ಬೊಗಳೆ ರಗಳೆ

header ads

ಹಣಗೊಬ್ಬರ ಪ್ರಭಾವವೂ ರಸಗೊಬ್ಬರ ಅಭಾವವೂ!

(ಬೊಗಳೂರು ಗೊಬ್ಬರ ಬ್ಯುರೋದಿಂದ)
ಬೊಗಳೂರು, ಜೂ.25- ರಾಜ್ಯದಲ್ಲಿ ರಸಗೊಬ್ಬರದ ಅಭಾವ ಮತ್ತು ಕೇಂದ್ರದಲ್ಲಿ ಹಣಗೊಬ್ಬರದ ಪ್ರಭಾವ ಹೆಚ್ಚಾಗುತ್ತಿರುವುದಕ್ಕೂ ಪರಸ್ಪರ ಸಂಬಂಧವಿದೆ ಎಂಬುದನ್ನು ಪತ್ತೆ ಹಚ್ಚಿರುವ ಬೊಗಳೆ ರಗಳೆ ಬ್ಯುರೋ, ರೈತರ ಆತ್ಮಹತ್ಯೆಗೂ ಕಾರಣಗಳನ್ನು ಪತ್ತೆ ಹಚ್ಚಿದೆ.

ಆದರೆ ಬೊ.ರ. ಬ್ಯುರೋವೇ ಈ ಕಾರಣಗಳನ್ನು ಪತ್ತೆ ಹಚ್ಚಿರುವುದು ಪತ್ರಿಕೋದ್ಯಮಕ್ಕೆ ತಟ್ಟಿದ ಕಳಂಕ ಮತ್ತು ಈ ದೇಶದ ದುರಂತ ಎಂದು ಜಾರಕಾರಣಿಗಳೆಲ್ಲಾ ಬಾಯಿಗೆ ಬಂದಂತೆ ಹೊಗಳುತ್ತಿರುವುದಾಗಿ ನಮ್ಮ ವಿರೋಧೀ ಪತ್ರಿಕೆಗಳ ರದ್ದಿಗಾರರು ಕಳುಹಿಸಿದ ಫ್ಯಾಕ್ಸ್ ಬೊ.ರ. ಕಚೇರಿಗೆ ತಲುಪಿದೆ.

ಕೇಂದ್ರದಲ್ಲಿರುವ ರಾಶಿಬಿದ್ದು ಕೊಳೆಯುತ್ತಿರುವ ಗೊಬ್ಬರವನ್ನು ಎಲ್ಲಾದರೂ ರಾಜ್ಯಕ್ಕೆ ಕಳುಹಿಸಿಕೊಟ್ಟರೆ, ಇಲ್ಲಿನ ರೈತರು ಆತ್ಮಹತ್ಯೆ ಮಾಡಿಕೊಳ್ಳುವುದಾದರೂ ಹೇಗೆ, ಆ ಬಳಿಕ, ರೈತರ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಸರಕಾರಕ್ಕೆ ರೈತ-ವಿರೋಧಿ ಅಂತ ಹಣೆಪಟ್ಟಿ ಕಟ್ಟುವುದಾದರೂ ಹೇಗೆ ಎಂಬುದು ಯೋಚನೆಯಾಗಿತ್ತು.

ಕೇಂದ್ರದ ಮೇಲೆ ಹಣಗೊಬ್ಬರ ಹೆಚ್ಚಾಗಿದ್ದಕ್ಕಾಗಿ ರಾಜ್ಯದವರು ಕೇಂದ್ರೀಯರನ್ನು ಬೈದಾಡಿದರೆ, ಕೇಂದ್ರದವರು ರಸಗೊಬ್ಬರ ಕಡಿಮೆಯಾಗಿದ್ದಕ್ಕಾಗಿ ರಾಜ್ಯದ ಮೇಲೆ ಗೊಬ್ಬರರಹಿತ ಕೆಸರು ಎರಚಬಹುದು. ಈ ತಂತ್ರಗಳಿಂದಾಗಿಯೇ ಬಡ ರೈತ ಅತಂತ್ರನಾಗಿದ್ದು, ರಸಗೊಬ್ಬರವೆಲ್ಲವೂ ಎದುರು ಪಕ್ಷದವರ ದಲ್ಲಾಳಿಗಳ ಕೈಯಲ್ಲಿ ಸುರಕ್ಷಿತವಾಗಿ ಉಬ್ಬರವಾಗುತ್ತಿವೆ ಎಂಬುದನ್ನು ಪತ್ತೆ ಹಚ್ಚಲು ಬೊ.ರ.ಗೂ ಸಾಧ್ಯವಾಗಿಲ್ಲ.

ಇನ್ನು ಆತ್ಮಹತ್ಯೆಗೆ ಕಾರಣವೆಂದರೆ, ರಸಗೊಬ್ಬರದ ಬದಲು ಹಣಗೊಬ್ಬರ ಹೆಚ್ಚಾಗಿದ್ದಲ್ಲದೆ, ರಸಗೊಬ್ಬರ ಅಂಗಡಿಗಳಲ್ಲಿ ಕೇವಲ ಕೀಟನಾಶಕಗಳು ಮಾತ್ರವೇ ದೊರೆಯುತ್ತಿದ್ದುದು ಎಂಬುದನ್ನು ಯಾರೂ ಪತ್ತೆ ಹಚ್ಚದಿದ್ದರೂ ಬೊ.ರ. ಮಾತ್ರ ವರದಿ ಮಾಡಿದೆ.

ಆದರೂ, ಕೀಟನಾಶಕಗಳು ಕೂಡ ಕಳಪೆಯಾಗಿದ್ದು ಮತ್ತು ಕಲಬೆರಕೆಯಿಂದ ಕೂಡಿದ್ದ ಕಾರಣದಿಂದಾಗಿ ಕೀಟಗಳು ಸಾಯುವ ಬದಲು ಕೀಟಗಳ ಸಂಖ್ಯೆಯೇ ಹೆಚ್ಚಾಗತೊಡಗಿದ್ದು, ಬೆಳೆ ನಾಶವಾಗತೊಡಗಿದೆ ಎಂಬುದು ಬೊ.ರ. ಗಮನಕ್ಕೆ ಬಂದಿದೆ. ಇದೇ ಕಾರಣದಿಂದ ಈ ಕೀಟಗಳು ಗೊಬ್ಬರ ಕೊರತೆಗೆ ಅವರು ಕಾರಣ, ಇವರು ಕಾರಣ ಎಂಬುದನ್ನು ಸ್ವರಬದ್ಧವಾಗಿ ಝೇಂಕರಿಸುತ್ತಾ ಕಾಲ ಕಳೆಯುತ್ತಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು