Wednesday, April 30, 2008

ಕತ್ತೆಗಳ ಪ್ರಣಾಳಿಕೆ ಬಿಡುಗಡೆ: ಗಾರ್ದಭ ಸಂಘ ಹರ್ಷ

(ಬೊಗಳೂರು ಕತ್ತೆ ಸಂರಕ್ಷಣಾ ಬ್ಯುರೋದಿಂದ)

ಬೊಗಳೂರು, ಏ.30- ಇಷ್ಟು ವರ್ಷ ಆರಿಸಿ ಬಂದರೂ ಕೂಡ, ಅಧಿಕಾರ ಹೊಂದಿದರೂ ಕೂಡ, ಕತ್ತೆಗಳು ಅಭಿವೃದ್ಧಿಯಾಗಲಿಲ್ಲ ಎಂದು ಸುಳ್ಳು ಸುಳ್ಳೇ ಅಪಪ್ರಚಾರ ಮಾಡುತ್ತಿರುವ ಪ್ರತಿಭಟನಾ ಪಕ್ಷವೊಂದರ ವಿರುದ್ಧ ಮತ ಚಲಾಯಿಸಲು ಮತದಾರರು ನಿರ್ಧರಿಸಿದ್ದಾರೆ.

ಯಾರ 'ಪರ'ವಾಗಿ ಮತ ಚಲಾಯಿಸದಿದ್ದರೂ ಪರವಾಗಿಲ್ಲ, ಆದರೆ 'ಕತ್ತೆಗಳ ಅಭಿವೃದ್ಧಿಯಾಗಿಲ್ಲ' ಎನ್ನುತ್ತಾ ಅದಕ್ಕಾಗಿಯೇ ಪ್ರಣಾಳಿಕೆ ಬಿಡುಗಡೆ ಮಾಡಿರುವ ಪಕ್ಷದ 'ವಿರುದ್ಧ' ಮತ ಚಲಾಯಿಸುವುದು ಗ್ಯಾರಂಟಿ ಎಂದು ಬೊಗಳೂರಿನ ಮಹಾ ಪ್ರಜೆಗಳು ತೀರ್ಮಾನಿಸಿದ್ದಾರೆ ಎಂಬುದಾಗಿ ನಮ್ಮ ವರದ್ದಿಗಾರರು ಅರಚಿದ್ದಾರೆ.

ರಾಜ್ಯದ ಖಜಾನೆಯು ಬರಿದಾಗಿರುವುದೇ ಇಂಥಹ ಕತ್ತೆಗಳಿಂದಾಗಿ. ರಾಜ್ಯದಲ್ಲಿ ಕತ್ತೆಗಳು ಭಯಂಕರ ಅನ್ನಿಸುವ ರೀತಿಯಲ್ಲಿ ಅಭಿವೃದ್ಧಿ ಸಾಧಿಸಿದ್ದು, ತಮ್ಮ ಮಕ್ಕಳು, ಮೊಮ್ಮಕ್ಕಳು, ಮರಿಮೊಮ್ಮಕ್ಕಳ ಸಂತಾನಕ್ಕಾಗುವಷ್ಟು ಸಂಪತ್ತನ್ನು ಈಗಾಗಲೇ ಗುಡ್ಡೆ ಹಾಕಿಕೊಂಡಿವೆ. ಆದರೆ ಅಖಿಲ ಕರುನಾಟಕ ಪ್ರತಿಭಟನಾ ಪಕ್ಷವು ಮಾತ್ರ, 'ಕತ್ತೆಗಳು ಅಭಿವೃದ್ಧಿಯಾಗಿಲ್ಲ, ಅವುಗಳ ಅಭಿವೃದ್ಧಿಗೆ ಶ್ರಮಿಸಲಾಗುತ್ತದೆ' ಎಂದು ಸಾರಿರುವುದು ಅಸತ್ಯದ ಪರಮಾವಧಿ ಎಂದು ದೂರಿರುವ ಬೊಗಳೂರು ಮತದಾರರು, ಕತ್ತೆಗಳ ಅಭಿವೃದ್ಧಿಯಾಗದಬೇಕಿದೆ ಎಂದು ಹೇಳಿರುವುದು ಯಾವ ನಿಟ್ಟಿನಲ್ಲಿ? ಅದೇನು ಕತ್ತೆಗಳ ಸಂತಾನ ಅಭಿವೃದ್ಧಿಯೇ? ಈ ಮೂಲಕ ಮತ್ತಷ್ಟು ಓಟುಗಳನ್ನು ಪಡೆಯುವ ಸಂಚೇ? ಎಂದೂ ಪ್ರಶ್ನಿಸಿದ್ದಾರೆ.

ಅಲ್ಲದೆ, ಈಗಾಗಲೇ ಬೀದಿ ಬೀದಿಗಳಲ್ಲಿ ಸಾಕಷ್ಟು ಕತ್ತೆಗಳು ಕಾರಿನ ಮೇಲೇರಿ, ಬೈಕಿನಲ್ಲಿ ಮೈಕು ಹಿಡಿದು ಅರಚಾಡುತ್ತಿವೆಯಲ್ಲ? ಇನ್ನೆಂತಕ್ಕೆ ಅವುಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸುವುದು? ಎಂದು ಏನೂ ಅರಿಯದ ಮುಗ್ಧರಂತಿರುವ ಬೊಗಳೂರಿನ ಮತಬಾಂಧವರು ಮತ್ತು ಮದಬಾಂಧವರು ಹಾಗೂ ಮತ-ದಾರ ಬಾಂಧವರು ಪ್ರಶ್ನಿಸಿದ್ದಾರೆ.

ರಾಜ್ಯದಲ್ಲಿ ಏನೇ ಸಂಭವಿಸಿದರೂ ಪ್ರತಿಭಟನೆ ಮಾಡಬೇಕಾಗುತ್ತದೆ. ಈ ಪ್ರತಿಭಟನಾ ಪ್ರದರ್ಶನದಲ್ಲಿ ಕೂರಲು, ಮೆರವಣಿಗೆಯಲ್ಲಿ ಸಾಗಲು ಸಾಕಷ್ಟು ಸಂಖ್ಯೆಯ ಕತ್ತೆಗಳ ಅವಶ್ಯಕತೆಯಿದೆ. ಈ ಏಕೈಕ ಉದ್ದೇಶವೇ ಈ ಪ್ರಣಾಳಿಕೆಯ ಹಿಂದಿರಬಹುದು ಎಂದು ಬಲವಾಗಿ ಶಂಕಿಸಲಾಗುತ್ತಿದೆ.

ಮನೆಮನೆಗೆ ಟೀವಿ: ರಾಜ್ಯಾದ್ಯಂತ ಪ್ರಣಾಳಿಕೆಗಳನ್ನು, ಪ್ರಣಾಳ ಶಿಶುಗಳನ್ನು ಬಿಡುಗಡೆ ಮಾಡುತ್ತಿರುವ ಪಕ್ಷಗಳ ಸಾಲಿಗೆ ಈ ಪಕ್ಷವೂ ತೂರಿಕೊಂಡಿದ್ದು, ಬೇರೆ ಪಕ್ಷಗಳು ಟೀವಿ, ಕರೆಂಟು, ರೋಡು, ನೀರು ಇತ್ಯಾದಿ ಕೊಡುವುದಾಗಿ ಘೋಷಿಸಿವೆ. ಆದರೆ ಪ್ರತಿಭಟನಾ ಪಕ್ಷವು ಪುಟ್ಟ ಪಕ್ಷವಾಗಿರುವುದರಿಂದ ಪಕ್ಷದ ಚಿಹ್ನೆಯಾಗಿ ಟೀವಿಯನ್ನೇ ಇಟ್ಟುಕೊಂಡಿದ್ದು, ರಾಜ್ಯದ ಎಲ್ಲ ಮತದಾರರ ಮನೆ ಮನೆಗೆ ಸಾಕು ಬೇಕಾಗುವಷ್ಟು ಟೀವಿಗಳನ್ನು ಠೀವಿಯಿಂದಲೇ ವಿತರಿಸಲು ಆ ಪಕ್ಷದ ಕಾರ್ಯಕರ್ತರು ಸಿದ್ಧತೆ ನಡೆಸುತ್ತಿರುವುದಾಗಿ ನಮ್ಮ ಬೇನಾಮಿ ಸುದ್ದಿ ಮೂಲಗಳು ವರದ್ದಿ ಹಾಕಿವೆ.

ಟೀವಿಯಿಲ್ಲದ ಮನೆಗಳಿಗೆ ಟೀವಿಯ ಚಿಹ್ನೆ ನೀಡಿ, ಪ್ರತಿಯೊಂದು ಮನೆಗೂ ಟೀವಿ ನೀಡುವ ಗುರಿಯನ್ನು ಆರಿಸಿಬರುವ ಮೊದಲೇ... ಅಷ್ಟೇಕೆ, ಚುನಾವಣೆಯಾಗುವ ಮೊದಲೇ ವಿತರಿಸಿ, ಆಶ್ವಾಸನೆ ಈಡೇರಿಸಿದ ಅಪಖ್ಯಾತಿಗೆ ಗುರಿಯಾಗುವ ಹುನ್ನಾರವಿದು ಎಂದು ರಾಜಕೀಯವಾಗಿ ವಿಶ್ಲೇಷಿಸಲಾಗುತ್ತಿದೆ.

ಆದರೆ, ಇನ್ನೊಂದೆಡೆ ಗಾರ್ದಭ ಸಮುದಾಯವಂತೂ ಆನಂದತುಂದಿಲವಾಗಿದ್ದು, ಈಗಾಗಲೇ ರಾಜ್ಯ ರಾಜಕೀಯದಲ್ಲಿ ಮೆರೆಯುತ್ತಿರುವ ತಮ್ಮ ಕುಟುಂಬದವರ ಸಂಖ್ಯೆಗೆ ಹೊಸ ಹೊಸ ತಳಿಗಳು ಸೇರ್ಪಡೆಯಾಗಲಿವೆ, ಇದೂ ಅಲ್ಲದೆ, ಟೀವಿ ಜಾಹೀರಾತುಗಳ ಮಧ್ಯೆ ಮಧ್ಯೆ ಆಗಾಗ್ಗೆ ಇಣುಕುತ್ತಿರುವ ಧಾರಾವಾಹಿಗಳಂತೆ ದಿನಕ್ಕೆ ನೂರಾರು ಬಾರಿ ಟೀವಿಯಲ್ಲಿ ಕಾಣಿಸಿಕೊಳ್ಳಲೂ ಬಹುದು ಎಂದು ಹರ್ಷಚಿತ್ತರಾಗಿ ನುಡಿದಿದ್ದಾರೆ ಅಖಿಲ ಭಾರತ ಗಾರ್ದಭ ಸಂಘದ ಅತಿಹಿರಿಯ ಕಾರ್ಯನಿರ್ವಾಹಕ ಆಡಳಿತ ನಿರ್ದೇಶಕ ಶ್ರೀಮಾನ್ ಕ.ಕುಮಾರ್ ಅವರು.

Tuesday, April 29, 2008

ಪಕ್ಷದಲ್ಲಿ ಕೀಳ್ಯಾವುದೋ... ಹುಚ್ಚಪ್ಪಾ...!

(ಬೊಗಳೂರು ಕುಲಗೆಡಿಸುವ ಬ್ಯುರೋದಿಂದ)

ಬೊಗಳೂರು, ಏ.29- ಯಾವ ಪರಿಯೆಲ್ಲಾ ಕುಲಗೆಡಿಸಬಹುದೋ, ಆ ಮಾದರಿಯಲ್ಲಿ ಗಬ್ಬೆದ್ದು ನಾದುತ್ತಾ ಇರುವ "ಕರುನಾಟಕ ರಾಜಕೀಯ"ವೆಂಬ ಹುಲುಸಾಗಿ ಬೆಳೆ ತೆಗೆಯಬಹುದಾದ ಕಾಳ ಸಂತೆಯಲ್ಲಿ ಟಿಕೆಟ್ ಮಾರುತ್ತಿದ್ದ ಬೊಗಳೂರಿನ ಬಹು ಗೌರವಾನ್ವಿತ ರಾವಣ, ರಾಸಂಧ, ಕೀಚಕ, ಮರಾಜರನ್ನು ಬಂಧಿಸಿದ್ದೇ ಅಸತ್ಯಾನ್ವೇಷಿ ಬೊಗಳೂರಿನಿಂದ ನಾಪತ್ತೆಯಾಗುವುದಕ್ಕೆ ಪ್ರಧಾನ ಕಾರಣ ಎಂದು ಪತ್ತೆಯಾಗಿದೆ.

