ಬೊಗಳೆ ರಗಳೆ

header ads

ಪೇಪರ್, ಕಳ್ಳೆಪುರಿ ಬಿಡಿ, ಊರನ್ನೇ ಮಾರಿ ಬಿಡಿ!

(ಬೊಗಳೂರು ಉದ್ಯೋಗ ನಿವಾರಣೆ ಸಲಹಾ ಬ್ಯುರೋದಿಂದ)
ಬೊಗಳೂರು, ಫೆ.11- ರಾಜಕೀಯ ಕುಲಗೆಟ್ಟು ಹೋಗಿದೆ ಎಂಬಂತಹ ಅತ್ಯಂತ ಅಸಭ್ಯ ಸತ್ಯದ ವಾದವನ್ನು ಖಂಡಿಸಿರುವ ಬೊಗಳೂರು ಜನತೆ, ಮಣ್ಣಿನಿಂದ ಮೇಲೆದ್ದುಬರುವವರು ಇರುವವರೆಗೂ ರಾಜಕೀಯ ಕುಲಗೆಟ್ಟು ಹೋಗುವ ಪ್ರಶ್ನೆಯೇ ಇಲ್ಲ ಎಂದು ಘರ್ಜಿಸಿದ್ದಾರೆ.

ಏಕೈಕ ವ್ಯಕ್ತಿ ವಾಸವಾಗಿರುವ ಬೊಗಳೂರಿನ ಸಮಸ್ತ ಜನರನ್ನು ಈ ಕುರಿತು ಮಾತನಾಡಿಸಲಾಯಿತು. ಒಬ್ಬೊಬ್ಬರಿಂದ ಒಂದೊಂದು ಉತ್ತರ ಬರ ತೊಡಗಿತು. ಜಾರಕಾರಣಿಗಳನ್ನು ಸಮರ್ಥಿಸುವ ಮಾತನಾಡುವವರೇ ಅಧಿಕವಿದ್ದ ಕಾರಣ ಬೊಗಳೂರು ಬ್ಯುರೋದ ಸದಸ್ಯರು ಮುಖ ಮುಚ್ಚಿಕೊಂಡೇ ಸಂದರ್ಶನ ನಡೆಸುತ್ತಿದ್ದುದು ಸಾಮಾನ್ಯವಾಗಿತ್ತು.

ಒಬ್ಬರು ನೀಡಿದ ಉತ್ತರದಿಂದ ಬೊಗಳೂರು ಬ್ಯುರೋವೇ ತತ್ತರಿಸಿಹೋಯಿತು. ಹಿಂದಿನ ಕಾಲದಲ್ಲಿ ಕಡ್ಲೆಪುರಿ ಮಾರುತ್ತಿದ್ದವರು ಜನಸೇವೆ ಮಾಡಿ ಮಂತ್ರಿಗಳಾಗುತ್ತಿದ್ದರು. ಇಂದು ಕಡ್ಲೆಪುರಿ ಬಿಡಿ, ಇಡೀ ಊರನ್ನೇ ಮಾರುವವರು ಮಂತ್ರಿಗಿರಿ ಪಡೆಯುತ್ತಾರೆ. ಹಾಗಾಗಿ ಕಡ್ಲೆ ಪುರಿಗಿಂತಲೂ ಊರಿನ ಬೆಲೆ ಹೆಚ್ಚಲ್ಲವೇ? ಸಿಲ್ಲಿ ಕಡ್ಲೆ ಪುರಿ ಮಾರೋದಂದ್ರೆ ಅವಮಾನ, ಊರನ್ನೇ ಮಾರಿದ್ರೆ ಎಲ್ಲರೂ ಸನ್ಮಾನ ಮಾಡುತ್ತಾರೆ ಅಂತ ಬೊಗಳೂರಿನ ಅರಾಜಕೀಯ ಪಂಡಿತರ ಡೆಸ್ಕಿಗೆ ಬಂದಿರುವ ಪತ್ರವೊಂದು ಹೇಳಿದೆ.

ರಾಜ್ಯದಲ್ಲೀಗ ಚುನಾವಣೆಗಳು ಬರುತ್ತಿವೆ. ಇದೀಗ ದೇಶದಲ್ಲಿ ಕೋಳಿಜ್ವರ ಹೆಚ್ಚಾಗಿಸುವಲ್ಲಿ ಜಾರಕಾರಣಿಗಳ ಪಾತ್ರ ಮಹತ್ವದ್ದು. ಕೋಳಿಗಳನ್ನು ನಿರ್ನಾಮ ಮಾಡುವ ಅನಿವಾರ್ಯತೆ ಸೃಷ್ಟಿಯಾಗುವಾಗ, ಮೊಟ್ಟೆ ಇಡಲು ಅವುಗಳು ಬದುಕುಳಿದಿರುವುದಿಲ್ಲ. ಹಾಗಾಗಿ ಯಾವುದೇ ಎಗ್ಗಿಲ್ಲದೆ, ಮೊಟ್ಟೆಯ ಭೀತಿಯಿಲ್ಲದೆಯೇ ಸಭೆ ಸಮಾರಂಭಗಳಲ್ಲಿ ಕೊರೆಯಬಹುದು ಎಂಬುದು ಜಾರಕಾರಣಿಗಳ ದು(ದೂ)ರಾಲೋಚನೆ ಎಂಬುದನ್ನು ನಮ್ಮ ಬ್ಯುರೋದ ವರದಿಗಾರರು ಇದುವರೆಗೆ ವರದಿ ಮಾಡಿಲ್ಲ.

ಈ ಮಧ್ಯೆ, ಬೊಗಳೂರಿನ ಏಕೈಕ ರಾಜಕಾರಣಿಯೂ ಆದ ಪ್ರಜೆಯು ಕೊನೆಯದಾಗಿ ಹೇಳಿದ ಸಂಗತಿ: "ರಾಜಕೀಯ ಪೂರ್ತಿ ಕುಲಗೆಟ್ಟಿಲ್ಲ. ಕುಲಗೆಡಿಸಲು ಇನ್ನೂ ಸ್ವಲ್ಪ ಬಾಕಿ ಇದೆ"!

ಕಾಮೆಂಟ್‌‌ ಪೋಸ್ಟ್‌ ಮಾಡಿ

2 ಕಾಮೆಂಟ್‌ಗಳು

  1. ಸತ್ಯ ಹರಿಶ್ಚಂದ್ರ ತನ್ನ ಹೆಂಡತಿಯನ್ನೆ ಮಾರಲಿಲ್ಲವೆ? ಈ ಜಾರಕಾರಣಿಗಳು ಅವನ ವಂಶಜರು. ಒಂದೇ ಫರಕು ಎಂದರೆ ಇವರು ಬೇರೆಯವರ ಹೆಂಡತಿ, ಮಕ್ಕಳನ್ನು ಮಾರುತ್ತಾರೆ.

    ಪ್ರತ್ಯುತ್ತರಅಳಿಸಿ
  2. ಸುನಾಥರೆ,
    ನಾವು ಹಳೇ ಕಾಲದಲ್ಲಿದ್ದೆವು. ನಮ್ಮ ಕಾಲದಲ್ಲಿ ಊರು, ಬೇರೆಯವರ ಆಸ್ತಿ ಮಾತ್ರ ಮಾರುತ್ತಾ ಇದ್ರು. ಈಗ ನಮಗೆ ಹೊಸ ಕಾಲದ ಅರಿವಾಗಿದೆ. ಬೇರೆಯವರ ಹೆಂಡತಿ ಮಕ್ಕಳು ಕೂಡ ಜಾರಕಾರಣಿಗಳ ಈ ಮಾರುವ ಪಟ್ಟಿಯಲ್ಲಿರುವುದು ಅವರು ಜಾರಿಗೊಳಿಸುವ ಯೋಜನೆಗಳ ಮುಂದುವರಿದ ಭಾಗ...

    ಪ್ರತ್ಯುತ್ತರಅಳಿಸಿ

ಏನಾದ್ರೂ ಹೇಳ್ರಪಾ :-D