Thursday, May 15, 2008

ಭಗ್ನ ಹೃದಯಿಗಳ ವರ್ತನೆಗೆ ಕಾರಣ Some-ಶೋಧನೆ!

(ಬೊಗಳೂರು ಭಗ್ನ ಹೃದಯೋತ್ತೇಜನ ಬ್ಯುರೋದಿಂದ)
ಬೊಗಳೂರು, ಮೇ 15- ಯುರೇಕಾ ಯುರೇಕಾ!!!
ಅಚ್ಚರಿಯಾಗದಿರಿ... ಪ್ರೇಮಿಗಳೆಲ್ಲಾ ಹಂದಿಗಳಂತೆ, ಎತ್ತುಗಳಂತೆ ಯಾಕೆ ವರ್ತಿಸುತ್ತಿದ್ದಾರೆ ಎಂಬುದಕ್ಕೆ ಕಾರಣವನ್ನು ಇಲ್ಲಿ ಪತ್ತೆ ಮಾಡಲಾಗಿದೆ.

ಇವರೆಲ್ಲರೂ ಪ್ರೇಮಿಗಳು ಅಂತ ಇಲ್ಲಿ ಮೆನ್ಷನ್ ಮಾಡಿದ್ದಷ್ಟೇ. ಆದರೆ ಅವರೆಲ್ಲರೂ ಪೂರ್ವ ಪ್ರೇಮಿಗಳು, ಅಥವಾ ಭೂತ ಪ್ರೇಮಿಗಳು ಅಥವಾ ಒಂದು ಕಾಲದಲ್ಲಿ ಪ್ರೇಮಿಗಳಾಗಿದ್ದುಕೊಂಡು ಈಗ ಹೃದಯದ ರಕ್ತನಾಳಗಳನ್ನು ಒಡೆದುಕೊಂಡು (ಅವರೇ ಒಡೆದುಕೊಂಡಿದ್ದಲ್ಲ) ಪುಡಿಮಾಡಲ್ಪಟ್ಟವರು, ಅಂದರೆ ಚುಟುಕಾಗಿ, ಸರಿಯಾಗಿ, ಏನೂ ಸತಾಯಿಸದೆ ಹೇಳಬೇಕೆಂದಾದರೆ ಅವರು 'ಭಗ್ನ ಪ್ರೇಮಿಗಳು' ಎಂಬುದನ್ನೂ ಇಲ್ಲಿ ಸತ್ಯ ಹೇಳಲಾಗುತ್ತದೆ.

ಆದರೆ ಇಲ್ಲಿ ಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯರು ಹೇಳಿರುವ ಪ್ರಕಾರ, ಪುಟ್ಟು ಪುಟಾಣಿಗಳಿಗೂ ಹಂದಿಯ ರಕ್ತನಾಳಗಳನ್ನು ಜೋಡಿಸಬೇಕಾದ ಪ್ರಸಂಗ ಬಂದಿರುವುದು ವಿಶ್ವಾದ್ಯಂತ ಆತಂಕ ಮೂಡಿಸಿದೆ. ಈಗೇನಿದ್ದರೂ ಮುಂದುವರಿದ ಯುಗ. ಅಂದರೆ ಹುಟ್ಟುವಾಗಲೇ ಮಕ್ಕಳು ಅತ್ಯಂತ ಬುದ್ಧಿವಂತರಾಗಿದ್ದುಕೊಂಡು, ವಂಡರ್ ಕಿಡ್ ಎಂದು ಕರೆಸಿಕೊಳ್ಳುತ್ತಿರುವುದನ್ನು ಕೇಳಿದ್ದೇವೆ. ಆದರೆ ಈ ರೀತಿ ಭಗ್ನ ಹೃದಯದೊಂದಿಗೇ ಮಕ್ಕಳು ಹುಟ್ಟುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಈ ಬಗ್ಗೆ ಹೃದಯ ವಿದ್ರಾವಕವಾಗಿ ಆತಂಕ ವ್ಯಕ್ತಪಡಿಸಿರುವ ಅಖಿಲ ಬೊಗಳೂರು ಪೋಷ-ಕರುಗಳ ಸಂಘವು, ಪುಟಾಣಿಗಳು ಹುಟ್ಟುತ್ತಲೇ ಪ್ರೇಮದ ಬಲೆಗೆ ಬೀಳುತ್ತಿವೆಯೇ ಎಂಬ ಬಗ್ಗೆ ಸಂಶೋಧನೆಯಾಗಬೇಕು ಎಂದು ಬೊಗಳೂರು ಬೊಗಳೆ ಬ್ಯುರೋಗೆ ಹಕ್ಕೊತ್ತಾಯ ಮಂಡಿಸಿದ್ದರೂ, ಆ ಮೇಲೆ ತಪ್ಪು ತಿದ್ದಿಕೊಂಡು, ನೀವು ಈ ಮಕ್ಕಳ ಪೂರ್ವಜನ್ಮದ ಜೀವನ ಚರಿತ್ರೆಯನ್ನು ತಂದೊಪ್ಪಿಸಬೇಕು ಎಂದು ದುರ್ಆಗ್ರಹಿಸಿದ್ದಾರೆ.

