಎಂದು ಕೇಳಿರುವುದಾಗಿ ವರದಿಯಾಗಿದೆ.

ಈ ಮನವಿ ಬಗ್ಗೆ ಕಾಂಗ್ರೆಸ್ ಸರಕಾರ ಗಂಭೀರ ಚಿಂತನೆ ನಡೆಸಿದ್ದು, ಬಾಚಿ ಬಾಚಿ ಧನವಿನಿಯೋಗಕ್ಕೆ ಸಕಲ ರೀತಿಯಲ್ಲೂ ಸಿದ್ಧತೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

Tuesday, February 19, 2008

ಹಾರ್ಟು/ಹೆಡ್ಡು ಬ್ರೇಕಿಂಗ್ ನ್ಯೂಸ್ !

(ಫ್ಲಾಶ್ ಮತ್ತು ಬ್ರೇಕ್ ಆಗುವ ನ್ಯೂಸ್ ಬ್ಯುರೋದಿಂದ)
ಬೊಗಳೂರು, ಫೆ.19- ಪ್ರತಿದಿನವೂ ನಾಳೆ ನಾಳೆ ಎಂದೇ ತಿಳಿದುಕೊಳ್ಳಲಾಗುತ್ತಿದ್ದ ಗಣೇಶನ ಮದುವೆ ರಾತೋರಾತ್ರಿ ದಿಢೀರ್ ಆಗಿ ಆಗಿ ವಿಶ್ವವೇ ತಲೆಕೆಳಗಾದ ಸುದ್ದಿಯನ್ನು ಬೊಗಳೆ ರಗಳೆಯಲ್ಲಿ ಫ್ಲ್ಯಾಶ್ ಮತ್ತು ಬ್ರೇಕ್ ಆದ ಮಾದರಿಯಲ್ಲಿ ಕೇಳಿದ ನೂರೆಂಟು ವರ್ಷದ ಹಣ್ಣು ಹಣ್ಣು ವೃದ್ಧೆಯೊಬ್ಬರು ಹೃದಯಾಘಾತಕ್ಕೊಳಗಾಗಿ ಹೃದಯಾಲಯದಲ್ಲಿ ಸೇರ್ಪಡೆಯಾಗಿರುವ ವಾರ್ತೆ ಬೊಗಳೂರಿನಿಂದ ತಡವಾಗಿ ವರದಿಯಾಗಿದೆ.

ಬೊಗಳೆ ಪತ್ರಿಕೆಯಲ್ಲಿ ಸುದ್ದಿ ತಿಳಿದ ತಕ್ಷಣವೇ ಮುತ್ತಜ್ಜಿ ಆತುರಾತುರವಾಗಿ ಓಡುತ್ತಾ , ತನ್ನ ಮರಿ ಮೊಮ್ಮಕ್ಕಳಿಗೆ ತಮ್ಮ ಮನಸ್ಸಿನ ವೇದನೆಯನ್ನು ಹಸ್ತಾಂತರಿಸಲೆಂದು ಧಾವಂತದಿಂದ ಓಡುತ್ತಿದ್ದಾಗ, ಹೊಸಿಲು ದಾಟಿ ಬಿದ್ದಿದ್ದರು.

ಆದರೆ ಇಲ್ಲಿ ನಿಜವಾಗಿಯೂ ಸುದ್ದಿಯೇ ಬ್ರೇಕ್ ಆಯಿತೋ ಅಥವಾ ಹೃದಯ ಬ್ರೇಕ್ ಆಗಿದ್ದೇ ಎಂಬುದು ತನಿಖಾರ್ಹ ಸಂಗತಿ. ತನಿಖೆಗೆ ಮತ್ತೊಂದು ಸೇರ್ಪಡೆಯೆಂದರೆ, ಹೊಸಿಲು ದಾಟಿ ಬಿದ್ದ ಕಾರಣ ಮಂಡೆಯೂ ಬ್ರೇಕ್ ಆಗಿರುವ ಸಾಧ್ಯತೆಗಳಿವೆ.

ಈ ಕುರಿತು ಸ್ಪಷ್ಟನೆ ನೀಡಿರುವ ಮುತ್ತಜ್ಜಿ, ನನಗೇನೂ ಆಗಿಲ್ಲ, ಏನಾದರೂ ಆಗಿದ್ದಿದ್ದರೆ ಹೃದಯಕ್ಕೆ ಸ್ವಲ್ಪ ಏಟು ಬಿದ್ದಿರಬಹುದು ಎಂದು ಸ್ವತಃ ಹೇಳಿದ ಹಿನ್ನೆಲೆಯಲ್ಲಿ ಅವರನ್ನು ನನ್ನಾರು-ಆಯಣ ಹೃದಯಾಲಯಕ್ಕೆ ಸೇರಿಸಲಾಗಿತ್ತು.

ಆದರೆ ಈ ಆಘಾತವಾಗಿ ಆಸ್ಪತ್ರೆ ಸೇರಿದ ಸುದ್ದಿಯನ್ನು ವರದಿ ಮಾಡಿದ್ದು ಯಾರು ಎಂಬುದನ್ನು ಪತ್ತೆ ಹಚ್ಚಲು ತೀವ್ರ ಕಾರ್ಯಾಚರಣೆ ನಡೆಯುತ್ತಿದೆ. ಇದು ಕಿಡಿಗೇಡಿಗಳ ಕೃತ್ಯವೇ ಎಂಬುದು ತನಿಖೆಯ ಬಳಿಕ ಗೊತ್ತಾಗಬೇಕಿದೆ.

ತಾನು ಖಂಡಿತವಾಗಿಯೂ ಆತ್ಮಹತ್ಯೆ ಪ್ರಯತ್ನ ಮಾಡಿದ್ದಲ್ಲ ಎಂದು ಈ ವೃದ್ಧೆ ಸ್ಪಷ್ಪಪಡಿಸಿದ್ದು, ಇದು ನನ್ನ ವೈಯಕ್ತಿಕ ವಿಷಯವಾಗಿದ್ದು, ಪತ್ರಿಕೆಗಳಲ್ಲಿ ಎಂಟು ಕಾಲಂ ಹೆಡ್‌ಲೈನ್ ನೀಡಿ ಪ್ರಕಟಿಸಬೇಕಾಗಿಲ್ಲ ಮತ್ತು ಇದೆಂಥಾ ಮದುವೆ ಅಲ್ಲಲ್ಲ... ಇದೆಂಥಾ ನರಕ ಅಂತ ಟಿವಿ ಚಾನೆಲ್‌ಗಳಲ್ಲಿ ವಿಶೇಷ ಪ್ರೋಗ್ರಾಂಗಳನ್ನೂ ಬಿತ್ತರಿಸಬೇಕಾಗಿಲ್ಲ ಎಂದು ಕೋರಿ ಅಲವತ್ತುಕೊಂಡಿದ್ದಾರೆ.

ಈ ನಡುವೆ, ಗಣೇಶನಿಗಾಗಿ ಈ ಅಜ್ಜಿ ನೂರಾ ಎಂಟು ವರ್ಷ ಕಾದಿದ್ದರೇ ಎಂಬುದು ಎಲ್ಲಾ ಪತ್ರಿಕೆಗಳಿಗೆ ಸುದ್ದಿಗೊಂದು grass ಒದಗಿಸಿದೆ. ಶೀಘ್ರವೇ ಈ ಕುರಿತು 'ಇದೆಂಥ ಅಜ್ಜಿ' ಎಂಬೊಂದು ಕಾರ್ಯಕ್ರಮ ಪ್ರಸಾರವಾಗುವ ಸಾಧ್ಯತೆಗಳು ದಟ್ಟವಾಗುತ್ತಿವೆ.

Monday, February 18, 2008

ನಾಪತ್ತೆಯಾಗಿದ್ದ ಕತ್ತೆ 'ರಾಜಯೋಗ' ಸಹಿತ ಪತ್ತೆ !

(ಬೊಗಳೂರು ಕತ್ತಾನ್ವೇಷಣೆ ಬ್ಯುರೋದಿಂದ)
ಬೊಗಳೂರು, ಫೆ.18- ಕೆಲಸವಾಗಬೇಕಿದ್ರೆ ಕತ್ತೆ ಕಾಲು ಹಿಡಿ ಎಂಬುದನ್ನು ತಪ್ಪಾಗಿ ಅರ್ಥೈಸಿಕೊಂಡಿರುವವರೀಗ ಗಾರ್ದಭ ಪೂಜೆಗೆ ಹೊರಟಿರುವುದು, ಕತ್ತೆಗಳನ್ನೇ ಬಂಡವಾಳವಾಗಿಸಿಕೊಂಡಿರುವ ಬೊಗಳೆ ರಗಳೆ ಬ್ಯುರೋದಲ್ಲಿ ಸಂಚಲನ ಮೂಡಿಸಿದೆ.

