Friday, May 30, 2008

ಬೊಗಳೆಗೆ 50 ಸಾವಿರದ ಹಿಟ್ಟು

(ಬೊಗಳೂರು ಸೊಂಪಾದkeyಯ ಬ್ಯುರೋದಿಂದ)
ಬೊಗಳೆ ಸ್ಫೋಟಗೊಂಡು 50 ಕಿಲೋ ಚಪಾತಿ ಹಿಟ್ಟುಗಳು ಛಿದ್ರಛಿದ್ರವಾಗಿದ್ದು, ಮತಯಾಚನೆ ಮತ್ತು ಮತಪೆಟ್ಟಿಗೆ ಅಪಹರಣ ಇತ್ಯಾದಿಗಳಲ್ಲಿ ನಿರತವಾಗಿದ್ದ ಬೊಗಳೆ ರಗಳೆ ಬ್ಯುರೋದ ಅರಿವಿಗೇ ಬಂದಿರಲಿಲ್ಲ. ಹೀಗಾಗಿ ಇದನ್ನು ನಮ್ಮ ವಿರೋಧೀ ಪತ್ರಿಕೆಗಳು ಬ್ರೇಕಿಂಗ್ ಸುದ್ದಿಯಾಗಿ ಪ್ರಕಟಿಸುವ ಮೊದಲೇ ಪ್ರಕಟಿಸಲು ನಾವಿಲ್ಲಿ ನಿರ್ಧರಿಸಿದ್ದೇವೆ.

ಇದಂತೂ ಹಾರ್ಟ್ ಬ್ರೇಕಿಂಗ್ ಸುದ್ದಿಯೋ ಅಥವಾ ಬ್ಲಾಗರ್ ಡಾಟ್ ಕಾಂ ಅವರ ಜಾಗ (ಸರ್ವರಿನ ಡಿಸ್ಕ್ ಸ್ಪೇಸ್) ಬ್ರೇಕ್ ಮಾಡುವ ಸುದ್ದಿಯೋ, ಅಂತೂ ಈ ಬೊಗಳೆ ಬ್ಲಾಗು 50 ಸಾವಿರ ಮೆಟ್ಟಿಲೇರಿ ಬಂದು ನಿಂತಿರುವುದು ಏಕಸದಸ್ಯ ಬ್ಯುರೋದ ಸಮಸ್ತ ಸಿಬ್ಬಂದಿಗಳಿಗೆ ಹೆಮ್ಮೆಯ ಸಂಗತಿಯಾಗಿದೆ. ಆದರೆ ಕೇವಲ ಒಬ್ಬನೇ ಒಬ್ಬ ಲೇಖಕ, ಪ್ರಕಾಶಕ,ಸಂಪಾದಕ, ಕರಡಚ್ಚು ತಿದ್ದುಗ ಮತ್ತು ಎಲ್ಲಕ್ಕೂ ಮೊದಲು.... ಒಬ್ಬನೇ ಒಬ್ಬ ಓದುಗನೊಂದಿಗೆ ಈ blog ನ ಕನ್ನಡೀಕೃತ ರೂಪವಾದ 'ಬೊಗಳೆ' ಹುಟ್ಟಿದಾಗಲೇ ಎಲ್ಲರೂ ತಡವಾಗಿ ಹುಟ್ಟಿದ್ದೇಕೆ ಅಂತ ಗುಲ್ಲೆಬ್ಬಿಸಿದ್ದರು.

ಈ ಬಗ್ಗೆ ಅನ್ವೇಷಣೆ ಕೈಗೊಂಡಾಗಲೇ ಗೊತ್ತಾದದ್ದು ಅಸಲು ವಿಷಯ ಏನೂಂತ. ಯಾಕೆಂದರೆ ಬೊಗಳೆ ಹುಟ್ಟಿದ್ದು 2006ರ ಏಪ್ರಿಲ್ 4ರಂದು. ಮೂರು ದಿನ ತಡವಾಗಿ ಹುಟ್ಟಿದ್ದೇಕೆ ಅಂತಲೇ ಅವರು ನಿಜವಾಗಿ ಕೇಳಿದ್ದು! ಆದರೂ ಬೊಗಳೆ ಜನ್ಮದಿನ ಏಪ್ರಿಲ್ ಒಂದರಂದೇ ಎಲ್ಲೆಡೆ ಆಚರಿಸುವ ಪರಿಪಾಠವಿದೆ, ಈಗಲೂ ಈ ಬಗ್ಗೆ ಗಹನವಾದ ಚರ್ಚೆಯೂ ಮುಂದುವರಿಯುತ್ತಲೇ ಇದೆ. ಆದರೆ ಇದರಲ್ಲಿ ಬೊಗಳೆಯ ಅನ್ವೇಷಿಯ ಪಾತ್ರ ಏನೂ ಇಲ್ಲ ಎಂದು ನಮ್ಮ ಸೊಂಪಾದ-ಕರುಗಳು ಸ್ಪಷ್ಟಪಡಿಸಿದ್ದಾರೆ.

415ನೇ ಪೋಸ್ಟಿನ ವೇಳೆಗೆ 50 ಸಾವಿರಕ್ಕೂ ಹೆಚ್ಚು ಬಾರಿ ಓಡುಗರಿಂದ ಹಿಟ್ಟಿಸಿಕೊಂಡರೂ 'ಭ್ರಷ್ಟಾಚಾರದ ಬೀಜ ನೂರ್ಕಾಲ ಬಾಳುತ್ತದೆ' ಅಂತ ನಾವು ಈ ಹಿಂದೆ ಬಿಟ್ಟಿದ್ದ ಬೊಗಳೆಯ ಅನುಸಾರವಾಗಿ, ಬೊಗಳೆಯೂ ಈ ತಂತ್ರಜ್ಞಾನದ ಮೊರೆ ಹೋಗಿದೆಯೋ ಎಂಬ ಬಗ್ಗೆ ಯಾರು ಕೂಡ ಸಂದೇಹ ಪಡಬೇಕಾದ್ದಿಲ್ಲ ಅಂತ ಈ ಮೂಲಕ ಸ್ಪಷ್ಟಪಡಿಸಲಾಗುತ್ತಿದೆ.

10 ಸಾವಿರ ಹಿಟ್ಟುಗಳು ಬಿದ್ದಾಗಲೇ ಮಾಡಿದ ಆವಾಂತರವಿನ್ನೂ ನೆನಪಿದೆ. ಅಂದು ಬಂದು ಹಾರೈಸಿದ ಬೊಗಳೋದುಗರು ಇಂದೂ ಭೇಟಿ ನೀಡುತ್ತಿದ್ದಾರೆ ಎಂಬುದು ನೆಮ್ಮದಿ! ಆದರೂ ನಾವು ಈ ಸಂದರ್ಭದಲ್ಲಿ ಕೊಟ್ಟ ಕೊನೆಗೆ ನಾವು ಬೊಗಳೆ ಬಿಡದಿರಲು ನಿರ್ಧರಿಸಿದ್ದೇವೆ. ಅಂದ್ರೆ ಬೆಚ್ಚಿ ಬೀಳದಿರಿ, ಓ'ಡು'ಗರಾಗಬೇಡಿರಿ... ಈ ಕೆಳಗಿನ ಒಂದು ವಾಕ್ಯ ಮಾತ್ರ ಬೊಗಳೆ ಬಿಡಲು ಆಗುತ್ತಿಲ್ಲ. ಅಥವಾ ಬಿಟ್ಟದ್ದು ಬೊಗಳೆಯಾಗುವುದೂ ಸಾಧ್ಯವಿಲ್ಲ.

"ಓದುಗರು, ಓದಿದ ತಕ್ಷಣ ಬಿಟ್ಟೋಡುಗರು, ಕಾಮೆಂಟಿಗರು, ಪ್ರೋತ್ಸಾಹಿಗರು, ಮೆಚ್ಚುಗರು, ಬೆಚ್ಚುಗರು, ಟೀಕಿಗರು, ಟೆಕ್ಕಿಗರು, ಲೆಕ್ಕಿಗರು... ಆಗಿರುವವರಿಗೆಲ್ಲಾ ಕೃತಜ್ಞತೆಗಳು ಇಲ್ಲಿ ತುಂಬಿ ತುಳುಕಾಡುತ್ತಿವೆ"

Thursday, May 29, 2008

ಠೇವಣಿ ನಷ್ಟ: ಬೊಗಳೆಯೆದುರು ವಟವಟಾಳ್ ಪ್ರತಿಭಟನೆ!

(ಬೊಗಳೂರು ಅಪ್ರಜ್ಞಾವಸ್ಥೆ ಬ್ಯುರೋದಿಂದ)
ಬೊಗಳೂರು, ಮೇ 28- ಒಮ್ಮೆಯೂ ತಮ್ಮ ಸ್ವಕ್ಷೇತ್ರವಾದ ಚಾಮರಾಜನಗರದಲ್ಲಿ ಯಾವುದೇ ಪ್ರತಿಭಟನೆ ಮಾಡದೆ, ರಾಜಧಾನಿಯಲ್ಲಿ ಮಾತ್ರವೇ ಹುಲಿಯಂತಿದ್ದ ವಟವಟಾಳ್ ಗಾನರಾಜ್ ಅವರಿಗೆ ಪ್ರತಿಭಟನೆಗೆ ಮತ್ತೊಂದು ಅವಕಾಶ ಸಿಕ್ಕಿದೆ.

ಅದೆಂದರೆ ಅವರು ಚುನಾವಣಾ ಆಯೋಗದಲ್ಲಿ ಇಟ್ಟಿದ್ದ ಠೇವಣಿಯು ನಷ್ಟವಾಗಿರುವುದು. ಹಣಕ್ಕೆ ಈಗ ಬೆಲೆ ಇಲ್ಲದಂತಾಗಿರುವುದರಿಂದ ಈ ಠೇವಣಿ ನಷ್ಟವಾಗಲು ಹಣದುಬ್ಬರವೇ ಕಾರಣ ಎಂದು ಹೇಳುತ್ತಿರುವ ಅವರು, ತಮ್ಮನ್ನು ಸೋಲಿಸಿದ ಮತದಾರರ ವಿರುದ್ಧ ಪ್ರತಿಭಟನೆ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ.

ಈ ಬಾರಿ ಕತ್ತೆಗಳ ಉದ್ಧಾರಕ್ಕಾಗಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದ ತಮಗೆ ಕತ್ತೆಗಳೇ ಲತ್ತೆ ಕೊಟ್ಟಿವೆ ಎಂದು ಹೇಳಿಕೊಂಡು ತಿರುಗಾಡುತ್ತಿರುವ ಅವರು, ಹೇಗಾದರೂ ಮಾಡಿ ಪ್ರತಿಭಟನೆ ಮಾಡಬೇಕಾಗಿದೆ. ಆದರೆ ತಮ್ಮ ಕ್ಷೇತ್ರವಾಗಿರುವ ಚಾಮರಾಜನಗರಕ್ಕೆ ಹೋಗುವ ದಾರಿ ಯಾವುದು ಎಂದು ತಿಳಿಯದೆ ಕಂಗಾಲಾಗಿರುವುದಾಗಿ ಬೊ.ರ. ಪತ್ತೆ ಹಚ್ಚಿದೆ.

ತಾವು ಇದುವರೆಗೆ ವಿಧಿವಿಧಾನಸೌಧದಲ್ಲೇ ಕುಳಿತು ಫೇಮಸ್ಸಾಗಿದ್ದು, ಚಾ.ನಗರಕ್ಕೆ ಹೋಗದೆ ಅದೆಷ್ಟೋ ವರ್ಷಗಳಾಗಿದ್ದವು. ಅಲ್ಲಿನ ಮತದಾರರು ಅದು ಹೇಗೆ ಮ್ಯಾಜಿಕ್ ಮಾಡಿದರೋ... ನಾನು ರಾಜಧಾನಿಯಲ್ಲಿರುವಾಗಲೇ ನನ್ನನ್ನು ಚಾ.ನಗರದಲ್ಲಿದ್ದುಕೊಂಡೇ ಗದ್ದುಗೆಯಿಂದ ಇಳಿಸಿಬಿಟ್ಟರಲ್ಲಾ... ಅದು ಹೇಗೆ ಸಾಧ್ಯವಿರಬಹುದು ಎಂದು ಅವರು ಲೆಕ್ಕಾಚಾರ ಹಾಕುತ್ತಿದ್ದಾರೆ. ಅವರು ಈ ಬಗ್ಗೆ ತಮಗೆ ದೊರೆತ ಮತಗಳ ಸಂಖ್ಯೆಗಿಂತಲೂ ಒಂದು ಹೆಚ್ಚು ಅಂದರೆ 11,414 ಬಾರಿ ಲೆಕ್ಕಾಚಾರ ಮಾಡಿದ್ದಾರೆ ಎಂಬುದನ್ನು ನಮ್ಮ ವರದ್ದಿಗಾರರು ಪತ್ತೆ ಹಚ್ಚಿದ್ದಾರೆ.

ತಮ್ಮ ಪ್ರತಿಭಟನಾ ಯೋಜನೆಯ ಕಾರಣಗಳನ್ನು ಪತ್ತೆ ಹಚ್ಚುತ್ತಾ ಪಟ್ಟಿ ಮಾಡುತ್ತಿರುವ ವಟವಟಾಳ್ ಅವರು, ಮೊದಲ ಕಾರಣವೆಂದರೆ, ತಾನು ಹಿಂದೆ ಎಲ್ಲಿಂದ ಆರಿಸಿ ಬಂದಿದ್ದೆ ಎಂಬುದು ತನಗೇ ತಿಳಿದಿಲ್ಲದಿದ್ದರೂ, ಅಲ್ಲಿನ ಜನ ಮಾತ್ರ ಸರಿಯಾಗಿ ತಿಳಿದುಕೊಂಡಿರುವುದು. ಎರಡನೇ ಕಾರಣವೆಂದರೆ, ತಮ್ಮ ಊರಿನ ಜನರಿಗೆ ಶಿಕ್ಷಣ ಹೆಚ್ಚಾಗಿರುವುದು. ಅದು ಯಾರೋ ಪುಣ್ಯಾತ್ಮ ಊರಿನ ಜನರನ್ನು ಬಡಿದೆಬ್ಬಿಸಿ, ಅವರಲ್ಲಿ ಜಾಗೃತಿ ಮೂಡಿಸಿ, ಸುಶಿಕ್ಷಿತರಾಗಿರುವಂತೆ ಮಾಡಿದ್ದಾರೆ. ಇದೇ ಕಾರಣಕ್ಕೆ ತನ್ನ ಸೋಲಾಗಿದೆ ಎಂದಿರುವ ಅವರು, ತಮ್ಮ ಕ್ಷೇತ್ರದ ಜನರನ್ನು ಈ ಪರಿ ಬುದ್ಧಿವಂತರಾಗಿಸಿದ್ದು ಯಾರು ಎಂಬ ಬಗ್ಗೆ ತನಿಖೆ ನಡೆಸುವುದಾಗಿ ಘೋಷಿಸಿದ್ದಾರೆ.

ಬರದ ಜಿಲ್ಲೆಯೆಂದೇ ಖ್ಯಾತಿ ಹೊತ್ತ ಚಾಮರಾಜನಗರದಲ್ಲಿ, ನೀರು ಬಿಡಿ, ಚರಂಡಿ ಹರಿಯಲೂ ಒಂದ ಯೋಜನೆ ರೂಪಿಸದಿದ್ದುದಕ್ಕಾಗಿಯೇ ವಟವಟಾಳ್ ಅವರಿಗೆ ಪ್ರಜ್ಞಾವಂತ ಮತದಾರರು ವಿಶ್ರಾಂತಿ ನೀಡಿ ಕಳುಹಿಸಿದ್ದಾರೆ, ಮತ್ತೊಮ್ಮೆ ವಿಧಾನಸೌಧಕ್ಕೆ ಆರಿಸಿ 'ಬರ'ದಂತೆ ನೋಡಿಕೊಂಡಿದ್ದಾರೆ ಎಂದು ಅಲ್ಲಿನ ಜನರು ಬೊಗಳೆ ರಗಳೆಗೆ ನೀಡಿದ ಸ್ವಯಂಪ್ರೇರಿತವಾದ ಮತ್ತು ವಿಶೇಷವಾದ ಸಂದರ್ಶನದಲ್ಲಿ ಗುಡುಗಿದ್ದಾರೆ.

Wednesday, May 28, 2008

ಇದು ಜನಸೇವೆಗಾಗಿ ದೊರೆತ ವಿಶ್ರಾಂತಿ: ಗೆದ್ದವರು

(ಬೊಗಳೂರು ದನಸೇವಾ ಬ್ಯುರೋದಿಂದ)
ಬೊಗಳೂರು, ಮೇ 28- ಇದುವರೆಗೆ ಕಷ್ಟಪಟ್ಟು ಜನ ಸೇವೆ ಮಾಡುತ್ತಿದ್ದ ಜನನಾಯಕರನೇಕರಿಗೆ ರಾಜ್ಯದ ಮತದಾರ ತಾನಾಗಿಯೇ 'ವಿಶ್ರಾಂತಿ' ನೀಡಿರುವಂತೆಯೇ, ತಮಗೂ ಸಮಪಾಲು-ಸಮಬಾಳು ಎಂಬ ಧ್ಯೇಯ ಹೊಂದಿದ ಗೆದ್ದವರು ಕೂಡ ವಿಧಿವಿಧಾನಸೌಧದಲ್ಲಿ ವಿಶ್ರಾಂತಿ ತೆಗೆದುಕೊಳ್ಳಲು ಸಿದ್ಧತೆಗಳನ್ನು ನಡೆಸುತ್ತಿದ್ದಾರೆ.

ಇದಕ್ಕವರು ಕೊಡುವ ಕಾರಣಗಳೂ ಒಪ್ಪತಕ್ಕದ್ದೇ. ಎಲ್ಲರೂ ತಮ್ಮ ಗೆಲುವನ್ನು ಪಟಾಕಿಗೆ ದುಡ್ಡು ಸುರಿದು, ತುಂಡು ತಿಂದು ಗುಂಡೇರಿಸಿ ಆಚರಿಸಿಕೊಳ್ಳುತ್ತಾರೆ. ನಾವು ಅವರಿಗಿಂತ ವಿಭಿನ್ನ. ಭಿನ್ನವಾಗಿಯೇ ಆಚರಿಸುತ್ತೇವೆ. ನಾವೆಲ್ಲರೂ ವಿಶ್ರಾಂತಿ ತೆಗೆದುಕೊಳ್ಳುವ ಮೂಲಕ ಗೆಲುವು ಆಚರಿಸುತ್ತೇವೆ ಎಂದು ಅವರೆಲ್ಲರೂ ಬೊಗಳೆ ರಗಳೆ ಬ್ಯುರೋದೆದುರು ತಾವಾಗಿಯೇ ಸಂದರ್ಶನ ನೀಡುತ್ತಾ ಹೇಳಿದ್ದಾರೆ.
ಕತ್ತೆ ಕುದುರೆ ಲೆಕ್ಕಾಚಾರ
ಈಗೇನಿದ್ದರೂ ಕುದುರೆಗಳಿಗೇ ಕಾಲ. ಕುದುರೆ ವ್ಯಾಪಾರ ಒಳ್ಳೆ ಭರ್ಜರಿ ಭರದಿಂದ ಸಾಗುತ್ತಿದೆ. 110 ಕುದುರೆಗಳಿದ್ದರೂ, ಕೇವಲ ಮೂರು ಕುದುರೆಗಳಿಗೇ ಐಷಾರಾಮಿ ಲಾಯ ಕಟ್ಟಬೇಕಾಗಿರುವುದು ಕುದುರೆ ಲಾಯದ ಒಡೆಯರ ದುರ್ದೈವ. ಒಂದಿಡೀ ರಾಜ್ಯದ ಐದುವರೆ ಕೋಟಿ ಜನತೆ ಈ ಮೂರು ವಿಶಿಷ್ಟ, ಅತಿವಿಶಿಷ್ಟ ಮತ್ತು ಅತಿಅತಿ ವಿಶಿಷ್ಟ ಕುದುರೆಗಳ ಮುಷ್ಟಿಯೊಳಗೆ ಸಿಲುಕಿದ್ದು, ಕೆಲಸವಾಗಬೇಕಿದ್ದರೆ ಕಾಲು ಹಿಡಿಯಲೇ ಬೇಕು ಎಂಬ ಪರಿಸ್ಥಿತಿ ಇರುವುದರಿಂದ ಇಲ್ಲಿ ಕತ್ತೆಗಳೇ ಆಗಬೇಕೆಂದಿಲ್ಲ, ಮೂರು ಕುದುರೆಗಳ ಕಾಲು ಹಿಡಿದರೂ ಸಾಕಾಗುತ್ತದೆ, ಕೆಲಸ ಮಾಡಿಸಿಕೊಳ್ಳಲು. ಅದೂ ಅಲ್ಲದೆ, ಅವರಿಗೆ ಇವರ ಕೆಲಸವಾಗಬೇಕು, ಇವರಿಗೆ ಅವರ ಕೆಲಸವಾಗಬೇಕು ಎಂದಿರುವುದರಿಂದ ಯಾರು ಯಾರನ್ನು ಬೇಕಾದರೂ ಯಾವುದೇ ಪ್ರತಿಷ್ಠಿತ ಸ್ಥಾನಗಳಲ್ಲಿ ಕೂರಿಸಿಕೊಳ್ಳಬಹುದು ಎಂದು ಬೊ.ರ. ತೀರ್ಪು ನೀಡುತ್ತಿದೆ.

ಈ ಕುದುರೆಗಳು ಕೂಡ ಗೆದ್ದೆತ್ತಿನ ಬಾಲ ಹಿಡಿದವುಗಳೇ ಆಗಿರುವುದರಿಂದಾಗಿ ಇವುಗಳ ಕಾಲು ಹಿಡಿಯುವುದಕ್ಕೆ ಅಡ್ಡಿಯಿಲ್ಲ ಎಂಬುದು ಸಚಿವ'ಲಾಯ'ದ ವಿಶ್ಲೇಷಕರ ಲೆಕ್ಕಾಚಾರ.

ವಿಶೇಷವೆಂದರೆ, ಈ ಆರು ಕುದುರೆಗಳೇ ಕರು-ನಾಟಕ ಮಾರುಕಟ್ಟೆಯಲ್ಲಿ ಅತ್ಯಂತ ಹೆಚ್ಚು ಬೆಲೆ ಬಾಳುವವುಗಳಾಗಿದ್ದು, ಇವುಗಳನ್ನು ಬೇಟೆಯಾಡುವುದಕ್ಕಾಗಿ ಅಡಿಗೆ ಬಿದ್ದ ಪಾಳಯಗಳೂ ಮೂಗು ಮೇಲೆತ್ತಿ ಪರಸ್ಪರ ಒಟ್ಟಾಗಿ ಸಿದ್ಧತೆ ನಡೆಸಿದ್ದವು. ಆದರೆ ಎಲ್ಲೋ ಒಂದು ಕಡೆ ಮತದಾರನ ಆಕ್ರೋಶದ ವಾಸನೆಯೊಂದು ಬಲವಾಗಿ ಬೀಸಿದ ರಭಸಕ್ಕೆ ಅವರೆಲ್ಲರೂ ಈ ಬೇಟೆ ನಿರ್ಧಾರದಿಂದ ರಭಸವಾಗಿ ತಳ್ಳಲ್ಪಟ್ಟಿದ್ದರು ಎಂಬುದು ಬೊಗಳೆ ರಗಳೆಗೆ ಮಾತ್ರ ಗೊತ್ತಿರುವ ವಿಚಾರ.

ಆದರೆ, ಈ ಆರು ಕುದುರೆಗಳು ಎರಡೂ ರಾಜರ ನಡುವೆ ಯಾರು ಹಿತವರು ನಮಗೆ ಎಂದು ಲೆಕ್ಕಾಚಾರ ಹಾಕುತ್ತಲೇ ಇರುವುದರಿಂದ ಈ ಬಿಸಿಯನ್ನು ಇಳಿಸಲು ಅವರ ತಲೆಯ ಮೇಲೆ ದೊಡ್ಡ ದೊಡ್ಡ ಸೂಟ್‌ಕೇಸ್‌ಗಳನ್ನು ಹೋಲುವ ಕೂಲರ್‌ಗಳನ್ನು ಇರಿಸಬೇಕಾಗುತ್ತದೆ ಎಂಬುದು ತಿಳಿದುಬಂದಿದೆ. ಅವರ ಮನಸ್ಸು ತಂಪು ತಂಪಾಗಿಸಲು ಈ ಕೂಲರನ್ನು ಸುಡು ಬೇಸಿಗೆಯಲ್ಲಿ ಮಾತ್ರವಲ್ಲದೆ, ಬಿರು ಚಳಿಗಾಲದಲ್ಲೂ ಇರಿಸಬೇಕಾಗುತ್ತದೆ.

