Monday, June 30, 2008

ಯಾರು? ಯಾವ ಪಕ್ಷದಿಂದ ಉಚ್ಚಾಟಿಸಿದ್ದು?

(ಬೊಗಳೂರು ಪಕ್ಷ ರಹಿತ ಬ್ಯುರೋದಿಂದ)
ಬೊಗಳೂರು, ಜೂ.30- ಯಾವುದೋ ಒಂದು ಪಕ್ಷದಿಂದ ಹೊರದಬ್ಬಲ್ಪಟ್ಟ ಜಿಪಿಆರ್ ನಿಂದ್ಯಾ ಅವರನ್ನು ಬೊಗಳೆ ರಗಳೆ ಬ್ಯುರೋಗಾಗಿ ವಿಶೇಷವಾಗಿ ಸಂದರ್ಶಿಸಲಾಯಿತು. ಸಂದರ್ಶನದ ಕಸಾರಾಂಶ ಇಲ್ಲಿದೆ:

* ನಿಮ್ಮನ್ನು ಆನೆ ಪಕ್ಷದಿಂದ ಮಾಯ ಮಾಡಲಾಗಿದೆ. ಯಾಕೆಂತ ಕೇಳಬಹುದೇ?
ಹೌದೇ? ಇರಬಹುದು. ನನ್ನನ್ನು ಯಾವ ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ತಿಳಿಸಿದರೆ ನಿಮಗೆ ನಾನು ತುಂಬಾ ಆಭಾರಿ. ಯಾಕೆಂದರೆ ನಾನು ಒಂದು ಕಾಲದಲ್ಲಿ ಜನತಾ... ಜನತಾ... ಜನತಾ... ಛೆ... ನೆನಪಿಗೇ ಬರ್ತಾ ಇಲ್ಲ... ಪಕ್ಷವೋ, ದಳವೋ... ಯಾವುದ್ರಲ್ಲೋ ಇದ್ದೆ. ಆ ಮೇಲೆ ಬಹುಶಃ ಸಮಾಜವಾದಿ ಪಕ್ಷಕ್ಕೆ ಸೇರಿರಬೇಕು. ಇಲ್ಲವಾದ್ರೆ ಕಾಂಗ್ರೆಸಿಗೆ...? ಛೆ... ಬಿಜೆಪಿಗೂ ಸೇರಿದ್ದಿರಬಹುದು. ಹೀಗಾಗಿ ಇವುಗಳಲ್ಲಿ ಯಾವ ಪಕ್ಷ ನನ್ನನ್ನು ಉಚ್ಚಾಟಿಸಿದೆ ಅಂತ ಹೇಳಿ ಪುಣ್ಯ ಕಟ್ಟಿಕೊಳ್ಳಿ.

* ನಿಮ್ಮ ಮುಂದಿನ ನಡೆ ಏನು?
ಆನೆ ನಮ್ಮ ಮೇಲೆ ಲದ್ದಿ ಹಾಕಿದರೆ ನಾವೇನು ಸುಮ್ಮನೆ ಕೂರುವವರೇ? ಸ್ಥಳೀಯ ಸಂಸ್ಥೆಗಳು, ರಾಜ್ಯ ರಾಜಕಾರಣ, ರಾಷ್ಟ್ರೀಯ ರಾಜಕಾರಣ ಇವೆಲ್ಲಾ ನಮಗೆ ಯಾವ ಲೆಕ್ಕ?... ಇನ್ನು ಮುಂದೆ ಏನಿದ್ದರೂ ನಮ್ಮದು ಅಂತಾರಾಷ್ಟ್ರೀಯ ರಾಜಕಾರಣ. ಹೀಗಾಗಿ ಹಿಲಾರಿಯಸ್ ಭಾಮಾಮಣಿ ಜತೆಗೆ ಸೆಣಸಾಡಿ ಅಭ್ಯರ್ಥನ ಪಡೆದುಕೊಂಡ ಒಬಾಮಾ ವಿರುದ್ಧ... ಅಲ್ಲಲ್ಲ... ಪರವಾಗಿ ಪ್ರಚಾರ ಮಾಡಲು ಅಮೆರಿಕೆಗೆ ಹಾರಲಿದ್ದೇನೆ.

* ಛೆ... ನೀವು ಹೋದರೆ ಇಲ್ಲಿ ನಿಮ್ಮವರನ್ನು, ನಿಮ್ಮನ್ನು ನಂಬಿದವರನ್ನು ನೋಡಿಕೊಳ್ಳೋರು ಯಾರು?
ಅವರಿಗೇನು... ಎಷ್ಟು ಬೇಕಾದ್ರೂ ಪಕ್ಷಗಳಿವೆ... ಯಾವುದಕ್ಕೆ ಬೇಕಾದ್ರೂ ಹೋಗ್ಬಹುದು. ಯಾಕೆಂದರೆ ಎಲ್ಲ ಪಕ್ಷಗಳ ತತ್ವ ಸಿದ್ಧಾಂತಗಳೂ ಒಂದೇ ಆಗಿಬಿಟ್ಟಿವೆ. ಈ ಸಿದ್ಧಾಂತಗಳಲ್ಲಿ ಪಕ್ಷಾಂತರ ಸಿದ್ಧಾಂತವು ಮೋಸ್ಟ್ ಕಾಮನ್ ಪ್ರಕ್ರಿಯೆ. ನೀವೇನೂ ಯೋಚ್ನೆ ಮಾಡ್ಬೇಕಾಗಿಲ್ಲ. ಇವತ್ತು ನೀವು ಬೊಗಳೆ ರಗಳೆ ಬ್ಯುರೋ ಪರವಾಗಿ ಕೆಲ್ಸ ಮಾಡ್ತಾ ಇದ್ದೀರಿ. ನಾಳೆ ಮಜಾವಾಣಿಗೆ, ನಾಡಿದ್ದು ನಗೆ ನಗಾರಿಗೆ, ಇನ್ನೊಂದಿನ ಹಾಸ್ಯಬ್ಲಾಗು ರದ್ದಿಗಾರರಾಗುತ್ತೀರಿ. ಎಲ್ಲಿ ಹೆಚ್ಚು ಗಿಟ್ಟುತ್ತದೆ ಅಲ್ಲಿಗೆ ಹಾರುತ್ತೀರಿ ಅಲ್ಲವೇ?

ಹೀಗೆ ಬುಡಕ್ಕೇ ಕೊಡಲಿ ಹಾಕಿದ ಕಾರಣದಿಂದಾಗಿ ಸಂದರ್ಶನವನ್ನು ಅರ್ಧಕ್ಕೇ ನಿಲ್ಲಿಸಿ, ಅಲ್ಲಿಂದ ಓಡಲಾಯಿತು.

Friday, June 27, 2008

ಶಾಂತಿಗೆ ಕಾರಣ ಹಣಗೊಬ್ಬರ!

(ಬೊಗಳೂರು ಸುಮ್ಮನಿರುವ ಬ್ಯುರೋದಿಂದ)
ಬೊಗಳೂರು, ಜೂ.೨೬- ದೇಶದಲ್ಲಿ ಮತ್ತು ಭಯೋತ್ಪಾದನೆ, ಹತ್ಯಾಕಾಂಡ ಇತ್ಯಾದಿಗಳಿಗೆ ಇತ್ತೀಚೆಗಿನ ದಿನಗಳಲ್ಲಿ ಕಡಿವಾಣ ಬಿದ್ದಿದ್ದು, ಇದಕ್ಕೆ ಕಾರಣವನ್ನು ಬೊಗಳೆ ರಗಳೆಯ ಹೊಸ ಬ್ಯುರೋ ಪತ್ತೆ ಹಚ್ಚಲು ನಿರ್ಧರಿಸಿದ ತಕ್ಷಣವೇ ಎರಡು ಅಂಶಗಳು ಪತ್ತೆಯಾಗಿವೆ.

ಮೊತ್ತ ಮೊದಲನೆಯದಾಗಿ, ರೈತರಿಗೆ ರಸಗೊಬ್ಬರವೂ ದೊರೆಯುತ್ತಿಲ್ಲ, ಇದರಿಂದ ಕೀಟ ನಾಶಕಗಳೂ ದೊರೆಯುತ್ತಿಲ್ಲ. ಹೀಗಾಗಿ ಆತ್ಮಹತ್ಯೆಯ ಪ್ರಮಾಣದಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ.

ಎರಡನೆಯದಾಗಿ, ಇದೀಗ ದೇಶಾದ್ಯಂತ ಹಣಗೊಬ್ಬರದ ಕೋಲಾಹಲ. ಹಣಗೊಬ್ಬರವು ೧೧.೦೫ ಶೇ. ಮೀರಿರುವುದರಿಂದ ಅಗತ್ಯವಸ್ತುಗಳು ಎಟುಕಲಾರದಷ್ಟು ಹುಳಿಯಾಗಿಬಿಟ್ಟಿವೆ. ಜನ ಸಾಮಾನ್ಯ ತತ್ತರಿಸುವುದು ಇತ್ತೀಚಿನ ವರ್ಷಗಳಲ್ಲಿ ಮಾಮೂಲಿ ಆಗಿಬಿಟ್ಟಿರುವುದರಿಂದ ಅದರ ಬಗ್ಗೆ ದೇಶದ ಚುಕ್ಕಾಣಿ ಹಿಡಿದಿರುವ ಯಾರು ಕೂಡ ಗಮನ ಹರಿಸುತ್ತಿಲ್ಲ ಎಂಬುದು ಡೀಫಾಲ್ಟ್ ಆಗಿರುವ ಸಂಗತಿ.