ಈ ಭಗ್ನ ಪ್ರೇಮಿಗಳು ತಮ್ಮ ಹೃದಯ ಒಡೆದು ಹೋದ ಬಳಿಕ ಹಂದಿಗಳಂತೆಯೇ ಚರಂಡಿಯಲ್ಲಿ ಬೀಳುತ್ತಿದ್ದಾರೆ. ಆದರೆ ಹೈಟೆಕ್ ಸಿಟಿಗಳಲ್ಲಿ ಚರಂಡಿ ಫೆಸಿಲಿಟಿ ಇಲ್ಲದಿರುವುದರಿಂದ ಇದ್ದುದರಲ್ಲೇ ರಸ್ತೆ ಬದಿಯಲ್ಲಿ ಸುಧಾರಿಸುತ್ತಾರೆ. ಅಂತೆಯೇ, ಎತ್ತುಗಳ ಮಾದರಿಯಲ್ಲಿ ಹಳ್ಳಗಳಲ್ಲಿ ಬಿದ್ದು ವಿಲವಿಲನೆ ಒದ್ದಾಡುತ್ತಾ ದೇಹ ತಂಪು ಮಾಡಿಕೊಳ್ಳುತ್ತಾರೆ. ಹೈಟೆಕ್ ಸಿಟಿಗಳಲ್ಲಿ ಅದಕ್ಕೂ ಫೆಸಿಲಿಟಿ ಇದೆ. ಬಾತ್ ಟಬ್ಬೋ, ಅಥವಾ ಸೀವೇಜ್ ಗಟಾರವೋ ಏನಾದರೂ ಇರುತ್ತವೆ.

ಕೆಲವರಂತೂ ಬೊಗಳೆಯೂರಿನ ಅಂದರೆ ಬ್ಲಾಗೂರಿನ ಚರಂಡಿಗಳಲ್ಲೂ ಬಿದ್ದು ಒದ್ದಾಡುತ್ತಿರುತ್ತಾರೆಂಬುದನ್ನು ಪತ್ತೆ ಹಚ್ಚಲಾಗಿದೆ. ಇದೇ ಕಾರಣಕ್ಕಾಗಿ ಕೆಲವೊಂದು ಅತ್ಯುತ್ತಮ ಸರಸ ಕವನಗಳೂ, ವಿರಸ ಕವನಗಳೂ ದಿಢೀರನೇ ಸೃಷ್ಟಿಯಾಗುತ್ತಿರುತ್ತವೆ. ಆದರೆ ಕೆಲವರು ಹೃದಯ ಭಗ್ನ ಮಾಡಿಕೊಳ್ಳದಿದ್ದರೂ ಭಗ್ನಪ್ರೇಮಿಗಳಿಗಿಂತಲೂ ಮಿಗಿಲಾಟಿ ಮನಸ್ಸಿಗೆ ನಾಟೋ ಕವನಗಳನ್ನು, ಪತ್ರಗಳನ್ನು ಹೇಗೆ ಬರೆಯುತ್ತಾರೆ ಎಂಬುದರ ಕುರಿತು ಸಂಶೋಧನೆ ನಡೆಯುತ್ತಿದೆ.

2 comments:

  1. ಪುಟಾಣಿಗಳಿಗೆ ಹಂದಿಯ ಹೃದಯ, ನರಿಯ ತಲೆ ಏನನ್ನಾದರೂ ಕಸಿ ಮಾಡಿರಿ. ಆದರೆ, ದಯವಿಟ್ಟು ಕಚಡಾನಿಧಿಯ ತಲೆ ಹಾಗು ವೇದೆಗೌಡನ ಹೃದಯಗಳನ್ನು ಮಾತ್ರ ಕಸಿ ಮಾಡಬೇಡಿರಿ.
    This is the deadliest combination.

    ReplyDelete
  2. ಸುನಾಥರೆ,

    ನಮ್ಮ ಜನರಿಗೆ ಡೆಡ್ಲಿಯೆಸ್ಟೇ ಬೆಸ್ಟು ಆಗಿರೋದ್ರಿಂದ ನೀವು ಕೊಟ್ಟ ಸಲಹೆಯನ್ನೂ ಪರಿಗಣಿಸಲಾಗುತ್ತದೆ. ಆದರೆ ನೀವು ಹೇಳಿದ ತಲೆ ಮತ್ತು ಹೃದಯಗಳನ್ನು ಅದಲು ಬದಲು ಮಾಡಿದ್ರೆ (ವೇದೇಗೌಡನ ತಲೆ, ಕಚಡಾನಿಧಿಯ ಹೃದಯ) ಹೊಸ ತಳಿಯು ಯಾವಾಗಲೂ ಕಣ್ಣು ಕೂರುತ್ತಾ, ತೂಕಡಿಸುತ್ತಾ, ವಿಶ್ವಕ್ಕೊಂದೇ ಭಾಷೆ ತಮಿಳು ಅಂತ ಹೇಳುತ್ತಲೇ ಇರಬಹುದು.

    ReplyDelete

ನಿಮ್ಮ ಸಲಹೆ/ಅಭಿಪ್ರಾಯ ತಿಳಿಸಿ..

ಎಂಜಿನ್ ಇಲ್ಲದ ರೈಲು: ಬ್ರೇಕಿಂಗ್ ನ್ಯೂಸ್ ಅಲ್ಲವೆಂದ ಬೊ.ರ.

[ಬೊಗಳೂರು ಪಟ್ಟೆ-ರಹಿತ ರೈಲು ಬ್ಯುರೋ] ಬೊಗಳೂರು: ಆಫ್‌ಲೈನ್ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯೊಂದು ಆನ್‌ಲೈನ್ ಸಂಪಾದಕರ ಕಣ್ಣು ಕುಕ್ಕಿದ್ದು, ಎಂಜಿನ್ ಇಲ್ಲದೆ...