Wednesday, July 30, 2008

ಪೊಲೀಸ್ ನಿಷ್ಕ್ರಿಯ ದಳ, ಸಾಕುನಾಯಿ ದಳ ಸ್ಥಾಪನೆ

(ಬೊಗಳೂರು ನಿಷ್ಕ್ರಿಯ ಬ್ಯುರೋದಿಂದ)
ಬೊಗಳೂರು, ಜು.೩೦- ಭಯೋತ್ಪಾದಕರನ್ನು ಮತ್ತು ಉಗ್ರವಾದವನ್ನು ಮಟ್ಟ ಹಾಕುವ ಪೊಲೀಸರ ಕ್ರಮವನ್ನು ಖಡಾಖಂಡಿತವಾಗಿ ಖಂಡಿಸಿರುವ ಅಖಿಲ ಭಾರತ ಓಟು ಓಲೈಕೆ ಪಕ್ಷವು, ಅಲ್ಲಲ್ಲಿ ಬಾಂಬ್ ಸ್ಫೋಟಿಸುತ್ತಾ, ರಕ್ತ ಪಾತ ಮಾಡುತ್ತಾ, ಕಾಶ್ಮೀರದಲ್ಲಿ ಸದಾ ಹಿಂಸಾಚಾರದಲ್ಲಿ ತೊಡಗುತ್ತಾ, ಬಾಂಬುಗಳ ಸಹಿತವಾಗಿ ಪತ್ತೆಯಾಗುತ್ತಿರುವ 'ಮತದಾರರನ್ನು' ಪತ್ತೆ ಹಚ್ಚುವುದಕ್ಕಾಗಿ ಪೊಲೀಸ್ ನಿಷ್ಕ್ರಿಯ ದಳಗಳನ್ನು ರಚಿಸುವ ಪ್ರಸ್ತಾಪ ಮುಂದಿಟ್ಟಿದೆ.

ಭಯೋತ್ಪಾದಕರನ್ನು ಪತ್ತೆ ಹಚ್ಚಿದರೆ ಮತ್ತು ಅವರನ್ನು ಬಂಧಿಸಿದರೆ, ಶೀಘ್ರವೇ ನಡೆಯಲಿರುವ ಚುನಾವಣೆಗಳಲ್ಲಿ ನಮಗೆ ಮತ ಹಾಕುವವರಾರು ಎಂಬ ಸಂದಿಗ್ಧತೆಗೆ ಸಿಲುಕಿರುವ ಅಭಾಓಓ ಪಕ್ಷ, ಪೊಲೀಸ್ ನಿಷ್ಕ್ರಿಯ ದಳದ ರೂಪು ರೇಷೆ ತಯಾರಿಸಿದೆ.

ಅದರ ಪ್ರಕಾರ, ಪೊಲೀಸ್ ನಿಷ್ಕ್ರಿಯ ದಳಕ್ಕೆ ನ್ಯೂಟನ್ ನಿಯಮ, ಐನ್‌ಸ್ಟೀನ್ ಸೂತ್ರ ಹಾಗೂ ದೇಶದ ಹೆಸರಾಂತ ಜಾರಕಾರಣ ವಿಜ್ಞಾನದ ವಿಶಿಷ್ಟ ಸೂತ್ರವನ್ನು ಕೂಡ ರೂಪಿಸಲಾಗಿದೆ.

ನ್ಯೂಟನ್ ನಿಯಮದ ಪ್ರಕಾರ, ಭಯೋತ್ಪಾದಕರು ದಾಳಿ ಮಾಡಲು ಅವಕಾಶ ಮಾಡಿಕೊಡಬೇಕು. ಆಗ ಭಯೋತ್ಪಾದಕರು ತಾವಾಗಿಯೇ ಬಲೆಗೆ ಬೀಳುವಂತಾಗುತ್ತದೆ. ಸಿಕ್ಕಿದರೆ 'ಯುರೇಕಾ' ಎನ್ನುತ್ತಾ, ಭಯೋತ್ಪಾದಕರನ್ನು ಹಿಂದಿಕ್ಕುವ ಭರದಲ್ಲಿ ಅವರನ್ನು ಅಲ್ಲೇ ಬಿಟ್ಟು ಓಡಬಹುದು.

ಐನ್‌ಸ್ಟೀನ್ ನಿಯಮದ ಪ್ರಕಾರ, ಬಾಂಬು ಇಡಲು ಬರುವ ಉಗ್ರಗಾಮಿಗಳನ್ನು ಬೆನ್ನಟ್ಟಬೇಕು. ಉಗ್ರರಿಗೆ ಓಡಿ ಓಡಿ ಸಾಕು ಸಾಕಾಗುವವರೆಗೂ ಓಡಿಸಬೇಕು. ಕೊನೆಗೆ ಆಯಾಸದಿಂದ ಅವರು ಬೀಳುತ್ತಾರೆ. ಆಗ ಶಕ್ತಿಗುಂದಿದ ಅವರನ್ನು (ನಮಗೆ ಶಕ್ತಿಯಿದ್ದರೆ) ಹಿಡಿಯುವುದು ಸುಲಭ.

ವಿಶಿಷ್ಟ ಮತ್ತು ವಿಶೇಷವಾದ ಜಾರಕಾರಣ ನಿಯಮದ ಪ್ರಕಾರ, ದಾಳಿ ನಡೆದಾಗ ಯಾರಾದರೊಬ್ಬರನ್ನು ಬಂಧಿಸಲೇಬೇಕಲ್ಲ... ಇದಕ್ಕಾಗಿ ಒಬ್ಬ ಮುಗ್ಧನನ್ನು ಬಂಧಿಸಿಡಬೇಕು. "ಅಯ್ಯೋ... ಬಿಟ್ಬಿಡಿ.... ನನ್ನೇನೂ ಮಾಡ್ಬೇಡಿ... ನಾನು ಉಗ್ರಗಾಮಿ ಅಂತ ಒಪ್ಪಿಕೊಳ್ತೀನಿ" ಅಂತ ಗೋಗರೆಯುವವರೆಗೂ ಚೆನ್ನಾಗಿ 'ಪೊಲೀಸ್ ಟ್ರೀಟ್‌ಮೆಂಟ್' ಕೊಟ್ಟಾಗ ನಮಗೊಬ್ಬ ಭಯೋತ್ಪಾದಕ ಸಿಕ್ಕಿದಂತಾಗುತ್ತದೆ!

ಇದರೊಂದಿಗೆ, ಬಾಂಬ್ ಪತ್ತೆಗೆ ಮತ್ತು ಅವುಗಳನ್ನಿರಿಸಿದವರ ಶೋಧಕ್ಕೆ ಶ್ವಾನ ದಳಗಳನ್ನು ಸುಖಾಸುಮ್ಮನೆ ದುಡಿಸಿಕೊಳ್ಳಲಾಗುತ್ತಿದೆ. ಅವುಗಳು ನಿಷ್ಠೆಗೆ ಹೆಸರಾಗಿರುವ ಪ್ರಾಣಿಗಳಾಗಿರುವುದರಿಂದ ಮತ್ತು ಅವುಗಳಿಗೆ ಯಾವುದೇ ಆಮಿಷ ನೀಡುವುದು ಸಾಧ್ಯವಿಲ್ಲ. ಅವುಗಳು ನಿಷ್ಪಕ್ಷಪಾತವಾಗಿ ಶೋಧನೆ ಮಾಡುತ್ತವೆಯಾದುದರಿಂದ, ನಮ್ಮ ಬಂಡವಾಳಗಳು ಹೊರಗೆ ಬರದಂತಾಗಲು, ಈ ಶ್ವಾನ ದಳಗಳಲ್ಲಿ ನಾಯಿಗಳ ಬದಲು ನಮ್ಮ ಪಕ್ಷದ ಮುಖಂಡರಿಗೇ ಅವಕಾಶ ನೀಡಬೇಕು ಎಂದೂ ಆಗ್ರಹಿಸಲಾಗಿದೆ. ಅದು ಶ್ವಾನದಳವೇ ಆಗಬೇಕೂಂತ ಇದ್ದರೆ, ಈ ಮುಖಂಡರು ತಮ್ಮ ಜೊತೆ ಮನೆಯಲ್ಲಿರುವ ಸಾಕುನಾಯಿಗಳನ್ನೂ ಒಯ್ಯುತ್ತಾರೆ ಎಂಬ ವಾಕ್ಯವನ್ನೂ ಈ ಪಕ್ಷವು ಸೇರಿಸಿದೆ.

Monday, July 28, 2008

ಕಂಡಕಂಡಲ್ಲಿ ಖಂಡನೆ: ತೀವ್ರತೆ ಅಳೆಯಲು ಭೂಕಂಪ ಮಾಪನ

(ಬೊಗಳೂರು ಕಂಡಲ್ಲಿ ಖಂಡನಾ ಬ್ಯುರೋದಿಂದ)
ಬೊಗಳೂರು, ಜು.28- ದೇಶದ ಭದ್ರತಾ ವ್ಯವಸ್ಥೆಯನ್ನು, ಪೋಟಾ ಕಾಯಿದೆ ರದ್ದುಪಡಿಸಿದ ಸರಕಾರದ ಭಯೋತ್ಪಾದನಾ ವಿರೋಧೀ ಕಾಯಿದೆಯ ಸಾಮರ್ಥ್ಯವನ್ನು ಅಳೆಯುವ ನಿಟ್ಟಿನಲ್ಲಿ ರಣಹೇಡಿ ಉಗ್ರರು ಟಿಫಿನ್, ಸೈಕಲು, ಬಸ್ಸು, ಆಸ್ಪತ್ರೆಗಳಲ್ಲಿ ಬಾಂಬ್ ಸ್ಫೋಟಿಸಿರುವುದಕ್ಕೆ ಜಾರಕಾರಣಿಗಳ ಸಮುದಾಯದಿಂದ ಖಂಡನೆಗಳ ಮಹಾಪೂರವೇ ಹರಿದುಬರುತ್ತಿದೆ.

ಈ ಖಂಡನೆಗಳೇ ಅಲ್ಲಲ್ಲಿ ಪಶ್ಚಾತ್ ಕಂಪನಗಳಂತೆ ಸ್ಫೋಟಿಸುತ್ತಿರುವುದರಿಂದ ಆತಂಕಗೊಂಡಿರುವ ಬೊಗಳೆ ರಗಳೆ ಬ್ಯುರೋ, ತಮ್ಮ ಪತ್ರಿಕೆಯಲ್ಲಿ ಈ ಖಂಡನೆಗಳನ್ನು ಪ್ರಕಟಿಸಲು ಸಾಧ್ಯವಾಗಲಾರದೆ ಚಡಪಡಿಸುತ್ತಿದೆ. ಆದರೆ ಈ ಬಗ್ಗೆ ಕ್ರಮ ಕೈಗೊಂಡಿರುವ ಸೊಂಪಾದ-ಕರು, ತೀವ್ರವಾಗಿ ಖಂಡಿಸಿದವರ ಹೇಳಿಕೆಯನ್ನು ಮಾತ್ರ ಪ್ರಕಟಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಈ ಕಾರಣಕ್ಕೆ ಖಂಡನೆಯ ತೀವ್ರತೆ ಎಷ್ಟೆಂಬುದನ್ನು ಅಳೆಯಲು ಭೂಗರ್ಭವತಿ ಶಾಸ್ತ್ರಜ್ಞರ ಮೊರೆ ಹೋಗಲಾಗಿದ್ದು, ಅವರು ನೀಡಿದ ಭೂಕಂಪ ಮಾಪನವನ್ನೇ ಈ ಖಂಡನೆಯ ತೀವ್ರತೆ ಅಳೆಯಲೂ ಉಪಯೋಗಿಸಲಾಗುತ್ತದೆ.

