Thursday, August 07, 2008

ಮ್ಯಾರಥಾನ್ ಬೆಲೆ ಓಟ; ಮ್ಯಾರಥಾನ್ ನರಳಿಕೆಯ ದಾಖಲೆ

(ಬೊಗಳೂರು ದಾಖಲೆಗಳ ಬ್ಯುರೋದಿಂದ)
ಬೊಗಳೂರು, ಆzzzzzzzz., 7- ದೇಶದಲ್ಲಿ ದಾಖಲೆ ಮಾಡುವವರಿಗೇನೂ ಬರವಿಲ್ಲ. ಹೀಗಾಗಿ ಗಿನ್ನೆಸ್ ಮತ್ತು ಲಿಮ್ಕಾ ದಾಖಲೆಗಳ ಪುಸ್ತಕ ಮಾಲೀಕರು ಭಾರತದತ್ತ ತಲೆ ಹಾಕಿಯೂ ಮಲಗದಿರಲು ಭೀಷ್ಮ ಪ್ರತಿಜ್ಞೆ ಮಾಡಿದ್ದಾರೆ ಎಂದು ಬೊಗಳೆ ರಗಳೆ ಬ್ಯುರೋದ ಮಂದಿಗೆ ಮಾತ್ರ ಗೊತ್ತಾಗಿದೆ.

ಇದಕ್ಕೆ ಪ್ರಮುಖ ನೆಪವೆಂದರೆ ಇತ್ತೀಚೆಗಷ್ಟೇ ಮಾಡಲಾದ ನಿರಂತರ - ಮ್ಯಾರಥಾನ್ ಮೃದಂಗವಾದನ ದಾಖಲೆ. ಇದೇನೂ ದಾಖಲೆಯೇ ಅಲ್ಲ ಎಂದು ಬೆನ್ನು... ಅಲ್ಲಲ್ಲ... ಹೊಟ್ಟೆ ತಟ್ಟಿಕೊಳ್ಳುತ್ತಿರುವ ಭಾರತದ ಜನ ಸಾಮಾನ್ಯರು ಇದಕ್ಕೆ ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನಗಳನ್ನು ಮಾಡುತ್ತಿದ್ದಾರೆ.

ಒಬ್ಬರ ವಾದದ ಪ್ರಕಾರ, ಈ ದಾಖಲೆಯು ಕೇಂದ್ರದ ಯುಪಿಎ ಸರಕಾರದ ಹೆಸರಿನಲ್ಲಿ ಬರೆಸಬೇಕು. ಅಧಿಕಾರಕ್ಕೆ ಬಂದಂದಿನಿಂದ ನಿರಂತರವಾಗಿ ಮ್ಯಾರಥಾನ್ ಬೆಲೆ ಏರಿಕೆಯಲ್ಲಿ ತೊಡಗಿದ ಕಾರಣದಿಂದಾಗಿಯೇ ಅದಕ್ಕೆ Unprecedented Price Agenda ಸರಕಾರ ಎಂಬ ಹೆಸರು ಬಂದಿದೆ.

ಮತ್ತೊಬ್ಬರ ವಾದದ ಪ್ರಕಾರ, ದೇಶಾದ್ಯಂತ ನಿರಂತರ ಬಾಂಬ್ ಸ್ಫೋಟ, ಆತ್ಮಾಹುತಿ ದಾಳಿಯೇ ಮೊದಲಾದ ಭಯೋತ್ಪಾದನಾ ಚಟುವಟಿಕೆಗಳ ಮ್ಯಾರಥಾನ್ ನಿರಂತರವಾಗಿ ನಡೆಯುತ್ತಿವೆ. ಯಾವುದೇ ಅಡೆತಡೆಯಿಲ್ಲದೆಯೇ ನಡೆಯುತ್ತಿರುವುದರಿಂದ ಕೇಂದ್ರ ಸರಕಾರದ ಗೃಹ ಇಲಾಖೆಗೆ ಈ ದಾಖಲೆಯ ಕೀರ್ತಿ ಸಲ್ಲಬೇಕು.

ಇನ್ನೂ ಒಂದು ದಾಖಲೆಯಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂಸಾಚಾರ. ಅದು ಕೂಡ ಮೇಲಿನ ಕೆಟಗರಿಗೇ ಸೇರ್ಪಡೆಯಾಗುವುದರಿಂದ ಇದನ್ನು ಆ ದಾಖಲೆಗಳ ಪಟ್ಟಿಯಡಿಗೇ ಸೇರಿಸಲಾಗುತ್ತದೆ.

ಮತ್ತೊಂದು ದಾಖಲೆಯೆಂದರೆ, ನಿರಂತರವಾಗಿ ಏರುತ್ತಲೇ ಇರುವ ಹಣದುಬ್ಬರದ ಮ್ಯಾರಥಾನ್ ಓಟ.

ಮಗದೊಂದು: ದೇಶದ ಜನ ಮ್ಯಾರಥಾನ್ ಬೆಲೆ ಏರಿಕೆಯಿಂದ ತತ್ತರಿಸುತ್ತಿದ್ದರೂ ಸರಕಾರ ನಿರಂತರವಾಗಿ ಕಣ್ಮುಚ್ಚಿ ಕುಳಿತಿರುವುದು.

