Monday, March 31, 2008

ಬೊಗಳೆ ಭಾಷಾಂತರವೂ ಭಾಷಾಅವಾಂತರವೂ...

(ಬೊಗಳೂರು ಸ್ವಂತ ತನಿಖಾ ಬ್ಯುರೋದಿಂದ)
ಬೊಗಳೂರು, ಮಾ.31- ಬೊಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಏಕೈಕ ಸಿಬ್ಬಂದಿಯಲ್ಲಿ ಒಬ್ಬರು, ಸೊಂಪಾದಕರ ಕಾಟ ತಡೆಯಲಾರದೆ ಬೇರೆ ಕೆಲಸಕ್ಕೆ ಟ್ರೈ ಮಾಡಿದ್ದು, ಅವರು ಅಲ್ಲಿ ಇಂಟರ್ವ್ಯೂಗೆ ಹೋದಾಗ ಭಾಷಾಂತರಕ್ಕೆಂದು ಕೊಟ್ಟ ಸುದ್ದಿಯನ್ನು "ಭಾಷಾವಾಂತರ" ಮಾಡಿದ್ದನ್ನು ನಮ್ಮ ಬ್ಯುರೋ ಪತ್ತೆ ಹಚ್ಚಿದೆ.

ಬೊಗಳೂರು ಬ್ಯುರೋಗೆ ಕೈಕೊಡುವ ಪ್ರಯತ್ನವನ್ನು ನಮ್ಮ ಬ್ಯುರೋ ಬಯಲಿಗೆಳೆದು, ಬೀದಿ ರಂಪ ಮಾಡಲು ನಿರ್ಧರಿಸಿರುವ ಪ್ರಯತ್ನವಾಗಿ, ನಮ್ಮ ಪರಾರಿಯಾಗಲು ಸಿದ್ಧವಾದ ಸಿಬ್ಬಂದಿಯ ಭಾಷಾವಾಂತರದ ಪ್ರತಿಯನ್ನು ಇಂಗ್ಲಿಷ್ ಮೂಲಪ್ರತಿಯೊಂದಿಗೆ ಇಲ್ಲಿ ನೀಡಲಾಗಿದೆ:

BJP plans stir against price rise, farmer suicides
ಬೆಲೆ ಅಕ್ಕಿ ವಿರುದ್ಧ ಕದಡಲು ಬಿಜೆಪಿ ಯೋಚನೆ, ರೈತ ಆತ್ಮಹತ್ಯೆ

New Delhi, Mar 27 (PTI) Aiming to exploit price rise and agrarian crisis to the hilt, BJP today announced a countrywide agitation to highlight the "failure" of the UPA Government to check farmer suicides and rising inflation.
ನವದೆಹಲಿ, ಮಾರ್ 27 (ಪಿಟಿ!) ಬೆಲೆಯುಳ್ಳ ಅಕ್ಕಿ ಮತ್ತು ಕೃಷಿಕರ ಕೊರತೆಯನ್ನು ಶೋಷಣೆ ಮಾಡುವ ಗುರಿಯೊಂದಿಗೆ, ರೈತ ಆತ್ಮಹತ್ಯೆಗಳನ್ನು ಮತ್ತು ಅಕ್ಕಿಯಾಗುತ್ತಿರುವ ಹಣದುಬ್ಬರವನ್ನು ಪರೀಕ್ಷೆ ಮಾಡಲು ಉಪ ಸರಕಾರದ ವೈಫಲ್ಯವನ್ನು ಎತ್ತರಲೈಟು ಹಾಕಲು ಗುರಿ ಇರಿಸಿ, ಬಿಜೆಪಿಯು ಇಂದು ಕಂಟ್ರಿ ಅಗಲದಲ್ಲಿ ಚಳವಳಿ ಮಾಡುವುದಾಗಿ ಘೋಷಣೆ ಮಾಡಿತು.

The main Opposition party will on April seven launch a week-long protest against the Congress-led government on the issue of price rise and a two-month long campaign in a bid to pick holes in the loan waiver package.
ಮುಖ್ಯವಾಗಿ ವಿರೋಧಿಸುವ ಪಕ್ಷವು ಏಪ್ರಿಲ್ 7ರಂದು ವಾರದಷ್ಟು ಉದ್ದವಿರುವ ಪ್ರತಿಭಟನೆಯನ್ನು ಕಾಂಗ್ರೆಸ್-ಸೀಸ ಸರಕಾರದ ವಿರುದ್ಧ ಆಕಾಶಕ್ಕೆ ಹಾರಿಬಿಡಲಿದೆ. ಇದು ಬೆಲೆ ಅಕ್ಕಿ ವಿವಾದ ಮತ್ತು ಎರಡು ತಿಂಗಳು ಉದ್ದದ ಚುನಾವಣಾ ಪ್ರಚಾರವನ್ನು ಸಾಲ ನೇಕಾರಿಕೆಯ ಪೊಟ್ಟಣದಲ್ಲಿರುವ ರಂಧ್ರಗಳನ್ನು ಕೈಬೆರಳಲ್ಲೆತ್ತಲು ಬಿಡ್ ಸಲ್ಲಿಸಲು ನಡೆಯಲಿದೆ.

"After the so-called pro-poor budget of the UPA government, prices of essential commodities are skyrocketing. The Government has totally failed to control and check price rise," senior BJP leader Anant Kumar said.
ಆಫ್ಟರ್ ದ ಎಂದು ಕರೆಯಲಾಗುವ ಉಪ ಸರಕಾರದ ಪ್ರಾ-ಪರ್ ಬಡ್‌ಜೆಟ್, ಅವಶ್ಯಕ ಕಮೋಡ್‌ಗಳನ್ನು ಆಕಾಶದಲ್ಲಿರುವ ರಾಕೆಟ್‌ಗೆ ಕಳುಹಿಸಿವೆ. ಸರಕಾರವು ಬೆಲೆ ಅಕ್ಕಿಯನ್ನು ಪರೀಕ್ಷೆ ಮಾಡಲು ಮತ್ತು ಕಂಟ್ರೋಲಿನಲ್ಲಿ ಫೈಲ್ (ನಪಾಸು) ಆಗಿದೆ ಎಂದು ದೊಡ್ಡ ಬಿಜೆಪಿ ಲೋಡರ್ ಅಂತ ಕೋ ಮಾರ್ ಹೇಳಿದರು.

The saffron party is planning to make price rise a major campaign issue alongwith distress in the agrarian sector and internal security situation for coming Assembly elections to corner the Congress.
ಕೇಸರಿ ಪಕ್ಷವು ಅಕ್ಕಿಯ ಬೆಲೆ ಏರಿಸಲು ಯೋಜನೆ ಮಾಡುತ್ತಿದೆ, ಇದನ್ನು ದೊಡ್ಡ ಚುನಾವಣಾ ಪ್ರಚಾರದ ವಿವಾದವನ್ನಾಗಿ ಅಗ್ರಗಣ್ಯ ಸೆಕ್ಟರಿನಲ್ಲಿ ಖಿನ್ನತೆಯೊಂದಿಗೆ ಮಾಡಲಾಗುತ್ತದೆ ಮತ್ತು ದೇಹದೊಳಗಿನ ಭದ್ರತಾ ಜವಾನರ ಪರಿಸ್ಥಿತಿಯನ್ನು ಅಸೆಂಬ್ಲಿಯಲ್ಲಿ ಮುಂದೆ ನಡೆಯುವ ಚುನಾವಣೆಗಳಲ್ಲಿ ಕಾಂಗ್ರೆಸನ್ನು ಮೂಲೆಯಲ್ಲಿ ಕೂರಿಸಲು ಬಳಸುತ್ತದೆ.

It is also firming up a strategy to counter the populist loan waiver package announced by the Government by spreading the message that the scheme does not include majority of the fೇarmers facing distress.
ಇದಲ್ಲದೆ, ಅದು ಯುದ್ಧತಂತ್ರದ ಕೌಂಟರೊಂದನ್ನು ಜನಮರುಳು ಸಾಲವನ್ನು ನೇಕಾರರ ಪೊಟ್ಟಣಕ್ಕೆ ಘೋಷಿಸಿರುವ ಸರಕಾರದ ಘೋಷಣೆಯನ್ನು ಸಾಂಕ್ರಾಮಿಕವಾಗಿ ಮಸಾಜು ಹರಡುವ ನಿಧಿಯೊಂದನ್ನು ತೆರೆಯಲಾಗುತ್ತದೆ ಮತ್ತು ಅದರಲ್ಲಿ ಖಿನ್ನತೆಯತ್ತ ತಮ್ಮ ಮುಖವನ್ನು ತಿರುಗಿಸಿರುವ ಬಹುಮತದ ಮಾಜಿಗಳು ಒಳಗೊಂಡಿರುವುದಿಲ್ಲ.

The party said it will organise kisan adalats (farmer courts) across the country for two months from April seven during which party leaders and workers will interact with the farming community.
ಪಾರ್ಟಿ ಹೇಳಿತು ಅದು ಸಂಘಟನೆ ಕಿಸ್ ಅದಾಲತುಗಳನ್ನು (ಹಿಂದಿನವರ ಗದ್ದೆಗಳು) ದೇಶದ ಅಡ್ಡಾದಿಡ್ಡಿ ಎರಡು ತಿಂಗಳುಗಳು ಏಪ್ರಿಲ್ ಏಳರಿಂದ ಯಾವ ಪಕ್ಷದ ನಾಯಕರು ಮತ್ತು ನೌಕರರು ಗದ್ದೆ ಕೆಲಸದ ಕೋಮುವಾದದೊಂದಿಗೆ ಇಂಟರ್ನೆಟ್‌ನಲ್ಲಿ ತೊಡಗಿರುವರು ಎಂದು.

"We will try to get their feedback on the loan waiver scheme, irrigation facilities, power problem, availability of fertiliser and pesticides," Kumar said. The agitation plan was finalised by a meeting of BJP General Secretaries here.
ಅವರ ಬೆನ್ನಿನಿಂದ ಪಶು ಆಹಾರಗಳನ್ನು ತೆಗೆದು ಸಾಲ ನೇಕಾರರ ನಿಧಿಗೆ ಹಾಕಿ, ನೀರಾವರಿ ಸನ್ಮಾನಗಳು, ಅಧಿಕಾರದ ಸಮಸ್ಯೆ, ಗೊಬ್ಬರ ಮತ್ತು ಕೀಟನಾಶಕದ ಲಭ್ಯತೆಯನ್ನು ಕುಮಾರ್ ಸೆಡ್ ಎಂಬವರಿಗೆ ನೀಡಲು ನಿರ್ಧರಿಸಲಾಗಿದೆ. ಅಜ್ಜಿಸ್ಟೇಶನ್ ಯೋಜನೆಯ ಫೈನಲನ್ನು ಬಿಜೆಪಿಯ ಸಾಮಾನ್ಯವಾಗಿ ಸ್ರವಿಸುವವರನ್ನು ಜೋಡಿಸಿ ಏರ್ಪಡಿಸಲಾಗುತ್ತದೆ.

Besides, the party will organise functions to commemorate the death anniversary of Mangal Pandey and to mark the 150th anniversary of the 1857 uprising. PTI
ಅಕ್ಕಪಕ್ಕದಲ್ಲಿ, ಪಾರ್ಟಿಯು ಮಂಗಲ ಪಾಂಡೆಯ ಡೆತ್‌ಗೆ ಕಾರಣರಾದವರ ವಾರ್ಷಿಕ ತಿಥಿಯನ್ನು ಕಾಮನ್ ಸೆನ್ಸ್‌ನಲ್ಲಿ ಕಾರ್ಯಕ್ರಮಗಳನ್ನು ಏರ್ಪಡಿಸುವುದು ಮತ್ತು 1857ರ ಮೇಲೇರುವ ಅಕ್ಕಿಯ 150ನೇ ವರ್ಷಾವಧಿ ಉತ್ಸವವನ್ನು ಗುರುತು ಮಾಡಲಾಗುತ್ತದೆ.

ಕೊನೆಗೆ ವಿಚಾರಿಸಿದಾಗ, ನಮಗೆ ಡಿಕ್-ಶ-ನರಿಯನ್ನು ಕೊಡಲೇ ಇಲ್ಲ ಎಂಬುದು ಈ ಭಾಷಾ-ಅವಾಂತರ ಅಭ್ಯರ್ಥಿ ಸ್ಪಷ್ಟನೆ ನೀಡಿರುವುದನ್ನೂ ಪತ್ತೆ ಹಚ್ಚಲಾಗಿದೆ.

ನಾಳೆ ಏಪ್ರಿಲ್ 1. ಸೊಂಪಾದಕರ ಜನ್ಮದಿನ ಅಂತ ಶುಭ ಹಾರೈಸಲು ಸಿದ್ಧವಾಗಿರುವವರನ್ನೆಲ್ಲಾ ಫೂಲ್‌ಗಳಾಗಿಸಲು ವಿಶೇಷ ವರದ್ದಿಯೊಂದನ್ನು ನೀಡಲಾಗುತ್ತದೆ/ನೀಡಲಾಗುವುದಿಲ್ಲ. ನಿಮ್ಮ ಪ್ರತಿಗಳನ್ನು ಕಾದಿರಿಸಿ, ಫೂಲ್‌ಗಳಾಗುವ ಅಮೂಲ್ಯ ಅವಕಾಶ ತಪ್ಪಿಸಿಕೊಳ್ಳಬೇಡಿ.

Friday, March 28, 2008

ಗಜ ಫ್ಯಾಶನ್ ಶೋಗೆ 'ಅಂಕುಶ': ಇರುವೆ ಕೈವಾಡ ಶಂಕೆ

(ಬೊಗಳೂರು ಫ್ಯಾಶನ್-ಪ್ಯಾಶನ್ ಬ್ಯುರೋದಿಂದ)
ಬೊಗಳೂರು, ಮಾ.28- ಆನೆಗಳ ಫ್ಯಾಶನ್ ಪೆರೇಡ್‌ಗೆ ನಿಷೇಧ ವಿಧಿಸಿರುವುದರಿಂದಾಗಿ ಆನೆಗಳು, ಅದರಲ್ಲೂ ಧಢೂತಿ ಆನೆಗಳು ತೀವ್ರ ಚಿಂತೆಗೀಡಾಗಿವೆ.

ಈ ಬಗ್ಗೆ, ಯಾವತ್ತೂ ಕತ್ತೆ, ನಾಯಿ, ಮಂಗಗಳಂತೆಯೇ ಅಲ್ಲದಿದ್ದರೂ ಅವುಗಳ ಪರವಾಗಿಯೇ ವರ್ತಿಸುತ್ತಿರುವ ಬೊಗಳೆ-ರಗಳೆ ಬ್ಯುರೋವನ್ನು ಸಂಪರ್ಕಿಸಿದ ಗಜಸಮೂಹ, ಇದು ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವ ಸಂಚು ಎಂದು ದೂರು ನೀಡಿವೆ.

ನಾವು ಸ್ಲಿಮ್ ಆಗುವುದಕ್ಕೆ ಸಾಕಷ್ಟು ಕಷ್ಟಪಡುತ್ತೇವೆ. ಹೆಚ್ಚಾಗಿ ಜಲಕ್ರೀಡೆ ಆಡುತ್ತಾ ಇರುತ್ತೇವೆ. ನೀರೆಯರ ಮೈಮಾಟ ಚೆನ್ನಾಗಿರಬೇಕೆಂದರೆ ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ನೀರು ಬೇಕು ಅಂತ ತಿಳಿದವರು ಹೇಳಿದ ಪ್ರಕಾರವೇ ನಾವು ನೀರಿನಲ್ಲೇ ಜಳಕ ಮಾಡಿ ಪುಳಕಗೊಳ್ಳುತ್ತಿದ್ದೆವು. ಅಷ್ಟು ನೀರು ಕುಡಿದ ಪರಿಣಾಮವಾಗಿ ನಾವು ಸ್ಲಿಮ್ ಆದದ್ದನ್ನು ತೋರಿಸಲೋಸುಗ ಈ ಫ್ಯಾಶನ್ ಶೋದಲ್ಲಿ ಭಾಗವಹಿಸುವ ಅವಕಾಶವಿತ್ತು. ಅದೀಗ ಇಲ್ಲದಂತಾಗಿದೆ ಎಂಬುದು ಅವುಗಳ ಅಳಲು.

ತಮ್ಮ ಗಜಗಾಂಭೀರ್ಯದ ಬೆಕ್ಕಿನ ನಡಿಗೆಯನ್ನು ನಿಲ್ಲಿಸುವಲ್ಲಿ ತಮ್ಮ ಬದ್ಧವೈರಿಯಾದ ಇರುವೆಗಳ ಕೈವಾಡವಿದೆ ಎಂದು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ ಧಢೂತಿ ಆನೆಗಳು, ನಾವು ಮಾಡಿದಂತೆ ವ್ಯಾಯಾಮ ಮಾಡಲಾಗದಿರುವುದು ಮತ್ತು ನಮ್ಮಷ್ಟು ಪ್ರಸಿದ್ಧಿ ಪಡೆಯದೇ ಇರುವುದು ಇರುವೆಗಳಿಗೆ ನಮ್ಮ ಮೇಲೆ ಇರುವ ಹೊಟ್ಟೆಕಿಚ್ಚು ಎಂದು ಆಪಾದಿಸಿವೆ.

ಮಾನವರಂತೆ ನಾವೇನೂ ಮೈಚಳಿ ಬಿಟ್ಟು ಬೆತ್ತಲೆಯಾಗಿ ಫ್ಯಾಶನ್ ಶೋದಲ್ಲಿ ಪಾಲ್ಗೊಳ್ಳುವುದಿಲ್ಲ ಎಂಬ ಮಾತನ್ನೂ ಗಜರಾಜ್ ಅವರು ಇದೇ ಸಂದರ್ಭದಲ್ಲಿ ಅದೆಲ್ಲಿಂದಲೋ ಹೆಕ್ಕಿ ತಂದು ಸೇರಿಸಿದ್ದಾರೆ.

ಫ್ಯಾಶನ್ ಶೋಗಳು ಮೈಮಾಟ ಪ್ರದರ್ಶಿಸುವುದಕ್ಕೇ ಇರುವುದಾದರೂ, ನಾವು ಆ ರೀತಿ ಮಾಡುತ್ತಿಲ್ಲ. ನಾವು ದಿನನಿತ್ಯ ಮಾಡುವ ವ್ಯಾಯಾಮ, ಡಯಟ್ ಇತ್ಯಾದಿಗಳಿಂದ ನಾವೆಷ್ಟು ಸ್ಲಿಮ್ ಆಗಿದ್ದೇವೆ, ಸಾಕಷ್ಟು ನೀರನ್ನು ನಮ್ಮ ಸೊಂಡಿಲಿನಿಂದ ಮೈಗೆ ಪಂಪ್ ಮಾಡಿಕೊಳ್ಳುವುದೇ ನಮ್ಮ ಸೌಂದರ್ಯದ ಗುಟ್ಟು ಎಂಬುದನ್ನು ಜನತೆಗೆ ತೋರಿಸೋದಷ್ಟೇ ನಮ್ಮ ಇಂಗಿತ ಎಂದವರು ಹೇಳಿದ್ದಾರೆ.

ಆದರೆ ಇರುವೆ ಸಂಘದ ಅಧ್ಯಕ್ಷರು ಗಜರಾಜ್ ಅವರ ಈ ಮಾತನ್ನು ಮಾತ್ರವೇ ಖಡಾಖಂಡಿತವಾಗಿ ತಳ್ಳಿ ಹಾಕಿದ್ದಾರೆ. ನಮ್ಮ ಸಮೂಹವನ್ನು ರೇಗಿಸಲೆಂದೇ ಗಜರಾಜ್ ಅವರು ನೀರಿನಲ್ಲಿ ಮುಳುಗುವ ಮಾತನ್ನು ಆಡಿದ್ದಾರೆ ಎಂಬುದು ಅವರ ಆರೋಪ.

ಈ ಬಗ್ಗೆ ಗೊಂದಲದಲ್ಲಿ ಸಿಲುಕಿರುವ ಬೊಗಳೆ ಬ್ಯುರೋ, ತನಿಖೆ ನಡೆಸಲು ಸಿದ್ಧತೆ ನಡೆಸುತ್ತಾ ನಿದ್ರಿಸಿದೆ.

Wednesday, March 26, 2008

ಬೀದಿಪಾಲಾದವರ ಕಲ್ಯಾಣಕ್ಕಾಗಿ ರಸ್ತೆ ಅಗಲೀಕರಣ!

(ಬೊಗಳೂರು ಬೀದಿಪಾಲು ಬ್ಯುರೋದಿಂದ)
ಬೊಗಳೂರು, ಮಾ. 26- ದೇಶದಲ್ಲಿರುವ ರಸ್ತೆಗಳ ಅಗಲೀಕರಣಕ್ಕೆ ತೀವ್ರ ಸಿದ್ಧತೆ ನಡೆಯುತ್ತಿದ್ದು, ಬೀದಿ ಬೀದಿಯನ್ನು ಅಗಲಗೊಳಿಸಲು ಆದೇಶ ನೀಡಲಾಗುತ್ತಿದೆ. ಇದಕ್ಕೆ ಕಾರಣವೆಂದರೆ ಇಲ್ಲಿ ಪ್ರಕಟವಾಗಿರುವ ಈ ವರದಿ.

ವಿಶ್ವಾದ್ಯಂತ 10 ಕೋಟಿ ಮಕ್ಕಳು ಬೀದಿಯಲ್ಲಿರುತ್ತಾರೆ ಎಂದು ಯುನಿಸೆಫ್ ವರದಿ ಮಾಡಿರುವುದರಿಂದ ಎಚ್ಚೆತ್ತುಕೊಂಡಿರುವ ಸರಕಾರ, ಈ ಮಕ್ಕಳಿಗೆ ನಿಲ್ಲಲು ಜಾಗ, ನಿಂತು ನಿಂತು ಮತ್ತು ಬೀದಿ ಸುತ್ತಿ ತಿರುಗಾಡಿ ಸುಸ್ತಾದರೆ ಮಲಗಿಕೊಳ್ಳಲು ಜಾಗದ ವ್ಯವಸ್ಥೆ ಮಾಡುವುದಕ್ಕಾಗಿ ಇರುವ ಬೀದಿಗಳನ್ನೆಲ್ಲಾ ಹೆದ್ದಾರಿಗಳಷ್ಟು ಅಗಲ ಮಾಡುವ ಪಣ ತೊಟ್ಟಿದೆ.

ಕೆಲವು ಬೆಳೆದ ಮಕ್ಕಳು ಮನೆಯಿಂದ ಶಾಲೆಗೆ ಹೊರಡುವ ಮಧ್ಯದಲ್ಲಿ ಬೀದಿಯಲ್ಲೇ ತಿರುಗಾಡುತ್ತಿರುತ್ತಾರೆ. ಈ ತಿರುಗಾಟದ ಅಂಕಿ ಅಂಶಗಳು ಪರಮಾವಧಿ ತಲುಪುತ್ತಿರುವುದು ಕಾಲೇಜು ಸುತ್ತಮುತ್ತಲಿನ ಬೀದಿಗಳಲ್ಲಿ.

ಹೀಗೆ ಬೀದಿ ಪಾಲಾಗುವ ದೊಡ್ಡ ಮಕ್ಕಳು ಕೆಲವೆಡೆ ಬೀದಿ ಕಾಮಣ್ಣರೆಂದೂ, (ಶಾಲೆಯ ಮೆಟ್ಟಿಲು ಹತ್ತಲು ಕಷ್ಟಪಡುವವರು) ಹಲವೆಡೆ ಬಾಲ ಕಾಮುಕರೆಂದೂ, ಮತ್ತೆ ಕೆಲವೆಡೆ ಕಾಲೇಜು ವಿದ್ಯಾರ್ಥಿಗಳೆಂದೂ, ಇನ್ನು ಕೆಲವೆಡೆ ಎಂಬಿಬಿಎಸ್ (ಮನೆ ಬಿಟ್ಟು ಬೀದಿ ಸುತ್ತುವಿಕೆ) ಅಂತಲೂ ವಿಭಿನ್ನ ನಾಮಧೇಯಗಳನ್ನು ಹೊಂದಿರುತ್ತಿದ್ದಾರೆ.

ಕೆಲವರು ಬೀದಿಯಲ್ಲೇ ಬಿದ್ದಿರುತ್ತಾರೆ ಯಾಕೆ ಎಂಬುದನ್ನೂ ಪತ್ತೆ ಹಚ್ಚಲಾಗಿದೆ. ಮನೆಯಲ್ಲಿ ಹಾಲು ಕುಡಿಯುವುದು ಕಷ್ಟವಾದವರು ಪಕ್ಕದ ಅಂಗಡಿಗೆ ತೆರಳಿ ಆಲ್ಕೋಹಾಲು ಸೇವಿಸಿ, ರಾತ್ರಿ ಪೂರ್ತಿ ಯಾಪಾಟಿ ಪಾರ್ಟಿಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆಂದರೆ, ಬೆಳಗ್ಗೆದ್ದು ನೋಡುವಾಗ ಈ ಆಲ್ಕೋಹಾಲು ಸೇವಿಸಿದವರು ಬೀದಿಪಾಲು ಆಗಿರುತ್ತಾರೆ.

ಹೀಗೆ, ಬೊಗಳೂರಿನ ಬೀದಿಗೆ ಬಿದ್ದ ದೊಡ್ಡ ದೊಡ್ಡ ಮಕ್ಕಳುಗಳನ್ನು ತಟ್ಟಿಸಿ, ಮುಖಕ್ಕೆ ನೀರು ಹಾಕಿ, ಎದ್ದೂ ಬಿದ್ದು ಎಬ್ಬಿಸಿ ಮಾತನಾಡಿಸಿದಾಗ, ಅವರದು ಒಂದೇ ಮಾತು:

"ಸ್ವಾಮೀ... ನಮ್ಮಂತಹ ಮಕ್ಕಳನ್ನು ಶೋಷಿಸಲಾಗುತ್ತಿದೆ. ನಮಗೆ ಮದಿರೆ ಕುಡಿಯಲು, ಅಮಲು ಪದಾರ್ಥ ಸೇವಿಸಲು ಯಾರು ಕೂಡ ಬೆಂಬಲ ನೀಡುತ್ತಿಲ್ಲ. ಆದರೂ ಅದು ಹೇಗೋ ಜೀವಿಸುತ್ತಿದ್ದೇವೆ. ನಮ್ಮಂತಹ ಬೀದಿ ಮಕ್ಕಳ ಶೋಷಣೆ ನಿಲ್ಲಿಸಬೇಕು. ಆಗಾಗ್ಗೆ ನಮಗೆ ಕಲ್ಯಾಣ ಮಾಡುತ್ತಿರಬೇಕು"!!

Monday, March 24, 2008

ಕ್ಷಿಪಣಿ ಪರೀಕ್ಷೆಗಾಗಿ ಆಹಾರಧಾನ್ಯ ಬೆಲೆ ಏರಿಕೆ

(ಈ ಸುದ್ದಿ ನಮ್ಮಲ್ಲಿ ಮಾತ್ರ)
ಬೊಗಳೂರು, ಮಾ.25- ಜನಸಾಮಾನ್ಯನಿಗೂ atleast ದನ ಸಾಮಾನ್ಯರಂತೆ ಬದುಕಲು ಅಗತ್ಯವಿರುವ ಆಹಾರ ಧಾನ್ಯಗಳ ಬೆಲೆ ಏರಿಕೆಗೆ ಕೇಂದ್ರ ಸರಕಾರವು ಕೈಗೊಳ್ಳುತ್ತಿರುವ ಕ್ರಮದ ಹಿಂದಿನ ರಹಸ್ಯ ಬಯಲಾಗಿದೆ.

ಇದು ಬಯಲಾಗಿದ್ದು, ನಮ್ಮ ರದ್ದಿಗಾರರು ತಲೆಮರೆಸಿಕೊಂಡು ನಿಧಾನಮಂತ್ರಿಯನ್ನು ಸಂದರ್ಶಿಸಿದ್ದರಿಂದಾಗಿ. ತರಕಾರಿ, ಅನ್ನಾಹಾರ ಬೆಲೆ ಏರಿಕೆ ಬಗ್ಗೆ ಆರಂಭಿಕ ಮಾಹಿತಿ ಕಲೆ ಹಾಕಿಯೇ ನಮ್ಮ ಒದರಿಗಾರರು ನಿಧಾನಿಕಚೇರಿಗೆ ನುಗ್ಗಿದ್ದರು.

ಆಗ ತಿಳಿದುಬಂದ ಅಂಶ: ಪೆಟ್ರೋಲ್, ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳದಂತಾಗಲು ಅವುಗಳ ಬೆಲೆ ಏರಿಕೆ ಮಾಡಲಾಗಿದೆ. ಅಂತೆಯೇ ನಮ್ಮ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳಿಗಾಗಿ ಕೂಡಿಡುವ ಸಲುವಾಗಿಯೇ ಆಹಾರ ಪದಾರ್ಥಗಳನ್ನು ಕೂಡ ಕೈಗೆಟುಕದಷ್ಟು ಮೇಲಕ್ಕೆ ಇರಿಸಲಾಗಿದೆ. ರೈತರು ವಿಷ ಕುಡಿದು ಸಾಯದಂತಾಗಲು, ಔಷಧಗಳ ಬೆಲೆಯನ್ನೂ ಏರಿಸಲಾಗಿದೆ. ಹೆಚ್ಚು ಸಕ್ಕರೆ, ಬೆಲ್ಲ ಸೇವಿಸಿದರೆ ಸಿಹಿಮೂತ್ರ ಹೆಚ್ಚು ಪ್ರವಹಿಸಿ ಆರೋಗ್ಯಕ್ಕೆ ಹಾನಿಯಾಗುವ ಸಾಧ್ಯತೆಗಳಿರುವುದರಿಂದ ಅವುಗಳನ್ನು ಮೂಸಿಯೂ ನೋಡದಂತಾಗಲು ಬೆಲೆಗಳನ್ನು ಆಗಸಕ್ಕೆ ಏರಿಸಲಾಗಿದೆ ಎಂದು ನಿಧಾನಮಂತ್ರಿ ಕಚೇರಿ ಮೂಲಗಳು ಸ್ಪಷ್ಟಪಡಿಸಿವೆ.

ಈ ಬಗ್ಗೆ ನಿಧಾನಮಂತ್ರಿಯವರನ್ನು ಸಂದರ್ಶನಕ್ಕೊಳಪಡಿಸಿದಾಗ ಅವರು ಮೊದಲಿಗೆ ಬೆದರುತ್ತಾ ನಿರುತ್ತರರಾದರೂ, ಹಣಗೊಬ್ಬರ ದರ ಹಣಗೊಬ್ಬರ ದರ ಎಂಬೆರಡು ಶಬ್ದಗಳು ಎರಡು ಬಾರಿ ತಡಬಡಿಸುತ್ತಾ ಅಚಾನಕ್ ಆಗಿ ಉದುರಿದರೂ, ಆ ಬಳಿಕ ಮೇಡಂ ಕಡೆಗೆ ದಯನೀಯವಾಗಿ ನೋಡಿದಾಗ, ಆಕೆ ಕ್ಯಾಕರಿಸಿ ನೋಡುತ್ತಲೇ... ಒಲ್ಲದ ಅನುಮತಿಯ ಸಂಜ್ಞೆ ನೀಡಿದಾಗ, ಕೊನೆಗೂ ಅವರು ವರದ್ದಿಗಾರರೆದುರು ಸ್ವಲ್ಪವೇ ಬಾಯಿ ತೆರೆಯುವಲ್ಲಿ ಸಫಲರಾದರು ಮತ್ತು ಪೂರ್ತಿ ಬಾಯಿ ತೆರೆಯಲು ವಿಫಲರೂ ಆದರು ಎಂಬುದನ್ನು ನಮ್ಮ ಪ್ರತಿನಿಧಿ ಪತ್ತೆ ಹಚ್ಚಿ ವರದಿ ಮಾಡಿದ್ದಾರೆ.

ಇಷ್ಟು ವರ್ಷಗಳಿಂದ ಆಳ್ವಿಕೆ ನಡೆಸುತ್ತಿದ್ದೇವೆ, ಪ್ರತಿವರ್ಷ ಬೆಲೆ ಏರಿಸುತ್ತಲೇ ಇದ್ದೇವೆ. ಯಾರು ಕೂಡ ಬೆಲೆ ಏರಿಕೆಯನ್ನು ಹೊಗಳಲಿಲ್ಲ. ಎಡಚರು ಕೂಡ ಬೆಂಬಲ ಹಿಂತೆಗೆತ... ಹಿಂತೆಗೆತ... ಹಿಂತೆಗೆ... ಹಿಂತೆ... ಹಿಂ...ಹ್... ಎನ್ನುತ್ತಾ ತಮ್ಮ ಸದ್ದಡಗಿಸಿಕೊಳ್ಳುತ್ತಿದ್ದಾರೆ. ಆದರೂ ನಾವು ಮಾಡೋ ಈ ಸಾಧನೆಯನ್ನು ಯಾರೂ ಗುರುತಿಸುತ್ತಿಲ್ಲ ಎಂದು ತತ್ತರಿಸುತ್ತಲೇ ಉತ್ತರಿಸಿದ ಅವರು, ವಿಜ್ಞಾನ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಭಾರತ ಎಷ್ಟು ಮುಂದುವರಿಯುತ್ತಿದೆ ಅಂತ ತಿಳಿದುಕೊಳ್ಳುವುದಕ್ಕಾಗಿಯೇ ನಾವಿದನ್ನು ಮಾಡುತ್ತಿದ್ದೇವೆ ಎಂದು ಸ್ಪಷ್ಟೀಕರಿಸಿದರು.

'ಹೇಗೆ' ಎಂದು ಮೂಗಿಗೆ ಬೆರಳಿಟ್ಟುಕೊಂಡೇ ಪ್ರಶ್ನಿಸಿದ ರದ್ದಿಗಾರರಿಗೆ ದೊರೆತ ಉತ್ತರ ಹೀಗಿತ್ತು:

'ನಾವು ಅಗ್ನಿ, ಪೃಥ್ವಿ ಮುಂತಾದ ಕ್ಷಿಪಣಿಗಳನ್ನು ಹಾಗೂ ಇನ್ಸಾಟ್ ಜಾತಿಯ ಉಪದ್ರವಗಳನ್ನು ಆಗಸಕ್ಕೆ ಹಾರಿಸಿ ಪ್ರಯೋಗ ಪರೀಕ್ಷೆ ಮಾಡಬೇಕಾಗುತ್ತದೆ. ಹೀಗಾಗಿ ದೇಶದ ಜನತೆಗೆ ಅತ್ಯಂತ ಭಾರ ಎಂದು ಕಂಡುಬರುವ ಬೆಲೆಗಳನ್ನೇ ಅದಕ್ಕೆ ಕಟ್ಟಿ ಹಾರಿಸಿ ಪ್ರಯೋಗ-ಪರೀಕ್ಷೆ ಮಾಡುತ್ತಿದ್ದೇವೆ. ಬೆಲೆ ಏರಿಕೆಯಿಂದ ಬಡತನದ ಜತೆಗೆ ಬಡವರೂ ನಿವಾರಣೆಯಾಗುತ್ತಾರೆ. ಇದರಿಂದ ಖರ್ಚು ಕಡಿಮೆಯಾಗಿ ನಮ್ಮ ದೇಶ ಸಮೃದ್ಧಿಯಾಗುತ್ತದೆ'!

Thursday, March 20, 2008

ಬೊಗಳೂರಿನಲ್ಲಿ ಹರ್ಷದ ಮೌನ

ಅರ್ಜೆಂಟಾಗಿ ಬೊಗಳೂರು ಬಿಟ್ಟು ಪರಾರಿಯಾಗಬೇಕಾದ ಪ್ರಸಂಗ ಬಂದಿರೋದ್ರಿಂದ ಬೊಗಳೂರಿಗೆ ಎರಡು ದಿನ ರಜೆ ಸಾರಲಾಗಿದೆ.

ಎಲ್ಲರೂ ನಿರಾಳವಾಗಿ ಉಸಿರಾಡುವಂತೆ ಕೋರಲಾಗಿದೆ.

ಆದರೆ ಬೊಗಳಿಗರ ಸಮಾವೇಶದಲ್ಲಿ ಭಾಗವಹಿಸಿ, ಅಲ್ಲಿಂದ ಯಾರೋ ಅಟ್ಟಿಸಿಕೊಂಡು ಹೋಗಿದ್ದಾರೆ ಎಂಬ ವರದಿಗಳನ್ನು ಮಾತ್ರ ನಮ್ಮ ಬ್ಯುರೋದ ಸೊಂಪಾದ-ಕರುಗಳು ನೀರ್ ನೀರ್-ವಾಕರಿಸಿದ್ದಾರೆ. ಎಲ್ಲರೂ ಎರಡು ದಿನ ಹರ್ಷಚಿತ್ತರಾಗಿ ರಜೆ ಸೆಲೆಬ್ರೇಟ್ ಮಾಡುವಂತೆ ಸಂದೇಶವನ್ನೂ ರವಾನಿಸಿದ್ದಾರೆ.

Tuesday, March 18, 2008

ಬಸವನ್ಗುಡೀಲಿ ಅಂತರ್ಜಾಲದಿಂದ ಉದುರಿದ ನಕ್ಷತ್ರಗಳು

(ತಡವಾಗಿ ಫ್ಲ್ಯಾಶ್ ಆದ ಸುದ್ದಿ)
ಬೊಗಳೂರು, ಮಾ.18- ಬೊಗಳೂರಿನಲ್ಲಿ ಭಾನುವಾರ ನಡೆದ ಅಂತರ್ಬ್ಲಾಗು ಕನ್ನಡಿಗರ ರಹಸ್ಯ ಸಮಾವೇಶದಲ್ಲಿ ಕೆಲವರು ತಮಗೆ ಕಾಮೆಂಟ್ ಹಾಕ್ತಿರೋರು ಯಾರು ಅಂತ ಪತ್ತೆ ಮಾಡಲಾಗದೆ ಬೊಗಳೆ ರಗಳೆ ಬ್ಯುರೋ ಮೊರೆ ಹೋದ ಘಟನೆಯೊಂದು ತುಂಬಾ ತಡವಾಗಿ ಫ್ಲ್ಯಾಶ್ ಸುದ್ದಿಯಾಗಿ ವರದಿಯಾಗಿದೆ.

ಈ ಸಮಾವೇಶದ ಬಗ್ಗೆ ಬಹುತೇಕ ಬ್ಲಾಗುಗಳಲ್ಲಿ ಗೌಪ್ಯವಾಗಿ ಕಾಮೆಂಟ್ ಹಾಕಿ ಆಹ್ವಾನಿಸಲಾಗಿತ್ತು. ಪ್ರತಿಯೊಬ್ಬರೂ ಈ ರಹಸ್ಯ ಕಾಮೆಂಟ್‌ಗಳನ್ನು ತಮ್ಮ ಮಿತ್ರರ ಬ್ಲಾಗುಗಳಲ್ಲಿ ಗೌಪ್ಯವಾಗಿಯೇ ಹಾಕುತ್ತಾ ಯಾರಿಗೂ ಏನೂ ತಿಳಿಯದಂತೆ ಆಹ್ವಾನಿಸುತ್ತಿದ್ದರು.

ಅಂತೂ ಇದುವರೆಗೆ ಕಾಮೆಂಟುಗಳಲ್ಲಷ್ಟೇ ಪರಸ್ಪರರನ್ನು ಒಂದು ಕೈ ನೋಡಿಕೊಳ್ಳುತ್ತಿದ್ದ ಅಂತರ್ಜಾಲಿ ಕನ್ನಡಿಗರು ಪರಸ್ಪರರನ್ನು ಅಲ್ಲಿ ಕಣ್ಣಾರೆ ನೋಡಿದರು ಮತ್ತು ಕಿವಿಯಾರೆ ಕೇಳಿದರು. ವಿಶೇಷವೆಂದರೆ ತಮ್ಮ ಹೆಸರು ಹೇಳಿದರೆ ಯಾರಿಗೂ ಕೂಡ ಪರಿಚಯವಾಗುತ್ತಿರಲೇ ಇಲ್ಲ. ಇದಕ್ಕೆ ಪ್ರಧಾನ ಕಾರಣವೆಂದರೆ ಒಂದಷ್ಟು ಶ್ರೀಗಳು, ನಿಧಿಗಳು ಅಂತರ್ಜಾಲದಲ್ಲಿ ಹೆಸರು ಸ್ಥಾಪಿಸಿ ಗೊಂದಲ ಸೃಷ್ಟಿಸಿರುವುದು. ಕೊನೆಗೂ ಬ್ಲಾಗಿನ ಯುಆರ್ಎಲ್ ಹೇಳಿದ ಬಳಿಕವಷ್ಟೇ ಕೆಲವರು 'ಓಹ್ ನೀವಾ' ಅಂತ ಹೃದಯಾಘಾತಕ್ಕೀಡಾಗದೆ ಸಾವರಿಸಿಕೊಂಡ ಘಟನೆಯೂ ನಡೆದಿದ್ದು, ನಾವಿಂದು ಯಾವ ರೀತಿ ವರ್ಚುವಲ್ ಜಗತ್ತಿನಲ್ಲಿದ್ದೇವೆ ಎಂಬುದಕ್ಕೆ ಸಾಕ್ಷಿ ಮತ್ತು ಭೂತವಾಯಿತು.

ಬೊಗಳೆಯ ಬಣ್ಣ ಬಯಲು ಮಾಡುವ ಪ್ರಯತ್ನಗಳೂ, ಹುನ್ನಾರಗಳೂ ಅಲ್ಲಲ್ಲಿ ಗೊತ್ತಾಗದಂತೆ ನಡೆದವು. ಇದರಿಂದ ತೀರಾ ಕಳವಳಗೊಂಡ ನಮ್ಮ ಏಕಸದಸ್ಯ ಬ್ಯುರೋದ ಸಮಸ್ತ ಸಿಬ್ಬಂದಿಗಳಲ್ಲೊಬ್ಬರು, "ನಾವಲ್ಲ ನಾವಲ್ಲ, ದಯವಿಟ್ಟು ಬಿಟ್ಬಿಡಿ" ಅಂತ ಗೋಗರೆಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಅಪರಾಧಿ ನಾನಲ್ಲ, ಅಪರಾಧ ಎನಗಿಲ್ಲ ಎಂಬ ದಾಸರ ಪದವೇ ಬೊಗಳೆಯನ್ನು ರಕ್ಷಿಸಿತು.

ಪಬ್ಬಿಗರು, ಮಜಾವಾಣಿ ಸೊಂಪಾದಕರು, ಜತೆಗೆ ಸೊಂಪಾದ ಗ್ರಹಗಳನ್ನು ಒಂದು ಬುಟ್ಟಿಯಲ್ಲಿ ಹಾಕಿ ಉಣಬಡಿಸುತ್ತಿರುವ ಅಂತರ್ಜಾಲ ನಾಡಿಗರು, ಕೆಂಡಾಮಂಡಲರಾಗದೇ ಇರೋ ಕೆಂಡಸಂಪಿಗೆಯ ರಶೀದರು, ಇದಲ್ಲ, ಅದುವೇ ಕನ್ನಡ ಎನ್ನುತ್ತಾ, ಹಾರ ತುರಾಯಿ ಬದಲು ಆಹಾರದ ಬುಟ್ಟಿ ನೀಡಿದವರನ್ನು ಮನಸಾ ಸ್ಮರಿಸಿದ ಶಾಮಿಯಾನಾ ರೂವಾರಿಗಳು... ಮುಂತಾದವರೆಲ್ಲರೂ ನೆಟ್ಟಾಗಿರೋ ಕನ್ನಡವನ್ನು ನೆಟ್ಟಗೇ ನಿಲ್ಲಿಸುವತ್ತ ಪ್ರಯತ್ನ ಮಾಡಬೇಕೆಂದು ಸಲಹೆ ನೀಡಿದರು. ಮಾತ್ರವಲ್ಲ, ಅಕ್ಕನ ಲಹರಿ, ಭಾವನ ಲಹರಿ ಬಿಟ್ಟು, ಬೇಲಿ ಹಾರಿ ಆಚೆ ಬರಬೇಕು ಎಂದು ಸಲಹೆ ನೀಡಿದರು. ಸಾಹಿತಿಗಳೂ ಮಾಹಿತಿ ನೀಡುವಂತಾಗಬೇಕು, ಮಾಹಿತಿ ನೀಡುವವರೂ ಸಾಹಿತಿಗಳಂತಾಗಬೇಕು ಎಂಬುದು ಎಲ್ಲರ ಕೊರಳಿನ ಮಧ್ಯಭಾಗದಲ್ಲಿರುವ ಧ್ವನಿಪೆಟ್ಟಿಗೆಯಿಂದ ಹೊರಟ ಧ್ವನಿ.

ಈ ಬ್ಲಾಗಂಗಳದ ನಕ್ಷತ್ರಗಳನ್ನೆಲ್ಲಾ ಒಂದೊಂದಾಗಿ ಹೆಕ್ಕುವ ಪ್ರಯತ್ನ ಮಾತ್ರ ಅಲ್ಲಿ ವಿಫಲವಾಯಿತು. ಆದರೆ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ಕಲ್ಚರ್ಡ್ ಆಗಿರೋರೇ ಬಂದು ಸೇರಿದ ಕಾರಣ, ಬ್ಲಾಗಿಗರೆಲ್ಲರೂ ಪ್ರಾಣಾಯಾಮ ಮಾಡಿ ರಿಫ್ರೆಶ್ ಆಗುವಂತೆ ಮಾಡಿದ ಪ್ರಣತಿಯು ಜಹಾಪನಾರಂತೆ ನೀಡಿದ ಆಣತಿಯಂತೆ, ಕಾರ್ಯಕ್ರಮದ ಮಧ್ಯೆ ಒಂದು ಬಾರಿ ಚಹಾ ಪಾನ ಗೋಷ್ಠಿಯೂ ನಡೆಯಿತು.

ಸಮಾರಂಭದ ನಂತರ, ಬೊಗಳೆ ಬ್ಯುರೋದ ಸಮಸ್ತ ಸಿಬ್ಬಂದಿಗಳೂ, ಕಾರು, ಬಸ್ಸು, ವಿಮಾನ, ರೈಲು, ಎತ್ತಿನ ಬಂಡಿಗಳನ್ನೇರಿ ಸದ್ದಿಲ್ಲದೆ ಬೊಗಳೂರು ಸೇರಿಕೊಂಡರು.

Saturday, March 15, 2008

ಕೋಲಸಭೆಯ 'ಸ್ಪೀಕರ್' ಬಂದ್ ಮಾಡಿಸುವ ಹುನ್ನಾರ!

(ಬೊಗಳೂರು ಕೋಲಾ(ಹಲ) ಸಭಾ ಬ್ಯುರೋದಿಂದ)
ಬೊಗಳೂರು, ಮಾ.15- ಕೋಲಾ(ಹಲ)ಸಭಾ ಸ್ಪೀಕರ್ ಅವರು ತಮ್ಮ ಸದಸ್ಯತ್ವವನ್ನೇ ಕಳೆದುಕೊಳ್ಳುವ ಎಲ್ಲ ಲಕ್ಷಣಗಳಿವೆ ಎಂಬುದನ್ನು ಬೊಗಳೆ ರಗಳೆ ಬ್ಯುರೋ ಪತ್ತೆ ಹಚ್ಚಿದೆ.

ಇತ್ತೀಚೆಗೆ ನಮ್ಮ ಬೊಗಳೆ ರಗಳೆ ಬ್ಯುರೋಗೂ ಅಪಥ್ಯವಾದ ಸತ್ಯವಾಕ್ಯಗಳನ್ನೇ ಅವರು ನುಡಿಯುತ್ತಿರುವುದು ಅವರ ಸಂಸತ್ಸದಸ್ಯತ್ವ ಅನರ್ಹತೆಗೆ ಪ್ರಧಾನ ಕಾರಣ ಎಂಬುದನ್ನು ಇಲ್ಲಿ ಪತ್ತೆ ಹಚ್ಚಲಾಗಿದೆ.

ಸಂಸದರನ್ನು 'ಪ್ರಜಾಸತ್ತೆಯನ್ನು ಸತ್ತೇಹೋಗುವಂತೆ ಮಾಡುವವರು', ಸದನದ ಗೌರವಕ್ಕೆ ಚ್ಯುತಿ ಬರುತ್ತಿದೆ, ನಾನೇ ಸ್ಪೀಕರ್ ಆಗಿದ್ದರೂ, ಯಾರು ಕೂಡ ನನಗೆ ಸ್ಪೀಕ್ ಮಾಡಲು ಬಿಡುತ್ತಿಲ್ಲ, ಎಲ್ಲರೂ ಸ್ಪೀಕರ್‌ಗಳಾಗುತ್ತಿದ್ದಾರೆ. ಇನ್ನು ಮುಂದೆ ನೀತಿ ನಿಯಮಗಳನ್ನೆಲ್ಲಾ ಗಾಳಿಗೆ ತೂರುವ ಬದಲು ಮಹಾತ್ಮ ಗಾಂಧೀಜಿ ಪ್ರತಿಮೆ ಎದುರು (ಬೇರಾವುದನ್ನೂ ಬಳಸದೆ)ಬೆಂಕಿ ಹಾಕಿಯೇ ಸುಟ್ಟುಹಾಕಬೇಕು ಎಂಬಿತ್ಯಾದಿಯಾಗಿ ಅವರು ಮಂಗಗಳಾರತಿ ಮಾಡಿದ್ದೇ ಈ ರಾದ್ಧಾಂತಕ್ಕೆ ಕಾರಣ ಎಂದು ಅಸತ್ಯಾನ್ವೇಷಿಗಳು ವರದ್ದಿ ಕಳುಹಿಸಿದ್ದಾರೆ.

ಅದೂ ಅಲ್ಲದೆ ಸದಸ್ಯರದು ನಾಚಿಕೆಗೇಡಿನ ವರ್ತನೆ ಎಂದು ತಮ್ಮ ಜೀವಮಾನದಲ್ಲಿ ಕಂಡು ಕೇಳರಿಯದ ನಾಚಿಕೆ ಎಂಬ ಪದವನ್ನು ಉಲ್ಲೇಖಿಸಿದ್ದಾರೆ. ಮಾತ್ರವಲ್ಲದೆ ಮಾನ, ಮರ್ಯಾದೆ ಇತ್ಯಾದಿ ಅಸಾಂವಿಧಾನಿಕವಾದ ಪದಗಳನ್ನು ಬಳಸಿದ್ದಾರೆ ಎಂಬುದು ಹೋಂ ಥಿಯೇಟರ್ ಸ್ಪೀಕರ್ ವಿರುದ್ಧ ಕೋಲಸಭೆ ಸದಸ್ಯರ ಆಕ್ರೋಶ.

ಒಟ್ಟಿನಲ್ಲಿ ಸ್ಪೀಕರ್ ಬಂದ್ ಮಾಡಲು ಎಲ್ಲ ಸಂಸದರು ಸಿದ್ಧತೆ ನಡೆಸುತ್ತಿದ್ದಾರೆ ಎಂದು ಯಾವುದೇ ಮೂಲಗಳು ವರದಿ ಮಾಡಿಲ್ಲ.

Friday, March 14, 2008

ಅಲ್ಲಲ್ಲಿ ಡೆಲಿವರಿ ಕೇಂದ್ರಗಳ ಸ್ಥಾಪನೆಗೆ ಸಿದ್ಧತೆ

(ಬೊಗಳೂರು ಸಂಶಯ-ಶೋಧನೆ ಬ್ಯುರೋದಿಂದ)
ಬೊಗಳೂರು, ಮಾ.14- ಉತ್ತರ ಅಮೆರಿಕದಲ್ಲಿ ತತ್ತರಿಸುತ್ತಿರುವವರಿಗೊಂದು ಬೆಚ್ಚಿ ಬೀಳಿಸುವ ಸುದ್ದಿ ಇಲ್ಲಿ ಬಿತ್ತರವಾಗಿದೆ. ಪ್ರಖ್ಯಾತ ತಂತ್ರಜ್ಞಾನ ಸಂಸ್ಥೆ ಕಾಗ್ನಿಜೆಂಟ್, ಜಾಗತಿಕವಾಗಿ ಡೆಲಿವರಿ ಮಾಡುವ ಕೇಂದ್ರವೊಂದನ್ನು ಉದ್ಘಾಟಿಸಿದೆ ಎಂದು ನಮ್ಮ ರದ್ದಿಗಾರರು ತಪ್ಪಿಲ್ಲದೆ ವರದಿ ಮಾಡಿದ್ದಾರೆ.

ದೇಶ ವಿದೇಶದಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿದೆ.ತಂತ್ರಜ್ಞಾನದ ಫಲವಾಗಿ ಐಟಿ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳೂ ಹೆಚ್ಚುತ್ತಿವೆ. ಹೀಗಾಗಿ ಪ್ರತಿಭಾನ್ವಿತ ಸಾಫ್ಟ್ ಆಗಿರುವ ಮಕ್ಕಳ ಬೇಡಿಕೆಯೂ ಹೆಚ್ಚುತ್ತಿದೆ. ಅವುಗಳಿಗೆ ಸೂಟ್ ಆಗಬಲ್ಲ ಅಗತ್ಯಗಳನ್ನೆಲ್ಲಾ ಪೂರೈಸಲೆಂದೇ ಈ ಡೆಲಿವರಿ ಮಾಡಿಸುವ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ನಮ್ಮ ರದ್ದಿ ಮೂಲಗಳಿಗೆ ಬೇರೆ ಸುದ್ದಿ ಮೂಲಗಳು ತಿಳಿಸಿವೆ.

ಇತ್ತೀಚೆಗಷ್ಟೇ ಇದೇ ಸಂಸ್ಥೆಯು ಎರಡನೇ (Platform 2.0) ಪ್ಲಾಟ್‌ಫಾರ್ಮ್‌ನಲ್ಲಿ ಪ್ರಾದೇಶಿಕ ಡೆಲಿವರಿಗಾಗಿ ವ್ಯವಸ್ಥೆ ಮಾಡಿರುವುದು ಇಲ್ಲಿ ಉಲ್ಲೇಖಾರ್ಹ. ಇನ್ನೂ ಕೆಲವೆಡೆ ಹಲವು ಡೆಲಿವರಿ ಕೇಂದ್ರಗಳನ್ನು ನಡೆಸುವ ಯೋಜನೆ ಇದೆ ಎಂದು ಕಾಗ್ನಿಜೆಂಟ್ ಮುಖ್ಯಸ್ಥರು ಬೊಗಳೆ ರಗಳೆಗೆ ತಿಳಿಸಿದ್ದಾರೆ.

Wednesday, March 12, 2008

ವಿಮಾನ ಮುಷ್ಕರ: ಸಂಚಾರ ಅಸ್ತವ್ಯಸ್ತ!!!