ಈ ಮಧ್ಯೆ, ಕರುನಾಟಕದಲ್ಲಿ ಸರಕಾರ ಎಂಬುದೊಂದಿದ್ದಾಗ ತೀವ್ರವಾಗಿ ಕಚ್ಚಾಡುತ್ತಾ, ಕತ್ತೆಗಳಂತೆಯೇ ಅರಚಾಡುತ್ತಿದ್ದ, ಕತ್ತೆಯ ಮಾದರಿಯಲ್ಲಿ ಮನೋಬಲಕ್ಕಿಂತಲೂ ದೈಹಿಕ ಬಲಕ್ಕೇ ಹೆಚ್ಚು ಒತ್ತು ನೀಡುತ್ತಾ ಹೊಡೆದಾಡುತ್ತಿದ್ದವರ ಕಡೆಯಿಂದ ಇತ್ತೀಚೆಗೆ ಯಾವುದೇ ಧ್ವನಿ ಕೇಳುತ್ತಿಲ್ಲ. ಕರುನಾಟಕದ ಜಾರಕಾರಣಿಗಳು ನಾಪತ್ತೆಯಾಗಿದ್ದಾರೆ. ಈ ರೀತಿ ನಾಪತ್ತೆಯಾದವರು ಎಲ್ಲಿಯಾದರೂ ಸಿಕ್ಕಾರೇ ಎಂಬ ಆಶಾಭಾವದಿಂದ ಬೊಗಳೂರಿನ ಒಂದು ತಂಡವು ಈ ಊರಿಗೆ ಹೊರಟಿದೆ ಎಂದು ತಿಳಿದುಬಂದಿದೆ.

ಇದಕ್ಕೆ ಕಾರಣವೂ ಇಲ್ಲದಿಲ್ಲ. ಚುನಾವಣೆಗಳು ಬರುತ್ತಿವೆ. ಓಟು ಕೇಳಲು ಹೋದಾಗ ಮತದಾರರಿಂದ ಒಳ್ಳೆಯ ಪೂಜೆಯಾಗುತ್ತದೆ. ಆದರೆ ಇಲ್ಲಿ ದೊರೆಯುತ್ತಿರುವ ಸಕಲ ಸವಲತ್ತುಗಳು ಮತದಾರರ ಪೂಜೆಗಿಂತ ವಾಸಿ ಎಂದು ತಿಳಿದುಕೊಂಡದ್ದರಿಂದಲೇ ಅವರೀಗ ಅಲ್ಲಿಗೆ ಪಲಾಯನ ಮಾಡಿದ್ದಾರೆ ಎಂಬುದನ್ನು ಶೋಧಿಸಲಾಗಿದೆ.

ಇದರ ನಡುವೆ, ಬೊಗಳೂರಿನ ಒಂದು ಭಾಗದ ಜನತೆ "ಕಾಲು ಹಿಡಿ" ಎಂಬ ಪದವನ್ನು "ಹಾಲು ಕುಡಿ" ಎಂದು ಅಕ್ಷರ ಅದಲುಬದಲಿಸಿ ಭಾವಿಸಿ ಅದರಂತೆ ಜೀವನ ಸಾಗಿಸುತ್ತಿರುವ ಅಂಶವೊಂದು ಹಠಾತ್ತನೆ ಹೊಳೆದಿದೆ. ಇದರೊಂದಿಗೆ ಕೆಲವರು ಗಾರ್ದಭ ಸದ್‌ಗುಣಗಳನ್ನು ಪ್ರದರ್ಶಿಸುತ್ತಿರುವುದೇಕೆ ಎಂಬ ನಿಗೂಢ ರಹಸ್ಯವೂ ಬಯಲಾಗಿಬಿಟ್ಟಿದೆ.

ಇನ್ನೊಂದೆಡೆ, ಈ ಸುದ್ದಿ ಪ್ರಕಟವಾದಂದಿನಿಂದ ತೀವ್ರ ಸಂತಸಗೊಂಡಿರುವ ಅಖಿಲ ಭಾರತ ಗಾರ್ದಭ ಒಕ್ಕೂಟವು, ಬೊಗಳೂರನ್ನೇ ತನ್ನ ಕಾರಸ್ಥಾನವಾಗಿಸಿಕೊಳ್ಳಲು ಸಕಲ ಸಿದ್ಧತೆಗಳನ್ನೂ ನಡೆಸುತ್ತಿದೆ.

ಈ ವಿಷಯವನ್ನು ಇಲ್ಲಿ ಪತ್ರಿಕಾಗೋಷ್ಠಿ ಕರೆದು ಅರಚಾಡಿದ ಅಭಾಗಾಒ ಅಧ್ಯಕ್ಷ ಗಾರ್ದಭ್ ರಾಜ್ ಅವರು, ಮನುಷ್ಯ ಯಾವತ್ತೂ ಕತ್ತೆ ಕತ್ತೆ ಅಂತ ಪರಸ್ಪರ ಕರೆದುಕೊಂಡು ನಮ್ಮ ಕುಲಕ್ಕೆ ಅವಮಾನ ಮಾಡುತ್ತಿದ್ದ. ಈಗ ಇದೇ ಕತ್ತೆಗಳ ಹಾಲೇ ಅವನಿಗೆ ಬೇಕಾಗಿದೆ. ನಾವು ಹಾಲು ಕೊಡುವುದನ್ನು ನಿಲ್ಲಿಸಿದರೆ ಆತ ಬದುಕುವುದಾದರೂ ಹೇಗೆ ಎಂದು ವ್ಯಂಗ್ಯವಾಡಿದ್ದಾರೆ.

ನಮ್ಮ ಹಾಗೆ ಬೆನ್ನು ಬಗ್ಗಿಸಿ, ತಲೆ ಉಪಯೋಗಿಸದೆ ದುಡಿಯಲು ನಮ್ಮ ಹಾಲು ಅತ್ಯಂತ ಅವಶ್ಯಕ ಎಂಬುದನ್ನು ಕೊನೆಗೂ ಮನುಷ್ಯ ಪ್ರಾಣಿ ತಿಳಿದುಕೊಂಡಿದ್ದಾನೆ ಎಂದು ತೀವ್ರವಾಗಿ ಅರಚಾಡಿರುವ ಗಾರ್ದಭ್, ತಮಿಳುನಾಡಿನಲ್ಲಿ ತಮ್ಮವರ ಸಂತತಿ ಹೆಚ್ಚಿಸಿ ನಮ್ಮವರ ಜನಸಂಖ್ಯಾ ಸ್ಫೋಟ ಮಾಡಲು ತೀವ್ರ ಯತ್ನಗಳನ್ನು ಈಗಲೇ ಆರಂಭಿಸುವುದಾಗಿ ಘೋಷಿಸಿದ್ದಾರೆ.

ಆದರೆ, ಬೊಗಳೆ ರಗಳೆ ಬ್ಯುರೋ ಯಾವತ್ತಿಗೂ ನಮ್ಮ ಬೆಂಬಲಕ್ಕಿರುವುದರಿಂದ ಮತ್ತು ನಮ್ಮಂತೆಯೇ ಅರಚಾಡುತ್ತಿರುವುದರಿಂದ ಇದರ ದ್ಯೋತಕವಾಗಿ ನಮ್ಮ ಮಹಾನ್ ನಾಯಕನ ಭಾವಚಿತ್ರವನ್ನು ಬ್ಯುರೋದ ಶೀರ್ಷಿಕೆಯಲ್ಲಿ ಹಾಕಿ ಗೌರವ ತೋರಿಸುತ್ತಿದೆ. ಈ ಕಾರಣಕ್ಕೆ ನಾವು ಅಲ್ಲಿಗೆ ಹಾಲು(ಳು) ಸರಬರಾಜು ಮಾಡುವುದಿಲ್ಲ ಎಂದೂ ಇದೇ ವೇಳೆ ಅವರು ಸ್ಪಷ್ಟೀಕರಿಸಿದರು.

Thursday, February 14, 2008

ಅನ್‌ಹ್ಯಾಪೀ Violentine's ಡೇ!