ಯಾರೂ ಏನೂ ಹೇಳದೆಯೇ ಮತ್ತು ಕೇಳದೆಯೇ ದೇಶದ ಮನೆ (=ಗೃಹದಲ್ಲಿರುವ) ಮಂತ್ರಿಗಳು, ಬೊಗಳೆಗೆ ಮಾತ್ರ ಪ್ರತಿಕ್ರಿಯೆ ನೀಡಿ, "ದೇಶ ಬಿಕ್ಕಟ್ಟಿನಲ್ಲಿದೆ. ದೇಶದ ಪ್ರಜೆಗಳ ರಕ್ಷಣೆಯು ಕೇಂದ್ರ ಸರಕಾರದ ಮತ್ತು ಗೃಹ ಇಲಾಖೆಯ ಜವಾಬ್ದಾರಿ ಅಂತ ಆ ರಾಜ್ಯಗಳು ನಮ್ಮ ಮೇಲೆ ಗೂಬೆ ಕೂರಿಸುವಂತಿಲ್ಲ. ಆಯಾ ರಾಜ್ಯಗಳೇ ಸೂಕ್ತ ಕ್ರಮ ಕೈಗೊಳ್ಳಲಿವೆ ಎಂಬ ಭರವಸೆ ನಮಗಿದೆ" ಅಂತ ಪ್ರತಿಕ್ರಿಯಿಸಿ, ಎದುರಿಗೇ ಇದ್ದ ಕೊಚ್ಚೆಗೆ ಕಲ್ಲೆಸೆದುಕೊಂಡಿದ್ದಾರೆ.

ಈ ಮಧ್ಯೆ, ಖಂಡನೆಯನ್ನು ತೀವ್ರವಾಗಿಸುವ, ಉಗ್ರವಾಗಿಸುವ, ಅತ್ಯುಗ್ರವಾಗಿಸುವ, ಅತ್ಯಂತ ಕಟುವಾಗಿಸುವ ಭರದಲ್ಲಿ ಜಾರಕಾರಣಿಗಳ ಬಾಯಿಂದ ಉದುರಿದ ಅಣಿಮುತ್ತುಗಳು ಇಂತಿವೆ:

* ದಯವಿಟ್ಟು ನಮಗೆ ರಕ್ಷಣೆ ನೀಡಿ: ಪೊಲೀಸ್ ಪಡೆ

* ನಮಗೆ ಓಟಿಯೂ ಕೊಡಬೇಕು, ಒಟಿನ ಹಕ್ಕೂ ನೀಡಬೇಕು: ಶ್ವಾನದಳ

* ರಕ್ಷಣೆ ನೀಡುವುದು ರಾಜ್ಯ ಸರಕಾರಗಳ ಜವಾಬ್ದಾರಿ, ಅವರು ಕೇಳಿದ್ದನ್ನು ನಾವು ಕೊಡಲು ರೆಡಿ: ಕೇಂದ್ರದ ಘನ ಗೃಹ ಮಂತ್ರಿ

* ಉಗ್ರರನ್ನು ಬಂಧಿಸಿದರೆ ಒಂದು ಸಮುದಾಯಕ್ಕೆ ನೋವಾಗುತ್ತದೆ, ಹೀಗಾಗಿ ಕೂಲಂಕಷವಾಗಿ ಪರಿಶೀಲಿಸಬೇಕಾಗುತ್ತದೆ: ಯುಪಿಎ

* ಭಯೋತ್ಪಾದಕರ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದನ್ನು ನಾವು ಸ್ವಾತಂತ್ರ್ಯ ಬಂದಂದಿನಿಂದಲೂ ಹೇಳುತ್ತಾ ಬಂದಿಲ್ಲವೇ? : ಕೇಂದ್ರ ಮಂತ್ರಿ ಪ್ರಶ್ನೆ

* ನಾವು ದಿನಾಲೂ ಉಗ್ರರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದೇವೆ (ಪ್ರತಿದಿನ ಖಂಡನಾ ನಿರ್ಣಯ ಹೊರಡಿಸಿ ಖಂಡಿಸುವ ಮೂಲಕ): ಕೇಂದ್ರ ಮಂತ್ರಿ

* ನಮಗೆ ಜನರ ಜೀವ ಮುಖ್ಯವೇ ಹೊರತು, ಉಗ್ರರಲ್ಲ. ಹೀಗಾಗಿ ಉಗ್ರರನ್ನು ನಾವೇನೂ ಹಿಡಿಯಲು ಹೋಗುವುದಿಲ್ಲ: ಕೇಂದ್ರ ಕಂತ್ರಿ

* ನಾವೂ ಉಗ್ರರನ್ನು ಹಿಡಿಯೋದಿಲ್ಲ, ಅವ್ರು ತಾನಾಗಿಯೇ ಸಿಕ್ಕಿ ಬೀಳ್ತಾರೆ: ನಿದ್ದೆಯಿಂದೆದ್ದ ಕಾನೂನು ಪಾಲಕ

* ನಾವಂತೂ ಭಯೋತ್ಪಾದಕರನ್ನು ಹಿಡಿಯೋದೇ ಇಲ್ಲ, ಯಾಕಂದ್ರೆ ಅವರನ್ನು ಬಿಡಿಸಲು ರಾಜಕಾರಣಿಗಳು ಹೆಣಗಾಡಿ ನಮ್ಮ ಮೇಲೇ ಕೋಮುವಾದ ಎಂಬ ಗೂಬೆ ಕೂರುಸ್ತಾರೆ: ಪೊಲೀಸ್ ಮುಖ್ಯಸ್ಥ

ಆದರೆ, ಪಕ್ಕದಲ್ಲೇ ನಿಂತಿದ್ದ ದೇಶದ ಮಹಾನ್ ಜಾರಕಾರಣಿಯೊಬ್ಬರು ಏನೂ ಮಾತನಾಡದೆ ಸುಮ್ಮನಿದ್ದರು. ಈ ಕುರಿತು ಅವರನ್ನು "ನೀವೇಕೆ ಖಂಡಿಸಿಲ್ಲ?" ಅಂತ ಪ್ರಶ್ನಿಸಲಾಯಿತು.

"ಒಂದು ಸಮುದಾಯದ ಮನಸ್ಸಿಗೆ ತೀವ್ರ ನೋವಾಗಬಹುದು, ಇದರಿಂದ ಅವರ ಓಟುಗಳು ತಮಗೆ ದೊರೆಯಲಾರವು" ಎಂಬ ಉತ್ತರ ದೊರೆಯುವ ಮೂಲಕ ನಮ್ಮ ಪ್ರಶ್ನೆ ಸಾರ್ಥಕವಾಯಿತು ಎಂಬ ಭಾವನೆ ಮೂಡಿಸಿದರು!
----------------
(ಆಸ್ಪತ್ರೆಯ ಮೇಲೂ ದಾಳಿ ನಡೆಸಿ, ಅಮಾಯಕರ ರಕ್ತ ಹೀರಿದ ಈ ದೈವದ್ರೋಹಿಗಳೂ, ಮಾನವದ್ರೋಹಿಗಳೂ, ಧರ್ಮ ದ್ರೋಹಿಗಳೂ, ದೇಶದ್ರೋಹಿಗಳೂ ಆಗಿರುವ ಉಗ್ರರಿಗೆ ಧಿಕ್ಕಾರವಿರಲಿ)

Thursday, July 24, 2008

ಎಟಿಎಂನಲ್ಲಿ ಚಿಲ್ಲರೆ ಹಣ!!!!

(ಬೊಗಳೂರು ಥೈ ಥೈ ಥೈಲಿ ಬ್ಯುರೋದಿಂದ)
ಬೊಗಳೂರು, ಜು.24- ದೇಶದಲ್ಲಿರುವ ಯಾವುದೇ ಎಟಿಎಂಗಳಲ್ಲಿ ಈಗೀಗ ನಾಲ್ಕಾಣೆ, ಎಂಟಾಣೆ, ಒಂದು ರೂಪಾಯಿ ಚಿಲ್ಲರೆ ಹಣಗಳು ಮಾತ್ರವೇ ಉದುರುತ್ತಿರುವುದು ವರದಿಯಾಗಿದೆ.

ಎಟಿಎಂಗಳಲ್ಲಿ ಯಾವತ್ತೂ ಸಾವಿರ ರೂ., ಐನೂರು ರೂ. ಸಂಬಳ ನಿರೀಕ್ಷಿಸುತ್ತಿದ್ದ ಬೊ.ರ. ಬ್ಯುರೋದ ಮಂದಿಗೆ ಇದು ಅಚ್ಚರಿಯ ವಿಷಯ. ಈ ಮಣಭಾರದ ಹಣ ಹೊತ್ತುಕೊಳ್ಳಲಾಗದೆ ತೊಳಲಾಡುತ್ತಾ, ಈ ಪರಿಸ್ಥಿತಿಯ ಬೆನ್ನ ಹಿಂದೆ ಬಿದ್ದಾಗ ಸತ್ಯಾಂಶ ಕಂತೆ ಕಂತೆಯಾಗಿ ಬಯಲಿಗೆ ಬಂತು.

ಅದೆಂದರೆ, ಸಂಸತ್ತಿನಲ್ಲಿ ಓಟು ಹಾಕುವುದಕ್ಕೆ ನೋಟುಗಳನ್ನೆಲ್ಲಾ ವಿತರಿಸಲಾಗಿದೆ. ಓಟು ಹಾಕಲು ನೋಟು ಕೊಟ್ಟರೂ, ಇಷ್ಟೊಂದು ಪ್ರಮಾಣದಲ್ಲಿ ನೂರು, ಐನೂರು, ಸಾವಿರ ರೂಪಾಯಿ ನೋಟುಗಳು ನಾಪತ್ತೆಯಾಗಿದ್ದೇಕೆ ಎಂಬುದು ಎಷ್ಟೇ ತಲೆ ಕೆರೆದರೂ ಹೊಳೆಯದಾದಾಗ, ತಲೆ ಕೆರೆಯಲು ಕೆರವನ್ನೇ ಹಿಡಿದು ನೋಡಿದಾಗ ತಕ್ಷಣವೇ ವಿಷಯ ಹೊಳೆಯಿತು.