ಇಲ್ಲಿ ಯಾವುದೇ ಪಕ್ಷದ ಹಾಗೂ ಯಾವುದೋ ಪಕ್ಷದ ಟಿಕೆಟ್‌ಗಳು ಕೂಡ ಸಿದ್ಧವಿದೆ. ಒಂದು ಕಂಡಿಷನ್ ಮತ್ತು ಏಕಮಾತ್ರ ಅರ್ಹತೆಯೆಂದರೆ ಐಪಿಎಲ್ ಪಾಲಿಸಿ. ಅಂದರೆ ಐಪಿಎಲ್ ಎಂಬ ವಿಮಾ ಪಾಲಿಸಿಯನ್ನು ತೆಗೆದುಕೊಳ್ಳಬೇಕೆಂದು ಅರ್ಥವಲ್ಲ. ಐಪಿಎಲ್ ನೀತಿ. ಏನೇ ಆಗಬೇಕಿದ್ದರೂ ಹಣ ಝಣ ಝಣ. ಕುಲದಲ್ಲಿ ಕೀಳ್ಯಾವುದೋ... ಹುಚ್ಚಪ್ಪ ಎಂಬ ಹಾಡು ನೆನಪಾಗಿದ್ದು ಇದೇ ಕಾರಣಕ್ಕೆ. ಹಣದ ಎದುರು ಪಕ್ಷನಿಷ್ಠೆ, ತತ್ವ, ಸಿದ್ಧಾಂತ, ಜನಸೇವಾ ತುಡಿತ ಇವೆಲ್ಲಾ ನಿರ್ದಾಕ್ಷಿಣ್ಯವಾಗಿ ಮಾಯವಾಗುವುದರಿಂದಾಗಿ ಪಕ್ಷದಲ್ಲಿ ಕೀಳ್ಯಾವುದೋ ಹುಚ್ಚಪ್ಪ ಎಂಬ ಹಾಡು ಬೀದಿ ಬೀದಿಯಲ್ಲಿ ಕೇಳಿಬರುತ್ತಿದೆ. ಐಪಿಎಲ್‌ನ ತಂಡವೊಂದರ ಹೆಸರು ಹೇಳಲು ಹಣ, ಆ ತಂಡದಲ್ಲಿದ್ದ ಒಬ್ಬ ಕ್ರಿಕೆಟಿಗನ ಹೆಸರು ಹೇಳಬೇಕಿದ್ದರೆ ಹಣ, ಆ ಆಟಗಾರ ಒಂದು ರನ್ನು ತೆಗೆದರೆ ಹಣ, ಚೆಂಡು ಮುಟ್ಟಿದರೆ ಹಣ, ಅವರು ಏನು ಮಾಡಿದರು, ಎಷ್ಟು ಚಚ್ಚಿದರು, ಚಚ್ಚಿಸಿಕೊಂಡರು ಎಂಬುದನ್ನು ಬೊಗಳೆಯಂತಹಾ ಪತ್ರಿಕೆಗಳಲ್ಲಿ ಬರೆಯಬೇಕಿದ್ದರೂ ಹಣ.... ಝಣ... ಝಣ....

ಇದೇ ಪಾಲಿಸಿಯನ್ನು ಈ ರಂಗು ರಂಗಿನ ಚುನಾವಣಾ ಕಣದಲ್ಲೂ ಅನುಸರಿಸಲು ನಿರ್ಧರಿಸಲಾಗಿದ್ದು, ಹೈಯೆಸ್ಟ್ ಬಿಡ್ಡು ಸಲ್ಲಿಸಿ ದುಡ್ಡು ಕಳೆದುಕೊಂಡವರಿಗೆ ಮಣೆ. ಈ ಪಕ್ಷದಲ್ಲಿ ಟಿಕೆಟ್ ಸಿಗದೆ ಬೇರೆ ಪಕ್ಷದ ಟಿಕೆಟ್ ಸಿಗಬೇಕಿದ್ದರೆ ಆ ಪಕ್ಷಕ್ಕೆ ದುಪ್ಪಟ್ಟು ಹಣ. ಈ ಪಕ್ಷಕ್ಕಾದರೆ ಇಂತಿಷ್ಟು, ಹೇಳ ಹೆಸರಿಲ್ಲದ ಪಕ್ಷಕ್ಕಾದರೆ ಅತಿ ಕಡಿಮೆ. ಎಲ್ಲಾ ಬಿಟ್ಟು ನಿಮ್ಮದೇ ಸ್ವಂತ ಪಕ್ಷ ಕಟ್ಟಿ ಚುನಾವಣೆಗೆ ಸ್ಪರ್ಧಿಸುತ್ತೀರೆಂದಾದರೆ, ಅದಕ್ಕೆ ನಾಮಿನಲ್ ಹಣ ಕೊಟ್ಟರಾಯಿತು.

ಕೊಟ್ಟ ಕೊನೆಗೆ, ನಮ್ಮ ಬ್ಯುರೋದಲ್ಲಿರುವ ಭಾವಚಿತ್ರವನ್ನು ಹೋಲುವವರಂತೆ ಟಿಕೆಟಿಗಾಗಿ ಮರದಿಂದ ಮರಕ್ಕೆ ಹಾರುವ ಪಂಗಡಕ್ಕೆ ಸೇರಿದವರು, ತಮ್ಮ ಕೈಯಲ್ಲಿರೋದು ಯಾವ ಪಕ್ಷದ ಟಿಕೆಟ್, ತಾವು ಯಾವ ಪಕ್ಷಗಳ ಬಾಗಿಲನ್ನೆಲ್ಲಾ ಬಡಿದೆವು, ನಿಜವಾಗಿ ತಾವು ಸ್ಪರ್ಧಿಸಬೇಕಿರುವ ಪಕ್ಷ ಯಾವುದು, ಯಾವ ಪಕ್ಷವನ್ನು ಸೋಲಿಸಬೇಕು ಎಂಬಿತ್ಯಾದಿಗಳನ್ನು ನೆನಪಿಸಿಕೊಳ್ಳಲು ಹತ್ತು ಹಲವಾರು ಸೆಕ್ರೆಟರಿಗಳನ್ನು ಇರಿಸಿಕೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕಿರುವುದಾಗಿ ನಮ್ಮ ವರದ್ದಿಗಾರರು ಒದರಿದ್ದಾರೆ.

ಒಟ್ಟಿನಲ್ಲಿ ಟಿಕೆಟ್ ಪಟ್ಟಿ ಬಿಡುಗಡೆ ಎಂಬುದು ಕಪ್ಪೆಗಳನ್ನು ತಕ್ಕಡಿಯಲ್ಲಿಟ್ಟು ತೂಗಿದಂತಹಾ ಸನ್ನಿವೇಶವನ್ನು ಸೃಷ್ಟಿಸಿದ್ದು, ಕರ್ನಾಟಕದ ಮತದಾರರಂತೂ ಟಿಕೆಟಿಲ್ಲದೆಯೇ ಮನರಂಜನೆ ಅನುಭವಿಸುತ್ತಿದ್ದಾರೆ.

ವಿ.ಸೂ.: ಇಂಥದ್ದೇ ಸಾಕಷ್ಟು ಮನರಂಜನಾ ಚಟುವಟಿಕೆಗಳನ್ನು ಸವಿಯುವುದಕ್ಕಾಗಿ ಬೊಗಳೂರಿನ ಕೆಲಸವಿಲ್ಲದ ಏಕಸದಸ್ಯ ಬ್ಯುರೋದ ಸಮಸ್ತ ಸಿಬ್ಬಂದಿಗಳು, ರಜಾ ಕಾಲದ ಪ್ರವಾಸಕ್ಕಾಗಿ ಬೊಗಳೂರಿಗೇ ರಜೆ ಸಾರಿದ್ದು, ಬೊಗಳೂರಿನಲ್ಲಿ ಶೋಕಾಚರಣೆ ನಡೆದಿತ್ತು. ಇಷ್ಟು ದಿನಗಳ ಕಾಲ ದುಡ್ಡು ಕೊಟ್ಟವರಿಗೆ ಮಾತ್ರವೇ ಪತ್ರಿಕೆ ಸರಬರಾಜು ಮಾಡಲಾಗುತ್ತಿತ್ತು ಎಂಬುದನ್ನು ನಾವು ಯಾರಿಗೂ ಜ್ಞಾಪಿಸಲು ಇಚ್ಛಿಸುವುದಿಲ್ಲ.

Thursday, April 17, 2008

ಬೊಗಳೆ ಚುನಾವಣಾ ಪ್ರಣಾಳಶಿಶು ಬಿಡುಗಡೆ!

(ಬೊಗಳೂರು ಚುನಾವಣಾ ಬ್ಯುರೋದಿಂದ)
ಬೊಗಳೂರು, ಏ.17- ಆಕಸ್ಮಿಕವಾಗಿ ಬೊಗಳೂರು ಚುನಾವಣಾ ಬ್ಯುರೋದಿಂದ ಚುನಾವಣಾ ಪ್ರಣಾಳಶಿಶುವನ್ನು ಬೇರೆಯವರ ಮೊದಲೇ ಬಿಡುಗಡೆಗೊಳಿಸಲಾಗಿದ್ದು, ಬೊ.ರ. ವಿರೋಧಿಸುವ ಪತ್ರಿಕೆಗಳು ಪ್ರಕಟಿಸುವ ಮುನ್ನವೇ ಇದನ್ನು ಪ್ರಕಟಿಸುವಂತೆ ಸೊಂಪಾದಕರು ತಲೆಕೆಡಿಸಿಕೊಂಡಿರುವಂತೆಯೇ ಕಿರಿಕಿರಿಯ ಉಪಸಂಪಾದಕರು ಪಬ್ಲಿಷ್ ಮಾಡಿದ್ದಾರೆ.

ಸೂಚನೆ: ಆದರೆ ಕೆಲವು ಮಾಹಿತಿಗಳ ಪ್ರಕಾರ, ಇದು ನಮ್ಮ ವಿರೋಧಿ ಪತ್ರಿಕೆಗಳಿಗೆ, ಅಂದರೆ ನಮ್ಮನ್ನು ವಿರೋಧಿಸುವ ಪತ್ರಿಕೆಗಳಿಗೆ ನೀಡಲೆಂದು ಜಗತ್ತಿನ ಹೆಸರಾಂತ ಪಕ್ಷವು ಸಿದ್ಧಪಡಿಸಿರುವ ಜಾಹೀರಾತು. ಈ ಜಾಹೀರಾತನ್ನು ಅವರೆಲ್ಲರಿಗಿಂತ ಮುನ್ನವೇ ಪ್ರಕಟಿಸಬೇಕೆಂಬ ತರಾತುರಿಯಲ್ಲಿ ಬೊ.ರ. ಬ್ಯುರೋ ಕದ್ದು ತಂದು ಇಲ್ಲಿ ಪ್ರಕಟಿಸಿದೆ. ಕೆಲಸವಿಲ್ಲದ ಬ್ಯುರೋದ ಅಸಾಧ್ಯ ಶ್ರೀಮಾನ್ ಶ್ಶೀ ಶ್ಶೀ ಶ್ಶೀ ಅನ್ವೇಷಿಯೇ ಚುನಾವಣೆಗೆ ನಿಲ್ಲುತ್ತಿದ್ದಾರೆಯೇ ಎಂಬ ಬಗ್ಗೆ ತಪ್ಪು ತಿಳಿದುಕೊಳ್ಳಬೇಕಾಗಿಲ್ಲ.

ಪ್ರಣಾಳಿಕೆಯ ಪ್ರಣಾಳಶಿಶುವಿನ ಅಂಶಗಳು ಇಂತಿವೆ:

ಮಾನವ ಮತದಾರ ಬಂಧುಗಳೇ,

ಆದರದಿಂದಲೇ ಮತ ನೀಡುವ ಮತದಾರ ಬಂಧುಗಳ ಮತಗಳೇ ನಮಗೆ ಆಧಾರ.

ನಾವು ನಿಮಗೆ ಜುಷ್sssss ಎಂದು ಹೊಗೆ ಬಂದಂತೆ ಸದ್ದು ಮಾಡುವ, ಬಣ್ಣ ಬಣ್ಣದ ಟೀವಿ ಕೊಡುತ್ತೇವೆ, 2 ರೂಪಾಯಿಗೆ ಮೂರು ಕಾಸಿನ ಅಕ್ಕಿ ಕೊಡುತ್ತೇವೆ, ಹಚ್ಚ ಹಸಿರಾಗಿರೋ ಕೆಲಸಕ್ಕೆ ಬಾರದ ಕಾರ್ಡು ಕೊಡುತ್ತೇವೆ. ಇವೆಲ್ಲವೂ ನಿಮಗಾಗಿ ಉಚಿತ. ಇದು ಖಚಿತ. ನಮ್ಮನ್ನು ದಯವಿಟ್ಟು ನಂಬಿ. ಆದರೆ ನೀವು ನೀಡಬೇಕಿರುವುದು ಕೇವಲ ಒಂದು ಮತ ಮಾತ್ರ. ಏನೂ ಮಾಡ್ಬೇಕಾಗಿಲ್ಲ, ನಿಮ್ಮ ತೋರು ಬೆರಳನ್ನು ನಮ್ಮ ಪಕ್ಷದ ಚಿಹ್ನೆ ಇರುವ ಪಕ್ಕದ ಗುಂಡಿಗೆ ಒತ್ತಿದರಾಯಿತು. ಅಲ್ಲಿಗೆ ನೀವು ಗುಂಡಿಗೆ ಬಿದ್ದಂತೆಯೇ ಸೈ.

ಈ ಮೇಲೆ ಹೇಳಿದ್ದೆಲ್ಲವನ್ನೂ ನೀವು ಸಂಪಾದಿಸಬೇಕಿದ್ದರೆ, ನಮ್ಮವರಿಗೆ, ನಮ್ಮ ಪಕ್ಷದವರಿಗೆ, ಅಧಿಕಾರಿಗಳಿಗೆ ಒಂದಷ್ಟು ಆಗಾಗ್ಗೆ ಕೊಡಲೆಂದು ನೀವು ಕಚೇರಿಯಿಂದ ಕಚೇರಿಗೆ ಅಲೆದಾಡುತ್ತಿದ್ದರಾಯಿತು. ಬೇರೇನೂ ಕೆಲಸವೇ ಮಾಡಬೇಕಾಗಿಲ್ಲ.
ಈ ಎಲ್ಲಾ ಫ್ರೀ-ಬೀಗಳಿಗೆ ಒಂದೊಂದು ಕಂಡಿಷನ್ನನ್ನೂ ನಾವು ಇಡುತ್ತಿದ್ದೇವೆ. ನೀವು ನಮಗೇ ಓಟು ಹಾಕಿದ್ದೂಂತ ತೋರಿಸೋದಿಕ್ಕೆ ದಾಖಲೆ ಪತ್ರಗಳನ್ನು ತಾಲೂಕು ಕಚೇರಿಯಿಂದ ಪಡೆದುಕೊಳ್ಳಬೇಕು. ಅದಕ್ಕಾಗುವ ಖರ್ಚುವೆಚ್ಚಗಳನ್ನು ಬೇಕಿದ್ದರೆ ನೀವೇ ಭರಿಸಿಕೊಳ್ಳಿ. ಇಲ್ಲವಾದಲ್ಲಿ ನಮಗೆ ನಷ್ಟವಿಲ್ಲ.

ಇನ್ನು, ಇದು ಮಾತ್ರವೇ ಅಲ್ಲ. ನಾವು ಇನ್ನಷ್ಟು ಕೊಡುಗೆಗಳ ಆಮಿಷವನ್ನು ಕೂಡ ಒಡ್ಡುತ್ತೇವೆ. ಯಾಕೆಂದರೆ, ಈಗ ಒಡ್ಡದಿದ್ದರೆ ನಮ್ಮ ಎದುರಾಳಿ ಪಕ್ಷದವರು ಏನಾದರೂ ಘೋಷಿಸಿದರೆ? ಅದಕ್ಕಾಗಿ ಮುನ್ನೆಚ್ಚರಿಕೆಯಿದು.

ಮತದಾರನಿಗೆ ಲಂಚ ನೀಡುವ ಆಮಿಷವನ್ನಂತೂ ನಾವು ನೀಡುತ್ತಿಲ್ಲ. ಇದು ನಮ್ಮ ಉದ್ಧಾರಕ್ಕೆ ಉದಾರ ಕೊಡುಗೆ. ಅವುಗಳು ಇಂತಿವೆ:

* ಮತದಾರನಿಗೆ 12 ರೂ. ಬದಲು 11 ರೂಪಾಯಿಯಲ್ಲಿ ಬಾಟಲಿ ನೀರು.

* ನೀರು ಇಷ್ಟವಾಗದವರಿಗೆ (ನೀರಿನ ತೀವ್ರ ಅಭಾವವಿರುವುದರಿಂದ) ಚುನಾವಣೆ ಸಂದರ್ಭ ಹಿಂಬಾಗಿಲಲ್ಲಿ ಬಂದರೆ ಭರಪೂರ ಉಚಿತ ಸಾರಾಯಿ.

* ರಾಜ್ಯದ ಆರ್ಥಿಕತೆಗೆ ಧಕ್ಕೆಯಾಗುವ ಕಾರಣದಿಂದಾಗಿ ಸಾರಾಯಿ, ಲಾಟರಿ, ಜೂಜು ಇತ್ಯಾದಿಗಳ ಮೇಲಿನ ನಿರ್ಬಂಧ ಹಿಂತೆಗೆತ.

* ಯಾವುದೇ ಸೌಲಭ್ಯಲ್ಲದ, ತೀರಾ ಹಿಂದುಳಿದ ಹಳ್ಳಿಗಳಿಗೆ ಕಲರ್ ಟಿವಿ. ಇದನ್ನು ಕೊಡಲು ಪ್ರಮುಖ ಕಾರಣವೆಂದರೆ ಕಲರ್ ಟೀವಿ ತರಬೇಕಿದ್ದರೆ ಅಲ್ಲಿಗೆ ರಸ್ತೆಯಾಗಬೇಕು, ಅದನ್ನು ನೋಡಬೇಕಿದ್ದರೆ ಕರೆಂಟು ಬೇಕು. ನಾವು ಇಲ್ಲಿಂದ ಎಷ್ಟರವರೆಗೆ ಆರಿಸಿಬರುತ್ತೇವೋ ಅಷ್ಟರವರೆಗೆ ರಸ್ತೆ, ಕರೆಂಟು ಇತ್ಯಾದಿ ವ್ಯವಸ್ಥೆ ಆಗುವುದು ಸಾಧ್ಯವಿಲ್ಲ. ಹೀಗಾಗಿ ಕಲರ್ ಟೀವಿಯನ್ನು ಕೊಂಡು ರಾಶಿ ಹಾಕುತ್ತೇವೆ. ಹರಾಜು ಕೂಡ ಹಾಕುತ್ತೇವೆ.

* ಹಳ್ಳಿ ಹಳ್ಳಿಗೂ ಇಂಟರ್ನೆಟ್ ಪ್ರಸಾರವಾಗಬೇಕು, ಅಲ್ಲಿನವರೂ ಬೊಗಳೆ ರಗಳೆ ಓದಬೇಕು ಎಂಬ ಉದ್ದೇಶದೊಂದಿಗೆ ಮನೆಗೊಂದು ಇಂಟರ್ನೆಟ್ ಸೌಲಭ್ಯ.

* ಹಳ್ಳಿ ಹೈದರು ಕೂಡ ಪೇಟೆಗೆ ಹೋಗುವ ಮುನ್ನವೇ ಮೊಬೈಲ್‌ನಲ್ಲಿ ಎಸ್ಎಂಎಸ್ ಫಾರ್ವರ್ಡ್ ಮಾಡೋದು ಕಲಿತುಕೊಂಡು ಪೇಟೆ ಬದುಕಿಗೆ ಸರ್ವ ರೀತಿಯಲ್ಲೂ ಸಜ್ಜಾಗುವಂತಾಗಲು, ಮನೆಗೊಂದು ಮೊಬೈಲ್ ಫೋನ್. ಮೊಬೈಲ್ ಫೋನ್ ಸೆಟ್‌ಗಳ ಕೊರತೆಯಾದರೆ, ಈಗಾಗಲೇ ರಿಂಗ್ ಆಗದಿರುವ, ಹಾಳಾಗಿರುವ, ಕನೆಕ್ಷನ್ನೇ ಇಲ್ಲದ, ಪಿರಿಪಿರಿ ಸದ್ದು ಮಾಡುವ ಲ್ಯಾಂಡ್‌ಲೈನ್ ಫೋನ್‌ಗಳನ್ನೇ ಕೈಯಲ್ಲಿ ಹಿಡಿದುಕೊಂಡು ತಿರುಗಾಡಿದರೆ, ಅದು ಮೊಬೈಲ್ ಫೋನ್ ಅಂತ ಭಾವಿಸಬಹುದು.

* ಅಗ್ಗದ ದರದಲ್ಲಿ ಪೆಪ್ಸಿ ಕೋಲಾ ಪೂರೈಕೆ. ಮನೆಮನೆಗೂ ನೀರು ವಿತರಿಸುವ ಟ್ಯಾಂಕರಿನಲ್ಲಿ ಪೆಪ್ಸಿ ಕೋಲಾ ವಿತರಣೆಗೆ ಕ್ರಮ ಕೈಗೊಳ್ಳಲಾಗುತ್ತದೆ. ನೀರು ಬಾರದಿದ್ದರೂ ಪೆಪ್ಸಿಯಲ್ಲೇ ಜೀವನ ಸಾಗಿಸುವುದು ಇದರಿಂದ ಸುಲಭವಾದೀತು.

* ಗ್ರಾಮ ಪ್ರದೇಶದಲ್ಲಿ ಗುಡಿಸಲು (hut) ವಾಸ ಮಾಡಬೇಕಾಗಿ ಬಂದಾಗ ಐಷಾರಾಮಿ ಜೀವನಕ್ಕೆ ಕೊರತೆಯಾಗುತ್ತದೆ ಎಂಬ ಕಾರಣಕ್ಕೆ ಅಲ್ಲಲ್ಲಿ ಪಿಜ್ಜಾ ಹಟ್‌ಗಳ ಸ್ಥಾಪನೆ. ರೊಟ್ಟಿ ಮಾಡಿ ಹೊಟ್ಟೆ ಗಟ್ಟಿ ಮಾಡಿಕೊಳ್ಳಲು ಜನರು ತೀರಾ ಬಡವರಾಗಿರುವುದರಿಂದ, ಸಿಟಿಗಳ ಮೂಲೆ ಮೂಲೆಗಳಲ್ಲಿ ನಾಯಿಕೊಡೆಯಂತೆ ಹುಟ್ಟಿಕೊಂಡಿರುವ ಪಿಜ್ಜಾ ಹಟ್ಟುಗಳನ್ನು ಗ್ರಾಮ ಪ್ರದೇಶದಲ್ಲಿ ಸ್ಥಾಪಿಸುವುದು.

* ಮೊನ್ನೆ ಯಾರೋ ಟೀವಿ ಕೊಡುವುದಾಗಿ ಠೀವಿಯಿಂದಲೇ ಘೋಷಿಸಿ, ತಮ್ಮ ಓಟಿನ ಬ್ಯಾಂಕನ್ನು ಪೋಷಿಸಿಕೊಂಡಿದ್ದಾರೆ. ನಾವು ಹಳಸಲು ತಿನ್ನುವಂತಾಗಲು ಫ್ರಿಜ್ಜು, ಬಟ್ಟೆ ಹರಿದುಹೋಗಲು ವಾಷಿಂಗುಮೆಷಿನು, ಪೆಟ್ರೋಲ್ ಬೆಲೆ ಏರುತ್ತಲೇ ಇರುವುದರಿಂದ ಕನಿಷ್ಠ ಪಕ್ಷ ತಳ್ಳಾಟಕ್ಕೂ ಸಹಾಯವಾಗುವ ಪುಟ್ಟ ನ್ಯಾನೋ ಕಾರು, ಕರೆಂಟಿಲ್ಲದೇ ಓಡದ ಮಿಕ್ಸಿ ಎಲ್ಲಾ ಕೊಡುತ್ತೇವೆ.

* ಗ್ರಾಮೀಣ ರಸ್ತೆಗಳು ಕುಲಗೆಟ್ಟು, ಅಲ್ಲಲ್ಲಿ ಹೊಂಡಾಗುಂಡಿ ಎದ್ದು, ಹೆಂಡ್ಕುಡುಕರಿಗೆ ಓಡಾಟಕ್ಕೂ ತಡೆಯಾಗಿದ್ದು, ಈಗ ಅದು ಬಹುತೇಕ ಪಟ್ಟಣದ ರಸ್ತೆಗಳನ್ನೇ ಹೋಲುತ್ತದೆ. ಹೀಗಾಗಿ ಈ ರಸ್ತೆಗಳಲ್ಲಿ ಓಡಾಡಿ ಕೈಕಾಲು ಮುರಿದುಕೊಳ್ಳುವ ಬದಲಿಗೆ ಎಲ್ಲರೂ ವಿಮಾನದಲ್ಲಿ, ರೈಲಿನಲ್ಲಿ ಓಡಾಡುವಂತಾಗಲು, ಹಳ್ಳಿ ಹಳ್ಳಿಯಲ್ಲಿ ಶಟ್ಲ್ ವಿಮಾನ ನಿಲ್ದಾಣ ಹಾಗೂ ರೈಲು ನಿಲ್ದಾಣಗಳ ಸ್ಥಾಪನೆ.

Wednesday, April 16, 2008

ಅಭ್ಯರ್ಥಿಗಳ ಸಾಮೂಹಿಕ ವಿವಾಹಕ್ಕೆ ಆಯೋಗ ನಿಷೇಧ!