ಅದೆಲ್ಲ ಇರಲಿ, ಇದೀಗ ಎಲ್ಲ ಕುದುರೆಗಳನ್ನೂ ಕಟ್ಟಿ ತಂದು ಲಾಯದಲ್ಲಿರಿಸಲಾಗಿದ್ದು, ಇನ್ನು ಸ್ವಲ್ಪ ದಿನ ಎಂದರೆ ಸುಮಾರು ಐದು ವರ್ಷಗಳ ಕಾಲ ಮಾತ್ರವೇ ವಿಶ್ರಾಂತಿ ತೆಗೆದುಕೊಳ್ಳಲು ಎಲ್ಲ ಗೆದ್ದವರೂ ಹೊರಟಿರುವುದಾಗಿ ಬಲ್ಲ ಮೂಲಗಳು ವರದ್ದಿ ಮಾಡಿವೆ.

ವಿಧಿವಿಧಾನಸೌಧದಲ್ಲೇ ಕೆಲವರು ಪವಡಿಸಲಿದ್ದರೆ, ಮತ್ತೆ ಕೆಲವರು ತಮ್ಮ ಕ್ಷೇತ್ರದ ಮತದಾರರ ಕೈಗೆ ಸಿಗದಷ್ಟು ದೂರದಲ್ಲಿ ತಂಗಲಿದ್ದಾರೆ. ಕಳೆದ ಎರಡು ತಿಂಗಳಲ್ಲಿ ಓಡಾಡಿ ಓಡಾಡಿ ಕೈ ಮುಗಿದು, ಕಾಲ್ಮುಗಿದು, ಎದ್ದು ಬಿದ್ದು ಕೆಟ್ಟು ಗಬ್ಬೆದ್ದು ಹೋಗಿರುವ ರಸ್ತೆಗಳಲ್ಲಿ ನಡೆದು, ರಸ್ತೆಗಳೇ ಇಲ್ಲದ ಊರುಗಳಲ್ಲಿಯೂ ನಡೆದು ಎಷ್ಟೊಂದು ಸುಸ್ತಾಗಿರಲಿಕ್ಕಿಲ್ಲ...! ಹಾಗಾಗಿ ಅವರು ವಿಶ್ರಾಂತಿ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದೂ ಬೊ.ರ. ತೀರ್ಪು ನೀಡುತ್ತದೆ.

ಆದರೆ ಮಧ್ಯೆ ಏನಾದರೂ ಈ ಆರು ಕುದುರೆಗಳನ್ನು ಬೇರೆಯವರು ಎಬ್ಬಿಸಿ 'ಉತ್ತರ ಗೋಗ್ರಹಣ' ಮಾಡಿಸಿ ಕರೆದುಕೊಂಡು ಹೋದರೆ, ಈ ಗೋವುಗಳಿಗೆ ಸರಿಯಾದ ಗೋ'ಗ್ರಾಸ' ನೀಡಿ ಸರಿಪಡಿಸಲು ಎಚ್ಚರಗೊಳ್ಳಲೇಬೇಕಾಗುತ್ತದೆ. ಎಚ್ಚರಿಸಲು ಸಾಕಷ್ಟು ಜನ ಇರುವುದರಿಂದ ಚಿಂತೆ ಇರುವುದಿಲ್ಲ. ಹೀಗಾಗಿ ಚಿಂತೆ ಸದ್ಯಕ್ಕೆ ನಿಶ್ಚಿಂತೆ.

Sunday, May 25, 2008

ಇದೋ ಮತ್ತೆ ಅತಂತ್ರ: ನಾವು ಸಿದ್ಧ ಕುತಂತ್ರಕ್ಕೆ!

(ಬೊಗಳೂರು ಕು-ತಂತ್ರ ಬ್ಯುರೋದಿಂದ)
ಬೊಗಳೂರು, ಮೇ 25- ಹಲವು ಕ್ಷೇತ್ರಗಳಲ್ಲಿ ಅಕ್ಷರಶಃ 'ಹಣಾ'ಹಣಿಯೇ ಆಗಿಬಿಟ್ಟಿರುವ ಚುನಾವಣೆಗಳ ಫಲಿತಾಂಶ ಹೊರಬಿದ್ದಿದ್ದು, ಅದೆಷ್ಟೋ ದೇವರು, ದಿಂಡರನ್ನು ಸಂದರ್ಶಿಸಿ, ಲೆಕ್ಕವಿಲ್ಲದಷ್ಟು ಜ್ಯೋತಿಷಿಗಳು, ಪುರೋಹಿತರೊಂದಿಗೆ ಚರ್ಚಿಸಿದ ಪರಿಣಾಮ ಮಾನನೀಯ ತೆನೆಹೊತ್ತ ರೈತ ಮಹಿಳೆಯ ಒಡೆಯಗೌಡ್ರು ನುಡಿದ ಭವಿಷ್ಯವೂ ನಿಜವಾಗುವುದಾಗಿ ಬೊಗಳೆಗೆ ಖಚಿತ ಮಾಹಿತಿ ದೊರೆತಿದೆ.

ನಮ್ಮ ಬೆಂಬಲವಿಲ್ಲದೆ ಯಾರು ಸರಕಾರ ರಚಿಸ್ತಾರೋ ನೋಡ್ತೀನಿ ಅಂತ ಅವರ ಬಾಯಿಂದ ಬಿದ್ದ ಅಣಿಮುತ್ತುಗಳು ನಿಜವಾಗುತ್ತಿದ್ದು, ತೆನೆಹೊತ್ತವರ ಕಚೇರಿಯ ಮುಂದೆ ಹಸ್ತದ ಚಿಹ್ನೆಯನ್ನೂ ಇರಿಸಲು ಸಿದ್ಧತೆ ನಡೆಸಲಾಗುತ್ತಿದೆ. ಇದಕ್ಕೆ ಕೋಮುವಾದಿಗಳನ್ನು ಅಧಿಕಾರದಿಂದ ದೂರವಿಡುವ ಉದ್ದೇಶ ಎಂಬ ಕಾರಣ ನೀಡುವುದಿಲ್ಲ. ಇಲ್ಲಿ ಹಸ್ತ ಎಂಬುದು ಜ್ಯೋತಿಷ್ಯ, ಭವಿಷ್ಯ ವಾಣಿ ನುಡಿಯುವವರು ಹಾಕಿಕೊಳ್ಳುವ ಬೋರ್ಡ್‌ನಲ್ಲಿರುವ ಲಾಂಛನವೇ ಹೊರತು, ರೈತ ಮಹಿಳೆ ಮತ್ತು 'ಕೈ'ಗಳು ಪರಸ್ಪರ ಮುಗಿದುಕೊಳ್ಳುತ್ತವೆ ಎಂಬ ಅರ್ಥವನ್ನು ಕಲ್ಪಿಸಿದರೆ ಅದಕ್ಕೂ ಬೊಗಳೆ ರಗಳೆ ಸಿದ್ಧವಾಗಿದೆ.

ಹೇಗೂ ಹಲವು ತಂತ್ರಗಾರಿಕೆಗಳಿಂದಾಗಿ ಅತಂತ್ರದ ಸ್ಥಿತಿ ನಿರ್ಮಾಣವಾಗಿರುವಾಗ ಕುತಂತ್ರ ಮಾಡಲು ಕೂಡ ಯಾರಾದರೂ ಇರಬೇಕಿರುವುದು ಬೈಡೀಫಾಲ್ಟ್ ಅನಿವಾರ್ಯ ಪರಿಸ್ಥಿತಿ. ಹೀಗಾಗಿ ಆ ಕಾರ್ಯವನ್ನು ತಮ್ಮ ಕೈಗೆ ಎತ್ತಿಕೊಳ್ಳಲು, ಅದರ ಜವಾಬ್ದಾರಿಯನ್ನು ತೆನೆ ಹೊತ್ತಂತೆಯೇ ಹೊರಲು ಸಿದ್ಧ ಎಂದು ಅವರು ವಿಶೇಷ ಸಂದರ್ಶನದಲ್ಲಿ ಬಾಯಿಬಿಟ್ಟಿದ್ದಾರೆ.
ಈ ಮಧ್ಯೆ, ಗೆದ್ದವರು, ಸೋತವರೆಲ್ಲರೂ ಬಾಯಿ ಚಪ್ಪರಿಸಿಕೊಳ್ಳುತ್ತಿದ್ದಾರೆ. ಹೇಗಾದರೂ ಮತದಾರನ ಮನೆ ಬಾಗಿಲಿಗೆ ತಿರು ತಿರುಗಿ ಸುಸ್ತಾಗಿದೆ. ಇನ್ನೈದು ವರ್ಷ ಗಡದ್ದಾಗಿ ನಿದ್ದೆ ಮಾಡಬಹುದು (ಯಾವುದೇ ಮೈತ್ರಿ ಕು-ತಂತ್ರಗಳು ನಡೆಯದೇ ಇದ್ದರೆ!).

ಒಂದೆರಡು ತಿಂಗಳು ಮತದಾರರಿಗೆ ಕೈ ಮುಗಿದು ಕೈಗಳೆಲ್ಲಾ ನೋವಾಗಿದೆ. ಇನ್ನೇನಿದ್ದರೂ ಕೈ ಮುಗಿದು, ಕಾಲು ಹಿಡಿಯುವ ಸರದಿ ನಮ್ಮ ಮತದಾರರದು ಎಂದು ಹೆಮ್ಮೆಯಿಂದ ಬೀಗುತ್ತಿರುವ ಜಾರಕಾರಣಿಗಳು, ಇಷ್ಟು ದಿನ ತಮ್ಮ ತಮ್ಮ ಕೊಠಡಿಗಳಲ್ಲಿ ನಿದ್ದೆಯಿಲ್ಲದೆ ಚಡಪಡಿಸುತ್ತಾ ಚೆಲ್ಲಾಪಿಲ್ಲಿಯಾಗಿದ್ದ ಹಾಸಿಗೆಗಳನ್ನು ಸರಿಪಡಿಸುವಂತೆ ತಮ್ಮ ನೌಕರರಿಗೆ, ಕಾಲಾಳುಗಳಿಗೆ, ಕೈಯಾಳುಗಳಿಗೆ ಆದೇಶ ನೀಡಿರುವುದನ್ನು ಬೊಗಳೆ ಬ್ಯುರೋ ಸ್ಟಿಂಗ್ ಆಪರೇಶನ್ ತಂಡವು ಪತ್ತೆ ಹಚ್ಚಿದೆ.

ಇದುವರೆಗೆ ಸುಮಾರು ಎರಡು ತಿಂಗಳ ಕಾಲ ರಜಾ ಅನುಭವಿಸುತ್ತಾ ನೆಮ್ಮದಿಯಾಗಿದ್ದ ರಾಜ್ಯದ ಜನತೆ ಇನ್ನು ಮುಂದೆ ಹೊಸ ಹೊಸ ಹೊಚ್ಚ ಹೊಸ 'ಬನ್ನಿರಿ, ನೋಡಿರಿ, ಆನಂದಿಸಿರಿ' ಎಂಬಂತೆ ಪ್ರೇರೇಪಿಸುತ್ತಿರುವ ನಾಟಕಗಳನ್ನು ನೋಡಲು ಸಜ್ಜಾಗುತ್ತಿದ್ದಾರೆ ಎಂದು ಇದೇ ವೇಳೆ ರಾಜ್ಯದ ವಿವಿಧೆಡೆ ಅವಿತಿರುವ ನಮ್ಮ ಬೊಗಳೆ ಏಕ ಸದಸ್ಯ ಬ್ಯುರೋದ ಸಮಸ್ತ ಸಿಬ್ಬಂದಿಗಳು ಅಲ್ಲಲ್ಲಿಂದ ವರದ್ದಿ ಕಳುಹಿಸುತ್ತಿದ್ದಾರೆ.