ವಿಷಯ ಏನಂದ್ರೆ, ನಾವೆಲ್ಲಾ ತಿಳಿದುಕೊಂಡದ್ದು ಓಟಿಗಾಗಿ ನೋಟು ನೀಡುವುದು ಮಾತ್ರ. ಆದರೆ ಓಟು ಹಾಕದಂತೆಯೂ, ಮತದಾನಕ್ಕೇ ಬಾರದಂತೆಯೂ ಒತ್ತಾಯಿಸಿ ನೋಟು ಕೊಡುವ ಪ್ರಕರಣದಿಂದಾಗಿಯೇ ಈ ಎಲ್ಲಾ ನೋಟುಗಳು ಎಟಿಎಂನಿಂದ ಖಾಲಿಯಾಗಿವೆ ಎಂಬುದು ಆ ಬಳಿಕ ತಿಳಿಯಿತು.

ಹಾಗಿದ್ದರೆ ಈ ಸಂಸದರೇಕೆ ಹೀಗೆ ಮಾಡಿದರು? ಹಣವೇಕೆ ಪಡೆದರು? ಎಂಬ ಪ್ರಶ್ನೆಯ ಹಿಂದೆ ಹಿಂದೆಯೇ ಹೋದಾಗ ದೊರೆತ ವಿಷಯವೆಂದರೆ, ಜಾಗತಿಕವಾಗಿ ದೇಶದ ಮೌಲ್ಯ ಇಳಿಕೆಯಾಗಿರುವುದು. ಹಣದುಬ್ಬರ, ಬೆಲೆಗಳು ಎಲ್ಲಾ ಏರುತ್ತಿರುವಾಗ ಭ್ರಷ್ಟಾಚಾರದಲ್ಲಿಯೂ ಭಾರತದ ಸ್ಥಾನ ಏರಬೇಡವೇ ಎಂಬ ಪ್ರಶ್ನೆ ಮನಸ್ಸಿನಲ್ಲಿ ಮೂಡಿದ್ದೇ ತಡ, ಸಂಸದರು ಈ ಸ್ಟಿಂಗ್ ಕಾರ್ಯಾಚರಣೆಗಿಳಿದು ಕೋಟಿ ಕೋಟಿ ಹಣ ಸ್ವೀಕರಿಸಿದರು ಎಂದು ತಿಳಿದುಬಂದಿದೆ.

ಮತ್ತೆ ಕೆಲವರ ಪ್ರಕಾರ, ಸಂಸದರಿಗೆ ನೀಡಿದ ಹಣ ಇಷ್ಟೆಯಾ? ಕೇವಲ ಒಂದು ಕೋಟಿ ನೀಡಿ ನಮ್ಮ ಮಹಾನ್ ದೇಶದ ಸಂಸದರು ಇಷ್ಟು ಕಳಪೆ ಮೌಲ್ಯದವರು ಎಂದು ಬಿಂಬಿಸಲು ಯತ್ನಿಸಿದವರ ವಿರುದ್ಧ ಆಕ್ರೋಶಗೊಂಡು ಈ ಹಣವನ್ನು ಅಲ್ಲಿ ತಂದು ಸುರಿದರು ಎಂದು ಕೂಡ ನಂಬಲನರ್ಹ ಮೂಲಗಳು ವ-ರದ್ದಿ ತಂದು ಸುರಿದಿವೆ.

ವಿಶ್ವಾಸ ಮತ ಆರಂಭವಾಗುವ ಮೊದಲೇ ನಮ್ಮ ಬೆಲೆ ಏನಿಲ್ಲವೆಂದರೂ 25ರಿಂದ 100 ಕೋಟಿ ಇದೆ ಅಂತ ಹಿರಿಯ ಸಂಸದರೇ ಹೇಳಿಕೆ ನೀಡಿದ್ದರು. ಈಗ ನೋಡಿದರೆ ಕೊಟ್ಟದ್ದು ಕೇವಲ 1 ಕೋಟಿ. ಇದಕ್ಕೆಲ್ಲಾ ನಾವು ಜಗ್ಗುವುದಿಲ್ಲ, ನಾವು ಇಂಥ ಹಣ ಮುಟ್ಟುವುದಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ನಮ್ಮದಲ್ಲದ ಮೂಲಗಳು ಹೇಳಿವೆ.

ಇನ್ನೂ ಒಂದು ನಂಬಲನರ್ಹ ಮೂಲದ ಪ್ರಕಾರ, ಸಂಸದರಲ್ಲಿ ಬಡತನ ಕಾಡುತ್ತಿದ್ದು, ಅವರಿಗೆ ಈಗ ಬೇಕಾಗಿರುವುದು ಹಣ ಮತ್ತು ಸಾಕಷ್ಟು 'ಮೌಲ್ಯ'ಆಧಾರಿತ ರಾಜಕೀಯ. ಈ ಕಾರಣಕ್ಕಾಗಿಯೇ ಸಂಸತ್ತಿನೊಳಗೆ ಹಣ ಹಂಚಲು ತರಲಾಗಿದೆ. ಇನ್ನು ಮುಂದೆ ಬಾಕಿ ಉಳಿದಿರುವ ಮದಿರೆ-ಮಾನಿನಿಯರ ಪೂರೈಕೆಯೂ ನಡೆಯಲಿದೆ ಎಂದು ಯಾರೂ ನಮಗೆ ವರದಿ ಮಾಡದೆಯೇ ಪ್ರಕಟಿಸಿದ್ದೇವೆ. ಅಧಿಕಾರ ಉಳಿಸಿಕೊಳ್ಳಲು ಈ ಸಂಸದರ ಬೆಲೆ ಇಷ್ಟೊಂದು ತುಟ್ಟಿಯೇ ಎಂದು ಸ್ವತಃ ಸರಕಾರವೇ ಬೆಲೆ ಏರಿಕೆಯಿಂದ ಕಂಗೆಟ್ಟುಹೋಗಿದ್ದು ಯಾರಿಗೂ ತಿಳಿಯದ ಸಂಗತಿಯಾಗಿದೆ.

Tuesday, July 22, 2008

ಪ್ರತಿಪಕ್ಷದ ವಿರುದ್ಧವೇ ಅವಿಶ್ವಾಸ ಗೊತ್ತುವಳಿ!

(ಬೊಗಳೂರು ಅವಿಶ್ವಾಸ ಬ್ಯುರೋದಿಂದ)
ಬೊಗಳೂರು, ಜು.22- ಸಂಸತ್ತಿನಲ್ಲಿ ವಿಶ್ವಾಸ ಮತ ಕೋರಿ ನಿಧಾನಿ ಅಣುಮೋಹನ್ ಸಿಂಗ್ ಅವರು ಗೊತ್ತುವಳಿ ಮಂಡಿಸಿರುವಂತೆಯೇ, ಪ್ರತಿಪಕ್ಷಗಳ ವಿರುದ್ಧವೇ ಅವಿಶ್ವಾಸ ಗೊತ್ತುವಳಿ ಮಂಡಿಸಿ, ಪ್ರತಿಪಕ್ಷವನ್ನು ಉರುಳಿಸುವ ಪ್ರಯತ್ನವೊಂದು ಸದ್ದಿಲ್ಲದೆ ನಡೆಯುತ್ತಿರುವುದನ್ನು ಬೊಗಳೂರು ಸಂಚೋದನಾ ಬ್ಯುರೋದ ಮಂದಿ ಪತ್ತೆ ಹಚ್ಚಿದ್ದಾರೆ. ಹೀಗಾಗಿ ನ್ಯೂಕ್ಲಿಯರ್ ಡೀಲ್‌ಗಿಂತಲೂ ಇನ್ನೂ ಕ್ಲಿಯರ್ ಆಗಿರುವ ಓಲ್ಡ್ ಕ್ಲಿಯರ್ ಡೀಲೇ ಇಲ್ಲಿ ಪ್ರಧಾನ ಪಾತ್ರ ವಹಿಸುತ್ತಿದೆ ಎಂದು ಶಂಕಿಸಲಾಗಿದೆ.

ಇದಕ್ಕೆ ಕಾರಣವೆಂದರೆ, ತಕ್ಕಡಿಯಲ್ಲಿಟ್ಟ ಕಪ್ಪೆಗಳಂತೆ ಜಿಗಿಯುತ್ತಿರುವ ಸಂಸದರು. ಎಲ್ಲಿ ಎಷ್ಟು ಗಿಟ್ಟುತ್ತದೋ ಅಲ್ಲಿಗೆ ಹಾರುವ ಈ ತಳಿಗಳನ್ನು ಒಂದೆಡೆ ಕೂಡಿ ಹಾಕುವುದೇ ಭಾರೀ ತ್ರಾಸದ ಕಾರ್ಯ. ಆಡಳಿತ ಪಕ್ಷದವರು ಕೋಟಿ ಕೋಟಿ ಕೊಟ್ಟು ಪ್ರತಿಪಕ್ಷಗಳಿಂದಲೂ, ಪ್ರತಿಪಕ್ಷೀಯರು ದೇಶದ ಖಜಾನೆಯನ್ನು ಮುಟ್ಟುವಂತಿಲ್ಲವಾದ ಕಾರಣ, ಕೋಟಿ ಕೋಟಿ ಕೊಡಲಾರದೆ ಆಡಳಿತ ಬಣದಿಂದಲೂ, ಕಪ್ಪೆಗಳನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.

ಆದರೆ ಹೆಣಗಳಿಗೂ ಹಣವೇ ಪ್ರಧಾನವಾಗಿರುವುದರಿಂದ, ಪ್ರತಿಪಕ್ಷದ ಮಂದಿ ಕೈಕೈ ಹಿಸುಕಿಕೊಳ್ಳುವಷ್ಟರಲ್ಲಿ, ಅವರ ವಿರುದ್ಧವೇ ಅವಿಶ್ವಾಸ ಗೊತ್ತುವಳಿ ಜಾರಿಯಾಗಿದ್ದು, ಬಲಾಬಲ ಪರೀಕ್ಷೆಯಲ್ಲಿ ಪ್ರತಿಪಕ್ಷದ ಬಲ ಕುಂದುವ ನಿರೀಕ್ಷೆಗಳು ಹೆಚ್ಚುತ್ತಿರುವುದರಿಂದಾಗಿ, ಅವುಗಳು ಪ್ರತಿಪಕ್ಷ ಸ್ಥಾನದಲ್ಲಿರಲು ಅನರ್ಹ ಎಂದು ಅವಿಶ್ವಾಸ ಗೊತ್ತುವಳಿ ಮಂಡಿಸಲಾಗುತ್ತಿದೆ.

