Thursday, February 21, 2008

ಐ-ಪಿಲ್ ಕ್ರಿಕೆಟ್ ಮಾನ ಕೋತಿ ಕೋತಿಗೆ ಹರಾಜು!

(ಬೊಗಳೂರು ಅವಮಾನ ಬ್ಯುರೋದಿಂದ)
ಬೊಗಳೂರು, ಫೆ.21- ಚೆಂಡು ಮತ್ತು ದಾಂಡು ಹೊಡೆಯುತ್ತಾ, ಎಸೆಯುತ್ತಾ ಆಟವಾಡುತ್ತಿದ್ದವರ ಮಾನ ಹರಾಜು ಪ್ರಕ್ರಿಯೆ ಭರದಿಂದ ಸಾಗಿದ್ದು, ಕೋತಿಗಟ್ಟಲೆ ಕಾಸಿಗೆ ಚೆಂಡಿಗರು ಮತ್ತು ದಾಂಡಿಗರು ಮಾರಾಟವಾಗುತ್ತಿದ್ದಾರೆ ಎಂಬ ವರದಿಯಿಂದ ಆಘಾತಗೊಂಡಿರುವ ಬ್ಯುರೋ, ಅತ್ತ ಧಾವಿಸಿದಾಗ ಅದಕ್ಕೆ ಸಿಕ್ಕಿದ್ದು ಅಲ್ಲಲ್ಲಿ ಬಿದ್ದಿದ್ದ ಮೂರು ಕಾಸಿನ ಮಾನಗಳು.

ಇದರಲ್ಲಿ ಸಿಂಹೇಂದ್ರ ಮಂಗ್ ಧೋಣಿ ಹಾಗೂ ಸೈಮೊಂಡ್‌ಸ್ ಅವರು ಅತೀ ಹೆಚ್ಚು ಕೋತಿಗೆ ಹರಾಜಾಗಿದ್ದು, ಹರಾಜಾದ ಬಳಿಕ ಅಲ್ಲಿ ಉಳಿದಿದ್ದ ಮಾನವನ್ನು ಹೆಕ್ಕಿಕೊಳ್ಳಲಾಯಿತು. ಆದರೆ ಈ ಮಾನವನ್ನು ಹಿಡಿದುಕೊಳ್ಳಲು ಕೇವಲ ಒಂದು ಪುಟ್ಟ, ಬೆಂಕಿಪೆಟ್ಟಿಗೆಯ ಕಾಲು ಭಾಗದಷ್ಟು ಗಾತ್ರದ ಪೊಟ್ಟಣವಷ್ಟೇ ಸಾಕಾಗಿತ್ತು.

ಇದೀಗ ಮಾನ ಹರಾಜು ಹಾಕಿಸಿಕೊಂಡ ಕ್ರಿಕೆಟಿಗರು, ಇನ್ನು ಮುಂದೆ ಯಾವುದೇ ದೇಶದ ಬಗ್ಗೆ ಹೆಮ್ಮೆಯಿಂದ ಆಡಬೇಕಾಗಿಲ್ಲ. ಯಾಕೆಂದರೆ ಇದೀಗ ಕ್ರಿಕೆಟ್ ಜಾಗತೀಕರಣಗೊಂಡಿದೆ. ಎಲ್ಲಾ ದೇಶಗಳ ಸದಸ್ಯರು ಎಲ್ಲಾ ತಂಡಗಳಲ್ಲಿದ್ದಾರೆ. ಇನ್ನೇನಿದ್ದರೂ ಹಣವೇ ಪ್ರಧಾನವಾಗಿಬಿಡುತ್ತದೆ ಎಂಬುದನ್ನು ಪತ್ತೆ ಹಚ್ಚಲಾಗಿದೆ.

ಕ್ರಿಕೆಟಿಗರು ಇಷ್ಟೊಂದು ಭರ್ಜರಿ ಮೊತ್ತಕ್ಕೆ ಮಾನ ಹರಾಜು ಹಾಕಿಸಿಕೊಂಡ ಪ್ರಕರಣದಿಂದ ಅತೀ ಹೆಚ್ಚು ಕಳವಳಗೊಂಡವರೆಂದರೆ ಬುಕ್ಕೀಗಳು. ಈ ಹಿಂದೆ ಅಲ್ಪ ಮೊತ್ತಕ್ಕೆ ಕೈಚಾಚುತ್ತಾ, ಪಂದ್ಯವನ್ನು ಅದೇ ಕೈಯಿಂದ ಕೆಳಗೆ ಚೆಲ್ಲುತ್ತಿದ್ದ ಕ್ರಿಕೆಟಿಗರಿಗೆ, ಅಷ್ಟು ಹಣವೆಲ್ಲಾ ಯಾವುದಕ್ಕೂ ಸಾಕಾಗಾದು. ಇನ್ನೇನಿದ್ದರೂ ಕೋತಿ ಕೋತಿ ಮೊತ್ತದಲ್ಲೇ ಇರುತ್ತದೆ ಎಂದು ಅವರು ಕೈಕೈ ಹಿಸುಕಿಕೊಂಡಿದ್ದಾರೆ.