Friday, May 23, 2008

ಕಳ್ಳಬಟ್ಟಿ ದುರಂತಕ್ಕೆ ಕಾರಣ ಪತ್ತೆ

(ಬೊಗಳೂರು ಸಂ-ಚೋಧನಾ ಬ್ಯುರೋದಿಂದ)

ಬೊಗಳೂರು, ಮೇ 23- ಕಳ್ಳಬಟ್ಟಿ ದುರಂತಕ್ಕೆ ಕಾರಣವನ್ನು ಬೊಗಳೆ ರಗಳೆ ಬ್ಯುರೋದ ವಿಶೇಷ ತನಿಖಾ ತಂಡವು ಪತ್ತೆ ಹಚ್ಚಿ ಈ ಸಾಧನೆ ಮಾಡಿದ್ದಕ್ಕೆ ಹೆಮ್ಮೆಯಿಂದ ಪಟಾಕಿ ಹಚ್ಚಿ ಸಂಭ್ರಮಿಸುತ್ತಿದೆ.

ಚುನಾವಣೆ ಸಮಯವಾಗಿರುವುದರಿಂದ ಮತದಾರರು ಯಾವ ಪಕ್ಷಕ್ಕೆ ಮತ ನೀಡುತ್ತಿದ್ದೇವೆ ಎಂದು ಅರಿವಿಗೆ ಬಾರದೆ ಮತಮುದ್ರೆಯೊತ್ತಬೇಕೆಂಬ ಕಾರಣಕ್ಕೆ ರಾಜಕೀಯ ಪಕ್ಷಗಳೇ ಈ ಕಳ್ಳಬಟ್ಟಿ ತಯಾರಿಸಿಟ್ಟಿದ್ದವು ಮತ್ತು ಅದನ್ನು ಹಂಚಿಯೂ ಇದ್ದವು ಎಂಬುದು ಯಾರು ಬೇಕಾದರೂ ಬಾಯಿಬಿಟ್ಟು ಹೇಳಬೇಕೆಂದಿಲ್ಲ ಎನ್ನುವಂತಹ ಹಸಿ ಹಸಿ ಸುಳ್ಳು.

ಹೀಗಾಗಿ ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ಚಿತಾವಣೆ ನೀಡುವುದಕ್ಕಾಗಿ ಕದ್ದು ತಂದ (ಕಳ್ಳ) ಬಟ್ಟಿಯನ್ನು ಬಿಟ್ಟಿಯಾಗಿಯೇ ಕುಡಿದು ಜೀವವನ್ನೂ ಬಿಟ್ಟು ಬಿಡುವಂತೆ ಮಾಡಲಾಗಿರುವುದು ತಮಗೆ ಹೆಚ್ಚು ಮತ ಸಿಗದಂತೆ ಮಾಡಲು ವಿರೋಧ ಪಕ್ಷಗಳ ಕೈವಾಡ ಎಂದು ಎಲ್ಲ ಪಕ್ಷಗಳೂ ದೂಷಿಸುತ್ತಿವೆ.

ಆದರೆ ಬೊಗಳೆ ರಗಳೆ ಬ್ಯುರೋ ಸಾಕ್ಷಾತ್ ಕಳ್ಳಬಟ್ಟಿ ಸಮೀಕ್ಷೆ ನಡೆಸಿದ ಪ್ರಕಾರ, ಮತದಾರರು ಕಳ್ಳಬಟ್ಟಿ ಸೇವಿಸಿದ್ದೇ ಈ ದುರಂತಕ್ಕೆ ಕಾರಣ ಎಂದು ತಿಳಿದುಬಂದಿದೆ! ಕಳ್ಳಬಟ್ಟಿ ಸೇವಿಸಿದ ಪರಿಣಾಮವಾಗಿಯೇ ಅವರು ಪ್ರಾಣಕಳೆದುಕೊಂಡ ಕಾರಣ, ಅವರು ಕುಡಿಯದೇ ಇದ್ದಿದ್ದರೆ ಬದುಕಬಹುದಿತ್ತು ಎಂಬುದು ಬೊಗಳೆ ರಗಳೆ ಅಭಿಪ್ರಾಯವಾದುದರಿಂದ ಕುಡಿದದ್ದೇ ದುರಂತಕ್ಕೆ ಕಾರಣ ಎಂಬುದನ್ನು ಖಚಿತವಾಗಿ ಹೇಳಲಾಗುತ್ತಿದೆ!

Tuesday, May 20, 2008

ಭಯೋತ್ಪಾದನೆ ನಿಷೇಧ ಇಲ್ಲ: ಮಾನ್ಯ ನಿಧಾನಮಂತ್ರಿ

(ಬೊಗಳೂರು ನಿರುದ್ಯೋಗ ನಿವಾರಣಾ ಬ್ಯುರೋದಿಂದ)
ಬೊಗಳೂರು, ಮೇ 17- ಒಂದು ಕಡೆಯಿಂದ ಕಳ್ಳಭಟ್ಟಿ ದುರಂತ, ಮತ್ತೊಂದು ಕಡೆಯಿಂದ ಭಯೋತ್ಪಾದಕರ ಹಾವಳಿ..., ಇವೆಲ್ಲಕ್ಕಿಂತ ಮೇಲೆ ಏರುತ್ತಿರುವ ಬೆಲೆಗಳು ಜನಸಾಮಾನ್ಯರ ಜೀವನವನ್ನು ನರಕ ಮಾಡುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರದ Unprecedented Price Agenda (UPA) ಸರಕಾರವು ಭಯೋತ್ಪಾದನೆಯನ್ನು ನಿಷೇಧಿಸುವುದೇ ಇಲ್ಲ ಎಂದು ಕಟ್ಟಖಂಡಿತವಾಗಿ ಹೇಳಿದೆ.

ಇದಕ್ಕೆ ಕಾರಣ ಪಟ್ಟಿ ಮಾಡಿ ಬೊಗಳೆ ಬ್ಯುರೋಗೆ ಕಳುಹಿಸಿರುವ, (ಭಯೋತ್ಪಾದನೆ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ) ನಿಧಾನಿ ಮನಮೋಹಕ ಸಿಂಗರು, ಭಯೋತ್ಪಾದನೆಯನ್ನು ನಿಷೇಧಿಸಿದರೆ ಹಲವರಿಗೆ ಉದ್ಯೋಗ ನಷ್ಟವಾಗುತ್ತದೆ, ನಮ್ಮ ಓಟಿನ ಬ್ಯಾಂಕು ಕೂಡ ನಷ್ಟಕ್ಕೀಡಾಗಿ ದಿವಾಳಿ ಆಗಬೇಕಾಗುತ್ತದೆ ಎಂದು ಹೇಳಿದ್ದಾರೆ.

ಭಯೋತ್ಪಾದಕರನ್ನು ನಿಷೇಧಿಸಿದರೆ ನಮ್ಮ ಓಟಿನ ಬ್ಯಾಂಕು ದಿವಾಳಿಯಾಗುತ್ತದೆ. ಈ ಕಾರಣಕ್ಕೆ ಅವರಿಗೆ ಬಿಪಿಎಲ್ ರೇಷನ್ ಕಾರ್ಡ್, ಕಂಡಿರಾ ಗಾಂಧಿ ಆವಾಸ್ ಯೋಜನೆಯ ಮನೆ ಎಲ್ಲವನ್ನೂ ಒದಗಿಸುತ್ತೇವೆ ಎಂದಿರುವ ನಿಧಾನಮಂತ್ರಿ ಅವರು, ಭಯೋತ್ಪಾದಕರಿಲ್ಲದೇ ಇದ್ದರೆ ನಮ್ಮ ಪೊಲೀಸರಿಗೇನು ಕೆಲಸವಿರುತ್ತದೆ? ಅವರು ಸುಮ್ಮನೆ ಕೈಕಟ್ಟಿ ಕೂರಬೇಕಾಗುತ್ತದಲ್ಲ? ನಮ್ಮ ಗುಪ್ತಚರ ವಿಭಾಗಕ್ಕೂ ಕೆಲಸವಿರುವುದಿಲ್ಲ. ಅವರೆಲ್ಲಾ ಉದ್ಯೋಗಹೀನರಾಗುವರು ಎಂದು ಕಳವಳ ವ್ಯಕ್ತಪಡಿಸಿದರು.

ಈಗ ಕೆಲಸವಿಲ್ಲದ ಪೊಲೀಸರಿಗೆ ಕನಿಷ್ಠ ಪಕ್ಷ ಭಯೋತ್ಪಾದಕರನ್ನು ಹುಡುಕುತ್ತಲಾದರೂ ಕಾಲ ಕಳೆಯಬಹುದಲ್ಲವೇ ಎಂಬ ಲಾಜಿಕ್ಕನ್ನು ಮಾನ್ಯ ನಿಧಾನಿಯವರು ಬೊಗಳೆ ಮುಂದಿಟ್ಟಾಗ ಬೆಚ್ಚಿದ ಬೊಗಳೆಯೆದುರು, ಹೇಳಲೋ ಬೇಡವೋ ಅಂತ ತಿಣುಕಾಡುತ್ತಿದ್ದುದು ಕಂಡುಬಂತು. ಹೇಳಿ ಹೇಳಿ ಅಂತ ಧೈರ್ಯ ತುಂಬಿದಾಗ.... ಭಯೋತ್ಪಾದನೆಯೇ ನಡಿಯದೆ ಇದ್ದರೆ, ದೇಶದಲ್ಲಿ ವಿರೋಧ ಪಕ್ಷಗಳನ್ನು ಟೀಕಿಸೋದು, ಅವರು ನಮ್ಮನ್ನು ಟೀಕಿಸೋದಾದರೂ ಹೇಗೆ? ನಮ್ಮ ಹೆಸರು ಕೂಡ ಮುಂದಿನ ಚುನಾವಣೆವರೆಗೆ ಚಾಲ್ತಿಯಲ್ಲಿರಬೇಕಲ್ಲ... ಮತ್ತು ಈ ಮೂಲಕ ನಾವು ಇದ್ದೇವೆ ಎಂಬುದು ಮತದಾರರಿಗೆ ತಿಳಿಯಬೇಕಲ್ಲ ಎಂದು ಕೇಳಿದರು.

ಹಾಗಿದ್ದರೆ ನೀವೇಕೆ ಭಯೋತ್ಪಾದನೆಯನ್ನು ನಿಷೇಧಿಸುವುದಿಲ್ಲ ಎಂದು ಈ ಮೊದಲೇ ಕೇಳಿದ ಪ್ರಶ್ನೆಗೆ ನಿಧಾನಿಯವರು ಪಟ್ಟಿ ನೀಡಿದರು.

ನೋಡಿ ದೇಶದಲ್ಲಿ ಗುಟ್ಕಾ, ತಂಬಾಕು, ಸಿಗರೇಟು ನಿಷೇಧ ಮಾಡಿದರೆ ಅಡಕೆ ಬೆಳೆಗಾರರಿಗೆ, ತಂಬಾಕು ಬೆಳೆಗಾರರಿಗೆ ನಷ್ಟವಾಗುತ್ತದೆ. ಬೀಡಿ ನಿಷೇಧಿಸಿದರೆ ಬೀಡಿ ಕಟ್ಟುವವರು ಎಲ್ಲಿಗೆ ಹೋಗಬೇಕು? ಸಾರಾಯಿ ನಿಷೇಧಿಸಿದರೆ ಸಾರಾಯಿ ದಂಧೆಕೋರರು ಎಲ್ಲಿಗೆ ಹೋಗಬೇಕು? ರಮ್, ವಿಸ್ಕಿ ಎಲ್ಲಾ ನಿಷೇಧಿಸಿಬಿಟ್ಟರೆ ದೊಡ್ಡ ದೊಡ್ಡ ಮದ್ಯದ ದೊರೆಗಳು ಎಲ್ಲಿಗೆ ಹೋಗಬೇಕು? ಐಪಿಎಲ್‌ನಂತಹ ಕ್ರೀಡೆಯನ್ನು ನಡೆಸುವುದಾದರೂ ಹೇಗೆ? ವೇಶ್ಯಾವಾಟಿಕೆ ನಿಷೇಧಿಸಿದರೆ ರಾಜಕಾರಣಿಗಳು, ರೌಡಿಗಳು ಏನು ಮಾಡಬೇಕು?