(ಬೊಗಳೂರು ರದ್ದಿ ಬ್ಯುರೋದಿಂದ)
ಬೊಗಳೂರು, ಏ.16- ಚುನಾವಣೆಗೆ ನಿಂತ ಅಭ್ಯರ್ಥಿಗಳು ಸಾಮೂಹಿಕ ವಿವಾಹ ಮಾಡಿಕೊಳ್ಳುವುದನ್ನು ನಿರ್ಬಂಧಿಸಿ ಕೇಂದ್ರ ಮತದಾನ ಆಯೋಗವು ದಿಬ್ಬಣ ಹೊರಡಿಸಿದೆ.

ಚುನಾವಣೆಗೆ ನಿಲ್ಲುವ ಹೆಚ್ಚು ಹೆಚ್ಚು ಅಭ್ಯರ್ಥಿಗಳು ಆಗಾಗ್ಗೆ ಹೆಚ್ಚು ಹೆಚ್ಚು ವಿವಾಹವಾಗಿ, ಬಂದವರಿಗೆಲ್ಲ ಬಾಡೂಟ ಏರ್ಪಡಿಸಿ ಖರ್ಚು ಮಾಡುತ್ತಾರೆ. ಈ ರೀತಿ ಒಬ್ಬನೇ ಅಭ್ಯರ್ಥಿಯು ಸಾಮೂಹಿಕವಾಗಿ ವಿವಾಹವಾಗುವುದನ್ನು ತಪ್ಪಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಆಯುಕ್ತರು ಬೊಗಳೆಗೆ ನೀಡಿದ ಎಚ್ಚರಿಕೆ ಪತ್ರದಲ್ಲಿ ವಿವರಿಸಿದ್ದಾರೆ.

ಈ ಆದೇಶ ಹೊರಟ ಸಂದರ್ಭದಲ್ಲಿ ದಿಬ್ಬಣ ಹೊರಟಿದ್ದು, ಯಾವುದನ್ನು ಮೊದಲು ತಡೆಯಬೇಕು ಎಂದು ತಿಳಿಯದೆ ಬೊಗಳೂರಿನ ಮಂದಿ ಗಲಿಬಿಲಿಯಾದ ಪ್ರಸಂಗವೂ ನಡೆದಿರುವುದಾಗಿ ವರದ್ದಿಯಾಗಿದೆ.
----------

ಚುನಾವಣಾ ಪ್ರಣಾಳಿಕೆ ಬಟಾ ಬಯಲು!

ಉಚಿತ ಜಾಹೀರಾತಿದು ಖಚಿತ!

ನೋಡಲು ಮರೆಯದಿರಿ, ಮರೆತು ನಿರಾಶರಾಗಿರಿ!!!

ಕರುನಾಟಕದ ದೇಶದಾದ್ಯಂತ ಭೀಕರ ಜ್ವರ ಹಬ್ಬತೊಡಗಿದ್ದು, ವಿಧಾನಸೌಧದಲ್ಲಿದ್ದ ನೊಣಗಳು, ವೈರಸ್ಸುಗಳು, ಕ್ರಿಮಿಗಳು, ಕೀಟಗಳು ಇತ್ಯಾದಿಗಳೆಲ್ಲವೂ ಊರೂರಿನಲ್ಲಿ ಕಂಡುಬರುತ್ತಿವೆ. ಜನರು ಕಿವಿ ಮುಚ್ಚಿಕೊಂಡು ಓಡಾಡಬೇಕಾದ ಪರಿಸ್ಥಿತಿ ಇದೆ. ಇಂಥಹ ಸ್ಥಿತಿಯಲ್ಲಿ ಬೊ.ರ. ಬ್ಯುರೋಗೆ ಆಕಸ್‌ಮಿಕವಾಗಿ ಸಿಕ್ಕಿರುವ ಚುನಾವಣಾ ಜ್ವರದ ಪ್ರಣಾಳಶಿಶುವೊಂದು ಬಟಾ ಬಯಲಾಗಲು ಸಿದ್ಧತೆ ನಡೆಸಿದೆ.

ಪ್ರಣಾಳಿಕೆಯ ಪ್ರಣಾಳಕ್ಕೆ ಒಂದಷ್ಟು ತೇಪೆ ಹಚ್ಚಿ ಅದನ್ನು ನೀಡಲು ತೀವ್ರ ಸಿದ್ಧತೆಗಳು ನಡೆಯುತ್ತಿದ್ದು, ಬೊಗಳೂರು ಓದುಗರು ಎಂದಿನಂತೆ ತಮ್ಮ ಪ್ರತಿಗಳನ್ನು ಕಾದಿರಿಸಿಕೊಳ್ಳದೆ, ತಲೆಕೆಡಿಸಿಕೊಳ್ಳಲು ಸೂಚಿಸಲಾಗಿದೆ.

ಇದು ನಮ್ಮಲ್ಲಿ ಮಾತ್ರ!
ಇಂದಿನ ಸುದ್ದಿ ನಾಳೆಯ ವ-ರದ್ದಿ!!!

Tuesday, April 15, 2008

ಓಟಿನ ರಾಡಿ ಸ್ವಚ್ಛಗೊಳಿಸಲು ಉಪ-ವಾಸ!

(ಬೊಗಳೂರು ಕೊಚ್ಚೆ-ಸ್ವಚ್ಛ ಬ್ಯುರೋದಿಂದ)
ಬೊಗಳೂರು, ಏ.15- ಕರುನಾಟಕದಲ್ಲಿ ಮುಂಬರುವ ಭರ್ಜರಿ ನಾಟಕ ಪ್ರದರ್ಶನಕ್ಕಾಗಿ ಬೊಗಳೂರಿನಲ್ಲಿಯೂ ಚಿತ್ರವಿಚಿತ್ರ ತಾಲೀಮುಗಳನ್ನು ಆರಂಭಿಸಲಾಗಿದ್ದು, ಈಗಾಗಲೇ ರೊಚ್ಚಿಗೆದ್ದ ಮತದಾರರು ಮತ್ತಷ್ಟು ರೊಚ್ಚಿಗೇಳುವ ಮುನ್ನ ಅವರ ಎಲ್ಲಾ ಶಕ್ತಿಗುಂದಿಸಲು ಸಕಲ ಸಿದ್ಧತೆ ನಡೆಯುತ್ತಿದೆ ಎಂಬುದನ್ನು ಬೊ.ರ. ಬ್ಯುರೋ ಪತ್ತೆ ಹಚ್ಚಿದೆ.

ಈ ನಡುವೆ, ಬೀದಿ ಬೀದಿಯಲ್ಲಿರುವ ಕೊಚ್ಚೆ ಸ್ವಚ್ಛ ಮಾಡುವುದಕ್ಕಾಗಿ ಬೊಗಳೂರಿನ ಸಮಸ್ತ ಸಿಬ್ಬಂದಿಗೂ ಉಪ-ವಾಸ ಮಾಡಲು ಪ್ರಯತ್ನಿಸಿದ ಘಟನೆ ವರದಿಯಾಗಿದೆ. ಇದಕ್ಕೆ ಕಾರಣ ಮತ್ತು ಪ್ರೇರಣೆ ಸುವರ್ಣಯುಗದಲ್ಲಿರುವ ಪಕ್ಷವೊಂದರ ಮಹಿಮೆಯೇ ಆಗಿದೆ.

ಕರುನಾಟಕದಲ್ಲಿ ನಾಟಕದ ಪ್ರಚಾರಾರ್ಥ ಹೋಗ ಹೋದಲ್ಲೆಲ್ಲಾ, ಗಲ್ಲಿ ಗಲ್ಲಿಯಲ್ಲಿ ರಾಜಕಾರಣಿಗಳ ಆಶ್ವಾಸನೆಗಳು ಪುಂಖಾನುಪುಂಖವಾಗಿ ಉದುರಿದ ಪರಿಣಾಮವಾಗಿ ರಸ್ತೆಯೆಲ್ಲಾ ಕೊಚ್ಚೆಯಂತಾಗಿ, ಗಬ್ಬೆದ್ದು ಹೋಗುತ್ತಿದೆ. ಇದನ್ನೆಲ್ಲಾ ಕ್ಲೀನ್ ಮಾಡಲು ಕೇವಲ ಒಬ್ಬರು ಉಪವಾಸ ಮಾಡಿದರೆ ಸಾಲದು ಎಂಬ ಕಾರಣಕ್ಕೆ ಬೊಗಳೂರಿನ ರಗಳೆ ಬ್ಯುರೋ ಕೂಡ ಈ ಕ್ರಮಕ್ಕೆ ಕೈಜೋಡಿಸಿದೆ.

ಆದರೆ ಯಾವ ಕೈಯನ್ನು ಎಲ್ಲಿ ಜೋಡಿಸಬೇಕು ಎಂದು ತಿಳಿಯದೆ, ನೇರವಾಗಿ ಕೇಂದ್ರದಲ್ಲಿ ಸರ-ಖಾರ ಚಲಾಯಿಸುತ್ತಾ, ತರ-ಖಾರಿ ಬೆಲೆ ಏರಿಕೆಯಿಂದಾಗಿ ಎಲ್ಲರ ಟೀಕೆಗೆ ಪಾತ್ರವಾಗಿರುವ ಸರ-ಖಾರ ನಡೆಸುತ್ತಿರುವ ಪಕ್ಷದ 'ಕೈ' ಹಿಡಿಯುವುದೇ ಸೂಕ್ತ ಅಂತ ಯೋಚಿಸಿದ ನಮ್ಮ ಬ್ಯುರೋ ಅತ್ತ ಕಡೆ ತೆರಳಿತು.

ಆದರೆ ನಮ್ಮ ಬರುವಿಕೆಯನ್ನು ದೂರದಿಂದಲೇ ನೋಡಿದ ತಕ್ಷಣ ಅರ್ಥೈಸಿಕೊಂಡ ಮಾಜಿ ಅನರ್ಥ ಸಚಿವರೂ ಆಗಿರುವ ನಿಧಾನಿ ಒಣಮೋಸಕ ಸಿಂಗರು, "ಬೇಡ... ಬೇಡ... ನೀವಿಲ್ಲಿ ಬರೋದೇ ಬೇಡ... ನಾನೇ ನಿಮಗೆ ಎಲ್ಲಾ ವ್ಯವಸ್ಥೆ ಮಾಡ್ತೇವೆ. ನಿಮಗೆ ಎಲ್ಲರೂ ಉಪವಾಸವಿದ್ದರಾಯಿತಲ್ಲ... ಈಗಾಗಲೇ ಇದ್ದ ಬದ್ದ ಬೆಲೆಗಳೆಲ್ಲಾ ಏರಿವೆ. ಹೆಚ್ಚಿನವರೆಲ್ಲರೂ ದೇಶಾದ್ಯಂತ ಅರೆಬರೆ ಉಂಡು ಉಪವಾಸ ಮಾಡುತ್ತಲೇ ಇದ್ದಾರೆ. ಕೆಲವೇ ದಿನಗಳಲ್ಲಿ ಪರಿಪೂರ್ಣ ಉಪವಾಸವೂ ನಡೆಯುತ್ತದೆ. ನೀವೇನೂ ಹೆದರದಿರಿ... ದಯವಿಟ್ಟು ಅಲ್ಲಿಂದಲೇ ಹೋಗಿಬಿಡಿ" ಅಂತ ಕಿರುಚಾಡಿದರು ಎಂದು ಮೂಲೆಯಲ್ಲೆಲ್ಲೋ ನಿಂತು ವರದಿ ಮಾಡುತ್ತಿದ್ದ ನಮ್ಮ ರದ್ದಿಗಾರರು ಫ್ಯಾಕ್ಸ್ ಮಾಡಿದ್ದಾರೆ.

ಹೀಗಾಗಿ, ಕರುನಾಟಕದ ಪಕ್ಷಗಳೆಲ್ಲವೂ ಕೇಂದ್ರ ಸರಕಾರದ ಯೋಜನೆಗಳನ್ನು ಕಾಪಿ ಮಾಡಿಕೊಳ್ಳುತ್ತಿವೆ ಎಂದು ಅವರು ಟೀಕಿಸಿದ್ದು, ಈ ಬಾರಿ ನಮ್ಮ ಕೈಗೇ ಜಯ ಕಟ್ಟಿಟ್ಟ ಬುತ್ತಿ. ಯಾಕಂದ್ರೆ ಎಲ್ಲರನ್ನೂ ಉಪವಾಸ ಕೆಡವಿದ್ದೇವೆ. ರಾಜಕಾರಣಿಗಳು ಕೂಡ ಗ್ರಾಮವಾಸ, ಕೊಳಚೆ ವಾಸ, ಬೀದಿ ವಾಸ, ಹಳ್ಳಿ ವಾಸ, ಗುಡಿಸಲು ವಾಸ ಎಂಬಿತ್ಯಾದಿಗಳನ್ನು ಮುಂದುವರಿಸುತ್ತಿದ್ದು, ಅದಕ್ಕೆ ಉಪ ವಾಸವೂ ಸೇರ್ಪಡೆಯಾಗಿದೆ ಎಂದು ಅವರು ವಿಜಯದ ನಗೆ ಬೀರಿದ್ದಾರೆ.