(ಬೊಗಳೂರು ವೈಲೆನ್ಸ್ -ಸೈಲೆನ್ಸ್ ಬ್ಯುರೋದಿಂದ)
ಬೊಗಳೂರು, ಫೆ.14- ದೇಶದಲ್ಲಿ ಎಲ್ಲರೂ ವ್ಯಾಲೆಂಟೈನ್ಸ್ ಡೇ ಸಂಭ್ರಮದಲ್ಲಿರುವಾಗ, ಎಲ್ಲರಿಂದಲೂ ನಿರ್ಲಕ್ಷಿತರಾದ, ಭಾವನಾತ್ಮಕವಾಗಿ ಅತ್ಯಂತ ಹಿಂದುಳಿದ, ಎಲ್ಲರಿಂದಲೂ ತುಳಿಯಲ್ಪಟ್ಟ ಒಂದು ವರ್ಗದವರಿಗಾಗಿ ಬೊಗಳೂರು ಬ್ಯುರೋ ಅಶುಭಾಶಯಗಳನ್ನು ಕೋರುತ್ತಿದ್ದು, ಈಗಾಗಲೇ ದೇಶಾದ್ಯಂತ ಅನ್ ಹ್ಯಾಪೀ ವಯಲೈಂಟೈನ್ಸ್ ದಿನವನ್ನು ಅವರು ತಮ್ಮ ತಮ್ಮೊಳಗೇ ಆಚರಿಸುತ್ತಿದ್ದಾರೆ.

ಈ ರೀತಿ ಅಶುಭಾಶಯ ಕೋರಿದ್ದಕ್ಕೆ ಯಾರೂ ಕೂಡ ಏನೂ ಕೂಡ ಪ್ರತಿಭಟನೆ ನಡೆಸಬೇಕಾಗಿಲ್ಲ, ಹಿಂಸಾಚಾರ ಮಾಡಬೇಕಾಗಿಲ್ಲ. ನಮ್ ದೇಶದಲ್ಲಿರುವ ಒಂದು ವರ್ಗವಂತೂ ಪ್ರತಿದಿನವೂ Unhappy Violentines ದಿನವನ್ನಾಗಿ ಭರ್ಜರಿಯಾಗಿಯೇ ಆಚರಿಸುತ್ತಿದೆ. ಇಂಥವರಿಗೂ ಭಾವನೆಗಳಿವೆ, ಅವರಿಗೂ ತಲೆ ಇದೆ, ಅವರಿಗೂ ಕೆಲವೊಮ್ಮೆ ಮನುಷ್ಯತ್ವ ಇರುತ್ತದೆ ಎಂಬುದರ ಬಗ್ಗೆ ಸಂಶಯಗಳಿದ್ದರೂ ಅದನ್ನು ಸಾಬೀತುಪಡಿಸಲು ಬೊಗಳೂರು ಬ್ಯುರೋ ಹೆಣಗಾಡುತ್ತಿದೆ.

ಈಗ ಮುಂಬಯಿಯನ್ನೇ ತೆಗೆದುಕೊಳ್ಳಿ. ಹಾಗಂತ ಅಕ್ಷರಶಃ ತೆಗೆದುಕೊಳ್ಳಲು ಹೋಗಬೇಡಿ. ವನ ನಿರ್ನಾಮ ಸೇನೆಯ ವನಚರರು ನಿಮ್ಮನ್ನು ಅಟ್ಟಿಸಿಕೊಂಡು ಹೋಗಬಹುದು. ಆಮ್ಚಿ ಮುಂಬಯಿ ಎನ್ನುತ್ತಾ, ಮುಂಬಯಿ ಅನ್ನೋದು ನಮ್ಮದೇ ಸ್ವಂತದ್ದು, ಪೂರ್ವಜರ ಸೊತ್ತು, ಅದಕ್ಕಾಗಿ ನಾವು ಪೂರ್ವಜರಂತೆಯೇ ವರ್ತಿಸುತ್ತಿದ್ದೇವೆ ಎನ್ನುತ್ತಾ ಮುಂಬಯಿಯಲ್ಲಿ ಬೊಂ-ಬಾಯಿಯಂತೆ ಅರಚಾಡುತ್ತಾ, ವಯಲೆನ್ಸ್ ಸೃಷ್ಟಿಸುತ್ತಿರುವ ವನ ನಿರ್ನಾಮ ಸೇನೆಯವರಿಗೆ Very Very Unhappy Violentines Day!

ಮತ್ತೊಂದು ವರ್ಗವಿದೆ. ಅವರು ಬೇರೆಯವರನ್ನು ತುಂಬಾ ತುಂಬಾ ಪ್ರೀತಿಸುತ್ತಾರೆ. ಆದರೆ ಅವರಿಗೆ ದೈಹಿಕ ಆಕರ್ಷಣೆ ಅಗತ್ಯವಿರುವುದಿಲ್ಲ. ಏನಿದ್ದರೂ ಕಟ್ಟಾ ಹೃದಯಗಳ ಮಾತಿದು. ನಾವೆಲ್ಲರೂ ನಮ್ಮ ಜೀವವನ್ನು ಬಚ್ಚಿಡುವುದು, ಬಿಚ್ಚಿಡುವುದು ಹೃದಯಗಳಲ್ಲೇ. ಆದುದರಿಂದಾಗಿ ಅವರಿಗೆ ಈ ಜೀವಗಳೆಂದರೆ ತುಂಬಾ ಇಷ್ಟ. ಅದಕ್ಕಾಗಿಯೇ ಅವರು ಜೀವ ತೆಗೆಯುವ ಕಾಯಕದಲ್ಲಿ ನಿತ್ಯ ನಿರಂತರವಾಗಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ. ಅವರೇ ದೇಶದ ಮೂಲೆ ಮೂಲೆಯಲ್ಲಿ, ಬೊಗಳೂರಿನ ಕೋಣೆ ಕೋಣೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಉಗ್ರಪ್ರೇಮಿಗಳು. ಅಲ್ಲಲ್ಲಿ ಬಾಂಬ್ ಇರಿಸುವುದು, ಪ್ರಮುಖ ವ್ಯಕ್ತಿಗಳನ್ನು ಗುರಿಯಾಗಿರಿಸುವುದು, ಐಎಸ್ಐ ಸಹಾಯ ಪಡೆಯುವುದು... ಇತ್ಯಾದಿ ಕೃತ್ಯಗಳಲ್ಲಿ ಅವರು ತುಂಬಾ ಬಿಸಿ. ಅವರಿಗೆ ಈ ಅಶುಭ ದಿನವನ್ನು ಆಚರಿಸಲು ಸಮಯವಿರುವುದಿಲ್ಲ, ಬಾಂಬ್ ತಯಾರಿ ಅಥವಾ ಪ್ಲೇನ್ ಹೈಜಾಕ್ ಯೋಜನೆಗಳಲ್ಲೇ ಅವರು ಮಗ್ನರಾಗಿರುತ್ತಾರೆ. ಅಂಥ ಅ-ಮಾನವೀಯ ಹೃದಯವುಳ್ಳವರಿಗೆಲ್ಲಾ Very Very Unhappy Violentines Day!

ಮಗದೊಂದು ವರ್ಗವಿದೆ. ದೇಶದ ಕಣ ಕಣದಲ್ಲಿ ಬೇರು ಬಿಟ್ಟಿರುವ ಉಗ್ರರ ವಿರುದ್ಧ ಹೋರಾಡುವ ಬದಲು, ಉಗ್ರಗಾಮಿಗಳ ಪರವಾಗಿ ಧೋರಣೆ ತಳೆಯುತ್ತಿರುವುದು ನೀವು, ಉಗ್ರರನ್ನು ಬಿಡುಗಡೆ ಮಾಡಿದ್ದು ನೀವು, ಉಗ್ರರನ್ನು ರಕ್ಷಿಸುತ್ತಿರುವುದು ನೀವು, ಉಗ್ರರಿಗೆ ಗಲ್ಲುಶಿಕ್ಷೆ ವಿಧಿಸದೆ ತುಷ್ಟೀಕರಣ ಮಾಡುತ್ತಿರುವುದು ನೀವು... ಎಂಬಿತ್ಯಾದಿ ಆರೋಪ-ಪ್ರತ್ಯಾರೋಪಗಳ ಹೂವುಗಳನ್ನು ಪರಸ್ಪರ ಎಸೆಯುತ್ತಾ, ತಮ್ಮ ತಮ್ಮೊಳಗೆ ಹೋರಾಡುತ್ತಿರುವವರು. ಇವರು ಇದೇ ತಮ್ಮ ಶಕ್ತಿ ಸಾಮರ್ಥ್ಯವನ್ನು ಉಗ್ರರ ವಿರುದ್ಧ ಹೋರಾಡಲು ಬಳಸುವ ಬದಲು, ತಮ್ಮ ತಮ್ಮೊಳಗೆ ಕಚ್ಚಾಡಲು ಬಳಸುತ್ತಾರೆ. ಅವರಿಗೂ ಪುರುಸೊತ್ತಿಲ್ಲ. ಅಂಥವರಿಗೂ Very Very Unhappy Violentines Day!