(ಬೊಗಳೂರು ಸಂಚಕಾರ ಬ್ಯುರೋದಿಂದ)
ಬೊಗಳೂರು, ಮಾ.12- ರಾಷ್ಟ್ರವ್ಯಾಪಿಯಾಗಿ ವಿಮಾನ ನಿಲ್ದಾಣ ನೌಕರರು ಮುಷ್ಕರ ಆರಂಭಿಸಿರುವುದರಿಂದ ವಿಮಾನಗಳ ಓಡಾಟ ಕಡಿಮೆಯಾಗಿ, ರಸ್ತೆ ಸಂಚಾರದಲ್ಲಿ ತೀವ್ರ ದಟ್ಟಣೆ ಕಂಡುಬಂದಿದ್ದು, ಅಲ್ಲಲ್ಲಿ ಟ್ರಾಫಿಕ್ ಜಾಮ್ ಆಗಿರುವುದಾಗಿ ವರದಿಯಾಗಿದೆ.

ಕಚೇರಿಯಿಂದ ಮನೆಗೆ ಹೊರಟವರು ಮನೆ ತಲುಪಲಾರದೆ ದಾರಿಯಲ್ಲೇ ದಾರಿ ತಪ್ಪಿ ಎಲ್ಲೆಲ್ಲೋ ಹೋಗಿರುವ ಕುರಿತಾಗಿ ನಮ್ಮ ಬೊಗಳೂರು ಏಕಸದಸ್ಯ ಬ್ಯುರೋದ ಸಮಸ್ತ ಸಿಬ್ಬಂದಿಗಳ ತಂಡವು ನಗರವಿಡೀ ಸಂಚಾರ ನಡೆಸಿ ಸಮೀಕ್ಷೆ ನಡೆಸಿದಾಗ ಕಂಡು ಬಂದ ಪ್ರಮುಖ ಅಂಶ.

ವಿಮಾನ ಮುಷ್ಕರದಿಂದಾಗಿ ವಿಮಾನ ನಿಲ್ದಾಣದ ಸುತ್ತಮುತ್ತ ವಾಸಿಸುತ್ತಿರುವ ಕುಟುಂಬಗಳಂತೂ ತೀರಾ ಸಂಕಷ್ಟಕ್ಕೀಡಾದವು. ಮಕ್ಕಳು ಮರಿಗಳು ಶಾಲೆಗೆ ತಡವಾಗಿ ಹೋಗಬೇಕಾಯಿತು. ಬೆಳಗ್ಗೆ ನ್ಯೂಯಾರ್ಕ್‌ಗೆ ತೆರಳುವ ವಿಮಾನ ಹಾರಾಟ ಆರಂಭವಾದಾಗಲೇ ಅಪಾರ ಶಬ್ದಮಾಲಿನ್ಯದಿಂದಾಗಿ ಸುತ್ತಮುತ್ತಲಿನವರಿಗೆ ಗಾಢ ನಿದ್ರೆಯಿಂದ ಎಚ್ಚರವಾಗುತ್ತಿತ್ತು. ಮತ್ತು ಯಾವುದೇ ಅಲಾರಂ ಅನಗತ್ಯವಾಗಿತ್ತು. ಇದೀಗ ವಿಮಾನದ ಸದ್ದಿಲ್ಲದೆ ಅವರು ತುಂಬಾ ತ್ರಾಸಪಟ್ಟರು. ಹೆಚ್ಚಿನ ಮನೆಗಳಲ್ಲಿ ಆಫೀಸಿಗೆ ತಡವಾಯಿತು, ಶಾಲೆಗೆ ತಡವಾಯಿತು, ತಿಂಡಿಗೆ ಲೇಟಾಯ್ತು, ಸ್ನಾನಕ್ಕೆ ಲೇಟಾಯ್ತು ಅಂತ ಗೊಣಗುಟ್ಟುವಿಕೆ, ಸಿಡಿಮಿಡಿಗುಟ್ಟುವಿಕೆಯೇ ಹೆಚ್ಚಾಗಿ ವಿಮಾನಕ್ಕಿಂತಲೂ ಹೆಚ್ಚು ಶಬ್ದಮಾಲಿನ್ಯವನ್ನು ಬೊಗಳೂರು ತಂಡವು ಕಣ್ಣಾರೆ ಕೇಳಿಸಿಕೊಂಡಿತು ಮತ್ತು ಕಿವಿಯಾರೆ ಕಂಡಿತು.

ಶಾಲೆಗೆ ಹೋಗುವ ಮಕ್ಕಳು ಕೂಡ ವಿಮಾನಕ್ಕಾಗಿ ಕಾದು ಕಾದು ಸುಸ್ತಾಗಿ ನಡೆದೇ ಶಾಲೆಗೆ ಹೋಗುವಾಗ ತಡವಾಯಿತು. ಇನ್ನು ಕೆಲವು ವಿಮಾನಗಳು ಬಂದಂತೆ ಕಾಣಿಸಿತಾದರೂ ಅವುಗಳು ಎಲ್ಲಿಯೂ ನಿಲ್ಲಿಸದೆ ಪರಾರಿಯಾದಂತೆ ಓಡಿದವು. ವಿಚಾರಣೆಗೊಳಪಡಿಸಿದಾಗ, ಅವುಗಳೆಲ್ಲಾ ಬೆಂಗಳೂರಿನ ಹೊಸ ವಿಮಾನ ನಿಲ್ದಾಣಕ್ಕೆ ಹೋಗಿ ಅಲ್ಲೇ ನೆಲೆ ನಿಲ್ಲಲು ತೆರಳುತ್ತಿವೆ ಎಂಬುದು ತಿಳಿದುಬಂತು.

ಇನ್ನು, ಕಚೇರಿಗೆ ಅದು ಹೇಗೋ ತಲುಪಿದವರ ಪಾಡು ಹೇಳತೀರದು. ಅವರಿಗೆ ವಾಪಸ್ ಬರಲು ವಿಮಾನವೇ ಇಲ್ಲ! ಅರ್ಧಂಬರ್ಧ ಕೆಲಸ ಮುಗಿಸಿ ಮನೆಗೆ ವಿಮಾನದಲ್ಲಿ ಬುರ್ರನೇ ಓಡಿಹೋಗೋಣ ಅಂದುಕೊಂಡವರ ಸ್ಥಿತಿಯಂತೂ ಕುದಿಯುವ ಎಣ್ಣೆಗೆ ನೀರು ಚಿಮುಕಿಸಿದಂತಿತ್ತು.

ಒಟ್ಟಿನಲ್ಲಿ, ವಿಮಾನಗಳು ಇಲ್ಲದ ಕಾರಣದಿಂದಾಗಿ ನಗರದ ರಸ್ತೆಗಳೆಲ್ಲಾ ತುಂಬಿ ತುಳುಕಾಡುತ್ತಿದ್ದು, ಇರುವೆಗಳು ಕೂಡ ಎಲ್ಲಿ ಹೋಗುವುದು, ಹೇಗೆ ಹೋಗುವುದು ಎಂದು ತಿಳಿಯದೆ ಒದ್ದಾಡಿದವು ಎಂದು ತಿಳಿದುಬಂದಿದೆ. ವಿಮಾನಗಳಿಲ್ಲದ ಕಾರಣದಿಂದಾಗಿ ಕಚೇರಿಗೆ ಓಡುತ್ತಿರುವವರ, ನಡೆದು ಏಗುತ್ತಿರುವವರ ಮತ್ತು ಏಗಿಕೊಂಡೇ ನಡೆಯುತ್ತಿರುವವರ ಮುಖ ನೋಡಿ ಬೊಗಳೂರು ಬ್ಯುರೋದ ಮಂದಿಯೂ ಮುಖ ಕಿವುಚಿಕೊಳ್ಳಬೇಕಾಗಿಬಂತು ಎಂದು ನಮ್ಮ ಖಾರಾ ಬಾತ್‌ಮೀದಾರರು ವರದ್ದಿ ಒಪ್ಪಿಸಿದ್ದಾರೆ.

Tuesday, March 11, 2008

ಏನೈತೆ, ಒಳಗಡೆ ಏನೇನೈತೆ???

(ಬೊಗಳೂರು Some-ಶೋಧನೆ ಬ್ಯುರೋದಿಂದ)
ಬೊಗಳೂರು, ಮಾ.11- "ಏನೈತೆ, ಒಳಗಡೆ ಏನೇನೈತೆ?" ಅಂತ ಹಾಡಿ ಕುಣಿಯೋ ಸಿನಿಮಾ ಪದವನ್ನೇ ಮಾದರಿಯಾಗಿಟ್ಟುಕೊಂಡು ತಯಾರಿಸಲಾಗಿರುವ ಉಟ್ಟ ಬಟ್ಟೆಯೊಳಗೆ ಏನೇನು ಇಟ್ಟುಕೊಳ್ಳಲಾಗಿದೆ ಅಂತ ಪತ್ತೆ ಹಚ್ಚುವ, ಆದರೆ ಏನೇನಿರುತ್ತೆ ಅಂತ ಪತ್ತೆ ಹಚ್ಚಲಾರದ ಯಂತ್ರವನ್ನು ಕಂಡು ಹುಡುಕಲಾಗಿದ್ದು, ಅದು "ವೀಕ್ಷಕ/ಪ್ರೇಕ್ಷಕ" ವರ್ಗದಲ್ಲಿ ಭಯಂಕರ ನಿರಾಸೆ ಮೂಡಿಸಿದೆ ಎಂಬುದು ಇಲ್ಲಿ ವರದಿಯಾಗಿದೆ.

ಇದಕ್ಕೆ ಪ್ರಧಾನ ಕಾರಣಗಳು ಎರಡು. ಇದು ಪಡ್ಡೆ ಹೈಕಳಿಗೆ ಯಾವುದೇ ರೀತಿಯಲ್ಲೂ ಪ್ರಯೋಜನಕ್ಕೆ ಬರುವುದಿಲ್ಲ ಅಂತ ಸಂಶೋಧಕರು ಸ್ಪಷ್ಟಪಡಿಸಿದ್ದು. ಇನ್ನೊಂದು ಎಂದರೆ, ಕನಿಷ್ಠ ಉಡುಗೆಯಲ್ಲೇ ಮೈಮುಚ್ಚಿಕೊಳ್ಳಲು ಹೆಣಗಾಡುವುದರಲ್ಲೇ ಸಂತೋಷ ಕಾಣುವ ಬಿಚ್ಚೋಲೆ ಗೌರಮ್ಮರ ಸಾಲಿಗೆ ಸೇರಿದ ನಟೀ ಮಣಿಯರ ತಪಾಸಣೆಗೆ ಇದು ಯಾವುದೇ ರೀತಿಯಲ್ಲೂ ಪ್ರಯೋಜನವಾಗದು ಎಂಬುದು!

ಯಾಕೆಂದರೆ ಈ ನಟೀಮಣಿಯರು ಯಾವತ್ತಿಗೂ ವಿದೇಶ ಪ್ರಯಾಣವೇ ಇರಲಿ, ಸ್ವದೇಶ ಯಾನವೇ ಇರಲಿ, ಅವರು ತಮ್ಮ ಬಟ್ಟೆ ಬರೆಗಳನ್ನು ಹೊತ್ತೊಯ್ಯಲು ಒಂದು ಪುಟ್ಟ ಬೆಂಕಿಪೊಟ್ಟಣವನ್ನು ಮಾತ್ರವೇ ಒಯ್ಯುತ್ತಾರೆ. ಇದನ್ನಂತೂ ತಪಾಸಿಸುವುದು ಬಹಳ ಸುಲಭ. ಮಾತ್ರವಲ್ಲದೆ, ಅವರ ತೊಟ್ಟ ಉಡುಗೆಯ ಪ್ರಮಾಣದಿಂದಾಗಿ ಈ ಕ್ಯಾಮರಾ ಚಾಲೂ ಮಾಡುವ ಅವಶ್ಯಕತೆಯೇ ಬಾರದು. ಈ ಕಾರಣಕ್ಕೆ, ಮುಂಬಯಿ ವಿಮಾನ ನಿಲ್ದಾಣಗಳಲ್ಲಿ ಇದನ್ನು ಅಳವಡಿಸಬೇಕಾಗಿಲ್ಲ ಅಂತ ಬೊಗಳೂರು ರಗಳೆ ಬ್ಯುರೋ ಶಿಫಾರಸು ಮಾಡುತ್ತಿದೆ.
ಬೊಗಳೋದುಗರಿಗೆ ಸಂತಸದ ಸುದ್ದಿ

ಬೆಳೆಯುತ್ತಿರುವ ಕನ್ನಡ ಬ್ಲಾಗ್ ಜಗತ್ತಿನಲ್ಲಿ ಕನ್ನಡ ಬ್ಲಾಗೋತ್ತಮರನ್ನು ಒಟ್ಟು ಸೇರಿಸುವ ಶ್ಲಾಘನೀಯ ಕಾರ್ಯಕ್ರಮವೊಂದರ ಆಹ್ವಾನ ಪತ್ರವಿದು. ಕಳಿಸಿದ್ದು ಸುಶ್ರುತ ದೊಡ್ಡೇರಿ.
ಅದನ್ನು ಅವರದೇ ಮಾತಿನಲ್ಲಿ ಕೇಳಿ:

ಎಲ್ಲರಿಗೂ ನಮಸ್ಕಾರ.