ಇದನ್ನೆಲ್ಲಾ ಬದಿಗಿಟ್ಟು, ಭಯೋತ್ಪಾದಕರ ದಾಳಿ, ಬಾಂಬ್ ಸ್ಫೋಟ ಕೂಡ ಕಡಿಮೆಯಾಗಿರುವುದಕ್ಕೆ ಹಣಗೊಬ್ಬರವೇ ಕಾರಣ. ಈ ಉಬ್ಬರಿಸುವ ಹಣದ ಅಬ್ಬರದಿಂದಾಗಿ , ಗನ್ನು ಇತ್ಯಾದಿಗಳು ಕೂಡ ಭಯೋತ್ಪಾದಕರ ಕೈಗೆಟುಕಲಾರದಷ್ಟು ದುಬಾರಿಯಾಗಿಬಿಟ್ಟಿವೆ. ಇದೇ ಕಾರಣಕ್ಕೆ ದೇಶದಲ್ಲಿ ಒಂದಷ್ಟು ಶಾಂತಿಯ ವಾತಾವರಣ ಕಂಡುಬರುತ್ತಿದೆ. ಅಥವಾ ಅಶಾಂತಿ ಕಂಡು ಬಂದರೂ ವರದಿಯಾಗುತ್ತಿಲ್ಲ. ಇದಕ್ಕೆ ಕಾರಣ ಹಣದುಬ್ಬರದ ಬಿಸಿ ವರದಿಗಾರಿಕೆಗೂ ತಟ್ಟಿದ್ದು, ಒಂದು ವರದ್ದಿ ಕಳುಹಿಸಿದರೆ ಸಾಕಷ್ಟು ಹಣ ಖರ್ಚಾಗುತ್ತದೆ. ಹೀಗಾಗಿ ನಾವು ವರದ್ದಿ ಕಳುಹಿಸಿದರೆ ಬದುಕುವುದಕ್ಕಾಗಿ ತಿನ್ನಲು ಏನು ಮಾಡುವುದು ಎಂಬ ಯೋಚನೆಯಲ್ಲಿ ವರದ್ದಿಗಾರರೆಲ್ಲರೂ ಸುಮ್ಮನಾಗಿಬಿಟ್ಟಿದ್ದಾರೆ.

ದೇಶದಲ್ಲಿ ದ್ವೇಷದ ವಾತಾವರಣವಿಲ್ಲದೆ, ಎಲ್ಲೆಲ್ಲೂ ಶಾಂತಿಯೇ ಗೋಚರಿಸುತ್ತಿರುವುದರಿಂದ ಉಪ (UPA) ಸರಕಾರವು ಈ ಶಾಂತಿಯನ್ನು ಮತ್ತು ಅ ಶಾಂತಿಯನ್ನು ತಾವೇ ಸ್ಥಾಪಿಸಿದ್ದೇವೆ ಎಂದು ಎದೆ ತಟ್ಟಿಕೊಂಡು ಹೇಳಲಾರಂಭಿಸಿದೆ. "ಜನಗಳೇ ಮತ್ತು ದನಗಳೇ, ಹಣಗೊಬ್ಬರದ ಬಗ್ಗೆ ತಲೆಬಿಸಿ ಮಾಡಿಕೊಳ್ಳಬೇಕಿಲ್ಲ, ಎಲ್ಲೆಲ್ಲೂ ಶಾಂತಿ ಇರುವುದರಿಂದ ನೆಮ್ಮದಿಯಲ್ಲಿ ಇರಬಹುದು, ಆದರೆ ಆ ಶಾಂತಿಯನ್ನು ನಿಮ್ಮ ಮನೆಯೊಳಗೇ ಇಟ್ಟುಕೊಳ್ಳಬೇಡಿ. ಚುನಾವಣೆಗಳು ಬರುವಾಗ ಜಾರಕಾರಣಿಗಳಿಗೆ ಅಗತ್ಯವಾಗಿ ಅದನ್ನು ಕೆಡಿಸಬೇಕಾಗಿದೆ" ಎಂಬ ಎಚ್ಚರಿಕೆಯ ಸೂಚನೆಯನ್ನೂ ಉಪ ಸರಕಾರ ಜನತೆಗೆ ನೀಡಿದೆ.

Wednesday, June 25, 2008

ಹಣಗೊಬ್ಬರ ಪ್ರಭಾವವೂ ರಸಗೊಬ್ಬರ ಅಭಾವವೂ!

(ಬೊಗಳೂರು ಗೊಬ್ಬರ ಬ್ಯುರೋದಿಂದ)
ಬೊಗಳೂರು, ಜೂ.25- ರಾಜ್ಯದಲ್ಲಿ ರಸಗೊಬ್ಬರದ ಅಭಾವ ಮತ್ತು ಕೇಂದ್ರದಲ್ಲಿ ಹಣಗೊಬ್ಬರದ ಪ್ರಭಾವ ಹೆಚ್ಚಾಗುತ್ತಿರುವುದಕ್ಕೂ ಪರಸ್ಪರ ಸಂಬಂಧವಿದೆ ಎಂಬುದನ್ನು ಪತ್ತೆ ಹಚ್ಚಿರುವ ಬೊಗಳೆ ರಗಳೆ ಬ್ಯುರೋ, ರೈತರ ಆತ್ಮಹತ್ಯೆಗೂ ಕಾರಣಗಳನ್ನು ಪತ್ತೆ ಹಚ್ಚಿದೆ.

ಆದರೆ ಬೊ.ರ. ಬ್ಯುರೋವೇ ಈ ಕಾರಣಗಳನ್ನು ಪತ್ತೆ ಹಚ್ಚಿರುವುದು ಪತ್ರಿಕೋದ್ಯಮಕ್ಕೆ ತಟ್ಟಿದ ಕಳಂಕ ಮತ್ತು ಈ ದೇಶದ ದುರಂತ ಎಂದು ಜಾರಕಾರಣಿಗಳೆಲ್ಲಾ ಬಾಯಿಗೆ ಬಂದಂತೆ ಹೊಗಳುತ್ತಿರುವುದಾಗಿ ನಮ್ಮ ವಿರೋಧೀ ಪತ್ರಿಕೆಗಳ ರದ್ದಿಗಾರರು ಕಳುಹಿಸಿದ ಫ್ಯಾಕ್ಸ್ ಬೊ.ರ. ಕಚೇರಿಗೆ ತಲುಪಿದೆ.

ಕೇಂದ್ರದಲ್ಲಿರುವ ರಾಶಿಬಿದ್ದು ಕೊಳೆಯುತ್ತಿರುವ ಗೊಬ್ಬರವನ್ನು ಎಲ್ಲಾದರೂ ರಾಜ್ಯಕ್ಕೆ ಕಳುಹಿಸಿಕೊಟ್ಟರೆ, ಇಲ್ಲಿನ ರೈತರು ಆತ್ಮಹತ್ಯೆ ಮಾಡಿಕೊಳ್ಳುವುದಾದರೂ ಹೇಗೆ, ಆ ಬಳಿಕ, ರೈತರ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಸರಕಾರಕ್ಕೆ ರೈತ-ವಿರೋಧಿ ಅಂತ ಹಣೆಪಟ್ಟಿ ಕಟ್ಟುವುದಾದರೂ ಹೇಗೆ ಎಂಬುದು ಯೋಚನೆಯಾಗಿತ್ತು.

ಕೇಂದ್ರದ ಮೇಲೆ ಹಣಗೊಬ್ಬರ ಹೆಚ್ಚಾಗಿದ್ದಕ್ಕಾಗಿ ರಾಜ್ಯದವರು ಕೇಂದ್ರೀಯರನ್ನು ಬೈದಾಡಿದರೆ, ಕೇಂದ್ರದವರು ರಸಗೊಬ್ಬರ ಕಡಿಮೆಯಾಗಿದ್ದಕ್ಕಾಗಿ ರಾಜ್ಯದ ಮೇಲೆ ಗೊಬ್ಬರರಹಿತ ಕೆಸರು ಎರಚಬಹುದು. ಈ ತಂತ್ರಗಳಿಂದಾಗಿಯೇ ಬಡ ರೈತ ಅತಂತ್ರನಾಗಿದ್ದು, ರಸಗೊಬ್ಬರವೆಲ್ಲವೂ ಎದುರು ಪಕ್ಷದವರ ದಲ್ಲಾಳಿಗಳ ಕೈಯಲ್ಲಿ ಸುರಕ್ಷಿತವಾಗಿ ಉಬ್ಬರವಾಗುತ್ತಿವೆ ಎಂಬುದನ್ನು ಪತ್ತೆ ಹಚ್ಚಲು ಬೊ.ರ.ಗೂ ಸಾಧ್ಯವಾಗಿಲ್ಲ.

ಇನ್ನು ಆತ್ಮಹತ್ಯೆಗೆ ಕಾರಣವೆಂದರೆ, ರಸಗೊಬ್ಬರದ ಬದಲು ಹಣಗೊಬ್ಬರ ಹೆಚ್ಚಾಗಿದ್ದಲ್ಲದೆ, ರಸಗೊಬ್ಬರ ಅಂಗಡಿಗಳಲ್ಲಿ ಕೇವಲ ಕೀಟನಾಶಕಗಳು ಮಾತ್ರವೇ ದೊರೆಯುತ್ತಿದ್ದುದು ಎಂಬುದನ್ನು ಯಾರೂ ಪತ್ತೆ ಹಚ್ಚದಿದ್ದರೂ ಬೊ.ರ. ಮಾತ್ರ ವರದಿ ಮಾಡಿದೆ.

ಆದರೂ, ಕೀಟನಾಶಕಗಳು ಕೂಡ ಕಳಪೆಯಾಗಿದ್ದು ಮತ್ತು ಕಲಬೆರಕೆಯಿಂದ ಕೂಡಿದ್ದ ಕಾರಣದಿಂದಾಗಿ ಕೀಟಗಳು ಸಾಯುವ ಬದಲು ಕೀಟಗಳ ಸಂಖ್ಯೆಯೇ ಹೆಚ್ಚಾಗತೊಡಗಿದ್ದು, ಬೆಳೆ ನಾಶವಾಗತೊಡಗಿದೆ ಎಂಬುದು ಬೊ.ರ. ಗಮನಕ್ಕೆ ಬಂದಿದೆ. ಇದೇ ಕಾರಣದಿಂದ ಈ ಕೀಟಗಳು ಗೊಬ್ಬರ ಕೊರತೆಗೆ ಅವರು ಕಾರಣ, ಇವರು ಕಾರಣ ಎಂಬುದನ್ನು ಸ್ವರಬದ್ಧವಾಗಿ ಝೇಂಕರಿಸುತ್ತಾ ಕಾಲ ಕಳೆಯುತ್ತಿವೆ.

Monday, June 23, 2008

ಒಬಿಸಿ ಮೀಸಲಿಗೆ ಸಚಿವ ದುರ್ಜನ ಸಿಂಗ್ ಹೆಣಗಾಟ

(ಬೊಗಳೂರು ಮೂಸಲು ಬ್ಯುರೋದಿಂದ)
ಬೊಗಳೂರು, ಜೂ.23- ಸರಕಾರ ಎಷ್ಟೇ ಕಷ್ಟ ಪಟ್ಟು ಹೆಣಗಾಡಿದರೂ ದೇಶದಲ್ಲಿ ಇತರ ಹಿಂದುಳಿದವರು ಸಿಗದೇ ಇರುವುದರಿಂದ ಜಾರಕೀಯ ಪಕ್ಷಗಳೆಲ್ಲವೂ ತತ್ತರಿಸಿ ಬೆಚ್ಚಿ ಬಿದ್ದಿವೆ. ಹೀಗಾದರೆ ಹೇಗೆ, ಓಟಿನ ಬ್ಯಾಂಕಿನ ಖಾತೆಯಲ್ಲಿ ಜಮಾವಣೆ ಆಗುವುದಾದರೂ ಹೇಗೆ ಎಂಬುದೇ ನಮ್ಮನ್ನು ಆಳಲು ಮನಸ್ಸಿಲ್ಲದವರ ಚಿಂತೆಗೆ ಕಾರಣ ಎಂದು ಬೊಗಳೆ ರಗಳೆ ಬ್ಯುರೋ ಪತ್ತೆ ಹಚ್ಚಿದೆ.

ಓಟಿನ ಬ್ಯಾಂಕನ್ನು ಗಟ್ಟಿ ಮಾಡಿಕೊಳ್ಳುವ ಸರಕಾರದ ಉದ್ದೇಶವೇ ಇಲ್ಲಿ ದಾರಿ ತಪ್ಪಿರುವುದು ಎಲ್ಲ ಜಾರಕೀಯ ಪಕ್ಷಗಳ ಉದ್ವೇಗಕ್ಕೆ ಕಾರಣವಾಗಿದೆ. ಓಬಿಸಿ ಕೋಟಾವನ್ನೇ ಖೋಟಾ ಎಂದು ಪರಿಗಣಿಸುವಂತಾಗಿಸುವ ನಿಟ್ಟಿನಲ್ಲಿ ಇತ್ತೀಚೆಗೆ ಎಲ್ಲರೂ ತಾವು ಹಿಂದುಳಿದವರು, ನಾವು ಹಿಂದುಳಿದವರು ಎಂದು ಹಳಿದುಕೊಳ್ಳುತ್ತಾ, ಅಧಿಕಾರಿಗಳಿಗೆ ದುಡ್ಡು ತೆತ್ತು ಒಬಿಸಿ ಫರ್ಟಿಸಿಕೇಟು ಮಾಡಿಸಿಕೊಳ್ಳುವ ತರಾತುರಿಯಲ್ಲಿರುವುದನ್ನು ಕೂಡ ಬೊಗಳೆರಗಳೆ ಬ್ಯುರೋ ಕಂಡು ಹುಡುಕಿದೆ.

ಒಬಿಸಿಗೆ 27 ಶೇ. ಮೀಸಲಾಗಿದ್ದರೂ, ಏಳು ಶೇಕಡಾ ಮಾತ್ರ ಒಬಿಸಿ ಮಂದಿಗಳು ದೊರಕಿದ್ದು, ಉಳಿದ 20 ಶೇಕಡಾ ಮಂದಿಯನ್ನು ಸೃಷ್ಟಿಸಬೇಕಾಗಿರುವುದು ಮಾನನೀಯ ಮಾವನ ಸಂಪನ್ಮೂಲಗಳನ್ನು ಕ್ರೋಡೀಕರಿಸುವ ಸಚಿವ ದುರ್ಜನ ಸಿಂಗರಿಗೆ ದೊಡ್ಡ ಸವಾಲಿನ ಮತ್ತು ಮುಖವುಳಿಸಿಕೊಳ್ಳುವ ವಿಷಯವಾಗಿದ್ದು, ಅದನ್ನು ತುಂಬಿಸಿಕೊಳ್ಳುವ ನಿಟ್ಟಿನಲ್ಲಿ ತಮ್ಮ ಪಕ್ಷದ ಓಟಿನ ಬ್ಯಾಂಕೇ ಆಗಿಬಿಟ್ಟಿರುವ ಅಲ್ಪ ಸಂಖ್ಯೆಯುಳ್ಳವರನ್ನು ಓಲೈಸಿಕೊಳ್ಳುವತ್ತ ಒಳಗಿಂದೊಳಗೆ ಸಿದ್ಧತೆಗಳನ್ನು ಮಾಡುತ್ತಿದ್ದಾರೆ ಎಂಬುದು ತಿಳಿದುಬಂದಿದೆ.

ಇದಕ್ಕಾಗಿ ದೇಶದ ಎಲ್ಲಾ ಜೈಲುಗಳನ್ನು ಹುಡುಕಿ, ಇತ್ತೀಚೆಗೆ ಭಯೋತ್ಪಾದನೆಗೆ ಸಂಬಂಧಿಸಿ ಬಂಧಿತರಾದವರನ್ನೆಲ್ಲರಿಗೂ ಉನ್ನತ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ಅವರನ್ನು ಐಐಟಿಗಳಿಗೆ ಸೇರಿಸುವ ಪ್ರಯತ್ನ ನಡೆಯುತ್ತಿದೆ. ಸಿಮಿ ಸಂಘಟನೆಯವರು ಯಾವತ್ತಿದ್ದರೂ ಸ್ಟೂಡೆಂಟ್‌ಗಳೇ ಆಗಿರುವುದರಿಂದ ಅವರಿಗೆ ಉನ್ನತ ತಾಂತ್ರಿಕ ಶಿಕ್ಷಣ ಕೊಡಿಸಲು ಮತ್ತು ಅವರನ್ನು ಐಐಟಿಗಳಿಗೆ ಸೇರಿಸಿಕೊಳ್ಳಲು ಅತ್ಯಂತ ಸುಲಭ. ಹೇಗಿದ್ದರೂ ದೇಶದಲ್ಲಿ ಈ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಅವರು ಆಗಾಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆಯುವ ಕೆಲಸ ಮಾಡುತ್ತಿದ್ದಾರೆ. ಅವರಿಂದಾಗಿ ದೇಶದ ಹೆಸರು ಕೂಡ ಅಂತಾರಾಷ್ಟ್ರೀಯ ಟೆರರ್ ಭೂಪಟದಲ್ಲಿ ಜ್ವಾಜ್ವಲ್ಯಮಾನವಾಗಿ ಬೆಳಗುತ್ತಿದೆ ಎಂಬುದನ್ನು ಕೇಂದ್ರವು ಮನಗಂಡಿದ್ದು, ಹೇಗಾದರೂ ಮಾಡಿ ಅವರಿಗೆ ಉನ್ನತ ಶಿಕ್ಷಣ ಕೊಡಿಸಿದರೆ, ದೇಶದ ಹೆಸರೂ ಪ್ರಸಿದ್ಧಿ ಪಡೆಯುತ್ತದೆ, ಒಬಿಸಿ ಕೋಟಾವನ್ನು ಖೋಟಾ ಪದ್ಧತಿಯಿಂದ ತುಂಬಿಸಿ ತಮ್ಮ ಇಲ್ಲದ ಮಾನವನ್ನು ಉಳಿಸಿಕೊಂಡ ಹಾಗೆಯೂ ಆಗುತ್ತದೆ ಎಂಬುದು ಲೆಕ್ಕಾಚಾರ.

ಒಬಿಸಿ ಕೋಟಾಕ್ಕೆ ಸಾಕಷ್ಟು ಅಭ್ಯರ್ಥಿಗಳು ಸಿಗದಿರುವುದರಿಂದ, ಯಾರಿಗೆ ಬೇಕಾದರೂ ಈ ರೀತಿಯ ಪ್ರಮಾಣಪತ್ರ ಕೊಡಿಸುಲು ಯಾರಾದರೂ ಮುಂದೆ ಬಂದರೆ ಅವರಿಗೂ ಉದ್ಯೋಗಾವಕಾಶ ಹೆಚ್ಚುತ್ತದೆ. ಮೀಸಲಾತಿಯಿಂದಾಗಿ ಎಷ್ಟೊಂದು ಜನರಿಗೆ ಉದ್ಯೋಗಾವಕಾಶ ದೊರೆಯುತ್ತದೆ ಎಂದು ತಮಗರಿವಿಲ್ಲದಂತೆಯೇ ಅಚ್ಚರಿ ವ್ಯಕ್ತಪಡಿಸಲಿರುವ, ಇಂಥ ವಿಷಯಗಳಿಗೇ ತಲೆ ಓಡಿಸುತ್ತಾ ಮಾವನ ಸಂಪನ್ಮೂಲ ಹೆಚ್ಚಿಸುವ ಕೇಂದ್ರ ಸಚಿವ ದುರ್ಜನ ಸಿಂಗ್, ಪ್ರಮಾಣಪತ್ರ ಕೊಡುವ ಕೇಂದ್ರಗಳನ್ನು ಅಲ್ಲಲ್ಲಿ ಸ್ಥಾಪಿಸಲು ಕೇಂದ್ರ ಪಿತ್ತಸಚಿವ ಪೀಚಿ ದಂಬರಂ ಅವರ ಸಲಹೆ ಕೋರಿದ್ದಾರೆ.

Thursday, June 19, 2008

ಬೊಗಳೆ ಬ್ಯುರೋದಿಂದ ಸರ್ವೋಪಯೋಗಿ ಭವಿಷ್ಯ

ಬೊಗಳೆ ರಗಳೆ ಸ್ಥಬ್ದವಾಗಿದೆ ಎಂಬ ಆರೋಪಗಳನ್ನು ತಪ್ಪಿಸಲೋಸುಗ ಬೇರೆಯವರ ಭವಿಷ್ಯವನ್ನು ನಮ್ಮ ಕೈಯಲ್ಲಿ ಹಿಡಿದುಕೊಳ್ಳುವ ನಿಟ್ಟಿನಲ್ಲಿ ರಾಶಿ ರಾಶಿಗಳ ಭವಿಷ್ಯವನ್ನು ಇಲ್ಲಿ ನೀಡಲಾಗಿದೆ. ಬೊಗಳೆ ಭವಿಷ್ಯವು ಅತ್ಯಂತ ಸುಲಭವೂ, ಅತ್ಯಂತ ಸರಳವೂ ಆಗಿದ್ದು, ಓದುಗರು ಯಾವುದೇ ರಾಶಿಯನ್ನು ಬೇಕಿದ್ದರೂ ಆರಿಸಿಕೊಂಡು, ಇದು ತಮ್ಮದೇ ಅಂತ ತಿಳಿದುಕೊಳ್ಳಬಹುದು. ಇದೇ ನಮ್ಮ ಈ ಸೇವೆಯ ವೈಶಿಷ್ಟ್ಯ. ಈ ನಿಟ್ಟಿನಲ್ಲಿ ಈ ಭವಿಷ್ಯ ವಾಣಿಗಳನ್ನು ಹೆಚ್ಚು ಹೆಚ್ಚು ಖರೀದಿಸಿ ಪ್ರೋತ್ಸಾಹಿಸಲು ಬೋರಲಾಗಿದೆ.
ಮೇಷ
ಅಷ್ಟಮ ಸ್ಥಾನದಲ್ಲಿ ಗುರು ನೆಲಸಿರುವುದರಿಂದ ಮನೆಯಲ್ಲಿ ಬಾಗಿಲು ಇಲ್ಲದಿದ್ದರೆ ಖಂಡಿತವಾಗಿಯೂ ಕಳ್ಳತನವಾಗುತ್ತದೆ. ಆದುದರಿಂದಾಗಿ ಚೋರ ಭಯ ಶತಃಸಿದ್ಧ. ಹಠಾತ್ ರಜೆ ಹಾಕಿದರೆ ಉನ್ನತ ಅಧಿಕಾರಿಗಳಿಂದ ಬೈಗುಳ. ಮನೆಯಲ್ಲಿ ಬೆಂಕಿ ಇದ್ದರೆ ಅದನ್ನು ಬೀಡಿ, ಸಿಗರೇಟು ಸುಡಲು, ಒಲೆ ಹಚ್ಚಲು ಬಳಸಬಹುದು. ಹೆಚ್ಚುಕಡಿಮೆ ಮಾಡಿಕೊಂಡು ಪ್ರಯೋಗಿಸಿದರೆ ಅನಾಹುತವಾಗಬಹುದು. ಬೆಂಕಿ ಉರಿಯುತ್ತಿದ್ದರಂತೂ ಬಿಸಿ ಬಿಸಿಯಾಗಿರುತ್ತದೆ ಮತ್ತು ಮುಟ್ಟಿದರೆ ಸುಟ್ಟುಹೋಗಲೂ ಬಹುದು.

ವೃಷಭ
ಜ್ವರ ಬಂದರೆ ವೈದ್ಯರ ಬಳಿಗೆ ಹೋಗುವ ಇಚ್ಛೆ ನಿಮಗೆ ಬರಲಾರದು. ಬೇರೇನಾದರೂ ಕಾಯಿಲೆ ಬಂದರೆ ಮಾತ್ರ ಡಾಕ್ಟರ್ ಶಾಪ್ ಎಲ್ಲಿದೆ ಅಂತ ಹುಡುಕುವಿರಿ. ಬೇರೆಯವರ ಸ್ವಭಾವ ಗೊತ್ತಿದ್ದೂ ಅವರಿಗೆ ಜವಾಬ್ದಾರಿ ವಹಿಸಿದರೆ ಮೋಸ ಹೋಗುವ ಸರದಿ ನಿಮ್ಮದೇ. ಕಚೇರಿಯಲ್ಲಿ ಎಲ್ಲರೊಂದಿಗೂ ಕೂಗಾಡುತ್ತಿದ್ದರೆ ನಿಮ್ಮ ಮೇಲಧಿಕಾರಿಗಳ, ಕೆಳಅಧಿಕಾರಿಗಳ ಆಕ್ರೋಶಕ್ಕೆ ಗುರಿಯಾಗುವಿರಿ. ಕ್ರೆಡಿಟ್ ಕಾರ್ಡ್ ಆಗಾಗ್ಗೆ ಬಳಸುವುದರಿಂದ ನೀವು ಸಾಲವಂತರಾಗುತ್ತೀರಿ.

ಮಿಥುನ
ನೀವು ಎಲ್ಲರೊಂದಿಗೂ ನಿಷ್ಠುರರಾಗಿ ಮಾತನಾಡುವುದರಿಂದ ಅವರೆಲ್ಲರಿಗೂ ನಿಷ್ಠುರ ವ್ಯಕ್ತಿ ಅನಿಸಿಕೊಳ್ಳುತ್ತೀರಿ. ನಿಮ್ಮ ತೋಟಕ್ಕೆ ಮಂಗಗಳ ಕಾಟ ಹೆಚ್ಚಾದಲ್ಲಿ ಮನೆಯಲ್ಲಿ ಮಂಗಗಳ ಕಾರ್ಯ ನೆರವೇರುವ ಸಾಧ್ಯತೆಗಳು ಬಹುತೇಕ ಖಚಿತ. ಹೊಸ ಬಟ್ಟೆ, ಹೊಸ ಆಭರಣ ತೊಟ್ಟರೆ ಎಲ್ಲರೂ ನಿಮ್ಮತ್ತ ನೋಡುವರು. ಬಟ್ಟೆ ಧರಿಸದಿದ್ದರೆ ನೋಡುವವರ ಸಂಖ್ಯೆ ಹೆಚ್ಚಾಗಲಿದೆ.

ಕರ್ಕಾಟಕ
ನೀವು ಎಲ್ಲರನ್ನೂ ನಂಬುವುದರಿಂದ ಎಲ್ಲರೂ ನಿಮಗೆ ಮೋಸ ಮಾಡುವುದು ಸುಲಭ. ಇದು ಬೊಗಳೆ ರಗಳೆ ಬ್ಯುರೋಗೆ ತಿಳಿಯದಂತೆ ಎಚ್ಚರ ವಹಿಸುವುದು ಸೂಕ್ತ. ವಿವಾದ ಇತ್ಯರ್ಥಕ್ಕೆ ನ್ಯಾಯಾಲಯದ ಮೊರೆ ಹೋಗಿದ್ದರೆ ಹತ್ತಾರು ವರ್ಷಗಳ ಬಳಿಕ ನಿಮಗೆ, ಅಲ್ಲದಿದ್ದರೆ ಎದುರಾಳಿ ಪಾರ್ಟಿಗಳಿಗೆ ನ್ಯಾಯ ದೊರೆಯುವುದು ಖಚಿತ. ಅಷ್ಟು ವರ್ಷಗಳ ಕಾಲ ಕರಿ"ಕೋಟಿ"ಗರು ನಿಮ್ಮಿಂದ ಕೋಟಿ ಕೋಟಿ ಪೀಕಿಸಬಹುದು.

ಸಿಂಹ
ಸಂಪಾದನೆಗಿಂತ ನೀವು ಹೆಚ್ಚು ಖರ್ಚು ಮಾಡಿದರೆ ಆ ತಿಂಗಳ ಮಟ್ಟಿಗೆ ದಿವಾಳಿಯಾಗುತ್ತೀರಿ. ಇಲ್ಲವಾದಲ್ಲಿ ಬ್ಯಾಂಕ್ ಬ್ಯಾಲೆನ್ಸ್ ಕರಗಿಸಬೇಕಾಗಿಬಂದೀತು. ಶಾಂತಿ ಎಂಬ ನಿಮ್ಮ ಕಾಲೇಜು ಗೆಳತಿ ಮನೆಗೆ ದಿಢೀರ್ ಬಂದರೆ ಗೃಹದಲ್ಲಿ ಅಶಾಂತಿ ಉಂಟಾದೀತು. ಯಾವುದೇ ಅಶುಭ ಫಲಗಳು ಸಂಭವಿಸದಿದ್ದರೆ ಆ ದಿನ ನಿಮಗೆ ಶುಭದಾಯಕವಾಗಲಿದೆ.

ಕನ್ಯಾ
ಕಲೆ, ಸಂಗೀತ, ಸಾಹಿತ್ಯ ಇತ್ಯಾದಿಗಳ ಅಕಾಡೆಮಿಗಳಿಗೆ ಅರ್ಜಿ ಸಲ್ಲಿಸಿಯೂ ನೀವು, ಕೆಲಸವಾಗಬೇಕಿದ್ದರೆ ಕತ್ತೆ ಕಾಲು ಹಿಡಿ ಎಂಬ ಉಕ್ತಿಯ ಅನುಸಾರ ರಾಜಕಾರಣಿಗಳ ಕಾಲು ಹಿಡಿಯದಿದ್ದರೆ, ಖಂಡಿತಾ ನಿಮಗೆ ಅರ್ಹತೆಯಿದ್ದರೂ ಪ್ರಶಸ್ತಿ, ಪುರಸ್ಕಾರ ಲಭಿಸುವುದಿಲ್ಲ. ರಾಜಕಾರಣಿಗಳೆಲ್ಲಾ ವಿಧಾನಸೌಧದಲ್ಲಿ ಹೊಡೆದಾಡುತ್ತಿರುವುದರಿಂದ ನಿಮ್ಮೂರಲ್ಲಿ ಅಭಿವೃದ್ಧಿ ಕಾರ್ಯಗಳಾಗಿ ಶಾಂತಿ ನೆಲಸಬಹುದು.

ತುಲಾ
ಅಪರಿಚಿತರೊಂದಿಗೆ ಸಹ-ವಾಸ ದೋಷದಿಂದ ಎಚ್ಐವಿ ಎಂಬ ಮಾನವಕುಲಕ್ಕೆ ಇದೀಗ ಅಮೂಲ್ಯವಾಗಿಬಿಟ್ಟಿರುವ (ಅದರ ಚಿಕಿತ್ಸೆಗೆ ಸಾಕಷ್ಟು ವ್ಯಯ ಮಾಡಬೇಕಾಗಿರುವುದರಿಂದ ಅದು ಅ-ಮೂಲ್ಯ) ವೈರಸ್ ನಿಮ್ಮನ್ನು ಪ್ರೀತಿಸುವ ಸಾಧ್ಯತೆಯಿದ್ದು, ಡ್ಯುಯೆಟ್ ಸಾಂಗ್ ಹಾಡಬಹುದು. ಶನಿಕಾಟವಿದ್ದರೆ ಶನಿಶಾಂತಿಯನ್ನೂ, ಗುರುಕಾಟವಿದ್ದರೆ ಗುರುಶಾಂತಿಯನ್ನೂ, ಅದೇ ರೀತಿ ಇತರ ನವಗ್ರಹಗಳ ಕಾಟವಿದ್ದರೆ ಆಯಾ ಶಾಂತಿಯನ್ನು ಮಾಡಿಸಿಕೊಳ್ಳುವುದು ಉತ್ತಮ.

ವೃಶ್ಚಿಕ
ಕರೆಂಟ್ ಬಿಲ್ ಕಟ್ಟದಿದ್ದರೆ ಬಿಲ್ ಸರಿಯಾಗಿ ಕಟ್ಟಿದವರಿಗೆ ದೊರೆಯುವ ಪವರ್ ಕಟ್ ಸೌಲಭ್ಯ ನಿಮಗೂ ಅಚಾನಕ್ ಆಗಿ ದೊರೆಯಬಹುದು. ವಿದ್ಯುತ್ ಸೌಲಭ್ಯ ಇಲ್ಲದಿದ್ದರೂ ಶಾಕ್ ಹೊಡೆಯುವ ಅನುಭವವು ವಿದ್ಯುತ್ ಇಲಾಖೆಯ ಈ ಬಿಲ್-ವಿದ್ಯೆಯಿಂದಾಗಿ ನಿಮಗೆ ಆಗಲಿದೆ. ಮನೆ ಬಾಡಿಗೆ ಬಾಕಿ ಇರಿಸಿಕೊಂಡಿದ್ದರೆ, ನೀವು ಕಚೇರಿಯಿಂದ ಸಂಜೆ ಮರಳಿದಾಗ ಮನೆಯೊಳಗಿನ ವಸ್ತುಗಳೆಲ್ಲಾ ಹೊರಗಿರುವ ಸಾಧ್ಯತೆ ಇರುವುದರಿಂದ ಮತ್ತು ಮನೆಯೊಡೆಯ ಕಣ್ಣು ದೊಡ್ಡದು ಮಾಡುತ್ತಾ ದೊಣ್ಣೆ ಹಿಡಿದು ನಿಮ್ಮನ್ನು ಸ್ವಾಗತಿಸಲು ಕಾಯುತ್ತಿರುವುದರಿಂದ ಎಚ್ಚರಿಕೆ ವಹಿಸಿ.

ಧನು
ನೀವು ರಾಜಕೀಯಕ್ಕೆ ಸೇರಿದ್ದರೆ ಓಟು ಪಡೆಯುವುದಕ್ಕಾಗಿ ಅಸತ್ಯ ನುಡಿಯಬೇಕಾಗುತ್ತದೆ. ಪ್ರಜೆಗಳು ಏನೇ ಮನವಿ ಸಲ್ಲಿಸಿದರೂ, "ಶೀಘ್ರದಲ್ಲೇ ಅದನ್ನು ಪರಿಹರಿಸುತ್ತೇವೆ, ನಾಳೆಯೇ ಅದನ್ನು ರಿಪೇರಿ ಮಾಡಿಸುವೆ, ಇನ್ನೊಂದೆರಡು ವಾರ ಕೊಟ್ಟು ನೋಡಿ, ಹೇಗೆ ಊರನ್ನೇ ಬದಲಿಸುತ್ತೇನೆ" ಎಂಬಿತ್ಯಾದಿ ಸಾಮಾನ್ಯ ಧ್ಯೇಯವಾಕ್ಯಗಳನ್ನು ಬರೆದಿಟ್ಟುಕೊಳ್ಳಿ. ಆಗಾಗ್ಗೆ ಈ ವಾಕ್ಯಗಳನ್ನು ಬಾಯಿಯಿಂದ ಉದುರಿಸಬೇಕಾಗಬಹುದು. ಆದರೆ ಇದನ್ನು "ಬೊಗಳೆ" ಎಂದು ಕರೆದು ನಮ್ಮ ಬ್ಯುರೋಗೆ ಅಪಮಾನ ಮಾಡದಿರಲು ಕೋರಲಾಗಿದೆ.

ಮಕರ
ರಾಜ್ಯದಲ್ಲೇನಾದರೂ ಅಹಿತಕರ ಘಟನೆ ನಡೆದಲ್ಲಿ, ನೀವು ಆಡಳಿತ ಪಕ್ಷದವರಾಗಿದ್ದರೆ, "ತನಿಖೆ ನಡೆಸಲಾಗುತ್ತದೆ, ದುಷ್ಕರ್ಮಿಗಳನ್ನು ಮಟ್ಟ ಹಾಕುತ್ತೇವೆ" ಎಂದೂ, ವಿರೋಧ ಪಕ್ಷದಲ್ಲಿದ್ದರೆ "ಸಿಬಿಐ ತನಿಖೆಯಾಗಲಿ, ಇದರಲ್ಲಿನ ಮಂತ್ರಿ ಕೈವಾಡದ ಬಗ್ಗೆ ತನಿಖೆಯಾಗಲಿ" ಎಂದೂ ವಿಧಾನಸೌಧದಲ್ಲಿ ಕೂಗಾಡಿದರೆ ನಿಮಗೆ ಆ ದಿನದ ವೇತನ ಗ್ಯಾರಂಟಿ. ರಾತ್ರಿ ಆಡಳಿತ-ವಿರೋಧ ಪಕ್ಷದವರಿಬ್ಬರೂ ಕುಳಿತುಕೊಂಡು ಸಾಮರಸ್ಯಕ್ಕಾಗಿ ಪಬ್‌ಗಳೂರಲ್ಲಿ ಸೋಮ-ರಸ ಹೀರುತ್ತಾ ಕುಳಿತಿರಬಹುದು.

ಕುಂಭ
ನೀವು ಕೈಗೊಳ್ಳುವ ಎಲ್ಲಾ ಕಾರ್ಯಗಳಲ್ಲಿ ಜಯ ಲಭಿಸದಿದ್ದರೆ ಅಪಜಯ ಎದುರಾಗುವುದು ಖಚಿತ. ಗೃಹ ನಿರ್ಮಾಣ ಕಾರ್ಯಕ್ಕಾಗಿ ನೀವು ಪಂಚಾಂಗ ಹಾಕದಿದ್ದರೆ, ಮನೆಯು ಮೇಲೆದ್ದು ನಿಲ್ಲುವ ಸಾಧ್ಯತೆಗಳು ಕಡಿಮೆ ಎಂದೇ ಹೇಳಬಹುದು. ಅಧಿಕಾರಿಗಳ ಕೈಬಿಸಿಯಾಗದಿದ್ದರೆ ಪರವಾನಗಿ ಪತ್ರದ ಬೆಣ್ಣೆ ಕರಗುವುದಿಲ್ಲ.

ಮೀನ
ನೀವು ಸ್ನಾನ ಮಾಡದಿದ್ದರೆ ಸಮಾಜದಲ್ಲಿ ಉತ್ತಮ ಸ್ನಾನ-ಮಾನ ಲಭಿಸುವ ಸಾಧ್ಯತೆಗಳು ಕಡಿಮೆ. ನೀವು ಬೆಂಗಳೂರಿನಲ್ಲಿದ್ದರೆ ಶುನಕ ಕಾಟವೂ, ಶುನಕ ಕಾಟವಿಲ್ಲದಿದ್ದರೆ ಬೀದಿ ಶುನಕ ಕಾಟವೂ, ಯಾವುದೂ ಇಲ್ಲದಿದ್ದರೆ ಕೈಯೊಡ್ಡುವ ಪೊಲೀಸರ ಕಾಟವೂ ದೊರೆಯಲಿದೆ. ಮದುವೆಯಾಗದಿದ್ದರೆ ಮತ್ತು ಸರಿಯಾದ ವಧು-ವರರನ್ನು ನೋಡಿಟ್ಟಿದ್ದರೆ, ಕೊನೆಯದಾಗಿ ವಿವಾಹ ನಿಶ್ಚಿತಾರ್ಥವಾಗಿದ್ದರೆ ಮತ್ತು ವಿವಾಹವಾಗುವುದು ಖಚಿತವಾಗಿದ್ದರೆ ವಿವಾಹಯೋಗವಿದೆ.