ಕೊನೆಯದಾಗಿ, ಪ್ಲಾಸ್ಟಿಕ್ ನಿಷೇಧ ಮಾಡಿದರೆ, ಏರುತ್ತಿರುವ ಬೆಲೆಗಳ ಈ ಯುಗದಲ್ಲಿ ಜನ ತಿನ್ನೋದನ್ನಾದರೂ ಏನನ್ನು? ಹೀಗಾಗಿ ಏನೇ ನಿಷೇಧ ಮಾಡಿದರೂ ದೇಶದಲ್ಲಿ ಭೀಕರ ನಿರುದ್ಯೋಗ ಸಮಸ್ಯೆ ತಲೆದೋರುತ್ತದೆ ಎಂದು ವಿವರ ಬಿಡಿಸಿಟ್ಟಾಗ ಬೊಗಳೆ ರಗಳೆ ಬ್ಯುರೋ ಅಲ್ಲಿಂದ ಒಂದೇ ಓಟಕ್ಕೆ ಪರಾರಿ.

Thursday, May 15, 2008

ಭಗ್ನ ಹೃದಯಿಗಳ ವರ್ತನೆಗೆ ಕಾರಣ Some-ಶೋಧನೆ!

(ಬೊಗಳೂರು ಭಗ್ನ ಹೃದಯೋತ್ತೇಜನ ಬ್ಯುರೋದಿಂದ)
ಬೊಗಳೂರು, ಮೇ 15- ಯುರೇಕಾ ಯುರೇಕಾ!!!
ಅಚ್ಚರಿಯಾಗದಿರಿ... ಪ್ರೇಮಿಗಳೆಲ್ಲಾ ಹಂದಿಗಳಂತೆ, ಎತ್ತುಗಳಂತೆ ಯಾಕೆ ವರ್ತಿಸುತ್ತಿದ್ದಾರೆ ಎಂಬುದಕ್ಕೆ ಕಾರಣವನ್ನು ಇಲ್ಲಿ ಪತ್ತೆ ಮಾಡಲಾಗಿದೆ.

ಇವರೆಲ್ಲರೂ ಪ್ರೇಮಿಗಳು ಅಂತ ಇಲ್ಲಿ ಮೆನ್ಷನ್ ಮಾಡಿದ್ದಷ್ಟೇ. ಆದರೆ ಅವರೆಲ್ಲರೂ ಪೂರ್ವ ಪ್ರೇಮಿಗಳು, ಅಥವಾ ಭೂತ ಪ್ರೇಮಿಗಳು ಅಥವಾ ಒಂದು ಕಾಲದಲ್ಲಿ ಪ್ರೇಮಿಗಳಾಗಿದ್ದುಕೊಂಡು ಈಗ ಹೃದಯದ ರಕ್ತನಾಳಗಳನ್ನು ಒಡೆದುಕೊಂಡು (ಅವರೇ ಒಡೆದುಕೊಂಡಿದ್ದಲ್ಲ) ಪುಡಿಮಾಡಲ್ಪಟ್ಟವರು, ಅಂದರೆ ಚುಟುಕಾಗಿ, ಸರಿಯಾಗಿ, ಏನೂ ಸತಾಯಿಸದೆ ಹೇಳಬೇಕೆಂದಾದರೆ ಅವರು 'ಭಗ್ನ ಪ್ರೇಮಿಗಳು' ಎಂಬುದನ್ನೂ ಇಲ್ಲಿ ಸತ್ಯ ಹೇಳಲಾಗುತ್ತದೆ.

ಆದರೆ ಇಲ್ಲಿ ಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯರು ಹೇಳಿರುವ ಪ್ರಕಾರ, ಪುಟ್ಟು ಪುಟಾಣಿಗಳಿಗೂ ಹಂದಿಯ ರಕ್ತನಾಳಗಳನ್ನು ಜೋಡಿಸಬೇಕಾದ ಪ್ರಸಂಗ ಬಂದಿರುವುದು ವಿಶ್ವಾದ್ಯಂತ ಆತಂಕ ಮೂಡಿಸಿದೆ. ಈಗೇನಿದ್ದರೂ ಮುಂದುವರಿದ ಯುಗ. ಅಂದರೆ ಹುಟ್ಟುವಾಗಲೇ ಮಕ್ಕಳು ಅತ್ಯಂತ ಬುದ್ಧಿವಂತರಾಗಿದ್ದುಕೊಂಡು, ವಂಡರ್ ಕಿಡ್ ಎಂದು ಕರೆಸಿಕೊಳ್ಳುತ್ತಿರುವುದನ್ನು ಕೇಳಿದ್ದೇವೆ. ಆದರೆ ಈ ರೀತಿ ಭಗ್ನ ಹೃದಯದೊಂದಿಗೇ ಮಕ್ಕಳು ಹುಟ್ಟುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಈ ಬಗ್ಗೆ ಹೃದಯ ವಿದ್ರಾವಕವಾಗಿ ಆತಂಕ ವ್ಯಕ್ತಪಡಿಸಿರುವ ಅಖಿಲ ಬೊಗಳೂರು ಪೋಷ-ಕರುಗಳ ಸಂಘವು, ಪುಟಾಣಿಗಳು ಹುಟ್ಟುತ್ತಲೇ ಪ್ರೇಮದ ಬಲೆಗೆ ಬೀಳುತ್ತಿವೆಯೇ ಎಂಬ ಬಗ್ಗೆ ಸಂಶೋಧನೆಯಾಗಬೇಕು ಎಂದು ಬೊಗಳೂರು ಬೊಗಳೆ ಬ್ಯುರೋಗೆ ಹಕ್ಕೊತ್ತಾಯ ಮಂಡಿಸಿದ್ದರೂ, ಆ ಮೇಲೆ ತಪ್ಪು ತಿದ್ದಿಕೊಂಡು, ನೀವು ಈ ಮಕ್ಕಳ ಪೂರ್ವಜನ್ಮದ ಜೀವನ ಚರಿತ್ರೆಯನ್ನು ತಂದೊಪ್ಪಿಸಬೇಕು ಎಂದು ದುರ್ಆಗ್ರಹಿಸಿದ್ದಾರೆ.

ಈ ಭಗ್ನ ಪ್ರೇಮಿಗಳು ತಮ್ಮ ಹೃದಯ ಒಡೆದು ಹೋದ ಬಳಿಕ ಹಂದಿಗಳಂತೆಯೇ ಚರಂಡಿಯಲ್ಲಿ ಬೀಳುತ್ತಿದ್ದಾರೆ. ಆದರೆ ಹೈಟೆಕ್ ಸಿಟಿಗಳಲ್ಲಿ ಚರಂಡಿ ಫೆಸಿಲಿಟಿ ಇಲ್ಲದಿರುವುದರಿಂದ ಇದ್ದುದರಲ್ಲೇ ರಸ್ತೆ ಬದಿಯಲ್ಲಿ ಸುಧಾರಿಸುತ್ತಾರೆ. ಅಂತೆಯೇ, ಎತ್ತುಗಳ ಮಾದರಿಯಲ್ಲಿ ಹಳ್ಳಗಳಲ್ಲಿ ಬಿದ್ದು ವಿಲವಿಲನೆ ಒದ್ದಾಡುತ್ತಾ ದೇಹ ತಂಪು ಮಾಡಿಕೊಳ್ಳುತ್ತಾರೆ. ಹೈಟೆಕ್ ಸಿಟಿಗಳಲ್ಲಿ ಅದಕ್ಕೂ ಫೆಸಿಲಿಟಿ ಇದೆ. ಬಾತ್ ಟಬ್ಬೋ, ಅಥವಾ ಸೀವೇಜ್ ಗಟಾರವೋ ಏನಾದರೂ ಇರುತ್ತವೆ.

ಕೆಲವರಂತೂ ಬೊಗಳೆಯೂರಿನ ಅಂದರೆ ಬ್ಲಾಗೂರಿನ ಚರಂಡಿಗಳಲ್ಲೂ ಬಿದ್ದು ಒದ್ದಾಡುತ್ತಿರುತ್ತಾರೆಂಬುದನ್ನು ಪತ್ತೆ ಹಚ್ಚಲಾಗಿದೆ. ಇದೇ ಕಾರಣಕ್ಕಾಗಿ ಕೆಲವೊಂದು ಅತ್ಯುತ್ತಮ ಸರಸ ಕವನಗಳೂ, ವಿರಸ ಕವನಗಳೂ ದಿಢೀರನೇ ಸೃಷ್ಟಿಯಾಗುತ್ತಿರುತ್ತವೆ. ಆದರೆ ಕೆಲವರು ಹೃದಯ ಭಗ್ನ ಮಾಡಿಕೊಳ್ಳದಿದ್ದರೂ ಭಗ್ನಪ್ರೇಮಿಗಳಿಗಿಂತಲೂ ಮಿಗಿಲಾಟಿ ಮನಸ್ಸಿಗೆ ನಾಟೋ ಕವನಗಳನ್ನು, ಪತ್ರಗಳನ್ನು ಹೇಗೆ ಬರೆಯುತ್ತಾರೆ ಎಂಬುದರ ಕುರಿತು ಸಂಶೋಧನೆ ನಡೆಯುತ್ತಿದೆ.

Tuesday, May 13, 2008

ಕುಡಿತ ವಯಸು ಶೂನ್ಯಕ್ಕಿಳಿಸಲು ಪುಟಾಣಿಗಳ ಆಗ್ರಹ!

(ಬೊಗಳೂರು ಕುಡಿಯೋತ್ತೇಜನ ಬ್ಯುರೋದಿಂದ)
ಬೊಗಳೂರು, ಮೇ 13- ಕುಡಿಯುವ ವಯಸ್ಸನ್ನು 25ರಿಂದ ಕೇವಲ 21ಕ್ಕೆ ಇಳಿಸುವ ಪ್ರಸ್ತಾಪದ ವಿರುದ್ಧ ಸಿಡಿದೆದ್ದಿರುವ ಅಖಿಲ ಭಾರತ ಬಾಲ ಪುಟಾಣಿ ಪರಿಷತ್, ನಮಗೂ ಸಮಾನತೆ ಬೇಕು, ಹುಟ್ಟಿದಾಗಲೇ ಕುಡಿಯುವ ಅರ್ಹತೆ ದೊರಕಿಸಬೇಕು ಎಂದು ಒತ್ತಾಯಿಸಿದೆ.

'ಕುಡಿಯುವುದು ನಮ್ಮ ಆಜನ್ಮ ಸಿದ್ಧ ಹಕ್ಕು' ಎಂಬ ಘೋಷಾ ವಾಕ್ಯದೊಂದಿಗೆ ಹೋರಾಟದ ಕಣಕ್ಕಿಳಿದಿರುವ ಈ ಅಖಿಲ ಭಾರತ ಪುಟಾಣಿ ಪರಿಷತ್ತಿಗೆ, ಅಖಿಲ ಭಾರತ ಅಂಗನವಾಡಿ ಪುಟಾಣಿಗಳ ಸಂಘವೂ ಬೇಷರತ್ ಬೆಂಬಲ ಘೋಷಿಸಿದೆ.

ಕಾಂಗ್ರೆಸ್‌ನೋರು, ಜೆಡಿಎಸ್‌ನೋರು ರಾಜ್ಯದಲ್ಲಂತೂ ಈಗಾಗಲೇ ಎಲ್ಲರನ್ನೂ ಕುಡುಕರಾಗಿಸುತ್ತೇವೆ ಎಂದು ಹೇಳುತ್ತಾ ಭವ್ಯ ಭವಿಷ್ಯಕ್ಕೆ ಅಡಿಪಾಯ ಹಾಕತೊಡಗಿದ್ದಾರೆ. ಈ ಪರಿಸ್ಥಿತಿಯಲ್ಲಿ ನಮ್ಮನ್ನು ಕುಡಿಯುವ 'ಕೆನೆಪದರ'ದಿಂದಲೂ ಕಿತ್ತು ಹಾಕುವುದು ಎಷ್ಟು ಸಮಂಜಸ ಎಂದು ಜಂಟಿ ಮತ್ತು ಒಂಟಿ ಪತ್ರಿಕಾಗೋಷ್ಠಿಗಳಲ್ಲಿ ಎರಡೂ ಸಂಘಗಳ ಪದಧಿಕ್ಕಾರಿಗಳು ಸರಕಾರವನ್ನು ಪ್ರಶ್ನಿಸಿದ್ದಾರೆ.