ನಿಮ್ಗೂ ಗೊತ್ತಿರೋ ಹಾಗೆ, ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ 'ಪ್ರಣತಿ', ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: 16 ಮಾರ್ಚ್ 2008
ಟೈಮು: ಇಳಿಸಂಜೆ ನಾಲ್ಕು ಗಂಟೆ
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು

ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, 'ಪ್ರಣತಿ'ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.
ಅಲ್ಲಿ ಸಿಗೋಣ,
ಸೂಚನೆ: ಇದು ನಡೀತಿರೋದು ಬೊಗಳೂರು ಅಲ್ಲ, ಬೆಂಗಳೂರಿನಲ್ಲಿ ಅಂತ ಈ ಮೂಲಕ ಸ್ಪಷ್ಟಪಡಿಸುತ್ತಿದ್ದೇವೆ!!! ಯಾರಾದರೂ ಹಾದಿ ತಪ್ಪಿ ಬೊಗಳೂರಿಗೆ ಬಂದಲ್ಲಿ, ಅಲ್ಲಿ ಜನಜಂಗುಳಿ ಹೆಚ್ಚಾಗಿ ಜನರನ್ನು ನಿಯಂತ್ರಿಸಲು ಮತ್ತು ಬೊಗಳೂರೆಂಬ ಊರನ್ನು ಸೃಷ್ಟಿ ಮಾಡಲು ನಾವು ಸಾಕಷ್ಟು ಹೆಣಗಾಡಬೇಕಾದೀತು....:)

Monday, March 10, 2008

ಉದ್ಯೋಗ ನಿವಾರಣೆಯಿಂದ ಉದ್ವೇಗ ಹೆಚ್ಚಳ!

(ಬೊಗಳೂರು ಉದ್ಯೋಗ ನಿವಾರಣಾ ಬ್ಯುರೋದಿಂದ)
ಬೊಗಳೂರು, ಮಾ.10- ದೇಶದಲ್ಲಿ ಜಾರಕಾರಣಿಗಳು ಇರೋದ್ರಿಂದಾಗಿ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ. ಈ ನಿರುದ್ಯೋಗಿಗಳನ್ನು ನಿವಾರಿಸುವ ನಿಟ್ಟಿನಲ್ಲಿ ಕಗ್ಗತ್ತಲ ಖಂಡದಿಂದ ವಿಶೇಷ ಪ್ರತಿನಿಧಿಗಳನ್ನು ಭಾರತಕ್ಕೆ ಕಳುಹಿಸಿಕೊಟ್ಟಿರುವುದಾಗಿ ನೈಜೀರಿಯಾ ಪ್ರತಿನಿಧಿಗಳು ವರದಿ ಮಾಡಿದ್ದಾರೆ.

ಈಗಾಗಲೇ ನಮ್ಮ ದೇಶದ ಬುದ್ಧಿವಂತ ಗುಗ್ಗುಗಳಿಗೆಲ್ಲಾ ನೈಜೀರಿಯಾದಲ್ಲಿ ವಿಮಾನ ಅಪಘಾತವಾಗಿ ಯಾರೋ ಸತ್ತಿದ್ದಾರೆ, ಅವರ ಬ್ಯಾಂಕ್ ಬ್ಯಾಲೆನ್ಸ್ ಕೋಟಿ ಕೋಟಿ ಇದೆ, ಅದನ್ನು ನಾವು ಹಂಚಿಕೊಳ್ಳೋಣ ಎಂಬಿತ್ಯಾದಿ ವಿವರಗಳುಳ್ಳ ಇ-ಮೇಲ್‌ಗಳ ಮೂಲಕ ಉದ್ಯೋಗಕ್ಕೊಂದು ಅವಕಾಶ ಕಲ್ಪಿಸಿಕೊಡುತ್ತಿರುವ ಈ ಕಪ್ಪು ಬಣ್ಣದ ನಮ್ಮ ಪೂರ್ವಜ ವಂಶಜರು, ಇದೀಗ ದೇಶದಲ್ಲಿ ನೇರವಾಗಿಯೇ ಉದ್ಯೋಗಕ್ಕಿಳಿದಿದ್ದಾರೆ ಎಂದು ಇಲ್ಲಿ ವರದಿ ಮಾಡಲಾಗಿದೆ.

ಆದರೆ, ಈ ಬಗ್ಗೆ ಬುದ್ಧಿವಂತ ಗುಗ್ಗುಗಳನ್ನು ಎಚ್ಚರಿಸುವ ನಿಟ್ಟಿನಲ್ಲಿ 'ಬಿವೇರ್' ಅಂತ ತಲೆಬರಹ ಕೊಟ್ಟಿರುವ ಬಗ್ಗೆ ತೀವ್ರ ಆಕ್ಷೇಪವೆತ್ತಿರುವ ಏಕಸದಸ್ಯ ಅಖಿಲ ಭಾರತ ಕಾರ್ಯಮರೆತ ಪತ್ರಕರ್ತರ ಸಂಘದ ಏಕೈಕ ಅಧ್ಯಕ್ಷರೂ ಆಗಿರುವ ಬೊಗಳೆ ರಗಳೆ ಸಂತಾಪಕರು, ಈ ರೀತಿ ಮಾಡುವುದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮಟ್ಟ ಹಾಕುವ ಯತ್ನ ಎಂದು ಟೀಕಿಸಿದ್ದಾರೆ.

ಇದಲ್ಲದೆ, ಇಂಥ ಎಚ್ಚರಿಕೆಗಳನ್ನು ನೀಡಿ ಬುದ್ಧಿವಂತರ ಜ್ಞಾನ ತಪ್ಪಿಸಲು ಮತ್ತು ಜನತೆಯನ್ನು ಹೆದರಿಸಲು ತೀವ್ರ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ರೀತಿಯೆಲ್ಲಾ ಎಚ್ಚರಿಸಿಬಿಟ್ಟರೆ, ನಯ್ಜೀರಿಯನ್ನರು ಮತ್ತು ಇದೇ ರೀತಿ ನಯ್ವಂಚನೆ ಮಾಡೋರು ಒಪ್ಪೊತ್ತಿನ ಊಟಕ್ಕೂ ಗತಿಯಿಲ್ಲದಂತೆ ಬಿದ್ದಿರಬೇಕು ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಉದ್ಯೋಗ ನಿವಾರಣೆಯಾದಲ್ಲಿ ಉದ್ವೇಗ ಹೆಚ್ಚುತ್ತದೆ. ಆದರೆ ನಿರುದ್ಯೋಗ ನಿವಾರಣೆಯಾದಲ್ಲಿ ಇದು ಕಡಿಮೆಯಾಗುತ್ತದೆ ಎಂಬುದು ಅವರ ಅಭಿಮತ.

ನೈಜೀರಿಯದ ಪೂರ್ವಜ ವಂಶಜರು ಕೆಲಸವಿಲ್ಲದೆ ಕುಳಿತವರಿಗೆ ಅತ್ತಿತ್ತ ಅಲೆಡಾಡಿಸುತ್ತಾ ಕೈತುಂಬಾ ಕೆಲಸ ಕೊಡಿಸುತ್ತಿದ್ದಾರೆ. ಸುಮ್ಮನೇ ಕೂತಿದ್ದವರನ್ನು ಎಚ್ಚರಿಸಿ ಓಡಾಡುವಂತೆ ಮಾಡುತ್ತಿದ್ದಾರೆ. ಇದರಿಂದ ದೈಹಿಕವಾಗಿಯೂ ಒಳ್ಳೆಯ ವ್ಯಾಯಾಮ ದೊರೆಯುತ್ತದೆ ಎಂದು ಪ್ರತಿಪಾದಿಸಿರುವ ಅವರು, ಬಿ-wear ಅಂತ ಎಚ್ಚರಿಕೆ ಕೊಡುತ್ತಿರುವುದೇಕೆ ಎಂಬುದನ್ನು ತೀವ್ರವಾಗಿ ಆಕ್ಷೇಪಿಸಿದ್ದಾರೆ.

ಬಿಚ್ಚುಡುಗೆ ನಟೀಮಣಿಯರು, ಆಧುನಿಕ ಜನಾಂಗದವರಿಗಾದರೆ Be-Wear ಅಂತ ಎಚ್ಚರಿಕೆ ನೀಡಿದರೆ ಸ್ವಲ್ಪ ಸ್ವಲ್ಪ ಬಟ್ಟೆ wear ಮಾಡಿಕೊಳ್ಳಬಹುದಿತ್ತು. ಆದರೆ ನಮಗೆ ಎಚ್ಚರಿಕೆ ನೀಡಲು ಅವರಿಗೇನು ಹಕ್ಕಿದೆ? ಎಂಬುದು ಸಂತಾಪಕರ ವ್ಯಾಖ್ಯಾನ.

ಹಾಗಿದ್ದರೆ, ಇಂಥವರಿಂದಾಗಿ ನಿರುದ್ಯೋಗ ನಿವಾರಣೆ ಹೇಗೆ ಸಾಧ್ಯ? ಇದು ಉದ್ಯೋಗ ನಿವಾರಣೆಯೇ ಅಥವಾ ನಿರುದ್ಯೋಗ ನಿವಾರಣೆಯೇ ಎಂದು ಬೆಪ್ಪುತಕ್ಕಡಿಯಂತೆ ಕೇಳಿದಾಗ, ಅವರೆಲ್ಲಾ ನೈಜೀರಿಯದ ನೈವಂಚಕರಿಂದಾಗಿ ಎಲ್ಲಾ ಹಣ ಕಳೆದುಕೊಂಡು ನಯಾಜೀವನ ಶುರುಮಾಡಿ, ಉದ್ಯೋಗ ಹುಡುಕುವುದನ್ನೇ ಉದ್ಯೋಗವಾಗಿಸಿಕೊಳ್ಳುತ್ತಿದ್ದಾರೆ. ಅಂದರೆ ಕೈತುಂಬಾ ಕೆಲಸ ಎಂದಾಯಿತು. ಅವರ ನಿರುದ್ಯೋಗವೂ ನಿವಾರಣೆಯಾದಂತಾಯಿತು ಎಂದು ಸ್ಪಷ್ಟನೆ ನೀಡಿದರು,

Saturday, March 08, 2008

ಯಾವ ಪಕ್ಷದಲ್ಲಿದ್ದೇನೆಂಬುದೇ ಮರೆತುಬಿಟ್ಟ ಎಂಪೀ!

(ಬೊಗಳೂರು ಗೊಂದಲಮಯ ಬ್ಯುರೋದಿಂದ)
ಬೊಗಳೂರು, ಮಾ.8- ಎಂಪಿಯಾಗಿದ್ದುಕೊಂಡೇ ಡಿಸಿಎಂ ಆಗಿದ್ದ ಪ್ರಕಾಶರು ಬೇರೆ ಪಕ್ಷಕ್ಕೆ ಸೇರಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದ್ದನ್ನು ಟಿವಿ ಚಾನೆಲ್‌ಗಳು ಬಿತ್ತರಿಸಿದ್ದು, ಅವುಗಳು ಕೆಲವು ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು, ರೇಡಿಯೋ ವಾರ್ತೆಗಳಲ್ಲೂ ಪ್ರಸಾರವಾಗಿದ್ದು, ಅಲ್ಲಿಂದ ಜೆಡಿಎಸ್ ಪಕ್ಷದ ಮೂಲಗಳು ಈ ಬಗ್ಗೆ ಮಾತನಾಡಿದ್ದನ್ನು ಕಾಂಗ್ರೆಸ್ ಮೂಲಗಳು ಉಲ್ಲೇಖಿಸಿ ಬಿಜೆಪಿ ಮೂಲಗಳ ಮುಖಾಂತರ ಅಲ್ಲಿ ಇಲ್ಲಿ ಪ್ರಕಟವಾಗಿರುವ ವರದಿಯನ್ನು ನಮ್ಮ ವರದ್ದಿಗಾರರು ತಂದೊಪ್ಪಿಸಿದ ಸುದ್ದಿಯನ್ನು ನಮ್ಮ ಸಂತಾಪಕರು ತಿದ್ದಿ ತೀಡಿ ಪತ್ರಿಕೆ ಅಚ್ಚಿಗೆ ಹೋಗುವ ವೇಳೆಗೆ ನಿರ್ಧಾರ ಬದಲಿಸಿದ್ದು ದಿಲ್ಲಿ ಯಾತ್ರೆ ಕೈಗೊಂಡ ಪ್ರಕಾಶರು ದಿಲ್ಲಿಯಿಂದ ಮರಳಿ ಬಂದು ತಮ್ಮ ಬೆಂಬಲಿಗರೊಂದಿಗೆ ಸಮಾಲೋಚಿಸಿ ಸೂಕ್ತ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದು, ಹಲವು ಹಬ್ಬ ಹರಿದಿನಗಳನ್ನು ಉಲ್ಲೇಖಿಸಿ ಆ ದಿನದೊಳಗೆ ಬೇರೆ ಪಕ್ಷ ಸೇರುವುದಾಗಿ ತಿಳಿಸಿದ್ದು, ಯಾವ ಪಕ್ಷ ಎಂಬುದನ್ನು ತೀರ್ಮಾನಿಸುವುದು ಇನ್ನೂ ಸಾಧ್ಯವಾಗದ ಕಾರಣ ಮತ್ತೂ ಗೊಂದಲದಲ್ಲಿ ಮುಳುಗಿದ್ದಲ್ಲದೆ, ಈ ಸುದ್ದಿ ಓದಿದ ಎಲ್ಲರನ್ನೂ ಗೊಂದಲದ ಗೂಡಿನೊಳಗೆ ತೂರಿಸಿದ್ದು, ಅಂತಿಮವಾಗಿ ತಾವು ಯಾವ ಪಕ್ಷ ಸೇರಬೇಕು ಎಂಬುದನ್ನು ಮಾತ್ರವೇ ಅಲ್ಲ, ಈಗ ತಾನಿರುವ ಪಕ್ಷ ಯಾವುದು ಎಂಬುದನ್ನೇ ಮರೆತುಬಿಟ್ಟಿರುವುದಾಗಿ ನಮ್ಮ ಬೊಗಳೆ ರಗಳೆ ರದ್ದಿಗಾರರು ಯಾವ್ಯಾವುದೋ ಮೂಲಗಳನ್ನು ಉಲ್ಲೇಖಿಸಿ ತಲೆ ಕೆರೆದುಕೊಂಡು ಯಾವುದೇ ಉತ್ತರ ಹೊಳೆಯದೆ ತತ್ತರಿಸುತ್ತಾ ವರದಿ ಕಳುಹಿಸಿದ್ದಾರೆ. ಆದರೆ ಸಂತಾಪಕರು ಈ ಸುದ್ದಿ ನಿಖರವೇ ಎಂದು ತಿಳಿಯದೆ ಗೊಂದಲದ ಗೂಡಿನಿಂದಲೇ ತಲೆ ಹೊರಗೆ ಹಾಕಿ ಪ್ರಕಟಿಸಲು ಹಿಂದೆ ಮುಂದೆ ನೋಡುತ್ತಿರುವುದರಿಂದ ಈ ಗೊಂದಲಮಯ ಸುದ್ದಿ ಪ್ರಕಟವಾಗಿದೆ ಎಂದು ತಿಳಿಸಲು ವಿಷಾದಿಸುವುದಾಗಿಯೂ, ಕೊನೆಯ ಕ್ಷಣದ ಬದಲಾವಣೆ ಹೊರತಾಗಿ ಎಂದು ಒಂದು ಸಾಲನ್ನು ಸೇರಿಸಲೂ ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ!!!! ಉಫ್....!!!