Thursday, June 12, 2008

ಗಾಳ ಹಾಕುವ ಕೋತಿಗಳ ಪತ್ತೆ: ಬೊ.ರ. ನಾಪತ್ತೆ!

(ಬೊಗಳೂರು ಗಾಳಗಾರಿಕೆ ಬ್ಯುರೋದಿಂದ)
ಬೊಗಳೂರು. ಜೂ.12- ಬೊಗಳೂರಿನ ವಿಶೇಷವಾಗಿ ಬೊಗಳೆ ರಗಳೆ ಬ್ಯುರೋದ ಮಂದಿ ತಲೆಮರೆಸಿಕೊಳ್ಳಲು ಸಿದ್ಧತೆ ನಡೆಸಿದ್ದಾರೆ. ಅವರಿಗೆಲ್ಲ ಮೀನು ಹಿಡಿಯಲು ತಿಳಿದಿರುವುದೇ ಇದಕ್ಕೆ ಪ್ರಧಾನ ಕಾರಣವಾಗಿದೆ.

ಮೀನು ಹಿಡಿಯಲು ತಿಳಿದಿರುವ ಮಂಕಿಗಳನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ ಎಂದು ಇಲ್ಲಿ ವರದಿ ಪ್ರಕಟವಾಗಿರುವ ಬೆನ್ನಿಗೇ ಬೊಗಳೆ ರಗಳೆ ಏಕ ಸದಸ್ಯ ಬ್ಯುರೋದ ಸಮಸ್ತ ಸಿಬ್ಬಂದಿಗಳು ಪತರಗುಟ್ಟಲಾರಂಭಿಸಿದ್ದರು. ಮಾತ್ರವಲ್ಲದೆ, ಈ ಅಜ್ಞಾನಿಗಳು ತಮ್ಮನ್ನೇ ಪತ್ತೆ ಹಚ್ಚಿರಲೂಬಹುದೇ ಎಂಬ ಶಂಕೆಯಿಂದ ಪರಾರಿಯಾಗಲು, ನಾಪತ್ತೆಯಾಗಲು, ತಲೆಮರೆಸಿಕೊಳ್ಳಲು, ಅಡಗಿ ಕೂರಲು... ಇತ್ಯಾದಿ ಎಲ್ಲದಕ್ಕೂ ಸಿದ್ಧತೆಗಳನ್ನು ಮಾಡತೊಡಗಿದ್ದಾರೆ ಎಂದು ನಿಗೂಢ ರಹಸ್ಯ ತಾಣವೊಂದರಿಂದ ಬ್ಯುರೋದ ವರದ್ದಿಗಾರರು ಎಸ್ಎಂಎಸ್ ಮೂಲಕ ವರದಿ ಕಳುಹಿಸಿದ್ದಾರೆ.

ಈ ಕುರಿತು ತೀವ್ರ ಸಂಚೋದನೆ ಕೈಗೊಂಡ ಬೊ.ರ., ಹಲವಾರು ಚಿತ್ರ ವಿಚಿತ್ರವಲ್ಲದ, ಸಾಮಾನ್ಯ ಸಂಗತಿಗಳನ್ನೆಲ್ಲಾ ಬಯಲಿಗೆಳೆದಿದೆ. ಇದೇನೂ ಹೊಸ ಸಂಚೋದನೆಯಲ್ಲ. ಈ ಹಿಂದೆಯೇ ನಮ್ಮ ಜಾರಕಾರಣಿಗಳು ಗಾಳ ಹಾಕಿ ಮೀನು ಹಿಡಿಯುತ್ತಿರುವುದನ್ನು ಕರಗತ ಮಾಡಿಕೊಂಡು, ಬೇರೆಯವರಿಗೂ ಅದನ್ನು ಕಲಿಸುವಷ್ಟರ ಮಟ್ಟಿಗೆ ಪ್ರಾವೀಣ್ಯ ಸಾಧಿಸಿದ್ದಾರೆ. ಇದರ ಬಗ್ಗೆ ನೂರಾರು ವರ್ಷಗಳ ಹಿಂದೆಯೇ ಬೊಗಳೆ ರಗಳೆ ಬ್ಯುರೋ ಇಲ್ಲಿ ವರದಿ ಮಾಡಿತ್ತು ಎಂದು ನಮ್ಮ ಸೊಂಪಾದಕರು ಚಿರಸ್ಮರಣೆ ಮಾಡಿಕೊಂಡಿದ್ದಾರೆ.

ಇದೀಗ ಕರ್ನಾಟಕದಲ್ಲಿ ನಾಟಕಗಳ ತಂಡಕ್ಕೆ ಕೊಂಚ ವಿರಾಮ ಸಿಕ್ಕಂತೆ ಕಂಡುಬಂದರೂ, ವಿರಾಮದಲ್ಲಿ ಬೇಸರ ಕಳೆಯುವುದಕ್ಕಾಗಿ ಗಾಳಗಾರಿಕೆ, ಮೀನುಗಾರಿಕೆ ಇತ್ಯಾದಿ ಎಲ್ಲ ಸೌಲಭ್ಯಗಳೂ ಇವೆ. ಹೀಗಾಗಿ ಬಿಜ್ಜೆಪ್ಪಿ ಸರಕಾರ ಸ್ಥಿರವಾಗಿರುತ್ತದೆ ಎಂದು ತೋರಿಕೆಗೆ ಕಂಡು ಬಂದರೂ 6 ಮೀನುಗಳು ನೀರಿನಿಂದ ಹೊರ ತೆಗೆದಂತೆ ಆಗಾಗ್ಗೆ ಚಡಪಡಿಸುತ್ತಲೇ ಇವೆ. ಅವುಗಳಿಗೆ ಎಲ್ಲಿ ಒಳ್ಳೆಯ ನೀರು ಸಿಗುತ್ತದೋ ಅಲ್ಲಿಗೇ ಮತ್ತೆ ಹಾರಿದರೆ ಆಶ್ಚರ್ಯವೇನಿಲ್ಲ ಎಂಬ ಕಾರಣಕ್ಕೆ, ಅಧಿಕಾರಕ್ಕೇರಲು ಸಾಧ್ಯವಾಗದೆ ಚಡಪಡಿಸುತ್ತಿರುವವರು ಈ ಮೀನುಗಳನ್ನು ಹಿಡಿಯಲು ಗಾಳ ಹಾಕುತ್ತಲೇ ಇರುತ್ತಾರೆ.

ಬಹುಶಃ ಅಜ್ಞಾನಿಗಳು ಇವರನ್ನೂ ಪತ್ತೆ ಮಾಡಿರಬಹುದೇ? ಎಂಬುದು ಎಲ್ಲರ ಶಂಕೆಗೆ ಕಾರಣವಾಗುವ ಬೊ.ರ.ಕ್ಕೇ ಮೂಡಿರುವ ಶಂಕೆಗಳಲ್ಲೊಂದಾಗಿದೆ. ತನಿಖೆ ನಡೆಯುತ್ತದೆ.

Monday, June 09, 2008

ಅರಿವಿಲ್ಲದೆ ಡೈವರ್ಸ್: ಹೊಸ ಉದ್ಯೋಗಾವಕಾಶ

(ಬೊಗಳೂರು ನಿರುದ್ಯೋಗ ನಿವಾರಣಾ ಬ್ಯುರೋದಿಂದ)
ಬೊಗಳೂರು, ಜೂ.9- ಗಂಡ-ಹೆಂಡಿರಿಗೆ ಗೊತ್ತಿಲ್ಲದೆಯೇ ಡೈವರ್ಸ್ ಮಾಡಿಸುವ ದಂಧೆಯೊಂದು ದೇಶದಲ್ಲಿ ಶುರುವಾಗಿದ್ದು, ಹೆಚ್ಚು ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುತ್ತಾ, ನಿರುದ್ಯೋಗ ನಿವಾರಣೆಯಲ್ಲಿ ಪ್ರಧಾನ ಪಾತ್ರ ವಹಿಸುತ್ತಿರುವ ಪ್ರಸಂಗ ಇಲ್ಲಿ ವರದಿಯಾಗಿದೆ.

ಇದನ್ನು ಸಮರ್ಥಿಸಿಕೊಂಡಿರುವ 'ಡೈವರ್ಸ್ ಅನಾನಿಮಸ್' ಎಂಬ ಸಂಸ್ಥೆಯು, ಡೌರಿಗೂ ಡೈವರ್ಸಿಗೂ ಯಾವತ್ತೂ ಆತ್ಮೀಯ ಸಂಬಂಧವಿರುತ್ತದೆ. ಹೀಗಾಗಿ ಡೌರಿಯಲ್ಲಿ ಸಿಲುಕಿಕೊಳ್ಳಲು ಇಚ್ಛಿಸದವರು ಡೈವರ್ಸ್ ಎಂಬ ಕೋರ್ಸನ್ನು ಆರಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದೆ.

ಡೌರಿಗಿಂತಲೂ ಡೈವರ್ಸ್ ಹೇಗೆ ವಿಭಿನ್ನ ಎಂದು ಕೇಳಲಾದಾಗ, ಡೌರಿಯಲ್ಲಿ ಹರಾಸ್ಮೆಂಟ್ ಎಲ್ಲಾ ಇರುತ್ತದೆ. ಗಂಡ ಹೆಂಡಿರಿಗೆ ಜಗಳ, ಮಗು ಮೂಲೆಗುಂಪಾಗುತ್ತದೆ. ಆಮೇಲೆ ಈ ಜಗಳವು ಭಾವನಾತ್ಮಕವಾಗಿ ಮನಸ್ಸು (ಇದ್ದರೆ) ಹಿಂಡುತ್ತದೆ. ಉಭಯ ಬಣದವರಿಗೂ ತೊಂದರೆಯೇ ತೊಂದರೆ. ಆದರೆ ಈ ರೀತಿಯ ಡೈವರ್ಸಿನಿಂದ ಯಾರಿಗೂ ಯಾವುದೇ ಮಾನಸಿಕ ತಾಕಲಾಟ-ಪೀಕಲಾಟಗಳಿರುವುದಿಲ್ಲ. ಯಾರಿಗೂ ಏನೂ ಆಗಿಯೇ ಇಲ್ಲ ಎಂಬಂತಹ ಸ್ಥಿತಿ ಇರುತ್ತದೆ. ಇಲ್ಲಿ ನೋವು-ಸಿಟ್ಟು-ಸೆಡವುಗಳಿರುವುದಿಲ್ಲ ಎಂದು ಸಂಸ್ಥೆಯ ರೂವಾರಿಗಳೂ, ಇಪ್ಪತ್ತು ಬಾರಿ ಡೌರಿ ತೆಗೆದುಕೊಂಡು, ಇಪ್ಪತ್ತೇಳು ಬಾರಿ ಡೈವರ್ಸ್ ನೀಡಿ ವಿಶ್ವ ದಾಖಲೆ ಸ್ಥಾಪನೆಗೆ ಪ್ರಯತ್ನಿಸುತ್ತಿರುವ ಡೌರು ಕುಮಾರ್ ಎಂಬವರು ತಿಳಿಸಿದ್ದಾರೆ.

ಎಷ್ಟೇ ಆದರೂ, ಇದು ಬೊಗಳೆಯು ಸ್ಪಾಂಟೇನಿಯಸ್ ಆಗಿ ಡೈವರ್ಸ್ ಪಡೆಯಲು ಹಲವು ವರ್ಷಗಳ ಹಿಂದೆ ಪತ್ತೆ ಹಚ್ಚಿದ್ದ ಸ್ಪೂನ್‌-ಟೇನಿಯಸ್ ಡೈವರ್ಟಿನ್ ಎಂಬ ಟೂಲ್‌ನಷ್ಟು ಪ್ರಭಾವ ಬೀರುವುದಿಲ್ಲ ಎಂದು ಬೊಗಳೆ ಸಂಚೋದನಾ ಬ್ಯುರೋ ಕಂಡುಕೊಂಡಿದೆ.

Friday, June 06, 2008

ಪೆಟ್ರೋಲಿಗೆ ಬೆಂಕಿ ಹಚ್ಚಿ ಬೊಗಳೆಗೇ ಸೆಡ್ಡು!

(ಬೊಗಳೂರು ಬೊಗಳೆ ಬ್ಯುರೋದಿಂದ)
ಬೊಗಳೂರು, ಜೂ.6- ಇವರೇಕೆ ಬೊಗಳೆಗೆ ಸೆಡ್ಡು ಹೊಡೆಯುತ್ತಿದ್ದಾರೆ? ಏನಾದರೂ ಬೊಗಳೆ ರಗಳೆ ಬ್ಯುರೋವನ್ನು ಪೆಟ್ರೋಲ್ ಹಾಕಿ ಸುಟ್ಟುಬಿಡುವ ಹುನ್ನಾರವೇ ಎಂದು ನಮ್ಮ ಏಕ ಸದಸ್ಯ ಬ್ಯುರೋದ ಎಲ್ಲರೂ ಬಂದು ಸೊಂಪಾದಕರಲ್ಲಿ ಆತಂಕ ತೋಡಿಕೊಂಡ ಹಿನ್ನೆಲೆಯನ್ನು ಶೋಧಿಸಲಾಯಿತು.

ನೋಡಿದರೆ ಆಗಲೇ ಎಲ್ಲಾ ಕಡೆ ತೈಲ ಬೆಲೆ ಏರಿಕೆಯ ಬೆಂಕಿಗೆ ಪೆಟ್ರೋಲ್ ಸುರಿಯಲಾಗುತ್ತಿದೆ. ಪೆಟ್ರೋಲ್ ಬೆಲೆ ಏರಿಕೆಯಿಂದ ಉಂಟಾಗುವ ಸಾಧ್ಯಾಸಾಧ್ಯತೆಗಳ ಬಗ್ಗೆ ಈಗಾಗಲೇ ಹಲವು ಬಾರಿ ನಮ್ಮ ಬ್ಯುರೋ ಬೊಗಳೆ ಬಿಟ್ಟಿದ್ದು, ಈ ಜನನಾಯಕರು ಮತ್ತು ದನ-ನಾಯಿ-ಕರುಗಳು ಎಲ್ಲಾ ಸೇರಿಕೊಂಡು, ಜನತೆಯ ಹಿತ ಕಾಯದಿರುವ ನಿರ್ಧಾರಗಳನ್ನೆಲ್ಲಾ ಕೈಗೊಳ್ಳುತ್ತಾ, ಮತ್ತೆ ಮತ್ತೆ ಇದನ್ನೇ ಬೊಗಳೆ ಬಿಡುತ್ತಿದ್ದಾರೆ.
ಈ ಬೊಗಳೆಗಳೇನು ಅಂತ ಕೂಲಂಕಷವಾಗಿ ನೋಡಿದರೆ :

* ನಾವು ದೇಶಾದ್ಯಂತ ಪ್ರತಿಭಟನೆ ನಡೆಸುತ್ತೇವೆ, ಬೆಂಬಲ ಹಿಂತೆಗೆಯುತ್ತೇವೆ: ಎಡಪಕ್ಷಗಳ ಬೊಗಳೆ

* ಬೆಲೆ ಇಳಿಸುವವರೆಗೂ ಹೋರಾಟ: ಪ್ರತಿಪಕ್ಷಗಳ ಬೊಗಳೆ ಘೋಷಣೆ

* ನಾವು ಬೀದಿಗಿಳಿದು ಹೋರಾಡುತ್ತೇವೆ, ಪೆಟ್ರೋಲ್ ಬೆಲೆ ಇಳಿಸುವವರೆಗೆ ವಿರಮಿಸುವುದಿಲ್ಲ: ಎಲ್ಲ ಅಂಗ- ಅನಂಗ ಪಕ್ಷಗಳಿಂದ ಬೊಗಳೆ ಘೋಷಣೆ

* ಹಣದುಬ್ಬರಕ್ಕೆ ಕಡಿವಾಣ ಅತ್ಯಗತ್ಯ, ಅದನ್ನು ಸಾಧಿಸಿಯೇ ಸಿದ್ಧ: ಮಾನ್ಯ ನಿಧಾನಿ ಘೋಷಣೆ

* ಆಹಾರ ವಸ್ತುಗಳು ಸಾಕಷ್ಟು ಸ್ಟಾಕ್ ಇವೆ, ಬೆಲೆ ಏರಲು ಬಿಡುವುದಿಲ್ಲ: ಆಹಾರ ಸಚಿವರ ಬೊಗಳೆ ಘೋಷಣೆ

* ಕಾಂಗ್ರೆಸ್ ಕಾ ಹಾತ್ ಆಮ್ ಆದ್ಮೀ ಕಾ ಸಾಥ್! --- (ಆಮ್ ಆದ್ಮೀ ಕೇ ಗಲೇ ಕೇ ಊಪರ್?)

* ಹಣದುಬ್ಬರಕ್ಕೆ ಕಡಿವಾಣ ಹಾಕಲು ಹಾಗೆ ಮಾಡಬೇಕು, ಹೀಗೆ ಮಾಡಬೇಕು: ಪಿತ್ತ ಸಚಿವರು

* ಬಡವರ ನಿರ್ಮೂಲನೆ ಅತ್ಯಗತ್ಯ: ಸರಕಾರ ಘೋಷಣೆ (ಖಂಡಿತಾ ಬೊಗಳೆಯಂತೆ ತೋರುವುದಿಲ್ಲ!)

* ದೇಶದಲ್ಲಿ ಬಡವರೇ ಇಲ್ಲದಂತೆ ಮಾಡುತ್ತೇವೆ: ಮತ್ತೊಂದು ಸರಕಾರದ ಘೋಷಣೆ (ಡಿಟ್ಟೋ ಮೇಲಿನದೇ!)

* ಮಂತ್ರಿಗಳು, ಮಾಗಧರು, ಅಧಿಕಾರಿಗಳು ಐಷಾರಾಮ ಕಡಿಮೆ ಮಾಡಬೇಕು, ವಿದೇಶ ಪ್ರವಾಸ ಕಡಿಮೆ ಮಾಡಬೇಕು: ಮಾನ್ಯ ನಿಧಾನಿ ಘೋಷಣೆ

* ಬಡವರ ತೆರಿಗೆ ಹಣದಲ್ಲಿ ಐಷಾರಾಮಿ ಜೀವನ ಮಾಡುತ್ತಾ, ಗೂಟದ ಕಾರಿಗೊಂಡು, ಕೈಗೊಂದು ಆಳುಗಳೊಂದಿಗೆ ಸೇವೆ ಮಾಡಿಸಿಕೊಳ್ಳುತ್ತಾ, ಜೇಬು ತುಂಬಿಸಿಕೊಳ್ಳುತ್ತಿರುವವರನ್ನು ದೇಶದಿಂದಲೇ ಹೊಡೆದೋಡಿಸಬೇಕು: ಯಾರು ಹೇಳಿದ್ದು ಅಂತ ಯೋಚಿಸಿ?....
ಉತ್ತರ: ಭವ್ಯ ಭಾರತದ ನಗಣ್ಯವಾಗಿಬಿಟ್ಟಿರುವ ಬಡ ಪ್ರಜೆ!

Wednesday, June 04, 2008

Cheap Minister ಬರ್ತ್‌ಡೇ ಗಿಫ್ಟ್!