Friday, April 11, 2008

ಕರು-ನಾಟಕದ ಟಿಕೆಟಿಗೆ ನೂಕು-ನುಗ್ಗಲು

(ಬೊಗಳೂರು ಚಮಚಾಗಿರಿ ಬ್ಯುರೋದಿಂದ)
ಬೊಗಳೂರು, ಏ.11- ಬೆಂಗಳೂರಿನಲ್ಲಿ ಇತ್ತೀಚೆಗೆ ಹೆಚ್ಚು ಹೆಚ್ಚು ಜಾಮ್ ದೊರೆಯುತ್ತಿರುವುದರಿಂದಾಗಿ ನಾಯಿಗಳಿಗೆ ಬಾಲ ಅಲ್ಲಾಡಿಸುವುದಕ್ಕೂ ಜಾಗದ ಕೊರತೆ ಉಂಟಾಗಿದೆ.

ಇದಕ್ಕೆ ಕಾರಣವನ್ನು ಈ ಹಿಂದೆಯೇ ಹಲವು ಬಾರಿ ವಿವರಿಸಲಾಗಿತ್ತಾದರೂ, ಇದೀಗ ಹೊಸದೊಂದು ಕಾರಣವೂ ಸೇರ್ಪಡೆಯಾಗಿದೆ. ಅದೆಂದರೆ ಎಲ್ಲರೂ ಟಿಕೆಟ್ ಕೊಳ್ಳುವುದಕ್ಕೆ ಸಾಲುಗಟ್ಟಿ ಬೆಂಗಳೂರಿಗೆ ಬರುತ್ತಿರುವುದು. ಇದರಿಂದಾಗಿಯೇ ಈ ಬಾರಿ ಟ್ರಾಫಿಕ್ ಜಾಮ್ ಹೆಚ್ಚಾಗಿ, ಯಾರು ತಮಗೆ ಬ್ರೆಡ್ಡು ತುಂಡುಗಳನ್ನು ಹಾಕುತ್ತಾರೆ ಎಂದು ಕಾಯುವ ಪರಿಸ್ಥಿತಿ ಹೆಚ್ಚಾಗತೊಡಗಿದೆ ಎಂದು ಹೇಳಲಾಗದಿದ್ದರೂ, ಸಾಕಷ್ಟು ಅವಕಾಶಗಳು ಲಭ್ಯವಾಗಿರುವುದರಿಂದಾಗಿ ಇದನ್ನು ಅಲ್ಲಗಳೆಯುವಂತೆಯೂ ಇಲ್ಲ.

ಅರ್ಥವಾಗಲಿಲ್ಲವೇ? ತಲೆ ಜೋರಾಗಿ ಕೆರೆದುಕೊಳ್ಳಬೇಡಿ. ಇದೆಂಥಾ ಕ್ಯೂ? ನಾಟಕದ ಟಿಕೆಟ್ ಪಡೆಯಲು, ಅತ್ಯಂತ ಮನರಂಜನೀಯ ಸಿನಿಮಾದ ಟಿಕೆಟ್ ಕೊಳ್ಳಲು, ಯಕ್ಷಗಾನವೋ, ಬೊಂಬೆಯಾಟವೋ, ಬೀದಿ ನಾಟಕವೋ ಎಂದೆಲ್ಲಾ ತಲೆ ತುರಿಸಿಕೊಳ್ಳಬೇಕಾಗಿಲ್ಲ. ಇವೆಲ್ಲವುಗಳಿಗೂ ಕಾರಣವಾಗಬಲ್ಲ ಪ್ರದರ್ಶನದ ಟಿಕೆಟ್ ಪಡೆಯಲು ಈ ಪರಿ ನೂಕು ನುಗ್ಗಲು.

ಹೌದು. ಇದು ಕರುನಾಟಕಕ್ಕಾಗಿ ಕ್ಯೂ. ಈಗಾಗಲೇ ಹತ್ತು ಹಲವು ಬಾರಿ ನಾಟಕವಾಡಿ, ಆಟವಾಡಿ ಹೊಡೆದಾಡಿ-ದಣಿದು, ನಿರೀಕ್ಷೆಗಳ ಗುಳ್ಳೆಯೊಂದು ಒಡೆದ ರಭಸಕ್ಕೆ ಎಲ್ಲರೂ ದಿಕ್ಕಾಪಾಲಾಗಿದ್ದರು. ಇದೀಗ ಮತ್ತೆ ಒಂದುಗೂಡುವ ಕಾಲ. ವಿವಿಧ ನಾಟಕ ರಂಗಗಳನ್ನು ಕಟ್ಟಿ, ಭಿನ್ನ ಭಿನ್ನ ರೀತಿಯ ಬಣ್ಣ ಹಚ್ಚಿ, ಏನೆಲ್ಲಾ ಡೈಲಾಗು ಹೊಡೆಯಬೇಕು ಅಂತೆಲ್ಲಾ ಪಟ್ಟಿ ಮಾಡಿ, ಬಾಯಿಪಾಠ ಮಾಡಿಕೊಂಡು ಸಿದ್ಧವಾಗುವ ಕಾಲ.

ಹಾಗಿದ್ದರೆ, ಇಂಥದ್ದೊಂದು ನಾಟಕವಾಡಲೊಂದು ವೇದಿಕೆ ಅಂತ ಬೇಕಲ್ಲ... ವೇದಿಕೆ ಯಾವುದಾದರೇನು... ಕುಣಿಯುವವರೂ... ಕುಣಿಸುವವರೂ ಇರೋವಾಗ ಎಂಬ ಉಡಾಫೆ ಮನೋಭಾವದ ಪಾತ್ರಧಾರಿಗಳಿಗೇನೂ ಕೊರತೆಯಿಲ್ಲದಿದ್ದರೂ, ರಾಷ್ಟ್ರೀಯ ಮಟ್ಟದ ನಾಟಕ ಮಂಡಳಿಯಲ್ಲಿ ಅಭಿನಯಕ್ಕೆ ಅವಕಾಶ ದೊರೆತರೆ, ಹೆಚ್ಚು ಹೆಚ್ಚು ಅಧಿಕಾರದ ಸಾಧ್ಯತೆ ಲಭಿಸುತ್ತದೆ ಎಂಬ ಕಚ್ಚಾ ಸತ್ಯದ ಬೆನ್ನೇರಿ,

ಕರುನಾಟಕದ ಮೂಲೆ ಮೂಲೆಗಳಿಂದ ಈ ಪಾತ್ರಧಾರಿಗಳು ಬೆಂಗಳೂರಿಗೆ ಬಂದು ಹೋಟೇಲುಗಳಲ್ಲಿ ತುಂಬಿ ತುಳುಕಾಡುತ್ತಿದ್ದಾರೆ. ಹೆಚ್ಚಿನವರು ಚಮಚಾಗಳನ್ನೂ ತಮ್ಮೊಂದಿಗೆ ತಂದಿದ್ದರು. ಬೇಕಾದಾಗಲೆಲ್ಲಾ ಈ ಚಮಚಾಗಳನ್ನು ಅವರು ಬಳಸಿಕೊಳ್ಳುತ್ತಾ, ಲಾಬಿಯ ಸ್ಕ್ರೂ ತಿರುಗಿಸಲು ಕೂಡ ಅವುಗಳ ಮೊರೆ ಹೋಗುತ್ತಿದ್ದುದು ಕಂಡುಬರುತ್ತಿತ್ತು.

ಇಷ್ಟೆಲ್ಲದರ ನಡುವೆಯೇ, ಬೊ.ರ.ಬ್ಯುರೋದ ಏಕಸದಸ್ಯ ವರದಿಗಾರರ ಸಂಘದ ಅಧ್ಯಕ್ಷರು, ಕಾರ್ಯದರ್ಶಿಗಳು, ಸದಸ್ಯರು ಎಲ್ಲರೂ ಸೇರಿಕೊಂಡು, ಬೆಂಗಳೂರಿಗೆ ಹೋಗಿ ಅಡ್ಡಾಡುತ್ತಿದ್ದು, ತಮಗೂ ಯಾರಾದರೂ ಟಿಕೆಟ್ ಕೊಡಲಿದ್ದಾರೆಯೇ ಎಂದು ಚಾತಕ ಪಕ್ಷಿಯಂತೆಯೂ, ಫೀನಿಕ್ಸ್ ಪಕ್ಷಿಯಂತೆಯೂ ಕತ್ತು ಉದ್ದ ಮಾಡಿ ಅತ್ತಿತ್ತ ನೋಡುತ್ತಿದ್ದಾರೆ ಎಂಬುದನ್ನು ನಮ್ಮ ವಿರೋಧೀ ಪತ್ರಿಕೆಗಳವರು ವರದ್ದಿಸಿದ್ದಾರೆ.

Thursday, April 10, 2008

ಭ್ರಷ್ಟಾಚಾರಿಯ ಪತ್ನಿಗೆ ಶಿಕ್ಷೆ: ತೀರ್ಪಿಗೆ ಸ್ವಾಗತ

(ಬೊಗಳೂರು ಜಡೆಕಿತ್ತಾಟ ಬ್ಯುರೋದಿಂದ)
ಬೊಗಳೂರು, ಏ.10- ಹೈಕೋರ್ಟು ತೀರ್ಪಿನಿಂದಾಗಿ ಬೊಗಳೂರಿನ ಮಹಿಳಾ ಮಂಡಲದ ಮಹಿಳೆಯರು ಹೈಸ್ಪಿರಿಟ್‌ನಿಂದ ಕುಣಿದಾಡಿದ ಪ್ರಸಂಗವೊಂದನ್ನು ಇಲ್ಲಿ ಬೊಗಳೆ ರಗಳೆ ಬ್ಯುರೋ ವರದಿ ಮಾಡುತ್ತಿಲ್ಲ ಅಂತ ಮೊದಲೇ ಹೇಳಿಬಿಡುತ್ತದೆ.

'ಅವ್ಳು ಮಹಿಳಾ ಮಂಡಲ ಮೀಟಿಂಗಿಗೆ ಮೈತುಂಬಾ ಚಿನ್ನ ಹಾಕ್ಕೊಂಡು ಬರ್ತಿದ್ದಾಳೆ ನೋಡು... ಅಬ್ಬಾ... ಅವ್ಳು ಹಾಕೋ ಸೆಂಟು ವಿದೇಶದ್ದಂತೆ. ಈ ಬಾರಿ ಮಹಿಳಾ ಮಂಡಲ ಎಲೆಕ್ಷನ್‌ಗೆ ಅವಳೇ ನಿಲ್ತಾಳೆ, ಗೆಲ್ಲೋದು ಕೂಡ ಗ್ಯಾರಂಟಿ...' ಅಂತ ಮೊನ್ನೆ ಮೊನ್ನೆ ಮತ್ಸರದಿಂದ ಹಲುಬುತ್ತಿದ್ದವರೆಲ್ಲರೂ ಇದೀಗ ಆ 'ಗಟ್ಟಿ ಕುಳ'ದತ್ತ ವಾರೆನೋಟದಲ್ಲಿ ನಗುವಿನ ಮಿಂಚು ಹರಿಸತೊಡಗಿದ್ದಾರೆ.

ಇದಕ್ಕೆ ಕಾರಣವೆಂದರೆ ಇಲ್ಲಿ ಪ್ರಕಟವಾಗಿರೋ ವರದಿ. ಭ್ರಷ್ಟನ ಪತ್ನಿಯರೂ ಶಿಕ್ಷಾರ್ಹರು ಅಂತ ಹೇಳಿರುವುದರಿಂದ, ಅವರೆಲ್ಲರೂ ಈ 'ಗಟ್ಟಿ ಕುಳ'ದ ಗಂಡನನ್ನು ಯಾವುದಾದರೊಂದು ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ವರದಿಯಾಗದಿದ್ದರೂ, ನಮ್ಮ ಬ್ಯುರೋ ವರದಿ ಮಾಡುತ್ತಿದೆ.

'ಹಾಂ.... ಅವ್ಳಿಗೆಷ್ಟು ದರ್ಪ... ತಾನು ಹೇಳಿದ್ದೇ ಆಗ್ಬೇಕು ಅಂತಿದ್ದಾಳೆ. ಮೊದ್ಲು ಅವ್ಳ ಗಂಡನ್ನ ಒಂದು ಕೈ ನೋಡ್ಕೊಳೋಣ, ಆಮೇಲೆ ಎಲ್ಲಾ ಸರಿಹೋಗುತ್ತೆ' ಎಂಬಲ್ಲಿಂದ, ಅವಿವಾಹಿತ ತರುಣಿಯರಿದ್ದರೆ, 'ಇವ್ಳಿಗೆ ಮೊನ್ನೆ ಮೊನ್ನೆ ಕೋಟಿ ಕೋಟಿ ನುಂಗಿ ದಿಢೀರ್ ಶ್ರೀಮಂತನಾದ್ನಲ್ಲ, ಅವನನ್ನೇ ಕಟ್ಟಿ ಬಿಡೋಣ. ಆಗ ಅವಳ ದರ್ಪ ಎಲ್ಲಾ ಇಳಿಯುತ್ತೆ' ಎಂಬಲ್ಲಿವರೆಗೆ ಬೊಗಳೂರಿನ ಈ ಮಹಿಳಾ ಮಂಡಲದಲ್ಲಿ ಚರ್ಚೆಗಳು ನಡೆದಿರುವುದಾಗಿ, ಯಾರಲ್ಲೂ ಹೇಳದಂತೆ ನಮ್ಮಲ್ಲಿ ಮಾತ್ರವೇ ಜೋರಾಗಿ ಮೈಕಿನಲ್ಲಿ ಕೂಗಿ ಹೇಳಿರುವ ಈ ಸಂಘದ ಮೂಲಗಳು ತಿಳಿಸಿವೆ.

ಈ ತೀರ್ಪಿನ ಸಾಧ್ಯಾಸಾಧ್ಯತೆಗಳ ಬಗ್ಗೆ ಪರಿಶೀಲನೆ ನಡೆಸಲು ಬೊಗಳೂರು ಮಹಿಳಾ ಮಂಡಲದ ತುರ್ತುಪರಿಸ್ಥಿತಿಯ ಸಭೆ ಕರೆಯಲಾಗಿದೆ.

Wednesday, April 09, 2008

ಏಪ್ರಿಲ್ ಫೂಲ್ ಪಶ್ಚಾತ್ ಫೂಲುಗಳು!

(ಬೊಗಳೂರು ಕೆಲಸಹೀನ ಬ್ಯುರೋದಿಂದ)
ಬೊಗಳೂರು, ಏ.9- ಏಪ್ರಿಲ್ ಫೂಲ್ ಎಂಬ ವಿಶ್ವದಾದ್ಯಂತ ಸಡಗರದಿಂದ ಆಚರಿಸಲಾದ ಹಬ್ಬದ After-effects ಬಗ್ಗೆ ಸಂಶೋಧಿಸಲು ತೀವ್ರವಾಗಿ ಪರದಾಡಿದ ಬೊಗಳೆ ರಗಳೆ ಬ್ಯುರೋಗೆ ಹಲವಾರು ಮಹತ್ವಹೀನ ಅಂಶಗಳು ಲಭಿಸಿವೆ.

ಏಪ್ರಿಲ್ ಫೂಲ್‌ನ ಪಶ್ಚಾತ್ ಪರಿಣಾಮಗಳಿವು:

* ಮನೆಯವರೆಲ್ಲಾ ನಾಳೆ ಬೆಳಿಗ್ಗೆ ಬೇಗನೇ ಎದ್ದು ಗಡಿಬಿಡಿಯಲ್ಲಿ ಕಚೇರಿಗೆ ಬೇಗನೇ ಹೋಗಿ ಏಪ್ರಿಲ್ ಫೂಲ್ ಆಗಲಿ ಎಂಬ ಕಾರಣಕ್ಕೆ ಗಡಿಯಾರದ ಮುಳ್ಳನ್ನು ಒಂದು ಗಂಟೆ ಮುಂದೆ ತಿರುಗಿಸಿಟ್ಟಿದ್ದ ತಮ್ಮ. ಮಧ್ಯರಾತ್ರಿ ಎದ್ದ ಅಣ್ಣ, ನಾಳೆ ಎಲ್ಲರನ್ನೂ ಏಪ್ರಿಲ್ ಫೂಲ್ ಮಾಡೋಣ ಎಂದುಕೊಂಡು, ಎಲ್ಲರೂ ಕಚೇರಿ, ಶಾಲೆಗೆ ಲೇಟಾಗಿ ಹೋಗಲಿ ಅಂತ ಒಂದು ಗಂಟೆ ಹಿಂದೆ ಇಟ್ಟ. ಇಬ್ಬರಿಗೂ ತಮ್ಮ ತಮ್ಮ ಸಮಯದ ಮೇಲೆ ಅಪಾರ ಭರವಸೆ. ಮರುದಿನ ಎಲ್ಲರೂ ಸರಿ ಸಮಯಕ್ಕೇ ಕೆಲಸಕ್ಕೆ ಹೋದರೂ, ತಮ್ಮ ಒಂದು ಗಂಟೆ ತಡವಾಗಿ, ಅಣ್ಣ ಒಂದು ಗಂಟೆ ಮುಂಚಿತವಾಗಿ ಕಚೇರಿ ಸೇರಿ ಫೂಲ್‌ಗಳಾಗಿದ್ದರು!

* ಏಪ್ರಿಲ್ 1ರಂದು ನಡೆದ ಪರೀಕ್ಷೆಗೆ ಕಾಲೇಜಿನ ಉಂಡಾಡಿ ಗುಂಡರು ಯಾರು ಕೂಡ ಹಾಜರಾಗಿರಲಿಲ್ಲ. ಅವರು ನೀಡಿದ ಕಾರಣ: ಅವ್ರೇನು ನಮ್ಮನ್ನು ಫೂಲ್‌ಗಳು ಅಂತ ತಿಳ್ಕೊಂಡಿದ್ದಾರಾ? ಏಪ್ರಿಲ್ 1ರಂದು ಪರೀಕ್ಷೆ ಇದೆ ಅಂತ ಹೇಳಿ ನಮ್ಮನ್ನು ಮೂರ್ಖರಾಗಿಸಲು ಹೊರಟಿದ್ದಾರೆ. ನಾವು ಮೂರ್ಖರಲ್ಲ ಎಂಬುದನ್ನು ಶ್ರುತಪಡಿಸಬೇಕು. ಅದಕ್ಕಾಗಿ ನಾವು ಪರೀಕ್ಷೆಗೆ ಹೋಗಲೇ ಇಲ್ಲ.

* ಸಹೋದ್ಯೋಗಿಯನ್ನು ಫೂಲ್ ಮಾಡಲೆಂದು ಆತನ ಮೌಸ್‌ನ ಕೆಳಭಾಗದ ಬಾಲ್‌ಗೆ ಗಮ್ ಹಾಕಿದ ಕಾರಣ, ಗಮ್ ತೆಗೆಯಲಾರದೆ, ಮೌಸನ್ನೇ ಬದಲಾಯಿಸಬೇಕಾಗಿಬಂದು, ಏಪ್ರಿಲ್ ಫೂಲ್ ಮಾಡಿದವರೇ ದಂಡ ತೆರಬೇಕಾಗಿ ಬಂದ ಪ್ರಸಂಗಗಳು ಕೂಡ ಅಲ್ಲಲ್ಲಿ ವರದಿಯಾಗಿವೆ.

* ಕರ್ನಾಟಕದ ವಿವಿಧೆಡೆಯಂತೂ ಭಾರೀ ಮಳೆ ಸುರಿದು ಶ್ರಾವಣ ಮಾಸದ ಗಂಟೆಯನ್ನು ಒಂದೆರಡು ತಿಂಗಳುಗಳಷ್ಟು ಹಿಂದೆ ತಿರುಗಿಸಿದ ವರುಣದೇವನೇ ಜನರನ್ನು ಫೂಲ್ ಮಾಡಿಬಿಟ್ಟಿದ್ದ.

* ಅದೂ ಅಲ್ಲದೆ, ಏಪ್ರಿಲ್ ಫೂಲ್ ದಿನವೇ ಬೊ.ರ. ಜನುಮದಿನ ಅಂತ ಬೆಟ್ ಕಟ್ಟಿದವರು ಕೋಟ್ಯಂತರ ರೂಪಾಯಿ ಹಣ ಕಳೆದುಕೊಂಡು ಸಂಭ್ರಮಿಸಿದ್ದಾರೆ.

Tuesday, April 08, 2008

ಪ್ರತಿಕೃತಿ ಬದಲು ನಿಜ-ಕೃತಿ ಸುಟ್ಟರು!

(ಬೊಗಳೂರು ಸುಡೋ ಬ್ಯುರೋದಿಂದ)
ಬೊಗಳೂರು, ಏ.8- ಎತ್ತಿ ಎತ್ತಿ ಒಗೇನಕಲ್‌ನಲ್ಲಿ ಸಿಕ್ಕಸಿಕ್ಕವರಿಗೆಲ್ಲಾ ನೀರು ಕುಡಿಸುವ ಪ್ರಯತ್ನದಲ್ಲಿರುವ, ಮತ್ತು ಈಗಾಗಲೇ ಒದರಬಾರದೂಂತ ಭಾರತೀಯ ಸಂವಿಧಾನದಲ್ಲಿ ಎಲ್ಲಿಯೂ ಹೇಳಿಲ್ಲ ಎನ್ನುತ್ತಾ ಎಲ್ಲರ ಪ್ರೀತಿಗೆ ಪಾತ್ರವಾಗಿರುವ ಕಚಡಾನಿಧಿಯ ಪ್ರತಿಕೃತಿಯ ಬದಲು ನಿಜವಾದ ನಿಧಿಯನ್ನೇ ಸುಟ್ಟು ಹಾಕಿದ ಘಟನೆಯೊಂದು ಯಾರಿಗೂ ತಿಳಿಯದಂತೆ ಘಟಿಸಿಹೋಗಿದ್ದು, ದೇಶಾದ್ಯಂತ ಹಾಹಾಕಾರವೆದ್ದಿದೆ.

ಇದಕ್ಕೆ ಕಾರಣವನ್ನೂ ಪತ್ತೆ ಹಚ್ಚಲಾಗಿದ್ದು, ಮಾಮೂಲಿಯಾಗಿ ಕಾರ್ಟೂನ್ ಚಿತ್ರಗಳನ್ನು, ವಕ್ರವಕ್ರವಾಗಿ ಬರೆದ ಗೆರೆಗಳ ರೂಪದಲ್ಲಿರುವ ಚಿತ್ರಗಳನ್ನು, ನಿರ್ಭಾವ ಚಿತ್ರಗಳನ್ನು, ಒಂದು ಕೋಲಿಗೆ ಕಟ್ಟಿ, ಬೆದರು ಬೊಂಬೆಯಂತಹ ಪ್ರತಿಕೃತಿ ಮಾಡಿ ಸುಟ್ಟುಬಿಡುವುದು ವಾಡಿಕೆ. ಆದರೆ ಪ್ರತಿಭಟನಾಕಾರರಿಗೆ ಪ್ರತಿಕೃತಿ ಯಾವುದು, ನಿಜವಾದ ಕೃತಿ ಯಾವುದು ಎಂಬುದು ತಿಳಿಯದೆಯೇ ಇಂತಹ ಚಾತುರ್ಯ ನಡೆದಿದೆ ಎಂದು ಕಳ್ಳ ಮೂಲಗಳು ತಿಳಿಸಿವೆ.

ಅಸತ್ಯ ಹೇಳುವುದರಲ್ಲಿ ಅಸತ್ಯಾನ್ವೇಷಿಗೇ ಸವಾಲೊಡ್ಡುತ್ತಿರುವ ತಮಿಳುಕಾಡಿನ ಮುಖ್ಯಕಂತ್ರಿಯು ಕೋಲಸಭಾ ಚುನಾವಣೆಯ ಹೊಸ್ತಿಲಲ್ಲಿರುವ ಯುಪಿಎ ಸರಕಾರದ ಪ್ರಧಾನ ಪಕ್ಷವಾದ ಕಾಂಗ್ರೆಸ್ಸನ್ನು ಒಲಿಸಿಕೊಳ್ಳಲು, ಆ ಮೂಲಕ ತನ್ನ ಬೇಳೆ ಬೇಯಿಸಿಕೊಳ್ಳುವ ಸಂಚಿನೊಂದಿಗೆ ಹೊಗೆ ಹಾಕುವ ಪ್ರಯತ್ನ ನಿಲ್ಲಿಸಿದ್ದರೂ, ಆತನ ಬಂಟರು ಅಲ್ಲಲ್ಲಿ ಬಸ್ಸು ಸುಟ್ಟು ಹೊಗೆ ಹಾಕುತ್ತಿರುವುದು ಈ ದೇಶದ ಒಂದು ಅಮೂಲ್ಯ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತದೆ ಎಂಬುದನ್ನು ಪತ್ತೆ ಹಚ್ಚಲಾಗಿದೆ.

Saturday, April 05, 2008

ಕಾವೇರಿ ತಿರುಗಿಸಿ 'ಕಪ್ಪು ಕನ್ನಡಿ'ಗ ಬೊಗ್ಳೂರಲ್ಲಿ ಸೆಟ್ಲ್!

ತಮಿಳುನಾಡಿನ ಅಮುಖ್ಯಮಂತ್ರಿ ಕ'ರಣ'ನಿಧಿ ಇತ್ತೀಚೆಗೆ ಕರುನಾಡಿನ ವಿಷಯಗಳಲ್ಲಿ ಮೂಗು ತೂರಿಸುವುದು ಹೆಚ್ಚಾಗುತ್ತಿರುವುದರಿಂದಾಗಿ ಅವರನ್ನು ಕರುನಾಡಿಗೆ ಓಡಿಸಲು ಸರ್ವರೂ ಸನ್ನದ್ಧತೆಯಲ್ಲಿದ್ದಾರೆ.