ಉಗ್ರ ಭಾವನೆಗಳನ್ನು ಹತ್ತಿಕ್ಕಿಕೊಳ್ಳಲಾರದೆ ಆತ್ಮಹತ್ಯೆಗೆ ಮೊರೆ ಹೋಗುವವರಿಗೂ ಛೆ... ಪಾಪ... ಎನ್ನುತ್ತಾ... Very Very Unhappy Violentines Day!

Wednesday, February 13, 2008

ಆತ್ಮಹತ್ಯೆಗೆ ಪ್ರೇರಣೆ: ಮದ್ವೆಯಾದ ಗಣೇಶನ ಸೆರೆಗೆ ಸಿದ್ಧತೆ!

(ಬೊಗಳೂರು ಒಡೆದ ಹೃದಯಗಳು ಬ್ಯುರೋದಿಂದ)
ಬೊಗಳೂರು, ಫೆ.13- ಹುಡುಗಿಯರ ಹೃದಯದಲ್ಲಿ 'ಚೆಲ್ಲಾಟ'ವಾಡಿ, ಅವರ ಮನಸ್ಸಿನಲ್ಲಿ 'ಗಾಳಿಪಟ' ಹಾರಿಸಿ, ಪ್ರಾಯಕ್ಕೆ ಬಂದ ಯುವತಿಯರ ಮನದಂಗಳದಲ್ಲಿ 'ಚೆಲುವಿನ ಚಿತ್ತಾರ' ಬರೆದುಬಿಟ್ಟು, ಗಣೇಶನ ಮದುವೆಯಾ? ಅದು ನಾಳೆ ನಾಳೆ ಎನ್ನುವ ಬದಲು 'ಕೃಷ್ಣ' ಆಗಿ ದಿಢೀರ್ ಮದುವೆಯಾಗಿ, ಕಾಯುತ್ತಿದ್ದ ಅಭಿಮಾನಿನಿಯರ ಕಣ್ಣಲ್ಲಿ 'ಮುಂಗಾರುಮಳೆ' ಸುರಿಸಿದ ಗಣೇಶ್ ಅವರನ್ನು ಬಂಧಿಸಲು ಬೊಗಳೂರು ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ನಮ್ಮ ಸುದ್ದಿಯ ಮೂಲಗಳು ವರದಿ ಮಾಡಿಲ್ಲ.

ಇದಕ್ಕೆ ಪ್ರಧಾನ ಕಾರಣವೆಂದರೆ, ಮದುವೆಯಾಗದೆಯೂ ಹಲವು ಹೃದಯಗಳು ಒಡೆಯಲು ಕಾರಣವಾದ, ಮದುವೆಯಾದ ಬಳಿಕವಂತೂ ಆತ್ಮಹತ್ಯೆಯ ಸರಣಿಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಚಿನ್ನದ ತಾರೆಯನ್ನು ಬಂಧಿಸಲು ತೀವ್ರವಾಗಿ ಯತ್ನಿಸಲಾಗುತ್ತಿದೆ ಎಂದು ತಿಳಿದುಬಂದಿದೆ.

ಈ ಬಂಧನ ಕಾರ್ಯಾಚರಣೆಗೆ ಪೊಲೀಸರು ಹಲವು ಕಾರಣಗಳನ್ನು ನೀಡುತ್ತಿದ್ದಾರೆ. ಅವುಗಳಲ್ಲಿ ಪ್ರಮುಖವಾದವೆಂದರೆ:
 • ಹುಡುಗಿಯರ ಹೃದಯ ಒಡೆಯುವ ಹುನ್ನಾರ.
 • ದಿಢೀರ್ ಮದುವೆಯಾಗಿ ಕೆಲವರಿಗೆ ಹಾರ್ಟ್ ಅಟ್ಯಾಕ್ ಆಗಲು ಕಾರಣವಾಗಿದ್ದು ಹಾಗೂ ರಾಸ್ಕಲ್ ದೇವದಾಸನ ಪರಿಸ್ಥಿತಿ ತರಲು ಕಾರಣವಾಗಿದ್ದು.
 • ಫೆ.18ರಂದು ಮದುವೆಯಾಗುವುದಾಗಿ ಹೇಳಿ, ಮಣ್ಣಿನ ಅಪ್ಪ-ಮಕ್ಕಳಂತೆ ಕೊಟ್ಟ ಮಾತಿಗೆ ತಪ್ಪಿದ್ದು.
 • ಕಾದಿದ್ದವರಿಗೆಲ್ಲಾ ಕೈಕೊಟ್ಟು, ವಿಚ್ಛೇದಿತೆಗೆ ಬಾಳು ನೀಡಿದ ಚಿನ್ನದಂಥ ಗುಣ ಪ್ರದರ್ಶಿಸಿ ವಿಚ್ಛೇದನೆಗೆ ಪ್ರೋತ್ಸಾಹ.
 • ಹುಡುಗಿಯರ ಮನೆಯ ಟೆಲಿಫೋನ್ ಬಿಲ್ ಹೆಚ್ಚಿಸಿದ್ದು.
 • ಹೃದಯ ತಜ್ಞ ವೈದ್ಯರಿಗೆ ಸಂಪಾದನೆ ಹೆಚ್ಚಿಸಿದ್ದು.
ಮದುವೆ ಗಲಾಟೆಯ ಮಧ್ಯೆಯೇ, ಮದುವೆ ಮಂಟಪದಿಂದ ಮೂಗನ್ನು ಮಾತ್ರವೇ ಹೊರಗೆ ತಳ್ಳಿ, ಬೊಗಳೆ ರಗಳೆಗೆ ವಿಶೇಷ ಸಂದರ್ಶನ ನೀಡಿದ ಅವರು, ತರಾತುರಿಯ ಮದುವೆಯೇಕೆ ಎಂದು ಕೇಳಿದಾಗ, ಇನ್ನೂ ತಡ ಮಾಡಿದರೆ, ಮತ್ತಷ್ಟು ಮಂದಿ ಫೋನ್ ಕಾಲ್ ಮಾಡಲು, ಹಾಗೂ "ನಿನ್ನಿಂದಲೇ.... ನಿನ್ನಿಂದಲೇ... ಈ ಜೀವ ಸಾಕಾಗಿದೆ..." ಅಂತ ಹಾಡಲು ಹೆಚ್ಚು ಅವಕಾಶ ನೀಡಿದಂತಾಗುತ್ತದೆ. ಹಾಗಾಗಿ ಪ್ರೇಮಹತ್ಯಾ ದೋಷ ಹೆಚ್ಚಳವಾಗದಂತೆ ತಡೆಯುವುದಕ್ಕಾಗಿಯೇ ಅವಸರ ಮಾಡಬೇಕಾಯಿತು ಎಂದು ಹೇಳಿದರು.

ರಾತೋ ರಾತ್ರಿ ಮದುವೆಯಾಗಿದ್ದೇಕೆ ಎಂಬ ಪ್ರಶ್ನೆಗೆ ತ(ಉ)ತ್ತರಿಸಿದ ಅವರು, ದಿಢೀರ್ ಮದುವೆಯಾಗಿದ್ದು ಯಾರಿಗೂ ಗೊತ್ತಿಲ್ಲ. ಹಾಗಾಗಿ ಮದುವೆಯಾದ ತಕ್ಷಣ ಈ ಒಂದು ರಾತ್ರಿಯಾದರೂ ಸುಖವಾಗಿ, ಗಡದ್ದಾಗಿ ನಿದ್ದೆ ಮಾಡಬಹುದು. ನಾಳೆಯಿಂದ ಹೇಗೂ ಫೋನ್ ಕರೆಗಳು ಇದ್ದೇ ಇವೆ, ಕಿರಿಕಿರಿ. ನಿದ್ದೆ ಮಾಡುವುದು ಸಾಧ್ಯವಾಗದು. ಅದಕ್ಕೇ ಈ ತರಾತುರಿ ಎಂದು ಸ್ಪಷ್ಟಪಡಿಸಿದರು.

ಅದೂ ಅಲ್ಲದೆ, ಫೆ.14 ವೆಲಂಟೈನ್ಸ್ ದಿನಕ್ಕೆ ಗಂಡು ಪ್ರೇಮಿಗಳಿಗೆ ಉಡುಗೊರೆ ರೂಪದಲ್ಲಿ ಈ ಕ್ರಮ ಕೈಗೊಂಡಿರುವುದಾಗಿ ಗುಣೇಶರು ಹೇಳಿದ್ದಾರೆ. ಅದು ಹೇಗೆ? ಮುಂದೆ ಓದಿ.

ಈ ನಡುವೆ, ಗಣೇಶನ ಗಲಾಟೆಯಿಂದಾಗಿ, ತಾವು ಇಷ್ಟಪಟ್ಟ ಹೆಣ್ಣುಗಳು ಸಿಗದೆ ನೊಂದಿದ್ದ ಮದುವೆ ಗಂಡುಗಳು, ಗಣೇಶನ ಮದುವೆಯಾದ ಬಳಿಕ ನಿಟ್ಟುಸಿರಿಟ್ಟ ಪ್ರಸಂಗವೂ ಅಲ್ಲಲ್ಲಿ ವರದಿಯಾಗಿದೆ.

ಇದುವರೆಗೆ ಈ ಗಂಡುಗಳು ನೋಡಿ ಬಂದ ಹೆಣ್ಣುಗಳೆಲ್ಲವೂ, ಗಣೇಶನ ಮದುವೆಯಾಗಲಿ, ಆಮೇಲೆ ನೋಡೋಣ ಅಂತ ಹೇಳಿ ಕಳುಹಿಸುತ್ತಿದ್ದರು. ಗಣೇಶನಿಗೆ ಮದುವೆ ಇಲ್ಲ ಎಂಬ ಲೋಕಪ್ರಿಯ ಮಾತೇ ಇರುವುದರಿಂದ ಈ ಗಂಡುಗಳು ಮದುವೆ ಸುದ್ದಿ ಬಿಟ್ಟಿದ್ದವು. ಈಗ ಗಣೇಶನಿಗೆ ಮದುವೆಯಾಗಿದೆ, ಕಾಯುತ್ತಿದ್ದವರೆಲ್ಲರನ್ನೂ ತಿರಸ್ಕರಿಸಿಯಾಗಿದೆ. ಹಾಗಾಗಿ ಇನ್ನಾದರೂ ಅವರು ನಮ್ಮತ್ತ ಕೃಪೆ ಬೀರಬಹುದು ಎಂಬುದು ಹೆಣ್ಣು ಹುಡುಕುತ್ತಿದ್ದ ಗಂಡುಗಳ ಆತ್ಮತೃಪ್ತಿ.

Monday, February 11, 2008

ಪೇಪರ್, ಕಳ್ಳೆಪುರಿ ಬಿಡಿ, ಊರನ್ನೇ ಮಾರಿ ಬಿಡಿ!

(ಬೊಗಳೂರು ಉದ್ಯೋಗ ನಿವಾರಣೆ ಸಲಹಾ ಬ್ಯುರೋದಿಂದ)
ಬೊಗಳೂರು, ಫೆ.11- ರಾಜಕೀಯ ಕುಲಗೆಟ್ಟು ಹೋಗಿದೆ ಎಂಬಂತಹ ಅತ್ಯಂತ ಅಸಭ್ಯ ಸತ್ಯದ ವಾದವನ್ನು ಖಂಡಿಸಿರುವ ಬೊಗಳೂರು ಜನತೆ, ಮಣ್ಣಿನಿಂದ ಮೇಲೆದ್ದುಬರುವವರು ಇರುವವರೆಗೂ ರಾಜಕೀಯ ಕುಲಗೆಟ್ಟು ಹೋಗುವ ಪ್ರಶ್ನೆಯೇ ಇಲ್ಲ ಎಂದು ಘರ್ಜಿಸಿದ್ದಾರೆ.

ಏಕೈಕ ವ್ಯಕ್ತಿ ವಾಸವಾಗಿರುವ ಬೊಗಳೂರಿನ ಸಮಸ್ತ ಜನರನ್ನು ಈ ಕುರಿತು ಮಾತನಾಡಿಸಲಾಯಿತು. ಒಬ್ಬೊಬ್ಬರಿಂದ ಒಂದೊಂದು ಉತ್ತರ ಬರ ತೊಡಗಿತು. ಜಾರಕಾರಣಿಗಳನ್ನು ಸಮರ್ಥಿಸುವ ಮಾತನಾಡುವವರೇ ಅಧಿಕವಿದ್ದ ಕಾರಣ ಬೊಗಳೂರು ಬ್ಯುರೋದ ಸದಸ್ಯರು ಮುಖ ಮುಚ್ಚಿಕೊಂಡೇ ಸಂದರ್ಶನ ನಡೆಸುತ್ತಿದ್ದುದು ಸಾಮಾನ್ಯವಾಗಿತ್ತು.

ಒಬ್ಬರು ನೀಡಿದ ಉತ್ತರದಿಂದ ಬೊಗಳೂರು ಬ್ಯುರೋವೇ ತತ್ತರಿಸಿಹೋಯಿತು. ಹಿಂದಿನ ಕಾಲದಲ್ಲಿ ಕಡ್ಲೆಪುರಿ ಮಾರುತ್ತಿದ್ದವರು ಜನಸೇವೆ ಮಾಡಿ ಮಂತ್ರಿಗಳಾಗುತ್ತಿದ್ದರು. ಇಂದು ಕಡ್ಲೆಪುರಿ ಬಿಡಿ, ಇಡೀ ಊರನ್ನೇ ಮಾರುವವರು ಮಂತ್ರಿಗಿರಿ ಪಡೆಯುತ್ತಾರೆ. ಹಾಗಾಗಿ ಕಡ್ಲೆ ಪುರಿಗಿಂತಲೂ ಊರಿನ ಬೆಲೆ ಹೆಚ್ಚಲ್ಲವೇ? ಸಿಲ್ಲಿ ಕಡ್ಲೆ ಪುರಿ ಮಾರೋದಂದ್ರೆ ಅವಮಾನ, ಊರನ್ನೇ ಮಾರಿದ್ರೆ ಎಲ್ಲರೂ ಸನ್ಮಾನ ಮಾಡುತ್ತಾರೆ ಅಂತ ಬೊಗಳೂರಿನ ಅರಾಜಕೀಯ ಪಂಡಿತರ ಡೆಸ್ಕಿಗೆ ಬಂದಿರುವ ಪತ್ರವೊಂದು ಹೇಳಿದೆ.

ರಾಜ್ಯದಲ್ಲೀಗ ಚುನಾವಣೆಗಳು ಬರುತ್ತಿವೆ. ಇದೀಗ ದೇಶದಲ್ಲಿ ಕೋಳಿಜ್ವರ ಹೆಚ್ಚಾಗಿಸುವಲ್ಲಿ ಜಾರಕಾರಣಿಗಳ ಪಾತ್ರ ಮಹತ್ವದ್ದು. ಕೋಳಿಗಳನ್ನು ನಿರ್ನಾಮ ಮಾಡುವ ಅನಿವಾರ್ಯತೆ ಸೃಷ್ಟಿಯಾಗುವಾಗ, ಮೊಟ್ಟೆ ಇಡಲು ಅವುಗಳು ಬದುಕುಳಿದಿರುವುದಿಲ್ಲ. ಹಾಗಾಗಿ ಯಾವುದೇ ಎಗ್ಗಿಲ್ಲದೆ, ಮೊಟ್ಟೆಯ ಭೀತಿಯಿಲ್ಲದೆಯೇ ಸಭೆ ಸಮಾರಂಭಗಳಲ್ಲಿ ಕೊರೆಯಬಹುದು ಎಂಬುದು ಜಾರಕಾರಣಿಗಳ ದು(ದೂ)ರಾಲೋಚನೆ ಎಂಬುದನ್ನು ನಮ್ಮ ಬ್ಯುರೋದ ವರದಿಗಾರರು ಇದುವರೆಗೆ ವರದಿ ಮಾಡಿಲ್ಲ.