ಇದರಲ್ಲಿ ಹಣ ಪಡೆದ ಕೆಲವು ಕಪ್ಪೆಗಳಂತೂ ಅಷ್ಟು ದೊಡ್ಡ ಮೊತ್ತವನ್ನು ಜೀವನದಲ್ಲೇ ಮೊದಲ ಬಾರಿಗೆ ನೋಡಿದ ಕಾರಣದಿಂದಾಗಿ, ಮತ್ತು ಇದನ್ನು ತಮ್ಮ ತಮ್ಮ ಕ್ಷೇತ್ರಗಳ ಅಭಿವೃದ್ಧಿಗೆ ವಿನಿಯೋಗಿಸಲೇಬೇಕು ಎಂಬುದೇನೂ ಕಡ್ಡಾಯವಲ್ಲ ಎಂಬುದೆಲ್ಲಾ ನೆನಪಿಗೆ ಬಂದ ಕಾರಣ, ದಿಢೀರ್ ಹೃದಯಾಘಾತವೋ, ಸಂದು ನೋವೋ, ತಲೆ ಸುತ್ತು ಬಂದೋ... ಆಸ್ಪತ್ರೆಗಳನ್ನು ಸೇರಿಕೊಂಡಿದ್ದಾರೆ. ಸಂಸತ್ತಿನಲ್ಲಿ ಓಟು ಹಾಕಲು ಅಸಾಧ್ಯವಾಗುವಂತೆ (Absention) ಇವರು ವರ್ತಿಸುವುದರಿಂದ Un Principled Agreement ಸರಕಾರವು ಪಾರಾಗುವ ಎಲ್ಲ ಸಾಧ್ಯತೆಗಳೂ ಖಚಿತ ಎಂದು ಸಂಚೋದನಾ ಬ್ಯುರೋ ಸದಸ್ಯರು ವರದ್ದಿರದ್ದಿ ಮಾಡಿದ್ದಾರೆ.

ಸರಕಾರದ ವಿಶ್ವಾಸ ಮತ ನಿರ್ಧರಿಸುವ ಚರ್ಚೆ ನಡೆಯುತ್ತಿರುವಂತೆಯೇ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ಉಚ್ಛ್ವಾಸ, ನಿಶ್ವಾಸ ಎಲ್ಲವೂ ಏರುಪೇರಾಗಿರುವ ಕಾರಣ ಅವರು ಆಸ್ಪತ್ರೆಗೆ ಸೇರಿದ್ದಾರೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

Monday, July 21, 2008

ಸಂಸದರ ಬೆಲೆ ಏರಿಕೆ: ಅಣುಮೋಹನ್ ಸಿಂಗ್ ಕಂಗಾಲು

(ಬೊಗಳೂರು ಸಂಸದರ ಬೆಲೆ ಏರಿಕೆ ಬ್ಯುರೋದಿಂದ)
ಬೊಗಳೂರು, ಜು.21- Nuclear ಒಪ್ಪಂದದ ಬಗ್ಗೆ ಸರಕಾರದ ಅಳಿವು-ಉಳಿವು ಇನ್ನೂ Unclear ಆಗಿರುವ ಗೊಂದಲದಲ್ಲಿ ಸಿಲುಕಿದ ನಿಧಾನಿ ಅಣುಮೋಹನ ಸಿಂಗ್ ಅವರು, ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿರುವುದರಿಂದಾಗಿ 'ಆಮ್ ಆದ್ಮಿ'ಯ ಸ್ಥಾನದಲ್ಲಿದ್ದರೆ ಯಾವ ರೀತಿಯ ಮಜಾ ಅನುಭವಿಸಬಹುದು ಎಂಬುದನ್ನು ಅಣುಭವಿಸುತ್ತಿದ್ದಾರೆ.

Un Principled Agreement ನಡೆಯುತ್ತಿರುವ ಈ ರಾಜಕೀಯ ಯುಗದಲ್ಲಿ ಸರಕಾರದ ಜೀವನಾವಶ್ಯಕ ವಸ್ತುಗಳ ಬೆಲೆ ಕೈಗೆಟುಕದಷ್ಟು ಎತ್ತರಕ್ಕೇರಿವೆ. ಒಂದೊಂದು ಕಿಲೋ ತರಕಾರಿ ಸಿಗಬೇಕಿದ್ದರೂ, ಇಪ್ಪತ್ತೈದು ಕೋಟಿ ಇದ್ದದ್ದು ನೂರು ಕೋಟಿಗೂ ತಲುಪಿದೆ. ಹೀಗಾಗಿ ಈಗ ಆಮ್ ಆದ್ಮಿಯ ಸ್ಥಾನದಲ್ಲಿರುವ ನಾವು ಬದುಕುವುದಾದರೂ ಹೇಗೆ ಎಂದು ಅಣುಮೋಹಕ ಸಿಂಗ್ ಅವರು ಬೊ.ರ. ಬ್ಯುರೋದೆದುರು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.

ಇದಲ್ಲದೆ, ಒಂದು ಕಡೆಯಿಂದ Non Developmental Agreement ಮಾಡಿಕೊಂಡಿರುವವರು ಕೂಡ ಅಗತ್ಯವಸ್ತುಗಳಿಗೆ ಗಾಳ ಹಾಕುವ ನಿಟ್ಟಿನಲ್ಲಿ ಬಾಡೂಟ ಏರ್ಪಡಿಸುತ್ತಿದ್ದಾರೆ. ಅದಕ್ಕಿಂತ ಮಿಗಿಲಾದ ಡಿನ್ನರ್ ಪಾರ್ಟಿ ಏರ್ಪಡಿಸುವುದು ನಮ್ಮ ಧರ್ಮ. ಹೀಗಿರುವಾಗ ಈ ರೀತಿ ಬೆಲೆ ಏರಿಸಿದರೆ ನಮ್ಮ ಪರಿಸ್ಥಿತಿ ಏನಾಗಬೇಡ ಎಂದು ಪ್ರಶ್ನಿಸಿರುವ ಅವರು, ಈ ಹಣದುಬ್ಬರದ ಕಾಲದಲ್ಲಿ ಈ ದೇಶದ ಜನ ಅದ್ಹೇಗೆ ಬದುಕುತ್ತಾರೋ ಎಂದು ತಲೆ ಚಚ್ಚಿಕೊಂಡರಾದರೂ, ತಮ್ಮದೇ ಸರಕಾರದ ನೀತಿಗಳು ಇದಕ್ಕೆ ಕಾರಣ ಎಂದು ಹೊಳೆದ ತಕ್ಷಣ, ಆ ವಾಕ್ಯದ ಕೊನೆಯಲ್ಲಿ 'ನೋಡೇಬಿಡ್ತೀನಿ' ಅಂತಾನೂ ಸೇರಿಸಿಬಿಟ್ಟಿದ್ದಾರೆ.

ತಾವು ಕೋಲಾ(ಹಲ)ಸಭೆಯಲ್ಲಿ ವಿಶ್ವಾಸಮತ ನಿರ್ಣಯವನ್ನು ಮಂಡಿಸುವ ಬದಲು, ಅವಿಶ್ವಾಸ ನಿರ್ಣಯ ಮಂಡಿಸಿದಲ್ಲಿ, ಅದಕ್ಕೆ ಜಯ ದೊರೆಯುವುದು ಖಚಿತ ಎಂಬ ವಿಶ್ವಾಸದಲ್ಲಿರುವ ಅಣುಮೋಹಕ ಸಿಂಗ್, ಯಾವ ಗೊತ್ತುವಳಿ ಮಂಡಿಸುವುದು ಎಂದು ತಲೆ ತುರಿಸಿಕೊಳ್ಳಲು ಕೈ ಮೇಲೆತ್ತಿದಾಗ, ಪೇಟ ಅಡ್ಡ ಬಂದ ಕಾರಣ ಕೈಕೆಳಗಿಳಿಸಿದರು.

ದೇಶದ ಜನರೆಲ್ಲಾ ಬೆಲೆ ಏರಿಕೆಗಾಗಿ ಹಾಹಾಕಾರ ಮಾಡುತ್ತಿರುವಾಗ ಕೇವಲ ಅಣು ಒಪ್ಪಂದಕ್ಕೆ ಸರಕಾರವೇ ಉರುಳುವಂತಾಗುವುದು ಈ ದೇಶದ ಮಹಾನ್ ದುರಂತ. ಈಗಲೂ ಬೆಲೆ ಇಳಿಸುವ ಬಗ್ಗೆ ಯೋಚಿಸದಿರುವ ಸರಕಾರ ಅಣು ಒಪ್ಪಂದದ ಜಪವನ್ನೇ ಮಾಡುತ್ತಿದೆ. ಅಂತೆಯೇ, ಎಡಬಿಡಂಗಿ ಪಕ್ಷಗಳು ಕೂಡ, ಬೆಲೆ ಇಳಿಸುವಲ್ಲಿ ವಿಫಲವಾದ ಸರಕಾರವನ್ನು ಉರುಳಿಸುವ ಬದಲು, ಅಣು ಒಪ್ಪಂದಕ್ಕೆ ಮುಂದಾದ ಕಾರಣಕ್ಕೆ ಸರಕಾರ ಉರುಳಿಸಲು ಆದ್ಯತೆ ನೀಡಿರುವುದು ಬೊಗಳೂರು ಮಂದಿಗೆ ತಲೆಗೆ ಹೊಳೆಯದ ಸಂಗತಿ ಎಂದು ನಮ್ಮ ಬಾತ್ಮೀದಾರರು ವರದ್ದಿ ನೀಡಿದ್ದಾರೆ.

ಈ ನಡುವೆ, ಕೋಲಸಭೆಯೇ ದೊಡ್ಡ ವ್ಯಾಪಾರ ಮಂಡಿಯಾಗಿ ಪರಿವರ್ತಿತವಾಗಿದ್ದು, ಅಗತ್ಯ ವಸ್ತುಗಳೆಲ್ಲವೂ ಅತ್ತಿಂದಿತ್ತ ಓಲಾಡುತ್ತಿವೆ. ಈಗಾಗಲೇ ಕನಿಷ್ಠ ಬೆಂಬಲ ಬೆಲೆಯನ್ನು ಗರಿಷ್ಠಕ್ಕೇರಿಸಬೇಕೆಂದು ಆಗ್ರಹಿಸಿರುವ ಮತ್ತು ಒಮ್ಮೆ ಯುಪಿಎ ಬಣದಲ್ಲಿ ಕಾಣಿಸಿಕೊಳ್ಳುವ ಈ ಅಗತ್ಯ ವಸ್ತುಗಳು, ಮತ್ತೊಮ್ಮೆ ಎನ್‌ಡಿಎ ಬಣದಲ್ಲೂ, ಮಗದೊಮ್ಮೆ ಬಿಎಸ್ಪಿ ಹಣದಲ್ಲೂ.... ಅಲ್ಲಲ್ಲ... ಬಣದಲ್ಲೂ ಗೋಚರಿಸಿಕೊಳ್ಳುತ್ತಿದ್ದು, ಎಲ್ಲ ಕಡೆಯಿಂದ ಬಾಚಿ ಬಾಚಿಕೊಳ್ಳುತ್ತಿದ್ದಾರೆ ಎಂದು ಬೊ.ರ. ಪ್ರತಿನಿಧಿಗಳು ತನಿಖಾ ವರದ್ದಿ ಕಳುಹಿಸಿದ್ದಾರೆ.