ಆಗ ಕಾವೇರಿ ನಮ್ಮವಳು ಎನ್ನುತ್ತಿದ್ದ ಅವರು, ಈಗ ಹೊಗೇನಕಲ್ಲಿನಲ್ಲಿರೋ ಕಾವೇರಿಯೂ ನಮ್ಮವಳು. ಇತ್ತೀಚೆಗೆ ಬೊಗಳೂರು ಕೂಡ ಐಟಿ ಹಬ್ ಆಗಿ ಜಾಗತಿಕವಾಗಿ ಬೆಳೆಯುತ್ತಿದೆ ಮತ್ತು ಅಲ್ಲಿ ತಮಿಳರೇ ಹೆಚ್ಚಾಗಿರುವುದರಿಂದಾಗಿ ಬೊಗಳೂರು ಕೂಡ ತಮಿಳುನಾಡಿಗೇ ಸೇರಬೇಕು ಎಂದು ಕರುನಾಡನಿಧಿಯವರು ಆಗ್ರಹಿಸುತ್ತಿರುವುದರಿಂದ ಈ ಕ್ರಮ ಕೈಗೊಳ್ಳಲು ಸಕಲರೀತಿಯಲ್ಲೂ ಸಿದ್ಧತೆ ನಡೆದಿದೆ.

ಬೊಗಳೂರಿನಲ್ಲಿ ಹೇಗೂ ತಮ್ಮ ಹೆಂಡಂದಿರಲ್ಲೊಬ್ಬರ ಪುತ್ರಿಯ ಮನೆಯೂ ಇದೆ. ಆ ಊರಲ್ಲಿ ತಮಿಳರೂ ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ. ಹೊಡೆ-ಬಡಿಯ ಸಂಪ್ರದಾಯಕ್ಕೆ ವಿರುದ್ಧವಾಗಿ ಸುಮ್ಮನೆ ತಮ್ಮ ಪಾಡಿಗೆ ತಮ್ಮ ಕೆಲಸ ಮಾಡಿಕೊಂಡು ಹೋಗುತ್ತಿರುವ ತಮಿಳರನ್ನೆಲ್ಲಾ ಅಲ್ಲಿಂದ ತಮಿಳುನಾಡಿಗೆ ಓಡಿಸಿದಲ್ಲಿ, ತನಗೆ ಅಲ್ಲಿ ತಳವೂರಲು ಸಾಕಷ್ಟು ಸ್ಥಳಾವಕಾಶ ದೊರೆಯುತ್ತದೆ ಎಂದು ಗೂಢಾಲೋಚನೆ ಮಾಡಿರುವ ಕರುನಾಡನಿಧಿ, ತಾನೇ ಬೊಗಳೂರಿಗೆ ಪರಾರಿಯಾಗುವ ಯೋಚನೆಯಲ್ಲಿದ್ದಾರೆ ಎಂಬುದನ್ನೂ ನಮ್ಮ ಮೂಲಗಳು ತಿಳಿಸಿವೆ.

ಅತ್ಯಾಚಾರ, ಅನಾಚಾರ ಎಂಬೆರಡು ಶಬ್ದಗಳಿಗೆ ಅರ್ಥ ಕಲ್ಪಿಸಿಕೊಟ್ಟು ಪ್ರಸಿದ್ಧರಾದ ತಮ್ಮ ಪುತ್ರದ್ವಯರಿಬ್ಬರನ್ನೂ ಕಟ್ಟಿಕೊಂಡು ಬೆಂಗಳೂರಿಗೆ ಧಾವಿಸಿದರೆ, ಅಲ್ಲಿರುವ ಶಾಂತಿಯನ್ನು ಸಂಪೂರ್ಣವಾಗಿ ಕೆಡಿಸಬಹುದು. ಇದರಿಂದ ಅರಾಜಕ ಆಡಳಿತ ನೀಡಲು ಸುಲಭವಾಗಬಹುದು ಎಂಬುದು ಕಪ್ಪುಕನ್ನಡಿಗನ ದುರ್ಆಲೋಚನೆ.

ಈಗಾಗಲೇ ಮುರಿದಿರೋ ಬೆನ್ನುಮೂಳೆಯನ್ನು ಮತ್ತಷ್ಟು ಮುರಿಯಲು ಸಾಧ್ಯವಿಲ್ಲ ಎಂದು ತಿಳಿದೇ, ಬೆನ್ನುಮೂಳೆ ಮುರಿದರೂ ದ್ವೇಷದಹೊಗೆಯ ಕಲ್ಲಿನ ಯೋಜನೆ ಮುಂದುವರಿಸಿಯೇ ಸಿದ್ಧ ಎನ್ನುತ್ತಾ, ತಮ್ಮ ಭಾಷಾಂಧತೆಯನ್ನು ಬಚ್ಚಿಡುವ-ಮುಚ್ಚಿಡುವ ಸಲುವಾಗಿ ಕನ್ನಡಿಗರನ್ನು ಭಾಷಾಂಧರು ಎಂದಿರುವ ಕರುಣಾಜನಕ, ಸದಾ ಕಪ್ಪು ಕನ್ನಡಿ ಧರಿಸುವ ಮೂಲಕ ಭಾಷಾ "ಅಂಧರು" ಯಾರು ಎಂಬುದನ್ನು ತಮಗರಿವಿಲ್ಲದಂತೆಯೇ ಶ್ರುತಪಡಿಸದಿರುವುದು ವಿಚಿತ್ರವಾದರೂ ಸತ್ಯವಾಗಿದೆ.

ತಮ್ಮ ಹೆಸರಲ್ಲೇ ಕರುನಾಡಿನ ಮೊದಲ ಎರಡ್ಮೂರು ಅಕ್ಷರಗಳಿವೆ. ಹಾಗಾಗಿ ಯಾರಿಂದಲೂ ಆಕ್ಷೇಪ ಬರಲಾರದು. ಒಮ್ಮೆ ಬೆಂಗಳೂರನ್ನು ವಶಪಡಿಸಿಕೊಂಡರೆ, ಕೇಂದ್ರದ ಮೇಲೆ ಬೆಂಬಲ ಹಿಂತೆಗೆತದ ಒತ್ತಡ ಹೇರಿ, ನದಿ ತಿರುವು ಯೋಜನೆಯ ಸಹಕಾರದಿಂದ ಕಾವೇರಿಯನ್ನು ಕರ್ನಾಟಕದ ಪಶ್ಚಿಮ ಕರಾವಳಿಗೇ ತಿರುಗಿಸಿದಲ್ಲಿ ಯಾವುದೇ ಜಂಜಡ-ದ್ವೇಷದ ಹೊಗೆ-ಮೆಟ್ಟೂರಿನ ಮೆಟ್ಟಿನೇಟು ಇತ್ಯಾದಿ ಇರಲಾರದು ಎಂಬ ಗೂಢತಂತ್ರವೂ ಇದರಲ್ಲಿ ಸೇರಿದೆ ಎಂಬುದನ್ನು ಪತ್ತೆ ಹಚ್ಚಲಾಗಿದೆ.

Friday, April 04, 2008

ಅರ್ಧಶತಕ ಕಿಲೋ ತೂಕದ ಬೊಗಳೆ

ಕಳೆದ ಎರಡು ವರ್ಷಗಳಿಂದ ಓದುಗರು ಬ್ಲಾಗು ಬಿಟ್ಟೋಡುಗರು ಆಗುವಂತೆ ನೋಡಿಕೊಂಡಿರುವ ಬೊಗಳೆ ರಗಳೆ ಬ್ಯುರೋ ರಗಳೆಗೆ ಓದುಗರ ಬರೆಗಳೇ ಕಾರಣವಾಗಿದ್ದಲ್ಲದೆ, ಇದರಿಂದಾಗಿಯೇ ಸಾಕಷ್ಟು ರಗೆಳೆಯರೂ ದೊರೆತಿದ್ದಾರೆ ಎಂದು ಬೊಗಳೆ ರಗಳೆ ಬ್ಯುರೋ ಇಂದು ಸಂಭ್ರಮದಿಂದ ಹೇಳಿಕೊಳ್ಳುತ್ತಿದೆ.

ಇದೇನಪ್ಪಾ, ಬೊಗಳೆ ಬ್ಯುರೋದ ಏಕ ಸದಸ್ಯ ಬ್ಯುರೋದ ಸಮಸ್ತ ಮಂದಿಗೆ ತಲೆ ಕೆಟ್ಟಿದೆಯಾ ಅಂತ ಬೆಪ್ಪಾಗುವವರಿಗೊಂದು ತಲೆ ಚಿಟ್ಟು ಹಿಡಿಸುವ, ದಿಗ್ಭ್ರಮೆ ಮೂಡಿಸುವ ಸುದ್ದಿ. ಏಪ್ರಿಲ್ 1ರಂದೇ ನಮ್ಮ ಬ್ಯುರೋದ ಜನ್ಮದಿನ ಅಂತ ರಚ್ಚೆ ಹಿಡಿದು, ಊರೆಲ್ಲಾ ರಂಪ ಮಾಡಿ, ದೇಶದೆಲ್ಲೆಡೆ ಪ್ರತಿಭಟನಾ ಪ್ರದರ್ಶನಗಳನ್ನು ಮಾಡಿ, ಸಿಕ್ಕ ಸಿಕ್ಕಲ್ಲೆಲ್ಲಾ ಕೂಗಾಡಿದ ಎಲ್ಲ ಓದುಗರು ಈ ಸುದ್ದಿ ಕೇಳಿ ಬೆಚ್ಚಿ ಬೀಳಬಹುದು.

ಈ ಸುದ್ದಿ ಏನಪಾ ಎಂದರೆ, ನಮ್ಮ ಬ್ಯುರೋದ ಜನ್ಮ ದಿನ ಏ.1 ಅಲ್ಲ, ಬದಲಾಗಿ, ಏ.4. ಅಂದ್ರೆ ಇಂದು! ಎರಡು ವರ್ಷಗಳ ಹಿಂದೆ ಅದ್ಯಾವುದೋ ಕಾರಣಕ್ಕೆ ತಲೆಚಿಟ್ಟು ಹಿಡಿದು ಈ ಬೊಗಳೆಯ ಪುಟದ ಪ್ರತಿಷ್ಠಾಪನೆಯನ್ನು ಇದೇ ದಿನ ನೆರವೇರಿಸಲಾಗಿದ್ದು, ಇದುವರೆಗೆ ಬೊಗಳೂರಿನ ಮಂಗನ ಮುಸುಡಿಗೆ ಕೈ ಒತ್ತಿಹೋದವರ, ಕೈಯೆತ್ತಿ ಹೋದವರ ಸಂಖ್ಯೆ ಐಒತ್ತು ಸಾವಿರ!

2006ನೇ ಏಪ್ರಿಲ್ ನಾಲ್ಕರಂದು ಸ್ವಲ್ಪ ಕಾಯಿರಿ, ಅಸತ್ಯದ ಅನ್ವೇಷಣೆಗೆ ಹೊರಟಿರುವುದಾಗಿ ಹೇಳಿ ಆರಂಭಿಸಿದಾಗ, ವಾಸ್ತವವಾಗಿ ಬ್ಲಾಗೆಂದರೆ ಏನು ಎಂಬುದೇ ಅರಿವಿರಲಿಲ್ಲ ಎಂಬುದು ಖಂಡಿತಾ ಅಸತ್ಯವಲ್ಲ. ಅದರಲ್ಲಿ ಏನು ಬರೆಯೋದು ಅಂತ ತಲೆ ಕೆರೆದುಕೊಳ್ಳಲೆಂದೇ ಮೂರು ದಿನ ತೆಗೆದುಕೊಂಡ ಬಳಿಕ ಎರಡನೇ ಪೋಸ್ಟ್ ಬಂದಿತ್ತು. ಊಹೂಂ... ಸರಿ ಎನಿಸಲಿಲ್ಲ... ಮತ್ತೆ ಏನೇನೋ ಗೀಚಿ, ಅಳಿಸಿ, ಗೀಚಿ ಅಳಿಸಿ, ಎಲ್ಲಾ ನೋಡಿದ ನಂತರ ಸಿಕ್ಕಿದ ಐಡಿಯಾವೊಂದರಿಂದಾಗಿ ಇಡೀ ಕನ್ನಡಾಂತರ್ಜಾಲಿಗರು ಕಿರಿಕಿರಿ ಎದುರಿಸಲೇಬೇಕಾದ ಪ್ರಸಂಗವೊಂದು ಸೃಷ್ಟಿಯಾಯಿತು ಎಂದು ತಿಳಿಸಲು ವಿಷಾದಿಸುತ್ತೇವೆ.