ಈ ಮಧ್ಯೆ, ಬೊಗಳೂರಿನ ಏಕೈಕ ರಾಜಕಾರಣಿಯೂ ಆದ ಪ್ರಜೆಯು ಕೊನೆಯದಾಗಿ ಹೇಳಿದ ಸಂಗತಿ: "ರಾಜಕೀಯ ಪೂರ್ತಿ ಕುಲಗೆಟ್ಟಿಲ್ಲ. ಕುಲಗೆಡಿಸಲು ಇನ್ನೂ ಸ್ವಲ್ಪ ಬಾಕಿ ಇದೆ"!

Friday, February 08, 2008

ನನ್ನದು ಜನಸೇವೆ: ಕಿಡ್ನಿ ಮಾರ್ಕೆಟ್ ಪ್ರೈ.ಲಿ. ಒಡೆಯ

(ಬೊಗಳೂರು ಕಿಡ್ನಿ ಮಾರ್ಕೆಟ್ ಸಮೀಕ್ಷಾ ಬ್ಯುರೋದಿಂದ)
ಬೊಗಳೂರು, ಫೆ.8- ತಲೆಯಲ್ಲಿ ಕಿಡ್ನಿ ಇರುವವರೇ ಈ ದಿ ಗ್ರೇಟ್ ಇಂಡಿಯನ್ ಕಿಡ್ನಿ ಮಾರ್ಕೆಟ್ ಪ್ರೈವೇಟ್ ಲಿ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆ ಅಂತ ತಲೆಯಲ್ಲಿ ಏನನ್ನೂ ಇಟ್ಟುಕೊಳ್ಳದ ಬೊಗಳೆ ಬ್ಯುರೋದ ರದ್ದಿಗಾರರು ಪತ್ತೆ ಹಚ್ಚಿದ್ದಾರೆ.

500ಕ್ಕೂ ಹೆಚ್ಚು ಕಿಡ್ನಿಗಳನ್ನು ಕಳವು ಮಾಡಿ ಮಾರಾಟ ಮಾಡಿದ್ದಾನೆ ಎಂದು ಯಾರ್ಯಾರೋ ಆರೋಪಿಸುತ್ತಿರುವ, ಗುರುಗುಟ್ಟುವ ಗಾಂವ್‌ನ ವೈದ್ಯ ಡಾ.ಅಪರಿಮಿತ ಕಿಡ್ನಿ ಕುಮಾರನನ್ನು ಬಂಧಿಸಿರುವ ಸುದ್ದಿ ಕೇಳಿದ ತಕ್ಷಣ ನೇಪಾಳಕ್ಕೆ ಪರಾರಿಯಾದ ಬೊಗಳೆ ಬ್ಯುರೋ ವಾ-ರದ್ದಿಗಾರರು, ಅಲ್ಲಿ ಕಿಡ್ನಿಗೆ ಚುಚ್ಚುವ (ಕಿಂಗ್)ಪಿನ್ನನ್ನು ಕೈಯಲ್ಲಿ ಹಿಡಿದುಕೊಂಡು ಮಾತನಾಡಿಸಿತು.

ಡಾ.ಕಿಡ್ನಿಕುಮಾರನಿಗೆ ಬೊಗಳೆ ಬ್ಯುರೋ ಏನೂ ತಿಳಿಯದವರಂತೆ ಕೇಳಿದ ಮೊದಲ ಪ್ರಶ್ನೆ ಎಂದರೆ "ಕಿಡ್ನಿ ಅಂದರೇನು?!!!".

ಅದಕ್ಕುತ್ತರಿಸಿದ ಕಿಡ್ನಿ ಕುಮಾರ್, ಕಿಡ್ನಿ ಅನ್ನೋದು ಬೇರೆಯವರ ದೇಹದಲ್ಲಿ ಸುಲಭವಾಗಿ ದೊರೆಯಬಹುದಾದ, ಅದನ್ನು ತೆಗೆದರೆ ನಮ್ಮ ಜೇಬು ತುಂಬಿಕೊಳ್ಳಬಹುದಾದ ಪುಟ್ಟದಾದ ನಿರುಪದ್ರವಿ ಅಂಗ. ಅದು ಕೆಲವು ಬಾರಿ ಕೆಲವರ ತಲೆಯಲ್ಲೂ ಇರುತ್ತದೆ. ಹಾಗಾಗಿ, ನಮ್ಮ ತಂತ್ರಗಳ ಅರಿವಿಲ್ಲದ, ಈ ತಲೆಯಲ್ಲಿ ಕಿಡ್ನಿ ಹೊಂದಿರುವವರ, ಉದರದ ಕೆಳಭಾಗದಲ್ಲಿರುವ ಗೇರುಬೀಜದ ಮಾದರಿಯ ಕಿಡ್ನಿಯನ್ನು ನಾವು ತೆಗೆಯುತ್ತಿದ್ದೆವು.

ನಿಮಗೆ ಕಿಡ್ನಿಯೇ ಏಕೆ ಬೇಕು? ಎಂಬುದು ಬೊಗಳೆಯಿಂದ ಬಂದ ಮತ್ತೊಂದು ಪ್ರಶ್ನೆ.

ಅದಕ್ಕೆ ಮಂಗಪಿನ್‌ನಂತಾಗಿರುವ ಕಿಂಗ್‌ಪಿನ್ ಉತ್ತರ: ಮನುಷ್ಯನಿಗೆ ಹೆಚ್ಚಾಗಿ ಎರಡು ಕಿಡ್ನಿಗಳಿರುತ್ತವೆ. ಕೇವಲ ಒಂದು ಕಿಡ್ನಿ ಇದ್ದರೂ ಮಾನವ ಯಂತ್ರವು ಸರಾಗವಾಗಿ ಕೆಲಸ ಮಾಡುತ್ತದೆ. ಆದರೆ ಈಗೀಗ ಮನುಷ್ಯರು ಸ್ವಾರ್ಥಿಗಳಾಗುತ್ತಿದ್ದಾರೆ. ಎರಡೂ ಕಿಡ್ನಿ ಹಾಳಾಗಿರುವವರನ್ನು ಬದುಕಿಸುವುದಕ್ಕಾಗಿ ತಮ್ಮ ವ್ಯರ್ಥವಾಗಿರೋ ಮತ್ತೊಂದು ಕಿಡ್ನಿಯನ್ನು ನೀಡಲು ಹಿಂಜರಿಯುತ್ತಿದ್ದಾರೆ.

ಯಾರು ಕೂಡ ಕಿಡ್ನಿಯನ್ನು ಕೊಡಲು ನಿರಾಕರಿಸುತ್ತಿರುವುದರಿಂದ ನಾವು ಆ ಹೆಚ್ಚುವರಿಯಾಗಿರುವ ಎರಡನೇ ಕಿಡ್ನಿಯನ್ನು ಮಾತ್ರವೇ ತೆಗೆಯುತ್ತಿದ್ದೆವು. ಅರಿವಿಲ್ಲದಂತೆಯೇ ತೆಗೆಯುವುದಕ್ಕಾಗಿ ಇರುವ ಅರಿವಳಿಕೆ ಔಷಧಿಯನ್ನೂ ನಾವು ವ್ಯರ್ಥ ಮಾಡಬಾರದಲ್ಲ... ಹಾಗಾಗಿ ಅರಿವಳಿಸಿ ಕಿಡ್ನಿ ತೆಗೆದು ಅದನ್ನು ಅವಶ್ಯಕತೆಯಿರುವವರಿಗೆ ನೀಡುತ್ತಿದ್ದೆವು ಎಂದು ಸುದೀರ್ಘವಾಗಿ ಬಾಯಿ ಹರಿದುಕೊಂಡಿರುವ ಕಿಡ್ನಿಕುಮಾರ, ಅಬ್ಬಾ... ಮನುಷ್ಯ ಇಷ್ಟೊಂದು ಸ್ವಾರ್ಥಿಯಾಗಬಾರದು, ಒಂದು ಕಿಡ್ನಿ ಇಟ್ಟುಕೊಂಡೂ, ಮತ್ತೊಂದು ಕೂಡ ತನಗೇ ಬೇಕು ಅಂತ ಹಠ ಹಿಡಿಯುವುದು ಎಷ್ಟು ಸರಿ ಎಂದು ಸ-ಖೇದ-ಆಶ್ಚರ್ಯ ಪ್ರಕಟಿಸಿದ್ದಾನೆ.