ಬಗೆಬಗೆದು ತೆಗೆದ ಮಗದೊಂದು ದಾಖಲೆ (ಇದನ್ನೇ ಲಿಮ್ಕಾ / ಗಿನ್ನೆಸ್ ಪುಸ್ತಕದಲ್ಲಿ ಇಷ್ಟವಿಲ್ಲದಿದ್ದರೂ ಸೇರ್ಪಡಿಸಲಾಗಿದೆ): ಇಷ್ಟೆಲ್ಲ ಬೆಲೆ ಏರಿಕೆಯಿದ್ದರೂ ಈ ದೇಶದ ಜನರು ಮ್ಯಾರಥಾನ್ ಆಗಿ ಬದುಕುಳಿದು, ಅರೆಬರೆ ಹೊಟ್ಟೆ-ಬಟ್ಟೆಯಲ್ಲೇ ಜೀವನ ಸಾಗಿಸುತ್ತಿರುವುದು ಮತ್ತು ಕೇಳುವವರಿಲ್ಲದಂತಾಗಿ ಅಸಹಾಯಕತೆಯಿಂದ ಮ್ಯಾರಥಾನ್ ಆಗಿ ಆಕಾಶ ನೋಡುತ್ತಿರುವುದು!

4 comments:

 1. ಭ್ರಷ್ಟಾಚಾರದ ಗೆರೆ ಮುಟ್ಟಲು, ಶಿಬಿ ಸೋರಣ್ಣ ಮೊದಲಾದವರಿಂದ ಮ್ಯಾರಾಥಾನ್ ಓಟ. ಮಂಕ ಸಿಂಗಣ್ಣನವರಿಂದ ಗೆದ್ದವರಿಗೆ ಓಟಿನ ಮಾಲೆ!

  ReplyDelete
 2. ಅದು ಓಟಿನ ಮಾಲೆ ಅಲ್ಲ...ನೋಟಿನ ಕಂತೆ....ಸಿಂಗ್ ಈಸ್ ಕಿಂಗ್...ಗೊತ್ತಿಲ್ವಾ ನಿಮ್ಗೆ?. ಆದರೆ ಈ ಮರಕೋತಿಯಾಟದಲ್ಲಿ ನಮ್ಮ ಜನರ ಪರಿಸ್ಥಿತಿ ಊರಗಲ...ಇಂತಹ ದೇಶದ್ರೋಹಿ ಜನಗಳನ್ನು ಇನ್ನೂ..ಮತ್ತೆ ಮತ್ತೆ ಓಟು ಕೊಟ್ಟು ಚುನಾಯಿಸುತ್ತಾರಲ್ಲ...ಅವರಿಗೆ ಮೆಟ್ಟಲ್ಲಿ ಹೊಡೆದರೂ ಕಡಿಮೆಯೇ.....

  ReplyDelete
 3. ಸುನಾಥರೆ,

  ಓಡಿದರೆ ಓಟ, ನೋಡಿದರೆ ನೋಟ. ಜಾರಕಾರಣಿಗಳು ನಮ್ಮ ಹಿಂದೆ ಓಡಿದರೆ ಓಟು, ನಾವೇ ಅವರ ಹಿಂದೆ ಓಡುವಂತಾದರೆ ನೋಟು... ಹೀಗಿದೆ ಆಧುನಿಕ ಚಾಣಕ್ಯನ ಅನರ್ಥಶಾಸ್ತ್ರ...

  ReplyDelete
 4. ಗುರುಗಳೆ,
  ಮುಂದಿನ ಓಟು ಬಂದಾಗ ನಿಮ್ಮಲ್ಲಿನ ಮೆಟ್ಟುಗಳನ್ನು ಅಡಗಿಸಿಟ್ಟುಕೊಳ್ಳಿ. ಮತಕೇಳಲು ಜಾರಕಾರಣಿಗಳು ಬರುವ ಸಂದರ್ಭವಂತೂ ಕಟ್ಟೆಚ್ಚರದಲ್ಲಿರಬೇಕಾಗುತ್ತದೆ. ಸಿಕ್ಕಿದವರೆಲ್ಲಾ ಅದನ್ನು ಹೊತ್ತುಕೊಂಡುಹೋಗಬೇಕಾಗಬಹುದು. ಶಸ್ತ್ರ ಪ್ರಯೋಗಕ್ಕೆ!

  ReplyDelete

ನಿಮ್ಮ ಸಲಹೆ/ಅಭಿಪ್ರಾಯ ತಿಳಿಸಿ..

ಎಂಜಿನ್ ಇಲ್ಲದ ರೈಲು: ಬ್ರೇಕಿಂಗ್ ನ್ಯೂಸ್ ಅಲ್ಲವೆಂದ ಬೊ.ರ.

[ಬೊಗಳೂರು ಪಟ್ಟೆ-ರಹಿತ ರೈಲು ಬ್ಯುರೋ] ಬೊಗಳೂರು: ಆಫ್‌ಲೈನ್ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯೊಂದು ಆನ್‌ಲೈನ್ ಸಂಪಾದಕರ ಕಣ್ಣು ಕುಕ್ಕಿದ್ದು, ಎಂಜಿನ್ ಇಲ್ಲದೆ...