ಈ ನಡುವೆ, ಪಕ್ಷಗಳೆಲ್ಲವೂ ಸಾಕಷ್ಟು ದೊಡ್ಡದಿದ್ದು, ಅವುಗಳನ್ನು ಸಾಕುವುದು ಕಷ್ಟ. ಈ ಕಾರಣಕ್ಕೆ, ಪರಸ್ಪರ ಎದುರು ಪಕ್ಷಗಳನ್ನು ಒಡೆಯುವ ಕಾರ್ಯ ನಡೆಯುತ್ತಿದೆ ಎಂದು ಎಲ್ಲಾ ಪಕ್ಷಗಳ ವಕ್ರತಾರರು ಬೊ.ರ. ಬ್ಯುರೋ ಎದುರು ಕೂಗಾಡಿದ್ದು, ಯಾರು ಕೂಡ ನೇರವಾಗಿ ಹಣದ ಆಮಿಷ ಒಡ್ಡುತ್ತಿಲ್ಲ, ಏನಿದ್ದರೂ ಗುಪ್ತವಾಗಿ ಎಂದು ತಿಳಿಸಿದ್ದಾರೆ.

Friday, July 18, 2008

ಬಜೆಟ್ ಸ್ಪೆಷಲ್: 'ಬಾಲ' ವಿಕಾಸ, ಪುತ್ರಕರ್ತರಿಗೆ ಕಲ್ಯಾಣ

(ಬೊಗಳೂರು ಬಾ-ಜೆಟ್ ಸಂಶ್ಲೇಷಣಾ ಬ್ಯುರೋದಿಂದ)
ಬೊಗಳೂರು, ಜು.8- ಮುಖ್ಯಮಂತ್ರಿ ಬಿ.ಎಸ್.ಒಡೆಯೋರಪ್ಪ ಮಂಡಿಸಿದ 2008-09ರ ನಾಲ್ಕುಕಾಸು ಸಾಲಿನ ಬಜೆಟ್ಟನ್ನು ಬೊಗಳೆ ರಗಳೆ ಬ್ಯುರೋದ ಸಮಸ್ತ ಮಂದಿ ಮಹೋದಯರು ಬಾಲವೆತ್ತಿ ಸ್ವಾ-ಗತಿಸಿದ್ದಾರೆ.

ಇದಕ್ಕೆ ಪ್ರಧಾನ ಕಾರಣಗಳಲ್ಲೊಂದು ಎಂದರೆ ಒಡೆಯೋರಪ್ಪ ಪ್ರಸ್ತಾಪಿಸಿದ ಬಾಲ ವಿಕಾಸ ಯೋಜನೆ. ಈಗಾಗಲೇ ಪರೀಕ್ಷಾ ಫಲಿತಾಂಶಗಳಲ್ಲಿ 'ಬಾಲ'ಕಿಯರ 'ಬಾಲ'ಕರು ಹಿಂದೆ ಬೀಳುತ್ತಿದ್ದಾರೆ. ಅಥವಾ ಬಾಲಕಿಯರೇ ಮುಂದೆ ಹೋಗುತ್ತಾರೆ. ಅವರನ್ನು ಸಮರ್ಥವಾಗಿ ಹಿಂಬಾಲಿಸಲು 'ಬಾಲ'ಕರಿಗೂ ಸೈಕಲ್ ನೀಡುವ ಯೋಜನೆ ಕೂಡ ವಿಫಲವಾದ ಹಿನ್ನೆಲೆಯಲ್ಲಿ, ಬಾಲವನ್ನೇ ವಿಕಾಸ ಮಾಡುವ ಯೋಜನೆಯನ್ನು ಜಾರಿಗೊಳಿಸಿರುವುದು ಬಾಲವಿರುವ ಬೊ.ರ. ಬ್ಯುರೋ ಸದಸ್ಯರಲ್ಲಿ ಸಂತಸಕ್ಕೆ ಕಾರಣವಾಗಿದೆ.

ಇನ್ನೊಂದು ಕಾರಣವೆಂದರೆ, ಹಿರಿಯ ಪುತ್ರ ಕರ್ತರ ಕಲ್ಯಾಣ ನಿಧಿ ಸ್ಥಾಪಿಸಿರುವುದು. ಬೊಗಳೆ ರಗಳೆ ಬ್ಯುರೋ ಮಂದಿ ಕೂಡ ಆನ್‌ಲೈನ್ ಪುತ್ರಕರ್ತರ ಸಾಲಿಗೆ ಸೇರಿರುವುದರಿಂದಾಗಿ ಪುತ್ರಕರ್ತರಿಗೆಲ್ಲಾ ಕಲ್ಯಾಣ ಮಾಡಿಸಲು ನಿಧಿ ಮೀಸಲಿಟ್ಟಿರುವುದು ತುಂಬಾ ಸಂತಸದ ಸಂಗತಿ ಎಂದು ಅವರು ಅವಲತ್ತುಕೊಂಡಿದ್ದಾರೆ.

ಆದರೆ ಅವಶ್ಯಕತೆಯೇ ಇಲ್ಲದ ಒಂದು ಬಜ್ಜೆಟ್ಟು ಪ್ರಸ್ತಾಪದ ಬಗ್ಗೆ ಬೊಗಳೂರು ಮಂದಿ ಮತ್ತೇರಿಸಿದಷ್ಟರ ಎತ್ತರಕ್ಕೆ ಹುಬ್ಬೇರಿಸಿದ್ದಾರೆ. ಅದೆಂದರೆ ಮದ್ಯದಂಗಡಿಗಳ ಹೆಚ್ಚಳ. ಬೊಗಳೂರಿನಲ್ಲೆಲ್ಲಾ ಈಗಾಗಲೇ ಹೆಜ್ಜೆಗೊಂದರಂತೆ ಮದ್ಯದಂಗಡಿಗಳಿವೆ. ಅವುಗಳ ಮಧ್ಯ ಮತ್ತೆ ಹೇಗೆ ಅಂಗಡಿ ಸ್ಥಾಪಿಸುವುದು ಎಂಬುದು ತಿಳಿಯದೆ ಬೊಗಳೂರಿನ ಜನತೆ ಕಂಗಾಲಾಗಿ ಪಕ್ಕದ ಮದ್ಯದಂಗಡಿಗೆ ತೆರಳಿ ಸುಮ್ಮನಾಗತೊಡಗಿದ್ದಾರೆ.

ಇನ್ನೊಂದು ಅಸಮಾಧಾನವೆಂದರೆ, ಶಾಸಕರನ್ನು, ನಾಯಕರನ್ನು ಬೇರೆ ಪಕ್ಷಗಳಿಂದ ಗಣಿಗಾರಿಕೆ ನಡೆಸಿ ಎತ್ತಿಕೊಂಡು ಬಂದು ಲೋಡುಗಟ್ಟಲೆ ಬಿಜೆಪಿ ಮನೆಯೆದುರು ಸುರಿಯಲಾಗುತ್ತಿರುವುದು ಎಲ್ಲರ ಗಮನಕ್ಕೆ ಬಂದಿದೆ. ಇದೇ ಕಾರಣಕ್ಕೆ ಗಣಿಗಾರಿಕೆಗೆ ನೂರಲ್ಲ, ನೂರಾರು ಕೋಟಿ ರೂ. ಮೀಸಲಿಡಬೇಕು ಎಂಬುದು ಎಲ್ಲಾ ಪಕ್ಷಗಳ ನಾಯಿಕರುಗಳ, ಮುಖಂಡರುಗಳ ಒಕ್ಕೊರಳ ಆಗ್ರಹ.

Thursday, July 17, 2008

ಬೊಗಳೆಯಲ್ಲಿ ಯಡ್ಡಿ ಬಜೆಟ್ ವಿಶ್ಲೇಷಣೆ

ಬಿ.ಎಸ್.ಒಡೆಯೋರಪ್ಪ ಮಂಡಿಸಿದ 2008-09ರ ನಾಲ್ಕುಕಾಸು ಸಾಲಿನ ಬಜೆಟ್ಟನ್ನು ಬೊಗಳೆ ರಗಳೆ ಬ್ಯುರೋದ ಸಮಸ್ತ ಮಂದಿ ಮಹೋದಯರು ಬಾಲವೆತ್ತಿ ಸ್ವಾ-ಗತಿಸಿದ್ದಾರೆ. ಹೇಗೆ , ಏನು, ಎತ್ತ ಕಂಗಾಲಾಗುತ್ತಿದ್ದೀರಾ?

ದಯವಿಟ್ಟು ನಿರೀಕ್ಷಿಸಿ... ಎಂದಿನಂತೆ ದುಡ್ಡು ಕೊಡದೆ ನಿಮ್ಮ ಪ್ರತಿಗಳನ್ನು ಕಾದಿರಿಸಿ. ಆದರೆ ಕೆಂಡದಂತೆ ಕಾದಿರಿಸಬೇಡಿ. ಚುರುಕ್ಕೆಂದೀತು....

Wednesday, July 16, 2008

ಬೊಗಳೆ: ಕನಿಷ್ಠ 'ಬೆಂಬಲ' ಬೆಲೆ ನಿಗದಿಗೆ ಆಗ್ರಹ!

(ಬೊಗಳೂರು ಬೆಂಬಲದ 'ಬೆಲೆ' ಬ್ಯುರೋದಿಂದ)
ಬೊಗಳೂರು, ಜು.16- ಉರುಳುವ ಸ್ಥಿತಿಯಲ್ಲಿರುವ ಉಪ (UPA) ಸರಕಾರಕ್ಕೆ ಊರುಗೋಲಾಗಿ ನಿಂತು ಅದನ್ನು ರಕ್ಷಿಸುವ ಹವಣಿಕೆಯಲ್ಲಿರುವ ಏಕಸದಸ್ಯ, ಅರ್ಧ ಸದಸ್ಯ, ಕಾಲುಸದಸ್ಯ ಪಕ್ಷಗಳೆಲ್ಲ ಇದೀಗ ಒಂದೇ ಒಂದು ಬೇಡಿಕೆ ಈಡೇರಿಸುವಂತೆ ತೀವ್ರವಾಗಿ ಒತ್ತಾಯಿಸತೊಡಗಿವೆ.

ದೇಶಾದ್ಯಂತ ಬೆಳೆಗಾರರು ಸಂಕಷ್ಟ ಸ್ಥಿತಿಯಲ್ಲಿದ್ದಾರೆ. ಕೈಗೆ ಬಂದ ಫಸಲು ಬಾಯಿಗೆ ಬಾರದೆ ರಸ್ತೆಗೆ ಸುರಿದು ಪ್ರತಿಭಟನೆ ಮಾಡುತ್ತಿದ್ದಾರೆ. ಕಬ್ಬಿನ ಬೆಳೆಗಾರರ ಕೈಗೆ ಸಿಪ್ಪೆ ಮತ್ತು ಜಲ್ಲೆ ಮಾತ್ರ ಸಿಕ್ಕುತ್ತಿದೆ. ತೊಗರಿ ಬೆಳೆಗಾರರು, ಟೊಮೆಟೋ, ಮೆಣಸು ಇತ್ಯಾದಿ ರೈತರೆಲ್ಲರೂ ಅದನ್ನು ರಸ್ತೆಗೆ ಸುರಿದು ರಸ್ತೆಯಲ್ಲೇ ಸಾಂಬಾರು ಮಾಡುತ್ತಿದ್ದಾರೆ. ಇಂಥ ಸ್ಥಿತಿಯಲ್ಲಿ ಅವರಿಗೆಲ್ಲರಿಗೂ ಬೆಳೆಗೆ ಬೆಂಬಲ ಬೆಲೆ ಒದಗಿಸುವ ಪ್ರಯತ್ನದಂತೆಯೇ ನಮಗೂ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಬೇಕು ಎಂದು ಈ ಸಂಸತ್ ರೈತರು ಆಗ್ರಹಿಸಿದ್ದಾರೆ.