Friday, March 07, 2008

ಕನಸು ನನಸಾಗಿಸುವ ಉಪಕರಣ ಶೋಧ!

(ಬೊಗಳೂರು ಡ್ರೀಮ್‌ಬಗ್ ಬ್ಯುರೋದಿಂದ)
ಬೊಗಳೂರು, ಮಾ.7- ಕನಸುಗಳನ್ನು ನನಸಾಗಿಸುವ ಉಪಕರಣವೊಂದು ಬೊಗಳೂರು ಅಜ್ಞಾನಿಗಳ ತಂಡವೊಂದು Someಶೋಧಿಸಿದ್ದು, ಇದಕ್ಕೆ ವಿಶೇಷವಾಗಿ ಕಾಲೇಜು ಸುತ್ತಮುತ್ತಲಿನ ಪರಿಸರಗಳು, ಲೇಡೀಸ್ ಹಾಸ್ಟೆಲ್ ಮತ್ತು ಜೆಂಟ್ಸ್ ಹಾಸ್ಟೆಲ್‌ಗಳಿಂದ ತೀವ್ರ ಬೇಡಿಕೆ ಕುದುರಿದೆ ಎಂದು ವರದ್ದಿಯಾಗಿದೆ.

ಈ ಉಪಕರಣಕ್ಕೆ ಡ್ರೀಮ್‌ಬಗ್ ಅಂತ ಹೆಸರಿಡಲಾಗಿದೆ. ಡ್ರೀಮ್ ಅನ್ನೋದು ಡ್ರೀಮೇ, ಆದರೆ ಬಗ್ ಅನ್ನೋದು ಮಾತ್ರ ಬೊಗಳೆ ಎಂಬುದರ ಕತ್ತರಿಸಿದ ರೂಪ ಎಂದು ಅಜ್ಞಾನಿಗಳು ತಿಳಿಸಿದ್ದಾರೆ. ಹೀಗಾಗಿ ಇದರಲ್ಲಿ ಬೊಗಳೆ ರಗಳೆ ಕೈವಾಡವಿರುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ. ಆದರೂ ಹುಡುಗರ ಡ್ರೀಮ್‌ಗರ್ಲ್‌ಗಳು ಮತ್ತು ಹುಡುಗಿಯರ ಡ್ರೀಮ್‌ಬಾಯ್‌ಗಳು ಈ ಡ್ರೀಮ್ ಬಗ್ ಖರೀದಿಗೆ ಮುಗಿಬೀಳುತ್ತಿದ್ದಾರೆ ಎಂಬುದನ್ನು ಪಕ್ಕದ್ಮನೆಯಲ್ಲಿ ನಡೆಯುತ್ತಿದ್ದ ಗಲಾಟೆಯನ್ನು ನೋಡಿ ನಮ್ಮ ವರದಿಗಾರರು ರಹಸ್ಯವಾಗಿ ಬಾಯಿಬಿಟ್ಟಿದ್ದಾರೆ.

ಆದರೆ ಸುಳ್ಳು ಸುಳ್ಳೇ ಕನಸು ಕಾಣುವ ಯುವ ವರ್ಗದಿಂದ ಈ ಉಪಕರಣಕ್ಕೆ ತೀವ್ರ ಪ್ರತಿರೋಧವೂ ಎದುರಾಗಿದೆ. ಕೆಲವು ಬಾರಿ ನಾವು ನಮ್ಮ ಎಲ್ಲ ಕ್ಲಾಸುಮೇಟ್‌ಗಳ ಬಗ್ಗೆ ಮತ್ತು ಗ್ಲಾಸುಮೇಟುಗಳ ಬಗ್ಗೆ ಕನಸು ಕಾಣುತ್ತಿರುತ್ತೇವೆ. ಅದೆಲ್ಲಾ ನನಸಾದಲ್ಲಿ ಅವರೆಲ್ಲರನ್ನೂ ನಿಭಾಯಿಸೋದು ಹೇಗೆ ಎಂಬುದು ಅವರ ಪ್ರಶ್ನೆ.

ಆದರೆ, ಹಗಲು ಕನಸು ಕಾಣುವುದಕ್ಕಾಗಿಯೇ ಕಾಲೇಜಿಗೆ ಬರುವವರು ಇದನ್ನು "ಭಯಂ"ಕರವಾಗಿ ಸ್ವಾಗತಿಸಿದ್ದಾರೆ. ಈಗಾಗಲೇ ಬುಕಿಂಗ್ ಆರಂಭಿಸಿರುವ ಅವರು, ಬೊಗಳೆಗೂ ಕನಸು ಕಾಣುವಂತೆ ಒತ್ತಾಯಿಸುತ್ತಿದ್ದಾರೆ ಎಂದು ವರದ್ದಿಗಾರರು ಬೆಚ್ಚಿಬಿದ್ದು ಕೆಂಡಾಮಂಡಲವಾಗಿ ವದರಿದ್ದಾರೆ.

ಈ ಕನಸಿನ ಉಪಕರಣವು ಮನಸಿನಲ್ಲೇನೇನಿದೆ ಎಂಬುದನ್ನೆಲ್ಲಾ ತಿಳಿಯಪಡಿಸುವುದರಿಂದ ಜಾರಕಾರಣಿಗಳಂತೂ ಬಾಲ ಸುಟ್ಟ ಇಲಿಯಂತೆ ರಾಜಪಥದಲ್ಲೇ ಅತ್ತಿತ್ತ ಶತಪಥ ಹಾಕುತ್ತಿದ್ದಾರೆ. ಎಲ್ಲಾದರೂ ಅಬ್ದುಲ್ ಕರೀಂ ತಲೆತೆಗಿ ಮುಂತಾದ ಹಗರಣಕೋರರನ್ನು, ಕೊಲೆಗಡುಕರನ್ನೆಲ್ಲಾ ಹಿಡಿದು ಈ ಉಪಕರಣದ ಮುಂದೆ ಇರಿಸಿದಲ್ಲಿ, ಅವರು ಪೂರ್ತಿಯಾಗಿ ಬಾಯಿ ಬಿಡದಂತೆ ಮಾಡಲು, ಅವರ ಬಾಯಿಯ ಸ್ನಾಯುವಿಗೆ ಹಗ್ಗ ಕಟ್ಟುವಂತೆ ಅಧಿಕಾರಿಗಳಿಗೆ ಒಳಗಿಂದೊಳಗೆ ಆದೇಶ ನೀಡುತ್ತಿದ್ದಾರೆ ಎಂಬುದನ್ನು ಬೊಗಳೆ ರಗಳೆಯ ರಹಸ್ಯ ಬ್ಯುರೋ ವದರಿದೆ.

Thursday, March 06, 2008

ಅಂಗಿ ಹಾಕಿದರೆ ಸುದ್ದಿ, ಕಳಚಿದರೆ ರದ್ದಿ!

(ಬೊಗಳೂರು ಬಟ್ಟೆರಹಿತ ಬ್ಯುರೋದಿಂದ)
ಬೊಗಳೂರು, ಮಾ.6- ಥೂ... ಯಾರಿಗೆ ಯಾವಾಗ ಎಂಥ ವರದಿಗಳನ್ನು ನೀಡಬೇಕೆಂಬುದು ಗೊತ್ತೇ ಆಗುತ್ತಿಲ್ಲವಲ್ಲ ಎಂಬುದು ಬೊಗಳೆ ಸೊಂಪಾದಕರುಗಳ ಉದ್ಗಾರ.

ಇದಕ್ಕೆ ಕಾರಣವೆಂದರೆ, ಸಾಲಮನ್ನಾ ಖಾನ್ ಅಂಗಿ ಕಳಚಿದ್ದನ್ನೇ ಸುದ್ದಿ ಮಾಡುವವರು ಮಾಧ್ಯಮಕ್ಕೆ ಅಪಚಾರ ಎಸಗಿದಂತೆ ಎಂಬುದು ಅವರ ಅಭಿಪ್ರಾಯ. ಇದೇಕೆ ತಮ್ಮಷ್ಟಕ್ಕೆ ತಾವೇ ಒದರಿಕೊಳ್ಳುತ್ತಿದ್ದೀರಿ? ಸಾಲಮನ್ನಾ ಖಾನನಿಗೆ ಏನಾದರೂ ಹಾಟ್ ಹಾಟ್ ತಾರೆಯರ ಕಾಟದಿಂದ ಸೆಖೆ ಜಾಸ್ತಿಯಾಗಿರಬೇಕು, ಅದಕ್ಕಾಗಿ ಅಂಗಿ ಕಳಚಿ ತಂಪು ಮಾಡಿಕೊಳ್ಳುತ್ತಿದ್ದಿರಬಹುದಲ್ಲ ಎಂದು ವರದ್ದಿಗಾರರು ಪ್ರಶ್ನಿಸಿದಾಗ, ಅದಕ್ಕೆ ಅವರು ಉದಾಹರಣೆ ಸಹಿತ ಉತ್ತರ ನೀಡಿ ನಮ್ಮನ್ನು ತತ್ತರಿಸುವಂತೆ ಮಾಡುತ್ತಾ ಐಸ್ ವಾಟರ್ ತರಿಸಿಕೊಂಡರು.

ಸಾಲಮನ್ನಾ ಖಾನ್ ಅಂಗಿ ಹಾಕಿದರೆ ಅದನ್ನು ಸುದ್ದಿ ಮಾಡಬೇಕು. ಅಂಗಿ ಕಳಚುವುದು ಮಾಮೂಲಿ ಸಂಗತಿಯೇ ಅಲ್ಲವೇ? ಎಂದು ಪ್ರಶ್ನಿಸಿರುವ ಅವರು, ಇದನ್ನೇಕೆ ಸುದ್ದಿ ಮಾಡಬೇಕು? ಈಗಾಗಲೇ ಜಾಗತಿಕ ತಾಪಮಾನ ಹೆಚ್ಚಾಗಿದ್ದು, ಎಲ್ಲರೂ ಸೆಕೆಯಲ್ಲಿದ್ದಾರೆ. ಶರ್ಟು ಕಳಚುತ್ತಾರೆ. ಅಂತೆಯೇ ಸಾಲಮನ್ನಾ ಖಾನ ಅವರು (ಬಟ್ಟೆಗೂ) ಕತ್ರೀನಾ? ಜತೆಗೆ ತಿರುಗಾಡಿಕೊಂಡು ಸುದ್ದಿ ಮಾಡುತ್ತಿದ್ದಾರೆ. ಆಗಾಗ್ಗೆ ತನ್ನ ಅಂಗಿ ಬದಲಾಯಿಸಿದಂತೆಯೇ ತಮ್ಮ ಲವರ್‌ಗಳನ್ನೂ ಬದಲಾಯಿಸುತ್ತಾ ಇರುತ್ತಾರೆ. ಇದನ್ನೆಲ್ಲಾ ಸುದ್ದಿ ಮಾಡುವುದು ಬಿಟ್ಟು, ಹುಟ್ಟುಡುಗೆಯಲ್ಲಿ ಇರೋದನ್ನೇ ಸುದ್ದಿ ಮಾಡಿದರೆ ನಮ್ಮಂಥ ಅವಮರ್ಯಾದಸ್ಥ ಪತ್ರಿಕೆಗಳಿಗೆ ಮತ್ತಷ್ಟು ಅವಮಾನ ಮಾಡಿದಂತಾಗುತ್ತದೆ ಎಂದು ಅಲವತ್ತುಕೊಂಡಿರುವುದನ್ನು ನಮ್ಮ ರದ್ದಿಗಾರರು ವರದಿ ಮಾಡಿಲ್ಲ.

Tuesday, March 04, 2008

ಅಂಪೈರ್ ಬೆರಳೆತ್ತೋದೂ ಜನಾಂಗೀಯ ನಿಂದನೆ!

(ಬೊಗಳೂರು ಸ್ಲೆಡ್ಜಿಂಗ್ ಬ್ಯುರೋದಿಂದ)
ಬೊಗಳೂರು, ಮಾ.4- ಭಜ್ಜಿಗೆ ಮೆಣಸಿನಕಾಯಿ ಪುಡಿ ಎರಚುತ್ತಾ ಸಂಭ್ರಮದಲ್ಲಿರುವ ಆಸೀಸ್ ಆಟಗಾರರು ಈ ಕ್ಷಣದ ವಿದ್ಯಮಾನವೊಂದರ ಪ್ರಕಾರ, ಅಂಪೈರ್ ವಿರುದ್ಧ ಜನಾಂಗೀಯ ನಿಂದನೆ ಆರೋಪ ಹೊರಿಸಿದ್ದಾರೆ.

ಫೀಲ್ಡಿನಲ್ಲಿ ಹರಭಜನ್ ಸಿಂಗ್ ಮಾಡುತ್ತಿರುವ ಎಲ್ಲ ಭಾವ ಭಂಗಿಗಳನ್ನು ಸ್ಲೆಡ್ಜಿಂಗ್, ಪ್ರಚೋದನೆ, ಜನಾಂಗೀಯ ನಿಂದನೆ ಎಂದೆಲ್ಲಾ ಜರೆಯುವ ಕಲೆಯನ್ನು ಕರಗತ ಮಾಡಿಕೊಂಡಿರುವ ಕಾಂಗರೂಗಳು, ಈ ಜನಾಂಗೀಯ ನಿಂದನೆ ಪಟ್ಟಿಗೆ ಹೊಸ ಹೊಸ ಕೇಸುಗಳನ್ನು ಸೇರಿಸಿಕೊಳ್ಳುವಲ್ಲಿಯೂ ನಿಷ್ಣಾತರಾಗಿದ್ದೇವೆ ಎಂದು ರಾಕಿ ಫಟಿಂಗ ಅವರು ಬೊಗಳೆ ರಗಳೆಗೆ ನೀಡಿದ ಸ-ಶೇಷ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಹರಭಜನ್ ಸಿಂಗ್ ಚೆಂಡನ್ನು ಸ್ಪಿನ್ ಮಾಡಿ ಎಸೆಯುವುದೇ ಜನಾಂಗೀಯ ನಿಂದನೆ ಎಂದು ಸ್ಪಷ್ಟಪಡಿಸಿರುವ ಅವರು, ಇದೇ ಕಾರಣಕ್ಕೆ ತಾನು ಹಲವಾರು ಬಾರಿ ಭಜ್ಜಿ ಬೌಲಿಂಗಿನಲ್ಲಿಯೇ ಔಟಾಗಿದ್ದೇನೆ. ಈ ಥರ ಜನಾಂಗೀಯ ನಿಂದನೆ ಮಾಡಿದರೆ, ನಾವು ಮುರಳೀಧರನ್ ಸಹಿತ ಏಷ್ಯಾ ಉಪಖಂಡದ ಬೌಲರುಗಳನ್ನು ಎದುರಿಸುವುದಾದರೂ ಹೇಗೆ. ಹಾಗಾಗಿ ಸ್ಪಿನ್ ಬೌಲಿಂಗನ್ನೇ ನಿಷೇಧಿಸಬೇಕು ಎಂದು ಫಟಿಂಗ ಆಗ್ರಹಿಸಿದ್ದಾರೆ.

ಇಶಾಂತ್ ಶರ್ಮಾ ಕೂಡ ಸೈಮೊಂಡನನ್ನು ಕ್ಲೀನ್ ಬೌಲ್ಡ್ ಮಾಡಿದ ಬಳಿಕ, ಆ ರೀತಿ ಬೆರಳೆತ್ತಿ ಔಟ್ ಅಂತ ಕೂಗಬಾರದಿತ್ತು. ಆತ ಕೂಡ ಕೈ ಬೆರಳೆತ್ತಿ ಜನಾಂಗೀಯ ನಿಂದನೆ ಮಾಡಿದ್ದಾರೆ ಎಂದು ಹೇಳಿದ ಅವರು, ಅಂಪೈರ್ ಹೇಗೆ ಜನಾಂಗೀಯ ನಿಂದನೆ ಮಾಡಿದರು ಎಂಬ ಪ್ರಶ್ನೆಗೆ ಈ ರೀತಿ ಉತ್ತರಿಸಿದರು:

ಆ ಅಂಪೈರಿಗೆ ತಲೆ ಇಲ್ಲ. ಕಾಂಗರೂ ಬ್ಯಾಟ್ಸ್‌ಮನ್‌ಗಳು ಔಟಾದಾಗ ಅವರೇಕೆ ಒಂದು ಬೆರಳು ಎತ್ತಿ ತೋರಿಸಬೇಕು? ಇದು ನಮಗೆ ಮಾಡಿದ ಅವಮಾನವಲ್ಲವೇ? ಅದೂ ಅವರು ಎತ್ತಿ ತೋರಿಸಿದ್ದು ತೋರು ಬೆರಳನ್ನೇ. ಒಂದು ವೇಳೆ ಅವರು ಒಂದು ಕೈಯ ಕಿರು ಬೆರಳು ಮಾತ್ರ ಎತ್ತಿದ್ದರೆ, ಭಾರತೀಯ ಬೌಲರುಗಳೆದುರಿನ ನಮ್ಮ ಪರಿಸ್ಥಿತಿಯ ಅರಿವು ನಮಗೆ ಮೂಡುತ್ತಿತ್ತು. ಅದಕ್ಕೆ ಖಂಡಿತವಾಗಿಯೂ ನಾವು ಪೆವಿಲಿಯನ್ ಪಕ್ಕವೇ ಹೋಗಬೇಕಾಗುತ್ತಿತ್ತು ಎಂದು ಕಿರು ಬೆರಳು ತೋರಿಸುತ್ತಾ, ಈಗ್ಬಂದೆ ಎನ್ನುತ್ತಾ ಪೆವಿಲಿಯನ್ ಹಿಂದಕ್ಕೆ ಓಡತೊಡಗಿದರು.

ಮರಳಿ ಬಂದ ಅವರಿಗೆ ಮತ್ತೆ ಪ್ರಶ್ನಿಸಲಾಯಿತು. ಹಾಗಿದ್ದರೆ, ನೀವೇಕೆ "ಜನಾಂಗೀಯ ನಿಂದನೆ" ಎಂಬ ಪದವನ್ನು ಬಳಸ್ತಿದೀರಿ, ನಿಮ್ಮದು ಯಾವ ಜನಾಂಗ? ಅಂತ ಕೇಳಿದಾಗ ತತ್ತರಿಸಿದ ಅವರು, "ನಮ್ಮದು ಯಾವ ಜನಾಂಗವಾದ್ರೆ ನಿಮಗೇನ್ರೀ... ಮಂಗ ಅಂತ ಹೇಳೋದು ನಮ್ಮ ಜನಾಂಗೀಯ ನಿಂದನೆಯೇ..." ಅಂತ ಸಮರ್ಥಿಸಿಕೊಂಡರು.

Monday, March 03, 2008

ಡೆಮಾಕ್ರಸಿ ನಾಶಕ್ಕೆ ಸಂಸದರಿಂದ ಓಟಿ ಡ್ಯೂಟಿ!

(ಬೊಗಳೂರು ಅಸತ್ಯ ಸಂಶೋಧನಾ ಬ್ಯುರೋದಿಂದ)
ಬೊಗಳೂರು, ಮಾ.3- ಅಗತ್ಯ ಬಿದ್ದಾಗಲೆಲ್ಲಾ 'ರಜಾ'ಕಾರಣಿಗಳಾಗುವ ನಿಟ್ಟಿನಲ್ಲಿ ಸಂಸತ್ತಿನಲ್ಲಿ ಗದ್ದಲವೆಬ್ಬಿಸುತ್ತಿರುವ ಸಂಸದರ ಮತ್ತು ಜಾರಕಾರಣಿಗಳ ಜನ್ಮವನ್ನು ಜಾಲಾಡಿದಾಗ ಸತ್ಯವಾಕ್ಯವೊಂದು ಹೊರಬಿದ್ದಿರುವುದು 'ಅಚಾನಕ್' ಎಂದು ಹೋಂಥಿಯೇಟರ್ ಸ್ಪೀಕರ್ ಸಿಸ್ಟಂ ಕಚೇರಿ ಮೂಲಗಳು ಅವಸರವಸರವಾಗಿ ಸ್ಪಷ್ಟಪಡಿಸಿವೆ.

ಎಲ್ಲಾ ರಜಾಕಾರಣಿಗಳು ಕೂಡ ಭಾರತೀಯ ಪ್ರಜಾಸತ್ತೆಯನ್ನು ಪ್ರಜೆ ಸತ್ತೇ ಹೋಗುವ ಮಾದರಿಯಲ್ಲಿ ಮುಗಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿರುವುದು ಸತ್ಯ ಹರಿಶ್ಚಂದ್ರನಿಗೆ ಮಾಡಿರುವ ಅಪಮಾನ ಎಂದು ಗದ್ದಲದಲ್ಲೇ ಕಾಲ ಕಳೆಯುತ್ತಿರುವ, ಕಾಲೆಳೆಯುತ್ತಿರುವ ಸಂಸದರು ಮತ್ತು ಇತರ ರಜಾಕಾರಣಿಗಳು ಆಕ್ರೋಶ ವ್ಯಕ್ತಪಡಿಸಿದ್ದರು.

ಈ ಹಿನ್ನೆಲೆಯಲ್ಲಿ, ತಾವೂ ಒಬ್ಬ ಸಂಸದ ಮತ್ತು ರಜಾಕಾರಣಿಯೂ ಆಗಿರುವುದರಿಂದ ಸ್ಪಷ್ಟನೆ ನೀಡಲೇಬೇಕಾದ ಅನಿವಾರ್ಯತೆಗೆ ಸಿಲುಕಿರುವ Woofer ಸ್ಪೀಕರ್ ಕಚೇರಿ, ಇದೊಂದು ಪ್ರಮಾದವಾಗಿದ್ದು, ಬೊಗಳೆ-ರಗಳೆಯ ಬಾಯಿಗೆ ಬಿದ್ದರೆ, 'ಸತ್ಯ ವಾಕ್ಯವ ನೆಚ್ಚಿ ನಡೆದರೆ ಮೆಚ್ಚನಾ ಪರಮಾತ್ಮನು' ಎಂಬ ಧ್ಯೇಯ ವಾಕ್ಯದೊಂದಿಗೆ ಹೋರಾಟ ಆರಂಭಿಸಬಹುದು ಎಂದು ಆತಂಕ ವ್ಯಕ್ತಪಡಿಸಿದರಲ್ಲದೆ, ಈ ಬಗ್ಗೆ ದಯವಿಟ್ಟು ದನಿಯೆತ್ತದಂತೆ ಮನವಿ ಮಾಡಿಕೊಂಡರು.

ಫಾಲೋ ಅಪ್
ಆದರೆ ಡೆಮಾಕ್ರಸಿ ಎಂದರೇನು, ಅಂಥದ್ದೊಂದು ನಮ್ಮ ಸಂಸತ್ತಿನಲ್ಲಿ ಇದೆಯೇ ಎಂಬುದರ ಬಗ್ಗೆ ಸಂಸದರು ಯೋಚನೆ ಮಾಡಲಾರಂಭಿಸಿದ್ದೇ, ಸ್ಪೀಕರ್ ಅವರು ಈ ಹೇಳಿಕೆ ನೀಡಿದ ನಂತರವೇ ಎಂಬುದನ್ನು ಬೊಗಳೆ ರಗಳೆ ಬ್ಯುರೋ ಯಾರಿಗೂ ಗೊತ್ತಾಗದಂತೆ ಪತ್ತೆ ಮಾಡಿದೆ.

ಇದಲ್ಲದೆ, ಸದನದಲ್ಲಿ ಮನೆಯ ಬಾವಿ (Well of the house) ತೋಡಿದ್ದೇಕೆ? ಅದು ಇದ್ದದ್ದರಿಂದಲೇ ಅಲ್ಲವೇ, ಸಂಸದರೆಲ್ಲಾ ಬಾವಿಗೆ ಬೀಳಲು ಧಾವಿಸುತ್ತಿದ್ದದ್ದು ಎಂಬುದರ ಕುರಿತಾಗಿಯೂ ಬೊ.ರ. ಬ್ಯುರೋ ಸಂಶೋಧನೆ ನಡೆಸಿದಾಗ ಮತ್ತೊಂದು ವಿಷವಿಷಯವೂ ಪತ್ತೆಯಾಯಿತು. ಬಜೆಟಿನಲ್ಲಿ ರೈತರ ಆತ್ಮಹತ್ಯೆ ತಡೆಗಾಗಿ ಘೋಷಿಸಲಾಗುವ ಪ್ಯಾಕೇಜಿಗಾಗಿ ತಾವು ಕೂಡ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವಂತಹ ಪರಿಸ್ಥಿತಿ ಬಂದಿತ್ತು ಎಂಬುದನ್ನು ಜನತೆಗೆ ತಿಳಿಸಲು ಸದನದಲ್ಲಿರುವ ಬಾವಿಯೇ ಅತ್ಯಂತ ಸೂಕ್ತ ವೇದಿಕೆ ಅಂತ ಅವರೆಲ್ಲಾ ತೀರ್ಮಾನಿಸಿದ್ದರು.

ಈ ಗದ್ದಲಕ್ಕೆ ಮತ್ತೊಂದು ಕಾರಣವೂ ಇದೆ. ಪ್ರಜಾಸತ್ತೆಯನ್ನು ಮುಗಿಸಿಬಿಡಲು ಓವರ್ ಟೈಮ್ ಕೆಲಸ ಮಾಡಿದರೆ, ತಮಗೆ ಸರಕಾರದಿಂದ ದೊರೆಯುವ ಭರ್ಜರಿ ಸವಲತ್ತುಗಳ ಪಟ್ಟಿಯಲ್ಲಿ ಟಿಎ, ಡಿಎ, ಬಿಎ, ಸಿಎ, ಎಕ್ಸ್ಎ, ವೈಎ, ಝಡ್ಎ ಮುಂತಾದವುಗಳ ಜತೆ "ಓಟಿ" ಸೌಲಭ್ಯವನ್ನೂ ಸೇರಿಸಿಕೊಳ್ಳಬಹುದು ಎಂಬುದು ಸಂಸದರ ಲೆಕ್ಕಾಚಾರವಾಗಿತ್ತು.

ಎಂಜಿನ್ ಇಲ್ಲದ ರೈಲು: ಬ್ರೇಕಿಂಗ್ ನ್ಯೂಸ್ ಅಲ್ಲವೆಂದ ಬೊ.ರ.

[ಬೊಗಳೂರು ಪಟ್ಟೆ-ರಹಿತ ರೈಲು ಬ್ಯುರೋ] ಬೊಗಳೂರು: ಆಫ್‌ಲೈನ್ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯೊಂದು ಆನ್‌ಲೈನ್ ಸಂಪಾದಕರ ಕಣ್ಣು ಕುಕ್ಕಿದ್ದು, ಎಂಜಿನ್ ಇಲ್ಲದೆ...