ಇದುವರೆಗೆ ಸುಮಾರು 400ರ ಸಮೀಪದಷ್ಟು ಬೊಗಳೆ ವರದ್ದಿಗಳು ನಮ್ಮ ಏಕಸದಸ್ಯ ಬ್ಯುರೋದ ಸಮಸ್ತ ಸಿಬ್ಬಂದಿ ಒದರಿದ್ದರಿಂದ ಪ್ರಕಟವಾಗಿದ್ದು, ನಮಗೆ ಬಿದ್ದ ಒದೆಗಳ ಸಂಖ್ಯೆ ಐವತ್ತು ಕಿಲೋ ಸಮೀಪಿಸಿದೆ.

ಈ ಮಧ್ಯೆ ಮಧ್ಯೆ, ಬೊಗಳೆಯಲ್ಲಿ ವರದಿ ಪ್ರಕಟವಾಗದೆ, ಚಂದಾದಾರರಿಗೆಲ್ಲ ವಂಚಿಸಿದರೂ, ನೀಡದ ಚಂದಾ ಹಣ ವಾಪಸ್ ಕೇಳದೆ, ಇಂದು ವರದಿ ಬಂದಿಲ್ಲ ಅಂತ ಸಂಭ್ರಮದಿಂದ ಕುಣಿದಾಡುತ್ತಿದ್ದಾ ಸಂತೋಷ ಕೂಟ ಏರ್ಪಡಿಸಲಾಗುತ್ತಿತ್ತು ಎಂಬುದನ್ನು ಕೂಡ ನಮ್ಮ ಬ್ಯುರೋದ ರದ್ದಿಗಾರರು ಕಂಡುಕೊಂಡಿದ್ದಾರೆ.

ಮಾಹಿತಿ ಹತ್ತಿಕ್ಕು ಕಾಯ್ದೆ ಪ್ರಯೋಗಿಸಿ ನಮ್ಮ ಜನ್ಮ ಜಾಲಾಡಲು ಯತ್ನಿಸಿದ ಆತ್ಮೀಯ ಬೊಗಳಿಗರಿಗೆ, ದಿನಾಲೂ 'ಚುಚ್ಚು'ಮಾತುಗಳಿಂದ ಚುಚ್ಚುತ್ತಲೇ, ನಾವು ಚಚ್ಚುವುದನ್ನು ನೋಡುತ್ತಲೇ ಇರುವವರು, ಕಚೇರಿಯಲ್ಲಿ ಕೆಲಸದೊತ್ತಡವಿದ್ದರೂ, ಕಾಫೀ-ಟೀ ಕುಡಿಯುವಂತೆ ರಿಲ್ಯಾಕ್ಸೇಷನ್‌ಗಾಗಿ ನಮ್ಮ ಬೊಗಳೂರಿನ ಈ ತಾಣಕ್ಕೆ ಬಂದು ಉಗುಳಿ ಹೋಗುವವರು, ಯಾರದೋ ಕಾಲೆಳೆಯಬೇಕು ಅಂತನ್ನಿಸಿದಾಗ, ಬೊಗಳೆ ರಗಳೆಗೆ ಬಂದು ಕಾಲೋ, ಕೈಯೋ ಎಳೆದು ಹೋಗುವವರು, ಇಂದು ಬೊಗಳೆಯಲ್ಲೇನಿದೆ ಅಂತ ನಿರೀಕ್ಷೆಯಿಂದ ಬಂದು ನಿರಾಶರಾಗುವವರು, ಬೊಗಳೆಯಲ್ಲಿ ಏನೂ ಇಲ್ಲ, ಅದ್ರೂ ಒಮ್ಮೆ ಓದೋಣ ಅಂತ ಓದಿ ಬೆಚ್ಚಿ ಬೀಳುವವರು, ಬೊಗಳೆಯಲ್ಲಿ ಕಾಮೆಂಟ್ ಹಾಕುವ ಬದಲು ನೇರವಾಗಿ ಮೇಲ್ ಮೂಲಕವೇ ಕಾಲೆಳೆಯುವವರು, ಆತ್ಮೀಯರಾದವರು, ಅನ್ವೇಷಿಗಳೇ ಹೇಗಿದ್ದೀರಿ ಅಂತ ಒಂದು ಕೈ ವಿಚಾರಿಸಿಕೊಳ್ಳೋರು... ಅಬ್ಬಬ್ಬಾ... ಬರೆದರೆ ಪಟ್ಟಿ ತುಂಬಾನೇ ಬೆಳೆದುಬಿಡುತ್ತದೆ... ನಾವು ಫೂಲ್ ಮಾಡಲೆತ್ನಿಸಿದರೂ ನಮ್ಮನ್ನು ಸುಲಭವಾಗಿ ಫೂಲ್ ಮಾಡುವ ಅಂಥವರೆಲ್ಲರಿಗೂ, ಒಟ್ಟಿನಲ್ಲಿ ಬೊಗಳೆಯನ್ನು ಮೆಚ್ಚಿಕೊಳ್ಳುವವರಿಗೆ, ಚಚ್ಚಿ ಹಾಕುವವರಿಗೆ, ಕೊಚ್ಚೆ ಎಂದು ಹೀಗಳೆಯುವವರಿಗೆ, ಬೆಚ್ಚಿ ಓಡುವವರಿಗೆ, ಹಚ್ಚಿಕೊಂಡವರಿಗೆ, ದ್ವೇಷಿಸುವವರೂ ಸಹಿತ ಎಲ್ಲ ಕನ್ನಡ ನೆಟ್ಟೋದುಗರಿಗೆ, ಕನ್ನಡದ ಬ್ಲಾಗೋತ್ತಮರಿಗೆ ನನ್‌ನ-ಮನ!

Thursday, April 03, 2008

ಗಾಂಧೀಜಿಯಿಂದ ಗ್ರಾಮೀಣ ವಿದ್ಯುದೀಕರಣ!

(ಬೊಗಳೂರು ವಿದ್ಯುದೀಕರಣ ಬ್ಯುರೋದಿಂದ)
ಬೊಗಳೂರು, ಏ.3- ಕರುನಾಟಕದ ಹಳ್ಳಿ ಹಳ್ಳಿ, ಗ್ರಾಮ-ಕುಗ್ರಾಮಗಳೆಲ್ಲಾ ಇತ್ತೀಚೆಗೆ ಮೂರೂವರೆ ದಿನಗಳ ಕಾಲ ಬೆಳಗುತ್ತಿದ್ದವು. ಇದಕ್ಕೆ ಕಾರಣ ಪತ್ತೆ ಹಚ್ಚಲಾಗಿದ್ದು, ಭಾವೀ ಪ್ರಧಾನಿ ರಾಹುಲ ಗಾಂಧೀಜಿ ಅವರ ಕುಗ್ರಾಮ ಡಿಸ್ಕವರಿ ಪ್ರವಾಸ.

ಕೊಲಂಬಸುವಿನಂತೆ ಕುಗ್ರಾಮಗಳನ್ನೆಲ್ಲಾ ಡಿಸ್ಕವರಿ ಮಾಡಲೆಂದು ಮರಿ ಗಾಂಧೀಜಿ ಅವರು ವರಿ ಮರೆತು ಜಿಲ್ಲೆ ಜಿಲ್ಲೆಗಳಲ್ಲಿ ಪ್ರಸವ ಮಾಡಿದಾಗ, ಗ್ರಾಮಸ್ಥರಲ್ಲೆಲ್ಲಾ ವಿದ್ಯುತ್ ಸಂಚಾರವಾಗಿತ್ತು. ಕೆಲವರು ಈ ವಿದ್ಯುತ್ತಿನ ಆಘಾತಕ್ಕೂ ಒಳಗಾಗಿದ್ದರು. ಒಟ್ಟಿನಲ್ಲಿ ಎಲ್ಲಿ ಹೋದರೂ ವಿದ್ಯುತ್ತೇ ವಿದ್ಯುತ್ತು. ಈ ವಿದ್ಯುತ್ತುಗಳನ್ನೆಲ್ಲಾ ಸಂಗ್ರಹಿಸಿ, ಇಷ್ಟು ವರ್ಷ ಕರ್ನಾಟಕವನ್ನು ಆಳಿಯೂ ಇನ್ನೂ ಕರೆಂಟಿಲ್ಲದೇ ನರಳುತ್ತಿದ್ದ ಗ್ರಾಮಗಳಿಗೆ ಕಾಂಗ್ರೆಸ್ ವಿದ್ಯುತ್ ಒದಗಿಸಿ ಇದು ನಮ್ಮ ಸಾಧನೆ ಎಂದು ಬೆನ್ನು ತಟ್ಟಿಕೊಳ್ಳಲಾರಂಭಿಸಿದೆ. ಇದುವೇ ಗ್ರಾಮೀಣ ವಿದ್ಯುದೀಕರಣ ಯೋಜನೆ ಎಂದೂ ಕರೆದುಕೊಂಡಿದೆ.

ಆದರೆ, ಅವರು ಪಕ್ಷದೊಳಗೆ ಆಂತರಿಕ ಪ್ರಜಾಪ್ರಭುತ್ವ ಇಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ತಾವು ಮುಂದಿನ ಪ್ರಧಾನಿ ಎಂಬುದನ್ನು ಸ್ಪಷ್ಟಪಡಿಸಿದರು. ಪಕ್ಕದಲ್ಲಿರುವ ಪಾಕಿಸ್ತಾನ ಮಿಲಿಟರಿ ಆಡಳಿತದಿಂದ ಪ್ರಜಾಪ್ರಭುತ್ವ ಆಡಳಿತಕ್ಕೆ, ನೇಪಾಳವೂ ಪ್ರಜಾಸತ್ತೆಗೆ, ಭೂತಾನದಲ್ಲೂ ಪ್ರಜಾಪ್ರಭುತ್ವ ಆಡಳಿತಕ್ಕೆ ಮರಳಿದೆ. ಎಲ್ಲರೂ ಪ್ರಜಾಪ್ರಭುತ್ವ ಅಂತ ಹೋರಾಡಿದರೆ, ಗಾಂಧೀಜಿ ಕುಟುಂಬವದವರು ಇನ್ನು ಯಾವಾಗ ಆಳ್ವಿಕೆ ನಡೆಸುವುದು ಎಂಬ ಪ್ರಶ್ನೆ ಸುಳಿದಾಡಿದ ಹಿನ್ನೆಲೆಯಲ್ಲಿ ಅವರು ಈ ಸ್ಪಷ್ಟನೆ ನೀಡಿದ್ದಾರೆ ಮತ್ತು ಭಾರತವು ಪ್ರಜಾಪ್ರಭುತ್ವದ ಬದಲು ಪ್ರಭುಪ್ರಭುತ್ವದತ್ತ ಹೊರಳುವ ಸೂಚನೆಗಳನ್ನೂ ನೀಡಿದರು.

ಈ ಮಧ್ಯೆ, ರಾಹುಲರು ಗಾಳಿ ಬೀಸಿ ಹೋದಲ್ಲಿ ಜನರನ್ನು ಬೊಗಳೆ ರಗಳೆ ಬ್ಯುರೋ ಸಂದರ್ಶಿಸಿತು. ಅಲ್ಲಿ ಕೇಳಿ ಬಂದ ಪ್ರಶ್ನೆಗಳು ಹಲವಾರು... ರಾಹುಲ್ ಬಂದಿದ್ರಲ್ಲಾ... ಏನನಿಸಿತು ಅಂತ ಕೇಳಿದಾಗ ದೊರೆತ ತತ್ತರದ ಉತ್ತರ ಹೀಗಿತ್ತು:

'ಅರೆ, ಯಾರು ರಾಹುಲ್? ಬಂದ್ಹೋಗಿದ್ದು ಮಹಾತ್ಮ ಗಾಂಧೀಜಿ ಅಲ್ವಾ? ಛೆ.. ನಮ್ಗೆ ಗೊತ್ತೇ ಆಗಿಲ್ಲ...' ಅಂತ ಕೆಲವರು ಕೇಳಿದ್ರೆ, ಇನ್ನು ಕೆಲವರು, "ಛೆ... ನಾವು ಇಂದಿರಮ್ಮರೇ ಬಂದು ಹೋದ್ರೂಂತ ತಿಳ್ಕೊಂಡ್ವಿ... ಹಾಗಂತ ನಮ್ಗೆ ಊರ ಜನಾ ಹೇಳಿದ್ರು, ಕರ್ಕೊಂಡು ಬಂದ್ರು..."

ಎಂಜಿನ್ ಇಲ್ಲದ ರೈಲು: ಬ್ರೇಕಿಂಗ್ ನ್ಯೂಸ್ ಅಲ್ಲವೆಂದ ಬೊ.ರ.

[ಬೊಗಳೂರು ಪಟ್ಟೆ-ರಹಿತ ರೈಲು ಬ್ಯುರೋ] ಬೊಗಳೂರು: ಆಫ್‌ಲೈನ್ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯೊಂದು ಆನ್‌ಲೈನ್ ಸಂಪಾದಕರ ಕಣ್ಣು ಕುಕ್ಕಿದ್ದು, ಎಂಜಿನ್ ಇಲ್ಲದೆ...