ಕ್ರಿಕೆಟಿಗರ ರೇಟು ಈ ಪ್ರಮಾಣ ಏರಿಬಿಟ್ಟಿರುವುದರಿಂದ ಮ್ಯಾಚ್ ಫಿಕ್ಸಿಂಗ್ ಮಾಡಲು ಇನ್ನು ಮುಂದೆ ಕಷ್ಟವಾದರೂ, ನಾವು ಹೇಗಾದರೂ ಮ್ಯಾನೇಜ್ ಮಾಡುತ್ತೇವೆ ಎಂದು ಹೇಳಿದ್ದಾರಾದರೂ, ಕ್ರಿಕೆಟ್ ಮ್ಯಾಚ್ ನೋಡಲು ಬೆವರು ಸುರಿಸಿ, ರಕ್ತ ಸುರಿಸಿ ದುಡಿದು ದುಡ್ಡು ತರುವ ಭಾರತದ ಬಡಜನತೆ ಮಾತ್ರ, ಪ್ರತಿಯೊಬ್ಬ ಚೆಂಡಿಗ ಎಸೆಯುವ ಚೆಂಡಿನಲ್ಲಿ ಮತ್ತು ಪ್ರತಿಯೊಬ್ಬ ದಾಂಡಿಗ ಕುಟ್ಟುವ ಬ್ಯಾಟಿನಲ್ಲೂ ಹಣದ ಚಿತ್ರವನ್ನೇ ಕಾಣುತ್ತಿದ್ದಾನೆ ಎಂದು ನಮ್ಮ ಭವಿಷ್ಯ ಬ್ಯುರೋದ ಮಂದಿ ಒದರಿದ್ದಾರೆ.

ಈ ಹರಾಜುಕೋರರ ದಂಧೆಯಿಂದಾಗಿ ಐ-ಪಿಲ್ ಸಾಕಷ್ಟು ಶ್ರೀಮಂತವಾಗಿದೆ ಎಂಬುದು ಸಾಬೀತಾಗಿದ್ದು, ಕ್ರಿಕೆಟಿಗರ ಬಳಿ ಬೇಕಾಬಿಟ್ಟಿ ಖರ್ಚು ಮಾಡಲು ಸಿಕ್ಕಾಪಟ್ಟೆ ಹಣವಿರುವುದರಿಂದ ಐಪಿಲ್ ಬೇಡಿಕೆಯೂ ಹೆಚ್ಚಾಗಲಿದೆ ಎಂದು ನಿರೀಕ್ಷಿಸಲಾಗಿದೆ.

6 comments:

 1. ಕೊಟ್ಟವನು ಕೋತಿ, ಇಸಕೊಂಡವನು ಈರಭದ್ರ.

  ReplyDelete
 2. ಅಸತ್ಯಿಗಳೇ,

  ಇದು ಯಾಕೋ ಸರಿಯಿಲ್ಲಾ..
  ಇರದ ಮಾನವನ್ನು ಅದು ಹೇಗೆ ಹರಾಜು ಹಾಕಿದರು :)

  ReplyDelete
 3. ಫುಟ್ ಬಾಲ್ ಮತ್ತು ರಗ್ಬಿ ಆಟಗಾರರ ಮಾನಕ್ಕೆ ಹೋಲಿಸಿದರೆ, ಈ ಕ್ರಿಕೆಟಿಗರ " ಮಾನ" ಹರಾಜಾಗಿರುವುದು ಕಡಿಮೆಯೇ ;-)

  ReplyDelete
 4. ಸುನಾಥರೆ,
  ಕೋತಿ ಕೋತಿ ಕೊಟ್ಟು ಇಸಕೊಂಡೋನೇ ಕೋತಿ ಆಗದಿದ್ದರೆ ಅಷ್ಟೇ ಸಾಕು....!

  ReplyDelete
 5. ಶಿವ್,

  ನಿಮ್ಮ ಆತಂಕ ಸರಿ. ಬಹುಶಃ ಕ್ರಿಕೆಟ್ ಅಭಿಮಾನಿಗಳ ಮಾನವನ್ನು ಕಡ ತೆಗೆದುಕೊಂಡಿರಬಹುದೇ?

  ReplyDelete
 6. ನೀಲಗಿರಿಯವರೆ,
  ಒಂದು ಸಂಶಯ. ಹರಾಜಾಗಿರೋ ಮಾನ ಕಡಿಮೆಯಾಯಿತೇ ಅಥವಾ ಮಾನ ಹರಾಜಾಗಿದ್ದು ಕಡಿಮೆಯಾಯಿತೇ?

  ReplyDelete

ನಿಮ್ಮ ಸಲಹೆ/ಅಭಿಪ್ರಾಯ ತಿಳಿಸಿ..

ಎಂಜಿನ್ ಇಲ್ಲದ ರೈಲು: ಬ್ರೇಕಿಂಗ್ ನ್ಯೂಸ್ ಅಲ್ಲವೆಂದ ಬೊ.ರ.

[ಬೊಗಳೂರು ಪಟ್ಟೆ-ರಹಿತ ರೈಲು ಬ್ಯುರೋ] ಬೊಗಳೂರು: ಆಫ್‌ಲೈನ್ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯೊಂದು ಆನ್‌ಲೈನ್ ಸಂಪಾದಕರ ಕಣ್ಣು ಕುಕ್ಕಿದ್ದು, ಎಂಜಿನ್ ಇಲ್ಲದೆ...