ವಿಶ್ವಾಸ ಮತ ಕೋರುವ ಸರಕಾರಕ್ಕೆ ಬೆಂಬಲ ನೀಡಬೇಕಿದ್ದರೆ ಕೇವಲ 25 ಕೋಟಿ ರೂ. 'ಬೆಂಬಲ' ಬೆಲೆ ನಿಗದಿಪಡಿಸಿದ್ದು ಸಾಕಾಗುವುದಿಲ್ಲ. ಇದನ್ನು ಒಂದು ರೂಪಾಯಿಯಾದರೂ ಹೆಚ್ಚಿಸಬೇಕು ಎಂಬುದು ಈ ಮಿನಿ-ಮಿಡಿ ಪಕ್ಷಗಳ ಒಕ್ಕೊರಳ ಒತ್ತಾಯ.

ಒಂದಿಡೀ ಸರಕಾರದ ಜುಟ್ಟನ್ನು ನಾವು ಹಿಡಿದುಕೊಳ್ಳಲು ನಮಗೆ ಈ ನಿಕೃಷ್ಟ ಬೆಂಬಲ ಬೆಲೆಗಿಂತ ಕನಿಷ್ಠ ಬೆಂಬಲ ಬೆಲೆಯಾಗಿ 25 ಕೋಟಿ, ಒಂದು ರೂಪಾಯಿ ನಿಗದಿಪಡಿಸಬೇಕು ಎಂದು ಅವರು ಆಗ್ರಹಿಸುತ್ತಿದ್ದು, ಈ ಬಗ್ಗೆ ಪ್ರತಿಭಟನೆಗಳನ್ನು ನಡೆಸಲು ಯಾವುದನ್ನು ರಸ್ತೆಗೆ ಸುರಿಯಲಿದ್ದಾರೆ ಎಂದು ಬೊ.ರ. ಬ್ಯುರೋ ತೀವ್ರ ಸಂಶೋಧನೆ ನಡೆಸಿತು.

ಈ ತನಿಖೆಯ ಪ್ರಕಾರ ತಿಳಿದುಬಂದಿದ್ದೇನೆಂದರೆ, ಅವರೆಲ್ಲರೂ ಅವಕಾಶವಾದಿತನವನ್ನೆಲ್ಲವನ್ನೂ ಬಯಲಿಗೆ ತಂದಿರಿಸಿ, ತಮ್ಮ ಇಲ್ಲದ ಮಾನವನ್ನೆಲ್ಲ ರಸ್ತೆಗೆ ಸುರಿದು ಪ್ರತಿಭಟನೆ ನಡೆಸಲಿದ್ದಾರೆ!

Monday, July 14, 2008

ಸ್ವರ್ಗದಿಂದ ಸಂಸಾರ ಸಾಗರಕ್ಕೆ ಬಿದ್ದ ಮದುಮಗ!

(ಬೊಗಳೂರು ಬೆಲೆ ಏರಿಕೆ ಬ್ಯುರೋದಿಂದ)
ಬೊಗಳೂರು, ಜು.14- ಮಿತ್ರರೊಂದಿಗೆ ಆಗಸದಲ್ಲಿ ಹಾರಾಡುತ್ತಿದ್ದವರಲ್ಲಿ ಒಬ್ಬ ವ್ಯಕ್ತಿ ದಿಢೀರನೇ ಸಂಸಾರ ಸಾಗರಕ್ಕೆ ಧುಮುಕಿದ ಆತಂಕಕಾರಿ ಘಟನೆಯೊಂದು ಇಲ್ಲಿ ವರದಿಯಾಗಿದೆ. ಈ ಬಗ್ಗೆ ಬೊಗಳೆ ರಗಳೆ ಬ್ಯುರೋ ತೀವ್ರ ಸಂಶೋಧನೆ ನಡೆಸಿದ್ದು, ಕೆಲವು ಆಘಾತಕಾರಿ ವಿಷಯಗಳು ಸಂಸಾರ ಸಾಗರದಿಂದ ಬಯಲಿನ ಮೇಲೆ ಬಿದ್ದಿವೆ.

ಈ ಮಿತ್ರರು ಆಕಾಶದಲ್ಲಿ ಹಾರಾಡುವುದಕ್ಕೆ ಕಾರಣಗಳೂ ಇದ್ದವು. ಯುಪಿಎ ಸರಕಾರ ಅಧಿಕಾರಕ್ಕೆ ಬಂದಂದಿನಿಂದ ಏರುತ್ತಿರುವ ಬೆಲೆಗಳಿಂದಾಗಿ, ಅಗತ್ಯ ವಸ್ತುಗಳು ಕೈಗೆಟುಕದಷ್ಟು ಎತ್ತರಕ್ಕೇರಿದ್ದವು. ಅವುಗಳನ್ನು ಹೇಗಾದರೂ ಮಾಡಿ ಹಿಡಿಯಲೆಂದು ಈ ಐವರು ಹಾರಾಟ ಮಾಡುತ್ತಿದ್ದರು. ಆದರೆ ಕೆಳಗೆ ಜನ ಜಂಗುಳಿಯ ಹಾಹಾಕಾರ, ಆಕ್ರಂದನ, 'ನಮಗೂ ಬೆಲೆಗಳನ್ನು ಕೆಳಗೆ ಇಳಿಸಿಕೊಡಿ' ಎಂಬ ಕೂಗಾಟವೆಲ್ಲಾ ಕೇಳಿ ಬೆದರಿದ ಅವರಲ್ಲೊಬ್ಬರು ಆಯತಪ್ಪಿ ಬಿದ್ದೇ ಬಿಟ್ಟರು.

ಬೆಲೆ ಏರಿಕೆಯ ಭರಾಟೆಯ ನಡುವೆಯೂ ಸಂತಸದಿಂದ ಓಡಾಟ ನಡೆಸುತ್ತಿರುವುದು ಕಂಡು ಬಂದ ಮದುವೆಯೊಂದು ಅದೇ ಸಂದರ್ಭ ಅಲ್ಲಿ ನಡೆಯುತ್ತಿತ್ತು. ನೇರವಾಗಿ ಮಂಟಪಕ್ಕೇ ಬಂದು ಬಿದ್ದ ಕಾರಣ, ಓಡಿ ಹೋಗಲೂ ಆಗದೆ ತಾಳಿ ಕಟ್ಟುವುದು ಅನಿವಾರ್ಯವಾಯಿತು ಎಂಬುದನ್ನು ಪತ್ತೆ ಹಚ್ಚಲಾಗಿದೆ.

ಇವರೆಲ್ಲಾ ಆಗಸದಲ್ಲಿ ಹಾರಾಡಲು ಮತ್ತೊಂದು ಕಾರಣವೂ ಇತ್ತು. ಮದುವೆಗಳು ಸ್ವರ್ಗದಲ್ಲಿ ನಡೆಯುತ್ತವೆ ಎಂದು ಹಿರಿಯರು ಹೇಳಿದ್ದು ಅವರಿಗೆಲ್ಲ ನೆನಪಿತ್ತು. ಅದು ಹೇಗೆ ಎಂಬುದನ್ನು ಕಂಡುಕೊಳ್ಳಬೇಕಾಗಿತ್ತು. ಮದುವೆಯಾದರೆ ಸ್ವರ್ಗ ಸುಖಕ್ಕೆ ದಾರಿ ಅಂತಲೂ ಕೆಲವರು ಹೇಳುತ್ತಿದ್ದರು. ಹೀಗಾಗಿ ಮದುವೆಯಾದ ಮೇಲೆ ದಿಢೀರ್ ಮೇಲಕ್ಕೆ ಹೋಗುವುದಕ್ಕಿಂತ, ಮದುವೆಗೆ ಮೊದಲೇ ಮೇಲಕ್ಕೆ ಹಾರಾಡಿ ಹೋಗಿ ಬಂದರೆ ಅನುಭವ ದೊರೆಯುತ್ತದೆ ಎಂಬುದು ಅವರ ಸಿದ್ಧಾಂತ. ಸ್ವರ್ಗಕ್ಕೆ ಮೊದಲೇ ಭೇಟಿ ಕೊಟ್ಟು ಬಂದರೆ, ಹೇಗಿರುತ್ತದೆ, ಅಲ್ಲೇ ಉಳಿಯಬಹುದೇ? ಅಥವಾ ಅಲ್ಲಿಯ ಉದ್ಯೋಗಕ್ಕಿಂತ ಭೂಲೋಕದ ಉದ್ವೇಗದ ಉದ್ಯೋಗವೇ ಮಿಗಿಲೇ? ಎಂಬುದನ್ನೆಲ್ಲಾ ತಿಳಿದುಕೊಳ್ಳಬೇಕಿತ್ತು. ಇದಕ್ಕಾಗಿ ಈ ರೀತಿ ಮಾಡಿದೆ ಎಂದು, ಅವರಲ್ಲಿ ಯಾರು ಕೂಡ ತಪರಾಕಿ ನೀಡುವಂತಹ ಸ್ಥಿತಿಯಲ್ಲಿಲ್ಲದ್ದರಿಂದ, ಹಾವೆಂದು ಹೆದರಿದವರ ಮೇಲೆ ಹಗ್ಗ ಎಸೆದಂತೆ, ಜೋರಾಗಿಯೇ ಆರ್ಭಟಿಸಿ ಬೆದರಿಕೆಯೊಡ್ಡಿದ ಬೊ.ರ. ಬ್ಯುರೋ ಸದಸ್ಯರ ಬಳಿ ಆತ ತಪ್ಪೊಪ್ಪಿಕೊಂಡಿದ್ದಾನೆ.

ಲಾಸ್ಟ್ ಬಟ್ ಒನ್ ಕ್ವೆಶ್ಚನ್ನು - ಹಾಗಿದ್ದರೆ ಈಗ ಏನನಿಸುತ್ತದೆ ಎಂದು ಬೊ.ರ. ಸದಸ್ಯರು ಕೇಳಿದಾಗ, ಇದು ಬಾಣಲೆಯಿಂದ ಬೆಂಕಿಗೆ ಬಿದ್ದಂತಾಯಿತು ಎಂದು ಸಂತಸದಿಂದಲೇ ನುಡಿದಿದ್ದಾನೆ. ಏರುತ್ತಿರುವ ಬೆಲೆಗಳ ಉರಿ ಆ ಮೇಲಿನ ಲೋಕದಲ್ಲಿ ತಡೆಯಲಾಗುತ್ತಿಲ್ಲ. ಅದರ ಜತೆಗೆ ಸೂರ್ಯನ ಶಾಖವೂ ಒಂದಿಷ್ಟು ಸೇರಿಕೊಳ್ಳುತ್ತಿದೆ. ಆದರೆ ಧರೆಗಿಳಿದಾಗ, ಸೂರ್ಯನ ಪ್ರಖರತೆಯೇ ಗೊತ್ತಾಗದಷ್ಟು ಬೆಲೆ ಏರಿಕೆಯು ಬಿಸಿ ಬಿಸಿಯಾಗಿದೆ. ಚೀಲ ತುಂಬಾ ಹಣ ತೆಗೆದುಕೊಂಡು ಹೋದರೆ ಜೇಬು ತುಂಬಾ ಅಕ್ಕಿ ದೊರೆಯುತ್ತದೆ ಎಂದು ಅವರು ಕೇಂದ್ರ ಸರಕಾರ ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ಕ್ಯಾಕರಿಸಿ ಶ್ಲಾಘಿಸುತ್ತಾ ಹೇಳಿದರು.

ಅಂತಿಮವಾಗಿ, ಮುಂದಿನ ಹೆಜ್ಜೆ ಏನು ಎಂದು ಕೇಳಿದಾಗ, ಮುಂದೆ ಬೆಲೆ ಏರಿಕೆಯ ಬಿಸಿ ಗಾಳಿ ತುಂಬಿದ ಬೆಲೂನಿನಲ್ಲಿ ವಿಶ್ವ ಸುತ್ತುವ ಆಸೆಯಿದೆ ಎಂದಾತ ಅಲವತ್ತುಕೊಂಡಿದ್ದಾನೆ.

Wednesday, July 09, 2008

ಕೇಂದ್ರದಲ್ಲಿ ಗಾಳ: ಗಣಿ ಧಣಿಗಳಿಗೆ ಭಾರಿ ಬೇಡಿಕೆ

(ಬೊಗಳೂರು ಗಣಿ-ಗಾಳ-ದಾಳ ಬ್ಯುರೋದಿಂದ)
ಬೊಗಳೂರು, ಜು.9- ದೇಶಾದ್ಯಂತ ಮಳೆಗಾಲ ಬಂದಿರುವಂತೆಯೇ, ಸಣ್ಣಪುಟ್ಟ ರಾಜಕೀಯ ಪಕ್ಷಗಳಿಗೂ ಇದು ಒಂದು ಕಾಲವಾಗಿ ಪರಿಣಮಿಸಿದ್ದು, ಯುಪಿಎ ನೇತೃತ್ವದ ಸರಕಾರವು ಬೃಹತ್ ಪ್ರಮಾಣದ ಬೀಸು ಬಲೆಗಳನ್ನು ಹಿಡಿದು ಮೀನು ಹಿಡಿಯಲು ಹಲವರನ್ನು ನೇಮಿಸಿರುವುದು ಬೊ.ರ. ಬ್ಯುರೋ ಗಮನಕ್ಕೆ ಬಂದಿದೆ.

ಇದೇ ವೇಳೆ, ಕರುನಾಟಕ ಕ್ಷೇತ್ರದಲ್ಲಿ ಭಾರಿ ಪ್ರಮಾಣದ ಮೀನುಗಾರಿಕೆ ನಡೆಸಿ ಸಿದ್ಧ-ಪ್ರಸಿದ್ಧರಾಗಿದ್ದ ಗಣಿ ದೊರೆಗಳು ಕರುನಾಟಕ ರಂಗವೇದಿಕೆಯಿಂದ ದಿಢೀರ್ ನಾಪತ್ತೆಯಾಗಿದ್ದಾರೆ ಎನ್ನಲಾಗಿದ್ದು, ಅವರೀಗ Unprecedented Price-raise Agenda ಸರಕಾರದ ಕಂಕುಳ ಕೆಳಗೆ ಬೆಚ್ಚನೆ ಆಶ್ರಯ ಪಡೆಯುವಂತೆ ಮಾಡಲಾಗಿದೆ ಎಂಬುದನ್ನು ಬೊ.ರ. ಬ್ಯುರೋ ಪತ್ತೆ ಹಚ್ಚಿದೆ.

ರಾಜ್ಯದಲ್ಲಿ ಸ್ವತಂತ್ರರ ಹಂಗಿನಿಂದ ಹಂಗೂ ಹಿಂಗೂ ಹೊರಬರುವಂತಾಗಲು ಭಾರಿ ಮನೆಹಾಳು/ಪ್ರಳಯಾಂತಕ ಕಾರ್ಯಾಚರಣೆ ನಡೆಸಿದ್ದ ಗಣಿ ಕುಳಗಳು, ಅದಿರುಗಳನ್ನು ಅಗೆದು ಬಗೆದು ಲೋಡುಗಟ್ಟಲೆ ತಂದು ಸುರಿಯುವಲ್ಲಿ ಎತ್ತಿದ ಕೈ ಎಂಬ ಕಾರಣಕ್ಕೆ ಯುಪಿಎ ಇವರ ಸೇವೆ ಬಯಸಿದ್ದು, ಅವರಿಗೀಗ ಡಿಮ್ಯಾಂಡಪ್ಪೋ ಡಿಮ್ಯಾಂಡು. ಎದುರು ಪಕ್ಷಗಳಿಂದ ಸಂಸದರನ್ನು ಲೋಡು ಲೋಡು ಗಣಿಯಂತೆ ಎತ್ತಿ ತಂದು 'ಇಷ್ಟು ಸಾಕಾ... ಇನ್ನೂ ಬೇಕಾ' ಅಂತ ಕೇಳುವ ಜಾಯಮಾನದ ಗಣಿ ದೊರೆಗಳು ಸದ್ಯಕ್ಕಂತೂ ತುಂಬಾ ತುಂಬಾ ಬ್ಯುಸಿಯಾಗಿಬಿಟ್ಟಿರುವುದಾಗಿ ಮೂಲಗಳು ವರದಿ ಮಾಡಿವೆ.

ಈ ಗಾಳ ವೀರರು ಗಾಳ ಹಾಕಲು ಹೊರಟಿರುವಂತೆಯೇ, ಅವರ ಬಲೆಗೆ ಮೊದಲು ಬಿದ್ದಿರುವುದು ಅಜಿತ್ ಸಿಂಗ್ ಅವರ ರಾಷ್ಟ್ರೀಯ ಲೋಪ ದಳ. ಸಮಜಾ ವಾದಿಗಳು ಈಗಾಗಲೇ ಬಲೆಯೊಳಗೆ ಬಿದ್ದಿದ್ದಾರೆ. (ಇದಕ್ಕೆ ಕಾರಣ ಮಾಯಾಂಗನೆಯ ಆನೆಯ ಭೀತಿ ಎಂಬುದನ್ನು ಕೂಡ ಪತ್ತೆ ಹಚ್ಚಲಾಗಿದೆ).

ಇನ್ನು ಚಾಣಕ್ಯ ತಂತ್ರಗಳಿಗೆ ಹೆಸರಾದ, ಕರ್ನಾಟಕದಲ್ಲಿ ತಾರಾಮಾರಾ ಪ್ರಸಿದ್ಧಿ ಪಡೆದಿರುವ, ಎಲ್ಲರಿಂದಲೂ ಕ್ಯಾಕರಿಸಿ ಹೊಗಳಿಸಿಕೊಂಡಿರುವ ಪಕ್ಷದ ಎರಡು ಮೀನುಗಳನ್ನು ಸ್ವತಃ ವೇದೇಗೌಡರೇ ಕೇಂದ್ರದ ಗಾಳಕ್ಕೆ ಸಿಕ್ಕಿಸಿಬಿಟ್ಟಿದ್ದಾರೆ. ಅವರು ಅದರಲ್ಲಿ ಸಿಕ್ಕಿಬಿದ್ದರೆ, ಕೇಂದ್ರದ ಬೆಂಬಲ ಪಡೆದು ಅಧಿಕಾರಯುತವಾಗಿ ಕರುನಾಟಕದಲ್ಲಿ ಹೊಸ ನಾಟಕ ಶುರು ಮಾಡಬಹುದು ಮತ್ತು ತಮ್ಮ ಪಕ್ಷಕ್ಕೆ ಹಾಕಲಾಗುತ್ತಿರುವ ಗಾಳದಿಂದ ಪಾರಾಗಬಹುದು ಎಂಬುದು ಚಾಣಾಕ್ಷ ಚಾಣಕ್ಯನ ಲೆಕ್ಕಾಚಾರ.

ಸದ್ಯಕ್ಕೆ ಚುನಾವಣೆ ನಡೆದರೆ ಈಗಾಗಲೇ ಬೆಲೆ ಏರಿಕೆಯಿಂದಾಗಿ ಎಲ್ಲೆಡೆಯೂ ಸುಣ್ಣ ಬಳಿಸಿಕೊಂಡಿರುವ ಕಾಂಗ್ರೆಸ್‌ಗೆ ಭಾರೀ ಹೊಡೆತ ಬೀಳುವ ಸಾಧ್ಯತೆ ಇರುವುದರಿಂದ, ಉಳಿದಿರುವ ಏಳೆಂಟು ತಿಂಗಳನ್ನು ಹೇಗಾದರೂ ದೂಡಬೇಕು. ಇದಕ್ಕಾಗಿ ತಮಗೆ ದೊಡ್ಡ ತಿಮಿಂಗಿಲಗಳೇ ಬೇಕಿಲ್ಲ. ಮೀನು, ಕಪ್ಪೆ, ಆಮೆ ಇತ್ಯಾದಿಗಳು ಕೂಡ ಸಾಕಾಗುತ್ತವೆ ಎಂದು ಕೇಂದ್ರದಿಂದ ಗಾಳ ವೀರರಿಗೆ ಸ್ಪಷ್ಟ ಸೂಚನೆ ದೊರೆತಿದೆ ಎನ್ನಲಾಗಿದೆ.

Monday, July 07, 2008

'ಎಡ' 'ಕೈ'ಗಾದ ಗಾಯಕ್ಕೆ ಸ-ಮಜಾ ವಾದದ ಮುಲಾಮು

(ಬೊಗಳೂರು ಮಜಾ ವಾದ ಬ್ಯುರೋದಿಂದ)
ಬೊಗಳೂರು, ಜು.೭- ರಾಷ್ಟ್ರ ಹಿತವೂ, ಮಾರ್ಕ್ಸಿಸ್ಟ್ ಆಡಳಿತವಿರುವ ನೆರೆ ರಾಷ್ಟ್ರದ ಹಿತವೂ ಮೇಳೈಸಿದ ಪರಿಣಾಮವಾಗಿ ಬಲಪಂಥೀಯರ ವಿರೋಧಿಗಳು ಯುಪಿಎಯಿಂದ ಅಂಗ ಕಳೆದುಕೊಳ್ಳುವ ಹಿನ್ನೆಲೆಯಲ್ಲಿ ಮುಲಾಮು ಹಚ್ಚಲು ಈಗಾಗಲೇ ಭಾರೀ ಸಿದ್ಧತೆ ನಡೆದಿದೆ.