ಹಾಗಿದ್ದರೆ, ನಿನ್ನನ್ನು ಪೊಲೀಸರು ಬಂಧಿಸಿದ್ದೇಕೆ? ಎಂಬ ಕೊಟ್ಟ ಕೊನೆಯ ಪ್ರಶ್ನೆಗೆ ಅಪರಿಮಿತ ಕಿಡ್ನಿ ರಾಕೆಟ್ ಹಿಡಿದು ಆಡುತ್ತಿದ್ದ ಕುಮಾರನ ಉತ್ತರ:

ಪೊಲೀಸರಿಗೆ ಕೂಡ ತಲೆಯಲ್ಲಿ ಕಿಡ್ನಿ ಇಲ್ಲ. ನೋಡಿ, ನಾನು ಮಾಡುತ್ತಿದ್ದುದು ದೇಶ ಸೇವೆ. ಜನರನ್ನು ರಕ್ಷಿಸುವುದಕ್ಕಾಗಿಯೇ ಒಬ್ಬರ ಕಿಡ್ನಿ ತೆಗೆದು ಮತ್ತೊಬ್ಬರಿಗೆ ಅಳವಡಿಸುತ್ತಾ ಸುಖವಾಗಿದ್ದೆ. ಮತ್ತೊಬ್ಬರ ಜೀವವುಳಿಸುವುದನ್ನೇ ಹಗರಣ ಅಂತ ಕೂಗಾಡುತ್ತಿರುವ ಈ ಮಾಧ್ಯಮದ ಮಂದಿಗೆ ಏನು ಹೇಳಬೇಕೋ ಗೊತ್ತಾಗುತ್ತಿಲ್ಲ. ಈಗ ನೋಡಿ, ನನಗೆ ದೊಡ್ಡ ದೊಡ್ಡ ಕುಳಗಳ ಸಂಪರ್ಕವಿದೆ ಅಂತೆಲ್ಲಾ ಬರೆಯುತ್ತಾರೆ, ಸ್ವತಃ ಕಿಡ್ನಿ ತೊಂದರೆಯಿಂದ ಬಳಲುತ್ತಿರುವ ವಿಪ್ರಸಿಂಗರೇ ಧಾವಂತದಿಂದ, ಲಗುಬಗನೆ ನಾನಲ್ಲ, ನಾನಲ್ಲ ಅಂತ ಈ ಆರೋಪಗಳನ್ನು ನಿರಾಕರಿಸುತ್ತಿದ್ದರೂ ಕೇಳುತ್ತಿಲ್ಲ. ಅಂದ ಮೇಲೆ ಈ ಮಾಧ್ಯಮದವರಿಗೂ ತಲೇಲಿ ಕಿಡ್ನಿ ಇಲ್ಲ ಎಂದಾಯಿತು ಅಂತ ಕಿಡ್ನಿ ಕಿಂಗ್‌ಪಿನ್ ತೀರ್ಪು ನೀಡಿಬಿಟ್ಟ.

ಕೊನೆಯದಾಗಿ ಏನೋ ಹೇಳಲು ಬಾಯಿತೆರೆದ ಆತನ ಬಾಯಿಯಲ್ಲಿರೋ ಹಲ್ಲುಗಳು ಕೂಡ ಕಿಡ್ನಿಯಾಕಾರದಲ್ಲಿದ್ದುದನ್ನು ಬೊಗಳೆ ಬ್ಯುರೋ ಕಂಡುಕೊಂಡಿತು. ಮಾತು ಆಡಿಯೇ ಬಿಟ್ಟ ಆತ, ಇಷ್ಟು ಸಣ್ಣ ಒಂದು ಅಂಗವನ್ನು ತೆಗೆದುಹಾಕಿದರೆ ನೀವೇಕೆ ಇಷ್ಟೊಂದು ಗಲಾಟೆ ಮಾಡ್ತೀರಿ? ದೊಡ್ಡ ದೊಡ್ಡ ಗಡ್ಡೆಗಳನ್ನು ದೇಹದಿಂದ ಹೊರತೆಗೆಯುವ ಅಥವಾ ಸಿಸೇರಿಯನ್ ಮಾಡಿ ಮಗುವನ್ನೇ ದೇಹದಿಂದ ಹೊರತೆಗೆಯುವ ವೈದ್ಯರ ಮೇಲೇಕೆ ನೀವು ಹರಿಹಾಯುವುದಿಲ್ಲ? ಎಂದು ಆತ ನಮ್ಮ ಬ್ಯುರೋವನ್ನೇ ಸಂದರ್ಶನ ಆರಂಭಿಸಿದಾಗ, ರದ್ದಿಗಾರರು ಗಪ್‌ಚಿಪ್!

ಸಂದರ್ಶನ ಮುಗಿಸಿ ಹೊರಬರುವಾಗ, 'ಎಲ್ಲಾದರೂ ಕಿಡ್ನಿಯನ್ನು ಎಗರಿಸಿಬಿಟ್ಟಿದ್ದರೆ....?' ಅಂಬೋ ಸಂಶಯದಿಂದ ನಮ್ಮ ರದ್ದಿಗಾರರು ತಮ್ಮ ತಲೆಯ ಯಾವುದಾದರೂ ಒಂದು ಭಾಗದಲ್ಲಿ ಗಾಯವಾಗಿದೆಯೇ ಎಂದು ತೀವ್ರವಾಗಿ ತಪಾಸಣೆ ಮಾಡಿಕೊಂಡರು...

ಇತ್ತೀಚೆಗೆ ಬಂದಿರುವ ವರದ್ದಿ ಪ್ರಕಾರ, ಕಿಡ್ನಿ ಮಾರ್ಕೆಟ್‌ನಲ್ಲಿ ತೀವ್ರ ಕೋಲಾಹಲ ಉಂಟಾಗಿದ್ದು, ಕಿಡ್ನಿ ಕಂಪನಿಯ ಶೇರು ಸೂಚ್ಯಂಕಗಳೆಲ್ಲವೂ ಏರುಪೇರಾಗಿದೆ.

Wednesday, February 06, 2008

ಸಾಲ ಬೇಕಿದ್ದರೆ ಆತ್ಮ ಇರುವಿಕೆ ಸಾಬೀತುಪಡಿಸಿ!

ಬೊಗಳೂರು, ಫೆ.6- ಸತ್ತ ಮೇಲೂ ಬ್ಯಾಂಕಿನವರ ಕಾಟ ಮುಗಿಯುವುದಿಲ್ಲ ಎಂಬುದು ಇಲ್ಲಿ ಸಾಬೀತಾದ ಹಿನ್ನೆಲೆಯಲ್ಲಿ, ಇನ್ನು ಮುಂದೆ ಸಾಲ ಮಾಡದಿರಲು ಹಾಗೂ ಮಾಡಿದರೂ ಸತ್ತ ಮೇಲೆ ಮಾಡಲು ಒಬ್ಬನೇ ಪ್ರಜೆಯಿರುವ ಊರಾದ ಬೊಗಳೂರಿನ ಸಮಸ್ತ ಸಮುದಾಯವು ನಿರ್ಧರಿಸಿದೆ.

ಹೇಗಿದ್ದರೂ ಐಸೀ ಐಸೀ ಹೈ ಬ್ಯಾಂಕಿನ ಕಿರುಕುಳ ಇದ್ದೇ ಇರುತ್ತದೆ. ಹಾಗಾಗಿ ಜೀವಂತವಾಗಿರುವಾಗ ಸಾಲದ ಉಸಾಬರಿ ಬೇಡ, ಸತ್ತ ಮೇಲೆಯೇ ಸಾಲ ಮಾಡುವುದಾಗಿ ಬೊಗಳೂರಿನ ಏಕ ಪ್ರಜಾ ಪರಿವಾರವು ತುರ್ತು ಸಭೆ ಸೇರಿ ಈ ನಿರ್ಣಯ ಕೈಗೊಂಡಿದೆ.

ಬೇರೆ ಯಾರೂ ಇಲ್ಲದ ಕಾರಣ, ಸಭೆಯಲ್ಲಿ ಹಾಜರಿದ್ದ ಒಬ್ಬನೇ ಸದಸ್ಯ ಮಾತನಾಡಲೆಂದು ಎದ್ದು ನಿಂತಾಗ, ಇದುವರೆಗೆ ಆತ್ಮಹತ್ಯೆ ಮಾಡಿಕೊಂಡಿದ್ದವರ ಆತ್ಮಗಳು ಮಾತ್ರವೇ ಹೂಂಗುಟ್ಟುತ್ತಿದ್ದವು.

ಈ ಬಗ್ಗೆ ಐಸೀ ಐಸೀ ಹೈ ಬ್ಯಾಂಕ್ ಅಧಿಖಾರಿಗಳನ್ನು ಬೊಗಳೂರು ಬ್ಯುರೋ ಪ್ರಶ್ನಿಸಿತು. ರೈತನ ಆತ್ಮಕ್ಕೆ ನೋಟಿಸ್ ಕಳುಹಿಸಿದ್ದಕ್ಕೆ ಸಮಜಾಯಿಷಿ ನೀಡಿದ ಅವರು, ಅವರು ಜೀವಂತವಾಗಿರುವಾಗ ನೋಟೀಸ್ ಕಳುಹಿಸಿದರೆ ಧರಣಿಯಲ್ಲಿರುವವರೆಲ್ಲರೂ ಧರಣಿ ಮಾಡುತ್ತಾರೆ. ಸತ್ತ ಮೇಲಾದರೆ ಅಲ್ಲಿ ಧರಣಿ ಅಂತ ನಡೆಸಲು ಧರಣಿಯೇ ಇರುವುದಿಲ್ಲ. ಅದೇನಿದ್ದರೂ ಭೂಮಿ ಮೇಲೆ ತಾನೇ ಇರೋದು ಅಂತ ಪ್ರಶ್ನಿಸಿದ್ದಾರೆ.

ತಮ್ಮ ಬ್ಯಾಂಕಿನ ಭಾವೀ ಯೋಜನೆಗಳ ಬಗ್ಗೆ ವಿವರಿಸಿದ ಅವರು, ಇನ್ನು ಮುಂದೆ ಸಾಲ ಕೊಡಲು ಹೊಸ ಹೊಸ ನಿಯಮಗಳನ್ನು ಜಾರಿಗೊಳಿಸಲಾಗುತ್ತದೆ. ಜಮೀನು ಅಡವಿಟ್ಟು ಸಾಲ ಪಡೆಯುವವರು ತಮಗೆ ಆತ್ಮ ಇದೆ ಅಂತ ಸಾಬೀತುಪಡಿಸಲು ಸಾಕ್ಷ್ಯಾಧಾರ ನೀಡಬೇಕು. ಎಲ್ಲಾ ಮುಗಿದ ಮೇಲೆ ನೋಟೀಸ್ ಕಳುಹಿಸಲು ಇದು ಅನುಕೂಲ ಮಾಡಿಕೊಡುತ್ತದೆ ಎಂದವರು ಹೆಮ್ಮೆಯಿಂದ ಕ್ಯಾಕರಿಸಿ ನಗುತ್ತಾ ಹೇಳಿದರು.

Monday, February 04, 2008

ಬೊಗಳೆಗೆ ಅರ್ಜಿ ಗುಜರಾಯಿಸಿದ ಪ್ರಿನ್ಸ್ ವಿಲಿಯಂ!

(ಬೊಗಳೂರು ಶಾಕಿಂಗ್ ನ್ಯೂಸ್ ಬ್ಯುರೋದಿಂದ)
ಬೊಗಳೂರು, ಫೆ. 4- ಬ್ರಿಟನ್ ರಾಜಕುಮಾರ ವಿಲಿಯಂ ಕೂಡ ಬೊಗಳೆಯಿಂದ ಪ್ರಭಾವಿತರಾಗಿದ್ದು, ಇದೀಗ ಅವರೇ ಕೆಲಸಕ್ಕಾಗಿ ಹಾಕಿದ ಅರ್ಜಿಯು ಬೊಗಳೆ ರಗಳೆ ಕೈ ಸೇರಿರುವುದಾಗಿ ನಂಬಲನರ್ಹ ಮೂಲಗಳು ಖಚಿತಪಡಿಸಿವೆ.

ಈಗಾಗಲೇ ಸೈನ್ಯದಲ್ಲೆಲ್ಲಾ ಕೆಲಸ ಮಾಡಿ ಉತ್ತಮ ಅನುಭವವಿರುವ ಅವರು ಪಾಪರಾಝಿ ಕಾಟದಿಂದ ತಮ್ಮ ತಾಯಿಯನ್ನು ಕಳೆದುಕೊಂಡಿದ್ದರು. ಆದರೆ ಈ ಪಾಪರಾಝಿಗಳು ಹೇಗೆ ಕೆಲಸ ಮಾಡುತ್ತಾರೆ ಎಂಬುದನ್ನು ಕಲಿಯುವುದು ತಮ್ಮ ಉದ್ದೇಶ ಎಂದವರು ಒಂದೂವರೆ ಸಾಲಿನ ತಮ್ಮ ಅರ್ಜಿಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಈಗಿನ ಪಾಪರಾಝಿಗಳು ಪಾಪಿಗಳ ಬೆನ್ನು ಬೀಳಲಿದ್ದಾರೆಯೇ? ಎಂಬ ನಮ್ಮ ಅರ್ಧ ಸಾಲಿನ ಪ್ರಶ್ನೆಗೆ ಮರುತ್ತರಿಸುತ್ತಾ ತತ್ತರಿಸಿದ ಅವರು, ಖಂಡಿತವಾಗಿ, ಅಮ್ಮನ ಬೆನ್ನಟ್ಟಿದಂತೆಯೇ ಅವರ ಸಾವಿಗೆ ಕಾರಣರಾದವರನ್ನೂ ಬೆನ್ನಟ್ಟುತ್ತೇವೆ ಎಂದರು.

ಹಾಗಿದ್ದರೆ, ಬೊಗಳೆಗೇ ಏಕೆ ಅರ್ಜಿ ಗುಜರಾಯಿಸಿದಿರಿ? ಎಂಬ ಪ್ರಶ್ನೆಗೆ ಇರಿಸುಮುರಿಸಿಗೊಳಗಾದಂತೆ ಮುಖ ಸಿಂಡರಿಸಿದ ಅವರು, ಈ ಬಾರಿ ಸುದೀರ್ಘ ಉತ್ತರ ನೀಡತೊಡಗಿದರು.

ಕೆಟ್ಟದ್ದನ್ನು ಸುಟ್ಟು ಬಿಡಬೇಕು ಅಂತ ಹಿರಿಯರು ಹೇಳಿದ್ದಾರೆ. ಬೇಡವಾದದ್ದನ್ನು ಬೇರು ಸಹಿತ ಕಿತ್ತೊಗೆಯಬೇಕು ಅಂತನೂ ಹೇಳಿದ್ದಾರೆ. ಹಾಗಾಗಿ ಬೊಗಳೆ ಸೇರಿಕೊಂಡರೆ ಅದನ್ನು ಸುಡುವುದು, ಅದರ ಮೂಲ ಬೇರನ್ನೇ ಕಿತ್ತೊಗೆಯುವುದು ಹೇಗೆ ಅಂತ ಲೆಕ್ಕಾಚಾರ ಹಾಕುತ್ತಾ ಕಾಲ ಕಳೆಯಬಹುದು. ಹೇಗೂ ರಾಯಲ್ ಆರ್ಮಿ, ರಾಯಲ್ ನೇವಿ, ರಾಯಲ್ ಏರ್‌ಫೋರ್ಸ್‌ಗಳಲ್ಲಿ ಸೇರಿಕೊಂಡು ಫೈರಿಂಗ್, ಬ್ಲಾಸ್ಟಿಂಗ್ ಎಲ್ಲಾ ಕಲಿತಿದ್ದೇನೆ. ದಯವಿಟ್ಟು ನಿಮ್ಮನ್ನು ಮುಳುಗಿಸಲು ನೆರವಾಗಿ ಅಂತ ಸುದೀರ್ಘವಾಗಿ ಬರೆಯದ ಪತ್ರವೊಂದು ಬೊಗಳೆಯ ಏಕಸದಸ್ಯ ಬ್ಯುರೋದ ಪ್ರತಿಯೊಬ್ಬರಿಗೂ ಒಂದೊಂದರಂತೆ ಲಭಿಸಿದೆ.

ಎಂಜಿನ್ ಇಲ್ಲದ ರೈಲು: ಬ್ರೇಕಿಂಗ್ ನ್ಯೂಸ್ ಅಲ್ಲವೆಂದ ಬೊ.ರ.

[ಬೊಗಳೂರು ಪಟ್ಟೆ-ರಹಿತ ರೈಲು ಬ್ಯುರೋ] ಬೊಗಳೂರು: ಆಫ್‌ಲೈನ್ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯೊಂದು ಆನ್‌ಲೈನ್ ಸಂಪಾದಕರ ಕಣ್ಣು ಕುಕ್ಕಿದ್ದು, ಎಂಜಿನ್ ಇಲ್ಲದೆ...