ದೇಶದಲ್ಲಿ ಇತ್ತೀಚೆಗೆ ಪಬ್ ಸಂಸ್ಕೃತಿ ಹೆಚ್ಚಾಗುತ್ತಿದ್ದು, ಬದಲಾಗುತ್ತಿರುವ ಯುಗದೊಂದಿಗೆ ನಾವೂ ಬದಲಾಗಬೇಕಾಗಿದೆ, ಆಧುನಿಕತೆಗೆ ಒಗ್ಗಿಕೊಳ್ಳಬೇಕಾಗಿದೆ. ಹೀಗಿರುವಾಗ ಹುಟ್ಟಿನಿಂದಲೇ ಎಲ್ಲವನ್ನೂ ಕಲಿತುಕೊಂಡು ಬಿಟ್ಟರೆ, ಮುಂದೆ ದೊಡ್ಡವರಾದ ಬಳಿಕ ಸರಕಾರಿ ಕೆಲಸ ಪಡೆಯಲು ಅತ್ಯಂತ ನೆರವಾಗುತ್ತದೆ. ಯಾವುದೇ ಕೆಲಸ ಸಿಗದಿದ್ದರೂ ರಾಜಕಾರಣಿಯಾಗಲು ಸಾಕಷ್ಟು ಕುಡುಕ ಮಿತ್ರರ ಸಹವಾಸ ಇದ್ದರೆ ಅತ್ಯಂತ ಹೆಚ್ಚು ಸುಲಭ. ಮತ್ತು ರಾಜಕಾರಣಿಯಾಗುವ ಮೂಲಕ ದಿಢೀರ್ ಶ್ರೀಮಂತರಾಗಲು ಕೂಡ ಇದು ಭದ್ರ ಬುನಾದಿ ಹಾಕಿಕೊಡುತ್ತದೆ ಎಂದು ಅವರು ಹೇಳಿದ್ದಾರೆ.

Monday, May 12, 2008

ರಾಜ್ಯಾದ್ಯಂತ ಭಯೋತ್ಪಾದನೆ, ಎಲ್ಲರಿಗೂ ಕೆಂಗಣ್ಣು!

(ಬೊಗಳೂರು ಭಯಭೀತ ಬ್ಯುರೋದಿಂದ)

ಬೊಗಳೂರು, ಮೇ 12- ಚುನಾವಣೆಯಲ್ಲಿ ಭಯೋತ್ಪಾದನೆಯ ಕರಿ ನೆರಳು ಕಾಣಿಸಿಕೊಂಡಿದ್ದು, ದುರ್ಬೀನಿನಲ್ಲಿ ನೋಡಿದಾಗ ಈ ನೆರಳು ಮತ್ತಷ್ಟು ಕಪ್ಪಾಗಿ ಕಂಡಿರುವುದು ಪತ್ತೆಯಾಗಿದೆ. ಇದಲ್ಲದೆ, ಎಲ್ಲೆಡೆ ಕೆಂಗಣ್ಣು ರೋಗ ಕಾಣಿಸಿಕೊಂಡಿದ್ದು, ಇದು ಮದ್ರಾಸ್ ಐ ಅಲ್ಲ ಎಂಬುದನ್ನೂ ಬೊಗಳೆ ಬ್ಯುರೋ ಖಚಿತಪಡಿಸಿಕೊಂಡಿದೆ.

ರಾಜ್ಯಾದ್ಯಂತ ಭಯೋತ್ಪಾದಕರು ಎಗ್ಗಿಲ್ಲದೆ ಓಡಾಡುತ್ತಿದ್ದು, ಅನೇಕ ಬಾಂಬುಗಳನ್ನು ಸಿಡಿಸುತ್ತಿದ್ದಾರೆ. ಇದರಿಂದ ಜನಸಾಮಾನ್ಯರು ನಿದ್ದೆಯನ್ನು ಕಳೆದುಕೊಂಡು, ರಾತ್ರಿಯಂತೂ ಕೆಂಗಣ್ಣೇ, ಹಗಲಲ್ಲೂ ಸಹ ಕೆಂಗಣ್ಣು ಮಾಡಿಕೊಂಡು ಕುಳಿತುಕೊಳ್ಳತೊಡಗಿದ್ದಾರೆ ಎಂದು ನಮ್ಮ ಆತ್ಮೀದಾರರು ಕೆಂಗಣ್ಣು ತೇಲಾಡಿಸುತ್ತಾ ವರದ್ದಿ ಮಾಡಿದ್ದಾರೆ ಎಂದು ನಮ್ಮ ವಿರೋಧಿ ಪತ್ರಿಕೆಗಳು ಫ್ಲ್ಯಾಶ್ ನ್ಯೂಸ್ ಪ್ರಕಟಿಸಿವೆ.

ಭಯೋತ್ಪಾದಕರ ಹಾವಳಿಯಿಂದ ಜನರೆಲ್ಲಾ ಯಾಕೆ ಕೆಂಗಣ್ಣು ಮಾಡಿಕೊಂಡು ಕುಳಿತುಕೊಳ್ಳಬೇಕು? ಭಯೋತ್ಪಾದನೆ ಎಲ್ಲಿ? ಏನು? ಎತ್ತ? ಎಂದೆಲ್ಲಾ ಜನ ಸಾಮಾನ್ಯರನ್ನು ಕೇಳಿದಾಗ ಅವರ ಬಾಯಿಂದ ಬಂದ ಉತ್ತರ:

ನಾವು ಬಡತನ ನಿವಾರಿಸುತ್ತೇವೆ ಎಂದು ಈ ಉಗ್ರ-ಗಾಮಿಗಳು ನಮ್ಮನ್ನು ಹೆದರಿಸುತ್ತಿದ್ದಾರೆ. ಬಡತನ ನಿವಾರಿಸಿ ಬಿಟ್ಟರೆ ನಮಗೆ ಕೊಡುವ ಬಿಪಿಎಲ್ ಕಾರ್ಡನ್ನೇನು ಮಾಡುವುದು? ಎಂದು ಬೋರೇಗೌಡರೊಬ್ಬರು ಪ್ರಶ್ನಿಸಿದರೆ, ಕಲರ್ ಟೀವಿ, ಎರಡು ರೂಪಾಯಿಗೆ ಅಕ್ಕಿ ಕೊಡುತ್ತೇವೆ ಅಂತಲೂ ಹೇಳಿಕೆ ನೀಡಿ ಭಯ ಉತ್ಪಾದಿಸುತ್ತಿದ್ದಾರೆ. ಎರಡ್ರುಪಾಯಿಗೆ ಅಕ್ಕಿ ತಿಂದರೆ ನಾವು ಬಡವರಾಗಿ ಉಳಿಯುವುದಾದರೂ ಹೇಗೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಸೀರೆಗಳನ್ನೂ ತಂದುಕೊಡುತ್ತೇವೆ ಅಂತಾನೂ ಹೇಳಿದ್ದಾರೆ, ನಮ್ ಹೆಂಡಿರು ಮಕ್ಕಳೆಲ್ಲರೂ ಸೀರೆ ತೆಗೆದುಕೊಳ್ಳಲೆಂದು ಹೋದವರು ಯಾವ ಸೀರೆ ಆಯ್ದುಕೊಳ್ಳಬೇಕೆಂದು ತಿಳಿಯದೆ ಎಂದಿನಂತೆ ಗೊಂದಲದಲ್ಲಿ ಸಿಲುಕುತ್ತಾರೆ ಎಂಬ ಭೀತಿಯೂ ಮತ್ತೆ ಕೆಲವರದು.

ಹಾಗಿದ್ದರೆ ನಿಮ್ಮ ಕಣ್ಣು ಕೆಂಪಗೇಕಿದೆ? ಎಂದು ಪ್ರಶ್ನಿಸಿದಾಗ ಒಳ್ಳೆಯ ಉತ್ತರವೊಂದು ಅಲೆ ಅಲೆಯಾಗಿ 'ತೇಲಾಡುತ್ತಾ' ಬಂತು:

ನಿನ್ನೆ ರಾತ್ರಿ ಆ ಪಕ್ಷ ಈ ಪಕ್ಷ ಅಂತ ನಮ್ಮ ಮನೆಗೆ ಒಬ್ಬರ ಹಿಂದೊಬ್ಬರಂತೆ ಬಂದಿದ್ದೇ ಬಂದಿದ್ದು. ಅವರೇನೋ ಕೊಟ್ಟರು, ಇಲ್ಲ ಅನ್ನೋಕ್ಕಾಗುತ್ತದೆಯೇ ಅಂತ ಬಾಟ್ಲಿಯಲ್ಲೂ, ತೊಟ್ಟೆಯಲ್ಲೂ ಸೇರಿಸಿಕೊಂಡು ಹೊಟ್ಟೆಗೆ ಸುರಿದುಕೊಂಡಿದ್ದೆವು. ಅದೇನೋ... ನಮ್ಮದು ನಿಮಗೇ... ಆದ್ರೆ ನಿಮ್ಮದು (ಬಾಟ್ಲಿಯೆಲ್ಲಾ) ನಮಗೇ ಕೊಡಬೇಕು ಅಂತ ತಾಕೀತು ಮಾಡಿದ್ದೆವು ಎಲ್ಲರಿಗೂ ಎಂದು ಮತ್ತೊಂದು ಕೈಯ ಬಾಟಲಿಯನ್ನು ಸುರಿದುಕೊಳ್ಳುತ್ತಾ ಹೇಳಿದರು ಮತದಾರ ಮಹಾಪ್ರಭುಗಳು!

Friday, May 09, 2008

ಟ್ರಾಫಿಕ್ ಪೊಲೀಸರ ಸಂಪಾದನೆ ಕೇವಲ 4 ಕೋಟಿ!

(ಬೊಗಳೂರು ಟ್ರಾಫಿಕ್‌ನಲ್ಲಿ ಮೇಯೋರ ಬ್ಯುರೋದಿಂದ)
ಬೊಗಳೂರು, ಮೇ 9- ಟ್ರಾಫಿಕ್ ಪೊಲೀಸರು ಕೇವಲ 4 ಕೋಟಿ ರೂ. ಮಾತ್ರ ಸಂಪಾದನೆ ಮಾಡಿದ್ದಾರೆ ಎಂಬುದಾಗಿ ಸುಳ್ಳು ಸುಳ್ಳು ವರದಿ ಪ್ರಕಟಿಸುತ್ತಿರುವ ಟಾಯ್ ಪತ್ರಿಕೆ ವಿರುದ್ಧ ಬೊಗಳೆ ರಗಳೆ ಬ್ಯುರೋ ಅವಮಾನ ನಷ್ಟ ಮೊಕದ್ದಮೆ ಹೂಡಲು ನಿರ್ಧರಿಸಿದೆ.

ಟ್ರಾಫಿಕ್ ಪೊಲೀಸರು ಬಡಜನರನ್ನು ಸುಲಿಯುವುದೇನು ಸಾಮಾನ್ಯವೇ? ಇಡೀ ಹಗಲು ಬಿಸಿಲಲ್ಲಿ ಬೆಂದು, ರಾತ್ರಿಯೆಲ್ಲಾ ಚಳಿಯಲ್ಲಿ ನೊಂದು ಅವರು ರಸ್ತೆಗಳ ಮೂಲೆ ಮೂಲೆಗಳಲ್ಲಿ ಸಂಪಾದನೆಗೆ ನಿಲ್ಲುತ್ತಾರೆ. ಇಷ್ಟೆಲ್ಲಾ ಕಷ್ಟಪಟ್ಟು, ಬೆವರು ಸುರಿಸಿ (ಕೆಲವೊಮ್ಮೆ ಹಣೆಯಲ್ಲಿ ಮಾತ್ರ ಬೆವರು ಬರುತ್ತದೆ) ದುಡಿದ ಹಣವನ್ನು ಇಷ್ಟು ಅಲ್ಪ ಪ್ರಮಾಣದ್ದು ಎಂದು ಲೆಕ್ಕ ತೋರಿಸಿದ ಈ ಪತ್ರಿಕೆಯು ಬೊಗಳೆ ಪತ್ರಿಕೆಗಳ ಅನೀತಿಯನ್ನೇ ಉಲ್ಲಂಘಿಸಿದೆ ಎಂದು ನಮ್ಮ Someಪಾದ-ಕರುಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಲ್ಲಾ ದಾಖಲೆ ಪತ್ರಗಳಿದ್ದರೂ, ನೀನು ಅತಿವೇಗದ ಚಾಲನೆ ಮಾಡುತ್ತಿದ್ದೀ ಅಂತ ಹೇಳಿ ಎರಡ್ಮೂರು ಸಾವಿರ ರೂ. ದಂಡ ಕಟ್ಟುವಂತೆ, ದಂಡದಲ್ಲಿ 'ರಶೀದಿ ಬೇಡ ಎಂದಾದರೆ' ಕೇವಲ ಒಂದು ಸಾವಿರದೊಳಗೆ ಕೆಲಸ ಮುಗಿಸಿಕೊಡುವುದಾಗಿಯೂ ಹೇಳಬಲ್ಲ ಸಾಮರ್ಥ್ಯವಿರುವ ಏಕೈಕ ಉದ್ಯೋಗ ಎಂದರೆ ಸಂಚಾರಿ ಪೊಲೀಸರದು ಎಂಬುದನ್ನು ಪತ್ತೆ ಹಚ್ಚಲಾಗಿದೆ.

ನಗರಗಳಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾದರೆ ಅದಕ್ಕೆ ಅನುಲೋಮ ಅನುಪಾತದಲ್ಲಿ ಈ ಟ್ರಾಫಿಕ್ ಪೊಲೀಸರ ಕಮಾಯಿ ಹೆಚ್ಚಾಗುತ್ತದೆ ಎಂದು ಐನ್‌ಸ್ಟೈನ್ ಅಥವಾ ಆರ್ಕಿಮಿಡಿಸ್‌ಗಳು ಈ ಹಿಂದೆಯೇ ದೊಡ್ಡ ದೊಡ್ಡ ಗಣಿತ ಸೂತ್ರಗಳನ್ನು ತಯಾರಿಸಿಕೊಟ್ಟಿದ್ದಾರೆ. ಅದರ ಅನುಸಾರವಾಗಿಯೇ ಕೆಲಸ ಮಾಡಬಲ್ಲ ಸಾಮರ್ಥ್ಯವಿರುವ ಈ ಬಿಳಿಯ ಪೊಲೀಸರು, ಮೊಬೈಕ್ ಸವಾರರಲ್ಲಿ ಏನೂ ದಕ್ಕದಿದ್ದರೆ, ಕನಿಷ್ಠ ಒಂದು ಲೋಟ ಚಹಾ ಕುಡಿಯಲಾರದೂ ಏನಾದರೂ 'ದಂಡ' ನೀಡು ಎಂದು ಹಲ್ಕಿರಿಯುತ್ತಾರೆ. ಹೀಗಾಗಿ ಅವರಿಗೂ ಹಲ್ಲುಗಳಿವೆ ಎಂಬುದನ್ನು ಪತ್ತೆ ಮಾಡುವುದು ಕೂಡ ಸುಲಭಸಾಧ್ಯವಾಗಿದೆ.

ಅಲ್ಲದೆ, ಏನೂ ತಪ್ಪು ಮಾಡದಿದ್ದರೂ ನೀನು ತಪ್ಪು ಮಾಡಿದ್ದೀ ಅಂತ ಕೋರ್ಟುಗಳು ಕೂಡ ಸಾಬೀತು ಮಾಡಲಾಗದ ಪ್ರಕರಣಗಳನ್ನು ಈ ಬಿಳಿಯರು ಮಾಡಿ ತೋರಿಸುತ್ತಿರುವುದು ವಿಶ್ವದಾಖಲೆಯೇ ಆಗಿದೆ. ಎಲ್ಲಾ ದಾಖಲೆ ಪತ್ರ ಸರಿಯಾಗಿದ್ದರೆ, ತಲೆ ಕೆರೆದುಕೊಂಡ ತಕ್ಷಣ ಅವರಿಗೆ ಹಲವು ತಪ್ಪುಗಳು ತಲೆಯೊಳಗಿಂದಲೇ 'ಹೊಳೆಯುತ್ತವೆ'. ಅವುಗಳಲ್ಲಿ, ಓವರ್‌ಸ್ಪೀಡ್, ರಾಂಗ್ ಸೈಡ್, ಒನ್ ವೇ, ಇಂಡಿಕೇಟರ್ ಹಾಕಿಲ್ಲ, ಹಾರ್ನ್ ವರ್ಕ್ ಆಗುತ್ತಿಲ್ಲ ಎಂಬಿತ್ಯಾದಿಗಳು ಬಹುತೇಕ ಹೆಚ್ಚು.

ಇಂಥ ದಂಧೆಯವರು ಕೇವಲ ನಾಲ್ಕು ಕೋಟಿ ಸಂಪಾದಿಸಿದ್ದಾರೆ ಎಂಬುದನ್ನು ಪ್ರಜ್ಞಾವಂತರು ಯಾರು ಕೂಡ ಒಪ್ಪುವುದಿಲ್ಲ ಎಂದು ಅಖಿಲ ಭಾರತ ಟ್ರಾಫಿಕ್ ಪೊಲೀಸ್ ಪೀಡಿತ ಸಂಘದ ಅಧ್ಯಕ್ಷರು ಘಂಟಾಘೋಷವಾಗಿ ಸಾರಿದ್ದು, ಕನಿಷ್ಠಪಕ್ಷ ಅದರಲ್ಲಿ 4 ಎಂಬ ಅಂಕಿಯ ಬಳಿಕ ಒಂದೆರಡ್ಮೂರ್ನಾಲ್ಕೈದಾರೇಳೆಂಟೊಂಭತ್ಹತ್ತು ಸೊನ್ನೆಗಳು ಬಿಟ್ಟು ಹೋಗಿರಬಹುದು ಎಂದು ಹೇಳಿದ್ದಾರೆ.

Thursday, May 08, 2008

ಹಣದುಬ್ಬರದಿಂದ ಚುನಾವಣೆ ಟಿಕೆಟ್ ದರ ದುಬಾರಿ!

(ಬೊಗಳೂರು ಉಬ್ಬರ ಬ್ಯುರೋದಿಂದ)
ಬೊಗಳೂರು, ಮೇ 8- ಹಣದುಬ್ಬರವು ದೇಶದ ಆರ್ಥಿಕತೆಯ ಮೇಲೆ ಭಾರಿ ಪ್ರಮಾಣದ ಪರಿಣಾಮ ಬೀರಿರುವಂತೆಯೇ, (ದಢೂತಿ) ದೇಹದ ಆರ್ಥಿಕತೆಯ ಮೇಲೂ ಅಷ್ಟೇ ಪ್ರಮಾಣದ ಪ್ರಭಾವ ಬೀರಿದೆ. ಇದು ಬೊಗಳೂರು ಬ್ಯುರೋಗೆ ಆಕಸ್‌ಮಿಕವಾಗಿ ಹೊಳೆದದ್ದು ಚುನಾವಣೆ ಘೋಷಣೆಯಾದ ಬಳಿಕದಿಂದೀಚೆಗೆ ಹಿನ್ನೋಟ ಹರಿಸಿದಾಗ.

ಹಣದುಬ್ಬರದಿಂದಾಗಿ ಆವಶ್ಯಕ ವಸ್ತುಗಳ ಬೆಲೆ ಏರಿಕೆಯಾಗಿದೆ. ಬಡ ಮತದಾರನಂತೂ ಯಾವುದೇ ಬೆಲೆಗಳು ಕೈಗೆಟುಕದಷ್ಟು ಮೇಲಕ್ಕೇರಿರುವುದರಿಂದ ಆಕಾಶಕ್ಕೆ ಹಾರಲು ಮತ್ತು ಆ ಬೆಲೆಗಳನ್ನು ಹಿಡಿಯಲು ಎಷ್ಟೇ ಪ್ರಯತ್ನ ಪಟ್ಟರೂ ಸೋತಿದ್ದಾನೆ. ಇದೇ ಸಂದರ್ಭ ಊರು-ಪರವೂರುಗಳಿಗೆ ಹೋಗುವ ವಿಮಾನ ಯಾನದ ಟಿಕೆಟ್ ದರಗಳೂ ರಾಕೆಟ್‌ನಂತೆ ಮೇಲೇರುತ್ತಿವೆ ಎಂಬುದು ಕೂಡ ಪತ್ತೆಯಾಗಿದೆ. ಅದೇ ರೀತಿಯಲ್ಲಿ ವಿಧಾನಸಭೆಗೆ ಪ್ರಯಾಣದ ಟಿಕೆಟ್ ದರವೂ ಪೈಪೋಟಿಯಿಂದಾಗಿ ಮೇಲಕ್ಕೇರಿದೆ ಎಂಬುದನ್ನು ಪತ್ತೆ ಹಚ್ಚಲಾಗಿದೆ.

ಇದರಿಂದಾಗಿಯೇ ಹಣದುಬ್ಬರದಿಂದ ಟಿಕೆಟ್ ಬೆಲೆಯೂ ಏರಿದ್ದು, ದೇಶದ ಅರ್ಥಿಕತೆಗೂ ದಢೂತಿ ದೇಹದ ಆರ್ಥಿಕತೆಗೂ ಹೊರೆ ಬಿದ್ದಿದೆ. ಜನ ಸಾಮಾನ್ಯರು ಬುಟ್ಟಿ ತುಂಬಾ ಹಣ ತೆಗೆದುಕೊಂಡು ಹೋಗಿ, ಜೇಬು ತುಂಬಾ ಅಕ್ಕಿಯನ್ನು ಹೇಗೆ ತರುತ್ತಾರೋ... ಅದೇ ಮಾದರಿಯಲ್ಲಿ, ಈ ದಢೂತಿ ದೇಹಿಗಳು ಅಂದರೆ ಜಾರಕಾರಣಿಗಳು, ಟಿಕೆಟ್ ಪಡೆಯುವುದಕ್ಕಾಗಿ ಸೂಟ್‌ಕೇಸು ತುಂಬಾ ನೋಟುಗಳ ಕಂತೆ ತೆಗೆದುಕೊಂಡು ಹೋಗಿ, ಒಂದು ಪುಟ್ಟ ಕಾಗದದ ತುಂಡನ್ನು ಹಿಡಿದುಕೊಂಡು ಬರಬೇಕಾಗಿದೆ. ಇಂಥ ದುರಂತ ಯಾರಿಗೂ ಬರಬಾರದಪ್ಪಾ ಎಂದು ನಾಡಿಗೆ ನಾಡೇ ಕಣ್ಣೀರಿಡುತ್ತಿದೆ ಎಂದು ತಿಳಿದುಬಂದಿದೆ.

ಈ ಹಿನ್ನೆಲೆಯಲ್ಲಿ, ವಿಧಾನಭೆಗೆ ತೆರಳುವ ಬಸ್ಸಿನ ಟಿಕೆಟ್ ದೊರೆತು, ಗಮ್ಯ ಸ್ಥಾನ ತಲುಪಿದ ಬಳಿಕ ತುಟ್ಟಿ ಭತ್ಯೆ ಹೆಚ್ಚಿಸುವ ಬಗ್ಗೆ ಕ್ರಮ ಕೈಗೊಳ್ಳಲು ಎಲ್ಲಾ ಟಿಕೆಟ್‌ಸಹಿತ ಪ್ರಯಾಣಿಕರು ತೀರ್ಮಾನಿಸಿದ್ದಾರೆ.

Monday, May 05, 2008

ಭಾರತೀಯರು ತಿಂಡಿಪೋತರೆಂದು ಬೊಗಳೆ ಬಿಟ್ಟ ಲಾರ್ಜ್ ಬುಷ್‌ಗೆ ಗಾಳ

(ಬೊಗಳೂರು ಗಾಳ ಹಾಕೋ ಬ್ಯುರೋದಿಂದ)
ಬೊಗಳೂರು, ಮೇ 6- ಅಮೆರಿಕದ (ಅತ್ಯಂತ) ಅದಕ್ಷ ಲಾರ್ಜ್ ಬುಷ್ ಅವರನ್ನು ಬೊಗಳೆ ರಗಳೆ ಬ್ಯುರೋಗೆ ಸೇರಿಸಿಕೊಳ್ಳಲು ಗಾಳ ಹಾಕಲಾಗುತ್ತಿದೆ.