ಇನ್ನುಳಿದ ನಾಲ್ಕಾರು ತಿಂಗಳುಗಳ ಕಾಲ ಈ ಬೆಲೆ ಆಗಸಕ್ಕೇರಿಕೆಯ ಯುಗದಲ್ಲೇ ಮುಂದುವರಿದು, ಜನಗಳನ್ನು ಮತ್ತಷ್ಟು ಕೂಪಕ್ಕೆ ತಳ್ಳಿಬಿಡುವ ಪ್ರಯತ್ನವಾಗಿ Unprecedented Price Agenda ಸರಕಾರವು ಎಡಗೈ ಕಳಚಿಕೊಂಡಲ್ಲಿ ಗಾಯವಾಗುವುದಕ್ಕೆ ಮುಲಾಮು ಹಚ್ಚಲೇಬೇಕಾಗುತ್ತದೆ.

ಇದಕ್ಕೆ ಮುಲಾಮು ಹಚ್ಚಲೆಂದೇ ಒಂದು ಕಾಲದಲ್ಲಿ ತಮ್ಮಿಂದ ಯದ್ವಾತದ್ವಾ ಬಾಯಿಗೆ ಬಂದಂತೆ ಹೊಗಳಿಸಿಕೊಳ್ಳುತ್ತಿದ್ದ, ಮತ್ತು ತಾವು ಕೂಡ ಪರಸ್ಪರ ಉಗುಳಿಸಿಕೊಳ್ಳುತ್ತಿದ್ದ ಪಕ್ಷದ ಸಹಕಾರ ಅತ್ಯಗತ್ಯ ಎಂಬುದು ಇಬ್ಬರಿಗೂ ಮನವರಿಕೆಯಾಗಿದೆ ಎಂಬುದನ್ನು ಪತ್ತೆ ಹಚ್ಚಲಾಗಿದೆ.

ರಾಜಕೀಯದಲ್ಲಿ ಇಡೀ ವಿಶ್ವವೇ ತಮ್ಮ ಸಮಾಜ ಎಂಬುದನ್ನು ತಿಳಿದುಕೊಂಡು, ತಮ್ಮ ಕಾರ್ಯ ಸಾಧಿಸಿಕೊಂಡು ಮಜಾ ಅನುಭವಿಸಲು ಸಿದ್ಧವಾಗಿರುವ ಸಮಜಾ ವಾದ ಪಕ್ಷದ ನೀತಿ ನಿಯಮಗಳು ಮತ್ತು ತತ್ವ ಸಿದ್ಧಾಂತಗಳು ಗಾಳಿಗೆ ತೂರದಂತಾಗಲು ಅಥವಾ ಅಕಸ್ಮಾತ್ ತೂರಿ ಹೋದರೂ, ಅದನ್ನು ಮರಳಿ ಗೂಡಿಗೆ ಸೇರಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಮೂಲಗಳು ವರದ್ದಿ ಮಾಡಿವೆ.

Saturday, July 05, 2008

೦೬ ತಾರೀಕು ೦೭ ತಿಂಗಳು ೦೮ ವರ್ಷ

ಭಾನುವಾರ 06ನೇ ತಾರೀಕು 07ನೇ ತಿಂಗಳು 08ನೇ ವರ್ಷವಾಗಿರುವುದರಿಂದ
ಈ ದಿನ ಬೆಳಿಗ್ಗೆ ೦೬ ಗಂಟೆ ೦೭ ನಿಮಿಷ ೦೮ ಸೆಕೆಂಡ್ ವೇಳೆಗೆ ಬೊಗಳೆ ರಗಳೆ ಬ್ಯುರೋ ಭರ್ಜರಿ ನಿದ್ರೆ ಮಾಡಲಿದೆ ಎಂದು ತಿಳಿಸಲು ವಿಷಾದಿಸುತ್ತೇವೆ.

Tuesday, July 01, 2008

ಇಂಗ್ಲೀಸು ಟು ಖನ್ನಡ್ಡ ಭಾಷಾವಾಂತರ!

(ಬೊಗಳೂರು ಭಾಷಾವಾಂತರ ಬ್ಯುರೋದಿಂದ)
ಬೊಗಳೂರು, ಜು.1- ಇದು ನಮ್ಮ ಬೊಗಳೆ ಬ್ಯುರೋದ ಹೊಸ ಯಾರ್ಕ್ ಬ್ಯುರೋ ರದ್ದಿಗಾರರು ಕಳುಹಿಸಿದ ವರದ್ದಿಯಾಗಿದ್ದು, ಅದನ್ನು ಬ್ಯುರೋದಲ್ಲಿರುವ ಭಾಷಾವಾಂತರಕಾರರು ಚೆನ್ನಾಗಿಯೇ ಅಂತರ್‌ಖಂಡೀಯ ಭಾಷಾವಾಂತರ ಮಾಡಿದ್ದಾರೆ. ವರದ್ದಿ ಹೀಗಿದೆ:

New York: An Indian-origin surgeon has been barred from practising for two years in New Jersey and slapped with USD81,000 fine for operating on a wrong lung of a cancer patient eight years ago.
ಹೊಸ ಯಾರ್ಕ್: ಭಾರತೀಯ ಅಸಲಿ ಸರ್ಜನನೊಬ್ಬ ನ್ಯೂಜೆರ್ಸಿಯಲ್ಲಿ ಎರಡು ವರ್ಷ ಬಾರಿನಲ್ಲಿ ಪ್ರಾಕ್ಟೀಸ್ ಮಾಡಬೇಕೆಂದು ಹೇಳಲಾಗಿದೆ ಮತ್ತು ಎಂಟು ವರ್ಷದ ಹಿಂದೆ ಕ್ಯಾನ್ಸರ್ ತಾಳಿಕೊಂಡ ವ್ಯಕ್ತಿಯೊಬ್ಬರ ತಪ್ಪು ಲಂಗದ ಮೇಲೆ ಕಾರ್ಯಾಚರಣೆ ಕೈಗೊಂಡಿದ್ದಕ್ಕೆ 81,000 ಉಸ್ಡ್ ಫೈನನ್ನು ಮುಖಕ್ಕೆ ಹೊಡೆಯಲಾಗಿದೆ.

The State Board of Medical Examiners found that Dr Santusht Perera removed a portion of right lung of 60-year-old Richard Flagg when he should have been operated on a tumour in the left lung, then lied and altered documents in an attempt to cover up the mistake.
ಮೆಡಿಕಲ್ ಪರೀಕ್ಷಾಧಿಕಾರಿಗಳ ರಾಜ್ಯ ಮಂಡಳಿಯು ಪತ್ತೆ ಹಚ್ಚಿದ್ದೇನೆಂದರೆ, 60 ವರ್ಷದ ರಿಚರ್ಡ್ ಫ್ಲಾಗ್‌ನ ಬಲ ಲಂಗದ ಒಂದು ತುಂಡನ್ನು ಡಾ.ಸಂತುಷ್ಟ ಪೆರೆರಾ ಅವರು ತೆಗೆದಿದ್ದರು... ಯಾವಾಗೆಂದರೆ ಎಡ ಲಂಗದಲ್ಲಿ ಆಲೂ ಗಡ್ಡೆಯೊಂದರ ಕಾರ್ಯಾಚರಣೆ ನಿಯಂತ್ರಿಸುತ್ತಿದ್ದಾಗ. ಆ ಬಳಿಕ ಅಲ್ಲೇ ಬಿದ್ದುಕೊಂಡ ಮತ್ತು ಅಲ್ಲಿ ಕಂಡು ಬಂದ ಮಿಸ್ಟೇಕನ್ನು ಕವರ್ ಮಾಡಿಕೊಳ್ಳಲು ಪ್ರಯತ್ನಿಸಿದ.

State documents say Perera removed the lower and middle lobe of the patient's right lung during the September 2000 surgery.
ರಾಜ್ಯದಲ್ಲಿರುವ ಡಾಕ್ಯುಮೆಂಟರಿಗಳು ಹೇಳುವುದೇನೆಂದರೆ, 2000 ಮಂದಿಗೆ ಸೆಪ್ಟೆಂಬರ್ ತಿಂಗಳಲ್ಲಿ ಮಾಡಿದ ಸರ್ಜರಿ ವೇಳೆ ಪೆರೇರಾ ರೋಗಿಯ ಬಲ ಲಂಗದ ಮಧ್ಯ ಮತ್ತು ಕೆಳ ಭಾಗದಲ್ಲಿರುವ ಪಕ್ಕೆಯೊಂದನ್ನು ತೆಗೆಯಲಾಗಿತ್ತು.

When Flagg woke up from surgery eight years ago in Bergen County hospital, he wondered why his right side hurt though he was told that his left lung was affected by tumour.
ಬರ್ಜನ್ ಕೌಂಟ್ ಮಾಡುವ ಆಸ್ಪತ್ರೆಯಲ್ಲಿ ಸರ್ಜರಿ ನಡೆದ ಎಂಟು ವರ್ಷಗಳ ಹಿಂದೆ ಧ್ವಜವು ಮೇಲೆದ್ದಾಗ, ತನ್ನ ಎಡ ಲಂಗದಲ್ಲಿ ಆಲೂಗಡ್ಡೆಯಿಂದ ಪ್ರಭಾವಿತವಾಗಿದೆ ಎಂದು ಹೇಳಿದ್ದರೂ ಬಲ ಭಾಗದಲ್ಲೇಕೆ ಮಾನಸಿಕ ಆಘಾತವಾಗಿದೆ ಎಂದು ಆತನಿಗೆ ಅಚ್ಚರಿಯಾಯಿತು.

Flagg quizzed his surgeon Perera who lied that an even larger tumour had been detected in his right lung, according to state documents.
ಬಲ ಲಂಗದಲ್ಲಿ ಇನ್ನೂ ದೊಡ್ಡ ಆಲೂಗಡ್ಡೆಯಿತ್ತು ಎಂದು ಹೇಳಿ ಮಲಗಿದ್ದ ಸರ್ಜನ್ ಪೆರೇರಾನನ್ನು ಫ್ಲ್ಯಾಗ್ ರಾಜ್ಯ ದಾಖಲೆಗಳ ಅನುಸಾರವಾಗಿ ಕ್ವಿಜ್‌ ಸ್ಪರ್ಧೆ ಮಾಡಿ ನೋಡಿದ.

ಎಂಜಿನ್ ಇಲ್ಲದ ರೈಲು: ಬ್ರೇಕಿಂಗ್ ನ್ಯೂಸ್ ಅಲ್ಲವೆಂದ ಬೊ.ರ.

[ಬೊಗಳೂರು ಪಟ್ಟೆ-ರಹಿತ ರೈಲು ಬ್ಯುರೋ] ಬೊಗಳೂರು: ಆಫ್‌ಲೈನ್ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯೊಂದು ಆನ್‌ಲೈನ್ ಸಂಪಾದಕರ ಕಣ್ಣು ಕುಕ್ಕಿದ್ದು, ಎಂಜಿನ್ ಇಲ್ಲದೆ...