(ಬೊಗಳೂರು cheap ಬ್ಯುರೋದಿಂದ)

ಬೊಗಳೂರು, ಜೂ.4- Chief ಆಗಬೇಕಿದ್ದ ವಯೋವೃದ್ಧರೂ, ಅಜ್ಞಾನವೃದ್ಧರೂ ಆಗಿರುವ ತಮಿಳುನಾಡು ಮುಖ್ಯಮಂತ್ರಿಗಳು 85 ವರ್ಷ ಪೂರೈಸಿದ ದಿನ Cheap ಆಗಿ ಪರಿಗಣಿಸಲ್ಪಟ್ಟಿದ್ದಾರೆ. ಇದಕ್ಕೆ ಕಾರಣ, ಎಂದೂ ಕೂಡ ಏರುತ್ತಲೇ ಇರುವ, ಯಾವುದೇ ವಸ್ತುಗಳ ಬೆಲೆ ಇಳಿಕೆಯಾದರೂ ಇಳಿಯದೇ ಇರುವ ಹೋಟೆಲ್ ತಿಂಡಿಗಳ ಬೆಲೆಯನ್ನು Cheap ಮಾಡಿಸಿದ್ದು.

ಈಗ ಚೀಪ್ ಮಿನಿಸ್ಟರು ಇಡ್ಲಿಯ ಬೆಲೆ ಇಳಿಸಿರುವುದರಿಂದ ಅವರು ಇನ್ನು ಮುಂದೆ ಕೇಕು ಕತ್ತರಿಸಿ ಬರ್ತ್ ಡೇ ಆಚರಿಸಬಾರದು. ಏನಿದ್ದರೂ ಇಡ್ಲಿ ಕತ್ತರಿಸಿಯೇ ಹುಟ್ಟು ಹಬ್ಬ ಆಚರಿಸಬೇಕು. ಯಾಕೆಂದರೆ, ಕೇಕು ಎನ್ನುವುದು ತಮಿಳು ಸಂಸ್ಕೃತಿಗೆ ವಿರೋಧವಾದದ್ದು. ಇಡ್ಲಿ ದೋಸೆಯೇ ತಮಿಳು ಭಾಷೆಯ ಬ್ರ್ಯಾಂಡ್ ಎಂಬ ಕೋಲಾಹಲವೂ ತಮಿಳುನಾಡಿನಿಂದ ಕೇಳಿಬರುತ್ತಿದೆ.

ಆದರೆ ಬರೇ ಇಡ್ಲಿ ಕತ್ತರಿಸಿ ಸುಮ್ಮನಿರಬೇಕಾದ ಅವರು, ಸಮುದ್ರದ ಸೇತುವನ್ನೇ ಕತ್ತರಿಸಿ ಬರ್ತ್ ಡೇ ಆಚರಿಸುತ್ತೇನೆ ಎಂದು ಹೇಳಿರುವುದು ಮಾತ್ರ ಹಲವರ ಹುಬ್ಬುಗಳು ತೂಗುಸೇತುವೆಯ ಮಾದರಿಯಲ್ಲಿ ವಕ್ರವಾಗಿ ಮೇಲೇರಲು ಕಾರಣವಾಗಿದೆ.

ಇದರ ನಡುವೆಯೇ, ಕೇಕಿನ ಬದಲು ಹೊಗೇನಕಲ್ಲನ್ನೂ ಕತ್ತರಿಸುತ್ತೇನೆ, ತಮಿಳುನಾಡಿನ ಅಧಿಕಾರವನ್ನೂ ಮಕ್ಕಳಾದ ಅಳಗಿರಿ-ಸ್ಟಾಲಿನ್‌ಗೆ ಕತ್ತರಿಸಿ ಹಂಚುತ್ತೇನೆ, ಕುರಿಯನ್ನೂ ಕತ್ತರಿಸಿ ಬರ್ತ್‌ಡೇ ಸೆಲೆಬ್ರೇಟ್ ಮಾಡುತ್ತೇನೆ ಎಂದೆಲ್ಲಾ ಘೋಷಿಸಿರುವುದಾಗಿ ಯಾರೂ ವರದಿ ಮಾಡಿಲ್ಲ.

ಆದರೆ ಇದೇ ವರದಿಯಲ್ಲಿ, ತಮಿಳುಕಾಡಿನಲ್ಲಿದ್ದುಕೊಂಡು ಬಾವಿಯೊಳಗಿನ ಕಪ್ಪೆಯಂತೆ ವಟಗುಟ್ಟಿರುವ ಅವರು, ನಮಗೆ ಒಳ್ಳೆಯ ನೆರೆಹೊರೆಯವರಿಲ್ಲ. ನೆರೆ ಬರುತ್ತದೆ, ಅದರ ಜೊತೆಗೆ ಹೊರೆಯೂ ಇದೆ. ಹೀಗಾಗಿ ತಮಿಳರನ್ನು ತಮಿಳರೇ ರಕ್ಷಿಸಿಕೊಳ್ಳಬೇಕಷ್ಟೆ ಎಂಬರ್ಥದ ಮಾತುಗಳನ್ನು ಆಡಿರುವುದು ಬೊಗಳೆಯ ಸುದ್ದಿಗೆ ಗ್ರಾಸವಾಗಿದೆ.

Tuesday, June 03, 2008

ಇನ್ನು ಮುಂದೆ ಒಳಉಡುಪುಗಳನ್ನೂ ಧರಿಸಬಹುದು!

(ಬೊಗಳೂರು ಬಿಚ್ಚೋಲೆ ಬ್ಯುರೋದಿಂದ)
ಬೊಗಳೂರು, ಜೂ.3- ಇನ್ನು ಯಾವುದೇ ಎಗ್ಗಿಲ್ಲದೆ ಮಂದಿರಗಳಿಗೆ ಪ್ರವೇಶಿಸಬಹುದು ಎಂಬುದು ಈಗ ಖಚಿತವಾಗಿದೆ. ಒಳಉಡುಪುಗಳನ್ನು ಕೂಡ ಧರಿಸಬಹುದು ಎಂದು ತೀರ್ಪು ನೀಡಿದ ಹಿನ್ನೆಲೆಯಲ್ಲಿ ಸಂಪ್ರದಾಯವಾದಿಗಳು ಬೊಗಳೆ ರಗಳೆ ಕಚೇರಿಯೆದುರು ಬಂದು ನಿಟ್ಟುಸಿರುಬಿಟ್ಟಿದ್ದಾರೆ.

ದುಡ್ಡು ಲೆಕ್ಕ ಮಾಡುವಾಗ ಕೆಲವರು ಇದೇ Underwear ಅನ್ನು Overweight ಆಗಿಸುವ ಮೂಲಕ ತಮ್ಮ ಜೇಬನ್ನೂ ಹರಿಯುವಷ್ಟರ ಮಟ್ಟಿಗೆ ತುಂಬಿಸಿಕೊಳ್ಳುತ್ತಿದ್ದರು. ಹೀಗಾಗಿ ದೇವಳದ ಆಡಳಿತವು ಎಲ್ಲರೂ ಎಲ್ಲವನ್ನೂ ಬಿಚ್ಚಿಹಾಕಿ ಹಣ ಲೆಕ್ಕ ಮಾಡಲು ಬರಬೇಕು ಎಂದು ಹೇಳಿತ್ತು. ಅದು... ಅತ್ತ ಇತ್ತ ಅಡ್ಡಾಡುತ್ತಿದ್ದ ಬೊಗಳೂರಿನ ಮಂದಿಗೆ ಇರಿಸುಮುರಿಸಿಗೆ ಕಾರಣವಾದ ಹಿನ್ನೆಲೆಯಲ್ಲಿ ಅನ್ಯಾಯಾಲಯವು ಈ ಕ್ರಮ ಕೈಗೊಂಡಿರುವುದಾಗಿ ಮೂಲಗಳು ವರದ್ದಿ ಮಾಡಿವೆ.

ಒಳಉಡುಪುಗಳನ್ನು ಕೂಡ ಧರಿಸಬಹುದು ಎಂಬ ಈ ತೀರ್ಪಿನಿಂದ ಸಂತಸಗೊಂಡಿರುವ ಬೊಗಳೂರಿನ ಜನತೆ, ಒಳಉಡುಪುಗಳು ಕೂಡ ಧರಿಸಲು ಯೋಗ್ಯವಾದುದು ಎಂದು ಜ್ಞಾನೋದಯ ಮಾಡಿಸಿದ ಪ್ರಕರಣಕ್ಕೆ ಅಭಿನಂದಿಸಿದ್ದಾರೆ.

ಆದರೆ, ಈ ತೀರ್ಪು ಸಿನಿಮಾ ನಟಿಯರಿಗೆ ಅನ್ವಯವಾಗುವುದಿಲ್ಲ ಎಂದು ಬಿಚ್ಚೋಲೆ ನಟೀಮಣಿಯರ ಸಂಘದ ಅಧ್ಯಕ್ಷೆ ಗೌರಮ್ಮ ಅವರು ತುರ್ತು ಪಾನ-ಪತ್ರಿಕಾಗೋಷ್ಠಿ ಕರೆದು ಘೋಷಿಸಿದ್ದಾರೆ.

ಎಂಜಿನ್ ಇಲ್ಲದ ರೈಲು: ಬ್ರೇಕಿಂಗ್ ನ್ಯೂಸ್ ಅಲ್ಲವೆಂದ ಬೊ.ರ.

[ಬೊಗಳೂರು ಪಟ್ಟೆ-ರಹಿತ ರೈಲು ಬ್ಯುರೋ] ಬೊಗಳೂರು: ಆಫ್‌ಲೈನ್ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯೊಂದು ಆನ್‌ಲೈನ್ ಸಂಪಾದಕರ ಕಣ್ಣು ಕುಕ್ಕಿದ್ದು, ಎಂಜಿನ್ ಇಲ್ಲದೆ...