ಇದಕ್ಕೆ ಪ್ರಧಾನ ಕಾರಣವೆಂದರೆ, ಭಾರತೀಯರ ತಿಂಡಿಪೋತತನದಿಂದಾಗಿಯೇ ಜಾಗತಿಕವಾಗಿ ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗಿದೆ ಎಂದು ಲಾರ್ಜ್ ಬುಷ್ ಹೇಳಿಕೆ ನೀಡಿದ್ದು. ಬೊಗಳೆಗೇ ಸೆಡ್ಡು ಹೊಡೆಯುವ ಮಾದರಿಯಲ್ಲಿ ಲಾರ್ಜ್ ಬುಷ್ ಈ ಹೇಳಿಕೆ ನೀಡಿದ್ದು ಎಲ್ಲಿ ಎಂಬುದನ್ನು ಪತ್ತೆ ಮಾಡಲು ಹೊರಟಾಗ ತಿಳಿದು ಬಂದ ವಿಷಯವೆಂದರೆ, ಅವರು ಈ ಹೇಳಿಕೆ ನೀಡಿದ್ದು ಅಪ್ಪಟ ಭಾರತೀಯ ಮದ್ಯ ಒದಗಿಸುತ್ತಿರುವ 'ಮಜ'ಯ ಮಲ್ಯರ ಆತ್ಮೀಯ ಅಡಗುದಾಣದಿಂದ.

ಬೆಲೆ ಏರಿಕೆಗೆ ಮಧ್ಯಮ ವರ್ಗ ಕಾರಣ ಅಂತ ಲಾರ್ಜ್ ಬುಷ್ ಹೇಳಿದ್ದರೂ, ಅವರ ಹೇಳಿಕೆಯನ್ನು ಮತ್ತೊಮ್ಮೆ ಸರಿಯಾಗಿ ರಿವೈಂಡ್ ಮಾಡಿ ಕೇಳಿದಾಗ, ನಿಜಕ್ಕೂ ಅವರು ಹೇಳಿದ್ದು 'ಮದ್ಯ'ಮ ವರ್ಗದಿಂದಾಗಿ ಅಂತ ಎಂಬುದು ಖಚಿತವಾಯಿತು. ಯಾಕೆಂದರೆ ಅವರು ಕೂಡ 'ಮದ್ಯ'ವರ್ತಿತನ ಮಾಡಿಕೊಂಡೇ ಅಪಮೌಲ್ಯವರ್ಧಿಸಿಕೊಳ್ಳುತ್ತಿದ್ದರು ಎಂಬುದನ್ನು ನಮ್ಮ ಬ್ಯುರೋ ಪತ್ತೆ ಹಚ್ಚಿದೆ.

ಭಾರತೀಯರ ತಿಂಡಿಪೋತತನದಿಂದಾಗಿಯೇ ಜಾಗತಿಕ ಮೌಲ್ಯ ಹೆಚ್ಚಾಗಿದೆ, ಡೌಲರ್ ಮೌಲ್ಯ ಕುಸಿಯುತ್ತಿದೆ ಎಂದೆಲ್ಲಾ ಅಷ್ಟು ನಿಖರವಾಗಿ ಬೊಗಳೆ ಬಿಡಬಲ್ಲ ಲಾರ್ಜ್ ಬುಷ್‌ರಂತವರು ನಮ್ಮ ಏಕ ಸದಸ್ಯ ಬ್ಯುರೋದಲ್ಲಿದ್ದರೆ ಎಂಥೆಂಥಾ ಬೆಲೆಗಳನ್ನೇ ಇಳಿಸಬಹುದಲ್ಲ ಎಂದು ಯೋಚಿಸಿರುವ ಬೊ.ರ. ಸೊಂಪಾದ-ಕರುಗಳು, ಈ ನಿರ್ಧಾರ ಕೈಗೊಂಡಿದ್ದು, ಗಾಳ ಹಾಕುವ ತಿಮಿಂಗಿಲವು ದೊಡ್ಡದಾಗಿರುವುದರಿಂದ ಗಾಳದಲ್ಲಿ ಒಪ್ಪಂದ ಚಾಲ್ತಿಯಲ್ಲಿರುವ ಅಣ್ವಸ್ತ್ರವನ್ನೇ ಸಿಕ್ಕಿಸಲಾಗಿದೆ ಎಂದು ಬಲ್ಲ ಮೂಲಗಳು ಹೇಳಿವೆ.

ವಿಶ್ವಕ್ಕೇ ಹಿರಿಯಣ್ಣ ಅಂತ ಕರೆಸಿಕೊಳ್ಳುವವರು ಭಾರತದಂತಹ ರಾಷ್ಟ್ರಕ್ಕೆ ಗೂಬೆಯೊಂದನ್ನು ತಂದು ಅದರ ತಲೆ ಮೇಲೆ ಕೂರಿಸಲು ಎಷ್ಟು ಚೆನ್ನಾಗಿ ಪೊಗರು ಬೆಳೆಸಿಕೊಂಡಿರಬೇಕು ಎಂಬುದರ ಬಗ್ಗೆ ಅಚ್ಚರಿ ವ್ಯಕ್ತಪಡಿಸಿರುವ ಸೊಂಪಾದಕರು, ಭಾರತದಲ್ಲಿ ಹಣವನ್ನೇ ನುಂಗುವಂಥವರಿದ್ದಾರೆ ಎಂಬುದು ವರದಿಯಾಗಿರುವುದರಿಂದಾಗಿಯೇ ಲಾರ್ಜೆಸ್ಟ್ ಬುಷ್ ಈ ರೀತಿ ಆರೋಪ ಮಾಡಿರಬೇಕು ಎಂಬುದಾಗಿ ಆಮಶಂಕಿಸಲಾಗಿದೆ.

ಇದಲ್ಲದೆ, ಭಾರತೀಯರಿಗೆ ರುಚಿಕಟ್ಟಾದ ತಿಂಡಿ ಬೇಕು, ಅವರೆಲ್ಲಾ ನಮ್ಮ ಹಾಳು-ಮೂಳು ಜಂಕ್ ಫುಡ್ ಸೇವಿಸೋದು ಕಡಿಮೆ. ಇದರಿಂದಾಗಿ ಅಮೆರಿಕನ್ ಜಂಕ್ ಫುಡ್ ಕಂಪನಿಗಳಿಗೆ ಅಲ್ಲಿ ಸರಿಯಾಗಿ ವ್ಯಾಪಾರವಾಗುತ್ತಿಲ್ಲ ಎಂಬುದು ಲಾರ್ಜ್ ಬುಷ್ ಅರಿವಿಗೆ ಬಂದಿದೆ. ಇದೇ ಕಾರಣಕ್ಕೆ 'ಭಾರತೀಯರು ಹಾಳು ಮೂಳು ತಿನ್ನುವ ಬದಲು, ಪ್ರಕೃತಿದತ್ತ ಆಹಾರವನ್ನೇ ತಿಂದು ಪ್ರಕೃತಿಯನ್ನು ಸರ್ವ ನಾಶ ಮಾಡಲು ಪ್ರಯತ್ನಿಸುತ್ತಿದ್ದಾರೆ' ಅಂತ ಆರೋಪಿಸಿರುವುದನ್ನೂ ಕೂಡ ಈ ಸಂದರ್ಭದಲ್ಲಿ ಪತ್ತೆ ಹಚ್ಚಲಾಗಿದೆ.

Friday, May 02, 2008

ಹಣ ಗುಳುಂಕರಿಸುವ ತರಬೇತಿ ಶಿಬಿರಕ್ಕೆ ಚಿಂತನೆ

(ಬೊಗಳೂರು ನುಂಗೋ ಬ್ಯುರೋದಿಂದ)
ಬೊಗಳೂರು, ಮೇ 2- ಹಣ ನುಂಗುವುದರಲ್ಲಿ ಎಕ್ಸ್‌ಪರ್ಟ್ ಆಗಿರುವ ಪೊಲೀಸ್ ಅಧಿಕಾರಿಯೊಬ್ಬ ಆಂಧ್ರಪ್ರದೇಶದಲ್ಲಿ ಪತ್ತೆಯಾಗಿದ್ದಾನೆ ಎಂಬ ಸುದ್ದಿ ಕೇಳಿದ ತಕ್ಷಣವೇ ಕಿವಿ ನಿಮಿರಿಸಿಕೊಂಡ ರಾಜ್ಯಾಂಗ ಮತ್ತು ಕಾರ್ಯಾಂಗದ ಅಧಿಕಾರಿಗಳು, ಆತನನ್ನು ಎಳೆದು ತಂದು ತಮ್ಮ ಬುಟ್ಟಿಯೊಳಗೆ ಹಾಕಿಕೊಳ್ಳುವ ತೀವ್ರ ಪ್ರಯತ್ನ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಹೇಗಿದ್ದರೂ ಬೇರೆ ಬೇರೆ ಪಕ್ಷಗಳ ಟಿಕೆಟ್ ಪಡೆಯುವುದಕ್ಕೆ ಕೋಟ್ಯಂತರ ರೂಪಾಯಿ, ಮತದಾರರಿಗೆ ಆಮಿಷವೊಡ್ಡುವುದಕ್ಕೆ ಕೋಟಿ ಕೋಟಿ ರೂಪಾಯಿ ಎಲ್ಲಾ ನೀಡಲಾಗಿದೆ. ಚುನಾವಣೆಯಲ್ಲಿ ಆರಿಸಿ ಬಂದ ಬಳಿಕ ಇವನ್ನೆಲ್ಲಾ ಬಡ್ಡಿ ಸಮೇತ ಹಿಂದೆ ಪಡೆಯುವುದಕ್ಕೆ ಇಂಥವರ ಅಗತ್ಯವಿದೆ ಎಂಬುದನ್ನು ಮನಗಂಡ ಜಾರಕಾರಣಿಗಳು ಆತನ ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ಇನ್ನೊಂದೆಡೆ, ಜನಸಾಮಾನ್ಯರನ್ನು ಎಷ್ಟು ಹಿಂಡಿದರೂ ಈ ರೀತಿ ಹಣ ನುಂಗುವಿಕೆ ತಮಗೆ ಕಷ್ಟ-ಸಾಧ್ಯ. ಹೀಗಾಗಿ ಈ ಪೊಲೀಸಪ್ಪನಿಂದ ತರಬೇತಿ ಪಡೆಯವುದಕ್ಕೆ, ಆತನ ಮೂಲಕ ತರಬೇತಿ ಶಿಬಿರವೊಂದನ್ನು ಏರ್ಪಡಿಸುವುದಕ್ಕೆ ಪ್ಲಾನ್ ಹಾಕುತ್ತಿದ್ದಾರೆ.

ಈ ಮಧ್ಯೆ, ನುಂಗಿದ ಹಣವನ್ನು ವಾಂತಿ ಮಾಡಿಸುವುದಕ್ಕೆ ವೈದ್ಯರು ಬರೆದುಕೊಟ್ಟಿರುವ ಮಾತ್ರೆಯ ಹೆಸರು ಯಾವುದು ಎಂಬುದನ್ನು ಕೂಡ ಪತ್ತೆ ಮಾಡಲಾಗುತ್ತಿದೆ. ಯಾಕೆಂದರೆ ಬರೇ ನೋಟು ನುಂಗಣ್ಣಗಳನ್ನು ತಂದು ಕೂರಿಸಿದರೆ ಯಾವುದೇ ಕೆಲಸವಾಗಲಾರದು. ಅವರು ನುಂಗಿದ್ದನ್ನು ಕಕ್ಕಿಸದಿದ್ದರೆ ತಮ್ಮ ಶ್ರಮವೆಲ್ಲಾ ವ್ಯರ್ಥ ಎಂಬ ಗೂಢಚಿಂತನೆ ಅವರದು.

ಎಂಜಿನ್ ಇಲ್ಲದ ರೈಲು: ಬ್ರೇಕಿಂಗ್ ನ್ಯೂಸ್ ಅಲ್ಲವೆಂದ ಬೊ.ರ.

[ಬೊಗಳೂರು ಪಟ್ಟೆ-ರಹಿತ ರೈಲು ಬ್ಯುರೋ] ಬೊಗಳೂರು: ಆಫ್‌ಲೈನ್ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯೊಂದು ಆನ್‌ಲೈನ್ ಸಂಪಾದಕರ ಕಣ್ಣು ಕುಕ್ಕಿದ್ದು, ಎಂಜಿನ್ ಇಲ್ಲದೆ...